ಪುಟಗಳು

29 ಜೂನ್ 2018

ಮಲೆಗಳಲ್ಲಿ ಮದುಮಗಳು-17

          ತಾನು ಒಡ್ಡಿದ್ದ ಉರುಳಿಗೆ ಸಿಕ್ಕ ಕಾಡುಕೋಳಿಯನ್ನು ನೋಡಲು ಹೋದ ಮುಕುಂದಯ್ಯ, ತಾನೆಯೆ ಮತ್ತೊಂದು ರೀತಿಯ ಉರುಳಿಗೆ ಸಿಕ್ಕಿ, ಮನದಲ್ಲಿಯೆ ವಿಲಿವಿಲಿ ಒದ್ದಾಡಿಕೊಳ್ಳುತ್ತಾ, ಗುತ್ತಿಯನ್ನು ನಿರ್ದಾಕ್ಷಿಣ್ಯವಾಗಿ ಬೀಳುಕೊಂಡು, ಕಾಡಿನಿಂದ ಮನೆಗೆ ಧಾವಿಸಿದ್ದನು. ತನ್ನ ಹೃದಯಭೂಮಿಯಲ್ಲಿ ಮೊಳೆಯತೊಡಗಿದ್ದ ಬಿರುಗಾಳಿಯ ಸುಳಿಯನ್ನು ಯಾರಿಗೂ ತೋರಗೊಡಲಿಲ್ಲ. ಗುತ್ತಿ ಹೇಳಿದ್ದುದನ್ನು ನಂಬುವುದಕ್ಕೂ ಸಾಧ್ಯವಾಗಲಿಲ್ಲ; ಅಷ್ಟು ಅನಿರೀಕ್ಷಿತವಾಗಿತ್ತು, ವಿಲಕ್ಷಣವಾಗಿತ್ತು, ಅವನಿಗೆ ವಿಕಾರವಾಗಿತ್ತು ಆ ವಾರ್ತೆ. ಸಿಂಬಾವಿ ಹೆಗ್ಗಡೆಯೇನೊ ಎರಡನೆಯ ಮದುವೆಯ ಹಟ ತೊಟ್ಟಿದ್ದ ವಿಚಾರ ಅವನಿಗೆ ಗೊತ್ತಿತ್ತು. ಆ ಚಟ ಹಳೆಮನೆಯ ದಿಕ್ಕಿಗೆ ಸೊಂಡಿಲು ಚಾಚುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವೆ ಆಗಿತ್ತು. ಆದರೆ ಯಾವ ಖಚಿತ ಉದ್ದೇಶವೂ ಇಲ್ಲದೆ, ಏನೊ ಮಾತಿನ ನಡುವೆ, ಗುತ್ತಿ ಅಕಸ್ಮಾತ್ತಾಗಿ ಬಿಟ್ಟುಕೊಟ್ಟಿದ್ದ ಸುದ್ದಿ ಮುಕುಂದಯ್ಯನ ಮೇಲೆ ಸಿಡಿಲಿನಂತೆ ಎರಗಿತ್ತು. ಅದು ಎಂದಾದರೂ ನಿಜವಿರಬಹುದೆ? ಆ ವಯಸ್ಸಾದವನಿಗೆ, ಕುಡುಕನೂ ರೋಗಿಷ್ಟನೂ ವೃದ್ಧಪ್ರಯಾನೂ ಆಗಿ ಜುಗುಪ್ಸಾರ್ಹನಾದವನಿಗೆ ಹೂವಿನಂತಹ ಹುಡುಗಿ ಹೂವಳ್ಳಿ ಚಿನ್ನಮ್ಮನನ್ನು, ತನ್ನ ಚಿನ್ನಿಯನ್ನು, ಮದುವೆ ಮಾಡಿಕೊಳ್ಳಲು ಒಪ್ಪುತ್ತಾರೆಯೆ? ಹೆಗ್ಗಡೆಯ ಶ್ರೀಮಂತಿಕೆಯ ಹಾಳುಬಾವಿಗೆ ತೆರದ ಆಸೆಗಾಗಿ ಆ ಹೆಣ್ಣನ್ನು ತಳ್ಳುತ್ತಾರೆಯೆ? ಸುಳ್ಳಿರಬೇಕು. ಜಟ್ಟಮ್ಮ ಲಕ್ಕಮ್ಮ ಜಗಳ ಆಡಿಕೊಳ್ಳುವಾಗ ಒಬ್ಬರನ್ನೊಬ್ಬರು ಮೂದಲಿಸುವ ಸಿಟ್ಟಿನಲ್ಲಿ, ‘ಚಿನ್ನದಂಥ ಹುಡುಗಿ ಚಿನ್ನಮ್ಮನ್ನೇ ತರ್ತೀನಿ’ ಎಂದು ಜಟ್ಟಮ್ಮ ಹೇಳಿರಬಹುದಾದ ಮಾತಿಗೆ ನಿಜದ ಬೆಲೆಯನ್ನೇಕೆ ಕೊಡಬೇಕು? ಇದುವರೆಗೆ ಯಾರ ಬಾಯಲ್ಲಾಗಲಿ ಇಂಗಿತವಾಗಿಯೂ ಸುಳಿಯದಿದ್ದ ಆ ಸುದ್ದಿ ಎಷ್ಟು ಅಸಹ್ಯವಾಗಿತ್ತೊ ಅಷ್ಟೇ ಹುಸಿಯೂ ಆಗಿ ತೋರಿತು ಮುಕುಂದಯ್ಯನಿಗೆ. ಆದರೂ ಆ ವಿಚಾರದಲ್ಲಿ ಮುನ್ನೆಚ್ಚರಿಕೆಯ ರೂಪವಾಗಿಯೆ ಕ್ರಮ ಕೈಕೊಳ್ಳುವ ನಿರ್ಧಾರ ಮಾಡಿದನು.

ಅವನ ಅಂತಃಕರಣದಲ್ಲಿ ಈ ನಿರ್ಧಾರದ ವ್ಯಾಪಾರ ನಡೆಯುತ್ತಿದ್ದಾಗ ಅವನ ಬಹಿಃಕರಣಗಳೆಲ್ಲ ಚಿಟ್ಟುಬಿಲ್ಲಿನ ಹಗ್ಗವನ್ನು ಸರಿಮಾಡುವ ಚೇಷ್ಟಿತದಲ್ಲಿ ತೊಡಗಿದ್ದುವು. ಅಷ್ಟರಲ್ಲಿ ಅಲ್ಲಿಗೆ ಬಂದ ಅವನ ಅಣ್ಣ ರಂಗಪ್ಪಗೌಡರು ತೋಟದಲ್ಲಿ ಹಿಂದಿನ ದಿನದ ಬಿರುಗಾಳಿ ಮಳೆಗೆ ಉರುಳಿದ್ದ ಅತ್ತಿಯ ಮರವನ್ನು ಕಡಿಯುವ ಆಳುಗಳಿದ್ದಲ್ಲಿಗೆ ಹೋಗಲು ಹೇಳಿದ್ದರು. ತನ್ನ ಉದ್ದೇಶ ಸಾಧನೆಗೆ ಕರ್ತವ್ಯದ ಅನುಕೂಲತೆಯೂ ಒದಗಿದಂತಾಗಿ ಮುಕುಂದಯ್ಯ ತೋಟದ ಆ ಮೂಲೆಗೆ ಹೋಗಿದ್ದನು.
ಅಲ್ಲಿ ಏಡಿ ಹಿಡಿಯುವ ನೆಪಹೇಳಿ ಐತನನ್ನು ಕರೆದಿದ್ದರೂ ಅವನ ಉದ್ದೇಶ ಐತನ ಹೆಂಡತಿ ಪೀಂಚಲು ಒಡನೆ ವ್ಯವಹರಿಸುವುದೆ ಆಗಿತ್ತು. ಅವನಿಗೆ ಗೊತ್ತಿತ್ತು ಐತನನ್ನು ಎಳೆದೆಡೆಗೆ ಪೀಂದಲು ಬರುತ್ತಾಳೆ ಎಂದು.
ಐತ ಪೀಂಚಲು ಇಬ್ಬರೂ ತಾವು ಮಾಡುತ್ತಿದ್ದ ಕೆಲಸ ಬಿಟ್ಟು ಮುಕುಂದಯ್ಯನ ಅಣತಿಯಂತೆ ಅವನ ಹಿಂದೆ ಹೊರಡುವ ಮುನ್ನವೆ, ಅವನು ಮುನ್ನಡೆದು ತೋಟದ ಅಡಕೆ ಬಾಳೆಯ ಮರಗಳ ಮಧ್ಯೆ ಮರೆಯಾಗಿದ್ದನು. ತೋಟದ ಎಲ್ಲೆಯನ್ನು ದಾಟಿ ‘ಭೂತದ ಬನ’ದ ಮಾರ್ಗವಾಗಿ ನಡೆದು, ಕಾಡಿನಿಂದ ತೋಟದ ಅಂಚಿಗೆ ಇಳಿದು ಬರುತ್ತಿದ್ದ ಸರಲಿಗೆ ತಲುಪಿದ್ದನು. ದೊಡ್ಡ ಸಣ್ಣ ಉಂಡೆಗಲ್ಲು ಮತ್ತು ಬಂಡೆಗಳ ನಡುವೆ ಅಲ್ಲಲ್ಲಿ ನಿಂತೂ ನಿಂತೂ ಹಿಂದಿನ ದಿನದ ಸಂಜೆಯ ಮಳೆಯ ದೆಸೆಯಿಂದ ಮೆಲ್ಲಗೆ ಜುಳು ಜುಳು ಮರ್ಮರದಿಂದ ಹರಿಯುತ್ತಿದ್ದ ಬೇಸಗೆಯ ಹಳ್ಳದ ನೀರು, ಇಕ್ಕೆಲದಲ್ಲಿಯೂ ಬೆಳೆದಿದ್ದ ದೈತ್ಯಾಕಾರದ ನಿಬಿಡಪರ್ಣದ ಮರಗಳ ನೆರಳಲ್ಲಿ, ಬಿಸಿಲನ್ನೆ ಕಾಣದೆ, ಕಾಲಿಟ್ಟರೆ ಚಳಿಯಾಗುವಂತೆ, ತಣ್ಣಗೆ ಹರಿಯುತ್ತಿತ್ತು. ಅಲ್ಲಿಂದಲೆ ಪ್ರಾರಂಭವಾಗುತ್ತಿತ್ತು ಅವರ ಏಡಿ ಹಿಡಿಯುವ ತಾಣ. ಐತ ಮುಕುಂದಯ್ಯರಿಗಂತೂ ಆ ತಾಣ ಅತ್ಯಂತ ಸುಪರಿಚಿತವಾದುದಾಗಿತ್ತು. ಚಿಕ್ಕಂದಿನಿಂದಲೂ ಅವರಿಬ್ಬರೂ ಜೊತೆಗೂಡಿ ಅದೆಷ್ಟೊ ಸಾರಿ ಅಲ್ಲಿ ಕಪ್ಪೆಗೋಲು ಹಾಕಿ ಏಡಿ ಹಿಡಿದಿದ್ದರು. ಪೀಂಚಲುವಿಗೆ ಮಾತ್ರ ಅದು ಸ್ವಲ್ಪ ಹೊಸ ಸ್ಥಾನವೆ ಆಗಿತ್ತು. ಐತನನ್ನು ಮದುವೆಯದ ಮೊದಲಲ್ಲಿ ಅವನೊಡನೆ, ತಾವಿಬ್ಬರೆ, ತನ್ನ ಬಿಡಾರದ ಅಡುಗೆಯ ಪ್ರಯೋಜನಾರ್ಥವಾಗಿ, ಒಂದೆರಡು ಸಾರಿ ಅಲ್ಲಿಗೆ ಏಡಿ ಹಿಡಿಯಲು ಬಂದಿದ್ದರು. ಆದರೆ ಆ ಜಾಗ ಎಷ್ಟು ಏಕಾಂತವಾಗಿತ್ತು ಎಂದರೆ, ಹೊಚ್ಚ ಹೊಸ ಗಂಡಹೆಂಡಿರ ಶೃಂಗಾರ ಜೀವನವನ್ನೂ ಅದರ ಪ್ರಣಯ ಚೇಷ್ಟಿತನಗಳನ್ನೂ ಉದ್ದೀಪಿಸಿದಷ್ಟು ಉದಾರವಾಗಿ ಅದು ಅವರಿಗೆ ಏಡಿ ಹಿಡಯುವುದಕ್ಕೆ ನೆರವಾಗಿರಲಿಲ್ಲ. ಆದರೂ ಅವರು ತಮಗೆ ದೊರೆತಿದ್ದ ಒಂದೆರಡು ಏಡಿಗಳಿಂದಲೆ ಸಂಪೂರ್ಣ ತೃಪ್ತರಾಗಿ ಹಿಂದಿರುಗಿದ್ದರು, ತಮ್ಮ ಪ್ರಣಯ ಚೇಷ್ಟೆಗಳಿಂದಲೆ ಅಲ್ಲಿ ತಮಗೆ ಒದಗಿದ್ದ ಸುಖಕ್ಕೆ ಆ ಸ್ಥಾನಮಹಿಮೆಯೆ ಕಾರಣವೊ ಎಂಬಂತೆ.
ಮೊದಲೆ ಅಲ್ಲಿಗೆ ಸೇರಿದ್ದ ಮುಕುಂದಯ್ಯನಿಗೆ, ಅನೇಕ ಮಧುರ ಸುಂದರ ಸಾಹಸಮಯ ಪೂರ್ವಾನುಭವಗಳಿಗೆ ಕಾರಣವಾಗಿದ್ದ ಆ ತಾಣದ ಮಹಾತ್ಮ್ಯೆಯಿಂದಲೊ ಏನೊ, ಭಾವಕೋಶ ತುಂಬಿ ಅರಳಿದಂತಾಗಿ, ಸಂಸ್ಕಾರ ರೂಪದಲ್ಲಿದ್ದ ಅವನ ಬಾಲಕತ್ವ ಹೊರಕ್ಕೆ ಹಾರಿತು. ಏನೊ ಒಂದು ವಿನೋದವನ್ನು ನೆನೆದು ಹಳ್ಳದ ದಂಡೆಯಲ್ಲಿದ್ದ ಒಂದು ಮಟ್ಟಿನ ಹಿಂದೆ ಅವಿತು ಕುಳಿತನು.
ಕೀಳುಜಾತಿಯವರಾಗಿ ಮುಟ್ಟಾಳು ಎಂದರೆ ಅಸ್ಪೃಶ್ಯರಾಗಿದ್ದ ಐತ ಪೀಂಚಲು ತಾನು ಬಂದ ‘ಭೂತದ ಬನ’ದ ದಾರಿಯಲ್ಲಿ ಬರುವುದಿಲ್ಲವೆಂಬುದು ಅವನಿಗೆ ಗೊತ್ತಿತ್ತು. ಏಕೆಂದರೆ ಭೂತದ ಬನದೊಳಕ್ಕೆ ಮುಟ್ಟಾಳುಗಳು ಕಾಲಿಟ್ಟರೆ ಅವರಿಗೆ ಏನಾದರು ಕೇಡು ತಪ್ಪದು ಎಂಬ ನಂಬುಗೆ ಬಲವಾಗಿತ್ತು; ಅದರಲ್ಲಿಯೂ ಕನ್ನಡಜಿಲ್ಲೆಯಿಂದ ಬಂದವರಿಗೆ ಗಟ್ಟದ ಮೇಲಣ ದೆಯ್ಯಗಳೆಂದರೆ ಮಹಾಭಯ. ಆ ಭಯದ ಬೇಲಿಕಟ್ಟಿ ಮಲೆನಾಡಿನ ಜಮೀನುದಾರರು ತಮ್ಮ ತೋಟ, ಗದ್ದೆ, ಹಿತ್ತಲುಗಳ ಫಸಲು ರಕ್ಷಣೆ ಮಾಡಿಕೊಳ್ಳುತ್ತಿದ್ದರು, ಎಂತಹ ಕಾವಲೂ ಪೋಲೀಸೂ ಕಾನೂನೂ ಮಾಡಲಾರದಷ್ಟು ಸಮರ್ಪಕವಾಗಿ.
ಗಟ್ಟದ ತಗ್ಗಿನ ಹೆಣ್ಣಾಳುಗಳಂತೂ ಅಡಕೆ ತೋಟಕ್ಕೆ ಕೆಲಸಕ್ಕೆ ಬರುವುದಕ್ಕೆ ಹೆದರಿ ಸಾಯುತ್ತಿದ್ದರು. ಏಕೆಂದರೆ, ತೋಟವೇ ಭೂತರಾಯನ ವಿಶೇಷ ಅಧಿಪತ್ಯಕ್ಕೆ ಸೇರಿ, ಅವನ ಮಡಿಪ್ರದೇಶವಾಗಿದೆ ಎಂಬುದು ಪ್ರತೀತಿ. ಮುಟ್ಟಾದ ಹೆಂಗಸರು, ಮರೆತಾದರೂ ಸರ, ಆ ಮಡಿನೆಲಕ್ಕೆ ಪ್ರವೇಶಿಸಿದರೆ ಅವರು ರಕ್ತಕಾರಿ ಸಾಯುತ್ತಾರೆ ಎಂಬ ಶಾಸ್ತ್ರವಾರ್ತೆ ಅನೇಕ ನಿದರ್ಶನಸಹಿತವಾಗಿ ಪ್ರಚಲಿತವಾಗಿತ್ತು. ಆದ್ದರಿಂದ ಹೆಂಗಸು ತಾನು ಹೊರಗಾಗಿದ್ದಾಗ ತೋಟಕ್ಕೆ ಹೋಗದೆಯೆ ಇರುವುದು ಪ್ರಜ್ಞಾಪೂರ್ವಕವಾಗಿಯೆ ಸಾಧ್ಯವಾಗಿತ್ತು; ಆದರೆ ತೋಟದಲ್ಲಿ ಕೆಲಸಕ್ಕೆ ಹೋಗಿ, ಕೆಲಸ ಮಾಡುತ್ತಿದ್ದಾಗಲೆ ಅಕಸ್ಮಾತ್ತಾಗಿ ಎಲ್ಲಿಯಾದರೂ ಮುಟ್ಟಾಗಿಬಿಟ್ಟರೆ ಏನು ಗತಿ? ಆದ್ದರಿಂದಲೆ ಮುಂಜಾಗ್ರತೆಯ ಕ್ರಮವಾಗಿ ಅವರು ಮಿಂದ ಮೊದಲು ದಿನಗಳಲ್ಲಿ ಮಾತ್ರವೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದುದು ರೂಢಿ. ಆ ದಿನ ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮುನ್ನ, ತೋಟದಲ್ಲಿ ಮರ ಕಡಿಯುವುದೆ ಕೆಲಸ ಎಂದು ಗೊತ್ತಾದಾಗ, ಗಂಡಾಳುಗಳೆಲ್ಲ ಆ ವಿಚಾರದಲ್ಲಿ ತಮ್ಮ ತಮ್ಮ ಹೆಣ್ಣುಗಳನ್ನು ಪ್ರಶ್ನಿಸಿ, ತನಿಖೆ ನಡೆಸಿ, ಸಮಾಧಾನ ಮಾಡಿಕೊಂಡೆ ಕೆಲಸಕ್ಕೆ ಬಂದಿದ್ದರು. ತನಿಖೆಯಲ್ಲಿ ಸಂಶಯಾಸ್ಪದವಾಗಿ ಕಂಡ ಮೂರು ನಾಲ್ಕು ಹೆಣ್ಣುಗಳನ್ನು ಕೆಲಸಕ್ಕೆ ಬೇರೆಯ ಕಡೆ ಕಳುಹಿಸಲಾಗಿತ್ತು. ಆ ಅನಿವಾರ್ಯದಿಂದಲೆ, ಮೈ ಸರಿಯಾಗಿಲ್ಲದಿದ್ದರೂ, ಕೆಲಸಕ್ಕೆ ಆಳು ಬೇಕಾಗಿದ್ದುದರಿಂದ, ಸೇರೆಗಾರ ಚೀಂಕ್ರನು ತನ್ನ ಬಸುರಿ ಹೆಂಡತಿ ದೇಯಿಯನ್ನು ಕೆಲಸಕ್ಕೆ ಬಾ ಎಂದು ಬಲಾತ್ಕಾರದಿಂದ ಕರೆತಂದಿದ್ದನು. ಅವಳೂ ಕಣ್ಣೀರೊರಸುತ್ತಾ ಬಂದಿದ್ದಳು. ಅಕ್ಕಣಿ ಪೀಂಚಲು ಇಬ್ಬರೂ ಅವಳಿಗೆ ಸಂತೈಕೆ ಹೇಳಿ, ಅವಳ ಕೆಲಸವನ್ನೆಲ್ಲ ತಾವೇ ನಿರ್ವಹಿಸಿ, ಅವಳಿಗೆ ಸಾಕಷ್ಟು ವಿರಾಮ ಕೊಟ್ಟು, ದಣಿವು ಆಗದ ಹಾಗೆ ನೋಡಿಕೊಳ್ಳುವುದಾಗಿ ಭರವಸೆ ಇತ್ತಿದ್ದರು….
ಮಟ್ಟಿನ ಹಿಂದೆ ಅಡಗಿ ಕುಳಿತಿದ್ದ ಮುಕುಂದಯ್ಯನಿಗೆ ಸ್ವಲ್ಪ ಹೊತ್ತು ಕಾಯುವುದರೊಳಗೆ ಬೇಜಾರಾಯಿತು. ತಾನು ನಿರೀಕ್ಷಿಸಿದ್ದಕ್ಕಿಂತಲೂ ಅವರು ಬಹಳ ತಡವಾಗಿ ಬರುವಂತೆ ತೋರಿತು. ಹೊಸದಾಗಿ ಮದುವೆಯಾಗಿ, ಇನ್ನೂ ರಸಿಕತೆ ದಣಿದು, ಸೋತು, ಸಾಮಾನ್ಯತೆಯ ಧೂಳಿಗೆ ಬೀಳದಿದ್ದ ಐತನೇನಾದರೂ ಶೃಂಗಾರ ಚೇಷ್ಟೆಗೆ ತೊಡಗಿದನೊ ಏನೊ ಎಂಬ ಶಂಕೆಯೂ ಮೂಡಿ, ಮುಕುಂದಯ್ಯ ಸಸ್ನೇಹಸರಸವಾಗಿಯೆ ‘ಬರಲಿ, ಮಾಡ್ತೀನಿ ಆ ಮುಂಡೆಕುರುದೆಗೆ!’ ಎಂದು ಬೈದನು.
ತುಸು ಹೊತ್ತಿನಲ್ಲಿಯೆ ಗೊಣಗೊಣ ಮಾತಾಡುವ ಸದ್ದು ಕಿವಿಗೆ ಬಿದ್ದು  ಮುಕುಂದಯ್ಯ ತಾನು ಆಲೋಚಿಸಿದ್ದ ವಿನೋದವನ್ನು ಗುರುತಪ್ಪದಂತೆ ಎಸಗಲು ನಿಶ್ಚಯಿಸಿ, ಜಾಗ್ರತನಾಗಿ, ಆ ದಿಕ್ಕನ್ನೆ ಅವಲೋಕಿಸುತ್ತಾ ಕುಳಿತನು. ನೋಡುತ್ತಿದ್ದಂತೆ ಹಳ್ಳದ ದಂಡೆಯ ಹಳು ಅಲುಗಾಡಿತು. ಐತ ಪೀಂಚಲು ಒಬ್ಬರ ಹಿಂದೆ ಒಬ್ಬರು ಹಳ್ಳದ ಪಾತ್ರದಲ್ಲಿದ್ದ ಹಾಸುಗಲ್ಲಿಗೆ ನೆಗೆದು ನಿಂತು ಸುತ್ತಲೂ ನೋಡಿದರು. ತನಗಾಗಿಯೆ ಹುಡುಕುತ್ತಿದ್ದಾರೆ ಎಂಬದೂ ಮುಕುಂದಯ್ಯನಿಗೆ ಗೊತ್ತಾಯಿತು.
ಅಲ್ಲದೆ ಅವರು ಬರುವುದು ಏಕೆ ತಡವಾಯಿತು ಎಂಬುದಕ್ಕೂ ಕಾರಣ ತಿಳಿಯಿತು: ಪೀಂಚಲು ಕೈಲೊಂದು ಹಾಳೆಕೊಟ್ಟೆ ಇತ್ತು; ಐತನ ಕೈಯ್ಯಲ್ಲಿ ಒಂದು ಸೊಗಸಾದ ಹೊಂಬಾಳೆ ಮುಕುಂದಯ್ಯನ ಆಶೆಯನ್ನು ಕೆರಳಿಸುವಂತೆ ಕಂಗೊಳಿಸುತ್ತಿತ್ತು. ತೋಟದಲ್ಲಿ ಉದುರಿ ಬಿದ್ದಿದ್ದ ಅಡಕೆಯ ಹಾಳೆಯನ್ನು ಕೊಯ್ದು, ಕೊಟ್ಟೆ ಮಾಡಿ, ಬಿದಿರ ಕಣೆಯಿಂದ ಕೊಟ್ಟೆ ಕಡ್ಡಿ ತಯಾರಿಸಿ, ಅದನ್ನು ಸೆಟ್ಟು, ತರುವುದಕ್ಕೆ ಸ್ವಲ್ಪ ಸಮಯ ಹಿಡಿಯದಿರುತ್ತದೆಯೆ? ಇನ್ನು ಹೊಂಬಾಳೆ? ಬಿದ್ದಿದ್ದಾದರೂ ಇರಬಹುದು; ಅಥವಾ ಮರವನ್ನು ಒರಕಿ ಕಿತ್ತದ್ದಾದರೂ ಇರಬಹುದು.
“ಎಲ್ಲಿ ಹ್ವಾಯಿತು ಈ ಅಯ್ಯ? ಚಿಟ್ಟುಬಿಲ್ಲು ಹಿಡುಕೊಂಡು ಹಕ್ಕಿ ಹೊಡೆಯಲು ಹೊರಟಿತೋ?” ಎಂದು ಮುಕುಂದಯ್ಯ ಕಾಣದಿದ್ದುದಕ್ಕೆ ತನ್ನ ಅಸಮಾಧಾನವನ್ನು ಸೂಚಿಸುತ್ತಾ ಐತ ಮುಂದೆ, ಪೀಂಚಲು ಅವನ ಹಿಂದೆ, ಹಳ್ಳದ ಪಾತ್ರದಲ್ಲಿ ಕಲ್ಲಿಂದ ಕಲ್ಲಿಗೆ ನೆಸೆಯುತ್ತಾ ಮುಂಬರಿದರು.
ಮುಟ್ಟಿನ ಹಿಂದೆ ಅವಿತು ಅವರನ್ನೇ ಗಮನಿಸಿ ನೋಡುತ್ತಿದ್ದ ಮುಕುಂದಯ್ಯ ಬೆರಗಾದನು: ಆ ಕಾಡಿನ ಹಿನ್ನೆಲೆಯಲ್ಲಿ, ಆ ಏಕಾಂತದಲ್ಲಿ, ಆ ವಿರಳ ವನ್ಯ ಪಕ್ಷಿಕೂಜನದ ಸನ್ಮೋಹಕತೆಯಲ್ಲಿ ಅವರಿಬ್ಬರೂ ಗಟ್ಟದ ತಗ್ಗಿನಿಂದ ಹೊಟ್ಟಪಾಡಿಗಾಗಿ ದುಡಿಯಲು ಬಂದಿದ್ದ ಬಿಲ್ಲವರ ಜಾತಿಯ ತಮ್ಮ ಬಡ ಕೂಲಿಯಾಳುಗಳಂತೆ ಕಾಣಿಸುತ್ತಿರಲಿಲ್ಲ. ಆ ತರುಣ ದಂಪತಿ ಪ್ರಪ್ರಾಚೀನ ಕಾಲದಲ್ಲಿ ಪೌರಾಣಿಕ ಯುಗದಲ್ಲಿ ದಂಡಕಾರಣ್ಯಕ್ಕೊ ನೈಮಿಶಾರಣ್ಯಕ್ಕೊ ಕಾರ್ಯಾರ್ಥವಾಗಿ ಅವತರಿಸಿ ಅಲೆಯುತ್ತಿದ್ದಿರ ಬಹುದಾದ ಭಿಲ್ಲವೇಷದ ಶಿವ ಶಿವಾಣಿಯರಂತೆ ತೋರಿದರು! ಐಗಳು ಅನಂತಯ್ಯನವರ ಆಶೀರ್ವಾದದಿಂದ ಮುಕುಂದಯ್ಯ ಸಂಪಾದಿಸಿದ್ದ ಪೌರಾಣಿಕ ಕಲ್ಪನಾಶಕ್ತಿಯ ಪ್ರಭಾವವೋ? ಅಥವಾ ಮೇಲು ಕೀಳು ಬಡವ ಬಲ್ಲಿದ ಅರಸ ತಿರುಕ ಎಂಬ ತಾರತಮ್ಯವಿಲ್ಲದೆ ಅಡವಿ ನಗರ ಮಂಚ ನೆಲ ಚಾಪೆ ಸುಪ್ಪತ್ತಿಗೆ ಎಂಬ ಭೇದವಿಲ್ಲದೆ ಸರ್ವರಲ್ಲಿಯೂ ಸಮಾನವಾಗಿ ಸಮಪ್ರಮಾಣದಲ್ಲಿ ಆವಿರ್ಭೂತವಾಗುವ ರತಿಮನ್ಮಥ ಪ್ರೇಮಾನುಗ್ರಹದ ಪ್ರಣಯ ಪರಿವೇಷದ ಮಹಿಮೆಯೋ? ಅಥವಾ ತನ್ನಲ್ಲಿಯೂ ಸಾವಿರ ಹೆಡೆಯೆತ್ತಿ ರತಿಮನ್ಮಥರನ್ನೂ ಹೆತ್ತಯ್ಯ ಅಮ್ಮರನ್ನು ಹೊತ್ತು ಮರೆಯಲು ಅಣಿಯಾಗುತ್ತಿದ್ದ ಶೃಂಗಾರ ಶೇಷನೊಂದು ಪ್ರಸ್ಥಾನಪೂರ್ವ ವೈಭವದ ನಿಗೂಢ ಪರಿಣಾಮವೋ? ಮುಕುಂದಯ್ಯ ತನಗೆ ತಾನೆ ಗೊಣಗಿಕೊಂಡನು. “ಅಃ ಏನು ಚೆನ್ನಾಗಿದ್ದಾರೆ  ಅವರಿಬ್ಬರೂ!”
ಅದರಲ್ಲಿಯೂ ಮಿಗದ ಪಡ್ಡೆಕರುವಂತೆ, ತೆಳ್ಳಗಿದ್ದರೂ ಬಲಿಷ್ಠವಾದ ಅಂಗೋಪಾಂಗದಿಂದ ಕೂಡಿ, ಕಲ್ಲಿಂದ ಕಲ್ಲಿಗೆ ನೆಸೆದು ಬರುತ್ತಿದ್ದ ಐತನಿಗಿಂತಲೂ ಅವನ ಹೆಂಡತಿ ಮುಕುಂದಯ್ಯನ ಮನವನ್ನೆಲ್ಲ ಸೂರೆಗೊಳ್ಳುವಷ್ಟು ಚೆಲುವೆಯಾಗಿ ಕಂಡಳು: ಮಲೆನಾಡಿನವರಂತೆ ಸೊಂಟಕ್ಕೆ ಸೀರೆ ಸುತ್ತಿ, ಗೊಬ್ಬೆಸೆರಗು ಹಾಕಿ ಕಟ್ಟಿ, ವಲ್ಲಿ ಹೊದ್ದು, ಹಣೆಗೆ ಕುಂಕುಮವಿಟ್ಟು, ಕಿವಿಗೆ ಬುಗುಡಿ, ಕೊರಳಿಗೆ ಅಡ್ಡಿಕೆ, ಕೈಗೆ ಬಳೆ ಕಡಗ, ಕಾಲುಬೆರಳಿಗೆ ಸುತ್ತುಗಾಲುಂಗುರ ಹಾಕಿ ಸಿಂಗರಿಸಿದರೆ-ಪೀಂಚಲು ಯಾವ ಮಲೆಯ ಹೆಣ್ಣಿಗೂ ಬಿಟ್ಟುಕೊಡುವುದಿಲ್ಲ ಎಂದುಕೊಂಡನು! ಬಣ್ಣ ತುಸು ಬೆಳ್ಳಗಿದ್ದರೆ ತಾನು ಒಲಿದಿರುವ ಹೂವಳ್ಳಿ ಚಿನ್ನಮ್ಮಗೆ ಸಮಸ್ಪರ್ಧಿಯಾಗಿ ಬಿಡುತ್ತಿದ್ದಳಲ್ಲವೆ?….
ಇನ್ನೂ ಏನೇನೊ ಆಲೋಚನೆಗಳು ನುಗ್ಗಿ ಬರುತ್ತಿದ್ದುವೊ? ಅಷ್ಟರಲ್ಲಿ ಐತ ಅವನು ಅಡಗಿ ಕುಳಿತಿದ್ದ ಪೊದೆಯನ್ನು ದಾಟಿ, ತನ್ನ ಹಿಂದುಗಡೆ ಆ ಪೊದೆಗೆ ಸಮೀಪಿಸುತ್ತಿದ್ದ ಪೀಂಚಲು ಕಡೆಗೆ ತಿರುಗಿದನು. ಸುಸಮಯವೆಂದು ಭಾವಿಸಿ ಮುಕುಂದಯ್ಯ ಕಾಡು ಮರುದನಿ ಕೊಡುವಂತೆ ಗಟ್ಟಿಯಾಗಿ, ಹುಲಿ ಅಬ್ಬರಿಸುವಂತೆ, ‘ಆಆಮ್‌!’ ಎಂದು ಕೂಗಿ ಇಬ್ಬರ ಮಧ್ಯೆ ಹಾರಿದನು.
“ಅಯ್ಯಪೋ!” ಎಂದು ಚೀರಿಬಿಟ್ಟಳು ಪೀಂಚಲು!
“ಎಂಥ ಭರ ಹೆದರಿಬಿಟ್ಟೆ ನಾನು! ಹಹ್ಹಹ” ಎಂದು ಐತ ನಗತೊಡಗಿದನು.
ಪೀಂಚಲುಗೆ ಸಿಟ್ಟುಬಂದು ತುಳುಮಾತಾಡುವ ಗಟ್ಟದವರ ಕನ್ನಡದ ವಿರಳಾಕ್ಷರ ರೀತಿಯಲ್ಲಿ “ಮದುವೆಯಾಗಿದ್ದರೆ ಎರಡು ಮಕ್ಕಳ ಅಪ್ಪಯ್ಯ ಆಗುತ್ತಿದ್ದಿರಿ ನೀವು! ಇನ್ನೂ ಮಕ್ಕಳಾಟಿಕೆ ಬಿಟ್ಟಿಲ್ಲ!” ಎಂದು ಮುಕುಂದಯ್ಯನನ್ನು ನೇರವಾಗಿ ನೋಡುತ್ತಾ, ತನಗೂ ನಗೆ ತಡೆಯಲಾರದ ನಕ್ಕುಬಿಟ್ಟಳು.
“ನನ್ನ ಮದುವೆ, ಮಕ್ಕಳು ಹಾಗಿರಲಿ. ನಿನಗೀಗ ಮದುವೆಯಾಗಿ ಒಂದು ವರ್ಷದ ಹತ್ತಿರಕ್ಕೆ ಬಂತಲ್ಲ? ಎಲ್ಲಿ ನಿನ್ನ ಮಕ್ಕಳು? ಎಲ್ಲೂ ಕಾಣೋದಿಲ್ಲ!” ಎಂದು ನಗು ನಗುತ್ತಲೆ ವಿನೋದವಾಡಿ ಕುಡುಕುವಂತೆ ಸುತ್ತ ಕಣ್ಣಾಡಿಸಿದನು.
ಕರಿ ಮೊಗವೂ ನಸು ಕೆಂಪಾಗುವಂತೆ ನಾಚಿ ಪೀಂಚಲು “ಇಸ್ಸಿ! ಏನ್ರಯ್ಯಾ? ಏನೆಲ್ಲ ಹೇಳ್ತೀರಿ!” ಎನ್ನುತ್ತಾ ದೂರ ಸರಿದು ಐತನ ಮರೆಗೆ ಹೋದಳು.
“ಎಲ್ಲಿತ್ತೊ ಈ ಹೊಂಬಾಳೆ? ಬಿದ್ದಿತ್ತೊ? ಹತ್ತಿ ಉದುರಿಸಿದಿರೊ?” ಐತನ ಕೈಲಿದ್ದ ಹೊಂಬಾಳೆಯನ್ನು ಕರುಬಿನ ಕಣ್ಣಿನಿಂದ ನೋಡುತ್ತಾ ಕೇಳಿದನು ಮುಕುಂದಯ್ಯ. “ಬಿದ್ದಿತ್ತು.” ಉತ್ತರಿಸಿದ ಐತನ ಮುಖದ ನಗೆಯ ಭಂಗಿಯನ್ನು ನೋಡಿ, ಮುಕುಂದಯ್ಯ “ಸುಳ್ಳೋ ಬದ್ದೊ? ನಿಜ ಹೇಳು” ಎಂದನು.
ಐತನ ಹಿಂದುಗಡೆಯಿಂದ ಪೀಂಚಲು ನಗುತ್ತಾ “ಇಲ್ಲಯ್ಯ, ಹತ್ತಿ ತೆಗೆದದ್ದು!”
“ಯಾರು ಹತ್ತಿದ್ದು? ನೀನೋ ಅವನೋ?”
“ಇಸ್ಸಿ, ಅಯ್ಯ, ಏನು ಹೀಂಗೆ ಎಲ್ಲಾ ಹೇಳುತ್ತೀರಿ? ನಾನು ಯಾಕೆ ಹತ್ತಲಿ ಅವನೆ ಹತ್ತಿ ಕುಯ್ದದ್ದು.”
ಪೀಂಚಲು ಐತನೊಡನೆ ಬಾಲ್ಯದಿಂದಲೂ ಆಡಿದ್ದ ಏಕವಚನವನ್ನೆ ಸ್ವಾಭಾವಿಕವಾಗಿ ಉಪಯೋಗಿಸುತ್ತಿದ್ದಳು. ಅವರ ಸಂಬಂಧ ಇನ್ನೂ ಬಹುವಚನಕ್ಕೇರುವಷ್ಟು ಕೃತಕವೂ ದೂರವೂ ಆಗಿರಲಿಲ್ಲ.
“ಓಹೋ, ಮದುವೆಯಾದ ಮೇಲೆ ನೀನೀಗ ದೊಡ್ಡ ಹೆಗ್ಗಡ್ತಿ ಆಗಿಬಿಟ್ಟಿದ್ದೀಯ! ಆಗೆಲ್ಲ ನೀನೇ ಮರ ಹತ್ತಿ ಹೊಂಬಾಳೆ ಕಿತ್ತುಕೊಟ್ಟಿದ್ದೆ ನಮಗೆ?”
ಪೀಂಚಲು ತನ್ನ ವಿವಾಹಪೂರ್ವದ ಬಾಲ್ಯಸಾಹಸಗಳ ವಿಚಾರವಾಗಿ ಮುಕುಂದಯ್ಯ ಆಡಿದ ಮಾತಿಗೆ ಸ್ವಲ್ಪ ಮಟ್ಟಿಗೆ ಪ್ರಹರ್ಷಿತಳಾಗಿ, ಆದರೂ ಭರ್ತ್ಸನೆಯ ಧ್ವನಿಯಿಂದ ಹೇಳಿದಳು, ಮುಕುಂದಯ್ಯನ ಪ್ರಶಂಸನೀಯ ನೇತ್ರಗಳನ್ನು ತನ್ನ ನೇತ್ರಗಳು ನೇರವಾಗಿ ಸಂಧಿಸುವಂತೆ ದೀರ್ಘಾಪಾಂಗದಿಂದ ನೋಡುತ್ತಾ “ಈ ಅಯ್ಯ ಏನೆಲ್ಲ ನೆನಪು ಇಟ್ಟುಕೊಂಡಿದ್ದಾರೆ!”
“ಒಳ್ಳೆ ಚೆನ್ನಾಗಿದೆ ಹೊಂಬಾಳೆ. ಇತ್ತಕೊಡು ನನಗೆ. ಇವತ್ತು ಅವ್ವನ ಹತ್ರ ನಂಗೆ ಬಳ್ಳೆ ಹಾಕಬ್ಯಾಡ ಅಂತಾ ಹೇಳ್ತೀನಿ. ಇದರಲ್ಲೇ ಉಣ್ತೀನಿ” ಎಂದು ಮುಕುಂದಯ್ಯ ಕೈ ನೀಡಿದನು.
ಐತ ಅದನ್ನು ಅವನು ಮುಟ್ಟದಂತೆ ಸ್ವಲ್ಪ ಹಿಂದಕ್ಕೆ ಎಳೆದುಕೊಂಡು “ಬ್ಯಾಡ ಅಯ್ಯ, ಇವಳು ಮುಟ್ಟಿಬಿಟ್ಟಿದ್ದಾಳೆ” ಎಂದನು.
“ಮುಟ್ಟಿದರೆ ಏನಾಯ್ತೊ? ಕೊಡೊ.”
ತಾನು ಹೇಳಿದುದು ಅರ್ಥವಾಗದಿದ್ದ ತನ್ನ ಹುಡುಗ ಒಡೆಯನ ದಾಂಪಾತ್ಯಾನುಭವವಿಲ್ಲದ ಅಜ್ಞಾನಕ್ಕೆ ನಸು ಕಿನಿಸಿದಂತೆ “ನಿಮಗೆ ಅದೆಲ್ಲಾ ಗೊತ್ತಾಗದಿಲ್ಲ, ಅಯ್ಯಾ” ಎಂದ ಐತ ಹೊಂಬಾಳೆಯನ್ನು ಪೀಂಚಲು ಕೈಗೆ ಕೊಟ್ಟು, ಹೆಗಲ ಕಂಬಳಿಯನ್ನು ಹಳ್ಳದ ದಂಡೆಗೆ ಎಸೆದು, ಕಪ್ಪೆ ಹಿಡಿಯಲು ಹಳ್ಳದ ಬಂಡೆಸಂದಿಯ ನಡುವೆ ನಿಂತಿದ್ದ ನೀರಿಗೆ ಬಾಗಿದನು. ತುಸು ತೇಜೋಭಂಗವಾದಂತೆ ಮುಖಮ್ಲಾನನಾಗಿ ನಿಂತಿದ್ದ ಮುಕುಂದಯ್ಯನನ್ನು ಕಿರಿನಗೆವೆರಸಿ ನಸುನಿಟ್ಟಿಸಿ, ತನ್ನ ಗಂಡನ ಮಾತನ್ನು ಸಂಪೂರ್ಣವಾಗಿ ಸಮರ್ಥಿಸುವ ಠೀವಿಯಿಂದ ಪೀಂಚಲು ಹೊಂಬಾಳೆಯನ್ನೂ ಹಾಳೆಕೊಟ್ಟೆಯನ್ನೂ ಐತನ ಕಂಬಳಿಯ ಪಕ್ಕದಲ್ಲಿ ದಡದ ಮೇಲಿಟ್ಟು, ಕಪ್ಪೆ ಹಿಡಿಯಲು ಪ್ರಯತ್ನಿಸುತ್ತಿದ್ದ ತನ್ನ ಗಂಡನೆಡೆಗೆ ಹೋದಳು.
ಮುಕುಂದಯ್ಯ ನಿಂತಲ್ಲಿಯೆ ನಿಂತು, ಕಪ್ಪೆ ಹಿಡಿಯುವುದರಲ್ಲಿ ಮಗ್ನರಾಗಿದ್ದ ಅವರಿಬ್ಬರನ್ನೂ ನೋಡುತ್ತಿದ್ದನು, ಯಾವುದರಲ್ಲಿಯೊ ಏನೊ, ತನಗೆ ಅಗೋಚರವಾಗಿದ್ದ ಒಂದು ವಿಷಯದಲ್ಲಿ ಅವರಿಬ್ಬರಿಂದಲೂ ಪರಾಜಿತನಾದವನಂತೆ.
ತಾನು ಓದು ಬರಹ ಬಲ್ಲವನು. ಐಗಳ ಕೃಪೆಯಿಂದ ಇತರ ತನ್ನಂತಹರಿಗಿಂತಲೂ ಹೆಚ್ಚು ಕಾವ್ಯ ಸಾಹಿತ್ಯ ಸಂಸ್ಕಾರ ಪಡೆದಿದ್ದಾನೆ. ಐಗಳೂ ತನ್ನನ್ನು ಎಲ್ಲರಿಗಿಂತ ಬುದ್ದಿವಂತನೆಂದು ಮೆಚ್ಚಿಕೊಂಡಿದ್ದಾರೆ. ತಾನು ಮನೆತನಸ್ಥರಾದ ಗೌಡರ ಕುಲದವನು. ತಮ್ಮ ಮನೆಯವರು ಕಲ್ಲೂರು ಮಂಜಭಟ್ಟರಂತೆ ಅಜ್ಞರನ್ನೂ ಬಡಬಗ್ಗರನ್ನೂ ನಾನಾ ರೀತಿಯಿಂದ ಸುಲಿದು ಸಾಹುಕಾರರು ಎನ್ನಿಸಿಕೊಳ್ಳದಿದ್ದರೂ, ಯಾರೂ ತಮ್ಮನ್ನ ಬಡವರೆಂದು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅಲ್ಲದೆ ತಾನು ಅನೇಕ ಗಟ್ಟಡ ತಗ್ಗಿನವರನ್ನೂ ಕೂಲಿಯಾಳುಗಳನ್ನಾಗಿ ಇಟ್ಟುಕೊಂಡಿರುವ ಒಡೆಯರ ವರ್ಗಕ್ಕೆ ಸೇರಿದವನು. ತನ್ನನ್ನು ಕಂಡರೆ ಇತರರಿಗೆಂತೊ ಅಂತೆ ಐತ ಪೀಂಚಲುಗಳಿಗೂ ಗೌರವ. ತಾನು ಐತ ಪೀಂಚಲು ಮೂವರೂ ಸ್ವಲ್ಪ ಹೆಚ್ಚು ಕಡಿಮೆ ಸಮವಯಸ್ಸಿನವರು. ಅನೇಕ ವರ್ಷಗಳಿಂದಲೂ ಒಡನಾಡಿದವರು. ತನ್ನನ್ನು ಕಂಡರೆ ಹತ್ತಿರದ ಗೆಳೆಯನನ್ನು ಕಂಡಂತೆ ಅಕ್ಕರೆ ಪೀಂಚಲು ಐತರಿಗೆ. ಅವರು ಮದುವೆಯಾಗುವ ಮೊದಲು ತಾನು ಹೇಳಿದುದಕ್ಕೆ ಎದುರು ಹೇಳಿದವರಲ್ಲ. ತನ್ನನ್ನು, ಅವರಿಗೆ ತಿಳಿಯದೆಯೆ, ಒಂದು ರೀತಿಯ ಗುರುಭಾವದಿಂದ ಕಂಡು, ತನ್ನ ನಿರ್ಣಯಗಳಿಗೆ ಶಿಷ್ಯರಂತೆ ಶರಣಾಗಿ ಆಜ್ಞಾನುವರ್ತಿಗಳಾಗಿದ್ದರು. ಈಗಲೂ ಅವರಿಗೆ ತನ್ನ ಮೇಲೆ ವಿಶ್ವಾಸ, ಗೌರವ, ಸ್ನೇಹಭಾವ ಎಲ್ಲ ಅಚ್ಚಳಿಯದಿವೆ. ಆದರೂ ಮದುವೆಯಾದ ಮೇಲೆ ಅವರು ಅನೇಕ ವಿಚಾರಗಳಲ್ಲಿ ತಾನು ಅರಿಯದವನೆಂಬಂತೆ ಮಾತಾಡುತ್ತಾರೆ, ವರ್ತಿಸುತ್ತಾರೆ, ಎದುರುತ್ತರ ಕೊಡುತ್ತಾರೆ. ‘ನಿಮಗೆ ಅದೆಲ್ಲ ಗೊತ್ತಾಗದಿಲ್ಲ, ಅಯ್ಯಾ!’ ಎಂದು ಒಬ್ಬರ ಕಣ್ಣನ್ನು ಒಬ್ಬರು ನೋಡಿ, ಏನೊ ಇಂಗಿತಸಂವಾದ ಮಾಡಿಕೊಳ್ಳುತ್ತಾರೆ. ಏನೊ ತಮಗೆ ಮಾತ್ರ ಲಭಿಸಿರುವ ಗುಪ್ರಾನುಭವದಿಂದ ತಾವಿಬ್ಬರೂ ನನಗಿಂತಲೂ ಹೆಚ್ಚು ತಿಳಿದವರು ಎಂಬಂತೆ ನಡೆದುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಂತೂ ಅನುಭವಶಾಲಿಗಳಾದ ವೃದ್ಧರು ಅನುಭವವಿಲ್ಲದ ಮಕ್ಕಳೊಡನೆ ದಾಕ್ಷಿಣ್ಯದಿಂದಲೊ ಕನಿಕರದಿಂದಲೊ ವ್ಯವಹರಿಸುವಂತೆ ಅರೆಪಾಲು ಮೂದಲಿಕೆಯಂತೆಯ ತೋರುವ ವ್ಯಂಗ್ಯವ್ಯಾಪಾರದಲ್ಲಿ ತೊಡಗುತ್ತಾರೆ. ಅವಿಧೇಯತೆಯೂ ಅಲ್ಲ, ಅವಜ್ಞೆಯೂ ಅಲ್ಲ ಎಂಬ ಅಸ್ಪಷ್ಟ ನಿಲುವಿನಿಂದ ಮನಸ್ಸಿಗೆ ಕೀಟಲೆ ಕೊಡುತ್ತಾರೆ. ತನಗಿಲ್ಲದ ಅದಾವ ವಿಶೇಷಾನುಭವ ಒದಗಿಬಿಟ್ಟಿದೆ ಇವರಿಗೆ, ಮದುವೆಯಾದ ಮೇಲೆ? ಇದ್ದಕ್ಕಿದ್ದಂತೆ ಹಾಗೆ ಕೋಡುಮೂಡಿದವರ ಹಾಗೆ ವರ್ತಿಸುತ್ತಾರಲ್ಲಾ?
“ಅಯ್ಯಾ, ಬನ್ನಿ ಕಪ್ಪೆಗೋಲು ಆಗಿದೆ. ನಿಮಗೊಂದು ನನಗೊಂದು” ಐತನ ಕರೆ ಕೇಳಿ ಮುಕುಂದಯ್ಯ ತನ್ನ ಚಿಂತನಧಾರೆ ತುಂಡಾದವನಂತೆ ತೆಕ್ಕನೆ ಹಗಲುಗನಸಿನಿಂದ ಎಚ್ಚತ್ತು ಕೆಲಸಕ್ಕೆ ಮುಂದುವರಿದನು.
ಮೂವರೂ ಕಪ್ಪೆಗೋಲು ಹಾಕುತ್ತಾ ಸರಲಿನಲ್ಲಿ ಮೇಲೆ ಮೇಲೆ ಹೋದರು. ನಾಲ್ಕಾರು ಕಾರೇಡಿಗಳೂ ಕೊಂಬುಕಾಲು ಮುರಿಸಿಕೊಂಡು ಪೀಂಚಲು ಹಿಡಿದಿದ್ದ ಹಾಳೆಕೊಟ್ಟೆಗೆ ಬಿದ್ದವು. ಏಡಿ ಹಿಡಿಯುವುದೆ ಮುಖ್ಯ ಉದ್ದೇಶವಾಗಿ ಬರದಿದ್ದ ಮುಕುಂದಯ್ಯನ ಕಪ್ಪೆಗೋಲಿಗೆ ಒಂದೂ ಕಚ್ಚದಿರಲು ಬಿಲ್ಲವನಾದ ಐತ ಅದಕ್ಕೆ ಕಾರಣ ಹೇಳಿದನು, ಸಮಾಧಾನ ಮಾಡುವಂತೆ: “ಆ ಹಸಲವರ ಬಿಡಾರದವರು ಇದಾರಲ್ಲಾ ಅವರು, ಕೆಲಸಕ್ಕೆ ಬರದೆ ಉಳಿ ಕೂತಾಗಲೆಲ್ಲ, ಈ ಹಳ್ಳಕ್ಕೇ ಬಂದು ಕಲ್ಲು ಮುಗುಚುತ್ತಾರಲ್ದಾ? ಏಡಿ ಎಲ್ಲಾ ಅವರ ಪಾಲಿಗೆ ಆಗಿಹೋಯಿತ್ತು. ಮೊದಲು ಸಿಕ್ಕಿದ ಹಾಂಗೆ ಎಲ್ಲಿ ಸಿಕ್ಕುತ್ತವೆ ಈಗ?”
ತನ್ನ ಕಪ್ಪೆಗೋಲಿಗೆ ಏಡಿ ಕಚ್ಚದೆ ಬೇಸತ್ತವನ ಹಾಗೆ ಮುಕುಂದಯ್ಯ “ಏಡಿ ಹಿಡೀತಾ ಇರೋ ನೀನು. ನಾನು ಇಲ್ಲೆ ಕೆಳಗೆ, ಆ ಹಕ್ಕಲಿನಲ್ಲಿ, ಬಿದಿರುಹಿಂಡಿಲು ಮೇಲೆ ಹೊರಸಲ್ಹಕ್ಕಿ ಇವೆಯೇನೊ ನೋಡಿ ಬರ್ತೇನೆ, ಚಿಟ್ಟುಬಿಲ್ಲು ತಗೊಂಡು ಹೋಗಿ” ಎಂದು ತುಸು ಕಾದನು.
ಐತ ಕಪ್ಪೆಗೋಲು ಹಾಕುವುದನ್ನೆ ಆಸಕ್ತಿಯಿಂದ ಮುಂದುವರಿಸುತ್ತಿದ್ದನು. ಮುಕುಂದಯ್ಯ ನಿರೀಕ್ಷಿಸಿದ್ದಂತೆ, ತಾನೆ ಚಿಟ್ಟುಬಿಲ್ಲು ತೆಗೆದುಕೊಂಡು ಹೋಗುತ್ತೇನೆ, ಎಂದು ಅವನು ಮುಂದೆ ಬರಲಿಲ್ಲ. ಚಿಟ್ಟುಬಿಲ್ಲಿನಿಂದ ಹಕ್ಕಿ ಹೊಡೆಯುವುದರಲ್ಲಿ ಮುಕುಂದಯ್ಯ ಎಷ್ಟು ಪ್ರವೀಣನೋ ಅಷ್ಟೇ ಪ್ರವೀಣನಾಗಿದ್ದನು ಐತನೂ. ಅಲ್ಲದೆ ಹಕ್ಕಿಬೇಟೆಯ ಆಸಕ್ತಿಯಲ್ಲಿ ಮುಕುಂದಯ್ಯನಿಗಿಂತಲೂ ಒಂದು ಕೈ ಮೇಲಾಗಿತ್ತು ಐತನದು. ಆದ್ದರಿಂದ ಐತ ತಾನೇ ಚಿಟ್ಟುಬಿಲ್ಲು ಬೇಟೆಗೆ ಹೋಗಲು ಮುಂದೆ ಬರುತ್ತಾನೆ; ಹಾಗೆ ಮುಂದೆ ಬಂದರೆ ಅವನನ್ನು ಹಕ್ಕಿ ಬೇಟೆಗೆ ಹೋಗಲು ಹಕ್ಕಲಿಗೆ ಕಳಿಸಿ, ತಾನು ಏಕಾಂತದಲ್ಲಿ ಪೀಂಚಲುವೊಡನೆ ತನ್ನ ಉದ್ದೇಶ ಸಾಧನೆ ಮಾಡಿಕೊಳ್ಳಬಹುದು ಎಂದು ಹವಣಿಸಿದ್ದನು.
“ಹೊತ್ತು ಮಾಡಬೇಡಿ, ಬೇಗ ಬನ್ನಿ” ಐತನ ಸಲಹೆಯಂತೆ ಮುಕುಂದಯ್ಯ ಪೀಂಚಲುವನ್ನೆ ನೋಡುತ್ತಾ ಹಳುವಿನಲ್ಲಿ ಮರೆಯಾದನು.
ಪೀಂಚಲು ಅವನು ಹೋದತ್ತ ಕಡೆಯೆ ಎವೆಯಿಕ್ಕದೆ ನೋಡುತ್ತಾ “ಇವತ್ತು ಯಾಕೆ ಅಯ್ಯ ನನ್ನ ಕಡೆ ಮತ್ತೆ ಮತ್ತೆ ನೋಡುತ್ತಾರಲ್ಲಾ?” ಎಂದುಕೊಂಡು ಮುಗುಳುನಕ್ಕಳು.
ಮುಕುಂದಯ್ಯನಿಗೂ ಹಾಗೆಯೆ ಅನ್ನಿಸಿತ್ತು. ಮೂವರೂ ಕಪ್ಪೆಗೋಲು ಹಾಕುತ್ತಾ ಮುಂದುವರಿಯುತ್ತಿದ್ದಾಗ ಮುಕುಂದಯ್ಯ ಪೀಂಚಲು ಕಡೆ ನೋಡಿದಾಗಲೆಲ್ಲ ಅವಳೂ ತನ್ನನ್ನೆ ನೋಡುತ್ತಿರುವಂತೆ ಭಾಸವಾಗಿ “ಇವಳು ಯಾಕೆ ಇವತ್ತು ನನ್ನ ಕಡೇನೆ ನೋಡ್ತಾಳಲ್ಲಾ?” ಎಂದು ಸೋಜಿಗಪಟ್ಟಿದ್ದನು.
ಅಕ್ಷಿಪ್ರಸರಣದ ಅನೇಕಾರ್ಥವು ಅನುಭವಿಯಾಗಿದ್ದ ಪೀಂಚಲುಗೆ ಸ್ಫುರಿಸಿದಂತೆ ಮುಕುಂದಯ್ಯಗೆ ಆಗಲುಸಾಧ್ಯವೆ? ಅವನು ಮುಗುಳು ನಕ್ಕರೆ, ಇವನು ಸೋಜಿಗ ಪಡಬಲ್ಲ ಅಷ್ಟೆ!
ನಾಲ್ಕೈದುನಿಮಿಷಗಳೂ ಕಳೆದಿರಲಿಲ್ಲ. ಮುಕುಂದಯ್ಯ ಏದುತ್ತಾ ಓಡಿ ಬಂದ. ಐತ ಪೀಂಚಲು ಗಾಬರಿಯಿಂದ ಎದ್ದುನಿಂತು ಅವನ ಕಡೆ ನೋಡಿದರು.
ಏದುತ್ತಲೆ ಕೂಗಿದನು ಮುಕುಂದಯ್ಯ: ‘ಐತ, ಓಡು! ಬೇಗೋಡು! ಒಂಟಿಗ ಹಂದಿ ಒಂದು ಆ ಇಲಾತ್‌ಸೀಂಗೇಲಿ ಮಲಗಿಕೊಂಡದೆ. ಕೋವಿ ತಗೊಂಡು, ನಾಯಿ ಕರಕೊಂಡು ಬರಾಕೆ ನಾ ಹೇಳ್ದೆ ಅಂತಾ ಹೇಳು ಐಗಳಿಗೆ. ಓಡ್ಹೋಗಿ ಹೇಳು! ಬೇಗ ಓಡು! ಸುಲಭದಲ್ಲಿ ಹೊಡೀಬೈದು!”
ಕಪ್ಪೆಗೋಲನ್ನು ಕೆಳಕ್ಕೆಸೆದು, ಕಲ್ಲಿಂದ ಕಲ್ಲಿಗೆ ಹಾರಿ ನೆಗೆದು, ಒಂದೇ ಸಮನೆ ನಿಟ್ಟೋಟದಿಂದ ಓಡುತ್ತಾ ತೋಡದ ಕಡೆಗೆ ನುಗ್ಗಿ ಐತ ಕಣ್ಮರೆಯಾದನು.
ಫಕ್ಕನೆ ಸುತ್ತಲೂ ನಿಃಶಬ್ದವಾದಂತಾಯಿತು: ಕಾಗೆಗಳಂತೆ ಕೋಗಿಲೆಗಳೂ ವಿರಳವಾಗಿದ್ದ ಆ ಕೋಣೂರಿನ ಹಾಡ್ಯದಲ್ಲಿ ಅಪರೂಪಕ್ಕೆಂಬಂತೆ ಕೂಗುತ್ತಿದ್ದ ಒಂದು ಕೋಗಿಲೆಯ ಇಂಚರ ಅಲೆಅಲೆಯಾಗಿ ತೇಲಿಬರುತ್ತಿತ್ತು. ಒಂದು ಕಾಮಳ್ಳಿಯ ಹಿಂಡು ಉಲಿಯುತ್ತಾ ರೆಕ್ಕೆಸದ್ದೂ ಕಿವಿಗೆ ಬರುವಷ್ಟು ಸಮೀಪದಲ್ಲಿ ಹಾರಿಹೋಯಿತು. ದೂರ ತೋಟದ ಮೂಲೆಯಲ್ಲಿ ಮರ ಕಡಿಯುತ್ತಿದ್ದ ಸದ್ದು ಮಂದವಾಗಿ ಬರುತ್ತಿದ್ದು. ಪೀಂಚಲು ಏನೋ ಒಂದು ರೀತಿಯ ಸಂಕೋಚಭಾವವನ್ನು ಮರೆಮಾಡುವ ಪ್ರಯತ್ನದಲ್ಲಿ ತಾನು ಹಿಡಿದಿದ್ದ ಹಾಳೆಕೊಟ್ಟೆಯಲ್ಲಿದ್ದ ಏಡಿಗಳನ್ನು ಪರಿಶೀಲಿಸುವ ನೆವ ಹೂಡಿದ್ದಳು.
ಆ ಮೌನ ಮತ್ತು ಸಂಕೋಚಭಾವದ ಎರಡು ಮೂರು ನಿಮಿಷಗಳ ಕಾಲ ಗಂಟೆಗಳಷ್ಟು ದೀರ್ಘವಾಗಿ ತೋರಿ, ಮುಕುಂದಯ್ಯನಿಗೆ ಮನಸ್ಸಿಗೆ ಹೊರಲಾರದಷ್ಟು ಭಾರವಾಯಿತು. ವ್ಯರ್ಥವಾಗಿ ಕಳೆಯಲು ಸಮಯವಿರಲಿಲ್ಲ. ಐತ ಹಿಂದಿರುಗುವುದರೊಳಗೆ ಎಲ್ಲವನ್ನೂ ಪೂರೈಸಿಬಿಡಬೇಕಿತ್ತು! ಏನನ್ನೊ ಮಾತು ಪ್ರಾರಂಭಿಸಲು ತವಕಿಸುತ್ತಾ ನಿಂತ ಪೀಂಚಲು ಹಾಳೆಕೊಟ್ಟೆಯಿಂದ ತಲೆ ಎತ್ತುವುದನ್ನೆ ಕಾಯುತ್ತಿದ್ದನು. ಆದರೆ ಅವಳು ತಲೆ ಎತ್ತುವಂತೆಯೇ ತೋರಲಿಲ್ಲ.
“ಇವಳು ಯಾಕೆ ಇವತ್ತು ಹೀಗೆ?” ಮುಕುಂದಯ್ಯ ಮನಸ್ಸಿನಲ್ಲಿಯೆ ಅಂದುಕೊಂಡನು. ಮದುವೆಯಾದ ಮೇಲೆ ಬೇರೆಯೆ ಆಗಿಬಿಟ್ಟಿದ್ದಾಳೆ! ಹಿಂದೆಲ್ಲ ಎಷ್ಟು ಸರಸದಿಂದ, ಸಲಿಗೆಯಿಂದ, ಮುಗ್ಧಳಾಗಿ ಸಂಕೋಚವಿಲ್ಲದೆ ವರ್ತಿಸುತ್ತಿದ್ದಳು?”
ಪೀಂಚಲು ಮತ್ತು ಐತ ಇಬ್ಬರೂ ದಂಪತಿಗಳಾಗುವ ಮೊದಲು ಆರೇಳು ವರ್ಷಗಳಿಂದಲೂ ಮುಕುಂದಯ್ಯನ ಸಹಪಾಂಶುಗಳಾಗಿ ಒಡನಾಡಿಗಳಾಗಿದ್ದರು. ಪೀಂಚಲು ಹೆಣ್ಣುಜಾತಿಗೆ ಸೇರಿದವಳೆಂಬುದು ಅವನಿಗೆ ಜ್ಞಾನವಿಷಯವಾಗಿದ್ದಿತೆ ಹೊರತು ಭಾವವಿಷಯವಾಗಿಯೆ ಇರಲಿಲ್ಲ. ಬಾಲ್ಯಾನಂತರ ಅವನಲ್ಲಿ ಹೂವಳ್ಳಿ ಚಿನ್ನಮ್ಮನ ಪರವಾಗಿ ಯಾವ ಭಾವಪರಿವರ್ತನೆಯನ್ನು ಅನುಭವಿಸಿದ್ದನೊ ಅಂತಹ ಯಾವ ಭಾವವನ್ನೂ ಪೀಂಚಲು ಪರವಾಗಿ ಅನುಭವಿಸಿರಲಿಲ್ಲ. ತನ್ನೊಡನೆ ಬೇಟೆಗೆ ಬರುವ ತಮ್ಮ ಮನೆಯ ಒಂದು ಒಳ್ಳೆಯ ಜಾತಿಯ ಮತ್ತು ರೂಪದ ಹೆಣ್ಣು ನಾಯಿಯ ವಿಚಾರವಾಗಿ ಯಾವ ಮೋಹ ಮಮತೆ ಪ್ರೀತಿ ಪ್ರಶಂಸೆಗಳಿರಬಹುದಾಗಿತ್ತೋ ಹಾಗೆಯೆ ಮುಟ್ಟದವಳೂ ಕೀಳು ಜಾತಿಯವಳೂ ತಮ್ಮ ಕೂಲಿಯಾಳುಗಳ ಕುರುದೆಯೂ ಆಗಿದ್ದ ಪೀಂಚಲು ವಿಚಾರದಲ್ಲಿಯೂ ಒಂದು ವಿಶ್ವಾಸಪೂರ್ವಕವಾಗಿದ್ದ ಆಸಕ್ತಿ ಇರುತ್ತಿತ್ತು. ಕೆಲವು ವಿಷಯಗಳಲ್ಲಿ ಪೀಂಚಲು ಗಂಡುಹುಡುಗರಂತೆಯೆ ನಡೆಯುತ್ತಿದ್ದಳು. ತನ್ನವರಾದ ಒಕ್ಕಲಿಗ ಮನತನಸ್ಥರ ಹೆಣ್ಣುಮಕ್ಕಳಿಗೆ ಅಸಾಧ್ಯವಾದ ಸಾಹಸಗಳನ್ನೆಲ್ಲ ಮಾಡಿ ಮುಕುಂದಯ್ಯನ ಬೆರಗಿಗೂ ಮೆಚ್ಚುಗೆಗೂ ಪಾತ್ರಳಾಗಿದ್ದಳು. ಅಡಕೆ ಮರಕ್ಕೆ ಹತ್ತಿ, ಕೆಳಗೆ ಬೀಳಲಾರದೆ ಹಿಂಗಾರಕ್ಕೆ ಸಿಕ್ಕಿಕೊಂಡು ಹೊಂಬಾಳೆಗಳನ್ನು ಅದೆಷ್ಟೋ ಸಾರಿ ಲೀಲಾಜಾಲವಾಗಿ ಕಿತ್ತುಕೊಟ್ಟಿದ್ದಳು. ತಾನೂ ಐತನೂ ಹುಳುಗಳಿಗೆ ಹೆದರಿ ಓಡಿಹೋದಾಗ ಅವಳು ಕಚ್ಚಿಸಿಕೊಂಡೂ ಹೆದರದೆ ಹುತ್ತದಲ್ಲಿದ್ದ ತುಡುವೆ ಜೇನನ್ನು ಕಿತ್ತುಕೊಟ್ಟಿದ್ದಳು. ಮರುದಿ ಮುಖ ಊದಿಕೊಂಡು ವಿಕಾರವಾಗಿ ತನ್ನವರಿಂದ ಬಯ್ಯಿಸಿಕೊಳ್ಳುತ್ತಿದ್ದುದನ್ನೂ ಲೆಕ್ಕಿಸದೆ. ಅಷ್ಟೆ ಅಲ್ಲದೆ, ಇತ್ತೀಚೆಗೆ ತನಗೂ ಹೂವಳ್ಳಿ ಚಿನ್ನಮ್ಮಗೂ ನಡುವಣ ಬಾಯಿಪತ್ರ ವ್ಯವಹಾರವನ್ನೂ ನಡೆಸಿ, ಗೋಪ್ಯವನ್ನು ಯಾರಿಗೂ ಬಿಟ್ಟುಕೊಡದೆ, ಯಾರಿಗೂ ತಿಳಿಯದಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಳು. ಆ ವಿಚಾರದಲ್ಲಿ ಅವಳು ತನ್ನ ಗಂಡ ಐತನಿಗಿಂತಲೂ ಸಾವಿರ ಪಾಲು ನಂಬಿಕೆಗೆ ಅರ್ಹಳಾಗಿದ್ದಳು. ಐತ ಸರಳ, ಶಕ್ತ, ಜಾಣ, ಶ್ರಮಸಹಿಷ್ಣು; ಆದರೆ ಬಾಯಾಳಿ. ಅವನ ಹತ್ತಿರ ಯಾವ ಗುಟ್ಟೂ ಒಂದು ದಿನವಾದರೂ ಸುರಕ್ಷಿತವಾಗಿರುವುದು ಅಸಾಧ್ಯವಾಗಿತ್ತು. ಒಮ್ಮೆ ಹುಡುಗರೆಲ ಸೇರಿ ಕದ್ದು, ಬಾಳೆಮರದ ಬುಡದಲ್ಲಿ ಹೂಳಿಟ್ಟ ಐಗಳ ಮಂಗಳೂರು ನಶ್ಯದ ಬೆಳ್ಳಿಯ ಪುಡಿ ಡಬ್ಬಿಯನ್ನು, ಅವರು ತುಸು ಪುಸಲಾಯಿಸಿದ್ದೆ ತಡ, ಅದನ್ನು ಕದಿಯುವಾಗ ಅವರ ಅವಸರ ಆಸಕ್ತಿಗಳನ್ನು ತೋರಿದ್ದನೋ ಅದೇ ಅವಸರ ಆಸಕ್ತಿಗಳಿಂದಲೆ, ಕದ್ದಿಟ್ಟ ಜಾಗವನ್ನೂ ಹೇಳಿಕೊಟ್ಟುದಲ್ಲದೆ ಡಬ್ಬಿಯನ್ನೂ ಅಗೆದು ತೆಗೆದುಕೊಟ್ಟು, ರಂಗಪ್ಪಗೌಡರಿಂದ ಎಲ್ಲರೂ ಚಡಿಏಟು ತಿನ್ನುವಂತೆ ಮಾಡಿದ್ದನು. ಗಟ್ಟದ ತಗ್ಗಿನವರ ಹರಕಲು ತಟ್ಟಿ ಗೋಡೆಯ ಬಿಡಾರಗಳಲ್ಲಿ ಗಂಡು ಹೆಣ್ಣುಗಳೊ ಗಂಡ ಹೆಂಡಿರೊ ಗೋಪ್ಯಕಾರ್ಯಗಳಲ್ಲಿ ಸಾಕಷ್ಟು ಮುಚ್ಚುಮರೆಯಿಲ್ಲದೆ ತೊಡಗಿದ್ದುದನ್ನು ಇವನು ಬೇಕೆಂದು ಹಣಿಕಿಯೊ, ಅಕಸ್ಮಾತ್ತಾಗಿ ಇಳಿಕಿಯೋ ಕಂಡಾಗ ಅದನ್ನೆಲ್ಲೆ ಹಾಗೆ ಹಾಗೆಯೆ, ಹಸಿಹಸಿಯಾಗಿಯೇ ಮುಕುಂದಯ್ಯನಿಗೆ ವಿನೋದ ವಿಷಯವನ್ನು ಹೇಳುವಂತೆ ಹೇಳಿ, ಹೊಟ್ಟೆ ಹಿಡಿದುಕೊಂಡು ಕುಮ್‌ಚೆಟ್‌ ಹೊಡೆದು ನಕ್ಕಿದ್ದನು! ಆ ವಿಚಾರದಲ್ಲಿ ಅವನಿಗೆ ತನ್ನದು ಪರರದು ಎಂದು ಎಗ್ಗೂ ಇರಲಿಲ್ಲ. ತಾನೆ, ಮದುವೆಯಾದ ಹೊಸದರಲ್ಲಿ, ಹೆಂಡತಿಯ ಮಗ್ಗುಲಲ್ಲಿ ಮೊತ್ತಮೊದಲು ಮಲಗಿದಾಗ ನಡೆದ ಗೋಪನೀಯವೂ ಅವಾಚ್ಯವೂ ಆದ ಸಂಗತಿಗಳನ್ನು ತನಗೆ ಲಭಿಸಿದ ಮೊದಲನೆಯ ಅವಕಾಶದಲ್ಲಿಯೆ, ಆಲಿಸಿದ ಮುಕುಂದಯ್ಯ ನಾಚಿ ಥೂಗೊಳ್ಳುವವರೆಗೂ ಬಹಿರಂಗಪಡಿಸಿ ಗಳಪಿದ್ದನು! ಆದ್ದರಿಂದಲೆ ಮುಕುಂದಯ್ಯ ತಾನು ಕೈಗೊಳ್ಳಲಿರುವ ರಹಸ್ಯ ಕಾರ್ಯಸಾಧನೆಗೆ ಐತನನ್ನು ಆರಿಸದೆ ಅವನ ಹೆಂಡತಿಯನ್ನು ಆರಿಸಿ, ಉಪಾಯದಿಂದ ಅವಳನ್ನು ತನ್ನ ಏಕಾಂತಕ್ಕೆ ಪ್ರತ್ಯೇಕಿಸಿದ್ದನು.
ಆದರೆ ಪೀಂಚಲು ಅನುಭವಿಸುತ್ತಿದ್ದ ಭಾವದ ಸ್ವರೂಪ ಬೇರೆಯದಾಗಿತ್ತು.
ಐತನನ್ನು ಮದುವೆಯಾಗುವುದಕ್ಕೆ ಮೊದಲು, ಅವಳು ಹುಡುಗಿಯಾಗಿ ಹೊರೆ ಹೊಣೆಹೆಚ್ಚೇನೂ ಇಲ್ಲದೆ, ಗದ್ದೆ ತೋಟ ಹಕ್ಕಲು ಹಾಡ್ಯ ಕಾಡುಗಳಲ್ಲಿ, ಹುಡುಗರ ಗುಂಪಿನೊಡನೆ ಅಥವಾ ಅವರ ಹಿಂದೆ, ಇತರ ತನ್ನಂತಹ ಗಟ್ಟದ ತಗ್ಗಿನ ಕುರುದೆಗಳೊಡನೆ ಅಲೆಯುತ್ತಿದ್ದಾಗ ಬಾಲಕರಲ್ಲೆಲ್ಲ ಮುಕುಂದಯ್ಯನನ್ನೆ ಬಹಳವಾಗಿ ಮೆಚ್ಚಿಕೊಂಡಿದ್ದಳು. ಜಾತಿ ಮತ್ತು ಸಾಮಾಜಿಕ ನೀತಿನಿಷ್ಠೆಗಳಿಗೆ ಅನುಗುಣವಾಗಿ ತನಗಿಂತಲೂ ತುಂಬ ಎತ್ತರದಲ್ಲಿ, ತಾನೆಂದೂ ಮುಟ್ಟಲಾರದಷ್ಟು ಮತ್ತು ಮುಟ್ಟಬಾರದಷ್ಟು ದೂರದಲ್ಲಿಯೆ ಇರುತ್ತಿದ್ದ ಮುಕುಂದಯ್ಯನನ್ನು ಆರಾಧ್ಯ ಭಾವದಿಂದಲೆ ಪೂಜಿಸುತ್ತಿದ್ದಳೆಂದರೆ ಅವನ ಪರವಾಗಿ ಅವಳಲ್ಲಿದ್ದ ಪ್ರಶಂಸೆಯ ಭಾವವನ್ನೇನು ತಪ್ಪಾಗಿ ವರ್ಣಿಸಿದಂತಾಗುವುದಿಲ್ಲ. ಇತರ ಎಲ್ಲ ಗೌಡರು ಹಳೆಪೈಕದವರು ಸೆಟ್ಟರು ಹಸಲವರು ಬಿಲ್ಲವರು ಕರಾದಿಗರು ಬೇಲರು ಹೊಲೆಯರು ಇವರ ಮಕ್ಕಳಿಗಿಂತ ಮುಕುಂದಯ್ಯ ರೂಪದಲ್ಲಾಗಲಿ ಬಣ್ಣದಲ್ಲಾಗಲಿ ಬುದ್ಧಿಯಲ್ಲಾಗಲಿ ಚಟುವಟಿಕೆಯಲ್ಲಾಗಲಿ ಸಾಹಸದಲ್ಲಾಗಲಿ ಮೇಲಾಗಿ ಮುಂದಾಗಿ ಕಾಣಿಸಿದ್ದನು, ಪೀಂಚಲು ಕಣ್ಣಿಗೆ. ಸ್ವಲ್ಪ ಬೆಳೆದ ಮೇಲೆ, ಬಾಲೆ ತರಳೆಯಾದ ಮೇಲೆ, ಅವಳು ಮುಕುಂದಯ್ಯನನ್ನು ಯಾವ ಹೆಣ್ಣಾದರೂ ಲಕ್ಷಣವಾದ ಯಾವ ಗಂಡನ್ನಾದರೂ ಮೆಚ್ಚಿ ಬಯಸಿಕಾಣುವಂತೆ ಕಾಣುತ್ತಿದ್ದಳು. ಅವಳ ಆ ಭಾವಸಮೂಹದ ಎಳೆಗಳಲ್ಲಿ ಶೃಂಗಾರದ ಅಪೇಕ್ಷೆಯೂ ಒಂದು ಎಳೆಯಾಗಿತ್ತು ಎಂದರೆ ಅದು ಅವಳ ಮುಗ್ಧತೆಯನ್ನೇನೂ ಕಲುಷಿತಗೊಳಿಸುವಂತಿರಲಿಲ್ಲ. ಮುಕುಂದಯ್ಯನನ್ನು ತಾನು ಸುಮ್ಮನೆ ಮುಟ್ಟುವಷ್ಟಾದರೂ ಆಗಿದ್ದರೆ ಅವಳಿಗೆ ಸ್ವರ್ಗವೆ ಪ್ರಾಪ್ತವಾದಷ್ಟು ಆನಂದವಾಗುತ್ತಿತ್ತು. ಅದಕ್ಕೆ ಅವಳಿಗೆ ತಡೆಯಾಗಿದ್ದುದೆಂದರೆ ಜಾತಿ, ಸಮಾಜ, ವರ್ಗತಾರತಮ್ಯ. ಐತನನ್ನು ಮದುವೆಯಾದ ಮೇಲೆ, ಪೀಂಚಲುಗೆ ಗಂಡು ಹೆಣ್ಣುಗಳ ಸಂಬಂಧದ ಸ್ವರೂಪದಲ್ಲಿ ಅತ್ಯಂತ ವಿಸ್ಮಯದ ಮತ್ತು ಸುಖದ ಹೊಸ ಅನುಭವವುಂಟಾಗಿ, ಮುಕುಂದಯ್ಯನ ಪರವಾಗಿ ಅವಳ ನಡತೆ ಸಾಮಾಜಿಕ ಮತ್ತು ಜಾತಿಯ ನೀರಿಯ ಚೌಕಟ್ಟಿನ ಕಟ್ಟಿಗೊಳಗಾಯಿತು. ಹೊಸದಾಗಿ ಪಡೆದ ಶಾರೀರಿಕ ಸಂಬಂಧದಿಂದ ತನ್ನ ಗಂಡನ ಮೇಲೆ ಹಿಂದೆ ಅವಳಿಗಿದ್ದ ಪ್ರೀತಿ ಮೆಚ್ಚುಗೆಗಳು ನೂರರಷ್ಟಾಗಿ ಹೊಸ ಮೋಹಪಾಶದಿಂದ ಕಟ್ಟುಗೊಂಡು ಸುಭದ್ರವಾಗಿದ್ದುವು. ಆದರೆ ಆ ಪ್ರೇಮ ವ್ರತಸ್ವರೂಪದ್ದಾಗಿರಲಿಲ್ಲ. ದೃಢಕಾಯದ ಅರೋಗಿಯಾದ ಪ್ರಾಯದ ಪ್ರಾಣಿಯಲ್ಲಿರಬಹುದಾದ ಪ್ರಣಯದಂತೆ ರತಸ್ವರೂಪದ್ದಾಗಿತ್ತು ಎಂದರೆ ಅವರ ಸಂಬಂಧವನ್ನು ಅವಹೇಳನ ಮಾಡಿದಂತೆಯೂ ಆಗುವುದಿಲ್ಲ, ಕೀಳುಗೈದಂತೆಯೂ ಆಗುವುದಿಲ್ಲ. ಅದು ಸಹಜವಾಗಿತ್ತು, ಅಕೃತಕವಾಗಿತ್ತು ಎಂದಂತೆ ಮಾತ್ರ ಆಗುತ್ತದೆ. ತನ್ನ ಗಂಡನ ಸಂಬಂಧವಾದ ಅವಳ ನಡೆಯನ್ನು ‘ಪಾತಿವ್ರತ್ಯ’ ಎಂದು ಕರೆಯುವಂತಿರಲಿಲ್ಲ. ಏಕೆಂದರೆ ಅದಕ್ಕೆ ಸಮಾಜದ ನೀತಿಯ ಭೀತಿಯಾಗಲಿ, ಪಾಪ ನರಕಾದಿ ಧರ್ಮ ಭಯದ ಭಿತ್ತಿಯಾಗಲಿ, ಆದರ್ಶಸಾಧನೆಯ ಸಾಣಿಯಾಗಲಿ, ಆಕರ್ಷಣೆಯಾಗಲಿ ಇರಲಿಲ್ಲ. ಅದು ತೀರ ನೈಸರ್ಗಿಕವಾಗಿತ್ತು. ಐತನಲ್ಲದ ಮತ್ತಾವ ಗಂಡನ್ನಾಗಲಿ, ಮುಕುಂದಯ್ಯ ವಿನಾ, ಅದು ತಿರಸ್ಕರಿಸುವುದಿರಲಿ ಆಲೋಚಿಸುವ ಗೋಜಿಗೂ ಹೋಗಿರಲಿಲ್ಲ; ವ್ರತಪಾಲನೆಗಾಗಿ ಅಲ್ಲ, ನೈಸರ್ಗಿಕವಾಗಿ. ಅವಳ ಪ್ರಣಯಕ್ಕೆ ಅಂಗರಕ್ಷಕರಾರೂ ಇರಲಿಲ್ಲ; ಸಮಾಜ ನೀತಿಯ ಇಲಾಖೆಯಿಂದ ನೇಮಕವಾದವರಾಗಲಿ, ಧಾರ್ಮಿಕ ಭೀತಿಯ ಇಲಾಖೆಯಿಂದ ನೇಮಕವಾದವರಾಗಲಿ! ಆದ್ದರಿಂದಲೆ ಮದುವೆಗೆ ಮೊದಲು ಅವಳಿಗೆ ಮುಕುಂದಯ್ಯನ ಮೇಲಿದ್ದ ಅಭಿಮಾನ ಇಂದಿಗೂ ಅಕ್ಷತವಾಗಿಯೆ ಉಳಿದಿತ್ತು. ಐತ ಅಪೇಕ್ಷಿಸಿದ್ದನ್ನು ಮುಕುಂದಯ್ಯ ಅಪೇಕ್ಷಿಸಿದ್ದರೆ ಅವಳು ‘ಇಲ್ಲ’ ಎನ್ನುವ ಸ್ಥಿತಿಯಲ್ಲಿರಲಿಲ್ಲ; ಒಲ್ಲೆ ಎನ್ನುತ್ತಿರಲಿಲ್ಲ. ತನಗಿಂದಲೂ ಮಹತ್ತಾದುದಕ್ಕೆ ತನ್ನನ್ನು ಅರ್ಪಿಸಿಕೊಳ್ಳಲು ಅವಳು ಹಿಂಜರಿಯುತ್ತಿರಲಿಲ್ಲ. ತಾನು ಬಹುಪೂರ್ವದಿಂದಲೂ ಮೆಚ್ಚಿಕೊಂಡೇ ಬಂದಿರುವ ತನ್ನ ಒಡೆಯನಿಗೆ ತೋರುವ ಗೌರವವೆಂದೂ, ವಿಧೇಯತೆಯ ಅಂಗವೆಂದೂ, ಅವಳು ತನ್ನನ್ನು ಸಮರ್ಪಣ ಭಾವದಿಂದಲೇ, ಸಂತೋಷವಾಗಿಯೆ, ಪಾಪಭಯ ಲೇಶವಿಲ್ಲದ ಆತ್ಮನೈವೇದ್ಯ ರೂಪದಿಂದಲೇ ಒಪ್ಪಿಸಿಕೊಂಡುಬಿಡುತ್ತಿದ್ದಳು. ಹಾಗೆ ಒಪ್ಪಿಸಿಕೊಂಡೂ, ಐತನಿಗೆ, ತನ್ನ ಕೈ ಹಿಡಿದ ಗಂಡನಿಗೆ, ವಂಚನೆ ಮಾಡುತ್ತಿದ್ದೇನೆ ಎಂಬ ಭಾವನೆ ಅವಳಲ್ಲಿ ಇನಿತೂ ಇರಲಿಲ್ಲ. ಆ ಭಾವನೆ ಇದ್ದೂ ಒಂದು ವೇಳೆ ಅವಳು ಒಪ್ಪಿಸಿಕೊಂಡಿದ್ದರೆ, ಅವಳು ಮೋಸಗಾರ್ತಿಯಾಗುತ್ತಿದ್ದಳು; ಜಾರೆಯಾಗುತ್ತಿದ್ದಳು; ಕುಟಿಲೆಯಾಗುತ್ತಿದ್ದಳು.
ಏಡಿಕೊಟ್ಟೆಯ ಕಡೆಗೆ ಕಣ್ಣಾಗಿ, ಕೊಟ್ಟೆಯೊಳಕ್ಕೆ ಕೈಹಾಕಿಕೊಂಡು, ಮಿಟಿಮಿಟಿಗುಡುತ್ತಿದ್ದ ಏಡಿಗಳೊಡನೆ ಏನನ್ನೊ ಮಾಡುವವಳಂತೆ ತಲೆ ಬಾಗಿಸಿದ್ದ ಪೀಂಚಲುಗೆ ಅವಳು ತಲೆ ಎತ್ತುವುದನ್ನೆ ಕಾದು ಕಾದು ಸಾಕಾದ ಮುಕುಂದಯ್ಯ “ಏನೇ ಇದು? ಏಡಿ ಸಂಗಡ ಮಾತಾಡ್ತಿದ್ದೀಯಾ?” ಎಂದು ತುಸು ಹತ್ತಿರಕ್ಕೆ ಸರಿದನು.
ಹಿಂದಿನ ದಿನ ಬಿದ್ದ ಮಳೆಯ ದೆಸೆಯಿಂದಾಗಿ ಸ್ವಲ್ಪ ಹೆಚ್ಚಾಗಿಯೆ ನೀರು ಸುತ್ತಿದ್ದ ಒಂದು ಸಣ್ಣ ಬಂಡೆಗುಂಡಿನ ಮೇಲೆ ಕುಕ್ಕುರುಗಾಲಿನಲ್ಲಿ ಕೂತು ಮುಖ ಬಾಗಿದ್ದ ಬಿಲ್ಲವರ ಹುಡುಗಿ, ಪೀಂಚಲು, ಮೇಲು ಜಾತಿಯ ಸಣ್ಣ ಅಯ್ಯನನ್ನು ಮುಟ್ಟುಚಿಟ್ಟು ಮಾಡಿಬಿಡುತ್ತೇನಲ್ಲಾ ಎಂಬು ಹುಟ್ಟಿದಂದಿನಿಂದ ಬಂದ ಅಭ್ಯಾಸಬಲದಿಂದ, ದಾಡಿಬಿಡುವ ಅವಸರದ ಔತ್ಸುಕ್ಯದಲ್ಲಿ ತಟಕ್ಕನೆ ಎದ್ದು ಹಿಂದಕ್ಕೆ ಸರಿದು, ಒಂದು ಕಾಲು ಬಂಡೆಯಿಂದ ಜಾರಿ, ಹೊಂಗಿ ನೀರಿಗೆ ಬೀಳುವಂತಾಗಿ ತತ್ತರಿಸುತ್ತಿರುವಷ್ಟರಲ್ಲಿ ಮುಕುಂದಯ್ಯ ಅವಳನ್ನು ರಟ್ಟೆ ಹಿಡಿದು, ಬೀಳದಂತೆ ನಿಲ್ಲಿಸಿಬಿಟ್ಟನು!
ಅವನು ಅವಳ ಬತ್ತಲೆಯ ತೋಳನ್ನು ಹಿಡಿಯುವ ಗಡಿಬಿಡಿಯಲ್ಲಿ, ಕುಪ್ಪಸವಾಗಲಿ ರವಕೆಯಾಗಲಿ ಇಲ್ಲದೆ ಬರಿಯ ಸೀರೆಯ ಸೆರಗಿನಿಂದ ಮಾತ್ರ ಮರೆಯಾಗಿದ್ದ ಅವಳ ಎದೆಗೂ ಅವನ ಕೈ ನಸು ತಾಗಿತ್ತು. ನೀರಿಗೆ ಬೀಳದಂತೆ ಅವಳನ್ನು ಹಿಡಿದು ನಿಲ್ಲಿಸುವ ಏಕಮಾತ್ರ ಉದ್ದೇಶದಿಂದ ಅವಳ ಮೈಯನ್ನು, ಮುಟ್ಟಬಹುದಾದವಳು ಮುಟ್ಟಬಾರದವಳು ಎಂಬ ಯಾವ ತಾರತಮ್ಯಕ್ಕೂ ಆಲೋಚನೆಗೂ ಅವಕಾಶವಿಲ್ಲದೆ, ಮುಟ್ಟಿದ್ದನು. ಅವಳನ್ನು ನೀರಿಗೆ ಬೀಳದಂತೆ ರಕ್ಷಿಸುವ ಆತುರದಲ್ಲಿ ಅವಳ ಮೈಯ ಆ ಭಾಗ ಈ ಭಾಗ ಎಂದು ಮೀನ ಮೇಷ ಮಾಡುವ ಅನುಚಿತಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಆದ್ದರಿಂದ ಅವನ ಮನಸ್ಸಿನಲ್ಲಿ ಯಾವ ಭಾವ ಸಂಚಾರವೂ ಆಗಿರಲಿಲ್ಲ.
ಆದರೆ ಪೀಂಚಲು ಅವನ ಕ್ರಿಯಿಗೆ ಶ್ಲೇಷಾರ್ಥ ಆರೋಪಿಸಲು ಇಷ್ಟವುಳ್ಳವಳಾಗಿದ್ದಂತೆ ತೋರಿತು. ಅವನ ಹಿಡಿತ ಮತ್ತು ಸ್ಪರ್ಶ ಎರಡೂ, ಎರಡು ದೃಷ್ಟಿಯಿಂದಲೂ, ತನ್ನನ್ನು ನೀರಿಗೆ ಬೀಳದಂತೆ ರಕ್ಷಿಸುವ ದೃಷ್ಟಿ ಮತ್ತು ಅನ್ಯೋದ್ದೇಶದಿಂದ ತನ್ನನ್ನು ಸ್ಪರ್ಶಿಸಿದ ದೃಷ್ಟಿ, ಮನಸ್ಸಿಗೆ ಹಿತವಾಗಿತ್ತು, ಆಪ್ಯಾಯಮಾನವಾಗಿತ್ತು. ಆಪ್ಯಾಯಮಾನವಾಗಿದ್ದ ಒಂದು ದೃಷ್ಟಿಯಿಂದ ಮುಕುಂದಯ್ಯನ ಕ್ರಿಯೆ ಮುಂದುವರಿಯಬಹುದೆಂದೆ ಅವನ ಕಡೆಗೆ ಕಣ್ಣರಳಿಸಿ ನಿಡುನೋಡುತ್ತಾ “ನನ್ನ ಮುಟ್ಟಿಬಿಟ್ರಲ್ಲಾ, ಅಯ್ಯಾ!” ಎಂದಳು, ಮುಗುಳುನಗೆ ಬೀರಿ.
“ಮುಟ್ಟಿದರೇನು ನಿನ್ನ ಜಾತಿ ಹೋಗ್ಲಿಲ್ಲ” ಅವಳ ತೋಳಿನ ಹಿಡಿತವನ್ನು ಸಡಿಲಿಸಿ, ಬಿಟ್ಟು, ಹಿಂದಕ್ಕೆ ಸರಿದು ನಿಂತು, ಮುಕುಂದಯ್ಯ ಕೈದೋರಿದನು “ನೋಡಲ್ಲಿ, ನಿನ್ನ ತಳಾಲೆ ತೇಲಿ ಹೋಗ್ತಾ ಇದೆ.”
ತೇಲಿಹೋಗುತ್ತಿದ್ದ ತನ್ನ ಹಾಳೆ ಟೋಪಿಯನ್ನು ಹಿಡಿದೆತ್ತಿಕೊಳ್ಳಲೆಂದು ಪೀಂಚಲು ಒಂದು ಹಾಸುಬಂಡೆಗೆ ಹಾರಿ, ಮೊಳಕಾಲೆತ್ತರದ ನೀರಿಗೂ ಇಳಿದು, ಸೀರೆಯ ಬಹುಭಾಗ ಒದ್ದೆಯಾದುದನ್ನೂ ಗಮನಿಸದೆ ತಳಾಲೆಯನ್ನು ತಂದಳು.
“ಅದ್ಯಾಕೇ, ಅಷ್ಟು ಗಡಿಬಿಡಿ ಗಾಬರಿ ನಿನಗೆ?” ಮುಕುಂದಯ್ಯ ಕೇಳಿದನು. ನಿರ್ಭಾವವಾಗಿ, ಅವಳು ಭಾವೋದ್ವೇಗದ ಮತ್ತು ಅಸ್ಥಿರತೆಯ ಉಸಿರಾಟವನ್ನು ಗಮನಿಸಿ.
ಪೀಂಚಲು ಅವನ ಧ್ವನಿಯ ಧೈರ್ಯಕ್ಕೂ ಸ್ಥೈರ್ಯಕ್ಕೂ ಎಚ್ಚತ್ತುಕೊಂಡು ಮುಕುಂದಯ್ಯನ ಮುಖದ ಕಡೆ ನೇರವಾಗಿ ನೋಡಿದಳು, ಅವನ ಕಣ್ಣಿಗೆ ಕಣ್ಣಿಟ್ಟು. ಅವನ ಕಣ್ಣಿನಲ್ಲಿ ಒಂದಿನಿತೂ ಅಸ್ಥಿರತೆ ತೋರಲಿಲ್ಲ. ನೂರು ಮಾತು ತಿಳಿಸಲಾರದ ಏನನ್ನೊ ಅವನ ಒಂದು ನೋಟ ತಿಳಿಸಿದಂತಾಗಿ, ತರುಣಿಯ ಚಂಚಲ ಮನಸ್ಸು ಮಂತ್ರದಿಂದೆಂಬಂತೆ ತಿಳಿಯಾಯಿತು!
ಇದ್ದಕ್ಕಿದ್ದಹಾಗೆ ಮುಕುಂದಯ್ಯ ಕೇಳಿದನು “ಪೀಂಚ್ಲು, ನನಗೊಂದು ಉಪಕಾರ ಆಗಬೇಕಾಗಿದೆಯಲ್ಲಾ! ಮಾಡ್ತೀಯಾ?”
“ಕೇಳ್ತೀರಲ್ಲ ನನ್ನ?…. ಏನು? ಹೇಳಿರಿ, ಅಯ್ಯಾ” ತುಂಬ ಕೃತಜ್ಞತೆಗೆಂಬಂತೆ ಉತ್ತರಿಸಿದಳು ಪೀಂಚಲು.
“ಮಾಡ್ತೀನಿ ಅಂತ ಭಾಷೆ ಕೊಟ್ಟರೆ….” ಮುಕುಂದಯ್ಯನ ದನಿಯಲ್ಲಿ ದೈನ್ಯವಿತ್ತು.
“ನಿಮ್ಮ ಪಾದದಾಣೆ, ಆಳಾಗಿ ಮಾಡ್ತೀನಿ, ಹೇಳಿ!” ಹುಡುಗಿಯ ಮಾತು ಅವಳ ಮನಸ್ಸು ಏರಿದ್ದ ಮಟ್ಟವನ್ನು ಸೂಚಿಸುವಂತಿತ್ತು.
“ಯಾರಿಗೂ ಗೊತ್ತಾಗಬಾರದು.”
“ಇಲ್ಲ, ಯಾರಿಗೂ ಹೇಳುವುದಿಲ್ಲ.”
“ಐತಗೂ ಗೊತ್ತಾಗಬಾರದು.”
ಹುಡುಗಿ ‘ಹ್ಞೂ’ ಎನ್ನದೆ ಸ್ವಲ್ಪ ಹಿಂದು ಮುಂದು ನೋಡುತ್ತಿದ್ದುದನ್ನು ಗಮನಿಸಿ ಮುಕುಂದಯ್ಯ ವಿವರಿಸಿದನು: “ನಿನ್ನ ಗಂಡಗೆ ಹೇಳಬಾರದ್ದೇನಲ್ಲ. ಆದರೆ ಅಂವ ಪೂರಾ ಬಾಯಾಳಿ. ನಿನಗೇ ಗೊತ್ತಿದೆ, ಅವನ ಹತ್ತಿರ ಯಾವ ಗುಟ್ಟೂ ಇಟ್ಟುಕೊಳ್ಳಾಕೆ ಸಾಧ್ಯ ಇಲ್ಲ….”
“ಆಗಲಿ, ಒಡೆಯ!” ಅತ್ಯಂತ ಹೃದಯಪೂರ್ವಕವಾದ ಸಹಾನುಭೂತಿಯ ವಾಣಿಯಿಂದ ಭರವಸೆ ಇತ್ತಳು ಪೀಂಚಲು, ಒಡೆಯನ ದನಿ ತುಸು ನಡುಗತೊಡಗಿದ್ದುದನ್ನೂ ಕಣ್ಣು ತೇವಗೊಳ್ಳುತ್ತಿದ್ದುದನ್ನೂ ಅರಿತು, ಅನುಭವಿಸಿ.
ಮುಕುಂದಯ್ಯ ತಾನು ಆವೊತ್ತು ಹೊತ್ತಾರೆ ಗುತ್ತಿಯಿಂದ ಕೇಳಿದ್ದ ದುರ್ವಾರ್ತೆಯನ್ನು ಸಂಕ್ಷೇಪವಾಗಿ, ಶೀಘ್ರವಾಗಿ ತಿಳಿಸಿ, ಹೂವಳ್ಳಿ ಚಿನ್ನಮ್ಮನ ಬಳಿಗೆ ತಾನು ಹೇಳಿ ಕಳಿಸುವುದನ್ನು ಹೋಗಿ ಹೇಳಬೇಕೆಂದೂ, ಏನಾದರೂ ಮಾಡಬೇಕಾಗಿ ಬಂದರೆ ಮಾಡಬೇಕೆಂದೂ ಹೃದಯಸ್ಪರ್ಶಿಯಾಗುವಂತೆ ತಿಳಿಸಿದನು.
‘ಹೂವಳ್ಳಿ ಅಮ್ಮ’ ‘ಚಿನ್ನಕ್ಕ’ ಎಂದೆಲ್ಲ ಪೀಂಚಲು ಕರೆಯುತ್ತಿದ್ದ ಚಿನ್ನಮ್ಮನ ಪರಿಚಯ ಅವಳಿಗೆ ಮುಕುಂದಯ್ಯನ ಪರಿಚಯದಷ್ಟೆ ಹಳೆಯದಾಗಿತ್ತು. ಅಲ್ಲದೆ ಇತ್ತೀಚೆಗೆ ಮುಕುಂದಯ್ಯನ ‘ಹಂಸದೂತಿ’ಯಾಗಿಯೂ ಚಿನ್ನಮ್ಮನ ಬಳಿಗೆ ಹೋಗಿ ಬಂದಿದ್ದಳು. ತಾನು ಹೂವಳ್ಳಿಗೆ ಹೋದಾಗಲೆಲ್ಲ ತನ್ನನ್ನು ಕಾಣುತ್ತಿದ್ದ ಅಕ್ಕರೆಯ ರೀತಿಯಿಂದಲೂ ಪೀಂಚಲು ಚಿನ್ನಮ್ಮನ ಪ್ರೀತಿಗೆ ಮಾರುಹೋಗಿದ್ದಳು. ಈಗ ಮುಕುಂದಯ್ಯನಿಗೆಂತೊ ಅಂತೆ ಚಿನ್ನಮ್ಮನಿಗೂ ಬಂದೊದಗಬಹುದಾದ ಅನಿಷ್ಟವನ್ನು ತಪ್ಪಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗುವ ತನ್ನ ಕರ್ತವ್ಯ ಮಾತ್ರವಲ್ಲದೆ ಪುಣ್ಯವೆಂದು ಭಾವಿಸಿ, ಅವಳ ಚೇತನ ತನ್ನ ಸಾಹಸದ ರೆಕ್ಕೆ ಕೆದರಲು ಉತ್ಸಾಹದಿಂದಲೆ ಅನುವಾಯಿತು.
“ಇವತ್ತು ಬೈಗಿನ ಹೊತ್ತು ಆ ವಾಟೆ ಹಿಂಡಲಿನ ಹತ್ತಿರ ಬಾ. ಮರೀಬ್ಯಾಡ.”
“ಹ್ಞೂ ಬರ್ತೀನಿ.”
“ಯಾರಾದರೂ ಕಂಡರೆ?”
“ಇಲಿಕಿವಿ ಸೊಪ್ಪು ಕುಯ್ಯಾಕ್ಕೆ ಹೋಗ್ತೀನಿ ಅಂತೀನಿ.”
“ಐತ ಬಂದಾ ಅಂತ ಕಾಣ್ತದೆ!” ಹಳ್ಳದ ಪಾತ್ರದ ದಾರಿಯಲ್ಲಿ, ಕೆಳಗೆ, ದೂರದಲ್ಲಿ, ಹಳು ಅಲುಗುತ್ತಿದ್ದುದನ್ನೂ ಕಲ್ಲುಹರಳು ಸದ್ದಾಗುತ್ತಿದ್ದುದನ್ನೂ ಗಮನಿಸಿ ಹೇಳಿದನು ಮುಕುಂದಯ್ಯ.
ಪೀಂಚಲು ತಳಾಲೆಯನ್ನು, ನೀರು ಸಿಡಿಯುವಂತೆ ಕೊಡಹಿ, ತಲೆಗೆ ಹಾಕಿಕೊಂಡು, ಏಡಿಯಿದ್ದ ಹಾಳೆಕೊಟ್ಟೆಯ ಬಳಿಗೆ ಹೋಗಿ ತುದಿಗಾಲ ಮೇಲೆ ಕೂತಳು. ಮುಕುಂದಯ್ಯ, ಐತ ಕೆಳಗೆ ಹಾಕಿದ್ದ ಕಪ್ಪೆಗೋಲನ್ನು ಕೈಗೆ ತೆಗೆದುಕೊಂಡು, ಒಂದು ಕಲ್ಲಿನ ಸಂಧಿಯ ಪೊಟರೆಗೆ ಇಳಿಬಿಟ್ಟು ಕೂತನು.
ಐತ ನಡೆದ ಸಂಗತಿಯನ್ನು ರಂಗಪ್ಪಗೌಡರು ಹೇಳಿದುದನ್ನೂ ಹೇಳಿದನು, ಹೀಗಾಗಿ ಹೋಯಿತಲ್ಲಾ ಎಂಬ ನಿರಾಶೆಯ ಭಂಗಿಯಲ್ಲಿ. ಆದರೆ ಮುಕುಂದಯ್ಯ ತಾನು ಏತಕ್ಕಾಗಿ ಐತನನ್ನು ಅಟ್ಟಿದ್ದೆ ಎಂಬುದನ್ನೆ ಮರೆತಂತೆ ಅಲಕ್ಷ್ಯಭಾವದಿಂದ ಉದಾಸೀನನಾಗಿದ್ದುದನ್ನು ಕಂಡು ಐತನಿಗೆ ಬೆರಗಾಯಿತು. ಪೀಂಚಲು ಕಡೆಗೆ ನೋಡಿದನು. ಅವಳೂ ನಿರ್ಲಕ್ಷವಾಗಿ, ಪ್ರಯತ್ನಪೂರ್ವಕವಾಗಿ ಮೌನವಾಗಿರುವಂತೆ ತೋರಿತು. ಅವಳ ತಳಾಲೆ ಹಿಂದುಮುಂದಾಗಿ ವಕ್ರವಕ್ರವಾಗಿದ್ದುದನ್ನೂ ಕೂದಲು ಕೆದರಿ ಹೊರಗೆ ಹೊರಟಿರುವುದನ್ನೂ ಗ್ರಹಿಸಿದನು. ಅವಳ ಸೀರೆ ಸೊಂಟದವರೆಗೂ ಒದ್ದೆಯಾಗಿದ್ದುದು ಕಣ್ಣಿಗೆ ಹೊಡೆಯುವಂತೆ ಕಾಣುತ್ತಿತ್ತು. ಹಳ್ಳಕ್ಕೆ ಏತಕ್ಕೊ ಇಳಿಯಬೇಕಾಯಿತೆಂದು ತೋರುತ್ತದೆ; ಅದಕ್ಕೇ ಸೀರೆ ಒದ್ದೆಯಾಗಿರಬೇಕು ಎಂದು ಊಹಿಸಿ ಬೇರೆಯ ವಿಚಾರವಾಗಿ ಮಾತೆತ್ತಿದನು.
ತನ್ನ ಪುಟ್ಟ ಹೆಂಡತಿಯನ್ನು ಒಂದು ಕ್ಷಣವೂ ಬಿಟ್ಟಿರಲು ಒಪ್ಪುತ್ತಿರಲಿಲ್ಲ ಅವನ ಮನಸ್ಸು. ಅದರಲ್ಲಿಯೂ ಇತರ ಗಂಡಸರು ಇದ್ದಾಗಲಂತೂ ಅವನು ಅವಳನ್ನು ಬಿಟ್ಟು ಹೋಗುತ್ತಲೇ ಇರಲಿಲ್ಲ. ಹೋಗಲೇಬೇಕಾಗಿ ಬಂದರೆ ಅವಳನ್ನೂ ಏನಾದರೂ ಉಪಾಯ ಮಾಡಿ ನೆವಹೇಳಿ ಕರೆದುಕೊಂಡೆ ಹೋಗುತ್ತಿದ್ದುದು ರೂಢಿ. ಆದರೆ ಮುಕುಂದಯ್ಯನೊಡನೆ ಅವಳನ್ನು ಬಿಟ್ಟುಹೋಗುವುದಕ್ಕೆ ಅವನು ಸ್ವಲ್ಪವೂ ಹಿಂದು ಮುಂದು ನೋಡಿರಲಿಲ್ಲ. ಮುಕುಂದಯ್ಯನನ್ನು ಚೆನ್ನಾಗಿ ಅರಿತಿದ್ದ ಅವನಿಗೆ, ಅವನಲ್ಲಿ ಅಚಲವಾದ ನಂಬುಗೆ ಇತ್ತು. ಅದಕ್ಕೆ ಬೆಂಬಲವಾಗಿ ಕೀಳು ಜಾತಿಯವರಾಗಿದ್ದ ತಾವು, ಪ್ರತ್ಯೇಕವಾದ ಪ್ರಾಣಿವರ್ಗಕ್ಕೆ ಸೇರಿದವರೋ ಎಂಬಂತೆ, ಮೇಲು ಜಾತಿಯ ಮನುಷ್ಯ ವರ್ಗಕ್ಕೆ ಸೇರಿದ ಮುಕುಂದಯ್ಯನ ಮೋಹಕ್ಕೆ ಪಕ್ಕಾಗುವುದೂ ಸಾಧ್ಯವಿರಲಿಲ್ಲ ಎಂಬುದೂ ಅವನ ರಕ್ತಗತ ಬುದ್ಧಿಯಾಗಿತ್ತು. ಜಿಂಕೆ ನಾಯಿಯ ಮೇಲೆ ಮೋಹಗೊಳ್ಳುವುದು ಹೇಗೆ ಅಸಂಭವವೋ ಹಾಗೆ.
ಎಲ್ಲರೂ ಮನೆಗೆ ಹಿಂದಕ್ಕೆ ಹೊರಟಾಗ ಮುಕುಂದಯ್ಯ ಭೂತದ ಬನದ ಹತ್ತಿರದ ಹಾದಿಯ ಮೇಲಾಗಿ ಹೋಗುವುದಕ್ಕೆ ಬದಲು ಐತ ಪೀಂಚಲು ಅವರ ಸಂಗಡವೇ ತೋಟದ ಬಳಸುದಾರಿಯಲ್ಲಿ ಹೊರಟಿದ್ದುದನ್ನು ನೋಡಿ ಐತನಿಗೆ ತುಸು ಸೋಜಿಗವೆ ಆಯಿತು. ಐತನು ಕೇಳಿದ ಪ್ರಶ್ನೆಗೆ ಮುಕುಂದಯ್ಯ ಕೊಟ್ಟ ಉತ್ತರ ‘ಈ ರಣ ಬಿಸಿಲಿನಲ್ಲಿ ಒಬ್ಬನೆ ಹೋಗುವುದಕ್ಕೆ ಬೇಜಾರಾಗಿ’ ಎಂದು. ಅದನ್ನು ಕೇಳಿದ ಪೀಂಚಲು ಸಣ್ಣಗೆ ನಕ್ಕಿದ್ದನ್ನೂ ಐತನು ಗಮನಿಸದೆ ಇರಲಿಲ್ಲ. ತನಗರಿಯದುದು ಏನೊ ತನ್ನ ಹೆಂಡತಿಗೆ ಗೊತ್ತಾಗಿದೆ ಎಂಬ ಭಾವನೆ ಮೂಡತೊಡಗಿತ್ತು ಐತನ ಮನಸ್ಸಿನಲ್ಲಿ. ಪೀಂಚಲುವನ್ನು ಮುಟ್ಟಿದ್ದರಿಂದ ಮುಟ್ಟುಚಿಟ್ಟಾಗಿದ್ದ ಮುಕುಂದಯ್ಯ ಭೂತನ ಬನದ ಒಳಗಣಿಂದ ಹೇಗೆ ತಾನೆ ಹೋದಾನು ಎಂಬುದು ಐತನಿಗೆ ತಾನೆ ಹೇಗೆ ಗೊತ್ತಾಗಬೇಕು? ಪೀಂಚಲುಗೆ ಗೊತ್ತಾಗಿದ್ದಂತೆ!
*****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ