ಪುಟಗಳು

17 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-04-ಭಾಗ್ಯಶಿಲ್ಪಿಗಳು-ಲೇಖನ ಚಿಹ್ನೆಗಳು & ವಾಕ್ಯಪ್ರಭೇದಗಳು

ಲೇಖನ ಚಿಹ್ನೆಗಳು 
ಬರೆವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಮುಖ್ಯವಾದುದು. ಲೇಖನ ಚಿಹ್ನೆಗಳಿಲ್ಲದ ಬರೆವಣಿಗೆ ಸ್ಪಷ್ಟಾರ್ಥವನ್ನು ಕೊಡದೆ ತೊಡಕುಗಳಿಗೆ ಕಾರಣವಾಗುವುದುಂಟು. ಹಾಗಾಗಿ ಲೇಖನ ಚಿಹ್ನೆಗಳು ಅತ್ಯಂತ ಅಗತ್ಯ. 

ಪೂರ್ಣ ವಿರಾಮ : (.) ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು. 
ಉದಾ :- ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ. 

ಅರ್ಧ ವಿರಾಮ : (;) ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು. 
        ಉದಾ :- ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. 

ಅಲ್ಪವಿರಾಮ : (,) ಸಂಬೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇ?ಣ ಬಿಟ್ಟು ಉಳಿದವುಗಳ ಮುಂದೆ ಅಲ್ಪವಿರಾಮ ಬಳಸಬೇಕು. 
        ಉದಾ :- ಬಟ್ಟೆಗಿರಣಿ, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ. 

ಪ್ರಶ್ನಾರ್ಥಕ : (?) ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸಲಾಗುವುದು. 
        ಉದಾ :- ನಿನ್ನ ಹೆಸರೇನು ? 

ಭಾವಸೂಚಕ : (!) ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು. 
        ಉದಾ :- ಅಬ್ಬಾ! ಈ ಜಲಪಾತ ಎಷ್ಟೊಂದು ರಭಸವಾಗಿ ಬೀಳುತ್ತಿದೆ! 

ಉದ್ಧರಣ ಚಿಹ್ನೆ : (" ") ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು. 
        ಉದಾ :- "ಶಿಕ್ಷಣವು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ದ ಹಕ್ಕಾಗಬೇಕು" ಎಂದು ಸರ್ ಎಂ. ವಿಶ್ವೇಶ್ವರಯ್ಯನವರು ಹೇಳಿದರು. 

ವಾಕ್ಯವೇಷ್ಟನ ಚಿಹ್ನೆ : (' ') ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು. 
        ಉದಾ :- ಕನ್ನಡ ಭಾಷೆಯಲ್ಲಿ 'ಇಂಗ್ಲಿಷ್', 'ಪರ್ಷಿಯನ್ ', 'ಪೆರ್ಚ್‌ಗೀಸ್ ' ಭಾಷೆಗಳ ಪದಗಳನ್ನು ಬಳಸಲಾಗುತ್ತದೆ. 

ಆವರಣ ಚಿಹ್ನೆ : ( ) ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನೋ  ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ. 
        ಉದಾ :- ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್) ಜಲಜನಕ (ಹೈಡ್ರೋಜನ್)ಗಳು ಉತ್ಪತ್ತಿಯಾಗುತ್ತವೆ. 

ವಿವರಣಾತ್ಮಕ ಚಿಹ್ನೆ : (:) ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ. 
        ಉದಾ :- ಪಂಚಮಹಾವಾದ್ಯಗಳು : ತಾಳ, ಹಳಗ, ಗಂಟೆ, ಮೌರಿ, ಸನಾದಿ. 

***********
ವಾಕ್ಯ ಪ್ರಕಾರಗಳು 
೧. ಸಾಮಾನ್ಯ ವಾಕ್ಯ 
ಈ ವಾಕ್ಯಗಳನ್ನು ಗಮನಿಸಿ. 
ಅ. ಕಾರವಾರದಲ್ಲಿ ಮಲೇರಿಯಾ ವ್ಯಾಪಕವಾಗಿ ಹಬ್ಬಿತ್ತು. 
ಆ. ಕಾರವಾರದಲ್ಲಿ ಉದ್ಯೋಗಿಯಾಗಿದ್ದ ವೀರೇಶ್ವರ ಪಾಠಕ್ ಮಲೇರಿಯಾದಿಂದ ಬಳಲಿದರು. 
ಇ. ವೀರೇಶ್ವರ ಪಾಠಕ್‌ರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು. 

ಮೂರು ವಾಕ್ಯಗಳು ಒಂದೊಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ವಾಕ್ಯಗಳಾಗಿವೆ. ಹೀಗೆ ಒಂದು ಪೂರ್ಣಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯವನ್ನು ಸಾಮಾನ್ಯವಾಕ್ಯವೆಂದು ಕರೆಯುತ್ತಾರೆ. ಸಾಮಾನ್ಯವಾಕ್ಯದಲ್ಲಿ ಒಂದು ಕ್ರಿಯಾಪದ ಮಾತ್ರ ಇದ್ದು ಸಾಪೇಕ್ಷ ಕ್ರಿಯಾರೂಪಗಳು ಮಧ್ಯದಲ್ಲಿ ಬರಬಹುದು. 

ಉದಾ:- ಕಾರವಾರದಲ್ಲಿ ಮಲೇರಿಯಾ ಹಬ್ಬಿ, ವೀರೇಶ್ವರ ಪಾಠಕ್‌ರವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ಅವರು ಅಲ್ಲಿಂದ ವರ್ಗಾವಣೆ ಹೊಂದುವಂತೆ ಆಯಿತು.
 
ಈ ವಾಕ್ಯದಲ್ಲಿ ಆಯಿತು ಎಂಬ ಒಂದೇ ಕ್ರಿಯಾಪದವಿದ್ದು ಹಬ್ಬಿ, ಬೀರಿ ಎಂಬ ಸಾಪೇಕ್ಷ ಕ್ರಿಯಾಪದಗಳು ಮಧ್ಯದಲ್ಲಿ ಬಂದಿವೆ. ಹಾಗಾಗಿ ಇದು ಕೂಡಾ ಸಾಮಾನ್ಯವಾಕ್ಯವೆಂದೇ ಪರಿಗಣಿಸಲ್ಪಡುತ್ತದೆ. 

೨. ಸಂಯೋಜಿತ ವಾಕ್ಯ :
ಕಾರವಾರದಲ್ಲಿ ಮಲೇರಿಯಾ ಹಬ್ಬಿತ್ತು; ಆದ್ದರಿಂದ ವೀರೇಶ್ವರ ಪಾಠಕ್‌ರವರು ಮಲೇರಿಯಾದಿಂದ ಬಳಲಬೇಕಾಯ್ತು; ಈ ಕಾರಣದಿಂದ ಅವರನ್ನು ಅಲ್ಲಿಂದ ವರ್ಗಾಯಿಸಲಾಯ್ತು.

ಈ ವಾಕ್ಯ ಸಮೂಹದಲ್ಲಿ ಮೂರು ಬೇರೆಬೇರೆ ವಾಕ್ಯಗಳಿವೆ. ಆದರೆ ಈ ವಾಕ್ಯಗಳು ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣವಾಕ್ಯವಾಗಿದೆ. ಹೀಗೆ ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯವೆನ್ನಿಸುವುದು. 


೩. ಮಿಶ್ರವಾಕ್ಯ :
ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ ಅವರ ನಿರ್ಧಾರಕ್ಕೆ ಬ್ರಿಟಿ? ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಅವರು ಬಹುವಾಗಿ ಮರುಗಿದರು.

ಇಲ್ಲಿ ಅವರು ಬಹುವಾಗಿ ಮರುಗಿದರು ಎಂಬ ಪ್ರಧಾನ ವಾಕ್ಯಕ್ಕೆ ೧- ಏನಾದರೂ ಮಾಡಿ ಭಾರತದಲ್ಲಿ ಮೋಟಾರು  ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರು; ೨- ಅವರ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲಿಲ್ಲ ಎಂಬ ವಾಕ್ಯಗಳು ಉಪವಾಕ್ಯಗಳಾಗಿ ಸೇರಿಕೊಂಡಿವೆ. 

ಹೀಗೆ ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಮಿಶ್ರವಾಕ್ಯ ಎನ್ನುತ್ತೇವೆ. 

******





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ