ಪುಟಗಳು

24 ಮೇ 2018

ಶ್ರೀರಾಮಾಯಣ ದರ್ಶನಂ: ಲಂಕಾ ಸಂಪುಟಂ: ಸಂಚಿಕೆ 12 - ಸೈನ್ಯ ಗುಪ್ತಿ


ಏನು ಮೌನವಿದೆನ್ನ ಕೋಮಲೆ? ಕೋಪವೆ ನಿನಗೆ
ಕಾಮಿಸಿದನಿನಿಯನೆಂದನ್ಯ ವಿಷಯ ವಧೂ
ಸರೋಜ ಶಾರದೆಗೆ? ತಂಗೆಗೆ ಕರುಬುವರೆ, ಪೇಳ್,
ಉದಾತ್ತೆ ನೀಂ? ರೂಪಕ ರೂಪಿಯಾದೊಡೇನಾ
ಪ್ರೇಮಮುಂ ರಾಮ ಮಹಿಮಾ ಕೀರ್ತಿ ಕಥೆಯಲ್ತೆ?
ಕವಿಯಲ್ಮೆ ಕಡಲಲ್ತೆ? ಬಡಬ ಕುಂಬೋದ್ವವರ್
ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್
ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್,
ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ
ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ ೧೦
ಹರಜಟಾ ಜೂಟಪ್ರಪಾತ ಗಂಗಾ ಸ್ರೋತಮಂ
ಸಂಗೀತಮಂ!
ಶುಕಂ ಸ್ವೇಚ್ಛೆಯಿಂದರಿಗಳ್ಗೆ
ಸೆರೆವೋದುದಂ, ತಾಂ ಕಂಡ ರಿಪು ಬೃಹದ್ಬಲದ
ರುಂದ್ರ ಸಾಮರ್ಥ್ಯಮಂ, ರಾಮಂಗೆ ಸ್ನೇಹಂ
ವಿಭೀಷಣನ ಕೂಡೆ ದೊರೆಕೊಂಡುದಂ, ದುರ್ಗಮಂ
ಲಗ್ಗೆನುರ್ಗ್ಗಲ್ ಕಪಿನೃಪನ ದಂಡಯಾತ್ರಾ
ಪ್ರಚಂಡ ಸನ್ನಾಹಮಂ ಬಣ್ಣಿಸಿದನಸುರಂಗೆ,
ಭಯ ಗದ್ಗದಂ ಬೆರಸಿ, ರಾಮ ಸೇನಾ ಶಿಬಿರ
ಮೃತ್ಯು ಪಂಜರದಿಂ ಜಗುಳ್ದು ಜುಣುಗಿ ಬಂದಾ
ಸಾರಣಂ. “ಹಂಚದಿರು ನಿನ್ನಳ್ಕನಿತರರಿಗೆ! ೨೦
ನಡೆ, ಹೊಂಚಿ ಬಂದೊರೆಯುತಿರು ನನಗೆ ವೈರಿಯ
ರಹಸ್ಯಂಗಳಂ.” ಎನುತೆ ತೊಲಗಿಸಿದನಾತನಂ
ಪುರ್ವು ಜರ್ವಿಂ. ಒಡನೆ ಬರಿಸಿದನು ಸಂಜ್ಞೆಯಿಂ
ಸನಿಹದೊಳೆ ತೆರೆಯ ಮರೆಯೊಳ್ ಕಾವಲಡಗಿರ್ದ
ದುರ್ಮಂತ್ರಸಿದ್ಧನಂ, ಕಪಟ ಕೋವಿದನಂ,
ಕಠೋರ ಮತಿ ಶಾರ್ದೂಲನಂ. ಮೊಸಳೆ ಮೋರೆಯಾ
ಕ್ರೂರ ಚಾರಿಗೆ ಬೆಸಸಿದನು ದೈತ್ಯ ದೇವಂ :
ಸಮೀಪಿಸುತ್ತಿದೆ ಕಪಿಧ್ವಜ ಗಜಂ, ಶಾರ್ದೂಲ,
ಕಲಂಕಲೀ ಅಕಳಂಕ ಲಂಕಾ ಸರೋಲಕ್ಷ್ಮಿಯಂ.
ಮಂತ್ರಯಂತ್ರಂಗಳಂ ಸೃಜಿಸಿ, ಗುಪ್ತ ವಿಧದಿಂ, ೩೦
ಪಡೆ ನಡೆಯುವೆಲ್ಲೆಡೆಗಳಂ ಮಿತ್ತವಿಂದಡಕಿ
ತಡೆಗಟ್ಟುತಿರ್! ಅಸುರ ವಾಹಿನಿಗಳನಿತರೊಳ್
ಮೃತ್ಯು ಮೇಖಲೆಯಾಗಿ ನಿಲ್ವುವೀ ದುರ್ಗಮಂ
ನೀಚ ನರ ನಿಷ್ಠ ಕಪಿದುಷ್ಟರಿಂ ಸಂರಕ್ಷಿಸಲ್!”
ಆಜ್ಞೆಯಂ ನಡೆವುದಲ್ಲದೆ ನಿನಗೆ ಸಲಹೆಯಂ
ಪೇಳ್ವುದಲ್ತೆನ್ನ ಧರ್ಮಂ. ಸ್ವಾಮಿಭಕ್ತಿಯಿಂ
ಬಿನ್ನೈಪೆನೆನ್ನ ಮನಮಂ. ಮಂತ್ರಯಂತ್ರಗಳ್,
ಸುವ್ರತಂ ಪ್ರತಿಭಟಿಸೆ, ಕಳೆದುಕೊಳ್ಳುತೆ ತಮ್ಮ
ಶಕ್ತ್ಯಂಶಮಂ, ಕರೆಯಲಾರವು ಪೂರ್ಣ ಫಲಮಂ:
ಕಿಡಿಸವೇಳ್ಕುಂ ಮೊದಲ್ ವ್ರತಪ್ರತೀಕಾರಮಂ. ೪೦
ವಾನರರ ಸರ್ವ ಸೈನ್ಯಕೆ ಮಿಗಿಲ್ ಗುರುವೈರಿ
ನಮಗೆ ಸೀತಾವ್ರತಂ! ಸತಿ ಪತಿವ್ರತೆಯೆಂಬ
ಧರ್ಮಧೈರ್ಯಮೆ ಭಯಂಕರತರಂ ನಮಗಾ
ರಘೂದ್ವಹ ನಿಷಂಗ ನಾರಾಚಂಗಳಿಂ! ಅದರಿಂದೆ
ಹದಿಬದೆಯ ನೋಂಪಿಯಂ ಸೋಲಿಸಲ್‌ವೇಳ್ಪುದುಂ
ಕದನದೊಳೆಮಗೆ ಮೊದಲ ಗೆಯ್ಮೆ!”
ಶಾರ್ದೂಲನಂ
ನೋಡಿದನು ನೀಡುವೊಳ್ತು ದನುಜನನಿಮಿಷನಾಗಿ
ಚಿಂತಾಬ್ಧಿಯಲ್ಲದ್ಧಿ. ಬಹುದಿನಗಳಿಂ ಕಾಂತಿ
ಕುಂದಿದಾನನಕೆ ಶಾಂತಿಯ ತೇಜಮಂಕುರಿಸಿ
ನಕ್ಕನೊಯ್ಯನೆ, ಮುದಂ ಮಿಕ್ಕನೋಲ್, ತನಗೆ ತಾನ್. ೫೦
ಸುಯ್ದು, ಶಾರ್ದೂಲಂಗೆ ನುಡಿದನಾತ್ಮಸೌಮ್ಯಂ
ವ್ಯಂಗ್ಯ ವಾಕ್ಯಂಗಳಂ:
ನೀನೊರೆವುದತಿ ದಿಟಂ,
ಶಾರ್ದೂಲ. ಹರೆಗಡಿಯಲಾನತಿಯನಿತ್ತೆನಾನ್;
ಬೇರ್ಗೊಯ್ವ ಬೇಹಾರಮಂ ಪೇಳ್ವೆ ನೀನ್! ಅಯ್ಯೊ,
ವಾನರರ ಪಡೆಯೊಳೊರ್ವನುಮುಳಿಯದೋಲಂತೆ
ಕೊಲ್ವ ಕಷ್ಪಂ ತೃಣಂ. ಪರ್ವತಂ, ಶಾರ್ದೂಲ, ಕೇಳ್,
ಪರ್ವತಂ ಸೀತಾವ್ರತಂ, ಶಾರ್ದೂಲ, ಕೇಳ್,
ಪರ್ವತಂ ಸೀತಾವ್ರತಂ! ಆ ರಜತ ಶೈಲಮಂ,
ಶಿವ ಶಿವಾಣಿಯರೊಡನೆ, ಬೇರ್ ಬಿಡಿಸುತಳ್ಳಾಡಿ
ನೆಗಹಿದೀ ದೈತ್ಯರ ದೊರೆಯ ತೋಳ್ ಸ್ಥಿರಾತ್ಮಜೆಯ
ಹೃದಯದುದ್ಯಾನದೊಳ್ ಉದಿರ್ದೊಂದು ಪೂವೆಸಳ ೬೦
ಪೊರೆಗುರುಳ್ದುದು ಸೋಲ್ತು, ಪಿಂತೆ ಹರಧನುವೆತ್ತಿ
ಕೆಡೆದಂತೆ! ರಾವಣನ ಬಾಳ್ದೋಣಿ ಬಡಿದೊಡೆವುದೇನ್,
ಕಿಂಕರ, ನೋಂಪಿಯೈಕಿಲ್ಬಂಡೆಯಂ ತಾಗಿ, ಪೇಳ್,
ಪೆಣ್ಣೊರ್ವಳಾ?”
ಶಂಕೆ ಮಾಣ್, ಲಂಕೇಶ್ವರಾ.
ಪೇಳ್ವೆನೊಂದಂ ಕುಟಿಲ ನೀತಿಯಂ. ಮಾಯೆಯಿಂ
ಸೃಜಿಸುವೆನ್ ರಾಮಶಿರಮಂ, ರಕ್ತಸಿಕ್ತಮಂ.
ತೋರದನ್ ದೇವಿಗೆ. ರಣಾಗ್ರದಿ ರಘೂದ್ವಹಂ
ಸೈಗೆಡೆದನೆಂದೊಡೆ. . . . ”
ಸುಯ್ವೆರ್ಚಿದಸುರಾಧಿಪಂ
ಶಾದೂಲನಂ ತಡೆಯುತುಗ್ರಕಂಠದೊಳಿಂತು
ಗುಡುಗಿದನ್ : “ಏನ್ ಪೇಳ್ದೆ, ಶಾರ್ದೂಲ? ಪೇಳ್ದುದೇನ್? ೭೦
ಮತ್ತಮೊರೆ!”
ಪತಿ ಸತ್ತನೆಂದಾದೊಡಂ ನಿನ್ನ
ವಶವಾಗುವಳ್!”
ದಿಟಂ ವಶವಾಗುವಳ್ ದಿಟಂ!
ವಶಮಪ್ಪುದವಳಾ ಕಳೇಬರಂ! ಸ್ಥೂಲಮತಿ
ನೀನ್, ಶಾರ್ದೂಲ; ಮೂರ್ಖಮಾಡದಿರ್! ನಡೆ, ನಡಸು
ನನ್ನಾಜ್ಞೆಯಂ! ರಾವಣಂಗಲ್ಲದಿನ್ನಾರ್ಗೆ, ಹೇಳ್,
ಸೀತಾ ಹೃದಯ ಸೂಕ್ಷ್ಮತಾ ಸಿದ್ಧಿ? ನಡೆ, ಪೋಗು,
ಬರವೇಳ್ ಪ್ರಹಸ್ತ ಸೇನಾನಿಯಂ!”
ಪ್ರಭುವಿನಾ
ಉಗ್ರ ರೀತಿಗೆ ಮೇಣ್ ನವೀನ ನೀತಿಗೆ ಬೆಚ್ಚಿ
ಬೆರಗಾಗಿ ಕಿಂಕರಂ ಪೋದುದಂ ಕಂಡಾ
ಮಹೇಂದ್ರಾರಿ ಪೀಠದಿಂದೆದ್ದಲೆಯತೊಡಗಿದನ್, ೮೦
ಪಂಜರದ ವೇದಿಕೆಯನಲೆವ ಕೇಸರಿಯವೋಲ್.
ಚಿಂತೆಗಳ್, ಭಾವಗಳ್, ಬಗೆಯ ಹೋರಾಟಗಳ್,
ನೆನಪುಗಳ್, ತಾಪಗಳ್, ಮತ್ತೆ ಪಶ್ಚಾತ್ತಾಪಗಳ್,
ಆಶಾ ನಿರಾಶೆಗಳ್, ಪುಣ್ಯಗಳ್, ಪಾಪಗಳ್,
ಕ್ಷಾತ್ರಪ್ರತಿಜ್ಞೆಗಳ್, ಧರ್ಮಗಳ್, ನೀತಿಗಳ್,
ಪ್ರೀತಿಗಳ್, ಮತ್ತೆ ಧೀರೋದಾತ್ತ ಭೀತಿಗಳ್
ಮೂಡಿ ಮುತ್ತಿದುವಾತನಾತ್ಮಮಂ, ಲಂಕೆಯಂ
ಮುತ್ತಲೈತಂದವರ ಸಂಖ್ಯೆಯಂ ಮೀರಿ :
ಆರ್?
ಈಕೆಯಾರ್ ಈ ಸೀತೆ? ಈಕೆಯಂ ಪಡೆಯಲ್
ತಪಂಗೆಯ್ದುದದು ಸಫಲಮಾದಪುದೆ? ನೀನಂದು ೯೦
ಪಂಚವಟೆಗೆನ್ನ ಪುಷ್ಪಕವನೇರುವ ಮೊದಲ್
ನುಡಿದ ನುಡಿ ತೊದಲಲ್ತು, ಮಾವ! ಪುಸಿಗೆಯ್ಯಲ್
ಪ್ರಯತ್ನಿಸುವೆನಂತ್ಯಂ ಬರಂ : ಆ ಪ್ರಯತ್ನಮೆ
ತಪಸ್ಸಾಧನಂ! ಅವ್ಯರ್ಥಮೇಗಳುಂ ತಪಂ!”
ಪುದುಗಿ ಪಾವೊಳವೊಕ್ಕ ಪಿರಿಯ ಪುತ್ತೆಂಬಂತೆ
ತೆಕ್ಕನೆಯ ತಾಟಸ್ಥ್ಯಮಂ ನಟಿಸಿ ನಿಂತಾ
ನಿಶಾಚರ ನೃಪಂ, ಪ್ರಸನ್ನಾನನಂ ತಾನಾಗಿ,
ನಿಶ್ಯಂಕಿ ಧೈರ್ಯಮಂ ನಿಲವಿಂ ಪ್ರದರ್ಶಿಸುತೆ,
ಕಂಡನ್ ಪ್ರಹಸ್ತನಂ ತನ್ನೆಡೆಗೆ ಬಂದಾ
ಪ್ರಧಾನ ಸೇನಾನಿಯಂ. ಕನಕ ರತ್ನ ಪ್ರಚುರ ೧೦೦
ನಾನಾ ರಣಾಲಂಕಾರ ರಿಪುಭಯಾಕಾರಮಾ
ವಿಪುಲ ವಪುವಂ ಮೆಚ್ಚಿ ನೋಡಿ, ಕುಳ್ಳಿರವೇಳ್ದು,
ತಲೆಯೊಲೆತದಿಂ ಪಡಿತುಳಿಲ್‌ಗೆಯ್ತಮಂ ಸಲಿಸಿ,
ತಾನುಂ ಕುಳಿತನಾ ಕುಬೇರಾರಿ.
ಬರವೇಳ್ದ
ಬೆಸನೇನ್, ಮಹಾಪ್ರಭೂ?”
ತಿಳಿದೆಯೇನ್, ಸೇನಾನಿ,
ಶತ್ರುಶಕ್ತಿಯ ಮೇರೆಯಂ?”
ತಿಳಿದೆನ್; ಆದೊಡಂ,
ಬಿರುಗಾಳಿ ಲೆಕ್ಕಿಪುದೆ ತರಗೆಲೆಯ ಸಂಖ್ಯೆಯಂ?”
ನಮ್ಮ ಪಡೆಗಳ್ ತಮ್ಮ ತಾಣಂಗಳಂ ಪಿಡಿದು
ಸಜ್ಜಿತಮೊ?”
ಕಳೆದಿರುಳ್ ಬೆಳಗಪ್ಪುವನಿತರೊಳೆ!”
ಸೈನ್ಯಗುಪ್ತಿಯನರಿಯಲಾಟಿಪೆನ್.”
ಇದೆ ಕೊಳ್ ೧೧೦
ರಣಕ್ಷೇತ್ರ ವಿನ್ಯಾಸಮಂ ತೋರ್ಪ ಚಿತ್ರವಸ್ತ್ರಂ.”
ಹರಡಿದನು ದಳಪತಿ ರಣಾಂಗಣದ ನಕ್ಷೆಯಂ
ರಣಪಟು ದಶಗ್ರೀವನಿದಿರಿನಲಿ. ನೋಡುತಿರೆ
ದೊರೆ, ಸವಿಯುತಿರ್ದನ್ ಪ್ರಹಸ್ತನಾತನ ಮುಖದ
ಮುಕುರ ರಂಗದಿ ಮಿಂಚುತಿರ್ದ ಚಿತ್ತದ ವಿವಿಧ
ವೃತ್ತಿಗಳ ಖಂಡನೆಯ ಮೇಣ್ ಶ್ಲಾಘನೆಯ ಬೇವು
ಬೆಲ್ಲಂಗಳಂ. ದೀರ್ಘ ವೇಳೆಯಂ ಜಾನಿಸಿ
ಪರೀಕ್ಷಿಸುತೆ, ಪಗೆಯ ಶಕ್ತಿಗೆ ತನ್ನ ಶಕ್ತಿಯಂ
ಯುಕ್ತಿಯಿಂ ತೂಗಿ ನಿರ್ಣಯಿಸುತಾ ನಿಶಿತಮತಿ,
ರಣರುಚಿಯ ರಾವಣಂ, ಪಡೆವಳನ ಮೊಗಸಿರಿಗೆ ೧೨೦
ಮೊಗಂಗೆಡದವೋಲೊಯ್ಯನಿಂತೆಂದನಾಜ್ಞೆಯಂ
ತನ್ನೊಂದು ಭಿನ್ನರುಚಿಯಿತ್ಯರ್ಥಮೆಂಬಂತೆ:
ಶ್ಲಾಘ್ಯಮೆ ದಿಟಂ, ವೀರವರ, ನಿನ್ನ ಗುಪ್ತಿಯ
ವಿಧಾನಂ. ಆದೊಡಮೆನಗೆ ಬಗೆ ಬೇರೆ. ಸಮ್ಮತಿಸೆ
ನೀನ್. . . . .” ಎನುತ್ತಾ ಪ್ರಹಸ್ತನ ಕಡೆಗೆ ಕಣ್ಣಾಗಿ
ತಾನೆ ಮುಂಬರಿದನಾತನ ಮಾತಿಗೆಡೆಗೊಡದೆ :
ಪಡೆವಳರ್ ವಜ್ರಹನು ರಾಹುರೋಷರ್ವೆರಸಿ
ಪೂರ್ವಮಂ ಪೊರೆ ನೀನ್. ಮಹಾಪಾರ್ಶ್ವನಿರಲಾ
ಮಹೋದರಂವೆರಸಿ ದಕ್ಷಿಣ ದಿಶಾ ರಕ್ಷಣೆಗೆ.
ಮೇಣ್, ಪೇಳ್ ಕುಮಾರನಂ, ಶೋಣಿತಾಕ್ಷಂ ಕೂಡಿ, ೧೩೦
ಪಶ್ವಿಮದ್ವಾರ ರಕ್ಷೆಗೆ. ಅಕಂಪನನಿರ್ಕೆ ಉತ್ತರಕೆ,
ವಜ್ರದಂಷ್ಟ್ರಂ ವೆರಸಿ. ರಕ್ಷಿಸಲಿ ಸುಪ್ತಘ್ನ ಮೇಣ್
ಮಕರಾಕ್ಷರೀಶಾನ್ಯಮಂ. ಅಗ್ನಿಕೇತುವಾ
ದುರ್ಮಖನ ಪಡೆಗೂಡಿ ಪೊರೆಯಲಾಗ್ನೇಯಮಂ.
ಸೂರ್ಯಶತ್ರುವೆ ಸಾಲ್ಗುಮಾ ನೈರುತ್ಯದಿಶೆಗೆ.
ಬ್ರಹ್ಮಾಕ್ಷ, ಧೂಮ್ರಾಕ್ಷರಿರ್ಕೆ ವಾಯವ್ಯದೊಳ್.
ಗುಲ್ಮ ಮಧ್ಯದೊಳಿತರ ದಳಪತಿಗಳಂ ನಿಲಲ್
ಪೇಳ್, ಕ್ಷಣಾರ್ಧದಿ ರಣಾಗ್ರಕೆ ಬೆಂಬಲಂ ನಡೆಯೆ
ತಗುವಂತೆವೋಲ್. ಮೇಣ್, ಪ್ರಧಾನ ಸೇನಾನಿ, ಕೇಳ್ :
ಚಂಡಿಕಾಧ್ವಜದರ್ಪದಾಶ್ರಯದಿ, ದಾನವರ ೧೪೦
ಸರ್ವ ಸೇನಾಧ್ಯಕ್ಷತೆಯನಾಂತು, ನಾನೀ
ಮಹೋಗ್ರ ಸಂಗ್ರಾಮ ದೀಕ್ಷಿತನಾಗಿ, ದೈತ್ಯಕುಲ
ದಿಗ್ವಿಜಯ ಯಜ್ಞಮಂ ಕೊನೆಗಾಣ್ಚುವೆನ್!”
ಇರ್ವರುಂ
ಮೋನಮಿರ್ದರ್ ಸುದೀರ್ಘಮೆನೆ. ರಾಜಧ್ವನಿಯ
ದರ್ಪ ಭಾರಕೆ ಬಾಗಿದಂತಿರ್ದ ಸೇನಾನಿ
ಮೆಲ್ಲನೇಳುತೆ, ಮಣಿದು, ಬೀಳ್ಕೊಂಡನಸುರನಂ,
ಕ್ರುದ್ಧ ಭ್ರುಕುಟಿಬದ್ಧನಂ, ಕಾಲ ಚೋದಿತ
ಭಯಂಕರ ಜಗತ್‌ಕ್ಲೇಶಕರ ಯುದ್ಧಸಿದ್ಧನಂ,
ಬ್ರಹ್ಮ ವರ ಬಲ ವರ್ಮ ಸನ್ನದ್ಧನಂ!
ಅತ್ತಲಾ
ವಾನರೇಂದ್ರಂ ತನ್ನ ಗುಪ್ತಚರರಿಂ ಮೇಣ್ ೧೫೦
ವಿಭೀಷಣಾನುಚರರಿಂದರಿತನ್ ದಶಾನನ
ಸರಸ್ವತಿಯ ಸಮರ ನಾಟಕ ಸಂವಿಧಾನಮಂ.
ನರದೇವ ಚಂದ್ರಮನ, ರಾವಣ ಸಹೋದರನ,
ನೀಲ ನಳ ಹನುಮ ಜಾಂಬವ ಮುಖ್ಯ ವಾನರರ
ಮತಿಯರಿತು, ದಳದಳದ ದಂಡನಾಯಕ ಸಭೆಗೆ
ಬೆಸಸಿದನು ತನ್ನಾಜ್ಞೆಯಂ:
ಬೆಂಬಲಂ ಬಡೆದು
ಮೈಂದ ದ್ವಿವಿದರಂ, ವಾನರರ ಸೇನಾನಿ
ಅಗ್ನಿಯ ಕುಮಾರಂ ಪ್ರಹಸ್ತಂಗಿದಿರ್ ನಿಲ್ಗೆ,
ಯಾತುಧಾನ ಪ್ರಮುಖ ಸೇನೆಗಳ್ಗಭಿಮುಖಂ,
ನೀಲದೇವಂ, ತ್ರಿಕೂಟಾಚಲದ ಪೂರ್ವಮಂ ೧೬೦
ಪಡೆದು. ತೆಂಕಣಕಿರಲಿ ಯುವರಾಜನಂಗದಂ,
ಋಷಭಂ ಗವಾಕ್ಷಂ ಸಹಾಯರಿರೆ, ಇದಿರ್ಚಲ್
ಮಹಾಪಾರ್ಶ್ಚನ ಮಹಾಭೀಳ ರಣರೌದ್ರಮಂ.
ದೈತ್ಯೇಂದ್ರ ಸೂನುವಂ ಕಲಿ ಮೇಘನಾದನಂ
ಪಶ್ಚಿಮ ಶೌರ್ಯಭಾನುವಂ ವಿನತನೊಡಗೂಡಿ
ಪ್ರತಿಭಟಿಪುದಾಂಜನೇಯನ ವಜ್ರವಿಕ್ರಮಂ.
ಶಿಲ್ಪದೇವಂ ನಳಂ, ದರೀಮುಖಂ ವೆರಸಿ,
ನಿಲ್ವನ್ ಅಕಂಪನಂಗಿದಿರಾಗಿ, ಉತ್ತರದ
ದಿಗ್‌ದ್ವಾರ ದಿಕ್ಕುಂಜರಾಂಕುಶಮೆನಲ್. ಗಜಂ
ಗವಯನೊಡಗೂಡಿ ತಡೆಯಲಿ ಅಗ್ನಿಕೇತುವಂ ೧೭೦
ಆಗ್ನೇಯದೊಳ್, ತಾರ ದೇವನುಂ, ಕೇಸರಿಯ
ಕೂಡಿ, ತಾಗಲಿ ಸೂರ್ಯಶತ್ರುವಂ, ನೈಋತ್ಯ
ದಿಗ್ವಲಯದಿ. ಗಗನಚರಮಾ ಶತಬಲಿಯ ಸೇನೆ
ವಾಯವ್ಯದೊಳಗಿರ್ಪ ಬ್ರಹ್ಮಾಕ್ಷ ಬಲ ಗಿರಿಗೆ
ಪಣೆವೆಣೆದು ನಿಲ್ಗೆ. ಈಶಾನ್ಯದೊಳ್ ಧಗಿಸುತಿಹ
ಸುಪ್ತಘ್ನ ಮಕರಾಕ್ಷ ಸೇನಾ ದವಾನಲಕೆ
ವಿಲಯ ವಾರಿಧಿಯಾಗಿ ನಿಲ್ವುದು ಸುಷೇಣನ
ಚಮೂ ಸಮುದ್ರಂ. ಸುಮಿತ್ರಾತ್ಮಜಂ, ಜಾಂಬವನ
ಬಲದ ಬೆಂಬಲಮಿರಲ್, ಪಡೆಪಡೆ ನಡೆಯನರಿತು
ನೆರಮಪ್ಪನನಿಬರಿಗೆ. ರಕ್ಕಸರ ಕೈತವದ ೧೮೦
ಕೊಲೆಬಲೆಗೆ ಸಿಲ್ಕದೋಲೆಮ್ಮ ಮಿತ್ರಂ, ನಾನೆ
ರಕ್ಷಣಾವ್ಯೂಹಮಂ ರಚಿಸಿ, ಮೆಯ್ಗಾವಲಿರ್ಪೆನ್,
ಸರ್ವ ಸೇನಾ ಸೂತ್ರಧರನಾಗಿ. ಮೇಣ್ ಈ
ಕಪಿಧ್ವಜದ ಪೆರ್ಮೆ ನೂರ್ಮಡಿಯಪ್ಪವೋಲಂತೆ
ಶ್ರೀರಾಮಚಂದ್ರಂ, ವಿಭೀಷಣಶ್ರೀಬುದ್ಧಿ ತಾಂ
ಮಂತ್ರಿಯಾಗಿರೆ, ಕೃತ್ಸ್ನಮೀ ಸಂಗ್ರಾಮ ವಿಭುವಾಗಿ.
ದಾನವಕುಲದ ದೌಷ್ಟ್ಯಕೆ ದವಾಗ್ನಿ ತಾನಾಗಿ,
ನಮ್ಮನುಯ್ವನ್ ದೇವಿ ಸೀತೆಯ ಪತಿವ್ರತಾ
ಧರ್ಮದವಳ ಅರಾಕ್ಷಸಾಲಯಕೆ!”
ಕೇಳುತಾ
ಸುಗ್ರೀವನಾಜ್ಞೆಯಂ ವಾನರೋತ್ಸಾಹಂ ೧೯೦
ಮಹಾರ್ಣವಂ ಮೇರೆದಪ್ಪಿದೊಲಾಯ್ತು. ಬಲ್ದೆರೆಗಳೋಲ್
ವಾಹಿನಿಗಳೆದ್ದು ವೇಲಾವನಿಯ ಶಿಬಿರಮಂ
ಧಿಕ್ಕರಿಸುತೇರ್ದುವು ಸುವೇಲಾದ್ರಿಯಂ; ಕಾರ್ಗಾಳಿ
ಕೈವೀಸೆ, ಪೆರ್ಬಂಡೆಗಳೆ ದಂಡಯಾತ್ರೆಯಂ
ಕೈಕೊಂಡುವೋ ಎನಲ್ ಕರ್ಮುಗಿಲ್‌ವಿಂಡುಗಳ್
ಸಹ್ಯ ಶಿಖರದ ಸೀಮೆಯಂ ದಂಡುದಂಡುರ್ಕ್ಕಿ
ಸಂಕ್ರಮಿಪವೋಲ್! ಗೋಚರಿಸಿತಯ್ ಸುವೇಲಾದ್ರಿಯಾ
ಶಿರದಿಂ ತ್ರಿಕೂಟೋತ್ತಮಾಂಗಮಂ ಸಿಂಗರಿಸಿ
ಪರ್ವಿದ ದಶಗ್ರೀವ ಬಾಹುಪಾಲಿತ ಪುರಂ,
ಗಗನ ವಿಸ್ತೃತ ಗಗನ ನಗರಿಯೆನಲಾ ಬೃಹತ್ ೨೦೦
ರಮಣೀಯ. ಮಾರೀಚಮಾಯಾಮೃಗೋಪಮದ,
ಅಮರ್ತ್ಯಭೂಮಿಯ, ಕನತ್ಕನಕ ಗೋ ಶ್ರೀರುಚಿರಮಾ
ಲಂಕೆ! ವಿವರಮೆನೆ ವರ್ಣಿಸಲ್ಕಾ ವಿಭೀಷಣಂ,
ಕಿಡಿಯಿಡುವ ಕಣ್ಗಳಿಂ ನೋಡಿದನು ದಾಶರಥಿ
ವಿತ್ತೇಶ ಪತ್ತನದ ವಿಭವಮಂ ವಿಸ್ತೃತದಿ
ಸೂರೆಗೊಂಡಾ ದೈತ್ಯದುರ್ಗಮಂ : ಮಲೆದೆಲೆಯ
ಕಲ್ಗವಿಯೊಳಿನಿಯಳೊಡನಿರ್ದ ಮೃಗರಾಜನಂ
ಬೇಡರೊಡೆಯಂ ದೀವದೆರೆದೋರುತೆಳತಟಂ
ಮಾಡಿ ಗೆಂಟರ್ಗುಯ್ವನತ್ತಲ್ ಇತ್ತಲ್ ಮರೆಯ
ಬಿಯದ ಪಡೆ ಮಿಣಿವಲೆಯನೊಡ್ಡಿ ಸೆರೆವಿಡಿಯುತಾ ೨೧೦
ಸಿಂಹಿಣಿಯನುಯ್ವದರಸನ ಬೇಂಟೆವೀಡಿರ್ಪ
ಕಂದರಕೆ. ಹೊನ್ನ ಹಲ್ಲಣದ ಹೇರಾನೆಗಳ್
ಸುತ್ತಿ ಬಳಸುತೆ ಬೇಲಿಗಾಪಿರಲ್, ಕರ್ಬೊನ್ನ
ಕಣ್ಣಿಯಿಂ ಕಟ್ಟುಗೊಂಡಾ ಸಿಂಗವೆಣ್ ತನ್ನ
ಮನದನ್ನನಂ ನೆನೆದೂರಲ್ವುದು, ವನಾಂತರಂ
ಗೋಳ್ಗರೆವವೋಲ್. ದೀವದೆರೆಯ ಕೈತವವರಿತು
ಪಿಂತಿರುಗಿದಾ ರುಷ್ಟ ಪಂಚಾನನಂ ತನ್ನ
ಪೆಂಡಿತಿಯ ಪಾಡರಿತು, ಕೋಡುಗಲ್ಲಂ ಪತ್ತಿ
ಕಾಣ್ಬುದಾ ಸಿಂಹಿಣಿಯ ಸುತ್ತಲುಂ ಕಾಪಿರ್ಪ
ಸಾಲಂಕೃತಿಯ ದಂತಿಪಂಕ್ತಿಯಂ. ಗುಡುಗುಡಿಪ ೨೨೦
ಸಿಡಿರೋಷಮುಕ್ಕಿ, ತಾಂ ನಿಂತ ಬಂಡೆಯನಾನೆಯೊರ್
ಮಂಡೆಯಂ ಗೆತ್ತು, ನಖವಜ್ರದಿಂದವ್ವಳಿಸೆ
ಬಿರಿವುದಾ ಕಲ್, ಗರ್ಜನೆಗೆ ದಿಗಿಲ್ ತತ್ತರಿಸಿ
ಬೆಟ್ಟಮೆರ್ದೆಯೊಡೆವವೋಲ್!
ಅಂತೆವೊಲ್ ಸುಯ್‌ಸುಯ್ದು,
ಪಲ್‌ಗಚ್ಚಿ, ಕೋದಂಡ ಡಂಡದಿಂದುಗ್ರಮತಿ
ದಾಶರಥಿ ಮಲೆಯ ನೆತ್ತಿಯನೊತ್ತಿದನ್, ತನ್ನನಾ
ಆಂತಿರ್ದ ಪಾಸರೆಯ ಬಲ್‌ಬಂಡೆಯಂ, ಒತ್ತಲ್,
ಧರಿತ್ರಿ ಕಂಪಿಸಿತೊಂದು ಭೀತಿವೀಚೀ ತಟಿತ್‌
ತಾಡನಿಯ ಪೊಯ್ಲಿಗೆಂಬಂತೆ! ರಾಕ್ಷಸ ನಾಶ
ದುಶ್ಶಕುನಗಳ್ — ಗಾಳಿ, ಧೂಳಿ, ಸಿಡಿಲ್‌ಗುಡುಗುಗಳ್, ೨೩೦
ಖಗದ ಕಂಠದ ಗಗನ ಚೀತ್ಕಾರಗಳ್, — ಲಂಕೆಯೊಳ್
ಬೀಸಿದುವು ಕಾಲಲೀಲೆಯ ಕಪಿಧ್ವಜಬಲದ
ಮೃತ್ಯುಕರ ಕರವಾಲಮಂ. ಅನಲೆಯಿಂದನಿತುಮಂ
ಅರಿತಿರ್ದ ಅವನಿಜೆಗಶೋಕವನದಸ್ಥಿರತೆ
ತನಗಶೋಕವ ಸೂಚಿಸಲ್, ತ್ರಿಜಟೆಯನ್ ಒಲಿದು
ನೋಡಿದಳ್‌; ಒಯ್ಯನಿಂತಾಡಿದಳ್ :
ಕೇಳ್, ತ್ರಿಜಟೆ,
ರಣಭೇರಿಯಂ! ದಿಗಿಭಹೃದಯ ವಿದ್ರಾವಕಂ,
ಕೇಳ್, ಅಂಜನೆಯ ಮಗನವರ ಕಡೆಯ ಭೈರವ
ಭಯಂಕರದ ಸಿಂಹನಾದಂಗಳಂ! ಆಲಿಸೀ
ಅಸುರ ಸಮರ ಸನ್ನಾಹಜಂ ಸ್ವನಶ್ವಾನಂಗಳಂ ೨೪೦
ಬಿಡದಟ್ಟಿ, ಪಿಡಿದು, ಬೆನ್ನೇರಿ, ಗೋಣ್ಮುರಿದಿಕ್ಕಿ,
ನೆತ್ತರಂ ಪೀರ್ವ, ಬಾನ್ಗೇರ್ವ, ಗೆಲ್ಲಂ ಸಾರ್ವ
ರಘುನಾಥ ಚಾಪವೀಣೆಯ ಕೋಪ ಸಿಂಜಿನಿಯ
ಶರಕೋಣ ಭೇರುಂಡ ಕಂಠ ಡಿಂಡಿಮ ರುಂದ್ರ
ರಣ ಗಾಥಮಂ!”
ಧ್ವನಿರಸಾತಿಶಯಕೆನೆ ಸೀತೆ
ಮೈಮರೆತಳಾ ತ್ರಿಜಟೆ ಸಯ್ ನಡುಗುತಾಕೆಯಂ
ಸಂತಯ್ಸುತಿರೆ ಶಿಶಿರ ಶುಶ್ರೂಷೆಯಿಂ, ದ್ಯುಮಣಿ
ಮುಳುಗಿದನಂ ಕೆಮ್ಮುಗಿಲ ರಕ್ತೋಕುಳಿಯನೆರಚಿ,
ಗಿರಿ ಸುವೇಲದೊಳಿರ್ದ ವಾನರ ಬಲಾಬ್ದಿಯಂ
ಮೇಣ್ ತ್ರಿಕೂಟದೊಳಿರ್ದ ದಾನವ ಬಲೌಘಮಂ ೨೫೦
ರಕ್ತ ಕರ ರಕ್ತವರ್ಣಂಗಳಿಂ ಪರಸಿ!
ನಿಶೆ ತಾಂ
ನಿಶಾಚರರ ಸೀಮೆಯಲಿ, ತನ್ನ ದೊರೆತನಮಿರಲ್,
ರವಿವಂಶನಂ ಮುತ್ತದಿರ್ಪುದೆ? ನಿಶಾಪತಿ
ಶಶಾಂಕನಾಗಿರೆ ರಾಮಚಂದ್ರಂಗೆ ಕತ್ತಲೆಯ
ಮುತ್ತಿಗೆಯೆ? ಮೂಡಿದನು ಮಧುಸಮಯ ಪೂರ್ಣಿಮಾ
ಹಿಮರೋಚಿ, ನೋಡದೊ, ಸುವೇಲ ಮಸ್ತಕದಲ್ಲಿ
ಕಪಿನಾಯಕರ್ ಬಳಸೆ ನಿಂದಿರ್ಪ, ಧನುರ್ಧರ
ಭಯಂಕರ ಮನೋಹರ ರಘೂದ್ವಹನ ರಣಭವ್ಯ
ದರ್ಶನಕೆ! ಮಿಂದತ್ತು ಬೆಳ್ದಿಂಗಳಮರ್ದಿನೊಳ್
ವಾನರರ ಪಡೆಯಡವಿ ತುರುಗಿರ್ದ ರಾಕ್ಷಸರ ೨೬೦
ಪೊಡವಿ. ತಮತಮಗರಿಯದಿರ್ದೊಡಂ, ಸುರಶಿಲ್ಪಿ
ವರ ಮಹಿಮೆಯಿಂ ಬೃಹದ್‌ಗಾತ್ರಂಗಳಂ ಪೊರ್ದ್ದಿ,
ಗಿರಿ ತುಂಗ ಶೃಂಗಗಳೆ ಜಂಗಮೆಯಾಂತಲ್ಲಿ
ಜೈತ್ರ ಯಾತ್ರೆಗೆ ದಂಡುನೆರೆದಂತೆ, ಜೃಂಭಿಸುತೆ
ಭವ್ಯಮಾಗಿರ್ದ ಕಪಿರಾಜ ಸೈನ್ಯಂಗಳಂ
ನೋಡಿ ದಶರಥಸೂನು ಸುಖಿಸುತ್ತೆ, ನಳನಂ
ಬಳಿಗೆ ಕರೆದು :
ಪ್ರತ್ಯಕ್ಷಮೆನಗೆ ಮೇಣ್ ನಿನಗೆ ಆ
ನಿನ್ನ ತಂದೆಯ ವರದ ಮಹಿಮೆಯಿಂ ನೂರ್ಮಡಿಸಿ
ಬೆಳೆದೀ ಕಪಿಧ್ವಜರ ಬಲ್‌ಮೆಯ್ಯ ಮೇಣ್ ಬಲದ
ಭವ್ಯದೃಶ್ಯಂ, ಶಿಲ್ಪಿಸೇನಾನಿ. ತಿಳಿದೊಡಾ ೨೭೦
ಆತ್ಮಗೋಚರ ಸತ್ಯಮಕ್ಷಿಗೋಚರಮಾಗಿ
ನೂರ್ಮಡಿಪುದುತ್ಸಾಹಮೀ ನಮ್ಮ ಮಿತ್ರರ್ಗೆ
ಅರಿವುದುಂ ಅಣ್ಮು. ಪೇಳ್‌, ವಿಶ್ವಕರ್ಮ ಕುಮಾರ,
ದಳಪತಿ ಸಮಿತಿಗೀ ರಹಸ್ಯಮಂ. ತಂತಮ್ಮ
ದಳಗಳಿಗೆ ಡಂಗುರಂಬೊಯ್ಸಲೀ ಅದ್ಭುತ
ಸುವಾರ್ತೆಯಂ. ಈ ಇರುಳ್ ಕೊನೆಗಾಣ್ಬುವನಿತರೊಳ್
ತಂತಮ್ಮ ತಾಣಂಗಳಂ ಪಿಡಿಯವೇಳ್ಕೆಮ್ಮ
ಸೇನೆಗಳ್. ಈ ಚಂದ್ರನೀ ಶುಕ್ಷಪಕ್ಷಮಾ
ಶುಕ್ಲಪಕ್ಷಕೆ ಸೇರ್ವ ಮುನ್ನಮೇ ದಶಾನನನ
ದೆಶೆ ಸೇರ್ವುದಾ ದಕ್ಷಿಣದ ದಿಶೆಗೆ!” ಮತ್ತಮಾ ೨೮೦
ಸುಗ್ರೀವನಂ ಕುರಿತು : “ಮಿತ್ರವರ, ಯುದ್ಧಕೆ
ಮೊದಲ್ ರಾಯಭಾರಮಂ ಕಳುಹುವುದು ಪದ್ಧತಿ
ಮಹೀಶರಿಗೆ. ತಿಳಿದೆನು ವಿಭೀಷಣನ ಬುದ್ಧಿಯಂ.
ತಿಳಿದೆನದು ನಿಷ್ಫಲಂ. ಕಾಲವಶಿ ರಾವಣಂ.
ಕೇಳನಾರೆಂದುದಂ. ಆದೊಡಂ, ಸೆರೆಗಳಚಿ
ಕಳುಹಿಸಾ ಬೇಹಿನಾಳ್ ಶುಕನೆಂಬೊನಂ : ನಾಳೆ
ನೇಸರ್ ತ್ರಿಕೂಟಾಚಲದ ನೆತ್ತಿಯಂ ತನ್ನ
ಪೊಂಗದಿರ್ಗಳಿಂ ಸೋಂಕುವನಿತರೊಳ್ ವನಿತೆಯಂ
ತಂದೊಪ್ಪಿಸುತೆ ಶರಣ್‌ಬೋಗದಿರೆ ಮೊಳಗುವುದು
ರಣಭೇರಿ, ವಾನರ ಪತಾಕಿನಿಯ ಪೊಣ್ಕೆಯಂ, ೨೯೦
ತರಿಸಲ್ಕೆಯಂ. ಲೋಕ ಲೋಕಾಂತರಂಗಳಿಗೆ
ಸಾರಿ!”
ಕೇಳ್ದಳು ನಭೋಲಕ್ಷ್ಮಿ ಆ ನಟ್ಟಿರುಳ್
ಬಡಗಣಿಂ ತೆಂಕಣಕೆ ಜೊನ್ನ ಬಾನ್ಬಟ್ಟೆಯೊಳ್
ಬೇಗದಿಂ ಸಾಗುತಿರ್ದೊಂದಮೃತರೂಪಮಂ :
ನೀನಾರ್?” “ತಪೋಲಕ್ಷ್ಮಿ!” ಮಾರ್ನುಡಿದುದಾ ಮೂರ್ತಿ.
ಅದೆತ್ತಣ್ಗೆ ಅವಸರದ ಪಯಣಂ?” “ಸುವೇಲಾದ್ರಿ
ಶಿಖರಕ್ಕೆ!” “ಎತ್ತಣಿಂದೇಕೆ?” “ನಂದಿಗ್ರಾಮದಿಂ
ಪೊಣ್ಮಿದೆನ್; ಅಯೋಧ್ಯಾ ಪ್ರದಕ್ಷಿಣಂಗೆಯ್ದೆನ್;
ಚಿತ್ರಕೂಟಾದ್ರಿಯಂ, ದಂಡಕಾರಣ್ಯಮಂ,
ಪಂಚವಟಿಯಂ ಮತ್ತೆ ಕಿಷ್ಕಿಂಧೆಯಂ ಸುತ್ತಿ ೩೦೦
ಬಂದೆನಿತ್ತಣ್ಗೆ. ಮೇಣ್ ಊರ್ಮಿಳಾ ಪ್ರಾಣಂಗೆ
ತಾಯ್ವರಕೆಯಂ, ತಮ್ಮನರಕೆಯಂ, ಮೇಣ್ ಸತಿಯ
ಮೇರುಕಂಪನಕಾರಿ ಸುವ್ರತದ ಋತಶಕ್ತಿಯಂ
ಪೊತ್ತು ಪೋದಪೆನಕ್ಕ, ರಕ್ಕಸರ ಕೊಂದಕ್ಕನಂ
ಪೊರೆದು, ಬೇಗನೆ ಮನೆಗೆ ಬಪ್ಪ ಶುಭಮಪ್ಪವೋಲ್!”






*******************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ