ಪುಟಗಳು

03 ಡಿಸೆಂಬರ್ 2021

ವಡ್ಡಾರಾಧನೆ - ಸನತ್ಕುಮಾರಚಕ್ರವರ್ತಿಯ ಕಥೆ | Vaddaradhane-Santkumara chakravarthiya kathe

ಸನತ್ಕುಮಾರಚಕ್ರವರ್ತಿಯ ಕಥೆಯಂ ಪೇೞ್ವೆಂ :

ಗಾಹೆ || ಕಚ್ಚು ಜರಖಾಸ ಸೋಸೋ ಭತ್ತಚ್ಛದಿ ಅಚ್ಛಿ ಕುಚ್ಛಿ ದುಕ್ಷಾಣಿ

ಅಯಾಸಿ ದಾಣಿ ಸಮ್ಮಂ ಸಣಂಕುಮಾರೇಣ ವಾಸಸದಂ ||

ಕಚ್ಚು – ಕೆರಕುಂ, ಜರ – ನರೆಯುಂ, ಖಾಸ – ಕೆಮ್ಮುಂ, ಸೋಸೋ – ಬಾಯ್ ಬತ್ತುವುದುಂ, ಭತ್ತಚ್ಚದಿ – ಛರ್ದಿಯುಂ, ಅಚ್ಛಿಕುಚ್ಛಿ ದುಕ್ಖಾನಿ – ಕಣ್ಣಬಸಿಱ ಬೇನೆಗಳುಮೆಂದಿವು ಮೊದಲಾಗೊಡೆಯ, ಅಯಾಸಿದಾಣಿ – ಸೈರಿಸೆಪಟ್ಟವು. ಸಮ್ಮಂ – ಒಳ್ಳಿತ್ತಾಗಿ ಸಣಂಕುಮಾರೇಣ – ಸನತ್ಕುಮಾರ ಚಕ್ರವರ್ತಿ ರಿಸಿಯಿಂದಂ, ವಾಸಸದಂ – ನೂಱುವರುಷಂ”

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕುರುಜಾಂಗಣಮೆಂಬುದು ನಾಡಲ್ಲಿ ಹಸ್ತಿನಾಪುರಮೆಂಬುದು ಪೊೞಲದನಾಳ್ವೊಂ ವಿಶ್ವಸೇನಮಹಾರಾಜನೆಂಬರಸನಾತನ ಮಹಾದೇವಿ ಸಹದೇವಿಯೆಂಬೊಳಾಯಿರ್ವ್ವರ್ಗ್ಗಂ ಸನತ್ಕುಮಾರನೆಂಬೊಂ ಪುಟ್ಟಿದೊನಾತಂ ಸರ್ವಲಕ್ಷಣಸಂಪೂರ್ಣಂ ಸಕಳಕಳಾಪಾರಗಂ ಚೆಲ್ವಿನಿಂ ದೇವಾಸುರರ್ಕ್ಕಳಂ ಗೆಲ್ವ ರೂಪನೊಡೆಯನಾತಂಗೆ ಕೆಳೆಯಂ ಸಿಂಹವಿಕ್ರಮನೆಂಬ ಸಾಮಂತನ ಮಗಂ ಮಹೇಂದ್ರಸಿಂಹನೆಂಬೊನಂತವರ್ಗ್ಗನ್ಯೋನ್ಯಪ್ರೀತಿಯಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಏಕಚಕ್ರಪುರಾಶಂ ಭೂರಾಮನಾಮಧೇಯನಪ್ಪ ಶತ್ರುಂದಮಂ ವಿಶ್ವಸೇನಮಹಾರಾಜಂಗೆ ಪಾಗುಡಮನಟ್ಟೆ ಪಟ್ಟವಾರಮರಗಮೆಂಬ ದುಷ್ಪಾಶ್ವಮಂ ಕುಮಾರನೇಱ ಲಕ್ಷ್ಮೀಗೃಹಮೆಂಬುದ್ಯಾನವನದ ಮಧ್ಯಸಮಪ್ಪ ಸ್ಥಲದೊಳ್ ಸಲ್ವನಾ ದುಷ್ಪಾಶ್ವಮಂ ಕೊಸೆಗೊಳೆ ಗಾಳಿಯಿಂದಂ ಬೇಗಮಾಗಿ ವಾರಿತಪೂರಿತಂ ಪರಿದು ಕುಮಾರನಂ ಕೊಂಡು ಮಹಾಟವಿಯಂ ಪೊಕ್ಕೊಡಿತ್ತ ವಿಶ್ವಸೇನಮಹಾರಾಜನ ಮಹಾ ಸಾಮಂತರ್ಕ್ಕಳುಂ ಪರಿವಾರಮುಮೆಲ್ಲಂ ಕುದುರೆವಡಿಜ್ಜೆಯಂ ನೋಡಿ ನಾಡೆಗೆಂಟುವೋಗಿ

    ಸನತ್ಕುಮಾರ ಚಕ್ರವರ್ತಿಯ ಕಥೆಯನ್ನು ಹೇಳುವೆನು. : “ಸನತ್ಕುಮಾರ ಚಕ್ರವರ್ತಿ ಋಷಿಯು ತುರಿ (ಚರ್ಮರೋಗ), ನರೆ, ಕೆಮ್ಮು, ಬಾಯಾರಿಕೆ, ಭೇ, ಕಣ್ಣುನೋವು, ಹೊಟ್ಟೆನೋವು ಎಂದು ಇವೇ ಮೊದಲಾಗಿ ಉಳ್ಳವನ್ನು ನೂರುವರ್ಷ ಚೆನ್ನಾಗಿ ಸೈರಿಸಿಕೊಂಡನು). ಅದು ಹೇಗೆಂದರೆ : ಈ ಜಂಬೂದ್ವೀಪದ ಭರತ ಲಿತ್ರದಲ್ಲಿ ಕುರುಜಾಂಗಣ ಎಂಬ ಒಂದು ನಾಡಿದೆ. ಅಲ್ಲಿ ಹಸ್ತಿನಾಪುರ ಎಂಬ ಪಟ್ಟಣವಿದೆ. ಅದನ್ನು ವಿಶ್ವಸೇನಮಹಾರಾಜ ಎಂಬ ಅರಸನು ಆಳುತ್ತಿದ್ದನು. ಅವನ ಪಟ್ಟದ ರಾಣಿ ಸಹದೇವಿಯೆಂಬವಳು. ಆ ದಂಪತಿಗಳಿಗೆ ಸನತ್ಕುಮಾರನೆಂಬ ಮಗನು ಹುಟ್ಟಿದನು. ಅವನು ಎಲ್ಲ ಲಕ್ಷಣಗಳಿಂದ ತುಂಬಿದವನು, ಎಲ್ಲ ಕಲೆಗಳನ್ನೂ ಪೂರ್ಣವಾಗಿ ತಿಳಿದವನು. ದೇವತೆಗಳನ್ನೂ ದೇವತೆಗಳಲ್ಲದವರನ್ನೂ ಸೊಬಗಿನಿಂದ ಗೆಲ್ಲುವ ರೂಪುಳ್ಳವನು. ಅವನಿಗೆ ಸಿಂಹವಿಕ್ರಮನೆಂಬ ಸಾಮಂತನ ಮಗನಾದ ಮಹೇಂದ್ರಸಿಂಹನೆಂಬುವನು ಸ್ನೇಹಿತನಾಗಿದ್ದನು. ಅಂತು ಅವರಿಬ್ಬರು ಪರಸ್ಪರವಾಗಿ ಪ್ರೀತಿಯಿಂದಿದ್ದು ಹೀಗೆಯೇ ಕಾಲ ಕಳೆಯುತ್ತಿತ್ತು. ಆಲಿಲೆ ಒಂದು ದಿವಸ ಏಕಚಕ್ರವೆಂಬ ಪಟ್ಟಣದ ಒಡೆಯನೂ ಶತ್ರುಗಳನ್ನು ದಮನ ಮಾಡತಕ್ಕವನೂ ಆದ ಭೂರಾಮನೆಂಬ ಹೆಸರು”ಲ್ಷ ರಾಜನು ವಿಶ್ವಸೇನ ಮಹಾರಾಜನಿಗೆ ಪಟ್ಟವಾರಮರಗ ಎಂಬ ಕೆಟ್ಟ ಕುದುರೆನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟನು. ಆ ಕುದುರೆಯನ್ನು ಸನತ್ಕುಮಾರನು ಲಕ್ಷ್ಮೀಗೃಹವೆಂಬ ಇದ್ಯಾನದ ಮಧ್ಯಸ್ಥಳದಲ್ಲಿ ಏರಿದಾಗ ಅದು ವಾರಿತ – ಪೂರಿತ ಎಂಬ ಅಶ್ವಗತಿಗಳಲ್ಲಿ ಓಡಿತು. ಸನತ್ಕುಮಾರನನ್ನು ಏರಿಸಿಕೊಂಡು ದೊಡ್ಡ ಕಾಡಿನೊಳಗೆ ಹೊಕ್ಕಿತು. ಇತ್ತ ವಿಶ್ವಸೇನಮಹಾರಾಜನ ದೊಡ್ಡಸಾಮಂತರೂ ಪರಿವಾರವೂ ಎಲ್ಲರೂ ಕುದುರೆಯ ಕಾಲಿನ ಹೆಜ್ಜೆಯನ್ನು ನೋಡಿಕೊಳ್ಳುತ್ತ ಬಹಳ ದೂರದವರೆಗೆ ಹೋದರು.

    ಮೂಱನೆಯ ದಿವಸದಂದಂ ಅಡಿವಜ್ಜೆ ಕೆಟ್ಟೊಡೆ ಪೋದ ದೆಸೆಯನಱಯದೆ ಹಾ ಪುತ್ರಾ ಎಂದು ಮಹಾ ದುಃಖಾಕ್ರಾಂತನಾಗಿ ಪ್ರಲಾಪಂಗೆಯ್ದ ವೃಪತಿಯಂ ಮಹೇಂದ್ರಸಿಂಹಂ ಸಂತಯಿಸಿ ಇಂತೆಂದು ನುಡಿದಂ ಕುಮಾರನಂ ಪಾತಾಳಮಂ ಪೊಕ್ಕನಪ್ಪೊಡಮಱಸಿಕೊಂಡು ಬರ್ಪೆಂ ನಿಮ್ಮಡಿ ನೀಮುಬ್ಬೆಗಂಬಡದೆ ಮಗುೞಮೆಂದರಸನಂ ಮಗುೞ ಪರಿವಾರಂಬೆರಸು ಮಹಾಟವಿಯಂ ಪೊಕ್ಕು ತೊೞಲ್ದು ನೋೞನಂ ಪರಿಜನಂಗಳ್ ಕುಮಾರನನಱಸಿ ಕಾಣದೆ ಬೇಸತ್ತು ಮಹೇಂದ್ರಸಿಂಹನಂ ಬಿಸುಟು ಪೊೞಲ್ಗೆವೋದರ್ ಇತ್ತ ಮಹೇಂದ್ರಸಿಂಹನೊರ್ವನೆ ನಾನಾವಿಧ ಗಿರಿಗಹನ ವಿಷಯ ವಿಷಯ ಪ್ರದೇಶಂಗಳುಮಂ ವ್ಯಾಧನಿವಾಸಂಗಳುಮಂ ಯಥಾ ಕ್ರಮದಿಂದಂ ಕೞೆದು ಪೋಗಿ ಪ್ರಿಯಂಗುಪಂಡಮೆಂಬ ವನಮನೆಯ್ದಿ ತದ್ವನಮಧ್ಯಸ್ಥ ಗೃಹದೊಳಿರುತಿರ್ದ್ದು ಮಿತ್ರನ ವಿಯೋಗದೊಳಪ್ಪ ದುಃಖದಿಂದಂ ಕಾರುಣ್ಯಮಾಗೆ ಪ್ರಳಾಪಂಗೆಯ್ದೞ್ತು ದೇವತೆಯ ಮುಂದೆ ನಿದ್ರೆಗೆಯ್ದೊಂ ಮನೋಹರಿಯೆಂಬ ಜಾವದಾಗಳ್ ಕರಿಣೀಶತಂಗಳಿಂ ಪರಿವೇಷ್ಟಿತನಾಗಿ ತಿಳಿನೀರ ಕೊಳದೊಳಗೆ ಕ್ರೀಡಿಸುವ ಸೊರ್ಕಾನೆಯುಮಂ ಫಲಭರಿತಮಾದ ಮಾವಿನ ಮರನುಮಂ ಕನಸಿನೊಳ್ ಕಂಡು 

    ಮೂರನೆಯ ದಿವಸದಂದು ಕುದುರೆಯ ಅಡಿ ಹೆಜ್ಜೆಯ ಗುರುತೂ ಸಿಕ್ಕದಾಯಿತು. ಆಗ ವಿಶ್ವಸೇನರಾಜನು ತನ್ನ ಮಗನು ಹೋದ ದಿಕ್ಕನ್ನು ತಿಳಿಯದೆ “ಹಾ ಮಗನೇ!” ಎಂದು ಬಹಳ ವ್ಯಸನದಿಂದ ಗೋಳಾಡಿದನು. ಅವನನ್ನು ಮಹೇಂದ್ರಸಿಂಹನು ಸಮಾಧಾನಪಡಿಸಿ, ಹೀಗೆ ಹೇಳಿದನು. “ಎಲೈ ಪ್ರಭುವೇ, ಸನತ್ಕುಮಾರನು ಪಾತಾಳವನ್ನು ಹೊಕ್ಕಿದ್ದರೆ ಕೂಡಾ ಅವನನ್ನು ಹುಡುಕಿ ಕರೆದುಕೊಂಡು ಬರುವೆನು. ನೀವು ವ್ಯಸನವನ್ನು ತಾಳದಿರಿ. ಹಿಂದಕ್ಕೆ ತೆರಳಿರಿ” – ಎಂದು ರಾಜನ್ನು ಹಿಂದಿರುಗಿಸಿದನು. ಆ ಮೇಲೆ ಮಹೇಂದ್ರಸಿಂಹನು ಪರಿವಾರವನ್ನು ಕೂಡಿಕೊಂಡು ದೊಡ್ಡ ಕಾಡನ್ನು ಹೊಕ್ಕು ಸುತ್ತಾಡಿ ನೋಡುತ್ತಿರಲು ಪರಿಜತಿಲರು ಕುಮಾರನನ್ನು ಹುಡುಕಿ ಕಾಣದೆ ಬೇಸರಗೊಂಡು ಮಹೇಂದ್ರಸಿಂಹನನ್ನು ಬಿಟ್ಟು ಪಟ್ಟಣಕ್ಕೆ ಹೋದರು. ಇತ್ತ ಮಹೇಂದ್ರಸಿಂಹನೊಬ್ಬನೆ ಹಲವಾರು ಬೆಟ್ಟ, ಕಾಡುಗಳನ್ನೂ ಕಠಿನಕರವಾದ ಪ್ರದೇಶಗಳನ್ನೂ ಬೇಡರ ವಾಸಸ್ತಾನಗಳನ್ನೂ ಯಥಾರೀತಿಯಿಂದ ದಾi ಹೋಗಿ ‘ಪ್ರಿಯಂಗು ಷಂಡ’ ಎಂಬ ಕಾಡಿಗೆ ಹೊದರು. ಆ ಕಾಡಿನ ನಡುವೆ ಇದ್ದ ದೇವಾಲಯದಲ್ಲಿದ್ದು, ತನ್ನ ಗೆಳೆಯನ ಆಗಲಿಕೆಯಿಂದುಟಾದ ವ್ಯಸನದಿಂದ ದೇವತೆಯ ಮುಂದೆ ಪ್ರಲಾಪಿಸುತ್ತ, ಅತ್ತು ನಿದ್ದೆ ಮಾಡಿದನು. ಸೊಗಸಾದ ಬೆಳಗಿನ ಜಾವದ ವೇಳೆಗೆ ಒಂದು ಕನಸನ್ನು ಕಂಡನು. ಅದರಲ್ಲಿ ನೂರಾರು ಹೆಣ್ಣಾನೆಗಳಿಂದ ಆವರಿಸಿಕೊಂಡು ತಿಳಿಯಾದ ನೀರಿನ ಕೊಳದಲ್ಲಿ ಆಡುವ ಮದ್ದಾನೆಯನ್ನೂ ಹಣ್ಣಿನಿಂದ ತುಂಬಿದ ಮಾವಿನ ಮರವನ್ನು ಕಂಡು 

   ಮನೋರಥಸಿದ್ಧಿಯಾಯ್ತೆಂದು ಒಸೆದು ಮಗುೞ್ದು ನಿದ್ರಾವಶಗತನಾದೊನಂ ಕಂಡು ಕರುಣಿಸಿ ಭೂತಾಂಬರನೆಂಬ ವೃಂತರದೇವನೆತ್ತಿಕೊಂಡು ಪೋಗಿ ವಿಜಯಾರ್ಧಪರ್ವತಕ್ಕಾಸನ್ನಮಪ್ಪ ಭೂತರಮಣಮೆಂಬ ವನದ ನಡುವಿನೊಳಿರ್ದ್ದ ಕ್ಷುಲ್ಲಕಮಾನಸಮೆಂಬ ಸರೋವರದ ತಡಿಯೊಳಿಕ್ಕಿ ಪೋದನ್ ಆಗಳಾತನುಂ ನೇಸರ್ಮೂಡುವಾಗಳ್ ತೂಂಕಡುಗೆಟ್ಟು ದೆಸೆಗಳಂ ನೋೞ್ಪಂ ಸಮುದ್ರದೊಳೋರಂತಪ್ಪ ಕೋಕನದ ಕುಮುದ ಕುವಲಯ ಕಲ್ಪಾರೇಂದೀವರಾದಿಗಳಿಂದಂ ಹಂಸ ಚಕ್ರವಾಕ ಬಳಾಕ ವಿಪಕ್ಷಿಗಣಂಗಳ್ ನೀರೊಳಗಾಡುತ್ತುಂ ಮುೞುಗುತ್ತುಂ ನಾನಾಪ್ರಕಾರದಿಂದಂ ಮಾಱುಲಿದ ದನಿಗಳಿಂದಮತಿ ರಮಣೀಯಮಪ್ಪ ಕೊಳನಂ ಕಂಡಾದಮಾನುಂ ವಿಸ್ಮಯಚಿತ್ತನಾಗಿ ಆ ಭೂತರಮಣಮೆಂಬ ವನದೊಳಶೋಕ ಪುನ್ನಾಗ ವಕುಲ ಚಂಪಕ ಸಹಕಾರ ಲವಂಗ ಕ್ರಮುಕ ನಾಳಿಕೇರ ನಾಗವಲ್ಲೀ ಪಿನದ್ಧ ದ್ರುಮಷಂಡ ಮಂಡಿತಮನಿಂದ್ರವನದೋಳೋರಂತಪ್ಪುದಂ ನೋಡುತ್ತುಂ ತೊೞಲ್ವೊಂ ತನಗನುಕೂಲಮಪ್ಪ ಶಕುನನಿಮಿತ್ತಂಗಳುಮಂ ಕಂಡಿಂದಮೋಘಮೆನ್ನ ಸ್ವಾಮಿಯಂ ಕಾಣ್ಬೆನೆಂದು ಸಂತುಷ್ಟಚಿತ್ತನಾಗಿಯೂ ಬನದ ನಡುವೆ ತೊೞಲ್ವೊಂ ಮೃದು ಮಧುರ ಗಂಭೀರ ಧ್ವನಿಯೊಳ್ ಕೂಡಿದ ಮೃದಂಗ ವಂಶ ತಾಳಾದಿಗಳ ಧ್ವನಿಗಳುಮಂ ಮಂದ್ರ ತಾರ ಲಯಾನ್ವಿತಮಾಗೆ ಕಿವಿಗಂ ಮನಕ್ಕಂ ಸೊಗಯಿಸುವಂತಪ್ಪ ಪಾಟಮುಮಂ ಕೇಳ್ದು ಹರಿಚಂದನ ಕಾಳಾಗರು ಮಲಯಜ ತುರುಷ್ಕಾದಿಗಳ ಕಂಪು ಬಂದು ತೀಡಿದೊಡಿದು ದೇವನಿವಾಸಮಕ್ಕುಮೆಂದು ಬಗೆದು ಭಯಾಶ್ಚರ್ಯದಿಂದಂ  

        ಇಷ್ಷೇರ್ಥ ಕೈಗೂಡಿತೆಂದು ಸಂತೋಷಪಟ್ಟು ಪುನಃ ನಿದ್ರೆ ಮಾಡಿದನು. ಅವನನ್ನು ಭೂತಾಂಬರನೆಂಬ ಪಿಶಾಚದೇವನು ಕಂಡು ದಯೆಗೊಂಡು, ಎತ್ತಿಕೊಂಡು ಒಯ್ದು ವಿಜಯಾರ್ಧಪರ್ವತಕ್ಕೆ ಸಮೀಪದಲ್ಲಿರುವ ‘ಭೂತರಮಣ’ ಎಂಬ ಕಾಡಿನ ನಡುವಿನಲ್ಲಿದ್ದ ಕ್ಷುಲ್ಲಕ ಮಾನಸವೆಂಬ ಸರೋವರದ ತೀರದಲ್ಲಿ ಬಿಟ್ಟು ತೆರಳಿದನು. ಮಹೇಂದ್ರಸಿಂಹನಿಗೆ ಸೂರ್ಯೋದಯವಾಗುವ ವೇಳೆಗೆ ನಿದ್ದೆ ಬಿಟ್ಟಿತು. ದಿಕ್ಕುಗಳ ಕಡೆಗೆ ನೋಡಿದನು. ಆಗ ಕುವಲಯ, ಕನ್ನೈದಿಲೆ, ನೀಲೋತ್ಪಲ ಮುಂತಾದ ಹೂವುಗಳಿಂದ ಕೂಡಿಯೂ ಹಂಸ, ಚಕ್ರವಾಕ, ಕೊಕ್ಕರೆ ಮುಂತಾದ ವಿಶೇಷ ರೀತಿಯ ಹಕ್ಕಿ ಬಳಗಗಳು ನೀರಿನಲ್ಲಿ ಆಡುತ್ತ ಮುಳುಗುತ್ತ ಹಲವಾರು ರೀತಿಯಲ್ಲಿ ಪ್ರತಿಶಬ್ದಗಳನ್ನು ಮಾಡತಕ್ಕ ಧ್ವನಿಗಳಿಂದ ಕೂಡಿಯೂ ಬಹಳ ಮನೋಹರವಾಗಿದ್ದಿತು. ಮಹೇಂದ್ರಸಿಂಹನು ಆ ಕೊಳವನ್ನು ಕಂಡು ಮನಸ್ಸಿನಲ್ಲಿ ಬಹಳ ಆಶ್ಚರ್ಯಪಟ್ಟನು. ಆ ಭೂತರಮಣವೆಂಬ ಕಾಡಿನಲ್ಲಿ ಅಶೋಕ, ಪುನ್ನಾಗ, ಬಕುಳ (ರೆಂಜಿ), ಸಂಪಗೆ, ಮಾವು, ಲವಂಗ, ಅಡಕೆ ಮರ, ತೆಂಗಿನ ಮರ, ವೀಳ್ಯದೆಲೆ ಬಳ್ಳಿಗಳಿಂದ ಕೂಡಿದ ಮರಗಳ ಸಮೂಹದಿಂದ ಅಲಂಕೃತವಾಗಿದ್ದು ದೇವೇಂದ್ರನ ನಂದನವನದಂತಿದ್ದ ಆ ಕಾಡನ್ನು ನೋಡುತ್ತ ಸುತ್ತಾಡುತ್ತಿದ್ದನು. ತನಗೆ ಅನುಕೂಲವಾದ ಶಕುನಗಳನ್ನು ಕಂಡು, ‘ಇಂದು ನಿಶ್ಚಯವಾಗಿಯೂ ನನ್ನ ಪ್ರಭುವನ್ನು ಕಾಣುವೆನು’ ಎಂದುಕೊಂಡು ಮಹೇಂದ್ರ ಸಿಂಹನು ಮನಸ್ಸಿನಲ್ಲಿ ಸಂತೋಷಗೊಂಡು ಆ ಕಾಡಿನ ನಡುವೆ ಸಂಚರಿಸುತ್ತಿದ್ದನು. ಆಗ ಅವನು ಮೃದುವೂ ಮಧುರವೂ ಉದಾತ್ತವೂ ಆದ ನಾದದಿಂದ ಕೂಡಿದ ಮೃದಂಗ, ಕೊಳಲು, ತಾಳಾದಿಗಳ ಧ್ವನಿಗಳನ್ನೂ ಮಂದ್ರ – ತಾರ ಸ್ವರಗಳಿಂದ ಲಯಬದ್ಧವಾಗಿ ಕಿವಿಗೂ ಮನಸ್ಸಿಗೂ ಸುಖವನ್ನ್ನುಂಟುಮಾಡುವ ಹಾಡನ್ನು ಕೇಳಿದನು. ಶ್ರೀಗಂಧ, ಕಪ್ಪು ಅಗರು, ಗಂಧ ಲೋಬಾನ ಮುಂತಾದವುಗಳ ಸುವಾಸನೆ ಬಂದು ಅವನನ್ನು ಸೋಕಿತು. ಆಗ ಇದು ದೇವಾಲಯವಾಗಿರಬೇಕೆಂದು ಭಾವಿಸಿದನು. ಭಯದಿಂದಲೂ ಆಶ್ಚರ್ಯದಿಂದಲೂ

    ವ್ಯಾಕುಳಿತಮನದೊನಾಗಿ ಇನ್ನಿದನಮೋಘಂ ನೋೞ್ಪೆನೆಂದಾ ದೆಸೆಗಾಗಿ ಸಲ್ವೊನ್ ಕನತ್ಕನಕವಿನಿರ್ಮಿತಮಂ ನಾನಾ ಮಣಿಗಣ ಪಿನದ್ದಮಂ ಚಳತ್ಕೇತುಪತಾಕಾದ್ಯಮಂ ವಿದ್ಯಾಧರಯುವತೀಜನ ಕ್ರೀಡನಾರ್ಥಮಪ್ಪ ಪ್ರಾಸಾದಮಂ ಕಂಡು ವಿಸ್ಮಯಚಿತ್ತನಾಗಿಯದಱ ಸಮೀಪಕ್ಕೆ ಸಾರ್ದೊಂದು ಮರನಂ ಮೆಱೆಗೊಂಡು ನೋೞ್ಪೊಂ ತತ್ಪುರಃಸ್ಥಿತಮಪ್ಪ ಮಣಿಮಂಟಪದೊಳ್ ದಿವ್ಯಸ್ತ್ರೀಜನಂಗಳ್ ವಿಲಾಸದಿಂ ಚಾಮರಮಿಕ್ಕೆ ದಿವ್ಯಶಯ್ಯಾತಳದ ಮೇಗಿರ್ದು ನಾಟಕಮಂ ನೋೞ್ಪ ಕುಮಾರನಂ ಕಂಡು ಹರ್ಷಚಿತ್ತದಿಂದಂ ಕುಸುಮಿತ ಕದಂಬವೃಕ್ಷಂಬೊಲ್ ಕಂಟಕಿತ ರೋಮಾಂಚಿತಗಾತ್ರನಾಗಿ ಪರಿದುವರ್ಪೊನಂ ಕಂಡಿದಿರೆಯ್ದೆ ಯಾತನುಂ ಕುಮಾರನ ಚರಣಾರವಿಂದಂಗಳ್ಗೆಱಗಿ ಬಿರ್ದು ಮೂರ್ಛಾಗತನಾದೊಡಾಗಳ್ ಶೀತಳಕ್ರಿಯೆಗಳಿಂದೆೞ್ಚುತ್ತದಿಂಗಳಿಂ ಕಂಡೆಂ ಸ್ವಾಮಿ ನಿನ್ನಂ ನಂಬಿರ್ದೆ ನಾನೆಂದು ಮಹಾ ದುಃಖದಿಂದೞ್ವನಂ ಸಂತಯಿಸಿ ವಿಪುಳಶ್ರೀಯೆಂಬ ವಿದ್ಯಾಧರವಿಳಾಸಿನಿಯಂ ಕರೆದಿಂತೆಂದು ಪೇೞ್ಪನೆನ್ನ ಸಹೋದರನೆಂತುಂ ಶ್ರಮಮ ನೀಗಿ ಸುಖದಿಂ ತಣಿದೊನಕ್ಕುಮಂತಾಗೆ ಸ್ನಾನಪಾನ ಭೋಜನಾದಿ ಕ್ರಿಯೆಗಳಂ ಬೇಗಂ ಮಾಡೆಂದು ಪೇೞ್ದೊಡಾಕೆಯುಮಂತೆಗೆಯ್ದೆನೆಂದಾತನಂ ಮಹಾವಿಭೂತಿಯಿಂದಂ ವಿದ್ಯಾಧರ ವಿಲಾಸಿನಿ ಮಜ್ಜನಂಬುಗಿಸಿ ದಿವ್ಯಾಹಾರಮನೂಡಿ ವಸ್ತ್ರಾಭರಣ ಗಂಧಮಾಲ್ಯಾದಿ ತಾಂಬೂಲಾದಿಗಳಿಂ ತಣಿಪಿದಾಗಳಾತನುಂ ಮುನ್ನಿನ ದುಃಖಮೆಲ್ಲಮಂ ಮಱದಂ

     ಕದಡಿದ ಮನಸ್ಸುಳ್ಳವನಾಗಿ ನಿಶ್ಚಯವಾಗಿಯೂ ನಾನಿದನ್ನು ನೋಡುವೆನು – ಎಂದು ಅದೇ ಕಡೆಗಾಗಿ ತೆರಳಿದನು. ಅಲ್ಲಿ ಹೊಳೆವ ಚಿನ್ನದಿಂದ ಮಾಡಿದ್ದೂ ಹಲವಾರು ರತ್ನಗಳನ್ನು ಕೆತ್ತಿಸಿದ್ದೂ ಚಲಿಸುವ ಧ್ವಜ ಬಾವುಟಗಳುಳ್ಳುದೂ ವಿದ್ಯಾಧರತರುಣಿಯರಿಗೆ ಆಡಲು ಉಪಯುಕ್ತವೂ ಆದ ಮಹಾಭಾವನವನ್ನು ಕಂಡು ಆಶ್ಚರ್ಯಪಟ್ಟನು. ಅದರ ಬಳಿಗೆ ಹೋಗಿ ಒಂದು ಮರದ ಮರೆಯಲ್ಲಿದ್ದು ನೋಡಿದನು. ಆ ಭವನದ ಎದುರುಗಡೆ ಇದ್ದ ರತ್ನಮಂಟಪದಲ್ಲಿ ದೇವತಾಸ್ತ್ರೀಯರು ಸೊಗಸಾಗಿ ಚಾಮರವನ್ನು ಬೀಸುತ್ತಿರಲು ದಿವ್ಯವಾದ ಹಾಸಿಗೆಯ ಮೇಲೆ ಕುಳಿತು ನಾಟಕವನ್ನು ನೋಡುವ ಸನತ್ಕುಮಾರನನ್ನು ಕಂಡು ಸಂತುಷ್ಟ ಮನಸ್ಕನಾದನು. ಹೂಬಿಟ್ಟ ಕಡವೆ ಮರದಂತೆ ರೋಮಾಂಚಗೊಂಡ ದೇಹವುಳ್ಳವನಾಗಿ ನಡೆದು ಬರುವವರನ್ನು ಕುಮಾರನು ಕಂಡು ಎದುರಿಗೆ ಬಂದನು. ಅವನು ಕುಮಾರನ ಪಾದಕಮಲಗಳಿಗೆ ವಂದಿಸಿ ಬಿದ್ದು ಮೂರ್ಛೆ ಹೋದನು. ಆಗ ಶೀತಳಕ್ರಿಯೆಗಳಿಂದ ಎಚ್ಚರಗೊಂಡು “ಪ್ರಭುವೇ, ನಿನ್ನನ್ನು ಆರು ತಿಂಗಳನಂತರ ಇದೀಗ ಕಂಡೆನು. ನಾನು ನಿನ್ನನ್ನು ನಂಬಿದ್ದೇನೆ” ಎಂದು ಮಹಾವ್ಯಸನದಿಂದ ಅತ್ತನು. ಸನತ್ಕುಮಾರನು ಅವನನ್ನು ಸಮಾಧಾನಪಡಿಸಿ ವಿಪುಳಶ್ರೀ ಎಂಬ ವಿದ್ಯಾಧರ ಸ್ತ್ರಿಯನ್ನು ಕರೆದು ಹೀಗೆಂದನು – “ನನ್ನ ಸಹೋದರನಾದ ಇವನು ಹೇಗಾದರೂ ಆಯಾಸವನ್ನು ಕಳೆದು ಸುಖದಿಂದ ತೃಪ್ತಿಗೊಳ್ಳುವ ಹಾಗೆ ಅವನಿಗೆ ಸ್ನಾನ – ಪಾನ – ಭೋಜನ ಮುಂತಾದುವನ್ನು ಬೇಗನೆ ನೆರವೇರಿಸು. “ ಹೀಗೆ ಹೇಳಲು, “ಹಾಗೆಯೇ ಮಾಡುವೆನು” ಎಂದು ಆ ವಿದ್ಯಾಧರ ಸ್ತ್ರೀಯು ಮಹೇಂದ್ರ ಸಿಂಹನಿಗೆ ಮಹಾವೈಭವದಿಂದ ಸ್ನಾನವನ್ನು ಮಾಡಿಸಿ ದಿವ್ಯವಾದ ಆಹಾರವನ್ನು ಕೊಟ್ಟು ಉಡಿಗೆ, ತೊಡಿಗೆ, ಗಂಧ, ಹೂಮಾಲೆ, ಎಲೆಯಡಕೆ –ಮುಂತಾದವುಗಳಿಂದ ತೃಪ್ತಿಪಡಿಸಿದಳು. ಅವನು ಆಗ ಹಿಂದಿನ ದುಃಖವೆಲ್ಲವನ್ನೂ ಮರೆತನು. 

       ಮುನ್ಮ ಕ್ನಶಭಾಗಿಯಪ್ಪ ಪುರುಷಂ ಸ್ವರ್ಗಮನೆಯ್ದಿ ಮಾಱಪ್ಪವೊಲೆ ಆಯ್ತಾಗಳಲ್ಲಿಂ ಬಂದು ಕುಮಾರನೋರಾಸನದೊಳಿರ್ದು ಸರ್ವಾಭರಣಭೂ ತನಾಗಿ ನೇತ್ರಮನೋಹರಿಯೆಂಬ ದಿವ್ಯಸಭೆಯಂ ನೋಡಿ ವಿಸ್ಮಯಚಿತ್ತನಾಗಿ ಇಂತೆಂದು ಸ್ವಾಮಿ ವ್ರತ ಶೀಲೋಪವಾಸ ತಪಶ್ಚರಣ ಸಂನ್ಯಸನಾದಿ ಶುಭಾನುಷ್ಠಾನಕ್ರಿಯೆಗಳಿಂ ಸತ್ಪುರುಷಂ ಮಱುಭವದೊಳ್ ದೇವಾಂಗನೆಯರ್ಕ್ಕಳೆಱೆಯನಕ್ಕುಂ ನೀಮೀ ಭವದಿಂದಿಂತಪ್ಪ ವಿಭವಮನೆಯ್ದಿದಿರಿದೆನಗೆ ಮಹಾವಿಸ್ಮಯಮೆನೆ ಕುಮಾರನಿಂತೆಂದನಿವರ್ಗ್ಗಳ್ ದೇವಕನ್ನೆಯರಲ್ಲರ್ ವಿದ್ಯಾಧರಿಯರ್ಕ್ಕಳೆನೆ ಇವರ್ಗ್ಗಳಂ ನೀಮೆಂತು ಪೆತ್ತಿರೆಲ್ಲಿ ಮೇಣಾವ ಸ್ವರೂಪದಿಂ ಬಂದಿರಿದನೆನಗೆ ತಿಳಿಯೆ ಪೇೞಮೆನೆ ಕುಮಾರನಿರುಳೆಲ್ಲಮತಿರಂಜನೆಯೆಂಬ ನಾಟಕಮಂ ನೋಡಿ ನಿದ್ರಾಸುಖಮಂ ಪೆಱದೊನಾ ಕಮಳಮತಿಯೆಂಬ ವಿದ್ಯಾಧರ ವಿಳಾಸಿನಿಯಂ ವಿದಗ್ಧೆಯಂ ಕರೆದೆನ್ನ ಸಂಬಂಯಪ್ಪ ಕಥೆಯೆಲ್ಲಮಂ ಮಹೇಂದ್ರಸಿಂಹಂಗೆ ಪೇೞೆಂದು ನಿದ್ರಾವಶಗತನಾಗಿ ವಾಸಗೃಹಮಂ ಪೊಕ್ಕನಿತ್ತಾಕೆಯುಮಾತಂಗಿಂತೆಂದು ಪೇೞಲ್ ತಗುಳ್ದಳ್ ಕುಮಾರನಿಂದಾರೂಢಮಪ್ಪ ದುಷ್ಪಾಶ್ವಂ ಕುಮಾರನಂ ಕೊಂಡು ಮನೋವೇಗದಿಂ ಗಿರಿ ವನ ದರಿ ನದೀಪ್ರದೇಶಂಗಳೊಳ್ ಮೂಱುದಿವಸ ಮಿರುಳುಂ ಪಗಲುಂ ಪರಿಯುತ್ತಿರ್ದುದು ಕರುಳ್ ಪಱದು ತೆಗಲೆಯೊಡೆದು ಕಾಲಂಗೆಯ್ದತ್ತಾ ಗಳ್ ಕುಮಾರನುಂ ಪಸಿವುಂ ನೀರೞ್ಕೆಯಿಂದಮಾನುಂ ಬಾಸೆಪಟ್ಟು ಬಸಮೞದು ಪಿರಿದೊಂದಾಲದ ಮರದ ಕೆೞಗೆ ಶಿಲಾತಳದ ಮೇಗೆ ಪಟ್ಟಿರ್ದ್ದನ್

   ಹಿಂದೆ ಕಷ್ಟಗಳನ್ನು ಅನುಭವಿಸಿದವನು ಸ್ವರ್ಗಕ್ಕೆ ಹೋಗಿ ತನ್ನ ಹಿಂದಿನ ಕಷ್ಟಕ್ಕೆ ಸುಖವನ್ನು ವಿನಿಮಯ ಮಾಡಿಕೊಳ್ಳುವಂತೆಯೇ ಆಗ ಅವನಿಗಾಯಿತು. ಅಲ್ಲಿಂದ ಬಂದು ಸನತ್ಕುಮಾರನೊಂದಿಗೆ ಒಂದೇ ಪೀಠದಲ್ಲಿ ಕುಳಿತುಕೊಂಡು ಎಲ್ಲಾ ಆಭರಣಗಳಿಂದ ಅಲಂಕೃತನಾಗಿ ನೇತ್ರಮನೋಹರವಾದ ದಿವ್ಯ ಸಭೆಯನ್ನು ನೋಡಿ ಮನದಲ್ಲಿ ಆಶ್ಚರ್ಯಪಟ್ಟು ಹೀಗೆಂದನು – “ಪ್ರಭುವೇ, ವ್ರತ, ಶೀಲ, ಉಪವಾಸ, ತಪಸ್ಸು, ಸಂನ್ಯಾಸ – ಮುಂತಾದ ಶುಭಕರ ಆಚರಣೆಗಳಿಂದ ಸತ್ಪುರುಷನು ಮುಂದಿನ ಜನ್ಮದಲ್ಲಿಯೇ ದೇವತಾಸ್ತ್ರೀಯರಿಗೆ ಒಡೆಯನಾಗುವನು. ನೀವು ಈ ಜನ್ಮದಲ್ಲಿಯೇ ಇಂತಹ ವೈಭವವನ್ನು ಹೋದಿದ್ದೀರಿ! ಇದು ನನಗೆ ಮಹದಾಶ್ಚರ್ಯ !. “ ಆಗ ಕುಮಾರನು ಹೀಗೆಂದನು – “ಇವರು ಸುರಕನ್ಯೆಯರಲ್ಲ ವಿಧ್ಯಾಧರಿಯರು”. ಅದಕ್ಕೆ ಮಹೇಂದ್ರಸಿಂಹನು – “ಇವರನ್ನು ನೀವು ಎಲ್ಲಿ ಪಡೆದಿರಿ ? ಅಲ್ಲದೆ ಯಾವ ರೀತಿಯಲ್ಲಿ ಇಲ್ಲಿಗೆ ಬಂದಿರಿ? ಇದನ್ನು ನನಗೆ ತಿಳಿಸಿರಿ” ಎಂದನು, ಕುಮಾರನು ರಾತ್ರಿಯೆಲ್ಲ ‘ಅತಿರಂಜನೆ’ ಎಂಬ ನಾಟಕ ನೋಡಿನಿದ್ದೆ ಗೆಟ್ಟಿದ್ದುದರಿಂದ ಕಮಳಮತಿ ಎಂಬ ವಿದ್ಯಾಧರೆ ವಿದಗ್ದೆಯಾದ ಸ್ತ್ರೀಯನ್ನು ಕರೆದು “ನನ್ನ ಸಂಬಂಧವಾದ ಎಲ್ಲ ಕಥೆಯನ್ನೂ ಮಹೇಂದ್ರಸಿಂಹನಿಗೆ ಹೇಳು” ಎಂದು ನುಡಿದು ನಿದ್ರೆಗೆ ವಶನಾಗಿ ಮಲಗುವ ಮನೆಯನ್ನು ಹೊಕ್ಕನು. ಇತ್ತ ಕಮಳಮತಿ ಮಹೇಂದ್ರಸಿಂಹನಿಗೆ ಈ ರೀತಿಯಾಗಿ ಹೇಳತೊಡಗಿದಳು . – ಕುಮಾರನು ಕುಳಿತು ಪಟ್ಟದ ಕುದುರೆ ಕುಮಾರನನ್ನು ತೆಗೆದುಕೊಂಡು ಮನೋವೇಗದಿಂದ ಬೆಟ್ಟ, ಕಾಡು, ತಪ್ಪಲು, ಹೊಳೆಗಳ ಸ್ಥಳಗಳಲ್ಲಿ ಮೂರು ದಿವಸ ಇರುಳೂ ಹಗಲೂ ಓಡುತ್ತಿದ್ದು ಕರುಳು ತುಂಡಾಗಿ ಎದೆ ಒಡೆದು ಸತ್ತುಹೋಯಿತು. ಆಗ ಸನತ್ಕುಮಾರನು ಬಹಳವಾಗಿ ಹಸಿವು ಬಾಯಾರಿಕೆಗಳಿಂದ ಬಾತನಾಗಿ ಶಕ್ತಿಗುಂದಿದ್ದನು. ಅವನು ದೊಡ್ಡದಾದ ಒಂದು ಆಲದ ಮರದ ಕೆಳಗಿನ ಕಲ್ಲಿನ ತಳದ ಮೇಲೆ ಮಲಗಿದ್ದನು. 

      ಆಗಳಲ್ಲಿಯಾ ವಟವೃಕ್ಷವಾಸಿಯಪ್ಪ ಮನೋಹರನೆಂಬ ಯಕ್ಷಂ ಕಂಡೀ ಪುರುಷಂ ಸಕಲಚಕ್ರವರ್ತಿಯಪ್ಪನೆಂದಱದು ಗಂಧೋದಕಮಂ ಮೇಲೆ ತಳಿದು ತಣ್ಣಾಳಿಯಂ ವಿಗುರ್ವಿಸಿ ದೇಹಕ್ಕಾಪ್ಯಾಯನಂ ಮಾಡಿ ಸ್ವರ್ಣಭಾಜನದಿಂದಾಮೋದಸುಗಂಧಮಪ್ಪ ಕೋಡುವ ನೀರನಾತಂಗೆ ಕುಡಿಯಲೆಱೆದನಾಗಳ್ ಕುಮಾರಂ ನೀನಾರ್ಗ್ಗೀ ನೀರನೆಲ್ಲಿಂ ತಂದಯ್ ಪೇೞೆಂದು ಬೆಸಗೊಂಡೊಂಡಾತನಿಂತೆಂದನಾನೀ ವಟವೃಕ್ಷನಿವಾಸಿಯೆನ್ ಮನೋಹರನೆಂಬ ಯಕ್ಷನೆನ್ ಕ್ಷುಲ್ಲಕಮಾನಸಮೆಂಬ ಸರೋವರದಿಂ ತಂದೆನೀ ನೀರನೆನೆ ಅಂತಪ್ಪೊಡೆ ನೀನೆನ್ನನಾ ಕೊಳಕ್ಕೊಡಗೊಂಡು ಪೋಗಲ್ಲಿಯಾ ನೀರಂ ಮಿಂದು ಕುಡಿದೊಡಲ್ಲದೆನಗೆ ನೀರೞ್ಕೆ ಕಿಡದೆಂದು ಪೇೞ್ದೊಡೆ ಕುಮಾರನನೆತ್ತಿಕೊಂಡು ಪೋಗಿ ಯಕ್ಷನಾ ಸರೋವರದ ತಡಿಯೊಳಿೞಪಿ ಪೋದನ್ ಆ ಅವಸರದೊಳ್ ಸಿತಯಕ್ಷನೆಂಬ ವ್ಯಂತರದೇವಂ ಕುಮಾರನ ಪೂರ್ವವೈರಿ ಭೌಮವಿಹಾರಕ್ಕೆ ಬಂದು ಕುಮಾರನಂ ಕಂಡು ಕ್ರೋಧಾಗ್ನಿ ಪೆರ್ಚ್ಚಿ ಭೈರವರೂಪಧಾರಿಯಾಗಿ ಕಳಕಳಧ್ವನಿಯಿಂದಂ ಗರ್ಜಿಸಿ ಬರ್ಪೊನಂ ಕಂಡಾಗಳ್ ಸಿಂಹಾನಾದಂಗೆಯ್ದು ಖೞ್ಗಸನ್ನಿಭಮಪ್ಪ ಮಹಾಶಿಲೆಯಂ ಕಿೞತ್ತಿಕೊಂಡು ಪ್ರತಿರಾಕ್ಷಸಂಬೊಲ್ ನಿಂದ ಕುಮಾರನಂ ನೋಡಿ ವ್ಯಂತರದೇವಂ ನಾಗಪಾಶದಿಂದಂ ವೇಷ್ಟಿಸಿದೊಡೆ ಕುಮಾರನದಂ ಹಸ್ತತಳದಿಂ ಪಱಯೆ ಪೊಯ್ದನಾಗಳಾ 

      ಆಗ ಅಲ್ಲಿ ಆ ಆಲದ ಮರದಲ್ಲಿ ವಾಸವಾಗಿದ್ದ ಮನೋಹರನೆಂಬ ಯಕ್ಷನು ಅವನನ್ನು ಕಂಡನು. “ಈ ಪುರುಷನು ಭರತಕ್ಷೇತ್ರದ ಆರು ಖಂಡಗಳಿಗೂ ಆರಾಜನಾಗುವನು” ಎಂದು ತಿಳಿದುಕೊಂಡನು. ಕುಮಾರನು ಮೇಲೆ ಗಂಧದ ನೀರನ್ನು ಸೇಚಿಸಿದನು. ತಂಗಾಳಿಯನ್ನು ಮಾಯೆಯಿಂದ ಸೃಷ್ಟಿಸಿ ಅವನ ದೇಹಕ್ಕೆ ಹಿತವನ್ನುಂಟುಮಾಡಿ, ಚಿನ್ನದ ಪಾತ್ರೆಯಿಂದ ಸಂತೋಷಕರವೂ ಸುಗಂಧಯುಕ್ತವೂ ಅದ ತಣ್ಣೀರನ್ನೂ ಅವನಿಗೆ ಕುಡಿಯುವುದಕ್ಕಾಗಿ ಹೊಯ್ದನು. ಆಗ ಕುಮಾರನು “ನೀನು ಯಾರು ? ಈ ನೀರನ್ನು ಎಲ್ಲಿಂದ ತಂದೆ ? ಹೇಳು” ಎಂದು ಕೇಳಿದನು. ಅದಕ್ಕೆ ಅವನು – “ನಾನು ಈ ಆಲದ ಮರದಲ್ಲಿ ವಾಸಿಸುತ್ತಿರುವ ಮನೋಹರನೆಂಬ ಯಕ್ಷನಾಗಿರುವೆನು. ಈ ನೀರನ್ನು ಕ್ಷುಲ್ಲಕಮಾನಸವೆಂಬ ಕೊಳದಿಂದ ತಂದಿರುವೆನು” ಎಂದು ಹೇಳಿದನು. ಕುಮಾರನು ಅವನೊಡನೆ “ಹಾಗಾದರೆ ನೀನು ನನ್ನನ್ನು ಆ ಕೊಳಕ್ಕೆ ಕರೆದುಕೊಂಡು ಹೊಗು. ಅಲ್ಲಿ ಅ ನೀರಿನಲ್ಲಿ ಸ್ನಾನಮಾಡಿ ಜಲಪಾನ ಮಾಡಿದಲ್ಲದೆ ನನಗೆ ಬಾಯಾರಿಕೆ ಪರಿಹಾರವಾಗದು” ಎಂದು ಹೇಳಲು, ಯಕ್ಷನು ಕುಮಾರನನ್ನು ಎತ್ತಿಕೊಂಡು ಹೋಗಿ ಆ ಸರೋವರದ ದಡದಲ್ಲಿ ಇಳಿಸಿ ಹೋದನು. ಆ ಸಂದರ್ಭದಲ್ಲಿ ಸನತ್ಕುಮಾರನು ಪೂರ್ವಜನ್ಮದ ಶತ್ರುವಾದ ಸಿತಯಕ್ಷನೆಂಬ ವ್ಯಂತರದೇವನು ಭೂಮಿಯಲ್ಲಿ ಸಂಚರಿಸುವುದಕ್ಕಾಗಿ ಬಂದು, ಕುಮಾರನನ್ನು ಕಂಡನು. ಆಗ ಸಿಟ್ಟೆಂಬ ಬೆಂಕಿ ಹೆಚ್ಚಾಗಿ ಭೈರವರೂಪವನ್ನು ಧರಿಸಿ ಗರ್ಜಿಸುತ್ತ ಬಂದನು. ಅವನನ್ನು ಕುಮಾರನು ಕಂಡು ಸಿಂಹಗರ್ಜವೆ ಮಾಡಿ ಖಡ್ಗವನ್ನು ಹೋಲುವ ದೊಡ್ಡ ಕಲ್ಲನ್ನು ಕಿತ್ತು ಎತ್ತಿಕೊಂಡು ಎದುರಾಗಿ ರಾಕ್ಷಸನೇ ಬಂದ ಹಾಗೆ ನಿಂತನು. ವ್ಯಂತರದೇವನು ಕುಮಾರನನ್ನು ನೋಡಿ ನಾಗಪಾಶದಿಂದ ಅವನನ್ನು ಸುತ್ತುವರಿಯಲು (ಬಂಸಲು) ಕುಮಾರನು ಅದನ್ನು ತನ್ನ ಅಂಗೈಯಿಂದ ಹೊಡೆದು ತುಂಡುಮಾಡಿದನು. 

        ದೇವಂ ನಾನಾ ವಿಧ ಮಾಯಾಯುದ್ಧಂಗಳಿಂ ಕಾದೆ ಕುಮಾರನಂ ಯಷ್ಟಿಮುಷ್ಟಿ ಪ್ರಹಾರಾದಿಗಳಿಂ ಗೆಲ್ದಿರ್ದೊನನೆತ್ತಿಕೊಂಡು ಸಮುದ್ರದ ಬಡವಾಮುಖದೊಳಿಕ್ಕಿ ಕೊಲ್ವೆನಮೋಘಮೆಂದು ನೆಲದಿಂದುರ್ಬಿ ಬಂದಾಕಾಶಕ್ಕೆ ನೆಗಪಿದೊನ ಸ್ಕಂಧಮಂ ತಿವಿದೊಂ ಕುಮಾರನ ಅವೃಷ್ಟಿವಜ್ರಘಾತಂಬೊಲಪ್ಪ ಮುಷ್ಟಿಯಿಂ ದಿವ್ಯಪುರುಷನ ಹಸ್ತಪ್ರಹಾರಮೆಂಬ ಮುದ್ರಾಪೀಡೆಯಿಂ ತ್ರಸ್ತಾಭಿಭೂತನಾಗಿ ಬೆನ್ನಿತ್ತೋಡಿದನಾಗಳ್ ತನ್ನಿವಾಸಿಗಳಪ್ಪ ಯಕ್ಷಕಿನ್ನರಾದಿಗಳ್ ಮಸ್ತಕದೊಳ್ ನೃಸ್ತಹಸ್ತರ್ಕ್ಕಳಾಗಿ ಜಯಜಯಶಬ್ದಂಗಳಿಂದಂ ಪುಷ್ಪಾದಿಗಳಿಂ ಕುಮಾರನಂ ಪೂಜಿಸಿದರ್ ಆ ಅವಸರದೊಳಿಂದ್ರಪ್ರಭನೆಂಬ ವಿದ್ಯಾಧರಂ ಬಂದು ಕುಮಾರನ ಚರಣಾರವಿಂ ದಂಗಳ್ಗೆಱಗಿ ಪೊಡೆವಟ್ಟಿಂತೆಂದನ್ ಸ್ವಾಮಿ ಮೂವತ್ತಾಱುವರುಷಂ ನಿನ್ನ ಬರವನಾನೆನ್ನರಸನ ಬೆಸದಿಂ ಪಾರುತ್ತಿರ್ದ್ದೆಂ ನೀನೆನ್ನ ಭಾಗ್ಯದಿನಿಲ್ಲಿಗೆ ಬಂದಯ್ ಏಱು ವಿಮಾನಮನೆನೆ ಅಂತೆಗೆಯ್ವೆನೆನ್ನ ಬಯಕೆಯಂ ತೀರ್ಚಿದ ಬೞಕ್ಕೇಱುವೆನೆಂದು ಕೊಳನಂ ಪೊಕ್ಕು ಸ್ವೇಚ್ಛೆಯಿಂ ಕ್ರೀಡಿಸಿ ಪೊಱಮಟ್ಟನನಾ ಖೇಚರಂ ಕೊಂಡು ಪೋಗಿ ತದ್ವನದೊಳತಿ ರಮಣೀಯಮಪ್ಪ ಪ್ರದೇಶದೊಳಾಡುತ್ತಿರ್ದ್ದ ವಿದ್ಯಾಧರ ಕನ್ನೆಯರ್ಕಳ ಪಕ್ಕದಿರಿಸಿ ಪೋದನ್ ಎತ್ತ ಖೇಚರ ಕನ್ನೆಯರ್ಕಳ ಕಣ್ಗಳೆಂಬ ಮೀಂಗಳ್ ಕುಮಾರನ ರೂಪೆಂಬ ಗಾಳದಿಂ ತೆಗೆಯೆಪಟ್ಟು ತಪನ ತಾಪನ ದಹನ ವಿಮೋಹನ ಮರಣ ಸ್ವರೂಪದ ಕಾಮಶರಂಗಳವರ್ಗ್ಗಳೆರ್ದೆಯನುರ್ಚಿ ಪೋಗಿ ಪರವಸೆಯರಾಗಿ ಮಱುಗಿದಱುನೀರ ಮೀಂಗಳ್ವೊಲಾದರಿದೇಂ ಚೋದ್ಯವೊ ಕುಸುಮಬಾಣ ಬಿಲ್ಬಲ್ಮೆ

    ಆಗ ಸಿತಯಕ್ಷನು ಹಲವಾರು ರೀತಿಯ ಮಾಯೆಯ ಯುದ್ದಗಳಿಂದ ಹೋರಾಡಲು ಕುಮಾರನು ದೊಣ್ಣೆ ಮುಷ್ಟಿಗಳ ಹೊಡೆತಗಳಿಂದ ಗೆದ್ದನು. ವ್ಯಂತರನು ಕುಮಾರನನ್ನು ಎತ್ತಿಕೊಂಡು, ಸಮುದ್ರದ ವಡಬಾಗ್ನಿಯ ಬಾಯಿಗೆ ಹಾಕಿ ಕೊಲ್ಲುವೆನು, ಈ ಕಾರ್ಯ ವ್ಯರ್ಥವಾಗದು – ಎಂದು ನೆಲದಿಂದ ಹಿಗ್ಗಿ ಬಂದು ಆಕಾಶಕ್ಕೆ ಎತ್ತಲು ಕುಮಾರನು ಅವನ ಹೆಗಲಿಗೆ ತಿವಿದನು. ಅವನ ವರಸಿಡಿಲಿನ ಹೊಡೆತದಂತಹ ಮುಷ್ಟಿಯ ಹೊಡೆತದ ಹಿಂಸೆಯಿಂದ ಹೆದರಿದವನೂ ಹೊಡೆಯಲ್ಪಟ್ಟವನೂ ಆಗಿ ಬೆನ್ನುಕೊಟ್ಟು ಓಡಿಹೋದನು. ಆಗ ಅಲ್ಲಿ ವಾಸಮಾಡುತ್ತಿದ್ದ ಯಕ್ಷರು ಕಿನ್ನರರು ಮುಂತಾದವರು ತಲೆಯ ಮೇಲೆ ಕೈಯಿಟ್ಟವರಾಗಿ ಜಯ ಜಯ ಎಂಬ ಶಬ್ದಗಳಿಂದಲೂ ಹೂ ಮುಂತಾದವುಗಳಿಂದಲೂ ಸನತ್ಕುಮಾರನನ್ನು ಪೂಜಿಸಿದರು. ಆ ಸಂದರ್ಭದಲ್ಲಿ ಇಂದ್ರಪ್ರಭನೆಂಬ ವಿದ್ಯಾಧರನು ಬಂದು ಕುಮಾರನ ಪಾದಕಮಲಗಳಿಗೆ ಬಿದ್ದು ಸಾಷ್ಟಾಂಗ ನಮಸ್ಕಾಗಳನ್ನು ಮಾಡಿ ಹೀಗೆ ಹೇಳಿದನು – ಸ್ವಾಮೀ, ನಾನು ನನ್ನ ಅರಸನ ಆಜ್ಞೆಯ ಪ್ರಕಾರ ಮೂವತ್ತಾರು ವರ್ಷಗಳಿಂದ ನಿನ್ನ ಆಗಮನವನ್ನು ಎದುರು ನೋಡುತ್ತ ಇದ್ದೆನು. ನೀನು ನನ್ನ ಪುಣ್ಯದಿಂದ ಇಲ್ಲಿಗೆ ಬಂದಿರುತ್ತೀ. ಇಗೋ ವಿಮಾನ ಹತ್ತು ಹತ್ತು. “ ಹೀಗೆನ್ನಲು, “ಹಾಗೆಯೇ ಮಾಡುವೆನು ; ನನ್ನ ಬಯಕೆಯನ್ನು ತೀರಿಸಿ ಆದಮೇಲೆ ಹತ್ತುವೆನು” ಎಂದು ನುಡಿದು ಕುಮಾರನು ಸರೋವರವನ್ನು ಹೊಕ್ಕನು. ಅಲ್ಲಿ ತನ್ನ ಇಚ್ಚೆಗೆ ಬಂದಂತೆ ಜಲಕೇಳಿಯಾಡಿ ಹೊರಟನು. ಹೊರಟ ಅವನನ್ನು ವಿದ್ಯಾಧರನು ಎತ್ತಿಕೊಂಡು ಹೋಗಿ, ಆ ಕಾಡಿನಲ್ಲಿ ಅತ್ಯಂತ ಮನೋಹರವಾದ ಸ್ಥಳದಲ್ಲಿ ಆಡುತ್ತಿದ್ದ ಕನ್ಯೆಯರ ಬಳಿಯಲ್ಲಿರಿಸಿ ತೆರಳಿದನು. ಇತ್ತ ವಿದ್ಯಾಧರ ಕನ್ಯೆಯರ ಕಣ್ಣುಗಳೆಂಬ ಮೀನುಗಳು ಕುಮಾರನ ರೂಪವೆಂಬ ಗಾಳದಿಂದ ಹಿಡಿಯಲ್ಪಟ್ಟವು. ತಪನ, ತಾಪನ, ದಹನ, ವಿಮೋಹನ (ವಿಶೇಷವಾಗಿ ಮೋಹಗೊಳಿಸುವುದು), ಮರಣ – ಎಂಬ ಗುಣಸ್ವರೂಪವುಳ್ಳ ಕಾಮ ಬಾಣಗಳು ಆ ಕನ್ಯೆಯರ ಎದೆಗೆ ನಾಟಿ ಬೆನ್ನಿನಲ್ಲಿ ಹೊರಟು, ಅವರು ಮೂರ್ಛೆಹೋಗಿ, ಕುದಿದ ಬತ್ತಿದ ನೀರಿನ ಮೀನುಗಳಂತೆ ಆದರು. ಪುಷ್ಪಬಾಣನಾದ ಮನ್ಮಥನ ಬಿಲ್ಲಿನ ಸಾಮರ್ಥ್ಯ ಏನೊಂದು ಆಶ್ಚರ್ಯವೋ! 

ಶ್ಲೋಕ ||      ಅಹೋ ಧನುಷಿ ಕೌಶಲ್ಯಂ ಮನ್ಮಥಸ್ಯ ಮಹಾತ್ಮನಃ

                  ಅಸ್ಪಶನ್ನಪಿ ಗಾತ್ರಾಣಿ ಛಿನತ್ತೈಂತರ್ಗತಂ ಮನಃ ||

ಇವರ್ಗ್ಗಳ್ ತನ್ಮುಖನಿರೀಕ್,ಣದೊಳಾಸಕ್ತೆಯರಾಗಿರ್ದ್ದರಾಗಳಾ ಇಂದ್ರಪ್ರಭನೆಂಬ ವಿದ್ಯಾಧರಂ ಪ್ರಿಯಸಂಗಮಮೆಂಬ ಪೊೞಲನೆಯ್ದಿ ಭಾನುವೇಗನೆಂಬ ವಿದ್ಯಾಧರಂಗೆ ಪೇೞ್ದನಾದೇಶ ಪುರುಷನಂ ತಂದುಭೂತರಮಣದ ಜ್ಯೋತಿರ್ವಿತಾನಮೆಂಬ ಮಣಿಮಂಟಪದೊಳ್ ಕನ್ನೆಯರ ಪಕ್ಕದಿರಿಸಿ ಬಂದೆನೆನೆ ಆಗಳಾತಂಗೆ ತಣಿವಿನೆಗಂ ತುಷ್ಟಿದಾನಂಗೊಟ್ಟು ವಿಪುಳಶ್ರೀಯೆಂಬ ಖೇಚರಿಯಂ ಕರೆದಿಂತೆಂದಂ ಶೀಘ್ರಂ ಪೋಗಿ ಕೀರ್ತಿಧವಳಂಗೆ ಭೋಜನಾದಿ ವಿಯಂ ಮಾಡೆಂದು ಪೇೞ್ದೊಡಾಕೆಯುಮಂತೆಗೆಯ್ವೆನೆಂದು ಸಪರಿವಾರಂಬೆರಸು ಬಂದಾತಂಗೆ ಮಜ್ಜನ ಭೋಜನ ಪ್ರಸಾಧನಾದಿಗಳುಮಂ ಮಾಡಿ ಮತ್ತೆ ಕುಮಾರನಂ ದಿವ್ಯಶಯ್ಯಾತಳದೊಳ್ ಸುಖದಿನಿರಿಸಿ ಅನಂಗಸುಂದರಿಯೆಂಬ ವಿದ್ಯಾಧರಿಯನಾಡವೇೞ್ದು ನಾಟಕಮನಭಿನಯಿಸುತ್ತುಂ ಕುಮಾರನ ಮುಂದೆ ವಿನಯಾನ್ವಿತೆಯಾಗಿರ್ದೊಳಂ

      ಮಹಾತ್ಮನಾದ ಮನ್ಮಥನ ಬಿಲ್ಲುವಿದ್ಯೆಯ ನೈಪುಣ್ಯ ಆಶ್ಚರ್ಯಕರ. ಅವನು ದೇಹಗಳನ್ನು ಮುಟ್ಟದೆ ಇದ್ದರೂ ಒಳಗಿರತಕ್ಕ ಮನಸ್ಸನ್ನು ತುಂಡರಿಸುತ್ತಾನೆ. ಇವರು ಸನತ್ಕುಮಾರನ ಮುಖವನ್ನು ನೋಡುವುದರಲ್ಲೇ ಆಸಕ್ತೆಯರಾಗಿದ್ದರು. ಆಗ ಇಂದ್ರಪ್ರಭನೆಂಬ ವಿದ್ಯಾಧರನು ಪ್ರಿಯಸಂಗಮವೆಂಬ ಪಟ್ಟಣಕ್ಕೆ ಹೋಗಿ ಭಾನುವೇಗವೆಂಬ ವಿದ್ಯಾಧರರಾಜನಿಗೆ ಹೀಗೆಂದನು – “ನಾನು ನಿಮ್ಮ ಆದೇಶದಂತೆ ಆ ಮನುಷ್ಯನನ್ನು (ಸನತ್ಕುಮಾರನನ್ನು) ತಂದು ಭೂತರಣವೆಂಬ ಕಾಡಿನ ಜ್ಯೋತಿರ್ವಿತಾನವೆಂಬ ರತ್ನಮಂಟಪದಲ್ಲಿ ಕನ್ಯೆಯರ ಸಮೀಪದಲ್ಲಿರಿಸಿ ಬಂದಿರುತ್ತೇನೆ. “ ಹೀಗೆ ಹೇಳಲು, ಆತನಿಗೆ ಭಾನುವೇಗನು ತೃಪ್ತಿಯಾಗುವ ಮಟ್ಟಿಗೆ ತೃಪ್ತಿಕರವಾದ ದಾನವನ್ನು ಕೊಟ್ಟು ವಿಪುಳಶ್ರೀ ಎಂಬ ವಿದ್ಯಾಧರಿಯನ್ನು ಕರೆದು – “ನೀನು ಬೇಗನೆ ಹೋಗಿ ಧವಳ ಕೀರ್ತಿಶಾಲಿಯಾದ ಆತನಿಗೆ ಊಟ ಮುಂತಾದ ವ್ಯವಸ್ಥೆಯನ್ನು ಮಾಡು” ಎಂದು ಹೇಳಿದನು. ಆಕೆ “ಹಾಗೆಯೇ ಮಾಡುವೆನು” ಎಂದು ಹೇಳಿ ಪರಿವಾರದೊಡನೆ ಬಂದು ಅವನಿಗೆ ಸ್ನಾನ – ಭೋಜನ – ಅಲಂಕಾರಾದಿಗಳನ್ನು ಮಾಡಿದ ನಂತರ, ಕುಮಾರನನ್ನು ದಿವ್ಯವಾದ ಹಾಸಿಗೆಯ ಮೇಲೆ ಸುಖದಿಂದ ಇರುವಂತೆ ಮಾಡಿದಳು. ಅನಂಗಸುಂದರಿಯೆಂಬ ವಿದ್ಯಾಧರಿಯನ್ನು ನಾಟ್ಯವಾಡಲು ಹೇಳಿ, ನಾಟಕವನ್ನು ಅಭಿನಯಿಸುತ್ತ ಕುಮಾರನ ಮುಂದೆ ವಿನಯದಿಂದ ಕೂಡಿದವಳಾಗಿದ್ದಳು. 

   ಕುಮಾರಂ ನೋಡಿ ಇಂತೆಂದಂ ನೀಮೆನಗೀದೃಗ್ವಿಧಮಪ್ಪುಪಕಾರಮನೇಕೆ ಗೆಯ್ದಪ್ಪಿರ್ ನೀಮೇನಾರ್ಗ್ಗೆಂದು ಬೆಸಗೊಂಡೊಡಾಕೆಯಿಂತೆಂದಳ್ ಕೇಳ್ ಪೇೞ್ಷೆಂ ಸ್ವಾಮಿ ವಿಜಯಾರ್ಧ ಪರ್ವತದೊಳ್ ಪ್ರಿಯಸಂಗಮಪುರಾಪತಿಯಪ್ಪ ಭಾನುವೇಗನೆಂಬ ವಿದ್ಯಾಧರಂಗೆ ಶ್ರೀಮಾಲೆ ಮೊದಲಾಗೊಡೆಯ ಮಹಾದೇವಿಯರೆಣ್ಣರವರ್ಗ್ಗೆ ಪುಟ್ಟಿದೊರೀಯೆಣ್ಬರುಂ ಕನ್ನೆಯರ್ಕಳ್ ಲಕ್ಷ್ಮೀಮತಿ ಕನಕಕಾಂತೆ ಮಂದಾರಸೇನೆ ಅಳಕೆ ಅಲಂಭೂಷೆ ಹೇಮಾವತಿ ಹೇಮಮಾಳಿನಿ ವಿಜಯಾರ್ಧವತಿಯೆಂದೀ ಪೆಸರ್ಗಳನೊಡೆಯರೆಣ್ಬರುಂ ಮಕ್ಕಳನಾರ್ಗೆ ಕುಡುವಮೆಂದೊಂದು ದಿವಸಂ ನೈಮಿತ್ತಿಕನಂ ಭಾನುವೇಗಂ ಬೆಸಕೊಂಡೊಡಾತನಿಂತೆಂದಂ ಕ್ಷುಲ್ಲಕಮಾನಸಮೆಂಬ ಕೊಳದೊಳ್ ಸಿತಯಕ್ಷನೆಂಬ ದೇವನಂ ಸಂಗ್ರಾಮದೊಳಾವೊಂ ಗೆಲ್ಲುಮಾತಂಗೆ ಕೂಸುಗಳಂ ಕುಡಿಮೆಂದು ಪೇಳ್ದನದಱಂ ನೀನೆಮ್ಮ ಸ್ವಾಮಿಯೆಂದು ಪೇೞ್ದವಸರದೊಳ್ ಮಹಾವಿಭೂತಿಯಿಂ ಬರ್ಪ ಖೇಚರೇಂದ್ರನು ತೋಱದೊಡೀತಂ ನಿಮ್ಮ ಮಾವನೆಂದಾಗಳ್ ಕುಮಾರನುಮಿದಿರೆೞ್ದು ತದ್ಯೋಗ್ಯಮಪ್ಪ ವಿನಯಮಂ ಗೆಯ್ದಿರ್ದೊನಂ ವಿದ್ಯಾಧರೇಂದ್ರಂ ಕುಮಾರನಂ ನೋಡಿ ತ್ರಿಭುವನಕ್ಕೆಲ್ಲಂ ತಿಳಕಮಾಗಿರ್ದ್ದಳಿಯನಂ ನಾನೆ ಪೆತ್ತೆನೆಂದಾದ ಮಾನುಂ ಸಂತುಷ್ಟಚಿತ್ತನಾಗಿ ಕುಮಾರನಂ ಕೊಂಡು ಪೊಗಿ ತನ್ನ ಪೊೞಲಂ ಪೊಕ್ಕಾ ದೆವಸದೊಳೆಣ್ಬರ್ ಕನ್ನೆಯರ್ಕ್ಕಳಂ ಕೈನೀರೆಱೆದು ಕುಮಾರಂಗೆ ಕೊಟ್ಟಂ ಕುಮಾರನುಂ ದಿವ್ಯಾಂಗನೆಯರ್ಕ್ಕಳೊಡನೆ ಸುಖದಿಂದೊಂದಿದನ್

        ಅವಳನ್ನು ಕುಮಾರನು – “ನೀವು ನನಗೆ ಈ ರೀತಿಯಾಗಿರುವ ಉಪಕಾರವನ್ನು ಯಾಕೆ ಮಾಡುತ್ತಿದ್ದೀರಿ ? ನೀವು ಯಾರು ? ಯಾರ ಸಂಬಂಧದವರು ?” ಎಂದು ಕೇಳಲು ಆಕೆ ಹೀಗೆಂದಳು – ಸ್ವಾಮಿಯೆ, ಕೇಳು ಹೇಳುತ್ತೆನೆ. ವಿಜಯಾರ್ಧಪರ್ವತದಲ್ಲಿ ಪ್ರಿಯಸಂಗಮವೆಂಬ ಪಟ್ಟಣದ ಒಡೆಯನಾದ ಭಾನುವೇಗನೆಂಬ ವಿದ್ಯಾಧರನಿಗೆ ಶ್ರೀಮಾಲೆ ಮೊದಲಾಗುಳ್ಳ ಎಂಟು ಮಂದಿ ರಾಣಿಯರು. ಅವರಿಗೆ ಹುಟ್ಟಿದ ಲಕ್ಷ್ಮೀಮತಿ, ಕನನಕಾಂತೆ, ಮಂದಾರಸೇನೆ, ಅಳಕೆ, ಅಲಂಭೂಷೆ, ಹೇಮವತಿ, ಹೇಮಮಾಳಿನಿ, ವಿಜಯಾರ್ಧವತಿ – ಎಂದು ಹೆಸರುಳ್ಳ ಎಂಟು ಮಂದಿ ಕನ್ಯೆಯರನ್ನು ಯಾರಿಗೆ ಕೊಡೋಣ ? ಎಂದು ಭಾನುವೇಗನು ಒಂದು ದಿನ ಜೋಯಿಸನನ್ನು ಕೇಳಲು ಆತನು “ಕ್ಷುಲ್ಲಕಮಾನಸವೆಂಬ ಸರೋವರದಲ್ಲಿ ಸಿತಯಕ್ಷನೆಂಬ ವ್ಯಂತರದೇವನನ್ನು ಯಾವನು ಯುದ್ಧದಲ್ಲಿ ಗೆಲ್ಲುವನೋ ಅವನಿಗೆ ಹೆಣ್ಣುಮಕ್ಕಳನ್ನು ಕೊಡಿ” ಎಂದು ಹೇಳಿದನು. ಆದುದರಿಂದ ನೀನು ನಮಗೆ ಒಡೆಯನು – ಎಂದು ಹೇಳಿದಳು. ಅದೇ ಸಂದರ್ಭದಲ್ಲಿ ಬಹಳ ವೈಭವದಿಂದ ಬರುತ್ತಿದ್ದ ವಿದ್ಯಾಧರರಾಜನಾದ ಭಾನುವೇಗನನ್ನು ತೋರಿಸಿ, “ಈತನು ನಿಮ್ಮ ಮಾವ” ಎಂದು ಹೇಳಿದಳು. ಕುಮಾರನು ಆಗ ಇದಿರೆದ್ದು ಆತನಿಗೆ ಯೋಗ್ಯವೆನಿಸತಕ್ಕ ವಿನಯವನ್ನು ತೋರಿಸಿದನು. ಅಂತಹ ಸನತ್ಕುಮಾರನನ್ನು ವಿದ್ಯಾಧರರಾಜನು ನೋಡಿ, ಮೂರುಲೋಕಗಳಿಗೆಲ್ಲ ತಿಲಕದಂತೆ ಶ್ರೇಷ್ಠನಾಗಿರುವ ಅಳಿಯನನ್ನು ನಾನೇ ಪಡೆದಿದ್ದೇನೆ. – ಎಂದು ಅತ್ಯಂತವಾಗಿ ಸಂತೋಷಪಟ್ಟನು. ಕುಮಾರನನ್ನು ಕರೆದುಕೊಂಡು ಹೋಗಿ ತನ್ನ ಪಟ್ಟಣವನ್ನು ಪ್ರವೇಶಿಸಿ ತನ್ನ ಎಂಟು ಮಂದಿ ಕನ್ಯೆಯರನ್ನೂ ಕುಮಾರನಿಗೆ ಧಾರೆಯೆರೆದು ಕೊಟ್ಟನು. ಕುಮಾರನು ಆ ದಿವ್ಯ ಸ್ತ್ರೀಯರೊಂದಿಗೆ ಸುಖದಿಂದ ಕೂಡಿದನು.

    ಆಗಳೊಂದು ವನದೇವತೆ ಬಂದು ಸುನಂದೆಯೆಂಬ ಕನ್ನೆಯ ದುಃಖಮಂ ಕಾಣಲಾರದೆ ಕರುಣಿಸಿ ಕುಮಾರನನೆತ್ತಿಕೊಂಡು ಪೋಗಿ ಹರಿಕೂಟಮೆಂಬ ಪರ್ವತದ ಜ್ಯೋತಿರ್ವನದೊಳ್ ದಿವ್ಯಶಯ್ಯಾತಳಮಂ ವಿಗುರ್ವಿಸಿಯದಱ ಮೇಗೆ ಕುಮಾರನನಿಟ್ಟು ಪೋದೊ ಡಾತನುಂ ಪ್ರಭಾತಸಮಯದೊಳೆೞ್ಚತ್ತು ದೆಸೆಗಳಂ ನೋೞ್ಪೊನಾ ವನಮುಮಂ ತನ್ನಿರ್ದ ಲತಾ ಮಂಟಪಮುಮಂ ನೋಡಿ ಎನಗಿದು ಮಹಾವಿಸ್ಮಯಂ ರಾತ್ರಿಯೊಳ್ ವಿವಾಹಕಲ್ಯಾಣಮೆನಗೆ ಸ್ವಪ್ನದೊಳಾದುದೊ ನಿರುತಮೊ ಎಂದು ಸಂದೇಹಚಿತ್ತನಾಗಿ ತನ್ನ ಕೈಯೊಳ್ ಕಟ್ಟಿದ ಕಂಕಣಮಂ ನೋಡಿ ಕಂಡು ಕುಮಾರನಿಂತೆಂದು ಬಗೆದಂ

ಶ್ಲೋಕ ||       ಭವಿತವ್ಯಂ ಭವತ್ಯೇವ ಕರ್ಮಣಾಮೇಷ ನಿಶ್ಚಯಃ
ವಿಪತ್ತೌ ಕಿಂ ವಿಷಾದೇನ ಸಂಪತ್ತೌ ವಿಸ್ಮಯೇನ ಕಿಂ ||

ಎಂದಿಂತು ವಸ್ತುರೂಪಮಂ ಕುಮಾರಂ ಬಗೆಯುತ್ತಿರ್ಪಿನೆಗಂ ದೂರಾಂತರದೊಳ್ ಸಂಛನ್ನ ಮಾಗುತ್ತಿರ್ದ್ದ ವನದೊಳಿರ್ದ ಕನ್ನೆಯಿಂತೆಂದು ಪುಯ್ಯಲಿಟ್ಟಳ್ ಸಾಕೇತಪ್ಪುರಾಪತಿಯಪ್ಪ ಸುರಥನೆಂಬರಸಂಗಂ ಚಂದ್ರಯಶಿಯೆಂಬ ಮಹಾದೇವಿಗಂ ಪುಟ್ಟದೆನ್ ಸನತ್ಕುಮಾರನ ಭಾರ್ಯೆಯೆನ್ ಸುನಂದೆಯೆನೆಂಬೆನೆನ್ನನನ್ಯಾಯದಿಂ ವಜ್ರವೇಗನೆಂಬ ವಿದ್ಯಾಧರಂ ತಂದು ಕಿನ್ನರ ಕಿಂಪುರುಷ ಗರುಡಗಂಧರ್ವ ಯಕ್ಷರಾಕ್ಷಸಾದಿ ದೇವರ್ಕಳಿರಾ ವಿದ್ಯಾಧರರ್ಕ್ಕಳಿರಾ ಶರಣಾಗಿಮಾರಪ್ಪೊಡಮೆನ್ನಂ ರಕ್ಷಿಸಿಮೆಂಬ ಕಾರುಣ್ಯಸ್ವರಮಂ ಕೇಳ್ದಾಶ್ಚರ್ಯಮನದೊನಾಗಿ ದೆಸೆಯಂ ನೋಡಿ ಸಲ್ವೊಂ ಸ್ಪಟಿಕಮಯಮಪ್ಪ ಶಿಲಾಗೃಹದ ಕೆಱಗಿರ್ದ್ದ ಯಕ್ಷಕನ್ನೆಯಂ ಕಂಡು

        ಆಗ ಒಂದು ವನದೇವತೆ ಬಂದು ಸುನಂದೆ ಎಂಬ ಓರ್ವ ಕನ್ಯೆಯ ವ್ಯಸನವನ್ನು ನೋಡಲಾರದೆ, ಆಕೆಯ ಮೇಲಿನ ಕರುಣೆಯಿಂದ ಕುಮಾರನನ್ನು ಎತ್ತಿಕೊಂಡು ಹೋಯಿತು. ಹರಿಕೂಟವೆಂಬ ಪರ್ವತದ ಜ್ಯೋತಿರ್ವಣದಲ್ಲಿ ದಿವ್ಯವಾದ ಹಾಸಿಗೆಯನ್ನು ಮಾಯೆಯಿಂದ ಸೃಷ್ಟಿಸಿ, ಅದರ ಮೇಲೆ ಸನತ್ಕುಮಾರನನ್ನು ಇಟ್ಟು ತೆರಳಿತು. ಕುಮಾರನು ಪ್ರಾತಃಕಾಲದಲ್ಲಿ ಎಚ್ಚರಗೊಂಡು ದಿಕ್ಕುಗಳನ್ನು ನೋಡುತ್ತಿದ್ದನು. ಆ ಕಾಡನ್ನೂ ತಾನು ಇದ್ದ ಬಳ್ಳಿ ಮಂಟಪವನ್ನೂ ನೋಡಿ, “ನನಗೆ ಇದು ಬಹಳ ಆಶ್ಚರ್ಯ. ನನಗೆ ರಾತ್ರಿಯಲ್ಲಿ ಆದ ಮದುವೆ ಕನಸಿನಲ್ಲಿ ಆಯಿತೊ ! ಆಥವಾ ನಿಜವಾಗಿ ಆಯಿತೋ ? “ ಎಂದು ಮನಸ್ಸನಲ್ಲಿ ಸಂಶಯಪಟ್ಟನು. ತನ್ನ ಕೈಯಲ್ಲಿ ಕಟ್ಟಿದ ಕಂಕಣವನ್ನು ನೊಡಿ, ಕುಮಾರನು ಹೀಗೆ ಭಾವಿಸಿದನು. (ಆಗಬೇಕಾದ್ದು ಆಗಿಯೇ ಆಗುತ್ತದೆ. ಕರ್ಮಗಳ ವಿಷಯದಲ್ಲಿ ಇದು ನಿಶ್ಚಯ. ವಿಪತ್ತು ಬಂದಾಗ ದುಃಖಿಸಿ ಪ್ರಯೋಜನವೇನು ? ಸಂಪತ್ತು ಬಂದಾಗ ಆಶ್ಚರ್ಯಪಡುವುದರಿಂದ ಉಪಯೋಗವೇನು ?) ಈ ರೀತಿಯಾಗಿ ಕುಮಾರನು ನಿಜಸಂಗತಿಯನ್ನು ಯೋಚಿಸುತ್ತ ಇರುತ್ತಿರಲು, ದೂರವಾದ ಪ್ರದೇಶದಲ್ಲಿ ದಟ್ಟವಾಗುತ್ತಿದ್ದ ಕಾಡಿನಲ್ಲಿ ಕನ್ಯೆ ಈ ರೀತಿಯಾಗಿ ಮೊರೆಯಿಟ್ಟಳು – “ಸಾಕೇತ ಪಟ್ಟಣದ ಒಡೆಯನಾದ ಸುರಥನೆಂಬ ರಾಜನಿಗೂ ಚಂದ್ರಯಶಿಯೆಂಬ ರಾಣಿಗೂ ನಾನು ಮಗಳಾಗಿ ಜನಿಸಿದೆನು. ನಾನು ಸನತ್ಕುಮಾರನ ಹೆಂಡತಿಯಾಗಿರುವೆನು. ಸುನಂದೆ ಎಂಬವಳಾಗಿರುವೆನು, ವಜ್ರವೇಗನೆಂಬ ವಿದ್ಯಾಧರನು ಅನ್ಯಾಯದಿಂದ ನನ್ನನ್ನು ತಂದಿದ್ದಾನೆ. ಕಿನ್ನರ ಕಿಂಪುರುಷ ಗರುಡ ಗಂಧರ್ವ ಯಕ್ಷರಾಕ್ಷಸರೇ ದೇವತೆಗಳೇ, ವಿದ್ಯಾಧರರೇ, ನನಗೆ ಆಶ್ರಯವನ್ನು ಕೊಡಿ. ಯಾರಾದರೂ ನನ್ನನ್ನು ರಕ್ಷಿಸಿರಿ”. ಹೀಗೆನ್ನತಕ್ಕ ಆರ್ತಧ್ವನಿಯನ್ನು ಕೇಳಿ ಕುಮಾರನು ಮನಸ್ಸಿನಲ್ಲಿ ಆಶ್ಚರ್ಯವನ್ನು ತಾಳಿದನು. ದಿಕ್ಕುಗಳನ್ನು ನೋಡುತ್ತ ಇದ್ದನು. ಬಿಳಿಕಲ್ಲಿನಿಂದ ಕೂಡಿದ ಕಲ್ಲ ಮನೆಯ ಕೆಳಗೆ ಇದ್ದ ಯಕ್ಷ ಕನ್ಯೆಯನ್ನು ಕಂಡು 

 ನೀನಾರ್ಗ್ಗೇನೆಂಬೆಯಾ ಸನತ್ಕುಮಾರನೆಂಬೊನಾರ್ಗ್ಗೆಂದು ಕುಮಾರಂ ಬೆಸಗೊಂಡೊಡೆಕೆಯಿಂತೆಂದು ಪೇೞ್ದಳ್ ಅಯೋಧ್ಯಾಪುರಮನಾಳ್ರ್ವೆಂ ಸುರಥನೆಂಬೊನರಸನಾತನ ಮಹಾದೇವಿ ಚಂದ್ರಯಶಿಯೆಂಬೊಳಾಯಿರ್ವರ್ಗ್ಗಂ ಪುಟ್ಟಿದೆಂ ಸುನಂದೆಯೆಂಬೆಂ ಸನತ್ಕುಮಾರಂಗೆ ಗರ್ಭದೊಳಿರ್ದಂತೆ ನಿವೇದಿಸೆಪಟ್ಟೆನೆನ್ನಂ ಮದನೋದ್ಯಾನದೊಳುಯ್ಯಲಾಡುತ್ತಿರ್ದೊಳಂ ಭೌಮವಿಹಾರಾರ್ಥಂ ಬಂದು ವಜ್ರವೇಗನೆಂಬ ವಿದ್ಯಾಧರಂ ಕಂಡೆನ್ನನೆತ್ತಿಕೊಂಡು ಪುಯ್ಯಲಿಯಿಡೆ ಬಂದನಿಂದಿಂಗೇೞು ದಿವಸಮುಂಟುಮತ್ತಾ ಸನತ್ಕುಮಾರನೆಂಬೊಂ ಹಸ್ತಿನಾಪುರವನಾಳ್ರ್ವೆಂ ವಿಶ್ವಸೇನ ಮಹಾರಾಜನೆಂಬೊನರಸನಾತನ ಮಹಾದೇವಿ ಸಹದೇವಿಯೆಂಬೊಳಾಯಿವ್ವರ್ಗ್ಗಂ ಪುಟ್ಟಿದಂ ಸನತ್ಕುಮಾರನೆಂಬೊನೆಂದು ಪೇೞ್ದೊಡೆ ಕುಮಾರನೆಂದನಾತನಂ ಕಂಡೊಡೇನಱವೋ ಎಂದು ಬೆಸಗೊಂಡೊಡೆ ಸುನೆಂದೆಯಿಂತೆಂದಳ್ ಎನ್ನ ತಂದೆ ವಿಶ್ವಸೇನಮಹಾರಾಜನೊಳಪ್ಪ ಮಿತ್ರಸಂಬಂಧದಿನೊಂದು ದಿವಸಂ ಹಸ್ತಿನಾಪುರಕ್ಕೆ ವೋಗಿ ಕುಮಾರನಂ ಕಂಡಾತನ ರೂಪಂ ಪಟದೊಳ್ ಬರೆದು ತಂದಾ ರೂಪನೆಲ್ಲಾ ಪೊೞ್ತುಂ ನೋೞ್ಪೆನುಂ ಬರೆವೆನುಂ ಭಾವಿಸುತ್ತಿರ್ಪೆ ನಪ್ಪುದಱಂದಱವೆನಾ ರೂಪುಂ ನಿಮ್ಮನೆ ಪೋಲ್ಕುಮೆನೆಯಂತಪ್ಪೊಡಾಂ ಸನತ್ಕುಮಾರನೆನಪ್ಪೆನೆಂದಾಗಳ್ ಹರ್ಷರೋಮಾಂಚಕಂಚುಕಿತೆ ವಿಕಸಿತವದನೆಯಾಗಿಯಱಪ ಬಳ್ಳಿ ಕಾಲ್ತೊಡರ್ದತ್ತೆಂಬಂತೆವೊಲಾಯ್ತೆನ್ನ ಭಾಗ್ಯದಿಂದಂ ಸ್ವಾಮಿ ನೀಮಿಲ್ಲಿಗೆ ಬಂದಿರಾ ವಜ್ರವೇಗಂ ತನ್ನ ತಂಗೆಯನೆನಗೆ ಕಾಪಿಟ್ಟು ತನ್ನ ನಿದ್ರೆಗೆಯ್ಯೆ ಪೋದನಾಕೆಯು ಜಳಕ್ರೀಡೆಗೆ ಪೋದಳವಳ್ ಬಾರದನ್ನೆಗಂ ಬೇಗಂ ಪೋಪಮೆನೆ 

    “ನೀನು ಯಾರು ? ಏನು ಹೇಳುತ್ತಿರುವೆ ? ಆ ಸನತ್ಕುಮಾರನೆಂಬುವನು ಯಾರು ? - ಎಂದು ಕುಮಾರನು ಕೇಳಲು ಆಕೆ ಹೀಗೆ ನುಡಿದಳು – “ಅಯ್ಯೋಧ್ಯಾಪಟ್ಟಣವನ್ನು ಆಳತಕ್ಕ ರಾಜನು ಸುರಥನೆಂಬುವನು. ಅವನ ರಾಣಿ ಚಂದ್ರಯಶಿಯೆಂಬುವಳು. ಆ ಇಬ್ಬರಿಗೆ ಹುಟ್ಟಿದ ಸುನಂದೆ ನಾನು. ನಾನು ಗರ್ಭದಲ್ಲಿದ್ದಾಗಲೇ ಸನತ್ಕುಮಾರನಿಗೆ ಅರ್ಪಿತಳಾಗಿದ್ದೇನೆ. ನಾನು ಮದನೋದ್ಯಾನದಲ್ಲಿ ಉಯ್ಯಾಲೆಯಾಡುತ್ತಿದ್ದಾಗ ವಜ್ರವೇಗನೆಂಬ ವಿದ್ಯಾಧರನು ಭೂಮಿಯಲ್ಲಿ ಸಂಚಾರ ಮಾಡುವುದಕ್ಕಾಗಿ ಬಂದು ನನ್ನನ್ನು ಕಂಡು ಎತ್ತಿಕೊಂಡನು. ನಾನು ಹುಯ್ಯಲಿಟ್ಟರೂ ಕೂಡ ಕೇಳದೆ ತೆಗೆದುಕೊಂಡು ಬಂದನು. ಇಂದಿಗೆ ಏಳು ದಿವಸಗಳಾಗಿವೆ. ಇನ್ನು ಆ ಸನತ್ಕುಮಾರನೆಂಬವನಾದರೋ, ಹಸ್ತಿನಾಪುರವನ್ನು ಅಳತಕ್ಕ ಮಹಾರಾಜ ವಿಶ್ವಸೇನನೆಂಬವನಿದ್ದನು. ಅವನ ಮಹಾರಾಣಿ ಸಹದೇವಿಯೆಂಬುವಳು. ಆ ಇಬ್ಬರಿಗೆ ಜನಿಸಿದವನು ಸನತ್ಕುಮಾರನೆಂಬವನು” ಎಂದು ಹೇಳಿದಳು. ಆಗ ಕುಮಾರನು “ಅವನನ್ನು ಕಂಡರೆ ನಿನಗೆ ಗೊತ್ತಾಗುವುದೇ ? “ ಎಂದು ಕೇಳಲು ಸುನಂದೆ ಹೀಗೆಂದಳು – – “ನನ್ನ ತಂದೆಯಾದ ಸುರಥನು ವಿಶ್ವಸೇನ ಮಹಾರಾಜನಲ್ಲಿದ್ದ ಸ್ನೇಹಸಂಬಂಧದಿಂದ ಒಂದು ದಿವಸ ಹಸ್ತಿನಾಪುರಕ್ಕೆ ಹೋಗಿ ಕುಮಾರನನ್ನು ಕಂಡು ಅವನ ರೂಪವನ್ನು ಪಟದಲ್ಲಿ (ಬಟ್ಟೆಯಲ್ಲಿ) ಬರೆದು ತಂದನು. ಆ ರೂಪವನ್ನು ನಾನು ಎಲ್ಲ ಹೊತ್ತಿನಲ್ಲಿಯೂ ನೋಡುತ್ತಿರುವೆನು, ಬರೆಯುತ್ತಿರುವೆನು, ಭಾವಿಸುತ್ತಿರುವೆನು – ಆದುದರಿಂದ ಬಲ್ಲೆನು ಆ ರೂಪವು ನಿಮ್ಮನ್ನೇ ಹೋಲುತ್ತಿದೆ”. ಸುನಂದೆ ಹೀಗೆ ಕೆಳಿದಾಗ ಕುಮಾರನು “ಹಾಗಾದರೆ ನಾನು ಸನತ್ಕುಮಾರನೇ ಆಗಿರುವೆನು” ಎಂದನು. ಸುನಂದೆ ಆಗ ಸಂತೋಷದ ರೋಮಾಂಚವೆಂಬ ರವಿಕೆಯುಳ್ಳವಳೂ ಆರಳಿದ ಮುಖವುಳ್ಳವಳೂ ಆಗಿ “ಹುಡುಕುವ ಬಳ್ಳಿ ಕಾಲಿಗೆ ತೊಡರಿತು (ಸಿಕ್ಕಿಕೊಂಡಿತು) ಎಂಬ ಹಾಗೆ ಆಯಿತು. ಸ್ವಾಮೀ, ನೀವು ನನ್ನ ಪುಣ್ಯದಿಂದ ಇಲ್ಲಿಗೆ ಬಂದಿದ್ದೀರಿ. ಆ ವಜ್ರವೇಗನು ತನ್ನ ತಂಗಿಯನ್ನು ನನಗೆ ಕಾವಲಿಟ್ಟು, ನಿದ್ದೆ ಮಾಡಲು ತನ್ನ ಪಟ್ಟಣಕ್ಕೆ ಹೋಗಿದ್ದಾನೆ. ಆಕೆ ಜಲಕ್ರೀಡೆಗೆ ಹೋಗಿದ್ದಾಳೆ. ಅವಳು ಬರುವುದರೊಳಗಾಗಿ ಬೇಗನೆ ಹೋಗೋಣ” ಎಂದು ಹೇಳಿದಾಗ

    ಕುಮಾರನಿಂತೆಂದನಂಜದಿರ್ ನಿನ್ನ ತಂದೊನನಮೋಘಂ ಮೃತ್ಯುಮುಖಕ್ಕುಯ್ದೊಡಲ್ಲದೆ ಪೋಗೆನೆನೆ ಭಯದಿಂದಂ ನಡುಗಿ ಇಂತೆಂದಳಾತನಾಕಾಶಗಾಮಿ ನೀಮೆಂತು ಕೊಲ್ವಿರೆನೆ ಕುಮಾರಂ ನಕ್ಕಿಂತೆಂದಂ ಆಕಾಶಗಾಮಿಯಪ್ಪ ಕಾಗೆಯನೇಂ ಕೊಲ್ವುದರಿದೆ ಎಂದು ನುಡಿಯುತ್ತಿರ್ಪನ್ನೆಗಂ ವಜ್ರವೇಗನ ಬರವಂ ಕಂಡಾ ಪ್ರಾಸಾದದೊಳಗೆ ಪೋಗಿ ಪೊಕ್ಕಿರ್ದಳ್ ಖೇಚರನುಂ ಕುಮಾರನಂ ಕಂಡು ಪುರುಡಿಂ ಮುಳಿಸು ಪೆರ್ಚ್ಚಿಯೆನ್ನ ಪೆಂಡತಿಯಾಡನೆ ನುಡಿಯುತ್ತಿರ್ದ್ದೊನನಮೋಘಂ ಕೊಲ್ವೆನೆಂದು ಕಿೞ್ತ ಬಾಳ್ವೆರಸು ಬಂದೆಱಗಿ ಇಱದಾತನೇಱಂ ಬಂಚಿಸಿ ಸಿಂಹಲಂಘನದಿಂ ಮೇಗೆ ನೆಗೆದು ವಜ್ರಸಮಾನಮಪ್ಪ ಕೈಯಿಂದಂ ಕುಮಾರನಾತನ ತೆಗಲೆಯಂ ತಿವಿದೊಡಾತನಲ್ಲಿ ತನ್ನ ವಿದ್ಯಾಧರಕರಣಮಂ ತೋರ್ಪ್ಪಂಬೊಲೆ ಮೇಗುಚ್ಚಳಿಸಿ ಬಿೞ್ದೂಗಡೆ ಮಡಿದಂ ಕುಮಾರನಿಂತೆಂದು ಬಗೆದನೊರ್ವಳೆ ಇರ್ದ ಸ್ತ್ರೀಯ ಪಕ್ಕದೆ ಸತ್ಪುರುಷಂಗಿರಲ್ ತಕ್ಕುದಲ್ಲೆಂದು ಮುನ್ನೆ ತನ್ನಿರ್ದ ಲತಾಮಂಟಪದೊಳ್ ಪೋಗಿರ್ದನನ್ನೆಗಮಿತ್ತ ವಜ್ರವೇಗನ ತಂಗೆ ಸಂಧ್ಯಾವಳಿಯೆಂಬೊಳ್ ಮಾನಸಸರೋವರದೊಳ್ ಜಲಕ್ರೀಡೆಯಾಡಿ ಬರ್ಪೊಳನ್ನೆಗಂ ತಮ್ಮಣ್ಣ್ಣಂ ಸತ್ತುದಂ ಕಂಡು

        ಕುಮಾರನು ಹೀಗೆಂದನು – “ಹೆದರಬೇಡ, ನಿನ್ನನ್ನು ತಂದವನನ್ನು ನಿಶ್ಚಯವಾಗಿಯೂ ಮೃತ್ಯುವಿನ ಬಾಯಿಗೆ ಒಯ್ಯದೆ ನಾನು ಹೋಗುವವನಲ್ಲ ಎಂದನು. ಸುನಂದೆ ಆಗ ಹೆದರಿಕೆಯಿಂದ ನಡುಗಿ “ಆತನು ಆಕಾಶದಲ್ಲಿ ಹೋಗಬಲ್ಲವನು, ಅವನನ್ನು ನೀವು ಹೇಗೆ ಕೊಲ್ಲುವಿರಿ” ಎಂದು ಕೇಳಿದಳು. ಕುಮಾರನು ನಕ್ಕು ಇಂತೆಂದನು – “ಆಕಾಶದಲ್ಲಿ ಹೊಗುವ ಕಾಗೆಯನ್ನು ಕೊಲ್ಲುವುದು ಅಸಾಧ್ಯವೇ? 'ಹೀಗೆ ಮಾತಾನಾಡುತ್ತಿರುವಾಗ ವಜ್ರವೇಗನು ಬರುವುದನ್ನು ಆ ಕನ್ಯೆ ಕಂಡು ಹೆದರಿ ಮಹಾಭವನದೊಳಗೆ ಹೋಗಿ ಹೊಕ್ಕು ಇದ್ದಳು. ವಜ್ರವೇಗನು ಕುಮಾರನನ್ನು ಕಂಡು ಹೊಟ್ಟೆಕಿಚ್ಚಿನಿಂದ ಕೋಪ ಹೆಚ್ಚಾಗಿ ” ನನ್ನ ಹೆಂಡತಿಯೊಡನೆ ಮಾತಾನಾಡುತ್ತಿದ್ದವನನ್ನು ನಿಶ್ಚಯವಾಗಿ ಕೊಲ್ಲುವೆನು” ಎಂದು ಹಿರಿದ ಖಡ್ಗದೊಂದಿಗೆ ಬಂದು ಮೇಲೆ ಬಿದ್ದು ಹೊಡೆದನು. ಹಾಗೆ ಹೊಡೆದವನ ಏಟನ್ನು ತಪ್ಪಿಸಿಕೊಂಡು ಕುಮಾರನು ಸಿಂಹವು ಹಾರುವಂತೆ ಮೇಲಕ್ಕೆ ಹಾರಿ ವಜ್ರಾಯುಧಕ್ಕೆ ಸಮಾನವಾದ ತನ್ನ ಕೈಯಿಂದ ಅವನ ಎದೆಯನ್ನು ತಿಳಿದನು. ಆಗ ವಜ್ರವೇಗನು ತನ್ನ ವಿದ್ಯಾಧರಕಾರ್ಯವನನ್ನು ತೋರಿಸುತ್ತಾನೋ ಎಂಬಂತೆ ಮೇಲಕ್ಕೆ ನೆಗೆದು ಬಿದ್ದು ಕ್ಷಣವೇ ಸತ್ತುಹೋದನು. ಕುಮಾರನು “ಏಕಾಂಗಿಯಾಗಿ ಇದ್ದ ಹೆಂಗುಸಿನ ಬಳಿಯಲ್ಲಿ ಸತ್ಪುರುಷನು ಇರುವುದು ಯೋಗ್ಯವಲ್ಲ' ಎಂದು ಈ ರೀತಿಯಾಗಿ ಯೋಚಿಸಿ, ತಾನು ಮೊದಲು ಇದ್ದ ಬಳ್ಳಿಮಂಟಪಕ್ಕೆ ಹೋಗಿ ಅಲ್ಲಿದ್ದನು. ಅಷ್ಟರಲ್ಲಿ ಇತ್ತ ವಜ್ರವೇಗನ ತಂಗಿಯಾದ ಸಂಧ್ಯಾವಳಿಯೆಂಬುವಳು ಮಾನಸಸರೋವರಕ್ಕೆ ಜಲಕ್ರೀಡೆಯಾಡುವುದಕ್ಕಾಗಿ ಹೋಗಿದ್ದಳು. ಜಲಕ್ರೀಡೆ ಮುಗಿಸಿ ಬರುತ್ತ, ತನ್ನ ಅಣ್ಣನು ಸತ್ತುದನ್ನು ಕಂಡು

    ಮೂರ್ಛಾಗತೆಯಾಗಿ ಬಿೞ್ದು ನೀಡಱಂದೆೞ್ವತ್ತು ಕ್ರೋಧಾಗ್ನಿ ಪೆರ್ಚಿ ಎಮ್ಮಣ್ಣನಂ ಕೊಂದ ದುರಾತ್ಮನಂ ಪಾತಾಳಮಂ ಪೊಕ್ಕಿರ್ದನಪ್ಪೊಡಮಱಸಿ ಕೊಲ್ವೆನಮೋಘಮೆಂದು ಭಯಂಕರರೂಪಂ ಕೈಕೊಂಡು ದೆಸೆಗಳಂ ನೋೞ್ಪೊಳನ್ನೆಗಮಾರುಮಂ ಕಾಣದೆ ಸುನಂದೆಯಂ ಬೆಸಗೊಂಡೊಡಾಕೆಯಿಂತೆಂದಳ್ ದುಷ್ಟನಿಗ್ರ್ರಹ ಶಿಷ್ಟಪ್ರತಿಪಾಲಾನಸ್ವರೂಪದಿಂ ಪೃಥ್ವಿಯಂ ರಕ್ಷಿಸುವ ಸ್ವಾಮಿ ಚೋರ ಜಾರ ಪಾದರಿಗರ್ಕ್ಕಳಂ ಕೊಲ್ಲದಿರ್ಕುಮೆ ಎಂದೊಡಾತನಾವೊನೆಲ್ಲದೊಂ ತೋಱೆಂದು ಬೆಸಗೊಂಡೊಡೆ ಸುನಂದೆಯುಂ ಪೋಗಿ ಕುಮಾರನಂ ತೋಱದೊಡಾಕೆಯುಮಸಿಖೇಟಕಹಸ್ತೆಯಾಗಿ ವಿಭೀಷಣಮಪ್ಪ ರೂಪುಮಂ ವಿಗುರ್ವಿಸಿ ಕೊಲ್ವೆನೆಂದು ಸಾರ್ದಾಗಳ್ ಕುಮಾರಂ ಸೌಷ್ಟವದೊಳಿರ್ದ್ದೊನಂ ನೋಡಿ ಕ್ರೋಧಂಗೆಟ್ಟು ಸ್ನೇಹಂ ಪೆರ್ಚಿ ಕಾಮಶರಂಗಳಿಂ ಸ್ಮರವಶಹೃದಯೆಯಾಗಿ ಇಂತೆಂದು ತನ್ನೊಳ್ ಬಗೆದೊಳೆಮ್ಮಣ್ಣಂ ತನ್ನದೋಷದಿಂ ಸತ್ತೊನೀತಂಗೇನುಂ ದೋಷಮಿಲ್ಲೆಂದು ವಿಕಾರಮಪ್ಪ ರೂಪಮನುಪಸಂಹರಿಸಿ ತನ್ನ ಮುನ್ನಿನ ಸ್ವಾಭಾವಿಕಮಪ್ಪ ರೂಪಂ ಕೈಕೊಂಡು ತಮ್ಮಣ್ಣನಂ ಸಂಸ್ಕರಿಸಿ ನೀರಿೞದು ತದ್ವಿರಹಾನಳನಿಂ ಬೆಂದು ಕರಗಿ ಕೊರಗಿ ಬಸಮೞದಿರ್ದ್ದ ಮೆಯ್ಯನೊಡೆಯೊಳ್ ಬಂದು ಸುನಂದಗಿಂತೆಂದಳ್ ನಿನ್ನಪ್ರಸಾದಿಂ ಬಾೞ್ವೆಂ ನೀನನಗೆ ಸೋದರಮುಂ ಕಲ್ಯಾಣಮಿತ್ರೆಯುಮಾದಯ್ ಅದಱಂ ನೀನೀ ಕುಮಾರಂಗೆ ಪೋಗಿ ಇಂತೆಂದು ಪೇೞು ವಿಜಯಾರ್ಧಪರ್ವತದೊಳಗ್ರಮಂದಿರ ಪುರಾಪತಿಯಪ್ಪಶನಿವೇಗನೆಂಬ 

    ಮೂರ್ಛೆ ಹೋಗಿ ಬಿದ್ದಳು. ಬಹಳ ಹೊತ್ತಿನ ನಂತರ ಎಚ್ಚತ್ತಳು. ಸಿಟ್ಟಿನ ಬೆಂಕಿ ಹೆಚ್ಚಾಗಿ – “ನನ್ನ ಆಣ್ಣನನ್ನು ಕೊಂದ ದುಷ್ಟನನ್ನು, ಆತನು ಪಾತಾಳವನ್ನು ಹೊಕ್ಕಿದವನಾದರೂ ವ್ಯರ್ಥವಾಗದಂತೆ ಹುಡುಕಿ ಕೊಂದುಬಿಡುವೆನು” ಎಂದು ಭೀಕರವಾದ ರೂಪವನ್ನು ತಾಳಿದಳು. ದಿಕ್ಕುಗಳ ಕಡೆಗೆ ನೋಡಿದಳು. ಆ ಸಂದರ್ಭದಲ್ಲಿ ಯಾರನ್ನೂ ಕಾಣದೆ ಸುನಂದೆಯನ್ನು ಕೇಳಿದಾಗ ಅವಳು ಹೀಗೆಂದಳು – “ಕೆಟ್ಟವರನ್ನು ನಾಶಮಾಡುವ ಮತ್ತು ಸತ್ಪುರುಷರನ್ನು ರಕ್ಷಣೆ ಮಾಡುವ ಸ್ವರೂಪದಿಂದ ಲೋಕವನ್ನು ಕಾಪಾಡುತಕ್ಕ ಪ್ರಭುವು ಕಳ್ಳರನ್ನೂ ಜಾರರನ್ನೂ ಹಾದರಿಗರನ್ನೂ ಕೊಲ್ಲದಿರುವನೆ” ? ಎಂದು ಹೇಳಿದಾಗ “ಆತನು ಯಾವನು ? ಎಲ್ಲಿದ್ದಾನೆ? ತೋರಿಸು” ಎಂದು ಕೇಳಿದಳು. ಸುನಂದೆ ಹೋಗಿ ಸನತ್ಕುಮಾರನನ್ನು ತೊರಿಸಿದಳು. ಆಗ ಸಂಧ್ಯಾವಳಿ ಕತ್ತಿ ಗುರಾಣಿಗಳನ್ನು ಹಿಡಿದುಕೊಂಡು ಮಾಯೆಯಿಂದ ಭಯಂಕರವಾದ ರೂಪವನ್ನು ತಾಳಿ “ಕೊಲ್ಲುತ್ತೇನೆ” ಎಂದು ಸಮೀಪಕ್ಕೆ ಬಂದಳು. ಸುಂದರವಾದ ರೂಪದಲ್ಲಿದ್ದ ಕುಮಾರನನ್ನು ನೋಡಿ, ಕೋಪವನ್ನು ಬಿಟ್ಟು ಪ್ರೀತಿ ಹೆಚ್ಚಾಗಿ ಕಾಮನ ಬಾಣಗಳಿಂದ ಮನ್ಮಥನಿಗೆ ಅನವಾದ ಮನಸ್ಸುಳ್ಳವಳಾಗಿ ತನ್ನಲ್ಲಿಯೇ ಹೀಗೆ ಯೋಚಿಸಿದಳು “ನನ್ನ ಅಣ್ಣನು ತನ್ನ ದೊಷದಿಂದ ಸತ್ತನು, ಈತನಿಗೆ ಏನೂ ದೊಷವಿಲ್ಲ” ಎಂದುಕೊಂಡು ತನ್ನ ವಿಕಾರವಾದ ರೂಪವನ್ನು ಕೊನೆಗಾಣಿಸಿ, ಹಿಂದಿನ ನೈಜವಾದ ರೂಪವನ್ನು ತಾಳಿಕೊಂಡು ತನ್ನ ಅಣ್ಣನಿಗೆ ತಕ್ಕ ಶವಸಂಸ್ಕಾರವನ್ನು ಮಾಡಿ, ಸ್ನಾನಮಾಡಿ, ಕುಮಾರನ ವಿರಹದ ಬೆಂಕಿಯಿಂದ ಬೆಂದು ಕರಗಿ ಕೊರಗಿ ಶಕ್ತಿಕುಂದಿಹೋದ ಶರೀರವುಳ್ಳವಳಾಗಿ ಸುನಂದೆಯ ಬಳಿಗೆ ಬಂದು ಹೀಗೆಂದಳು – “ನಿನ್ನ ಅನುಗ್ರಹವಿದ್ದರೆ ಮಾತ್ರ ಬದುಕುವೆನು. ನೀನು ನನಗೆ ಸಹೋದರಿಯೂ ಮಂಗಳಕರಳಾದ ಗೆಳತಿಯೂ ಆಗಿರುವೆ. ಆದುದರಿಂದ ನೀನು ಈ ಕುಮಾರನಲ್ಲಿಗೆ ಹೋಗಿ ಹೀಗೆ ಹೇಳು – ವಿಜಯಾರ್ಧ ಪರ್ವತದಲ್ಲಿರುವ ಅಗ್ರಮಂದಿರವೆಂಬ ಪಟ್ಟಣದ ಒಡೆಯನಾದ ಅಶನಿವೇಗನೆಂಬ

        ವಿದ್ಯಾಧರಂಗಂ ವಿದ್ಯುತ್ಪ್ರಭೆಯೆಂಬ ಮಹಾದೇವಿಗಂ ಮಗಳ್ ಸಂಧ್ಯಾವಳಿಯೆಂಬೊಳ್ ನೀಮೆ ಶರಣೆಂದಿರ್ದೊಳಾಕೆಯಂ ನೀಮಮೋಘಂ ಕೈಕೊಳಲ್ವೇೞ್ಕುಮೆಂದಿಂತು ನುಡಿಯೆಂದು ಕಲ್ಪಿಸಿಯಟ್ಟಿದೊಡಾಕೆಯುಂ ಕುಮಾರಂಗೆ ತದ್ವ”ತ್ತಾಂತಮೆಲ್ಲಮಂ ಪೇೞ್ದೊಡಾತನುಂ ಪಿತೃಮಾತೃಗಳೀಯದ ಸ್ತ್ರೀಯರಂ ಕೈಕೊಳ್ವುದೆನಯೋಗ್ಯಮೆಂದು ಮಱುಮಾತುಗೊಟ್ಟೊಡೆ ಸುನಂದೆಯೆಂಬೊಳ್ ಮಿತ್ರಸಂಬಂಗಳಪ್ಪ ಜನಂಗಳ್ ಮುಂತಿಟ್ಟು ಕುಡೆ ಕೊಳಲ್ ತಕ್ಕುದೆಂದು ನುಡಿದೊಡಂಬಡಿಸಿ ದಿವ್ಯದೇವತೆಗಳನೆ ಬಾಂಧವಜನಮಾಗೊಡೆಯಳಂ ಮಹಾವಿಭೂತಿಯಿಂದಂ ಪಾಣಿಗ್ರಹಣಪುರಸ್ಸರಂಸಂಧ್ಯಾವಳಿಯಂ ಕುಮಾರಮಗೆ ಕೊಟ್ಟಳ್ ಸಂಧ್ಯಾವಳಿಯಂ ಸುನಂದೆಯಂ ಕುಮಾರಂಗೆ ಕೊಟ್ಟಳಿಂತನ್ಯೋನ್ಯಸಂಬಂಧದಿಂ ಗಾಂಧರ್ವವಿವಾಹದಿಂ ಕಲ್ಯಾದೊಳ್ ಕೂಡಿ ಸುಖದಿಂದಿರ್ಪೊರ್ ಅನ್ನೆಗಮಿತ್ತಶನಿವೇಗಂ ತನ್ನ ಮಗಂ ಪರಿರಿದು ಪೊೞ್ತು ಪೋಗಿ ತಡೆದನೆಂದು ಮಗನವಸ್ಥೆಯನಱದು ಬಾಯೆಂದವಳೋಕಿನಿಯೆಂಬ ವಿದ್ಯೆಯನಾರಯ್ಯಲಟ್ಟಿದೊಡಾ ವಿದ್ಯೆಯುಂ ಪಾರಾವತರೂಪದಿಂದಾರೈದು ಬಾಯೆಂದವಳೋಕಕಿನಿಯೆಂಬ ವಿದ್ಯೆಯನಾರಯ್ಯಲಟ್ಟಿದೊಡಾ ವಿದ್ಯೆಯುಂ ಪಾರಾವತರೂಪದಿಂದಾರೈದು ಪೋಪ್ಮದಂ ಸಂಧ್ಯಾವಳಿಯಱದಿಂತೆಂದು ತನ್ನ ಭರ್ತಾರಂಗೆ ವಜ್ರವೇಗನ ಸಾವನಱದಮೋಘಂ ನಿಮ್ಮ ಮೇಲೆ ಬರ್ಕುಮದಱಂ ನೀಮೀ ಪ್ರಜ್ಞಪ್ತಿಯೆಂಬ ಮಹಾವಿದ್ಯೆಯಂ ಕೊಳ್ಳಿಮೆನೆ 

         ವಿದ್ಯಾಧರನಿಗೂ ವಿದ್ಯುತ್ಪ್ರಭೆಯೆಂಬ ಮಹಾರಾಣಿಗೂ ಮಗಳಾಗಿರುವ ಸಂಧ್ಯಾವಳಿ ಎಂಬವಳು ನೀವೇ ತನಗೆ ಆಶ್ರಯವೆಂದು ಇದ್ದಾಳೆ. ಅವಳನ್ನು ನೀವು ನಿಶ್ಚಯವಾಗಿಯೂ ಸ್ವೀಕರಿಸಬೇಕು – ಎಂದು ಈ ರೀತಿಯಾಗಿ ಹೇಳು” – ಹೀಗೆ ಹೇಳಿಕೊಟ್ಟು ಸುನಂದೆಯನ್ನು ಕಳುಹಿಸಿದಳು. ಸುನಂದೆ ಈ ಸಂಗತಿಯೆಲ್ಲವನ್ನೂ ಕುಮಾರನಿಗೆ ತಿಳಿಸಿದಳು. ಅದಕ್ಕೆ ಕುಮಾರನು – “ತಂದೆ ತಾಯಿಗಳು ಕೊಡದೆ ಇರತಕ್ಕ ಹೆಣ್ಣುಗಳನ್ನು ಸ್ವೀಕರಿಸುವುದು ನನಗೆ ಯೋಗ್ಯವಲ್ಲ” ಎಂದು ಪ್ರತ್ಯುತ್ತರ ಕೊಟ್ಟನು ಆಗ ಸುನಂದೆ ಕುಮಾರನೊಡನೆ “ಮಿತ್ರಸಂಬಂಧವುಳ್ಳ ಜನರು ಮುಂದೆ ಇದ್ದುಕೊಂಡು ಹೆಣ್ಣನ್ನು ಕೊಟ್ಟರೆ ಸ್ವೀಕರಿಸಲು ಯೋಗ್ಯವಾಗುತ್ತದೆ” ಎಂದು ಹೇಳಿ, ಅವನನ್ನು ಒಪ್ಪುವಂತೆ ಮಾಡಿದಳು. ದೇವಲೋಕದ ದೇವತೆಗಳೇ ಬಂಧು ಜನವಾಗಿರತಕ್ಕ ಸಂಧ್ಯಾವಳಿಯನ್ನು ಬಹಳ ವೈಭವದಿಂದ ಪಾಣಿಗ್ರಹಣ ಕ್ರಮಪೂರ್ವಕವಾಗಿ ಕುಮಾರನಿಗೆ ಮದುವೆಮಾಡಿಕೊಟ್ಟಳು. ಸಂಧ್ಯಾವಳಿ ಸುನಂದೆಯನ್ನು ಕುಮಾರನಿಗೆ ಮದುವೆಮಾಡಿಕೊಟ್ಟಳು. ಹೀಗೆ ಪರಸ್ಪರ ಸಂಬಂಧದಿಂದ ಗಾಂಧರ್ವವಿವಾಹ ಕ್ರಮದಿಂದ ಅವರು ಮಂಗಳದಲ್ಲಿ ಕೂಡಿ ಸುಖದಿಂದ ಇದ್ದರು. ಆ ವೇಳೆಗೆ ಇತ್ತ ಆಶನಿವೇಗನು ತನ್ನು ಮಗನು ಹೋಗಿ ಬಹಳ ಹೊತ್ತು ತಡೆದನೆಂದು ಮಗನ ಸ್ಥಿತಿಯೇನೆಂಬುದನ್ನು ವಿಚಾರಿಸಿ ತಿಳಿದುಬರುವಂತೆ ಅವಲೋಕಿನಿ ಎಂಬ ವಿದ್ಯೆಯನ್ನು ಕಳುಹಿಸಿದನು ಆ ವಿದ್ಯೆ ಪಾರಿವಾಳರೂಪದಿಂದ ಬಂದು ವಿಚಾರಿಸಿ ಹೋಗುವುದನ್ನು ಸಂಧ್ಯಾವಳಿ ತಿಳಿದು ತನ್ನ ಗಂಡನಿಗೆ (ಸನತ್ಕುಮಾರನಿಗೆ) ಹೀಗೆಂದಳು – ಸ್ವಾಮಿ, ನನ್ನ ತಂದೆ ಅಶನಿವೇಗ ವಿದ್ಯಾಧರನು ಅತ್ಯಂತ ಭಯಂಕರವಾದ ಮಹಾಶಕ್ತಿ ಸಾಮರ್ಥ್ಯವುಳ್ಳವನು. ಅವನು ವಜುವೇಗನು ಸತ್ತುದನ್ನು ತಿಳಿದು ನಿಶ್ಚಯವಾಗಿಯೂ ನಿಮ್ಮ ಮೇಲೆ ದಂಡೆತ್ತಿ ಬರುವನು. ಆದುದರಿಂದ ನೀವು ಪ್ರಜ್ಞಪ್ತಿಯೆಂಬ ಈ ಮಹಾವಿದ್ಯೆಯನ್ನು ಸ್ವೀಕರಿಸಿಕೊಳ್ಳಿ  ಎಂದಾಗ

       ಕುಮಾರಂ ನಕ್ಕು ಪ್ರುಸಿತವದನನಾಗಿ ಖೇಚರರೆಂಬೆರಲೆಗಳಂ ನಿಪಾತಿಸಲ್ಕೆನಗೆ ವಿದ್ಯೆಯುಂ ಬೇೞ್ಕುಮೆ ಎಂದೊಲ್ಲದಿರ್ದೊನ ಪಾದದ್ವಯಂಗಳ್ಗೆಱಗಿ ಪೊಡೆವಟ್ಟಮೋಘಂ ಕೊಳಲೆವೇೞ್ಕುಮೆಂದು ಬಲಾತ್ಕಾರದಿಂ ವಿದ್ಯೆಯಂ ಕೊಟ್ಟಾಡಾ ಅವಸರದೊಳ್ ಮತ್ತಿತ್ತ ರಥನೂಪುರಚಕ್ರವಾಳಪುರಾಪತಿಯಪ್ಪ ಚಂದ್ರಯಶನೆಂಬ ವಿದ್ಯಾಧರಂಗಂ ವಿದ್ಯುದ್ವೇಗೆಯೆಂಬ ಮಹಾದೇವಿಗಮಂತಿರ್ವ್ವರ್ಗಂ ಪುಟ್ಟಿದರ್ ಚಂದ್ರವೇಗನುಂ ಭಾನುವೇಗನುಮೆಂಬರ್ ಮಕ್ಕಳಾಗಿ ಇಂತಿಷ್ಟವಿಷಯಕಾಮ ಭೋಗಂಗಳನನುಭವಿಸತ್ತಿರೆ ಮತ್ತೊಂದು ದಿವಸಂ ನೃಪತಿಗೆ ಸಂಸಾರ ವೈರಾಗ್ಯಮಾಗಿ ಚಮದ್ರವೇಗನೆಂಬ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಕಿಱಯಾತನಪ್ಪ ಭಾನುವೇಗಂಗೆ ಯುವರಾಜಪಟ್ಟಮಂ ಕಟ್ಟಿ ಗುಣಧರರಿಂಬ ಚಾರಣರಿಸಿಯರ ಪಕ್ಕದೆ ಜೈನದಿಕ್ಷೆಯಂ ಕೈಕೊಂಡು ಪಲಕಾಲಂ ತಪಂಗೆಯ್ದು ಸಮ್ಮೇದಪರ್ವದೊಳ್ ಮೋಕ್ಷಕ್ಕೆ ವೋದರ್ ಮತ್ತಾ ಚಂದ್ರವೇಗಂಗೆ ನೂರ್ವರ್ ಪೆಣ್ಗೂಸುಗಳಾದೊರವಗಳತಿಶಯ ರೂಪು ಲಾವಣ್ಯಮನೊಡೆಯೊರವರನಾ ಆಶನಿವೇಗಂ ತನ್ನ ಮಗಂ ವಜ್ರವೇಗಂಗನವರತಂ ಪಾಗುಡಮಂ ಪೆರ್ಗ್ಗೆಡೆಗಳುಮನಟ್ಟುತ್ತಿರ್ಕ್ಕುಂ ಮತ್ತಂ ಪೆಱರುಂ ವಿದ್ಯಾದರರ್ಕ್ಕಳನವರತಂ ಕೂಸುಗಳಂ ಬೇಡಿಯಟ್ಟುತ್ತಿರೆ ಆರ್ಗಂ ಕುಡಲೊಲ್ಲದೆ ಮತ್ತೊಂದು ದಿವಸಂ ಮಕ್ಕಳನಾರ್ಗೆ ಕುಡುವಮೆಂದು ದೈವಜ್ಞನಂ ಬೆಸಗೊಂಡೊಡಾತನಿಂತೆಂದು ಪೇೞ್ದಂ

        ಆಗ ಕುಮಾರನು ನಕ್ಕು, ನಗೆಯಿಂದ ಕೂಡಿದ ಮುಖವುಳ್ಳವನಾಗಿ “ವಿದ್ಯಾಧರರೆಂಬ ಹುಲ್ಲೆಮರಿಗಳನ್ನು ಬೀಳಿಸುವುದಕ್ಕೆ ನನಗೆ ವಿದ್ಯೆಯೂ ಬೇಕೆ? “ ಎಂದು ನಿರಾಕರಿಸಿದನು. ಸಂಧ್ಯಾವಳಿ ಅವನ ಎರಡೂ ಪಾದಗಳಿಗೆ ಬಿದ್ದು ಸಾಷ್ಟಾಂಗ ವಂದಿಸಿ ನಿಶ್ಚಯವಾಗಿಯೂ ಸ್ವೀಕರಿಸಲೇಬೇಕು ಎಂದು ಒತ್ತಾಯದಿಂದ ವಿದ್ಯೆಯನ್ನು ಆ ಸಂದರ್ಭದಲ್ಲಿ ಕೊಟ್ಟಳು. ಅನಂತರ ಇತ್ತ ರಥನೂಪುರಚಕ್ರವಾಳ ಎಂಬ ಪಟ್ಟಣದ ಒಡೆಯನಾದ ಚಂದ್ರಯಶನೆಂಬ ವಿದ್ಯಾಧರನಿಗೂ ವಿದ್ಯುದ್ವೇಗೆ ಎಂಬ ಮಹಾರಾಣಿಗೂ ಅಂತೂ ಇಬ್ಬರಿಗೂ ಚಂದ್ರವೇಗ ಭಾನುವೇಗ ಎಂಬಿಬ್ಬರು ಮಕ್ಕಳಾಗಿ ಜನಿಸಿದರು. ಹೀಗೆ ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇರಲು, ಆಮೇಲೆ ಒಂದಾನೊಂದು ದಿವಸ ರಾಜನಿಗೆ ಸಂಸಾರದಲ್ಲಿ ವೈರಾಗ್ಯವುಂಟಾಗಿ ಹಿರಿಯ ಮಗನಾದ ಚಂದ್ರವೇಗನಿಗೆ ರಾಜ್ಯವನ್ನು ಕಟ್ಟಿ ಕಿರಿಯ ಮಗನಾದ ಭಾನುವೇಗನಿಗೆ ಯುವರಾಜಪಟ್ಟವನ್ನು ಕಟ್ಟಿ ಗುಣಧರರೆಮಭ ಚಾರಣಋಷಿಗಳ ಬಳಿಯಲ್ಲಿ ಜೈನದೀಕ್ಷೆಯನ್ನು ಸ್ವೀಕರಿಸಿ, ಹಲವು ಕಾಲ ತಪಸ್ಸನ್ನು ಮಾಡಿ ಸಮ್ಮೇದಪರ್ವತದಲ್ಲಿ ಮೋಕ್ಷಕ್ಕೆ ತೆರಳಿದರು. ಆಮೇಲೆ ಚಂದ್ರವೇಗನಿಗೆ ನೂರು ಮಂದಿ ಹೆಣ್ಣುಮಕ್ಕಳಾದರು. ಅವರು ಹೆಚ್ಚಾದ ರೂಪ ಲಾವಣ್ಯವುಳ್ಳವರಾಗಿದ್ದರು. ಅವರನ್ನು ಆಶನಿವೇಗನು ತನ್ನ ಮಗನಾದ ವಜ್ರವೇಗನಿಗೆ ತರಬೇಕೆಂದು ಎಡೆಬಿಡದೆ ಕಾಣಿಕೆಯನ್ನೂ ಹೆಗ್ಗಡೆ (ಅರಮನೆಯ ಅಕಾರಿ)ಗಳನ್ನೂ ಕಳುಹಿಸುತ್ತಿದ್ದನು. ಅದಲ್ಲದೆ ಬೇರೆ ವಿದ್ಯಾಧರರೂ ಯಾವಾಗಲೂ ಆ ಕನ್ಯೆಯರನ್ನು ಕೇಳುವುದಕ್ಕೆ ಕಳುಹಿಸುತ್ತಲೇ ಇದ್ದರು. ಚಂದ್ರವೇಗನು ಅವರಲ್ಲಿ ಯಾರಿಗೂ ಕೊಡಲು ಒಪ್ಪದೆ ಅನಂತರ ಒಂದು ದಿವಸ ತನ್ನ ಹೆಣ್ಣುಮಕ್ಕಳನ್ನು ಯಾರಿಗೆ ಕೊಡೋಣ ಎಂದು ದೈವಜ್ಞನಾದ ಜಫಯಿಸನನ್ನು ಕೇಳಿದನು. ಆಗ ಅವನು ಹೀಗೆಂದನು

        ಮಹಾವಿಭೂತಿಯೊಳ್ ಕೂಡಿ ಸಂಗ್ರಾಮಮಂ ನೋಡುತ್ತಮಿರೆ ಮತ್ತಶನಿವೇಗಂ ಕುಂಆರನಂ ಕಂಡು ಕ್ರೋಧಾಗ್ನಿ ಪೆರ್ಚಿ ಎನ್ನ ಮಗನಂ ಕೊಂದೊನಂ ಬೇಗಂ ಮೃತ್ಯುರಾಜನಂ ಕಾಣ್ಬಂತಿರೆ ಮಾೞ್ಪೆನೆಂದು ಮುಳಿದು ಮಸಗಿ ಬರ್ಪೊನಂ ಕುಮಾರಂ ಕಂಡಾಗಡೆ ಬಾಣಾಸನುಸ್ತನಾಗಿ ಆರ್ದಚಂದ್ರಮೆಂಬ ಸರದಿಂದಾತನ ತಲೆಯಂ ಮೊಕ್ಕನೆವೋಗೆಚ್ಚಂ ಅದು ಜ್ವಲನ್ಮಣಿಮಕುಟ ಕುಂಡಲಂಗಳಿಂದೊಪ್ಪುತ್ತಿರ್ದುದು ವಿದ್ಯುತ್ಕಪಾಲಂಬೊಲ್ ನೆಲದೊಳ್ ಬಿೞ್ದತ್ತಾಗಳಾ ತಲೆಯಂ ಮಱುವಕ್ಕದರ್ ಕಂಡು ಕೆಲರಂಜಿ ತ್ರಸ್ತಾಭಿಭೂತರಾಗಿಯೋಡಿ ಕೆಲರ್ ಶರಣೆಮದು ಕುಮಾರನ ಕಾಲ್ಗೆಱಗಿ ಪುಲ್ಲಂ ಕರ್ಚಿ ಪೊಡೆವಟ್ಟರಾ ಕುಮಾರನುಮಾಗಳಬೈಘೋಷಣೆಯಂ ಪೊಯ್ದಿಯವರ್ಗ್ಗಭಯದಾನವಮಂ ಕೊಟ್ಟನಾಗಳ್ ಪೋಗಿ ಪೊೞಲಂ ಪೊಕ್ಕು ಪ್ರಶಸ್ತ ದಿನ ವಾರ ನಕ್ಷತ್ರ ಹೋರಾಮುಹೂರ್ತ ಲಗ್ನದೊಳ್ ತನ್ನ ಮಕ್ಕಳ್ ಚಂದ್ರಮತಿ ಚಂದ್ರಶ್ರೀ ಚಂದ್ರಲೇಖೆ ಶಶಿಕಾಂತೆ ಮನೋಹಾರಿಣಿ ಹರಿಣಾಂಕೆ ಕಮಲಮುಖಿ ಪ್ರುದರ್ಶನೆಯೆಂದಿವರ್ ಮೊದಲಾಗೊಡೆಯ ನೂರ್ವರ್ ಕನ್ನೆಯರ್ಕ್ಕಳಂ ಪಾಣೀಗ್ರಹಣಪುರಸ್ಸರಂ ಕೊಟ್ಟನಂತಾ ನೂರ್ವರ್ ಕನ್ನೆಯರ್ಕ್ಕಳುಂ ಮುನ್ನಿನ ಖೇಚರಿಯರ್ಕ್ಕಳುಂ ಪೆಱವುಮೆಂದಿವರೊಳ್ ಕೂಡಿ ಕುಮಾರಂ ವಿದ್ಯಾಧರಶ್ರೇಣಿಯೊಳ್ ಸುಖಮನನುಭವಿಸತ್ತಿರ್ಪ್ಪನ್ನೆಗಂ 

        ಛತ್ರ (ಕೊಡೆ), ಚಾಮರ(ಚೌರಿ), ನವಿಲಗರಿಯ ಕೊಡೆ, ಪಾಳಿಧ್ವಜ, (ಹಾರ, ವಸ್ತ್ರ, ನವಿಲು, ಕಮಲ, ಹಂಸೆ, ಮೀನ, ಸಿಂಹ, ವೃಷಭ, ಆನೆ, ಚಕ್ರ – ಈ ಲಾಂಛನಗಳುಳ್ಳ ಬಾವುಟಗಳ ವ್ಯೂಹ), ಪತಾಕೆ – ಮುಂತಾದ ಮಹಾ ವೈಭವದಿಮದ ಕೂಡಿ ಯುದ್ದವನ್ನು ನೋಡುತ್ತ ಇದ್ದನು. ಆ ಮೇಲೆ ಆಶನಿವೇಗನು ಕುಮಾರನನ್ನು ಕಂಡಾಗ ಕೋಪವೆಂಬ ಬೆಂಕಿ ಹೆಚ್ಚಾಗಿ “ನನ್ನ ಮಗನನ್ನು ಕೊಂದವನನ್ನು ಬೇಗನೆ ಮರಣದ ರಾಜನನ್ನು ಕಾಣುವ ಹಾಗೆ ಮಾಡುವೆನು" ಎಂದು ಕೋಪೋದ್ರೇಕಗೊಂಡು ಬರುತ್ತಿದ್ದನು. ಅವನನ್ನು ಕುಮಾರನು ಕಂಡೊಡನೆಯೇ ಬಿಲ್ಲನ್ನು ಹಿಡಿದು ಆರ್ಧಚಂದ್ರವೆಂಬ ಬಾಣದಿಂದ ಆತನ ತಲೆಯನ್ನು ಮೊಕ್ಕೆಂದು ಕತ್ತರಿಸಿ ಹೊಗುವಂತೆ ಹೊಡೆದನು. ಆ ತಲೆ ಹೊಳೆಯುವ ರತ್ನಗಳ ಕಿರೀಟಕುಂಡಲಗಳಿಂದ ಶೋಭಿಸುತ್ತಿದ್ದುದು ಮಿಂಚಿನ ತಲೆಬುರುಡೆಯೋ ಎಂಬಂತೆ ನೆಲದ ಮೆಲೆ ಬಿದ್ದಿತು ಆಗ ಆ ತಲೆಯನ್ನು ಪ್ರತಿಪಕ್ಷದವರು ಕಂಡರು. ಅವರಲ್ಲಿ ಕೆಲವರು ಹೆದರಿ, ಭಯದಿಂದ ಹೊಡೆಯಲ್ಪಟ್ಟವರಾಗಿ ಓಡಿದರು. ಕೆಲವರು ‘ಶರಣು’ ಎಂದು ಕುಮಾರನ ಕಾಲಿಗೆರಗಿದರು, ಕೆಲವರು ಹುಲ್ಲನ್ನು ಕಚ್ಚಿ ಸಾಷ್ಟಾಂಗವಂದನೆ ಮಾಡಿದರು. ಆಗ ಕುಮಾರನು ಆಭಯಘೋಷಣೆಯನ್ನು ಹೊಡೆಸಿ ಅವರಿಗೆಲ್ಲ ಅಭಯಧಾನವನ್ನಿತ್ತನು. ಆಗ ಚಂದ್ರವೇಗನು ಯುದ್ದರಂಗವನ್ನು ಪೂಜಿಸಿ ದೊಡ್ಡ ವೈಭವದಿಂದ ಕುಮಾರನನ್ನು ಕೂಡಿಕೊಂಡು ಹೋಗಿ ಪಟ್ಟಣವನ್ನು ಹೊಕ್ಕು ಒಳ್ಳೆಯ ದಿನ ವಾರ ನಕ್ಷತ್ರ ಹೋರಾ ಮುಹೂರ್ತ ಲಗ್ನದಲ್ಲಿ ತನ್ನ ಮಕ್ಕಳಾದ ಚಂದ್ರಮತಿ ಚಂದ್ರಶ್ರೀ ಚಂದ್ರಲೇಖೆ ಶಶಿಕಾಂತೆ ಮನೋಹಾರಿಣಿ ಹರಿಣಾಂಕೆ ಕಮಲಮುಖಿ ಪ್ರಿಯದರ್ಶನೆ – ಎಂದು ಇವರೇ ಮೊದಲಾಗಿರುವ ನೂರು ಮಂದಿ ಕನ್ಯೆಯರನ್ನು ಪಾಣಿಗ್ರಹಣಪೂರ್ವಕನಾಗಿ ಕೊಟ್ಟನು. ಅಂತು ಆ ನೂರು ಮಂದಿ ಕನ್ಯೆಯರೂ ಹಿಂದಿನ ಬೇರೆ ವಿದ್ಯಾಧರಯುವತಿಯರು – ಎಲ್ಲರನ್ನು ಕೂಡಿಕೊಂಡು ಸನತ್ಕುಮಾರನು ವಿದ್ಯಾಧರರ ಸಾಲಿನಲ್ಲಿದ್ದು ಸುಖವನ್ನು ಅನುಭವಿಸುತ್ತ ಇದ್ದನು. ಹೀಗಿರಲು,

       ಮತ್ತೊಂದುದಿವಸಂ ಚಂದ್ರವೇಗಂ ಸಿದ್ದಕೂಟಕ್ಕೆ ವಂದನಾಭಕ್ತಿಗೆ ವೋಗಿ ದೇವನನರ್ಚಿಸಿ ವಂದಿಸಿ ಸುಮಾಳಿಗಳೆಂಬವಜ್ಞಾನಿಗಳಪ್ಪ ಚಾರಣಸಿರಿಯರಂ ಗುರುಭಕ್ತಿಗೆಯ್ದು ವಂದಿಸಿ ಧರ್ಮಮಂ ಕೇಳ್ದು ತದನಂತರಮಿಚಿತೆಂದು ಐಟಾರಾ ಸನತ್ಕುಮಾರಂಗಂ ಸಿತಯಕ್ಷಂಗಂ ವೈರಸಂಬಂಧಕ್ಕೆ ಕಾರಣಮೇನೆಂದು ಬೆಸಗೊಂಡೊಡೆ ಭಟಾರರುಂ ತತ್ಸಂಬಂಯಪ್ಪ ಸಿತಯಕ್ಷಂಗಂ ವೈರಸಂಬಂಧಕ್ಕೆ ಕಾರಣಮೇನೆಂದು ಬೆಸಗೊಂಡೊಡೆ ಭಟಾರರುಂ ತತ್ಸಂಬಂಯಪ್ಪ ಕಥೆಯನಿಂತೆಮದು ಪೇೞಲ್ ತೊಡಗಿದರ್ ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಕಾಂಚನಮೆಂಬುದು ಪೊೞಲದನಾಳ್ರ್ವೆಂ ಪ್ರತಿಮುಖನೆಂಬರಂನಷ್ಟಶತಮಂತಪುರಕ್ಕಪನಾಗಿ ಕಾಲಂ ಸಲೆ ಮತ್ತಾ ಪೊೞಲೊಳ್ ನಾಗಚಂದ್ರನೆಂಬೋಂ ಸಾರ್ಥಾಪತಿಯಾತನ ಭಾರ್ಯೆ ವಿಷಗಣುಶ್ರೀಯೆಂಬೊಳತ್ತಂತ ರೂಪಲಾವನ್ಯ ಸೌಭಾಗ್ಯ ಕಾಂತಿ ಭಾವ ವಿಳಾಸ ವಿಭ್ರಮಂಗಳಿಂ ಕೂಡಿದೊಳೊಂದು ದಿವಸಂ ಅರಸನುದ್ಯಾನವನಕ್ಕೆ ಪೋಗುತ್ತಂ ಪ್ರಾಸಾದದೊಳಿರ್ದ ದೇವಾಂಗನಾಸನ್ನಿಭೆಯಪ್ಪಳಂ ಕಂಡು ಕಾಮಶರಂಗಳಿಂ ಜರ್ಝರಿತಹೃದಯನಾಗಿ ಮಂತ್ರಪ್ರಯೋಗದಿಂದಂ ವಿಷ್ಣುಶ್ರೀಯನೊಳಕೊಂಡ ನಾಕೆಯುಮಾತಂಗಗ್ರವಲ್ಲಭೆಯಾಗಿ ಸಲ್ವೊಳಂ ಸಮಸ್ತಮಂತಃಪುರಮಾಕೆಗೆ ಮುಳಿಯಿತ್ತಿರ್ಕುಮೊಂದು ದಿವಸಂ ಸಾರ್ವಭೌಮನೆಂಬ ಪಟ್ಟವರ್ಧನಗಜಂ ಸೊರ್ಕಿ ಮಸಗಿ ಕಟ್ಟುಗಳೆಲ್ಲಮಂ ಪಱದು

         ಮತ್ತೊಂದು ದಿವಸ ಚಂದ್ರವೇಗನು ಸಿದ್ದರಿರತಕ್ಕ ಪರ್ವತಶಿಖರಕ್ಕೆ ವಂದನೆಯ ಭಕ್ತಿಗೋಸ್ಕರ ಹೋದನು. ಅಲ್ಲಿ ದೇವರನು ಪೂಜಿಸಿ, ನಮಸ್ಕರಿಸಿ ಸುಮಾಳಿಗಳೆಂಬ ಅವಜ್ಞಾನಿಗಳಾದ ಚಾರಣಋಷಿಗಳಲ್ಲಿ ಗುರುಭಕ್ತಿಯನ್ನು ಆಚರಿಸಿ ಅವರನ್ನು ವಂದಿಸಿ ಧರ್ಮೋಪದೇಶಗಳನ್ನು ಕೇಳಿದನು. ಅನಂತರ ಹೀಗೆಂದನು – “ಪೂಜ್ಯರೇ ಸನತ್ಕುಮಾರನಿಗೂ ಸಿತಯಕ್ಷನಿಗೂ ದ್ವೇಷಸಂಬಂಧಕ್ಕೆ ಕಾರಣವೇನು?" ಎಂದು ಕೇಳಲು ಸ್ವಾಮಿಗಳು ಅದಕ್ಕೆ ಸಂಬಂಸಿದ ಕಥೆಯನ್ನು ಹೀಗೆ ಹೇಳತೊಡಗಿದರು. ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆಯೆಂಬ ನಾಡಿನಲ್ಲಿ ಕಾಂಚನವೆಂಬ ಪಟ್ಟಣವಿದೆ. ಅದನ್ನು ಪ್ರತಿಮುಖನೆಂಬ ರಾಜನು ಆಳುತ್ತಿದ್ದನು. ಅವನು ಎಂಟನೂರು ಅಂತಃಪುರ ಸ್ತ್ರೀಯರಿಗೆ ಒಡೆಯನಾಗಿದ್ದನು. ಹೀಗೆ ಕಾಲ ಕಳೆಯಿತು. ಆಮೇಲೆ, ಆ ಪಟ್ಟಣದಲ್ಲಿ ನಾಗಚಂದ್ರನೆಂಬ ವ್ಯಾಪಾರಿಯಿದ್ದನು. ಅವನು ಸಾರ್ಥಾಪತಿಯಾಗಿದ್ದನು. (ಊರಿಂದುರಿಗೆ ಹೋಗಿ ಸರಕುಗಳನ್ನು ಮಾರುವವರ ಶ್ರೇಣಿಗೆ ಒಡೆಯ). ಅವನ ಪತ್ನಿಯಾದ ವಿಷ್ಣುಶ್ರೀಯೆಂಬವಳು ಅತಿಶಯ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳಿಂದ ಕೂಡಿದವಳು. ಒಂದು ದಿನ ರಾಜನು ಉದ್ಯಾನಕ್ಕೆ ಹೋಗುವಾಗ ದೊಡ್ಡ ಮನೆಯಲ್ಲಿ ಇದ್ದ ದೇವತಾಸ್ತ್ರೀಯಂತಿದ್ದ ಆಕೆಯನ್ನು ಕಂಡನು. ಕಾಮನ ಬಾಣಗಳಿಂದ ನುಜ್ಜುಗುಜ್ಜಾದ ಮನುಸುಳ್ಳವನಾಗಿ ಮಂತ್ರಶಕ್ತಿಯನ್ನು ಉಪಯೋಗಿಸಿ ವಿಷ್ಣುಶ್ರೀಯನ್ನು ವಶಪಡಿಸಿಕೊಂಡನು. ಆಕೆ ಅವನಿಗೆ ಇತರರಿಗಿಂತ ಮೇಲಿನ ಹೆಂಡತಿಯಾಗಿ ನಡೆಯುತ್ತಿದ್ದಳು. ರಾಜನ ಅಂತಃಪುರದವರೆಲ್ಲ ಅಕೆಯ ಮೇಲೆ ಸಿಟ್ಟಿನಿಂದಿದ್ದರು. ಒಂದು ದಿವಸ ಸಾರ್ವಭೌಮ ಎಂಬ ಪಟ್ಟದಾನೆ ಸೊಕ್ಕಿ ಉದ್ರೇಕಗೊಂಡು ಕಟ್ಟುಗಳನ್ನೆಲ್ಲ ಕಡಿದುಕೊಂಡು 

    ಹತತವಿತಕೋಳಾಹಳಮೆೞೆದು ಪೊೞಲೆಲ್ಲಮಂ ಕೊಲ್ವುದನರಸಂ ಕೇಳ್ದಾನೆಯಂ ಕಟ್ಟಿಸಲೆಂದು ಪೋದನನ್ನೆಗಮಿತ್ತ ಅನಿಬರರಸಿಯರ್ಕಳ್ ನೆರೆದು ವಿಷಪ್ರಯೋಗದಿಂದಂ ಕೊಂದಾರುಮಱಯದಂತಿರೆ ಶ್ಮಶಾನದೊಳೀಡಾಡಿದೊರನ್ನೆಗಮರಸನುಮಾನೆಯುಮಂ ಕಟ್ಟಿಸಿ ಬಂದರಸಿಯಂ ಕಾಣದೆಲ್ಲರ್ದಳೆಂದು ಬೆಸಗೊಂಡೆಡೆ ಸತ್ತಳೆಂಬಾ ಮಾತಂ ಕೇಳ್ದು ಮೂರ್ಛಿತನಾಗಿ ಕಟ್ಟಿಸಿ ಬಂದಂರಸಿಯಂ ಮಹಾದುಃಖಂಗೆಯ್ದು ಶ್ಮಶಾನಕ್ಕಾಕೆಯ ದೇಹಮಂ ನೋಡಲೆಂದು ಪೋಗಿಯದಱ ಬೀಭತ್ಸಮಂ ಕಂಡಾದಮಾನುಂ ಪೇಸಿ ಶರೀರವೈರಾಗ್ಯಮನೊಡೆಯಾಗಿ ಅನ್ಯಾಯದಿಂ ಪರಸ್ತ್ರೀಹರಣಂ ಗೆಯ್ದೆಂ ಮಹಾಪಾತಕನೆನೆಂದು ತನ್ನ ತಾನಾದಮಾನುಂ ನಿಂದಿಸಿ ವಿಮಳವಾಹನೆಂಬ ಪಿರಿಯ ಮಗಂಗೆ ರಾಜ್ಯ ಪಟ್ಟಂಗಟ್ಟಿ ಸುವ್ರತೆರೆಂಬಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ಪಲಕಾಲಂ ತಪಂಗೆಯ್ದು ಸಮಾಮರಣದಿಂ ಮುಡಿಪಿ ಪ್ರಾಣತಕಲ್ಪದೊಳಿರ್ಪ್ಪತ್ತು ಸಾಗರೋಪಮಾಯುವ್ಯಸ್ಥಿತಿಯ ನೊಡೆಯೊಂ ಪ್ರತೀಂದ್ರನಾಗಿ ಪುಟ್ಟಿ ದೇವಲೋಕದ ದಿವ್ಯಸುಖಮಂ ಪಲಕಾಲಮನುಭವಿಸಿ ಬಮದಿಲ್ಲಿ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಕನಕಮೆಂಬುದು ಪೊೞಲದನಾಳ್ವೊಂ ಹರಿವಾಹನನೆಂಬರಸಂ ಮತ್ತಮಾ ಪೊೞಲೊಳ್ ರಾಜಶ್ರೇಷ್ಠಿ ಅರ್ಹದ್ದಾಸನೆಂಬೊನಾತನ ಭಾರ್ಯೆ ಜಿನದತ್ತೆಯೆಂಬೊಳಾ ಇರ್ವ್ವರ್ಗಂ ಮಗಂ ಜಿನವರ್ಮನೆಂಬೊನಾಗಿ ಪುಟ್ಟಿ 

    ಯದ್ವಾತದ್ವಾ ಗದ್ದಲವನ್ನುಂಟುಮಾಡಿ ಎಳೆದುಕೊಂಡು ಪಟ್ಟಣದಲ್ಲೆಲ್ಲಾ ಸಿಕ್ಕಿಸಿಕ್ಕಿದವರನ್ನು ಕೊಲ್ಲತೊಡಗಿದತು. ರಾಜನು ಇದನ್ನು ಕೇಳಿ ಆನೆಯನ್ನು ಹಿಡಿದು ಬಂಸುವುದಕ್ಕಾಗಿ ಹೋದನು. ಆ ವೇಳೆಯಲ್ಲಿ ಇತ್ತ ಆಂತಃಪುರದ ಅಷ್ಷೊಂದು ಮಂದಿ ಅರಸಿಯರು ಒಟ್ಟುಗೋಡಿ ವಿಷ್ಣುಶ್ರೀಯನ್ನು ವಿಷಪ್ರಯೋಗದಿಂದ ಕೊಂದು ಯಾರೊಬ್ಬರೂ ತಿಳಿಯದ ಹಾಗೆ ಶ್ಮಶಾನದಲ್ಲಿ ಬಿಸಾಡಿದರು. ಅಷ್ಟರಲ್ಲಿ ರಾಜನು ಆನೆಯನ್ನು ಕಟ್ಟಿಸಿ ಹಿಂದಕ್ಕೆ ಬಂದು ರಾಣಿಯನ್ನು ಕಾಣದೆ, ಆಕೆ ಎಲ್ಲಿದ್ದಾಳೆ?’ ಎಂದು ಕೇಳಿದನು. ‘ಸತ್ತಳು’ ಎಂಬ ಸುದ್ದಿಯನ್ನು ಕೇಳಿ ಮೂರ್ಛೆಹೋದನು. ಹೆಚ್ಚು ಹೊತ್ತಿನ ಮೇಲೆ ಎಚ್ಚರಗೊಂಡು ಮಹಾದುಃಖವನ್ನು ತಾಳುತ್ತ ಆಕೆಯ ಶರೀರವನ್ನು ನೋಡುವುದಕ್ಕಾಗಿ ರುದ್ರಭೂಮಿಗೆ ಹೋದನು. ಅಲ್ಲಿ ಜುಗುಪ್ಸೆಯನ್ನುಂಟುಮಾಡುವ ಹೆಣದ ರೂಪವನ್ನು ಕಂಡು ಅತಿಶಯವಾಗಿ ಹೇಸಿಕೆ ಪಟ್ಟು ದೇಹದ ಮೇಲೆ ವೈರಾಗ್ಯವುಳ್ಳವನಾದನು. “ಅನ್ಯಾಯದಿಂದ ಬೇರೆಯವರ ಹೆಂಡಿತಿಯನ್ನು ಅಪಹರಣ ಮಾಡಿದೆನು, ಮಹಾಪಾಪಿಯಾಗಿರುವೆನು" ಎಂದು ತನ್ನನ್ನು ತಾನು ಅತ್ಯಂತವಾಗಿ ಹಳಿದುಕೊಂಡನು, ಆಮೇಲೆ ವಿಮಳವಾಹನನೆಂಬ ಹಿರಿಯ ಮಗನಿಗೆ ರಾಜ್ಯಪಟ್ಟವನ್ನು ಕಟ್ಟಿ ಸುವ್ರತರೆಂಬ ಆಚಾರ್ಯರ ಬಳಿಯಲ್ಲಿ ಜೈನದೀಕ್ಷೆಯನ್ನು ಸ್ವೀಕರಿಸಿದನು. ಹಲವು ಕಾಲದವರೆಗೆ ತಪಸ್ಸನ್ನು ಆಚರಿಸಿ ಸಮಾಮರಣದಿಂದ ಸತ್ತು ಪ್ರಾಣತವೆಂಬ ಸ್ವರ್ಗದಲ್ಲಿ ಇಪ್ಪತ್ತು ಸಾಗರವನ್ನು ಹೋಲುವ ದೀರ್ಘಕಾಲದ ಆಯುಷ್ಯವುಳ್ಳ ಪ್ರತಿದೇವೇಂದ್ರನಾಗಿ ಹುಟ್ಟಿದನು. ಹಲವು ಕಾಲ ದೇವಲೋಕದ ಸುಖವನ್ನನುಭವಿಸಿ ಬಂದನು – ಎಲ್ಲಿ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆಯೆಂಬ ನಾಡಿನ ಕನಕಪುರವನ್ನು ಆಳುವ ಹರಿವಾಹನನೆಂಬ ರಾಜನಿದ್ದನು. ಅನಂತರ, ಅದೇ ಪಟ್ಟಣದಲ್ಲಿ ರಾಜಶ್ರೇಷ್ಠಿಯಾಗಿ ಅರ್ಹದ್ದಾಸನೆಂಬವನಿದ್ದನು. ಅವನ ಹೆಂಡತಿ ಜಿನದತ್ತೆ. ಆ ಇಬ್ಬರಿಗೆ ಜಿನವರ್ಮನೆಂಬ ಮಗನಾಗಿ (ಆ ಪ್ರತಿಮುಖನಾಗಿದ್ದವದು) ಹುಟ್ಟಿದನು. 

     ರೂಪ ಲಾವಣ್ಯ ಸೌಭಾಗ್ಯ ಕಾಂತಿತ್ವದಿಂದಾದಮಾನುಂ ನೆಱೆದೊನಾಗಿ ಇಂತು ಕಾಲಂ ಮಲೆ ಅರ್ಹದ್ವಾಸಂಗೇನಾನುವೊಂದು ಕಾರಣದಿಂದಂ ವೈರಾಗ್ಯಮಾಗಿ ಜಿನವರ್ಮಂಗೆ ರಾಜಶ್ರೇಷ್ಠಿಪದಮಂ ಕೊಟ್ಟು ಶಿವಗುಪ್ತಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ತಪಂಗೈಯ್ದುಮೋಕ್ಷಕ್ಕೆ ವೋದನ್ ಮತ್ತಿತ್ತ ಜಿನವರ್ಮನುಂ ಪಲವುಂ ಜಿನಾಲಯಂಗಳಂ ಮಾಡಿಸಿ ದಾನಶ್ರೀಯೆಂಬ ಪೂಜೆ ಶಿಲೋಪವಾಸಮೆಂದಿಂತು ಚತುರ್ವಿಧಮಪ್ಪ ಶ್ರಾವಕಧರ್ಮದೊಳಗ್ಗಳನಾಗಿ ನೆಗೞುತ್ತಮಿಂತು ಪಲಕಾಲಂ ಸಲೆ ಮತ್ತಾ ಮುನ್ನಿನ ಭವದ ನಾಗಚಂದ್ರನೆಂಬೊಂ ಸಾರ್ಥಾಪತಿ ವಿಷ್ಣು ತನ್ನ ಭಾರ್ಯೆಯ ವಿಯೋಗಂ ಕಾರಣವಾಗಿ ಆರ್ತಧ್ಯಾನದಿಂ ಸತ್ತು ತಿರ್ಯಙ್ನರಕಾದಿಗಳೊಳ್ ಪಲಕಾಲಂ ತೊೞಲ್ದೀ ಭರತಕ್ಷೇತ್ರದೊಳ್ ಕಪಿಲನೆಂಬ ಪಾರ್ವ್ವಂಗಂ ಗಂಗೆಯೆಂಬ ಪಾರ್ವ್ವಂತಿಗಂ ಭಾರದ್ವಾಜನೆಂಬ ಮಗನಾಗಿ ಪುಟ್ಟಿ ಕನಕದಂಡಿಯೆಂಬ ಪರಿವ್ರಾಜಕಂಗೆ ಶಿಷ್ಯನಾಗಿ ನಾನಾದೇಶಂಗಳಂ ವಿಹಾರಿಸುತ್ತಂ ಕನಕಪುರಕ್ಕೆ ವಂದು ಮಾಸೋಪವಾಂಗೆಯ್ಯುತ್ತಂ ಮಹಾತಪಸ್ವಿಯಾಗಿ ನೆಗೞುತ್ತಿರೆ ತತ್ಪುರಾಪಂ ಹರಿವಾಹನನೆಂಬರಸಂ ಕಂಡಾದಮಾನುಮಾ ತಪಸ್ವಿಗೆ ಭಕ್ತನಾಗಿ ಬೆಸಕೆಯ್ಯೆ ಕಾಲಂ ಸಲೆ ಮತ್ತೊಂದು ದಿವಸಮರಸ ನೊಡನೆ ಜಿನವರ್ಮನಾ ಪರಿವ್ರಾಜಕನ ನಿವಾಸಕ್ಕೆ ವೋದೊಡೆ ಜಿನವರ್ಮನಂ ಕಂಡು ಪೂರ್ವವೈರಸಂಬಂಧದಿಂದಾದ ಕ್ರೋಧಾಗ್ನಿ ಪೆರ್ಚಿ ಮಱುಗುತ್ತಿರ್ದ್ದ ಮನಮನ್ರೆಡಯ ತಪಸ್ವಿಯನರಸನಿಂತೆಂದಂ ನೀಮಮ್ಮ ಮನೆಯೊಳ್ ಪಾರಿಸಲ್ವೇಳ್ಟುದೆಂದು ಪ್ರಾರ್ಥಿಸಿದೊಡೆ 

    ಜಿನವರ್ಮನು ಹೆಚ್ಚಾದ ರೂಪ – ಲಾವಣ್ಯ – ಸೌಭಾಗ್ಯ – ತೇಜಸ್ಸುಗಳಿಂದ ಕೂಡಿದ್ದನು. ಹೀಗೆಯೇ ಕಾಲಕಳೆಯಲು ಅರ್ಹದ್ದಾಸನಿಗೆ ಏನೋ ಒಂದು ಕಾರಣದಿಂದ ವೈರಾಗ್ಯವುಂಟಾಯಿತು. ಅವನು ಜಿನವರ್ಮನಿಗೆ ರಾಜಶ್ರೇಷ್ಠಿ ಪದವಿಯನ್ನು ಕೊಟ್ಟು ಶಿವಗುಪ್ತಾಚಾರ್ಯರ ಬಳಿಯಲ್ಲಿ ದೀಕ್ಷೆಯನ್ನು ಸ್ವೀಕರಿಸಿ ತಪಸ್ಸನ್ನು ಮಾಡಿ ಮೋಕ್ಷಕ್ಕೆ ಹೋದನು. ಆಮೇಲೆ ಇತ್ತ ಜಿನವರ್ಮನ ಹಲವು ಜಿನಾಲಯಗಳನ್ನು ಮಾಡಿಸಿ ದಾನ, ಪೂಜೆ, ಶೀಲ, ಉಪವಾಸ, ಎಂಬ ನಾಲ್ಕು ವಿಧದ ಶ್ರಾವಕಧರ್ಮದಲ್ಲಿ (ಜೈನಗೃಹಸ್ಥಧರ್ಮದಲ್ಲಿ) ಶ್ರೇಷ್ಠನಾಗಿ ಆಚರಿಸುತ್ತ ಹೀಗೆಯೇ ಹಲವು ಕಾಲ ಕಳೆಯಿತು. ಆಮೇಲೆ, ಆ ಹಿಂದಿನ ಜನ್ಮದ ನಾಗಚಂದ್ರನೆಂಬ ವರ್ತಕನು ವಿಷ್ಣುಶ್ರೀಯೆಂಬ ತನ್ನ ಹೆಂಡತಿಯ ಅಗಲಿಕೆಯ ಕಾರಣದಿಂದ ಆರ್ತಧ್ಯಾನದಿಂದ ಸತ್ತು ಪ್ರಾಣಿಪಕ್ಷಿಜನ್ಮಗಳಲ್ಲಿಯೂ ನರಕಗಳಲ್ಲಿಯೂ ಹಲವು ಕಾಲ ಸುತ್ತಾಡಿ ಈ ಭರತಕ್ಷೇತ್ರದಲ್ಲಿ ಕಪಿಲನೆಂಬ ಬ್ರಾಹ್ಮಣನಿಗೂ ಗಂಗೆಯೆಂಬ ಬ್ರಾಹ್ಮಣಿತಿಗೂ ಭಾರಧ್ವಜನೆಂಬ ಮಗನಾಗಿ ಹುಟ್ಟಿದನು. ಅವನು ಕನಕದಂಡಿಯೆಂಬ ಸಂನ್ಯಾಸಿಗೆ ಶಿಷ್ಯನಾಗಿ ಹಲವಾರು ದೇಶಗಳನ್ನು ಸಂಚಾರಮಾಡುತ್ತ ಕನಕಪುರಕ್ಕೆ ಬಂದು ಒಂದು ತಿಂಗಳ ಉಪವಾಸವನ್ನು ಮಾಡುತ್ತ ದೊಡ್ಡ ತಪಸ್ವಿಯಾಗಿ ಆಚರಿಸುತ್ತಿದ್ದನು. ಆ ಪಟ್ಟಣದ ಹರಿವಾಹನನೆಂಬ ರಾಜನು ಕಂಡು ಆ ತಪಸ್ವಿಗೆ ವಿಶೇಷ ಭಕ್ತನಾಗಿ ಸೇವೆಮಾಡುತ್ತಿದ್ದನು. ಕಾಲಕಳೆಯಲು ಮತ್ತೊಂದು ದಿನ ಜಿನವರ್ಮನು ಅರಸನೊಂದಿಗೆ ಆ ಸಂನ್ನಯಾಸಿಯ ವಾಸಸ್ಥಳಕ್ಕೆ ಹೋದನು. ಆಗ ತಪಸ್ವಿಯು ಜಿನವರ್ಮವನನ್ನು ಕಂಡು ಪೂರ್ವಜನ್ಮದ ವೈರದಿಂದ ಸಿಟ್ಟೆಂಬ ಬೆಂಕಿ ಹೆಚ್ಚಾಗಿ, ಕುದಿಯುವ ಮನಸುಳ್ಳವನಾಗಿದ್ದನು. ಅಂತಹ ತಪಸ್ವಿಯನ್ನು ಕುರಿತು ರಾಜನು – “ನೀವು ನಮ್ಮ ಮನೆಯ ಊಟವನ್ನು ಸ್ವೀಕರಿಸಬೇಕು" ಎಂದು ಪ್ರಾರ್ಥಿಸಿದನು. 

 

 ಆತನಿಂತೆಂದಂ ಒಂದು ಪಾಂಗಿನೊಳ್ ನಿಮ್ಮ ಮನೆಯೊಳ್ ಪಾರಿಸುವೆನೀ ಜಿನವರ್ಮನ ಬೆನ್ನೊಳಡಿಯಿಲ್ಲದ ತಳಿಗೆಯನಿಟ್ಟು ಬಿಸಿಯ ತುಯ್ಯಲನುಣ್ಬುದೆನಗೞಯೀ ಪಾಂಗಿನೊಳೆನ್ನನೂಡಲಾರ್ಪೊಡುಣ್ವಿನಲ್ಲದಾಗಳುಣ್ಣೆನೆಂದು ಪೇೞ್ದೊಡೆ ಕೇಳ್ದಚ್ಚಿಗನಾದರಸನಂ ಜಿನವರ್ಮಂ ಕಂಡಿಂತೆಂದಂ ದೇವಾ ತಪಸ್ವಿಗಾವ ಪಾಂಗಿನೊಳ್ ಮೆಚ್ಚು ಮೆಚ್ಚಿದ ಪಾಂಗಿನೊಳುಣ್ಗೆಂದೊಡಂಬಟ್ಟನಾಗಳಾ ಗರ್ಭಸುಖಿಯ ಬೆನ್ನೊಳ್ ಪಿರಿಯ ಪರಿಯಾಣಮನಿಟ್ಟದಂ ತೆಕ್ಕನೆ ತೀವಿ ಬಡ್ಡಿಸಿದೊಡೆ ಕುದಿಯುತ್ತಿರ್ದ್ದ ತುಯ್ಯಲಂ ತಣ್ಣಿತ್ತಾಗಿಯಾಱುವನ್ನೆಗಂ ಪಾರುತ್ತಿರ್ದ್ದು ನೀಡುಂ ಬೇಗಮುಂಡು ಸಮೆದ ಬೞಕ್ಕೆ ತಳಿಗೆಯನೆತ್ತಿದೊಡಾ ತಳಿಗೆಯೊಡನೆ ಬೆನ್ನತೊವಲೆಲ್ಲಮೆರ್ದುಪೋದುದನರಸಂ ಕಂಡೀತಂ ತಪಸ್ವಿಯಲ್ಲಂ ರಾಕ್ಷಸಂ ಪಂಚಮಹಾಪಾತಕನನೀ ಪೊೞಲೊಳಿರಲೀಯದಟ್ಟಿ ಕಳೆಯಿಮೆಂದು ನೃಪತಿ ಮುಳಿದೊಡೆ ಜಿನವರ್ಮಂ ತಪಸ್ವಿಗೆ ಮುಳಿಯಲ್ವೇಡೆಂದು ಬಾರಿಸಿ ಈತಂಗೇನುಂ ದೋಷಮಿಲ್ಲೆನ್ನ ಪೂರ್ವಕೃತಕರ್ಮಫಳವಿಪಾಕಮೆಂದು ನೃಪತಿಗೆ ಪೇೞ್ದು ಪರಿವ್ರಾಜಕಂಗೆ ನಿಶ್ಯಲ್ಯಂಗೆಯ್ದರಸನುಮಂ ಸ್ವಜನ ಪರಿಜನ ಬಂಧುವರ್ಗಮುಮಂ ಬಿಡಿಸಿ ಶ್ರೀವರ್ಮರೆಂಬಾಚಾರ್ಯರ ಪಕ್ಕದೆ ದೀಕ್ಷೆಯಂ ಕೈಕೊಂಡು ಮಹಿಷಗಿರಿಯೆಂಬ ಪರ್ವತದೊಳೀ ಪುಣ್ ತೀರ್ವನ್ನೆಗಂ ಕೈಯನೆತ್ತಕೊಳ್ಳೆನೆಂದು ಕಾಯೋತ್ಸರ್ಗದಿಂ ನಿಂದೊನಂ ಗೃಧ್ರವಾಯಸಾದಿಗಳ್ ಪುಣ್ಣಂ ತೋಡಿ ತಿನೆ ಮೇರುಪರ್ವತಂಬೊಲಚಳಿತಧೈರ್ಯನಾಗೊಂದು ತಿಂಗಳ್ವರೆಗಂ ಸೈರಿಸಿ

        ಆಗ ಅವನು ಹೀಗೆಂದನು – “ಒಂದು ರೀತಿಯಲ್ಲಿ ನಿಮ್ಮ ಮನೆಯಲ್ಲಿ ಊಟಮಾಡುವೆನು – ಈ ಜಿನವರ್ಮನ ಬೆನ್ನಿನ ಮೇಲೆ ಅಡಿಯಿಲ್ಲದ ತಟ್ಟೆಯನ್ನಿಟ್ಟು ಬಿಸಿ ಪಾಯಸವನ್ನು ಉಣ್ಣುವುದು ನನಗೆ ಪ್ರೀತಿ ಈ ರೀತಿಯಲ್ಲಿ ನನಗೆ ಬಡಿಸುವುದಾದರೆ ಊಟಮಾಡುವೆನು, ಅದಲ್ಲವಾದರೆ ಉಣ್ಣೆನು" – ಎಂದು ಹೇಳಿದಾಗ ಕೇಳಿ ವ್ಯಥಿತನಾದ ಅರಸನನ್ನು ಜಿನವರ್ಮನು ಕಂಡು ಹೀಗೆಂದನು. – “ದೇವಾ, ಸಂನ್ಯಾಸಿಗೆ ಯಾವರೀತಿ ಮೆಚ್ಚುಗೆಯೋ ಅಂತಹ ಮೆಚ್ಚಿನ ರೀತಿಯಲ್ಲಿಯೇ ಉಣ್ಣಲಿ" ಎಂದು ಒಪ್ಪಿದನು. ಆಗ ಜನ್ಮಸುಖಿಯಾದ ಅವನ ಬೆನ್ನ ಮೇಲೆ ದೊಡ್ಡ ಹರಿವಾಣವನ್ನಿಟ್ಟು, ಕುದಿಯುವ ಪಾಯಸವನ್ನು ಅದು ಭರ್ತಿಯಾಗಿ ತುಂಬುವಂತೆ ಬಡಿಸಲು ಅದು ತಣ್ಣಗೆ ಆರುವ ತನಕವೂ ನಿರೀಕ್ಷಿಸುತ್ತಿದ್ದು ಬಹಳ ಬೇಗ ಊಟಮಾಡಿ ಮುಗಿದ ಮೇಲೆ ತಟ್ಟೆಯನ್ನು ಎತ್ತಿದಾಗ ಆ ತಟ್ಟೆಯೊಂದಿಗೆ ಬೆನ್ನ ಚರ್ಮವೆಲ್ಲಾ ಎದ್ದುಹೋದುದನ್ನು ರಾಜನು ಕಂಡನು. “ಇವನು ಸಂನ್ಯಾಸಿಯಲ್ಲ ರಾಕ್ಷಸನು. ಪಂಚಮಹಾಪಾಪಮಾಡಿದವನು. ಇವನನ್ನು ಈ ಪಟ್ಟಣದಲ್ಲಿ ಇರಲಿಕ್ಕೆ ಬಿಡದೆ ಓಡಿಸಿಬಿಡಿ!" ಎಂದು ರಾಜನು ಕೋಪದಿಂದ ನುಡಿದನು ಆಗ ಜಿನವರ್ಮನು – “ತಪಸ್ವಿಯ ಮೇಲೆ ಕೋಪಿಸಬೇಡ" ಎಂದು ಅವನನ್ನು ತಡೆದು “ಇವನಿಗೆ ಏನೊಂದು ದೋಷವಿಲ್ಲ, ನಾನು ಹಿಂದೆ ಮಾಡಿದ ಕರ್ಮದ ಫಲದ ಪಕ್ವತೆಯಿದು" ಎಂದು ರಾಜನಿಗೆ ಹೇಳಿ, ಸಂನ್ಯಾಸಿಗೆ ತೊಂದರೆಯಾಗದಂತೆ ಮಾಡಿ, ರಾಜನನ್ನೂ ಸ್ವಜನರನ್ನೂ ಸೇವಕರನ್ನೂ, ಬಂಧುವರ್ಗವನ್ನೂ ಬಿಡಿಸಿದನು. ಆಮೇಲೆ ಶ್ರೀವರ್ಮರೆಂಬ ಆಚಾರ್ಯರ ಬಳಿಯಲ್ಲಿ ದೀಕ್ಷೆಯನ್ನು ಸ್ವೀಕರಿಸಿ, ಮಹಿಷಗಿರಿ ಎಂಬ ಪರ್ವತದಲ್ಲಿ “ಈ ಬೆನ್ನಿನ ಹುಣ್ಣು ಗುಣವಾಗುವವರೆಗೂ ಕೈಯನ್ನು ಎತ್ತಿಕೊಳ್ಳುವುದಿಲ್ಲ" ಎಂದು ದೇಹತ್ಯಾಗಕ್ಕಾಗಿ ನಿಂತುಕೊಂಡನು. ಹದ್ದು ಕಾಗೆಗಳು ಅವನ ಹುಣ್ಣನ್ನು ತೋಡಿತಿನ್ನುತ್ತಿರಲು, ಅವನು ಮೇರುಪರ್ವತದಂತೆ ಅಲುಗಾಡದಂತಹ ಧೈರ್ಯವುಳ್ಳವನಾಗಿ ಒಂದು ತಿಂಗಳವರೆಗೂ ಸಹಿಸಿದನು. 

    ಸಮಾಮರಣದಿಂ ಮುಡಿಪಿಯಚ್ಯುತೇಂದ್ರನಾಗಿ ಪುಟ್ಟಿಯಲ್ಲಿಯ ದೇವಲೋಕದ ದಿವ್ಯಸುಖಮಂ ಪಲಕಾಲಮನುಭವಿಸಿ ಬಂದಿಲ್ಲಿ ಸನತ್ಕುಮಾರನಾದಾ ಪರಿವ್ರಾಜಕನುಮಾಯಚ್ಯುತೇಂದ್ರಂಗೆ ವಾಹನದೇವನಾದೊನಲ್ಲಿಂ ಬೞ ಬಂದಿಲ್ಲಿ ಚತುರ್ಗತಿ ಸಂಸಾದೊಳ್ ನೀಡುಂ ತೊೞಲ್ದಂಜನಗಿರಿಯೆಂಬ ಪರ್ವತದ ತಟದೊಳ್ ತಾಪಸಾಶ್ರಮದೊಳ್ ವಸಿಷ್ಠನೆಮಬ ತಾಪಸಂಗಂ ಘೂಕೆಯೆಂಬ ತಾಪಸಿಗಂ ಬಕನೆಂಬೊಂ ಮಗನಾಗಿ ಪುಟ್ಟಿ ತಾಪಸತಪಮಂ ಕೈಕೊಂಡು ನೆಗೞ್ದು ಮಡಿದು ಸಿತಯಕ್ಷನಾದನೆಂದಿಂತಿರ್ವ್ವರ ಪೂರ್ವಭವೈರಸಂಬಂಯಪ್ಪ ಕಥೆಯಂ ಸವಿಸ್ತರಮಾಗಿ ಸುಮಾಳಿಗಳೆಂಬವಜ್ವಾನಿಗಳಪ್ಪ ಚಾರಣರಿಸಿಯರ್ ಪೇೞೆ ಎನ್ನ ಸ್ವಾಮಿಯಪ್ಪ ಖಚರೇಂದ್ರಂ ಕೇಳ್ದಾದಮಾನುಂ ಸಂತುಷ್ಟಚಿತ್ತನಾಗಿ ಭಟಾರರಂ ಬಂದಿಸಿ ತನ್ನ ಪೊೞಲ್ಗೆವೋದನ್ ಎಂದಿಂತು ಕಥಾಸಂಬಂಧಮೆಲ್ಲಮಂ ಕಮಳಮತಿಯೆಂಬ ಖೇಚರವಿಳಾಸಿನಿ ಸನತ್ಕುಮಾರಂ ಪೇೞವೇೞ್ದೊಡೆ ಮಹೇಂದ್ರಸಿಂಹರಿಗೆ ಪೇೞ್ದೊಳಾ ಅವಸರದೊಳ್ ಕುಮಾರಂ ನಿದ್ರಾಸುಖವಿಮುಕ್ತನಾದೊಡಾತನ ಸಮೀಪಕ್ಕೆ ಮಹೇಂದ್ರಸಿಂಹಂ ಪೋಗಿ ಇಂತೆಂದಂ ನಿನ್ನ ವಿಯೋಗದೊಳಪ್ಪ ದುಃಖದಿಂದಂ ವಿಶ್ವಸೇನಮಹಾರಾಜನುಂ ಸಹದೇವಿ ಮಹಾದೇವಿ ಮೊದಲಾಗೊಡೆಯವರ್ಗ್ಗಳ್ಗೆಲ್ಲಂ ಪ್ರಾಣಸಂದೇಹಮಾಗಿರ್ಕ್ಕುಮದಱಂ ನಿಮ್ಮ ಪೊೞಲ್ಗೆ ಪೋಗಲ್ವೇೞ್ಕುಮೆಂದು ಪೇೞ್ದೊಡಾತನುಮಂತೆಗೆಯ್ವೆನೆಂದು 

 

ಆಮೇಲೆ ಸಮಾಮರಣದಿಂದ ಸತ್ತು ಅಚ್ಯುತ ಎಂಬ ಸ್ವರ್ಗದಲ್ಲಿ ಇಪ್ಪತ್ತೆರಡುಸಾಗರದಷ್ಟು ಆಯುಷ್ಯವುಳ್ಳವನಾಗಿ ಅಚ್ಯುತೇಂದ್ರನಾಗಿ ಹುಟ್ಟಿದನು. ಅಲ್ಲಿಯ ದೇವಲೋಕದ ದಿವ್ಯವಾದ ಸುಳವನ್ನು ಹಲವು ಕಾಲ ಅನುಭವಿಸಿ ಮತ್ತೆ ಇಲ್ಲಿಗೆ ಬಂದು ಸನತ್ಕುಮಾರನಾದನು. ಆ ಸಂನ್ಯಾಸಿ ಆ ಅಚ್ಯುತೇಂದ್ರನಿಗೆ ವಾಹನದೇವತೆಯಾಗಿದ್ದನು. ಅವನು ಅಲ್ಲಿಂದ ಕೆಳಕ್ಕೆ ಜಾರಿ ಬಂದು ಇಲ್ಲಿ ನಾಲ್ಕು ಗತಿಗಳುಳ್ಳ ಈ ಪ್ರಪಂಚದಲ್ಲಿ ಬಹಳ ಕಾಲ ಸುತ್ತಿ ಅಂಜನಗಿರಿಯೆಂಬ ಪರ್ವತದ ತಪ್ಪಲಿನ ಋಷಿಯಾಶ್ರಮದಲ್ಲಿ ವಸಿಷ್ಠನೆಂಬ ಋಷಿಗೂ ಘೂಕೆಯೆಂಬ ಋಷ್ಯಾಂಗನೆಗೂ ಬಕನೆಂಬ ಮಗನಾಗಿ ಹುಟ್ಟಿದನು. ಅವನು ಋಷಿಯಂತೆ ತಪಸ್ಸನ್ನು ಆಚರಿಸಿ ಸತ್ತು ಸಿತಯಕ್ಷನಾದನು. ಹೀಗೆ ಇಬ್ಬರ ಪೂರ್ವಜನ್ಮದ ದ್ವೇಷಕ್ಕೆ ಸಂಬಂಸಿದ ಕಥೆಯನ್ನು ಸುಮಾಳಿ ಎಂಬ ತ್ರಿಕಾಲಜ್ಞಾನಿಗಳಾದ ಚಾರಣಋಷಿಗಳು ವಿಸ್ತಾರವಾಗಿ ಹೇಳಿದರು. ಆಗ ನನ್ನ ಸ್ವಾಮಿಯಾದ ವಿದ್ಯಾಧರರಾಜನು ಕೇಳಿ ಅತ್ಯಂತ ಸಂತೋಷಗೊಂಡ ಮನಸ್ಸಿನವನಾಗಿ ಋಷಿಗಳಿಗೆ ನಮಸ್ಕರಿಸಿ ತನ್ನ ಪಟ್ಟಣಕ್ಕೆ ತೆರಳಿದನು. ಸನತ್ಕುಮಾರನು ಹೇಳಲು ಸೂಚಿಸಿದ ಪ್ರಕಾರ ಕಮಳಮತಿಯೆಂಬ ವಿದ್ಯಾಧರಸ್ತ್ರಿಯು ಮಹೇಂದ್ರಸಿಂಹನಿಗೆ ಈ ರೀತಿಯಾಗಿ ಕಥೆಯ ಸಂಬಂಧವನ್ನೆಲ್ಲಾ ಹೇಳಿದಳು. ಆ ಸಂದರ್ಭದಲ್ಲಿ ಸನತ್ಕುಮಾರನು ನಿದ್ರೆಯ ಸುಖದಿಂದ ಬಿಡುಗಡೆ (ಎಚ್ಚರ) ಗೊಳ್ಳಲು ಅವನ ಬಳಿಗೆ ಮಹೇಂದ್ರಸಿಂಹನು ಹೋಗಿ ಹೀಗೆಂದನು – “ನಿನ್ನ ಅಗಲಿಕೆಯಿಂದಾದ ದುಃಖದಿಂದ ವಿಶ್ವಸೇನಮಹಾರಾಜನೂ ಸಹದೇವಿ ಮಹಾರಾಣಿ ಮುಂತಾಗಿರುವವರೆಲ್ಲ ಜೀವಿಸಿರುವುದೇ ಸಂಶಯವೆಂಬ ಸ್ಥಿತಿಯಲ್ಲಿದ್ದಾರೆ. ಆದುದರಿಂದ ನಿಮ್ಮ ಪಟ್ಟಣಕ್ಕೆ ಈಗ ಹೋಗಬೇಕಾಗಿದೆ" ಎನ್ನಲು ಸನತ್ಕುಮಾರನು “ಹಾಗೆಯೇ ಮಾಡುವೆನು" ಎಂದು 

    ತಮ್ಮ ಮಾವಂಗಳಂ ಬಿಡಿಸಿ ವಿಚಿತ್ರಮಪ್ಪ ರಥಗಜತುರಗ ಗರುಡ ಕಳಹಂಸ ಮಯೂರ ಮಕರ ಸಿಂಹ ವಿಮಾನಾರೂಢರ್ಕ್ಕಳಪ್ಪ ವಿದ್ಯಾಧರರ್ಕ್ಕಳುಮಪ್ಪ ಸಹಸ್ರ ಸಂಖ್ಯಾ ಪ್ರಮಾಣಮಪ್ಪರಸಿಯರ್ಕ್ಕಳುಂಬೆರಸು ಮಹಾವಿಭೂತಿಯಿಂದಂ ಬಂದು ಹಸ್ತಿನಾಪುರಮಂ ಪೊಕ್ಕನಿಬರುಂ ವಿಶ್ವಸೇನಮಹಾರಾಜಂಗಂ ಸಹದೇವಿಮಹಾದೇವಿಗಂ ಸಾಷ್ಟಾಂಗಮೆಱಗಿ ಪೊಡೆವಟ್ಟು ಅವರಾಶೀರ್ವಚನಸಹಸ್ರಂಗಳನಾಂತು ಕೊಂಡು ಸುಖದಿಂದರೆ ಸನತ್ಕುಮಾರಂಗೆ ಚಕ್ರಂ ಪುಟ್ಟಿ ಸಕಳ ಚಕ್ರವರ್ತಿಯಾಗಿ ಭೋಗೋಪಭೋಗಂಗಳೆಂಬ ಮಹಾಸಮುದ್ರದೊಳ್ ಪಲಕಾಲಂ ಕ್ರೀಡಿಸುತ್ತಿರ್ಪ್ಪನ್ನೆಗಂ ಮತ್ತೊಂದು ದಿವಸಂ ಸೌಧರ್ಮಕಲ್ಪದೊಳಾ ಸೌಧರ್ಮೇಂದ್ರಂ ತನ್ನ ದೇವಸಭೆಯ ನಡುವೆ ಸಿಂಹಾಸನಮಸ್ತಕಸ್ಥಿತಂದೇವರ್ಕ್ಕಳಿಂ ದೇವರ್ಕ್ಕಳಿಂ ಪರಿವೇಷ್ಟಿತನಾಗಿ ಸೌಧಮಿನಿಯೆಂಬ ನಾಟಕಮಂ ನೋಡುತ್ತಿರ್ಪ್ಪನ್ನೆಗಂ ಈಶಾನಕಲ್ಪದಿಂದಂ ಸಹೋತ್ಪನ್ನಸಂಗಮದೇವಂ ಬಂದು ಸೌಧರ್ಮೇಂದ್ರನ ಸಭೆಯನವಯವದಿಂ ಪೊಕ್ಕಿರ್ದಾಗಳಾ ಸಭೆಯೊಳಿರ್ದ್ದ ದೇವರ್ಕಳ ರೂಪುಂ ತೇಜಮುಂ ಲಾವಣ್ಯಮುಮೆಲ್ಲಮಂ ಮಾಸಿಸಿ ತನ್ನ ತೇಜಮೆಯಗ್ಗಳಮಾಗಿರ್ದ್ದೊಡೆಂತು ಚಂದ್ರನುದಯಂಗೆಯ್ದಾಗಳ್ ಗ್ರಹನಕ್ಷತ್ರತಾರೆಗಳ ತೇಜಂ ಕುಂದುಗುಮಂತೆಲ್ಲರ ತೇಜಮುಮಂ ಕುಂದಿಸಿ ತಾನೆಯಗ್ಗಳಮಾಗೆ ಬೇಳಗುತ್ತಿರ್ದೊನಂ ದೇವರ್ಕ್ಕಳೆಲ್ಲಂ ವಿಸ್ಮಯಂಬಟ್ಟು ನೋಡಿ ಸೌಧರ್ಮೇಂದ್ರನಿಂತೆಂದು ಬೆಸಗೊಂಡರ್ ಸ್ವಾಮಿ ಈ ಸಂಗಮನೆಂಬ ದೇವನತಿಶಯಮಪ್ಪ ರೂಪುಂ ಲಾವಣ್ಯಮುಂ ತೇಜಮುಂ ದ್ವಾದಶಾದಿತ್ಯರ್ಕ್ಕಳೊರ್ಮೊದಲೆ ಉದಯಂಗೆಯ್ದಂತೆ ಬೆಳಗಿಪ್ಪುದೇ ಕಾರಣದಿಂದಾದುದೆಂದು ಬೆಸಗೊಂಡೊಡಿಂತೆಂದು ಸೌದರ್ಮೇಂದ್ರಂ ಪೇೞಲ್ ತೊಡಂಗಿದನ್ 

        ತನ್ನ ಮಾವನನ್ನು ಆಗಲಲು ಅಪ್ಪಣೆ ಪಡೆದನು. ಆಶ್ಚರ್ಯಕರವಾದ ರಥ, ಆನೆ, ಕುದುರೆ, ಗರುಡ, ಹಂಸ, ನವಿಲು, ಮೊಸಳೆ, ಸಿಂಹ ವಿಮಾನ – ಮುಂತಾದುವುಗಳಲ್ಲಿ ಕುಳಿತ ವಿದ್ಯಾಧರರನ್ನೂ ಎಂಟು ಸಾವಿರ ಸಂಖ್ಯೆಯ ಗಣನೆಯುಳ್ಳ ರಾಣಿಯರನ್ನೂ ಕೂಡಿಕೊಂಡು ಮಹಾ ವೈಭವದಿಂದ ಬಂದು ಹಸ್ತಿನಾಪುರವನ್ನು ಪ್ರವೇಶಿಸಿದನು. ಅವರೆಲ್ಲರೂ ವಿಶ್ವಸೇನಮಹಾರಾಜನಿಗೂ ಸಹದೇವಿ ಮಹಾರಾಜ್ಞಿಗೂ ಸಾಷ್ಟಾಂಗ ವಂದನೆಯನ್ನು ಮಾಡಿ ಅವರಿಂದ ಲಕ್ಷಗಟ್ಟಳೆಯ ಆಶೀರ್ವಾದಗಳನ್ನು ಸ್ವೀಕರಿಸಿಕೊಂಡು ಸುಖದಿಂದಿದ್ದನು, ಹೀಗಿರಲು ಅವನ ಅಯುಧಾಗಾರದಲ್ಲಿ ಒಂದು ಚಕ್ರ ಉದ್ಭವಿಸಿತು. ಅವನು ಸಮಸ್ತ ಭೂಮಂಡಲಕ್ಕೂ ಒಡೆಯನಾದ ಸಾರ್ವಭೌಮನಾಗಿ ಬೋಗ ಉಪಭೋಗಗಳೆಂಬ ದೊಡ್ಡ ಸಮುದ್ರದಲ್ಲಿ ಹಲವು ಕಾಲ ಆಡುತ್ತ ಇದ್ದನು. ಆ ಮೇಲೆ, ಒಂದಿ ದಿವಸ ಸೌಧರ್ಮವೆಂಬ ಸ್ವರ್ಗದಲ್ಲಿ ಸೌಧರ್ಮೇಂದ್ರನು ತನ್ನ ದೇವತೆಗಳ ಸಭೆಯ ಮಧ್ಯದಲ್ಲಿ ಸಿಂಹಾಸನದ ಮೇಲೆ ಕುಳಿತು ದೇವತೆಗಳಿಂದ ಸುತ್ತುವರಿಯಲ್ಪಟ್ಟವನಾಗಿ ಸೌದಾಮಿನಿ ಎಂಬ ನಾಟಕವನ್ನು ನೋಡುತ್ತಿದ್ದನು. ಆಗ ಈಶಾನ್ಯ ಎಂಬ ಸ್ವರ್ಗದಿಂದ ತನ್ನ ಸಂಗಡವೇ ಹುಟ್ಟಿದ ಸಂಗಮದೇವನು ಬಂದು ಸೌಧರ್ಮೇಂದ್ರನ ಸಭೆಯನ್ನು ಸುಲಭವಾಗಿ ಪ್ರವೇಶಿಸಿದನು. ಆಗ ಆ ಸಭೆಯಲ್ಲಿದ್ದ ದೇವತೆಗಳ ರೂಪ, ಕಾಂತಿ, ಸೌಂದರ್ಯವೆಲ್ಲವನ್ನೂ ಮಸುಕಾಗಿ ಕಾಣಿಸುವ ತನ್ನಕಾಂತಿಯೇ ಆತಿಶಯವಾಗಿ ಕಾಣಿಸುತ್ತಿದ್ದು, ಚಂದ್ರನು ಮೂಡಿಕೊಂಡು ಬಂದಾಗ ಗ್ರ್ರಹ ನಕ್ಷತ್ತ ತಾರೆಗಳ ಕಾಂತಿ ಹೇಗೆ ಕುಗ್ಗಿದುದಾಗಿ ಕಾಣುವುದೋ ಹಾಗೆಯೇ ಸಂಗಮದೇವನ ಕಾಂತಿ ಇತರ ಎಲ್ಲರ ಕಾಂತಿಯನ್ನು ಕುಂದಿಸಿ ತನ್ನದೇ ಹೆಚ್ಚಾಗಿ ಕಾಣುತ್ತಿತ್ತು. ಈ ರೀತಿ ಬೆಳಗುತ್ತಿದ್ದವನನ್ನು ದೇವತೆಗಳೆಲ್ಲ ಆಶ್ಚರ್ಯಪಟ್ಟು ನೋಡಿ, ಸೌಧರ್ಮೇಂದ್ರನನ್ನು ಹೀಗೆ ಕೇಳಿದರು – “ಪ್ರಭೂ, ಈ ಸಂಗಮದೇವನ ಹೆಚ್ಚಾದ ರೂಪವೂ ಸೌಂದರ್ಯಕಾಂತಿಯೂ ಹನ್ನೆರಡು ಸೂರ್ಯರು ಏಕಕಾಲದಲ್ಲಿ ಉದಯಸಿದ ಹಾಗೆ ಬೆಳಕು ಕೊಡುವುದಕ್ಕೆ ಕಾರಣವೇನು ?" ಎಂದು ದೇವತೆಗಳು ಕೇಳಲು, ಸೌಧಮೇಂದ್ರನು ಈ ರೀತಿ ಹೇಳತೊಡಗಿದನು –

    ಈತಂ ಮುನ್ನಿನ ಭವದೊಳ್ ಈ ಜಂಬೂದ್ವೀಪದ ಪೂರ್ವವಿದೇಹದೊಳ್ ಸೀತೆಯೆಂಬ ತೊಱೆಯ ಬಡಗಣದೆಸೆಯೊಳ್ ಪುಷ್ಕಾಳಾವತಿಯೆಂಬುದು ನಾಡಲ್ಲಿ ಪುಂಡರೀಕಿಣಿಯೆಂಬುದು ಪೊೞಲದನಾಳ್ಪೊಂ ಸಕಲ ಚಕ್ರವರ್ತಿ ವಿಮಳವಾಹನನೆಂಬರಸನಾತನ ಮಹಾದೇವಿ ವಿಮಳಮತಿಯೆಂಬೊಳಾ ಇವ್ವರ್ಗ್ಗಂ ಪುಟ್ಟಿದೊಂ ಮಗಂ ಕ್ಷೀರಕುಮಾರನೆಂಬೊನಾತಂ ವೈರಾಗ್ಯಮನೊಡೆಯನಾಗಿ ತಪಂಬಡಲ್ಲೆಂದು ಬಗೆದಿರ್ದೊಡೆ ತಾಯ್ ತಪಂಗಡಲೀಯದೆನಿತಾನುಂ ತೆಱದಿಂ ನುಡಿದು ತಗುಳ್ದೊಡೆ ತಾಯ ವಚನಮನತಿಕ್ರಮಿಸಲಾಱದೆ ಮನೆಯೊಳಿರ್ದ್ದಂತೆ ಬ್ರಹ್ಮಚರ್ಯಂ ಮೊದಲಗೊಡೆಯ ಬ್ರತಂಗಳಂ ಪ್ರತಿಪಾಳಿಸಿ ಆಚಾಮ್ಲವರ್ಧನಮೆಂಬ ನೋಂಪಿಯಂ ಪನ್ನೆರಡು ವರ್ಷಂಬರಂ ನೋಂತು ಸಮಾಮರಣದಿಂದಂ ಮುಡಿಪೆ ಇಂತಪ್ಪ ರೂಪುಂ ತೇಜಮುಂ ಲಾವಣ್ಯಮುಮದಱಂದೀತಂಗಾದುದೆಂದು ಸೌಧರ್ಮೇಂದ್ರಂ ಪೇೞ್ದೊಡೆ ಮತ್ತಂ ದೇವರ್ಕ್ಕಳಿಂತೆಂದು ಬೆಸಗೊಂಡರ್ ಸ್ವಾಮಿ ಈತನಂತಪ್ಪ ರೂಪುಂ ತೇಜಮುಂ ಲಾವಣ್ಯಮುಮನೊಡೆಯರ್ ಪೆಱರಾರಾನುಮೊಳರೆ ಎಂದು ಬೆಸಗೊಂಡೊಡೆ ಸೌಧರ್ಮೇಂದ್ರನೆಂದನೊಳನ್ ಹಸತ್ತಿನಾಪುರದೊಳ್ ಕುರುವಂಶದಾತಂ ಸನತ್ಕುಮಾರನೆಂಬೊಂ ಚಕ್ರವರ್ತಿಯಾತಂ ದೇವರ್ಕಳ ರೂಪುಂ ಲಾವಣ್ಯಮುಂ ತೇಜಮುಮನೊಡೆಯನಾದಮಾನುಮಗ್ಗಳಮೆಂದು ಪೇಳ್ದೊಡೆ ಇಂದ್ರನ ಮಾತಂ ನಂಬದೆ ವಿಜಯ ವೈಜಯಂತರೆಂಬರಿರ್ವರ್ ದೇವರ್ಕಳ್ ಪಾರ್ವರ ರೂಪಂ ಕೈಕೊಂಡು ಹಸ್ತಿನಾಪುರಕ್ಕೆ ಸನತ್ಕುಮಾರಚಕ್ರವರ್ತಿಯ ರೂಪಂ ನೋಡಲೆಂದು ಬಂದು ಬಾಗಿಲೊಳಿರ್ದ್ದ ಪಡಿಯಱರನೆಂದರ್ –

     "ಈತನು ಹಿಂದಿನ ಜನ್ಮದಲ್ಲಿ ಕ್ಷೀರಕುಮಾರನಾಗಿದ್ದನು. ಈ ಜಂಬೂದ್ವೀಪದ ಪೂರ್ವವಿದೇಹದಲ್ಲಿ ಸೀತಾನದಿಯ ಉತ್ತರ ದಿಕ್ಕಿನಲ್ಲಿ ಪುಷ್ಕಳಾವತಿ ಎಂಬ ನಾಡಿದೆ. ಅಲ್ಲಿ ಪುಂಡರೀಕಿಣಿಯೆಂಬ ಪಟ್ಟಣವನ್ನು ಇಡೀ ಭೂಮಂಡಲಕ್ಕೆ ಒಡೆಯನಾದ ವಿಮಳವಾಹನನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ವಿಮಳಮತಿಎಂಬವಳು ಆ ದಂಪತಿಗಳಿಗೆ ಕ್ಷೀರಕುಮಾರನೆಂಬವನು ಮಗನು. ಅವನು ವೈರಾಗ್ಯವಂತನಾಗಿ ತಪಸ್ಸು ಮಾಡಬೇಕೆಂದು ಬಗೆದನು. ಆದರೆ ಅವನ ತಾಯಿ ಅವನನ್ನು ತಪಸ್ಸಿಗೆ ಹೋಗಲು ಬಿಡದೆ, ಎಷ್ಟೋ ರೀತಿಯಿಂದ ನುಡಿದು ಒತ್ತಾಯ ಪಡಿಸಿದಳು. ಕ್ಷೀರಕುಮಾರನು ತಾಯಿಯ ಮಾತನ್ನು ಮೀರಲಾರದೆ ಮನೆಯಲ್ಲಿದ್ದುಕೊಂಡೇ ಬ್ರಹ್ಮಚರ್ಯ ಮುಂತಾಗಿರುವ ವ್ರತಗಳನ್ನು ನಡೆಸಿಕೊಂಡು ಆಚಾಮ್ಲವರ್ಧನ ಎಂಬ ವ್ರತವನ್ನು ಹನ್ನೆರಡು ವರ್ಷಗಳವರೆಗೆ ನಡೆಸಿಕೊಂಡು ಬಂದು ಸಮಾಮರಣದಿಂದ ಸತ್ತುಹೋದನು. ಅದರಿಂದಲೇ ಈತನಿಗೆ ಇಂತಹ ರೂಪವೂ ಕಾಂತಿಯೂ ಸೌಂದರ್ಯವೂ ಆಗಿವೆ – ಎಂದು ಸೌಧರ್ಮೇಂದ್ರನು ಹೇಳಿದನು. ಅನಂತರ ದೇವತೆಗಳು ಹೀಗೆ ಕೇಳಿದರು . – “ಪ್ರಭೂ, ಈ ಸಂಗಮದೇವನಂತಹ ರೂಪವೂ ಕಾಂತಿಯೂ ಸೌಂದರ್ಯವೂ ಉಳ್ಳವರು ಬೇರೆ ಯಾರಾದರೂ ಇರುವರೆ ?" ಎಂದು ಕೇಳಲು ಸೌಧರ್ಮೇಂದ್ರನು ಹೇಳಿದನು. “ಇರುವನು. ಹಸ್ತಿನಾಪುರದಲ್ಲಿ ಕುರುವಂಶದವನಾದ ಸನತ್ಕುಮಾರನೆಂಬ ಚಕ್ರವರ್ತಿ ಇರುವನು. ಅವನ ದೇವತೆಗಳ ರೂಪ. ಸೌಂದರ್ಯ, ಕಾಂತಿಗಳನ್ನು ಉಳ್ಳವನು. ಅವರಿಗಿಂತಲೂ ಅತ್ಯತಿಶಯನಾಗಿ ಶ್ರೇಷ್ಠನಾದವನು" ಎಂದು ಹೇಳಿದನು. ಇಂದ್ರನು ಹೇಳಿದ ಮಾತನ್ನು ನಂಬದೆ, ವಿಜಯ ಮತ್ತು ವ್ಶೆಜಯಂತ ಎಂಬ ಇಬ್ಬರು ದೇವತೆಗಳು ಬ್ರಾಹ್ಮಣರ ರೂಪವನ್ನು ತಾಳಿದರು. ಸನತ್ಕುಮಾರಚಕ್ರವರ್ತಿಯ ರೂಪವನ್ನು ನೋಡುವುದಕ್ಕಾಗಿ ಹಸ್ತಿನಾಪುರಕ್ಕೆ ಬಂದರು. ಅವರು ಬಾಗಿಲಿನಲ್ಲಿದ್ದ ದ್ವಾರಪಾಲಕರೊಡನೆ ಹೀಗೆಂದರು –

    "ನಿಮ್ಮರಸಂಗಿಂತೆಂದು ಪೇೞಂ ಗೆಂಟಱಂ ಬಂದೆವು ನಿಮ್ಮ ರೂಪನೞವಟ್ಟು ನೋಡಲ್ಲೆಂದೊಡವರುಂ ಪೋಗಿ ತಮ್ಮರಸಂಗಱಪಿದೊಡೆ ಅರಸನನುಮತದಿಂದವರರಮನೆಯಂ ಪೊಕ್ಕರಸನ ಸಾರೆವೋಗಿ ನೋೞ್ಪಾಗಳರಸಂ ಸುಗಂಧತೈಲದಿಂ ಮೆಯ್ಯನಭಂಗನಂಗೆಯ್ದು ಮಜ್ಜನಂಬುಗಲೆಂದಿರ್ದ್ದವಸರದೊಳ್ ದೇವರ್ಕ್ಕಳ್ ಸನತ್ಕುಮಾರ ಚಕ್ರವರ್ತಿಯ ರೂಪಂ ತೊಟ್ಟು ನಖಾಗ್ರಂಬರೆಗಗ್ರದಿಂ ತೊಟ್ಟು ವಾಳಾಗ್ರಂಬರೆಗಂ ಏಱೆಯುಮಿೞಯೆಯುಂ ನೀಡು ಭಾವಿಸಿ ನೋಡಿ ಚೋದ್ಯಂಬಟ್ಟಿಂತು ರೂಪುಂ ತೇಜಮುಂ ಗಾಡಿಯುಂ ಯೌವನಮುಂ ದೇವರ್ಕ್ಕಳ್ಗಮಿಲ್ಲೆಂದು ಚಕ್ರವರ್ತಿಯ ರೂಪಂ ಪೊೞ್ದೊಡರಸನಿಂತೆಂದಂ ನೀಮಾರ್ಗ್ಗೇನೆಂಬಿರೆಲ್ಲಿಂ ಬಂದಿರೆಂದು ಬೆಸಗೊಂಡೊಡವರೆಂದರ್ ದೇವಲೋಕದಿಂ ಬಂದೆವು ದೇವರ್ಕಳೆವು ಸೌಧರ್ಮಕಲ್ಪದೊಳ್ ದೇವರ್ಕಳ ಸಭೆಯ ನಡುವೆ ಸೌಧರ್ಮೇಂದ್ರಂ ನಿಮ್ಮ ರೂಪನಾದಮಾನುಂ ನಚ್ಚಿ ಬಣ್ಣಿಸಿದೊಡಿಂದ್ರನ ಮಾತಂ ನಂಬದೆ ನಿಮ್ಮಂ ನೋಡಲ್ ಬಂದೆಮಿಂದ್ರನ ವ್ಯಾವರ್ಣಿಸುವುದರ್ಕ್ಕಗ್ಗಳಮೆ ನಿಮ್ಮ ರೂಪುಂ ಯೌವನಮುಂ ಲಾವಣ್ಯಮುಮಂ ಕಂಡೆಮೆಂದು ಪೇಳ್ದಾಮಿನ್ನೆಮ್ಮ ದೇವಲೋಕಕ್ಕೆ ಪೋಪೆಮೆಂದೊಡೆ 

        “ನಿಮ್ಮ ರಾಜನಿಗೆ ಈ ರೀತಿಯಾಗಿ ತಿಳಿಸಿ – ನಿಮ್ಮ ರೂಪವನ್ನು ಆಸಕ್ತಿಯಿಂದ ನೋಡುವುದಕ್ಕಾಗಿ ನಾವು ದೂರದಿಂದ ಬಂದಿದ್ದೇವೆ" ಹೀಗೆ ಹೇಳಲು ಪ್ರತೀಹಾರರು ಒಳಗೆ ಹೋಗಿ ಅರಸನಿಗೆ ತಿಳಿಸಿದರು. ರಾಜನ ಅಪ್ಪಣೆಯಂತೆ ಆ ದೇವತೆಗಳು ಅರಮನೆಯೊಳಗೆ ಹೋದರು. ಅರಸನ ಸಮೀಪಕ್ಕೆ ಹೋಗಿ ನೋಡುವಾಗ, ಅರಸನು ಸುವಾಸಿತವಾದ ತೈಲವನ್ನು ಮೈಗೆ ಲೇಪಿಸಿದ್ದನು. ಸ್ನಾನಕ್ಕೆ ಹೋಗಲು ಸಿದ್ದನಾಗಿದ್ದನು, ಈ ಸಂದರ್ಭದಲ್ಲಿ ದೇವತೆಗಳು ಸನತ್ಕುಮಾರಚಕ್ರರ್ವತಿಯ ರೂಪವನ್ನು ತಲೆಯ ಕೂದಲ ತುದಿಯಿಂದ ಹಿಡಿದು ಕಾಲ ಹೆಬ್ಬೆರಳಿನ ಉಗುರ ತುದಿಯವರೆಗೂ ಏರುವಂತೆಯೂ ಇಳಿಯುವಂತೆಯೂ ಅತಿಶಯವಾಗಿ ಭಾವಿಸಿ ನೋಡಿದರು. ಆಶ್ಚರ್ಯಪಟ್ಟು “ಈ ರೀತಿಯ ರೂಪ, ಕಾಂತಿ,ಚೆಲುವು, ಯೌವನಗಳು ದೇವತೆಗಳಿಗೂ ಇಲ್ಲ" ಎಂದು ಸನತ್ಕುಮಾರ ಚಕ್ರವರ್ತಿಯ ರೂಪವನ್ನು ಹೊಗಳಿದರು. ಆಗ ಅರಸನು “ನೀವು ಯಾರು ? ಏನು ಹೇಳಲಿರುವಿರಿ? ಎಲ್ಲಿಂದ ಬಂದಿರಿ ?" ಎಂದು ಕೇಳಲು ಅವರು ಹೀಗೆಂದರು – “ನಾವು ದೇವಲೋಕದಿಂದ ಬಂದಿದ್ದೇವೆ, ದೇವತೆಗಳಾಗಿದ್ದೇವೆ. ಸೌಧರ್ಮವೆಂಬ ಸ್ವರ್ಗದಲ್ಲಿ ಸೌಧರ್ಮೇಂದ್ರನು ದೇವತೆಗಳ ಸಭೆಯ ನಡುವೆ ನಿಮ್ಮ ರೂಪನ್ನು ಅತಿಶಯವಾಗಿ ನಂಬಿ ವರ್ಣಿಸಿದಾಗ ನಾವು ಇಂದ್ರನ ಮಾತನ್ನು ನಂಬದೆ ನಿಮ್ಮನ್ನು ನೋಡುವುದಕ್ಕಾಗಿ ಬಂದಿದ್ದೇವೆ. ಇಂದ್ರನು ವರ್ಣಿಸಿದುದಕ್ಕಿಂತ ಶ್ರೇಷ್ಠವಾಗಿ ನಾವು ನಿಮ್ಮ ರೂಪ – ಯೌವನ – ಸೌಂದರ್ಯಗಳನ್ನು ಕಂಡೆವು" – ಎಂದು ಹೇಳಿ “ನಾವು ಇನ್ನು ನಮ್ಮ ದೇವಲೋಕಕ್ಕೆ ಹೋಗುವೆವು" ಎಂದರು. ಆಗ..

        ಅರಸಂ ಮನಂ ಪೆರ್ಚಿ ತನ್ನೊಳ್ ತನ್ನ ರೂಪಂ ನೆಚ್ಚಿ ಕಿಱದು ಬೇಗಂ ಮಾಣಿಮಭ್ಯಂಗನಂಗೆಯ್ದ ರೂಪಂ ಕಂಡಿರಿಂ ಮಜ್ಜನಂಬೊಕ್ಕು ಪಸದನಂಗೊಂಡಿರ್ದ ರೂಪಂ ನೋಡಿ ಪೋಗಿಮೆಂದರಸಂ ನುಡಿದೊಡಂತೆ ಗೆಯ್ದೆಮೆಂದು ದೇವರ್ಕಳಿರ್ದ್ದೊಡರಸನುಂ ಮಜ್ಜನಂಬೊಕ್ಕು ಬೇಗಂ ಸರ್ವಾಭರಣಭೂಸಿತನಾಗಿ ಆಸ್ಥಾನಮಂಟಪದೊಳ್ ಸಿಂಹಾಸನಮಸ್ತಕಸ್ಥಿತನಾಗಿ ಸಾಮಂತಮಹಸಾಮಂತರ್ ಮೂವತ್ತಿರ್ಛಾಸಿರ್ವರ್ ಮಕುಟಬದ್ಧರ್ಕ್ಕಳುಂ ವಿದ್ಯಾಧರರರ್ಕ್ಕಳುಂ ಯಕ್ಷದೇವರ್ಕ್ಕಳುಂ ಬಳಸಿಯುಮಿರ್ದೊಲಗಿಸೆ ಮೂವತ್ತೆರಡುಂ ಚಾಮರಂಗಳಿಕ್ಕೆ ಸೌಧರ್ಮೇಂದ್ರನಿಪ್ಪಂತಿರ್ದು ದೇವರ್ಕಳ್ಗೆ ಬೞಯಟ್ಟಿ ಬರಿಸಿ ನೋಡಿ ಮಿನ್ನೆನ್ನ ರೂಪನೆಂದು ತನ್ನಂ ತೋಱದೊಡೆ ದೇವರ್ಕಳ್ ನೋಡಿ ವಿಸ್ಮಯಂಬಟ್ಟಿದೇಂ ಚೋದ್ಯಮೋ

ಶ್ಲೋ|| ಅನೇಕ ರಾಗಸಂಕಿರ್ಣಂ ಘನಲಗ್ನಮಪಿ ಕ್ಷಣಾತ್
          
ಮಾನುಷಂ ಯೌವನಂ ಕಷ್ಟಂ ನಶ್ಯತೀಂದ್ರಧನುರ್ಯಥಾ ||

    ಎಂದೀ ಕ್ಷಣಮಾತ್ರದೊಳೆ ಮನುಷ್ಯರ ರೂಪುಂ ಗಾಡಿಯುಂ ಚೆಲ್ವುಂ ತೇಜಮುಂ ಯೌವನಮುಂ ಕುಂದಿತ್ತೆನೆ ಚಕ್ರವರ್ತಿಯೆಂದನೆನ್ನ ರೂಪಂ ಮುನ್ನ ನೀಮೆ ಪೊಗೞರೀಗಳೇಕೆ ಪೞದಪ್ಪಿರೆನೆ ದೇವರೆಂದರ್ ಕೇಳರಸಾ ದೇವರ್ಕಳ ತೇಜಮುಂ ಲಾವಣ್ಯಮುಂ ಪುಟ್ಟಿದ ಪ್ರಥಮಸಮಯದಿಂ ತೊಟ್ಟು ಪೆರ್ಚುತ್ತುಂ ಪೋಕುಮಾಯುಷ್ಯದ ನಡುವರೆಗಮಲ್ಲಿಂದತ್ತ ಕುಂದುತ್ತ ಪೋಕುಮಾಯುಷ್ಯಾಂತಂಬರೆಗಂ ಮತ್ತಾಮುಂ ನಿಮ್ಮ ರೂಪಂ ಯೌವನಭರದೊಳಿರ್ದ್ದುದುಮಂ ಕಂಡೆಮೀಗಳಾಯುಷ್ಯಮುಂ ತೇಜಮುಂ ರೂಪುಂ ಲಾವಣ್ಯಮುಂ ಯೌವನಮುಂ ಕಿಱದು ಕುಂದಿದುದಂ ಕಂಡೆಮೆನೆ ಚಕ್ರವರ್ತಿ ನೀಮೆಂತಱದಿರೆಂದು ಬೆಸಗೊಂಡೊಡೆ 

         ರಾಜನು ಮನಸ್ಸಿನಲ್ಲಿ ಹಿಗ್ಗಿದನು. ತನ್ನ ರೂಪದ ಹಿರಿಮೆಯನ್ನು ತನ್ನಲ್ಲೇ ನಂಬಿ – “ಸ್ವಲ್ಪ ಹೊತ್ತು ತಡೆಯಿರಿ. ಮೈಗೆ ತೈಲ ಹಚ್ಚಿದ ರೂಪವನ್ನು ಕಂಡಿದ್ದೀರಿ. ಸ್ನಾನಮಾಡಿ ಅಲಂಕರಿಸಿಕೊಂಡ ರೂಪವನ್ನು ನೋಡಿದ ನಂತರ ಹೋಗಿ” ಎಂದು ಅರಸನು ಹೇಳಿದನು. ‘ಹಾಗೆಯೇ ಮಾಡುವೆವು” ಎಂದು ನುಡಿದು ದೇವತೆಗಳು ನಿಂತುಕೊಂಡರು. ಉಜನು ಸ್ನಾನವನ್ನು ಮಾಡಿ ಬೇಗನೆ ಎಲ್ಲಾ ಆಭರಣಗಳಿಂದ ಸಿಂಗರಿಸಿಕೊಂದನು. ಆಸ್ಥಾನದ ಮಂಟಪದಲ್ಲಿ ಸಿಂಹಾಸನದ ಮೇಲೆ ಕುಳಿತುಕೊಂಡನು. ಸಾಮಂತರೂ ಮಹಾಸಾಮಂತರೂ ಮೂವತ್ತೆರಡು ಸಾವಿರ ಕಿರೀಟಧಾರಿಗಳಾದ ರಾಜರೂ ವಿದ್ಯಾಧರರೂ ಯಕ್ಷರೂ ದೇವತೆಗಳೂ ಆವರಿಸಿಕೊಂಡಿದ್ದ ಸಭೆಯಲ್ಲಿ ಸೇರಿದ್ದರು. ಮೂವತ್ತೆರಡು ಚಾಮರಗಳನ್ನು ಬೀಸುತ್ತಿರಲು ಸನತ್ಕುಮಾರನು ಸೌಧರ್ಮೇಂದ್ರನ ಹಾಗೆ ವೈಭವದಿಂದ ಇದ್ದು ದೇವತೆಗಳಿಗೆ ದೂತರನ್ನು ಕಳುಹಿಸಿ ಬರಮಾಡಿದನು. “ಇನ್ನೂ ನನ್ನ ರೂಪವನ್ನು ನೋಡಿ”ಎಂದು ಅವರಿಗೆ ತನ್ನನ್ನು ತೋರಿಸಿದನು. ಆಗ ಅವರು ಸನತ್ಕುಮಾರನನ್ನು ನೋಡಿ ಆಶ್ಚರ್ಯಪಟ್ಟರು. “ಇದೇನು ಆಶ್ಚರ್ಯವೋ ! (ಕ್ಲೇಶಕರವಾದ ಮನುಷ್ಯನ ಯೌವನವು ಹಲವಾರು ಪ್ರೀತಿ ಸಂಬಂಧಗಳಿಂದ ಕೂಡಿದ್ದರೂ ಗಟ್ಟಿಯಾಗಿಹೊಂದಿಕೊಂಡಿದ್ದರೂ, ಮಳೆಬಿಲ್ಲಿನ ಹಾಗೆ, ಅದು ಹಲವಾರು ಬಣ್ಣಗಳಿಂದ ತುಂಬಿದ್ದರೂ ಮೋಡಕ್ಕೆ ಅಂಟಿಕೊಂಡಿದ್ದರೂ ಹೇಗೆ ನಾಶವಾಗುವುದೋ ಹಾಗೆಯೇ ಕ್ಷಣದಲ್ಲಿ ನಾಶವಾಗುತ್ತದೆ.) ಕ್ಷಣದಲ್ಲೇ ಮನುಷ್ಯರ ರೂಪವೂ, ಸೌಂದರ್ಯವೂ ಸೊಬಗೂ ಕಾಂತಿಯೂ ಯೌವನವೂ ಕುಂದುತ್ತದೆ." ಎಂದು ಹೇಳಲು ಚಕ್ರವರ್ತಿಯು “ನನ್ನ ರೂಪವನ್ನು ಮೊದಲು ನೀವೇ ಹೊಗಳಿದಿರಿ, ಈಗ ಯಾಕೆ ನಿಂದಿಸುತ್ತೀರಿ?" ಎಂದು ಕೇಳಿದನು. 

        ದೆವರ್ಕ್ಕಳೆಂದರೆಮಗವಜ್ಞಾನಮುಂಟಪ್ಪುದಱಂದೆವು ಮನುಷ್ಯರ್ಗಱಯಲಾಗದೆಂದೊಂದು ದೋಣಿಕೊಂಡಮಂ ತರಿಸಿ ನೀರಂ ತೆಕ್ಕನೆ ತೀವಿಯಾದಱೊಳಗೆ ಚವ್ಮರಿಯನರ್ದ್ದಿ ತೆಗೆದು ಬಳಸಿಯಂ ಬೀಸಿದಾಗಳ್ ಸಭೆಯೊಳಿರ್ದ ಮಾನಸರ ಮೇಗೆಲ್ಲಂ ನೀರ್ ಪನಿತುದಂ ತೋಱೆ ದೇವರೆಂದರ್ ಪೇೞಮೀ ಚಮರಿಯೊಳ್ ತಗುಳ್ದು ಬಿಯಮಾದನಿತು ನೀರಂ ಕೊಂಡದೊಳ್ ಕುಂದಿದುದಂ ತೋಱಮೆಂದೊಡವರುಮಱಯದಿರ್ದ್ದೊಡೆಂತಿದಂ ನೀಮಱಯಲಾಗದಂತೆ ಮಾನಸರಾಯುಷ್ಯಮುಂ ತೇಜಮುಂ ಲಾವಣ್ಯಮುಂ ಯೌವನಮುಂ ಪ್ರತಿಸಮಯಂ ಕುಂದುತಿರ್ಕುಮಾ ವೀಚಿಮರಣಮಂ ನಿಮಗಱಯಲಾಗದೆಂದು ಪೇೞ್ದು ಹೇತು ದೃಷ್ಪಾಂತರಂಗಳಿಂದಂ ಪ್ರತ್ಯಕ್ಷಮಂ ತೋಱ ಚಕ್ರವರ್ತಿಯಂ ನಂಬೆ ನುಡಿದು ದೇವರ್ಕ್ಕಳ್ ತಮ್ಮ ಸೌಧರ್ಮಕಲ್ಪಕ್ಕೆ ವೋದರ್ ಮತ್ತಿತ್ತ ಸನತ್ಕುಮಾರಚಕ್ರವರ್ತಿಗದುವೆ ನಿರ್ವೇಗಕ್ಕೆ ಕಾರಣಮಾಗಿ ಶರೀರಭೋಗಕ್ಕೆ ಪೇಸಿ ಇಂತೆಂದು ಮನದೊಳ್ ಬಗೆಗುಂ

        ಅದಕ್ಕೆ ಅವರು – “ದೇವತೆಗಳ ಅರಸನೇ, ಕೇಳು. ಮನುಷ್ಯರ ಕಾಂತಿ ಸೌದಂರ್ಯಗಳು ಜನನದ ಮೊದಲ ಸಮಯದಿಂದ ಪ್ರಾರಂಭವಾಗಿ ಆಯುಷ್ಯದ ನಡುವಿನವರೆಗೆ ಹೆಚ್ಚುತ್ತ ಹೋಗುತ್ತದೆ. ಅಲ್ಲಿಂದ ನಂತರ ಆಯುಷ್ಯದ ಕೊನೆವರೆಗೆ ಕಡಮೆಯಾಗುತ್ತ ಹೊಗುತ್ತವೆ. ನಾವು ಯೌವನದ ಭರದಲ್ಲಿದ್ದ ನಿಮ್ಮ ರೂಪವನ್ನು ಕಂಡೆವು. ಈಗ ಅಯುಷ್ಯವೂ ಕಾಂತಿಯೂ ರೂಪವೂ ಸೌಂದರ್ಯವೂ ಯೌವನವೂ ತುಸು ಕಡಮೆಯಾದುದನ್ನು ಕಂಡಿದ್ದೇವೆ" ಎಂದರು. “ನೀವು ಹೆಗೆ ತಿಳಿದುಕೊಂಡಿರಿ?" ಎಂದು ಚಕ್ರವರ್ತಿ ಕೇಳಿದನು. ಆಗ ದೇವತೆಗಳು – “ನಮಗೆ ಅವಜ್ಞಾನ (ತ್ರಿಕಲಜ್ಞಾನ)ವಿರುವುದರಿಂದ ತಿಳಿದಿದ್ದೇವೆ. ಮನುಷ್ಯರಿಗೆ ಇದನ್ನು ತಿಳಿಯಲು ಸಾಧ್ಯವಿಲ್ಲ" ಎಂದರು. ಆ ಮೇಲೆ ಒಂದು ದ್ರೋಣಿ ಕುಂಡವನ್ನು (ದೊನ್ನೆಯಂತಹ ಹರವಿಯನ್ನು)ತರಿಸಿ, ಅದರಲ್ಲಿ ನೀರನ್ನು ಭರ್ತಿಮಾಡಿ ತುಂಬಿಸಿ ಅದರೊಳಗೆ ಚಾಮರವನ್ನು ಅದ್ದಿ ತೆಗೆದು ಸುತ್ತಲೂ ಬೀಸಿದರು. ಆಗ ಸಭೆಯಲ್ಲಿದ್ದ ಮನುಷ್ಯರ ಮೇಲೆಲ್ಲ ನೀರು ಹನಿಗಳಾಗಿ ಬಿದ್ದುದನ್ನು ತೋರಿಸಿ ದೇವತೆಗಳು ಹೀಗೆಂದರು – “ಈ ಚಾಮರದಲ್ಲಿ ಸೇರಿಕೊಂಡು ವ್ಯಯವಾದುದು ಎಷ್ಟು ನೀರು ಎಂಬುದನ್ನು ಹರವಿಯಲ್ಲಿ ಕಡಮೆಯಾದುದನ್ನು ತೋರಿಸಿ" ಎನ್ನಲು ಅವರು ತಿಳಿಯದವರಾಗಿದ್ದರು. “ಇದನ್ನು ಹೇಗೆ ನೀವು ತಿಳಿಯಲಾರಿರೋ ಹಾಗೆಯೇ ಮನುಷ್ಯರ ಆಯುಷ್ಯವೂ ಕಾಂತಿ ಸೌಂದರ್ಯ ಯೌವನಗಳೂ ಪ್ರತಿಯೊಂದು ಹೊತ್ತಿನಲ್ಲೂ ಕುಂದಿಹೋಗುತ್ತಿರುವುದು. ಆ ಅಲೆಯ ಸಾವನ್ನು (ಕ್ಷಿಪ್ರಮರಣವನ್ನು) ನಿಮಗೆ ತಿಳಿಯಲು ಸಾಧ್ಯವಿಲ್ಲ" ಎಂದು ಆ ದೇವತೆಗಳು ಹೇಳಿ ಕಾರಣಗಳಿಂದಲೂ ದೃಷ್ಟಾಂತಗಳಿಂದಲೂ ಸಂಗತಿಯನ್ನು ಕಣ್ಣೆದುರಿನಲ್ಲಿ ಕಾಣಿಸಿ, ಚಕ್ರವರ್ತಿ ನಂಬುವ ಹಾಗೆ ಹೇಳಿ, ತಮ್ಮ ಸೌಧರ್ಮಸ್ವರ್ಗಕ್ಕೆ ತೆರಳಿದರು. ಆಮೇಲೆ, ಇತ್ತ ಸನತ್ಕುಮಾರಮಹಾರಾಜನಿಗೆ ಅದೇ ಘಟನೆ ವೈರಾಗ್ಯಕ್ಕೆ ಕಾರಣವಾಯಿತು. ಅವನು ದೇಹಸುಖಕ್ಕೆ ಅಸಹ್ಯಪಟ್ಟು ಮನಸ್ಸಿನಲ್ಲಿ ಹೀಗೆ ಭಾವಿಸಿದನು. 

 ವೃತ್ತ || ರೂಪಂ ಯೌವನಮಾಯುರಕ್ಷವಿಷಯಾ ಭೋಗೋಪಭೋಗಾ ವಪುಃ
ವೀರ್ಯಂ ಸ್ಪೇಷ್ಟಸಮಾಗಮೋ ವಸುಮತಿಸ್ಸೌಭಾಗ್ಯ ಭಾಗ್ಯಾದಯಃ
ನೋ ನಿತ್ಯಾಃ ಸುಟಮಾತ್ಮನಸ್ಸಮುದಿತ ಜ್ಞಾನೇಕ್ಷಣಾಭ್ಯಾಮೃತೇ
ಶೇಷಾ ಇತ್ಯನುಚಿಂತಯುಂತು ಸುಯಃ ಸರ್ವೇ ಸದಾ – ನಿತ್ತತಾಂ

ಶ್ಲೋಕ || ಆದೌ ಜನ್ಮಜರಾರೋಗೌ ಮಧ್ಯೇಷ್ಯಂತೇ ಖಳಾಂತಕಃ
ಇತಿ ಚಕ್ರೈಕ ಸಂಭ್ರಾಂತಿರ್ಜಂತೋರ್ಮಧ್ಯೇ ಭವಾರ್ಣವಂ

     ಎಂದಿಂತು ವೈರಾಗ್ಯಮಂ ಭಾವಿಸಿ ವಿಜಯಕುಮಾರನೆಂಬ ಪಿರಿಯ ಮನೆಗೆ ಮಗಂಗೆ ರಾಜ್ಯಪಟ್ಟಂಗಟ್ಟಿ ಪರಿವಾರಕ್ಕೆಲ್ಲಂ ನಿಶ್ಯಲ್ಯನಾಗಿ ಬಾಹ್ಯಾಭ್ಯಂತರಪರಿಗ್ರಹಂಗಳೆಲ್ಲಮಂ ತೊಱೆದು ಪಲಂಬರ್ ಮಕುಟಬದ್ಧರ್ಕಳಪ್ಪರಸುಮಕ್ಕಳ್ವೆರಸು ವಿನಯಂಧರಭಟಾರರ ಪಕ್ಕದೆ ತಪಂಬಟ್ಟು ದೀಕ್ಷೋಪವಾಸ ತ್ರಿರಾತ್ರಂಗೆಯ್ದು ಶರೀರಸಂಧಾರಣನಿಮಿತ್ತಂ ಚರಿಗೆವೊಕ್ಕೊಡೊರ್ವಳ್ ಬಡಬಿರ್ದಿನಿಱಸಿ ಪ್ರಥಮ ದಿವಸದೊಳೆ ಪಾರಕಿನ ಕೂೞುಮವರೆಯುಮೆಣ್ಣಿಯುಮಾಡಿನಳೆಯುಮಂ ಬಡ್ಡಿಸಿ ದೊಡದನಮೃತಮನುಣ್ಬಂತುಂಡು ಮತ್ತಂ ತ್ರಿರಾತ್ರಕ್ಕೆ ಪಚ್ಚಖ್ಖಾಣಂಗೊಂಡರಾ ಕಾಲದಿ ತೊಟ್ಟಾಹಾರದೊಳಪ್ಪ ದೊಷದಿಂದಂ ಕಚ್ಛುಜರಖಾಸ ಸೋಸೋ ಭತ್ತಚ್ಛದಿ ಅಚ್ಛಿಕುಚ್ಛಿದುಕ್ಖಾಣಿ ಎಂದಿವು ಮೊದಲಾಗೊಡೆಯವೇೞುನೂಱು ಬ್ಯಾಗಳಂ ನೂಱುವರುಷಂಬರಂ ಒಳ್ಳಿತ್ತಾಗೆ ಸೈರಿಸಿ

         ರೂಪಪ್ರಾಯ. ಆಯುಸ್ಸುಇಂದ್ರಿಯ ಗೋಚರ ವಿಷಯಗಳುಸುಖಾನುಭವಗಳು, ದೇಹ, ಶಕ್ತಿ, ತನ್ನ ಪ್ರೀತಿಯವರ ಸಹವಾಸ ಭೂಮಿ (ರಾಜ್ಯಾಕಾರ), ಸೊಬಗು ಐಶ್ವರ್ಯಗಳು, ಶಾಶ್ವತಗಳಲ್ಲ. ಹೀಗೆ ಉಳಿದ ಎಲ್ಲಾ ಬುದ್ಧಿವಂತರು (ಜ್ಞಾನಿಗಳು) ತಮ್ಮಲ್ಲಿ ಸರಿಯಾಗಿ ಮೂಡಿದ ಜ್ಞಾನವೆಂಬ ಕಣ್ಣುಗಳಿಂದ ಸರಿಯಾಗಿ ಅನಿತ್ಯವೆಂಬುದನ್ನು ಸ್ಪಷ್ಟವಾಗಿ ಯೋಚಿಸಲಿ.) (ಮೊತ್ತ ಮೊದಲು ಜನಿಸುವುದು, ನಡುವೆ ಮುಪ್ಪು ಮತ್ತು ರೋಗಗಳು. ಮತ್ತು ಕೊನೆಯಲ್ಲಿ ಕೆಟ್ಟವನಾದ ಯಮನು, ಈ ರೀತಿಯಾಗಿ ಹುಟ್ಟುಸಾವುಗಳೆಂಬ ಪರಂಪರೆಯ ಸಮುದ್ರವು (ಭವಸಾಗರವು) ಜೀವಿಗಳ ನಡುವೆ ಚಕ್ರಾಕಾರದಲ್ಲಿ ತಿರುಗುತ್ತ ಇರುತ್ತದೆ.) ಎಂದು ಈ ರೀತಿಯಾಗಿ ಸನತ್ಕುಮಾರನು ವೈರಾಗ್ಯವನ್ನು ಯೋಚಿಸಿ ವಿಜಯಕುಮಾರನೆಂಬ ಹಿರಿಯ ಮಗನಿಗೆ ಅರಸುತನವನ್ನು ಕೊಟ್ಟು ಪರಿಹಾರಕ್ಕೆಲ್ಲ ತೊಂದರೆಯಿಲ್ಲದಂತೆ ಮಾಡಿ, ಒಳಗಿನ ಮತ್ತು ಹೊರಗಿನ ಪರಿಗ್ರಹಗಳನ್ನೆಲ್ಲ ಬಿಟ್ಟು ಹಲವರು ರಾಜರನ್ನು ರಾಜಕುಮಾರರನ್ನು ಮಾಡಿ ವಿನಯಂಧರಸ್ವಾಮಿಗಳ ಬಳಿಯಲ್ಲಿ ತಪಸ್ಸನ್ನು ಸ್ವೀಕರಿಸಿ ಮೂರು ರಾತ್ರಿ ದೀಕ್ಷೆಯ ಉಪವಾಸವನ್ನು ಮಾಡಿ ದೇಹಧಾರಣೆಗಾಗಿ ಭಿಕ್ಷಾಟನಕ್ಕೆ ಹೋದನು. ಆ ಸಂದರ್ಭದಲ್ಲಿ ಓರ್ವ ಬಡ ಮುದುಕಿ ಅವನನ್ನು ಪಾರಣೆಗಾಗಿ ನಿಲ್ಲಿಸಿ, ಹಾರಕದ ಅಕ್ಕಿಯ ಅನ್ನವನ್ನೂ ಅವರೆಕಾಯಿ ಹುಳಿಯನ್ನೂ ಎಣ್ಣೆಯನ್ನೂ ಆಡಿನ ಮಜ್ಜಿಗೆಯನ್ನೂ ಬಡಿಸಿದಳು. ಸನತ್ಕುಮಾರಋಷಿ ಅಮೃತವನ್ನು ಉಣ್ಣುವ ಹಾಗೆ ಅದನ್ನು ಉಂಡು, ಆ ಮೇಲೆ ಮೂರುರಾತ್ರಿಗಳ ಮಟ್ಟಿಗೆ ಆಹಾರನಿವೃತ್ತಿಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಅಂದಿನಿಂದ ತೊಡಗಿ ಆಹಾರದಲ್ಲಿ ಆದ ದೋಷದಿಂದ ಕಜ್ಜಿ, ಜ್ವರ, ಕೆಮ್ಮು, ಉಬ್ಬಸ, ಅತಿಸಾರ, ಕಣ್ಣುನೋವು – ಹೊಟ್ಟನೋವುಗಳು ಎಂದು ಇವೇ ಮೊದಲಾದ ಏಳು ನೂರು ರೋಗಗಳನ್ನು ನೂರುವರ್ಷಗಳವರೆಗೆ ಚೆನ್ನಾಗಿ ಸಹಿಸಿ 

     ಉಗ್ರೋಗ್ರತಪದಿಂ ದೀಪ್ತತಪಂ ಮಹಾತಪಂ ಘೋರತಪಮೆಂದಿವು ಮೊದಲಾಗೊಡೆಯ ತಪಂಗಳಂ ಗೆಯ್ಯೆ ತಪದ ಮಹಾತ್ಮ್ಯದಿಂದಂ ಅಮೋಷ ಖೇಳೋಷ ಜವೋಷ ವಿಪ್ಪೋಷ ಸರ್ವೋಷಯೆಂಬಿವು ಮೊದಲಾಗೊಡೆಯ ಋದ್ಧಿಗಳ್ ಪುಟ್ಟಿದೊಡಂ ವ್ಯಾಗೆ ತಕ್ಕ ಪ್ರತೀಕಾರಮಂ ಮಾಡದಿಂತು ಫೋರವೀರ ತಪಶ್ಚರಣಂಗೆಯ್ಯೆ ಮತ್ತೊಂದು ದಿವಸಂ ಸೌಧರ್ಮೇಂದ್ರಂ ತನ್ನ ಸಭೆಯೊಳ್ ಸಿಂಹಾಸನಮಸ್ತಕಸ್ಥಿತನಾಗಿ ಧರ್ಮಶ್ರವಣಾನಂತರಂ ರಿಸಿಯರ್ಕಳ ಗುಣಂಗಳಂ ವ್ಯಾವರ್ಣಿಸುತ್ತಿರ್ದು ಸನತ್ಕುಮಾರರಿಸಿಯ ಗುಣಗಣಮನಾದಮಾನುಂ ಕೈಕೊಂಡಿಂತೆಂದು ಪೇೞಲ್ ತಗುಳ್ದೊನ್ ವಾತಪಿತ್ತಶ್ಲೇಷ್ಮ ಶ್ವಾಸ ಖಾಸ ಜರಾರುಚಿ ಛರ್ದ್ಯತಿಸಾರಾಕ್ಷಿ ಕುಕ್ಷಿವೇದನಾಸೋಟಕಂ ಪಿಟಕಂ ಶೂಲ ಭಗಂದರಂ ಕುಷ್ಠ ಕ್ಷಯ ಗಂಡ ಶಿರೋವೇದನೆ ಮೊದಲಾಗೊಡೆಯವೇೞುನೂಱು ವ್ಯಾಗಳೊರ್ಮೊದಲೆ ಮೆಯ್ಯೊಳ್ ಪುಟ್ಟಿದೊಡಂ ತಾಮುಂ ಋದ್ಧಿಸಂಪನ್ನರಾಗಿಯುಂ ವ್ಯಾಗೆ ತಕ್ಕ ಪ್ರತೀಕಾರಂಗೆಯ್ಯದೆ ನೂಱುವರುಷಂಬರೆಗಂ ಒಳ್ಳಿತ್ತಾಗಿ ಸೈರಿಸಿ ತಪಂಗೆಯ್ದಪ್ಪರೆಂದು ಸೌಧರ್ಮೇಂದ್ರಂ ಪೊಗೞ್ದೊಡೆ ಕೇಳ್ದು ಮುನ್ನೆ ಬಂದ ದೇವರ್ಕಳಿರ್ವರುಂ ವೈದ್ಯರ ರೂಪಿನೊಳ್ ಮರ್ದುಗಳಂ ಪಸುಂಬೆಯೊಳ್ ತೆಕ್ಕನೆ ತೀವಿ ಪರೀಕ್ಷಿಸಲ್ಕೆಂದು ಸಾರವಂದು ವಂದಿಸಿ ರೂಪಿನೊಳ್ ಮರ್ದುಗಳಂ ಪಸುಂಬೆಯೊಳ್ ತೆಕ್ಕನೆ ತೀವಿ ಪರೀಕ್ಷಿಸಲ್ಕೆಂದು ಸಾರೆವಂದು ವಂದಿಸಿ ಇಂತೆಂದರ್ ಭಟಾರಾ ನಿಮ್ಮ ಮೆಯ್ಯ ಕುತ್ತಂಗಳೆಲ್ಲಮಂ ಮರ್ದಂ ಮಾಡಿ ಕಿಡಿಸಲ್ ನೆಱೆವೆವು ಮರ್ದಂ ಮಾಡುವುದನೊಡಂಬಡವೇೞ್ಕು ಮೆಂದೊಡೆ ಭಟ್ಟಾರರುಂ ಮೋನಂಗೊಂಡು ನುಡಿಯದೆ ಕೆಮ್ಮಗಿರ್ದೊಡೆ ಪಿರಿದುಂ ಬೇಗಮಿರ್ದೆೞ್ದುಪೋಗಿ 

         ಅತ್ಯಂತ ಭಯಂಕರವಾದ ದೀಪ್ತತಪಮಹಾತಪಘೋರತಪ ಎಂದಿವೇ ಮೊಲಾಗುಳ್ಳ ತಪಸ್ಸುಗಳನ್ನು ಮಾಡಿದರು. ತಪಸ್ಸಿನ ಮಹತ್ವದಿಂದ ಅವರಿಗೆ ಆಮೋಷ, ಖೇಳೋಷ, ವಿಪ್ಪೋಷ, ಸರ್ವೋಷ – ಎಂಬಿವೇ ಮುಂತಾಗಿರುವ ಸಿದ್ಧಿ ಸಂಪತ್ತುಗಳು (ದಿವ್ಯಶಕ್ತಿಗಳು) ಉಂಟಾದವು. ಆದರೂ ರೋಗಕ್ಕೆ ತಕ್ಕುದಾದ ಪರಿಹಾರೋಪಾಯಗಳು (ದಿವ್ಯಶಕಿಗಳು) ಉಂಟಾದವು. ಆದರೂ ರೋಗಕ್ಕೆ ತಕ್ಕುದಾದ ಪರಿಹಾರೋಪಾಯವನ್ನು (ಚಿಕಿತ್ಸೆಯನ್ನು) ಮಾಡದೆ, ಈ ರೀತಿಯಾಗಿ ಉಗ್ರರೀತಿಯ ವೀರತ್ವದ ತಪಸ್ಸನ್ನು ಮಾಡಿದರು. ಆಮೇಲೆ, ಒಂದು ದಿವಸ ಸೌಧಮೇಂದ್ರನು ತನ್ನ ಸಭೆಯಲ್ಲಿ ಸಿಂಹಾಸನದ ಮೇಲೆ ಮಂಡಿಸಿದ್ದು ಧರ್ಮವಿಚಾರವನ್ನು ಕೇಳಿದ ನಂತರ ಋಷಿಗಳ ಗುಣಗಳನ್ನು ವಿಶೇಷವಾಗಿ ವರ್ಣಿಸುತ್ತಿದ್ದನು. ಆ ಸಂದರ್ಭದಲ್ಲಿ ಸನತ್ಕುಮಾರಋಷಿಗಳ ಗುಣಗಳ ಸಮೂಹವನ್ನು ವಿಶೇಷವಾಗಿ ವರ್ಣಿಸಲು ಉದ್ಯುಕ್ತನಾಗಿ ಈ ರೀತಿಯಾಗಿ ಹೇಳತೊಡಗಿದನು. – “ಸನತ್ಕುಮಾರ ಋಷಿಗಳು ತಮ್ಮ ಶರೀರದಲ್ಲಿ ವಾತ(ವಾಯು), ಪಿತ್ತ, ಕಫ, ಕೆಮ್ಮು, ಮುಪ್ಪು, ಬಾಯಿರುಚಿಯಿಲ್ಲದಿರುವುದು, ವಾಂತಿ, ಭೇದಿ, ಕಣ್ಣುನೋವು, ಹೊಟ್ಟೆನೋವು, ಬಾವು, ಕುರು, ನೋವು, ಮೂಲವ್ಯಾ, ಕುಷ್ಠ, ಕ್ಷಯ, ಗಂಡಮಾಲೆ, ತಲೆಸಿಡಿತ – ಮುಂತಾಗಿರುವ ಏಳುನೂರು ರೋಗಗಳು ಒಮ್ಮೆಗೇ ಉಂಟಾದರೂ ತಾವೂ ಆ ರೀತಿ ತಪಸ್ಸಿದ್ಧಿ ಸಂಪತ್ತಿನಿಂದ ಕೂಡಿದವರಾಗಿದ್ದರೂ ರೋಗಕ್ಕೆ ತಕ್ಕುದಾದ ಚಿಕಿತ್ಸೆಯನ್ನು ಮಾಡದೆ, ನೂರುವರ್ಷಗಳವರೆಗೆ ಚೆನ್ನಾಗಿ ಸಹಿಸಿಕೊಂಡು ತಪಸ್ಸು ಮಾಡುತ್ತಿದ್ದಾರೆ” ಎಂದು ಸೌಧರ್ಮೇಂದ್ರನು ಹೊಗಳಿದನು. ಇದನ್ನು ಕೇಳಿ ಹಿಂದೆ ಒಮ್ಮೆ ಬಂದಿದ್ದ ದೇವತೆಗಳಿಬ್ಬರೂ ವೈದ್ಯರ ರೂಪದಲ್ಲಿ ಔಷಧಗಳನ್ನು ಹಸುಬೆ ಚೀಲದಲ್ಲಿ ಭರ್ತಿಯಾಗಿ ತುಂಬಿಸಿಕೊಂಡು ಪರೀಕ್ಷಿಸುವ ಉದ್ದೇಶದಿಂದ ಸಮೀಪಕ್ಕೆ ಬಂದು ನಮಸ್ಕರಿಸಿ ಹೀಗೆಂದರು “ಪೂಜ್ಯರೇನಿಮ್ಮ ದೇಹದ ರೋಗಗಳೆಲ್ಲವನ್ನೂ ಔಷಧ ಮಾಡಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ. ಮದ್ದು ಮಾಡಲು ನೀವು ಒಪ್ಪಬೇಕು. “ ಹೀಗೆ ಹೇಳಿದಾಗ ಋಷಿಗಳು ಮೌನವನ್ನು ತಾಳಿಮಾತಾಡದೆ ಸುಮ್ಮನಿರಲುಬಹಳ ಹೊತ್ತು ಇದ್ದು ಎದ್ದುಹೋದರು. 

    ಮಱುದಿವಸಂ ಮಗುೞ್ದು ಬಂದಿಂತೆಂದರ್ ಭಟಾರಾ ವೈದ್ಯಶಾಸ್ತ್ರದೊಳಾದಮಾನುಂ ಕುಶಲರೆ ಮುಂ ಗ್ರ್ರಂಥಾರ್ಥಸ್ವರೂಪದಿಂದೆಲ್ಲಾ ಕುಶಲರೆಮುಂ ಕರ್ಮಜ್ಞರೆಮುಂ ಮರ್ದುಗಳುಮಭಿನವಂಗಳಾದಮೊಳ್ಳಿದವಿರ್ದುವುಂ ನಿಮ್ಮ ಮೆಯ್ಯ ಕುತ್ತಂಗಳೆಲ್ಲಮನೇೞು ದಿವಸದಿಂದೊಳಗೆ ಕಿಡಿಸಿ ನೀರೋಗಮಪ್ಪಂತಿರೆ ಮಾಡುವೆವು ಬೞಕ್ಕೇನುಂ ಸಂಕ್ಲೇಸಮಿಲ್ಲದೆ ತಪಂಗೆಯ್ಯಿಮೆಂದೊಡೆ ಭಟಾರರವರೊಡನೆ ನುಡಿವಾಗಳುಗುೞ ಸೀಕರಂಗಳ್ ತಮ್ಮ ಮುಂಗೆಯ್ಯ ಮೇಗೆ ಬಿೞ್ದೊಡೆ ಬೆರಲಿಂ ಸೀಂಟಿ ತೋಱದಾಯೆಡೆ ಸುವರ್ಣಾಯಮಾನವಾಗಿ ತೊಳಗುತ್ತಿರ್ದ ಮೆಯ್ಯ ತೇಜಮುಮಂ ದೇವರ್ಕ್ಕಳ್ ವಿಸ್ಮಯಂಬಟ್ಟು ನೋಡುತ್ತಿರೆ ಭಟಾರರಿಂತೆಂದರೆಮಗೆ ಮರ್ದು ಬಾೞ್ತೆಯಪ್ಪೊಡೆಮಗಾಮೆ ವ್ಮರ್ದಂ ಬಲ್ಲೆಮೆಮಗದು ಬಾೞ್ತೆಯಲ್ತು ನೀಮುಂ ಜಾತಿ ಜರಾ ಮರಣಂಗಳೆಂಬೆಮ್ಮ ಕುತ್ತಮಂ ಕಿಡಿಸಲಾರ್ಪೊಡಾ ಮರ್ದನೊಡಂಬಡುವೆಮುೞದಾವ ಮರ್ದುಮನೊಡಂಬಡುವೆಮಲ್ಲೆಮೆಂದೊಡೆ ದೇವರ್ಕಳುಮಿಂತೆಂದರ್ ಜಾತಿ ಜರಾಮರಣಂಗಳೆಂಬ ಕುತ್ತಮಂ ಕಿಡಿಸಲ್ಕಾಮಾಱೆಮಾ ಕುತ್ತಮಾ ಕಿಡಿಸಲ್ಕೆ ಭಟಾರಾ ನೀಮೆ ಸಮರ್ಥರಿರ್ ಪರಮ ವೈದ್ಯರಿರದರ್ಕ್ಕೆಂದು 

         ಮರುದಿವಸ ಆ ದೇವತೆಗಳು ಮರಳಿ ಬಂದು ಹೀಗೆಂದರು – “ಪೂಜ್ಯರೇ, ನಾವು ವೈದ್ಯಶಾಸ್ತ್ರದಲ್ಲಿ ಅತ್ಯಂತ ಪ್ರವೀಣರಾಗಿದ್ದೇವೆ, ಮತ್ತು ವೈದ್ಯಗ್ರಂಥಗಳ ಅರ್ಥವನ್ನು ತಿಳಿದು ಕುಶಲರಾಗಿದ್ದೇವೆ. ಕಾರ್ಯವನ್ನು ಬಲ್ಲವರೂ ಆಗಿದ್ದೇವೆ. ಮದ್ದುಗಳು ಹೊಸತಾಗಿವೆ, ಬಹಳ ಒಳ್ಳೆಯವಾಗಿವೆ. ನಿಮ್ಮ ಶರೀರದ ಎಲ್ಲ ರೋಗಗಳನ್ನು ಏಳುದಿವಸಗಳೊಳಗೆ ಗುಣಪಡಿಸಿ ರೋಗವೇ ಇಲ್ಲದವರನ್ನಾಗಿ ಮಾಡುವೆವು. ಆಮೇಲೆ ಏನೊಂದೂ ಕಷ್ಡವಿಲ್ಲದೆ ತಪಸ್ಸನ್ನು ಮಾಡಿ” ಎಂದು ಹೇಳಿದರು. ಹೀಗೆ ಹೇಳಿದಾಗ ಋಷಿಗಳು ಅವರೊಂದಿಗೆ ಮಾತಾಡುವಾಗ ಎಂಜಲಿನ ತುಂತುರು ಹನಿಗಳು ಅವರ ಮುಂಗೈಯ ಮೇಲೆ ಬೀಳಲು, ಅವನ್ನು ಬೆರಲಿನಿಂದ ತೊಡೆದರು. ಆಗ ಕಾಣಿಸಿದ ಆ ಸ್ಥಳ ಚಿನ್ನದ ಬಣ್ಣದಂತಾಗಿ ಹೊಳೆಯುತ್ತಿತ್ತು. ಅಂತಹ ಋಷಿಗಳು ಅವರೊಡನೆ ಹೀಗೆಂದರು – “ನಮಗೆ ಮದ್ದಿನಿಂದ ಉಪಯೋಗವಾಗುವುದಾದರೆ ನಮಗೆ ಬೇಕಾದ ಮದ್ದು ನಮಗೇ ಗೊತ್ತಿದೆ. ನಮಗದು ಪ್ರಯೋಜನವಿಲ್ಲ. ನೀವು ಹುಟ್ಟು – ಮುಪ್ಪು – ಸಾವುಗಳೆಂಬ ನಮ್ಮ ರೋಗವನ್ನು ಪರಿಹಾರಮಾಡಬಲ್ಲವರಾದರೆ ಆ ಮದ್ದನ್ನು ಮಾಡಲು ಒಪ್ಪುತ್ತೇವೆ. ಇನ್ನುಳಿದ ಯಾವ ಮದ್ದನ್ನು ಮಾಡುವುದಕ್ಕೂ ಒಪ್ಪುದಿಲ್ಲ” ಎಂದರು. ಅದಕ್ಕೆ ದೇವತೆಗಳು – “ಪೂಜ್ಯರೇ, ಹುಟ್ಟು – ಮುಪ್ಪು – ಸಾವುಗಳೆಂಬ ರೋಗಗಳನ್ನು ಪರಿಹಾರ ಮಾಡಲು ನಾವು ಸಮರ್ಥರಲ್ಲ. ಆ ರೋಗವನ್ನು ವಾಸಿಮಾಡಲು ನೀವೇ ಸಮರ್ಥರು. ಅದಕ್ಕೆ ನೀವು ಅತಿ ಶ್ರೇಷ್ಠ ವೈದೈರಾಗಿರುವಿರಿ” ಎಂದರು. 

         ಮತ್ತಂ ದೇವರ್ಕಳೆಂದರ್ ಭಟಾರಾ ಸೌಧರ್ಮೇಂದ್ರಂ ನಿಮ್ಮ ತಪದೊಳಪ್ಪ ಗುಣಗಳುಮಂ ವ್ಯಾಗಳಂ ಸೈರಿಸಿ ನೆಗೞ್ವ ನೆಗೞ್ತೆಯುಮಂ ದೇವರ್ಕಳ ಸಭೆಯ ನಡುವೆಯಾದಮಾನುಂ ಕೈಕೊಂಡು ಪೊಗೞ್ದೊಡಾಮಿಂದ್ರನ ಮಾತಂ ನಂಬದೆ ನಿಮ್ಮಂ ಪರೀಕ್ಷಿಸಲ್ಕೆಂದು ಬಂದೆವು ಸೌಧರ್ಮೇಂದ್ರನ ಪೊಗೞ್ದುದೇನುಂ ತಪ್ಪೊಲ್ಲೆಂದು ನುಡಿದು ಗುಣಂಗೊಂಡು ಮಗುೞ್ದು ವಂದಿಸಿ ಮರ್ದುಗಳೆಲ್ಲಮನೊಂದು ಪೞವಾವಿಯೊಳ್ ಪೊಯ್ದು ದೇವರ್ಕಳ್ ತಮ್ಮ ದೇವಲೋಕಕ್ಕೆ ವೋದೊರಾ ಮರ್ದಿನ ಬಾವಿಯ ನೀರಂ ಮಿಂದರ್ಗ್ಗೆಲ್ಲಂ ಕುತ್ತಂಗಳ್ ಕಿಡುವುವಾದವು ಸನತ್ಕುಮಾರಭಟಾರರುಮೇೞುನೂಱುಂ ವ್ಯಾದಿಗಳಂ ನೂಱುವರುಷಂಬರೆಗಂ ಸೈರಿಸಿ ಘೋರವೀರ ತಪಶ್ಚರಣಂಗೆಯ್ದು ಆಲದ ಮರದ ಕೆೞಗೆ ಸಂನ್ಯಸನಂಗೆಯ್ದು ಸಮಾಮರಣದಿಂ ಮುಡಿಪಿ ಮಿಕ್ಕ ರತ್ನತ್ರಯಂಗಳಂ ಸಾಸಿ ಸನತ್ಕುಮಾರಕಲ್ಪದೊಳ್ ಏೞು ಸಾಗರೋಪಮಾಯುಷ್ಯಸ್ಥಿತಿಯನೊಡೆಯೊನಿಂದ್ರನಾಗಿ ಪುಟ್ಟಿದೊಂ ಮತ್ತಾರಾಧಕರಪ್ಪ ಭವ್ಯರ್ಕಳೆಲ್ಲಂ ಸನತ್ಕುಮಾರಭಟಾರರಂ ಮನದೊಳ್ ಬಗೆದು ವ್ಯಾಗಳೊಳಪ್ಪ ವೇದನೆಗಳುಮಂ ಪಸಿವುಂ ನೀರೞ್ದೆ ಮೊದಲಾಗೊಡೆಯ ಬಾಧೆಯುಮಂ ಸೈರಿಸಿ ದೇವರಂ ಧ್ಯಾನಿಸುತ್ತಂ ಪಂಚನಮಸ್ಕಾರಮಂ ಮನದೊಳುಚ್ಚರಿಸುತ್ತಂ ಮಿಕ್ಕ ದರ್ಶನ ಜ್ಞಾನ ಚಾರಿತ್ರಮಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

         ಆಮೇಲೆ ದೇವತೆಗಳು ಹೀಗೆಂದರು – “ಋಷಿಗಳೇಸೌಧರ್ಮೇಂದ್ರನು ನಿಮ್ಮ ತಪಸ್ಸಿನಿಂದಾದ ಗುಣಗಳನ್ನೂ (ಸಿದ್ಧಿ ಸಂಪತ್ತಗಳನ್ನೂ) ರೋಗಗಳನ್ನು ಸಹಿಸಿಕೊಂಡು ಮಾಡುವ ಕಾರ್ಯಗಳನ್ನೂ ದೇವತೆಗಳ ಸಭಾಮಧ್ಯದಲ್ಲಿ ಅತಿಶಯವಾಗಿ ಹೇಳಲು ಉದ್ಯೋಗಿಸಿ, ಹೊಗಳಿದರು. ಆಗ ನಾವು ಇಂದ್ರನ ಮಾತನ್ನು ನಂಬದೆ ನಿಮ್ಮನ್ನು ಪರೀಕ್ಷಿಸಿ ತಿಳಿಯುವುದಕ್ಕಾಗಿ ಬಂದಿರುತ್ತೇವೆ. ಸೌಧರ್ಮೇಂದ್ರನು ಹೊಗಳಿದುದರಲ್ಲಿ ಏನೂ ತಪ್ಪಿಲ್ಲ” ಎಂದು ಹೇಳಿದರು. ಋಷಿಗಳ ಗುಣವನ್ನು ಅನುಗ್ರಹಿಸಿಕೊಂಡು ಪುನಃ ನಮಸ್ಕರಿಸಿ ಮದ್ದುಗಳನ್ನೆಲ್ಲ ಒಂದು ಹಳೆಯ ಬಾವಿಯೊಳಗೆ ಹೊಯ್ದು, ಆ ದೇವತೆಗಳು ತಮ್ಮ ದೇವಲೋಕಕ್ಕೆ ತೆರಳಿದರು. ಆ ಮದ್ದಿನ ಬಾವಿಯ ನೀರಿನಲ್ಲಿ ಸ್ನಾನ ಮಾಡಿದವರಿಗೆಲ್ಲ ರೋಗಗಳು ಪರಿಹಾರಗೊಳ್ಳುವವಾದವು. ಸನತ್ಕುಮಾರಋಷಿಗಳು ಏಳುನೂರು ಬಗೆಯ ರೋಗಗಳನ್ನು ನೂರು ವರ್ಷಗಳವರೆಗೂ ಸಹಿಸಿಕೊಂಡು ಉಗ್ರವೂ ಶಕ್ತಶಾಲಿಯೂ ಆದ ತಪಸ್ಸನ್ನು ಆಚರಿಸಿ ಆಲದ ಮರದ ಕೆಳಗೆ ಸಂನ್ಯಾಸವನ್ನು ಸ್ವೀಕರಿಸಿ ಸಮಾಮರಣದಿಂದ ತೀರಿಹೋಗಿ, ಸಮ್ಯಗ್ದರ್ಶನ, ಸಮ್ಯಗ್ಞಾನ, ಸಮ್ಯಕ್ಚಾರಿತ್ರಗಳೆಂಬ ಶ್ರೇಷ್ಠವಾದ ರತ್ನತ್ರಯವನ್ನು ಪಡೆದು ಸನತ್ಕುಮಾರ ಎಂಬ ಸ್ವರ್ಗದಲ್ಲಿ ಏಳು ಸಾಗರಕ್ಕೆ ಸಮಾನವಾದ ಆಯುಷ್ಯವನ್ನು ಉಳ್ಳ ಇಂದ್ರನಾಗಿ ಜನಿಸಿದನು. ಆರಾಧನೆ ಮಾಡತಕ್ಕವರಾದ ಭವ್ಯ(ಮೊಕ್ಷಾಪೇಕ್ಷಿ) ಜನರೆಲ್ಲರೂ ಸನತ್ಕುಮಾರಋಷಿಗಳನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು ರೋಗಗಳು ಬಂದಾಗ ಉಂಟಾಗುವ ನೋವುಗಳನ್ನು ಹಸಿವು ಬಾಯಾರಿಕೆ ಮುಂತಾಗಿರುವ ತೊಂದರೆಯನ್ನೂ ಸಹಿಸಿ ದೇವರನ್ನು ಧ್ಯಾನಮಾಡುತ್ತ ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಗಳು – ಎಂಬ ಪಂಚಪರಮೇಷ್ಠಿಗಳಿಗೆ ಮಾಡುವ ಪಂಚನಮಸ್ಕಾರದ ಮಂತ್ರವನ್ನು ಮನಸ್ಸಿನಲ್ಲಿಯೇ ಉಚ್ಚಾರಣೆ ಮಾಡುತ್ತ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳೆಂಬ ಮೂರು ರತ್ನಗಳನ್ನು ಪಡೆದು ಸ್ವರ್ಗ – ಮೋಕ್ಷಗಳ ಸುಖಗಳನ್ನು ಪಡೆಯಲಿ.

*****ಕೃಪೆ: ಕಣಜ****


 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ