ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-14

        ‘ಬುಚ್ಚಿ’ ಕೊಟ್ಟ ಕಣ್ಣಾ ಪಂಡಿತರ ಕಷಾಯ ಕುಡಿಯುತ್ತಾ ಸುಬ್ಬಣ್ಣ ಹೆಗ್ಗಡೆಯವರು ಮಗಳ ಮುಖವನ್ನು ನೋಡಿ ಕಣ್ಣು ಸನ್ನೆ ಕೈಸನ್ನೆಗಳಿಂದಲೆ ಕೇಳಿದರು: ‘ಅತ್ತಿಗೆ ಹೇಗಿದ್ದಾಳೆ?’

ಮಂಜಮ್ಮನ ಮುಖ ಇದ್ದಕ್ಕಿದ್ದಹಾಗೆ ಖಿನ್ನವಾಯಿತು. ಕನಿಕರದ ಭಾವವನ್ನು ಕಣ್ಣ ಭಂಗಿಯಿಂದಲೆ ಸೂಚಿಸುತ್ತಾ ತುಸು ಪಿಸುದನಿಯಿಂದ ಹೇಳಿದಳು: “ಮೊನ್ನೆ ಮುಟ್ಟಾದ ಮೇಲೆ ಆ ಹಿತ್ತಲು ಕಡೆ ಮೂಲೆಯಲ್ಲಿ ಚಾಪೆ ಕಂಬಳಿ ಹಾಕಿಕೊಂಡು ಅಳ್ತಾ ಕೂತುಬಟ್ಟಾರೆ. ಊಟಾನೂ ಮಾಡ್ತಾ ಇಲ್ಲ. ಒಂದು ಹೊತ್ತು ಮಾಡಿದ್ರೆ, ಒಂದು ಹೊತ್ತು ಮಾಡಾದಿಲ್ಲ.
“ಮೀಯಾಕೆ ಮೊದಲೆ ಒಳಗ್ಗಿಳಗೆ ಬಂದು ಬಿಟ್ಟಾಳು! ದೇವರ ಕಾಣಿಕೆ ಡಬ್ಬಿ ಇಟ್ಟೀವಿ ಮ್ಯಾಲೆ. ತಿರುಪತಿ ತಿಮ್ಮಪ್ಪ ಈಗ ಕೊಟ್ಟ ಶಿಕ್ಷೇನೆ ಸಾಕಾಗದೆ. ಮತ್ತೆ ಇನ್ನೂ ಏನಾದ್ರೂ ಆದಾತು!” ಎಂದು ಮಗಳಿಗೆ ತಮ್ಮ ಹಿರಿಯ ಮಗನ ಹೆಂಡತಿ ‘ಹುಚ್ಚು ಹೆಗ್ಗಡ್ತಿಯ’ಯ ವಿಚಾರವಾಗಿ ಎಚ್ಚರಿಕೆಯಿಂದಿರುವಂತೆ ತಿಳಿಸಿ, ಮೇಲೆದ್ದು ಸುಬ್ಬಣ್ಣ ಹೆಗ್ಗಡೆಯ ಜಗಲಿಗೆ ಹೋದರು.
ಕತ್ತಲೆ ಯಾವಾಗಲೂ ಬೀಡು ಬಿಟ್ಟಿರುತ್ತಿದ್ದ ಮಾಣಿಗೆಯ ಗಿಡ್ಡ ಬಾಗಿಲನ್ನು ತಲೆ ತಾಗದಂತೆ ಬಗ್ಗಿ ಎಚ್ಚರಿಕೆಯಿಂದ ಜಗಲಿಗೆ ದಾಟಿ ನೋಡುತ್ತಾರೆ: ಹೊರ ಅಂಗಳದಲ್ಲಿ ಹೊಲೆಯರ ಹಿಂಡೆ ಜಮಾಯಿಸಿದಂತಿದೆ! ಸುಬ್ಬಣ್ಣ ಹೆಗ್ಗಡೆಯವರು ಸಿಟ್ಟು ಜುಟ್ಟಿಗೂ ಏರಿತು. ‘ಹಂದಿ ಹೊರುವುದಕ್ಕೆ ಇಬ್ಬರು ಹೊಲೆಯರನ್ನು ಕಳಿಸು ಎಂದರೆ, ಹೊಲಗೇರಿಯನ್ನೆ ಮನೆಗೆ ತಂದಿದ್ದಾನಲ್ಲ, ಮುಟ್ಟಾಳ ಮಗ, ಮನೆಹಳ! ಎಂದುಕೊಂಡು ಸುತ್ತಲೂ ಅವನಿಗಾಗಿ ಹುಡುಕಿನೋಡಿದರು. ಅವನು ಎಲ್ಲಿಯೂ ಗೋಚರವಾಗಲಿಲ್ಲ. ಜಗಲಿಯಿಂದ ಕಿರುಜಗಲಿಗೆ ಇಳಿದು, ಸಿಟ್ಟೇರಿದ್ದರೂ ವಯೋಧೀನರಾಗಿ ನಿಧಾನವಾಗಿಯೆ ಅಂಗಳಕ್ಕಿಳಿದರು. ಹೊಲೆಯರೆಲ್ಲ ಒಡೆಯರ ಮೆಚ್ಚುಗೆಗಾಗಿಯೂ, ಸಂತೋಷ ಪ್ರದರ್ಶನಕ್ಕಾಗಿಯೂ, ಇಷ್ಟು ಬೆಳಿಗ್ಗೆ ಮುಂಚೆಯೆ ಅವರು ಹೇಳಿ ಕಳುಹಿಸುವುದೆ ತಡ ಇಷ್ಟೊಂದು ಆಳುಗಳು ಕೆಲಸಕ್ಕೆ ಆತುರರಾಗಿ ಬಂದುಬಿಟ್ಟಿದ್ದಾರಲ್ಲಾ ಎಂದು ಹಿಗ್ಗಿ ತಮ್ಮೊಡನೆ ವಿನೋದವಾಗಿ ಸಂವಾದ ತೊಡಗುತ್ತಾರೆಂಬ ನಿರೀಕ್ಷೆಯಿಂದಲೂ ನಗುಮೊಗರಾಗಿ ನೋಡುತ್ತಾ ಹಲ್ಲುಹಲ್ಲು ಬಿಡುತ್ತಿದ್ದರು. ಅವರ ಮಾತೆಲ್ಲ ತಟಕ್ಕನೆ ನಿಂತು, ಅರೆಕ್ಷಣ ಅರ್ಥಗರ್ಭಿತ ನಿಃಶಬ್ದತೆ ವ್ಯಾಪಿಸಿತ್ತು.
“ಯಾರ ಹೆಣಾ ಹೊರಾಕಂತಾ ಎಲ್ಲಾ ಬಂದಿದ್ದೀರೋ ಇಲ್ಲಿಗೆ? ಗದ್ದೆ ಕೆಲಸಕ್ಕೆ ಹೋಗಾದು ಬಿಟ್ಟು ಯಾರೋ ಹಲ್ಲು ಹಲ್ಲು ಬಿಡ್ತಾ ನಿಂತೀರಿ? ಈಗ ಬೆಣಕು ಬಿಡ್ತೇನ್ರೋ ನಿಮಗೆ?” ಒಮ್ಮೆಗೇ ಮೈಮೇಲೆ ಬಂದವರಂತೆ ಕಾಕು ಹಾಕಿ ಕೂಗಿಬಿಟ್ಟರು ಸುಬ್ಬಣ್ಣ ಹೆಗ್ಗಡೆ.
ಹೊಲೆಯರಾರೂ ದಿಗಿಲು ಬೀಳಲೂ ಇಲ್ಲ; ಒಡೆಯರ ಬೈಗುಳವನ್ನು ಮನಸ್ಸಿಗೆ ಹಚ್ಚಿಕೊಳ್ಳಲೂ ಇಲ್ಲ. ಒಬ್ಬರ ಮುಖವನ್ನು ಒಬ್ಬರು ಇಂಗಿತವಾಗಿ ನೋಡಿಕೊಂಡರು. ಏನೋ ಅಚಾತುರ್ಯ ಸಂಭವಿಸಿರಬೇಕು ಎನ್ನಿಸಿತು ಕೆಲವರಿಗೆ.
ತಿಮ್ಮ ಧೈರ್ಯ ಮಾಡಿ “ನೀವೇ ಹೇಳಿಕಳಿಸಿದಿರಂತೆ….”
“ಯಾರೋ ಹೇಳಿ ಕಳಿಸಿದ್ದು?”
“ಹೂವಮ್ಮ ಬಂದು ಹೇಳಿದ್ರು ಸಣ್ಣಯ್ಯಗೆ….”
“ಹಂದೀ ಹಸಿಗೇಗಂತೆ…. ಎಂದು ಕೆಮ್ಮೀಸೆಯ ಮಂಜ ನಡುವೆ ಬಾಯಿ ಹಾಕಿದ್ದೆ ಹೆಗ್ಗಡೆ ಹಣೆ ಹಣೆ ಬಡಕೊಂಡು “ಮನೇಹಾಳ ಮಕ್ಕಳು! ಮನೆಹಾಳ ಮಕ್ಕಳು! ಹೂವಳ್ಳಿ ಎಂಕಟಣ್ಣಗೆ ಒಂದು ಸಲಗಾನ ಹಿಡಿದು ಹೊರಿಸಿ ಕಳಿಸಾಕೆ ಇಬ್ಬರನ್ನ ಕಳಿಸ್ಲಿ ಅಂತಾ ಹೇಳಿಕಳ್ಸಿದ್ರೆ, ಒಂದು ಹಿಂಡಿಗೆ ಹಿಂಡೇ ಬಂದು ನಿಂತಿದ್ದೀರಲ್ಲೋ!…. ಇಂದೇನು ಇಷ್ಟು ಜನ ಒಟ್ಟಿಗೇ ಕೆಲಸಕ್ಕೆ ಬಂದಾರಲ್ಲಾ ಅಂತಿದ್ದೆ? ಈಗ ಗೊತ್ತಾತು! ಬಾಡು ಸಿಗ್ತದೆ ಪಾಲಿಗೆ ಅಂತಾ ಬಿಡಾರನೆಲ್ಲಾ ಖಾಲಿ ಮಾಡಿ ಬಂದೀರಿ ಅಲ್ಲೇನ್ರೋ, ಕಣ್ಣ ಸೂಳೆ ಮಕ್ಕಳ್ರಾ?” ಎಂದು ಬಯ್ದು ಮತ್ತೆ ಗಂಭೀರವಾಗಿ ಆಜ್ಞೆ ಮಾಡಿದರು: “ಯಾರಾದ್ರೂ ಇಬ್ಬರು ಇರಿ; ಬಾಕಿಯೋರೆಲ್ಲಾ ಗದ್ದೆಗೆ ಹೊರಡಿ.
ಆಳುಗಳೆಲ್ಲ ಸ್ವಲ್ಪ ಪೆಚ್ಚಾದರು. ಹಂದಿ ಹಸಿಗೆ ಮಾಡಿ, ಪಾಲು ತೆಗೆದುಕೊಂಡು ಹೋಗುವ ಹೇರಾಸೆ ಕಟ್ಟಿಕೊಂಡು ಬಂದಿದ್ದರು. ಈಗ ಎಲ್ಲ ವ್ಯರ್ಥವಾದದ್ದು ಮಾತ್ರವೆ ಅಲ್ಲದೆ, ಕೆಲಸಕ್ಕೂ ಹೋಗಬೇಕಾಗಿಯೆ ಬಂದಿತಲ್ಲಾ ಎಂದು ತಪ್ಪಿಸಿಕೊಳ್ಳುವ ಉಪಾಯ ಆಲೋಚಿಸತೊಡಗಿದರು.
ಬೈರ “ಯಾರಾದರೂ ಇರಿ. ನನಗೆ ದನಾಬಿಡಾಕೆ ಹೊತ್ತಾಯ್ತು” ಎಂದವನು ಮನೆಗೆ ಬಳಿಯ ಕರೆಯುವ ಕೊಟ್ಟಿಗೆಯ ಕಡೆಗೆ ಹೊರಟನು.
ಬೆಟ್ಟಳ್ಳಿಗೆ ಹೋಗಬೇಕೆಂದು ಮೊದಲೇ ಕೆಲಸಕ್ಕೆ ಉಳಿಕೊಡಲು ನಿಶ್ಚಯಿಸಿದ್ದ ಮಂಜ “ನಾನೊಂದು ಚೂರು ಬಿಡಾರಕ್ಕೆ ಹೋಗಿ, ಹಾಂಗೇನೆ ಗದ್ದೆಗೆ ಬಂದು ಬಡ್ತೀನಿ” ಎಂದು ಕೇರಿಯ ಕಡೆಗೆ ಹೊರಟನು.
ಹಂದಿ ಒಡ್ಡಿನ ಹತ್ತಿರಕ್ಕೆ ಹೋಗಿ ಸುಬ್ಬಣ್ಣ ಹೆಗ್ಗಡೆಯವರು ಹಿಂದಿರುಗಿ ನೋಡುತ್ತಾರೆ, ಹೊಲೆಯರೆಲ್ಲ ಅಂಗಳದಿಂದ ಹೊರಡುತ್ತಿದ್ದಾರೆ! ಅಬ್ಬರಿಸಿ ಗರ್ಜಿಸಿದರು: “ಲೌಡಿಮಕ್ಕಳ್ರಾ, ಎಲ್ಲಿಗೆ ಹೊರಟೀರೋ ಎಲ್ಲಾ? ಬನ್ರೋ ಇಲ್ಲಿ ಎಲ್ಲರೂ! ಹಂದಿ ಹಿಡಿದು, ಅಡ್ಡೆ ಕಟ್ಟಿಕೊಟ್ಟು ಹೊರಡಿ ಕೆಲಸಕ್ಕೆ” ಎಂದವರು, ಮತ್ತೆ ದೂರದಲ್ಲಿ ಹೋಗುತ್ತಿದ್ದ ಬೈರನನ್ನು ಕಂಡು “ಕರೆಯೋ ಅವನ್ನ, ಆ ಬೈರನ್ನ. ಹೊರಟನಲ್ಲ, ದುಣ್ಣ ಮುಂಡೆಗಂಡ, ಎಲ್ಲಿಗೋ ಹಡಬೆ ತಿರಗಾಕೆ!” ಎಂದು ಗದರಿದರು.
ಮನಸ್ಸಿಲ್ಲದ ಮನಸ್ಸಿನಿಂದ ಎಲ್ಲರೂ ಹಿಂದಿರುಗಿ ಬಂದು ಒಡ್ಡಿಯ ಹತ್ತಿರ ನೆರೆದರು. ಮನೆ ಹಿಸ್ಸೆಯಾದಾಗ ಹೊಲಗೇರಿ ಆಳುಗಳನ್ನೂ ಬಿಡಾರವಾರಾಗಿ ಪಾಲುಮಾಡಿಕೊಂಡಿದ್ದರಿಂದ ಶಂಕರ ಹೆಗ್ಗಡೆಯವರ ಪಾಲಿಗೆ ಹೋಗಿದ್ದ ಬುಚ್ಚ ಮತ್ತು ಪುಟ್ಟ ಇಬ್ಬರೂ ತಮ್ಮ ಪಾಲಿಗೆ ಬಂದಿದ್ದ ಹೊಲೆಯರೊಡನೆ ನಿಂತಿದ್ದುದನ್ನು ನೋಡಿ ಸುಬ್ಬಣ್ಣ ಹೆಗ್ಗಡೆಯವರು: “ನೀವು ಯಾಕ್ರೋ ಬಂದಿದ್ದು? ಮೊದಲೇ ನಿಮ್ಮ ಒಡೇರು ‘ನಮ್ಮ ಆಳ್ಗಳನ್ನೆಲ್ಲ ನಮ್ಮ ಕೆಲಸಕ್ಕೆ ಬರದ ಹಾಂಗೆ ಮಾಡಿ, ದುರ್ಬೋಧನೆ ಆಡ್ತಾನೆ’ ಅಂತ ನನ್ನ ಮೇಲೆ ಅವರಿವರ ಹತ್ರ ದೂರು ಪುಕಾರು ಹೇಳ್ತಾನಂತೆ!” ಎಂದು ಒಡ್ಡಿ ಬಾಗಿಲು ತೆಗೆಯಲು ಸುರು ಮಾಡಿದ್ದ ತಿಮ್ಮಗೆ “ನೋಡೂ ಗುರುತಿಟ್ಟಗಾ ಆ ಹೂಬಾಲದ ಸಲಗಾನ…. ಏ ಮಂಜಾ, ನೀನೂ ಒಂದು ಕೈ ಕೂಡಿಸೋ. ಬಲವಾಗಿದೆಯೋ ಅದು!” ಎಂದರು.
“ಯಾವುದು? ಕಿವಿಚಟ್ಟೆ ಹತ್ರ ಬೆಳ್ಳಗಿದೆಯಲ್ಲಾ ಅದಾ?” ಎಂದು ಕೇಳಿದ ಮಂಜಗೆ
“ನಿನ್ನ ಅಜ್ಜಿ ತಲೆ! ಬಾಲದ ಹತ್ರ ಬೆಳ್ಳಗಿದೆಯಲ್ಲೋ ಅದು!” ಎಂದು ಹೆಗ್ಗಡೆಯವರು, ಹಂದಿಯ ಹೇಲುಗೆಸರನ್ನೂ ಲೆಕ್ಕಿಸದೆ ಮೆಟ್ಟುತ್ತಾ, ಇತರ ಅಸ್ಪೃಶ್ಯರಿಂದ ತುಸು ದೂರಸರಿದು ನಿಂತರು.
ಆಗಲೇ ಹೊತ್ತೇರಿದ್ದರಿಂದ ಎಂದಿನಂತೆ ಹೊರಗೆ ಹೋಗಲು ತವಕಿಸುತ್ತಾ ಹಂದಿಗಳೆಲ್ಲಾ ನಾ ಮುಂದೆ ತಾ ಮುಂದೆ ಎಂದು ಬಾಗಿಲ ಬಳಿಗೆ ನುಗ್ಗಲು ತೊಡಗಿದ್ದುವು. ಒಡ್ಡಿಯ ಒಳಗೆ ಜರುಗುತ್ತಿದ್ದ ಕಾಮಕ್ರೋಧಾದಿ ಅರಿಷಡ್ವರ್ಗದ ಚತುಷ್ಪಾದಿ ಪ್ರಣಿಚೇಷ್ಟೆಗಳನ್ನು ಕಂಡು ಹೊರಗೆ ನಿಂತಿದ್ದ ದ್ವಿಪಾದಿ ಪ್ರಾಣಿಗಳು ಗಟ್ಟಯಾಗಿ ನಗುತ್ತಾ ‘‘ಚಾಷ್ಟೆಮಾತು’ ಪ್ರಾರಂಭಿಸಿದರು:
“ಹಿಹ್ಹಿಹ್ಹಿಹ್ಹಿ! ಹಹ್ಹಹ್ಹಹ್ಹ! ಮರಿ ಹಾಕಿದ ದಡ್ಡೆ ಮ್ಯಾಲೇ ಸವಾರಿಗೆ ಸುರುಮಾಡ್ತಲ್ಲೋ….”
“ಹಿಹ್ಹಿಹ್ಹಿಹ್ಹೀ ಬಿತ್ತು ಕೆಳಗೆ!…. ಹಾಂಗೆ ಆಗ್ಬೇಕು ಸೊಕ್ಕಿದ ಮುಂಡೇದಕೆ….”
“ಅಯ್ಯಯ್ಯಯ್ಯೋ ಆ ಮರೀನ ಕೊಂದೇ ಹಾಕ್ತಲ್ಲೋ ತುಳಿದು….”
“ಏ ಬೈರಣ್ಣಾ, ಕಂಡೀಲಿ ಕೋಲು ಹೆಟ್ಟಿ, ಮುಸುಡಿಗೆ ಒಂದು ತಿವಿಯೋ….”
“ಥೂ ಥೂ ಥೂ! ಹೊಟ್ಟೆ ಮೆಟ್ಟಿದ ಹೊಡತಕ್ಕೆ ಒಂದು ಮಣ್ಣು ತಟ್ಟೇನೆ ಸುರಿದು ಬಿಡ್ತಲ್ಲೋ….!”
ತಿಮ್ಮ ತುಂಬ ಎಚ್ಚರಿಕೆಯಿಂದ ಮೆಲ್ಲಗೆ ಬಾಗಿಲು ತೆರೆಯ ತೊಡಗಿದ. ಒಂದರ ಮೇಲೆ ಒಂದು ನುಗ್ಗಿ ಕೆಲವು ಮರಿಗಳೂ, ನಡುಪ್ರಾಯದವೂ ಹೊರಗೆ ನೆಗೆದು ಗುರು ಗುರು ಗುಟ್ಟುತ್ತಾ, ದಿನವೂ ಬೆಳಗ್ಗೆ ಮನುಷ್ಯರು ಹೊರಕಡಗೆ ಹೋಗುವ ತೋಟದ ಮೂಲೆಯ ಕಡೆಗೆ ಧಾವಿಸಿದುವು, ಹಸಿದ ತವಕವೋ ತವಕದಿಂದ!
“ತಿಮ್ಮಣ್ಣಾ, ತಿಮ್ಮಣ್ಣಾ, ಬಂತಲ್ಲೋ ಹೂಬಾಲದ ಸಲಗ!” ಬಚ್ಚ ಕೂಗಿದ ರಭಸಕ್ಕೆ ತಿಮ್ಮ ದಢಾರನೆ ಬಾಗಿಲು ಮುಚ್ಚಿಬಿಟ್ಟ! ನಿಜಕ್ಕೂ ಆ ಸಲಗ ದಡ್ಡೆಗಳನ್ನೆಲ್ಲ ತಿವಿದು ದಾರಿ ಬಿಡಿಸಿಕೊಂಡು ಬಾಗಿಲಿಗೆ ನುಗ್ಗಿತ್ತು, ಸಕಾಲದಲ್ಲಿ ಬಾಗಿಲು ಹಾಕದಿದ್ದರೆ ಹೊರಕ್ಕೆ ಹಾರಿಯೆ ಬಿಡುತ್ತಿತ್ತು. ಆದರೆ ಬಾಗಿಲು ಹಾಕಿದ್ದನ್ನು ನೋಡಿ ಆ ಸಲಗ ಪುನಃ ಒಡ್ಡಿಯ ಹಿಂಭಾಗಕ್ಕೆ ದಢಾರನೆ ನುಗ್ಗಿ ಕಂಡಿಗಳಿಗೆಲ್ಲಾ ಮೂತಿ ಹಾಕಿ ಪರಿದಾಡತೊಡಗಿತು.
ಬೈರ, ಒಂದು ಬಿದಿರುದೊಣ್ಣೆಯಿಂದ ಒಡ್ಡಿಯೊಳಗಡೆ ದಡ ಬಡಿಸುತ್ತಿದ್ದ ಸಲಗವನ್ನು ಅದರ ಗಮನ ಬಾಗಿಲ ಕಡೆ ಹೋಗದಂತೆ ಮಾಡುವುದಕ್ಕಾಗಿ ಸತಾಯಿಸತೊಡಗಿ, ತಿಮ್ಮಗೆ ಕೂಗಿ ಹೇಳಿದನು: “ತಮ್ಮಣ್ಣಾ, ತಿಮ್ಮಣ್ಣಾ, ಈಗ ಬಾಗಿಲು ತೆಗಿ! ಬ್ಯಾಗ, ಬ್ಯಾಗ!”
ತಿಮ್ಮ ಬೇಗಬೇಗನೆ ಬಾಗಿಲು ತೆರೆದನು. ದಡ್ಡೆಗಳೂ ಕೆಲವು ಮರಿಗಳೂ ಹೊರಗೆ ನೆಗೆದೋಡಿದುವು. ಇನ್ನೂ ಕೆಲವು ಬಾಗಿಲಿಗೆ ಧಾವಿಸಿದುವು. ಅಷ್ಟರಲ್ಲಿ ಬಾಗಿಲು ತೆರೆದದ್ದನ್ನು ಅರಿತ ಸಲಗ ಕಣ್ಣು ಮುಚ್ಚಿ ಬಿಡುವುದರಲ್ಲಿಯೆ ಉಳಿದೆಲ್ಲ ಹಂದಿಗಳನ್ನೂ ಅತ್ತ ಇತ್ತ ತಳ್ಳಿ ಉರುಳಿಸಿ ಬಾಗಿಲಿಗೆ ನುಗ್ಗಿಬಿಟ್ಟಿತು! ‘ಹೋ ಹೋ ಹೋ!’ ‘ಬಂತೂ ಬಂತೂ ಬಂತೂ!’ ‘ಅಯ್ಯಯ್ಯೊ ಅಯ್ಯಯ್ಯೊ! ತಪ್ಪಿಸಿಕೊಳ್ತಲ್ಲೋ!’ ‘ಹಿಡಿರೋ! ಹಿಡೀರೋ! ಹಿಡೀರೋ! ಥೂ ಹೊಲೆಸೂಳೆಮಕ್ಕಳ್ರಾ, ನೀವೇನು ಅನ್ನಾತಿಂತೀರೋ….?’ ನಾನಾ ಕೂಗುಗಳೂ ಬೈಗುಳಗಳೂ ಅಂಗಳವನ್ನೆಲ್ಲ ಸಶಬ್ದವನ್ನಾಗಿ ಮಾಡಿದುವು. ಸುಬ್ಬಣ್ಣ ಹೆಗ್ಗಡೆಯವರು “ತ್ವಾಟದ ಕಡೆ ಹೋಗದ ಹಾಂಗೆ ತಡೀರೋ!” ಎಂದು ಕೂಗುತ್ತಾ, ತಾವೇ ಅತ್ತ ಕಡೆ ನುಗ್ಗಿ ಓಡಿದರು. ಹಿಂದಿನ  ದಿನದ ಬಿರುಮಳೆಯಿಂದಾದ ಅಂಗಳದ ಕೆಲಸರು ಹೆಜ್ಜೆಹೆಜ್ಜಾಯಾಗ ಬೂದಿಗುಡ್ಡೆಯಿಂದಲೂ ಓಡಿಬಂದ ಕಂತ್ರಿನಾಯಿಗಳೂ ಸಲಗನ ಬೇಟೆಯಲ್ಲಿ ಭಾಗವಹಿಸಿದುವು. ಯಾವ ಕಡೆ ಹೋದರೂ ದಾರಿ ಕಟ್ಟಿಹೋದ ಆ ಹಂದಿಗೆ ತಲೆ ಕೆಟ್ಟಂತಾಗಿ ಸಿಕ್ಕಬಟ್ಟೆ ನುಗ್ಗಿ ಓಡಲಾರಂಭಿಸಿತು.
ಸೌದೆಕೊಟ್ಟಿಗೆಯ ಕಡೆ ನುಗ್ಗಿ ಅಲ್ಲಿ ತನಗೆ ಎದುರಾಗಿ ಕಡಿದಾಗಿ ಎದ್ದಿದ್ದ ದರೆಯನ್ನು ಕಂಡು, ಹತ್ತಲು ಎರಡು ಮೂರು ಸಾರಿ ನೆಗೆದು ಜಾರಿಬಿದ್ದು ಸೋತು, ಹಿಂದಕ್ಕೆ ಹಾರಲು ಪ್ರಯತ್ನಿಸುತ್ತಿದ್ದಾಗ ಮಂಜ ಅಲ್ಲಿಯೆ ಬಿದ್ದಿದ್ದ ಒಂದು ದೊಡ್ಡ ಬಡಿಕೆಯನ್ನೆತ್ತಿ ಹಂದಿಯ ಸೊಂಟಕ್ಕೆ ಇಕ್ಕಡಿಸಿಬಿಟ್ಟನು. ಅದು ಆ ಪೆಟ್ಟಿಗೆ ಕಿರ್ರೋ ಎಂದು ಕೂಗಿಕೊಳ್ಳಲು, ಹೆಗ್ಗಡೆಯವರು “ಅಯ್ಯೋ ಮುಂದೇಮಗನೇ, ಹೊಡೆದು ಕೊಂದೇನೊ? ಸೊಂಟಮುರಿದು ತೆವಳ್ತಿದೆಯಲ್ಲೋ! ಹಸಿಗೆ ಮಾಡಿಕೊಂಡು ತಿನ್ನಾವ ಅಂತಾ ಮಾಡೀರೇನೋ?” ಎಂದು ಮೊದಲಾಗಿ ಬೊಬ್ಬೆ ಹಾಕಿದರು.
ಹಂದಿಯನ್ನು ಮಾರುವುದರಿಂದ ಬರುವ ಹಣಕ್ಕೆ ಎಲ್ಲಿ ಸಂಚಕಾರ ಆಗುತ್ತದೆಯೋ ಎಂಬುದು  ಅವರ ಹೆದರಿಕೆಯಾಗಿತ್ತು. ಆದರೆ ಸಲಗ ಸ್ವಲ್ಪವೂ ಜಗ್ಗಲಿಲ್ಲ. ಪಣತದ ಕೊಟ್ಟಿಗೆಯ ಕಡೆ ನುಗ್ಗಿತು. ಅಲ್ಲಿ ತೊಳಸಿ ಘನಮಾಡಲೆಂದು ರಾಸಿಹಾಕಿದ್ದ ಅಕ್ಕಿಯಿದ್ದುದನ್ನು ಕಂಡು ಹೆಗ್ಗಡೆಯವರು ಹುಚ್ಚೆದ್ದು ಕುಣಿದಾಡಿದರು: “ಹೋಯ್ತಲ್ಲೋ! ಹೋಯ್ತಲ್ಲೋ! ನಿಮ್ಮ ಮನೆ ಹಾಳಾಗ, ಅಕ್ಕಿನೆಲ್ಲಾ ತೆಗಿದ್ರಲ್ಲೋ…” ಎಂದು ಕೋಪ ಮಿಶ್ರವಾದ ರೋದನ ಧ್ವನಿಮಾಡತೊಡಗಿದರು. ಹೊಲೆಯರೆಲ್ಲಾ ಸೇರಿ ಹಂದಿ ಅತ್ತಕಡೆ ಹೋಗದಂತೆ ತಡೆಯಲು ಹೆಣಗಿದರು. ಆದರೆ ಸಲಗವು ಅಕ್ಕಿಯ ರಾಶಿಯ ಮೇಲೆಯೆ ನುಗ್ಗಿ, ತುಳಿದು, ಚೆನ್ನಾಪಿಲ್ಲಿ ಮಾಡಿ, ಬೊಬ್ಬೆಯ ಹೊನಲಿನಲ್ಲಿ ತೇಲಿ ನುಗ್ಗುವ ಕರಿಬಂಡೆಯಂತೆ, ಶಂಕರಪ್ಪ ಹೆಗ್ಗಡೆಯವರ ಹೆಂಚಿನ ಮನೆಯ ಅಂಗಳದತ್ತ ಧಾವಿಸಿತು.
ಜಗಲಿಯ ಮೇಲೆ ಮಾತಾಡುತ್ತಾ ಕುಳತಿದ್ದ ಶಂಕರಪ್ಪ ಹೆಗ್ಗಡೆ ಮತ್ತು ವೆಂಕಟಣ್ಣ ಇಬ್ಬರೂ ಅಂಗಳದ ಕಡೆ ನುಗ್ಗಿ ಬರುತ್ತಿದ್ದ ಹಂದಿ ನಾಯಿ ಮನುಷ್ಯರ ಬೊಬ್ಬೆಗುಂಪನ್ನು ನೋಡ, ತುಳಸೀಕಟ್ಟೆಯಿರುವ ಸ್ಥಳವನ್ನು ಅಪವಿತ್ರಗೊಳಿಸದಂತೆ ಹಂದಿಯನ್ನು ಅಡ್ಡಗಟ್ಟಿ ಹಿಂದಕ್ಕೇ ಓಡಿಸಬೇಕೆಂದು ಕೆಳಕ್ಕಿಳಿಯುವಷ್ಟರಲ್ಲಿಯೆ ಗುಂಪು ಅಂಗಳಕ್ಕೆ ನುಗ್ಗಿ ಬಿಟ್ಟಿತ್ತು. ಶಂಕರಪ್ಪ ಹೆಗ್ಗಡೆ  ತುಳಸಿಕಟ್ಟೆಯ ಬಲಗಡೆಗೆ ಧಾವಿಸಿ, ಅಬ್ಬರಿಸಿ ಕೂಗಿ ಹಂದಿಯನ್ನು ಎಬ್ಬಿದೊಡನೆ ಅದು ಬಲಕ್ಕೆ ತಿರುಗಿ ನುಗ್ಗಿತು. ಕಾಲಿನ ಹುಣ್ಣು ರಕ್ತ ಸೋರುತ್ತಾ ನೆಲದ ಮೇಲೆ ನೋಯುತ್ತ ಕುಳಿತಿದ್ದ ವೆಂಕಟಣ್ಣ ಅಭ್ಯಾಸಬಲದಿಂದೆಂಬಂತೆ ತನ್ನ ದೊಣ್ಣೆಯನ್ನೆತ್ತಿ, ಬೀಸಲು ಹಂದಿ ತುಳಸಿಕಟ್ಟೆಯ ಮೇಲೇಯೆ ಹತ್ತಿ ಹಾರಿತು. ಅದರ ಹಿಂದೆ ನಾಯಿಗಳೂ ನುಗ್ಗಿದುವು. ದೇವರ ಮುಂದೆ ಹೋತ್ತಿಸಿಟ್ಟಿದ್ದ ನೀಲಾಂಜನಗಳೂ ದೇವರಿಗೆ ಮುಡಿಸಿದ್ದ ಹೂವುಗಳೂ ಉರುಳಿ ಚೆಲ್ಲಾಪಿಲ್ಲಿಯಾಯಿತು. ದೀಪಗಳೂ ಆರಿಹೋದುವು. ಹಂದಿಯ ಹಿಂದೆ ಓಡಿ ಬರುತ್ತಿದ್ದ ಹೊಲೆಯರೆಲ್ಲ ಹಂದಿ ದೇವರ ಕಡೆಗೆ ನುಗ್ಗಿದೊಡನೆ, ಹದರಿ ಗಾಬರಿಯಾಗಿ ಮರವಟ್ಟಂತೆ ದೂರದಲ್ಲಿಯೆ ನಿಂತುಬಿಟ್ಟರು. ತಾವು ಹೋಗಬಾರದ ಜಾಗಕ್ಕೆ ಹಂದಿ ಹೋಯಿತಲ್ಲಾ ಎಂದು ವಿಷಾದದಿಂದಲೂ, ಅದಕ್ಕಿಂತಲೂ ಹೆಚ್ಚಾಗಿ ತಮಗೆ ಕೇಡು ತಪ್ಪದು ಎಂಬ ಪಾಪಭೀತಿಯಿಂದಲೂ ಅವರು ಕಂಗಾಲಾಗಿದ್ದರು. ಅಷ್ಟರಲ್ಲಿ ಹಂದಿ ಅಂಗಳದ ಒಂದು ಭಾಗಕ್ಕೆ ಹಾಕಿದ್ದ ಹಳೆಯ ಬೇಲಿಯನ್ನು ಮುರಿದುಕೊಂಡು ಅವರ ಮನೆಯ ಹಿತ್ತಲು ಕಡೆಗೆ ನುಗ್ಗಿದುದನ್ನು ಕಂಡ ಹೊಲೆಯರು ಬಳಸುದಾರಿಯಿಂದ ಅತ್ತ ಓಡಿದರು. ಅಲ್ಲಿಯೂ ಹಂದಿ ಹರುವೆ ಮಾಡಿ, ಕೊತ್ತಂಬರಿ ಮಡಿ, ಕೆಸುವಿನ ಚೀಪಿನ ಮಡಿ, ತಿಂಗಳವರೆ ಮಡಿಗಳನ್ನೆಲ್ಲ ತುಳಿದು ರಂಪ ಮಾಡಿ ಮನೆಯ ಮೇಲಣ ಹಕ್ಕಲುಹಾಡಿನ ಕಡೆಗೆ ನುಗ್ಗಿಬಿಟ್ಟಿತ್ತು.
ಸ್ವಲ್ಪ ಹೊತ್ತಿಗೆ ಮುಂಚೆ ತಾನು ಪೂಜಿಸಿ ಪ್ರದಕ್ಷಿಣೆ ಮಾಡಿದ್ದ ತನ್ನ ಮನೆದೇವರಿಗೆ ತನ್ನ ಕಣ್ಣಮುಂದೆಯೆ ಒದಗಿದ ಮೈಲಿಗೆಯ ದುಃಸ್ಥಿತಿಯನ್ನು ಎವೆಯಿಕ್ಕದೆ ನಿಟ್ಟಿಸುತ್ತಾ, ದಿಗ್‌ಭ್ರಾಂತನಂತೆ ನಿಂತಿದ್ದ ಶಂಕರ ಹೆಗ್ಗಡೆಯವರ ಕಣ್ಣುಗಳಲ್ಲಿ ನೀರು ಬಳಬಳನೆ ಇಳಿಯತೊಡಗಿತು. ನಿಟ್ಟುಸಿರುಗಳಿಂದ ಅಳ್ಳೆ ಎದತೊಡಗಿತು. ಮರ್ಮಭೇದಿಯಾದ ಅಂತರ್ದುಃಖವೊಂದು ಅವರ ಹೃದಯವನ್ನೆಲ್ಲಾ ಹಿಂಡಿದಂತಾಯಿತು. ತನಗೇನೊ ಒಂದು ಭಯಂಕರ ಅಮಂಗಳ ಕಾದಿದೆ ಎನ್ನುವುದಕ್ಕೆ ಮುನ್ಸೂಚನೆಯಾದಂತಾಗಿ ಅರೂಪ ಭೀತಿಯೊಂದು ಅವರ ಅಂತಃಕರಣದ ಅಂತರಾಳವನ್ನೆಲ್ಲ ಕಲಕತೊಡಗಿತು. ಜಗಲಿಯ ಮೇಲೆ ಕೈ ಕೂಸನ್ನೆತ್ತಿಕೊಂಡು, ಮಕ್ಕಳೊಡನೆ ನಿಂತು, ನಿಸ್ಸಹಾಯಕಳಾಗಿ, ದಿಗಿಲುಗೊಂಡು ನಡೆದುದನ್ನೆಲ್ಲ ನೋಡಿ ಸಂಕಟಪಡುತ್ತಾ ನಿಂತಿದ್ದ ಬಡಕಲೊಡಲ ತನ್ನ ಹೆಂಡತಿಯನ್ನು ನೋಡಿ, ಹಿಂದೆಂದೂ ಇತರರೆದುರು ಹೆಂಡತಿಯ ಹೆಸರು ಹಿಡಿದು ಕೂಗದಿದ್ದ ಅವರು, ತಡೆಯಲಾರದ ದುಃಖ ಭಯ ಅಮಂಗಳಾಶಂಕೆಯಿಂದ ಕಂಗೆಟ್ಟಂತೆ “ಅಯ್ಯೋ, ಸೀತೂ, ನಮ್ಮ ಮನೆಯೆ ಹಾಳಾಯಿತಲ್ಲೇ! ದೇವರಿಗೆ ಹಚ್ಚಿಟ್ಟಿದ್ದ ದೀಪಾನೆ ಆರಿಸಿದನಲ್ಲೇ ನಮ್ಮ ದಾಯಾದಿ!” ಎಂದು ಗಟ್ಟಿಯಾಗಿ ರೋದನ ಧ್ವನಿಯಲ್ಲಿ ಕೂಗಿಕೊಂಡರು.
ಅತ್ತ ಕಾಡು ಹತ್ತಿದ ಊರು ಹಂದಿ ಒಂದು ಸೀಗೆಯ ಉಡಿಯಲ್ಲಿ ಆಶ್ರಯ ಪಡೆದುದನ್ನು ಪತ್ತೆ ಹಚ್ಚಿ ಹೊಲೆಯರೆಲ್ಲ ಸುತ್ತುವರಿದು ಅದನ್ನು ಹೊರಡಿಸುವ ಯತ್ನದಲ್ಲಿದ್ದರು. ಇದ್ದಕ್ಕಿದ್ದ ಹಾಗೆ ಯಾವುದೊ ಒಂದು ದೊಡ್ಡ ನಾಯಿಯ ದೊಡ್ಡ ಗಂಟಲು ಕೇಳಿಸಿತು. ಹಂದಿ ಉಡಿಯಿಂದ ಹೊಡಗೆ ದುಮಿಕಿ ತನ್ನೆಲ್ಲ ಶಕ್ತಿಯನ್ನೂ ವಿನಿಯೋಗಿಸಿ ಓಡತೊಡಗಿತು. ನೋಡುತ್ತಾರೆ: ಅದನ್ನು ಬೆನ್ನಟ್ಟುತ್ತಿದೆ, ಹುಲಿಯ!
“ಅಯ್ಯಯ್ಯೋ ಅದ್ಯಾವುದ್ರೋ ಆ ನಾಯಿ?” ಎಂದೊರಲುತ್ತಾ ತಿಮ್ಮ ದೌಡಾಯಿಸಿದ. ಕೆಮ್ಮೀಸೆ ಮಂಜ ಹಿಂಬಾಲಿಸುತ್ತಲೇ ಕೂಗಿದ: “ಸಿಂಬಾವಿ ಗುತ್ತೀದು ಕಣ್ರೋ! ಎಲ್ಲಿಂದ ಬಂತ್ರೋ ಇಲ್ಲಿಗೆ ಆ ಸನಿ? ಕೊಂದೇ ಹಾಕ್ತದೆ ಹಂದೀನ!”
ಅಷ್ಟರಲ್ಲಿಯೆ ಒಂದು ಪೊದೆಯ ಹಿಂದೆ ಹಂದಿ ಕಿರ್ರೋ ಎಂದು ಕೂಗುತ್ತಿದ್ದ ಬೊಬ್ಬೆ ಕೇಳಿಸಿತು: ಹುಲಿಯ ಹಂದಿಯ ಕಿವಿಚಟ್ಟೆಯನ್ನು ಕಟ್ಟಿ ಹಿಡದು ಅದರ ಓಟವನ್ನು ನಿಲ್ಲಿಸಿತ್ತು. ಹೊಲೆಯರು ಸಮೀಪಿಸುವುದರೊಳಗೆ ಹಂದಿ ಕೆಳಗೆ ಬಿದ್ದಿತ್ತು. ನಾಯಿ ಅದರ ಗಂಟಲಿಗೆ ಬಾಯಿ ಹಾಕುವ ಪ್ರಯತ್ನದಲ್ಲಿತ್ತು.
“ಬಿಡಿಸ್ರೋ! ಬಿಡಿಸ್ರೋ! ಹಂದೀನಾ ಕೊಂದುಹಾಕ್ತದೆ!” ಎಂದು ಎಲ್ಲರೂ ಒಬ್ಬರಿಗೊಬ್ಬರಿಗೆ ಕೂಗಿ ಹೇಳಿದರೇ ಹೊರತು ಯಾರೂ ನಾಯಿಯ ಹತ್ತಿರಕ್ಕೆ ಹೋಗಲು ಧೈರ್ಯ ಮಾಡಲಿಲ್ಲ.
ಅಷ್ಟರಲ್ಲಿ ಕೋಣೂರಿನ ಹತ್ತಿರ ನಾಗತ್ತೆ ನಾಗಕ್ಕರನ್ನು ಅಗಚಿ, ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೆ ಸಿಂಬಾವಿ ಭರಮೈ ಹೆಗ್ಗಡೆಯವರಿಂದ ಕಾಗದ ತರುತ್ತಿದ್ದ ಹೊಲೆಯರ ಗುತ್ತಿ, ತಾನು ಬರುತ್ತಿದ್ದ ಕಾಲುದಾರಿಯಿಂದ ತುಸು ಮೇಲುಭಾಗದ ಕಾಡಿನ ಅಂಚಿನಲ್ಲಿ ಆಗುತ್ತಿದ್ದ ಗಲಾಟೆಯನ್ನು ಕೇಳಿ, ಕುತೂಹಲವಶನಾಯಿ ಆ ಕಡೆ ಓಡುತ್ತಲೇ ಹೋಗಿ ಕಾಣಿಸಿಕೊಳ್ಳುವುದೆ ತಡ ನಾಲ್ಕಾರು ಕೊರಳುಗಳು ಒಟ್ಟಿಗೆ “ನಿನ್ನ ನಾಯಿ ನಮ್ಮ ಹಂದೀನ ಕೊಲ್ತಲ್ಲೋ, ಗುತ್ತಿ!” ಎಂದು ಕೂಗಿಕೊಂಡವು. ಸನ್ನಿವೇಶದ ಅರ್ಥವನ್ನೆಲ್ಲ ತಟಕ್ಕನೆ ಗ್ರಹಿಸಿದ ಗುತ್ತಿ ಓಡಿಹೋಗಿ, ಕೂಗಿ ಕರೆಯುತ್ತಾ, ಹುಲಿಯನ ಬೆನ್ನ ಮೇಲೆ ಮುಷ್ಟಿಯಿಂದಲೆ ಎರಡು ಗುದ್ದು ಗುದ್ದಿ, ಅದರ ಕುತ್ತಿಗೆಯನ್ನು ಬಲವಾಗಿ ತಬ್ಬಿ ಎಳೆದು ಹಿಡಿದುಕೊಂಡನು. ತತ್ತರಿಸಿದ್ದ ಸಲಗ ಮತ್ತೆ ಬಡರಿಬಿದ್ದು ಎದ್ದು ಓಡಲು ಪ್ರಯತ್ನಿಸುತ್ತಿದ್ದಂತೆಯೇ ಮಂಜ, ಬೈರ, ತಿಮ್ಮ, ಬಚ್ಚ, ಪುಟ್ಟ ಎಲ್ಲರೂ ಒಂದೇ ನೆಗೆತಕ್ಕೆ ನುಗ್ಗಿ ಅದನ್ನು ಅದುಮಿ ಹಿಡಿದು, ಬಳ್ಳಿಗಳಿಂದ ಮುಂದಿನ ಎರಡೂ ಕಾಲುಗಳನ್ನೂ ಹಿಂದಿನವುಗಳನ್ನೂ ಬೇರೆ ಬೇರೆಯಾಗಿ ಒಟ್ಟಿಗೆ ಬಿಗಿದು ಕಟ್ಟಿ, ಒಂದು ನೇರವಾದ ಗಿಡವನ್ನು ಕಡಿದು ಬಲವಾದ ಅಡ್ಡೆಯನ್ನಾಗಿ ಮಾಡಿ ಹಂದಿಯ ಕಾಲುಗಳ ನಡುವೆ ತೂರಿಸಿ, ಎತ್ತಿ ತಲೆಕೆಳಗಾಗಿ ಕಿರ್ರೊ ಎಂದು ಕಾಡೆಲ್ಲ ಮೊರೆಯುವಂತೆ ಚೀರಿಡುತ್ತಿದ್ದ ಅದನ್ನು ಹೊತ್ತುಕೊಂಡು ಮನೆಯ ಕಡೆಗೆ ಇಳಿದರು.
ಗುತ್ತಿ ತನ್ನ ನಾಯಿಯ ಕೊರಳಿಗೆ ಮತ್ತೆ ಒಂದು ಬಳ್ಳಿ ಕುಣಿಕೆ ಬಿಗಿದು, ಅದನ್ನು ಭದ್ರವಾಗಿ ಹಿಡಿದುಕೊಂಡು ಮನೆಯ ಕಡೆಗೆ ಹೊರಟು ಎರಡು ಹೆಜ್ಜೆ ಹಾಕಿದ್ದನೊ ಇಲ್ಲವೊ ಎದುರಿಗೆ ತಿಮ್ಮಪ್ಪ ಹೆಗ್ಗಡೆ ಬರುತ್ತಿರುವುದನ್ನು ನೋಡಿ, ಪಿಚ್ಚನೆ ಹಲ್ಲುಬಿಟ್ಟು, ಅಭ್ಯಾಸಬಲದಿಂದಲೆಂಬಂತೆ ದಾರಿಯಿಲ್ಲದಿದ್ದರೂ ದಾರಿಬಿಟ್ಟು ನಿಲ್ಲುವಂತೆ ಸರಿದು ನಿಂತನು.
ಹಂದಿ ನೆರಮನೆಯ ದಾಯಾದಿಗಳ ಅಂಗಳದ ಕಡೆಗೆ ನುಗ್ಗಿದುದನ್ನು ಕಂಡ ಸುಬ್ಬಣ್ಣ ಹೆಗ್ಗಡೆಯವರು, ಕಾಲುಗೆಟ್ಟಂತಾಗಿ, ತಮಗೆ ಸೇರಿದ ಅಂಗಳದ ಭಾಗದಲ್ಲಿಯೆ ನಿಂತು, ಮಗನನ್ನು ಕೂಗಿ ಕರೆಯತೊಡಗಿದರು. ತಿಮ್ಮಪ್ಪ ಹೆಗ್ಗಡೆ ತನಗೂ ಅದಕ್ಕೂ ಏನೂ ಸಂಬಂಧವಿಲ್ಲದವನಂತೆ ಬಚ್ಚಲ ಕಡೆಯಿಂದ ಬರಲು “ನಿನ್ನ ಕಾಲಿಗೆ ಒರಲೆಹಿಡಿಯಾ! ಕಿವಿ ಕೆಪ್ಪಾಗಿದೆಯೇನೊ? ಅಲ್ಲಿ ಓಡೋ! ಓಡೋ ಬ್ಯಾಗ!” ಎಂದು ಗಂಟಲು ಕಟ್ಟಿ ಹೋಗುವಂತೆ ಕೂಗಿಕೊಂಡರು. ತಿಮ್ಮಪ್ಪ ತುಸು ಚುರುಕಾಗಿಯೆ ಗಲಾಟೆಯ ಜಾಡನ್ನು ಹಿಂಬಾಲಿಸಿ ಗುಡ್ಡವೇರಿ ಬರುತ್ತಿದ್ದನು. ಗುತ್ತಿಯಿಂದ ಹೊಲೆಯರು ಹಂದಿಯನ್ನು ಅಡ್ಡೆ ಕಟ್ಟಿ ಹೊತ್ತುಕೊಂಡು ಹೋದ ವಿಷಯ ತಿಳಿದವನು “ಅಂತೂ ನೀನು, ನಿನ್ನ ನಾಯಿ, ಹೋದಲ್ಲೆಲ್ಲಾ ಕೊಂಡು ಹುಯ್ಲು!” ಎಂದವನು, ತಟಕ್ಕನೆ ದನಿ ಬದಲಾಯಿಸಿ “ಎಲ್ಲಿಂದ ಬಂದ್ಯೊ?” ಎಂದನು.
ಗುತ್ತಿ ಇದ್ದಕ್ಕಿದ್ದಂತೆ ಪ್ರಸನ್ನನಾದವನಂತೆ ಮಂದಹಸಿತನಾದನು. ತಾನು ಎಲ್ಲಿಂದ ಬಂದದ್ದು ಎಂಬುದನ್ನು ಹೇಳಿದರೆ ಆ ಹೆಸರು ಕೇಳಿ ತಿಮ್ಮಪ್ಪ ಹೆಗ್ಗಡೆ ಒಳಗೊಳಗೆ ಹಿಗ್ಗುತ್ತಾನೆ ಎಂಬುದನ್ನು ನಿಸ್ಸಂದಿಗ್ಧವಾಗಿ ಅರಿತವನಂತೆ ಹೇಳಿದನು: “ಮನೆಯಿಂದ.”
‘ಮನೆಯಿಂದ’ ಎಂದರೆ ‘ಸಿಂಬಾವಿಯಿಂ’ ಎಂದು ಎಲ್ಲರೂ ತಿಳಿದೇ ತಿಳಿದುಕೊಳ್ಳುತ್ತಾರೆ ಎಂಬುದರಲ್ಲಿ ಅವನಿಗೆ ಸುನಿಶ್ಚಯ ಬುದ್ದಿ. ಆ ಕಡೆ ಯಾರೂ “ನಮ್ಮ ಊರಿಂದ ಬಂದೆ” ಎಂದಾಗಲಿ, ನಮ್ಮ ‘ಹಳ್ಳಿ’ಯಿಂದ ಬಂದೆ ಎಂದಾಗಲಿ ಹೇಲುವುದಿಲ್ಲ. ಅಲ್ಲಿ ಊರು ಹಳ್ಳಿ ಎಲ್ಲ ಒಂದೇ: ‘ಮನೆ’ಗೆ ಸೇರಿದಂತೆ ತುಸು ದೂರದಲ್ಲಿ ಹೊಲೆಯರ ಕೇರಿ, ಗಟ್ಟದವರ ಬಿಡಾ, ಇತ್ಯಾದಿ ಏನಿದ್ದರೂ ಅವೆಲ್ಲ ‘ಮನೆ’ಯಲ್ಲಿ ಐಕ್ಯ. ನಮ್ಮ ಊರು, ನಮ್ಮ ಹಳ್ಳಿ- ಎಂಬ ಮಾತುಗಳು ಗಟ್ಟದ ತಗ್ಗಿನವರಿಂದ ಬರಬಹುದು ಅಥವಾ ಬಯಲು ಸೀಮೆಯವರಿಂದ ಬರಬಹುದು. ಮಲೆನಾಡಿನವರಿಗೆ ಇರುವುದು ‘ನಮ್ಮನೆ’ ‘ನಿಮ್ಮನೆ’.
“ಏನಾರೂ ಹೇಳಿ ಕಳಿಸಿದಾರೋ ನಿಮ್ಮ ಅಯ್ಯೋರು?” ತಿಮ್ಮಪ್ಪ ಹೆಗ್ಗಡೆ ಸುಪ್ರೀತನಾಗಿಯೆ ಪ್ರಶ್ನಿಸಿದನು.
“ಏನೂ ಇಲ್ಲಾ…” ಎಂದು ಗುತ್ತಿ ನೀಳ್ದನಿ ತೆಗೆದರೂ ಆ ದನಿ ಧ್ವನಿಪೂರ್ಣವಾಗಿದ್ದಂತೆ ತೋರಿತು ತಿಮ್ಮಪ್ಪ ಹೆಗ್ಗಡೆಗೆ. ಗುತ್ತಿ ಹಲ್ಲು ಬಿಡುತ್ತಿದ್ದುದನ್ನು ಗಮನಿಸಿ ತಾನೂ ಹಲ್ಲು ಬಿಡುತ್ತಾ “ಥೂ ಲೌಡೀ ಮಗನೇ, ನನ್ನ ಹತ್ತಿರ ದಗಲಬಾಜಿ ಮಾಡ್ತೀಯಾ?” ಎಂದನು.
“ಇಲ್ಲ ನನ್ನೊಡೆಯ, ನಾನ್ಯಾಕೆ ದಗಲಬಾಜಿ ಮಾಡಿ? ನನ್ನ ಹತ್ರ ಏನೂ ಹೇಳಿ ಕಳ್ಸಿಲ್ಲ.”
“ಮತ್ತೆ? ಕಾಗದ ಗೀಗದ ಕೊಟ್ಟಾರೇನು?”
ಗುತ್ತಿಗೆ ಫಜೀತಿಗಿಟ್ಟುಕೊಂಡಿತು. ಕೊಟ್ಟ ಕಾಗದವನ್ನು ಗುಟ್ಟಾಗಿ ಸುಬ್ಬಣ್ಣ ಹೆಗ್ಗಡೆಯವರಿಗೇ ಕೊಡಬೇಕೆಂದು ಸಿಂಬಾವಿ ಭರಮಯ್ಯ ಹೆಗ್ಗಡೆಯವರು ತಮ್ಮ ನೆಚ್ಚಿನ ಆಳಿಗೆ ಆಜ್ಞಾಪಿಸಿದ್ದರು. ಬೇರೆ ಯಾರಾದರೂ ಕೈಯಲ್ಲಿ ಕೊಟ್ಟುಗಿಟ್ಟೀಯಾ? ಎಂದು ಹೆದರಿಸಿಯೂ ಇದ್ದರು. ಈಗ ಕಾಗದ ಕೊಟ್ಟಿದ್ದಾರೆ ಎಂಬ ವಿಚಾರ ತಿಮ್ಮಪ್ಪಗೆ ತಿಳಿಸಿದರೆ ‘ಎಲ್ಲಿ? ಕೊಡು, ನೋಡಿ ಕೊಡುತ್ತೇನೆ’ ಎಂದು ಕೇಳಿದರೆ ಏನು ಮಾಡುವುದು? ಏನನ್ನಾದರೂ ಹೇಳಿ ಕಳಿಸಿದ್ದಾರೆ ಎಂದು ತೋಟ, ಗದ್ದೆ, ಹಂದಿ, ದನ, ಕರು, ಜಮೀನು ಇಂತಹ ಯಾವುದಾದರೂ ಒಂದನ್ನು ಕುರಿತು ಏನಾದರೊಂದು ಸುಳ್ಳಂಬಳ್ಳಿ ಹೇಳಬಹುದಾಗಿತ್ತು. ಆ ಅವಕಾಶವನ್ನೂ ಮೊದಲೇ ಕಳೆದುಕೊಂಡು ಬಿಟ್ಟಿದ್ದಾನೆ, ಏನನ್ನೂ ಹೇಳಿ ಕಳಿಸಿಲ್ಲ ಎಂದು ಹೇಳಿ. ಮುಂದೇನು ಮಾಡಬೇಕು ಎಂದು ಗುತ್ತಿ ಮನದಲ್ಲಿಯೆ ತಡಕಾಡುತ್ತಿದ್ದುದನ್ನು ಗುರುತಿಸಿದ ತರುಣ ಹೆಗ್ಗಡೆ:
“ಏನೋ? ಮತ್ತೇನೋ ಠಕ್ಕು ಮಾಡಾಕೆ ಹುನಾರು ಮಾಡ್ತಿದ್ದೀಯಾ?” ಎಂದು ಮೂದಲಿಸುವಂತೆ ಪ್ರಶ್ನಿಸಿ, ಎರಡು ಹೆಜ್ಜೆ ಮುಂಬರಿದನು.
ತಿಮ್ಮಪ್ಪ ಹೆಗ್ಗಡೆಯ ಕಠೋರ ಧೂರ್ತ ಸ್ವಭಾವದ ಪರಿಚಯವಿದ್ದ ಗುತ್ತಿ “ತಡೀರಪ್ಪಾ, ಕಾಗ್ದ ಕೊಟ್ಟಿದ್ರೂ” ಎಂದು ದಗಲೆಯೊಳಗೆ, ಸೊಂಟದ ಸುತ್ತಿನಲ್ಲಿ ಅಲ್ಲಿ ಇಲ್ಲಿ ಹುಡುಕುತ್ತಾ “ಹಾಳು ಆ ಲಕ್ಕುಂದದ ಹಳ್ಳ ನಿನ್ನೆ ಆ ಮಳೇಲಿ ಏರಿ ಬಿಟ್ಟಿತ್ತು! ಹಾದು ಬರುವಾಗ ಸೊಂಟದ ಮ್ಯಾಲಕ್ಕೂ ನೀರು ಬಂದಿತ್ತು. ಎಲ್ಲಿ ತೇಲಿಹೋತೋ ಏನೋ?”  ಎಂದು ಹುಡುಕುವುದನ್ನು ಬಿಟ್ಟು ನಿರಾಶನಾದವನಂತೆ ನಿಂತು “ಇನ್ನೇನು ಮಾಡ್ಲಪ್ಪಾ ನಾನು? ಮಗ್ಗಲು ಮುರಿಯೋ ಹಾಂಗೆ ಹೋಡೋತಾರಲ್ಲಾ  ನನ್ನ!” ಎಂದು ಅಳುದನಿ ತೆಗೆದುದನ್ನು ಕಂಡ ತಿಮ್ಮಪ್ಪ ಹೆಗ್ಗಡೆ, ತುಟಿಗಚ್ಚಿ, ಕೊಂಕುನಗೆ ಬೀರಿ:
“ನೋಡೋ, ಗುತ್ತಿ, ಈ ಆಟಾನೆಲ್ಲಾ ತೆಗೀಬ್ಯಾಡ ನನ್ಹತ್ರ” ಎಂದು ಗುತ್ತಿಯ ಕಣ್ಣನ್ನೆ ನೇರವಾಗಿ ನೋಡುತ್ತಾ ಹೇಳಿದನು: “ನಿನ್ನ ಗುತ್ತೆಲ್ಲಾ ನಂಗೆ ಗೊತ್ತಿಲ್ಲಾ ಅಂತಾ ಮಾಡೀಯೇನು?”
ಗುತ್ತಿ ತಾನು ಬೆಟ್ಟಳ್ಳಿಗೆ ಹೋಗಿ ದೊಡ್ಡ ಬೀರನ ಮಗಳು ತಿಮ್ಮಿಯನ್ನು ಹಾರಿಸಿಕೊಂಡು ಹೋಗುವ ಗುಟ್ಟನ್ನೇ ಕುರಿತು ತಿಮ್ಮಪ್ಪ ಹೆಗ್ಗಡೆ ಸೂಚಿಸುತ್ತಿದ್ದಾನೆ ಎಂದು ಹೆದರಿ, ಹೇಗಾದರೂ ಮಾಡಿ ಅವನ ಕೈಯಿಂದ ನುಣುಚಿಕೊಂಡು ಹೊಗಿ ಸುಬ್ಬಣ್ಣ ಹೆಗ್ಗಡೆಯವರಿಗೆ ಕಾಗದ ತಲುಪುವಂತೆ ಮಾಡಿದರೆ ಸಾಕು ಎಂದು, ಹಿಂದುಮುಂದು ನೋಡದೆ “ಇಲ್ಲ, ನನ್ನೊಡ್ಯಾ, ಸತ್ಯವಾಗಿ, ದೇವರಾಣೆ!” ಎಂದುಬಿಟ್ಟನು.
“ದನಾ ತಿನ್ನುವನಿಗೆ ಗೊಬ್ಬರದ ಆಣೆ!…. ನೋಡೂ, ನನು ಅಪ್ಪಯ್ಯಗೆ ಕಾಗದ ಕೊಟ್ಟರೂ ಅವರು ಅದನ್ನ ನನ್ನ ಹತ್ರಾನೆ ಓದಾಕೆ ಹೇಳ್ತಾರೆ. ಅವರಿಗೆ ಕಣ್ಣೂ ಸರಿಯಾಗಿ ಕಾಣಾದಿಲ್ಲ. ಅಕ್ಷರ ಓದಾಕೆ. ಸುಮ್ಮಸುಮ್ಮನೆ ಮುಚ್ಚುಮರೆ ಮಾಡ್ತೀಯಲ್ಲಾ ಇಲ್ಲಿ ಸತ್ತಾ!” ಎಂದು ಸಾಫಲ್ಯ ದೃಢತಾಭಂಗಿಯಿಂದ ಕೈನೀಡಿದ ತಿಮ್ಮಪ್ಪ ಹೆಗ್ಗಡೆಗೆ,
ಗುತ್ತಿ ಪೆಚ್ಚಾದವನಂತೆ ಮುಗುಳುನಗುತ್ತಾ “ಅಯ್ಯೋ ದೇವರಾಣೇನೂ ಹಾಕಿಬಿಟ್ಟೆನಲ್ರೊ! ಇನ್ನು  ಹ್ಯಾಂಗೆ ಕಾಗದ ಕೊಡಲಿ ಅಂತಾ ವೇಚ್ನೆ ಮಾಡ್ತಿದ್ದೀನಿ!” ಎಂದು ದಗಲೆಯ ಯಾವುದೋ ಒಂದು ಅಜ್ಞಾತ ಒಳಮೂಲೆಗೆ ಕೈಹಾಕಿದನು.
“ಅಯ್ಯೊ! ನಿನ್ನ ದೇವರಿಗೆ ಇಂಥಾ  ಆಣೆ ಕೇಳಿ ಕೇಳಿ ಕಿವಿ ಕೆಪ್ಪಾಗಿ ಹೋಗಿ ಅದೆ! ಇನ್ನು ನೀನೆಷ್ಟು ಸಾರಿ ಬೇಕಾದ್ರೂ ಆಣೆ ಹಾಕು; ಅವನಿಗೇನೂ ಕೇಳ್ಸೋದಿಲ್ಲ! ಯಾಕೆ ಹೆದರ್ತೀಯಾ?”
“ಹಂಗೇನ್ರೋ?…. ಸೈ ಹಾಂಗಾರೆ ತಗೊಳ್ಳಿ; ಇಲ್ಲದೆ!” ಎಂದು ಒದ್ದೆಯಾಗಿ ಮುದುಡಿ ಹೋಗಿದ್ದ ಒಂದು ಕಾಗದದ ತುಂಡನ್ನು ಈಚೆಗೆಳದು, ಅಂಜಲಿಬದ್ಧನಾಗಿ ನೀಡಿದನು.
ತಿಮ್ಮಪ್ಪ ಹೆಗ್ಗಡೆ ತುಂಬ ಗೆಲುಮೊಗದಿಂದ ಅದನ್ನು ತೆಗೆದುಕೊಂಡು ಬಿಚ್ಚ ತೊಡಗಿದನು. ಅದು ಗುತ್ತಿ ಹೇಳಿದಂತೆ, ತೇಲಿಹೋದದ್ದು ಸುಳ್ಳಾಗಿದ್ದರೂ ಮುಳುಗಿದ್ದುದಕ್ಕೇನೊ ನಿಜವಾಗಿಯೂ ಪ್ರತ್ಯಕ್ಷ ಪ್ರಮಾಣವಿತ್ತು, ಒದ್ದೆ ಮುದ್ದೆಯಾಗಿ, ಮತ್ತೆ ಗುತ್ತಿಯ ಶರೀರದ ಬಿಸುಪಿನಿಂದಲೆ ಅರ್ಧಂಬರ್ಧ ಒಣಗಿದ್ದ ಆ ಕಾಗದವನ್ನು ಹರಿದುಹೋಗದಂತೆ ತುಂಬ ಎಚ್ಚರಿಕೆಯಿಂದಲೆ ಬಿಚ್ಚಿ ಓದತೊಡಗಿದ್ದ ತಿಮ್ಮಪ್ಪನ ಮುಖದಲ್ಲಿ ಪ್ರಾರಂಭದಲ್ಲಿದ್ದ ನಗುವಿನ ಕಳೆ ಬಾಡತೊಡಗಿತು. ನಿರಾಶೆಯೊ? ದುಃಖವೊ? ಸಿಟ್ಟೊ? ಮುಖ ಸಿಂಡರಿಸಿತು. ಕಾಗದವನ್ನು ಹಿಸುಕಿ ಮುದ್ದೆ ಮಾಡಿ ತಟಕ್ಕನೆ ಗುತ್ತಯ ಮೋರೆಯ ಕಡೆ ಎಸೆದು “ನಿನ್ನ ಹೆಣಕ್ಕೆ ಹಾಕಿಕೊ!” ಎಂದು ಸಿಡುಕಿ, ತಟಕ್ಕನೆ ತಿರುಗಿ, ಗದ್ದೆಯ ಕಡೆಗೆ ಇಳಿಜಾರಾದ ಗುಡ್ಡದಲ್ಲಿ ನಡೆದು ಪೊದೆಗಳ ನಡುವೆ ಕಣ್ಮರೆಯಾದನು.
ಗುತ್ತಿಗೆ ಒಂದೂ ಅರ್ಥವಾಗದೆ, ಬೆಪ್ಪಾಗಿ ನಿಂತು ಅವನು ಕಣ್ಮರೆಯಾಗುವುದನ್ನೆ ನೋಡುತ್ತಾ “ಒಳ್ಳೆ ಮಲಾಮತ್ತಾಯ್ತಲ್ಲಪ್ಪಾ! ಇದೇನು ಬಂತು ಗಿರಾಚಾರ ನನಗೆ?” ಎಂದುಕೊಂಡು, ಬಗ್ಗಿ, ಕಾಲ್ದೆಸೆಯಲ್ಲಿ ಮುದ್ದೆಯಾಗಿ ಬಿದ್ದಿದ್ದ ಕಾಗದವನ್ನು ಎತ್ತಿ, ಮೆಲ್ಲಗೆ ಬಿಚ್ಚಿ ನೀವಿ ಸರಿಮಾಡಿ ದಗಲೆಯೊಳಗೆ ಸೇರಿಸಿ, ಏತಕ್ಕೊ ಏನೊ ಪಕ್ಕದಲ್ಲಿದ್ದ ಹುಲಿಯನ ತಲೆಗೊಂದು ರಪ್ಪನೆ ಕೊಟ್ಟು, ಅದು ಕಂಯ್ ಎನ್ನಲು “ಹಾಳು ಮುಂಡೇದು! ಹೋದಲ್ಲಿ ಶಂಕ ಬತ್ತದೆ! ಸನಿ ಬಂದ ಹಾಂಗೆ!” ಎನ್ನುತ್ತಾ ತನ್ನ ಸಿಟ್ಟನ್ನು ಅದರ ಮೇಲೆ ಶಪಿಸುತ್ತಾ ಕೊರಳಿಗೆ ಬಳ್ಳಿ ಕುಣಿಕೆ ಬಿಗಿದಿದ್ದ ಅದನ್ನು ದರದರನೆ ಎಳೆದುಕೊಂಡು ಮನೆಯ ಕಡೆಗೆ ಗುಡ್ಡವಿಳಿದನು.
ಸೋಗೆ ಮನೆಯ ದೊಡ್ಡ ಅಂಗಳ ಪ್ರವೇಶ ಮಾಡುತ್ತಿದ್ದಂತೆಯೆ, ಅಡ್ಡೆ ಕಟ್ಟಿ ತಲೆಕೆಳಕಾಗಿ ಹೊಲೆಯರ ಹೆಗಲಮೇಲೆ ಹೂವಳ್ಳಿ ಸಗುತ್ತಿದ್ದ ಹಂದಿಯ ಕಿರ್ರೋ ಕೂಗು ಗದ್ದೆ ಬಯಲಿನಿಂದ ಕೇಳಿಸಿತು. ಗುತ್ತಿ ಆ ಕಡೆ ನೋಡಿದನು. ಗದ್ದೆ ಬಯಲಿನ ನಡುವೆ ಅಂಕುಡೊಂಕಾಗಿ ಹಂದಿಯನ್ನು ಹೊತ್ತು ಸಾಗುತ್ತಿದ್ದ ದೂರದೃಶ್ಯ ಕಾಣಿಸಿತು. ಯಾವುದೊ ದೂರದಾಶೆ ಅವನ ನಾಲಗೆಗೆ ನೀರು ತಂದಿತು. ಹಂದಿಯ ಕೀರುಲಿಯನ್ನು ಆಲಿಸಿ ಕಿವಿನಿಮಿರಿ ಉದ್ವೇಗಗೊಂಡು ತನ್ನ ಕೈಲಿ ಹಿಡಿದಿದ್ದ ಬಳ್ಳಿಯನ್ನು ಜಗ್ಗುತ್ತಿದ್ದ ಹುಲಿಯನನ್ನು ಹೆದರಿಸುತ್ತಿದ್ದಂತೆ ಜಗಲಿಯಿಂದ ಸುಬ್ಬಣ್ಣ ಹೆಗ್ಗಡೆಯವರ ಅಬ್ಬರದ ಕರೆ ಕೇಳಿಸಿತು: “ಏ ಗುತ್ತೀ, ಬಾರೊ ಇಲ್ಲಿ!”
ಕೆಸರ್ಹಲಗೆಯ ಮೇಲೆ ಕೂತಿದ್ದ ವೆಂಕಟಣ್ಣ “ಸೈ, ಅವನೆ ಬಂದನಲ್ಲಪ್ಪ? ಕೇಳಿ ಬೇಕಾದರೆ ಅವನ್ನೇ” ಎಂದು ಗುತ್ತಿಯ ಕಡೆ ತಿರುಗಿ “ನಿನ್ನ ನಾಯೀನೇ ಅಲ್ವೇನೋ ಸಲಗನ್ನ ಹಿಡಿದಿದ್ದು?” ಎಂದನು.
“ಮತ್ತೆ? ನನ್ನ ನಾಯಿ ಬರದೆ ಇದ್ದರೆ ಇಷ್ಟು ಹೊತ್ತಿಗೆ ಸಲಗ ಕಾಡಿನಾಗೆ ಇರ್ತಿತ್ತು” ಎಂದು ಹಲ್ಲು ಬಿಡುತ್ತಾ, ಶಿಫಾರಸು ಕೊಡುತ್ತಾರೆ ಎಂದು ಹಾರೈಸಿದವನಂತೆ, ಗುತ್ತಿ ನಿಂತಿದ್ದನು.
ಶಿಫಾರಸು ಕೊಟ್ಟರು ಹೆಗ್ಗಡೆಯವರು: “ನಿನ್ನ ಮನೆ ಮಂಟೇನಾಗ! ಯಾಕೋ? ಹೋದಲ್ಲಿ ತನಕ ಆ ನಾಯಿ ಕರಕೊಂಡು ಹೋಗ್ತೀಯಾ?  ಬಾಲಂಗಚ್ಚೇನ?” ಎಂದು ಬೈದು “ಹಂದೀ ಗಂಟಲಾಗೆ ರಕ್ತ ಸುರಿತಿತ್ತೇನೋ?” ಎಂದು ಗದರಿಸಿದಂತೆ ಕೇಳಿದರು.
ಅವರ ಪ್ರಶ್ನೆಯ ಧ್ವನಿಯಿಂದಲೆ ಏನು ಉತ್ತರ ಹೇಳಬೇಕೆಂಬುದೂ ಗೊತ್ತಾಯಿತು ಗುತ್ತಿಗೆ: “ಇಲ್ಲ, ಬರೀ ಕಿವಿಚಟ್ಟೆ ಹಿಡುಕೊಂಡಿತ್ತು, ನಾನಾ ಬಿಡಿಸ್ದೆ.”
ವೆಂಕಟಣ್ಣ ನಡುವೆ ಬಾಯಿಹಾಕಿ “ಗಂಟಲಿಗೇ ಬಾಯಿಹಾಕಿರಲಿಲ್ಲೇನೋ?” ಸುಳ್ಳು ಹೇಳಬ್ಯಾಡ. ನೆತ್ತರು ಸುರೀತಿತ್ತು ಅಂತಾ ತಿಮ್ಮನೇ ಹೇಳ್ದ” ಎಂದನು.
“ನನ್ನ ಕಣ್ಣಿಗೇನೂ ಕಾಣಲಿಲ್ಲಪ್ಪಾ!” ಎಂದು ಗುತ್ತಿ, ಆ ವಿಚಾರವಾಗಿ ಹೂವಳ್ಳಿ ವೆಂಕಟಣ್ಣನಿಗೂ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೂ ಏನೋ ವಾಗ್ವಾದ ನಡೆದಿರಬೇಕೆಂದು ಊಹಿಸಿ, ತಾನು ಮಾತನಾಡುವುದರಲ್ಲಿ ಎಚ್ಚರಿಕೆ ವಹಿಸಬೇಕೆಂದು ನಿರ್ಧರಿಸಿದನು.
ನಾಯಿ ಹಂದಿಯ ಕುತ್ತಿಗೆಗೆ ಬಾಯಿಹಾಕಿ ಗಾಯಮಾಡಿ ರಕ್ತ ಸೋರಿಸಿರುವುದರಿಂದ ಅದು ದೈವಕ್ಕೆ ಆಯಾರ ಕೊಡಲು ಯೋಗ್ಯವಲ್ಲ ಎಂಬ ವಾದ ಹೂಡಿ, ಅದರ ಬೆಲೆ ಕಡೆಯಪಕ್ಷ ಒಂದು ರೂಪಾಯಿಯಿಂದಲಾದರೂ ಕಡಮೆ ಮಾಡಿಸಿಕೊಳ್ಳಬೇಕು ಎಂದು ವೆಂಕಟಣ್ಣ ಹವಣಿಸಿದ್ದನು. ಆದರೆ ಹೆಗ್ಗಡೆಯವರು “ನಾನು ಮೊದಲೆ ಐದು ರೂಪಾಯಿ ಹೇಳಿದ್ದೆ. ನೀನು ಕೇಳಿಕೊಂಡಿದ್ದರಿಂದ ಒಂದು ರೂಪಾಯಿ ಬಿಟ್ಟೀನಿ. ಇನ್ನೂ ಒಂದು ರೂಪಾಯಿ ಬಿಡು ಅಂದರೆ, ಯಾರ ಮನೆ ಹಾಳಮಾಡಬೇಕು ಅಂತಾ ಮಾಡೀಯಾ?” ಎಂದು ನಾಲ್ಕು ರೂಪಾಯಿಗೆ ಕಾಸ ಕಡಮೆ ಸಾಧ್ಯವಿಲ್ಲ ಎಂದು ಬಿಟ್ಟಿದ್ದರು. ಈಗ ಯಾವಾಗ ಗುತ್ತಿಯ ಸಾಕ್ಷಿ ತಮ್ಮ ಪರವಾಗಿದ್ದುದನ್ನು ಅರಿತರೊ ತಾವು ಹಿಡಿದ ಪಟ್ಟನ್ನು ಬಿಡದೆ ಕುಳಿತುಬಿಟ್ಟರು. ವೆಂಕಟಣ್ಣ ಉಪಾಯವಿಲ್ಲದೆ ದೊಣ್ಣೆಯೂರಿಕೊಂಡು ಎದ್ದು ಕುಂಟುತ್ತಾ ಎರಡು ಹೆಜ್ಜೆಯಿಟ್ಟು ನಿಂತನು. ಆಗಲೇ ಬಿಸಿಲೇರಿದ್ದರಿಂದ “ಊಟ ಮಾಡಿಕೊಂಡು ಹೋಗು” ಎಂದು ಹೇಳುತ್ತಾರೇನೋ ಎಂದು ದೂರದ ಆಸೆ ಅವನಿಗೆ. ಆದರೆ ಹೆಗ್ಗಡೆಯವರು ಅಂತಹ ದಾಕ್ಷಿಣ್ಯಕ್ಕೆ ಒಳಗಾಗದೆ “ಹಾಂಗಾದರೆ ಬೇಗ ಹೊರಡೋ, ಎಂಕ್ಟಣ್ಣಾ, ಬಿಸಿಲೇರ್ತಾ ಇದೆ” ಎಂದು ಹೇಳಿ ಕುಂಟುತ್ತಾ, ಗದ್ದೆ ಕೋಗಿನ ಕಡೆಗೆ ಇಳಿದನು.
ಅವನು ಕಣ್ಮರೆಯಾದುದನ್ನು ಅರಿತು ಸುಬ್ಬಣ್ಣ ಹೆಗ್ಗಡೆ ತಲೆಯೆತ್ತಿ ಗುತ್ತಿಯ ಕಡೆ ನೋಡಿ ನಗುತ್ತಾ ಕೆಮ್ಮಿದರು. ತಾನು ಹೇಳಿದ ಸಾಕ್ಷಿಯಿಂದ ಒಡೆಯರು ಪ್ರೀತರಾಗಿದ್ದಾರೆಂದು ತಿಳಿದ ಗುತ್ತಿ ದಗಲೆಯೊಳಗಿಂದ ಕಾಗದ ತೆಗೆದು ಎರಡೂ ಕೈಗಳನ್ನೂ ಒಟ್ಟು ಮಾಡಿ ಸೊಂಟಬಗ್ಗಿಸಿ ನೀಡಿದನು.
ಹೆಗ್ಗಡೆಯವರು ಅದನ್ನು ತೆಗೆದುಕೊಂಡರು. ಆದರೆ ಬಿಚ್ಚಿ ನೋಡಲಿಲ್ಲ. ಎದುರುಗಡೆ ಕೆಸರ್ಹಲಿಗೆಯ ಮೇಲೆ ಹಾಕಿ, ಅದರ ಕಡೆ ನೋಡುತ್ತಾ “ಯಾಕೋ? ಮುದುರಿ ಮುದ್ದೆ ಆಗಿದೆಯಲ್ಲಾ?” ಎಂದರು. ಗುತ್ತಿ ಅವರಿಗೂ ತಿಮ್ಮಪ್ಪ ಹೆಗ್ಗಡೆಗೆ ತಾನು ಹೇಳಿದ್ದ ಲಕ್ಕುಂದದ ಹಳ್ಳ ಏರಿದ್ದ ಕಥೆಯನ್ನೆ ಮತ್ತೆ ಹೇಳಿದನು.
ಅಷ್ಟರಲ್ಲಿ ಕುಟ್ಟೊರಳಿನಲ್ಲಿ ಎಲೆಅಡಿಕೆ ಕುಟ್ಟುತ್ತಿದ್ದುದನ್ನು ನಿಲ್ಲಿಸಿ ಸುಬ್ಬಣ್ಣ ಹೆಗ್ಗಡೆಯವರು ತಲೆಯೆತ್ತಿ ಗುತ್ತಿಯ ಕಡೆ ನೋಡಿ “ಹಾಂಗಾದ್ರೆ ಒಂದು ಕೆಲಸ ಮಾಡ್ತೀಯಾ, ಗುತ್ತಿ? ನೀನು ಹಾಂಗೇ ಹೋಗಾಂವ, ಕೋಣೂರಿನ ಐಗಳು ಅನಂತಯ್ಯನ್ನ, ನಾ ಬರಾಕೆ ಹೇಳ್ದೆ ಅಂತ ಹೇಳ್ತೀಯಾ?” ಎಂದರು. ಸಿಂಬಾವಿಯಿಂದ ಬರುವ ಕಾಗದಗಳನ್ನು ಇತ್ತೀಚೆಗೆ ಮಗನ ಕೈಲಿ ಓದಿಸುತ್ತಿರಲಿಲ್ಲ. ಮನೆಯ ವಿಚಾರ ನಂಟರಿಷ್ಟರಿಗೆ ತಿಳಿಯಬಾರದೆಂದು ಐಗಳು ಅನಂತಯ್ಯನವರಿಂದ ಓದಿಸುತ್ತಿದ್ದರು.
ಗುತ್ತಿ ಕ್ಷಮೆ ಕೇಳುವ ಧ್ವನಿಯಲ್ಲಿ “ನಾ ಬೆಟ್ಟಳ್ಳಿಗೆ ಹೋಗ್ತೀನಿ, ಹೂವಳ್ಳಿ ಮೇಲಾಸಿ” ಎಂದು ಅಂಗಲಾಚುತ್ತಾ ನಿಂತನು.
“ಹೂವಳ್ಳಿ ಮೇಲಾಸಿ ಹೋದರೇನು? ಕೋಣೂರಿನ ಮೇಲಾಸಿ ಹೋದರೇನು? ಒಂದೇ ದೂರ ಅಲ್ಲೇನೋ?” ಎಂದವರು ಮತ್ತೆ ಇನ್ನೇನನ್ನೋ ನೆನಪಿಗೆ ತಂದುಕೊಂಡವರಂತೆ ಹುಸಿ ನಗೆ ನಗುತ್ತಾ “ಯಾಕೋ ಬೆಟ್ಟಳ್ಳಿಗೆ? ಕಾಗ್ದಗೀಗ್ದ ಕೊಟ್ಟಾರೇನೋ?” ಎಂದುದಕ್ಕೆ
ಗುತ್ತಿ ದೀರ್ಘವಾಗಿ “ಇಲ್ಲಾ! ನಂದೇ ಒಂದು ಚೂರು ಕೆಲಸ ಇತ್ತು” ಎಂದನು.
“ಬಾಳಾ ಗುತ್ತಿನ ಕೆಲಸನೇನೊ?”
“ಅಂತದೇನೂ ಇಲ್ಲಾ” ಎಂದ ಗುತ್ತಿ, ಒಡೆಯರಿಗೆ ತನ್ನ ಗುಟ್ಟು (ಇತರ ಹಲವರಿಗೆ ಗೊತ್ತಾಗಿದ್ದುದನ್ನು ವಿಸ್ಮಯದಿಂದ ಅರಿತಂದೆ!) ಗೊತ್ತಾಗಿರಬೇಕೆಂದೇ ಊಹಿಸಿದನಾದರೂ, ಆ ವಿಚಾರ ಅವರು ಪ್ರಸ್ತಾಪಿಸದಂತೆ ಮಾಡಲು ದಿಕ್ಕು ತಪ್ಪಿಸುವುದಕ್ಕಾಗಿ ತಟಕ್ಕನೆ ತಲೆ ಹೊಳೆದ ಮತ್ತೊಂದು ಅಷ್ಟೇನು ಮುಖ್ಯವಲ್ಲದ ವಿಚಾರ ಎತ್ತಿದನು.
“ಬೆಟ್ಟಳ್ಳಿ ಹಕ್ಕಲಾಗೆ ಇವತ್ತು ಬೈಗಿನ ಹೊತ್ತು ತೀರ್ಥಳ್ಳಿ ಕಿಲಸ್ತರ ಪಾದ್ರಿ ಅದೇನೋ ಬೀಸೆಕಲ್ಲು ಸವಾರಿ ಮಾಡ್ತಾರಂತೆ. ನಮ್ಮ ಬೆಟ್ಟಳ್ಳಿ ಸಣ್ಣಗೌಡ್ರಿಗೂ ಸವಾರಿ ಕಲಿಸ್ತಾರಂತೆ! ಎಲ್ಲರೂ  ಹೋಗ್ತೀದ್ದಾರೆ ಅದನ್ನೋಡಾಕೆ.”
“ಬೀಸೆಕಲ್ಲು ಸವಾರಿ! ನಿನಗೇನು ತಲೆ ಕೆಟ್ಟಿದೆಯೊ?”
“ಹೌದೊಡೆಯಾ! ನಿಮ್ಮ ಕೇರೇರೂ ಹೊಲ್ಟಾರಂತೆ!”
“ಹ್ಞಾಃ! ನಿನಗೇನು ಕಲಿಯೋ? ಕೆಲಸಕ್ಕೆ ಹೋಗಿ ಅಂತಾ ಕೇಳಿಕಳ್ಸೀನಿ!”
“ಹೂವಳ್ಳಿಗೆ ಹಂದಿ ಹೊತ್ತುಕೊಂಡು ಹೋದೋರೂ, ಹಾಂಗೆ ಮಜ್ಜಾನದ ಮ್ಯಾಲೆ ಬೆಟ್ಟಳ್ಳಿಗೆ ಹೋಗ್ತಾರಂತೆ…. ನಾನೂ ಸಂಗಡ ಬತ್ತೀನಿ ಅಂತಾ ಹೇಳೀನಿ.”
“ಅಂತೂ ಆ ಪಾದ್ರಿಯಿಂದ ಸುಖಾ ಇಲ್ಲಾ ಅಂತಾ ಕಾಣ್ತದೆ. ಬೀಸೆಕಲ್ಲು ಸವಾರಿ, ಹೊಗೇಬತ್ತಿ ಸೇದೋದು, ಮುಂಜುಟ್ಟು ಬಿಡೋದು, ಇನ್ನೂ ಏನೇನೋ ಯಕ್ಷಿಣಿಮಾಡಿ, ಜಾತಿಕೆಡಿಸಿ, ಕಿಲಸ್ತರ ಮತಕ್ಕೆ ಸೇರಿಸಕ್ಕೆ ಹುನಾರು ಮಾಡ್ತಿದಾನೆ. ನಿನ್ನ ಬೆಟ್ಟಳ್ಳಿ ಸಣ್ಣ ಗೌಡರೂ ಅವನ ಬಲೆಗೆ ಬೀಳಾಹಂಗೆ ಕಾಣ್ತದೆ!”
“ನಾವೇನು ಅವರ ಹತ್ರ ಹೋಗ್ತಿವೇನು? ದೂರದಾಗೆ ನಿಂತುಕೊಂಡು ನೋಡಿ, ಇತ್ತಮುಖಾ ಬಂದುಬಿಡ್ತೀವಿ” ಎಂದು ಗುತ್ತಿ ತಾನೂ ತನ್ನ ಜಾತಿಯವರೂ ಕಿಲಸ್ತರ ಪಾದ್ರಿಯ ಪ್ರಭಾವದಿಂದ ತಪ್ಪಿಸಿಕೊಳ್ಳುವ ರೀತಿಯನ್ನು ವಿವರಿಸಿದನು.
“ಏನಾದ್ರೂ ಸಾಯ್ಲಿ! ಹಾಳಾಗೇ ಹೋಗ್ತೀವಿ ಅನ್ನೋರ್ನ ಯರು ಉದ್ದಾರ ಮಾಡಾಕೆ ಆಗ್ತದೆ? ಅವನು ಒಬ್ಬೊಂಟಿಗ ಆಗಿದ್ರೆ, ಎತ್ಲಾಗಾದರೂ ಸಾಯಿ, ಯಾವ ಜಾತಿಗಾದರೂ ಸೇರು ಅನ್ನಬೈದಾಗಿತ್ತು. ಹೆಂಡ್ತಿ ಮಕ್ಕಳು ಬ್ಯಾರೆ ಇವೆಯಲ್ಲ. ಅವ್ರ ಗತಿ ಏನು? ಅವರಿನ್ನು ಕೆರೇನೋ ಬಾವೀನೊ ಹುಡುಕಬೇಕಲ್ಲಾ!”
ಹೆಗ್ಗಡೆಯವರು ದೀರ್ಘಚಿಂತಾಮಗ್ನರಾದಂತೆ ಅನ್ಯಮನಸ್ಕರಾಗಿ ಕುಟ್ಟೊರಳಿನ ಕಡೆಗೆ ತಮ್ಮ ಗಮನವನ್ನೆಲ್ಲ ಹರಿಸಿ, ತನ್ನನ್ನು ಮರೆತೇ ಬಿಟ್ಟಂತಾಗಲು, ಗುತ್ತಿ ಹುಲಿಯನನ್ನು ಹಿಡಿದುಕೊಂಡೇ ಅಲ್ಲಿಂದ ಸರಿದು ಹೂವಳ್ಳಿಯ ಹಾದಿ ಹಿಡಿದನು.
********


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ