ಪುಟಗಳು

23 ಜುಲೈ 2018

ಶ್ರೀ ಸಂಪುಟಂ: ಸಂಚಿಕೆ 13 - ಅಭಿಷೇಕ ವಿರಾಡ್ ದರ್ಶನಂ

ಓಂಕಾರಮುಖ ಸಚ್ಚಿದಾನಂದ ಋತಚಿತ್‌
ಸ್ವರೂಪಿಣಿಯೆ, ಶಿವೆ ಸರಸ್ವತಿ ಲಕ್ಷ್ಮಿಯರ್ ಮೊದಲ್‌
ನಿಶ್ಶೇಷ ದೇವಗೋಷ್ಠಿ ಸಮಷ್ಟಿ ರೂಪಿಣಿಯೆ,
ಸೃಷ್ಟಿಕಾರಿಣಿಯೆ, ಭವತಾರಿಣಿಯೆ, ಹೇ ಜಗದ್‌
ಧಾರಿಣಿಯೆ, ನಿನಗಿದೊ ಸಮರ್ಪಿಸುವೆನಾತ್ಮಮಂ
ಚರಣಕಿರಣದ ಸೊಂಕಿಗೆನ್ನೀ ಸಹಸ್ರಾರ
ಚಕ್ರಸ ಶಿರಸ್ಸರೋಜಂ, ಅಯೋಧ್ಯಾ ರಾಮ
ಪಟ್ಟಾಭಿಷೇಕೋತ್ಸವದ ವಿರಾಡ್‌ ವೈಭವಕೆ
ಕವಿಕೃತಿಪ್ರತಿಮೆ ತಾನೆಎ, ವಿಕಾಸಂಗೊಳ್ವೋಲ್‌!
ಬಲವಂದುದೀ ಮೇದಿನೀ ಗೋಲಮೊಂಬತ್ತು ಸೂಳ್‌ ೧೦
ತಪೋನಿಧಿಯನಾದಿತ್ಯನಂ ತವ ಕೃಪೆಯೊಳಾಂ
ಮಹಾಬ್ಧಿಯಾತ್ರೆಯನಿದಂ ತೊಡಗಿ ಗುರುಕಾವ್ಯಮಂ.
ನೀನೆ ತಾರಿಣಿ, ನೀನೆ ತರಣಿ: ಭವತಾರಿಣಿಯೆ,
ರಣಮಯ ಧರಿತ್ರಿಯೀ ವರ್ಷ ತಾರಣದಲ್ಲಿ
ಕಾಣುತಿಹುದೆನಗಿದರ ದೂರ ಪಾರಾವಾರ
ತೀರ ರೂಪಂ. ದೇವಗೋಚರಮದಂ ತೋರ್,
ಜಗಜ್ಜನನಿ, ರಾಮ ಪಟ್ಟಾಭಿಷೇಕದ ವಿರಾಡ್‌
ವ್ಯಾಪರಮಂ ಪ್ರತಿಮಿಸುವ ವಿಶ್ವರೂಪಮಂ!
ಇತಿಹಾಸಮಲ್ತು; ಬರಿ ಕಥೆಯಲ್ತು; ಕಥೆ ತಾಂ
ನಿಮಿತ್ತಮತ್ರಂ, ಆತ್ಮಕೆ ಶರೀರದೋಲಂತೆ. ೨೦
ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ
ರಾಮ ರೂಪದ ಪರಾತ್ಪರನ ಪುರುಷೋತ್ತಮನ
ಲೋಕಲೀಲಾ ದರ್ಶನಂ. ಬಂಧ ಲೀಲೆಗಾ
ಮೋಕ್ಷಮೆಯೆ ಪರಮಪುರಷಾರ್ಥಮಾ ಮುಕ್ತಿಗೀ
ಪಟ್ಟೋತ್ಸಮಂ ತಾಂ ಪರಬ್ರಹತ್ವ ಸಿದ್ಧಂಗೆ
ಸಮನಿಸುವ ಕೈವಲ್ಯಸವನೋತ್ಸವಕೆ ಸಮಂ!
“ಸಮನೆ? ಮಿಗಿಲದಕೆ! ಕಾಣಾ‌!”
ಆರ ಆಜ್ಞೆಗೂ ಕಣ್‌
ತೆರೆದತ್ತತೀಂದ್ರಿಯಕೆ. ಕಂಡೆನಚ್ಚರಿಯೆನಲ್‌
ನಿರಾಕಾರನೊರ್ವನಂ! ಭಯಭಕ್ತಿ ಗೌರವದಿ
ರೋಮಹರ್ಷದಿ ಬಾಗಿ ಕೇಳ್ದನಾ ಸಾನ್ನಿಧ್ಯ ೩೦
ಮಾತ್ರ ತನುಸೂಕ್ಷ್ಮನಂ: “ನೀನಾರ್, ಮಹಾಪುರುಷ?”
“ಗುರುವನೆಯೆ ಗುರುತಿಸದವಂ ಶಿಷ್ಯನೆಂತಹನೊ?”
ವಾತ್ಸಲ್ಯದಿಂದೊರೆದುದಾ ಭವ್ಯ ಸಾನ್ನಿಧ್ಯ
ಸತ್ತ್ವಂ: “ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್‌
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹು ನಾಮರೂಪಗಳ್‌, ಬಹು ಕಾಲದೇಶಗಳ್‌
ನನಗೆ. ನೀನುಂ ನಾನೆಯೆ, ಕುವೆಂಪು!”
ತಲ್ಲಣಿಸಿದೆನ್‌
ಮಂದ್ರಕಂಠಧ್ವನಿಯ ರುಂದ್ರಗಾಂಭೀರ್ಯಕಾಂ. ೪೦
ದಿವ್ಯ ಜಿಹ್ವೆಯೊಳೆನ್ನ ನಾಮಾಕ್ಷರಂಗಳಂ
ಕೇಳ್ದು ವಿಸ್ಮಿತನಾಗಿ ತುಟಿನಡುಗಿ ತೊದಲುತಿರೆ:
“ನಾನೊರೆದುದಲ್ಲದೆಯೆ ನೀನ್‌ ಬರೆದುದೇನ್‌, ವತ್ಸ?
ನಿನ್ನಹಂಕಾರದಲ್ಪತೆ ಗೆಯ್ದ ದೋಷಗಳ್‌, ಕೇಳ್‌,
ನಿನ್ನವಲ್ಲದೆ ಕೃತಿಯ ಪೆರ್ಮೆಗೇಂ ಕವಿಯೆ ನೀನ್‌?
ಏಳ್‌, ಏಳ್‌! ತೊರೆ ಆ ಅವಿದ್ಯೆಯಂ! ತೋರ್ಪೆನದೊ
ಕಾಣ್‌!”
ಕಂಡೆನಾಂ ಕಂಡೆನಾ ಕಂಡುದೇನೆಂದರಿಯೆ!
ಶೂನ್ಯತೆಗೆ ಮುಳುಗುತಿರ್ದೆನ್ನ ಮತಿಯಂ ಪಿಡಿದು
ತನ್ನ ವಕ್ಷದೊಳಪ್ಪುತಾ ಕೃಪಾ ಭಗವದ್‌
ವಿಭೂತಿ ಪುರುಷಂ:
“ಪ್ರಾಣಿ ನೀಂ: ಪ್ರಾಣಮಯಮಂ
ಮನೋಮಯಮುಮಂ ಮೀರ್ದ ವಿಜ್ಞಾನಮಂ ಕಂಡು ೫೦
ಕಾವ್ಯಸತ್ತಾ ಜ್ಞಾನದಿಂದಿರ್ಪುದಸದಳಂ!
ಕಂಡ ದರ್ಶನಕೊಂದು ವಿರಚಿಸುವೆನಾಂ ಬೃಹತ್‌
ಪ್ರತಿಮೆಯಂ, ತಾನತೀಂದ್ರಿಯಮಾದೊಡಂ, ಕಾಣ್‌
ಕವಿಪ್ರಾಣಿ, ಪ್ರಾಣಬುದ್ಧಿಗ್ರಾಹನ್ಯಮಪ್ಪುದನದಂ!”
ದಿವ್ಯ ಸಾನ್ನಿಧ್ಯ ವಕ್ಷದೊಳಾಂ ನಭೋಂಗಣದ
ನೀಡದೊಳ್‌ ಕುಳ್ತ ನಕ್ಷತ್ರ ಪಕ್ಷಿಯೊಲಿರ್ದು
ಪ್ರೇಕ್ಷಿಸಿದೆನಭಿಷೇಕ ಲೀಲಾ ಮಹರ್ ಲಕ್ಷ್ಮೀ
ವಿಭೂತಿಯಂ;
ಮೇರೆಗಾಣದ ಕಾಲದೇಶದ
ಚಿದಾಕಾಶಮಂ ತುಂಬಿದತ್ತ ಒಂದು ನೀಲಮೌನಂ.
ಮೌನ ಸಿಂಧುವೊಳೇಳ್ವ ನಾದ ಬುದ್ಬುದಗಳೋಲ್‌ ೬೦
ಚಲಿಸಿದುವು ವಿವಿಧ ವರ್ಣಾಗ್ನಿಯ ತರಂಗಗಳ್‌.
ಶರಧಿನಾಭಿಯಿನೇಳ್ದುವೈರಾವತಂಗಳೇಳ್‌,
ದಿಶೆಗಳುಜ್ವಲಿಸೆ, ಚಕ್ರಾಕಾರದೊಳ್‌ ನಿಂದು
ಸೊಂಡಿಲ್ಗಳಿಂದಾಂತುವೊಂದುದಕಸದ್ಮದಿಂ
ಮೂಡಿ ಬಂದಮೃತರುಚಿಯಂಬುಜದ ಮುಕುಳಮಂ.
ಗಾನ ಮರುತನ ಸೋಂಕಿಗೊಯ್ಯೆಯ್ಯನೆಸಳೆಸಳೆ
ಬಿರಿದರಳ್ದುದು ತಾವರೆಯ ಮುಗುಳ್‌, ಪೇಳ್ವೆನೇಂ?
ತುಂಬಿದತ್ತದರ ಕಂಪಂಬುಜ ಭವಾಂಡಮಂ!
“ನೀಂ ನೋಡುತಿರ್ಪಾ ಸರೋಜದೊಂದೊದೆಸಳ್‌
ಬಹುಕೋಟಿ ಯೋಜನ ಸುವಿಸ್ತೀರ್ಣದೊಂದೊಂದು ೭೦
ದೇವಲೋಕಂ ಕಣಾ!” ಸುಖಭೀತಮನನಾಗಿ
ನೋಡುತಿರಲಾಂ ಮುನ್ನಡೆದನೊಂದೆರಳ್‌ ಪಜ್ಜೆಯಂ
ವಕ್ಷ ರಕ್ಷೆಯೊಳೆನ್ನನಾಂತ ಗುರುದೇವನಾ
ಲೋಕಶಿಲ್ಪಿಯ ಕಲ್ಪನೆಯೆ ಕಲಾಸತ್ಯಮಂ
ಬಳಿಸಾರ್ವವೋಲ್‌: ಕಂಡೆನಾ ಕಮಲದಲ ದಲಗಳಲಿ,
ಬಾಂದಳದಿ ಕಿಕ್ಕಿರಿವಲ್‌ಚುಕ್ಲಕಿಗಳನೆಂತಂತೆ,
ಸಾಂದ್ರಮುಜ್ಜ್ವಲಿಸಿರ್ದ ಕಾಂತಿಕೇಂದ್ರಂಗಳಂ,
ಗಣಿತಂ ದಣಿವ ಸಂಖ್ಯೆಯಲಿ. ತಿರ್ರ‍ನೆಯೆ ತಿರುಗಿ
ರಚಿಸಿದುವಲಾತಚಕ್ರಂಗಳಂ ವಿದ್ಯುನ್ಮಹಾ
ವೇಗದಲಿ: “ದಿವ್ಯ ಚಿಚ್ಛಕ್ತಿಯಿಂ ತಿರುಗುತಿಹ ೮೦
ಸೃಷ್ಟಿ ಚಕ್ರಂಗಳ್‌ ಕಣಾ, ಮೂಲಗಳ್‌ ತಾಂ ಮನುಜ
ವಿಶ್ವದೊಳ್‌ ಪ್ರಕೃತಿನಿಯಮಂಗಳೋಲ್‌ ತೋರ್ಪಖಿಲ
ಜಡದ ಮೇಣ್‌ ಜೀವಚೇಷ್ಟಿತಕೆ.” ಮುಂಬರಿದಿನಿತು
ನಿಲ್ಲಲಾತಂ, ಕಂಡನೊಂದೊಂದಲಾತಕೃತ
ನೇಮಿಯುಂ ತಾಂ ಪುಟ್ಟಿದತ್ತಮಿತ ದೇವತಾ
ಹಸ್ತ ಹಸ್ತ ನ್ಯಸ್ತ ವಿನ್ಯಾಸದಿಂ. ಆ ಜ್ಯೋತಿ,
ನಮ್ಮ ಬೆಳಕೆಯೆ ತನ್ನ ನೆಳಲ ನೆಳಲಿಗೆ ನೆಳಲ್‌
ತಾನೆಂಬುದಾ ಚಿತ್‌ ತಪೋಜ್ಯೋತಿ ಏ ತನುವೆತ್ತ
ಆ ದೇವತಾಕೃತಿಯ ದಿವ್ಯಪ್ರಕಾರಗಳ್‌
ಬೆಳೆದುವೊಂದೊಂದುಮಾಗಸಕಿದಿರ್ ನಿಮಿರೇಳ್ವ ೯೦
ಶಿಖರಮಯ ಗಿರಿಪಂಕ್ತಿ ಸಂಭವ ದಿಗಂತಕೃತ
ರೇಖಾ ಮುಖಂಗಳೋಲ್‌, ಬೈಗಿನಾಕಾಶದೊಳ್‌
ಕೆತ್ತಿದೊಲ್‌ ದಗ್ದೇಶಮಂ. ದಳಸಹಸ್ರದೊಳೊಂದು
ದಳದಿ, ಕಿಡಿಕೋಟಿಗಳಲೊಂದು ಕಿಡಿಗಾಲಿಯೊಳ್‌,
ಪಂಕ್ತಿ ಪಂಕ್ತಿಯ ದೇವತಾ ರೂಪಗಳಲೊಂದೆಮಗೆ
ಗುರಿಯಾಗಿ ಬೆಳೆಬೆಳೆದು ನಮ್ಮನೊಳಗೊಳ್ಳುತಿರೆ,
ಗುರುದೇವ ವಾಣಿ:
“ನೀನೀಗಳೀ ಜ್ಯೋತಿರ್
ದಿವೌಕಸನ ದಿಗುಮೊಗಂಬುಗುವಯ್‌, ಲಲಾಟದಾ
ಪ್ರಜ್ಞಾನ ಪಥದಿಂದಮಾತನ ಮನೋಮಯಕೆ!”
ಪೊಕ್ಕನಾಂ ಸಹಿತೊಯ್ಕನಾ ದೇವ ಫಾಲಾಕ್ಷಿಯಂ, ೧೦೦
ರವಿಯ ಛವಿ ಪುಗುವಂತೆ ಗಾಜಿನ ಗವಾಕ್ಷಮಂ, ಮೇಣ್‌
ಕವಿಯ ಕನಕಸ್ವಪ್ನಮಂ ಪ್ರವೇಶಿಸುವಂತೆವೋಲ್‌
ಸಹೃದಯಪ್ರತಿಭೆ. ನೀರಿಗೆ ಮರುಳ್ದುರುಳ್ದೊಂದು
ಮೀನಂತೆವೋಲಾದೆನಾಂ. ಬರ್ದುಕಿದೋಲುಸಿರ್
ಸುಯ್ದೆನೆಂದನ್‌:
“ಗುರುವೆ, ಸ್ವಪ್ನದಿಂದೆಳ್ಚರರ್ತನೋಲ್‌,
ಬಗೆಗದಡುವಾ ಭ್ರಮೆಯಿಂದಮೀ ಪರಿಚಿತಪ್ರಮೆಗೆ
ಪಿಂತಿರುಗಿದಂತಾದುದಯ್‌. ವಿಕೃತಿಲೋಕದಿಂ
ಮಿಥ್ಯೆಯಿಂ ಪ್ರಕೃತಿಲೋಕಕೆ ಮತ್ತೆ ಸತ್ಯಕ್ಕೆ
ಬಂದು ನೆಮ್ಮದಿಯಾಂತುದೆನ್ನ ಜೀವಂ.”
ಕೇಳ್ದು
ಪಸುಳೆ ತೊದಲಿಗೆ ತಾಯಿ ನಗುವಂತೆ ನಕ್ಕನಾ ೧೧೦
ದಿವ್ಯ ಪುರುಷಂ: “ವತ್ಸ, ಮೀನ್ಗೆ ನೀರೊಳಗಿರ್ಪ
ಗಾಳಿಯೆ ಗಾಳಿ. ನೀರನುಳಿಯಲ್ಕುಸಿರ್ ಕಟ್ಟಿ,
ವಾಯುಮಂಡಲಮೆ ವಾಯುವಿಹೀನವೆಂಬಂತೆ
ತೋರ್ಪುದಯ್‌. ನಿನಗುಮಂತೆಯೆ ಸತ್ಯಲೋಕಗಳ್‌
ತೋರ್ದುವು ಅಸತ್ಯದೋಲ್‌. ತೋರುತಿಹುದೀ ಮಿಥ್ಯೆ
ಘನತರದ ಸತ್ಯದೋಲ್‌. ನನಸಿನೊಳ್‌, ಚರಿಸುತಿರೆ
ಕನಸಿನೊಲ್‌ ತೋರ್ದುದಾ ಅಸಂಖ್ಯ ದೇವರೊಳೊರ್ಬ
ದೇವನ ಮನೋಮಯಂ ಕಾಣ್ಬ ಕನಸಂ ಬೊಕ್ಕು
ಗಟ್ಟಿ ನನಸಂ ಮೆಟ್ಟಿಮುಟ್ಟಿ ನಿಂದಂತೆವೋಲ್‌
ನಿನಗನುಭವಂ. ನೆಳಲ್‌ ನೆಳಲನಲ್ಲದೆ ಅನ್ಯಮಂ ೧೨೦
ನನ್ನಿಯಂ ತಿಳಿಯದೊಪ್ದದು ಕಣಾ!ನೋಡಿದುವೆ
ಯೋಗಬುದ್ಧಿಗ್ರಾಹ್ಯ ಮನುಜವಿಶ್ವಂ. ಇದುವುಮಾ
ಸ್ಥೂಲ ನರಮತಿಗೆ, ನಿನಗಾ ಸತ್ಯಲೋಕಗಳ್‌
ತೋರ್ಪಂತೆವೋಲ್‌, ಬರಿಯ ಕಾವ್ಯವಿಭ್ರಮೆ ನೆಯ್ವ
ನಶ್ವರ ಮನೋಹರಂ, ಕಲಾಮಾತ್ರಮೆಯೆ ರುಚಿರ
ಮೇಣಚಿರ ಸತ್ಯಂ ಕಣಾ! ಖಿನ್ನನಾಗದಿರ್;
ನಾಂ ಗೆಯ್ದುದಾರ ಖಂಡನೆಯಲ್ತು; ಲೀಲಾಮಯೀ
ಮಾಯಾ ಸ್ವರೂಪ ಕಥನಂ.”
ಮನೋಲೋಕದಾ
ಚಿಚ್ಛಕ್ತಿ ವಿಭವಂಗಳಂ, ಸಾಗರೋಪಮ
ಮಹರ್ಷಿ ರೂಪಂಗಳಂ, ಬುದ್ಧಿ ಪ್ರಭಾವಗಳ ೧೩೦
ಚಿನ್ಮಯಾಕೃತಿಗಳಂ, ಸಿದ್ಧಿ ಶಕ್ತಿಗಳಾದಿ
ಮಾತೃಕೆಯರಂ, ಕೃಪೆಗಳಂ, ನಮಸ್ಕಾರಾದಿ
ವಿನಯಂಗಳಂ, ಪ್ರತಿಭೆ ಮೇಣ್‌ ಜ್ಞಾನಸಾಧನಾ
ತೇಜೋ ವಿಶೇಷಂಗಳಂ ತೋರುತಿಳಿದಿಳಿದಿಳಿದು
ಪೊಕ್ಕನ್‌, ಮನೋಮಯದ ಮಾತೃಸತ್ತ್ವಂ ಪರಿವ
ಪೊರ್ಕುಳಿಂ ಭ್ರೂಣಕೆಂಬಂತೆವೋಲ್‌, ಪ್ರಾಣಮಯ
ಜಗಕೆ. ಕಣ್ನೆನಗೆ ತತ್ತರಿಸಿತಾ ಶತಶತಶತಂ
ಸಹಸ್ರರೀತಿಯ ವರ್ಣ ಕಿರ್ಮೀರತೆಗೆ. ಶುಕ್ಲ
ಮೇಣಂ‌ ಕೃಷ್ಣ ಮೇಣ್‌ ನೀಲ, ಮೇಣ್‌ ರಕ್ತ, ಮೇಣ್‌ ಕಪಿಶ,
ಮೇಣ್‌ ಧೂಮ್ರ ಪಾಟಲ ಪಿಂಗಲಾದಿ ನಾನಾ
ಬೃಹತ್ತರಂಗಿತ ಸಮುದ್ರಾಂಗಿಯಾಗೆಸೆದುದಾ
ಓಜಶ್ಯರಧಿ ಸಾಗರಂ. ಮಧುರ, ವಾತ್ಸಲ್ಯ, ೧೪೦
ಸಖ್ಯ, ಮೇಣ್‌ ದಾಸ್ಯ, ಮೇಣ್‌ ವೈರಾದಿ ಭಾವಗಳ್‌
ಮೆರೆದುವು ಮಹಾವೀರ್ಯ ಮಕರಂಗಳೋಲ್‌. ರಾಗ
ಮೇಣ್‌ ದ್ವೇಷ, ಕೋಪ ಮೇಣ್‌ ಕಾಮ ಮೇಣ್‌ ರೋಷ ಮೇಣ್‌
ಅಸೂಯಾದಿಗಳ್‌ ಮೆರೆದುವಲ್ಲಲ್ಲಿ ನಕ್ರಂಗಳೋಲ್‌.
ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು
ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್‌ ಜನತೆ ಜನತೆಯೊಳ್‌ ಪಕ್ಷ ಪಕ್ಷಂಗಳಂ
ಕೆರಳಿಸುವ ಶತ ಶತ ಮತಂಗಳುಂ ತಾಮಲ್ಲಿ ೧೫೦
ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್‌,
ಜೋಲ್ವ ಜಿಹ್ವೆಯೊಳತಿ ಭಯಾನಕಂ! ಪೃಥ್ವಿಯೊಳ್‌
ಘೋರ ಯುದ್ಧಂಗಳಂ ಪೊತ್ತಿಸುವ ಛಲಂಗಳ್‌,
ಮಹತ್ತ್ವಾಶೆಗಳ್‌, ಯಶೋಲೋಭಗಳ್‌, ಕೃಪಣತಾ
ಭೂತಗಳ್‌, ಕೀರ್ತಿಶನಿಗಳ್‌, ಮಮತಾ ವಿಕಾರಗಳ್‌
ಮೆರೆದುವಲ್ಲಲ್ಲಿ ಪಶುವೀರ್ಯ ದೈತ್ಯರ್ಕಳೋಲ್‌.
ಮೇಣ್‌ ಕ್ಷಮಾ, ಮೇಣ್‌ ದಯಾ, ಮೇಣ್‌ ಮೈತ್ರಿ, ಮೇಣಹಿಂಸಾ
ದಿವ್ಯರೂಪಗಳಲ್ಲಿ ಚಂದ್ರರೋಚಿಯ ಚೆಲ್ಲಿ
ತಳತಳಿಸುತಿರ್ದುವಾಶೀರ್ವಾದ ಮುದ್ರೆಗಳವೋಲ್‌,
ಪಾಲ್‌ಸೋರ್ವ ಪಾಲ್‌ಮೆಯ್ಯ ಹರಾದ್ರಿಧೇನುಗಳವೋಲ್‌. ೧೬೦
ಇಂತಿಂತು ತೋರುತ್ತಾ ಪ್ರಾಣಮಯ ಲೋಕದಿಂ,
ಗರ್ಭದಿಂದರ್ಭಕಂ ಯೋನಿಮುಖದಿಂದಿಳಿವವೋಲ್‌,
ಕರುಣೆಯಿಂದೆನಗಾಗಿ ನನ್ನ ಗುರುದೇವನಾ
ಬ್ರಹ್ಮಕವಿ ತಾನುಮವತರಿಸಿದನು ನನ್ನೊಡನೆ
ಸುಪರಿಚಿತದನ್ನಮಯದೈಂದ್ರಿಯ ಜಗತ್ತಲಕೆ!
ನೀಹಾರಿಕಾ ಲಕ್ಷಗಳ್‌, ನಕ್ಷತ್ರ ಕೋಟಿಗಳ್‌,
ಸೂರ್ಯ ಚಂದ್ರಾದಿ ವಂಕಿಮ ದೇಶಕಾಲದ
ಮನೋಜ್ಞವೀಧಿಯಿನಿಳಿದು ಕಂಡೆನೀ ಉರ್ವರೆಯ
ಶಾಶ್ವತ ಅಯೋಧ್ಯೆಯಂ:
“ಕಾಣ್ಬುದದೊ ನೋಡಲ್ಲಿ
ರಾಮಪಟ್ಟಾಭಿಷೇಕೋತ್ಸವದ ಮೂಲಮ್‌, ಆ ೧೭೦
ಮಾನುಷ ಸ್ಥೂಲ ನಶ್ವರ ಕೃತಿಗೆ ತಾನಿದುವೆ
ನಿತ್ಯ ಶಾಶ್ವತ ದಿವ್ಯ ಮಾತೃಕೆ ಕಣಾ!” ಗುರು ತೋರೆ
ಕಂಡೆನಾಂ; ಕೈಮುಗಿದು ನಿಂದೆನಾಂ; ಧನ್ಯನಾಂ;
ಇಂಗಡಲ ನಡುವಣಿಂದೆಳ್ದುದೊಂದೆಳ್ತರದ
ನೀಲಿಮಲೆ, ಶಿಖರದ ಕಿರೀಟದಿಂ ಮೀಂಟುತೆ
ಪಯೋದ ಪಥಮಂ. ರಾಜಿಸಿತು ಬಳಿಯೆ ತಳ್ತದಂ
ತೊಡೆಸೋಂಕಿ ಕುಳ್ತವೋಲೊಂದು ಕನಕಾಚಲಂ.
ರಜತಗಿರಿಯೊಂದೆಸೆದುದು ಸಮೀಪದೊಳೆ, ಸೇವೆಯಂ
ಸಲಿಸುವೋಲ್‌. ಮೇಣೆರ್ದ್ದುದೊಂದನತಿ ದೂರದೊಳ್‌
ಸಸ್ಯ ಸುಂದರ ಬೃಹದ್‌ಭೂದರಂ, ಸ್ನೇಹದಿಂದಾ ೧೮೦
ನೀಲಾದ್ರಿಭುಜದೆಡೆಗೆ ತನ್ನ ಗಿರಿಬಾಹುವಂ
ಚಾಚಿ. ಮತ್ತಿತರ ಶೈಲಗಳಿರ್ದುವವುಗಳಂ
ಸುತ್ತಿ,ಲ ತೆರೆತೆರೆವರಿವ ಸಾಗರದವೋಲೆನ್ನ
ಕಣ್ಣಲೆದು ಸೋಲ್ವನ್ನೆಗಂ. ದೃಷ್ಟಿಸೀಮೆಯಂ
ತುಂಬಿದುದು, ಯವನಿಕೆಯನೆಳೆದಂತೆ, ಗಂಧಮಯ
ಹೇಮಭಾಸುರ ಧೂಳಿ, ಸುರಕಂಠ ಸಂಗೀತ
ದಿವ್ಯ ಛಂದೋ ವಿಲಾಸಾಂದೋಲಿತಂ. ಮಹರ್ಷಿ
ಮುಖಂಗಳಂ ತಳೆದೇಳ್‌ ಕಡಲ್‌ಗಳುಂ ಕೈಯೆತ್ತಿ
ಅಭಿಷೇಕಮಂಗೈದುವಂಬುದ ಕುಂಭಧಾರೆಯಲಿ,
ಮೊಗೆಮೊಗೆದು ಮುನ್ನೀರ್ಗಳಂ! ಹಿಮಾಲಯ ವಿಂಧ್ಯ ೧೯೦
ಸಹ್ಯ ಮೊದಲಹ ಮೇದಿನಿಯ ಗಿರಿಶ್ರೇಣಿಗಳ್‌
ತೊಯ ದು, ತಣಿದುವು ದಂಡಕಾರಣ್ಯಗಳ್‌, ಮಲೆಯ
ನಾಡುಗಳ್‌ ಮೇಣ್‌ ಬಯಲ್‌ಸೀಮೆಗಳ್‌. ಗಂಗೆ ಮೇಣ್‌
ಯಮುನೆಯರ್, ಕೃಷ್ಣೆ ಕಾವೇರಿ ಮೇಣ್‌ ತುಂಗೆಯರ್,
ಪೃಥಿವಿಯ ನದ ನದೀ ಸಮೂಹಗಳ್‌ ಸಂಭವಿಸಿ
ಪರಿದುದಾ ಪರ್ವತ ಶಿರಂಗಳಿಂದಭಿಷೇಕ
ವಾರಿಪ್ರಭವ ಜಟಾ ಸ್ರೋತಂಗಳೋಲ್‌!
ರಸವಶಂ
ನೋಡುತಿರಲಾಂ, ಬಂದುದೊಯ್ಯಯ್ಯನೆಯೆ ಕಿವಿಗೆ,
ಬಹುದೂರದಿಂದೆನೆ, ಸಮುದ್ರ ಮಂದ್ರಮದೊಂದು
ರುಂದ್ರ ಜಯಗಾಥೆಯ ಮಹಾ ನಿನಾದಂ:
“ಕಂದ ಕೇಳ್‌!” ೨೦೦
ಕರುಣೆಯಿಂದೊರೆದುದಿಂತಾ ಗುರುಕೃಪಾ ವಾಣಿ,
“ಮಾನವನ ಕಿವಿಯಾಲಿಸಲ್ಕರಿಯದೀ ಸೃಷ್ಟಿ
ಗಾಥೆಯಂ, ನಿತ್ಯ ರಾಮಾಯಣದ ರಾಮಂಗೆ
ನಿಚ್ಚಮುಂ ನಡೆವ ಪಟ್ಟೋತ್ಸವ ಸ್ತೋತ್ರಮಂ,
ಆಲಿಸದೊ! ಸ್ಥಾವರದಿ, ಜಂಗಮದಿ, ಜಡ ಜೀವ
ಚೇತನ ಚರಾಚರದೊಳಣುರೇಣು ತೃಣಕಾಷ್ಠ
ಕೋಟಿ ಕೋಟಿಯ ಕಂಠದಿಂದೇಳುವಾನಂದ
ಗೋಷ್ಠಿಗಾನಂ!”
ಗುರುಕೃಪೆಯೊಳಾಲಿಸಿದೆನಾಂ
ಅವಾಙ್ಮನೋಗೋಚರವನಖಿಲ ಶಬ್ದಾಬ್ಧಿಯಂ,
ಸರ್ವ ಸಂಗೀತ ಯೋಗದ ಚರಮ ಸಿದ್ಧಿಯಂ, ೨೧೦
ಶಿಲೆಗಳಲಿ ಜಲಗಳಲಿ ಲೋಹ ಲೋಹಗಳಲ್ಲಿ
ಖಗಗಳಲಿ ಮೃಗಗಳಲಿ ನಾನಾ ನರಸ್ವರಕಲಾ
ಸಕಲ ವಿನ್ಯಾಸದಲಿ ಮರ್ತ್ಯೇಂದ್ರಿಯಂಗಳಿಗೆ
ಪ್ರತ್ಯಕ್ಷಮಾಗುತಿರ್ಪೋಂಕಾರಮಂ! ಘನಂ
ದ್ರವಮಾಗುವೋಲುರಿಗೆ ಕಪ್ಪುರಂ ಕರಗುವೋಲ್‌
ಕರಗಿದನು ಗುರು, ತಾನುಮೋಂಕಾರಲಯನಾಗಿ
ನನ್ನೀ ಕೃತಿಯ ಮಹಾಛಂದಸ್‌ ಶ್ರೀ ಲಯಗತಿಯವೋಲ್‌!
ಕವಿ ವಿಭೂತಿಗೆ ನಮೋ! ಕೃತಿ ವಿಭೂತಿಗೆ ನಮೋ!
ದರ್ಶನಧ್ವನಿರಸಾಮೃತ ಪಾನದಾನಂದದಿಂ
ಲೋಕಶೋಕವನಳಿಸಿ ಭುವನತ್ರಯಂಗಳಂ ೨೨೦
ತಣಿಪ ನಂದನ ತಪೋದೀಕ್ಷೆಯಂ ಕೊಂಡೆಸಪ
ರಸ ಋಷಿಗೆ ಯೋಗಮತಿ ಸಹೃದಯ ವಿಭೂತಿಗೆ ನಮೋ!
ಯುಗ ಯುಗದಿ ಸಂಭವಿಪೆನೆಂಬ ಭಗವದ್ವಿವ್ಯಮಾ
ವಚನಮೇಂ ನರರೂಪಮಾತ್ರಕ್ಕೆ ಮುಡಿಪೆ, ಪೇಳ್‌?
ನರಸಿಂಹ ಮತ್ಸ್ಯ ಕೂರ್ಮಾದಿ ಚರಮಾ ಲೀಲೆಗೇಂ
ಪೊರತೆ ಈ ಕೃತಿರೂಪಮಾ ಭಗವದಾ ವಿರ್ಭಾವ
ಬಹುರೂಪ ಸೂತ್ರತೆಗೆ? ರಾಮಂಗೆ ಮೊದಲಲ್ತೆ,
ರಾಮಾಯಣಂ? ಮುನ್ನಲ್ತೆ, ಪಿರಿದಲ್ತೆ, ಮೆಯ್ಯಲ್ತೆ
ಮನೆಯಲ್ತೆ ರಾಮಾಯಣಂ? ರಾಮನಾಮದ ಮಹಿಮೆ
ರಾಮಂಗೆ ಮಿಗಿಲೆಂಬವೋಲ್‌ ರಾಮಾವತಾರಕಿಂ ೨೩೦
ಗುರುತರಂ ತಾನೈಸೆ ರಾಮಾಯಣಾವತಾರಂ!
ಓಂ ನಮೋ ರಾಮಾವತಾರಕಿರ್ಮಡಿಯೆನಲ್‌,
ಮೂಲವಿಗ್ರಹಕೆತ್ತಿದುತ್ಸವದ ಪಡಿಯೆನಲ್‌,
ನನ್ನೊಳೀ ರಾಮಾಯಣಾವತಾರವನೆತ್ತಿ ಮೇಣ್‌
ಸರ್ವಭಾಷಾಮಯೀ ಭಗವತಿಯ ಪೂವಡಿಯ
ಕನ್ನಡದ ಸಿರಿಗುಡಿಯ ನುಡಿಯ ಕಣ್ಪಡಿಮೆಯೊಳ್‌
ಕಡೆದು ಮೂಡಿಹ ನಿತ್ಯರಾಮಂಗೆ, ಓಂ ನಮೋ,
ಓಂ ನಮೋ, ಓಂ ನಮಃ! ಓಂ ಶಾಂತಿಶ್ಯಾಂತಿಶ್ಯಾಂತಿಃ!

**** ಮುಕ್ತಾಯ ****






*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ