ಪುಟಗಳು

10 ಜುಲೈ 2020

ಚಾಟು ವಿಠಲನಾಥ

ಚಾಟು ವಿಠಲನಾಥ
ಈತ (ಕ್ರಿ.ಶ.೧೫೩೦) ೧೬ನೆಯ ಶತಮಾನದ ಕವಿ. ಕನ್ನಡ ಭಾಗವತಭಾರತ (ಕೆಲವು ಪರ್ವಗಳು)ಗಳ ಕರ್ತೃ . ಆಶ್ರಯ - ಕೃಷ್ಣದೇವರಾಯ . ಇವರು ಕನ್ನಡ ಭಾಗವತದ ಹನ್ನೊಂದು ಹನ್ನೆರಡನೆಯ ಸ್ಕಂಧಗಳನ್ನು ರಚಿಸಿದ ಕವಿ. ಚಾಟುವಿಠಲನೆಂದೂ ಕೆಲವು ಪ್ರತಿಗಳಲ್ಲಿ ಹೇಳಿದೆ. ಇವರು ಏಕಾದಶಸ್ಕಂಧದ ಮೂವತ್ತಾರು ಸಂಧಿಗಳ ಸಾವಿರದ ಐನೂರ ನಲವತ್ತೆರಡು ಪದ್ಯಗಳನ್ನೂ ಹನ್ನೆರಡನೆಯ ಸ್ಕಂಧದ ಎರಡು ಸಂಧಿಗಳ ಒಟ್ಟು ಎಂಬತ್ತೆಂಟು ಪದ್ಯಗಳನ್ನೂ ರಚಿಸಿದನೆಂದು ಕವಿ ಆಯಾ ಸ್ಕಂಧದ ಕಡೆಯಲ್ಲಿ ಹೇಳಿ ಕೊಂಡಿದ್ದಾನೆ. ಅಲ್ಲದೆ ಗ್ರಂಥದ ಕೋನೆಯ ಪದ್ಯದಲ್ಲಿ ಭಾಗವತವನ್ನು ಕನ್ನಡಿಸಿದನು ಸತ್ಕವಿ ಚಾಟುವಿಠಲನಾಥನರ್ಥಿಯಲಿ ಎಂದು ಹೇಳಿಕೊಂಡಿದ್ದಾನೆ. ಇದರಿಂದ ಭಾಗವತದ ಹನ್ನೆರಡು ಸ್ಕಂಧಗಳನ್ನೂ ಚಾಟುವಿಠಲನೆಂಬ ಹೆಸರಿನ ಕವಿಯೇ ಬರೆದನೆಂದು ಭಾವಿಸಬಹುದಾಗಿದೆ. ಈತನ ಗುರು ಅಚ್ಚುತಾರಣ್ಯನೆಂಬ ಯತಿ. ಆತನ ಸ್ತೋತ್ರ ಭಾಗವತದ ಎಲ್ಲ ಸ್ಕಂಧಗಳಲ್ಲಿಯೋ ಬಂದಿದೆ.

ಸಾಹಿತ್ಯ ರಚನೆ
ಏಕಾದಶ ಸ್ಕಂಧದ ಮೂವತ್ತಾರು ಸಂಧಿಗಳ ಸಾವಿರದ ಐನೂರ ನಲವತ್ತೆರಡು ಪದ್ಯಗಳನ್ನೂ ಹನ್ನೆರಡನೆಯ ಸ್ಕಂಧದ ಎರಡು ಸಂಧಿಗಳ ಒಟ್ಟು ಎಂಬತ್ತೆಂಟು ಪದ್ಯಗಳನ್ನೂ ರಚಿಸಿದನೆಂದು ಕವಿ ಆಯಾ ಸ್ಕಂಧದ ಕಡೆಯಲ್ಲಿ ಹೇಳಿಕೊಂಡಿದ್ದಾನೆ. ಅಲ್ಲದೆ ಗ್ರಂಥದ ಕೊನೆಯ ಪದ್ಯದಲ್ಲಿ ಭಾಗವತವನ್ನು, ಕನ್ನಡಿಸಿದನು ಸತ್ಕವಿ ಚಾಟುವಿಠಲನಾಥನರ್ಥಿಯಲಿ ಎಂದು ಹೇಳಿಕೊಂಡಿದ್ದಾನೆ. ಇದರಿಂದ ಭಾಗವತದ ಹನ್ನೆರಡು ಸ್ಕಂಧಗಳನ್ನೂ ಚಾಟುವಿಠಲನೆಂಬ ಹೆಸರಿನ ಕವಿಯೇ ಬರೆದನೆಂದು ಭಾವಿಸಬಹುದಾಗಿದೆ. ಆದರೆ ಚಾಟುವಿಠಲನಾಥನೆಂಬ ಹೆಸರು ಕನ್ನಡ ಭಾಗವತದ ಇನ್ನಾವ ಸ್ಕಂಧದಲ್ಲಿಯೂ ಬಂದಿಲ್ಲ. ಇದು ಸದಾನಂದಾಖ್ಯಯೋಗಿಯ ತೊದಲು ನುಡು, ಗೋಪಿನಾಥನು ಮಂಗಳವನೀವನು ಸದಾನಂದಾಖ್ಯಮುನಿವರೆಗೆ, 'ಯೋಗೀಂದ್ರ ನಖಿಳೋದಿತ ಸದಾನಂದ ಮುದರೊಳಭಿವರ್ಣಿಸಿದಂ'- ಎಂಬ ವಾಕ್ಯಗಳು ಕನ್ನಡ ಭಾಗವತದ ಬೇರೆ ಬೇರೆ ಭಾಗಗಳಲ್ಲಿ ಬಂದಿವೆ. ಇದರಿಂದ ಕನ್ನಡ ಭಾಗವತಕಾರನ ಹೆಸರು ಸದಾನಂದನಿರಬಹುದೆಂಬ ಸಂಶಯ ಬರುತ್ತದೆ. ಯೋಗಿ, ಯೋಗೀಂದ್ರ ಎಂದು ಹೇಳಿಕೊಳ್ಳುವುದರಿಂದ ಈತ ಯತಿಯಾಗಿದ್ದಿರಬಹುದು. ಈತನ ಗುರು ಅಚ್ಚುತಾರಣ್ಯನೆಂಬ ಯತಿ. ಆತನ ಸ್ತೋತ್ರ ಭಾಗವತದ ಎಲ್ಲ ಸ್ಕಂಧಗಳಲ್ಲಿಯೂ ಬಂದಿದೆ. ಕನ್ನಡ ಭಾಗವತದ ಪ್ರತಿ ಸಂಧಿಯ ಕೊನೆಯಲ್ಲಿಯೂ ನಿತ್ಯಾತ್ಮನೆಂಬ ಅಂಕಿತವಿದೆ. ನಿತ್ಯಾತ್ಮ ಶಬ್ದದೊಡನೆ ಬೇರೆ ಬೇರೆ ದೇವರ ಹೆಸರುಗಳನ್ನು ಸೇರಿಸಿ ಕವಿ ಬರೆದಿರುವುದರಿಂದ ಕವಿಯ ಅಂಕಿತ ನಿತ್ಯಾತ್ಮನೆಂದೇ ತಿಳಿಯಬೇಕು.

ಸದಾನಂದನಿಗೇ ನಿತ್ಯಾತ್ಮನೆಂಬ ಅಂಕಿತವಿದ್ದು ಭಾಗವತ ರಚನೆ ಪೂರೈಸುವ ವೇಳೆಗೆ ಚಾಟುವಿಠಲನೆಂಬ ಹೆಸರು ಬಂದಿರಬಹುದೇ? ಅಥವಾ ಸದಾನಂದ ಕವಿ ಬರೆಯದೆ ಬಿಟ್ಟಿದ್ದ ಭಾಗವತದ ಕಡೆಯ ಎರಡು ಸ್ಕಂಧಗಳನ್ನು ಅವನ ಶಿಷ್ಟನೋ ಭಕ್ತನೋ ಆದ ಚಾಟುವಿಠಲನೆಂಬ ಕವಿ ಬರೆದಿರಬಹುದೇ? ಇದು ಹೀಗೆಯೇ ಸರಿಯೆಂದು ನಿರ್ಧರಿಸಲು ಈಗ ಸಾಧ್ಯವಿಲ್ಲ. ಚಾಟುವಿಠಲನ ಹೆಸರಿರುವ ಕೊನೆಯ ಎರಡು ಸ್ಕಂಧಗಳಲ್ಲಿಯೂ ಸದಾನಂದ ಯೋಗಿಯ ಸ್ಮರಣೆಯಿದೆ. ಗೋಪೀನಾಥ ಮಂಗಳವನೀವನು ಸದಾನಂದಾಖ್ಯಮುನಿವರೆಗೆ ಎಂಬ ಮಾತು ಬಂದಿರುವುದರಿಂದ ಚಾಟುವಿಠಲ, ಸದಾನಂದ ಮುನಿ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳಿರಬಹುದೆಂಬ ಭಾವನೆ ಬರುತ್ತದೆ.

ಸದಮಳಾಚ್ಯುತ ಕೃಷ್ಣರಾಯನ ಹೃದಯವೆನಿಸುವ ಭಾಗವತಶಾಸ್ತ್ರ- ಎಂಬ ಮಾತುಗಳು ಹನ್ನೆರಡನೆಯ ಸ್ಕಂಧದ ಕಟ್ಟಕಡೆಯ ಪದ್ಯದಲ್ಲಿ ಬಂದಿರುವುದರಿಂದ ಚಾಟುವಿಠಲನಾಥ ವಿಜಯನಗರದ ಅರಸನಾದ ಕೃಷ್ಣದೇವರಾಯನ ಕಾಲದಲ್ಲಿ ಇದ್ದಿರಬಹುದೆಂದು ತೋರುತ್ತದೆ. ಆದರೆ ಅತ್ಯಂತ ಪ್ರಾಚೀನವೆನಿಸಿದ ತಾಳೆ ಪ್ರತಿಯಲ್ಲಿ ಅದು ಶಾಲಿವಾಹನಶಕ ೧೪೪೧ರಲ್ಲಿ, ಅಂದರೆ ಕ್ರಿ.ಶ. ೧೫೧೯ರಲ್ಲಿ ಪ್ರತಿ ಮಾಡಲ್ಪಟ್ಟಿತೆಂದು ಹೇಳಿದೆ. ನಕಲು ಮಾಡುದುದೇ ೧೫೧೯ನೆಯ ವರ್ಷವಾದರೆ ಮೂಲಗ್ರಂಥ ಇನ್ನೂ ಮುಂಚೆಯೇ ಹುಟ್ಟಿರಬೇಕು. ಆ ಪ್ರತಿಯಲ್ಲಿ ಮೊದಲಿನ ಒಂಬತ್ತು ಸ್ಕಂಧಗಳು ಮಾತ್ರ ಇವೆ. ಆದ್ದರಿಂದ ಅವು ಅಷ್ಟಾದರೂ ಕೃಷ್ಣದೇವರಾಯನ ಕಾಲಕ್ಕಿಂತ ಮುಂಚೆಯೇ ರಚಿತವಾಗಿರಬೇಕು.

ಕನ್ನಡ ಭಾಗವತಕಾರ ಬೇರಾವ ಕವಿಯ ಸ್ಮರಣೆಯನ್ನೂ ಮಾಡಿಲ್ಲ. ಬೇರೆ ಕನ್ನಡ ಕವಿಗಳೂ ಆರನ ಹೆಸರನ್ನು ಸ್ಮರಿಸಿದಂತೆ ತೋರುವುದಿಲ್ಲ. ಹನ್ನೆರಡು ಸಾವಿರ ಪದ್ಯಗಳಷ್ಟು ವಿಸ್ತಾರವಾದ ಈ ಬೃಹದ್ಗ್ರಂಥವನ್ನು ರಚಿಸಿದ ಕವಿಯನ್ನು ಬೇರಾರೂ ಹೆಸರಿಸದಿರುವುದು ವಿಸ್ಮಯಜನಕವಾಗಿದೆ.

ಈ ಕವಿಗೆ ಹರಿಗುಣ ಸ್ತುತಿ, ಹರಿಪಾದಭಕ್ತರ ಚಾರಿತ್ರಕಥನ, ಭಕ್ತಿಮಾರ್ಗ ನಿರೂಪಣೆ- ಇವು ಮುಖ್ಯವಾದ ಗುರಿಗಳು. ಅಖಿಲಭವರೋಗಹರವೆನಿಸಿದ ಭಾಗವತದರ್ಥವನು ಬಲ್ಲಂದದಲಿ ಹೇಳುವುದಾಗಿ ಪ್ರತಿಜ್ಞೆ ಮಾಡಿ ಕವಿ ಲಲಿತವಾದ ಕನ್ನಡದಲ್ಲಿ ವಿಸ್ತಾರವಾದ ಷಟ್ಪದಿ ಕಾವ್ಯವನ್ನು ರಚಿಸಿದ್ದಾನೆ.

ಮೊದಲಿನ ಎರಡು ಸ್ಕಂಧಗಳು ಪೀಠಿಕಾರೂಪದಲ್ಲಿದ್ದು ಭಾಗವತದ ಉತ್ಪತ್ತಿ ಕಥೆಯನ್ನು ಹೇಳುತ್ತವೆ. ವ್ಯಾಸರು ಉಪದೇಶಿಸಿದ ಭಾಗವತವನ್ನು ಶುಕಮಹರ್ಷಿ ಪರೀಕ್ಷಿತನಿಗೆ ಉಪದೇಶಿಸಲು ಅಲ್ಲಿಯೇ ಇದ್ದು ಕೇಳಿದ ಸೂತಪುರಾಣಿಕ ಯಾಗ ಕಾರ್ಯಮಗ್ನರಾಗಿದ್ದ ಋಷಿಗಳಿಗೆ ನೈಮಿಷಾರಣ್ಯದಲ್ಲಿ ವಿಸ್ತರಿಸಿ ಹೇಳಿದನಂತೆ. ಇಷ್ಟಕ್ಕೆ ಮೊದಲ ಎರಡು ಸ್ಕಂಧಗಳು ಮುಗಿಯುತ್ತವೆ. ಮೂರನೆಯ ಸ್ಕಂಧದಲ್ಲಿ ಭಾಗವತ ಪ್ರಾರಂಭವಾಗಿ ಕಲ್ಪಾವಸಾನ ಕಥೆಯಿಂದ ತೊಡಗಿ ಹಿರಣ್ಯಕಶಿಪು, ಹಿರಣ್ಯಾಕ್ಷರ ಚರಿತ್ರೆ, ಕಪಿಲ ದೇವಹೂತಿಯರ ಕಥೆ, ದಕ್ಷಯಜ್ಞ ವೃತ್ತಾಂತ, ಗಿರಿಜಾ ಕಲ್ಯಾಣ, ಧ್ರುವ, ಪೃಥು, ಪುರಂಜನರ ಕಥೆಗಳು, ಪ್ರಿಯವತರಾಯ, ಜಡಭರತರ ಕಥೆಗಳು ಕೊನೆಗೊಳ್ಳುವ ವೇಳೆಗೆ ಐದನೆಯ ಸ್ಕಂಧ ಮುಗಿಯುತ್ತದೆ. ಆರು, ಏಳನೆಯ ಸ್ಕಂಧಗಳು ಅಜಾಮಿಳ, ವೃತ್ರಾಸುರ, ಪ್ರಹ್ಲಾದ ಮತ್ತು ತ್ರಿಪುರಾಸುರರ ಕಥೆಗಳನ್ನು ಹೇಳುತ್ತವೆ. ಎಂಟನೆಯ ಸ್ಕಂಧದಲ್ಲಿ ಮನುಮುನಿಗಳ ವರ್ಣನೆ, ಗಜೇಂದ್ರೋಪಾಖ್ಯಾನ, ಸಮುದ್ರಮಥನ ವೃತ್ತಾಂತ, ಮೋಹಿನಿಯ ಅವತಾರ, ವಾಮನ ಮತ್ಸ್ಯಾವತಾರಗಳ ಕಥೆ ಬಂದಿವೆ. ಒಂಬತ್ತನೆಯ ಸ್ಕಂಧ ಇಕ್ಷ್ವಾಕು ವಂಶದ ಕಥೆ, ಪರಶುರಾಮ ವೃತ್ತಾಂತ, ಶ್ರೀರಾಮಚರಿತ್ರೆ ಮುಂತಾದುವುಗಳನ್ನು ಹೇಳುತ್ತದೆ. ಆ ಸ್ಕಂಧದ ಕಡೆಯಲ್ಲಿ ಆರಂಭವಾಗುವ ಯಾದವ ವಂಶವರ್ಣನೆ ದಶಮ ಸ್ಕಂಧದಲ್ಲಿ ಮುಂದುವರಿದು ಯಾದವ ಶಿರೋಮಣಿಯಾದ ಶ್ರೀಕೃಷ್ಣನ ದಿವ್ಯಚರಿತ್ರೆ ವಿಸ್ತಾರವಾಗಿ ನಿರೂಪಿತವಾಗಿದೆ. ಭಾಗವತದಲ್ಲೆಲ್ಲ ಇದೇ ಅತ್ಯಂತ ದೀರ್ಘವೂ ಸ್ವಾರಸ್ಯವೂ ಜನಪ್ರಿಯವೂ ಆದ ಸ್ಕಂಧ. ಭಾಗವತವೆಂದೊಡನೆ ಜನರಿಗೆ ಶ್ರೀಕೃಷ್ಣಚರಿತಾಮೃತವೇ ನೆನಪಿಗೆ ಬರುತ್ತದೆ. ಹನ್ನೊಂದನೆಯ ಸ್ಕಂಧದಲ್ಲಿ ಶ್ರೀಕೃಷ್ಣ ವೈಕುಂಠಕ್ಕೆ ಹಿಂದಿರುಗಿದ ವೃತ್ತಾಂತವಿದೆ. ಕೊನೆಯ ಹನ್ನೆರಡನೆಯ ಸ್ಕಂಧ ಉಳಿದೆಲ್ಲ ಸ್ಕಂಧಗಳಿಗಿಂತ ತೀರ ಚಿಕ್ಕದು. ಇದರಲ್ಲಿ ಭವಿಷ್ಯನ್ನರಪಾಲರ ಚರಿತ್ರೆ ಸಂಕ್ಷೇಪವಾಗಿ ಬಂದಿದೆ. ಶುಕಮಹರ್ಷಿಗಳಿಂದಲೇ ನೇರವಾಗಿ ಭಾಗವತವನ್ನು ಕೇಳಿದ ಪರೀಕ್ಷಿತ ಮಹಾರಾಜ ಸದ್ಗತಿ ಹೊಂದಿದ ಕಥೆ ಈ ಸ್ಕಂಧದಲ್ಲಿ ಬಂದಿದೆ.

ಕನ್ನಡ ಭಾಗವತಕಾರ ಮೂಲ ಸಂಸ್ಕøತ ಭಾಗವತವನ್ನು ಕ್ರಮವಾಗಿ ಅನುವಾದ ಮಾಡಿದ್ದಾನೆ. ಆದರೂ ಇದು ಸ್ವತಂತ್ರ ಕಾವ್ಯದಂತೆ ಏಕಧಾರೆಯಾಗಿ ಎಲ್ಲಿಯೂ ಕುಂಟದೆ ನಡೆದಿದೆ. ಕವಿ ವರ್ಣನೆಗೆ ಪ್ರಾಧಾನ್ಯವಿತ್ತು ಕಥೆಯನ್ನು ಕುಗ್ಗಿಸುವ, ಮರೆಯುವ, ಸಾಹಸಕ್ಕೆ ಎಲ್ಲಿಯೂ ಕೈಹಾಕಿಲ್ಲ. ಅನಗತ್ಯವಾದ ಸಮಯೋಚಿತವಲ್ಲದ ವರ್ಣನೆ ಕಾವ್ಯದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಮಾತಿನ ಧೋರಣೆಯಲ್ಲಿ ತಾನಾಗಿ ಬಂದಿರುವ ಶಕ್ತಿಯ ಚಮತ್ಕಾರಗಳನ್ನು ಕವಿ ತಡೆದಿಲ್ಲವೇ ಹೊರತು ಉದ್ಧೇಶಪೂರ್ವಕವಾಗಿ ಅಲಂಕಾರ ಪ್ರಯೋಗಕ್ಕೆ ಆಸೆಪಟ್ಟಿಲ್ಲ. ಪಾಂಡಿತ್ಯ ಪ್ರದರ್ಶನ ಕವಿಯ ಆಶಯವಲ್ಲ. ಹರಿಕೀರ್ತನೆಯೇ ಆತನ ಪರಮ ಧ್ಯೇಯವಾಗಿದ್ದು ಅದನ್ನು ಸಾಧಿಸಿ ಕವಿ ಕೃತಕೃತ್ಯನಾಗಿದ್ದಾನೆ.
********ಮಾಹಿತಿ ಕೃಪೆ : ವಿಕಿಪೀಡಿಯಾ********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ