ಪುಟಗಳು

23 ಮೇ 2018

ಶ್ರೀರಾಮಾಯಣ ದ‍ರ್ಶನಂ, ಅಯೋಧ್ಯಾ ಸಂಪುಟಂ: ಸಂಚಿಕೆ 5- ಭರತಮಾತೆ

ಸಂಚಿಕೆ 5 – ಭರತಮಾತೆ
ಪ್ರೇಯಸಿಯ ರೂಪ ಮೋಹಜ್ವಾಲೆಯೊಳ್ ಕುದಿದು
ಬೆಂದು, ಮೇಣ್ ಪ್ರಿಯಪುತ್ರವಾತ್ಸಲ್ಯ ಮಧುವಿನೊಳ್
ಮುಳುಗಿ ಮಿಂದಾ ನೃಪೋನ್ಮಾದವತಿ ವಿಷಮತೆಗೆ
ನೆಗೆದುದಯ್ ಭೀಷಣತೆವೆತ್ತು ! ನಡುರಾತ್ರಿಯೊಳ್
ಸಜ್ಜೆಯಿಂ ನೆಗೆದೆಳ್ದು, ಕಣ್ಮುಚ್ಚದೆಯೆ ಕಾಯ್ದು
ಕುಳಿತಿರ್ದೆ ಕೌಸಲ್ಯೆಯಂ, ಕೈಕೆ ಬಾರೆನುತೆ,
ತುಡುಕಿ ತೊಡೆಯೇರಿಸುತೆ, ಬಿಗಿದಪ್ಪಿ ಮುತ್ತಿಡುತೆ,
ನಗೆತೊಡಗಿದರ್. ಕೂಡೆ, ತೊಲಗು ತೊಲಗೆಂದೊರಲಿ
ತಳ್ಳಿದನ್, ರಾಮನಂ ಕೂಗಿ ಗೋಳಾಡಿ. ‘ಕರೆ
ಕೈಕೆಯಂ’ ಎನಲಾಕೆ ಬರೆ, ಬೀಸಿದನ್ ಮೊಗಕೆ            ೧೦
ಮೋದಿ ಪರಿವಾಣಮಂ. ಶೂನ್ಯಮನೆ ಪಿಡಿದೆಳಸಿ
ಬೋಳೈಸಿದನ್ ಲಲ್ಲೆಗೈಯುತೆ ಕುಮಾರನಾ
ಮುದ್ದುವೆಸರಂ ಮೆಲ್ಲನುಚ್ಚರಿಸಿ. ಬೆಳಗಾಗಿ
ನೇಸರೈತರೆ, ನಂದಿಸೆಂದಾಣತಿಯನಿತ್ತು
ಮೂದಲಿಸಿದನ್ ಗುರು ವಸಿಷ್ಠನಂ. ಕೂಗಿದನ್
ಪೆಸರಿಂ ಸುಮಂತ್ರನಂ. ಪೇಳೆ ಬರಲಿಲ್ಲೆಂದು,
ಶಪಿಸಿದನ್ ಸರ್ವರಂ ನೀಚವಾಕ್ಯಂಗಳಿಂ
ಬಾಯ್ಗೆಬಂದಂತೆವೋಲ್. ಬಯಲಿನಂಗಳದಲ್ಲಿ
ಕಂದನಂ ಕಂಡಂತೆ ಕೈಚಾಚಿ ಕರೆ ಕರೆದು,
ತಡೆದರಂ ಬಡಿದಿಕ್ಕಿ, ಮುನ್ನುಗ್ಗುತೋಡೋಡಿ  ೨೦
ದುಮುಕಿದನ್, ಕುಟ್ಟಿಮದಿನಾಳೆತ್ತರದ ಕೀಳ್ಗೆ,
ಮೆಯ್ಯೆಲ್ವು ಕೀಲುಳ್ಕುವಂತೆ, ಹಾಹಾ ರವಂ
ನೆರೆದ ಪೆಣ್ಗಂಡುಗೊರಲುಗಳಿಂದಮೊಮ್ಮಿಂಗೆ
ಪೊರಪೊಣ್ಮುವಂತೆ, ಮಣ್ಣೊರಸಿ, ತೈಲಂಬಳಿದು,
ನೆತ್ತರುಗುವೇರುಗಳಿಗೊಳ್ಮರ್ದ್ದನಾವರಿಸಿ,
ನೆಗಹಿ ಮಲಗಿಸಿದರಾ ಮಾನಸಜ್ಜರವೇರ್ದನಂ
ಪುರ್ಚುಗಿರ್ಚಿನ ಮೂರ್ಛೆಗಳ್ದ ವಸುಧೇಶನಂ
ಹಂಸಹೃದಯದ ತೂಲ ತಲ್ಪದಲಿ.
ರಾಮನಂ
ಗಂಗೆಯೆಡೆ ಬೀಳ್ಕೊಂಡು ಬಂದಾ ಸುಮಂತ್ರನಾ
ಕಂಡನೀ ಶೋಚನೀಯ ಸ್ಥಿತಿಯ ರಾಜೇಂದ್ರನಂ.         ೩೦
ಕಣ್‌ತೊಯ್ದು ಕರಪುಟಾಂಜಲಿಯೆತ್ತಿ ನಿಂದಾ
ಸುಮಂತ್ರನಂ ಗುರುತಿಸಲ್ಕಾರದಾ ಪೃಥಿವಿಪತಿ
ಮಂಕುಗಣ್ಣಿಂ ದಿಟ್ಟಿಸಿರ್ದನು ಶವಾಕ್ಷಿಯೋಲ್,
ನಿರ್ಜೀವವೆನೆ ನಿಶ್ಚಲಂ. ಪೇಳಲಾಟಿಸಲ್
ಮಂತ್ರಿ ರಘುರಾಮ ಸಂದೇಶಮಂ, ಮೌನದಿಂ
ಕೇಳ್ದನು ಶಿಲಾಪ್ರತಿಮೆಯೊಲ್. ಕೇಳುತಾಲಿಸುತೆ
ಶೋಕದಶನಿಯ ಹೊಯ್ಲಿಗುರುಳಿದನ್ ಮಂಚದಿಂ
ನೆಲಕೆ. ಹೋ ಎಂದೊದರುತಲ್ಲಿರ್ದ ಸ್ತ್ರೀಜನಂ
ತೋಳ್ಗಳೆರಡಂ ನೆಗಹಿ ಪಳಯಿಸಿರಲಾ ಗೋಳ್ಗೆ
ಪತ್ತನ ಸಮಸ್ತಮಾಬಾಲ ವೃದ್ಧರ್ವೆರಸಿ          ೪೦
ಕಡೆದುದೈ ರೋದನ ಸಮುದ್ರಮಂ. ಮೇಲೆತ್ತಿ
ಮಲಗಿಸಿದರರಸನಂ ಕೌಸಲೆ ಸುಮಿತ್ರೆಯರ್.
ತವಿಸಿದರ್ ಮುಚ್ಚೆಯಂ ಶಿಶಿರೋಪಚಾರದಿಂ.
ಸಂತವಿಟ್ಟರ್ ವಾಮದೇವನ್ ವಷಿಷ್ಠಾದಿ
ಗುರುವರರ್, ತಮ್ಮಾಡಿತಕೆ ತಾವೆ ದುಃಖಿಸುತೆ.
ಗುರುವರೇಣ್ಯರ ನುಡಿಗೆ ದೊರೆಯೆರ್ದೆಯಳಲ್‌ವೆಂಕೆ
ನೂರ್ಮಡಿಸುತುಕ್ಕಿದುದು, ತೆಕ್ಕನೆಯೆ ತಡೆಗೊಂಡ
ಹೊಳೆಯುರ್ಕಿ ದಡಗಳಂ ಮುಚ್ಚಿಕೊಚ್ಚುವ ತೆರದಿ,
ರಾಜೇಂದ್ರನಾತ್ಮಮಂ ಛಿದ್ರಛಿದ್ರಂಗೈವ
ರಭಸದಿಂ. ಬಳಿಯಿರ್ದರಂ ಬಡಿದು ಬಡಿದಟ್ಟಿ,  ೫೦
ಕೈಗಾರುಮೆಟುಕದಿರೆ, ಸಿಟ್ಟು ಸೀಕರಿಸುರೆಯೆ,
ತನ್ನ ಕಣ್ಣಂ ತಾನೆ ಕಿಳ್ತನಮಮಾ, ಭೀತಿ
ಬಡಿಯಲ್ಕೆ ನೋಳ್ಪರ್ಗೆ ! ಕೂಗಿದನ್ ಕೈಕೆಯಂ
ಬೊಬ್ಬಿರಿದು. ನೆಣವಸೆಯ ನೆತ್ತರಂ ಸೋರಿರ್ದ
ಕಣ್ಣದಂ ಕೈಲಾಂತು, ಸುಟ್ಟಿದೋರ್ದು, ಕನಲ್ದು :
“ದೇಶ ಕೋಸಲವಿದೆಕೊ ಕರತಲಾಮಲಕಮೆನೆ
ಕಣ್ಗೊಳಿಸುತಿದೆ. ನನ್ನ ರಾಮನನೆನಗೆ ಕುಡಾ
ನಯನಾಭಿರಾಮನಂ ! ಕಣ್ಣಾರ್ವಿನಂ ನೋಡಿ
ತೊರೆವೆನಸುವಂ, ಪ್ರಿಯತಮಾ ಪಿಶಾಚಿನಿ, ಕೈಕೆ ! -
ಪಾಳ್ ಕಣ್ಗಳಿವೆ ಕಾರಣಂ, ನಿನ್ನ ರೂಪಲ್ತು,      ೬೦
ರಾಣಿ ! ಈಗೆಲ್ಲಿ ಪೇಳಾ ನಿನ್ನ ರೂಪಪಾಪಂ ? -
ಓ ಅಂಧತಾಪಸ, ನಿನ್ನ ಕಂದನಂ, ನೀರ್‌ಕುಡಿವ
ಕೋಳ್ಮಿಗಂಗೆತ್ತು, ಕಣ್ಣರಿಯದಾ ಕಳ್ತಲೊಳ್,
ಶಬ್ದವೇಧೀ ಧನುರ್ವಿದ್ಯಾ ಪ್ರತಿಷ್ಠೆಯಿಂ
ಕೊಂದುದಕೆ, ವಿಧಿ ನನಗೆ ವಿಧಿಸಿದೀ ಶಾಪಮಂ ಕಾಣ್ !
ಕಾಣ್ ! – ಇದೇನ್ ಶಾಂತಿ ತುಂಬುತಿಹುದೆನ್ನಾತ್ಮಮಂ ?
ಮತ್ತಿದೇನ್ ಕಾಂತಿ ? ಅಃ ! ಬೆಳಕೆ, ನೀಂ ಕಣ್‌ಕಿಡಲ್
ಕಣ್ದೆರೆವೆಯಲ್ತೆ? ಕುರುಡಿನ ಮಹಿಮೆ ಕುರುಡಂಗೆ
ಗೋಚರಂ ! ಏಂ ದಿವ್ಯದರ್ಶನಂ ! ಓ ರಾಮ,
ಇದಕೆ ನೀನಡವಿಗೊಲಿದುದೆ? ಈಗಳರಿತೆನಯ್           ೭೦
ಕ್ರತುಪುರುಷನಂದಿತ್ತ ಸಂದೇಶದರ್ಥಮಂ !
ನನ್ನ ಮಗನಾದುದಕೆ ನಿನಗಿದೊ ನಮಸ್ಕಾರಂ !
ಧನ್ಯನಾದೆನ್, ದೇವ !” ಓಡಿದಳ್ ನೆರವೀಯಲಾ
ಗೂನಿ ಮಂಥರೆಯೊರ್ವಳಾ ವಿಕೃತಿಗೆತ್ತಣಂ
ಬೀಭತ್ಸ ಭೀತಿ ? ಕೈಕೆಯ ಕುಬ್ಜೆ ತನ್ನೆಡೆಗೆ
ಬರ್ಪನಿತರೊಳ್ ಬಂದುದೈ ಮೃತ್ಯು ದಶರಥಗೆ,
ವಿಕೃತಿಯಿದಿರೊಳ್ ಪ್ರಕೃತಿಯೊರ್ ಚೆಲ್ಪು ಬರ್ಪಂತೆ.
ದೊರೆಯುರುಳ್ದನ್ ಧರೆಗೆ !
ಅತ್ತ ಕೇಕಯಪುರದಿ,
ಮಾತುಲ ಗೃಹದಿ, ಲಲಿತಸುಖದ ನಿದ್ರಾರತಿಯ
ತೋಳ್ತೊಡೆಯ ತಳ್ಕೆಯೊಳ್ ಬೆಚ್ಚನೆಯ ವಕ್ಷದೊಳ್     ೮೦
ಪಟ್ಟಿರ್ದ ಭರತದೇವಂ ದುಃಸ್ವಪ್ನಭೀತಿಯಿಂ
ಬೆಚ್ಚಿ ಬೆಬ್ಬಳಿಸೆದ್ದು ನೋಡಿದನ್ : ನಡುರಾತ್ರಿ
ತಾರಾಖಚಿತ ನೀಲಿಮೆಯನುಟ್ಟು ನಿಂದತ್ತು
ನೀರವಂ. ತತ್ತಳಿಸಿ ನೋಡುತಿರ್ದಿರ್ದಂತೆ
ಪಜ್ಜಳಿಸುತರಿಲೊಂದು ಬಾನ್‌ಪಟದೊಳುರಿದುರಿದು
ಕರ್ಬಿತ್ತರಕೆ ಬೆಂಕೆಗೆರೆಯ ಚಿತ್ತಾರಮಂ
ಮೆತ್ತಿ ಬರೆದರಮನೆಯ ಕತ್ತಲೊಳ್ ಹುದುಗಿರ್ದ
ವಸ್ತುಗಳ್ಗಿತ್ತು ನೆಳಲಂ, ಜವಂಜವದಿಂದೆ
ಮರೆಯಾಯ್ತು ಮುಳುಗಿ. ನಿಡುಸುಯ್ದು ಶತ್ರುಘ್ನನಂ
ಕರೆದೆಳ್ಚರಿಸಿ ಭರತನೊರೆದನ್ ಕನಸನಿಂತು : ೯೦
“ಬೆಕ್ಕಸವನೇನೆಂಬೆ, ಸೋದರನೆ; ಕಂಪಿಸಿದೆ
ತನು, ನೆನೆಯೆ ಕಂಡ ರಕ್ಕಸಗನಸದಂ. ಜಿಹ್ವೆ
ತೊದಲುತಿದೆ. ಬೆಮರುಕ್ಕುತಿದೆ. ಕದಡಿದೋಲಂತೆ
ಘೂರ್ಣಿಸಿದೆ ಬುದ್ಧಿ. ಕಳವಳಕಾತ್ಮ ಕುದಿಯುತಿದೆ :
ತಿಳಿಯದಾವುದೊ ನಾಡು. ನೇಸರಿಳಿದಿದೆ. ಕಪ್ಪು
ಕವಿಯುತಿದೆ. ನಿರ್ಜನತೆ ನಿಶ್ಚಲತೆ ನೀರವತೆಗಳ್
ಮೈಗೊಂಡವೊಲ್ ಬೈಗಿನಂಬರಕ್ಕೆದುರಾಗಿ
ಪೆರ್ಬೆಟ್ಟಿನೊಂದು ಕೋಡಿನ ಬಂಡೆ ನಿಂದತ್ತು
ದುಶ್ಯಕುನದಂತೆ. ನಾನೊರ್ವನೆಯೆ ಪರದೇಶಿ
ನಡೆದಿರಲ್ಕಾ ಗಿರಿಯ ಕಣಿವೆಯೊಳ್, ಪೇಳ್ವೆನೇಂ,        ೧೦೦
ಕಿವಿಗೆ ಬಂದುದು ಗೋಳುನೀಳ್ದನಿ, ವಿಪತ್ತೆಲ್ಲಮುಂ
ನೆರೆದು ಮೊರೆದುದೆನೆ ಮಸಗಿದ ಕಡಲ ಕಡೆಹದಾ
ಹೇರಳಾ ಘೋಷದಲಿ. ಬಿರುಗಾಳಿಗರಳಿಯೆಲೆ
ನಡುಗುವಂದದೆ ನಡುಗಿ ನಾನಿರದೆ ನೋಡುತಿರೆ,
ಬಾನ್ಗೋಡೆಗೆದುರಿನಾ ಕಲ್ಗೋಡಿನಗ್ರದೊಳ್
ಕಂಡುದೊಂದಾಳ್ತನಂ, ಮೆಯ್ಗೊಂಡ ಗೋಳೆಂಬ
ತೆರದಿ. ತೆರೆಗಣ್ಣಾಗಿ ನೋಡುತಿರೆ, ಗುರುತಿಸಿದೆನಯ್
ಪಿತನನಾ ಮಸಿಯ ಚಿತ್ತಾರದೊಳ್, ತಲೆಗೆದರಿ
ಕೊಳೆಮೆಯ್ಯೊಳಿರ್ದನಂ. ಬೆಟ್ಟದುದಿಗೋಡಿಂದೆ
ಹಾರಿ ಧುಮುಕಿದನು ತಳ್ಪಲೊಳಿರ್ದ ಹೇಸಿಗೆಯ          ೧೧೦
ಮಡುವಿನೊಳ್, ತಲೆಕೆಳಗೆ ! ನೋಡುತಿರ್ದೆನೆ ಹೊರತು
ನೆರವೀಯಲಾರದಳುತಿರ್ದೆನತಿದೂರದಾ
ತೀರದಲಿ ನಿಂತು : ತೇಲಿದನವನ್ ದುರ್ಮಲದ
ಜಲಧಿಯಲಿ. ಮತ್ತೆ ಕಂಡೆನ್ ಬೊಗಸೆಗೈಯಲ್ಲಿ
ತೈಲಮಂ ಕುಡಿಯುತಿರ್ದುದನಲ್ಲದೇನೆಂಬೆ, ಕೇಳ್,
ತಿಂದನ್ ತಿಲ್ಲಾನ್ನಮಂ ಮುಳುಮುಳುಗುತೆಣ್ಣೆಯೊಳ್.
ಕಡಲೊಣಗಿತುದುರಿದನ್ ಚಂದ್ರನಂಬರದಿಂದೆ
ನೆಲಕೆ. ಕವಿದುದು ಕತ್ತಲೆಯ ಕುರುಡದೆತ್ತೆತ್ತಲುಂ
ಮುತ್ತಿ. ಪಾತಾಳಕ್ಕೆ ಭೂಮಿ ಬೀಳ್ವಂತಾಯ್ತು.
ಪ್ರಲಯಾಗ್ನಿ ಪೊತ್ತಿ ಲೋಕಂ ದಹಿಸುತಿರೆ, ತಂದೆ          ೧೨೦
ಕಾಲಾಯಸಾಸನದೊಳಸಿತ ವಸನವನಾಂತು,
ರಕ್ತವರ್ಣದ ಪುಷ್ಪಮಾಲೆಯಂ ಧರಿಸಿ, ಮೇಣ್
ಕೆಂಗಂಧಮಂ ಪೂಸಿ, ಹಿಂದುಮುಂದಾಗುತ್ತೆ
ಕಳ್ತೆಯನಡರಿ ತೆಂಕಮೊಗಮಾಗಿ ಪೋಗುತಿರ್ದನ್.
ರಾಕ್ಷಸಸ್ತ್ರೀಯೊರ್ವಳಾತನಂ ಪಿಡಿದೆಳೆದು
ಕಿಲಕಿಲನೆ ನಕ್ಕು, ಕರ್ಮೊಗದೆಡೆಯ ಪಲ್ಗಳಂ
ಬೆಳ್ಳನೆಯೆ ಚಿಲಿವ ಘೋರಕೆ ಬೆದರಿ, ಗದಗದಿಸಿ
ನೆಗೆದೆದ್ದೆನೊಡೆಯುತಾ ದುಸ್ವಪ್ನಮಂ !”
ಸೋದರಗೆ
ಗಂಟಲೊಣಗಿತು ಕೇಳುತಾ ಸ್ವಪ್ನ ವೃತ್ತಾಂತಮಂ,
ಸಂಕಟಾಶಂಕೆಗಳ ಸೂಜಿಮೊನೆಮೇಲಿರುಳ್   ೧೩೦
ಕಳೆದುದೆ ತಡಂ, ಮಾತುಲಂಗೆ ಬಗೆಗುದಿಹಮಂ
ಪೇಳ್ದಾವ ಸಂತೈಕೆಗುಂ ಹೃದಯಮೊಪ್ಪದಿರೆ,
ತೇಜಿಗಳನೇರ್ದು, ಪರಿವಾರಮಂ ಪಿಂದಿಕ್ಕಿ,
ಮಿಂಚಿದರಯೋಧ್ಯಾಭಿಮುಖಮಾಗಿ ಭರತನುಂ
ಶತ್ರುಘ್ನನುಂ. ಸುದಾಮಾ ನದಿಯನುತ್ತರಿಸಿ,
ಹ್ಲಾದಿನೀ ನದಿಯನೇಲಾಧಾನ ಪಲ್ಲಿಯೆಡೆ
ದಾಂಟಿ, ಪಿಂತಿಕ್ಕಿದರ್ ಬಹುಸಂಖ್ಯೆ ನದಿಗಳಂ
ಗಿರಿಗಳಂ ಗ್ರಾಮನಗರಂಗಳಂ, ವನಗಳಂ
ಮೇಣರಣ್ಯಂಗಳಂ, ಪಗಲೇಳುಮಿರುಳುಮೇಳ್
ಕಳೆದು; ದಿಕ್ತಟದ ದೂರದೊಳಯೋಧ್ಯಾಪುರದ           ೧೪೦
ಮೇಘ ಚುಂಬಿತ ಸೌಧಗೋಪುರಂಗಳ ಪಂಕ್ತಿ
ಪ್ರಾಭಾತ ಸುಂದರಾರುಣ ಹೇಮಕಾನ್ತಿಯೊಳ್
ಮಿರುಮಿರುಗಿ ಕರೆದು ಕಾಣ್ಬನ್ನೆಗಂ. ಕಟವಾಯ್
ನೊರೆಯ ಚೆಲ್ಲೆ; ಬೆಮರಿಂದೆ ಕೂದಲೊಡಲಿಂಗಂಟೆ,
ಮೆಯ್ ತೊಯ್ದು ತೊಟ್ಟಿಡಲ್; ಹೊಟ್ಟೆ ನೆಲಮಂ ಕೀಸುವೊಲ್
ಮೆರೆಯೆ ಹಯಗತಿ ರಯಂ; ಮಣ್‌ವೊನಲ್ ಪರಿವಂತೆ
ದಾರಿ ಧಾವಿಸೆ ಪಡಿಮೊಗಂ, ಮಿಂಚಿದುವು ತೇಜಿ.
ವಾರುವಂಗಳ ಖುರಪುಟಧ್ವನಿ, ಸಮೀರಣಂ
ಕಿವಿವೊಗುವ ರಭಸಂ, ನಿರಂತರೋಚ್ಛ್ಪಾಸದಿಂ
ತಿದಿಯೊತ್ತಿದಂತೇದುತಿರ್ದಳ್ಳೆಗಳ ರವಂ        ೧೫೦
ಕಿರಿದಾಗೆ, ಕುರಿತು ಶತ್ರುಘ್ನನಂ : “ಸೋದರನೆ,
ಅರಳಿದೆ ಜಗನ್ನಯನಮಾದೊಡಂ, ಮನುನಗರಿ
ಮೂಗುವಟ್ಟಿದೆ ನಿದ್ದೆಯೊಳಗದ್ದವೋಲ್ ! ಜನದ
ಕೋಲಾಹಲಂ, ಗೀತ ವಾದ್ಯ ಮಧುರಸ್ವನಂ,
ಕೇಳದಿಹುದಿನಿತು ಬಳಿಸಾರ್ದೊಡಂ. ಮೇಣಗರು
ಚಂದನಂಗಳ ಧೂಪಧೂಮದಾಮೋದಮುಂ
ಮೂಗಿಂಗೆ ನಲ್ಗಂಪನೀಯದಿಹುದಿತ್ತಣ್ಗೆ
ತಾನೆಂದಿನಂದದೊಳೆ ತೀಡುತಿಹುದಾದೊಡಂ
ಮೆಲ್ಲುಸಿರ್ಗಾಳಿ. ಕೋಗಿಲೆ ಗಿಳಿಗಳುಲಿಯಿಲ್ಲಮಾ
ಪುರೋದ್ಯಾನತರುಗಳಲಿ. ಪೂಗಳ್ ಮೊಗಂಜೋಲ್ದು    ೧೬೦
ತೂಗುತಿವೆ ಬಾಡಿ. ಪಾಳ್ಮನೆಯಂತೆ ತೋರುತಿದೆ
ನಿರ್ಜನಂ, ನಿಶ್ಚಲಂ, ನೀರವಂ, ನಿರ್ಜೀವ
ನಿಸ್ತೇಜಮೀ ಮಹಾನಗರಿ. ನೋಡದೊ, ಅಲ್ಲಿ,
ವೈಜಯಂತಿಯ ಪೆಸರ ಪೆರ್ಬಾಗಿಲೀಚೆಯೊಳ್
ಶೂನ್ಯಮಾದಂತಿಹುದು ಪಿತೃದೇವ ಮಂದಿರಂ.
ಪೂಜ್ಯ ಪಿತೃದೇವತೆಗಳಿಗೆ ವಂದನಂ ಗೆಯ್ದು
ಪುರದೊಳಗೆ ಪೋಗುವಂ ಬಾ” ಎನುತ್ತವರಜಂ
ವೆರಸಿ ಭರತಂ ಪೊಕ್ಕನಾ ದೇವನಿಲಯಮಂ,
ತುಳುಂಕೆ ಗುರುಭಕ್ತಿ.
ಪೊಕ್ಕುದೆ ತಡಂ, ಬೆಕ್ಕಸಂ
ಬಡಿದಂತೆವೊಲ್, ನಿಂದರಾಯಿರ್ವರುಂ, ನಟ್ಟು           ೧೭೦
ಮುಂದಕೆವೆಯಿಕ್ಕದಾ ದಿಟ್ಟಿ. ವಿಗ್ರಹಗೃಹದಿ
ಕೀರ್ತಿಶೇಷ ದಿನೇಶ ವಂಶದ ನೃಪಾಲರಾ
ಪ್ರತಿಮೆಗಳೊಡನೆ ತುತ್ತತುದಿಮೂರ್ತಿ ತಾನಾಗಿ
ಮೆರೆದುದದೊ ದಶರಥಪ್ರತಿಮೆ ! ಓರೊರ್ವರಂ
ಮೊಗಂ ನೋಡಿದರ್ ಸೋದರರ್, ಮಾತುದೋರದಾ
ಭೀತಿ ಸಂಶಯ ದಗ್ಧ ಹೃದಯ ಸಂದಿಗ್ಧತೆಯ
ಮೌನಮುದ್ರೆಯಲಿ. ಬೆದರಿದರ್ ತಾಮಿರ್ವರುಂ
ತಮ್ಮೆರ್ದೆಯೊಳಿರ್ದಂಜಿಕೆಯ ಮೂಕತೆಗೆ ನುಡಿಯ
ನಾಲಗೆಯನೀಯೆ. ನಿಡುಸುಯ್ಯುತ್ತೆ ತಿರುಗಿದರ್;
ಕುದುರೆಗಳನೇರಿದರ್; ವಾಘೆ ರಾಘೆಯ ಬಲದಿ            ೧೮೦
ವಾಯು ವೇಗವ ಮೀರ್ದು ಪೊಕ್ಕರತಿ ತವಕದೊಳ್
ಪೊಳಲ ಪೆರ್ಬಾಗಿಲಂ : ಗುಡಿಸದಿವೆ ಬೀದಿಗಳ್.
ಮುಚ್ಚದಿವೆ ಮನೆಮನೆಯ ಬಾಗಿಲ್ಗಳುಂ, ಪೆಣಂ
ಬಾಯ್ವಿಟ್ಟವೋಲಂತೆ, ಬದುಕಿರ್ಪ ಚಿಹ್ನೆಯನೆ
ನೀಗಿ. ರಂಗೋಲಿಗಳ ಕುರುಹಿಲ್ಲ; ಪೊಸತಳಿರ್
ತೋರಣದ ಸುಳಿವಿಲ್ಲ. ಕೇಳಿಸದು ಗುಡಿಗಳಲಿ
ಗಂಟೆದನಿ. ಪರಿಮಳದ್ರವ್ಯಗಳ ಕಂಪಿಲ್ಲ. ಮೇಣ್
ಮಂದಿಯ ಚಲನೆಯಿಲ್ಲ : ಹಾಳು ಹಂಪೆಯ ಹೊಕ್ಕ
ಕನ್ನಡಿಗರಂತಾದರೈ ಕುದಿವೆದೆಯ ಭರತನುಂ
ಶತ್ರುಘ್ನನುಂ! ದುರ್ದಿನದ ಮಂಕು ಕವಿದಂತಿರ್ದ          ೧೯೦
ಪತ್ತನದ ಪೆರ್ದಾರಿಗಳಲಿರದೆ ಪರಿದೋಡಿ
ತಂದೆಯರಮನೆಯಂ ಪ್ರವೇಶಿಸಲ್, ಮೈದೋರ್ದುದೈ
ಶೂನ್ಯತಾ ವ್ಯಾಘ್ರವದನಂ, ದುಷ್ಪಮಯಮೆನಲ್
ಕಟು ವಿಕಟಹಾಸ್ಯೋಗ್ರ ಭೀಕರಂ.
ತಲ್ಲಣಿಸಿ,
ತನ್ನ ತಾಯರಮನೆಗೆ ಶತ್ರುಘ್ನನಂ ಕಳಿಪಿ,
ಭರತನೈದಿದನೊಡನೆ ಜನನಿ ಕೈಕೆಯ ರತುನ
ಮಂದಿರಕೆ. ಪಾಳ್ಮನೆಯ ತೆರದಿನೆಸೆದಳ್ ಮಾತೆ,
ನಿರ್ಜನೆ, ನಿರಾಭರಣೆ, ನಿಶ್ಚಲೆ, ರವವಿಹೀನೆ.
ವ್ಯಥೆತಿಮಿರ ಪರಿವೃತೆಯನಳ್ಕಜದಿನೀಕ್ಷಿಸುತೆ
ಬೆದರೆದೆಯ ಕಂದನಮ್ಮನ ಕಾಲ ಮೇಲುರುಳಿದನ್.     ೨೦೦
ಬೆಸಗೊಂಡನಯ್ಯನೆಲ್ಲಿದನೆಮ್ಮ ಪೊಳಲಿಗೇಂ
ಕೇಡಡಸಿತರಮನೆಯಿದೇಕೆ ಸಿರಿಗೆಟ್ಟಂತೆ
ಕಂದಿಹುದು? ನಿನ್ನಿರವಿದೇಕೆ ದುಶ್ಶಕುನಮಂ
ಸಾರುತಿದೆ ?- ಕಂದನುಬ್ಬೇಗಮಂ ಕಂಡಬ್ಬೆ
ನುಡಿಗೆಟ್ಟವೋಲಳುತಳುತೆ ಸುತನನೆತ್ತಿದಳ್;
ಮತ್ತೆ ಬಿಗಿಯಪ್ಪಿದಳ್; ಮತ್ತೆ ಮುಂಡಾಡಿದಳ್;
ನೋಡಿದಳ್ ಪುರ್ಚ್ಚೇರ್ದರಂತೆವೋಲ್. ಬೆಕ್ಕಸದಿ
ಬಿಟ್ಟಾಲಿಯಾಗಿ ಭರತನಿರೆ, ಗದ್ಗದಕಂಠೆ ತಾಯ್ :
“ಮನ್ನಿಸೆನ್ನನ್, ಮಗನೆ; ಪಾಪಿಯೆನ್ !” “ಮಾಣ್, ತಾಯೆ,
ಮಾಣಾತ್ಮನಿಂದೆಯನ್. ನಿನ್ನಪ್ಪುಗೆಯ ಪಡೆಯೆ           ೨೧೦
ಪಾಪಮನಿತೇಂ ಪುಣ್ಯಶಾಲಿ? ಮೇಣೆನಗದೇಂ
ನೇರ್ಗಿರಿಯನೇಂ?” “ದಿವಂಗತ ದಶರಥ ಕುಮಾರ,
ವನವಾಸಿ ರಘುರಾಮ ಹೃದಯಚಂದ್ರ ಚಕೋರ,
ಪೆತ್ತಳೆಂದೀ ನೀಚಳನ್ನೇಕೆ ಪೊಗಳಿದಪೆ? ಕೇಳ್,
ಕೇಡನೆಸಗಿದೆ ಬೇಡಿ. ವರವೆನ್ನ ಭಾಗಕ್ಕೆ
ಶಾಪವಾದುದೊ, ಕಂದ. ಮುಂದುಗಾಣದೆ ತಂದೆನೈ
ತಂದೆಗಪಮೃತ್ಯುವಂ ! ಮೇಣರಣ್ಯಕ್ಕಟ್ಟಿದೆನ್
ಕೌಸಲೆಯ ಕಂದನಂ. ಕಟ್ಟಿದೆನ್ ಕುತ್ತಿಗೆಗೆ
ತಿರೆಹೊರೆಯರೆಯನೆನ್ನ ಕಂದನ ಕಂದಳಕ್ಕೆ !
ಪುತ್ರಾಭ್ಯುದಯ ಮೋಹದ ತಮಸ್ಸು ತೀವಿರ್ದ            ೨೨೦
ಲೋಭ ಪೈಶಾಚಿಗೀ ಪಿರಿಯ ಬಲಿಯಹುದೆಂದು
ಮುನ್ನಮಾನರಿಯಲಾರದೆ ಹೋದೆ. ಹಾಳಾದೆ !
ನಿನ್ನ ಬಾಳಿನ ಪಾಲ್ಗೆ ವಿಷವಾದೆ ! ರವಿಕುಲದ
ಚಂದನಶ್ರೀವನಕೆ ದಾವಾಗ್ನಿಯಾದೆ ! ಹಾ,
ಲೋಕನಿಂದೆಯ ತೋರುಬೆರಳಿಗೆ, ಕರುಣೆ ವತ್ಸ,
ಹೇಸು ಗುರಿಯಾದೆ !”
ಕಾರ್ಮೊದಲ ಬಿರುಗಾಳಿಗುರೆ
ಬೇರದುರಿ ತಲೆದಿರುಗಿ ತೂಗಿತೊನೆಯುತ್ತಿರ್ಪ
ಮಲೆವಣೆಯ ಪೆರ್ಮರಕೆ ಸಿಡಿಲು ಬಡಿದಂತೆ ಆ
ಪಿತೃಮರಣವಾರ್ತೆಗಗ್ರಜನ ವನವಾಸದಾ
ಸುದ್ದಿ ಸಂಘಟ್ಟಿಸೆ ನೆಲಕ್ಕುರುಳ್ದುದು ಕೂಡೆ      ೨೩೦
ಹಡೆದೊಡಲಿನಡಿಗೆ ಭರತನ ಕರುಣಮಯವಿಗ್ರಹಂ.
ಕುಳಿರೆಲರಿಗನುಕಂಪಿಸುವ ಲತೆಯವೋಲ್ ಕೈಕೆಯುಂ
ನಡುನಡುಗಿ, ಕಂದನಂ ನೆಗಹಿ ಮೈಸೋಂಕಿನಲಿ
ಕುಳ್ಳಿರಿಸಿಕೊಂಡು ಸಂತೈಸುತೆಂದಳ್ : “ಮಗನೆ,
ಸಾತ್ವಿಕ ಸರಳಜೀವಿ ನೀನೆಂತರಿವೆಯೆನ್ನ ಈ
ಹೃದಯಮಂ? ತಾಯಿಯೊಲ್ಮೆಗೆ ಮಗನ ಮೇಲ್ಮೆಗಿಂ
ಬಯಕೆ ಬೇರುಂಟೆ ? ನಿಃಸ್ವಾರ್ಥದಾ ಬಯಕೆಗಿಂ
ಪೆರತು ಕಣ್ಣೇನೊಳದೆ ಧರ್ಮಕ್ಕೆ ? ಕೇಳ್, ಕೌಸಲ್ಯೆ
ಪಡೆದಂಗೆ ನೀನಿಲ್ಲದಂದು ಪಟ್ಟಂಗಟ್ಟೆ
ಹೊಂಚಿ ಹವಣಿಸುತಿರ್ದುದಂ ನಿನ್ನೊಲುಮೆ ದಾದಿ        ೨೪೦
ಕೇಳ್ದು ಬಂದರುಹಿದಳ್. ಹುರಿದುಂಬಿಸುತ್ತೆನಗೆ
ತಿಳುಹಿದಳುಪಾಯಮಂ : ಮದುವೆ ನಿಲ್ವಂದೆನಗೆ
ರಾಜೇಂದ್ರನಿತ್ತ ವರಗಳನೊಡ್ಡಿ ತಡೆಯಲ್ಕೆ
ಪಟ್ಟಾಭಿಷೇಕಮಂ, ದೂರದೂರಿಂದೆ ನೀಂ
ಬರ್ಪಂಬರಂ. ಆ ಪ್ರಯತ್ನಮಿಂತಾದುದಯ್
ದುರ್ವಾರ ದುರ್ಜ್ಞೇಯ ದುರ್ವಿಧಿಯ ಲೀಲೆಯಿಂ.
ಕಂದ, ನಿನ್ನೆದೆಯನಾಂ ಬಲ್ಲೆನಾದೊಡಮೆನ್ನ
ತಾಯ್ಮಧುರ ವಾತ್ಸಲ್ಯದಾ ತಿಕ್ತ ಕರ್ತವ್ಯಮಂ
ಮಾಣ್ದೆಂತುಟಿರಲಿ? ದೊರೆಯೆನಗಿತ್ತ ವರಗಳಿಂ
ನಿನಗೆ ರಾಜ್ಯದ ಪಟ್ಟದಧಿಕಾರವಿರ್ಪುದಂ        ೨೫೦
ತೊರೆಯೆ ನಿನಗಲ್ಲದೆನಗದೇನಿದೆ ಪಸುಗೆಪಾಳಿ? -
ಬಿದಿಗೈದ ಹದನಕಿನ್ ರೋದಿಸಿದರೇನ್, ಮಗುವೆ?
ಕಡೆಗೆಲ್ಲರೈದುವೆಡೆಗೈದಿದನ್ ಮುದಿಯರಸು,
ರಾಮಲಕ್ಷ್ಮಣ ನಾಮಮಾತ್ರವನೆ ಜಪಿಸುತ್ತೆ,
ಮರೆತು ಕೈಕೆಯ ಕುವರನಂ. ರಾಮನಾದೊಡಂ
ನಡೆದನಡವಿಗೆ ಪಿತನ ವಾಕ್ಯಪರಿಪಾಲನೆಗೆ
ಪದಿನಾಲ್ಕು ಬರಿಸಂಬರಂ. ನೆಲಮರಾಜಕಂ.
ನೀನಲ್ಲದಿನ್ನಾರ್ ಸುಜನಮೂರ್ತಿಗಳಿಹರ್, ಪೇಳ್,
ಪ್ರಜಾಭ್ಯುದಯಕಾಂಕ್ಷಿಗಳ್ ಕೋಸಲಕೆ?”
“ನಿಲ್ ! ನಿಲ್      ೨೬೦
ಕೊಲೆಗೈಯದಿರ್, ತಾಯೆ, ಹಾಲೂಡಿದೆದೆಯೊಳೆಯೆ
ಹಾಲಾಹಲವನುಗುಳಿ !” ಎನುತ್ತಬ್ಬೆಯಿಂ ಸಾರ್ದು
ದೂರಕ್ಕೆ “ಪೆತ್ತಂದೆ ಕೊರಳಂ ಮುರಿಯದೇಕೆ
ಕಾಯ್ದೆ ನೀನೀ ಪೊಳ್ತುಬರೆಗಂ? ಕುಮಾರನಂ
ಪಡೆದುಂ ನಿನಗೆ ಬಂಜೆತನಮೊದವಿದಂತಾಯ್ತೆ,
ಪೇಳ್, ಭರತಮಾತೆ ? ನಿನಗನ್ಯನೆ ರಘೂದ್ವಹಂ?
ರಾಮನಂ, ಧಶರಥಪ್ರಾಣನಂ, ಕಾನನಕೆ
ನೂಂಕಿ, ವೈಧವ್ಯ ದಿವಮಂ ಪಡೆದೆ ನೀನಲ್ತೆ,
ಧರೆಗೆ ಮೇಣೆಮಗನಾಥತ್ವಮಂ ? – ಬದುಕೆನಗೆ
ಸಾವಿಗೆಣೆ ಅಣ್ಣದೇವನನುಳಿದು ; ಪಾಳ್‌ಮಣ್ಣು ಈ        ೨೭೦
ಕೀಳ್ ನೆಲದ ಸಿರಿ! ತೀರ್ದಯ್ಯನುಸಿರನೆಂತುಂ ಪೆಡಂ
ಮಗುಳಿಸುವುದಸದಳಂ : ಪಿರಿಯಣ್ಣನಂ ಮರಳ್ಚಿ
ಕರೆದು ತಂದಪೆನಡವಿಯಿಂ. ಬರಲ್ಕೊಪ್ಪದಿರೆ,
ತಾಯಾತ್ಮದೊಳ್ಪಿಂಗೆ ಹೊಣೆ ಕಂದನದರಿಂದೆ
ರಾಮಸೇವೆಯೊಳಿರ್ದು ನೀಂ ಗೈದ ಕುಕೃತಮಂ
ತವಿಸುವೆನು, ಕೇಳ್, ವಿಪಿನಾಶ್ರಮದ ತಪೋಜೀವನದ
ಸುಕೃತ ತೀರ್ಥದಲಿ !”
ಎನುತ್ತಲ್ಲಿಂ ಜುಗುಪ್ಸೆಯಿಂ
ಪೊರಮಡುವ ತನುಜನಂ ಬಂದೆರಗಿ ಕಾಲ್ವಿಡಿದು
ಬಾಚಿ ತಬ್ಬಿದಳು ಮೊಳಕಾಲೂರಿ ! ದೀನಾಸ್ಯೆ,
ಸುತ ತಿರಸ್ಕಾರ ಕಟು ಶೂಲದಾಘಾತದಿಂ      ೨೮೦
ಬಿರಿದೆದೆಯ ರಾಣಿ, ಮೇಣಶ್ರುಮಲಿನ ಕಪೋಲೆ ತಾಂ
ಮೊಗವೆತ್ತಿ ಮಗನ ಮೊಗಮಂ ಕರುಣದೈನ್ಯದಿಂ
ನೋಡಿ ಗೋಳಾಡಿದಳ್, ಬಿನ್ನಹಕೆ ಬಾಯ್ ಬಂದ
ತೆರದಿ : “ಕೈಬಿಡದಿರೆನ್ನಂ, ಮಗನೆ, ಕೆಟ್ಟಳೆನ್ !
ಜಗವೆ ಕೈಬಿಟ್ಟಳೆನ್ ! ನೂಂಕು ನರಕಕೆ; ಸಹಿಸಿ
ಬಹೆನೊ ಕೇಡಂ ತವಿಸಿ ; ನೂಂಕದಿರೊ ಶೂನ್ಯತೆಗೆ !
ಹೊಲೆಗೆ ಹೊಲೆ ಮಡಿಯಲ್ತು; ಕೊಲೆಗೆ ಕೊಲೆ ಪಡಿಯಲ್ತು :
ನೋವು ನೋವಿಗೆ ಸಾವುಮಲ್ತು. ನಾಂ ಗೈದುದನೆ
ನೀಂ ಗೈದರೇಂ ತಪ್ಪು ತಪ್ಪಿನಿಂದೊಪ್ಪಮಂ
ಪೊರ್ದುವುದೆ? ಕಾಲ್ವಿಡಿದು ಬೇಡುತಿಹೆನಿದೊ, ಕಂದ.    ೨೯೦
ಬಂದಪೆನ್ ಕರೆದೊಯ್ಯೊ ನಿನ್ನ ಕೂಡೆನ್ನನುಂ
ಮಂಗಳದ ಮನೆಗೆ, ನಡೆದಪೆನೊ ನೀನೆಂದಂತೆವೋಲ್
ನೆಳಲಂತೆ, ಮೂಕವಿನಯದಲಿ ! ಕೇಳ್, ಕೈಕೆಗಿನ್
ಬಾಯಿಲ್ಲೊ ! ಕಲ್ಲಾದಹಲ್ಯೆಯಂ ನುಡಿಸಿದಾ
ರಾಮನಡಿ ಸೋಂಕಿಗುಂ ಕಿಡದೆನ್ನ ಕಲ್‌ತನಂ !
ಕೈಬಿಡದೆ ಕಾಪಿಡೆನ್ನಂ !”
ತನ್ನಡಿಗೆ ಮುಡಿಚಾಚಿ
ಕೆಡೆದಂಬೆಯಂ ಕರಗಿ ಕಂಬನಿಗರೆದು ಸುಯ್ದು
ಬಾಗಿ ಬಿಗಿದಪ್ಪಿದುದು, ಜನನಿ ರಸವಶೆಯಾಗೆ,
ಭರತಕ್ಷಮಾ ಕಲ್ಪತರು ಮೃದು ಬಾಹುಶಾಖೆ.
ಬಗೆಯ ಮೈಲಿಗೆ ಮರುಗುವೆದೆಯ ಕುದಿಬೇನೆಯಿಂ      ೩೦೦
ಮಡಿಯಪ್ಪುದೊಳಸೋರದಿರ್, ಕೈಕೆ. ಕೇಡುಂಟೆ ಪೇಳ್
ತಿರೆಯೊಳ್ಪಿಗಿಂಬಾದ ರಾಮನನುಜನ ತಾಯ್ಗೆ ?
ಕಣ್ಗೆಡದಿರಂಜದಿರ್, ಪಾಪಿಗುದ್ಧಾರಮಿಹುದೌ
ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್, ಕೇಳ್, ತಾಯಿ :
ಬೆರಳಿಚದ ಕೂರ್ಮೊನೆಯ ಮಿಡಿವ ಹಿಂಸೆಗೆ ತಂತಿ ತಾಂ
ಬೀಣೆಯಿಂಚರವೀಯುವಂತೆ, ನೀನುಗುರಾಗಲಾ
ವೈಣಿಕ ವಿಧಿಯ ಕೈಗೆ, ಪೊಣ್ಮಿದತ್ತಿಂಪಾಯ್ತು ಮೇಣ್
ಭಗವದ್ ರಸಧಿಯಾಯ್ತು ರಾಮಾಯಣ ಬೃಹದ್‌ಗೀತೆ !


********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ