ಸಂಚಿಕೆ 1 - ಕುಂಭಕರ್ಣನನೆಬ್ಬಿಸಿಮ್
ಮನೋಮಯಂ ಪ್ರಾಣಮಯಮನ್ನಮಯದಾ ಪ್ರತಿಮೆಗಳ್
ಮಾನವತೆ ವಾನರತೆ ದೈತ್ಯತೆಗಳಂ ದಾಂಟುವೋಲ್
ಸಂಪುಟಮಯೋಧ್ಯೆಯಂ ಕಿಷ್ಕಿಂಧೆಯಂ ಲಂಕೆಯಂ
ದಾಂಟಿ, ವಿಜ್ಞಾನದೃಷ್ಟಿಯ ಪೂರ್ಣರಸಕೇರ್ವವೋಲ್
ತವ ಕೃಪಾ ಕರುಣೆಯಿಂ ಶ್ರೀ ಸಂಪುಟ ಬೃಹತ್ಕಲಾ
ವೈಭವದ ಮೇರು ಮಂದರ ಹಿಮಾಚಲೋನ್ನತ
ಭವ್ಯತಾ ಅನುಭವದ ಭೂಮಾನುಭೂತಿಯ
ಅತೀಂದ್ರಿಯದ ಪರ್ಯಟನಕಾತ್ಮದ ನಭೋನೌಕೆಯಂ
ತೇಲುತಿಹೆನೇರುತಿಹೆನಾಂ! ತಾಯಿ
ಹಸುಳೆಯನೆರ್ದೆಗೆ ೧೦
ಓತುಕೊಳ್ವಂದದಿಂದಾತು ಪೊರೆಯಯ್, ಗುರುವೆ,
ಮಂತ್ರದೀಕ್ಷೆಯ ನಿಮ್ಮಡಿಯ ಶಿಷ್ಯಸಾಮಾನ್ಯನಂ,
ಮಾನ್ಯ ಕುಪ್ಪಳಿ ವೆಂಕಟಾರ್ಯಂಗೆ ಮೇಣ್
ಪೂಜ್ಯೆ
ಸೀತಮ್ಮನೆಂಬಿಭಿಧಾನದಾ ಮಾತೃದೇವತೆಗೆ
ಸಂಭವಿಸಿದೀ ಪುಣ್ಯನಂ, ಧನ್ಯನಂ, ದೀನನಂ;
ಕೌಸಲೆಯ ನಂದನಂ ಮೇಣ್ ದೇವಕಿಯ ಕಂದನುಂ
ತಾಮೊಂದೆ ಮೆಯ್ಯೊಳಿಂದವತಾರಮೆತ್ತಿದಾ
ಶ್ರೀರಾಮಕೃಷ್ಣ ಭಗವದ್ ಗೋತ್ರಸಂಜಾತನಂ;
ತೇಜಸ್ವಿ ಚೈತ್ರ ಮೇಣಿಂದುಕಲೆ ತಾರಿಣಿಯರಂ
ಮಕ್ಕಳೆನುವಕ್ಕರೆಯ ಸಕ್ಕರೆಗೆ ಕಬ್ಬಾದಳೀ
ವಕ್ಷಮಂಚಕ್ಷೀರ ಬಿಂಬೇಕ್ಷುರಸ ಚಂದ್ರಿಕಾ ೨೦
ಹೇಮಾ ಚಕೋರಚಂಚುಪ್ರೇಮ ಗೋಸ್ರೋತನಂ;
ಭವತಾರಣೀ ತಾರಕಚರಣ ನಾಮರೂಪನಾ
ಶ್ರೀ ಶಿವಾನಂದ ಚಿತ್ಕಿರಣೋತ್ಠ
ಹೃತ್ಕೇಂದ್ರನಂ!
ಅನ್ನಮಯವಾನಂದಮಯವನೊಳಕೊಳ್ವಂತೆ
ದಶಶಿರಂ ಸೆರೆಗೊಂಡ ದೇವಿ ಭೂಮಿಜೆಯೆಂತುಟಾ
ವಿಜ್ಞಾನರೂಪಿ ರಾಮನ ಚಿತ್‌ತಪಸ್‌ಶಕ್ತಿಯಿಂ
ಮುಕ್ತೆಯುಂ ಸ್ವಾಮಿಸಂಯುಕ್ತೆಯುಂ ತಾನಪ್ಪಳಾ
ದಿವ್ಯದರ್ಶನವನೆನಗೊಲಿದು ತೋರ್ ನಿತ್ಯತ್ವಮಂ
ಮೇಣ್ ಪ್ರಜ್ಞಾಪ್ರಪೂರ್ಣತಾ ಲೀಲಾ ವಿಭೂತಿಯಂ,
ಪಾರ್ಥಂಗೆ ವಿಶ್ವರೂಪವನಂದು ಕೃಪೆದೋರ್ದವೊಲ್!
೩೦
ಮೀಯಿಸಿ ದಿವೀಧುನಿಯ ಪೀಯೂಷವಾಹದಲಿ
ತನ್ನ ರಥವಾಜಿರಾಜಿಯನಹಸ್ಪತಿಯ ಸೂತಂ
ಪ್ರಾಚ್ಯ ಪರ್ವತದುತ್ತಮಾಂಗವನಡರ್ದ್ದನಾ
ಹಬ್ಬಿದುದೊ ದಿವಸೇಶ್ವರಾಶ್ವ ಖುರಧೂಳಿಯೆನೆ
ಕೆಂಪೇರ್ದುದಾಖಂಡಲ ದಿಶಾ ಉಷಾ ವಿಯನ್
ಮಂಡಲಂ. ಅಂತೆವೋಲಿರುಳೆಲ್ಲಮರಿವಾಹಿನಿಯ
ಕೆನ್ನೀರಿನಲಿ, ಮಿಂದು, ಕಪಿಸೇನೆಯನಸಂಖ್ಯೆಯಿಂ
ಕೊಂದು, ನೀಲನ ಶೌರ್ಯಕೈರವಕೆ ರವಿಯಾಗಿ,
ಹನುಮಗರ್ವದ ಗಿರಿಗೆ ಪವಿಯಾಗಿ, ಲಕ್ಷ್ಮಣನ
ಕಡುಗಲಿತನದ ಖಡುಗಕೊರೆವುಗಿಸಿ, ಅಂಗದನ ೪೦
ರಣಗೌರವಕೆ ರಾಹುವಿಡಿಸಿ, ತುದಿಗೆ ರಾಮನೆ
ಸೆಣಸೆ ಸರಿಸಮವೆನಿಸಿ ಕಾದಾಡುತೇರ್ವಡೆದು
ಮೆಯ್ಮರೆತ ಸೇನಾನಿಯಂ, ಮಹಾಪಾರ್ಶ್ವನಂ,
ಯುದ್ಧರಂಗಕೆ ದೂರಮಿರ್ದೊಂದು ಜನರಹಿತ
ವಿಪಿನಾಂತರದ ಗಿರಿಶಿರಸ್ಥಲಕೆ ತಂದನಯ್
ನಿವುಣಸಾರಥಿ ವರೂಥಾಗ್ರದಲಿ, ಬೀಸಿದುದು
ಹೊತ್ತರೆಯ ತಂಬೆಲರ್ ಮೆಯ್ಗೆ; ಸೂಸಿದುವಲರ್
ಫ್ರಾಣಕ್ಕೆ ಮಧುಸಮಯ ಪರಿಮಳಪ್ರಾಣಮಂ;
ಸಾರಥಿಯ ಶಿಶಿರಸೇವೆಗೆ ತೆರೆದುವೊಯ್ಯನೆಯೆ
ಕಣ್; ನೋಡಿದನು ತಾನಿರ್ದ್ದದ್ರಿಚೂಡಮಂ ೫೦ಚುಂಬಿಸುತ್ತಾಗಳಾಗಳೆ ಮೂಡಿಬಂದಾ
ಮರೀಚಿಮಾಲಿಯ ಹಿರಣ್ಮಯಮೂರ್ತಿಯಂ, ಜಗತ್
ಚಕ್ಷುವಿಗೆ ಕಯ್ಮುಗಿದು ಸಾರಥಿಯ ಕಡೆ ನೋಡಿ;
“ಮಾಣ್, ಸೂತ, ಶುಶ್ರೂಷೆಯಂ, ಕೇಳುತಿಹುದೆನಗೆ
ಮಿಳ್ತುವಿನ ಕರೆಯ ಕೊಳಲಿಂಚರಂ. ಮರ್ತ್ಯಮಂ
ದಾಂಟಿರ್ಪುದಾಲಿಸಾ ಪಕ್ಷಿಕಂಠಸ್ವನಂ.
ವೀರರ್ಗೆ ರಣಧರೆ ಮರಣಶಯ್ಯೆ, ನೀನೇಕೆ
ನನ್ನನಲ್ಲಿಂದಿಲ್ಲಿಗೊಯ್ದೆ?” ಒಡೆಯನ ನುಡಿಗೆ
ತುಟಿ ನಡುಗಿ ಜಿಹ್ವೆ ತೊದಲಿರೆ, ಸಾಶ್ರುನೇತ್ರನಾ
ಸೂತನಿಂತೆಂದನ್;
“ಚಮೂಸ್ವಾಮಿ ನೀಂ ಬದುಕೆ ೬೦ಜಯವೆಮ್ಮದೆಂದು
ದೂರಕೆ ತಂದೆನಸುಗಳ್ಕಿ
ಬಂದೆನೆಲ್ಲಯ್, ತಂದೆ.”
“ನನ್ನ ಬದುಕೆಂತಂತೆ
ನಮ್ಮ ಗೆಲ್ಲಂ! ಸೂತ, ಆ ಆಸೆಯಂ ಬಿಟ್ಟು ಕಳೆ,
ನನ್ನನೀ ಸ್ಯಂದನಾಗ್ರದಿನೊಯ್ಯನಿಳುಹುವೆಯ
ಆ ಶಾದ್ವಲಸ್ಥಿರೆಗೆ!”
ಮುಗಿಲ್ ಬಿಳಿಯ ಕುದುರೆಗಳ
ಕೊರಳುರ್ಚಿದನ್, ಚಂಚಲತೆಯಿಂ ಧ್ರುವಕ್ಕುಯ್ವವೋಲ್
ತೇರಿಂದೆ ತಿರೆಗಿಳಿಸಿದನು ತನ್ನೊಡೆಯನೊಡಲಂ
ಆಲಿಸಿದನಾಲಿ ನಟ್ಟಾಣ್ಮನಂತಿಮ ಸಮಯದಾ
ಸಂದೇಶಮಂ:
“ಕೇಳ್, ಸೂತ, ಆರ್ಗಮಿದನುಸುರದಿರ್,
ಲಂಕೇಶ್ವರಂ ವಿನಾ, ನನ್ನ ಮುಂಗಾಣ್ಕೆಯಂ, ೭೦ನೀನಿನ್ನುಮಿಳೆಯ ಆಳ್; ನಾನೊ ಅರೆಗಿಂ ಮಿಗಿಲ್
ಆಗಳೆ ಅಲೌಕಿಕನ್! ಕಣ್ಣೀರನೊರಸಿಕೊಳ್;
ಕಾಣೆನ್ನ ಮೊಗದೊಳ್ ಮುಗುಳ್ನಗೆಯ ಶಾಂತಿಯಂ;
ನೀನುಮಂತೆಯೆ ತಾಳ್ ಸಮಾಧಾನಮಂ.”
ಶ್ರದ್ಧೆ
ಕಣ್ಣೆರೆದವೋಲ್, ಸಾರಥಿಗೆ ಸೇನಾಪತಿಯ
ಮಾತಿನಲಿ ಸಿದ್ಧಪುರುಷನ ವಾಣಿ ಮೈದೋರಿ,
ಕಿವಿಗೊಟ್ಟನಾ ಶಕ್ತಿಸಾಧಕಗೆ:
“ಪಾಪಮುಂ
ಪುಣ್ಯಮುಖಿ! ಐಹಿಕದ ವೈರಿ ಆಧ್ಯಾತ್ಮಿಕಕೆ
ಕೆಲೆಯಹನ್, ಗುರುವಹನ್, ಬಹುಪಥಂಗಳ್ ವಿಧಿಗೆ
ತನ್ನಯ ಕಾರ್ಯಸಾಧನೆಗೆ, ನನ್ನಿಷ್ಟದೇವತೆಯೆ ೮೦
ಸೀತಾ ಸ್ವರೂಪದಿಂ ಮೋಹಿಸಿದಳೆಂಬಂತೆ
ತೋರುತಿದೆ ಲಂಕಾಧಿನಾಥನಂ, ಅಲ್ಲದಿರೆ
ಲಭಿಸುತಿರ್ದುದೆ ನನ್ನ ಸಾಧನೆಗಿನಿತು
ಶೀಘ್ರದಿ
ಮರಣತೋರಣದಾಚೆ ಗೋಚರಿಪಮರ ಸಿದ್ಧಿ?”
ತೂಲ ವಸ್ತ್ರದೊಳೊರಸುತಿರೆ ಸೂತನರುಣಜಲ
ಧಾರೆಯಂ, ಪಣೆ ಸೋರುತಿರ್ದುದಂ ಗಮನಿಸದೆ
ಸೇನಾನಿ:
“ಚಿನ್ಮಯಂ ತಾನಾಗುತಿರ್ಪುದೀ
ಮೃಣ್ಮಯಂ ಪೃಥಿವಿ, ಭಗವಾನ್ ಸಹಸ್ರಾಂಶುವುಂ —
ತ್ಯಜಿಸುತಿಂದ್ರಿಯರೂಪ ಮರ್ತ್ಯ ತತ್ತ್ವಂಗಳಂ
ಪಿಂತಿರುಗುತಿರ್ಪ್ಪನಾತ್ಮಜ್ಯೋತಿಯೋಲ್
ಬ್ರಾಹ್ಮ ೯೦
ವಿಜ್ಞಾನ ತತ್ತ್ವಕ್ಕೆ.”
ತುಸುವೊಳ್ತು ಮೌನಮಿರ್ದನ್,
ಪೊಂಬಿಸಿಲೊಳಾ ಬನಂ ವಸಂತಮಂ
ಸಾರುತಿರ್ದತ್ತು, ರಜನಿಯ ರಜೋಸಾಹಸದಿ
ದಣಿದ ತೇರುಗುದುರೆಗಳ್ ಮೇಯುತಿರ್ದುವು ಪಸುರ್
ಗರುಕೆವುಲ್ಲೆಳೆಯ ಸೊಂಪಂ, ಪೊಸತದೊಂದೇನೊ
ದರ್ಶನಕೆ ಬಂದಂತೆವೋಲ್ ಆ ಪೃತನಾಧಿಪಂ;
“ಇನ್ನಿಲ್ಲಿ ತಳುವದಿರ್, ಸೂತ; ನಡೆ ಬೇಗದಿಂ;
ಲಂಕೆಗೆನ್ನವಸಾನಮಂ ಪೇಳ್, ವರೂಥಮಂ
ಕೊಂಡು ನಡೆ. ಧವಳಧ್ವಜವನೆತ್ತು, ರಿಪುಗಳಿಂ,
ರಾಮನವರಿಂ. ಬರದು ನಿನಗಪಾಯಂ. ಕೆಣಕಿ ೧೦೦
ರಾಮನಂ ಧನ್ಯಂ ದಶಾನನಂ ! ಸನಿಹಮಿದೆ
ಆತನುದ್ಧಾರಮುಂ, ಕಾನ್ಬನಾದರ್ಶಮಂ,
ತಾನಿನ್ನೆಗಂ ಪುಡುಕಿ ಪಡೆಯದೆ
ತೊಳಲುತಿರ್ದುದಂ,
ಆ ರಾಮನರ್ದಾಂಗಿಯೊಳ್, ಮಹಾಸಾಧಕಂ
ಕಣಾ ರಾವಣಂ! ಸೂತ, ಮರ್ತ್ಯರ್ಗಗೋಚರಂ
ನನಗೆ ಹೃದ್ಗೋಚರಂ, ನೀನಲ್ಲಿ ತಳುವದಿರ್
ನಡೆಯಲಿರ್ಪುದು ನರರ್ ನೋಡಬಾರದುದಿಲ್ಲಿ
ನನ್ನಾತ್ಮಯಾತ್ರೆಯ ಸಮಾರಂಭ ಸಂಭ್ರಮಂ!
ನಡೆ, ಪೇಳ್, ಪುರಪ್ರಜೆಗೆ ಧೈರ್ಯಮಂ, ವಿಶ್ರಮಿಸಿ
ಕೊಳಲಿಂದು ನಮ್ಮ ಸೈನ್ಯಂ, ಬೇಂಟೆಗಾರರಿಂ ೧೧೦
ಕಡುಗಾಯವಡೆದ ಪೆರ್ಬ್ಬುಲಿಯೆಂತು ಪಳುವೊಳ್
ಜುಣುಂಗಿ, ನೆತ್ತರ್ ನೆಕ್ಕಿಕೊಳ್ಳುತಾಸರ್ಗಳೆಯೆ
ಮಗ್ಗುಲಿಕ್ಕುವುದೊ ತಾನಂತೆವೋಲ್ ಕಪಿಸೇನೆ,
ಕಳೆದ ರಾತ್ರಿಯೊಳೆನ್ನ ಕೈಯುಪಹತಿಗೆ ಸಿಲ್ಕಿ,
ಮಗ್ಗುಲಿಕ್ಕಿದೆ ಸರಿದು ಶಿಬಿರಕ್ಕೆ . ಮತ್ತೆ
ರಿಪು
ಚೇತರಿಸಿ ಮೇಲ್ವಾಯ್ವ ಮುನ್ನಮೇಳ್ವನು ನಮ್ಮ
ಕಾಲರುದ್ರಂ ಬೃಹನ್ನಿದ್ರೆಯಿಂದಾ ಜಗದ್
ಭೀಕರಂ ಕುಂಭಕರ್ಣಂ!”
ಸಂಚರಿಸುದುದು ಭಯಂ
ಸಾರಥೈಗಲೌಕಿಕಂ, ಹೆದರಿ ಕುದರೆಗಳುಲಿದ
ಹೇಷಾಧ್ವನಿಗೆ ವಿಕಂಪಿಸಿತನಿಲಮಂಡಲಂ. ೧೨೦
ತಾನುದುವರೆಗೆ ಕೇಳ್ದುದಾವುದುಂ ಹೋಲಿಕೆಗೆ
ನಿಲುಕದ ನಿನಾದಮೊಂದೆದ್ದುದು ಜಗತ್‌ತ್ರಯಂ
ಧಿಗಿಲ್ಲೆನಲ್! ಸ್ವಾಮಿಗೆ ಮಣಿದು ಮೊಳ್ಗಿ,
ಬೇಗದಿಂ
ತೇರ್ನೊಗಕೆ ಗದಗದಿಪ ಕುದುರೆಪೆಗಲಂ ಸಾರ್ಚಿ,
ತಿರುಗಿದನು ಪುರಕೆ ಸೂತಂ ಬರು ವರೂಥದಲಿ!
ಕ್ಷಪೆಯೊಳನಿಶಂ ರಿಪು ವನೌಕಸರ ಧಾಳಿಯಿಂ
ಲಂಕೆಯಂ ಪೊರೆದು, ಸುಗ್ರೀವ ಬಲವಾರ್ಧಿಯಂ
ಬತ್ತುವೋಲ್ ಪಿಂದೊತ್ತುವೋಲ್ ಪೀರ್ದು,
ಮೊಗಂದೋರೆ
ಮೂಡಣದ ದಿಗುತಟದಹರ್ಮುಖದ ಕೋಕನದ
ಕಿಂಜಲ್ಕ ರಕ್ತರಾಗಂ, ಜಯಧ್ವನಿಗಳಿಂ ೧೩೦ವಿಜಯಮಂ ಘೋಷಿಸುತೆ ಲಂಕೆಗೆ ಮರುಳ್ಗುದಯ್
ರಾಕ್ಷಸಧ್ವಜಿನಿ, ವೀರಪಾನದ ಗೋಷ್ಠಿಯೊಳ್
ಆ ವಿಜಯಕಾರಾಣಕೆ ಹೃದಯಕಾರಣನಾದ
ವೀರ ಸೇನಾನಿಯಂ, ಬಹುಮಾನ್ಯ ಯೋಗ್ಯರೊಳ್
ಪರಮಪ್ರಧಾನನಂ, ಕಾಣದತಿಖೇದದಿಂ
ವಿರಮಿಸುತ್ತಾಮೋದಸಭೆಯಂ,ಕಠೋರಮುಖಿ
ದೈತ್ಯೇಂದ್ರನಿತ್ತನಾಜ್ಞೆಯನವನನರಸಲ್ಕೆ,
ಹರಿದರಾಳುಗಳೆತ್ತಲುಂ, ಮಹಾಪಾರ್ಶ್ವನಂ
ಕಾಣ್ಬುದಂತಿರ್ಕೆ; ಸಾತಥಿಯಕ್ಕೆ ರಥಮಕ್ಕೆ
ಕಣ್ಬೊಲಕೆ ಪೊರಗಾಗೆ ಖಿನ್ನಾನನರ್ ಚರರ್ ೧೪೦
ಪಿಂತಿರುಗಿದರ್ ವ್ಯರ್ಥಪ್ರಯತ್ನದಿಂ,
ಪಗೆಗೆ
ಸೆರೆವೋದನೋ? ಮಡಿದನೋ ಕಾಳೆಗದ ಕಳದಿ?
ಮೇಣ್ ಮನಂ ಮಾರುವೋಗುತೆ ವಿಭೀಷಣನಂತೆ
ಪರಿಪಂಥಿಯಾದನೋ? ಮೇಣೆನಗೆ ಪೇಸುತ್ತೆ,
ದೇಶಚ್ಯತಿಯ ಬಹುಕ್ಲೇಶಕ್ಕೆ ತರಿಸಂದು,
ತೊರೆದನೋ ತಾಯ್‌ಭೂಮಿಯಂ? ಶಂಕೆವೆಂಕೆಯಲಿ
ಬೇಯುತಿರಲಂತು ಲಂಕೇಶ್ವರಂ, ಸ್ವಾಮಿಯಂ
ಕುತ್ಕೀಲಚೂಡದೊಳ್ ಬೀಳ್ಕೊಟ್ಟು ಬಂದಾ
ಮಹಾಪಾರ್ಶ್ವ ಸೂತನೊರೆಯುತೆ ಸಕಲವೃತ್ತಮಂ
ದನುಜೇಂದ್ರನಾತ್ಮದ ತಮಿಸ್ರಕ್ಕೆ ತಾನಾದನಯ್
೧೫೦
ಸೂರ್ಯಸೂತಂ. ಕೇಳುತಾಶ್ಚರ್ಯದಿಂ ಮತ್ತೆ
ತೇರಟ್ಟಿದನು, ಮಹಾಸೇನಾನಿಯಂ ತರಲ್,
ಸೂತಂಗೆ ಸಮರ್ಥರಂ ಸಾಹಾಯ್ಯಮಂ ನೀಡಿ,
ಹೋಗಿ ಹಿಂತಿರುಗಿದರು ಬೇಗದಿಂ. ತಂದುದಂ
ಕೊಟ್ಟು ಕಂಡುದನೊರೆದದರವರಿಂತು:
“ಜೀಯ, ಕೇಳ್,
ಕಂಡೆವಿಲ್ಲಾಂ ಚಮೂಪತಿಯಂ, ಕಳೇಬರಕೆ
ಬದುಲಿರ್ದುದಲ್ಲೀ ಅಲೌಕಿಕ ಕುಸುಮ ರಾಶಿ!”
ಭೂಮಿ ಬೆಸಲಾಗದಾ ಹೊಸ ಹೂಗಳಂ ನೀಡಿ,
ತುಸುವೊಳ್ತು ಜಾನಿಸುತ್ತೇನನೋ ನಿಚ್ಛಯ್ಸಿ,
ಮೆರವಣಿಗೆ ಕಳುಹಿದನು ಆ ಸುಮಸ್ತೋಮಮಂ ೧೬೦
ತನ್ನ ಪೂಜೆಯ ಶಿವನೀಕೇತನಕೆ,
ಮತ್ತಮಿತ್ತಲ್
ಬೆಸಸಿದನು ರಣಮಂತ್ರಿಯಂ ಜಿಂಹ ತಂತ್ರಿಯಂ
ಕುರಿತು ಯೂಪಾಕ್ಷನಂ:
“ನಡೆಯಿ ನೀಂ ಬೇಗದಿಂ.
ತಡೆಯಲಿನ್ ಪೊಳ್ತಿರದು. ಮಹಾಪಾರ್ಶ್ವ ಘಾತದಿಂ
ಗಾಯಗೊಂಡರಿ ಮರಳಿ ಚೇತರಿಸಿ ಲಗ್ಗೆ ನುಗ್ಗಿ
ಮೇಲ್ವಾಯುವನಿತರೊಳೆ ನೀಮೆಬ್ಬಿಸಲ್ವೇಳ್ಕುಮಯ್
ಲಂಕಾಂತರಂಗ ನಿಖ್ಶಿಪ್ತ ಲಯಶಕ್ತಿಯಂ,
ಪ್ರಲಯಸ್ವರೂಪನಂ, ಶಾಪ ಸುಪ್ತಿ ಸ್ತೂಪನಂ,
ದೇವದಿಗ್ಗಜದ ದಂತವನಲುಗಿ ಕಿಳ್ತದನೆ
ಗದೆಗಯ್ದು ಸುರರಾಜನೆರ್ದೆಗಪ್ಪಳಿಸಿ ಬಡಿದು
೧೭೦
ನೆಲಕುರುಳ್ಚಿದ ವಜ್ರಿವಜ್ರನಂ! ನಡೆಯಿ ನೀಂ:
ಸರ್ವಪ್ರಯತ್ನದಿಂದಾ ಭುವನ ಕಂಪ್ರನ ಕರಂ
ಜಗದ್ಭೀಕರಾಕಾರ ಧಾರಣ ಸಮರ್ಥನಂ
ಕುಂಭಕರ್ಣನನೆಬ್ಬಿಸಿಮ್!”
ಪರ್ಬ್ಬಿದುದು ವಾರ್ತೆ;
ಪೆಳರ್ದ್ದುದು ಜನಂ, ಹೊಗೆದು ಕಿಡಿಗೆಡಿಗೆದರಿ , ದಳ್ಳುರಿ
ನೆಗೆದು ಹೊತ್ತಿ, ಬೀದಿವರಿದುದು ಸುದ್ದಿ, ಬೆಬ್ಬಳಿಸೆ
ಲಂಕಾಮನಂ: ಕುಂಭಕರ್ಣನನೆಬ್ಬಿಸುವರೆ?
ಹಾ!
ಪ್ರಳಯಂ ಫಣಿಯಂ ನಿದ್ದೆಗೆಡಿಪರೆ? ಅವೇಳೆಯೊಳ್
ಹಬ್ಬಗೆಯ್ವರೆ ಜಗವನಾ ಮಿಳ್ತುಪೆರ್ಬ್ಬುಲಿಗೆ?
ಮುಂದೆ ಗತಿ ಏನೆಂತೊ ತಮಗೆಂದು ಗುಜುಗುಗಿಸಿ
೧೮೦
ನೆರೆದುದು ಜನಂ, ತಂಡತಂಡದಿ ಬೀದಿಬೀದಿಯಲಿ!
ಹೇಳಲರಿಯದ ಭಯಂ, ವೈರಿಭೀತಿಗೆ ಮಿಗಿಲ್,
ದಿಗಿಲುಗೊಳಿಸಿತು ದೈತ್ಯರಕ್ಷಿತ ದುರ್ಗಲಂಕಾ
ಸಮಸ್ತಮಂ!
ವಿಷಯೇಂದ್ರಿಯದಾ ತೃಪ್ತಿಸಾಧನೆಗೆ
ತನ್ನಾತ್ಮದತಿನಿಗೂಢದ ತಮಶ್ಯಕ್ತಿಯಂ
ಸಾಹಾಯ್ಯಕಾಹ್ವಾನಿಸುವ ಪತಿತಯೋಗಿಯ
ಕುಬುದ್ದಿಯೋಲ್, ತ್ರಿದಶೇಂದ್ರವೈರಿ ಪ್ರಚೋದಿತನ್
ಯೂಪಾಕ್ಷರಾಕ್ಷಸಂ ಸರ್ವಸನ್ನಾಹದಿಂ
ಕುಂಭಕರ್ಣನ ಮಲಗುದಾಣಕೆ ಸಮೀಪಿಸಲ್
ಮುಂದೆಸೆದುದು ವಿರಂಚಿಶಾಪದ ವಿಚಿತ್ರ ಕೃತಿ,
೧೯೦
ಮತಿಗೆ ಮೇಣ್ ವಿವವರಣೆ ವರ್ಣನಾತೀತಮಹ
ಸರ್ಪರಜ್ಜುಭ್ರಮೆಯ ಸದಸದಾತ್ಮಕ ಮಾಯೆಯೋಲ್
ಸ್ಥಾವರವೊ ಜಂಗಮವೊ? ಬಂಡೆಗಳೊ — ಮೋಡಗಳೊ?
ಗಿರಿಯೊ ಗಗನವೊ ಜಡವೊ ಚೇತನವೊ? ನಿದ್ರೆಯೋ
ಮೇಣದ್ರಿಯೋ? ಕಾಣೆನನಸುರನನಲ್ಲಿ! ನೆನೆಯೆ,
ನೆನೆದಂತೆ, ನೆನೆದುದೆ ತೋರುತಿದೆ ನೆನೆದವರ್ಗೆ!
ಪಂತಿಗಟ್ಟಿದರಲ್ಲಿ ಮಿಗಗಳಂ. ಕಾಳ್ಪಂದಿ
ಕಾಳ್ಕೋಣ ಕುರಿ ಕೋಳಿ ಗೂಳಿ ಮೊದಲಾಗವಂ
ಸುತ್ತುಂಬರಿಸಿ, ಹರಸಿ, ಚರಿಗೆ ಚರಿಗೆಯಲಿ ಚರು
ಬೆಟ್ಟವಿಳ್ದುದು ಬಣ್ಣಗೊಳ್, ಒರಲ್ ಕೂಗುವಳ್ ೨೦೦
ಅರಚುಗಳ್ ಹೂಂಕಾರಗಳ್ ಕೇಕೆ ಕೊಕ್ಕೊಕೋಗಳ್,
ಮಾರಿಗುಂ ಕಿವಿಗೆ ಕರೆಕರೆ ಕರೆಯೆ, ನೆರೆದುವು
ನಿಶಾಚರನ ನಿದ್ದೆಬೂತಿಗೆ ಸಿದ್ಧ ಬಲಿಯಾಗಿ,
ಮೇಣ್, ತಮಶ್ಚರ ತಮೋಜಾಗ್ರತಿಗೆ ಪಾನಕಂ
ಹಂಡೆ ಹಂಡೆಯಲಿ ನೊರೆನೊರೆ ಹೆಂಡವಣಿಯಾಯ್ತು!
ಊದಿದುವು ಕಹಳೆಪರೆ; ಎದ್ದುದು ಧೂಪ ಧೂಮಂ;
ಅಥರ್ವಣವನೋದಿದರ್ ದುರ್ಮಂತ್ರ ಕೋವಿದರ್;
ಪೂರೈಸಿದವು ಶಂಕಗಳ್; ಜೇಗಟೆಗಲೊಡನೆ
ಬೊಬ್ಬೆಯಿಟ್ಟವು ಘಂಟೆ; ಕಿವಿ ನಿಮಿರೆ ದಿಗ್ಗಜಕೆ
ಜಗಭಯಂಕರವಾಯ್ತು ನಿರ್ಘೋಷ.
ಇರಲಿರಲ್, ೨೧೦
ತೆರೆದೆಮೆಯನಿಕ್ಕದ ಕುತೂಹಲದೊಳೀಕ್ಷಿಸಿರೆ,
ದೈತ್ಯ ಭೀಮನ ಸುಪ್ತಿನೀಹಾರಿಕೆಯ ನಡುವೆ
ಮರ್ಬ್ಬುಮರ್ಬ್ಬಾವಿರ್ಭವಿಸಿತಿರ್ಬ್ಬನಿಯ
ದಿನದ
ಪೊಳ್ತೆರೆಯೊಳೆಂತಂತೆ ವೃಕ್ಷರೂಕ್ಷಚ್ಛಾಯೆ!
ಚಾಚಿ ಹಬ್ಬಿರ್ದ ಹರೆಗಳನೊಯ್ಯನೊಯ್ಯನೆಯೆ
ಬಾಚಿ ಜೋಡಿಸಿ, ತಿರುಗಿತು ಸರೀಸೃಪಾಕೃತಿಗೆ!
ಜ್ವಲಿಸಿದುವು ಕಣ್; ಚುರುಚುರುಂಗುಟ್ಟಿದುವು ರಕ್ತ
ಪಾಟಿಲ ಕುಟಿಲ ಚಟುಲ ಸುವಿಭಕ್ತ ಜಟಿಲಗಳ್
ಜಿಹ್ವೆ! ತೊನೆದುದು ತೂಗಿ ಬಹು ಘಣಾ ಶೀರ್ಷಮಂ,
ಗದಾಭಯಂಕರಮೆನೆ, ಶಿರೋಧಿ! ವ್ಯಾಳೋಗ್ರಮಂ ೨೨೦
ಮಿಳ್ಮಿಳನೆ ನೋಡುತಿರೆ, ತೂಪಿರಿದುದುಃಖಫೆಂದು
ಬಿಸಿಯುಸಿರ್ ವಿಷಗಾಳಿಯಂ; ಸೀದುರುಳ್ದುದು
ಸಮೀಪದ ಜನಂ! ಚೀರುತೋಡಿದರ್ ಮಿಕ್ಕವರ್;
‘ಪಿಂಗಾಕ್ಷಿವೆಸರ ಭೂತಿನಿ ಕಣಾ! ಕೊಲ್ಲಿಮಾ
ಕಾಳ್ಕೋಣನಂ ಬಲಿಗೆ ! ತಡಮಾದದಿರ್; ತಡೆಯೆ
ಬಲಿಗೊಳ್ವುದೆಮ್ಮಂ!’ ಪುರೋಹಿತನ ರೋದನಕೆ
ಕಡಿತಲೆಯವಂ ಕಡಿದನಾ ಕೋಣಮಂ, ಪಿಡಿದು
ಪೆರ್ದೊನ್ನೆಗಳಲಿ ಶೋಣಿತವನರ್ಪಿಸಿದರಾ
ಮಂತ್ರವಾದಿಗಳಂತೆ ಚೆಲ್ಲಿದರು ಭಸ್ಮಮಂ
ಭೂತಮಂತರ್ಧಾನಮಪ್ಪಂತೆ!
ಪೋಗಲಾ ೨೩೦
ಭೂತಂ, ವಿಕಾರಾಕೃತಿಯ ಶಿಂಶುಮಾರಗಳ್
ನಕ್ರಗಳ್ ಮಕರಗಳ್ ಮತ್ಸ್ಯಗಳ್ ಮೇಲೇಳೆ,
‘ಇವು ಕಣಾ ಜಲಪಿಶಾಚೋತ್ಕರಂಗಳ್; ಕೊಡಿಮ್
ಬಲಿಯನ್’ ಎನೆ, ಕಡಿಕಡಿದು ಚೆಲ್ಲಿದರು ನೆತ್ತರಂ
ನಾನಾಮೃಗಂಗಳಿಂ, ಮರೆಯಾದುವವು; ಮರಳಿ
ಮೂಡಿದುವು ಭೀಕರದ ಪಕ್ಷಿರೂಪಗಳಂತೆ
ಪ್ರಾಣಿಯಾಕಾರಗಳ್, — ‘ಇವು ಕಣಾ ಮೃತ್ತಿಕಾ
ದೇವತೆಗಳನುಚರರ್; ಬಲಿಗೊಡಿಮ್; ತಳುವಿದರೆ
ಬರಿದಪ್ಪುದೀ ಲಂಕೆ!’ — ಕಡಿಕಡಿದು ಕೆಡಹಿದರ್
ಕುರಿಕೋಳಿ ಲಕ್ಕಮಂ, ಬಿಕ್ಕಿದರ್ ಬೂದಿಯಂ, ೨೪೦
ಕೂಗಿದರ್ ತಡೆಮಂತ್ರಮಂ! ಮಾಯವಾದುದೆ
ತಡಂ, ಮತ್ತಮೊಂದೆದ್ದುದೈ, ಕಾಣ್, ಮಹಾದ್ಬುತಂ!
ಹೇಮಂತ ಸೂಯೋದಯಂ ತುಷಾರ ಪಟಮಂ
ಪೃಥುಲ ಪೃಥ್ವೀಮುಖದಿನೋಸರಿಸೆ, ವೃಕ್ಷಮಯ
ಸಸ್ಯಸುಂದರ ಸಹ್ಯಗಿರಿಶೃಂಗಮೊಯ್ಯನೆಯೆ
ಮೆಯ್ದೋರುವಂತೆ, ಮೂಡಿದುದು ಸೌಧೋನ್ನತಂ
ಸೌಧಗಾತ್ರದೊಳೊಂದು ವಿಗ್ರಹಂ ಪುಂಗವ
ಪ್ಲವಂಗದಾ. ಕಪಿರೂಪದುಗ್ರತೆಗೆ ಬಡಿದುದೊ
ಭಯಗ್ರಹಂ ನೆರೆದ ರಾಕ್ಷಸ ನಿವಹಮಳರಲ್ಕೆ.
ಗಿರ್ರನೆಯೆ ತಿರುಗಿಸುತೆ ಕಣ್ಣಾಲಿಯಂ,
ಕಡಿದು ೨೫೦
ದವಡೆಯನೊರಲ್ದತ್ತು, ನಡ ನಡ ನಡುಗಿ ಲಂಕೆ
ಗೃಹಗೃಹ ಗುಹಾಧ್ವನಿಗಳಿಂ ಪ್ರತಿಧ್ವಾನಮಂ
ಪಯ್ಯಲ್ಚೆ! ‘ಇದು ಕಣಾ ಕುಂಭಿಕಾಭೂತಂ!
ಸಮರ್ಥಂ ತ್ರಿಕೂಟಾಚಲವನ್ನೆತ್ತಿ ಬಿಸುಡಲ್ಕೆ!
ತಡೆ, ತಡೆಯೊ, ಏ ಕಡಿತಲೆಯ ಕುಂಬಾರ! ಕಡಿಯದಿರ್,
ಕಡಿಯದಿರ್! ಕೊಡಿಮಿಡಿಯ ಪೆರ್ಬ್ಬಂದಿಯಂ!
ಕಡಿಮೆ
ಕೆರಳುತೆಂಜಲಿಗೆ ಕುಡಿವುದೊ ನಿನ್ನ
ನೆತ್ತರಂ!’
ಇಡಿಯಿಡಿದು ಕಾಳ್ಪಂದಿಗಳನೆತ್ತಿ ತುಯ್ದೆಸೆಯೆ
ಬೀಳುಗೊಡದೆಯೆ ಪಿಡಿದುದಾ ಮಹಾಮರ್ಕಟಂ;
ಪೀರ್ದುದು ಕೊರಳ್ಮುರಿದು ವನವರಾಹನ ರುಧಿರ
೨೬೦
ಮದಿರೆಯಂ; ಹಿಂಡಿಕೊಂಡುದು ತನ್ನ ಬಾಯ್ಬಿಲಕೆ.
ತಿಲದಿಂದೆ ತೈಲಮಂ ಪಿಳಿವ ಗಾಣಿಗನಂತೆ,
ನೆಣಮಜ್ಜೆಯಂ! ಬಲಿಗೆ ತಣಿದಾ ಪಿಶಾಚಂ
ತಿರೋಹಿತಂ ತಾನಾಗುತಿರೆ, ಕಾರ್ಮುಗಿಲ್ ಕವಿದು
ಬೀಸಿದುದು ಕಾರ್ಗಾಳಿ; ಕೂರ್ಪಿನಿಂದೆರಗಿದುದು
ಮಿಂಚಿನಂಚಿನ ಸಿಡಿಲ್; ಕುಂಭದ್ರೋಣಮೆನೆ
ಕರೆದುದು ಮುಸಲಧಾರೆ, ಪೇಳ್ವುದೇನಾ ಸರಿಗೆ
ಕರಗಿದುದೊ ಶಾಪಸುಪ್ತಿಸ್ತೂಪವನೆ, ಪುತ್ತು
ಕರಗಲ್ ತಪಂಗೆಯ್ವೆ ಕಿತ್ತಡಿಯ ಮೆಯ್ವರಿಜು
ಕಣ್ಬೊಲಕೆ ಬೀಳ್ವಂತೆ, ಕಂಡುದು ಮಹಾಶಯ್ಯೆ ತಾಂ ೨೭೦
ಪೊತ್ತ ಪೇರರ್ದೆಯ ಪೊದೆದಲೆಯ ದಾನವಭವ್ಯ
ಕುಂಭಕರ್ಣನ ಮಹದ್ ವಿಗ್ರಹಂ! ಘೋ ಎಂದು
ನಲಿದುದು ಜನಂ, ಸ್ತೋತ್ರಪ್ರಗಾಥಮಂ ಪಾಡಿ
ಕುಣಿದಾಡಿದರ್; “ಏಳೊ, ಲಂಕಾ ರಕ್ಷಕನೆ! ಏಳ್,
ಏಳೊ, ರಿಪುಯಮಶಿಕ್ಷಕನೆ! ಏಳ್, ಜಗದ್‌ಗರ್ವ
ಭಕ್ಷಕನೆ! ಭೀತಿ ಮುತ್ತಿದೆ ಲಂಕೆಯಂ,
ಮಿತ್ತು
ತುತ್ತುಗೊಳ್ಳಲ್ ಸುತ್ತಿ ಕಾದಿದೆ! ಲಯಂ
ಬೆದರೆ
ಏಳ್! ಏಳ್‌ರಿಪುಪ್ರಾಣವಾರ್ಧಿಯಂ ಶೋಷಿಸಲ್,
ಪೋಷಿಸಲ್ ದೈತ್ಯಗೌರವರೂಪಿಯೀ ಲಂಕೆಯಂ!”
ನಿದ್ದೆ ತಿಳಿದೆದ್ದನೊಯ್ಯನೆ ದೈತ್ಯಭಾಸ್ಕರಂ
೨೮೦
ಮೆಯ್ಮುರಿದು, ಕಣ್ಣುಜ್ಜಿಕೊಂಡಾಕಳಿಸಿ, ನೀಡಿ
ನಿಡುದೊಳ್ಗಳಂ ಲಟಿಕೆ ಮುರಿದೆದ್ದು ಕುಳಿತನ್
ಭಯಂಕರಾಕಾರಿ; ಸುಗ್ರೀವ ವಾಹಿನಿಗೇನೊ
ತಿಳಿಯದೊಂದೆಳ್ದು ಚಲಿಸಿತೊ ಭಯ ಪುಲಕ ವೀಚಿ!
ವಾನರ ಪ್ರಾಣಶಕುನಿಗಳಿರದೆ ಚೀರಿದುವೊ
ಹಾನಿಯ ಭವಿಷ್ಯಮಂ! ತನ್ನ ಶಾಪಕ್ಕಾದ
ಅಕಾಲ ಮುಕ್ತಿಗೆ ಖಿನ್ನನಾದನೊ ಚುತರ್ಮುಖಂ
ಎನೆ, ಬಹಿಃಪ್ರಜ್ಞೆಗಿಳಿದನ್ ದೈತ್ಯ ಭಯ ತಿಮಿರ
ಭಾನು! ಪೊನ್ನಿಂ ಪೆಣೆದ ಪಡೆಗೆ
ಕುಕ್ಕೆಗಳಿಡಿಯೆ
ಮೃಗ ಪಕ್ಷಿ ಪಕ್ವ ಪರಿಮಳ ಪಲಾನ್ನಂಗಳಿಂ,
೨೯೦
ತಂದಡಕಿದರು ರಾಕ್ಷಸರ್, ರಾಕ್ಷಸನ ಮುಂದೆ,
ಸಾಲುಸಾಲ್ ಮೆರೆಯೆ ಕಾಲ್ಮಣೆಯೋಳಿಯೋಳಿಗಳ್,
ದೈತ್ಯ ದೈತ್ಯಕ್ಷುಧಾ ಸಂತುಷ್ಟಿಯಂ; ಮೇಣ್ ತೃಷೆಗೆ
ನೆರೆದುವೈ ಭಾಂಡಗಳ್ ಡಿಂಡೀರಮಯ ಸುರೆಯಾ!
ಕ್ಷಾಮಂ ಸುಭಿಕ್ಷಮಂ ಸಂಧಿಸಿದವೋಲಾಯ್ತು :
ಕುಡಿದು ತಿಂದನ್; ತಿಂದು ಕುಡಿದನ್; ಕುಡಿ ಕುಡಿದು,
ತಿನ್‌ತಿನ್ದು ತೇಗಿದನ್, ನಡುನಡುವೆ ನಲ್ಮೆ ಮಿಗೆ
ಗಹಗಹಿಸಿ ಕೂಗಿದನ್, ತಲೆದೂಗಿದನ್! ಮಿಗತನವ
ಮೀರ್ದ್ದುಮದರಿಂ ಮೂಡಿಬಂದಾ ಮನುಷ್ಯತೆಯ
ಮನದ ತೃಷೆ ತಾಂ ತತ್ತ್ವವಿದ್ಯಾಕಲಾ ರಸದಿಂದೆ
೩೦೦
ತೃಪ್ತಿಗೊಂಡಟ್ಟಹಾಸದಿ ಕೇಗಿ ಪುಕ್ಕಂಗೆದರಿ
ಕುಣಿವಂತೆವೋಲ್ ತಣಿದು ಕುಣಿದುದು ಕುಂಭಕರ್ಣ
ಮಯೂರಹೃದಯಂ!
ಸಮಯವದೆ ಸರಿಯೆಂದು ಬಗೆದು
ತನ್ನಿದಿರ್ ಬಂದು ಕೈಮುಗಿದು ಯೂಪಾಕ್ಷನಂ
ನೋಡಿ, ಗುರುತಿಸಿ, ಕೇಳ್ದನೆನ್ನನಿಂತವಧಿಯಂ
ಕಡೆಗಣ್ಚಿ ಏಕೆಳ್ಬಿಸಿದಿರೆಂದು, ಪ್ರಶ್ನಧ್ವನಿಗೆ
ಸೆಡೆತು, ಬಿನ್ನಯ್ಸೆ ನಡಿದನಿತುಮಂ; ಬಿಸುಸುಯ್ದು
ಕಣ್ಮುಚ್ಚಿ ಜಾನಸಿ; “ವಿಭೀಷಣಂ ಲಂಕೆಯಂ
ತೊರೆದನೇ? ಮಹಾತ್ಮಂ ಮಹಾಪಾರ್ಶ್ಚನಳಿದನೇ?
ಮಲಗಿದಾನ್‌ಅವಧಿ ತುಂಬುವ ಮುನ್ನಮೆದ್ದೆನೇ?
೩೧೦
ಸಾಲ್ಗುಮೀ ಮೂರೆ ಕೇಡುಗಳೆಮ್ಮ ಲಂಕಾ
ವಿನಾಶನಕೆ!” ಎನುತೆ ತನ್ನೊಳಗೆ ತಾಂ
ನೊಂದನೋಲ್
ನುಡಿದುಕೊಳ್ಳುತೆ, ಮತ್ತೆ ಯೂಪಾಕ್ಷನಂ ಕುರಿತು
ಬೆಸಸಿದನ್:
“ನಡೆ, ಪೇಳ್, ಪ್ರಭುಗೆ ನಾನೆಳ್ದುದನ್;
ಬಂದು ಕಾಣುವೆನಾತನಂ ತಡೆಯದೀಗಳೆಯೆ;
ಮೇಣ್, ಸಿದ್ಧಗೊಳಿಸೆನ್ನ ಯುದ್ದಸನ್ನಾಹಮಂ!”
ದಿಗ್ಗಜಗಳೆಂಟನೇನ್ ಅಳವಡಿಸಿದರು ಧರಾ
ಸ್ಯಂದನಕೆ? ಬಂದುದು ಬೃಹದ್ರಥಂ, ಪೊತ್ತೆಳೆವ
ಪೇರಾನೆಗಳ್ ಪೆಗಲೆಂಟರೊಳ್ ಕುಸಿವಂತೆವೋಲ್!
ಚೀತ್ಕರಿಸೆ, ರಥಚಕ್ರಮಚಲಭಾರಕ್ಕೊರಲೆ ೩೨೦
ಕೀಲುಗಳ್, ನಿಡುಸುಯ್ಯಲಿಭತತಿ ಕೊರಲ್ ನೆಗ್ಗಿ,
ತೇರೇರಿದನು ದನುಜಮಲ್ಲಂ, ಬೃಹದ್ ರಥಂ,
ನಡುಗಲಿರ್ಕೆಲದಚಲಸೌಧಶ್ರೇಣಿ, ಗುಡುಗಿ
ನಡೆದುದೂರ್ಮಿಗಳಲೆಯೆ ರಾಜಪಥಮಂ. ತನ್ನ
ಧೈರ್ಯದ್ರುಮದ ಬೇರ್ಗೆ ಜೀವಾತು ಜೀವನವ
ತರುವ ತಮ್ಮನ ಬರುವ ಗೌರವಕೆ, ಸಂತಸಕೆ,
ನಗರಶೋಭೆಗೆ ದಶಶಿರಂ ಬೆಸನನೀಯದಿರೆ
ಹುಡಿಯೇಳದಿರುತಿರ್ದುದೇ ಪಥಂ? ಕಿಡಿಗೆದರಿ
ಸುಡದೆ ಬಿಡುತಿರ್ದುದೆ ರಥಂ ಗುಡಿಯ ತೋರಣದ
ವರ್ಣ ವಸ್ತ್ರಾಳಿಯಂ? ಜೀರ್ಕೋವಿ ಚಳೆಯದಿಂ ೩೩೦
ತೊಯ್ಯವನಿ ಧೂಳೆದ್ದುದಿಲ್ಲೆದ್ದುದು ಕೆಸರ್,
ಜನಂ
ಕೊರಳೆತ್ತಿ ಕೂಗಿತಿರೆ ಜಯಘೋಷಮಂ, ಮುಗಿಲ್
ಮುಟ್ಟಿದರಮನೆಗಳುಪ್ಪರಿಗೆಗಳನೇರಿರ್ದ
ಲಂಕಾಲಂತಾಂಗಿಯರ್ ಪೂವಳೆಯನೆರಚುತಿರೆ,
ತೇರ್ ಸೇರ್ದುದರಮನೆಗೆ, ದೈತ್ಯವಿಕ್ರಮನಿಳಿದು
ಪೊಕ್ಕನು ರಾಜಗೌರವಸಹಿತ ಚಕ್ರವರ್ತಿಯ
ನೆರಪಿದೋಲಗಕೆ. ಜಗರಿದುವು ಗೌರವಭೇರಿ,
ವಂದಿಮಾಗಧರುಲಿಯ ಸೇರಿ, ದಿಗ್ಗನೆ ನಿಂದು
ಪಣೆಗೈಯಾಗಿ ಮಣಿದುದು ಬಾಗಿ ಆಸ್ಥಾನ.
ಸಿಂಹ ಸಿಂಹಕೆ ಸುಖಾಗಮನಮಂ ಬಯಸುವೋಲ್ ೩೪೦
ಸಿಂಹಾಸನವನಿಳಿದು ಸಿಂಹಗಾಂಭೀರ್ಯದಿಂ
ಸ್ವಾಗತಿಸಿದನು ತನ್ನ ತಮ್ಮನಂ ಸುಸ್ಮಿತ
ದಶಾನನ ನಿಶಾಚರೇಂದ್ರಂ, ಮೆಯ್ಗೆ ಮೆಯ್ ಸೋಂಕಿ
ರತ್ನವಿಷ್ಟರದಿ ರಾವಣ ಕುಂಭಕರ್ಣರಿರೆ,
ಇಷ್ಟದರ್ಶನವಾದುದಿನ್ನೆನಗದೆತ್ತಣದೊ
ಕಷ್ಟಮೆಂಬುವ ಮತಿಯ ನಿಶ್ಚಿಂತೆಯೋಲಂತೆ,
ಕುಳಿತುದು ಸಭಾ ಸಮೂಹಂ.
ರಾಜಕೀಯಮಂ,
ಕುಂಭಕರ್ಣನ ನಿದ್ದೆತೊಟ್ಟು ನಡೆದನಿತುಮಂ,
ವರದಿಯೋದಿದನು ಸಚಿವೋತ್ತಮಂ, ತನ್ನಂ
ಮೊಗಂ ನೋಡಿದಣ್ಣನಿಂಗಿತವರಿತನೆದ್ದನು ೩೫೦
ಮಹೋನ್ನತಂ, ನೆರವಿ ನಿಶ್ಯಬ್ದಾಬ್ದಿಗದ್ದಿರಲ್
ಪೂಣ್ದನಭಯವನರಿಭಯಂಕರಂ ಇಂತುಟಾ
ಕುಂಭಕರ್ಣಂ:
“ಮೊದಲೆ ನೀಮೆನ್ನನೆಳ್ಚರಿಸೆ
ಇನಿತು ಕೇಡಡಸುತಿರ್ದುದೆ ನಿಮ್ಮ ಮಂಗಳಕೆ?
ವೈರಿಗಳ್ ನಿಮಗೆ ನೀಮಾದಿರಲ್ಲದೆ ಪೆರರ್
ವೈರಿಗಳೆ? ಗೀರ್ವಾಣರಳ್ಕುವೀ ರಾಕ್ಷಸ
ಮಹಾಬಲಕೆ ಪೇಲ್‌ಕಪಿಧ್ವಜರಿದಿರೆ? ನಿಮ್ಮ ಸೋಲ್
ನಿಮ್ಮಿಂದಲಾಯ್ತು, ಧರ್ಮಾಧರ್ಮಂ ಕುರಿತು
ಪೇಳ್ವುದೆನಗಪ್ರಕೃತಮಿಲ್ಲಿ. ಧರ್ಮದೊಳೆನೆಗೆ
ಭೀತಿ ಬೇರಿರಬಹುದು. ನೀತಿ ರೀತಿಯೊಳೆನ್ನ ೩೬೦
ಪ್ರೀತಿ ಬೇರಿರಬಹುದು. ಕಜ್ಜ ಮುಂಬರಿದಂದು
ಪ್ರಭುಚಿತ್ತಕನ್ಯಮಂ ಪೇಳ್ವುದು ನಿರರ್ಥಕಂ.
ಈಗಳೆನಗಗ್ರಜನ ಗುರಿಯೆ ಗುರಿ, ಗತಿಯೆ ಗತಿ,
ಮತಿಯೆನಿತು ಬೇರಿರ್ಪೊಡಂ, ವಿಭೀಷಣನಂದೆ
ತೊರೆದನ್; ಮಹಾಪಾರ್ಶ್ವನಿಂದು, ನಾನೆದ್ದೆನಿನ್
ಲಂಕೆಯಾತ್ಮಕೆ ಪರಮಕಲ್ಯಾಣಮಾಯ್ತೆಂದೆ
ಭಾವಿಸಿಮ್! ನರಕವಾಗುತ್ತಿಂದು ಪಗೆಗೆ ನಾಂ
ಸ್ವರ್ಗಮಂ ತೋರ್ದಪೆನ್; ಪಿಂತೆಂದುಮಿಂತುಟು
ಪೊಣರ್ದ್ದನಿಲ್ಲೆನೆ, ಯಕ್ಷ ಗಂಧರ್ವ ದೇವಾದಿ
ಭುವನತ್ರಯಂ ಭಯಗ್ರಸ್ತಮಪ್ಪಂತೆವೋಲ್ ೩೭೦
ಕಾದುವೆನ್, ಇಂದ್ರನ ಉರಃಸ್ಥಲ ಸರೋಜಲಂ
ಕದಡೇಳೆ ಮಿಂದೀಂಟಿ ನಾಂದೆನ್ನ ಮುದ್ಗರಕೆ,
ತರುದೀರ್ಘ ದಂಡದಿಂ ಗಿರಿಭಾರ ರುಂಡದಿಂ
ಜವನ ಬೆನ್ನೆಲ್ವು ಸೋಂಕಿಗೆ ಕರ್ಬ್ಬುನದ
ನವಿರ್
ನಿಮಿರ್ದಪೋಲಿರ್ಪ ಈ ರುಧಿರಮುಖಿ ರುಧಿರನಖಿ
‘ಮುಸಲ ಕೇಶಿನಿ’ ವೆಸರ ನನ್ನತುಲ ಮುದ್ಗರ
ಮಹಾಯುಧಕೆ, ಕುಡಿಸುವೆನು ಖರನ ಕೊಂದವನೆದೆಯ
ಶೋಣಾಂಬುವಂ! ಕುಳುಂಪೆಯನಾನೆ ಕಲಂಕುವೋಲ್
ಕಪಿವಾಹಿನಿಗೆ ವಾರಿಯಾರಿ ಕೆಮ್ಮಣ್ಗೆಸರ್
ಮೂಡಿಪೆನ್! ವಿಕ್ರಿಯಾ ಬಲದಿಂದಗುರ್ಬ್ಬಿಪೆನ್,
೨೮೦
ಬಾನ್ಪವಣ್ಗುರ್ಬಿ! ತ್ರೈಲೋಕ್ಯ ಭೀಕರಮೆನಲ್
ನುರ್ಚ್ಚುನುರಿಗೈವೆನರಿಶಿರೋಗಿರಿಗಳಂ! ಮೇಣ್
ರಣಮಾರಿಗರೆಯಾಗಿ ಓಕರಿಪ ಮಾಳ್ಕೆಯಿಂ
ಕಡಿದು ಬಡಿದು ಕುರಿದರಿಯೊಟ್ಟುವೆನು ಮಾರೀಚ
ಸೂದನಗೆ ಮೇದಿನೀಸುತೆಯ ನೆವದಿಂದೆಮ್ಮ
ಮೇದಿನಿಯ ಗೆಲ್ದೀಯಲೆಂದು ಬಂದವರೊಡಲ
ತೊರಳೆ ಮಾಂಸಂಗಳಂ! ಶ್ರೀಮಹಾಪಾರ್ಶ್ವನಿಂ
ಕಡ್ಡೇರ್ವಡೆದು ಹೊಕ್ಕಿಹುದು ತನ್ನ ಹಕ್ಕೆಯಂ
ಪಗೆ ಮಿಗಂ. ಸೊರ್ಕ್ಕುಗುಂದಿಹುದದರ ಭಯವಿಂದು
ಬೇಡೆಮೆಗೆ. ನಾಳೆ ಪೊಳ್ತರೆಯ ರಣಕೀ ರಾತ್ರಿ
೨೯೦
ಸಿದ್ಧನಾಗುವೆನೇಳಿ, ನೆಮ್ಮದಿಯ ಬಗೆಯಿಂದೆ
ನಡೆಯಿ ನೀಂ ಮನೆಗೆ, ಲಂಕೆಯ ಜಸಂ ಗೆಲ್ಗೆ, ಬಾಳ್ಗೆ!”
ಎದ್ದುವು ಜಯಧ್ವನಿಗಳೊಡನೆ ಕೈಪರೆ. ಸದ್ದು
ನಡುಗಿಸುತು ಸಭಾಸೌಧಾಂತಮಂ. ಕುಂಭಕರ್ಣಂ
ಕುಳಿತುಕೊಳ್ವನಿತರೊಳೆ ದಿಗ್ಗನೆಳ್ದಪ್ಪಿದನು
ದನುಜೇಂದ್ರನವರಜನ ಗಿರಿಧೀರ ಗಾತ್ರಮಂ.
ತನ್ನ ಹೊರೆಯರಿತವಂ, ರಿಪುಬಲವನರಿತವಂ,
ತಮ್ಮನೊಂದದ್ಭುತ ಪರಾಕ್ರಮವನರಿತವಂ,
ದನುಜೇಂದ್ರಜನವರಜನ ಗಿರಿಧೀರ ಗಾತ್ರಮಂ
ದಿನ್ಗನೆಳ್ದಪ್ಪಿದನು ಬಲ್ದೋಳ್ಗಳಿಂ ಬಿಗಿದು,
೪೦೦
ಅಮೃತಲೋಭಿಗಳಸುರರಂದು, ಸುರರ ಲಾಭಕೆ,
ಭುಜಗೇಂದ್ರನಂ ಬೀಸಿ ಬಿಗಿದಂತೆ ಮಂದರದ
ಮೆಯ್ಗೆ. ಬಾಯ್ತುಂಬಮನೆ ಪೊಗಳಿದನು ತಮ್ಮನಂ;
ತೆಗಳ್ದನಿಂಗಿತದಿಂ ವಿಭೀಷಣ ಚರಿತ್ರೆಯಂ.
ತೊಡಿಸಿದನು ಕೇಯೂರಮಂ ತೋಳ್ಗೆ; ತೊಡಿಸಿದನು
ಭುಜಕಂಗದಾಭರಣಮಂ; ಮಹಾಹಾರಮಂ
ತೊಡಿಸಿದನು ಕಂಠಕೆ, ಸತೋಯ ನೀಲಾಂಬುದಕೆ
ಸುರಧನುಸ್ ಶೋಭೆಯಂ ನೀಳ್ವ ರವಿಕರದಂತೆ,
ರತ್ನರಮಣೀಯ ವಜ್ರದ್ಯುತಿಯ ನಿಷ್ಕಮಂ;
ತೊಡಿಸಿದನು ಚಾಮೀಕರಂಕಿತ ಬೃಹತ್‌ಕವಚಮಂ,
೪೧೦
ವಿವಿಧ ಬಿರುದಿನ ತಾರೆಗಳ್, ಕ್ಷಾತ್ರತೇಜಕ್ಕೆ
ನಕ್ಷತ್ರ ಸಾಕ್ಷಿಗಳೆನಲ್, ತಳತಳಿಸಿ ಪೊಳೆಯೆ
ರಾಕ್ಷಸ ವಕ್ಷದಂತರಿಕ್ಷದಲಿ, ತಮ್ಮನಂ,
ಸಂಧ್ಯಾಭ್ರಸಂವೀತ ಶೈಲೇಂದ್ರನೋಲಂತೆ
ನಿಂದತುಲ ಬಲಸಿಂಹನಂ, ಪ್ರಶಂಸಿಸಿ ನೋಡಿ
ಹರಸಿದನು ರಾವಣಂ;
“ಪೋಗು, ನಡೆ; ಪಗೆಪಡೆಯ
ಕಡಲ ಕಡೆ! ಸೋಲ್ನಂಜನರಿಗುಣಿಸಿ ಬಾ; ತಾ
ಗೆಲ್‌ಸೊದೆಯನೆಮಗೆ! ವಾನರ ಭಯಂಕರನಾಗು;
ನರವರ ಭಯಂಕರಂ ನೀನಾಗು! ನಡೆ, ಪೋಗು,
ರಿಪುದಳಕ್ಕಿದಿರಾಗು, ತಾಗು; ಮಂಗಳವಾಗು ೪೨೦
ಲಂಕೆಗೆ; ಜಯಶ್ರೀ ರಮಣನಾಗು! ಗೆಲಮಕ್ಕೆ,
ಶುಭಮಕ್ಕೆ, ನಿನಗೊಳ್ಳಿತಕ್ಕೆ; ವಂಶದ ಜಸಕೆ
ಪೊಂಗಳಸಮಕ್ಕೆ! ತಾಯ್ತಂದೆವಿರ ಸಂತಸದ
ಪದುಮಕ್ಕೆ ನೇಸರುದಯದ ಮುದಂ ತಾನಕ್ಕೆ!”
ಪರಿದತ್ತು ಪರಿಷದಂ, ಪರಿತೋಷದಿಂ ಮನೆಗೆ
ಪರಿದುದು ಜನಂ. ಹಬ್ಬಿದುದು ಸುದ್ಧಿ,
ಭಯ ಧೈರ್ಯ
ಸಂಮಿಶ್ರತಂ. ನಾಳೆ ಪೊಳ್ತರೆಗೆ ತನಗೇನೊ
ಗತಿಯೆಂದು ಮೈನಡುಗಿದಳು ಧರಣಿ; ಮುಳುಗಿದನ್,
ರವಿವಂಶದಾಗುಹೋಗಿಗೆ ಹೆದರಿ, ಪಡುವಣ
ಗಿರೀಂದ್ರಮಂ ಮರೆವೊಕ್ಕ ತರಣಿ; ಪದಹತಿಗಳ್ಕಿ ೪೩೦
ಕೂರ್ಮ ದಿಗ್ಗಜರೊರ್ವರೊರ್ವರ ಸಹಾಯಮಂ
ಬೇಡಿದರ್; ಭೋಗೀಂದ್ರನಾದೊಡಂ ಯೋಗಿಯೊಲ್
ಕೈಕೊಂಡನಾದಿಶೇಷಂ ಕುಂಭಕಾಭ್ಯಾಸಮಂ!
ಶ್ರೀ ಸಂಪುಟಂ: ಸಂಚಿಕೆ 2 - ರಸಮಲ್ತೆ ರುದ್ರದೃಷ್ಟಿಗೆ ರೌದ್ರಮುಂ! >>>
*********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ