ಪುಟಗಳು

13 ಸೆಪ್ಟೆಂಬರ್ 2019

ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಅಗತ್ಯತೆ :

ಭಾರತದ ಇತಿಹಾಸದ ಪುಟಗಳ ಮೇಲೊಮ್ಮೆ ಕಣ್ಣಾಯಿಸಿದಾಗ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗಮಾಡಿ, ದೇಶಸೇವೆಯೇ ಈಶಸೇವೆ ಎಂದು ನಂಬಿ, ಕಡೆಗೆ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ಮುಡಿಪಾಗಿಸಿದ ಅಸಂಖ್ಯಾತ ನಿದರ್ಶನಗಳು ನಮಗೆ ದೊರೆಯುತ್ತವೆ. ಇತಿಹಾಸದಲ್ಲಿ ಮಾತ್ರವಲ್ಲ ಪುರಾಣಗಳಲ್ಲಿಯೂ ನಿಮಗೆ ಅನೇಕ ಉದಾಹರಣೆಗಳು ದೊರೆಯುತ್ತವೆ. ರಾಮಾಯಣದಲ್ಲಿ ಶ್ರೀರಾಮ “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸ” ಎಂದು ಹೇಳಿದ್ದಾನೆ. ಅಂದರೆ ತಾಯಿ ಮತ್ತು ತಾಯಿನೆಲ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎಂದರ್ಥ.

ಇಲ್ಲಿ ಏಕೆ ಈ ವಿಚಾರಗಳನ್ನು ಪ್ರಸ್ಥಾಪಮಾಡುತ್ತಿದ್ದೇನೆಂದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಭವ್ಯ ಭಾರತದ ಭವಿಷ್ಯತ್ತಿನ ಪ್ರಜೆಗಳಾಗುವ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬಹಳಷ್ಟು ಕಡಿಮೆಯಾಗುತ್ತಿದೆ. ದೇಶದ ಮೇಲಿನ ಅಭಿಮಾನ, ಪ್ರೀತಿ, ಗೌರವಗಳು ದಿನದಿಂದ ದಿನಕ್ಕೆ ಕುಗ್ಗಿಹೋಗತೋಡಗಿದೆ. ಎಷ್ಟರ ಮಟ್ಟಿಗೆ ಇದು ತನ್ನ ಪಾರುಪತ್ಯವನ್ನು ಮರೆಯುತ್ತಿದೆ ಎಂದರೆ ಇಂದಿನ ಯುವ ಪೀಳಿಗೆಗೆ ನಮ್ಮ ರಾಷ್ಟ್ರಗೀತೆಯನ್ನು ಹಾಡುವುದು ಸಹಾ ಕಷ್ಟವಾಗಿ ಹೋಗಿದೆ. ರಾಷ್ಟ್ರಗೀತೆಯನ್ನು ಹಾಡುವಾಗ ಕಡ್ಡಾಯವಾಗಿ ಎದ್ದು ನಿಂತು ಗೌರವ ಸಲ್ಲಿಸಬೇಕೆಂಬ ನಿಯಮವನ್ನು ಕೈಬಿಡುವ ಹಂತಕ್ಕೆ ಬಂದು ತಲುಪಿದ್ದೇವೆ. ನಮ್ಮ ನಾಡಗೀತೆ ತುಂಬಾ ಉದ್ದವಾಗಿದೆ ಎಂದು ಅದನ್ನು ಮೊಟಕುಗೊಳಿಸುವ ದುಸ್ಸಾಹಸಕ್ಕೆ ನಮ್ಮ ಸರಕಾರಗಳೆ ಸಮ್ಮತಿಯನ್ನು ನೀಡಿರುವಾಗ ಇನ್ನೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕಡಿಮೆಯಾಗಿರುವುದರಲ್ಲಿ ಆಶ್ಚರ್ಯಪಡಬೇಕಾದ ಅಗತ್ಯವಿಲ್ಲ. ಆದರೆ ಇದೊಂದು ಅಪಾಯಕಾರಿ ಬೆಳವಣಿಗೆ ಎಂಬುದು ನೆನಪಿರಲಿ.

ಸುಭಾಷ್‌ಚಂದ್ರ ಬೋಸರು ಜಪಾನಿನ ವಿದ್ಯಾರ್ಥಿಗಳನ್ನು ನೀವು ಆರಾಧ್ಯದೈವವೆಂದು ಪೂಜಿಸುವ ಬುದ್ಧ ನಿಮ್ಮ ರಾಷ್ಟ್ರದ ಮೇಲೆ ದಂಡೆತ್ತಿ ಬಂದರೆ ಏನು ಮಾಡುತ್ತೀರಿ? ಎಂದು ಕೇಳಿದರೆ ಅವನನ್ನು ಗುಂಡಿಕ್ಕಿ ಕೊಂದುಬಿಡುತ್ತೇವೆ ಎನ್ನುವ ಉತ್ತರವನ್ನು ಆ ಮಕ್ಕಳು ನೀಡುತ್ತಾರೆ. ಅಮೇರಿಕದ ಹೋಟೆಲ್ಲಿನಲ್ಲಿ ವಿವೇಕಾನಂದರಿಗೆ ದಿನವಿಡೀ ಊಟವನ್ನು ನೀಡದೇ ಅವಮಾನ ಮಾಡಿರುತ್ತಾರೆ. ನಂತರ ಸರ್ವಧರ್ಮ ಸಮ್ಮೇಳನದಲ್ಲಿ ವಿಶ್ವವಿಕ್ಯಾತ ಭಾಷಣವನ್ನು ನೀಡಿ ಜಗದ್ವಿಖ್ಯಾತರಾಗಿ ಮರಳಿ ಹೋಟೆಲ್ಲಿಗೆ ಬಂದಾಗ ಅಲ್ಲಿನ ಸಾಮಾನ್ಯ ಪ್ರಜೆ, ಆ ಹೋಟೆಲ್ಲಿನ ಸೇವಕ ಈಗ ನೀವು ವಿಶ್ವಖ್ಯಾತಿಯನ್ನು ಪಡೆದಿದ್ದೀರಿ ನಮ್ಮ ದೇಶದ ಬಗ್ಗೆ ಎಲ್ಲೂ ಕೀಳಾಗಿ ಹೇಳಬೇಡಿ ಎಂದು ತಾನು ಯಾವುದೇ ತಪ್ಪನ್ನೂ ಮಾಡದಿದ್ದರೂ ವಿವೇಕನಂದರಲ್ಲಿ ಅಂಗಾಲಾಚಿ ಬೇಡಿಕೊಳ್ಳುತ್ತಾನೆ. ಈ ವಿಚಾರಗಳನ್ನು ನೆನೆದಾಗ ಇಂತಹ ಒಂದು ಅಭಿಮಾನ, ಗೌರವ, ಭಕ್ತಿ ಏಕೆ ನಮ್ಮ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಕಂಡು ಬರುವುದಿಲ್ಲ? ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿ ವೈದ್ಯನಾಗುತ್ತೇನೆ, ಅಭಿಯಂತರ[ಇಂಜಿನೀಯರ್]ನಾಗುತ್ತೇನೆ, ಉದ್ಯಮಿಯಾಗುತ್ತೇನೆ, ವಿದೇಶಕ್ಕೆ ಹೋಗಿ ಸಾಧನೆ ಮಾಡುತ್ತೇನೆ ಎಂಬುದೇ ಆಗಿದೆ. ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡುವುದು ಉತ್ತಮವಾದ ಅಂಶವೇ ಆದರೆ ಅದರ ಉಪಯೋಗವನ್ನು ಮತ್ತಾವುದೋ ದೇಶಕ್ಕೆ ಕೊಟ್ಟು ಅದರ ಬೆಳವಣಿಗೆಗೆ ಕಾರಣವಾಗುವುದಿದೆಯಲ್ಲ ಅದು ನಮ್ಮ ಕಾಲಿಗೆ ನಾವೇ ಮುಳ್ಳು ಚುಚ್ಚಿಕೊಂಡತೆ ಎಂಬುದನ್ನು ಮರೆತಿದ್ದೇವೆ. ನನ್ನ ದೇಶಕ್ಕಾಗಿ ದುಡಿಯುತ್ತೇನೆ, ನನ್ನ ದೇಶದ ಸರ್ವತೋಮುಖ ಅಭಿವೃದ್ಧಿಗೆ ನನ್ನ ಕೊಡುಗೆಯನ್ನು ನೀಡುತ್ತೇನೆ, ದೇಶಕಾಯುವ ಯೋಧನಾಗುತ್ತೇನೆ, ರಾಷ್ಟ್ರಕ್ಕಾಗಿ ಪ್ರಾಣವನ್ನು ತ್ಯಾಗಮಾಡಲು ಸಿದ್ಧನಿದ್ದೇನೆ ಎಂದು ಹೇಳುವವರ ಸಂಖ್ಯೆ ವಿರಳವಾಗುತ್ತಿರುವುದು ನನ್ನ ದುಗುಡಕ್ಕೆ ಪ್ರಮುಖ ಕಾರಣವಾಗಿದೆ.

ಹಾಗಾದರೆ ಈ ಸಮಸ್ಸೆಗೆ ಕಾರಣಗಳೇನು? ಇದಕ್ಕೆ ಪರಿಹಾರಗಳೇ ಇಲ್ಲವೆ? ಎಂದು ಆಲೋಚಿಸಿದಾಗ ಪ್ರಮುಖವಾಗಿ ಕಂಡುಬರುವ ಅಂಶಗಳೆಂದರೆ, ತಂದೆತಾಯಿಗಳು ತಮ್ಮ ಮಕ್ಕಳ ಮೇಲೆ ಬೆಳೆಸಿಕೊಂಡ ಅತಿಯಾದ ಮಮಕಾರ, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಹೆಚ್ಚಾಗಿ ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದ ಪಠ್ಯಗಳಿಲ್ಲದಿರುವುದು, ವ್ಯವಹಾರಿಕ ಹಾಗೂ ವೈಯಕ್ತಿಕ ಲಾಭಗಳಿಗಾಗಿ ಬದುಕುವ ಮನೋಭಾವ, ಇತಿಹಾಸದ ಬಗೆಗಿನ ತಾತ್ಸಾರ ಇತ್ಯಾದಿ....... ಬಹುತೇಕ ಈ ಕಾರಣಗಳಿಂದಾಗಿಯೆ ನಮ್ಮ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಕೊರತೆ ಎದ್ದು ಕಾಣುತ್ತಿದೆ. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ದೇಶದ ಸಂಪತ್ತಾಗಿ ಬೆಳೆಸಬೇಕು, ಶಿಕ್ಷಕ ವೃಂದ ತಮ್ಮ ಜವಾಬ್ದಾರಿಯರಿತು ಕರ್ತವ್ಯ ನಿರ್ವಹಿಸಬೇಕು, ಸರಕಾರಗಳು ಸಕಾಲದಲ್ಲಿ ಸರಿಯಾದ ಕ್ರಮಗಳನ್ನು ಜಾರಿಗೊಳಿಸಬೇಕು, ಇದೆಲ್ಲಕ್ಕೂ ಮಿಗಿಲಾಗಿ ಪ್ರತಿಯೊಬ್ಬ ಭಾರತೀಯನು ತನ್ನ ತನು, ಮನ, ಧನವನ್ನು ದೇಶಕ್ಕಾಗಿ ಸಮರ್ಪಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸ್ವಾಭಿಮಾನಿಯಾಗಬೇಕು. ಹೀಗಾದಾಗ ಮಾತ್ರ ನಮ್ಮ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಹುಟ್ಟುಹಾಕಲು ಸಾಧ್ಯ. ಇಲ್ಲವಾದರೆ ಮುಂದೊಂದು ದಿನ ಭಾರತ ಮತ್ತೆ ಪರಕೀಯರ ವಶವಾಗುವ ಪರಿಸ್ಥಿತಿ ನಿರ್ಮಾಣವಾದರೆ ಆಶ್ಚರ್ಯ ಪಡಬೇಕಾಗಿಲ್ಲ.
               ಜೈ ಹಿಂದ್.....
              - ಖ್ವಾಜಾಹುಸೇನೆ ಎನ್.ಆರ್

***********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ