ಪುಟಗಳು

13 ಸೆಪ್ಟೆಂಬರ್ 2019

ಆದರ್ಶ ಗುರು.. ಶಿಷ್ಯನಿಗೆ ದೇವರು.. 🙏🏻

"ಗುರು ಎಂದರೆ ಕೇವಲ ವ್ಯಕ್ತಿಯಲ್ಲ..
ಅವರೊಬ್ಬ ಶಕ್ತಿ..
ತನ್ನನ್ನು ತಾನು ಉರಿಸಿಕೊಂಡು ಸಮಾಜಕ್ಕೆ ಬೆಳಕು ನೀಡುವ ನಂದಾದೀಪ" ..

ಅಂತಹ ಗುರುವಿನ ಗುಣಗಳು ಯಾವ ರೀತಿ ಇದ್ದರೆ ನಾವು ಅವರನ್ನು ಉತ್ತಮ ಗುರು ಎಂದು ಭಾವಿಸುತ್ತೇವೆ ? ಎಂದರೆ ಅವರು ಬಿತ್ತಿದ ಬೀಜಗಳು (ಶಿಷ್ಯರು) ನಾಳೆ ಸಮಾಜದಲ್ಲಿ ಆರೋಗ್ಯಕರ ಹಸಿರು ಫಲವಾಗಿ ಬೆಳೆಯಬೇಕು. ಇಂತಹ ಗುರುವನ್ನು ಮಾತ್ರ ಒಬ್ಬ ದೇವರು ಎಂದು ಶಿಷ್ಯರು ಭಾವಿಸಲು ಸಾಧ್ಯ. ಆದರೆ ಕೆಲವೊಮ್ಮೆ ಗುರುವಿನ ಕೆಲವು ಭೌತಿಕ ವರ್ತನೆಗಳು ಶಿಷ್ಯರ ಮಾನಸಿಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.

ಇದು ಕೇವಲ ನನ್ನ ಕೂಗಲ್ಲ ಕೆಲವು ಪೋಷಕರ ಕೂಗು. ತನ್ನ ಮಗು ಮುಂದೆ ಏನನ್ನೋ ಸಾಧಿಸುತ್ತಾನೆ, ನಮ್ಮನ್ನು ಸಾಕುತ್ತಾರೆ, ಎಂದು ನಿರೀಕ್ಷೆ ಇಟ್ಟು ಕೋಟ್ಯಾನು ಕೋಟಿ ಕನಸು ಕಟ್ಟಿ, ತನ್ನ ಮಗುವನ್ನು ಶಾಲೆಗೆ ಕಳಿಸಿರುವ ಅಥವಾ ಕಾಲೇಜಿಗೆ ಕಳಿಸಿರುವ ತಂದೆ ತಾಯಿಗಳ ಕೂಗು..

ಉತ್ತಮ ಗುರು ಎಂದರೆ ಕೇವಲ ಉತ್ತಮವಾಗಿ ಬೋಧನೆ ಮಾಡುವವನಲ್ಲ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರೋತ್ಸಾಹ ನೀಡಿ, ಅವರನ್ನು ಮುಂದೆ ತರುವ ಕಾಯಕ ಅವರಿಂದಾಗಬೇಕು.

ಹಾಗೆಂದರೆ ಕಲಿಕೆಯಲ್ಲಿ ಪ್ರಗತಿ ಸಾಧಿಸಿದ ಅಥವಾ ಸಾಧಿಸುತ್ತಿರುವ ಮಕ್ಕಳನ್ನು ತಿರಸ್ಕರಿಸಬೇಕು ಎಂದರ್ಥವಲ್ಲ.. ಕಲಿಕೆಯಲ್ಲಿ ಪ್ರಗತಿ ಸಾಧಿಸಿರುವ ಶಿಷ್ಯರಿಗೆ ಪ್ರೋತ್ಸಾಹ ನೀಡಬೇಕು, ಕಲಿಕೆಯಲ್ಲಿ ಹಿಂದುಳಿದವರಿಗೆ ಆತ್ಮವಿಶ್ವಾಸ, ಭರವಸೆಯನ್ನು ನೀಡಿ ಮುಂದೆ ತರಬೇಕು. ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಮತ್ತು ಉತ್ತಮ ರಾಷ್ಟ್ರ ನಿರ್ಮಾಣದ ಮುಖ್ಯ ಜವಾಬ್ದಾರಿ ಶಿಕ್ಷಕರ ಕೈಯಲ್ಲಿರುತ್ತದೆ. ಅಂತಹ ಗುರುವಿನ ನಡೆನುಡಿಗಳು ಧನಾತ್ಮಕವಾಗಿರಬೇಕೇ ಹೊರತು " ಅಯ್ಯೋ ಅವನು ಎಷ್ಟು ಕಲಿಸಿದರೂ ಅಷ್ಟೇ, ಅವನ ಹಣೆ ಬರಹವನ್ನು ಬ್ರಹ್ಮನಿಂದಲೂ ಸಾಧ್ಯವಿಲ್ಲ" ಎಂಬ ಋಣಾತ್ಮಕ ಮಾತುಗಳು ಬಂದರೆ ವಿದ್ಯಾರ್ಥಿಗಳು ಕೈ ಎತ್ತಿ ಮುಗಿಯಬೇಕಾದ ಗುರುವಿಗೆ - ಅವರು ಎದುರಿಗೆ ಬಂದಾಗ ಅಸಭ್ಯವಾಗಿ ವರ್ತಿಸುತ್ತಾರೆ.

ಒಬ್ಬ ವಿದ್ಯಾರ್ಥಿಯು ಚೆನ್ನಾಗಿ ಓದುವುದಿಲ್ಲವೆಂದರೆ ಅವನ ಹಣೆ ಬರಹವನ್ನು ಬ್ರಹ್ಮನಿಂದಲೂ ಬದಲಿಸಲು ಸಾಧ್ಯವಿಲ್ಲದೇ ಇರಬಹುದು.

ಆದರೆ ಅವರ ಹಣೆಬರಹ ಬದಲಿಸುವ ಶಕ್ತಿ ಖಂಡಿತಾ ಒಬ್ಬ ಗುರುವಿಗೆ ಇದೆ. ಆ ಕೆಟ್ಟ ಹಣೆ ಬರಹವನ್ನು ಬದಲಾಯಿಸಲು ಶಿಕ್ಷಕರು ಏನೋ ದೊಡ್ಡ ಪ್ರಯೋಗ ಮಾಡಬೇಕಾಗಿಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಹೆಚ್ಚು ಪ್ರೋತ್ಸಾಹದ ಮಾತಿನಿಂದ, ಆತ್ಮವಿಶ್ವಾಸದ ನುಡಿಗಳಿಂದ, ಮುಂದೆ ತರುವಂತಹ ಚಿಕ್ಕ ಪ್ರಯತ್ನ ಮಾಡಿದರೆ ಸಾಕು ಆ ಶಿಷ್ಯನ ಪಾಲಿಗೆ ಆ ಗುರು ದೇವರಾಗಿ ಬಿಡುತ್ತಾರೆ.

ಆದ್ದರಿಂದ ಎಲ್ಲಾ ಗುರುಗಳು ಎಲ್ಲ ಶಿಷ್ಯರನ್ನು ಬೆಳೆಸಬೇಕೆಂಬುದು ನನ್ನ ವಿನಂತಿ.

🖊️ - ಪವಿತ್ರ ಬಡಿಗೇರ್. ದ್ವಿತೀಯ ಪ್ರ ಪ್ರಶಿಕ್ಷಣಾರ್ಥಿ ಟಿ.ಎಂ.ಎ.ಇ. ಸಂಸ್ಥೆ ಹರಪನಹಳ್ಳಿ


**********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ