ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ. ಕಾಲನು ತನ್ನ ಪದಾಘಾತದಲ್ಲಿ ಮೃತರಾಗುವವರ ನೆನೆದು ಮರುಗುತ್ತಾನೆ . ಹಾಗೆ ಮೃತರಾದವರು ಮಣ್ಣಾದ ಮೇಲೆ ಆ ಭೂಮಿಯಮೇಲೆ ಮತ್ತೆ ಹೊಸ ಹುಲ್ಲು ಹುಟ್ಟುತ್ತದೆ..ಈ ಧರೆ ಮತ್ತೆ ಮತ್ತೆ ಗರ್ಭ ಧರಿಸಿ ಹೊಸ ಹೊಸ ಪಲ್ಲವಗಳಿಗೆ ಎಡೆಮಾಡಿ ಕೊಡುತ್ತಾಳೆ, ಮತ್ತೆ ಮತ್ತೆ ಹೊಸ ಜೀವ ಉದಯಿಸುವುದು. ನಿರಂತರವಾಗಿ ನಡೆಯುವ ಕೃಷಿಯೇ ಈ ಪ್ರಕೃತಿ ಎಂದು ಒಂದು ಸುಂದರ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.
ಸೃಷ್ಟಿಯ ಆದಿಯಲ್ಲಿ ಏನಿತ್ತೋ ಏನೋ ನಾನರಿಯೆ. ಆದರೆ ಅಂದಿನಿಂದ ಇಂದಿಗೂ ಪ್ರತಿ ಕ್ಷಣ ಸಾವಿರಾರು ಜೀವಿಗಳು ಈ ಜಗತ್ತಿನಲ್ಲಿ ಜನಿಸುತ್ತಿದ್ದಾರೆ ಮತ್ತು ಅಳಿಯುತ್ತಿದ್ದಾರೆ. ಕೋಟ್ಯಾಂತರ ಜೀವಿಗಳ ಸೃಷ್ಟಿ ಮತ್ತು ಅಳಿವು ಪ್ರತಿಕ್ಷಣವೂ ನಡೆಯುತ್ತಿದೆ. ಪ್ರಾಣಿಗಳು ಪಕ್ಷಿಗಳು ಕೀಟಗಳು ಮಾನವರು ಮತ್ತು ಜಲಚರಗಳಲ್ಲಿ ನಿರಂತರ ಈ ಪ್ರಕ್ರಿಯೆ ನಡೆಯುತ್ತಿದೆ. ಅವ್ಯಾಹತ ಹರಿಯುವ ಕಾಲದ ರಂಗಮಂಟಪದಲ್ಲಿ ನಡೆದಾಡುವ ಪಾತ್ರಗಳ ಕುಸಿಯುವಿಕೆ ಮತ್ತು ಹೊಸ ಹೊಸ ಪಾತ್ರಗಳ ಸೃಷ್ಟಿ ಮತ್ತು ನಲಿದಾಟ,ಕಾಲನೆಷ್ಟು ಅವ್ಯಾಹತನೋ ಅಷ್ಟೇ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಒಂದು ದೇಹ ಮತ್ತು ಚೇತನದ ನಿರಂತರ ಸಮಾಗಮ, ಜೀವನ ಮತ್ತು ನಿರ್ಗಮನದ ಆಟವೇ ಈ ಇಳೆಯಲ್ಲಿ. ಆ ಪರಮಾತ್ಮನ ಸೃಷ್ಟಿ ಸ್ಥಿತಿ ಲಯಗಳಾಟ. ಇದೆ ಪ್ರಕೃತಿ ಮತ್ತು ಅದರ ಸಹಜ ಸ್ಥಿತಿ.
ಬಂಧುಗಳೇ, ನಾವು ಬೇಕೆಂದರೂ, ಬೇಡವೆಂದರೂ, ಇಷ್ಟಪಟ್ಟರೂ, ಪಡದೆ ಇದ್ದರೂ ನಮ್ಮ ನಿಮಿತ್ತವಿಲ್ಲದೆಯೇ ನಡೆಯುವ ಈ ಗೊಂಬೆಯಾಟದಲ್ಲಿ ನಾವೆಲ್ಲಾ ಕೇವಲ ಪಾತ್ರಧಾರಿಗಳು. ಆ ಜಗನ್ನಾಟಕ ಸೂತ್ರಧಾರಿ ಆಡಿಸುವ ಬೊಂಬೆಗಳು. ನಮ್ಮ ಪಾತ್ರ ಬಂದಾಗ ನಮ್ಮ ಪ್ರವೇಶ, ಪಾತ್ರ ಮುಗಿದೊಡನೆ ನಿರ್ಗಮನ, ಇವೆರಡರ ನಡುವೆ ನಾವಾಡುವ ಆಟ ಹೇಳತೀರದು. ಅಜ್ಞಾನದಿಂದ ನಮ್ಮನ್ನು ” ನಾನು ” ಎಂದುಕೊಂಡು ನಾವು ಪಡುವ ಪಾಡನ್ನು ನೋಡಿ ಆ ಪರಮಾತ್ಮನೂ ಸಹ ನೋಡಿ ನಗುತ್ತಿರಬೇಕು, ಅಲ್ಲವೇ? ಈ ಜಗತ್ತಿನ ಎಲ್ಲ ಮಾನವರಿಗೂ ” ನಾವು ಒಂದು ದಿನ ಈ ಪಾತ್ರದಿಂದ ನಿರ್ಗಮಿಸಲೇ ಬೇಕು” ಎಂದು ಗೊತ್ತು. ಆ ಸತ್ಯವನ್ನು ಮರೆಸಿ ನಮ್ಮಿಂದ ಹಲವಾರು ಕೆಲಸಗಳನ್ನು ಮಾಡಿಸುವುದು ಮಾಯೆ. ನಮಗರ್ಥವಾಗದ ಮಾಯೆ. ನಾವು ನಿರ್ದೇಶಕನು ಸೂಚಿಸಿದ ಮಾರ್ಗದಲ್ಲಿ ನಮ್ಮ ಪಾತ್ರ ವಹಿಸಿದರೆ ಸುಖ, ನಮ್ಮ “ಅಹಂ”ಕಾರದ ಮಾತು ಕೇಳಿದರೆ ದುಃಖ. ಆಯ್ಕೆ ನಮ್ಮದು. ಸುಖ ಅಥವಾ ದುಃಖ ನಮ್ಮದು.
ಇಡೀ ಜಗತ್ತಿನ ಮೂಲ ವಸ್ತುವು ಒಂದೇ. ಆ ಪರಮಾತ್ಮ ತನ್ನ ಲೀಲಾ ವಿನೋದಕಾಗಿ ತನ್ನನ್ನೇ ತಾನು ಹಲವಾಗಿಸಿಕೊಂಡಿದ್ದಾನೆ. ಕಾಲದ ನೋಟಕ್ಕೆ ಬಹಳವಾಗಿ ಕಂಡರೂ ಅದು ಕೇವಲ ಒಂದೇ. ಸ್ಥೂಲವಾಗಿ ನೋಡಿದಾಗ ಹಲವಾಗಿ ಬಾಳಿದರೂ ಸೂಕ್ಷ್ಮ ರೂಪದಿ ನೋಡಿದಾಗ ಜಗತ್ತಿನ ಎಲ್ಲ ವಸ್ತುಗಳಲ್ಲೂ ಸಾಮ್ಯತೆಯನ್ನು ತೋರುತ್ತಾ ಆ ಆತ್ಮನೇ ಆಳುತ್ತಿದ್ದಾನೆ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಜಗತ್ತಿನ ಎಲ್ಲವೂ ಒಂದೇ ಮೂಲದಿಂದ ಬಂದು ಹಲವಾಗಿ ಪ್ರಕಟಗೊಂಡಿದೆ ಎನ್ನುವುದು ಪ್ರಮಾಣಸಿದ್ಧ . ಆದರೂ ನಮಗೆ ಅದು ಬೇರೆ ಬೇರೆಯಾಗಿ ಕಾಣುತ್ತವೆ. ಹಾಗೆ ಬೇರೆ ಬೇರೆ ಕಾಣುವುದು ಕೇವಲ ಸ್ಥೂಲ ರೂಪ. ಆದರೆ ಸೂಕ್ಷ್ಮ ರೂಪದಲ್ಲಿ ನೋಡಿದರೆ ಎಲ್ಲವೂ ಒಂದೇ ಎಂದು ತೋರುತ್ತದೆ ಮತ್ತು ಅರ್ಥವಾಗುತ್ತದೆ. ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಪ್ರತಿಯೊಂದೂ ಸ್ಥೂಲರೂಪದಲ್ಲಿ ಇದ್ದು ಈ ಸ್ಥೂಲರೂಪಕ್ಕೆ ಚಲನೆಯನ್ನು ನೀಡುವ ಚೇತನವೇ ಸೂಕ್ಷ್ಮರೂಪದಲ್ಲಿ ಇದೆ. ಆ ಚೇತನವು ಪರಮ ಚೈತನ್ಯದ ಒಂದು ಅಂಶವಷ್ಟೇ. ಆ ಪರಮ ಚೈತನ್ಯವೇ ಇಡೀ ವಿಶ್ವಕ್ಕೆ ಮೂಲ. ಆ ಪರಮಾತ್ಮ ಕೇವಲ ತನ್ನ ಲೀಲಾ ವಿನೋದಕ್ಕಾಗಿ ಎಲ್ಲವನ್ನೂ ಸೃಜಿಸಿ ಅದಕ್ಕೆ ಚೈತನ್ಯ ರೂಪದಲ್ಲಿ ತಾನೆ ಒಳಹೊಕ್ಕು ತನ್ನ ಲೀಲೆಯನ್ನು ನಡೆಸಿದ್ದಾನೆ. ಅದನ್ನೇ ಮಾನ್ಯ ಗುಂಡಪ್ಪನವರು ” ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ” ಎಂದಿದ್ದಾರೆ.
ಇಲ್ಲಿ ನಾವು ಮುಖ್ಯವಾಗಿ ನೋಡಬೇಕಾದುದೇನೆಂದರೆ ಸ್ಥೂಲ ರೂಪದಲ್ಲಿರುವ ನಾವೆಲ್ಲಾ ನಮ್ಮ ನಮ್ಮನ್ನು ಬೇರೆಬೇರೆಯಾಗಿ ಗುರುತಿಸಿ ಕೊಂಡರೂ ಮತ್ತು ಬೇರೆ ಬೇರೆ ರೂಪಗಳಿಗೆ ಬೇರೆ ಬೇರೆ ಹೆಸರುಗಳನ್ನೂ ಇಟ್ಟರೂ ನಮ್ಮಲ್ಲಿ ಇರುವ ಸಾಮ್ಯತೆ ಏನೆಂದರೆ ಏಕರೂಪದಲ್ಲಿರುವ ಆ ಸೂಕ್ಷ ಚೇತನವೇ. ಅಂದರೆ ನಾವೆಲ್ಲ ಬೇರೆ ಬೇರೆ ರೂಪದಲ್ಲಿ ಇದ್ದರೂ ನಮ್ಮಲ್ಲಿ ಇರುವ ಆ ಸಾಮ್ಯ ರೂಪದ ಚೇತನವೇ ಪರಮಾತ್ಮ.
ಹೇಗೆ ಸಾಮ್ಯರೂಪದ, ಒಂದೇ ತೆರನಾಗಿರುವ, ವಿದ್ಯುತ್ ಹಲವಾರು ವಿಧದ ವಿವಿಧ ರೂಪದ ವಿದ್ಯುತ್ ಬಲ್ಬುಗಳನ್ನು ಬೆಳಗುತ್ತದೆಯೋ ಹಾಗೆ ಕೋಟ್ಯಾಂತರ ರೂಪಗಳನ್ನು ಧರಿಸಿರುವುದು, ಆ ರೂಪಗಳನ್ನು ಬೆಳಗುವುದೂ ಸಹ ಸಾಮ್ಯರೂಪದ ಚೇತನ ಅಥವಾ ಆತ್ಮ. ನಾವು ನಮ್ಮ ನಮ್ಮ ರೂಪಗಳ “ಮರೆಸಿ” ಕಂಡರೆ ನಮಗೆ ಕಾಣುವುದು ಆ ಏಕರೂಪದ ಪರಮಾತ್ಮ ಮಾತ್ರ ಎನ್ನುವುದೇ ಈ ಕಗ್ಗದ ಹೂರಣ. ಆದರೆ ಮಾಯೆ ನಮ್ಮನ್ನು ಹಿಡಿದು ಬಂಧಿಸಿ ಬಿಟ್ಟಿದೆ. ನಾವು, ಆ ಸೂಕ್ಷ್ಮವಾಗಿ ಸಾಮ್ಯತೆಯಿಂದ ಎಲ್ಲ ಜೀವಿಗಳಲ್ಲೂ ಇರುವ, ಆ ಪರಮಾತ್ಮನನ್ನು ಕಾಣಲು ಆಶಕ್ಯರಾಗಿದ್ದೇವೆ. ಮಾಯೆಯಿಂದ ಆವರಿಸಲ್ಪಟ್ಟ ನಮ್ಮ ಮನಸ್ಸು ಬುದ್ಧಿಗಳು ಈ ಬೇಧದ ಭಾವದಿಂದ ಹೊರಬರಬೇಕಾದರೆ, ಮುಕ್ತನಾಗಬೇಕಾದರೆ ಆರು ವೈರಿಗಳ ಸೆರೆಯಿಂದ ಹೊರಬರಬೇಕು.
ವಾಚಕ ಮಹಾಶಯರೇ, ಅದು ಸಾಧ್ಯವೋ, ಇಲ್ಲವೋ ನಾನರಿಯೆ! ಸಾಧ್ಯವಿರಬಹುದು. ಎಂದು ಮತ್ತು ಹೇಗೆ ಸಾಧ್ಯವೆಂದು ನಾನರಿಯೆ !! ಆದರೆ ಸಾಧ್ಯವಾದಲ್ಲಿ ಇಡೀ ಭುವನವೇ ನಾವು ಶಾಂತಿಯಿಂದ, ಸೌಹಾರ್ಧತೆಯಿಂದ. ಪ್ರೀತಿಯಿಂದ, ಪ್ರೇಮದಿಂದ ಮತ್ತು ಆನಂದದಿಂದ ಬಾಳಲು ಎಲ್ಲ ಜೀವಿಗಳೂ ಇಷ್ಟಪಡುವ ಒಂದು ಸುಂದರ ತಾಣವಾಗುವುದರಲ್ಲಿ ಸಂದೇಹವೇ ಇಲ್ಲ.
ಈ ಧರಣಿಯನ್ನು ಮನುಷ್ಯನ ಕಣ್ಣಿಗೆ ಸುಂದರವಾಗಿ ಕಾಣುವಂತೆ, ಮದುವೆ ಮಂಟಪದಂತೆ ಸಿಂಗರಿಸಿ, ಇದರೊಳಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಆಸ್ಥೆ ಮತ್ತು ಆಸೆಯನ್ನು ಅವನ ಹೃದಯದಲ್ಲಿ ತುಂಬಿ ಸತ್ಯವನ್ನು ಮರೆಸಿ ಕೇವಲ ಅಸಹಜತೆಯನ್ನು ಮೆರೆಯುವಂತೆ ಮಾಡಿರುವ ಮತ್ತು ನೋಡಿ ನಗುತ್ತಿರುವ “ಮಾಯೆ” ಒಂದು ಸುಂದರ ಚಿತ್ರಕಾರಿಯೋ ಎಂದು ಒಂದು ಗಹನವಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಹೌದಲ್ಲವೇ ಸಹೃದಯರೇ, ಇಡೀ ಜಗತ್ತು ಹಲವಾರು ಭೂ ವಿನ್ಯಾಸಗಳಿಂದ, ಬೆಟ್ಟ ಗುಡ್ಡಗಳಿಂದ, ನದಿ ತೊರೆ ಮತ್ತು ದುಮ್ಮಿಕುವ ಜರಿಗಳಿಂದ, ಕೋಟಿ ಕೋಟಿ ವಿನ್ಯಾಸ, ಬಣ್ಣ, ಮತ್ತು ಆಕಾರಗಳಿಂದ ಕೂಡಿದ ಕ್ರಿಮಿ, ಕೀಟ, ಹುಳ, ಹುಪ್ಪಟೆ,ಪ್ರಾಣಿ , ಪಕ್ಷಿ, ಮನುಷ್ಯ, ಗಿಡ, ಮರಗಳು, ಹೂ, ಹಣ್ಣುಗಳು, ಸುಗಂಧಗಳು, ಹೀಗೆ ಹೇಳಲಾಗದಷ್ಟು, ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಹುಟ್ಟಿದ ಪ್ರತಿ ಮನುಷ್ಯನು ಅವನ ಜೀವನದಲ್ಲಿ ಒಂದು ಬಾರಿಯಾದರೂ ಇದರ ಈ ಅಂದವನ್ನು ನೋಡಿ ” ಆಹಾ ಎಷ್ಟು ಚೆನ್ನಾಗಿದೆ” ಎಂದು ಒಂದು ಉದ್ಹ್ಘಾರವನ್ನು ತೆಗೆಯದೆ ಇರಲು ಸಾಧ್ಯವೇ ಇಲ್ಲ. ಒಂದೊಂದು ಕಡೆಯಲ್ಲಿ ಒಂದೊಂದು ವಿನ್ಯಾಸ. ಮಣ್ಣಿನ ಗುಣ ಬೇರೆ, ನೀರಿನ ಗುಣ ಬೇರೆ, ಗಾಳಿಯ ಮತ್ತದರ ಗಂಧದ ಗುಣ ಬೇರೆ. ಇವುಗಳ ಗುಣಗಳಿಗೆ ಅನುಸಾರವಾಗಿ ಎಲ್ಲ ಜೀವಿಗಳ ಗುಣಗಳೂ ಬೇರೆ ಬೇರೆ. ಆದರೂ ಪ್ರತಿ ವೈವಿಧ್ಯತೆಯಲ್ಲೂ ಒಂದು ಮನ ಮೋಹಕ ಸುಂದರತೆ. ಇದನ್ನು ನೋಡಿ ಆನಂದಿಸದೇ, ಆಕರ್ಷಿತನಾ(ಳಾ)ಗದೆ ಇರುವ ಮನುಷ್ಯ ಇರಲು ಸಾಧ್ಯವೇ ಇಲ್ಲ ಅಲ್ಲವೇ?
ಆದರೆ ಇದು ಇಹ. ಇದು ಇಹವಾದರೆ ಪರವೂ ಒಂದು ಉಂಟು. ನಾವು ಇರುವುದೇ ಇಹದಲ್ಲಿ. ಪರಕ್ಕೆ ಹೋಗುವ ಪರದಾಟ. ಆದರೆ ಇಲ್ಲಿರುವ ಅಂದರೆ ಇಹದಲ್ಲಿರುವ ಎಲ್ಲ ಅಂದಗಳೂ ಅಶಾಶ್ವತವಾದರೂ, ಮನುಷ್ಯನನ್ನು ಆಕರ್ಷಿಸಿ ಮೋಹಗೊಳಿಸಿ ತನ್ನೆಡೆಗೆ ಸೆಳೆಯುತ್ತಿದೆ. ಈ ಸೆಳೆತದಿಂದ ಹೊರಬರಲು ಮಾನವನ ನಿರಂತರ ಪ್ರಯತ್ನ ನಡೆದೇ ಇದೆ. ಜನ್ಮ ಜನ್ಮಾಂತರದಿಂದ ನಡೆಯುತ್ತಲೇ ಇದೆ. ಪ್ರತಿ ಜನ್ಮದಲ್ಲೂ ಕೆಲವರು ಕೆಲವು ಹೆಜ್ಜೆ ಮುನ್ನಡೆಯುತ್ತಾರೆ, ಕೆಲವರು ಹಿನ್ನಡೆಯನ್ನೂ ಹಾಕುತ್ತಾರೆ. ಮತ್ತೆ ಮುನ್ನಡೆಯುವ ಪ್ರಯತ್ನ. “ಎಣ್ಣೆ ಸುರಿದ ನೆಲದಮೇಲೆ ನಡೆಯಲು ಪ್ರಯತ್ನ ಪಡುವವನ ರೀತಿ”. ಈ ಜಗತ್ತಿನ ಮಾಯೆಯಂಬ ಎಣ್ಣೆ ನಮ್ಮನ್ನು ಮುನ್ನಡೆಯಲು ಬಿಡುವುದೇ ಇಲ್ಲ. ಬಹಳಷ್ಟು ಸಾರಿ ಜಾರಿ ಬೀಳುವುದೇ ನಮ್ಮ ಪಾಡು.
“ಈ ಜಗತ್ತನ್ನು, ಆಕರ್ಷಣೀಯವಾದ ಈ ಜಗತ್ತಿನ ಸೊಬಗನ್ನೂ, ನಮ್ಮನ್ನು ಈ ಆಕರ್ಷಣೆಯ ವೃತ್ತದೊಳಕ್ಕೆ ಸೆಳೆದುಕೊಳ್ಳುವ ಮಾಯೆಯನ್ನು”, ಸೃಷ್ಟಿಸಿದ ಆ ದೈವವೂ ಸಹ ಈ ನಮ್ಮ ಪಾಡನ್ನು ಕಂಡು ಒಳಗೊಳಗೇ ಹಲವಾರುಬಾರಿ ನಕ್ಕಿರಬಹುದು, ಗಹಗಹಿಸಿ ಅಟ್ಟಹಾಸದ ಕೇಕೆ ಹಾಕಿರಬಹುದು , ಅಣಕವಾಡಿರಬಹುದು. ” ಜಗವನ್ನು ಸೃಜಿಸಿ, ನಿನ್ನನ್ನು ಸೃಷ್ಟಿಮಾಡಿ, ಜಗಕ್ಕೆ ಅಂದವನ್ನು ಕೊಟ್ಟು, ಮಾಯೆಯ ಪ್ರಾಭಲ್ಯದಿಂದ ಈ ಜಗತ್ತಿನಲ್ಲಿ ನಿನಗೆ ಆಸೆಯನ್ನೂ ಹುಟ್ಟಿಸಿ, ನನ್ನ ಸೇರುವಾಸೆಯನ್ನೂ ಕೊಟ್ಟು ಅದರ ಸೆಳೆತದಲ್ಲಿ ಸಿಕ್ಕಿಹಾಕಿಕೊಂಡು ಪರದಾಡುವಂತೆ ಮಾಡಿದ್ದೇನೆ, ಇದರಿಂದ ಬಿಡಿಸಿಕೊಳ್ಳುವ ಮಾರ್ಗವನ್ನೂ ತೋರಿದ್ದೇನೆ. ನಿನ್ನ ಶಕ್ತಿಯಿಂದ ಬಿಡಿಸಿಕೊಂಡು ಬರುವೆಯೋ ಅಥವಾ ಅದರ ಸೆಳೆತದಲ್ಲೇ ಅಲ್ಲೇ ಒದ್ದಾಡುವೆಯೋ ” ಎಂದು ತಮಾಷೆಯಾಟವನ್ನು ಆಡುತ್ತಿದ್ದಾನೆ. ಇದು ಮಾಯೆ ಎಂದು ಬಹಳಷ್ಟು ಜನರಿಗೆ ಅರಿವಾಗುವುದೇ ಇಲ್ಲ. ಹಾಗೆ ಅರಿವಾದವರಲ್ಲಿ ಬಹಳಷ್ಟುಜನ ಇದರಿಂದ ಮುಕ್ತರಾಗುವ ಪ್ರಯತ್ನವನ್ನೇ ಮಾಡುವುದಿಲ್ಲ. ಹಾಗೆ ಪ್ರಯತ್ನ ಪಟ್ಟವರಲ್ಲಿ ತದೇಕಚಿತ್ತದಿಂದ ಮುಂದುವರೆದವರು ವಿರಳ. ಹಾಗೆ ಮುಂದುವರೆದವರಲ್ಲಿ ಮುಕ್ತಿ ಪಡೆದವರು ಅತೀ ವಿರಳ.
ವಾಚಕರೆ ನಾವೂ ಸಹ ಬಿಡುಗಡೆಯ ಪ್ರಯತ್ನ ಪಡುವ, ದಿಟ್ಟ ಹೆಜ್ಜೆಯನ್ನು ಇಡುವ ಸಂಕಲ್ಪವನ್ನು ಇಂದೇ ಮಾಡೋಣವೆ?
ಗಾಳಿಯನ್ನು ನೋಡಿದವರು ಯಾರು. ಆದರೆ ಅದರ ಕ್ರಿಯೆಯನ್ನು ಅನುಭವಿಸದವರಾರು. ಮಾಯೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ಆ ಪರಮಾತ್ಮನ ಕ್ರಿಯೆಯನ್ನು ನಾವು ನೋಡಬಹುದು ಆದರೆ ರಾಜನನ್ನು ನೋಡಲಾಗದೆ ಅವನ ಸೇವಕ ಮಂತ್ರಿಯ ಬಳಿ ಹೋಗಿ ಬೇಡುವವನಂತೆ ನೀ ಇದ್ದೀಯೇ ಎಂದು ಮಾನ್ಯ ಗುಂಡಪ್ಪನವರು ತಮ್ಮನ್ನೇ ತಾವು ಹೇಳಿಕೊಳ್ಳುತ್ತಾ ನಮ್ಮ ಸ್ಥಿತಿಯೂ ಹಾಗೆ ಇದೆ ಎಂದು ಸೂಚ್ಯವಾಗಿ ಹೇಳುತ್ತಾರೆ.
ಗಾಳಿಯನ್ನು ನೋಡಿದವರಿಲ್ಲ. ಧೂಳನ್ನು ನೋಡಿರಬಹುದು. ಹಾಗೆ ಗಾಳಿಯನ್ನು ನೋಡದಿದ್ದರೂ ಅದಿಲ್ಲದೆ ನಮಗೆ ಜೀವನವೇ ಇಲ್ಲ. ಉಸಿರಾಡುವುದು ಸಹಜ ಕ್ರಿಯೆ. ಆದರೆ ನಮ್ಮ ಗಮನ ಎಲ್ಲ ಕಾಲದಲ್ಲಿಯೂ ನಾವಾಡುವ ಉಸಿರಿನ ಮೇಲೆ ಇರುವುದಿಲ್ಲ ಅಲ್ಲವೇ? ಇಡೀ ಜಗತ್ತಿನಲ್ಲಿ ಇರುವ ಎಲ್ಲ ಚರಾಚರ ಜೀವಿಗಳಿಗೂ ಗಾಳಿಯೇ ಜೀವಾಧಾರ. ಆದರೆ ಅದು ಹೇಗೆ ಕೆಲಸಮಾಡುತ್ತದೆ ಎಂದು ನಮಗೆ ಗೊತ್ತಿರದಿದ್ದರೂ ನಮ್ಮ ಅಧಾರ ಅದು. ಹಾಗೆಯೇ ಈ ಜಗತ್ತಿನಲ್ಲಿ ಮಾಯೆಯನ್ನು ಅರಿತವರಿಲ್ಲ. ಆದರೆ ನಮ್ಮೆಲ್ಲರ ಮೇಲೆ ಮಾಯೆಯ ಮುಸುಕನ್ನು ಹಾಕಿ, ನಾವು ಈ ಮಾಯೆಯ ಹಿಡಿತದಲ್ಲಿರುವಂತೆ ಮಾಡಿ, ಈ ಜಗನ್ನಾಟಕವನ್ನು ಆಡಿಸುವ ಆ ಪರಮಾತ್ಮನ ಕೃತಿಯನ್ನು ನಾವು ಪ್ರತಿಯೊಂದು ವಸ್ತುವಿನಲ್ಲೂ ನೋಡಬಹುದು. ಅಲ್ಲಿ ಸತ್ವವಿದೆ. ಆದರೆ ಸತ್ಯವನ್ನು ಮಾಯೆ ಮುಸುಕಿದೆ. ಹಾಗಾಗಿ ಅದರ ಕ್ರಿಯೆ ಕಂಡರೂ ಅದು ಹೇಗೆ ನಡೆಯುತ್ತದೆ ಎಂದು ಅರಿಯಲು ಮಹಾ ಮಹಿಮರಿಗೂ ಸಾಧ್ಯವಾಗಿಲ್ಲ.
ಆದರೆ ನಮಗೆ ” ಇದು ಮಾಯೆ” ” ಇದು ಸತ್ಯವಲ್ಲ” ಎಂದು ಅರಿವು ಹೇಗಾಗುತ್ತದೆ. ಇದಕ್ಕೆ ನಮ್ಮ ಪೂರ್ವಜರು ಋಷಿ ಮುನಿಗಳು ಹಲವಾರು ಮಾರ್ಗಗಳನ್ನು ತೋರಿದ್ದಾರೆ. ಧ್ಯಾನ, ತಪಸ್ಸು ಯಜ್ಞ ಯಾಗಗಳಿಂದ ಆ ಪರಮ ಪುರುಷನ ನಿಜ ಸ್ವರೂಪವನ್ನು ಕಾಣಬಹುದೆಂದು ಹೇಳಿದ್ದಾರೆ. ಆದರೆ ನಾವು ಈ ಜಗತ್ತಿನಲ್ಲಿ ಕೇವಲ ಮಾಯೆಯ ಹಿಡಿತದಲ್ಲಿದ್ದೇವೆ. ಒಂದು ಕ್ಷಣವೂ ಇದರಿಂದ ಮುಕ್ತಿಯೇ ಇಲ್ಲ. ಕೆಲವರಿಗೆ ತಾವು ಮಾಯೆಯಲ್ಲಿದ್ದೇವೆಂದು ಗೊತ್ತು. ಆದರೆ ಅವರೂ ಸಹ ಈ ಜಗತ್ತಿನ ಮೋಹದಲ್ಲಿ ಅದನ್ನು ಮರೆತಿದ್ದಾರೆ. ಪಾಪ ಕೆಲವರಿಗೆ ಅದರ ಅರಿವೇ ಇಲ್ಲ.
ಆದರೆ ಜಗನ್ನಾಟಕವನ್ನು ಆಡಿಸುವ ಆ ಪರಮಾತ್ಮನ ಕೃತಿಯನ್ನು ಈ ಮಾಯೆ ಮರೆಸಿದ್ದರೂ ನಮಗದನ್ನು ಅರಿಲಾಗದಿದ್ದರೂ ಅದರ ಅನುಭವವನ್ನು ಆ ಅನುಭವದ ಆನಂದವನ್ನು ಪಡೆಯಲು ಸಮರ್ಥರಾಗಿದ್ದೇವೆ. ಆದರೆ ನಾವು ಅಜ್ಞಾನದಿಂದ ಆ ಪರಮ ಚೇತನದ ಕೃಪೆಗೆ ಪಾತ್ರರಾಗುವುದರ ಬದಲು “ರಾಯನಂ ಕಾಣಲಾಗದೆ ಮಂತ್ರಿಯಡೆ ಸಾರ್ವ” ಎಂದು ಗುಂಡಪ್ಪನವರು ಹೇಳುವಂತೆ, ಅವನ ಮಂತ್ರಿಗಳಾದ, ದೇವತೆಗಳು ಗ್ರಹಗಳನ್ನು ಕಂಡ ಕಂಡ ದೇವ ದೇವತೆಗಳನ್ನು ನಂಬಿ ಈ ಜಗತ್ತಿನಲ್ಲಿ ಆನಂದವನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದೇವೆ. ನೇರ ಆ ಪರಮಾತ್ಮನಿಗೆ ಶರಣಾಗಿಬಿಟ್ಟರೆ, ನಮ್ಮೆಲ್ಲ ಹಿತವನ್ನೂ ಅವನೇ ನೋಡಿಕೊಳ್ಳುತ್ತಾನೆ ಎಂದು ಗೊತ್ತಿದ್ದರೂ ಅರಿತುಕೊಳ್ಳಲಾಗದಂತೆ ಮಾಯೆಯ ಹಿಡಿತದಲ್ಲಿ ಸಿಕ್ಕಿಬಿದ್ದಿದ್ದೇವೆ. ಇದರಿಂದ ಮುಕ್ತಿಪಡೆಯುವುದೇ ನಮ್ಮ ಮೂಲ ಗುರಿಯಾಗಿರಬೇಕು. ಸತ್ಯವನ್ನು ಅರಿಯಬೇಕು.
ನಿಮಗೂ ನಮಗೂ ಅಂತಹ ಗುರಿಯನ್ನು ಮುಟ್ಟುವ ಪ್ರಯತ್ನಮಾಡುವ ಅವಕಾಶ ಸಿಗಲೆಂದು ಹಾರೈಸುತ್ತಾ.
ರಸಧಾರೆ – 145
ಮಾಯೆಯೇ ಸರಸಿ, ನಿರ್ಗುಣ ಸತ್ವದಿಂದೇನು ? |
ಮಾಯೆ ಬಿಡೆ ಜಗವೆತ್ತ? ಜೀವಕಥೆಯತ್ತ? ||
ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು |
ತಾಯವಳು ನೀಂ ಮಗುವು – ಮಂಕುತಿಮ್ಮ ||
ನಮ್ಮ ಜೀವನದ ಜೊತೆಗೆ ಸರಸವಾಡುವ ಆ ಸರಸಿಯೇ ಈ ಮಾಯೆ. ಗುಣ ರಹಿತವಾದ ಸತ್ವದಿಂದ ಏನು ಪ್ರಯೋಜನ. ಈ ಮಾಯೆಯೇ ಇಲ್ಲದೆ ಹೋದರೆ ಈ ಜಗತ್ತಿನಲ್ಲಿ ವೈವಿಧ್ಯತೆ ಇಲ್ಲದೆ ಸ್ವಾರಸ್ಯವೇ ಇಲ್ಲದೆ ಹೋಗುತ್ತಿತ್ತು. ಅರ್ಥವಾಗದ ( ಮೇಯವಲ್ಲದ) ಈ ಮಾಯೆಯಾ ಮಹಿಮೆ ಆ ಸೃಷ್ಟಿಕರ್ಣ ಬ್ರಹ್ಮನ ಛಾಯೆ (ನೆರಳು) ಈ ಮಾಯೆ ತಾಯಿ ಇದ್ದ ಹಾಗೆ ನಾವೆಲ್ಲಾ ಅವಳ ಮಕ್ಕಳಂತೆ ಎಂದು ಒಂದು ಸ್ವಾರಸ್ಯಕರ ವಿಷಯವನ್ನು ಈ ಕಗ್ಗದಲ್ಲಿ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
ನಾವು ಈ ಜಗತ್ತನ್ನು ” ಮಾಯಾ ಪ್ರಪಂಚ ” ಎಂದು ಎಷ್ಟೋಬಾರಿ ಕೇಳಿದ್ದೇವೆ. ಅಂದರೆ ಈ ಜಗತ್ತೆಲ್ಲ ಮಾಯೆಯಿಂದ ತುಂಬಿದೆ. ಈ ಮಾಯೆಯಿಂದಲೇ ಅಲ್ಲವೇ ಈ ಜಗತ್ತಿನ ಎಲ್ಲ ಭಾವಗಳು. ಅದು ಒಳ್ಳೆಯದೋ ಕೆಟ್ಟದ್ದೋ ಎನ್ನುವ ಪರಿಭಾಷೆಗೆ ಈ ಭಾವನೆಗಳನ್ನು ಒಡ್ಡದೆ ಹಾಗೆ ನೋಡಿದರೆ ಮಾಯಾ ಜನಿತ ಭಾವಗಳೇ ಎಲ್ಲವೂ ಎಂದು ತಿಳಿಯುತ್ತದೆ . ಈ ಭಾವುಕತೆ ಇಲ್ಲದೆ ಹೋಗಿದ್ದಿದ್ದರೆ, ಎಲ್ಲರೂ ಭಾವ ಶೂನ್ಯರಾಗಿ, ಕೇವಲ ಪರಬ್ರಹ್ಮನನ್ನು ಕುರಿತು ಧ್ಯಾನವನ್ನೋ ತಪಸ್ಸನ್ನೋ ಮಾಡುತ್ತಾ ಇದ್ದಿದ್ದಿದ್ದರೆ , ಇಡೀ ಜಗತ್ತೇ ಎಷ್ಟು ನೀರಸವಾಗಿರುತಿತ್ತು ಅಲ್ಲವೇ ವಾಚಕರೆ.
ಹಾಗೆ ಆ ಪರಬ್ರಹ್ಮ ವಸ್ತುವಿನಿಂದಲೇ ಈ ಜಗತ್ತು ಆಗ ಮಾಡಲ್ಪಟ್ಟಿದೆ ಎಂದು ಒಪ್ಪಿಕೊಂಡರೆ, ಈ ಜಗತ್ತನ್ನು “ಮಾಯೆ” ಎಂಬ ಸಾಧನದಿಂದಲೇ ಮಾಡಲ್ಪಟ್ಟಿದೆ ಎಂದು ಅರಿತುಕೊಳ್ಳಬೇಕು. ಎಷ್ಟೊಂದು ವೈವಿಧ್ಯತೆಯಿಂದ ಕೂಡಿದ ಈ ಜಗತ್ತು ನಮ್ಮ ಅರಿವಿಗೆ ಬಾರದ ಈ ಮಾಯಾ ಜ್ಹಾಲದಿಂದಲೇ ಮಾಡಲ್ಪಟ್ಟಿದೆ. ಕೋಟಿ ಕೋಟಿ ಬಗೆಯ ಗಿಡ ಮರಗಳು ಹೂ ಹಣ್ಣುಗಳು, ಪಶು ಪಕ್ಷಿಗಳು, ಕೀಟ ಪ್ರಾಣಿಗಳು, ಅವುಗಳ ಬಣ್ಣಗಳು ಆಕಾರಗಳು ರುಚಿಗಳು ಸುಗಂಧಗಳು ಎಲ್ಲವೂ ಮಾಯೆಯೇ ಮಾಡಿದೆ ಎಂದರೆ ತಪ್ಪಾಗಲಾರದು. ಇನ್ನು ಮನುಷ್ಯನನ್ನು ತೆಗೆದುಕೊಳ್ಳೋಣ. ಅಬ್ಬಾ! ಇವನಲ್ಲಿರುವ ವೈವಿಧ್ಯತೆಗೆ ಮಿತಿಯೇ ಇಲ್ಲ. ಇವನ ಚಿತ್ರ ವಿಚಿತ್ರ ಯೋಚನೆಗಳು ಮತ್ತು ಭಾವಗಳು, ಅವಿಷ್ಕಾರಗಳು, ಭಾಷೆಗಳು, ಕಲೆಗಳು, ಸಂಸ್ಕೃತಿಗಳು, ಮತಗಳು, ಜಾತಿಗಳು, ಧರ್ಮಗಳು, ಎಲ್ಲವೂ ಈ ಜಗತ್ತನ್ನು ಒಂದು ವೈವಿಧ್ಯಮಯ ಸುಂದರ ತಾಣವನ್ನಾಗಿಸುವುದರಲ್ಲಿ ಮಾಯೆಯ ಕೈವಾಡ ಸಂಪೂರ್ಣವಾಗಿದೆ. ಯಾವುದಾದರೂ ಒಂದು ” ಏಕೆ ಹೀಗಾಗಿದೆ” ಎಂದು ಅಂದರೆ ” ಅದು ಮಾಯೆ” ಅರ್ಥವಾಗುವುದಿಲ್ಲ ಎಂದು ಉತ್ತರ ಸಿಗುತ್ತದೆ. ಇದನ್ನೇ ಗುಂಡಪ್ಪನವರು “ಮೇಯವಲ್ಲದ ಮಹಿಮೆ ” ಎಂದರು ಈ ಕಗ್ಗದಲ್ಲಿ.
ನಮ್ಮನ್ನು ಪರಮಾತ್ಮ ಸೃಷ್ಟಿಸಿ, ಮಾಯೆಯ ಹಿಡಿತದಲ್ಲಿ ನಮ್ಮನ್ನು ಸಿಕ್ಕಿಸಿ ” ಇದರಿಂದ ಬಿಡಿಸಿಕೊಂಡು ಬಾ ನೋಡೋಣ ” ಎಂದು ಒಂದು ಸವಾಲು ಹಾಕಿದ್ದಾನೆ. ಆದರೆ ವಾಚಕರೆ ಈ ಮಾಯೆಯ ಪ್ರಭಾವ ಇಲ್ಲದೆ ಹೋಗಿದ್ದಿದ್ದರೆ ಈ ನಮ್ಮ ಪ್ರಪಂಚ ಹೇಗಿದ್ದಿರಬಹುದು ಎಂದು ಊಹಿಸಲೂ ಸಾದ್ಯವಿಲ್ಲ ಅಲ್ಲವೇ? ನೀವೂ ಸಹ ಇದನ್ನೇ ಯೋಚಿಸುವ ಪ್ರಯತ್ನ ಮಾಡಿ.
ರಸಧಾರೆ – 146
ರಾಯ ಮುದಿದಶರಥನನಾಡಿಸುತ ಕೈಕೇಯಿ |
ಸ್ವೀಯ ವಶದಲಿ ಕೋಸಲವನಾಳಿದಂತೆ ||
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ ||
ಕಾಯುವಳು ತನ್ನಿಚ್ಛೆ. – ಮಂಕುತಿಮ್ಮ ||
ಮುದಿದಶರಥನನಾಡಿಸುತ= ಮುದಿ + ದಶರಥನನು+ ಆಡಿಸುತ // ಕೋಸಲವನಾಳಿದಂತೆ = ಕೊಸಳವನು+ ಆಳಿದಂತೆ // ಬಿನದವಡಿಸಿ = ಬಿನದವ + ಆಡಿಸಿ.
ರಾಯ= ರಾಜ// ಸ್ವೀಯ = ತನ್ನ, ಸ್ವಇಚ್ಛೆ // ಬೊಮ್ಮನ = ಪರಬ್ರಹ್ಮನ // ಬಿನದವಡಿಸಿ = ವಿನೋದಪಡಿಸಿ//
ಇಲ್ಲಿ ಮಾನ್ಯ ಗುಂಡಪ್ಪನವರು ರಾಮಾಯಣದ ಒಂದು ಪ್ರಸಂಗವನ್ನು ತರುತ್ತಾರೆ. ದಾಸಿ ಮಂಥರೆಯ ಮಾತ ಕೇಳಿ, ತಾನು ಪಡೆದ ವರಗಳ ಬಲದಿಂದ, ತನ್ನ ಗಂಡನಾದ ಮುದುಕ ದಶರಥನನ್ನು, ಯುವರಾಜ ರಾಮನು ಪಟ್ಟಕ್ಕೇರದೆ ತನ್ನ ಮಗನಾದ ಭರತನು ರಾಜನಾಗಬೇಕೆಂಬ ಬಯಕೆಯ ಮುಂದಿಟ್ಟು, ತನ್ನ ಮೋಹದ ಬಲೆಯನ್ನು ಬೀಸಿ, ಅವನನ್ನು ಒಪ್ಪಿಸುತ್ತಾಳೆ. ದುಃಖಿತನಾದಾಗ್ಯೂ, ಅವಳ ಮೋಹದಲ್ಲಿ, ಅವಳಿಚ್ಚೆಯಂತೆ ರಾಜ್ಯಬಾರ ಮಾಡಲು ಬಿಡುತ್ತಾನೆ. ಹಾಗೆಯೆ ಪರಬ್ರಹ್ಮನನ್ನು ಆನಂದ ಪಡಿಸುತ್ತಾ, ಈ ಮಾಯೆಯಂಬ ಮಾಯಾಂಗನೆ ತನ್ನ ಇಚ್ಚೆಯಂತೆ ಈ ಜಗವನಾಳುತ್ತಿದ್ದಾಳೆ, ಎಂದು ಮಾಯೆಯ ಪ್ರಭಾವವನ್ನು ವಿವರಿಸುತ್ತಾರೆ, ಶ್ರೀ ಗುಂಡಪ್ಪನವರು.
ಇರಲಿ ಅಮೇಯವಾದ ಮಾಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮನ್ನು ಭ್ರಮಾ ಲೋಕಕ್ಕೆ ತಳ್ಳುತ್ತದೆ. ಅಲ್ಲೂ ಸಹ ದಶರಥನು” ಇಲ್ಲ ಸಾಧ್ಯವಿಲ್ಲ” ಎಂದಿದ್ದಿದ್ದರೆ ರಾಮಾಯಣವೇ ನಡೆಯುತ್ತಿರಲಿಲ್ಲ. ಹಾಗೆಯೇ ನಮ್ಮ ಜೀವನಗಳಲ್ಲೂ ನಾವು ಎಷ್ಟೋ ಬಾರಿ ಅಂತಹ ಭ್ರಮೆಗಳಿಗೆ ತುತ್ತಾಗಿ, ಆ ಕ್ಷಣದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ನಂತರ ಧೀರ್ಘಕಾಲ ಪರದಾಡು ವಂತಾ ಸ್ಥಿತಿಗೆ ಬೀಳುವುದಿಲ್ಲವೇ? ಹಾಗೆ.
ಮಾಯೆ ಪರಬ್ರಹ್ಮನ ನೆರಳು. ಅವಳಿಗೆ ಛಾಯಾ ಎಂದೂ ಹೆಸರಿದೆ. ಈ ಮಾಯೆಯ ಮಗಳೇ “ಭ್ರಮಾ” ಇವಳು ನಮ್ಮನ್ನು ಸತ್ಯದಿಂದ ಆದಷ್ಟೂ ದೂರ ಇಡಲು ಪ್ರಯತ್ನಿಸುತ್ತಾಳೆ ಮತ್ತೆ ಸಾಕಷ್ಟು ಯೆಶಸ್ವಿಯೂ ಆಗುತ್ತಲೇ. ಅವಳ ಪ್ರಲೋಭನೆಗಳು ಅಧಿಕ. ನಮ್ಮಲ್ಲಿ ಕಂಡ ಕಂಡ ಆಸೆಗಳನ್ನು ಹುಟ್ಟಿಸುವುದಕ್ಕೂ ಅವಳೇ ಕಾರಣ. ನಮಗೆ ಸತ್ಯವಲ್ಲದ್ದನ್ನು ತೋರಿಸಿ, “ಅದರೊಳಗೆ ಆನಂದವಿದೆ, ಸುಖವಿದೆ, ಇದೇ ಸುಖ, ಇದು ಬಿಟ್ಟರೆ ಬೇರೆ ಇಲ್ಲ, ಇಂದು ಬಿಟ್ಟರೆ ಮತ್ತೆ ಸಿಗುವುದಿಲ್ಲ “ಎನ್ನುವಂತಹ ಭ್ರಮೆಯಿಂದ ಕೂಡಿದ ಭಾವಗಳನ್ನು ನಮ್ಮ ಮನಸ್ಸಿನಲ್ಲಿ ತುಂಬಿ, ನಮ್ಮನ್ನು ಒಂದು ಸೂತ್ರದಗೊಂಬೆಯಂತೆ ಆಡಿಸುವವಳೇ ಈ “ಭ್ರಮಾ” . ಈ ಜಗತ್ತಿನಲ್ಲಿ ನಡೆದ ಕತೆಗಳು ಪುರಾಣಗಳು, ಮತ್ತು ಆ ಕಥಾ ಪುರಾಣಗಳಲ್ಲಿ ನಮಗೆ ವಿವರಿಸಟ್ಟಿತ್ತಿರುವ ಹಲವಾರು ರೋಚಕ ಪ್ರಸಂಗಗಳು ಎಲ್ಲವೂ ಈ “ಭ್ರಮೆಯ” ಕಾರಣವೇ.
ಹಾಗಾದರೆ ಈ ಭ್ರಮೆ ಮಾಯೆಯನ್ನು ಅನುಸರಿಸುತ್ತಾ ನಮಗೆಲ್ಲ ಮೋಸಮಾಡುತ್ತಿದ್ದಾಳೆಯೇ? ಎಂದರೆ “ಹೌದು ಮತ್ತು ಇಲ್ಲ” ಎನ್ನುವ ಉತ್ತರ ಸಿಗುತ್ತದೆ. “ಹೌದು” ಏಕೆಂದರೆ ಇದರ ಮುಸುಕಿನಲ್ಲಿ ಇರುವ ನಮಗೆ ಸತ್ಯದ ಗೋಚರವಾಗುವುದೇ ಇಲ್ಲ. ಇಂದು ಸತ್ಯ ಎಂದು ನಂಬಿಕೊಂಡದ್ದು ನಾಳೆಗೆ ಸುಳ್ಳಾಗಿಬಿಡುತ್ತದೆ. ವ್ಯಕ್ತಿ ವಸ್ತು ಮತ್ತು ವಿಷಯ ಎಲ್ಲ ಬದಲಾಗಿಬಿಡುತ್ತದೆ. ಅದು ಬದಲಾದಹಾಗೆ ನಮ್ಮ ಪರಿಸ್ಥಿತಿಯೂ ಬದಲಾಗುತ್ತದೆ. ನಿನ್ನೆಯ ಸತ್ಯ ಇಂದಿಗೆ ಸುಳ್ಳು ಮತ್ತು ಇಂದಿನ ಸತ್ಯ ನಾಳೆಗೆ ಸುಳ್ಳು. ಕೆಲವು ಬಾರಿ ಸತ್ಯವೇ ಸುಳ್ಳಾಗಿ ಕಾಣಬಹುದು ಮತ್ತು ಸುಳ್ಳೇ ಸತ್ಯವಾಗಿ ಕಾಣಬಹುದು. ಈ ಕಣ್ಣ ಮುಚ್ಚಾಲೆ ಆಟದಲ್ಲಿ ನಾವೆಲ್ಲಾ ನಲುಗಿ ಹೋಗುತ್ತೇವೆ. ಆದರೆ ಇದನ್ನೇ ಸತ್ಯವೆಂದು ನಂಬಿಕೊಂಡು ಇದರಲ್ಲೇ ಆನಂದವನ್ನು ಕಾಣುವ ಜನರೇ ಜಾಸ್ತಿ. ” ಒಂದು ಸಿನೆಮಾ ನೋಡುವಾಗ, ಅಲ್ಲಿ ನಡೆಯುವುದೆಲ್ಲವೂ ಸತ್ಯವಲ್ಲ ಎಂದು ಗೊತ್ತಿದ್ದರೂ, ಮೂರು ಗಂಟೆಗಳ ಕಾಲ ಅದನ್ನೇ ಸತ್ಯವೆಂದು ನಂಬಿ ಅದರಲ್ಲೇ ಮಗ್ನರಾಗಿ, ತೀವ್ರತೆಯಿಂದ ಅದನ್ನು ಅನುಭವಿಸುವವರೆಷ್ಟು, ಅನುಸರಿಸುವವರೆಷ್ಟು ಮತ್ತು ಅತ್ತು ಗೋಳಾಡುವವರೆಷ್ಟು ಮತ್ತು ಅದರ ಬಗ್ಗೆಯೇ ಚರ್ಚೆಮಾಡುವವರೆಷ್ಟು ಜನ ” ನೋಡಿದಿರಾ ಭ್ರಮೆಯ ಆಟ!!!!
“ಇಲ್ಲ” ಏಕೆಂದರೆ, ಆಕೆ ನಮಗೆ ” ನನ್ನನ್ನು ಬಿಟ್ಟರೆ ನಿಮಗೆ ಸತ್ಯ ದರ್ಶನವಾಗುತ್ತದೆ” ಎಂಬುದನ್ನೂ ಸಹ ನಾವು ಆ ಭ್ರಮಾಲೋಕದಲ್ಲಿ ಇರುವಾಗಲೇ ಅರಿವುಮಾಡಿಕೊಡುತ್ತಾಳೆ ಅಲ್ಲವೇ? ಅರಿತು ಭ್ರಮೆಯಿಂದ ಹೊರಗೆ ಬಂದು ಮಾಯಾ ಲೋಕದಿಂದ ಮುಕ್ತರಾಗ ಬೇಕಾದರೆ ಸತ್ಯವರಿಯಬೇಕು. ಈ ಜಗತ್ತಿನಲ್ಲಿ ನಮ್ಮ ಬದುಕು ” ಅಶಾಶ್ವತ ” ಎಂದು ಅರಿಯಬೇಕು. “ಯಾವುದೂ ನಾವಲ್ಲ ಮತ್ತು ಯಾವುದೂ ನಮ್ಮದಲ್ಲ ನಾವು ಧರಿಸಿರುವುದು ಕೇವಲ ಪಾತ್ರಗಳು” ಎಂಬ ಧೃಢ ನಂಬಿಕೆ ಮತ್ತು ವಿಶ್ವಾಸದಿಂದ ಮಾತ್ರ ನಮಗೆ ಸತ್ಯದರಿವು ಆಗಿ ಶುದ್ಧ ಸತ್ವ ಅರ್ಥವಾಗುತ್ತದೆ. ಹಾಗೆ ಅರ್ಥವಾದ ಸತ್ವವನ್ನು ನಾವು ನಮ್ಮದಾಗಿಸಿಕೊಂಡು ಅದನ್ನು ನಮ್ಮ ಸ್ವಭಾವವನ್ನಾಗಿಸಿಕೊಂಡರೆ, ನಾವು ಈ ಮಾಯೆಯ ಮಗಳಾದ ಭ್ರಮೆಯ ಹಿಡಿತದಿಂದ ಮುಕ್ತರಾಗಿ ಸತ್ಯವರಿತು ಮಾಯೆ ಮತ್ತು ಭ್ರಮೆಯ ಸಹವಾಸದಲ್ಲಿ ಉದ್ಭವವಾಗುವ ತೊಂದರೆಗಳಿಂದ ಮುಕ್ತರಾಗಿ, ಶುದ್ದ ಮತ್ತು ನಿಜ ಆನಂದದಿಂದ ಇರಬಹುದು. “ಆದರೆ ನಮಗೆ ರಂಜನೀಯವಾದ “ಭ್ರಮಾ ಲೋಕ ” ಬೇಕೋ ಅಥವಾ ” ಅನಂದಮಯವಾದ” ಸತ್ವಲೋಕ ಬೇಕೋ” ನಾವೇ ನಿರಧರಿಸಿಕೊಲ್ಲಬೇಕು. ನಮ್ಮ ಇಚ್ಛೆ ಮುಖ್ಯ. ನಾವು ಏನನ್ನು ಬಯಸಿದರೆ ಅದು ನಮಗೆ ಸಿಗುತ್ತದೆ.
ರಸಧಾರೆ – 147
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ |
ಮಾಯಿಪಳು ಗಾಯಗಳನೀವಳಿಷ್ಟಗಳ ||
ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ |
ಪ್ರೇಯಪೂತನೆಯವಳು – ಮಂಕುತಿಮ್ಮ ||
ಮಾಯೆಯೊಮ್ಮೊಮ್ಮೆ = ಮಾಯೆಯು + ಒಮ್ಮೊಮ್ಮೆ// ಮಿಗಿಲಕ್ಕರೆಯ = ಮಿಗಿಲು + ಅಕ್ಕರೆಯ// ಮಾಯಿಪಳು ಗಾಯಗಳನೀವಳಿಷ್ಟಗಳ = ಮಾಯಿಪಲು+ ಗಾಯಗಳ+ ಈವಳು+ ಇಷ್ಟಗಳ// ನೂಕುವಳಾಗ = ನೂಕುವಳು+ಆಗ.
ಮಿಗಿಳಕ್ಕರೆಯ+ ಅತಿಯಾದ ಅಕ್ಕರೆ ಅಥವಾ ಪ್ರೀತಿ// ಮಾಯಿಪಳು = ಗಾಯ ಮಾಗುವಂತೆ ಮಾಡುವಳು// ನೂಕುವಳಾಗ+ ತಲ್ಲುವಳು ಆಗ// ಪಾತಳಕೆ= ಪಾತಾಳಕ್ಕೆ// ಪ್ರೇಯಪೂತನೆಯವಳು=ವಿಷವನುಣಿಸುವ ಪೂತನೆಯಂತೆ .
ನಮಗೆ ಅರ್ಥವೇ ಆಗದ ಈ ಮಾಯೆಯ ಮತ್ತೊಂದು ಸ್ವರೂಪವನ್ನು ವಿವರಿಸುತ್ತಾ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ, ” ಆಗಾಗ ಈ ಮಾಯೆ ನಮ್ಮ ಮೇಲೆ ಅತೀ ಪ್ರೀತಿಯನ್ನು ತೋರಿ ನಮ್ಮ ದುಃಖಗಳನ್ನು ತೀರಿಸುವಂತೆ ಮಾಡಿ ನಮ್ಮ ಅಭೀಷ್ಟಗಳನ್ನು ತೀರಿಸುತ್ತಾಳೆ. ಆದರೆ ಆ ಸಂತೋಷದಲ್ಲಿ ನಾವೇನಾದರೂ ಮೈ ಮರೆತು ನಡೆದುಕೊಂಡೆವೋ, ತಕ್ಷಣವೇ ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾಳೆ. “ಮೂಲತಃ ರಾಕ್ಷಸ ಗುಣವನ್ನು ಹೊಂದಿದವಳಾದರೂ ತಾನು ಸುಂದರ ರೂಪ ಧರಿಸಿ “ಕೃಷ್ಣ”ನಿಗೆ ವಿಷಪೂರಿತ ಹಾಲನ್ನು ಕುಡಿಸಲು ಪ್ರಯತ್ನಿಸಿದ ” ಪೂತನೆ”ಯಂತೆ” ಎಂದು ಬಹಳ ಸುಂದರವಾಗಿ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ.
ನಮ್ಮ ನಮ್ಮ ಜೀವನಗಳನ್ನು ನಾವೆಲ್ಲಾ ಒಂದು ಬಾರಿ ಅವಲೋಕಿಸಿ ನೋಡಿದರೆ, ನಮಗೆ ಈ ವಿಷಯ ಅರ್ಥವಾಗುತ್ತದೆ. ಕೆಲವರ ಜೀವನ ಸುಗಮವಾಗಿ ಆದಿಯಿಂದ ಅಂತ್ಯದವರೆಗೆ ನಡೆದುಕೊಂಡು ಹೋಗುವುದನ್ನು ನಾವು ಕಾಣುತ್ತೇವೆ. ಅವರ ಸಂಖ್ಯೆ ಬಹಳ ಕಡಿಮೆ. ಬಹಳಷ್ಟು ಜನರ ಜೀವನ ಒಂದು ಒಂದು ರಂಗಿನ ರಾಟ್ನದ ( rollor coaster ride ) ತರಹ ಇರುತ್ತದೆ. ಆಸೆಗಳ ಬೆನ್ನು ಹತ್ತಿ ಹೋದವರಿಗೆ ಮೊದಮೊದಲು ಎಲ್ಲವೂ ಸುಂದರವಾಗಿ ಕಂಡರೂ,ಅನುಭವಗಳಾಗುತ್ತ ಆಗುತ್ತಾ ಏಳುಬೀಳುಗಳು ಎಡರು ತೊಡರುಗಳು ಬೇಕಾದಷ್ಟು ಬರುತ್ತವೆ. ಎಲ್ಲರೂ ವಯೋಧರ್ಮಕ್ಕೆ ಅನುಗುಣವಾಗಿ ಈ ಜಗತ್ತಿನ ಸುಖ ಸೌಲಭ್ಯಗಳನ್ನು ಅನುಭವಿಸುವ ತವಕದಲ್ಲಿರುತ್ತಾರೆ. ವಿಷಯಾಕರ್ಷಣೆ ಹೇಗಿರುತ್ತದೆ ಎಂದರೆ ಸೂಕ್ತಾಸೂಕ್ತತೆಯನ್ನು ಪರೀಕ್ಷಿಸಿ ನೋಡುವ ತಾಳ್ಮೆ ಮತ್ತು ಜಾಣ್ಮೆ ಯಾರಲ್ಲೂ ಇರುವುದಿಲ್ಲ. ಬಯಕೆಯಲ್ಲಿ ವಿವೇಚನೆ ಇರುವುದಿಲ್ಲ. ಪಡೆದರೆ ಸಂಪೂರ್ಣ ತೃಪ್ತಿ ಇರುವುದಿಲ್ಲ. ಏನೋ ಅತೃಪ್ತಿ, ಸಂಕಷ್ಟ, ನೋವು ಜಿಗುಪ್ಸೆ ಎಲ್ಲವೂ ಶುರುವಾಗಿಬಿಡುತ್ತೆ. ಜೀವನ ಕಷ್ಟವೆಂದು ಅನ್ನಿಸತೊಡಗುತ್ತದೆ.
ಇವಕ್ಕೆಲ್ಲ ಕಾರಣ ಹುಡುಕುತ್ತಾ ಜನ ದೇವರು, ದೇವತೆಗಳು, ಗ್ರಹಗಳು, ಜಾತಕ, ಸ್ವಾಮಿಗಳು, ಸಿದ್ಧರು ಹೀಗೆ ಎಲ್ಲೆಲ್ಲೋ ಸುತ್ತುತ್ತಾರೆ. ತಮ್ಮ ತಮ್ಮ ತಾಪತ್ರಯಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಪಡುತ್ತಾರೆ. ತಾತ್ಕಾಲಿಕ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ. ನಂಬಿಕೆಗಳನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳನ್ನು ಬೇರೆಯವರ ಮೇಲೆ ಹೇರುತ್ತಾರೆ. ಎಲ್ಲರೂ ಯಾವುದಾದರೊಂದು ರೀತಿಯ ಕಷ್ಟಗಳ ಸಂಕೋಲೆಗಳಲ್ಲಿ ಸಿಕ್ಕು ತೊಳಲಾಡುತ್ತಿರುತ್ತಾರೆ.
” ನೂಕುವಳಾಗ ಪಾತಳಕೆ ” ಎಂದು ಬಹಳ ಸೂಕ್ತವಾಗಿ ಹೇಳಿದ್ದಾರೆ ಗುಂಡಪ್ಪನವರು. ಮೊದಲು ಆಸೆ ಹುಟ್ಟಿಸುವುದು, ಪಡೆದುಕೊಳ್ಳುವ ಪ್ರಯತ್ನ ಮಾಡಿಸುವುದು, ಪಡೆದೆನೆಂಬ, ಗೆದ್ದೆನೆಂಬ ಭಾವ ಮೂಡಿಸುವುದು, ಅಹಂಕಾರ ಹುಟ್ಟಿಸುವುದು, ಮತ್ತೆ ಕೆಳಕ್ಕೆ ತಳ್ಳುವುದು. ಆಸೆಯೇ ಮಾಯೆಯ ಮೊದಲ ಅಸ್ತ್ರ. ಆಸೆ ಹುಟ್ಟಿಸಿ, ಎಲ್ಲವನ್ನೂ ಸುಂದರವಾಗಿ ಸುಗಮವಾಗಿ ತೋರಿಸುತ್ತಾ ಎಲ್ಲರನ್ನೂ ತನ್ನ ಹಿಡಿತಕ್ಕೆ ಸೆಳೆದುಕೊಳ್ಳುವುದೇ ಮಾಯೆಯ ಕಾರ್ಯ ವೈಖರಿ. ಬಹಳ ಸಾವಧಾನದಿಂದ ಇದ್ದರೆ, ಇದರ ಹಿಡಿತದಿಂದ ತಪ್ಪಿಸಿಕೊಳ್ಳಲಾಗದಿದ್ದರೂ, ಬಂದದ್ದನ್ನು ಅನುಭವಿಸುವ ದೈರ್ಯ ಸ್ಥೈರ್ಯವನ್ನು ಪಡೆದುಕೊಳ್ಳಬಹುದು. ಇದರ ಹಿಡಿತದಿಂದ ಬಿಡಿಸಿಕೊಳ್ಳಲು ಮೊದಲು ಆಸೆಯನ್ನು ಬಿಡಬೇಕು. ಸಾಧ್ಯವಾಗದಿದ್ದರೆ, ಅತಿಯಾಸೆಯನ್ನು ಬಿಡಬೇಕು. ನಮಗೆ ಆಗುವುದೆಲ್ಲ ಆ ಪರಮಾತ್ಮನ ಕೃಪೆಯಿಂದ ಆಗುತ್ತದೆ ಎಂಬ ದೃಢ ಭಾವವನ್ನು ತಳೆಯಬೇಕು. ಹಾಗಾದರೆ ಮಾಯೆಯ ಹಿಡಿತದಲ್ಲಿ ಇದ್ದರೂ ಸಮಾಧಾನದಿಂದ ಇರಬಹುದು.
ರಸಧಾರೆ – 148
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? |
ಸ್ವಕೃತಿಯೆಂದವನೆನುವುದವಳಿರದೊಡಿರದು ||
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ |
ವಿಕೃತಿಗೆಡೆಯಾಗದಿರೊ – ಮಂಕುತಿಮ್ಮ ||
ಪೊರಗಿರುವ = ಪೊರಗೆ + ಇರುವ // ನರನಾರು = ನರನು + ಯಾರು // ಸ್ವಕೃತಿಯೆಂದವನೆನುವುದವಳಿರದೊಡಿರದು = ಸ್ವಕೃತಿ + ಎಂದು + ಅವನು+ ಎನುವುದು +ಅವಳು+ಇರದೊಡೆ+ಇರದು // ಸುಕೃತವೆನಿಸುವುದವಳ = ಸುಕೃತ+ಎನಿಸುವುದು+ಅವಳ // ವಿಕೃತಿಗೆಡೆಯಾಗದಿರೊ = ವಿಕೃತಿಗೆ + ಎದೆ+ ಆಗದಿರೋ//
ಪೊರಗೆ= ಹೊರಗೆ // ಸ್ವಕೃತಿ = ತನ್ನ ಕಾರ್ಯ// ಸುಕೃತ = ಒಳ್ಳೆಯ ಕೆಲಸ// ವಿಕೃತಿ+ ಕೆಲಸ ಕೆಡುವುದು.
ಈ ಜಗತ್ತಿನ ಪ್ರಕೃತಿಯ ಪ್ರಭಾವದಿಂದ ಹೊರೆಗೆ ಇರುವ ಮನುಷ್ಯ ಯಾರು. ಯಾರಾದರೂ ಇದನ್ನು ನಾನು ಮಾಡಿದ್ದು ಎಂದರೂ ಸಹ ಪ್ರಕೃತಿಯ ಪ್ರಭಾವದಲ್ಲೇ ಮಾಡಿರಬೇಕಲ್ಲವೇ? ಆದರೆ ಪ್ರಕೃತಿಯ ಪ್ರಭಾವದಲ್ಲಿ ಇದ್ದರೂ ಸಂಪೂರ್ಣ ಅದರ ವಶವಾಗದೆ, ತನ್ನ ಪ್ರತಿಭೆಯಿಂದ ಮಾಡುವ ಕೆಲಸವನ್ನು ಒಳ್ಳೆಯಕೆಲಸವೆನ್ನುತ್ತಾರೆ. ಆದರೆ ಕೆಲಸಮಾಡುವಾಗ ಸಂಪೂರ್ಣ ಪ್ರಕೃತಿಯ ಪ್ರವಾಕ್ಕೆ ಒಳಗಾಗಿ, ಕೆಲಸ ಕೆಡಿಸಿಕೊಳ್ಳದೆ ಅಂದರೆ ಅದನ್ನು ವಿಕ್ರುತಗೊಳಿಸದೆ ಕೆಸಲವನ್ನು ಮಾಡೋ ಎಂದು ನಮಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಅಂದರೆ ನಾವೆಲ್ಲ, ಅಂದರೆ ಈ ಭೂಮಿಯ ಮೇಲಿನ ಎಲ್ಲವೂ ಪ್ರಕೃತಿ ಎಂದು ಪರಿಗಣಿಸಲಾಗುತ್ತದೆ. ಪ್ರಕೃತಿ ಎನ್ನುವ ಪದಕ್ಕೆ ಸ್ವಭಾವವೆಂದೂ ಹೆಸರು. ನಮ್ಮ ಜೀವನ ಈ ನಾವಿರುವ ಪ್ರಪಂಚದ ಪ್ರಕೃತಿಯ ಪ್ರಭಾವಕ್ಕೆ ಎಲ್ಲಾ ಸಮಯದಲ್ಲೂ ಒಳಗಾಗಿರುತ್ತದೆ. ಇದರಿಂದ ನಾವು ಬೇರೆ ಆಗಲು ಸಾಧ್ಯವೇ ಇಲ್ಲ. ನಮ್ಮ ಉಸಿರಾಟದಿಂದ ಹಿಡಿದು ಎಲ್ಲವೂ ಈ ಪ್ರಕೃತಿಯ ಆಧಿಪತ್ಯಕ್ಕೆ ಒಳಪಟ್ಟದ್ದೆ ಅಲ್ಲವೇ? ನಾವು ಈ ಪ್ರಕೃತಿಯ ಒಂದು ಅವಿಭಾಜ್ಯ ಅಂಗವಲ್ಲದೆ ಮತ್ತೇನು ? ಆದರೆ ಎಲ್ಲ ಪ್ರಾಣಿಗಳಂತೆ ನಾವು ಮಾನವರೂ ಸಹ, ಸ್ವತಂತ್ರವಾಗಿ ಯೋಚನೆ ಮಾಡುತ್ತೇವೆ. ಆದರೆ ನಮ್ಮ ಯೋಚನೆಗಳು ಅನ್ಯ ಪ್ರಾಣಿಗಳಿಗಿಂತ ಭಿನ್ನವಾದದ್ದು. ಒಂದೇ ಪ್ರಕೃತಿಯನ್ನು ಹಂಚಿಕೊಂಡರೂ ನಮ್ಮ ಆಲೋಚನೆಗಳು ಭಿನ್ನವಾಗೇ ಇವೆ. ನಾವು ಸಹಜವಾಗಿ ಪ್ರಕೃತಿಯ ಜೊತೆ ಜೊತೆಗೆ ಸಮನ್ವಯದಿಂದ ಬಾಳಬಹುದು. ಪ್ರಕೃತಿಯನ್ನು ಉಪಯೋಗಿಸಿಕೊಂಡು ಸಹಜ ಸೌಂದರ್ಯದಿಂದ ಬಾಳು ನಡೆಸಬಹುದು. ಅನ್ಯ ಪ್ರಾಣಿಗಳೆಲ್ಲವೂ ಪ್ರಕೃತಿ ಸಹಜವಾಗೇ ಜೀವಿಸುತ್ತವೆ. ಆದರೆ ಮನುಷ್ಯ ಮಾತ್ರ ಭಿನ್ನ. ಏಕೆಂದರೆ ಇವನಿಗೆ ಒಂದು ಉನ್ನತ ಬುದ್ಧಿವಂತಿಕೆಯನ್ನು ಆ ಪರಮಾತ್ಮ ಕರುಣಿಸಿದೆ ಅಲ್ಲವೇ?
ಈ ಪ್ರಕೃತಿಯಲ್ಲಿ ಇದ್ದು ಈ ಪ್ರಕೃತಿಯೊಂದಿಗೆ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಈ ಜಗತ್ತನ್ನು ಇನ್ನೂ ಸುಂದರವನ್ನಾಗಿಸುವುದು ಅವನಿಂದ ಸಾಧ್ಯ. ಅದು ಸುಕೃತಿಯಾಗುತ್ತದೆ. ಆದರೆ ಸಮನ್ವಯದಿಂದ ಬಾಳುವುದನ್ನು ಬಿಟ್ಟು ತನ್ನ ಸ್ವಾರ್ಥ ಮುಂತಾದ ದುರ್ಗುಣಗಳಿಂದ ಅವನು ಪ್ರಕೃತಿಯನ್ನು ಹಾಳುಗೆಡವಿ ತನ್ನ ನಾಶವನ್ನೇ ತಂದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಮುಂದಿನ ಪೀಳಿಗೆಗಳಿಗೆ ಒಂದು ದುರಂತದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ವಿಕೃತಿ. ಇದು ಬಹಳ ಶೋಚನೀಯ ಸ್ಥಿತಿ ಆದರೆ ಅನಿವಾರಣೀಯವಲ್ಲ . ಹಲಕೆಲವರು ಈ ನಿಟ್ಟಿನಲ್ಲಿ ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಅದು ಸಾಲದು. ಸಮಗ್ರವಾಗಿ ಇಡೀ ಸಮಾಜವೇ ಈ ಕೆಲಸದಲ್ಲಿ ತೊಡಗಿಸಿಕೊಂಡರೆ, ನಮ್ಮ ಮುಂದಿನ ಪೀಳಿಗೆಗಳಿಗೆ ಸಹಜವಾಗಿ ಪ್ರಕೃತಿಯೊಂದಿಗೆ ಸಮನ್ವಯದಿಂದ ಬಾಳಲು ನಾವು ಅವಕಾಶಮಾಡಿಕೊಡಬಹುದು. ಒಂದು ವಿಷಯವನ್ನು ಎಲ್ಲರೂ ಅರಿತುಕೊಳ್ಳಬೇಕು. ನಮಗೆ ಉಪಯೋಗಕ್ಕೆ ಬರುವ ಯಾವುದೇ ವಸ್ತುವನ್ನು ನಾವು ಜತನ ಮಾಡಿದರೆ, ಅದು ನಮನ್ನು ಧೀರ್ಘಕಾಲ ಕಾಪಾಡುತ್ತದೆ. ಇಲ್ಲದಿದ್ದರೆ ಇಲ್ಲ. ಇದು ಪ್ರಕೃತಿಗೂ ಅನ್ವಯ.
ಬಂಧುಗಳೇ, ನಿಮ್ಮ ನಿಮ್ಮ ವೃತ್ತಗಳಲ್ಲಿ ಪ್ರಕೃತಿಯನ್ನು ಕಾಯುವ ಮತ್ತು ಕಾಪಾಡುವ ಕಾರ್ಯಗಳಲ್ಲಿ ಎಲ್ಲರೂ ತೊಡಗಿಸಿಕೊಂಡರೆ ಅದೇ ಸುಕೃತಿ.
ರಸಧಾರೆ – 149
ಅರಸನೊಬ್ಬನಲ್ಲ; ಮೂವರು ಬಾಳನಾಳುವರು |
ನರ ಕರುಮ ದೈವಗಳು ತೊಡಕದಕೆ ಸಾಜ ||
ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ |
ಸರಿಯೇನೋ ತಪ್ಪೇನೋ ? – ಮಂಕುತಿಮ್ಮ
ಅರಸನೊಬ್ಬನಲ್ಲ= ಆರಸನು + ಒಬ್ಬನಲ್ಲ // ಬಾಳನಾಳುವರು = ಬಾಳನು + ಆಳುವರು // ತೊಡಕದಕೆ = ತೊಡಕು+ ಅದಕೆ
ಆರಸನು = ರಾಜನು, ಒಡೆಯನು // ನರ = ಮನುಷ್ಯ // ಕರುಮ = ಕರ್ಮ // ದೈವಗಳು + ಆ ಪರಮಾತ್ಮ ಮತ್ತು ಅವನ ಗುಂಪು // ಗುರಿಯಿಡದ = ಪೂರ್ವ ನಿರ್ಧಾರಿತ ಕಾರಣವಿಲ್ಲದೆ.
ನಮ್ಮ ಬಾಳಿಗೆ ಅರಸ ಅಥವಾ ಒಡೆಯ ಒಬ್ಬನಲ್ಲ. ಮೂರು ಜನರಿದ್ದಾರೆ. ನಾವು, ನಮ್ಮ ಪೂರ್ವ ಕರ್ಮ ಮತ್ತು ದೈವ. ಹೀಗೆ ಒಂದು ಕಾರ್ಯಕ್ಕೆ ಮೂರು ಅರಸರಿದ್ದಾಗ, ತೊಡಕುಂಟಾಗುವುದು ಸಹಜ. ಒಂದು ಆದಿ ಮತ್ತು ಒಂದು ಅಂತ್ಯವಿರದ ಮತ್ತು ಯಾವುದೇ ನಿರ್ಧಾರಿತ ಗುರಿಯಿರದ ಈ ಬಾಳಿನಲ್ಲಿ ನಡೆಯುವುದರಲ್ಲಿ ಸರಿಯೇನೋ ತಪ್ಪೇನೋ ಎಂದು ಒಂದು ಮಹತ್ತಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಈ ಜಗತ್ತು ಒಂದು ದರ್ಬಾರು. ಇಲ್ಲಿ ಸಕಲ ಚರಾಚರಗಳ ಬಾಳು. ಅವುಗಳ ನಡುವೆ ನಾವು. ನಮ್ಮ ಬಾಳಿಗೆ ಮೂವರು ಒಡೆಯರು. ನಾವು, ನಮ್ಮ ಕರ್ಮ ಮತ್ತು ನಮ್ಮನ್ನಾಳುವ ದೈವ. ನಾವು ಎಂದರೆ ಹೇಗೆ? ಎಲ್ಲವೂ ದೈವ ನಿಯಾಮಕವಲ್ಲವೇ ? ನಮ್ಮ ಕರ್ಮಗಳೂ ಪೂರ್ವ ನಿರ್ಧಾರಿತ ಮತ್ತು ಪೂರ್ವ ನಿಯೋಜಿತವಲ್ಲವೇ? ಹೀಗೆ ಹತ್ತು ಹಲವಾರು ಸಂದೇಹಗಳು ನಮ್ಮ ಮನದಲ್ಲಿ ಉದ್ಭವವಾಗುವುದು ಸಹಜ. ಆದರೆ ಇದು ಬಹಳ ಸೂಕ್ಷ್ಮವಾದ ವಿಷಯ.
ನಮಗೆ ಒಂದು ಸ್ವತಂತ್ರವಾದ ಯೋಚನಾ ಶಕ್ತಿಯನ್ನು ಪರಮಾತ್ಮ ಕೊಟ್ಟಿದ್ದಾನೆ.ಇದರಿಂದ ನಾವು ಕೆಲಸಗಳನ್ನು ಮಾಡುವಾಗ ನಾವು ಮಾಡುತ್ತಿದ್ದೇವೆ ಎಂದು ಅಂದುಕೊಳ್ಳುತ್ತೇವೆ. ಆದರೆ ನಾವು ಹುಟ್ಟುವಾಗ ನಮ್ಮ ಪೂರ್ವ ಜನ್ಮದಿಂದ ಸಂಚಿತ ಕರ್ಮ ಮತ್ತು ವಾಸನೆಗಳನ್ನು ತೆಗೆದುಕೊಂಡೆ ಬರುತ್ತೇವೆ ಎನ್ನ್ದುವುದು ಭಾರತೀಯ ವೇದಾಂತ. ಹಾಗೆ ತಂದ ಸಂಚಿತ ಕರ್ಮ ವಾಸನೆಗಳು, ನಾವು ಜನ್ಮ ಪಡೆದ ಮೇಲೆ ನಾವು ಹುಟ್ಟಿದ ವಂಶದ ಗುಣಗಳು, ನಮ್ಮ ಪರಿಸರ, ಸಮಾಜ, ವಿಧ್ಯೆ, ಸಹವಾಸ ಮುಂತಾದವುಗಳಿಂದ ಪುನಃ ಸಂಚಯವಾಗುವ ಗುಣಗಳು ನಮ್ಮ ಕರ್ಮಗಳನ್ನು ನಿರ್ದೇಶಿಸುತ್ತವೆ. ಆದರೆ ಕೆಲವು ಬಾರಿ ನಮ್ಮ ಬುದ್ಧಿ ಶಕ್ತಿಯನ್ನು ಉಪಯೋಗಿಸಿದರೂ ನಾವು ನಮ್ಮ ಎಲ್ಲ ವಿದ್ಯೆ ಸಂಸ್ಕಾರಗಳನ್ನು ಉಪಯೋಗಿಸಿದರೂ ನಾವಂದುಕೊಂಡ ಕೆಲಸ ಆಗದೆ ಹೋಗುವ ಸಂಭವ ಉಂಟು. ಅದಕ್ಕೆ ಕಾರಣವನ್ನು ಹುಡುಕಿ ಕೆದಕಿ ನೋಡಿದರೂ ನಮಗರ್ಥವಾಗದೆ ಹೋಗಬಹುದು. ಏಕೆಂದರೆ ನಮ್ಮ ವೈಯಕ್ತಿಕ ಬುದ್ಧಿವಂತಿಕೆ ಮತ್ತು ನಾವು ಕಲಿತ ಬುದ್ಧಿಗಳಿಗಿಂದ ಮಿಗಿಲಾದ ಆ ದೈವೀ ಶಕ್ತಿಯೂ ತನ್ನ ಪಾತ್ರವನ್ನು ಆಡಿಯೇ ತೋರುತ್ತದೆ. ಇವರು ಮೂವರೂ ತಮ್ಮ ತಮ್ಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರಲು, ಹಲ ಕೆಲಬಾರಿ ಆ ಕಾರ್ಯಗಳು ಕೆಡಲೂ ಬಹುದು. ಇದನ್ನೇ ಮಾನ್ಯ ಗುಂಡಪ್ಪನವರು ” ತೊಡಕದಕೆ ಸಾಜ ” ಎಂದರು.
ಹಾಗಾಗಿ ನಮ್ಮನ್ನು ನಿಯತ್ರಿಸುವವರು ನಾವು, ನಮ್ಮ ಕರ್ಮಗಳು ಮತ್ತು ಆ ದೈವ . ಇದೆ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ನಮ್ಮನ್ನು ಆಳುವ ಅರಸರು ಮೂವರು ಎಂದು ಹೇಳಿದ್ದಾರೆ. ನಮ್ಮ ಜೀವನದ ಪಯಣ ಎಂದು ಮೊದಲಾಯಿತು ಎಂದು ನಮಗೆ ಗೊತ್ತಿಲ್ಲ. ಎಂದು ಕೊನೆಯೂ ಗೊತ್ತಿಲ್ಲ. ಈ ಜಗತ್ತಿನಲ್ಲಿ ನಮ್ಮ ಜನ್ಮ ಜನ್ಮಾಂತರದ ಈ ಪಯಣದ ಗುರಿಯೇನೋ ಗೊತ್ತಿಲ್ಲ. ಆದರೆ ನಾವು ಬಾಳಲೇ ಬೇಕು. ಈ ಜಗತ್ತಿನಲ್ಲಿ ಹುಟ್ಟಿದಮೇಲೆ ಬಾಳಲೇ ಬೇಕು. ಆದ್ದರಿಂದ, ನಮ್ಮ ಪೂವಕರ್ಮದಿಂದ ಸಂಚಯನವಾದ ಗುಣಗಳನ್ನು ಉಳಿಸಿಕೊಂಡು ತಿದ್ದಿಕೊಂಡು, ಈ ಜೀವನದಲ್ಲಿ ಆರ್ಜಿಸಿದ ಜ್ಞಾನ ಮತ್ತು ಅನುಭವಗಳನ್ನು ನಮ್ಮ ವೈಯಕ್ತಿಕ ಬುಧ್ಧಿವಂತಿಕೆಯೊಂದಿಗೆ ಸಮನ್ವಯಮಾಡಿಕೊಂಡು, ದೈವವನ್ನು ನಂಬಿ ಅದರ ಸಹಾಯವನ್ನೂ ಪಡೆದುಕೊಂಡು, ನಮ್ಮನ್ನಾಳುವ ಮೂರೂ ಅರಸರನ್ನು ಏಕಮುಖವಾಗಿ ದಂಡಿಗೆ ಕರೆದುಕೊಂಡು ಹೊರಟರೆ, ನಾವು ಈ ಜೀವನದ ಯುದ್ಧವನ್ನು ಗೆಲ್ಲಬಹುದು. ವಾಚಕರೆ, ಅಂತಹ ಪ್ರಯತ್ನವನ್ನು ನಮ್ಮ ನಮ್ಮ ಜೀವದಲ್ಲೂ ಪ್ರಯತ್ನ ಮಾಡೋಣವೆ?
ರಸಧಾರೆ – 150
ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು |
ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು ? ||
ಬರಲಿ ಬರುವುದು, ಸರಿವುದೆಲ್ಲ ಸರಿಯಲಿ ; ನಿನಗೆ |
ಪರಿವೆಯೇನಿಲ್ಲೆಲವೋ – ಮಂಕುತಿಮ್ಮ ||
ಮೂವರಿರುವಲ್ಲಿ = ಮೂವರು + ಇರುವಲ್ಲಿ // ಸರಿಯಿಹುದೆ = ಸರಿ + ಇಹುದೆ // ಹೆಚ್ಚಿಕೆಗಳಿರಲಚ್ಚರಿಯದೇನು = ಹೆಚ್ಚಿಕೆಗಳು+ಇರಲು + ಅಚ್ಚರಿ + ಅದೇನು// ಪರಿವೆಯೇನಿಲ್ಲೆಲವೋ = ಪರಿವೆ+ಏನು+ ಇಲ್ಲ+ ಎಲವೋ
ನಮ್ಮನ್ನಾಳುವ ದೊರಗಳು ಮೂವರು ಇರುವಲ್ಲಿ ಎಲ್ಲವೂ ಸರಿಯಿದ್ದರೆ ಅದು ಆಶ್ಚರ್ಯವೇ ಸರಿ. ಹೆಚ್ಚು ಕಡಿಮೆಗಳು, ಕೊರತೆ, ಹೆಚ್ಚಳಿಕೆಗಳು ಇದ್ದರೆ ಅಚ್ಚರಿಯಿಲ್ಲ. ಬರುವುದು ಬರಲಿ ನಡೆಯುವುದೆಲ್ಲ ನಡೆಯಲಿ ಅದನ್ನು ಕುರಿತು ನೀವು ಹೆಚ್ಚಾಗಿ ಚಿಂತಿಸುವೆ ಏಕೋ ಎಂದು ಒಂದು ಪ್ರಶ್ನೆಯನ್ನು ಕೇಳುತ್ತಾರೆ.
ಜೀವನದಲ್ಲಿ ಒಂದು ನಿರ್ಲಿಪ್ತ ಭಾವ ಬೇಕು. ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ “ಬಂದದ್ದೆಲ್ಲಾ ಆ ಗೋವಿಂದನ ದಯೆ ಇರಲಿ ಎಂದು ಇದ್ದರೆ ಮನಸ್ಸಿಗೆ ಅಲ್ಪ ಸ್ವಲ್ಪ ನೆಮ್ಮದಿ. ಅಲ್ಲವೇ ವಾಚಕರೆ?
ನಮ್ಮ ಬಾಳನ್ನು ಆಳುವವರು ಮತ್ತು ನಿರ್ಧರಿಸುವವರು ನಮ್ಮ ವ್ಯಕ್ತಿಗತ ಬುದ್ಧಿಶಕ್ತಿ, ನಮ್ಮ ಪೂರ್ವ ಕರ್ಮ ಮತ್ತು ಆ ಪರಮ ಚೇತನವೆಂಬ ಮೂರು ಅರಸರು ಇರುವಾಗ, ಎಲ್ಲವೂ ಸಮರ್ಪಕವಾಗಿ ಇರುವ ಸ್ಥಿತಿ ಇರುವುದೇ ಇಲ್ಲ. ಏಕೆಂದರೆ, ನಾವು ನಮ್ಮ ಪರಿಮಿತ ಬುದ್ಧಿಶಕ್ತಿಯಿಂದ ಯೋಚನೆ ಮಾಡುತ್ತೇವೆ. ಅದರ ಪ್ರಕಾರ ನಮ್ಮ ಕೆಲಸಗಳನ್ನು ಮಾಡುತ್ತೇವೆ. ನಮಗೆ ನಮ್ಮ ಪೂರ್ವಕರ್ಮವೂ ಗೊತ್ತಿಲ್ಲ, ಆ ಪರಮಾತ್ಮನ ಇಚ್ಛೆಯೂ ಗೊತ್ತಿಲ್ಲ. ನಾವು ಹಲವಾರು ಕೋನಗಳಿಂದ ಪ್ರಭಾವಿತವಾದ ನಮ್ಮ ಪರಿಮಿತ ಮತಿಯಿಂದ ಯೋಚಿಸಿ, ” ಹೇ ಪರಮಾತ್ಮಕಾಪಾಡು, ನನಗೆ ಈ ಕೆಲಸ ಆಗುವಂತೆ ಕರುಣಿಸು” ಎಂದೆಲ್ಲ ಬೇಡುತ್ತೇವೆ. ಆದರೆ ನಮ್ಮ ಕೆಲಸ ಆಗುವುದಕ್ಕೆ ಇರುವ ಅನ್ಯಕಾರಣಗಳು, ನಮ್ಮ ಚಟುವಟಿಕೆಗಳ ಮೇಲೆ ನಮ್ಮ ಪೂರ್ವ ಕರ್ಮದ ಪ್ರಭಾವ ಮತ್ತು ದೈವೇಚ್ಛೆ, ಇವೆಲ್ಲವೂ ಕಾರಣವಾಗುತ್ತವೆ. ಹಾಗಿರುವಾಗ ನಮ್ಮ ಕೆಲಸ ನಾವಂದುಕೊಂಡಂತೆ ಆಗೇ ಆಗುತ್ತದೆ ಎಂದು ಹೇಳಲಾಗುತ್ತದೆಯೇ? ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಕೆಲಸಗಳಾಗದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ ಅಲ್ಲವೇ?
ತಿರುವನಂತಪುರದ ರಾಜರಾಗಿದ್ದ ರಾಜ ಕುಲಶೇಖರರು ” ಮುಕುಂದಮಾಲ” ಎಂಬ ಒಂದು ಸ್ತೋತ್ರರತ್ನದಲ್ಲಿ ” ಯದ್ ಯದ್ ಭವ್ಯಂ ಭವತು ಭಗವನ್ ಪೂರ್ವ ಕರ್ಮಾನುರೂಪಂ| ಏತತ್ ಪ್ರಾರ್ತ್ಯಂ ಮಮ ಬಹುಮತಂ ಜನ್ಮಜನ್ಮಾಂತರೇಪಿ ತ್ವತ್ಪಾದಾಂಬೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು||” ಎಂದು ಹೇಳುತ್ತಾರೆ. ” ಹೇ ಪರಮಾತ್ಮ ಜನ್ಮ ಜನ್ಮಾಂತರದಲ್ಲಿ ಸಂಚಿತವಾದ ನನ್ನ ಪೂರ್ವಕರ್ಮದ ಅನುಸಾರವಾಗಿ ಏನೆಲ್ಲಾ ನಡೆಯಬೇಕೋ ಅದೆಲ್ಲ ನಡೆಯಲಿ ಆದರೆ ಅದನ್ನೆಲ್ಲ ಅನುಭವಿಸುವಾಗ ನನ್ನ ಮನಸ್ಸು ನಿನ್ನ ಚರಣಗಳಲ್ಲಿ ಇರಲಿ ” ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಇದನ್ನೇ ಗುಂಡಪ್ಪನವರು “ಬರಲಿ ಬರುವುದು, ಸರಿವುದೆಲ್ಲ ಸರಿಯಲಿ” ಎಂದು ಈ ಕಗ್ಗದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ನಾವು ನಮ್ಮ ಬುದ್ಧಿ ಶುಧ್ಧವಾಗಿ ಇಟ್ಟು ಕೊಳ್ಳಬೇಕು, ನಮ್ಮ ಪೂರ್ವಕರ್ಮದ ಬಗ್ಗೆ ಚಿಂತಿಸದೆ, ದೈವದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು.ಫಲಿತದ ಬಗ್ಗೆ ನಿರ್ಲಿಪ್ತ ಭಾವನೆ ಇರಬೇಕು. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಶಾಂತಿ ಸಿಗುತ್ತದೆ ಮತ್ತು ಒಂದು ತೃಪ್ತ ಭಾವನೆ ಸಿಗುತ್ತದೆ. ಅದರ ಬಗ್ಗೆ ನಾವು ಚಿಂತಿಸಿ ಪ್ರಯೋಜನವಿಲ್ಲ ಎಂದು ಒಂದು ಸಲಹೆಯನ್ನೂ ನೀಡಿದ್ದಾರೆ ಮಾನ್ಯ ಗುಂಡಪ್ಪನವರು.
ಬಂಧುಗಳೇ ನಾವು ನಮ್ಮನ್ನಾಳುವ ಈ ಮೂವರಿಗೂ ಒಂದು ಧೀರ್ಘದಂಡ ಪ್ರಣಾಮ ಮಾಡಿ ಒಂದು ನಿರ್ಲಿಪ್ತ ಭಾವ ಬೆಳೆಸಿಕೊಂಡರೆ ನಮಗೆ ಸುಖವಿದೆ ಇಲ್ಲದಿದ್ದರೆ ಪ್ರತಿ ನಿತ್ಯ, ಪ್ರತಿ ಕ್ಷಣ ನಾವು ನೋವನ್ನುಣ್ಣತ್ತಲೇ ಇರಬೇಕು.
ರಸಧಾರೆ – 151
ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ |
ಜೀವವಾಸನೆಗಳಲಿ ಪೂರ್ವಕೃತವೆನಿಸಿ ||
ಧೀವರ್ತನೆಯಲಿ ಪೌರುಷವೆನಿಸಿ ಪರಸತ್ವ |
ತ್ರೈವಿಧದೊಳಿರುತಿಹುದು – ಮಂಕುತಿಮ್ಮ
ದೈವವೆನಿಸಿರುತೆ = ದೈವ+ಎನಿಸಿ+ ಇರುತೆ// ತ್ರೈವಿಧದೊಳಿರುತಿಹುದು = ತ್ರೈವಿಧದೊಳು + ಇರುತಿಹುದು.
ಪರಮಾತ್ಮ ಈ ಜಗತ್ತನ್ನು ಸೃಷ್ಟಿಸಿ ಪ್ರಕೃತಿಯ ಮೂಲಕ ಇದನ್ನು ನಡೆಸುತ್ತಾನೆ. ಈ ಜಗದ ಜೀವಿಗಳು, ತಮ್ಮ ಪೂರ್ವ ಮತ್ತು ಪೂರ್ವಜನ್ಮದ ವಾಸನಾ ಪ್ರೇರಿತ ಕರ್ಮಗಳ ಅನುಸಾರವಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ಜೀವಿಗಳು ತಮ್ಮ ತಮ್ಮ ಪೂರ್ವಕರ್ಮಗಳನ್ನು ತಿದ್ದಿಕೊಂಡು ಮುನ್ನಡೆಯಲು “ಧೀ” ಅಂದರೆ ವಿವೇಚನಾ ಶಕ್ತಿಯನ್ನೂ ಕೊಟ್ಟಿದ್ದಾನೆ. ಹೀಗೆ ಪರಮಾತ್ಮ, ಪ್ರಕೃತಿ ಮತ್ತು ಜೀವಿಗಳ ಧೀ ಶಕ್ತಿಗಳ ಬಲದಿಂದಲೇ ಈ ಜಗದ್ವ್ಯಾಪಾರ ನಡೆಸುತ್ತಾನೆ ಎಂದು ಪ್ರಸ್ತಾಪಸಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಒಂದು ಪರಮ ಚೇತನ . ಅದನ್ನೇ ನಾವುಗಳು ಪರಮಾತ್ಮ ಎಂದು ಕರೆಯುತ್ತೇವೆ. ತಾನೊಬ್ಬನಿದ್ದು, ಈ ಜಗತ್ತನ್ನು ಸೃಷ್ಟಿ ಮಾಡಿ ಮತ್ತು ಇದನ್ನು ನಡೆಸಿಕೊಂಡು ಹೋಗಲು ಪ್ರಕೃತಿಯನ್ನು ನಿಯಮಿಸಿದ. ಈ ಪ್ರಕೃತಿಯ ಮೂಲಕ ಎಲ್ಲ ಚರಾಚರಗಳ ಮೇಲೆ ಆ ಪರಮಾತ್ಮನ , ಪರಮ ಚೇತನದ ಆಧಿಪತ್ಯ ಈ ಜಗತ್ತಿನಲ್ಲಿ ಯಾವುದೂ ಈ ಪ್ರಕೃತಿಯ ಪ್ರಭಾವದ ಪರಿಧಿಯಿಂದ ಹೊರಗಿಲ್ಲ.ಹಾಗಾಗಿ ಎಲ್ಲವೂ ಆ ಪರಮಾತ್ಮನಿಂದ ಪ್ರೇರಿತ ,ಪ್ರಭಾವಿತ ಮತ್ತು ದೈವಕ್ಕೆ ಅಧೀನ.
ಜೀವಿಗಳು ತಮ್ಮ ಪೂರ್ವ ಕರ್ಮದಿಂದ ಮತ್ತು ಪೂರ್ವ ಜನ್ಮದಿಂದ ಸಂಚಿತವಾದ ವಾಸನೆಗಳ ಸಹಿತ ಮತ್ತೊಂದು ಜನ್ಮ ಪಡೆಯುತ್ತವೆ. ತಮ್ಮ ಪೋಷಕರ, ವಂಶವಾಹಿನಿಯ, ಪರಿಸರದ, ವಿದ್ಯೆಯ, ಸಹವಾಸದ ಮತ್ತು ಸಂಗದ ಪ್ರಭಾವದಿಂದ ಮತ್ತೊಂದು ವ್ಯಕ್ತಿತ್ವದ ವಿಕಸನವಾಗುತ್ತದೆ. ಈ ಜೀವಿಗಳಿಗೆ ಸ್ವಂತಿಕೆಯಿಂದ ಕೂಡಿದ ಒಂದು “ಬುದ್ಧಿಶಕ್ತಿ” ಆ ಪರಮಾತ್ಮ ಕರುಣಿಸಿದ್ದಾನೆ. ಅದನ್ನು ಉಪಯೋಗಿಸಿ ಪಾರಮಾರ್ಥಿಕ ಔನ್ನತ್ಯವನ್ನು ಪಡೆಯುವ ಸದವಕಾಶವನ್ನೂ ಕೊಟ್ಟಿದ್ದಾನೆ. ಅದಕ್ಕೆ ದಾರಿ ತೋರುವ ” ಪರಸತ್ವ ” ವನ್ನು ನಮಗೆ ವೇದೋಪನಿಷತ್ತುಗಳು, ಪುರಾಣಗಳು, ನೀತಿ ಕತೆಗಳು, ಸಾಧುಗಳ ,ಮುನಿಪುಂಗವರ, ಜೀವನವು ಮತ್ತು ಭೋದನೆಗಳ ರೂಪದಲ್ಲಿ ಕೊಟ್ಟಿದ್ದಾನೆ . ಇವುಗಳನ್ನೆಲ್ಲ ಉಪಯೋಗಿಸಿಕೊಂಡು ನಾವು ಉನ್ನತಿಯನ್ನಾದರೂ ಪಡೆಯಬಹುದು ಅಥವಾ ಅವುಗಳನ್ನು ಅರಿಯದೆ, ಜನ್ಮ ಜನ್ಮಾಂತರಕ್ಕೆ ನಮ್ಮ ಕರ್ಮ ಶೇಷವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು.
ಹೀಗೆ ಪರಮಾತ್ಮ, ಪ್ರಕೃತಿ ಮತ್ತು ನಮ್ಮ ಪೂರ್ವ ಸಂಚಿತ ಕರ್ಮಗಳು ನಮ್ಮ ಜೀವನವನ್ನು ನಡೆಸುತ್ತವೆ. ಇದನ್ನು ಉತ್ತಮಗೊಳಿಸುವುದಕ್ಕೆ ನಮಗೆ “ಧೀ” ಇದೆ ಅದನ್ನು ಉಪಯೋಗಿಸಿಕೊಳ್ಳಿ ಎಂದು ಒಂದು ಆದೇಶವನ್ನು ಸೂಚ್ಯವಾಗಿ ನೀಡಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಕಗ್ಗದಲ್ಲಿ. ಉಪಯೋಗಿಸಿಕೊಳ್ಳುವುದು ಅಥವಾ ಬಿಡುವುದು ನಮ್ಮ ನಮ್ಮ ಆಯ್ಕೆಗೆ ಬಿಟ್ಟದ್ದು.
ರಸಧಾರೆ – 152
ಪುಣ್ಯಪಾಪ ಋಣಾನುಬಂಧ ವಾಸನೆಗಳಿವು |
ಜನ್ಮಾಂತರದ ಕರ್ಮಶೇಷದಂಶಗಳು ||
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಚಿಗಳು|
ಸನ್ನಿಹಿತ ದೈವಕದೆ – ಮಂಕುತಿಮ್ಮ ||
ಕರ್ಮಶೇಷದಂಶಗಳು = ಕರ್ಮ + ಶೇಷದ + ಅಂಶಗಳು // ಸಿಲುಕದಾಕಸ್ಮಿಕ = ಸಿಲುಕದ + ಆಕಸ್ಮಿಕ.
ಯದೃಚ್ಚಿಗಳು = ಸ್ವತಂತ್ರ, ದೈವ ಮತ್ತು ಅದೃಷ್ಟಗಳು
ಒಂದು ಬೀಜ ತನ್ನ ತಾಯಿ ಮರದಿಂದ ಬೇರ್ಪಟ್ಟು, ಮುಂದೆ ಭೂಮಿ, ನೀರು ಮತ್ತು ಬೆಳಕಿನ ಸಂಸರ್ಗದಿಂದ ತಾನೂ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ ಮರವಾಗಿ ಬೆಳೆದಾಗ, ತನ್ನ ತಾಯಿಮರದಿಂದ ಪಡೆದುಕೊಂಡಬಂದ ಎಲ್ಲ ಗುಣಗಳನ್ನೂ “ನಾವು ಕಾಣಲಾಗದಿದ್ದರೂ” ಆ ಮರದಲ್ಲಿ ಪ್ರಕಟಿಸುವಂತೆ, ಪ್ರಕಾಶಿಸುವಂತೆ, ಎಲ್ಲ ಜೀವಿಗಳೂ ತಮ್ಮ ತಮ್ಮ ಪೂರ್ವಜನ್ಮದಲ್ಲಿ ಆರ್ಜಿಸಿದ ಗುಣಗಳು ಮತ್ತು ಅಂಟಿಸಿಕೊಂಡ ವಾಸನೆಗಳನ್ನು ಒಂದು ” ಸೂಕ್ಷ್ಮ ಶರೀರದಲ್ಲಿ ಹೊತ್ತು ತಂದು ಮತ್ತೊಂದು ಶರೀರ ( ಬೀಜಕ್ಕೆ, ಭೂಮಿ ಮತ್ತು ನೀರಂತೆ) ಸಿಕ್ಕಾಗ ಆ ಗುಣಗಳನ್ನು ಮತ್ತು ವಾಸನೆಗಳನ್ನು ಪ್ರಕಾಶಗೊಳಿಸುತ್ತಾ ಅನುಭವಿಸುತ್ತವೆ ಎನ್ನುವುದು ಭಾರತೀಯ ಸನಾತನ ಸಿದ್ಧಾಂತದ ಸಾರ. ಇದನ್ನೇ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.
ನಮ್ಮ ಕೆಲಸ ಕಾರ್ಯಗಳಲ್ಲಿ ಪಾಪ, ಪುಣ್ಯ, ಋಣಾನುಬಂಧ ಎಂದು ಕರೆಯಲ್ಪಡುವುದೆಲ್ಲವೂ ಇಂತಹ ಪೂರ್ವ ಜನ್ಮದ ವಾಸನೆಗೆ ಸಂಬಂಧಪಟ್ಟವುಗಳೇ. ಜನ್ಮ ಜನ್ಮಾಂತರದ ಕರ್ಮ ಶೇಷವನ್ನು ಸವೆಸಲು ಪಡೆದುಕೊಂಡದ್ದೇ ಮತ್ತೊಂದು ಜನ್ಮ. ಆದರೆ ಅವೆಲ್ಲವನ್ನೂ ಸವೆಸುವಾಗ, ನಮ್ಮ ನಮ್ಮ ಜೀವನಗಳಲ್ಲಿ ಹಲವಾರು ಘಟನೆಗಳು ನಡೆಯುತ್ತವೆ. ಕೆಲವಕ್ಕೆ ನಾವು ಅರ್ಥೈಸಬಹುದು. ಆದರೆ ಬಹುತೇಕ ನಮ್ಮ ಊಹೆಗೂ ನಿಲುಕದ ಹಾಗೆ ನಡೆಯುತ್ತವೆ. ನಾವು”ಇದು ಏಕೆ ಹೀಗಾಯಿತು” ಎಂದು ಕಾರಣಗಳನ್ನು ಹುಡುಕುತ್ತಾ ಎಷ್ಟು ದೂರ ನಮ್ಮ ಯೋಚನೆಗಳನ್ನು ಹರಿ ಬಿಟ್ಟರೂ ಅರ್ಥವಾಗುವುದೇ ಇಲ್ಲ, ಅಲ್ಲವೇ ವಾಚಕರೆ ? ಇದನ್ನೇ ಮಾನ್ಯ ಗುಂಡಪ್ಪನವರು
“ಎಣ್ಣಿಕೆಗೆ ಸಿಲುಕದಾಕಸ್ಮಿಕ ” ಎಂದಿದ್ದಾರೆ. ಹೀಗೆ ನಮ್ಮ ಆಗು ಹೋಗುಗಳಿಗೆ ಕಾರಣಗಳನ್ನು ಹುಡುಕುತ್ತಾ, ನಾವು ನಮ್ಮ ಪೂರ್ವ ಕರ್ಮವನ್ನೋ, ಅದೃಷ್ಟವನ್ನೂ, ಅನ್ಯರನ್ನೂ, ತಮ್ಮನ್ನೇ ತಾವೋ, ಗ್ರಹಗತಿಗಳನ್ನೋ, ಅಥವಾ ಸರ್ವ ನಿಯಂತ್ರಕನಾದ ಆ ಪರಮಾತ್ಮನನ್ನೋ ಹಳಿದು ಅಥವಾ ಹೊಗಳಿ, ತೃಪ್ತಿಪಟ್ಟುಕೊಳ್ಳುತ್ತೇವೆ.
ಆದರೆ ನಮ್ಮ ಅರಿವಿಗೆ ಬಾರದ ನಮ್ಮ ಪೂರ್ವ ಮತ್ತು ಪೂರ್ವಜನ್ಮದ ಕರ್ಮಗಳು ನಮ್ಮ ಇಂದಿನ ಕರ್ಮಗಳನ್ನು ನಿಯಂತ್ರಿಸಿದರೂ, ನಮಗೊಂದು ವಿವೇಚನೆಯನ್ನು ಕೊಟ್ಟು, ಸರಿ ತಪ್ಪುಗಳ ವಿಶ್ಲೇಷಣೆ ಮಾಡುವ ಕ್ಷಮತೆಯನ್ನು ಕೊಟ್ಟು ಆ ಪರಮಾತ್ಮ ನಮ್ಮ ಪೂರ್ವ ಕರ್ಮ ಮತ್ತು ಪೂರ್ವಜನ್ಮದ ವಾಸನೆಗಳ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶವನ್ನೂ ಇತ್ತಿದ್ದಾನೆ ಮತ್ತು ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಸರಿ ಮಾರ್ಗದಲ್ಲಿ ಕೊಂಡು ಒಯ್ಯಲು ನಮ್ಮೊಡನೆ ಇರಲು ತಯಾರಾಗಿದ್ದಾನೆ. ಆದರೆ ನಮ್ಮನ್ನು ಈ ಪ್ರಪಂಚದ ಇಂದ್ರಿಯಾಧಾರಿತ ಆಕರ್ಷಣೆಗಳೇ ಹೆಚ್ಚು ಹೆಚ್ಚಾಗಿ ಸೆಳೆದು, ಆರು ಶತ್ರುಗಳಿಗೆ ಬಲಿಯಾಗಿ ಇನ್ನಷ್ಟು ಕರ್ಮವನ್ನು ಮತ್ತು ವಾಸನೆಗಳ ಅಂಟನ್ನು ಹೆಚ್ಚಿಸಿ ಕೊಳ್ಳುತ್ತೇವೆ. ಪಾಪ, ಆ ಪರಮಾತ್ಮನಿಗೆ ನಮಗೆ ಕರುಣೆಯಿಂದ ಸಹಾಯಮಾಡುವುದೇ ಒಂದು ಕೆಲಸ. ನಮ್ಮ ಎಲ್ಲ ಕೆಲಸಗಳಲ್ಲೂ ಅವನ ಪ್ರಮೇಯವುಂಟು. ನಮ್ಮ ಇಚ್ಚೆಯು ಯಾವ ಕಡೆ ವಾಲಿದರೆ ನಾವು ಅದಾಗುವುದಕ್ಕೆ ಸಹಾಯ ಮಾಡುತ್ತಾನೆ. ಅದನ್ನರಿಯದೆ ನಾವು ಏನೇನನ್ನೋ ಆಶಿಸಿದರೆ, ತಪ್ಪು ನಮ್ಮದೇ ಅಲ್ಲವೇ?
ಹಾಗಾಗಿ ವಾಚಕರೆ, ನಾವು “ಅವನಿಂದ” ಏನನ್ನೂ ಬೇಡದೆ, ಕೇವಲ ” ಅವನನ್ನು” ಮಾತ್ರ ಬೇಡಿದರೆ, ನಾವು ಆ ” ಸತ್ ” ವಸ್ತುವನ್ನು ನಮ್ಮದಾಗಿಸಿಕೊಂಡು ನಮ್ಮ ಕರ್ಮ ಶೇಷವನ್ನು ಮತ್ತು ವಾಸನೆಗಳನ್ನು ಕಳೆದುಕೊಳ್ಳಬಹುದು. ಹೇಳುವುದು ಸುಲಭ, ಪಾಲಿಸಿವುದು ಕಷ್ಟ. ಆದರೆ ಅಸಾಧ್ಯವಲ್ಲ. ಅದನ್ನು ಸಾಧಿಸುವ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?
ರಸಧಾರೆ – 153
ಪ್ರಾರಬ್ಧಕರ್ಮಮುಂ ದೈವಿಕದ ಲೀಲೆಯುಂ |
ತೋರುವುದದ್ರುಷ್ಟವಿಧಿಯೆಂಬ ಪೆಸರುಗಳಿಂ ||
ಆರುಮಳೆವವರಿಲ್ಲವವುಗಳಾವೇಗಗಳ |
ಪೌರುಷವು ನವಸತ್ವ – ಮಂಕುತಿಮ್ಮ ||
ತೋರುವುದದ್ರುಷ್ಟವಿಧಿಯೆಂಬ = ತೋರುವುದು+ಅದು+ ಅದೃಷ್ಟ+ ವಿಧಿಯೆಂಬ// ಆರುಮಳೆವವರಿಲ್ಲವವುಗಳಾವೇಗಗಳ = ಆರುಂ+ ಅಳೆವವರು+ಇಲ್ಲ+ಅವುಗಳಾ+ವೇಗಗಳ//
ಪ್ರಾರಬ್ಧ = ಪೂರ್ವದಿಂದ ಬಂದ// ದೈವಿಕದ = ದೈವ ಪ್ರೇರಿತ// ಲೀಲೆಯುಂ = ಆಟವು// ಪೆಸರುಗಳಿಂ = ಹೆಸರುಗಳಿಂದ// ಆರುಂ = ಯಾರೂ// ಪೌರುಶವು = ಶಕ್ತಿಯು // ನವಸತ್ವ = ಹೊಸ ತಿರುಳು
ಪೂರ್ವ ಮತ್ತು ಪೂರ್ವಜನ್ಮ ಕರ್ಮವು ನಮಗೆ ಪ್ರಾಪ್ತವಾಗುವುದು ಒಂದು ದೈವೀ ಕ್ರಿಯೆ. ಕಾಣಲು ಸಾಧ್ಯವಿಲ್ಲವಾದ್ದರಿಂದ ಇದನ್ನು ದೈವಲೀಲೆಯನ್ನಬೇಕು. ಅದನ್ನು ಅದೃಷ್ಟ( ಕಣ್ಣಿಗೆ ಕಾಣದ್ದು ಎಂದು ಅರ್ಥ) ಅಥವಾ ವಿಧಿ ಎಂದು ಕರೆಯಲ್ಪಡುತ್ತದೆ. ಅವುಗಳ ಚಲನೆ ಮತ್ತು ವೇಗವನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಸ್ವಪ್ರಯತ್ನದಿಂದ ಹೊಸತನವನ್ನು ಕಂಡುಕೊಳ್ಳಬಹುದು ಎಂದು ಈ ಕಗ್ಗದ ಹೂರಣ.
ನಮ್ಮ ಕಣ್ಣಿಗೆ ಕಾಣದ ಆತ್ಮವು ಸ್ಥೂಲ ದೇಹವನ್ನು ತೊರೆದು ಒಂದು ಸೂಕ್ಷ್ಮ ದೇಹದೊಳಕ್ಕೆ ಹೋಗುವಾಗ, ಹಿಂದಿನ ಜನ್ಮದಲ್ಲಿ ದೇಹ ಮನಸ್ಸು ಬುದ್ಧಿಗಳ ಸಂಸರ್ಗದಿಂದ ನಡೆಸಿದ ಕರ್ಮಖಾಂಡದ ಶೇಷವನ್ನು ಮತ್ತು ಆರ್ಜಿಸಿದ ವಾಸನೆಗಳನ್ನೂ ಹೊತ್ತು ತರುತ್ತದೆ ಎಂದು ಹಿಂದಿನ ಕಗ್ಗದಲ್ಲಿ ವಿವರಿಸಿದ್ದೇನೆ. ಇದಕ್ಕೆ ಪ್ರಮಾಣವುಂಟು. ಅದನ್ನು ವೇದವಿದರು ವಿವರಿಸಬೇಕು. ಇರಲಿ. ನಮ್ಮ ಕಣ್ಣಿಗೆ ಕಾಣದ್ದು ಆದ್ದರಿಂದ ” ಅದೃಷ್ಟ” ಪರಮಾತ್ಮನ ಇಚ್ಚೆಯಂತೆ ನಡೆಯುವುದು ಅದ್ದರಿಂದ ” ಲೀಲೆ” ಆದರೆ ನಮಗೆ ಇದು ಹೇಗೆ ಬರುತ್ತದೆ, ಹೇಗೆ ನಡೆಯುತ್ತದೆ, ನಮ್ಮ ಬದುಕುಗಳಲ್ಲಿ ಅದರ ಪಾತ್ರವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ನಮ್ಮ ಊಹೆಗೂ ಸಿಗದು.
ನಾವು ಸಾಮಾನ್ಯವಾಗಿ ” ಏನು ಕರ್ಮವೋ ” ” ಈ ಪ್ರಾರಬ್ಧ ಕರ್ಮ ಬಿಡೋಲ್ಲ” ಎಂದು ನಮ್ಮ ಪರಿಸ್ಥಿತಿಯು ಕೆಟ್ಟಾಗ ನಮ್ಮ ” ಅದೃಷ್ಟವನ್ನು” ಹಳಿದುಕೊಳ್ಳುವುದು ಸರ್ವೇ ಸಾಮಾನ್ಯ. ಹಿಂದಿನಿಂದ ತಂದದ್ದು ಏಕೆ, ಏನು, ಹೇಗೆ ಎಂದು ನಮಗೆ ಅರಿವಿಲ್ಲ. ಅದರ ಬಗ್ಗೆ ಯೋಚಿಸಿ ಫಲವಿಲ್ಲ. ಏನು ವಿಧಿಯೋ ಅದನ್ನು ಅನುಭವಿಸಿಯೇ ತೀರಬೇಕು. ಎಲ್ಲ ತತ್ವಜ್ಞಾನಿಗಳೂ ಸಂತರೂ ಸಾಧುಗಳೂ ಇಂತಹ ಬುದ್ಧಿವಾದವನ್ನು ಹೇಳುತ್ತಲೇ ಇರುತ್ತಾರೆ. ಆದರೆ ಸಂಸಾರದ ನಂಟಿನಲ್ಲಿರುವವರಿಗೆ ಕೇಳುವಾಗ ತಲೆದೂಗಿ ಮತ್ತೆ ಚಿಂತೆಯ ಹಾದಿ ಹಿಡಿಯುವುದು ಸರ್ವೇಸಾಮಾನ್ಯ . ಯಾರಿಗೂ ಅರ್ಥವಾಗದ್ದು. ಅದನ್ನು ಅಳೆಯಲು ಸಾಧ್ಯವಿಲ್ಲ. ಇನ್ನು ಅರ್ಥಮಾಡಿಕೊಳ್ಳುವುದು ಹೇಗೆ, ಬಿಡುವುದು ಹೇಗೆ.
ನಮ್ಮಂಥ ಸಾಮಾನ್ಯ ಮನುಷ್ಯರು ಗತಿಸಿದ ಘಟನೆಗಳನ್ನು ಮೆಲುಕು ಹಾಕಿ ಒಂದು ಮರಣೋತ್ತರಕ್ರಿಯೆಯನ್ನು (postmortem) ಮಾಡುವುದು ಇಲ್ಲದ್ದಿದ್ದರೆ ಮುಂದೆ ನಡೆಯಬೇಕಾದ ಕೆಲಸಗಳ ಬಗ್ಗೆ ಯೋಚನೆ ಮತ್ತು ಯೋಜನೆಗಳನ್ನು ಮನದೊಳಗೆ ಸುತ್ತುವುದು ಸಹಜ. ಇಲ್ಲಿ ಗುಂಡಪ್ಪನವರು ಒಂದು ಪರಿಹಾರವನ್ನು ಸೂಚಿಸುತ್ತಾರೆ. “ಪೌರುಷವು ನವಸತ್ವ ” ಎಂದಿದ್ದಾರೆ. ನಮಗೆ ಒಂದು ವಿವೇಚನಾ ಶಕ್ತಿಯನ್ನು ಪರಮಾತ್ಮ ಕೊಟ್ಟಿರುವುದರಿಂದ, ನಾವು ಪೌರುಷದಿಂದ ಅಂದರೆ ಧೈರ್ಯದಿಂದ ಬಂದದ್ದನ್ನು ಎದುರಿಸಬೇಕು. ಏಕೆಂದರೆ ಅದು ಅನಿವಾರ್ಯ. ಆದರೆ ನಮ್ಮ ವಿವೇಚನೆಯಿಂದ ನಮ್ಮ ” ಇಂದನ್ನು” ಸರಿಪಡಿಸಿಕೊಂಡರೆ, ಮತ್ತು ಒಂದು ನವ ಸತ್ವವನ್ನು ನಮ್ಮ ಬಾಳಲ್ಲಿ ತಂದುಕೊಂಡರೆ ನಮ್ಮ ” ನಾಳೆ ” ಸುಂದರವಾಗಬಹುದು ಮತ್ತು ಪ್ರಾರಬ್ಧ ಕರ್ಮ ಮತ್ತು ಅದರೊಟ್ಟಿಗೆ ಬರುವ ಪೂರ್ವ ವಾಸನೆಗಳು ಕಡಿಮೆಯಾಗಿ ಸತ್ವಯುತವಾದ ಸಜ್ಜೀವನವನ್ನು ನಡೆಸಿ ಮುಂದಕ್ಕೆ, ಅಂದರೆ ಮುಂದಿನ ಜನ್ಮದ ಬದುಕಿದೆ ಕೊಂಡು ಹೋಗಬೇಕಾದ ಕರ್ಮ ಮತ್ತು ವಾಸನೆಗಳನ್ನು ಕಡಿಮೆಮಾಡಿಕೊಳ್ಳಬಹುದು ಎಂದು ಒಂದು ಸಲಹೆಯನ್ನು ಇತ್ತಿದ್ದಾರೆನಿಸುತ್ತದೆ.
ವಾಚಕರೆ ನಾವು, ನೀವೂ ಸಹ ಅನುಕರಣೀಯವಾದ ಮತ್ತು ಅನುಸರನೀಯವಾದ ಮಾರ್ಗವಿದೆಂದು ನಂಬೋಣ ಅಲ್ಲವೇ?
ರಸಧಾರೆ – 154
ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ |
ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ||
ಹೊಸ ಸೃಷ್ಟಿಸತ್ವಮೆತ್ತಣಿನೋ ಬರುತನುದಿನಂ |
ಪೊಸತಾಗಿಪುದು ಜಗವ – ಮಂಕುತಿಮ್ಮ
ಪೊಸರಸಂ = ಪೊಸ + ರಸಂ //ಬೇರಿಗನುದಿನಮೊದವಿ = ಬೇರಿಗೆ + ಅನುದಿನಂ + ಒದವಿ// ಸೃಷ್ಟಿಸತ್ವಮೆತ್ತಣಿನೋ = ಸೃಷ್ಟಿ ಸತ್ವ+ ಎತ್ತಣಿನೋ// ಬರುತನುದಿನಂ = ಬರುತ+ ಅನುದಿನಂ// ಪೋಸತಾಗಿಪುದು = ಪೊಸತು + ಆಗಿಪುದು
ಪೊಸರಸಂ = ಹೊಸ ರಸವನ್ನು // ಅನುದಿನಂ = ಪ್ರತಿನಿತ್ಯ// ಒದವಿ = ಒದಗಿಸಿ// ಎತ್ತಣಿನೋ = ಎಲ್ಲಿಂದಲೋ // ಪೊಸತಾಗಿಪುದು=ಹೊಸತಾಗಿ ಮಾಡುವುದು.
ಒಂದು ಗಿಡದ ಬೇರಿಗೆ ಹೊಸ ರಸವನ್ನು ಸತ್ವವಾಗಿ ಪೂರೈಸಿ, ಆ ಬೇರಿನ ಗಿಡದಲ್ಲಿ ಹೊಸ ಚಿಗುರನ್ನು ಮೂಡಿಸುವಂತೆ, ಹೊಸ ಸೃಷ್ಟಿಗೆ ಅನುವಾದ ಸತ್ವವು ಎಲ್ಲಿಂದಲೋ ಬಂದು ಈ ಜಗವನೆಲ್ಲ ಹೊಸತಾಗಿಸುತ್ತದೆ, ಎಂದು ಜಗತ್ತಿನಲ್ಲಿ ನಿರಂತರ ನಡೆಯುವ ಹೊಸತನದ ಆನಂದ ನೃತ್ಯವನ್ನು ಬಣ್ಣಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಒಂದು ತುಳಸಿಗಿಡವನ್ನು ಗಮನಿಸಿ. ಬೆಳೆದ ಒಂದು ದಳವನ್ನು ಕಿತ್ತುಕೊಂಡರೆ, ಪಕ್ಕದಿಂದ ಎರಡು ಸಣ್ಣ ದಳಗಳು ತಲೆಯೆತ್ತುತ್ತವೆ. ಎಷ್ಟು ಚೆಂದ ಅಲ್ಲವೇ? ಆ ಗಿಡ ನಿಮ್ಮನ್ನು ಕೇಳಬೇಡ ಎನ್ನುವುದಿಲ್ಲ. ಕಿತ್ತ ಮರುಕ್ಷಣದಿಂದಲೇ ಮತ್ತೆ ಚಿಗುರೊಡೆಯಲು ಶುರು. ಹಾಗೆ ಚಿಗುರೊಡೆಯಲು ಬೇಕಾದ ಶಕ್ತಿಯು ಮತ್ತು ಸತ್ವವು ಅದಕ್ಕೆ ಎಲ್ಲಿಂದ ಬರುತ್ತದೋ ನಾವು ಕಂಡಿಲ್ಲ. ಯಾವುದೋ ಒಂದು ಅಜ್ಞಾತ ಶಕ್ತಿ ಆ ಸತ್ವವನ್ನು ತುಂಬುತ್ತದೆ ಮತ್ತು ಆ ಗಿಡದ ಸೊಬಗನ್ನು ಕಾಪಾಡುತ್ತದೆ.
ಇದು ಬಹುತೇಕ ಈ ಜಗತ್ತಿನ ಎಲ್ಲ ಚರಾಚರಜೀವಿಗಳಿಗೂ ಅನ್ವಯಿಸಿಕೊಳ್ಳಬಹುದು. ಹಳೆಯದರ ನೆರಳಿನಲ್ಲೇ ಹೊಸತು ಪಲ್ಲವಿಸುತ್ತಿರುತ್ತದೆ. ಹೊಸತನವನ್ನು ತುಂಬುತ್ತಿರುತ್ತದೆ. ಹೊಸ ಚೈತನ್ಯವನ್ನು ತುಂಬುವ ಆ ಚೇತನವಾವುದೆಂದು ನಮಗೆ ಸೋಜಿಗವುಂಟಾಗಬಹುದು. ಆದರೆ ಇದರಲ್ಲಿ ಸೋಜಿಗಪಡುವುದೇನೂ ಇಲ್ಲ. ಎಲ್ಲದಕೂ ಆ ಪರಮ ಚೈತನ್ಯವೆ ಕಾರಣವೆಂದಮೇಲೆ, ಇದಕ್ಕೂ ಅದೇ. ಹೊಸ ಹೊಸ ವಿಚಾರಗಳು ಭಾವಗಳು ಮಾನವರ ಮನದಲ್ಲಿ ಬರಲೂ ಸಹ ಆ ಪರಮ ಚೈತನ್ಯದ ಲೀಲೆಯಿಂದಲೇ ಆಗಬೇಕು. ಆದರೆ ಅದು ಹೇಗೆ ಬರುತ್ತದೆ ಎಲ್ಲಿಂದ ಬರುತ್ತದೆ ಎಂದು ಆಲೋಚಿಸಿದರೆ ನಮಗರ್ಥವಾಗದ ವಿಚಾರ.
ಸ್ವತಂತ್ರವಾದ ಆ ಪರಮ ಚೈತನ್ಯವು ತನ್ನದೇ ರೀತಿಯಲ್ಲಿ ಕಾರ್ಯಬಾರ ಮಾಡುತ್ತಾ, ತನಗೆ ಹೇಗೆ, ಏನು, ಎಷ್ಟು, ಯಾವಾಗ, ಎಲ್ಲಿ ಬೇಕೋ ಅದನ್ನೆಲ್ಲ ಹಾಗೆ ನಿರ್ಮಿಸಿಕೊಳ್ಳುವ ಶಕ್ತಿ ಮತ್ತು ಸತ್ವವನ್ನು ಹೊಂದಿದೆ. ಹಾಗಾಗಿಯೇ ಈ ಜಗತ್ತಿನಲ್ಲಿ ನಮಗೆ ಹಲವು ಪುರಾತನವಾದದ್ದು ಕಾಣುತ್ತದೆ. ಉದಾ: ನಮ್ಮ ಹಿಮಾಲಯ ಶಿಖರ ಮತ್ತು ಅದರಿಂದಲೇ, ಪ್ರತೀ ವರ್ಷ ಹೊಸತನವನ್ನು ಹೊತ್ತು ಹರಿದುಬರುವ ಗಂಗೆ. ಹೀಗೆಯೇ ನಾವು ಎಲ್ಲಿ ಕಂಡರೂ ನಮಗೆ ಈ “ಹೊಸ ಸೃಷ್ಟಿ ಸತ್ವದ ” ವಿಕಸಿತ ರೂಪ ಕಾಣುತ್ತದೆ. ಹೊಸತನ್ನು ನೋಡುತ್ತೇವೆ.ಅನುಭವಿಸುತ್ತೇವೆ. ಆನಂದಿಸುತ್ತೇವೆ.
ಹೀಗೆ ಸೃಷ್ಟಿಯಲ್ಲಿ ಪ್ರತಿನಿತ್ಯ ಹೊಸತನ್ನು ತುಂಬುವ ಆ ಪರಮ ಚೈತನ್ಯಕ್ಕೆ ಶಿರಬಾಗಿ ನಮಿಸೋಣ .
ರಸಧಾರೆ – 155
ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು |
ತುಸಿರಾಗಿ ನಮ್ಮೊಳಾವಗಮಾಡುವಂತೆ ||
ವಿಸರಸತ್ವಮದೊಂದದೆತ್ತಣಿನೋ ಬಂದು ನ |
ಮ್ಮಸುಗಳೊಳವೊಗುತಿಹುದು – ಮಂಕುತಿಮ್ಮ ||
ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯುತುಸಿರಾಗಿ = ಶ್ವಸನ+ಅನ್+ಆಗಸದಿನ್+ಇಳಿದು+ಅದ್ರಿ+ಗುಹೆಗಳೊಳು+ಅಲೆಯುತ+ ಉಸಿರಾಗಿ// ನಮ್ಮೊಳಾವಗಮಾಡುವಂತೆ = ನಮ್ಮೊಳು+ ಆವಗ + ಮಾಡುವಂತೆ// ವಿಸರಸತ್ವಮದೊಂದದೆತ್ತಣಿನೋ= ವಿಸರ+ಸತ್ವಂ+ಅದೊಂದು+ಎತ್ತಣಿನೋ// ನಮ್ಮಸುಗಳೊಳವೊಗುತಿಹುದು = ನಮ್ಮ+ಅಸುಗಳ +ಒಳ+ಒಗುತಿಹುದು //
ಶ್ವಸ್ಸನ = ಗಾಳಿ, ಉಸಿರು // ಆಗಸದಿನ್ = ಆಕಾಶದಿಂದ//ಅದ್ರಿ= ಬೆಟ್ಟ// ಆವಗ =ಯಾವಾಗಲೂ, ಸದಾಕಾಲ //ವಿಸರ= ವಿಸ್ತಾರವಾದ// ಎತ್ತಣಿನೋ= ಎತ್ತಲ್ಲಿಂದಲೋ// ಅಸುಗಳ = ಉಸಿರು, ಪ್ರಾಣ//ಒಗುತಿಹುದು= ಹೊಕ್ಕುತ್ತಿದೆ.
ನಮ್ಮ ಉಸಿರಾಗಿರುವ ಈ ಗಾಳಿಯು ಆಕಾಶದಿಂದ ಇಳಿದು, ಬೆಟ್ಟಗಳ ಮೇಲೆ ಬೀಸಿ, ಗುಹೆಗಳಲ್ಲಿ ನುಗ್ಗಿ, ಉಸಿರಾಗಿ ನಮ್ಮ ಒಡಲೊಳಗೆ ಆಡುವಂತೆ ಮಾಡುವ, ಒಂದು ವಿಸ್ತಾರ ಸತ್ವವು ಎಲ್ಲಿಂದಲೋ ಬಂದು ನಮ್ಮ ಪ್ರಾಣಗಳ ಒಳಗೆ ನುಗ್ಗುತ್ತಿದೆ ಎಂದು ಪ್ರಸ್ತಾಪಿಸ್ಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾವೆಳೆದುಕೊಳ್ಳುವ ಉಸಿರು ನಮಗೆ ಬಹಳ ಮುಖ್ಯ. ಉಚ್ವಾಸ ನಿಶ್ವಾಸಗಳು ನಮಗೆ ನಿರಂತರ ಆಡುತ್ತಿದ್ದರೆ ಮಾತ್ರ ನಮ್ಮ ಅಸ್ತಿತ್ವ. ಅದು ಆಡುವ ತನಕ ನಾವಿರುತ್ತೇವೆ, ನಮಗೊಂದು ಹೆಸರಿರುತ್ತದೆ. ಇಲ್ಲದಿದ್ದರೆ ನಮ್ಮನ್ನು ” ಹೆಣ”ವೆನ್ನುತ್ತಾರೆ. ಆದರೆ ಈ ಉಸಿರು ಎಲ್ಲಿಂದೆಲ್ಲೆಲ್ಲಿಗೆ ಹೊಕ್ಕು ನಮ್ಮ ತನಕ ಬರುತ್ತದೆ ಎಂದು ಯೋಚಿಸಿದರೆ ನಮಗೆ ಗೊತ್ತಾಗುವುದಿಲ್ಲ. ವೇದವು” ಆಕಾಶಾದ್ವಾಯು:” ಎನ್ನುತ್ತದೆ. ಅದು ಆಕಾಶದಿಂದ ಹೊರಟು, ಬೆಟ್ಟ, ಗುಹೆಗಳಲ್ಲಿ ಹೊಕ್ಕು, ನಮ್ಮ ತನಕ ಬರುತ್ತದೆ. ನಾವು ಉಸಿರಾಡುತ್ತೇವೆ. ಬದುಕುತ್ತೇವೆ.
ಆದರೆ ನಮಗೆ ಬಹಳ ಮುಖ್ಯವಾದ, ಎಲ್ಲಿದಲೋ ಬಂದು ” ಉಸಿರನ್ನು” ನಮ್ಮ ತನಕ ತಲುಪಿಸುವುದು ಒಂದು”ವಿಸರಸತ್ವ” ವಿಸ್ತಾರವಾದ ತತ್ವವೆನ್ನುತ್ತಾರೆ ಶ್ರೀ ಡಿ.ವಿ.ಜಿ. ಇಡೀ ಸೃಷ್ಟಿಯಲ್ಲಿ ಬೇರೆ ಬೇರೆ ಗ್ರಹಗಳಲ್ಲಿಯೂ ಸಹ ಇರುವ ಯಾವುದೇ ಜೀವಿಯು ಬದುಕಲು ಬೇಕಾದುದೇ ಈ ಉಸಿರು. ಆಹಾರ, ಉಡುಗೆ, ತೊಡಿಗೆ, ಮುಂತಾದವುಗಳು ಎಷ್ಟೇ ಭಿನ್ನವಾದರೂ, ಜೀವಿಯಾದರೆ ಅದಕ್ಕೆ ಈ ಉಸಿರೇ ಆಧಾರ. ಹಾಗಾಗಿ ಇಡೀ ನಭೋಮಂಡಲವನ್ನು ಆವರಿಸಿಕೊಂಡು ಎಲ್ಲ ಜೀವಿಗಳ ಅಸ್ತಿತ್ವಕ್ಕೆ ಆಧಾರವಾಗಿರುವ ಈ ಉಸಿರನ್ನು ” ಪ್ರಾಣವಾಯು” ಎನ್ನುತಾರೆ. ಮಾಧ್ವ ಸಂಪ್ರದಾಯದಲ್ಲಿ ಇದಕ್ಕೆ” ಜೀವೋತ್ತಮ” ಎನ್ನುತ್ತಾರೆ. ಇಂತಹ ಉಸಿರನ್ನು ನಮಗೆ ಕೊಡುವ ಆ ಪರಮ ತತ್ವವೇ, ಪರಮ ಚೇತನ. ಆ ಪರಮ ಚೇತನದ ಕೃಪೆಯಿಂದಲೇ ನಾವು ಉಸಿರಾಡುತ್ತಾ ಬದುಕಿದ್ದೇವೆ.
ಇಂದು ಅ ಉಸಿರಿಗೂ ಬರ ಬಂದಿದೆ. ಶುದ್ಧಗಾಳಿಯನ್ನು ಜನರ ಹುಡುಕಿಕೊಂಡು ಹೋಗುವ ಕಾಲ ಬಂದಿದೆ. ಎಲ್ಲ ಕಡೆಯೂ ಗಾಳಿ ಕಲುಷಿತವಾಗುತ್ತಿದೆ. ವಾಚಕರೆ ಇಂದಿನ ಪರಿಸ್ಥಿತಿ ಹೀಗೇ ಮುಂದುವರೆದರೆ, ಮುಂದೆ ಗಾಳಿಯ ಚೀಲವನ್ನು ಕಟ್ಟಿಕೊಂಡೆ ತಿರುಗಬೇಕಾದ ಪರಿಸ್ಥಿತಿ ಬರಬಹುದು. ಅಂತಹ ಪರಿಸ್ಥಿತಿ ಬರದಿರಲೆಂದು ಆಶಿಸೋಣ.
ರಸಧಾರೆ – 156
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |
ಬಾಯ ಚಪ್ಪರಿಸುವನು – ಮಂಕುತಿಮ್ಮ ||
ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು
ಈ ವಿಧಿ ಅನ್ನುವುದು ನಮ್ಮನ್ನು ಈ ಭೂಮಿ ಎನ್ನುವ ಒಲೆಯೊಳು, ನೆನೆಸುತ್ತ, ಬೇಯಿಸುತ, ಹೆಚ್ಚುತ್ತ , ಕೊಚ್ಚುತ್ತ, ಕಾಯಿಸುತ, ಕರಿಯುತ್ತ, ಹುರಿಯುತ್ತ, ಸುಡುತ್ತ, ನಮ್ಮನ್ನು ಆಡಿಸುತ್ತ, ತಾನು ಒಂದು ರುಚಿಯಾದ ಪಕ್ವಾನ್ನವನ್ನು ತಿಂದು ಆಸ್ವಾದಿಸುವನಂತೆ ಬಾಯಿ ಚಪ್ಪರಿಸುತ್ತಿದ್ದಾನೆ ಎಂದು ಒಂದು ಗಹನವಾದ ವಿಷಯವನ್ನು ವಿನೋದವಾಗಿ ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾವು ಒಂದು ತರಕಾರಿಯನ್ನು ಮನೆಗೆ ತಂದರೆ ಮೊದಲು ಅದನ್ನು ತೊಳೆದು( ತೋಯಿಸುತ್ತ) ಹೆಚ್ಚಿ ಅಥವಾ ಕೊಚ್ಚಿ, ಬೇಯಿಸಿಯೋ ಅಥವಾ ಎಣ್ಣೆಯಲ್ಲಿ ಕರೆದೊ ಅಥವಾ ಹುರಿದೋ ಅಥವಾ ಸುಟ್ಟೋ ಒಂದು ಪಲ್ಯವನ್ನೋ ಅಥವಾ ಹುಳಿಯನ್ನೋ ಮಾಡಿ ಬಾಯಿ ಲೊಟ್ಟೆ ಹೊಡೆಯುತ್ತಾ ತಿಂದು ಆನಂದ ಪಡುವುದಿಲ್ಲವೇ? ಹಾಗೆಯೇ ಆ ಪರಮ ಚೇತನ “ವಿಧಿ”ಯ ವೇಷಧರಿಸಿ,ನಮ್ಮನ್ನು ಈ ಭೂಮಿಗೆ ತಂದು ಶೈಶವ, ಬಾಲ್ಯ, ಕೌಮಾರ್ಯ, ವಯಸ್ಕ, ಪ್ರೌಢ ಮತ್ತು ವೃದ್ಧಾಪ್ಯದ ಮಜಲುಗಳಲ್ಲಿ ಅಡ್ಡಾಡಿಸಿ, ಹೊರಳಾಡಿಸಿ, ಪರದಾಡಿಸಿ, ತಿಣುಕಾಡಿಸಿ, ನಗಿಸಿ, ಅಳಿಸಿ, ದರ್ಪದಿಂದ, ದೈನ್ಯತೆಯಿಂದ, ರಾಜನಂತೆ, ಬಿಕಾರಿಯಂತೆ, ಸುಂದರಾಗಿಸಿ, ರೂಪಗೆಡಿಸಿ, ಇನ್ನೂ ಏನೇನೋ ಅವಸ್ಥೆಗಳಲ್ಲಿ ನಮ್ಮ ಜೀವನದ ಬಂಡಿಯನ್ನು ಎಗ್ಗಾಮುಗ್ಗಾ ಓಡಿಸಿ ನಮ್ಮನ್ನು ಮಂಗನಾಟ ಆಡಿಸಿ ತಾನು ನೋಡಿ ಕೇಕೆಹಾಕಿ ಅಟ್ಟಹಾಸದ ನಗುವ ನಗುತ್ತ ಸಂತಸಪಡುತ್ತಾನೆ, ಎನ್ನುವುದೇ ಈ ಕಗ್ಗದ ಹೂರಣ.
ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಿದರೆ, ಪ್ರತಿಯೊಬ್ಬರ ಜೀವನವೂ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಅದಕ್ಕೆ ಕಾರಣವನ್ನು ಹುಡುಕಲು ಸಾಧ್ಯವಿಲ್ಲ. ಹಾಗೆ ನಮಗೆ ಕೆಲವು ಕಾರಣಗಳು ಕಂಡರೂ ಆ ಕಾರಣಕ್ಕೆ ಏನು ಕಾರಣ ಎಂದು ಒಂದು ಪ್ರಶ್ನೆ ಕೇಳಿದರೆ” ಅಯ್ಯೋ ಬಿಡಿ ಹಣೆಬರಹಕ್ಕೆ ಯಾರು ಹೊಣೆ” ಅಂತಲೋ ” ಪ್ರಾರಬ್ಧ ಕರ್ಮ ಯಾರೂ ತಪ್ಪಿಸಕ್ಕಾಗಲ್ಲ” ಎನ್ನುವ ಉದ್ಘಾರವೋ ಉತ್ತರವಾಗಿ ಸಿಗುತ್ತದೆ. ಒಬ್ಬ ಕುಂಟ, ಒಬ್ಬ ಕುರುಡ, ಒಬ್ಬ ಧನಿಕ, ಒಬ್ಬ ಬಡವ, ಒಬ್ಬ ಒಳ್ಳೆಯವ, ಒಬ್ಬ ಪಾತಕಿ, ಒಬ್ಬ ಜ್ಞಾನಿ ಮತ್ತೊಬ್ಬ ಅಜ್ಞಾನಿ ಹೀಗೆ ಸಾವಿರಾರು ವೈವಿದ್ಯೆತೆಗಳ ಬಾಳನ್ನು ಆ ಪರಮಾತ್ಮ ವಿಧಿ ರೂಪದಲ್ಲಿ ಎಲ್ಲರಿಗೂ ಕೊಟ್ಟಿದ್ದಾನೆ.
” ವಿಧಿ ” ಎಂದರೆ ಮೊದಲೇ ನಿರ್ಧರಿಸಿದ್ದು ಎಂದು ಒಂದು ಅರ್ಥ.ನಮ್ಮ ಜೀವನದ ಪರಿ ಮೊದಲೇ ನಿರ್ಧಾರಿತವಾಗಿರುತ್ತದೆ. ಆದರೆ ನಮಗೆ ಆಗುವುದನ್ನು ನಾವು ನಮಗೆ ಆ ಪರಮಾತ್ಮ ಕೊಟ್ಟ ಜ್ಞಾನದಿಂದ ಮತ್ತು ನಮ್ಮ ಪ್ರಯತ್ನದಿಂದ, ಮತ್ತು ನಾವು ನಂಬಿದ ಆ ಪರಮಾತ್ಮನ ಕೃಪೆಯಿಂದ ಕೊಂಚಮಟ್ಟಿಗೆ ಬದಲಾಯಿಸಿಕೊಳ್ಳಬಹುದು ಎಂಬುದೂ ಸಹ ಅಭಿಪ್ರಾಯವಿದೆ. ಅದಕ್ಕೆ ಬೇಕಾದ ಹತ್ತು ಹಲವಾರು ಮಾರ್ಗಗಳನ್ನೂ ಚತುರೋಪಾಯಗಳನ್ನೂ ನಮಗೆ ನಮ್ಮ ವೇದ, ಪುರಾಣ, ಭಾಗವತ, ಭಗದ್ಗೀತೆ, ಪುರಾಣಗಳು ಮುಂತಾದವುಗಳಿಂದಲೂ ದೊರೆಯುತ್ತೆ. “ಲಭ್ಯ” ವನ್ನು ಅನುಭವಿಸುತ್ತಾ, ತೃಪ್ತಿಯಿಂದ ಸಂತೋಷದಿಂದ ಅನುಭವಿಸುತ್ತಾ ಇರಬೇಕು. ಬೇರೆ ಮಾರ್ಗವಿಲ್ಲ. ಇದು ನಿರಾಶಾವಾದವಲ್ಲ. ವಾಸ್ತವವಾದ. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ತೃಪ್ತಿಯ ಜೀವನ ಮಾಡಿದರೆ ಸುಖ.
ರಸಧಾರೆ – 157
ಪರಬೋಮ್ಮನಾ ವಿಧಿಯ ನೇಮಿಸಿಹುದೇತಕೆನೆ |
ನರಜಾತಿ ಸಾನುಭೂತಿಯ ಕಲಿಯಲೆಂದೆ ||
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತೆ |
ಬೆರೆ ನೀನು ವಿಶ್ವದಲಿ – ಮಂಕುತಿಮ್ಮ
ಪರಬೋಮ್ಮನಾ = ಪರಬೊಮ್ಮ್ಬನು+ಆ // ನೇಮಿಸಿಹುದೇತಕೆನೆ = ನೇಮಿಸಿಹುದು+ಏತಕೆ+ಎನೆ// ಪರರೆಂಬರಿಲ್ಲ = ಪರರು + ಎಂಬರು+ಇಲ್ಲ// ಆತ್ಮಾಂಶರೆಲ್ಲರೆನುತೆ = ಆತ್ಮ + ಅಂಶರು+ಎಲ್ಲರು+ಎನುತೆ //
ಸಾನುಭೂತಿಯ = ಸಹಾನುಭೂತಿ // ಪರರು = ಅನ್ಯರು
ಆ ಪರಬ್ರಹ್ಮನು ಆ “ವಿಧಿ”ಯನ್ನು ಏಕೆ ನೇಮಿಸಿದ್ದಾನೆ ? ಎಂದರೆ, ಮನುಷ್ಯರು ಪರಸ್ಪರ ಸಹಾನುಭೂತಿಯನ್ನು ಕಲಿಯಲಿ ಎಂದು ಮತ್ತು ಪರರು ಯಾರೂ ಇಲ್ಲ, ಎಲ್ಲರೂ ಆತ್ಮದ ಒಂದು ಅಂಶವೆಂದು ಅರಿತು ನೀನೂ ಬೆರೆತು ಈ ವಿಶ್ವದಲಿ ಬಾಳು ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
“ವಿಧಿ” ಯನ್ನು ಆ ಪರಮಾತ್ಮ ನಿಯಮಿಸಿರುವುದು. ಪ್ರತಿಯೊಬ್ಬರಿಗೂ ಬೇರೆ ಬೇರೆ ವಿಧಿಯನ್ನು ನಿಯಮಿಸಿ ಎಲ್ಲರನ್ನೂ ಬೇರೆ ಬೇರೆಯಾಗಿ ನಿರ್ಮಿಸಿ, ” ನಾನು ಅನ್ಯರಿಂದ ಬೇರೆ “ಎನ್ನುವ ಭಾವವನ್ನು, ನಮ್ಮ ಮನಸ್ಸು ಮತ್ತು ಸ್ವಭಾವಗಳಲ್ಲಿ ತುಂಬಿ ಈ ಜಗನ್ನಾಟಕವನ್ನು ಆಡಿಸುತ್ತಿದ್ದಾನೆ ಆ ಪರಮಾತ್ಮ. ಆ ಪರಮ ಚೇತನ ಜಗತ್ತಿನ ಎಲ್ಲ ಪ್ರಾಣಿಗಳೂ ಬೇರೆ ಬೇರೆ ರೂಪಗಳನ್ನು ಧರಿಸಿದೆ ಎಂಬುದು ಸಿದ್ಧಾಂತ. ಬಾಹ್ಯ ರೂಪಗಳು ಬೇರೆ ಬೇರೆ ಆದರೂ ಚೇತನದ ಸಾಮ್ಯವಿದೆ ಎಂದು “ತಿಳಿ”ದರೂ ಸಹ “ಅರಿ”ಯದೆ ನಾವುಗಳು ನಮ್ಮನ್ನು ನಮ್ಮ ಬಾಹ್ಯರೂಪದಿಂದ ಗುರುತಿಸಿಕೊಳ್ಳುತ್ತೇವೆ. ಇದೆ ” ಮಾಯೆ” !!!!
ಬಾಹ್ಯ ರೂಪ ಅಶಾಶ್ವತ. ಅಂತರ್ಯದ ಚೇತನ ಮಾತ್ರ ನಿರಂತರ, ಅನಂತ ಮತ್ತು ಶಾಶ್ವತ. ಹಾಗಾಗಿ ಅದೇ ಸತ್ಯ. ಏಕೆಂದರೆ ಯಾವುದು ನಿತ್ಯವೋ ಅದು ಸತ್ಯ. ನಾವು ಸತ್ಯವನ್ನು ಅರಿತು ಅನುಭವಿಸಿದರೆ ನಮಗೆ ಎಲ್ಲ ಜೀವಿಗಳಲ್ಲಿ ಇರುವ, ಒಂದೇ ರೂಪದ ಆ ಪರಮ ಚೇತನದ ಅಸ್ತಿತ್ವ ಅರ್ಥವಾಗುವುದು.
” ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಷ್ಯತಿ I ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ II (ಈಶಾವಾಸ್ಯ-೬) ಎಂದು ಬಹಳ ಸುಂದರವಾಗಿ ಈಶಾವಾಸ್ಯೋಪನಿಷತ್ತಿನಲ್ಲಿ ಉಲ್ಲೇಖ ಮಾಡಲಾಗಿದೆ. ಯಾರು ಎಲ್ಲಾ ಭೂತಗಳನ್ನೂ ( ಭೂತ= ಭವತಿ ಇತಿ ಭೂತಃ, ಅಂದರೆ ಯಾವುದು ಇದೆಯೋ, ಅದು ಭೂತ) ಆತ್ಮನಲ್ಲಿ ನೋಡುವರೋ ಮತ್ತು ಯಾರು ಎಲ್ಲ ಭೂತಗಳಲ್ಲಿಯೂ ಆತ್ಮನನ್ನೇ ಕಾಣುವರೋ ಅವರಲ್ಲಿ ಭೇದಭಾವದ ಸ್ವಭಾವವಿರುವುದಿಲ್ಲ. ಇದನ್ನೇ ” ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ” ಎಂದು ಸರ್ವಜ್ಞನ ವಚನ ಹೇಳುತ್ತದೆ. ನಾವು ಯಾರನ್ನಾದರೂ ಕಂಡಾಗ ” ನಮಸ್ಕಾರ” ಎನ್ನುತ್ತೇವೆ. ಆ ನಮಸ್ಕಾರ ಹೊರ ರೂಪಕ್ಕಲ್ಲ, ಆದರೆ ಆ ರೂಪವನ್ನು ಧರಿಸಿರುವ ಪರಮಾತ್ಮ ಸ್ವರೂಪ ಆತ್ಮಕ್ಕೆ. ಇದೇ ಸತ್ಯ.
ಹಾಗಾಗಿ ವಾಚಕರೆ ಪರಮಾತ್ಮನು ನಮ್ಮನ್ನು ಬೇರೆ ಬೇರೆ ರೂಪದಲ್ಲಿ ಈ ಭೂಮಿಗೆ ತಂದಿದ್ದರೂ ಒಳಗಿರುವ ಚೇತನದ ಸಾಮ್ಯತೆಯನ್ನು ಮನಗಂಡು ನಾವು, ನಾವೆಲ್ಲಾ ಒಂದೇ ಎಂದು ಮನಗಂಡು, ಪರಸ್ಪರ ಪ್ರೀತಿ ವಿಶ್ವಾಸ ಸಹಬಾಳ್ವೆ, ಸೌಹಾರ್ದಯುತ ಬಾಳನ್ನು ನಡೆಸಿದರೆ ಈ ಜಗತ್ತೇ ಎಷ್ಟು ಸುಂದರವಾಗಿರುತ್ತದೆ ಅಲ್ಲವೇ?
ರಸಧಾರೆ – 158
ಕರವೆರಡದೃಷ್ಟ್ಟಕ್ಕೆ ನರನ ಪೂರ್ವಿಕವೊಂದು I
ಪೆರತೊಂದು ನವಸೃಷ್ಟಿಸತ್ವವಾ ಬೊಗಸೆ II
ಧರಿಸಿಹುದು ಮನುಜಜೀವಿತವನದರೊತ್ತಡದೆ I
ಪರಿದಾಟ ನಮಗೆಲ್ಲ – ಮಂಕುತಿಮ್ಮ
ಕರವೆರಡದೃಷ್ಟ್ಟಕ್ಕೆ = ಕರವು+ಎರಡು+ಅದೃಷ್ಟ್ಟಕ್ಕೆ // ಪೂರ್ವಿಕವೊಂದು = ಪೂರ್ವಿಕವು+ ಒಂದು // ಪೆರತೊಂದು = ಪರೆತು + ಒಂದು // ಮನುಜಜೀವಿತವನದರೊತ್ತಡದೆ = ಮನುಜಜೀವಿತವನು+ ಅದರ + ಒತ್ತಡದೆ/
ಕರವು = ಕೈಗಳು // ಪೂರ್ವಿಕವು = ಹಿಂದಿಂದ ಬಂದದ್ದು // ಪರೆತು = ದೊಡ್ದದ್ದಾದ, ಮಹತ್ತಾದ // ನವಸೃಷ್ಟಿಸತ್ವವಾ = ಹೊಸದೊಂದು ಸೃಷ್ಟಿಗೆ ಹೂರಣ//
ನಮ್ಮ ಪೂರ್ವಜನ್ಮದ ರೇಖೆಗಳನ್ನು ಹೊತ್ತ ಎಡಗೈ ಮತ್ತು ನಮ್ಮ ಈ ಜನ್ಮದ ಆಗು ಹೋಗುಗಳನ್ನು ಬಿತ್ತರಿಸುವ ನಮ್ಮ ಬಲಗೈಯ ರೇಖೆಗಳು . ಎರಡು ಕೈಗಳು. ಈ ಎರಡೂ ಕೈಗಳನ್ನು ಜೋಡಿಸಿದಾಗ ಒಂದು ಬೊಗಸೆಯಾಗುತ್ತದೆ. ಈ ಬೊಗಸೆಯಿಂದ ನಾವು ಹೊಸ ಹೊಸ ಕೆಲಸವನ್ನು ಮಾಡುತ್ತಾ ಇಲ್ಲಿನ ಒತ್ತಡಗಳನ್ನು ಅನುಭವಿಸುತ್ತಾ ನಾವು ಪರದಾಡುತ್ತಿರುತ್ತೇವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ನಮ್ಮ ಎಡಗೈನ ರೇಖೆಗಳು ನಮ್ಮ ಪೂರ್ವ ಜನ್ಮದ ವೃತ್ತಾಂತವನ್ನು ಹೇಳುತ್ತವೆಯಂತೆ ಮತ್ತು ಬಲಗೈನ ರೇಖೆಗಳು ನಮ್ಮ ಈ ಜನ್ಮದ ಅದೃಷ್ಟವನ್ನು ತಿಳಿಸುತ್ತವೆಯಂತೆ. ಅದೃಷ್ಟವೆಂದರೆ ನಮಗೆ ಕಾಣದ್ದು. ಹಾಗೆ ನೋಡಿದರೆ, ಹಿಂದಿನ ಜನ್ಮದ ವೃತ್ತಾಂತವೂ ನಮಗೆ ಗೊತ್ತಿಲ್ಲ ಮತ್ತು ಈ ಜನ್ಮದಲ್ಲಿ ಆಗುವ ವಿಷಯಗಳೂ ನಮಗೆ ಗೊತ್ತಿಲ್ಲ. ಎರಡೂ ಅದೃಷ್ಟವೇ. ಅಂದರೆ ನಮಗೆ ಗೊತ್ತಿರದ ಪೂರ್ವ ಕರ್ಮ ಮತ್ತು ನಮ್ಮ ಭವಿಷ್ಯ, ಇವೆರಡನ್ನೂ ಒಟ್ಟಾಗಿಸಿ ಒಂದು ಬೊಗಸೆಯಾಗಿಸಿ ನಮ್ಮ ಕಾರ್ಯಗಳನ್ನು ಮಾಡಿ ನಮ್ಮ ಜೀವನದಲ್ಲಿ ಆನಂದವನ್ನು ಕಾಣಲು ಪ್ರಯತ್ನಿಸುವ ನಾವು ಸದಾಕಾಲ ಒಂದು ರೀತಿಯ ಒತ್ತಡದಲ್ಲೇ ಇರುತ್ತೇವೆ ಎಂಬುದೇ ಈ ಕಗ್ಗದ ಹೂರಣ.
ಮುಖ್ಯ ತತ್ವ ಮತ್ತು ಸತ್ವವೇನೆಂದರೆ, ನಾವು ಹಿಂದಿನಿಂದ ತಂದ ಪೂರ್ವ ಕರ್ಮ,( ಎಡಗೈ) ಮತ್ತು ಇಂದು ನಮ್ಮ ಜ್ಞಾನ ಮತ್ತು ಕೃಷಿಯಿಂದ ನಡೆಯುವ ಈಗಿನ ಕಾರ್ಯಗಳು(ಬಲಗೈ). ಇವೆರಡನ್ನೂ ಜೋಡಿಸಿ ನಾವು ಈ ಜಗತ್ತಿನಲ್ಲಿ ಕೆಲಸ ಮಾಡುವಾಗ ಬಹಳ ಒತ್ತಡಕ್ಕೊಳಗಾಗುತ್ತೇವೆ. ಆಗ ಈ ಜೋಡಿಸಿದ ಕೈಗಳನ್ನು ಪರಮಾತ್ಮನೆಡೆಗೆ ಮಾಡಿ ಅವನ ಕೃಪೆಯನ್ನು ಯಾಚಿಸಿದರೆ ಮತ್ತು ಅವನಿಗೆ ಶರಣಾದರೆ ಬದುಕಿನ ಜಂಜಡವನ್ನು ತಡೆದುಕೊಳ್ಳಬಹುದು. ಇಂದು ಬೆಳಗ್ಗೆ ಏಳುವಾಗ ಕೈಜೋಡಿಸಿ ಭೂತ ಭವಿಷ್ಯತ್ತುಗಳನ್ನು ಒಟ್ಟಿಗೆ ಸೇರಿಸಿ ಎರಡನ್ನೂ ಪರಮಾತ್ಮನ ಚರಣಗಳಿಗೆ ಅರ್ಪಿಸಿ “ಇಂದಿನ ದಿನ ನಿನ್ನ ಕೃಪೆ ಇರಲಿ ತಂದೆ” ಎಂದು ನಿವೇದನೆ ಮಾಡಿ ಅಂದಿನ ಕೆಲಸಕಾರ್ಯಗಳಲ್ಲಿ ನಿಮಗ್ನರಾಗಬೇಕು ಮತ್ತೆ ನಾಳೆ ಅದೇ ಪ್ರಕ್ರಿಯೆ. ಇದರಲ್ಲಿ ನೆಮ್ಮದಿ ಉಂಟು ಶಾಂತಿ ಉಂಟು.
ರಸಧಾರೆ – 159
ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ |
ಭೂಪುಟದಿ ಜೀವರಸಗಳ ಪಚಿಸುವಂತೆ II
ಪಾಪಿಯಂ ಪ್ರೋತ್ಸಾಹಿಸಿ ಸುಕ್ರುತಿಯ ಪರೀಕ್ಷಿಸುತ |
ವೇಪಿಪನು ವಿಧಿ ನಮ್ಮ – ಮಂಕುತಿಮ್ಮ ಈ
ತಾಪಿಸುತೆ = ಸುಡುತ್ತಾ// ತಣಿಯಿಸುತೆ= ತೊಯಿಸುತ್ತಾ// ಕುಲುಕಿಸುತೆ= ಅಲುಗಿಸುತ್ತಾ // ಋತುವೈದ್ಯ = ಬದಲಾಗುವ ಋತುಮಾನ// ಭೂಪಟದಿ = ಭೂಮಿಯ ಮೇಲೆ// ಪಚಿಸುವಂತೆ = ಜೀರ್ಣವಾಗಿಸುವಂತೆ//
ಸುಕ್ರುತಿಯ = ಒಳ್ಳೆಯ ಕೆಲಸವನ್ನು ಮಾಡುವವನು// ವೇಪಿಪನು = ನಡುಗಿಸುತ್ತಾನೆ.
ಬಿಸಿಲಲ್ಲಿ ಸುಟ್ಟು, ಮಳೆಯಲ್ಲಿ ನೆನೆಸಿ, ಚಳಿಗಾಲದಲ್ಲಿ ನಡುಗಿಸಿ, ಋತು ಬದಲಾವಣೆಯಿಂದ ಈ ಭೂಮಿಯಲ್ಲಿ ಜೀವರಸಗಳ ಪಾಕ ಮಾಡಿ ಪಕ್ವ ಮಾಡುವಂತೆ, ನಮ್ಮನ್ನು ವಿಧಿಯು ಹಲಬಗೆಯ ಪರೀಕ್ಷೆಗಳಿಗೊಡ್ಡಿ, ದುಷ್ಟನನ್ನು ಪ್ರೋತ್ಸಾಹಿಸಿ, ಒಳ್ಳೆಯಕೆಲಸ ಮಾಡುವವರನ್ನು ಇನ್ನೂ ಪರೀಕ್ಷೆಗೆ ಒಳಪಡಿಸುತ್ತಾ, ನಮ್ಮನ್ನು ನಡುಗಿಸುತ್ತಾನೆ ಎನ್ನುವುದೇ ಈ ಕಗ್ಗದ ಹೂರಣ.
ಈ ಜಗತ್ತಿನಲ್ಲಿ, ಮನುಷ್ಯನನ್ನೂ ಸೇರಿ ಎಷ್ಟು ಪ್ರಾಣಿಗಳಿವೆಯೋ ಎಲ್ಲವನ್ನೂ ಏಕಕಾಲದಲ್ಲಿ ಅವರವರ ಪೂರ್ವಕರ್ಮಗಳಿಗನುಸಾರವಾಗಿ, ವಿಧಿ ಆಟ ಆಡಿಸುತ್ತದೆ. ಸಂಕಷ್ಟಗಳ ಬಿಸಿಲಿನ ಬೇಗೆಯಲ್ಲಿ ಸುಡುತ್ತಾ, ದುಃಖದ ಕಡಲಿನಲ್ಲಿ ನೆನೆಸುತ್ತಾ, ಅಕಸ್ಮಾತ್ತಾಗಿ ನಡೆಯುವ ಸಂಭವಗಳಿಂದ ನಡುಗಿಸುತ್ತಾ, ನಲುಗಿಸುತ್ತಾ ಕಾಲಕಾಲಕ್ಕೆ ಋತುಗಳು ಬದಲಾಗುವಂತೆ ನಮ್ಮ ಪರಿಸ್ಥಿತಿಯನ್ನೂ ಬದಲಾಯಿಸುತ್ತಲೇ ಇರುತ್ತದೆ. ಹಲಬಾರಿ ಸುಖ, ಹಲಬಾರಿ ದುಃಖ, ಹಲಬಾರಿ ನಿರಾಸೆ, ಹಲಬಾರಿ ನಿರ್ಲಿಪ್ತತೆಯಂತ ಸ್ಥಿತಿಗಳಲ್ಲಿ ನಮ್ಮನ್ನು ನೂಕಿ, ಋತುಪರಿವರ್ತನೆಯಿಂದ ಭೂಮಿಯಲ್ಲಿ ಮತ್ತು ವಾತಾವರಣದಲ್ಲಿ ಆಗುವ ಬದಲಾವಣೆಯಂತೆ, ನಮ್ಮ ಸ್ಥಿತಿಯೂ ಬದಲಾಗುತ್ತಿರುತ್ತದೆ.
ದಾಸರು” ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಇದು ಸುಭಿಕ್ಷಕಾಲ” ಎಂದು ಈಗ್ಗೆ ಆರೇಳು ಶತಮಾನಗಳ ಹಿಂದೆಯೇ ಹಾಡಿದ್ದರು. ಈ ವಿಧಿ ಸಜ್ಜನರನ್ನು ” ಇವರೆಷ್ಟು ಗಟ್ಟಿ ಇದ್ದಾರೆಯೋ ನೋಡಿಯೇ ಬಿಡೋಣ” ಎನ್ನುವಂತೆ ಸದಾಕಾಲ ಸಂಕಷ್ಟಗಳ ಮಾಲೆಗಳನ್ನು ಹಾಕುತ್ತಾ ಪರೀಕ್ಷಿಸುತ್ತಿರುತ್ತದೆಯಂತೆ, ಇವರಿಗೆ ಇನ್ನಷ್ಟು ಗಟ್ಟಿಯಾಗುವುದಕ್ಕೆ ಪ್ರೇರಕವಾಗಿರುತ್ತದಂತೆ. ಹಾಗೆಯೇ ದುಷ್ಟರಿಗೆ ಮತ್ತಷ್ಟು ದುಷ್ಕಾರ್ಯಗಳನ್ನು ಮಾಡಲು ಸದಾಕಾಲ ಪ್ರೇರೇಪಿಸುತ್ತಾ, ಅವರನ್ನು ಪಾಪದ ಕೂಪಕ್ಕೆ ತಳ್ಳುತ್ತಾ, ಆ ದುಷ್ಟರಿಗೆ ” ಅಯ್ಯೋ ನಾವು ಮಾಡುವುದು ತಪ್ಪು ” ಎಂದು ಅರಿವಾಗಿಸಿ ಮತ್ತು ಅವರು ಬದಲಾಗುವ ತನಕ ಅವರಿಗೆ ಸಹಾಯಮಾಡುತ್ತಲೇ ಇರುತ್ತದಂತೆ. ಇದು ವಿಧಿಯ ಆಟ.
ಇವೆಲ್ಲ ಆಗುವುದು ನಾವು ಈ ಸಂಸಾರಕ್ಕೆ ಮತ್ತು ಈ ಜಗತ್ತಿಗೆ ಅಂಟಿಕೊಂಡಿರುವ ತನಕ ಅಥವಾ ನಾವು ಇಲ್ಲಿನ ಆಗುಹೋಗುಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ತನಕ. ಎಂದು ನಾವು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳುತ್ತೇವೋ, ಈ ಸಂಸಾರದಲ್ಲಿ ಇದ್ದೂ ಇಲ್ಲದಹಾಗೆ ಇದ್ದರೆ, ಈ ವಿಧಿಯ ಯಾವ ಆಟವೂ ನಮ್ಮ ಮುಂದೆ ನಡೆಯುವುದಿಲ್ಲ. ಬಾಳು” ತಾವರೆ ಎಲೆಯಮೇಲಿನ ನೀರ ಹನಿಯಂತಿರಬೇಕು” ಎಂದು ಭಗವದ್ಗೀತೆಯ ಉಲ್ಲೇಖ. ಹಾಗಿದ್ದರೆ ಈವಿಧಿಯ ಆಟವನ್ನು ಎದುರಿಸುವಲ್ಲಿ ನಮಗೆ ಜಯ ಸಿಗುತ್ತೆ.
ರಸಧಾರೆ – 160
ಆವ ಬೇಳೆಯದಾವ ನೀರಿನಲಿ ಬೇಯುವುದೋ I
ಆವ ಜೀವದ ಪಾಕವಾವ ತಾಪದಿನೋ II
ಆ ವಿವರವನ್ನು ಕಾಣದಾಕ್ಷೇಪಣೆಯದೇನು I
ದೈವಗುಟ್ಟದು ತಿಳಿಯೆ – ಮಂಕುತಿಮ್ಮ II
ಬೇಳೆಯದಾವ = ಬೇಳೆಯು + ಅದಾವ// ಕಾಣದಾಕ್ಷೇಪಣೆಯದೇನು = ಕಾಣದ + ಆಕ್ಷೇಪಣೆ+ ಅದೇನು
ಯಾವ ಬೇಳೆ ಯಾವ ನೀರಿನಲಿ ಬೇಯುವುದೋ ಗೊತ್ತಿಲ್ಲವಲ್ಲ ಹಾಗೆಯೇ ಪ್ರತಿಯೊಬ್ಬರೂ ಪಕ್ವವಾಗಲು ಯಾವ ಕರ್ಮಗಳನ್ನು ಅನುಭವಿಸಿ, ಸುಟ್ಟು, ಬೆಂದು, ತೋಯ್ದು, ನೋಡು ಎಷ್ಟುದಿನ ಅನುಭವಿಸಬೇಕೋ ಯಾರಿಗೂ ಅರ್ಥವಾಗದು. ಪ್ರತಿಯೊಬ್ಬರೂ ಈ ಅನುಭವದ ಯಾವುದೋ ಸ್ಥರದಲ್ಲಿರುತ್ತಾರೆ, ಹಾಗಾಗಿ ಮತ್ತೊಬ್ಬರನ್ನು ವಿಮರ್ಶೆ ಅಥವಾ ಆಕ್ಷೇಪಣೆ ಮಾಡಬೇಡ, ಏಕೆಂದರೆ ಇದು ದೈವ ಅಥವಾ ವಿಧಿಯ ರಹಸ್ಯ, ಇದನ್ನು ಅರಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಾವು ನಮ್ಮ ಸುತ್ತ ಮುತ್ತ ನೋಡಿದಾಗ, ಒಬ್ಬೊಬ್ಬರದು ಒಂದೊಂದು ಸ್ವಭಾವ ಮತ್ತು ಪ್ರತಿಯೊಬ್ಬರಿಗೂ ಅವರವರದೇ ಸಮಸ್ಯೆ ಮತ್ತು ಆ ಸಮಸ್ಯೆಗಳಿಗೆ ಅವರವರದೇ ಕಾರಣಗಳು. ಯಾರಿಗೋ ಏನೋ ಆದ್ರೆ ನಾವು ತಕ್ಷಣ ಅದನ್ನು ವಿಶ್ಲೇಷಣೆ ಮಾಡುತ್ತಾ ನಮ್ಮ ಪೂರ್ವಾಗ್ರಹಪೀಡಿತ ಅಥವಾ ವಿವೇಚನಾರಹಿತವಾದ ತೀರ್ಮಾನವನ್ನು ಮಾಡಿ ಬಿಡುತ್ತೇವೆ. ಆದರೆ ಒಬ್ಬ ವ್ಯಕ್ತಿ ಯಾವುದೋ ಒಂದು ಸ್ಥಿತಿಯಲ್ಲಿದ್ದಾನೆಯೆಂದು ಅವನು” ಅದೇ” ಎಂದಾಗಲೀ, ಅವನು ಸದಾಕಾಲ “ಹಾಗೆಯೇ” ಎಂದಾಗಲೀ ತೀರ್ಮಾನಿಸಲಾಗುವುದಿಲ್ಲ ಮತ್ತು ಹಾಗೆ ತೀರ್ಮಾನಿಸುವುದು ತಪ್ಪು.
ಅವರವರ ಪೂರ್ವ ಕರ್ಮಗಳಿಗನುಸಾರವಾಗಿ ಮತ್ತು ಅವರ ಇಂದಿನ ಸ್ವಭಾವ ಮತ್ತು ಕೆಲಸಗಳಿಗನುಸಾರವಾಗಿ ಕೆಲಕೆಲವರು ಕೆಲಕೆಲ ಅನುಭವಗಳನ್ನು ಪಡೆಯುತ್ತಿರುತ್ತಾರೆ. ಇದಕ್ಕೆಲ್ಲ ಆ ವಿಧಿಯ ಕೈವಾಡ. ಇದು ದೇವ ರಹಸ್ಯ. ಇದು ಅರ್ಥವಾಗುವುದಿಲ್ಲ ಮತ್ತು ಇದನ್ನು ಚೇಧಿಸುವ ಪ್ರಯತ್ನವೂ ವ್ಯರ್ಥ. ಪ್ರತಿಜೀವಿಯೂ ಆ ವಿಧಿಯೊಡ್ಡುವ ಹಲವಾರು ಕಷ್ಟ ನಷ್ಟ ನೋವು ಸಂಕಟಗಳ ಒತ್ತಡದ ಅನುಭವಗಳಿಂದ ಪ್ರತಿನಿತ್ಯ, ಜನ್ಮ ಜನ್ಮಾಂತರದಿಂದಲೂ ಪಕ್ವವಾಗುತ್ತಲೇ ಇರುತ್ತಾನೆ. ಇಂದು ಅವನಿರುವುದು ಒಂದು ಹಂತ. ಅದಕ್ಕೆ ಕಾರಣಗಳು ಸೂಕ್ಷ್ಮಾತಿ ಸೂಕ್ಷ್ಮ. ಇದು ಎಲ್ಲರ ಪರಿಸ್ಥಿತಿ. ಹಾಗಾಗಿ ಒಬ್ಬರು ಇನ್ನೊಬ್ಬರನ್ನು ಆಕ್ಷೇಪಣೆ ಮಾಡುವುದಾಗಲೀ ಅಥವಾ ವಿಶ್ಲೇಷಣೆ ಮಾಡುವುದಾಗಲೀ ಮಾಡಬಾರದು. ಅದು ಅಪರಾಧ. ನಾವೂ ಸಹ ಪಕ್ವವಾಗುವ ಯಾವುದೋ ಒಂದು ಸ್ಥರದಲ್ಲಿದ್ದೇವೆ. ಎಂದು ನಾವೋ ಸಂಪೂರ್ಣ ಪಕ್ವವಾಗುತ್ತೇವೋ ಅಂದು ನಾವು ಈ ಸುಖ ದುಃಖದ ಸಂಕೋಲೆಗಳಿಂದ ಮುಕ್ತರಾಗುತ್ತೇವೆ ಎನ್ನುವುದು ಹಿರಿಯರ ಆದೇಶ. ನಮ್ಮನ್ನು ಪಕ್ವವಾಗಿಸುವ ಆ ” ವಿಧಿ” ಗೆ ಮತ್ತು ಆ ವಿಧಿಯ ಮಾಲೀಕ ಆ ಪರಮಾತ್ಮನಿಗೆ ಶರಣಾಗಿ ಬರುವುದನ್ನೆಲ್ಲ ಅನುಭವಿಸಿ ಶೀಘ್ರವಾಗಿ ” ಪಕ್ವವಾಗುವ ” ಪ್ರಯತ್ನವನ್ನು ಮಾಡೋಣವೆ?
ಮುಂದಿನ ಭಾಗಕ್ಕೆ ಹೋಗಲು ಇಲ್ಲಿ ಕ್ಲಿಕ್‍ಮಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ