“ಮಡಿದನೈಂದ್ರಾಸ್ತ್ರದಿಂ ಮಂಡೋದರಿಯ ಮಗಂ!”
ಚಕಿತ ಚಾರಣರುಲಿಯ ಕೋಗಿಲೆಗಳಲೆದುವಯ್
ಹೃದಯ ಮಧು ಮಧುರ ಮಂದಸ್ಮೇರ ಪುಷ್ಪಮಯ
ದಿವಿಜ ಕರ್ಣೋದ್ಯಾನ ತರುಗಳಲಿ. ಕೋಸಲದಿ,
ಸರಯೂ ನದೀ ತಟ ಕುಟೀರದ ತಪಸ್ವಿನಿಗೆ
ದೇವಿ ಊರ್ಮಿಳೇಗೇನೊ ಹೃದಯಭಾರಂ ಜಗುಳಿಒ
ಹಗುರವಾದುದು ಜೀವತಾವರೆಯ ಹೂ. ಕುಲಗುರು
ವಸಿಷ್ಠನ ಮುಖಮ್ಲಾನದೀನತೆ ಮಾಣ್ದುದಂ ಕಂಡು
ನಂದಿಗ್ರಾಮ ಪರ್ಣಶಾಲಾ ತಪಶ್ಚರ್ಯೆಯಾ
ಭರತಂ ವಿಚಾರಿಸಲ್, ನಸುನಗೆಯ ಸುಖಮುಖದಿ
೧೦
ಋಷಿ ನುಡಿದನೊಂದತಿ ಮಹಾ ಕ್ಲೇಶದಿಂದಿಂದು
ರವಿಕುಲಂ ಪಾರಾದುದೆಂದು. ಲಂಕಾಪುರದ
ಹೊರವಳಯದಲಿ ಶಿಬಿರವಿಕ್ಕಿರ್ದ ವಾನರರ
ಕಂಠಕೋಟಿಗೊಳೊಂದೆ ಕೊರಲಿಂದುಲಿದುವಯ್
ಮಹೇಂದ್ರಜಿತುವಂ ಜಯಿಸಿದಾತನ ಜಯಸ್ತುತಿಯ
ಪ್ರೋದ್ದಾಮ ಗೀತಮಂ, ಮೈಂದಪ್ರಣೀತಮಂ,
ದಿವ್ಯಮಂತ್ರಪ್ರಗಾಥಮಂ, ತಳತ್ತಳತಳಿಸಿ
ಮೂಡಿದನು, ಚಂದ್ರ ಕುಂಕುಮ ಕನಕ ತೀರ್ಥದಲಿ
ಮಿಂದನೋಲಿಂದ್ರನ ದಿಗಂತದಿಂ, ಕಮನೀಯ
ಫಾಲ್ಗುಣ ಪ್ರಾಭಾತ ಸೂರ್ಯಂ, ಜಗನ್ಮನಕೆ
ಸಿಂಚಿಸುತ ಸಂತೋಷಮಂ !
ಅದೆತ್ತಲೋಡಿದುದೊ ೨೦
ಕತ್ತಲರಸಿಂ! ದಶಾನನ ಚಿತ್ತಗುಹೆಯನೇಂ
ಕೆತ್ತಿಹುದೊ? ರಾಜಗೃಹಮಂ ಮೇಣ್‌ಕುಟುಂಬಮಂ
ಮುತ್ತಿಹುದೊ? ರಕ್ಕಸರೆರ್ದೆಯ ಸಿರಿಯ ಬೊಕ್ಕಸಕೆ
ಪೊಕ್ಕುದೊ ಅಲಕ್ಷ್ಮಿಯೋಲ್? ತನ್ನೊರ್ವನೆಯ ಮಗನ
ದುರವಸಾನದ ಸಿಡಿಲ ಬಿರುಬಿಂಗಾನಲಾರದೆ
ಜಜ್ಜರಿತ ಜೀವಿಯಾದಾ ಮಯನ ನಂದನೆಯ
ಮೋಹದೊಡಲಂ ಬಾಚಿ ತಬ್ಬಿ ತನ್ನೆದೆಗೊತ್ತಿ
ಸಂತೈಸುತಿರ್ದ ಲಂಕೇಶ್ವರನ ಕೆಂಗಣ್ಗಳಿಂ
ತೋರ ಬಿಂದುಗಳುದುರುತಿರ್ದುವು, ಕೃಶಾನು ತಾಂ ೩೦
ದಹಿಸುವ ನವೇಂಧನಂ ತುದಿಗೆ ತನ್ನಂತ್ಯದಿಂ
ಹೃದಯದಲಲಿ ಹುದುಗಿರ್ದ ಕುದಿವ ಕಟುವಾರಿಯಂ
ಪ್ರಕಟಂ ಸ್ರವಿಸುವಂತೆ!
“ರಾಜ್ಞಿ, ತಡೆ ಶೋಕಮಂ.
ನನ್ನನೀಕ್ಷಿಸು, ಮನವ ಕಲ್ಮಾಡು. ನನಗಾಗಿ
ಮರೆ, ಮಗನ ಹಂಬಲಂ. ಈ ಅಳಲ್ಗಿಚ್ಚಿಂದೆ
ಸುಡದಿರೆನ್ನೆರ್ದೆಯ ಕೆಚ್ಚಿನ ಮರದ ಬೇರ್ಗಳಂ.
ಐರಾವತವನೇರ್ದವನ ಸೋಲಿಸಿದ ಮಗಂ,
ರಾಮವಾನರ ಸೇನೆಯಂ ತನ್ನ ಮಾಯೆಯಿಂ
ಕಂಗೆಡಿಸಿ ಕೊಂದಾ ಮಗಂ, ರಾಕ್ಷಸರ ಕುಲದ
ಗೌರವಕೆ ಕಲಶನಾಗಿರ‍್ದಾ ಮಗಂ, ನನ್ನ
ಬಲಮೇರುಗಿರಿ ಬಲಕೆ ಮೇರುದಂಡದೊಲಿರ್ದ ೪೦
ಗಂಡುಗಲಿ ಮೇಘನಾದಂ ದಿಂಡುಗೆಡೆದೊಡೇಂ
ಪಗೆಯ ಕೈತವಕೆ ಸಿಲ್ಕಿ? ಜಾನಿಸುತ್ತಿರ್ದನಂ
ಕೊಂದು ಕಲಿಯಪ್ಪನೇಂ ಪೇಡಿ ರಾಮಾನುಜಂ?
ಕೇಳ್‌ಪೂಣ್ಕೆಯಂ, ರಾಣಿ: ಇಂದ್ರಜಿತುವಂ ಕೊಂದ
ಕಿತವನ ಕಳೇಬರಂ ಕೊಳೆವುದೆಮ್ಮೀ ನೆಲದ
ಹುಳುಗಳುಣಿಸಾಗಿ, ಮೇಣೆನ್ನೊಡಲ್‌ತವಿವುದಾ
ಮಾಳ್ಕೆಯಿಂ! ನಿನ್ನ ಕಂಬನಿಗೆರಡುಮಡಿ
ಕಣ್ವೊನಲ್
ಪರಿವಂತುಟೆಸೆಗುವೆನ್, ತುಂಡರಿಪೆನೀ ನಮ್ಮ
ಸಂಕಟದ ಕಾರಣವನಾ ಹೃದಯಶೂನ್ಯೆಯಂ, ೫೦
ಸಂಕಟದ ಕಾರಣವನಾ ಹೃದಯಶೂನ್ಯೆಯಂ,
ನನ್ನ ಜೀವನ ಶೂಲರೂಪಿಣಿಯನಾ ಸ್ಥಿರಾ
ಕನ್ಯೆಯಂ!…….”
ಸುಯ್ಯೊತ್ತಿ ಸೊಲ್ಲುಡುಗಿದುದು, ಮುಂದೆ,
ಕೊರಳ ಸೆರೆ ಬಿಗಿದು, ಕಣ್‌ಮೊಗಂಗಳನೊರಸಿದನ್
ಸೆರಗಿನಂಚಿಂದೆ, ಕಲ್ಲಾದನೊಲ್‌ಕುಳ್ತನಾ
ಲಂಕೇಶ್ವರಂ, ದಿಟ್ಟಿ ನಟ್ಟು ಹೃದಯೇಶ್ವರಿಯ
ಮಂಡೋದರಿಯ ವದನಮಂಡಲದಿ:
“ಏನಿದೇನ್?
ಆವ ಭಯಕೀ ಮುಖವಿಕಾರಂ ನಿನಗೆ ಪೇಳ್?
ಬೆದರದಿರ್, ಮಹಿಷಿ, ಏಕೆನಗೆ ಕೈಮುಗಿಯುತಿಹೆ?
ನೋಡಲಾರೆನ್‌ನಿನ್ನ ವದನವೈರೂಪ್ಯಮಂ!
ತಪ್ಪಾಯ್ತು. ಕೊಲ್ಲೆನವಳಂ; ಕ್ಷಮಿಸು!”
ಇಂತಾರ್ದ
೬೦
ಪತಿಗತಿ ಕೃತಜ್ಞತೆಯನರ್ಪಿಸುವ ತೆರದಿಂದೆ
ಮಯನ ಮಗಳವನ ಕಾಲ್ವಿಡಿದದರ ಧೂಳಿಯಂ
ತಳಿದುಕೊಂಡಳೊ ತನ್ನ ಮುಡಿಗೆ೧ ಅನಿತರೊಳೊರ್ವ
ದಾಸಿಯೈತಂದಳೆಂದಳು ಗದ್ಗದಿಸುತಿಂತು;
“ಧಾನ್ಯಮಾಲಿನಿ ದೇವಿಗಸ್ತಮಿಸುತಿರ್ಪುದಸು!
ಅತಿಕಾಯನೊಡಲುಳಿದುದಂ ಕೇಳಿದುದೆ ತಡಂ.
ಒಡೆಯ, ಮೂರ್ಛೆಗೆ ಸಂದಳಿನ್ನುಮುಪಚರಿಸಿಹರ್
ದಾದಿಯರ್!” ಏರ ಮೇಲೇರ‍್ಗೊಂಡ ಸಿಂಗದೊಲ್
ಬಾರಿಬಾರಿಗೆ ಸುಯ್ಯುತಸುರೇಂದ್ರನೊಯ್ಯನೆಯೆ
ಮಂಡೋದರಿಯ ಮೆಯ್ಯನಿಳುಹಿದನು ಸಿತಹಂಸ ೭೦
ತೂಲಿಕೆಯ ಮೃದುತಲ್ಪಕೆ. ಆರೈಕೆಗಾಕೆಯಂ
ದಾದಿಯರಿಗೊಪ್ಪಿಸಿ ದಶಾನನಂ, ಮ್ಲಾನಮುಖಿ,
ನಡೆದನೈ ಧಾನ್ಯಮಾಲಿನಿ ದೇವಿಯರಮನೆಗೆ.
ಜಳಯಂತ್ರ ವಾರಿ ಲೀಲಾ ವಿನೋದಮಯಮಂ,
ಪಕ್ಷಿಕೂಜನ ವಿವಿಧ ಕಲಕಲ ಮಧುರಮಂ, ಮೇಣ್
ಗಂಧಮಯ ಕುಸುಮಕುಲ ರಮಣೀಯಮಂ ದಾಂಟಿ
ಪೂದೋಂಟಮಂ, ಪೊಕ್ಕನಸುರ ಚಕ್ರೇಶ್ವರಂ
ನೀರವತೆಯಿಂ ಶಾಂತಿಸಂಭ್ರಾಂತಿಕರಮಾಗಿ
ಪೊಂಬಿಸಿಲೊಳೆಸೆದಿರ್ದಸುರ ಹರ‍್ಮ್ಯಮಂ. ಕಂಡು
ಅಸುರೇಂದ್ರನೈತರವನರುಗಾದರೊಯ್ಯನೆಯೆ ೮೦
ತಲೆಮುಸುಗ ದಾದಿಯರ್. ಧಾನ್ಯಮಾಲಿನಿ ಮಲಗಿ
ನಿದ್ರಿಪೋಲಿರ್ದ ಸಿರಿಮಂಚದೆಡೆ ನಿಂದನ್:
“ಬಾಳ್!
ಕಳ್ಳನೊರೆದೊಂದು ಸುಳ್ಳಿನ ಸಂತೆ! ಬರಿ
ಬೊಂತೆ!
ಕಡೆಗೆ, ಬೆಂಕಿಯ ಹೊರೆದು, ಬೂದಿರಾಸಿಯನುಳಿವ
ಅರ್ಥವಿಲ್ಲದ ಬಣಗು ಕಂಥೆ! ಇದಕೇಕಿನಿತು
ಚಿಂತೆ?” ತನ್ನೊಳಗೆ ತಾನಿಂತು ಗೊಣಗಿಕೊಳ್ಳುತೆ
ತಲೆಯ ಮೇಲ್‌ಚಿಂತಾಚಲವನಾಂತನೋಲಂತೆ
ಕುಸಿದನಾ ಧಾನ್ಯಮಾಲಿನಿಯೆಡೆಯೆ, ಪೀಠದಲಿ.
ತುಸುವೊಳ್ತು ಕೆಮ್ಮಿನಿರ್ದಿಂ ಬಳಿಂ,
ಮೆಲ್ಲನೆಯೆ,
ಕಲರಳತವ ಸೋಂಕಿಸಿದನತಿಕಾಯನಂಬಿಕೆಯ
ಸುಡು ಹಣೆಯ ಕುರುಳೋಳಿಗಳನೆಳವಿ. ಬೆಚ್ಚಿದಳ್; ೯೦
ಸುಯ್ದಳ್; ಕಣ್ದೆರೆದಳ್; ಆರನುಂ ಗುರುತಿಸದ
ನೋಟದಿಂ ನೋಡಿದಳ್; ತನ್ನೊಳಗೆ ತಾನಿಂತು
ಇನ್ನಾರೊ ಅಶರೀರಿಯೊಡನೆ ಮಾತಾಡಿದಳ್,
ದನುಜೇಂದ್ರನನಿಮೇಷನಾಗಿ ಕೇಳ್ವಂತೆವೋಲ್:
“ಮುನಿಯದಿರ್, ಸ್ವಾಮಿ, ಮೆಯ್‌ಸೋಲ್ತುದು ದಿಟಂ; ಮನಂ
ಸುಡುತಿರ್ದುದದನೇಗಳುಂ. ಮೆಯ್ಯನಲ್ಲದೇಂ
ಮನವನಿತ್ತೆನೆ ರಾಕ್ಷಸಂಗೆ? ಕೈಬಿಡದಿರೀ
ದಾಸಿಯಂ. ಮನವನಲ್ಲದೆ ತನುವ ನೋಡುವನೆ
ಜಗದೀಶ್ವರಂ? ನನಗೆ ನೀನೆ ಸರ್ವೇಶ್ವರಂ.
ಸೀತೆಯಂ, ಪೂಜ್ಯೆಯಂ, ಆ ಲೋಕಮಾತೆಯಂ ೧೦೦
ಪಶುರಾಕ್ಷಸಂ ಮುಟ್ಟಿ ಪೊತ್ತುತಂದಾ ಕತದಿನ್
ಅಪವಿತ್ರಳಾದಳೇನಾ ಪತಿವ್ರತೆ ? ಸ್ವಾಮಿ,
ನನ್ನ ಮುಡಿಯಂ ನೋಡು. ನಿಚ್ಚಮುಂ ತ್ರಿಜಟೆಯಿಂ
ನಾಂ ಪಡೆದು ಮುಡಿದ ರಘುರಾಮನ ಮಡದಿಯಡಿಯ
ಪಾಪನಾಶಕ ಧೂಳಿ! ಏನೊ ದುಃಸ್ವಪ್ನದೊಳ್
ಪ್ರಾರಬ್ಧ ಕರ್ಮಪಾಕದಿಂದಗಲಿದೆವು
ನೀನುಮಾನ್, ಆ ಸ್ವಪ್ನಮೊಡೆದುದಿನ್! ಅದಕಾಗಿ
ಆ ದೇವಿ ರಾಮಸತಿಗಿದೊ ಶತ ನಮಸ್ಕಾರಗಳ್!”
ಮತ್ತೆ ಕಣ್ಮುಚ್ಚಿದಳ್‌ಧಾನ್ಯಮಾಲಿನಿ.
ಮುಖಂ ೧೧೦
ಸುರ್ಕಳಿದು, ನಿಸ್ತರಂಗಿತ ಸರೋವರದಂತೆ,
ಶಾಂತವಾದುದು. ತನ್ನ ಕಾಮಾತಿಶಯದಿಂದೆ
ಶವದ ಸಹವಾಸದೊಳ್‌ಭೋಗಿಯಾಗಿರ್ದವಂ
ಬೋಧೆ ತಿಳದೇಳುತೆ ಜುಗುಪ್ಸೆಯಿಂದತಿ ನಾಣ್ಚಿ
ಯಾತನಾ ಪಂಕದೊಳಸಹ್ಯದೊಳುರುಳ್ವವೋಲ್,
ಪಿಂತೆಂದುಮಾವ ಕಾರಣಕನುಭವಿಸದೊಂದು
ಮರ್ಮಘಾತದ ವೇಧೆಯಿಂ ನರಳ್ದನಾಳದಿಂ
ಮಂಡೋದರೀ ಪ್ರಿಯಂ, ಧಾನ್ಯಮಾಲಿನಿಯಾತ್ಮಮಂ
ಕ್ಷಮೆ ಬೇಡುವಂದದಿಂ ಮುಡಿಮಣಿದನವಳಡಿಗೆ
ದೇವದಾನವ ಭಯಂಕರನಾತ್ಮ ಸಂತಾಪ ೧೨೦
ದೀನ ಮನನಾಗಿ; ಪುಲಕಿಸಿತು ಪರಶಿವನ ಮೆಯ್;
ಮುಗುಳುನಗೆ ಮಲರಿದತ್ತಾದಿಶಕ್ತಿಯ ಮೊಗಕೆ;
ಮಾಯಾಂಗನೆಯ ಕಯ್ಯ ಮೋಹಪಾಶಂ ನಡುಗೆ,
ಕರುಬಿದಳು ಕಂಡು ಮುಕ್ತ್ಯಂಗನೆಯ ಹಸಿತ ಸಿತ
ವದನಾಬ್ಚಮಂ೧
ಬಂದಳನ್ನೆಗಮೊರ್ವಳನಲೆ
ಕಳುಹಿರ್ದವಳ್, ತನ್ನಿದಿರ್ ಕೈಮುಗಿದು ನಿಂದಳಂ,
ನಡುಗಿರ್ದಳಂ, ನೋಡಿ ದುರ್ವಾರ್ತೆಯಾಶಂಕಿ;
“ಮತ್ತಿದೇನಂ ತಂದೆ ಪೇಳ್‌ಅಮಂಗಳಮಂ,
ಅಕಲ್ಯಾಣಮುಖಿ? ಅಶುಭಮಲ್ಲದೆನಗಿಲ್ಲವೇನ್
ಇನ್ನನ್ಯ ಕರ್ಣಾಮೃತಂ? ನಡುಗುತಿಹೆ ಏಕೆ? ೧೩೦
ನಿನಗೆ ನಾಲಗೆಯುಡುಗಿದುದೆ ? ಕೆಮ್ಮನಿಹುದೇಕೆ ?
ನುಡಿ ಬೇಗದಿಂದಲ್ಲದಿರೆ ತೊಲಗು! ಕಣ್ಣಿದಿರ್
ನಿಂದು ಕಾಡದಿರೆನ್ನ ಕದಡು ಬಗೆಯಂ!” ಗುಡುಗಿ
ನುಡಿದ ಕಾರ್ಮುಗಿಲೊಡಲ ಕರ್ಬುರಾದ್ಭುತಗಿಂತು
ಗದ್ಗದಿಸಿದಳ್‌ದಾಸಿ: “ನನ್ನನನಲಾ ಲಲನೆ
ಬಳಿಯಟ್ಟಿದಳ್, ಪ್ರಭೂ. ತಾರಾಕ್ಷಿದೇವಿಯರ್
ಮೇಘನಾದ ಸ್ವಾಮಿಯೊಡನಗ್ನಿಯಂ ಪುಗಲ್
ನಿಚ್ಚಯ್ಸಿಹರ್. ತಡೆದದಂ ತಮ್ಮ ಬರ್ಪುದನೆ
ಪಾರ್ದಿದಿರ್ ನೋಡುತ್ತುಮಿರ್ದೆನ್ನನಟ್ಟಿದರ್
ನಿಮ್ಮಿರ್ದ್ದೆಡೆಗದಂ ನಿವೇದಿಸಲ್‌ತಮ್ಮಡಿಗೆ!” ೧೪೦
ಕೇಳ್ದುದೆ ತಡಂ ತೆಕ್ಕನೆದ್ದನು ದಾಶಾನನಂ.
ಸೊಸೆಯಳಲಿದರ್ ತನ್ನಳಲ್‌ಬರಿ ನೆಳಲ್‌ದಿಟಂ
ಎಂಬ ಧೀರೋದಾತ್ತ ಭಾವೋಜ್ವಲಾನನಂ:
“ನಡೆ, ತೆರಳ್; ಪೇಳನಲೆಗೀಗಳೆಯ ಬಂದೆನಾಂ.
ತಳುವದೆಯ ನಡೆ, ಓಡು!” ಆಳನಟ್ಟಿದನೊಡನೆ
ತೊಳೆವವೋಲಳಲಂ ಮೊಗಂದೊಳೆದನುಟ್ಟುದಂ
ತೊಟ್ಟುದಂ ನೇವರಿಸಿದನ್. ದುಃಖಛಾಯೆಯುಂ
ಹೊರಸುಳಿಯದಂದದೊರ್ ಧೀರವೈಖರಿಯಾಂತೆ
ನಡೆದನಾ ದೈತ್ಯೇಶ್ವರಂ, ದಿವಂಗತ ಸುತನ
ಸತಿಯ ಶೋಕಾಗ್ನಿಯಂ ತವಿಪ ಪೆರ್ಮಳೆಗಳಂ ೧೫೦
ಕರೆಯುವ ಮನೋನಿಶ್ಚಯದ ತೋಯದಂಗಳಂ
ಪೊತ್ತುಯ್ವ ಕಾರ್ಗಾಳಿಯೋಲ್!
ದಿಗಿಲ್ಗೊಂಡೆರ್ದೆಗೆ
ಧೃತಿ ತಾಂ ಪ್ರವೇಶಿಸಿದ ಮಾಳ್ಕೆಯಿಂ ರಾವಣಂ
ಪೊಕ್ಕನ್‌ಪುರಂದರಾರಿಯ ಮೇಘಚುಂಬಿತ
ಮಹಾ ವೇಶ್ಮಮಂ. ಪಿಂತೆ ತಾಂ ಬರಲಿದಿರ್ಗೊಂಬ
ಸುತನ ಸಾನ್ನಿಧ್ಯಶೂನ್ಯತೆಗಸುರ ಸಂಕಟಂ
ಸುಯ್ದಿರಲದಂ ಕಷ್ಟದಿಂ ಸುಯಮಿಸಿಕೊಳುತೆ;
ದ್ವಾರದ್ವಾರಂಗಳೆಡೆ ತನ್ನ ಬರ್ಪುದ ಕಂಡು,
ಕುಗ್ಗುತೆ, ಮೊಗಂ ತಗ್ಗಿ, ಗೆಂಟರ್ಮರೆಗೆ ಸರಿದು
ಕೈಮುಗಿಯುತಿರ್ದ ಕಿಂಕರವರ್ಗಮಂ ದಾಂಠಿ ೧೬೦
ಬಂದನನಲಾ ಕನ್ಯೆ ತನ್ನಪ್ಪುಗೆಯೊಳಾಂತು
ಮಗನ ಮನದನ್ನೆಯಂ ತರುಣಿ ತಾರಾಕ್ಷಿಯಂ
ಸಂತೈಸುತಿರ್ದಂತವುರಕೆ. ಆ ಗೋಳನಾರ್
ಸಹಿಸಲಾಪರ್? ಮಡಿದ ಜವ್ವನಿಗ ಗಂಡನಂ
ನೆನೆದಳುವ ಜವ್ವನೆಯ ಗೋಳನಾಕರ್ಣಿಸುತೆ
ಮರವಟ್ಟನೊಲ್‌ನಿಂದನಿಂದ್ರಜಿತುವಿನ ತಂದೆ
ಹಂದದಲ್ಲಿಂದೆ: ರಾಮಾಸ್ತ್ರತತಿಯಿಂ ಮುಂದೆ
ಜಜ್ಜರಿತನಾದನೆಂಬುದು ಬರಿಯ ಕಥೆಯಲ್ತೆ?
ಪಿರಿಯಯ್ಯನೆಯ್ತಂದುದಂ ಕಂಡನೆಲೆ: “ಸಖೀ,
ಮಾವನದೊ! ಸುತನ ಸಾವಿನ ಸಿಡಿಲೊಬಡಿದುಸಿರ್ ೧೭೦
ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್‌ಗರಂ
ತನಗೆರಗಿದಂತೆ!” ಕೆಳದಿಯನಾಲಿಸರ್ಜಡೆಯ
ಬೈತಲೆಯ ಸಿರಿಯುಡೆಯ ಬೆಡಗಿನ ನಡೆಯ ತರಳೆ
ತಾರಾಕ್ಷಿ . ತತ್ತರಿಸುತೆದ್ದು, ರೋದಿಸುತೆಯ್ದಿ,
ಮುಡಿ ಬಾಗುತಡಿಗೆರಗಲುರುಳಿದಳು; ಹೊರಳಿದಳ್
ಗಂಡನಯ್ಯನ ಪಾದತಲದಲಿ, ದಶಾನನನ
ಗುಂಡಿಗೆಯ ಮೇಲೆ ಗರಗಸವೆಳೆವವೋಲ್. ಬಾಗಿ
ಬಾಲೆಯಂ ಮೇಲೆತ್ತವೋಗಿ, ಕುಸಿದನು ತಾನೆ
ನೆಲಕೆ, ಕೈಲಾಸಮಂ ನಗೆಹಲಲುಗಾಡಿಸಿದ
ಬಾಹು ಭೀಮಂ. ಮುಕ್ತ ಮುಕ್ತಾಫಲಾಶ್ರುಗಳ್
ಸ್ಖಲಿತಾಕ್ಷರಂಗಳಂ ಕೆಳೆಗೊಂಡುವೆನೆ
ಸೊಸೆಯ ೧೮೦
ಸಂತೈಸಿದನು ಮಾವನಿಂತೆಂದು: “ತಡೆ, ಮಗಳೆ,
ಕಡಲುಕ್ಕುವೀ ಕಣ್ಣೊಡಲ ಬಡಬನಂ: ಲಂಕೆ
ಕಂತುವುದು ಕಣ್ಣೀರೊಳಳ್ದು; ಸುಟ್ಟುರಿವನೀ
ಲಂಕಾಧಿಪಂ, ನಿನ್ನ ದುಃಖ ದಾರುಣ ದವದ
ದಳ್ಳುರಿಗೆ! ನಿನ್ನಿಂದೆ ಮುಂದೆ
ರಾಕ್ಷಸಕುಲಂ!
ನೀನೆಯಿನ್‌ಲಂಕಾಧಿದೇವಿ, ಲಂಕಾ ಲಕ್ಷ್ಮಿ;
ನೀಂ ಬರ್ದುಕಲುಳಿವುದೆಮ್ಮೀ ವಂಶಮಿಲ್ಲದಿರೆ,
ನೀನೆ ಕಾರಣ ಮಾಗೆ, ಕುಲಕೆ ಕೊನೆ! ತಾಳ್, ಮಗಳೆ;
ತಾಳಿ ಬಾಳ್; ಬಾಳಿ ಬಾಳಿಸು ನಮ್ಮ ಬಳಿಯಂ; ೧೯೦
ಮಹಾರಾಣಿ ಮೇಘನಾದಂಗೆ ನೀನವನಿಂದೆ
ವೀರ ಸತ್ತ್ವಪ್ರತಿಮೆಯೆನೆ ಪಡೆದೆಯೊರ್ವನಂ,
ಮನೆಯ ಪೆರ್ಮೆಯ ಕುಡಿಯನಣುಗನಂ ವಜ್ರಾರಿಯಂ.
ತಣಿವಹುದು ನಿನ್ನಿನಿಯನಾತ್ಮಕ್ಕೆ ನೀನವನ
ಮೊಳಕೆಯಂ ಪೆರ್ಮರತನಕೆ ಪೊರೆಯೆ. ಬಹಳಮಿನ್
ಪೇಳಿಲಿಂದೆನಗೆ ತೆರಪಿಲ್ಲ: ಕೇಳ್, ಮಗಳೆ, ಪಗೆ
ಕೋಂಟೆಯಂ ಮುತ್ತಿ ನಿಂದಿಹ ಪೊಳ್ತು.
ಪೋದಿರುಳ್
ವೀರನತಿಕಾಯನಿಂ ಗಾಯಗೊಂಡೊಳಸೋರ್ದು
ಕೆಟ್ಟೋಡಿತಾದೊಡಂ, ತಲ್ಲಣಿಸಿಹುದು ಲಂಕೆ,
ಬೆಂಕೆಯಾಟೋಪದಿಂ . ಇಂದೆನಗೆ ಕಟ್ಟುವೆನ್ ೨೦೦
ನಾನೆ ಸೇನಾಧಿಪನ ಪಟ್ಟಮನ್‌ದ!;; ತುಸುವೊಳ್ತು
ಮೌನಮಿರ್ದನ್, ಮತ್ತೆ: “ಬಾಳ್, ಮಗಳೆ, ಬಾಳ್! ಏಳು;
ಮೊಮ್ಮಗನದೆಲ್ಲಿ? ತೋರೆನಗೆ!”
ಎನುತೆದ್ದವಗೆ
ಅನಲೆ “ತಾಯ್‌ಕರೆದುಕೊಂಡಿಹಳೀಗಳೆಯೆ ತಹೆನ್.”
ಎಂದಗಂ ನಡೆದು, ಸರಮೆಯ ಕಯ್ಯೊಳಿರ್ದನಂ
ವಜ್ರಾರಿಯಂ ತಂದು ಲಂಕೇಶ್ವರನ ಕಯ್ಗೆ
ನೀಡಿದಳು, ರಾಕ್ಷಸ ಮುಖಂ ಮುಗ್ದ ಶಿಶುವಾಗೆ!
ಪೊಸ ಮುಗುಳ್‌ಪಸುಳೆಯಂ ಮೊಮ್ಮಗನನೆತ್ತಿ,
ಕಣ್
ತೊಯ್ವಿನಂ ಮುಂಡಾಡಿ, ಸೊಸೆಯ ಸನಿಹಕೆ ನಡೆದು,
“ಮಗಳೆ, ನೋಡಿಲ್ಲಿಹುದು ಬರ್ದುಕಿಗರ್ಥಂ, ಮತ್ತೆ ೨೧೦
ಬಾಳ್ಗೆ ಗುರಿ ನಿನಗೆ . ನಿನ್ನ ಸಾವಿನ
ಸುಖವನೀ
ಮೇಘನಾದನ ತೇಜದೇಳ್ಗೆಗೋಸುಗಮಾಗಿ
ಬೇಳ್. ನಿನ್ನ ದುಃಖಮಕಂ ಮರೆ ಈತನೆಳನಗೆಯ
ಸುಖಕೆ. ತೊರೆ ನಿನ್ನ ಸರ್ವಸ್ವಮಂ ಈ ನಿನ್ನ
ಮೇಣೆಮ್ಮ ಸರ್ವಸ್ವಕಾಗಿ, ಕೊಳ್ಳೀತನಂ,
ಪುರುಹೂತ ಜೇತ ಸಂಜಾತನಂ! ಏಳ್, ಮಗಳೆ,
ಏಳ್! ಬಾಳ್‌ಇದೆಕೊ ತೋಳ್‌ಚಾಚುತಾಹ್ವಾನಿಸಿದೆ
ನಿನ್ನಳ್ಕರೆಯ ಪಸುಳೇವೋಲ್. ಕೇಳ್,
ತೊದಲ್ವದರ
ಕರೆಯಿಂಚರಂ!” ಇಟ್ಟನಿಂದ್ರಜಿತುವಿನ ಸತಿಯ
ತೊಡೆಯ ತೊಟ್ಟಿಲೊಳವನ ಕಾಂತಿ ಕರುವಿಟ್ಟಂಥೆ ೨೨೦
ಕಂಗೊಳಿಸುತಿರ್ದ ಶಿಶುಗಾತ್ರಮಂ. ತೊಟ್ಟನೆಯ
ಪೊರಮಟ್ಟನಲ್ಲಿಂದೆ, ತರಿಸಂದು ತನ್ನ ತಾಂ
ಬೇರ್ ಪರಿಯೆ ಕಿಳ್ತುಕೊಳ್ವಂತೆ.
ಪುರಾಧ್ಯಕ್ಷನಂ
ಕೂಡಿ ನಗರದ ದಗ್ಧ ದುಃಸ್ಥಿತಿಗಳಂ ನ ಓಡಿ,
ಜನ ಭಯ ನಿವಾರಣೋಪಾಯಂಗಳಂ ಪೇಳ್ದು,
ಕೋಂಟೆವಾಗಿಲ್‌ವಾಗಿಲೆಡೆ ದುರ್ಗರಕ್ಷೆಗೆ
ಬಲಾಧ್ಯಕ್ಷನಿಗೆ ಸಮಯಸೂಚನೋಚಿತಗಳಂ
ಬೆಸಸಿ, ತನ್ನಯ ಮೂಲಬಲ ಸರ್ವಮಂ ರಣಕೆ
ಸಜ್ಜಿತಂ ಮಾಡಿ ಸನ್ನಾಹಗೆಯ್ವಾಜ್ಞೆಯಂ
ದಂಡನಾಯಕಗಿತ್ತು, ಕೋಲಾಹಲಂ ವೆರಸಿ ೨೩೦
ರಣವಾದ್ಯಗಳ್‌ಮೊಳಗುತಿರೆ ಪಿಂದಿರುಗಿದನ್
ದಶಗ್ರೀವನಾತ್ಮದುಃಖ ಕ್ರೋಧ ತಪ್ತಂ,
ಮರಳ್ವವೋಲ್‌ಪೋದ ಧೈರ್ಯಂ ದಯತ್ಯಪತ್ತನಕೆ.
ಕಳಕೆ ತೆರಳುವ ಮುನ್ನಮಿನಿತು ವಿಶ್ರಾಂತಿಯಂ
ಬಯಸಿ, ಮಂಚದೊಳೊರಗಿ, ಘೋರ ಸಮರಕೆ ತನ್ನ
ಧೃತಿಯ ಧನುವಿಗೆ ಮೌರ್ವಿಯನ್ನೇಧರಿಸಲ್ಕದಂ
ಚಿತ್ತಮಂ ಬಾಗಿಸುವ ದೈತ್ಯ ದುರ್ಧರ ಧೂರ್ತ
ಮರಣಮಯ ಕರ್ಮದೊಳ್‌ತೊಡಗಿರಲ್‌ರಾವಣಂ,
ಬಾಗಿಲೊಯ್ಯನೆ ತೆರೆದುದೊಳಗೆ ಬಂದಳು ತಂಗೆ
ಚಂದ್ರನಖಿ!
ಕಣ್ಣೆತ್ತಿ ನೋಡಿ “ಏನ್‌ಬಂದುದೌ, ೨೪೦
ತಂಗೆ?” ಎಂದಸ್ಥಿರಧ್ವನಿಯ ಪಿರಿಯಣ್ಣನಂ
ಬಳಿಸಾರ್ದು, ಕಾಲ್ವಿಡಿದು, ಪದಕೆ ಪಣೆಯೊತ್ತಿದಳ್;
ಗದ್ಗದಿಸುತಳ್ತಳಸುರ ಕೃಶಾಂಗಿ. ಪಿಂತೆಂದುಂ
ಕಾಣದಿರ್ದವಳ ದುಃಸ್ಥಿತಿಗೆ ಬೆಕ್ಕಸಗೊಂಡು
ರಕ್ಕಸಂ:
“ಏನಿದೀ ಈ ಮಲಿನ ವಸನಂ ನಿನಗೆ?
ಅದೇಕಿಂತು ಸೊರಗಿರುವೆ?”
“ಪಾಪಿ; ಪಶ್ಚಾತ್ತಾಪಿ;
ಬಂದೆನಾಂ ಬಯಸಿ ಪ್ರಾಯಶ್ಚಿತ್ತಮ್?”
“ಪಾಪಿ ನಾಣ್, ನನಗೆ ಪ್ರಾಯಶ್ಚಿತ್ತಮಿನ್ನಾರ್ಗೆ?”
ವ್ಯಂಗ್ಯಮೆನೆ ನಕ್ಕನಸುರಂ.
“ನಗುವೆ ಏಕಣ್ಣಯ್ಯ? ೨೫೦
ಮುನ್ನನ್ನಳಲ್ತು ನಾನಿನ್….ನನ್ನ ದೆಸೆಯಿಂದೆ
ಕಳ್ದುಯ್ದು ಹದಿಬದೆಯನೆಳೆತಂದೆ. ಲಂಕೆಯಂ
ನಾನೆ ಈ ದುರ್ಗತಿಗೆ ತಂದೆ; ಲೆಕ್ಕಕೆ ಮಿಗಿಲ್
ಬೀರಾಳ್ಗಳಂ ತಿಂದೆ; ಸೇನಾನಿಗಳನೆನಿತೊ
ಕೊಂದೆ; ಕುಂಭಕರ್ಣನ ಕೊಂದೆನತಿಕಾಯನಂ
ಮೇಣಿಂದ್ರಜಿತು ಮೇಘನಾದಾದಿ ಮಕ್ಕಳಂ
ಬೇಳ್ದೆನೆನ್ನಯ ದುರಭಿಮಾನದ ದವಾಗ್ನಿಯಂ
ಪೋಷಿಸಲ್. ಕಾಲ್ವಿಡಿದು ಬೇಡುವೆನ್‌ನಿನ್ನನ
ಈ
ರಣಮೇಧಮಂ ನಿಲಿಸು. ನನ್ನನಾ ಲಕ್ಷ್ಮಣಂ
‘ಶೂರ್ಪನಖಿ’ ಎಂದು ಕೋಪಕೆ ಬಯ್ದನಂದದಂ ೨೬೦
ನನ್ನಿಗೆಯ್ಯದಿರಿಂದು ನೀನ್.
ಬಂದೆನಿಲ್ಲಿಗಾನ್
ನಿನ್ನಡಿಯೊಳೊಂದು ಭಿಕ್ಷೆಯ ಬೇಡಲದನೆನಗೆ
ನೀಡವೇಳ್ಕುಂ!”
“ಭಿಕ್ಷೆ? ನಿನ್ನನ್ನಳಿಗೆ ಭಿಕ್ಷೆ?
ಇಂದಿನ ಈ ವೇಷದಿಂ ನೀಂ ಭಿಕ್ಷುಣಿಯೆ ದಿಟಂ!”
“ನಾನ್‌ಪೊತ್ತಿಸಿದ ಕಿಚ್ಚನಾನ್‌ನಂದಿಸಲ್ಕೆನಗೆ
ನೀಡು ನಿನ್ನನುಮತಿಯ ಭಿಕ್ಷೆಯಂ.”
“ಚಂದ್ರನಖಿ,
ನಿನ್ನ ಕೈ ಪೊತ್ತಿಸಿತ್ತಾದೊಡಂ, ನಿನ್ನಳವನಾ
ಕಾಳ್ಗಿಚ್ಚು ಮೀರಿರ್ಪುದಿಂದು. ನೀನಾರಿಸಲ್
ಪೋದಡದು ಕೇಳ್‌ನಿನ್ನೊಳಕೊಳ್ಳುವುದೆ ದಿಟಂ!”
“ನನಗದೇ ಪಥ್ಯಂ!”
“ಅದೇನ್ ನಿನ್ನ ಬಗೆ ? ಪೇಳ್.” ೨೭೦
“ಪೇಳಲೆನಗಾಸೆ; ಪೇಳಲ್ಕಂಜುತಿಹುದೆನ್ನ
ಜಿಹ್ವೆ.”
“ನೀನೊಡವುಟ್ಟಿದಳ್.”
“ಜನಕಕನ್ಯೆಯಂ
ದಾಶರಥಿಗೊಪ್ಪಿಸುವುದೆನ್ನಾ ಮನೋರಥಂ!”
“ಸತ್ವಧಮೆ ದಲ್, ತಂಗೆ! ಸತ್ಪಥಮೆ ಅದು ದಿಟಂ,
ಹೆಂಬೇಡಿಗಳಿಗೆ , ಮೇಣ್‌ಜೀವಗಳ್ಳರಿಗೆ!” ಆರ್ದು
ಕೂಗಿ ಕುಳಿತನು ದಶಾನನನವನ ಮಂಚಮಂ
ನೆಮ್ಮಿ!
ಅವನ ಸೋದರಿಯಲ್ತೆ ಆ ಚಂದ್ರನಖಿ?
ಅಪ್ರತಿಭಳಪ್ಪಳೇನ್‌ಅಸುರೇಂದ್ರನೊಳಹೊರಗು
ಮೇಲ್‌ಕೆಳಗುಗಳನರಿತವಳ್? ಸುಯ್ದು ಕುಳ್ತಿರ್ದ
ದೈತ್ಯೇಂದ್ರ ಸಮ್ಮುಖದಿ ತನ್ನುದ್ದಮನಿತುಮಂ
೨೮೦
ನೀಳ್ದು ನಿಂದಳು ನೀಳೊಡಲ ಲಂಕಾಲತಾಂಗಿ,
ಮಾರುತ್ತಗಂಗುಡಲ್‌ಮಾರಾಂತಳೋಲ್:
“ಅಂಜಿ
ನೆಗಳ್ವುದದು ಪೇಡಿತನವರಿತು ಮಾಳ್ವುದಕೇಕೆ
ಆ ಪೆಸರ್? ಪೇಡಿ ತಾನೆಂಬರೆಂಬುದಕಳ್ಕಿ
ನೆಗಳ್ವನುಮಪಥ್ಯಮಂ. ಪೇಡಿಯಿರ್ಮಡಿ ದಿಟಂ !
ನಿನ್ನಾತ್ಮಮೇನಾಡುತಿದೆ ಪೇಳ್; ಪೇಳೆನಗೆ
ನಿನ್ನಂತರಾತ್ಮಂ! ಏನದಾ ಅತ್ತಿಗೆಗೆ
ನೀನೊರೆದ ಕನಸಿನರ್ಥಂ? ಸೀತೆಯೊಳ್‌ನಿನಗೆ
ಇನ್ನುಮಿರ್ಪುದೆ ಅಂದಿನಾ ಕಾಮರುಚಿ? ಪೇಳ್
ಅಶೋಕವನವಾಸಿ ಈ ಸೀತೆ, ಆ ಪಂಚವಟಿ ೨೯೦
ವಾಸಿನಿ ಸುವಾಸಿನಿಯೊವೋಲ್, ನಿನಗೆ ಮೋಹಮಂ
ಕೆರಳಿಪಳೆ? ಈ ನಿರಶನವ್ರತೆಯುಮೀ ಮಲಿನ
ವಸನೆಯುಂ, ಈ ತಪಸ್ವಿನಿಯುಮೀ ನಿಶ್ಚಲ
ಪತಿವ್ರತಾ ಪೂಜ್ಯೆಯುಂ” ಕಡೆಕಡೆಯುತಕ್ಷರವ
ತಡೆ ತಡೆಯುತಾಡಿದಳ್“ನಿನಗೆ ಭೋಜ್ಯಳೆ,
ಪೇಳ್”
ತಪಸ್ಯೆಯಿಂ ವಾಣೀಪತಿಯನೊಲಿಸಿ ವರಂಗಳಂ
ಪಡೆದ ಕೃತಬುದ್ಧಿ ನೀನ್! ತೇಜಂ ಕಿಡುವುದೆಂದು
ಕ್ಷಾತ್ರಂ ಮಸುಳ್ವುದೆಂದಿಂತು ನೀನಂಜುವೊಡೆ
ಬೆಸಸು ಕಾರ್ಯವನೆನಗೆ, ಅನ್ಯರಿಗೆ…..”
“ನಿಲ್ ಸಾಲ್ಗುಮ ಈ
ನಿನ್ನುಪನ್ಯಾಸಂ, ಸಹೋದರೀ! ಜಾಣೆ ನೀನ್,
ಬಲ್ಲೆನಾನ್. ಇಲ್ಲದುದನಹುದೆಂದುಮಿರ್ಪುದಂ
ಇಲ್ಲಮೆಂದುಂ ಬಗೆಯೊಪ್ಪುವೊಲ್‌ತೋರ್ಪ ಜಾಣ್ಮೆ
ನಿನಗೆವೊಡಹುಟ್ಟು, ನಿನಗಿಂ ಮೊದಲ್‌ಪುಟ್ಟಿದೆನ್
ನಾನ್. ದಿಟಂ ನೀಂ ಪೇಳ್ದುದನಿತುಂ. ದಿಟಂ
ನನಗೆ
ಸತ್ತುದಾ ಸೀತೆಯೊಳ್‌ಕಾಮರುಚಿ, ನೀನಿತ್ತ
ಕಾರಣಂಗಳಿಗಲ್ತು; ಅವಕಿಂ ಮಿಗಿಲ್‌ಪಿರಿಯ
ಕಾರಣಂಗಳಿಗಾಗಿ! ದಿಟಿಮಿಂದಿನೀ ಸೀತೆ
ನನಗಂದಿನಾ ಸೀತೆಯಲ್ತು; ಆಕೆಗೆ ಮಿಗಿಲ್
ಪುಟ್ಟಿರ್ಪುದೀಕೆಯೊಳ್‌ನನಗೊಂದತೀವತರ
ಗಾಢಮೋಹಂ. ತೊರೆದೆನಾಕೆಯನ್; ಆದೊಡಂ ೩೧೦
ಎಂದೆಂದಿಗಂ ಬಿಡೆನ್‌ಈಕೆಯನ್! ಚಂದ್ರನಖಿ,
ಪೇಳ್ವೆನಾಲಿಸು ಪಿಂತೆ ನಡೆದುದಂ; ಕಂಡೆನಾ
ಮಾರೀಚನಂ. ಪ್ರೇರಿಸಿದೆನಾತನಂ, ಕನಕ
ಮೃಗರೂಪದಿಂ ವಂಚಿಸಲ್. ಬಲ್ಲೆ ನೀನದಂ
ಕಥನಮಂ. ಮಾವನಾಡಿದನಂದು ಹದಿಬದೆಯ
ಮಹಿಮೆಯಂ ಕುರಿತು . ರಾವಣಶಯ್ಯೆಗೊಲಿಯದಿಹ.
ನಾರಿಯಿಲ್ಲೆಂದಾಡಿದೆನ್, ಮೂಲೋಕದೊಳ್! ಮತ್ತೆ ,
(ನಿನ್ನೆ ನಾನಾಡಿದಂತಿರ್ಪುವಾ ಮಾತುಗಳ್)
ಪೂಣ್ದೆನವನಿಗೆ ‘ಇಲ್ಲ, ಮಾರೀಚ, ಎಲ್ಲಿಯೂ
ಇಲ್ಲ ಆ ನನ್ನ ತಾಯ್! ಪುಸಿಯ ಪೊಗಳಲ್,
ಅಯ್ಯೊ, ೩೨೦
ಪೇಸಿದಪುದೆನ್ನ ಬಾಯ್. ಸಲ್ಲದಯ್‌ಪುಸಿಗೆನ್ನ
ಪೂಜೆ; ಪಾವನೆಯೆನಗೆ ತೋರ್ದಂದು ಧನ್ಯನಾಂ;
ಧನ್ಯೆ ತಾಂ!’ ಚಂದ್ರನಖಿ, ಧನ್ಯನಪ್ಪಾ ಪೊಳ್ತು
ತೋರುತಿರ್ಪುದು ಸಾರೆ ಬರ್ಪಂತೆ. ಬರ್ದುಕಿರಲ್
ಮೇಣ್‌ಪುಣ್ಯಯೋಗಮಿರೆ ನಿನಗೆ ನೋಡಲ್‌ಬರ್ಕುಮಾ
ದಿವ್ಯದೃಶ್ಯಂ!….”
ನಿರ್ನಿಮೇಷನಾ ದೃಶ್ಯಮಂ
ಮನಶ್ಚಕ್ಷುವಿಂ ನೋಳ್ವವೋಲ್ ದಾನವೇಶ್ವರಂ
ದೂರಗತ ದೃಷ್ಟಿಯಾದನ್. ಮುಗುಳ್‌ನಗೆಯೊಂದು
ಬೆದರಿದಂದದಿ ಸುಳಿದುದಾನನ ನಿಕುಂಜದೊಳ್.
ಮತ್ತೆ ತೆಕ್ಕನೆ ಕುರಿತು ತಂಗೆಯಂ:
“ಅಃ! ನಿನಗೆ ೩೩೦
ಕಾಣದಾ ದೃಶ್ಯಮದೊ! ಏನ್‌ದಿವ್ಯಮಾ ದೃಶ್ಯಂ:
ಮೂಲೋಕಮಿನ್ನೆಗಂ ಮತ್ತಮಿನ್ನಾದೊಡಂ
ಕಂಡರಿಯದಾ ಕಾಣಲಾರದಾ ಕೊಳುಗುಳದಿ
ರಘುಕುಲ ಲಲಾಮನಂ, ಜಗದೇಕವೀರನಂ.
ಗೆಲ್ದು, ಸೆರೆಯಾಳ್‌ಮಾಡಿ ತಂದು, ಲಂಕೇಶ್ವರನ
ಸರ್ವ ಗರ್ವವನಿರದೆ ಸೋಲಿಸಿದ ಮೈಥಿಲಿಗೆ
ಕಪ್ಪಮೆನೆ ಕಾಣಿಕೆಯನೊಪ್ಪಿಸುವ ಭವ್ಯತಾ
ದಿವ್ಯದೃಶ್ಯಂ!”
ಕೇಳ್ದದಂ ನಿಮಿರ್ದುದು ನವಿರ್
ಮೆಯ್ಗೆ; ತತ್ತರಿಸಿದಳ್‌ಚಂದ್ರನಖಿ; ಕಣ್ಣೀರ್
ತುಳುಂಕುತಿರೆ, ಮತ್ತೆ ಮೊಳಕಾಲೂರಿ ನಮಿಸಿದಳ್;
ನುಡಿದಳ್:
೩೪೦
“ದಿಟಂ, ನೀನ್‌ಮಹಾಕವಿ ದಿಟಂ! ಜಗದ್
ರಂಗದೊಳ್, ಬರಿ ಕಲ್ಪನೆಯೊಳಲ್ತು, ಕೃತಿಗಳಂ
ಕೊರೆಯುವ ಮಹಚ್ಛಿಲ್ಪಿ ನೀಂ ದಿಟಂ!”
ತಾಳ್! ತಾಳ್!
ಕವಿಪ್ರತಿಭೆಯಲ್ತಾ ಋತಪ್ರತಿಭೆ. ದಶಮುಖಂ,
ಶತಮುಖಂ, ಬಹುಮುಖಮನಂತಮುಖಮದಕೆ! ಕೇಳ್,
ಜಾನಕಿಗೆ ಸೋಲನೊಪ್ಪಿದೆನಿಲ್ಲಮಿನ್ನುಮಾಂ,
ತಂಗೆ. ಆ ಸೋಲೊಳಿಹುದೆನ್ನ ಗೆಲ್. ಇಂದೆನ್ನ
ಮೂಲಬಲಗಳನ್ನೆಲ್ಲ ಕೊನೆರಣಕೆ ಕರೆಯುವೆನ್.
ಪಿಂತೆಂದುಮಾ ವಾನರಬಲಂ ಕಾಣದೊಂದತಿ
ಪರಾಕ್ರಮವನವರಿಗಿಂದಾಂ ತೋರುವೆನ್.
ನನಗೆ ೩೫೦
ಬ್ರಹ್ಮನಿಂ ಬಂದುದೊಂದಿರ್ಪುದು ವರ ವರಿಷ್ಠಂ.
ಆ ವರಬಲದಿ ನನ್ನ ಮೂಲಬಲದೊಳ್‌ನಾನೆ
ಓರೊರ್ವನುಂ, ಸರ್ವರುಂ, ಮತ್ತೆ ಸರ್ವಮುಂ
ಆಗಿ, ದಶಮುಖನೆಂಬ ಬಿರುದು ಶತಶತಮಾಗೆ,
ಕಾದಾಡುವೆನ್….ಮತ್ತಮೀ ಸೀತೆಯಂ ಬೇಡಿ
ಪಡೆವೆನಿಷ್ಟಾರ್ಥಮಂ. ಅತಿಕಾಯನಿಂದ್ರಜಿತುಗಳ್
ಮಡಿದರೇನ್? ಮೆಯ್‌ಬಿಟ್ಟರಲ್ತೆ? ನೀನಳುಕದಿರ್,
ಅಳದಿರ್! ಅಂಜದಿರ್! ಸಿಡಿಲಾಳ್‌ಸಹೋದರನ್,
ಎಂದರಿ, ಸಹೋದರಿ!….ಏಳ್, ತಂಗೆ, ನನಗೇಕೊ
ಬಾಯಾರುತಿದೆ, ಪಾನಮಂ ತಾ….ಮೊಳಗುತಿದೆ ಕೇಳ್ ೩೬೦
ಭೇರೀರವಂ!…..”
ತೊಯ್ದ ಕಣ್ಣೊರಸಿಕೊಳ್ಳುತ್ತೆ
ಚಂದ್ರನಖಿ ತಂದುಕೊಟ್ಟಳು ಶೀತಲೋದಕದಿ
ಮುಳುಗಿಟ್ಟ ಸೋಮರಸಮಂ. ಈಂಟುತ್ತದಂ
ಮಂಡೋದರೀಪ್ರಿಯಂ:
“ನಿನ್ನತ್ತಿಗೆಯನಿನಿತು
ನೋಡಿಕೊಳ್, ನಡೆ, ತಂಗೆ. ಜಜ್ಜರಿತಳಾಗಿಹಳ್”
ನಿಡಿದು ಸುಯ್ದೆಂದನ್“ಒಬ್ಬನೆ ಮಗನ ಸಾವ್‌ಗೇಳ್ದು!”
ಒಂದಿನಿತನಂತರಂ “ನಮ್ಮ ಸಂವಾದಮಂ
ನೀನವಳ್ಗೊರೆಯದಿರ್,” ಎಮದಿನಿತನಂತರಂ
ಚಿಂತಿಸಾಳೋಚಿಸುತೆ ಮತ್ತೆ “ನೀನೊರೆದೊಡಂ
ಚಿಂತೆಯೇನ್? ಪೇಳದಿರೆನಲ್‌ಪೇಳದಿರ್ಪೆಯಾ
ನೀನ್! ನೀಮೆ ಗೆಲ್ವಿರ್ ತುದಿಗೆ!
ನಿಮ್ಮದೊಳಸಂಚು! ೩೭೦
ತನ್ನವರ್ ಗೆಲ್ಲುವೊಡೆ ತನಗೆ ಸೋಲ್ವುದೆ
ಜಯಂ!
********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ