ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-60

         ಪಿಜಿಣನ ಆತ್ಮಹತ್ಯೆಯ ಅನಂತರ ಚೀಂಕ್ರ ಎಂದಿಗಿಂತಲೂ ಅತಿಶಯವಾಗಿ ಅಕ್ಕಣಿಯ ಯೋಗಕ್ಷೇಮದ ವಿಚಾರದಲ್ಲಿ ಆಸಕ್ತನಾದನು. ಅಕ್ಕಣಿ ಅವಳ ಗಂಡನ ಕಳೇಬರಕ್ಕೂ ಪ್ರೇತಕ್ಕೂ ಸಲ್ಲಿಸಬೇಕಾಗಿದ್ದ ಕ್ರಿಯೆಗಳಿಗೆಲ್ಲ ಚೀಂಕ್ರನೆ ಹೊಣೆಗಾರನಾಗಿ ನಿಂತು ಕೆಲಸ ಮಾಡಿದನು. ಅಕ್ಕಣಿಗೂ ಚೀಂಕ್ರ ಸೇರೆಗಾರನಿಗೂ ಇದ್ದಿಬಹುದಾದ ಗುಪ್ತಸಂಬಂಧವನ್ನು ಗುಟ್ಟಾಗಿಯೆ ಅರಿತಿದ್ದ ಅವರ ಜಾತಿಯವರಿಗೂ ಇತರರಿಗೂ ಚೀಂಕ್ರನ ಕರುಣೆಯ, ದಯೆಯ ಮತ್ತು ಸೇವೆಯ ಅರ್ಥ ಸ್ಪಷ್ಟವಾಗಿಯೆ ಆಗಿತ್ತು: ಇನ್ನು ಅಕ್ಕಣಿ ಚೀಂಕ್ರವನ್ನು ಕೊಡುತ್ತಾಳೆ; ಅದೂ ಸರಿಯೆ; ಪ್ರಾಯದ ಹೆಂಗಸು ಗಂಡನಿಲ್ಲದೆ ಬದುಕು ಸಾಗಿಸುವುದು ಎಂದಿಗಾದರೂ ಸಾಧ್ಯವೆ? ಕಂಡ ಕಂಡ ಗಂಡಸರ ಕಾಟಕ್ಕೆ ಒಳಗಾಗಿ, ಮೂರು ಹೊತ್ತೂ ಮುಜುಗರದ ಜೀವನ ನಡೆಸುವುದಕ್ಕಿಂತ ಯಾವನಾದರೊಬ್ಬನನ್ನು ಕೂಡಿಕೆಯಾಗಿ, ಮತ್ತೆ ಗರತಿಬಾಲು ಮಾಡುವುದೇ ಯೋಗ್ಯ; ಅಲ್ಲದೆ ಹೆಂಡತಿ ಸತ್ತ ಮೇಲೆ ಕೆಟ್ಟು ಅಲೆಯುತ್ತಿರುವ ಚೀಂಕ್ರನಿಗೂ ಒಂದು ನೆಲೆ ಸಿಕ್ಕಿದ ಹಾಗಾಗುತ್ತದೆ; ಅವನ ಮಕ್ಕಳಿಗೂ ಒಂದು ತಾಯಿ ದಿಕ್ಕು, ಇದುವರೆಗೂ ಅತಂತ್ರವಾಗಿದ್ದುದ್ದು, ಸುತಂತ್ರವಾಗಿಯೂ ದೊರೆತಂತೆ ಆಗುತ್ತದೆ.

ಆದರೆ ಅಕ್ಕಣಿಯ ಮನಸ್ಸೇ ಬೇರೆಯಾಗಿತ್ತು. ಅವಳು ತನ್ನ ಗಂಡನು ಬದುಕಿದ್ದಾಗಲೆ ಸಮಯ ಸನ್ನಿವೇಶ ದಾಕ್ಷಿಣ್ಯಗಳಿಗೆ ತುತ್ತಾಗಿ ಕಾಲುಜಾರಿದ್ದಳು, ನಿಜ. ಆದರೆ ಸೇರೆಗಾರನಿಗೆ ಮನಸ್ಸು ಸೋತು ಒಡಲನ್ನು ಒಪ್ಪಿಸಿರಲಿಲ್ಲ. ತನ್ನ ರೋಗಿಷ್ಠ ತಂಡನ ಶುಶ್ರೂಷೆಗೆ ಸೇರೆಗಾರನಿಂದ ನೆರವಾಗುತ್ತಿದೆ ಎಂಬ ಕೃತಜ್ಞತಾ ಕಾರಣವೂ ಅವಳ ‘ಪತನ’ಕ್ಕೊಂದು ಪ್ರಬಲ ಪ್ರಚೋದನೆಯಾಗಿತ್ತು. ಪಿಜಿಗಣ ದೊಡ್ಡತನದ ಮುಂದೆ ಚೀಂಕ್ರನ ನೀಚತ್ವ ಅವಳ ಕಣ್ಣಿಗೆ ಎದ್ದುಕಾಣುತ್ತಿತ್ತು. ಪಿಜಿಣನು ರೋಗವಶನಾಗಿ ಇಂದೊ ನಾಳೆಯೊ ಸಾಯುತ್ತಿದ್ದನು. ಅವನು ಹಾಗೆ ಸ್ವಾಭವಿಕವಾಗಿ ಸತ್ತಿದ್ದರೆ ಏನಾಗುತ್ತಿತ್ತೊ ಏನೋ? ಈಗ ಗಂಡನ ಆತ್ಮಹತ್ಯೆಗೆ ಚೀಂಕ್ರನ ಪ್ರಧಾನ ಕಾರಣ ಎಂಬ ಭಾವನೆ ಅಕ್ಕಣಿಯಲ್ಲಿ ಬೇರೊರಿತ್ತು: ಚೀಂಕ್ರ ತಂದು ಕೊಡುತ್ತಿದ್ದ ಔಷಧಗಳೂ, ಹೇಳುತ್ತಿದ್ದ ಪಥ್ಯಗಳೂ, ನೆವವೊಡ್ಡಿ ತಮ್ಮ ಬಿಡಾರದಲ್ಲಿಯ ಪಿಜಿಣನಿಗೆ ಕಾಣುವಂತೆ ಮತ್ತು ಎಟಕುವಂತೆ ತಂದು ಮುಚ್ಚಿಡುತ್ತಿದ್ದ ಸಾರಾಯಿಯಂತಹ ಅಗ್ನತುಲ್ಯ ಪಾನೀಯಗಳೂ ಪಿಜಿಣನ ರೋಗ ಉಲ್ಭಣಗೊಳ್ಳುವುದಕ್ಕೂ ಯಾತನೆ ಸಹಿಸಲಸಾಧ್ಯವಾಗುವಂತೆ ಏರಿ ಆತ್ಮಹತ್ಯೆಗೂ ಅವನನ್ನು ನೂಕಿದುದಕ್ಕೂ ಸಹಾಯವಾದುವಲ್ಲವೆ? ಜೊತೆಗೆ, ಕೊನೆಕೊನೆಯಲ್ಲಿ ತನ್ನ ಗಂಡನ ಉದಾರ ಹೃದಯದಲ್ಲಿಯೂ ಜುಗುಪ್ಸೆ ಹುಟ್ಟುವಂತೆ ತಾನು ವರ್ತಿಸಿದೆನೆಲ್ಲಾ ಎಂಬ ಆತ್ಮನಿಂದನೆಯ ಭಾವವೂ ಅವಳಲ್ಲಿ ಸದ್ಯಃ ಪಶ್ಚಾತಾಪವನ್ನು ಕೆರಳಿಸಿತ್ತು: ಯಾವುದಾದರೂ ಒಂದು ರೀತಿಯಲ್ಲಿ, ಹೇಗಾದರೂ, ತಾನು ಕಠೋರ ಪ್ರಾಯಶ್ಚಿತ್ತ  ಮಾಡಿಕೊಳ್ಳಬೇಕು ಎಂಬ ಆತ್ಮ ಶುದ್ಧೀಕರಣದ ಧರ್ಮ ಬುದ್ಧಿ ಚೇತನಗ್ರಸ್ತವಾಗಿತ್ತು.
ಅವಳೀಗ ಚೀಂಕ್ರನ ಮಕ್ಕಳನ್ನು ಎಂದಿನಂತೆ ನೋಡಿಕೊಳ್ಳುತ್ತಿದ್ದರೂ ಅವನೊಡನೆ ಮಾತಿಗೆ ಹೋಗುತ್ತಿರಲಿಲ್ಲ. ತನ್ನ ಬಿಡಾರದಲ್ಲಿಯೇ ಮಕ್ಕಳನ್ನು ಮಲಗಿಸಿಕೊಂಡು ಮಲಗುತ್ತಿದ್ದಳು. ತನ್ನ ಬಿಡಾರಕ್ಕೆ ಚೀಂಕ್ರನನ್ನು ಸೇರಿಸುತ್ತಿರಲಿಲ್ಲ. ಪಿಜಣ ಆತ್ಮಹತ್ಯ ಮಾಡಿಕೊಂಡ ಜಾಗದಲ್ಲಿ ಮಲಗುವುದು ಒಳ್ಳೆಯದಲ್ಲ ಎಂದು ಕೆಲವರು ವಿವೇಕ ಹೇಳಿದಾಗ, ಅವಳು ಖಾಲಿಯಾಗಿದ್ದ ಐತನ ಬಿಡಾರದಲ್ಲಿಯೆ ಅವನ ಹೆಂಡತಿ ಪೀಂಚಲುವಿನ ಒಪ್ಪಿಗೆ ಪಡೆದು ಮಲಗಿಕೊಳ್ಳುತ್ತಿದ್ದಳು.
ಪ್ರವೀಣ ವಿಟಮನೋಧರ್ಮದ ಚೀಂಕ್ರ – ಗಂಡ ಸತ್ತ ಹೊಸದಲ್ಲಿ ಹೆಂಗಸಿಗೆ ಹಾಗೆನ್ನಿಸುತ್ತದೆ; ಕಾಲವೆ ದುಃಖವನ್ನು ಶಮನಗೊಳಿಸಿ, ಮೈಯನ್ನು ಪಳಗಿಸಿ, ಸುಖಾನುಭವಕ್ಕೆ ಅಳವಡಿಸುತ್ತದೆ; ಹುರಿದುಂಬಿಸುತ್ತದೆ; ಇವೊತ್ತಲ್ಲ ನಾಳೆ ಅಕ್ಕಣಿ ತನ್ನವಳಾಗಿಯೆ ಆಗುತ್ತಾಳೆ ಎಂದು ಸಮಯ ಕಾದನು.
ತನ್ನನ್ನು ಮದುವೆಯಾಗುವ ಸಲಹೆಯನ್ನು ಅವಳು ನಿರಾಕರಿಸಲು ‘ಮದುವೆಯಾಗದಿದ್ದರೆ ಚಿಂತೆಯಿಲ್ಲ, ಮೊದಲಿನಂತೆಯೆ ಮೈಯ ಸಂಬಂಧವನ್ನು ಮುಂದುವರಿಸಿಕೊಂಡರಾಯಿತು’ ಎಂದು ಸೂಚಿಸಿದನು. ಅದನ್ನೊ ಅವಳು ತಿರಸ್ಕರಿಸಲು, ಹೆದರಿಸಿಯೊ ನೋಡಿದನು. ಪಿಜಿಣ ಮೇಗರವಳ್ಳಿ ಕರೀಮ ಸಾಬರ ಹತ್ತಿರ ಸಾಲಮಾಡಿದ್ದನಂತೆ; ಅದನ್ನು ತೀರಿಸುತ್ತೀಯೋ ಇಲ್ಲವೋ ಎಂದು ಕೇಳಲು ನಿನ್ನನ್ನು ಬರಹೇಳಿದ್ದಾರೆ ಎಂದನು. ‘ಅಯ್ಯೋರ ಹತ್ರ ಗಂಡನ ಸಾಲಾನೆಲ್ಲ ತೀರಿಸ್ತೀನಿ ಅಂತಾ ಹೇಳಿದ್ದೀನಿ. ಸಾಬರ ಸಾಲ ಏನಿದ್ದರೂ ಅಯ್ಯೋರೆ ಕೊಡ್ತಾರೆ; ಅವರನ್ನೇ ಕೇಳಲಿ’ ಎಂದಳು. ಅಕ್ಕಣಿ. ‘ಆ ಸಾಲನೆಲ್ಲ ಎಂದಾದರೂ ತೀರಿಸುವುದಕ್ಕೆ ಆಗುತ್ತದೆಯೆ? ವರ್ಷವರ್ಷವೂ ಅದಕ್ಕೆ ಬಡ್ಡಿ ಚಕ್ರಬಡ್ಡಿ ಅಂತಾ ಏನೇನೊ ಸೇರಿಸಿ ಹೆಚ್ಚು ಮಾಡ್ತಾನೆ ಇರುತ್ತಾರೆ. ಅದನ್ನೆಲ್ಲ ಒಟ್ಟಿಗೆ ತೀರಿಸೋಕೆ ಇರೋದು ಒಂದೋ ಒಂದು ಉಪಾಯ. ನನ್ನ ಸಂಗಡ ಬಂದು ಬಿಡು; ಗಟ್ಟದ ಕೆಳಗೆ ಇಳಿದು ಬಿಡೋಣ; ಆಮೇಲೆ ನಮ್ಮನ್ನು ಯಾರು ಕೇಳ್ತಾರೆ?’ ಎಂದು ಉಪಾಯ ಸೂಚಿಸಿದ ಚೀಂಕ್ರನಿಗೆ ಅಕ್ಕಣಿ ‘ನಾನು ಧರ್ಮಸ್ಥಳದ ದೇವರಾಣೆ ಹಾಕಿ, ಅವರ ಸಾಲಾನೆಲ್ಲ ದುಡಿದು ತೀರಿಸ್ತೀನಿ ಅಂತಾ ಹೇಳಿದ್ದೀನಿ. ಅದಕ್ಕೆ ತಪ್ಪಿದರೆ ದೇವರು ಸುಮ್ಮನೆ ಬಿಟ್ಟಾನೆ ನನ್ನ?’ ಎಂದು ಬಿಟ್ಟಳು. ‘ತಪ್ಪು ಕಾಣಿಕೆ ಕಟ್ಟಿ ಅದನ್ನೆಲ್ಲ ಪರಿಹರಿಸಿಕೊಳ್ಳಬಹುದು. ಆ ಹೊಣೆ ನನ್ನದಾಗಿರಲಿ’ ಎಂದು ಧೈರ್ಯ ಹೇಳಿದ ಚೀಂಕ್ರನಿಗೆ ಅಕ್ಕಣಿ ‘ನನ್ನ ಗಂಡ ದಿನಾ ಕನಸಿನಾಗ ಬಂದು ಹೇಳುತ್ತಾರೆ, ಹಾಂಗೆಲ್ಲಾ ಮಾಡಬೇಡಾ ಅಂತಾ’ ಎಂದು. ತನ್ನ ಗಂಡನ ಹೆಚ್ಚುಗಾರಿಕೆಯನ್ನೂ ಚೀಂಕ್ರನ ಅಲ್ಪತ್ವವನ್ನೂ ಒಟ್ಟಿಗೆ ಸೂಚಿಸಿ, ಕಡ್ಡಿ ಮುರಿದಂತೆ ಉತ್ತರ ಕೊಟ್ಟಿದ್ದಳು.
“ಅಕ್ಕವಣಿಯ ಮನಃಸ್ಥೈರ್ಯ ಮುರಿಯಲು ಚೀಂಕ್ರ ಮತ್ತೊಂದು ಕೊನೆಯ ಉಪಾಯ ಹೂಡಿದನು.
ಮಕ್ಕಳಿಲ್ಲದ ಅಕ್ಕಣಿಗೆ ದೇಯಿ ಸತ್ತುಹೋದ ಮೇಲೆ ಚೀಂಕ್ರನ ಮಕ್ಕಳೇ ತನ್ನ ಮಕ್ಕಳಾಗಿ ಹೋಗಿದ್ದರು.
ಒಂದು ಬೈಗು. ಆಗತಾನೆ ಕಪ್ಪಾಗಿತ್ತು. ಗೌಡರ ಮನೆಯ ಗದ್ದೆ ಕೆಲಸಕ್ಕೆ ಹೋಗಿ ಬಂದಿದ್ದ ಅಕ್ಕಣಿ ತನ್ನ ಬಿಡಾರದಲ್ಲಿ ಒಲೆ ಹೊತ್ತಿಸಿ ಗಂಜಿ ಬೇಯಿಸುವ ಕಾರ್ಯದಲ್ಲಿ ತೊಡಗಿದ್ದಳು. ಹಸಿದಿದ್ದ ಮೂವರು ಮಕ್ಕಳೂ, ಐತನದಾಗಿದ್ದ ಬಿಡಾರದಲ್ಲಿ, ಹಸಿವೆಯಿಂದಲೆ ಸೋತು ದಣಿದು, ಒಂದು ಮುದ್ದೆಗೊಂಡು ಹದುಗಿ ಮಲಗಿದ್ದುವು, ಅಕ್ಕಣಬ್ಬೆ ಗಂಜಿಯುಣ್ಣಲು ಕರೆಯುವುದನ್ನೆ ಇದಿರುನೋಡುತ್ತಾ.
ಇದ್ದಕ್ಕಿದ್ದ ಹಾಗೆ ಬಿಡಾರದ ಬಾಗಿಲಲ್ಲಿ ಚೀಂಕ್ರ ಕೆಮ್ಮುತ್ತಾ ನಿಂತಿದ್ದುದು ಅಕ್ಕಣಿಯ ಗಮನಕ್ಕೆ ಬಂದಿತು. ಇತ್ತೀಚೆಗೆ ಅವನು ಹಿಂದೆ ಬರುತ್ತಿದ್ದಂತೆ ತನ್ನ ಬಿಡಾರಕ್ಕೂ ಬರುವುದೇ ವಿರಳವಾಗಿತ್ತು. ಅಕ್ಕಣಿ ಒಮ್ಮೆ ತಿರುಗಿ ಅವನನ್ನು ಗುರುತಿಸಿದಳು. ಮತ್ತೆ ಆ ಕಡೆ ತಿರುಗಲಿಲ್ಲ. ಒಲೆಯ ಉರಿ ಆರದಂತೆ ಜಿಗ್ಗನ್ನು ಮುಂದಕ್ಕೆ ನೂಕುವುದರಲ್ಲಿ, ಗರಟದ ಸೌಟಿನಲ್ಲಿ ಗಂಜಿ ತಿರುಗಿಸುವುದರಲ್ಲಿ ಮಗ್ನೆಯಾದಂತೆ ಇದ್ದುಬಿಟ್ಟಳು. ಆದರೆ ಅವಳ ಹೃದಯ ಮಾತ್ರ ಯಾವುದೋ ಭಯಾಶಂಕೆಯಿಂದ ತಲ್ಲಣಗೊಂಡಿತ್ತು.
ಚೀಂಕ್ರ ತನ್ನ ಮಕ್ಕಳೆಲ್ಲಿವೆ ಎಂದು ಮಾತಿಗೆ ಮೊದಲು ಮಾಡಿದನು. ಅವನ ಧ್ವನಿಯನ್ನು ಆಲಿಸಿಯೆ ಅಕ್ಕಣಿಗೆ ಗೊತ್ತಾಯಿತು, ಸೇರೆಗಾರ ಎಂದಿಗಿಂತಲೂ ಹೆಚ್ಚಾಗಿಯೆ ಕುಡಿದಿದ್ದಾನೆ ಎಂದು. ಮತ್ತೊಂದು ಹೋರಾಟಕ್ಕೆ ಅನಿವಾರ್ಯವಾಗಿಯೆ ಸಿದ್ಧಳಾದಳು, ಮನಸ್ಸನ್ನು ಕಲ್ಲು ಮಾಡಿಕೊಂಡು.
“ಐತನ ಬಿಡಾರದಲ್ಲಿ ಮಲಗಿದಾವೆ” ಚೀಂಕ್ರನತ್ತ ಮೊಗದಿರುಗದೆ ಗಂಜಿ ಗಿರುಗಿಸುತ್ತಲೆ ಹೇಳಿದಳು ಅಕ್ಕಣಿ.
“ಸ್ವಲ್ಪ ಬಾ ನನ್ನ ಬಿಡಾರಕ್ಕೆ” ಅಪ್ಪಣೆ ಮಾಡುವಂತಿತ್ತು ಚೀಂಕ್ರನ ದನಿ.
“ಕಾಣಾದಿಲ್ಲೇನು? ಗಂಜಿ ಬೇಯಿಸ್ತಿದ್ದೀನಿ. ಮಕ್ಕಳು ಹಸಿದು ಕಾಯ್ತಾವೆ.”
“ಅವು ಸಾಯಲಿ! ಅವನ್ನ ಬಾವಿಗೆ ಹಕು!….ಬರ್ತಿಯೋ? ಇಲ್ಲೋ?” ಈ ಸಾರಿ ಸೇರೆಗಾರನ ಧ್ವನಿ ಕ್ರೂರವಾಗಿತ್ತು.
ದೈಹಿಕ ಶಕ್ತಿಯಲ್ಲಿ ಸೇರೆಗಾರನಿಗೆ ತಾನೇನೂ ಕಡಿಮೆ ಇಲ್ಲದಿದ್ದರೂ ಅಕ್ಕಣಿಗೆ ಹೆಣ್ಣಿನ ಸಹಜ ಅಂಜಿಕೆಯಾಗಿ, ಒಲೆಯ ಎಡೆ ಕುಳಿತು ಬಾಗಿ ಗಂಜಿ ಬೇಯಿಸುತ್ತಿದ್ದವಳು, ಎದ್ದುನಿಂತು, ಚೀಂಕ್ರನತ್ತ ದಿಟ್ಟಿಸಿದಳು. ಅವಳ ಬಲಗೈಯಲ್ಲಿ ಮರದ ಹಿಡಿ ಹಾಕಿದ್ದ ಕರಟದ ಚಿಪ್ಪಿನ ಸೌಟು ಇತ್ತು.
“ಏನು ಸೌಟು ತೋರ್ಸಿ ಹೆದರಿಸುತ್ತೀಯಾ, ಹಾದರದವಳೆ? ನನ್ನನ್ನು ಏನು ಅಂತಾ ತಿಳಿದಿದ್ದೀಯಾ? ಕೈಲಾಗದ ನಿನ್ನ ಗಂಡ ಪಿಜಿಣ ಅಂತಾ ಮಾಡಿದ್ದೀಯಾ?…. ಕತ್ತರಿಸಿ ಹಾಕಿಬಿಟ್ಟೇನು! ಗೊತ್ತಾಯ್ತೇನು?”
ತನ್ನ ಗಂಡನ ಹೆಸರ ಮೂದಲಿಕೆ ಮಂತ್ರೌಷಧಿಯಂತೆ ಕೆಲಸ ಮಾಡಿತು. ಆ ಬಿಡಾರದಲ್ಲಿಯೆ, ಸ್ವಲ್ಪ ಹೆಚ್ಚೂ ಕಡಿಮೆ ಈಗ ಅಕ್ಕಣಿ ನಿಂತಡೆಯಲ್ಲಿಯೆ, ನೇಣುಹಾಕಿಕೊಂಡಿದ್ದ ಪಿಜಿಣನ ಪ್ರೇತ ಅಲ್ಲಿಯೆ ಸುತ್ತುತ್ತಿದ್ದು, ಚೀಂಕ್ರನ ಮೂದಲಿಕೆಯನ್ನು ಕೇಳಿ ಕುಪಿತವಾಗಿ, ತನ್ನ ಹೆಂಡತಿಯ ಮೈಮೇಲೆ ಬಂದಿತೋ ಏನ ಎಂಬತಾಯ್ತು.
ನುಗ್ಗಿ ಬಂದು ತನ್ನ ಒಂದು ಎದೆಗೇ ಕೈಹಾಕಲು ಹವಣಿಸುತ್ತಿದ್ದ ಚೀಂಕ್ರನ ಮೋರೆಗೆ ಸೌಟಿನಿಂದಲೆ ಹೊಡೆದು ತಳ್ಳಿಬಿಟ್ಟಳು. ಅಮಲು ನೆತ್ತಿಗೇರಿದ್ದ ಅವನು ತತ್ತರಿಸುತ್ತಲೆ ಹಿಂದಕ್ಕೆ ಹೋಗಿ ಉರುಳಿಬಿದ್ದನು. ಅವನ ತಲೆ ಅಲ್ಲಿದ್ದ ಒಂದು ಗಡಿಗೆಗೆ ತಗುಲಿ ಅದು ಒಡೆಯಿತು. ಬಳಿಯಲ್ಲಿದ್ದ ಒಂದು ಕೆಲಸದ ಕತ್ತಿ ಅವನ ಕಣ್ಣಿಗೆ ಬಿತ್ತು. ತೆವಳಿಯೆ ಅದನ್ನು ಸಮೀಪಿಸಿ ಕೈಗೆ ತೆಗೆದುಕೊಳ್ಳಲು ಯತ್ನಿಸಿದನು. ಮೊದಲೇ ಕುಡಿದಿದ್ದ ಅವನಿಗೆ ಈಗ ಬಿದ್ದೂ ಸ್ವಾಧೀನ ತಪ್ಪಿತ್ತಾದ್ದರಿಂದ ಕತ್ತಿಯನ್ನು ಸುಲಭವಾಗಿ ತುಡುಕಲಾಗಲಿಲ್ಲ. ಅವನಿಗೆ ದೂರವಾಗಿದ್ದ ಅದರ ಹಿಡಿಪನ್ನು ಹಿಡಿಯುವುದಕ್ಕೆ ಬದಲಾಗಿ ಸಮೀಪವಾಗಿದ್ದ ಅದರ ಅಲಗನ್ನೆ ಹಿಡಿದುಕೊಂಡನು. ಅದನ್ನು ಕಂಡ ಅಕ್ಕಣಿ ಓಡಿ ಹೋಗಿ ಕತ್ತಿಯ ಹಿಡಿಯನ್ನು ತುಡುಕಿದಳು. ಚೀಂಕ್ರ ಅಲಗನ್ನೆ ಬಲವಾಗಿ ಹಿಡಿದನು. ಅಕ್ಕಣಿ ಎಳೆದ ಹೊಡೆತಕ್ಕೆ ಅವನ ಬೆರಳು ಅರೆ ಕತ್ತರಿಸಿ ರಕ್ತ ಹರಿಯಿತು. ಕತ್ತಿ ತನ್ನ ಕೈಗೇ ಬಂದಿದರೂ ನೆತ್ತರನ್ನು ಕಂಡು ಅಕ್ಕಣಿ ಕೂಗಿಕೊಂಡಳು: “ಅಯ್ಯೋ ಸತ್ತೇ; ಮಕ್ಕಳಿರಾ, ನಿಮ್ಮ ಅಪ್ಪ ಕೊಲ್ಲುತ್ತಿದ್ದಾನೆ!”
ಐತನ ಬಿಡಾರದಲ್ಲಿ ಅರೆ ನಿದ್ದೆಯಲ್ಲಿದ್ದ ಮಕ್ಕಳಿಗೆ ಎಚ್ಚರವಾಗಿ, ಅವೂ ಕೂಗಿಕೊಳ್ಳುತ್ತಲೆ ಓಡಿಬಂದವು. ಅಷ್ಟರಲ್ಲಿಯೆ ಎದ್ದು ನಿಂತಿದ್ದ ಚೀಂಕ್ರ, ತಲೆಗೆದರಿ, ಅಸ್ತವ್ಯಸ್ತವಸನನಾಗಿ, ಮುಂದಿನ ಭೀಷಣಕ್ರಮಕ್ಕೆ ತೂರಾಡುತ್ತಲೆ ಅನುವಾಗುತ್ತಿದ್ದನು. ಓಡಿಬಂದ ಮಕ್ಕಳಲ್ಲಿ ಹಿರಿಯದು ಅಪ್ಪನ ತೊಡೆಗೆ ತಬ್ಬುಹಾಕಿ “ಬೇಡ ಅಪ್ಪಾ! ಬೇಡ ಅಪ್ಪಾ!” ಎಂದು ರೋದಿಸಿತು. ಕೊನೆಯ ಚಿಕ್ಕಮಗು ಚೀಂಕ್ರನಿಗೂ ಅಕ್ಕಣಿಗೂ ನಡುವೆ ನಿಂತು ಒರಲುತ್ತಿತ್ತು. ಚೀಂಕ್ರ ಝಾಡಿಸಿ ಒದ್ದ ರಭಸಕ್ಕೆ ಆ ಮಗು ಬಿಡಾರದ ಗೋಡೆಗೆ ಢಿಕ್ಕಿ ಹೊಡೆದು ಸತ್ತಂತೆ ಬಿದ್ದು ಬಿಟ್ಟಿತು. ತೊಡೆಯನ್ನು ತಬ್ಬಿದ್ದ ಹುಡುಗನನ್ನು ಕೈ ಎಳೆದು ಬಿಡಿಸಿ ಮೂಲೆಗೆ ತಳ್ಳಿದನು. ಅಷ್ಟರಲ್ಲಿ ಆ ಅಬ್ಬರ ಕೇಳಿಸಿ ಓಡಿಬಂದಿದ್ದ ಬಾಗಿ, ಮೊಡಂಕಿಲ, ಕುದುಕ ಮೊದಲಾದವರು ಬಿಡಾರದ ಒಳಗೆ ನುಗ್ಗಿ ಚೀಂಕ್ರನನ್ನು ತಡೆದರು.
“ನನ್ನ ಮಕ್ಕಳನ್ನು ಕರೆದುಕೊಂಡು ಹೋಗುತ್ತೇನೆ, ಕಳಿಸಿಕೊಡು ಅಂದರೆ, ರಂಡೆ ನನ್ನನ್ನು ಕಡಿದೇ ಬಿಟ್ಟಳಲ್ಲಾ! ಬಿಡೀ ನೀವು ನನ್ನನ್ನು; ಅವಳಿಗೆ ಸಮಾ ಮಾಡುತ್ತೇನೆ….” ಎನ್ನುತ್ತಾ ಚೀಂಕ್ರ ರಕ್ತ ಹರಿಯುತ್ತಿದ್ದ ತನ್ನ ಕೈಯನ್ನು ಸಾಕ್ಷಿಯಾಗಿ ಎಲ್ಲರಿಗೂ ತೋರಿಸಿದನು.
ಚೀಂಕ್ರ ಹೇಳಿದುದಕ್ಕೆ ಸಾಕ್ಷಿಯಾಗಿ ಅಕ್ಕಣಿಯ ಕೈಯಲ್ಲಿ ಕತ್ತಿಯೂ ಇತ್ತು.
ನಿಜವಾದ ನಿಜ ಈ ಸುಳ್ಳಿಗಿಂತಲೂ ಹೆಣ್ಣಿಗೆ ಹೆಚ್ಚು ಅಸಹ್ಯತರವಾಗಿ ತೋರಿದುದರಿಂದ, ನಿಜ ಹೇಳಿ ಸುಳ್ಳನ್ನು ಬಯಲಿಗೆಳೆಯುವುದಕ್ಕೆ ಬದಲಾಗಿ, ಸುಳ್ಳನ್ನು ಮತ್ತೊಂದು ಸುಳ್ಳಿನಿಂದಲೆ ಮೀಟಿ ತೆಗೆದುಹಾಕಿದ್ದಳು ಅಕ್ಕಣಿ: ಕರ್ಮೀನುಸಾಬರ ಹತ್ತಿರ ಪಿಜಿಣ ಮಾಡಿದ್ದನೆಂದು ಹೇಳಲಾದ ಸಾಲವನ್ನು ತೀರಿಸಲು ತನ್ನ ಬಳಿಯಿರುವ ಚೂರುಪಾರು ಒಡವೆಗಳನ್ನೆಲ್ಲ ಕೊಡು ಎಂದು ಚೀಂಕ್ರ ಪೀಡಿಸಿದನೆಂದೂ, ತಾನು ನಿರಾಕರಿಸಲು ಕತ್ತಿಗೆ ಕೈಹಾಕಿದನೆಂದೂ, ಬಾಳೆಕಾಯಿ ಹೆಚ್ಚಲು ಹಿಡಿದುಕೊಂಡಿದ್ದ ಆ ಕತ್ತಿಯ ಬಾಯನ್ನು ಅವನೇ ಹಿಡಿದೆಳೆದುದರಿಂದ ಗಾಯವಾಯಿತೆಂದೂ ಹೇಳಿದಳು.
ಕಡೆಗೆ, ಮರುದಿನ ಚೀಂಕ್ರನು ತನ್ನ ಮಕ್ಕಳನ್ನು, ಅವನೇ ಹೇಳಿದಂತೆ, ಮೇಗರವಳ್ಳಿಯಲ್ಲಿ ಅವನು ಮಾಡಿದ್ದ ಹೊಸ ಬಿಡಾರಕ್ಕೆ ಕರೆದುಕೊಂಡು ಹೋಗಬಹುದೆಂದು ಇತ್ಯರ್ಥವಾಯಿತು. ಇತರರೊಡನೆ ಚೀಂಕ್ರನೂ ಹೊರಟು ಹೋದನು.
ಅಕ್ಕಣಿ ಸೀದುಹೋಗಿದ್ದ ಗಂಜಿಗೆ ಇಷ್ಟು ನೀರು ಹೊಯ್ದು ಪುನರ್ಪಾಕಮಾಡಿ ಇಳಿಸಿದಳು.
ಅಳುತ್ತಿದ್ದ ಮಕ್ಕಳಿಗೆ ಉಣ್ಣಿಸಿದಳು. ಆದರೆ ಚೀಂಕ್ರನು ಒದ್ದು ಕೆಡವಿದ್ದ ಕಿರಿಯ ಮಗು ಉಣಲಾರದೆ ಹೋಯಿತು. ಅದರ ಬಾಯಲ್ಲಿ ರಕ್ತ ಬರುತ್ತಿತ್ತು.
ತನ್ನ ಬಿಡಾರದ ತಟ್ಟಿಬಾಗಿಲಿಗೆ ಹಗ್ಗ ಬಿಗಿದು ಕಟ್ಟಿ, ಮಕ್ಕಳನ್ನೂ ಕರೆದುಕೊಂಡು ಐತನ ಬಿಡಾರಕ್ಕೆ ಹೋಗಿ ಅವರನ್ನು ಮಲಗಿಸಿದಳು. ತಾನೂ ನಿದ್ರಿಸಲು ಪ್ರಯತ್ನಿಸಿದಳು. ಆದರೆ ದುಃಖ ಉಕ್ಕಿ ಬಂದು, ಅಳುತ್ತಾ ಕುಳಿತುಬಿಟ್ಟಳು.
ಗುಡಿಸಲು ಒಳಗೆ ಕಗ್ಗತ್ತಲೆ. ಹೊರಗಡೆ ಕಪ್ಪೆ ಹುಳುಹುಪ್ಪಟೆಯ ರೇಜಿಗೆಯ ಸದ್ದು. ಆಗಾಗ್ಗೆ  ಬರ್ರೇಂದು ಹೊಯ್ದು ಹೊಯ್ದು ನಿಲ್ಲುವ ಶ್ರಾವಣಮಾಸದ ಮಳೆ. ಬೃಹಜ್ಜಗತ್ತಿನಲ್ಲಿ ತಾನೂ ತಾನು ಸಾಕಿದ್ದ ಆ ಮೂರು ಮಕ್ಕಳೂ ದಿಕ್ಕುಕೆಟ್ಟ ಅನಾಥರಾಗಿ ತೋರಿತು: ನಾಳೆ ಆ ಮೂರು ಮಕ್ಕಳನ್ನೂ ಸೇರೆಗಾರ ಕರೆದೊಯ್ಯುತ್ತಾನೆ! ತನ್ನ ಬದುಕು ಭಯಂಕರ ಶೂನ್ಯವಾಗುತ್ತದೆ! ತಾನೊಬ್ಬಳೆ ಆಗುತ್ತೇನೆ! ತನ್ನ ಬದುಕನ್ನು, ತೊಂದರೆಯಿಂದಲಾದರೂ, ತುಂಬಿ, ಅದು ಬೆಕೋ ಎನ್ನದಂತೆ ಮಾಡಿ, ಸಂತೋಷಗೊಳಿಸುತ್ತಿದ್ದ ಮೂರು ಮಕ್ಕಳನ್ನೂ ಕರೆದೊಯ್ಯುತ್ತಾನೆ! ಅವನಿಗೆ ನಿಜವಾಗಿ ಮಕ್ಕಳ ಮೇಲೆ ಪ್ರೀತಿಯಿದೆಯೋ? ಇಲ್ಲ. ನಾಲ್ಕೇ ದಿನಗಳಲ್ಲಿ ಅವನ್ನು ಕೊಲ್ಲುತ್ತಾನೆ. ಹೊಟ್ಟೆಗಿಲ್ಲದೆ ಸಾಯಿಸುತ್ತಾನೆ. ಹೊಡೆದೇ ಸಾಯಿಸುತ್ತಾನೆ; ಆರೈಕೆಯಿಲ್ಲದೆ ಸಾಯಿಸುತ್ತಾನೆ; ಹಿರಿಯ ಹುಡುಗನನ್ನು ಯಾರೋ ಮನೆಯಲ್ಲಿ ಕೆಲಸಕ್ಕೆ ಬಿಡುತ್ತಾನಂತೆ! ಆ ಬಡಕಲು ಮಗು ಒಂದೇ ದಿನದಲ್ಲಿ ಸಾಯುತ್ತದೆ! ಇಲ್ಲ, ಇಲ್ಲ; ಅವನಿಗೆ ಬೇಕಾದುದು ಮಕ್ಕಳಲ್ಲ; ನಾನು! ನಾನೂ ಅಲ್ಲ, ನನ್ನ ಒಡಲು! ನಾಯಿಗೆ ಬಾಡು ಬೇಕಾಗುವಂತೆ! ನನ್ನ ಮೇಲೆ ಮುಯ್ಯಿ ತೀರಿಸಿಕೊಳ್ಳಲೆಂದೇ ಮಕ್ಕಳನ್ನು ಕರೆದೊಯ್ಯುತ್ತಿದ್ದಾನೆ, ಅವನಿಚ್ಛೆಗೆ ನಾನು ಬರಲಿಲ್ಲ ಎಂದು! ಅಯ್ಯೋ ಏನು ಮಾಡಲಿ?
ಅಕ್ಕಣಿ ನಿಡುಸುಯ್ದಳು. ಹತಾಶೆ ಬಡಿದು, ಮತ್ತೂ ಅತ್ತಳು.
ಚೀಂಕ್ರ ಒದ್ದು ಕೆಡವಿದ್ದ ಮಗು ನರಳತೊಡಗಿತ್ತು. ಅಕ್ಕಣಿ ಕತ್ತಲಲ್ಲೆ ಅದರ ಮೈಮೇಲೆ ಕಂಬಳಿ ಹೊದಿಸಿದಳು.
ಕಿರಿಯ ಮಗುವನ್ನಾದರೂ ಬಿಟ್ಟು ಹೋಗು ಎಂದು ಕೇಳಿಕೊಳ್ಳುತ್ತೇನೆ. ಅದೂ ರಕ್ತ ಬೇರೆ ಕಾರುತ್ತಿದೆ! ಅದಕ್ಕೂ ಅವನು ಒಪ್ಪದಿದ್ದರೆ? ಇನ್ನೇನು ಮಾಡುವುದು? ನಾನೊಬ್ಬಳೆ ಹೀಗೆ ಬದುಕಿದ್ದು ಏನು ಆಗಬೇಕಾಗಿದೆ? ಮಕ್ಕಳ ಸಂಗಡ ನಾನೂ…. ಥೂ ಹಾಳು ಅನಿಷ್ಟ! ಅವನ ಸಹವಾಸ! ಧರ್ಮಸ್ಥಳದ ದೇವರಾಣೆ ಬೇರೆ ಹಾಕಿದ್ದೇನಲ್ಲಾ? ಹೌದು, ಗೌಡರಿಗೆ ಹೇಳಿ, ಏನಾದರೂ ಲಮಾಡಿ ಕಾಪಾಡಿ ಎಂದುಕೊಂಡರೆ? ಚೀಂಕ್ರ ಅವರಿಗೂ ಸಾಲ ಕೊಡುವುದಿದೆಯಂತೆ! ಅಕ್ಕಣಿಗೆ ಏನೋ ದೂರದ ಆಶಾಕಿರಣ ಹೊಳೆದಂತಾಯಿತು. ಬೆಳಿಗ್ಗೆ ಮುಂಚೆ ಎದ್ದು ಒಡೆಯರಲ್ಲಿ ಓಡಿ ಹೇಳಿಕೊಳ್ಳುತ್ತೇನೆ ಎಂದು ಮನಸ್ಸಿಗೆ ಧೈರ್ಯ ಮತ್ತು ಸಮಾಧಾನ ತಂದುಕೊಂಡು ಮಲಗಿದಳು.
ಆದರೆ ಬೆಳಿಗ್ಗೆ?
ತಾನು ಊಹಿಸಿದ್ದೆ ಒಂದಾಗಿತ್ತು; ವಿಧಿ ವ್ಯೂಹಿಸಿದ್ದು ಬೇರೊಂದಾಗಿತ್ತು.
ಅಕ್ಕಣಿ ತನ್ನ ಬಿಡಾರದಲ್ಲಿ ಗಂಜಿ ಬೇಯಿಸುತ್ತಿದ್ದಾಗ ಹಿರಿಯ ಮಕ್ಕಳಿಬ್ಬರೂ ಐತನ ಬಿಡಾರದಿಂದ ಓಡಿ ಬಂದರು. ಎಷ್ಟು ನೂಕಿದರೂ ಎಬ್ಬಿಸಿದರೂ ಕಿರಿಯ ಮಗು ಏಳುವುದಿಲ್ಲ ಎಂದು ಗಾಬರಿಯಿಂದಲೆ ಹೇಳಿದರು. ಅಕ್ಕಣಿ ದಿಗಿಲುಬಿದ್ದು ಓಡಿ ನೋಡಿದಾಗ ಅದು ಸತ್ತುಹೋಗಿತ್ತು.
ರೋದನದ ಬೊಬ್ಬೆ ಕೇಳಿ ನೆರೆಯ ಬಿಡಾರಗಳಿಂದ ಜನರು ಓಡಿ ಬಂದರು. ಚೀಂಕ್ರ ಒದ್ದ ಆಘಾತಕ್ಕೆ ಮಗು ಪ್ರಾಣ ಬಿಟ್ಟಿದೆ ಎಂದು ಅವನನ್ನು ಶಪಿಸಿದರು. ಕೋಣೂರು ಮನೆಗೆ ಹೋಗಿ ರಂಗಪ್ಪಗೌಡರಿಗೂ ಸುದ್ದಿಕೊಟ್ಟರು. ಅವರ ಹೇಳಿಕೆಯ ಮೇರೆಗೆ ಮಧ್ಯಾಹ್ನದವರೆಗೂ ಸೇರೆಗಾರನ ಆಗಮನವನ್ನು ನಿರೀಕ್ಷಿಸಿದರು. ಮರುದಿನ ಬೆಳಿಗ್ಗೆಯೆ ಬಂದು ಮಕ್ಕಳನ್ನು ಒಯ್ಯುತ್ತೇನೆ ಎಂದಿದ್ದ ಅವನು ಸಂಜೆಯವರೆಗೆ ಕಾದರೂ ಕಾಣಿಸಿಕೊಳ್ಳಲಿಲ್ಲ. ಅಕ್ಕಣಿ, ಬಾಗಿ ಮೊಡಂಕಿಲರ ಸಹಾಯದಿಂದ, ದೇಯಿಯನ್ನು ಹೂಳಿದ್ದ ಜಾಗದ ಪಕ್ಕದಲ್ಲಿಯೆ ಗುಂಡಿ ತೋಡಿ, ಮಗುವನ್ನು ಮಣ್ಣು ಮಾಡಿ ಬಂದಳು.
ಚೀಂಕ್ರನಂತೂ ಕೋಣೂರಿನ ಕಡೆಗೆ ಮುಖ ಹಾಕಲೆ ಇಲ್ಲ. ಅವನು ಮಕ್ಕಳನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೆದರಿದ್ದ ಅಕ್ಕಣಿಗೆ ಸ್ವಲ್ಪ ಧೈರ್ಯವಾಯಿತು. ಆದರೂ, ಇಂದಲ್ಲದಿದ್ದರೆ ನಾಳೆ, ಯಾವತ್ತಾದರೂ ಅವನಿಂದ ಪೀಡೆ ಒದಗಬಹುದೆಂದು ಆಶಂಕಿಸಿದ ಅಕ್ಕಣಿ, ತನ್ನ ಮೊದಲಿನ ಸಂಕಲ್ಪದಂತೆ, ಮನೆಗೆ ಹೋಗಿ ಕಾಗಿನಹಳ್ಳಿ ಅಮ್ಮನ ಹತ್ತಿರ ತನ್ನ ಗೋಳನ್ನು ತೋಡಿಕೊಂಡು, ಚೀಂಕ್ರನಿಂದ ತನ್ನನ್ನೂ ಮಕ್ಕಳನ್ನೂ ರಕ್ಷಿಸಬೇಕೆಂದು ಬೇಡಿಕೊಂಡಳು. ದಾನಮ್ಮ ಹೆಗ್ಗಡಿತಿಯವರು ಮಗನಿಗೆ ನಡೆದ ಸಂಗತಿಯನ್ನೆಲ್ಲಾ ತಿಳಿಸಿ, ಅವಳನ್ನು ಮನೆಗೆಲಸಕ್ಕೆ ಹಾಕಿಕೊಂಡು ಸೆಗಣಿ ಬಾಚುವುದು, ಮುರು ಬೇಯಿಸಿ ಕರೆಯುವ ಎಮ್ಮೆ ದನಗಳಿಗೆ ಇಡುವುದು ಮೊದಲಾದ ಕೊಟ್ಟಿಗೆಯ ಮತ್ತು ಬಚ್ಚಲು ಕೊಟ್ಟಿಗೆಯ ಹೊರಗೆಲಸಕ್ಕೆ ನೇಮಿಸಿಕೊಲ್ಳಬಹುದೆಂದು ಸಲಹೆ ಮಾಡಿದರು. ಬಾಣಂತಿಯಾಗಿದ್ದ ಸೊಸೆ ತವರುಮನೆಗೆ ಹೋಗಿದ್ದು, ಅಲ್ಲಿಯ ಲಗ್ನ ತೀರಿಸಿಕೊಂಡು ಹಿಂತಿರುಗುವುದು ಬಹಳ ಕಾಲವಾಗಬಹುದಾದ್ದರಿಂದ ತನಗೂ ಕೆಲಸ ನಿರ್ವಹಿಸುವುದಕ್ಕೆ ಅನುಕೂಲವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ರಂಗಪ್ಪಗೌಡರು ತಾಯಿಯ ಸಲಹೆಯನ್ನು ಒಪ್ಪಿಕೊಳ್ಳಲು ಮೊದಮೊದಲು ಸ್ವಲ್ಪ ಹಿಂದುಮುಂದು ನೋಡಿದರು, ಗದ್ದೆ ಕೆಲಸದ ಆಳುಗಳನ್ನು ಮನೆಗೆಲಸಕ್ಕೆ ಹಾಕಿಕೊಂಡರೆ ಮುಖ್ಯವಾಗಿ ಬೇಗನೆ ನಡೆಯಬೇಕಾಗಿದ್ದ ಆ ಕೆಲಸಕ್ಕೆ ತೊಂದರೆಯಾಗುತ್ತದೆ, ಈಗ ಮುಕುಂದನೂ ಹೂವಳ್ಳಿ ಸೇರಿ ಬಿಟ್ಟಿರುವುದರಿಂದ ಎಂದು. ಆದರೆ ಅವರು, ಎರಡು ಕೃಶಜೀವಿಗಳಾಗಿದ್ದ ಮಕ್ಕಳೊಡನೆ, ತಮ್ಮ ಮುಂದೆ ಅಂಗಲಾಚುತ್ತಾ ತುಸು ನಾಚುತ್ತಾ ನಿಂತಿದ್ದ ಪ್ರಾಯದ ಹೆಂಗಸನ್ನು ಹತ್ತಿರದಿಂದಲೆ ಕಂಡಮೇಲೆ, ಮನಸ್ಸು ಕರಗಿದಂತಾಗಿ, ಒಪ್ಪಿಕೊಂಡರು: ‘ಹೌದು, ಅವ್ವ ಹೇಳಿದ್ದೂ ನಿಜವೆ. ನನ್ನ ಹೆಂಡತಿ ಅವಳ ತಮ್ಮ ಹಳೆಮನೆ ತಿಮ್ಮಪ್ಪ ಹೆಗ್ಗಡೆಯ ಮತ್ತು ಅವಳ ತಂಗಿ ಮಂಜಮ್ಮನ ಮದುವೆ ಮುಗಿಸಿಕೊಂಡು ತವರಿನಿಂದ ಹಿಂದಿರುಗುವುದು ಇನ್ನೆಷ್ಟು ತಿಂಗಳೋ? ಹೆಂಡತಿ ಹೆರುವುದಕ್ಕೆ ಮುಂಚೆಯೂ, ಹಲವು ತಿಂಗಳಿಂದ ದೂರವಾಗಿಯೆ ಇದ್ದಳು. ಏನೋ ಪಥ್ಯವಂತೆ! ಏನೋ ಕಾಯಿಲೆಯಂತೆ! ಈ ಹೆಂಗಸರದ್ದು ಯಾವಾಗಲೂ ಇದ್ದೇ ಇರುತ್ತದೆ. ಗಂಡಸಿನ ತೊಂದರೆ ಅವರಿಗೆ ಗೊತ್ತಾಗುವುದು ಹೇಗೆ? ಅದರಲ್ಲಿಯೂ ದೃಢಕಾಯನಾಗಿ ಯೌವನದಲ್ಲಿರುವ ನನ್ನಂಥ ಗಂಡಸಿನ ತೊಂದರೆ?….’ ಅಕ್ಕಣಿಯನ್ನು ದಿಟ್ಟಿಸುತ್ತಾ ‘ಇವಳು ಪವಾ ಇಲ್ಲ!’ -ಗೌಡರ ಮನೆಗೆ ಹೆಗ್ಗಡಿ ತಮ್ಮನವರೆಡೆಗೆ ಹೋಗುತ್ತೇನಲ್ಲಾ ಎಂದು ಅಕ್ಕಣಿ ಎಂದು ಒಳ್ಳೆ ಸೀರೆ ಉಟ್ಟಿದ್ದಳು. ಅದನ್ನು ಗಮನಿಸುತ್ತಾ ‘ಅಂಥ ಕಳಪೆಯಾಗಿ ಕಾಣುತ್ತಿಲ್ಲ! ಅದರಲ್ಲಿಯೂ ಗಂಡ ಸತ್ತವಳು. ಮೈ ತುಂಬಿಕೊಂಡು ಲಕ್ಷಣವಾಗಿಯೂ ಇದ್ದಾಳೆ…. ಆದರೆ…. ಅಂವ ಮೂಳ!…. ನನ್ನ ವಿಚಾರವೇ ಬೇರೆ! ನಾನು ಕರೆದರೆ ಎಂದಾದರೂ ಒಲ್ಲೆ ಎನ್ನುತ್ತಾಳೆಯೆ? ದಮ್ಮಯ್ಯ ಅಂತಾನೆ ಬರ್ತಾಳೆ!….’ ರಂಗಪ್ಪಗೌಡರ ಮನಸ್ಸು ನಕ್ಷತ್ರವಿಹಾರಿಯಾಗಿತ್ತು.
ಮಗ ಏನೋ ವ್ಯಾವಹಾರಿಕವಾದ ಜಟಿಲವಾದ ದೀರ್ಘ ಆಲೋಚನೆಯಲ್ಲಿದ್ದಾನೆ, ತನ್ನ ನಿರ್ಣಯ ಹೇಳುವ ಮುನ್ನ, ಎಂದು ಭಾವಿಸಿ ಎದುರು ನಿಂತಿದ್ದು, ಅವನ ಮುಖವನ್ನೆ ನೋಡುತ್ತಿದ್ದ ತಾಯಿ ದಾನಮ್ಮ ಹೆಗ್ಗಡಿತಿಯವರಿಗೆ ರಂಗಪ್ಪಗೌಡರೆಂದರು: “ಆಗಲಿ, ಅವ್ವಾ. ಬಂದಿರಾಕೆ ಹೇಳು, ಮಕ್ಕಳ ಜೊತೇಲಿ…. ಆ ಉಂಡಾಡಿ ಲೌಡಿಮಗ ಚೀಂಕ್ರ ಬಂದ್ರೆ ನಾ ನೋಡಿಕೊಳ್ತಿನಿ. ಕೊಡಬೇಕಾದ ಸಾಲಾನೂ ತೀರಿಸದೆ, ಸಿಕ್ಕಿಸಿಕ್ಕಿದ ಹೆಂಗಸರ ಮೇಲೆಲ್ಲ ಕೈಮಾಡ್ತಾ ಸೊಕ್ಕಿ ಮೆರೀತಿದಾನೆ ಆ ಸೂಳೇಮಗ…. ಮತ್ತೆ ಹಿತ್ತಲ ಕಡೆಗೆಲ್ಲಾದ್ರೂ ಸೇರಿಸೀಯಾ ಈ ಹಸಲೋರ ಹೆಂಗಸ್ರನ್ನ?…. ಇಲ್ಲೇ ಮುಂಚೆಕಡೆ ಆ ಕೆಳಗರಡಿ ಮೂಲೇಲಿ, ಮುರಿನ ಒಲೆ ಹತ್ರ ಆಚೆ ಕಡೇಲಿ, ಮಲಗಾದೂ ಏಳಾದೂ ಮಾಡಿಕೊಂಡಿರ್ಲಿ. ಎಷ್ಟು ಸಾಮಾನು ಬೇಕೋ ಅಷ್ಟೇ ತಂದುಕೊಳ್ಳಲಿ. ಮತ್ತೆ ಬಿಡಾರಾನೆಲ್ಲ ಹೊತ್ತುಕೊಂಡು ಬಂದಾಳು?….”
ಗೌಡರು ಎಷ್ಟು ಒಳ್ಳೆಯವರು? ಏನು ದಯೆ? ಕಷ್ಟದಲ್ಲಿರುವವರನ್ನು ಕಂಡರೆ ಎಂಥಾ ಕರುಣೆ? ನಾನು ಬದುಕಿದೆ. ಮಕ್ಕಳೂ ಬದುಕಿದವು-ಎಂದುಕೊಂಡ ಅಕ್ಕಣಿಗೆ ರಂಗಪ್ಪಗೌಡರ ಹೊರ ಆಕಾರವೂ ಪೂಜ್ಯವಾಗಿ ತೋರಿ, ಕೃತಜ್ಞತೆಗೆ ಬಾಗಿಬಿಟ್ಟಳು, ಶರಣು ಹೋಗುವವರಂತೆ.
******




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ