ಪುಟಗಳು

02 ಡಿಸೆಂಬರ್ 2020

10ನೇ ತರಗತಿ-ಕನ್ನಡ-ಪದ್ಯ-01-ಸಂಕಲ್ಪಗೀತೆ - ಟಿಪ್ಪಣಿಗಳು

ಹಣತೆ = ದೀಪ, ಮಣ್ಣಿನ ದೀಪ

ಪ್ರೀತಿಯ ಹಣತೆ = ಪ್ರೀತಿ ಎಂಬ ದೀಪ (ದ್ವೇಷ ಎಂಬ ಕತ್ತಲೆಯನ್ನು ಹೋಗಲಾಡಿಸುವ ಪ್ರೀತಿ ಎಂಬ ದೀಪ)

ಬಿರುಗಾಳಿಗೆ ಹೊಯ್ದಾಡುವ ಹಡಗು = ಇಡೀ ಪ್ರಪಂಚವೇ ಒಂದು ದೊಡ್ಡ ಸಮುದ್ರ; ಅದರಲ್ಲಿ ನಮ್ಮ ಜೀವನವೇ ಹಡಗು. ಜೀವನದಲ್ಲಿ ಎದುರಾಗುವ ನೋವು-ಕಷ್ಟ-ಕಾರ್ಪಣ್ಯಗಳೇ ಬಿರುಗಾಳಿ; ಆದ್ದರಿಂದ ಹಲವಾರು ಕಷ್ಟ-ನಷ್ಟಗಳಿಂದ ನಲುಗುವ ಜೀವನವೆಂಬ ಹಡಗು ಎಂದು ಅರ್ಥೈಸಿಕೊಳ್ಳಬೇಕು.

ಮುಂಗಾರಿನ ಮಳೆ = ಚೈತ್ರ ಮಾಸದ ಆರಂಭದಲ್ಲಿ ಮೇ/ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ, 

ಬರಡಾದ ಕಾಡುಮೇಡುಗಳು = ಮಾನವನ ದುರಾಸೆಗೆ ಒಳಗಾಗಿ ನಾಶವಾದ ಹಾಗೂ ಮಳೆ ಇಲ್ಲದೆ ಒಣಗಿ ಖಾಲಿಖಾಲಿ ಕಾಣುವ ಕಾಡುಮೇಡುಗಳು

ವಸಂತ = ಋತುಗಳು ಆರು, ಅವುಗಳಲ್ಲಿ ವಸಂತ ಋತುವೂ ಒಂದಾಗಿದೆ. ಈ ಕೆಳಗಿನ ಕೋಷ್ಟಕದಲ್ಲಿ ನೋಡಿ.

ಋತು

ಮಾಸಗಳು

ಗ್ರೆಗೊರಿಯನ್ ತಿಂಗಳುಗಳ ಅವಧಿ

ವಸಂತ

ಚೈತ್ರ, ವೈಶಾಖ

ಮಾರ್ಚ್-ಮೇ

ಗ್ರೀಷ್ಮ

ಜ್ಯೇಷ್ಠ, ಆಷಾಢ

ಮೇ-ಜುಲೈ

ವರ್ಷ

ಶ್ರಾವಣ, ಭಾದ್ರಪದ

ಜುಲೈ-ಸೆಪ್ಟೆಂಬರ್

ಶರತ್

ಆಶ್ವಯುಜ, ಕಾರ್ತಿಕ

ಸೆಪ್ಟೆಂಬರ್-ನವಂಬರ್

ಹೇಮಂತ

ಮಾರ್ಗಶಿರ, ಪುಷ್ಯ

ನವಂಬರ್-ಜನವರಿ

ಶಿಶಿರ

ಮಾಘ, ಫಾಲ್ಗುಣ

ಜನವರಿ-ಮಾರ್ಚ್

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸುವುದು = ಬೀಳುವುದು ಎಂದರೆ ಅವನತಿ, ಹಿನ್ನಡೆ, ಸೋಲು ಎಂದರ್ಥ. ಆದ್ದರಿಂದ ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸುವುದೆಂದರೆ ಸೋಲು, ಹಿನ್ನಡೆಗಳಿಂದ ಕಂಗಾಲಾದವರಿಗೆ ಹೊಸ ಆಶಾಭಾವನೆಯನ್ನು ತುಂಬಿ ಚೈತನ್ಯಗೊಳಿಸುವುದು. ನಿರಾಶೆಯನ್ನು ದೂರಮಾಡಿ ಆಶಾಭಾವನೆಯನ್ನು ಮೂಡಿಸುವುದು ಎಂದರ್ಥ

ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ = ಮಾನವನ ನಡುವೆ ಜಾತಿ-ಧರ್ಮ, ಮೇಲು-ಕೀಳು, ಬಡವ-ಶ್ರೀಮಂತ, ಅಕ್ಷರಸ್ಥ-ಅನಕ್ಷರಸ್ಥ, ಸುಂದರ-ಕುರೂಪ ಹೀಗೆ ಇನ್ನೂ ಹಲವಾರು ರೀತಿಯ ಭೇದ-ಭಾವಗಳಿವೆ ಇವೆಲ್ಲ ವ್ಯಕ್ತಿ ಹಾಗೂ ಸಮುದಾಯಗಳ ನಡುವೆ ಅಡ್ಡಗೋಡೆಗಳಾಗಿವೆ. ಇವುಗಳನ್ನು ದೂರಮಾಡಿ ಮನುಜ ಮನುಜರ ನಡುವೆ ಸಂಬಂಧ, ಸೌಹಾರ್ದತೆ, ಸಹಕಾರ ಮನೋಭಾವನೆಯನ್ನು ಬೆಳೆಸುವುದು ಎಂದರ್ಥ.

ಮತಗಳೆಲ್ಲವೂ ಪಥಗಳು = ಇಲ್ಲಿ ಮತ ಎಂದರೆ ವಿಶಾಲ ಅರ್ಥದಲ್ಲಿ ಧರ್ಮ ಹಾಗೂ ಸಿದ್ಧಾಂತಗಳೆನ್ನಬಹುದು. ವಿಚಾರ ಮಾಡಿ ನೋಡಿದರೆ ಎಲ್ಲಾ ಧರ್ಮಗಳು ಹೇಳುವುದು ಒಂದೇ ಅದು ಮಾನವೀಯತೆಯನ್ನು ಬೆಳೆಸಿಕೋ ಎಂದು. ಅಂದರೆ ಮನುಷ್ಯ ತನ್ನ ದ್ವೇಷ-ಅಸೂಯೆ-ದುರಾಸೆ-ಪಕ್ಷಪಾತಗಳನ್ನು ತೊರೆದು ಎಲ್ಲರೊಡನೊಂದಾಗಿ ಮಾನವೀಯತೆಯಿಂದ ಬಾಳುವುದು. ಇದನ್ನೇ ಬಸವಣ್ಣನವರು "ದಯವಿಲ್ಲದ ಧರ್ಮವದಾವುದಯ್ಯಾ?" ಎಂದಿದ್ದಾರೆ. ಎಲ್ಲ ಮತಗಳ ಪ್ರಮುಖ ಉದ್ದೇಶ ಮಾನವನ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸುವುದು ಹಾಗು ಅಹಿಂಸೆಯನ್ನು ತೊರೆದು ಶಾಂತಿ-ಪ್ರೀತಿಯನ್ನು ಪಸರಿಸುವುದೇ ಆಗಿದೆ. ಆದ್ದರಿಂದ ಎಲ್ಲ ಮತಗಳು ಮಾನವನ ಸನ್ನಡತೆಗೆ ಸತ್ಪಥ (ಒಳ್ಳೆಯ ಮಾರ್ಗ)  ಆಗಿದೆ.

ಭಯ-ಸಂಶಯದೊಳು ಕಂದಿದ ಕಣ್ಣೊಳು ನಾಳಿನ ಕನಸನ್ನು ಬಿತ್ತುವುದು = ಸಮಾಜದಲ್ಲಿ ಕೊಲೆ-ಸುಲಿಗೆ-ದರೋಡೆಯಂತಹ ಅಮಾನವೀಯ ಕೃತ್ಯಗಳು ದಿನೇದಿನೇ ಹೆಚ್ಚಾಗುತ್ತಿವೆ. ಹಲವರು ಜನ ಶೋಷಣೆಗೆ ಒಳಗಾಗಿ ಭಯದಿಂದ ಬದುಕುತ್ತಿದ್ದಾರೆ. ಹಾಗೆಯೇ ವರ್ತಮಾನದಲ್ಲಿ ಜನರ ನಡೆವಳಿಗೆಗಳ ಬಗ್ಗೆ ಹಾಗೂ ತಮ್ಮ ಉತ್ತಮ ಭವಿಷ್ಯದ ಬಗ್ಗೆ ಅನುಮಾನ ಹೊಂದಿದ್ದಾರೆ. ಅಂತಹವರ ಭಯಭೀತ ಹಾಗೂ ಸಂಶಯದಿಂದ ಕೂಡಿದ ಕಣ್ಣುಗಳಲ್ಲಿ ನಾಳಿನ ಉತ್ತಮ ಭವಿಷ್ಯದ ಬಗ್ಗೆ ಮತ್ತು ಮುಂದೆ ಆಗಲಿರುವ ಒಳ್ಳೆಯದರ ಬಗ್ಗೆ ಆಶಾವಾದವನ್ನು ಬೆಳೆಸಿ ಧೈರ್ಯ ತುಂಬುವುದಾಗಿದೆ.


**************



3 ಕಾಮೆಂಟ್‌ಗಳು: