ಪುಟಗಳು

10 ಏಪ್ರಿಲ್ 2018

ಪಂಪಭಾರತ : ಗದ್ಯಾನುವಾದ - ಪ್ರಥಮಾಶ್ವಾಸಂ

ಪ್ರಥಮಾಶ್ವಾಸಂ
ಉ|| ಶ್ರೀಯನರಾಕಿ ಸಾಧನ ಪಯೋನಿಯೊಳ್ ಪಡೆದುಂ ಧರಿತ್ರಿಯಂ
ಜೀಯೆನೆ ಬೇಡಿಕೊಳ್ಳದೆ ವಿರೋ ನರೇಂದ್ರನೊತ್ತಿಕೊಂಡುಮಾ|
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ದಿಯುಮಿಂತುದಾತ್ತ ನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ|| ೧

ಚಂ|| ಮುಳಿಸು ಲಲಾಟನೇತ್ರಶಿಖಿ ಮೆಚ್ಚೆ ವಿನೂತ ರಸಪ್ರಸಾದಮು
ಜ್ಜಳ ಜಸಮಂಗಸಂಗತ ಲಸದ್ಭಸಿತಂ ಪ್ರಭುಶಕ್ತಿ ಶಕ್ತಿ ನಿ|
ರ್ಮಳಮಣಿಭೂಷಣಂ ಫಣಿವಿಭೂಷಣಮಾಗೆ ನೆಗೞ್ತೆಯಂ ಪುದುಂ
ಗೊಳಿಸಿದನೀಶ್ವರಂ ನೆಗೞ್ದುದಾರ ಮಹೇಶ್ವರನೀಗೆ ಭೋಗಮಂ|| ೨

ಉ|| ಚಂಡ ವಿರೋಸಾಧನ ತಮಸ್ತಮಮೋಡೆ ವಿಶಿಷ್ಟ ಪದ್ಮಿನೀ
ಷಂಡಮರಲ್ದು ರಾಗದಿನೊಱಲ್ದಿರೆ ಯಾಚಕ ಭೃಂಗಕೋಟಿ ಕೈ|
ಕೊಂಡು ನಿರಂತರಂ ತಗುಳ್ದು ಕೀರ್ತಿಸೆ ಮಿಕ್ಕೆಸೆವ ಪ್ರಚಂಡ ಮಾ
ರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವಾಙ್ಮರೀಚಿಯಿಂ|| ೩

ಚಂ|| ಸಹಜದ ಚೆಲ್ವಿನೊಳ್ ರತಿಯ ಸೋಲದ ಕೇಳಿಕೆಯೊಳ್ ಪೊದೞ್ದು ಸ
ನ್ನಿಹಿತವೆನಿಪ್ಪಪೂರ್ವ ಶುಭಲಕ್ಷಣ ದೇಹದೊಳೊಳ್ಪನಾಳ್ದು ಸಂ|
ದಹಿಕಟಕ ಪ್ರಸಾದದೆ ಮನೋಜನುಮಂ ಗೆಲೆವಂದನಾಗಳುಂ
ಸಹಜಮನೋಜನೋಜನೆಮಗೀಗೆ ವಿಚಿತ್ರ ರತೋತ್ಸವಂಗಳು|| ೪

೧. ಅಮೃತಮಥನ ಕಾಲದಲ್ಲಿ ಉದ್ಭವಿಸಿದ ಲಕ್ಷ್ಮಿಯನ್ನು ಶ್ರಮವಿಲ್ಲದೆ ಪಡೆದ, ಬಲಿಚಕ್ರವರ್ತಿಯಿಂದ ಬೇಡಿ ಭೂಮಿಯನ್ನು ಪಡೆದ, ಪುಷ್ಪಪಟ್ಟವೆಂಬ ಸಾಮಾನ್ಯ ಶಿರೋಭೂಷಣವನ್ನು ಪಡೆದ ನಾರಾಯಣನಂತಲ್ಲದೆ ಶತ್ರುಸೈನ್ಯವೆಂಬ ಸಮುದ್ರದ ಮಂಥನದಿಂದ ಜಯಲಕ್ಷ್ಮಿಯನ್ನು ಬೇಡದೆ ಶತ್ರುರಾಜರುಗಳನ್ನು ಮೆಟ್ಟಿ ಭೂಮಿಯನ್ನೂ ತನ್ನ ಯೋಗ್ಯತೆಗೆ ಅನುಗುಣವಾದ ಸುಪುಷ್ಪಪಟ್ಟವೆಂಬ ಶಿರೋಭೂಷಣವನ್ನು ಪಡೆದು ಉದಾತ್ತನಾರಾಯಣನೆನಿಸಿಕೊಂಡಿರುವ ದೇವನಾದ ಅರಿಕೇಸರಿಯು ನಮಗೆ ಸೌಖ್ಯರಾಶಿಯನ್ನು ಕೊಡಲಿ.

೨. ಅರಿಕೇಸರಿಯ ಕೋಪವೇ ಈಶ್ವರನ ಹಣೆಗಣ್ಣಿನ ಬೆಂಕಿಯಾಗಿರಲು ಅವನ ಮೆಚ್ಚಿಗೆಯೇ ಶ್ಲಾಘ್ಯವೂ ರಸಯುಕ್ತವೂ ಆದ ಅವನ ಪ್ರಸಾದ. ಅರಿಕೇಸರಿಯ ಯಶಸ್ಸೇ ಈಶ್ವರನು ಶರೀರಕ್ಕೆ ಲೇಪಿಸಿಕೊಂಡಿರುವ ಕಾಂತಿಯುಕ್ತವಾದ ವಿಭೂತಿಯಾಗಿರಲು ಅರಿಕೇಸರಿಯ ಶಕ್ತಿತ್ರಯಗಳಲ್ಲಿ ಒಂದಾದ ಪ್ರಭುಶಕ್ತಿ ಈಶ್ವರನ ಶಕ್ತಿದೇವತೆಯಾಗಿರಲು ಇವನ ನಿರ್ಮಲವಾದ ರತ್ನಭೂಷಣಗಳೇ ಅವನ ನಾಗಭೂಷಣವಾಗಿರಲು ವಿಶೇಷ ಪ್ರಸಿದ್ಧಿಯನ್ನು ತನ್ನಲ್ಲಿ ಅಳವಡಿಸಿಕೊಂಡಿರುವ ಈಶ್ವರನೂ ಉದಾರಮಹೇಶ್ವರನೆಂದು ಪ್ರಸಿದ್ದಿಯನ್ನು ಪಡೆದಿರುವ ಅರಿಕೇಸರಿಯೂ ಸೌಖ್ಯರಾಶಿಯನ್ನು ಕೊಡಲಿ.

೩. ಕ್ರೂರಿಗಳಾದ ಶತ್ರುಸೈನ್ಯವೆಂಬ ಕತ್ತಲೆಯ ಮೊತ್ತವು ಓಡಿಹೋಗುತ್ತಿರುವ ವಿಶೇಷ ಗುಣಗಳಿಂದ ಕೂಡಿದ ತಾವರೆಯ ಸಮೂಹವು (ಅರಿಕೇಸರಿಯ ಪರವಾಗಿ ಪದ್ಮಿನಿ ಜಾತಿಯ ಸ್ತ್ರೀಯರ ಸಮೂಹವು) ಅರಳಿ ಪ್ರೀತಿಸಿ ಸಂತೋಷದಿಂದಿರಲು, ತಿರುಕನೆಂಬ ದುಂಬಿಗಳ ಸಮೂಹವು ತೃಪ್ತಿಯಿಂದ ಎಡಬಿಡದೆ ಹಿಂಬಾಲಿಸಿ ಹೊಗಳುತ್ತಿರಲು ಅತ್ಯಕವಾಗಿ ಪ್ರಕಾಶಿಸುತ್ತಿರುವ ಸೂರ್ಯನೂ ಪ್ರಚಂಡ ಮಾರ್ತಂಡನೆಂಬ ಬಿರುದಿನಿಂದ ಕೂಡಿದ ಅರಿಕೇಸಕರಿಯೂ ತಮ್ಮ ಮಾತೆಂಬ ಕಿರಣದಿಂದ ನನ್ನ ಹೃದಯಕಮಲವನ್ನು ಅರಳಿಸಲಿ.

೪. ತನ್ನ ಹುಟ್ಟಿನಿಂದಲೇ ಸಹಜವಾಗಿ ಬಂದ ಸೌಂದರ್ಯದಿಂದಲೂ ಎಂದೂ ಸೋಲದ ಸಂಭೋಗಕ್ರೀಡೆಯಿಂದಲೂ ಅಪೂರ್ವವಾದ ಶುಭಲಕ್ಷಣಗಳಿಂದ ಕೂಡಿದ ಶರೀರದ ವೈಭವದಿಂದಲೂ ಸರ್ಪಭೂಷಣನಾದ ಈಶ್ವರನ ಪ್ರಸಾದದಿಂದಲೂ ಕೂಡಿ ಸಹಜಮನ್ಮಥನಿಗೂ ಆಚಾರ್ಯನಾಗಿರುವ ಅರಿಕೇಸರಿಯು ಯಾವಾಗಲೂ ರಮಣೀಯವೂ ವೈವಿಧ್ಯಮಯವೂ ಆದ ಸುಖ ಸಂತೋಷಗಳನ್ನು ದಯಪಾಲಿಸಲಿ. (ಮನ್ಮಥನು ಶರೀರವಿಲ್ಲದವನು; ಈಶ್ವರನ ಕೋಪಕ್ಕೆ ಪಾತ್ರನಾದವನು;

ವಕ್ತವ್ಯವಿಶೇಷ : ಈ ಪದ್ಯದಲ್ಲಿ ಬರುವ ‘ಪುಷ್ಪಪಟ್ಟ’ವೆಂಬುದು ಶಿಲ್ಪಾಶಾಸ್ತ್ರಕ್ಕೆ ಸಂಬಂಸಿದ ಶಬ್ದ. ರಾಜರೂ ದೇವತೆಗಳೂ ಧರಿಸುವ ಶಿರೋವೇಷ್ಪನಗಳಲ್ಲಿ ಜಟಾ, ಮೌಳಿ, ಕಿರೀಟ, ಕರಂಡ, ಶಿರಸ್ತ್ರಕ, ಕುಂಡಲ, ಕೇಶಬಂಧ, ಧಮ್ಮಿಲ, ಅಲಕ, ಚೂಡ, ಮಕುಟ, ಪಟ್ಟ ಎಂಬ ಹನ್ನೆರಡು ವಿಧಾನಗಳಿವೆ. ಅರಿಕೇಸರಿಯು ಸಾಮಾನ್ಯ ಸಾಮಂತ ರಾಜನಲ್ಲದುದರಿಂದ ಸುಪುಷ್ಪಪಟ್ಟವನ್ನು ಧರಿಸಿದ್ದಾನೆ, ಇವುಗಳಲ್ಲಿ ಪಟ್ಟರೆಂಬುದು ಪತ್ರಪಟ್ಟ, ರತ್ನಪಟ್ಟ, ಪುಷ್ಪವೃಷ್ಟಿ ಎಂದು ಮೂರು ವಿಧ. ಇಲ್ಲಿಯ ಪುಷ್ಪವೃಷ್ಟಿ ಯೆಂಬ ಪಾಠವನ್ನು ಪುಷ್ಪಪಟ್ಟ ಎಂದು ತಿದ್ದಿಕೊಳ್ಳಬೇಕು.

ಚಂ|| ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾವನುಮಿಲ್ಲೆನಲ್ ತದ
ಕ್ಷಯನಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ|
ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ
ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ|| ೫

ತಿಸುಳದೊಳುಚ್ಚಳಿಪ್ಪ ಪೊಸ ನೆತ್ತರೆ ಕೆಂದಳಿರಾಗೆ ಕಣ್ಗಗು
ರ್ವಿಸುವಿನಮೊಕ್ಕು ನೇಲ್ವ ಕರುಳೋಳಿಯೆ ಬಾಳಮೃಣಾಳಮಾಗೆ ಮಿ||
ಕ್ಕಸುರರ ಮೆಯ್ಯೊಳಾದ ವಿರಹಾಗ್ನಿಯನಾಱಸುತಿಂತೆ ತನ್ನ ಕೂ
ರಸಿಯೊಳಡುರ್ತು ಕೊಂದಸಿಯಳಿ ರ್ಕ್ವಸಿಯೊಳ್ ಪಡೆಮೆಚ್ಚೆ ಗಂಡನಾ|| ೬

ಮಲ್ಲಿಕಾಮಾಲೆ|| ಎನ್ನ ದಾನಮಿದಾಗಳುಂ ಮಧುಪಾಶ್ರಯಂ ಧರೆಗವ್ಯವ
ಚ್ಛಿನ್ನ ದಾನಮಿದಾಗಳುಂ ವಿಬುಧಾಶ್ರಯಂ ಗೆಲೆವಂದನೆ||
ನನ್ನಿಜೋನ್ನತಿಯಿಂದವಿ ಪತಿಯೆಂದು ಮೆಚ್ಚಿ ವಿನಾಯಕಂ|
ತಾನ್ನಿಮಿರ್ಚುದೆ ಕಬ್ಬಮಂ ನಯದಿಂ ಗುಣಾರ್ಣವ ಭೂಪನಾ|| ೭

ಚಂ|| ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದೊಂದಿ ದೇಸಿಯೊಳ್|
ಪುಗುವುದು ಪೊಕ್ಕ ಮಾರ್ಗದೊಳೆ ತಳ್ವುದು ತಳ್ತೊಡೆ ಕಾವ್ಯಬಂಧಮೊ||
ಪ್ಪುಗುಮೆಳಮಾವು ಕೆಂದಳಿರ ಪೂವಿನ ಬಿಣ್ದೊಯಿಂ ಬೞಲ್ದು ತುಂ
ಬಿಗಳಿನೆ ತುಂಬಿ ಕೋಗಿಲೆಯ ಬಗ್ಗಿಸೆ ಸುಗ್ಗಿಯೊಳೊಪ್ಪುವಂತೆವೋಲ್|| ೮

ಉ|| ಆ ಸಕಳಾರ್ಥ ಸಂಯುತಮಳಂಕೃತಿಯುಕ್ತಮುದಾತ್ತ ವೃತ್ತ್ವಿ ವಿ
ನ್ಯಾಸಮನೇಕ ಲಕ್ಷಣಗುಣಪ್ರಭವಂ ಮೃದುಪಾದಮಾದ ವಾ|
ಕ್ಛ್ರೀ ಸುಭಗಂ ಕಳಾಕಳಿತಮೆಂಬ ನೆಗೞ್ತೆಯನಾಳ್ದ ಕಬ್ಬಮಂ|
ಕೂಸುಮನೀವುದೀವುದರಿಕೇಸರಿಗಲ್ಲದವಸ್ತುಗೀವುದೇ|| ೯

ರತಿಯ ಸಂಭೋಗಕ್ರೀಡೆಯಲ್ಲಿ ಸೀಮಿತನಾದವನು. ಅರಿಕೇಸರಿಯಾದರೋ ಸೌಂದರ್ಯದಿಂದ ಕೂಡಿದ ಶರೀರವುಳ್ಳವನೂ ಈಶ್ವರಾನುಗ್ರಹಕ್ಕೆ ಪಾತ್ರನಾದವನೂ ವಿವಿಧ ಸಂಭೋಗಕೇಳಿಯುಳ್ಳವನೂ ಆಗಿರುವುದರಿಂದ ಇವನು ಮನ್ಮಥನಿಗೂ ಆಚಾರ್ಯನಾಗಿದ್ದಾನೆ ಎಂಬುದು ಭಾವ)

೫. ಸ್ವಲ್ಪವೂ ನಾಶವಿಲ್ಲದ, ಯಾರಿಂದಲೂ ಅದರ ಕೊನೆಯನ್ನು ತಿಳಿಯುವುದಕ್ಕಾಗದ, ತನಗೆ ತಾನೆ ಅಕ್ಷಯನಿಯಾಗಿರುವ, ಅವಳನ್ನು ಸೇವಿಸಿದವರಿಗೆ ಅಸಾಧ್ಯವಾವುದೂ ಇಲ್ಲವೆನಿಸುವ, ಸಮಸ್ತ ವಾಙ್ಮಯಕ್ಕೂ ತಾಯಿಯಾದ ಸರಸ್ವತೀದೇವಿಯು ಕಮಲದಂತಿರುವ ಮುಖವೆಂಬ ರಂಗಸ್ಥಳದ ಏಳಿಗೆಯನ್ನೊಳಗೊಂಡು ಅರಿಕೇಸರಿಗೆ ಸಂತೋಷದಿಂದ ನಿಷ್ಕಲ್ಮಷವಾದ ಬುದ್ಧಿಯನ್ನು ದಯಪಾಲಿಸಲಿ.

೬. ತನ್ನ ತ್ರಿಶೂಲದಿಂದ ಮೇಲಕ್ಕೆ ಚಿಮ್ಮುತ್ತಿರುವ ಹೊಸರಕ್ತವೇ ಕೆಂಪಾದ ಚಿಗುರಾಗಿರಲು ಕಣ್ಣಿಗೆ ಭಯವನ್ನುಂಟುಮಾಡುತ್ತ ಹೊರಕ್ಕೆ ಸೂಸಿ ನೇತಾಡುತ್ತಿರುವ ಕರುಳುಗಳ ಸಮೂಹವೇ ಎಳೆಯ ತಾವರೆಯ ದಂಟಾಗಿರಲು ಹದ್ದುಮೀರಿದ ರಾಕ್ಷಸರ ದೇಹದಲ್ಲುಂಟಾದ ಅಗಲಿಕೆಯೆಂಬ ಬೆಂಕಿಯನ್ನು ಅವು ಆರಿಸುತ್ತ ತನ್ನ ಹರಿತವಾದ ಕತ್ತಿಯನ್ನು ಆಶ್ರಯಿಸಿಕೊಂಡಿರುವ ಕೃಶಾಂಗಿಯಾದ ದುರ್ಗಿಯು ಪಡೆಮೆಚ್ಚಗಂಡನೆಂಬ ಬಿರುದುಳ್ಳ ಅರಿಕೇಸರಿಯ ಕತ್ತಿಯನ್ನು ಸೇರಿಸಿಕೊಂಡಿರಲಿ.

೭. ಮಧುಪಾಶ್ರಯಂ (ಅಂದರೆ ದುಂಬಿಗಳಿಗೆ ಅವಲಂಬನವಾದುದು- ಬಾಹ್ಯಾರ್ಥದಲ್ಲಿ; ಧ್ವನಿಯಲ್ಲಿ – ಮದ್ಯಪಾನ ಮಾಡುವವರಿಗೆ ಅವಲಂಬನವಾದುದು) ಅರಿಕೇಸರಿಯ ದಾನವು (ವಸ್ತುಗಳನ್ನು ಪ್ರದಾನ ಮಾಡುವುದು-ಕೊಡುಗೆಯು) ವಿಬುಧಾಶ್ರಯಂ ಅಂದರೆ ವಿದ್ವಾಂಸರಿಗೆ ಅವಲಂಬನವಾದುದು. ಆದುದರಿಂದ ಈ ರಾಜನಾದ ಅರಿಕೇಸರಿಯು ತನ್ನ ಮೇಲ್ಮೆಯಿಂದ ನನ್ನನ್ನು ಗೆದ್ದಿದ್ದಾನೆ ಎಂಬ ಮೆಚ್ಚಿಗೆಯಿಂದ ವಿನಾಯಕನು ಗುಣಾರ್ಣವನೆಂಬ ಬಿರುದಾಂಕಿತನಾದ ಈ ಅರಿಕೇಸರಿಯ ವಿಷಯಕವಾದ ಈ ಕಾವ್ಯವನ್ನು ನಯವಾಗಿ ವಿಸ್ತರಿಸಲಿ.

೮. ಕಾವ್ಯವು ನವನವೋಜ್ವಲವಾಗಿರಬೇಕು. ಮೃದು ಶಬ್ದಗಳ ಜೋಡಣೆಯಿಂದ ಕೂಡಿರಬೇಕು. ಅಚ್ಚಗನ್ನಡ ಶೈಲಿಯಲ್ಲಿ ರಚಿತವಾಗಿರಬೇಕು. ಸಂಸ್ಕೃತ ಶೈಲಿಯೊಂದಿಗೆ ಹೊಂದಿಕೊಂಡಿರಬೇಕು. ಹೀಗೆ ಸೇರಿಕೊಂಡಿದ್ದರೆ ಕಾವ್ಯರಚನೆಯ ವಸಂತಕಾಲದಲ್ಲಿ ಮಾವಿನ ಮರವು ಕೆಂಪಾದ ಚಿಗುರು ಮತ್ತು ಹೂವುಗಳ ಭಾರದಿಂದ ಜೋತುಬಿದ್ದು ತುಂಬಿಗಳಿಂದ ಆವೃತವಾಗಿ ಕೋಗಿಲೆಯ ಕೂಜನದಿಂದ ಪ್ರಕಾಶಿಸುವ ಹಾಗೆ ಶೋಭಾಯಮಾನವಾಗಿರುತ್ತದೆ.

೯. ಸಮಸ್ತನಾದ ಅರ್ಥಗಳನ್ನೊಳಗೊಂಡಿರುವುದೂ ಅಲಂಕಾರಗಳಿಂದ ಕೂಡಿದುದೂ ಉತ್ತಮವಾದ ವೃತ್ತಿ ವಿನ್ಯಾಸದಿಂದ ಯುಕ್ತವಾದುದೂ ಮೃದುಪದಪಾದಗಳನ್ನುಳ್ಳ ವಾಕ್ಸಂಪತ್ತಿನಿಂದ ಸುಂದರವಾಗಿ ಕಲಾನ್ವಿತವಾದುದೂ

ಚಂ|| ಕವಿಗಳ ನಾಮಧಾರಕ ನರಾಪರೋಳಿಯೊಳೀತನೊಳ್ಳಿದಂ
ಕವಿ ನೃಪನೀತನೊಳ್ಳಿದನೆನಲ್ ದೊರೆಯಲ್ತು ನೆಗೞ್ತೆವೆತ್ತ ಸ|
ತ್ಕವಿಗಳ ಷೋಡಶಾವನಿಪರೋಳಿಯೊಳಂ ಕವಿತಾಗುಣಾರ್ಣವಂ
ಕವಿತೆಯೊಳಗ್ಗಳಂ ಗುಣದೊಳಗ್ಗಳಮೆಲ್ಲಿಯುವಿ ಗುಣಾರ್ಣವಂ|| ೧೦

ಚಂ|| ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ
ರತಮನಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ ವರ್ಣಕಂ|
ಕತೆಯೊಳೊಡಂಬಡಂ ಪಡೆಯೆ ಪೇೞ್ವೊಡೆ ಪಂಪನೆ ಪೇೞ್ಗುಮೆಂದು ಪಂ
ಡಿತರೆ ತಗುಳ್ದು ಬಿಚ್ಚೞಸೆ ಪೇೞಲೊಡರ್ಚಿದೆನೀ ಪ್ರಬಂಧಮಂ|| ೧೧

ಚಂ|| ಲಲಿತಪದಂ ಪ್ರಸನ್ನ ಕವಿತಾಗುಣಮಿಲ್ಲದೆ ಪೂಣ್ದು ಪೇೞ್ದ ಬೆ
ಳ್ಗಳ ಕೃತಿಬಂಧಮುಂ ಬರೆಪಕಾಱಂ ಕೈಗಳ ಕೇಡು ನುಣ್ಣನ|
ಪ್ಪಳಕದ ಕೇಡು ಪೇೞಸಿದೊಡರ್ಥದ ಕೇಡೆನೆ ಪೇೞ್ದು ಬೀಗಿ ಪೊ|
ಟ್ಟಳಿಸಿ ನೆಗೞ್ತೆಗಾಟಿಸುವ ದುಷ್ಕವಿಯುಂ ಕವಿಯೆಂಬ ಲೆಕ್ಕಮೇ|| ೧೨

ಉ|| ವ್ಯಾಸಮುನೀಂದ್ರ ರುಂದ್ರ ವಚನಾಮೃತರ್ವಾಯನೀಸುವೆಂ ಕವಿ
ವ್ಯಾಸನೆನೆಂಬ ಗರ್ವಮೆನಗಿಲ್ಲ ಗುಣಾರ್ಣವನೊಳ್ಪು ಮನ್ಮನೋ|
ವಾಸಮನೆಯ್ದೆ ಪೇೞ್ದಪೆನದಲ್ಲದೆ ಗರ್ವಮೆ ದೋಷಮೞಗಂ
ದೋಷಮೆ ಕಾಣೆನೆನ್ನಱವ ಮಾೞ್ಕೆಯ ಪೇೞ್ವೆನಿದಾವ ದೋಷಮೋ|| ೧೩

ಚಂ|| ವಿಪುಳ ಯಶೋವಿತಾನ ಗುಣವಿಲ್ಲದನಂ ಪ್ರಭು ಮಾಡಿ ಪೂರ್ವ ಭೂ
ಮಿಪರ ಪದಂಗಳಂ ಪುಗಿಸಿ ಪೋಲಿಪೊಡೀತನುದಾತ್ತ ಪೂರ್ವ ಭೂ|
ಮಿಪರುಮನೊಳ್ಪಿನೊಳ್ ತಗುಳೆವಂದೊಡೆ ಕಥೆಯೊಳ್ ತಗುಳ್ಚಿ ಪೋ
ಲಿಪೊಡೆನಗೞಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್|| ೧೪

ಎನಿಸಿಕೊಂಡಿರುವ ಕಾವ್ಯವನ್ನೂ ಕನ್ಯೆಯನ್ನೂ ಅರಿಕೇಸರಿಗಲ್ಲದೆ ಅಪಾತ್ರರಾದ ಮತ್ತಾರಿಗೊ ಅರ್ಪಿಸುವುದೇ? (ಕನ್ಯೆಯ ವಿಷಯವಾಗಿ ಅರ್ಥಮಾಡುವಾಗ ಅರ್ಥ ಎಂಬ ಶಬ್ದಕ್ಕೆ ಐಶ್ವರ್ಯವೆಂದೂ ವೃತ್ತಿಯೆಂಬ ಶಬ್ದಕ್ಕೆ ನಡವಳಿಕೆಯೆಂದೂ ಪಾದವೆನ್ನುವುದಕ್ಕೆ ಕಾಲು ಎಂದೂ ತಿಳಿಯಬೇಕು. ಕಾವ್ಯದೃಷ್ಟಿಯಿಂದ ವೃತ್ತಿಯೆಂಬ ಶಬ್ದಕ್ಕೆ ಅಭಿದಾ, ವ್ಯಂಜನಾ ಮತ್ತು ಲಕ್ಷಣಾ ಎಂಬ ಶಕ್ತಿಗಳಾಗಲಿ ಕೃಶಿಕೀ, ಭಾರತೀ, ಸಾತ್ವತೀ, ಆರಭಟೀ ಎಂಬ ವೃತ್ತಿಗಳಾಗಲಿ ಆಗಬಹುದು).

೧೦. ಹೆಸರಿಗೆ ಮಾತ್ರ ಕವಿಗಳೆನಿಸಿಕೊಂಡಿರುವವರ ಸಾಲಿನಲ್ಲಿ ಕವಿಯೆಂದಾಗಲಿ ಸಾಮಾನ್ಯವಾಗಿ ರಾಜರೆಂಬ ಹೆಸರನ್ನು ಮಾತ್ರ ಧರಿಸಿರುವವರ ಗುಂಪಿನಲ್ಲಿ ರಾಜನೆಂದಾಗಲಿ ಕರೆಸಿಕೊಳ್ಳುವುದು ವಿಶೇಷವೇನೂ ಇಲ್ಲ. ಸತ್ಕವಿಗಳ ಸಾಲಿನಲ್ಲಿ ಪಂಪನು ಕವಿತಾಗುಣಾರ್ಣವನೆಂದೂ, ಷೋಡಷರಾಜರ ಶ್ರೇಣಿಯಲ್ಲಿ ಅರಿಕೇಸರಿಯು ಗುಣಾರ್ಣವನೆಂದೂ ಪ್ರಸಿದ್ಧರಾಗಿದ್ದಾರೆ.

೧೧. ಕಥೆಯ ವಸ್ತುವು ಹಿರಿದಾಗಿದ್ದರೂ ಅದರ ವಸ್ತುವಿನ್ಯಾಸವು ನಷ್ಟವಾಗದಂತೆ ಸಮಗ್ರಭಾರತದ ಕತೆಯನ್ನು ಅಪೂರ್ವವಾಗಿ ಹೇಳಿದ ಕವಿಗಳು ಕಳೆದ ಕಾಲದಲ್ಲಿ ಇದುವರೆಗೆ ಯಾರೂ ಇಲ್ಲ. ವರ್ಣನಾಂಶಗಳಾದ ಅಷ್ಟಾದಶ ವರ್ಣನೆಗಳೂ ಕಥಾಂಶಗಳೊಡನೆ ಸಮಂಜಸವಾಗಿ ಹೊಂದಿಕೊಳ್ಳುವಂತೆ ಹೇಳುವುದಾದರೆ ಪಂಪನು ಮಾತ್ರ ಶಕ್ತ ಎಂದು ಪಂಡಿತರು ಒಂದೇ ಸಮನಾಗಿ ಹೇಳಿ ಸ್ತೋತ್ರ ಮಾಡುತ್ತಿರಲು ಈ ಉತ್ತಮ ಕಾವ್ಯವನ್ನು ಹೇಳಲು ತೊಡಗಿದ್ದೇನೆ.

೧೨. ಲಲಿತವಾದ ಶಬ್ದಗಳೂ ಪರಿಶುದ್ಧವಾದ ಗುಣಗಳೂ ಇಲ್ಲದೆ ಕಾವ್ಯವನ್ನು ಬರೆಯಬೇಕೆಂಬ ಒಂದು ಹಟದಿಂದಲೇ ರಚಿಸಿದ ದಡ್ಡರ ಕೃತಿರಚನೆ ಅದೊಂದು ಕಾವ್ಯರಚನೆಯೇನು? ಅದು ಬರಹಗಾನರ ಕೈಗೆ ಶ್ರಮವನ್ನುಂಟುಮಾಡತಕ್ಕದ್ದು; ಬರೆಯಲ್ಪಡಬೇಕಾಗಿರುವ ನಯವಾದ ಓಲೆಗರಿಗಳ ದಂಡ! ವಾಚನಮಾಡಿದರೆ ಅರ್ಥಕ್ಕೆ ಹಾನಿಯನ್ನುಂಟುಮಾಡುವ ಕಾವ್ಯರಚನೆ ಮಾಡಿ ಉಬ್ಬಿ ಅಹಂಕಾರದಿಂದ ಯಶಸ್ಸಿಗಾಗಿ ಹಾತೊರೆಯುತ್ತಿರುವ ಬಣಗುಕವಿಯು ಕವಿಯೆಂಬ ಗಣನೆಗೆ ಬರತಕ್ಕವನೆ?

೧೩. ನಾನು ವ್ಯಾಸಮಹರ್ಷಿಗಳ ವಿಸ್ತಾರವಾದ ಕಾವ್ಯವೆಂಬ ಅಮೃತ ಸಾಗರವನ್ನು ಈಜುತ್ತೇನೆ. ಆದರೆ ಕವಿ ವ್ಯಾಸನೆಂಬ ಗರ್ವ ಮಾತ್ರ ನನಗಿಲ್ಲ. ಗುಣಾರ್ಣವನಾದ ಅರಿಕೇಸರಿಯು ಸತ್ಸ್ವಭಾವರು ನನ್ನ ಮನೋಮಂದಿರವನ್ನು ಪ್ರವೇಶಿಸಿರುವುದರಿಂದ ಈ ಕಾವ್ಯವನ್ನು ಹೇಳುತ್ತಿದ್ದೇನೆ. ಈ ರೀತಿಯಾದ ಪ್ರೀತಿಪ್ರದರ್ಶನವು ದೋಷವಾಗುತ್ತದೆಯೇ? ನನಗೆ ತಿಳಿದಷ್ಟು ನಾನು ಹೇಳುತ್ತೇನೆ. ಇದರಲ್ಲಿ ಯಾವ ದೋಷವಿದೆ?

೧೪. ಹಿಂದಿನ ಕೆಲವು ಕವಿಗಳು ವಿಸ್ತಾರವಾದ ಯಶೋರಾಶಿಯಿಲ್ಲದವನನ್ನು ತಮ್ಮ ಕಾವ್ಯದ ನಾಯಕನನ್ನಾಗಿ ಮಾಡಿ ಪ್ರಾಚೀನ ರಾಜರ ಸದ್ಗುಣಗಳನ್ನೆಲ್ಲ ಅವರಲ್ಲಿ ಆರೋಪಣೆ ಮಾಡಿ ಹೋಲಿಸುತ್ತಾರೆ. ಆದರೆ ಗುಣಾರ್ಣವನಾದ ಅರಿಕೇಸರಿಯು ತನ್ನ ಸದ್ಗುಣಗಳಿಂದ ಪೂರ್ವಕಾಲದ ರಾಜರನ್ನು

ಕಂ|| ಶ್ರೀಮಚ್ಚಳುಕ್ಯ ವಂಶ
ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂ|
ಡೀ ಮಹಿಯೊಳಾತ್ಮವಂಶಶಿ
ಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದ|| ೧೫

ಆತ ನಿಜಭುಜವಿಜಯ
ಖ್ಯಾತಿಯನಾಳ್ದಾಳ್ದನಕಬಲನವನಿಪತಿ|
ವ್ರಾತ ಮಣಿಮಕುಟಕಿರಣ
ದ್ಯೋತಿತಪಾದಂ ಸಪಾದಲಕ್ಷ ಕ್ಷಿತಿಯಂ|| ೧೬

ಏನಂ ಪೇೞ್ವುದೊ ಸಿರಿಯು
ದ್ದಾನಿಯನೆಣ್ಣೆಯೊಳೆ ತೀವಿ ದೀರ್ಘಿಕೆಗಳನಂ|
ತಾ ನೃಪತಿ ನಿಚ್ಚಲಯ್ನೂ
ಱುನೆಯನವಗಾಹಮಿರಿಸುವಂ ಬೋದನದೊಳ್|| ೧೭

ಶ್ರೀಪತಿಗೆ ಯುದ್ಧಮಲ್ಲ ಮ
ಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದನಖಿಳ|
ಕ್ಷ್ಮಾಪಾಲ ಮೌಳಿಮಣಿ ಕಿರ
ಣಾಪಾಳಿತ ನಖಮಯೂಖರಂಜಿತ ಚರಣಂ|| ೧೮

ಅರಿಕೇಸರಿಯೆಂಬಂ ಸುಂ
ದರಾಂಗನತ್ಯಂತ ವಸ್ತುವಂ ಮದಕರಿಯಂ|
ಹರಿಯಂ ಪಡಿವಡೆಗುರ್ಚಿದ
ಕರವಾಳನೆ ತೋಱ ನೃಪತಿ ಗೆಲ್ಲಂಗೊಂಡಂ|| ೧೯

ನಿರುಪಮ ದೇವನ ರಾಜ್ಯದೊ
ಳರಿಕೇಸರಿ ವೆಂಗಿವಿಷಯಮಂ ತ್ರಿ ಕಳಿಂಗಂ|
ಬೆರಸೊತ್ತಿಕೊಂಡು ಗರ್ವದೆ
ಬರೆಯಿಸಿದಂ ಪೆಸರನಖಿಳ ದಿಗ್ಭಿತ್ತಿಗಳೊಳ್|| ೨೦

ಸೋಲಿಸುತ್ತಿರುವುದರಿಂದ ಮಹಾಭಾರತದ ಕಥೆಯಲ್ಲಿ ಅವನ ಕಥೆಯನ್ನು ಸೇರಿಸಿ ಗುಣಾರ್ಣವ ಮಹಾರಾಜನನ್ನು ಅರ್ಜುನನಲ್ಲಿ ಹೊಂದಿಸಿ ವರ್ಣಿಸಲು ನನಗೆ ಪ್ರೀತಿಯಾಯಿತು.

೧೫. ಸಂಪದ್ಯುಕ್ತವಾದ ಚಾಳುಕ್ಯವಂಶವೆಂಬ ಆಕಾಶಕ್ಕೆ ಚಂದ್ರನೆನಿಸುವ ತೇಜಸ್ಸಿನಿಂದ ಕೂಡಿ ತನ್ನ ವಂಶಕ್ಕೆ ಶಿರೋಭೂಷಣನಾಗಿರುವ ಯುದ್ಧಮಲ್ಲನೆಂಬುವನು ಈ ಭೂಮಿಯಲ್ಲಿ ಕೀರ್ತಿವಂತನಾಗಿ ಪ್ರಸಿದ್ಧನಾದನು.

೧೬. ಆತನು ತನ್ನ ಭುಜಬಲದ ವಿಜಯದ ಖ್ಯಾತಿಯನ್ನು ಹೊಂದಿ ಅಕಬಲನೂ ರಾಜಸಮೂಹದ ರತ್ನಖಚಿತವಾದ ಕಿರೀಟಗಳ ಕಾಂತಿಯಿಂದ ಬೆಳಗಲ್ಪಟ್ಟ ಪಾದವುಳ್ಳವನೂ ಆಗಿ ಸಪಾದಲಕ್ಷ ಭೂಮಿಯನ್ನು ಆಳಿದನು.

೧೭. ಆತನು ಬೋದನವೆಂಬ ತನ್ನ ರಾಜಧಾನಿಯಲ್ಲಿ ಬಾವಿಗಳನ್ನು ಎಣ್ಣೆಯಲ್ಲಿ ತುಂಬಿ ಪ್ರತಿದಿನವೂ ಐನೂರಾನೆಗಳನ್ನು ಮಜ್ಜನ ಮಾಡಿಸುತ್ತಾನೆ ಎಂದರೆ ಆತನ ಐಶ್ವರ್ಯಾತಿಶಯವನ್ನು ಏನೆಂದು ಹೇಳುವುದೋ.

೧೮. ಐಶ್ವರ್ಯವಂತನಾದ ಈ ಯುದ್ಧಮಲ್ಲ ಮಹಾರಾಜನಿಗೆ ಕೀರ್ತಿ ಹುಟ್ಟಿದ ಹಾಗೆ ಸಮಸ್ತರಾಜರ ಕಿರೀಟಗಳ ರತ್ನಕಾಂತಿಯಿಂದ ಪೋಷಿತವಾದ ಕಾಲಿನುಗುರುಗಳ ಕಿರಣಗಳಿಂದ ಪ್ರಕಾಶಿಸುತ್ತಿರುವ ಪಾದಗಳನ್ನುಳ್ಳ

೧೯. ಅರಿಕೇಸರಿಯೆಂಬ ಸುಂದರಾಂಗನಾದ ಮಗನು ಹುಟ್ಟಿದನು. ಆ ರಾಜನು ತನಗೆ ಪ್ರತಿಭಟಿಸಿದ ಸೈನ್ಯಕ್ಕೆ ತನ್ನ ಒರೆಯಿಂದ ಹೊರಗೆಳೆದ ಕತ್ತಿಯನ್ನೇ ತೋರಿ ವಿಶೇಷ ಬೆಲೆಬಾಳುವ ವಸ್ತುಗಳನ್ನೂ ಮದ್ದಾನೆಗಳನ್ನೂ ಕುದುರೆಗಳನ್ನೂ ಲಾಭವಾಗಿ ಪಡೆದನು. ಈ ಅರಿಕೇಸರಿಯು ರಾಷ್ಟ್ರಕೂಟ ರಾಜನಾದ ನಿರುಪಮದೇವನ ಆಳ್ವಿಕೆಯಲ್ಲಿ ಮೂರು ಕಳಿಂಗ ದೇಶಗಳ ಸಮೇತವಾಗಿ ವೆಂಗಿಮಂಡಲವನ್ನು ಗೆದ್ದು ಸ್ವಬಾಹುಬಲದಿಂದ ತನ್ನ ಪ್ರತಿಷ್ಠೆಯನ್ನು ಸಮಸ್ತದಿಕ್ಕಿನ ಗೋಡೆಗಳಲ್ಲಿಯೂ ಬರೆಯಿಸಿದನು.

೨೦ ಕ್ಷತ್ರಿಯೋಚಿತವಾದ ಶೌರ್ಯಪ್ರತಾಪಾದಿ ತೇಜೋಗುಣಗಳು ಆ ಕ್ಷತ್ರಿಯರ ವಂಶದಲ್ಲಿ ಸ್ಥಿರವಾಗಿ ನಿಂತುದು ಈ ಅರಿಕೇಸರಿಯ ಮಹತ್ಕಾರ್ಯಗಳಿಂದ.

ಕ್ಷತ್ರಂ ತೇಜೋಗುಣಮಾ
ಕ್ಷತ್ರಿಯರೊಳ್ ನೆಲಸಿ ನಿಂದುದಾ ನೆಗೞುದಿ|
ಕ್ಷತ್ರಿಯರೊಳಮಿಲ್ಲೆನಿಸಿದು
ದೀ ತ್ರಿಜಗದೊಳೆಸಗಿದೆಸಕಮರಿಕೇಸರಿಯಾ|| ೨೧

ಅರಿಕೇಸರಿಗಾತ್ಮಜರರಿ
ನರಪ ಶಿರೋದಳನ ಪರಿಣತೋಗ್ರಾಸಿ ಭಯಂ|
ಕರಕರರಾಯಿರ್ವರೊಳಾವ್
ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್|| ೨೨

ಕಂ|| ಅವರೊಳ್ ನರಸಿಂಗಂಗತಿ
ಧವಳಯಶಂ ಯುದ್ಧಮಲ್ಲನಗ್ರಸುತಂ ತ|
ದ್ಭುವನ ಪ್ರದೀಪನಾಗಿ
ರ್ದವಾರ್ಯವೀರ್ಯಂಗೆ ಬದ್ದೆಗಂ ಪಿರಿಯ ಮಗಂ|| ೨೩

ಪುಟ್ಟಿದೊಡಾತನೊಳಱವೊಡ
ವುಟ್ಟಿದುದಱವಿಂಗೆ ಪೆಂಪು ಪೆಂಪಿನೊಳಾಯಂ|
ಕಟ್ಟಾಯದೊಳಳವಳವಿನೊ
ಳೊಟ್ಟಜೆ ಪುಟ್ಟಿದುದು ಪೋಲ್ವರಾರ್ ಬದ್ದೆಗನಂ|| ೨೪

ಬಲ್ವರಿಕೆಯೊಳರಿನೃಪರ ಪ
ಡಲ್ವಡೆ ತಳ್ತಿಱದು ರಣದೊಳಾ ವಿಕ್ರಮಮಂ|
ಸೊಲ್ವಿನಮಾವರ್ಜಿಸಿದಂ
ನಾಲ್ವತ್ತೆರಡಱಕೆಗಾಳೆಗಂಗಳೊಳೀತಂ|| ೨೫

ಚಂ|| ವನಪರೀತ ಭೂತಳದೊಳೀತನೆ ಸೋಲದ ಗಂಡನೆಂಬ ಪೆಂ
ಪಿನ ಪೆಸರಂ ನಿಮಿರ್ಚಿದುದುಮಲ್ಲದೆ ವಿಕ್ರಮದಿಂದೆ ನಿಂದಗು|
ರ್ವೆನಲಿಱದಾಂತರಂ ಮೊಸಳೆಯಂ ಪಿಡಿವಂತಿರೆ ನೀರೊಳೊತ್ತಿ ಭೀ
ಮನನತಿಗರ್ವದಿಂ ಪಿಡಿಯೆ ಮೆಯ್ಗಲಿ ಬದ್ದೆಗನನ್ನನಾವನೋ|| ೨೬

ಮ|| ಮುಗಿಲಂ ಮುಟ್ಟಿದ ಪೆಂಪು ಪೆಂಪನೊಳಕೊಂಡುದ್ಯೋಗಮುದ್ಯೋಗದೊಳ್
ನೆಗೞುಜ್ಞಾಫಲಮಾಜ್ಞೆಯೊಳ್ ತೊಡರ್ದಗುರ್ವೊಂದೊಂದಗುರ್ವಿಂದಗು|
ರ್ವುಗೊಳುತ್ತಿರ್ಪರಿಮಂಡಳಂ ಜಸಕಡರ್ಪಪ್ಪನ್ನೆಗಂ ಸಂದನೀ
ಜಗದೊಳ್ ಬದ್ದೆಗನನ್ನನಾವನಿೞಕುಂ ಭ್ರೂಕೋಟಿಯಂ ಕೋಟಿಯಂ|| ೨೭

ಇವನ ಕಾರ್ಯಗಳು ಮೂರು ಲೋಕಗಳಲ್ಲಿ ಪ್ರಸಿದ್ಧರಾದ ಪ್ರಾಚೀನ ರಾಜರುಗಳಲ್ಲಿಯೂ ಇಲ್ಲವೆಂದೆನಿಸಿತು.

೨೨. ಆ ಅರಿಕೇಸರಿಗೆ ಶತ್ರುರಾಜರ ತಲೆಯನ್ನು ಸೀಳುವುದರಲ್ಲಿ ಸಮರ್ಥವೂ ಹರಿತವೂ ಆದ ಕತ್ತಿಯಿಂದ ಭಯಂಕರವಾದ ಬಾಹುಗಳನ್ನುಳ್ಳ ಇವರಿಗೆ ಸಮಾನರಾರಿದ್ದಾರೆ ಎನ್ನಿಸಿಕೊಂಡ ನರಸಿಂಹ ಭದ್ರದೇವರೆಂಬ ಇಬ್ಬರು ಮಕ್ಕಳು ಪ್ರಸಿದ್ಧರಾದರು.

೨೩. ಅವರಲ್ಲಿ ನರಸಿಂಹನಿಗೆ ನಿರ್ಮಲಯಶಸ್ಸಿನಿಂದ ಕೂಡಿದ ಇಮ್ಮಡಿ ಯುದ್ಧಮಲ್ಲನು ಹಿರಿಯ ಮಗ. ಪ್ರಪಂಚಕ್ಕೆಲ್ಲ ತೇಜೋವಂತನೂ ಅಸಮಪ್ರತಾಪಶಾಲಿಯೂ ಆಗಿದ್ದ ಆ ಯುದ್ಧಮಲ್ಲನಿಗೆ ಬದ್ದೆಗನು (ಭದ್ರದೇವನು) ಹಿರಿಯ ಮಗ

೨೪. ಹೀಗೆ ಹುಟ್ಟಿದ ಭದ್ರದೇವನಿಗೆ ಜೊತೆಯಲ್ಲಿಯೇ ಜ್ಞಾನವೂ ಜ್ಞಾನದೊಡನೆ ಹಿರಿಮೆಯೂ ಹಿರಿಮೆಯೊಡನೆ ದ್ರವ್ಯಲಾಭಾದಿಗಳೂ ಅವುಗಳೊಡನೆ ಪರಾಕ್ರಮಾತಿಶಯಾದಿಗಳೂ ಹುಟ್ಟಿದುವು. (ಇಂತಹ) ಭದ್ರದೇವನನ್ನು ಹೋಲುವವರಿದ್ದಾರೆ?

೨೫. ಈ ಭದ್ರದೇವನು ಬಲವಾದ ಧಾಳಿಯಲ್ಲಿ ಶತ್ರುರಾಜರು ಚದುರಿ ಓಡಿಹೋಗುವಂತೆ ಪ್ರತಿಭಟಿಸಿ ತನ್ನ ಶೌರ್ಯವನ್ನು ಜನಗಳೆಲ್ಲ ಕೊಂಡಾಡುವಂತೆ ಯುದ್ಧಮಾಡಿ ನಲವತ್ತೆರಡು ಸುಪ್ರಸಿದ್ಧ ಕಾಳಗಗಳಲ್ಲಿ ತನ್ನ ಪ್ರತಾಪವನ್ನು ಪ್ರಕಟಿಸಿದನು.

೨೬. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲದಲ್ಲಿ ಇವನೊಬ್ಬನೇ ಯಾರಿಗೂ ಸೋಲದ ವೀರ ಎಂಬ ಹಿರಿಮೆಯನ್ನು ಗಳಿಸಿದ್ದಲ್ಲದೆ ತನ್ನನ್ನು ಪ್ರತಿಭಟಿಸಿದವರನ್ನು ಪರಾಕ್ರಮದಿಂದ ಎದುರಿಸಿ ಭಯಂಕರವಾಗಿ ಇರಿದು ಯುದ್ಧಮಾಡಿದ ಭೀಮನೆಂಬ ರಾಜನನ್ನು ನೀರಿನಲ್ಲಿ ಮುಳುಗಿಸಿ ಮೊಸಳೆಯನ್ನು ಹಿಡಿವಂತೆ ವಿಶೇಷ ದರ್ಪದಿಂದ ಹಿಡಿದಿರುವಾಗ ಈ ಶೂರನಾದ ಭದ್ರದೇವನಂತಹ (ಶೂರ) ನಾವನಿದ್ದಾನೆ.

೨೭. (ಈ ಭದ್ರದೇವನ) ಅತ್ಯುನ್ನತವಾದ ಹಿರಿಮೆಯೂ ಹಿರಿಮೆಯಲ್ಲಿ

ಕಂ|| ಮೇರುವ ಪೊನ್ ಕಲ್ಪಾಂಘ್ರಿಪ
ದಾರವೆ ರಸದೊಱವು ಪರುಸವೇದಿಯ ಕಣಿ ಭಂ|
ಡಾರದೊಳುಂಟೆನೆ ಕುಡುವ ನಿ
ವಾರಿತ ದಾನಕ್ಕೆ ಪೋಲ್ವರಾರ್ ಬದ್ದೆಗನಂ|| ೨೮

ತರಳ|| ಸುರಭಿ ದೇವತೆಯೆಂಬ ಕಾಪಿನೆ ಮಾಣ್ದುದೇಱುವುದೊಂದೆಂ
ದಿರದೆ ಮಾಣ್ದುದು ದೇವ ವಾರಣವೇೞೆ ಉಂಟವು ಪೋದೊಡಾ|
ಖರಕರಂಗರಿದೆಂದೆ ಮಾಣ್ದಿರೆ ಮಾಣ್ದುವಾ ಹರಿ ನೀನೆ ಪೇ
ೞರಿಯವೆಂದಿವು ಭದ್ರದೇವರ ಚಾಗದೊಳ್ಪೊಱಗಾದುವೇ|| ೧೯

ಕಂ|| ಆ ಬದ್ದೆಗಂಗೆ ವೈರಿತ
ಮೋಬಳ ದಶಶತಕರಂ ವಿರಾಜಿತ ವಿಜಯ|
ಶ್ರೀ ಬಾಹು ಯುದ್ಧಮಲ್ಲನಿ
ಳಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ|| ೩೦

ಆತ್ಮಭವನನಾರಾಪ
ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ|
ಹಾತ್ಮರನಿೞಸಿ ನೆಗೞ್ದ ಮ
ಹಾತ್ಮಂ ನರಸಿಂಹನಱವಿನೊಳ್ ಪರಮಾತ್ಮಂ|| ೩೧

ಮಾಂಕರಿಸದಱವು ಗುರು ವಚ
ನಾಂಕುಶಮಂ ಪಾೞಯೆಡೆಗೆ ಪೊಣರ್ದರಿಬಲಮಂ|
ಕಿಂಕೊಳೆ ಮಾೞ್ಪೆಡೆಗಣಮೆ ನಿ
ರಂಕುಶಮೆನಿಸಿದುದು ಮುನಿಸು ಭದ್ರಾಂಕುಶನಾ|| ೩೨

ತಱಸಂದು ಲಾೞರೊಳ್ ತ
ಳ್ತಿಱದೇಱಂ ಪೇೞೆ ಕೇಳ್ದು ಮಂಡಲಮಿನ್ನುಂ|
ತಿಱುನೀರಿಕ್ಕುವುದೆನಿಸಿದ
ತಱಸಲವಿನ ಚಲದ ಬಲದ ಕಲಿ ನರಸಿಂಹಂ|| ೩೩

ಕೂಡಿಕೊಂಡ ಕಾರ್ಯಕಲಾಪಗಳಲ್ಲಿ ಹುದುಗಿಕೊಂಡಿರುವ ಆಜ್ಞಾಫಲವೂ ಅದರಲ್ಲಿ ಸೇರಿರುವ ಭಯವೂ ಭಯದಿಂದ ಆಶ್ಚರ್ಯಗೊಳ್ಳುತ್ತಿರುವ ಶತ್ರುಸಮೂಹವೂ ಅವನ ಕೀರ್ತಿಗೆ ಆಶ್ರಯವಾಗುತ್ತಿರಲು ಆ ಭದ್ರ ದೇವನು ಭೂಮಂಡಲದಲ್ಲಿ ಸುಪ್ರಸಿದ್ದನಾದನು. ಒಂದು ಸಲ ಹುಬ್ಬುಹಾರಿಸುವುದರಿಂದ ಕೋಟ್ಯಂತರ ಸೈನ್ಯವನ್ನು ಇಳಿಸಿಬಿಡುವ ಅವನಂಥವರು ಬೇರೆ ಯಾರಿದ್ದಾರೆ?

೨೮. ಆ ಭದ್ರದೇವನ ಭಂಡಾರದಲ್ಲಿ ಮೇರುಪರ್ವತದ ಚಿನ್ನವೂ ಕಲ್ಪವೃಕ್ಷದಾರಾಮವೂ ಸಿದ್ಧರಸದೂಟೆಯೂ ಸ್ಪರ್ಶಶಿಲೆಯ ಗಣಿಯೂ ಇವೆಯೆಂದರೆ ಅವಿಚ್ಛಿನ್ನವಾದ ದಾನಕ್ಕೆ ಭದ್ರದೇವನನ್ನು ಹೋಲುವರಾರಿದ್ದಾರೆ.

೩೦-೩೧. ಆ ಭದ್ರದೇವನಿಗೆ ಶತ್ರುಗಳೆಂಬ ಕತ್ತಲೆಗೆ ಸೂರ್ಯನ ಹಾಗಿರುವವನೂ ಪ್ರಕಾಶಮಾನಳಾದ ವಿಜಯಲಕ್ಷ್ಮಿಯಿಂದ ಕೂಡಿದ ಬಾಹುವುಳ್ಳವನೂ ಭೂಮಿಯನ್ನು ನಾನಾ ರೀತಿಯಲ್ಲಿ ರಕ್ಷಣ ಮಾಡುವ ಸಾಮರ್ಥ್ಯವುಳ್ಳ ಕತ್ತಿಯುಳ್ಳವನೂ ಆದ (ಮೂರನೆಯ) ಯುದ್ಧಮಲ್ಲನು ಮಗನಾದನು. ಆ ಯುದ್ಧಮಲ್ಲ ಮಹಾರಾಜನ ಮಗನಾದ ನರಸಿಂಹನು ಪ್ರಸಿದ್ಧರಾದ ನಹುಷ, ಪೃಥು, ಭಗೀರಥ, ನಳರೆಂಬ ಮಹಾತ್ಮರನ್ನು ಮಹಿಮೆಯಲ್ಲಿ ಮೀರಿಸಿದ ಪ್ರಸಿದ್ಧಿಯುಳ್ಳವನೂ ಜ್ಞಾನದಲ್ಲಿ ಸಾಕ್ಷಾತ್ ಪರಮಾತ್ಮನೂ ಆದವನು.

೩೨. ಭದ್ರ ಜಾತಿಯ ಆನೆಗಳಿಗೆ ಅಂಕುಶಸ್ವರೂಪನಾದ ಆ ನರಸಿಂಹನ ಜ್ಞಾನವು ಕ್ರಮಪರಿಪಾಲನಾ ಸಂದರ್ಭದಲ್ಲಿ ಗುರುವಚನವೆಂಬ ಅಂಕುಶವನ್ನು ನಿರಾಕರಿಸುವುದಿಲ್ಲ. ಆದರೆ ಪ್ರತಿಭಟಿಸಿದ ಶತ್ರುವನ್ನು ಇದಿರಿಸುವ ಸಂದರ್ಭದಲ್ಲಿ ಭದ್ರಾಂಕುಶನ ಕೋಪವು ತಡೆಯಿಲ್ಲದುದು ಎಂದೆನಿಸಿಕೊಂಡಿತು. (ಅಂದರೆ ನ್ಯಾಯ ಪರಿಪಾಲನೆಯಲ್ಲಿ ಅವನ ವಿವೇಕವು ಗುರುಜನರ ಆದೇಶವನ್ನು ಉಲ್ಲಂಘಿಸುತ್ತಿರದಿದ್ದರೂ ಶತ್ರುಸೈನ್ಯದೊಡನೆ ಯುದ್ಧ ಮಾಡುವಾಗ ಅವನ ಕೋಪವು ಯಾವ ಅಂಕೆಗೂ ಸಿಕ್ಕುತ್ತಿರಲಿಲ್ಲ).

೩೩. ನರಸಿಂಹನು ಎಂದೋ ಹಟದಿಂದ ಲಾಟದೇಶದ (ದಕ್ಷಿಣ ಗುಜರಾತು) ಮೇಲೆ ಬಿದ್ದು ಯುದ್ಧಮಾಡಿದ ವಿಷಯವನ್ನು ಇಂದು ಹೇಳಲು ಅದನ್ನು ಕೇಳಿ ಆ ಲಾಟದೇಶದವರು ಇನ್ನೂ ಆ ಸತ್ತವರಿಗೆ ತರ್ಪಣೋದಕವನ್ನು ಕೊಡುತ್ತಿದ್ದಾರೆ

ಸಿಂಗಂ ಮಸಗಿದವೋಲ್ ನರ
ಸಿಂಗಂ ತಳ್ತಿಱಯೆ ನೆಗೞ್ದ ನೆತ್ತರ್ ನಭದೊಳ್|
ಕೆಂಗುಡಿ ಕವಿದಂತಾದುದಿ
ದೇಂ ಗರ್ವದ ಪೆಂಪೊ ಸಕಲಲೋಕಾಶ್ರಯನಾ|| ೩೪

ಏೞುಂ ಮಾಳಮುಮಂ ಪಾ
ೞೆ ತಗುಳಿಱದು ನರಗನುರಿಪಿದೊಡೆ ಕರಿಂ|
ಕೇೞಸಿದಾತನ ತೇಜದ
ಬೀೞಲನನುಕರಿಪುವಾದುವೊಗೆದುರಿವುರಿಗಳ್|| ೩೫

ವಿಜಯಾರಂಭ ಪುರಸ್ಸರ
ವಿಜಯಗಜಂಗಳನೆ ಪಿಡಿದು ಘೂರ್ಜರ ರಾಜ|
ಧ್ವಜಿನಿಯನಿಱದೋಡಿಸಿ ಭುಜ
ವಿಜಯದೆ ವಿಜಯನುಮನಿೞಸಿದಂ ನರಸಿಂಹಂ|| ೩೬

ಸಿಡಿಲವೊಲೆಱಗುವ ನರಗನ
ಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂ|
ಕೆಡೆದೆಡೆಯೊಳ್ ಕೆಡೆಯದೆ ನಿಂ
ದೆಡೆಯೊಳ್ ನಿಲ್ಲದೆಯುಮೋಡಿದಂ ಮಹಿಪಾಲಂ|| ೩೭

ಗಂಗಾರ್ವಾಯೊಳಾತ್ಮತು
ರಂಗಮುಮಂ ಮಿಸಿಸಿ ನೆಗೞ್ದ ಡಾಳಪ್ರಿಯನೊಳ್|
ಸಂಗತ ಗುಣನಸಿಲತೆಯನ
ಸುಂಗೊಳೆ ಭುಜವಿಜಯಗರ್ವದಿಂ ಸ್ಥಾಪಿಸಿದಂ|| ೩೮

ಕಂ|| ಆ ನರಸಿಂಹಮಹೀಶ ಮ
ನೋನಯನಪ್ರಿಯೆ ವಿಳೋಳನೀಳಾಳಕೆ ಚಂ|
ದ್ರಾನನೆ ಜಾಕವ್ವೆ ದಲಾ
ಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ|| ೩೯

ಪೊಸತಲರ್ದ ಬಿಳಿಯ ತಾವರೆ
ಯೆಸೞ್ಗಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್|
ನಸು ಮಸುಳ್ದು ತೋರ್ಪಳೆನೆ ಪೋ
ಲಿಸುವೊಡೆ ಜಾಕವ್ವೆಗುೞದ ಪೆಂಡಿರ್ ದೊರೆಯೇ|| ೪೦

ಎನ್ನಿಸಿಕೊಳ್ಳುವ ದೃಢಸಂಕಲ್ಪದ, ಛಲದ ಬಲದ ಕಲಿಯಾದವನು ನರಸಿಂಹ.

೩೪. ನರಸಿಂಹನು ಸಿಂಹದಂತೆ ರೇಗಿ ಮೇಲೆ ಬಿದ್ದು ಯುದ್ಧಮಾಡಲು ಆಗ ಚಿಮ್ಮಿದ ರಕ್ತವು ಆಕಾಶದಲ್ಲಿ ಕೆಂಪುಬಾವುಟಗಳು ಮುಚ್ಚಿಕೊಂಡಂತಾಯಿತು. ಸಕಲ ಲೋಕಕ್ಕೂ ಆಶ್ರಯದಾತನಾದ ಆತನ ಗರ್ವದ ಹಿರಿಮೆ ಅದೆಂತಹುದೋ?

೩೫. ನರಸಿಂಹನು ಸಪ್ತಮಾನಲಗಳನ್ನು (ಮಾಳವದೇಶದ ಏಳು ಭಾಗಗಳನ್ನು) ಹಾರಿಹೋಗುವಂತೆ ಪ್ರತಿಭಟಿಸಿ ಕರಿಕೇಳುವಂತೆ ಸುಡಲು ಆಗ ಎದ್ದ ಉರಿಯು ಅವನ ತೇಜಸ್ಸಿನ ಬೀಳಲುಗಳನ್ನು ಅನುಕರಿಸಿದುವು.

೩೬. ನರಸಿಂಹನು ತನ್ನ ಚೈತ್ರಯಾತ್ರೆಯಲ್ಲಿ ವಿಜಯಸೂಚಕವಾದ ಮುಂಗುಡಿಯ ಆನೆಗಳನ್ನು ಹಿಂಬಾಲಿಸಿ ಘೂರ್ಜರದೇಶದ ರಾಜನ ಸೈನ್ಯವನ್ನು ಹೊಡೆದೋಡಿಸಿ ತನ್ನ ಭುಜಬಲದ ಜಯದಿಂದ ಅರ್ಜುನನನ್ನು ಮೀರಿಸುವಂಥವನಾದನು.

೩೭. ಸಿಡಿಲೆರಗುವ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಊಟಮಾಡಿದ ಸ್ಥಳದಲ್ಲಿ ಪುನ ಊಟಮಾಡದೆಯೂ ಮಲಗಿದ ಕಡೆಯಲ್ಲಿ ಪುನ ಮಲಗದೆಯೂ ನಿಂತೆಡೆಯಲ್ಲಿ ನಿಲ್ಲದೆಯೂ ಪಲಾಯನ ಮಾಡಿದನು.

೩೮. ಅಲ್ಲದೆ ನರಸಿಂಹನು ಗಂಗಾನದಿಯಲ್ಲಿ ತನ್ನ ಕುದುರೆಯನ್ನು ಮಜ್ಜನಮಾಡಿಸಿ ಪ್ರಸಿದ್ಧವಾದ ಉಜ್ಜಯನಿಯಲ್ಲಿ ಗುಣಶಾಲಿಯಾದ ಅವನು ತನ್ನ ಕತ್ತಿಯನ್ನು ೧ ಶತ್ರುಗಳ ಪ್ರಾಣಾಪಹರಣಕ್ಕಾಗಿ ಭುಜವಿಜಯ ಗರ್ವದಿಂದ ಸ್ಥಾಪಿಸಿದನು.

೩೯. ಆ ನರಸಿಂಹರಾಜನ ಮನಸ್ಸಿಗೂ ಕಣ್ಣಿಗೂ ಪ್ರಿಯಳಾದವಳೂ ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳವಳೂ ಆ ಜಾಕವ್ವೆಯಲ್ಲವೆ ! ಆಕೆಯ ಕುಲದಲ್ಲಿಯೂ ಶೀಲದಲ್ಲಿಯೂ ಸೀತಾದೇವಿಗೂ ಅಕಳಾದವಳೇ ಸರಿ.

೪೦. ಹೊಸದಾಗಿ ಅರಳಿದ ಬಿಳಿಯ ತಾವರೆಯ ದಳದ

೧. ಇಲ್ಲಿ ಡಾಳಪ್ರಿಯನೊಳ್ ಎಂಬ ಪಾಠಕ್ಕೆ ಅರ್ಥವಾಗುವುದಿಲ್ಲ.

ಆ ಜಾಕವ್ವೆಗಮಾ ವಸು
ಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋ|
ರಾಜಿತನೆನಿಪರಿಕೇಸರಿ
ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ|| ೪೧

ಮಗನಾದನಾಗಿ ಚಾಗದ
ನೆಗೞ್ತೆಯೊಳ್ ಬೀರದೇೞ್ಗೆಯೊಳ್ ನೆಗೞೆ ಮಗಂ|
ಮಗನೆನೆ ಪುಟ್ಟಲೊಡಂ ಕೋ
ೞ್ಮೊಗಗೊಂಡುದು ಭುವನಭವನಮರಿಕೇಸರಿಯೊಳ್|| ೪೨

ತರಳ|| ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾ
ಮದಗಜಾಂಕುಶದಿಂದೆ ಪೆರ್ಚಿಸಿ ನಾಭಿಯಂ ಮದದಂತಿ ದಂ|
ತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಱಸೆ ಬಾಳಕಾ
ಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಱದಂ|| ೪೩

ಕಂ|| ರುಂದ್ರಾಂಭೋದಿ ಪರೀತ ಮ|
ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ಷಾ||
ದಿಂದ್ರಂ ತಾನೆನೆ ಸಲೆ ನೆಗ
ೞಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ|| ೪೪

ಅಮಿತಮತಿ ಗುಣದಿನತಿ ವಿ
ಕ್ರಮಗುಣದಿಂ ಶಾಸ್ತ್ರಪಾರಮುಂ ರಿಪುಬಳ ಪಾ|
ರಮುಮೊಡನೆ ಸಂದುವೆನಿಸಿದ
ನಮೇಯ ಬಲಶಾಲಿ ಮನುಜ ಮಾರ್ತಾಂಡ ನೃಪಂ|| ೪೫

ಉಡೆವಣಿ ಪಱಯದ ಮುನ್ನಮೆ
ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡ|
ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ|| ೪೬

ಮಧ್ಯದಲ್ಲಿರುವ ಲಕ್ಷ್ಮಿದೇವಿಯೂ ಆಕೆಯ ಪಕ್ಕದಲ್ಲಿ ಸ್ವಲ್ಪ ಕಾಂತಿಹೀನಳಾಗುತ್ತಾಳೆ ಎನ್ನಲು ಉಳಿದ ಸ್ತ್ರೀಯರು ಆ ಜಾಕವ್ವೆಗೆ ಹೋಲಿಸಲು ಸಮನಾರಾಗುತ್ತಾರೆಯೇ.

೪೧-೪೨. ಆ ಜಾಕವ್ವೆಗೆ ಭೂಮಂಡಲಾಪತಿ ಶ್ರೇಷ್ಠನಾದ ನರಸಿಂಹನಿಗೂ ತನ್ನ ತೇಜಸ್ಸೆಂಬ ಬೆಂಕಿಯಲ್ಲಿ ಮುಳುಗಿದ ಶತ್ರುರಾಜರೆಂಬ ಪತಂಗಗಳನ್ನುಳ್ಳವನೂ ನಿರ್ಮಲವಾದ ಯಶಸ್ಸಿನಿಂದ ಕೂಡಿದವನೂ ಆದ (ಇಮ್ಮಡಿ) ಅರಿಕೇಸರಿಯೆಂಬ ರಾಜನು ಹುಟ್ಟಿದನು. ಹಾಗೆ ಅವನು ಹುಟ್ಟಿದ ಕೂಡಲೇ ತ್ಯಾಗದ ಪೆಂಪಿನಲ್ಲಿಯೂ ವೀರದ ವೈಭವದಲ್ಲಿಯೂ ಮಗನೆಂದರೆ ಇವನೇ ಮಗ ಎಂದೆಲ್ಲರೂ ಹೊಗಳುವ ಹಾಗೆ ಪ್ರಸಿದ್ಧಿ ಪಡೆಯಲು ಈ ಅರಿಕೇಸರಿಯಿಂದ ಪ್ರಪಂಚವೆಂಬ ಮಂದಿರಕ್ಕೆ ಕೊಂಬು ಹುಟ್ಟಿದ ಹಾಗಾಯಿತು. (ಅಂದರೆ ಇವನಿಂದ ಪ್ರಪಂಚಕ್ಕೆಲ್ಲ ಹಿರಿಮೆಯುಂಟಾಯಿತು ಎಂದು ಭಾವ).

೪೩. ಅರಿಕೇಸರಿಯು ಹುಟ್ಟಿದ ಕೂಡಲೆ ಆ ಶಿಶುವಿಗೆ ಆನೆಯ ಮದೋದಕದಿಂದಲೇ ಲೋಕರೂಢಿಯಂತೆ (ಸಂಪ್ರದಾಯಾನುಸಾರವಾಗಿ) ಬೆಚ್ಚ ನೀರೆರೆದು ಮದಗಜಾಂಕುಶದಿಂದ ಹೊಕ್ಕಳ ಕುಡಿಯನ್ನು ಕತ್ತರಿಸಿ ಮದಗಜದಂತದಿಂದ ಮಾಡಿದ ತೊಟ್ಟಿಲಿನಲ್ಲಿ ಮಲಗಿಸಲು ಅವನು ತೊಟ್ಟಿಲ ಕೂಸಾಗಿದ್ದ ಕಾಲದಿಂದಲೂ ತಾನು ‘ಗಜಪ್ರಿಯ’ನಾಗುವುದನ್ನು ಪ್ರಕಾಶಪಡಿಸಿದನು.

೪೪. ಈ ಅರಿಕೇಸರಿಯು ಸಾಕ್ಷಾತ್ ಇಂದ್ರನೇ ತಾನೆಂದು ಪ್ರಸಿದ್ಧಿ ಪಡೆದ ಇಂದ್ರರಾಜನ ತೋಳೆಂಬ ತೊಟ್ಟಿಲಿನಲ್ಲಿ ಬೆಳೆದನು. ವಿಸ್ತಾರವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಭೂಮಿಯಲ್ಲಿ ಇಂಥವರು ಮತ್ತಾರಿದ್ದಾರೆ?

೪೫. ಅಳತೆಗೆ ಸಿಲುಕದ ಭುಜಬಲವುಳ್ಳ ಈ ಮನುಜಮಾರ್ತಾಂಡನೃಪನು (ಮನುಷ್ಯರಲ್ಲಿ ಸೂರ್ಯನಂತಿರುವ ರಾಜನು) ತನ್ನ ವಿಶೇಷವಾದ ಬುದ್ಧಿಗುಣದಿಂದಲೂ ಅಸಾಧ್ಯವಾದ ಪರಾಕ್ರಮದಿಂದಲೂ ಶಾಸ್ತ್ರದ ಎಲ್ಲೆಯನ್ನೂ ಶತ್ರುಬಲದ ಎಲ್ಲೆಯನ್ನೂ ಜೊತೆಯಲ್ಲಿಯೇ ದಾಟಿದನು. ಎಂದರೆ ಶಾಸ್ತ್ರವಿದ್ಯೆಯನ್ನೂ ಶಸ್ತ್ರವಿದ್ಯೆಯನ್ನೂ ಏಕಕಾಲದಲ್ಲಿ ಕಲಿತನು.

೪೬. ಈತನು ತನ್ನ ಸೊಂಟಕ್ಕೆ ಕಟ್ಟಿರುವ ಮಣಿಗಳು ಹರಿದು ಹೋಗುವುದಕ್ಕೆ ಮುಂಚಿನಿಂದಲೂ ಅಂದರೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಿ ನಿಂದಲೂ ಹಟಸ್ವಭಾವದಿಂದ ಕೂಡಿ ಶತ್ರುಸೈನ್ಯಗಳ ಲ್ಲ ಕೆಳಗುರುಳುವ ಹಾಗೆ ಮಾಡಿ ಶತ್ರುಸೇನೆಯ ರಕ್ತಸಮುದ್ರದ ಮಧ್ಯದಲ್ಲಿರುವ

ಮೇಲೆೞ್ದ ಬಲಂ ಕೋಟಿಗೆ
ಮೇಲಪ್ಪೊಡಮನ್ಯವನಿತೆ ನೆಗೞ್ದೂರ್ವಶಿಗಂ|
ಮೇಲಪ್ಪೊಡಮಕ್ಕೆಂದುಂ
ಸೋಲವು ಕಣ್ ಪರಬಲಾಬ್ಧಿಗಂ ಪರವಧುಗಂ|| ೪೭

ಧುರದೊಳ್ ಮೂಱುಂ ಲೋಕಂ
ನೆರೆದಿರೆಯುಂ ಕುಡುವ ಪೋೞ್ತಳ್ ಮೇರುವೆ ಮುಂ|
ದಿರೆಯುಂ ಬೀರದ ಬಿಯದಂ
ತರಕ್ಕೆ ಕಿಱದೆಂದು ಚಿಂತಿಪಂ ಪ್ರಿಯಗಳ್ಳಂ|| ೪೮

ಸಮನೆನಿಸುವರ್ ಪ್ರಶಸ್ತಿ
ಕ್ರಮದೊಳ್ ಸ್ವಸ್ತಿ ಸಮಗತ ಪಂಚಮಹಾ ಶ|
ಬ್ದ ಮಹಾ ಸಾಮಂತರೆನಲ್
ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್|| ೪೯

ಉ|| ಚಾಗದ ಕಂಬಮಂ ನಿಱಸಿ ಬೀರದ ಶಾಸನಮಂ ನೆಗೞ ಕೋ
ಳ್ಪೋಗದ ಮಂಡಲಂಗಳನೆ ಕೊಂಡು ಜಔತ್ತ್ರಿತಯಂಗಳೊಳ್ ಜಸ|
ಕ್ಕಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್
ಮೇಗು ಪೊದೞ್ದ ಚಾಗದೊಳಮೊಂದಿದ ಬೀರದೊಳಂ ಗುಣಾರ್ಣವಂ|| ೫೦

ಮ||ಸ್ರ|| ಎನೆ ಸಂದುಂ ವೀರವೈರಿಕ್ಷಿತಿಪಗಜಘಟಾಟೋಪಕುಂಭಸ್ಥಳೀಳೇ
ದನನುಗ್ರೋದ್ಘಾಸಿ ಭಾಸ್ವದ್ಭುಜಪರಿಘನನಾರೂಢಸರ್ವಜ್ಞನಂ ವೈ|
ರಿ ನರೇಂದ್ರೋದ್ಧಾಮ ದರ್ಪೋದ್ದಳನನನೆ ಕಥಾನಾಯಕಂ ಮಾಡಿ ಸಂದ
ರ್ಜುನನೊಳ್ ಪೋಲ್ವೀ ಕಥಾಭಿತ್ತಿಯನನುನಯದಿಂ ಪೇೞಲೆಂದೆತ್ತಿಕೊಂಡೆಂ|| ೫೧

ವ|| ಅದೆಂತೆನೆ-ಸಮುನ್ಮಿಷ ರತ್ನಮಾಲಾ ಪ್ರಭಾಭೀಲಾರುಣ ಜಲಪ್ಲವಾವಿಳ ವಿಳೋಳವೀಚೀರಯ ಪ್ರದಾರಿತ ಕುಳಾಚಲೋದಪರೀತಮಾಗಿರ್ದ ಜಂಬೂದ್ವೀಪ ದೊಳಗುಂಟು ನಾಡು ಕುರುಜಾಂಗಣನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್-

ಜಿಗುಳೆಯು ಬೆಳೆಯುವ ಹಾಗೆ ಬೆಳೆದನು.

೪೭. ತನ್ನ ಮೇಲೆ ದಂಡೆತ್ತಿ ಬಂದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿದ್ದರೂ ಪರಸ್ತ್ರೀಯು ಪ್ರಸಿದ್ಧರೂಪವತಿಯಾದ ಊರ್ವಶಿಯನ್ನು ಮೀರಿದ್ದರೂ ಅವನ ಕಣ್ಣು ಮಾತ್ರ ಯಾವಾಗಲೂ ಶತ್ರುಸೇನಾಸಮುದ್ರಕ್ಕೂ ಪರವನಿತೆಗೂ ಸೋಲುವುದಿಲ್ಲ.

೪೮. ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಆ ಅರಿಕೇಸರಿಯು ಯುದ್ಧದಲ್ಲಿ ತನಗೆ ಮೂರುಲೋಕವೂ ಒಟ್ಟುಗೂಡಿ ಎಂದು ಎದುರಿಸಿದರೂ ಅದು ತನ್ನ ಪರಾಕ್ರಮದ ವ್ಯಾಪ್ತಿಗೆ ಕಿರಿದೆಂದೇ ಭಾವಿಸುತ್ತೇನೆ. ಹಾಗೆಯೇ ದಾನಮಾಡುವ ಹೊತ್ತಿನಲ್ಲಿ ಸುವರ್ಣ ಪರ್ವತವಾದ ಮೇರುಪರ್ವತವೇ ತನ್ನ ಮುಂದೆ ಇದ್ದರೂ ತನ್ನ ವ್ಯಯಶಕ್ತಿಗೆ ಅಲ್ಪವೆಂದೇ ಎಣಿಸುತ್ತಾನೆ. ೪೯. ಬಿರುದಾವಳಿ ಗಳನ್ನು ಹೊಗಳುವ ಪ್ರಸ್ತಾಪದಲ್ಲಿ ಮಾತ್ರ ಪಂಚಮಹಾಶಬ್ದಗಳನ್ನು (ಕೊಂಬು, ತಮಟೆ, ಶಂಖ, ಭೇರಿ, ರಾಜಘಂಟ) ಸಂಪಾದಿಸಿರುವ ಮಹಾಸಾಮಂತರು ಅರಿಕೇಸರಿಯೊಡನೆ ಸಮಾನರೆನಿಸಿಕೊಳ್ಳುತ್ತಾರೆಯೇ?

೫೦. ದಾನಶಾಸನಗಳನ್ನೂ ವೀರಸೂಚಕವಾದ ಪ್ರತಾಪಶಾಸನಗಳನ್ನೂ ಸ್ಥಾಪಿಸಿ ಅನವಾಗದ ರಾಜ್ಯಸಮೂಹಗಳನ್ನೆಲ್ಲ ವಶಪಡಿಸಿಕೊಂಡು ಮೂರುಲೋಕಗಳನ್ನೂ ತನ್ನ ಕೀರ್ತಿಗೆ ಆವಾಸಸ್ಥಾನ ಮಾಡಿಕೊಂಡ ಭದ್ರದೇವನಿಗಿಂತಲೂ ನರಸಿಂಹನಿಗಿಂತಲೂ ಸರ್ವವ್ಯಾಪಿಯಾದ ದಾನಗುಣದಲ್ಲಿಯೂ ಅವನಲ್ಲಿ ಸಹಜವಾಗಿರುವ ವೀರ್ಯಗುಣದಲ್ಲಿಯೂ ಗುಣಾರ್ಣವ ಬಿರುದಾಂಕಿತನಾದ ಅರಿಕೇಸರಿಯು ನಾಲ್ಕು ಬೆರಳಷ್ಟು ಮೇಲಾಗಿದ್ದಾನೆ.

೫೧. ಎಂದು ಪ್ರಸಿದ್ಧನಾದವನೂ ಶತ್ರುರಾಜರ ಆನೆಗಳ ಸಮೂಹದ ಬಲಿಷ್ಠವಾದ ಕುಂಭಸ್ಥಳವನ್ನು ಸೀಳುವವನೂ ಭಯಂಕರವೂ ಬಲಿಷ್ಠವೂ ಆದ ಕತ್ತಿಯಿಂದ ಪ್ರಕಾಶಮಾನವಾದ ತೋಳೆಂಬ ಪರಿಘಾಯುಧವುಳ್ಳವನೂ ಆರೂಢಸರ್ವಜ್ಞನೆಂಬ ಬಿರುದುಳ್ಳವನೂ ವೈರಿರಾಜರ ವಿಶೇಷವಾದ ಅಹಂಕಾರವನ್ನು ಅಡಗಿಸುವವನೂ ಆದ ಅರಿಕೇಸರಿಯನ್ನೇ ಈ ಕತೆಗೆ ನಾಯಕನನ್ನಾಗಿ ಮಾಡಿ ಪ್ರಸಿದ್ಧನಾದ ಅರ್ಜುನನೊಡನೆ ಹೋಲಿಸುವ ಈ ಕಥಾಚಿತ್ರವನ್ನು ಹೇಳಬೇಕೆಂದು ಪ್ರೀತಿಯಿಂದ ಅಂಗೀಕಾರ ಮಾಡಿದ್ದೇನೆ. ವ|| ಅದು ಹೇಗೆಂದರೆ ವಿಶೇಷವಾಗಿ ಪ್ರಕಾಶಿಸುತ್ತಿರುವ ವಿಧವಿಧವಾದ ರತ್ನಗಳ ಕಾಂತಿಯಿಂದ ಭೇದಿಸಲ್ಪಟ್ಟ ಕೆಂಪುನೀರಿನಿಂದ ಕಲುಷಿತವೂ ಚಂಚಲವೂ ಆದ ಅಲೆಗಳ ವೇಗದಿಂದ ಸೀಳಲ್ಪಟ್ಟ ಕುಲಪರ್ವತಗಳನ್ನುಳ್ಳ, ಸಮುದ್ರದಿಂದ ಆವೃತವೂ ಆದ ಜಂಬೂದ್ವೀಪದಲ್ಲಿ ಕುರುಜಾಂಗಣವೆಂಬ

ಚಂ|| ಜಲಜಲನೊೞ್ಕುತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೈ
ದಿಲ ಪೊಸವೂ ಪೊದೞ್ದ ಪೊಸ ನೈದಿಲ ಕಂಪನೆ ಬೀಱ ಕಾಯ್ತಂ ಕೆಂ|
ಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ವ ಶುಕಾಳಿ ತೋ ಕೆ
ಯ್ವೊಲಗಳಿನೊಪ್ಪಿ ತೋಱ ಸಿರಿ ನೋಡುಗುಮಾ ವಿಷಯಾಂತರಾಳದೊಳ್|| ೫೨

ಬೆಳೆದೆಱಗಿರ್ದ ಕೆಯ್ವೊಲನೆ ಕೆಯ್ವೊಲನಂ ಬಳಸಿರ್ದ ಪೂತ ಪೂ
ಗೊಳಗಳೆ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ|
ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ
ಗಳೆ ವಿಷಯಾಂಗನಾಲುಳಿತ ಕುಂತಳದಂತೆವೊಲೊಪ್ಪಿ ತೋಱುಗುಂ|| ೫೩

ಚಂ|| ಲಳಿತ ವಿಚಿತ್ರ ಪತ್ರ ಫಲ ಪುಷ್ಪಯುತಾಟವಿ ಸೊರ್ಕಿದಾನೆಯಂ
ಬೆಳೆವುದು ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಂ|
ಬೆಳೆವುದು ರಮ್ಯ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂ
ಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್|| ೫೪

ಕಂ|| ಅವಲರುಂ ಪಣ್ಣುಂ ಬೀ
ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ|
ಮ್ಯಾವುಗಳುಮೆಂದೊಡಿನ್ ಪೆಱ
ತಾವುದು ಸಂಸಾರ ಸಾರಸರ್ವಸ್ವ ಫಲಂ|| ೫೫

ಮಿಡಿದೊಡೆ ತನಿಗರ್ವು ರಸಂ
ಬಿಡುವುವು ಬಿರಿದೊಂದು ಮುಗುಳ ಕಂಪಿನೊಳೆ ಮೊಗಂ|
ಗಿಡುವುವು ತುಂಬಿಗಳೞ್ಕಮೆ
ವಡುವುವು ಕುಡಿದೊಂದು ಪಣ್ಣ ರಸದೊಳೆ ಗಿಳಿಗಳ್|| ೫೬

ಸುತ್ತಿಱದ ರಸದ ತೊಗಳೆ
ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ|
ನ್ಮತ್ತ ಮದಕರಿ ವನಂಗಳೆ
ಸುತ್ತಲುಮಾ ನೆಲದ ಸಿರಿಯನೇನಂ ಪೊಗೞ್ವೆರ|| ೫೭

ಹೆಸರಿನಿಂದ ಕೂಡಿದ ನಾಡೊಂದುಂಟು. ಹಾಗಿರುವಾಗ ಕುರುಜಾಂಗಣ ದೇಶದಲ್ಲಿ

೫೨. ಜಲಜಲ ಎಂದು ಶಬ್ದ ಮಾಡುತ್ತ ಪ್ರವಾಹವಾಗಿ ಹರಿಯುವ ಕಾಲುವೆಗಳು, ಆ ಕಾಲುವೆಗಳಲ್ಲಿ ಹರಡಿಕೊಂಡಿರುವ ಹೊಸದಾದ ನೆಯ್ದಿಲೆಯ ಹೂವು, ಸುತ್ತಲೂ ವ್ಯಾಪಿಸಿರುವ ಹೊಸನೆಯ್ದಿಲ ಹೂವಿನ ಸುಗಂಧವನ್ನು ಸೂಸಿ ಫಲ ಬಿಟ್ಟಿರುವ ಕೆಂಪುಗೊಂಚಲಿನ ಜೋತುಬಿದ್ದಿರುವ ಬತ್ತ, ಆ ಹೊಸ ಬತ್ತಕ್ಕೆ ಹಾಯ್ದು ಬರುವ ಗಿಣಿಗಳ ಗುಂಪು -ಇವು ಕಾಣುತ್ತಿರಲು ಆ ಗದ್ದೆಗಳಿಂದ ಮನೋಹರವಾಗಿ ತೋರುವ ಆ ದೇಶದಲ್ಲಿ ಲಕ್ಷ್ಮೀದೇವಿಯು ಸದಾ ನಲಿದಾಡುತ್ತಿದ್ದಾಳೆ. ಅಂದರೆ ಆ ಭಾಗವು ಸದಾ ಸಂಪದ್ಭರಿತವಾಗಿದೆ ಎಂದು ಭಾವ.

೫೩. (ಆ ದೇಶದಲ್ಲಿ ಎಲ್ಲಿ ನೋಡಿದರೂ) ಬೆಳೆದ ತೆನೆಯ ಭಾರದಿಂದ ಬಾಗಿರುವ ಗದ್ದೆಗಳೇ, ಆ ಗದ್ದೆಗಳನ್ನು ಬಳಸಿಕೊಂಡಿರುವ ಹೂವಿನಿಂದ ಕೂಡಿರುವ ಕೊಳಗಳೇ, ಆ ಹೂಗೊಳಗಳ ಸುತ್ತಲಿರುವ ವಿಚಿತ್ರವಾದ ತೋಟದ ಸಮೂಹಗಳೇ. ಆ ತೋಟವನ್ನು ಆವರಿಸಿಕೊಂಡಿರುವ ಮದಿಸಿದ ದುಂಬಿಗಳ ಗುಂಪುಗಳ ಆ ದೇಶವೆಂಬ ಸ್ತ್ರೀಯ ವಕ್ರವಾದ ಮುಂಗುರುಳಿನಂತೆ ಕಾಣುತ್ತದೆ.

೫೪. ಆ ನಾಡಿನ ಒಳಭಾಗದಲ್ಲಿ ಸುಂದರವೂ ವಿವಿಧವೂ ಆದ ಎಲೆ ಹಣ್ಣು ಹೂವುಗಳಿಂದ ಕೂಡಿದ ಕಾಡು ಮದ್ದಾನೆಗಳನ್ನು ಬೆಳೆಸುತ್ತದೆ. ಮಳೆಯಿಂದಲೇ ಬೆಳೆಯುವ ಹೊಲಗಳು ಸುವಾಸನಾಯುಕ್ತವಾದ ಬತ್ತವನ್ನು ಬೆಳೆಸುತ್ತವೆ. ರಮ್ಯವಾದ ತೋಟದ ಸಾಲುಗಳು ವಿರಹಿಗಳಿಗೆ ಪ್ರೀತಿಯನ್ನು ಹೆಚ್ಚಿಸುತ್ತವೆ. ಆ ದೇಶದ ನಾಡಿನಲ್ಲಿಯೂ ಕಾಡಿನಲ್ಲಿಯೂ ಬೆಳೆಯುವ ಬೆಳಸು ಇನಿದಾದ ಬೆಳಸಾಗಿವೆ.

೫೫. (ಅಲ್ಲಿಯ) ಹೂವು ಹಣ್ಣು ಮಲ್ಲಿಗೆಗಳೂ ರಸಯುಕ್ತವಾದ ಮಾವುಗಳೂ ಎಂದೂ ಮುಗಿದುಹೋಗವು ಎಂದಮೇಲೆ ಸಂಸಾರಸಾರ ಸರ್ವಸ್ವಫಲ ಬೇರೆ ಯಾವುದಿದೆ?

೫೬. ಆ ನಾಡಿನ ರಸಯುಕ್ತವಾದ ಕಬ್ಬು ಬೆರಳಿನಿಂದ ಮಿಡಿದರೇ ರಸವನ್ನು ಚೆಲ್ಲುತ್ತದೆ. ದುಂಬಿಗಳು ಅರಳಿದ ಒಂದು ಹೂವಿನ ವಾಸನೆಯಿಂದಲೇ ತೃಪ್ತಿಹೊಂದಿ ಮುಖವನ್ನು ತಿರುಗಿಸುವುವು. ಗಿಳಿಗಳು ಒಂದು ಹಣ್ಣಿನ ರಸವನ್ನು ಕುಡಿಯುವುದರಿಂದಲೇ ಅಜೀರ್ಣವನ್ನು ಹೊಂದುವುವು. ಅಂದರೆ ಅಲ್ಲಿಯ ಕಬ್ಬು, ಹೂವು, ಹಣ್ಣು ರಸಯುಕ್ತವಾಗಿವೆ.

೫೭. ಆ ನಾಡಿನ ಸುತ್ತಲೂ ಸಿದ್ಧರಸದ ಮಡುಗಳೇ,

ವ|| ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ರಾಜಧಾನಿಯಾಗಿರ್ದು ಹರಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂತೆ ದಿಕ್ಕರಿಕಟತಟಕ್ಕೆ ಮದಲೇಖೆಯಿರ್ಪಂತೆ ಕೈಟಭಾರಾತಿಯ ವಿಶಾಲೋರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರ ಮೆಂಬುದು ಪೊೞಲಲ್ಲಿ-

ರಗಳೆ|| ಅಂದರ ಪೊಱವೊೞಲ ವಿಶಾಲ ಕನಕ ಕೃತಕ ಗಿರಿಗಳಿಂ ಫಳಪ್ರಕೀರ್ಣತರುಗಳಿಂ
ನನೆಯ ಕೊನೆಯ ತಳಿರ ಮುಗುಳ ವನಲತಾನಿಕುಂಜದಿಂ ಪ್ರಸೂನ ರಜದ ಪುಂಜದಿಂ
ಗಗನತಳಮೆ ಪಱದು ಬಿೞ್ದುದೆನಿಪ ಬಹುತಟಾಕದಿಂ ಕುಕಿಲ್ವ ನಲಿವ ಕೋಕದಿಂ
ಸುರಿವ ಸುರಿಯಿಯಲರ ಮುಗುಳ್ಗೆ ಮೊಗಸಿದಳಿಕುಳಂಗಳಿಂ ತೊದಲ್ವ ಶಿಶು ಶಕುಂಗಳಿಂ
ತೆಗೆಯೆ ಬೀರರವದೆ ಮೇಲೆ ಪರಿವ ಮದಗಜಗಳಿಂ ಚಳತ್ತುರಂಗಮಂಗಳಿಂ
ಲವಣ ಜಳ ಬಳಸಿದಂತೆ ಬಳಸಿದಗೞ ನೀಳದಿಂದುದಗ್ರ ಕನಕಶಾಳದಿಂ
ದೊಳಗೆ ಕುಲನಗಂಗಳೆನಿಪ ದೇವಕುಲದ ಭೋಗದಿಂ ಸರಾಗಮಾದ ರಾಗದಿಂ
ದಿವಮನೇಳಿಪಂತು ಮಿಳಿರ್ವ ವಿವಿಧ ಕೇತನಂಗಳಿಂ ಸದಾನಿಕೇತನಂಗಳಿಂ
ಧನದ ಭವನಮೆನಿಪ ಸಿರಿಯ ಬಚ್ಚರಾಪಣಂಗಳಿಂ ಪೊದೞ್ದ ಕಾವಣಂಗಳಿಂ
ವಿಟಜನಕ್ಕೆ ತೊಡರ್ವ ಚಾರಿಯೆನಿಪ ಸೂಳೆಗೇರಿಯಿಂ ವಿದಗ್ಧ ಹೃದಯಹಾರಿಯಿಂ
ಕನಕ ಗೋಪುರಂಗಳೊಳಗಣೆರಡು ದೆಸೆಯ ಗುಣಣೆಯಿಂ ವಿಳಾಸಿನಿಯರ ಗಡಣೆಯಿಂ
ಸುರತಸುಖದ ಬಳ್ಳವಳ್ಳಿಯೆನಿಪ ಬಳ್ಳಿಮಾಡದಿಂ ಮಹಾ ವಿನೋದನೀಡದಿಂ
ಕನಕಶೈಲಮೆನಿಸಿ ನೆಗೞ್ದ ಭೂಮಿಪಾಲಭವನದಿಂ ಸಮಸ್ತ ವಸ್ತುಭುವನದಿಂ|| ೫೮

ವ|| ಅಂತು ಮೂಱುಲೋಕದ ಚೆಲ್ವೆಲ್ಲಮಂ ವಿಧಾತ್ರನೊಂದೆಡೆಗೆ ತೆರಳ್ಪಿದಂತೆ ಸಮಸ್ತವಸ್ತುವಿಸ್ತಾರಹಾರಮಾಗಿರ್ದ ಹಸ್ತಿನಪುರವೆ ನಿಜವಂಶಾವಳಂಬಮಾಗೆ ನೆಗೞ್ದ ಭರತಕುಲತಿಲಕರ ವಂಶಾವತಾರಮೆಂತಾದುದೆಂದೊಡೆ-

ಕಂ|| ಜಳರುಹನಾಭನ ನಾಭಿಯ
ಜಳ ಬುದ್ಬುದದೊಳಗೆ ಸುರಭಿ ಪರಿಮಳ ಮಿಳಿತೋ|
ಲ್ಲುಳಿತಾಳಿ ಜಲಜಮಾಯ್ತಾ
ಜಳಜದೊಳೊಗೆದಂ ಹಿರಣ್ಯಗರ್ಭ ಬ್ರಹ್ಮಂ|| ೫೯

ಮುತ್ತುರತ್ನಗಳಿಂದ ಮಾಡಿದ ಮನೆಗಳೇ, ಮದ್ದಾನೆಗಳಿಂದ ಕೂಡಿದ ಕಾಡುಗಳೇ. ಆ ನೆಲದ ಸಂಪತ್ತನ್ನು ಏನೆಂದು ಹೊಗಳಲಿ. ವ|| ಹಾಗೆ ಸೊಗಯಿಸುತ್ತಿರುವ ಕುರುಜಾಂಗಣದೇಶಕ್ಕೆ ಪ್ರಕಾಶಮಾನವಾದ ರಾಜಧಾನಿ ಹಸ್ತಿನಾಪುರ. ಅದು ಈಶ್ವರನ ಜಟೆಯ ಸಮೂಹಕ್ಕೆ ಚಂದ್ರಲೇಖೆಯ ಹಾಗೆಯೂ ದಿಗ್ಗಜಗಳ ಗಂಡಸ್ಥಲಕ್ಕೆ ಮದಲೇಖೆಯ ಹಾಗೆಯೂ ವಿಷ್ಣುವಿನ ವಿಶಾಲವಾದ ವಕ್ಷಸ್ಥಳಕ್ಕೆ ಕೌಸ್ತುಭಮಣಿಯ ಹಾಗೆಯೂ ಸೊಗಯಿಸುತ್ತಿದೆ. ಆ ಪಟ್ಟಣದಲ್ಲಿ

೫೮. ಆ ಪಟ್ಟಣದ ಹೊರಭಾಗದಲ್ಲಿರುವ ಚಿನ್ನದಿಂದ ಮಾಡಿದ ಕೃತಕಪರ್ವತಗಳಿಂದಲೂ ಹಣ್ಣುಗಳಿಂದಲೂ ತುಂಬಿರುವ ಗಿಡಗಳಿಂದಲೂ ಹೂವು, ಕುಡಿ, ಚಿಗುರು, ಮೊಗ್ಗುಗಳಿಂದ ಕೂಡಿದ ತೋಟದ ಬಳ್ಳಿಮಾಡಗಳಿಂದಲೂ ಹೂವಿನ ಪರಾಗದ ರಾಶಿಗಳಿಂದಲೂ ಆಕಾಶಪ್ರದೇಶವೇ ಹರಿದು ಕೆಳಗೆ ಬಿದ್ದಿದೆಯೋ ಎನ್ನಿಸಿಕೊಳ್ಳುವ ವಿಶೇಷವಾದ ಸರೋವರಗಳಿಂದಲೂ ಶಬ್ದಮಾಡುತ್ತಿರುವ ಕೋಗಿಲೆಗಳಿಂದಲೂ ತಾನಾಗಿ ಸುರಿಯುತ್ತಿರುವ ಸುರಗಿಯ ಹೂವಿನ ಮೊಗ್ಗುಗಳಿಗೆ ಮುತ್ತಿಕೊಂಡಿರುವ ದುಂಬಿಯ ಸಮೂಹದಿಂದಲೂ ತೊದಲು ಮಾತನಾಡುತ್ತಿರುವ ಗಿಳಿಯ ಮರಿಗಳಿಂದಲೂ ವೀರಶಬ್ದಗಳಿಂದ ಮುನ್ನಡೆಸಲು ಮುಂದಕ್ಕೆ ನುಗ್ಗುತ್ತಿರುವ ಮದ್ದಾನೆಗಳಿಂದಲೂ ಚಲಿಸುತ್ತಿರುವ ಕುದುರೆಗಳಿಂದಲೂ ಲವಣಸಮುದ್ರವೇ ಬಳಸಿಕೊಂಡಂತೆ ಸುತ್ತುವರಿದಿರುವ ಕಂದಕಗಳ ಹರವಿನಿಂದಲೂ, ಎತ್ತರವಾದ ಚಿನ್ನದ ಗೋಡೆಯಿಂದಲೂ ಒಳಭಾಗದಲ್ಲಿ ಕುಲಪರ್ವತವೆನಿಸಿಕೊಳ್ಳುವ ದೇವಸ್ಥಾನಗಳ ಐಶ್ವರ್ಯದಿಂದಲೂ ಸ್ವರ್ಗವನ್ನೇ ಹಾಸ್ಯಮಾಡುವ ಹಾಗೆ ಚಲಿಸುತ್ತಿರುವ ಧ್ವಜಗಳಿಂದಲೂ ದಾನಮಾಡುವವರ ಮನೆಗಳಿಂದಲೂ, ಕುಬೇರಭವನಗಳೆನಿಸಿ ಕೊಂಡಿರುವ ಸಂಪದ್ಯುಕ್ತವಾದ ವೈಶ್ಯರ ಅಂಗಡಿಗಳಿಂದಲೂ ವ್ಯಾಪಿಸಿಕೊಂಡಿರುವ ಚಪ್ಪರಗಳಿಂದಲೂ ವಿಟ ಜನರು ಸಿಕ್ಕಿಕೊಳ್ಳುವ ಸಂಕೋಲೆಯಂತೆಯೂ ಪಂಡಿತರ ಹೃದಯವನ್ನೂ ಸೂರೆಗೊಳ್ಳುವಂತೆಯೂ ಇರುವ ಸೂಳೆಗೇರಿಯಿಂದಲೂ ಚಿನ್ನದ ಗೋಪುರದೊಳಗಿರುವ ಎರಡು ಕಡೆಯ ನೃತ್ಯಶಾಲೆಗಳಿಂದಲೂ ವಿಲಾಸವತಿಯರಾದ ಸ್ತ್ರೀಯರ ಸಮೂಹದಿಂದಲೂ ಸಂಭೋಗ ಸುಖಾತಿಶಯದಿಂದ ಕೂಡಿದ ಲತಾಗೃಹದಿಂದಲೂ ಆರಾಮಗೃಹಗಳಿಂದಲೂ ಮೇರುಪರ್ವತವೆನಿಸಿಕೊಂಡು ಪ್ರಸಿದ್ಧಿಯಾಗಿರುವ ಅರಮನೆಗಳಿಂದಲೂ ಭಂಡಾರಗಳಿಂದಲೂ ವ|| ಮೂರುಲೋಕದ ಸೌಂದರ್ಯವನ್ನು ಬ್ರಹ್ಮನು ಒಂದು ಕಡೆ ರಾಶಿ ಮಾಡಿದ ಹಾಗೆ ಸಮಸ್ತ ವಸ್ತು ವಿಸ್ತಾರದಿಂದ ಮನೋಹರವಾಗಿದ್ದ ಹಸ್ತಿನಾಪಟ್ಟಣದಲ್ಲಿ ಭರತವಂಶಶ್ರೇಷ್ಠರು ರಾಜ್ಯಭಾರ ಮಾಡುತ್ತಿದ್ದರು. ಅವರ ಹುಟ್ಟು ಹೇಗಾಯಿತೆಂದರೆ

೫೯. ವಿಷ್ಣುವಿನ ಹೊಕ್ಕುಳ ನೀರಿನ ಗುಳ್ಳೆಯಲ್ಲಿ ಸುಗಂಧಯುಕ್ತವೂ ದುಂಬಿಗಳಿಂದ ಆವೃತವೂ ಆದ

ಕಮಲೋದ್ಭವನಮಳಿನ ಹೃ
ತ್ಕಮಲದೊಳೊಗೆದರ್ ಸುರೇಂದ್ರ ಧಾರಕರಾವಾ|
ಗಮಳರ್ ನೆಗೞರ್ದರ್ ಪುಲ
ಹ ಮರೀಚ್ಯತ್ರ್ಯಂಗಿರ ಪುಳಸ್ತ್ಯ ಕ್ರತುಗಳ್|| ೬೦

ವ|| ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟಿದಱುವರ್ಮಕ್ಕಳೊಳಗೆ ಮರೀಚಿಯ ಮಗಂ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯಂ ಸೂರ್ಯನಾತನಿಂದವ್ಯವಚ್ಛಿನ್ನಮಾಗಿ ಬಂದಂ ವಂಶ ಸೂರ್ಯವಂಶಮೆಂಬುದಾಯ್ತು-

ಕಂ|| ಅತ್ರಿಯ ಪಿರಿಯ ಮಗಂ ಭುವ
ನತ್ರಯ ಸಂಗೀತ ಕೀರ್ತಿ ಸೋಮಂ ಸಕಲ|
ಕ್ಷತ್ರಕುಲಪೂಜ್ಯನಮಳ ಚ
ರಿತ್ರಂ ಪ್ರೋದ್ದಾಮ ಸೋಮವಂಶಲಲಾಮಂ|| ೬೧

ಆ ಸೋಮವಂಶಜರ್ ಪಲ
ರಾಸುಕರಂಬೆರಸು ನೆಗೞ್ದ ಜಸದಿಂ ಜಗಮಂ|
ಬಾಸಣಿಸಿ ಪೋದೊಡಕ ವಿ
ಳಾಸಂ ದೌಷ್ಯಂತಿ ಭರತನೆಂಬಂ ನೆಗೞ್ದಂ|| ೬೨

ಚಾರುಚರಿತ್ರಂ ಭರತನ
ಪಾರಗುಣಂ ತನ್ನ ಪೆಸರೊಳಮರ್ದೆಸೆಯೆ ಯಶೋ|
ಭಾರಂ ಕುಲಮುಂ ಕಥೆಯುಂ
ಭಾರತಮೆನೆ ನೆಗೞ್ದನಂತು ನೆಗೞ್ವುದು ಭೂಪರ್|| ೬೩

ಭರತನನೇಕಾಧ್ವರ ಭರ
ನಿರತಂ ಜಸಮುೞಯೆ ಕೞಯೆ ಭೂಪರ್ ಪಲರಾ|
ದರಿಸಿದ ಧರಣೀಭರಮಂ
ಧರಿಯಿಸಿದಂ ಪ್ರತಿಮನೆಂಬನಪ್ರತಿಮಬಲಂ|| ೬೪

ಅಂತಾ ಪ್ರತಿಮಂಗೆ ಸುತರ್
ಶಂತನು ಬಾಹ್ಲಿಕ ವಿನೂತ ದೇವಾಪಿಗಳೋ|
ರಂತೆ ಧರೆ ಪೊಗೞೆ ನೆಗೞ್ದರ
ನಂತ ಬಳರ್ ಪರಬಳ ಪ್ರಭೇದನ ಶೌರ್ಯರ್|| ೬೫

ಕಮಲವು ಹುಟ್ಟಿತು. ಆ ಕಮಲದಲ್ಲಿ ಹಿರಣ್ಯಗರ್ಭ ಬ್ರಹ್ಮನು ಹುಟ್ಟಿದನು. ೬೦. ಬ್ರಹ್ಮನ ಪರಿಶುದ್ಧವಾದ ಹೃದಯಕಮಲದಲ್ಲಿ ಶ್ರೇಷ್ಠವಾದ ನೀರಿನ ಕಮಂಡಲವನ್ನು ಧರಿಸಿದ ಶುದ್ಧ ವಾಕ್ಕುಳ್ಳ ಪುಲಹ, ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ ಮತ್ತು ಕ್ರತು ಎಂಬುವರು ಹುಟ್ಟಿದರು. ವ|| ಹಾಗೆ ಹಿರಣ್ಯಗರ್ಭ ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಆರುಜನ ಮಕ್ಕಳಲ್ಲಿ ಮರೀಚಿಯ ಮಗನಾದ ಕಶ್ಯಪನು ಅನೇಕಲೋಕಗಳ ಉತ್ಪತ್ತಿಯೆಂಬ ನಾಟಕಕ್ಕೆ ಸೂತ್ರಧಾರನಾದನು. ತಡೆಯಿಲ್ಲದೆ ಪರಾಕ್ರಮದಿಂದ ಕೂಡಿದವನು ಅವನ ಮಗ ಸೂರ್ಯನೆಂಬುವನು. ಆತನಿಂದ ಏಕಪ್ರಕಾರವಾಗಿ ನಡೆದುಬಂದ ವಂಶ ಸೂರ್ಯವಂಶವೆಂಬುದಾಯಿತು. ೬೧. ಮೂರು ಲೋಕದಲ್ಲಿಯೂ ಹಾಡಲ್ಪಟ್ಟ ಕೀರ್ತಿಯುಳ್ಳವನೂ ಸಮಸ್ತಕ್ಷತ್ರಿಯಸಮೂಹದಲ್ಲಿ ಪೂಜ್ಯನಾದವನೂ ಪರಿಶುದ್ಧವಾದ ನಡತೆಯುಳ್ಳವನೂ ಅತ್ಯತಿಶಯವಾದ ಸೋಮವಂಶ ಶ್ರೇಷ್ಠನೂ ಆದ ಸೋಮನೆಂಬುವನು ಅತ್ರಿಯ ಹಿರಿಯ ಮಗ. ೬೨. ಆ ಸೋಮವಂಶದಲ್ಲಿ ಹುಟ್ಟಿದ ಅನೇಕರು ಅತ್ಯತಿಶಯವೂ ಪ್ರಸಿದ್ಧವೂ ಆದ ಕೀರ್ತಿಯಿಂದ ಲೋಕವನ್ನೆಲ್ಲ ಮುಚ್ಚಿ ಮರಣ ಹೊಂದಲಾಗಿ ಅತ್ಯಂತ ವಿಳಾಸದಿಂದ ಕೂಡಿದ ದುಷ್ಯಂತನ ಮಗನಾದ ಭರತನೆಂಬುವನು ಪ್ರಸಿದ್ಧನಾದನು. ೬೩. ಸಚ್ಚರಿತ್ರನೂ ಅಪಾರಗುಣಯುತನೂ ಯಶಸ್ಸಿನ ಭಾರದಿಂದ ಕೂಡಿದವನೂ ಆದ ಭರತನು ತನ್ನ ಕುಲವೂ ಕಥೆಯೂ ತನ್ನ ಹೆಸರಿನಲ್ಲಿ ಸೇರಿ ಭಾರತವೆಂದು ಪ್ರಸಿದ್ಧಿಯಾಗುವ ಹಾಗೆ ಪ್ರಖ್ಯಾತನಾದನು. ರಾಜರು ಹೀಗೆ ಪ್ರಸಿದ್ಧರಾಗಬೇಕು. ೬೪. ಅನೇಕ ಯಜ್ಞ ಕಾರ್ಯಗಳಲ್ಲಿ ಆಸಕ್ತನಾದ ಭರತನು ಕೀರ್ತಿಶೇಷನಾಗಿ ಸಾಯಲು ಅನೇಕ ರಾಜರು ಪ್ರೀತಿಸಿದ ಭೂಭೂರವನ್ನು (ರಾಜ್ಯಭಾರವನ್ನು) ಅಪ್ರತಿಮಬಲನಾದ ಪ್ರತಿಮನೆಂಬುವನು ಧರಿಸಿದರನು. ೬೫. ಹಾಗೆ ಆ ಪ್ರತಿಮನಿಗೆ ಕೊನೆಯಿಲ್ಲದ ಬಲವುಳ್ಳವರೂ ಶತ್ರುಸೈನ್ಯವನ್ನು ವಿಶೇಷವಾಗಿ ಭೇದಿಸುವ ಶೌರ್ಯವುಳ್ಳವರೂ ಆದ ಬಾಹ್ಲಿಕ, ವಿನೂತ,

ವ|| ಅವರೊಳಗೆ ದೇವಾಪಿ ನವಯೌವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದಂ ಪ್ರತಿಮನುಂ ಪ್ರತಾಪಪ್ರಸರಪ್ರಕಟ ಪಟುವಾಗಿ ಪಲವುಕಾಲಮರಸುಗೆಯ್ದು ಸಂಸಾರಾಸಾರತೆಗೆ ಪೇಸಿ ತಪೋವನಕ್ಕಭಿಮುಖನಾಗಲ್ಬಗೆದು-

ಕಂ|| ಕಂತು ಶರ ಭವನನಾ ಪ್ರಿಯ
ಕಾಂತಾ ಭ್ರೂವಿಭ್ರಮ ಗೃಹಾಗ್ರಹವಶದಿಂ|
ಭ್ರಾಂತಿಸದುಪಶಾಂತಮನಂ
ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ|| ೬೬

ಶಂತನುಗಮಮಳ ಗಂಗಾ
ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ|
ಭ್ರಾಂತಿಯೊಳೆ ಬಂದು ನಿರ್ಜಿತ
ಕಂತುವೆನಲ್ಕಂತು ಪುಟ್ಟಿದಂ ಗಾಂಗೇಯಂ|| ೬೭

ವ|| ಅಂತು ಭುವನಕ್ಕೆಲ್ಲಮಾಯಮುಮಳವುಮಱವುಮಣ್ಮುಂ ಪುಟ್ಟುವಂತೆ ಪುಟ್ಟಿ ನವಯೌವನಂ ನೆಯೆ ನೆಯೆ-

ಶಾ|| ಸೌಲಪ್ರಾಂಶು ವಿಶಾಲಲೋಲನಯನಂ ಪ್ರೋದ್ಯದ್ವೃಷಸ್ಕಂಧನು
ನ್ಮೀಲತ್ಪಂಕಜವಕ್ತ್ರನಾಯತ ಸಮಗ್ರೋರಸ್ಥಳಂ ದೀರ್ಘ ಬಾ|
ಹಾಲಂಬಂ ಭುಜವೀರ್ಯವಿಕ್ರಮಯುತಂ ಗಂಗಾತ್ಮಜನ್ಮಂ ಜಯ
ಶ್ರೀಲೋಲಂ ಜಮದಗ್ನಿರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ|| ೬೮

ವ|| ಅಂತು ಕಲ್ತು ಮುನ್ನಮೆ ಚಾಪವಿದ್ಯೆಯೊಳಾರಿಂದವಿತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾಪರಿಕಲಿತ ಕಂಠಲುಂಠನುಮಾಗಿ ಪ್ರಮಾಣನಿಜಭುಜದಂಡದಂಡಿತಾರಾತಿಮಂಡಲನುಮಾಗಿ ಗಾಂಗೇಯಂ ಸುಖದೊಳರಸು ಗೆಯ್ಯುತ್ತಿರ್ಪ ನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ತಾವತಿಯೆಂಬ ತೊಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟಿದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಣ್ಬೇಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತೆಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ ಕ್ಷರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೋಪಳಲ್ಲಿಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗನೆಡೆಗೊಂಡು ಜಗುನೆಯಂ ಪಾಯ್ವಾಗಳುಗಿಬಗಿ ಮಾಡಿದಾಗಳದಱ ಕೈಯಿಂ ಬರ್ದುಂಕಿ ತೊಯೊಳಗೆ ಬಿೞ್ದೊಡದನೊಂದು ಬಾಳೆವಿನ್ನುಂಗಿ ಗರ್ಭಮಂ ತಾಳ್ದಿದೊಡೊಂದು ದಿವಸಮಾ ವಿನನೊರ್ವ ಜಾಲಗಾಱಂ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಱದೊಡದಂ

ದೇವಾಪಿಗಳೆಂಬ ಮಕ್ಕಳು ಲೋಕವು ಏಕಪ್ರಕಾರವಾಗಿ ಹೊಗಳುವಂತೆ ಪ್ರಸಿದ್ಧರಾದವರು. ವ|| ಅವರಲ್ಲಿ ದೇವಾಪಿಯು ಹೊಸದಾದ ಯವ್ವನ ಪ್ರಾರಂಭದಲ್ಲಿಯೇ ತಪಸ್ಸು ಮಾಡುವುದರಲ್ಲಿ ಆಸಕ್ತನಾದನು. ಪ್ರತಿಮನೂ ಕೂಡ ಪ್ರತಾಪವನ್ನು ಪ್ರಕಟಿಸುವುದರಲ್ಲಿ ಸಮರ್ಥನಾಗಿ ಅನೇಕಕಾಲ ರಾಜ್ಯಭಾರಮಾಡಿ ಸಂಸಾರದ ಅಸಾರತೆಗೆ ಅಸಹ್ಯಪಟ್ಟು ತಪೋವನಕ್ಕಭಿಮುಖನಾದನು. ೬೬. ಮನ್ಮಥನ ಬಾಣಗಳಿಗೆ ವಾಸಸ್ಥಾನವಾದ ಬತ್ತಳಿಕೆಯ ಹಾಗಿದ್ದ ಆ ಪ್ರತಿಮನು ತನ್ನ ಪ್ರೀತಿಪಾತ್ರರಾದ ಸ್ತ್ರೀಯರ ಹುಬ್ಬಿನ ವಿಲಾಸವೆಂಬ ಗ್ರಹಕ್ಕೆ ವಶನಾಗಿ ಭ್ರಮೆಗೊಳ್ಳದೆ ಸಮಾಧಾನಚಿತ್ತನಾಗಿ ಸಮಸ್ತರಾಜ್ಯ ಸಂಪತ್ತನ್ನೂ ಶಂತನುವಿಗೆ ಕೊಟ್ಟನು. ೬೭. ಶಂತನುವಿಗೂ ಪರಿಶುದ್ಧಳಾದ ಗಂಗಾದೇವಿಗೂ ಎಂಟನೆಯ ವಸುವು ವಸಿಷ್ಠನ ಶಾಪದಿಂದ ರೂಪಿನಲ್ಲಿ ಮನ್ಮಥನನ್ನು ಸೋಲಿಸುವ ಸೌಂದರ್ಯದಿಂದ ಕೂಡಿ ಭೀಷ್ಮನಾಗಿ ಹುಟ್ಟಿದನು. ೬೮. ಸಾಲವೃಕ್ಷದಂತೆ ಎತ್ತರವಾಗಿರುವವನೂ ವಿಸ್ತಾರವೂ ವಿಲಾಸದಿಂದ ಕೂಡಿದುದೂ ಆದ ಕಣ್ಣುಳ್ಳವನೂ ಗೂಳಿಯಂತೆ ಎತ್ತರವಾದ ಹೆಗಲುಳ್ಳವನೂ ಉದ್ದವಾದ ತೋಳುಗಳಿಗೆ ಅವಲಂಬನವಾದ ಬಾಹುವೀರ್ಯಪರಾಕ್ರಮವುಳ್ಳವನೂ ವಿಜಯಲಕ್ಷ್ಮಿಯಲ್ಲಿ ಆಸಕ್ತನಾಗಿರುವವನೂ ಆದ ಭೀಷ್ಮನು ಪರಶುರಾಮನಲ್ಲಿ ಬಿಲ್ವಿದ್ಯೆಯನ್ನು ಕಲಿತನು. ವ|| ಹಾಗೆ ಕಲಿತು ಮೊದಲೇ ಬಿಲ್ವಿದ್ಯೆಯಲ್ಲಿ ಇವನೇ ಎಲ್ಲರಿಗಿಂತಲೂ ಉತ್ತಮವೆನಿಸಿಕೊಂಡ ಪರಶುರಾಮನಿಗೆ ತಾನೇ ಆಚಾರ್ಯನಾಗಿ ಯುವರಾಜ ಪದವಿಗೆ ಸೂಚಕವಾದ ಕತ್ತಿನ ಹಾರದಿಂದ ಕೂಡಿದ ಕೊರಳ ಚಲನೆಯುಳ್ಳವನೂ ತನ್ನ ನೀಳವೂ ದಪ್ಪವೂ ಆದ ಭುಜದಂಡದಿಂದ ಶಿಕ್ಷಿಸಲ್ಪಟ್ಟ ಶತ್ರುಸಮೂಹವುಳ್ಳವನೂ ಆಗಿ ಭೀಷ್ಮನು ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಗಂಗಾದೇಶದಲ್ಲಿ ಉಪರಿಚರವಸುವೆಂಬುವನು ಮುಕ್ತಾವತಿಯೆಂಬ ನದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಕೋಳಾಹಳಪರ್ವಕ್ಕೆ ಹುಟ್ಟಿದ ಗಿರಿಜೆಯೆಂಬ ಕನ್ಯೆಯನ್ನು ಆತನು ನೋಡಿ, ನೋಡಿದ ಕೂಡಲೇ ದೇಹವಶನಾಗಿ ಪ್ರೀತಿಸಿ ಮದುವೆಯಾದನು. ಒಂದು ದಿವಸ ಆತನು ಇಂದ್ರನ ಸಭೆಗೆ ಹೋಗಿ ಋತುಕಾಲ ಪ್ರಾಪ್ತೆಯಾಗಿದ್ದ ತನ್ನ ಪ್ರಿಯಳಲ್ಲಿಗೆ ಬರಲು ಸಾಧ್ಯವಾಗದೆ ಅವಳನ್ನು ನೆನೆದು ರೇತಸ್ಖಲನವಾಗಲು ಅದನ್ನು ಒಂದು ಬಾಳೆಯ ಎಲೆಯಲ್ಲಿ ಸುತ್ತಿ ತಾನು ಸಾಕಿದ ಗಿಳಿಯ ಕಯ್ಯಲ್ಲಿ ಕಳುಹಿಸಿದನು. ಅದನ್ನು ತರುತ್ತಿದ್ದ ಅರಗಿಳಿಯನ್ನು ಒಂದು ಗಿಡುಗನು ಅಡ್ಡಗಟ್ಟಿ ಯಮುನಾ

ವಿದಾರಿಸಿ ನೋೞ್ಪನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸ್ಯಗಂಯುಂ ಮತ್ಸ ಗಂಧನುಮೆಂದು ಪೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮೆ ಬ್ರಹ್ಮರ ಮೊಮ್ಮನಪ್ಪ ಪರಾಶರ ಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊಯ ತಡಿಯೊಳೋಡಮಂ ನಡೆಯಿಸುವ ಮತ್ಸ್ಯಗಂಯಂ ಕಂಡೆಮ್ಮನೀ ತೊಯಂ ಪಾಯಿಸೆಂಬುದುಂ ಸಾಸಿರ್ವರೇಱದೊಡಲ್ಲದೀಯೋಡಂ ನಡೆಯದೆಂಬುದುಮಾಮನಿಬರ ಬಿಣ್ಪುಮಪ್ಪೆ ಮೇಱಸಂದೊಡಂತೆ ಗೆಯ್ವೆನೆಂದೋಡಮೇಱಸಿ ನಡೆಯಿಸುವಲ್ಲಿ ದಿವ್ಯಕನ್ನೆಯನೞ್ಕರ್ತು ನೋಡಿ-

ಮ|| ಮನದೊಳ್ ಸೋಲ್ತು ಮುನೀಂದ್ರನಾಕೆಯೊಡಲೀ ದುರ್ಗಂಧರೋಪಂತೆ ಯೋ
ಜನ ಗಂತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂ|
ಜನಲಂಪೞ್ಕಱನೀಯೆ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾ
ಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೇಗೆಯ್ಡೊಡಂ ತೀರದೇ|| ೬೯

ವ|| ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ ಕಪಾಳ್ವ ಹಸ್ತನುಂ ಕೃಷ್ಣಮೃಗ ತ್ವಕ್ವ್ವ ರಿಧಾನನುಮಾಗೆ ವ್ಯಾಸಭಟ್ಟಾರಕಂ ಪುಟ್ಟುವುದು ಮಾತನನೊಡಗೊಂಡು ಸತ್ಯವತಿಗೆ ಪುನ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್-

ಮ|| ಮೃಗಯಾವ್ಯಾಜದಿನೊರ್ಮೆ ಶಂತನು ತೊಱಲ್ತರ್ಪಂ ಪಳಂಚಲೈ ತ
ನ್ಮ ಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೋಲ್ತು ಕಂಡೋಲ್ದು ನ|
ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀನ್ ಬಾ ಪೋಪಮೆಂದಂಗೆ ಮೆ
ಲ್ಲಗೆ ತತ್ಕನ್ಯಕೆ ನಾಣ್ಚಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ|| ೭೦

ವ|| ಎಂಬುದುಂ ಶಂತನು ಪೊೞಲ್ಗೆ ಮಗುೞ್ದು ವಂದವರಯ್ಯನಪ್ಪ ದಾಶರಾಜನಲ್ಲಿಗೆ ಕೂಸಂ ಬೇಡೆ ಪೆರ್ಗಡೆಗಳನಟ್ಟಿದೊಡೆ ಗಾಂಗೇಯಂ ದೊರೆಯ ಪಿರಿಯ ಮಗನುಂ ಕ್ರಮಕ್ರಮಾರ್ಹನುಮಿರ್ದಂತೆನ್ನ ಮಗಳಂ ಕುಡಿಮೆಮ್ಮ ಮಗಳ್ಗೆ ಪುಟ್ಟದಾತಂ ರಾಜ್ಯಕ್ಕೊಡೆಯನುಂ ಪಿರಿಯ ಮಗನುಂ ಕ್ರಮಕ್ಕರ್ಹನುಮಪ್ಪೊಡೆ ಕುಡುವೆಮೆನೆ ತದ್ವ ತ್ತಾಂತಮಂ ಮಂತ್ರಿಗಳಿಂ ಶಂತನು ಕೇಳ್ದು-

ನದಿಯನ್ನು ದಾಟುವಾಗ ಹಿಂಸೆ ಮಾಡಲು ಅದರ ಕಯ್ಯಿಂದ ಜಾರಿಕೊಂಡು ನೀರಿನಲ್ಲಿ ಬಿದ್ದಿತು. ಅದನ್ನು ಒಂದು ಬಾಳೆಮೀನು ನುಂಗಿ ಗರ್ಭವನ್ನು ಧರಿಸಿತು. ಅದನ್ನು ಒಬ್ಬ ಬೆಸ್ತರವನು ಬಲೆಯಲ್ಲಿ ಹಿಡಿದು ಅಲ್ಲಿಯ ರಾಜನಲ್ಲಿಗೆ ತೆಗೆದುಕೊಡುಹೋಗಿ ತೋರಿದನು. ಅವನು ಅದನ್ನು ಸೀಳಿ ನೋಡಿ ಮೀನಿನ ಗರ್ಭದಲ್ಲಿದ್ದ ಬಾಲೆಯನ್ನೂ ಬಾಲಕನನ್ನೂ ಕಂಡು ಎತ್ತಿಕೊಂಡು ಮತ್ಸ್ಯಗಂ ಮತ್ಸ್ಯಗಂಧನೆಂಬ ಹೆಸರನ್ನಿಟ್ಟು ಸಲಹಿ ಯಮುನಾತೀರದಲ್ಲಿರುತ್ತಿದ್ದನು. ಅಲ್ಲಿಗೆ ಒಂದು ಸಲ ಬ್ರಹ್ಮನ ಮೊಮ್ಮಗನಾದ ವೃದ್ಧಪರಾಶರನೆಂಬ ಋಷಿಯು ಉತ್ತರದೇಶಕ್ಕೆ ಹೋಗುತ್ತ ಒಂದು ನದಿಯ ದಡದಲ್ಲಿ ದೋಣಿಯನ್ನು ನಡೆಸುತ್ತಿದ್ದ ಮತ್ಸ್ಯಗಂಯನ್ನು ನೋಡಿ ನೀನು ನಮ್ಮನ್ನು ಈ ನದಿಯನ್ನು ದಾಟಿಸು ಎಂದು ಕೇಳಿದನು. ಅದಕ್ಕೆ ಆ ಕನ್ಯೆಯು ಸಾವಿರ ಜನರು ಹತ್ತದ ಹೊರತು ಈ ದೋಣಿಯು ನಡೆಯುವುದಿಲ್ಲ ಎಂದಳು. ಋಷಿಯು ನಾವು ಅಷ್ಟು ಜನರ ಭಾರವಾಗುತ್ತೇವೆ ಏರಿಸು ಎಂದನು. ಹಾಗೆಯೇ ಮಾಡುತ್ತೇನೆ ಎಂದು ಹತ್ತಿಸಿಕೊಂಡು ನಡೆಸುತ್ತಿರುವಾಗ ಆ ದಿವ್ಯಕನ್ಯೆಯನ್ನು ಪ್ರೀತಿಸಿ ನೋಡಿ- ೬೯. ಆ ಋಷಿಶ್ರೇಷ್ಠನು ಮನಸ್ಸಿನಲ್ಲಿ ಆಕೆಗೆ ಸೋತು ಆಕೆಯ ಶರೀರದ ಆ ದುರ್ವಾಸನೆಯು ಹೋಗುವ ಹಾಗೆಯೋಜನದೂರದವರೆಗೆ ವ್ಯಾಪಿಸುವ ಸುವಾಸನೆಯನ್ನು ಕೊಟ್ಟು ಮಂಜನ್ನೇ ತೆರೆಯನ್ನಾಗಿ ಮಾಡಿ ಪ್ರೀತಿಯಿಂದ ಅವಳೊಡನೆ ಕೂಡಲು ಜ್ಞಾನಸ್ವರೂಪನಾದ ಋಷಿಶ್ರೇಷ್ಠನು ಹುಟ್ಟಿದನು. ಮುನೀಂದ್ರರಾದವರು ಏನು ಮಾಡಿದರೂ ತಡೆಯುತ್ತದೆಯಲ್ಲವೆ? ವ|| ಹಾಗೆ ಕರಿಯ ಮೋಡದಂತೆ ಕರ‍್ಗಗಿರುವವನೂ ಹಳದಿ ಮತ್ತು ಕೆಂಪುಮಿಶ್ರವಾದ ಬಣ್ಣದ ಜಟೆಯ ಸಮೂಹವುಳ್ಳವನೂ ಕಯ್ಯಲ್ಲಿ ಯೋಗದಂಡ ಭಿಕ್ಷಾಪಾತ್ರೆಗಳನ್ನು ಧರಿಸಿರುವವನೂ ಕೃಷ್ಣಾಜಿನದ ಹೊದಿಕೆಯುಳ್ಳವನೂ ಆಗಿ ಪೂಜ್ಯನಾದ ವ್ಯಾಸಮಹರ್ಷಿಯು ಹುಟ್ಟಲಾಗಿ ಅವನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಸತ್ಯವತಿಗೆ ಪುನ ಕನ್ಯಾಭಾವವನ್ನು ದಯಮಾಡಿ ಕೊಟ್ಟು ಪರಾಶರಋಷಿಯು ಹೊರಟು ಹೋದನು. ಈ ಕಡೆ ೭೦. ಒಂದು ದಿನ ಬೇಟೆಯ ನೆಪದಿಂದ ಸುತ್ತಾಡಿ ಬರುತ್ತಿದ್ದ ಶಂತನುವು ಜಿಂಕೆಯ ಮರಿಯ ಕಣ್ಣಿನಂತೆ ಕಣ್ಣುಳ್ಳ ಯೋಜನಗಂಯ ವಾಸನೆಯು ಅವನನ್ನು ಮುಟ್ಟಲಾಗಿ (ಆದರಿಂದ ಆಕರ್ಷಿತನಾಗಿ) ದುಂಬಿಯ ಹಾಗೆ ಸೋತು ಹೋಗಿ ಅವಳನ್ನು ಪ್ರೀತಿಸಿದನು. ತನ್ನ ಪ್ರೀತಿಗೆ ಸಾಕ್ಷಿಯಾಗಿ ದಿವ್ಯವನ್ನು ಹಿಡಿಯುವ ಹಾಗೆ ಅವಳ ಕೈಹಿಡಿದು ‘ನೀನು ಬಾ ಹೋಗೋಣ’ ಎನ್ನಲು ಆ ಕನ್ಯೆಯು ನಾಚಿಕೊಂಡು ಮೆಲ್ಲಗೆ ನೀವು ನನ್ನನ್ನು ಬೇಡುವುದಾದರೆ ನಮ್ಮ ತಂದೆಯನ್ನು ಪ್ರಾರ್ಥಿಸಿ ಎಂದಳು. ವ|| ಶಂತನು ಪಟ್ಟಣಕ್ಕೆ ಹಿಂದಿರುಗಿ ಬಂದು ಅವಳ ತಂದೆಯಾದ ದಾಶರಾಜನಲ್ಲಿಗೆ ಕನ್ಯೆಯನ್ನು ಬೇಡುವುದಕ್ಕಾಗಿ ಹೆಗ್ಗಡೆಗಳನ್ನು ಕಳುಹಿಸಿದನು. ದಾಶರಾಜನು ಭೀಷ್ಮನು ರಾಜನ ಹಿರಿಯಮಗನೂ ಕ್ರಮಪ್ರಾಪ್ತವಾದ ಹಕ್ಕುದಾರಿಕೆಗೆ

ಮ|| ಕ್ರಮಮಂ ವಿಕ್ರಮದಿಂದೆ ತಾಳ್ದುವ ಮಗಂ ಗಾಂಗೇಯನಿರ್ದಂತೆ ನೋ|
ಡ ಮರುಳ್ ಶಂತನು ತನ್ನದೊಂದು ಸವಿಗಂ ಸೋಲಕ್ಕಮಿತ್ತಂ ನಿಜ|
ಕ್ರಮಮಂ ತನ್ನಯ ಬೇಟದಾಕೆಯ ಮಗಂಗೆಂಬೊಂದಪಖ್ಯಾತಿ ಲೋ
ಕಮನಾವರ್ತಿಸೆ ಬೞ್ದೊಡೆನ್ನ ಕುಲಮುಂ ತಕ್ಕೂರ್ಮೆಯುಂ ಮಾಸದೇ|| ೭೧

ವ|| ಎಂದು ತನ್ನ ನಾಣ್ಗಾಪನೆ ಬಗೆದತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದೆಗಿಡೆ ತದ್ವ ತ್ತಾಂತಮೆಲ್ಲಮಂ ಗಾಂಗೇಯನಱದು-

ಉ|| ಎನ್ನಯ ದುಸಱಂ ನೃಪತಿ ಬೇಡಿದುದಂ ಕುಡಲೊಲ್ಲಂದಂಗಜೋ
ತ್ಪನ್ನ ವಿಮೋಹದಿಂದೞದಪಂ ಪತಿ ಸತ್ತೊಡೆ ಸತ್ತ ಪಾಪಮೆ|
ನ್ನನ್ನರಕಂಗಳೊಳ್ ತಡೆಯದೞ್ದ್ದುಗುಮೇವುದು ರಾಜ್ಯಲಕ್ಷ್ಮಿ ಪೋ
ತನ್ನಯ ತಂದೆಯೆಂದುದನೆ ಕೊಟ್ಟು ವಿವಾಹಮನಿಂದೆ ಮಾಡುವೆಂ|| ೭೨

ವ|| ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆವಂದಾತನ ಮನದ ತೊಡರ್ಪಂ ಪಿಂಗೆ ನುಡಿದು-

ಉ|| ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್
ಕೂಡುಗೆ ರಾಜ್ಯಲಕ್ಷ್ಮಿ ಮೊಯಲ್ತೆನಗಂತದು ಪೆಂಡಿರೆಂಬರೊಳ್|
ಕೂಡುವನಲ್ಲೆನಿಂದು ಮೊದಲಾಗಿರೆ ನಿಕ್ಕುವಮೆಂದು ರಾಗದಿಂಠ
ಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ|| ೭೩

ವ|| ಅಂತು ಶಂತನುವುಂ ಸತ್ಯವತಿಯುಮನ್ಯೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಲ್ಗಳಂತೆ ಚಿತ್ರಾಂಗದ ವಿಚ್ತಿತ್ರವೀರ್ಯರೆಂಬ ಮಕ್ಕಳ್ ಪುಟ್ಟಿ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚೆ ಕರುಕ್ಷೇತ್ರಮಂ ಕಳಂಬೇೞ್ದು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ-

ಅರ್ಹನೂ ಆಗಿರುವಾಗ ನಮ್ಮ ಮಗಳನ್ನು (ಶಂತನುವಿಗೆ) ಮದುವೆ ಮಾಡಿಕೊಡುವುದಿಲ್ಲ. ನನ್ನ ಮಗಳಿಗೆ ಹುಟ್ಟಿದವನು ರಾಜ್ಯಕ್ಕೊಡೆಯನೂ ಹಿರಿಯ ಮಗನೂ ರಾಜ್ಯಕ್ಕೆ ಕ್ರಮವಾದ ಅರ್ಹನೂ ಆಗುವುದಾದರೆ ಕೊಡುವೆವು ಎಂದನು. ಆ ವೃತ್ತಾಂತವನ್ನು ಶಂತನುವು ಮಂತ್ರಿಗಳಿಂದ ಕೇಳಿ ೭೧. ಪರಾಕ್ರಮದಿಂದ ಕ್ರಮಪ್ರಾಪ್ತವಾದುದನ್ನು ಧರಿಸುವ (ಧರಿಸಲು ಯೋಗ್ಯನಾದ) ಮಗನಾದ ಭೀಷ್ಮನಿರುವಾಗ, ನೋಡಯ್ಯ, ಅವಿವೇಕಿಯಾದ ಶಂತನುವು ತನ್ನ ಒಂದು ಭೋಗಕ್ಕೂ ಮೋಹಪರವಶತೆಗೂ ತನ್ನ ಕ್ರಮಪ್ರಾಪ್ತವಾದ ರಾಜ್ಯವನ್ನು ತನ್ನ ಮೋಹದಾಕೆಯ ಮಗನಿಗೆ ಕೊಟ್ಟನು ಎಂಬ ಒಂದು ಅಪಯಶಸ್ಸು ಲೋಕವನ್ನು ಆವರ್ತಿಸುವ ಹಾಗೆ ಬಾಳಿದರೆ ನನ್ನ ಕುಲವೂ ಅತಿಶಯವಾದ ಯೋಗ್ಯತೆಯೂ ಮಾಸಿಹೋಗುರುದಿಲ್ಲವೇ? ವ|| ಎಂದು ತನ್ನ ಮಾನಸಂರಕ್ಷಣೆಯನ್ನೆ ಯೋಚಿಸಿ ಕಾಮಸಂತಾಪದಿಂದ ಕೂಡಿದ ಶರೀರವುಳ್ಳವನಾಗಿ ಶಂತನು ಕರಗಿ ಎದೆಗೆಟ್ಟಿರಲು ಆ ವೃತ್ತಾಂತವೆಲ್ಲವನ್ನೂ ಭೀಷ್ಮನು ತಿಳಿದು ೭೨. ನನ್ನ ಕಾರಣದಿಂದ ರಾಜನೂ ನನ್ನ ಒಡೆಯನೂ ಆದ ಶಂತನುವು ಬೇಡಿದುದನ್ನು ಕೊಡಲಾರದೆ ಕಾಮದಿಂದುಂಟಾದ ದುಖದಿಂದ ಸಾಯುತ್ತಾನೆ. ಪತಿ ಸತ್ತರೆ ಸತ್ತ ಪಾಪವು ನನ್ನನ್ನು ತಡೆಯದೆ ನರಕದಲ್ಲಿ ಮುಳುಗಿಸುತ್ತದೆ. ಈ ರಾಜ್ಯಲಕ್ಷ್ಮಿ ಏನು ಮಹಾದೊಡ್ಡದು, ಹೋಗಲಿ; ಈ ದಿನವೇ ನನ್ನ ತಂದೆಯು ಹೇಳಿದುದನ್ನೇ ಕೊಟ್ಟು ಮದುವೆಯನ್ನು ಮಾಡಿಸುವೆನು. ವ|| ಎಂದು ನಿಶ್ಚಯಿಸಿ ಭೀಷ್ಮನು ದಾಶರಾಜನಲ್ಲಿಗೆ ಬಂದು ಆತನ ಮನಸ್ಸಿನ ಸಂದೇಹ ನಿವಾರಣೆಯಾಗುವ ಹಾಗೆ ಹೇಳಿ ೭೩. ಸಾವಕಾಶಮಾಡದೆ ನಿಮ್ಮ ಮಗಳನ್ನು (ಎನ್ನ ತಂದೆಯಾದ ಶಂತನುವಿಗೆ) ಕೊಡಿರಿ. ಈ ವಧುವಿಗೆ ಹುಟ್ಟಿದ ಮಕ್ಕಳಲ್ಲಿಯೇ ರಾಜ್ಯಲಕ್ಷ್ಮಿಸೇರಲಿ. ಅದರ ಸಂಬಂಧ ನನಗಿಲ್ಲ; ಈ ದಿನ ಮೊದಲಾಗಿ ಹೆಂಗಸು ಎನ್ನುವವರಲ್ಲಿ ಕೂಡುವವನಲ್ಲ; ಇದು ನಿಶ್ಚಯ ಎಂದು ಆತ್ಮಸಂತೋಷದಿಂದ ಸತಿಯಾದ ಸತ್ಯವತಿಯನ್ನು ಕರೆದು ತಂದು ಪತಿಯಾದ ಶತನುವಿನಲ್ಲಿ ಭೀಷ್ಮನು ಕೂಡಿಸಿದನು ವ|| ಹಾಗೆ ಶಂತನುವೂ ಸತ್ಯವತಿಯೂ ಪರಸ್ಪರಾಸಕ್ತಮನಸ್ಸುಳ್ಳವರಾಗಿ ಕೆಲವು ಕಾಲವಿರುವಷ್ಟರಲ್ಲಿ ಅವರ ಪ್ರೇಮದ ಮೊಳಕೆಗಳ ಹಾಗೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳು ಹುಟ್ಟಿ ಮಹಾಪ್ರಚಂಡರೂ ಪ್ರತಾಪಶಾಲಿಗಳೂ ಆಗಿ ಬೆಳೆಯುತ್ತಿರಲು ಶಂತನುವು ಪರಲೋಕಪ್ರಾಪ್ತನಾದನು. ಭಿಷ್ಮನು ಅವನಿಗುಚಿತವಾದ ಪರಲೋಕ (ಉತ್ತರ) ಕ್ರಿಯೆಗಳನ್ನು ಮಾಡಿ ತಾನು ಮೊದಲೇ ನುಡಿದ ಮಾತುಕಟ್ಟೆಂಬ ಅರಮನೆಗೆ ಅಸ್ತಿಭಾರವನ್ನು ಹಾಕುವ ಹಾಗೆ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ ರಾಜ್ಯಭಾರ ಮಾಡಿಸುತ್ತಿದ್ದನು. ಅಷ್ಟರಲ್ಲಿ ಒಬ್ಬ ಗಂಧರ್ವನೊಡನೆ ಚಿತ್ರಾಂಗದನು ದ್ವಂದ್ವಯುದ್ಧವನ್ನುಂಟುಮಾಡಿಕೊಂಡು

ಮ|| ಸಕಳ ಕ್ಷತ್ರಿಯ ಮೋಹದಿಂ ನಿಜಭುಜ ಪ್ರಾರಂಭದಿಂ ಪೋಗಿ ತಾ
ಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾ|
ಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂ
ಬಿಕೆಯಂಬಾಲೆಯರೆಂಬ ಬಾಲೆಯ ರನೇಂ ಭೀಷ್ಮಂ ಯಶೋಭಾಗಿಯೋ|| ೭೪

ವ|| ಅಂತು ತಂದು ತನ್ನ ತಮ್ಮಂ ವಿಚಿತ್ರವೀರ್ಯಂಗಾ ಮೂವರ್ಕನ್ನೆಯರಂ ಪಾಣಿ ಗ್ರಹಣಂಗೆಯ್ವಾಗಳೆಲ್ಲರಿಂ ಪಿರಿಯಾಕೆ ನಿನ್ನನಲ್ಲದೆ ಪೆಱರನೊಲ್ಲೆನೆಂದಿರ್ದೊಡೆ ಮತ್ತಿನಿರ್ವರುಮಂ ಮದುವೆಯಂ ಮಾಡಿ ಗಾಂಗೇಯನಂಬೆಯನಿಂತೆಂದಂ-

ಉ|| ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ
ದಾತ್ತ ಸಮಸ್ತ ಲೋಕಮಱದಂತಿರೆ ಪೂಣ್ದೆನಗಾಗದಂಗಜೋ|
ತ್ಪತ್ತಿ ಸುಖಕ್ಕೆ ಸೋಲಲೞಗುಂ ಪುರುಷವ್ರತವಿಗಳಬ್ದೆಯೆಂ|
ದತ್ತಿಗೆಯೆಂಬ ಮಾತನೆನಗೇನೆನಲಕ್ಕುಮೊ ಪಂಕಜಾನನೇ|| ೭೫

ವ|| ಎಂದು ನುಡಿದ ಗಾಂಗೇಯನ ನುಡಿಯೋಳವಸರಮಂ ಪಸರಮಂ ಪಡೆಯದೆ ತನಗೆ ಕಿಱಯಂದುಂಗುರವಿಟ್ಟ ಸಾಲ್ವಲನೆಂಬರಸನಲ್ಲಿಗೆ ಪೋಗಿ ನೀನೆನ್ನಂ ಕೈಕೊಳವೇೞ್ಕುಮೆಂದೊಡಾತನಿಂತೆಂದಂ-

ಕಂ|| ಬಂಡಣದೊಳೆನ್ನನೋಡಿಸಿ
ಕಂಡುಯ್ದಂ ನಿನ್ನನಾ ಸರಿತ್ಸುತನಾನುಂ|
ಪೆಂಡತಿಯೆನಾದೆನದಱಂ
ಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ|| ೭೬

ವ|| ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗಂ ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾಱದೆ ಪರಶುರಾಮನಲ್ಲಿಗೆ ಪೋಗಿ ಭೀಷ್ಮನೆನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೋಡಿಸಿ ಕೊಂಡು ಬಂದೆನ್ನ ಂ ಮದುವೆಯಂ ನಿಲಲೊಲ್ಲ ದ್ವ ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನನೆನ್ನಂ ಪಾಣಿಗ್ರಹಣಂ ಗೆಯ್ವಂತು ಮಾಡು ಮಾಡಲಾಱದೊಡೆ ಕಿಚ್ಚಂ ದಯೆಗೆಯ್ವುದೆಂದಂಬೆ ಕಣ್ಣ ನೀರಂ ತುಂಬೆ-

ಕುರುಕ್ಷೇತ್ರವನ್ನೇ ರಣಭೂಮಿಯನ್ನಾಗಿ ಮಾಡಿ ಕಾದಿ ಸತ್ತನು. ಭೀಷ್ಮನು ವಿಚಿತ್ರವೀರ್ಯನನ್ನು ರಾಜ್ಯಭಾರವನ್ನು ವಹಿಸಲು ಸಮರ್ಥನನ್ನಾಗಿ ಮಾಡಿ ೭೪. ಎಲ್ಲ ಕ್ಷತ್ರಿಯರಿಗೂ ಸಹಜವಾಗಿ ಆಶೆಯಿಂದ ತನ್ನ ಬಾಹುಬಲ ಪ್ರದರ್ಶನಕ್ಕಾಗಿ (ಜೈತ್ರಯಾತ್ರೆಗೆ) ಹೋಗಿ ಮೇಲೆ ಬಿದ್ದ ಕಾಶಿರಾಜನ ಮಕ್ಕಳಲ್ಲಿ ಕೆಲವರು ನೋಯುವ ಹಾಗೆ ತನ್ನ ಪ್ರಸಿದ್ಧವೂ ಭಯಂಕರವೂ ಆದ ಬಾಣದಿಂದ ಸೇನಾನಾಯಕರನ್ನೆಲ್ಲಾ ಬೀಳುವ ಹಾಗೆ ಮಾಡಿ ಅಂಬೆ ಅಂಬಿಕೆ ಅಂಬಾಲಿಕೆಯರೆಂಬ ಬಾಲಿಕೆಯರನ್ನು ಅಪಹರಿಸಿಕೊಂಡು ಬಂದನು. ಭೀಷ್ಮನು ಎಂತಹ ಕೀರ್ತಿಗೆ ಭಾಗಿಯೋ! ವ|| ಹಾಗೆ ತಂದು ಆ ಮೂವರು ಕನ್ಯೆಯರನ್ನೂ ತನ್ನ ತಮ್ಮನಾದ ವಿಚಿತ್ರವೀರ್ಯನಿಗೆ ಮದುವೆಮಾಡುವಾಗ ಅವರೆಲ್ಲರಲ್ಲಿಯೂ ಹಿರಿಯಳಾದವಳು ನಿನ್ನನ್ನಲ್ಲದೆ ಇತರರನ್ನು ನಾನು ಅಂಗೀಕರಿಸುವುದಿಲ್ಲ ಎಂದಳು. ಉಳಿದಿಬ್ಬರನ್ನೂ ಮದುವೆ ಮಾಡಿ ಭೀಷ್ಮನು ಅಂಬೆಗೆ ಹೀಗೆ ಹೇಳಿದನು- ೭೫. ಆ ಕಡೆ ದೇವೇಂದ್ರನು ವಾಸಮಾಡುವ ಸ್ವರ್ಗಲೋಕ; ಈ ಕಡೆ ಭೂಲೋಕ ಮತ್ತೊಂದು ಕಡೆ ಪಾತಾಳಲೋಕವೇ ಮೊದಲಾದುವುಗಳು ತಿಳಿದಿರುವ ಹಾಗೆ ಪ್ರತಿಜ್ಞೆ ಮಾಡಿದ ನನಗೆ ಕಾಮಸುಖಕ್ಕೆ ಸೋಲುವುದಾಗದು. ನನ್ನ ಬ್ರಹ್ಮಚರ್ಯವ್ರತವು ನಾಶವಾಗುತ್ತದೆ. ಎಲೆ ಕಮಲಮುಖಿ ಮೊದಲು ತಾಯಿಯೆಂದು ಕರೆದು ಆಮೇಲೆ ಪ್ರೀತಿಪಾತ್ರಳಾದವಳೆಂದು ಹೇಳುವುದು ಸಾಧ್ಯವಾಗುತ್ತದೆಯೇ? ವ|| ಎಂದು ಹೇಳಿದ ಭೀಷ್ಮನ ಮಾತಿನಲ್ಲಿ ಅಂಬೆಯು ಯಾವ ಇಷ್ಟಾರ್ಥವನ್ನು ಪಡೆಯಲಾರದೆ ತನ್ನ ಬಾಲ್ಯದಲ್ಲಿ ಮದುವೆಯಾಗುತ್ತೇನೆಂದು ಉಂಗುರವನ್ನು ತೊಡಿಸಿದ್ದ ಸಾಲ್ವಲನೆಂಬ ರಾಜನಲ್ಲಿಗೆ ಹೋಗಿ ನೀನು ನನ್ನನ್ನು ಅಂಗೀಕಾರ ಮಾಡಬೇಕು ಎನ್ನಲು ಆತನು ಹೀಗೆಂದು ಹೇಳಿದನು. ೭೬. ಯುದ್ಧದಲ್ಲಿ ಆ ಭೀಷ್ಮನು ನನ್ನನ್ನು ಓಡಿಸಿ ನಿನ್ನನ್ನು ಅಪಹರಿಸಿಕೊಂಡು ಹೋದನು. ಅದರಿಂದ ನಾನೂ ಹೆಂಗಸಾಗಿದ್ದೇನೆ. ಎಲೆ ಹೆಣ್ಣೆ ಹೆಂಗಸರು ಹೆಂಗಸರಲ್ಲಿ ಸೇರುವುದು ಹೇಗೆ ಸಾಧ್ಯ? ವ|| ಎಂದು ಸಾಲ್ವಲನು ತನಗೆ ಸೋಲಿನಲ್ಲಿ ಉಂಟಾದ ನಾಚಿಕೆಯನ್ನು ಸಾಕಾಗುವಷ್ಟು ಪ್ರದರ್ಶಿಸಲಾಗಿ ಅವನನ್ನು ಒಪ್ಪಿಸಲಾರದೆ ಪರಶುರಾಮನ ಹತ್ತಿರಕ್ಕೆ ಹೋಗಿ ಭೀಷ್ಮನು ಸ್ವಯಂವರದಲ್ಲಿ ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ ಅಪಹರಿಸಿಕೊಂಡು ಬಂದು ನನ್ನನ್ನು ಮದುವೆ ಮಾಡಿಕೊಳ್ಳದೆ ಓಡಿಸಿದನು. ನನ್ನ ಯೌವನವು ಕಾಡಿನಲ್ಲಿ ಬಿಟ್ಟ ಹೂವಿನಂತೆ ವ್ಯರ್ಥವಾಗದ ಹಾಗೆ ಆತನು ನನ್ನ ಕಯ್ಯನ್ನು ಹಿಡಿಯುವ ಹಾಗೆ ಮಾಡು; ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ (ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ), ಕಿಚ್ಚನ್ನು ದಯಪಾಲಿಸು ಎಂಬುದಾಗಿ ಅಂಬೆಯು

ಮ|| ನಯಮಂ ನಂಬುವೊಡೆನ್ನ ಪೇೞ್ವ ಸತಿಯಂ ಕೈಕೊಂಡನಂತಲ್ಲದು
ರ್ಣಯಮಂ ನಚ್ಚುವೊಡೆನ್ನನುಗ್ರ ರಣದೊಳ್ ಮೇಣ್ ವಿಱ ಮಾರ್ಕೊಂಡನಾ|
ರಯೆ ಕಜ್ಜಂ ಪೆಱತಿಲ್ಲ ಶಂತನು ಸುತಂಗೆನ್ನಂ ಕರಂ ನಂಬಿದಂ
ಬೆಯೊಳೆನ್ನ ಂಬೆವಲಂ ವಿವಾಹವಿಯಂ ಮಾಂ ಪೆಱರ್ ಮಾೞ್ಪರೇ|| ೭೭

ವ|| ಎಂದು ನಾಗಪುರಕ್ಕೆ ವರ್ಷ ಪರಶುರಾಮನ ಬರವಂ ಗಾಂಗೇಯಂ ಕೇಳ್ದಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಘ್ಯಮಂ ಕೊಟ್ಟು ಪೊಡಮಟ್ಟು-

ಮ|| ಬೆಸನೇನೆಂದೊಡೆ ಪೇೞನೆನ್ನ ಬೆಸನಂ ಕೈಕೊಳ್ವುದೀ ಕನ್ನೆಯಂ
ಪಸುರ್ವಂದರ್ ಪಸೆಯೆಂಬಿವಂ ಸಮದು ನೀಂ ಕೈಕೊಳ್ ಕೊಳಲ್ಕಾಗದಂ|
ಬೆಸಕಂ ಚಿತ್ತದೊಳುಳ್ಳೊಡೀಗಳಿವರೆಮ್ಮಾಚಾರ್ಯರೆಂದೋವದೇ
ರ್ವೇಸನಂ ಮಾಣದೆ ಕೈದುಗೊಳ್ಳೆರಡ ಳ್ ಮೆಚ್ಚಿತ್ತೆನೇನೆಂದಪಯ್|| ೭೮

ವ|| ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳ್ದೆನಗೆ ವೀರಶ್ರೀಯುಂ ಕೀರ್ತಿಶ್ರೀಯುಮಲ್ಲದುೞದ ಪೆಂಡಿರ್ ಮೊಯಲ್ಲ ನೀವಿದನೇಕಾಗ್ರಹಂಗೆಯ್ವಿರೆಂದೊಡೆಂತು ಮೆಮ್ಮೊಳ್ ಕಾದಲ್ವೇೞ್ವುದೆಂದು-

ಮ|| ಕೆಳರ್ದದುಗ್ರ ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ
ಕಳವೇೞರ್ವರುಮೈಂದ್ರ ವಾರುಣದೆ ವಾಯವ್ಯಾದಿ ದಿವ್ಯಾಸ್ತ್ರ ಸಂ|
ಕುಳದಿಂದೊರ್ವರನೊರ್ವರೆಚ್ಚು ನಿಜಪೀಠಾಂಭೋಜದಿಂ ಬ್ರಹ್ಮನು
ಚ್ಚಳಿಪನ್ನಂ ಪಿರಿದೊಂದು ಸಂಕಟಮನೀ ತ್ರೈಲೋಕ್ಯದೊಳ್ ಮಾಡಿದರ್|| ೭೯

ಶಿಖರಿಣಿ|| ಅತರ್ಕ್ಯಂ ವಿಕ್ರಾಂತಂ ಭೂಜಬಲಮಸಾಮಾನ್ಯಮಕಂ
ಪ್ರತಾಪಂ ಪೋಗೀತಂಗೆಣೆಯೆ ದಿವಿಜರ್ ವಾಯುಪಥದೊಳ್|
ಶಿತಾಸ್ತ್ರಂಗಳ್ ಪೊಂಕಂಗಿಡಿಸೆ ಸುಗಿದಂ ಭಾರ್ಗವನಿದೇಂ
ಪ್ರತಿಜ್ಞಾ ಗಾಂಗೇಯಂಗದಿರದಿದಿರ‍್ನಿಲ್ವನ್ನರೊಳರೇ|| ೮೦

ವ|| ಅಂತು ಗಾಂಗೇಯನೊಳ್ ಪರಶುರಾಮಂ ಕಾದಿ ಬಸವೞದುಸಿರಲಪ್ಪೊಡಮಾಱದೆ ಮೂರ್ಛೆವೋಗಿರ್ದನಂ ಕಂಡಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆಮಗನಾಗಿ

ಕಣ್ಣ ನೀರನ್ನು ತುಂಬಿದಳು. ೭೭. ಅದಕ್ಕೆ ಪರಶುರಾಮನು ಭೀಷ್ಮನು ವಿನಯವನ್ನು ಆಶ್ರಯಿಸುವುದಾದರೆ ನಾನು ಹೇಳಿದ ಸ್ತ್ರೀಯನ್ನು ಮದುವೆಯಾಗುತ್ತಾನೆ. ಹಾಗಲ್ಲದೆ ಅವಿನಯವನ್ನೇ (ದುರ್ನೀತಿಯನ್ನೇ) ನಂಬುವುದಾದರೆ ನನ್ನನ್ನು ಮೀರಿ ಭಯಂಕರವಾದ ಯುದ್ಧದಲ್ಲಿ ಪ್ರತಿಭಟಿಸುವವನಾಗುತ್ತಾನೆ. ವಿಚಾರಮಾಡುವುದಾದರೆ ಭೀಷ್ಮನಿಗೆ ಬೇರೆ ಕಾರ್ಯವೇ ಇಲ್ಲ. ನನ್ನನ್ನು ವಿಶೇಷವಾಗಿ ನಂಬಿದ ಅಂಬೆಗೆ ನನ್ನ ಬಾಣದಿಂದಲೇ ಮದುವೆ ಮಾಡುಸುತ್ತೇನೆ. ಭೀಷ್ಮನಿಗೆ ಅಂಬೆಯನ್ನು ಮದುವೆಯಾಗುವುದು ಇಲ್ಲವೇ ನನ್ನೊಡನೆ ಯುದ್ಧಮಾಡುವುದು- ಇವೆರಡಲ್ಲದೇ ಬೇರೆ ಮಾರ್ಗವೇ ಇಲ್ಲ ಎಂಬುದು ಇದರ ಭಾವ) ವ|| ಎಂದು ಹಸ್ತಿನಾಪುರಕ್ಕೆ ಬರುತ್ತಿರುವ ಪರಶುರಾಮನ ಆಗಮನವನ್ನು ಭೀಷ್ಮನು ಕೇಳಿ ಎದುರಾಗಿ ಬಂದು ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಅರ್ಘ್ಯವನ್ನು ಕೊಟ್ಟು ನಮಸ್ಕಾರಮಾಡಿ ೭೮. ಅಪ್ಪಣೆಯೇನೆಂದು ಕೇಳಿದನು. ಅದಕ್ಕೆ ಪರಶುರಾಮನು ನನ್ನ ಆಜ್ಞೆಯನ್ನು ನೀನು ಅಂಗೀಕಾರಮಾಡಬೇಕು. ಹಸುರುವಾಣಿ ಚಪ್ಪರ ಮತ್ತು ಹಸೆಮಣೆಗಳನ್ನು ಸಿದ್ಧಪಡಿಸಿ ಈ ಕನ್ಯೆಯನ್ನು ಸ್ವೀಕರಿಸು, ಸ್ವೀಕರಿಸಕೂಡದೆಂಬ ಕಾರ್ಯ (ಅಭಿಪ್ರಾಯ) ಮನಸ್ಸಿನಲ್ಲಿರುವಾದದರೆ ಈಗಲೇ ಇವರು ನಮ್ಮ ಗುರುಗಳು ಎಂಬ ಭಕ್ತಿಪ್ರದರ್ಶನ ಮಾಡದೆ ಯುದ್ಧೋದ್ಯೋಗವನ್ನು ಕೈಕೊಂಡು ಶಸ್ತ್ರಧಾರಣೆ ಮಾಡು. ಎರಡರಲ್ಲಿ ನಿನಗಿಷ್ಟವಾದುದನ್ನು ಕೊಟ್ಟಿದ್ದೇನೆ; ಏನು ಹೇಳುತ್ತೀಯೆ? ವ|| ಎಂದು ಹೇಳಿದ ಪರಶುರಾಮನ ಮಾತನ್ನು ಭೀಷ್ಮನು ಕೇಳಿ ನನಗೆ ವೀರಲಕ್ಷ್ಮಿ ಮತ್ತು ಯಶೋಲಕ್ಷ್ಮಿಯರಲ್ಲದೆ ಉಳಿದ ಹೆಂಗಸರಲ್ಲಿ ಸಂಬಂಧವಿಲ್ಲ. ಏಕೆ ಕೋಪಿಸಿ ಕೊಳ್ಳುತ್ತೀರಿ, ಹೇಗೂ ನಮ್ಮೊಡನೆ ಯುದ್ಧಮಾಡುವುದು ಎಂದನು. ೭೯. ಇಬ್ಬರೂ ರೇಗಿ ಭಯಂಕರವಾದ ಯುದ್ಧಮಾಡಬೇಕೆಂಬ ಅಪೇಕ್ಷೆಯಿಂದ ಕುರುಕ್ಷೇತ್ರವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡು ಐಂದ್ರಾಸ್ತ್ರ ವಾರುಣಾಸ್ತ್ರ ವಾಯವ್ಯಾಸ್ತ್ರಗಳ ಸಮೂಹದಿಂದ ಒಬ್ಬರೊಬ್ಬರೂ ಬ್ರಹ್ಮನು ತನ್ನ ಕಮಲಾಸನದಿಂದ ಮೇಲಕ್ಕೆ ಹಾರಿಹೋಗುವಂತೆ ಬಾಣಪ್ರಯೋಗಮಾಡಿ ಮೂರುಲೋಕಗಳಲ್ಲಿಯೂ ಹಿರಿದಾದ ಸಂಕಟವನ್ನುಂಟುಮಾಡಿದರು. ೮೦. ಇವನ ಪರಾಕ್ರಮವು ಚರ್ಚೆಗೆ ಮೀರಿದುದು; ಬಾಹುಬಲವು ಅಸಾಧಾರಣವಾದುದು; ಶೌರ್ಯವು ಅತಿಶಯವಾದುದು; ಹೋಗೋ! ಈತನಿಗೆ ದೇವತೆಗಳು ಸಮಾನವೇ ! ಆಕಾಶಮಾರ್ಗದಲ್ಲಿ ಹರಿತವಾದ ಬಾಣಗಳನ್ನು

ಪುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಮರ ಬೆಂಬಲದೊಳ್ ವಿಚಿತ್ರವೀರ್ಯನು ಮವಾರ್ಯವೀರ್ಯನುಮಾಗಿ ಕೆಲವು ರಾಜ್ಯಲಕ್ಷ್ಮಿಯಂ ತಾಳ್ದಿ ರಾಜಯಕ್ಷ್ಮ ತಪ್ತಶರೀರನಾತ್ಯಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಸೋಕಾನಲ ದಹ್ಯಮಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯೆಗಳಂ ಮಾಡಿ ರಾಜ್ಯಂ ನಷ್ಟರಾ (ಜ) ಮಾದುದರ್ಕೆ ಮಮ್ಮಲಮಱುಗಿ ಯೋಜನಗಂ ಸಿಂಧುಪುತ್ರನನಿಂತೆಂದಳ್-

ಮ|| ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಮ್ದ ನ
ನ್ನಿಗೆ ಬನ್ನಂ ಬರಲೀಯದಾರ್ತೆಸಗಿದೀ ವಿಖ್ಯಾತಿಯುಂ ಕೀರ್ತಿಯುಂ|
ಮುಗಿಲಂ ಮುಟ್ಟಿದುದಲ್ಲೆ ನಮ್ಮ ಕುಲದೊಳ್ ಮಕ್ಕಳ್ಪೆಱರ್ ನೀನೇ ಜ
ಟ್ಟಿಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ|| ೮೧

ವ|| ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದೆನೆಂದು ಸತ್ಯವತಿಗಮರಾ ಪಗಾನಂದನನಿಂತೆಂದಂ

ಕಂ|| ಕಿಡುಗುಮೆ ರಾಜ್ಯಂ ರಾಜ್ಯದ
ತೊಡರ್ಪದೇವಾೞ್ತ ಬಾೞ್ತೆ ನನ್ನಿಯ ನುಡಿಯಂ|
ಕಿಡೆ ನೆದೞೆ ನಾನುಮೆರಡಂ
ನುಡಿದೊಡೆ ಹಠಿ ಹರ ಹಿರಣ್ಯಗರ್ಭರ್ ನಗರೇ|| ೮೨

ಚಂ|| ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಣದೀತಿ
ಕ್ರಮಮನಗಾಧ ವಾರಿಯೆ ಗುಣ್ಪನಿಳಾವಧು ತನ್ನ ತಿಣ್ಪನು|
ತ್ತಮ ಕುಲಶೈಲಮುನ್ನತಿಯನೇಲಿದವಾಗೆ ಬಿಸುೞ್ಪೊ ಡಂ ಬಿಸು
ೞ್ಕೆ ಮ ಬಿಸುಡೆಂ ಮದೀಯ ಪುರುಷವ್ರತಮೊಂದುಮನೀಗಳಂಬಿಕೇ| ೮೩

ವ|| ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯ್ದು ತಪ್ಪಿದನಿಲ್ಲ-

ಕಂ|| ರಂಗತ್ತರಂತ ರ್ವಾ ಚ
ಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ|
ಗಂಗೇಯನುಂ ಪ್ರತಿಜ್ಞಾ
ಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ|| ೮೪

ನಿರ್ವೀರ್ಯಮಾಡಲು ಪರಶುರಾಮನೂ ಹೆದರಿದನು. ಪ್ರತಿಜ್ಞೆಮಾಡಿರುವ ಭೀಷ್ಮನಿಗೆ ಹೆದರದೆ ಎದುರಾಗಿ ನಿಲ್ಲುವವರೂ ಇದ್ದಾರೆಯೇ? ವ|| ಹಾಗೆ ಗಾಂಗೇಯನಲ್ಲಿ ಪರಶುರಾಮನು ಕಾದಿ ಶಕ್ತಿಗುಂದಿ ಮಾತನಾಡಿವುದಕ್ಕೂ ಆಗದೆ ಮೂರ್ಛೆಹೋಗಿದ್ದವನನ್ನು ಕಂಡು ಅಂಬೆಯೆಂಬ ಗಯ್ಯಾಳಿ ನಿನ್ನ ಸಾವಿಗೆ ಕಾರಣವಾಗಿ ಹುಟ್ಟುತ್ತೇನೆ, ಆಗಲಿ ಎಂದು ಕೋಪದ ಬೆಂಕಿಯಿಂದ ಅಗ್ನಿಪ್ರವೇಶಮಾಡಿ ದ್ರುಪದನ ಮಹಾರಾಣಿಗೆ ಮಗನಾಗಿ ಹುಟ್ಟಿ ಕಾರಣಾಂತರದಿಂದ ಶಿಖಂಡಿಯಾಗಿದ್ದಳು. ಈ ಕಡೆ ವಿಚಿತ್ರವೀರ್ಯನು ಭೀಷ್ಮರ ಸಹಾಯದಿಂದ ತಡೆಯಿಲ್ಲದ ಪರಾಕ್ರಮವುಳ್ಳವನಾಗಿ ಕೆಲವು ಕಾಲ ರಾಜ್ಯಲಕ್ಷ್ಮಿಯನ್ನು ಧರಿಸಿ ಕ್ಷಯರೋಗದಿಂದ ಸುಡಲ್ಪಟ್ಟವನು, ಮಕ್ಕಳಿಲ್ಲದೆಯೇ ಸತ್ತನು. ಭೀಷ್ಮನೂ ಸತ್ಯವತಿಯೂ ಅತ್ಯತಿಯವಾದ ದುಖಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವಾರಾಗಿ ಆತನಿಗೆ ಪರಲೋಕಕ್ರಿಯೆಗಳನ್ನು ಮಾಡಿ ರಾಜ್ಯಕ್ಕೆ ರಾಜನೇ ಇಲ್ಲದಂತಾದುದಕ್ಕೆ ವಿಷೇಷವಾಗಿ ದುಖಪಟ್ಟು ಯೋಜನಗಂಯಾದ ಸತ್ಯವತಿಯು ಭೀಷ್ಮನಿಗೆ ಹೀಗೆಂದುಳು: ೮೧. ಮಗನೆಂದರೆ ನೀನೆ ಮಗ ಎಂದು ಲೋಕವೆಲ್ಲ ಶ್ಲಾಘಿಸುವ ಹಾಗೆ ನಿನ್ನ ತಮ್ಮಂದಿರನ್ನು ಸ್ವೀಕರಿಸಿ ಮೊದಲು ಪ್ರತಿಜ್ಞೆ ಮಾಡಿದ ಸತ್ಯಕ್ಕೆ ಭಂಗಬರದ ಹಾಗೆ ಸಮರ್ಥನಾಗಿ ಮಾಡಿದ ನಿನ್ನ ಖ್ಯಾತಿಯೂ ಯಶಸ್ಸೂ ಮುಗಿಲನ್ನು ಮುಟ್ಟಿತಲ್ಲವೇ ! ನಮ್ಮ ವಂಶಕ್ಕೆ ಬೇರೆ ಮಕ್ಕಳೇತಕ್ಕೆ? ನೀನೇ ಶೂರನಾಗಿದ್ದೀಯೇ. ಹಿಂದಿನ ಒರಟುತನ ಬೇಡ. ಮಗನೇ ನೀನೇ ರಾಜ್ಯಭಾರವನ್ನು ವಹಿಸಿಕೊ, ವ|| ಎಂದು ಕೈಯೊಡ್ಡಿ ಬೇಡಿದ ಸತ್ಯವತಿಗೆ ದೇವಗಂಗಾನದಿಯ ಮಗನಾದ ಭೀಷ್ಮನು ಹೀಗೆಂದನು- ೮೨. ರಾಜ್ಯವು ಕೆಡತಕ್ಕುದೇ (ಅಶಾಶ್ವತವಾದುದರಿಂದ) ರಾಜ್ಯದ ತೊಡಕು ನನಗೇಕೆ? ನನ್ನ ಬದುಕು ಸತ್ಯಪ್ರತಿಜ್ಞೆಗೆ ವಿರೋಧವಾಗುವಂತೆ ನಡೆದರೆ (ನಾನೂ ಎರಡು ಮಾತನ್ನಾಡಿದರೆ) ತ್ರಿಮೂರ್ತಿಗಳಾದ ಬ್ರಹ್ಮವಿಷ್ಣುಮಹೇಶ್ವರರು ನಗುವುದಿಲ್ಲವೇ? ೮೩. ಚಂದ್ರನು ತನ್ನ ಶೀತಕಿರಣವನ್ನೂ ಸೂರ್ಯನು ತನ್ನ ಬಿಸುಗದಿರ ತೀವ್ರತೆಯನ್ನೂ ಅತ್ಯಂತ ಆಳವಾದ ಸಮುದ್ರವು ತನ್ನ (ಗಾಂಭೀರ್ಯ) ಆಳವನ್ನೂ ಈ ಭೂದೇವಿಯು ತನ್ನ ಭಾರವನ್ನೂ ಶ್ರೇಷ್ಠವಾದ ಕುಲಪರ್ವತಗಳು ತಮ್ಮ ಔನ್ನತ್ಯವನ್ನೂ ಹಾಸ್ಯಾಸ್ಪದವಾಗುವಂತೆ ಬಿಸುಟರೂ ಬಿಸಾಡಲಿ. ಎಲೆ ತಾಯೀ ನಾನು ನನ್ನ ಪುರುಷ (ಬ್ರಹ್ಮಚರ್ಯ) ವ್ರತವೊಂದನ್ನು ಮಾತ್ರ ಬಿಸುಡುವುದಿಲ್ಲ. ೮೪. ಚಂಚಲವಾಗಿ ಕುಣಿಯುತ್ತಿರುವ ಅಲೆಗಳನ್ನುಳ

ವ|| ಅಂತಚಲಿತ ಪ್ರತಿಜ್ಞಾರೂಢನಾದ ಗಾಂಗೇಯನನೇಗೆಯ್ವುಮೊಡಂಬಡಿಸಲಾಱದೆ ಸತ್ಯವತಿ ತಾನುಮಾತನುಮಾಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದ ಸೋಮವಂಶವಿಗಳೆಮ್ಮ ಕುಲಸಂತತಿ ಗಮಾರುಮಿಲ್ಲದೆಡೆವಱದು ಕಿಡುವಂತಾಗಿರ್ದುದದು ಕಾರಣದಿಂ ನಿಮ್ಮ ತಮ್ಮಂ ವಿಚಿತ್ರವೀರ್ಯನ ಕ್ಷೇತ್ರದೊಳಂಬಿಕೆಗಮಂಬಾಲೆಗಂ ಪುತ್ರರಪ್ಪಂತು ವರಪ್ರಸಾದಮಂ ದಯೆಗೆಯ್ವುದೆನೆ ಅಂತೆಗೆಯ್ವೆನೆಂದು-

ಚಂ|| ತ್ರಿದಶ ನರಾಸುರೋರಗ ಗಣ ಪ್ರಭು ನಿಶ್ಚಿತ ತತ್ತ್ವಯೋಗಿ ಯೋ
ಗದ ಬಲಮುಣ್ಮಿ ಪೊಣ್ಮಿ ನಿಲೆ ಪುತ್ರ ವರಾರ್ಥಿಗಳಾಗಿ ತನ್ನ ಕ|
ಟ್ಟಿದಿರೊಳೆ ನಿಂದರಂ ನಯದೆ ನೋಡೆ ಮುನೀಂದ್ರನ ದಿವ್ಯದೃಷ್ಟಿಮಂ
ತ್ರದೊಳೆ ಪೊದೞ್ದುದಾ ಸತಿಯರಿರ್ವರೊಳಂ ನವಗರ್ಭವಿಭ್ರಮಂ|| ೮೫

ವ|| ಅಂತು ದಿವ್ಯಸಂಯೋಗದೊಳಿರ್ವರುಂ ಗರ್ಭಮಂ ತಾಳ್ದರ್ ಮತ್ತೊರ್ವ ಮಗನಂ ವರಮಂ ಬೇಡೆಂದಂಬಿಕೆಗೆ ಪೇೞ್ದೊಡಾಕೆಯುಂ ವ್ಯಾಸಭಟ್ಟಾರಕನಲ್ಲಿಗೆ ಪೋಗಲಲಸಿ ತನ್ನ ಸೂೞುಯ್ತೆಯಂ ತನ್ನವೊಲೆ ಕಯ್ಗೆಯ್ದು ಬರವಂ ಬೇಡಲಟ್ಟಿದೊಡಾಕೆಗೆ ವರದನಾಗಿ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷ್ಮಂಗಮಿಂತೆಂದನೆನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪ್ಪುದಱಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯುಂ ಜಾತ್ಯಂಧನಕ್ಕುಮಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದಱಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಮತ್ಯಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕ್ಕು ಮಂಬಿಕೆಯ ಸೂೞುಯ್ತೆಯಪ್ಪಾಕೆ ದರಸಹಿತ ವದನಾರವಿಂದೆಯಾಗಿ ಬರವಂ ಕೈಕೊಂಡಳಪ್ಪುದಱಂದಾಕೆಯ ಮಗಂ ವಿದುರನೆಂಬ ನನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಮೆಂದು ಪೇೞ್ದು ಮುನಿಪುಂಗವಂ ಪೋದನಿತ್ತಂ-

ಸಮುದ್ರದ ಸಮೂಹಗಳು ತಮ್ಮ ಎಲ್ಲೆಯನ್ನು ದಾಟಿದರೂ ಭೀಷ್ಮನೂ ಪ್ರತಿಜ್ಞಾಗಾಂಗೇಯನೆಂಬ ಬಿರುದುಳ್ಳ ಅರಿಕೇಸರಿ ತಾವೂ ಒಂದು ಸಲ ಹೇಳಿದುದನ್ನು ತಪ್ಪುತ್ತಾರೆಯೇ? ವ|| ಹಾಗೆಸ ಸ್ಥಿರಪ್ರತಿಜ್ಞೆಯುಳ್ಳ ಗಾಂಗೇಯನನ್ನು ಏನು ಮಾಡಿದರೂ ಒಪ್ಪಿಸಲಾರದೆ ಸತ್ಯವತಿಯು ತಾನೂ ಆತನೂ ಆಲೋಚಿಸಿ ನಿಷ್ಕೃಷ್ಟವಾದ ಮಂತ್ರಾಲೋಚನೆಮಾಡಿ ಕೃಷ್ಣದ್ವೆ ಪಾಯನ ವ್ಯಾಸರನ್ನು ನೆನೆದು ಬರಿಸಲಾಗಿ ವ್ಯಾಸಮುನೀಂದ್ರನು ಏನು ಮಾಡಬೇಕು ಏನನ್ನು ಈಡೇರಿಸಬೇಕು ಎನ್ನಲು ಸತ್ಯವತಿಯು ಹೀಗೆಂದಳು- ಹಿರಣ್ಯಗರ್ಭ ಬ್ರಹ್ಮನಿಂದ ಹಿಡಿದು ಏಕಪ್ರಕಾರವಾಗಿ ನಡೆದುಬಂದ ನಮ್ಮ ಸೋಮವಂಶವು ಈಗ ನಮ್ಮ ಸಂತತಿಗೆ ಯಾರೂ ಇಲ್ಲದೆ ಮಧ್ಯೆ ಹರಿದುಹೋಗಿ ನಾಶವಾಗುವಂತಾಗಿದೆ. ಆದಕಾರಣದಿಂದ ನಿನ್ನ ತಮ್ಮನಾದ ವಿಚಿತ್ರವೀರ್ಯನ ಕ್ಷೇತ್ರದಲ್ಲಿ ಅಂಬಿಕೆಗೂ ಅಂಬಾಲಿಕೆಗೂ ಮಕ್ಕಳಾಗುವ ಹಾಗೆ ವರಪ್ರಸಾದವನ್ನು ಕರುಣಿಸಬೇಕು ಎಂದಳು. ವ್ಯಾಸನು ಹಾಗೆಯೇ ಆಗಲೆಂದು ಒಪ್ಪಿದನು. ೮೫. ದೇವತೆಗಳು ಮನುಷ್ಯರು ರಾಕ್ಷಸರು ಮತ್ತು (ಪಾತಾಳಲೋಕದ) ಸರ್ಪಗಳು ಮೊದಲಾದವರ ಗುಂಪಿಗೆ ಪ್ರಭುವೂ ನಿಷ್ಕೃಷ್ಟವಾದ ತತ್ವಜ್ಞಾನಿಯೂ ಯೋಗಿಯೂ ಆದ ವ್ಯಾಸಮಹರ್ಷಿಯು ತನ್ನ ಯೋಗಾಶಕ್ತಿಯು ಹುಟ್ಟಿ ಅಭಿವೃದ್ಧಿಯಾಗಿ ಸ್ಥಿರವಾಗಿ ನಿಲ್ಲಲು ಮಕ್ಕಳು ಬೇಕೆಂಬ ವರವನ್ನು ಬೇಡುವವರಾಗಿ ತನ್ನ ಎದುರಿನಲ್ಲೇ ನಿಂತಿರುವವರನ್ನು ನಯದಿಂದ ನೋಡಲಾಗಿ ಆ ಋಷಿಶ್ರೇಷ್ಠನ ದಿವ್ಯದೃಷ್ಟಿಯಂತ್ರದಿಂದಲೇ ಆ ಇಬ್ಬರು ಸ್ತ್ರೀಯರಲ್ಲಿಯೂ ನವೀನವಾದ ಗರ್ಭಸೌಂದರ್ಯವು ವ್ಯಾಪಿಸಿತು. (ಇಬ್ಬರೂ ಗರ್ಭಧಾರಣೆ ಮಾಡಿದರು) ವ|| ಹಾಗೆ ದಿವ್ಯವಾದ (ಋಷಿ ಶ್ರೇಷ್ಠನ) ಸಂಯೋಗದಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಇನ್ನೊಬ್ಬ ಮಗನ ವರವನ್ನು ಕೇಳು ಎಂದು ಅಂಬಿಕೆಗೆ ಹೇಳಲು ಅವಳು ವ್ಯಾಸಭಟ್ಟಾರಕನ ಹತ್ತಿರ ಹೋಗುವುದಕ್ಕೆ ಆಯಾಸಪಟ್ಟು ತನ್ನ ದಾಸಿಯನ್ನು ತನ್ನ ಹಾಗೆಯೇ ಅಲಂಕರಿಸಿ ವರವನ್ನು ಪ್ರಾರ್ಥಿಸುವಂತೆ ಹೇಳಿ ಕಳುಹಿಸಲು (ವ್ಯಾಸಮಹರ್ಷಿಯು) ಅವಳಿಗೂ ವರವನ್ನು ಕೊಟ್ಟು ಸತ್ಯವತಿ ಮತ್ತು ಭೀಷ್ಮರನ್ನು ಕುರಿತು ನನ್ನ ವರಪ್ರಸಾದ ಕಾಲದಲ್ಲಿ ನನ್ನನ್ನು ನೋಡಿ ಅಂಬಿಕೆಯು ಕಣ್ಣನ್ನು ಮುಚ್ಚಿದಳಾದುದರಿಂದ ಆಕೆಗೆ ಧೃತರಾಷ್ಟ್ರನೆಂಬ ಮಗನು ಅತ್ಯಂತ ಸುಂದರನಾಗಿಯೂ ಹುಟ್ಟುಗುರುಡನಾಗಿಯೂ ಹುಟ್ಟುತ್ತಾನೆ. ಅಂಬೆಯು ನನ್ನ ರೂಪವನ್ನು ಕಂಡು ಮುಖವನ್ನು ಬೆಳ್ಳಗೆ ಮಾಡಿಕೊಂಡುದರಿಂದ ಆಕೆಯ ಮಗನು ಪಾಂಡುರೋಗದಿಂದ ಕೂಡಿದವನೂ ಅನೇಕ ಶುಭಲಕ್ಷಣಗಳಿಂದ ಗುರುತುಮಾಡಲ್ಪಟ್ಟವನೂ (ಕೂಡಿದವನೂ) ಅತ್ಯಂತ ಶೌರ್ಯಶಾಲಿಯೂ ಆಗಿ ಪಾಂಡುರಾಜನೆಂಬ ಮಗನಾಗುತ್ತಾನೆ. ಅಂಬಿಕೆಯ ದಾದಿಯಾದವಳು ಹುಸಿನಗೆಯಿಂದ ಕೂಡಿದ ಮುಖ ಕಮಲವುಳ್ಳವಳಾಗಿ ಬಂದುದರಿಂದ ಆಕೆಯ ಮಗನಾದ ವಿದುರನು ಮನ್ಮಥಾಕಾರವುಳ್ಳವನೂ ಆಚಾರವಂತನೂ ಬುದ್ಧಿವಂತನೂ

ಪೃಥ್ವಿ|| ವರಂಬಡೆದ ಸಂತಸಂ ಮನದೊಳಾಗಲೊಂದುತ್ತರೋ
ತ್ತರಂ ಬಳೆವ ಮಾೞ್ಕೆಯಿಂ ಬಳೆವ ಗರ್ಭಮಂ ತಾಳ್ದಿಯಾ|
ದರಂ ಬೆರಸು ಪೆತ್ತರಂದು ಧೃತರಾಷ್ಟ್ರ ವಿಖ್ಯಾತ ಪಾಂ
ಡುರಾಜ ವಿದುರರ್ಕಳಂ ಕ್ರಮದೆ ಮೂವರು ಮೂವರಂ|| ೮೬

ಕಂ|| ಆ ವಿವಿಧ ಲಕ್ಷಣಂಗಳೊ
ಳಾವರಿಸಿದ ಕುಲದ ಬಲದ ಚಲದಳವಿಗಳೊಳ್|
ಮೂವರುಮನಾದಿ ಪುರುಷರ್
ಮೂವರುಮೆನಲಲ್ಲದತ್ತ ಮತ್ತೇನೆಂಬರ್|| ೮೭

ವ|| ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚೌಲೋಪನಯವಾದಿ ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರ ಶಾಸ್ತ್ರಂಗಳೊಳತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟ್ರಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟು-

ಕಂ || ಮತ್ತಿತ್ತ ನೆಗೞ್ತೆಯ ಪುರು
ಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ |
ಮತ್ತಗಜಗಮನೆ ಯದುದಂ
ಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್ || ೮೮

ಬಳೆಯುತ್ತಿರ್ಪನ್ನೆಗಮಾ
ನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂ |
ಗೊಳೆ ಕೊಟ್ಟಂ ದುರ್ವಾಸಂ
ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ || ೮೯

ವ|| ಅಂತು ಕೊಟ್ಟಯ್ದು ಮಂತ್ರಾಕ್ಷರಂಗಳನಾಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೊಂದು ದಿವಸಂ ಕೊಂತಿ-

ಕಂ|| ಪುಚ್ಚವಣಂ ನೋಡುವೆನೆ
ನ್ನಿಚ್ಚೆಯೊಳೀ ಮುನಿಯ ವರದ ಮಹಿಮೆಯನೆನುತಂ|
ದುಚ್ಚಸ್ತನಿ ಗಂಗೆಗ ಶಫ
ರೋಚ್ಚಳಿತ ತರತ್ತರಂಗೆಗೊರ್ವಳೆ ಬಂದಳ್|| ೯೦

ಆಗುತ್ತಾನೆ ಎಂದು ಹೇಳಿ ಋಷಿಶ್ರೇಷ್ಠನು ಹೊರಟುಹೋದನು. ಈ ಕಡೆ ೮೬. ಆ ಮೂವರು ಸ್ತ್ರೀಯರೂ ವರವನ್ನು ಪಡೆದ ಸಂತೋಷವು ಅಭಿವೃದ್ಧಿಯಾಗಿ ಮೇಲೆ ಮೇಲೆ ಬೆಳೆಯುತ್ತಿರುವ ಹಾಗೆಯೇ ಬೆಳೆಯುತ್ತಿರುವ ಗರ್ಭವನ್ನು ಧರಿಸಿ ಪ್ರೀತಿಯಿಂದ ಕೂಡಿದವರಾಗಿ ಮೂವರೂ ಧೃತರಾಷ್ಟ್ರ, ವಿಖ್ಯಾತನಾದ ಪಾಂಡುರಾಜ, ವಿದುರ ಎಂಬ ಮೂವರನ್ನು ಕ್ರಮವಾಗಿ ಅಂದು ಪಡೆದರು. ೮೭. ಆ ಬಗೆಬಗೆಯ ರಾಜಲಕ್ಷಣಗಳಿಂದ ಕೂಡಿದ ವಂಶದ, ಶೌರ್ಯ, ಛಲದ ಪ್ರಮಾಣಗಳಲ್ಲಿ ಆ ಮೂವರನ್ನೂ ಆದಿಪುರುಷರೂ ತ್ರಿಮೂರ್ತಿಗಳೂ ಆದ ಬ್ರಹ್ಮವಿಷ್ಣು ಶಿವರೆಂದು ಹೇಳದೆ ಮತ್ತೇನೆಂದು ಹೇಳುವುದು. ಅಂದರೆ ಆ ಮೂವರನ್ನೂ ತ್ರಿಮೂರ್ತಿಗಳೆಂದೇ ಕರೆಯುತ್ತಾರೆ ವ|| ಹಾಗೆ ಅವರಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ್ಯ ಉಪನಯನವೇ ಮೊದಲಾದ ಹದಿನಾರು ಕರ್ಮಗಳನ್ನು ಪ್ರಧಾನವಾಗಿ ಭೀಷ್ಮನು ತಾನೇ ಮುಂದೆ ನಿಂತು ಮಾಡಿ ಅವರನ್ನು ಶಸ್ತ್ರವಿದ್ಯೆಯಲ್ಲಿಯೂ ಶಾಸ್ತ್ರವಿದ್ಯೆಯಲ್ಲಿಯೂ ಪಂಡಿತರನ್ನಾಗಿ ಮಾಡಿದನು. ಧೃತರಾಷ್ಟ್ರನಿಗೆ ಗಾಂಧಾರರಾಜನಾದ ಸೌಬಲನ ಮಗಳೂ ಶಕುನಿಯ ಒಡಹುಟ್ಟಿದವಳೂ ಆದ ಗಾಂಧಾರಿಯನ್ನು ಮದುರೆ ಮಾಡಿದನು. ೮೮-೮೯. ಈ ಕಡೆ ಪ್ರಸಿದ್ಧನಾದ ಶ್ರೀಕೃಷ್ಣನ ತಾತನಾದ ಶೂರನೆಂಬ ಯದುವಂಶದ ರಾಜನಿಗೆ ಮದಗಜಗಮನೆಯೂ ಯದುವಂಶಶ್ರೇಷ್ಠಳೂ ಆದ ಕುಂತಿಯೆಂಬ ಮಗಳು ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರಲು ಆ ಕಮಲಮುಖಿಯಾದ ಕುಂತಿಯು ಮಾಡಿದ ಶುಶ್ರೂಷೆಯಿಂದ ಮೆಚ್ಚಿದ ದುರ್ವಾಸನೆಂಬ ಋಷಿಯು ಪ್ರಕಾಶಮಾನವಾದ ಅಯ್ದು ಮಂತ್ರಾಕ್ಶರಗಳನ್ನು ದಯಮಾಡಿ ಕೊಟ್ಟನು. ವ|| ಹಾಗೆ ಕೊಟ್ಟು ಈ ಅಯ್ದುಮಂತ್ರಗಳನ್ನು ನೀನು ಉಚ್ಚರಿಸಿ ಕರೆದರೆ ನಿನ್ನ ಮನಸ್ಸಿಗೆ ಬಂದ ಹೋಲಿಕೆಯ ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಮಾಡಿದನು. ಒಂದು ದಿನ ಕುಂತಿಯು ೯೦. ಈ ಋಷಿಯ ಕೊಟ್ಟ ವರದ ಮಹಿಮೆಯನ್ನು ನನಗೆ ಇಷ್ಟ ಬಂದಂತೆ ಪರೀಕ್ಷೆ ಮಾಡಿ ನೋಡುತ್ತನೆಂದು ಮೀನುಗಳಿಂದ ಮೇಲಕ್ಕೆ ಹಾರಿಸಲ್ಪಟ್ಟ ಚಂಚಲವಾದ

ಬಂದು ಸುರನದಿಯ ನೀರೊಳ್
ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನ|
ಕ್ಕೆಂದಾಹ್ವಾನಂಗೆಯ್ಯಲೊ
ಡಂ ದಲ್ ಧರೆಗಿೞದನಂದು ದಶಸತಕಿರಣಂ|| ೯೧

ವ|| ಅಂತು ನಭೋಭಾಗದಿಂ ಭೂಮಿಭಾಗಕ್ಕಿೞದು ತನ್ನ ಮುಂದೆ ನಿಂದರವಿಂದ ಬಾಂಧವನಂ ನೋಡಿ ನೋಡಿ-

ಕಂ|| ಕೊಡಗೂಸುತನದ ಭಯದಿಂ
ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊ|
ೞ್ಕುಡಿಯಲೊಡಗೂಡೆ ಗಂಗೆಯ
ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ|| ೯೨

ವ|| ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕುಮುಮಂ ಕಿಡೆನುಡಿದಿಂತೆಂದಂ-

ಕಂ|| ಬರಿಸಿದ ಕಾರಣಮಾವುದೊ
ತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾಂ|
ಮರುಳಿಯೆನೆಯಱದುಮಱಯದೆ
ಬರಿಸಿದೆನ್ನಿನ್ನೇೞಮೆಂದೊಡಾಗದು ಪೋಗಲ್|| ೯೩

ಮುಂ ಬೇಡಿದ ವರಮಂ ಕುಡ
ದಂಬುಜಮುಖಿ ಪುತ್ರನೆನ್ನ ದೊರೆಯಂ ನಿನಗ|
ಕ್ಕಂಬುದುಮೊದವಿದ ಗರ್ಭದೊ
ಳಂಬುಜಮಿತ್ರನನೆ ಪೋಲ್ವ ಮಗನೊಗೆತಂದಂ|| ೯೪

ಒಡವುಟ್ಟಿದ ಮಣಿಕುಂಡಲ
ಮೊಡರುಟ್ಟಿದ ಸಹಜಕವಚಮಮರ್ದಿರೆ ತನ್ನೊಳ್ |
ತೊಡರ್ದಿರೆಯುಂ ಬಂದಾಕೆಯ
ನಡುಕಮನೊಡರಿಸಿದನಾಗಳಾ ಬಾಲಿಕೆಯಾ || ೯೫

ವ|| ಅಂತು ನಡನಡನಡುಗಿ ಜಲದೇವತೆಗಳಪ್ಪೊಡಂ ಮನಂಗಾಣ್ಬರೆಂದು ನಿಧಾನಮ ನೀಡಾಡುವಂತೆ ಕೂಸಂ ಗಂಗೆಯೊಳೀಡಾಡಿ ಬಂದಳಿತ್ತ ಗಂಗಾದೇವಿಯುಮಾ ಕೂಸಂ ಮುೞುಗಲೀಯದೆ ತನ್ನ ತೆರೆಗಲೆಂಬ ನಲಿತೋಳ್ಗಳಿನೊಯ್ಯನೊಯ್ಯನೆ ತೞ್ಕೈಸಿ ತರೆ ಗಂಗಾತೀರ ದೊಳಿರ್ಪ ಸೂತನೆಂಬಂ ಕಂಡು-

ಅಲೆಗಳನ್ನುಳ್ಳ ಗಂಗಾನದಿಗೆ ಉನ್ನತಸ್ತನಿಯಾದ ಅವಳು ಒಬ್ಬಳೇ ಬಂದಳು. ೯೧. ಬಂದು ಗಂಗಾನದಿಯ ನೀರಿನಲ್ಲಿ ಸ್ನಾನಮಾಡಿ ಸೂರ್ಯನನ್ನು ನೋಡಿ ನಿನಗೆ ಸಮನಾದ ಮಗನಾಗಲಿ ಎಂದು ಕರೆದಾಗಲೇ ಸೂರ್ಯನು ಪ್ರತ್ಯಕ್ಷವಾದನು. ೯೨. ತಾನು ಇನ್ನೂ ಕನ್ಯೆಯಲ್ಲಾ ಎಂಬ ಭಯದಿಂದ ನಡುಗುವ ಆ ಕನ್ಯೆಯ ಬೆವರಿನ ನೀರಿನ ಪ್ರವಾಹವು ತುಂಬಿ ಹರಿದು ಒಟ್ಟುಗೂಡಲು ಗಂಗಾನದಿಯ ಮಡುವೂ ದಡವನ್ನು ಮೀರಿ ಹರಿಯಿತು. ಆಕೆಯ ನಾಚಿಕೆಯ ಆಕ್ಯವು ಎಷ್ಟು ಹಿರಿದೊ! ವ|| ಆಗ ಸೂರ್ಯನು ಅವಳ ಮನಸ್ಸಿನ ಸಂದೇಹವೂ ನಡುಗುತ್ತಿರುವ ಶರೀರದ ನಡುಕವೂ ಹೋಗುವ ಹಾಗೆ (ನಯದಿಂದ) ಮಾತನಾಡಿ ೯೩-೯೪. ಎಲೆ ತರುಣಿ ನನ್ನನ್ನು ಬರಿಸಿದ ಕಾರಣವೇನು (ಎಂದು ಸೂರ್ಯನು ಪ್ರಶ್ನಿಸಲು ಕುಂತಿಯು) ಆ ಋಷಿಶ್ರೇಷ್ಠನು ಕೊಟ್ಟ ಮಂತ್ರವು ಎಂಥಾದ್ದು ಎಂದು ಪರೀಕ್ಷಿಸಿಸಲು (ಬರಿಸಿದೆನು) ನಾನು ಅರಿಯದವಳೂ ಭ್ರಮೆಗೊಂಡವಳೂ ಆಗಿದ್ದೇನೆ. ತಿಳಿದೂ ತಿಳಿಯದೆ ಬರಮಾಡಿದೆನು. ಇನ್ನು ಎದ್ದುಹೋಗಿ ಎಂದಳು. (ಸೂರ್ಯನು) ಎಲೌ ಕಮಲಮುಖಿಯೇ ನೀನು ಮೊದಲು ಬೇಡಿದ ವರವನ್ನು ಕೊಡದೆ ನಾನು ಹೋಗಲಾಗುವುದಿಲ್ಲ. ನಿನಗೆ ನನ್ನ ಸಮಾನನಾದ ಮಗನಾಗಲಿ ಎಂದನು. ಆಗ ಉಂಟಾದ ಗರ್ಭದಲ್ಲಿ ಕಮಲಸಖನಾದ ಸೂರ್ಯನನ್ನು ಹೋಲುವ ಮಗನು ಹುಟ್ಟಿದನು. ೯೫. ಜೊತೆಯಲ್ಲಿಯೇ ಹುಟ್ಟಿದ ಮಣಿಕುಂಡಲಲಗಳೂ (ರತ್ನಖಚಿತವಾದ ಕಿವಿಯಾಭರಣ) ಜೊತೆಯಲ್ಲಿಯೇ ಹುಟ್ಟಿದ ಕವಚವೂ ತನ್ನಲ್ಲಿ ಸೇರಿ ಅಮರಿಕೊಂಡಿರಲು ಹುಟ್ಟಿದ ಆ ಮಗನು ಆಗ ಆ ಬಾಲಿಕೆಗೆ ನಡುಕವನ್ನುಂಟು ಮಾಡಿದನು. ವ|| ಹಾಗೆ ವಿಶೇಷವಾಗಿ ನಡುಗಿ ಜಲದೇವತೆಗಳಾದರೂ ನನ್ನ ಮನಸ್ಸನ್ನು ತಿಳಿದುಕೊಳ್ಳುತ್ತಾರೆ ಎಂದು ತನ್ನ ನಿಯನ್ನೇ (ಐಶ್ವರ್ಯ) ಬಿಸಾಡುವಂತೆ ಕೂಸನ್ನು ಗಂಗೆಯಲ್ಲಿ ಎಸೆದು ಬಂದಳು. ಈ ಕಡೆ ಗಂಗಾದೇವಿಯು ಆ ಕೂಸನ್ನು ಮುಳುಗುವುದಕ್ಕೆ ಅವಕಾಶಕೊಡದೆ ತನ್ನ ಅಲೆಗಳೆಂಬ ಸುಂದರವಾದ ತೋಳುಗಳಿಂದ ನಿಧಾನವಾಗಿ ತಬ್ಬಿಕೊಂಡು ತರಲು ಗಂಗಾತೀರದಲ್ಲಿದ್ದ ಸೂತ

ಉ|| ಬಾಳದಿನೇಶಬಿಂಬದ ನೆೞಲ್ ಜಲದೊಳ್ ನೆಲಸಿತ್ತೊ ಮೇಣ್ ಫಣೀಂ
ದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳ ರಶ್ಮಿಯೋ ಕರಂ |
ಮೇಲಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲೆನೆ ಪಾಯ್ದು ನೀರೊಳಾ
ಬಾಳನನಾದಮಾದರದೆ ಕೊಂಡೊಸೆದಂ ನಿದಿಗಂಡನಂತೆವೋಲ್ || ೯೬

ವ|| ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನಿಟ್ಟೊಡಾಕೆ ರಾಗಿಸಿ ಸೂತನ ಸೂತಕಮಂ ಕೊಂಡಾಡೆ-

ಕಂ|| ಅಗುೞ್ದರಲಾ ಕುೞಯೊಳ್ ತೊ
ಟ್ಟಗೆ ನಿಗಂಡಂತೆ ವಸುಧೆಗಸದಳಮಾಯ್ತಾ |
ಮಗನಂದಮೆಂದು ಲೋಗರ್
ಬಗೆದಿರೆ ವಸುಷೇಣನೆಂಬ ಪೆಸರಾಯ್ತಾಗಳ್ || ೯೭

ಅಂತು ವಸುಷೇಣನಾ ಲೋ
ಕಾಂತಂಬರಮಳವಿ ಬಲೆಯೆ ಬಳೆದೆಸಕಮದೋ ||
ರಂತೆ ಜನಂಗಳ ಕರ್ಣೋ
ಪಾಂತದೊಳೊಗೆದೆಸೆಯೆ ಕರ್ಣನೆಂಬನುಮಾದಂ || ೯೮

ವ|| ಆಗಿಯಾತಂ ಶಸ್ತ್ರಶಾಸ್ತ್ರವಿದ್ಯೆಯೊಳತಿಪರಿಣತನಾಗಿ ನವಯೌವನಾಂಭದೊಳ್-

ಚಂ|| ಪೊಡೆದುದು ಬಿಲ್ಲ ಜೇರೊಡೆಯೆ ವಿಱುವ ವೈರಿ ನರೇಂದ್ರರಂ ಸಿಡಿ
ಲ್ವೊಡೆದವೊಲಟ್ಟಿ ಮುಟ್ಟಿ ಕಡಿದಿಕ್ಕಿದುದಾದೆಡರಂ ನಿರಂತರಂ|
ಕಡಿಕಡಿದಿತ್ತ ಪೊನ್ನ ಬುಧ ಮಾಗಧ ವಂದಿಜನಕ್ಕೆ ಕೊಟ್ಟ ಕೋ
ಡೆಡರದೆ ಬೇಡಿಮೋಡಿಮಿದು ಚಾಗದ ಬೀರದ ಮಾತು ಕರ್ಣನಾ|| ೯೯

ವ|| ಅಂತು ಭುವನಭವನಕ್ಕೆಲ್ಲಹ ನೆಲೞ್ದ ಕಣ್ರನ ಪೊಗೞ್ತೆಂ ನೆಗೞ್ತೆಯುಮುನೀಂದ್ರಂ ಕೇಳ್ದು ಮುಂದೆ ತನ್ನಂಶದೊಳ್ ಪುಟ್ಟುವರ್ಜುನಂಗಮಾತಂಗಂ ದ್ವಂದ್ವಯುದ್ಧಮುಂಟೆಂಬುದಂ ತನ್ನ ದಿವ್ಯಜ್ಞಾನದಿಂದಮಱದುವಿಂತಲ್ಲದೀತನನಾತಂ ಗೆಲಲ್ ಬಾರದೆಂದು-

ಕಂ|| ಬೇಡಿದೊಡೆ ಬಲದ ಬರಿಯುಮ
ನೀಡಾಡುಗುಮುಗಿದು ಕರ್ಣನೆಂದಾಗಳೆ ಕೈ |
ಗೂಡಿದ ವಟುರಾಕೃತಿಯೊಳೆ
ಬೇಡಿದನಾ ಸಹಜಕವಚಮಂ ಕುಂಡಳಮಂ || ೧೦೦

ನೆಂಬುವನು ಕಂಡು ೯೬. ಬಾಲ ಸೂರ್ಯಮಂಡಲದ ನೆರಳು ನೀರಿನಲ್ಲಿ ನೆಲೆಸಿದೆಯೋ ಅಥವಾ ನಾಗಲೋಕದಿಂದ ಭೋದಿಸಿಕೊಂಡು ಬಂದ ಹೆಡೆವಣಿಗಳ ಮಂಗಳಕಿರಣಗಳೋ! ಇದು ನನ್ನ ಹೃದಯವನ್ನು ವಿಶೇಷವಾಗಿ ಆಕರ್ಷಿಸುತ್ತಿದೆ ಎಂದು ಗಂಗೆಯ ನೀರಿನಲ್ಲಿ ಬೊದಿಲ್ ಎಂದು ಶಬ್ದವಾಗುವ ಹಾಗೆ ಥಟ್ಟನೆ ಹಾರಿ ಅತ್ಯಂತ ಪ್ರೇಮಾವತಿಶಯದಿಂದ ಕಂಡು ನಿಯನ್ನು ಕಂಡವನಂತೆ ವ|| ಉತ್ಸಾಹದಿಂದೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ಪ್ರಿಯಳ ಮಡಲಿನಲ್ಲಿ ಕೂಸನ್ನು ಇಡಲಾಗಿ ಆಕೆ ಪ್ರೀತಿಸಿ ಮಗನು ಹುಟ್ಟಿದ ಮೈಲಿಗೆಯನ್ನು ಆಚರಿಸಿದಳು. ೯೭. ತೋಡುತ್ತಿರುವ ಗುಳಿಯಲ್ಲಿ ನಿ ದೊರೆತಂತಾಯಿತು ಈ ಮಗುರಿನ ಸೌಂದರ್ಯ ಎಂದು ಜನರಾಡಿಕೊಳ್ಳುತ್ತಿರಲು ಆ ಮಗುವಿಗೆ ವಸುಷೇಣನೆಂಬ ಹೆಸರಾಯಿತು-೯೮. ಹಾಗೆಯೇ ವಸುಷೇಣನ ಪರಾಕ್ರಮವು ಲೋಕದ ಎಲ್ಲೆಯವರೆಗೆ ಬೆಳೆಯಲು ಆ ಬೆಳೆದ ರೀತಿ ಒಂದೇಪ್ರಕಾರವಾಗಿ ಜನಗಳ ಕರ್ಣ(ಕಿವಿ)ಗಳ ಸಮೀಪದಲ್ಲಿ ಹರಡುತ್ತಿರಲು (ಕೂಸು) ಕರ್ಣನೆಂಬ ಹೆಸರುಳ್ಳವನೂ ಆದನು. ವ|| ಶಸ್ತ್ರ ಮತ್ತು ಶಾಸ್ತ್ರವಿದ್ಯೆಗಳಲ್ಲಿ ಪೂರ್ಣ ಪಾಂಡಿತ್ಯವನ್ನು ಪಡೆಯಲು ಅವನಿಗೆ ಯವ್ವನೋದಯವೂ ಆಯಿತು. ೯೯. ಅವನ ಬಿಲ್ಲಿನ ಟಂಕಾರವೇ ಶತ್ರುರಾಜರನ್ನು ಹೋಗಿ ಅಪ್ಪಳಿಸಿತು. ನಿರಂತರವಾಗಿ ದಾನ ಮಾಡಿದ ಅವನ ಚಿನ್ನದ ರಾಶಿಯೇ – ವಿದ್ವಾಂಸರಿಗೂ ವಂದಿಮಾಗಧರಿಗೂ ಕೊಟ್ಟ ದಾನವೆ ವರಿಗಿದ್ದ ದಾರಿದ್ರ್ಯರನ್ನು ಸಿಡಿಲುಹೊಡೆದ ಹಾಗೆ ಅಟ್ಟಿಮೆಟ್ಟಿ ಕತ್ತರಿಸಿಹಾಕಿತು. ಅವನಲ್ಲಿಗೆ ಹೋಗಿ ಎಂಬಂತೆ ಅವನ ತ್ಯಾಗದ ಮತ್ತು ವೀರ್ಯದ ಮೇಲ್ಮೆ ಲೋಕಪ್ರಸಿದ್ಧವಾಯಿತು. ವ|| ಹೀಗೆ ಲೋಕಪ್ರಸಿದ್ಧವಾದ ಕರ್ಣನ ಹೊಗಳಿಕೆಯನ್ನೂ ಪ್ರಸಿದ್ಧಿಯನ್ನೂ ಇಂದ್ರನು ಕೇಳಿ ಮುಂದೆ ತನ್ನಂಶದಲ್ಲಿ ಹುಟ್ಟುವ ಅರ್ಜುನನಿಗೂ ಈತನಿಗೂ ದ್ವಂದ್ವಯುದ್ಧವುಂಟಾಗುತ್ತದೆ ಎಂದು ತನ್ನ ದಿವ್ಯಜ್ಞಾನದಿಂದ ತಿಳಿದು ಹೀಗಲ್ಲದೆ ಆತನು ಈತನನ್ನು ಗೆಲ್ಲಲಾಗುವುದಿಲ್ಲ ಎಂದು ೧೦೦. ಯಾಚಿಸಿದರೆ ಕರ್ಣನು ಬಲಪಾರ್ಶ್ವದ ಪಕ್ಕೆಯನ್ನು ಕತ್ತರಿಸಿ ದಾನವಾಗಿ ಎಸೆಯುತ್ತಾನೆ ಎಂದು ಭಾವಿಸಿ ಆಗಲೇ ಸಿದ್ಧವಾದ ಬ್ರಹ್ಮಚಾರಿಯ ರೂಪದಲ್ಲಿಯೇ ಬಂದು ಇಂದ್ರನು ಕರ್ಣನೊಡನೆ ಹುಟ್ಟಿಬಂದ ಕವಚವನ್ನೂ ಕುಂಡಲವನ್ನೂ ಬೇಡಿದನು.

ಬೇಡಿದುದನರಿದುಕೊಳ್ಳೆನೆ
ಬೇಡಿದುದಂ ಮುಟ್ಟಲಾಗದೆನಗೆನ ನೆಗೞ್ದ |
ಲ್ಲಾಡದೆ ಕೊಳ್ಳೆಂದರಿದೀ
ಡಾಡಿದನಿಂದ್ರಂಗೆ ಕವಚಮಂ ರಾಧೇಯಂ || ೧೦೧

ಎಂದುಂ ಪೋಗೆಂದನೆ ಮಾ
ಣೆಂದನೆ ಪೆಱತೊಂದನೀವೆನೆಂದನೆ ನೋದ |
ಎಂದನೆ ಸೆರಗಿಲ್ಲದ ಪಿಡಿ
ಯೆಂದನಿದೇಂ ಕಲಿಯೊ ಚಾಗಿಯೋ ರವಿತನಯಂ || ೧೦೨

ವ|| ಅಂತು ತನ್ನ ಸಹಜಕವಚಮಂನೆತ್ತರ್ ಪನ ಪನ ಪನಿಯೆ ತಿದಿಯುಗಿವಂತುಗಿದು ಕೊಟ್ಟೊಡಿಂದ್ರನಾತನ ಕಲಿತನಕೆ ಮೈಚ್ಚಿ-

ಕಂ|| ಸುರ ದನುಜ ಭುಜಗ ವಿದ್ಯಾ
ಧರ ನರಸಂಕುಲದೊಳಾರನಾದೊಡಮೇನೋ |
ಗರ ಮುಟ್ಟೆ ಕೊಲ್ಗುಮಿದು ನಿಜ
ವಿರೋಯಂ ಧುರದೊಳೆಂದು ಶಕ್ತಿಯನಿತ್ತಂ || ೧೦೩

ವ|| ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಬುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿ-

ಕಂ|| ಕೂರಿಸೆ ಗುರು ಶುಶ್ರೂಷೆಯೊ
ಳಾ ರಾಮನನುಗ್ರ ಪರಶು ಪಾಟಿತ ರಿಪು ವಂ |
ಶಾರಾಮನನಿಷುವಿದ್ಯಾ
ಪಾರಗನೆನಿಸಿದುದು ಬಲ್ಮೆ ವೈಕರ್ತನನಾ || ೧೦೪

ವ|| ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮದೊಱಗಿದಾ ಪ್ರಸ್ತಾವದೊಳಾ ಮುನಿಗೆ ಮುನಿಸಂ ಮಾಡಲೆಂದಿಂದ್ರನುಪಾಯದೊಳಟ್ಟಿದ ವಜ್ರಕೀಟಂಗಳ್ ಕರ್ಣನೆರಡುಂ ತೊಡೆಯುಮ ನುಳಿಯನೂಱ ಕೊಂಡಂತಿಯೊಳ್ ಬೆಟ್ಟಿದಂತತ್ತಮಿತ್ತಮುರ್ಚಿ ಪೋಗೆಯುಮದನಱಯದಂತೆ ಗುರುಗೆ ನಿದ್ರಾಬಿಗಾತಮಕ್ಕುಮೆಂದು ತಲೆಯನು ಗುರಿಸುತ್ತುಮಿರೆಯಿರೆ-

ಕಂ|| ಆತಿ ವಿಶದ ವಿಶಾಲೋರು
ಕ್ಷತದಿಂದೊದನಿತು ಜಡೆಯುಮಂ ನಾಂದಿ ಮನ |
ಕ್ಷತದೊಡನೆೞ್ಚಱಸಿದುದು
ತ್ಥಿತಮಾ ವಂದಸ್ರ ಮಿಶ್ರ ಗಂಧಂ ಮುನಿಯಂ|| ೧೦೫

೧೦೧. ಬೇಡಿದುದನ್ನು ಕತ್ತರಿಕೊ ಎಂದು ಕರ್ಣನು ಹೇಳಲು ಇಂದ್ರನು ಬೇಡಿದುದನ್ನು ನೀನು ಕೊಡುರುದಕ್ಕೆ ಮೊದಲು ನಾನು ಮುಟ್ಟಲಾಗದು ಎನಲು ಸ್ವಲ್ಪವೂ ಅಲುಗಾಡದೆ ತೆಗೆದುಕೋ ಎಂದು ಹೇಳಿ ಕರ್ಣನು ಕವಚವನ್ನು ಕತ್ತರಿಸಿ ಲಕ್ಷ್ಯವಿಲ್ಲದೆ ನಿರ್ಯೋಚನೆಯಿಂದ ಕೊಟ್ಟನು. ೧೦೨. ಕರ್ಣನು ಬೇಡಿದವರಿಗೆ ಎಂದಾದರೂ ಮುಂದೆ ಹೋಗು ಎಂದು ಹೇಳಿದನೆ? ಸ್ವಲ್ಪ ತಡೆ ಎಂದು ಹೇಳಿದನೆ? (ಕೇಳಿದ ಪದಾರ್ಥವನ್ನಲ್ಲದೆ) ‘ಬೇರೊಂದನ್ನು ಕೊಡುತ್ತೇನೆ ಎಂದನೆ? (ಕತ್ತರಿಸುವಾಗ) ನೋವಿನಿಂದ ಅ ಎಂದನೆ? ಹೆದರಿಕೆಯಿಲ್ಲದೆ ಹಿಡಿ ತೆಗೆದುಕೋ ಎಂದನು. ಕರ್ಣನು ಅದೆಂತಹ ಶೂರನೋ ಹಾಗೆಯೇ ತ್ಯಾಗಿಯೂ ಅಲ್ಲವೇ! ವ|| ಹಾಗೆ ರಕ್ತವು ಪನ ಪನ ಹರಿಯುತ್ತಿರಲು ತನ್ನ ಸಹಜಕವಚವನ್ನು ಚರ್ಮದ ಚೀಲವನ್ನು ಸೀಳುವಂತೆ ಸೀಳಿ, ಕೊಡಲಾಗಿ ಇಂದ್ರನು ಆತನ ಶೌರ್ಯಕ್ಕೆ ಮೆಚ್ಚಿ ೧೦೩. ನಿನ್ನ ಶತ್ರುಗಳಲ್ಲಿ ದೇವತೆಗಳು, ರಾಕ್ಷಸರು, ನಾಗಗಳು, ವಿದ್ಯಾಧರರು, ಮನುಷ್ಯರು ಇವರಲ್ಲಿ ಯಾರಾದರೂ ಸರಿಯೆ ಈ ಶಕ್ತ್ಯಾಯುಧರು ಗ್ರಹ ಹಿಡಿದ ಹಾಗೆ ಅವರನ್ನು ಕೊಲ್ಲುತ್ತದೆ ಎಂದು ಅವನಿಗೆ ಶಕ್ತ್ಯಾಯುಧವನ್ನು ಕೊಟ್ಟನು. ವ|| ಹಾಗೆ ಇಂದ್ರನು ಕೊಟ್ಟ ಶಕ್ತ್ಯಾಯುಧವನ್ನು ಸ್ವೀಕರಿಸಿ ತನ್ನ ಬಾಹುಬಲವನ್ನು ಪ್ರಕಟಮಾಡಬೇಕೆಂದು ಪರಶುರಾಮನ ಹತ್ತಿರಕ್ಕೆ ಹೋದನು. ೧೦೪. ಭಯಂಕರವಾದ ಕೊಡಲಿಯಿಂದ ಸೀಳಲ್ಪಟ್ಟ ವೈರಿಗಳೆಂಬ ತೋಟವನ್ನುಳ್ಳ ಆ ಪರಶುರಾಮನನ್ನು ಕರ್ಣನು ಗುರುಶುಶ್ರೂಷೆಯ ಮೂಲಕ ಪ್ರೀತಿಸುವಂತೆ ಮಾಡಲು ಕರ್ಣನ ಬಿಲ್‌ಬಲ್ಮೆಯು ಅವನನ್ನು ಧನುರ್ರ‍ಿದ್ಯೆಯಲ್ಲಿ ಪಾರಂಗತನೆನ್ನುವ ಹಾಗೆ ಮಾಡಿತು. ವ|| ಹಾಗೆ ಬಿಲ್ಲು ಹಿಡಿದಿರುವವರಲ್ಲೆಲ್ಲ ಮೊದಲಿಗನಾಗಿದ್ದು ಒಂದು ದಿನ ಪರಶುರಾಮನು ತನ್ನ ತೊಡೆಯ ಮೇಲೆ ತಲೆಯನ್ನು ಮಡಗಿ ಎಚ್ಚರತಪ್ಪಿ ಮಲಗಿದ ಸಂದರ್ಭದಲ್ಲಿ ಆ ಋಷಿಗೆ ಕೋಪವನ್ನುಂಟು ಮಾಡಬೇಕೆಂದು ಇಂದ್ರನು ಉಪಾಯದಿಂದ ಹೊಡೆದ ಹಾಗೆ ಆ ಕಡೆಯಿಂದ ಈ ಕಡೆಗೆ ಕೊರೆದುಕೊಂಡು ಹೋದರೂ ಕರ್ಣನು ಅದನ್ನು ತಿಳಿಯದವನಂತೆ ಗುರುವಿಗೆ ನಿದ್ರಾಭಂಗವಾಗುತ್ತದೆಂದು ಗುರುವಿನ ತಲೆಯನ್ನು ತನ್ನ ಉಗುರಿನಿಂದ ಸವರುತ್ತಿದ್ದನು. ೧೦೫. ವಿಶೇಷವೂ ಸ್ಪಷ್ಟವೂ ಅಗಲವೂ ಆದ

ವ|| ಅಂತೆೞ್ಚತ್ತು ನೆತ್ತರ ಪೊನಲೊಳ್ ನಾಂದು ನನೆದ ಮೆಯ್ಯುಮಂ ತೊಯ್ದು ತಳ್ಪೊಯ್ದ ಜಡೆಯುಮಂ ಕಂಡೀ ಕ್ಷತ್ರಿಯಂಗಲ್ಲದಾಗದು ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರ ಮವಸಾನಕಾಲದೊಳ್ ಬೆಸಕೆಯ್ಯದಿರ್ಕೆಂದು ಶಾಪಮನಿತ್ತನಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ-

ಚಂ|| ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚೆ
ಲ್ವುಗಳ ವಿಲಾಸದುರ್ಮೆಗಳೊಳಾವೆವಗಾಗಿಪೆವೆಂದು ಬಂದಂ ಚೆ |
ನ್ನಿಗರುಮನಾಸೆಕಾಱರುಮನೊಲ್ಲದೆ ಚೆಲ್ವಿಡಿದಿರ್ದ ರೂಪು ದೃ
ಷ್ಟಿಗೆವರೆ ಪಾಂಡುರಾಜನನೆ ಕುಂತಿ ಮನಂಬುಗೆ ಮಾಲೆ ಸೂಡಿದಳ್ || ೧೦೬

ವ|| ಅಂತು ಸ್ವಯಂಬರದೊಳ್ ನೆದರಸುಮಕ್ಕಳೊಳಪ್ಪುಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ್ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದೆ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರಂ ಮುಂಡಾಡುವಂತೆ ತಾಂ ಮದುವೆಯಂ ಮಾಡಿ-

ಚಂ|| ತಳಿರ್ಗಳಸಂ ಮುಕ್ಕುಂದರವಮೆತ್ತಿದ ಮುತ್ತಿನ ಮಂಟಪಂ ಮನಂ
ಗೊಳಿಪ ವಿತಾನಪಙ್ಕ್ತಿ ಪಸುರ್ವಂದಲಳೊಲ್ದೆಡೆಯಾಡುರೆಯ್ದೆಯರ್ |
ಬಳಸಿದ ವೇದಪಾರಗರ ಸಂದಣಿಯೆಂಬಿವಱಂ ವಿವಾಹಮಂ
ಗಳಮದು ಕುಂತಿ ಮಾದ್ರಿಗಲೊಳಚ್ಚರಿಯಾದುದು ಪಾಂಡುರಾಜನಾ || ೧೦೭

ತುಱುಗೆಮೆ ನೀಳ್ದ ಪುರ್ವು ನಿಡುಗಣ್ ಪೊಯಲ್ಲದೆ ಬಟ್ಟಿತಪ್ಪ ಬಾ
ಯ್ದೆ ತನು ರೇಖೆಗೊಂಡ ಕೊರಲೊಡ್ಡಿದ ಪೆರ್ಮೊಲೆ ತೆಳ್ವಸಿಱು ಕರಂ |
ನೆದ ನಿತಂವಿಂಬುವಡೆದೊಳ್ದೊಡೆ ನಕ್ಕರವದ್ದಿ ತಾನೆ ಪೋ
ಕಿಱುದೊಡೆಯೆಂದು ಧಾತ್ರಿ ಪೊಗೞ್ಗುಂ ಪೊಗೞ್ವನ್ನರೆ ಕುಂತಿ ಮಾದ್ರಿಗಳ್ || ೧೦೮

ವ|| ಅಂತಾಕೆಗಳಿರ್ವರುಮೆರಡುಂ ಕೆಲದೊಳಿರೆ ಕಲ್ಪಲತೆಗಳೆರಡಱ ನಡುವಣ ಕಲ್ಪವೃಕ್ಷ ಮಿರ್ಪಂತಿರ್ದ ಪಾಂಡುರಾಜಂಗೆ ಧೃತರಾಷ್ಟ್ರನಂಗಹೀನೆಂದು ವಿರಾಹದೊಸಗೆಯೊಡನೆ ಪಟ್ಟಬಂಧದೊಸಗೆಯಂ ಮಾಡಿ ನೆಲನನಾಳಿಸೆ-

ತೊಡೆಯ ಗಾಯದಿಂದ ಜಿನುಗಿ ಹೆಚ್ಚುತ್ತಿರುವ ರಕ್ತದಿಂದ ಕೂಡಿದ ದುರ್ಗಂಧವು ಜಡೆಯಷ್ಟನ್ನೂ ಒದ್ದೆಮಾಡಿ ಋಷಿಯನ್ನು ಮನಸ್ಸಿನ ಏರುತ್ತಿರುವ ಕೋಪದೊಡನೆ ಎಚ್ಚರವಾಗುವ ಹಾಗೆ ಮಾಡಿತು. ವ|| ಹಾಗೆ ಎಚ್ಚರಗೊಂಡು ರಕ್ತದ ಪ್ರವಾಹದಲ್ಲಿ ಚೆನ್ನಾಗಿ ನೆನೆದು ಒದ್ದೆಯಾದ ಶರೀರವನ್ನೂ ಜಡೆಯನ್ನೂ ನೋಡಿ ಈ ಧೈರ್ಯವು ಕ್ಷತ್ರಿಯನಲ್ಲದವನಿಗಾಗುವುದಿಲ್ಲ. ಬ್ರಾಹ್ಮಣನೆಂದು ನನ್ನಲ್ಲಿ ಸುಳ್ಳು ಹೇಳಿ ವಿದ್ಯೆಯನ್ನು ಸ್ವೀಕಾರಮಾಡಿದುದಕ್ಕೆ ದಂಡ ಬೇರೇನಿಲ್ಲ. ನಿನಗೆ ನಾನು ಕೊಟ್ಟ ಬ್ರಹ್ಮಾಸ್ತ್ರವೆಂಬ ದಿವ್ಯಾಸ್ತ್ರವು ನಿನ್ನ ಕಡೆಯ ಕಾಲದಲ್ಲಿ ನಿನ್ನ ಆಜ್ಞೆಯನ್ನು ಪಾಲಿಸದಿರಲಿ ಎಂದು ಶಾಪ ಕೊಟ್ಟನು. ಹಾಗೆ ಕರ್ಣನು ಶಾಪಹತನಾಗಿ ಪುನ ಬಂದು ಸೂತನ ಮನೆಯಲ್ಲಿರಲು ಈಕಡೆ ಕುಂತಿಗೆ ಅವರ ಮಾವನಾದ ಕುಂತೀಭೋಜನು ಸ್ವಯಂವರಕ್ಕೆ ಏರ್ಪಡಿಸಿದನು. ೧೦೬. ಸೊಗಸಾಗಿರುವ ತಮ್ಮ ಯವ್ವನ, ಐಶ್ವರ್ಯ, ಸೌಂದರ್ಯ ಮತ್ತು ಶೃಂಗಾರಚೇಷ್ಟೆಗಳ ಆಕ್ಯದಿಂದ ನಾವು ಕುಂತಿಯನ್ನು ನಮ್ಮವಳನ್ನಾಗಿ ಮಾಡಿಕೊಳ್ಳುತ್ತೇನೆ ಎಂಬುದಾಗಿ ಬಂದಿದ್ದ ಸೌಂದರ್ಯಶಾಲಿಗಳನ್ನೂ ಕಾಮುಕರನ್ನೂ ಬಯಸದೆ ಕುಂತಿಯು ಪಾಂಡುವಿನ ಸುಂದರವಾದ ರೂಪವು ತನ್ನ ಕಣ್ಣಿಗೆ ಹಿತವಾಗಿದ್ದು ಮನಸ್ಸನ್ನು ಪ್ರವೇಶಿಸಲು ಪಾಂಡುರಾಜನಿಗೇ ವರಣಮಾಲೆಯನ್ನು ತೊಡಿಸಿದಳು (ಹಾಕಿದಳು). ವ|| ಹಾಗೆ ಸ್ವಯಂವರದಲ್ಲಿ ತುಂಬಿದ್ದ ರಾಜಕುಮಾರರನ್ನು ಪಾಂಡುವನ್ನೇ ಆಯ್ದುಕೊಂಡ ಕುಂತಿಯೊಡನೆ ಮದ್ರರಾಜನ ಮಗಳೂ ಶಲ್ಯನೊಡನೆ ಹುಟ್ಟಿದವಳೂ ಆದ ಮಾದ್ರೀದೇವಿಯನ್ನೂ ಒಂದೇ ಹಸೆಮಣೆಯಲ್ಲಿರಿಸಿ ಭೀಷ್ಮನು, ಬ್ರಹ್ಮನೆ ಮೆಚ್ಚಿ ಮುದ್ದಾಡುವಂತೆ ತಾನೇ ಮದುವೆಯನ್ನು ಮಾಡಿದನು. ೧೦೭. ಚಿಗುರಿನಿಂದ ಕೂಡಿದ ಕಳಶ, ತಮಟೆಯ ಧ್ವನಿ (ಮಂಗಳವಾದ್ಯ) ಎತ್ತರವಾಗಿ ಕಟ್ಟಿದ ಮಂಟಪ, ಮನೋಹರವಾಗಿರುವ ಮೇಲುಕಟ್ಟಿನ ಸಾಲುಗಳು, ಹಸಿರುವಾಣಿಯ ಚಪ್ಪರ, ಪ್ರೀತಿಯಿಂದ ಮಧ್ಯೆ ಮಧ್ಯೆ ಓಡಾಡುವ ಸುಮಂಗಲಿಯರು, ಮತ್ತು ಸುತ್ತುವರಿದಿದ್ದ ವೇದಪಂಡಿತರ ಸಮೂಹ ಇವುಗಳಿಂದ ಪಾಂಡು ಮತ್ತು ಕುಂತಿ ಮಾದ್ರಿಯಲ್ಲಿ ಆದ ವಿವಾಹ ಮಂಗಳಕಾರ್ಯವು ಆಶ್ಚರ್ಯಕರವಾಯಿತು. ೧೦೮. ಕುಂತಿ ಮಾದ್ರಿಯಲ್ಲಿ ದಟ್ಟವಾದ ಕೂದಲಿನಿಂದ ಕೂಡಿದ ರೆಪ್ಪೆ, ಉದ್ದವಾಗಿರುವ ಹುಲ್ಲು, ದೀರ್ಘವಾದ ಕಣ್ಣು, ಹಗುರವಾಗಿಯೂ ದುಂಡಾಗಿಯೂ ಇರುವ ತುಟಿ, ಸಣ್ಣ ರೇಖೆಗಳಿಂದ ಕೂಡಿದ ಕೊರಳು, ಮುಂದಕ್ಕೆ ಚಾಚಿಕೊಂಡಿರುವ ಪೃಷ್ಠಭಾಗ, ಹೊಂದಿಕೊಂಡಿರುವ ಒಳತೊಡೆ, ಚಿಕ್ಕತೊಡೆ (ನೆರ್ಕೊರೆಪಟ್ಟೆ?) ಇವುಗಳು ಸೊಗಸಾಗಿವೆ ಎಂದು ಲೋಕವೆಲ್ಲ (ಅವರನ್ನು) ಹೊಗಳಿದವು. ವಾಸ್ತವವಾಗಿ ಕುಂತಿ ಮಾದ್ರಿಗಳು ಹೊಗಳಿಸಿಕೊಳ್ಳುವಂಥವರೇ ಸರಿ. ವ|| ಹಾಗೆ ಅವರಿಬ್ಬರೂ ಎರಡು ಪಕ್ಕಗಳಲ್ಲಿರಲು ಎರಡು ಕಲ್ಪಲತೆಗಳ ಮಧ್ಯೆಯಿರುವ ಕಲ್ಪವೃಕ್ಶದಂತಿದ್ದ ಪಾಂಡುರಾಜನಿಗೆ ಧೃತರಾಷ್ಟ್ರನು ಅಂಗಹೀನನೆಂಬ ಕಾರಣದಿಂದ (ಕುರುಡನಾಗಿದ್ದುದರಿಂದ) ವಿವಾಹಮಂಗಳದೊಡನೆ ಪಟ್ಟಾಭಿಷೇಕಮಹೋತ್ಸವವೂ ನಡೆಯಿತು.

ಉ|| ವಿಱುವೆರೆಂಬ ಮಾಂಡಳಿಕರೀಯದರೆಂಬದಟರ್ ವಯಲ್ಗೆ ಮೆ
ಯ್ದೋಱುರೆವೆಂಬ ಪೂಣಿಗರಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾ|
ಯ್ಪಾ ನಭಕ್ಕೆ ಪಾಱದುದು ಗಂಡರ ನೆತ್ತಿಯೊಳೆತ್ತಿ ಬಾಳನಿ
ನ್ನೂಱುಗುಮೆಂದೊಡೇಂ ಪಿರಿದೊ ತೇಜದ ದಳ್ಳುರಿ ಪಾಂಡುರಾಜನಾ|| ೧೦೯

ಮ|| ಬೆಸಕೆಯ್ದತ್ತು ಸಮುದ್ರಮುದ್ರಿತಧರಾಚಕ್ರಂ ಪ್ರತಾಪಕ್ಕಗು
ರ್ವಿಸೆ ಗೋಳುಂಡೆಗೊಳುತ್ತುಮಿರ್ದುದು ದಿಶಾಚಕ್ರಂ ಪೊzೞ್ದಾಜ್ಞೆಗಂ |
ಪೆಸರ್ಗಂ ಮುನ್ನಮೆ ರೂಪುವೋದುದು ವಿಯಚ್ಚಕ್ರಂ ಸಮಂತೆಂಬಿನಂ
ಜಸಮಾ ಪಾಂಡುರಮಾದುದಾ ನೃಪರೊಳಾರಾ ಪಾಂಡುರಾಜಂಬರಂ || ೧೧೦

ವ|| ಅಂತು ಪಾಂಡುರಾಜನಕತೆಜನುಮವನತವೈರಿಭೂಭೃತ್ಸಮಾಜನುಮಾಗಿ ನೆಗೞುತ್ತಿರ್ದೊಂದು ದಿವಸಂ ತೋಪಿನ ಬೇಂಟೆಯನಾಡಲೞಯಿಂ ಪೋಗಿ-

ಚಂ|| ಇನಿಯಳನೞಯಿಂದೆ ಮೃಗಿ ಮಾಡಿ ಮನೋಜಸುಖಕ್ಕೆ ಸೋಲ್ತಲಂ
ಪಿನೆ ನೆರೆಯಲ್ಕೆ ದಿವ್ಯಮುನಿಯುಂ ಮೃಗಮಾಗಿ ಮರಲ್ದು ಕೂಡೆ ಮೆ |
ಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂ
ಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ || ೧೧೧

ವ|| ಆಗಳ್ ಪ್ರಳಯದುಳ್ಕಮುಳ್ಳುವಂತೆ ಕನ್ನೆಚ್ಚಂಬು ಮುನಿಕುಮಾರನ ಕಣ್ಣೊಳಮೆರ್ದೆಯೊಳಮುಕ್ಕೆ ಪೇೞಮೆನ್ನನಾವನೆಚ್ಚನೆಂಬ ಮುನಿದು ಮುನಿದ ಸರಮಂ ಕೇಳ್ದು ಬಿಲ್ಲನಂಬುಮನೀಡಾಡಿ ತನ್ನ ಮುಂದೆ ನಿಂದಿರ್ದ ಭೂಪನಂ ಮುನಿ ನೋಡಿ-

ಉ|| ಸನ್ನತದಿಂ ರತಕ್ಕೆಳಸಿ ನಲ್ಲಳೊಳೋತೊಡಗೂಡಿದೆನ್ನನಿಂ
ತನ್ನಯ ಮೆಚ್ಚುದರ್ಕೆ ಪೆಱತಿಲ್ಲದು ದಂಡಮೊಱಲ್ದು ನಲ್ಲಳೊಳ್ |
ನೀನ್ನಡೆನೊಡಿಯುಂ ಬಯಸಿ ಕೂಡಿಯುಮಾರಡೆ ಸಾವೆಯಾಗಿ ಪೋ
ಗಿನ್ನೆನೆ ರೌದ್ರಶಾಪಪರಿತಾಪವಿಳಾಪದೊಳಾ ಮಹೀಶ್ವರಂ || ೧೧೨

೧೦೯. ಪಾಂಡುರಾಜನ ಆಜ್ಞೆಯನ್ನು ಮೀರಿ ನಡೆಯುತ್ತೇವೆ ಎಂಬ ಸಾಮಂತರಾಜರೂ, ಕಪ್ಪಕಾಣಿಕೆಗಳನ್ನು ಕೊಡುವುದಿಲ್ಲವೆಂದ ಶೂರರೂ, ಕಾಳೆಗದಲ್ಲಿ ಪ್ರತಿಭಟಿಸಿ ಯುದ್ಧಮಾಡುವೆವು ಎಂದು ಪ್ರತಿಜ್ಞೆಮಾಡಿದವರೂ ಕುಗ್ಗಿಸಿಡಿದು ಕೆಳಕ್ಕೆ ಬಿದ್ದು ಕೋಪವಿರಹಿತರಾಗಲು ಪಾಂಡುರಾಜನ ತೇಜಸ್ಸೆಂಬ ಜಾಜ್ವಲ್ಯಮಾನವಾದ ಬೆಂಕಿಯ ಆಕಾಶಕ್ಕೆ ಚಿಮ್ಮಿತು. ಪಾಂಡುರಾಜನ ಕತ್ತಿಯು ಇನ್ನೂ ಪರಾಕ್ರಮಿಗಳ ಹಣೆಯಲ್ಲಿ ನಾಡಲ್ಪಡುತ್ತಿವೆ ಎಂದಾಗ ಅವನ ಮಹತ್ವ ಎಷ್ಟು ಹಿರಿದೋ! (ಎಂದರೆ ಅವನ ಪ್ರತಾಪಾಗ್ನಿ ಯಾವ ತಡೆಯೂ ಇಲ್ಲದೆ ಅಭಿವೃದ್ಧಿಯಾಗಿ ಆಕಾಶಕ್ಕೆ ಚಿಮ್ಮುತ್ತಿರುವುದರಿಂದ ಅವನ ಮೇಲ್ಮೆಯು ಅತ್ಯತಿಶಯವಾದುದು ಎಂದು ಭಾವ). ೧೧೦. ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವು ಅವನ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿತು. ಅವನ ಶೌರ್ಯಕ್ಕೆ ಹೆದರಿ ದಿಙ್ಮಂಡಲದಲ್ಲಿದ್ದ ರಾಜರೆಲ್ಲ ಗೋಳುಗುಟ್ಟುತ್ತಿದ್ದರು. ಸಂಪೂರ್ಣವಾಗಿ ಎಲ್ಲ ಕಡೆಗೂ ವ್ಯಾಪಿಸುವ ಅವನ ಆಜ್ಞೆಗೂ ಯಶಸ್ಸಿಗೂ ಆಕಾಶಮಂಡಲವು ಗೂಡಾಗಿ ಪರಿಣಮಿಸಿತು. (ಆವಾಸಸ್ಥಾನವಾಯಿತು) ಎನ್ನುವಾಗ ಅವನ ಧವಳಕೀರ್ತಿ ಸರ್ವಲೋಕವ್ಯಾಪ್ತಿಯಾಯಿತು. ರಾಜರುಗಳಲ್ಲಿ ಪಾಂಡುರಾಜನಿಗೆ ಸಮನಾಗುವವರಾರಿದ್ದಾರೆ? ವ|| ಹಾಗೆ ಆ ಪಾಂಡುರಾಜನು ಅಕತೇಜಸ್ಸುಳ್ಳವನೂ ನಮಸ್ಕರಿಸಲ್ಪಟ್ಟ ಶತ್ರುರಾಜಸಮೂಹವನ್ನುಳ್ಳವನೂ ಆಗಿ ರಾಜ್ಯಭಾರಮಾಡುತ್ತಿದ್ದು ಒಂದು ದಿವಸ ತೋಹಿನ ಬೇಂಟೆಯೆಂಬುದನ್ನು ಆಡಲು ಆಸಕ್ತನಾಗಿ ಕಾಡಿಗೆ ಹೋದನು. ೧೧೧. ಅಲ್ಲಿ ಕಿಂದಮನೆಂಬ ಋಷಿಯೊಬ್ಬನು ತನ್ನ ಪ್ರಿಯಳನ್ನು ಹೆಣ್ಣು ಜಿಂಕೆಯನ್ನಾಗಿ ಮಾಡಿ ಕಾಮವಶನಾಗಿ ಸಂತೋಷದಿಂದ ಅವಳೊಡನೆ ಕೂಡಿ ಋಷಿಶ್ರೇಷ್ಠನಾದ ತಾನೂ ಗಂಡುಜಿಂಕೆಯ ಆಕಾರವನ್ನು ತಾಳಿ ಉತ್ಸಾಹದಿಂದ ವಿಹರಿಸುತ್ತಿದ್ದನು. ಪಾಂಡುರಾಜನು ಅದು ಜಿಂಕೆಯೆಂದು ಮೆಲ್ಲಗೆ ಅದರ ಹತ್ತಿರ ಬಂದು ಅದರ ಮರ್ಮಸ್ಥಾನವನ್ನು ನೋಡಿ ಗುರಿಯಿಟ್ಟು ಆ ಮೃಗರೂಪದಲ್ಲಿದ್ದ ಆ ಋಷಿಯನ್ನು ತಟ್ಟನೆ ಬಾಣದಿಂದ ಹೊಡೆದು ತನಗೆ ಒಂದು ಮಾರಿಯನ್ನು ತಂದುಕೊಂಡನು. ವ|| ಆಗ ತಾನು ಹೊಡೆದ ಬಾಣವು ಋಷಿಪುತ್ರನ ಕಣ್ಣಿನಲ್ಲಿಯೂ ಎದೆಯಲ್ಲಿಯೂ ಪ್ರಳಯಕಾಲದ ಉಲ್ಕಾಪಾತದಂತೆ ಹೊಳೆಯುತ್ತಿರಲು ‘ನನ್ನನ್ನು ಯಾರು ಹೊಡೆದನು ಹೇಳಿ’ ಎಂಬ ಋಷಿಯ ಕೋಪಧ್ವನಿಯನ್ನು ಕೇಳಿ ಬಿಲ್ಲು ಬಾಣಗಳನ್ನೆಸೆದು ತನ್ನ ಮುಂದೆ ರಾಜನನ್ನು ಮುನಿ ನೋಡಿ ೧೧೨. ಸಂಭೋಗಸುಖಕ್ಕಾಸೆಪಟ್ಟು ಪ್ರಿಯಳಲ್ಲಿ ಪ್ರೇಮದಿಂದ ಸೇರಿಕೊಂಡಿದ್ದ ನನ್ನನ್ನು ಹೀಗೆ ಅನ್ಯಾಯದಿಂದ ಹೊಡೆದುದಕ್ಕೆ ನಿನಗೆ ಬೇರೆ ಶಿಕ್ಷೆಯಿಲ್ಲ, ನೀನು ಇನ್ನು ಮೇಲೆ ನಿನ್ನ ಪ್ರಿಯಳಲ್ಲಿ ಪ್ರೀತಿಸಿ ನೋಡಿದಾಗ ಅಥವಾ ಆಸೆಪಟ್ಟು ಕೂಡಿದಾಗ ಸಾಯುತ್ತೀಯೆ ಹೋಗು ಎಂದು ಶಪಿಸಿದನು. ಈ ಭಯಂಕರವಾದ ಶಾಪದಿಂದುಂಟಾದ ದುಖದ ಅಳುವಿನಿಂದ ಆ ಪಾಂಡುರಾಜನು ವ|| ನಾನು

ವ|| ಎನ್ನ ಗೆಯ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದಲ್ತು-
ಕಂ|| ಎತ್ತ ವನಮೆತ್ತ ಮೃಗಯಾ
ವೃತ್ತಕವಿ ತಪಸಿಯೆತ್ತ ಮೃಗಮೆಂದೆಂತಾ|
ನೆತ್ತೆಚ್ಚೆನಾತ್ಮಕರ್ಮಾ
ಯತ್ತಂ ಪೆಱತಲ್ತಿದೆಲ್ಲಮಘಟಿತಘಟಿತಂ || ೩೪ ||

ವ|| ಎಂದು ಚಿಂತಿಸುತ್ತುಂ ಪೊೞಲ್ಗೆ ಮಗುೞ್ದುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ತದ್ವೃತ್ತಾಂತಮೆಲ್ಲಮಂ ಪೇೞ್ದು ಸಮಸ್ತವಸ್ತುಗಳಂ ದೀನಾನಾಥಜನಂಗಳ್ಗೆ ಸೂಗೊಟ್ಟು ನಿಜಪರಿರಾರಮಂ ಬರಿಸಿ-

ಉ|| ಸಾರಮನಂಗ ಜಂಗಮಲತಾ ಬಲಿತಾಂಗಿಯರಿಂದಮಲ್ತೆ ಸಂ
ಸಾರಮಿದೆಂಬುದಿನ್ನೆನಗೆ ತಪ್ಪುದು ತನ್ಮುನಿ ಶಾಪದಿಂದಿಮಿ|
ನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆನೆಂದು ದು
ರ್ವಾರ ಪರಾಕ್ರಮಂ ತಳರೆ ಬಾರಿಸಿವಾರಿಸಿ ಕುಂತಿ ಮಾದ್ರಿಯರ್|| ೧೧೪

ವ|| ಬೆನ್ನ ಬೆನ್ನನೆ ಬರೆ ಚಿನ್ನ ಬಿನ್ನನೆ ಪೋಗಿ-

ಖಚರುಪ್ಲುತ ತ|| ತುಂಗ ವನ್ಯ ಮತಂಗಜ ದಂತಾಘಾತ ನಿಪಾತಿತ ಸಲ್ಲಕೀ
ಭಂಗಮಂ ಮಣಿಮೌಕ್ತಿಕ ನೀಳ ಸ್ಥೂಳ ಶಿಲಾ ಪ್ರವಿಭಾಷಿತೋ|
ತ್ತುಂಗಮಂ ಮುನಿಮುಖಮುಖಾಂಭೋಜೋದರ ನಿರ್ಗತಮಂತ್ರ ಪೂ
ತಾಂಗಮಂ ನೃಪನೆಯ್ದಿದನುದ್ಯಚ್ಛೃಂಗಮನಾ ಶತಶೃಂಗಮಂ|| ೧೧೫

ವ|| ಆ ಪರ್ವತದ ವಿಪುಳ ವನೋಪಕಂಠಗಳೊಳ್ ತಾಪಸಕನ್ಯೆಯರ್ ನಡಪಿದೆಳಲತೆಗಳೊಳೆಱಗಿ ತುಱುಗಿ ಸಾಮವೇದಧ್ವನಿಯೊಳ್ ಮೊರೆವ ತುಂಬಿಗಳುಮಂ ಪಣ್ತೆಱಗಿದ ತದಾಶ್ರಮದ ತರುಗಳ ಮೇಗಿರ್ದು ಪುಗಿಲ್ ಪುಗಿಲೆಂದಿತ್ತ ಬನ್ನಿಮಿರಿಮೆಂಬ ಪೊಂಬಣ್ಣದ ಕೋಗಿಲೆಗಳುಮಂ ಮುನಿಕುಮಾರರೋದುವ ವೇದವೇದಾಂಗಂಗಳಂ ತಪ್ಪುವಿಡುದು ಜಡಿದು ಬಗ್ಗಿಸುವ ಪದುಮರಾಗದ ಬಣ್ಣದರಗಿಳಿಗಳುಮಂ ಸುರಭಿಗಳ ತೊರೆದ ಮೊಲೆಗಳನುಣ್ಬವಱ ಮಱಗಳಂ ಪೋಗೆ ನೂಂಕಿ ಕೂಂಕಿ ಮೊಲೆಗಳನುಣ್ಬ ಕಿಶೋರ ಕೇಸರಿಗಳುಮಂ ತಮ್ಮೊಡನೆ ನಲಿದಾಡುವ ಕಿಶೋರಕೇಸರಿಗಳಂ ಪಿಡಿದು ತೆಗೆವ ಕರಿಕಳಭಂಗಳುಮನಾಗಳಾಪಳುವಂಗಳಿಂದೆ ಪಾಯ್ವ ಪುಲಿಗಳ ಮಱಗಳೊಳ್ ಪರಿದಾಡುವ ತರುಣ ಹರಿಣಂಗಳುಮಂ ಮತ್ತಂ ಮುತ್ತ ಕುರುಡತವಸಿಗಳ ಕೈಯಂ ಪಿಡಿದುಯ್ದವರ ಗುಹೆಗಳಂ ಪುಗಿಪ ಪೊಱಮಡಿಪ ಚಪಳ ಕಪಿಗಳುಮಂ ಹೋಮಾಗ್ನಿಯನೆಱಂಕೆಯ ಗಾಳಿಯಿಂ ನಂದಲೀಯದುರಿಪುವ ರಾಜಹಂಸೆಗಳುಮಂ ಮುನಿಗಣೀಶ್ವರರೊಡನೆ ದಾಳಿವೂಗೊಯ್ವೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪೋಧನರದ ತಪಪ್ರಭಾವಕ್ಕೆ ಚೋದ್ಯಂಬಟ್ಟು-

ಮಾಡಿದ ಕಾಮಕ್ರೀಡಾವಿಘ್ನಕ್ಕೆ ತಡೆಯಿಲ್ಲದ ಈ ಶಾಪವು ಹಿರಿದೇನಲ್ಲ – ೧೧೩. ಈ ಕಾಡೆಲ್ಲಿಯದು; ಈ ಬೇಟೆಯ ಕಾರ್ಯವಲ್ಲಿಯದು, ಈ ತಪಸ್ವಿಯೆಲ್ಲಿಯವನು, ಮೃಗವೆಂದು ನಾನು ಇದನ್ನು ಹೇಗೆ ಹೊಡೆದೆ, ಅಸಂಬದ್ಧವಾದ ಇದೆಲ್ಲ ನನ್ನ ಪ್ರಾಚೀನ ಕರ್ಮಾನವಲ್ಲದೆ ಬೇರೆಯಲ್ಲ ವ|| ಎಂದು ಹೋಚಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಆ ಸಮಾ ಆ ಸಮಾಚಾರವನ್ನೆಲ್ಲ ಹೇಳಿ ಸಮಸ್ತವಸ್ತುಗಳನ್ನೂ ದೀನರೂ ಅನಾಥರೂ ಆದ ಜನಗಳಿಗೆ ಉದಾರವಾಗಿ ದಾನಮಾಡಿ ತನ್ನ ಪರಿವಾರವನ್ನು ಬರಮಾಡಿ- ೧೪೪. ಸಂಸಾರವು ಸಾರವತ್ತಾಗಿರುವುದು ಮನ್ಮಥನ ನಡೆದಾಡುವ ಬಳ್ಳಿಗಳಂತಿರುವ ಸುಂದರಾಂಗಿಯರಿಂದಲ್ಲವೇ? ಆ ಋಷಿಶಾಪದಿಂದ ಇನ್ನು ಅದು ನನಗೆ ಇಲ್ಲವಾಯಿತು. ವನವಾಸದಲ್ಲಿರುತ್ತೇನೆ? ಇದಕ್ಕೆ ಮತ್ತಾರೂ ಅಡ್ಡಿಮಾಡಬೇಡಿ ಎಂದು ಅಪ್ರತಿಮ ಪರಾಕ್ರಮಿಯಾದ ಆ ಪಾಂಡುರಾಜನು ಕಾಡಿಗೆ ಹೊರಟನು. ಕುಂತಿ ಮಾದರಿಯರು ಅವನನ್ನು ತಡೆದು ವ|| ಹಿಂದೆ ಹಿಂದೆಯೇ ಬಂದರು.

೧೧೫. ಎತ್ತರವಾದ ಕಾಡಾನೆಯ ದಂತದ ಪೆಟ್ಟಿನಿಂದ ಉರುಳಿಸಲ್ಪಟ್ಟು ಮುರಿದ ಬೇಲದ ಮರಗಳನ್ನುಳ್ಳುದೂ ಮುತ್ತು ಮತ್ತು ರತ್ನಗಳನ್ನೊಳಗೊಂಡ ನೀಲವೂ ಸ್ಥೂಲವೂ ಆದ ಕಲ್ಲುಬಂಡೆಗಳಿಂದ ಪ್ರಕಾಶಮಾನವಾದುದೂ ಬಹಳ ಎತ್ತರವಾದುದೂ ಋಷಿಶ್ರೇಷ್ಠರ ಮುಖಕಮಲಗಳಿಂದ ಹೊರಹೊರಟ ಮಂತ್ರಗಳಿಂದ ಪವಿತ್ರವಾದ ಶರೀರವುಳ್ಳದೂ ಎತ್ತರವಾದ ಲೋಡುಗಳಿಂದ ಕೂಡಿದುದೂ ಆದ ಶತಶೃಂಗ ಪರ್ವತವನ್ನು ಪಾಂಡುರಾಜನು ಬಂದು ಸೇರಿದನು. ವ|| ಆ ಪರ್ವತದ ತಪ್ಪಲು ಪ್ರದೇಶದಲಿ ತಾಪಸಕನ್ಯೆಯರು ಸಾಕಿ ಬೆಳೆಸಿದ ಬಳ್ಳಿಗಳನ್ನು ಮುತ್ತಿ ಗುಂಪುಗೂಡೆ ಸಾಮವೇದಧ್ವನಿಯ ಶಬ್ದಮಾಡುತ್ತಿರುವ ದುಂಬಿಗಳನ್ನೂ ಫಲಭಾರದಿಂದ ಬಾಗಿದ ಆ ಆಶ್ರಮದ ಗಿಡಗಳ ಮೇಲಿದ್ದು ‘ಪ್ರವೇಶಿಸಿ, ಬನ್ನಿ, ಇಲ್ಲಿ ವಾಸಿಸಿ’ ಎನ್ನುತ್ತಿರುವ ಹೊಂಬಣ್ಣದ ಕೋಗಿಲೆಗಳನ್ನೂ ಋಷಿಕುಮಾರರು ಅಧ್ಯಯನ ಮಾಡುತ್ತಿರುವ ವೇದವೇದಾಂಗಗಳಲ್ಲಿ ತಪ್ಪನ್ನು ಕಂಡುಹಿಡಿದು ಆಕ್ಷೇಪಿಸಿ ಸರಿಪಡಿಸುವ ಪದ್ಮರಾಗವೆಂಬ ರತ್ನದ ಬಣ್ಣದಿಂದ

ಚಂ|| ವಿನಯದಿನಿತ್ತ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೊ
ಯ್ಯನೆ ಮಱದುಂಬಿಗಳ್ ಮೊರೆವುವೞ್ಕಱ ಳೊಲ್ದೆಱಪಂತೆ ತಳ್ತ ಪೂ|
ವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ ಕಲ್ತುವಾಗದೇ
ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ|| ೧೧೬

ವ|| ಎಂದು ಮೆಚ್ಚುತ್ತುಮೆನಗೆ ನೆಲಸಿರಲೀ ತಪೋವನಮೆ ಪಾವನಮೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗೆ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವರ್ಮಕ್ಕಳಂ ಪಡೆವಂತು ಪರಾಶರಮುನೀಂದ್ರನೊಳ್ ಬರಂಬಡೆದಳೆಂಬುದಂ ಕುಂತಿ ಕೇಳ್ದು ತಾನುಂ ಪುತ್ರಾರ್ಥಿನಿಯಾಗಲ್ ಬಗೆದು-

ಚಂ|| ವಿಸಸನದೊಳ್ ವಿರೋನೃಪರಂ ತೆಱದೊಟ್ಟಲುಮರ್ಥಿಗರ್ಥಮಂ
ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೊಳ್|
ಪಸರಿಸಲುಂ ಕರಂ ನೆವ ಮಕ್ಕಳನೀಯದೆ ನೋಡೆ ನಾಡೆ ನೋ
ಯಸಿದಪುದಿಕ್ಷುಪುಷ್ಪದವೊಲೆನ್ನಯ ನಿಷಲ ಪುಷ್ಪದರ್ಶನಂ|| ೧೧೭

ವ|| ಎಂದು ಚಿಂತಾಕ್ರಾಂತೆಯಾಗಿರ್ದ ಕುಂತಿಯಂ ಕಂಡು ಪಾಂಡುರಾಜನೇಕಾಂತದೊಳಿಂತೆಂದಂ-

ಉ|| ಚಿಂತೆಯಿದೇನೊ ಸಂತತಿಗೆ ಮಕ್ಕಳೆ ನೆಟ್ಟನೆ ಬಾರ್ತೆಯಪ್ಪೊಡಿ
ನ್ನಿಂತಿರವೇಡ ದಿವ್ಯ ಮುನಿಪುಂಗವರಂ ಬಗೆದೀರ್ಪಿನಂ ನಿಜಾ|
ತ್ಯಂತ ಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತ ವಿ
ಶ್ರಾಂತ ಯಶರ್ಕಳಂ ವರ ತನೂಭವರಂ ಪಡೆ ನೀಂ ತಳೋದರೀ|| ೧೧೮

ಕೂಡಿದ ಶ್ರೇಷ್ಠವಾದ ಗಿಳಿಗಳನ್ನೂ ಹಸುಗಳ ಹಾಲು ತುಂಬಿದ ಕೆಚ್ಚಲುಗಳನ್ನು ಉಣ್ಣುತ್ತಿರುವ ಅವುಗಳ ಕರುಗಳನ್ನು ಪಕ್ಕಕ್ಕೆ ತಳ್ಳಿ ಓರೆಯಾಗಿ ಹಾಲುಕುಡಿಯುತ್ತಿರುವ ಸಿಂಹದ ಮರಿಗಳನ್ನೂ ತಮ್ಮೊಡನೆ ನಲಿದಾಡುತ್ತಿರುವ ಸಿಂಹದ ಮರಿಗಳನ್ನು ಹಿಡಿದೆಳೆಯುವ ಆನೆಯ ಮರಿಗಳನ್ನೂ ಆಗಾಗ ಅಲ್ಲಿ ಎಡೆಯಾಡುತ್ತಿರುವ ಹುಲಿಯ ಮರಿಗಳ ಜೊತೆಯಲ್ಲಿ ಹರಿದಾಡುತ್ತಿರುವ ಜಿಂಕೆಯ ಮರಿಗಳನ್ನೂ ಮತ್ತು ಕುರುಡರಾದ ಮುದಿತಪಸ್ವಿಗಳ ಕೈ ಹಿಡಿದು ಅವರ ಗುಹೆಗಳನ್ನು ಪ್ರವೇಶಮಾಡಿಸುವ ಹಾಗೆಯೇ ಅಲ್ಲಿಂದ ಹೊರಡಿಸುವ ಚಪಳವಾದ ಕಪಿಗಳನ್ನೂ ಹೋಮಾಗ್ನಿಯು ನಂದಿಹೋಗದಂತೆ ತಮ್ಮ ರಕ್ಕೆಯ ಗಾಳಿಯಿಂದ ಬೀಸಿ ಉರಿಸುತ್ತಿರುವ ರಾಜಹಂಸಗಳನ್ನೂ ಮುನೀಂದ್ರ ಸಮೂಹದೊಡನೆ ದಾಳಿಯ ಹೂವನ್ನು ಕುಯ್ಯುವ ಮತ್ತು ಜೊತೆಯಲ್ಲಿ ಬರುವ ಕಪಿಗಳನ್ನೂ ನೋಡಿ ಆ ತಪೋವನದ ತಪಸ್ಸನ್ನೇ ಧನವನ್ನಾಗಿ ಉಳ್ಳ ಆ ಋಷಿಶ್ರೇಷ್ಠರ ತಪಸ್ಸಿನ ಪ್ರಭಾವಕ್ಕೆ ಆಶ್ಚರ್ಯಪಟ್ಟನು. ೧೧೬. ಇದೇನು! ಇಲ್ಲಿಯ ದುಂಬಿಯ ಮರಿಗಳು ವಿನಯದಿಂದ ಈ ಕಡೆ ಬನ್ನಿ, ಇಲ್ಲಿರಿ ಎನ್ನುವ ಹಾಗೆ ಮನೋಹರವಾದ ಧ್ವನಿಯಿಂದ ನಿಧಾನವಾಗಿ ಶಬ್ದಮಾಡುತ್ತಿವೆ. ಮರಗಳೂ ತಾವು ಹೊತ್ತಿರುವ ಹೊಸಹೂವಿನ ಗೊಂಚಲಿನ ಭಾರದಿಂದ ಪ್ರೀತಿಯಿಂದ ಒಲಿದು ಬಾಗಿದಂತೆ ಏನು ಸೊಗಸಾಗಿದೆ ! ಈ ಪರ್ವತಶ್ರೇಷ್ಠದ ಮರಗಳೂ ಈ ತಪೋಧನರ ಕೈಯಿಂದಲೇ ನಮ್ರತೆಯನ್ನು ಕಲಿತವಾಗಿರಬೇಕಲ್ಲವೇ? ವ|| ಎಂದು ಮೆಚ್ಚುತ್ತ ನಾನು ವಾಸವಾಗಿರಲು ಈ ತಪೋವನವೇ ಪವಿತ್ರವಾದುದು ಎಂದು ಆ ತಪೋವನದ ಮುನಿಜನರ ವಿಶೇಷ ಪ್ರೀತಿಯನ್ನು ಹೆಚ್ಚಿಸಿ ಕಾಮದಲ್ಲಿ ತನಗಿದ್ದ ಪ್ರೀತಿಯನ್ನು ಹೆದರಿ ಓಡಿಹೋಗುವ ಹಾಗೆ ಮಾಡಿ ಆ ಆಶ್ರಮದಲ್ಲಿ ಪಾಂಡುರಾಜನು ಆಶ್ರಮದ ಗುರುವಾಗಿ ಇದ್ದನು. ಈ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರುಮಕ್ಕಳನ್ನು ಪಡೆಯುವಂತೆ ವ್ಯಾಸಮಹರ್ಷಿಗಳಿಂದ ವರವನ್ನು ಪಡೆದಳೆಂಬುದನ್ನು ಕುಂತಿ ಕೇಳಿ ತಾನೂ ಮಕ್ಕಳನ್ನು ಬಯಸುವವಳಾದಳು. ೧೧೭. ಯುದ್ಧದಲ್ಲಿ ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವ ಸಾಮರ್ಥ್ಯವುಳ್ಳ, ಯಾಚಕರಿಗೆ ದ್ರವ್ಯವನ್ನು ಕಸಕ್ಕೆ ಸಮನಾಗಿ ಎಣಿಸಿ ದಾನಮಾಡುವ ತಮ್ಮ ಪರಾಕ್ರಮವನ್ನು ದಿಕ್ಕುಗಳ ಕೊನೆಯಲ್ಲಿಯೂ ಪ್ರಸಾರ ಮಾಡಲು ಸಮರ್ಥರಾದ ಮಕ್ಕಳುಗಳನ್ನು ಕೊಡದೆ ನೋಡು ನೋಡುತ್ತಿರುವ ಹಾಗೆಯೇ ನನ್ನ (ತಿಂಗಳ ಮುಟ್ಟು) ರಜಸ್ವಲೆತನವು ಕಬ್ಬಿನ ಹೂವಿನಂತೆ ನಿಷಲವಾಯಿತು. ವ|| ಎಂಬ ಚಿಂತೆಯಿಂದ ಕೂಡಿದ್ದ ಕುಂತಿಯನ್ನು ನೋಡಿ ಪಾಂಡುರಾಜನು ರಹಸ್ಯವಾಗಿ ಹೀಗೆಂದು ಹೇಳಿದನು. ೧೧೮. ಕೃಶೋದರಿಯಾದ ಎಲೌ ಕುಂತಿಯೇ ಈ ಚಿಂತೆಯೇಕೆ ನಿನಗೆ? ನಮ್ಮ ವಂಶಕ್ಕೆ ನೇರವಾಗಿ ಪುತ್ರಸಂತಾನದ ಪ್ರಾಪ್ತಿಯಾಗಬೇಕಾದರೆ ಇನ್ನು ಮೇಲೆ ನೀನು ಹೀಗಿರಬೇಡ; ಋಷಿಶ್ರೇಷ್ಠರಿಂದ ನಿನ್ನ ಇಷ್ಪಾರ್ಥಸಿದ್ಧಿಯಾಗುವ ಹಾಗೆ ನಿನ್ನ ವಿಶೇಷವಾದ ಪತಿವ್ರತಾಗುಣದಿಂದ ನೀನು ಪೂಜೆಮಾಡಿ ಅವರನ್ನು ಮೆಚ್ಚಿಸು. ದಿಕ್ಕುಗಳ ಕೊನೆಯವರೆಗೆ ವ್ಯಾಪ್ತಿಯಾದ

ವ|| ಎಂದೊಡೆ ಕೊಂತಿಯಿಂತೆಂದಳೆನ್ನ ಕನ್ನಿಕೆಯಾ ಕಾಲದೊಳ್ ನಾನೆನ್ನ ಮಾವಂ ಕೊಂತಿಭೋಜನ ಮನೆಯೊಳ್ ಬಳೆವಂದು ದುರ್ವಾಸ ಮಹಾಮುನಿಯರೆಮ್ಮ ಮನೆಗೆ ನಿಚ್ಚಕ್ಕಂ ಬರ್ಪರವರೆನ್ನ ವಿನಯಕ್ಕಂ ಭಕ್ತಿಗಂ ಬೆಸಕೆಯ್ವುದರ್ಕಂ ಮೆಚ್ಚಿ ಮಂತ್ರಾಕ್ಷರಂಗಳನಯ್ದಂ ವರವಿತ್ತರೀಯಯ್ದು ಮಂತ್ರಕಯ್ವರ್ಮಕ್ಕಳಂ ನಿನ್ನ ಬಗೆಗೆ ಬಂದವರನಾಹ್ವಾನಂ ಗೆಯ್ಯಲವರ ಪೋಲ್ವೆಯ ಮಕ್ಕಳಂ ಪಡೆವೆಯೆಂದು ಬೆಸಸಿದೊಡೀಗಳೆನ್ನ ಪುಣ್ಯದಿಂ ದೊರೆಕೊಂಡು ದೊಳ್ಳಿತ್ತೆಂಬುದಂ ದಿವ್ಯಮುನಿವಾಕ್ಯಮಮೋಘವಾಕ್ಯಮಕ್ಕುಮದರ್ಕೇನುಂ ಚಿಂತಿಸಲ್ವೇಡೆಂ ದೊಡಂತೆ ಗೆಯ್ವೆನೆಂದು ತೀರ್ಥಜಲಂಗಳಂ ಮಿಂದು ದಳಿಂಬವನುಟ್ಟು ಮುತ್ತಿನ ತೊಡಿಗೆಗಳಂ ತೊಟ್ಟು ದರ್ಭಶಯನದೊಳಿರ್ದು-

ಉ|| ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ
ತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋ|
ಜಾನನೆ ಜಾನದಿಂ ಬರಿಸೆ ಬಂದು ಯಮಂ ಬೆಸನಾವುದಾವುದಾ
ತ್ಮಾನುಗತಾರ್ಥಮೆಂದೊಡನಗೀವುದು ನಿನ್ನನೆ ಪೋಲ್ವ ಪುತ್ರನಂ|| ೧೧೯

ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ-

ಚಂ|| ಹಿಮ ಧವಳಾತಪತ್ರಮನೆ ಪೋಲೆ ಮುಖೇಂದುವ ಬೆಳ್ಪು ಪೂರ್ಣ ಕುಂ
ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪು ಪತಾಕೆಯೊಂದು ವಿ|
ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಕೊಂಡುದವಳ್ಗೆ ಗರ್ಭ ಚಿ
ಹ್ನಮೆ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ|| ೧೨೦

ವ|| ಅಂತು ಕೊಂತಿಯ ಗರ್ಭಭಾರಮುಂ ತಾಪಸಾಶ್ರಮದನುರಾಗಮುಮೊಡನೊಡನೆ ಬಳೆಯೆ ಬಂಧುಜನದ ಮನೋರಥಂಗಳು ಮೊಂಬತ್ತನೆಯ ತಿಂಗಳುಮೊಡನೊಡನೆ ನೆಯೆ-

ಕಂ|| ವನನಿಯಿಂದಂ ಚಂದ್ರಂ
ವಿನತೋದರದಿಂ ಗರುತ್ಮನುದಯಾಚಳದಿಂ|
ದಿನಪನೊಗೆವಂತೆ ಪುಟ್ಟಿದ
ನನಿವಾರ್ಯ ಸುತೇಜನೆನಿಪನಿನಜನ ತನಯಂ|| ೧೨೧

ಯಶಸ್ಸಿನಿಂದ ಕೂಡಿದ ಶ್ರೇಷ್ಠರಾದ ಮಕ್ಕಳನ್ನು ಪಡೆಯುತ್ತೀಯೆ ವ|| ಎಂದು ಹೇಳಲು ಕುಂತಿಯು ಹೀಗೆಂದಳು- ನಾನು ಕನ್ನಿಕೆಯಾಗಿ ನನ್ನ ಮಾವನಾದ ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರುವಾಗ ದುರ್ವಾಸ ಮಹರ್ಷಿಗಳು ನಮ್ಮ ಮನೆಗೆ ಪ್ರತಿದಿನವೂ ಬರುತ್ತಿದ್ದವರು ನನ್ನ ವಿನಯಕ್ಕೂ ಭಕ್ತಿಗೂ ಸೇವೆ ಮಾಡಿದುದಕ್ಕೂ ಮೆಚ್ಚಿ ಅಯ್ದು ಮಂತ್ರಾಕ್ಷರಗಳನ್ನು ವರವಾಗಿ ಕೊಟ್ಟರು. ಈ ಅಯ್ದು ಮಂತ್ರಕ್ಕೂ ನಿನ್ನ ಮನಸ್ಸಿಗೆ ಬಂದವರನ್ನು ನೆನೆದು ಆಹ್ವಾನ ಮಾಡಲು ಅವರನ್ನು ಹೋಲುವ ಅಯ್ದು ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಕೊಡಿಸಿದರು. ಈಗ ಅದು ನನ್ನ ಪುಣ್ಯದಿಂದ ದೊರೆಕೊಂಡುದು ಒಳ್ಳೆಯದಾಯಿತು ಎಂದು ಹೇಳಿದಳು. ಪಾಂಡುವು ‘ದಿವ್ಯಋಷಿಗಳ ಮಾತು ಬಹುಬೆಲೆಯುಳ್ಳದ್ದು ; ಅದಕ್ಕೇನೂ ಯೋಚಿಸಬೇಡ, ಹಾಗೆಯೇ ಮಾಡು’ ಎಂದುನು. ಕುಂತಿಯು ಹಾಗೆಯೇ ಮಾಡುತ್ತೇನೆಂದು ಹೇಳಿ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಶುಭ್ರವಸ್ತ್ರವನ್ನು ಧರಿಸಿ ಮುತ್ತಿನ ಆಭರಣವನ್ನು ತೊಟ್ಟು ದರ್ಭೆಯಿಂದ ಮಾಡಿದ ಹಾಸಿಗೆ ಮೇಲಿದ್ದು ೧೧೯. ಋಷಿಶ್ರೇಷ್ಠನಾದ ದುರ್ವಾಸನು ಕೊಟ್ಟ ಮಂತ್ರಸಮೂಹವನ್ನು ಜ್ಞಾನದಿಂದ ಏಕಾಗ್ರಚಿತ್ತದಿಂದ ಪಠನಮಾಡಿ ಕಮಲಮುಖಿಯಾದ ಆ ಕುಂತಿಯು ಅದ್ಭುತವಾದ ತೇಜಸ್ಸಿನಿಂದ ಕೂಡಿದ ಯಮರಾಜನನ್ನು ಆಹ್ವಾನಿಸಿದಳು. ಯಮನು ಬಂದು ‘ಮಾಡಬೇಕಾದ ಕಾರ್ಯವಾವುದು ನಿನ್ನ ಇಷ್ಟಾರ್ಥವೇನು’ ಎಂದನು. ‘ನಿನ್ನನ್ನು ಹೋಲುವ ಮಗನನ್ನು ನನಗೆ ದಯಪಾಲಿಸಬೇಕು’ ಎಂದಳು. ವ|| ಯಮಭಟ್ಟಾರಕನು ‘ತಥಾಸ್ತು’ ಎಂದು ತನ್ನಂಶವನ್ನು ಅವಳ ಗರ್ಭದಲ್ಲಿ ಇಳಿಸಿಟ್ಟು ಮರೆಯಾದನು. ಆಗ

೧೨೦. ಅವಳ ಮುಖಕಮಲದ ಬಿಳುಪು ಹಿಮದಂತೆ ಬೆಳ್ಳಗಿರುವ ಶ್ವೇತಚ್ಛತ್ರವನ್ನು ಸೂಚಿಸಿತು. ಕಪ್ಪುಸ್ತನಗಳು ಪೂರ್ಣಕುಂಭಗಳ ಆಕಾರವನ್ನು ಪಡೆದವು. ಹುಬ್ಬಿನ ವಿಸ್ತಾರವು ಧ್ವಜದ ವಿಸ್ತಾರವನ್ನು ಪ್ರದರ್ಶಿಸಿತು. ಅವಳ ಗರ್ಭದಲ್ಲಿರುವ ಬಾಲಕನ ಮುಂದಣ ರಾಜ್ಯಚಿಹ್ನವನ್ನು ಸೂಚಿಸುವಂತೆ ಅವಳಿಗೆ ಗರ್ಭಚಿಹ್ನೆಗಳುಂಟಾದವು. ವ|| ಹಾಗೆ ಕುಂತಿಯ ಗರ್ಭಭಾರವೂ ಆ ತಪಸ್ವಿಗಳ ಆಶ್ರಮದ ಪ್ರೀತಿಯೂ ಜೊತೆಜೊತೆಯಲ್ಲಿಯೇ ಅಭಿವೃದ್ಧಿಯಾಗುತ್ತಿರಲು ಅವಳ ಬಂಧುಜನದ ಇಷ್ಟಾರ್ಥವೂ ಒಂಬತ್ತನೆಯ ತಿಂಗಳೂ ಒಟ್ಟಿಗೆ ಪೂರ್ಣವಾದುವು. ೧೨೧. ಸಮುದ್ರದಿಂದ ಚಂದ್ರನೂ ವಿನತಾದೇವಿಯ ಹೊಟ್ಟೆಯಿಂದ ಗರುಡನೂ ಉದಯಪರ್ವತದಿಂದ ಸೂರ್ಯನೂ

ಪುಟ್ಟುವುದುಂ ಧರ್ಮಮುಮೊಡ
ವುಟ್ಟಿದುದೀತನೊಳೆ ಧರ್ಮನಂಶದೊಳೀತಂ|
ಪುಟ್ಟಿದನೆಂದಾ ಶಿಶುಗೊಸೆ
ದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರುಂ|| ೧೨೨

ವ|| ಅಂತು ಪೆಸರನಿಟ್ಟು ಪರಕೆಯಂ ಕೊಟ್ಟು-

ಕಂ|| ಸಂತಸದಿನಿರ್ದು ಮಕ್ಕಳ
ಸಂತತಿಗೀ ದೊರೆಯರಿನ್ನುಮಾಗದೊಡೆಂತುಂ|
ಸಂತಸಮೆನಗಿಲ್ಲೆಂದಾ
ಕಾಂತೆ ಸುತಭ್ರಾಂತೆ ಮುನ್ನಿನಂತೆವೊಲಿರ್ದಳ್|| ೧೨೩

ಮಂತ್ರಾಕ್ಷರ ನಿಯಮದಿನಭಿ
ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ|
ಮಂತ್ರಂ ಪೇೞೆನೆ ಕುಡು ರಿಪು
ತಂತ್ರಕ್ಷಯಕರನನೆನಗೆ ಹಿತನಂ ಸುತನಂ|| ೧೨೪

ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕ್ಕೊಗೆದೊಡಾತನಂಶಮಾಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತೆ ಸೊಗಯಿಸೆ-

ಚಂ|| ತ್ರಿವಳಿಗಳುಂ ವಿರೋ ನೃಪರುತ್ಸವಮುಂ ಕಿಡೆವಂದುವಾನನೇಂ
ದುವ ಕಡುವೆಳ್ಪು ಕೂಸಿನ ನೆಗೞ್ತೆಯ ಬೆಳ್ಪುವೊಲಾಯ್ತು ಮುನ್ನೆ ಬ|
ಳ್ಕುವ ನಡು ತೋರ್ಪ ಮೆಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ
ಲ್ಲವದೊಳೆ ಮುಚ್ಚಿದಂದದೊಳೆ ಚೂಚುಕಮಾಂತುದು ಕರ್ಪನಾಕೆಯಾ|| ೧೨೫

ಕಂ|| ಆ ಸುದತಿಯ ಮೃದು ಪದ ವಿ
ನ್ಯಾಸಮುಮಂ ಶೇಷನಾನಲಾರದೆ ಸುಯ್ದಂ|
ಬೇಸಱನೆಂದೊಡೆ ಗರ್ಭದ
ಕೂಸಿನ ಬಳೆದಳವಿಯಳವನಳೆವರುಮೊಳರೇ|| ೧೨೬

ವ|| ಅಂತು ಗರ್ಭನಿರ್ಭರ ಪ್ರದೇಶದೊಳರಾತಿಗಳ್ಗಂತಕಾಲಂ ದೊರೆಕೊಳ್ವಂತೆ ಪ್ರಸೂತಿ ಕಾಲಂ ದೊರೆಕೊಳೆ-

ಹುಟ್ಟುವಂತೆ ತೇಜೋಮೂರ್ತಿಯಾದ ಯಮಪುತ್ರನು ಜನಿಸಿದನು. ೧೨೨. ಇವನು ಹುಟ್ಟಲಾಗಿ ಇವನೊಡನೆಯೇ ಧರ್ಮವೂ ಹುಟ್ಟಿತು. ಯಮಧರ್ಮನ ಅಂಶದಿಂದ ಈತ ಹುಟ್ಟಿದ್ದಾನೆ ಎಂದು ಆ ಋಷಿಸಮೂಹವು ಆ ಮಗುವಿಗೆ ಪ್ರೀತಿಯಿಂದ ಧರ್ಮಸುತನೆಂಬ ಹೆಸರನ್ನಿಟ್ಟಿತು. ವ|| ಹಾಗೆ ಹೆಸರಿಟ್ಟು ಹರಕೆಯನ್ನು ಕೊಟ್ಟರು ೧೨೩. ಸಂತೋಷದಿಂದಿದ್ದು ಮಕ್ಕಳ ಸಂತತಿಗೆ ಇವನಿಗೆ ಸಮಾನರಾದ ಇನ್ನೂ ಇತರರೂ ಆಗದಿದ್ದರೆ ಹೇಗೂ ನನಗೆ ಸಂತೋಷವಿಲ್ಲ ಎಂದು ಮಕ್ಕಳ ಭ್ರಮೆಯಿಂದ ಕೂಡಿದ ಆ ಕುಂತಿಯು ಮೊದಲಿನ ಹಾಗೆಯೇ ಇದ್ದಳು. ೧೨೪. (ಅಲ್ಲದೆ) ಮಂತ್ರಾಕ್ಷರವನ್ನು ಜಪಿಸುವ ವಿಯಿಂದ ವಾಯುದೇವನನ್ನು ಆಹ್ವಾನಿಸಿ ಬರಿಸಲಾಗಿ ಅವನು ‘ಇಷ್ಟಾರ್ಥವೇನು ಹೇಳು’ ಎನ್ನಲು ‘ವೈರಿಸೈನ್ಯವನ್ನು ನಾಶಪಡಿಸುವವನು ಎನ್ನಿಸಿಕೊಳ್ಳುವ ಹಿತನಾದ ಮಗನನ್ನು ಕೊಡು’ ಎಂದಳು. ವ|| ವಾಯುದೇವನು ‘ಇದೇನು ಮಹಾ ದೊಡ್ಡದು. ಕೊಟ್ಟಿದ್ದೇನೆ’ ಎಂದು ಹೇಳಿ ಆಕಾಶಪ್ರದೇಶಕ್ಕೆ ನೆಗೆಯಲು, ಆತನಂಶವು ಅವಳ ಗರ್ಭಸರೋವರದಲ್ಲಿ ಚಂದ್ರಬಿಂಬದಂತೆ ಸೊಗಯಿಸಿತು. ೧೨೫. ಅವಳ ಹೊಟ್ಟೆಯ ಮೇಲಿನ ಮೂರು ಮಡಿಪು (ರೇಖೆ)ಗಳೂ ವೈರಿರಾಜರ ಸಂತೋಷವೂ (ಒಟ್ಟಿಗೆ) ನಾಶವಾದುವು. ಅವಳ ಮುಖದಲ್ಲಿರುವ ಹೆಚ್ಚಾದ ಬಿಳುಪುಬಣ್ಣವು ಗರ್ಭದಲ್ಲಿರುವ ಮಗುವಿನ ಯಶಸ್ಸಿನ ಬಿಳಿಯ ಬಣ್ಣದಂತಾಯಿತು. ಮೊದಲು ಬಳುಕುತ್ತಿದ್ದ ನಡುವು ದಪ್ಪನಾದ ಆಕಾರವನ್ನು ಪಡೆಯಿತು. ಅವಳ ಮೊಲೆಯ ತೊಟ್ಟು ಚಿನ್ನದ ಕಲಶವನ್ನು ಹೊಂಗೆಯ ಚಿಗುರಿನಿಂದ ಮುಚ್ಚಿದಂತೆ ಕಪ್ಪುಬಣ್ಣವನ್ನು ತಾಳಿತು. ೧೨೬. ಸುಂದರವಾದ ದಂತಪಂಕ್ತಿಯಿಂದ ಕೂಡಿದ ಆ ಕುಂತಿಯು ಮೃದುವಾದ ಹೆಜ್ಜೆಯಿಡುವುದನ್ನು ಆದಿಶೇಷನು ತಾಳಲಾರದೆ ಕಷ್ಟದಿಂದ ನಿಟ್ಟುಸಿರು ಬಿಟ್ಟನು, ಎಂದರೆ ಗರ್ಭದಲ್ಲಿರುವ ಕೂಸು ಬೆಳೆದ ಅಳತೆಯ ಪ್ರಮಾಣವನ್ನು ಅಳೆಯುವವರೂ ಇದ್ದಾರೆಯೇ? (ಇಲ್ಲವೆಂದೇ ಅರ್ಥ) ವ|| ಹಾಗೆ

ಕಂ|| ಶುಭ ತಿಥಿ ಶುಭ ನಕ್ಷತ್ರಂ
ಶುಭ ವಾರಂ ಶುಭ ಮುಹೂರ್ತಮೆನೆ ಗಣಕನಿಳಾ|
ಪ್ರಭುವೊಗೆದನುದಿತ ಕಾಯ
ಪ್ರಭೆಯೊಗೆದಿರೆ ದಳಿತ ಶತ್ರುಗೋತ್ರಂ ಪುತ್ರಂ|| ೧೨೭

ಭೀಮಂ ಭಯಂಕರಂ ಪೆಱ
ತೇ ಮಾತೀ ಕೂಸಿನಂದವಿತನ ಪೆಸರುಂ|
ಭೀಮನೆ ಪೋಗೆನೆ ಮುನಿಜನ
ವಿ ಮಾೞ್ಕೆಯಿನಾಯ್ತು ಶಿಶುಗೆ ಪೆಸರನ್ವರ್ಥಂ|| ೧೨೮

ವ|| ಅಂತು ಭರತಕುಲತಿಲಕರಪ್ಪಿರ್ವರ್ಮಕ್ಕಳಂ ಪೆತ್ತು ಕೊಂತಿ ಸಂತಸದಂತ ಮನೆಯ್ದಿರ್ಪುದುಮತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ಕೇಳ್ದು ತನ್ನ ಗರ್ಭಂ ತಡೆದುದರ್ಕೆ ಕಿನಿಸಿ ಕಿಂಕಿರಿವೋಗಿ-

ಕಂ|| ಸಂತತಿಗೆ ಪಿರಿಯ ಮಕ್ಕಳ
ನಾಂ ತಡೆಯದೆ ಪಡೆವೆನೆಂದೊಡೆನ್ನಿಂ ಮುನ್ನಂ|
ಕೊಂತಿಯೆ ಪಡೆದಳ್ ಗರ್ಭದ
ಚಿಂತೆಯದಿನ್ನೇವುದೆಂದು ಬಸಿಱಂ ಪೊಸೆದಳ್|| ೧೨೯

ಪೊಸೆದೊಡೆ ಪಾಲ್ಗಡಲಂ ಮಗು
ೞ್ದಸುರರ್ ಪೊಸೆದಲ್ಲಿ ಕಾಳಕೂಟಾಂಕುರಮಂ|
ದಸದಳಮೊಗೆದಂತೊಗೆದುವು
ಬಸಿಱಂ ನೂಂದು ಪಿಂಡಮರುಣಾಕೀರ್ಣಂ|| ೧೩೦

ವ|| ಅವಂ ಕಂಡು ಕಿನಿಸಿ ಪರ್ಚೆೞವೆಲ್ಲವಂ ಪೊಱಗೆ ಬಿಸುಟು ಬನ್ನಿಮೆಂಬುದುಂ ವ್ಯಾಸಭಟ್ಟಾರಕಂ ಬಂದು ಗಾಂಧಾರಿಯಂ ಬಗ್ಗಿಸಿ-

ಚಂ|| ಒದವುಗೆ ನಿನ್ನ ಸಂತತಿಗೆ ನೂರ್ವರುದಗ್ರ ಸುತರ್ಕಳೊಂದೆ ಗ
ರ್ಭದೊಳೆನೆ ಕೆಮ್ಮನಿಂತು ಪೊಸೆದಿಕ್ಕಿದೆ ಪೊಲ್ಲದುಗೆಯ್ದೆಯೆಂದು ಮಾ|
ಣದೆ ಮುನಿ ನೂಱುಪಿಂಡಮುಮನಾಗಳೆ ತೀವಿದ ಕಮ್ಮನಪ್ಪ ತು
ಪ್ಪದ ಕೊಡದೊಳ್ ಸಮಂತು ಮಡಗಿಟ್ಟೊಡೆ ಸೃಷ್ಟಿಗೆ ಚೋದ್ಯಮಪ್ಪಿನಂ|| ೧೩೧

ಗರ್ಭವು ಬೆಳೆಯುತ್ತಿದ್ದೆಡೆಯಲ್ಲಿ ಶತ್ರುಗಳಿಗೆ ಅವಸಾನಕಾಲವುಂಟಾಗುವ ಹಾಗೆ ಹೆರಿಗೆಯ ಕಾಲವು ಸಮೀಪಿಸಲು- ೧೨೭. ಜೋಯಿಸನು ಶುಭತಿಥಿ, ಶುಭನಕ್ಷತ್ರ, ಶುಭಮುಹೂರ್ತ ಎಂದು ಹೇಳುತ್ತಿರಲು ಜೊತೆಯಲ್ಲಿಯೇ ಹುಟ್ಟಿದ ಶರೀರಕಾಂತಿಯು ಹರಡುತ್ತಿರಲು ಲೋಕಕ್ಕೆಲ್ಲ ರಾಜನೂ ಶತ್ರುಸಂಹಾರಕನೂ ಆದ ಮಗನು ಹುಟ್ಟಿದನು. ೧೨೮. ಈ ಮಗುವಿನ ರೀತಿ ಅತಿಭಯಂಕರವಾದುದು. ಬೇರೆಯ ಮಾತೇನು? ಅವನ ಹೆಸರು ಕೂಡ ಭೀಮನೆಂದೇ ಆಗಲಿ ಎಂದು ಋಷಿಗಳು ಎನ್ನಲು ಅದೇ ರೀತಿ ಆ ಶಿಶುವಿಗೆ ಹೆಸರು ಅನ್ವರ್ಥವಾಗಿಯೇ (ಅರ್ಥಕ್ಕೆ ಹೊಂದಿಕೊಳ್ಳುವ ಹಾಗೆ) ಭೀಮನೆಂದಾಯಿತು. ವ|| ಹಾಗೆ ಭರತಕುಲತಿಲಕರಾದ ಇಬ್ಬರು ಮಕ್ಕಳನ್ನು ಹೆತ್ತು (ಪಡೆದು) ಕುಂತಿಯು ಸಂತೋಷದ ಪರಮಾವಯನ್ನು ಹೊಂದಿರಲು ಆ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ಕೇಳಿ ತನ್ನ ಗರ್ಭವು ತಡವಾದುದಕ್ಕೆ ಕೋಪಿಸಿ ಕಿರಿಕಿರಿಯಾಗಿ- ೧೨೯. ವಂಶಕ್ಕೆ ಹಿರಿಯರಾದ ಮಕ್ಕಳನ್ನು ನಾನು (ಸಾವಕಾಶವಿಲ್ಲದೆ) ಮೊದಲು ಪಡೆಯುತ್ತೇನೆಂದಿದ್ದರೆ ನನಗಿಂತ ಮುಂಚೆ ಕುಂತಿಯೇ ಪಡೆದಳು. ಇನ್ನು ಮೇಲೆ ಗರ್ಭದ ಚಿಂತೆಯದೇಕೆ ಎಂದು ಹೊಟ್ಟೆಯನ್ನು ಕಿವುಚಿದಳು. ೧೩೦. ಕ್ಷೀರಸಮುದ್ರವನ್ನು ಪುನ ರಾಕ್ಷಸರು ಕಡೆಯಲು ಅಂದು ಕಾಳಕೂಟವೆಂಬ ವಿಷದ ಮೊಳಕೆ ಅತಿಶಯವಾಗಿ ಹುಟ್ಟಿದ ಹಾಗೆ ಗಾಂಧಾರಿಯ ಗರ್ಭದಿಂದ ರಕ್ತದಿಂದ ತುಂಬಿದ ನೂರೊಂದು ಭ್ರೂಣಗಳು ಹುಟ್ಟಿದುವು. ವ|| ಅವನ್ನು ನೋಡಿ ಕೋಪಿಸಿ ಬೆಂಕಿಬೆಂಕಿಯಾಗಿ ಇವುಗಳೆಲ್ಲವನ್ನೂ ಹೊರಗೆ ಬಿಸಾಡಿಬನ್ನಿ ಎಂದು ಹೇಳಲು ವ್ಯಾಸಮಹರ್ಷಿಯು ಬಂದು ಗಾಂಧಾರಿಯನ್ನು ಗದರಿಸಿ- ೧೩೧. ‘ನಿನ್ನ ಸಂತತಿಗೆ ಒಂದೇ ಗರ್ಭದಲ್ಲಿ ನೂರುಜನ ಶ್ರೇಷ್ಠರಾದ ಮಕ್ಕಳು ಹುಟ್ಟಲಿ ಎಂದಿರಲು ನಿಷ್ಪ್ರಯೋಜನವಾಗಿ ಹೀಗೆ ಹೊಟ್ಟೆಯನ್ನು ಕಿವುಚಿಬಿಟ್ಟೆ, ಅಯೋಗ್ಯವಾದುದನ್ನು ಮಾಡಿದೆ’ ಎಂದು ಬಿಡದೆ ಆ ಋಷಿಯು ಆ ನೂರು ಭ್ರೂಣಗಳನ್ನು ಆಗಲೇ ಗಮಗಮಿಸುವ ತುಪ್ಪದಿಂದ ತುಂಬಿದ ಕೊಡದಲ್ಲಿ ಸುರಕ್ಷಿತವಾಗಿಡಿಸಿದನು. ಸಮಸ್ತಲೋಕಕ್ಕೂ ಆಶ್ಚರ್ಯವುಂಟಾಗುವ ಹಾಗೆ

ವ|| ಅಂತು ನೂರ್ವರೊಳೊರ್ವನಗುರ್ಬು ಪರ್ಬಿ ಪರಕಲಿಸೆ ಸಂಪೂರ್ಣ ವಯಸ್ಕನಾಗಿ ಘೃತಘಟವಿಘಟನುಮಾಗೆ ಪುಟ್ಟುವುದುಂ-

ಕಂ|| ಪ್ರತಿಮೆಗಳೞ್ತುವು ಮೊೞಗಿದು
ದತಿ ರಭಸದೆ ಧಾತ್ರಿ ದೆಸೆಗಳುರಿದುವು ಭೂತ|
ಪ್ರತತಿಗಳಾಡಿದುವೊಳಱದು
ವತಿ ರಮ್ಯಸ್ಥಾನದೊಳ್ ಶಿವಾ ನಿವಹಂಗಳ್|| ೧೩೨

ವ|| ಅಂತೊಗೆದನೇಕೋತ್ಪಾತಂಗಳಂ ಕಂಡು ಮುಂದಱವ ಚದುರ ವಿದುರನಿಂತೆಂದಂ-

ಕಂ|| ಈತನೆ ನಮ್ಮ ಕುಲಕ್ಕಂ
ಕೇತು ದಲಾನಱವೆನಲ್ಲದಂದೇಕಿನಿತು|
ತ್ಪಾತಂ ತೋರ್ಪುವು ಬಿಸುಡುವು
ದೀತನ ಪೆಱಗುೞದ ಸುತರೆ ಸಂತತಿಗಪ್ಪರ್|| ೧೩೩

ವ|| ಎಂದೊಡಂ ಪುತ್ರಮೋಹ ಕಾರಣಮಾಗಿ ಧೃತರಾಷ್ಟ್ರನುಂ ಗಾಂಧಾರಿಯುಮೇಗೆಯ್ದುಮೊಡಂಬಡದಿರ್ದೊಡುತ್ಪಾತ ಶಾಂತಿಕ ಪೌಷ್ಟಿಕ ಕ್ರಿಯೆಗಳಂ ಮಹಾ ಬ್ರಾಹ್ಮಣರಿಂದಂ ಬಳೆಯಿಸಿ ಬದ್ದವಣಮಂ ಬಾಜಿಸಿ ಮಂಗಳಮಂ ಪಾಡಿಸಿ ಕೂಸಿಂಗೆ ದುರ್ಯೋಧನನೆಂದು ಪೆಸರನಿಟ್ಟು ಮತ್ತಿನ ಕೂಸುಗಳ್ಗೆಲ್ಗಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಪರಕೆಯಂ ಕೊಟ್ಟು-

ಮ|| ಸುಕಮಿರ್ಪನ್ನೆಗಮಿತ್ತ ಕುಂತಿ ಶತಶೃಂಗಾದ್ರೀಂದ್ರದೊಳ್ ದಿವ್ಯ ಬಾ
ಲಕನಿನ್ನೊರ್ವನನುಗ್ರವೈರಿ ಮದವನ್ಮಾತಂಗ ಕುಂಭಾರ್ದ್ರ ಮೌ|
ಕ್ತಿಕ ಲಗ್ನೋಜ್ಜ ಲ ಬಾಣನಂ ಪ್ರವಿಲಸದ್ಗೀರ್ವಾಣ ದಾತವ್ಯ ಸಾ
ಯಕ ಸಂಪೂರ್ಣ ಕಳಾಪ್ರವೀಣನನಿಳಾಭಾರ ಕ್ಷಮಾಕ್ಷೂಣನಂ|| ೧೩೪

ವ|| ಅಂತು ಸರ್ವ ಲಕ್ಷಣ ಸಂಪೂರ್ಣನಪ್ಪ ಮಗನನಮೋಘಂ ಪಡೆವೆನೆಂಬುದ್ಯೋಗಮನೆತ್ತಿಕೊಂಡು ಪಾಂಡುರಾಜನಂ ತಾನುಂ-

ಚಂ|| ಎಱಗಿಯುಮೊರ್ಮೆ ದಿವ್ಯ ಮುನಿಗಾರ್ತುಪವಾಸಮನಿರ್ದುಮೊರ್ಮೆ ಕೊ
ಯ್ದಱಕೆಯ ಪೂಗಳಿಂ ಶಿವನನರ್ಚಿಸಿಯುಂ ಬಿಡದೊರ್ಮೆ ನೋಂತುಮೋ||
ದಱವರ ಪೇೞ್ದ ನೋಂಪಿಗಳನೊರ್ಮೆ ಪಲರ್ಮೆಯುಮಿಂತು ತಮ್ಮ ಮೆ
ಯ್ಮವಿನಮಿರ್ವರುಂ ನಮೆದರೇನವರ್ಗಾದುದೊ ಪುತ್ರದೋಹಳಂ|| ೧೩೫

ಅವುಗಳು ಅಲ್ಲಿ ಬೆಳೆದವು. ವ|| ಆ ನೂರುಜನರಲ್ಲಿ ಒಬ್ಬನು ಭಯವು ಹಬ್ಬಿ ಹರಡುವ ಹಾಗೆ ತುಂಬಿದ ಪ್ರಾಯವುಳ್ಳವನಾಗಿ ತುಪ್ಪದ ಕೊಡವನ್ನು (ಮಡಕೆ) ಒಡೆದುಕೊಂಡು ಹುಟ್ಟಿಬಂದನು. ೧೩೨. ಆಗ (ಅರಮನೆಯಲ್ಲಿದ್ದ) ವಿಗ್ರಹಗಳು ರೋದನಮಾಡಿದುವು; ಬಹು ರಭಸದಿಂದ ಭೂಮಿಯು ಗುಡುಗಿತು. ದಿಕ್ಕುಗಳು ಹತ್ತಿ ಉರಿದುವು; ಪಿಶಾಚಿಗಳ ಸಮೂಹವು ಕುಣಿದಾಡಿದುವು. ಅತಿಮನೋಹರವಾದ ಸ್ಥಳಗಳಲ್ಲೆಲ್ಲ ನರಿಯ ಗುಂಪುಗಳು ಕೂಗಿಕೊಂಡವು. ವ|| ಹಾಗೆ ಉಂಟಾದ ಅನೇಕ ಉತ್ಪಾತ (ಅಪಶಕುನ)ಗಳನ್ನು ಕಂಡು ಭವಿಷ್ಯಜ್ಞಾನಿಯೂ ಬುದ್ಧಿವಂತನೂ ಆದ ವಿದುರನು ಹೀಗೆಂದನು. ೧೩೩. ಈತನೇ ನಮ್ಮ ವಂಶವನ್ನು ಹಾಳುಮಾಡುವ ಕೇತುಗ್ರಹ; ಹಾಗಿಲ್ಲದಿದ್ದರೆ ಏಕೆ ಇಷ್ಟು ದುರ್ನಿಮಿತ್ತಗಳಾಗುತ್ತಿದ್ದುವು. ಇವನನ್ನು ಹೊರಗೆ ಎಸೆಯುವುದು. ಇವನ ಹಿಂದೆಯ ಉಳಿದವರೇ ವಂಶೋದ್ಧಾರಕರಾಗುತ್ತಾರೆ. ವ|| ಎಂಬುದಾಗಿ ಹೇಳಿದರೂ ಪುತ್ರಮೋಹ ಕಾರಣದಿಂದ ಧೃತರಾಷ್ಟ್ರನೂ ಗಾಂಧಾರಿಯೂ ಏನು ಮಾಡಿದರೂ (ಎಸೆಯುವುದಕ್ಕೆ) ಒಪ್ಪದಿರಲು ಉತ್ಪಾತಶಾಂತಿಗಾಗಿಯೂ ಮಂಗಳವರ್ಧನಕ್ಕಾಗಿಯೂ ಶಾಂತಿಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ಮಂಗಳ ವಾದ್ಯವನ್ನು ಹಾಡಿಸಿ ಕೂಸಿಗೆ ದುರ್ಯೋಧನನೆಂದು. ಹೆಸರಿಟ್ಟು ಉಳಿದ ಮಕ್ಕಳಿಗೆಲ್ಲ ದುಶ್ಶಾಸನನೇ ಮೊದಲಾದ ಹೆಸರುಗಳನ್ನಿಟ್ಟು ಆಶೀರ್ವಾದ ಮಾಡಿದರು. ೧೩೪. ಈ ಕಡೆ ಶ್ರೇಷ್ಠವಾದ ಶತಶೃಂಗಪರ್ವತದಲ್ಲಿ ಕುಂತಿಯು ಭಯಂಕರನಾದ ಶತ್ರುಗಳೆಂಬ ಮದ್ದಾನೆಗಳ ಒದ್ದೆಯಾದ ಮುತ್ತುಗಳು ಅಂಟಿಕೊಂಡಿರುವ ಉಜ್ವಲವಾದ ಬಾಣಗಳನ್ನುಳ್ಳವನೂ ದೇವತೆಗಳಿಂದ ಕೊಡಲ್ಪಟ್ಟ ದಿವ್ಯಾಸ್ತ್ರಪ್ರಯೋಗದಲ್ಲಿ ಸಂಪೂರ್ಣ ನಿಪುಣನಾಗಿರುವವನೂ ರಾಜ್ಯಭಾರ ಮಾಡುವ ಶಕ್ತಿಯಲ್ಲಿ ಸ್ವಲ್ಪವೂ ಊನವಿಲ್ಲದವನೂ ವ|| ಹಾಗೆಯೇ ಸರ್ವಲಕ್ಷಣ ಸಂಪೂರ್ಣನೂ ಆದ ಮಗನನ್ನು ಬೆಲೆಯಿಲ್ಲದ ರೀತಿಯಲ್ಲಿ ಪಡೆಯಬೇಕೆಂಬ ಕಾರ್ಯದಲ್ಲಿ ತೊಡಗಿ ಪಾಂಡುರಾಜನೂ ತಾನೂ ೧೩೫. ಒಂದು ಸಲ ದಿವ್ಯಮುನಿಗಳಿಗೆ ನಮಸ್ಕಾರ ಮಾಡಿಯೂ ಮತ್ತೊಂದು ಸಲ ಉಪವಾಸವಿದ್ದೂ ಬೇರೊಂದು ಸಲ ಪ್ರಸಿದ್ಧರಾದ ಹೂವುಗಳನ್ನು ಕೊಯ್ದು ಶಿವನನ್ನು ಆರಾಸಿಯೂ ಇನ್ನೊಂದು ಸಲ ಶಾಸ್ತ್ರಜ್ಞರು ಹೇಳಿದ ವ್ರತಗಳನ್ನು ನಿರಂತರ ನಡೆಯಿಸಿಯೂ ಒಂದುಸಲವೂ

ಆಲಸದೆ ಮಾಡಿ ಬೇಸಱದೆ ಸಾಲ್ಗುಮಿದೆನ್ನದೆ ಮೆಯ್ಸೊಗಕ್ಕೆ ಪಂ
ಬಲಿಸದೆ ನಿದ್ದೆಗೆಟ್ಟು ನಿಡು ಜಾಗರದೊಳ್ ತೊಡರ್ದೇಕ ಪಾದದೊಳ್|
ಬಲಿದುಪವಾಸದೊಳ್ ನಮೆದು ನೋಂಪಿಗಳೊಳ್ ನಿಯಮ ಕ್ರಮಂಗಳಂ
ಸರಿಸಿದರಂತು ನೋನದೆ ಗುಣಾರ್ಣವನಂ ಪಡೆಯಲ್ಕೆ ತೀರ್ಗುಮೇ|| ೧೩೬

ವ|| ಅಂತೊಂದು ವರ್ಷಂಬರಂ ಭರಂಗೆಯ್ದು ನೋಂತು ಪೂರ್ವಕ್ರಮದೊಳೊಂದುದಿವಸಮುಪವಾಸಮನಿರ್ದಗಣ್ಯ ಪುಣ್ಯತೀರ್ಥ ಜಲಂಗಳಂ ಮಿಂದು ದಳಿಂಬಮನುಟ್ಟು ದರ್ಭಶಯನದೊಳಿರ್ದು-

ಮ|| ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀ ಪೇನಮು
ಜ್ಜ ಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಮಂ|
ಗಲತಾ ಲಾಲಿತ ಸಾಂದ್ರ ಚಂದನರಸಂ ಬೆಳ್ದಿಂಗಳೆಂಬೊಂದು ಪಂ
ಬಲ ಬಂಬಲ್ಗೆಡೆಯಾಗೆ ಬೆಳ್ಪಸದನಂ ಕಣ್ಗೊಪ್ಪಿತಾ ಕಾಂತೆಯಾ|| ೧೩೭

ವ|| ಅಂತು ತನ್ನ ಕೈಕೊಂಡು ಬೆಳ್ಪಸದನದೊಳ್ ಕೀರ್ತಿಶ್ರೀಯಂ ವಾಕ್ಶ್ರೀಯುಮನನುಕರಿಸಿ ಮಂತ್ರಾಕ್ಷರ ನಿಯಮದೊಳಿಂದ್ರನಂ ಬರಿಸೆ-

ಕಂ|| ನೆನೆದ ಮನಂ ಪೆಱಗುೞದ
ತ್ತೆನೆ ಬೆಳಗುವ ರತ್ನದೀಪ್ತಿ ಸುರಧನು ನೆಗೆದ|
ತ್ತೆನೆ ನೆಯ್ದಿಲ್ಗೊಳನಲರ್ದ
ತ್ತೆನೆ ಕಣ್ಗಳ ಬಳಗಮಾಗಳಿಂದ್ರಂ ಬಂದಂ|| ೧೩೮

ಬೆಸನೇನೇಗೆಯ್ವುದೊ ನಿನ
ಗೊಸೆದೇನಂ ಕುಡುವುದೆಂದೊಡೆಂದಳ್ ಮಕ್ಕಳ್|
ಒಸಗೆಯನೆನಗೀವುದು ನಿ
ನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ|| ೧೩೯

ಅನೇಕಸಲವೂ ತಮ್ಮ ಶರೀರವು ಕೃಶವಾಗುವ ಹಾಗೆ ಇಬ್ಬರೂ ನಮೆದರು. ಅವರಿಗೆ ಮಕ್ಕಳನ್ನು ಪಡೆಯಬೇಕೆಂಬ ಆಶೆ ಅತ್ಯಕವಾಯಿತು. ೧೩೬. ಆಲಸ್ಯವಿಲ್ಲದೆ ವ್ರತಮಾಡಿ, ಬೇಸರಿಕೆಯಿಂದ ಇದು ಸಾಕು ಎನ್ನದೆ, ಶರೀರಸುಖಕ್ಕೆ ಹಂಬಲಿಸದೆ, ನಿದ್ದೆಗೆಟ್ಟು, ದೀರ್ಘವಾದ ಜಾಗರಣೆಗಳಲ್ಲಿ ಸೇರಿಕೊಂಡು, ಒಂದು ಕಾಲಿನಲ್ಲಿ ನಿಂತುಕೊಂಡು, ಉಪವಾಸದಿಂದ ಕೃಶರಾಗಿ ವ್ರತಗಳಲ್ಲಿ ನಿಯಮವನ್ನು ತಪ್ಪದೆ ಪಾಲಿಸಿದರು. ಹಾಗೆ ವ್ರತಮಾಡದೆ ಗುಣಸಮುದ್ರನಾದ ಅರ್ಜುನನನ್ನು (ಆ ಬಿರುದಿನಿಂದ ಕೂಡಿದ ಅರಿಕೇಸರಿಯನ್ನು) ಪಡೆಯಲು ಸಾಧ್ಯವೇ? ವ|| ಹಾಗೆ ಒಂದು ವರ್ಷದವರೆಗೆ ಶ್ರದ್ಧೆಯಿಂದ ವ್ರತಮಾಡಿ ಹಿಂದಿನ ರೀತಿಯಲ್ಲಿಯೇ ಒಂದು ದಿವಸ ಉಪವಾಸವಿದ್ದು ಲೆಕ್ಕವಿಲ್ಲದಷ್ಟು ಪುಣ್ಯತೀರ್ಥಗಳಲ್ಲಿ ಸ್ನಾನಮಾಡಿ ಧೌತವಸ್ತ್ರವನ್ನುಟ್ಟು ದರ್ಭದ ಹಾಸಿಗೆಯ ಮೇಲಿದ್ದು ವ್ರತವನ್ನು ಪಾಲಿಸಿದಳು.

೧೩೭. ಅವಳ ಶುಭ್ರವಾದ ಹಲ್ಲೇ ಮಿಂಚಿನ ಗೊಂಚಲು, ಧರಿಸಿರುವ ರೇಷ್ಮೆಯ ವಸ್ತ್ರವೇ ಗಂಗಾನದಿಯ ಬಿಳಿಯ ನೊರೆ, ಚಂಚಲವಾಗಿ ಅಲುಗಾಡುತ್ತಿರುವ ಮುತ್ತಿನಹಾರದ ಕಾಂತಿಪ್ರಸರವೂ ಅಂಗಕ್ಕೆ ಲೇಪಿಸಿಕೊಂಡಿರುವ ಗಟ್ಟಿಯಾದ ಶ್ರೀಗಂಧದ ರಸವೂ ಬೆಳುದಿಂಗಳೆಂಬ ಸಂದೇಹಕ್ಕೆ ಅವಕಾಶವಾಗಿರಲು ಆ ಕುಂತೀದೇವಿಯ ಬಿಳಿಯ ಬಣ್ಣದ ಅಲಂಕಾರವು ಕಣ್ಣಿಗೆ ಮನೋಹರವಾಗಿದ್ದಿತು. ವ|| ಹಾಗೆ ತಾನು ಅಂಗೀಕರಿಸಿದ ಬಿಳಿಯ ಬಣ್ಣದ ಅಲಂಕಾರದಲ್ಲಿ ಯಶೋಲಕ್ಷ್ಮಿಯನ್ನೂ ವಾಕ್‌ಲಕ್ಷ್ಮಿಯಾದ ಸರಸ್ವತಿಯನ್ನೂ ಅನುಕರಿಸಿ ಮಂತ್ರಾಕ್ಷರಗಳನ್ನು ಸಕ್ರಮವಾಗಿ ಪಠಿಸಿ ಇಂದ್ರನನ್ನು ಬರಮಾಡಿದಳು. ೧೩೮. ಧ್ಯಾನಮಾಡಿದ ಮನಸ್ಸು ಹಿಂದೆ ಉಳಿಯಿತು ಎನ್ನುವ ಹಾಗೆಯೂ ಪ್ರಕಾಶಮಾನವಾದ ರತ್ನಕಾಂತಿಯು ಕಾಮನಬಿಲ್ಲಾಗಿ ನೆಗೆದು ತೋರಿತು ಎನ್ನುವ ಹಾಗೆಯೂ ಅವನ ಸಾವಿರ ಕಣ್ಣುಗಳ ಸಮೂಹವು ನೆಯ್ದಿಲೆಯ ಕೊಳವು ಅರಳಿತು ಎನ್ನುವ ಹಾಗೆಯೂ ತರಲು ಆಗ ಇಂದ್ರನು ಬಂದನು. (ಅಂದರೆ ಇಂದ್ರನು ಕುಂತಿಯ ಮನೋವೇಗವನ್ನೂ ಮೀರಿ ರತ್ನಕಿರೀಟಗಳ ಕಾಂತಿಯಿಂದಲೂ ಅರಳಿಸಿಕೊಂಡಿರುವ ಸಾವಿರ ಕಣ್ಣುಗಳಿಂದಲೂ ಬಂದನೆಂಬುದು ಭಾವ). ೧೩೯. ಅಪ್ಪಣೆಯೇನು? ಏನು ಮಾಡಬೇಕು? ನಿನಗೆ ಪ್ರೀತಿಯಿಂದ ಏನನ್ನು ಕೊಡಲಿ? ಎಂದು ಇಂದ್ರನು ಕೇಳಲು ಕುಂತಿಯು ಹೇಳಿದಳು. ಇಂದ್ರದೇವಾ ಮಕ್ಕಳ ನಲಿವನ್ನೂ ನಿನ್ನ ಪರಾಕ್ರಮಕ್ಕೆ ತಕ್ಕ ಶೌರ್ಯವುಳ್ಳ ಮಗನನ್ನು ಕೊಡಬೇಕು ಎಂದಳು.

ವ|| ಎಂಬುದುಮಾಕೆಯ ಬಗೆದ ಬಗೆಯೊಳೊಡಂಬಡುವಂತೆ ಕುಲಗಿರಿಗಳ ಬಿಣ್ಪುಮಂ ಧರಾತಳದ ತಿಣ್ಪುಮನಾದಿತ್ಯನ ತೇಜದಗುಂತಿಯುಮಂ ಚಂದ್ರನ ಕಾಂತಿಯುಮಂ ಮದನನ ಸೌಭಾಗ್ಯಮುಮಂ ಕಲ್ಪತರುವಿನುದಾರಶಕ್ತಿಯುಮನೀಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳ್ತನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ ಕುಕ್ತಿಪುಟೋದರದೊಳ್ ತನ್ನ ದಿವ್ಯಾಂಶಮೆಂಬ ಮುಕ್ತಾಫಲೋದ ಬಿಂದುವನಿಂದ್ರಂ ಸಂಕ್ರಮಿಸಿ ನಿಜನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿ-

ಚಂ|| ಕುಡಿವುದನೇೞುಮಂಬುಯುಮಂ ಕುಲಶೈಲಕುಳಂಗಳಂ ತಗು
ಳ್ದಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮೇಗೆ ರಾಗದಿಂ|
ಪೊಡರ್ವುದನಂತೆ ದಿಕ್ಕರಿಗಳಂಬುಜಪತ್ರ ಪುಟಾಂಬುವಿಂ ಬೆಡಂ
ಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್|| ೧೪೦

ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರೆಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳ್ಗ ಮಱಪಿದೊಡವರಾ ಕನಸುಗಳ್ಗೆ ಸಂತೋಷಂಬಟ್ಟು-

ಚಂ|| ಕುಡಿವುದಱಂದಮಭ್ಧಿಗಳನಬ್ಧಿಪರೀತ ಮಹೀಶನಂ ತಗು
ಳ್ದಡರ್ವುದಱಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನೞ್ಕಱಂ|
ಪೊಡರ್ವುದಱಂದಮೆಂದುಮುದಿತೋದಿತನಂ ದಿಗಿಭಂಗಳೆಂಟುಮೊ
ಳ್ಪೊಡರಿಸಿ ಮಜ್ಜನಂಬುಗಿಸೆ ಕಂಡುದಱಂ ಕಮಲಾಭಿರಾಮನಂ|| ೧೪೧

ವ|| ಇಂತಪ್ಪ ಮಗನಂ ನೀನಮೋಘಂ ಪಡೆವೆಯೆಂದು ಮುನಿಜನಂಗಳ್ ಪೇೞ್ವ ಶುಭ ಸ್ವಪ್ನಫಲಂಗಳೊಡನೊಡನೆ ಗರ್ಭಚಿಹ್ನಂಗಳುಂ ತೋ ಪಗೆವರ ಪೆಂಡಿರ ಮೊಗಂಗಳುಮಾಕೆಯ ಕುಚಚೂಚುಕಂಗಳುಮೊಡನೊಡನೆ ಕಂದಿದುವಾಕೆಯ ವಳಿತ್ರಯಂಗಳುಂ ಪಗೆವರ ಶಕ್ತಿತ್ರಯಂಗಳುಮೊಡನೊಡನೆ ಕೆಟ್ಟುವಾಕೆಯ ಬಾಸೆಗಳುಂ ಪಗೆವರ ಬಾೞ್ವಾಸೆಗಳುಮೊಡನೊಡನಸಿಯವಾದುವಾಕೆಯ ಮಂದಗಮನಮುಂ ಪಗೆವರ ಮನಂಗಳುಮೊಡನೊಡನಲಸಿಕೆಯ ಕೈಕೊಂಡುವಾಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಮೊಡನೊಡನೆ ಕೆಟ್ಟುವಾ ಸಮಯದೊಳ್-

ವ|| ಅವಳು ಆಶೆಪಟ್ಟಂತೆಯೇ ಒಪ್ಪಿಕೊಂಡು ಕುಲಪರ್ವತಗಳ ಭಾರವನ್ನೂ ಭೂಮಿಯ ತೂಕವನ್ನೂ ಸೂರ್ಯನ ತೇಜಸ್ಸಿನ ಆಕ್ಯವನ್ನೂ ಚಂದ್ರನ ಕಾಂತಿಯನ್ನೂ ಮನ್ಮಥನ ಸೌಭಾಗ್ಯವನ್ನೂ ಕಲ್ಪವೃಕ್ಷದ ಔದಾರ್ಯವನ್ನೂ ಈಶ್ವರನ ಪ್ರಭುಶಕ್ತಿಯನ್ನೂ ಯಮನ ಶೌರ್ಯವನ್ನೂ ಸಿಂಹದ ಪರಾಕ್ರಮವನ್ನೂ ಅವು ಒಂದೊಂದರಿಂದಲೂ ತೆಗೆದು ಒಟ್ಟಿಗೆ ಶೇಖರಿಸಿ ಕುಂತಿಯ ಶ್ರೇಷ್ಠವಾದ ಗರ್ಭವೆಂಬ ಮುತ್ತಿನ ಚಿಪ್ಪಿನ ಒಳಗಡೆ ತನ್ನ ದಿವ್ಯಾಂಶವೆಂಬ ಮುತ್ತಿನ ಹನಿಯನ್ನು ಬೆರಸಿಟ್ಟು ಇಂದ್ರನು ತನ್ನ ವಾಸಸ್ಥಳಕ್ಕೆ ಹೋದನು. ಅಷ್ಟರಲ್ಲಿ ಈ ಕಡೆ ಕುಂತಿಯು ಮುಂದಿನ ಬೆಳಗಿನ ಜಾವದಲ್ಲಿ ಸುಖನಿದ್ರೆಯನ್ನು ಹೊಂದಿ ೧೪೦. ರಾತ್ರಿಯ ಕೊನೆಯ ಭಾಗದಲ್ಲಿ ತಾನು ಸಪ್ತಸಮುದ್ರಗಳನ್ನು ಕುಡಿಯುವುದನ್ನೂ ಸಪ್ತಕುಲಪರ್ವತಗಳನ್ನು ಕ್ರಮವಾಗಿ ಹತ್ತುವುದನ್ನೂ ಬಾಲಸೂರ್ಯನು ತನ್ನ ಮಡಲಿನಲ್ಲಿ ಸಂತೋಷವಾಗಿ ಹೊರಳಾಡುವುದನ್ನೂ ಹಾಗೆಯೇ ದಿಗ್ಗಜಗಳನ್ನೂ ಕಮಲಪತ್ರದ ಮೇಲಿರುವ ನೀರಿನಿಂದ ಸುಂದರವಾಗಿ ಕಾಣುತ್ತಿರುವ ಸರೋವರದಲ್ಲಿ ಸ್ನಾನ ಮಾಡಿಸುತ್ತಿರುವುದನ್ನೂ ಸ್ವಪ್ನದಲ್ಲಿ ಕಂಡು ಸಂತೋಷಪಟ್ಟಳು. ವ|| ಹಾಗೆ ಕನಸನ್ನು ಕಂಡು ಋಷಿಕುಮಾರರು ಪಠಿಸುವ ವೇದಘೋಷದಿಂದ ಎಚ್ಚೆತ್ತು ಪಾಂಡುರಾಜನಿಗೂ ಅಲ್ಲಿದ್ದ ಋಷಿಸಮೂಹಕ್ಕೂ ಆ ಕನಸಿನ ವಿಷಯವನ್ನು ತಿಳಿಸಲು ಅವರು ಆ ಕನಸುಗಳಿಗೆ ಸಂತೋಷಪಟ್ಟು ಅದರ ಅರ್ಥವನ್ನು (ಸಂಕೇತ) ವಿವರಿಸಿದರು. ೧೪೧. ಸಪ್ತಸಮುದ್ರಗಳನ್ನು ಕುಡಿಯುವುದರಿಂದ ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನೂ ಕುಲಪರ್ವತಗಳನ್ನು ಹತ್ತುವುದರಿಂದ ಕುಲಪರ್ವತಗಳಿಂದ ಸುತ್ತುವರಿಯಲ್ಪಟ್ಟ ರಾಜ್ಯವನ್ನುಳ್ಳವನನ್ನೂ ಬಾಲಸೂರ್ಯನು ಮಡಿಲಿನಲ್ಲಿ ಹೊರಳಾಡುವುದರಿಂದ ಏಕಪ್ರಕಾರದ ಅಭಿವೃದ್ಧಿಯನ್ನು ಪಡೆಯುವನನ್ನೂ ಎಂಟು ದಿಗ್ಗಜಗಳನ್ನೂ ಶೋಭಾಯಮಾನವಾಗಿ ಸ್ನಾನ ಮಾಡಿಸುವುದನ್ನು ಕಂಡುದರಿಂದ ಕಮಲದಂತೆ ಆಕರ್ಷಕವಾದ ಸೌಂದರ್ಯವುಳ್ಳ ಮಗನನ್ನು ವ|| ನೀನು ಪಡೆಯುತ್ತೀಯೆ ಎಂದು ಮುನಿಜನಗಳು ಹೇಳಿದ ಶುಭಸ್ವಪ್ನಫಲಗಳ ಜೊತೆಯಲ್ಲಿಯೇ ಗರ್ಭಚಿಹ್ನೆಗಳೂ ತೋರಲಾಗಿ ಶತ್ರುರಾಜರಸ್ತ್ರೀಯರ ಮುಖವೂ ಆಕೆಯ ಮೊಲೆಯ ತೊಟ್ಟುಗಳೂ ಒಟ್ಟಿಗೆ ಕಂದಿದುವು (ಕಪ್ಪಾದವು). ಆಕೆಯ ಹೊಟ್ಟೆಯ ಮೂರು ಮಡಿಪುಗಳೂ ಶತ್ರುರಾಜರ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬ ಶಕ್ತಿತ್ರಯಗಳ ಜೊತೆ ಜೊತೆಯಲ್ಲಿಯೇ ನಾಶವಾದುವು. ಆಕೆಯ ಬಾಸೆಗಳೂ (ಹೊಕ್ಕುಳಿನಿಂದ ಎದೆಯವರೆಗಿರುವ ಕೂದಲಿನ ಸಾಲು) ಶತ್ರುಗಳ ಬಾಳುವ ಆನೆಗಳೂ ಜೊತೆ ಜೊತೆಯಲ್ಲಿಯೇ ಕೃಶವಾದುವು. ಆಕೆಯ ಮಂದಗಮನವೂ ಶತ್ರುಗಳ ಮನಸ್ಸೂ ಜೊತೆ ಜೊತೆಯಲ್ಲಿಯೇ ಆಲಸ್ಯವನ್ನು ಹೊಂದಿದುವು.

ಉ|| ಉರ್ಚಿದ ಬಾಳೊಳಾತ್ಮ ಮುಖಬಿಂಬಮನೞಯೆ ನೋಡಲುಂ ಮನಂ
ಪೆರ್ಚಿ ಧನುರ್ಲತಾ ಗುಣ ನಿನಾದಮನಾಲಿಸಿ ಕೇಳಲುಂ ಮನಂ|
ಬೆರ್ಚದೆ ಸಿಂಹ ಪೋತಕಮನೋವಲುಮಾಕೆಯ ದೋಹಳಂ ಕರಂ
ಪೆರ್ಚಿದುದಾ ಗುಣಾರ್ಣವನ ಮುಂದಣ ಬೀರಮನಂದೆ ತೋರ್ಪವೋಲ್|| ೧೪೨

ವ|| ಮತ್ತಮೇೞುಂ ಸಮುದ್ರಂಗಳ ನೀರನೊಂದುಮಾಡಿ ವಿಯಲುಂ ವೇಳಾ ವನ ಲತಾಗೃಹೋದರ ಪುಳಿನಸ್ಥಳ ಪರಿಸರಪ್ರದೇಶ ದೊಳ್ ತೊೞಲಲುಮೞಯಾಗೆ-

ಕಂ|| ಬಳೆದ ನಿತಂಬದೆ ಕಾಂಚೀ
ಕಳಾಪಮಂ ಕಟ್ಟಲಣಮೆ ನೆಯದಿದೆಂದ|
ಗ್ಗಳಿಸಿ ಕುಳಿಕೆಗಳಿನೇಂ ಕ
ಣ್ಗೊಳಿಸಿದುದೋ ಸುಭಗೆಯಾದ ಸುದತಿಯ ಗರ್ಭಂ|| ೧೪೩

ವ|| ಅಂತು ತೆಕ್ಕನೆ ತೀವಿದ ಮೆಯ್ಯೊಳಲರ್ದ ಸಂಪಗೆಯರಲಂತೆ ಬೆಳರ್ತ ಬಣ್ಣಂ ಗುಣಾರ್ಣವಂಗೆ ಮಾಡಿದ ಬಣ್ಣದಂತೆ ಸೊಗಯಿಸಿ ಬೆಳೆದು-

ಕಂ|| ತುಡುಗೆಗಳೊಳ್ ಸರಿಗೆಯುಮಂ
ಕಡುವಿಣ್ಣಿತ್ತೆನಿಸಿ ನಡೆದುಮೋರಡಿಯನಣಂ|
ನಡೆಯಲುಮಾಱದೆ ಕೆಮ್ಮನೆ
ಬಿಡದಾರಯ್ವನಿತುಮಾಗೆ ಬಳೆದುದು ಗರ್ಭಂ|| ೧೪೪

ವ|| ಅಂತಾ ಬಳೆದ ಗರ್ಭದೊಳ್ ಸಂಪೂರ್ಣಪ್ರಸವಸಮಯಂ ದೊರೆಕೊಳೆ ಗ್ರಹಂಗಳೆಲ್ಲಂ ತಂತಮ್ಮುಚ್ಚ ಸ್ಥಾನಂಗಳೊಳಿರ್ದು ಷಡ್ವರ್ಗ ಸಿದ್ಧಿಯನುಂಟುಮಾಡೆ ಶುಭಲಗ್ನೋದಯದೊಳ್-

ಕಂ|| ಭರತಕುಲ ಗಗನ ದಿನಕರ
ನರಾತಿಕುಳಕಮಳಹಿಮಕರಂ ಶಿಶು ತೇಜೋ|
ವಿರಚನೆಯುಂ ಕಾಂತಿಯುಮಾ
ವರಿಸಿರೆ ಗರ್ಭೋದಯಾದ್ರಿಯಿಂದುದಯಿಸಿದಂ|| ೧೪೫

ಆಕೆಯ ನಡುವಿನ ಬಡತನವೂ (ಸಣ್ಣದಾಗಿರುವಿಕೆ-ಕೃಶತೆ) ಶತ್ರುಗಳ ಐಶ್ವರ್ಯವೂ ಜೊತೆಯಲ್ಲಿಯೇ ಕೆಟ್ಟವು ; ಆ ಸಮಯದಲ್ಲಿ ೧೪೨. ಮುಂದಿನ ಗುಣಾರ್ಣವನ (ಅರ್ಜುನನ-ಅರಿಕೇಸರಿಯ) ವೀರ್ಯವನ್ನು ಆ ದಿನವೇ ತೋರ್ಪಡಿಸುವಂತೆ ಕುಂತಿಯ ಬಸಿರ ಬಯಕೆಯು ಒರೆಗಳೆದ ಕತ್ತಿಯಲ್ಲಿ ತನ್ನ ಮುಖಮಂಡಲವನ್ನು ನೋಡಿಕೊಳ್ಳುವುದಕ್ಕೂ ಉತ್ಸಾಹದಿಂದ ಬಿಲ್ಲಿನ ಟಂಕಾರಶಬ್ದವನ್ನು ಮನವಿಟ್ಟು ಕೇಳುವುದಕ್ಕೂ ಸ್ವಲ್ಪವೂ ಹೆದರದೆ ಸಿಂಹದ ಮರಿಯನ್ನು ಸಲಹುವುದಕ್ಕೂ ಆಶೆಪಟ್ಟು ವಿಶೇಷವಾಗಿ ಹೆಚ್ಚಿತು ವ|| ಮತ್ತು ಸಮುದ್ರಗಳ ನೀರನ್ನು ಒಟ್ಟಿಗೆ ಸೇರಿಸಿ ಸ್ನಾನಮಾಡಲೂ ಸಮುದ್ರದ ಅಂಚಿನಲ್ಲಿರುವ ಕಾಡಿನಲ್ಲಿಯೂ ಬಳ್ಳಿವನೆಗಳ ಒಳಭಾಗದಲ್ಲಿಯೂ ಮರಳುದಿಣ್ಣೆಗಳ ಸುತ್ತಲೂ ಎಡೆಯಾಡಲೂ ಆಶೆಯಾಯಿತು. ೧೪೩. ತುಂಬಿ ಬೆಳೆದ ಪೃಷ್ಠಭಾಗದಿಂದ ನಡುಕಟ್ಟನ್ನು ಕಟ್ಟಲೂ ಸ್ವಲ್ಪವೂ ಸಾಧ್ಯವಿಲ್ಲವೆನ್ನುವ ರೀತಿಯಲ್ಲಿ ಆ ಸೌಭಾಗ್ಯಶಾಲಿನಿಯಾದ ಕುಂತಿಯ ಗರ್ಭವು ಬೆಳೆದು ವಿಶೇಷವಾದ ನೂಲಿನ ಕುಳಿಕೆಗಳಿಂದ ಅತಿ ಮನೋಹರವಾಯಿತು. ವ|| ಹಾಗೆ ಪೂರ್ಣವಾಗಿ ತುಂಬಿಕೊಂಡ ಮೈಯಲ್ಲಿ ಅರಳಿದ ಸಂಪಗೆಯ ಹೂವಿನಂತೆ ಬಿಳುಪಾದ ಬಣ್ಣವು ಗುಣಾರ್ಣವನಿಗೆ ಮಾಡಿದ ಬಣ್ಣದಂತೆಯೇ ಸೊಗಸಾಗಿ ಬಳೆದು ೧೪೪. ಅವಳು ಧರಿಸಿರುವ ಆಭರಣಗಳಲ್ಲಿ ಒಂದು ಸರಿಗೆಯೂ ಬಹುಭಾರವುಳ್ಳದ್ದೆನಿಸಿ ಓಡಾಡಲು ಒಂದು ಹೆಜ್ಜೆಯನ್ನೂ ಇಡಲಾರದೆ ಸುಮ್ಮನೆ ಹಿಂದಿರುಗಿ ನೋಡುವಷ್ಟು ಗರ್ಭವು ಬೆಳೆಯಿತು. ವ|| ಹಾಗೆ ಬೆಳೆದ ಗರ್ಭದಲ್ಲಿ ತುಂಬಿದ ಹೆರಿಗೆಯ ಕಾಲವು ಪ್ರಾಪ್ತವಾಗಲು ನವಗ್ರಹಗಳೆಲ್ಲ ತಮ್ಮ ತಮ್ಮ ಉಚ್ಚಸ್ಥಾನಗಳಲ್ಲಿದ್ದು ಲಗ್ನ, ಹೋರಾ, ದ್ರೇಕ್ಕಾಣ, ನವಾಂಶ, ದ್ವಾದಶಾಂಶ ಮತ್ತು ತ್ರಿಂಶಾಂಶಗಳೆಂಬ ಷಡ್ವರ್ಗಗಳ ಸಿದ್ಧಿಯನ್ನುಂಟುಮಾಡಿದ ಶುಭಲಗ್ನ ಪ್ರಾಪ್ತವಾದಾಗ ೧೪೫. ಭರತವಂಶವೆಂಬ ಆಕಾಶಕ್ಕೆ ಸೂರ್ಯನೂ ಶತ್ರುಗಳ ವಂಶವೆಂಬ ತಾವರೆಗೆ ಚಂದ್ರನೂ ಆದ ಶಿಶುವು

ಉದಯಿಸುವುದುಮಮೃತಾಂಶುವಿ
ನುದಯದೊಳಂಭೋ ವೇಲೆ ಭೋರ್ಗರೆವವೊಲೊ|
ರ್ಮೊದಲೆಸೆದುವು ಘನಪಥದೊಳ್
ತ್ರಿದಶಕರಾಹತಿಯಿನೊಡನೆ ಸುರದುಂದುಭಿಗಳ್|| ೧೪೬

ವ|| ಅಂತು ಮೊೞಗುವ ಸುರದುಂದುಭಿಗಳುಂ ಪರಸುವ ಜಯಜಯ ಧ್ವನಿಗಳುಂ ಬೆರಸು ದೇವೇಂದ್ರಂ ಬರೆ ದೇವವಿಮಾನಂಗಳೆಲ್ಲಂ ಶತಶೃಂಗಪರ್ವತಮಂ ಮುಸುಱಕೊಂಡು-

ಕಂ|| ದೇವರ ಪಗಳ ರವದೊಳ್
ದೇವರ ಸುರಿವರಲ ಸರಿಯ ಬೆಳ್ಸರಿಯೊಳ್ ತ|
ದ್ದೇವ ವಿಮಾನಾವಳಿಯೊಳ್
ತೀವಿದುದೊರ್ಮೊದಲೆ ಗಗನದಿಂ ಧರೆ ಮಧ್ಯಂ|| ೧೪೭

ವ|| ಅಂತು ಹಿರಣ್ಯಗರ್ಭಬ್ರಹ್ಮಂ ಮೊದಲಾಗೆ ವ್ಯಾಸ ಕಶ್ಯಪ ವಸಿಷ್ಠ ವಾಲ್ಮೀಕಿ ವಿಶ್ವಾಮಿತ್ರ ಜಮದಗ್ನಿ ಭಾರದ್ವಾಜಾಗಸ್ತ್ಯ ಪುಲಸ್ತ್ಯ ನಾರದ ಪ್ರಮುಖರಪ್ಪ ದಿವ್ಯಮುನಿಪತಿಗಳುಮೇಕಾದಶರುದ್ರರುಂ ದ್ವಾದಶಾದಿತ್ಯರುಮಷ್ಟವಸುಗಳುಮಶ್ವಿನೀ ದೇವರುಂ ಮೊದಲಾಗೆ ಮೂವತ್ತಮೂದೇವರುಂ ಇಂದ್ರಂಬೆರಸು ವೈಮಾನಿಕ ದೇವರುಂ ನೆರೆದು ಪಾಂಡುರಾಜನುಮಂ ಕುಂತಿಯುಮಂ ಪರಸಿ ಕೂಸಿಂಗೆ ಜನ್ಮೋತ್ಸವಮಂ ಮಾಡಿ-

ಕಂ|| ನೋಡುವನಾ ಬ್ರಹ್ಮಂ ಮುಂ
ಡಾಡುವನಮರೇಂದ್ರನಿಂದ್ರನಚ್ಚರಸೆಯರೆ|
ೞುಡುವರೆಂದೊಡೆ ಪೊಗೞ
ಲ್ವೇಡ ಗುಣಾರ್ಣವನ ಜನ್ಮದಿನದ ಬೆಡಂಗಂ|| ೧೪೮

ವ|| ಅಂತು ಪಿರಿದುಮೊಸಗೆಯಂ ಮಾಡಿ ದೇವಸಭೆಯುಂ ಬ್ರಹ್ಮಸಭೆಯುಮೊಡನಿರ್ದು ನಾಮಕರಣೋತ್ಸವ ನಿಮಿತ್ತಂಗಳಪ್ಪ ನಾಮಂಗಳೊಳೀತಂ ಸಕಲ ಭುವನ ಸಂಸ್ತೂಯಮಾನಂ ಚಾಳುಕ್ಯವಂಶೋದ್ಭವಂ ಶ್ರೀಮದರಿಕೇಸರಿ ವಿಕ್ರಮಾರ್ಜುನನುದಾತ್ತನಾರಾಯಣಂ ಪ್ರಚಂಡ ಮಾರ್ತಾಂಡನುದಾರಮಹೇಶ್ವರಂ ಕದನತ್ರಿಣೇತ್ರಂ ಮನುಜ ಮಾಂಧಾತಂ ಪ್ರತಿಜ್ಞಾ ಗಾಂಗೇಯಂ ಶೌಚಾಂಜನೇಯನಕಳಂಕರಾಮಂ ಸಾಹಸಭೀಮಂ ಪ್ರತ್ಯಕ್ಷಜೀಮೂತವಾಹನಂ ಜಗದೇಕಮಲ್ಲಂ ಪರಸೈನ್ಯ ಭೈರವಂ ಅತಿರಥ ಮಥನಂ ವೈರಿಗಜಘಟಾವಿಘಟನಂ ವಿದ್ವಿಷ್ಟ ವಿದ್ರಾವಣನರಾತಿ ಕಾಳಾನಳಂ ರಿಪುಕುರಂಗಕಂಠೀರವಂ ವಿಕ್ರಾಂತತುಂಗಂ ಪರಾಕ್ರಮಧವಳಂ ಸಮರೈಕಮೇರು ಶರಣಾಗತ

ತೇಜಸ್ಸಿನ ರಚನೆಯೂ ಪ್ರಕಾಶವೂ ತುಂಬಿರಲು ಗರ್ಭವೆಂಬ ಉದಯಪರ್ವತದಿಂದ ಉದಯಿಸಿದನು. ೧೪೬. ಹುಟ್ಟಲಾಗಿ ಚಂದ್ರೋದಯ ಸಮಯದಲ್ಲಿ ಸಮುದ್ರದಲೆಗಳು ಆರ್ಭಟಮಾಡುವ ಹಾಗೆ ಆಕಾಶಮಾರ್ಗದಲ್ಲಿ ದೇವತೆಗಳ ಕೈಚಪ್ಪಾಳೆಗಳೊಡನೆ ದೇವದುಂದುಭಿಗಳೂ (ದೇವತೆಗಳ ಮಂಗಳವಾದ್ಯ) ಕೂಡಲೇ ಒಟ್ಟಿಗೆ ಶಬ್ದಮಾಡಿದುವು ವ|| ಹಾಗೆ ಭೋರ್ಗರೆಯುತ್ತಿರುವ ದೇವದುಂದುಭಿಗಳೊಡನೆ ಹರಕೆಯ ಜಯಜಯಶಬ್ದಗಳನ್ನೂ ಸೇರಿಸಿಕೊಂಡು ದೇವೇಂದ್ರನು ಬರಲಾಗಿ ಇತರ ದೇವತೆಗಳ ವಿಮಾನಗಳೆಲ್ಲವೂ ಶತಶೃಂಗಪರ್ವತವನ್ನು ಮುತ್ತಿಕೊಂಡು ೧೪೭. ದೇವತೆಗಳ ವಾದ್ಯಧ್ವನಿಯಿಂದಲೂ ದೇವತೆಗಳು ಸುರಿಸುತ್ತಿರುವ ಪುಷ್ಪವೃಷ್ಟಿಪ್ರವಾಹದಿಂದಲೂ ಆ ದೇವತೆಗಳ ವಿಮಾನಪಂಕ್ತಿಗಳಿಂದಲೂ ಭೂಮ್ಯಾಕಾಶಗಳ ಮಧ್ಯಭಾಗವು ತುಂಬಿಹೋಯಿತು.

ವ|| ಹೀಗೆ ಹಿರಣ್ಯಗರ್ಭ ಬ್ರಹ್ಮನೇ ಮೊದಲಾಗಿ ವ್ಯಾಸ, ಕಶ್ಯಪ, ವಸಿಷ್ಠ, ವಾಲ್ಮೀಕಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಅಗಸ್ತ್ಯ, ಪುಲಸ್ತ್ಯ, ನಾರದ ಪ್ರಮುಖರಾದ ದಿವ್ಯಋಷಿಶ್ರೇಷ್ಠರೂ ಏಕಾದಶರುದ್ರರೂ ದ್ವಾದಶಾದಿತ್ಯರೂ ಅಷ್ಟವಸುಗಳೂ ಅಶ್ವಿನೀದೇವತೆಗಳೂ ಮೊದಲಾದ ಮೂವತ್ತು ಮೂರು ದೇವರೂ ಇಂದ್ರನೊಡಗೂಡಿ ವೈಮಾನಿಕದೇವತೆಗಳೂ ಒಟ್ಟಾಗಿ ಸೇರಿ ಪಾಂಡುರಾಜನನ್ನೂ ಕುಂತಿಯನ್ನೂ ಹರಸಿ ಮಗುವಿಗೆ ಜನ್ಮೋತ್ಸವವನ್ನು ಮಾಡಿ ೧೪೮. ಆ ಬ್ರಹ್ಮನು (ತೃಪ್ತಿಯಾಗದೆ) ನೋಡುತ್ತಾನೆ; ದೇವೇಂದ್ರನು ಮುದ್ದಾಡುತ್ತಾನೆ, ಅಪ್ಸರಸ್ತ್ರೀಯರು (ಮಗುವನ್ನು ನೋಡಿ ಸಂತೋಷದಿಂದ) ಎದ್ದು ಕುಣಿದಾಡುತ್ತಾರೆ ಎಂದ ಮೇಲೆ ಗುಣಾರ್ಣವನ ಜನ್ಮೋತ್ಸವದ ಸೊಗಸನ್ನು ಹೊಗಳಬೇಡವೇ? ವ|| ಹಾಗೆ ವಿಶೇಷೋತ್ಸವವನ್ನು ನಡೆಸಿ ದೇವಸಭೆಯವರೂ ಬ್ರಹ್ಮಸಭೆಯವರೂ ಒಟ್ಟಿಗಿದ್ದು ಹೆಸರಿಡಲು ಕಾರಣವಾದುವುಗಳಲ್ಲಿ ಈತನು ಸಕಲಲೋಕಗಳಿಂದ ಹೊಗಳಲ್ಪಡುವ ಚಾಳುಕ್ಯವಂಶದಲ್ಲಿ ಹುಟ್ಟಿದ ಶ್ರೀಮದರಿಕೇಸರಿ, ವಿಕ್ರಮಾರ್ಜುನ, ಉದಾತ್ತನಾರಾಯಣ, ಪ್ರಚಂಡಮಾರ್ತಾಂಡ (ವಿಶೇಷತೇಜಸ್ಸನ್ನುಳ್ಳ ಸೂರ್ಯ) ಉದಾರಮಹೇಶ್ವರ (ಔದಾರ್ಯದಲ್ಲಿ ಶಿವನ ಹಾಗಿರುವವನು), ಕದನತ್ರಿಣೇತ್ರ (ಯುದ್ಧದಲ್ಲಿ ಮುಕ್ಕಣ್ಣನಂತಿರುವವನು), ಮನುಜಮಾಂಧಾತ (ಮನುಷ್ಯರಲ್ಲಿ ಮಾಂಧಾತ ಚಕ್ರವರ್ತಿಯಂತಿರುವವನು), ಪ್ರತಿಜ್ಞಾಗಾಂಗೇಯ (ಪ್ರತಿಜ್ಞೆ ಮಾಡುವುದರಲ್ಲಿ ಪಣ ತೊಟ್ಟ ಭೀಷ್ಮನಂತಿರುವವನು),

ಜಲನಿ ವಿನಯವಿಭೂಷಣಂ ಮನುನಿದಾನನನೂನದಾನಿ ಲೋಕೈಕ ಕಲ್ಪದ್ರುಮಂ ಗಜಾಗಮ ರಾಜಪುತ್ರನಾರೂಢಸರ್ವಜ್ಞಂ ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ ವಿಬುಧ ವನಜವನ ಕಳಹಂಸಂ ಸುರತಮಕರಧ್ವಜಂ ಸಹಜಮನೋಜಂ ಆಂಕುಚಕಳಶ ಪಲ್ಲವಂ ಕರ್ಣಾಟೀ ಕರ್ಣಪೂರಂ ಲಾಟೀಲಲಾಮಂ ಕೇರಳೀಕೇಳಿಕಂದರ್ಪಂ ಸಂಸಾರಸಾರೋದಯಂ ಮಱುವಕ್ಕದಲ್ಲೞಂ ನೋಡುತ್ತೆ ಗೆಲ್ವಂ ಪಾಣ್ಬರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚೆ ಗಂಡಂ ಪ್ರಿಯಗಳ್ಳಂ ಗಣನಿ ಗುಣಾರ್ಣವಂ ಸಾಮಂತಚೂಡಾಮಣಿಯೆಂದಿಂತಿವು ಮೊದಲಾಗೆ ಪಲವುಮಷ್ಪೋತ್ತರಶತನಾಮಂಗಳನಿಟ್ಟು ವಿಶೇಷಾಶೀರ್ವಚನಂಗಳಿಂ ಪರಸಿ-

ಉ|| ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ಸು ವಿಱದು
ದ್ದ ಪ್ತ ವಿರೋ ಸಾಧನಮನಾಹವದೊಳ್ ತಱದೊಟ್ಟು ವಿಶ್ವದಿ|
ಗ್ವ್ಯಾಪ್ತ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖ
ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ|| ೧೪೯

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪ್ರಥಮಾಶ್ವಾಸಂ

ಶೌಚಾಂಜನೇಯ, (ಶುಚಿತ್ವದಲ್ಲಿ ಹನುಮಂತನಂತಿರುವವನು), ಆಕಳಂಕರಾಮ (ಕಲ್ಮಷ ರಹಿತನಾದ ರಾಮನಂತಿರುವವನು), ಸಾಹಸಭೀಮ (ಭಯಂಕರವಾದ ಸಾಹಸವುಳ್ಳವನು), ಜಗದೇಕಮಲ್ಲ (ಜಗತ್ತಿನಲ್ಲೆಲ್ಲ ಶೂರನಾಗಿರುವವನು), ಪ್ರತ್ಯಕ್ಷಜೀಮೂತವಾಹನ (ಎದುರಿಗೇ ಇರುವ ದಾನಶೀಲನೂ ವಿದ್ಯಾಧರ ಚಕ್ರವರ್ತಿಯೂ ಆದ ಜೀಮೂತವಾಹನ), ವಿದ್ವಿಷ್ಟವಿದ್ರಾವಣ (ಶತ್ರುಗಳನ್ನು ಓಡಿಹೋಗುವಂತೆ ಮಾಡುವವನು), ಮನುನಿದಾನ (ಮನುಚಕ್ರವರ್ತಿಯಂತೆ ಆದಿಪುರುಷನಾದವನು), ಪರಸೈನ್ಯಭೈರವ (ಶತ್ರುಸೈನ್ಯಕ್ಕೆ ಭಯಂಕರನಾಗಿರುವವನು), ಅತಿರಥಮಥನ (ಅತಿರಥರನ್ನು ಕಡೆದುಹಾಕುವವನು), ವೈರಿಗಜಘಟಾವಿಘಟನ (ಶತ್ರುಗಳೆಂಬ ಆನೆಗಳ ಸಮೂಹವನ್ನು ಭೇದಿಸುವವನು), ಅರಾತಿಕಾಲಾನಲ (ಶತ್ರುಗಳಿಗೆ ಕಾಲಾಗ್ನಿಯಂತಿರುವವನು), ರಿಪುಕುರಂಗಕಂಠೀರವ (ಶತ್ರುಗಳೆಂಬ ಜಿಂಕೆಗೆ ಸಿಂಹದಂತಿರುವವನು), ವಿಕ್ರಾಂತತುಂಗ (ಪರಾಕ್ರಮದ ಔನ್ನತ್ಯವನ್ನುಳ್ಳವನು) ಪರಾಕ್ರಮಧವಳ (ಶೌರ್ಯದಿಂದ ಬೆಳ್ಳಗಿರುವ ಯಶಸ್ಸನ್ನುಳ್ಳವನು), ಸಮರೈಕಮೇರು (ಯುದ್ಧದಲ್ಲಿ ಒಂದು ಮೇರು ಪರ್ವತದಂತಿರುವವನು), ಶರಣಾಗತ ಜಲನಿ (ಆಶ್ರಿತರಿಗೆ ಸಮುದ್ರದೋಪಾದಿಯಲ್ಲಿರುವವನು), ವಿನಯವಿಭೂಷಣ (ನಮ್ರತೆಯನ್ನೇ ಆಭರಣವನ್ನಾಗಿ ಉಳ್ಳವನು), ಅನೂನದಾನಿ (ಊನವಿಲ್ಲದೆ ದಾನಮಾಡುವವನು), ಲೋಕೈಕಕಲ್ಪದ್ರುಮ (ಸಮಸ್ತಲೋಕಕ್ಕೂ ಒಂದೇ ಕಲ್ಪವೃಕ್ಷದಂತಿರುವವನು) ಗಜಾಗಮರಾಜಪುತ್ರ (ಹಸ್ತಿಶಾಸ್ತ್ರದಲ್ಲಿ ರಾಜಪುತ್ರನಂತಿರುವವನು), ಆರೂಢಸರ್ವಜ್ಞ (ಅಶ್ವಾರೋಹಣ ವಿದ್ಯೆಯನ್ನು ಸಂಪೂರ್ಣವಾಗಿ ತಿಳಿದವನು), ಗಂದೇಭವಿದ್ಯಾಧರ (ವಿದ್ಯಾಧರದಲ್ಲಿ ಮದ್ದಾನೆಯಂತಿರುವವನು), ನೃಪಪರಮಾತ್ಮ (ರಾಜರಲ್ಲಿ ಪರಮಾತ್ಮನಂತಿರುವವನು), ಸುರತಮಕರಧ್ವಜ (ಸಂಭೋಗದಲ್ಲಿ ಮನ್ಮಥನಂತಿರುವವನು), ಸಹಜಮನೋಜ (ಸ್ವಭಾವವಾದ ಮನ್ಮಥ), ವಿಬುಧವನಜವನ ಕಳಹಂಸ (ಪಂಡಿತರೆಂಬ ಕಮಲಸರೋವರದ ಕಲಹಂಸದಂತಿರುವವನು), ಆಂಕುಚಕಳಶ ಪಲ್ಲವ (ಆಂಧ್ರಸ್ತ್ರೀಯರ ಮೊಲೆಗಳೆಂಬ ಕಳಸಕ್ಕೆ ಚಿಗುರಿನಂತಿರುವವನು), ಕರ್ಣಾಟೀಕರ್ಣಪೂರ (ಕರ್ಣಾಟಸ್ತ್ರೀಯರ ಕಿವಿಯಾಭರಣದಂತಿರುವವನು), ಲಾಟೀಲಲಾಮ (ಲಾಟದೇಶದ ಸ್ತ್ರೀಯರ ಹಣೆಯಾಭರಣ), ಕೇರಳೀಕೇಳಿಕಂದರ್ಪ (ಕೇರಳದೇಶದ ಸ್ತ್ರೀಯರ ಕ್ರೀಡೆಯಲ್ಲಿ ಮನ್ಮಥನ ಹಾಗಿರುವವನು), ಸಂಸಾರಸರೋದಯ (ಸಂಸಾರರಹಸ್ಯವನ್ನು ತಿಳಿದು ಅಭಿವೃದ್ಧಿಯಾಗುತ್ತಿರುವವನು), ಮರುವಕ್ಕದಲ್ಲಳಂ (ಶತ್ರುಸೈನ್ಯವನ್ನು ಭಯಪಡಿಸುವವನು) ನೋಡುತ್ತೆ ಗೆಲ್ವ (ದೃಷ್ಟಿಯಿಂದಲೇ ಗೆಲ್ಲುವವನು), ಪಾಣ್ಬರಂಕುಸ (ಜಾರರಿಗೆ ಅಂಕುಶಪ್ರಾಯನಾದವನು), ಅಮ್ಮನ ಗಂಧವಾರಣ (ತಂದೆಯ ಮದ್ದಾನೆ) ಪಡೆಮೆಚ್ಚೆಗಂಡ (ಸೈನ್ಯವು ಮೆಚ್ಚುವ ಹಾಗಿರುವ ಶೂರ), ಪ್ರಿಯಗಳ್ಳ (ಪ್ರಿಯಳನ್ನು ಅಪಹರಿಸಿದವನು), ಗುಣನಿ (ಗುಣಗಳ ಗಣಿ), ಗುಣಾರ್ಣವ (ಗುಣಸಮುದ್ರ) ಸಾಮಂತಚೂಡಾಮಣಿ (ಆಶ್ರಿತರಾಜರಲ್ಲಿ ತಲೆಯಾಭರಣದಂತಿರುವವನು), ಇವೇ ಮೊದಲಾದ ನೂರೆಂಟು ಹೆಸರುಗಳನ್ನಿಟ್ಟು ವಿಶೇಷಾಶೀರ್ವಾದಗಳಿಂದ ಹರಸಿದರು. ೧೪೯. ಎಲೈ ಅರಿಕೇಸರಿಯೇ ನೀನು ಲೋಕವಿರುವವರೆಗೆ ಏಳು ಸಮುದ್ರಗಳಿಂದ ಮುದ್ರಿಸಲ್ಪಟ್ಟ (ಸುತ್ತುವರಿಯಲ್ಪಟ್ಟ) ಭೂಮಂಡಲವನ್ನೂ ನಿನ್ನ ಆಜ್ಞಾನವನ್ನಾಗಿ ಮಾಡು. ನಿನ್ನನ್ನು ಮೀರಿ ಗರ್ವಿಷ್ಠರಾದ ಶತ್ರುರಾಜಸೈನ್ಯವನ್ನು ಯುದ್ಧದಲ್ಲಿ ಕತ್ತರಿಸಿ ಹಾಕು. ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿರುವ ಯಶೋಲಕ್ಷ್ಮಿಗೆ ಪತಿಯಾಗಿ ನಿರಂತರವಾದ ಸುಖಭೋಗಗಳಿಗೆ ನೀನೆ ಮೊತ್ತಮೊದಲಿಗನಾಗು ಎಂದೂ ಹರಿಸಿದರು
************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ