ಪುಟಗಳು

10 ಜುಲೈ 2020

ಸಾಳ್ವ ಕವಿ

ಸಾಳ್ವ ಕವಿ 

ಈತ ೧೬ನೆಯ ಶತಮಾನದ ಜೈನಕವಿ. ಸಾಳ್ವಭಾರತ, ರಸರತ್ನಾಕರ, ಶಾರದಾವಿಲಾಸ, ವೈದ್ಯಸಾಂಗತ್ಯ ಎಂಬ ಗ್ರಂಥಗಳ ಕರ್ತೃ. ಈತನ ತಂದೆ ಧರ್ಮಚಂದ್ರ. ಗುರು ದೇಶೀಗಣದ ಶ್ರುತಕೀರ್ತಿ. ವಿಜಯನಗರದ ಅರಸರ ಮಹಾಮಾಂಡಲಿಕರಾಗಿ ನಗಿರೆ ರಾಜ್ಯದಲ್ಲಿ ಆಳುತ್ತಿದ್ದವರ ಪೀಳಿಗೆಯಲ್ಲಿ ಸಾಳ್ವಮಲ್ಲ ಸು.೧೫೫೦ರಲ್ಲಿ ಆಧಿಪತ್ಯ ನಡೆಸುತ್ತಿದ್ದನೆಂದು ಕೆಲವು ಶಾಸನಗಳಿಂದ ತಿಳಿಯುತ್ತದೆ. ಕನ್ನಡ ಭಾಷೆಗೆ ವಿಶೇಷವಾಗಿ ಪ್ರೋತ್ಸಾಹ ನೀಡಿದ್ದ ಈತ ಕವಿಸರೋವರರಾಜಹಂಸ ಎಂಬ ಬಿರುದನ್ನೂ ಪಡೆದಿದ್ದ. ಸಾಳ್ವ ಈತನ ಆಸ್ಥಾನದಲ್ಲಿ ಕವಿಯಾಗಿದ್ದ. ಸಂಸ್ಕಂತ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣತನಾಗಿದ್ದ. ಭಾರತ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದೆ. ಇದರಲ್ಲಿ ಸು. ೮೦೦೦ಪದ್ಯಗಳೂ ೧೬ ಆಶ್ವಾಸಗಳೂ ಇವೆ. ಇದು ಜೈನ ಸಂಪ್ರದಾಯಕ್ಕೆ ಅನುಸಾರವಾಗಿ ರಚಿತವಾಗಿದೆ. ನೇಮೀಶ್ವರಚರಿತ್ರೆ ಎಂಬುದು ಇದಕ್ಕಿರುವ ಮತ್ತೊಂದು ಹೆಸರು. ಇದೊಂದು ಪಾಡುಗವಿತೆ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಕವಿಯ ಪ್ರತಿಭೆ, ಪ್ರೌಢಿಮೆ, ಕಾವ್ಯರಚನಾ ಸಾಮಥ್ರ್ಯವನ್ನು ಸಮರ್ಥಿಸುವ ಅನೇಕ ಸಂದರ್ಭಗಳು ಈ ಕಾವ್ಯದಲ್ಲಿವೆ.

ರಸರತ್ನಾಕರ ರಸ ವಿವೇಚನೆಯನ್ನು ಸಮಗ್ರವಾಗಿ ಒಳಗೊಂಡಿರುವ ಕನ್ನಡದ ಮೊತ್ತ ಮೊದಲ ಲಕ್ಷಣಗ್ರಂಥ. ಇದರಲ್ಲಿ ಒಟ್ಟು ನಾಲ್ಕು ಪ್ರಕರಣಗಳಿವೆ. ಮೊದಲನೆಯ ಪ್ರಕರಣದಲ್ಲಿ ಶೃಂಗಾರ ರಸ ವಿಚಾರ, ಎರಡನೆಯ ಪ್ರಕರಣದಲ್ಲಿ ಉಳಿದ ಎಂಟು ರಸಗಳ ವಿಚಾರ, ಮೂರನೆಯ ಪ್ರಕರಣದಲ್ಲಿ ನಾಯಕ-ನಾಯಿಕಾ ವಿಚಾರ ಮತ್ತು ನಾಲ್ಕನೆಯ ಪ್ರಕರಣದಲ್ಲಿ ವ್ಯಭಿಚಾರೀಭಾವ ಮತ್ತು ಸಾತ್ವಿಕ ಭಾವಗಳ ವಿಚಾರವೆ ವರ್ಣಿತವಾಗಿವೆ. ಸಂಸ್ಕøತದ ಅಲಂಕಾರಿಕರಾದ ಅಮೃತಾನಂದಿ, ರುದ್ರಭಟ್ಟ ವಿದ್ಯಾನಾಥ ಇವರ ಮಾರ್ಗವನ್ನು ಅಲ್ಲಲ್ಲೆ ಅನುಸರಿಸಿದ್ದರೂ ಹೇಮಚಂದ್ರನ ಮತವನ್ನೇ ವಿಶೇಷವಾಗಿ ಈ ಕೃತಿಯಲ್ಲಿ ಅನುಸರಿಸಿರು ವುದು ಕಾಣಬರುತ್ತದೆ. ಲಕ್ಷ್ಯಪದ್ಯಗಳಲ್ಲಿ ಹಲವನ್ನು ಕವಿ ಕಾಮನ ಶೃಂಗಾರ ರತ್ನಾಕರ, ನಾಗವರ್ಮನ ಕಾವ್ಯಾವಲೋಕನ, ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ, ಅಗ್ಗಳ ಇವರ ಗ್ರಂಥಗಳಿಂದಲೂ ಆರಿಸಿಕೊಂಡಿದ್ದಾನೆ. ಇದಲ್ಲದೆ ಉದಯಾದಿತ್ಯ, ಗಣೇಶ್ವರಾಗ್ನಿ ಎಂಬಿಬ್ಬರ ಮತವನ್ನೂ ವಿರುದ್ಧ ರಸ ಪ್ರತಿಪಾದನ ಸಂದರ್ಭದಲ್ಲಿ ಸಂಗ್ರಹಿಸಿದ್ದಾನೆ.

ಶಾರದಾವಿಲಾಸ ಕೃತಿ ಕನ್ನಡದಲ್ಲಿ ಧ್ವನಿ ವಿಚಾರವನ್ನು ಕಂದ, ವೃತ್ತಗಳಲ್ಲಿ ಹೇಳಿರುವ ಮೊದಲ ಗ್ರಂಥ. ಸಂಪೂರ್ಣ ಗ್ರಂಥ ಉಪಲಬ್ಧ ವಿಲ್ಲ. ದೊರೆತಿರುವ ಎರಡನೆಯ ಆಶ್ವಾಸದಲ್ಲಿ ವ್ಯಂಗ್ಯ ವಿಷಯ ವರ್ಣಿತವಾಗಿದೆ.

ವೈದ್ಯಸಾಂಗತ್ಯ ಒಂದು ವೈದ್ಯಗ್ರಂಥ. ಇದು ಸಾಂಗತ್ಯದಲ್ಲಿ ರಚಿತವಾಗಿದೆ. ಪೂರ್ಣಗ್ರಂಥ ದೊರೆತಿಲ್ಲ.

(ಎಸ್.ಎನ್.ಕೆ.)

*******ಮಾಹಿತಿ ಕೃಪೆ: ಮೈಸೂರು ವಿ.ವಿ. ವಿಶ್ವಕೋಶ*******


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ