ಪುಟಗಳು

14 ಮೇ 2021

ಭಕ್ತಿ ಭಂಡಾರಿ ಬಸವಣ್ಣ

  
ಶ್ರೀ ಬಸವೇಶ್ವರರು 
 
 ಬಾಲ್ಯ ಜೀವನ :

ಬಸವಣ್ಣನವರು ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿನಾಂಕ: ಎಪ್ರಿಲ್ 30, 1134) ರೋಹಿಣಿ ನಕ್ಷತ್ರದಲ್ಲಿ, ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳ ಮಗನಾಗಿ ಜನಿಸಿದರು.

ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾರೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಎಂದು ಹೇಳಿದಾಗ, ಬಸವಣ್ಣ ಪುರುಷ-ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.

ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕುಂಡಲಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು. ನಂತರ ಸಂಗಮೇಶ್ವರದಲ್ಲಿದ್ದ ಲಕುಲಿಶಾ-ಪಾಶುಪತ ಸಂಪ್ರದಾಯದ ಒಂದು ಶೈವ ಗುರುಕುಲದಲ್ಲಿ ಶಿಕ್ಷಣವನ್ನು ಮುಗಿಸಿದರು. ಜಾತವೇದಮುನಿ(ಈಶಾನ್ಯಗುರು) ಎಂಬುವವರು ಅವರ ಗುರುಗಳೆಂದು ಹೇಳಲಾಗುತ್ತದೆ. ಅವರು ತಮ್ಮ ಸೋದರ ಮಾವನ ಮಗಳು ನೀಲಾ೦ಬಿಕೆಯನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಳು,

ಬಸವಣ್ಣನವರ ಸಾಮಾಜಿಕ ಮತ್ತು ಧಾರ್ಮಿಕ ಮನೋಧೋರಣೆಗಳು :

ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವನಲ್ಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ.

ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ.

ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು.

ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾವಾದಿ ಎಂದೂ ಕರೆಯಲಾಗುತ್ತದೆ. “ಮಾನವೀಯತೆ ಹಾಗೂ ಕಾಯಕ ನಿಷ್ಠೆ ಇವು ಧರ್ಮದ ಬುನಾದಿಯಾಗಬೇಕು” ಎಂದು ಬಲವಾಗಿ ನಂಬಿದ್ದರು.

ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅಂತರ್ಜಾತಿ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು. ಇವರು ಷಟ್‌ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.

ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ.

 ಅನುಭವ ಮಂಟಪ:

ಅನುಭವ ಮಂಟಪ ರಚಿಸಿ ಧರ್ಮ ಪ್ರಚಾರ ಮಾಡಿದರು. ಅಲ್ಲಮಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಅದರ ನೇತೃತ್ವ ವಹಿಸಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಎಲ್ಲ ಶರಣ ಬಂಧುಗಳನ್ನು ಸಮಾನಭಾವದಿಂದ ಕಂಡರು. ಅನುಭವ ಮಂಟಪವೆಂಬುದು ಮಂಟಪವಲ್ಲ, ಅದು ಎಲ್ಲಾ ಜಾತಿ-ಧರ್ಮ, ಸ್ತ್ರಿ-ಪುರುಷ, ಬಡವ-ಶ್ರೀಮಂತ, ಆಳು-ಒಡೆಯ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಭೇದಭಾವಗಳಿಲ್ಲದೆ ಎಲ್ಲರನ್ನೂ ಒಳಗೊಂಡಿದ್ದ ಮಹಾವೇದಿಕೆ. ಅಲ್ಲಿ ಸಮಾಜೋದ್ಧಾರದ ವಿಚಾರ ಮಂಥನ ನಡೆಯುತ್ತಿತ್ತು. ಅವರವರ ಅನುಭವವನ್ನು ವಚನಗಳ ಮೂಲಕ ಅಭಿವ್ಯಕ್ತಪಡಿಸುತ್ತಿದ್ದರು.

ಅನುಭವ ಮಂಟಪ
    ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು.

ಅಣ್ಣನವರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ, ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಲು ಸನ್ನದ್ಧರಾದಾಗ ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ.

 ಇಷ್ಟಲಿಂಗದ ಪರಿಕಲ್ಪನೆ ಮತ್ತು ಅದರ ಮಹತ್ವ ಹಾಗೂ ಶಕ್ತಿ ವಿಶಿಷ್ಟಾದ್ವೈತ

ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ' ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರೇ ಇಷ್ಟಲಿಂಗದ ಜನಕರು ಎಂಬುದನ್ನು ಅಲ್ಲಮಪ್ರಭು, ಸಿದ್ದರಾಮ, ಅಕ್ಕಮಹಾದೇವಿ ಮುಂತಾದವರು ಸೂಚಿಸಿದ್ದಾರೆ. ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದವನ್ನು ಕಳೆದು ಸಮರತಿ, ಸಮಕಳೆ ಮತ್ತು ಸಮಸುಖದ ಅರಿವು ಮೂಡಿಸಲಿಕ್ಕಾಗಿಯೇ ಇರುವಂಥದ್ದು ಎಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. 

     ಬಸವಣ್ಣನವರು ಸ್ಥಾವರ ಲಿಂಗ, ಮೂರ್ತಿ ಪೂಜೆ ಹಾಗೂ ಬಹುದೇವೋಪಾಸನೆಯನ್ನು ತಿರಸ್ಕರಿಸಿ, ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಅವರು ತ್ರಿಮೂರ್ತಿಗಳಿಗಿಂತ ಸೃಷ್ಟಿಯೇ ಶ್ರೇಷ್ಠವೆಂದು ಪ್ರತಿಪಾದಿಸಿದರು. ಸಕಲ ಜೀವ ಕೋಟಿ, ಗ್ರಹತಾರಾದಿಗಳಿಗೆಲ್ಲ ಆಗರವಾದ ಇಡೀ ಬ್ರಹ್ಮಾಂಡವೇ ದೇವರೆಂದೂ ಅದನ್ನೇ ದೇವರೆಂದು ಪೂಜಿಸಬೇಕೆಂದು ಹೇಳಿದ ಅವರು ಇಡೀ ಬ್ರಹ್ಮಾಂಡವನ್ನು ಅಂಗೈಯಲ್ಲಿಟ್ಟು ಪೂಜಿಸುವ ಕಲ್ಪನೆಯಿಂದ ಬ್ರಹ್ಮಾಂಡದಂತೆ ಅಂಡಾಕಾರದ ಸ್ವರೂಪದಲ್ಲಿರುವ ಇಷ್ಟಲಿಂಗವನ್ನು ಪರಿಚಯಿಸಿದರು. ಅವರ ಈ ಸಿದ್ಧಾಂತವನ್ನು ‘ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ’ ಎಂದು ಕರೆಯಲಾಗುತ್ತದೆ.

ಇಷ್ಟಲಿಂಗ ಪೂಜೆಯು ಮಾನವನಲ್ಲಿ ಏಕತೆಯ ಅರಿವನ್ನು ಮೂಡಿಸುತ್ತದೆ ಎಂದು ಹೇಳುತ್ತಾರೆ. ಭೂಮಿಯ ಮೇಲಿನ ಎಲ್ಲ ಮಾನವರು ನದಿಯೊಳಗೆ ನದಿ ಬೆರೆತಾಗ ಉಂಟಾಗುವ ಐಕ್ಯಭಾವವನ್ನು ತಮ್ಮ ನಿಜಜೀವನದಲ್ಲಿ ಹೊಂದಿರಬೇಕು. ಲಿಂಗಭೇದ, ಜಾತಿ-ವರ್ಣಭೇದ, ವರ್ಗಭೇದ ಹಾಗೂ ಮಾನವ ಸಮಾಜಗಳ ಭೇದವನ್ನು ಅಳಿದು ಸಮತೆಯ ಬದುಕನ್ನು ಬದುಕುವ ಅರಿವು ಮೂಡಿದಾಗ ಜಗತ್ತು ಯುದ್ಧ ಮತ್ತು ಎಲ್ಲ ತೆರನಾದ ಹಿಂಸೆಗಳಿಂದ ಮುಕ್ತವಾಗುತ್ತದೆ. ಬಸವಣ್ಣನವರ ಇಷ್ಟಲಿಂಗ ಸೃಷ್ಟಿಯ ಉದ್ದೇಶ, ಮಾನವನನ್ನು ವಿಶ್ವಮಾನವನನ್ನಾಗಿ ಮಾಡುವುದೇ ಆಗಿದೆ.

 ವಚನ ಸಾಹಿತ್ಯ :

’ವಚನ’ ಎಂಬ ವಿಶಿಷ್ಟವಾದ ಗದ್ಯ ಮತ್ತು ಪದ್ಯದ ಲಕ್ಷಣಗಳನ್ನು ಹೊಂದಿರುವ ಸಾಹಿತ್ಯ ಪ್ರಕಾರ ಶರಣರು ವಿಶ್ವಕ್ಕೆ ನೀಡಿದ ವಿಶಿಷ್ಟವಾದ ಕಾಣಿಕೆ. ಯಾವುದೇ ಪ್ರಚಾರ, ಪ್ರಶಸ್ತಿ, ರಾಜರ ಮೆಚ್ಚುಗೆಗಳಿಸಲು ರಚನೆಯಾಗದೆ ಸಮಾಜದ ಉದ್ಧರಕ್ಕಾಗಿ ರಚಿತವಾದ ವಿಶ್ವದ ಏಕೈಕ ಸಾಹಿತ್ಯ ಪ್ರಕಾರವಿದ್ದರೆ ಅದು ‘ವಚನ ಸಾಹಿತ್ಯ’. ಈ ವಚನಾಂದೋಲನದಲ್ಲಿ ನೂರಾರು ಶರಣರು ಭಾಗವಹಿಸಿ, ಸಾವಿರಾರು ವಚನಗಳ ಕೊಡುಗೆ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ಶರಣರ ವಚನಗಳನ್ನು ಮೊದಲಿಗೆ ಬೃಹತ್ತಾಗಿ ಸಂಗ್ರಹಿಸಿ ಸಂಪಾದಿಸಿದ ಮೊದಲಿಗರು ಫ.ಗು.ಹಳಕಟ್ಟಿ. ಅವರ ಮಹತ್ವಪೂರ್ಣವಾದ ವಚನ ಸಂಪಾದನೆಯ ಕೃತಿ ‘ವಚನ ಸಾಹಿತ್ಯ ಸಾರ’ ಅಪೂರ್ವವಾದ ವಚನಗಳ ಸಂಗ್ರಹವಾಗಿದೆ.

ಬಸವಣ್ಣನವರ 1500 ಕ್ಕೂ ಹೆಚ್ಚು ವಚನಗಳು ದೊರೆತಿವೆ. ಅವರು ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದರೆ ನರಕ ಎಂದು ಸಾರುವ ಮೂಲಕ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅವರ ಕೊಡುಗೆ ಅಪಾರ.

 
ಬಸವಣ್ಣನವರ ಕೆಲವು ಪ್ರಸಿದ್ಧ ವಚನಗಳು
1. ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ!!
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ!!
ಕೂಡಲಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ

2. ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯೂ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯೂ !!

3. ಆನು ಒಬ್ಬನು; ಸುಡುವರೈವರು.
ಮೇಲೆ ಕಿಚ್ಚು ಘನ, ನಿಲಲು ಬಾರದು.
ಕಾಡುಬಸವನ ಹುಲಿ ಕೊಂಡೊಯ್ದರೆ
ಆರೈಯಲಾಗದೆ ಕೂಡಲಸಂಗಮದೇವ ?

4. ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.

5. ಕಳ್ಳ ನಾಗರ ಕಂಡರೆ ಹಾಲನೆರೆ ಎಂಬುದು
ದಿಟದ ನಾಗರ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದರೆ ನಡೆಯೆಂಬುದು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ
ಕಲ್ಲತಾಗಿದ ಮಿಟ್ಟಿಯಂತಪ್ಪರಯ್ಯ

6. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ!
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ,
ನೀವೇ ಬಲ್ಲಿರಿ ಕೂಡಲಸಂಗಮದೇವಾ.

7. ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.

8. ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು
ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ
ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು
ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.

9. ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ

10. ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ

ಬಸವಣ್ಣನವರ ಜೀವನವನ್ನಾಧರಿಸಿದ ಪ್ರಮುಖ ಕೃತಿಗಳು:

  • ಬಸವ ಪುರಾಣಮು (ತೆಲುಗು) – ಪಾಲ್ಕುರಿಕೆ ಸೋಮನಾಥ
  • ಬಸವ ಪುರಾಣ (ಕನ್ನಡ) – ಭೀಮಕವಿ
  • ಬಸವರಾಜದೇವರ ರಗಳೆ (ಕನ್ನಡ) - ಹರಿಹರ
ಬಸವಣ್ಣನವರ ಅಂಚೆ ಚೀಟಿ ಮತ್ತು ನಾಣ್ಯ



ಗುರು ಬಸವಣ್ಣವರ ೮೦೦ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ತ ಭಾರತ ಸರಕಾರದ ಅಂಚೆ ಇಲಾಖೆಯು ೧೧ನೇ ಮೇ ೧೯೬೭ರಲ್ಲಿ ೧೫ ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿ ಯನ್ನು ಮುದ್ರಿಸಿತು. ಮತ್ತೊಮ್ಮೆ ೧೯೯೭ರಲ್ಲಿ ೨ ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು. ಗುರು ಬಸವಣ್ಣವರ ಭಾವಚಿತ್ರವುಳ್ಳ ೫ ರೂಪಾಯಿ ಮತ್ತು ೧೦೦ ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗ ರಾಗಿದ್ದಾರೆ. ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು.

    ಇಂತಹ ಮಹಾನ್ ನೇತಾರರಾದ ಬಸವಣ್ಣನವರು 62 ವರ್ಷ 3 ತಿಂಗಳು 2 ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ 30, 1196) ಉರಿಯುಂಡ ಕರ್ಪೂರದಂತೆ ಲಿಂಗೈಕ್ಯರಾದರು.

 


8 ಕಾಮೆಂಟ್‌ಗಳು:

  1. ಉತ್ತಮ ಮಾಹಿತಿ ಸಂಗ್ರಹ ಮಾಡಿದ್ದೀರಿ ಮಹೇಶ್ ಸರ್ . ಬಸವಣ್ಣನವರು ಬದುಕಿದ್ದ ಕೇವಲ ೩೬ ವರ್ಷ ಎಂದು ಹಲವು ಸಂಶೋಧನೆಗಳಲ್ಲಿ ಉಲ್ಲೇಖವಾಗಿದೆ ಸರ್

    ಪ್ರತ್ಯುತ್ತರಅಳಿಸಿ
  2. ಉಪಯುಕ್ತ ಮಾಹಿತಿಗಾಗಿ ಹೃದಯಪೂರ್ವಕ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ತುಂಬಾ ಹೃತ್ಪೂರ್ವಕ ಧನ್ಯವಾದಗಳು .. ನಮಗೆ ಇದು ತುಂಬಾ ಸಹಾಯಕ .ಆಯ್ತು

    ಪ್ರತ್ಯುತ್ತರಅಳಿಸಿ
  4. ಬಸವಣ್ಣ ಗುರುವಿಲ್ಲದ ಗುಡ್ಡ. ಜಾತವೇದರ ಪ್ರಸ್ತಾಪ ಗೊಂದಲಕ್ಕಿಡುಮಾಡುವುದು ಉದ್ದೇಶವಿದ್ದರೆ ಇಡಬಹುದು ಇಲ್ಲದಿದ್ದರೆ ಅಪ್ರಸ್ತುತ ಅನಾವಶ್ಯಕ ದುರುದ್ದೇಶದ್ದು.

    ಪ್ರತ್ಯುತ್ತರಅಳಿಸಿ