ತದ್ಧಿತಾಂತಗಳು
ತದ್ಧಿತಾಂತಗಳನ್ನು ತಿಳಿಯುವ ಮೊದಲು ನಾಮಪ್ರಕೃತಿಗಳ ಬಗ್ಗೆ ತಿಳಿಯುವುದು ಸೂಕ್ತ.
ನಾಮಪ್ರಕೃತಿ : ನಾಮಪದದ ಮೂಲರೂಪವನ್ನು ನಾಮ ಪ್ರಕೃತಿ ಅಥವಾ ಪ್ರಾತಿಪದಿಕ ಎನ್ನುವರು.
ಉದಾ: ಮರ, ಗಿಡ, ಮನುಷ್ಯ, ಲೆಕ್ಕಿಗ, ಗಾಣಗಿತ್ತಿ, ಸಿರಿವಂತ ಇತ್ಯಾದಿ.
ನಾಂ ಪ್ರಕೃತಿಗಳಲ್ಲಿ ಪ್ರಮುಖವಾಗಿ ಎರಡು ವಿಧ : ೧) ಸಹಜ ನಾಮಪ್ರಕೃತಿ ೨) ಸಾಧಿತ ನಾಮಪ್ರಕೃತಿ
೧) ಸಹಜ ನಾಮಪ್ರಕೃತಿ : ಸ್ವಾಭಾವಿಕವಾಗಿ ಬಳಕೆಯಲ್ಲಿರುವ; ಯಾವುದೇ ಬದಲಾವಣೆ ಮಾಡದಿರುವ; ಬೇರೆ ಬೇರೆ ಪದಗಳ ಸಂಯೋಜನೆ ಇಲ್ಲದ ನಾಮಪದದ ಮೂಲ ರೂಪವನ್ನು ಸಹಜ ನಾಮಪ್ರಕೃತಿ ಎನ್ನುವರು.
ಉದಾ: ಗಿಡ, ಮರ, ಬಳ್ಳಿ, ಬೆಟ್ಟ, ಗುಡ್ಡ, ನದಿ, ಕಪ್ಪು, ಪೂರ್ವ, ಒಂದು, ನೂರು, ಅವನು, ಅದು ಇತ್ಯಾದಿ
೨) ಸಾಧಿತ ನಾಮಪ್ರಕೃತಿ : ಭಾವವಾಚಕ ಪದಗಳು, ಕೃದಂತಗಳು, ತದ್ಧಿತಾಂತಗಳು
[ಈ ಮೇಲಿನ ಮಾಹಿತಿಗಳನ್ನು ನೋಡಿದಾಗ ಕೃದಂತ, ತದ್ಧಿತಾಂತಗಳು ನಾಮಪದವನ್ನು ಸೃಷ್ಟಿ ಮಾಡುವ ವ್ಯಾಕರಣದ ಕ್ರಿಯೆಗಳೆಂದು ಹೇಳಬಹುದು. ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಧಾತುಗಳಿಗೆ ಕೃತ್ ಪ್ರತ್ಯಯಗಳನ್ನು ಸೇರಿಸಿ ಕೃದಂತಗಳಾಗುತ್ತವೆ. ಹಾಗೆಯೇ ಸಹಜ ನಾಮ ಪ್ರಕೃತಿಗಳಿಗೆ ತದ್ಧಿತ ಪ್ರತ್ಯಯಗಳನ್ನು ಸೇರಿಸಿ ಪಡೆಯುವ ಪದಗಳೇ ತದ್ಧಿತಾಂತಗಳು.
ಆದ್ದರಿಂದ ಕೃದಂತ ತದ್ಧಿತಾಂತಗಳನ್ನು ಗುರುತಿಸುವಾಗ ಯಾವ ಪದದಲ್ಲಿ ಧಾತು ಅಥವಾ ಕ್ರಿಯೆ ಇದೆಯೋ ಅದು 'ಕೃದಂತ' ಎಂದೂ ಯಾವ ಪದದಲ್ಲಿ ನಾಮಪದ ಅಡಗಿದೆಯೋ ಅದು ತದ್ಧಿತಾಂತವೆಂದೂ ಗುರುತಿಸಬಹುದು.
*********
ತದ್ಧಿತಾಂತಗಳಲ್ಲಿ ಮೂರು ವಿಧಗಳಿವೆ :
೧) ತದ್ಧಿತಾಂತನಾಮ
೨) ತದ್ಧಿತಾಂತ ಭಾವನಾಮ
೩) ತದ್ಧಿತಾಂತ ಅವ್ಯಯ
೧] ತದ್ಧಿತಾಂತ ನಾಮಗಳು : ನಾಮಪದಗಳಿಗೆ ತದ್ಧಿತ ಪ್ರತ್ಯಯಗಳು ಸೇರಿ ಆಗುವ ಪದಗಳೇ ತದ್ಧಿತಾಂತನಾಮಗಳು.
ಉದಾ:- (ಪುಲ್ಲಿಂಗರೂಪದಲ್ಲಿ)
ಬಳೆಯನ್ನು + ಮಾರುವವನು = ಬಳೆಗಾರ
ಕೋಲನ್ನು + ಹಿಡಿಯುವವನು = ಕೋಲುಕಾರ
ಕನ್ನಡವನ್ನು + ಬಲ್ಲವನು = ಕನ್ನಡಿಗ
ಸಿರಿಯನ್ನು + ಉಳ್ಳವನು = ಸಿರಿವಂತ
ಪ್ರಮಾಣವನ್ನು + ಉಳ್ಳವನು = ಪ್ರಾಮಾಣಿಕ
(ಸ್ತ್ರೀಲಿಂಗರೂಪದಲ್ಲಿ)
ಬಳೆಯನ್ನು + ಮಾರುವವಳು = ಬಳೆಗಾರ‍್ತಿ
ಕೋಲನ್ನು + ಹಿಡಿಯುವವಳು = ಕೋಲುಕಾರ‍್ತಿ
ಕನ್ನಡವನ್ನು + ಬಲ್ಲವಳು = ಕನ್ನಡಿತಿ
ಸಿರಿಯನ್ನು + ಉಳ್ಳವಳು = ಸಿರಿವಂತೆ
ಹೀಗೆ_
ಇತಿ, ಇತ್ತಿ, ಗಿತ್ತಿ, ತಿ, ಎ ಇತ್ಯಾದಿ ಸ್ತ್ರೀಲಿಂಗ ರೂಪದ ತದ್ಧಿತ ಪ್ರತ್ಯಯಗಳು ಸೇರಿ ಸ್ತ್ರೀಲಿಂಗದ ತದ್ಧಿತಾಂತಗಳಾಗುತ್ತವೆ.
(ಇತರೆ ಉದಾಹರಣೆಗಳು : ಕುಂಬಾರ, ಗಾಣಿಗ, ಚಾಲಕ, ಲೆಕ್ಕಿಗ, ಗಾಣಗಿತ್ತಿ, ಹಾವಾಡಿಗ .... ಇತ್ಯಾದಿ )
೨] ತದ್ಧಿತಾಂತ ಭಾವನಾಮಗಳು : ನಾಮಪದಗಳ ಮುಂದೆ ಭಾವಾರ್ಥದಲ್ಲಿ - ತನ,- ಇಕೆ, -ಪು, - ಮೆ ಇತ್ಯಾದಿ ತದ್ಧಿತ ಪ್ರತ್ಯಯಗಳು ಸೇರಿ ತದ್ಧಿತಾಂತ ಭಾವನಾಮಗಳೆನಿಸುವುವು.
ಉದಾ:- ಜಾಣನ (ಭಾವ) ತನ - ಜಾಣತನ, [ಜಾಣನ (ಭಾವ) ಮೆ - ಜಾಣ್ಮೆ]
ಚೆಲುವಿನ (ಭಾವ) ಇಕೆ - ಚೆಲುವಿಕೆ
ಕರಿದರ (ಭಾವ) ಪು - ಕಪ್ಪು
ಪಿರಿದರ (ಭಾವ) ಮೆ - ಪೆರ್ಮೆ
ಒಳ್ಳೆಯದರ (ಭಾವ) ಇತು - ಒಳಿತು
(ಇತರೆ ಉದಾಹರಣೆಗಳು : ಒಲುಮೆ, ಬಲ್ಮೆ, ಹಿರಿಮೆ, ಕೆಡುಕು, ಕೆಂಪು, ಬಿಳಿಪು, ಅರಿಮೆ, ತಿಳಿವಳಿಕೆ, ಬಡತನ, ಸಿರಿತನ, ಸಿರಿವಂತಿಕೆ... ಇತ್ಯಾದಿ)
೩] ತದ್ಧಿತಾಂತಾವ್ಯಯ :
ನಾಮಪದಗಳ ಮುಂದೆ ಅಂತೆ, ವೊಲ್, ವೋಲು, ತನಕ, ವರೆಗೆ, ಇಂತ, ಆಗಿ, ಓಸುಗ ಮುಂತಾದ ಪ್ರತ್ಯಯಗಳು ಸೇರಿ ತದ್ಧಿತಾಂತಾವ್ಯಯಗಳಾಗುತ್ತವೆ. ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದಿಲ್ಲ.
ಉದಾಹರಣೆಗೆ:
ಅಂತೆ : ಚಂದ್ರನಂತೆ, ಅವನಂತೆ
ವೊಲ್ : ಚಂದ್ರನವೊಲ್, ಅವನವೊಲ್
ವೊಲು : ನನ್ನವೊಲು, ಅವಳವೊಲು
ವೋಲು : ಮನೆಯವೋಲು, ಇದರವೋಲು
ವೋಲ್ : ಕರಡಿಯವೋಲ್, ನದಿಯವೋಲ್
ತನಕ : ಮನೆಯತನಕ, ಹಿಮಾಲಯದತನಕ
ವರೆಗೆ : ಶಾಲೆಯವರೆಗೆ, ಪಟ್ಟಣದವರೆಗೆ
ಮಟ್ಟಿಗೆ : ಇವಳಮಟ್ಟಿಗೆ, ಸುಂದರನಮಟ್ಟಿಗೆ
ಓಸ್ಕರ : ನನಗೋಸ್ಕರ, ಬೆಕ್ಕಿಗೋಸ್ಕರ
ಸಲುವಾಗಿ : ಅರ್ಜುನನ ಸಲುವಾಗಿ, ಕಟ್ಟಡದ ಸಲುವಾಗಿ
ಇಂತ : ರಾಧೆಗಿಂತ, ಅದಕ್ಕಿಂತ
ಆಗಿ : ನಿನಗಾಗಿ, ಇದಕ್ಕಾಗಿ
ಓಸುಗ : ಮದುವೆಗೋಸುಗ, ಕಾಗೆಗೋಸುಗ
*************
ಸರ್ ಭಾಷಾ ಚಟುವಟಿಕೆಯಲ್ಲಿನ ಸಂಧಿಗಳ ಬಗ್ಗೆ?
ಪ್ರತ್ಯುತ್ತರಅಳಿಸಿ