ಪುಟಗಳು

23 ಜುಲೈ 2018

ಶ್ರೀ ಸಂಪುಟಂ: ಸಂಚಿಕೆ 3 - ದುರಮಿರದಿನ್ ಸುಗತಿ!

ಶ್ರೀ ಸಂಪುಟಂ: ಸಂಚಿಕೆ 3 - ದುರಮಿರದಿನ್ ಸುಗತಿ!

“ಪೊಗೆ ಅದೇ ಕಾಣ್, ತ್ರಿಜಟೆ? ಏಳುತಿದೆ ಮದಿಲೊಲ್
ಮುಗಿಲನ್ನೆಗಂ! ಕೇಳಿಸದು ಕದನ ಕೋಲಾಹಲಂ,
ಕೇಳುತಿದೆ ರೋದನಾತ್ಮಕ ತುಮುಲ ನಾದಮ್.
ಮಾಣ್ದು ರಣಭೇರಿಗಳ್, ಪ್ರೇತವನ ವಾದ್ಯಗಳ್
ಗೋಳ್ ಗರೆಯುತಿವೆ! ಕೇಳ್ ನಿನ್ನೊಡೆಯನನುಜಂ
ರಣಾಂಗಣಕೆ ಕುಂಭಕರ್ಣಂ ನಿನ್ನೆ ಪೋದುದಂ
ಪೇಳ್ದೆ. ತಳುವಿಹಳನಲೆಯುಂ; ನಿಚ್ಚಯಂ ಪೊಗಸು
ಸೊಗಯಿಸುವ ಮುನ್ನಮೇ ಬರುತಿರ್ದವಳ್, ದಿನದಿನದ
ರಣವಾರ್ತೆಯಂ ತರುತ್ತಿರ್ದವಳ್? ಸುಡುತಿದೆ ಶಂಕೆ.
ಆರ್ಗೇನಮಂಗಳಮೊ? ಏಕೆ, ರಾಕ್ಷಸಸಖೀ, ೧೦
ಕೆಮ್ಮನಿಹೆ? ಮೊಗದೊಳೇನೋ ದುಗುಡವಾಡುತಿದೆ!
ಕಣ್ಣೀರಿದೇಕಕ್ಕ? ದುಕ್ಕಮೇನ್ ಪೇಳ್, ತಾಯಿ,
ನಿನ್ನ ಮಗಳೆದೆ ಸುಕ್ಕಿ ಸೀಯುವ ಮೊದಲ್! ನನ್ನ
ಮೈದುನಂ ಕ್ಷೇಮವೆ? ವನೇಚರ ಮಹಾತ್ಮರ್ಗೆ
ಹಾನಿಯಿಲ್ಲ್ಯೆಸೆ ದೀರ್ಘಾಯುಗಳಿಗೆ?”
ಭೂಮಿಸುತೆ
ಬೆದರುಗಣ್ಣಿಂ ನೋಡಿದಳು ಜಲನಿಧಿಯ ದೂರ
ತೀರದಿಂದೇಳುತಿರ್ದಾ ಧೂಮದುಶ್ಯಕುನಮಂ
ದೃಶ್ಯಮಂ: ಪೊಗೆ ತುಂಬಿದಾಗಸದೊಳಾಗಳೆಯೆ
ಮೂಡಿಬಂದಿನಬಿಂಬಮೆಸೆದುದು ಮಸುಳ್ದವೊಲ್,
ಪೊಗೆಯ ಮರ್ಬಿನ ಪೊಗರ್ ಕವಿದುದು ಅಶೋಕವನ ೨೦
ಮಧು ಧಾಮಮಂ, ಮೂಗು ಮುರಿಯಲ್ ಬೀಸಿದುದು ಗಾಳಿ
ಕೌರುಗಂಪಂ, ಮೂಗುವಟ್ಟುವು ಪರಮೆಪಕ್ಕಿಗಳ್,
ಪೆಣವೊಗೆಗೆ ಪೇಸಿದೋಲಂತೆ ಸೀತೆಗೆ ತ್ರಿಜಟೆ
ಕಣ್ಣೀರ್ಮಿಡಿದು ಸುಯ್ದೊರೆದಳಿಂತು ತನ್ನುಸಿರ
ಬಿಸುಸೇದೆಯಂ:
“ದೇವಿ, ಪೇಳ್ವೆನೇನಂ? ಮಹಾ
ಶೋಕಮಡಸಿದೆ ಲಂಕೆಯಂ, ನಿನ್ನೆ ಯುದ್ಧದೊಳ್,
ಸದೆಬಡಿದು ವಾನರರ ಪಡೆಗಳಂ. ಮಡಿದನಾ
ದೊರೆಯ ತಮ್ಮಂ, ಕುಂಭಕರ್ಣನೊಡವೆರಸಿದರ್
ಕಾದು ಮಡಿದರ್ ಚಮೂನಾಯಕರನೇಕರ್,
ಅನೀಕಿನಿಗಳುರುಳಿ, ಶವಗಳ್ ಬೆಟ್ಟವಿಳ್ದುವೆಂಬರ್ ೩೦
ಇರ್ಕೆಲದೊಳುಂ, ನಾರ್ವ ರಣಧರೆಯನಿನ್ನೊಮ್ಮೆ
ಘೋರತರ ಸಂಗ್ರಾಮಕಣಿಗೆಯ್ಯೆ, ಸಾರಿಹರ್,
ಇದೊಂದೆ ಪಗಲಂ, ವೈರ ವಿಶ್ರಾಂತಿಯಂ, ನಾಳೆ
ಮರಳಿ ಮೊದಲಪ್ಪುದು ಭಯಂಕರದ ಕಾಳೆಗಂ!
ನಮ್ಮವರ್ ನಿಮ್ಮವರ್ ಮಡಿದ ತಂತಮ್ಮರಂ
ಕಡಲ ದಂಡೆಗೆ ಪೊತ್ತು, ಪೆಣಬಣಬೆಗಳನೊಟ್ಟಿ,
ಸುಡುತಿಹರ್. ಅದೆ ನಿನಗೆ ಕಾಣ್ಬಾಗಸಕ್ಕೇರ್ವ
ಪೊಗೆಯ ಕೇರ್; ಪಿತೃಲೋಕಕಾತ್ಮಗಳನುಯ್ವ ತೇರ್!
ಅದೆ ಕೇಳ್ವ ರೋದನಂ! ಮೇಣ್ ಮಸಣದೋಲಗಂ!
ಲಂಕೆ ಅಳುತಿದೆ, ಮನೆಮನೆಯೊಳುಂ, ಇಂದು: ಮಗನ್ ೪೦
ಮಡಿದ ತಾಯ್; ಪತಿ ತೀರ್ದ ಪೆಣ್; ತಂದೆಯಳಿದಿರ್ವ
ಕಂದನ್; ಅಣ್ಣಂಗಳುವ ತಂಗೆ! ಆ ಗೋಳನಾರ್
ಕೇಳ್ವರೈ?… ಅಲ್ಲದೆಯೆ, ಬೇರೆವೇರೆಯೆ ಪುಡುಕಿ
ತಂತಮ್ಮ ಬಂಧುಗಳಿಗಂತ್ಯಸಂಸ್ಕಾರಮಂ
ಬಿಡಿಬಿಡಿಯೆ ಮಾಳ್ವುದಂ ನಿಷೇಧಿಸಿದೆ ರಾಜಾಜ್ಞೆ.
ಅಲ್ಲದಿರೆ ನಾನಿಲ್ಲಿ ಇರುತಿರ್ದೆನೇನವ್ವ
ನಿನ್ನ ಬಳಿ ಇಂದು?…. ನೀಂ ನೋಳ್ಪ ಆ ಧೂಮದೊಳ್
ನನ್ನ ತಂದೆಯ ಮೆಯ್ಯ ಪೊಗೆಯುಂ ಇರಲ್ ಬಹುದು,
ದೇವಿ!
“ಏನದು ತ್ರಿಜಟೆ?” ಸುಯ್ದು ಕೇಳ್ದಳ್ ಸೀತೆ.
ಗದ್ಗದಂ ಬೆರಸಿ ಪೇಳ್ದಳ್ ತ್ರಿಜಟೆ:
“ಪೋದಿರುಳ್ ೫೦ನನ್ನಯ್ಯನಾಜಿರಂಗದಿ ಮರಳಿದರಲೆನ್ನ
ತಮ್ಮನರಸಲ್ಕೆವೋದನ್, ಕತ್ತಿ ತಲೆಸೀಳ್ದೊ
ಬಂಡೆ ಬಡಿದುದಕೆ ತಲೆಯೊಡೆದೊ ಮಡಿದಾತನಂ
ಕಂಡು, ತರ್ಪುಜ್ಜುಗದೊಳಿರೆ, ರಾಜಭಟರದಂ
ನೋಡಿ ತಡೆದರ‍್. ಕಳೇಬರವನವರ ವಶಮಾಡಿ,
ಕಾಲ್ ಮುರಿದು ಕೆಡೆದು ನರಳುತ್ತಿರ್ದ ಪಿರಿಯನಂ
ತನ್ನಣ್ಣನಂ ಪುಡುಕಿ, ಪಡೆದು, ಮನೆಗೆ ತಂದನ್,
ಪಡೆಗೆ ತಲೆಯಾಳೆನ್ನ ಗಂಡನ ಸಹಾಯದಿಂ
ಅವನೊ ಅಸ್ತಾವಸ್ಥನಾಗಿಹನ್, ನಾಳೆ ಇನ್
ನನಗೇನೊ? ನಿನ್ನ ಸೇವೆಯ ಗತಿಯೊ? ಮುಂದೆನೆಗೆ ೬೦ಪತಿಯ ಸೇವೆಯ ಪುಣ್ಯಮೇನೊಳದೊ? ಏನ್ ತಾಯಿ,
ನಿನ್ನೊರ್ವಳಿಂದೆ ಏನೇನಪ್ಪುದಿರ್ಕುಮೋ
ಆರಾರ್ಗೆ?”
ಹೃದಯವರಿತಳ್, ತ್ರಿಜಟೆಯೆಂದುದಕೆ,
ಕೊರಳ ಸೆರೆ ಬಿಗಿಯೊತ್ತುತಿರೆ ತನಗೆ, ಬಗೆಮರುಗಿ
ಪೇಳ್ದಳ್ ಧರಣಿಜಾತೆ ಸಂತೈಕೆಯಂ:
“ತ್ರಿಜಟೆ.
ನೀನೆಂದೆವೊಲೆ ನನಗುಮೊಮ್ಮೊಮ್ಮ ತೋರ್ಪುದವ್
ಲೋಕ ಸಂಕಟಿಕೆಲ್ಲ, ನಿನತೊಂದಕೆಯೆ ಅಲ್ತು,
ನಾನೆ ಕಾರಣಮೆಂಬವೋಲ್, ಜನಕ ಭೂಮಿಪಂ
ಭೂಮಿಗರ್ಭದಿನೆನ್ನನಲ್ತು ಲೋಕದ ಸಕಲ
ಶೋಕಮಂ ಪಡೆದು ರಾಮಂಗಿತ್ತು, ಲಂಕೆಯಿಂ ೭೦ತೊಟ್ಟಯೋಧ್ಯೆಯವರೆಗೆ ದುಃಖಕುಯ್ಯಲೆಯಾಡೆ
ತೂಗುಮಂಚವನಿಕ್ಕಿದನ್! ನನ್ನ ದೆಸೆಗಾಗಿ
ಅದೆನಿತೊ ಲಂಕೆಯ ಪೆಣ್ಗಳೆನಿತೊ ಕಿಷ್ಕಿಂಧೆಯರ್
ತಮ್ಮ ಮಂಗಳಸೂತ್ರ ಭಂಗಮಂ ಕಾಣುವರೊ?
ಮೇಣ್, ಸಖೀ, ಇದು ಬರಿ ಅಹಂಕಾರ ಸಂಭವಮೊ
ನಿನಗುಮೆನಗುಂ? ನಿನ್ನ ಪಿತೃವಿಧಿಗೆ ನಾನೆನಿತು
ಕಾರಣಳೊ ನನ್ನ ವಿಧಿಗಾತನುಂ, ಕೇಳ್, ತಾನನಿತೆ
ಕಾರಣನ್? ವಿಧಿಯ ಸೂತ್ರದ ಜಗಜ್ಜಾಲದೊಳ್
ವ್ಯಕ್ತಿಗಳ್ ಗ್ರಂಥಿಮಾತ್ರಗಳಲ್ವೆ, ವಿಧಿಹಸ್ತ
ಕೌಶಲ ಪ್ರತಿಮೆಗಳ್? ನಂನಮ್ಮ ಕರ್ಮಫಲಮಂ ೮೦ನಾಮುಣಲೆವೇಳ್ಕುಮ್. ಆದೊಡಮಿದಂ ಕೇಳ್, ತ್ರಿಜಟೆ,
ನನ್ನ ಮಾಂಗಲ್ಯಮಂ ಪಣವಿಟ್ಟು ಪೇಳ್ವೆನೀ
ಪೂಣ್ಕೆಯಂ: ನಿನಗೆ ವೈಧವ್ಯಮಾದಂದೆನಗೆ
ವೈಧವ್ಯಮೆಂದು ತಿಳಿ! ಆ ಭೀತಿಯಂ ಬಿಡು, ಕೆಳದಿ.
ನಾಳೆ ರಣಮೆನಿತೆ ಭೀಕರಮಕ್ಕೆ. ವಾನರರ
ಬಲಮೆನಿತು ಘೋರತರಮಕ್ಕೆ, ಮೇಣ್ ಎನ್ನ ಪತಿ
ಬ್ರಹ್ಮಾಸ್ತ್ರಮನೆ ತುಡುಗೆ, ನಿನ್ನಯ್ದೆದಾಳಿ ತಾನ್
ಒಂದಿನಿತಲುಗದಿರ್ಕೆ!
ಬರಿಯ ಹರಕೆಯದಲ್ತು,
ವರವೆಂದು ತಿಳಿದವಳ್ ಕೈಮುಗಿದಳಾ ತ್ರಿಜಟೆ;
ಬೇಡಿದಳ್ ಕ್ಷಮೆಯಂ:
“ಮನಂ ನೋಯಲಾಡಿದೆನ್ ೯೦ಮನ್ನಿಸೀ ಮುಕ್ಕೆಯನ್, ತಾಯಿ, ನನ್ನದು ನೋವೆ
ನಿನ್ನದರಿದಿರ‍್? ಮಹಿಮೆ ಮೈದೋರಲೋಸುಗಂ
ಮಡಿದರಾ ಸಾವೊಂದು ಸಾವೆ? ಬರ್ದುಕಿಗೆ ಮಿಗಿಲ್
ಅಮೃತಮಲ್ತೆ?
ಬೆರಗಾಗಿ ನೋಡಿದಳ್ ತ್ರಿಜಟೆಯಂ
ಸೀತೆ:
“ವೇದಂಬೊಲೊರೆದೀ ಮಹಾ ವಾಕ್ಯಮಂ
ನೀನೆಲ್ಲಿ ಕಲಿತವ್, ಕೆಳದಿ?
“ನೀನೆ ಗುರುವಲ್ತೆ?”
ತ್ರಿಜಟೆಯೆಂದಳ್ ಧನ್ಯಭಾವದಿಂ “ನಿನ್ನೊಡನೆ
ಇನಿತು ದಿನಮಿರ್ದು ನಿನ್ನಂ ಸೇವೆಗೆಯ್ದುದೇನ್
ಬರಿಯ ಸಾಸ್ಯಮೆ? ತಪಂ ತಾನಲ್ತೆ? ನುಡಿಗೇಳ್ದು,
ನಡೆನೋಳ್ದು, ಸಾನ್ನಿಧ್ಯದೊಳೆ ಪಗಲಿರುಳುಮಳ್ದು, ೧೦೦
ಪೂರ್ವ ಜನ್ಮದ ಪುಣ್ಯಫಲದಿ ನಿನ್ನನ್ನರಿವ
ಕೃಪೆಯೊದಗಿದೆನಗೆ ,ಪೇಳ್, ಅಂತು ನುಡಿವನಿತದೇನ್
ಪಿರಿದೆ?”
“ಪಿರಿಯಳ್ ನೀಂ, ಸಖೀ, ಪೆರ್ಮೆನುಡಿಗಳನೆ
ಪೊಣ್ಮುತಿರ್ಪುದು ನಿನ್ನ ಜಿಹ್ವೆ!”
ಇತ್ತಿಂತಿವರ್.
ಅತ್ತಲ್ ವಿಭೀಷಣಕುಮಾರಿ, ಅನಲಾದೇವಿ,
ಕಾಳಗದ ಕಣಕಿಂ ಮಿಗಿಲ್ ಭಯಂಕರಮೆನಲ್
ಶೋಕಕುಲಮಾಗಿರ್ದ ದೊಡ್ಡಯ್ಯನರಮನೆಯ
ರೋದನ ಸೀಮೆಯಂ ಪಿಂತಿಕ್ಕುತಲ್ಲಿಂದೆ
ಅಶೋಕವನ ಧಾಮ ನೇಮಿಯ ಪೊಕ್ಕಳರಸುತೆ
ಮನಶಾಂತಿಯಂ, ನೇರಮವನಿಜಾತೆಯ ಹೊರೆಗೆ ೧೧೦
ನಡೆದೆರಗಿದಳು ತಪಸ್ವಿನಿಯಡಿಗೆ, ಅಶ್ರುಮಯ
ಲೋಚನೆಯ, ಗದ್ಗದಧ್ವನಿಯ, ಶೋಕಾಕುಲೆಯ
ಸುಮಕೋಲಾಂಗಮಂ ಕನಿಕರದಿನೆತ್ತಿದಳ್;
ತಳ್ಕಯಿಸಿದಳು ಸೀತೆ, ತಾಯ್ ಮಗಳನೆಂತಂತೆವೋಲ್,
ಕಂಬನಿಯನೊರಸಿದಳು; ಮೊಗವ ಮುಂಡಾಡಿದಳು;
ಕುವರಿಯೊಡಲಂ ತನ್ನ ಮೆಯ್ಗೆ ತಳ್ತಪ್ಪುತ್ತೆ
ಕಣ್ಮುಚ್ಚಿ ಮೌನಿಯಾದಳ್. ತನ್ನ ಹೃದಯದ
ನಿಗೂಢತಮ ಶಾಂತಿಯಂ ಯೌಗಿಕ ವಿಧಾನದಿಂ
ಅನಲೆಯಾತ್ಮಕೆ ದಾನಗೈವಂದದಿಂದಿರ್ದು,
ನುಡಿಸಿದಳು ತುಸುವೊಳ್ತನಂತರಂ: “ಎಂತು ನಾನ್ ೧೨೦
ಸಂತೈಪೆನೌ ನಿನ್ನನನಲೆ? ಬಾಯ್ ಬರದೆನಗೆ
ನಿನ್ನನಳವೇಡೆನಲ್, ತಾಯಿ.”
ಬೈತಲೆಯೆಳವಿ
ತನ್ನ ನುಣ್ ಗೂದಲಂ ನೇವರಿಸುತಿರ್ದಳಂ
ಮೊಗವೆತಿ ನೋಡಿದಳು ಮುಗುದ ನೇತ್ರದ ತರಳೆ,
ಮೈಥಿಲಿಯನನಲೆ, ಸೀತೆಯ ಕಣ್ಗಳೆವೆಹನಿಗಳಂ
ತನ್ನಯ ತಳಿರ್ ಬೆರಳ್ಗಳಿಂದೊರಸಿ:
“ನಿನ್ನಳಲನ್
ಅಳ್ತು ಮುಗಿಸಲ್ ನಿನಗೆ ಸಾಲದಾಗಿರೆ ನಿನ್ನ
ಕಣ್ಣೀರ್, ನನ್ನಳೆಲ್ಗೇಕೆ ತವಿಸುವೆ, ದೇವಿ,
ಬರಿದೆ ನಿನ್ನೀ ನೇತ್ರ ತೀರ್ಥಾಂಬುವಂ, ನಿನ್ನ
ನಯನದಿಂದುರುಳುವೊಂದೊಂದಶ್ರುಬಿಂದುವುಂ ೧೩೦
ಪೆರ್ಚಿಪುದು ನಮ್ಮ ಲಂಕೆಯ ಶೋಕಜೀವನದ
ಸಿಂಧುವಂ. ನೀನಳ್ತೆ: ಆ ಹನಿಗಳೊಂದೊಂದುವುಂ
ಬಡಬಾಗ್ನಿ ಕಡಲಾಗಿ ಕುಡಿದುವವ್ ಲಂಕೆಯ
ಮಹಾಸುರ ಸಹಸ್ರಾಸು ವಾಹಿನಿಗಳಂ. ಸರ್ವ
ಲೋಕ ಭೀಕರನೆಂದು ಯುದ್ಧಭೈರವನೆಂದು
ಪೆಸರಾಂತ ಕಿರಿಯ ದೊಡ್ಡಯ್ಯನಂತಪ್ಪನಂ,
ನೇರ್ ನಡೆಯ ಸವಿನುಡಿಯ ಪೆರ್ಮೆಬಾಲ್ ಬಾಳ್ದನಂ,
ನಿನ್ನೆ ನುಂಗಿದುದಮ್ಮ ನಿನ್ನ ಕಣ್ ಪನಿಗಡಲ
ಬಡಬವಾಯ್! ಆ ಅಯ್ಯನೆಮ್ಮೊಡನೆ ಎನಿತೊ ಸೂಳ್
ಕುಳಿತು ಸರಸವನಾಡುತಿರ್ದನ್! ಹಾಸ್ಯಮಂ ೧೪೦
ನುಡಿದಣಕಿಸುತ್ತೆಮ್ಮನೆಂತಳ್ಳೆ ಬಿರಿವಂತೆ
ನಗಿಸುತಿರ್ದನ್! ಕಳ್ಳರಾಟದಲಿ ನಾವಟ್ಟಿ,
ಅವನೋಡಿ, ನಾನ್ ಪಿಡಿಯಲಾರದಿರೆ, ಕೊನೆಕೊನೆಗೆ
ನಗೆ ತಡೆಯಲಾರದೆಯೆ ಸೋಲ್ತು ನಿಲುತಿರ್ದನಂ
ನಾನ್ ಮುಟ್ಟಿ, ನನ್ನನಂಬರಕೆತ್ತಿ ಮೇಲೆಸೆದು
ಪಿಡಿದು ‘ನೀನೊಂದು ಪೂವಿನ ಚೆಂಡು’ ಎನುತೆನ್ನ
ಮುದ್ದಾಡುತಿರ್ದನ್ ‘ಚೆಂಡುವೂ! ಚೆಂಡುವೂ!’
ಎಂದಟ್ಟಹಾಸಂ ಮೊಳಗಲದ್ಭುತಂ ನಗುತೆ! —
ಅಯ್ಯೊ ಆ ಅಯ್ಯನನ್, ಇಂದು ಕಡಲೆಡೆ, ಮಳಲ
ತೀರದಲಿ, ಗಂಧಚಿತೆಯಲಿ ಬೇಳ್ದು , ಬೂದಿಯಂ ೧೫೦
ತಂದನೂರಿಗೆ ನನ್ನ ಬದುಕಿರ್ಪ ದೊಡ್ಡಯ್ಯನ್,
ಅಸುರೇಶ್ವರಂ! ಅದನ್ ಇಟ್ಟ ರತ್ನಮಂಜೂಷೆಯಂ
ಬಿಗಿದಪ್ಪಿ ತಮ್ಮ ತಮ್ಮ ಎಂದೊರಲುತಿರ್ದನಂ
ನೆನೆಯಲಮ್ಮೆನ್, ದೇವಿ ನಿನಗಹಿತನಾದಡೇನ್?
ನೀನುಮ್ ಮರುಗಿ ಕರುಗುತಿರ್ದೆ ಆ ನೋಟಮನ್
ಕಂಡು!”
ಗದ್ಗದೆಯಾಗಿ ಜಾನಕಿಯೆದೆಗೆ ಮೊಗಮೊತ್ತಿ,
ಮಗಳವೋಲಳುತಿರ್ದಳಂ ಅನಲೆಯಂ ನೋಡಿ,
ಆವಿರ್ಭವಿಸಿದುದೊ ತನಗೆ ನಿಜಸ್ವರೂಮೆನೆ,
ಬೇರೆತನಮಂ ತೊರೆದು ಸೀತೆ, ಲೋಕಕೆ ಮಾತೆ
ತಾನಾದಳೆಂಬವೋಲ್, ತನ್ನೆರಡು ತೋಳ್ಗಳಿಂ ೧೬೦
ತಳ್ಕಯ್ಸುತನಲೆಯಂ, ತ್ರಿಜಟೆಗೆಂದಳ್;
“ಬಾಲೆ
ಉಲಪವಾಸಮಿರ್ಪಳ್, ತ್ರಿಜಟೆ; ಶೋಕಭಾರಮಂ
ತಡೆಯಲಾರಳ್; ತತ್ತರಿಸುವಳ್: ಇವಳ್ಗಮೀ
ಅಳಲೆ ಈ ಎಳಹರಯದೊಳ್? ಪೋಗು, ಪಣ್ಗಳಂ
ತಿಳಿನೀರ್ಗಳಂ ಬೇಗದಿಂ ತಾ.”
ತ್ರಿಜಟೆ ಪೋಗಲ್,
ಅನಲೆಯ ತಲೆಗೆ ತನ್ನ ತೊಡೆಯ ತಲೆದಿಂಬೆಸಗಿ
ತನ್ನುಡಿಯ ಮಲಿನ ವಸ್ತ್ರಾಂಚಲದಿ ಕೃಶಗಾತ್ರೆ
ಬೀಸಿದಳ್ ತಂಗಾಳಿಯಂ: “ಏನ್ ಬೇಸಗೆಯೊ? ಬೇಗೆ
ಧಗಿಸುತಿದೆ ಲೋಕಮಂ!” ತನ್ನೊಳಗೆನುತೆ ಸುಯ್ದು
ನೋಡಿದಳು ಮುಂದೆ ಹಬ್ಬಿರ್ದ ಜಲಧಿಯ ನೀಲ ೧೭೦
ವಿಸ್ತಾರಮಂ, ನೀಲಿಯಾಗಸದ ನಿಸ್ಸೀಮತಾ
ವಿಸ್ತಾರಮಂ, ಮುಗಿಲ್ ಮುಗಿಲಾಗಿ ಮೇಲೇರ್ದ
ಸತ್ ಕ್ರಿಯಾನಲಧೂಮ ವಿಸ್ತಾರಮಂ, ಕಣ್ಗೆ
ಪನಿ ತುಳ್ಕಿ ಬಿಳ್ದುವನಲೆಯ ಮೆಯ್ಗೆ!
ಬೇಗದಿಂ
ಬಂದಾ ತ್ರಿಜಟೆ ತಂದ ಶೀತಾಂಬುವಿಂ ತೊಳೆದು
ಅನಲಾನನಾಬ್ಜಮಂ, ಮೆಯ್ ತಿಳಿದವಳ್ಗುಣಲ್
ಫಲಜಲಂಗಳನಿತ್ತು ಸಸಿನೆಗೆಯ್ದಿಂ ಬಳಿಕಲಾ
ದಶಶಿರಾನುಜ ತನುಜೆ ಮುಂ ಪೇಳ್ದಳಿಂತಾ
ಸ್ಥಿರಾತ್ಮಜೆಗೆ:
“ಆದುದಾದುದು, ದೇವಿ , ಆದುದಕೆ
ನೂರ್ಮಡಿಯ ಘೋರಮಿನ್ನಾಗಲುರ್ಕುಮ್. ಅದನ್, ೧೮೦
ನೀನಿಚ್ಛಿಸಲ್, ನಿಲಿಸಲದಳಮಲ್ತು. ಕೇಳ್, ತಾಯಿ,
ಮುನ್ನಡೆದುದು ಪೇಳ್ವೆನರಮನೆಯ ಕಥನಮಂ.
ತಮ್ಮನ ಕಳೇಬರಕೆ ಕೊನೆಯ ಸಂಸ್ಕಾರಮಂ
ಕಡಲ ತೀರದೊಳೆಸಗಿ, ಭಸ್ಮಾವಶೇಷಮಂ
ರತ್ನಪಾತ್ರೆಯೊಳಿಟ್ಟು ತಂದು ಗೋಳಿಡುತಿರ್ದ
ದೊಡ್ಡಯ್ಯನಂ ಕಂಡು ನನ್ನಣ್ಣನಿಂದ್ರಜಿತು,
ಮೇಘನಾದಂ, ಮಹಾ ರುದ್ರ ರೋಷವನಾಂತು
ಸಂತಯ್ಸಿದನು ತನ್ನ ತಂದೆಯಂ; ಪೂಣ್ದನ್
ಭಯಂಕರ ಪ್ರತಿಜ್ಞೆಯಂ: — ’ ತ್ಯಜಿಸು ಸಂತಾಪಮಂ,
ದೈತ್ಯಕುಲ ಚಕ್ರೇಶ; ಚಿಕ್ಕಯ್ಯನಸುವಿಂಗೆ ೧೯೦
ನೂರ್ಮಡಿಯುಸಿರ್ಗಳಂ ಬಲಿಗೊಳ್ವೆನೆನ್ನೀ
ಪ್ರತಾಪ ಭೂತಕ್ಕೆ. ರಿಪುಬಲವನಂತಕನೂರ್ಗೆ
ಬಿರ್ದ್ದೆಸಗುವೆನ್; ತಪ್ಪೆನೆನ್ನಾಣೆ, ನಿನ್ನಾಣೆ,
ತೀರ್ದಯ್ಯನಾಣೆ, ಪೆತ್ತಬ್ಬೆ ಮೇಣ್ ಕುಲದೈವವಾ
ಶಿವನಾಣೆ! ಕೈಕೊಳ್ವೆನೀಗಳೆ ನಿಕುಂಭಿಲಾ
ಯಾಗಮಂ, ಮೃತ್ಯುಗರ್ಭಂ ತರತರನೆ ನಡುಗೆ
ಮಾರಣ ಮಹಾಶಕ್ತಿಗಳನೊಡನೆ ಸೃಜಿಸುವೆನ್.
ನರ ವಾನರರ ಸೇನೆ ನಿರ್ನಾಮಮಪ್ಪಂತೆ
ಗೆಯ್ದವರ ನೆತ್ತರಿಂ ತಣಿಯೆರೆವೆನಾ ಪೂಜ್ಯ
ಕುಂಭಕರ್ಣಪ್ರೇತಮೆಮ್ಮ ಪಿತೃಲೋಕದೊಳ್ ೨೦೦
ಸಂಪ್ರೀತಮಪ್ಪವೋಲ್!’ ಇಂತತಿ ಕಠೋರಮಂ
ಸೂರುಳಂ ತೊಟ್ಟು, ನಡೆದನ್ ನಿಕುಂಭಿಲೆವೆಸರ
ನ್ಯಗ್ರೋಧಮೂಲದಾ ಯಾಗಶಾಲೆಯ ಮಹಾ
ಮಂತ್ರಕರ್ಮದ ತಂತ್ರಮಂಟಪಕೆ. ಆ ನನ್ನ
ಅಣ್ಣನ್ ಅತಿ ಶಕ್ತನ್; ಇಂದ್ರನ ಗೆಲ್ದು, ಬ್ರಹ್ಮನಿಂ
ನಾನಾ ವರಂಗಳು ಪಡೆದು. ಮಾಯಾಬಲದಿ
ದೇವದಾನವ ಭಯಂಕರನಾಗಿಹನು, ದೇವಿ.
ನಿರ್ವಿಘ್ನಮಾ ಯಾಗಮಂ ಮುಗಿಸಿದಾತನಂ
ಸೋಲಿಸುವರೊಳರೆ ಭುವನತ್ರಯದ ವೀರರಲಿ?
ವಿಘ್ನಮಿಲ್ಲದೆ ಯಾಗಮದು ಸಿದ್ಧಿಯಾಗಲ್, ೨೧೦
ಅಜೇಯನಾತನ್; ಅವಾರ್ಯವೀರ್ಯನ್; ಸುರಾಸುರರ್
ನೆರೆಯಲ್, ತೃಣೀಕರಿಸುವನ್! ಕಪಿಧ್ವಜರೊಂದು
ಪಾಡೆ? ಆ ಬಳಿಕಲಾಂ ನೆನೆಯಲಮ್ಮೆನ್, ತಾಯಿ,
ಇರ್ಕೆಲದೊಳಪ್ಪ ಹರಣದ ಹತ್ಯೆಯಂ, — ಪೆಣ್
ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು.
ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು
ಪಣೆಪೆಣೆದು ನಿಲ್ಲಲ್‌? ಮಹೀಯಸೀ, ನಿನೊಪ್ಪೆ
ನೆರಮಪ್ಪೆನಾಂ ನಿನಗೆ. ನೆರಮಪ್ಪಳಾಂ ಬಲ್ಲೆನ್,
ದೊಡ್ಡಮ್ಮನಾ ಮಂಡೋದರೀ ದೇವಿ, ತಾರಾಕ್ಷಿ.
ಮೇಘನಾದನ ಪತ್ನಿ, ನನ್ನತ್ತಿಗೆಯುಮಂತೆ ೨೨೦
ನೆರಮಪ್ಪಳೆಮಗೆ, ಕೇಳ್, ನಿನ್ನನಿಲ್ಲಿಗೆ ತರಲ್
ಸಂಚು ಹೂಡಿದ ಚಂದ್ರನಖಿಯುಮೀಗಳ್ ಬೇರೆ
ಬಗೆಯಾಗಿಹಳ್, ಮೇಣ್, ದಶಗ್ರೀವನಾತ್ಮಮುಂ,
ತನ್ನ ಕಸುಗಾಯ್ತನದೊಗರ್ ಕಳೆದು, ಪಣ್ತನಕೆ
ತಿರುಗುತಿರ್ಪೊಂದು ಸೂಚನೆ ತೋರುತಿಹುದೆನಗೆ.
ಅದೊಡೆ ಮಹಾಸತ್ತ್ವನಾತನತ್ಯಭಿಮಾನಿ;
ಪಿಂಜರಿವನಲ್ತು. ತಾನೆಯೆ ಮುಂಬರಿವನಲ್ತು
ತಡೆಯಲೀ ಕಾಳೆಗದ ಕೊಲೆಯಂ. ಅಮರ್ಷಿ ತಾಂ
ಕ್ಷಾತ್ರತೇಜಕೆ ಭಂಗ ಬರ್ಪಂದದಿಂದೆಂದುಂ
ನಡೆವನಲ್ತು.”
“ಪುಟ್ಟ ಹೃದಯದೊಳೆಂತು, ಪೇಳನಲೆ, ೨೩೦
ಇಂತಪ್ಪ ದಿಟ್ಟತನವಿರಿಸಿರ್ಪೆ? ಪದಿನಾರ್
ಬಸಂತಗಳ ಮುದ್ರೆಯಂ ತಳೆದಿರ್ಪ ನಿನ್ನ ಮೆಯ್
ಪಿರಿಯುಸಿರ್ ಬೀಡು, ಪೆರ್ಬಗೆಯ ಪೆರ್ಮೆಗೆ ತವರ್
ನಾಡು!. . . . . ನಾನಸ್ವತಂತ್ರಳ್, ಕುವರಿ, ನಿನ್ನವರ್
ಮೇಣ್ ನೀನ್ ಸ್ವತಂತ್ರರ್, ತಪೋದ್ಯೋಗಮೊಂದುಳಿಯೆ
ಮತ್ತಾವುದುಜ್ಜುಗಂ ತಗದೆನಗೆ. . . . .ಪರಸುವೆನ್
ನಿನ್ನನ್; ಅದೆ ನಾನೀವ, ನಿನ್ನುದ್ಯಮಕೆ ನೆರಂ.
ನಿನ್ನಾಸೆ ನಲ್ಲದು. ವಿಭೀಷಣ ಕುಮಾರಿ, ಅದು
ಸಲ್ಗೆ!”
ಆಶೀರ್ವದಿಸಿದವನಿಜೆಗೆ ಅನಲೆ: “ತೊರೆ
ನಿರಾಶೆಯಂ, ದೆವಿ. ವಾರ್ತೆಯನೆನ್ನ ತಂದೆಗೆ ೨೪೦
ಹಿರಣ್ಯಕೇಶಿಯ ಕೈಲಿ ಕಳುಹಿದೆನ್, ಇಂದ್ರಜಿತು
ಕೈಕೊಳ್ವ ಕ್ರತು ಮುಗಿವ ಮುನ್ನಮೆಯೆ, ವಿಘ್ನಮಂ
ತಂದೊಡ್ಡುವರ್ ದಿಟಂ, ವಾನರ ಮಹಾ ಪ್ರಾಜ್ಞ
ಸೇನಾನಿಗಳ್.” ಮುಗುಳ್ನಗೆವೆರಸಿ, ಆ ಧೈರ್ಯಮ್
ಎನಗಿರ್ಕುಮೆಂದ ಸೀತೆಗೆ, ಮತ್ತಮನಲೆ; “ನೀನ್,
ದೊಡ್ಡಯ್ಯನಿಂದಿಲ್ಲಿಗೈತರಲ್, ನಮ್ಮಿದಿರ್
ತಾಯಾಗಿ ತೋರ್ಪವೊಲ್ ತೋರಿ, ಕಂದಂಗೆಂತೊ
ಅಂತೆ, ಹಿತವನೊರೆ ಸದ್ಬುದ್ಧಿಯಂ. ನಿಚ್ಚಮುಂ
ನಿನ್ನನೆಯೆ ನೆನೆದಾತನಾತ್ಮಕ್ಕೆ ನಿನ್ನೊಂದು
ಪೊಳೆಯತೊಡಗಿದೆ ಮಹಿಮೆ. ಮರುಗುವಂದದಿ ಮನಂ ೨೫೦
ಕರಗುವಂದದಿ ಹೃದಯವವನಂತರಾತ್ಮಮಂ
ಮಿಡಿದು ನುಡಿ, ದೇವಿ, ಬೀರದ ಪೆರ್ಮೆ ಕನಿಕರಕೆ
ಶರಣಪ್ಪವೋಲ್! ಬಲ್ಲೆನೆನ್ನ ದೊಡ್ಡಯ್ಯನಂ
ನಾನ್, ದರ್ಪಕಾರಣಕೆ ಕೂರ್ಪನೆ ತೋರ್ಪನಪ್ಪೊಡಂ
ಕೂರ್ಮೆಗೆ ಮಣಿವ ಮೃದಲತೆಯಿರ್ಪುದವನೆರ್ದೆಯ
ಕರ್ಬುನಕೆ. ಇನ್ನೆಗಂ ನಿನ್ನರೊಲ್ ಪೇರುಸಿರ
ಪೆಣ್ಗಳಂ ಸಂಧಿಸಿದನಿಲ್ಲದುವೆ ಕಾರಣವಾಯ್ತು
ಲಂಕೇಶ್ವರನ ದುರ್ಗತಿಗೆ. ದೂರಮಿರದಿನ್ ದಿಟಂ
ಮಹಾತ್ಮಂಗೆ ಸುಗತಿ!”
ಉಕುತಿಯ ದನಿಯ ನನ್ನಿಯ
ದುರಂತಮಂ ಬಗೆಯದಾಡಿದ ಮುಗುದೆಯನಲೆಯ ೨೬೦
ಮುಡಿಯ ನೇವರಿಸಿ, ಪೆಗಲಿಂ ಜಗಳುತಿರ್ಕ್ಕೆಲದಿ
ಷೋಡಶ ವಸಂತ ವಕ್ಷವ ಸಿಂಗರಿಸಿ ನೀಳ್ದ
ನುಣ್ಪಿನ ಕರ್ಜಡೆಗಳಂ ಕರಾಗ್ರದಿಂದೆಳವಿ,
ರಾವಣಂ ಬಂದಾಗಳೆಂತು ತನ್ನಾತ್ಮಂ
ಪ್ರಚೋದಿಪುದೊ ಅಂತೆ ನಡೆವಂತೆ ಭಾಷೆಯನಿತ್ತು
ಸಂತಯ್ಸಿದಳು ದೇವಿ. ದೈತ್ಯಕುಲ ಕನ್ಯೆಯಂ
ಪೆತ್ತಳೋಲೋವಿ. ದೂರ ವಾರಧಿ ವೇಲೆಯಿಂ
ಬಾನ್ಗೇರಿದುದು ಪೊಗೆ ಮರುನ್ಮಾರ್ಗಮಂ! ತೀವಿ!





*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ