ಕುಮಾರವ್ಯಾಸನ ಪರಿಚಯ
ಕುಮಾರವ್ಯಾಸ ಕಂಬ |
ಕುಮಾರವ್ಯಾಸನ ಕಾಲ: ಕ್ರಿ.ಶ. ೧೩೫೦-೧೪೦೦
ಸ್ಥಳ : ಗದುಗಿನ ಕೋಳಿವಾಡ (ಈಗಿನ ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲೂಕಿನ ಕೋಳಿವಾಡ)
ಆರಾಧ್ಯದೈವ: ಗದುಗಿನ ವೀರನಾರಾಯಣ
ಕೃತಿ: ‘ಕರ್ಣಾಟಭಾರತ ಕಥಾಮಂಜರಿ’ ಇದಕ್ಕೆ ಕನ್ನಡಭಾರತ, ಗದುಗಿನ ಭಾರತ ಎಂಬ ಹೆಸರುಗಳೂ ಇವೆ.
ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.
ಕುಮಾರವ್ಯಾಸನ ಕಾಲದ ಬಗ್ಗೆ ಚರ್ಚೆ
- ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ.
- ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣಕವಿ. ಇವನ ಕಾಲ ಸುಮಾರು ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ.
- ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ.
- ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ.
- ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ.. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ.
- ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ.
- ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).
- ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ.
- ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು.
ಕುಮಾರವ್ಯಾಸನ ಊರು
ಹುಟ್ಟೂರು ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.
ವಂಶಾವಳಿ
ಈ ವಂಶಾವಳಿಯಂತೆ, ವೀರನಾರಾಯನೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.
- ವಂಶಾವಳಿ :
- ||ಶ್ರೀ ವೀರನಾರಾಯಣ ಪ್ರಸನ್ನಃ||
- ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.
- ೨.ತಿರುಮಲಯ್ಯ.
- ೩. ಲಕ್ಕರಸಯ್ಯ.
- ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?
- ೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ
- ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ
ಕೃತಿಗಳು
ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ.
ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:
- “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!)
- “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ)
- “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ)
- “ಅರಿವಿನ ಸೆರಗು ಹಾರಿತು”
ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;
ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:
“ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!“
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!“
- ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.
ಪ್ರಭಾವ
ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.
“ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ವೀರನಾರಾಯಣನ ಕಿಂಕರಗೆ”
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ವೀರನಾರಾಯಣನ ಕಿಂಕರಗೆ”
“ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ