ಪುಟಗಳು

18 ಅಕ್ಟೋಬರ್ 2014

ಪದಚರಿತೆ-5



ಪದಚರಿತೆ: ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 5

ತಿಂಗಳು2: ಈಗ ತಿಂಗಳು ಶಬ್ದದ ಮತ್ತೊಂದು ಅರ್ಥದ ಬಗ್ಗೆ ಗಮನ ಹರಿಸೋಣ. ಚಂದ್ರನು ಕಾಣಿಸಿಕೊಂಡು ಬೆಳೆಯುತ್ತ ಪೂರ್ಣಗೊಂಡು ಮತ್ತೆ ಇಳಿಯುತ್ತ ಕಣ್ಮರೆಯಾಗುವ ಅವಧಿಯನ್ನು ಕನ್ನಡದಲ್ಲಿ ತಿಂಗಳು ಎನ್ನುತ್ತೇವೆ. ಇದು ರೂಢಿಗೆ ಬಂದಿರುವುದು ಪ್ರಾಯಶಃ ನಾವು ಚಾಂದ್ರಮಾನವನ್ನು ಅನುಸರಿಸಿ ಕಾಲಗಣನೆ ಮಾಡುವುದರಿಂದಾಗಿ. ಕ್ರಿಶ 800 ರ ಶಾಸನವೊಂದರಲ್ಲಿಯೇ ಈ ಅರ್ಥದಲ್ಲಿ ಈ ಶಬ್ದವನ್ನು ಬಳಸಲಾಗಿದೆ: "ಉಗ್ರಸೇನ ಗುರುವಡಿಗಳ್ ಒನ್ದು ತಿಙ್ಗಳ್ ಸನ್ಯಾಸನಂ ನೋನ್ತು". ಹಾಗೆಯೇ 'ವಡ್ಡಾರಾಧನೆ'ಯಲ್ಲಿ "ಇಂತು ವರ್ಷಾಕಾಲದ ನಾಲ್ಕು ತಿಂಗಳೊಳು ಮರ್ದನೂಡಿ" ಎಂಬ ಪ್ರಯೋಗವಿದೆ. "ಒಂದು ತಿಂಗಳು ಪಲವು ಮನ್ನಣೆಯಿಂದ ಮನ್ನಿಸಿ ತನ್ನ ಸೇನಾವೃಂದವನು" ಎಂಬುದು ಕುಮಾರವ್ಯಾಸನ ಮಾತು.  "ಹಿಂದಿರುಗಿ ಬಂದೆನ್ನನೊಂದೆ ಮಾತಿನಲಿ 'ತಿಂಗಳಾಯಿತೆ?' ಎಂದಳೆನ್ನ ಹೊಸಹುಡುಗಿ" ಎಂಬ ಸಾಲುಗಳು ಕೆಎಸ್ನ ಅವರ 'ತಿಂಗಳಾಯಿತೆ' ಕವನದ್ದು. ತಿಂಗಳು ಎಂಬುದನ್ನು ಮೂವತ್ತು ದಿವಸಗಳ ಅವಧಿ ಎಂಬುದರ ಜೊತೆಗೆ ಚೈತ್ರ ವೈಶಾಖ ಮುಂತಾದ ನಮ್ಮ ಮಾಸಗಳನ್ನು ಸೂಚಿಸುವಂತೆಯೇ ಜನವರಿ ಫೆಬ್ರವರಿ ಮುಂತಾದ ಇಂಗ್ಲಿಷ್ ಮಾಸಗಳನ್ನು ಸೂಚಿಸಲೂ ಬಳಸುತ್ತೇವೆ.
ಈ ಎರಡೂ ಅರ್ಥಗಳ ಶ್ಲೇಷೆಯನ್ನು ಅನೇಕ ಕಡೆಗಳಲ್ಲಿ ಕಾಣಬಹುದು. ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಇಂತಹ ಪ್ರಯೋಗವಿದೆ. "ತಿಂಗಳ್ವರಂ ಅಮೃತಮಂ ಆ ತಿಂಗಳ್ ಸುರಿದಪುದೆ ಬಯಸಿ ನೋಡುವರೆಲ್ಲಂ ತಿಂಗಳೊಳ್ ಒಂದು ದಿನಂ ಚೌತಿಯೊಳೆ ವಿಷಮನುಗುಳೞ್ವುದೆ ನೋಡಲ್". ಹಾಗೆಯೇ "ತಿಂಗಳ ಸಿರಿಯಿದು ಮುನ್ನಮೆ ತಿಂಗಳ ಸಿರಿಯಲ್ತು ಪಕ್ಷಮೆಂಬಾ ಪಕ್ಷಂ ಸಂಗತಿವಡೆಯದು ಪಗಲೀ ಭಂಗಿ ದಲದಱದವಾರೋ ನೆರೆಸಿರಿಯೆಱೆಯರ್" ಎಂಬುದು 'ಚಂದ್ರಪ್ರಭ ಪುರಾಣ'ದ ಅಗ್ಗಳನ ಚಮತ್ಕಾರದ ಮಾತು. ಬೇಂದ್ರೆಯವರಂತೂ ಇಂತಹುದಕ್ಕೆ ಖ್ಯಾತರಾದವರು. ಅವರ 'ಅನಂತ ಪ್ರಣಯ' ಎಂಬ ಗೀತೆಯಲ್ಲಿ "ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ" ಎಂಬ ಸಾಲು ಇಂತಹ ಶ್ಲೇಷೆಯುಳ್ಳದ್ದು.
ನಿರಂತರತೆಯನ್ನು ಸೂಚಿಸಲು ಈ ಶಬ್ದದ ದ್ವಿರುಕ್ತಿಯನ್ನು ಬಳಸುವುದು ರೂಢಿ: "ಸ್ಥಳದ ಹೆಜ್ಜುಂಕದಲ್ಲಿ ತಿಂಗಳ್ ತಿಂಗಳ್ಗೆ ಕೊಟ್ಟ ಗದ್ಯಾಣ 1" ಎಂಬ ಮಾತು ಹನ್ನೆರಡನೆಯ ಶತಮಾನದ ಶಾಸನವೊಂದರಲ್ಲಿ ಬಂದಿರುವ ಸಾಲು. ತಿಂಗಳ ಲೇಖೆ ಎಂದರೆ ಚಂದ್ರನ ಕಲೆ: "ತಿಂಗಳ ಲೇಖೆಯಂ ಬಿಡದೆ ಗೂಡಿವಂಗೆ ಮಹೇಶ್ವರಂಗೆ" (ಸೋಮದೇವನ 'ಉದ್ಭಟಕಾವ್ಯ'). 'ತಿಂಗಳುಗಟ್ಟಲೆ' 'ತಿಂಗಳುವಾರು' 'ತಿಂಗಳೊಪ್ಪತ್ತು' ಮುಂತಾದ ಮಾತುಗಳೂ ದಿನನಿತ್ಯದ ಪ್ರಯೋಗದಲ್ಲಿ ಹೇರಳವಾಗಿವೆ.
=====
ತಿಪ್ಪೆ: ಈ ದ್ರಾವಿಡ ಶಬ್ದವು ತಮಿಳಿನಲ್ಲಿ 'ತಿಪ್ಪೈ' ಎಂದೂ, ತೆಲುಗಿನಲ್ಲಿ 'ತಿಪ್ಪ' ಎಂದೂ, ತುಳುವಿನಲ್ಲಿ 'ತಿಪ್ಪೆ' ಎಂದೂ ಬಳಕೆಯಲ್ಲಿದೆ. ಇದರ ಅರ್ಥ ರಾಶಿ, ಗುಡ್ಡ ಎಂದರ್ಥ ('ದಿಬ್ಬ' ಎಂಬುದು ಇದಕ್ಕೆ ಸಂಬಂಧಿಸಿದ ಶಬ್ದ). ಆದರೆ ಈಗ ಈ ಶಬ್ದಕ್ಕಿರುವ ಅರ್ಥ ಕಸದ ರಾಶಿ ಅಥವಾ ಸಗಣಿ ರಾಶಿ ಎಂದು. ತಿಪ್ಪೆಗುಂಡಿ ಎಂದರೆ ಕಸ ಅಥವಾ ಸಗಣಿ ಹಾಕುವ ಗುಂಡಿ ಎಂದರ್ಥ. ಕಸದ ರಾಶಿ ಎಂಬರ್ಥದಲ್ಲಿ ನಯಸೇನನ 'ಧರ್ಮಾಮೃತ'ದಲ್ಲಿ ಈ ಶಬ್ದ ಬಳಕೆಯಾಗಿದೆ: "ವಾರಿಜಷಂಡಮಂ ಪದೆದು ಪೊರ್ದುವವೋಲ್ ಕಳಹಂಸೆ ತಿಪ್ಪೆಯಂ".
ಹಲವು ಮಕ್ಕಳು ಹುಟ್ಟಿ ಬಹುಬೇಗ ತೀರಿಕೊಂಡರೆ, ಮುಂದೆ ಆಗುವ ಮಗುವಿಗೆ, ತಿಪ್ಪೆಯ ಮೇಲೆ ಗಿಡವು ದೈವಕೃಪೆಯಿಂದ ಯಾರ ಹಂಗಿಗೂ ಒಳಗಾಗದೆ ಬೆಳೆಯುವ ರೀತಿಯಲ್ಲಿ ಈ ಮಗುವಾದರೂ ಬದುಕಿಕೊಳ್ಳಲಿ ಎಂಬ ಆಶಯದಿಂದ, ತಿಪ್ಪೆ ಹೆಸರನ್ನಿಡುವ ರೂಢಿಯಿದೆ. ಪ್ರಾಯಶಃ ಈ ರೂಢಿ ತುಂಬ ಹಳೆಯದೆಂದು ಕಾಣುತ್ತದೆ. ಏಕೆಂದರೆ ತಿಪ್ಪಣ್ಣ, ತಿಪ್ಪಯ್ಯ ಎಂಬ ಹೆಸರುಗಳು ಒಂಬತ್ತನೆಯ ಶತಮಾನದಿಂದಲೇ ಶಾಸನಗಳಲ್ಲಿ ದೊರೆಯುತ್ತವೆ. ಅಥವಾ ತಿಪ್ಪೆ ಎಂದರೆ ಬೂದಿಯ ರಾಶಿ ಎಂದು ಅರ್ಥೈಸಿ, ತಿಪ್ಪ ಎಂದರೆ ಅದರ ಮೇಲಿರುವವನು, ಶಿವ ಎಂಬ ಎಂದಾಗಿದೆಯೇ ಅಥವಾ ತಿರಿಪೆಯೇ ತಿಪ್ಪೆ ಎಂದಾಗಿ, ಶಿವ ಭಿಕ್ಷುಕನಾದ್ದರಿಂದ ಅವನಿಗೆ ಈ ಹೆಸರು ಬಂತೋ! ಇದಕ್ಕೆ ಸಮರ್ಥನೆಯಾಗಿ ತಿಪ್ಪೆ ಎಂಬುದು ಕೆಲವೆಡೆ 'ತಿರ್ಪೆ' ಎಂಬ ರೂಪದಲ್ಲಿಯೂ ದೊರೆಯುತ್ತದೆ: 'ತಿರ್ಪೆಸುಂಕ' (ಗೊಬ್ಬರದ ಗುಂಡಿಯ ಮೇಲೆ ಹಾಕುವ ಸುಂಕ)ದ ಪ್ರಸ್ತಾಪ  ಹದಿಮೂರನೆಯ ಶತಮಾನದ ಶಾಸನದಲ್ಲಿ ಉಲ್ಲೇಖವಾಗಿದೆ. ಹೀಗಾಗಿದ್ದರೆ ಮೊದಲು ತಿರ್ಪೆ ಎಂಬ ರೂಪ ದೊರೆತು, ಆ ಬಳಿಕ ತಿಪ್ಪೆ ರೂಪ ದೊರೆಯಬೇಕಾಗಿತ್ತು. ಅಲ್ಲದೆ, ಇತರ ದ್ರಾವಿಡ ಭಾಷೆಗಳಲ್ಲಿ ರೇಫವಿಲ್ಲ. ಆದ್ದರಿಂದ ಇದು ಹಿಂರಚನೆ (ಬ್ಯಾಕ್ ಫಾರ್ಮೇಷನ್) ಆಗಿರಬಹುದು. ಈಗಲೂ ಈ ಮೇಲೆ ಹೇಳಿದ ಹೆಸರುಗಳ ಜೊತೆಗೆ ತಿಪ್ಪೇಸ್ವಾಮಿ, ತಿಪ್ಪೇರುದ್ರಸ್ವಾಮಿ ಮುಂತಾದವು ಜನಜನಿತ ಹೆಸರುಗಳಾಗಿವೆ. ಚಿತ್ರದುರ್ಗ ಜಿಲ್ಲೆಯ ನಾಯಕನ ಹಟ್ಟಿಯ ತಿಪ್ಪೇಸ್ವಾಮಿ ಎಂಬ ದೈವ ಹಲವರ ಆರಾಧ್ಯ ದೈವ. ಊರುಗಳ ಹೆಸರಲ್ಲೂ ಈ ಶಬ್ದ ಬಳಕೆಯಾಗುತ್ತದೆ: ತಿಪ್ಪೆಯೂರ್ ಎಂಬ ಹೆಸರು ಹತ್ತನೆಯ ಶತಮಾನದ ಶಾಸನದಲ್ಲಿಯೇ ಸಿಕ್ಕುತ್ತದೆ. ತಿಪ್ಪೆಗೊಂಡನಹಳ್ಳಿ ಈಗಲೂ ಇದೆ.
'ತಿಪ್ಪೆ ಕೆದಕು' ಎಂಬ ನುಡಿಗಟ್ಟಿಗೆ ಹಳೆಯದನ್ನು ಹೊರತೆಗೆ ಎಂದರ್ಥವಿದೆ. 'ತಿಪ್ಪೆ ಸಾರಿಸು' ಎಂದರೆ ಸರಿಯಾದ ಉತ್ತರವೀಯದೆ ವಿಷಯವನ್ನು ಮರೆಮಾಚುವುದು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
=====
ತೊಗರಿ ನಮ್ಮದೇ ಅಥವಾ ಎರವಲು ತಂದದ್ದೆ?
ಪ್ರತಿನಿತ್ಯ ನಮ್ಮ ಮನೆಗಳಲ್ಲಿ ತೊಗರಿಯಿಲ್ಲದೆ ಅಡುಗೆಯೇ ಇಲ್ಲ; ಸಾರು, ಹುಳಿ, ತೊವ್ವೆ ಅಥವಾ ಹಬ್ಬದ ದಿನ ಒಬ್ಬಟ್ಟಿನ ಹೂರಣ ಇವೆಲ್ಲಕ್ಕೂ ನಾವು ಬಳಸುವುದು ತೊಗರಿ ಬೇಳೆಯನ್ನು, ಕೆಲವು ವೇಳೆ ಹಸಿ ತೊಗರಿ ಕಾಯನ್ನೂ ಹುಳಿ ಮಾಡಲು ಬಳಸುತ್ತೇವೆ. ಇದರಲ್ಲಿ ಹೆಚ್ಚು ಪ್ರೊಟೀನ್ ಇದೆ. ತೊಗರಿಗೆ ಸಸ್ಯವಿಜ್ಞಾನದಲ್ಲಿ ಲ್ಯಾಟಿನ್ನ Cajanus cajan ಎಂದು ಹೆಸರು. ಹಿಂದೆ ಇದನ್ನು ಆ ವಿಜ್ಞಾನದಲ್ಲಿ cajanus indicus ಅಥವಾ Cajanus indica ಎನ್ನುತ್ತಿದ್ದರು. ಇಂಗ್ಲಿಷಿನಲ್ಲಿ ಈ ಸಸ್ಯವನ್ನು pigeon pea ಎನ್ನುತ್ತಾರೆ. ಆದರೆ ಖ್ಯಾತ ಸಸ್ಯವಿಜ್ಞಾನಿಗಳಾಗಿದ್ದ ಬಿ.ಜಿ.ಎಲ್. ಸ್ವಾಮಿ ಅವರು ಇದು ನಮ್ಮ ದೇಶದ್ದಲ್ಲವೇ ಅಲ್ಲ ಎಂದು ವಾದಿಸಿದರು: ಮೂವತ್ತಮೂರು ವರ್ಷಗಳ ಹಿಂದೆ ಪ್ರಕಟವಾದ ತಮ್ಮ 'ತಮಿಳು ತಲೆಗಳ ನಡುವೆ' ಎಂಬ ಪುಸ್ತಕದಲ್ಲಿ, ಬೇರಾವುದೋ ಒಂದು ವಿಷಯದ ಬಗ್ಗೆ ಬರೆಯುತ್ತ ಅವರು ಇದು "ಆಫ್ರಿಕ ಖಂಡದಿಂದ ಪೂರ್ಚುಗೀಸರು ಕ್ರಿ.ಶ. ಹದಿನಾರನೆಯ ಶತಮಾನದಿಂದೀಚೆಗೆ ತಂದದ್ದು. ಅದು ಹೇಗೋ ನಮ್ಮ ನಾಲಗೆ ತೊಗರಿ ಬೇಳೆಯ ರುಚಿಗೆ ಒಗ್ಗಿಬಿಟ್ಟಿತು" ಎನ್ನುತ್ತಾರೆ. ಆದರೆ ಈ ಶಬ್ದದ ಬೆನ್ನು ಹತ್ತಿ ಹೋದಾಗ ಅದು ನಮ್ಮ ಪ್ರಾಚೀನ ಕನ್ನಡ ಗ್ರಂಥಗಳಲ್ಲಿಯೂ ಸಾಕಷ್ಟು ಬಳಕೆಯಲ್ಲಿದ್ದ ಶಬ್ದವೆಂದು ಗೊತ್ತಾಗುತ್ತದೆ.
ಈ ಶಬ್ದ ಕನ್ನಡದಲ್ಲಿ ತೊವರಿ, ತುವರಿ, ತೊಗರಿ ಎಂಬ ರೂಪಗಳಲ್ಲಿ ಬಳಕೆಯಾಗಿದೆ; ಈಗ ತೊಗರಿ ಎಂಬ ರೂಪ ಸಾರ್ವತ್ರಿಕವಾಗಿದೆ. ತಮಿಳಿನಲ್ಲಿ ತುವರೈ, ತುಳುವಿನಲ್ಲಿ ತೊಗರಿ ಅಥವಾ ತೊಗರೆ, ಮಲಯಾಳಂನಲ್ಲಿ ತೋರಿ ಹಾಗೂ ತೆಲುಗಿನಲ್ಲಿ ತೊಗರಿ, ತೊಗರು, ತೊಗರಿ ಎಂಬ ರೂಪಗಳಲ್ಲಿ ಬಳಕೆಯಲ್ಲಿದೆ (ಈ ಬೇಳೆಗೆ ತೆಲುಗಿನಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವುದು ಕಂದುಲು ಎಂದು). "ಈ ಪಯಿರು ನಮ್ಮಲ್ಲಿದ್ದುದಾಗಿ ಸಾಹಿತ್ಯದಲ್ಲಾಗಲೀ ಶಾಸನದಲ್ಲಾಗಲೀ ದಾಖಲೆಯಲ್ಲಿಲ್ಲ" ಎಂದಿದ್ದಾರೆ ಸ್ವಾಮಿ ಅವರು. ಆದರೆ ಕ್ರಿ.ಶ. 1025 ರಲ್ಲಿ ರಚಿತವಾದ ಚಾವುಂಡರಾಯನ 'ಲೋಕೋಪಕಾರಂ' ಗ್ರಂಥದಲ್ಲಿನ 'ಸೂಪಶಾಸ್ತ್ರಂ' ಎಂಬ ಅಧ್ಯಾಯಲಿಲ್ಲಲ್ಲದಿದ್ದರೂ 'ನರಾದಿವೈದ್ಯಪ್ರಕರಣಂ' ಎಂಬ ಅಧ್ಯಾಯದಲ್ಲಿ "ತೊವರಿ ಗೋದುವೆ ಜೋಳಮುರ್ದ್ದು ಪೆಸರ್ ಮಸೂರಿಗೆ ಗುಂಜಿಯೆಂಬಿವಱೊಂದಱೊಳಾದ ತೈಲ"ವನ್ನು ವಿಶಿಷ್ಟ ರೀತಿಯಲ್ಲಿ ಮಾಡಿ ಹಚ್ಚಿದರೆ ತುರಿ ವಾಸಿಯಾಗುತ್ತದೆ ಎಂದಿದ್ದಾನೆ. ಇಲ್ಲಿ ತೊವರಿ ಧಾನ್ಯ ಎಂಬುದು ಸ್ಪಷ್ಟವಾಗಿದೆ. ಸ್ವಾಮಿಯವರು "ಸೂಪಶಾಸ್ತ್ರಗಳಲ್ಲೂ ಇದರ ಉಲ್ಲೇಖವಿಲ್ಲ" ಎಂದಿದ್ದಾರೆ. ಆದರೆ ಎರಡನೇ ನಾಗವರ್ಮನು (ಇವನ ಕಾಲವೂ ಹನ್ನೊಂದನೇ ಶತಮಾನ) 'ಕಾವ್ಯಾವಲೋಕನ' ಎಂಬ ತನ್ನ ಗ್ರಂಥದಲ್ಲಿನ 'ಶಬ್ದಸ್ಮೃತಿ' ಎಂಬ ಭಾಗದ ವ್ಯಾಕರಣ ಸೂತ್ರವೊಂದಕ್ಕೆ ಉದಾಹರಣೆಯಾಗಿ ನೀಡಿರುವ (ತನಗಿಂತ ಹಿಂದೆ ಇದ್ದ ಗ್ರಂಥವೊಂದರಿಂದ ಆಯ್ದ) ಪದ್ಯ ಹೀಗಿದೆ: "ತುೞಿಕಲಡುಗೆಗಳೊಳೇಂ ಪೞಗೞವೆಯ ಕೂಳ್ ತಿವುಡುಗೞಿದ ತೊವರಿಯ ತೊವೆ ಕಾಯ್ದಿೞಿಪಿದ ತುಪ್ಪಂ ಕೋಡುವ ಕೞಲಲ್ಲದೆ ದಿವ್ಯಭೋಜನಂ ಪೆಱತುಂಟೇ" (ರುಚಿಯಿಲ್ಲದ ಅಡುಗೆಯಿಂದೇನು, ಹಳೆಯ ಅಕ್ಕಿಯಿಂದ ಮಾಡಿದ ಅನ್ನ, ಹೊಟ್ಟು ತೆಗೆದ ತೊಗರಿ (ಬೇಳೆಯ) ತೊವ್ವೆ, ಕಾಸಿದ ತುಪ್ಪ ಹಾಗೂ ತಂಪಾದ ಮೊಸರಲ್ಲದೆ ಬೇರೆ ಒಳ್ಳೆಯ ಊಟವಿದೆಯೇ!) ಎಂದು ಬಾಯಿ ಚಪ್ಪರಿಸುತ್ತ ಕೇಳುತ್ತಾನೆ. (ಈ ಪದ್ಯ ಹದಿಮೂರನೇ ಶತಮಾನದ 'ಸೂಕ್ತಿಸುಧಾರ್ಣವ' ಎಂಬ ಗ್ರಂಥದಲ್ಲೂ ಇದೆ). ಇದೇ ನಾಗವರ್ಮನ ಇನ್ನೊಂದು ಕೃತಿ 'ಅಭಿಧಾನ ವಸ್ತುಕೋಶ' ಎಂಬ ನಿಘಂಟುವಿನಲ್ಲಿ "ತುವರ್ಯಾಢಕಿ" (ತುವರಿ=ಆಢಕಿ) ಎಂದು ಸಮಾನಾರ್ಥಕಗಳಾಗಿ ಕೊಡುತ್ತಾನೆ. ಅಂದರೆ ಒಬ್ಬನೇ ತೊವರಿ, ತುವರಿ ಎರಡೂ ರೂಪಗಳನ್ನು ಬಳಸುತ್ತಾನೆ.
ತೊಗರಿ ಎಂಬ ರೂಪವೂ ಹಿಂದಿನ ಕಾಲದಿಂದಲೇ ಬಳಕೆಯಲ್ಲಿದೆ; ಕ್ರಿ.ಶ. 1159 ರ ಒಂದು ಶಾಸನದಲ್ಲಿ "ದೇವರ್ಗ್ಗೆ .. .. ಕಡಲೆ ತೊಗರಿಯಾದಿಯಾಗಿ ಸಲುವುದು" ಎಂದಿದೆ. ಹದಿಮೂರನೆಯ ಶತಮಾನದ ಪ್ರಸಿದ್ಧ ಕವಿ ಹರಿಹರನ 'ಬಸವರಾಜದೇವರರಗಳೆ'ಯಲ್ಲಿ ರಾಶಿಗಟ್ಟಲೆ ಕನಕರತ್ನಗಳನ್ನು ಬೇಡಿ ಬಸವಣ್ಣನನ್ನು ಪರೀಕ್ಷಿಸಲು ಬಂದ ಮಹದೇವಿಸೆಟ್ಟಿ ಎಂಬುವವನು ಅವನನ್ನು ಕಂಡೊಡನೆ ತಾನೇ ಬೆದರಿ "ಮೂವತ್ತೆತ್ತಿನೊಳ್ ಜೋಳದಕ್ಕಿ ಕಡಲೆ ತೊಗರಿಗಳಂ ತೀವೆ ಕೊಡುವುದು" ಎಂದು ಕೇಳುತ್ತಾನೆಂಬ ಪ್ರಸಂಗವಿದೆ. ಕ್ರಿ. ಶ. ಹದಿನೈದನೆಯ ಶತಮಾನದ ಮೂರನೆಯ ಮಂಗರಾಜನೆಂಬ ಕವಿ ಮಿಕ್ಕ ಗ್ರಂಥಗಳ ಜೊತೆಗೆ  'ಸೂಪಶಾಸ್ತ್ರ'ವೊಂದನ್ನೂ (ಅಡುಗೆ ಕಲೆ) ಬರೆದಿದ್ದಾನೆ. ಆದರೆ ತನ್ನ ಬೇರೊಂದು ಕಾವ್ಯವಾದ 'ನೇಮಿಜಿನೇಶ ಸಂಗತಿ'ಯಲ್ಲಿ "ಸಣ್ಣಗಳ ಮೇಲೋಗರ ತೊಗರಿಯ ತೋಯೆ ಬೆಣ್ಣೆಗಾಸಿದ ತುಪ್ಪವೆಱೆದು ಅಣ್ಣಂದಿರಂ ಬನ್ನಿ" ಎಂದು ಕರೆಯುವ ಉಲ್ಲೇಖವಿದೆ. ಹೀಗೆಯೇ ಆನಂತರದ ಗ್ರಂಥಗಳಲ್ಲಿಯೂ ಈ ಬೇಳೆಯ ಉಲ್ಲೇಖ ಸ್ಪಷ್ಟವಾಗಿದೆ; ಅದು ವ್ಯಾಪಕವಾಗಿ ಬಳಕೆಯಲ್ಲಿತ್ತೆಂಬುದಕ್ಕೆ ಸಾಕ್ಷಿಯಾಗಿದೆ.
ಸ್ವಾಮಿಯವರು ತಮ್ಮ ಲೇಖನದಲ್ಲಿ "ಸಂಸ್ಕೃತದ ತುಬರಿಕಾ ಎಂಬ ಸಮಾನಾರ್ಥದ ಪದ ಈಚೀಚೆಗೆ ಹುಟ್ಟಿಕೊಂಡದ್ದು" ಎನ್ನುತ್ತಾರೆ. ಆದರೆ ತುವರೀ ಮತ್ತು ತುವರಿಕಾ ಎಂಬ ಶಬ್ದಗಳು 'ಅಮರಕೋಶ'ದಲ್ಲಿ ಸಿಕ್ಕುತ್ತವೆ. ಹಿಂದೆ ಅದಕ್ಕೆ 'ಆಢಕಿ' ಎಂಬ ಹೆಸರೂ ಇತ್ತು. ನಾಗವರ್ಮ ತುವರಿಗೆ ಆಢಕಿಯನ್ನು ಸಮಾನಾರ್ಥಕವಾಗಿ ಹೇಳಿರುವುದನ್ನು ಈ ಹಿಂದೆಯೇ ಗಮನಿಸಿದ್ದೇವೆ. ಸರ್ ಮೊನಿಯೇರ್ ವಿಲಿಯಮ್ಸ್ ಅವರು ತಮ್ಮ ಸಂಸ್ಕೃತ-ಇಂಗ್ಲಿಷ್ ನಿಂಟುವಿನಲ್ಲಿ ಆಢಕ ಶಬ್ದವನ್ನು ಕೊಟ್ಟು ಅದಕ್ಕೆ the pulse Cajanus Indicus Spreng ಎಂಬ ಅರ್ಥವನ್ನಿತ್ತು, ಈ ಶಬ್ದದ ಆಕರವೆಂದು ಸುಶ್ರುತ ಸಂಹಿತೆಯನ್ನು ಉಲ್ಲೇಖಿಸುತ್ತಾರೆ. ಭಾರತ ಸರ್ಕಾರದ 'ಆಯುರ್ವೇದಿಕ್ ಫಾರ್ಮಕೋಪಿಯ ಆಫ್ ಇಂಡಿಯ'ದಲ್ಲಿ ಆಢಕಿಯಿಂದ ಕಿಂಕಾಯಣ ಘುಟಿಕಾ ಎಂಬ ಔಷಧಿಯನ್ನು ತಯಾರಿಸುವ ಬಗ್ಗೆ ವಿವರವಿದೆ.
ತೊಗರಿಯಲ್ಲಿ ಎರಡು ಪ್ರಭೇದಗಳ ಉಲ್ಲೇಖವೂ ನಮ್ಮ ಬರವಣಿಗೆ ಮತ್ತು ಆಡುಮಾತುಗಳಲ್ಲಿ ರೂಢಿಯಲ್ಲಿದೆ. ಅವೆಂದರೆ ಅಚ್ಛತೊಗರಿ ಮತ್ತು ಕಾಡು ತೊಗರಿ. ವಿಶೇಷಣಗಳೇ ಸೂಚಿಸುವಂತೆ ಇವು ಹೊಲದಲ್ಲಿ ಬೆಳೆದ ಹಾಗೂ ಕಾಡಿನಲ್ಲಿ ಬೇಸಾಯವಿಲ್ಲದೆ ಬೆಳೆದ ಪ್ರಭೇದಗಳನ್ನು ಸೂಚಿಸುತ್ತವೆ. (ಕಾಡುತೊಗರಿ ಎಂಬುಕ್ಕೆ ಕಿಟೆಲ್ Atylosia candollei ಎಂಬ ಲ್ಯಾಟಿನ್ ಸಸ್ಯವೈಜ್ಞಾನಿಕ ಹೆಸರು ನೀಡುತ್ತಾರೆ). ತೆಲುಗಿನಲ್ಲಿ ಇವನ್ನು ಕೊಂಡಕಂದುಲು ಮತ್ತು ಪೊಟ್ಟಿಕಂದುಲು ಎನ್ನುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಒಂದಾದ ತೊದವ (ತೋಡ)ದಲ್ಲಿ ತಿಫಿನಿ ಎಂಬುದು ಕಾಡು ತೊಗರಿಗಿರುವ ಹೆಸರೆಂದು (Atylosia candollei) ಟಿ. ಬರೋ ಮತ್ತು ಎಂ. ಬಿ ಎಮೆನೂ ತಮ್ಮ 'ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ'ಯಲ್ಲಿ ಹೇಳುತ್ತಾರೆ. ಅಲ್ಲದೆ ತೊಗರಿಯ ಗಿಡವು ಹೊಲಗಳಲ್ಲಿ ಚಿಕ್ಕ ಪೊದೆಯಂತೆ ಬೆಳೆಯುವುದನ್ನೂ, ಮರದ ಹಾಗೆ ಬೆಳೆಯುವ ಪ್ರಭೇದವನ್ನೂ ನಾವು ನೋಡಿದ್ದೇವೆ.
ಸಸ್ಯವಿಜ್ಞಾನದಲ್ಲಿ ಇದರ ಬಗ್ಗೆ ಏನಿದೆಯೆಂದು ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದವು. ಇದರಲ್ಲಿ ಬೇಸಾಯ ಮಾಡುವ ಮತ್ತು ತಾನಾಗಿ ಬೆಳೆಯುವ Cajanus ಜಾತಿಯ ಮೂವತ್ತೆರಡು ಬಗೆಗಳನ್ನು ಸಸ್ಯಶಾಸ್ತ್ರಜ್ಞರು ಗುರುತಿಸುತ್ತಾರೆ. ಭಾರತ ಆಫ್ರಿಕದಂತಹ ಉಷ್ಣವಲಯವು ಇದರ ತವರು ತಾಣ. ಬರ್ಕ್ಹಿಲ್ ಎಂಬುವವರು ಭಾರತದ ಈ ಸಸ್ಯ ಕ್ರಿ.ಪೂ. ಮೂರನೆಯ ಶತಮಾನದ ಹೊತ್ತಿಗೆ ಮಲಯಕ್ಕೆ ಹೋಯಿತು, ಆನಂತರ ಇತರೆಡೆಗಳಿಗೆ ಹಬ್ಬಿತು ಎನ್ನುತ್ತಾರೆ. ಮೊದಲು ಇದು ಪ್ರಾಯಶಃ ಹೆಚ್ಚು ಬೆಳೆಯುತ್ತಿದ್ದುದು ದಕ್ಷಿಣ ಭಾರತದಲ್ಲೇ ಇರಬಹುದು. ಹಲವಾರು ಸ್ವತಂತ್ರ ಭಾಷೆಗಳಗಿ ಬೇರ್ಪಡುವ ಮುನ್ನ ಕ್ರಿ.ಪೂ. ಆರನೆಯ ಶತಮಾನದ ಹೊತ್ತಿಗಿದ್ದ ದ್ರಾವಿಡ ಭಾಷಾ ಸ್ವರೂಪವನ್ನು ಮೂಲದ್ರಾವಿಡ (Proto-Dravidian) ಎಂದು ಭಾಷಾವಿಜ್ಞಾನಿಗಳು ಕರೆಯುವುದು ರೂಢಿ. ಸುಪ್ರಸಿದ್ಧ ದ್ರಾವಿಡ ಭಾಷಾವಿಜ್ಞಾನಿಗಳಾಗಿದ್ದ ಭದ್ರಮರಾಜು ಕೃಷ್ಣಮೂರ್ತಿ ಅವರು ಮೂಲ ದ್ರಾವಿಡದಲ್ಲ್ಲಿ ತೊಗರಿಗೆ 'ತುವರ್' ಎಂಬ ರೂಪವಿದ್ದಿರಬೇಕೆಂದು ಅದನ್ನು ಪುನಾರಚಿಸಿರುವುದಾಗಿ 'Proto-Dravidian Agriculture' ಎಂಬ ತಮ್ಮ ಸಂಶೋಧನ ಲೇಖನದಲ್ಲಿ ಎಫ್.ಸಿ. ಸೌತ್‍ವರ್ತ್ ಎಂಬುವವರು ಉಲ್ಲೇಖಿಸುತ್ತಾರೆ.
ಸ್ವಾಮಿಯವರು ಹೇಳುವಂತೆ ತೊಗರಿ ಕೆಲವರಲ್ಲಿ ಶ್ರಾದ್ಧಕರ್ಮಗಳಲ್ಲಿ ನಿಷಿದ್ಧವಿರಬಹುದು. (ಹೀಗೆ ನಿಷಿದ್ಧಗೊಳ್ಳುವ ಧಾನ್ಯ ತರಕಾರಿಗಳನ್ನು 'ವಿಶ್ವಾಮಿತ್ರ ಸೃಷ್ಟಿ' ಎಂದು ಹೇಳುವುದನ್ನು ಕೇಳಿದ್ದೇವೆ, ಅಂದರೆ ಅವು 'ಬ್ರಹ್ಮಸೃಷ್ಟಿ'ಯಲ್ಲ, ಅರ್ಥಾತ್ ಸ್ಥಳೀಯವಾದದ್ದಲ್ಲ ಎಂಬುದು). ಆದರೆ ಅದಕ್ಕೆ ಕಾರಣ ಏನೋ ತಿಳಿಯದು. ಇಷ್ಟನ್ನು ಬಿಟ್ಟರೆ ತೊಗರಿ ನಮ್ಮದೇ, ಎರವಲು ತಂದದ್ದಲ್ಲ ಎಂಬುದು ರುಜುವಾತಾಗುತ್ತದೆ.
=====
ತೊತ್ತು: ಇದೊಂದು ದ್ರಾವಿಡ ಪದ; ಇದರ ಹಳಗನ್ನಡ ರೂಪ 'ತೊೞ್ತು' ಎಂದು. ತಮಿಳಿನಲ್ಲಿದು ತೊಳುತ್ತೈ, ತೊತ್ತು ಎಂಬ ರೂಪಗಳಲ್ಲಿಯೂ, ತೆಲುಗಿನಲ್ಲಿ ತೊತ್ತು ಎಂಬುದಾಗಿಯೂ ಸಿಕ್ಕುತ್ತದೆ. ಇದರ ಮೂಲ 'ತೊೞಿಲ್' ಎಂದರೆ ಕೆಲಸ (ಮಲಯಾಳಂ ಮತ್ತು ತುಳುಗಳಲ್ಲಿ ಕೆಲಸ ಎಂಬರ್ಥದಲ್ಲಿ ಈ ಶಬ್ದದ ಬಳಕೆಯಿದೆ). 'ತೊೞಿಲ್' ಅನ್ನು ಮಾಡುವವನೇ 'ತೊೞ್ತು'. ಈ ಶಬ್ದವು ಪುಲ್ಲಿಂಗ ಸ್ತೀಲಿಂಗಗಳೆರಡರಲ್ಲೂ ಒಂದೇ ಆಗಿದೆ: "ತೊೞ್ತೆಂದು ದಾಸನುಂ ದಾಸಿಯುಮಕ್ಕುಂ" ('ಶಬ್ದಮಣಿದರ್ಪಣ'). ತೊೞ್ತು ಮಾಡುವ ಕೆಲಸವೇ 'ತೊೞ್ತುವೆಸ' ("ಎನಗೆಡೆಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ" - 'ಪಂಪಭಾರತ') ಅಥವಾ ತೊೞ್ತುಗೆಲಸ ("ತೊೞ್ತುಗೆಲಸಕ್ಕರಮನೆಯಂ ಪುಗುವ ಪೊಱಮಡುವ" - ದುರ್ಗಸಿಂಹನ 'ಪಂಚತಂತ್ರ').
ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ತನ್ನನ್ನು ಒಬ್ಬರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೇ ತೊತ್ತಿನ ಲಕ್ಷಣ. "ತೊತ್ತಿಂಗೆ ಲಕ್ಷಣವೇಕಯ್ಯ? ಅವರೊಕ್ಕುದನುಂಡು ಮಿಕ್ಕುದ ಕಾಯ್ದುಕೊಂಡಿಪ್ಪುದು" ಎಂಬುದು ಬಸವಣ್ಣನ ವಚನದ ಮಾತು. ಹಲವು ವೇಳೆ ಮಕ್ಕಳನ್ನು ತೊತ್ತುಗಳಾಗಿ ಬಿಡುತ್ತಿದ್ದರು. ಇಂತಹವರನ್ನು 'ಬೞಿದೊತ್ತುಕ' (ಬೞಿ=ವಂಶ) ಎನ್ನುತ್ತಿದ್ದರು. ಹರಿಹರನ 'ನಂಬಿಯಣ್ಣನ ರಗಳೆ'ಯಲ್ಲಿ "ತಾವಿವರ್ಗೆ ವಂಶಾವಳಿಯಲಿ ಬಂದ ಬಳಿದೊತ್ತಿರ ಮಕ್ಕಳಾದ ಕಾರಣ" ಎಂಬ ಮಾತಿದೆ.
ತೊತ್ತುಗಳ ಮೇಲೆ ಸಂಪೂರ್ಣ ಹಕ್ಕಿರುತ್ತಿದ್ದುದರಿಂದ ಒಡೆಯರು ಹೆಣ್ಣುದೊತ್ತುಗಳನ್ನು  ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದುದರಿಂದ ಅಂತಹವರ ಮಕ್ಕಳನ್ನು 'ತೊೞ್ಪುಟ್ಟಿ' ಎನ್ನುತ್ತಿದ್ದರು ("ವಿದುರನೆಂಬೀ ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ" - 'ಪಂಪಭಾರತ'). ತೊತ್ತುಗಳನ್ನು ಕಾಣಿಕೆಯಾಗಿ ಕೊಡುವ ಪದ್ಧತಿ ತೀರ ಹಳೆಯದು. ರೆಬ್ಬಕಬ್ಬೆ ಎನ್ನುವವಳು ತನ್ನ ತೊತ್ತು ಮಾಚಬ್ಬೆಯನ್ನು ಸಕಳೇಶ್ವರ ದೇವರಿಗೆ (ದೇವಸ್ಥಾನದ ಕೆಲಸಗಳನ್ನು ಮಾಡಲು) ಕಾಣಿಕೆ ಕೊಟ್ಟ ಉಲ್ಲೇಖ 11ನೆಯ ಶತಮಾನದ ಶಾಸನವೊಂದರಲ್ಲಿದೆ.
"ಕೂರ್ಪ ತಾಯಂ ಮಾ ತೊತ್ತ ಕೊಂಬಂತೆಕ" ಎಂಬ ಗಾದೆಯ ಉಲ್ಲೇಖ ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ದಲ್ಲಿದೆ. ತೊತ್ತುಗಳನ್ನು ಸಂತೆಯಲ್ಲಿ ಮಾರುತ್ತಿದ್ದ ಅಂಶ ಶಾಸನೋಕ್ತವಾಗಿದೆ. ಹರಿಶ್ಚಂದ್ರನು ತನ್ನ ಹೆಂಡತಿಯನ್ನು ಕಾಶಿಯ ಬ್ರಾಹ್ಮಣನೊಬ್ಬನಿಗೆ ಮಾರಿದ ಪ್ರಸಂಗವೂ ಅದೇ ಕಾವ್ಯದಲ್ಲಿದೆ.
=====
ದಂಡ: ಇದು ಸಂಸ್ಕೃತ ಶಬ್ದ. ದಂಡ ಎಂದರೆ ಕೋಲು. 'ಪಂಪಭಾರತ'ದಲ್ಲಿ ಉದ್ದವಾದ ಕೋಲನ್ನು 'ದಂಡಕಾಷ್ಠ' ಎಂದಿದ್ದರೆ ("ದಂಡಕಾಷ್ಠದ ತುದಿಯೊಳ್ ಪಳಂಚಲೆಯೆ ಕೋವಣಮಂ ಕಟ್ಟಿ"), ಚಿಕ್ಕ ಕೋಲನ್ನು 'ಸುಕುಮಾರ ಚರಿತೆ' ಯು 'ದಂಡಖಂಡ' ಎನ್ನುತ್ತದೆ. ("ದಂಡಖಂಡಾಘಾತದೊಳು"). ಬಂಧುವರ್ಮನ 'ಜೀವಸಂಬೋಧನೆ'ಯಲ್ಲಿ "ಊಱುವ ದಂಡವೆರಸು" ಎಂಬಲ್ಲಿ ಊರೆಗೋಲು ಸೂಚಿತವಾಗಿದೆ.
ತಕ್ಕಡಿಯ ಕೋಲನ್ನು 'ತುಲಾದಂಡ'ವೆನ್ನುತ್ತಿದ್ದರು. "ಧರೆಯಱಿಯಲೊಡಂ ತೂಗಲ್ ಧರೆಗೆ ತುಲಾದಂಡಮಲ್ತೆ ಮದ್ಭುಜದಂಡಂ" ಎಂಬ ಮಾತು 'ಆದಿಪುರಾಣ'ದಲ್ಲಿದೆ. ನಾಲ್ಕು ಮೊಳದ ಅಳತೆಯನ್ನು 'ವ್ಯವಹಾರ ಗಣಿತ'ವು ದಂಡ ಎಂಬ ಹೆಸರಿನಿಂದ ಕರೆಯುತ್ತದೆ. ಸನ್ಯಾಸಿಗಳು ಹಿಡಿದುಕೊಳ್ಳುವ ಕೋಲನ್ನೂ 'ದಂಡ' ಎಂಬ ಶಬ್ದವು ಸೂಚಿಸುತ್ತದೆ. ಹಾಗೆಯೇ ಅಧಿಕಾರದ ಸೂಚಕವಾಗಿ 'ದಂಡ' ಬಳಕೆಯಲ್ಲಿದೆ. ಸೈನ್ಯವನ್ನೂ 'ದಂಡ' ಎನ್ನುತ್ತಿದ್ದರು ("ನೃಪಸೇನೆಯೊಳಂ ದಂಡಂ" - 'ಅಭಿಧಾನ ವಸ್ತುಕೋಶ'). ಅದಕ್ಕೇ ಸೇನೆಯ ನಾಯಕನನ್ನು 'ದಂಡನಾಯಕ' ಅಥವಾ 'ದಂಡನಾಥ' ಎನ್ನುತ್ತಿದ್ದುದು.
ಪ್ರಾಯಶಃ ಕೋಲಿಗೂ ಹೊಡೆಯುವಿಕೆಗೂ ಇರುವ ಸಂಬಂಧದಿಂದಾಗಿ ದಂಡ ಎಂದರೆ ಶಿಕ್ಷೆ ಎಂಬರ್ಥ ಪ್ರಾಪ್ತವಾಗುತ್ತದೆ. ಮರಣದಂಡನೆಯನ್ನು ವಚನಗಳು 'ತಲೆದಂಡ' ಎನ್ನುತ್ತವೆ.  ಹೀಗೆ ಶಿಕ್ಷೆ ಕೊಡಬಲ್ಲ ಅಧಿಕಾರಿಯೇ ದಂಡಧರ ("ಮತ್ತಂ ದಂಡಧರರಿಲ್ಲದಂದು ತಂತಮ್ಮ ವೃತ್ತಿಗಳಂ ಪ್ರಜೆಗಳತಿಕ್ರಮಿಸಿ ನಡೆಗುಮೆಂದು" ಎಂಬುದು ಪಂಪನ 'ಆದಿಪುರಾಣ'ದ ಮಾತು. ಅತ್ಯಂತ ದೊಡ್ಡ ಶಿಕ್ಷೆಗಾರ ಯಮನಾದ್ದರಿಂದ ಅವನನ್ನು 'ದಂಡಪಾಣಿ' ಎನ್ನುತ್ತವೆ ಕಾವ್ಯಗಳು ("ಕೋದಂಡಪಾಣಿಗಳ್ ದಂಡಪಾಣಿಗೆಣೆಯೆನೆ ತಳರ್ದರ್" – 'ಪಂಪರಾಮಾಯಣ'). ಶಿಕ್ಷಿಸುವ ಅಧಿಕಾರವೇ 'ದಂಡನೀತಿ' ಅಥವಾ ರಾಜನೀತಿ. "ನಿನ್ನ ದಂಡನೀತಿಯ ಪುದುವೆ ವಲಂ ದಂಡರತ್ನಮೆಂಬುದು ಪೆಱತೇ" ಎಂದೂ ಅಲ್ಲಿಯೇ ಬಳಕೆಯಾಗಿದೆ. ದಂಡನೆಗೊಳಗಾಗುವುದು 'ದಂಡಂಗೊಳ್ಳು'ವುದು ("ಲೆಂಕರ್ ದಂಡಗೊಂಡರಂತೆ ಶಂಕಿಸುತ್ತುಂ" - 'ಧರ್ಮಾಮೃತ'). ಜುಲ್ಮಾನೆಯನ್ನೂ ದಂಡ ಎಂಬ ಶಬ್ದವೇ ಸೂಚಿಸುತ್ತದೆ.
======
ದಿವ್ಯ: ಈ ಶಬ್ದವು ದೈವಕ್ಕೆ ಅಥವಾ ಸ್ವರ್ಗಕ್ಕೆ ಸಂಬಂಧಿಸಿದುದು ಎಂಬರ್ಥದ ಸಂಸ್ಕೃತ ವಿಶೇಷಣ. ಆದರೆ ಇದನ್ನು ಒಂದು ನಾಮಪದವಾಗಿ ಹಾಗೂ ಪರಿಭಾಷೆಯಾಗಿ ಬಳಸುವ ರೂಢಿಯು ಕನ್ನಡ ನಾಡಿನಲ್ಲಿ ಹಿಂದಿನಿಂದಲೂ ಇದೆ. ಅಪರಾಧವೊಂದು ನಡೆದರೆ ಅದನ್ನು ಸಾಬೀತುಪಡಿಸಲು ಸಾಕ್ಷ್ಯ ಬೇಕು. ಸಾಕ್ಷ್ಯಗಳು ಎರಡು ಬಗೆ: ಮಾನುಷ ಹಾಗೂ ದೈವ. ಅಪರಾಧವನ್ನು ಕಣ್ಣಾರೆ ಕಂಡವನು ಇಲ್ಲದಿದ್ದಾಗ ಹಿಂದಿನವರು ಮೊರೆಹೊಗುತ್ತಿದ್ದುದು ದಿವ್ಯಸಾಕ್ಷ್ಯವನ್ನು. ಇದನ್ನೇ 'ದಿವ್ಯ' ಅಥವಾ 'ದಿಬ್ಯ' ಎಂದು ಕರೆಯುವುದು (ಇಂಗ್ಲಿಷಿನಲ್ಲಿ ಆರ್ಡಿಯಲ್ ಎನ್ನುತ್ತಾರೆ). ರಾಜದ್ರೋಹ, ದೊಡ್ಡ ಪಾತಕಗಳು ಅಥವಾ ಭಾರಿ ಮೊತ್ತದ ಹಣ ವ್ಯವಹಾರದ ಮೋಸ ಇಂಥವುಗಳ ತೀರ್ಮಾನ ಮಾಡಲು ಮಾತ್ರವೇ 'ದಿವ್ಯ'ವನ್ನು ಆಧರಿಸಬೇಕು ಎಂದು 'ಅಗ್ನಿಪುರಾಣ'ವು ಹೇಳುತ್ತದೆ. ಕನ್ನಡದ ಕಾವ್ಯ ಶಾಸನಗಳಲ್ಲಿ ದಿವ್ಯದ ಉಲ್ಲೇಖಗಳನ್ನು ಹೇರಳವಾಗಿ ಕಾಣಬಹುದು.
ದಿವ್ಯಗಳಲ್ಲಿ ಎಷ್ಟು ವಿಧ ಹಾಗೂ ಅವುಗಳ ಸ್ವರೂಪದ ಬಗ್ಗೆ ಏಕಾಭಿಪ್ರಾಯವಿಲ್ಲ. ಐದರಿಂದ ಒಂಬತ್ತು ವಿಧಧ ದಿವ್ಯಗಳನ್ನು ವಿವಿಧ ಸ್ಮೃತಿಗಳು ಉಲ್ಲೇಖಿಸುತ್ತವೆ. ವಿಷ್ಣುಸ್ಮೃತಿಯು ದಿವ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತದೆ: ಸಾಧಾರಣ ಮತ್ತು ಮುಖ್ಯ. ಮೊದಲನೆಯವು ಕೆಲವು ವಸ್ತುಗಳನ್ನು ಹಿಡಿದು ಪ್ರಮಾಣ ಮಾಡುವುದನ್ನು ಒಳಗೊಂಡರೆ, ಎರಡನೆಯದು ಕಷ್ಟಕರವಾದ ನಾನಾ ಬಗೆಯ ಪರೀಕ್ಷೆಗಳನ್ನು ಒಳಗೊಳ್ಳುವಂಥದು.
ಕನ್ನಡ ನಾಡಿನಲ್ಲಿ ಪ್ರಚಲಿತವಿದ್ದುದು ಮುಖ್ಯವಾಗಿ ಏಳು ಬಗೆಯ ದಿವ್ಯಗಳು ಎನ್ನಲಾಗಿದೆ. ಅವುಗಳೆಂದರೆ ಕೋಶ, ರವಿ, ತಂಡುಲ, ಅಗ್ನಿ, ತಪ್ತಮಾಷ, ಜಲ ಮತ್ತು ವಿಷ. ಹಲ್ಲು ಕೀಳದ ಸರ್ಪವನ್ನು ಹಿಡಿದುಕೊಂಡರೂ ಅದು ಕಚ್ಚದಿದ್ದರೆ ಅಂಥವನು ನಿರಪರಾಧಿ; ಈ 'ಸರ್ಪದಿವ್ಯ'ದ ಉಲ್ಲೇಖ ಬಸವಣ್ಣನ ವಚನವೊಂದರಲ್ಲಿದೆ. ಅಂತೆಯೇ ಕೆಂಪಗೆ ಕಾದ ಪಂಚಲೋಹದ ಗುಂಡು ಅಥವಾ ಕಬ್ಬಿಣದ ಗುಳವನ್ನು ಹಿಡಿದುಕೊಳ್ಳುವ ಅಗ್ನಿದಿವ್ಯದ ಪ್ರಸ್ತಾಪ ರಾಘವಾಂಕನ 'ಸಿದ್ಧರಾಮ ಚಾರಿತ್ರ'ದಲ್ಲಿದೆ. ಹೀಗೆ ದಿವ್ಯಕ್ಕೊಳಗಾಗಿ ನಿರಪರಾಧಿಯೆಂದು ಪರಿಗಣಿತನಾದವನಿಗೆ 'ಜಯಪತ್ರ'ವನ್ನು ಕೊಡುತ್ತಿದ್ದರಂತೆ.
=====
ದೇಸಿ: ಇದು ದೇಶ ಎಂಬುದರಿಂದಾದ ದೇಶಿ ಎಂಬ ಸಂಸ್ಕೃತ ಶಬ್ದದ ಮತ್ತೊಂದು ರೂಪ. ಈ ಶಬ್ದವು ಅನೇಕ ಅರ್ಥಗಳನ್ನೊಳಗೊಂಡು ಬಳಕೆಯಾಗಿದೆ. ಸ್ಥಳೀಯ ಸಂಸ್ಕೃತಿಗೆ ಈ ಹೆಸರೀಗ ಸಲ್ಲುತ್ತಿದೆ. ಕವಿರಾಜಮಾರ್ಗದಲ್ಲಿಯೇ ದೇಶಿ ದೇಸಿ ಎಂಬೆರಡು ರೂಪಗಳೂ ಸಿಕ್ಕುತ್ತವೆ. ದೇಶಿ ಎಂಬುದು (ಕನ್ನಡದ) ಉಪಭಾಷೆ ("ದೇಶಿ ಬೇಱೆವೇಱಪ್ಪುದಱಿಂ") ಎಂಬರ್ಥದಲ್ಲಿದ್ದರೆ, ದೇಸಿ ಎಂಬುದು ಬಳಕೆಯ ನುಡಿ ("ದೇಸಿಯಲ್ಲವೆಂದದನಱಿದಿರ್ದುಂ") ಎಂಬರ್ಥದಲ್ಲಿಯೂ, ಅಚ್ಚಗನ್ನಡದ (ದೇಶಿಯನೆ ನಿಱಿಸಿ) ಎಂಬರ್ಥದಲ್ಲಿಯೂ ಬಳಕೆಯಾಗಿದೆ. 'ಪಂಪಭಾರತ'ದ "ಬಗೆ ಪೊಸತಪ್ಪುದಾಗೆ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು" ಎಂಬ ಪ್ರಸಿದ್ಧವಾಕ್ಯದಲ್ಲಿ ಈ ಶಬ್ದವು ಜನಪದದ ಸ್ವಂತಿಕೆ ಎಂಬರ್ಥದಲ್ಲಿ ಬಳಕೆಯಾಗಿದೆ.
ಬಹು ಹಿಂದಿನಿಂದಲೇ ಕನ್ನಡದಲ್ಲಿ ಮಾರ್ಗ-ದೇಶಿ ಎಂಬ ಶಬ್ದಗಳು ಕಾವ್ಯರೂಪಕ್ಕೆ ಅನ್ವಯಿಸುವಂತೆ ಬಳಕೆಯಾಗಿವೆ. ಮಾರ್ಗವು ಸಂಸ್ಕೃತ ಪರಂಪರೆಯನ್ನು ಮಾದರಿಯಾಗಿರಿಸಿಕೊಂಡಂಥದಕ್ಕೂ, ದೇಸಿ ಕನ್ನಡಕ್ಕೆ ವಿಶಿಷ್ಟವಾದ ಸ್ವಂತದ್ದಕ್ಕೂ ಅನ್ವಯಿಸುತ್ತದೆಂದು ಸ್ಥೂಲವಾಗಿ ಹೇಳಬಹುದು. ಇದು ಪಂಪನ ಮಾತಿನಲ್ಲಿಯೇ ವ್ಯಕ್ತವಾಗಿದೆ. ಜಾನಪದ ಎಂಬ ಅರ್ಥವೂ ಇದಕ್ಕೆ ಹೊಂದುವಂತಿದೆ.
ಸ್ವಂತದ್ದೇ ಸುಂದರವಾದುದು ಎಂಬ ಭಾವನೆಯಿಂದಾಗಿಯೋ ಏನೋ ಮುಂದೆ ಈ ಪದಕ್ಕೆ ಸುಂದರವಾದುದು ಎಂಬ ಅರ್ಥವೇ ಪ್ರಾಪ್ತವಾಗಿದೆ. "ಚರಣಂ ನವಕೇಸರದೊಂದು ದೇಸಿಯಂ ಪ್ರಕಟಿಸೆ" ಎಂಬ ಮಾತು 'ಕರ್ಣಾಟಕ ಕಾದಂಬರಿ'ಯಲ್ಲಿದ್ದರೆ, "ಪೊಸದೇಸಿವೆತ್ತು ಎಸೆದುದಲ್ಲಿ ನರೇಂದ್ರಕುಮಾರಸಂಕುಳಂ" ಎಂಬ 'ರಾಜಶೇಖರವಿಳಾಸ'ವೆಂಬ ಕಾವ್ಯದ ಮಾತಿನಲ್ಲಿ ಬೆಡಗು ಎಂಬರ್ಥವನ್ನು ತಾಳಿದೆ. ದೇಸಿ ಎಂಬುದು ದೇಸೆ ಎಂಬ ರೂಪವನ್ನೂ ಪಡೆಯುತ್ತದೆ. ದೇಸಿಯಿಂದ ರೂಪಿತವಾದ ದೇಸಿಗ, ದೇಸಿಗಿತಿ ಎಂಬ ಶಬ್ದಗಳು ನಿರ್ಗತಿಕ(ಳು) ಎಂಬರ್ಥದಲ್ಲಿ ಬಳಕೆಯಾಗಿವೆ. "ಲಲ್ಲೆಯ ಸಗ್ಗದ ದೇಸೆಕಾರ್ತಿಯರ್" ಎಂಬ 'ಆದಿಪುರಾಣ'ದ ಮಾತಿನಲ್ಲಿ ದೇಸೆಕಾರ್ತಿ ಎಂಬುದು ಸುಂದರಿ ಎಂಬರ್ಥದಲ್ಲಿ ಬಳಕೆಯಾಗಿದೆ.
=====
ದೋಣಿ: ಸಂಸ್ಕೃತ 'ದ್ರೋಣೀ' ಶಬ್ದದ ತದ್ಭವ. ಇದು ನೀರಿನಲ್ಲಿ ತೇಲಲು ಬಳಸುವ ಮರದ ಸಾಧನ. "ದ್ರೋಣೀ ಕಾಷ್ಠಾಂಬುವಾಹಿನೀ" ಎಂದು 'ಅಮರಕೋಶ'ವು ಹೇಳುತ್ತದೆ. ಈ ಅರ್ಥದಲ್ಲಿ ಶಾಂತಿನಾಥನ 'ಸುಕುಮಾರಚರಿತೆ'ಯಲ್ಲಿ ಈ ಶಬ್ದ ಬಳಕೆಯಾಗಿದೆ ("ತುಳುಕು ನೀರಾಡಿದಂ ದೋಣಿಯಿಂದೇಱಿದನೆಂಬಂತೆ"). "ದೋಣಿಯೆಂದೆನಲ್ ನಾವೆಯಕ್ಕುಂಕ" ಎಂದು ಮಂಗರಾಜ ನಿಘಂಟುವಿನಲ್ಲಿ ಅರ್ಥ ಹೇಳಿದೆ. ನೀರು ತುಂಬಿಡುವ ತೊಟ್ಟಿಗೂ ದ್ರೋಣಿ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಕನ್ನಡದಲ್ಲಿ ಈ ಅರ್ಥವೂ ಇದೆ. "ಕಲ್ಲ ದೋಣಿಯಲೆಱೆದ ನೀರಂತೆ" ಎಂಬುದು ನಯಸೇನನ 'ಧರ್ಮಾಮೃತ'ದ ಮಾತು.  ಆಕಾರವನ್ನು ಹೋಲುವ ಮತ್ತು ನೀರಿನೊಡನೆ ಸಂಬಂಧ ಹೊಂದಿರುವ ಕಾರಣ ಇನ್ನೂ ಹಲವಾರು ವಸ್ತುಗಳನ್ನು ಸೂಚಿಸಲು ಈ ಈ ಶಬ್ದವು ಕನ್ನಡದಲ್ಲಿ ಬಳಕೆಯಲ್ಲಿದೆ. ಮನೆಯ ಸೂರಿನ ಮೇಲೆ ಬಿದ್ದ ಮಳೆ ನೀರು ಕೆಳಗೆ ಹರಿದು ಹೋಗಲು ಬಿಟ್ಟಿರುವ ಕಂಡಿಯನ್ನೂ ದೋಣಿ ಎನ್ನುತ್ತಾರೆ.
ದೋಣಿ ಎಂಬ ಶಬ್ದವನ್ನು ತಟ್ಟೆ ಎಂಬರ್ಥದಲ್ಲಿಯೂ ಬಳಸುತ್ತಾರೆ. "ನಾಯುಣ್ಣದ ದೋಣಿಯೊಳ್ ಊಡಿದಂಗೆ ಪದಯಿದನೆ ಕರಂ" ಎಂಬುದು 'ಸುಕುಮಾರ ಚರಿತೆ' ಯ ಮಾತು. ತಟ್ಟೆಯಂತೆ ಅಗಲವಾಗಿದ್ದು ಅದಕ್ಕಿಂತ ಆಳವಾದ ಬಾನಿಯನ್ನೂ ಈ ಶಬ್ದದಿಂದಲೇ ಕರೆಯುವ ರೂಢಿಯಿತ್ತು. ತಗ್ಗು ಬೀಳು ಎಂಬರ್ಥದಲ್ಲಿ 'ದೋಣಿವೋಗು' ಎಂಬ ಪ್ರಯೋಗವಿತ್ತು. ("ಇರ್ಬಗಿಯಾಗಿ ಪೋಳ್ದು ನೀರೇಱೆದ ನಾಳಿಪುಣ್ಣೊಡೆದು ಸೌಳೆನೆ ಸೀಳ್ದುದು ದೋಣಿವೋಪಿನಂ" ಗ 'ಸುಕುಮಾರಚರಿತೆ'). ದೋಣಿಯಾಕಾರದ ಹರವಿಯನ್ನು 'ದೋಣಿಕೊಂಡ' ಎಂದು 'ವಡ್ಡಾರಾಧನೆ'ಯಲ್ಲಿ ಕರೆದಿದೆ ("ಒಂದು ದೋಣಿಕೊಂಡಮಂ ತಱಿಸಿ") ಇದು 'ದ್ರೋಣಿಕುಂಡ'ದ ತದ್ಭವರೂಪ.
ಡೋಣಿ ಎಂಬ ರೂಪದಲ್ಲಿಯೂ ಈ ಶಬ್ದದ ಬಳಕೆಯಿದೆ. "ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ, ಬೈಚಿಟ್ಟ ನೆಲೆಯಿರ್ದಡೇನು ಭೋಗಿಸಲರಿಯನಾಗಿ. ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ?" ಎಂಬುದು ಮೋಳಿಗೆ ಮಾರಯ್ಯನೆಂಬ ವಚನಕಾರನ ಮಾತು. ಈ ರೂಪವು ದೋಣಿ ಶಬ್ದಕ್ಕಿರುವ ಬಹುತೇಕ ಎಲ್ಲ ಅರ್ಥಗಳಲ್ಲಿಯೂ ಬಳಕೆಯಾಗಿದೆ.
=====
ನಂಜು: ಇದೊಂದು ಕನ್ನಡ ಪದ, ವಿಷ ಎಂಬುದು ಅದರ ಅರ್ಥ. ಈ ಶಬ್ದವು ಇತರ ದ್ರಾವಿಡ ಭಾಷೆಗಳಲ್ಲೂ ದೊರೆಯುತ್ತದೆ: ತಮಿಳು ಮಲಯಾಳಂಗಳಲ್ಲಿ ನಂಚು, ತುಳುವಿನಲ್ಲಿ ನಂಜು, ನಂಜಿ ಎಂಬ ರೂಪಗಳಿವೆ. ರಕ್ತದ ವಿಷಪೂರಿತವಾಗುವಿಕೆಯನ್ನು ನಂಜು ಎನ್ನುತ್ತಾರೆ. ವಿಷಯುಕ್ತ ನೀರನ್ನು ಪಂಪ 'ನಂಜುನೀರ್' ಎನ್ನುತ್ತಾನೆ. 'ನಂಜುರುಳಿ' ಎಂದರೆ ವಿಷದ ಉಂಡೆ; ಈ ಶಬ್ದ ಬಳಕೆಯಾಗಿರುವುದು ಅಗ್ಗಳನ 'ಚಂದ್ರಪ್ರಭಪುರಾಣ'ದಲ್ಲಿ; ಇದೇ ಅರ್ಥದಲ್ಲಿ 'ಧರ್ಮಾಮೃತ'ದಲ್ಲಿ 'ನಂಜಿನುರುಳಿ' ಎನ್ನಲಾಗಿದೆ. ವಿಷವನ್ನುಳ್ಳುದರಿಂದ ಕುಮಾರವ್ಯಾಸ ಹಾವನ್ನೂ ನಂಜು ಎನ್ನುತ್ತಾನೆ; ಕೃಷ್ಣನನ್ನು  "ನಂಜಿನಲಿ ಪವಡಿಸುವ"(ವನು) ಎಂದು ವರ್ಣಿಸುತ್ತಾನೆ. ಪುರಂದರದಾಸ ಆದಿಶೇಷನನ್ನು 'ನಂಜಿನೊಡೆಯ' (ಹಾವುಗಳ ಒಡೆಯ) ಎನ್ನುತ್ತಾನೆ. ಮಾತಿನಲ್ಲಿ ತುಂಬಿರುವ ಕೆಟ್ಟ ಭಾವನೆಯನ್ನೂ ನಂಜು ಎನ್ನುತ್ತಾರೆ.
ಈ ನಾಮಪದಕ್ಕೆ ಆಗು ಎಂದು ಸೇರಿ ಮಾಡಿಕೊಳ್ಳುವ ಕ್ರಿಯಾಪದ ನಂಜಾಗು ಎಂಬುದು ವಿಷಪೂರಿತವಾಗುವುದನ್ನು ಸೂಚಿಸುತ್ತದೆ. "ಮೊಲೆವಾಲು ನಂಜಾಗಿ ಕೊಲುವೊಡೆ ಇನ್ನಾಗೆ ದೂರುವೆನಯ್ಯಾ" ಎಂಬ ಸಾಲು ಬಸವಣ್ಣನ ವಚನವೊಂದರಲ್ಲಿದೆ.  ಹಾಗೆಯೇ ವಿಷ ಹಾಕುವುದನ್ನು 'ನಂಜೂಡು' ಎನ್ನುತ್ತಾರೆ; ವಿಷಜಂತು ಕಚ್ಚಿದಾಗ ಮೈಯಲ್ಲಿ 'ನಂಜೂರು'ತ್ತದೆ.
ಸಮುದ್ರಮಥನ ಕಾಲದಲ್ಲಿ ಮೊದಲು ಬಂದ ವಿಷವನ್ನು ಲೋಕಕಲ್ಯಾಣಾರ್ಥವಾಗಿ ಶಿವ ಕುಡಿಯುತ್ತಾನೆ; ಅದು ಹೊಟ್ಟೆ ಸೇರದ ಹಾಗೆ ಪಾರ್ವತಿ ಆತನ ಕತ್ತನ್ನು ಅದುಮಿ ಹಿಡಿದುದರಿಂದ ವಿಷವು ಕೊರಳಲ್ಲೇ ಉಳಿದುಬಿಡುತ್ತದೆ. ಆದ್ದರಿಂದಲೇ ಅವನಿಗೆ ವಿಷಕಂಠ ಎಂದು ಹೆಸರಾಯಿತು; ಇದರ ನೇರ ಅನುವಾದವೇ 'ನಂಜುಗೊರಲ' ಎಂಬುದು. ಆಂಡಯ್ಯ ಶಿವನನ್ನು ಈ ಮಾತಿನಿಂದ ಸಂಬೋಧಿಸುತ್ತಾನೆ. ನಂಜುಂಡ ಎಂದರೂ ಇದೇ ಅರ್ಥ: ನಂಜು+ಉಂಡ(ವನು). ಇದಕ್ಕೆ ಮುಂದೆ ಒಡೆಯ ಎಂಬರ್ಥದ ಈಈ್ವರ ಎಂಬ ಸಂಸ್ಕೃತ ಶಬ್ದ ಸೇರಿ ನಂಜುಂಡೇಶ್ವರ ಎಂದಾಯಿತು (ಈ ರೂಪವು ಹದಿನಾಲ್ಕನೆಯ ಶತಮಾನದ ಶಾಸನದಲ್ಲಿ ದೊರೆಯುತ್ತದೆ). (ಇದು ಅಚ್ಚಗನ್ನಡ ಮತ್ತು ಸಂಸ್ಕೃತ ಶಬ್ದಗಳು ಸೇರಿ ಆಗಿರುವ ಸಮಾಸಪದ). ಹಾಗೆಯೇ ನಂಜಾಂಬಾ ಎಂಬುದು; ಪಾರದವತಿಯನ್ನು ಸೂಚಿಸುವ ಹೆಸರು. ಕಪಿಲಾ ನದಿಯ ದಂಡೆಯಲ್ಲಿರುವ ನಂಜನಗೂಡು ನಂಜುಂಡನ ಆವಾಸ. ಆ ಊರಿನ ಈ ದೈವವನ್ನು ಟಿಪ್ಪು 'ಹಕೀಂ ನಂಜುಂಡ' ಎಂದು ಕರೆಯುತ್ತಿದ್ದನಂತೆ. ಸಂಬಂಧಸೂಚಕ ಪದವು ಸೇರಿ ಅಂಕಿನಾಮವಾಗುವುದು ಕನ್ನಡದಲ್ಲಿ ಸಾಮಾನ್ಯ. ಈ ರೀತಿ ಆಗಿರುವ ಶಬ್ದಗಳೇ ನಂಜಯ್ಯ, ನಂಜಪ್ಪ, ನಂಜಣ್ಣ, ನಂಜಪ್ಪಯ್ಯ, ನಂಜಪ್ಪಣ್ಣಯ್ಯ ಮುಂತಾದುವು.
=====
ನಮ್ಮಭಿಮಾನ: ಈಚೆಗೆ ಶಿವಮೊಗ್ಗದಲ್ಲಿ ಒಂದು ಸಮಾವೇಶ ನಡೆಯಿತು, ಅದನ್ನು ಸಂಘಟಕರು 'ನಮ್ಮಭಿಮಾನ' ಎಂದು ಕರೆದುಕೊಂಡರು. ಅದು ಯಾತಕ್ಕಾಯಿತು, ಯಾರಿಗಾಗಿ ಆಯಿತು ಎಂಬುದು ನಮಗೆ ಪ್ರಸ್ತುತವಲ್ಲ. ಬೇಕಾಗಿರುವುದು ಆ ಶಬ್ದದ ಸ್ವರೂಪ ಚರ್ಚೆ, ಅದರ ಅರ್ಥ ಏನಿರಬಹುದು ಎಂಬುದು.  ಈ ಶಬ್ದವು 'ನಮ್ಮ' ಹಾಗೂ 'ಅಭಿಮಾನ' ಎಂಬ ಎರಡು ಪದಗಳಿಂದ ಕೂಡಿದೆ. ನಮ್ಮ ಎಂಬುದು ನಮಗೆ ಸೇರಿದ ಅಥವಾ ನಮಗೆ ಸಂಬಧಿಸಿದ ಅಥವಾ ನಾವು ಹೊಂದಿರುವ ಎಂಬ ಅರ್ಥವನ್ನು ಹೊಂದಿರುವುದರಿಂದ ಈ ಶಬ್ದಕ್ಕೆ ಒಟ್ಟಾಗಿ 'ನಾವು (ಇಂಥವರ ಬಗ್ಗೆ) ಹೊಂದಿರುವ ಅಭಿಮಾನ' ಎಂಬ ಅರ್ಥ ಹೊರಡಬಹುದು. ಹೊರನೋಟಕ್ಕೆ ಅಭಿಮಾನ ಎಂಬ ಪದಕ್ಕೆ ಪ್ರೀತಿ ಎಂಬ ಅರ್ಥವಿರುವುದು ಸ್ಪಷ್ಟ. ಯಾರಿಗಾಗಿ ಸಮಾವೇಶವನ್ನು ಮಾಡುತ್ತಿರುವರೋ ಅವರ ಬಗ್ಗೆ ಸಂಘಟಕರು ಹೊಂದಿರುವ ಅಭಿಮಾನ ಇದು ಎಂಬುದು ಅಭಿಪ್ರಾಯ.
ನಮ್ಮ ಎಂಬುದು ನಾವು ಎಂಬುದರ ಷಷ್ಠೀವಿಭಕ್ತಿಯ ರೂಪ, ಕನ್ನಡದ್ದೇ ಪದ; ಅಭಿಮಾನ ಸಂಸ್ಕೃತ ಮೂಲದ್ದು. ಸಂಪ್ರದಾಯನಿಷ್ಠ ವೈಯಾಕರಣಿಗಳ ದೃಷ್ಟಿಯಲ್ಲಿ ಇದೊಂದು ಅರಿಸಮಾಸ. ಅಭಿಮಾನ ಎಂಬುದಕ್ಕೆ ಸಂಸ್ಕೃತದಲ್ಲಿ ಅಹಂಕಾರ, ಆತ್ಮಗೌರವ ಎಂಬ ಅರ್ಥಗಳಿವೆ. ನಮ್ಮ ಪ್ರಾಚೀನ ಕಾವ್ಯಗಳಲ್ಲಿಯೂ ಸುಮಾರು ಇದೇ ಅರ್ಥವಿದೆ, ಆದರೆ ಅರ್ಥಚ್ಛಾಯೆ ಕೊಂಚ ಭಿನ್ನ. 'ಪಂಪಭಾರತ'ದಲ್ಲಿ "ಅಭಿಮಾನಮೊಂದೆ ಕುಲಂ" ಎಂಬ ಮಾತಿದೆ. ವ್ಯಕ್ತಿಯು ಹೊಂದಿರಬೇಕಾದ ಅಪೇಕ್ಷಣೀಯ ಗುಣವಾದ ಆತ್ಮಗೌರವ ಎಂಬ ಅರ್ಥವಿದೆ ಅಲ್ಲಿ. "ಅಭಿಮಾನಧನ" - ಯಾರಿಗೆ ಅಭಿಮಾನವೇ ಸಂಪತ್ತೋ ಅಂಥವನು - ಎಂಬ ಮಾತು 'ಕವಿರಾಜಮಾರ್ಗ'ದಲ್ಲಿಯೇ ಪ್ರಯೋಗಗೊಂಡಿದೆ. ಹಾಗಾಗಿಯೇ ರನ್ನಕವಿಯು ದುರ್ಯೋಧನನನ್ನು "ಅಭಿಮಾನಧನ" ಎನ್ನುತ್ತಾನೆ. ತನ್ನ ಬಗೆಗಿನ ಗೌರವ ಎಂಬುದು ಸಡಿಲಗೊಂಡು ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಇಟ್ಟ ಗೌರವವೂ ಅಭಿಮಾನ ಎನಿಸಿಕೊಂಡು, ಅದೇ ಮುಂದೆ ಪ್ರೀತಿ ಎಂಬ ಅರ್ಥವನ್ನು ಪಡದಿದೆ. ತನ್ನ ಬಗೆಗಿನ ಗೌರವವನ್ನು ಸೂಚಿಸಲು 'ಸ್ವಾಭಿಮಾನ' ಹಾಗೂ 'ಆತ್ಮಾಭಿಮಾನ' ಎಂಬ ಶಬ್ದಗಳು ಈಗ ಹೆಚ್ಚು ರೂಢಿಯಲ್ಲಿವೆ. ಶಬ್ದಗಳಿಗೆ ಕಾಲಕಾಲಕ್ಕೆ ಬದಲಾಗುವ ಅರ್ಥಚ್ಛಾಯೆಗೆ ಇದೊಂದು ಒಳ್ಳೆಯ ಉದಾಹರಣೆ.
*****
ನಿಲ್ಲು: ಇದೊಂದು ಕ್ರಿಯಾಪದ; ಹಳಗನ್ನಡದಲ್ಲಿದು 'ನಿಲ್' ಎಂಬ ರೂಪದಲ್ಲಿತ್ತು. ತಮಿಳು, ಮಲಯಾಳಂಗಳಲ್ಲಿ ನಿಲ್ ಎಂಬ ರೂಪದಲ್ಲಿಯೂ, ತೆಲುಗಿನಲ್ಲಿ ನಿಲುಚು ಎಂಬುದಾಗಿಯೂ, ತುಳುನಲ್ಲ್ಲಿ ನಿಲ್, ನಿಲಿ ಎಂಬ ರೂಪಗಳಲ್ಲಿಯೂ ದೊರೆಯುತ್ತದೆ. ನಿಲ್ ಎಂಬುದಕ್ಕೆ ಕೇಶಿರಾಜನ 'ಶಬ್ದಮಣಿದರ್ಪಣ'ವು ಎರಡು ಅರ್ಥಗಳನ್ನು ನೀಡುತ್ತದೆ: "ನಿಲ್ - ಗತಿಮುಕ್ತೌ ಸ್ಥಾಪನೇಚ"; ಅಂದರೆ ಚಲನೆಯಿಲ್ಲದ್ದು ಮತ್ತು ಸ್ಥಾಪನೆಗೊಂಡದ್ದು ಎಂದು. ತಂಗುವುದು ಎಂಬರ್ಥವೂ ಇದಕ್ಕಿದೆ ("ತಡೆದಿಲ್ಲಿ ನಿಂದೆನಪ್ಪೊಡೆ ಮಡಿವಾದಪುದು" - ನಯಸೇನನನ 'ಧರ್ಮಾಮೃತ'). ಸ್ಥಿರವಾಗಿರು ಎಂಬರ್ಥದಲ್ಲಿಯೂ ಇದು ಬಳಕೆಯಲ್ಲಿದೆ ("ಶ್ರೀರೂಪಲೀಲಾಧನವಿಭವಮಹಾರಾಶಿಗಳ್ ನಿಲ್ಲವಾರ್ಗಂ" - ಎಂಟನೆಯ ಶತಮಾನದ ಒಂದು ಶಾಸನ). ನಿಲ್ ಎಂಬುದಕ್ಕೆ ಎ ಎಂಬ ಪ್ರತ್ಯಯ ಸೇರಿಸಿ ಅವಧಾರಣೆಯಾಗಿ ನಿಲೆ, 'ನಿಲೆ ನುಡಿ' ಎಂಬ ರೂಪಗಳಲ್ಲಿಯೂ ಈ ಶಬ್ದವು ಬಳಕೆಗೊಂಡಿದೆ. ಕಾಯುವುದು ಎಂಬರ್ಥವೂ ಇದಕ್ಕಿದೆ: "ಬೇಡಲ್ಕೆ ಬಂದು ನಿಂದಿರ್ಪಂ" ಎಂಬ ಪ್ರಯೋಗ 'ಕರ್ಣಾಟಕ ಕಾದಂಬರಿ'ಯದು. ನೆಲೆ ಎಂಬರ್ಥವೂ ಈ ಶಬ್ದಕ್ಕಿದೆ ("ಆನತನಲ್ಲದಂಗೆ ಪದುಳಂ ನಿಲವಿಲ್ಲ" - ನಾಗಚಂದ್ರನ 'ಪಂಪರಾಮಾಯಣ").
ನಿಂತ ವ್ಯಕ್ತಿಯ ಸ್ವರೂಪವೇ ನಿಲವು ಅಥವಾ ನಿಲುವು. "ನಿಲವು ಮೋಹನಂ" ಎಂಬುದು 'ಹರಿಚಂದ್ರಕಾವ್ಯ'ದ ಪ್ರಯೋಗ. ಇದು ರೂಪಕವಾಗಿ ವ್ಯಕ್ತಿಯ ಧೋರಣೆ ಅಥವಾ ಸ್ವಭಾವ ಎಂಬರ್ಥಕ್ಕೆ ವಿಸ್ತಾರಗೊಳ್ಳುತ್ತದೆ. "ಮಹಾದೇವಿಯಕ್ಕಗಳ ನಿಲವ ಬಸವಣ್ಣನ ಕೃಪೆಯಿಂದಲರಿದೆನಯ್ಯಾ" ಎಂಬುದು ಮಡಿವಾಳ ಮಾಚಿದೇವನ ಮಾತು. ನಿಂತು ಎಟುಕಿಸಿಕೊಳ್ಳುವುದು 'ನಿಲ್ಕಿಸು' ಅಥವಾ 'ನಿಲುಕಿಸು'. ಹಾಗೆ ನಿಂತು ಎಟುಕಿಸಿಕೊಳ್ಳಬಹುದಾದ, ಹಾಲು ಮೊಸರುಗಳ ಗಡಿಗೆಗಳನ್ನಿಡುವ ಹಗ್ಗದ ಜೋತಾಡುವ ಸಾಧನವೇ 'ನಿಲವು' ಅಥವಾ 'ನೆಲವು'.
ವಾಹನಗಳು ಹೊರಡುವ ಹಾಗೂ ಬಂದು ನಿಲ್ಲುವ ಜಾಗಗಳನ್ನು ನಿಲ್ದಾಣ ಎಂದೂ, ಮಧ್ಯೆ ಜನರನ್ನು ಹತ್ತಿಸಿಕೊಳ್ಳುವ ಜಾಗವನ್ನು ನಿಲುಗಡೆ ಎಂದೂ ಕರೆಯುತ್ತೇವೆ. ವಾಹನಗಳನ್ನು ನಿಲ್ಲಿಸುವ ಜಾಗವೂ (ಪಾರ್ಕಿಂಗ್) ನಿಲುಗಡೆಯೇ. ಬಹು ತುರ್ತಾಗಿ ಚರ್ಚಿಸಬೇಕಾದ ವಿಷಯ ಬಂದಾಗ ಸಾಗುತ್ತಿರುವ ವಿಷಯದ ಚರ್ಚೆಯನ್ನು ನಿಲ್ಲಿಸಲು ಮಾಡುವ ಕೋರಿಕೆಯೇ ಶಾಸನಸಭೆಗಳಲ್ಲಿನ 'ನಿಲುವಳಿ ಸೂಚನೆ'.
======
ನಿವೃತ್ತಿ: ಈಗ ಸಾಮಾನ್ಯವಾಗಿ ನಿವೃತ್ತಿ ಎಂಬ ಶಬ್ದವು ನೌಕರಿಯಲ್ಲಿದ್ದು ನಿಯಮಾನುಸಾರ ಅವಧಿ ಮುಗಿದ ಬಳಿಕ ನೌಕರನೊಬ್ಬ ಅದರಿಂದ ಬಿಡುಗಡೆಗೊಳ್ಳುವುದನ್ನು ಸೂಚಿಸುತ್ತದೆ. ಸಹಜವಾಗಿಯೇ ಈ ಪರಿಕಲ್ಪನೆ ಹಿಂದೆ ಇರಲಿಲ್ಲ: ಏಕೆಂದರೆ ಆಗ ನೌಕರಿಯಾಗಲೀ, ನಿವೃತ್ತಿಯಾಗಲೀ ರೂಢಿಯಲ್ಲಿರಲಿಲ್ಲ. ಇದೆಲ್ಲ ಕಚೇರಿ, ನೌಕರಿ, ಸಂಬಳ ಮುಂತಾದ ಪದ್ಧತಿಗಳು ಬಂದ ಆಧುನಿಕ ಕಾಲದವು. ಹೊಸ ಪದ್ಧತಿಗಳನ್ನು ಸೂಚಿಸಲು ಹೊಸ ಶಬ್ದಗಳು ಸೃಷ್ಟಿಗೊಳ್ಳಬೇಕು.
ಮೂಲತಃ ನಿವೃತ್ತಿ ಎಂಬುದು ಸಂಸ್ಕೃತ ಪದ. ಹಿಂದಿರುಗುವುದು, ಹಿಂದಕ್ಕೆ ನಡೆಯುವುದು ಎಂಬುದು ಇದಕ್ಕಿದ್ದ ಅರ್ಥ. ಕೊನೆಯಾಗುವುದೂ ಎಂಬ ಅರ್ಥವೂ ಇದಕ್ಕಿದೆ. ಪ್ರಾಪಂಚಿಕ ವ್ಯವಹಾರದಿಂದ ದೂರ ಸರಿಯುವುದೂ ಎಂಬ ಅರ್ಥವೂ ಬಳಕೆಯಲ್ಲಿತ್ತು. ಇದಕ್ಕೆ ಹತ್ತಿರವಾದ ಮತ್ತೊಂದು ಶಬ್ದವೂ ಸಂಸ್ಕೃತದಲ್ಲಿದೆ, ಅದೇ ನಿರ್ವೃತಿ. ಇದಕ್ಕೂ ಬಿಡುಗಡೆ ಎಂಬ ಅರ್ಥವಿದೆ, ಜೊತೆಗೆ ಸಂತೋಷ ಎಂಬ ಅರ್ಥವೂ ಇದೆ. ಕಾವ್ಯದ ಪ್ರಯೋಜನಗಳನ್ನು ಹೇಳುವಾಗ ಕೆಲವರು 'ಸದ್ಯಃಪರನಿರ್ವೃತಯೇ' ಎಂದೂ ಹೇಳುತ್ತಾರೆ ಅಂದರೆ ತನ್ಮಯವಾಗಿ ಓದುತ್ತಿರುವಷ್ಟು ಕಾಲ ಕಾವ್ಯವು ನಮ್ಮ ಮನಸ್ಸನ್ನು ಇಲ್ಲಿಂದ ಬಿಡುಗಡೆಗೊಳಿಸಿ ಸಂತೋಷ ನೀಡುವಂಥದು ಎಂಬುದು ಅಭಿಪ್ರಾಯ.
ಈಗ ನಿವೃತ್ತಿವೇತನ ಎಂಬ ಶಬ್ದವೂ ಬಳಕೆಯಲ್ಲಿದೆ. ನೌಕರಿಯಲ್ಲಿ ದೀರ್ಘ ಕಾಲ ದುಡಿದ ವ್ಯಕ್ತಿಯು ಅದರಿಂದ ಬಿಡುಗಡೆಗೊಂಡ ಮೇಲೆ ಪಡೆಯುವ ಸಂಭಾವನೆ ಎಂಬರ್ಥ ಅದಕ್ಕಿದೆ. ಹಿಂದೆಯೇ ಬಳಕೆಯಲ್ಲಿದ್ದ ಎರಡು ಶಬ್ದಗಳನ್ನು ಸೇರಿಸಿ ಹೊಸ ಪರಿಕಲ್ಪನೆಯೊಂದನ್ನು ಸೂಚಿಸಲು ಸಿದ್ಧಗೊಂಡ ಶಬ್ದ ಇದು. ಭಾಷೆಯು ಹೊಸ ಪರಿಕಲ್ಪನೆಗಳನ್ನು ಹಳೆಯ ಶಬ್ದಗಳ ಸಂಯೋಜನೆಗೊಳಿಸುವ ಮೂಲಕವೂ ಹೇಳುವ ಪರಿ ಇದು. ನಿವೃತ್ತಿವೇತನ ಎಂಬ ಶಬ್ದಕ್ಕೆ ಈಗ 'ಪಿಂಚಣಿ' ಎಂಬ ಇನ್ನೊಂದು ಶಬ್ದವೂ ರೂಢಿಯಲ್ಲಿದೆ; ಅದು ಇಂಗ್ಲಿಷ್ನ 'ಪೆನ್ಶನ್' ಎಂಬುದರ ಕನ್ನಡೀಕರಣಗೊಂಡ ರೂಪ. ಒಂದು ಶಬ್ದ ಸಂಸ್ಕೃತದ ಈ ಕಡೆಯಿಂದ ಬಂದುದಾದರೆ, ಮತ್ತೊಂದು ಇಂಗ್ಲಿಷ್ನ ಆ ಕಡೆಯಿಂದ ಬಂದುದು. ಈ ಎರಡೂ ಭಾಷೆಗಳು ಕನ್ನಡ ಶಬ್ದಭಂಡಾರದ ಹೊಲಕ್ಕೆ ಹೊಸ ಮೆಕ್ಕಲನ್ನು ತಂದು ಫಲವತ್ತಾಗಿಸುವ ಎರಡು ದೊಡ್ಡ ನದಿಗಳು. ನದಿಗಳಿರುವುದೇ ಸಮೃದ್ಧವಾಗಿ ನೀರು ಮೆಕ್ಕಲುಗಳನ್ನು ಒದಗಿಸುವುದಕ್ಕಲ್ಲವೇ?
                                ******  ಮುಂದಿನ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ