ಪುಟಗಳು

24 ಜೂನ್ 2018

ಮಲೆಗಳಲ್ಲಿ ಮದುಮಗಳು-2

ಲಕ್ಕುಂದದ ಹಳೆಪೈಕದ ಸೇಸನಾಯ್ಕನ ಮನೆಯ ಜಗಲಿಯ ತುದಿ ಕೆಸರಲಿಗೆಯ ಮೇಲೆ ಹಾಸಿದ್ದ ಕರಿಗಂಬಳಿಯ ಮೇಲೆ, ಮುಂಡಿಗೆಗೆ ಒರಗಿ ಎದುರು ಬದುರಾಗಿ ಕುಳಿತು ಸೇಸನಾಯ್ಕನೂ ಅವನ ನೆಂಟಬಾವ ಸೀತೂರು ತಿಮ್ಮನಾಯ್ಕನೂ ಗಹನ ಸಂಭಾಷಣೆಯಲ್ಲಿ ಮಗ್ನರಾಗಿದ್ದರು. ದನಗೋಳಾಗಿ ಹೊಯ್ದುದ್ದ ಮುಂಗಾರು ಮಳೆ ಅವರ ಪ್ರಜ್ಞಾವಲಯದ ನೇಮಿಯಲ್ಲಿ ಸುಳಿದಿಣಿಕಿ ಮಾಯವಾಗಿತ್ತು. ಅಡಕೆಯ ಸೋಗೆ ಗರಿ ಹೊದಿಸಿದ್ದ ಮಾಡಿನಿಂದ ಇರಿಚಲು ಬೀಸಿದಾಗ ಅಭ್ಯಾಸ ಬಲದಿಂದ ಸ್ವಲ್ಪ ದೂರ ಸರಿದು ಕುಳಿತಿದ್ದರೇ ವಿನಾ ಮಾತಿನ ಕಳ್ಳನ್ನು ಹೀರುತ್ತಿದ್ದ ಮನಸ್ಸಿನ ಬಾಯಿಗೆ ಒಂದಿನಿತೂ ವಿರಾಮ ಕೊಟ್ಟಿರಲಿಲ್ಲ.
ಕತ್ತಲಾದ ಮೇಲೆ ನೆರೆಮನೆಯ ಪುಟ್ಟನಾಯ್ಕನ ಅತ್ತೆ, ಕಾಡಿ, ಹಣತೆದೀಪ ತಂದಿಟ್ಟು ಹೋಗುತ್ತಿದ್ದಾಗ ಸೇಸನಾಯ್ಕನ ನೋಟ ಅಪ್ರಯತ್ನವಾಗಿ ಅತ್ತಕಡೆ ಹರಿದು “ಕಾಡೀ, ತಿಮ್ಮ ಬಾವಗೆ ಏನಾದರೂ ಕೊಡೂದಿಲ್ಲೇನೆ?” ಎಂದನು.
ತಿಮ್ಮನಾಯ್ಕನೂ ಕಾಡಿಯ ಕಡೆ ನೋಡುತ್ತಿದ್ದನು. ಆದರೆ ಅವನ ದೃಷ್ಟಿ ಕಳವು ಮಾಲನ್ನು ಪತ್ತೆ ಮಾಡಲು ಹೊರಟಿದ್ದ ಗುಪ್ತ ಪೊಲೀಸಿನವನಂತೆ ಕಾಡಿಯ ಮೋರೆಯ ಕಡೆಗೆ ತೆರಳದೆ ಅವಳ ಹೊಟ್ಟೆಯೆಡೆ ಸಂಚರಿಸುತ್ತಿತ್ತು. ಅದೇ ಕಾರಣವಾಗಿಯೇ ಸೀತೂರು ಸೀಮೆಯ ಹಳೆ ಪೈಕದವರ ಪ್ರತಿನಿಧಿಯೂ ಮುಖಂಡನೂ ಆಗಿದ್ದ ಅವನು ಆ ದಿನ ಲಕ್ಕುಂದಕ್ಕೆ ಬಂದಿದ್ದನು.
ಲಕ್ಕುಂದದ ಜಮೀನಿನಲ್ಲಿ ಮುಕ್ಕಾಲುಪಾಲು ಸಿಂಬಾವಿ  ಭರಮೈ ಹೆಗ್ಗಡೆಯವರಿಗೆ ಸೇರಿತ್ತು. ಇನ್ನುಳಿದ ಕಾಲುಪಾಲು ಹಳೆಪೈಕದ ಸೇಸನಾಯ್ಕನ ಸ್ವಂತದ್ದಾಗಿತ್ತು. ಸಾಧಾರಣವಾಗಿ ಒಕ್ಕಲಿಗ ಒಡೆಯರ ಒಕ್ಕಲುಗಳಾಗಿದ್ದುಕೊಂಡು, ಬಗನಿಯ ಮರದಿಂದ ಕಳ್ಳು ಇಳಿಸಿ ಕುಡಿದು, ಮಾರಿ, ಜೀವನ ಮಾಡುವ ಕಳೆಪೈಕದವರಿಗೆ (ಅವರಿಗೆ “ದೀವರು” ಎಂದು ಹೆಸರೂ ಉಂಟು) ಸ್ವಂತ ಜಮೀನಿರುವುದು ಬಹಳ ಅಪೂರ್ವ; ಮಹಾ ಅನಾಚಾರವೆಂದೂ ಅನೇಕರ ಮನಸ್ಸು. ವೇದ ಕಲಿಯುವುದು ಶೂದ್ರರಿಗೆ ಹೇಗೆ ನಿಷಿದ್ದವೋ ಹಾಗೆಯೇ ಸ್ವಂತ ಜಮೀನಿ ಮಾಡುವುದು ಹಳೆಪೈಕದವರಿಗೆ ನಿಷಿದ್ಧ ಎಂದು ಒಕ್ಕಲಿಗರಾಗಿದ್ದ ಹೆಗ್ಗಡೆ ಗೌಡ ನಾಯಕರುಗಳೆಲ್ಲ ಸೇರಿ ತೀರ್ಮಾನಮಾಡಿದ್ದರು. ಅಷ್ಟೇ ಅಲ್ಲದೆ, ಮದುವೆ ಮೊದಲಾದ ಸಂಭ್ರಮಗಳಲ್ಲಿ ಹಳೆಪೈಕದವರು ಒಕ್ಕಲಿಗರನ್ನು ಯಾವ ವಿಧದಲ್ಲಿಯೂ ಅನುಕರಿಸಕೂಡದೆಂದೂ ಮಾಮೂಲು ಕಟ್ಟಾಗಿತ್ತು. ದಿಬ್ಬಣದಲ್ಲಿ ಮದುವೆಯ ಗಂಡು ಕುದುರೆಯ ಮೇಲೆ ಸವಾರಿ ಮಾಡಬಾರದು; ದಂಡಿಗೆಯ ಮೇಲೆ ಕೂತರಂತೂ ಮದುಮಕ್ಕಳಿಗೂ ದಿಬ್ಬಣದವರಿಗೂ ಉಳಿಗತಿಯಿರಲಿಲ್ಲ. ಈ ಚರ್ಚೆ ಸರ್ಕಾರದವರೆಗೂ ಹೋಗಿ, ಅದೂ ಒಕ್ಕಲಿಗರ ಪರವಾಗಿಯೇ ತೀರ್ಮಾನ ಕೊಟ್ಟಿದ್ದರಿಂದ ಮಾಮೂಲಿಗೂ ಮಾತ್ಸಯ್ಯಕ್ಕೂ ಕಾನೂನಿನ ಮುದ್ರೆ ಬೇರೆ ಬಿದ್ದಿತ್ತು.
ಸರ್ಕಾರದ ಇತ್ಯರ್ಥಕ್ಕೆ ಕಾರಣ ನ್ಯಾಯಪಕ್ಷಪಾತವಾಗಿರಲಿಲ್ಲ; ಬಲ ಪಕ್ಷಪಾತವಾಗಿತ್ತು. ಬಲಿಷ್ಠರೂ ಬಹುಸಂಖ್ಯೆಯವರೂ ಆದವರ ಕಡೆ ಸರ್ಕಾರವಿದ್ದರೆ ಅದಕ್ಕೂ ಕ್ಷೇಮ; ನ್ಯಾಯ ರಕ್ಷಣೆಯೂ ಸುಲಭಸಾಧ್ಯ. ಅದರಲ್ಲಿಯೂ ಮೈಸೂರು ಸಂಸ್ಥಾನದ ಅಂಚಾಗಿ, ದುರ್ಗಮವಾದ ಪರ್ವತಾರಣ್ಯಗಳ ಬೀಡಾಗಿ, ಆಗತಾನೆ ನಗರ, ಕೌಲೆದುರ್ಗ ಮೊದಲಾದ ಪಾಳೆಯ ಪಟ್ಟುಗಳ ಕಿರುಕುಳದಿಂದ ಪಾರಾಗಿದ್ದ ಮಲೆನಾಡಿಗೆ ಅಲ್ಲಿದ್ದ ಬಹುಸಂಖ್ಯೆಯ ಬಲಿಷ್ಠರ ಇಚ್ಛೆಯಂತೆ ಸರ್ಕಾರದ ಕಾನೂನಾದುದರಲ್ಲಿ ಆಶ್ಚರ್ಯವೇನಿಲ್ಲ.
ಸರ್ಕಾರದಿಂದ ಕಾನೂನಾಗಿ ಬಂದ ಮಾತ್ರಕ್ಕೇ ಅನ್ಯಾಯ ನ್ಯಾಯವಾಗುತ್ತದೆಯೇ ಎಂದು ಕೆಲವು ಸ್ವತಂತ್ರದೃಷ್ಟಿಯ ಕಳೆಪೈಕದ ನಾಯಕರು ಅದಕ್ಕೆ ವ್ಯತಿರಿಕ್ತವಾಗಿ ನಡೆಯಲು ಪ್ರಯತ್ನಿಸುತ್ತಿದ್ದರು. ಅವರ ಆ ಪ್ರಯತ್ನಕ್ಕೆ ಸರ್ಕಾರವೆಂದಿಗೂ ಅಡ್ಡಿ ಬರುತ್ತಿರಲಿಲ್ಲವೆಂದು ದೇವರಾಣೆ ಹಾಕಿ ಬೇಕಾದರೂ ಹೇಳಬಹುದು. ಆದರೆ ಒಕ್ಕಲಿಗರು ತಮ್ಮ ಹಕ್ಕಿನ ರಕ್ಷಣೆಗಾಗಿ ಪಣತೊಟ್ಟಿದ್ದರು!
ಒಕ್ಕಲಿಗ ಜಮೀನುದಾರರ ಆಳುಗಳೂ ಒಕ್ಕಲುಗಳೂ ಆಗಿದ್ದ ಹಳೆಪೈಕದವರು ಬಹಿರಂಗವಾಗಿ ಯಾವ ತಂಟೆ ತಕರಾರುಗಳ ಗೋಜಿಗೂ ಹೋಗುತ್ತಿರಲಿಲ್ಲ. ಆದರೆ ಸೇಸನಾಯ್ಕನಂತಹ ಸ್ವಂತ ಜಮೀನುದಾರರಿಗೆ “ಅವರಿಗಿಂತ ನಾವೇನು ಕಡಿಮೆ? ನಮ್ಮ ಕುದುರೆ, ನಮ್ಮ ದಂಡಿಗೆ, ನಮ್ಮ ವಾದ್ಯ, ನಮ್ಮ ಬೋವಿಗಳು! ನಮ್ಮ ದುಡ್ಡು ನಾವು ಖರ್ಚು ಮಾಡುವುದಕ್ಕೆ ಇವರದೇನು ಅಡ್ಡಿ?” ಎಂಬ ಹುಮ್ಮಸ್ಸು ಇರುತ್ತಿತ್ತು. ಮುಖಂಡರು ಸೇರಿ ಕಳ್ಳು ಕುಡಿದಾಗಲಂತೂ ಆ ಗರ್ವ ಗುಟುರುಹಾಕುತ್ತಿತ್ತು.
ಅದರಲ್ಲಿಯೂ ಒಕ್ಕಲಿಗರ ಮನೆಗಳಿರದಿದ್ದ ಲಕ್ಕುಂದದಂತಹ ಹಳ್ಳಿಗಳಲ್ಲಿ ಆ ಸೊಕ್ಕಿನ ಗೂಳಿ ನಿರ್ಭಯವಾಗಿ ಗುಟುರುಹಾಕಬಹುದಾಗಿತ್ತು.
ಲಕ್ಕುಂದದಲ್ಲಿದ್ದ ಹಳೆಪೈಕದವರ ಮನೆಗಳು ಮೂರು. ಒಂದು ಸೇಸನಾಯ್ಕನ ಮನೆ. ಮತ್ತೊಂದು ರಂಗನ ಮನೆ. ಇನ್ನೊಂದು ಪುಟ್ಟನ ಮನೆ. ಅದರಲ್ಲಿ ನಿಜವಾಗಿಯೂ ಮನೆ ಎಂಬ ಹೆಸರಿಗೆ ಅಯೋಗ್ಯವಾಗಿರದಿದ್ದುದು ಸೇಸನಾಯ್ಕನ ಮನೆ ಮಾತ್ರ. ಉಳಿದವು ಎರಡೂ ಗುಡಿಸಲು. ಆದರೆ ಗುಡಿಸಲು, ಬಿಡಾರ ಮೊದಲಾದ ಪದಗಳನ್ನು ಹೊಲೆಯರು, ಬೇಲರು, ಮಾದಿಗರು, ಬಿಲ್ಲವರು, ಹಸಲವರು ಇತ್ಯಾದಿ ಕೀಳುಜನರ ನಿವಾಸಗಳಿಗೆ  ಉಪಯೋಗಿಸುತ್ತಿದ್ದುದರಿಂದ ತಮ್ಮ ನಿವಾಸಗಳಿಗೆ ಆ ಪದಗಳನ್ನು ಪ್ರಯೋಗಿಸುವುದು ಅವಮಾನಕರವೆಂದು ತಿಳಿದು, ಹಳೆಪೈಕದವರು ತಮ್ಮ ಜೋಪಡಿಗಳನ್ನು ಕೂಡ ‘ಮನೆ’ ಎಂದು ಕರೆದುಕೊಳ್ಳುತ್ತಿದ್ದರು. ಇತರರನ್ನೂ ಹಾಗೆಯೇ ಕರೆಯುವಂತೆ ಒತ್ತಾಯ ಪಡಿಸುತ್ತಲೂ ಇದ್ದರು.
ಸೇಸನಾಯ್ಕನ ಮನೆ ಏಳೆಂಟು ಅಂಕಣದ್ದಾಗಿತ್ತು. ಸೋಗೆ ಹೊದಿಸಿದ್ದನು. ಮಣ್ಣಿನ ಗೋಡೆ ಹಾಕಿದ್ದನು. ಮುಂಭಾಗಕ್ಕೆ ಕೆಮ್ಮಣ್ಣು ಜೇಡಿಗಳನ್ನು ಬಳಿದಿದ್ದನು.
ಸಿಂಬಾವಿ ಭರಮೈ  ಹೆಗ್ಗಡೆಯವರ ಒಕ್ಕಲುಗಳಾಗಿದ್ದ ರಂಗ, ಪುಟ್ಟ ಇವರ ಮನೆಗಳು ನಿಜವಾಗಿಯೂ ಗುಡಿಸಲುಗಳಾಗಿದ್ದುವು. ಬಿಳಿಹುಲ್ಲು ಹೊದಿಸಿದ್ದರು. ಅಡಕೆ ದಬ್ಬೆಯ ತಟ್ಟಿಗೋಡೆಗಳನ್ನು ಹಾಕಿದ್ದರು.
ಕೋಳಿ, ಕುರಿ, ನಾಯಿ, ದನ, ಎತ್ತು, ಸೆಗಣಿ, ಬೂದಿ, ಗಲೀಜು ಮೊದಲಾದುವುಗಳ ವಿಚಾರದಲ್ಲಿ ಆ ಮೂರು ಮನೆಗಳೂ ಒಂದನ್ನೊಂದು ಸೆಣಸುವಂತಿದ್ದುವು. ಲಕ್ಕುಂದಕ್ಕಿಂತಲೂ ಸ್ವಲ್ಪ ಹೆಚ್ಚು ಚೊಕ್ಕಟವಾಗಿರುತ್ತಿದ್ದ ಸೀತೂರಿನಿಂದ ಬಂದಿದ್ದ ತಿಮ್ಮನಾಯ್ಕನಿಗೆ ಲಕ್ಕುಂದದ ಹಳೆಪೈಕದವರ ಮೇಲೆ ತಮ್ಮೂರಿನ ಹಳೆಪೈಕದವರಿಗಿದ್ದ ತಿರಸ್ಕಾರದಲ್ಲಿ ಮತ್ತಷ್ಟು ಶ್ರದ್ಧೆ ಹೆಚ್ಚಿತು.
ಸುವಾಸನೆಗಿಂತಲೂ ದುರ್ವಾಸನೆ ಬೇಗ ಹಬ್ಬುತ್ತದೆ; ಬೇಗ ಮೂಗಿಗೆ ಬೀಳುತ್ತದೆ; ಅನೇಕರಿಗೆ ಬೇಗ ಗೊತ್ತಾಗುತ್ತದೆ. ಸತ್ಕೀರ್ತಿ ಹಬ್ಬುವುದು ನಿಧಾನ; ದುಷ್ಕೀರ್ತಿ ಕಾಡುಕಿಚ್ಚಿನಂತೆ ಹರಡಿಕೊಳ್ಳುತ್ತದೆ. ಪುಟ್ಟನ ಅತ್ತೆ ಕಾಡಿ ಮುಂಡೆ ಬಸುರಾಗಿದ್ದಾಳೆ ಎಂಬ ಸಿದ್ದಿ ಪಿಸುಮಾತಿನ ಕುದುರೆಯ ಮೇಲೆ ಊರೂರು ಅಲೆಯುವ ನಾಡಾಡಿಯಾಗಿತ್ತು. ಅವಳನ್ನು ಜಾತಿಯಿಂದ ಹೊರಗೆ ಹಾಕಬೇಕೆಂಬ ಚಳವಳಿಯೆದ್ದಿತು. ಅಥವಾ ತಪ್ಪೊಪ್ಪಿಕೊಂಡು ದಂಡಾಕೊಟ್ಟು, ಜಾತಿಯವರನ್ನೆಲ್ಲಾ ಸಂತೈಸುವ ಸಮಾರಾಧನೆ ಮಾಡಿದ್ದರೂ ಸಾಕಿತ್ತು. ಆದರೆ ಕಾಡಿಯ ಕೈಯಲ್ಲಾಗಲಿ ಪುಟ್ಟನ ಕೈಯಲ್ಲಾಗಲಿ ಹಣವಿರಲಿಲ್ಲ. ಒಡೆಯರಾಗಿದ್ದ ಸಿಂಬಾವಿ ಹೆಗ್ಗಡೆಯವರನ್ನು ಕೇಳುವ ಧೈರ್ಯವಿರಲಿಲ್ಲ.
ಇನ್ನು ಕಾಡಿಯ ಸ್ಥಿತಿಗೆ ಯಾರು ಕಾರಣರೊ ಅವರಿಂದ ತಪ್ಪುಗಾಣಿಕೆ ವಸೂಲು ಮಾಡಿಕೊಳ್ಳಬೇಕೆಂದು ಜಾತಿಯ ಮುಖಂಡರು ನಿರ್ಣಯಿಸಿದರು. ಆದರೆ ಆ ಕಾರಣ ಪುರುಷನನ್ನು ಕಂಡು ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. ಜಾತಿಯ ಮುಖಂಡರಿಗೆ ಸಾಧ್ಯವಾಗದಿದ್ದುದು ಹಾಗಿರಲಿ, ಕಾಡಿಗೂ ಅದನ್ನು ನಿರ್ಣಯಿಸುವುದು ಕಷ್ಟವಾಯಿತು. ವರ್ಷಗಳಲ್ಲಿಯೆ ಮಾವನನ್ನೂ ಹೆಂಡತಿಯನ್ನೂ ಕಳೆದುಕೊಂಡಿದ್ದ, ತನ್ನ ಅಳಿಯ ಪುಟ್ಟನ ಹೆಸರನ್ನು ಸೂಚಿಸುವಳು. ಬೇರೊಂದು ಸಾರಿ, ತನ್ನ  ಸ್ವಂತ ಹೆಂಡತಿಯಿದ್ದರೂ ಪ್ರಣಯ ಸಾಹಸಗಳಲ್ಲಿ ಪ್ರವೀಣನೆಂದು ಹೆಸರು ಪಡೆದಿದ್ದ ನೆರೆಮನೆಯ ರಂಗನ ಹೆಸರನ್ನು ಸೂಚಿಸುವಳು. ಮತ್ತೊಂದು ಸಾರಿ, ಕೇಳಿದವರೆಲ್ಲ ಮೂಗು ಬೆರಳಾಗಿ ಬೆರಗಾಗುವಂತೆ, ಹಳೆಪೈಕದ ಮುಖಂಡರಲ್ಲೆಲ್ಲ ಅಗ್ರಗಣ್ಯನೂ ಸನ್ಮಾನ್ಯನೂ ಜಮೀನುದಾರನೂ ಆಗಿ, ನಾಲ್ವತ್ತನೆಯ ವಯಸ್ಸಿಗಾಗಲೆ ಮೂವರು ಹೆಂಡಿರನ್ನು ಕಳೆದುಕೊಂಡು ಇನ್ನು ಮೇಲೆ ಮದುವೆಯಾಗುವುದೇ ಇಲ್ಲವೆಂದು ಹಟಹಿಡಿದು ವ್ರತಿಯಾಗಿದ್ದ ಲಕ್ಕುಂದದ ಸೇಸನಾಯ್ಕನ ಹೆಸರನ್ನೂ ಸೂಚಿಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅಂತೂ ಮುಖಂಡರ ಅನ್ವೇಷಣೆಯ ನೌಕೆಗೆ ಧ್ರುವತಾರೆಯೂ ಅಗೋಚರವಾಗಿ, ಉತ್ತರಮುಖಿಯೂ ಕೆಟ್ಟು ಹೋಗಿ, ನಡುಗಡಲಿನಲ್ಲಿ ದೆಸೆಗೆಟ್ಟಂತಾಯ್ತು.
ಕಡೆಗೆ ಸೇಸನಾಯ್ಕನೇ ಮುಂದೆ ಬಂದು, ಮೇಗರವಳ್ಳಿಯ ಕಣ್ಣಾ ಪಂಡಿತರಿಂದ ಮದ್ದು ತರಿಸಿಕೊಟ್ಟು, ಹೊಟ್ಟೆಯ ಹೊರೆಯಿಳಿಸಿ ಕಾಡಿಯನ್ನು ಕಷ್ಟದಿಂದ ಪಾರುಗಾಣಿಸಿದ್ದನು. ಆ ದಿನ ವಿಚಾರಣೆಗೆ ಬಂದಿದ್ದ ಮುಖಂಡರಿಗೆಲ್ಲಾ ಚೆನ್ನಾಗಿ ತುಂಡುಕಡುಬು ಕಳ್ಳುಗಳ ಹಬ್ಬ ಮಾಡಿಸಿ ಬಾಯಿಗೆ ಬೀಗಮುದ್ರೆ ಮಾಡಿ ಕಳುಹಿಸಿದ್ದನು. ಅವನ ನೆಂಟಬಾವ ತಿಮ್ಮನಾಯ್ಕನನ್ನು ಮಾತ್ರ ಒತ್ತಾಯಮಾಡಿ ಉಳಿಸಿಕೊಂಡಿದ್ದನು.
ಕಾಡಿಯ ವಿಚಾರಣೆಗಾಗಿಯೇ ಆ ದಿನ ಬೆಳಿಗ್ಗೆ ಲಕ್ಕುಂದದಲ್ಲಿ ಸೇಸನಾಯ್ಕನ ಮನೆಯಲ್ಲಿ ಸೇರಿದ್ದ ಮುಖಂಡರು ಅದೊಂದನ್ನು ಬಿಟ್ಟು ಉಳಿದ ಅನೇಕ ವಿಚಾರಗಳನ್ನು ಚರ್ಚಿಸಿದ್ದರು. ಕಾರಣವೇನೆಂದರೆ ಅನೇಕರಿಗೆ ಕಾಡಿಯ ಆ ಸ್ಥಿತಿಗೆ ಸೇಸನಾಯ್ಕನೇ ಕಾರಣನಾಗಿದ್ದಾನೆ ಎಂಬ ಒಳಗುಟ್ಟು ಹೊಳೆಯತೊಡಗಿತ್ತು. ಜೊತೆಗೆ ಸೇಸನಾಯ್ಕನೂ ಒಳ್ಳೆಯ ಉಪಾಯದಿಂದ ಬೇರೆಯ ಪ್ರಸ್ತಾಪಗಳನ್ನೆತ್ತಿ ತನಗೆ ತೊಂದರೆಯಾಗದ ರೀತಿಯಲ್ಲಿ ವಾದಮುಖವನ್ನು ತಿರುಗಿಸಿದ್ದನು.
“ನಮ್ಮ ದಂಡಿಗೆ ಹಕ್ಕಿಗೆ, ಕುದುರೆ ಹಕ್ಕಿಗೆ, ಗೌಡ ಮಕ್ಕಳು ಅಡ್ಡ ಬರುವುದು ಯಾವ ನ್ಯಾಯ? ನಾವೇಕೆ ಹೊಡೆದಾಟಕ್ಕೆ ಹೆದರಬೇಕು? ನಾಳೆ ನನ್ನ ಮಗನ ಮದುವೆ ಮಾಡುವಾಗ ದಂಡಿಗೆ ಸಿಕ್ಕದೆ ಇದ್ದರೂ ಕುದುರೆ ಮೇಲಾದರೂ ಹೆಣ್ಣೂ ಗಂಡೂ ಕೂರಿಸಿ ದಿಬ್ಬಣ ತಗೊಂಡು ಹೋಗಲೇ ಬೇಕು. ಜಾತಿಯವರು ನೀವೆಲ್ಲಾ ಸಹಾಯ ಮಾಡಿದರೆ ನಾನೊಂದು ಕೈ ನೋಡೇ ಬಿಡ್ತೀನಿ” ಎಂದು ಮೊದಲಾಗಿ ವೀರಾವೇಶದಿಂದ ಮಾತಾಡಿದ ಸೇಸನಾಯ್ಕನನ್ನು ನೋಡಿ ಎಲ್ಲರಿಗೂ ಹೆಮ್ಮೆಯಾಯಿತು. ಒಬ್ಬೊಬ್ಬರೂ ಸಹಾಯ ಮಾಡುವುದಾಗಿ ಪ್ರೋತ್ಸಾಹವಿತ್ತರು. ಕಳ್ಳನ್ನು ಚೆನ್ನಾಗಿ ಹೀರಿದರು; ಹಣ್ಣು ಹಣ್ಣಾಗಿ, ಮೀಸೆ ತಿರುವಿದರು.
ಇಳಿಹಗಲಿನಲ್ಲಿ ಇತರ ಮುಖಂಡರೆಲ್ಲ ಹೊರಟುಹೋದ ಮೇಲೆ ಸೇಸನಾಯ್ಕನಿಗೆ ಮನಸ್ಸೂ ನೆಮ್ಮದಿಯಾಗಿ ತನ್ನ ನೆಂಟಬಾವ ಸೀತೂರು ತಿಮ್ಮನಾಯ್ಕನೊಡನೆ ಮಗನ ಮದುವೆ ವಿಚಾರವಾಗಿಯೂ ಕುದುರೆಯ ಮೇಲೆ ಗಂಡನ್ನು ಕೂರಿಸಿ ದಿಬ್ಬಣ ತೆಗೆದುಕೊಂಡು ಹೋಗುವಾಗ ಮಾಡಿಕೊಳ್ಳಬೇಕಾದ ಸಲಕರಣೆಗಳ ವಿಚಾರವಾಗಿಯೂ ರಸಾವೇಶದಿಂದ ಮಾತಾಡತೊಡಗಿದನು. ಕತ್ತಲೆಯಾದುದಾಗಲಿ, ಮಳೆ ಜೋರಾಗಿ ಹೊಯ್ದುದಾಗಲಿ, ನೆರಮನೆಯ ಪುಟ್ಟ ರಂಗ ಮೊದಲಾದವರು ಬಂದು ತನ್ನ ಮಗನನ್ನು ಕರೆದುಕೊಂಡು ಹತ್ತು ಮೀನು ಕಡಿಯುವುದಕ್ಕೆ ಹೋದುದಾಗಲಿ ಅವನ ಗಮನಕ್ಕೆ ಬಂದಿರಲಿಲ್ಲ.
ಕಾಡಿ ಬಂದು ಮೊಗೆಯ ತುಂಬಾ ನೊರೆಗಳ್ಳನ್ನೂ, ಕೀಸಿ ನುಣ್ಣಗೆ ಮಾಡಿದ ಎರಡು ಗಂಡುಗರಟಗಳನ್ನೂ ತಂದು ಮುಂದಿಟ್ಟು, ನಸುನಾಚಿಗೆಯಿಂದಲೆಂಬಂತೆ, ಕುತ್ತಿಗೆಯವರೆಗೂ ಕಂಬಳಿ ಹೊದೆದು ಕುಳಿತಿದ್ದ ಇಬ್ಬರನ್ನೂ ಮಿಂಚಿನೋಡಿ ಒಳಗೆ ಹೋದಮೇಲೆ, ಇಬ್ಬರೂ ಅರ್ಥಪೂರ್ಣವಾಗಿ ಒಬ್ಬರೊಬ್ಬರನ್ನು ನೋಡಿ, ಹುಳ್ಳಗೆ ನಗುತ್ತಾ, ಕೆಲಸಕ್ಕೆ ಪ್ರಾರಂಭಿಸಿದರು. ಸೆಸನಾಯ್ಕನು ಹುಳಿಗಂಪಿನ ನರುಗಳ್ಳನ್ನು ಕರಟ ತುಳುಕುವಷ್ಟರಮಟ್ಟಿಗೆ ಬೊಗ್ಗಿಸಿ ತುಂಬಿ “ತಗಾಳಿ! ತಗಾಳಿ!  ಏನ್ ನೋಡಾದು, ಬಾವ?” ಎಂದನು.
“ಮಾರಾಯ್ರಾ, ನಂಗೇನು ಬ್ಯಾಡಾಗಿತ್ತು!” ಎಂದು ರಾಗಧ್ವನಿ ಮಾಡುತ್ತಾ ಪಿಚ್ಚನೆ ಹಲ್ಲು ಬಿಡುತ್ತಾ ರೋಮಮಯವಾಗಿದ್ದ ತನ್ನ ಬಲಗೈಯನ್ನು ಕಂಬಳಿಯಿಂದ ಹೊರಗೆ ತೆಗೆದು ನೀಡಿ ಕರಟವನ್ನೆತ್ತಿ, ನೀಳವಾಗಿ ಕೊಂಚ ಮುಂದಕ್ಕೆ ಬಾಗಿದ್ದ ಮೀಸೆಗೂದಲಿಗೆ ಮದ್ಯದಲ್ಲಿ ತೀರ್ಥಸ್ನಾನವಾಗುತ್ತಿರುವುದನ್ನು ಒಂದಿನಿತೂ ಲಕ್ಷ್ಯಕ್ಕೆ ತಾರದೆ, ಬಾಯಿಗಿಟ್ಟು, ಸೊರ್ರೆಂದು ಕುಡಿಯತೊಡಗಿದನು.
ಸೇಸನಾಯ್ಕನೂ ಕೂದಲಿಲ್ಲದೆ ನುಣುಪಾಗಿದ್ದ ತನ್ನ ಬಡಕಲು ಕೈಯಿಂದ ಕರಟವನ್ನೆತ್ತುತ್ತಾ ಹಣತೆಯ ಮಬ್ಬುಬೆಳಕಿನಲ್ಲಿ ಅಂಗಳದಲ್ಲಿ ನಿಂತಿದ್ದ ನೀರನ್ನು ನೋಡಿ ಬೆರಗು ದನಿಯಲ್ಲಿ “ಹೌದೇನ್ರೋ! ಘನಾಗೆ ಬಂದದೆ ಒಂದು ಮಳೆ!” ಎಂದನು.
ತಿಮ್ಮನಾಯ್ಕನು ಖಾಲಿಯಾದ ಗರಟವನ್ನು ಕೆಳಗಿಟ್ಟು, ತೊಯ್ದಿದ್ದ ಚೌರಿಮೀಸೆಗಳನ್ನು ನೀಪಿಕೊಳ್ಳುತ್ತಾ, ಗಂಟಲು ಕ್ಯಾಕರಿಸಿ ಅಂಗಳಕ್ಕೆ ತುಪ್ಪಿ “ಬರ್ಲಿ, ಮಾರಾಯ್ರಾ, ನಮ್ಮ ಅಗೋಡಿಗೆ ನೀರುಕಾಣದೆ ಕಂಗಾಲಾಗಿದ್ದೆ ನಾನು!” ಎಂದನು.
ಬಾವನ ಮಾತಿಗೆ ಮಾರ್ನುಡಿಯಾಗಿ ಸೇಸನಾಯ್ಕನು ಕರಟವನ್ನೆಲ್ಲಾ ಬರಿದು ಮಾಡಿ ಕೆಳಗಿಟ್ಟು, ತರಕಲಾದ ಗಡ್ಡಮೀಸೆಯ ಮೇಲ್ದುಟಿಗಳನ್ನು ಸವರುತ್ತಿದ್ದವನು “ಹಚಾ! ಹಚಾ!” ಎನ್ನುತ್ತಾ ಎದ್ದುನಿಂತು ದಾರಿಯ ಕಡೆ ಕಿರುಗಣ್ಣಾಗಿ ದಿಟ್ಟಿಸಿದನು.
ದದ್ದು ಹಿಡಿದು ಬಡಕಲಾದ ಬೂದಿಬುಕ್ಕಗಳಾಗಿದ್ದ ಅವನ ಮನೆಯ ನಾಯಿಗಳೂ ರಂಗ ಪುಟ್ಟರೆ ಮನೆಯ ನಾಯಿಗಳೂ ಒಟ್ಟಿಗೆ ಸೇರಿ ಬಾಯಿ ಬಡುಕೊಳ್ಳುವಂತೆ ಕೂಗತೊಡಗಿದ್ದುವು.
ಸೇಸನಾಯ್ಕನು ನೋಡುತ್ತಿದ್ದ ಹಾಗೆ ಕತ್ತಲೆಯ ಗರ್ಭದಿಂದ ಹೊಮ್ಮಿದ ನಾಯಿಗುತ್ತಿ ದೀಪದ ಬೆಳಕಿನ ಮಬ್ಬುವಲಯಕ್ಕೆ ಮೂಡಿಬಂದನು. ಬಲಗಡೆಗೆ ನಸುಬಾಗಿ ತನ್ನ ದೈತ್ಯನಾಯಿಯ ಕುತ್ತಿಗೆಯನ್ನು ಬಲಗೈಯಲ್ಲಿ ತಬ್ಬಿ ಹಿಡಿದುಕೊಂದೇ ಬರುತ್ತಿದ್ದವನು ಸೇಸನಾಯ್ಕನ ಪ್ರಶ್ನೆಗೆ “ನಾನು ಕಣ್ರೋ-ಗುತ್ತಿ” ಎಂದನು.
“ಕಂಡ ಹಾಗೆ ಇದೆಯೆಲ್ಲಾ! ನೀನು ಹೋದಲ್ಲಿ ತನಕಾ ಆ ನಾಯಿ ಯಾಕೆ ಕರಕೊಂಡು ಹೋಗ್ತೀಯೊ, ಮಾರಾಯ?” ಎಂದನು ತಿಮ್ಮನಾಯ್ಕ.
“ಏನು ಮಾಡೋದ್ರೋ?  ಹೊಡೆದಟ್ಟಿ ಬಂದೀನಿ; ನಡೂದಾರೀಲಿ ಹಿಂದಕ್ಕೆ ಬಂದದೆ” ಎಂದು ಮಾತಾಡುತ್ತಿದ್ದಾಗಲೆ ಕೈ ಸಡಿಲವಾಗಿದ್ದುದನ್ನು ಅರಿತು ಹುಲಿಯನು ಚಂಗನೆ ಒಂದು ನೆಗತ ನೆಗದು, ಕಿವಿ ಕೆಟ್ಟು ಹೋಗುವಂತೆ ಅರಚುತ್ತಿದ್ದ ಕುನ್ನಿಗಳ ಕಡೆಗೆ ನುಗ್ಗಿತು. ನುಗ್ಗಿತೋ ಇಲ್ಲವೋ, ಸತ್ತೆನೋ ಕೆಟ್ಟೆನೋ ಎಂದು ಆ ದದ್ದು ಹಿಡಿದ ಬಡಕಲು ಕಂತ್ರಿ ನಾಯಿಗಳು ದಿಕ್ಕಾಪಾಲಾಗಿ ಕೂಗಿಕೊಳ್ಳುತ್ತಾ ಓಡಿಹೋದುವು. ಒಂದಂತೂ ನಿಂತಿದ್ದ ಸೇಸನಾಯ್ಕನಿಗೆ ಡಿಕ್ಕಿ ಹೊಡೆದು ನೆಲವನ್ನು ಒದ್ದೆ ಮಾಡುತ್ತಾ ಹಿತ್ತಲ ಕಡೆಗೆ ಪರಾರಿಯಾಯಿತು.
ಅದನ್ನು ನೋಡಿದ ತಿಮ್ಮನಾಯ್ಕನು “ಅಯ್ಯಯ್ಯೋ, ಇದರ ಮನೆ ಮಂಟೆನಾಗಲ್ರೊ! ಹಚೀ! ಹಚೀ! ಹಚ್ಚಿಚ್ಚಿಚ್ಚೀ” ಎಂದು ಗದರಿಸಿದನು.
ಗುತ್ತಿ  ತನ್ನ ನಾಯಿಯನ್ನು ಗದರಿಸಿ ಕರೆದನು. ಅದು ಅವನ ಪಕ್ಕಕ್ಕೆ ಸರಿದು ನಿಂತು, ಹೊಳೆವ ಕಣ್ಣುಗಳಿಂದ ನೋಡತೊಡಗಿತು.
“ಇದೇನೋ? ಈಟ್ಹೊತ್ತನಾಗೆ? ಈ ಮಳೇಲಿ?”
ಆಗಲೇ ಮಾಂಸದ ಪಲ್ಯದ ವಾಸನೆಯನ್ನೂ ಕಳ್ಳು ಹೆಂಡಗಳ ಹುಳಿಗಂಪನ್ನೂ ಮೂಗಾಳಿ ಹಿಡಿದು ಮನಸ್ಸಿನಲ್ಲಿಯೆ ಸಂತೋಷಪಡುತ್ತಿದ್ದ ಗುತ್ತಿ ಪೆಚ್ಚು ಪೆಚ್ಚಾಗಿ ನಗುತ್ತಾ, ನಿರ್ನಿಮಿತ್ತವಾಗಿ ತೊಡೆ ತುರಿಸಿಕೊಳ್ಳುತ್ತಾ “ಏನಿಲ್ಲ ಕಣ್ರೋ! ಮಳೆ ಹೊಡೀತೂ ಹೊಡೀತೂ! ಕಾದೂ ಕಾದೂ ಸಾಕಾಯ್ತು! ನೀರು ಇಳೀಲೆ ಇಲ್ಲ”. ಎಂದು ಮೊದಲಾಗಿ ಪ್ರಶ್ನೆಯನ್ನೂ ಒಂದಿನಿತೂ ಲೆಕ್ಕಿಸದೆ ಮಾತನಾಡಿದನು.
ಹಳೆಪೈಕದವನಿಗೆ ಹೊಲೆಯನ ಉತ್ತರದಲ್ಲಿ ಯಾವ ನ್ಯೂನತೆಯೂ ಗೋಚರವಾಗಲಿಲ್ಲ. “ಅಂಗಳದಾಗೆ ಯಾಕೆ ನಿಂತೀಯಾ? ಮ್ಯಾಲೆ ಬಂದು ಕೂತಗಾ” ಎಂದು ಸೇಸನಾಯ್ಕನೂ ಮುಂಡಿಗೆಗೆ ಒರಗಿ ಕೂತುಕೊಂಡನು.
ಗುತ್ತಿ ನಿಂತಲ್ಲಿಂದ ಅಲುಗಾಡದೆ ಮೊದಲಿನಂತೆಯೆ ಬೆಪ್ಪುನಗೆ ನಗುತ್ತಾ “ಇಲ್ಲ, ಅಷ್ಟೇನು ಹೊಟ್ಟೆ ಹಸಿದಿಲ್ಲ. ಸ್ವಲೂಪ ದಾವಾಗದೆ” ಎಂದು, ತಟಸ್ಥವಾಗಿಯೆ ನಿಂತಿದ್ದ ನಾಯಿಯನ್ನು “ಸುಮ್ಮನಿರು, ಹುಲಿಯ!” ಎಂದು ಗದರಿಸಿದನು.
ನಾಯಿ ವಿಸ್ಮಯದಿಂದ ಒಡೆಯನ ಮುಖ ನೋಡಿತು. “ಮ್ಯಾಲೆ ಬಂದು ಕೂತುಕೊಳ್ಳೋ ಅಂದ್ರೆ ನೀರಿನಾಗೆ ನಿಂತ್ಕೊಂಡು ಪರ್ಸಂಗ ಮಾಡ್ತಾನೆ! ಒಳ್ಳೆ ಮಾರಾಯ!” ಎಂದು ತಿಮ್ಮನಾಯ್ಕ ಗಟ್ಟಿಯಾಗಿ ಹೇಳಿದ ಮೇಲೆಯೆ ಗುತ್ತಿ ಕಿರುಜಗಲಿಯ ಮೂಲೆಯಲ್ಲಿ, ಮುರುವಿನ ಒಲೆಯ ಬೆಂಕಿಗೆ ಸ್ವಲ್ಪ ಹತ್ತಿರವಾಗಿ, ಕೊಪ್ಪೆಗಂಬಳಿಯನ್ನು ಕೊಡವಿ ಗಳುವಿನ ಮೇಲೆ ಹರಡಿ, ಬೆನ್ನು ಕಾಯಿಸುತ್ತಾ ತುರಿಸಿಕೊಳ್ಳುತ್ತಾ ಮಾತಾಡುತ್ತಾ ಕುಳಿತುಕೊಂಡನು.
ಹುಲಿಯನೂ ಒಡೆಯನಿಗೆ ಸಮೀಪದಲ್ಲಿ ಬೆಚ್ಚಗೆ ಬೆಂಕಿ ಕಾಯಿಸುತ್ತಾ, ಅರೆಗಣ್ಣು ಮಾಡಿಕೊಂಡು ನೋಡುತ್ತಾ, ಹೊಟ್ಟೆಯಡಿಯಾಗಿ, ಮುನ್ನೀಡಿದ ಮುಂಗಾಲುಗಳ ಮೇಲೆ ಮೋರೆಯಿಟ್ಟು ಮಲಗಿಕೊಂಡಿತು.
******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ