ಪುಟಗಳು

05 ಅಕ್ಟೋಬರ್ 2015

೧೩) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಏ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಏ)
೩೮೦. ಏಕನಾದ ಹಿಡಿದುಕೊಳ್ಳು = ತಿರುಪೆ ಎತ್ತು, ಭಿಕ್ಷೆಗೆ ಹೋಗು
(ಏಕ ನಾದ = ವಾದ್ಯ ವಿಶೇಷ, ದಂಡಿಗೆ)
ಪ್ರ : ಇವರ ದೆಸೆಯಿಂದ ನನಗೀಗ ಏಕನಾದ ಹಿಡಿದುಕೊಳ್ಳೋದೊಂದು ಬಾಕಿ ಉಳಿದದೆ.
೩೮೧. ಏಗಲಾಗದಿರು = ಬಾಳ್ವೆ ಮಾಡಲಾಗದಿರು, ನಿಭಾಯಿಸಲಾಗದಿರು
(ಏಗು = ನಿಭಾಯಿಸು, ನಿರ್ವಹಿಸು)
ಪ್ರ : ಕುಡುಕ ಗಂಡನ ಜೊತೆ ನಾನು ಏಗಾಕಾಗಲ್ಲ
೩೮೨. ಏಟು ಹಾಕು = ಗುರಿ ಇಡು, ಹೊಂಚು ಹಾಕು
(ಏಟು = ಗುರಿ, ಲಕ್ಷ್ಯ)
ಪ್ರ : ಇದ್ದೂ ಇದ್ದೂ ನೀನು ಸರಿಯಾದ ಮಾಲಿಗೇ ಏಟು ಹಾಕಿದ್ದೀಯಾ !
೩೮೩. ಏಟು ಕೊಟ್ರೂ ಈಟೆ ಎನ್ನು = ಎಷ್ಟು ಕೊಟ್ರೂ ಇಷ್ಟೇ ಅನ್ನು, ಕಡಿಮೆ ಎನ್ನು
(ಏಟು = ಎಷ್ಟೊಂದು, ಬಹಳ; ಈಟು = ಇಷ್ಟೇ ಇಷ್ಟು, ಕಡಮೆ)
ಪ್ರ :ಏಟು ಕೊಟ್ರೂ ಈಟೇ ಅನ್ನೋ ಅವಳ ಯೋಗ್ತೆ ನನಗೆ ಗೊತ್ತಿಲ್ವ?
೩೮೪. ಏನು ಅನ್ನೋರು ಇರದಿರು = ವಿಚಾರಿಸಿಕೊಳ್ಳುವ ಜನ ಇರದಿರು
ಪ್ರ : ಮದುವೆ ಮನೆಗೆ ಹೋದ್ರೆ ಏನು ಅನ್ನೋರೆ ದಿಕ್ಕಿರಲಿಲ್ಲ.
೩೮೫. ಏನು ಉಡೋದು ಏನು ತೊಡೋದು ಎನ್ನುವಂತಿರು = ಕಣ್ಣಿಗೆ ಬೇಕಾದ ಒಡವೆವಸ್ತ್ರ ಸಮೃದ್ಧವಾಗಿರು
ಪ್ರ : ಅವರ ಮನೇಲಿ ಏನು ಉಡೋದು ಏನು ತೊಡೋದು ಎಂದು ಗಕ್‌ಪಟ್ಲು ಹಿಡಿಯುವಷ್ಟು ಬಿದ್ದದೆ.
೩೮೬. ಏನು ತಿನ್ನೋದು ಏನು ಬಿಡೋದು ಎನ್ನುವಂತಿರು = ಕಣ್ಣೀಗೆ ಬೇಕಾದ, ನಾಲಗೆಗೆ ರುಚಿಯಾದ ಭಕ್ಷ್ಯ ಭೋಜ್ಯಗಳು ಯಥೇಚ್ಛವಾಗಿರು
ಪ್ರ : ಏಣು ತಿನ್ನೋದು ಏನು ಬಿಡೋದು ಎನ್ನುವಷ್ಟು ತರಾವರಿ ಅಡುಗೆ ಮಾಡಿಸಿದ್ದರು.
೩೮೭. ಏನು ಅನ್ನೋಳಿರು = ಹೆಂಡತಿ ಇರು.
ಸಾಮಾನ್ಯವಾಗಿ ಹಳ್ಳಿಗಾಡಿನಲ್ಲಿ ಹೆಂಡತಿ ಗಂಡನನ್ನು, – ಪಟ್ಟಣ ನಗರಗಳಲ್ಲಿ ‘ರೀ’ ಎಂದು ಸಂಬೋಧಿಸಿದಂತೆ, ಸಂಬೋಧಿಸದೆ- “ಏನು, ಕೇಳಿಸ್ತ?” “ಏನೀ, ಕೇಳಿಸ್ತ?” ಎಂದು ಸಂಬೋಧಿಸುವುದು ರೂಢಿ. ಅದರ ಪುಡಿಗಂಟು ಈ ನುಡಿಗಟ್ಟು.
ಪ್ರ : ಏನು ಅನ್ನೋಳಿರದ ಮನೆಯಲ್ಲಿ ಏನಿದ್ದರೇನು?
೩೮೮. ಏರಸಿಂಗಿ ಇಳಿಸಿಂಗಿಯಾಟವಾಡು = ಒಮ್ಮೆ ಅಟ್ಟಕ್ಕೇರಿಸಿ ಮತ್ತೊಮ್ಮೆ ಬುಟ್ಟಿಗೆ ಹಾಕಿ ತುಳಿ
(ಏರಸಿಂಗಿ = ಉದ್ರೇಕ, ಇಳಿಸಿಂಗಿ = ಶಮನ) ಏರಸಿಂಗಿ ಇಳಿಸಿಂಗಿ ಎಂಬುವು ಗಿಡಮೂಲಿಕೆ ಬೇರುಗಳು. ಏರಸಿಂಗಿ ಬೇರಿಗೆ ಉದ್ರೇಕಿಸುವ ಶಕ್ತಿ ಇದೆಯೆಂದೂ, ಇಳಿಸಿಂಗಿ ಬೇರಿಗೆ ಶಮನಗೊಳಿಸುವ ಶಕ್ತಿ ಇದೆಯೆಂದೂ ನಂಬಿಕೆ. ಜನಪದ ವೈದ್ಯ, ಮದ್ದು ಈ ನುಡಿಗಟ್ಟಿಗೆ ಮೂಲ.
ಪ್ರ : ನಿನ್ನ ಏರಸಿಂಗಿ ಇಳಿಸಿಂಗಿಯಾಟ ನನ್ನ ಹತ್ರ ನಡೆಯಲ್ಲ.
೩೮೯. ಏರಿಗೆ ಮೋಳೆ ಹಾಕೋ ಕೆಲಸ ಮಾಡು = ಮನೆ ಹಾಳು ಕೆಲಸ ಮಾಡು
(ಏರಿ = ಕೆರೆಯ ನೀರು ನಿಲ್ಲಲು ಹಾಕಿರುವ ಕಟ್ಟೆ, ಹುದಿ; ಮೋಳೆ = ತೂತು, ರಂದ್ರ) ಆದರೆ ತಮಿಳಿನಲ್ಲಿ ಏರಿಗೆ, ಕೊಳ, ಕೆರೆ ಎಂಬ ಅರ್ಥವೂ ಇದೆ. ಹಿಂದೆ ಕನ್ನಡದಲ್ಲಿ ಆ ಅರ್ಥವೂ ಇತ್ತು ಎಂಬುದಕ್ಕೆ ‘ದೊಡ್ಡೇರಿ’ ‘ಹಾವೇರಿ’ ಎಂಬ ಊರ ಹೆಸರುಗಳು ಸಾಕ್ಷ್ಯ ನೀಡುತ್ತವೆ. ಹುಲಿಕುಂಟೆ, ಕೋಣನಕುಂಟೆ, ಆನೆಗೊಳ ಎಂಬ ಹೆಸರುಗಳು ಆಯಾ ಪ್ರಾಣಿಗಳ ನೀರ್ದಾಣವಾಗಿದ್ದುದನ್ನು ಸೂಚಿಸುತ್ತದೆ. ಹಾಗೆಯೇ ಆವು + ಏರಿ = ಆವೇರಿ ( ಆಕಳಕೆರೆ) ಎಂಬುದು ಜನರ ಬಾಯಲ್ಲಿ ಹಾವೇರಿಯಾಗಿದೆ. ಹಾಗೆಯೇ ದೊಡ್ಡು ಎಂಬ ಕಾಡು ಪ್ರಾಣಿ (ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಅದರ ಪ್ರಸ್ತಾಪವಿದೆ)ಯ ನೀರ್ದಾಣ ಎಂಬ ಅರ್ಥದಲ್ಲಿ ದೊಡ್ಡೇರಿ ಎಂಬ ಹೆಸರು ಬಂದಿರಬಹುದೆ ಎಂಬುದು ಚಿಂತನಾರ್ಹ. ಅಥವಾ ದೊಡ್ಡಕೆರೆ ಎಂಬ ಅರ್ಥವೂ ಇರಬಹುದು. ಒಟ್ಟಿನಲ್ಲಿ ಏರಿ ಎಂಬುದಕ್ಕೆ ಕೆರೆ, ಕೊಳ ಎಂಬ ಅರ್ಥ ಕನ್ನಡದಲ್ಲಿತ್ತು ಎಂಬುದಕ್ಕೆ ಇವು ಸಾಕ್ಷಿ. ತಮಿಳಿನಲ್ಲಿ “ಏರಿಯಿಕ್ಕು ಏರಿ ಪಗೈ; ಇಡೆಯನ್‌ಕ್ಕು ಇಡಿಯನ್ ಪಗೈ” ಎಂಬ ಗಾದೆಯೇ ಇದೆ. ಅದರ ಅರ್ಥ ಕೆರೆಗೆ ಕೆರೆ ಶತ್ರು, ಕುರುಬ (ಯಾದವ)ನಿಗೆ ಕುರುಬ ಶತ್ರು ಎಂದು.
ಪ್ರ : ಏರಿಗೆ ಮೋಳೆ ಹಾಕಿದೋನು, ಊರಿಗೆ ಹಾಕದೆ ಬಿಟ್ಟಾನ?
೨೯೦. ಏರು ಬೀಳು = ದರ್ದಿರು, ನೋವಿರು
(ಏರು = ಗಾಯ, ದರ್ದು)
ಪ್ರ : ಏರು ಬಿದ್ದೋನು ಹೋಗ್ತಾನೆ, ನಾನು ಯಾಕೆ ಹೋಗಲಿ?
೩೯೧. ಏಳು ಅಂದ್ರೆ ಏಳು ಕೂಡು ಅಂದ್ರೆ ಕೂಡು = ಆಜ್ಞಾನುವರ್ತಿಯಾಗಿರು, ಓಡಿದರೆ
ಓಡುವ, ನಿಂತರೆ ನಿಲ್ಲುವ, ಕುಂತರೆ ಕೂಡುವ ನೆರಳಿನಂತಿರು.
ಪ್ರ : ಅವನೊಬ್ಬ ಗಂಡಸ ? ಹೆಂಡ್ರು ಏಳು ಅಂದ್ರೆ ಏಳ್ತಾನೆ, ಕೂಡು ಅಂದ್ರೆ ಕೂಡ್ತಾನೆ.
೩೯೨. ಏಳು ಮದ್ದಾನಕೇಳು = ತಡವಾಗಿ ಏಳು, ತೀರ ಹೊತ್ತೇರಿದ ಮೇಲೇಳು.
(ಮದ್ದಾನ < ಮಧ್ಯಾಹ್ನ = ನಡುಹಗಲು. ಏಳು ಮದ್ದಾನ = ಮಟಮಟ ಮಧ್ಯಾಹ್ನ ಆಗಬೇಕಾದರೆ ‘ಗಳಿಗೆ’ ತರದ ಏಳು ಕಾಲಘಟ್ಟಗಳು ಆಗಬೇಕೆಂದು ತೋರುತ್ತದೆ. ಇದು ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಲೆಕ್ಕಾಚಾರ)
ಪ್ರ : ಗಾದೆ – ಏಳು ಮದ್ದಾನಕೆದ್ದೋಳಿಗೆ ಹೇಲೋಕೆ ಜಾಗಿಲ್ಲ.
೩೯೩. ಏಳು ಕೆರೆ ನೀರು ಕುಡಿದಿರು = ಲೋಕಾನುಭವ ಬೇಕಾದಷ್ಟಿರು.
ಏಳು ಸಂಖ್ಯೆಗೆ ಭಾರತೀಯರು ಕೊಟ್ಟಿರುವ ಪ್ರಾಶಸ್ತ್ಯದ ಬಗೆಗೆ ತಳಮಟ್ಟದ ಸಂಶೋಧನೆ ಆಗಬೇಕಾದ ಅಗತ್ಯವಿದೆ. ಸಪ್ತ ವಾರಗಳು, ಸಪ್ತ ಸ್ವರಗಳು, ಸಪ್ತ ವರ್ಣಗಳು, ಸಪ್ತ ಕುಲಪರ್ವತಗಳು, ಸಪ್ತ ಸಮುದ್ರಗಳು, ಸಪ್ತಪದಿ – ಹೀಗೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಸಪ್ತದ ಹಿಂದಿನ ಗುಪ್ತ ಸಂಗತಿ ಏನು?
ಪ್ರ : ಏಳು ಕೆರೆ ನೀರು ಕುಡಿದಿರೋ ಬಡ್ಡೀಮಗನಿಗೆ ನಿನ್ನ ಹುನ್ನಾರ ಅರ್ಥವಾಗಲ್ವ?
೩೯೪. ಏಳು ಹನ್ನೊಂದಾಗು = ಹಾಳಾಗು, ನಾಶವಾಗು
(ಏಳು ಹನ್ನೊಂದು = ಹದಿನೆಂಟು) ಪಾಂಡವರದು ಏಳು ಅಕ್ಷೋಹಿಣಿ ಸೈನ್ಯ, ಕೌರವರದು ಹನ್ನೊಂದು ಅಕ್ಷೋಹಿಣಿ ಸೈನ್ಯ – ಕುರುಕ್ಷೇತ್ರದಲ್ಲಿ ಭಾಗಿಯಾದದ್ದು ಒಟ್ಟು ಹದಿನೆಂಟು ಅಕ್ಷೋಹಿಣಿ ಸೈನ್ಯ ; ಕದನ ನಡೆದದ್ದು ಹದಿನೆಂಟು ದಿನಗಳವರೆಗೂ. ಕೊನೆಗೆ ಎಲ್ಲವೂ ಸರ್ವನಾಶ. ಆ ಪೌರಾಣಿಕ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ಅವನ ಆಸ್ತಿಯೆಲ್ಲ ಏಳು ಹನ್ನೊಂದಾಯ್ತು.
೩೯೫. ಏಳೂವರೆ ತಿಂಗಳಿಗೆ ಹುಟ್ಟಿದವನಂತಿರು = ಹೆಳವನಂತಿರು, ಶಕ್ತಿಹೀನನಾಗಿರು.
ಪ್ರ : ಏಳೂವರೆ ತಿಂಗಳಿಗೆ ಹುಟ್ಟಿದೋನು, ಆ ಹರಾಮಿ ಹೆಂಡ್ರನ್ನ ಆಳದಂಗೇ ಅದೆ !

1 ಕಾಮೆಂಟ್‌: