ಪುಟಗಳು

09 ಮೇ 2018

'ಯಮನ ಸೋಲು'-ದೃಶ್ಯ-1

ದೃಶ್ಯ ೧

ಆಶ್ರಮದ ಪಕ್ಕದ ಒಂದು ಎಲೆವನೆಯ ಶಿವಗುಡಿ.
ಸಾವಿತ್ರಿ ಪೂಜೆ ಧ್ಯಾನಾದಿಗಳಲಿ ತೊಡಗಿದ್ದಾಳೆ.
ಸಾವಿತ್ರಿ
ಏಳದಿರು, ಎಲೆ ಸೂರ್ಯ, ಏಳದಿರು ಇಂದು!
ಮುಂದೆ ಎಂದೆಂದಿಗೂ ಮುಳುಗಲೆಂದೇಕೆ
ಉದಯಿಸುವೆ ಇಂದು? ಕಾಲಚಕ್ರವೆ, ನಿಲ್ಲು!
ಮುಂದೆ ಎಂದೆಂದಿಗೂ ನಿಲ್ಲಲೇಂದೇಕೆ
ತಿರುಗುತಿಹೆ ನೀನು? ಸೃಷ್ಟಿಯೇ, ನಿಲ್ಲಿಲ್ಲಿ;
ಸಾಗದಿರು ಮುಂದೆ; ಹತ್ತಿರದೊಳಿದೆ ವಿಲಯ!
ಹೇ ದೇವ, ವಿಶ್ವಭಕ್ತಿಯನೆಮಗೆ ಕೊಟ್ಟಿರುವೆ;
ವಿಶ್ವದೊಲವನು ನಮ್ಮ ಹೃದಯದೊಳಗಿಟ್ಟರುವೆ;
ವಿಶ್ವಶಕ್ತಿಯನೇಕೆ ದಯಪಾಲಿಸಿಲ್ಲ? —
ಇಂದು ಆ ದಿವಸ! ಯಮರಾಯನಿನಿಯನನು ೧೦
ಕೊಂಡೊಯ್ವ ದುರ್ದಿವಸ! ಎಲೆ ಭಯಂಕರ ದಿನವೆ,
ಸೃಷ್ಟಿಜಾಲವ ಬಿಟ್ಟು ನನಗಾಗಿ ಕಳ್ಳನೊಲು
ಜಾರಬಾರದೆ, ಹಾರಿ ಹೋಗಬಾರದೆ ನೀನು!
ನಿನ್ನ ನಾನಾಗ ಪರಮೇಶನಿಗೆ ಬದಲಾಗಿ
ಪೂಜಿಸುತಲಿದ್ದೆ. ಪ್ರೇಮವೇ, ನನ್ನಂತೆ
ನೀನೂ ಅಬಲೆಯಾದೆಯಾ ಹೇಳು! ಚುಕ್ಕಿಗಳೆ,
ತೆರಳಬೇಡಿರಿ! ಚಂದ್ರ, ಮರೆಯಾಗಬೇಡ.
ಕೋಗಿಲೆಯೆ, ಕೂಗದಿರು: ಕೂಗಿಜವಗಂಟೆಯಂ
ಬಡಿಯದಿರು. ನೆನಪ ಕೊಡದಿರು ಜವಗೆ, ಇಂದು ಆ
ದುರ್ದಿವಸವೆಂದು. ವಿಸ್ಮೃತಿಯೆ, ಜವನ
ಆವರಿಸು ಹೋಗು! ಚಲಿಸದಿರಿ, ಮರ್ಮರ
ನಿನಾದವಂ ಮಾಡದಿರಿ, ಎಲೆತಳಿತ ತರುಗಳಿರ!
ನಿಮ್ಮ ಒಂದೊಂದು ಮರ್ಮರವು ಯಮರಾಯನನ್
ಇನ್ನೆಲ್ಲಿ ಎಚ್ಚರಿಸುವುವೊ ಎಂದು ಬೆದರುವೆನು.
ಬೀಸದಿರು, ಮಾರುತನೆ; ಎನಗಾಗಿ ಬೀಸದಿರು,
ಕೈ ಮುಗಿದು ಬೇಡುವೆನು.
(ಬಾಗಿಲು ತಟ್ಟುತ್ತಾರೆ.)
ಬರಬೇಡ; ಬರಬೇಡ;
ಒಳಗೆ, ಯಮದೂತ; ಶಪಿಸುವೆನು ಬರಬೇಡ!
ಪಾತಿವ್ರತ್ಯವೆ, ನಿನ್ನ ಪಂಡಿತರು ಹೊಗಳಿಹರು;
ಎಲ್ಲಿ ನಿನ್ನಾ ಶಕ್ತಿ? ಎಲ್ಲಿ ನಿನ್ನಾಮೈಮೆ?
(ಬಾಗಿಲು ಶಬ್ದ.)
ಯಾರಲ್ಲಿ?
(ಬಾಗಿಲು ತೆರೆಯುತ್ತಾಳೆ. ಸತ್ಯವಾನನ ಪ್ರವೇಶ.
ಕೈಯಲ್ಲಿ ಹೂಬುಟ್ಟಿ, ಹೆಗಲಮೇಲೆ ಕೊಡಲಿ ಇವೆ.)
ಸತ್ಯವಾನ್
ಇಲ್ಲೇನು ಮಾಡುತಿಹೆ, ಸಾವಿತ್ರಿ? ೩೦
ಸಾವಿತ್ರಿ
ತಪ್ಪಾಯ್ತು; ಕ್ಷಮಿಸೆನ್ನ ಮನದೆನ್ನ, ಪೂಜೆ ಮಾ
ಡುತಲಿದ್ದೆ. ಅದರಿಂದ ತಡವಾಯ್ತು.
ಸತ್ಯವಾನ್
ಇದಾವ ವ್ರತ!
ದಿನ ಮೂರು ಕಳೆದುವಾಗಲೆ ಪೂಜೆಯಾರಂಭ
ವಾಗಿ! ಮುಖದಲ್ಲಿ ಉದ್ವೇಗ ಚಿತ್ರಿಸಲ್ಪಟ್ಟಿಹುದು.
ಸಾವಿತ್ರಿ
ಏನಿಲ್ಲ, ಪ್ರಿಯತಮಾ. ದೇವರಾ
ರಾಧನೆಗೆ ಜಾಗರಣೆ ಮಾಡಿದೆನು. ಅದಕಾಗಿ
ಸ್ವಲ್ಪ ಆಯಾಸ. ಕುಳಿತುಕೋ ಬಾ; ನೀನೂ
ಈಶನಂ ಪೂಜಿಸುವೆಯಂತೆ.
ಸತ್ಯವಾನ್
ಪ್ರಯತಮೆ,
ನಾಳೆ ಪೂಜಿಸುವೆ. ಸಮಯವಿಲ್ಲೀಗ; ಫಲ
ಪುಷ್ಪಗಳಿಗಾಗಿ ವನಗಳಿಗೆ ಹೊರಟಿಹೆನು. ೪೦
ನೋಡು, ಕೈಯಲಿ ಬುಟ್ಟಿ! ಭುಜದ ಮೇಲ್ನೋಡು,
ಸೌದೆ ಕಡಿಯಲು ಕೊಡಲಿ!
ಸಾವಿತ್ರಿ
(ಸ್ಚಗತ)
ಸುಮ್ಮನಿರು, ನಾಲಗೆಯೆ,
ಸುಮ್ಮನಿರು.
(ಬಹಿರಂಗ)
ನಾಳೆ ಪೂಜೆಯು ನಾಳೆ; ರಮಣ,
ಪೂಜಿಸಿಂದೆನಾಗಾಗಿ. ಸತಿಪತಿಯರಿಬ್ಬರೂ
ಪೂಜಿಸಲೇಬೇಕಾದ ವ್ರತವು ಇದು.
ಸತ್ಯವಾನ್
ನಿನಿಷ್ಟ!
(ಪೂಜಿಸಲಾರಂಭಿಸುತ್ತಾನೆ.)
ಸಾವಿತ್ರಿ
(ಸ್ವಗತ)
ಎಲೆ ರಮಣ, ಈ ದಿನವೆ ಚರಮದಿನವೆಂದರಿಯೆ.
ಅಯ್ಯೋ! ಯಮನ ಪಾಶವುಕೊರಳೊಲಿರುವುದನು
ಅರಿಯದೆಯೆ ಎಷ್ಟು ಜನ ಹಿಗ್ಗುವರು! ಎಷ್ಟು ಜನ
ನುಗ್ಗುವರು ದೀಪಕೊಡುವ ಕ್ರಿಮಿಯಾಳಿಯಂತೆ!
ಸತ್ಯವಾನ್, ನಾಳೆ ಪೂಜಿಸಲಾರೆ ನೀನು; ೫೦
ಇದೆ ನಿನ್ನ ಕಡೆಯ ಪೂಜೆ. — ಇಂದೆನಿತು
ಅಂದವಾಗಿಹನೆನ್ನ ಪತಿಯು! ಈ ತೆರದ
ಸೊಬಗ ನಾನೆಂದು ನೋಡಿರಲಿಲ್ಲ! ಇಂದೆನಿತು
ಪ್ರಿಯವಾಗಿ ತೋರುವನು! ಹಿಂದೆಂದು ಸಲ್ಲಿಸದ
ಪ್ರಣಯ ಪ್ರೇಮವ ತೋರುತಿಹನು. ಅರಿಯದಲೆ
ತನಗೆ ಒದಗುವ ಗತಿಯ ಸಂತೋಷದಿಂದಿಹನು.
ಮುಂದರಿವೆ, ಹಾಳಾಗು! ಮುಂದಾಗುದನೊಂದನೂ
ಅರಿಯದವನೇ ಧನ್ಯ. ಏಲೆ ಕಾಲವೇ, ನಿನ್ನ
ಭೀಕರ ಕಾಳಗರ್ಭವ ತೋರಬೇಡ!
ಸತ್ಯವಾನ್
(ಪೂಜೆ ಮುಗಿಸಿ)
ತರಳೆ, ಸಾವಿತ್ರಿ, ಹೊರಡುವೆನು; ಹೊತ್ತಾಯ್ತು. ೬೦
ಸಾವಿತ್ರಿ
ಪ್ರಿಯನೆ, ಇಂದಿನಾರಾಧನೆಯು ಹೇಗಿತ್ತು?
ಸತ್ಯವಾನ್
ಇಂತೇಕೆ ಕೇಳುತಿಹೆ! ಎಂದಿನಂತೆಯೆ, ರಮಣಿ.
ಸಾವಿತ್ರಿ
ಎಂದಿನಂತಿರಲಾರದಿನಿಯ!
ಸತ್ಯವಾನ್
ಸಾವಿತ್ರಿ,
ಇಂದೇಕೆ ನಿನ್ನ ರೀತಿಯೆ ಬೇರೆಯಾಗಿಹುದು?
(ಸಾವಿತ್ರಿ ಬೆಚ್ಚುತ್ತಾಳೆ.)
ಬೆಚ್ಚುತಿಹೆ ಏಕೆ?
ಸಾವಿತ್ರಿ
(ಸ್ವಗತ}
ಹೃದಯವೇ, ಸಿಡಿದೊಡೆಯ
ಬೇಡ, ಮನವೇ ಶಾಂತಿಯ ಹೊಂದು.
(ಗಟ್ಟಿಯಾಗಿ)
ಹೃದಯೇಶ,
ಬನಗಳಿಗೆ ಹೊರಡುವೆಯಾ? ನನ್ನನೂ ಕರೆದೊಯ್ಯು.
ಸತ್ಯವಾನ್
(ಸಾವಿತ್ರಿಯನ್ನೇ ಎವೆಯಿಕ್ಕದೆ ನೋಡಿ. ಸ್ವಗತ.)
ಇಂದೇನು! ಇವಳ ರೀತಿಯನರಿಯಲಾರೆ.
ವನದೊಳೆನಗಶುಭವಾಗುವುದೆಂದು ಬೆದರಿಹಳೊ
ಏನೊ!
(ಯೋಚಿಸುತ್ತಾ ನಿಲ್ಲುತ್ತಾನೆ.)
ಸಾವಿತ್ರಿ
(ಅವನನ್ನು ನೋಡಿ, ಸ್ವಗತ)
ಇಂದೆನಿತು ದಿವ್ಯವಾಗಿಹನೀತನ್ ೭೦
ಎನ್ನ ಕಂಗಳಿಗೆ! ಮನಕೆನಿತು ಪೂಜ್ಯನಾ
ಗಿಹನಿಂದು! ಹೃದಯಕೆ ಪವಿತ್ರನಾಗಿಹನು!
(ಬಹಿರಂಗ)
ಸತ್ಯೇಂದ್ರ, ನಟ್ಟ ದಿಟ್ಟಿಯೊಳೇನ ನೋಡುತಿಹೆ?
ಚಿಂತಿಸುವುದೇನು? ಬನಕೆನ್ನ ಕರೆದೊಯ್ಯ
ಲಾರೆಯಾ? ಜತೆಯೊಳಾನಿದ್ದರೇಂ ತೊಂದರೆಯೆ?
ಸತ್ಯವಾನ್
ಅದಕಲ್ಲ ನೀರೆ, ಹಿಂದೆಂದು ಬರದಿದ್ದ
ನೀನು, ಇಂದೇಕೆ ವನಗಳಿಗೆ? ನನಗೆ
ಅಮಂಗಳವಾಗಬಹುದೆಂದು ಬೆದರಿಕೆಯೆ?
ಸಾವಿತ್ರಿ
(ಉದ್ವೇಗದಿಂದ)
ಹೌದು,
ಪ್ರಿಯತಮೆ; ಹೌದು ಸತ್ಯೇಂದ್ರ, ಎದೆಯನ್ನ!
ಸತ್ಯವಾನ್
ಸುಮ್ಮನಿರು, ಮುಗ್ಧೆ, ಸುಮ್ಮನಿರು; ಬೆದರದಿರು ೮೦
ಬರಿದೆ. ಇಂದೇಕೆ ಇಂತುಟಾಲೋಚಿಸುವೆ
ಹಿಂದೆಂದು ಯೋಚಿಸದ ನೀನು?
ಸಾವಿತ್ರಿ
ಸತ್ಯವಾನ್,
ಪ್ರಾಣೇಶ, ಘೋರಸ್ವಪ್ನವದೊಂದ ನೋಡಿದೆನು!
ಅತಿ ಭಯಂಕರ ಕನಸು!
ಸತ್ಯವಾನ್
ಕನಸಿನೊಳಗೇನಿಹುದು,
ನೀರೆ? ಸ್ವಪ್ನವಾದರು ಏನು?
ಸಾವಿತ್ರಿ
ಹಳಿಯದಿರು
ಕನಸೆಂದು ನೀರ. ಘೋರ ಕಾನನದಲ್ಲಿ —
ಘೋರ ಕಾನನದಲ್ಲಿ — ನಾನೊಲ್ಲೆ, ನಾನೊಲ್ಲೆ —
ದುರ್ನುಡಿ ನಾ ನುಡಿಯೆ.
ಸತ್ಯವಾನ್
ಹೇಳು, ಸಾವಿತ್ರಿ!
ಸಾವಿತ್ರಿ
ನಿನ್ನ ಕೊಂಡೊಯ್ದಂತೆ ಕನಸಾಯ್ತು, ಇನಿಯ.
ಸತ್ಯವಾನ್
ಮೊಲದೆದೆಯು ನಿನ್ನೆದೆಯು! ಅದಕಿನಿತು ಭೀತಿಯೆ? ೯೦
ಸಾವಿತ್ರಿ
ಹಾಗಲ್ಲ ಪ್ರಿಯತಮಾ! ಕೇಳೆನ್ನ —
ಸತ್ಯವಾನ್
ಅದಕಾಗಿ
ಬರುವುದಾದರೆ ಬೇಡ.
ಸಾವಿತ್ರಿ
ಅದಕಲ್ಲ; ನಿನ್ನೊಡನೆ
ಹೂವಾಯ್ದು ವನದಲ್ಲಿ ಅಡ್ಡಾಡಬೇಕೆಂದು.
ಸತ್ಯವಾನ್
ಹಾಗನ್ನು! ಅದಕಿಷ್ಟು ಅಭಿನಯವು ಬೇಕೆ?
ಸಾವಿತ್ರಿ
(ಸ್ವಗತ)
ಹೇ ದೇವ! ಪತಿಯರಿಯ ನನ್ನೆದೆಯ ತಾಪವನು.
ಸತ್ಯವಾನ್
ಹೊರಗಿರುವೆ. ಬಾ, ಬೇಗ, ಹೊತ್ತಾಯ್ತು ಹೊರಡೋಣ!
ಬರುವಾಗ ತಂದೆ ತಾಯಂದಿರಿಗೆ ಹೇಳಿ ಬಾ!
(ಕೊಡಲಿ ತೆಗೆದುಕೊಂಡು ಹೊರಡುತ್ತಾನೆ.)
ಸಾವಿತ್ರಿ
ಪರಮೇಶ, ಪಾರುಮಾಡೆನ್ನ ನೀ ದಿನದ
ಅಳಲಿಂದ! ಪತಿಯನಗಲದ ತೆರದಿ ಭಕ್ತಿಯನು,
ಶಕ್ತಿಯನು, ದೃಢತೆಯನು ನೀಡು. ಹೋರಾಡಿ ೧೦೦
ಯಾದರೂ ಮೃತ್ಯುವಿನ ಅಣಲಿಂದ ಪತಿಯನುಳು
ಹುವ ತೆರದಿ ಮಾಡು. ಹೇ ದುಷ್ಟ ವಿಧಿಯೇ,
ಎನ್ನ ರಮಣನನೆಲ್ಲಿಗೊಯ್ಯುತಿಹೆ? ನಿನ್ನ —
ತಾಳೆಲೈ ನಾಲಗೆಯೆ, ದುರ್ವಚನಕೆಡೆಗೊಟ್ಟು
ಸತ್ಯಶಕ್ತಿಯ ದಹಿಸಬೇಡ! ಹೇ ದೇವ,
ಎನ್ನಿನಿಯನೊಡನಿಂದು ನರಕವಾದರೆ ನರಕ!
ಸಗ್ಗವಾದರೆ ಸಗ್ಗ ನಾಶವಾದರೆ ನಾಶ!
ಯಮರಾಯನೊಡ್ಡುತಿಹ ಪಾಶವಾದರೆ ಪಾಶ!
(ಹೊರಡುತ್ತಾಳೆ)

*************



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ