ಪುಟಗಳು

10 ಜುಲೈ 2020

ಅಭಿನವವಾದಿ ವಿದ್ಯಾನಂದ

ಅಭಿನವವಾದಿ ವಿದ್ಯಾನಂದ

ಕಾವ್ಯಸಾರವೆಂಬ ಸಂಕಲನದ ಸಂಪಾದಕ. ಸಂಕಲನವೆಂದರೆ ಇಲ್ಲಿ ಯಾವುದೇ ಒಂದು ಕಾವ್ಯದ ಸಾರಸಂಗ್ರಹವಲ್ಲ. ಅಂಥ ಅನೇಕಾನೇಕ ಕಾವ್ಯಗಳಲ್ಲಿನ ರಸವತ್ತಾದ ಬಿಡಿ ಪದಗೇಯಗಳ ಸಂಗ್ರಹವಷ್ಟೆ. ಯಾವುದೇ ಸಾಹಿತ್ಯದಲ್ಲಿ ಸಂಕಲನೆ ಗ್ರಂಥಗಳು ಕಾಣಿಸಿಕೊಂಡರೆ, ಆ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆಯೆಂದರ್ಥ, ಕನ್ನಡದಲ್ಲಿ ಬಹಳ ಹಿಂದೆಯೇ ಇಂಥ ಕೃತಿಗಳು ತಲೆದೋರಿದುವು. ಅವುಗಳಲ್ಲಿ ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ ಮತ್ತು ಅದರ ಮಾದರಿಯನ್ನೇ ಅನುಸರಿಸಿ ಬಂದ ಕಾವ್ಯಸಾರ ಬಹಳ ಗಣ್ಯವಾಗಿವೆ. ಇವು ಚಂಪೂ ಗ್ರಂಥಗಳಿಂದ ಆಯ್ದ ಮುಕ್ತಕಗಳ ಸಂಕಲನಗಳು.

ಅಭಿನವವಾದಿ ವಿದ್ಯಾನಂದನ ಕಾಲದೇಶಗಳು ಸರಿಯಾಗಿ ಗೊತ್ತಿಲ್ಲ. ಈತ ಜೈನಕವಿಯೆಂಬುದು ಮಾತ್ರ ನಿಶ್ಚಯ. ಕಾವ್ಯಸಾರದ ಅಂತ್ಯದಲ್ಲಿ ವಿಜಯ ಸಂವತ್ಸರದ ಭಾದ್ರಪದ ಬಹುಳ 3ರಲ್ಲೂ ಶ್ರೀಮದಭಿನವವಾದಿ ವಿದ್ಯಾನಂದ ಸ್ವಾಮಿಗಳು ಭಲ್ಲಾತಕೀಪುರವರಾಧೀಶ್ವರ ಬೈರಾಗಿಗೆ ಬರೆಸಿಕೊಟ್ಟ ಕಾವ್ಯಸಾರಕ್ಕೆ ಮಂಗಳ ಮಹಾಶ್ರೀ ಎಂದಿದೆ. ಇದರಿಂದ ಈ ಸಂಕಲನಕಾರ ಭಲ್ಲಾತಕೀಪುರದವನೆಂದು ತಿಳಿಯುತ್ತದೆ. ಗೇರುಸೊಪ್ಪೆಗೆ ಭಲ್ಲಾತಕೀಪುರವೆಂಬ ಬೇರೊಂದು ಹೆಸರುಂಟಾದ್ದರಿಂದ ಇವನು ಗೇರುಸೊಪ್ಪೆಯವನೆಂದು ಉಹಿಸಬಹುದು. ಕಾವ್ಯಸಾರದಲ್ಲಿ ಚಂದ್ರಶೇಖರನ (ಸು. ೧೪೩೦) ಗುರುಮೂರ್ತಿಶಂಕರಶತಕದಿಂದ ಪದ್ಯಗಳನ್ನು ಉದ್ಧರಿಸಿರುವುದರಿಂದ ವಿದ್ಯಾನಂದ ೧೪೩೦ಕ್ಕಿಂತ ಈಚಿನವನಿರಬೇಕು. ನಗರ ತಾಲ್ಲೂಕಿನ ೪೬ನೆಯ ಶಾಸನದಲ್ಲಿ (೧೫೮೦) ಒಬ್ಬ ವಾದಿವಿದ್ಯಾನಂದನ ಸ್ತುತಿ ಬರುತ್ತದೆ; ಅವನು ಉಪನ್ಯಾಸ, ವಾದಗಳಲ್ಲಿ ಗಟ್ಟಿಗನೆಂದೂ ಅನೇಕ ದೊರೆಗಳ ಅಸ್ಥಾನಗಳಲ್ಲೂ ಗೇರುಸೊಪ್ಪೆಯಲ್ಲೂ ವಾದಿಗಳನ್ನು ಗೆದ್ದು ಸ್ವಮತಸ್ಥಾಪನೆ ಮಾಡಿದನೆಂದೂ ಆ ಶಾಸನದಲ್ಲಿ ಉಕ್ತವಾಗಿದೆ. ಅವನನ್ನು ಪ್ರೋತ್ಸಾಹಿಸಿದ ರಾಜರಲ್ಲಿ ವಿಜಯನಗರದ ಕೃಷ್ಣದೇವರಾಯನ (೧೫೦೯-೧೫೨೯) ಹೆಸರು ಬರುವುದರಿಂದ, ವಿದ್ಯಾನಂದ ಆ ರಾಜನ ಸಮಕಾಲೀನನೆಂದೂ ಹಾಗಿದ್ದಲ್ಲಿ ಗ್ರಂಥಾಂತ್ಯದಲ್ಲಿ ಹೇಳಿರುವ ವಿಜಯ ಸಂವತ್ಸರ ೧೫೨೩ ಆಗಬೇಕೆಂದೂ ಕವಿಚರಿತಕಾರರು ಅಭಿಪ್ರಾಯ ಪಡುತ್ತಾರೆ.

ಕಾವ್ಯಸಾರದಲ್ಲಿ ೪೫ ಅಧ್ಯಾಯಗಳೂ ೧೧೪೩ ಪದ್ಯಗಳೂ ಇವೆ. ಆರಿಸಿಕೊಟ್ಟ ಪದ್ಯಗಳ ಆಕರವನ್ನು ಅಥವಾ ಕರ್ತೃವನ್ನು ಸಂಕಲನಕಾರ ಹೆಸರಿಸಿರುವುದು ಮುಖ್ಯವಾದ ಸಂಗತಿ. ಈಗ ಉಪಲಬ್ಧವಿಲ್ಲದ ಒಂದನೆಯ ಗುಣವತ್ಮನ ಶೂದ್ರಕ, ಹರಿವಂಶಗಳಿಂದ ಅನೇಕ ಪದ್ಯಗಳನ್ನು ಎತ್ತಿಕೊಟ್ಟು ವಿದ್ಯಾನಂದ ಬಹಳ ಉಪಕಾರ ಮಾಡಿದ್ದಾನೆ. ಕೇವಲ ಪದ್ಯಗಳನ್ನಲ್ಲದೆ ಗದ್ಯ ಭಾಗಗಳನ್ನೂ ಉದ್ಧರಿಸಿರುವುದು ಇವನ ಸಂಕಲನಗ್ರಂಥದ ವೈಶಿಷ್ಟ್ಯ. ಕೆಲವು ಚಾಟುಪದ್ಯ, ಮುಕ್ತಕಗಳೂ ಇಲ್ಲಿ ಸೇರಿವೆ.

ಚಂಪೂಕಾವ್ಯಗಳಲ್ಲಿ ಬರುವ ಸಮುದ್ರ, ದೇಶ, ನಗರ, ಋತು, ವಿರಹ, ಯುದ್ಧ ಮುಂತಾದ ನಲವತ್ತೈದು ವಿಷಯಗಳ ವರ್ಣನೆಗಳಿಗೆ ಸಂಬಂಧಿಸಿದ ಪದ್ಯಗಳನ್ನು ಕಾವ್ಯಸಾರದಲ್ಲಿ ನೋಡುತ್ತೇವೆ. ಇವುಗಳನ್ನು ಆಯುವಲ್ಲಿ ವಿದ್ಯಾನಂದನ ಪಾಂಡಿತ್ಯ ಉತ್ತಮ ಅಭಿರುಚಿ, ರಸಿಕತೆ, ಗೋಚರವಾಗುತ್ತವೆ. ಕನ್ನಡ ಸಾಹಿತ್ಯದ ಶ್ರೀಮಂತಿಗೆಯನ್ನು ಈ ಸಂಕಲನಗ್ರಂಥ ನಿರ್ದೇಶಿಸುತ್ತದೆ.

(ಸಿ.ಪಿ.ಕೆ.) 

 

******ಮಾಹಿತಿ ಕೃಪೆ: ಮೈಸೂರು ವಿ.ವಿ. ವಿಶ್ವಕೋಶ******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ