ತೃತೀಯಾಶ್ವಾಸಂ
ಕಂ|| ಶ್ರೀಯನರಾತಿಬಳಾಸೃಕ್ತೋಯಯೊಳ್ ಪಡೆದ ವೀರನುಱದರಿಗಳನಾ|
ತ್ಮೀಯಪದಸುರಿತ ನಖ
ಚಾಯೆಗಳೊಳ್ ನಱಸಿ ನಿಂದ ಗಂಡಂ ಹರಿಗಂ| ೧
ವ|| ಆ ಪೊೞಲ ಪೊಱವೋೞಲನೆಯ್ದೆ ವರ್ಪಾಗಳ್-
ಕಂ|| ಕತ್ತುರಿಯ ಸಗಣ ನೀರ್ ಬಿಡು ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ|
ಪತ್ತಿನ ಬಿತ್ತರದೆತ್ತಿದ ಮುತ್ತಿನ ಮಂಡವಿಗೆ ಪೊೞಲ ಮನೆಗಳೊಳೆಲ್ಲಂ|| ೨
ವ|| ಅಂತಾಗಳೊಂದುತ್ತರಂ ಬಳೆಯೆ ಸೊಗಯಿಸುವ ಪೊೞಲೊಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೊಳ್ ಮುನ್ನಮೆ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ಧಾರ್ಥ ದೂವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣ ಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂಯರುಂ ಬದ್ಧವಣದ ಪಗಳುಂಬೆರಸಿದಿರ್ವಂದು ಮೆಯ್ಯಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೊಡಗೊಂಡು ಬಂದು ಪೊೞಲಂ ಪುಗಿಸೆ ಪೊಕ್ಕು ಬೀಡನೆಲ್ಲಿ ಬಿಡುವಮೆನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮೆದಿಟ್ಟೆನಲ್ಲಿಗೆ ಬಿಜಯಂಗೆಯ್ಯಿಮೆನೆ-
ಕಂ|| ಅರಗು ಮೊದಲಾಗೆ ಘೃತ ಸ
ಜ್ಜರಸಂ ಬೆಲ್ಲಂ ಸಣಂಬಿವೆಂಬಿವಱಂ ವಿ|
ಸ್ತರಿಸಿ ಸಮೆದಿಂದ್ರಭವನಮೆ
ಧರೆಗವತರಿಸಿರ್ದುದೆನಿಸುವರಗಿನ ಮನೆಯಂ|| ೩
ವ|| ತಾನೆ ಮುಂದಿಟ್ಟೊಡಂಗೊಂಡು ಬಂದು ಪುಗಿಸೆ ಪಾಂಡವರಯ್ವರುಂ ಕೊಂತಿವೆರಸು ಕಿಱದಾನುಂ ಬೇಗಮಿರ್ದು ದಾನ ಸನ್ಮಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗೆ ಪೋಗಲ್ವೇೞ್ದು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಱದು ನಿಜಾನುಜ ಸಹಿತಂ ಕೊಂತಿವೆರಸೇಕಾಂತದೊಳಿಂತೆಂದಂ-
೧. ಶತ್ರುಸೈನ್ಯದ ರಕ್ತಸಮುದ್ರದಲ್ಲಿ ಜಯಲಕ್ಷ್ಮಿಯನ್ನು ಪಡೆದ ವೀರನೂ ತನಗೆ ಅನರಾಗದ ಶತ್ರುಗಳನ್ನು ತನ್ನ ಕಾಲಿನಲ್ಲಿ ಹೊಳೆಯುತ್ತಿರುವ ಉಗುರಿನ ಕಾಂತಿಯ ನೆರಳಿನಲ್ಲಿ ನಿಲ್ಲಿಸಿದ ಪರಾಕ್ರಮಶಾಲಿಯೂ ಆದ ಅರ್ಜುನನು ಆ ಪಟ್ಟಣದ ವ|| ಹೊರಭಾಗವನ್ನು ಬಂದು ಸೇರಿದನು. ೨. ಪಟ್ಟಣದ ಮನೆಗಳೆಲ್ಲ ಕಸ್ತೂರಿಯಿಂದ ಕೂಡಿದ ಸಗಣಿನೀರು, ಬಿಡಿಬಿಡಿಯಾದ ಮುತ್ತಿನ ರಂಗೋಲೆ, ಚಲಿಸುತ್ತಿರುವ ರೇಷ್ಮೆಯ ಬಟ್ಟೆಯ ಬಾವುಟಗಳು, ಅತುಲೈಶ್ವರ್ಯದಿಂದ ಕೂಡಿದ ಮುತ್ತಿನ ಮಂಟಪ ಇವುಗಳಿಂದ ಅಲಂಕೃತವಾಗಿದ್ದುವು. ವ|| ಹಾಗೆ ವೈಭವದಿಂದ ಕೂಡಿ ಸೊಗಯಿಸುತ್ತಿರಲು ಪಟ್ಟಣದಲ್ಲಿ ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆಯೆಂಬ ಎಂಟು ವಿಧ ಅಲಂಕಾರಗಳಿಂದ ಕೂಡಿ ದುರ್ಯೋಧನನ ಸೂಚನೆಯ ಪ್ರಕಾರ ಮೊದಲೇ ಸಿದ್ಧವಾಗಿದ್ದ ಪುರೋಚನನು ಗೋರಚನ (ಹಸುವಿನ ಎದೆಯಲ್ಲಿರುವ ಒಂದು ಜಾತಿಯ ಕೊಬ್ಬು) ಅಕ್ಷತೆ, ಗರಿಕೆಯ ಚಿಗುರು, ಮಾದಲಹಣ್ಣು, ಕನ್ನಡಿ, ಕಳಮಾಕ್ಷತೆ ಮೊದಲಾದವುಗಳನ್ನು ಕಯ್ಯಲ್ಲಿ ಧರಿಸಿದ್ದ ಸ್ತ್ರೀಯರು ಮಂಗಳವಾದ್ಯಗಳು ಮೊದಲಾದವುಗಳಿಂದ ಕೂಡಿ ಎದುರಿಗೆ ಬಂದು ದೀರ್ಘದಂಡನಮಸ್ಕಾರಮಾಡಿ ಪಾಂಡವರನ್ನು ಮುಂದಿಟ್ಟುಕೊಂಡು ಬಂದು ಪಟ್ಟಣವನ್ನು ಪ್ರವೇಶಮಾಡಿಸಿ ‘ಎಲ್ಲಿ ಬೀಡುಬಿಡೋಣ’ (ಇಳಿದುಕೊಳ್ಳೋಣ) ಎಂದು ಪಾಂಡವರು ಪ್ರಶ್ನೆಮಾಡಲು ಅವನು ನಿಮ್ಮಯ್ಯನಾದ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ಮೊದಲೇ ಮನೆಯನ್ನು ಸಿದ್ಧಪಡಿಸಿದ್ದೇನೆ; ಅಲ್ಲಿಗೆ ದಯಮಾಡಿ ಎಂದನು. ೩. ಅರಗು ಮೊದಲಾದ ತುಪ್ಪ, ಸಜ್ಜರಸ, ಬೆಲ್ಲ, ಸೆಣಬು ಇವುಗಳಿಂದ ವಿಸ್ತಾರವಾಗಿ ನಿರ್ಮಿಸಿದ ದೇವೇಂದ್ರನರಮನೆಯೇ ಭೂಮಿಗಿಳಿದು ಬಂದಿದೆಯೋ ಎನಿಸಿದ್ದ ಅರಗಿನ ಮನೆಯನ್ನು ವ|| ತಾನೆ ಮುಂದಾಗಿ ಒಡಗೊಂಡು ಬಂದು ಪ್ರವೇಶಮಾಡಿಸಲು ಅಯ್ದುಜನ ಪಾಂಡವರೂ ಕುಂತಿಯೊಡಗೂಡಿ ಕೆಲವು ಕಾಲವಿದ್ದು ದಾನಸನ್ಮಾನಾದಿಗಳಿಂದ ಸಂತೋಷಪಡಿಸಿ ಪುರೋಚನನನ್ನು ಅವನ ಮನೆಗೆ ಹೋಗುವ ಹಾಗೆ ಹೇಳಿ ಧರ್ಮರಾಜನು ಆ ಮನೆಯನ್ನು ಪರೀಕ್ಷಿಸಿ ನೋಡಿ
ಚಂ|| ಇದು ಮನೆಯಂದವಲ್ತುರಿವ ದಳ್ಳುರಿಯುಗ್ಗಡದಂದಮಾಗಿ ತೋ ಱಿದಪುದು ಕಣ್ಗೆ ಸಜ್ಜರಸದೆಣ್ಣೆಯ ತುಪ್ಪದ ಕಂಪಿದೆಲ್ಲಮೆಂ|
ಬುದೆ ಬಗೆದಲ್ಲಿ ನೋಡುವೊಡಮಿಟ್ಟಗೆ ಕಲ್ಮರನೆಂಬುದಿಲ್ಲ ಕೂ ರದನಿದನೊಡ್ಡಿದಂ ಪಗೆಗೆ ಸಂತಸಮಾಗಿರೆ ಮಾರಿ ಸುಯ್ಗುಮೇ|| ೪
ವ|| ಅದಲ್ಲದೆಯುಮತ್ಯಾದರಸ್ಸಂಭ್ರಮಮುತ್ಪಾದಯತಿಯೆಂಬುದೀ ಪುರೋಚನನೆಂಬ ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ವಿದೆಲ್ಲಂ ನಮ್ಮಂ ಮೆಳ್ಪಡಿಸಲೆಂದೆ ಮಾಡಿದಂ ನಾಮಿದನಱಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮೆಂದು ನಿಚ್ಚಂ ಬೇಂಟೆವೋಗೆ ಪುರೋಚನನುಂ ಪೆಱಗಣ ಕಾಪಂ ಕಣ್ಗಾಪಿನಲೆ ಕಾದಿರ್ಪನ್ನೆಗಂ ವಿದುರನ ವಿಶ್ವಾಸ ದಾಸಂ ಕನಕನೆಂಬಂ ಬಂದು ಪಾಂಡವರಂ ಕಂಡೇಕಾಂತದೊಳ್ ವಿದುರನಟ್ಟಿದ ವಿನ್ನಾಣಂಗಳಂ ಪೇೞ್ದು ನಂಬಿಸಿ ನೀಮೆಂತುಂ ಬಲ್ಲಿರಂತೆ ಪೊಱಮಟ್ಟು ಪೋಗಿಮೆಂದು ಜತುಗೃಹ ಕವಾಟ ಪುಟ ಸಂಗಳೊಳ್ ಸುರಂಗಮಂ ಗಂಗೆಯೊಳ್ ಮೂಡುವಂತಾಗೆ ಸಮೆದು ಪೇೞ್ದು ಪೋಪುದುಂ ಪಾಂಡವರುಂ ಪುರೋಚನಂ ತಮ್ಮಂ ಮಱುದಿವಸಂ ಛಿದ್ರಿಸುವನೆನಲುಂ ಮುನ್ನಿನ ದಿವಸಮೊಳಗಣ ಪರಿಜನಮೆಲ್ಲಮಂ ಪಾರ್ವರನೂಡುವ ನೆವದೊಳೆ ಪೊಱಮಡಿಸಿ ಸೂರ್ಯಾಸ್ತಮಯದೊಳ್ ಪಾರ್ವರನೂಡಿ ನಿಷಾದಿತಿಯೆಂಬ ಬೇಡಿತಿಗಮಯ್ವರ್ ಮಗಂದಿರ್ಗಮುಣಲಿಕ್ಕಿದೊಡೆ ತಣಿಯುಂಡು ಬೆಂಡುಮರಲ್ದು ಮಱಸುಂದಿದರ್ ಪುರೋಚನನುಮಾ ಮನೆಯೊಳೊಂದೋವರಿಯೊಳ್ ಮಱಕೆಂದಿದನಾ ಪ್ರಸ್ತಾವದೊಳರ್ಧ ರಾತ್ರಿಯಾದಾಗಳ್ ಕೊಂತಿವೆರಸಯ್ವರುಮಂ ಮುನ್ನಮೊಯ್ಯನೊಯ್ಯನೆ ಸುರಂಗದಿ ಪೊಱಮಡಿಸಿ ಭೀಮಸೇನಂ ಪುರೋಚನಂ ಮಱಕೆಂದಿರ್ದೋವರಿಯೊಳ್ ಕಿಚ್ಚಂ ಕೊಳಿಸಲೊಡಂ-
ಕಂ|| ಅಡೆವೊತ್ತದೆ ಕಿಱಕಿಱದನೆ ಸುಡದಿನಿಸರೆಪೊರೆಕನಾಗದೆಯೆ ಸಸಿದಂದೊಂ|
ದೆಡೆಯೊಳಗೊಟ್ಟಿರ್ದರಳೆಯ ನೊಡನಳುರ್ವಂತುಳುರ್ದನನಲನರಗಿನ ಮನೆಯಂ| ೫
ಅದರ ರಹಸ್ಯವನ್ನು ತಿಳಿದು ತಮ್ಮಂದಿರೊಡಗೂಡಿದ ಕುಂತಿಗೆ ರಹಸ್ಯವಾಗಿ ಹೀಗೆ ಹೇಳಿದನು- ೪. ಇದು ಮನೆಯ ಹಾಗೆ ಕಾಣುವುದಿಲ್ಲ. ಉರಿಯುವ ದಾವಾಜ್ಞಾಲೆಯ ರಾಶಿಯಂತೆ ಕಣ್ಣಿಗೆ ಕಾಣುತ್ತಿದೆ. ಎಲ್ಲಿ ಪರೀಕ್ಷಿಸಿ ನೋಡಿದರೂ ಸಜ್ಜರಸದ ಎಣ್ಣೆಯ ತುಪ್ಪದ ವಾಸನೆಯೇ ಇದೆ. ಇಟ್ಟಿಗೆ, ಕಲ್ಲು, ಮರ ಎಂಬುವುದಿಲ್ಲ. ಶತ್ರುವಿಗೆ ಸಂತೋಷವಾಗುವುದಕ್ಕೋಸ್ಕರ ಅಹಿತನಾದ ವಿರೋಚನನು ಈ ಉಪಾಯವನ್ನು ಒಡ್ಡಿದ್ದಾನೆ. ಇದಕ್ಕೆ ಮಾರದೇವತೆಯು ನಿಟ್ಟುಸಿರು ಬಿಡುತ್ತಾಳೆಯೇ (ಅಂದರೆ ಇಲ್ಲ, ಅದು ಅವಳಿಗೆ ತೃಪ್ತಿಕರವಾಗಿಯೇ ಇರುತ್ತದೆ) ವ|| ಅಷ್ಟೇ ಅಲ್ಲದೆ ‘ವಿಶೇಷವಾದ ಆದರವು ಸಂದೇಹವನ್ನುಂಟುಮಾಡುತ್ತದೆ’ ಎಂಬುದುಂಟು. ‘ಈ ಪುರೋಚನನೆಂಬ ಭೂತವು ದೂರ್ಯೋಧನನ ಆಜ್ಞೆಯ ಪ್ರಕಾರ ನಮಗಿಷ್ಟು ಆದರವನ್ನು ತೋರಿಸುವುದೆಲ್ಲ ನಮ್ಮನ್ನು ಮೋಸಮಾಡುವುದಕ್ಕಾಗಿಯೇ ಮಾಡಿದ್ದಾನೆ. ನಾವು ಇದನ್ನು ತಿಳಿಯದ ಹಾಗೆ ಬೇಟೆಗೆ ಹೋಗುವ ನೆಪದಲ್ಲಿ ದಾರಿಯನ್ನು ಹುಡುಕೋಣ’ ಎಂದು ನಿತ್ಯವೂ ಬೇಟೆಗೆ ಹೋಗುತ್ತಿರಲು ಪುರೋಚನನೂ ಇವರ ಹೊರಗಿನ ರಕ್ಷಣೆಯನ್ನು ತನ್ನ ಕಣ್ಣಿನ ಮೇಲುನೋಟದಿಂದಲೇ ನೋಡುತ್ತಿರುವಷ್ಟರಲ್ಲಿ ವಿದುರನ ನಂಬಿಕೆಗೆ ಪಾತ್ರನಾದ ಕನಕನೆಂಬ ಸೇವಕನು ಬಂದು ಪಾಂಡುವರನ್ನು ಕಂಡು ರಹಸ್ಯವಾಗಿ ಅವರಿಗೆ ವಿದುರನು ಕಳುಹಿಸಿದ ಸಂಜ್ಞೆಗಳನ್ನು ಹೇಳಿ ನಂಬುವ ಹಾಗೆ ಮಾಡಿ ‘ನೀವು ಹೇಗೂ ತಿಳಿದವರಾಗಿದ್ದೀರಿ; ಹಾಗೆಯೇ ಹೊರಟು ಹೋಗಿ ಎಂದು ಅರಗಿನ ಮನೆಯ ಬಾಗಿಲಿನ ಸಂದಿಯಲ್ಲಿ ನೆಲದೊಳಗಿನ ರಂಧ್ರವನ್ನು ಗಂಗೆಯ ಆಚೆಯ ದಡದಲ್ಲಿ ಹೊರಗೆ ಬರುವಂತೆ ಸಿದ್ಧಪಡಿಸಿ ಆ ವಿಷಯವನ್ನು ಅವರಿಗೆ ಹೇಳಿಹೋದನು. ಪಾಂಡವರೂ ಕೂಡ ಪುರೋಚನನು ತಮ್ಮನ್ನು ಮುಂದಿನ ದಿವಸ ಛೇದಿಸುತ್ತಾನೆಂದು ತಿಳಿದು ಮೊದಲ ದಿನವೇ ಬ್ರಾಹ್ಮಣರಿಗೆ ಭೋಜನಮಾಡಿಸುವ ನೆಪದಲ್ಲಿ ತಮ್ಮ ಪರಿವಾರವನ್ನೆಲ್ಲ ಹೊರಗೆ ಹೋಗುವ ಹಾಗೆ ಮಾಡಿದರು. ಸೂರ್ಯನು ಮುಳುಗುವ ಹೊತ್ತಿನಲ್ಲಿ ಬ್ರಾಹ್ಮಣರಿಗೆಲ್ಲ ಊಟ ಮಾಡಿಸಿ ನಿಷಾದಿತಿಯೆಂಬ ಬೇಡರವಳಿಗೂ ಅವಳ ಅಯ್ದು ಜನ ಮಕ್ಕಳಿಗೂ ಊಟ ಮಾಡಿಸಿದರು. ಅವರು ತೃಪ್ತಿಯಾಗಿ ತಿಂದು ಬಳಲಿದಂತವರಾಗಿ ಮೈಮರೆತು ನಿದ್ರಿಸಿದರು. ಪುರೋಚನನೂ ಆ ಮನೆಯ ಒಂದು ಕೋಣೆಯಲ್ಲಿ ಎಚ್ಚರತಪ್ಪಿ ಮಲಗಿದನು. ಆ ಸಂದರ್ಭದಲ್ಲಿ ಅರ್ಧರಾತ್ರಿಯಾದಾಗ ಭೀಮಸೇನನು ಕುಂತಿಯೊಡನೆ ಅಯ್ದುಜನಗಳನ್ನು ಮೊದಲೇ ನಿಧಾನವಾಗಿ ಸುರಂಗದಿಂದ ಹೊರಡಿಸಿ ಪುರೋಚನನು ಮೈಮರೆತು ಮಲಗಿದ್ದ ಕೊಠಡಿಗೆ ಬೊಂಕಿಯನ್ನು ಹಚ್ಚಿದನು. ೫. ಅಡಿಯ ಭಾಗ ಹತ್ತಿಕೊಳ್ಳದೆ ಸ್ವಲ್ಪ ಸ್ವಲ್ಪವಾಗಿ ಸುಡದೆ ಸ್ವಲ್ಪವೂ ಅರೆಕರಿಕಾಗದೆ ಬಿಡಿಸಿಟ್ಟಿದ್ದ ಹತ್ತಿಯ ರಾಶಿಯನ್ನು ಒಟ್ಟಿಗೇ
ಕಂ|| ಮೇಲಾದ ಪಾಂಡುಸುತರನು ಪಾಲಂಭಂಗೆಯ್ಯುತಿರ್ಪ ದುರ್ಯೋಧನನಂ||
ಲೀಲೆಯೆ ನುಂಗುವ ಮೃತ್ಯುವ ನಾಲಗೆಯೆನೆ ನೆಗೆದುವುರಿಯ ನಾಲಗೆ ಪಲವುಂ|| ೬
ವ|| ಆಗಳ್ ಭೀಮಸೇನಂ ತನ್ನ ತಲೆಯೊಳಂ ಮೆಯ್ಯೊಳಂ ಕರಗಿ ಸುರಿವರಗಿನುರಿಯ ಬಂಬಲ್ಗಳಂ ಪೊಸೆದು ಬಿದಿರ್ದು ಕಳೆದು ಸುರಂಗದೊಳಗಣಿಂದಮೆ ತನ್ನೊಡವುಟ್ಟಿದರ್ ಕೂಡೆ ವಂದನನ್ನೆಗಮಿತ್ತಂ-
ಕಂ|| ಅರಗಿನ ಮನೆಯೊಳ್ ಪಾಂಡವ ರುರಿದೞದರಕ್ಕಟಯ್ಯೊ ದುರ್ಯೋಧನನೆಂ|
ಬೆರಲೆಯಿನೆಂದೞುತುಂ ತ ತ್ಪುರಜನಮೞಲೊದಪಿ ಪರಿದು ನೋಡಿತ್ತಾಗಳ್| ೭
ವ|| ನೋಡಿ ರೂಪಱಯಲಾಗದಂತು ಕರಿಮುರಿಕನಾಗಿರ್ದ ಬೇಡಿತಿಯು ಮನವಳಯ್ವರ್ ಮಕ್ಕಳುಮಂ ಕೊಂತಿಯುಂ ಪಾಂಡವರುಮಪ್ಪರೇನುಂ ತಪ್ಪಲ್ಲೆಂದು ಪುರಪ್ರಧಾನರ್ಕಳ್ ತದ್ವ ತ್ತಾಂತಮೆಲ್ಲಮಂ ಪೇೞ್ದು ಧೃತರಾಷ್ಟ್ರಂಗಂ ಪೇೞಲಟ್ಟಿದೊಡೆ-
ಕಂ|| ಮನದೊಳ್ ತ್ರೈಭುವನಮನಾ
ಳ್ದನಿತುವರಂ ತನಗೆ ಸಂತಸಂ ಪೆರ್ಚಿಯುಮಂ| ದಿನಿಸಂಧನೃಪಂ ತನ್ನಯ
ಜನದೊಳ್ ಕೆಲನಱಯೆ ಕೃತಕ ಶೋಕಂಗೆಯ್ದಂ|| ೮
ವ|| ಆಗಳ್ ನದೀತನೂಜ ಭಾರದ್ವಜ ಕೃಪರವಿರಳ ಬಾಷ್ಪವಾರಿ ದುರ್ದಿನ ದೀನಾನನರಾಗಿರೆ ವಿದುರಂ ತಾನಱದುಮಱಯದಂತೆ ಶೋಕಾಕ್ರಾಂತನಾಗಿ ಧೃತರಾಷ್ಟ್ರನ ಬೆಸದೊಳ್ ವಾರಣಾವತಕ್ಕೆ ಪೋಗಿ ತದರ್ಧ ದಗ್ಧ ಕಳೇವರಂಗಳಂ ಸಂಸ್ಕರಿಸಿ ಜಳದಾನಾದಿಕ್ರಿಯೆಗಳಂ ಮಾಡಿ ಮಗುೞೆ ವಂದನನ್ನೆಗಮಿತ್ತ ಪಾಂಡವರ್ ಸುರಂಗದಿಂ ಪೊಱಮಟ್ಟು ತಾರಾಗಣಂಗಳ್‌ನಿಂದ ನೆಲೆಯಿಂದೆಸೆಯಂ ಪೊೞ್ತ್ತುಮನಱದು ತೆಂಕಮೊಗದೆ ಪಯಣಂಬೋಗಿ-
ಮ|| ತಡಕುಂ ಪಿಟ್ಟೆಯುಮೊತ್ತೆ ಮೆಲ್ಲಡಿಗಳಂ ಬಳ್ಕುತ್ತುಮಳ್ಕುತ್ತುಮೋ
ರಡಿಗೊರ್ಮೊರ್ಮೆ ಕುಳುತ್ತುಮೇೞುತಿರೆ ಕಂಡಿಂತಾಗದಿನ್ನೇೞಮೆಂ| ದೊಡನಂದಯ್ವರುಮಂ ನಿಜಾಂಸಯುಗದೊಳ್ ಪೊತ್ತೆತ್ತಿ ತಳ್ತೂಳ್ವ ಸೀ
ಱುಡುವಿಂದದ್ಭುತದಾ ಹಿಡಿಂಬವನಮಂ ಪೊಕ್ಕಂ ಮರುನ್ನಂದನಂ|| ೯
ವ್ಯಾಪಿಸುವಂತೆ ಅರಗಿನ ಮನೆಯನ್ನು ಅಗ್ನಿಯು ತಕ್ಷಣ ವ್ಯಾಪಿಸಿದನು. ೬. ಉತ್ತಮರಾದ ಪಾಂಡವರನ್ನು ಮೋಸಮಾಡುತ್ತಿರುವ ದುರ್ಯೋಧನನನ್ನು ಆಟದಿಂದಲೇ ನುಂಗುವ ಮೃತ್ಯುದೇವತೆಯ ನಾಲಗೆಯೆನ್ನುವ ಹಾಗೆ ಹಲವು ಅಗ್ನಿಜ್ವಾಲೆಗಳು ಹೊರಟವು. ವ|| ಆಗ ಭೀಮಸೇನನು ತನ್ನ ತಲೆಯ ಮೇಲೆಯೂ ಶರೀರದ ಮೇಲೆಯೂ ಕರಗಿ ಸುರಿಯುತ್ತಿದ್ದ ಅರಗಿನ ಜ್ವಾಲೆಯ ಸಮೂಹಗಳನ್ನು ಹೊಸದು ಒದರಿ ಕಳೆದು ಸುರಂಗದೊಳಗಿನಿಂದಲೇ ತನ್ನ ಸಹೋದರರ ಜೊತೆಯಲ್ಲಿ ಬಂದನು. ಅಷ್ಟರಲ್ಲಿ ಈ ಕಡೆ- ೭. ದುರ್ಯೋಧನನೆಂಬ ವಿಷದ ಹುಳುವಿನಿಂದ ಪಾಂಡವರು ಅರಗಿನ ಮನೆಯಲ್ಲಿ ಬೆಂದು ನಾಶವಾದರು; ಅಯ್ಯೋ ಅಬ್ಬ ಎಂದು ಅಳುತ್ತ ಆ ಪಟ್ಟಣಿಗರೆಲ್ಲ ಹೆಚ್ಚುತ್ತಿರುವ ದುಖದಿಂದ ಬಂದು ನೋಡಿದರು. ವ|| ನೋಡಿ ಗುರುತಿಸಲಾಗದಷ್ಟು ಕರಿಕುಮುರುಕಾಗಿದ್ದ ಬೇಡಿತಿಯನ್ನೂ ಅವಳ ಅಯ್ದು ಜನ ಮಕ್ಕಳನ್ನೂ ಕುಂತಿ ಹಾಗೂ ಪಾಂಡವರೇ ಆಗಿದ್ದಾರೆ ವ್ಯತ್ಯಾಸವಿಲ್ಲ ಎಂದು ನಿಷ್ಕರ್ಷಿಸಿ ಊರ ಮುಖ್ಯಸ್ಥರು ಆ ವಿಚಾರವನ್ನೆಲ್ಲ ಧೃತರಾಷ್ಟ್ರನಲ್ಲಿಗೂ ಹೇಳಿ ಕಳುಹಿಸಿದರು. ೮. ಅದನ್ನು ಕೇಳಿ ತನಗೆ ಆ ದಿನ ಮೂರುಲೋಕವನ್ನು ಆಳುವಷ್ಟು ಸಂತೋಷ ಹೆಚ್ಚಿದರೂ ಅಕ್ಕಪಕ್ಕದವರು ತಿಳಿಯುವ ಹಾಗೆ ಧೃತರಾಷ್ಟ್ರನು ತನ್ನ ಜನದ ಮಧ್ಯದಲ್ಲಿ ಕಪಟದುಖವನ್ನು ಪ್ರದರ್ಶಿಸಿದನು. ವ|| ಆಗ ಭೀಷ್ಮದ್ರೋಣ ಕೃಪರು ಏಕಪ್ರಕಾರವಾಗಿ ಸುರಿಯುವ ಕಣ್ಣೀರೆಂಬ ಮಳೆಗಾಲದಿಂದ ಬಾಡಿದ ಮುಖವುಳ್ಳವರಾಗಿರಲು ವಿದುರನು ತಾನು ತಿಳಿದಿದ್ದರೂ ತಿಳಿಯದವನಂತೆ ದುಖದಿಂದ ಕೂಡಿದವನಾಗಿ ಧೃತರಾಷ್ಟ್ರನ ಆಜ್ಞೆಯ ಪ್ರಕಾರ ವಾರಣಾವತಕ್ಕೆ ಹೋಗಿ ಅಲ್ಲಿ ಅರ್ಧಸುಟ್ಟಿದ್ದ ದೇಹಗಳಿಗೆ ಸಂಸ್ಕಾರಮಾಡಿ ತರ್ಪಣಾದಿಗಳನ್ನು ಕೊಟ್ಟು ಹಿಂತಿರುಗಿದನು. ಅಷ್ಟರಲ್ಲಿ ಈ ಕಡೆ ಪಾಂಡವರು ಸುರಂಗ ಮಾರ್ಗದಿಂದ ಹೊರಟು ನಕ್ಷತ್ರಸಮೂಹಗಳಿದ್ದ ಸ್ಥಾನಗಳಿಂದ ದಿಕ್ಕನ್ನೂ ಹೊತ್ತನ್ನೂ ತಿಳಿದು ಪ್ರಯಾಣ ಮಾಡಿದರು. ೯. ಮೃದುವಾದ ತಮ್ಮ ಕಾಲುಗಳನ್ನು ಕಲ್ಲುಗಳೂ ಹೆಂಟೆಯೂ ಒತ್ತುತ್ತಿರಲು ಬಳುಕುತ್ತಲೂ ಹೆದರುತ್ತಲೂ ಒಂದೊಂದು ಹೆಜ್ಜೆಗೂ ಕೂರುತ್ತಲೂ ಏಳುತ್ತಲೂ ಇರುವುದನ್ನು (ಭೀಮಸೇನನು) ನೋಡಿ ‘ಇನ್ನು ಮುಂದೆ ಹೀಗಾಗುವುದಿಲ್ಲ ಏಳಿ
ಚಂ|| ಅದು ಮದದಂತಿ ದಂತ ಮುಸಲ ಪ್ರವಿಭಗ್ನ ಮಹಾಮಹೀರುಹಾ ಸ್ಪದಮದು ಸಿಂಹನಾದಜನಿತ ಪ್ರತಿಶಬ್ದ ಮಹಾ ಭಯಾನಕ|
ಪ್ರದಮದು ನಿರ್ಝರೋಚ್ಚಳಿತ ಶೀಕರ ಶೀತಳ ವಾತ ನರ್ತಿತೋ
ನ್ನದ ಶಬರೀ ಜನಾಳಕಮದಾಯತ ವೇತ್ರಲತಾವಿತಾನಕಂ|| ೧೦
ವ|| ಆ ವನಾಂತರಾಳ ಮಧ್ಯಸ್ಥಿತ ವಿಶಾಳ ವಟ ವಿಟಪಿಯನೆಯ್ತಂದದಱ ಕೆೞಗಯ್ವರುಮ ನಿೞಪಿದೊಡಧ್ವಾನ ಪದ ಪರಿಶ್ರಮ ಶ್ರಾಂತರ್ ನಿದ್ರಾಭರಪರವಶರಾಗಿರೆ ಭೀಮಂ ಜಾವಮಿರ್ದು ತನ್ನೊಡವುಟ್ಟಿದರ್ಗಾದ ಪ್ರವಾಸಾಯಾಸಂಗಳ್ಗಂ ದೆಸೆಗಂ ಮನ್ಯುಮಿಕ್ಕು ಕಣ್ಣ ನೀರಂ ತುಂಬಿ-
ಚಂ|| ಭರತನ ವಂಶದೊಳ್ ನೆಗೞ್ದ ಪಾಂಡುಗೆವುಟ್ಟಿಯುವಿ ಸಮಸ್ತ ಸಾ
ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುವಿ ಮಹೋಗ್ರ ಕೇ|
ಸರಿ ಕರಿಕಂಠ ಗರ್ಜಿತ ಮಹಾಟವಿಯೊಳ್ ಮಱಕೆಂದಿ ನೀಮುವಿ ಮರದಡಿಯೊಳ್ ಶಿವಾಶಿವ ರವಂಗಳಿನೆೞ್ಚಱುವಂತುಟಾದುದೇ|| ೧೧
ವ|| ಎಂದು ನುಡಿಯುತ್ತಿರ್ಪನ್ನೆಗಂ ಕೋಕನದಬಾಂಧವನುದಯಾಚಳಶಿಖರ ಶೇಖರನಾದ ನಾಗಳಾ ಬನಮನಾಳ್ವ ಹಿಡಿಂಬನೆಂಬನವರ ಬರವನಱದು ತನ್ನ ತಂಗೆ ಹಿಡಿಂಬೆಯೆಂಬಳಂ ಕರೆದು-
ಕಂ|| ನಿಡಿಯರ್ ಬಲ್ಲಾಯದ ಬ ಲ್ಡಡಿಗರ್ ವಂದಿರ್ದರಯ್ವರಾಲದ ಕೆೞಗಿಂ|
ತೊಡರ್ದರ್ ನಮ್ಮಯ ಭಕ್ಷದೊ
ಳಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ|| ೧೨
ವ|| ಎಂಬುದುಮಂತೆಗೆಯ್ವೆನೆಂದು-
ಕಂ|| ಆಗಸದೊಳಗೊಂದು ಮಹೀ ಭಾಗದೊಳಿನ್ನೊಂದು ದಾಡೆಯಾಗಿರೆ ಮನದಿಂ|
ಬೇಗಂ ಬರ್ಪಳ ದಿಟ್ಟಿಗ
ಳಾಗಳೆ ಪತ್ತಿದುವು ಗೆಂಟಳ್ ಮಾರುತಿಯಂ|| ೧೩
ಎಂದು’ ಒಟ್ಟಿಗೆ ಆ ಅಯ್ದು ಜನವನ್ನು ತನ್ನ ಎರಡು ಭುಜದ ಮೇಲೆ ಹೊತ್ತು ವ್ಯಾಪಿಸಿ ಶಬ್ದಮಾಡುತ್ತಿರುವ ಜೀರುಂಡೆಯಿಂದ ಅದ್ಭುತವಾಗಿದ್ದ ಹಿಡಿಂಬವನವೆಂಬ ಕಾಡನ್ನು ವಾಯುಪುತ್ರನಾದ ಭೀಮಸೇನನು ಪ್ರವೇಶಿಸಿದನು. ೧೦. ಆ ಹಿಡಿಂಬವನವು ಮದ್ದಾನೆಗಳ ಕೊಂಬೆಂಬ ಒನಕೆಯಿಂದ ಮುರಿಯಲ್ಪಟ್ಟ ದೊಡ್ಡಮರಗಳಿಗೆ ಆಶ್ರಯವಾಗಿದ್ದಿತು. ಸಿಂಹಗರ್ಜನೆಯಿಂದ ಉಂಟಾದ ಪ್ರತಿಧ್ವನಿಯಿಂದ ಭಯಂಕರವಾಗಿ ಕಂಡಿತು. ಬೆಟ್ಟ ಝರಿಗಳಲ್ಲಿ ಮೇಲಕ್ಕೆದ್ದ ತುಂತುರುಗಳಿಂದ ಒದ್ದೆಯಾದ ಗಾಳಿಯಿಂದ ಕುಣಿಸಲ್ಪಟ್ಟ ಮದಿಸಿರುವ ಬೇಡಿತಿಯರ ಮುಂಗುರುಳುಗಳಿಂದ ಮನೋಹರವಾಗಿತ್ತು. ವಿಸ್ತಾರವಾದ ಬೆತ್ತದ ಬಳ್ಳಿಗಳ ಮೇಲ್ಕಟ್ಟುಗಳಿಂದ ತುಂಬಿದ್ದಿತು. ವ|| ಆ ಕಾಡಿನ ಒಳಭಾಗದ ಮಧ್ಯದಲ್ಲಿ ವಿಸ್ತಾರವಾದ ಆಲದ ಮರದ ಸಮೀಪಕ್ಕೆ ಬಂದು ಅದರ ಕೆಳಗಡೆ ಆ ಅಯ್ದು ಜನರನ್ನು ಇಳಿಸಿದನು. ಅವರು ದಾರಿ ನಡೆದ ಬಳಲಿಕೆಯಿಂದ ನಿದ್ರಾಭಾರಕ್ಕೆ ಅನರಾದರು. ಭೀಮನು ಅವರಿಗೆ ಕಾವಲಾಗಿದ್ದು ತನ್ನ ಒಡಹುಟ್ಟಿದವರಿಗುಂಟಾದ ಪ್ರಯಾಣದಾಯಾಸಕ್ಕೂ ದುರ್ದೆಶೆಗೂ ದುಖವು ಉಲ್ಬಣಿಸಿ ಬರಲು ಕಣ್ಣ ನೀರನ್ನು ತುಂಬಿಕೊಂಡನು. ೧೧. ಭರತವಂಶದಲ್ಲಿ ಪ್ರಸಿದ್ಧನಾದ ಪಾಂಡುರಾಜನಿಗೆ ಮಕ್ಕಳಾಗಿ ಹುಟ್ಟಿಯೂ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಸಮಸ್ತ ಭೂಮಂಡಲಕ್ಕೆ ಒಡೆಯರಾಗಿಯೂ ಈ ಭಯಂಕರವಾದ ಸಿಂಹ ಮತ್ತು ಆನೆಗಳ ಕೊರಳಿನಿಂದ ಹೊರಟ ಗರ್ಜನೆಗಳಿಂದ ಕೂಡಿದ ಈ ಘೋರಾರಣ್ಯದಲ್ಲಿ ಮೈಮೆರೆತು ಮಲಗಿ ನೀವೂ ಈ ಮರದಡಿಯಲ್ಲಿ ನರಿಗಳ ಅಮಂಗಳಕರವಾದ ಧ್ವನಿಯಿಂದ ಎಚ್ಚರಗೊಳ್ಳುವ ಹಾಗೆ ಆಯಿತೆ? ವ|| ಎಂದು ಹೇಳುತ್ತಿರುವಷ್ಟರಲ್ಲಿಯೇ ಕಮಲಸಖನಾದ ಸೂರ್ಯನು ಉದಯಪರ್ವತದ ಕೋಡಿಗೆ ಬಂದು ಸೇರಿದನು (ಸೂರ್ಯನು ಉದಯಿಸಿದನು). ಆಗ ಆ ಅರಣ್ಯಪ್ರದೇಶವನ್ನು ಆಳುವ ಹಿಡಿಂಬನೆಂಬುವನು ಅವರ ಬರವನ್ನು ತಿಳಿದು ತನ್ನ ತಂಗಿಯಾದ ಹಿಡಿಂಬೆಯೆಂಬವಳನ್ನು ಕರದೆ ೧೨. ನೀಳವಾಗಿಯೂ ಬಲುದಪ್ಪನಾಗಿಯೂ ದಾಂಡಿಗರಾಗಿಯೂ ಇರುವ ಅಯ್ದು ಜನ ಆಲದ ಮರದ ಕೆಳಗೆ ಇದ್ದಾರೆ. ಇನ್ನು ನಮ್ಮ ಆಹಾರಕ್ಕಾಗಿ ಸಿಕ್ಕಿಬಿದ್ದಿದ್ದಾರೆ. ಹೋಗಿ ಬೇಯಿಸಿ ಅಡುಗೆ ಮಾಡಿ ಸಿದ್ಧಪಡಿಸು; ನೀನೂ ನಾನೂ ತಿನ್ನೋಣ. ವ|| ಎನ್ನಲು ಹಾಗೆಯೇ ಮಾಡುತ್ತೇನೆ ಎಂದು. ೧೩. ಆಕಾಶದಲ್ಲಿ ಒಂದು ಭೂಮಿಯಲ್ಲಿ ಒಂದು ದವಡೆಯಾಗಿರಲು
ವ|| ಅಂತೊಂದಂಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು ತನ್ನತ್ತ ಮೊಗದೆ ಬರ್ಪಳಂ ಕಂಡು-
ಕಂ|| ಖೇಚರಿಯೋ ಭೂಚರಿಯೊನಿ ನಿ ಶಾಚರಿಯೋ ರೂಪು ಬಣ್ಣಿಸಲ್ಕಾರ್ಗಮವಾ|
ಗ್ಗೊಚರವಿ ಕಾನನಮುಮ ಗೋಚರಮಿವಳಿಲ್ಲಿಗೇಕೆ ಬಂದಳೊ ಪೇೞಂ||
ವ|| ಎಂಬನ್ನೆಗಮಾಕೆ ಮದನನ ಕೆಯ್ಯಿಂ ಬರ್ದುಕಂದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗೇನೆಂಬೆಯೇಕೆ ಬಂದೆಯೆಂದೊಡಾಕೆಯೆಂದಳೆರಡಱಯ ದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಬನಂ ಹಿಡಿಂಬವನೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯೆನೆಂಬೆನಾತನ ಬೆಸದಿಂ ನಿಮ್ಮಿನಿಬರುಮಂ-
ಕಂ|| ಪಿಡಿದಡಸಿ ತಿನಲ್ ಬಂದಿ ರ್ದೆಡೆಯೊಳ್ ನಿನಗಾಗಿ ಮದನನೆನ್ನನೆ ತಿನೆ ಕೇಳ್|
ಪಡೆನೋಡಲ್ ಬಂದವರಂ ಗುಡಿವೊಱಸಿದರೆಂಬುದಾಯ್ತು ನಿನ್ನೆನ್ನೆಡೆಯೊಳ್|| ೧೫
ವ|| ಎಂದೀ ಮಱಲುಂದಿದರಾರ್ಗೆಂದೊಡೆನ್ನ ತಾಯ್ವಿರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ಗೆ ನೀನೆನ್ನ ಪೆಗಲನೇಱು ಗಗನತಳಕ್ಕುಯ್ವೆನೆನೆ ಭೀಮಸೇನನಾ ಮಾತಿಂಗೆ ಮುಗುಳ್ನಗೆ ನಕ್ಕು-
ಚಂ|| ಅೞಪಿದೆಯಂತುಮಲ್ಲದೆ ನಿಶಾಚರಿಯೈ ನಿನಗಪ್ಪುದಪ್ಪುದೀ ಯೞನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋೞ್ಪಮಾತನೊ|
ಡ್ಡೞಯದ ಗಂಡವಾತನೆನುತಂತಿರೆ ತಂಗೆಯ ಮಾಣ್ದುದರ್ಕವಂ ಮೊೞಗಿ ಸಿಡಿಲ್ದದೊಂದು ಸಿಡಿಲೇೞ್ಗೆಯಿನೆಯ್ತರೆ ವಂದು ಭೀಮನಂ|| ೧೬
(ಅಂದರೆ ದೊಡ್ಡದಾಗಿ ಬಾಯಿ ತೆರೆದುಕೊಂಡು) ಮನೋವೇಗವನ್ನು ಮೀರಿ ಬರುತ್ತಿದ್ದ ಅವಳ ದೃಷ್ಟಿಗಳು ದೂದದಿಂದಲೇ ಭೀಮನನ್ನು ಸೇರಿಕೊಂಡವು. ವ|| ಹಾಗೆ ಒಂದು ಬಾಣ ಹೋಗುವಷ್ಟು ದೂರದಲ್ಲಿಯೇ ಕಾಮಬಾಣಕ್ಕೆ ಅನಳಾಗಿ ತಾನು ಇಷ್ಟ ಬಂದ ರೂಪವನ್ನು ಧರಿಸುವ ಸಾಮರ್ಥ್ಯವುಳ್ಳವಳಾದುದರಿಂದ ಸುಂದರಳಾದ ಕನ್ನಿಕೆಯ ಆಕಾರವನ್ನು ತಾಳಿ ಭೀಮನ ಕಡೆಗೇ ಬಂದಳು. ತನ್ನ ಕಡೆಗೆ ಬರುತ್ತಿದ್ದ ಅವಳನ್ನು ನೋಡಿದನು. ೧೪. ಭೀಮನು ಇವಳು ಅಂತರಿಕ್ಷದಲ್ಲಿ ಸಂಚರಿಸುವ ವಿದ್ಯಾಧರಿಯೋ ಭೂಮಿಯಲ್ಲಿ ಸಂಚಾರಮಾಡುವ ಮನುಷ್ಯಸ್ತ್ರೀಯೋ, ಇಲ್ಲ ರಾತ್ರಿಯಲ್ಲಿ ಸಂಚಾರಮಾಡುವ ರಾಕ್ಷಸಿಯೋ! ಇವಳ ರೂಪವನ್ನು ವರ್ಣಿಸುವುದಕ್ಕೆ ಯಾರಿಗೂ ಮಾತಿನಿಂದ ಸಾಧ್ಯವಿಲ್ಲ. ಈ ಕಾಡೂ ಕೂಡ ಯಾರಿಗೂ ಪರಿಚಿತವಿಲ್ಲದುದು. ಇವಳಿಲ್ಲಿಗೇಕೆ ಬಂದಳು ಎಂದು ಯೋಚಿಸಿದನು. ವ|| ಅಷ್ಟರಲ್ಲಿ ಅವಳು ಮನ್ಮಥನ ಕಯ್ಯಿಂದ ಬದುಕಿ ಪುಷ್ಪಬಾಣದ ಹಾಗೆ ಭೀಮಸೇನನ ಪಕ್ಕದಲ್ಲಿ ಬಂದು ಕುಳಿತುಕೊಂಡಿರಲು ಭೀಮಸೇನನು ಅವಳನ್ನು ಕುರಿತು ನೀನು ಯಾರ ಮಗಳು? ನಿನ್ನ ಹೆಸರೇನು? ಯಾತಕ್ಕೆ ಬಂದಿದ್ದೀಯೆ ಎನ್ನುಲು (ಆಕೆ ಅವನನ್ನು ಕುರಿತು) ಸಂದೇಹವಿಲ್ಲದೆ ದೃಢವಾಗಿ ಪ್ರೀತಿಸಿ ಬಂದ ನಿನ್ನಲ್ಲಿ ಸುಳ್ಳನ್ನು ಹೇಳಬಾರದು. ಈ ಕಾಡು ಹಿಡಿಂಬವನಮೆಂಬುದು. ಇದನ್ನು ಆಳುವ ಹಿಡಿಂಬನೆಂಬ ರಾಕ್ಷಸನು ನಮ್ಮಣ್ಣ; ನನ್ನ ಹೆಸರೂ ಹಿಡಿಂಬೆಯೆಂದು; ಅವನ ಆಜ್ಞೆಯ ಪ್ರಕಾರ ನಿಮ್ಮಿಷ್ಟು ಜನವನ್ನು
೧೫. ಹಿಡಿದು ಬಾಯಿಗೆ ತುರಿಕಿಕೊಂಡು ತಿನ್ನಲು ಬಂದ ಸಮಯದಲ್ಲಿ ಮನ್ಮಥನು ನನ್ನನ್ನೇ ತಿಂದುಬಿಟ್ಟಿದ್ದಾನೆ. “ಸೈನ್ಯವನ್ನು ನೋಡಲು ಬಂದವರ ಕೈಯಲ್ಲಿ ಬಾವುಟವನ್ನು ಹೊರಿಸಿದರು” ಎಂಬ ಗಾದೆಗೆ ಅನುಗುಣವಾಯಿತು ನಿನ್ನ ನನ್ನ ಸಂಬಂಧವು ವ|| ಎಂದು ‘ಈ ಮೈಮರೆತು ಮಲಗಿರುವವರಾರು’ ಎಂದು ಕೇಳಿದಳು. ಅವರು ನನ್ನ ತಾಯಿ ಮತ್ತು ಸಹೋದರರು ಎಂದು ಉತ್ತರಕೊಡಲು ಹಿಡಿಂಬನು ಬಂದು ಅವರನ್ನು ತಿನ್ನುವುದಾದರೆ ತಿನ್ನಲಿ; ನೀನು ನನ್ನ ಹೆಗಲನ್ನು ಏರಿಕೋ, ಆಕಾಶಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಳು. ಅದಕ್ಕೆ ಭೀಮಸೇನನು ಹುಸಿನಗೆ ನಕ್ಕು ೧೬. ನೀನು ನನ್ನಲ್ಲಿ ಮೋಹಗೊಂಡಿದ್ದಿಯೆ; ಅಲ್ಲದೆ ನೀನು ರಾಕ್ಷಸಿಯಾಗಿದ್ದೀಯೆ; ಈ ಅಯ್ಯೋಗ್ಯವಾದ ಮಾತು ನಿನಗೆ ತಕ್ಕುದಾಗಿದೆ. ನಿನ್ನ ಹಿರಿಯಣ್ಣನೇ ಬರಲಿ, ಅವನ ಊನವಾಗದ ವೀರ್ಯಾಲಾಪಗಳನ್ನು ಪರೀಕ್ಷಿಸಿ ನೋಡೋಣ ಎನ್ನುಕ ಹಾಗೆಯೇ ಇರಲು ತಂಗಿಯು ಸಾವಕಾಶಮಾಡಿದುದಕ್ಕಾಗಿ ಹಿಡಿಂಬನು ಗರ್ಜನೆ ಮಾಡಿ ಸಿಡಿಲವೇಗದಿಂದ
ವ|| ಕಂಡು ಕಣ್ಗಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸೆ ನೀನೊರ್ವಯೆನ್ನೊಳಗೇಂ ಕಾದುವೆ ಈ ಮಱಲುಂದಿದರನೆತ್ತಿನಿಬರುಮನೊರ್ಮೆಯೆ ಪೊಸೆದು ಮುಕ್ಕುವೆನೆನೆ ಸಾಹಸಭೀಮಂ ಮಲ್ಲಂತಿಗೆಯನಪ್ಪೊಡಂ ಸಡಲಿಸದವನನವಯವ ದೊಳಿಂತೆಂದಂ-
ಕಂ|| ಏಂ ಗಾವಿಲನಯೊ ನಿನ್ನಂ ನಂಗುವುದರ್ಕಿವರನೆತ್ತವೇೞ್ಕುಮೆ ನೆರಮಂ|
ಸಂಗಳಿಸಲ್ವೇೞ್ಕು ಮಾ ತಂಗವಿರೋಗೆ ಕುರಂಗ ಸಂಗರ ಧರೆಯೊಳ್|| ೧೭
ವ|| ಎಂಬುದುಂ ಹಿಡಿಂಬನಾಡಂಬರಂಗೆಯ್ದು ತುಂಬುರುಕೊಳ್ಳಿಯತಂಬರಂಬರಂ ಸಿಡಿಲ್ದು-
ಚಂ|| ಕಡುಪಿನೆ ಪೊತ್ತು ಪಾಸಯನೆಯ್ತರೆ ಭೀಮನುಮೊತ್ತಿ ಕಿಱ್ತು ಬೇ
ರೊಡನೆ ಮಹೀಜಮೊಂದನಿಡೆಯುಂ ಬಿಡೆ ಪೊಯ್ಯೆಯುಮಾ ಬನಂ ಪಡ| ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನೆ ಜೋಲ್ದು ದೈತ್ಯನಂ
ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮೆಯೆ ಸೀಳ್ದು ಬೀಸಿದಂ|| ೧೮
ವ|| ಆಗಳಾ ಕಳಕಳಕ್ಕೆ ಮಱಲುಂದಿದಯ್ವರುಮೆೞ್ಚತ್ತಿದೇನೆಂದು ಬೆಸಗೊಳೆ ತದ್ವೃತ್ತಾಂತ ಮೆಲ್ಲಮನಱಪಿ ಹಿಡಿಂಬೆ ಡಂಬಮಿಲ್ಲದೆ ಭೀಮಸೇನನೊಳಪ್ಪೊಡಂಬಡಂ ನುಡಿಯೆ ಕೊಂತಿಯುಂ ಧರ್ಮಪ್ರತ್ರನುವಿಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲ್ಬೇಡೀಕೆಯಂ ಕೆಯ್ಕೊಳ್ವುದೆ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಱಂಗಿ ಕೞ್ತಲಿಸಿದ ಮರುದುಱುಗಲ ನಡುವೆ ಸುಧಾ ಧವಳಿತೋತ್ತುಂಗ ರಮ್ಯ ಹರ್ಮ್ಯಂಗಳಂ ಕಾಣ್ಬಿರಪ್ಟೊಡದು ಹಿಡಿಂಬಪುರಮೆಂಬುದೆಮ್ಮ ಪುರಮಲ್ಲಿಗೆ ಪೋಪಂ ಬನ್ನಿಮೆಂದು ಮುಂದಿಟ್ಟೊಡಗೊಂಡು ಪೋಗಿ ಮಹಾವಿಭೂತಿಯಿಂ ಪೊೞಲಂ ಪುಗಿಸಿ ತನ್ನಸಂಪತ್ತುಮಂ ಶ್ರೀಯುಮಂ ಮೆದು ಮಜ್ಜನ ಭೋಜನತಾಂಬೂಲ ಲೇಪನಂಗಳಿಂ ಪಥಪರಿಶ್ರಮಮೆಲ್ಲಮಂ ಕಳೆದು ಭೀಮಸೇನನುಂ ತಾನುಂ-
ಹತ್ತಿರಕ್ಕೆ ಬಂದು ಭೀಮನನ್ನು- ವ|| ನೋಡಿ ಕಣ್ಣುಗಳಿಂದ ಕೆಂಡದ ಸಮೂಹವೂ ಉರಿಯು ಮೊತ್ತವೂ ಚೆಲ್ಲುತ್ತಿರಲು ನೀನೊಬ್ಬನೇ ನನ್ನಲ್ಲಿ ಹೇಗೆ ಕಾದುತ್ತೀಯೆ; ಈ ಮೈಮರೆತು ಮಲಗಿದವರನ್ನೆಲ್ಲ ಎಚ್ಚರಗೊಳಿಸು, ಇವರಿಷ್ಟು ಜನವನ್ನು ಒಂದೇ ಸಲ ಹೊಸೆದು ಮುಕ್ತುತ್ತೇನೆ ಎಂದನು. ಸಾಹಸಭೀಮನು ತನ್ನ ಚಡ್ಡಿಯನ್ನು (ನಡುಕಟ್ಟು?) ಬಿಚ್ಚದೆ (ಸಡಲಿಸದೆ) ಉದಾಸೀನನಾಗಿಯೇ ಅವನನ್ನು ಕುರಿತು ಹೀಗೆಂದನು. ೧೭. ಎಂತಹ ದಡ್ಡನೊ ನೀನು? ನಿನ್ನನ್ನು ನುಂಗುವುದಕ್ಕೆ ಇಷ್ಟು ಜನವನ್ನೂ ಎಬ್ಬಿಸಬೇಕೆ? ಜಿಂಕೆಯೊಡನೆ ಯುದ್ಧಮಾಡುವ ರಣರಂಗದಲ್ಲಿ ಗಜವಿರೋಯಾದ ಸಿಂಹಕ್ಕೆ ಸಹಾಯವನ್ನೂ ಕೊಡಿಸಬೇಕೆ? ಎಂದನು. ವ|| ಹಿಡಿಂಬನು ಆರ್ಭಟಿಸಿ ತೂಬರಮರದ ಸೌದೆಯ ಕೊಳ್ಳಿಯ ಹಾಗೆ ಆಕಾಶದವರೆಗೆ ನೆಗೆದು-೧೮. ಒಂದು ಹಾಸುಬಂಡೆಯನ್ನು ವೇಗದಿಂದ ಕಿತ್ತು ಹೊತ್ತು ಬರಲು ಭೀಮನೂ ಬಲಾತ್ಕಾರದಿಂದ ಒಂದು ಮರವನ್ನು ಬೇರೊಡನೆಯೇ ಕಿತ್ತು ಅವನ ಮೇಲೆ ಬೀಸುವುದರಿಂದಲೂ ಒಂದೇ ಸಮನಾಗಿ ಹೊಡೆಯುವುದರಿಂದಲೂ ಆ ಕಾಡೆಲ್ಲ ಚೆಲ್ಲಾಪಿಲ್ಲಿಯಾಗುವ ಹಾಗೆ ಕಲ್ಲಿನಿಂದಲೂ ಮರದಿಂದಲೂ ಬಡಿದು ನಿಧಾನವಾಗಿ ಜೋತುಬಿದ್ದ ಆ ರಾಕ್ಷಸನನ್ನು ಹಿಡಿದುಕೊಂಡು ತಾವರೆಯ ದಂಟನ್ನು ಸೀಳುವ ಹಾಗೆ ಒಂದೇ ಸಲ ಸೀಳಿ ಎಸೆದನು. ವ|| ಆಗ ಆ ಕಲಕಲಶಬ್ದದಿಂದ ಮೈಮರೆತು ನಿದ್ದೆ ಮಾಡುತ್ತಿದ್ದ ಅಯ್ದು ಜನವೂ ಎಚ್ಚೆತ್ತು ಇದೇನೆಂದು ಪ್ರಶ್ನೆಮಾಡಲು ಆ ವಿಷಯವನ್ನೆಲ್ಲಾ ತಿಳಿಸಿ ಹಿಡಿಂಬೆಯು ಆಡಂಬರವಿಲ್ಲದೆ ಸರಳವಾಗಿ ಭೀಮನ ವಿಷಯದಲ್ಲಿ ತನ್ನ ಒಪ್ಪಿಗೆಯನ್ನು ತಿಳಿಸಲು ಕುಂತಿಯೂ ಧರ್ಮರಾಜನೂ ಇವಳು ಸಾಮಾನ್ಯಳಾದ ಹೆಂಗಸಲ್ಲ; ರಾಕ್ಷಸಸ್ತ್ರೀಯೆಂದು ಭಾವಿಸಬೇಡ, ಅವಳನ್ನು ಸ್ವೀಕರಿಸುವುದೇ (ನಿನಗೆ ಯೋಗ್ಯವಾದ) ಕಾರ್ಯ ಎಂದು ಅವಳಿಗೂ ಭೀಮಸೇನನಿಗೂ ಗಾಂಧರ್ವವಿವಾಹವನ್ನು ಮಾಡಿದರು. ಹಿಡಿಂಬೆಯು ನೀವು ಇಲ್ಲಿರುವುದು ಬೇಡ; ಬೆಟ್ಟದ ಮೇಲೆ ಕರ್ರಗೆ ಕಪ್ಪಾಗಿ ಕಾಣುವ ಮರಗಳ ತೋಪಿನ ಮಧ್ಯೆ ಸುಣ್ಣದಿಂದ ಬಿಳುಪಾಗಿ ಮಾಡಲ್ಪಟ್ಟು ಎತ್ತರವೂ ಮನೋಹರವೂ ಆಗಿ ನಿಮ್ಮಕಣ್ಣಿಗೆ ಕಾಣುತ್ತಿರುವ ಆ ಉಪ್ಪರಿಗೆ ಮನೆಗಳು ನಮ್ಮಪಟ್ಟಣ (ರಾಜಧಾನಿ), ಅಲ್ಲಿಗೆ ಹೋಗೋಣ ಬನ್ನಿ ಎಂದು ಅವರನ್ನು ಮುಂದುಮಾಡಿಕೊಂಡು ಹೋಗಿ ಮಹಾವೈಭವದಿಂದ ಪುರಪ್ರವೇಶಮಾಡಿದಳು. ತನ್ನ ಐಶ್ವರ್ಯವನ್ನೂ ವೈಭವವನ್ನೂ ಅವರಿಗೆ ಪ್ರಕಾಶಪಡಿಸಿ ಸ್ನಾನ, ಭೋಜನ, ತಾಂಬೂಲ ಗಂಧಾದಿಗಳಿಂದ ದಾರಿನಡೆದ ಬಳಲಿಕೆಗಳನ್ನೆಲ್ಲ ಕಳೆದು ಸತ್ಕರಿಸಿದಳು. ಭೀಮಸೇನನೂ
ಕಂ|| ಎಲ್ಲಿ ಕೊಳನೆಲ್ಲಿ ತಣ್ಬುೞ
ಲೆಲ್ಲಿ ಲತಾಭವನಮೆಲ್ಲಿ ಧಾರಾಗೃಹಮಂ|
ತಲ್ಲಿಯೆ ತೊಡರ್ದದಲ್ಲಿಯೆ ನಿಂ ದಲ್ಲಿಯೆ ರಮಿಯಿಸಿದಳಾಕೆ ಮರುದಾತ್ಮಜನೊಳ್|| ೧೯
ವ|| ಅಂತು ರಮಿಯಿಸಿ ಪೊೞಲ್ಗೆ ಮಗುೞ್ದು ಬಂದೊಡಾಕೆಗಂ ಭೀಮಂಗಂ
ಕಂ|| ಕಾರಿರುಳ ತಿರುಳ ಬಣ್ಣಂ ಕೂರಿದುವೆನೆ ತೊಳಪ ದಾಡೆ ಮಿಳಿರ್ವುರಿಗೇಸಂ|
ಪೇರೊಡಲೆಸೆದಿರೆ ಪುಟ್ಟಿದ ನಾರುಮಗುರ್ವಿಸೆ ಮಗಂ ಘಟೋತ್ಕಚನೆಂಬಂ|| ೨೦
ವ|| ಅಂತು ಪುಟ್ಟುವುದುವಿಶ್ವರಕಲ್ಪಿತದಿಂ ರಾಕ್ಷಸರ್ಗೆ ಸದ್ಯೋಗರ್ಭಮುಂ ಸದ್ಯ ಪ್ರಸೂತಿಯುಂ ಸದ್ಯೋಯೌವನಮುಮುಳ್ಳ ಕಾರಣದಿಂದಾಗಳೆ ಷೋಡಶವರ್ಷದ ಕುಮಾರನಾಗಿರೆ ಪಾಂಡಮರುಮಲ್ಲಿ ಮೂಱು ವರುಷಮಿರ್ದು ತೃಣದ್ವೈಪಾಯನೋಪದೇಶದಿಂದೇಕಚಕ್ರಕ್ಕೆ ವೋಪ ಕಜ್ಜಮನಾಳೋಚಿಸಿ-
ಚಿಂ|| ಬರಿಸಿ ಹಿಡಿಂಬೆಯಂ ಕರೆದು ಸಾರೆ ಘಟೋತ್ಕಚನಂ ಮನೋಮುದಂ ಬೆರಸೊಸೆದಿರ್ದೆವಿನ್ನೆವರಮಿನ್ನಿರಲಾಗದು ಪೋಪೆವೆಂದೊಡಾ|
ದರದೊಳೆ ಕೊಟ್ಟ ವಸ್ತುಗಳನೊಂದುಮನೊಲ್ಲದೆ ಕೂರ್ತು ಬುದ್ಧಿವೇ
ಱರಿಸಿ ಸುಖಪ್ರಯಾಣದೊಳೆ ಪಾಂಡವರೆಯ್ದಿದರೇಕಚಕ್ರಮಂ|| ೨೧
ರಗಳೆ|| ಅಲ್ಲಿ ಸೊಗಯಿಸುವ ಕೃತಕಗಿರಿಗಳಿಂ
ಕಲ್ಪತರುಗಳೊಳ್ ಪೋಲ್ವ ಮರಗಳಿಂ ನಂದನಂಗಳೊಳ್ ಸುೞದ ಬಿರಯಿಯಿಂ
ಕಂಪು ಕಣ್ಮಲೆಯೆ ಪೂತ ಸುರಯಿಯಿಂ||
ಸುತ್ತಲುಂ ಪರಿವ ಜರಿವೊನಲ್ಗಳಿಂ
ದೆತ್ತಲುಂ ನಲಿವ ಪೊಸ ನವಿಲ್ಗಳಿಂ|
ಬೆಳೆದು ಮಗಮಗಿಪ ಗಂಧಶಾಳಿಯಿಂ
ದಲ್ಲಿ ಸುಱವ ಗಿಳಿವಿಂಡಿನೋಳಿಯಿಂ||
ಈಂಟುಜಳಯೆನಿಪಗೞ ನೀಳ್ಪಿನಿಂ
ನೆಗೆದು ಸೊಗಯಿಸುವ ಕೋಂಟೆಯೊಳ್ಪ್ಪಿನಿಂ|
ವಿವಿಧ ದೇವ ಗೃಹದಾಟಪಾಟದಿಂ
ಮಱುಗಿ ಬಟ್ಟೆಯರ ನೋೞ್ಪ ನೋಟದಿಂ||
ಪಂಚರತುನದೊಳೆ ನೆದ ಪಸರದಿಂ
ತೋರಣಂಗಳೊಳೆ ತೊಡರ್ದ ತಿಸರದಿಂ|
ಧನದರನ್ನರಿವರೆನಿಪ ಪರದರಿಂ
ದೇವರನ್ನರಿವರೆನಿಪ ಬಿರುದರಿಂ||
ನೆಯೆ ಸೊಗಯಿಪಾ ಯೇಕಚಕ್ರಮಂ
ಮೆಚ್ಚಿದಂ ಹರಿಗನಮಿತ ವಿಕ್ರಮಂ| ೨೨
ತಾನು ೧೯. ಎಲ್ಲಿ ಸರೋವರಗಳುಂಟೋ ಎಲ್ಲಿ ತಂಪಾದ ತೋಪುಗಳುಂಟೋ ಎಲ್ಲಿ ಬಳ್ಳಿವಾಡಗಳುಂಟೋ ಎಲ್ಲಿ ಬಳ್ಳಿವಾಡಗಳುಂಟೋ ಎಲ್ಲಿ ಏಕಪ್ರಕಾರವಾಗಿ ನೀರು ಹರಿಯುವ ಮನೆಗಳುಂಟೋ ಅಲ್ಲಲ್ಲಿಯೇ ಸೇರಿಕೊಂಡು ಅಲ್ಲಲ್ಲಿಯೇ ನಿಂತು ಹಿಡಿಂಬೆಯು ವಾಯುಪುತ್ರನಲ್ಲಿ ರಮಿಸಿದಳು. ೨೦. ಕಗ್ಗತ್ತಲೆಯಿಂದ ಕೂಡಿದ ರಾತ್ರಿಯ ಬಣ್ಣವು ಇಲ್ಲಿ ಮೊನಚಾಯಿತು (ಬಟ್ಟಿಯಿಳಿಸಿದೆ) ಎನ್ನುವ ಹಾಗೆ ತೊಳಗುತ್ತಿರುವ ಕೋರೆಹಲ್ಲೂ ಅಲುಗಾಡುತ್ತಿರುವ ಕೆಂಗೂದಲೂ ದೊಡ್ಡ ದೇಹವೂ ಪ್ರಕಾಶಮಾನವಾಗಿರಲು ಯಾರಿಗಾದರೂ ಭಯವನ್ನುಂಟುಮಾಡು ವಂತಿರುವ ಘಟೋತ್ಕಚನೆಂಬ ಮಗನು ಹುಟ್ಟಿದನು. ವ|| ದೈವಸಂಕಲ್ಪದಿಂದ ರಾಕ್ಷಸರಿಗೆ ಕೂಡಲೇ ಗರ್ಭವನ್ನು ಧರಿಸುವುದೂ ಕೂಡಲೇ ಹೆತ್ತು ಕೂಡಲೇ ಯೌವನಪ್ರಾಪ್ತಿಯೂ ಉಂಟಾಗುವುದರಿಂದ ಆಗಲೇ ಹದಿನಾರುವರ್ಷದ ಬಾಲಕನಾಗಿರಲು ಪಾಂಡವರು ಅಲ್ಲಿ ಮೂರುವರ್ಷಕಾಲವಿದ್ದು ವೇದವ್ಯಾಸರ ಉಪದೇಶಪ್ರಕಾರ ಏಕಚಕ್ರಪುರಕ್ಕೆ ಹೋಗುವ ಕಾರ್ಯವನ್ನು ಆಲೋಚಿಸಿದರು.
೨೧. ಹಿಡಿಂಬೆಯನ್ನು ಬರಮಾಡಿಕೊಂಡು ಘಟೋತ್ಕಚನನ್ನೂ ಹತ್ತಿರಕ್ಕೆ ಕರೆದು ಇಲ್ಲಿಯವರೆಗೆ ಸುಖವಾಗಿ ಸಂತೋಷವಾಗಿ ಇಲ್ಲಿ ಇದ್ದೆವು. ಇನ್ನು ಇರಬಾರದು ಹೋಗುತ್ತೇನೆ ಎಂದು ಹೇಳಿ ಅವರು ಆದರದಿಂದ ಕೊಟ್ಟ ಯಾವ ಪದಾರ್ಥವನ್ನೂ ಸ್ವೀಕರಿಸದೆ ಅಲ್ಲೆಯೇ ಬಿಟ್ಟು ಪ್ರೀತಿಯಿಂದ ಬುದ್ಧಿಹೇಳಿ ಸುಖಪ್ರಯಾಣದಿಂದ ಪಾಂಡವರು ಏಕಚಕ್ರಪುರವನ್ನು ಸೇರಿದರು. ೨೨. ಅಲ್ಲಿ ಸುಂದರವಾಗಿ
ವ|| ಅಂತು ಮೆಚ್ಚಿ ತಮ್ಮುತಯ್ವರುಮಿನ್ನವು ಪೊೞಲ್ಗಳಿಲ್ಲೀ ಪೊೞಲ್ಗೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯಮೆಂಬ ನಾಲ್ಕು ಪೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೇದಪಾರಗರ ಮನೆಯ ಮುಂದಣ ಚತುಶ್ಯಾಲೆಯೊಳ್ ಬೀಡಂ ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ-
ಕಂ|| ತುಂಬಿದ ರಕ್ತತೆಯಿಂ ನಿಜ
ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಗೆ|
ಟ್ಟಂಬೋಲ್ ತೇಜಂ ಮಸುಳ್ವಿನ
ಮಂಬರಮಂ ಬಿಸುಟನಾಗಳಂಬುಜಮಿತ್ರಂ|| ೨೩
ವ|| ಆಗಳ್ ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಪಾಂತದೊಳ್-
ಕಂ|| ಸಾರೆಯೊಳೞ್ವ ಮಹಾ ದ್ವಿಜ
ನಾರಿಯ ಮಮತಾವಿಪೂರಿತೋರ್ಜಿತ ರವದಿಂ|
ಕಾರುಣ್ಯಾಕ್ರಂದನಮನಿ
ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್|| ೨೪
ಕಾಣುವ ಕೃತಕಪರ್ವತಗಳಿಂದಲೂ ಕಲ್ಪವೃಕ್ಷವನ್ನೇ ಹೋಲುವ ಮರಗಳಿಂದಲೂ ನಂದನವನಗಳಲ್ಲಿ ಸುಳಿದಾಡುತ್ತಿರುವ ವಿರಹಿಗಳಿಂದಲೂ ಸುಗಂಧ ಬೀರುತ್ತಿರುವ ಹೂವುಗಳನ್ನು ಬಿಟ್ಟಿರುವ ಸುರಗಿಯ ಮರಗಳಿಂದಲೂ, ಸುತ್ತಲೂ ಹರಿಯುತ್ತಿರುವ ಸುಂದರವಾದ ಕೃತಕಪರ್ವತಗಳು, ಕಲ್ಪವೃಕ್ಷದಂತಿರುವ ಮರಗಳು, ನಂದನವನಗಳಲ್ಲಿ ವಿರಹಿಸುವ ವಿರಹಿಗಳು ಮನೋಹರವಾದ ವಾಸನೆಯಿಂದ ಕೂಡಿದ ಸುರಗಿಯ ಹೂವುಗಳು, ಅಲ್ಲಲ್ಲೆ ಹರಿಯುವ ನದಿಗಳು, ಎಲ್ಲೆಡೆಯಲ್ಲಿಯೂ ಕುಣಿಯುತ್ತಿರುವ ನವಿಲುಗಳು, ಕೊಬ್ಬಿ ಬೆಳೆದಿರುವ ಸುಗಂಧಯುಕ್ತವಾದ ಬತ್ತದ ಗದ್ದೆಗಳು, ಅದಕ್ಕೆ ಸುಳಿಯುತ್ತಿರುವ ಗಿಳಿಗಳ ಹಿಂಡು, ಸಮುದ್ರವನ್ನೂ ಹೀಯ್ಯಾಳಿಸುವಷ್ಟು ಆಳವಾದ ಕಂದಕ, ಮೇಲೆದ್ದುಸೊಗಸುವ ಕೋಟೆ, ವಿವಿಧರೀತಿಯ ದೇವಾಲಯಗಳು, ಬಹಳ ಆಸಕ್ತಿಯಿಂದ ನೋಡುತ್ತಿರುವ ದಾರಿಹೋಕರ ನೋಟಗಳು, ಪಂಚರತ್ನಗಳಿಂದ ತುಂಬಿದ ಅಂಗಡಿಗಳು ಕುಬೇರರನ್ನೂ ಮೀರಿಸುವ ವಣಿಕರು- ಇವುಗಳಿಂದ ಶೋಭಾಯಮಾನವಾದ ಏಕಚಕ್ರಪುರವನ್ನು ಅತ್ಯಂತ ಪರಾಕ್ರಮಿಯಾದ ಅರ್ಜುನನು ನೋಡಿ ಸಂತೋಷಪಟ್ಟನು. ಝರಿಯ ಪ್ರವಾಹಗಳಿಂದಲೂ ಎಲ್ಲ ಕಡೆಯಲ್ಲಿಯೂ ನಲಿದಾಡುತ್ತಿರುವ ಹೊಸನವಿಲುಗಳಿಂದಲೂ ಕೊಬ್ಬಿ ಬೆಳೆದು ವಾಸನೆಯನ್ನು ಬೀರುತ್ತಿರುವ ಕಂಪು ಬತ್ತದಿಂದಲೂ ಅಲ್ಲಿ ಸಂಚರಿಸುತ್ತಿರುವ ಗಿಳಿಯ ಹಿಂಡುಗಳ ಸಮೂಹದಿಂದಲೂ ಕುಡಿಯುವುದಕ್ಕೆ ಯೋಗ್ಯವಾದ ಸಮುದ್ರವೆನಿಸಿಕೊಂಡಿರುವ ಕಂದಕಗಳ ದೀರ್ಘತೆಯಿಂದಲೂ ಮೇಲಕ್ಕೆ ಹಾರಿ ಕೋಟೆಯ ಸೊಗಸಾಗಿ ಕಾಣುವ ಶ್ರೇಷ್ಠತೆಯಿಂದಲೂ ಬಗೆ ಬಗೆಯ ದೇವಾಲಯ ಕ್ರೀಡಾವಿನೋದಗಳಿಂದಲೂ ದಾರಿಹೋಕರನ್ನು ಕರುಣೆಯಿಂದ ನೋಡುವ ನೋಟದಿಂದಲೂ ಅಯ್ದು ರೀತಿಯ ರತ್ನಗಳಿಂದ ತುಂಬಿದ ಅಂಗಡಿಗಳಿಂದಲೂ ತೋರಣಗಳಲ್ಲಿ ಸೇರಿಕೊಂಡಿರುವ ಮೂರೆಳೆಯಹಾರಗಳಿಂದಲೂ ಕುಬೇರನಂತಹವರಿವರು ಎನ್ನಿಸಿಕೊಂಡ ವ್ಯಾಪಾರಿಗಳಿಂದಲೂ ದೇವರಂತಹರಿವರು ಎನ್ನಿಸಿಕೊಂಡಿರುವ ಬಿರುದಾಂಕಿತರಿಂದಲೂ ಪೂರ್ಣವಾಗಿ ಏಕಚಕ್ರಪುರವನ್ನು ಎಲ್ಲೆಯಿಲ್ಲದ ಪರಾಕ್ರಮವುಳ್ಳ ಹರಿಗನು (ಅರ್ಜುನ-ಅರಿಕೇಸರಿಯು) ಮೆಚ್ಚಿದನು. ವ|| ಹೀಗೆ ಮೆಚ್ಚಿ ತಾವೈದು ಜನಗಳೂ ಇಂತಹ ಪಟ್ಟಣಗಳೇ ಇಲ್ಲ; ಈ ಪಟ್ಟಣಕ್ಕೆ ನಾಲ್ಕು ಯುಗದಲ್ಲಿಯೂ ಕ್ರಮವಾಗಿ ವಸುಮತಿ, ಪದ್ಮನಗರ, ಏಕಚಕ್ರ, ಬಹುಧಾನ್ಯ ಎಂಬ ಹೆಸರುಗಳಾದುವು. ಎಂದು ಸಂತೋಷಪಟ್ಟು ನೋಡುತ್ತ ಬಂದು ನಾಲ್ಕು ವೇದಗಳಲ್ಲಿಯೂ ಪಂಡಿತರಾದವರೊಬ್ಬರ ಮನೆಯ ಮುಂಭಾಗದ ತೊಟ್ಟಿಯಲ್ಲಿ ಬೀಡುಬಿಟ್ಟು ಬ್ರಾಹ್ಮಣವೇಷದಿಂದ ಒಂದು ವರ್ಷ ಕಾಲವಿದ್ದರು. ಆ ಕಾಲದಲ್ಲಿ ಒಂದು ದಿನ ೨೩.ತುಂಬಿಕೊಂಡಿರುವ ಕೆಂಪು ಬಣ್ಣದಿಂದ (ಅನುರಕ್ತತೆಯಿಂದ) ತನ್ನ ಬಿಂಬವು ಪಶ್ಚಿಮದಿಕ್ಕನ್ನು ಪ್ರೀತಿಸಿ ಸೇವೆಮಾಡಲು (ಪ್ರೀತಿಸಿ ಮದ್ಯಪಾನವನ್ನು ಮಾಡಲು ನಾಚಿಕೆಗೆಟ್ಟವನಂತೆ) ಕಾಂತಿ ಮಂಕಾಗುತ್ತಿರಲು ಕಮಲಮಿತ್ರನಾದ ಸೂರ್ಯನು ಅಂಬರವನ್ನು (ಆಕಾಶವನ್ನೂ-ಬಟ್ಟೆಯನ್ನೂ) ಬಿಸಾಡಿದನು. (ಸೂರ್ಯನು ಅಸ್ತಮಿಸಿದನು ಎಂಬುದು ಭಾವ). ವ|| ಆಗ ಸಂಧ್ಯಾವಂದನೆಗಾಗಿ ಧರ್ಮರಾಜ ಅರ್ಜುನ ನಕುಲ ಸಹದೇವರು ಹೋದರು. ಅಷ್ಟರಲ್ಲಿ ಈ ಕಡೆ ಬೀಡಿನಲ್ಲಿದ್ದ ಕುಂತಿ ಮತ್ತು ಭೀಮನ ಕಿವಿಗೆ
೨೪. ಸಪದಲ್ಲಿದ್ದ ಮಹಾಬ್ರಾಹ್ಮಣತಿಯ ಮಮತೆಯಿಂದಲೂ ಕರುಣೆಯಿಂದಲೂ ಕೂಡಿದ ಅಳುವ ಶಬ್ದವು ತಡೆಯಿಲ್ಲದೆ ಇದಕ್ಕಿದ್ದ
ವ|| ಅದಂ ಕೇಳ್ದೇನಾನುಮೊಂದು ಕಾರಣಮಾಗಲೆವೇೞ್ಕುವಿ ಪುಯ್ಯಲನಾರಯ್ದು ಬರ್ಪೆನೆಂದು ಭೀಮನನಿರಿಸಿ ಕೊಂತಿ ತಾನೆ ಪೋಗಿ-
ಚಂ|| ಅೞೆ ಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾ
ಯೞದು ಕೊರಲ್ಗೆ ಪಾಯ್ದು ಪರಿದಾಡುವ ಬಾಲಕನಾದ ಶೋಕದಿಂ|
ಗೞಗೞ ಕಣ್ಣನೀರ್ ಸುರಿಯೆ ಚಿಂತಿಪ ಪಾರ್ವನ ಶೋಕದೊಂದು ಪೊಂ
ಪುೞಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ|| ೨೫
ವ|| ನಿನಗಿಂತೀ ಪಿರಿದು ಶೋಕಮೆಂತಾದುದೆಂಬುದುಮಾ ಪಾರ್ವಂ ಕೊಂತಿಗಿಂತೆಂದಂ ಬಕನೆಂಬನೊರ್ವಸುರನೀ ಪೊೞಲ ತೆಂಕಣ ಬೆಟ್ಟದೊಳಿರ್ಪನಾತಂಗೆ ನಿಚ್ಚಮೊಂದು ಮನೆಯೊಳರಡೆಮ್ಮೆವೋಱಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂೞುಮನದರ್ಕೆ ತಕ್ಕ ಪರಿಕರಮುಮನೊರ್ವ ಮಾನಸಂ ಕೊಂಡು ಪೋಪನಂತಾತಂಬೆರಸದೆಲ್ಲಮಂ ತಿಂದು ತಣಿಯದೆ ಪಲ್ಲಂ ತಿಂಬನದೊಂದು ದಿವಸ ತಪ್ಪಿದೊಡೀ ಪೊೞಲನಿತುಮಂ ತಿಂಬಂ ನಾಳಿನ ಬಾರಿಯೆಮ್ಮ ಮೇಲೆ ಬಂದುದೆಮ್ಮ ಮನೆಯೊಳಾನುಮೆಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಿಂತೀ ನಾಲ್ವರೆ ಮಾನಸರೆಮ್ಮ ಪೆಂಡಿತಿಯನೀವೆನೆಪ್ಪೊಡಾಕೆಯಿಂ ಬಿೞಯವಿ ಕೂಸುಗಳಂ ನಡಪುವರಿಲ್ಲೀ ಮಗಳನೀವೆನಪ್ಪೊಡೆ ಕೊಡಗೂಸೆಂಬುದು ಪೆಱರೊಡವೆ ಮಗನನೀವೆನಪ್ಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಮಕ್ಕುಮದಱಂದೆನ್ನನೆ ಕುಡಲ್ವೇೞ್ಕುಮೆಂಬುದುಂ ಕೊಂತಿಯಿಂತೆಂದಳ್-
ಕಂ|| ನಿವಿi ನಾಲ್ವರೊಳೊರ್ವರು
ಮಿಮ್ಮಿಡುಕಲ್ವೇಡ ಮಕ್ಕಳೊಳರೆನಗಯ್ವರ್|
ತಮ್ಮೊಳಗೆಸೆವಯ್ವರೊಳಂ
ನಾಮ್ಮಾಣದೆ ಬಕನ ಬಾರಿಗೊರ್ವನನೀವೆಂ|| ೨೬
ವ|| ಎಂಬುದುಂ ಪಾರ್ವನಿಂತೆನಲ್ವೇಡ ಮಕ್ಕಳೊಳಾದ ಮೋಹಮೆಲ್ಲಾ ಜೀವಕ್ಕಂ ಸಮಾನಮೆಂಬುದುಂ ನೀಮಱಯಿರುಸಿರದಿರಿಮದರ್ಕೆ ತಕ್ಕ ಸವಕಟ್ಟಂ ಮಾಡಿಮೆಂದು ಬಂದು ತದ್ವ ತ್ತಾಂತಮೆಲ್ಲಮಂ ಭೀಮಸೇನಂಗಱಪಿದೊಡೆ ನಾಳಿನುಣಿಸನೆನಗೆ ದೊರೆಕೊಳಿಸಿ ಬಂದುದು ಕರಮೊಳ್ಳಿತಾಯ್ತೆಂದು ನಗುತಿರ್ಪನ್ನೆಗಂ ಮತ್ತಿನ ನಾಲ್ವರುಂ ಬಂದು ತದ್ವ ತ್ತಾಂತಮೆಲ್ಲಮಂ ಕೇಳ್ದು ನಮಗೀ ಪೊೞಲೊಳೊಂದು ಪರೋಪಕಾರಾರ್ಥಂ ಸಯ್ಪಿನಿಂ ದೊರೆಕೊಂಡುದೆಂದಿರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂ-
ಹಾಗೆ ಬಂದು ಸೋಂಕಿತು. ವ|| ಅದನ್ನೂ ಕೇಳಿ ಇದಕ್ಕೆ ಏನಾದರೂ ಕಾರಣವಿದ್ದೇ ಇರಬೇಕು. ಈ ಪ್ರಲಾಪವನ್ನು ವಿಚಾರಮಾಡಿ ಬರುತ್ತೇನೆ ಎಂದು ಭೀಮನನ್ನು ಅಲ್ಲಿ ಬಿಟ್ಟು ಕುಂತಿಯು ಹೋಗಿ ನೋಡಿದಳು. ೨೫. ಮದುವೆಯಿಲ್ಲದ ಅವನ ಮಗಳು ಅಳುತ್ತಿದ್ದಳು. ಅವನ ಹೆಂಡತಿಯು ನೆಲದ ಮೇಲೆ ಹೊರಳಾಡುತ್ತಿದ್ದಳು. ಕೊರಳನ್ನು ತಬ್ಬಿಕೊಂಡು ಅತ್ತು ಓಡಾಡುವ ಬಾಲಕನು ತನಗುಂಟಾದ ದುಖದಿಂದ ಗಳಗಳನೆ ಕಣ್ಣೀರನ್ನು ಸುರಿಸುತ್ತಿದ್ದನು. ಚಿಂತಿಸುತ್ತಿದ್ದ ಬ್ರಾಹ್ಮಣನ ದುಖಾತಿಶಯವನ್ನು ನೋಡಿ ತನಗೆ ವಿಶೇಷ ಕರುಣೆಯುಂಟಾಗಿರಲು ಕುಂತಿಯು ದುಖದಿಂದ ಬ್ರಾಹ್ಮಣನನ್ನು ಕುರಿತು ಪ್ರಶ್ನಿಸಿದಳು. ವ|| ನಿನಗೆ ಇಷ್ಟು ದೊಡ್ಡ ದುಖ ಹೇಗಾಯಿತು ಎನ್ನಲು ಬ್ರಾಹ್ಮಣನು ಕುಂತಿಗೆ ಹೀಗೆ ಹೇಳಿದನು- ಬಕನೆಂಬ ರಾಕ್ಷಸನೊಬ್ಬನು ಈ ಪಟ್ಟಣಕ್ಕೆ ದಕ್ಷಿಣದಲ್ಲಿರುವ ಬೆಟ್ಟದಲ್ಲಿದ್ದಾನೆ. ಅವನಿಗೆ ನಿತ್ಯವೂ ಒಂದೊಂದು ಮನೆಯಿಂದ ಎರಡು ಕೋಣಗಳನ್ನು ಹೂಡಿರುವ ಗಾಡಿಯಲ್ಲಿ ತುಂಬಿದ ಹನ್ನೆರಡು ಖಂಡಗದಕ್ಕಿಯನ್ನೂ ಅದಕ್ಕೆ ಬೇಕಾಗುವಷ್ಟು ವ್ಯಂಜನಪದಾರ್ಥಗಳನ್ನೂ ಒಬ್ಬ ಮನುಷ್ಯನು ಕೊಂಡುಹೋಗುತ್ತಾನೆ. (ಬಕನು) ಅವನ ಸಮೇತ ಆ ಪದಾರ್ಥವೆಲ್ಲವನ್ನೂ ತಿಂದರೂ ತೃಪ್ತನಾಗದೆ ಕೋಪದಿಂದ ಹಲ್ಲನ್ನು ಕಡಿಯುತ್ತಾನೆ. ಒಂದು ದಿವಸ ತಪ್ಪಿದರೂ ಈ ಪಟ್ಟಣವೆಲ್ಲವನ್ನೂ ತಿಂದುಹಾಕುತ್ತಾನೆ. ನಾಳೆಯ ಸರದಿ ನನ್ನ ಮೇಲೆ ಬಂದಿದೆ. ನಮ್ಮ ಮನೆಯಲ್ಲಿ ನಾನೂ ನನ್ನ ಹೆಂಡತಿಯೂ ಮಗನೂ ಮಗಳೂ ಈ ನಾಲ್ಕೇ ಜನ (ಇರುವವರು). ಹೆಂಡತಿಯನ್ನು ಕೊಡೋಣವೆಂದರೆ ಅವಳು ಹೋದಬಳಿಕ ಈ ಮಕ್ಕಳನ್ನು ಸಾಕುವವರಿಲ್ಲ. ಮಗಳನ್ನು ಕೊಡೋಣವೆಂದರೆ ಕನ್ಯೆ ಪರರ ವಸ್ತು; ಮಗನನ್ನು ಕೊಡೋಣವೆಂದರೆ ಸಂತತಿಯು ಹರಿದು ಹೋಗುತ್ತದೆ ಮತ್ತು ಪಿಂಡದಾನ ಮಾಡುವವರಿಲ್ಲದಾಗುತ್ತಾರೆ. ಆದುದರಿಂದ ನನ್ನನ್ನೇ ಕೊಡಬೇಕಾಗಿದೆ ಎಂದನು. ಅದಕ್ಕೆ ಕುಂತಿಯು ಹೀಗೆಂದಳು-
೨೬. ನಿಮ್ಮ ಈ ನಾಲ್ಕು ಜನಗಳಲ್ಲಿ ಯಾರೂ ಇನ್ನು ಮೇಲೆ ಭಯಪಡಬೇಡಿ. ನನಗೆ ಅಯ್ದು ಜನ ಮಕ್ಕಳಿದ್ದಾರೆ. ಪ್ರಸಿದ್ಧರಾದ ಆ ಅಯ್ವರಲ್ಲಿ ಒಬ್ಬನನ್ನು ನಾನು ಬಕನ ಸರದಿಗೆ ತಪ್ಪದೆ ಕೊಡುತ್ತೇನೆ. ವ|| ಅದನ್ನು ಕೇಳಿ ಬ್ರಾಹ್ಮಣನು ಹೀಗೆ ಹೇಳಬೇಡ. ಮಕ್ಕಳ ಮೇಲಿನ ಮೋಹವು ಎಲ್ಲ ಜೀವಕ್ಕೂ ಸಮಾನ ಎಂದನು. ಕುಂತಿಯು ನಿಮಗೆ ತಿಳಿಯದು; ಮಾತನಾಡಬೇಡಿ ಅದಕ್ಕೆ ಬೇಕಾದ
ಕಂ|| ಓಡೆ ತಮೋಬಳಮಗಿದ
ಳ್ಳಾಡೆ ನಿಶಾಚರಬಲಂ ರಥಾಂಗಯುಗಂಗಳ್|
ಕೂಡೆ ಬಗೆ ಕೂಡೆ ನೇಸಱ್
ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ|| ೨೭
ವ|| ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಱಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂೞಂ ಕೆಯ್ಕೊಂಡು ನಿಲ್ವುದುಂ ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ ಪೊೞಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದೆಡೆಗೆಯ್ತಂದು-
ಕಂ|| ದಾಡೆಗಳನಯೊಳಿಂಬಿಂ
ತೀಡುತ್ತುಂ ತೀವ್ರಮಾಗೆ ಬಂಡಿಯ ಬರವಂ|
ನೋಡುತ್ತಿರ್ದಾ ಬಕನಂ
ನಾಡೆಯೆ ಅಂತರದೆ ಕಂಡು ಮುಳಿದಂ ಭೀಮಂ|| ೨೮
ಕಡೆಗಣ್ಣೊಳೆ ರಕ್ಕಸನಂ
ನಡೆ ನೋಡಿ ಕೊಲಲ್ಕೆ ಸತ್ತ್ವಮಪ್ಪಂತಿರೆ ಮುಂ|
ಪೊಡೆವೆಂ ಕೂೞಂ ಬೞಯಂ
ಪೊಡೆವೆಂ ರಕ್ಕಸನನೆಂದು ಸಾಹಸಭೀಮಂ|| ೨೯
ವ|| ಅಂತು ತನ್ನ ತಂದ ಬಂಡಿಯ ಕೂೞೆಲ್ಲಮಂ ಪತ್ತೆಂಟು ತುತ್ತಿನೊಳೆ ಸಮೆಯೆ ತುತ್ತುವುದಂ ಕಂಡು ರಕ್ತಸನಿವನ ಪಾಂಗಂ ಮೆಚ್ಚಲಾನೆನ್ನುಮಿಂತು ಸಮೆಯೆ ತುತ್ತುಗುಮೆಂದು ಬಕಂ ಬಕವೇಷದಿಂ ಪೆಱಗಣ ದೆಸೆಗೆ ಮೆಲ್ಲನೋಸರಿಸಿ ಬಂದು-
ಕಂ|| ಎರಡುಂ ಕೆಲನುಮನೆರಡುಂ
ಕರ ಪರಿಘದಿನಡಸಿ ಗುರ್ದಿ ಪೆಱಪಿಂಗುವನಂ|
ಮುರಿದಡಸಿ ಪಿಡಿದು ಘಟ್ಟಿಸಿ
ಪಿರಿಯಯೊಳ್ ಪೊಯ್ದನಸಗವೊಯ್ಲಂ ಭೀಮಂ|| ೩೦
ವ|| ಅಂತು ಪೊಯ್ದೊಡೆ ಪೊಡೆಸೆಂಡಂ ಪೊಯ್ದಂತೆ ಮೇಗೊಗೆದು ಸೆಣಸೆ-
ಸಿದ್ಧತೆಯನ್ನು ಮಾಡಿ ಎಂದು ಹೇಳಿ ಆ ವಿಷಯವೆಲ್ಲವನ್ನೂ ಭೀಮಸೇನನಿಗೆ ತಿಳಿಸಲು ನಾಳೆಯ ಊಟವನ್ನು ನನಗೆ ಸಿದ್ಧಪಡಿಸಿ ಬಂದುದು ಬಹಳ ಒಳ್ಳೆಯದಾಯಿತು ಎಂದು ಸಂತೋಷಿಸಿದರು. ಉಳಿದ ನಾಲ್ಕು ಜನರೂ ಬಂದು ಆ ವಿಷಯವೆಲ್ಲವನ್ನೂ ಕೇಳಿ ಈ ಪಟ್ಟಣದಲ್ಲಿ ಇತರರಿಗೆ ಉಪಕಾರ ಮಾಡುವ ಸಂದರ್ಭವು ಅದೃಷ್ಟದಿಂದ ಪ್ರಾಪ್ತವಾಯಿತು ಎಂದು ರಾತ್ರಿಯೆಲ್ಲ ಬಕನ ವಿಷಯವಾದ ಮಾತನ್ನೇ ಆಡುತ್ತಿದ್ದರು. ಅಷ್ಟರಲ್ಲಿ ೨೭. ಕತ್ತಲೆಯ ರಾಶಿಯು ಓಡಿತು ರಾಕ್ಷಸಸಮೂಹವು ಹೆದರಿ ನಡುಗಿತು. ಚಕ್ರವಾಕಮಿಥುನವು ಕೂಡಿಕೊಳ್ಳಲು ಮನಸ್ಸು ಮಾಡಿತು. ಬಕನಿಗೆ ಸಾವು ಹುಟ್ಟುವ ರೀತಿಯಲ್ಲಿ ಸೂರ್ಯ ಹುಟ್ಟಿದನು. ವ|| ಆಗ ಸಾಹಸಭೀಮನು ಪರಾಕ್ರಮವನ್ನು ತೋರಬೇಕೆಂದು ಬಂದು ಬ್ರಾಹ್ಮಣನ ಮನೆಯ ಮುಂಭಾಗದಲ್ಲಿದ್ದ ಗಾಡಿಯ ಅನ್ನವನ್ನು ತೆಗೆದುಕೊಂಡು ನಿಂತನು. ಬ್ರಾಹ್ಮಣಿತಿಯೂ ಬ್ರಾಹ್ಮಣನೂ ಆಶೀರ್ವಾದಮಾಡಿ ತಲೆಯ ಮೇಲೆ ಅಕ್ಷತೆಯನ್ನು ಚೆಲ್ಲಿ ಕಳುಹಿಸಿದರು. ಪಟ್ಟಣದಿಂದ ಬಂಡಿಯನ್ನು ಹೊಡೆದುಕೊಂಡು ರಾಕ್ಷಸನಿದ್ದ ಸ್ಥಳಕ್ಕೆ ಭೀಮನು ಬಂದನು. ೨೮. ತನ್ನ ಕೋರೆಹಲ್ಲುಗಳನ್ನು ಕಲ್ಲಿನ ಮೇಲೆ ಹರಿತವಾಗುವ ಹಾಗೆ ನಿಧಾನವಾಗಿ ಮಸೆಯುತ್ತ ಬಂಡಿಯಬರವನ್ನೇ ಎದಿರುನೋಡುತ್ತಿದ್ದ ಬಕನು ಬಹಳ ದೂರದಿಂದಲೇ ಕಂಡು ರೇಗಿದನು.
೨೯. ಕಡೆಗಣ್ಣಿನಿಂದಲೇ ರಾಕ್ಷಸನನ್ನು ದೃಷ್ಟಿಸಿ ನೋಡಿ ಕೊಲ್ಲುವುದಕ್ಕೆ ಶಕ್ತಿ ಬರುವಂತೆ ಮೊದಲು ಅನ್ನವನ್ನು ಹೊಡೆಯುತ್ತೇನೆ (ತೃಪ್ತಿಯಾಗಿ ತಿನ್ನುತ್ತೇನೆ); ಆಮೇಲೆ ಆ ರಾಕ್ಷಸನನ್ನು ಹೊಡೆಯುತ್ತೇನೆ (ಧ್ವಂಸ ಮಾಡುತ್ತೇನೆ) ಎಂದು ಸಾಹಸಭೀಮನು ವ|| ತಾನು ತಂದ ಬಂಡಿಯ ಅನ್ನವೆಲ್ಲವನ್ನೂ ಹತ್ತೆಂಟು ತುತ್ತುಗಳಲ್ಲಿಯೇ ಮುಗಿಸುವ ಹಾಗೆ ಬಾಯಿಗೆ ತುಂಬಿಕೊಳ್ಳುವುದನ್ನು ರಾಕ್ಷಸನು ನೋಡಿ ಇವನ ರೀತಿಯನ್ನು ನಾನು ಮೆಚ್ಚಲಾರೆ. ನನ್ನನ್ನು ಇವನು ಪೂರ್ಣವಾಗಿ ನುಂಗಿ ಬಿಡುವಂತಿದೆ ಎಂದು ಬಕಪಕ್ಷಿಯ ರೂಪದಿಂದ ಹಿಂದುಗಡೆಗೆ ಸರಿದು ಬಂದು ೩೦. ಅವನ ಎರಡು ಪಕ್ಕಗಳನ್ನೂ ತನ್ನ ಗದೆಯಿಂತಿದ್ದ ಎರಡು ಕೈಗಳಿಂದ ಹಿಡಿದು ಗುದ್ದಿ ಹಿಂತಿರುಗಿದನು. ಹಾಗೆ ಹೋಗುತ್ತಿದ್ದವನನ್ನು ಭೀಮನು ಹಿಂತಿರುಗಿ ಘಟ್ಟಿಯಾಗಿ ಹಿಡಿದುಕೊಂಡು ದೊಡ್ಡ ಬಂಡೆಯ ಮೇಲೆ ಬಡಿದು ಅಗಸನ ಬಡಿತ
ಉ|| ಬಾರಿಯನಿಟ್ಟು ಕೂಡೆ ಪೊೞಲಂ ತವೆ ತಿಂದನನಾರ್ತರಿಲ್ಲಣಂ
ಬಾರಿಸಲಾರುಮಿನ್ ಜವನ ಬಾರಿಯೊಳಿಕ್ಕುವವನೆಂದು ಪರ್ವೆ ಭೋ|
ರ್ಭೋರೆನೆ ಬೀಸೆ ತದ್ವದನ ಗಹ್ವರದಿಂ ಬಿಸುನೆತ್ತರುಣ್ಮೆ ಭೋ
ರ್ಭೋರೆನೆ ಕೊಂದನಂಕದ ಬಳಾಕನಂ ಬಕನಂ ವೃಕೋದರಂ|| ೩೧
ವ|| ಅಂತು ಕೊಂದು ನೀಲಗಿರಿಯನೆ ಪಿಡಿದೆೞೆವಂತೆ ರಕ್ಕಸನ ಕರಿಯ ಪಿರಿಯೊಡಲನೆೞೆದು ತಂದು ಪೊೞಲ ನಡುವಿಕ್ಕಿದಾಗಳ್ ಪೊೞಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಪಗಳಂ ಪೊಯ್ಸಿ ಸಾಹಸಭೀಮನ ಸಾಹಸಮನಳವಲ್ಲದೆ ಪೊಗೞ್ದು ತಮ್ಮಾಳ್ದನುಮನಿಷ್ಟ ದೈವಮುಮಂ ಕೊಂಡಾಡುವಂತಯ್ವರುಮಂ ಕೊಂಡಾಡೆ ಕೆಲವು ದಿವಸಮಿರ್ಪನ್ನೆಗಮೊಂದು ದಿವಸಮಶಿಶಿರಕಿರಣನಪರಜಲನಿತಟನಿಕಟ ವರ್ತಿಯಾದನಾಗಳೊರ್ವ ಪಾರ್ವಂ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣ್ಮುಚ್ಚಲೆಡೆವೇಡೆ ತನಗವರ್ ಪಾಸಲ್ಕೊಟ್ಟ ಕೃಷ್ಣಾಜಿನನಮಂ ಪಾಸಿ ಪಟ್ಟಿರ್ದನಂ ಧರ್ಮಪುತ್ರನಾವ ನಾಡಿಂ ಬಂದಿರೆಲ್ಲಿಗೆ ಪೋದಪಿರೆಂದೊಡುತ್ತರಾಪಥದೆ ಹಸ್ತಿನಪುರದಿಂ ಬಂದೆಮೆಂದೊಡಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನ ರಿರ್ಪಂದಮಾವುದೆಂದು ಬೆಸಗೊಳೆ-
ಮ|| ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹೋಗ್ರಾಗ್ನಿಯಾ
ನನದೊಳ್ ಮೞದರೆನ್ನ ಪುಣ್ಯಮಱಯರ್ ವೇಮಾಱ(?)ರಿನ್ನಾರೊ ಬೇ|
ರನೆ ಕಿೞಕ್ಕಿದೆನೀಗಳಾಯ್ತು ಧರೆ ನಿರ್ದಾಯಾದ್ಯಮೆಂದಾ ಸುಯೋ
ಧನನಾಳುತ್ತಿರೆ ಸಂದ ಹಸ್ತಿನಪುರಂ ಸಂತಂ ಬಸಂತಂ ಕರಂ|| ೩೨
ವ|| ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪೆಸರ ಪಾಂಚಾಳದೇಶದರಸಂ ದ್ರುಪದನೆಂಬಂ ದ್ರೋಣನೊಳಾದ ಪರಿಭವಮಂ ನೆನೆದಾತನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜನಂಗೆ ಪೆಂಡಿತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಪೂಣ್ದು ಪೋಗಿ ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಠಿಗೆಯ್ಸೆ ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್
ದಂತೆ ಬಡಿದನು. ವ|| ಹಾಗೆ ಹೊಡೆಯಲು, ಬಕನು ಪುಟಚೆಂಡನ್ನು ಹೊಡೆದಂತೆ ಮೇಲಕ್ಕೆ ಹಾರಿದನು. ೩೧. ಭೀಮನು ಸ್ವಲ್ಪ ಅವಕಾಶ ಮಾಡಿಕೊಂಡು ಅಲ್ಪಕಾಲದಲ್ಲಿ ಪಟ್ಟಣವನ್ನೇ ನಾಶಮಾಡಿದ ಇವನನ್ನು ಸ್ವಲ್ಪ ಮಾತ್ರವೂ ತಡೆಯಲು ಶಕ್ತರಾದವರು ಯಾರೂ ಇಲ್ಲ. ಇನ್ನು ಮೇಲೆ ಇವನನ್ನು ನಾನು ಯಮನ ಸರದಿಗೆ ಕಳುಹಿಸುತ್ತೇನೆ ಎಂದು ದೀರ್ಘವಾಗಿ ಭೋರ್ ಎಂದು ಶಬ್ದಮಾಡುತ್ತ ಅವನನ್ನು ಬೀಸಲು ಅವನ ಮುಖವೆಂಬ ಗುಹೆಯಿಂದ ಬಿಸಿರಕ್ತವು ಹರಿಯಿತು. ಪರಾಕ್ರಮಿಯಾದ ಆ ಬಕಾಸುರನನ್ನು ಅತಿಶಯವಾದ ಶಕ್ತಿಯುಳ್ಳ ಭೀಮನು ಕ್ಷಣಮಾತ್ರದಲ್ಲಿ ಕೊಂದುಹಾಕಿದನು. ವ|| ಹಾಗೆ ಕೊಂದು ನೀಲಪರ್ವತವನ್ನೇ ಹಿಡಿದೆಳೆಯುವಂತೆ ರಾಕ್ಷಸನ ಕರಿಯ ಹಿರಿಯ ಶರೀರವನ್ನು ಭೀಮನು ಎಳೆದುತಂದು ಪಟ್ಟಣದ ಮಧ್ಯಭಾಗದಲ್ಲಿ ಇಟ್ಟನು. ಪಟ್ಟಣವೆಲ್ಲ ಆಶ್ಚರ್ಯಪಟ್ಟು ಮಂಗಳ ವಾದ್ಯಗಳನ್ನು ಬಾಜನ ಮಾಡಿಸಿ ಸಾಹಸಭೀಮನ ಪರಾಕ್ರಮವನ್ನು ಅಳತೆಯಿಲ್ಲದಷ್ಟು ಹೊಗಳಿ ತಮ್ಮ ಸ್ವಾಮಿಯನ್ನು ಇಷ್ಟದೈವವನ್ನು ಕೊಂಡಾಡುವಂತೆ ಅಯ್ದು ಜನರನ್ನೂ ಕೊಂಡಾಡಿದರು. ಅಲ್ಲಿ ಪಾಂಡವರು ಕೆಲವು ದಿನವಿರುವಷ್ಟರಲ್ಲಿ ಒಂದು ದಿನ ಸೂರ್ಯಾಸ್ತ ಸಮಯದಲ್ಲಿ ಒಬ್ಬ ಬ್ರಾಹ್ಮಣನು ವಿಶೇಷವಾಗಿ ಹರಿದುಹೋದ ಬಟ್ಟೆಯಿಂದ ಮುಚ್ಚಿದ ಸೊಂಟ ಪ್ರದೇಶವನ್ನುಳ್ಳವನಾಗಿ ಬಂದು ಮಲಗಲು ಸ್ಥಳವನ್ನು ಕೇಳಿದನು. ಅವರು ಕೊಟ್ಟ ಜಿಂಕೆಯ ಚರ್ಮವನ್ನೇ ಹಾಸಿಕೊಂಡು ಮಲಗಿದ್ದ ಅವನನ್ನು ಧರ್ಮರಾಜನು ಯಾವ ನಾಡಿನಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದನು. ಅವನು ಉತ್ತರಾಪಥದ ಹಸ್ತಿನಾಪಟ್ಟಣದಿಂದ ಬಂದೆವು ಎಂದನು. ಧರ್ಮರಾಜನು ಅಲ್ಲಿ ಪಾಂಡವರ ಸುದ್ದಿಯೇನು? ಧೃತರಾಷ್ಟ್ರ ದುರ್ಯೋಧನರಿರುವ ರೀತಿ ಯಾವುದು ಎಂದು ಕೇಳಿದನು.
೩೨. ಅದಕ್ಕೆ ಅವನು ನನ್ನ ಶತ್ರುಗಳಾದ ಪಾಂಡಸುತರು ಅರಗಿನ ಮನೆಯ ಭಯಂಕರವಾದ ಬೆಂಕಿಯ ಮುಖದಲ್ಲಿ ನಾಶವಾದರು. ಇದು ನನ್ನ ಅದೃಷ್ಟ, ಅಸಾಧ್ಯರಾದವರೂ ಮೋಸಹೋಗದಿರುವವರು ಯಾರಿದ್ದಾರೆ ಎನ್ನುವ ಹಾಗೆ ಈ ವೈರಿಗಳನ್ನು ಬೇರುಸಹಿತ ಕಿತ್ತುಹಾಕಿದ್ದೇನೆ, ಈಗ ಈ ರಾಜ್ಯವು ದಾಯಾದಿಗಳಿಲ್ಲದ ಹಾಗಾಯಿತು- ಎಂದು ದುರ್ಯೋಧನನು ರಾಜ್ಯಭಾರ ಮಾಡುತ್ತಿದ್ದಾನೆ, ಪ್ರಸಿದ್ಧವಾದ ಹಸ್ತಿನಪುರವು ಯಾವಾಗಲೂ ಪೂರ್ಣವಾಗಿ ಸಂತೋಷಭರಿತವಾಗಿದೆ ಎಂದನು. ವ|| ಅಷ್ಟೇ ಅಲ್ಲದೆ ಯಜ್ಞಸೇನನೆಂಬ ಮೊದಲಿನ ಹೆಸರಿನಿಂದ ಕೂಡಿದ ಪಾಂಚಾಲದೇಶದ ರಾಜನಾದ ದ್ರುಪದನೆಂಬುವನು ದ್ರೋಣನಿಂದಾದ ಸೋಲನ್ನು ನೆನೆಸಿಕೊಂಡು ಅವನನ್ನು ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದೇ ಇರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ಪಯೋವ್ರತನೆಂಬ ದೇವಋಷಿಯಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದನು. ಹೋಮಕುಂಡದಲ್ಲಿ ಧಗಧಗಿಸಿ ಉರಿಯುವ ಜ್ವಾಲೆಗಳ ಸಮೂಹದಲ್ಲಿ ಒರೆಯಿಂದ ಹೊರಸೆಳೆದ ಕತ್ತಿಯನ್ನೂ ಗುರಾಣಿಯನ್ನೂ (ಭೇದಿಸಲಾಗದ) ಒಡೆಯಲಾಗದ ಕವಚವನ್ನೂ ಕೂಡಿಕೊಂಡು ಧೃಷ್ಟದ್ಯುಮ್ನನೆಂಬ ಮಗನೂ ಜ್ವಾಲಾಮಾಲಿನೀದೇವಿಯಂತಿರುವ ಕೃಷ್ಣೆಯೆಂಬ ಮಗಳೂ
ಕಿೞ್ತಬಾಳುಮತ್ತಪರಮುಮಭೇದ್ಯ ಕವಚಮುಂಬೆರಸೊಗೆದ ಧೃಷ್ಟದ್ಯುಮ್ನನೆಂಬ ಮಗನುಮಂ ಜ್ವಾಳಾಮಾಳಿನಿಯೊಗೆವಂತೊಗೆದ ಕೃಷ್ಣೆಯೆಂಬ ಮಗಳುಮಂ ಪಡೆದನಾ ಹೋಮಾಗ್ನಿಯೊಳ್ ಪುಟ್ಟಿದೊಂದು ದಿವ್ಯ ಚಾಪಮುಮಯ್ದು ದಿವ್ಯ ಶರಮೊಳವಾ ಬಿಲ್ಲನೇಱಸಿ ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತ್ರದ ವಿನನೆಚ್ಚನು ಮಾಕೆಗೆ ಗಂಡನಕ್ಕುಮೆಂದಾದೇಶಮಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದೆ ಪೆಱರಿಲ್ಲೆಂಬರದಱಂದೆನ್ನುಂ ಪಾಂಡವರೊಳರೆಂಬ ಮಾತುಗಳಂ ಬುದ್ಧಿಯೊಡೆಯರಾರಾನುಂ ನುಡಿವರ್ ದ್ರುಪದನುವಿಗಳಾ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳುಳ್ಳರಸು ಮಕ್ಕಳೆಲ್ಲರ್ಗಂ ಬೞಯನಟ್ಟಿದೊಡೆ ದುರ್ಯೋಧನಾದಿಗಳ್ ಮೊದಲಾದನೇಕ ದೇಶಾಶ್ವರರೆಲ್ಲಂ ಛತ್ರವತಿಯೆಂಬುದು ದ್ರುಪದನ ಪೊೞಲಾ ಪೊೞಲ್ಗೆ ವಂದಿರ್ದರಾನಲ್ಲಿಂದಂ ಬಂದೆನೆಂದು ಪೇೞೆ ತದ್ವೃತ್ತಾಂತಮೆಲ್ಲಮಂ ಕೇಳ್ದು ತಮ್ಮೊಳಾಳೋಚಿಸಿ-
ಮ|| ತಲೆಯೊಳ್ ಸೀರೆಯನಿಕ್ಕಿ ಕೆಮ್ಮನೆನಿತಂ ಪೂಣ್ದಿರ್ಪಮುಗ್ರಾರಿ ವಂ
ಶ ಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱ ತದ್ದ್ರೌಪದೀ|
ಲಲನಾವ್ಯಾಜದಿನೀಗಳೊಂದೆ ಪೊೞಲೊಳ್ ಸಂದಿರ್ದ ಭಾಸ್ವತುಹೃ
ದ್ಬಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗಲ್ಭ್ಯಮಂ ತೋಱುವಂ|| ೩೩
ವ|| ಎಂದು ನಿಶ್ಚಯಿಸಿ ತಮ್ಮ ಬಗೆದ ಬಗೆಯೊಳ್ ಪರಾಶರಮುನೀಂದ್ರೋಪದೇಶ ಮೊಡಂಬಡೆ ಪಾಂಡವರೇಕಚಕ್ರದಿಂ ಪೊಱಮಟ್ಟು ಶಕುನಂಗಳೆಲ್ಲಮುತ್ತರೋತ್ತರಂ ತಿರ್ದುವಿನ ಮುತ್ತರಾಭಿಮುಖರಾಗಿ ಪಯಣಂಬೋಗಿ ಕೆಲವಾನುಂ ದಿವಸಕ್ಕೆ ಯಮುನಾ ನದೀತಟನಿಕಟವರ್ತಿಯಪ್ಪಂಗದರ್ಪಣವೆಂಬಡವಿಯೊಳಗನೆ ಬರೆವರೆ ದಿನಕರಬಿಂಬಾಂಬುಜಮಂಬರಸರೋವರದಿಂ ಪತ್ತುವಿಡುವುದುಂ ಕವಿದ ಕೞ್ತಲೆಯಗುರ್ವಾಗೆ ತಮೋಪಶಮನನಿಮಿತ್ತಮುರಿವ ಕೊಳ್ಳಿಯಂ ಪಿಡಿದು ಜಗುನೆಯಂ ಪಾಯ್ವಾಗಳಾ ಬನಮನಾಳ್ವ ಕುಬೇರನಾಯಕ ನಂಗದಪರ್ಣನೆಂಬ ಗಂಧರ್ವಂ ಜಳಕ್ರೀಡೆಯಾಡುತಿರ್ದನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ ಪಾದಾಭಿಘಾತದೊಳುಚ್ಚಳಿಸುವ ನೀರ ಸಪ್ಪುಳುಮಂ ಕೇಳ್ದು ಪಿಡಿದ ಕೊಳ್ಳಿಯ ಬೆಳಗುಮಂ ಕಂಡು ಬೆಳಗಂ ಕಂಡ ಪತಂಗದಂತೆ ಮಾಣದೆಯ್ತಂದು-
ಮ|| ಬನಮೆನ್ನಾಳ್ವ ಬನಂ ನಿಶಾಬಲದಿಂತಸ್ಮದ್ಬಲಂ ಧೂರ್ತನಯ್
ನಿನಗೀ ಪೊೞ್ತಳಿತ್ತ ಬರ್ಪದಟನಿಂತಾರಿತ್ತರೆಂದಾಂತೊಡಾ|
ತನನಾ ಕೊಳ್ಳಿಯೊಳಿಟ್ಟೊಡಂತದು ಲಯಾಂತೋಗ್ರಾಗ್ನಿಯಂತೞ್ವೆ ಬಂ
ದೆನಸುಂ ಮಾಣದೆ ಬಾಗಿದಂ ಪದಯುಗಕ್ಕಾರೂಢಸರ್ವಜ್ಞನಾ|| ೩೪
ಹುಟ್ಟಿದರು. ಆ ಹೋಮಾಗ್ನಿಯಲ್ಲಿಯೇ ಒಂದು ಶ್ರೇಷ್ಠವಾದ ಬಿಲ್ಲೂ ಅಯ್ದು ಶ್ರೇಷ್ಠವಾದ ಬಾಣಗಳೂ ಉದ್ಭವಿಸಿದವು. ಆ ಬಿಲ್ಲನ್ನು ಹೆದೆಯೇರಿಸಿ ಆ ಬಾಣಗಳಿಂದ ಆತನ ಮನೆಯ ಮುಂದೆ ಆಕಾಶದಲ್ಲಿ ನಲಿನಲಿದು ಆಡುವ ಯಂತ್ರದ ಮೀನನ್ನು ಹೊಡೆಯುವವನು ಆಕೆಗೆ ಗಂಡನಾಗುತ್ತಾನೆ ಎಂಬುದು (ಆದೇಶ) ನಿಯಮ. ಅಂತಹ ಸಾಹಸ ಪುರುಷನು ವಿಕ್ರಮಾರ್ಜುನನಲ್ಲದೆ ಬೇರೆಯವರಿಲ್ಲ ಎನ್ನುವುದರಿಂದ ಪಾಂಡವರು ಇನ್ನೂ ಇದ್ದಾರೆ ಎಂಬ ಮಾತುಗಳನ್ನು ಬುದ್ಧಿವಂತರೆಲ್ಲರೂ ಹೇಳುತ್ತಿದ್ದಾರೆ. ಈಗ ದ್ರುಪದನು ಆ ಕನ್ಯೆಗೆ ಸ್ವಯಂವರವನ್ನು ಮಾಡಬೇಕೆಂದು ಭೂಮಿಯಲ್ಲಿರುವ ಎಲ್ಲ ರಾಜಕುಮಾರರಿಗೂ ದೂತರ ಮೂಲಕ ಸಮಾಚಾರವನ್ನು ಕಳುಹಿಸಿದ್ದಾನೆ. ದುರ್ಯೋಧನನೇ ಮೊದಲಾದ ಅನೇಕ ರಾಜರುಗಳೆಲ್ಲ ದ್ರುಪದನ ಆ ಛತ್ರಪತಿ ಎಂಬ ಪಟ್ಟಣಕ್ಕೆ ಬಂದಿದ್ದಾರೆ. ನಾನು ಅಲ್ಲಿಂದಲೇ ಬಂದೆ ಎಂದನು. ಆ ವೃತ್ತಾಂತವನ್ನೆಲ್ಲ ಕೇಳಿ ಪಾಂಡವರು ತಮ್ಮಲ್ಲಿ ಆಲೋಚಿಸಿದರು. ೩೩. ಅರ್ಜುನ, ನಾವು ತಲೆಯ ಮೇಲೆ ಬಟ್ಟೆಯನ್ನೂ ಹಾಕಿಕೊಂಡು ಎಷ್ಟು ಕಾಲ ಸುಮ್ಮನೆ ಪ್ರತಿಜ್ಞೆ ಮಾಡಿಕೊಂಡಿರುವುದು? ಭಯಂಕರವಾದ ಶತ್ರುಗಳೆಂಬ ಬಳ್ಳಿಯ ಕುಡಿಗಳಿಗೆ ಕಾಡುಗಿಚ್ಚಿನಂತೆ ನಮ್ಮನ್ನು ಪ್ರಕಟಿಸಿಕೊಂಡು ಆ ದ್ರೌಪದೀಕನ್ಯೆಯ ನೆಪದಿಂದ ಈಗ ಒಂದೇ ಪಟ್ಟಣದಲ್ಲಿ ಸೇರಿರುವ ಪ್ರತಾಪಶಾಲಿಗಳಾದ ಮಿತ್ರವರ್ಗಕ್ಕೂ ಶತ್ರುವರ್ಗಕ್ಕೂ ನಮ್ಮ ಬಾಣಕೌಶಲವನ್ನು ತೋರಿಸೋಣ ವ|| ಎಂದು ನಿಶ್ಚಯಿಸಿಕೊಂಡು ತಾವು ಯೋಚಿಸಿದ ರೀತಿಯಲ್ಲಿಯೇ ವ್ಯಾಸಮಹರ್ಷಿಗಳ ಉಪದೇಶವೂ ಹೊಂದಿಕೊಳ್ಳಲು ಪಾಂಡವರು ಏಕಚಕ್ರಪುರದಿಂದ ಹೊರಟರು. ಶಕುನಗಳೆಲ್ಲ ತಮ್ಮ ಅಭಿವೃದ್ಧಿಯನ್ನೇ ಸೂಚಿಸಿದುವು. ಉತ್ತರದಿಕ್ಕಿಗೆ ಅಭಿಮುಖವಾಗಿ ಪ್ರಯಾಣಮಾಡಿ ಕೆಲವು ದಿವಸವಾದ ಮೇಲೆ ಯಮುನಾನದಿಯ ದಡಕ್ಕೆ ಹತ್ತಿರವಿರುವ ಅಂಗದಪರ್ಣವೆಂಬ ಕಾಡನ್ನು ಪ್ರವೇಶಿಸಿದರು. ಸೂರ್ಯಾಸ್ತವಾಯಿತು. ಕವಿದ ಕತ್ತಲೆಯು ಅತಿಶಯವಾಗಲು ಕತ್ತಲೆಯನ್ನು ಹೋಗಲಾಡಿಸುವುದಕ್ಕಾಗಿ ಉರಿಯುವ ಕೊಳ್ಳಿಯನ್ನು ಹಿಡಿದು ಯಮುನಾನದಿಯನ್ನು ಹಾಯ್ದು ಹೋದರು. ಆ ಕಾಡನ್ನು ಆಳುತ್ತಿದ್ದ ಕುಬೇರನಾಯಕನಾಗಿದ್ದ ಅಂಗದಪರ್ಣನೆಂಬ ಹೆಸರಿನ ಗಂಧರ್ವನು ನೀರಾಟವಾಡುತ್ತಿದ್ದನು. ಎಲ್ಲರಿಗಿಂತ ಮುಂದೆ ಬರುತ್ತಿದ್ದ ವಿಕ್ರಮಾರ್ಜುನನ ಕಾಲಿನ ತುಳಿತದಿಂದ ಮೇಲಕ್ಕೆ ಹಾರುವ ನೀರಿನ ಶಬ್ದವನ್ನು ಕೇಳಿ ಅವರು ಹಿಡಿದಿದ್ದ ಕೊಳ್ಳಿಯ ಬೆಳಗನ್ನು ನೋಡಿ ಬೆಳಕನ್ನು ಕಂಡ ಪತಂಗದ ಹುಳುವಿನಂತೆ ತಡೆಯದೆ ಅವರ ಮೇಲೆ ಬಿದ್ದನು. ೩೪. ಈ ಕಾಡು ನಾನು ಆಳುವ ಕಾಡು. ಈ ರಾಕ್ಷಸ ಬಲವಿದು ನನ್ನ ಸೈನ್ಯ, ನೀನು ದುಷ್ಟನಾಗಿದ್ದೀಯೆ; ಈ ಹೊತ್ತಿನಲ್ಲಿ ಹೀಗೆ ಬರುವಷ್ಟು
ವ|| ಅಂತು ತಾಗಿ ಬಾಗಿದಂತಾಗಿ ಗಂಧರ್ವಂ ಕೊಂತಿವೆರಸಱುವರುಮಂ ತನ್ನ ಬೀಡಿಂಗೊಡಗೊಂಡೊಯ್ದತಿ ಪ್ರೀತಿಯಿಂ ಬಿರ್ದನಿಕ್ಕಿ-
ಕಂ|| ಇದು ನಿನ್ನ ಕೊಟ್ಟ ತಲೆ ನಿನ
ಗಿದನಿತ್ತಪೆನೆಂದು ನುಡಿಯಲಾಗದು ಮಾರ್ಕೊ|
ಳ್ಳದಿರೆಂದು ಗಿಳಿಯ ಬಣ್ಣದ
ಕುದುರೆಯನಯ್ನೂರನಿತ್ತನಂಗದಪರ್ಣಂ|| ೩೫
ವ|| ಇತ್ತೊಡಿವನ್ನೆಗಮೆಮಗಾಗಿರ್ಕೆಂದು ಪ್ರಿಯಂ ನುಡಿದಂಗದಪರ್ಣನನಿರವೇೞ್ದು ಮಾರ್ತಾಂಡೋದಯಮೆ ನಿಜೋದಯಮಾಗೆ ಪಯಣಂಬೋಗಿ-
ಕಂ|| ಪುಣ್ಯನದೀನದ ನಗ ಲ್ವಾ
ವಣ್ಯ ವಿಭೂಷಣೆಯನೊಲ್ದು ನೋಡುತ್ತುಮಿಳಾ|
ಪುಣ್ಯ ಸ್ತ್ರೀಯಂ ಸಂಚಿತ
ಪುಣ್ಯರ್ ಪಾಂಚಾಲದೇಶಮಂ ಪುಗುತಂದರ್|| ೩೬
ವ|| ಅಂತು ತದ್ವಿಷಯವಿಳಾಸಿನಿಗೆ ಪಿಡಿದ ಕನಕಚ್ಛತ್ರದಂತೆ ಸೊಗಯಿಸುವ ಛತ್ರವತೀಪುರದ ಪೊಱವೊೞಲನೆಯ್ತರ್ಪಾಗಳ್-
ಉ|| ಪಾಡುವ ತುಂಬಿ ಕೋಡುವ ಪುೞಲ್ ನಡಪಾಡುವ ರಾಜಹಂಸೆ ಬಂ
ದಾಡುವ ತೊಂಡುವೆಣ್ಬುರುಳಿ ತೀಡುವ ತೆಂಬೆರಲೊಲ್ದು ನಲ್ಲರೊಳ್|
ಕೂಡುವ ನಲ್ಲರಾರೆರ್ದೆಗಮಾರ ಮನಕ್ಕಮನಂಗರಾಗಮಂ
ಮಾಡೆ ಮನಕ್ಕೆ ಬಂದುವರಿಕೇಸರಿಗಲ್ಲಿಯ ನಂದನಾಳಿಗಳ್|| ೩೭
ವ|| ಅಂತು ನೋಡುತ್ತಂಬರೆವರೆ
ಚಂ|| ಮದಗಜಬೃಂಹಿತಧ್ವನಿ ತುರಂಗಮಹೇಷಿತಘೋಷಮಾದಮೊ
ರ್ಮೊದಲೆ ಪಯೋಮಂಥನಮಹಾರವಮಂ ಗೆಲೆ ತಳ್ತ ಬಣ್ಣವ|
ಣ್ಣದ ಗುಡಿ ತೊಂಬೆಗೊಂಚಲೆಲೆಯಿಕ್ಕಿದ ಕಾವಣಮೆಲ್ಲಿಯುಂ ಪೊದ
ೞ್ದೊದವಿರೆ ಕಣ್ಗೆ ಕಂಡುವಖಿಳಾವನಿಪಾಳರ ಬಿಟ್ಟ ಬೀಡುಗಳ್|| ೩೮
ಪರಾಕ್ರಮವನ್ನು ನಿನಗೆ ಕೊಟ್ಟವರಾರು ಎಂದು ಪ್ರತಿಭಟಿಸಿದನು. ಅರ್ಜುನನು ಅವನನ್ನು ಆ ಕೊಳ್ಳಿಯಿಂದಲೇ ಹೊಡೆದನು. ಅದು ಪ್ರಳಯಕಾಲದ ಘೋರವಾದ ಬೆಂಕಿಯಂತೆ ಸುಟ್ಟಿತು. ಅವನು ಸ್ವಲ್ಪವೂ ಸಾವಕಾಶ ಮಾಡದೆ ಬಂದು ಆರೂಢಸರ್ವಜ್ಞನಾದ ಅರ್ಜುನನ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ವ|| ಹಾಗೆ ಪ್ರತಿಭಟಿಸಿ ಅನನಾಗಿ ಗಂಧರ್ವನು ಕುಂತಿಯಿಂದ ಕೂಡಿದ ಆರು ಜನವನ್ನೂ ತನ್ನ ಬೀಡಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಪ್ರೀತಿಯಿಂದ ಆತಿಥ್ಯವನ್ನು ಮಾಡಿದನು. ಅಲ್ಲದೆ ೩೫. ಇದು ನೀನು ಕೊಟ್ಟ (ಬದುಕಿಸಿದ-ಉಳಿಸಿದ) ತಲೆ ಇದನ್ನು ನಿನಗೆ ಪ್ರತಿಯಾಗಿ ಕೊಡುತ್ತಿದ್ದೇನೆಂದು ಹೇಳಕೂಡದು. ಪ್ರತಿಮಾತಾಡಬೇಡ ಎಂದು ಅಂಗದಪರ್ಣನು ಗಿಳಿಯ ಬಣ್ಣದ ಅಯ್ನೂರು ಕುದುರೆಗಳನ್ನು ಅರ್ಜುನನಿಗೆ ಕೊಟ್ಟನು. ವ|| ನಾವು ಅಪೇಕ್ಷಿಸುವವರೆಗೆ ಇವು ನಮ್ಮದಾಗಿ ನಿಮ್ಮಲ್ಲಿರಲಿ ಎಂದು ಪ್ರಿಯವಾದ ಮಾತನಾಡಿ ಅಂಗದಪರ್ಣನನ್ನು ಅಲ್ಲಿರಲು ಹೇಳಿ ಸೂರ್ಯೋದಯವೇ ತಮ್ಮ ಅಭಿವೃದ್ಧಿ ಸೂಚಕವಾಗಿರಲು ಪಾಂಡವರು ಮುಂದೆ ಪ್ರಯಾಣ ಮಾಡಿದರು. ೩೬. ಪವಿತ್ರವಾದ ನದಿ, ನದ, ನಗರ, ಅರಣ್ಯಗಳಿಂದ ಅಲಂಕೃತವೂ ಪುಣ್ಯಭೂಮಿಯೂ ಆದ ಆ ಪ್ರದೇಶಗಳನ್ನು ಪ್ರೀತಿಯಿಂದ ನೋಡುತ್ತ ಪುಣ್ಯಶಾಲಿಗಳಾದ ಪಾಂಡವರು ಪಾಂಚಾಲ ದೇಶವನ್ನು ಪ್ರವೇಶ ಮಾಡಿದರು. ವ|| ಆ ದೇಶವೆಂಬ ಸ್ತ್ರೀಗೆ ಹಿಡಿದ ಚಿನ್ನದ ಕೊಡೆಯಂತೆ ಸೌಂದರ್ಯದಿಂದ ಕೂಡಿದ ಛತ್ರಪತಿಪುರದ ಹೊರಪಟ್ಟಣ (ಪ್ರದೇಶ)ವನ್ನು ಬಂದು ಸೇರಿದರು. ೩೭. ಅಲ್ಲಿ ಹಾಡುತ್ತಿರುವ ದುಂಬಿ, ತಂಪಾಗಿರುವ ತೋಪು, ನಡೆದಾಡುತ್ತಿರುವ ರಾಜಸಿಂಹ, ಬಂದು ಮಾತನಾಡುವ ತುಂಟಹೆಣ್ಣು ಗಿಳಿ, ಬೀಸುವ ತೆಂಕಣಗಾಳಿ, ಪ್ರೇಯಸಿಯರಲ್ಲಿ ಕೂಡುವ ಪ್ರಿಯರು – ಇವು ಯಾರ ಹೃದಯಕ್ಕೂ ಯಾರ ಮನಸ್ಸಿಗೂ ಕಾಮೋದ್ರೇಕವನ್ನುಂಟುಮಾಡುತ್ತಿರಲು ಅಲ್ಲಿಯ ತೋಟದ ಸಾಲುಗಳು ಅರಿಕೇಸರಿಯ ಮನಸ್ಸನ್ನಾಕರ್ಷಿಸಿದುವು. ೩೮. ಮದ್ದಾನೆಗಳ ಘೀಳಿಡುವ ಶಬ್ದ, ಕುದುರೆಗಳ ಕೆನೆತದ ಶಬ್ದ ಅವು ಒಟ್ಟುಗೂಡಿ ಸಮುದ್ರಮಥನದ ದೊಡ್ಡ ಶಬ್ದವನ್ನು ಮೀರಿದ್ದಿತು. ಒತ್ತಾಗಿ ಸೇರಿಕೊಂಡಿರುವ ಬಣ್ಣಬಣ್ಣದ ಬಾವುಟಗಳ ಕುಚ್ಚು, ಹೂಗೊಂಚಲು ಚಿಗುರುಗಳಿಂದ
ವ|| ಅಂತು ನೋಡುತ್ತುಂ ಮೆಚ್ಚುತ್ತುಂ ಬರೆವರೆ-
ಉ|| ಈ ತ್ರಿಜಗಂಗಳೊಳ್ ನೆಗೞ್ದ ಪೆಂಡಿರುಮಂ ಗೆಲೆವಂದ ಪದ್ಮಿನೀ
ಪತ್ರವಿಚಿತ್ರನೇತ್ರೆಗೆ ಸಯಂಬರದೊಳ್ ವರನಪ್ಪೆವಾದೊಡೀ|
ಧಾತ್ರಿಯನಾಳ್ವೆಮಾಮೆ ವಲಮೆಂದು ತೆರಳ್ದ ಸಮಸ್ತ ರಾಜಕ
ಚ್ಛತ್ರದಿನಂದು ಛತ್ರವತಿಯೆಂಬಭಿಧಾನಮನಾಳ್ದುದಾ ಪೊೞಲ್|| ೩೯
ವ|| ಅಂತು ಸೊಗಯಿಸುವ ಪೊೞಲಂ ಪೊಕ್ಕೆಲ್ಲಿಯುಂ ಬೀಡು ಬಿಡಿಲೆಡೆವಡೆಯದೊಂದು ಭಾರ್ಗವಪರ್ಣಶಾಲೆಯೊಳೆಡೆ ಮಾಡಿಕೊಂಡು ಬ್ರಹ್ಮಲೋಕಮಿರ್ಪಂತಿರ್ದ ಬ್ರಹ್ಮಸಭೆಯೊಳಗೆ ದೇವ ಬ್ರಾಹ್ಮಣರಾಗಿರ್ದರನ್ನೆಗಂ ದ್ರುಪದನಿತ್ತಲ್-
ಚಂ|| ನೆರೆದ ಸಮಸ್ತ ರಾಜಕಮನಾದರದಿಂದಿದರ್ಗೊಂಡನೇಕ ರ
ತ್ನ ರಚಿತಮಾಗೆ ಮಾಡಿಸಿ ಸಯಂಬರಸಾಲೆಯನೋಳಿಯಿಂ ನರೇ|
ಶ್ವರರ್ಗಿರಲೆಂದು ಚೌಪಳಿಗೆಗಳ್ ಪಲವಂ ಸಮೆದಲ್ಲಿ ರತ್ನದಿಂ
ಬೆರಸಿದ ಬಣ್ಣದೊಳ್ ಮೆಯೆ ಕಟ್ಟಿಸಿ ಪುಟ್ಟಿಸಿ ರಂಗಭೂಮಿಯಂ|| ೪೦
ವ|| ಆ ನೆಲೆಯ ಚೌಪಳಿಗೆಗಳೊಳನೇಕ ಪ್ರಾಸಾದದ ಮೇಲೆ ಚಿತ್ರದ ಪೞವಿಗೆಗಳಂ ತುಱುಗಲುಂ ಬಂಬಲ್ಗಳುಮಾಗೆ ಕಟ್ಟಿಸಿ ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ ಕಟ್ಟಿಸಿ ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪೞಯ ಸಕಳವಟ್ಟೆಗಳಂ ಸುತ್ತಿಸಿ ಮುತ್ತಿನ ಮಂಡವಿಗೆಗಳನೆಡೆಯಱದತ್ತಿಸಿ ಪೊನ್ನ ಮಾಂಗಾಯ ಗೊಂಚಲ್ಗಳುಮಂ ಮುತ್ತಿನ ಬುಂಭುಕಂಗಳುಮನೆೞಲೆ ಕಟ್ಟಿಸಿ ಮತ್ತಮಾ ಪ್ರಾಸಾದಂಗಳ ಚೌಪಳಿಗಳ ಪೊನ್ನ ಪೊಂಗಱಗೆ ನೀಳ್ಪುಂ ಬೆಳ್ಪುಮಂ ತಾಳ್ದಿ ಕರ್ಪಿನೊಳುಪಾಶ್ರಯಂಬಡೆದು-
ಕಂ|| ತುಱುಗಿದ ಪೂಗೊಂಚಲ ಕಾ
ಯ್ತೆಱಗಿದ ಮಾವುಗಳ ಬೆಳೆದ ಕೌಂಗಿನ ಗೊನೆ ತ|
ಳ್ತೆಱಗಿರೆ ಮಾಡದೊಳಲ್ಲಿಯೆ
ತಿಱದುಕೊಳಲ್ಕಿಂಬಿನೆಸಕಮೆಸೆದುದುಪವನಂ|| ೪೧
ನಾಳೆ ಸಯಂಬರಮೆನೆ ಪಾಂ
ಚಾಳಮಹೀಪಾಳನಖಿಳ ಭೂಭೃನ್ನಿಕರ|
ಕ್ಕೋಳಿಯೆ ಸಾಱದೊಡವನೀ
ಪಾಲರ್ ಕೆಯ್ಗೆಯ್ಯಲೆಂದು ಪಱವಱಯಾದರ್|| ೪೨
ಕೂಡಿದ ಚಪ್ಪರಗಳು ಎಲ್ಲೆಲ್ಲಿಯೂ ವ್ಯಾಪಿಸಿ ಒಪ್ಪಿದ್ದವು. ಸಮಸ್ತ ರಾಜರು ಇಳಿದುಕೊಂಡಿದ್ದ ಬೀಡುಗಳು ಕಣ್ಣಿಗೆ ಕಂಡವು. ವ|| ಹಾಗೆ ನೋಡುತ್ತಿರಲು ಮೆಚ್ಚುತ್ತಲೂ ಬರುತ್ತಿರಲು- ೩೯. ಈ ಮೂರು ಲೋಕದ ಸುಪ್ರಸಿದ್ಧ ಹೆಂಗಸರನ್ನು ಮೀರಿಸಿರುವ ಕಮಲಪತ್ರದಂತೆ ವಿಚಿತ್ರವಾದ ಕಣ್ಣುಳ್ಳ ದ್ರೌಪದಿಗೆ ಸ್ವಯಂವರದಲ್ಲಿ ಪತಿಯಾಗುವುದಾದರೆ ನಾವು ನಿಶ್ಚಯವಾಗಿಯೂ ಈ ಭೂಮಿಯನ್ನು ಆಳುವವರೇ ಸರಿ ಎಂದು ಒಟ್ಟಾಗಿ ಸೇರಿದ ಸಮಸ್ತ ರಾಜರ ಬೆಳ್ಗೊಡೆಗಳಿಂದ ಆ ದಿನ ಆ ಪಟ್ಟಣವನ್ನು ಪ್ರವೇಶಿಸಿ ಎಲ್ಲಿಯೂ ಬೀಡುಬಿಡಲು ಸ್ಥಳ ಸಿಕ್ಕದೆ ಒಂದು ಕುಂಬಾರನ ಗುಡಿಸಲಿನಲ್ಲಿ ಅವಕಾಶವನ್ನು ಮಾಡಿಕೊಂಡು ಬ್ರಹ್ಮಲೋಕದ ಹಾಗಿದ್ದ ಬ್ರಾಹ್ಮಣರ ಸಭೆಯಲ್ಲಿ ದೇವಬ್ರಾಹ್ಮಣರಂತಿರುತ್ತಿದ್ದರು. ೪೦. ಅಲ್ಲಿ ಸೇರಿದ ಎಲ್ಲ ಕ್ಷತ್ರಿಯವರ್ಗವನ್ನು ಆದರದಿಂದ ಇದಿರುಗೊಂಡು ಸ್ವಯಂವರ ಶಾಲೆಯನ್ನು ಅನೇಕ ರತ್ನಗಳಿಂದ ರಚಿತವಾಗಿರುವ ಹಾಗೆ ಮಾಡಿಸಿ ರಾಜರುಗಳಿರುವುದಕ್ಕಾಗಿ ಸಾಲಾಗಿ ಅನೇಕ ತೊಟ್ಟಿಯ ಮನೆಗಳನ್ನು ನಿರ್ಮಿಸಿ ಕೆಂಪುಬಣ್ಣದಿಂದ ಪ್ರಕಾಶಿಸುವ ಹಾಗೆ ರಂಗಸ್ಥಳವನ್ನು ಸಿದ್ಧಪಡಿಸಿದನು. ವ|| ಆ ಸ್ಥಿರವಾದ ತೊಟ್ಟಿಯ ಮನೆಗಳ ಉಪ್ಪರಿಗೆಗಳ ಮೇಲೆ ಅನೇಕ ಚತಿತ್ರವಾದ ಬಾವುಟಗಳೂ ಗುಂಪುಗುಂಪಾಗಿ ಕಟ್ಟಿಸಿದ ಹಸಿರುಹಾರದಿಂದ ಕೂಡಿದ ತೋರಣಗಳೂ ರೇಷ್ಮೆಯ ಧ್ವಜಗಳೂ ಕಂಬಕ್ಕೆ ಸುತ್ತಿದ್ದ ಕಸೂತಿಯ ಚಿತ್ರಕಾರ್ಯ ಮಾಡಿರುವ ಜರತಾರಿವಸ್ತ್ರಗಳೂ ಚಿತ್ರದಿಂದ ಕೂಡಿದ ಬಟ್ಟೆಗಳೂ ಸೂಕ್ತಸ್ಥಾನಗಳಲ್ಲಿ ನಿರ್ಮಿಸಿದ ಮಂಟಪಗಳಲ್ಲಿ ಜೋಲಾಡುವಂತೆ ಕಟ್ಟಿಸಿದ್ದ ಚಿನ್ನದ ಮಾವಿನ ಕಾಯಿನ ಗೊಂಚಲೂ ಮುತ್ತಿನ ಕುಚ್ಚುಗಳೂ ವಿವಿಧ ಬಣ್ಣಗಳನ್ನುಂಟುಮಾಡಿ ಸುವರ್ಣಚ್ಛಾಯೆಯನ್ನು ಅಳವಡಿಸಿದುವು. ೪೧. ಒತ್ತಾಗಿ ಸೇರಿರುವ ಹೂಗೊಂಚಲೂ ಕಾಯಿಗಳ ಭಾರದಿಂದ ಬಗ್ಗಿರುವ ಮಾವುಗಳೂ ಪುಷ್ಪವಾಗಿ ಬೆಳೆದ ಅಡಿಕೆಯ ಗೊನೆಗಳೂ ಗುಂಪಾಗಿ ಕೂಡಿ ಆ ಉಪ್ಪರಿಗೆಯಲ್ಲಿಯೇ ಸೇರಿ ಬಾಗಿರಲು ಅಲ್ಲಿಯೇ ಅವುಗಳನ್ನು ಕೊಯ್ದುಕೊಳ್ಳಲು ಅನುಕೂಲವಾಗಿರುವ ರೀತಿಯಲ್ಲಿ ಆ ಉಪವನವು ಪ್ರಕಾಶಮಾನವಾಗಿದ್ದಿತು. ೪೨. ಆಗ ಪಾಂಚಾಳನಾದ ದ್ರುಪದನು ಸಮಸ್ತ ರಾಜಮಂಡಳಿಗೆ ಕ್ರಮವಾಗಿ ನಾಳೆಯ ದಿನ ಸ್ವಯಂವರವೆಂದು ಡಂಗುರ ಹೊಡೆಯಿಸಿದನು.
ವ|| ಆಗಿ ಮಱುದಿವಸಂ ನೇಸಱು ಮೂಡೆ-
ಕಂ|| ತಂತಮ್ಮ ರಾಜ್ಯ ಚಿಹ್ನಂ
ತಂತಮ್ಮ ಮಹಾ ವಿಭೂತಿ ತಂತಮ್ಮ ಬಲಂ|
ತಂತಮ್ಮೆಸೆವ ವಿಳಾಸಂ
ತಂತಮ್ಮಿರ್ಪೆಡೆಯೊಳೀಳಿಯಿಂ ಕುಳ್ಳಿರ್ದರ್|| ೪೩
ವ|| ಆಗಳ್ ದ್ರುಪದಂ ತನ್ನ ಪುರಕ್ಕಮಂತಪುರಕ್ಕಂ ಪರಿವಾರಕ್ಕಂ-
ಕಂ|| ಸಾಸಿರ ಪೊಂಗೆಯ್ದುಂ ಚಿ
ಕಾಸಟಮೆಂದೊಂದು ಲಕ್ಕಗೆಯ್ವುದಿದರ್ಕಂ||
ಮಾಸರಮುಡಲೆಂದಕ ವಿ
ಳಾಸದಿನುಡಲಿಕ್ಕಿ ನೆಯೆ ಬಿಯಮಂ ಮೆದಂ|| ೪೪
ವ|| ಅಂತು ಮೆದು ಕೂಸಂ ನೆಯೆ ಕೆಯ್ಗೆಯ್ಸಿಮೆಂದು ಮುನ್ನಂ ಕೆಯ್ಗೆಯ್ಸುತಿರ್ದ ತಱದ ಗುಱುಗೆಯರಪ್ಪಂತಪುರ ಪುರಂಯರಂ ಕರೆದು ಪೇೞ್ವುದುಮಂತೆಗೆಯ್ವೆಮೆಂದು-
ಕಂ|| ಈ ಪೊೞಂಗೀ ರುತುವಿಂ
ಗೀ ಪಸದನಮಿಂತುಟಪ್ಪ ಮೆಯ್ವಣ್ಣಕ್ಕಿಂ|
ತೀ ಪೂವಿನೊಳೀ ತುಡುಗೆಯೊ
ಳೀ ಪುಟ್ಟಿಗೆಯೊಳ್ ಬೆಡಂಗುವಡೆದೆಸೆದಿರ್ಕುಂ|| ೪೫
ವ|| ಎಂದು ನೆಯ ಪಸದನಂಗೊಳಿಸಿ-
ಚಂ|| ತುಡಿಸದೆ ಹಾರಮಂ ಮೊಲೆಯ ಬಿಣ್ಪಿನೊಳಂ ನಡು ಬಳ್ಕಿದಪ್ಪುದೀ
ನಡುಗುವುಲ್ಲವೇ ತೊಡೆ ನಿತಂಬದ ಬಿಣ್ಪಿನೊಳೇವುದಕ್ಕ ಪೋ|
ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಮೆಂ
ತುಡಿಸುವುದಕ್ಕ ನೂಪುರಮನೀ ತೊಡವೇವುದೊ ರೂಪೆ ಸಾಲದೆ|| ೪೬
ವ|| ಎಂದೆಂದೋರೊರ್ವರಾಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು ಮಂಗಳವಸದನ ಮಿಕ್ಕಿಯುಂ ಪೊಸ ಮದವಳಿಗೆಯಪ್ಪುದಱಂ ತುಡಿಸಲೆವೇೞ್ಕುಮೆಂದು ನೆಯೆ ಪಸದನಂಗೊಳಿಸಿ-
ರಾಜರು ತಮ್ಮ ತಮ್ಮ ಶಕ್ತಿಪ್ರದರ್ಶನ ಮಾಡಲು ವಿಶೇಷ ಉತ್ಸಾಹಗೊಂಡರು. ವ|| ಮಾರನೆಯ ದಿನ ಸೂರ್ಯೋದಯವಾಯಿತು. ೪೩. ರಾಜರು ತಮ್ಮ ತಮ್ಮ ರಾಜ್ಯಚಿಹ್ನೆ ವೈಭವ ಸೈನ್ಯ ವಿಳಾಸಗಳಿಂದ ಕೂಡಿ ತಾವಿದ್ದ ಸ್ಥಳಗಳಲ್ಲಿ ಸಾಲಾಗಿ ಕುಳಿತರು. ವ|| ಆಗ ದ್ರುಪದನು ತನ್ನ ಪಟ್ಟಣಕ್ಕೂ ರಾಣಿವಾಸಕ್ಕೂ ಪರಿವಾರಕ್ಕೂ ೪೪. ಸಹಸ್ರಹೊನ್ನನ್ನು ಕೊಟ್ಟರೂ ಇದು ಲಭ್ಯವಾಗುವುದಿಲ್ಲ. ಹತ್ತಿಯ ಬಟ್ಟೆಯಾದರೂ ಇದು ಲಕ್ಷ ಬೆಲೆಯುಳ್ಳದ್ದು ಎಂಬ ವಸ್ತ್ರಗಳನ್ನು ಮಧುರವಾಗಿ ಧರಿಸಲೂ ಸಂತೋಷದಿಂದ ಉಡಲೂ ಕೊಟ್ಟು ವಿಶೇಷವಾಗಿ ತನ್ನ ಔದಾರ್ಯವನ್ನು ಪ್ರಕಾಶಿಸಿದನು. ವ|| ಹಾಗೆಯೇ ಕನ್ಯೆಯನ್ನು ಪೂರ್ಣವಾಗಿ ಅಲಂಕರಿಸಿ ಎಂದು ಹೇಳಿದನು. ಹಾಗೆ ಹೇಳುವುದಕ್ಕೆ ಮುಂಚೆಯೇ (ತಾವಾಗಿಯೇ) ಅಲಂಕರಿಸುತ್ತಿದ್ದ ಶಕ್ತರೂ ಅನುಭವಶಾಲಿಗಳೂ ಆದ ರಾಣಿ ವಾಸದ ಸ್ತ್ರೀಯರು ಹಾಗೆಯೇ ಮಾಡುತ್ತೇವೆಂದರು. ೪೫. ಈ ಹೊತ್ತಿಗೆ ಈ ಋತುವಿಗೆ ಇಂತಹ ಅಲಂಕಾರ; ಇಂತಹ ಮೈಬಣ್ಣಕ್ಕೆ ಇಂತಹ ಹೂವು ಈ ಆಭರಣ ಈ ಸೀರೆ ಉಚಿತವಾದುದು ವ|| ಎಂದು ನಿಷ್ಕರ್ಷಿಸಿ ಪೂರ್ಣವಾಗಿ ಅಲಂಕಾರ ಮಾಡಿದರು. ೪೬. ಹಾರವನ್ನು ತೊಡಿಸದಿದ್ದರೂ ಮೊಲೆಯ ಭಾರದಿಂದಲೇ ಸೊಂಟವು ಬಳಕುತ್ತದೆ. ಪಿರ್ರೆ (ಪೃಷ್ಠಭಾಗ)ಯ ಭಾರದಿಂದಲೇ ತೊಡೆ ನಡುಗುವುದಲ್ಲವೇ? (ಆದುದರಿಂದ) ಒಡ್ಯಾಣದ ಭಾರ ಬೇರೆಯೇತಕ್ಕೆ? ಅದನ್ನು ತೊಡದೆ ಬಿಡು. ತೊಡೆಯ ಭಾರವೇ ಪಾದಕಮಲಗಳಿಗೆ ಭಾರವಾಗಿದೆ (ಹೀಗಿರುವಾಗ) ಕಾಲಂದಿಗೆಯನ್ನೇಕೆ ತೊಡಿಸುವುದು. ಈಕೆಗೆ ಆಭರಣಗಳೇತಕ್ಕೆ ರೂಪೇ ಸಾಲದೆ? ವ|| ಎಂದು ಒಬ್ಬೊಬ್ಬರೂ ಆಕೆಯ ಸೌಂದರ್ಯವನ್ನು ಹೊಗಳಿ ಮಂಗಳಾಲಂಕಾರಮಾಡಿದರು. ಹೊಸ ಮದುವಣಗಿತ್ತಿಯಾದುದರಿಂದ ಆಭರಣವನ್ನೂ ತೊಡಿಸಲೇ
ಕಂ|| ಮಸೆದುದು ಮದನನ ಬಾಳ್ ಕೂ
ರ್ಮಸೆಯಿಟ್ಟುದು ಕಾಮನಂಬು ಬಾಯ್ಗೂಡಿದುದಾ|
ಕುಸುಮಾಸ್ತ್ರನ ಚಕ್ರಮಿದೆಂ
ಬೆಸಕಮನಾಳ್ದತ್ತು ಪಸದನಂ ದ್ರೌಪದಿಯಾ|| ೪೭
ವ|| ಅಂತು ನೆಯೆ ಪಸದನಂಗೊಳಿಸಿ ಬಿಡುಮುತ್ತಿನ ಸೇಸೆಯನಿಕ್ಕಿ ತಾಯ್ಗಂ ತಂದೆಗಂ ಪೊಡಮಡಿಸಿ-
ಕಂ|| ನಿಟ್ಟಿಸೆ ಹೋಮಾನಲನೊಳ್
ಪುಟ್ಟಿದ ನಿನಗಕ್ಕ ಪರಕೆ ಯಾವುದೊ ನಿನ್ನಂ|
ಪುಟ್ಟಿಸಿದ ಬದಿ ನೆಗೞ್ತೆಯ
ಜೆಟ್ಟಿಗನೊಳ್ ನೆರಪುಗೀಗಳರಿಕೇಸರಿಯೊಳ್|| ೪೮
ವ|| ಎಂದು ಪರಸಿ ಕನಕತೃನಕಖಚಿತಮುಂ ಮೌಕ್ತಿಕಸ್ತಂಭಮುಮಪ್ಪ ಸರ್ವತೋಭದ್ರಮೆಂಬ ಸಿವಿಗೆಯನೇಱಸಿ ಚಾಮರದ ಕುಂಚದಡಪದ ಡವಕೆಯ ವಾರ ವಿಳಾಸಿನಿಯರೆಡುಂ ಕೆಲದೊಳ್ ಸುತ್ತಿಱದು ಬಳಸಿ ಬರೆ ತಲೆವರಿದೋಜೆಯ ಪಿಡಿಯನೇಱ ಪೆಂಡವಾಸದೊಳ್ವೆಂಡಿರ್ ಬಳಸಿ ಬರೆ ತಳ್ತು ಪಿಡಿದ ಕನಕ ಪದ್ಮದ ಸೀಗುರಿಗಳ ನೆೞಲೆಡೆವಱಯದೆ ಬರೆ ದ್ರುಪದನುಂ ಧೃಷ್ಟದ್ಯುಮ್ನನುಂ ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳ್ ನೆಯೆ ಪಣ್ಣಿದ ಮದಾಂಧ ಗಂಧಸಿಂಧುರಂಗಳನೇಱ ಬರೆ ಮುಂದೆ ಪರಿವ ಧವಳಚ್ಛತ್ರ ಚಂದ್ರಾದಿತ್ಯ ಪಾಳಿಕೇತನಾದಿ ರಾಜ್ಯ ಚಿಹ್ನಂಗಳುಂ ಮೊೞಗುವ ಮಂಗಳತೂರ್ಯಂಗಳೆಸೆಯೆ ಪೆಱಪೆಱಗೆ ದ್ರೌಪದಿ ಶೃಂಗಾರಸಾಗರಮೆ ಮೇರೆದಪ್ಪಿ ಬರ್ಪಂತೆ ಬರೆ-
ಕಂ|| ಪರೆದುಗುವ ಪಂಚ ರತ್ನದ
ಪರಲ್ಗಳುದಿರ್ದೆಸೆಯೆ ಸೌಧದೊಳೆ ಕೆದಱದ ಕ|
ಪ್ಪುರವಳ್ಕುಗಳೆಸೆಯೆ ಸಯಂ
ಬರ ಸಾಲೆಯನೆಸೆವ ಲೀಲೆಯಿಂ ಪುಗುತಂದಳ್|| ೪೯
ವ|| ಆಗಳ್-
ಕಂ|| ನುಡಿವುದನೆ ಮದು ಪೆಱತಂ
ನುಡಿಯೆ ಕೆಲರ್ ನೋಡದಂತೆ ನೋಡೆ ಕೆಲರ್ ಪಾ|
ವಡರ್ದವೊಲಿರೆ ಕೆಲರೊಯ್ಯನೆ
ತುಡುಗೆಯನೋಸರಿಸೆ ಕೆಲರುದಗ್ರಾವನಿಪರ್|| ೫೦
ಬೇಕೆಂದು ಪೂರ್ಣವಾಗಿ ಅಲಂಕಾರಮಾಡಿದರು. ೪೭. ಆ ದ್ರೌಪದಿಯ ಅಲಂಕಾರವು ಮನ್ಮಥನ ಕತ್ತಿಯು ಮಸೆಯಲ್ಪಟ್ಟಿತು, ಕಾಮನ ಬಾಣವು ಹರಿತವಾಗಿ ಮಾಡಲ್ಪಟ್ಟಿತು, ಪುಷ್ಪಬಾಣನಾದ ಅನಂಗನ ಚಕ್ರಾಯುಧವು ಹರಿತವಾದ ಬಾಯಿಂದ ಕೂಡಿದುದಾಯಿತು ಎನ್ನುವಷ್ಟು ಸೌಂದರ್ಯವನ್ನು ಪಡೆಯಿತು. ವ|| ಹಾಗೆ ಸಂಪೂರ್ಣವಾಗಿ ಅಲಂಕಾರ ಮಾಡಿ ಬಿಡಿಮುತ್ತಿನ ಅಕ್ಷತೆಯನ್ನು ಅವಳ ತಲೆಯ ಮೇಲೆ ಚೆಲ್ಲಿ ತಾಯಿಗೂ ತಂದೆಗೂ ನಮಸ್ಕಾರ ಮಾಡಿಸಿದರು. ೪೮. ವಿಚಾರಮಾಡುವುದಾದರೆ ಹೋಮಾಗ್ನಿಯಲ್ಲಿ (ಯಜ್ಞ ಕುಂಡದಲ್ಲಿ) ಹುಟ್ಟಿದ ನಿನಗೆ ಪ್ರತ್ಯೇಕವಾದ ಹರಕೆ ಯಾಕಮ್ಮ, ನಿನ್ನನ್ನು ಹುಟ್ಟಿಸಿದ ಆ ವಿಯು ಸುಪ್ರಸಿದ್ಧ ಪರಾಕ್ರಮಿಯಾದ ಆ ಅರಿಕೇಸರಿಯಲ್ಲಿ ನಿನ್ನನ್ನು ಸೇರಿಸಲಿ ವ|| ಎಂದು ಹರಸಿ ಹೊಳೆಯುವ ಚಿನ್ನದಿಂದ ಕೆತ್ತಲ್ಪಟ್ಟುದೂ ಮುತ್ತಿನ ಕುಂಭಗಳನ್ನುಳ್ಳದೂ ಸರ್ವತೋಭದ್ರವೆಂಬ ಹೆಸರುಳ್ಳುದೂ (ನಾಲ್ಕು ಕಡೆಯೂ ಬಾಗಿಲುಳ್ಳದು) ಆದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಚಾಮರ, ಕುಂಚ, ಎಲೆ ಅಡಿಕೆಯ ಚೀಲ ಮತ್ತು ಪೀಕದಾನಿಗಳನ್ನು ಹಿಡಿದಿದ್ದ ಪರಿವಾರದ ಹೆಂಗಸರು ಎರಡುಪಕ್ಕದಲ್ಲಿಯೂ ಸುತ್ತ ಗುಂಪುಗೂಡಿ ಬಳಸಿ ಬರುತ್ತಿರಲು ಮುಂದೆ ಹೋಗುತ್ತಿರುವ ಕ್ರಮಬದ್ಧವಾದ ಹೆಣ್ಣಾನೆಯನ್ನು ಹತ್ತಿಕೊಂಡು ರಾಣಿವಾಸದ ಸಭ್ಯಸ್ತ್ರೀಯರ ಸುತ್ತ ಬರುತ್ತಿರಲು ಎತ್ತಿಹಿಡಿದ ಸೀಗುರಿಗಳು ನೆರಳು ವಿಚ್ಛಿತ್ತಿಯಿಲ್ಲದೆ ಜೊತೆಯಲ್ಲಿಯೇ ಬರುತ್ತಿರಲು ದ್ರುಪದನೂ ಧೃಷ್ಟದ್ಯುಮ್ನನೂ ಮುತ್ತು ಮಾಣಿಕ್ಯಾಭರಣಗಳಿಂದ ಪೂರ್ಣವಾಗಿ ಅಲಂಕಾರಮಾಡಿದ ಮದ್ದಾನೆಗಳನ್ನೇರಿ ಬರುತ್ತಿರಲು ಮುಂಭಾಗದಲ್ಲಿ ಹರಿದುಹೋಗುತ್ತಿದ್ದ ಬಿಳಿಯ ಕೊಡೆ, ಚಂದ್ರ, ಸೂರ್ಯ, ಧ್ವಜಸಮೂಹವೇ ಮೊದಲಾದ ರಾಜಚಿಹ್ನೆಗಳೂ ಶಬ್ದಮಾಡುತ್ತಿದ್ದ ಮಂಗಳವಾದ್ಯಗಳೂ ಪ್ರಕಾಶಿಸುತ್ತಿರಲು ಹಿಂಭಾಗದಲ್ಲಿ ದ್ರೌಪದಿಯು ಶೃಂಗಾರಸಾಗರವೇ ಎಲ್ಲೇ ಮೀರಿ ಬರುವಂತೆ ಬಂದಳು. ೪೯. ಎಲ್ಲೆಲ್ಲಿಯೂ ಹರಡಿದ್ದ ಪಂಚರತ್ನದ ಹರಳುಗಳೂ ಪಚ್ಚಕರ್ಪೂರದ ಹಳುಕುಗಳೂ ಪ್ರಕಾಶಿಸುತ್ತಿರಲು ಸ್ವಯಂವರ ಶಾಲೆಯನ್ನು ಸರಳವಿಲಾಸದಿಂದ ಪ್ರವೇಶಿಸಿದಳು. ವ|| ಆಗ ೫೦. (ಅವಳನ್ನು ನೋಡಿ ದಿಗ್ಭ್ರಾಂತರಾಗಿ) ಕೆಲವರು ಹೇಳಬೇಕಾದುದನ್ನು ಮರೆತು ಬೇರೆಯದನ್ನು ನುಡಿದರು, ಕೆಲವರು
ಒಡನೆ ನೆರೆದರಸುಮಕ್ಕಳ
ನಿಡುಗಣ್ಗಳ ಬಳಗಮೆಱಗೆ ತನ್ನಯ ಮೆಯ್ಯೊಳ್|
ನಡೆ ಬಳಸಿ ಪಲರುಮಂಬಂ
ತುಡೆ ನಡುವಿರ್ದೊಂದು ಪುಲ್ಲೆಯಿರ್ಪಂತಿರ್ದಳ್|| ೫೧
ಮೊನೆಯಂಬುಗಳೊಳೆ ಪೂಣ್ದಪ
ನನಿಬರುಮಂ ಕಿಱದು ಬೇಗದಿಂ ಹರಿಗನದ|
ರ್ಕೆನಗೆಡೆವೇೞ್ಕುಮೆ ಎಂಬವೊ
ಲನಿಬರುಮಂ ಪೂಣ್ದನತನು ನನೆಯಂಬುಗಳಿಂ|| ೫೨
ವ|| ಆಗಳ್ ಪಾಂಡವರ್ ತಮ್ಮಂ ಪೆಱರಱಯದಂತು ಬ್ರಾಹ್ಮಣವೇಷದೊಳೆ ಬ್ರಹ್ಮಸಭೆಯೊಳ್ ಬಂದಿರೆ-
ಚಂ|| ಇಳೆಯೊಳುದಗ್ರ ವೀರ ಭಟ ತುಂಗ ಮತಂಗಜ ವಾಜಿ ರಾಜಿ ಚೌ
ಪಳಿಗೆಗಳೊಳ್ ಧರಾಧರ ಧುರಂಧರ ಬಂಧುರ ರಾಜಕಂ ವಿಯ|
ತ್ತಳದೊಳನೇಕ ಕಿಂಪುರುಷ ಕಿನ್ನರ ಖೇಚರ ಸಿದ್ಧ ಬೃಂದಮ
ವ್ವಳಿಸಿರೆ ಮೂಱು ಲೋಕಮನೆ ಪೋಲ್ತುದು ಮೂನೆಲೆಯಿಂ ಸ್ವಯಂಬರಂ|| ೫೩
ವ|| ಆಗಳ್ ವಿದಿತವೃತ್ತಾಂತೆಯಾಗಿ ದ್ರೌಪದಿಯ ಕೆಲದೊಳಿರ್ದ ಸುಂದರ ಮಾಲೆಯೆಂಬ ಚೇಟಿ-
ಮ|| ಕನಕೋಚ್ಚಾಸನಸಂಸ್ಥಿತಂ ನೃಪನಮಂ ಬೆಂಗೀಶನುತ್ತುಂಗ ಪೀ
ನ ನಿಜಾಂಸಾರ್ಪಿತ ಲಂಬಹಾರನವನಾ ಪಾಂಡ್ಯಂ ಮನಂಗೊಂಡು ನಿ|
ನ್ನನೆ ಕಿೞ್ಗಣ್ಣೊಳೆ ನೋಡುತಿರ್ಪವನವಂ ಚೇರಮ್ಮನಾದಿತ್ಯ ತೇ
ಜನವಂ ನೋಡು ಕಳಿಂಗದೇಶದರಸಂ ಪಂಕೇಜ ಪ್ರತ್ರೇಕ್ಷಣೇ|| ೫೪
ವ|| ಮತ್ತಿತ್ತ ಬೀಸುವ ಚಾಮರಂಗಳ ಪೊಳಪಿನೊಳಮೆತ್ತಿದ ಬೆಳ್ಗೊಡೆಗಳ ಬೆಳ್ಪಿನೊಳಂ ದೆಸೆಗಳೆಲ್ಲಂ ಧವಳಿಸಿದನ್ನವಾಗೆ ಪೊಗಳುತೆ ವರ್ಪವರ ಸರಂಗಳೊಳಂ ಪಾಡುವ ಪಾಠಕಾಱರಿಂ ಚರಂಗಳೊಳೆಲ್ಲಂ ದಿಗ್ಭಿತ್ತಿಗಳ್ ತೆಕ್ಕನೆ ತೀವೆ ಮಣಿಮಯಪೀಠದ ಮೇಲೆ ಕಾಲನವಷ್ಟಂಭದಿಂ ನೀಡಿ-
ನೋಡದಂತೆ ದ್ರೌಪದಿಯನ್ನು ನೋಡುತ್ತಿದ್ದರು, ಮತ್ತೆ ಕೆಲವರು ಹಾವನ್ನು ಎದುರಿಸಿದವರಂತಿದ್ದರು ಮತ್ತೆ ಕೆಲವು ರಾಜಶ್ರೇಷ್ಠರು ಆಭರಣಗಳನ್ನು ಓರೆಮಾಡುತ್ತಿದ್ದರು. ೫೧. ಒಟ್ಟಿಗೆ ಅಲ್ಲಿ ನೆರೆದಿದ್ದ ರಾಜಕುಮಾರರ ನೀಳವಾದ ಕಣ್ಣುಗಳ ಸಮೂಹವು ತನ್ನ ಶರೀರದ ಮೇಲೆ ಎರಗಿ ನಾಟಿಕೊಳ್ಳಲು ಸುತ್ತಲೂ ಅನೇಕರು ಪ್ರಯೋಗಮಾಡಿದ ಬಾಣಗಳ ಮಧ್ಯೆ ಸಿಕ್ಕಿದ ಹುಲ್ಲೆಯಂತೆ ದ್ರೌಪದಿ ತೋರಿದಳು. ೫೨. ಅರಿಗನು ಅಲ್ಪಕಾಲದಲ್ಲಿಯೇ ಅಷ್ಟುಜನವನ್ನೂ ಮೊಣಚಾದ ಬಾಣಗಳಿಂದ ಹೂಳಿಬಿಡುತ್ತಾನೆ. ಅದಕ್ಕಾಗಿ ನಾನು ಬಾಣಬಿಡುವುದಕ್ಕೆ ಸ್ಥಳಬೇಕಲ್ಲವೇ? ಎನ್ನುವ ಹಾಗೆ ಮನ್ಮಥನು ಅಷ್ಟು ಜನರನ್ನೂ ಪುಷ್ಪಬಾಣಗಳಿಂದ ಹೂಳಿದನು. ವ|| ಆಗ ಪಾಂಡವರು ತಮ್ಮನ್ನು ಇತರರು ತಿಳಿದಂತೆ (ಗುರುತಿಸದಂತೆ) ಬ್ರಾಹ್ಮಣವೇಷದಿಂದಲೇ ಬ್ರಹ್ಮಸಭೆಯಲ್ಲಿ ಬಂದು ಕುಳಿತಿದ್ದರು. ೫೩. ಭೂಮಿಯಲ್ಲಿ (ನೆಲದ ಮೇಲೆ) ಶ್ರೇಷ್ಠರಾದ ಭಟರೂ ಎತ್ತರವಾದ ಮದ್ದಾನೆ ಮತ್ತು ಕುದುರೆಯ ಸಮೂಹಗಳೂ ಚಚ್ಚೌಕವಾದ ಮಂಟಪಗಳಲ್ಲಿ ರಾಜಶ್ರೇಷ್ಠರ ಮನೋಹರವಾದ ಸಮೂಹವೂ ಅಂತರಿಕ್ಷ ಪ್ರದೇಶದಲ್ಲಿ ಕಿಂಪುರುಷ, ಕಿನ್ನರ, ಖೇಚರ, ಸಿದ್ಧಪುರುಷರ ಸಮೂಹವೂ ತುಂಬಿರಲು ಈ ಮೂರುನೆಲೆಗಳಿಂದ ಸ್ವಯಂವರ ಮಂಟಪವು ಮೂರುಲೋಕವನ್ನೂ ಹೋಲುತ್ತಿತ್ತು. ವ|| ಆಗ ಅಲ್ಲಿರುವವರ ವಿಷಯವನ್ನು ತಿಳಿದುಕೊಂಡು ಪಕ್ಕದಲ್ಲಿದ್ದ ಸುಂದರಮಾಲೆಯೆಂಬ ಚೇಟಿಯು ದ್ರೌಪದಿಗೆ ಅವರ ಪರಿಚಯ ಮಾಡಿಸಿದಳು. ೫೪. ಎಲೌ ಕಮಲದಳಾಕ್ಷಿಯಾದ ದ್ರೌಪದಿಯೇ ಆ ಎತ್ತರವಾದ ಚಿನ್ನದ ಪೀಠದಲ್ಲಿ ಕುಳಿತಿರುವವನು ವಂಗದೇಶದ ದೊರೆ, ಎತ್ತರವೂ ದಪ್ಪವೂ ಆದ ಭುಜದಲ್ಲಿ ಉದ್ದವಾದ ಹಾರವುಳ್ಳವನು ಪಾಂಡ್ಯ, ವಿಶೇಷ ಆಕರ್ಷಿತನಾಗಿ ಕೆಳಗಣ್ಣಿನಲ್ಲಿ ನಿನ್ನನ್ನೇ ನೋಡುತ್ತಿರುವವನು ಚೇರಮ, ಸೂರ್ಯತೇಜಸ್ಸುಳ್ಳ ಆತ ಕಳಿಂಗದೇಶದರಸನು ನೋಡು. ವ|| ಈ ಕಡೆ ಬೀಸುವ ಚಾಮರಗಳ ಹೊಳಪಿನಿಂದಲೂ ಎತ್ತಿದ ಬೆಳುಗೊಡೆಗಳ ಬೆಳುಪಿನಿಂದಲೂ ದಿಕ್ಕುಗಳಲ್ಲಿ ಬಿಳಿಯಬಣ್ಣದಿಂದ ಕೂಡಿದುದಾಗಿರಲು ಹೊಗಳುತ್ತಲಿರುವವರ ಸ್ವರಗಳಿಂದಲೂ ಹಾಡುತ್ತಿರುವವರ ಹೊಗಳುಭಟ್ಟರ ಮಧುರವಾದ ಧ್ವನಿಗಳಿಂದಲೂ ದಿಗಂತಗಳೆಲ್ಲವೂ ಇದ್ದಕ್ಕಿದ್ದ ಹಾಗೆ ತುಂಬಿರಲು ರತ್ನಖಚಿತವಾದ ಆಸನದ ಮೇಲೆ
ಮ|| ಅಲರಂಬಿಂದುಱದೆನ್ನ ಮೆಲ್ಲೆರ್ದೆಯನಿಂತುರ್ಚಿತ್ತಿದೆಂಬಂತೆ ನೆ
ಯ್ದಿಲ ಕಾವಂ ತಿರುಪುತ್ತುಮೊಂದನನಿಬರ್ ತಮ್ಮಂದಿರುಂ ತನ್ನೆರ|
ೞ್ಕೆಲದೊಳ್ ಬಂದಿರೆ ನೋಡಿ ಸೋಲ್ತು ನಿನಗಾ ಗೇಯಕ್ಕೆ ಸೋಲ್ತಂತೆವೋಲ್
ತಲೆಯಂ ತೂಗುವವಂ ಸುಯೋಧನನೃಪಂ ನೀನಾತನಂ ನೋಡುಗೇ|| ೫೫
ವ|| ಮತ್ತಿತ್ತ ಮಿಂಚಂ ತಟ್ಟಿ ಮೆಡಱದಂತೆ ಸುತ್ತಿಱದ ಕಾಲ್ಗಾಪಿನ ಕಡಿತಲೆಯ ಬಳಸಿದಗಣ್ಯ ಪಣ್ಯಾಂಗನಾಜನದ ನಡುವೆ ಮಣಿಮಯಪೀಠಂಗಳನೇಱ-
ಕಂ|| ಆಯತ ಯದುವಂಶ ಕುಲ
ಶ್ರೀಯಂ ತೞ್ಕೈಸಿದದಟರತಿರಥರವರ|
ತ್ಯಾಯತಭುಜಪರಿಘರ್ ನಾ
ರಾಯಣ ಬಲದೇವರೆಂಬರಂಬುಜವದನೇ|| ೫೬
ವ|| ಎಂದು ಕಿಱದಂತರಂ ಪೋಗಿ-
ಉ|| ಇಂತಿವರಿನ್ನರೀ ದೊರೆಯರೆಂದೆಱವಂತಿರೆ ಪೇೞ್ದುವೇೞ್ದು ರಾ
ಜಾಂತರದಿಂದೆ ರಾಜಸುತೆಯಂ ನಯದಿಂದವಳುಯ್ದಳಂತು ಸ|
ದ್ಭ್ರಾಂತ ಸವಿರಣೋತ್ಥಿತ ವಿಶಾಲ ವಿಳೋಳ ತರಂಗ ರೇಖೆ ಪ
ದ್ಮಾಂತರದಿಂದಮಿಂಬಱದು ಮಾನಸಹಂಸಿಯನುಯ್ವಮಾರ್ಗದಿಂ|| ೫೭
ವ|| ಅಂತು ನೆರೆದರಸುಮಕ್ಕಳಾರುಮಂ ಮೆಚ್ಚದೆ ಮಗುೞೆವರೆ ದ್ರುಪದನಿದಳೆಲ್ಲ ಮೇನಿಂ ಹೋಮಾಗ್ನಿಸಂಭವಮಪ್ಪ ದಿವ್ಯಚಾಪಮನೇಱಸಿಯುವಿಯಯ್ದು ಶರದೊಳಾಕಾಶದೊಳ್ ನಲಿದು ಪೊಳೆಯುತ್ತಿರ್ಪ ಜಂತ್ರದ ವಿನನಿಸಲಾರ್ಪೊಡೆ ಬಂದೇಱಸಿಯು ಮೆಚ್ಚು ಗೆಲ್ಲಂಗೊಡೆನ್ನ ಮಗಳಂ ಮದುವೆಯಪ್ಪುದೆಂಬುದುಮಾಮಾಮೆ ಬಿಲ್ಲನೇಱಸಿದಪೆವೆಂದನಿಬರಾನುಮರಸುಮಕ್ಕಳ್ ಬಂದು-
ಉ|| ಏಱಪೆವೆಂದರ್ ನೆಲದಿನೆತ್ತಲುಮಾಱದೆ ಬಿೞ್ದು ನೆತ್ತರಂ
ಕಾಱಯುಮೆತ್ತಿ ಕಯ್ಯುಡಿದುಮಾಗಳೆ ಕಾಲುಡಿದುಂ ಬೞಲ್ದು ಪ
ಲ್ಲಾಱ ಪೊಡರ್ಪುಗೆಟ್ಟುಸಿರಲಪ್ಪೊಡಮಾಱದೆ ಪೋದೊಡಾಗಳಾ
ನೇಱಪೆನೆಂದು ಪೊಚ್ಚಱಸಿ ಬಂದು ಸುಯೋಧನನುಗ್ರಚಾಪಮಂ|| ೫೮
ತನ್ನ ಕಾಲನ್ನು ಠೀವಿಯಿಂದ ನೀಡಿ ೫೫. ನನ್ನ ಮೃದುವಾದ ಹೃದಯವನ್ನು ಪುಷ್ಪಬಾಣವು ಈ ದಿನ ಹೀಗೆ ಚುಚ್ಚುತ್ತಿದೆ ಎನ್ನುವ ಹಾಗೆ ನೆಯ್ದಿಲ ಹೂವಿನ ಕಾವನ್ನು ಒಂದು ಕೈಯಲ್ಲಿ ತಿರುಗಿಸುತ್ತಲೂ ಅಷ್ಟು ಜನ ತಮ್ಮಂದಿರೂ ತನ್ನ ಎರಡು ಪಕ್ಕದಲ್ಲಿಯೂ ಬಂದಿರಲು ನಿನ್ನ ಸೌಂದರ್ಯಕ್ಕೆ ಸೋತಿದ್ದರೂ ಆ ಸಂಗೀತಕ್ಕೆ ಸೋತವನಂತೆ ತಲೆಯನ್ನು ತೂಗುವ ಅವನು ದುರ್ಯೋಧನ ಭೂಪತಿ; ಆತನನ್ನು ನೀನು ನೋಡು. ವ|| ಈ ಕಡೆ ಮಿಂಚನ್ನೇ ಮುಸುಕಿದ್ದಾರೆಯೋ ಎನ್ನುವಂತಿರುವ ಅಸಂಖ್ಯಾತರಾದ ವೇಶ್ಯಾಸ್ತ್ರೀಯರ ಮಧ್ಯೆ ರತ್ನಖಚಿತವಾದ ಪೀಠದ ಮೇಲೆ ೫೬. ಕುಳಿತಿರುವವರು ವಿಸ್ತಾರವಾದ ಯದುಲಕ್ಷ್ಮಿಯನ್ನು ಆಲಿಂಗನಮಾಡಿಕೊಂಡಿರುವ ಶೂರರೂ ಪರಾಕ್ರಮಿಗಳೂ ದೀರ್ಘವಾದ ಪರಿಘಾಯುಧದಂತಿರುವ ತೋಳುಗಳನ್ನುಳ್ಳವರೂ ಆದವರು ಕೃಷ್ಣಬಲರಾಮರೆಂಬುವರು. ವ|| ಎಂದು ಸ್ವಲ್ಪದೂರ ಹೋಗಿ ೫೭. ಇವರು ಇಂತಹವರು, ಈ ಯೋಗ್ಯತೆಯುಳ್ಳವರು ಎಂದು ಚೆನ್ನಾಗಿ ತಿಳಿಯುವ ಹಾಗೆ ಹೇಳಿ ಕೇಳಿ ರಾಜರೊಬ್ಬರಿಂದ ಮುಂದಕ್ಕೆ ಆ ದ್ರೌಪದಿಯನ್ನು ಬಿರುಸಾಗಿ ಬೀಸಿದ ಗಾಳಿಯಿಂದ ಮೇಲಕ್ಕೆದ್ದ ವಿಶಾಲವೂ ಚಂಚಲವೂ ಆದ ಅಲೆಗಳ ಸಾಲು ಹದವರಿತು ಕಮಲದಿಂದ ಮೇಲಕ್ಕೆ ರಾಜಹಂಸವನ್ನು ಸೆಳೆದೊಯ್ಯುವ ರೀತಿಯಲ್ಲಿ ಈ ಚೆಟಿಯು ಕರೆದುಕೊಂಡು ಹೋದಳು. ವ|| ಹಾಗೆ ಅಲ್ಲಿ ಸೇರಿದ್ದ ರಾಜಕುಮಾರರಲ್ಲಿ ಯಾರನ್ನೂ ಮೆಚ್ಚದೆ ದ್ರೌಪದಿಯು ಹಿಂದಿರುಗಿ ಬರಲು ದ್ರುಪದನು ಇದರಲ್ಲೇನಿದೆ, ಅಗ್ನಿಕುಂಡದಲ್ಲಿ ಹುಟ್ಟಿದ ದಿವ್ಯಧನುವನ್ನು ಹೆದೆಯೇರಿಸಿ ಈ ಅಯ್ದು ಬಾಣಗಳಿಂದ ಆಕಾಶದಲ್ಲಿ ನಲಿದು ಹೊಳೆಯುತ್ತಿರುವ ಯಂತ್ರದ ಮೀನನ್ನು ಹೊಡೆಯಲು ಸಮರ್ಥನಾದರೆ ಬಂದು ಬಿಲ್ಲನ್ನು ಹೂಡಿ ಜಯವನ್ನು ಪಡೆದು ನನ್ನ ಮಗಳನ್ನು ಮದುವೆಯಾಗಬಹುದು ಎಂಬುದಾಗಿ ಸಾರಿದನು. ನಾವು ತಾವು ಬಿಲ್ಲನ್ನು ಏರಿಸುತ್ತೇವೆಂದು ಎಷ್ಟೋ ಜನ ರಾಜಕುಮಾರರು ಬಂದರು. ೫೮. ಏರಿಸುತ್ತೇನೆ ಎಂದವರು ಅದನ್ನು ನೆಲದಿಂದೆತ್ತಲೂ ಸಮರ್ಥರಾಗದೆ ಬಿದ್ದು ರಕ್ತವನ್ನು ಕಾರಿ, ಕೈಮುರಿದು ಕಾಲುಮುರಿದು ಬಳಲಿ ಬಾಯೊಣಗಿ ಶಕ್ತಿಗುಂದಿ ಉಸಿರಿಸುವುದಕ್ಕೂ ಆಗದೆ ಹೋಗಲು ದುರ್ಯೋಧನನು ನಾನು ಏರಿಸುತ್ತೇನೆಂದು ಜಂಭದಿಂದ ಬಂದನು. ಆ ಭಯಂಕರವಾದ
ವ|| ಮೂಱು ಸೂೞು ಬಲವಂದು ಪೊಡಮಟ್ಟು-
ಕಂ|| ಪಿಡಿದಾರ್ಪ ಭರದಿನೆತ್ತ
ಲ್ಕೊಡರಿಸಿದೊಡೆ ನೆಲದಿನಣಮೆ ತಳರದೆ ಬಿಲ್ ನಿ|
ಲ್ತೊಡೆ ಗುಡು ಗುಡು ಗುಡು ಗೊಳ್ಳೆಂ
ಡೊಡನಾರೆ ಸುಯೋಧನಂ ಕರಂ ಸಿಗ್ಗಾದಂ|| ೫೯
ವ|| ಆಗಿ ಪೋಗಿ ಕರ್ಣನ ಮೊಗಮಂ ನೋಡಿದೊಡೆ ಕರ್ಣನಾಳ್ದನ ಸಿಗ್ಗಾದ ಮೊಗಮಂ ಕಂಡು-
ಕಂ|| ಆನೇಱಪೆನೆಂದಾ ಕಾ
ನೀನಂ ಬಂದೆತ್ತಿ ಬಿಲ್ಲನೇಱಸಿ ತೆಗೆಯಲ್|
ತಾನಾರ್ತನಿಲ್ಲ ತೆಗೆವಂ
ತಾ ನೃಪತಿಗಳರಿಗನಿದಿರೊಳೇಂ ಪುಟ್ಟಿದರೇ|| ೬೦
ವ|| ಅಂತಾ ಬಿಲ್ಲಂ ಪಿಡಿದವರೆಲ್ಲಂ ಬಿಲ್ಲುಂಬೆಱಗುಮಾಗಿ ಸಿಗ್ಗಾಗಿ ಪೋಗಿ ತಂತಮ್ಮಿರ್ಪೆಡೆಯೊಳಿರೆ ಪಾಂಚಾಳರಾಜನೀ ನೆರೆದರ ಸುಮಕ್ಕಳೊಳಾರುವಿ ಬಿಲ್ಲನೇಱಸಲಾರ್ತರಿಲ್ಲವಿ ಜನವಡೆಯೊಳಾರಾನುವಿ ಬಿಲ್ಲನೇಱಸಲಾರ್ಪೊಡೆ ಬನ್ನಿಮೆಂದು ಸಾಱುವುದುಂ-
ಚಂ|| ಮುಸುಕಿದ ನೀರದಾವಳಿಗಳಂ ಕಿರಣಂಗಳೊಳೊತ್ತಿ ತೇಜಮ
ರ್ವಿಸುವಿನಮಾಗಳೊರ್ಮೊದಲೆ ಮೂಡುವ ಬಾಳ ದೀನೇಶಬಿಂಬದೊಂ|
ದೆಸಕದಿನಾ ದ್ವಿಜನ್ಮಸಭೆಯಂ ಪೊಱಮಟ್ಟೊಡೆ ಮಾಸಿದಂದಮುಂ
ಪಸದನದಂತೆ ಕಣ್ಗೆಸೆದು ತೋಱದುದಾ ಕದನತ್ರಿಣೇತ್ರನಾ|| ೬೧
ವ|| ಅಂತು ಪೊಱಮಡುವರಾತಿಕಾಲಾನಲನಂ ಕಂಡು ಕಡ್ಡುವಂದ ದೊಡ್ಡರೆಲ್ಲಂ ಮುಸುಱ-
ಕಂ|| ಸಂಗತಸತ್ವರ್ ಕುರು ರಾ
ಜಂಗಂ ಕರ್ಣಂಗಮೇಱಸಲ್ಕರಿದನಿದಂ|
ತಾಂ ಗಡಮೇಱಪನೀ ಪಾ
ರ್ವಂಗಕ್ಕಟ ಮೆಯ್ಯೊಳೊಂದು ಮರುಳುಂಟಕ್ಕುಂ|| ೬೨
ವ|| ಎಂದು ಬಾಯ್ಗೆ ವಂದುದನೆ ನುಡಿಯೆ ರಂಗಭೂಮಿಯ ನಡುವೆ ನಿಂದು ದಿವ್ಯಚಾಪಕ್ಕೆ ಪೊಡವಟ್ಟವಯವದಿನೆಡಗೆಯ್ಯೊಳೆತ್ತಿಕೊಂಡು ತನ್ನ ಬಗೆದ ಕಜ್ಜಮಂ ಗೊಲೆಗೊಳಿಸುವಂತಾ ಬಿಲ್ಲ ಗೊಲೆಯನೇ ನೂಂಕಿ-
ಬಿಲ್ಲನ್ನು ವ|| ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದನು. ೫೯. ಹಿಡಿದುಕೊಂಡು ತನ್ನ ಶಕ್ತಿಯಿದ್ದಷ್ಟನ್ನೂ ಉಪಯೋಗಿಸಿ ವೇಗದಿಂದ ಎತ್ತಲು ಪ್ರಯತ್ನಪಟ್ಟನು, ಅದು ನೆಲದಿಂದ ಸ್ವಲ್ಪವೂ ಅಲುಗದೆ ನಿಂತುಬಿಟ್ಟಿತು. ಗುಡುಗುಡುಗುಡುಗೊಳ್ಳೆಂದು ನೋಡುತ್ತಿದ್ದವರು ಕೂಗಿಕೊಂಡರು, ದುರ್ಯೋಧನನು ವಿಶೇಷವಾಗಿ ಲಜ್ಜಿತನಾದನು. ವ|| ದುರ್ಯೋಧನನು ಕರ್ಣನ ಮುಖವನ್ನು ನೋಡಿದನು. ಕರ್ಣನು ಸ್ವಾಮಿಯ ನಾಚಿದ ಮೊಗವನ್ನು ನೋಡಿ ೬೦. ನಾನು ಏರಿಸುತ್ತೇನೆಂದು ಬಂದು ಎತ್ತಿ ಏರಿಸಲು ಶಕ್ತನಾಗಲಿಲ್ಲ. ಹಾಗೆ ಮಾಡುವುದಕ್ಕೆ ಆ ರಾಜರುಗಳು ಅರ್ಜುನನಿಗಿಂತ ಸಮರ್ಥರಾಗಿ ಹುಟ್ಟಿದ್ದಾರೆಯೇನು? ವ|| ಹಾಗೆ ಆ ಬಿಲ್ಲನ್ನು ಹಿಡಿದವರೆಲ್ಲರೂ ಅಸ್ತವ್ಯಸ್ತವಾಗಿ ಲಜ್ಜಿತರಾಗಿ ಹೋಗಿ ತಾವು ತಾವು ಇದ್ದ ಸ್ಥಳಗಳಲ್ಲಿದ್ದರು. ಆಗ ದ್ರುಪದನು ಇಲ್ಲಿರುವ ರಾಜಕುಮಾರರಲ್ಲಿ ಈ ಬಿಲ್ಲನ್ನೇರಿಸಲು ಯಾರೂ ಶಕ್ತರಾಗಲಿಲ್ಲ. ಈ ಜನದ ಗುಂಪಿನಲ್ಲಿ ಯಾರಾದರೂ ಈ ಬಿಲ್ಲನ್ನೇರಿಸುವ ಶಕ್ತಿಯಿದ್ದರೆ ಬನ್ನಿ ಎಂದು ಸಾರಿದನು. ೯೧. ಮುಚ್ಚಿಕೊಂಡಿರುವ ಮೋಡಗಳ ಸಮೂಹವನ್ನು ಕಿರಣಗಳಿಂದ ಒತ್ತಿ ತೇಜಸ್ಸು ಪ್ರಕಾಶಮಾನವಾಗುತ್ತಿರಲು ಇದ್ದಕ್ಕಿದ್ದ ಹಾಗೆ ಉದಯವಾಗುವ ಬಾಲಸೂರ್ಯ ಬಿಂಬದೊಂದು ರೀತಿಯಲ್ಲಿ ಬ್ರಾಹ್ಮಣ ಸಭೆಯಿಂದ ಅರ್ಜುನನು ಹೊರಟುಬಂದನು. ಆ ಕದನತ್ರಿಣೇತ್ರನ ಮಲಿನವಾಗಿದ್ದ ರೀತಿಯೂ ಅಲಂಕಾರಮಾಡಿರುವಂತೆಯೇ ಕಣ್ಣಿಗೆ ರಮಣೀಯವಾಗಿ ತೋರಿತು. ವ|| ಹಾಗೆ ಹೊರಟು ಬರುವ ಅರಾತಿಕಾಲನಲನನ್ನು ಕಂಡು ಗಡ್ಡಬಂದ ವೃದ್ಧರೆಲ್ಲ ಮುತ್ತಿಕೊಂಡು ೬೨. ಸತ್ವಶಾಲಿಗಳಾದ ದುರ್ಯೋಧನಕರ್ಣರಿಗೂ ಏರಿಸುವುದಕ್ಕೆ ಅಸಾಧ್ಯವಾದ ಇದನ್ನು ಇವನು ಈ ಹಾರುವನು ಏರಿಸುತ್ತಾನಲ್ಲವೇ? ಈ ಬ್ರಾಹ್ಮಣನಿಗೆ, ಅಯ್ಯೋ, ಶರೀರದಲ್ಲಿ ಪಿಶಾಚಿ ಸೇರಿಕೊಂಡಿರಬೇಕು ವ|| ಎಂದು ಬಾಯಿಗೆ ಬಂದುದನ್ನು ಆಡಿದರು. ಅರ್ಜುನನು ರಂಗಸ್ಥಳದ ಮಧ್ಯಭಾಗದಲ್ಲಿ ನಿಂತುಕೊಂಡು ದಿವ್ಯಮನಸ್ಸಿಗೆ ನಮಸ್ಕಾರಮಾಡಿ ಶ್ರಮವಿಲ್ಲದೆ ಎಡಗೈಯ್ಯಿಂದಲೇ ಎತ್ತಿಕೊಂಡು ತಾನು ಕೈಹಾಕಿದ ಕಾರ್ಯವನ್ನು ಸುಗಮವಾಗಿ ಮುಗಿಸುವಂತೆ
ಮ|| ದೆಸೆ ಕಂಪಂಗೊಳೆ ಕೊಂಡು ದಿವ್ಯಶರಮಂ ಕರ್ಣಾದಿಗಳ್ ಕಂಡು ಬೆ
ಕ್ಕಸಮಾಗಿರ್ಪಿನಮೊಂದೆ ಸೂೞೆ ತೆಗೆದಾಕರ್ಣಾಂತಮಂ ತಾಗೆ ನಿ
ಟ್ಟಿಸಲಾರ್ಗಾರ್ಗಿಸಲಕ್ಕುಮೆಂಬೆಸಕದಾ ವಿನಂ ಸಮಂತೆಚ್ಚು ಮೆ
ಚ್ಚಿಸಿದಂ ದೇವರುಮಂ ಧನುರ್ಧರರುಮಂ ವಿದ್ವಿಷ್ಟವಿದ್ರಾವಣಂ|| ೬೩
ವ|| ಆಗಳಾ ಪಿಡಿದ ಬಿಲ್ಲೆ ಕರ್ಬಿನ ಬಿಲ್ಲಾಗೆಯುಮಂಬುಗಳೆ ಪೂವಿನಂಬುಗಳಾಗೆಯು ಮೆಚ್ಚ ವಿನೆ ವಿನಕೇತನಮಾಗೆಯುಂ ಸಹಜಮನೋಜನಂ ಮನೋಜನೆಂದೆ ಬಗೆದು-
ಚಂ|| ನಡೆ ಕಡೆಗಣ್ ಮನಂ ಬಯಸೆ ತಳ್ತಮರ್ದಪ್ಪಲೆ ತೋಳ್ಗಳಾಸೆಯೊಳ್
ತೊಡರ್ದಿರೆ ಪೊಣ್ಮೆ ಘರ್ಮಜಲಮುಣ್ಮೆ ಭಯಂ ಕಿಡೆ ನಾಣ್ ವಿಕಾರದೊಳ್|
ತೊಡರ್ದಿರೆ ಕೆಯ್ತವುಮ್ಮಳಿಪ ಕನ್ನೆಗೆ ಸುಂದರಮಾಲೆ ಮಾಲೆಯಂ
ತಡೆಯದೆ ನೀಡೆ ಮಾಣದೆ ಗುಣಾರ್ಣವನಂ ಸತಿ ಮಾಲೆ ಸೂಡಿದಳ್|| ೬೪
ವ|| ಆಗಳ್ ದ್ರುಪದಂ ಬದ್ದವಣದ ಪಗಳಂ ಬಾಜಿಸಲ್ವೇೞ್ದು ಸುರತ ಮಕರ ಧ್ವಜನಂ ದ್ರೌಪದಿಯೊಡನೆ ಸಿವಿಗೆಯನೇಱಸಿ ಧೃಷ್ಟದ್ಯುಮ್ನ ಯುಧಾಮನ್ಯೂತ್ತಮೌಜಶ್ಯಿಖಂಡಿ ಚೇಕಿತಾನರೆಂಬ ತನ್ನ ಮಗಂದಿರುಂ ತಮ್ಮಂದಿರುಂಬೆರಸು ನೆಲಂ ಮೂರಿವಿಟ್ಟಂತೆ ಬರೆ ಮುಂದಿಟ್ಟು ಪೊೞಲ್ಗೊಡಗೊಂಡುವರ್ಪುದುಮಿತ್ತ ದುರ್ಯೋಧನಂ ಕರ್ಣ ಶಲ್ಯ ಶಕುನಿ ದುಶ್ಶಾಸನಾದಿಗಳೊಳಾಲೋಚಿಸಿ ಪೇೞಮೇಗೆಯ್ವಮೆನೆ ಕರ್ಣನಿಂತೆಂದಂ-
ಮ|| ಜನಮೆಲ್ಲಂ ನೆರೆದಕ್ಕಟಣ್ಣರಿವರಿಂದೇವಂದರೇವೋದರೆಂ
ಬಿನಮೇಂ ಪೋಪಮೆ ನಾಡ ಕೂಟಕುಳಿಗಳ್ಗೇದೋಸಮೇಂ ಬನ್ನಮೊಂ|
ದನೆ ಕೇಳಾಂತರನಿಕ್ಕಿ ಮಿಕ್ಕ ವಿಜಯಶ್ರೀಕಾಂತೆಗಂ ಕಾಂತೆಗಂ
ನಿನಗಂ ದೋರ್ವಲದಿಂದಮೊಂದೆ ಪಸೆಯೊಳ್ ಪಾಣಿಗ್ರಹಂಗೆಯ್ಯೆನೇ|| ೬೫
ವ|| ಎನೆ ಶಲ್ಯನಿಂತೆಂದಂ-
ಚಂ|| ಕುಡುವೊಡೆ ನಿಸ್ತ್ರಪಂ ಕುಡುವುದೇಱಸಿದಂ ಬೆಸೆಕೋಲನೆಂದು ಪೇೞು
ಕುಡುವುದೆ ಕನ್ನೆಯಂ ದ್ವಿಜಕುಲಂಗಿದು ವಿಶ್ವನರೇಂದ್ರ ವೃಂದದೊಳ್|
ತೊಡರ್ದ ಪರಾಭವಂ ದ್ರುಪದನಂ ತಱದೊಟ್ಟದೆ ಕೆಮ್ಮಗಾನಿದಂ
ಕಡೆಗಣಿಸಿರ್ದೊಡೆನ್ನ ಕಡುಗೊರ್ವಿದ ತೋಳ್ಗಳ ಕೊರ್ವದೇವುದೋ|| ೬೬
ಆ ಬಿಲ್ಲಿನ ತುದಿಯನ್ನು ಎಳೆದು ಕಟ್ಟಿ- ೬೩. ದಿಕ್ಕುಗಳೆಲ್ಲ ನಡುಗುವ ಹಾಗೆ ದಿವ್ಯ ಬಾಣವನ್ನು ತೆಗೆದುಕೊಂಡು ಕರ್ಣನೇ ಮೊದಲಾದವರು ನೋಡಿ ಆಶ್ಚರ್ಯಪಡುತ್ತಿರಲು ಒಂದೇ ಸಲಕ್ಕೆ ಕಿವಿಮುಟ್ಟುವವರೆಗೆ ಸೆಳೆದು ಇದನ್ನು ಯಾರಿಗೆ ನೋಡುವುದಕ್ಕೂ ಹೊಡೆಯುವುದಕ್ಕೂ ಸಾಧ್ಯ ಎಂಬಂತಿದ್ದ ಮೀನನ್ನು ಛೇದಿಸಿ ದೇವತೆಗಳನ್ನೂ ಕುಶಲರಾದ ಬಿಲ್ಗಾರರನ್ನೂ ವಿದ್ವಿಷ್ಟವಿದ್ರಾವಣನಾದ ಅರ್ಜುನನು ಸಂತೋಷ ಪಡಿಸಿದನು. ವ|| ಆಗ ಅವನು ಹಿಡಿದ ಬಿಲ್ಲನ್ನೇ ಕಬ್ಬಿನ ಬಿಲ್ಲನ್ನಾಗಿಯೂ ಬಾಣಗಳನ್ನೇ ಪುಷ್ಪಬಾಣಗಳನ್ನಾಗಿಯೂ ಹೊಡೆದ ಮೀನನ್ನೇ ಮೀನಿನ ಬಾವುಟವನ್ನಾಗಿಯೂ ಸಹಜಮನೋಜನಾದ ಅರ್ಜುನನನ್ನೇ ಮನ್ಮಥನನ್ನಾಗಿಯೂ ಭಾವಿಸಿದಳು. ೬೪. ಅವಳ ಕಡೆಗಣ್ಣು ಅವನಲ್ಲಿ ನಾಟಿತು. ಮನಸ್ಸು ಅವನನ್ನು ಬಯಸಿತು, ತೋಳುಗಳು ಅವನ ಗಾಢಾಲಿಂಗನಕ್ಕೆ ಆಶಿಸಿತು. ಬೆವರು ಹೆಚ್ಚುತ್ತಿದ್ದಿತು ಭಯವು ಉಂಟಾಯಿತು ನಾಚಿಕೆ ಮಾಯವಾಯಿತು, ಅಂಗವಿಕಾರಗಳು ಶರೀರದಲ್ಲಿ ತಲೆದೋರಿದುವು. ಸುಂದರಮಾಲೆಯೆಂಬ ಚೇಟಿ ಸ್ವಯಂವರ ಮಾಲೆಯನ್ನು ಸಾವಕಾಶಮಾಡದೆ ಅವಳ ಕೈಲಿತ್ತಳು. ಸತಿಯಾದ ದ್ರೌಪದಿಯು ಗುಣಾರ್ಣವನಿಗೆ ಮಾಲೆಯನ್ನು ಹಾಕಿದಳು.
ವ|| ಆಗ ದ್ರುಪದನು ಮಂಗಳವಾದ್ಯಗಳನ್ನು ವಾದನಮಾಡಿಸಿ ಸುರತಮಕರಧ್ವಜನಾದ ಅರ್ಜುನನನ್ನು ದ್ರೌಪದಿಯೊಡನೆ ಪಲ್ಲಕ್ಕಿಯನ್ನೇರಿಸಿ ಧೃಷ್ಟದ್ಯುಮ್ನ, ಯುಧಾಮನ್ಯು, ಉತ್ತಮೌಜ, ಶಿಖಂಡಿ ಮತ್ತು ಚೇಕಿತಾನರೆಂಬ ತನ್ನ ಮಕ್ಕಳೂ ಮತ್ತು ತಮ್ಮಂದಿರೊಡಗೂಡಿ ನೆಲವು ಬಾಯಿಬಿಟ್ಟ ಹಾಗೆ ಅರ್ಜುನನನ್ನು ಮುಂದಿಟ್ಟುಕೊಂಡು ಪಟ್ಟಣಕ್ಕೆ ಬಂದನು. ದುರ್ಯೋಧನನು ಕರ್ಣ, ಶಲ್ಯ, ಶಕುನಿ, ದುಶ್ಯಾಸನನೇ ಮೊದಲಾದವರಲ್ಲಿ ಆಲೋಚಿಸಿ ಈಗ ಏನು ಮಾಡೋಣ ಹೇಳಿ ಎನ್ನಲು ಕರ್ಣನು ಹೀಗೆ ಹೇಳಿದನು. ೬೫. ಜನವೆಲ್ಲ ಒಟ್ಟುಗೂಡಿ ಅಯ್ಯೋ ಅಣ್ಣಂದಿರು ಈ ದಿನ ಏಕೆ ಬಂದರು ಏಕೆ ಹೋಗುತ್ತಾರೆ ಎನ್ನುವ ಹಾಗೆ ನಾವು ಹೋಗುವುದೇ? ಪರಾಕ್ರಮಿಗಳಾದ ನಮಗೆ ಈ ತೆರನಾದ ಸೋಲು ಅವಮಾನಕರ, ನನ್ನ ಅಭಿಪ್ರಾಯವಿದು : ಎದುರಿಸಿದವರನ್ನು ಸೋಲಿಸಿ ಈಗ ಕೈಮೀರಿರುವ ವಿಜಯಲಕ್ಷ್ಮಿಗೂ ಈ ದ್ರೌಪದಿಗೂ ನಿನಗೂ ನನ್ನ ಬಾಹುಬಲದಿಂದ ಒಂದೇ ಹಸೆಮಣೆಯಲ್ಲಿ ಪಾಣಿಗ್ರಹಣ (ವಿವಾಹ)ವನ್ನು ಮಾಡಲಾರೆನೇ? ಎಂದನು. ೬೬. ಕನ್ಯಾದಾನ ಮಾಡಬೇಕಾದರೆ ಲಜ್ಜೆಯಾಗದ ರೀತಿಯಲ್ಲಿ ದಾನಮಾಡಬೇಕು. ಹತ್ತಿಯನ್ನು ಎಕ್ಕುವ ಬಿಲ್ಲಿನಂತಿರುವ ಈ ಬಿಲ್ಲನ್ನು
ವ|| ಎಂದು ಕೆಳರ್ದು ನುಡಿದು ಸಯಂಬರಕೆ ನೆರೆದರಸುಮಕ್ಕಳೆಲ್ಲರನುತ್ಸಾಹಿಸಿ ನೋಡೆ ನೋಡೆ-
ಉ|| ಪಕ್ಕರೆಯಿಕ್ಕಿ ಬಂದುವು ಹಯಂ ಘಟೆ ಪಣ್ಣಿದುವಾಯುಧಂಗಳಿಂ
ತೆಕ್ಕನೆ ತೀವಿ ಬಂದುವು ರಥಂ ಪುಲಿವಿಂಡುವೊಲಾದಳುರ್ಕೆ ಕೈ|
ಮಿಕ್ಕಿರೆ ಬಂದುದೊಂದಣಿ ರಣಾನಕ ರಾವಮಳುಂಬಮಾದುದಾರ್
ಮಿಕ್ಕು ಬರ್ದುಂಕುವನ್ನರಿವರ್ಗೆಂಬಿನೆಗಂ ಮಸಗಿತ್ತು ರಾಜಕಂ|| ೬೭
ವ|| ಅಂತು ನೆಲಂ ಮೂರಿವಿಟ್ಟಂತೆ ತಳರ್ದು-
ಚಂ|| ತೆರೆಗಳ ಬಂಬಲಂ ಮಿಳಿರ್ವ ಕೇತನರಾಜಿಗಳೋಳಿವಟ್ಟ ಬೆ
ಳ್ನೊರೆಗಳ ಪಿಂಡನೆತ್ತಿಸಿದ ಬೆಳ್ಗೊಡೆಗಳ್ ಮಕರಂಗಳ ಭಯಂ|
ಕರ ಕರಿಗಳ್ ತೆಱಂಬೊಳೆವ ವಿಂಗಳನುಳ್ಕುವ ಕೈದುಗಳ್ ನಿರಾ
ಕರಿಸಿರೆ ಮೇರೆದಪ್ಪಿ ಕವಿದತ್ತು ನರಾಪಸೈನ್ಯಸಾಗರಂ|| ೬೮
ವ|| ಅಂತು ಕವಿದ ರಿಪುಬಳಜಳನಿಯ ಕಳಕಳರವಮಂ ಕೇಳ್ದು ಪೊೞಲಂ ಪುಗಲೊಲ್ಲದೆ ನಿಂದ ಮನುಜಮಾಂಧಾತನಂ ಪಾಂಚಾಳರಾಜನಿಂತೆಂದಂ-
ಮ|| ಧನುವಂ ನೀಂ ತೆಗೆದೆಚ್ಚು ವಿನನಳವಂ ಕೆಯ್ಕೊಂಡುದರ್ಕಂ ಕರಂ
ನಿನಗೀ ಕನ್ನಿಕೆ ಸೋಲ್ತುದರ್ಕಮೆರ್ದೆಯೊಳ್ ಕೋಪಾಗ್ನಿ ಕೈಗಣ್ಮೆ ಬಂ|
ದಿನಿತುಂ ರಾಜಕುಲಂ ಸಮಸ್ತಭರದಿಂ ಮೇಲೆೞ್ದುದಿನ್ ಕಾವನಾ
ವನೊ ನೀನಲ್ಲದೆ ಕಾವುದೆನ್ನ ತಲೆಯಂ ವಿದ್ವಿಷ್ಟವಿದ್ರಾವಣಾ|| ೬೯
ವ|| ಎಂಬುದುಮರಾತಿಕಾಳಾನಳನಿದರ್ಕೇನುಂ ಚಿಂತಿಸಲ್ವೇಡ ನೀಮೆನ್ನ ಕಾಳೆಗಮಂ ಪೆಱಗಿರ್ದು ನೋಡಿಮೆಂದು ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ ಪುಗುವರಾತಿಬಲಮಂ ಮಾರ್ಕೊಂಡು ತೆಗೆನೆದಿಸೆ-
ಚಂ|| ಸರಳ ಪೊದಳ್ದ ಬಲ್ಸರಿಯ ಕೋಳ್ಗಿರಲಾಱದೆ ಬಿಲ್ ತೆರಳ್ದು ದು
ರ್ಧರ ಹಯಮೞ ಸಂದಣಿಸಿ ಸಂದಣಿ ಕೊೞ್ಗುದಿಗೊಂಡುದಗ್ರ ಭೀ|
ಕರ ರಥಮೞ ದಂತಿಘಟೆಗಳ್ ಪೆಱಗಿಟ್ಟೊಡೆ ಕಟ್ಟೆಗಟ್ಟಿದಂ
ತಿರೆ ತಳರ್ದತ್ತರಾತಿಬಲಮಾಂಪವರಾರ್ ಕದನತ್ರಿಣೇತ್ರನಂ|| ೭೦
ಏರಿಸಿದನೆಂಬ ಕಾರಣದಿಂದ ಬ್ರಾಹ್ಮಣವಂಶದವನಿಗೆ ಕನ್ಯೆಯನ್ನು ಕೊಡುವುದೇ? ಈ ಪರಾಭವವು ಸಮಸ್ತರಾಜವೃಂದಕ್ಕೂ ಸಂಬಂಧಪಟ್ಟುದು, ಆದುದರಿಂದ ಈಗ ನಾನು ಈ ದ್ರುಪದನನ್ನು ತರಿದು ಹಾಕದೆ ಸುಮ್ಮನಿದ್ದರೆ ಕೊಬ್ಬಿ ಬೆಳೆದಿರುವ ನನ್ನ ತೋಳುಗಳಿಗೆ ಸಾರ್ಥಕತೆಯೇನು? ವ|| ಎಂದು ಕೋಪಿಸಿ ನುಡಿದು ಸ್ವಯಂವರಕ್ಕೆ ಸೇರಿದ್ದ ಎಲ್ಲ ರಾಜಕುಮಾರರನ್ನೂ ಪ್ರೋತ್ಸಾಹಿಸಿ ನೋಡುತ್ತಿದ್ದಂತೆಯೇ ೬೭. ಜೇನುಗಳನ್ನು ಧರಿಸಿದ ಕುದುರೆಗಳು ಬಂದುವು. ಆನೆಗಳ ಸಮೂಹವು ಯುದ್ಧಸನ್ನದ್ಧವಾದವು. ಆಯುಧಗಳಿಂದ ತುಂಬಿದ ರಥಗಳು ಬಂದವು. ಕಾಲಾಳುಸೈನ್ಯದ ಪಂಕ್ತಿಯೊಂದು ಹುಲಿಯ ಹಿಂಡಿನ ಹಾಗೆ ಕೈಮೀರಿ ಮುಂದೆ ಬಂದಿತು. ಯುದ್ಧವಾದ್ಯವೂ ವಿಜೃಂಭಿಸಿತು. ಇದನ್ನು ಮೀರಿ ಯಾರು ಬದುಕುತ್ತಾರೆ ಎನ್ನುವ ಹಾಗೆ ರಾಜಸಮೂಹವು ರೇಗಿ ಬಂದಿತು. ವ|| ಹಾಗೆ ನೆಲವು ಪ್ರಸರಿಸಿದ ಹಾಗೆ ನಡೆದು ೬೮. ಚಲಿಸುತ್ತಿರುವ ಧ್ವಜಗಳ ಸಮೂಹವು ತೆರೆಗಳ ರಾಶಿಗಳನ್ನೂ ಎತ್ತಿ ಹಿಡಿದ ಬಿಳಿಯ ಕೊಡೆಗಳು ಸಾಲಾಗಿರುವ ಬಿಳಿಯ ನೊರೆಗಳ ಸಮೂಹವನ್ನೂ ಭಯಂಕರವಾದ ಆನೆಗಳು ಮೊಸಳೆಗಳನ್ನೂ ಪ್ರಕಾಶಿಸುತ್ತಿರುವ ಆಯುಧಗಳು ಹೊಳೆಯುತ್ತಿರುವ ಮೀನುಗಳನ್ನೂ ತಿರಸ್ಕರಿಸುತ್ತಿರಲು ರಾಜರ ಸೇನಾಸಮುದ್ರವು ಮೇರೆಯನ್ನು ಮೀರಿ ಕವಿಯಿತು. ವ|| ಹಾಗೆ ಮುತ್ತಿದ ಶತ್ರುಸೇನಾಸಮುದ್ರದ ಕಳಕಳಶಬ್ದವನ್ನು ಕೇಳಿ ಪುರಪ್ರವೇಶ ಮಾಡದೇ ನಿಂದ ಮನುಜಮಾಂಧಾತನಾದ ಅರ್ಜುನನನ್ನು ಕುರಿತು ಪಾಂಚಾಳರಾಜನಾದ ದ್ರುಪದನು ಹೀಗೆಂದನು- ೬೯. ನೀನು ಬಿಲ್ಲನ್ನು ಏರಿಸಿ ಮೀನನ್ನು ಹೊಡೆದು ಪರಾಕ್ರಮವನ್ನು ಪ್ರದರ್ಶಿಸಿದುದಕ್ಕೂ ಈ ಕನ್ಯೆ ನಿನಗೆ ವಿಶೇಷವಾಗಿ ಸೋತು ಅನಳಾದುದಕ್ಕೂ ಎದೆಯಲ್ಲಿ ಕೋಪಾಗ್ನಿ ಹೆಚ್ಚಿ ಈ ರಾಜಸಮೂಹವು ವಿಶೇಷ ವೇಗದಿಂದ ನಮ್ಮ ಮೇಲೆದ್ದಿದೆ. ಇನ್ನು ಮೇಲೆ ನಮ್ಮನ್ನು ರಕ್ಷಣೆ ಮಾಡುವವರು ನೀನಲ್ಲದೆ ಮತ್ತಾರು? ಎಲೈ ವಿದ್ವಿಷ್ಟ ವಿದ್ರಾವಣನೇ ನನ್ನ ತಲೆಯನ್ನು ಕಾಯಬೇಕು ಎಂದನು. ವ|| ಅರಾತಿಕಾಲಾನಳನು (ಅರ್ಜುನನು) ಇದಕ್ಕೆ ನೀವು ಏನೂ ಚಿಂತಿಸಬೇಕಾಗಿಲ್ಲ; ನೀವು ನನ್ನ ಕಾಳೆಗವನ್ನು ಹೊರಗಿದ್ದು ನೋಡಿ ಎಂದು ಹೇಳಿ ತಾನೂ ಭೀಮಸೇನನೂ ಉತ್ತಮವಾದ ಬಿಲ್ಲುಗಳನ್ನು ತೆಗೆದುಕೊಂಡು ಪ್ರತಿಜ್ಞೆಮಾಡಿ ಪ್ರವೇಶಮಾಡಿದ ಶತ್ರುಸೈನ್ಯವನ್ನು ಪ್ರತಿಭಟಿಸಿ ದೀರ್ಘವಾಗಿ ಎಳೆದು ಪ್ರಯೋಗಮಾಡಿದರು. ೭೦. ಒಟ್ಟಿಗೆ ಸೇರಿದ
ವ|| ಆಗಳ್ ಕರ್ಣನರ್ಣವನಿನಾದದಿಂದಾರ್ದು ಗುಣಾರ್ಣವನೊಳ್ ಬಂದು ತಾಗಿ ಶಲ್ಯಂ ಭೀಮಸೇನನೊಳ್ ತಾಗಿ ಕಿಱದುಂ ಪೊೞ್ತು ಕಾದೆ-
ಚಂ|| ಅರಿದು ಗೆಲಲ್ಕೆ ಪಾರ್ವನ ಶರಾಸನವಿದ್ಯೆಯನೆಂದು ನೊಂದು ನಿ
ತ್ತರಿಸದೆ ಪಾರ್ವನೊಳ್ ಕಲಹಮಾಗದು ಚಿ ದೊರೆಯಲ್ತಿದೆಂದು ಭಾ|
ಸ್ಕರಸುತನೊಯ್ಯನೋಸರಿಸೆ ಮದ್ರಮಹೀಶನುಮಂ ಮರುತ್ಸುತಂ
ವಿರಥನೆ ಮಾಡಿ ತಳ್ತು ನೆಲಕಿಕ್ಕಿದನೊರ್ಮೆಯ ಮಲ್ಲಯುದ್ಧದೊಳ್|| ೭೧
ವ|| ಆಗಳಾ ಬಲದ ನಡುವಿರ್ದ ನಾರಾಯಣಂ ಬಲದೇವಂಗೆ ಸುಟ್ಟಿತೋಱ ಭೀಮಾರ್ಜುನರ್ಕಳಿವರಮೋಘಮಪ್ಪರೆಂದವರ ಸಾಹಸಕ್ಕೆ ಮೆಚ್ಚಿ ಸಂತಸಂಬಟ್ಟಿರ್ದಾಗಳುೞದರಸು ಮಕ್ಕಳೆಲ್ಲಂ ಕರ್ಣ ಶಲ್ಯರ್ ಮೊಗಂದಿರಿದುದಂ ಕಂಡು ಮನಂಗೆಟ್ಟು-
ಕಂ|| ಕರಮೊಸೆದಾ ದ್ರುಪದಜೆಯೊಳ್
ನೆರೆದೊಸಗೆಗೆ ತಮ್ಮ ಬೀರಮಂ ಬಂಕಮುಮಂ|
ತೆಱವುಂ ತೆಲ್ಲಂಟಿಯುಮೆಂ
ದರಿಕೇಸರಿಗಾಗಳೀವವೋಲ್ ಬೆನ್ನಿತ್ತರ್|| ೭೨
ವ|| ಆಗಳ್ ವಿಕ್ರಾಂತತುಂಗಂ ಬಿಲ್ಲ ಕೊಪ್ಪಿನ ಮೇಲೆ ಕೆಯ್ಯನೂಱ ಮುಗುಳ್ನಗೆ ನಗುತ್ತುಂ ಪಾಂಚಾಳರಾಜತನೂಜೆಗಿಂತೆಂದಂ-
ಕಂ|| ನಿನ್ನನುೞುಗಿಸಲುಮಾಜಿಯೊ
ಳೆನ್ನಂ ಬೆಂಕೊಂಡು ಕಾದಲುಂ ಬಿಂದೀಗಳ್|
ಬಿನ್ನನೆ ಮೊಗದಿಂ ಬೀರರ್
ಬೆನ್ನಿತ್ತುದನಿನಿಸು ನೋಡ ಸರಸಿರುಹಮುಖೀ|| ೭೩
ವ|| ಎಂಬನ್ನೆಗಂ ದ್ರುಪದಂ ಬಂದವರ್ ಪಾಂಡವರಪ್ಪುದುಮಂ ತನ್ನಳಿಯಂ ವಿಕ್ರಮಾರ್ಜುನನಪ್ಪುದುಮಂ ತಪ್ಪಿಲ್ಲದಱದು ಮಹಾವಿಭೂತಿಯಿಂ ಪೊೞಲಂ ಪುಗಿಸಿ-
ಚಂ|| ಪೊೞಲೊಳಗೊಪ್ಪೆ ಕನ್ನಡಿಯ ಕಂಚಿನ ತೋರಣದೋಳಿಗಳ್ ತಳ
ತ್ತಳಿಸೆ ವಿಚಿತ್ರಕೇತುತತಿಗಳ್ ಮಿಳಿರ್ದಾಡೆ ಪುರಾಂಗನಾಜನಂ|
ಗಳ ಜಯ ಜೀಯಮಾನ ರವಮಿಕ್ಕುವ ಸೇಸೆ ಮನೋನುರಾಗಮಂ
ಬಳೆಯಿಸೆ ಪೊಕ್ಕನಾ ದ್ರುಪದಮಂದಿರಮಂ ಪರಸೈನ್ಯಭೈರವಂ|| ೭೪
ಬಿಲ್ಲಿನ ಮಳೆಯ ಸುರಿತವನ್ನು ತಡೆಯಲಾರದೆ ಬಿಲ್ಲಾಳುಗಳು ಹಿಮ್ಮೆಟ್ಟಿದರು, ಪ್ರತಿಭಟಿಸಲಾಗದೆ ಕುದುರೆಗಳು ನಾಶವಾದವು. ಗುಂಪುಕೂಡಿದ ಬಿಲ್ಲಾಳಿನ ಸಾಲುಗಳು ಬಿಲ್ಲಿನ ಪೆಟ್ಟಿನಿಂದ ಕುದಿದುಹೋಯಿತು. ಎತ್ತರವೂ ಭಯಂಕರವೂ ಆದ ರಥವು ಅಳಿದುಹೋಯಿತು. ಆನೆಯ ಸಮೂಹವು ಹಿಮ್ಮೆಟ್ಟಿ ಓಡಿತು. ಹಿಂದೆ ಇದ್ದ ಆನೆಯ ಗುಂಪುಗಳು ಕಟ್ಟೆಯನ್ನು ಕಟ್ಟಿದ ಹಾಗಿರಲು ಶತ್ರುಸೈನ್ಯವು ಸರಿದೋಡಿತು. ಕದನತ್ರಿಣೇತ್ರನಾದ ಅರ್ಜುನನನ್ನು ಪ್ರತಿಭಟಿಸುವವರಾರಿದ್ದಾರೆ? ವ|| ಆಗ ಕರ್ಣನು ಸಮುದ್ರಘೋಷದಿಂದ ಆರ್ಭಟಮಾಡಿ ಗುಣಾರ್ಣವನಲ್ಲಿಯೂ ಶಲ್ಯನು ಭೀಮಸೇನನಲ್ಲಿಯೂ ತಾಗಿದರು. ೭೧. ಕರ್ಣನು ಹಾರುವನ ಬಿಲ್ವಿದ್ಯೆಯನ್ನು ಗೆಲುವುದಸಾಧ್ಯ ಎಂದು ದುಖಿಸಿ ಚಿ ಬ್ರಾಹ್ಮಣರಲ್ಲಿ ಜಗಳವಾಡುವುದು ಯೋಗ್ಯವಲ್ಲ ಎಂದು ನಿಧಾನವಾಗಿ ಹಿಮ್ಮೆಟ್ಟಿದನು, ಭೀಮನೂ ಮದ್ರರಾಜನಾದ ಶಲ್ಯನನ್ನು ರಥದಿಂದ ಕೆಳಕ್ಕಿಳಿಸಿ ಮಲ್ಲಯುದ್ಧದಲ್ಲಿ ಒಂದೇ ಸಲಕ್ಕೆ ನೆಲಕ್ಕುರುಳಿಸಿದನು. ವ|| ಆಗ ಆ ಸೈನ್ಯದ ಮಧ್ಯೆ ಇದ್ದ ಶ್ರೀಕೃಷ್ಣನು ಬಲರಾಮನಿಗೆ ಇವರು ಭೀಮಾರ್ಜುನರು ಎಂದು ಬೆರಳಿನಿಂದ ಸುಟ್ಟಿ ತೋರಿಸಿ ಇವರು ಅತಿಸಾಹಸಿಗಳಾಗುತ್ತಾರೆ ಎಂದು ಅವರ ಪರಾಕ್ರಮಕ್ಕೆ ಸಂತೋಷಪಟ್ಟನು. ಉಳಿದ ರಾಜಕುಮಾರರೆಲ್ಲ ಕರ್ಣಶಲ್ಯರು ಮುಖತಿರುಗಿಸಿ ಹಿಮ್ಮೆಟ್ಟಿದುದನ್ನು ನೋಡಿ ಉತ್ಸಾಹಶೂನ್ಯರಾಗಿ ೭೨. ದ್ರೌಪದಿಯನ್ನು ಪಡೆಯಲು ಬಂದು ಸೇರಿದ ಸಂತೋಷಕ್ಕಾಗಿ ತಮ್ಮ ಪರಾಕ್ರಮವನ್ನೂ ಅಹಂಕಾರವನ್ನೂ ತಪ್ಪು ಕಾಣಿಕೆಯನ್ನಾಗಿಯೂ ಬಳುವಳಿಯನ್ನಾಗಿಯೂ ಅರಿಕೇಸರಿಗೆ ಕೊಡುವ ಹಾಗೆ ಬೆನ್ನುತಿರುಗಿಸಿ ಪಲಾಯನ ಮಾಡಿದರು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಬಿಲ್ಲಿನ ತುದಿಯ ಮೇಲೆ ಕಯ್ಯನ್ನೂರಿಕೊಂಡು ಹುಸಿನಗೆ ನಗುತ್ತ ದ್ರೌಪದಿಗೆ ಹೀಗೆ ಹೇಳಿದನು- ೭೩. ಎಲೌ ಕಮಲಮುಖಿಯಾದ ದ್ರೌಪದಿಯೇ ಈ ವೀರರು ನಿನ್ನನ್ನು ಒಲಿಸುವುದಕ್ಕೂ ನನ್ನೊಡನೆ ಜಗಳವಾಡುವುದಕ್ಕೂ ಬಂದು ಈಗ ಪೆಚ್ಚು ಮುಖದಿಂದ ಬೆನ್ನು ತಿರುಗಿಸಿ ಹೋಗುತ್ತಿರುವುದನ್ನು ಸ್ವಲ್ಪನೋಡು ಎಂದು ತೋರಿಸಿದನು. ವ|| ಅಷ್ಟರಲ್ಲಿ ದ್ರುಪದನು ಅಲ್ಲಿಗೆ ಬಂದಿರುವವರು ಪಾಂಡವರಾಗಿರುವುದನ್ನೂ ತನ್ನ ಅಳಿಯನು ವಿಕ್ರಮಾರ್ಜುನ ನಾಗಿರುವುದನ್ನೂ ನಿಶ್ಚಯವಾಗಿ ತಿಳಿದು ಮಹಾವೈಭವದಿಂದ ಪುರಪ್ರವೇಶ ಮಾಡಿಸಿದನು. ೭೪. ಪಟ್ಟಣದಲ್ಲಿ ಕನ್ನಡಿ ಮತ್ತು ಕಂಚಿನ
ವ|| ಆಗಳ್ ದ್ರುಪದಂ ಪಚ್ಚೆಯ ನೆಲಗಟ್ಟಿನೊಳಂ ರಾಜಾವರ್ತದ ಕಂಬದೊಳಂ ಪವಳದ ಜಂತೆಯೊಳಂ ಪದ್ಮರಾಗದ ಬೋದಿಗೆಯೊಳಮಿಂದ್ರನೀಲದ ಭದ್ರದೊಳಂ ಕರ್ಕೇತನದ ಜಾಳರಿಗೆಯೊಳಂ ಪಳುಕಿನ ಚಿತ್ರಭಿತ್ತಿಯೊಳಂ ಚಂದ್ರಕಾಂತದ ಚಂದ್ರಶಾಲೆಯೊಳಮೊಪ್ಪುವ ವಿವಾಹಗೇಹಮಂ ಸಮೆಯಿಸಿಯದಱ ನಡುವಣಾರ್ದ್ರಮೃತ್ತಿಕಾವಿರಚಿತಮಪ್ಪ ಚತುರಾಂತರದೊಳ್ ಮುತ್ತಿನ ಚೌಕದ ನಡುವಣ ಚೆಂಬೊನ್ನ ಪಟ್ಟವಣೆಯ ಮೇಗಣ ದುಗುಲದ ಪೆಸೆಯೊಳ್ ಗುಣಾರ್ಣವನನಾ ದ್ರುಪದಜೆಯನೊಡನೆ ಕುಳ್ಳಿರಿಸಿ ಹಿತ ಪುರೋಹಿತ ಪ್ರಾಜ್ಯಾಜ್ಯಾಹುತಿಹುತ ಹುತವಹಸಮಕ್ಷದೊಳ್ ಕೆರೆದು ಪ್ರಾಣಿಗ್ರಹಂಗೆಯ್ಸೆ-
ಚಂ|| ಇಡಿದಿರೆ ಮಂಜಿನೊಳ್ ತುಱುಗಿ ತೆಂಕಣಗಾಳಿಯೊಳಾದ ಸೋಂಕಿನೊಳ್
ನಡುಗುವಶೋಕವಲ್ಲರಿಯ ಪಲ್ಲವದೊಳ್ ನವಚೂತಪಲ್ಲವಂ|
ತೊಡರ್ದವೊಲಾಗೆ ಘರ್ಮಜಲದಿಂ ನಡುಪಾಕೆಯ ಪಾಣಿಪಲ್ಲವಂ
ಬಿಡಿದು ಬೆಡಂಗನಾಳ್ದುದು ಗುಣಾರ್ಣವನೊಪ್ಪುವ ಪಾಣಿಪಲ್ಲವಂ|| ೭೫
ವ|| ಅಂತೊರ್ವರೊರ್ವರ ಕಿಱುಕುಣಿಕೆಗಳಂ ಪಿಡಿದು ರತಿಯುಂ ಕಾಮದೇವನುಂ ಬರ್ಪಂತೆ ಬೇಳ್ವೆಯ ಕೊಂಡದ ಮೊದಲ್ಗೆ ವಂದು ಕನಕಗಿರಿಯ ಬಲಗೊಳ್ವ ಪತಂಗ ದಂಪತಿಯಂತಾ ದಂಪತಿಗಳ್ ಸಪ್ತಾರ್ಚಿಯಂ ಮೂಱು ಸೂೞು ಬಲವಂದು ನಿಂದಿಂ ಬೞಯಮಾಕೆ ಪುರೋಹಿತನ ಪೇೞ್ದೋಜೆಯೊಳ್ ಲಾಜೆಯನಗ್ನಿಕುಂಡದೊಳ್ ಸುರಿದು-
ಚಂ|| ಅದಱ ಪೊದಳ್ದು ನೀಳ್ದ ಪೋಗೆಯಂ ಲುಳಿತಾಳಕ್ಕೆ ತನ್ನ ವಕ್ತ್ರ ಪ
ದ್ಮದಿನೊಸೆದಾಂತೊಡಾಕೆಯ ಕಪೋಲದೊಳಾ ನವ ಧೂಮಲೇಖೆ ಬೆ|
ಳ್ಪಿದಿರ್ಗೊಳೆ ಗಾಡಿವೆತ್ತಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾ
ಸದೆ ತೆಗೆದಂತೆ ಕಣ್ಗೆಸೆದು ತೋಱದುದಾ ಕದನತ್ರಿಣೇತ್ರನಾ|| ೭೬
ವ|| ಅಂತು ಸೊಗಯಿಸೆ ಪಾಡುವ ಮಂಗಳವಂಗಳುಮೋದುವ ಋಚೆಗಳುಂ ಪರಸುವ ಪರಕೆಗಳುಮೆಸೆಯೆ ಪಸೆಯೊಳಿರ್ದು-
ತೋರಣದ ಸಮೂಹಗಳು ಥಳಿಥಳಿಸಿ ಒಪ್ಪಿದವು. ವಿಧವಿಧವಾದ ಬಾವುಟಗಳ ಸಮೂಹಗಳು ಅಲುಗಾಡಿದುವು. ಪುರದ ಸ್ತ್ರೀಜನರು ಜಯಜಯವೆಂದು ಘೋಷಿಸುವ ಶಬ್ದವೂ ಚೆಲ್ಲುವ ಮಂತ್ರಾಕ್ಷತೆಯೂ ಮನಸ್ಸಿಗೆ ಸಂತೋಷವನ್ನು ಹೆಚ್ಚಿಸಿದುವು. ಪರಸೈನ್ಯಭೈರವನಾದ ಅರ್ಜುನನು ದ್ರುಪದನ ಅರಮನೆಯನ್ನು ಪ್ರವೇಶಿಸಿದನು. ವ|| ಆಗ ದ್ರುಪದನು ಪಚ್ಚೆಯೆಂಬ ರತ್ನದಿಂದ ಮಾಡಿದ ನೆಲಗಟ್ಟಿನಿಂದಲೂ ಎಳೆಯ ಇಂದ್ರನೀಲಮಣಿಯಿಂದ ಮಾಡಿದ ಕಂಭಗಳಿಂದಲೂ ಹವಳದ ಜಂತಿಗಳಿಂದಲೂ ಪದ್ಮರಾಗದ ಬೋದಿಗೆಗಳಿಂದಲೂ ಇಂದ್ರನೀಲದ ಉಪ್ಪರಿಗೆಗಳಿಂದಲೂ ಚಿನ್ನದ ಜಾಲರಿಗಳಿಂದಲೂ ಸಟಿಕದ ಚಿತ್ರಿತವಾದ ಗೋಡೆಗಳಿಂದಲೂ ಚಂದ್ರಕಾಂತ ಶಿಲೆಯಿಂದ ನಿರ್ಮಿಸಿದ ಮೇಲ್ಮಹಡಿಯಿಂದಲೂ ವಿವಾಹಗೃಹವನ್ನು ಸಿದ್ಧಗೊಳಿಸಿದನು. ಅದರ ಮಧ್ಯೆ ಹಸಿಯ ಮಣ್ಣಿನಿಂದ ಮಾಡಿದ ಚಚ್ಚೌಕದ ಹಸೆಯ ಜಗಲಿಯಲ್ಲಿ ಚಚ್ಚೌಕವಾದ ಮುತ್ತಿನ ಹೊಂಬಣ್ಣದ ಹಸೆಯ ಮಣೆಯ ಮೇಲೆ ರೇಷ್ಮೆಯ ಹಸೆಯಲ್ಲಿ ಗುಣಾರ್ಣವನನ್ನೂ ದ್ರೌಪದಿಯನ್ನೂ ಕುಳ್ಳಿರಿಸಿದನು. ಬಂಧುಗಳು, ಪುರೋಹಿತರು, ಶುದ್ಧವಾದ ತುಪ್ಪದ ಹವಿಸ್ಸನ್ನು ಹೋಮಮಾಡಿಸಿದರು. ದ್ರುಪದನು ಅಗ್ನಿಸಮಕ್ಷಮದಲ್ಲಿ ಧಾರೆಯೆರೆದು ಪಾಣಿಗ್ರಹಣವನ್ನು ಮಾಡಿಸಿದನು. ೭೫. ಒತ್ತಾಗಿ ಕೂಡಿಕೊಂಡಿರುವ ಮಂಜಿನಿಂದ ವ್ಯಾಪ್ತವಾದ ದಕ್ಷಿಣಮಾರುತ ಸ್ಪರ್ಶದಿಂದ ಅಲುಗಾಡುತ್ತಿರುವ ಅಶೋಕಲತೆಯ ಚಿಗುರಿನಲ್ಲಿ ಹೊಸದಾದ ಮಾವಿನ ಚಿಗುರು ಸೇರಿಕೊಂಡ ಹಾಗೆ ಬೆವರಿನಿಂದ ನಡುಗುತ್ತಿರುವ ಆಕೆಯ ಚಿಗುರಿನಂತಿರುವ ಕಯ್ಯನ್ನು ಹಿಡಿದು ಗುಣಾರ್ಣವನ ಸುಂದರವಾದ ಪಾಣಿಪಲ್ಲವವು ಸೌಂದರ್ಯವನ್ನು ಹೊಂದಿತು. ವ|| ಹಾಗೆ ಒಬ್ಬರು ಇನ್ನೊಬ್ಬರ ಕಿರುಬೆರಳನ್ನು ಹಿಡಿದು ರತಿಯೂ ಕಾಮದೇವನೂ ಬರುವ ಹಾಗೆ ಹೋಮಕುಂಡದ ಅಗ್ರಭಾಗಕ್ಕೆ ಬಂದು ಮೇರುಪರ್ವತವನ್ನು ಪ್ರದಕ್ಷಿಣೆ ಮಾಡುವ ಸೂರ್ಯದಂಪತಿಗಳ ಹಾಗೆ ಅಗ್ನಿಯನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ನಿಂತ ಬಳಿಕ ದ್ರೌಪದಿಯು ಆ ಪುರೋಹಿತನು ಹೇಳಿದ ಕ್ರಮದಲ್ಲಿ ಲಾಜಹೋಮವನ್ನು ಮಾಡಿದಳು. ೭೬. ಕೊಂಕುಗೂದಲಿನ ಆ ದ್ರೌಪದಿಯು ದಟ್ಟವೂ ದೀರ್ಘವೂ ಆದ ಅರಳಿನ ಹೊಗೆಯನ್ನು ತನ್ನ ಮುಖಕಮಲದಲ್ಲಿ ಪ್ರೀತಿಯಿಂದ ಧರಿಸಿರುವ ಅವಳ ಕೆನ್ನೆಯಲ್ಲಿ ಆ ಹೊಸಹೊಗೆಯ ರೇಖೆಯು ಸೌಂದರ್ಯದಿಂದ ಕೂಡಿ ಊರ್ಧ್ವಮುಖವಾಗಿ ಕಸ್ತೂರಿಯಿಂದ ರಚಿಸಿದ ಪತ್ರಲೇಖೆ (ಕಪೋಲಪತ್ರ – ಅಲಂಕಾರಕ್ಕಾಗಿ ಕನ್ನೆಯ ಮೇಲೆ ಬರೆದುಕೊಳ್ಳುವ ಚಿತ್ರ)ಯಂತೆ ಆ ಕದನತ್ರಿಣೇತ್ರನ ಕಣ್ಣಿಗೆ ಸೊಗಸಾಗಿ ಕಂಡಿತು. ವ|| ಸೊಗಸಾಗಿರುವ ಹಾಗೆ ಹಾಡುತ್ತಿರುವ ಮಂಗಳಧ್ವನಿಗಳೂ ಪಠಿಸುತ್ತಿರುವ ವೇದಮಂತ್ರಗಳೂ ಹರಸುವ ಹರಕೆಗಳೂ ಪ್ರಕಾಶಿಸುತ್ತಿರಲು
ಚಂ|| ಪರಿಜೆಯನಂಟು (?) ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋ
ಸರಿಸುವ ಹಾರಮಂ ಪಿಡಿದು ನೋಡುವ ಕಟ್ಟಿದ ನೂಲ ತೊಂಗಲಂ|
ತಿರಿಪುವ ಕೆಯ್ತದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ
ಬೆರಸಿದ ನಾಣುಮಂ ಕ್ರಮದೆ ಪಿಂಗಿಸು ಬೇಸಱದಿರ್ ಗುಣಾರ್ಣವಾ|| ಎ ೭೭
ವ|| ಎಂದು ಕೆಲದೊಳಿರ್ದ ದಂಡುರುಂಬೆಗಳ್ ಬುದ್ಧಿವೇೞೆ-
ಉ|| ಕಾಂತೆ ಪೊದಳ್ದ ನಾಣ ಭರದಿಂದಧರೀಕೃತ ಚಂದ್ರಬಿಂಬ ಸ
ತ್ಕಾಂತಿಯನಾನನಾಂಬುಜಮನೊಯ್ಯನೆ ಬಾಗಿರೆ ಕಾದಲಂಗೆ ಸ|
ಯ್ತಂತಿರು ನಾಣ್ಚದೆಂದಣುಗೆಯರ್ ಪಿಡಿದೞ್ಕಳೆತ್ತಿ ಬುದ್ಧಿ ವೇ
ೞ್ದಂತೆ ಕದಂಪಿನೊಳ್ ಪೊಳೆದುವಾಕೆಯ ಹಾರ ಮರೀಚಿ ಮಾಲೆಗಳ್|| ೭೮
ವ|| ಅಂತೊಪ್ಪುವ ವಿವಾಹಮಂಗಳದೊಸಗೆಯೊಳ್ ಮಂಗಳ ಪಾಠಕರೆೞ್ದು ನಿಂದಿರ್ದು-
ಶಾ|| ಇಂದ್ರಾನೋಕಹಮೊಪ್ಪುವಿಂದ್ರತುರಂಗಂ ಸಂದಿಂದ್ರಗೇಹಂ ಪೊದ
ಳ್ದಿಂದ್ರಾನೇಕಪಮೊಪ್ಪುವಿಂದ್ರನಖಿಳೇಂದ್ರೈಶ್ಚರ್ಯಮಿಂದ್ರಾಣಿ ಸಂ|
ದಿಂದ್ರಾನರ್ಘ್ಯವಿಭೂಷಣಂಗಳರಿಭೂಪಾಳಾವಳೀದುಸ್ತಮ
ಶ್ಚಂದ್ರಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೭೯
ವ|| ಎಂದು ಮಂಗಳವೃತ್ತಂಗಳನೋದೆ ಕಿಱದುಂ ಬೇಗಮಿರ್ದೆತ್ತಿದ ಬೋನದೊಳ್ ಕಲ್ಯಾಣಾಮೃತಾಹಾರಮನಾರೋಗಿಸಿ ಬೞಯಂ ಯಕ್ಷಕರ್ದಮದ ಕೆಯ್ಗಟ್ಟಿಯೊಳ್ ಕೆಯ್ಯಂ ತಿೞುರ್ದು ತಂಬುಲಮಂ ಕೊಂಡು-
ಕಂ|| ಕವಿ ಗಮಕಿ ವಾದಿ ವಾಗ್ಮಿ
ಪ್ರವರರ ಪಂಡಿತರ ನೆಗೞ್ದ ಮಾತಱವರ ಸ|
ಬ್ಬವದವರೊಡನಂತೊಸೆದ
ನ್ನವಾಸದೋಲಗದೊಳಿರ್ದನಾಗಳ್ ಹರಿಗಂ|| ೮೦
ವ|| ಆ ಪ್ರಸ್ತಾವದೊಳ್-
ಹಸೆಯಲ್ಲಿದ್ದ ತುಂಟಸಖಿಯರು ಗುಣಾರ್ಣವನಿಗೆ ಹೀಗೆಂದು ಸೂಚಿಸಿದರು. ೭೭. ಕೆನ್ನೆಯನ್ನು ಸವರು, ಚಿನ್ನದ ಹೂವನ್ನು ಓರೆಮಾಡು, ಹಾರವನ್ನು ಹಿಡಿದು ಪರೀಕ್ಷೆಮಾಡು, ಅಲಂಕಾರಕ್ಕಾಗಿರುವ ನೂಲಿನ ಕುಚ್ಚನ್ನು ತಿರುಗಿಸು, ಕಾರ್ಯಗಳ (ಚೇಷ್ಟೆಯ) ನೆಪದಿಂದ ಕೋಮಲಶರೀರೆಯಾದ ಆ ದ್ರೌಪದಿಯ ಸಂಶಯವನ್ನೂ ಭಯದಿಂದ ಕೂಡಿದ ನಾಚಿಕೆಯನ್ನೂ ಗುಣಾರ್ಣವನೇ ನೀನು ಕ್ರಮಕ್ರಮವಾಗಿ ಹೋಗಲಾಡಿಸು. ಈ ಕಾರ್ಯದಲ್ಲಿ ನೀನು ಬೇಸರಪಡಬೇಡ, ವ|| ಎಂದು ಪಕ್ಕದಲ್ಲಿದ್ದ ತುಂಟದಾಸಿಯರು ಬುದ್ಧಿಹೇಳಲು-
೭೮. ದ್ರೌಪದಿಯು ಲಜ್ಜಾಭಾರದಿಂದ ಚಂದ್ರಬಿಂಬದ ಕಾಂತಿಯನ್ನೂ ಕೀಳುಮಾಡಿದ್ದ ತನ್ನ ಮುಖಕಮಲವನ್ನು ನಿಧಾನವಾಗಿ ಬಗ್ಗಿಸಿರಲು ಅವಳ ಸಖಿಯರು ಪ್ರೀತಿಯಿಂದ ಅವಳ ಮುಖವನ್ನೆತ್ತಿ ‘ನಿನ್ನ ಪ್ರಿಯನಿಗೆ ಸರಿಯಾಗಿರು’ ಎಂದು ಬುದ್ಧಿಹೇಳುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ ಅವಳ ಕೆನ್ನೆಯಲ್ಲಿ ಅವಳ ಹಾರದ ಕಾಂತಿಸಮೂಹವು ಹೊಳೆಯಿತು. ವ|| ಹಾಗೆ ಪ್ರಕಾಶಮಾನವಾಗಿದ್ದ ಮದುವೆಯ ಶುಭೋತ್ಸವದಲ್ಲಿ ಹೊಗಳುಭಟರು ಎದ್ದು ನಿಂತು- ೭೯. ಇಂದ್ರನ ಮರವಾದ ಕಲ್ಪವೃಕ್ಷವೂ ಪ್ರಕಾಶಮಾನವಾದ ಇಂದ್ರನ ಕುದುರೆಯಾದ ಉಚ್ಛೆ ಶ್ರವೂ ಸುಪ್ರಸಿದ್ಧವಾದ ಇಂದ್ರನ ಅರಮನೆಯಾದ ಸುಧರ್ಮವೆಂಬ ಸಭಾಮಂಟಪವೂ ಬಲಿಷ್ಠವಾದ ಇಂದ್ರನ ಆನೆಯಾದ ಐರಾವತವೂ ಇಂದ್ರನ ಸಕಳೈಶ್ವರ್ಯಗಳೂ ಇಂದ್ರನ ರಾಣಿಯಾದ ಶಚೀದೇವಿಯೂ ಇಂದ್ರನ ಬೆಲೆಯಿಲ್ಲದ ಆಭರಣಗಳೂ ಶತ್ರುರಾಜರೆಂಬ ಕೆಟ್ಟ ಕತ್ತಲೆಗೆ ಚಂದ್ರನಾಗಿರುವ ಅವನಿಗೆ ಹಿರಿದಾದ ಸುಖಸಂಪತ್ತನ್ನೂ ಅತುಲೈಶ್ವರ್ಯವನ್ನೂ ಕೊಡಲಿ ವ|| ಎಂದು ಮಂಗಳಗೀತೆಗಳನ್ನು ಓದಲು ಸ್ವಲ್ಪ ಕಾಲವಾದ ಮೇಲೆ ಬಡಿಸಿದ ಶುಭಕರವಾದ ಅಮೃತಕ್ಕೆ ಸಮಾನವಾದ ಆಹಾರವನ್ನು ಊಟಮಾಡಿ ಪಚ್ಚಕರ್ಪೂರ ಅಗರು ಕಸ್ತೂರಿ ಶ್ರೀಗಂಧ ಕೇಸರಿ ಮೊದಲಾದ ಸುಗಂಧದ್ರವ್ಯಗಳನ್ನು ಮಿಶ್ರ ಮಾಡಿದ ಲೇಪನದ ಕದಡಿನಿಂದ ಕಯ್ಯನ್ನು ಲೇಪಿಸಿಕೊಂಡು ತಾಂಬೂಲವನ್ನು ಸ್ವೀಕರಿಸಿ- ೮೦. ಅರ್ಜುನನು, ಕವಿಗಳು, ಗಮಕಿಗಳು, ವಾದಿಗಳು, ವಾಗ್ಮಿಗಳು, ಶ್ರೇಷ್ಠರಾದ ಪಂಡಿತರು ಪ್ರಸಿದ್ಧರಾದ ಸಂಭಾಷಣಕಾರರು, ಹಾಸ್ಯಗಾರರು ಇವರೊಡನೆ ಸಂತೋಷದಿಂದ ಭೋಜನಶಾಲೆಯಲ್ಲಿದ್ದನು. ವ|| ಆ ಸಂದರ್ಭದಲ್ಲಿ -
ಎ ಇಲ್ಲಿ ಪರಿಜೆಯೆಂಬ ಶಬ್ದಕ್ಕೆ ಅರ್ಥ ದುರವಗಾಹ
ಉ|| ಬೇಸ ಲೋಕಮಂ ತಗುಳ್ದು ಸುಟ್ಟೞಲಿಂದೆ ಖರಾಂಶು ನಾರಕಾ
ವಾಸದೊಳಾೞ್ವವೋಲಪರರ್ವಾಯೊಳಾೞ್ವುದುಮಿತ್ತ ವಂದ ಸಂ|
ಧ್ಯಾಸಮಯಾತ್ತರಕ್ತರುಚಿ ಪಿಂಗೆ ಬೞಕ್ಕುದಯಾದ್ರಿಯೊಳ್ ಪದಂ
ಗಾಸಿದ ಪೊನ್ನ ಪುಂಜಿಯವೊಲಿರ್ದುದು ಕಣ್ಗೆ ಹಿಮಾಂಶುಮಂಡಲಂ|| ೮೧
ವ|| ಆಗಳ್ ದ್ರುಪದಂ ನಿಜಾಂತಪುರಪರಿವಾರಂಬೆರಸುದಾರಮಹೇಶ್ವರನಲ್ಲಿಗೋಲಗಕ್ಕೆ ವಂದು ನೃತ್ಯ ವಾದ್ಯ ಗೀತಾತೋದ್ಯಂಗಳೊಳ್ ಕಿಱದುಂ ಬೇಗಮಿರ್ದೋಲಗಮುಮಂ ಪರೆಯಲ್ವೇೞ್ದು ಮತ್ತಿನ ನಾಲ್ವರ್ಗಂ ಕೊಂತಿಗಂ ಬೇವೇ ಮಾಡಂಗಳಂ ಬೀಡುವೇೞ್ದು ಗುಣಾರ್ಣವನಂ ಸೆಜ್ಜೆಗೆ ಬಿಜಯಂಗೆಯ್ಯಿಮೆನೆ ಕಾಮಂ ಕಳನೇಱುವಂತೆ ಸೆಜ್ಜೆಯನೇಱ ಸೆಡೆದಿರ್ದ ನಲ್ಲಳಂ ನೋಡಿ-
ಉ|| ನೋಟದೊಳೞ್ಕಜಂಬಡೆದು ಮೆಲ್ನುಡಿಯೊಳ್ ಬಗೆವೊಕ್ಕು ಜಾಣೊಳ
ಳ್ಳಾಟಮನೆಲ್ಲಮಂ ಕಿಡಿಸಿ ಸೋಂಕಿನೊಳೊಯ್ಯನೆ ಮೆಯ್ವೊಣರ್ಚಿ ಬಾ|
ಯ್ಗೂಟದೊಳೞ್ಕಱಂ ಪಡೆದು ಕೂಟದೊಳುಣ್ಮಿದ ಬೆಚ್ಚ ತೞ್ಕೆಯೊಳ್
ಕೂಟ ಸುಖಂಗಳಂ ಪಡೆದನೇಂ ಚದುರಂ ಗಳ ಬದ್ದೆದಲ್ಲೞಂ|| ೮೨
ಬೇಡಿಸುವಪ್ಪುಗಳ್ಗೊರೆವ ಲಲ್ಲೆಯ ಮೆಲ್ನುಡಿಗಳ್ಗೆ ಕೂಡೆ ನಾ
ಣೂಡಿದ ಕೆಂದುಗಳ್ಗೆ ಬಗೆಗೊಂಡಿನಿಸಂ ತಲೆದೂಗುವಂತೆವೋಲ್|
ನಾಡೆ ಪೊದಳ್ದು ನೀಳ್ದವರ ಸುಯ್ಗಳ ಗಾಳಿಯೊಳೊಯ್ಯನೊಯ್ಯನ
ಳ್ಳಾಡುವುದಾಯ್ತು ತತ್ಸುರತಮಂದಿರದುಜ್ಜ ಳದೀಪಿಕಾಂಕುರಂ|| ೮೩
ವ|| ಅಂತಾ ಯಿರುಳ ನಾಲ್ಕು ಜಾವಮುಂ ಕಾಮನ ಜಾಗರದಂತವರ್ಗೆ ಕೆಂದಿನೊಳೆ ಬೆಳಗಾಗೆ-
ಚಂ|| ನಿನಗಿನಿಸಪ್ಪೊಡಂ ಮನದೊಳೋವದ ಕೞ್ತಲೆಯೆಂಬ ಪಾಪ ಕ
ರ್ಮನ ಮಱಗಳ್ ಕರಂ ಪಲವುಮಂ ಸೆಗೆಯ್ದೆವಿವೆಂದು ತಮ್ಮನ|
ಣ್ಪಿನೊಳವನೊಪ್ಪಿಪಂತೆ ಮುಗುಳೊಳ್ ಮಱಸುಂದಿದ ತುಂಬಿ ಪಾ ಕೋ
ಕನದ ಕುಲಂಗಳುಳ್ಳಲರ್ದುವೆಂಬಿನಮಂದೊಗೆದಂ ದಿವಾಕರಂ|| ೮೪
ವ|| ಅಂತು ಮಾರ್ತಾಂಡನುಂ ಪ್ರಚಂಡ ಮಾರ್ತಾಂಡನುಮುದಿತೋದಿತರಾಗೆ-
೮೧. ಲೋಕವನ್ನು ಬೆನ್ನಟ್ಟಿ ಅದು ದುಖಪಡುವಂತೆ ಸುಟ್ಟು ದುಖದಿಂದ ಸೂರ್ಯನು ನರಕವಾಸದಲ್ಲಿ ಮುಳುಗುವ ಹಾಗೆ ಪಶ್ಚಿಮಸಮುದ್ರದಲ್ಲಿ ಮುಳುಗಿದನು. ಸಂಧ್ಯಾಕಾಲದಲ್ಲುಂಟಾದ ಕೆಂಪುಕಾಂತಿಯು ಹಿಂಜರಿಯಿತು. ಅನಂತರ ಚಂದ್ರಮಂಡಲವು ಹದವಾಗಿ ಕಾಸಿದ (ಶುಭ್ರಮಾಡಿದ) ಶುದ್ಧಚಿನ್ನದಿಂದ ಮಾಡಿದ ಗಂಟೆಯ ಹಾಗೆ ಕಣ್ಣಿಗೆ ಕಾಣಿಸಿತು. ವ|| ಆಗ ದ್ರುಪದನು ತನ್ನ ಅಂತಪುರದ ಪರಿವಾರದವರೊಡನೆ ಉದಾರಮಹೇಶ್ವರನಾದ ಅರ್ಜುನನ ಸಭಾಗೃಹಕ್ಕೆ ಬಂದು ನೃತ್ಯ, ವಾದ್ಯ, ಗೀತ, ಮಂಗಳವಾದ್ಯಗಳಲ್ಲಿ ಭಾಗಿಯಾಗಿ ಸಭೆಯನ್ನು ವಿಸರ್ಜಿಸುವಂತೆ ಹೇಳಿ ಧರ್ಮರಾಜನೇ ಮೊದಲಾದ ಉಳಿದ ನಾಲ್ಕು ಜನಗಳಿಗೂ ಕುಂತೀದೇವಿಗೂ ಬೇರೆಬೇರೆ ಮನೆಗಳನ್ನು ಬಿಡಾರವನ್ನಾಗಿ ಮಾಡಿಸಿ ಗುಣಾರ್ಣವನನ್ನು ಶಯ್ಯಾಸ್ಥಳಕ್ಕೆ ದಯಮಾಡಿಸಿ ಎಂದನು. ಅರ್ಜುನನು ಮನ್ಮಥನು ಯುದ್ಧರಂಗವನ್ನು ಪ್ರವೇಶ ಮಾಡುವ ಹಾಗೆ ಹಾಸಿಗೆಯ ಮೇಲೆ ಕುಳಿತು ಲಜ್ಜೆಯಿಂದ ಕೂಡಿದ್ದ ತನ್ನ ಪ್ರಿಯಳನ್ನು ನೋಡಿ
೮೨. ನೋಟದಿಂದ ಪ್ರೀತಿಯನ್ನುಂಟುಮಾಡಿ ಮೃದುವಾದ ಮಾತಿನಿಂದ ಅವಳ ಮನಸ್ಸನ್ನು ಗೆದ್ದು ಜಾಣ್ಮೆಯಿಂದ ಅವಳ ನಡುಗುವಿಕೆ (ಕಂಪನ)ಯನ್ನು ಹೋಗಲಾಡಿಸಿ ಮೆಲ್ಲನೆ ಸೋಂಕುವುದರಿಂದ ಅವಳ ಮೈಯಲ್ಲಿ ತನ್ನ ಮೈಯ್ಯನ್ನು ಸೇರಿಸಿ ತುಟಿಗಳೆರಡನ್ನೂ ಸೇರಿಸಿ ಮುತ್ತಿಟ್ಟು ಬಿಗಿಯಾಗಿ ಆಲಿಂಗನಮಾಡಿಕೊಂಡು ರತಿಸುಖವನ್ನೂ ಪಡೆದನು. ಅರ್ಜುನನು ಏನು ಚದುರನೋ? ೮೩. ಆಶೆಪಡುತ್ತಿರುವ ಆಲಿಂಗನಗಳಿಗೂ ಆಡುತ್ತಿರುವ ಪ್ರೀತಿಯ ಮೃದುನುಡಿಗೂ ವಿಶೇಷವಾಗಿ ಲಜ್ಜೆಯಿಂದ ಕೂಡಿದ ಸುರತಕ್ರೀಡೆಗೂ ಮೆಚ್ಚಿ ದೀಪಗಳು ಒಂದಿಷ್ಟು ತಲೆದೂಗುವ ಹಾಗೆ ವಿಶೇಷವಾಗಿ ವ್ಯಾಪಿಸಿ ನೀಳವಾಗಿ ಬೆಳೆದ ಆ ರತಿಕ್ರೀಡಾಮಂದಿರದ ಪ್ರಕಾಶಮಾನವಾದ ದೀಪದ ಕುಡಿಯು ಅವರ ಉಸಿರಿನ ಗಾಳಿಯಿಂದ ನಿಧಾನವಾಗಿ ಅಳ್ಳಾಡುತ್ತಿದ್ದವು. ವ|| ಆ ರಾತ್ರಿಯ ನಾಲ್ಕು ಜಾವಗಳೂ ಕಾಮನ ಜಾಗರಣೆಯಂತೆ ಸುರತಕ್ರೀಡೆಯಲ್ಲಿಯೇ ಕಳೆದವು. ಬೆಳಗಾಯಿತು. ೮೪. ಸ್ವಲ್ಪವಾದರೂ ನಿನಗೆ ಪ್ರಿಯವಲ್ಲದ ಕಳ್ತಲೆಯೆಂಬ ಪಾಪಿಷ್ಠನ ಮರಿಗಳನೇಕವನ್ನು ಇಗೋ ಸೆರೆಹಿಡಿದಿದ್ದೇನೆ. ಇದೋ ಇಲ್ಲಿ ಇದೆ, ಒಪ್ಪಿಸಿಕೋ ಎಂದು ತಮ್ಮ ಸ್ನೇಹದಿಂದ ಒಪ್ಪಿಸುವ ಹಾಗೆ ಮೊಗ್ಗುಗಳಲ್ಲಿ ಮಲಗಿದ್ದ ತುಂಬಿಗಳು ಹಾರಿಹೋಗಲು ಕಮಲಸಮೂಹಗಳು ಚೆನ್ನಾಗಿ ಅರಳಿದುವು, ಸೂರ್ಯೋದಯವಾಯಿತು. ವ|| ಹಾಗೆ ಸೂರ್ಯನೂ
ಮ|| ಕಚಭಾರಾಳಸಗಾಮಿನೀಪರಿವೃತಂ ಗಂಗಾತರಂಗೋಪಮಾ
ನ ಚಳಚ್ಚಾಮರ ವಾತ ಪೀತ ನಿಜ ಘರ್ಮಾಂಭಕಣಂ ದ್ರೌಪದೀ|
ಕುಚಕುಂಭಾರ್ಪಿತ ಕುಂಕುಮದ್ರವ ವಿಲಿಪ್ತೋರಸ್ಥಳಂ ದಾಂಟೆ ಕೀ
ರ್ತಿ ಚತುರ್ವಾಯನಿರ್ದನಂದು ಸುಖದಿಂ ವಿದ್ವಿಷ್ಟ ವಿದ್ರಾವಣಂ|| ೮೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದ್ರೌಪದೀಕಲ್ಯಾಣವರ್ಣನಂ ತೃತೀಯಾಶ್ವಾಸಂ
ಪ್ರಚಂಡಮಾರ್ತಾಂಡನಾದ ಅರ್ಜುನನೂ ಅಭಿವೃದ್ಧಿಯಾಗುತ್ತಿರಲು- ೮೫. ಕೇಶಪಾಶದ ಭಾರದಿಂದ ಬಳಲಿ ನಿಧಾನವಾಗಿ ನಡೆಯುವ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟವನೂ ಗಂಗೆಯ ಅಲೆಗಳ ಹಾಗೆ ಅಲುಗಾಡುತ್ತಿರುವ ಚಾಮರದ ಗಾಳಿಯಿಂದ ಕುಡಿಯಲ್ಪಟ್ಟ ತನ್ನ ಬೆವರಿನ ಹನಿಯನ್ನುಳ್ಳವನೂ ದ್ರೌಪದಿಯ ಕುಚಕುಂಭಗಳಿಗೆ ಲೇಪನ ಮಾಡಿದ್ದ ಕುಂಕುಮಕೇಸರಿಯ ದ್ರವದಿಂದ ಕೂಡಿಕೊಂಡಿರುವ ಎದೆಯುಳ್ಳವನೂ ಆದ ಅರ್ಜುನನು ತನ್ನ ಕೀರ್ತಿಯು ನಾಲ್ಕು ಸಮುದ್ರಗಳನ್ನೂ ದಾಟಿರಲು ಆ ದಿನ ಅಲ್ಲಿ ಸುಖವಾಗಿದ್ದನು.
ವ|| ಇದು ವಿವಿಧ ವಿದ್ವಾಂಸರಿಂದ ಸ್ತುತಿಸಲ್ಪಟ್ಟ ಜಿನನ ಪಾದಕಮಲದ ವರಪ್ರಸಾದದಿಂದ ಹುಟ್ಟಿದುದೂ ಪ್ರಸನ್ನವೂ ಗಂಭೀರವೂ ಆದ ಮಾತುಗಳನ್ನು ರಚಿಸುವುದರಲ್ಲಿ ಜಾಣನಾದ ಕವಿತಾಗುಣಾರ್ಣವನಿಂದ ವಿರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ದ್ರೌಪದೀಕಲ್ಯಾಣ ವರ್ಣನಾತ್ಮಕವಾದ ಮೂರನೆಯ ಆಶ್ವಾಸ.
************
ಮುಂದಿನ ಭಾಗ :ಪಂಪಭಾರತ : ಚತುರ್ಥಾಶ್ವಾಸಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ