ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 3 - ಕಂಡನಾ ಹದಿಬದೆಯರಧಿದೇವಿಯ


ಪ್ರವೇಶಿಸಿತು ಪ್ರಥಮ ಕಿರಣಂ, ಪೃಥಿವಿಜಾತೆಯ
ಪರ್ಣಕುಟಿಯಂ, ತರಗೆಲೆಯ ತಡಿಕೆಗೋಡೆಯ
ಬಿರುಕಿನಿಂದೆ. ಕಂಡುದೇನಾ ಕದಿರ ಕಣ್‌ ಅಲ್ಲಿ ?
ಕಳೆಯುತೆ ವಿಭಾವರಿಯ ದೀರ್ಘತಾ ಕ್ಷೇಶಮಂ
ಪಾರುತಿರ್ದಳು ದೇವಿ ಇನ್ನೊಂದು ದೀರ್ಘತರ
ಸಂಕಟದ ದೀರ್ಘ ದಿನದವತಾರಮಂ ! ಆ
ಮರುಕೆದೆಯ ಬಿಸಿಲ್ಪಸುಳೆ ತನ್ನ ಕೋಮಲ ಕರದ
ಕಿಸಲಯೋಪಮ ಮೃದುಲ ರೋಚಿಯ ಬೆರಲ್ಗಳಿಂ
ಸೋಂಕಿ ಸಂತಯ್ಸಿದುದೊ ಸೀತೆಯ ತಪಃಕ್ಲಾಂತ
ಚರಣಾರವಿಂದಂಗಳಂ : ಹೈಮ ಶೈಲ ಶಿರ     ೧೦
ಗುಹೆಯ ಗರ್ಭದಿ, ಕಳ್ತಲಿಡಿದ ಕರ್ಗ್ಗವಿಯಲ್ಲಿ,
ಶೈತ್ಯದೈತ್ಯನ ಭಯಕೆ ಹೆಪ್ಪುಗಟ್ಟಿರ್ದ ನೀರ್
ಉತ್ತರಾಯಣ ರವಿಯ ಛವಿಯ ಚುಂಬನಕೆಂತು
ಮಂಜುಗಡ್ಡೆಯ ತನ್ನ ಘನನಿದ್ರೆಯಂ ದ್ರವಿಸಿ,
ಪೆಡೆನಿಮಿರ್‌ದೊಯ್ಯನೆ ಸುರುಳಿವಿರ್ಚ್ಚುವೊಲ್ ಸ್ರವಿಸಿ
ಪರಿವಂತುಟಾ ತಪಸ್ವಿನಿ, ವಂಶದೇವಾಂಶು
ಶುಶ್ರೂಷೆಯಿಂ ಸೊಗಸಿ, ಮರವಟ್ಟ ಮರವೆಯಿಂ
ಮೈತಿಳಿದು, ಕಣ್ದೆರೆದು, ಸುಯ್ದು ಸುತ್ತುಂ ನೋಡಿ,
ಕಯ್ಮುಗಿದಳಿಷ್ಟದೇವತೆಗೆ, ಮೈಥಿಳಿ, ಮನೋ
ರಾಮಚಂದ್ರಂಗೆ, ಕೈಮುಗಿದಳು ಸಮುದ್ರಂಗೆ  ೨೦
ಉಲ್ಲೋಲಕಲ್ಲೋಲ ಛಂದ ವೈಖರಿಯಿಂದೆ
ಮುಂದೆ ಪರ್ವಿರ್ದ ನೀಲಾನಂತತೆಯ ಮಹಾ
ಧೈರ್ಯದಾತೃವಿಗೆ. ಮೇಲಂ ನೋಡಿ, ಶಾಂತತಾ
ಪ್ರಜ್ಞಾಮಹೋದಾರನಾಕಾಶ ದೇವಂಗೆ,
ನಿತ್ಯಗುರುವಿಗೆ, ನಮಸ್ಕರಿಸಿದಳ್ ರಘುರಾಮ
ವರ್ಣರಮ್ಯಂಗೆ. ವಂದಿಸಿದಳಾಶಾರೂಪಿ,
ಮತ್ತೇಭ ಸನ್ನಿಭ ತಮೋವೈರಿ, ಪ್ರಾಚ್ಯಗಿರಿ
ಕಿರಣಕೇಸರಿಗೆ. ಆ ನಾಲ್ವರ ಕೃಪಾಶಕ್ತಿ
ಚೇತರಿಸಿತೆನೆ ತನ್ನ ಚೇತನದಿ, ಜಾನಕಿಗೆ
ಮಾಣ್ದತ್ತು ನಿರಶನವ್ರತಜನ್ಯ ನಿಶ್ಯಕ್ತಿ :            ೩೦
ಪ್ರಾಣಮಯಮಾಶ್ರಯಿಸಲನ್ನಮಯ ಕೋಶಮಂ
ತನುವ ತುಂಬಿತು ಬಲಮಭೌತಂ. ಅಕಾರಣಂ
ಸಂಚರಿಸಿತಾನಂದಮೊಂದಾತ್ಮಪಾತ್ರದಲಿ :
ಪೊನಲಿಟ್ಟಿಳಿದುವಶ್ರುಗಳ್ ಮಲಿನ ದೀನಾನನಾ
ಸಂಮ್ಲಾನ ನೇತ್ರಂಗಳಿಂ.
ಸ್ಥಾವರಸ್ಥಿತಿಯೊಂದು
ತಪಕೆ ಜಂಗಮತೆ ದೊರೆಕೊಳ್ವವೋಲೊಯ್ಯನೆಯೆ
ಮೇಲೆಳ್ದು, ಬಳಿಯೊಳೆಯೆ ನೆರಮೀಯಲೊಳ್ದೊರ್ವ
ತ್ರಿಜಟೆವೆಸರಿನ ರಾಕ್ಷಸೋತ್ತಮ ಸಖಿಯ ಕಯ್ಯ
ಸಾಹಾಯ್ಯಮಂ ಸನ್ನೆಯಿಂ ಬೇಡವೇಂದೆನುತೆ,
ಪನ್ನಗುಡಿ ತಡಿಕೆಪಡಿಯಂ ಕೆಲಕ್ಕೋಸರಿಸಿ     ೪೦
ಬಂದಳು ಬಯಲ್ಗೆ, ತನ್ನಿರ್ಕೆಯನುಳಿದು ಬರ್ಪ
ಬೆದರ್ದ ಜಿಂಕೆಯ ಕಣ್ಣವೋಲ್. ಕುಳಿರ್‌ದಿಂಗಳಾ
ಮುನ್ವೆಳಗು ಅಶೋಕವನ ವನಿತೆಯನ್ ಇರ್ಪ್ಪನಿಯ
ಮಿರುಗು ಮುತ್ತುಗಳಿಂದೆ ಸಿಂಗರಿಸಿ, ಮರಮರಕೆ
ನಿಡು ನೆಳಲ್ಗಳನಿತ್ತು ಬರ್ಚಿಸಿದವೋಲಿರ್ದ
ತರತರದ ಬಣ್ಣಬಣ್ಣದ ಅಲರ ತುರುಗಲಿನ
ಶೋಭೆಯಂ ಪೆರ್ಚಿಸುತೆ, ನಿಷ್ಕಾರಣಮೆನಲ್ಕೆ,
ಮೈಥಿಲಿಯ ಮನಕೊಂದು ತಂದುದಿಂಪಂ, ಅದರ್ಕೆ
ಶುಭ ಶಕುನಮಂ ಮಧುರಮುಲಿವವೋಲ್, ಮುಂದುಗಡೆ
ಬಳಿಯಿರ್ದ ಹಾಲಿವಾಣದ ಮರದ ಬರಲಾದ   ೫೦
ಹರೆಯ ತುಂಬಿದ ಕೆಂಬಲರ್ಗಳಿಗೆ ಹೂ ಕುಡಿಯೆ
ಬಂದೆರಗುತಿರ್ದ್ದ ಕನ್ನಡವಕ್ಕಿ ಕಾಜಾಣಗಳ್
ಹಾಡಿದುವು ಸಿಳ್‌ಸವಿಗಳಂ ಕೇಳಿ, ಮೇಲಂ ನೋಡಿ,
ಬಹುಕಾಲದಿಂದೆ ನಗದೊಂದು ನಗೆಯ ಮುಗುಳಂ
ಸುಳಿಸಿದಳ್ ಮೊಗದಿ. ಆ ಆನಂದಕೊಂದೇನೊ
ಹಿಮ್ಮೇಳಗಾನಮುಕ್ಕಿದ ತೆರದಿ, ತೆಕ್ಕನೆಯೆ
ಮಾಧುರ್ಯ ಗಿರಿಶೃಂಗಮೆನಿಪೊಂದು ಸುಂದರಂ
ಕೇಳ್ದತ್ತು ತೌರ್ಯತ್ರಿಕಂ. ಕಣ್ಗೆ ಕಂಗೊಳಿಪ
ಕುಸುಮಮಯ ವರ್ಣಕಿರ್ಮೀರತೆಯನೇಂ ಕಿವಿಗೆ
ಓಲೈಸುವುದೊ ಎನಲ್, ಆ ಇನಿದನಿಯವೊನಲ್.        ೬೦
ಜೋಗುಳಂಗೈದು ತೇಲಿಸಿತೆರ್ದೆಯ ದೋಣಿಯಂ
ಜಾನಕಯಾ. ಗಾನವಿದ್ಯಾಧರಂ ವಾಯುಜಂ
ಶಿಂಶುಪದ ಮೇಲೆಂತು ಬೆರಗಾದನಂತೆವೋಲ್
ರಾಮನರ್ಧಾಂಗಿಯುಂ ಬೆರಗುವಟ್ಟಿರೆ, ಮತ್ತೆ,
ಕೇಳ್ದು ಬಂದಂತೆವೊಲೆ, ತೆಕ್ಕನೆಯೆ, ನಿಂದುದಾ
ಇಂಚರದಮರ್ದುಸೋನೆ. ದೂರಮಿರವೇಳ್ದಖಿಳ
ಪರಿವಾರಮಂ, ಮೌನಮಿರಲೊರೆದಸುರ ಗಾನ
ಚತುರರಂ, ಲಂಕಾ ತಿಲೋತ್ತಮೆಯೆನಿಪ್ಪಂತೆ
ಮಿಂಚುತಿರ್ದಾ ತನ್ನ ತಂಗಿ ಚಂದ್ರನಖಿಯಂ,
ಮೇಣಿಂದು ನಸು ಖಿನ್ನಮುಖಿಯಾದಳಂ, ಬೆರಸಿ ತಾನ್            ೭೦
ಒರ್ವನೆಯೆ ನಡೆದು ಬಂದನೊ ದೈತ್ಯನೃಪವರಂ,
ಅಚ್ಚರಿಯೆನಲ್ ಸೌಮ್ಯವೇಷಂ ! ಪೀತಾಂಬರಂ
ಪೆಣೆದ ಶ್ವೇತಾಂಬರಂ ಸುತ್ತಿರಲ್ ಗಾತ್ರಮಂ
ಮನಮೋಹಿಪೋಲ್ ; ಮಿಂದು, ಮಡಿಯುಟ್ಟು, ದೇಗುಲಕೆ
ಜಾತ್ರೆ ನಡೆವವನಂತೆ ಐತಂದನಾ ಇಂದ್ರವೈರಿ,
ಕಣ್ಣರಿತು, ನೇರಮಿಳೆಗುವರಿಯಿರ್ದೆಡೆಗೆ !
ಅಂತಾ
ಲಂಕೇಶನಾಗಮಿಸುತಿರ್ದುದಂ ಕಂಡೊಡನೆ
ನಡುಗಿದಳ್ ವೈದೇಹಿ, ಕದಳಿ ಕಂಪಿಸುವೋಲ್
ಪ್ರವಾತಕೆ. ಅನೈಚ್ಛಿಕಂ, ಮುನ್ನೆ ಮುಚ್ಚಿದ ಮೆಯ್ಗೆ,
ಮುಚ್ಚಿಕೊಂಡಳ್ ಮತ್ತೆ ನಾರುಡೆಯ ಸೆರಗಂ, ೮೦
ನಿವಾರಿಸಲೆನಲ್ ದುಶ್ಶನಕ ದೃಷ್ಟಿಯಂ. ನೌಕೆ
ಹೊರೆಯ ಭಾರವ ತರಹರಿಸಲಾರದೆಯೆ ಕಡಲ
ನಡುವಳ್ದುವಂತೆ, ದುಃಖಕೆ ಭಯಕೆ ನಿರಶನಕೆ
ತತ್ತರಿಸಿ ಕುಸಿದಳ್ ರಘೂದ್ವಹನ ರಾಣಿ,
ಏಕವೇಣಿ. ಕಂಬನಿತುಂಬಿ ಪಿಡಿದೆತ್ತಲಾ
ತ್ರಿಜಟೆ, ಹಾಲಿವಾಣದ ಮರದ ಗಾತ್ರಮಂ ಬಲ್
ಪಿಡಿದದನೆ ಮರೆಯೊಡ್ಡಿ, ನೆಮ್ಮಿ, ನಿಂತಳು ಸೀತೆ,
ಬೆದರ್ದ ಧೃತಿಯಂ ಮರಳಿ ಹುರಿಮಾಡಿ.
ಬದ್ಧಭ್ರೂ
ಕರ್ಬುರೇಂದ್ರಂ ಖಿನ್ನಮುಖಿಯಾಗಿ ಕಂಡನಾ
ನೋಟಮಂ, ಬರ ಬಡಿದ ತೋಟಮಂ, ಬೇಟದ           ೯೦
ಬಿಸಿಗೆ ಕುಳಿರ್‌ಕೂಟಮಂ. ತಂಗಿಯ ಕಡೆಗೆ ತಿರುಗಿ,
ನೆಲಂ ನೋಡುತಿರ್ದಳನ್, ನಿಡುನೋಡಿದನ್. ಸಿಗ್ಗು
ಕೆರೆಯುಳಿದು ದಡಕೆ ನೆಗೆದಾ ಮೀನಿನೋಲಂತೆ
ಮಿಡುಮಿಡನೆ ಪುಡುಪುಡೊದ್ದಾಡಿಕೊಳುತಿರ್ದೆದೆಯ
ರಾವಣಂ ಬರಿದೆ ಸುಯ್ದನ್ ; ಬಗೆಯೊಳಾರನೊ
ಕಿಮುಳ್ಚಿ ಬಯ್ದನ್. ತನ್ನ ಕಿನಿಸಿಂಗೆ ತ್ರಿಜಟೆಯಂ
ಗುರಿಮಾಡಿದನ್ ಕೊನೆಗೆ : “ನಿನ್ನ ಸೇವಾಫಲಮೊ
ಮೇಣ್ ಸ್ತ್ರೀಸಹಜ ಛಲಮೊ ? ದೇವಿಗೀ ಪಾಂಗಿದೇನ್,
ತ್ರಿಜಟೆ ?” ಮೆಲ್ಲನೆ ನುಡಿಯುತಿರ್ದೊಡಂ, ಹೊಟ್ಟೆಯೊಳ್
ಸಿಟ್ಟು ಪೊಟ್ಟಣಗಟ್ಟೆ ಸಿಡಿವುದೆಂಬಂತಿರ್ದ,      ೧೦೦
ರಾಕ್ಷಸೇಶಧ್ವನಿಯ ಭೀಷ್ಮತೆಗೆ ಸೆಡೆತಳ್ಕಿ
ಬೆಪ್ಪುನುಡಿದಳ್ ‘ಅಪ್ಪುದಪ್ಪುದಿರ್ಪಳ್ ದೇವಿ !’
ಎಂದು. ‘ಇರ್ಪಳೆ ದೇವಿ ? ನಿನ್ನ ಕಾಪಿನ ಮೈಮೆ !
ಇರ್ಪುದಚ್ಚರಿಯಲ್ತೆ ?’ ಕಣ್‌ಕೆರಳಿ ಗುಡುಗಿದನ್
ಮುಂದೆ ‘ಇರ್ಪಳಿಲ್ಲವೊ ಅದನ್ ಕೇಳ್ದುದಿಲ್ಲಾನ್ !
ಕಣ್ಣಿರ್ಪುದೆನಗುಮ್, ಬೆಪ್ಪುತೊಳ್ತೆ ! -ಇರ್ಪ ಈ
ಪಾಂಗಿದೇನ್ ? ಈಕೆಯಾರ್ ? ಅಲ್ಲಿ ನಿಂತಿರ್ಪಾಕೆ ?’
ಸೀತೆಯಿರ್ದೆಡೆಗೆ ಕೈದೋರಿ ಮೊಳಗಿದನ್ ಆ
ಭಯಂಕರನ್ : “ಸೀತೆಯೋ ಪ್ರೇತವೋ ಪೇಳ್, ತ್ರಿಜಟೆ ?
ನಿದ್ದೆ ಪಾಸುಣಿಸು ಮೀಹಂಗಳಂ ಕಾಣದೀ       ೧೧೦
ಪೆಣ್ ಪೆಣ್ಣೊ ? ಮೇಣ್ ಪೆಣ್ಣೊಡಲಿನಸ್ಥಿಪಂಚರಮೊ ?
ಬಿನ್ನನಿರ್ದೇಕೆ ಪೀಡಿಪೆಯೆನ್ನ ಹರಣಮನ್ ?
ಮಾಣ್ ಪ್ರೇತಮೌನಮಂ, ಪ್ರೇತಪರಿಚಾರಿಕೇ,
ಮಸಣಗೈಯದಿರೀ ಅಶೋಕವನಮಂ !” ತ್ರಿಜಟೆ
ಬೆಬ್ಬಳಿಸಿದಳ್ : “ನೆನೆವಳಾ ರಾಮಚಂದ್ರನಂ
ಮೂರುವೊಳ್ತುಂ, ಸ್ವಾಮ !” ದೆವ್ವಕ್ಕೆ ಧೂಪಮಂ
ತೋರ್ದವೋಲೊದರಿದನ್ : ‘ಮಿಳ್ತು ಬರ್ಕೆಲ್ಲರ್ಗೆ,
ಪಾಳ್ ತೊಳ್ತೆ !’ ಎನುತೊಡನೆ ತಿರುಗಿದನ್ ರೋಷದಿಂ
ಚಂದ್ರನಖಿಯೆಡೆಗೆ : ‘ಏನಿದು, ಭಗಿನಿ ?’ ಎನಲವಳ್
ಮೊಗಮೆತ್ತಿ ಕಣ್ತುಂಬಿ ನೋಡಿ ತನ್ನಣ್ಣನಂ,       ೧೨೦
ಪೇಳ್ದಳತಿ ದೃಢವಾಣಿಯಿಂ : “ಸೀತೆ ಪೆಣ್ಣಲ್ತು
ನಮ್ಮನ್ನರೊಳ್, ದೈತ್ಯರಾಜೇಂದ್ರ : ದೇವಿಯಯ್ :
ನೀನಾಕೆಯಂ ಮೊದಲ್ ಕರೆದವೊಲ್ ಆ ಪೂಜ್ಯೆ
ದೇವಿಯೆ ದಿಟಂ !” ಕುದುರೆನಗೆ ನಕ್ಕನಸುರಂ
ತಿರಸ್ಕರಿಸುವೋಲ್ ; ಮತ್ತೆ ದುರುದುರುದುರನೆ ನೋಡಿ
ತನ್ನನುಜೆಯಂ : “ನಿಲ್, ಸಾಲ್ಗುಮಾನರಿತೆನ್ನ
ತಂಗೆ ನೀನಲ್ತೆ ?” ಮಿಂಚಿರಿವವೊಲ್ ಚಂದ್ರನಖಿ
ನುಡಿದಳ್ ತುಟಿಯ ಕೊಂಕಿನ ಕಠಾರಿಯಿಂ : “ದಿಟಂ
ನೀನಗ್ರಜಂ ! ದಿಟಂ ನೀನಸುರ ಕುಲ ನೃಪಂ !
ಆದೊಡೇನ್ ? ದಿಟವನೊರೆವೆನ್ ! ನಿನ್ನ ಕೈಯಿಂದೆ     ೧೩೦
ಹತನಾದನೆನ್ನ ಪತಿ ಪಾತಾಳಯುದ್ಧದೊಳ್.
ನೀನಿತ್ತ ವೈಧವ್ಯದಿಂದುರಿದೆನಾಂ. ಮತ್ತೆ,
ನಿನ್ನ ದೆಸೆಯಿಂದೆನಗನುತ್ತಮದ ಜೀವಿತಂ
ಮೊದಲಾಯ್ತು ! ಪಾಪಿ ನೀನ್ ಎನ್ನನುಂ ಪಾಪಕ್ಕೆ
ನೂಂಕಿದಯ್. ನಿನ್ನವೋಲೆನಗುಮಾ ಪಾಪಮೇ
ರುಚಿಯಾಯ್ತು. ಈ ಪೂಜ್ಯೆಯಿಂದರಿತೆ ಆ ರುಚಿ
ನರಕಮೆಂದು. ಆ ಕೂಪಕಿನ್ನೆಂದುಮಿಳಿಯೆನಯ್.
ನಿನ್ನನುಂ ಪ್ರಾರ್ಥಿಪೆನಿಳಿಯದಂತೆ !” ಬೆದರಿದನ್
ದಶಗ್ರೀವನೊಳಗೊಳಗೆ. ಮೇಲೆ ಕಿಚ್ಚುರಿದೆದ್ದು
ಕೂಗಿದೆನ್ : “ನೀನಾದೊಡಂ, ಆನಲೆಯಾದೊಡಂ,      ೧೪೦
ಮತ್ತಮಿನ್ನಾರಾದೊಡಂ ಇತ್ತಲೀ ಬನಕೆ
ಕಾಲಿಟ್ಟುದಂ ಕೇಳ್ದೆನಾದೊಡೆ.” ಎಂಬನಿತರೊಳ್
ಹೂಕುಡಿವ ಹಕ್ಕಿ ಕೆಡಹಿದ ಹಾಲಿವಾಣದ
ಮರದ ಕೆಂಪುವೂವೊಂದು ದೊಪ್ಪನೆರಗಲ್ ತಲೆಗೆ
ರಾವಣನ, ಕಿನಿಸಿ ತಲೆಕೊಡಹಿ, ಮೇಗಂ ನೋಡಿ,
ಕೊರಳ್ ಉರುಳ್ದಪು”ದೆಂದು ಪೂರೈಸಿದನ್ ತನ್ನ
ದುರ್ವಾಕ್ಯಮಂ ! ತಿತ್ತಿರಿಯೆಂದುಲಿಯುತಾ ಪಕ್ಷಿ
ಹಾರಿದುದು ಬೇರೊಂದು ಹರೆಗೆ ! ರಾವಣನೇಕೊ
ಮೌನಮಿರ್ದಾಲಿಸಿದನಾ ಪಕ್ಕಿಯುಲಿಹಮಂ !
ನಕ್ಕು, ತಂಗೆಗೆ ಮರಳಿ : “ದಿಟಕೆ ಪೇಳಿದೆನೆಂದು          ೧೫೦
ಬಗೆಯದಿರ್, ತಂಗೆ ! ನೀನರಿಯಲಾರೆಯೆ ನನ್ನ
ಗೂಢಾಂತರಂಗಮಂ ?” ಇದ್ದಕ್ಕಿದ್ದಂತೆವೋಲ್
ತನ್ನ ವೇಷಕೆ ತಗುವ ಸೌಮ್ಯತೆಯನಾಂತನಾ
ಕಾಮನಿಪುಣಂ. ಮಿಗುವ ವಿನಯದಿಂ ತಿರುಗಿದನ್
ಮೈಥಿಲಿಯೆಡೆಗೆ ಮತ್ತೆ :
ನಿನ್ನ ದುರವಸ್ಥೆಯಂ
ಕಂಡ ದುಃಖಕೆ ಕೋಪಿಸಿದೆನಾಂ, ಕ್ಷಮಾಪುತ್ರಿ,
ಕ್ಷಮಿಸೆನ್ನ ದುರ್ವಿನಯಮಂ. ಬ್ರತಮಿದೇನ್, ದೇವಿ,
ವಿಪರೀತಮೀ ಆತ್ಮಹತ್ಯೆ ? ನೀಂ ನಡೆಯುವಾ
ವೇದೋಕ್ತ ಧರ್ಮಮುಂ ಪಳಿಯುತಿದೆ, ಪೇಸುತಿದೆ
ನಿನ್ನ ನಡೆಯಂ. ಪೇಡಿಗಳ್ಗಿದು ತರಂ. ಪಥಂ    ೧೬೦
ತಾನಲ್ತು ಧೀರಮತಿಗಳ್ಗೆ. ಈ ಮಾರ್ಗಮಂ,
ಅಲ್ಪರೊಂದಪವರ್ಗಮಂ, ಬಿಟ್ಟುಕಳೆ, ಮಹಿಳೆ.
ನಾನರಿಯೆನೆಂದಲ್ತು ನಿನ್ನ ಮನದಾಳಮಂ ;
ನಾನಳೆಯೆನೆಂದಲ್ತು ನಿನ್ನೆರ್ದೆಯ ಗೂಢಮಂ ;
ನಿನ್ನ ಆದರ್ಶದುನ್ನತಿಗೇರದೆಂದಲ್ತು
ನನ್ನಾತ್ಮದಾಶೆ. ಆ ವ್ಯರ್ಥಪರ್ಯಟನದಿಂ
ಪುರುಷಾರ್ಥಮೇಂ, ಮಿಥಿಳೇಂದ್ರಸಂಭೂತೆ, ನಮಗೆ
ದೊರೆಕೊಳ್ವುದೌ ? ಸಾಹಸವನುಳಿ; ವಿವೇಕಮಂ
ಪುಗು ಶರಣ್. ಹೇ ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ
ನಿನಗೆ ರಾಮನ ವಾರ್ತೆ ? ದೇವ ದುರ್ಲಂಘ್ಯಮೀ         ೧೭೦
ಮಹಾಂಭೋಧಿ ನಿನಗುಮಾತಂಗುಮೆಂದೆಂದಿಗುಂ
ಸಾಧ್ಯಮಲ್ಲದ ಸಂಧಿಯಂ ಘೋಷಿಸುತ್ತಿದೆ ; ಕೇಳ್,
ಬುದ್ಧಿಮತಿ ! ನಿನ್ನನುಳಿದಾತನಿನ್ನಾವಳನೊ
ನೆರೆದು ಸುಖಿಯಾಗಿಹನ್ ಕಿಷ್ಕಿಂಧೆಯೊಳ್ ! ನನಗೆ
ತಿಳಿದುದೆಂತೆಂದು ಶಂಕಿಪ್ಪೆಯೇನ್ ? ತ್ರೈಜಗದಿ
ನನ್ನ ಬೇಹಿನ ಕಣ್ಗೆ ಬೀಳದಿಹುದೊಳದೆ, ಮೇಣ್
ಕಿವಿಗೆ ? ನಿನ್ನನ್ ತೊರೆದು ಮರೆತಾ ಕೃತಘ್ನನನ್
ನಿಷ್‌ಪ್ರಯೋಜನಮಿಂತು ನೆನೆನೆನೆದು, ಬೇಳ್ವೆಯೇನ್
ವ್ಯರ್ಥಮೀ ನಿನ್ನ ಹೂವಿನ ಜೀವಮಾನಮಂ ?
ಹರಧನುವನವನೆತ್ತಿ ಮುರಿದ ಮಾತ್ರದಿ ನಿನಗೆ ೧೮೦
ರಮಣನಪ್ಪೊಡೆ, ನಾನುಮದಕೆ ನೂರ್ಮಡಿ ಬಲದ
ಕಜ್ಜಮನೆಸಗಿ ತೋರಲಾರೆನೆಂದರಿಯದಿರ್,
ಪ್ರಾತಃಕಮಲನೇತ್ರೆ !”
ಶಿಂಶುಪಾಗ್ರದೊಳಿರ್ದು,
ಕೊಲೆಗೈವ ಪೊಲೆಪುಸಿಗೆ ಕುದಿವವೋಲನಿಲಜಂ
ರಾವಣನ ಜಲ್ಪಮಂ ಕೆರಳುತಾಲಿಸುತಿರಲ್,
ಮರನ ಮೆಯ್ಯಂ ನಂಬಿ ನಿಂದಿರ್ದ ಧರಣಿಸುತೆ
ಬಿಕ್ಕಿಬಿಕ್ಕಳುತಳುತೆ, ತಾಯಡಿಗೆರಗುವಂತೆ,
ಕೆಡೆದಳ್ ಕುಸಿದು ಬೇರ್ಗೆ. ತ್ರಿಜಟೆಯ ಸಹಾಯದಿಂ
ಕುಳ್ತಳಲ್ಲಿಯೆ ಮುದ್ದೆಮುದುರಿ.
ನಿನ್ನನೀವೋಲ್
ಸಂಕಟಕ್ಕೀಡುಮಾಡಿದ ನನ್ನ ನಾಲಗೆಯ       ೧೯೦
ಕಹಿನನ್ನಿಯಂ ಪೇಸುವೆನ್ ; ಮನ್ನಿಸದನಾರ್ಯೆ ;
ಮಿಥ್ಯೆಯಂ ನಂಬಿ ಕೆಡದಿರಲೆಂದು ಕಠಿನಮಂ
ಪೇಳ್ದೆನಲ್ಲದೆ ಮತ್ತೆ ಭಾವಿಸದಿರನ್ಯಮಂ,
ಸಚ್ಛೀಲ ಮುಗ್ಧೆ. ಕೈತವದಗ್ಧೆಯಾಗದಿರ್
ಪೋದ ಪುಸಿಗನಸೊಂದು ನಿರುತಮಾದಪುದೆಂದು
ಬಯಸಿ. ಇಲ್ಲದರ್ಕೆಳಸದಿರ್ ; ಇರ್ಪುದನೊಪ್ಪಿ
ಸೊಗವನುಣ್ !”
ಚೀರಿದುದು ಚಿಳಿಚಿಳಿಚಿಳಿಲ್ಲೆಂದು
ಹಾಲಿವಾಣದ ಹೂವಿನೆದೆಯೀಂಟುತಿರ್ದೊಂದು
ಚಿಟ್ಟಳಿಲ್. ಮೀರ್ದದರುಲಿಗೆ ಹುಬ್ಬುಗಂಟಿಕ್ಕೆ
ವಿರಮಿಸಿದನೀರೈದು ತಲೆಯ ಬಿರುದಿನ ಭೀಮ            ೨೦೦
ರಾಕ್ಷಸಂ. ಭೀತಿಯಂ ಕೆಲಕ್ಕೊತ್ತಿ, ದುಕ್ಕಮಂ
ಮೆಟ್ಟಿಕ್ಕಿ, ಸುಯ್ದೋರಿದುದು ಕೋಪಫಣಿ ಜನಕ
ನಂದಿನಿಯ ಮೌನವಲ್ಮೀಕದಿಂ :
ಪೇಳ್, ತ್ರಿಜಟೆ,
ಪಿತ್ತೋತ್ಪನ್ನ ಜಲ್ಪಕುತ್ತರವಿದಂ ನಿನ್ನ
ಅನ್ನದಾತಂಗೆ : ಕತ್ತೆಯ ತತ್ತ್ವಮಂ ಕತ್ತೆ
ಕತ್ತೆಗಳ್ಗುಪದೇಶಿಸಲ್ವೇಳ್ಕುಮಲ್ಲದೆಯೆ
ಉತ್ತಮ ರಘುಕುಲೋತ್ತಮನ ಸತಿಯ ಮುಂದದಂ
ಗಳಪಲ್ ಪ್ರಯೋಜನಮೆ ? ಪ್ರತ್ಯುತ್ತರಕ್ಕಮೀ
ಅರ್ಹನಲ್ತಲ್ಪಾಸು ! ಮರುಕಮಂ, ಕರುಣೆಯಂ,
ವಿನಯಮಂ, ಸೌಜನ್ಯಮಂ ನಟಿಸುವೀ ನಟನ            ೨೧೦
ಶುನಕಾಭಿನಯಕೆ ಧಿಕ್ ! ಪುಸಿವೇಳ್ವ ನಾಲಗೆಗೆ
ಧಿಕ್, ಧಿಕ್ ! ಕೋಟಿ ಧಿಕ್ ! ಇವನ ಪೊಲೆಸಿರಿಗೆ ಧಿಕ್ !
ಇವನ ಬಲ್ಮೆಗೆ ಲಕ್ಷಧಿಕ್ ! ಉಗುಳುಮಪವಿತ್ರಮಕ್ಕು,
ಈತಂಗೆ ಪೇಸಿ ಆ ದಿಕ್ಕಿಗೆಂಜಲನೆಸೆಯೆ ನಾಂ !
ಶ್ರೀ ರಾಮಚಂದ್ರನೆಲ್ಲಿರ್ದೊಡಂ ನನಗೆ ಪತಿ !
ಶ್ರೀ ರಾಮನೆಂತಿರ್ದೊಡಂ ನನಗೆ ಪತಿ ! ಸತ್ತೆ ನಾಂ
ಸೇರ್ದಪೆನಾತನೊಡನೆ ; ಬದುಕಮೇಧ್ಯಮೆ ದಿಟಂ
ಇನ್ನರಿರ್ಪೀ ಜಗದಿ ! ಈ ಸೊಣಗಮರಿಯದಾ
ಭೀಮ ವಿಕ್ರಮಿ ರಾಮ ಮಹಿಮೆಯಂ. ಬಲ್ಲೆನಾಂ.
ಪೇಳ್, ತ್ರಿಜಟೆ, ನಿನ್ನನ್ನದಾತಂಗೆ. ಕೂಳ್ ಕೊಟ್ಟು         ೨೨೦
ಸಲಹಿದಾ ಜೋಳವಾಳಿಗೆ ಉಪಕೃತಿಯನೆಸಗಿ
ಋಣಮುಕ್ತೆಯಾಗು. ಪಾಪಿಗೆ ಮೋಕ್ಷಮೆಂತಂತೆ
ದುರ್ಲಭಳ್ ನಾನೀ ನಿಶಾಚರಗೆ. ನಾಂ ಮುನ್ನೆ
ಗೆಂಟರಿಂ ಕೇಳ್ದ ರಾಕ್ಷಸವಿಕೃತಿ, ಪೊರಗಲ್ತು,
ಒಳಗಿರ್ಪುದೀತಂಗೆ. ಕೇಳದೊ ವಿಹಂಗಮಂ
ಕುಕಿಲಿದೆ ಭವಿಷ್ಯಮಂ : ತರುವುದೀ ಸಾಗರಂ
ತಾನೆ ಸೇತುವೆಯಾಗಿ ರಾವಣನ ಮೃತ್ಯುವಂ,
ಬೇಗಮಿವನೆನ್ನನಾ ಮುನ್ನಮೊಪ್ಪಿಸದಿರಲ್
ಆ ಕೃಪಾಕರನಡಿಗೆ ಮುಡಿಯಿಟ್ಟು !”
ತ್ರಿಜಟೆಯಂ
ಕುರಿತಿಂತು ತನಗೆ ಪೇಳ್ದುದನಾಲಿಸಿದನಾ      ೨೩೦
ತ್ರಿಕೂಟಲಂಕಾಧಿಪಂ. ಕಟು ತಿರಸ್ಕೃತಿಗದೆಯ
ಘಾತಕ್ಕೆ ಕಣ್ಮುಚ್ಚಿದನ್ ; ಸತ್ತು ಪುಟ್ಟಿದೋಲ್
ಮತ್ತೆ ಕಣ್ದೆರೆದನಾರಕ್ತೇಕ್ಷಣಂ :
ಅಣುಗಿ ನೀಂ ;
ನೀನರಿಯದಾಡಿದರೆ ನಾನುರಿವೆಯೆಂಬೆಯೇನ್ ?
ನಿನಗೆ ಅಲ್ಪಾಹಾರದಿಂ ಮತಿಭ್ರಮಣೆಗಿರ್ಪುದು
ಸುಕಾರಣಂ !-ತ್ರಿಜಟೆ, ಕೇಳ್ ಲಂಕೇಶನಾಜ್ಞೆಯಂ.
ಮತ್ತೆ ಪೇಳ್, ಉಣಿಸಿಲ್ಲದೀ ಮೆದುಳ್‌ಗೆಟ್ಟಳ್ಗೆ
ಬುದ್ಧಿಸ್ಥಿರತೆ ಮರಳ್ದಾಮೇಲೆ. ಮೊದಲ್, ಇಲ್ಲಿ
ಬಂದಿರ್ದರಾರೆಂಬುದಂ. ಪೇಳ್ದುದೇನೆಂಬುದಂ
ಮತ್ತೆ. ಇನ್ನೆರಳ್ ತಿಂಗಳಿಹುದಿತ್ತವಧಿ. ಆ        ೨೪೦
ಮೇರೆಯೊಳ್ ಪುರ್ಚಿನೀ ಬಗೆಕದಡು ಹಣಿಯದಿರೆ,
ಭೇಷಜಂ ಬರ್ಪುದು ಬಲಾತ್ಕಾರ ರೂಪಮಂ
ತಾಳ್ದು ! ಮೇಣ್,” ಸುಯ್ದು ನಿಡುನೋಡುತಾ ಸೀತೆಯಂ
ವಿರಳಾಕ್ಷರದಿ ತಡೆತಡೆದು ನುಡಿದನಿಂತು : “ಮೇಣ್,
ನಿರಶನವ್ರತರೂಪದಾತ್ಮಹತ್ಯೆಯಿನಾಕೆ
ಮಡಿಯುವೊಡೆ, ಅದೆ ಚಿತೆಯನೇರುವೆನ್ ; ಪೆಣದೆಡೆಯೆ
ಪವಡಿಪೆನ್ ; ಭಸ್ಮರೂಪದಿನಾದೊಡಂ ಕೂಡಿ
ಪೊಂದುವೆನ್ ಸಾಯುಜ್ಯಮಂ !”
ಕೊರಳ್ ಗದ್ಗದಿಸೆ
ನುಡಿದು, ಹಿಂತಿರುಗಿದನು ಲಂಕೇಶ್ವರಂ, ಬಂದ
ಬಟ್ಟೆಯೊಳೆ. ಕಾಯ್ದು ಕಬ್ಬುನವಿಕ್ಕಿದಂತಾಯ್ತು ೨೫೦
ರಕ್ಕಸನ ಕಡೆನುಡಿಯ ಕರ್ಕಶವನಾಲಿಸಿದ
ಕಿವಿಗೆ ಜಾನಕಿಗೆ. ಮರಣಂ ತ್ರಿಗುಣಘೋರಮೆನೆ
ತೋರೆ, ಬರ್ದುಕಿನ ಕಡೆಗೆ ಬಾಗಿತು ಮನಂ. ಮತ್ತೆ,
ಭೇಷಜಂ ಬರ್ಪುದು ಬಲಾತ್ಕಾರ ರೂಪಮಂ
ತಾಳ್ದೆಂಬ ವಿಷವಚನಮಂ ನೆನೆದು, ಮಿತ್ತುವಂ
ನೀನೆ ಗತಿ ರಕ್ಷಿಸೆಂದಪ್ಪಿದಳ್ ಮಾನವತಿ ಆ
ಸೀತೆ. ಭೀಕರಮಾಗೆ ಮಿತ್ತುಬಾಳೆರಡುಮುಂ,
ದೆಸೆಗೆಟ್ಟೊರಲಿದಳ್ ಧರೆಯ ಕುವರಿ ! ಕೇಳ್ದದಂ
ತ್ರಿಜಟೆ, ತಾನುಮಳುತುಂ, ಸಂತೈಸತೊಡಗಿದಳ್
ಮನುಜೇಂದ್ರನರ್ಧಾಂಗಿಯಂ :
ಸಂತಾಪದಗ್ಧೆ,    ೨೬೦
ಸ್ವಪ್ನ ಕೇಸರಿಗಳ್ಕಿ ನೈಜ ನೈರಾಶ್ಯಕ್ಕೆ
ಬಲಿಗೊಡದಿರಾಶಾಬ್ಜಮಂ. ಪೇಳ್ದುದನಿತುಮುಂ
ಪುಸಿ ರಾಕ್ಷಸೇಶ್ವರಂ : ರಾಮನಿನ್ನೊರ್ವಳಂ
ಕೂಡಿ ನಿನ್ನಂ ಮರೆತುದಾವ ನನ್ನಿಯೊ ಅಂತೆ,
ನಿನ್ನಂ ಬಲಾತ್ಕರಿಪುದುಂ ನಿನ್ನೊಡನೆ ಚಿತೆಗೆ
ಬೇಳ್ವುದುಂ ನನ್ನಿಗಳ್ ! ಬಲ್ಲೆನಾನಾತನಂ.
ಬಲದಿನೆಳತಂದೊಡಂ ಬಲದೊಳೊಡವೆರೆವನಿತು
ಪಶುಮಾತ್ರನಲ್ತು ; ಕಾಮುಕನಪ್ಪೊಡಂ ಮೆಚ್ಚಿ
ಬಗೆಸೋಲ್ತರನ್ನಲ್ಲದೆಯೆ ಸೋಂಕನಾವಗಂ ;
ಕಠಿಣನಾದೊಡಮಸಂಸ್ಕೃತನಲ್ತು ; ನಾರಿಯಂ           ೨೭೦
ಮೀರಿ ಕೂಡುವ ಪೇಡಿಯಲ್ತು ; ಪೌರುಷಶಾಲಿ
ತಾನಾವಗಂ !”
ಪುಸಿಯೆ ಪೇಳ್ದೆಲ್ಲಮುಂ, ತ್ರಿಜಟೆ ?”
ಸೀತೆ ಬೆಸಗೊಂಡಳತಿದೀನರವದಿಂ. ತ್ರಿಜಟೆ
ಧೈರ್ಯಮಂ ಕರೆವ ದೃಢವಾಣಿಯಿಂ: “ಪುಸಿ ದಿಟಂ;
ನನ್ನಾಣೆ ! ಪ್ರಾರ್ಥಿಸುವೆನೊಳಸೋರದಿರ್, ದೇವಿ.
ಆ ಚಂದ್ರನಖಿಯುಮಂ ಧವಳಮಾರ್ಗಕೆ ಗೆಲ್ದ
ನಿನಗೆ ನಿನ್ನುದ್ಧಾರಮನತಿದೂರಂ ವಲಂ !
ಮೇಣ್, ಕೇಳ್, ಪೇಳ್ವೆನೊಂದಂ ಸ್ವಪ್ನಸಾಕ್ಷಿಯಂ,
ಕಡೆಯ ಜಾವದೊಳಿಂದು ನಾಂ ಕಂಡುದಂ :” ಸೀತೆ
ಮೂಡಿದಾಶೆಗೆ ಕಣ್ಣರಳಿ ಕಿವಿಗೊಡಲ್, ತ್ರಿಜಟೆ ೨೮೦
ಕಣ್‌ತೊಯ್ದು ಮುನ್ನೊರೆದಳಿಂತು : “ಪುಣ್ಯಶಾಲಿನಿ,
ನೆನೆಯೆ ರೋಮೋದ್ಗಮಂ ಸಂಭವಿಪುದೆನಗೆ ಆ
ಸುಸ್ವಪ್ನಮಂ ! ಸೂಚಿಪುದು ನಿನಗೆ ದಲ್, ಭದ್ರೆ,
ಶುಭ ಶಕುನಮಂ !–ಸರೋವರಮೊಂದರೊಳ್ ಕಂಡೆನ್
ಅಬ್ಜಂಗಳೆರಡಂ, ಸಹಸ್ರದಲ ವಿಭವದಿಂ
ಶೋಭಿಸುತ್ತಿರ್ದುವಂ. ನೀಲಮೆಸೆದತ್ತೊಂದು ;
ಕನಕಸುಂದರಮಿರ್ದುದಿನ್ನೊಂದು. ತೆಂಬೆಲರ್
ತೀಡೆ, ತುಂಬಿಗಳಾಡೆ, ಚುಂಬಿಸುವವೋಲೊಂದು
ಮತ್ತೊಂದನಿನಿತು ಸೋಂಕುತ್ತಲ್ಲಿ ಸೊಗಯಿಸಿರೆ,
ನಕ್ರಮೊಂದೆದ್ದುದತಿಭೀಕರಂ, ಕೊಳದ ನೀರ್  ೨೯೦
ಭಯಚಕತಿಮಾಗೆ. ಕರ್ಕಶ ಖರ್ಪರಾಜಿನದ
ಆ ನೆಗಳ್ ಮೆಲ್ಲಮೆಲ್ಲನೆ ಹತ್ತೆ ಸಾರ್ದುದಾ
ಪೊನ್ದಾವರೆಯ ಸುಖಸ್ಪರ್ಶಕೆರ್ದೆಸೋಲ್ತವೋಲ್
ಮೂಗು ಮುಸುಡಿಯನರಳಿಸದರ ಕಂಪಂ ಮೂಸಿ
ಮೂಸಿ. ನಡುಗಿತು ಮಲರ್, ಪೇಸಿ. ನೋಡುತಿರೆಯಿರೆ,
ಮಕರಂದ ಪಾನದೊಳ್ ಮಗ್ನಮಿರ್ದಳಿಕುಳಂ
ಭೋಂಕನೆಯೆ ಝೇಂಕರಿಸುತೆದ್ದು, ಮೊಸಳೆಯಮೇಲೆ
ಬಿದ್ದು, ಕೊಂದುವು ಕಚ್ಚಿ, ಪುಚ್ಛಬಾಣಂಗಳಿಂ
ಚುಚ್ಚಿ ! ಕುಂಭೀರಮದು ತೇಲಿ ಬರಲೆನ್ನೆಡೆಗೆ,
ಕಂಡುದು ಕಳೇಬರಂ ದೈತ್ಯೇಂದ್ರನಾ ! ಬೆಚ್ಚಿ  ೩೦೦
ತಾವರೆಯೊಳಿರ್ದ ನಿನ್ನಂ ಕಂಡೆನಚ್ಚರಿಯ
ತೇಜದಾ ನೈದಿಲೆಯನಪ್ಪಿರ್ದಳಂ ! ಕುಮುಟಿ
ಕಣ್ದೆರೆಯೆ, ಕಂಡೆ ನಿನ್ನಂ ಧ್ಯಾನಮಗ್ನೆಯಂ,
ಪದ್ಮಾಸನಸ್ತಿಮಿತೆಯಂ !”
ಮಿಂಚಿದುದು ಬಗೆಗೆ
ಸೊಗದಿಂಪು ಮೈಥಿಲಿಗೆ. ಉಕ್ಕುವಕ್ಕರೆಯಿಂದೆ
ತಬ್ಬಲೇಳ್ತರೆ ಕೆಳದಿಯಂ, ತ್ರಿಜಟೆ ಕೈತಡೆದು
ಸನ್ನೆಗೈದಳ್, ಕಣ್ಗೆ ಬೀಳದಿರ್ಪೊಡಮಲ್ಲಿ
ಸುತ್ತಲುಂ ಕಾವಲಿರ್ಪುದನವಳ ಜಾಣ್ಮತಿಗೆ
ತಿಳುಹಿ. ಸಂಹರಿಸಿದಳ್ ಸೀತೆ ತನ್ನಾತ್ಮದಾ
ಬಹಿರಂಗದುತ್ಸಾಹಮಂ. ಸುಯ್ದು ಪರ್ಚಿದಳ್  ೩೧೦
ಕಿವಿಗೆ: “ನಿನ್ನನ್ನರಿಂ ಸುಕ್ಷೇಮಮೀ ಲಂಕೆ,
ತ್ರಿಜಟೆ. ರಾಕ್ಷಸ ನೀಚನಪವಚನ ನಿಚಯಮಂ
ನೂಂಕಿ, ಭೀರುಗೆ ಧೈರ್ಯಮಂ ನೀಡಿತಯ್ ನಿನ್ನ
ವಾಣಿ. ಕನಸಿಗೆ ಮಿಗಿಲ್, ನಿನ್ನ ಹರುಷಮೆ ನನಗೆ
ಕೊಟ್ಟಪುದು ಕಲ್ಯಾಣಮಂ. ನನಗುಮೊಂದಾಯ್ತು,
ಸಖಿ, ಸುಖಸ್ವಪ್ನಮದನುಸುರಲ್ಕೆ ನಾಣ್ಚುವೆನ್ !
ಈ ದುಷ್ಟನಪಚಾರದಿಂದೆನ್ನ ಬಗೆ ಕದಡಿ
ವಿಹ್ವಲಿಸುತಿರ್ಪೊಡಂ, ಇಂದು ಪೊಳ್ತರೆಯಿಂದೆ
ನಿರ್ನೆರಂ ಸಂತೋಷಮುಕ್ಕುತಿಹುದಾತ್ಮಕ್ಕೆ,
ಕ್ಷೇಮಂ ಸಮೀಪಿಸಿದವೋಲ್ !” ಮಾಗಿಯೆಳವಿಸಿಲ್     ೩೨೦
ಬನ ಪಸುರ್ ಸಿರಿಯೊಡನೆ ಸರಸವಾಡುತ್ತಿರ್ದ್ದ
ಚಂದಮಂ ಕಣ್ ಸುಳಿಸಿ ಕಂಡು, ಸೀತಾದೇವಿ
ಇಂದಿದೇನ್ ಚೆಲ್ವು, ಸಖಿ, ಶಿಶಿರ ಸಾಮ್ರಾಜ್ಯಕ್ಕೆ
ಓಲೈಸುತಿದೆ ಚೈತ್ರಸೌಂದರ್ಯಮಂ ? ಅದೋ
ಆ ಭವ್ಯ ಶಿಂಶುಪಾಂಘ್ರಿಪಮಿಂತು ಮನ್ಮನಕೆ
ಪಿಂತಾವಗಂ ತಂದುದಿಲ್ಲಮನುಭೂತಿಯಂ
ರಾಮಸಾನ್ನಿಧ್ಯದಾ !” ಮೊಗಮಾಗುತತ್ತಣ್ಗೆ
ನೋಟಮಂ ಕೀಲಿಸಿದ ಸಾಶ್ರುಸುಖನೇತ್ರೆಯ
ಸುಖಕೆ ಸುಖಿಸುತಾ ತ್ರಿಜಟೆ, ತನ್ನ ಕನ್ನೆಗೆ ತಾಯಿ
ಬೇಡುವಳ್ಕರೆಯಿಂದೆ, ಬಿನ್ನಯ್ಸಿದಳ್ : “ಮಗಳೆ,          ೩೩೦
ಬರ್ದುಕಿರಲ್ ಕಾಣ್ಬೆಯೊಳ್ಪಂ. ಸೇವಿಸಲ್ಪಮಂ,
ತೀರ್ಥಪ್ರಸಾದಂಗಳೊಲ್, ಫಲಜಲಂಗಳಂ,
ಪ್ರೀತಿಯಿಂದಾನೀವುದಂ.” ಸೀತೆ ಮೊಗದಿರುಹಿ,
ತ್ರಿಜಟೆಯಂ ಸಂಪ್ರೀತಿಯಿಂ ನೋಡಿ : “ನಿನ್ನಾಶೆ
ಮಂಗಳಂ ನನಗೆ. ಆ ಶಿಂಶುಪದ ಪಾದಮಂ
ತೊಳೆದು ಪರಿಯುವ ನಿರ್ಝರಿಣಿಯೊಳ್ ಮೊಗಂದೊಳೆದು,
ಬಳಸಿರ್ಪ ತರುಗುಲ್ಮಕೃತಿಯ ಏಕಾಂತದೊಳ್
ಕುಲಗುರುಗೆ ರವಿಗೆ ಅರ್ಘ್ಯವನೆತ್ತಿ, ಬಂದಪೆನ್
ಪೂಜೆಯಂ ಪೂರೈಸಿ.” ಮೆಲ್ಲನೆತ್ತಿದಳವಳ
ಕೈವಿಡಿದು ; ಮತ್ತಮೊರೆದಳ್ ತ್ರಿಜಟೆ : “ಸುತ್ತಲುಂ       ೩೪೦
ಕಾಪಿರ್ಪುದಂ ನೆನೆದು, ನೆನೆಯದಿರಕಾರ್ಯಮಂ,
ದೇವಿ. ನಿನ್ನ ಹರಣಕ್ಕೊತ್ತೆಯಿಟ್ಟಿಹೆನೆನ್ನ
ಹರಣಮಂ. ನಿನ್ನುಸಿರಿಗೇನಾದೊಡಂ ಕೇಡು
ಸಂಭವಿಸೆ, ನೇಲುವುದು ನನ್ನ ಪೆಣಮದರ ಬಳಿ ;
ತಿಳಿ, ಮಗಳೆ !”
ಮಂದಸ್ಮಿತಂ ಬೆರಸಿ ರಾಮಸತಿ,
ಕಿಂಕರಿಯ ಶಂಕೆಯಂ ದಿಟ್ಟಿಯಿಂದಪಹರಿಸಿ,
ಒಯ್ಯನಿಳಿದಳು ನಿರ್ಝರಿಣಿ ತಟಿಗೆ. ಪೊಕ್ಕಳಾ
ತ್ರಿಜಟೆ ತೃಣಕುಟಿಗೆ, ಪಣ್ಣುಣಿಸನಣಿಮಾಡಲಾ
ಪತಿವ್ರತೆಯ ವ್ರತಕೆ. ಸಿಸಿರದ ಬಿಸಿಲ್ ಹಿತಮಾಗೆ,
ಕುಳಿರ ಚಳಿಯಂ ಗೆಲ್ದೆರಂಕೆಯ ವಿಹಂಗಗಳ್   ೩೫೦
ಬಂಡೀಂಟಿ, ಪಣ್ಣುಂಡು, ಕೊಂಬೆಕೊಂಬೆಗೆ ನೆಗೆದು
ದಾಂಟಿ, ಹಾರಾಡುತಿರ್ದುವು ಹಾಡಿ ದಶರಥನ
ಸುತನ ಮಡದಿಯ ಮಹಾಯಾತ್ರೆಯನೊಲಿದು ನೋಡಿ !





***********************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ