ಪುಟಗಳು

05 ಅಕ್ಟೋಬರ್ 2015

೧೨) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಎ)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಎ)
೩೦೮. ಎಕ್ಕನಾಗಿರು = ಘಟಿಂಗನಾಗಿರು, ಖದೀಮನಾಗಿರು, ಯಾರೂ ಬಗ್ಗಿಸಲು ಸಾಧ್ಯವಿಲ್ಲದಿರು
(ಎಕ್ಕ < ಏಕ್ (ಹಿಂ) = ಒಂದು) ಈ ನುಡಿಗಟ್ಟಿಗೆ ಇಸ್ಪೀಟ್ ಆಟದ ಹಿನ್ನೆಲೆ ಇದೆ. ಇಸ್ಪೀಟ್ ಆಟದಲ್ಲಿ ಪರೇಲ್, ಇಪ್ಪತ್ತೆಂಟು ಎಂಬ ಬಗೆಗಳಿವೆ. ಅವುಗಳಲ್ಲಿ ಇಸ್ಪೀಟು ಎಲೆ ‘A’ ಗೆ ಮೊದಲನೆಯ ಸ್ಥಾನ. ಪರೇಲ್ ಆಟದಲ್ಲಿ ಯಾರಿಗಾದರೂ ಮೂರು ‘A’ ಗಳು ಬಿದ್ದರೆ ಬೇರೆಯವೆ ಬೇಳೆ ಬೇಯುವುದಿಲ್ಲ. ಹಾಗೆಯೇ ಇಪ್ಪತ್ತೆಂಟರಲ್ಲೂ ಒಂದು ಬಣ್ಣದಲ್ಲಿ ‘A’ ಅನ್ನು ಮೀರಿಸುವ ಬೇರೆ ಎಲೆಗಳಿರುವುದಿಲ್ಲ. ಅದಕ್ಕೆ ಒಂದನೇ ಸ್ಥಾನವಿರುವುದರಿಂದ ಹಿಂದಿಯಲ್ಲಿ ಏಕ್ ಎನ್ನಿಸಿಕೊಂಡು ಕನ್ನಡದಲ್ಲಿ ಎಕ್ಕ ಎನ್ನಿಸಿಕೊಂಡಿದೆ.
ಪ್ರ : ಅವನು ಐನಾತಿ ಎಕ್ಕ, ಹುಷಾರಾಗಿರು.
೩೦೯. ಎಕ್ಕ ಹುಟ್ಟಿ ಹೋಗು = ಹಾಳಾಗು, ನಿರ್ವಂಶವಾಗು
(ಎಕ್ಕ = ಸಸ್ಯ ವಿಶೇಷ, ಎಕ್ಕದ ಗಿಡ) ಮನೆಗೆ ದೀಪ ಹಚ್ಚುವ ವಂಶದ ಕುಡಿ ಒಂದೂ ಇಲ್ಲದೆ, ಮನೆ ಪಾಳು ಬಿದ್ದು, ಅಲ್ಲಿ ಎಕ್ಕದ ಗಿಡ ಬೆಳೆಯುವಂತಾಗಲಿ ಎಂದು ದಾಯಾದಿಗಳೋ ಅಥವಾ ಆಗದವರೋ ಶಾಪ ಹಾಕುತ್ತಾರೆ, ಬಯ್ಯುತ್ತಾರೆ. ಆ ಬಯ್ಗುಳ ಈ ನುಡಿಗಟ್ಟಿಗೆ ಮೂಲ.
ಪ್ರ: ನಿನ್ನ ಮನೆ ಎಕ್ಹುಟ್ಟಿ ಹೋಗದೆ ಇರ್ತದೇನೋ, ಮನೆಹಾಳ ಮುಂಡೇಮಗನೆ.
೩೧೦. ಎಕ್ಕಡ ಕಡಿ = ನಾಯಾಗಿ ಬಿದ್ದಿರು
(ಎಕ್ಕಡ = ಮೆಟ್ಟು, ಜೋಡು) ಚರ್ಮದಿಂದ ಎಕ್ಕಡ ಹೊಲಿದಿರುವುದರಿಂದ ನಾಯಿಗಳು ಎಕ್ಕಡವನ್ನು ಕಡಿಯುತ್ತಾ ತಮ್ಮ ನಾಲಗೆಯ ಚಾಪಕ್ಯವನ್ನೂ, ಹಲ್ಲುಗಳ ನವೆಯನ್ನೂ ತೀರಿಸಿಕೊಳ್ಳುತ್ತವೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಯಾರದಾದರೂ ಮನೇಲಿ ಎಕ್ಕಡ ಕಡಕೊಂಡು ಬಿದ್ದಿರು ಹೋಗು, ನಿನಗ್ಯಾಕೆ ಗೌಡಿಕೆ?
೩೧೧. ಎಕ್ಕಾಸವಾಗು = ದಿಬ್ಬ ಎದುರಾಗು, ಆಯಾಸವಾಗು
(ಎಕ್ಕಾಸ = ದಿಣ್ಣೆ, ದಿಬ್ಬ)
ಪ್ರ : ಗಾಡಿ ಈ ಜಾಡಿನಲ್ಲಿ ಹೋದ್ರೆ ಎಕ್ಕಾಸವಾಗ್ತದೆ, ಆ ಜಾಡೇ ಸಮತಟ್ಟಾಗಿದೆ.
೩೧೨. ಎಜ್ಜ ಹಾಕು = ಬಿರುಕು ಮೂಡಿಸು, ವೈಮನಸ್ಯ ಉಂಟಾಗುವಂತೆ ಮಾಡು
(ಎಜ್ಜ = ರಂದ್ರ, ತೂತು)
ಪ್ರ : ಹೆಪ್ಪಾಗಿದ್ದ ಸಂಸಾರಕ್ಕೆ ಎಜ್ಜ ಹಾಕಿ, ಏನೂ ಗೊತ್ತರದ ಮೆಕ್ಕನಂಗೆ ತಿರುಗಾಡ್ತಾನೆ.
೩೧೩. ಎಟುಕಿಸಿಕೊಳ್ಳು = ಮಧ್ಯೆ ಪ್ರವೇಶಿಸು
ಪ್ರ : ಮುಗ್ಧ ಹೆಣ್ಣನ್ನು ಮಾತ್ನಲ್ಲೇ ಕುಟುಕ್ತಿದ್ದ, ಅಷ್ಟರಲ್ಲಿ ಎಟುಕಿಸಿಕೊಂಡೆ.
೩೧೪. ಎಟ್ಟೆಯಾಗು = ಉಷ್ಟವಾಗು
(ಎಟ್ಟೆ..< ವೆಟ್ಟೈ (ತ) = ಉಷ್ಣ)
ಪ್ರ : ಎಟ್ಟೆಯಾಗಿ ಕಣ್ಣು ಅಂಗಾಲು ಭಗಭಗ ಅಂತವೆ.
೩೧೫. ಎಡಕ್ಕೆ ಹಾಕಿ ಬಲಕ್ಕೆ ತೆಗಿ = ತದ್ರೂಪವಾಗಿರು, ರೂಪಗುಣದಲ್ಲಿ ಸದೃಶವಾಗಿರು
ಪ್ರ : ಇಬ್ಬರದೂ ಒಂದೇ ಜಾಯಮಾನ, ಎಡಕ್ಕೆ ಹಾಕಿ ಬಲಕ್ಕೆ ತೆಗೀಬೇಕು.
೩೧೬. ಎಡಗಣ್ಣದುರು = ಕೆಟ್ಟದ್ದು ಕಾದಿರು, ಅಶುಭ ಎದುರಾಗು
(ಅದುರು = ನಡುಗು, ಕಂಪಿಸು) ಗಂಡಿಗೆ ಎಡಗಣ್ಣು ಅದುರಿದರೆ ಕೆಟ್ಟದ್ದೆಂದೂ, ಬಲಗಣ್ಣು ಅದುರಿದರೆ ಒಳ್ಳೆಯದೆಂದೂ ನಂಬಿಕೆಯಿರುವಂತೆಯೇ ಹೆಣ್ಣಿಗೆ ಎಡಗಣ್ಣು ಅದುರಿದರೆ ಒಳ್ಳೆಯದು ಎಂದೂ, ಬಲಗಣ್ಣು ಅದುರಿದರೆ ಕೆಟ್ಟದ್ದೆಂದೂ ನಂಬಿಕೆ ಇದೆ. ಈ ವೈರುದ್ಧ್ಯವನ್ನು ಮನನ ಮಾಡಿದಾಗ ನಂಬುವುದು ಕಷ್ಟವಾಗುತ್ತದೆ.
ಪ್ರ : ಎಡಗಣ್ಣು ಅದುರ್ತಾ ಅದೆ, ಅಲ್ಲಿಗೆ ಹೋಗೋದು ಬೇಡ, ನಡಿಯಣ್ಣ ಹಿಂದಕ್ಕೆ
೩೧೭. ಎಡಗಾಲು ಕಡಿ = ಯಾರಾದರೂ ಜಗಳಕ್ಕೆ ಬರುವ ಸಂಭವವಿರು
ಎಡಗಾಲು ಕಡಿದರೆ ಯಾರಾದರೂ ಜಗಳಕ್ಕೆ ಬರುತ್ತಾರೆ ಎಂಬುದು ಅನೂಚಾನವಾಗಿ ಬಂದಿರುವ ಜನಪದ ನಂಬಿಕೆ. ವೈಜ್ಞಾನಿಕಾಂಶಕ್ಕಿಂತ ಮೌಢ್ಯಾಂಶಗಳೇ ನಂಬಿಕೆಗಳಲ್ಲಿ ಹೆಚ್ಚಾಗಿವೆ ಎನ್ನಬಹುದು. ದೇಹದ ಮಾಂಸ ನರಗಳ ಅಲುಗಾಟ ಮಿಸುಕಾಟಕ್ಕೆಲ್ಲ ಹೀಗೆ ಅರ್ಥ ಕಲ್ಪಿಸಿದರೆ ಕಷ್ಟ. ಎಡಗಾಲು ಕಡಿದಾಗ ಯಾರೋ ಜಗಳಕ್ಕೆ ಬಂದಿರಬಹುದು. ಅದರ ಆಧಾರದ ಮೇಲೆ ಎಡಗಾಲು ಕಡಿದಾಗಲೆಲ್ಲ ಬರುತ್ತಾರೆ ಎಂದು ನಂಬುವುದು ಸರಿಯಲ್ಲವೆನಿಸುತ್ತದೆ.
ಪ್ರ : ಏಳ್ತಲೇ, ಯಾಕೋ ಎಡಗಾಲು ಕಡೀತಾ ಇದೆ, ಯಾರು ಜಗಳಕ್ಕೆ ಬರ್ತಾರೋ ಕಾಣೆ
೩೧೮. ಎಡಬಲ ಸುಳಿಯದಿರು = ಹತ್ತಿರ ಹೋಗುವುದಿರಲಿ, ಅಕ್ಕಪಕ್ಕ ಕೂಡ ಅಡ್ಡಾಡದಿರು
ಪ್ರ : ಆ ಸಣ್ಣನ ಸಂಗ ಯಾಕೆ ಅಂತ ಎಡ ಬಲ ಸುಳಿಯಲ್ಲ.
೩೧೯. ಎಡ ಮಗ್ಗುಲಲ್ಲಿ ಏಳು = ಕೆಟ್ಟದ್ದು ಕಾದಿರು, ಅಶುಭ ಎದುರಾಗು.
ನಿದ್ದೆ ಮಾಡಿ ಬೆಳಿಗ್ಗೆ ಏಳಬೇಕಾದರೆ ಎಡಮಗ್ಗುಲಲ್ಲಿ ಏಳಬಾರದೆಂದೂ ಬಲಮಗ್ಗುಲಿಂದ ಏಳಬೇಕೆಂದೂ ನಂಬಿಕೆ. ಎಡ ಕೆಟ್ಟದ್ದೆಂದೂ ಬಲ ಒಳ್ಳೆಯದೆಂದೂ ಅವರ ಭಾವನೆ. ಆದ್ದರಿಂದ ಮದುವೆಯಾದ ಹೆಣ್ಣು ಅತ್ತೆ ಮಾವನ ಮನೆಗೆ ಮೊಟ್ಟಮೊದಲು ಹೆಜ್ಜೆ ಇಡುವ ಸಂದರ್ಭದಲ್ಲಿ ‘ಬರಗಾಲು ಮೊದಲಿಡು’ ಎನ್ನುತ್ತಾರೆ.
ಪ್ರ : ಎಡಮಗ್ಗುಲಲ್ಲಿ ಎದ್ದಿದ್ದೆನೇನೋ, ಇವತ್ತು ಆಗಬಾರದ್ದೆಲ್ಲ ಆಗ್ತಾ ಇದೆ.
೩೨೦. ಎಡವಿದೆ ಬೆಳ್ಳಿಗೆ ಏಟು ಬೀಳು = ಕಷ್ಟದ ಮೇಲೆ ಕಷ್ಟ ಬರು, ನೊಂದವರಿಗೇ ನೋವು ಬರುತ್ತಿರು.
ಪ್ರ : ಎಡವಿದ ಬೆಳ್ಳಿಗೇ ಏಟು ಬೀಳ್ತಾ ಇದ್ದರೆ, ಸಹಿಸೋದಾದ್ರೂ ಹೇಗೆ?
೩೨೧. ಎಡ ಹೊತ್ನಲ್ಲಿ ಬರು = ಹೊತ್ತಲ್ಲದ ಹೊತ್ತಲ್ಲಿ ಬಂದು ಒತ್ತಾಯಿಸು, ಸಂಜೆ ಬರು
(ಎಡ ಹೊತ್ತು = ಎಡ ಹಗಲು, ಅಪರಾಹ್ನ, ಸಂಜೆ) ಸಂಸ್ಕೃತದ ಪ್ರಾತಃ ಕಾಲ, ಮಧ್ಯಾಹ್ನ, ಸಾಯಂಕಾಲಗಳಿಗೆ ಕ್ರಮವಾಗಿ ಜನಪದರು ಏರುಹೊತ್ತು, ನೆತ್ತಿಹೊತ್ತು, ಇಳಿಹೊತ್ತು ಎಂಬ ಶಬ್ದಗಳನ್ನು ಬಳಸಿದಂತೆಯೇ ಬಲಹಗಲು, ನಡುಹಗಲು, ಎಡಹಗಲು ಎಂಬ ಶಬ್ದಗಳನ್ನೋ ಅಥವಾ ಬಲಹೊತ್ತು, ನಡುಹೊತ್ತು, ಎಡಹೊತ್ತು ಎಂಬ ಶಬ್ದಗಳನ್ನೋ ಬಳಸುತ್ತಾರೆ.
ಪ್ರ : ಗಾದೆ – ಎಡಹೊತ್ತಿನಲ್ಲಿ ಬಂದ ಎದೆ ತೆರೆಯಾಕೆ
೩೨೨. ಎಡಾಗಲು ಆಗು = ಅಪರಾಹ್ನವಾಗು, ಸಾಯಂಕಾಲ ಸಮೀಪಿಸು
(ಎಡಾಗಲು < ಎಡ + ಹಗಲು = ಇಳಿಹೊತ್ತು)
ಪ್ರ : ಎಡಾಗಲು ಆಗಿ ಹೋಯ್ತು, ಇನ್ನೂ ದನಗಳಿಗೆ ನೀರು ಕುಡಿಸದೆ ಇದ್ದೀರಲ್ಲ
೩೨೩. ಎಡೆ ಓದಿಸು = ನೈವೇದ್ಯ ಅರ್ಪಿಸು, ಸಲ್ಲಿಸು
(ಎಡೆ = ನೈವೇದ್ಯ, ಓದಿಸು = ಸಲ್ಲಿಸು) ಅರ್ಪಿಸು, ಸಲ್ಲಿಸು ಎಂಬ ಅರ್ಥದಲ್ಲಿ ‘ಓದಿಸು’ ಎಂಬ ಶಬ್ದ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದೆ ಎಂಬುದಕ್ಕೆ ಈ ನುಡಿಗಟ್ಟು ಸಾಕ್ಷಿ. ಹೆಣ್ಣು ಗಂಡುಗಳಿಗೆ ನೆಂಟರಿಷ್ಟರು ಕೊಡುವ ಕೊಡುಗೆಯನ್ನು (presentation) ಕೂಡ ‘ಮುಯ್ಯಿ ಓದಿಸು’ ಎಂದೇ ಹೇಳುತ್ತಾರೆ.
ಪ್ರ : ಹಿರೇರಿಗೆ ಎಡೆ ಓದಿಸಿದ ಕೂಡಲೇ ಪಂತಿ ಜನ ಕೈಬಿಡಲಿ
೩೨೪. ಎಣೆ ಬೀಳು = ತೆಕ್ಕೆ ಮುರಿ ಬೀಳು, ಒಂದಕ್ಕೊಂದು ಹೆಣೆದುಕೊಳ್ಳು
ಹಾವುಗಳು ರತಿಕ್ರೀಡೆಯಲ್ಲಿ ಪರಸ್ಪರ ನುಲಿಯಂತೆ ನುಲಿದುಕೊಳ್ಳುವುದಕ್ಕೆ ಎಣೆ ಬೀಳು ಅಥವಾ ಎಣೆಯಾಡು ಎನ್ನುತ್ತಾರೆ. ಅದನ್ನು ಕಣ್ಣಿಂದ ನೋಡಿದವರಿಗೆ ಕೇಡಾಗುತ್ತದೆಂದು ಅಂಥವರಿಗೆ ಸ್ನಾನಮಾಡಿಸಿ ದೇವರಿಗೆ ತುಪ್ಪದ ದೀಪ ಹಚ್ಚಿಸುವ ಪದ್ಧತಿ ಇದೆ.
ಪ್ರ : ಎಣೆ ಬಿದ್ದಿರುವ ಇವರಿಂದ, ಹಾವುಗಳು ಕಲಿಯೋದು ಇದೆಯೇನೋ!
೩೨೫. ಎಣ್ಣೆ ಬತ್ತಿಗೆ ನೇರವಾಗಿರು = ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲದಿರು
ಪ್ರ : ಏನು ಚೆನ್ನ ಅಂತ ಹೇಳೋಣ, ಎಣ್ಣೆ ಬತ್ತಿಗೆ ನೇರವಾಗಿದ್ದೀವಿ ಅಷ್ಟೆ
೩೨೬. ಎಣ್ಣೆ ಹಚ್ಚು = ಶುಶ್ರೂಷೆ ಮಾಡು, ಕೆಲಸ ಗಿಟ್ಟಿಸಿಕೊಳ್ಳಲು ತಾಜಾ ಮಾಡು
ಪ್ರ : ಕೆಲಸ ಆಗೋವರೆಗೂ ಎಣ್ಣೆ ಹಚ್ತಾನೆ, ಆಮೇಲೆ ತುಣ್ಣೆ ತೋರಿಸ್ತಾನೆ
೩೨೭. ಎಣ್ಣೆ ಹಾಕು = ಮದ್ಯ ಸೇವಿಸು
ಪ್ರ : ಎಣ್ಣೆ ಹಾಕಿ ವಾಹನ ಓಡಿಸಿದರೆ ಅಪಘಾತವಾಗದೆ ಇರ್ತದ?
೩೨೮. ಎಣ್ಣೇಲಿ ತಿಕ ತೊಳೆದಂತೆ ಮಾಡು = ಸಮಸ್ಯೆಯನ್ನು ಉಲ್ಬಣಗೊಳಿಸು, ನಿರ್ಮಲಗೊಳಿಸುವುದಕ್ಕೆ ಬದಲಾಗಿ ಮಲದ ಮುಲಾಮು ಹಚ್ಚಿ ಗಬ್ಬೆಬ್ಬಿಸು, ರಬ್ಬಳಿಸಿಕೊಳ್ಳುವಂತೆ ಮಾಡು.
ಪ್ರ : ನಾನೆಲ್ಲ ಸರಿ ಮಾಡ್ತೀನಿ ಅಂತ ಬಂದು, ಎಣ್ಣೇಲಿ ತಿಕ ತೊಳೆದಂಗೆ ಎಲ್ಲ ರಬ್ಬಳಿಸಿ ಹೋಗಿಬಿಟ್ಟ ಮನೆಹಾಳು ಮುಂಡೇಮಗ
೩೨೯. ಎತ್ತಂಗಡಿಯಾಗು = ಸ್ಥಳಾಂತರವಾಗು, ವರ್ಗವಾಗು
ಪ್ರ : ಅವನಿಗೆ ಬೆಂಗಳೂರಿನಿಂದ ಬಿಜಾಪುರಕ್ಕೆ ಎತ್ತಂಗಡಿಯಾಯ್ತು
೩೩೦. ಎತ್ತಿ ಆಡು = ಹೀಗಳೆ, ಹಂಗಿಸು, ಹಿಂದಿನದನ್ನು ಎತ್ತಿ ಕುಕ್ಕು
ಪ್ರ : ಎತ್ತಿ ಆಡೋರ ಮನೇಲಿ ಹೊಕ್ಕು ನೀರು ಕುಡೀಬಾರ್ದು
೩೩೧. ಎತ್ತಿದ ಕೈಯಾಗಿರು = ಎಲ್ಲಕ್ಕೂ ಮುಂದಾಗಿರು, ಮೊದಲಿಗನಾಗಿರು
ಪ್ರ : ಕಂಡೋರ ಗಂಟನ್ನು ಎತ್ತಿ ಹಾಕಿ ಕೊಳ್ಳೋದ್ರಲ್ಲಿ ಅವನು ಎತ್ತಿದ ಕೈ
೩೩೨. ಎತ್ತಿ ಹಾಕಿಕೊಳ್ಳು = ಬಾಚಿಕೊಳ್ಳು, ದೋಚು
ಪ್ರ : ಬಡಬಗ್ಗರ ಆಸ್ತೀನೆಲ್ಲ ಎತ್ತಿ ಹಾಕಿಕೊಂಡರೂ ಇವತ್ತು ತುತ್ತಿಗೆ ಗತಿ ಇಲ್ಲ.
೩೩೩. ಎತ್ತಿ ಹಾಕಿದಂತಿರು = ಪುಟ ಹಾರುವಂತಿರು, ಕುವತ್ತಿನಿಂದ ಕುಣಿಯುತ್ತಿರು.
ಪ್ರ : ಗಾದೆ – ಹಿತ್ತಾಳೆ ಪತ್ತಾಳೆ ಇಕ್ಕೊಂಡ ಬಡವನ ಹೆಂಡ್ರು ಎತ್ತಿ ಹಾಕಿದಂಗವಳೆಸಿನ್ನ ಪನ್ನ ಇಕ್ಕೊಂಡ ಬಲಗಾರ್ನ ಹೆಂಡ್ರು ಸೋಸಿ ಹಾಕಿದಂಗವಳೆ
೩೩೪. ಎತ್ತು ಉಚ್ಚೆ ಹುಯ್ದಂತೆ ಮಾತಾಡು = ಒಂದೇ ಸಮನೆ ಮಾತಾಡು, ಔಚಿತ್ಯವಿಲ್ಲದೆ ಮಾತಾಡು,
ಎತ್ತುಗಳು ಉಚ್ಚೆ ಹುಯ್ಯಲು ಷುರು ಮಾಡಿದರೆ ಜೊಳಜೊಳ ಎಂದು ದೀರ್ಘಕಾಲ ಹುಯ್ಯುತ್ತಲೇ ಇರುತ್ತದೆ. ಈ ಮೂಲಕ ಔಚಿತ್ಯವಿಲ್ಲದೆ ಹೆಚ್ಚುಕಾಲ ಬಡಬಡಿಸುವ ವ್ಯಕ್ತಿಗಳ ವಾಚಾಳಿತನವನ್ನು ಗೇಲಿ ಮಾಡಲಾಗಿದೆ.
ಪ್ರ : ಎತ್ತು ಉಚ್ಚೆ ಹುಯ್ದಂತೆ ಮಾತಾಡೋದಲ್ಲ, ಮಾತಿಗೊಂದು ತೂಕ ಇರಬೇಕು
೩೩೫. ಎತ್ತುಡಿ ಹಾಕಿ ದೇವು = ಬಲೆ ಹಾಕಿ ಮೀನು ಹಿಡಿ.
(ಎತ್ತುಡಿ = ವೃತ್ತಾಕಾರದ ಕಟ್ಟಿಗೆಗೆ ಕೊಳವೆಯಾಕಾರದ ಬಲೆ ಕಟ್ಟಿ ನೀರಲ್ಲಿ ಮುಳುಗಿಸಿ ಮೇಲೆತ್ತುವ ಬಲೆ; ಉಡಿ = ಬಲೆ ; ದೇವು = ಸಾರಿನ ಕಾಯಿ ಪಲ್ಯೆಗಳು ಸೌಟಿಗೆ ಬರುವಂತೆ ಸೌಟಾಡಿಸುವುದಕ್ಕೆ ದೇವು ಎನ್ನುತ್ತಾರೆ, ಅಂದರೆ ಬಾಚಿಕೊಳ್ಳುವುದು)
ಪ್ರ : ಮೀನಿಲ್ಲದ ಕೆರೆಯಲ್ಲಿ ಎತ್ತುಡಿ ಹಾಕಿ ದೇವಿದ್ರೇನು ಫಲ ? ಬಾ, ಹೋಗಾನ
೩೩೬. ಎದಾರು ಇಲ್ಲದಿರು = ಭಯವಿಲ್ಲದಿರು
(ಎದಾರು < ಎದೆ + ಹಾರು = ಎದೆನಡುಕ)
ಪ್ರ : ಮಾಡಿದ ಬದುಕು ಏನಾಯ್ತೋ ಎತ್ತಾಯ್ತೋ ಎಂಬ ಎದಾರು ಇಲ್ಲದೋರಿಗೆ ಉಂಡು ಮಲಗೋದೆ ಕೆಲಸ
೩೩೭. ಎದ್ದಿರಾ ಎನ್ನು = ಸುಪ್ರಭಾತ ಸೂಚಿಸು
ಪ್ರ : ಪಟೇಲರು ‘ಎದ್ದಿರಾ?’ ಎಂದಾಗ ಶ್ಯಾನುಭೋಗರು ‘ಎದ್ದೆ, ನೀವೆದ್ದಿರಾ?’ ಎಂದರು
೩೩೮. ಎದುರುಗೊಳ್ಳು = ಸ್ವಾಗತಿಸು
ಪ್ರ : ಹೆಣ್ಣಿನೋರು ಗಂಡಿನೋರ್ನ ಎದುರುಗೊಂಡು ಕರೆತಂದರು.
೩೩೯. ಎದುರು ನೋಡು = ನಿರೀಕ್ಷಿಸು, ಕಾಯು
ಪ್ರ : ನಿನ್ನನ್ನೇ ಎದುರು ನೋಡ್ತಿದ್ದೆ, ಸದ್ಯ ಬಂದೆಯಲ್ಲ
೩೪೦. ಎದುರು ಬೀಳು = ಸೆಣಸಿ ನಿಲ್ಲು, ವಿರುದ್ಧ ನಿಲ್ಲು
ಪ್ರ : ಮಗನೇ ಅಪ್ಪನಿಗೆ ಎದುರು ಬಿದ್ದ, ಏನ್ ಮಾಡೋಕಾಗ್ತದೆ?
೩೪೧. ಎದುರು ಹಾಕಿಕೊಳ್ಳು = ವಿರೋಧ ಕಟ್ಟಿಕೊಳ್ಳು
ಪ್ರ : ಇವನ ದೆಸೆಯಿಂದ ನಾನು ಅವರ್ನ ಎದುರು ಹಾಕಿಕೊಳ್ಳಬೇಕಾಯ್ತು
೩೪೨. ಎದ್ದು ಕಾಣು = ಎಲ್ಲಕ್ಕಿಂತ ಚೆನ್ನಾಗಿ ಕಾಣು, ಕಣ್ಣು ಕೋರೈಸುವಂತಿರು
ಪ್ರ : ಕೂಡಿದ ಜನರಲ್ಲಿ ಎದ್ದು ಕಾಣುತ್ತಿದ್ದವಳು ನೀನೇನೇ.
೩೪೩. ಎದ್ದು ಬಿಡು = ತಪ್ಪಿಸಿ ಕೊಳ್ಳು, ಓಡಿ ಹೋಗು
ಪ್ರ : ಕೆಲಸಕ್ಕೆ ಬರದೆ ಇಬ್ಬರೂ ಎಲ್ಲೋ ಎದ್ದುಬಿಟ್ಟವರೆ
೩೪೪. ಎದೆಗೆಡು = ಧೈರ್ಯಗೆಡು
(ಎದೆ = ಗುಂಡಿಗೆ, ಧೈರ್ಯ)
ಪ್ರ : ಎದೆಗೆಟ್ಟು ಕೂತರೆ ಎಲ್ಲ ಹದಗೆಟ್ಟು ಹೋಗ್ತದೆ
೩೪೫. ಎದೆ ಝಲ್ ಎನ್ನು = ಭಯವಾಗು, ನಡುಕವುಂಟಾಗು
ಗಾಳಿ ಬೀಸದರೆ ತೆಂಗಿನ ಗರಿ ಝಲ್ ಎನ್ನುತ್ತದೆ. ಅದರೆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಸಿಡಿಲು ನೆತ್ತಿ ಮೇಲೆ ಹೊಡೆದಂಗೆ ಬಡೇರ್ ಅಂದಾಗ ಎದೆ ಝಲ್ ಅಂತು.
೩೪೬. ಎದೆ ತಿದಿಯಾಗು = ಏದುಸಿರು ಬಿಡು, ಉದ್ವೇಗದಿಂದ ಏರಿಳಿಯತೊಡಗು
(ತಿದಿ = ಕುಲುಮೆ ಮನೆಯಲ್ಲಿ ಕುಲುಮೆ ಒಲೆ ಧಗಧಗನೆ ಉರಿಯಲೆಂದು ಗಾಳಿ ಒತ್ತಲು ಬಳಸುವ ಚರ್ಮದ ಚೀಲ) ಕಮ್ಮಾರ ವೃತ್ತಿ ಅಥವಾ ಅಕ್ಕಸಾಲಿಗ ವೃತ್ತಿ ಈ ನುಡಿಗಟ್ಟಿಗೆ ಮೂಲ
ಪ್ರ : ಬೆದೆ ಹತ್ತಿದೋನಿಗೆ ಎದೆ ತಿದಿಯಾಗ್ತದೆ
೩೪೭. ಎದೆ ಬಾಯಿ ಗುದ್ದಿಕೊಳ್ಳು = ಲಬೊಲಬೋ ಅನ್ನು, ದುಃಖದಿಂದ ಉದ್ವಿಗ್ನಗೊಳ್ಳು
ಪ್ರ : ಮಗ ಸತ್ತ ಸುದ್ದಿ ಕೇಳಿ ಎದೆ ಬಾಯಿ ಗುದ್ದಿಕೊಂಡ್ಲು ಅಂದ್ರೆ, ಯಾಕೆ ಹೇಳ್ತಿ?
೩೪೮. ಎದೆ ಮೇಲೆ ಕುಕ್ಕು = ದಂಡವಾಗಿ ತೆರು, ಬರಿಗೈಯಾಗು
(ಕುಕ್ಕು < ಕುಟುಕು = ಒಡಿ) ಗಂಡ ಸತ್ತ ಮೇಲೆ ಮುತ್ತೈದೆತನದ ಲಕ್ಷಣ ಎಂದು ನಂಬಿರುವ ಕುಂಕುಮವನ್ನು ಅಳಿಸುತ್ತಾರೆ. ಗಂಡನ ಎದೆಯ ಮೇಲೆ ಕೈಬಳೆಗಳನ್ನು ಕುಕ್ಕಿ ಒಡೆಸುತ್ತಾರೆ. ಆದರೆ ಇತ್ತೀಚೆಗೆ ಹಾಗೆ ಮಾಡದೆ ಬಳೆ ಕುಂಕುಮ ಉಳಿಸಿಕೊಂಡು ಬದುಕುವಂಥ ದಿಟ್ಟ ಹೆಣ್ಣುಗಳಿದ್ದಾರೆ. ಜನರೂ ಕುಮ್ಮಕ್ಕು ಕೊಡುವ ಮನೋಧರ್ಮ ಬೆಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸತ್ತ ಗಂಡನ ಎದೆಯ ಮೇಲೆ ಬಳೆ ಕುಕ್ಕಿ ಒಡೆಯುವ ಆಚರಣೆಯ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಸರ್ಕಾರದಿಂದ ಸಾಗುವಳಿ ಜಮೀನು ಮಾಡಿಸಿಕೊಡ್ತೀನಿ ಅಂತ ಅವನು ಭರವಸೆ ಕೊಟ್ಟಿದ್ದಕ್ಕೆ, ನಾವು ಕೂಡಿಟ್ಟಿದ್ದನ್ನೆಲ್ಲ ಅವನ ಎದೆ ಮೇಲೆ ತಗೊಂಡು ಹೋಗಿ ಕುಕ್ಕಿದೆವಲ್ಲ.
೩೪೯. ಎದೆ ಮೇಲೆ ಕುಂತುಕೊಳ್ಳು = ತಗಾದೆ ನೋಡು, ಪೀಡಿಸು
ಪ್ರ : ಸಾಲದ ಬಾಕಿ ಕೊಡೋವರೆಗೂ ನಾನು ಹೆಜ್ಜೆ ಎತ್ತಲ್ಲ ಅಂತ ಎದೆ ಮೇಲೆ ಕುಂತುಬಿಟ್ಟ
೩೫೦. ಎದೆ ಮೇಲೆ ಚಪ್ಪಡಿ ಎಳಿ = ಹಾಳು ಮಾಡು, ವಪನ ಹೊಂದಿಸು
ಪ್ರ : ಕೊನೆಗೂ ನಮ್ಮ ಎದೆ ಮೇಲೆ ಚಪ್ಪಡಿ ಎಳೆದುಬಿಟ್ಟನಲ್ಲಪ್ಪ, ಚಂಡಾಲ
೩೫೧. ಎದೆ ಮೇಲೆ ಚಾಚು = ದಂಡವಾಗಿ ತೆರು, ಬೋಳುಗೈಯಾಗು
(ಚಾಚು < ಚಚ್ಚು = ಒಡಿ) ಗಂಡ ಸತ್ತಾಗ ಹೆಂಡತಿಯ ಕೈಬಳೆಗಳನ್ನು ಗಂಡನ ಎದೆಯ ಮೇಲೆ ಚಚ್ಚಿ ಒಡೆದು ಹಾಕಿ ಬರಿಗೈಯಾಗುವ ಆಚರಣೆ ಈ ನುಡಿಗಟ್ಟಿಗೆ ಮೂಲ
ಪ್ರ : ನನ್ನ ಹತ್ರ ಕಾಸೆಲ್ಲಿದೆಯಪ್ಪ, ಇದ್ದಬದ್ದದ್ದನೆಲ್ಲ ಅವನ ಎದೆ ಮೇಲೆ ಚಾಚಿದೆನಲ್ಲ?
೩೫೨. ಎದೆಯಲ್ಲಿ ಮಂತಾಡಿದಂತಾಗು = ತೊಳಸಿದಂತಾಗು, ಸಂಕಟವಾಗು
(ಮಂತು = ಮೊಸರನ್ನು ಕಡೆಯುವ ಕಡೆಗೋಲು)
ಪ್ರ : ನಿನ್ನೆಯಿಂದ ಎದೆಯಲ್ಲಿ ಮುಂತಾಡಿದಂತಾಗ್ತಾ ಇತ್ತು. ಇವತ್ತು ಬಂದ ಸಾವಿನ ಸುದ್ದಿಗೆ ಮೊದಲೇ ಕಳ್ಳು ಸಂಬಂಧಕ್ಕೆ ತಂತೀ ಸಂದೇಶ ಇದ್ದಂತಿತ್ತು ಎದೆಯಲ್ಲಿ ಮಂತಾಡಿದ್ದು.
೩೫೩. ಎದೆಯ ರಕ್ತವನ್ನು ಭೂಮಿತಾಯಿಗೆ ಬಸಿ = ಕಷ್ಟಪಟ್ಟು ದುಡಿ, ಬೆವರು ಸುರಿಸಿ ಬೇಸಾಯ ಮಾಡು
(ಬಸಿ = ಸುರಿ)
ಪ್ರ : ನನ್ನ ಎದೆಯ ರಕ್ತಾನೇ ಭೂಮಿತಾಯಿಗೆ ಬಸಿದಿದ್ದೀನಿ ಅನ್ನೋದು ನೆನ್ನೆ ಮೊನ್ನೆ ಕಣ್ಣುಬಿಟ್ಟೋರಿಗೆ ಏನು ಗೊತ್ತು ?
೩೫೪. ಎಪ್ಪೇಸ್ ಹೊಡಿ = ಗೈರು ಹಾಜರಾಗು, ಮರೆ ಮಾಜು
(ಎಪ್ಪೇಸ್..< Efface = ಮರೆ ಮಾಜು)
ಪ್ರ : ನನಗೇ ಎಪ್ಪೇಸ್ ಹೊಡದನಲ್ಲ, ಬಡ್ಡೀಮಗ
೩೫೫. ಎಬ್ಬಿಕೊಂಡು ಹೋಗು = ಸುಲಿದುಕೊಂಡು ಹೋಗು
(ಎಬ್ಬು = ಕೀಳು, ಸುಲಿ)
ಪ್ರ : ನಿನ್ನ ಮಗನ್ನ ಪೋಲಿಸ್ ಠಾಣೆಯಿಂದ ಬಿಡಿಸಿಕೊಂಡು ಬಂದೇ ಬರ್ತ್ತೀನಿ ಅಂತ ಹೇಳಿ ಅವಳ ಮೈಯಾಗೆ ಕೈಯಾಗೆ ಇದ್ದದ್ದನ್ನೆಲ್ಲ ಎಬ್ಬಿಕೊಂಡು ಹೋದ.
೩೫೬. ಎಬ್ಬಿಸಿ ಉಬ್ಬಸ ಪಡು = ಏಳಿಸಿದವರೇ ಏದುಸಿರು ಬಿಡು
ಗಂಡನ್ನು ಪ್ರಚೋದಿಸಿದ ಹೆಣ್ಣು ಆಮೇಲೆ ಸುಸ್ತಾಗಿ ಏದುಸಿರು ಬಿಡುವ ಸಂಭೋಗ ಕ್ರಿಯೆ ಈ ನುಡಿಗಟ್ಟಿಗೆ ಮೂಲ
ಪ್ರ : ಎಬ್ಬಿಸೋಳು ನೀನೇ, ಉಬ್ಬಸಪಡೋಳು ನೀನೇ.
೩೫೭. ಎಬ್ಬುಬ್ಬ ಹೇಳು = ಬಡಿವಾರ ಕೊಚ್ಚು, ಬೂಟಾಟಿಕೆ ತೋರಿಸು
(ಎಬ್ಬುಬ್ಬ..< ಹೆಬ್ಬುಬ್ಬ = ಅತಿಶಯತೆ)
ಪ್ರ : ಅಬ್ಬಬ್ಬ ಎಂದು ಪರಾಕು ಹೇಳೋ ಜನ ಇರುವಾಗ ಎಬ್ಬುಬ್ಬ ಹೇಳದೆ ಇರ್ತಾನ?
೩೫೮. ಎಮ್ಕೆ ಮುರಿ = ಮೂಳೆ ಮುರಿ, ಚೆನ್ನಾಗಿ ಚಚ್ಚು
(ಎಮ್ಕೆ.< ಎಮಕೆ < ಎಮುಕೆ (ತೆ) = ಮೂಳೆ)
ಪ್ರ : ಅವನ ಎಮ್ಕೆ ಮುರೀದೆ ಸುಮ್ಕೆ ಇರ್ತೀನಿ ಅಂದ್ಕೊಂಡಿದ್ದೀಯ?
೩೫೯. ಎಮ್ಮೆ ಮೇಲೆ ಮಳೆ ಹುಯ್ದಂತೆ ಹೋಗು = ನಿಧಾನವಾಗಿ ಹೋಗು
(ಎಮ್ಮೆ.< ಎರುಮೈ (ತ) ಎರುಮೆ (ಮ) = ಮಹಿಷ) ದನಗಳ ಮೈಮೇಲೆ ನಾಲ್ಕು ಹನಿ ಮಳೆ ಬಿದ್ದರೆ ಸಾಕು, ಕಿವಿ ನೆಟ್ಟಗೆ ಮಾಡಿ, ಮುಗೂ ಅರಳಿಸಿ ಮಣ್ಣಿನ ವಾಸನೆ ಹಿಡಿದು, ಮಳೆ ಬರುತ್ತದೆ ನೆನೆಯುತ್ತೇವೆ ಎಂದು, ಬಾಲವನ್ನು ಮೇಲಕ್ಕೆತ್ತಿ ಮನೆಯತ್ತ ದೌಡಾಯಿಸುತ್ತವೆ. ಆದರೆ ಎಮ್ಮೆಗೆ ಮಳೆ ಹುಯ್ದಷ್ಟೂ ಸಂತೋಷ. ಆದ್ದರಿಂದ ಅದು ಓಡದೆ, ಇನ್ನೂ ನಿಧಾನವಾಗಿ ಆನಂದತುಂದಿಲವಾಗಿ ತೆವಳುತ್ತದೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಎಮ್ಮೆ ಮೇಲೆ ಮಳೆ ಹುಯ್ದಂತೆ ಹೋಗೋನ್ನ ತುರ್ತು ಕೆಲಸಕ್ಕೆ ಕಳಿಸ್ತಾರ?
೩೬೦. ಎರಡಕ್ಕೆ ಹೋಗು = ಮಲವಿಸರ್ಜನೆಗೆ ಹೋಗು
ಮಠಗಳು ಅಥವಾ ಇಸ್ಕೂಲುಗಳು ಬಂದ ಮೇಲೆ ಮೇಷ್ಟ್ರುಗಳು ಮಕ್ಕಳಿಗೆ ಮೂತ್ರಕ್ಕೆ ಹೋಗಬೇಕಾದರೆ ಒಂದು ಬೆರಳನ್ನು ತೋರಿಸಬೇಕೆಂದೂ. ಮಲವಿಸರ್ಜನೆಗೆ ಹೋಗಬೇಕಾದರೆ ಎರಡು ಬೆರಳುಗಳನ್ನು ತೋರಿಸಬೇಕೆಂದೂ ಸಂಕೇತ ಭಾಷೆಯನ್ನು ಹೇಳಿ ಕೊಟ್ಟ ಪ್ರಯುಕ್ತ ಮೂತ್ರ ವಿಸರ್ಜನೆಗೆ ‘ಒಂದಕ್ಕೆ ಹೋಗು’ ಎಂಬ ನುಡಿಗಟ್ಟೂ ಮಲವಿಸರ್ಜನೆಗೆ ‘ಎರಡಕ್ಕೆ ಹೋಗು’ ಎಂಬ ನುಡಿಗಟ್ಟೂ ಚಾಲ್ತಿಗೆ ಬಂದವು.
ಪ್ರ : ಯಾಕೆ ಬಡ್ಕೊಂತೀಯೋ, ಅವನು ಎರಡಕ್ಕೆ ಹೋಗಿದ್ದಾನೆ, ಕೊಂಚ ತಡಿ.
೩೬೧. ಎರಡನ್ನು ಒಂದು ಮಾಡಲು ಹೋಗು = ಹೆಣವನ್ನು ಮಣ್ಣು ಮಾಡಲು ಹೋಗು
ದೇಹ ಪಂಚಭೂತಗಳಿಂದಾದದ್ದು ಎಂಬುದು ಸರ್ವಜನ ಸಂವೇದ್ಯ. ಪಂಚಭೂತಗಳಲ್ಲಿ ಮಣ್ಣು (ಭೂಮಿ) ಕೂಡ ಒಂದು. ಮಣ್ಣಿನ ಅಂಶವಿರುವ ಈ ದೇಹವನ್ನು ಮಣ್ಣಿನೊಂದಿಗೆ ಒಂದು ಮಾಡಲು ಹೋಗುವುದು ಎಂದರೆ ಸಮಾಧಿ ಮಾಡಲು ಎಂಬುದು ವ್ಯಕ್ತವಾಗುತ್ತದೆ. ಆದರೆ ಗ್ರಾಮೀಣರ ಈ ಬೆಡಗಿನ ಅಭಿವ್ಯಕ್ತಿಯ ಬಗೆಗೆ ಆಶ್ಚರ್ಯ ಪಡಬೇಕಾಗಿಲ್ಲ. ಅದು ಅವರಿಗೆ ಉಸಿರಾಟದಷ್ಟು ಸಹಜ, ಸುಲಭ
ಪ್ರ : ನಿಮ್ಮಪ್ಪ ಎಲ್ಲಿ ಹೋಗಿದ್ದಾನೆ ಅಂದರೆ, ಮಗಳು ‘ಪಕ್ಕದೂರಾಗೆ ಎರಡನ್ನು ಒಂದು ಮಾಡೋಕೆ ಹೋಗ್ಯವನೆ’ ಅಂದ್ಲು.
೩೬೨. ಎರಡು ಕಾಲು ಒಂದ್ಕಡೆ ಇಡದಿರು = ಪುರಸೊತ್ತು ಸಿಗದಿರು, ಒಂದು ಕಡೆ ಕುಳಿತು ವಿಶ್ರಮಿಸಿಕೊಳ್ಳದಿರು
ಪ್ರ : ಹೊತ್ತು ಹುಟ್ಟಿದಾಗಳಿಂದ ಹೊತ್ತು ಮುಳುಗೋತನಕ ಎರಡು ಕಾಲು ಒಂದ್ಕಡೆ ಇಟ್ಟಿಲ್ಲ, ನೋಡಪ್ಪ
೩೬೩. ಎರಡು ಕೈಲೂ ಉಣ್ಣು = ತಿನ್ನಲು ಏನೂ ಇಲ್ಲದಂತಾಗು, ಅಳುವೆ ಅನ್ನವಾಗು
ಸಾಮಾನ್ಯವಾಗಿ ಊಟ ಮಾಡುವುದು ಒಂದು ಕೈಯಲ್ಲಿ. ಆದರೆ ಎರಡು ಕೈಯಲ್ಲಿ ಉಣ್ಣುವುದು ಏನನ್ನು ? ನಮ್ಮ ಜನಪದರ ಧ್ವನಿಪ್ರಚುರ ಅಭಿವ್ಯಕ್ತಿಗೆ ಇದು ಸಾಕ್ಷಿಯಾಗಿದೆ. ದುಃಖ ಬಂದಾಗ ಎರಡು ಕೈಗಳಿಂದಲೂ ಕಣ್ಣು ಮುಖ ಮುಚ್ಚಿಕೊಳ್ಳುವುದರಿಂದ ಕಣ್ಣೀರು ಬಾಯೊಳಕ್ಕೂ ಹೋಗಬಹುದು. ಆದ್ದರಿಂದ ಎರಡು ಕೈಗಳಿಂದಲೂ ಉಣ್ಣುವುದು ಕಣ್ಣೀರು !
ಪ್ರಶ್ನೆ : ಅಪಾಪೋಲಿಗೆ ಮದುವೆ ಮಾಡಿದ್ರೆ. ಮಗಳು ಎರಡುಕೈಲೂ ಉಣ್ತಾಳೆ.
೩೬೪. ಎರಡು ತಲೆ ಹಾವಿನಂತಿರು = ಅಪಾಯಕಾರಿ ವ್ಯಕ್ತಿಯಾಗಿರು
ಒಂದೆ ತಲೆಯ ಹಾವನ್ನು ಅದರ ಗಂಟಲ ಹತ್ತಿರ ಕೈ ಹಾಕಿ ಗಟ್ಟಿಗೆ ಹಿಡಿದರೆ ಅದು ಕಚ್ಚುವ ಭಯವಿರುವುದಿಲ್ಲ. ಆದರೆ ಎರಡು ತಲೆಯ ಹಾವಿಗೆ ಹಾಗೆ ಒಂದು ಕಡೆಯ ಗಂಟಲನ್ನು ಹಿಡಿದರೆ, ಇನ್ನೊಂದು ಕಡೆಯ ತಲೆಯಿಂದ ಕಚ್ಚುವ ಅಪಾಯ ಇದ್ದೇ ಇರುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಎರಡು ತಲೆ ಹಾವಿನಂಥೋನ್ನ ಎಂದಾದ್ರೂ ನಂಬಿಗಿಂಬೀಯ, ಜೋಕೆ
೩೬೫. ಎರಡು ತುಟಿ ಒಂದ್ಮಾಡು = ಮೌನದಿಂದಿರು, ಬಾಯಿಬಿಡದಿರು
ಪ್ರ : ಅವರ ಕೌಟುಂಬಿಕ ವಿಷಯದಲ್ಲಿ ನಾನು ತಲೆ ಹಾಕೋದು ಸರಿಯಲ್ಲ ಅಂತ ಎರಡು ತುಟಿ ಒಂದ್ಮಾಡಿ ಕೂತುಬಿಟ್ಟೆ
೩೬೬. ಎರಡು ನೀರು ಕೊಡು = ಕೊಂಚ ನೀರು ಕೊಡು
(ಎರಡು < ಇರಂಡು (ತ) ರೆಂಡು (ತೆ) = ಸ್ವಲ್ಪ, ದ್ವಯ)
ಪ್ರ : ಕುಡಿಯೋಕೆ ಎರಡು ನೀರು ಕೊಡು ಅಂದ್ರೆ ಕೇಳಿಸದಂಗೆ ಕೋಣೆಗೆ ಹೋದ್ಲು.
೩೬೭. ಎರಡು ರೆಪ್ಪೆ ಒಂದು ಮಾಡದಿರು = ನಿದ್ದೆ ಮಾಡದಿರು
ನಮ್ಮ ಗ್ರಾಮೀಣರ ಸೃಜನಶೀಲ ಪ್ರತಿಭೆ ಹೇಗೆ ಸವಕಲು ಅಭಿವ್ಯಕ್ತಿಗೆ ಗಂಟು ಬೀಳದೆ ಚಿತ್ರಕ ಶಕ್ತಿಯುಳ್ಳ ತಾಜಾ ಅಭಿವ್ಯಕ್ತಿಯನ್ನು ನೀಡಬಲ್ಲುದು ಎಂಬುದಕ್ಕೆ ಈ ನುಡಿಗಟ್ಟು ನಿದರ್ಶನ.
ಪ್ರ : ಇಡೀ ರಾತ್ರಿ ಎರಡು ರೆಪ್ಪೆ ಒಂದು ಮಾಡಿದ್ರೆ, ಕೇಳು
೩೬೮. ಎರವಾಗು = ಬೇರೆಯಾಗು, ಹೊರತಾಗು, ದೂರವಾಗು
(ಎರವು = ಅನ್ಯ)
ಪ್ರ : ಗಾದೆ – ಸಮಯಕಿಲ್ಲದ ನೆರವು ಸಾವಿರ ಇದ್ದರೂ ಎರವು
೩೬೯. ಎರವು ತರು = ಸಾಲ ತರು, ಕಡ ತರು
(ಎರವು = ಕಡ, ಸಾಲ)
ಪ್ರ : ಗಾದೆ – ಹಣ ಎರವಲು ತಂದು ಮಣ ಉರುವಲು ಕೊಂಡ
೩೭೦. ಎಲ್ಲರ ನಾಲಗೆ ಮೇಲೆ ನಲಿ = ಹೆಸರುವಾಸಿಯಾಗು, ಕೀರ್ತಿಶಾಲಿಯಾಗು
ಪ್ರ : ಅವನ ನಡೆನುಡಿ ಸಾಧನೆಸಿದ್ಧಿಗಳಿಂದ ಎಲ್ಲರ ನಾಲಗೆಯ ಮೇಲೆ ನಲಿಯುವಂತಾದ.
೩೭೧. ಎಲ್ಲರ ಹಲ್ಲೊಳಗೆ ನುರಿ = ನಿಂದೆಗೊಳಗಾಗು, ಟೀಕೆಟಿಪ್ಪಣೆಗಳಿಗೆ ಗುರಿಯಾಗು.
ಪ್ರ : ಗಾದೆ – ಎಲ್ಲರ ಹಲ್ಲೊಳಗೆ ನುರಿದು ಹೋಗೋದ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
೩೭೨. ಎಲ್ಲ ಸೊಂಪಲು ಗುಜುಗುಜುಗುಂಪಲು ಆಗು = ಸಂದಿಗೊಂದಿಗಳಲ್ಲೆಲ್ಲ ಸಂಶಯದ ಪುಕಾರು ಹಬ್ಬು
(ಸೊಂಪಲು = ಓಣಿ, ಸಂದಿ, ಗೊಂದಿ)
ಪ್ರ : ಆ ವಿಷಯದ ಬಗ್ಗೆ ಎಲ್ಲ ಸೊಂಪಲು ಗುಜುಗುಜು ಗುಂಪಲು ಆಗಿ ಕೂತಿದೆ.
೩೭೩. ಎಲೆಗೆ ಸುನ್ಣ ಹಚ್ಚೋದ್ರಲ್ಲಿ ಬರು = ಬೇಗ ಬರು, ಕ್ಷಣಾರ್ಧದಲಿ ಬರು
ತಾಂಬೂಲ ಸೇವನೆ ನಮ್ಮ ಗ್ರಾಮೀಣರ ಬಹುಮುಖ್ಯ ತೆವಲು. ದೇವರ ತಲೆ ಮೇಲೆ ಹುವ್ವ ತಪ್ಪಿದರೂ ನಮ್ಮ ಗ್ರಾಮೀಣರ ಬಾಯಿ ‘ಅಡಕೆಲೆ’ ಯಿಂದ ವಂಚಿತವಾಗುವುದಿಲ್ಲ. ಕೆಲವರು ಅದರ ಜೊತೆಗೆ ಹೊಗೆಸೊಪ್ಪು, ಕಡ್ಡಿ ಪುಡಿಯನ್ನು ಬಳಸುತ್ತಾರೆ. ತಾಂಬೂಲ ಸೇವನೆಯಲ್ಲಿ ಎಲೆಗೆ ಸುಣ್ಣ ಹಚ್ಚುವುದು ಕ್ಷಣಾರ್ಧದ ಕೆಲಸ.
ಪ್ರ : ನೀನು ಕೂತ್ಕೊಂಡಿರು, ಎಲೆಗೆ ಸುಣ್ಣ ಹಚ್ಚೋದ್ರಲ್ಲಿ ಬಂದು ಬಿಡ್ತೇನೆ.
೩೭೪. ಎಲೆ ಮಿಸುಕದಿರು = ಗಾಳಿ ಬೀಸದಿರು
(ಮಿಸುಕು = ಅಲುಗಾಡು, ಕಂಪಿಸು)
ಪ್ರ : ಮಧ್ಯಾಹ್ನದಿಂದ ಎಲೆ ಮಿಸುಕ್ತಾ ಇಲ್ಲ. ವಾಯುದೇವರು ಕುಂಭಕಾಭ್ಯಾಸದಲ್ಲಿ ನಿರತನಾಗಿರಬೇಕು.
೩೭೫. ಎಳ್ಳುಕಾಳು ಮುಳ್ಳುಮೊನೆಯಷ್ಟೂ ಇರದಿರು = ಕೊಂಚವೂ ಇರದಿರು.
ಪ್ರ : ಅವನಲ್ಲಿ ಎಳ್ಳು ಕಾಳು ಮುಳ್ಳು ಮೊನೆಯಷ್ಟೂ ಮೋಸ ಇಲ್ಲ.
೩೭೬. ಎಳ್ಳು ನೀರು ಬಿಡು = ತರ್ಪಣ ಬಿಡು, ಆಸೆಬಿಡು
ಪ್ರ : ಅದ್ಕೆ ಎಳ್ಳು ನೀರು ಬಿಟ್ಟುಬಿಡು, ಗೀಳಿಟ್ಕೊಂಡು ಒದ್ದಾಡಿದರೆ ಸುಖವಿಲ್ಲ.
೩೭೭. ಎಳೆ ಹಾಕು = ಸಂಬಂಧ ಕಲ್ಪಿಸು, ಜೋಡಿ ಹಾಡು
(ಎಳೆ = ಅಂಗುದಾರ = ಅರಿಶಿಣ ಹಚ್ಚಿದ ದಾರ)
ಪ್ರ : ಈ ಗಂಡಿಗೆ ಅದೇ ಹೆಣ್ಣು ಅಂತ ಮಗುವಾಗಿದ್ದಾಗಲೇ ಎಳೆ ಹಾಕಿಬಿಟ್ಟಿದ್ದೀನಿ
೩೭೮. ಎಂಜಲು ಎತ್ತೋಕೆ ಹೋಗು = ಮನೆ ಬಿಟ್ಟು ಹೋಗು, ಪೋಲಿ ತಿರುಗಲು ಹೋಗು, ಅಡುಗೂಲಜ್ಜಿಯ ಆಳಾಗು
ಪ್ರ : ಎಂಜಲು ಎತ್ತೋಕೆ ಹೋದೋನು, ಈಗ್ಯಾಕೆ ಗುಂಜು ತರಿಯೋಕೆ ಬಂದ್ನ?
೩೭೯. ಎಂಜಲುಗೈಲಿ ಕಾಗೆ ಅಟ್ಟದಿರು = ಮಹಾಲೋಭಿಯಾಗಿರು
ಎಂಜಲುಗೈಯಲ್ಲಿರುವ ಒಂದೆರಡು ಅನ್ನದ ಅಗುಳು ಕೆಳಗೆ ಬಿದ್ದು ಕಾಗೆ ಪಾಲಾದೀತು ಎಂದು ಕೈ ಬೀಸದಷ್ಟು ಜಿಪುಣತನದ ಪರಾಕಾಷ್ಠೆಯ ಕಂಡರಣೆ ಈ ನುಡಿಗಟ್ಟಿನಲ್ಲಿದೆ.
ಪ್ರ : ಎಂಜಲುಗೈಲಿ ಕಾಗೆ ಅಟ್ಟದೋಳು, ಹೊಸಬನಿಗೆ ಹೊಸದಾಗಿ ಅಟ್ಟು ಊಟಕ್ಕಿಟ್ಟಾಳ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ