ಲಕ್ಕುಂದಕ್ಕೂ ಸಿಂಬಾವಿಗೂ ನಡುವೆ ಅಡ್ಡಲಾಗಿದ್ದ ಸೀತೂರು ಗುಡ್ಡದ ಒಂದು ತೋಳಿನಲ್ಲಿ, ಹಿಂದೊಮ್ಮೆ ಅಂದು ಹಳೆಮನೆಯ ಸುಬ್ಬಣ್ಣ ಹೆಗ್ಗಡೆಯವರಿಗೆ ಸಿಂಬಾವಿ ಭರಮೈ ಹೆಗ್ಗಡೆಯವರು ಬರೆದುಕೊಟ್ಟಿದ್ದ ಕಾಗದವನ್ನು ಹೊತ್ತಿದ್ದ ಗುತ್ತಿ ಬಿರುಮಳೆಯಿಂದ ನೆರೆಯುಕ್ಕಿ ಹರಿಯುತ್ತಿದ್ದ ಹಳ್ಳವನ್ನು ದಾಟಲಾರದೆ ಅದರ ‘ಹೆಣಾಕಾಯ್ತಾ’ ಕುಳಿತಿದ್ದ ದಿಬ್ಬಕ್ಕೆ ಹಿಂದೆಯೆ, ಮೇಲಕ್ಕೆ, ಸುಮಾರು ಎರಡು ಫರ್ಲಾಂಗು ದೂರದಲ್ಲಿದ್ದ ಗುಡ್ಡದೆತ್ತರದ ಭುಜಪ್ರದೇಶದಲ್ಲಿ, ಕಾಡು ಒಂದು ಹತ್ತು ಮಾರು ಬಯಲಾಗಿ ತುಸು ಇಳಿಜಾರಾಗಿದ್ದ ಕಿರುಹಕ್ಕಲಿನಲ್ಲಿ ಹಾದುಹೋಗುತ್ತಿದ್ದ ಕಾಳುದಾರಿಯ ಪಕ್ಕದಲ್ಲಿದ್ದ ಒಂದು ಕುನ್ನೇರಿಳೆಯ ಮಟ್ಟಿಗೆ ಕಟ್ಟಿಕೊಂಡು ನಿಂತಿತ್ತು, ಅಷ್ಟೇನೂ ಪುಷ್ಟವಲ್ಲದ ಸಾಧಾರಣ ಜಾತಿಯ ಒಂದು ಕುದುರೆ, ಆ ಕುದುರೆಯ ಬಳಿಯಾಗಲಿ ಸಮೀಪದಲ್ಲಾಗಲಿ ಯಾರೂ ಕಾಣಿಸುತ್ತಿರಲಿಲ್ಲ. ನಿರ್ಜನವಾಗಿದ್ದ ಆ ಮಲೆಗಾಡಿನ ಪಕ್ಷಿಕೂಜನ ವಿನಾ ನಿಃಶಬ್ದತೆಯಲ್ಲಿ, ವಿಶೇಷವಾಗಿ ನಗರ ನಾಗರಿಕತೆಯ, ಸಮರ ಸಾಹಸವಲಯದ, ವ್ಯಾಪಾರ ವಾಣಿಜ್ಯ ಜನಜಂಗುಳಿಯ ಮತ್ತು ರಾಜಸ್ಥಾನ ವೈಭವ ಕ್ಷೇತ್ರದ ಸಂಬಂಧಿಯಾಗಿದ್ದ ಆ ಪ್ರಾಣಿ ವಿದೇಶಿಪ್ರವಾಸಿಯಂತೆ ವಿಚಿತ್ರವಾಗಿ ತೋರುತ್ತಿತ್ತು. ಅದು ತನಗೆ ಅನ್ವಯವಾಗುವ ಸನ್ನೇವೇಶದಲ್ಲಿ ಇರುವಂತೆ ತೋರುತ್ತಿರಲಿಲ್ಲ. ಹಿಂಡುತಪ್ಪಿಯೂ ದಿಕ್ಕುತಪ್ಪಿಯೊ ಬಂದಂತಿತ್ತು.
ಮಲೆನಾಡಿನ ಆ ಕಾಡುಬೆಟ್ಟಗಳಿಗೆ ಕುದುರೆಗಳೇನೂ ಅಪರಿಚಿತ ಪ್ರಾಣಿಗಳಾಗಿರಲಿಲ್ಲ, ಸುಮಾರು ಅರ್ಧಶತಮಾನದ ಹಿಂದೆ! ನಗರ, ಇಕ್ಕೇರಿ, ಕೌಲೆದುರ್ಗ ಮೊದಲಾದ ಸಂಸ್ಥಾನಗಳೂ ಪಾಲೇಯಪಟ್ಟುಗಳೂ ಪ್ರಬಲವಾಗಿದ್ದ ಕಾಲದಲ್ಲಿ ಸೈನಿಕ ಅಶ್ವಗಳ ಹೇಷಾರವದಿಂದಲೂ ಖುರಪುಟಧ್ವನಿಗಳಿಂದಲೂ ಆ ಕಾಡುಬೆಟ್ಟಗಳು ಅನುಕರಣಿತವಾಗಿದ್ದುವು! ಆದರೆ ಈಗ, ಬ್ರಿಟಿಷರ ಸಾಮ್ರಾಜ್ಯ ಸ್ಥಾಪನೆಯಾಗಿ, ಹಿಂದಿದ್ದ ಅರಸಿಕೆ ಪಾಳೆಯಗಾರಿಕೆಗಳೆಲ್ಲ ಮಣ್ಣು ಪಾಲಾಗಿ, ಸಹ್ಯಾದ್ರಿ ಶ್ರೇಣಿಯ ಆರಣ್ಯಕ ರಂಗದಲ್ಲಿ ಸ್ಮಶಾನ ಮೌನ ವ್ಯಾಪಿಸಿದಮೇಲೆ, ಕುದುರೆ ಎಲ್ಲಿ ಅಪೂರ್ವ ವಸ್ತುವಾಗಿತ್ತು; ಸ್ವಲ್ಪ ಮಟ್ಟಗೆ ವಿದೇಶೀಯವೂ ಆಗಿದ್ದಂತೆ ತೋರುತ್ತಿತ್ತು. ದನ, ಎತ್ತು, ಹುಲಿ, ಮಿಗ, ಕಡ, ಕುರ್ಕ, ಬರ್ಕ, ಮೊಲ, ಮುಂಗುಸಿ. ನವಿಲು, ಹೊರಸಲು, ಕಾಜಾಣ, ಪಿಕಳಾರ, ಕಾಡುಕೋಳಿ, ಕೆಣೆಹಂದಿ ಮೊದಲಾದ ಜಂತುಗಳಂತೆ ಸ್ಥಳೀಯವಾಗಿರಲಿಲ್ಲ. ತಾವು ಕಟ್ಟಿದ್ದ ಸಾಮ್ರಾಜ್ಯವನ್ನು ಕಳೆದುಕೊಂಡಿದ್ದರೂ, ಅದರ ದೌಲತ್ತಿನ ಅವಶೇಷರೂಪವಾಗಿ ಸಾಬರು ಮಾತ್ರವೆ ವಿಶೇಷವಾಗಿ ಹೊರೆಹೊರಲೂ ಕಾಡುಮೇಡುಗಳ ಇಕ್ಕಟ್ಟಿನ ಕಾಲುದಾರಿಯಲ್ಲಿ ಸಂಚರಿಸಲೂ ಉಪಯೋಗಿಸುತ್ತಿದ್ದ ಬಡಕಲು ಪ್ರಾಣಿಯಾಗಿ ಉಳಿದಿತ್ತು. ಅದಕ್ಕೆ ಹಿಂದಿನ ಔನ್ನತ್ಯವಾಗಲಿ ವೇಗಪಟುತ್ವವಾಗಲಿ ಠೀವಿಯಾಗಲಿ ತೇಜಸ್ಸಾಗಲಿ ಇನಿತೂ ಇರಲಿಲ್ಲ. ಹಯ, ಅಶ್ವ, ವಾರುವ, ತೇಜಿ ಇತ್ಯಾದಿ ವೈಭವದ ಮತ್ತು ಗೌರವದ ಹೆಸರುಗಳಿಗಿರಲಿ, ಕುದುರೆ ಎಂಬ ಹೆಸರಿಗೂ ಅದು ಯೋಗ್ಯವಾಗಿರಲಿಲ್ಲ; ಆ ಹೆಸರಿಗೂ ಅದು ಬೆದರಿ ಹಿಂಜರಿಯುತ್ತಿತ್ತು. ಆದ್ದರಿಂದಲೆ ಅದಕ್ಕೆ ನಾಚಿಕೆಯಾಗಿ ಕುಗ್ಗದಿರಲಿ ಎಂದು ಅಲ್ಲಿಯ ಜನಸಾಮಾನ್ಯರು ಅದನ್ನು ‘ಸಾಬರ ತಟ್ಟು’ ಎಂಬ ಸುಸಾಮಾನ್ಯಮಾನದಿಂದಲೆ ಕರೆಯುತ್ತಿದ್ದರು. ಒದಗಿಬಂದಿದ್ದ ಅವನತಿಯಲ್ಲಿ ಅವರೂ ಕುದುರೆಯೊಡನೆ ಸಮಪಾಲುದಾರರಾಗಿದ್ದರಲ್ಲವೆ?
ಅಲ್ಲಿ ನಿಂತಿದ್ದುದೂ ಜಾತಿಯಲ್ಲಿ ಕುದುರೆಯಾಗಿದ್ದರೂ ಸ್ಥಿತಿಯಲ್ಲಿ ಸಾಬರ ತಟ್ಟೆ ಆಗಿತ್ತು. ಮೇಗರವಳ್ಳಿಯ ಚಮಡ ಸಾಗಿಸುವ ಅಜ್ಜೀಸಾಬು ಹೇರಿಗೂ ಫೇರಿಗೂ ಬಳಸುತ್ತಿದ್ದ ತಟ್ಟಿಗಿಂತ ತುಸು ಉತ್ತಮವಾಗಿತ್ತು ಎನ್ನಬಹುದು. ಅದಕ್ಕೂ ಹೆಸರಿಗೆ ಒಂದು ಕಡಿವಾಣ, ಲಗಾಮು, ಜೀನು ಎಲ್ಲ ಇದ್ದಂತಿತ್ತು. ಪಕ್ಕೆಲುಬು ತುಸು ಇಣುಕುವಂತಿದ್ದ ಬೆನ್ನಿನ ಮೇಲೆ ಇಕ್ಕೆಲಗಳಲ್ಲಿಯೂ ಅಮಾನು ತುಂಬಿ ಜೋತುಬಿದ್ದಿದ್ದ ಹಸುಬೆ ಚೀಲವೂ ಇತ್ತು.ಯಾರಾದರೂ ಪಕ್ಕದಲ್ಲಿದ್ದ ಕಾಳುದಾರಿಯಲ್ಲಿ ಹಾದುಹೋಗಿದ್ದರೆ, ಅವರ ಮೂಗಿಗೇ ಗೊತ್ತಾಗುತ್ತಿತ್ತು ಹಸುಬೆಚೀಲದ ಒಳಗಿದ್ದ ಪ್ರಧಾನವಸ್ತು ಯಾವುದು ಎಂದು. ಸ್ವಾರ್ಲು ಮತ್ತು ಬಂಗಡೆ ಮೀನಿನ ಗಬ್ಬುವಾಸನೆಯೊಡನೆ ಕುದುರೆಯ ಲದ್ದಿಯ ಮತ್ತು ಉಚ್ಚೆಯ ಕಟುದುರ್ವಾಸನೆಯೂ ಕೂಡಿದ್ದನ್ನೂ ನೋಡಿದರೆ ಅಲ್ಲಿ ಬಹಳ ಹೊತ್ತಿನಿಂದಲೊ ಕಟ್ಟುಗೊಂಡಿದೆ ಎಂಬುದನ್ನೂ ಊಹಿಸಬಹುದಾಗಿತ್ತು. ಅದಕ್ಕೂ ನಿಂತೂ ನಿಂತೂ ಬೇಜಾರಾಗಿ ಹಿಂಗಾಲುಗಳನ್ನು ಒಮ್ಮೆ ಬಲಕ್ಕೆ ಒಮ್ಮೆ ಎಡಕ್ಕೆ ಎತ್ತಿ ಎತ್ತಿ ಇಟು ಕಿನಿಸಿಗೆಯನ್ನು ಪ್ರದರ್ಶಿಸುತ್ತಿತ್ತು. ಅಲ್ಲದೆ ಆಗೊಮ್ಮೆ ಈಗೊಮ್ಮೆ ಕಾಡಿನ ಇಳಿಜಾರದ ಕಡೆ ಕತ್ತು ತಿರುಗಿಸಿ ನೋಡಿ ಕೆನೆಯುತ್ತಲೂ ಇತ್ತು. ಅದು ಕೆನೆತ ಆ ಕಾಡಿನ ಸದ್ದಿಲಿತನದಲ್ಲಿ ಬಹುದೂರದವರೆಗೂ ಸಂಚರಿಸುತ್ತಿತ್ತು. ಅದರ ಕೆನೆತ ಆ ಕಾಡಿನ ಸದ್ದಿಲಿತನದಲ್ಲಿ ಬಹುದೂರದವರೆಗೂ ಸಂಚರಿಸುತ್ತಿತ್ತು. ಅದು ಕೆನೆದಾಗಲೆಲ್ಲ ಸುತ್ತ ಹತ್ತಿರದ ಮರಗಳಲ್ಲಿದ್ದ ಕಾಡು ಹಕ್ಕಿಗಳು ಗಾಬರಿಗೊಂಡು ಕೂಗಿಕೊಂಡು ಹಾರುತ್ತಿದ್ದುವು. ಬೇಜಾರಿನ ಜೊತೆಗೆ ನೆತ್ತರು ಹೀರುವ ಕಾಡುನೊಣಗಳ ಪೀಡನೆಯೂ ಸೇರಿ, ಅವುಗಳನ್ನೋಡಿಸಲು ಚವರಿಬಾಲ ಬೀಸುವುದರ ಜೊತೆಗೆ ಗೊರಸಿನಿಂದ ನೆಲವನ್ನೊದ್ದು ಕುದುರೆ ಮೈಯಲ್ಲಾಡಿಸಿ ಕುಣಿಯುತ್ತಿತ್ತು. ಹಾಗೆ ಕುಣಿದಾಗಲೆಲ್ಲ ಅದರ ನೆತ್ತಿಯ ಜುಲ್ಪಿನ ಕೆಳಗೆ, ಕೆಂಬರು ಹಣೆಯ ಬಿಳಿಯ ದಾಸಪಟ್ಟೆಯ ಮೇಲೆ, ಅಲಂಕಾರಾರ್ಥವಾಗಿ ಇಳಿಬಿಟ್ಟಿದ್ದ ಗೆಜ್ಜೆಯ ಕುಚ್ಚಿನಿಂದ ಗಲಿರು ಗಲಿರೆಂದು ಕಿಂಕಿಣಿಯಾದ ಹೊಮ್ಮುತ್ತಿತ್ತು, ಅದರ ಒಡೆಯನ ವ್ಯಾಪಾರ ಬುದ್ದಿಯ ಯಾವುದೊ ಒಂದು ಮೂಲೆಯಲ್ಲಿದ್ದ ಷೋಕಿಗೂ ಸಾಕ್ಷಿಯಾಗಿ!
ಇದಕ್ಕಿದ್ದಹಾಗೆ ಕುದುರೆ ಕಿವಿಗಳನ್ನು ಕತ್ತರಿಎಬ್ಬಿಸಿ, ಕಾಡಿನ ಹಳುವಿನಲ್ಲಿ ಇಳಿದು ಹೋಗಿದ್ದ ಕಾಲುದಾರಿಯ ಕಡೆ ಕತ್ತುಕೊಂಕಿಸಿ ನೋಡತೊಡಗಿತು, ಯಾರೊ ಮಾತನಾಡುಕೊಳ್ಳುತ್ತಾ ಗುಡ್ಡ ಹತ್ತಿ ಬರುತ್ತಿದ್ದ ಗೊಣಗೊಣ ಸದ್ದು ಹತ್ತಿರ ಹತ್ತಿರವಾಗುತ್ತಾ ಬಂದು, ದಾರಿಯಲ್ಲಿ ಸಿಕ್ಕಿದ್ದ ಹೆಗ್ಗಡೆಯವರನ್ನು ಬೀಳುಕೊಂಡು ಸಿಂಬಾವಿಯ ಕೇರಿಗೆ ಹೊರಟಿದ್ದ ಬೆಟ್ಟಳ್ಳಿ ದೊಡ್ಡಬೀರನ ತಲೆಗಳು ಒಂದರ ಹಿಂದೆ ಒಂದು, ಸಾಲಾಗಿ ಕಾಣಿಸಿಕೊಂಡುವು. ಕುದುರೆ ನೀಡುತ್ತಿದ್ದಂತೆಯೆ ಎದೆ, ಹೊಟ್ಟೆ, ಸೊಂಟ, ಕಾಲು ಗೋಚರವಾಗಿ, ಆ ನಾಲ್ಕು ಮನುಷ್ಯರೂ ಸಮೀಪಿಸಿದರು. ತನ್ನ ಒಡೆಯನಿಗಾಗಿ ಕಾದೂ ಕಾದೂ ಅವನೇ ಬಂದನೇನೋ ಎಂದು ನಿರೀಕ್ಷಿಸಿದ್ದ ಆ ಪ್ರಾಣಿಗೆ ತುಂಬ ನಿರಾಶೆಯಾದಂತಾಗಿ ಮುಖ ಇಳಿಸಿ ತಟಸ್ಥಭಂಗಿಯಲ್ಲಿ ನಿಂತುಕೊಂಡಿತು.
“ಇದೇನೋ? ಅಜ್ಜೀಸಾಬರ ತಟ್ಟು? ಇಲ್ಲಿ?”
“ಅಜ್ಜೀ ಸಾಬರದಲ್ಲೋ, ಮೇಗ್ರೊಳ್ಳಿ ಕರೀಮೀನು ಸಾಬರದ್ದು ಅಂತ ಕಾಣ್ತದೆ.”
“ಯಾರ ಹಿತ್ತಲ ಕಬ್ಬೋ? ಯಾರ ತ್ವಾಟದ ಬಾಳೆಕೊನೇನೋ? ಲೂಟಿಯಾಗ್ತಿರಬೈದು!”
“ಅಂತೂ ಈ ಸಾಬರ ತಂಡದ ದೆಸೆಯಿಂದ ಸುಖಾ ಇಲ್ಲ.”
“ಆ ದುಣ್ಣಮುಂಡೇಗಂಡ! ಇಜಾರದ ಸಾಬಿ! ಅಂವನ್ನ ಯಾರಾದರೂ ಕಡಿದು ಹಾಕಿದ್ರೆ, ಉಂದು ಹಂಡೇ ಹಾಲು ಕುಡೀತಿದ್ದೆ!” ಪ್ರತೀಕಾರ ಮಾಡಲಾರದ ಸಿಟ್ಟಿನಿಂದ ಸಣ್ಣಬೀರ ಹೇಳಿದ್ದನ್ನು ಕೇಳಿ ನಕ್ಕು ಅವನ ತಂದೆ ದೊಡ್ಡಬೀರ ವಿಷಯದ ಕಟುತ್ವವನ್ನು ವಿನೋದದಿಂದ ಕಡಿಮೆ ಮಾಡಲೆಂಬಂತೆ ಹೇಳಿದನು:
“ಎಲ್ಲಿಂದ ತರ್ತಿಯೋ ಅಷ್ಟೊಂದು ಹಾಲ್ನ? ನಿನ್ನ ಹೇಣ್ತಿ ಹಡದ್ರೆ ಬಾಲೆಗೆ ಹಾಲು ಕುಡಿಸಾಕೆ ಒಂದು ಒಳಾಲೆ ಹಾಲಿಗೆ ಗತಿ ಇಲ್ಲ?….
“ನೀ ತಮಾಸೆ ಮಾಡಬ್ಯಾಡ, ಅಪ್ಪಾ!…. ಆ ಮಾಕೀಮನೆ ಈರಣ್ಣನ್ನ ಕಡ್ದು ರಕ್ತ ಕುಡಿದ್ರಂತಲ್ಲಾ ಹಾಂಗೇ ಅವನ ರಕ್ತ ಕುಡೀದೆ ಇದ್ರೆ ನಾನು ಅಪ್ಪಗೆ ಹುಟ್ಟಿದಾಂವ ಅಲ್ಲಾ! ನೋಡ್ತೀರು! ನನ್ನ ಬೆನ್ನಿನ ಬಾಸುಂಡೆ ಇನ್ನೂ ಮಾದಿಲ್ಲ…. ಏನೋ ನಮ್ಮ ಧಣಿ, ಉಪ್ಪು ಅನ್ನ ಹಾಕಿ ಸಾಕ್ದೋರು ಇದ್ರಲ್ಲಾ ಅಂತಾ ಅವೊತ್ತು ಸುಮ್ಮನಿದ್ದೆ! ಇನ್ನೊಂದು ಸಲ ನನಗೆ ಸಿಕ್ಲಿ ಸಮಯ? ನೋಡ್ತೀನಿ ನನ್ನ ಕೈಲಿ ಏನಾಗ್ತದೆ ಅಂತಾ? ಬಗನೇ ಕತ್ತೀನ ಮಸೆದು ಇಟ್ಟುಕೊಂಡ್ಹಾಂಗೆ ಇಟ್ಟುಕೊಂಡೀನಿ, ನನ್ನ ಕೆಲಸದ ಕತ್ತೀನ! ಉಂದೆ ಕೊಚ್ಚಿಗೆ ಅವನ ಆನೆಗಾತ್ರದ ಕುತ್ತಿಗೆ ಕತ್ತರಿಸಿ ಬೀಳಬೇಕು, ಹಾಂಗೆ ಹೊಡೀತೀನಿ….”
ಸಣ್ಣಬೀರ ಇನ್ನೂ ಮುಂದುವರಿಸುವುದರಲ್ಲಿದ್ದ! ಅಷ್ಟರಲ್ಲಿ ದೊಡ್ಡಬೀರ ತಿರುಗಿ ನಿಂತು ಗದರಿಸಿದ: “ಈ ಸೊಕ್ಕಿನ ಮಾತೆಲ್ಲ ಕಟ್ಟಿಡು! ಅಂಬಲಿ ತಿನ್ನಾಂವ ಅಂಬರಕ್ಕೆ ಹಾರಿದ್ಹಾಂಗೆ ಆದಾತು. ತೂದೂರು ಕಟ್ಟೇಲಿ ಮಾರಾಜರ ದಂಡಿನೋರು, ಸುಮಾರು ಜನ ಗೌಡ್ರನ್ನೆ ಕುತ್ತಿಗೀಗೆ ನೇಣುಹಾಕಿ ಮರಕ್ಕೆ ನೇತಾಕಿದ್ರಂತಲ್ಲಾ, ಹಾಂಗೇ ಆಗ್ತದೆ ನಿನ್ಗೂ, ಗೊತ್ತಾತೇನು? ಕಡೀಗೆ ನಿನ್ನ ದೆಸಿಂದ ನಮ್ಮನ್ನೂ ಎಲ್ಲ ತೀರ್ಥಹಳ್ಳಿ ಕಚೇರಿಗೆ ಎಳಕೊಂಡು ಹೋದಾರು ಕರೀಪೇಟದೋರು, ಗೊತ್ತಾತೇನು?….”
ದೊಡ್ಡಬೀರನ ಗುಂಪು ಮಾತಾಡುತ್ತಲೆ ಮುಂದುವರಿದು ಹಳುವಿನಲ್ಲಿ ಮರೆಯಾಯಿತು. ಕುದುರೆ ಅವರು ಹೋದ ಕಡೆಯೆ ನೋಡುತ್ತಾ ನಿಂತಿತ್ತು.
ಸಣ್ಣಬೀರ ಸ್ವಲ್ಪದೂರ ಹೋದವನು, ಹಿಂದುಳಿದು, ಹಾದಿಯ ಪಕ್ಕದ ಹಳುವಿನಲ್ಲಿ ಜಲಬಾಧೆಗೆ ಹೋಗುವವನಂತೆ ಮರೆಯಾಗಿ ಕುಳಿತನು. ಉಳಿದವರು ಮುಂಬರಿದರು.
ಕುದುರೆ ನೋಡುತ್ತಿದ್ದಂತೆಯೆ ಸಣ್ಣಬೀರ ಹಿಂದಿರುಗಿ ಬರುತ್ತಿದ್ದುದು ಅದಕ್ಕೆ ಕಾಣಿಸಿತು. ನೇರವಾಗಿ ತನ್ನ ಕಡೆಯೆ ಬರುತ್ತಿದ್ದ ಅವನನ್ನು ಅದು ಕುತೂಹಲದಿಂದಲೂ ಅಚ್ಚರಿಯಿಂದಲೊ ಸಂಶಯದಿಂದಲೊ ನೋಡುತ್ತಲೆ ಇತ್ತು. ಸಣ್ಣಬೀರ ಹತ್ತಿರ ಬಂದು, ಅದನ್ನು ಸಮಾಧಾನಪಡಿಸಲು ಅದರ ಕಡಿವಾಣವಿದ್ದ ಬಾಯಿಯ ಹತ್ತಿರ ಯಾವುದೊ ಸೊಪ್ಪನ್ನು ಹಿಡಿದನು. ಕುದುರೆ ಮೊದಲು ಅಪನಂಬಿಕೆಯಿಂದ ಮೂಗಿನ ಸೊಳ್ಳೆಯನ್ನು ಹಿಗ್ಗಿಸಿ ಕುಗ್ಗಿಸಿ ಮೂಸಿ ಮೂಸಿ ಬೆಚ್ಚುತ್ತಿದ್ದುದು ಕೊನೆಗೆ ಅದನ್ನು ತಿನ್ನಲೆಂಬಂತೆ ಸ್ವೀಕರಿಸಿತು. ಆದರೆ ತಿನ್ನಲಿಲ್ಲ ಕೆಳಕ್ಕೆ ಬೀಳಿಸಿತು. ಅದರ ಮೈಯನ್ನು ಉಪಚರಿಸಿ ತಟ್ಟುತ್ತಾ ಸಣ್ಣಬೀರ ಹಸುಬೆ ಚೀಲದ ಬಾಯನ್ನು ಹುಡುಕಿ, ಒಳಗೆ ಕೈಹಾಕಿ, ಸ್ವಾರ್ಲುಮೀನಿನ ಕೆಂತೆಗಳನ್ನು ಎಳೆದು ತೆಗೆದನು. ತಟಕ್ಕನೆ ಸೊಂಟದ ಕತ್ತಿಯಿಂದ ಕುದುರೆಯನ್ನು ಕಟ್ಟಿಹಾಕಿದ್ದ ಕುನ್ನೇರಿಲು ಮಟ್ಟಿನ ರೆಂಬೆಯನ್ನು ಕತ್ತರಿಸಿ, ಅತ್ತ ಇತ್ತ ಹುಡುಕುನೋಟವಟ್ಟಿ ಕಣ್ಣುಸುಳಿಸುತ್ತಾ, ತನ್ನವರು ಹೋದ ದಿಕ್ಕಿಗೆ ಓಡಿದನು. ನಿಂತೂ ನಿಂತೂ ಬೇಜಾರಾಗಿದ್ದ ಕುದುರೆ ಕುನ್ನೇರಿಲ ರೆಂಬೆಸಹಿತವಾಗಿ ಕಿರುಬಯಲಿನಲ್ಲಿ ಗಟ್ಟಿಯಾಗಿ ಕೆನೆಯುತ್ತಾ ಓಡಾಡತೊಡಗಿತು.
ಅದು ಇನ್ನೆತ್ತ ಓಡುತ್ತಿತ್ತೋ? ಮನೆಯ ನೆನಪಾಗಿ ಮೇಗರವಳ್ಳಿಯ ಕಡೆಗೇ ಹೋಗುತ್ತಿತ್ತೋ? ಅಥವಾ ತನ್ನ ಯಜಮಾನ ಹೋಗಿದ್ದ ದಿಕ್ಕಿಗೆ ಸೀತೂರಿನ ಕಡೆಗೇ ಸಾಗುತ್ತತ್ತೋ? ಆದರೆ ಅಷ್ಟರಲ್ಲಿ ಅದರ ಪ್ರತಿಧ್ವನಿಯೊ ಎಂಬಂತೆ ಪ್ರತ್ಯುತ್ತರವಾಗಿ ಮತ್ತೊಂದು ಕುದುರೆ ಕೆನೆದ ಸದ್ದು ಕೇಳಿಸಿ, ಆ ಹೆಣ್ದನಿಗೆ ಹಿಗ್ಗಿದ ಈ ಕುದುರೆಗಂಡು ಕತ್ತೆತ್ತಿ ಕಿವಿ ನಿಮಿರಿಸಿ ಆಲಿಸುತ್ತಾ ನಿಂತಿತು.
ಅದು ಬಹಳ ಹೊತ್ತು ಹಾಗೆ ನಿಂತಿರಲಿಲ್ಲ: ಅಜ್ಜೀಸಾಬು ಲಕ್ಕುಂದದ ದಿಕ್ಕಿನಿಂದ, ಭಾರವಾದ ಹೇರನ್ನು ಹೊತ್ತು ಮೆಲ್ಲಗೆ ಗುಡ್ಡವೇರುತ್ತಿದ್ದ ತನ್ನ ತಟ್ಟಿನ ಪಕ್ಕದಲ್ಲಿ, ಲಗಾಮು ಹಿಡಿದುಕೊಂಡು ನಡೆಯುತ್ತಾ ಬಂದನು. ಬಂಧನ ವಿಮುಕ್ತವಾಗಿದ್ದ ಗಂಡು ಕುದುರೆ ಆ ಬಂದ ಹೆಣ್ಣು ಕುದುರೆಯನ್ನೂ ಅದರ ಗಡ್ಡದೊಡೆಯನನ್ನೂ ಕಂಡು, ಗುರುತಿಸಿ, ಹಿಗ್ಗಿನಿಂದ ಬಳಿಸಾರಿತು.
ಲಗಾಮಿನ ತುದಿಯಲ್ಲಿದ್ದ ರೆಂಬೆಯನ್ನು ಕಂಡ ಅಜ್ಜೀಸಾಬು ಕರೀಂಸಾಬು ಪೊದೆಗೆ ಕಟ್ಟಿಹೋಗಿದ್ದ ಕುದುರೆ ಅದನ್ನು ಜಗ್ಗಿಸಿ ಎಳೆದು ಮುರಿದುಕೊಂಡಿರಬೇಕೆಂದು ಊಹಿಸಿದನು. ಅದರ ಬೆನ್ನಿನಿಂದ ಜಾರಿ ಕೆಳಗೆ ಬಿದ್ದಿದ್ದ ಹಸುಬೆ ಚೀಲವನ್ನು ಎತ್ತಿ ತಂದು ತನ್ನ ಪಕ್ಕದಲ್ಲಿಟ್ಟುಕೊಂಡು ಕಾಯುತ್ತಾ ಕುಳಿತನು.
ಕುದುರೆಗಳೆರಡೂ ಒಂದರ ಮುಖ ಮೈಗಳಿಗೆ ಮತ್ತೊಂದರ ಮುಕ ಮೈಗಳನ್ನು ತಿಕ್ಕುತ್ತಾ ಪರಸ್ಪರ ಅನುರಾಗ ಪ್ರದರ್ಶನ ಮಾಡುತ್ತಾ ತಮ್ಮ ಸ್ವಾಭಾವಿಕ ಲೈಂಗಿಕ ಸ್ವರೂಪವನ್ನು ಮೆರೆಯತೊಡಗಿದುವು.
ಸ್ವಲ್ಪ ಹೊತ್ತಿನಲ್ಲಿ ಸೀತೂರಿನ ದಿಕ್ಕಿನಿಂದ ಇಜಾರದ ಸಾಬಿಯೂ ಲುಂಗೀಸಾಬಿಯೂ ಹಳುವಿನಲ್ಲಿ ಗುಡ್ಡವೇರಿ ಬರುತ್ತಿದ್ದುದು ಕಾಣಿಸಿತು. ಇಜಾರದ ಸಾಬಿಯ ಬೆನ್ನಿನ ಮೇಲೆ ಒಂದು ಭಾರೀ ಕರಿಬಾಳೆ ಗೊನೆ ಇತ್ತು; ಲುಂಗೀಸಾಬುವಿನ ಹೆಗಲಮೇಲೆ ಒಂದು ತಕ್ಕಮಟ್ಟಿಗೆ ದೊಡ್ಡದೆ ಆದ ದಾಸ ಕಬ್ಬಿನ ಹೊರೆ ಇತ್ತು. ಇಬ್ಬರೂ ಅಜ್ಜೀಸಾಬುವಿನ ಸಮೀಪಕ್ಕೆ ಬಂದು ಉಸ್ಸೆನ್ನುತ್ತಾ ಹೊರೆಗಳನ್ನಿಳಿಸಿ, ಇತ್ತೀಚಿನ ಮಳೆಗಳಿಂದ ಆಗತಾನೆ ಹಸುರಾಗತೊಡಗಿದ್ದ ನೆಲದ ಮೇಲೆ ಕೂತರು.
ಅಜ್ಜೀಸಾಬು ಬಾಳೆಯ ಗೊನೆಯನ್ನೂ ಕಬ್ಬಿನ ಹೊರೆಯನ್ನೂ ತುಸು ಕರುಬಿನಿಂದಲೆ ನೋಡುತ್ತಾ ಸಾಬರ ಮಾತಿನಲ್ಲೇ ಕೇಳಿದನು: “ಎಂಥಾ ಬಾಳೆಕೊನೆ! ಅಬ್ಬ!…. ಏನು ಕೊಟ್ಟೆ?”
“ಹರಾಮ್ ಬಾಂಚೊತ್! ಏನು ಉಡಾಫಿ ಮಾತು ಆಡಿದ ಅವನು?” ಎಂದನು ಇಜಾರದ ಸಾಬು, ಅವರ ಭಾಷೆಯಲ್ಲಿಯೆ.
ವ್ಯಾಪಾರದ ಚೌಕಾಸಿಯಲ್ಲಿ ಭಿನ್ನಾಭಿಪ್ರಾಯ ಬಂದು ಮಾತಿಗೆ ಮಾತು ಹತ್ತಿರಬಹುದೆಂದು ಊಹಿಸಿ ಅಜ್ಜೀಸಾಬು “ಎಲ್ಲಿ? ತೋಟದಲ್ಲೇ ಯಾಪಾರ ಆಯ್ತಾ?” ಎಂದನು.
“ಆಗಿದ್ದು ತೋಟದಲ್ಲೇ! ಯಾಪಾರ ಮಾತ್ರ ಅಲ್ಲ!” ಎಂದನು ಲುಂಗೀಸಾಬಿ ವ್ಯಂಗ್ಯವಾಗಿ ನಗುತ್ತಾ.
“ಚೂರಿ ತೋರಿಸಿದ್ದೆ ತಡ, ಲೌಡೀಮಗ ಪರಾರಿಯಾಗಿಬಿಟ್ಟ!” ಎನ್ನುತ್ತಾ ಇಜಾರದ ಸಾಬಿ ವಿಕಟವಾಗಿ ನಗತೊಡಗಿದನು.
ಬಹುಮಟ್ಟಿಗೆ ಅಸೂಯೆಯಿಂದಲೆ ಪ್ರೇರಿತವಾಗಿದ್ದು, ದುರ್ಬಲನೂ ಕೃಶಶರೀರಿಯೂ ಆಗಿದ್ದ ಅಜ್ಜೀಸಾಬಿಯ ನೀತಿಪ್ರಜ್ಞೆ ಎಚ್ಚತ್ತಂತಾಗಿ, ತನ್ನ ಮನದಲ್ಲಿಯೆ “ನೀನು ಹೀಗೇ ಕಂಡಕಂಡವರ ಅಡಕೆತೋಟಕ್ಕೊ ಬಾಳೆ ತೋಟಕ್ಕೊ ಕಬ್ಬಿನಹಿತ್ತಲಿಗೋ ನುಗ್ಗಿನುಗ್ಗಿ ದುಂಡಾವರ್ತಿಯಿಂದ ಲೂಟಿಮಾಡುತ್ತಿರು?…. ಒಂದು ದಿನ ನಿನಗೆ ಆಗ್ತದೆ, ಸರಿಯಾಗಿ!” ಎಂದುಕೊಳ್ಳುತ್ತಾ, ಕೊಬ್ಬಿ ಬೆಳೆದಿದ್ದ ಹಂದಿಕತ್ತಿನ ಇಜಾರದ ಸಾಬಿಯ ಮಹಾಕಾಯದ ಕಡೆಗೆ ಕೈಲಾಗದ ಜುಗುಪ್ಸೆಯಿಂದ ನೋಡಿದನು.
ಅಷ್ಟರಲ್ಲಿ ಒಂದು ಕಾಡುದಾರಿಯ ಕಡೆಯ ಹಳು ಅಲುಗಿದಂತಾಗಿ, ಆ ಕಡೆಯೆ ನೋಡುತ್ತಿದ್ದ ಲುಂಗೀಸಾಬುಗೆ ಹಲಸಿನ ಹಣ್ಣನ್ನು ಹೆಗಲ ಮೇಲೆ ಹೊತ್ತು ಬರುತ್ತಿದ್ದ ಲಕ್ಕುಂದದ ಸೇಸನಾಯ್ಕನ ಮಗ ಹಮೀರನ ತಲೆವಸ್ತ್ರ ಕಾಣಿಸಿತು, ಹಳುವಿನ ಮರೆಯಿಂದಲೆ ಕಿರುಹಕ್ಕಲಿನಲ್ಲಿ ಕುಳಿತಿದ್ದ ಸಾಬರ ತಂಡವನ್ನು ಕಂಡ ಹಮೀರನಾಯ್ಕನು ಹೆಗಲ ಹೊರೆಯನ್ನು ಫಕ್ಕನೆ ಹಳುವಿನಲ್ಲಿಯೆ ಬಗ್ಗಿ ಮರೆಸಿಟ್ಟು, ಏನೊ ಕಾಣದವನಂತೆ ಮುಂದುವರಿದನು: ಅದರೆ ಲುಂಗೀಸಾಬು ಅದನ್ನಾಗಲೆ ಕಂಡುಬಿಟ್ಟಿದ್ದನು!
ಹಮೀರನಾಯ್ಕನು ಹಾಗೆ ಹಣ್ಣನ್ನು ಮುಚ್ಚಿಡುವುದಕ್ಕೆ ಕಾರಣ ಈ ಸಾಬರ ತಂಡದವರ ಸುಲಿಗೆಯ ಅನುಭವವೆ! ಯಾರಾದರೂ ಒಬ್ಬೊಬ್ಬರೆ ದಾರಿಯಲ್ಲಿ ಸಿಕ್ಕರೆ, ಅವರು ಗುರುತಿನವರಾದರೆ, ನಗುನಗುತ್ತಲೆ ಬೋಳೆಯ ಮಾತಗಳನ್ನಾಡುತ್ತಾ, ತಮಾಷೆಮಾಡುವವರಂತೆಯೆ ಕಸಿದುಕೊಳ್ಳುತ್ತಿದ್ದರು. ಅಪರಿಚಿತರಾದರೆ, ಬೆದರಿಸಿಯೊ ಹೊಡೆದೊ ಬಡಿದೊ ದೋಚುತ್ತಿದ್ದರು.
ಇಜಾರದ ಸಾಬಿ ಅಣಕುಗೌರವವನ್ನು ನಟಿಸುತ್ತಾ “ಓಹೋಹೋ ಏನು ಹಮ್ಮೀರನಾಯ್ಕರ ಸವಾರಿ, ಕಾಡ ಕಡೆಯಿಂದ ಬರ್ತಾ ಇದೆಯಲ್ಲಾ, ಖಾಲಿ ಕೈಲಿ?” ಎಂದು ಹಲ್ಲುಬಿಟ್ಟನು.
“ಭರ್ತೀನೆಲ್ಲಾ ಅಲ್ಲೇ ಹಳುವಿನಾಗೆ ಇಟ್ಟರೆ, ಖಾಲಿಯಾಗದೆ ಮತ್ತೇನು ಕೈ?” ಎಂದು ಲುಂಗೀಸಾಬಿ ನಕ್ಕು, ಹಮ್ಮೀರನ ಮುಣವನ್ನೇ ಅರ್ಥಗರ್ಭಿತ ವ್ಯಂಗ್ಯದೃಷ್ಟಿಯಿಂದ ನೋಡುತ್ತಾ ಕೇಳಿದನು: “ಹೌದೋ? ಅಲ್ಲೋ? ಹೇಳಿ ಮತ್ತೆ ನೀವೆ, ಹಮ್ಮೀರನಾಯಕರೆ?”
ಹೆದರಿದವನಿಗೆ ವಿನೋದ ಗ್ರಾಹ್ಯವಾಗಲಿಲ್ಲ. ಆದರೂ ಪೆಚ್ಚಾಗಿ ಪಿಚ್ಚನೆ ಹಲ್ಲು ಬಿಟ್ಟನು ಹಮೀರ.
ಮೇಲುಸಾಲಿನ ಮೂರು ಹಲ್ಲುಗಳೂ ಮುರಿದು ಹೆಬ್ಬಾಗಿಲು ತರದಂತಿದ್ದ ಅವನ ಬಾಯನ್ನು ನೋಡಿ ಮೂವರು ಸಾಬರೂ ಗಟ್ಟಿಯಾಗಿ ನಗತೊಡಗಿದರು. ಅವರೂ ಕೇಳಿದ್ದರು ಆ ಹಲ್ಲು ಉದುರಿದ ಸನ್ನಿವೇಶದ ಕಥೆಯನ್ನು: ಹಮೀರ ಒಂದು ದಿನ ಬೈಗುಗತ್ತಲಲ್ಲಿ ಮಿತಿಮೀರಿ ಕುಡಿದು, ಮತ್ತೇರಿ, ಹಾದಿಬದಿಯಲ್ಲಿ ಎಡವಿ ಬಿದ್ದನಂತೆ. ಅವನು ಮುಖ ಅಡಿಯಾಗಿ ಏಳೆಂಟು ಅಡಿ ಎತ್ತರದ ಕೊರಕಲಿಗೆ ಬಿದ್ದಿದ್ದನಂತೆ. ಬಿದ್ದಾಗ ಒಂದು ಕಗ್ಗಲ್ಲು ಅವನ ಬಾಯಿಗೆ ಬಡಿದ ಹೊಡೆತಕ್ಕೆ ಹಲ್ಲು ಸಡಿಲಿ ಮುರಿದುವಂತೆ. ಅವನ ಹಿಂದೆ ಅವನಂತೆಯೆ ಕುಡಿದು ಬರುತ್ತಿದ್ದವರು ಅವನನ್ನು ಎತ್ತಿ ನಿಲ್ಲಿಸಲು ಹೋದಾಗ, ಅವನು ಮರುಳನಂತೆ ಕಿಲಕಿಲನೆ ನಗುತ್ತಾ, ಬಾಯಿಂದ ಸೋರುತ್ತಿದ್ದ ರಕ್ತವನ್ನೂ ಲೆಕ್ಕಿಸದೆ ‘ತಗಾ ನಿಂಗೊಂದು! ತಗಾ ನಿಂಗೊಂದು! ತಗಾ ನಿಂಗೊಂದು!’ ಎಂದು ಅಲುಹುತ್ತಿದ್ದ ಹಲ್ಲುಗಳನ್ನು ಒಂದೊಂದನ್ನು ಕಿತ್ತೂ ಕಿತ್ತೂ ತನ್ನನ್ನು ಎತ್ತಿದವರಿಗೆ ಇನಾಮು ಕೊಟ್ಟಿದ್ದನಂತೆ! ಆ ಕಥೆ ಜನರಿಂದ ಜನಕ್ಕೆ ಹಬ್ಬಿ, ನಾಡಿನ ಒಂದು ಹಾಸ್ಯವಾಗಿ ಪರಿಣಮಿಸಿತ್ತು. ‘ತಗಾ ನಿಂಗೊಂದು!’ ಎಂದೊಡನೆ, ಜನ ಹಮೀರನ ಹಲ್ಲನ್ನು ನೆನೆದು ನಗೆಯಲ್ಲಿ ಮುಳುಗುತ್ತಿದ್ದರು.
ವ್ಯಕ್ತಿಯನ್ನು ನೋಡದಿದ್ದವರು ಯಾರಾದರೂ ಹಮೀರನಾಯ್ಕ ಎಂಬ ಹೆಸರನ್ನು ಕೇಳಿದ್ದರೆ ಅವರ ಕಲ್ಪನೆಯಲ್ಲಿ ಸುಳಿಯುತ್ತಿದ್ದ ಆ ವ್ಯಕ್ತಿಯ ಚಿತ್ರಕ್ಕೂ ಅವರು ಆ ವ್ಯಕ್ತಿಯನ್ನೆ ಸಾಕ್ಷಾತ್ತಾಗಿ ನೋಡಿದಾಗ ಕಾಣುತ್ತಿದ್ದ ಚಿತ್ತರಕ್ಕೂ ಆನೆಗೂ ಆಡಿಗೂ ಇರುವಷ್ಟು ವ್ಯತ್ಯಾಸವಿರುತ್ತಿತ್ತು. ಅಂತಹ ಸಾಧಾರಣ ದುರ್ಬಲ ವ್ಯಕ್ತಿಗೆ ಎಂತಹ ಹೆಸರಿಟ್ಟಿದ್ದರು! ಆದರೆ ಅದಕ್ಕೆ ಸಮರ್ಥನೀಯವಾದ ಒಂದು ಆಧಾರವೂ ಇತ್ತು: ಆ ಬಡಕಲು ‘ಹಮೀರ’ನ ಹೆಸರನ್ನೇ ಹೊತ್ತಿದ್ದ ಅವನ ಮುತ್ತಜ್ಜನೊ, ಅವನಜ್ಜನೊ, ದುರ್ಗದ ಪಾಳೇಯಗಾರರ ಹಳೆಪೈಕದ ಪಡೆಗೆ ಪಡೆದವಳನಾಗಿದ್ದನಂತೆ! ಅವನ ಶಕ್ತಿ ಪ್ರತಾಪ ಸಾಹಸಗಳ ವಿಚಾರವಾದ ಅನೇಕ ನಿಜವೋ ಸುಳ್ಳೋ ಕಥೆಗಳು ಲಕ್ಕುಂದದ ಸೇಸನಾಯಕನ ಮನೆತನದ ಗತವೈಭವದ ಸ್ಮಾರಕನಿಕೇತನಗಳಾಗಿದ್ದುವು. ಆ ಮಹಿಮೆಯಿಂದಲೆ ಅವನಿನ್ನೂ ಹಳೆಪೈಕದವರ ಮುಖಂಡನಾಗಿ, ಕುಲದವರ ವಿಧೇಯತೆಗೆ ಪಾತ್ರನಾಗಿದ್ದನು.
ಆದರೆ ಹತ್ತೊಂಭತ್ತನೆಯ ಶತಮಾನದ ಅಂತ್ಯದ ಗತವೈಭವಕ್ಕೆ ನಿದರ್ಶನಪ್ರಾಯನಾಗಿದ್ದ ನಮ್ಮ ಹಮ್ಮೀರನಾಯಕನಿಗೆ ಅವನ ಮೋರೆಯ ಮೇಲೆ, ಪೌರುಷದ ಚಿಹ್ನೆಯ ಮಾತಂತಿರಲಿ, ಪುರುಷ ಲಕ್ಷಣವಾದ ರೋಮವೂ ಇರಲಿಲ್ಲ. ಅವನ ಅಪ್ಪ ಸೇಸನಾಯಕನಿಗಿದ್ದಂತೆ ಅವನ ಕೈಕಾಲುಗಳಲ್ಲಿಯೂ ಕೂದಲು ಹುಟ್ಟಿಯೆ ಇಲ್ಲವೆಂಬತೆ ನುಣ್ಣಗೆ ಕ್ಷೌರ ಮಾಡಿಸಿದಂತೆ ಕಾಣುತ್ತಿತ್ತು. ಆದ್ದರಿಂದಲೆ ಇಜಾರದ ಸಾಬಿಗೆ ಅವನನ್ನು ಕಂಡರೆ, ಸೀರೆಯುಡದೆ ಸೊಂಟಕ್ಕೆ ಅಡ್ಡಪಂಚೆ ಸುತ್ತಿ, ಹರಕಲು ಅಂಗಿ ಹಾಕಿಕೊಂಡ ಬೆಳ್ಳನೆ ತೆಳ್ಳನೆ ಹುಡುಗಿಯನ್ನು ಕಂಡಂತಾಗಿ, ಖುಷಿಯಾಗುತ್ತಿದ್ದದ್ದು!
“ಭಾಗವತರಾಟದಲ್ಲಿ ಹೆಣ್ಣುವೇಷ ಹಾಕಿದರೆ ಲಾಯಖ್ಖಾಗ್ತದೆ ನಮ್ಮ ಹಮ್ಮೀರಣ್ಣಗೆ!” ಎಂದನು ಇಜಾರದ ಸಾಬು.
ತಾನು ಹಳುವಿನಲ್ಲಿ ಹಲಸಿನ ಹಣ್ಣು ಇಟ್ಟಿದ್ದನ್ನು ಅಜ್ಜೀಸಾಬು ಕಂಡುಬಿಟ್ಟಿದ್ದಾನೆಯೊ ಏನೋ ಎಂದು ಮೊದಲು ಪೆಚ್ಚಾಗಿದ್ದ ಹಮೀರನು ಇಜಾರದ ಸಾಬು ಹೇಳಿದ್ದನ್ನು ಕೇಳಿ ನಾಚಿ ನೆಲಕ್ಕಿಳಿದಂತಾಗಿ
“ಏ, ಈ ಸಾಬರಿಗೆ ಕಸುಬಿಲ್ಲ!” ಎಂದು ಬೆಪ್ಪುನಗೆ ನಕ್ಕನು.
“ಅವನು ಯಾಕೆ ಹೆಣ್ಣುವೇಷ ಹಾಕುತ್ತಾನೆ ಇನ್ನು? ಮದುವೆ ಗಂಡು ಆಗುವವನು? ಅಲ್ಲವೇನೋ?” ಕೇಳಿದನು ಲುಂಗೀಸಾಬು.
“ವ್ಹಾರೆವ್ಹಾ! ಹೆಣ್ಣಿಗೆ ಯಾರೋ ಹೆಣ್ಣು ಕೊಡುವವರು?” ಇರಿಯಿತು ಇಜಾರ ಸಾಬಿಯ ಕುಹಕ ಹಾಸ್ಯ.
“ಸೀತೂರು ತಿಮ್ಮನಾಯ್ಕರೋ! ಮಗಳ ಕೊಟ್ಟು ಇವನ್ನ ಅಳಿಯ ಮಾಡಿ ಕೊಳ್ತಾರಂತೆ” ಲುಂಗೀಸಾಬು ಎಂದನು.
ಇದ್ದಕಿದ್ದಹಾಗೆ ಕನ್ನಡವನ್ನು ಬಿಟ್ಟು ತುರುಕುಮಾತಿನಲ್ಲಿ ಇಜಾರದ ಸಾಬಿ ಏನನ್ನೊ ಹೇಳಿದುದಕ್ಕೆ ಉಳಿದ ಇಬ್ಬರು ಸಾಬರೂ ಹಮೀರನನ್ನೆ ನೋಡುತ್ತಾ ಬಿದ್ದು ಬಿದ್ದುಗಹಗಹಿಸಿ ನಗತೊಡಗಿದರು. ಏನನ್ನೋ ತುಂಬ ಅಸಹ್ಯವಾದ ಅಶ್ಲೀಲವನ್ನು ಇಜಾರದ ಸಾಬಿ ನುಡಿದಿರಬೇಕೆಂದು ಗೊತ್ತಾದರೂ ಅದರ ಇರಿತದ ಮೊನೆಯನ್ನು ನಿವಾರಿಸುವ ರೀತಿಯಲ್ಲಿ ಹಮೀರನೂ ನಗತೊಡಗಲು, ಉಳಿದ ಮೂವರೂ ಮತ್ತಷ್ಟು ಬಿದ್ದುಬಿದ್ದು ಹ್ಹೆಹ್ಹೆಹ್ಹೆಹ್ಹೇ ಎಂದು ಅಟ್ಟಹಾಸಮಾಡಿದ ರಭಸಕ್ಕೆ ಕುದುರೆಗಳೆರಡೂ ಬೆಚ್ಚಿ, ನಾಲ್ಕು ಹೆಜ್ಜೆ ಓಡಿ ನಿಂತುವು.
“ಹೋಗಲಿ ಬಿಡು, ಹಮೀರಣ್ಣ; ನೀನು, ನಿಕಾ ಮಾಡಿಕೊ; ಸಂತೋಷ…. ಅಲ್ಲಯ್ಯಾ, ನನ್ನ ಕುದುರೆ ಬೇಡ ಅಂತಾ ಹೇಳಿಬಿಟ್ಯಂತೆ?…. ನನ್ನ ಕುದುರೆ ಸ್ವಲ್ಪ ಬಡಕಲಾದ ಮಾತ್ರಕ್ಕೆ ನಿನ್ನ ಹೊರೋದಕ್ಕೆ ಆಗ್ತಿರಲಿಲ್ಲವೆ ಅದಕ್ಕೆ? ನೀನೇನು ಭಾರಿ ಆಳೇ? ಮದುವೆ ಗಂಡಾದ ಕೂಡ್ಲೆ ನಿನ್ನ ತೂಕ ಹೆಚ್ಚಿಬಿಡುತ್ತದ್ಯೋ?” ಕೇಳಿದನು ಅಜ್ಜೀಸಾಬು.
“ಕುದುರೇನೇ ನಿಕಾ ಮಾಡಿಕೊಳ್ತಾನೇನೋ?” ಗಹಗಹಿಸಿ ನಗುತ್ತಾ ಕೇಳಿದನು ಇಜಾರದ ಸಾಬು.
ನಾಲ್ವರ ನಗೆಯ ಮಧ್ಯೆ ಲುಂಗೀಸಾಬು ವಿವರಿಸಿದನು: “ಅವನು ಮಾಡಿಕೊಳ್ತೇನೆ ಅಂದ್ರೂ ಕುದುರೆ ಒಪ್ಪಬೇಕಲ್ಲಾ? ಅದಕ್ಕಾಗಲೆ ಗಂಡು ಸಿಕ್ಕಯ್ತೆ, ಅಲ್ಲಿ ನೋಡಿ ಕಾಣ್ತದಲ್ಲಾ! ಭರ್ಜರಿ ಗಂಡು! ಇವನ ಹಾಗೆ ಬಡಕಲಲ್ಲ!” ಎಲ್ಲರೂ ಆ ಕಡೆ ಕಣ್ಣಾದರು, ಪ್ರಣಯ ಸಿದ್ಧತೆಯ ಪೂರ್ವ ಲೀಲೆಯಲ್ಲಿ ತೊಡಗಿದ್ದ ಕುದುರೆಗಳ ಕಡೆ, “ಹಾಂಗಿಲ್ಲ ಆ ವಿಷಯಾ….” ಎಂದು ಮತ್ತೆ ಮುಂದುವರೆಸಿದನು ಲುಂಗೀಸಾಬು “ಹಳೆಪೈಕದವರು ದಂಡಿಗೆ ಹತ್ತಬಾರದು, ಕುದುರೆ ಏರಬಾರದು ಅಂತಾ ಸರಕಾರದ ತನಕ ಹೊಡೆದಾಡಿ ಹಕ್ಕು ಮಾಡಿಕೊಂಡಿದಾರೆ ಗೌಡರು. ದುರ್ಗದವರ ಕಾಲದಲ್ಲಿ ನಾವೂನೂ ರಾಜ್ಯ ಕಟ್ದೋರು, ರಾಜ್ಯ ಆಳ್ದೋರು, ನಮಗೆ ಅದು ಪೂರ್ವದಿಂದ ಬಂದ ಹಕ್ಕು ಅಂತಾ ಹಳೆಪೈಕದೋರು…. ಈಗ ಸೀಮೆ ಮುಖಂಡರು ಲಕ್ಕುಂದದ ಸೇಸನಾಯ್ಕರು ಸೀತೂರು ತಿಮ್ಮನಾಯ್ಕರು ಎಲ್ಲಾ ಸೇರಿ, ಹಮ್ಮಿರಣ್ಣನ ಮದುವೇಲಿ ಮದುವೆ ಗಂಡನ್ನ ಕುದುರೆ ಮೇಲೆ ಹತ್ತಿಸಿ ಹೆಣ್ಣಿನ ಮನೆಗೆ ದಿಬ್ಬಣ ತಗೊಂಡು ಹೋಗ್ತಾರಂತೆ; ಗಂಡು ಹೆಣ್ಣನ್ನ ಕರಕೊಂಡು ಬರುವಾಗ ದಂಡೀಗೆ ಮೇಲೆ ಕರಕೊಂಡು ಬರ್ತಾರಂತೆ; ಈಗ ಗೌಡರ ಕಡೆ ಸೀಮೆ ಮುಖಂಡರೆಲ್ಲ ಸೇರಿ ಮಸಲತ್ತು ಮಾಡಿಕೊಂಡಿದಾರಂತೆ; ಸೇಸನಾಯ್ಕರ ಮಗನ ಮದುವೇಲಿ ಗಂಡನ್ನ ಕುದುರೆ ಮೇಲೆ ಹತ್ತಿಸಿದ್ರೆ, ದಿಬ್ಬಣ ತಡೆದು, ಕುದುರೆ ಕಾಲು ಮುರಿದು ಹಾಕಬೇಕು ಅಂತಾ….” ಒಂದು ಕ್ಷಣ ಮಾತು ನಿಲ್ಲಿಸಿ, ಹಮಿರನ ಕಡೆ ತಿರುಗಿ, ವ್ಯಂಗ್ಯ ಮೃದುಹಾಸದಿಂದ ಕೇಳಿದನು: “ಅದಕ್ಕೇ ಅಲ್ಲೇನೊ, ಹೇಳೊ, ಹಮ್ಮಿರಣ್ಣಾ, ಇದ್ದಿದ್ದರಲ್ಲಿ ಬಲವಾದ ಗಂಡುಕುದುರೇನೆ ಆರಿಸಿಕೊಂಡದ್ದು?”
ಹಮೀರನು ಲುಂಗೀಸಾಬಿಯ ಧ್ವನಿಯ ವ್ಯಂಗ್ಯವನ್ನು ಗ್ರಹಿಸಲು ಅಸಮರ್ಥನಾಗಿ, ಅಜ್ಜೀಸಾಬಿಯ ಬಡಕಲು ಕುದುರೆಯ ಪಕ್ಕದಲ್ಲಿ ನಿಂತು ಹೋಲಿಕೆಯಿಂದ ಹೆಚ್ಚು ಎತ್ತರವೂ ಆಗಿ ಕಾಣುತ್ತಿದ್ದ ಕರೀಂ ಸಾಬರ ಕುದುರೆಯನ್ನು ಮೆಚ್ಚಿ ನೋಡುತ್ತಾ, ಬೆಪ್ಪುನಗೆ ನಗುತ್ತಾ, ತನ್ನ ಗಂಭೀರವಾದ ಅಭಿಪ್ರಾಯವನ್ನು ಗಂಭೀರವಾಗಿಯೆ ಮಂಡಿಸುವವನಂತೆ ಉತ್ತರಿಸಿದನು: “ ಮತ್ತೆ? ನೀವು ಹೇಳಾದೇನು ಸುಳ್ಳಾ? ಕರ್ಮಿನು ಸಾಬರ ಕುದುರೆ ಹ್ಯಾಂಗದೆ ನೋಡಿ! ಅದರ ಕಾಲು ಮುರಿಯಾಕೆ ಬಂದೋರಿಗೆ ಒಂದು ಒದೆ ಒದ್ದರೆ ಸಾಲ್ದೇನು? ಹಲ್ಲು ಮುರಿದ್ಹೋಗ್ತಾರೆ!….”
ಅವನು ಇನ್ನೂ ಮುಂದುವರಿಯುತ್ತಿದ್ದನೊ ಏನೊ? ಎಲ್ಲರೂ ಗೊಳ್ಳೆಂದು ನಕ್ಕುದನ್ನು ನೋಡಿ, ಪಿಚ್ಚನೆ ಹಲ್ಲು ಬಿಡುತ್ತಾ ತೆಪ್ಪಗಾದನು.
“ಅದೆಲ್ಲಾ ಸೈ. ನೀನು ಕುದುರೆ ಮೇಲೆ ಯಾವಾಗಲಾದರೂ ಹತ್ತಿದ್ದೀಯೊ?” ಇಜಾರದ ಸಾಬಿ ಲೇವಡಿಮಾಡಿದನು.
“ಕುದುರೆ ಮ್ಯಾಲೆ ಹತ್ತದಿದ್ರೆ ಏನಂತೆ?…. ನಾ ಹುಡುಗನಾಗಿದ್ದಾಗ ದನಾಕಾಯಾಕೆ ಹೋಗ್ತಿದ್ದಾಗ ದನದ ಮೇಲೆ ಎಮ್ಮೆ ಮೇಲೆ ಎಷ್ಟುಸಾರಿ ಹತ್ತಿಲ್ಲ?….” ಪ್ರತಿಭಟಿಸುವಂತೆ ಮಾತಾಡಿದನು ಹಮೀರ.
“ಹಾಗಾಂದ್ರೆ ನೀ ಅದನ್ನೂ ಮಾಡಿದ್ದೀಯಾ ಅನ್ನು, ಹೋರಿ ಕೆಲಸಾನ?” ಇಜಾರದ ಸಾಬಿಯ ಮಾತಿನ ಅಶ್ಲೀಲ ಇಂಗಿತವನ್ನು ಗ್ರಹಿಸಲಾರದೆ ನಿಂತಿದ್ದ ಹಮೀರನಿಗೆ ಅದನ್ನು ಸ್ಪಷ್ಟಪಡಿಸಲೆಂಬಂತೆ ಒತ್ತಿ ವಿವರಿಸಿದನು “ಅಯ್ಯೋ ಬೆಪ್ಪಾ! ಕುದುರೆ ಮೇಲೆ ಹತ್ತೋದು ಅಂದರೆ ಬೆನ್ನಮೇಲೆ ಹತ್ತಿ ಸವಾರಿ ಮಾಡೊದೋ? ಅದರ ಬಾಲ ಎತ್ತಿ ಹಿಂದುಗಡೆಯಿಂದ ಹತ್ತೋದಲ್ಲ, ನೀ ದನಕ್ಕೆ ಎಮ್ಮೆಗೆ ಹತ್ತಿದ ಹಾಂಗೆ!….”
ಎಲ್ಲರೂ ನಗುತ್ತಿದ್ದುದನ್ನು ನೋಡಿ ಹಮೀರನಿಗೆ ತಟ್ಟನೆ ಹೊಳೆಯಿತು, ಸಾಬಿಯ ಪೋಲಿಮಾತಿನ ಅರ್ಥ. ಅವನ ಮುಖ ಸಿಟ್ಟಿನಿಂದಲೂ ಜಿಗುಪ್ಸೆಯಿಂದಲೂ ಸಣ್ಣಗಾಯಿತು: “ಥ್ಪೂ!” ಎಂದನು ಯಾರ ಮುಖಕ್ಕೊ ಉಗುಳುವಂತೆ “ನಾನೇನು ಹಗಲು ಹನ್ನೆರಡು ಗಂಟೆಗೆ ರಾಜ್ಯ ಕಳಕೊಂಡವರ ಜಾತಿ ಅಲ್ಲ, ಹಾಂಗೆಲ್ಲ ಮಾಡಾಕೆ!”
ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿನಲ್ಲೆ ಶ್ರೀರಂಗಪಟ್ಟಣವನ್ನು ಕಳೆದುಕೊಂಡರೆಂದು ಮುಸಲ್ಮಾನರನ್ನು ಮೂದಲಿಸುವುದು ಆಗ ವಾಡಿಕೆಯಾಗಿತ್ತು. ಮುಸಲ್ಮಾನರಿಗೂ ಆ ನಿಂದೆ ಅತ್ಯಂತ ದುಸ್ಸಹನೀಯವಾಗಿ ಅವಮಾನಕರವಾಗಿದ್ದುದರಿಂದ ಹಾಗೆ ನಿಂದಿಸಿದವರನ್ನು ಖೂನಿ ಮಾಡಲೂ ಹೇಸುತ್ತಿರಲಿಲ್ಲ.
ತಟಕ್ಕನೆ ಇಜಾರದ ಸಾಬಿಯ ಮುಖ ಕರ್ಕಶವಾಯ್ತು. ಹಮೀರನ ಕೆಚ್ಚಲ್ಲದಿದ್ದರೂ ಅವನ ಮೊಂಡ ಮೂರ್ಖತೆಯ ಅವನ ಬಾಯಿಂದ ಏನನ್ನು ಬೇಕಾದರೂ ಹೇಳಿಸಿಬಿಡಬಹುದುದೆಂದು ಲುಂಗೀಸಾಬುವಿಗೆ ದಿಗಿಲಾಯಿತು. ವಿಷಾದದ ದಿಕ್ಕಿನ ಇಳಿಜಾರಿನ ಕಡೆಗೆ ಜಾರುತಿದ್ದ ವಿನೋದದ ಅಪಘಾತವನ್ನು ತಡೆಗಟ್ಟುವ ಉದ್ದೇಶದಿಂದ “ತಮಾಷೆಗೆ ಹೇಳಿದ್ದಕ್ಕೆಲ್ಲ ಸಿಟ್ಟುಮಾಡಬೇಡಣ್ಣಾ, ಹಮೀರಣ್ಣಾ!…. ನಿನ್ನ ಲಗ್ನಕ್ಕೆ ನಾನೂ ಬುಡನ್ ಇಬ್ಬರೂ ಬಿರುಸು ಬಾನ ಗರ್ನಾಲು ಹಾರಿಸೋಕೆ ಒಪ್ಪಿಕೊಂಡಿದ್ದೀವಿ…. ನೋಡ್ತೀರು, ಎಷ್ಟು ಪಸಂದಾಗಿ ಜಬರ್ದಸ್ತಿನಿಂದ ನಿನ್ನ ಲಗ್ನದ ದರ್ಬಾರು ನಡೀತದೆ!…. ನೋಡ್ತೀರು, ಎಷ್ಟು ಪಸಂದಾಗಿ ಜಬರ್ದಸ್ತಿನಿಂದ ನಿನ್ನ ಲಗ್ನದ ದರ್ಬಾರು ನಡೀತದೆ!…. ಇರ್ಲಿ ಬಿಡೂ…. ಈಗ ಬಹಳ ಹಸಿವಾಗೈತೆ ನಮಗೆ ‘ಹಸಿದು ಹಲಸಿನ ಹಣ್ಣು, ಉಂಡು ಬಾಳೆಹಣ್ಣು” ತಿನ್ನಬೇಕಂತೆ!…. ಆ ಹಳುವಿನಾಗೆ ಒಂದು ಹಲಸಿನ ಹಣ್ಣು, ಉಂಡು ಬಾಳೆಹಣ್ಣು’ ತಿನ್ನಬೇಕಂತೆ!… ಆ ಹಳುವಿನಾಗೆ ಒಂದು ಹಲಸಿನ ಹಣ್ಣು ಇಟ್ಟಿದ್ದ ಹಣ್ಣು ಇಟ್ಟಿದ್ದೆ! ಹೋಗಿ ತಗೊಂಡು ಬಾ’ಣ್ಣಾ!” ಎನ್ನುತ್ತಾ ಹಮೀರ ಹಲಸಿನ ಹಣ್ಣನ್ನು ಅಡಗಿಸಿಟ್ಟಿದ್ದ ಜಾಗದ ಕಡೆ ಕೈತೋರಿದನು.
“ಆ ಆ ಆ! ನೀ ಒಳ್ಳೆ ಗಟ್ಟಿಗ ಕಣೋ, ಸಾಬಣ್ಣಾ! ಅದನ್ನ ಯಾರಿಗೋ ಕೊಡಾಕಂತಾ ತಂದೀನೀ….” ಹಮೀರನ ಮುಖ ತಟಕ್ಕನೆ ಮೊದಲಿನ ಮುಗ್ಧಭಂಗಿಗೆ ತಿರುಗಿ, ಸಸ್ನೇಹ ವಾಣಿಯಿಂದ ಹೇಳಿ ಸರಸರನೆ ತಾನು ಹಲಸಿನ ಹಣ್ಣು ಅಡಗಿಸಿಟ್ಟಿದ್ದ ಸ್ಥಳಕ್ಕೆ ಹೋಗಿ ಅದನ್ನು ಹೊತ್ತು ತಂದನು.
ಹಮೀರನ ಕ್ರಿಯೆಯನ್ನೆ ಗಮನಿಸುತ್ತಾ ಇಜಾರದ ಸಾಬಿ “ಹಳ್ಳಿಗಮಾರ; ಆದರೂ ನರೀಬುದ್ದಿ ಬಿಟ್ಟಿಲ್ಲ!” ಎಂದನು.
ಸರಿ, ಇನ್ನೇನು ಮಾಡುತ್ತಾನೆ ಹಮೀರ? ಕಂಡಮೇಲೆ ಬಿಡುವುದಿಲ್ಲ ಈ ಸಾಬರ ಹಿಂಡು! ತುಸು ಪ್ರತಿಭಟಿಸಿ ನೋಡಿದ. ಆದರೆ ಪ್ರಯೋಜನ ಕಾಣಲಿಲ್ಲ.
ಹಲಸಿನಹಣ್ಣಿನ ಮಹಾ ಗಾತ್ರವನ್ನು ನೋಡಿ ಅಜ್ಜೀಸಾಬು ಕೇಳಿದನು “ಬಿಳುವನೋ? ಬಕ್ಕೆಯೋ?”
ಹಣ್ಣನ್ನು ಕೆಳಗಿಳಿಸುತ್ತಾ ಹಮೀರ “ಬಿಳುವ!” ಎಂದನು. ಅವನ ಕೊರಳಿನಲ್ಲಿ ತುಸು ಅಸಮಾಧಾನವಿತ್ತು.
“ಹಾಂಗಾದರೆ ಕತ್ತಿ ಚೂರಿ ಏನೂ ಬೇಡ, ತೊಟ್ಟು ಹಿಡಿದು ಬಲವಾಗಿ ಎಳೆದರೆ ಹಿಸಿದು ಎರಡು ಭಾಗ ಆಗ್ತದೆ.” ಎನ್ನುತ್ತಾ ಕೂತಲ್ಲಿಂದ ಎದ್ದ ಲುಂಗಿಸಾಬು ಹಮೀರನೆಡೆಗೆ ಬಂದು “ಎಲ್ಲಿ? ಸ್ವಲ್ಪ ಸರಿ!” ಎಂದು ಅವನ ಜಾಗದಲ್ಲಿ ತಾನೆ ನಿಂತು, ಒಂದು ಕೈಯಲ್ಲಿ ಹಣ್ಣಿನ ತೊಟ್ಟು ಹಿಡಿದು, ಇನ್ನೊಂದರಿಂದ ಹಣ್ಣನ್ನು ಒತ್ತಿ, ಬಲವಾಗಿ ಎಳೆದನು. ಹಣ್ಣು ಹಿಸಿದು ಇಬ್ಭಾಗವಾಗಿ ತನ್ನ ಹೊಟ್ಟೆಯ ತೊಳೆಚುಳಿಕಿಗಳನ್ನೆಲ್ಲ ಬಯಲಿಗೆ ಹಾಕಿತು. ಚೆನ್ನಾಗಿ ಕಳಿತು ಲೋಳಿಲೋಳಿಯಾಗಿದ್ದ ತೊಳೆಗಳನ್ನು ನಾಲ್ವರೂ ಹಿಸುಕಿ, ಬೀಜ ಹೊರಗೆ ಹಾಕಿ, ಅಗಿಯಲು ಹಲ್ಲಿಗೂ ಸಿಕ್ಕದಂತಿದ್ದ ಅವುಗಳನ್ನು ನಾಲಗೆಯಿಂದ ಅತ್ತ ಇತ್ತ ಓಡಾಡಿಸಿ ಗುಳು ಗುಳು ನುಂಗತೊಡಗಿದರು.
“ಈ ಬಿಳುವನಹಣ್ಣಿನ ತೊಳೆ ಆಗಿಯೋ ರಗಳೇನೆ ಇಲ್ಲ. ಮುದುಕರಿಗಂತೂ ಪಸಂದು, ಹಿಹಿಹಿ!” ಎಂದನು ಹಮೀರ.
“ಮುದುಕರಿಗೆ ಮಾತ್ರಾನೇ? ಹಲ್ಲು ಉದುರಿಸಿಕೊಂಡೋರಿಗೆಲ್ಲರಿಗೂ ಪಸಂದೆ!” ಎನ್ನುತ್ತಾ ಲುಂಗೀಸಾಬು ಮುಂಬಲ್ಲು ಮುರಿದಿದ್ದ ಹಮೀರನ ಕಡೆ ನೋಡಿ ನಕ್ಕನು: “ಅದಕ್ಕೆ ಅಂತಾ ಕಾಣ್ತದೆ, ನೀನು ಬಕ್ಕೇ ತರದೆ ಬಿಳುವನ್ನೇ ತಂದದ್ದು!”
ಕಾಡಿನ ಹಳುವಿನಲ್ಲಿ ಯಾರೋ ಮಾತಾಡಿಕೊಂಡು ಬರುತ್ತಿರುವುದು ಕೇಳಿಸಿ, ಒಬ್ಬೊಬ್ಬರು ಒಂದೊಂದು ಕಡೆಗೆ ತಿರುಗಿ ನೋಡಿದರು. ಸೀತೂರು ದಿಕ್ಕಿನತ್ತ ನೋಡುತ್ತಿದ್ದ ಹಮೀರಗೆ ಆ ಕಡೆಯ ಗುರುಗಿ ಹಳು ಅಲುಗಾಡುವುದು ಕಾಣಿಸಿ, ನೋಡುತ್ತದ್ದಂತೆಯೇ ಮೇಗರವಳ್ಳಿಯ ‘ಕರ್ಮಿನ್ ಸಾಬರೂ’ ಅವರ ತಮ್ಮ ‘ಪುಡೀ ಸಾಬರೂ’ ಗೋಚರಿಸಿದರು. ಇಬ್ಬರೂ ಮಲೆಯಾಳಿ ಭಾಷೆಯಲ್ಲಿಯೆ ಮಾತಾಡಿಕೊಂಡು ಬಂದರು. ಇಬ್ಬರೂ ಮಾಪಿಳ್ಳೆ ಲಬ್ಬೆ ಬ್ಯಾರಿ ಮೊದಲಾದ ಮಲೆಯಾಳಿಗಳು ಉಡುವಂತಹ, ಬೇರೆ ಬೇರೆ ಬಣ್ಣದ ಅಡ್ಡಗೀರು ಉದ್ದಗೀರಿನ ಕಣ್ಣುಕಣ್ಣಿನ ಅಡ್ಡಪಂಚಿ ಸುತ್ತಿ, ಉದ್ದುದ್ದ ಬನೀನು ಹಾಕಿದ್ದರು. ಕಪ್ಪು ಬಣ್ಣದ ಕರಿಮೀನು ಸಾಬು ಅಷ್ಟೇನು ಉದ್ದವಲ್ಲದ ಗಡ್ಡಬಿಟ್ಟಿದ್ದನು; ಅವನಿಗಿಂತಲೂ ತುಸು ಬೆಳ್ಳಗಿದ್ದ ಪುಡಿಸಾಬುವಿಗೆ ಮೀಸೆ ಮಾತ್ರ ಇತ್ತು. ಅಣ್ಣನಿಗಿಂತ ತಮ್ಮ ಷೋಕಿಯಾಗಿ ಕಾಣುತ್ತಿದ್ದನು. ಅಣ್ಣನ ಕಾಲಿನಲ್ಲಿ ಕನ್ನಡಜಿಲ್ಲೆಯ ಮೆಟ್ಟುಗಳಿದ್ದರೆ ತಮ್ಮನ ಕಾಲಿನಲ್ಲಿ ಕೆಂಪುಬಣ್ಣದ ಚಡಾವುಗಳಿದ್ದುವು. ಹತ್ತಿರಕ್ಕೆ ಬಂದವರೆ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿದರು. ಏಕೆಂದರೆ, ಉಳಿದ ಮೂವರು ಹೊನ್ನಾಲಿಕಡೆಯ ಸಾಬರಿಗೆ ಮಲೆಯಾಳಿ ಅರ್ಥವಾಗುತ್ತಿರಲಿಲ್ಲ. ಮಲೆಯಾಳದ ಕಡೆಯ ಇವರಿಬ್ಬರಿಗೆ ಮುಸಲ್ಮಾನ ಭಾಷೆ ಬರುತ್ತಿರಲಿಲ್ಲ.
“ಕುದುರೆ ಎಲ್ಲಿ? ಕಾಣುವುದಿಲ್ಲ. ಇಲ್ಲಿಯೆ ಈ ಮಟ್ಟಿಗೆ ಕಟ್ಟಿ ಹಾಕಿತಲ್ಲಾ?” ಗಾಬರಿಯಿಂದ ಕೇಳಿದನು ಕರೀಂ ಸಾಬು, ಸಾಮಾನು ತುಂಬಿದ್ದ ತನ್ನ ಹಸುಬೆ ಚೀಲವನ್ನು ನೆಲದಮೇಲೆ ಕಂಡು.
ಆಗಲೆ ಗೊತ್ತಾದದ್ದು, ಹಲಸಿನಹಣ್ಣು ತಿನ್ನುತ್ತಿದ್ದ ನಾಲ್ವರಿಗೂ, ಕುದುರೆಗಳೆರಡೂ ಕಣ್ಣು ತಪ್ಪಿಸಿಕೊಂಡಿವೆ ಎಂಬುದು!
“ಅಯ್ಯಯ್ಯೋ, ಇಲ್ಲೇ ಇದ್ವಲ್ಲೋ ಇಷ್ಟೊತ್ತನಕ! ಯತ್ತ ಮಕ ಹೋದ್ವೋ, ಹಂಗಾರೆ?” ಸೋಜಿಗ ವ್ಯಕ್ತಪಡಿಸಿದನು ಹಮೀರ.
“ಯಾರೋ ಬಿಚ್ಚಿಬಿಟ್ಟಿದ್ದು?” ಕರೀಂ ಸಾಬು ಕೇಳಿದನು, ಸ್ವಲ್ಪ ಕೋಪಧ್ವನಿಯಲ್ಲಿಯೆ.
“ಯಾರೂ ಬಿಚ್ಚಿದ್ದಲ್ಲ.” ದೀರ್ಘಸ್ವರದಲ್ಲಿ ಪದಗಳನ್ನು ವಿರಳವಾಗಿ ಉಚ್ಛರಿಸುತ್ತಾ “ನಾನು ಇಲ್ಲಿಗೆ ಬರುವಷ್ಟರಲ್ಲೆ ಕುದುರೆ, ಕಟ್ಟಿದ್ದ ಹರೆ ಮುರಿದುಕೊಂಡು, ಹಕ್ಕಲಿನಲ್ಲಿ ತಿರುಗುತ್ತಿತ್ತು. ಲಗಾಮಿನ ತುದಿಗೆ ಕಟ್ಟಿದ್ದ ಹರೆ ನೇತಾಡುತ್ತಿತ್ತು….ಕೆಳಗೆ ಬಿದ್ದಿದ್ದ ಮೂಟೇನ ನಾನೆ ಎತ್ತಿ ತಂದಿಟ್ಟದ್ದು.” ಎನ್ನುತ್ತಾ ಎದ್ದನು ಅಜ್ಜೀಸಾಬು, ಕುದುರೆಗಳನ್ನು ಹುಡುಕಿ ತರುವ ಉದ್ದೇಶದಿಂದ.
ಕರೀಂಸಾಬು ಕುನ್ನೇರಿಲ ಪೊದೆಯ ಹತ್ತಿರ ಹೋಗಿ ಬಗ್ಗಿನೋಡಿ “ಸುಳ್ಳು ಹೇಳಬೇಡ. ಇಲ್ಲಿ ನೋಡು, ಯಾರೋ ಹರೆಯನ್ನು ಕತ್ತಿಯಿಂದ ಕತ್ತರಿಸಿದ್ದಾರೆ, ಬೇಕಂತಲೇ!” ಎನ್ನುತ್ತಿರಲು, ಉಳಿದವರೂ ಹತ್ತಿರ ಹೋಗಿ ನೋಡಿ, ಹೌದೆಂದು ಸಮ್ಮತಿಸಿದರು.
“ಹೊಟ್ಟೆಕಿಚ್ಚಿನ ಬಾಂಚದ್ ಸೂಳೆಮಕ್ಕಳು, ಇದ್ದೇ ಇರುತ್ತಾರೆ, ಕಾಡಿನಲ್ಲಿಯೂ!” ಎಂದನು ಪುಡೀಸಾಬು. ಅವನಿಗೆ ಉಳಿದ ಮೂವರು ಕನ್ನಡಿಗ ಸಾಬರ ಮೇಲೆ ಗುಮಾನಿ!
ಅಜ್ಜೀಸಾಬು ಬೇಗಬೇಗನೆ ನಡೆದು ಕುದುರೆಗಳಿದ್ದ ದಿಕ್ಕಿನ ಹಳುವಿನಲ್ಲಿ ಕಣ್ಮರೆಯಾಗಿ, ಅಲ್ಲಿಯೆ ತುಸು ದೂರದಲ್ಲಿದ್ದ ಎರಡು ಕುದುರೆಗಳನ್ನೂ ಹಿಂದಕ್ಕೆ ಹೊಡೆದು ತಂದನು. ಕರೀಂಸಾಬು ಮತ್ತು ಪುಡೀಸಾಬೂ ಇಬ್ಬರೂ ತಮ್ಮ ಕುದುರೆಯ ಬಳಿಗೆ ಹೋಗಿ. ಅದರ ಬೆನ್ನಿಗೆ ಹಸುಬೆ ಚೀಲವನ್ನು ಎತ್ತಿ ತಂದಿಟ್ಟು, ಅದನ್ನು ತೀಕ್ಷ್ಣವಾಗಿ ಪರಿಶೀಲಿಸಿದರು. ಯಾರೋ ಚೀಲಕ್ಕೆ ಕೈ ಹಾಕಿದ್ದಾರೆ ಎಂಬುದನ್ನು ಅನುಮಾನಿಸಿ, ಸಾಮಾನುಗಳನ್ನು ಅಜಮಾಯಿಸಿ ಮಾಡಿ, ಸ್ವಾರ್ಲುಮೀನು ತುಂಡುಗಳನ್ನು ತೆಗೆದಿದ್ದಾರೆ ಎಂಬುದನ್ನು ಖಾತ್ರಿಮಾಡಿಕೊಂಡು, ಅಲ್ಲಿದ್ದವರಲ್ಲಿ ತಮಗಿಬ್ಬರಿಗೇ ಮಾತ್ರ ಗೊತ್ತಾಗುತ್ತಿದ್ದ ಮಲೆಯಾಳಿಯಲ್ಲಿಯೆ ಸ್ವಲ್ಪಹೊತ್ತು ಮಾತಾಡಿಕೊಂಡರು. ಮಾತು ಅರ್ಥಗರ್ಭಿತವಾಗಿ ನೋಡಿಕೊಂಡು, ತಮ್ಮನ್ನೆ ಕುರಿತು ತಮಗೆ ತಿಳಿಯಬಾರದ ಏನನ್ನೋ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಊಹಿಸಿ, ಉಳಿದಿದ್ದ ಹಲಸಿನ ತೊಳೆಗಳನ್ನು ತಿನ್ನತೊಡಗಿದರು, ತಮಗೇನೂ ಅರ್ಥವಾಗದವರಂತೆ ಉದಾಸೀನತೆಯನ್ನು ನಟಿಸುತ್ತಾ.
ಅಣ್ಣತಮ್ಮಂದಿರಿಬ್ಬರೂ ಹಸುಬೆ ಚೀಲವನ್ನು ಕುದುರೆಯ ಬೆನ್ನಿಗೆ ಸರಿಯಾಗಿ ಬಿಗಿದು ಕಟ್ಟಿ, ಹಲಸಿನ ಹಣ್ಣಿನ ಬುಡಕ್ಕೆ ಬಂದರು, ಸ್ವಲ್ಪ ಬಿಗುಮೊಗರಾಗಿಯೆ. ಉಳಿದವರು ತುಸು ಅತ್ತ ಇತ್ತ ಸರಿದು ಅವರಿಬ್ಬರಿಗೂ ತೆರಪು ಮಾಡಿಕೊಡಲು ಅವರೂ ಕುಳಿತು ತೊಳೆಗಳನ್ನು ನುಂಗತೊಡಗಿದರು.
“ಹೋಯ್ ಕರ್ಮೀನ್ ಸಾಬರೇ, ನಿಮ್ಮ ಗಡ್ಡಕ್ಕೆ. ಮ್ಯಾಣ ಹಿಡಿದಾತು? ಹುಸಾರಾಗಿ ತಿನ್ನಿ. ಹಿಹ್ಹಿಹ್ಹಿ!” ಎಂದು ವಿನೋದವಾಡಿದನು ಹಮೀರ.
“ಓಹೋಹೋ, ಈ ಹಲ್‌ಮುರುಕ ಹಮೀರಣ್ಣನ ನಾ ನೋಡ್ಲೆ ಇಲ್ಲ…. ನಿನ್ನ ಮಾವನ ಮನೀಗೆ ಹೋಗಿದ್ದೆನೋ, ಸೀತೂರಿಗೆ. ನಿನ್ನ ಹೆಂಡ್ತಿ ಲಗ್ನಕ್ಕೆ ನಾನೆ ಎಲ್ಲ ಸರಬರಾಜು ಮಾಡಿಕೊಡ್ತೀನಿ ಅಂತಾ ಒಪ್ಪಿಕೊಂಡು ಬಂದೀನಪ್ಪಾ!…. ಅಲೆಲೆಲೇ, ಏನೋ ಬಹಳ ನಾಚಿಕೆ ಮಾಡುತ್ತೀಯಾ?….” ಎಂದನು ಕರೀಂಸಾಬು, ಹಮೀರನ ಹೃದಯದ ಹಿಗ್ಗು ಅವನ ಮೊಗವನ್ನೆಲ್ಲ ಅರಳಿಸಿದುದನ್ನು ಕಂಡು.
ಲಜ್ಜೆಯ ರೂಪನ್ನು ತಾಳಿದ್ದ ಹಮೀರನ ಸಂತೋಷ ಇನ್ನೇನನ್ನೂ ಹೇಳುವುದಕ್ಕೆ ತೋಚದೆ “ಏ, ಸುಮ್ಮನಿರಿ ಅಂದ್ರೆ! ಈ ಸಾಬಣ್ಣನಿಗೆ ಯಾವಾಗ್ಲೂ ತಮಾಸೇನೆ!” ಎಂದು ಮಾತಿನ ದಿಕ್ಕು ಬದಲಾಯಿಸುವ ಹುನಾರಿನಿಂದ “ಅಲ್ಲಾ? ಕರ್ಮಿನ ಸಾಬ್ರೆ, ನೀವು ಯಾಕೆ ಇಷ್ಟು ಕರಗಿದ್ದೀರಿ? ನಿಮ್ಮ ತಮ್ಮ ಆ ಪುಡೀಸಾಬ್ರು, ನೋಡಿ, ಏಸು ಬೆಳ್ಳಗಿದ್ದಾರೆ?” ಎಂದನು.
“ಹಾಗೇ ಮತ್ತೆ? ನಿನ್ನ ಮಾವನಿಗೆ ಚವರಿ ಮೀಸೆ, ಮೈಯೆಲ್ಲಾ ರೋಮ. ನಿನಗೆ? ಹಜಾಮತ್ತು ಮಾಡಿದ ಹಾಗೆ, ಮುಖ ಮೈ ಎಲ್ಲ ಹೆಂಗಸರ ಹಾಗೆ!…. ನೀ ನೋಡು ಎಷ್ಟು ಬೆಳ್ಳಗಿದ್ದೀಯ? ಆದರೆ ನಿನ್ನ ಹೆಂಡ್ತಿ? ನನ್ನಷ್ಟು ಬೆಳ್ಳಗಿಲ್ಲಲ್ಲಾ!”
“ಏನಿಲ್ಲ! ಎಲ್ಲಾ ಸುಳ್ಳು!” ಪ್ರತಿಭಟಿಸಿದನು ಹಮೀರ.
“ಹಾಗಾದ್ರೆ….ನೀನಾಗಲೆ….ಮೈ….ಬಣ್ಣಗಿಣ್ಣ ಎಲ್ಲ ನೋಡಿಬಿಟ್ಟಿದ್ದೀಯಾ ಅನ್ನು?….” ನಿಲ್ಲಿಸಿ ನುಡಿದು ಕಣ್ಣುಮಿಟುಕಿಸಿ ಮೂದಲಿಸಿದನು ಕರೀಂಸಾಬು.
ಎಲ್ಲರೂ ಗಟ್ಟಿಯಾಗಿ ನಗತೊಡಗಲು, ಹಮೀರನೂ ಕಣ್ಣಲ್ಲಿ ನೀರು ಬರುವಂತೆ ನಗುತ್ತಾ ಸರಕ್ಕನೆ ಮೇಲೆದ್ದು, ಲಕ್ಕುಂದದ ಕಡೆ ಇಳಿಯುವ ಕಾಡುಹಾದಿಯಲ್ಲಿ ನಡೆಯತೊಡಗಿದನು. ಅವರೆಲ್ಲರೂ ಸೇರಿ ಕರೆದರೂ ಹಿಂತಿರುಗಿ ನೋಡದೆ ಹಳುವಿನಲ್ಲಿ ಗುಡ್ಡವಿಳಿದು ಮರೆಯಾದನು.
ಆಗಲೆ ಬೈಗಾಗತೊಡಗಿತ್ತು. ಆಕಾಶದ ಎತ್ತರದಲ್ಲಿ ಇನ್ನೂ ಚೆನ್ನಾಗಿಯೆ ಬೆಳಕು ಇದ್ದರೂ ಕಾಡಿನಲ್ಲಿ ಕಪ್ಪು ಕವಿಯತೊಡಗಿತ್ತು. ಮೊದಮೊದಲು ಅಲ್ಲೊಂದು ಇಲ್ಲೊಂದು ಕೂಗಲು ತೊಡಗಿದ್ದ ಜೀರುಂಡೆಗಳು ಬರಬರುತ್ತಾ ಸುತ್ತ ನಾಲ್ಕು ದಿಕ್ಕಿನಿಂದಲೂ ಜೀರ್ ಜೀರ್ ಎಂಬ ಕೊರೆಯುವ ಕರ್ಕಶ ಧ್ವನಿಯ ಗರಗಸಬಲೆಯನ್ನೇ ನೇಯ್ದು ಕಾಡಿನ ಮೇಲೆ ಬೀಸಿದ್ದುವು. ಅವುಗಳ ಆ ಕಿವಿ ಚಿಟ್ಟುಹಿಡಿಸುವ ಚೀರಾಟದಲ್ಲಿ ಹಕ್ಕಿಗಳ ಉಲಿಯಾಗಲಿ, ಕಡೆಗೆ ತಮ್ಮೊಳಗೆ ತಾವು ಆಡಿಕೊಳ್ಳುವ ಮಾತಾಗಲಿ, ಕೇಳಿಸುವುದೆ ಕಷ್ಟವಾಗಿತ್ತು. ಆ ಜೀರ್ದನಿಯಲ್ಲಿ ಏನೊ ಒಂದು ದುಃಶಕುನದ ಕರೆಕರೆ ಅಡಗಿದ್ದು, ಆಲಿಸುವ ಕಿವಿಗೆ ಒಂದೇನೊ ನಿಡುರೇಜಿಗೆ ಹುಟ್ಟಿ, ಹೃದಯಕ್ಕೆ ಒಂದು ಅಸ್ಪಷ್ಟ ಭೀತಿಭೂತದ ಛಾಯೆ ಬಿದ್ದಂತಾಗುತ್ತಿತ್ತು. ಎಂತಹ ಕ್ರೂರಕರ್ಮಿ ಧೂರ್ತರನ್ನೂ ಬೇಗಬೇಗನೆ ಕಾಡಿನಿಂದ ಊರ ಕಡೆಗೆ ಅಟ್ಟಿಬಿಡುವ ಒಂದು ಶ್ಮಶಾನ ಸದೃಶವಾದ ಭಯಾನಕತೆ ಆ ಜೀರುಂಡೆಗಳ ಕೊರಲಿನಿಂದ ಹೊಮ್ಮಿ, ಮುಸುಗುತ್ತಿದ್ದ ಕತ್ತಲೆಯೊಡನೆ ಮಿಳಿತವಾಗುತ್ತಿತ್ತು.
ಆ ಅರಣ್ಯಕವಾದ ಅಸಹನೀಯ ಅನುಭವದಿಂದ ಪಾರಾಗಲೋಸುಗದೆ ಹೊತ್ತಿಸಿದ್ದ ಐದು ಬೀಡಿಗಳು ಅವರ ತುಟಿಯ ನಡುವೆ ಕಿಡಿ ಹೊಮ್ಮಿಸಿ, ಹೊಗೆ ಕಾರಿ, ಹೊಗೆಸೊಪ್ಪಿನ ಕಟುವಾಸನೆಯನ್ನು ಹಬ್ಬಿಸಿದ್ದುವು. ಆ ವಾಸನೆ, ಅವರಿಗೆ ಸುಪರಿಚಿತವಾಗಿದ್ದ ನಾಗರಿಕ ಸಂಸ್ಕಾರಗಳನ್ನೆಬ್ಬಿಸಿ, ಮನಸ್ಸನ್ನು ಆರಣ್ಯಕತೆಯ ಭಾರದಿಂದೆತ್ತಿ ಹಗುರಗೊಳಿಸಿತ್ತು.
ಐವರೂ ಸಿಂಬಾವಿಯ ಕಡೆಗೆ ಹೋಗುವ ಕಾಡುದಾರಿಯಲ್ಲಿ ಎರಡು ಕುದುರೆಗಳನ್ನೂ ನಡೆಸಿಕೊಂಡು ಹೊರಟರು: ಇಜಾರದ ಸಾಬಿಯ ಬೆನ್ನಿನಮೇಲೆ ಬಾಳೆಯ ಹೆಗ್ಗೊನೆ; ಲುಂಗೀಸಾಬಿಯ ಹೆಗಲಮೇಲೆ ಕಬ್ಬಿನ ಹೊರೆ – ಚಾಡಿ ಹೇಳುತ್ತಿದ್ದುವು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ