ಪುಟಗಳು

13 ಸೆಪ್ಟೆಂಬರ್ 2019

ಸಂತೇಬೆನ್ನೂರಿನ ರಾಮತೀರ್ಥ ಪುಷ್ಕರಣಿ

       ಸಂತೇಬೆನ್ನೂರಿನ ರಾಮತೀರ್ಥ ಪುಷ್ಕರಣಿ ನಮಗೆಲ್ಲರಿಗೂ ಕಲ್ಯಾಣಿ ಅಥವಾ ಪುಷ್ಕರಣಿ ಎಂದಾಕ್ಷಣ ನೆನಪಾಗುವುದು ಸುತ್ತಲೂ ಮೆಟ್ಟಿಲುಗಳು ಮಧ್ಯೆ ನೀರು ಅದರ ನಡುವೆ ಒಂದು ಗೋಪುರ. ಅದೇ ರೀತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿರುವ ರಾಮತೀರ್ಥ ಪುಷ್ಕರಣಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಇಲ್ಲಿನ ರಮಣೀಯ ದೃಶ್ಯಗಳು ನೋಡುಗರ ಕಣ್ಣಿಗೆ ತಂಪನ್ನು ನೀಡುತ್ತವೆ. ಸಂಜೆ ವಿಹರಿಸುವುದಕ್ಕೂ ಇದೊಂದು ಸೂಕ್ತ ಮತ್ತು ಸುಂದರ ತಾಣ. ಒಳಗೆ ಹೋಗಿ ಹುಲ್ಲಿನ ಹಾಸಿನ ಮೇಲೆ ಮಲಗಿದರೆ ಎದ್ದು ಬರುವ ಮನಸ್ಸು ಬರುವುದೇ ಇಲ್ಲ. ಊರಿನವರಿಗೂ ಇದು ಒಂದು ಒಳ್ಳೆಯ ತಾಣವಾಗಿ ಮಾರ್ಪಟ್ಟಿದೆ. 

ಇತಿಹಾಸ :-
       ಊರಿನ ಇತಿಹಾಸವೇ ರೋಚಕವಾಗಿದೆ. ಇತಿಹಾಸಕಾರರು ತುಂಬಾ ಊಹೆಗಳನ್ನು ಮಾಡಿದ್ದಾರೆ. ಕೆಲವು ಇತಿಹಾಸಕಾರರ ಪ್ರಕಾರ, ಹದಿನಾರನೇ ಶತಮಾನದಲ್ಲಿ ಈ ಊರನ್ನು ಬೆನ್ನೂರು ಈ ಊರು ತದನಂತರ ವ್ಯಾಪಾರ ಕೇಂದ್ರವಾಗಿದ್ದರಿಂದ ಸಂತೇಬೆನ್ನೂರು ಎಂದು ಮರುನಾಮಕರಣ ಹೊಂದಿತು. ಕೆಲವರ ಪ್ರಕಾರ ಈ ಪುಷ್ಕರಣಿಯು ವಿಜಯನಗರ ಅರಸರ ಆಳ್ವಿಕೆಯಲ್ಲಿ ಕಟ್ಟಲಾಯಿತು ಎನ್ನುತ್ತಾರೆ. ದುರದೃಷ್ಟವಶಾತ್ ಇದನ್ನು ಬಿದನೂರು ಸಂಸ್ಥಾನದವರು ಯುದ್ಧದ ಸಮಯದಲ್ಲಿ ಕೆಲವು ಭಾಗಗಳನ್ನು ವಿರೂಪಗೊಳಿಸಿದ್ದರು ಎಂದು ಕೆಲವರ ಅಭಿಪ್ರಾಯ. ಮೈಸೂರು ಸಂಸ್ಥಾನದ ಮಹಾರಾಜರುಗಳು ತಮ್ಮ ರಾಣಿಯರನ್ನು ಕರೆದುಕೊಂಡು ರಾಮತೀರ್ಥ ಪುಷ್ಕರಣಿಗೆ ವಿಶ್ರಾಂತಿಗೆಂದು ಬರುತ್ತಿದ್ದರು ಎಂಬ ದಂತಕಥೆಗಳು ಇನ್ನು ಬಾಯಿಯಲ್ಲಿ ಹರಿದಾಡುತ್ತಿವೆ. 

ವಿನ್ಯಾಸ ಹಾಗೂ ವಾಸ್ತುಶಿಲ್ಪ :- 
       ಇಡೀ ಪುಷ್ಕರಣಿಯು ಸಣ್ಣ ಸಣ್ಣ ಗೋಪುರಗಳಿಂದ ಸುತ್ತುವರಿದಿದೆ. ಎಲ್ಲಾ ಗೋಪುರಗಳು ಕಲ್ಲಿನಿಂದ ಮಾಡಿದೆ. ಸುಂದರ ಕಲ್ಲುಗಳಿಂದ ಮಾಡಿದ ಮೆಟ್ಟಿಲುಗಳು ಸುತ್ತಲೂ ಇವೆ . ಪ್ರವಾಸಿಗರು ನಾಲ್ಕು ಕಡೆಯಿಂದಲೂ ನೀರಿಗೆ ಇಳಿಯಬಹುದು. ಇದು ಒಟ್ಟಾರೆ ಎಂಟು ಸಣ್ಣ ಗೋಪುರಗಳು ಮತ್ತು ನೀರಿನ ಮಧ್ಯೆ ಒಂದು ದೊಡ್ಡ ಗೋಪುರವಿದೆ. ಪುಷ್ಕರಣಿಯಲ್ಲಿ ನೀರು ಖಾಲಿಯಾದಾಗ ಮಾತ್ರ ಗೋಪುರವನ್ನು ಪ್ರವೇಶಿಸುವ ಅವಕಾಶವಿರುತ್ತದೆ. ನೀರಿನ ಮಧ್ಯೆ ಇರುವ ಗೋಪುರವನ್ನು ವಸಂತ ಮಂಟಪ ಎಂದು ಕರೆಯುತ್ತಾರೆ . ಗೋಪುರ ನಾಲ್ಕು ಮಹಡಿ ಇದ್ದು ಐವತ್ತು ಅಡಿ ಎತ್ತರ ಇದೆ ಇದರ ತಳಪಾಯ ಮತ್ತು ಕಟ್ಟಡವನ್ನು ಪೂರ್ತಿ ಕಲ್ಲು ಮತ್ತೆ ಗಾರೆಯಿಂದ ಕಟ್ಟಿದ್ದಾರೆ. ಗೋಪುರದ ಮೇಲೆ ಹೋಗಿ ನಿಂತರೆ ಬಾಲ್ಕನಿಯಲ್ಲಿ ನಿಂತ ಅನುಭವವಾಗುತ್ತದೆ. ಎಲ್ಲಾ ಗೋಡೆಗಳ ಮೇಲೆ ಪಕ್ಷಿ ಪ್ರಾಣಿಗಳ ಚಿತ್ರಣವಿದೆ. ಅದು ಗೋಪುರಕ್ಕೆ ಆಕರ್ಷಣೆ ಮತ್ತು ಸೊಬಗನ್ನು ನೀಡುತ್ತದೆ 

ಮುಸಾಫಿರ್ ಖಾನ:- 
        ಪುಷ್ಕರಣಿಯ ಆವರಣದ ಒಳಗೆ ಅದರ ಎದುರು ಒಂದು ದೊಡ್ಡದಾದ ಕೋಣೆ ಇದೆ ಅದನ್ನು ಮುಸಾಫಿರ್ ಖಾನಾ ಎಂದು ಕರೆಯುತ್ತಾರೆ (ಅತಿಥಿ ಗೃಹ ) ಈ ಅತಿಥಿ ಗೃಹವೂ ಬಿಜಾಪುರ ಸುಲ್ತಾನರ ಸೇನಾಧಿಪತಿ ರನದುಲ್ಲಾ ಖಾನ್ ಶತಮಾನದ ಹಿಂದೆಯೇ ಕಟ್ಟಿಸಿದ್ದ ಎನ್ನುತ್ತಾರೆ ಇತಿಹಾಸಕಾರರು . ಈಗ ಇದು ಒಂದು ಖಾಲಿ ಕೋಣೆ ಯಂತಿದೆ ಇದನ್ನು ಪುಷ್ಕರಣಿ ಅಗತ್ಯ ವಸ್ತುಗಳನ್ನು ಇಡಲು ಬಳಸುತ್ತಾರೆ ತುಂಬಾ ಅಚ್ಚುಕಟ್ಟಾದ ವಾಸ್ತುಶಿಲ್ಪ ಇದಕ್ಕಿದೆ. ಹಿಂದೂ ಮತ್ತು ಮುಸ್ಲಿಮರ ಬಾಂಧವ್ಯಕ್ಕೆ ಇದು ಹೆಸರಾಗಿದೆ ಮತ್ತು ಸಂಕೇತವೂ ಆಗಿದೆ . 

ಹೋಗುವುದು ಹೇಗೆ :- 
        ಸಂತೇಬೆನ್ನೂರಿನಿಂದ ಚನ್ನಗಿರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇದು ಕಾಣಸಿಗುತ್ತದೆ. ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರದಿಂದ ಕ್ರಮವಾಗಿ ನಲವತ್ತು ಮತ್ತು ಇಪ್ಪತ್ತು ಕಿಲೋಮೀಟರುಗಳು. 

ಪ್ರಮುಖ ಆಕರ್ಷಣೆ:- 
       ಪುಷ್ಕರಣಿಯು ಅಂದಕ್ಕೆ ಎಷ್ಟು ಜನಪ್ರಿಯವೋ ಅಷ್ಟೇ ಮೀನುಗಳಿಗೂ ಜನಪ್ರಿಯ , ಹಲವಾರು ಪುರವಣಿಗರು ಬಂದು ನಿತ್ಯವೂ ಮೀನುಗಳಿಗೆ ಆಹಾರ ಹಾಕುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೀನುಗಳೇ ಒಂದು ದೊಡ್ಡ ಆಕರ್ಷಣೆ. ಹುಲ್ಲು ಹಾಸಿಗೆಳನ್ನು ಇಲ್ಲಿ ಮಾಡಿದ್ದಾರೆ ಅಲ್ಲಿ ಕೂತು ವಿರಮಿಸಬಹುದು. ಪುಷ್ಕರಣಿಗೆ ಒಬ್ಬ ನಿರ್ವಾಹಕನನ್ನು ಸರ್ಕಾರವು ನೇಮಿಸಿದೆ ಅವರು ನೀರಿನ ಸುಚಿತ್ವ ಮತ್ತು ನೀರಿಗೆ ಇಳಿದು ಅಪಘಾತ ಮಾಡಿಕೊಳ್ಳದ ಹಾಗೆ ತಡೆಯುತ್ತಾರೆ. ಒಳಗೆ ಪ್ರವೇಶ ಮಾಡಲು ಯಾವುದೇ ಶುಲ್ಕವಿರುವುದಿಲ್ಲ ನೆನಪಿರಲಿ ನೀರಿಗೆ ಇಳಿಯದಿದ್ದರೆ ಒಳ್ಳೆಯದು ಎಲ್ಲರೂ ಒಮ್ಮೆ ನೋಡಲೇಬೇಕಾದ ಸ್ಥಳ ನೀವು ಒಮ್ಮೆ ನೋಡಿ ಬನ್ನಿ. 
         --ಹರ್ಷ ಆರ್ ಬಿ.  ಸಂತೆಬೆನ್ನೂರು

*********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ