ಪುಟಗಳು

20 ನವೆಂಬರ್ 2020

10ನೇ ತರಗತಿ-ಕನ್ನಡ-ಗದ್ಯ-02-ವ್ಯಾಘ್ರಗೀತೆ - ಟಿಪ್ಪಣಿಗಳು

೧) "ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ"

        ಎಲೆ ಬೆಕ್ಕೆ ರೂಪಿನಿಂದಲೇ
        ಹುಲಿಯ ಜಾತಿಗೆ ಸೇರಿದೆನೆಂದು ಗರ್ವಿಸಬೇಡ |
        ಬಲುಮೆಯು ನಿನ್ನೊಳಿಹುದೇಂ?
        ಇಲಿಗಳ ಹಿಡಿವುದರೊಳಾಯ್ತು ನಿನ್ನಯ ಶೌರ್ಯಂ ||
                                                      - ಜಯರಾಯಾಚಾರ್ಯ
        (ನೋಡಿ:- 'ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ' ಪುಟ-೫೫)

********

೨) ಹಿಂಸ್ರಪಶು : ಕ್ರೂರ ಮೃಗ (ಹುಲಿ, ಸಿಂಹ, ಚಿರತೆ ಮುಂತಾದ ಮಾಂಸಾಹಾರಿ ಕ್ರೂರಮೃಗಗಳು)

********

೩) ಶಾಕಾಹಾರ : ಸಸ್ಯಾಹಾರ

೪) ಭಗವದ್ಗೀತೆ : ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.

        ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣೆಯ ನಿರೂಪಣಾ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧರ್ಮ ಯುದ್ಧ (ನೀತಿವಂತ ಯುದ್ಧ) ದ ಆರಂಭದಲ್ಲಿ, ಅರ್ಜುನನು ತನ್ನ ಸ್ವಂತ ರಕ್ತಸಂಬಂಧಿಗಳ ವಿರುದ್ಧದ ಯುದ್ಧ ಮಾಡಲು ಹಿಂಜರಿಯುತ್ತಾನೆ. ಅವನು ಯುದ್ಧವು ಉಂಟುಮಾಡುವ ಹಿಂಸೆ ಮತ್ತು ಸಾವಿನ ಬಗ್ಗೆ ಸಂದಿಗ್ಧತೆ ಮತ್ತು ಹತಾಶೆಯಿಂದ ಕೂಡಿರುತ್ತಾನೆ. ಅರ್ಜುನನ ಪ್ರಶ್ನೆಗಳು / ಸಂದೇಹಗಳಿಗೆ ಕೃಷ್ಣ ನೀಡುವ ಉತ್ತರಗಳು ಮತ್ತು ಪ್ರವಚನವನ್ನು ಭಗವದ್ಗೀತೆಯನ್ನು ಒಳಗೊಂಡಿದೆ. "ನಿಸ್ವಾರ್ಥ ಕ್ರಿಯೆಯ" ಮೂಲಕ "ಧರ್ಮವನ್ನು ಎತ್ತಿಹಿಡಿಯುವ ತನ್ನ ಕ್ಷತ್ರಿಯ (ಯೋಧ) ಕರ್ತವ್ಯವನ್ನು ಪೂರೈಸಲು" ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಾನೆ. ಅರ್ಜುನನು ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು ಮತ್ತು ಅವುಗಳಿಗೆ ತಾತ್ವಿಕ ಪರಿಹಾರಗಳನ್ನು ಇಲ್ಲಿ ಕಾಣಬಹುದು. ಇದು ಅರ್ಜುನನಿಗೆ ಮಾತ್ರವಲ್ಲದೆ ಇಡೀ ಮಾನವ ಕುಲಕ್ಕೆ ಹೇಳಿದ ಆಧ್ಯಾತ್ಮಿಕ ಪಾಠದಂತಿದೆ.

೫) ವ್ಯಾಘ್ರ = ಹುಲಿ, ತರಕ್ಷು;     ವ್ಯಾಘ್ರ ಪದದ ತದ್ಭವ ರೂಪ - ಬಗ್ಗ,


೬) ಶಾನುಭೋಗಿಕೆ / ಶಾನುಭೋಗರು :  ಶಾನುಭೋಗಿಕೆ ಎಂಬುದು ಒಂದು ವೃತ್ತಿ. ಇದಕ್ಕೆ ಸೇನಬೋಯಿಕೆ, ಶ್ಯಾನುಭೋಗಿಕೆ, ಶಾನುಬೋಗಿಕೆ, ಶೇನಭಾವಿಕೆ, ಸೇನಬೋಕೆ ಎಂಬ ರೂಪಾಂತರಗಳೂ ಇವೆ. 
    ಶಾನುಭೋಗಿಕೆ ಹುದ್ದೆಯನ್ನು ಹೊಂದಿದವರನ್ನು ಶಾನುಭೋಗರೆಂದು ಕರೆಯುತ್ತಿದ್ದರು.
    ಹಿಂದೆ ರಾಜರ ಕಾಲದಲ್ಲಿ ಗ್ರಾಮೀಣ ಜನರ ಆಸ್ತಿ, ಮನೆ, ಹೊಲಗಳ ಕಂದಾಯ ವಸೂಲು ಮಾಡುವುದು, ಅಲ್ಲದೆ ಇತರೆ ವ್ಯವಹಾರಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಬರೆಯುವ ವೃತ್ತಿಯಾಗಿತ್ತು, ಶ್ಯಾನುಭೋಗಪದವಿ ಎಂದೂ ಕರೆಯುತ್ತಿದ್ದರು.

೭) ಖಿರ್ದಿ ಪುಸ್ತಕ : ಇದು ಫಾರ್ಸಿ ಭಾಷೆಯಿಂದ ಕನ್ನಡಕ್ಕೆ ಬಂದಿದೆ. ಗ್ರಾಮದ ಜನರ ಮನೆ, ಜಮೀನಿನ ದಾಖಲೆ ಹಾಗೂ ಕಂದಾಯದ ವಿವರಗಳನ್ನು ಹೊಂದಿರುವ ಪುಸ್ತಕ. ಈ ಪುಸ್ತಕ ಆಯಾ ಗ್ರಾಮದ ಪರಿಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾನುಭೋಗರ ಬಳಿ ಇರುತ್ತಿತ್ತು. ಸಾಮಾನ್ಯವಾಗಿ  ಈ ಪುಸ್ತಕ ವಂಶಪಾರಂಪರ್ಯವಾಗಿ ಅವರ ಮನೆತನದವರಿಂದಲೇ ನಿರ್ವಹಿಸಲ್ಪಡುತ್ತಿತ್ತು.
    ಪ್ರತಿ ದಿನದ ವಹಿವಾಟಿನ ದಾಖಲೆ. ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಭೂಮಿಯ ವ್ಯಾಪ್ತಿ, ಮೌಲ್ಯ ಮತ್ತು ಮಾಲೀಕತ್ವದ ಮಾಹಿತಿಯನ್ನು ಹೊಂದಿದ್ದ  ಸಾರ್ವಜನಿಕ ದಾಖಲೆಯಾಗಿತ್ತು.

೮) ಮಸಿಯ ಕಾಣಿಕೆ : ಮಸಿ ಎಂದರೆ ಕಪ್ಪು, ಕಾಡಿಗೆ.  ಇಲ್ಲಿ ಇಂಗ್ಲಿಷ್‌ನ 'ಇಂಕ್' (ink) ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಆದ್ದರಿಂದ ಮಸಿಯ ಕಾಣಿಕೆ ಎಂದರೆ ಅರ್ಜಿ ಅಥವಾ ಲೆಕ್ಕ-ಪತ್ರಗಳನ್ನು ಬರೆದು ಕೊಟ್ಟವರಿಗೆ, ಬರೆಸಿಕೊಂಡವರು ನೀಡುತ್ತಿದ್ದ ಹಣ ಅಥವಾ ವಸ್ತುವಿನ ರೂಪದ ಸಂಭಾವನೆ ಅಥವಾ ಕಾಣಿಕೆಯಾಗಿದೆ.

೯) ಲಾಂಛನ : ಗುರುತು, ಚಿಹ್ನೆ

೧೦) ಇರಸಾಲು : ಸಾರ್ವಜನಿಕರಿಂದ ಸಂಗ್ರಹಿಸಿದ ಮತ್ತು ಸರ್ಕಾರಕ್ಕೆ ಸಲ್ಲಿಸಬೇಕಾದ ಕಂದಾಯದ ಹಣವನ್ನು ಖಜಾನೆಗೆ ಸಲ್ಲಿಸುವುದು/ಕಟ್ಟುವುದು

೧೧) ಖಜಾನೆ : ತಿಜೋರಿ, ಬೊಕ್ಕಸ, ಅಂದರೆ ಹಣಕಾಸನ್ನು ಇಡುವ ಸ್ಥಳ ಎಂದರ್ಥ, ಆದರೆ ವಿಶಾಲಾರ್ಥದಲ್ಲಿ ಸರಕಾರದ ಹಣಕಾಸು ವ್ಯವಹಾರವನ್ನು ನಡೆಸುವ ತಾಲೂಕು ಮಟ್ಟದ ಕಛೇರಿಯೇ ಖಜಾನೆ. ಈ ಕಛೇರಿಯಲ್ಲಿ ಜನರಿಂದ ಸಂಗ್ರಹಿಸಿದ ಕಂದಾಯವನ್ನು ಸ್ವಿಕರಿಸಲಾಗುತ್ತದೆ ಹಾಗೂ ಸಂಬಂಧಿಸಿದ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಸರಕಾರಿ ನೌಕರರ ಸಂಬಳ ಭತ್ಯೆಗಳನ್ನು ವಿತರಿಸಲಾಗುತ್ತದೆ.

೧೨) ಮದಲಿಂಗನ ಕಣಿವೆ; ಮದಲಿಂಗನ ಕಣಿವೆ ಇದು ಮಾಸ್ತಿಯವರ ಕಥಾ ಕವನ. ಚಿಕ್ಕನಾಯಕನಹಳ್ಳಿಯ ಹತ್ತಿರ ಇರುವ ಒಂದು ಕಣಿವೆ. ಇದಕ್ಕೆ ಮದಲಿಂಗನ ಕಣಿವೆ ಎಂದು ಹೆಸರು ಬರುವುದಕ್ಕೆ ಒಂದು ಜನಪದೀಯ ಕಥೆ ಇದೆ. ಮದಲಿಂಗ ಎನ್ನುವ ಒಬ್ಬ ವ್ಯಕ್ತಿಯ ಕತೆ. ಮದಲಿಂಗನಿಗೆ ಆತನ ಅತ್ತೆಯ ಹಿರಿಯ ಮಗಳೊಟ್ಟಿಗೆ ಮದುವೆಯಾಗುತ್ತದೆ.

ಮದುವೆಯ ಬಳಿಕ ಹೆಂಡತಿ, ಅತ್ತೆ, ನಾದಿನಿ ಜಾಣೆಯೊಂದಿಗೆ ಚಿಕ್ಕನಾಯಕನಹಳ್ಳಿಗೆ ಬರುತ್ತಾನೆ. ಬರುವಾಗ ಒಂದು ಗುಡ್ಡ ಅಲ್ಲೊಂದು ಕಣಿವೆ ಸಿಗುತ್ತದೆ. ಅತ್ತೆ ಮತ್ತು ನಾದಿನಿಯರು ಸರಸದಿಂದ ಮದಲಿಂಗನೊಟ್ಟಿಗೆ ಮಾತನಾಡುವಾಗ ನಾದಿನಿಯು ಅಕ್ಕನನ್ನು  ಬಿಟ್ಟಿರಲು ನನಗೆ ಕಷ್ಟ ಎನ್ನುತ್ತಾಳೆ. ಆಗ ತಾಯಿಯು ನಿನಗೂ ಮದುವೆ ಆದ ಮೇಲೆ ನೀನು ಹೀಗೆ ಗಂಡನ ಮನೆಗೆ ಹೋಗುತ್ತೀಯಂತೆ ಬಾ ಎನ್ನುತ್ತಾಳೆ. ಆಗ ತಂಗಿ ನನಗಾವ ಗಂಡನೂ ಬೇಡವೆಂದು ಹೇಳುತ್ತಾಳೆ. ಆಗ ಮದಲಿಂಗ "ಎಲ್ಲರೂ ಹೀಗೆ ಹೇಳುತ್ತಾರೆ. ಯಾವನೋ ಬಂದು ಕರೆದರೆ ಓಡಿಹೋಗುತ್ತಾರೆ" ಎಂದು ವ್ಯಂಗ್ಯವಾಗಿ ಹೇಳುತ್ತಾನೆ. ನಾದಿನಿ ತಕ್ಷಣ ಭಾವನಿಗೆ ಮದುವೆಯಾಗಿ ಮೂರು ದಿನ ಆಗಿದೆ ಆಗಲೇ ಎಲ್ಲ ತಿಳಿದಿರುವನಂತೆ ಮಾತನಾಡುತ್ತಾರೆ ಎನ್ನುತ್ತಾಳೆ. ಮದಲಿಂಗ ನಾದಿನಿಗೆ "ನಿನ್ನ ಅಕ್ಕನನ್ನು ಬಿಟ್ಟಿರಲು ಆಗದಿದ್ದರೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಬಾ" ಎಂದು ರೇಗಿಸುತ್ತಾನೆ. ಆಗ ಅತ್ತೆ  ಒಂದು ಪಂಥ ಒಡ್ಡುತ್ತಾಳೆ. ಈ ಗುಡ್ಡವನ್ನು ಹಿಂದು ಹಿಂದಾಗಿ ಹತ್ತಿ, ಹಿಂದು ಹಿಂದಾಗಿ ಇಳಿದು ಬಂದರೆ ಇವಳನ್ನ ಕೊಡುತ್ತೇನೆ ಎಂದಳು. ಮದಲಿಂಗ ಹುಮ್ಮಸ್ಸಿನಿಂದ ಪಂಥವನ್ನು ಒಪ್ಪಿಕೊಂಡು ನೀವು ಆ ಕಡೆ ಕಣಿವೆಯಲ್ಲಿ ಚೊಂಬಿನಲ್ಲಿ ನೀರನ್ನು ಹಿಡಿದುಕಂಡು ಬನ್ನಿ; ಇವಳೇ ನನ್ನ ಕೈಗೆ ಕುಡಿಯಲು ನೀರನ್ನು ಕೊಡಬೇಕು ಎಂದನು. ಮದಲಿಂಗ ಗುಡ್ಡವನ್ನು ಹಿಂದು ಹಿಂದಾಗಿ ಹತ್ತಿ, ಹಿಂದು ಹಿಂದಾಗಿ ಇಳಿದು ಇವರಿರುವಲ್ಲಿಗೆ ಬರುತ್ತಾನೆ. ಆಗ ನಾದಿನಿ ಒಂದೇ ಉಸಿರಿಗೆ ನೀರನ್ನು ಕೊಡುವಾಗ ಚೊಂಬು ಕೈಯಿಂದ ಬಿದ್ದು ನೀರೆಲ್ಲ ಚೆಲ್ಲಿ ಕುಡಿಯಲು ನೀರಿಲ್ಲದ ಹಾಗೆ ಆಗುತ್ತದೆ. ಬೆಟ್ಟ ಹತ್ತಿ ಬಾಯಾರಿದ್ದ ಮದಲಿಂಗ ಸುಸ್ತಾಗಿ, ಗಂಟಲು ಒಣಗಿ, ಹತ್ತಿರದಲ್ಲಿ ಎಲ್ಲಿಯೂ ನೀರಿಲ್ಲದೆ ಒದ್ದಾಡಿ ಸಾಯುತ್ತಾನೆ. ಹೀಗೆ ಮದಲಿಂಗನು ಆ ಕಣಿವೆಯಲ್ಲಿ ಅಸುನೀಗಿದ್ದರಿಂದ ಮದಲಿಂಗನ ಕಣಿವೆ ಎಂಬ ಹೆಸರು ಬಂದಿದೆ.

ಮದಲಿಂಗನ ಕಣಿವೆ

  ಮದಲಿಂಗನಿಗೆ ನೀರು ತರಲು ಹೋದ ಹೆಂಡತಿ ಮಡುವಿಗೆ ಬಿದ್ದು ಸಾಯುತ್ತಾಳೆ. ಇದು ಮದನಮಡು ಆಗಿದೆ. ಮದಲಿಂಗನಿಗೆ ತಮ್ಮ ಜೊಲ್ಲು ನೀಡಿ ಬದುಕಿಸುವ ಪ್ರಯತ್ನ ಮಾಡಿ ಸಾಧ್ಯವಾಗದೇ ಜಾಣೆ ಕೂಡ ಸಾಯುತ್ತಾಳೆ. ಜಾಣೆ ಸಾವಿಗೀಡಾದ ಸ್ಥಳ ಜಾಣೆಹಾರ್ ಆಗಿದೆ. ಅಳಿಯ, ಇಬ್ಬರು ಹೆಣ್ಣು ಮಕ್ಕಳ ಸಾವಿನಿಂದ ಕಂಗಾಲಾಗಿ ಅಲ್ಲಿಂದ ಓಡುತ್ತಾ ಸ್ವಲ್ಪ ದೂರದಲ್ಲಿ ಅತ್ತೆಯೂ ಸಾಯುತ್ತಾಳೆ. ಅತ್ತೆ ಸತ್ತ ಜಾಗ ಈಗ ಹತ್ಯಾಳು ಆಗಿದೆ. ಅತ್ತೆ ಸಮಾಧಿ ಮಾಡಿದ ಜಾಗ ಎನ್ನಲಾದ ಜಾಗವನ್ನು ಈಗಲೂ ಅಜ್ಜಿಗುಡ್ಡೆ ಎಂದು ಕರೆಯಲಾಗುತ್ತದೆ.

೧೩) ಭರತಖಂಡ : 'ಭಾರತ ದೇಶ'ವನ್ನು ಇತಿಹಾಸ ಕಾಲದಲ್ಲಿ ಹಾಗೂ ಪುರಾಣಗಳಲ್ಲಿ 'ಭರತಖಂಡ ಎಂದು ಉಲ್ಲೇಖಿಸಲಾಗಿದೆ.

೧೪) ಹುಲಿಯ ಬಡಬಂಧುವಾದ ಬೆಕ್ಕು : ಬೆಕ್ಕು ಮತ್ತು ಹುಲಿ ಮಾರ್ಜಾಲ ವರ್ಗಕ್ಕೆ ಸೇರಿವೆ. ಆದರೆ ಹುಲಿಯಷ್ಟು ಶಕ್ತಿ ಹಾಗೂ ಗಾತ್ರ ಹೊಂದಿಲ್ಲದಿರುವ ಬೆಕ್ಕನ್ನು ಬಡಬಂಧುವೆಂದು ಕರೆಯಲಾಗಿದೆ.

೧೫) ಪುಣ್ಯಕೋಟಿ : ಜನಪದ ಕಥನ ಕಾವ್ಯದಲ್ಲಿ ಬರುವ ಸತ್ಯವಂತೆಯಾದ ಹಸು. ಪುಣ್ಯಕೋಟಿಯ ಕಥೆ "ಗೋವಿನ ಹಾಡು" ಎಂದು ಪ್ರಸಿದ್ಧಿಯಾಗಿದೆ.

  

                                                ********
೧೪) ಸ್ವಧರ್ಮೇ ನಿಧನಂ ಶ್ರೇಯಃ : ಭಗವದ್ಗೀತೆಯ 3 ನೇ ಅಧ್ಯಾಯದ 35 ಶ್ಲೋಕದಲ್ಲಿ ಈ ವಾಕ್ಯ ಬರುತ್ತದೆ. 
ಪೂರ್ಣ ಶ್ಲೋಕ ಹೀಗಿದೆ :
        ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
        ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ॥೩೫॥

        ಶ್ಲೋದ ಅರ್ಥ:  ತನ್ನ ಸ್ವಭಾವಕ್ಕೆ ವಿರುದ್ಧವಾದ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಅರೆಬರೆಯಾಗಿಯಾದರೂ ಸಹಜ ಧರ್ಮವನ್ನು / ಸ್ವಂತ ಧರ್ಮವನ್ನು ಆಚರಿಸುವುದು ಮಿಗಿಲು.

    ಮೇಲೆ ಹೇಳಿದಂತೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿರುತ್ತದೆ ಹಾಗು ಅದನ್ನು ಬದಲಿಸಲು ಬರುವುದಿಲ್ಲ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ, ಅದು ಸ್ವಧರ್ಮ. ಇದು ಸಹಜ ಕ್ರಿಯೆ. ನಮ್ಮ ಸಹಜ ಸ್ವಭಾವ ಯಾವುದೋ ಅದನ್ನು ನಾವು ಮಾಡಬೇಕೇ ವಿನಃ ಅನ್ಯವನ್ನಲ್ಲ. ಈ ಕಾರಣಕ್ಕಾಗಿ ತಂದೆ-ತಾಯಿ ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ನಿಜ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವನ್ನು ರೂಪಿಸಬೇಕು. ಇಲ್ಲದಿದ್ದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ. ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವದಲ್ಲಿದೆ. ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಇನ್ಯಾರದ್ದೋ ಧರ್ಮವನ್ನು ಅನುಸರಿಸಿ ಅಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ “ನಿನ್ನ ಸ್ವಧರ್ಮ ಆಚರಣೆಯಲ್ಲಿ ನ್ಯೂನತೆ ಇದ್ದರೂ, ಅದು ಪರಕೀಯ ಧರ್ಮವನ್ನು ಆಚರಿಸುವುದಕ್ಕಿಂತ ಶ್ರೇಷ್ಠ” ಎಂದು. ಪರ ಧರ್ಮವನ್ನು ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲ, ಅದು ಅಸಹ್ಯ ಅಥವಾ ಭಯಂಕರ.

    ಇಲ್ಲಿ ಯುದ್ಧ ಮಾಡುವುದು ಅರ್ಜುನನ ಸ್ವಭಾವ ಧರ್ಮ. ಅದನ್ನು ಬಿಟ್ಟು ಆತ ತಪಸ್ಸು ಮಾಡುವುದಕ್ಕೆ ಕಾಡಿಗೆ ಹೋಗುವುದು ಆತನ ಸ್ವಧರ್ಮಕ್ಕೆ ವಿರುದ್ಧ. ಆದುದರಿಂದ ಸ್ವಧರ್ಮ ಪಾಲನೆ ಮಾಡು, ರಾಗ ದ್ವೇಷವನ್ನು ಬಿಟ್ಟು ಹೋರಾಡು ಎನ್ನುತ್ತಿದ್ದಾನೆ ಕೃಷ್ಣ.

೧೫) ಬೈಬಲ್ : ಕ್ರೈಸ್ತ ಧರ್ಮೀಯರ ಪವಿತ್ರವಾದ ಗ್ರಂಥ ಬೈಬಲ್. ಇದರಲ್ಲಿ ಕ್ರೈಸ್ತ ಧರ್ಮದ ನಂಬಿಕೆಯಂತೆ ಏಳು ದಿನಗಳಲ್ಲಿ ದೇವರು ಪ್ರಪಂಚವನ್ನು ನಿರ್ಮಿಸಿದ್ದು; ಮೊದಲ ಮಾನವರ ಜನನ (ಆದಂ ಮತ್ತು ಈವ್) , ಅವರನ್ನು ಪಾಪದ ಕೆಲಸಕ್ಕೆ ಪ್ರೇರಿಪಿಸುವ ಸೈತಾನ (ದುಷ್ಟಶಕ್ತಿ), ಕೊನೆಗೂ ಅದರ ಪ್ರೇರೇಪಣೆಯಿಂದ ಪಾಪ ಮಾಡುವ ಆದಂ ಮತ್ತು ಈವರ ಕಥೆಯಿದೆ. ಅಲ್ಲದೆ ಏಸು ಮತ್ತು ಆತನ ಅನುಯಾಯಿಗಳ ಬೋಧನೆಗಳನ್ನು ಬೈಬಲ್ ನಲ್ಲಿ ಕಾಣಬಹುದು.

೧೬) ಸೈತಾನ ಹಿಂದಿರುಗು : ಬೈಬಲ್ ಗ್ರಂಥದಲ್ಲಿರುವಂತೆ ಸೈತಾನ ಎಂದರೆ "ವಿರೋಧಿಸುವವನು" ಅಥವಾ "ದುಷ್ಟಶಕ್ತಿ" ಎಂದರ್ಥ. ದೇವರು ತನ್ನಂತೆಯೇ ಇರುವ ಮಾನವರನ್ನು ಸೃಷ್ಟಸಿ ತೋಟದಲ್ಲಿರುವ ಹಣ್ಣುಗಳಲ್ಲಿ "ಒಳಿತು - ಕೆಡುಕುಗಳನ್ನು ತಿಳಿಯುವ" ಹಣ್ಣುಗಳನ್ನು ತಿನ್ನಬಾರದೆಂದು ಆದಂ-ಈವ್ ದಂಪತಿಗಳಿಗೆ ಆಜ್ಞೆ ಮಾಡಿದನು. ಇದನ್ನು ತಿಳಿದ ಸೈತಾನನು "ಈ ಮರದ ಹಣ್ಣುಗಳನ್ನು ತಿನ್ನಿರಿ. ತಿಂದರೆ ನೀವು ದೇವರಂತೆಯೇ ಒಳ್ಳೆಯದು ಮತ್ತು ಕೆಟ್ಟದ್ದರ ತಿಳಿವಳಿಕೆ ಪಡೆಯುವಿರಿ ಎಂದು ಪೀಡಿಸತೊಡಗಿದನು. ಆಗ ತಂದೆಯ ಮಾತಿಗೆ ಮೀರಬಾರದೆಂದು ಅವರಿಬ್ಬರೂ ಅದಕ್ಕೆ ಒಪ್ಪದೆ, "ಸೈತಾನ ಹಿಂದಿರುಗು" ಎಂದು ಆತನನ್ನು ದೂರ ಹೋಗುವಂತೆ, ತಮ್ಮನ್ನು ಪಾಪದ ಕೆಲಸ ಮಾಡಲು ಪ್ರೇರೇಪಿಸದಂತೆ ತಿರಸ್ಕರಿಸಿದರು.

೧೭) ಕುಲಾಲ ಚಕ್ರ : ಮಡಿಕೆ ಮಾಡಲು ಬಳಸುವ ಚಕ್ರಾಕೃತಿಯ ಸಾಧನ, ಇದನ್ನು 'ತಿಗರಿ' ಎಂದೂ ಕರೆಯುವರು.

ಕುಲಾಲ ಚಕ್ರ / ತಿಗರಿ ಬಳಸಿ ಮಡಿಕೆ ತಯಾರಿ
************
೧೮) ದೊಂಬರಾಟ : 'ದೊಂಬ' ಎಂಬ ಅಲೆಮಾರಿ ಜನಾಂಗದವರ ಆಟವೇ "ದೊಂಬರಾಟ". ದೊಂಬರು ಕರ್ನಾಟಕದ ಪ್ರಮುಖ ಅಲೆಮಾರಿ ಸಮುದಾಯ. ಉತ್ತರ ಕರ್ನಾಟಕದಲ್ಲಿ ಕೊಲ್ಲಟಿಗರೆಂದೂ ಕರೆಯುತ್ತಾರೆ. ಅವರ ಪ್ರದರ್ಶನವನ್ನು ದೊಂಬರಾಟ, ಕೊಲ್ಲಟಿಗರ ಆಟ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
   
        ದೊಂಬರು ಆಂಧ್ರಪ್ರದೇಶದ ಕಡಪಾ, ನೆಲ್ಲೂರು, ಚಿತ್ತೂರು ಮತ್ತು ವಿಶಾಖಪಟ್ಟಣ ಜಿಲ್ಲೆಗಳಿಂದ ವಲಸೆ ಬಂದರೆಂದು ಹೇಳಲಾಗಿದೆ. ಅವರು ತೆಲುಗು ಮತ್ತು ಪ್ರಾದೇಶಿಕ ಭಾಷೆಯಾದ ಕನ್ನಡ ಮಾತನಾಡುತ್ತಾರೆ. ದೊಂಬರ ಸಮುದಾಯವು ಭಾರತದ ಉದ್ದಗಲಕ್ಕೂ ಹರಡಿಕೊಂಡಿದ್ದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
        ದೊಂಬರಾಟ ಪ್ರದರ್ಶನ: ಪ್ರದರ್ಶನದ ಪ್ರಾರಂಭದಲ್ಲಿ ಸಗಣಿಯಿಂದ ಮಾಡಿದ ಗಣಪತಿಯನ್ನು ಪೂಜಿಸಿ, ರಂಗಸ್ಥಳದ ನಡುವೆ ಒಂದು ಬೊಂಬನ್ನು ಹೂಳಿ ನಿಲ್ಲಿಸುತ್ತಾರೆ.
  • ಬಿದಿರುಗಳವನ್ನು ಹತ್ತುವುದು ಮತ್ತು ದಿಢೀರನೆ ಅದರಿಂದ ಜಾರಿಕೊಂಡು ಕೆಳಗೆ ಇಳಿಯುವುದು.
  • ಆ ಬೊಂಬನ್ನು ಹಿಡಿದಿಕೊಂಡೇ ಬಗೆಬಗೆಯ ಲಾಗಗಳನ್ನು ಹಾಕುವುದು.
  • ಎತ್ತಿನ ಬಂಡಿಯನ್ನು ತನ್ನ ಕೂದಲಿಗೆ ಕಟ್ಟಿಕೊಂಡು ಎಳೆಯುವುದು.
  • ನೆಲದ ಮೇಲೆ ಅಂಗಾತ್ತಾಗಿ ಮಲಗಿಕೊಂಡು, ಎದೆಯ ಮೇಲೆ ದೊಡ್ಡ ಬಂಡೆಯನ್ನು ಇಟ್ಟುಕೊಳ್ಳುವುದು.
  • ಹಗ್ಗದ ಮೇಲಿನ ನಡಿಗೆ.
  • ನೀರುತುಂಬಿದ ಕೊಡವನ್ನು ಹಲ್ಲುಗಳಿಂದಲೇ ಎತ್ತುವುದು.
  • ಮರಗಾಲುಗಳನ್ನು ಕಟ್ಟಿಕೊಂಡು ನಡೆಯುವುದು.
  • ಚಿಕ್ಕ ಮಕ್ಕಳು ಕಬ್ಬಿಣದ ಹೂಪುಗಳಲ್ಲಿ (Hoop) ಒಳಗೆ ಮೈಮಣಿಸಿಕೊಂಡು ಹೋಗಿ ಹೊರಬರುವುದು. ಇತ್ಯಾದಿ
*********
೧೯) ಹುಲಿಯ ಪಂಜಾ : ಹುಲಿಯ ಕಾಲಿನಲ್ಲಿರುವ ಚೂಪಾದ ಉಗುರುಗಳನ್ನು ಪಂಜಾ ಎನ್ನಲಾಗುತ್ತದೆ. ಈ ಸ್ವಾಭಾವಿಕ ಉಗುರುಗಳು ಹಲವಾರು ಮಾಂಸಾಹಾರಿ ಪ್ರಾಣಿಗಳಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತವೆ.
   
ಹುಲಿಯ ಚೂಪಾದ ಪಂಜಾ (ಉಗುರುಗಳು)

*********

೨೦) ಬ್ರಹ್ಮಾಸ್ತ್ರ : ಬ್ರಹ್ಮಾಸ್ತ್ರವು ಭಾರತೀಯ ಪುರಾಣಗಳಲ್ಲಿ ಪದೇ ಪದೇ ಕೇಳಿಬರುವ ಅಸ್ತ್ರದ ಹೆಸರಾಗಿದೆ. ಸೃಷ್ಟಿಕರ್ತನಾದ ಬ್ರಹ್ಮನಿಂದ ಆವಿಷ್ಕರಿಸಲ್ಪಟ್ಟ ಬ್ರಹ್ಮಾಸ್ತ್ರವು ಅಸ್ತ್ರಸಂಕುಲದಲ್ಲಿಯೇ ಅತ್ಯಂತ ಬಲಿಷ್ಟ ಮತ್ತು ಕೊನೆಯ ಅಸ್ತ್ರವಾಗಿದೆಯೆಂದು ಭಾವಿಸಲಾಗುತ್ತದೆ. ಆದರೆ ಕೇವಲ ಧರ್ಮ ಮತ್ತು ಸತ್ಯವನ್ನು ಹಿಡಿದೆತ್ತುವದಕ್ಕಾಗಿ ಮತ್ತು ಅತ್ಯಂತ ಕ್ಲಿಷ್ಟ ಸಂದರ್ಭಗಳಲ್ಲಿ ಮಾತ್ರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಬೇಕೆಂಬ ನೀತಿಸಂಹಿತೆಯಿದೆ. ರಾಮಾಯಣದಲ್ಲಿ ರಾಮ ರಾಕ್ಷಸನಾದ ರಾವಣನ ಮೇಲೆ ಮತ್ತು ಮಹಾಭಾರತದಲ್ಲಿ ಅರ್ಜುನ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದನ್ನು ಓದಬಹುದಾಗಿದೆ.

*********
೨೧) ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ! : ಭಗವದ್ಗೀತೆಯ ೨ನೇ ಅಧ್ಯಾಯದ ೪೭ ನೇ ಶ್ಲೋಕದಲ್ಲಿ ಈ ವಾಕ್ಯವಿದೆ.
        ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
        ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ ॥೪೭॥

ಭಾವಾರ್ಥ:  ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೇ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.

        ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೆ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ.
        ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ 'ಹೀಗೇ ಆಗಬೇಕು' ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೆ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ.
        ಯಾವ ಕಾಲಕ್ಕೂ ನಿಷ್ಕ್ರೀಯನಾಗಿ ಕುಳಿತುಕೊಳ್ಳದೆ ಸದಾ ಕರ್ತವ್ಯ ಶೀಲನಾಗು ಎನ್ನುತ್ತಾನೆ ಕೃಷ್ಣ. ‘ಹೀಗೇ ಆಗಬೇಕು’, ‘ಇಂಥಹ ಫಲವೇ ಬರಬೇಕು’ ಎನ್ನುವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತ, ವ್ಯಾಕುಲತೆ(Mental depression) ಭಯಾನಕ. ಸೋಲನ್ನಾಗಲಿ ಗೆಲುವನ್ನಾಗಲಿ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರೀಯನಾಗದೆ, ಫಲದಲ್ಲಿ ಅಧಿಕಾರವನ್ನು ಸಾಧಿಸದೆ ಮುನ್ನೆಡೆಯಬೇಕು ಎನ್ನುವುದು ಕೃಷ್ಣನ ಕರ್ಮ ಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ ಯೋಚಿಸದೆ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.
***********

೨೨) ಹರಿದಾರಿ : ದೂರವನ್ನು ಅಳೆಯುವ ಮಾಪನ, ಮೂರು ಮೈಲಿಗೆ ಒಂದು ಹರದಾರಿ ಎನ್ನುವರು.

***********
೨೩) ಕಣಿಹಾಕಿಕೊಳ್ಳುವುದು : ಉಳುವ ನೇಗಿಲಿಗೆ ಎತ್ತುಗಳು ಅಥವಾ ಎಮ್ಮೆಗಳ ಕುತ್ತಿಗೆ ಮೇಲೆ ನೊಗ ಹಾಕಿ, ಕುತ್ತಿಗೆ ಮತ್ತು ನೊಗ ಸೇರಿಸಿ ಒಂದು ಹಗ್ಗದಿಂದ ಕಟ್ಟಿರುತ್ತಾರೆ. ಆ ಹಗ್ಗವನ್ನು ಮಿಳಿ ಅಥವಾ ಮಿಣಿ ಎನ್ನುತ್ತಾರೆ. ಕೆಲವೊಮ್ಮೆ ಎತ್ತುಗಳು / ಎಮ್ಮೆಗಳು ಮಿಣಿ ಮತ್ತು ನೊಗದಿಂದ ಬಿಡಿಸಿಕೊಳ್ಳು ಪ್ರಯತ್ನಿಸಿ ಹೆಗಲ ಮೇಲಿನ ನೊಗವನ್ನು ಕೆಳಭಾಗಕ್ಕೆ ಜಾರಿಸಿಬಿಡುತ್ತವೆ. ಹೀಗೆ ಎತ್ತುಗಳು ಹೆಗಲ ಮೇಲಿನ ನೊವನ್ನು ಕೆಳಕ್ಕೆ ಜಾರಿಸುವುದನ್ನು ರೈತರು "ಕಣಿಹಾಕಿಕೊಳ್ಳುವುದು" ಎನ್ನುತ್ತಾರೆ.
***********
೨೪) ಕೋವಿ : ಬಂದೂಕು, ತುಪಾಕಿ,
ಕೋವಿ
*************

೨೫) ಕುಡಿದ ನೀರು ಅಲುಗದ ಹಾಗೆ : ಯಾವುದೇ ತೊಂದರೆ ಇಲ್ಲದ ಹಾಗೆ.

೨೬) ಜೀರ್ಣವಸ್ತ್ರ : ಹಳೆಯದಾದ ಹಾಗೂ ಹರಿದು ಚೂರಾದ ಬಟ್ಟೆ.

೩೬) ತೊಲೆ: ದೂಲ, ಜಂತಿ;  ಮನೆಯ ಛಾವಣಿಗೆ ಆಧಾರವಾಗಿ ಗೋಡೆಗಳ ಮೇಲೆ ಅಡ್ಡಲಾಗಿ ಹಾಕುವಮರದ ದಿಮ್ಮಿ/ದೂಲ


*************

೩೭) ದೇವರ ಮಂದಾಸನ : ದೇವರ ಪೀಠ

*************








1 ಕಾಮೆಂಟ್‌: