ಪುಟಗಳು

24 ಜೂನ್ 2018

ಮಲೆಗಳಲ್ಲಿ ಮದುಮಗಳು-6

           ಮುಪ್ಪಿಗೆ ಇರುಳೆಂದರೆ ಅನಿವಾರ್ಯವಾದ ಒಂದು ಮಹಾ ಈತಿಬಾಧೆ. ಸಾವಿನ ಅನಂತ ನಿದ್ರೆ ಬಳಿಸಾರುವುದರಿಂದಲೋ ಏನೋ ಬಾಳೆಲ್ಲ ಸ್ವಪ್ನವೆಂಬಂತೆ ಆಯಾಸಕರವಾಗಿ ಪರಿಣಮಿಸುತ್ತದೆ. ಇಷ್ಟವಿರಲಿ ಬಿಡಲಿ ಮರಣಕ್ಕೆ ಮುಳುಗಲೇ ಬೇಕಾಗುತ್ತದೆ ಎಂಬ ಅರಿವಿನಿಂದ ಮೈದೋರುವ ಆತ್ಮದ ಅಶಾಂತಿ ನಿರಾಕಾರವಾಗಿದ್ದರೂ ಸಾಂಸಾರಿಕವಾದ ನೂರಾರು ಕೋಟಲೆಗಳ ಆಕಾರ ತಾಳಿ ನಿದ್ದೆಯನ್ನೆಲ್ಲಾ ಕದಡಿಬಿಡುತ್ತದೆ. ಅದರಲ್ಲಿಯೂ ದೇವರು, ಧರ್ಮ, ಕಲೆ, ಸಂಸ್ಕೃತಿ ಇತ್ಯಾದಿಗಳಿಂದ ದೂರವಾಗಿ, ಹಗಲೂ ಬೈಗೂ ಐಹಿಕ ಸಂಪತ್ತಿನ ಸಂಪಾದನೆ ಮತ್ತು ಸಂರಕ್ಷಣೆಗಳಲ್ಲಿಯೇ ಮನಸ್ಸು ಮುಳುಗಿ, ಕ್ರಿಯಾಪೂರ್ಣ ನಾಸ್ತಿಕತೆಯ ಸಜೀವ ಸಾಹಸಕ್ಕಿಂತಲೂ ಸಾವಿರ ಪಾಲು ನಿರ್ಜೀವವಾದ ಸಂಪ್ರದಾಯದ ಆಸ್ತಿಕತೆಯ ಮಂದ ಔದಾಸೀನ್ಯದ ಮೃತ್ಯುವಿಗೆ ತುತ್ತಾದ ಮುದುಕನಿಗಂತೂ ಇರುಳೆಂದರೆ ನರಕಶಿಕ್ಷೆ. ಸಹಧರ್ಮಿಣಿಯ ಸೇವೆಯೂ ಆಕೆಯ ಮರಣದಿಂದ ನಷ್ಟವಾಗಿದ್ದರಂತೂ ಮನಸ್ಸಿನ ಖಾಲಿ ಪಿಶಾಚಿಯ ಕಾರ್ಖಾನೆಯಾಗುತ್ತದೆ.

ಅಂತಹ ಪಿಶಾಚಿಯ ಕಾರ್ಖಾನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರು ಬೆಳಗಾಗುವುದಕ್ಕೆ ಬಹಳ ಮುಂಚೆಯೆ ಏಳುತ್ತಿದ್ದರು. ಆವೊತ್ತೂ ಕಡೆಯ ಜಾವದ ಮೊದಲ ಪಾದದಲ್ಲಿಯೆ ಎದ್ದಿದ್ದರು. ಹಿಂದಿನ ದಿನ ಬೈಗಿನಲ್ಲಿ ಬಹಳ ಜೋರಾಗಿ ಮುಂಗಾರು ಮಳೆ ಬಿದ್ದಿದ್ದರಿಂದ ಬೆಳಗಿನ ಜಾವದ ಹವಾ ಬಹಳ ತಂಪಾಗಿತ್ತು. ಮುಪ್ಪಿನ ಮೈಗೆ ಅದು ಚಳಿಚಳಿಯಾಗಿ ಕಂಡದ್ದರಿಂದ ಸುಬ್ಬಣ್ಣ ಹೆಗ್ಗಡೆಯವರು ತಮ್ಮ ಕಗ್ಗವಿ ಕೋಣೆಯಿಂದ ಜಗಲಿಗೆ ಬಂದವರು, ಅಲ್ಲಿಯೆ ಕೆಸರಲಿಗೆಯ ಮೇಲೆ, ವಾಡಿಕೆಯ ಜಾಗದಲ್ಲಿ ವಾಡಿಕೆಯಂತೆ ಮುಂಡಿಗೆಗೆ ಒಡಗಿಕೊಂಡು, ಹೊದೆದಿದ್ದ ಕಂಬಳಿಯನ್ನು ಇನ್ನೂ ಸ್ವಲ್ಪ ಬಲವಾಗಿ ಸುತ್ತಿ ಹೊದೆದು, ಕತ್ತಲೆಯಲ್ಲಿಯೆ ಕೈತಡವಿ ಕುಟ್ಟೊರಳನ್ನೂ ಎಲೆಯಡಿಕೆಯ ಚೀಲವನ್ನೂ ಹತ್ತಿರಕ್ಕೆ ಎಳೆದು, ಚೀಲದಿಂದ ಕೈಯಂದಾಜಿನ ಮೇಲೆ ಗಂಡಡಿಕೆಯೊಂದನ್ನು ಆಯ್ದು ತೆಗೆದು, ಉಫ್ ಎಂದು ಊದಿ, ಲೋಹದ ಕುಟ್ಟೊರಳಿಗೆ ಟಣಕ್ಕನೆ ಹಾಕಿ, ಕುಟ್ಟತೊಡಗಿದರು. ಬಹಿರ್ಮುಖ ಜೀವದ ಮುಪ್ಪಿನ ಭಾಗಕ್ಕೆ ಮೌನವು ಮಹಾಪಿಶಾಚಿ. ಕುಟ್ಟವ ಸದ್ದಿಗೆ ಆ ಪಿಶಾಚಿ ತೊಲಗಿದಂತಾಗಿ ಹೆಗ್ಗಡೆಯವರಿಗೆ ಎದೆ ಭಾರ ಕಡಿಮೆಯಾಗಿ ಮನಸ್ಸಿಗೆ ಧೈರ್ಯವಾಯಿತು; ನೆಮ್ಮದಿಯೂ ಆಯಿತು.
ಬೇರೆ ಇನ್ನಾವ ಸದ್ದೂ ಇರದೆ ನಿಃಶಬ್ದವಾಗಿದ್ದ ಹಳೆಮನೆಯ ಆ ವಟಾರದಲ್ಲಿ ಸುಬ್ಬಣ್ಣ ಹೆಗ್ಗಡೆಯವರ ಕುಟ್ಟೊರಳಿನ ಸದ್ದೊಂದೇ ಸಾಮ್ರಾಟವಾಗಿತ್ತು.
ತುಸುಹೊತ್ತಿನಲ್ಲಿಯೆ ಜಗಲಿಗೆ ಎದುರಾಗಿ ಅಂಗಳದಲ್ಲಿದ್ದ ಒಡ್ಡಿಗಳಲ್ಲಿಯೂ, ಒಡ್ಡಿಗಳ ಹಿಂದಿದ್ದ ಕೊಟ್ಟಿಗೆಯಲ್ಲಿಯೂ ಗೊರಸಿನ ಸದ್ದು, ಕೊಂಬಿನ ಸದ್ದು, ದೊಂಟೆಯ ಸದ್ದು, ಹೋತದ ಸೀನಿನ ಸದ್ದು, ಸಲಗನ ಗುರುಗುರು ಸದ್ದು, ಒಂದಾದ ಮೇಲೊಂದು ಕೇಳಿಸತೊಡಗಿತು. ಹಾಗೆಯೆ ತೋಟದ ಬೇಲಿಯಲ್ಲಿಯೂ ಅಥವಾ ಅಮಟೆಯ ಮರದಲ್ಲಿಯೊ ಹಂಡಹಕ್ಕಿಗಳೆರಡು ಸಿಳ್ಳು ಪಡಿಸಿಳ್ಳುಗಳಿಂದ ಪ್ರಣಯ ಸಂಭಾಷಣೆಗೆ ಮೊದಲು ಮಾಡಿದುವು. ಅದಾದ ಸ್ವಲ್ಪ ಹೊತ್ತಿನಲ್ಲಿಯೆ, ಎಲೆಯುದುರಿ ಬರಲಾಗಿ ಕೆಂಪು ಹೂ ಮಾತ್ರ ತುಂಬಿ ಹೋಗಿದ್ದ ಹಾಲಿವಾಣದ ಮರದಲ್ಲಿ ಎಂದು ತೋರುತ್ತದೆ, ಕಾಜಾಣವೊಂದು ಆಲಾಪನೆಗೆ ತೊಡಗಿತು.
ಸುಬ್ಬಣ್ಣ ಹೆಗ್ಗಡೆಯವರ ಗಮನ ಹಂಡಹಕ್ಕಿಯ ಸಿಳ್ಳಿನ ಕಡೆಗಾಗಲಿ, ಕಾಜಾಣದ ಆಲಾಪನೆಯ ಕಡೆಗಾಗಲಿ ಒಂದಿನಿತೂ ಹೊರಳಿರಲಿಲ್ಲ. ಕುಟ್ಟುವುದನ್ನು ಸ್ವಲ್ಪ ಸಿಲ್ಲಿಸಿ, ಕತ್ತೆತ್ತಿ, ಕಿರುದಿಟ್ಟಿಯಿಂದ ಅಂಗಳದ ಕಡೆಗೆ ನೋಡಿದರು. ಮನೆಯ ಕತ್ತಲೆಯಲ್ಲಿದ್ದ ಅವರಿಗೆ ಬಯಲಿನ ಕತ್ತಲೆಯಲ್ಲಿದ್ದ ಒಡ್ಡಿಗಳ ಆಕೃತಿ ಆಹ್ವಾನಕರವಾಗಿ ಗೋಚರಿಸಿತು. ಒಡ್ಡಿಗಳೊಳಗೆ ಆಗುತ್ತಿದ್ದ ಸದ್ದುಗಳೆಂದರೆ ಹೆಗ್ಗಡೆಯವರಿಗೆ ಬಹುಕಾಲದ ಸಾಧನದಿಂದ ಸಾಕ್ಷತ್ಕಾರವಾಗಿದ್ದು ಅವರಿಗೆ ಮಾತ್ರವೇ ಸಂವೇದ್ಯವಾಗುತ್ತಿದ್ದ ಯಾವುದೋ ಗುಪ್ತ ಲಿಪಿಯ ಸಂಕೇತ ಸ್ವರ ವಿಜ್ಞಾನವಾಗಿತ್ತು. ಊರು ಹಂದಿಯ ದಡ್ಡೆಯ ಸದ್ದೊ, ಸಲಗನ ಸದ್ದೊ, ಮರಿಗಳ ಸದ್ದೊ, ಹೋತನ ಸೀನೊ, ಆಡಿನ ಸೀನೊ, ಕೆಂಪು ಹುಂಜದ ಕೂಗೊ, ತಿಮ್ಮಪ್ಪ ಹೆಗ್ಗಡೆ ಕೋಳಿ ಅಂಕದಲ್ಲಿ ಗೆದ್ದು ತಂದಿದ್ದ ಬಿಳಿ ಸಳಗದ ಕೂಗೊ, ಹೆಗ್ಗಡೆಯವರಿಗೆ ಒಂದೊಂದೂ ಅರ್ಥವಾಗುತ್ತಿತ್ತು; ಭಾವವಾಗುತ್ತಿತ್ತು. ಮಹಾಕವಿ ಮಹಾಛಂದಸ್ಸಿನ ನಾದವಿನ್ಯಾಸವನ್ನು ಸವಿಯುವಂತೆ ಸವಿದು ಸುಖಿಸುತ್ತಲೂ ಇದ್ದರು. ಅಷ್ಟರಮಟ್ಟಿಗೆ ಆ ಒಂದೊಂದು ಸದ್ದಿಗೂ ಅವರ ಭಾವಕೋಶ ಬೆಳೆದುಹೋಗಿತ್ತು.
ಬೆಳಕುಬೆಳಕಾಗಿ ಕತ್ತಲೆ ಹರಿಯತೊಡಗಿತು. ಹೆಗ್ಗಡೆಯವರು ಎಲೆಯಡಿಕೆಯನ್ನು ಜಗಿಯುತ್ತಾ ಗಂಟಲಿನೊಳಗೆ ಯಜಮಾನ ಸದ್ದು ಮಾಡುತ್ತಾ ಕೆಸರಲಿಗೆ ಬಿಟ್ಟೆದ್ದರು. ಗಂಡಲಿನೊಳಗೇ ಕೆಮ್ಮಿನ ವೇಷದಿಂದ ಅವರು ಮಾಡುತ್ತಿದ್ದ ಆ ಯಜಮಾನನ ಸದ್ದೆಂದರೆ ಹಳೆಮನೆಗೆ ‘ಅಲಾರಾಂ’ ಇದ್ದಂತೆ.
ಸೋಗೆ ಮನೆಯಲ್ಲಿಯೂ ಹೆಂಚಿನ ಮನೆಯಲ್ಲಿಯೂ ಮಲಗಿದ್ದವರು ಎಚ್ಚತ್ತು ಗೃಹ ಕಾರ್ಯಗಳಲ್ಲಿ ತೊಡಗುತ್ತಿದ್ದ ಸದ್ದು ಪ್ರಾರಂಭವಾದುವು. ಮುರುವಿನ ಒಲೆಯ ಬೂದಿ ಗುಡ್ಡೆಯಲ್ಲಿ ಮಲಗಿದ್ದ ಕಂತ್ರಿನಾಯಿಗಳಿಗೂ ನಿದ್ರಾಭಂಗವಾಯಿತು. ಕರೆಯುವ ಕೊಟ್ಟಿಗೆಗೆ ಮುರುಹಾಕುವ ಕರ್ತವ್ಯಕ್ಕೆ ಮರದ ಮರಿಗೆ ಹಿಡಿದು ಬಂದ ಹಳೆಪೈಕದ ಹೂವಿ ದಿನವೂ ಒದರುತ್ತಿದ್ದಂತೆ “ಹಛಾ! ಹಛಾ! ಇವಕ್ಕೇನು ಜ್ಞವನಿದ್ದೆ ಬಂದವಪ್ಪಾ?” ಎಂದು ಗದರಿದಳು. ಪಾಪ. ಒಂದು ಕಂತ್ರಿ ನಾಯಿ ಇನ್ನೂ ಆಕಳಿಸಿ, ಬೆನ್ನು ನೀಳಿ, ಮೈನುರಿದಿರಲಿಲ್ಲ! ಬಿತ್ತು ಒಂದೇಟು, ಮರದ ಮರಿಗೆಯಿಂದಲೆ! ನಾಯಿ ಬೆಚ್ಚಿತೆ ವಿನಾ ಕೂಗಲಿಲ್ಲ! ಇನ್ನೂ ಸರಿಯಾಗಿ ಎಚ್ಚರವಾಗಿರಲಿಲ್ಲ ಅದಕ್ಕೆ, ನೋವನ್ನು ಅನುಭವಿಸಿ ಕೂಗುವುದಕ್ಕೆ! ಬೆಳಗೇನೊ ಆಗಿತ್ತು.
ಸುಬ್ಬಣ್ಣ ಹೆಗ್ಗಡೆಯವರು, ತಮ್ಮ ಕುಳ್ಳಾದ ಗುಜ್ಜು ದೇಹವನ್ನು ಮೊಣಕಾಲಿನವರೆಗೂ ಕರಿಕಂಬಳಿಯಿಂದ ಸುತ್ತಿ, ಭದ್ರವಾಗಿ ಹೊದೆದುಕೊಂಡು ಅಂಗಳಕ್ಕಿಳಿದರು. ಹಿಂದಿನ ದಿನ ಚೌರಮಾಡಿಸಿದ್ದರಿಂದ ಲಾಳದಾಕಾರದಲ್ಲಿ ನುಣ್ಣಗಿದ್ದ ತಲೆಯ ಮುಂಭಾಗಕ್ಕೆ ಶೀತ ತಗುಲಿದಂತಾಗಲು ಮತ್ತೆ ಹಿಂದಕ್ಕೆ ಹೋಗಿ ಒಂದು ಪುರಾತನವಾದ ದಗಲೆತೋಪಿಯನ್ನು ಸಿಕ್ಕಿಸಿಕೊಂಡು ಬಂದರು. ಮಳೆಗೆ ಕೆಸರೇಳುವ ಅಂಗಳದಲ್ಲಿ ಕೆಸರು ತುಳಿಯದೆ ನಡೆಯಲೆಂದು ಸಾಲಾಗಿ ಹಾಕಿದ್ದ ಕಲ್ಲುಗಳ ಮೇಲೆ ನಡೆದು ಒಡ್ಡಿಗಳ ಸಮೀಪ್ಕಕೆ ಹೋದರು.
ಆ ಪ್ರಾಣಿಗಳಿಗೂ ಆ ಪ್ರಾಣಿಯನ್ನು ಕಂಡರೆ ವಿಶ್ವಾಸವೋ ಏನೊ?
ಒಡ್ಡಿಯ ಕಂಡಿಕಂಡಿಗಳಲ್ಲಿ ಗಲಿಬಿಲಿ ಮಾಡುತ್ತಾ ಕೋಳಿ ಕುಣಿದಾಡಿದುವು. ಬಾಗಿಲು ತೆಗೆಯುತ್ತಾರೆಂಬ ಸಂತಸಕ್ಕಾಗಿ ಒಂದರಮೇಲೊಂದು ನಾಮುಂದೆ ತಾಮುಂದೆ ಎಂದು ಒಡ್ಡಿಯ ಕದವಿದ್ದೆಡೆಗೆ ಕುರಿ ನುಗ್ಗತೊಡಗಿದುವು. ಹಂದಿಗಳೂ, ಸಲಗ ದಡ್ಡೆ ಮರಿ ಎಲ್ಲಾ, ಗುರುಗುರು ಗುಟ್ಟುತ್ತಾ ಓಡಾಡಲಾರಂಭಿಸಿದುವು.
ಸುಬ್ಬಣ್ಣ ಹೆಗ್ಗಡೆಯವರು ಹಿಗ್ಗಿನಿಂದಲೆಂಬಂತೆ ತಮ್ಮ ಮೂಕ ಕುಟುಂಬದ ಕಡೆಗೆ ಸ್ವಲ್ಪ ಹೊತ್ತು ನೋಡಿ, ಯಾವ ಒಡ್ಡಿಯ ಬಳಿಗೆ ಮೊದಲು ಹೋಗುವುದೆಂದು ಮನಸ್ಸು ತುಯ್ಯುತ್ತಾ ನಿಂತು, ಕೊನೆಗೆ ಮೊನ್ನೆ ಮೊನ್ನೆ ಮರಿಹಾಕಿದ್ದ ದಡ್ಡೆಯ ಬಾಣಂತಿತನದ ಯೋಗಕ್ಷೇಮವನ್ನೆ ಪ್ರಧಾನವನ್ನಾಗಿ ಭಾವಿಸಿ ಹಂದಿಒಡ್ಡಿಯ ಕಡೆಗೆ ಸರಿದರು.
ಕೆಸರು ತುಳಿಯದಿರುವುದಕ್ಕಾಗಿ ಹಾಕಿದ್ದ ಕಲ್ಲುಗಳಿಂದ ಕೆಳಗಿಳಿಯುತ್ತಲೆ ಕೋಳಿಯ, ಕುರಿಯ, ಹಂದಿಯ ಹೇಸಿಗೆಯೊಡನೆ ಕಲಬೆರಕೆಯಾಗಿದ್ದ ಕೆಸರುಮಣ್ಣು ಕಾಲ್‌ಬೆರಳು ಸಂಧಿಗಳಲ್ಲಿ ಪಿಚಕ್ಕನೆ ನುಗ್ಗತೊಡಗಿದರೂ ಅತ್ತ ಕಡೆಗೆ ಸ್ವಲ್ಪವೂ ಗಮನಕೊಡದೆ ಹೆಗ್ಗಡೆಯವರು ಹಂದಿಯೊಡ್ಡಿಯ ಬಾಗಿಲಿಗೆ ಹೋದರು. ನಿತ್ಯಪರಿಚಯದಿಂದ ಮನಸ್ಸಿನಲ್ಲಿ ಮೈತ್ರಿಯನ್ನೇ ಪ್ರಚೋದಿಸುತ್ತಿದ್ದ ಆ ಮಿಶ್ರವಾಸನೆ ಸ್ನೇಹಿತನ ಆಗಮನದಂತೆ ಸಂತೋಷಕರವಾಯಿತು. ಹೆಗ್ಗಡೆಯವರು ಒಡ್ಡಿಯ ಸುತ್ತಲೂ ಪ್ರದಕ್ಷಿಣೆಮಾಡುತ್ತಾ ಕಂಡಿಗಳಲ್ಲಿ ಕಣ್ಣಿಟ್ಟು ನೋಡತೊಡಗಿದರು. ಮೃಗಶಾಲೆಯಲ್ಲಿ ಪ್ರಾಣಿಗಳ ಗುಂಪನ್ನು ಒಟ್ಟುನೋಡುವ ಪ್ರೇಕ್ಷಕರಂತಲ್ಲ; ತನ್ನ ‘ನರಮಂದೆ’ಯಲ್ಲಿ ಒಂದೊಂದು ಕುರಿಯ ಆತ್ಮಕಲ್ಯಾಣವನ್ನೂ ಗಮನಿಸುವ ‘ಪಾದ್ರಿ’ಯಂತೆ! ಆಸ್ಪತ್ರೆಯಲ್ಲಿ ಒಬ್ಬೊಬ್ಬ ರೋಗಿಯನ್ನೂ ಕಣ್ಣಿಟ್ಟು ಕಾಣುವ ‘ಡಾಕುದಾರ’ನಂತೆ! ಒಂದರ ಕಿವಿಚಟ್ಟೆಯ ಬುಡದ ಗಾಯ; ಇನ್ನೊಂದರ ಕಾಲ್‌ಕೊಳಗಿನ ಬಿರಕು; ಮತ್ತೊಂದರ ಬಾಯಿ ಹುಣ್ಣು; ಒಂದೊಂದನ್ನೂ ಮನಸ್ಸಿಟ್ಟು ನೋಡಿದರು. ಸಮೀಪದಲ್ಲಿ ಮನುಷ್ಯರಾರೂ ಇರದಿದ್ದರೂ ಮುಂದೆ ಆಳುಗಳಿಗೆ ಹೇಳುವುದನ್ನೆಲ್ಲಾ ಅಭ್ಯಾಸಮಾಡಿಕೊಳ್ಳುವಂತೆ ಆಗಾಗ ಬಾಯಲ್ಲಿ ಏನೇನನ್ನೊ ಹೇಳಿಕೊಳ್ಳುತ್ತಿದ್ದರು.
ಒಂದು ನಡು ವಯಸ್ಸಿನ ಮರಿಸಲಗದ ಕಾಮಚೇಷ್ಟೆಯಿಂದ ಇದ್ದಕ್ಕಿದ್ದ ಹಾಗೆ ಒಡ್ಡಿಯೊಳಗೆ ಗಡಬಿಡಿ ಮೊದಲಾಗಲು ಹೆಗ್ಗಡೆಯವರು ‘ಎಲಾ ನಿನ್ನ ಸೊಕ್ಕೆ! ಅಲ್ಲಾ, ಆ ಹೂವಳ್ಳಿ ಎಂಕಟಣ್ಣ ನಿನ್ನೆ ಬತ್ತೀನಿ ಅಂದಿದ್ದ. ಬರ್ಲೇ ಇಲ್ಲಾ ಗಿರಾಸ್ತಾ. ಇದ್‌ನೊಂದು ಕೊಟ್ಟ ಹೊರ್ತೂ ಒಡ್ಡೀಗೆ ಸುಖಾ ಇಲ್ಲ” ಎಂದುಕೊಂಡು, ಮಲೆಗಾಡುಗಳ ನಡುವೆ ಕಣಿವೆಯಲ್ಲಿ ಬಹು  ದೀರ್ಘವಾಗಿ ಹಬ್ಬಿದ್ದ, ಹಸುರಿನಿತೂ ಇಲ್ಲದ, ಗದ್ದೆಯ ಕೋಗಿನ ಕಡೆಗೆ ದಿಟ್ಟಿನಟ್ಟು ನೋಡತೊಡಗಿದರು.
ಬೆಳ್ಳಗೆ ಬೆಳಗಾಗಿತ್ತು. ಹಿಂದಿನ ದಿನದ ಮಳೆಯಲ್ಲಿ ತೊಯ್ದು ಅಂಚಿನ ಗೆರೆ ಬರೆ ಬರೆಯಾಗಿದ್ದ ಗದ್ದೆಯ ಕೋಗಿನ ಕಂದುಬಣ್ಣವು ಬೂದಿಗಪ್ಪಿಗೆ ತಿರುಗಿತ್ತು. ಆದರೂ ಹಾವು ಹರಿಯುವಂತೆ ಡೊಂಕುಡೊಂಕಾಗಿ ಹರಿದು, ಒಮ್ಮೆ ಅಂಚಿನ ಮೇಲೆ, ಒಮ್ಮೆ ಗದ್ದೆಯ ಮಧ್ಯೆ ಏರಿ ಇಳಿದು ಮುಂಬರಿದು ಬಹುದೂರದಲ್ಲಿ ಗಡಿಬೇಲಿಯ ಮುಂಡುಗದ ಹಿಂಡಲಿನಲ್ಲಿ ಕಣ್ಮರೆಯಾಗಿದ್ದ ಕಾಲುದಾರಿಯ ಸಮೆದ ನುಣ್ಪಿನ ಬೂದುಬಣ್ಣದ ರೇಖೆ, ಅತ್ತ ಕಣ್ಣಾದವನ ದೃಷ್ಟಿಯನ್ನು ತಟಕ್ಕನೆ ಸೆಳೆಯುವಂತೆ, ಪ್ರಧಾನವಾಗಿತ್ತು.
ಹೆಗ್ಗಡೆಯವರು ನೋಡುತ್ತಿದ್ದುದು ಅದನ್ನೆ. ಮಲೆಯ ಹಸುರನ್ನೇ ಸದಾ ನೋಡುತ್ತಿದ್ದ ಆ ಕಣ್ಣಿಗೆ ಮುಪ್ಪಾಗಿದ್ದರೂ ದೃಷ್ಟಿ ಮಂದವಾಗಿರಲಿಲ್ಲ. ಅಥವಾ ದೃಷ್ಟಿ ಸ್ವಲ್ಪ ಮಂದವಾಗಿದ್ದರೂ ಅದಕ್ಕೆ ಕಾರಣದ ಮೂಲ ಕಣ್ಣಿನ ನಿಃಶಕ್ತಿಯಾಗಿರಲಿಲ್ಲ, ಮನಸ್ಸಿನ ಮಾಂದ್ಯವಾಗಿತ್ತು. ಆ ಕಾಲುದಾರಿಯ ದೂರದ ಕೊನೆಯಲ್ಲಿ ಯಾರೋ ನಡೆದು ಬರುವಂತಿತ್ತು. ಹೆಗ್ಗಡೆಯವರು ಹುಬ್ಬು ಸುಕ್ಕಿಸಿ ಕಿರುಗಣ್ಣು ಮಾಡಿ ನೋಡಿದರೂ ಪ್ರಯೋಜನವಾಗಲಿಲ್ಲ. ಹೂವಿಯ ವಕ್ರ ಬೈತಲೆಯ ಗೆರೆಯಲ್ಲಿ ಹರಿದಾಡುವ ಹೇನು ಕೂಡ ಅಷ್ಟು ಅಸ್ಪಷ್ಟವಾಗಿರುತ್ತದೆಯೋ ಇಲ್ಲವೋ! ನೋಡಿ ನೋಡಿ, ಸಾಕಾಗಿ, ಮತ್ತೆ ಗೊಣಗುತ್ತಾ ಒಡ್ಡಿಯ ಕಡೆಗೆ ತಿರುಗಿದರು: “ಅವನೇ ಇರಬೈದು! ದುಡ್ಡಿಟ್ಟು ತಗೊಂಡು ಹೋಗು ಅಂತೀನಿ.”
ಆದರೂ ಮನಸ್ಸು ತಡೆಯದೆ ಮತ್ತೆ ಅತ್ತಕಡೆ ತಿರುಗು ನೋಡಿದರು. ಬರುವವರು ಯಾರೆಂದು ಗೊತ್ತಾಗದೆ ಕಣ್ಣಿನ ಮೇಲೆ ಸಿಟ್ಟಿನಿಂದ ಎಂಬಂತೆ “ತಿಮ್ಮೂ! ಏ ತಿಮ್ಮೂ!” ಎಂದು ಕೂಗಿ ಕರೆದರು.
ಆ ಕೂಗಿಗೆ ಒಡ್ಡಿಗಳಲ್ಲಾಗುತ್ತಿದ್ದ ಸದ್ದು ಕ್ಷಣಮಾತ್ರ ನಿಂತು ಮತ್ತೆ ಮುಂಬರಿಯಿತು.
“ತಿಮ್ಮೂ! ಏ ತಿಮ್ಮೂ!” ಇನ್ನೂ ರಭಸದಿಂದ ಕೂಗಿದರು. ಈ ಸಾರಿ ಒಡ್ಡಿಗಳ ಸದ್ದು ನಿಲ್ಲುವುದಕ್ಕೆ ಬದಲಾಗಿ ಮತ್ತೂ ಹೆಚ್ಚಾಯಿತು. ಪಂಜರ ಮೋಕ್ಷಕ್ಕಾಗಿ ಪ್ರಾಣಿಗಳೆಲ್ಲಾ ಒಂದೇ ತಡವೆ ಮುಮುಕ್ಷುಗಳಾಗಿ ನುಗ್ಗತೊಡಗಿದುದರಿಂದ ಗಲಾಟೆ ನೆರೆಯೇರಿತು.
ತಿಮ್ಮಪ್ಪ ಹೆಗ್ಗಡೆ ಓಡೋಡಿ ಬಂದನು. ಮೈಗೆ ಕೆಸರು ಹಾರುತ್ತದೆಂದು ಹೆದರಿ ನೀರು ಚೆನ್ನಾಗಿ ಆರಿದ್ದ ಸ್ಥಳಗಳಲ್ಲಿಯೇ ಜಾಗರೂಕತೆಯಿಂದ ಕಾಲಿಡುತ್ತಿದ್ದುದನ್ನು ನೋಡಿ ಅವನ ತಂದೆ “ಎಲಲಲಲಾ ನಿನ್ನ ಜಂಭಾನೆ! ಹಾರುವರು ಹಾರ್ದಾಂಗೆ ತುದೀ ಬೆಳ್ಳಾಗೆ ಹಾರ್ಕೋಂಡು ಬತ್ತೀಯಲ್ಲೋ! ಬಿಳೀ ಬಟ್ಟೆ ಕೆಸರಾಗ್ತದಲ್ಲೇನೋ ನಿಂಗೆ?” ಎಂದರು
ಅಪ್ಪ ಈ ರೀತಿ ಮಾತಾಡುವುದು ಮಗನಿಗೇನೂ ಹೊಸದಾಗಿರಲಿಲ್ಲ. ಆದ್ದರಿಂದ ಯಾವುದನ್ನೂ ಗಮನಿಸದಂತೆ ಬಳಿಗೆ ಬಂದು ನಿಂತನು.
“ಏನೋ ನಿನ್ನ ನೆರೆಮನೆ ಅಣ್ಣನಹಾಗೆ ಮಳೆಹಾಳ್  ಚಾಳೀನೆಲ್ಲಾ ಕಲೀತಾ ಬರ್ತೀಯಲ್ಲೊ? ನಿನ್ನ ಈ ಕರೀ ಬೂಲಕ್ಕೆ ಯಾಕೋ ಈ ಬಿಳೀ ಬಟ್ಟೆ?”
ತಿಮ್ಮಪ್ಪ ಹೆಗ್ಗಡೆ ಹುಲ್ಲು ಕಚ್ಚಿಕೊಂಡು ಹೇಳಿದ: “ಕರೆದದ್ದು ಯಾಕೆ?”
ದೂರದಲ್ಲಿ ಗದ್ದೆ ಕೋಗಿನ ಕಾಲುದಾರಿಯಲ್ಲಿ ಬರುತ್ತಿದ್ದ ವ್ಯಕ್ತಿ ಹೂವಳ್ಳಿ ವೆಂಕಟಣ್ಣನೋ ಯಾರೆಂದು ನೋಡಿ ಹೇಳುವುದಕ್ಕಾಗಿಯೇ ಹೆಗ್ಗಡೆಯವರು ಮಗನನ್ನು ಕರೆದಿದ್ದು. ಆದರೆ ಮಗನ ಬಟ್ಟೆಬರೆಗಳನ್ನು ಕಂಡು ಸಿಟ್ಟಿಗೇರಿದ ತಂದೆ “ಹೋಗಿ ನೋಡು, ಆರು ಕಟ್ಟಾಕೆ ಸತ್ತರೋ ಇಲ್ಲೋ ಹೊಲೆ ಮಕ್ಕಳು! ಮಳೆ ಬಂದ ಮರುದಿನಾನೂ ಬಿಸಿಲು ಬರೋ ತನಕ ಮಲಗಿಕೊಳ್ಳೋ ನೀವು ಮನೆ ಇಟ್ಟುಕೊಂಡ್ಹಾಂಗೆ ಅಂತಾ ಕಾಣ್ತದೆ! ಏನಾದ್ರೂ ಆಗ್ಲಿ! ಅತ್ತ ಮಖಾ ಹೋಗಾ ತನಕ ಗೆಯ್ತೀನಿ! ಆಮೇಲೆ ಮನೆ ಇಟ್ಟುಕೊಂಡ್ರೆ ಇಟ್ಟುಕೋ ಬಿಟ್ರೆ ಬಿದು! ನಂಗೇನು!!”
ತಿಮ್ಮಪ್ಪ ಹೆಗ್ಗಡೆ ತಂದೆ ಕರೆದಾಗ ಬಚ್ಚಲಲ್ಲಿ ಹಲ್ಲುಜ್ಜಿಕೊಳ್ಳುತ್ತಿದ್ದನು. ಹಾಗೆಯೇ ಓಡಿಬಂದಿದ್ದ ಅವನ ತುಟಿಯೆಲ್ಲ ಮಸಿಯೆಂಜಲಿಂದ ಅಸಹ್ಯವಾಗಿತ್ತು. ಅವನು ಬಾಯಿ ತೆರೆಯದಿದ್ದುದಕ್ಕೆ ಬಹುಶಃ ಅದೂ ಒಂದು ಕಾರಣವಾಗಿತ್ತೊ ಏನೋ? ಸುಬ್ಬಣ್ಣ ಹೆಗ್ಗಡೆಯವರ ರೇಗಿಗೆ ಮಗನ ಬಿಳಿ ಬಟ್ಟೆ ಎಷ್ಟರಮಟ್ಟಿಗೆ ಕಾರಣವಾಗಿತ್ತೊ ಅವನ ಮಸೀಮಯವಾದ ಕರೀತುಟಿಯೂ ಅಷ್ಟಮಟ್ಟಿಗೇ ಕಾರಣವಾಗಿತ್ತು. ಎಂದರೆ ಅರ್ಥ: ಎರಡೂ ಕಾರಣವಾಗಿರಲಿಲ್ಲ. ನಿಜವಾದ ಕಾರಣ ಒಂದಲ್ಲ, ಎರಡಲ್ಲ: ತಂದೆಯಾದವನು ಮಗನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ಯಾವಾಗಲೂ ಬಿಗಿಯಾಗಿ ವರ್ತಿಸಬೇಕು ಎಂಬುದೊಂದು. ಮಗನ ವಿರೂಪದ ದೆಸೆಯಿಂದಲೆ ಜನ ತಮ್ಮ ಮನೆಗೆ ಹೆಣ್ಣು ಕೊಡಲು ಹಿಂಜರಿಯುತ್ತದೆ ಎಂಬ ನಂಬುಗೆ ಮತ್ತೊಂದು ಆ ವಿರೂಪಕ್ಕೆ ಆಗುತ್ತಿರುವ ಅವಮಾನ ಅದರ ಸೃಷ್ಟಿಗೆ ಕಾರಣನಾದ ತನಗೂ ಸಲ್ಲುತ್ತಿದೆಯಲ್ಲಾ ಎಂಬ ಒಳಗುಟ್ಟು ಇನ್ನೊಂದು. ಮಗನು ಸುರೂಪಿಯಾಗಬೇಕೆಂದು ಮಾಡುತ್ತಿರುವ ಪ್ರಯತ್ನದಿಂದ ಮನೆ ಹಾಳಾಗುವುದೆಂಬ ಭೀತಿ ಮಗುದೊಂದು. ಹೆಂಡತಿಯಿಲ್ಲದ ಮುದುಕನ ಅತೃಪ್ತಿ ಇನ್ನೊಂದು. ಇತ್ಯಾದಿಯಾಗಿ ಅಸಂಬದ್ಧವೂ ಪರಸ್ಪರ ವಿರುದ್ದವೂ ಆದ ಅನೇಕ ನೆವಗಳೆಲ್ಲ ಒಟ್ಟುಗೂಡಿ ಹೆಗ್ಗಡೆಯವರನ್ನು ಕುದಿಸುತ್ತಿದ್ದುವು.
ಆದ್ದರಿಂದಲೆ ತಂದೆಯ ಅಪ್ಪಣೆಯಂತೆ ತಿಮ್ಮಪ್ಪ ಹೆಗ್ಗಡೆ ಮರುಮಾತಾಡದೆ ಹೊಲಗೇರಿಯ ಕಡೆಗೆ ಬಿರುಬಿರನೆ ನಡೆಯತೊಡಗಿದಾಗ, ಅವರು ಮತ್ತೂ ರೇಗಿ “ಇಲ್ಲಿ ಬಾರೊ! ಬಾರೋ!! ನಿನ್ನ  ಮುಖಾ ನೋಡಿದ್ರೆ ನಿನ್ನ ಮಾತು ಕೇಳ್ತಾರೇನೋ ಹೊಲೇರು? ಥೂ! ನಿನ್ನ ಬೂಲಕ್ಕೆ ಬೆಂಕಿ ಹಾಕಾ! ಹೋಗಿ ಬಾಯಾದ್ರೂ ಸರಿಯಾಗಿ  ತೊಳಕೊಂಡು ಹೋಗೋ!!” ಎಂದು ಕೂಗಿದ್ದು.
ತಿಮ್ಮಪ್ಪ ಹೆಗ್ಗಡೆಗೆ ತುಟಿ ನಡುಗಿತು; ಸಿಟ್ಟಿನಿಂದ, ದುಃಖದಿಂದ. ಬೇರೆ ಇನ್ನಾರಾದರೂ ಆಗಿದ್ದರೆ ಒರಟಾಗಿ ಹಲ್ಲು ಮುರಿಯುವಂತೆ ವರ್ತಿಸಿಬಿಡಬಹುದಾಗಿತ್ತಲ್ಲಾ, ಈಗ ಇಲ್ಲಿ ಸಾಧ್ಯವಾಗಲಿಲ್ಲವಲ್ಲಾ ಎಂಬೊಂದು ಸಂಕಟದಿಂದ ಹಲ್ಲು ಕಚ್ಚಿ, ಹುಬ್ಬು ಗಂಟಿಕ್ಕಿ, ಮುಖವೆಲ್ಲಾ ಸುಕ್ಕಾಗಿ ತಡೆದು ಕೊಂಡನು. ಆದರೆ ಕಣ್ಣು ಹನಿ ತುಂಬಿತು. ಅದು ತೊಟ್ಟಿಕ್ಕುವುದರೊಳಗೆ ಅಲ್ಲಿಂದ ಮೊಗದಿರುಹಿ ಹೊರಟನು: ಮುಖ ತೊಳೆಯುವುದಕ್ಕಾಗಿ ಬಚ್ಚಲಿಗಲ್ಲ; ಆರು ಕಟ್ಟಲು ಹೇಳುವುದಕ್ಕಾಗಿ ಹೊಲೆಗೇರಿಗೆ.
*******


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ