ಪುಟಗಳು
10 ನವೆಂಬರ್ 2020
10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ವ್ಯಾಕರಣಾಂಶಗಳು
ಕನ್ನಡ ವರ್ಣಮಾಲೆ
- ಸ್ವರಗಳು ಮತ್ತು ಸಂಧ್ಯಕ್ಷರಗಳು (13)
- ಯೋಗವಾಹಕಗಳು (2)
- ವ್ಯಂಜನಗಳು (34)
-ಅವುಗಳೆಂದರೆ- ಅ ಇ ಉ ಋ ಎ ಒ (ಒಟ್ಟು 6)
[ಟಿಪ್ಪಣಿ:- ಯಾವುದೇ ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಮಾತ್ರೆಗಳಿಂದ ಅಳೆಯಲಾಗುತ್ತದೆ. 'ಅ' ಎಂಬ ಅಕ್ಷರವನ್ನು ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲಾಗುವುದರಿಂದ ಇದು ಹ್ರಸ್ವಸ್ವರ ವಾಗಿದೆ. ಹಾಗೆಯೇ ಈ ಎಂಬ ಅಕ್ಷರವನ್ನು ಉಚ್ಚರಿಸಲು ಹ್ರಸ್ವಸ್ವರದ ಎರಡರಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಇದು ಧೀರ್ಘಸ್ವರವಾಗಿದೆ]
ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ ಉಚ್ಚಾರಣೆಯನ್ನು ಹೊಂದಿಲ್ಲದ ಹಾಗೂ ಸ್ವರ ಅಥವಾ ವ್ಯಂಜನಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ ಅಕ್ಷರಗಳನ್ನು 'ಯೋಗವಾಹಕಗಳು' ಎಂದು ಕರೆಯಲಾಗುತ್ತದೆ.
ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ. ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.
1) ಅನುಸ್ವಾರ:- (ಅಂ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ '0' ಮಾತ್ರ ಅನುಸ್ವರವಾಗಿದೆ.
2) ವಿಸರ್ಗ:- (ಅಃ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ ಎರಡು ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.
[ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ. ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.]
ವ್ಯಂಜನಗಳು:- (ಒಟ್ಟು-34) - ಸ್ವರಗಳ ಸಹಾಯದಿಂದ ಮಾತ್ರ ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುವ 34 ಅಕ್ಷರಗಳ ಗುಂಪಿಗೆ 'ವ್ಯಂಜನಗಳು' ಎಂದು ಕರೆಯಲಾಗುತ್ತದೆ.
ಇವುಗಳನ್ನು 'ವರ್ಗೀಯವ್ಯಂಜನಗಳು' ಮತ್ತು 'ಅವರ್ಗೀಯ ವ್ಯಂಜನಗಳು' ಎಂದು ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ.
1) ವರ್ಗೀಯವ್ಯಂಜನಗಳು-(25):- ವ್ಯವಸ್ಥಿತವಾಗಿ ಜೋಡಿಸಿ, 5 ವರ್ಗಗಳಾಗಿ ವರ್ಗೀಕರಿಸಲಾಗಿರುವ 'ಕ' ಇಂದ 'ಮ' ವರೆಗಿನ 25 ಅಕ್ಷರಗಳನ್ನು 'ವರ್ಗೀಯ ವ್ಯಂಜನಗಳು' ಎಂದು ಕರೆಯಲಾಗುತ್ತದೆ. ಅವುಗಳೆಂದರೆ..
ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಈ ಮೇಲಿನ ಅಕ್ಷರಗಳನ್ನು ನೋಡಿದಿರಲ್ಲ! ಇವುಗಳನ್ನು ಕ-ವರ್ಗ, ಚ-ವರ್ಗ, ಟ-ವರ್ಗ, ತ-ವರ್ಗ ಮತ್ತು ಪ-ವರ್ಗ ಎಂದು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ಕ ಇಂದ ಮ ವರೆಗಿನ ಅಕ್ಷರಗಳನ್ನು ಮತ್ತೆ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ..
- ಅಲ್ಪಪ್ರಾಣಾಕ್ಷರಗಳು (10) :- ಕಡಿಮೆ ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅಲ್ಪಪ್ರಾಣಾಕ್ಷರಗಳು'.
- ಮಹಾಪ್ರಾಣಾಕ್ಷರಗಳು (10) :- ಹೆಚ್ಚು ಉಸಿರಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಮಹಾಪ್ರಾಣಾಕ್ಷರಗಳು'.
- ಅನುನಾಸಿಕಾಕ್ಷರಗಳು (5) :- ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಗಳೇ 'ಅನುನಾಸಿಕಾಕ್ಷರಗಳು'.
[ಟಿಪ್ಪಣಿ:- ಈ ಐದು ಅನುನಾಸಿಕಾಕ್ಷರಗಳು ಆಯಾ ವರ್ಗದ ಅಕ್ಷರಗಳ ಹಿಂದೆ ನಿಂತು ಬಿಂದು (ಅನುಸ್ವಾರ) ವಾಗಿ ಕಾರ್ಯನಿರ್ವಹಿಸುತ್ತವೆ.
ಉದಾ:- 'ಕ' ವರ್ಗದಲ್ಲಿ :- ಅಙ್ಗಳ = ಅಂಗಳ, ಪಙ್ಕಜ = ಪಂಕಜ, ಸಙ್ಘ = ಸಂಘ
'ಚ' ವರ್ಗದಲ್ಲಿ:- ಅಞ್ಚೆ = ಅಂಚೆ, ಪಞ್ಜರ = ಪಂಜರ, ಇಞ್ಚರ = ಇಂಚರ
'ಟ' ವರ್ಗದಲ್ಲಿ:- ಗಣ್ಟೆ = ಗಂಟೆ, ಹಿಣ್ಡು = ಹಿಂಡು, ಅಣ್ಟು = ಅಂಟು
'ತ' ವರ್ಗದಲ್ಲಿ:- ಸನ್ತಸ = ಸಂತಸ, ಆನನ್ದ = ಆನಂದ, ಬನ್ಧನ = ಬಂಧನ
'ಪ' ವರ್ಗದಲ್ಲಿ:- ಪಮ್ಪ = ಪಂಪ, ತಮ್ಬಾಕು = ತಂಬಾಕು, ಶಮ್ಭು = ಶಂಭು,
ನಿಮಗಿದು ವಿಚಿತ್ರ ಎನುಸುತ್ತಿದೆಯೆ. ಹೌದು, ಪೂರ್ವದ ಹಳೆಗನ್ನಡದಲ್ಲಿ (ಸು.6-7ನೇ ಶತಮಾನದಿಂದ ಹಿಂದೆ) ಕನ್ನಡ ಭಾಷೆಯಲ್ಲಿ ಬಿಂದುವಿನ (ಅನುಸ್ವಾರ/ಸೊನ್ನೆ) ಬಳಕೆ ಇರಲಿಲ್ಲ. ಕನ್ನಡದ ಮೊಟ್ಟಮೊದಲ ಶಾಸನವಾದ 'ಹಲ್ಮಿಡಿ ಶಾಸನದಲ್ಲಿ ನಾವು ಈ ರೂಪದ ಪದಗಳನ್ನು ಕಾಣಬಹುದು.
****************
10ನೇ ತರಗತಿ ಕನ್ನಡ-ಗದ್ಯ-6-ಯುದ್ಧ-ಭಾಷಾಭ್ಯಾಸ
೧-ಯುದ್ಧ
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ವಿಜಾತೀಯ ಸಂಯುಕ್ತಾಕ್ಷರಗಳು: ಕಾರ್ಯ, ಶಸ್ತ್ರ, ಸ್ಫೋಟಿಸು, ಅದ್ಭುತ, ಡಾಕ್ಟರ್ (ರ್ಯ, ಸ್ತ್ರ, ಸ್ಫೋ, ದ್ಭು, ಕ್ಟ)
೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.
ಅವರ್ಗೀಯ ವ್ಯಂಜನಾಕ್ಷರಗಳು: ಸ, ಶ, ಯ, ರೊ, ಳಿ, ಲ, ವೆ, ಷ, ಹೊ, ಳ
೩. ಈ ಪಾಠದಲ್ಲಿ ಬರುವ ಇಂಗ್ಲಿಷ್ ಪದಗಳನ್ನು ಪಟ್ಟಿ ಮಾಡಿ.
ಇಂಗ್ಲಿಷ್ ಪದಗಳು: ಡಾಕ್ಟರ್, ರೇಡಿಯೋ, ಗ್ರೌಂಡಿ, ಪೈಲಟ್, ಬ್ಲಾಕ್ ಔಟ್, ಪ್ಲೀಸ್
೪. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.
ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್, ಝ್ : ಮಹಾಪ್ರಾಣಾಕ್ಷರಗಳು
ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ೩೪
ಇ) ಆ, ಈ, ಊ : ದೀರ್ಘಸ್ವರಗಳು : : ಅ, ಇ, ಉ, ಋ : ಹ್ರಸ್ವಸ್ವರ
ಈ) ಸ್ವರಗಳು : ೧೩ : : ಯೋಗವಾಹಗಳು : ೨