ಪುಟಗಳು

18 ಅಕ್ಟೋಬರ್ 2014

ಪದಚರಿತೆ-7



ಪದಚರಿತೆ:ಒಂದಷ್ಟು ಪದಗಳ ಮೂಲಚೂಲಗಳ ಕೆದಕಾಟ - 7

ಬಸವ: ಇದು ಸಂಸ್ಕೃತ ಶಬ್ದವಾದ 'ವೃಷಭ' ಎಂಬುದರ ತದ್ಭವ. ಇದರ ಮೂಲ ಅರ್ಥ ಹೋರಿ ಅಥವಾ ಎತ್ತು ಎಂದು. ಈ ಅರ್ಥದಲ್ಲಿ ಬ್ರಹ್ಮಶಿವನ 'ಸಮಯ ಪರೀಕ್ಷೆ'ಯಲ್ಲಿ ಈ ಶಬ್ದ ಬಳಕೆಗೊಂಡಿದೆ: "ಬಸವಂ ಸತ್ತಿರ್ದಡೆ ಸಂತಸದಿಂದಂ ಮೀಸಿ ಪೂಜಿಸುತೆ .. .." ದೇವರಿಗೆ ಮೀಸಲಿಡುವ ಹೋರಿಯನ್ನೂ ಬಸವ ಎಂದು ಕರೆಯುತ್ತಾರೆ. ಇಂತಹ ಹೋರಿಗಳ ಮೈಮೇಲೆ ಗುರುತುಮಾಡುವ ಪರಿಪಾಟವೂ ಉಂಟು: "ಬೀದಿಯ ಬಸವಂಗೆ ದೇವಾಲಯದ ಪಶುವಿಂಗೆ ಹುಟ್ಟಿದ ಕರು ಬಸವಗಳಪ್ಪುವೇ ಲಿಂಗಮುದ್ರಯನೊತ್ತದನ್ನಕ್ಕರ" ಎಂಬುದು ಚೆನ್ನಬಸವಣ್ಣನ ವಚನದ ಮಾತು. ಇದಕ್ಕೆ 'ಬಸವನ ಮುದ್ರೆ' ಎಂದೇ ಕರೆಯುತ್ತಿದ್ದರು: "ಮುದ್ದು ಮಾಡಿ ಸಾಕಿ ಮಗನಿಗೆ ಬಸವನ ಮುದ್ರೆಯ ಒತ್ತಿದ್ಯೇನೇ" ಎಂಬುದು ಪುರಂದರದಾಸರ ಹಾಡಿನ ಮಾತು. ಮುಂದೆ ಅದು ದೇವರ ಮೀಸಲ ಇತರ ಪ್ರಾಣಿಗಳಿಗೂ ಅನ್ವಯವಾಯಿತು, ಮನುಷ್ಯರಿಗೂ ಅನ್ವಯವಾಯಿತು. ಬಸವ ನಂದಿಯ ವಾಹನ ಎಂಬ ಕಾರಣದಿಂದ ಅದು ಜನರಿಗೆ ಪೂಜ್ಯವೂ ಆಯಿತು. 'ಬಸವ ನೋಂಪಿ'ಯ ಪ್ರಸ್ತಾಪ ಅನೇಕ ಕಡೆಗಳಲ್ಲಿದೆ.
ಕನ್ನಡ ತೆಲುಗುಗಳಲ್ಲಿ ಬಸವ ಎಂಬುದು ವ್ಯಕ್ತಿಯ ಅಂಕಿತನಾಮವೂ ಆಗಿದೆ. ಬಸವ ಎಂಬ ಪದಕ್ಕೆ ಅಣ್ಣ, ಅಪ್ಪ, ಅಯ್ಯ ಮುಂತಾದ ಸಂಬಂಧಸೂಚಕ ಪದಗಳೂ ಸೇರುತ್ತವೆ. ಬಸವಣ್ಣ ಕನ್ನಡ ಸಂಸ್ಕೃತಿಯ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲೊಬ್ಬ. ಹರಿಹರ ಕನ್ನಡದಲ್ಲಿ 'ಬಸವರಾಜದೇವರರಗಳೆ' ಎಂಬ ಕಾವ್ಯವನ್ನು ಬರೆದರೆ, ಪಾಲ್ಕುರಿಕೆ ಸೋಮನಾಥನು ತೆಲುಗಿನಲ್ಲಿ 'ಬಸವ ಪುರಾಣಮು'ವನ್ನು ರಚಿಸಿದ. ಮೊದಲಿನಿಂದ ಬಂದ ಬಸವಪೂಜೆಯ ಜೊತೆ ಹೊಂದಿಸಿ ಬಸವಣ್ಣನ ಹುಟ್ಟಿದ ದಿನವೆಂದು ಪುರಾಣಗಳಲ್ಲಿ ಉಕ್ತವಾದ ವೈಶಾಖ ಶುದ್ಧ ತದಿಗೆಯನ್ನು 'ಬಸವಜಯಂತಿ'ಯಾಗಿ ಆಚರಿಸುವ ಸಂಪ್ರದಾಯ ಉಂಟಾಯಿತು. ಬಸವ ಎಂಬ ತದ್ಭವ ಶಬ್ದಕ್ಕೆ ಈಶ್ವರ ಸೇರಿಸಿದರೆ ಬಸವೇಶ್ವರ ಎಂಬ ರೂಪವಾಗುತ್ತದೆ, ಹಾಗೆಯೇ ಬಸವಪ್ರಭು. ಬಸವನಗೌಡ ಮುಂತಾದೆಡೆಗಳಲ್ಲಿ ಬಸವಣ್ಣ ಎಂಬುದರ ಕೊನೆಯ ದ್ವಿತ್ವ ಸವಕಳಿಗೊಂಡಿದೆ. ಯಜಮಾನನ ಮಾತಿಗೆ ತಲೆಯಾಡಿಸುವ ಅಲಂಕೃತ ಎತ್ತನ್ನು 'ಕೋಲೆ ಬಸವ' (<ಕೌಲೆ<ಕವಿಲೆ) ಎನ್ನುತ್ತಾರೆ; ಎಲ್ಲದಕ್ಕೂ ಒಪ್ಪುವವನಿಗೂ ಈ ಹೆಸರು ಸಲ್ಲುತ್ತದೆ.
=====
ಬಿಟ್ಟಿ: ಬಿಟ್ಟಿ ಎಂಬುದು ಈಗ ಪುಕ್ಕಟೆ, ಪ್ರತಿಫಲವಿಲ್ಲದ ಎಂಬರ್ಥದಲ್ಲಿ ಬಳಕೆಗೊಳ್ಳುತ್ತಿರುವ ಶಬ್ದ. ಇದು 'ವಿಷ್ಟಿ' ಎಂಬ ಸಂಸ್ಕೃತ ಶಬ್ದದ ತದ್ಭವ. ಇದು ಪ್ರಾಕೃತದಲ್ಲಿ ವಿಟ್ಠಿ ಎಂಬ ರೂಪದಲ್ಲಿ ದೊರೆಯುತ್ತದೆ. ಯುದ್ಧಕಾಲದಲ್ಲಿ 'ಕೂಲಿಯಿಲ್ಲದೆ ನಿರ್ಬಂಧದಿಂದ ಮಾಡಿಸುತ್ತಿದ್ದ ಕೆಲಸ'ವನ್ನು ಬಿಟ್ಟಿ ಎನ್ನುತ್ತಿದ್ದರು. ವಿಷ್ಟಿ ಶಬ್ದವು ಮೊದಲು ಕಾಣಿಸಿಕೊಳ್ಳುವುದು ಕೌಟಿಲ್ಯನ 'ಅರ್ಥಶಾಸ್ತ್ರ'ದಲ್ಲಿ. "ಶಿಬಿರ ಮಾರ್ಗ ಸೇತು ಕೂಪ ತೀರ್ಥ ಶೋಧನಕರ್ಮ, ಯಂತ್ರಾಯುಧೋಪಕರಣ ಗ್ರಾಸ ವಹನಂ, ಅಯೋಧನಾಚ್ಯ ಪ್ರಹರಣಾವರಣ ಪ್ರತಿವಿದ್ದ ಅಪನಯನಮಿತಿ ವಿಷ್ಟಿಕರ್ಮಾಣಿ" ಎಂಬುದು ಅಲ್ಲಿನ ವಿವರಣೆ. ಎಂದರೆ ಶಿಬಿರ, ದಾರಿ, ಸೇತುವೆ, ಬಾವಿ, ನೀರು ಇವುಗಳನ್ನು ಸರಿಪಡಿಸುವುದು ಶೋಧನ ಕರ್ಮ ಎಂಬ ಬಿಟ್ಟಿ; ಆಯುಧಗಳು, ಯಂತ್ರಗಳು, ಆವರಣಗಳು, ಉಪಕರಣಗಳು ಆಹಾರ - ಇವುಗಳನ್ನು ಹೊತ್ತು ಸಾಗಿಸುವುದು ವಹನಕರ್ಮ ಎಂಬ ಬಿಟ್ಟಿ; ಯುದ್ಧದಲ್ಲಿ ಸತ್ತವರನ್ನು ಅಥವಾ ಗಾಯಗೊಂಡವರನ್ನು ಹೊತ್ತೊಯ್ಯುವುದು ಅಪನಯನ ಕರ್ಮ ಎಂಬ ಬಿಟ್ಟಿ. ಹೀಗೆ ಬಿಟ್ಟಿಗಳು ಮೂರು ಬಗೆಯಾದ್ದರಿಂದ ಕನ್ನಡದಲ್ಲಿ ಅದನ್ನು ಮೂವಿಟ್ಟಿ ಎನ್ನುತ್ತಿದ್ದರು (ಮೂರು+ಬಿಟ್ಟಿ). ಕನ್ನಡದಲ್ಲಿ 'ಮೂವಿಟ್ಟಿ' ಎಂಬ ಪದವು 'ಪಂಪಭಾರತ'ದಲ್ಲಿಯೇ ಬಂದಿದೆ. ಅಲ್ಲಿನ 'ಮೂವಿಟ್ಟಿಯ ಒಕ್ಕಲ್' ಎಂಬ ಮಾತಿಗೆ ಮೂವಿಟ್ಟಿ ಮಾಡುವ ಜನ ಎಂದರ್ಥ.
ಯುದ್ಧಕಾಲದಲ್ಲಿ ರಾಜನ ಸೈನ್ಯವು ಸಾಗುವ ದಾರಿಯ ಅಕ್ಕಪಕ್ಕದ ಊರುಗಳಲ್ಲಿನ ಯುವಕರನ್ನು ಕರೆಸಿಕೊಂಡು ಈ ಬಿಟ್ಟಿ ಕೆಲಸಗಳನ್ನು ಮಾಡಿಸುತ್ತಿದ್ದರು. ಇದಕ್ಕೆ ಕೂಲಿಯಿಲ್ಲದ್ದರಿಂದಾಗಿ ಜನರಿಗೆ ಬಿಟ್ಟಿ ಎಂದರೆ ಹೆದರಿಕೆಯಿರುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಿಟ್ಟಿಬೆಸ, ಬಿಟ್ಟಿಗೆಯ್ಮೆ, ಬಿಟ್ಟಿಗೆಲಸ ಎಂಬ ಶಬ್ದಗಳೂ ಹಳೆಯ ಕಾವ್ಯಗಳಲ್ಲಿ ಸಿಕ್ಕುತ್ತದೆ. ಪುಕ್ಕಟೆ ಕೆಲಸಕ್ಕೆ ಹೋಗುವುದನ್ನು 'ಬಿಟ್ಟಿವೋಗು' ಎಂದೇ ಕರೆಯುತ್ತಿದ್ದರು. ಕೆಲವು ವೇಳೆ ರಾಜನು (ಯುದ್ಧಕಾಲದಲ್ಲಿ?) ಕೊಟ್ಟಣದಲ್ಲಿ ಬತ್ತ ಕುಟ್ಟಿಸುತ್ತಿದ್ದ, ಅದೂ ಕೂಲಿಯಿಲ್ಲದೆ. ಇದನ್ನು 'ಕೊಟ್ಟಣ ಹಾಕಿಸು' ಎಂದು ಶಾಸನಗಳು ಕರೆಯುತ್ತವೆ. ಹೀಗಾಗಿ ಬಿಟ್ಟಿ ಎಂದರೆ ವ್ಯರ್ಥ ಎಂಬ ಅರ್ಥವೂ ಪ್ರಾಪ್ತವಾಯಿತು. 'ಬಿಟ್ಟಿವೇಳ್' ಎಂದರೆ ವ್ಯರ್ಥವಾದ ಮಾತಾಡು ಎಂಬ ರೂಪವು ಬಂದಿದೆ. ಭಕ್ತಿಯಿಲ್ಲದೆ ಮಾಡುವ ಪೂಜೆಯನ್ನು ಬಸವಣ್ಣನು 'ಅರಸಯದ ಬಿಟ್ಟಿ' ಎನ್ನುತ್ತಾನೆ. ಯುದ್ಧಕಾಲದಲ್ಲಿ ರಾಜನಿಗೆ ಅವನ ಕಣ್ಣಿಗೆ ಬೀಳುವಂತೆ ಬಿಟ್ಟಿಯ ಮೂಲಕ ಸಹಾಯ ಮಾಡಿದರೆ ಶಾಂತಿಕಾಲದಲ್ಲಿ ಅವನು ಸಹಾಯಮಾಡಿಯಾನು; ಆದರೆ ರಾಜನಿಗೆ ತಿಳಿಯದೆ ಮಾಡಿದ ಬಿಟ್ಟಿ ವ್ಯರ್ಥ ಎಂಬುದು ಬಸವಣ್ಣನ ಮಾತಿನ ಅರ್ಥ.
=====
ಬಿಸಿಲು: ಸೂರ್ಯನ ಬೆಳಕನ್ನು ತಿಳಿಸುವ ಕನ್ನಡದ ಈ ಶಬ್ದ ತಮಿಳು ಮಲಯಾಳಂಗಳಲ್ಲಿ 'ಚೆಯಿಲ್' ಎಂದೂ, ತುಳುವಿನಲ್ಲಿ 'ಬಿಸುಲು' ಎಂದೂ ಬಳಕೆಯಲ್ಲಿದೆ. "ನಡುವಗಲ ಬಿಸಿಲ್ ತನ್ನಂ ಸುಡೆ ವನಕರಿ .. .. ಪೊಕ್ಕುದಾಗ ಬಗೆದಾ ಕೊಳನಂ" ಎಂಬುದು 'ಕವಿರಾಜಮಾರ್ಗ'ದ ಮಾತು. ಖಬಿಸಿಲಂ ಬೆಳ್ದಿಂಗಳುಮಂ ಪಸರಿಸೆ ಕೞ್ತಲೆ ತೆರಳ್ದು" ಎಂಬ ವರ್ಣನೆ 'ಆದಿಪುರಾಣ'ದ್ದು. ವಿಶಿಷ್ಟವಾಗಿ ತಯಾರಿಸಿದ "ತಿಲತೈಲಮನಲ್ಲಿ ಪೊಯ್ದು ಬೞಿಕೇಳುದಿನಂ ಬಿಸಿಲೊಳದನಿಟ್ಟು ಚಂಪಕಕುಸುಮದಿನಿಂಬಾಗೆ" ಪ್ರತಿವಾಸನೆಯಿತ್ತರೆ ಚಂಪಕತೈಲವೆನಿಸುತ್ತದೆ ಎಂಬುದು 'ಲೋಕೋಪಕಾರಂ'ನ ವಿವರಣೆ. "ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ" ಎಂಬ ಬೆಡಗಿನ ಮಾತು ಅಲ್ಲಪ್ರಭುವಿನದು. ಗುರುಕರುಣೆಯಾದಾಗ ಪ್ರಾಪಂಚಿಕತೆಯು "ಬಿಸಿಲ ಮುಂದಣ ಮಂಜಿನಂತಾಯಿತ್ತು" ಎಂದು ಕೋಲಶಾಂತಯ್ಯನೆಂಬ ವಚನಕಾರ ವರ್ಣಿಸುತ್ತಾನೆ. ಇದರಂತೆಯೇ ಆತನು "ಮಂಜಿನ ಹರಿಗೆಯ ಬಿಸಿಲಂಬು ತಾಗಿದಂತಾಯಿತ್ತು" ಎಂದು ಮತ್ತೊಂದೆಡೆ ಹೇಳುತ್ತಾನೆ. "ಬಿಸಿನಿ ಬಿಸಿಲಂ ಉಟ್ಟಳೆಂಬಂತೆ" ಎಂಬ ಸುಂದರ ಚಿತ್ರವನ್ನು 'ರಾಜಶೇಖರವಿಳಾಸ'ದಲ್ಲಿ ಕಾಣಬಹುದು.
'ಬಿಸಿಲುಗೊಳ್' ಎಂದರೆ ಪ್ರಕಾಶಮಾನವಾಗು ಎಂದು: "ದೇವನ ದಿವ್ಯಚ್ಛಾಯೆ ಪ್ರತಿಬಿಂಬಿಸೆ ಬಿಸಿಲುಗೊಂಡು ಸೋಂಕಿದ ಕಣ್ಣಂ ತುಳ್ಕೆ" - ಪೊನ್ನನ 'ಶಾಂತಿಪುರಾಣ'ದ್ದು. ಕವಿಗಳು ಬಿಸಿಲು ಶಬ್ದದಿಂದ ಅನೇಕ ಸಮಾಸಗಳನ್ನು ಸೃಷ್ಟಿಸಿಕೊಂಡರು. 'ಬಿಸಿಲ್ಗುದುರೆ' ಎಂದರೆ ಮರೀಚಿಕೆ, ಭ್ರಾಂತಿ: "ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ" - 'ಪಂಪಭಾರತ'. 'ಬಿಸಲ್ಮೞೆ' ಬಿಸಿಲು ಮಳೆ ಎಡರೂ ಒಟ್ಟಿಗಿರುವುದು: "ಅರಲಂ ಸುಱಿದಪುದೆನೆ ಸುರಿವ ಬಿಸಿಲ್ಮಗಳೆಸೆದುವಭ್ರಾಂಗಣದೊಳ್" 'ಜಗನ್ನಾಥ ವಿಜಯ'. ಹಗಲು ಜೊತೆಯಾಗಿರುವ ಚಕ್ರವಾಕ ಪಕ್ಷಿಯನ್ನು 'ಬಿಸಿಲ್ವಕ್ಕಿ' ಎಂದು ಕರೆಯುತ್ತಾನೆ ವೆಂಕಾಮಾತ್ಯ ತನ್ನ 'ರಾಮಾಯಣ'ದಲ್ಲಿ: "ಬನವಂ ಪಗಲಂ ಬಿಸಿಲ್ವಕ್ಕಿ ಸೋಗೆ ಕಾರ್ಮುಗಿಲಂ:. 'ಬಿಸಿಲ್ದೊರೆ' (ಬಿಸಿಲಿನ ನದಿ) ಎಂಬ ರೂಪಕ ಕುವೆಂಪು ಅವರದು: "ಮಿಥ್ಯೆ ತಾಂ ಪುಸಿಸಾಸದ ಬಿಸಿಲ್ದೊರೆಯ ಬೇಂಟೆಯಿಂ ಬೇಸತ್ತು" 'ಶ್ರೀ ರಾಮಾಯಣ ದರ್ಶನಂ". "ಬಿಸಿಲ್ಹಣ್ಣು ಕಂಡೀದಿ ಬೆಳದಿಂಗಳ ಕಂಡೀದಿ" ಎಂದು ಕಷ್ಟವನ್ನು 'ಬಿಸಿಲ್ಹಣ್ಣು' ಎಂದವರು ಬೇಂದ್ರೆ ('ಬಿಸಿಲು ಬಾಳೆಹಣ್ಣು' ಇಂದಿಗೂ ಇದೆ). "ಬೆನ್ನು ಹೆಂಚನು ಬಗಿದು ಬಿಸಿಲುಕೋಲಂತಿಳಿದು ಬಂದವರು ಮಾವನವರೇ?" ಎಂಬುದು 'ಬಿಸಿಲ ಕೋಲು' ಎಂಬ ಕೆಎಸ್‍ನ ಕವನದ ಸಾಲು. "ಮೇಲಿಂದ ಬಿಸಿಲುಗಳು ಕಾಯಿಸಲು ಬಯಲಲ್ಲಿ" - ಇಲ್ಲಿ ವಿಸೀ ಈ ಶಬ್ದದ ಬಹುವಚನ ಬಳಸುತ್ತಾರೆ.
=====
ಬೀಜ: ಇದೊಂದು ಸಂಸ್ಕೃತ ಶಬ್ದ. ಬೀಜ ಶಬ್ದಕ್ಕೆ 'ಅಮರಕೋಶ'ವು ಒಂದೆಡೆ "ಹೇತುರ್ನಾ ಕಾರಣಂ ಬೀಜಂ" ಎಂದರೆ, ಮತ್ತೊಂದೆಡೆ "ಶುಕ್ರಂ ತೇಜೋ ರೇತಸೀಚ ಬೀಜವೀರ್ಯೇಂದ್ರಿಣಿಯಾಣಿ ಚ" ಎನ್ನುತ್ತದೆ; ಅಂದರೆ ಕಾರಣ ಹಾಗೂ ಸಂತಾನೋತ್ಪತ್ತಿ ಸತ್ವ. "ಹೇತು ನಿದಾನಂ ಬೀಜಂ" ಎಂದೇ 'ಅಭಿಧಾನ ವಸ್ತುಕೋಶ' ಅರ್ಥ ಕೊಡುತ್ತದೆ. "ರಾಜಬೀಜ ಸಂಜನಿತ ಗುಣಂ ಮದಂ" ಎಂಬುದು 'ಪಂಪಭಾರತ'ದ ವಾಕ್ಯ. ಬೇಂದ್ರೆಯವರ 'ಸಖೀಗೀತ'ದಲ್ಲಿ ಬರುವ "ಚೈತ್ರ ವೈಶಾಖಗಳು ಜೈತ್ರಯಾತ್ರೆಗೆ ಹೊರಟು ಪ್ರಾಯವ ಕೈಸೆರೆಗೊಳಿಸುತಿರೆ; ಮೈತ್ರಿಯ ಬೀಜವು ಮದುವೆ ಮುಹೂರ್ತಕೆ ಆಗಾಗ ಕಲ್ಲೊಳು ಬೀಳುತಿದೆ" ಎಂಬ ಮಾತಿನಲ್ಲಿಯೂ ಈ ಅರ್ಥ ಸೂಚಿತವಾದಂತಿದೆ. "ನಿನ್ನದೇ ಬೀಜ; ಸಂತಾನ ನಿನ್ನದೆನ್ನುವುದಕ್ಕೆ ಅಭ್ಯಂತರವೆ ಇಲ್ಲ" ಎಂಬ ಗೋಪಾಲಕೃಷ್ಣ ಅಡಿಗರ ಸಾಲಿನಲ್ಲಿ ಈ ಅರ್ಥ ಸ್ಪಷ್ಟವಾಗಿದೆ. ಬೀಜ ಉತ್ಪತ್ತಿಯಾಗುವ ವೃಷಣವನ್ನೂ ಬೀಜ ಎನ್ನುವುದು ವಾಡಿಕೆ; ಸಂತಾನವೃದ್ಧಿಗಾಗಿ ಮೀಸಲಾದ ಹೋರಿ 'ಬೀಜದ ಹೋರಿ'.
"ಲೋಕದ ಚೇಷ್ಟೆಗೆ ರವಿ ಬೀಜವಾದಂತೆ" ಎಂಬ ಅಕ್ಕಮಹಾದೇವಿಯ ಮಾತಿನಲ್ಲಿ ಈ ಶಬ್ದಕ್ಕೆ ಕಾರಣ ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲಿ ಬೀಜ ಶಬ್ದಕ್ಕೆ ಈ ಅರ್ಥಗಳು ಇವೆಯಾದರೂ ವ್ಯಾಪಕವಾಗಿ ಸಸ್ಯಗಳಿಗೆ ಅನ್ವಯಿಸುವಂತೆ ಈ ಮಾತಿನ ಬಳಕೆಯಿದೆ. "ಬೀಜವಿಲ್ಲದೆ ವೃಕ್ಷ ಬೇಳೆಯಬಲ್ಲುದೆ" ಎಂಬುದು ಅಮುಗೆ ರಾಯಮ್ಮನೆಂಬ ವಚನಕಾರ್ತಿಯ ಪ್ರಶ್ನೆ. "ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು?" ಎಂಬ ಕೌತುಕಪೂರ್ಣ ಪ್ರಶ್ನೆಯನ್ನು ಕೇಳುವವಳು ಮೋಳಿಗೆ ಮಹಾದೇವಿ ಎಂಬ ಮತ್ತೊಬ್ಬ ವಚನಕಾರ್ತಿ. "ಬೀಜದಿಂದಾಯಿತ್ತು ಅಂಕುರವೆಂದೆಂಬರು; ಆ ಬೀಜಕ್ಕೆ ಅಂಕುರವೆ ಪ್ರಾಣವೆಂದರಿಯರು" ಎಂಬ ಗಾಢಾರ್ಥದ ಮಾತು ಚೆನ್ನಬಸವಣ್ಣನದು. ಮತ್ತೊಂದು ವಚನದಲ್ಲಿ ಈತ "ಬಿತ್ತಿದ ಬೀಜದ ಫಲವು ವಿಪರೀತ ನೋಡಾ" ಎಂದು ಹೇಳುವಾಗ ಬೀಜದಿಂದಲೇ ಫಲ ಎಂಬುದನ್ನೂ ಸೂಚಿಸುತ್ತಿದ್ದಾನೆ. ವಾಸ್ತವ ನೆಲೆಯಲ್ಲಿ ಮಾತನಾಡುವ 'ಲೋಕೋಪಕಾರಂ' ಹಣ್ಣುಗಳನ್ನು ಬಿಡುವ ಮರಗಳ "ಕೊಂಬು ಬೀಜಮಂ ಸೆಗಣದೊಳಗೞ್ದಿ ಬಿತ್ತುಗೆ" ಎಂದು ಸಲಹೆ ನೀಡುತ್ತದೆ. ಬಿತ್ತನೆಯನ್ನು ಕಾವ್ಯಗಳು 'ಬೀಜಾವಾಪ' ಎನ್ನುತ್ತವೆ: "ಅದಿಂ ಬೀಜಾವಾಪಮೆನೆ ಜನ್ಮಲತೆಗೆ ಕಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ" - ಜನ್ನನ 'ಯಶೋಧರ ಚರಿತೆ'.
ಹಣ್ಣು ಕಾಯಿಗಳಲ್ಲಿರುವ ಕಾಳನ್ನೂ ಬೀಜ ಎನ್ನುತ್ತಾರೆ. "ಆ ದಾಡಿಮದ್ರುಮದೊಳ್ ಬಿಡೆ ಸವಿಯಲ್ ಬೀಜಮನುಗಿವೆಡೆಯೊಳ್ ಚಂಚೂಪುಟಂಗಳಂ ಬಿಡದೆಂತುಂ" ಎಂಬುದು 'ಕುಸುಮಾವಳೀ ಕಾವ್ಯ'ದ ವರ್ಣನೆ. 'ಬೀಜಕೋಶ'ವೆಂದರೆ ಅಂಡಾಶಯ: "ವರಾಳಕಂ ಬೀಜಕೋಶಮದು ಕರ್ನ್ನಿಕೆಯುಂ" - 'ಅಭಿಧಾನ ವಸ್ತುಕೋಶ'. 'ಬೀಜವೃಕ್ಷನ್ಯಾಯ' ಎಂಬುದು ಕಾರ್ಯಕಾರಣಗಳ ಸಾತತ್ಯವನ್ನು ಸೂಚಿಸುವ ಪರಿಕಲ್ಪನೆಯಾಗಿದೆ.
=====
ಬೆಳಗು1: ಕನ್ನಡದಲ್ಲಿ ಇದರ ಇನ್ನೊಂದು ರೂಪ ಬೆಳಕು. ಈ ಶಬ್ದ ಕ್ರಿಯಾರ್ಥ ಹಾಗೂ ನಾಮವಾಚಕವಾಗಿ ಬಳಕೆಯಲ್ಲಿದೆ. ನಾಮವಾಚಕವಾಗಿ ಇದು ತಮಿಳು ಮಲಯಾಳಂಗಳಲ್ಲಿ ವಿಳಕ್ಕು ಎಂದೂ, ತೆಲುಗಿನಲ್ಲಿ ವೆಲುಗು ಎಂದೂ ರೂಢಿಯಲ್ಲಿದೆ. ಇದರ ಅರ್ಥ ಕಾಂತಿ, ಹೊಳಪು ಎಂದು "ಅಱಿಗೆ ಬೆಳಗುಂ ದ್ಯುತಿಯುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ತೋರ ಮಾಣಿಕಂಗಳ ಬೆಳಗಿಟ್ಟಳಂ ತನಗೊಡಂಬಡೆ" ಎಂಬುದು 'ಪಂಪಭಾರತ'ದ ಮಾತು. "ಬೆಳಗುವ ಜ್ಯೋತಿಯ ತಿರುಳಿನಂತೆ ಕಂಗಳ ಕಾಂತಿ" ಎಂಬ ಅಲ್ಲಮನ ಸುಂದರ ಮಾತಿನಲ್ಲಿಯೂ ಈ ಅರ್ಥವಿದೆ. ಹಗಲು ಎಂಬರ್ಥದಲ್ಲಿಯೂ ಬೆಳಗು ಶಬ್ದಕ್ಕೆ ಅರ್ಥವಿದೆ. "ಬೆಳಗಿನೊಳಂ ಕಾಣದು ನಿಶೆಯೊಳ್ ಕಾಣ್ಬುದು ಪೆಗ್ಗಣಕ್ಕೆ" ಎಂಬ ವಾಕ್ಯ 'ಧರ್ಮಾಮೃತ'ದ್ದು. "ಚೋರಂಗೆ ಬೆಳಗು ಗುಣವಪ್ಪುದೆ" ಎಂಬ ಘಟ್ಟಿವಾಳಯ್ಯನೆಂಬ ವಚನಕಾರನ ಮಾತಿನಲ್ಲಿಯೂ ಇದೇ ಅರ್ಥವೇ ಇದೆ. 'ಬೆಳಗಪ್ಪ ಜಾವ' ಅಥವಾ 'ಬೆಳುಗು ಜಾವ' ಹಗಲಿನ ಆರಂಭದ ದೆಸೆಯನ್ನು ಸೂಚಿಸುತ್ತದೆ: "ಬೆಳಗಪ್ಪ ಜಾವದೊಳ್ ಪದಿನಾರು ಕನಸುಗಳಂ ಕಂಡೆಂ" ಎಂಬುದು 'ಆದಿಪುರಾಣ'ದ ಮಾತಾದರೆ, "ಬೆಳಗಪ್ಪ ಜಾವದಲ್ಲಿ ಲಿಂಗವ ಮುಟ್ಟಿ ಪೂಜಿಸಿ" ಎಂಬುದು ಅಲ್ಲಮನ ಮಾತು. ಇದಕ್ಕೆ ಜ್ಞಾನ ಎಂಬರ್ಥವೂ ಸೂಚಿತವಾಗುತ್ತದೆ: "ಬೆಳಗಿನೊಳಗಣ ರೂಪ ತಿಳಿದು ನೋಡಿಯೆ ಕಳೆದು ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ - ಆತ ಲಿಂಗಪ್ರಸಾದಿ" ಎಂಬುದೂ ಅಲ್ಲಮನ ಮಾತು. "ಬೆಳಗು ಬೆಳಗು ಹಳಚುವಲ್ಲಿ ಕತ್ತಲೆ ಉಳಿಯಬಲ್ಲುದೆ ಅಯ್ಯಾ?" ಎಂಬ ಅದ್ಭುತವಾದ ಪ್ರಶ್ನೆಯು ಸಿದ್ಧರಾಮನದು. 'ಬೆಳಗಾಗು' ಎಂದರೆ ಹಗಲು ಆರಂಭವಾಗು ಎಂದರ್ಥ. "ಬೆಳಗಾಗದಿರಲಯ್ಯ ಭಗವಂತ ಬೆಳಗಾಗದಿರಲಿ, ಒಂದು ದಿನ, ಒಂದೇ ಒಂದು ದಿನವಾದರೂ ಈ ರಾತ್ರಿ ಮುಗಿಯದಿರಲಿ" ಎಂಬುದು ಜಿ.ಎಸ್. ಶಿವರುದ್ರಪ್ಪನವರ 'ಬೆಳಗು'ಕವನದ ಆರಂಭದ ಸಾಲುಗಳು. 
ಬೆಳಕು ಎಂಬ ರೂಪವೂ ಬಳಕೆಯಲ್ಲಿತ್ತು, ಈಗಲೂ ಇದೆ: "ಬೆಳಕೆನೆ ದೀಪಂ" ಎಂಬುದು ರನ್ನನ ನನಘಂಟಿನ ಅರ್ಥ. ಮನೆಗೆ ಬೆಳಕನ್ನು ತರುವ ಗವಾಕ್ಷವನ್ನು ವೃತ್ತವಿಲಾಸನ 'ಧರ್ಮಪರೀಕ್ಷೆ'ಯು 'ಬೆಳಕಂಡಿ' ಎನ್ನುತ್ತದೆ: "ನೆಲನಗಲಕೆ ತೀವಿದ ಕೞ್ತಲೆಯಂ ಕಳೆಯಲ್ಕೆ ಗಗನದೊಳ್ ಪಲವುಂ ಬೆಳಕಂಡಿಗಳಂ ಸಮೆದಂ"." "ಜ್ಞಾನದೀಪದ ಬೆಳಕಲಿ ಓಡಾಡಬೇಕು" ಎಂಬ ಪುರಂದರದಾಸರ ಮಾತಿನಲ್ಲಿ ಈ ಶಬ್ದಕ್ಕೆ ಜ್ಜಾನ ಎಂಬರ್ಥ ಸ್ಪಷ್ಟವಾಗಿಯೇ ಇದೆ. 'ಬೆಳಕು ಹರಿ' ಎಂದರೆ ಬೆಳಗಾಗು ಎಂದರ್ಥ. "ಬಾಗಿಲು ತೆರೆದೂ ಬೆಳಕು ಹರಿದೂ ಜಗವೆಲ್ಲ ತೊಯ್ದಾ" ಎಂಬುದು ಬೇಂದ್ರೆಯವರ 'ಬೆಳಗು' ಎಂಬ ಪ್ರಸಿದ್ಧವಾದ ಪದ್ಯದ ಸಾಲು. 'ಬೆಳಕಿಗೆ ತಾ' (ಪ್ರಕಟಗೊಳಿಸು), ಬೆಳಕು ಚೆಲ್ಲು (ಸ್ಪಷ್ಟವಾಗಿಸು), ಬೆಳ್ಳಂಬೆಳಕು (ತೀರ ಸ್ಪಷ್ಟ) ಮುಂತಾದ ಅನೇಕ ನುಡಿಗಟ್ಟುಗಳನ್ನು ಬೆಳಕು ಶಬ್ದದಿಂದ ಸೃಷ್ಟಿಸಿಕೊಳ್ಳಲಾಗಿದೆ.
======
 ಬೇಸರ: ಇದರ ಮೂಲ ಕನ್ನಡದಲ್ಲಿ 'ಬೇಸರು'. ಇದು ಹಳಗನ್ನಡದಲ್ಲಿ ಬೇಜಾರುಮಾಡಿಕೋ ಮತ್ತು ಬೇಜಾರು ಎಂಬ ಕ್ರಿಯಾರ್ಥಕ ಹಾಗೂ ನಾಮವಾಚಕಗಳಾಗಿ ಬಳಕೆಯಲ್ಲಿತ್ತು. ತಮಿಳಿನಲ್ಲಿದು 'ವೇಚರು' ಆಗಿದ್ದರೆ, ತೆಲುಗಿನಲ್ಲಿ 'ವೇಸರು'  ಎಂದೂ ಮಲಯಾಳಂ ಮತ್ತು ತುಳುಗಳಲ್ಲಿ ನಾಮವಾಚಕವಾಗಿ ಕ್ರಮವಾಗಿ 'ವೇಚರು' ಹಾಗೂ 'ಬೇಸರ್' ಎಂದೂ ಬಳಕೆಯಲ್ಲಿದೆ. ಕ್ರಿಯಾರ್ಥದಲ್ಲಿ 'ಕವಿರಾಜಮಾರ್ಗ'ದಲ್ಲಿಯೇ ಇದರ ಪ್ರಯೋಗವಿದೆ: "ವಾಸುಗಿಯುಂ ಬೇಸರುಗುಂ ದೇಶಿ ಬೇವೇರಪ್ಪುದಂ". ಈ ಅರ್ಥದಲ್ಲಿಯೇ "ಬೇಸಱಿಸು' ಎಂಬ ರೂಪವೂ ಬಳಕೆಯಲ್ಲಿತ್ತು: "ಪಿರಿದುಂ ಬೇಸಱಿಸಿದುವು ಬಿರಯಿಯಂ ಜಳದಂಗಳ್" (ಅಗ್ಗಳನ 'ಚಂದ್ರಪ್ರಭಪುರಾಣ'). ಈ ಅರ್ಥದಲ್ಲಿಯೇ ರನ್ನನು 'ಬೇಸಱೆಯ್' ಎಂದು ಪ್ರಯೋಗಿಸುತ್ತಾನೆ: "ಒನಲಂ ಅಳ್ಕಂ ಚಳವಳಿಸಂ ಚಪ್ಪರಿಸಂ ತಳವಳಿಸಂ ಬೇಸಱೆಯ್ದು ಬೆಳ್ಮೊಗದಿನಿರಂ" ('ಅಜಿತಪುರಾಣ'). ನಡುಗನ್ನಡಲ್ಲಿ ಕೊಳ್ ಪ್ರತ್ಯಯವನ್ನು ಪಡೆದು ಕ್ರಿಯಾರ್ಥದಲ್ಲಿ ಬಳಕೆಗೆ ಬಂತು: ಕನಕದಾಸರ 'ಮೋಹನ ತರಂಗಿಣಿ'ಯಲ್ಲಿ "ಬೇಸರುಗೊಂಬ ತತ್ಕುವರಿಯ ಮನದೊಳಗಾಸರು ಬಹಳ ವೆಗ್ಗಳಿಸಿ" ಎಂಬ ಮಾತಿದೆ. 'ಬೇಸರು' ಎಂಬ ಮಾತಿಗೆ ಆಲಸ್ಯ ಎಂಬ ಅರ್ಥವೂ ಇದೆ ("ಬೇಸರು-ಆಲಸ್ಯೇ" 'ಶಬ್ದಮಣಿದರ್ಪಣ').
ನಾಮಪದವಾಗಿಯೂ ಇದರ ಬಳಕೆ ಹಿಂದಿನಿಂದಲೂ ಇದೆ. ಪಂಪನ 'ಆದಿಪುರಾಣ'ದಲ್ಲಿ "ತನ್ನ ಸೂಳೆಯ ಬೇಸಱಂ ಕೆಳೆಯಂಗಿಂತೆಂದಂ" ಎಂಬ ಪ್ರಯೋಗವಿದೆ. 'ಕುಮಾರವ್ಯಾಸ ಭಾರತ'ದಲ್ಲಿ "ಘನಸಂಗರಕೆ ಬೇಸರು ತೋಱಿತೇ" ಎಂಬ ಮಾತಿದೆ. ಕನಕದಾಸರು ತಮ್ಮ 'ನಳಚರಿತ್ರೆ'ಯಲ್ಲಿ 'ಬೇಸರ' ರೂಪವನ್ನು ಬಳಸುವುದುಂಟು: "ಸತಿಯರ ಮನ್ನಣೆಗೆ ಮೈಗೊಡವಿ ಬಲುಬೇಸರದಿ ಬಳಲುವಳು".
ಆಸರು-ಬೇಸರು ಎಂಬಿವು ಕೆಲವೇಳೆ ಜೋಡಿಪದವಾಗಿ ಬರುತ್ತದೆ. ಬೇಸರು ಮಾನಸಿಕ ಸ್ಥಿತಿಯಾದರೆ ಆಸರು ಎಂದರೆ ದೇಹದ ದಣಿವು. "ಈ ಗತಿಯುಡುಗದಾರದೆ ಬೇಸರದೆ" ಎಂಬುದು ಭೀಮಕವಿಯ 'ಬಸವಪುರಾಣ'ದ ಪ್ರಯೋಗ. "ಅಲ್ಲಮಲಿಂಗನಿದಿರಲಿ ಸೂಸಿದರು ತಮ್ಮೊಡತಿಯಾಸರುಬೇಸಲ್ಲವನು" ಎಂಬುದು ಚಾಮರಸನ 'ಪ್ರಭುಲಿಂಗಲೀಲೆ'ಯ ಮಾತು.
'ಬ್ಯಾಸರ' ಎಂಬುದು ಆಡುಮಾತಿನ ರೂಪ. "ಕವಿಜೀವದ ಬ್ಯಾಸರ ಹರಿಸಾಕ ಹಾಡ ನುಡಿಸಾಕ ಹೆಚ್ಚಿಗೇನು ಬೇಕ ಒಂದ ಹೂತ ಹುಣಿಸೇಮರ ಸಾಕ" ಎಂಬುದು ಬೇಂದ್ರೆಯವರ ಕವನವೊಂದರ ಸಾಲು. ಬ್ಯಾಸರಿಕೆ ಎಂಬ ರೂಪವೂ ಬಳಕೆಯಲ್ಲಿದೆ.
=====
ಬೇಸಾಯ: ಇದು ಸಂಸ್ಕೃತದ 'ವ್ಯವಸಾಯ' ಎಂಬ ಶಬ್ದದ ತದ್ಭವ. ಇದು ಹಿಂದಿನ ಕಾವ್ಯಗಳಲ್ಲಿ ಬೆವಸಾಯ, ಬವಸ, ಬವಸು ಮುಂತಾದ ರೂಪಗಳಲ್ಲಿಯೂ ದೊರೆಯುತ್ತದೆ. "ಎರಡಾರ ಬೆವಸಾಯಂ; ಹತ್ತು ಹಸುಕಱೆಹ" ಎಂಬುದು 'ಪಂಚತಂತ್ರ'ದ ಮಾತು. "ಬೆವಸಾಯವ ಮಾಡಿ ಬೀಯಕ್ಕೆ ಬತ್ತವಿಲ್ಲರ್ದಿಡೆ" ಎಂಬುದು ಅಲ್ಲಮಪ್ರಭುವಿನ ವಚನದ ಭಾಗ. "ಬವಸೆಂದು ವ್ಯವಸಾಯಂ" ಎಂದು 'ಶಬ್ದಮಣಿದರ್ಪಣ' ಅರ್ಥ ಕೊಡುತ್ತದೆ. "ದಾರುಣ ಸಂಸರಣ ವಿಷೋರ್ವೀರುಹಮಂ ಕೀಳ್ವ ಬವಸೆಯಿಂದಿರ್ದಪನೀ ಧೀರಂ" ಎಂಬುದು 'ಪಂಪರಾಮಾಯಣ'ದಲ್ಲಿ ಬರುವ ಮಾತು.  "ಗೆಲವೇನಿಲ್ಲದ ಯುದ್ಧ ಪಾಳುನೆಲದೊಳ್ ಬೇಸಾಯ" ಎಂಬುದು 'ಸೋಮೇಶ್ವರ ಶತಕ'ದ ಮಾತು. ಹನ್ನೆರಡನೆ ಶತಮಾನದ ಶಾಸನವೊಂದರಲ್ಲಿ "ಆತನ ಬ್ಯವಸಾಯ ಬ್ಯವಹಾರವೆನ್ತೆನೆ" ಎಂಬ ಪ್ರಯೋಗವಿದೆ. ಬೇಸಾಯ ಮಾಡುವವನೇ 'ಬೇಸಾಯಗಾರ'. ಎಂ.ಆರ್. ಶ್ರೀ. ವಚನಕಾರರನ್ನು "ಅಚ್ಚಗನ್ನಡದ ಬೇಸಾಯಗಾರರು" ಎಂದು ಕರೆಯುತ್ತಾರೆ.
ಬೆವಸಾಯ ಎಂಬ ಶಬ್ದವನ್ನು 'ಧರ್ಮಾಮೃತ'ವು ಪ್ರಯತ್ನ ಎಂಬರ್ಥದಲ್ಲಿ ಬಳಸುತ್ತದೆ: "ಪುಣ್ಯಮಿಲ್ಲದೆ ಬೆವಸಾಯದಿಂ ಸಿರಿಯಕ್ಕುಮೆಂದೆಯಪ್ಪೊಡೆ". 'ಪಂಪಭಾರತ'ದಲ್ಲಿ "ಬೆವಸಾಯಂಗೆಯ್' ಎಂಬ ನುಡಿಗಟ್ಟಿನ ಅರ್ಥ ಪ್ರಯತ್ನ ಮಾಡು ಎಂದು: "ಬೆವಸಾಯಂಗೆಯಲ್ ಇನ್ನುಮುಂಟು ಎಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂಡವರಂ ಗೆಲ್ವುದಸಾಧ್ಯಮಾಯ್ತೇ". ಸಿದ್ಧತೆಯನ್ನು ಶಾಸನವೊಂದು 'ಬವಸ' ಎನ್ನುತ್ತದೆ: "ಕವಿದುರ್ಗ್ಗಂ ಚಾತುರಂಗಂ ಬವಸ ದಳವುಳಂ" (ಹನ್ನೊಂದನೆಯ ಶತಮಾನದ ಶಾಸನ). ವೃತ್ತಿ, ಕೆಲಸ ಎಂಬರ್ಥದಲ್ಲಿ ಬವಸ ಎಬ ಶಬ್ದವನ್ನು ಅಗ್ಗಳನ 'ಚಂದ್ರಪ್ರಭಪುರಾಣ' ಬಳಸುತ್ತದೆ: "ಎನಗೆ ಮನೋಭವನೆ ದೇವಂ ಬಸನಮೆ ಬವಸಂ ಬಲವೆ ಕುಲಧನಂ".
ವ್ಯವಸಾಯ ಶಬ್ದವೂ ಬಳಕೆಯಲ್ಲಿದೆ. ಮೂಲತಃ ಈ ಅರ್ಥಕ್ಕೆ ಸಂಸ್ಕೃತದಲ್ಲಿ ಪ್ರಯತ್ನ, ನಿಶ್ಚಯ, ಆಚರಣೆ ಮುಂತಾದ ಅರ್ಥಗಳಿವೆ. ಈ ಪದಕ್ಕೆ ಕನ್ನಡದಲ್ಲಿ ಕೃಷಿ ಎಂಬರ್ಥದ ಜೊತೆಗೆ ಪ್ರಯತ್ನ ಎಂಬರ್ಥವಿದೆ. "ಈತನ ಭಕ್ತಿಗಂ ವ್ಯವಸಾಯಕ್ಕಂ ಮೆಚ್ಚಿ ತನ್ನ ತಂದ ಎರ್ಮ್ಮೆಗಳೊಳೊಂದುಮಂ ಕೊಳ್ಳದೆ" ಎಂಬ ಶಾಂತಿನಾಥನ 'ಸುಕುಮಾರಚರಿತೆ'ಯ ಮಾತಿನಲ್ಲಿ ಈ ಅರ್ಥವಿದೆ. ಪ್ರಯತ್ನ ಮಾಡದವನನ್ನು 'ಸಮಯ ಪರೀಕ್ಷೆ' "ಬೆವಸಾಯಹೀನ" ಎಂದು ಕರೆಯುತ್ತದೆ. ಅದೇ ಉತ್ಸಾಹದಿಂದ ಕೆಲಸಮಾಡುವವನನನ್ನು 'ಮಹಾವ್ಯವಸಾಯಿ' ಎನ್ನುತ್ತದೆ: "ಭುವನೈಕಮಲ್ಲದೇವನ ಭವನದೊಳಂ ತಾನೆ ಮಾನಸಂ ತಾನೆ ಮಹಾವ್ಯವಸಾಯಿ". ವ್ಯವಸಾಯ ಮಾಡುವವನೇ ವ್ಯವಸಾಯಗಾರ.
=====
ಭೋಗ1: ಈ ಸಂಸ್ಕೃತಮೂಲದ ಶಬ್ದವು ವ್ಯಾಪಕವಾಗಿ ಬಿಡಿಯಾಗಿಯೂ ಸಮಾಸಗಳಲ್ಲಿಯೂ ಬಳಕೆಯಲ್ಲಿದೆ. "ಭೋಗಂ ವಿಷಯಾನುಭವಂ" ಎಂದು ನಾಗವರ್ಮನ 'ಅಭಿಧಾನ ವಸ್ತುಕೋಶ'ವು ಸೂತ್ರಬದ್ಧವಾಗಿ ಹೇಳುತ್ತದೆ. ವಿಷಯಾನುಭವ ಎಂದರೆ ಇಂದ್ರಿಯಾನುಭವಗಳು. ಹೀಗಾಗಿ ಸುಖವನ್ನು ತರುವ ವಸ್ತುಗಳೂ ಭೋಗಗಳೇ: "ಅಮರಾಧಿಪಪ್ರಹಿತಸುರತರುಪ್ರಸೂನಗ್ರತ .. .. ಸುರಭಿವಿಲೇಪನ ಪ್ರಮುಖ ಭೋಗೋಪಭೋಗಂಗಳೊಳಂ" ಎಂಬುದು 'ಆದಿಪುರಾಣ'ದ ಮಾತು. ಇಲ್ಲಿ ಬಂದಿರುವ 'ಉಪಭೋಗ'ವೂ ವಿಷಯಸುಖ ಎಂಬರ್ಥವುಳ್ಳದ್ದು. 'ಅಭಿಧಾನ ವಸ್ತುಕೋಶ'ದಲ್ಲಿಯೇ "ಅನುಭವಂ ಉಪಭೋಗಂ" ಎಂಬರ್ಥ ಹೇಳಿದೆ. ಹೀಗೆ ಅನುಭವಿಸಬಹುದಾದುದೇ 'ಉಪಭೋಗ್ಯ'. ಪಂಪನ 'ಆದಿಪುರಾಣ'ದಲ್ಲಿನ "ಎನಗೊರ್ವಂಗುಪಭೋಗ್ಯಮಲ್ತು ವಸುಧಾ ಸಾಮ್ರಾಜ್ಯಂ ಓರಂತೆ ನಿಮ್ಮನಿಬರ್ಗಂ" ಎಂಬ ಮಾತನ್ನು ಗಮನಿಸಿ. 'ಅನುಭೋಗ' ಎಂದರೂ ವಿಷಯಸುಖವೇ. "ತನ್ನ ಸತಿಯುಂ ತಾನುಂ ಸುರತಾನುಭೋಗದಲಿ" ಎಂಬುದು ಭೀಮಕವಿಯ 'ಬಸವಪುರಾಣ'ದ ಮಾತು. ಭೋಗವನ್ನು ಅನುಭವಿಸಬೇಕೆಂಬ ತೀವ್ರವಾದ ಆಸೆಯೇ 'ಭೋಗತೃಷ್ಣೆ': "ತನ್ನ ಭೋಗತೃಷ್ಣೆಯಂ ತಾನೆ ತನ್ನ ಮನದೊಳ್ ನಿಂದಿಸುತ್ತುಂ" ('ಆದಿಪುರಾಣ'). ಭೋಗಿಸುವವನೇ 'ಭೋಗಿ', ಅಂದರೆ ರಸಿಕ. "ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೇ" ಎಂಬುದು ಜನ್ನನ 'ಅನಂತನಾಥಪುರಾಣ'ದ ಮಾತು.
ಭೋಗವನ್ನು ಅನುಭವಿಸುವ ಭೂಮಿಯೇ 'ಭೋಗಭೂಮಿ'. ಸತ್ತಮೇಲೆ ಪುಣ್ಯಫಲಗಳನ್ನು ಅನುಭವಿಸುವ ಸ್ವರ್ಗವನ್ನೇ ಭೋಗಭೂಮಿ ಎನ್ನುತ್ತಿದ್ದರು. ಅಗ್ಗಳನು ತನ್ನ 'ಚಂದ್ರಪ್ರಭಪುರಾಣ'ದಲ್ಲಿ "ಭೋಗಭೂತಲ' ಎಂಬ ಶಬ್ದವನ್ನು ಈ ಪದಕ್ಕೆ ಸಮಾನಾರ್ಥಕವಾಗಿ ಬಳಸಿದ್ದಾನೆ: "ತನ್ನೊಳೆ ಸರಿದೊರೆ ಸುರರೇಂ ಭೋಗಭೂತಲಂ ಸುಖಮಯಮೋ". ಹೀಗಾಗಿ ಪುಣ್ಯವಂತರು ಹುಟ್ಟುವ ಪ್ರದೇಶವನ್ನು ಪೊನ್ನ ತನ್ನ 'ಶಾಂತಿಪುರಾಣ'ದಲ್ಲಿ ಈ ಹೆಸರಿನಿಂದ ಕರೆದಿದ್ದಾನೆ: "ಈ ಭರತಾವನಿ ಭೋಗಭೂಮಿ ಭೂಭಾಗಿ ಸುಖಾವಾಪ್ತಿಯಂ ಪಡೆದುದು". ಪಂಪನು 'ಆದಿಪುರಾಣ'ದಲ್ಲಿ 'ಭೋಗಭೂಮಿ'ಯನ್ನು ಒಂದೆಡೆ 'ಸುಖದ ಭೂಮಿ' ಎಂಬರ್ಥದಲ್ಲಿ ಬಳಸಿದರೂ ("ಉತ್ತರಕುರುವೆಂಬ ಭೋಗಭೂಮಿಯೆ ಜನ್ಮಭೂಮಿಯಾದುದು") ಅದನ್ನು ಬೇರೆ ರೀತಿಯಲ್ಲಿಯೂ ಆರ್ಥೈಸುತ್ತಾನೆ: "ಭೋಗಭೂಮಿವಿರಾಮದೊಳ್ ಈ ಕರ್ಮಭೂಮಿ ಪ್ರಾರಂಭದೊಳ್" ಎಂಬ ಮಾತುಗಳಲ್ಲಿ ಮನುಷ್ಯರಿಗೆ ಪ್ರಕೃತಿಯಲ್ಲಿ ತಾನಾಗಿ ಆಹಾರ ಸಿಕ್ಕುತ್ತಿದ್ದ ಸ್ಥಿತಿಯನ್ನು 'ಭೋಗಭೂಮಿ' ಎಂದೂ ಗೆಯ್ಮೆ ಮಾಡಿ ಆಹಾರ ಬೆಳೆದುಕೊಳ್ಳಬೇಕಾದ ಸ್ಥಿತಿಯನ್ನು 'ಕರ್ಮಭೂಮಿ' ಎಂದೂ ವಿಭೇದ ಮಾಡುತ್ತಿದ್ದಾನೆ.
=====
ಭೋಗ2: ಭೋಗ ಎಂಬ ಶಬ್ದಕ್ಕೆ ಹಾವು ಹಾಗೂ ಹೆಡೆ ಎಂಬರ್ಥಗಳೂ ಇವೆ. "ಭೋಗಂ ನಾಗನ ಶರೀರಮುಂ ತತ್ಫಣಮುಂ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ. "ಶ್ರೀಮನ್ನಾಗೇಂದ್ರಭೋಗ ಸ್ಫುರದರುಣಮಣಿದ್ಯೋತಿ ಸಂಧ್ಯಾನಿಬದ್ಧಪ್ರೇಮಂ" ಎಂಬುದು 'ಕರ್ಣಾಟಕ ಕಾದಂಬರಿ'ಯ ಮಾತು. 'ಭೋಗ' (ಹೆಡೆ)ವನ್ನುಳ್ಳದ್ದು 'ಭೋಗಿ': "ಉರಗಂ ಭೋಗಿ" ('ಅಭಿಧಾನ ವಸ್ತುಕೋಶ'). "ತತ್ ಭೋಗಿ ಫಣಾದ್ಯುತಿಯೆ ಕೞ್ತಲೆಯಂ ತಲೆದೋರಲೀಯದು" 'ಪಂಪಭಾರತ'). 'ಭೋಗಿನಿ' ಎಂದರೆ ಹೆಣ್ಣು ಹಾವು "ಪೆಡೆಯುಡುಗಿದ ಭೋಗಿನಿಯೆಮೆ ಮಿಡುಕಂ ಸಂಗಳಿಸಿದಮರಿ" (ಅಗ್ಗಳನ 'ಚಂದ್ರಪ್ರಭಪುರಾಣ'). ಈ ಶಬ್ದಕ್ಕೆ ರಾಜನ ಭೋಗದ ಹೆಣ್ಣು ಎಂಬರ್ಥವನ್ನೂ 'ಅಮರಕೋಶ' ನೀಡುತ್ತದೆ: "ಭೋಗಿನ್ಯೋನ್ಯಾ ನೃಪಸ್ತ್ರಿಯಃ".  ಭೋಗೀಂದ್ರ ಎಂದರೆ ನಾಗಗಳ ಒಡೆಯ ನಾಗರಾಜ: "ಇಂದ್ರನೆ ಭೋಗೀಂದ್ರನೆ ಖಚರೇಂದ್ರನೆ ದಲ್ ಭೂಪೇಂದ್ರನೆಂಬನ್ನೆಗಂ" ('ಆದಿಪುರಾಣ').
ಪಂಪನು ಹಾವಿನ ಹೆಡೆಯನ್ನು 'ಭೋಗಿಭೋಗ' ಎಂಬ ಶಬ್ದದಿಂದಲೂ ಸೂಚಿಸುತ್ತಾನೆ: "ಸಂಸೃತಿಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್". 'ಭೋಗರತ್ನ' ಎಂಬುದು ಹಾವಿನ ಹೆಡೆಯಲ್ಲಿರುತ್ತದೆಂದು ನಂಬಲಾಗಿದ್ದ ಮಣಿ: "ಮಿಕ್ಕಂ ವಿಷವಹ್ನಿಯಿಂ ವಿಳಯಕಾಲಜ್ವಾಲೆಯಂ ಭೋಗರತ್ನದ ಚೆಲ್ವಿಂ ದ್ಯುತಿಮಾಲೆಯಂ ಮಸಕದಂಭೋಳಿಯಿಂ ಕಾಳಿಯಂ" ಎಂಬುದು ರುದ್ರಭಟ್ಟನ 'ಜಗನ್ನಾಥವಿಜಯ'ದ ಪ್ರಯೋಗ. 'ಭೋಗವತಿ' ಎಂಬುದು ನಾಗಲೋಕದ ರಾಜಧಾನಿ ಹಾಗೂ ಅಲ್ಲಿನ ಹೊಳೆಯ ಹೆಸರುಗಳು: "ನದೀನಗರ್ಯೋರ್ನಾಗಾನಾಂ ಭೋಗವತ್ಯಥ ಸಂಗರೇ" ('ಅಮರಕೋಶ').
ಭೋಗತಲ್ಪ ವಿಷ್ಣು ಮಲಗಿರುವನೆಂದು ನಂಬಲಾದ ಹಾವಿನ ಹಾಸುಗೆಯನ್ನು ಸೂಚಿಸುತ್ತದೆ: "ಭೋಗತಲ್ಪದ ಹರಿಯೊಲಿಹ ಶತಯಾಗಸುತನನು" ಎಂಬುದು ಕುಮಾರವ್ಯಾಸನ ಮಾತು. ಭೋಗಿಶಯನ ಎಂದರೆ ವಿಷ್ಣು "ಭೋಗಿಶಯನ ಶ್ರೀ ಪುರಂದರವಿಠಲನ" ಎಂಬುದು ಪುರಂದರದಾಸರ ವರ್ಣನೆ. ಹಾವುಗಳನ್ನೇ ತನ್ನ ಕಟಕ (ಕಂಕಣ) ಗಳನ್ನಾಗಿ ಮಾಡಿಕೊಂಡಿರುವವನು ಭೋಗಿಕಟಕ, ಶಿವ: "ಭೋಗಿಕಟಕನ ಗಾಣಪತ್ಯಕೆ ಹೋಗನೇ ತಂತ್ರಂ ಬೆರಸಿ" ಎಂಬ ಮಾತು 'ಬಸವಪುರಾಣ'ದಲ್ಲಿ ಬಂದಿದೆ. 'ಭೋಗಿವಿಭೂಷ' ಎಂದರೆ ಹಾವಿನ ಆಭರಣ; ಅದನ್ನು ಧರಿಸಿದವನೇ ಶಿವ: "ಅಪರ್ಣೆಯ ವಕ್ತ್ರಮನೊರ್ಮೆ ನೇಹದುತ್ಸವದೊಳೆ ನೋಡುತುಂ .. .. ಭೋಗಿವಿಭೂಷನೊಪ್ಪಿದಂ" (ಷಡಕ್ಷರದೇವನ 'ಶಬರಶಂಕರವಿಲಾಸ').
=====
ಮಂತ್ರ1: ತುಂಬ ವ್ಯಾಪಕವಾದ ಬಳಕೆಯ ಸಂಸ್ಕೃತ ಶಬ್ದವಿದು. "ವೇದಭೇದೇ ಗುಪ್ತವಾದೌ ಮಂತ್ರಃ" ಎಂದು 'ಅಮರಕೋಶ'ದಲ್ಲಿ ಹೇಳಿದೆ. ಇದರ ಪ್ರಕಾರ 'ಮಂತ್ರ' ಎಂದರೆ ವೇದದ ಭಾಗ, ರಹಸ್ಯವಾಗಿ ಹೇಳುವುದು ಎಂದರ್ಥ. ಇದಕ್ಕೆ ಬ್ರಾಹ್ಮಣವನ್ನುಳಿದು ಸಂಹಿತೆಯು ಸೇರಿದ ವೇದ ಎಂಬ ವಿವರಣೆಯೂ ಇದೆ. ಹಾಗೆಯೇ  ದೇವತೆಗಳನ್ನು ಒಲಿಸಿಕೊಳ್ಳಲು ಹೇಳುವ ಮಾತು ಎಂಬರ್ಥವೂ ಇದೆ: ಅಸ್ತ್ರಗಳ "ಪ್ರಯೋಗಸಂಹಾರವಿಭಕ್ತಮಂತ್ರಂ"ದ ಉಲ್ಲೇಖ ಕಾಳಿದಾಸನ 'ರಘುವಂಶ'ದಲ್ಲಿದೆ. "ಮಗಳೆ ಬಾ ಕೊಳ್ ಐದು ಮಂತ್ರಾಳಿಗಳಂ" ಎಂಬುದು 'ಕುಮಾರವ್ಯಾಸಭಾರತ'ದ ಮಾತು. ಧಾರ್ಮಿಕ ಆಚರಣೆಗಳಲ್ಲಿ ಮಂತ್ರ-ತಂತ್ರ ಎಂಬೆರಡು ಭಾಗಗಳಲ್ಲಿ 'ಮಂತ್ರ' ಎಂದರೆ ಹೇಳುವ ಅಕ್ಷರಸಮೂಹ ಎಂಬರ್ಥ ಪ್ರಾಪ್ತವಾಗುತ್ತದೆ. ಕಾಲಕ್ರಮದಲ್ಲಿ ಸಂಸ್ಕೃತದ ಶ್ಲೋಕಗಳನ್ನೆಲ್ಲ 'ಮಂತ್ರ' ಎಂಬ ಶಬ್ದದಿಂದ ಸೂಚಿಸುವ ಪರಿಪಾಟವುಂಟಾಯಿತು.
ಮಂತ್ರದ್ರಷ್ಟಾರನಾದ ಋಷಿಯನ್ನು 'ಮಂತ್ರಕೃತ್' ಎನ್ನುತ್ತಾರೆ. ಮಂತ್ರದ ಅಭಿಮಾನಿ ದೇವತೆಯನ್ನು ಪೊನ್ನನ 'ಶಾಂತಿಪುರಾಣ'ದಲ್ಲಿ 'ಮಂತ್ರದೇವತೆ' ಎನ್ನಲಾಗಿದೆ ("ಮನಸಿಜಮಂತ್ರದೇವತೆಯರಂಗನೆಯರ್"). ಮಂತ್ರದಿಂದ ಪಾವನಗೊಂಡವನು 'ಮಂತ್ರಪೂತ' ("ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯಚ್ಛೃಂಗಮಂ ಆ ಶತಶೃಂಗಮಂ" - 'ಪಂಪಭಾರತ'). ಮಂತ್ರಶಕ್ತಿಯನ್ನು ಕೈವಶಮಾಡಿಕೊಂಡವನು 'ಮಂತ್ರಸಿದ್ಧ' ("ಮಹನೀಯಂ ಮಂತ್ರಸಿದ್ಧಂ ಬಿಡೆ ಪಿಡಿದ ಮಹಾಮುದ್ರೆಯಂ" 'ಪಾರ್ಶ್ವನಾಥಪುರಾಣ'). "ಆತ್ಮನೆಂಬ ಹುತ್ತಿನೊಳಗೆ ನಿದ್ರೆಯೆಂಬ ಕಾಳೋರಗಟ್ಟಿ ಕಚ್ಚೆ .. .. ಮಂತ್ರಸಿದ್ಧರ ಮಂತ್ರ ಮರೆದು ಹೋದವು" ಎಂದು ಅಲ್ಲಮಪ್ರಭು ಒಂದೆಡೆ ಗೇಲಿಮಾಡುತ್ತಾನೆ.
ವೀರಶೈವರ 'ಅಷ್ಟಾವರಣ'ಗಳಲ್ಲಿ (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ತಿ ಮತ್ತು 'ಮಂತ್ರ') ಇದೂ ಒಂದು. 'ಮನ್' (ಆಲೋಚಿಸು) ಮತ್ತು ತ್ರ' (ಕಾಪಾಡು) ಎಂದರೆ ಇದನ್ನು ಉಸುರುವವರನ್ನು ಕಾಪಾಡುವಂಥದು "ಮನನಾತ್ ತ್ರಾಯತೇ ಇತಿ ಮಂತ್ರಃ" - ಎಂಬರ್ಥವನ್ನು ಹೇಳಲಾಗುತ್ತದೆ. ಇದು ಶಿವಮಂತ್ರ; "ಶಿವಮಂತ್ರಕ್ಕೆ ಸರಿ  ಬೇರೆ ಮಂತ್ರವಿಲ್ಲ" ಎಂಬುದು ಬಸವಣ್ಣನ ಮಾತು. ಶಿವಮಂತ್ರಕ್ಕೆ ಎರಡು ರೂಪ. 'ನಮಃಶಿವಾಯ' ಎಂಬುದು ಪಂಚಾಕ್ಷರ ಮಂತ್ರ; ಅದಕ್ಕೆ ಮೊದಲು 'ಓಂ' ಸೇರಿದರೆ ಷಡಕ್ಷರಮಂತ್ರ. "ಮಂತ್ರವೆ ಅವಯವಂಗಳಾಗುಳ್ಳ ಶಿವ" ಎಂದು ಚೆನ್ನಬಸವಣ್ಣ ವರ್ಣಿಸುತ್ತಾನೆ. "ಮಂತ್ರವ ತನ್ನಲ್ಲಿ ಸಯವ ಮಾಡಲರಿಯದ ಮಂತ್ರಭ್ರಷ್ಟರ ನೋಡಾ" ಎಂದು ಚೆನ್ನಬಸವಣ್ಣ ತನ್ನೊಂದು ವಚನದಲ್ಲಿ ಹೇಳುತ್ತಾನೆ. ಮಂತ್ರಗಳ ಗುಟ್ಟನ್ನು ವಿವರಿಸುವುದೇ 'ಮಂತ್ರಗೋಪ್ಯ'.
======
ಮಂತ್ರ2: ಮಂತ್ರ ಎಂಬುದು ರಹಸ್ಯವಾದುದು ಎಂಬರ್ಥವನ್ನೂ ಪಡೆದಿದ್ದುದರಿಂದ ಗ್ರಹ ದೆವ್ವ ಪಿಶಾಚಿ ಬೇತಾಳಗಳಿಂದ ಪೀಡಿತರಾದವರನ್ನು ರಕ್ಷಿಸಲು ಬಳಸುವ ಅಕ್ಷರಸಮೂಹವನ್ನೂ ಮಂತ್ರ ಎಂಬ ಶಬ್ದದಿಂದ ಕರೆಯುವ ರೂಢಿ ಇತ್ತು ಮತ್ತು ಇದೆ. ಕನ್ನಡದಲ್ಲಿ ಇಂತಹ ಪೀಡಕ ಸತ್ವಗಳನ್ನು 'ಗಾಳಿ' ಎಂದೂ ಕರೆಯುತ್ತಿದ್ದರು. ಇವುಗಳನ್ನು ಹೋಗಲಾಡಿಸಬಲ್ಲವರನ್ನು ಮಂತ್ರವಿದರೆಂದೂ ಮಂತ್ರವಾದಿಗಳೆಂದೂ ಮಾಂತ್ರಿಕರೆಂದೂ ಕರೆಯುತ್ತಿದ್ದರು. "ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ, ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ" (ಗರ=ಗ್ರಹ) ಎಂಬ ಬಸವಣ್ಣನ ಮಾತಿನಲ್ಲಿ ಮಂತ್ರವಾದಿಗಳು ಗ್ರಹಪೀಡಿತರಲ್ಲಿ ಸೇರಿಕೊಂಡ ಗ್ರಹಗಳೊಡನೆ ವ್ಯವಹರಿಸಬಲ್ಲರೆಂಬ ಅರ್ಥವಿದೆ. ಬಸವಣ್ಣನ ಮತ್ತೊಂದು ವಚನದಲ್ಲಿ "ಶೂರತ್ವವುಳ್ಳವನಾತನೇ ಮಾಂತ್ರಿಕನು" ಎಂಬ ಮಾತಿದೆ. ಮಂತ್ರ ಹಾಗೂ ತಂತ್ರಸಿದ್ಧಿಗಳನ್ನು ಹಿಂದೆ ಅರುವತ್ತನಾಲ್ಕು (ಚೌಷಷ್ಟಿ) ವಿದ್ಯೆಗಳಲ್ಲಿ ಸೇರಿಸಿದ್ದರು.
ಇಂಥವರು ಕ್ಷುದ್ರದೈವಗಳನ್ನು ತಮ್ಮ ಕೈವಶಮಾಡಿಕೊಂಡವರು ಎಂಬ ನಂಬಿಕೆಯಿತ್ತು. ಅವುಗಳಿಂದ ಬೇಕಾದಾಗ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುವುದು ಹಾಗೂ ಜನರನ್ನು ಮೆಟ್ಟಿದ ಗ್ರಹಗಳನ್ನು ಓಡಿಸುವುದನ್ನು ಮಾಡುತ್ತಿದ್ದರು. ಇದನ್ನು ಮಾಟ ಅಥವಾ ಅಭಿಚಾರ ಎನ್ನುತ್ತಿದ್ದರು. ದುರ್ಯೋಧನನು ಪಾಂಡವರ ವಿರುದ್ಧ ಮಾಟಮಾಡಿಸಿದ ಪ್ರಸಂಗ 'ಪಂಪಭಾರತ'ದಲ್ಲಿದೆ. ಮನುಷ್ಯನನ್ನು ಮೆಟ್ಟಿದ ದೆವ್ವವು ಮಂತ್ರವಾದಿಯನ್ನು ಎದುರಿಸಲಾಗದು ಎಂಬ ಭಾವನೆಯಿತ್ತು ("ಮಂತ್ರವಾದಿಯಂ ಕಂಡ ಗ್ರಹದಂತೆ ಸಮ್ಮುಖದೊಳ್ ನೋಡಲಣ್ಮದಿರೆಯುಂ" - 'ಪಂಚತಂತ್ರ'). ಹೀಗೆ ಮಾಡಬಲ್ಲವರು ಮಾಟಗಾರರೆಂದೂ ಹೆಸರನ್ನು ಪಡೆದವರು. ಇವರು ಹಲವು ವೇಳೆ ಪಿಶಾಚಿಗಳ ಬಾಧೆಯಿಂದ ರಕ್ಷಿಸಲು 'ಯಂತ್ರ'ಗಳನ್ನು ಕಟ್ಟುತ್ತಿದ್ದರು. ಹಾಗಾಗಿ ಇಂಥವರು 'ಯಾಂತ್ರಿಕ'ರೆಂಬ ಹೆಸರಿಗೂ ಪಾತ್ರವಾಗುತ್ತಿದ್ದರು. "ಯಾಂತ್ರಿಕನ ಯಂತ್ರ ಮಂತ್ರ ಸಂಬಂಧದಿಂದ ಪಿಶಾಚಗ್ರಸ್ತನ ಪಿಶಾಚಿಯು ಪಲಾಯನವಪ್ಪ ತೆರನಂತೆ" ಎಂಬ ಮಾತು ಚೆನ್ನಬಸವಣ್ಣನ ವಚನವೊಂದರಲ್ಲಿದೆ. ಸ್ತ್ರೀ ಮಾಂತ್ರಿಕಳನ್ನು 'ಮಾಟಗಾತಿ' ಎನ್ನುತ್ತಿದ್ದರು. ತಮಗೆ ರೋಗ ಬಂದಾಗ ಮಾಟಗಾತಿಯಲ್ಲಿಗೆ ಹೋಗಿ ಗ್ರಹಗಳಿಗೆ ಶಾಂತಿಕರ್ಮ ಮಾಡಿಸುತ್ತಿದ್ದುದನ್ನು ಮಡಿವಾಳ ಮಾಚಯ್ಯ ಎಂಬ ವಚನಕಾರ ಟೀಕಿಸುತ್ತಾನೆ.
ಯಕ್ಷಿಣಿಯನ್ನು 'ಮಂತ್ರವಾದ'ವೆನ್ನುತ್ತಿದ್ದರು: "ಜ್ಯೋತಿಷ್ಯಂ ಮಂತ್ರವಾದಂ ಮೊದಲಾಗೊಡೆಯ  ಶಾಸ್ತ್ರಂಗಳೆಲ್ಲಮುಮಂ ಈ ಕೂಸನೋದಿಸಿದಾ" ಎಂಬುದು 'ವಡ್ಡಾರಾಧನೆ'ಯಲ್ಲಿ ಬರುತ್ತದೆ. ಇದನ್ನು ಮಾಡುವವರನ್ನು ಮಂತ್ರವಾದಿಯೆನ್ನುತ್ತಿದ್ದರು: "ಕೊಟ್ಟಂ ಅರ್ಥಿಜನಕ್ಕಾ ದಿವಿಜೇಂದ್ರಂ ಬಳವಿಯ ಮಂತ್ರವಾದಿಯೆನೆ ಮಕುಟಬದ್ಧ ಸಮಾಜಂ" ಎಂಬ ಮಾತು ಪೊನ್ನನ 'ಶಾಂತಿಪುರಾಣ'ದ್ದು. ಯಕ್ಷಿಣಿಗಾರರು ಹಿಡಿದುಕೊಳ್ಳುತ್ತಿದ್ದ ಕೋಲೇ 'ಮಂತ್ರದಂಡ'.
=====
ಮಂತ್ರ3: ಹಾವು ಮುಂತಾದ ವಿಷಜಂತುಗಳ ವಿಷವನ್ನಿಳುಹಲು ಮಂತ್ರವನ್ನು ಬಳಸುತ್ತಿದ್ದರು. ವಸುಮಿತ್ರನೆಂಬ ಬಾಲಕನಿಗೆ ಹಾವು ಕಚ್ಚಿದಾಗ ಮಂತ್ರವಾದಿಯೊಬ್ಬ 'ಪಱೆಗುಟ್ಟಿ ಮಂತ್ರಿಸಿ' ಅವನನ್ನು ಬದುಕಿಸುವ ಸನ್ನಿವೇಶ 'ವಡ್ಡಾರಾಧನೆ'ಯಲ್ಲಿದೆ. ರಾಜಕುಮಾರನ್ನು ಹಾವು ಕಚ್ಚಿದಾಗ ಶಿವಭೂತಿ ಎಂಬುವವನು "ಗುಂಡಿಗೆಯ ನೀರನಭಿಮಂತ್ರಿಸಿ ತಳಿಯಲೊಡಂ ಕುಮಾರಂ" ನಿರ್ವಿಷನಾದನೆಂದು 'ಪಂಚತಂತ್ರ'ದಲ್ಲಿ ವರ್ಣಿತವಾಗಿದೆ. ಹನ್ನೊಂದನೆಯ ಶತಮಾನದ ಚಾವುಂಡರಾಯನ 'ಲೋಕೋಪಕಾರಂ'ನಲ್ಲಿ ವಿಷವೈದ್ಯ ಪ್ರಕರಣದಲ್ಲಿ ವಿಷವನ್ನಿಳುಹುವ ಎರಡು ಬಗೆಯ ಚಿಕಿತ್ಸೆಗಳ ಬಗ್ಗೆ ವಿಸ್ತಾರವಾದ ಪ್ರಸ್ತಾಪವಿದೆ: "ಓಂ ಹ್ರೀಂ ವಃ ಎಂಬ ಮಂತ್ರದಿನಭಿಮಂತ್ರಿಸಿ ಜಲಮಂ ಮೊಗದೊಳ್ ತಳಿಯೆ ಸಾಧ್ಯಮೆಂದಱಿಗೆ ತೆಱೆದೊಡಕ್ಷಿದ್ವಯಮಂ" ಎಂದೂ, ಗಾರುಡ, ವಾಯು ಹಾಗೂ ಗಗನಮಂತ್ರಗಳಿಂದ ಅಭಿಮಂತ್ರಿಸಿದ ನೀರನ್ನು ಚಿಮುಕಿಸಿ ಅಥವಾ ಮಂತ್ರಗಳಿಂದ ಅಭಿಮಂತ್ರಿಸಿದ ನೀರನ್ನು ಕುಡಿಸಿ ವಿಷವಿಳಿಸುವುದು ಒಂದು ಬಗೆಯಾದರೆ, "ಪಾವು ಕೊಳೆ ಕರ್ಣಮಲಮಂ ತೀವುಗೆ ಮೇಣ್ ಕೊಯ್ದು ಕಳೆಗೆ ಪಿಂಡುಗೆ ರಕ್ತಸ್ರಾವಂ ಮಾಡುಗೆ ಚುರ್ಚುಗೆ ನೀವುಗೆ ವಿಷಹರಣಮಲ್ತೆ ತಾತ್ಕಾಲಿಕದೊಳ್" ಎಂದು ಹಾವು ಕಚ್ಚಿದ ಜಾಗದಲ್ಲಿ ಗಾಯಮಾಡಿ ರಕ್ತ ಹೊರತೆಗೆಯುವುದು ಇನ್ನೊಂದು ಬಗೆ.  ಇವುಗಳನ್ನು ಬಸವಣ್ಣ ಕ್ರಮವಾಗಿ 'ಮಂತ್ರವೈದ್ಯಕಿ ಕಶಸ್ತ್ರವೈದ್ಯ' ಎಂದು ಕರೆಯುತ್ತಾನೆ: "ಗುರೂಪದೇಶ ಮಂತ್ರವೈದ್ಯ, ಜಂಗಮೋಪದೇ ಶಸ್ತ್ರವೈದ್ಯ ನೋಡಾ". ಹಾವು ಕಚ್ಚಿದ ವ್ಯಕ್ತಿಯೂ ಮಂತ್ರವನ್ನು ಉಚ್ಚರಿಸಿದರೆ ವಿಷ ಇಳಿಯುತ್ತದೆಂಬ ನಂಬಿಕೆಯಿತ್ತು: "ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯ ವಿಷಯವೆಂಬ ವಿಷದಿಂದ ಆನು ಮುಂದುಗೆಟ್ಟೆನಯ್ಯಾ; .. .. ಓಂ ನಮಶ್ಶಿವಾಯ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯಾ" ಎಂಬುದು ಬಸವಣ್ಣನ ಇನ್ನೊಂದು ವಚನ.
ಹಾವನ್ನು ಹಿಡಿಯುವಾಗ ಅದು ಮತ್ತಿಗೊಳಗಾಗುವಂತೆ ಮಂತ್ರವನ್ನು ಹೇಳುತ್ತಿದ್ದರಂತೆ; ಆಗ ಅದರ ಹಲ್ಲಿನ ವಿಷ ಹೋಗುತ್ತಿತ್ತು. "ಪಾವಿನ ಪಲ್ಲ ನಂಜು ಕಿಡುವಂತಿರೆ ಮಾಂತ್ರಿಕ ಮಂತ್ರಶಕ್ತಿಯಿಂ" ಎಂಬ ಹೋಲಿಕೆ ನಾಗಚಂದ್ರನ 'ಪಂಪರಾಮಾಯಣ'ದಲ್ಲಿ ಬರುತ್ತದೆ. ಇದೇ ಕಾವ್ಯದಲ್ಲಿ ಮತ್ತೊಂದೆಡೆ ಹಾವಿನಂತೆ ಗೆರೆಯನ್ನು ಬರೆದು ಮಂತ್ರಶಕ್ತಿಯಿಂದ ವ್ಯಕ್ತಿಯನ್ನು ಮೂರ್ಚೆಗೊಳಿಸುತ್ತಿದ್ದ ಬಗೆಯೂ ವರ್ಣಿತವಾಗಿದೆ: "ಬರೆದು ಉರಗಲೇಖೆ ಮೂರ್ಛಾಪರಿಣತಿಯಂ ಮಂತ್ರಶಕ್ತಿಯಿಂ ಪುಟ್ಟಿಪವೋಲ್". ವಿಷವಿಳಿಸುವ ಮಂತ್ರವನ್ನು ರಚಿಸಿದವನು ಗರುಡನಾದ್ದರಿಂದ ಇದಕ್ಕೆ 'ಗಾರುಡಮಂತ್ರ'ವೆಂಬ ಹೆಸರು ಜನಜನಿತವಾಯ್ತು. ಅದನ್ನು ಬಲ್ಲವನು 'ಗಾರುಡಿಗ'. "ಓರ್ವ ನಿರ್ಬುದ್ಧಿ ಗಾರುಡಿಗಂ ಗಾರುಡಮಂ ಕಲ್ತು ವಿದ್ಯಾಪ್ರಚಯಮಂ ನೋಡಲೆಂದು ಸರ್ಪದಷ್ಟನಂ ಅರಸುತ್ತುಂ" ಹೋಗುವ ಪ್ರಸ್ತಾಪ 'ಪಂಚತಂತ್ರ'ದಲ್ಲಿ ಬರುತ್ತದೆ.
=====
ಮಂತ್ರ4: ಮಂತ್ರ ಎಂದರೆ ಸಮಾಲೋಚನೆ ಎಂಬರ್ಥವೂ ಇದೆ. "ಸತ್ಯವತಿ ತಾನುಂ ಆತನುಂ ಆಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣ್ವಪಾಯನನಂ ನೆನೆದು: ಎಂಬುದು 'ಪಂಪಭಾರತ'ದ ಮಾತು. 'ಮಂತ್ರಗುಪ್ತಿ' ಎಂಬ ಶಬ್ದವನ್ನೂ ಸಮಾಲೋಚನೆ ಎಂಬರ್ಥದಲ್ಲಿ ಪಂಪ ಬಳಸಿದ್ದಾನೆ: "ಆ ಮುನಿನಾಥಂ ತ್ರಿಗುಪ್ತಿಯೊಳ್ ನೆರೆದಂ ಈ ಮಹೀನಾಥಂ ಮಂತ್ರಗುಪ್ತಿಯೊಳ್ ನೆರೆದಂ" ('ಆದಿಪುರಾಣ'). ರಾಜರುಗಳು ಸಮಾಲೋಚನೆಯಲ್ಲಿ ತೊಡಗುವ ಕೋಣೆಯನ್ನು ಪಂಪನು 'ಮಂತ್ರಾವಾಸ' ಎನ್ನುತ್ತಾನೆ ("ಮಂತ್ರಾವಾಸದೊಳ್ ಮಂತ್ರನಿಶ್ಚಿತನಾಗಿ" 'ಪಂಪಭಾರತ'). ಇದನ್ನು 'ಮಂತ್ರಶಾಲೆ' ಎಂದೂ ಕರೆಯಲಾಗುತ್ತಿತು: "ವಾಲಿ ಮಂತ್ರಶಾಲೆಯಂ ಸುಗ್ರೀವಂಬೆರಸು ಪೊಕ್ಕು ಮಂತ್ರಿಮಂಡಲಮಂ ಆಪ್ತಪರಿಜನಮುಮಂ ಬರಿಸಿ" ('ಪಂಪರಾಮಾಯಣ'). ಇದನ್ನು 'ಚಂದ್ರಪ್ರಭಪುರಾಣ'ದಲ್ಲಿ 'ಮಂತ್ರಾಗಾರ' ಎಂದಿದೆ ("ಮಂತ್ರಾಗಾರದಿಂದಂ ಕ್ಷಿತಿಪತಿ ಪೊರಮಟ್ಟಂ").
ರಾಜನ ಮೂರು ಬಗೆಯ ಶಕ್ತಿಗಳೆಂದರೆ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬಿವುಗಳೆಂದು 'ಪಂಚತಂತ್ರ'ದಲ್ಲಿ ಹೇಳಿದೆ; ಮಂತ್ರಶಕ್ತಿ ಎಂದರೆ "ಹಿತರ್ ಅರ್ಥಶಾಸ್ತ್ರಕುಶಲರ್ ಚತುರುಪಧಾವಿಶುದ್ಧರೆನಿಪ ಸಚಿವರೊಳ್ ಅನ್ವಿತಮಾಗೆ ಮಾಳ್ಪ ಕಾರ್ಯಂ ಪತಿಗೆಂದುಂ ಮಂತ್ರಶಕ್ತಿ ಮನುಮುನಿಮತದಿಂ" ಎಂದು ಅದೇ ಕಾವ್ಯದಲ್ಲಿ ವಿವರಿಸಲಾಗಿದೆ. ವಿಶೇಷವಾಗಿ ಯುದ್ಧಸಮಯಗಳಲ್ಲಿ ಇಂತಹ ಸಮಾಲೋಚನೆ ಅತ್ಯಂತ ಆವಶ್ಯಕ ಎಂಬ ಅಭಿಪ್ರಾಯದಲ್ಲಿ 'ಪಂಚತಂತ್ರ'ವು "ಚತುರಂಗಬಲಮೇವುದೋ ಸನ್ಮಂತ್ರಮೆ ಸಾಲ್ಗುಂ ಪುಸಿಗುಮೆ ದೇವ ಮಂತ್ರಮೂಲೋಹಿ ವಿಜಯಃ ಎಂಬೀ ವಾಕ್ಯಂ" ಎಂದು ವಿವರಿಸಿದೆ. ಇಂತಹ ಸಮಾಲೋಚನೆಯಲ್ಲಿ ದಾರಿತಪ್ಪಿದವನನ್ನು 'ಕುಮಾರವ್ಯಾಸ ಭಾರತ'ವು 'ಮಂತ್ರಭ್ರಮಿತ' ಎನ್ನುತ್ತದೆ ("ಸಮರಜಯಸಾಧಕರು ಮಂತ್ರಭ್ರಮಿತರಾಯ್ತಪಜಯವಧೂವಿಭ್ರಮಕಟಾಕ್ಷದ ಘಾಯದಲಿ ಕಳವಳಿಸದವರಾರು").
ಸಮಾಲೋಚನೆ ನಡೆಯಿಸುವುದೇ 'ಮಂತ್ರಾಲೋಚನೆ' ("ವಿಶಾಖಭೂತಿ ಮಂತ್ರಾಲೋಚನೆಯೊಳ್ ಯುವರಾಜಂಗೆ ಬೞಿಯನಟ್ಟಿ" 'ಶಾಂತಿಪುರಾಣ'). ಯಾವ ಸಂದರ್ಭಗಳಲ್ಲಿ ಮಂತ್ರಾಲೋಚನೆ ಆವಶ್ಯಕ ಎಂಬುದನ್ನು 'ಪಂಚತಂತ್ರ'ವು ಹೀಗೆ ವಿವರಿಸುತ್ತದೆ: "ಆಗಿರ್ದ ಕಾರ್ಯದ ಪೆರ್ಚುಗೆಗಂ ಮುಂತಪ್ಪ ಕಜ್ಜಮುಮಂ ಮಾಳ್ಪುದರ್ಕಂ ಅನರ್ಥಕಮಪ್ಪ ಕಜ್ಜದ ಪ್ರತೀಕಾರಕ್ಕಂ ಆವುದಾನೊಂದಾಲೋಚನೆಗೆಯ್ದು ಮಾಳ್ಪುದುತ್ತಮ ಮಂತ್ರಂ". ಅಂತೆಯೇ ಮಂತಾಲೋಚನೆಯ ನಿರ್ಣಯವನ್ನು ಗೋಪ್ಯವಾಗಿಡುವುದೂ ಆವಶ್ಯಕವೆಂದು 'ಪಂಚತಂತ್ರ'ವು ಹೇಳುತ್ತದೆ: "ಮಂತ್ರವು ಹೊರಪಟ್ಟಲ್ಲಿ ಕಾರ್ಯವು ಕಿಡುವುದು; ಅದುಕಾರಣಮದು ಎಲ್ಲಾ ಕಡೆಯಿಂದಲೂ ಗೋಪ್ಯವಾಗಿ ರಕ್ಷಿಸಲ್ಪಡತಕ್ಕುದು".
=====
ಮಂತ್ರಿ:  ಯಾವುದೇ ಬಗೆಯ ಅರ್ಥದಲ್ಲಿ ಮಂತ್ರವನ್ನು ಅರಿತವನು 'ಮಂತ್ರಿ' ಎನ್ನಿಸಿಕೊಳ್ಳುತ್ತಾನಾದರೂ ರಾಜನ ಸಮಾಲೋಚನೆಯಲ್ಲಿ ಸೇರುವವನನ್ನು ಈ ಶಬ್ದದಿಂದ ಕರೆಯುವುದು ಈಗಿನ ರೂಢಿ. "ಮಂತ್ರೀ ಧೀಸಚಿವೋ ಅಮಾತ್ಯೋ" ಎಂದು ಸಮಾನಾರ್ಥಕಗಳನ್ನು ಸೂಚಿಸುವ 'ಅಮರಕೋಶ'ವು ಮಂತ್ರಿಯನ್ನು 'ಧೀಸಚಿವ' ಎಂದಿರುವುದು ಗಮನಾರ್ಹ. ಅವನು ರಾಜ್ಯದ ಆಲೋಚನೆಯನ್ನು ಹೇಳುವವನು. "ನರಪತಿಯ ಬುದ್ಧಿಸಚಿವಂ ನಯಶಾಸ್ತ್ರನಪ್ಪವಂ ಮಂತ್ರಿ" ಎಂದು 'ಅಭಿಧಾನ ವಸ್ತುಕೋಶ'ವು ಹೇಳುತ್ತದೆ. ಸಚಿವನಿಗಿರಬೇಕಾದ ಅರ್ಹತೆಗಳ ಕುರಿತು 'ಮನುಸ್ಮೃತಿ'ಯಲ್ಲಿ ದೀರ್ಘವಾಗಿ ಪ್ರಸ್ತಾಪಿಸಲಾಗಿದೆ. ಸತ್ತ ಮಂತ್ರಿಯ ಸ್ಥಾನವನ್ನು ರಾಜನು ಅವನ ಮಕ್ಕಳಿಗೆ ನೀಡುತ್ತಿದ್ದ ಪದ್ಧತಿ ಒಂದು ಕಾಲದಲ್ಲಾದರೂ ಇದ್ದಂತೆ ಕಾಣುತ್ತದೆ: ಅತಿಬಳ ಅರಸನ ಮಂತ್ರಿ ಸೋಮಶರ್ಮಖನೆಂಬುವವನು ಸತ್ತಾಗ ಅವನ ಮಕ್ಕಳಿಗೆ ಆ ಸ್ಥಾನ ನೀಡುವ ಬಗ್ಗೆ ರಾಜ ಆಲೋಚಿಸುವ ಪ್ರಸಂಗವು 'ವಡ್ಡಾರಾಧನೆ'ಯಲ್ಲಿದೆ. ಮಂತ್ರಿಗಳಿಗಿರಬೇಕಾದ ಗುಣಗಳೇ 'ಮಂತ್ರಿಗುಣ'; ಇವುಗಳು ಯಾವುವೆಂಬುದನ್ನು 'ಪಂಚತಂತ್ರ' ಹೀಗೆ ವಿವರಿಸುತ್ತದೆ: "ಗೂಢಲಕ್ಷಣ ಭಿನ್ನಪ್ರತಿಸಂಧಾನ ಸಂಧಿದೂಷಣ ಪರಿಚಿತ್ತ ಪರೀಕ್ಷಾಲಕ್ಷಣಮೆಂಬ ಮಂತ್ರಿಗುಣಂಗಳು". ತನ್ನ ಕಾವ್ಯವು ವಿವಿಧ ಬಗೆಯ ಜನರಿಗೆ ಅವರಿಗೆ ಬೇಕಾದುದನ್ನು ನೀಡುತ್ತದೆ ಎಂದು ಹೇಳುವಾಗ ಕುಮಾರವ್ಯಾಸನು "ಮಂತ್ರೀಜನಕ್ಕೆ ಬುದ್ಧಿಗುಣ" ಎಂಬುದನ್ನೂ ಸೇರಿಸುತ್ತಾನೆ.
ರಾಜ್ಯವೊಂದರ "ಸ್ವಾಮಿ ಅಮಾತ್ಯ ಜನಪದ ದುರ್ಗ ಸುಹೃತ್ ಕೋಶ ದಂಡಮೆಂಬ ಏಳಂಗ"ಗಳಲ್ಲಿ ರಾಜನಾದ ಮೇಲೆ ಮಹತ್ವ ಪಡೆಯುವವನು 'ಅಮಾತ್ಯ' ಅಥವಾ ಮಂತ್ರಿಯೇ. ರಾಜನ ಬಳಿ ಒಬ್ಬರಿಗಿಂತ ಹೆಚ್ಚು ಮಂತ್ರಿಗಳಿರುತ್ತಿದ್ದರು; ಅವರೆಲ್ಲ ಸೇರಿ 'ಮಂತ್ರಿಮಂಡಲ'ವಾಗುತ್ತಿತ್ತು: "ವಾಲಿ ಮಂತ್ರಶಾಲೆಯಂ ಪೊಕ್ಕು ಸುಗ್ರೀವಂಬೆರಸು ಮಂತ್ರಿಮಂಡಲಮುಂ ಆಪ್ತಪರಿಜನಮುಮಂ ಬರಿಸಿ" 'ಪಂಪರಾಮಯಣ'). ಅನೇಕ ಶಾಸನಗಳಲ್ಲಿ ಮಂತ್ರಿಗಳನ್ನು 'ಪ್ರಧಾನ'ರು ಎಂದೂ ಕರೆಯಲಾಗಿದೆ; ವಚನಗಳಲ್ಲಿ 'ಪ್ರಧಾನಿ' ಎಂಬ ರೂಪವೂ ದೊರೆಯುತ್ತದೆ. ಶಾಸನಗಳೆಲ್ಲ ಎಲ್ಲ ಮಂತ್ರಿಗಳನ್ನೂ ದಂಡನಾಯಕ ಎಂಬ ವಿಶೇಷಣದಿಂದ ಕರೆಯುತ್ತವೆ. ದುಷ್ಟಮಂತ್ರಿಯನ್ನು ತೆಗೆದುಹಾಕಬೇಕೆಂದು 'ಪಂಚತಂತ್ರ'ವು ಶಾಸ್ತ್ರಗ್ರಂಥವೊಂದನ್ನು ಉಲ್ಲೇಖಿಸಿ ಹೇಳುತ್ತದೆ: "ಪಗೆಯಪ್ಪ ಭೃತ್ಯನಂ, ಅಲುಗಾಡುವ ಹಲ್ಲಂ ದುಷ್ಟನಪ್ಪ ಮಂತ್ರಿಯಂ ಬೇರ್ವೆರಸಿ ಕೀಳ್ವುದೇ ಸುಖಂ" ವ್ಯಕ್ತಿಯೊಬ್ಬನಿಗೆ ಅವನ ಅಂತಃಕರಣಗಳೇ ಬುದ್ಧಿವಾದವನ್ನು ಹೇಳಬಲ್ಲವು ಎಂಬರ್ಥದಲ್ಲಿ ಜೋದರ ಮಾಯಣ್ಣ ಎಂಬ ವಚನಕಾರನು "ಅಂತಃಕರಣಚತುಷ್ಟಯಂಗಳೇ ನಿಮ್ಮ ಮಂತ್ರಿಗಳಯ್ಯ" ಎನ್ನುತ್ತಾನೆ.
=====
ಮಂದಾಸನ: ಇದು ಸಂಸ್ಕೃತದ 'ಮಂಜೂಷಾ' ಮತ್ತು 'ಆಸನ' ಎಂಬೆರಡು ಶಬ್ದಗಳಿಂದ ಆದ ಹಾಗೆ ತೋರುತ್ತದೆ. ಸಂಸ್ಕೃತದಲ್ಲಿ ಮಂಜೂಷಾ ಎಂದರೆ ಪೆಟ್ಟಿಗೆ: "ಪಿಟಕಃ ಪೇಟಕಃ ಪೇಟಾ ಮಂಜೂಷಾ" ಎಂದು 'ಅಮರಕೋಶ'ದಲ್ಲಿದೆ. "ಪೇೞಿಗೆಯದು ಮಂಜೂಷೆ" ಎಂಬುದು 'ಅಭಿಧಾನ ವಸ್ತುಕೋಶ'ದ ವಿವರಣೆ ('ಪೇೞಿಗೆ' ಎಂಬುದು 'ಪೇಟಿಕಾ'ದ ತದ್ಭವ). 'ಮಂದಸು' ಎಂಬ ಶಬ್ದವನ್ನು 'ಚಾವುಂಡರಾಯಪುರಾಣ' ಪೆಟ್ಟಿಗೆ ಎಂಬರ್ಥದಲ್ಲಿ ಬಳಸಿದೆ: "ಮಂದಸಿನೊಳಿರ್ದ ತಳಾರನ ಸಾಕ್ಷಿ ನುಡಿಯಿಸಿದೊಡಂ". 'ಮಂದಾಸ' ಎಂಬ ರೂಪವು 'ಜೀವಸಂಬೋಧನೆ'ಯಲ್ಲಿದೆ: "ಮೇಗೆ ನೆಗೆದ ಮಂದಾಸಂ ಸಿಡಿಲ್ ಬಡಿಯೆ ಸುಭೌಮಂ ಸತ್ತು". ಕರ್ಣಪಾರ್ಯನ 'ನೇಮಿನಾಥಪುರಾಣ'ದಲ್ಲಿ ಬರುವ "ಕುಮಾರನಂ ಆಗಳೆ ಕೊಂಡು ಬಂದವರ್ ಸೊಗಯಿಸುತಿರ್ಪ ಮಂದಸಿನೊಳಿಕ್ಕಿ" ಎಂಬ ವಾಕ್ಯವನ್ನು ಗಮನಿಸಿದರೆ 'ಮಂದಸು' ಪದಕ್ಕೆ ಪೆಟ್ಟಿಗೆ ಎಂಬರ್ಥ ಮಾಡುವುದಕ್ಕಿಂತ ತೊಟ್ಟಿಲು ಎಂದು ಅರ್ಥೈಸುವುದು ಹೆಚ್ಚು ಸೂಕ್ತವಾಗಿ ಕಾಣುತ್ತದೆ. 'ಮಂದಾಸು' ಎಂಬ ರೂಪವು ಮೂರನೆಯ ಮಂಗರಸನ 'ನೇಮಿಜಿನೇಶಸಂಗತಿ'ಯಲ್ಲಿದೆ: "ಆ ಸುಕುಮಾರನನೊಂದು ಮಂದಾಸಿನೊಳ್ ರಾಸಿ ಮಾಡಿದ ರತ್ನಸಹಿತ ಆ ಸಹಚರಿಯರಿಸಿ". ಇಲ್ಲಿಯೂ 'ಮಂದಾಸು'ವಿಗೆ ಪೆಟ್ಟಿಗೆ ಎಂಬುದಕ್ಕಿಂತ ತೊಟ್ಟಿಲು ಎಂಬರ್ಥ ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಬಾಹುಬಲಿಯ 'ನಾಗಕುಮಾರಚರಿತೆ' ಎಂಬ ಕಾವ್ಯದಲ್ಲಿ 'ಮಂದಾಸು' ಶಬ್ದವನ್ನು ಪ್ರಾಣಿಗಳನ್ನಿಡುವ ಬೋನು ಎಂಬರ್ಥದಲ್ಲಿ ಬಳಸಲಾಗಿದೆ: "ಘೋಟದರಸು ಅಟ್ಟಿದ ಮಂದಾಸಿನೊಳು ಶಕಟದ ಮೇಲಿಟ್ಟು". ಈಗ ಮಂದಸು ಎಂಬ ಶಬ್ದ ಸ್ವತಂತ್ರವಾಗಿ ಬಳಕೆಯಲ್ಲಿಲ್ಲದಿದ್ದರೂ 'ಮಂದಾಸನ' ಎಂಬುದು ಸರ್ವಸಾಮಾನ್ಯ ಬಳಕೆಯ ಶಬ್ದವಾಗಿದೆ,  ಮಂದಾಸನ ಎಂದರೆ ದೇವರ ವಿಗ್ರಹವನ್ನು ಪೂಜೆಗಾಗಿ ಇಡುವ ಪೆಟ್ಟಿಗೆ ಅಥವಾ ಮಂಟಪದಾಕಾರದ ಮರದ ರಚನೆಗೆ ಅನ್ವಯಿಸುತ್ತದೆ. ಹೀಗಾಗಿ, ಪ್ರಾಯಶಃ ಪೆಟ್ಟಿಗೆಯಾಕಾರದ ಎಲ್ಲ ವಸ್ತುಗಳನ್ನೂ ಮಂದಸ ಎಂಬುದರೊಡನೆ ಸಮೀಕರಿಸುವ ಹಾಗೆ ಕಾಣುತ್ತದೆ. ಮಂಜೂಷಾ>ಮಂದಸ ಆದ ಮೇಲೆ ಕನ್ನಡದಲ್ಲಿ ಈ ತದ್ಭವಕ್ಕೇ 'ಆಸನ' ಎಂಬ ಶಬ್ದವನ್ನು ಸೇರಿಸಿ ಸವರ್ಣಸಂಧಿಯಾಗಿಸಿ 'ಮಂದಾಸನ'ವಾಗಿ ಮಾಡಿಕೊಂಡಿರುವಂತೆ ಕಾಣುತ್ತದೆ. ಆದ್ದರಿಂದ 'ಮಂದಾಸನ' ಎಂಬ ಶಬ್ದಕ್ಕೆ ಮಂದಸ+ಆಸನ=ಮಂದಸಾಸನ>ಮಂದಾಸನ ಎಂಬ ವ್ಯತ್ಪತ್ತಿಯನ್ನು ಹೇಳಬಹುದೆಂದು ಕಾಣುತ್ತದೆ.

=====
ಮಗು: ಇದೊಂದು ದ್ರಾವಿಡ ಪದ. ಇದರರ್ಥ ಶಿಶು ಎಂದು. ತಮಿಳಿನಲ್ಲಿ ಮಕ, ತುಳುವಿನಲ್ಲಿ ಮಗೆ, ಮಲಯಾಳಂನಲ್ಲಿ ಮಗನ್ ಎಂಬ ರೂಪಗಳಿವೆ. ಸಂತಾನ ಎಂಬರ್ಥದಲ್ಲಿ ಮಗ, ಮಗಳು ಎಂಬ ಶಬ್ದಗಳು ಬಳಕೆಯಲ್ಲಿವೆ. ಮಗು+ಅನ್=ಮಗನ್>ಮಗ ಎಂದೂ ಮಗು+ಅಳ್+ಮಗಳ್ (ಅವನ್, ಅವಳ್ ಎಂಬ ಸರ್ವನಾಮಗಳು ಗಂಡು-ಹೆಣ್ಣು ಎಂದು ಸೂಚಿಸುವ ಅನ್, ಅಳ್ ಎಂಬ ಪ್ರತ್ಯಯಗಳಾಗಿವೆ) ಎಂದೂ ಆಗಿವೆ. ಮಗ ಎಂಬುದು ಪುಂವಾಚಿಯಾಗಿ (ಗಂಡು ಎಂಬುದನ್ನು ಸೂಚಿಸಲು) ಮಗವಾಡು ಆಲುಮಗ ಮುಂತಾಗಿ ತೆಲುಗಿನಲ್ಲಿ ಬಳಕೆಯಾಗುತ್ತದೆ; ಮಗಡು ಎಂಬುದು ಅಲ್ಲಿ ಗಂಡನನ್ನು ಸೂಚಿಸುತ್ತದೆ. ಕನ್ನಡದಲ್ಲಿ ಮಗು ಎಂಬುದಕ್ಕೆ (ಕ)ಗಳ್ ಎಂಬ ಬಹುವಚನ ಪ್ರತ್ಯಯ ಹತ್ತಿಸಿ ಮಗುಗಳ್>ಮಕ್ಕಳ್ ಎಂಬ ರೂಪವನ್ನು ಮಾಡಿಕೊಳ್ಳುತ್ತೇವೆ.
ಚಿಕ್ಕವರನ್ನು ಅಕ್ಕರೆಯಿಂದ ಕರೆಯುವಾಗ 'ಮಗು' ಎಂದು ಸಂಬೋಧಿಸುವ ರೂಢಿಯಿದೆ. ಮಗು ಪುಂಸ್ತ್ರೀವಾಚಿಯಾದ (ಹೆಣ್ಣು ಗಂಡು ಎರಡಕ್ಕೂ ಅನ್ವಯಿಸುವ) ಪದವಾದುದರಿಂದ ಕನ್ನಡದಲ್ಲಿ ಅದರ ಹಿಂದೆ ಗಂಡು ಹೆಣ್ಣು ಎಂದು ಸೇರಿಸಿ ಗಂಡುಮಗು, ಹೆಣ್ಣು ಮಗು ಎಂದು ಮಾಡಿಕೊಳ್ಳುವ ಪರಿಪಾಟವಿದೆ: ಮಗ, ಮಗಳು ಎಂಬುದು ಸಿದ್ಧವಾದ ಮೇಲೆ ಬಹುವಚನವನ್ನು ಸೂಚಿಸಲು 'ಅಂದಿರು' ಎಂಬ ಪ್ರತ್ಯಯ ಸೇರಿಸಿದಾಗ ಮಗಂದಿರು, ಮಗಳಂದಿರು ಎಂಬ ರೂಪಗಳುಂಟಾಗುತ್ತವೆ. ಕ್ರಿಶ ಹತ್ತನೆಯ ಶತಮಾನದ ಗದ್ಯಕಾವ್ಯ 'ಚಾವುಂಡರಾಯಪುರಾಣ'ದಲ್ಲಿ "ಸಾಗರದತ್ತನುಂ ಸಮುದ್ರದತ್ತನುಂ ಎಂಬ ಮಗಂದಿರುಂ" ಎಂಬ ಹಾಗೂ ಹೆಣ್ಣುಮಕ್ಕಳು ಎಂಬರ್ಥದಲ್ಲಿ 'ಮಗಳ್ದಿರ್" ಎಂಬ ಪ್ರಯೋಗಗಳಿವೆ.
ಸಮಾಸಪದಗಳಲ್ಲೂ ಮಗ ಶಬ್ದವನ್ನು ಬಳಸಿ, ಮದುಮಗ, ಮದುಮಗಳು, ಮದುಮಕ್ಕಳು ಎಂಬ ರೂಪಗಳನ್ನು ಮಾಡಿಕೊಳ್ಳುತ್ತೇವೆ. ಮಕ್ಕಳಾಟ ಎಂಬುದು ಹುಡುಗಾಟವನ್ನು ಸೂಚಿಸುವಂತೆಯೇ ಗಂಭಿರವಾಗಿ ಪರಿಗಣಿಸದುದನ್ನೂ ಧ್ವನಿಸುತ್ತದೆ. ಹೀಗೆಯೇ ಮಕ್ಕಳಾಟಿಕೆ ಎಂಬುದು ಆಟದ ಸಾಮಾನು ಮತ್ತು ಮಕ್ಕಳು ಆಟವಾಡುವುದು ಹಾಗೂ ಗಂಭೀರವಾಗಿ ಪರಿಗಣಿಸದ ಮನೋಭಾವವನ್ನು ಸೂಚಿಸುತ್ತದೆ.
=====
ಮಜ್ಜನ: ಈ ಸಂಸ್ಕೃತ ಶಬ್ದದ ಮೂಲಾರ್ಥ ನೀರಲ್ಲಿ ಮುಳುಗುಹಾಕುವುದು ಎಂದು. ಕನ್ನಡದಲ್ಲಿದು ಸ್ನಾನ ಎಂಬ ವಿಶಾಲಾರ್ಥವನ್ನು ಪಡೆದಿದೆ. "ಕಾಮಂಗೆ ಮಜ್ಜನಕೆ ಎಂದೆತ್ತಿದ ಚಂದ್ರಕಾಂತ ಘಟದೊಳ್ ತಂದ .. .. ನೀರರುಹ ಎಂಬ ಮಾತು 'ಪಂಪಭಾರತ'ದಲ್ಲಿದೆ. "ಮಜ್ಜನಕೀಗಳೆ ರಾಜಪುತ್ರಿ ನೀಂ ನಡೆ" ಎಂಬ ವಾಕ್ಯ 'ಕರ್ಣಾಟಕ ಕಾದಂಬರಿ'ಯದು. 'ಮಜ್ಜನಂಬುಗು' ಎಂದರೆ ಸ್ನಾನಮಾಡು ಎಂದರ್ಥ: "ಉದಿತೋದಿತಂ ದಿಗಿಭಗಳೆಂಟುಂ ಒಳ್ಪೊಡರಿಸಿ ಮಜ್ಜನಂಬುಗುಸೆ" ('ಪಂಪಭಾರತ'). 'ಮಜ್ಜನಂಬೊಗು' ಎಂಬ ರೂಪವೂ ಸಿಕ್ಕತ್ತದೆ: "ಮಜ್ಜನಂಬೊಕ್ಕು ದಿವ್ಯವಸ್ತ್ರಮನುಟ್ಟು ಮಗುಳ್ದು ಬಂದು" (ನಯಸೇನನ 'ಧರ್ಮಾಮೃತ'). 'ಮಜ್ಜನವಳ್ಳ' ಎಂದರೆ ಸ್ನಾನ ಮಾಡಿಸುವವನು ("ಮಜ್ಜನಪೀಠಂ ಸುರಗಿರಿ ಮಜ್ಜನಜಳವಮೃತಜಳಧಿಜಳವು ಅಮರೇಂದ್ರಂ ಮಜ್ಜನವಳ್ಳಂ" ('ಆದಿಪುರಾಣ'). ಹಾಗೆಯೇ ಸ್ನಾನಮಾಡಿಸುವವಳು 'ಮಜ್ಜನವಳ್ತಿ': "ಅಮರ್ತ್ಯೆಯರೆ ಮಜ್ಜನವಳ್ತಿಯರಾಗಿ" (ಅಗ್ಗಳನ 'ಚಂದ್ರಪ್ರಭಪುರಾಣ'). ಸ್ನಾನ ಮಾಡುವಾಗ ಕುಳಿತುಕೊಳ್ಳುವ ಮಣೆಯನ್ನು 'ಮಜ್ಜನಪೀಠ' ಎನ್ನುತ್ತಿದ್ದರು: "ವಿಭವಂ ಜನ್ಮಾಭಿಷೇಕಕ್ಕೆ ತಾನೆ ವಲಂ ಮಜ್ಜನಪೀಠಮಾದತಿಶಯಂ ಹೇಮಾದ್ರಿಗುನ್ಮುದ್ರಿತಂ" (ನಾಗಚಂದ್ರನ 'ಮಲ್ಲಿನಾಥ ಪುರಾಣ'). ಸ್ನಾನದ ಮನೆ 'ಮಜ್ಜನ ಗೃಹ': "ವಸುಧಾರಕಮೆಂಬ ಕೋಷ್ಠಾಂಗಾರಮುಂ ಜೀಮೂತಮೆಂಬ ಮಜ್ಜನಗೃಹಮುಂ" ('ಆದಿಪುರಾಣ') ಎಂಬ ಮಾತಿನಲ್ಲಿ ಅರಮನೆಗಳಲ್ಲಿ ವಿವಿಧ ಕೋಣೆಗಳಿಗೆ ಬೇರೆ ಬೇರೆ ಹೆಸರುಗಳನ್ನಿಡುತ್ತಿದ್ದ ಪರಿಪಾಟವೂ ತಿಳಿದುಬರುತ್ತದೆ.
ಮೇಲೆ ಉಲ್ಲೇಖಿಸಿದ 'ಪಂಪಭಾರತ' 'ಆದಿಪುರಾಣ' 'ಮಲ್ಲಿನಾಥ ಪುರಾಣ'ಗಳ ಸಾಲುಗಳಲ್ಲಿ 'ಮಜ್ಜನ' ಶಬ್ದಕ್ಕೆ ಅಭಿಷೇಕ ಎಂಬರ್ಥವೂ ಪ್ರಾಪ್ತವಾಗುವುದು ಸ್ಪಷ್ಟವಾಗುತ್ತದೆ. ಈ ಅರ್ಥದಲ್ಲಿ ಈ ಶಬ್ದವು ವೀರಶೈವ ಪರಿಭಾಷೆಯಲ್ಲಿ ಸೇರಿಹೋಗಿದೆ. ಲಿಂಗಕ್ಕೆ ಅಭಿಷೇಕ ಮಾಡು ಎಂಬರ್ಥದಲ್ಲಿ ಬಸವಣ್ಣನ ವಚನಗಳಲ್ಲಿ "ಬಂಡಿ ತುಂಬ ಪತ್ರೆಯ ತಂದು ಕಂಡಕಂಡಲ್ಲಿ ಮಜ್ಜನಕ್ಕೆರೆವಿರಿ" "ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ" ಎಂಬಂತಹ ಮಾತುಗಳು ಸಿಗುತ್ತವೆ. ಜಂಗಮದ ವಿಷಯದಲ್ಲಾದರೆ 'ಮಜ್ಜನ ಮಾಡಿಸು' ಶಬ್ದಕ್ಕೆ ಸ್ನಾನಮಾಡಿಸು ಎಂಬ ಅರ್ಥ ಪ್ರಾಪ್ತವಾಗುತ್ತದೆ: "ನಾನು ಮಜ್ಜನವ ಮಾಡುವ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ" ಎಂಬ ಮಹಾದೇವಿಯಕ್ಕನ ಮಾತಿನಲ್ಲಿ ಈ ಅರ್ಥವಿದೆ. ಅಷ್ಟಾವರಣಗಳಲ್ಲಿ ಒಂದಾದ ಪಾದೋಕವೆಂದರೆ, ಚೆನ್ನಬಸವಣ್ಣ ಮಾತುಗಳಲ್ಲಿ, "ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು". ಅಲ್ಲದೆ "ಪಾದೋದಕದಲ್ಲಿ ಮುಖಪ್ರಕ್ಷಾಲನ ಮಾಡುವುದು" ಎಂದು ಅವನು ವಿಧಿಸುತ್ತಾನೆ. ಹರಿಹರನು 'ಮಹಮಜ್ಜನ' ಎಂಬ ಶಬ್ದವನ್ನು ಬಳಸುತ್ತಾನೆ: "ಚರಿತದಿಂ ಮನೆಗೆ ಬಿಜಯಂಗೆಯ್ಸಿ ತಂದಂದು| ಪರಿಮಳೋದಕದಿಂದೆ ಮಹಮಜ್ಜನಕ್ಕೆರೆದು".
=====
ಮಡಿ: 'ಹಿಮ್ಮಡಿ' ಮುಮ್ಮಡಿಗಳ ಕಾರುಬಾರು
ಮಠಮಾನ್ಯಗಳಳ್ಲಿ ಪಾಠಪೀಠಗಳಲ್ಲಿ ಹಿಮ್ಮಡಿ (ಹಿಂದೆಯೂ ಮಡಿ) ಮುಮ್ಮಡಿ (ಮುಂದೆಯೂ ಮಡಿ) ಪಾರುಪತ್ಯೆ ಮಾಡುವುದು ನಮ್ಮೆಲ್ಲರ ಅನುಭಕ್ಕೆ ಬಂದಿರುವಂಥದೇ. ಹೌದು, ಇದು ಮಡಿ ಪುರಾಣವನ್ನು ಕುರಿತದ್ದೇ. ಅಲ್ಲದೆ, ಮಡಿಮೈಲಿಗೆಗಳು ಅವಳಿಜವಳಿಗಳು, ಹೀಗಾಗಿ ಇದು ಜೋಡಿ ಸಂಕಥನವೂ ಹೌದು.
ಮಡಿ ದ್ರಾವಿಡ ಮೂಲದ್ದೇ; ಈ ಶಬ್ದ ಸಂಸ್ಕೃತದಲ್ಲಿ ಕಾಣಸಿಗುವುದಿಲ್ಲ. ತಮಿಳಿನಲ್ಲಿ ಮಟಿ ಎಂದೂ, ತೆಲುಗಿನಲ್ಲಿ ಮಡಿ, ಮಡುಗು ಎಂದೂ, ತುಳುವಿನಲ್ಲಿ ಮಡಿ ಎಂದೂ ಇದರ ರೂಪಗಳು ದೊರೆಯುತ್ತವೆ. ಎಲ್ಲ ಭಾಷೆಗಳಲ್ಲೂ ಅರ್ಥ ಸುಮಾರು ಒಂದೇ; ಪರಿಶುದ್ಧತೆ, ಒಗೆದ ಬಟ್ಟೆ, ನಾರುಡೆ, ಹತ್ತಿಯ ಅಥವಾ ರೇಷ್ಮೆ ಬಟ್ಟೆ ಹಾಗೂ ಧಾರ್ಮಿಕ ಶುಚಿತ್ವ ಎಂಬರ್ಥಗಳಿವೆ. ಪ್ರಾಯಶಃ ಇವೆಲ್ಲ ಮೊದಲಿನಿಂದಲೂ ಇದ್ದುವಾಗಿರದೆ, ಕ್ರಮೇಣ ಈ ಶಬ್ದದ ಅರ್ಥ ವಿಸ್ತಾರಗೊಂಡಂತೆ ಕಾಣುತ್ತದೆ. ಏಕೆಂದರೆ, ಕನ್ನಡದ ನಿದರ್ಶನಗಳನ್ನು ತೆಗೆದುಕೊಂಡರೆ, ಮಡಿ ಎಂಬುದು ಬಟ್ಟೆ ಒಗೆಯುವುದು ಎಂಬರ್ಥದಲ್ಲಿಯೂ, ಬಟ್ಟೆ ಒಗೆಯುವ ವೃತ್ತಿಯವನು ಎಂಬರ್ಥದಲ್ಲಿ ಮಡಿವಳ, ಮಡಿವಾಳ, ಮಡಿವಳ್ಳ ಎಂಬ ಶಬ್ದಗಳೂ ಮೊದಲಿನಿಂದಲೇ ಬಳಕೆಯಲ್ಲಿವೆ. ಹೀಗಾಗಿ ಮೊದಲು ಬಟ್ಟೆ ಶುದ್ಧಿಗೆ ಅನ್ವಯಿಸುತ್ತಿದ್ದ ಅರ್ಥವು ಬರಬರುತ್ತ ವ್ಯಾಪಕತೆಯನ್ನು ಪಡೆಯಿತು.
"ಬಗೆಯುತ್ತುಮಿರ್ದ ಮಡಿವಳನ ಮುಂದಣ ಮಡಿಯುಮಂ ತನ್ನೊಡನೆಯ ಗೋವಳಿಗರುಟ್ಟ ಮೈಲಿಗೆಯುಮಂ ಮಧುಸೂದನಂ ಕಂಡು" ಎಂಬ ನೇಮಿಚಂದ್ರನ 'ನೇಮಿನಾಥ ಪುರಾಣ'ದಲ್ಲಿ ಮಡಿ ಎಂಬುದಕ್ಕೆ ಶುಭ್ರವಾದ ಬಟ್ಟೆ ಎಂಬುದು ಅದಕ್ಕೆ ವಿರುದ್ಧವಾದ ಮೈಲಿಗೆಯ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ. ಅಂತೆಯೇ "ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು?" ಎಂಬ ಜೇಡರ ದಾಸಿಮಯ್ಯನ ಮಾತಿನಲ್ಲೂ ಶುಭ್ರವಾದ (ಮಡಿದು=ಮಡಿಯಾದ) ಬಟ್ಟೆ ಎಂಬರ್ಥವಿದೆ. 'ಬಸವ ಪುರಾಣ'ದಲ್ಲಿ ಉಬ್ಬ ಹಾಕುವ ರೀತಿ ವರ್ಣಿತವಾಗಿದೆ: "ಕುದಿಸಿ ಉದಕದೊಳುಲುಬಿ ಬೀಸುತ್ತೊಗೆದು ಪರಡಿ ಮಡಿಗಳಹುದಕ್ಕಟಾ ಮುನಿದೆ". ಆದರೆ 'ಪಂಪಭಾರತ'ದ "ತನ್ನುಡುವುಪ್ಪಟಂಗಳ್ ಮಡಿಯೊಳಾಗೆಯುಂ" ಎಂಬಲ್ಲಿಯೂ 'ಧರ್ಮಾಮೃತ' "ಮಡಿಯನುಡುವಂತೆ ಸಮೆದಾಭರಣಮಂ ತೊಡುವಂತೆ" ಎಂಬಲ್ಲಿ ರೇಷ್ಮೆ ಎಂಬರ್ಥವಿರುವಂತೆ ತೋರುತ್ತದೆ. 'ಮಡಿ' ದ್ರಾವಿಡ ಪದ, ಆದರಿದು ಕ್ವಚಿತ್ತಾಗಿ ಸಂಸ್ಕೃತದಲ್ಲಿಯೂ ಬಳಕೆಯಾದಂತಿದೆ: ಇಡಿಯಾದ ಬಟ್ಟೆ ಎಂಬರ್ಥದಲ್ಲಿ ಜೈನ ಕಾವ್ಯಗಳಲ್ಲಿದು ಬಳಕೆಯಾಗಿದೆಯೆಂದು ಕೆಲವು ವಿದ್ವಾಂಸರ ಸಂಶೋಧನೆ.
ಕೇವಲ ಒಗೆದು ಶುಭ್ರಗೊಂಡ ಬಟ್ಟೆ ಎನ್ನುವುದು ಬರಬರುತ್ತ ವೈಯಕ್ತಿಕ ಶೌಚ ಎಂಬರ್ಥದಲ್ಲಿ ಅಮೂರ್ತ ಕಲ್ಪನೆಯಾಯಿತು. ಕನ್ನಡದ ಮಡಿ ಶಬ್ದ ಈ ಅರ್ಥದಲ್ಲಿ ಬಳಕೆಗೊಂಡುದು ಈಚಿನ ಶತಮಾನಗಳಲ್ಲಿ. "ಮಡಿಮಡಿಯೆಂದು ಅಡಿಗಡಿಗ್ಹಾರುವೆ ಮಡಿಮಾಡುವ ಬಗೆ ಬೇರುಂಟು" ಎಂಬಂತಹ ಕಡೆಗಳಲ್ಲಿ, ಅಂದರೆ ಬ್ರಾಹ್ಮಣ ಬರಹಗಳಲ್ಲಿ. ಈ ಆಚರಣೆ ಮೊದಲಿನಿಂದಲೂ ಇರಬಹುದು, ಆದರೆ ಬ್ರಾಹ್ಮಣರಲ್ಲಾದ್ದರಿಂದಲೂ, ಬ್ರಾಹ್ಮಣೇತರರ ರಚನೆಗಳಲ್ಲಿ ಈ ಅರ್ಥದಲ್ಲಿ ಇದನ್ನು ಬಳಸುವ ಪ್ರಮೇಯ ಬಂದಿಲ್ಲ. ಪಂಚಸೂತಕಗಳ ಪರಿಕಲ್ಪನೆಯಲ್ಲಿ ಮಡಿಯಾದ ವ್ಯಕ್ತಿ ಇತರರನ್ನು ಮುಟ್ಟಿಕೊಳ್ಳದಿರುವುದು ಮುಖ್ಯವಾಯಿತು. ಜಾತಿಸೂತಕ, ಜನನಸೂತಕ, ಪ್ರೇತಸೂತಕ, ಉಚ್ಚಿಷ್ಟಸೂತಕ ಮತ್ತು ರಜಸ್ಸೂತಕಗಳೇ ಇವು. ಸೂತಕ ಎಂಬ ಶಬ್ದದಲ್ಲಿನ 'ಸೂತ' ಎಂಬುದು ಹುಟ್ಟನ್ನು ಸೂಚಿಸುತ್ತದೆ; ಹಾಗಾಗಿ ಜಾತಿಯನ್ನೂ ಸೂಚಿಸುತ್ತದೆ. ಮಗು ಹುಟ್ಟಿದಾಗ ಅಥವಾ ಗರ್ಭಪಾತವಾದಾಗ ತಂದೆತಾಯಿಯರಿಬ್ಬರೂ ಅಶೌಚವನ್ನಾಚರಿಸಬೇಕೆಂದು ಗೌತಮ, ವಾಸಿಷ್ಠರಂತಹ ಧರ್ಮಶಾಸ್ತ್ರಕಾರರು ನಿಯಮಿಸುತ್ತಾರೆ; ಆದರೆ ಇದು ಅನ್ವಯಿಸುವುದು ಮೇಲುವರ್ಣದವರಿಗೆ, ಅದರಲ್ಲೂ ಬ್ರಾಹ್ಮಣರಿಗೆ. ಇದು ಮಾನಸಿಕ ಶುಚಿತ್ವದ ಜೊತೆಗೆ ದೇಹಸ್ಥಿತಿಯ ಶುಭ್ರತೆ ಹಾಗೂ ಹುಟ್ಟಿನ ಶ್ರೇಷ್ಠತೆಗಳಿಗೂ ಅನ್ವಯಿಸಿತ್ತು. ಧಾರ್ಮಿಕಾಚರಣೆಗಳಲ್ಲಿ ಮಡಿಗೆ ವಿಶೇಷಪ್ರಾಧಾನ್ಯ: ಪೂಜೆ, ಯಜ್ಞ, ವ್ರತ ಮುಂತಾದವುಗಳನ್ನು ಮಾಡುವವನು ಮಡಿ ಉಡಬೇಕು. ಮಡಿ ವ್ಯಕ್ತಿ ಎಂದರೆ ಪವಿತ್ರ; ಆದ್ದರಿಂದ ಅಪವಿತ್ರನನ್ನು ಮುಟ್ಟಿಕೊಂಡರೆ ಸ್ನಾನಮಾಡಬೇಕೆಂಬ ನಿಯಮ ಬಂತು. ಗಂಡನನ್ನು ಕಳೆದುಕೊಂಡ ವಿಧವೆ (ಪ್ರಾಯಶಃ ಸದಾ ಪಾವಿತ್ರ್ಯವನ್ನುಳಿಸಿಕೊಳ್ಳಬೇಕೆಂಬ ನಿರೀಕ್ಷೆಯಿಂದ) ತಲೆ ಬೋಳಿಸಿಕೊಂಡು 'ಮಡಿ'ಯಾಗುವ ಸಂಪ್ರದಾಯ ಬಂತು. 'ಮಡಿ ಹೆಂಗಸು' ಬ್ರಾಹ್ಮಣವರ್ಗದಲ್ಲಿ ವ್ಯಾಪಕ ಬಳಕೆಯ ಶಬ್ದ. 'ಮಡಿ ಗಂಡಸು' ಎಂಬ ಶಬ್ದವಿಲ್ಲ!
ಮಡಿಯಲ್ಲಿರುವ ವ್ಯಕ್ತಿ ಅದಕ್ಕೆಂದೇ ಒಗೆದು ಹಾಕಿದ ಬಟ್ಟೆಯನ್ನೋ, ರೇಷ್ಮೆ ವಸ್ತ್ರವನ್ನೋ ನಾರುಮಡಿಯನ್ನೋ ಧರಿಸುತ್ತಾನೆ. ಸಂಸ್ಕೃತದ 'ವಲ್ಕಲ' ಎಂದರೆ ನಾರುವಸ್ತ್ರ; ವಲ್ಕಲ, ಅದು ಮರದ ತೊಗಟೆಯನ್ನೂ ನಾರಿನಿಂದ ಮಾಡಿದ ವಸ್ತ್ರವನ್ನೂ ಸೂಚಿಸುತ್ತದೆ; ತಪಸ್ವಿಗಳು ಉಡುತ್ತಿದ್ದ ಬಟ್ಟೆ. ಕನ್ನಡದಲ್ಲಿ ನಾರು, ನಾರುಡೆ, ನಾರುಡು, ನಾರಸೀರೆ ಮುಂತಾದ ಶಬ್ದಳ ಬಳಕೆಯಿತ್ತು; ನಾರುಮಡಿ ಪ್ರಾಯಶಃ ಈಚಿನ ರೂಪ. ನಾರಿನಿಂದ ತಯಾರಿಸಿದ ಬಟ್ಟೆ ಎಂರ್ಥದ ಜೊತೆಗೆ, ನಾರೇ ಮಡಿ ಎಂಬ ಭಾವನೆ ಇದರಲ್ಲಿ ಸೇರಿರುವಂತಿದೆ.
ಭಾಷೆಯಲ್ಲಿ ಸಾಮಾನ್ಯವಾಗಿ ಒಂದು ಪರಿಕಲ್ಪನೆಗೆ ವಿರುದ್ಧವಾದ ಮತ್ತೊಂದು ಇದ್ದೇ ಇರುತ್ತದೆ, ಅದಕ್ಕನುಗುಣವಾದ ಶಬ್ದವೂ ಸೃಷ್ಟಿತವಾಗುತ್ತದೆ. ಹೀಗೆ ಕನ್ನಡದಲ್ಲಿ 'ಮೈಲಿಗೆ' ಎಂಬುದು 'ಮಡಿ'ಯ ವಿರುದ್ಧ ಪರಿಕಲ್ಪನೆಯ ಶಬ್ದ. ಈ ಶಬ್ದವು ಮೈಲಗೆ ಹಾಗೂ ಮೈಲಿಗೆ ಎಂಬೆರಡೂ ರೂಪಗಳಲ್ಲಿ ದೊರೆಯುತ್ತದೆ. 'ಮಡಿ' ಯಾವ್ಯಾವ ನೆಲೆಗಳಲ್ಲಿ ಬಳಕೆಯಾಯಿತೋ ಆ ಎಲ್ಲ ನೆಲೆಗಳಲ್ಲಿ ಅದರ ವಿರುದ್ಧವಾದ ಮೈಲಿಗೆಯೂ ಬಳಕೆಯಾಗಿದೆ. ರನ್ನನ 'ಅಜಿತ ಪುರಾಣ'ದಲ್ಲಿ "ಅಗಲೊಳಿಕ್ಕಿದ ಉಳ್ಳುಣಿಸಮೇಧ್ಯಮೆಂ ಎಂಜಲುಂ ಅಪ್ಪುದು, ಉಟ್ಟ ಪುಟ್ಟುಗೆಗಳುಂ ಅಂತೆ ಮೈಲಗೆಗಳಪ್ಪುವು" ಎಂಬ ವಾಕ್ಯವಿದೆ. ಇಲ್ಲಿ ಉಟ್ಟು ಬಿಟ್ಟ ಬಟ್ಟೆ ಎಂಬರ್ಥ ಇಲ್ಲದೆ. ಇದು 'ಹರಿಶ್ಚಂದ್ರ ಕಾವ್ಯ'ದಲ್ಲಿ ನೇರವಾಗಿಯೇ ಬಂದಿದೆ: "ಉಟ್ಟು ಕಳೆದ ಮೈಲಿಗೆಗೆ ಸವಿದೊಗಡಿಸಿದ ಕೂಳ್ಗೆ ಕೈಯಾಂತವಂ ಬೇರೆ ಸಂದೆಗವಿಲ್ಲ". ಆಗಲೇ ನೋಡಿದ 'ನೇಮಿನಾಥ ಪುರಾಣ'ದ ಉಲ್ಲೇಖದಲ್ಲಿನ "ಗೋವಳಿಗರುಟ್ಟ ಮೈಲಿಗೆಯುಮಂ ಕಂಡು" ಎಂಬಲ್ಲಿ ಕೊಳಕು ಬಟ್ಟೆ ಎಂಬರ್ಥವಿದೆ. ಈ ಅರ್ಥ ಕನಕದಾಸರ 'ನಳಚರಿತ್ರೆ'ಯಲ್ಲಿ ಸ್ಪಷ್ಟವಾಗಿಯೇ ಇದೆ: "ಮೈಲಿಗೆಯ ಸೀರೆಯನುಟ್ಟು ತನು ಕಳೆತೆಗೆಯೆ ಕೈಗಲ್ಲದಲಿ ನಿಂದಿಹ ಸತಿಯನೀಕ್ಷಿಸಿದ". ಅಂದರೆ ಒಗೆಯಬೇಕಾದ ಬಟ್ಟೆ ಎಂಬ ಒಟ್ಟರ್ಥವು "ಧರ್ಮಾಮೃತ'ದ "ಮೈಲಿಗೆಯಂತೊಗೆಹಕ್ಕೆ ವಂದು" ಎಂಬ ವಾಕ್ಯಖಂಡದಲ್ಲಿ ಸ್ಪಷ್ಟವಾಗಿದೆ.
ಮುಂದೆ, ಈ ಶಬ್ದ ಮಾನಸಿಕ ಅಪವಿತ್ರತೆ ಎಂಬ ಅರ್ಥದಲ್ಲಿ ಹಿಗ್ಗಲಿಕೆಯಾಯಿತು. "ಮನದ ಮೈಲಿಗೆಯ ಕಳೆಯ ಬಂದನಯ್ಯಾ ಮಡಿವಾಳನು" ಎಂಬ ಬಸವಣ್ಣನ ವಚನದ ಮಾತಿನಲ್ಲಿದು ವೇದ್ಯವಾಗುತ್ತದೆ. "ಮತ್ಸರಮತಿಯ ಮೈಲಿಗೆ ಬಿದ್ದುದಾತ್ಮಜ್ಞಾನದೃಷ್ಟಿಯಲಿ" ಎಂಬ ಕುಮಾರವ್ಯಾಸನ ಮಾತೂ ಇದನ್ನು ಪುಷ್ಟೀಕರಿಸುತ್ತದೆ. ಆದರೆ ಇದು ಧಾರ್ಮಿಕಾಚರಣೆಯ ಪರಿಕಲ್ಪನೆಯ ಆರ್ಥದಲ್ಲಿ ಕಾಣಿಸಿಕೊಳ್ಳುವುದು ಪುರಂದರದಾಸರ ಮಾತಿನಲ್ಲಿ: "ಮಡಿಯುಂ ನೀನೆ ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಸಿ". ಆ ಮೊದಲು ರೂಢಿಯಲ್ಲಿರದಿದ್ದ ಮಡಿ-ಮೈಲಿಗೆಯ ಪರಿಕಲ್ಪನೆ ಬ್ರಾಹ್ಮಣರು ಅಂದರೆ ಮೇಲುವರ್ಣದವರಲ್ಲಿ ಬುದ್ಧನ ನಂತರ ಆರಂಭವಾಗಿರಬೇಕು ಎಂದು ಡಾ. ಶ್ಯಾಮಾಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ.
======
ಮದ್ದು: ಕನ್ನಡದಲ್ಲಿ ಈ ಶಬ್ದಕ್ಕೆ ಔಷಧಿ ಎಂಬ ಅರ್ಥವಿದೆ. ಇದು ದ್ರಾವಿಡ ಪದ (ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಮುಖ್ಯವಾದ ದ್ರಾವಿಡ ಭಾಷಾ ಕುಟುಂಬದಲ್ಲಿರುವ ಪದ). ಇದರ ಮೂಲ ರೂಪ ಕನ್ನಡದಲ್ಲಿ  ಮರ್ದು ಎಂದು. ತಮಿಳಿನಲ್ಲಿ ಮರುಂದು, ತೆಲುಗಿನಲ್ಲಿ ಮಂದು, ಮಲಯಾಳಂನಲ್ಲಿ ಮರುನ್ನು, ತುಳುವಿನಲ್ಲಿ ಮರ್ದ್ ಎಂಬ ರೂಪಗಳಿವೆ. ತುಂಬ ಹಿಂದಿನ ಕನ್ನಡ ಕಾವ್ಯಗಳಲ್ಲಿಯೂ ಔಷಧಿ ಎಂಬ ಅರ್ಥದಲ್ಲಿ ಈ ಶಬ್ದದ ಪ್ರಯೋಗವಿದೆ. "ಮರ್ದುಂ ಮಂತ್ರಮುಂ" ಎಂಬ ಪ್ರಯೋಗ 'ವಡ್ಡಾರಾಧನೆ'ಯಲ್ಲಿದ್ದರೆ, ಚಿಕಿತ್ಸೆಯ ಎರಡು ಕ್ರಮಗಳಾದ ಔಷಧಪ್ರಯೋಗ ಮತ್ತು ಮಂತ್ರ ಹಾಕುವುದು ಇವುಗಳನ್ನಿದು ಸೂಚಿಸುತ್ತದೆ. "ಕುತ್ತಕ್ಕೆ ಮರ್ದು ಮಾಡದೆ ಕುತ್ತಂ ಪೋಗೆಂದೊಡಂತೆ ಪೋಕುಮೇ" ಎಂದು ಬ್ರಹ್ಮಶಿವನ 'ಸಮಯ ಪರೀಕ್ಷೆ' ಯಲ್ಲಿ ಹೇಳಿದೆ. ಮದ್ದು ರೋಗನಿವಾರಣೆಗಾಗಿ ಬಳಸುವ ವಸ್ತು ಎಂಬುದು ಸ್ಪಷ್ಟವಾದ ಅರ್ಥ.
ಮರ್ದು ಎಂಬ ಶಬ್ದವನ್ನು ವಿಷ, ನಂಜು ಎಂಬರ್ಥದಲ್ಲಿಯೂ ಬಳಸುತ್ತಿದ್ದರು. 'ಸಮಯಪರೀಕ್ಷೆ'ಯಲ್ಲಿಯೇ "ಮಕ್ಕಳಿಗೆ ಬೆಣ್ಣೆಯೊಳ್ ಮರ್ದಿಕ್ಕುವವೊಲ್" ಎಂದು ಹೇಳಿದೆ. ಕೈಮದ್ದು ಎಂದೂ ಇದನ್ನು ಕರೆಯುತ್ತಾರೆ. ಕೈಮಸಕ ಅಥವಾ ಕೈಮಸಕು ಎಂಬ ಶಬ್ದಗಳನ್ನೂ ಈ ಅರ್ಥದಲ್ಲಿ ಬಳಸುತ್ತಾರೆ. ಆರೋಗ್ಯ ಹಾಳು ಮಾಡಲು ಆಹಾರದೊಡನೆ ಬೆರೆಸುವ ಮದ್ದನ್ನಿದು ಸೂಚಿಸುತ್ತದೆ. ಮಸಕ ಎಂದರೆ ಕೆಲಸ ಎಂಬ ಅರ್ಥವೂ ಇರುವುದರಿಂದ, ಕೈಮಸಕ ಎಂದರೆ ಕೈಚಳಕ ಎಂಬ ಅರ್ಥವೂ ಆಗಬಹುದೇನೋ. ಏಕೆಂದರೆ ಇದು ಬಹಿರಂಗವಾಗಿ ಮಾಡುವಂಥ ಕಾರ್ಯವಲ್ಲವಲ್ಲ. ಅಪರಿಚಿತರು ಕೊಡುವ ಏನನ್ನೂ ತಿನ್ನಬೇಡ ಎಂದು ಚಿಕ್ಕ ವಯಸ್ಸಿನಲ್ಲಿ ಹಳ್ಳಿಯಲ್ಲಿ ನಮ್ಮ ಹಿರಿಯರು ಹೇಳುತ್ತಿದ್ದರು. ಕೆಲವರಿಗೆ ಹೀಗೆ ಕೈಮಸಕವಿಕ್ಕುವುದು ಅನಿವಾರ್ಯ ಎಂಬ ನಂಬಿಕೆಯಿತ್ತು; ಯಾರಿಗಾದರೂ ಅದನ್ನು ಹಾಕಲೇಬೇಕಂತೆ; ಇಲ್ಲದಿದ್ದರೆ ಅವರಿಗೇ ಕೇಡು. ಆಹಾರದಲ್ಲಿ ಬೆರಸಿದ ಏನೋ ವಿಷಪದಾರ್ಥ ಹೊಟ್ಟೆಯಲ್ಲೇ ಉಳಿದು ತಿಂದವವನ್ನು ಕೃಶಗೊಳಿಸುತ್ತದೆ ಎಂಬ ನಂಬಿಕೆ. "ನವನೀತಮುಮಂ ಶುಕತುಂಡವುಮಂ ಮೇಣ್ ಬಿಸಿಯ ನೀರುಮಂ ಕೋಳದ ಮೂಳವುಮಂ ಮರವಸಲೆಯ ಪತ್ರೆ ತೊಳಸಿ ಸೇವಿಸುಗೆ ಪಿಂಗುಗುಂ ಕೆಯ್ಮಸಕಂ" ಎಂದು ಚಾವುಂಡರಾಯನ 'ಲೋಕೋಪಕಾರ'ದಲ್ಲಿ ಇಂಥ ವಿಷವನ್ನಿಳಿಸುವ ಉಪಾಯವು ಸೂಚಿತವಾಗಿದೆ. ಆನೆಗನ ತಿಗುಡನ್ನು ಅರೆದು ಬೆಣ್ಣೆಯಲ್ಲಿ ಕಲಸಿ ತಿನ್ನುವುದು, ಅಂಕೋಲೆಯ ಬೇರನ್ನು ಬಿಸಿನೀರಲ್ಲಿ ತೇಯ್ದು ಕುಡಿಸುವುದು ಅಥವಾ ಬಸಲೆಸೊಪ್ಪನ್ನು ತುಳಸಿಗಳನ್ನು ಮೆಲ್ಲವುದು ಇದಕ್ಕೆ ಪರಿಹಾರ ಎಂದು ಅರ್ಥ. ಇಲ್ಲಿ ಸೂಚಿತವಾದ ಸಸ್ಯಗಳನ್ನು ಗುರುತಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ