ಪುಟಗಳು

07 ಮಾರ್ಚ್ 2022

ವಡ್ಡಾರಾಧನೆ-ಕಾರ್ತಿಕ ಋಷಿಯ ಕಥೆ | Vaddaradhane-Karthiak-rishiya-kathe

 ಅಗ್ನಿರಾಜನ ಮಗನಪ್ಪ ಕಾರ್ತಿಕ ಋಷಿಯ ಕಥೆಯಂ ಪೇೞ್ವೆಂ

ಗಾಹೆ || ರೋಹೇದಯಮ್ಮಿ ಸತ್ತೀಎ ಹದೋ ಕೊಂಚೇಣ ಅಗ್ಗಿದಯಿದೋ ವಿ
ತವ್ವೇದಣಮಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

    *ರೋಹೇದಯಮ್ಮಿ – ರೋಹೇದಕಮೆಂಬ ಪೊೞಲೊಳ್, ಸತ್ತೀವಿಹದೋ – ಶಕ್ತಿಯೆಂಬಾ ಯುಧದಿಂದಿಱಯೆಪಟ್ಟೊನಾಗಿ, ಕೊಂಚೇಣ – ಕ್ರೌಂಚನೆಂಬರಸಿನಿಂದಂ, ಅಗ್ಗಿದಯಿದೋ ವಿ – ಅಗ್ನಿರಾಜನ ಕಾದಲಿಸೆಪಡುವ ಮಗಂ, ತವ್ವೇದಣಂ – ಆ ವೇದನೆಯಂ, ಆಯಾಸಿಯ – ಲೇಸಾಗಿ ಸೈರಿಸಿ, ಪಡಿವಣ್ಣೋ – ಪೊರ್ದಿರ್ದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನಚಾರಿತ್ರಂಗಳಾರಾಧನೆಯಂ*

  ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಲಾಳವಿಷಯದೊಳ್ ಕೃತ್ತಿಕಾಪುರಮೆಂಬುದು ಪೊೞಲದನಾಳ್ವೊನಗ್ನಿರಾಜನೆಂಬರಸನಾತನ ಮಹಾದೇವಿ ವೀರಮತಿಯೆಂಬೊಳಾಯಿರ್ವ್ವರ್ಗ್ಗಂ ಮಕ್ಕಳ್ ಬಂಧುಮತಿ ಶಿವಸೇನೆ ಶ್ರೀಮತಿ ಸ್ವಯಂಪ್ರಭೆ ಲಕ್ಷ್ಮೀಮತಿ ಕೃತ್ತಿಕೆಯೆಂದಿಂತಱುವರ್ ಪೆಣ್ಣೂಸುಗಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಂ ಫಾಲ್ಗುಣಮಾಸದ ನಂದೀಶ್ವರದಂದಱುವರುಂ ಕೊಡಗೂಸುಗಳುಪವಾಸಂಗೆಯ್ದು ಬಸದಿಗರ್ಚನೆಯಂ ಕೊಂಡು ಪೋಗಿ ದೇವರನರ್ಚಿಸಿ ನಂದೀಶ್ವರಂಗೆಯ್ದು ಬಂದಿಸಿ ರಿಸಿಯರ್ಕಳುಮಂ ಗುರುಪರಿವಿಡಿಯಿಂ ವಂದಿಸಿ ವ್ರತಂಗಳನೇಱಸಿ ಕೊಂಡು ಸಿದ್ದಶೇಷೆಯಂ ಕೊಂಡು ಬಂದು ತಾಯ್ಗಂ ತಂದೆಗಂ ಕೊಟ್ಟು ಪೋಪಾಗಳರಸಂ

    ಅಗ್ನಿರಾಜನ ಮಗನಾದ ಕಾರ್ತಿಕ ಋಷಿಯ ಕಥೆಯನ್ನು ಹೇಳುವೆನು : (ರೋಹೇದಕವೆಂಬ (ಕೋಗಳಿ ಎಂಬ) ಪಟ್ಟಣದಲ್ಲಿ ಅಗ್ನಿರಾಜನ ಪ್ರೀತಿಯ ಮಗನು ಕ್ರೌಂಚನೆಂಬ ರಾಜನಿಂದ ಶಕ್ತಿಯೆಂಬ ಆಯುಧದಿಂದ ತಿವಿಯಲ್ಪಟ್ಟವನಾಗಿ ಆ ವೇದನೆಯನ್ನು ಲೇಸಾಗಿ ಸಹಿಸಿಕೊಂಡು ಶ್ರೇಷ್ಠನಾದ ದರ್ಶನ – ಜ್ಞಾನ – ಚಾರಿತ್ರಗಳ ಆರಾಧನೆಯನ್ನು ನಡೆಸಿದನು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿರುವ ಲಾಳದೇಶದಲ್ಲಿ ಕೃತ್ತಿಕಾಪುರ ಎಂಬ ಪಟ್ಟಣವಿದೆ. ಅದನ್ನು ಅಗ್ನಿರಾಜನೆಂಬ ಅರಸನು ಆಳುತ್ತಿದ್ದನು. ಅವನ ರಾಣಿ ವೀರಮತಿಯೆಂಬುವಳು. ಆ ದಂಪತಿಗಳಿಗೆ ಬಂಧುಮತಿ, ಶಿವಸೇನೆ, ಶ್ರೀಮತಿ, ಸ್ವಯಂಪ್ರಭೆ, ಲಕ್ಷ್ಮೀಮತಿ, ಕೃತ್ತಿಕೆ – ಎಂದು ಈ ರೀತಿಯಾಗಿ ಆರುಮಂದಿ ಹೆಣ್ಣುಮಕ್ಕಳಿದ್ದರು.ಅಂತುಅವರು ತಮ್ಮ ಪ್ರೀತಿಯ ವಿಷಯದ ಮೆಚ್ಚುಗೆಯ ಸುಖಗಳನ್ನು ಅನುಭವಿಸುತ್ತಿದ್ದರು. ಹೀಗೆಯೇ ಕಾಲ ಕಳೆಯಿತು.ಅನಂತರ ಒಂದು ದಿವಸ ಆ ಆರು ಮಂದಿ ಕನ್ಯೆಯರೂ ಉಪವಾಸವನ್ನು ಆಚರಿಸಿದರು. ಜಿನಾಲಯಕ್ಕೆ ಪೂಜಾವಸ್ತುಗಳನ್ನು ತೆಗೆದುಕೊಂಡು ಹೋಗಿ ದೇವರನ್ನು ಪೂಜಿಸಿ ನಂದೀಶ್ವರದ ಹಬ್ಬವನ್ನು ಮಾಡಿ ವಂದಿಸಿದರು. ಋಷಿಗಳನ್ನು ಗುರುಗಳ ತಾರತಮ್ಯಯಕ್ಕೆ ಅನುಗುಣವಾದ ಅನುಕ್ರಮದಿಂದ ವಂದಿಸಿ, ವ್ರತಗಳನ್ನು ಸ್ವೀಕರಿಸಿ ಪೂಜೆ ಮಾಡಿದ ಹೂ ಮುಂತಾದ ಪ್ರಸಾದವನ್ನು ತೆಗೆದುಕೊಂಡು ಬಂದು ತಾಯಿತಂದೆಯರಿಗೆ ಕೊಟ್ಟು ಹೋಗುವಾಗ ರಾಜನು

    ಕಿಱಯ ಮಗಳಪ್ಪ ಕೃತ್ತಿಕೆಯ ರೂಪುಂ ತೇಜಮುಂ ಗಾಡಿಯುಮಂ ಕಂಡಾಕೆಗಾಟಿಸಿ ಸಾಮಂತ ಮಹಾಸಾಮಂತರ್ಕ್ಕಳ್ಗಂ ಪರಿವಾರಕ್ಕಂ ಮಂತ್ರಿವರ್ಗಕ್ಕಂ ವೀರಮತಿ ಮಹಾದೇವಿಗಮೆಲ್ಲ ಸಮಯಿಗಳ್ಗಂ ಬೞಯಟ್ಟಿ ಬರಿಸಿಯರಸನಿಂತೆಂದನೆನ್ನಾಳ್ವ ಮಂಡಳಂಗಳೊಳ್ ಪುಟ್ಟಿದ ಲೀಸಪ್ಪ ವಸ್ತುವಾರ್ಗಕ್ಕುಮೆಂದು ಬೇಱೆವೇಱೆಯರಸನನಿಬರುಮಂ ಬೆಸಗೊಂಡೊಡರ್ವರ್ಗ್ಗಳೆಲ್ಲಮಿಂತೆಂದರೊಳ್ಳಿತಪ್ಪಾನೆಯುಂ ಕುದುರೆಯುಂ ಮುತ್ತುಂ ಮಾಣಿದಮುಂ ಸ್ತ್ರೀರತ್ನಮುಂ ಮೊದಲಾಗೊಳ್ಳಿತಪ್ಪಗ್ಗಳ ವಸ್ತುವೆಲ್ಲಂ ಪೃಥ್ವಿಯನಾಳ್ವೊಂಗಕ್ಕುಮೆಂದು ಪೇೞ್ದೊಡರಸಂ ಋಷಿಯರುಮಂ ಬೆಸಗೊಂಡೊಡೆ ಋಷಿಯರೆಂದರಾವ ವಸ್ತು ಪೇೞಂ ಪೇೞ್ದೊಡೆ ತಕ್ಕುದು ತಗದುದುಮನಱಯಲಕ್ಕುಮೆಂದೊಡರಸನಿಂತೆಂದನಿವರೆಲ್ಲರ ಪೇೞ್ವಂತು ಪೇೞ್ವರಲ್ಲರೊಡಂಬಡುವರಲ್ಲರ್ ಬಹುಪ್ರಳಾಪಿಗಳಿವರಂ ಪೊೞಲಿಂದಟ್ಟಿ ಕಳೆಯಿಮೆಂದಟ್ಟಿ ಕಳೆದುೞದರೆಲ್ಲರುಮಂ ಬೆಸಗೊಂಡೊಡನಬರುಮೊಡಂಬಟ್ಟೊಳ್ಳಿತ್ತಪ್ಪ ವಸ್ತು ನಿನಗಕ್ಕುಮೆಂದೊಡೆ ಅರಸನೆನಗಕ್ಕುಂ ವಲಮೆಂದು ಮೂಱು ಸೂೞ್ವರಂ ಸಾರಿ ನುಡಿದೊಡಂಬಡಿಸಿ ವೀರಮತಿ ಮಹಾದೇವಿಯಂ ಬೇಡಿ ಕೃತ್ತಿಕೆಯಪ್ಪ ಕಿಱ*ಯ ಮಗಳಂ ಮದುವೆನಿಂದೊನಾ ದಿವಸಮೆ ವೀರಮತಿ ಮಹಾದೇವಿಯುಂ ಬ್ರಹ್ಮಚರ್ಮವ್ರತಮಂ ಕೈಕೊಂಡು ನೆಗೞ್ದಳ್ ಮತ್ತೆ ಕೃತ್ತಿಕೆಗೆ ನವಮಾಸಂ ಗರ್ಭಮಾದಂದು ಸರವಣಮೆಂಬುದ್ಯಾನವನದೊಳಗಣ ಸರವಣಮೆಂಬ ಬಾವಿಯೊಳ್

    ಕಿರಿಮಗಳಾದ ಕೃತ್ತಿಕೆಯ ರೂಪ, ಕಾಂತಿ, ಚೆಲುವುಗಳನ್ನು ಕಂಡು ಆಕೆಯ ಮೇಲೆ ಪ್ರೀತಿ ಪಟ್ಟನು. ಸಾಮಂತರಿಗೂ ಮಹಾಸಾಮಂತರಿಗೂ ಪರಿವಾರದವರಿಗೂ ಮಂತ್ರಿಗಳ ಸಮೂಹಕ್ಕೂ ವೀರಮತಿ ಮಹಾರಾಣಿಗೂ ಎಲ್ಲ ಮತ ಧರ್ಮದವರಿಗೂ ದೂತರನ್ನು ಕಳುಹಿಸಿ ಅವರನ್ನೆಲ್ಲ ಬರಮಾಡಿ, ರಾಜನು ಹೀಗೆ ಹೇಳಿದನು – “ನಾನು ರಾಜ್ಯಭಾರ ಮಾಡತಕ್ಕ ಪ್ರದೇಶಗಳಲ್ಲಿ ಹುಟ್ಟಿ ಬಂದ ಶ್ರೇಷ್ಠವಾದ ವಸ್ತು ಯಾರಿಗೆ ಸೇರಬೇಕಾದುದು?* ಎಂದು ಬೇರೆ ಬೇರೆಯಾಗಿ ರಾಜನು ಅವರೆಲ್ಲರನ್ನೂ ಕೇಳಿದನು. ಆಗ ಅವರೆಲ್ಲ ಹೀಗೆ ಊತ್ತರ ಕೊಟ್ಟರು – “ಒಳ್ಳೆಯದಾದ ಆನೆಯೂ ಕುದುರೆಯೂ ಮುತ್ತೂ ಮಾಣಿಕ್ಯವೂ ಸ್ತ್ರೀರತ್ನ ಮುಂತಾದ ಒಳ್ಳೆಯದಾದ ಶ್ರೇಷ್ಠ ವಸ್ತುಗಳೆಲ್ಲವೂ ಭೂಮಿಯನ್ನು ಆಳತಕ್ಕವನಿಗೆ ಸೇರಬೇಕಾದುವು* ಎಂದು ಹೇಳಿದಾಗ ರಾಜನು ಋಷಿಗಳನ್ನು ಕೇಳಿದನು. ಆಗ ಅವರು – “ಯಾವ ವಸ್ತುವೆಂಬುದನ್ನು ಹೇಳಿದರೆ ಯೋಗ್ಯವಾದುದು ಯಾವುದು, ಯೋಗ್ಯವಲ್ಲದುದು ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು* ಎಂದು ಹೇಳಿದರು. ಆಗ ರಾಜನು – “ ಈ ಋಷಿಗಳು ಇವರೆಲ್ಲ ಹೇಳುವಂತೆ ಹೇಳುವವರಲ್ಲ, ಒಪ್ಪುವವರೂ ಅಲ್ಲ. ಬಹಳ ಮಾತಾಡುವವರು ! ಇವರನ್ನು ಪಟ್ಟಣದಿಂದ ಓಡಿಸಿ ಬಿಡಿ* ಎಂದು ಆಜ್ಞಾಪಿಸಿ ಓಡಿಸಿದನು. ಆ ಮೇಲೆ ಉಳಿದವರನ್ನೆಲ್ಲ ಕೇಳಲು ಅವರೆಲ್ಲರೂ ಒಪ್ಪಿದವರಾಗಿ “ಒಳ್ಳೆಯದಾದ ವಸ್ತು ನಿನಗೇ ಆಗಬೇಕಾದುದು ನಿಶ್ಚಯ*‘ ಎಂದು ಮೂರು ಬಾರಿಯವರೆಗೆ ಘೋಷಿಸಿ ಹೇಳಿ ಒಪ್ಪಿಗೆ ಪಡೆದು, ವೀರಮತಿ ಮಹಾರಾಣಿಯನ್ನೂ ಕೇಳಿಕೊಂಡು ಕೃತ್ತಿಕೆ ಎಂಬ ಹೆಸರುಳ್ಳವಳಾದ ಕಿರಿಯ ಮಗಳನ್ನು ಮದುವೆಮಾಡಿಕೊಂಡನು. ಅದೇ ದಿವಸ ವೀರಮತಿ ಮಹಾರಾಣಿ ಬ್ರಹ್ಮಚರ್ಯವ್ರತವನ್ನು ಸ್ವೀಕರಿಸಿ ಆಚರಿಸಿದಳು. ಆ ಮೇಲೆ ಕೃತ್ತಿಕೆಗೆ ಒಂಬತ್ತು ತಿಂಗಳ ಗರ್ಭವಾಗಲು “ಸರವಣ ಎಂಬ ಹೂದೋಟದ ಒಳಗಿರುವ ಸರವಣವೆಂಬ ಬಾವಿಯಲ್ಲಿ ತನಗೆ ಜಲಕೇಳಿಯಾಡಲು ಬಯಕೆಯಾಗಿದೆ*

     ಜಲಕ್ರೀಡೆಯಾಡಲ್ ಬಯಕೆ ಯಾದುದೆಂದರಸಂಗಱಪಿದೊಡರಸನನುಮತದಿಂ ಜಲಕ್ರೀಡೆಯಾಡಿ ಮಗನಂ ಪೆತ್ತೊಡಾತಂಗೆ ಸ್ವಾಮಿ ಕಾರ್ತಿಕನೆಂದು ಪೆಸರನಿಟ್ಟರ್ ಮತ್ತಾತನಿಂ ಬೞಯಂ ಪೆಣ್ಗೂಸುಮಂ ಪೆತ್ತೊಡೆ ಆಕೆಗೆ ವೀರಶ್ರೀಯೆಂದು ಪೆಸರನಿಟ್ಟು ಬಳೆದೊಡಾಕೆಯಂ ಕೋಗಳಿಯನಾಳ್ವ ಕ್ರೌಂಚನೆಂಬರಸಂಗೆ ಕೊಟ್ಟರಿಂತು ಕಾಲ ಸಲೆ ಮತ್ತಿತ್ತ ನಮಿ ಮೊದಲಾಗೊಡೆಯ ತಮ್ಮಂದಿರಪ್ಪ ಕುಮಾರರೊಡನೆ ಸ್ವಾಮಿ ಕಾರ್ತಿಕಂ ಬಳೆದು ಪದಿನಾರು ವರುಷದ ಪ್ರಾಯಮಾದಂದು ಮತ್ತೊಂದು ದಿವಸಮನಿಬರುಂ ಕುಮಾರರ್ಕ್ಕಳುದ್ಯಾನವನಕ್ಕೆ ವನಕ್ರೀಡೆಯಾಡಲ್ ಪೋಗಿಯಾಡುತ್ತಿರ್ಪನ್ನೆಗಮೆಲ್ಲಾ ಕುಮಾರರ್ಕ್ಕಳ್ಗಂ ತಾಯ್ತಂದೆಯಜ್ಜರ್ಕ್ಕಳ ಮನೆಯಿಂದಂ ಪೂಸಲುಮುಡಲುಂ ತುಡಲುಂ ಪೂವುಂ ತಂಬುಲಮುಂ ತಿಂಬಡಂಗಳುಂ ಬಂದುವು ಸ್ವಾಮಿ ಕಾರ್ತಿಕಂಗಾರುಮಟ್ಟದಿರ್ದೊಡೆ ಮನದೊಳ್ ಬೞದೊನಾಗಿ ವನಕ್ರೀಡೆಯನಾಡಿ ಮನೆಗೆ ವಂದು ತಾಯನಿಂತೆಂದನಬ್ಬಾ ನಿಮ್ಮ ತಂದೆಯಪ್ಪೆಮ್ಮಜ್ಜನೊಳನೊ ಇಲ್ಲೆಯೊ ಎಂದು ಬೆಸಗೊಂಡೊಡೆ ತಾಯ್ ಮನದೊಳ್ ಬೞದೊಳಾಗಿ ಏನಂ ಪೇೞ್ವೆಂ ಮಗನೆ ನಿನಗೆ ತಂದೆಯಪ್ಪಾತನೆನಗಂ ತಂದೆಯೆಂದು ಪೇೞ್ದೊಡದಂ ಕೇಳ್ದು ಅದುವೆ ವೈರಾಗ್ಯಕಾರಣಮಾಗಿ ಶ್ರೀವರರೆಂಬಾಚಾರರ್ಯ ಪಕ್ಕದೆ ತಪಂಬಟ್ಟಾಗಮಂಗಳೆಲ್ಲಮಂ ಕಲ್ತು ಗುರುಗಳಂ ಬೆಸಗೊಂಡವರನು ಮತದಿಂದೇಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ

    ಎಂದು ಅವಳು ರಾಜನಿಗೆ ತಿಳಿಸಿದಳು. ರಾಜನು ಒಪ್ಪಿಗೆಯಂತೆ ಕೃತ್ತಿಕೆ ನೀರಿನಲ್ಲಿ ಆಡಿ ಮಗನನ್ನು ಹೆತ್ತಳು. ಅವನಿಗೆ ಕಾರ್ತಿಕನೆಂದು ಹೆಸರನ್ನಿಟ್ಟರು. ಅವನ ನಂತರ ಕೃತ್ತಿಕೆ ಹೆಣ್ಣುಮಗುವನ್ನು ಹೆತ್ತಳು. ಆ ಮಗುವಿಗೆ ವೀರಶ್ರೀ ಎಂದು ಹೆಸರಿಟ್ಟರು. ಆಕೆ ದೊಡ್ಡವಳಾಗಲು ಅವಳನ್ನು ಕೋಗಳಿ ಎಂಬ ಐನೂರು ಗ್ರಾಮಗಳುಳ್ಳ ಪಟ್ಟಣವನ್ನು ಆಳತಕ್ಕ ಕ್ರೌಂಚನೆಂಬ ರಾಜನಿಗೆ ಕೊಟ್ಟರು. ಹೀಗೆಯೇ ಕಾಲ ಕಳೆಯಿತು. ಇತ್ತ ಕಾರ್ತಿಕನು ನಮಿ ಮುಂತಾಗಿರುವ ತನಗೆ ತಮ್ಮಂದಿರಾದ ಕುಮಾರರೊಂದಿಗೆ ಬಳೆಯುತ್ತ ಹದಿನಾರು ವರ್ಷ ಪ್ರಾಯದವನಾದನು. ಆ ಮೇಲೆ ಒಂದು ದಿವಸ ಆ ಎಲ್ಲಾ ಕುಮಾರರೂ ಉದ್ಯಾನದ ವನಕ್ಕೆ ವನಕೇಳಿಯನ್ನು ಆಡುವುದಕ್ಕಾಗಿ ಹೋಗಿ ಆಡುತ್ತಿದ್ದರು. ಆಗ ಎಲ್ಲಾ ಕುಮಾರರಿಗೂ ಅವರ ತಾಯಿ ತಂದೆಗಳ ಮತ್ತು ಅಜ್ಜಂದಿರ ಮನೆಯಿಂದ ಮೈಗೆ ಹಚ್ಚಲು, ಉಡಲು, ತೊಡಲೂ ಪುಷ್ಪ ತಾಂಬೂಲ ಖಾದ್ಯವಸ್ತುಗಳು ಬಂದವು. ಕಾರ್ತಿಕನಿಗೆ ಮಾತ್ರ ಯಾರೂ ಕಳುಹಿಸಿರಲಿಲ್ಲ. ಇದರಿಂದ ಅವನು ಮನಸ್ಸಿನಲ್ಲಿ ಸತ್ತವನಾದನು (ಸಾಯುವಷ್ಟು ದುಃಖಿತನಾದನು). ವನಕೇಳಿಯನ್ನಾಡಿ ಮನೆಗೆ ಬಂದನು. ತನ್ನತಾಯಿಯೊಡನೆ “ಅಮ್ಮಾ ನಿಮ್ಮ ತಂದೆಯಾಗಿರುವ ನನ್ನ ಅಜ್ಜನು ಇರುವನೋ? ಇಲ್ಲವೋ?* ಎಂದು ಕೇಳಿದನು. ಆಗ ತಾಯಿ ತನ್ನ ಮನಸ್ಸಿನಲ್ಲಿ ಸತ್ತವಳಾದಂತೆ ದುಃಖಿತಳಾಗಿ – “ಮಗನೇ, ಏನು ಹೇಳಲಿ! ನಿನಗೆ ತಂದೆಯಾಗಿರುವವನು ನನಗೂ ತಂದೆಯಾಗಬೇಕು* ಎಂದು ಹೇಳಿದಳು. ಅದನ್ನು ಕೇಳಿದ ಕಾರ್ತಿಕನಿಗೆ ಅದೇ ಸಂಗತಿ ವೈರಾಗ್ಯಕ್ಕೆ ಕಾರಣವಾಯಿತು. ಅವನು ಶ್ರೀವರರೆಂಬ ಅಚಾರ್ಯರ ಬಳಿಗೆ ಹೋಗಿ, ಅವರಿಂದ ತಪ್ಪಸ್ಸನ್ನು ಕೈಗೊಂಡು ಶಾಸ್ತ್ರಗಳೆಲ್ಲವನ್ನೂ ಕಲಿತುಕೊಂಡನು. ಗುರುಗಳಿಂದ ಅನುಮತಿಯನ್ನು ಪಡೆದುಕೊಂಡು ಏಕವಿಹಾರಿ (ಒಬ್ಬನೇ ಸಂಚಾರ ಮಾಡುವ ಋಷಿ)ಯಾಗಿ, ಈ ಕಾರ್ತಿಕ ಋಷಿಗಳು ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಗಳಲ್ಲಿ ಸಂಚರಿಸುತ್ತ ತೆಂಕನಾಡಿನ ಕಿಷ್ಕಿಂಧ

    ವಿಹಾರಿಸುತ್ತಂ ತೆಂಕನಾಡ ಕಿಷ್ಕಿಂಧಮೆಂಬ ಪರ್ವತಮನೆಯ್ದಿಯದಱ ಮೇಗೆ ರಾತ್ರಿ ಪ್ರತಿಮಾಯೋಗಂ ಗೆಯ್ದೊರಾ ಇರುಳ್ ಪಿರಿದೊಂದು ಮೞೆ ಕೊಂಡು ಮೆಯ್ಯ ಮಳಮೆಲ್ಲಮಂ ಕರ್ಚಿ ಕಳೆದು ಪಾಷಾಣಮೆಂಬ ಮಡುಮಂ ನೀರ್ ಪೊಕ್ಕಾಗಳಾ ಮಡುವಿನ ನೀರ್ ಸರ್ವೌಷಯಾದೊಡಂತಲ್ಲಿಯ ನೀರಂ ಮಿಂದವರ್ಗೆಲ್ಲಾ ವ್ಯಾಯುಂ ಕಿಡುವುವಾದುವಲ್ಲಿಂ ತೊಡಗಿ ದಕ್ಷಿಣಾಪಥದೊಳದು ತೀರ್ಥಮಾಯ್ತು ಮತ್ತೆ ಸ್ವಾಮಿ ಕಾರ್ತಿಕಋಷಿಯುಂ ವಿಹಾರಿಸುತ್ತಂ ಬಂದು ಕೋಗಳಿಯನೆಯ್ದಿಯಲ್ಲಿಯ ಬಸದಿಯೊಳ್ ಪಂಥಾತಿಚಾರನಿಯಮಂಗೆಯ್ದು ದೇವರಂ ಬಂದಿಸಿ ಮಧ್ಯಾಹ್ನದಾಗಳ್ ಚರಿಗೆವೊಕ್ಕು ಚಾತುರ್ವರ್ಣ್ಯದ ಮನೆಗಳುಮಂ ತೊೞಲುತ್ತಂ ಬಂದರಮನೆಯಂ ಪೊಕ್ಕಾಗಳಾ ಪ್ರಸ್ತಾವದೊಳ್ ಕರುಮಾಡದ ಮೇಗಣ ನೆಲೆಯೊಳಿರ್ದು ವೀರಶ್ರೀ ಮಹಾದೇವಿಯರಸನ ತಲೆಯಂ ತನ್ನ ತೊಡೆಯ ಮೇಲಿಟ್ಟುಗುರಿಸುತ್ತಿರ್ದ್ದಾಕೆ ಭಟಾರರ ಬರುವಂ ಕಂಡಱದೆಮ್ಮಣ್ಣಂಗಳಪ್ಪ ಭಟಾರರ್ ಚರಿಗೆವಂದಪ್ಪೊರೆಂದು ಮಱಲುಂದಿದರಸನ ತಲೆಯಂ ಕೆಱಗೊಂದಾಧಾರಮನಿಟ್ಟು ನಿಱಸಲೆಂದು ಕರುಮಾಡದಿಂದಿಳಿದು ಪರಿತರ್ಪನ್ನೆಗಂ ಭಟಾರರ್ ವಂದರಮನೆಯಂಗಣಮಂ ಪೊಕ್ಕು ಮಗುೞ್ದು ಬಾಗಿಲ್ಮಾಡ ಮನೆಯ್ದಿದಾಗಳರಸಿ ಪೆಱಗಣಿಂ ಪರಿತಂದು ಬಂದು ಮುಂದೆ ನಿಂದು ಕೈಗಳಂ ಮುಗಿದೆಱಗಿ ನಿಲ್ಕೆ

    ಪರ್ವತಕ್ಕೆ ಬಂದರು. ಆ ಪರ್ವತದ ತುದಿಯಲ್ಲಿ ರಾತ್ರಿಯಲ್ಲಿ ಪ್ರತಿಮಾಯೋಗವನ್ನು ಆಚರಿಸಿದರು. ಆ ರಾತ್ರಿಯಲ್ಲಿ ದೊಡ್ಡದೊಂದು ಮಳೆ ಬಂದು ಕಾರ್ತಿಕಋಷಿಯ ಮೈ ಮೇಲಿನ ಕೆಸರನ್ನೆಲ್ಲ ತೊಳೆದುಕೊಂಡು ಹರಿದು, ಆ ನೀರು ಪಾಷಾಣವೆಂಬ ಮಡುವನ್ನು ಹೊಕ್ಕಿತು. ಆಗ ಆ ಮಡುವಿನ ನೀರು ಸಕಲ ರೋಗಗಳಿಗೂ ಔಷಯಾಗಿ ಪರಿಣಮಿಸಿತು. ಅಂತೂ ಅಲ್ಲಿಯ ನೀರಿನಲ್ಲಿ ಸ್ನಾನಮಾಡಿದವರಿಗೆ ಎಲ್ಲ ತರದ ರೋಗಗಳೂ ನಾಶವಾಗುವಂತಾದವು. ಆಂದಿನಿಂದ ಆ ಮಡು ದಕ್ಷಿಣದೇಶದಲ್ಲಿ ತೀರ್ಥವಾಯಿತು. ಆ ಮೇಲೆ ಸ್ವಾಮಿ ಕಾರ್ತಿಕ ಋಷಿಗಳು ಸಂಚಾರಮಾಡುತ್ತ ಬಂದು ಕೋಗಳಿಗೆ ಹೋದರು. ಅಲ್ಲಿಯ ಜಿನಾಲಯದಲ್ಲಿ ಪಂಥಾತಿಚಾರ ನಿಯಮವನ್ನು (ಚರಿಗೆಯಿಂದ ಹಿಂದಿರುಗಿ ದಾರಿಯಲ್ಲಾಗಿದ್ದ ಅತಿಚಾರಗಳ ಶುದ್ದಿಗಾಗಿ ಆಚರಿಸುವ ನಿಯಮವನ್ನು) ಮಾಡಿ ದೇವರನ್ನು ವಂದಿಸಿ ಮಧ್ನಾಹ್ನ ವೇಳೆ ಭಿಕ್ಷೆಗೆ ಹೋಗಿ, ನಾಲ್ಕೂ ವರ್ಣದ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರ) ಮನೆಗಳಿಗೆ ಸುತ್ತುತ್ತ ಬಂದು, ಅರಮನೆಯನ್ನು ಹೊಕ್ಕರು. ಆ ಸಂದರ್ಭದಲ್ಲಿ ಅರಮನೆಯ ಮೇಲುಪ್ಪರಿಗೆಯಲ್ಲಿದ್ದುಕೊಂಡು ವೀರಶ್ರೀ ಮಹಾರಾಣಿ ರಾಜನ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಉಗುರಿನಿಂದ ಕೆರೆಯುತ್ತಿದ್ದಳು. ಅವರು ಕಾರ್ತಿಕ ಋಷಿಗಳು ಬಂದುದನ್ನು ಕಂಡು, ತಿಳಿದುಕೊಂಡು, “ನನ್ನ ಅಣ್ಣನವರಾದ ಋಷಿಗಳು ಭಿಕ್ಷೆಗೆ ಬರುತ್ತಿದ್ದಾರೆ*‘ ಎಂದುಕೊಂಡು, ಮೈಮರೆತು ನಿದ್ದೆಮಾಡುತ್ತಿರುವ ರಾಜನ ತಲೆಯ ಕೆಳಗೆ ಒಂದು ಆಧಾರವನ್ನಿಟ್ಟು, ಋಷಿಗಳನ್ನು ಭಿಕ್ಷಕ್ಕೆ ನಿಲ್ಲಿಸಬೇಕೆಂದು ಉಪ್ಪರಿಗೆಯಿಂದ ಇಳಿದು ಬರುತ್ತಿದ್ದಳು ಅಷ್ಟರಲ್ಲಿ ಋಷಿಗಳು ಬಂದು ಅರಮನೆಯ ಅಂಗಳವನ್ನು ಹೊಕ್ಕು, ಹಿಂದಿರುಗಿಹೋಗಿ ಹೊರಬಾಗಿಲ ಕಡೆಗೆ ಹೋಗಿದ್ದರು. ರಾಣಿಯು ಹಿಂದಿನಿಂದ ನಡೆದುಕೊಂಡು ಬಂದು ಅವರ ಮುಂದೆ ನಿಂದು ಕೈಗಳನ್ನು ಮುಗಿದು ಅಡ್ಡಬಿದ್ದು “ಋಷಿಗಳೇ, ಭಿಕ್ಷೆಗೆ ನಿಲ್ಲಿ* ಎಂದು ಕೇಳಿದಾಗ ಅವರು – “ಅವ್ವಾ, ಮನೆಯನ್ನು ಹೊಕ್ಕು

 ಭಟಾರಾ ಎಂದು ನಿಱಸಿದೊಡೆ ಭಟಾರರೆಂದರಬ್ದಾ ಮನೆಯಂ ಪೊಕ್ಕು ಬಂದೊಮಿನ್ನೆಮಗೆ ನಿಲಲಾಗದೆಂದೊಡರಸಿಯಿಂತೆಂದಳ್ ಭಟಾರಾ ನೀಮೆನಗೆ ದಯೆಗೆಯ್ದಮೋಘಂ ನಿಲಲ್ವೇೞ್ಕುಮೆಂದು ಪೋಗಲೀಯದೆ ಕಾಲಂ ಪಿಡಿದು ತಾಂಗುತ್ತಿರ್ಪನ್ನೆಗಮ್ ಇತ್ತರಸನೆತ್ತು ದೆಸೆಗಳಂ ನೋಡಿಯರಸಿಯಂ ಕಾಣದರಸಿಯೆಲ್ಲಿರ್ದೊಳೆಂದು ಕೆಲದವರಂ ಬೆಸಗೊಂಡೊಡವರೆಂದೊರರಸಿಯೊರ್ವ ಸವಣಂ ಬಂದೊಡಾತನಂ ಕಂಡು ಕರುಮಾಡದಿಂದೞದು ಪರಿದುಬೞಯುಂ ತಗುೞ್ದು ಬಾಗಿಲ್ ಮಾಡದಲ್ಲಿ ಸವಣನೊಡನಾ ಪೋರುತ್ತಿರ್ಪೊಳ್ ನೋಡಿಮೆಂದರಸಂಗೆ ತೋಱದೊಡರಸಂ ಕಂಡೆನ್ನನಗಲ್ದು ನಿಚ್ಚಲೀ ಸವಣನಲ್ಲಿಗೆ ಪರಿವಳೆಂದು ಕಿನಿಸಿ ಕರುಮಾಡದಿಂದಿೞದು ರಿಸಿಯರಿರ್ದಲ್ಲಿಗೆವೋಗಿ ಶಕ್ತಿಯೆಂಬಾಯುಧದಿಂದುರಮನುರ್ಚೆಪೋಗಿಟ್ಟರಸಿಯುಮಂ ತಲೆನವಿರಂ ಪಿಡಿದು ದಱದಱನೆೞೆದುಕೊಂಡು ಬಂದಂ ಸ್ವಾಮಿ ಕಾರ್ತಿಕ ಋಷಿಯುಂ ಕ್ಷಮೆಯಂ ಭಾವಿಸಿ ನೆತ್ತರೊಕ್ಕು ಬಸಮೞದು ಬೇಸಗೆಯ ಕಡುವಿಸಿಲಿಂದಂ ಝಳದಿಂದಂ ಬೆಂಕೆಯಿಂದಂ ನೀರೞ್ಕೆಯಕಮಾಗಿ ತಣ್ಪಿನೊಳೊಳ್ಳಿತ್ತು ಸಮಾಯಕ್ಕುಮೆಂದು ಮನದೊಳ್ ಬಗೆದಿರ್ದ್ದೊರನ್ನೆಗಂ ತಮ್ಮಜ್ಜಿಯಪ್ಪ ವೀರಮತಿ ಮಹಾದೇವಿ ಬ್ರಹ್ಮಚರ್ಯವ್ರತಮಂ ಕೊಂಡು ಕಾಲಂಗೆಯ್ದು ವ್ಯಂತರದೇವತೆಯಾಗಿ ಪುಟ್ಟಿದಾಕೆಗಾಸನಕಂಪಮಾಗಿಯಱದು ಬಂದು ಭಟಾರಾ ಬೆಸನೇನಿವರೆಲ್ಲರುಮಂ ಕೊಂದಪ್ಪೆನೆಂದೊಡೆ

    ಹಿಂದೆ ಬಂದಾಗಿ ಹೋಯಿತು, ಇನ್ನು ನಿಲ್ಲಲು ನಮಗೆ ಅಸಾಧ್ಯ* ಎಂದರು. ಅಗ ರಾಣಿ – “ಪೂಜ್ಯರೇ, ನನ್ನ ಮೇಲೆ ದಯೆಮಾಡಿ ನೀವು ನಿಶ್ಚಯವಾಗಿಯೂ ನಿಲ್ಲಬೇಕು* ಎಂದು ನುಡಿದು ಹೋಗಲಿಕ್ಕೆ ಬಿಡದೆ ಅವರ ಕಾಲನ್ನು ಹಿಡಿದು ತಡೆದಳು. ಅಷ್ಟರಲ್ಲಿ ಇತ್ತ ರಾಜನು ಎಚ್ಚರಗೊಂಡನು. ದಿಕ್ಕುಗಳ ಕಡೆಗೆ ನೋಡಿದಾಗ ರಾಣಿಯನ್ನು ಕಾಣದೆ, ‘ರಾಣಿ ಎಲ್ಲಿದ್ದಾಳೆ?’ ಎಂದು ತನ್ನ ಪಕ್ಕದಲ್ಲಿದ್ದವರನ್ನು ಕೇಳಿದನು. ಆಗ ಅವರು – “ರಾಣಿ ಓರ್ವ ಜೈನಸನ್ಯಾಸಿ ಬಂದಾಗ ಅವನನ್ನು ಕಂಡು ಅರಮನೆಯ ಉಪ್ಪರೆಗೆಯಿಂದ ಇಳಿದು ಬಂದು, ಆತನ ಹಿಂದೆ ಹಿಂದೆಯೇ ಹೋಗಿ ಹೊರಬಾಗಿಲ ಗೋಪುರದಲ್ಲಿ ಆ ಸನ್ಯಾಸಿಯೊಡನೆ ಅದೋ ಹೋರಾಡುತ್ತಿರುವಳು, ನೋಡಿರಿ* ಎಂದು ರಾಜನಿಗೆ ತೋರಿಸಿದರು. ರಾಜನು ಕಂಡು, “ಈಕೆ ನಿತ್ಯವೂ ನನ್ನನ್ನು ಅಗಲಿ, ಈ ಸವಣನಲ್ಲಿಗೆ ಹೋಗುತ್ತಾಳೆ ಎಂದು ಕೋಪಗೊಂಡು ಅರಮನೆಯ ಉಪ್ಪರಿಗೆಯಿಂದ ಇಳಿದು ಋಷಿಗಳಿದ್ದಲ್ಲಿಗೆ ಹೋದನು. ಶಕ್ತಿ (ಈಟಿ) ಎಂಬ ಆಯುಧದಿಂದ ಅವನ ಎದೆ ಸೀಳೀಹೋಗುವಂತೆ ಹೊಡೆದನು. ಅರಸಿಯ ತಲೆಗೂದಲನ್ನು ಹಿಡಿದು, ಅವಳನ್ನು ದರದರನೆ ಎಳೆದುಕೊಂಡು ಬಂದನು. ಸ್ವಾಮಿ ಕಾರ್ತಿಕಋಷಿ ಕ್ಷಮೆಯನ್ನು ಬಗೆದು, ರಕ್ತ ಹರಿದು ಶಕ್ತಿ ಕುಂದಿ ಬೇಸಗೆಯ ತೀವ್ರವಾದ ಬಿಸಿಲಿನಿಂದಲೂ ಅದರ ತಾಪದಿಂದಲೂ ಸೆಕೆಯಿಂದಲೂ ಬಾಯಾರಿಕೆ ಹೆಚ್ಚಾಗಲು ತಂಪಾದ ಸ್ಥಳದಲ್ಲಿ ಒಳ್ಳೆಯ ಸಮಾ ಸ್ಥಿತಿ ಒದಗಿಬರುವುದೆಂದು ಮನಸ್ಸಿನಲ್ಲಿ ಭಾವಿಸಿಕೊಂಡಿದ್ದರು. ಅಷ್ಟರಲ್ಲಿ ತಮ್ಮ ಅಜ್ಜಿಯಾದ ವೀರಮತಿ ಮಹಾದೇವಿ ಬ್ರಹ್ಮಚರ್ಯದ ವ್ರತವನ್ನು ಕೈಗೊಂಡು ಸತ್ತು ವ್ಯಂತರ ದೇವತೆಯಾಗಿ ಹುಟ್ಟಿದಳು. ಆಕೆ ಕುಳಿತ ಆಸನ ಅಲುಗಾಡಿದುದರಿಂದ ನಡೆದ ಸಂಗತಿಯನ್ನು ತಿಳಿದುಕೊಂಡು ಅವಳು ಬಂದು “ಋಷಿಗಳೇ, ನನಗೆ ಅಪ್ಪಣೆಯೇನು? ಅಪ್ಪಣೆಕೊಟ್ಟರೆ ಇವರೆಲ್ಲರನ್ನೂ ಕೊಲ್ಲುತ್ತೇನೆ* ಎಂದಳು. 

    ಭಟಾರರೆಂದರಂತೇನುಂ ಬೇಡ ನೀನೆಮ್ಮಂ ತಣ್ಣಿನೆಡೆಗೆ ಕೊಂಡುಪೋಗೆಂದೊಡೆ ದೇವತೆ ನವಿಲ ರೂಪಿನಿಂದೆತ್ತಿಕೊಂಡು ಬೆನ್ನೊಳಿಟ್ಟು ಕೋಗಳಿಯ ಮೂಡಣ ದೆಸೆಯ ಪರ್ವತದ ಕೊಳದ ತಡಿಯೊಳ್ ಲತಾಮಂಟಪದೊಳಿರಿಸಿ ಪೋದೊಡೆ ಬೆಟ್ಟದ ಮೇಗಣಿಂ ಪಾಯ್ತರ್ಪ ನಿರ್ಝರ ಶ್ರೀಕರಂಗಳಿಂ ಶೀಕರಂಗಳಿಂ ಮೆಯ್ಯಾಪ್ಯಾಯನವಾಗಿ ಸಂನ್ಯಸಂಗೆಯ್ದು ಶುಭಪರಿಣಾಮದಿಂ ಮುಡಿಪಿ ಸರ್ವಾರ್ಥ ಸಿದ್ದಿಯೊಳ್ ಮೂವತ್ತುಮೂರು ಸಾಗರೋಪಮಾಯುಷ್ಯಮನೊಡೆಯೊನಹ ಮಿಂದ್ರನಾಗಿ ಪುಟ್ಟಿದೊಂ ಮತ್ತಿತ್ತ ಭಟಾರರ ತಂಗೆಯಪ್ಪ ವೀರಶ್ರೀಯುಂ ಹಾ ಭಟಾರ ಎಂದಿರುಳುಂ ಪಗಲುಂ ಪಲವುದಿವಸವೊಂದೆ ಪಾಂಗಿನೊಳ್ ಪ್ರಳಾಪಿಸಿದುಃಖಂಗೆಯ್ಯೆ ಅರಸನುಮಾತೆಗೆ ?

    ಆಗ ಋಷಿಗಳು – “ಹಾಗೇನೂ ಮಾಡುವುದು ಕಂಡನಲ್ಲ ನಪ್ಪುದಱಂದಾದಮಾನುಮುಬ್ಬೆಗಂಬಟ್ಟಿರ್ದ್ದಿಂತೆಂದನಾರೊರ್ವರರ? ಸಿಯೞ್ಕೆಯಂ ಮೞ್ಗೆಸಿ ದುಃಖಮಂ ಮಱೆಯಿಸುವೊರವರ್ಗೊಸಗೆಯಂ ಮಾಡುವೆನೆಂದು ಪೊೞಲೊಳಗೆ ಗೋಸಣೆಯಂ ತೊೞಲ್ಚಿದೊಡದಂ ಕೇಳ್ದು ಲೋಗರ್ ಪಗರಣಿಗರಾಗಿ ಎನಿತಾನುಂ ತೆಱದ ರೂಪುಗಳಂ ಕೈಕೊಂಡು ಮರಮೊಗಂಗಳನಿಟ್ಟು ಬಂದು ಮುಂದೆ ಅಡಿಯುಂ ಪಾಡಿಯುಂ ನಗಿಸಿಯುಮೆಂತುಮೞ್ಕೆಮೞ್ಗದಿರ್ದೊ ಡೊರ್ವಂ ಕರಿಯ ಕಚ್ಚುಟಮನುಟ್ಟು ಮೆಯ್ಯೆಲ್ಲಂ ಮಸಿಯಂ ಪೋಸಿ ಬೋೞದಲೆವೆರಸು ಬಾಯೊಳ್ ಕವಡಿಕೆಗಳಂ ಪಲ್ಗಳಂತೆ ಮಾಡಿ ಕುಂಚಮಂ ಗುಂಡಿಗೆಯುಮಂ ಪಿಡಿದು ಬರ್ಪೊನನರಸಂ ಕಂಡಿಂತೆಂದನೆಲೆಯರಸಿ ನಿನ್ನ ಸಹೋದರಂಗಳಪ್ಪ ಭಟಾರರಾ ಬರ್ಪೊರೆಯೆಂದು

    ಬೇಡ. ನಮ್ಮನ್ನು ತಂಪಾದ ಸ್ಥಳಕ್ಕೆ ಕೊಂಡೊಯ್ಯು* ಎಂದರು. ಆ ದೇವತೆ ನವಿಲಿನ ರೂಪದಿಂದ ಋಷಿಗಳನ್ನು ಎತ್ತಿ ಬೆನ್ನಲ್ಲಿಟ್ಟುಕೊಂಡು ಕೋಗಳಿಯ ಪೂರ್ವದಿಕ್ಕಿನ ಪರ್ವತದ ಸರೋವರದ ದಡದಲ್ಲಿ ಬಳ್ಳಿ ಮಂಟಪದಲ್ಲಿಟ್ಟು ತೆರಳಿತು. ಬೆಟ್ಟದ ತುದಿಯಿಂದ ಹರಿದು ಬರುವ ನೀರ ಝರಿಯ ತುಂತುರುಗಳಿಂದ ಅವರ ಶರೀರಕ್ಕೆ ಹಿತವಾಯಿತು. ಅವರು ಸಂನ್ಯಾಸವನ್ನು ಮಾಡಿ ಶುಭವಾದ ಪರಣಾಮದಿಂದ ಸತ್ತು ಸರ್ವಾರ್ಥಸಿದ್ಧಿ ಎಂಬ ಮೇಲುಮಟ್ಟದ ಸ್ವರ್ಗದಲ್ಲಿ ಮೂವತ್ತುಮೂರು ಸಾಗರದಂತಹ ಆಯುಷ್ಯವುಳ್ಳ ಅಹಮಿಂದ್ರನಾಗಿ ಹುಟ್ಟಿದ್ದರು. ಆಮೇಲೆ ಇತ್ತ ಋಷಿಗಳ ತಂಗಿಯಾದ ವೀರಶ್ರೀಯು ‘ಹಾ ಋಷಿಯೇ!’ ಎಂದು ಇರುಳೂ ಹಗಲೂ ಹಲವು ದಿವಸ ಒಂದೇ ರೀತಿಯಲ್ಲಿ ಅಳುತ್ತ, ದುಃಖಿಸುತ್ತಿದ್ದಳು. ಅರಸನು ಆಕೆಗೆ ಪ್ರಿಯತಮನಾದುದರಿಂದ ಅತ್ಯಂತ ದುಃಖಪಟ್ಟು ಹೀಗೆಂದನು – “ಯಾರಾದರೊಬ್ಬರು ರಾಣಿಯ ಅಳುವನ್ನು ಹೋಗಲಾಡಿಸಿ ದುಃಖವನ್ನು ಮರೆಯುವಂತೆ ಮಾಡಿದರಾದರೆ, ಅವರಿಗೆ ಪಾರಿತೋಷಕವನ್ನು ಕೊಡುವೆನು* – ಹೀಗೆ ಸಾರಿಸಿ ಡಂಗುರ ಹೊಡೆಯಿಸಿದನು. ಅದನ್ನು ಕೇಳಿ ಜನರು ಪಗರಣ (ಯಕ್ಷಗಾನ ಬಯಲಾಟ) ಎಂಬ ಆಟವಾಡುವವರಾಗಿ ಎಷ್ಟೋ ರೀತಿಯ ರೂಪಗಳನ್ನು (ವೇಷಗಳನ್ನು) ಧರಿಸಿಕೊಂಡು ಮರದ ಮೊಗವಾಡಗಳನ್ನು ಇಟ್ಟುಕೊಂಡು ಬಂದು ಅವಳ ಮುಂದೆ ಅಡಿಯೂ ಹಾಡಿಯೂ ನಗುವಂತೆ ಮಾಡಿಯೂ ಪ್ರಯೋಜನವಾಗಲಿಲ್ಲ. ಹೇಗೂ ಅವಳ ಅಳುವು ಪರಿಹಾರವಾಗಲಿಲ್ಲ. ಆಗ ಒಬ್ಬನು ಕಪ್ಪಾದ ಕೋವಣ (ಕೌಪೀನ)ವನ್ನು ಧರಿಸಿ ಮೈಗೆಲ್ಲ ಮಸಿ ಹಚ್ಚಿ ಬೋಳಾದ ತಲೆಯೊಂದಿಗೆ ಬಾಯಲ್ಲಿ ಕವಡೆಗಳನ್ನು ಹಲ್ಲಿನಂತೆ ಮಾಡಿ ನವಿಲುಗರಿಯ ಕುಂಚವನ್ನೂ ಕಮಂಡಲುವನ್ನೂ ಹಿಡಿದುಕೊಂಡು ಬರುತ್ತಿದ್ದನು. ಅವನನ್ನು ರಾಜನು ಕಂಡು ರಾಣಿಯೊಡನೆ – “ಎಲೈ ಅರಸಿ ‘ನಿನ್ನಸೋದರರಾದ

    ಪೇೞ್ದೂಗಳೆಲ್ಲಿರ್ದರೆಂದೆೞ್ದು ನೋಡಿ ಕಾಣದಾ ರೂಪಂ ಕಂಡು ನಕ್ಕು ದುಃಖಮಂ ಮಱೆದೊಳಾಗಳಾ ನಗಿಸಿದ ಪಗರಣೆಗಂಗೆ ಪಿರಿದು ಕಸವರಮನಿತ್ತೊ ನಂದಿಂದಿತ್ತ ಬಾದುಬ್ಬೆಯ ಪರ್ವಮುಂ ಪಗರಣದಾಟಪಾಟಮುಮಾದುವು ಮತ್ತೆ ಸ್ವಾಮಿ ಕಾರ್ತಿಕಋಷಿಯರ್ ಮುಡಿಪಿದಲ್ಲಿಯವರ ತಂಗೆಯಪ್ಪ ವೀರಶ್ರೀ ಬಸದಿಯಂ ಮಾಡಿದೊಡಂದಿಂದಿತ್ತ ಸ್ವಾಮಿಯೆಂಬ ತೀರ್ಥಮಾಯ್ತು ಮತ್ತಿತ್ತ ಕೃತ್ತಿಕೆಯೆಂಬ ಪೊೞಲಾನಾಳ್ವಗ್ನಿರಾಜ ನೆಂಬರಸಂ ತನ್ನ ಮಗಳಂ ತಾನೆ ಕೊಂಡು ಮೊಱೆಯೞದನಪ್ಪುದಱಂದಲ್ಲಿಯ ಜನಮು

    ಶ್ಲೋಕ || ರಾಜ್ಞಿಧರ್ಮಿಣಿ ಧರ್ಮಿಷ್ಠಾಃ ಪಾಪೇ ಪಾಪಸಮಾಶ್ರಿತಾಃ
    ರಾಜಾನಮನುವರ್ತಂತೇ ಯಥಾರಾಜಾ ತಥಾಪ್ರಜಾಃ ||

    ಎಂದರಸನುಂ ಕಂಡು ಮೊಱೆಯೞದು ನೆಗೞಲ್ ತಗುಳ್ದೊಡಾ ಪೊೞಲ್ಗೆ ಭೋಗಂಕಾರೋಹಣ ಮೆಂದು ಪೆಸರನಿಟ್ಟರಿದು ಸ್ವಾಮಿ ಕಾರ್ತಿಕ ಋಷಿಯ ಕಥೆ ಮತ್ತೆ ಪೆಱರುಂ ಪರಮ ಸಹಜ ರತ್ನತ್ರಯಂಗಳನಾರಾಸುವವಗ್ಗಳ್ ಸ್ವಾಮಿ ಕಾರ್ತಿಕ ಋಷಿಯರಂ ಮನದೊಳ್ ಬಗೆದೇಱುಂ ಪುಣ್ಣುಂ ವ್ಯಾಯುಂ ಪಸಿವು ನೀರೞ್ಕೆ ಶೀತವಾತೋಷ್ಣಂಗಳುಮಂ ಸೈರಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

    ಋಷಿಗಳು ಅದೋ ಬರುತ್ತಿರುವರು* ಎಂದು ಹೇಳಿದನು. ಆಗ ಆಕೆ “ಎಲ್ಲಿದ್ದಾರೆ?* ಎಂದು ಎದ್ದು ನೋಡಿದಳು. ಸಹೋದರನನ್ನು ಕಾಣದೆ, ಆ ರೂಪವನ್ನು ಕಂಡು ನಕ್ಕು ದುಃಖವನ್ನು ಮರೆತುಬಿಟ್ಟಳು. ಆ ನಗಿಸಿದ ಪಗರಣೆಗನಿಗೆ ಹೆಚ್ಚು ಚಿನ್ನವನ್ನು ಕೊಟ್ಟನು. ಅಂದಿನಿಂದ ಈಚೆಗೆ ಬಾದುಬ್ಬೆ ಎಂಬ ದೇವತೆಯ ಹಬ್ಬವೂ ಪಗರಣದ ಆಟವೂ ಮತ್ತು ಮಾತುಗಾರೆಕೆಯೂ ಪ್ರಚಲಿತವಾದವು. ಸ್ವಾಮಿ ಕಾರ್ತಿಕ ಋಷಿಗಳು ಸತ್ತ ಸ್ಥಳದಲ್ಲಿ ಅವರ ತಂಗಿಯಾದ ವೀರಶ್ರೀಯು ಜಿನಾಲಯವನ್ನು ಕಟ್ಟಿಸಿದಳು. ಅಂದಿನಿಂದ ಈಚೆಗೆ ಅದು ಸ್ವಾಮಿ ಎಂಬ ತೀರ್ಥವಾಯಿತು. ಆಮೇಲೆ ಇತ್ತ ಕೃತ್ತಿಕಾಪುರವನ್ನು ಆಳುವ ಅಗ್ನಿರಾಜನು ತನ್ನ ಮಗಳನ್ನು ತಾನೆ ಸ್ವೀಕರಿಸಿ ನಂಟತನ (ಬಾಂಧವ್ಯ)ವನ್ನು ಹಾಳುಮಾಡಿದನಾದುದರಿಂದ ಅಲ್ಲಿಯ ಜನರು (ರಾಜನು ಧರ್ಮವಂತಾನಾದರೆ ಪ್ರಜೆಗಳೂ ಧರ್ಮದಲ್ಲಿ ಇರುವವರಾಗುತ್ತಾರೆ. ರಾಜನು ಪಾಪಿಯಾಗಿದ್ದರೆ ಪ್ರಜೆಗಳೂ ಪಾಪವನ್ನು ಆಶ್ರಯಿಸುವವರಾಗುತ್ತಾರೆ. ಪ್ರಜೆಗಳು ರಾಜನನ್ನು ಅನುಸರಿಸುತ್ತಾರೆ.) ರಾಜನು ಹೇಗೋ ಪ್ರಜೆಗಳೂ ಹಾಗೆಯೇ. ಎಂಬ ನೀತಿಯಂತೆ ರಾಜನನ್ನು ಕಂಡು ಅವರೂ ಭಾಂಧವ್ಯವನ್ನು ಕೆಡಿಸಿ ಆಚರಿಸಲು ಪ್ರ್ರಾರಂಭಿಸಿದರು. ಇದರಿಂದ ಆ ಪಟ್ಟಣಕ್ಕೆ ಭೋಗಂಕಾರೋಹಣ (ಭೋಗಪಟ್ಟಣ) ಎಂದು ಹೆಸರಿಟ್ಟರು. ಇದು ಸ್ವಾಮಿ ಕಾರ್ತಿಕ ಋಷಿಯ ಕಥೆ. ಅತ್ಯಂತ ಶ್ರೇಷ್ಠವೂ ಸಹಜವೂ ಅಗಿರತಕ್ಕ ಸಂಮ್ಯಗ್ದರ್ಶನ, ಸಮ್ಯಗ್ ಜ್ಞಾನ, ಸಮ್ಯಕ್ ಚಾರಿತ್ರ ಎಂಬ ರತ್ನತ್ರಯವನ್ನು ಆರಾಸತಕ್ಕ ಇನ್ನು ಬೇರೆಯವರು ಕೂಡ, ಸ್ವಾಮಿ ಕಾರ್ತಿಕ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ಗಾಯ, ಹುಣ್ಣು, ರೋಗ, ಹಸಿವು, ಬಾಯಾರಿಕೆ, ತಂಪು, ಗಾಳಿ, ಕಾವುಗಳನ್ನು ಸಹಿಸಿ, ಸ್ವರ್ಗ – ಮೋಕ್ಷ ಸುಖಗಳನ್ನು ಪ್ರಾಪ್ತಿಮಾಡಿಕೊಳ್ಳಲಿ.

*****ಕೃಪೆ: ಕಣಜ****



3 ಕಾಮೆಂಟ್‌ಗಳು: