ಪುಟಗಳು

09 ಜನವರಿ 2021

ಎತ್ತ ಸಾಗುತ್ತಿದ್ದೇವೆ.....????

ಎತ್ತ ಸಾಗುತಿರುವುದೋ ಹೆತ್ತವರಾಗಿ ನಮ್ಮ ಚಿತ್ತ,
ಹೆಣೆದಿರುವೆವು ನಮ್ಮ ಜೀವನವನ್ನು ಮಕ್ಕಳ ಸುತ್ತ,
ಅತಿ ಪ್ರೀತಿ ವ್ಯಾಮೋಹ ಕೊಂಡೊಯುತಿದೆ ಅವನತಿಯತ್ತ
ತಳ್ಳುತಿರುವೆವೇನೋ ಮಕ್ಕಳ ಭವಿಷ್ಯ ಅತಂತ್ರದತ್ತ.....

ದೇವರ ನೀಡಿದ ಮಕ್ಕಳವು,ನಮ್ಮ ಮೂಲಕ ಹುಟ್ಟಿವೆ,
ದೈವಾತ್ಮಗಳು ಅವು, ನಮ್ಮ ಮಡಿಲನು ಸೇರಿವೆ,
ಪೋಷಕರಾಗಿ ಆಯ್ಕೆಯಾಗಿರುವೆವು, ಆ ಪುಟ್ಟ ಜೀವಿಗಳಿಗೆ,
ಮಾರ್ಗದರ್ಶರಾಗಬೇಕು, ಮುಂಬರುವ ನಾಗರಕರಿಗೆ....

ನಮ್ಮ ಮೂಲಕ ಬಂದಾಕ್ಷಣ, ನಾವು ಅವರ ಅಧಿಕಾರಿಗಳಲ್ಲ,
ನಮ್ಮ ಆಸೆ ಆಕಾಂಕ್ಷೆ ಹೇರಲು, ಅವರು ನಮ್ಮ ಸೇವಕರಲ್ಲ,
ನಮ್ಮ ಪ್ರೀತಿ ಪ್ರದರ್ಶನಕ್ಕೆ,ಅವರು ಗಾಳದ ಮೀನುಗಳಲ್ಲ,
ನಮ್ಮ ಅತೀ ನಿರೀಕ್ಷೆಗೆ, ಅವರು ಹೊಣೆಗಾರರಲ್ಲ....

ದೇವರು ಆಯ್ಕೆ ಮಾಡಿದ, ಆಪ್ತ ಸಹಾಯಕರು ನಾವು,
ಸನ್ಮಾರ್ಗದಲ್ಲಿ ನಡೆಸಲು, ದಾರಿ ದೀಪಗಳು ನಾವು,
ಸ್ನೇಹ ಸಂಭಂದಗಳ ಅರಿವನ್ನು ತುಂಬುವ, ಪ್ರೀತಿಯ ಪೋಷಕರು ನಾವು,
ಬಲಿವವರೆಗೆ ಬದುಕನು ಕಲಿಸುವ, ದಿವ್ಯ ದರ್ಶಕರು ನಾವು...

ತಪ್ಪು ಮಾಡುತ್ತಿದ್ದೇವೆನೋ, ಹೆತ್ತವರಾಗಿ ನಾವು,
ಕಷ್ಟ ಸುಖಗಳ ಮಿಶ್ರಣ ನೀಡದೆ, ಎಡವುತ್ತಿದ್ದೇವೆ ನಾವು,
ನೋವು ನಲಿವುಗಳ ಅಂತರ ತಿಳಿಸದೇ, ಹಾರುತ್ತಿದ್ದೇವೆ ನಾವು,
ಉಜ್ವಲ ಬದುಕನು ನೀಡುತ್ತಿದ್ದೇವೆಂಬ, ಬ್ರಮೆಯಲಿದ್ದೇವೆ ನಾವು......

ಅತಿಯಾದ ಪ್ರೀತಿ ಪಡೆದವರು, ನೋವು ಸಹಿಸಲಾರರು,
ಅನಾವಶ್ಯಕ ವಸ್ತುಗಳ ಪಡೆದವರು, ಅವಶ್ಯಕತೆ ಅರಿಯಲಾರರು,
ಕಷ್ಟನಷ್ಟಗಳರಿವಿರದವರು, ಜೀವನ ಎದುರಿಸಲಾರರು,
ಕೆರೆಯ ಕಪ್ಪೆಯಂತೆ ಜೀವನದಿಂದ, ಬದುಕಲು ಬವಣೆ ಪಡುವರು...

ಎಚೆತ್ತುಕೊಳ್ಳಬೇಕು ಬೇಗ, ಹೆತ್ತವರಾಗಿ ನಾವು,
ಜಗದ ನಿಯಮದಂತೆ ಬೆಳೆಯಲು ಬಿಟ್ಟು, ಜೊತೆಗಿರಬೇಕು ನಾವು,
ಎಡವಿದಾಗ ಕೈನೀಡಬೇಕು, ಕೊಡವಿ ಎದ್ದಾಗ ಬೆನ್ತಟ್ಟಬೇಕು,
ಸಾರ್ಥಕತೆಯಿಂದ ಬದುಕಲು ಕಳಿಸಿ, ಹೆಮ್ಮೆಯ ಹೆತ್ತವರಾಗಬೇಕು....

- ಡಾ ಜಯಲಕ್ಷ್ಮಿ ನಾಯಿಕ್
ವಿನೋಬನಗರ ವೃತ್ತ ಸಾಗರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ