ಕತೆಗಾರ ಮಂಜಣ್ಣ
ಮಂಜಣ್ಣ ನಮ್ಮ ಮನೆಯ ಆಳು; ಬಹಳ ಹಳೆಯ ಮನುಷ್ಯ; ಅಂದರೆ ಸುಮಾರು ಅರವತ್ತು ವರ್ಷ. ಅವನ
ಮುಖದ ತುಂಬ ಬಿಳಿಯ ಗಡ್ಡ ಮೀಸೆ. ತಲೆಯ ತುಂಬ ಹಣ್ಣು ಹಣ್ಣು ಕುದಲು. ಅವನ ಗಡ್ಡವೇನು
ಮಲೆನಾಡಿನ ಗಿರಿಗಳ ಮೇಲೆ ನಿಬಿಡವಾಗಿ ಬೆಳೆವ ತರುನಿಕದರಂತೆ ಉದ್ದವಾಗಿ ನೀಳವಾಗಿರಲಿಲ್ಲ.
ಬಯಲು ಸೀಮೆಯ ಗುಡ್ಡಗಳಲ್ಲಿ ಬೆಳೆಯುವ ವಿರಳವಾದ ಪೊದೆಗಳಂತೆ ಇತ್ತು. ಸುಲಭವಾಗಿ
ಹೇಳುವುದಾದರೆ ಇಲಿ ತರಿದಂತೆ ಇತ್ತು. ಅದಕ್ಕೊಂದು ಕಾರಣ ಇದೆ. ನಮ್ಮ ಮಂಜಣ್ಣ ಕ್ಷೌರಿಕರೊಡನೆ ಅಸಹಕಾರ ಮಾಡಿದ್ದ. ವಪನವೆಮದರೆ ಅವನಿಗೆ ನಮ್ಮೆಲ್ಲರಿಗಿರುವಂತೆ ಒಂದು ವೈಭವವಾಗಿರಲಿಲ್ಲ. ಅವನಿಗೆ ಕುಡುಗೋಲೇ ಮುಂಡನದ ಕೈದು! ಗಡ್ಡ ಉದ್ದವಾದ ಕೂಡಲೆ ಅದರ ತುದಿಯನ್ನು ಒಟ್ಟುಗೂಡಿಸಿ ಮಸೆದು ಹರಿತಮಾಡಿದ ಕುಡುಗೋಲಿನಿಂದ ಚರಚರನೆ ಕೊಯ್ಯುತ್ತಿದ್ದ ಬೆಳೆದು ಹಣ್ಣಾಗಿ ನಿಂತ ಬತ್ತದ ಪೈರನ್ನು ಸವರಿ ರಾಶಿ ಮಾಡುವಂತೆ! ಈಗ ಅದನ್ನು ಯೋಚಿಸಿಕೊಂಡರೆ ನಗು ಬರುತ್ತದೆ; ಆಗ ಬರುತ್ತಿರಲಿಲ್ಲ.
ಮಂಜಣ್ಣನ ಕರ್ಮಾಚರಣೆಗಳು ಕೂಡ ದೀರ್ಘವಾಗಿದ್ದುವು. ಅವನು ಸ್ನಾನ ಮಾಡುವುದು ಒಂದು ಗಂಟೆ. ಅದಾದಮೇಲೆ ಬಾವಿಯ ಹಾಸುಗಲ್ಲಿನ ಮೇಲೆ ಬೆತ್ತದಿಂದ ಹೆಣೆದು ಮಾಡಿದ ನಾಮದ ಪೆಟ್ಟಿಗೆಯೊಂದನ್ನು ಬಿಚ್ಚಿಟ್ಟು ಕುಳಿತುಕೊಳ್ಳುವನು. ಅದರೊಳಗಿಂದ, ಒಡೆದು ಹಾಳಾದ ಆರುಕಾಸಿನ ಅಗಲದ ಕನ್ನಡಿ, ನಾಮದ ಕಡ್ಡಿ, ಬಿಳಿಯನಾಮ, ಕೆಂಪುನಾಮ, ಒಣಗಿದ ತುಳಸಿಯ ದಳ ಇವೇ ಮೊದಲಾದುವು ಒಂದಾದ ಮೇಲೊಂದು ಮೆಲ್ಲನೆ ಮೂಡುತ್ತಿದ್ದುವು. ಆಮೇಲೆ ನಾಮಗಳು ನೆಟ್ಟಗಾಗಲು ಪ್ರಾರಂಭ! ಹಣೆಯಮೇಲೆ ಮೂರು, ಎದೆಯ ನಡುವೆ ಮೂರು, ನಾಭಿಯ ಬಳಿ ಮೂರು, ಬೆನ್ನಿಗೆ ಒಂದು. ಬಾಕಿ ಸರಿಯಾಗಿ ನೆನಪಿಲ್ಲ.
ಮಂಜಣ್ಣನೆಂದರೆ ನಮಗೆಲ್ಲ ಪ್ರಾಣ; ಏಕೆಂದರೆ ನಮಗೆಲ್ಲ ಅವನೇ ಕತೆಗಾರ! ಆ ವೃದ್ಧಮೂರ್ತಿಯನ್ನು ನೋಡಿದ ಕೂಡಲೆ ಹುಡುಗರಾದ ನಮಗೆ ಅವನು ನಮಗೆ ಆಳು ಎಂಬುದು ಮರೆತುಹೋಗಿ, ಅವನಲ್ಲಿ ಗುರುಭಾವ ಉಂಟಾಗುತ್ತಿತ್ತು! ಲವಕುಶರಿಗೆ ವಾಲ್ಮೀಕಿಯನ್ನು ಕಂಡರೆ ಯಾವ ಭಾವ ಉಂಟಾಗುತ್ತಿತ್ತೋ ಆ ಭಾವ. ಆದರೇನು? ನಮಗೆ ಗುರು, ನಮ್ಮ ಹಿರಿಯರಿಗೆ ಆಳು! ಅವನೂ ದಿನವೂ ಎಲ್ಲರಂತೆ ಕೆಲಸಕ್ಕೆ ಹೋಗಬೇಕಾಗಿತ್ತು. ನಾನು ಒಂದೊಂದು ಸಾರಿ ಹೀಗೆಂದು ಯೋಚಿಸುತ್ತಿದ್ದೆ: ನಾನ ಯಜಮಾನನಾದರೆ ಮಂಜಣ್ಣನಿಗೆ ಕತೆ ಹೇಳುವ ಕೆಲಸವೊಂದನ್ನೇ ಕೊಡುವೆನೆಂದು! ಮುಗ್ಧಾಲೋಚನ!. ನಾನು ಏಳೆಂಟು ವರ್ಷದ ಹುಡುಗ; ಮಂಜಣ್ಣ ಅರುವತ್ತು ವರ್ಷದ ಮುದುಕ! ನಾನು ಯಜಮಾನನಾಗುವತನಕ ಅವನು ಬದುಕಿರುವನೆ? ಹೌದು, ಆಗ ಇರುವನೆಂದೇ ಭಾವಿಸಿದ್ದೆ!
ಹೊತ್ತು ಎಷ್ಟು ಬೇಗ ಮುಳುಗುವುದೋ ಎಂದು ನಾವೆಲ್ಲಾ ಹಾರೈಕಿಯಿಂದ ಎದುರುನೋಡುತ್ತಾ ಇದ್ದೆವು. ಏಕೆಂದರೆ ಕತ್ತಲಾಗಲು ಮಂಜಣ್ಣ ನಮಗೆ ಕತೆ ಹೇಳುತ್ತಿದ್ದ. ಮಂಜಣ್ಣವೆಂದರೆ ನಿಜವಾಗಿಯೂ ‘ಕಥಾಸರಿತ್ಸಾಗರ’. ಅವೆಲ್ಲಾ ಅವನ ಕತೆಗೋ? ಅಥವಾ ಅನ್ಯರಿಂದ ಕಲಿತವುಗಳೋ ಏನೋ? ನಮಗೆ ತಿಳಿಯದು. ಅವನನ್ನೇ ಕೇಳಿದ್ದರೆ ಹೇಳುತ್ತಿದ್ದನೋ ಏನೋ? ಆದರೆ ಅಂದು ನಾವು ‘ಸ್ವಂತ’ ಮತ್ತು ‘ಅನ್ಯ’ ಇವುಗಳ ಪ್ರಭೇದಗಳು ಉಂಟೆಂದು ಕೂಡ ಭಾವಿಸಿರಲಿಲ್ಲ. ಕತೆಗಂತೂ ಅವನು ಕಲ್ಪವೃಕ್ಷವೇ ಸರಿ! “ಮಂಜಣ್ಣ ಕತೆ ಹೇಳೊ” ಎಂದು ಹೇಳುವುದೆ ತಡ ಕತೆಯ ಪ್ರವಾಹ ಹಲ್ಲಿಲ್ಲದ ಅವನ ಮುದಿಬಾಯಿಂದ ಹೊರಸೂಸುತ್ತಿತ್ತು. ನಾವೆಲ್ಲ ಒಂದೇ ಮನಸ್ಸಿನಿಂದ ಕತೆ ಕೇಳುತ್ತಾ ಕುಳಿತುಬಿಡುತ್ತಿದ್ದೆವು.
ಮೇಲೆ ಹೇಳಿದಂಥಾ ಒಂದು ದಿನ ಕತ್ತಲಾಗುತ್ತಿತ್ತು. ಮುಂಗಾರು ಮಳೆ ಬೇಸರವನ್ನುಂಟುಮಾಡುವಂತೆ ಜಿರ್ರೆಂದು ಸುರಿಯುತ್ತಿತ್ತು. ನಾನು ಕಿಟ್ಟು ಇಬ್ಬರೂ ಮುರಬೇಯಿಸುವ ಒಲೆಯ ಬಳಿ ಚಳಿ ಕಾಯಿಸುತ್ತಾ ಕುಳಿತಿದ್ದೆವು. ದೊಡ್ಡ ಒಲೆಯ ಬೆಂಕಿಯ ಪ್ರಕಾಶ ದೇದೀಪ್ಯಮಾನವಾಗಿತ್ತು. ವಾಸು ಸೀತೆ ಇಬ್ಬರನ್ನೂ ಹಲಸಿನ ಬಿತ್ತ ತರುವುದಕ್ಕೆ ಕಳಿಸಿದ್ದೆವು. ಹಲಸಿನ ಬಿತ್ತಗಳ ಸವಾರಿ ಬಂತು. ಎಲ್ಲರೂ ಸೇರಿ ಅವುಗಳನ್ನು ಕಚ್ಚಿ ಕಚ್ಚಿ ಕೆಳಗಿಟ್ಟೆವು. ಏಕೆಂದರೆ ಕಚ್ಚಿ ಗಾಯಮಾಡಿ ಒಲೆಗೆ ಹಾಕದಿದ್ದರೆ ಅವು ಸಿಡಿಯುವುವು ಎಂಬ ಭಯ! ಹೆಚ್ಚೇನು? ನಮ್ಮ ಪಾಲಿಗೆ ಅದೊಂದು ದೊಡ್ಡ ನಂಬಿಕೆಯೆ ಆಗಿತ್ತು. ಬಿತ್ತಗಳನ್ನು ಇನ್ನೂ ಒಲೆಗೆ ಹಾಕಿರಲಿಲ್ಲ. ದಹನ ಸಂಸ್ಕಾರ ಮುಗಿಯುವುದಕ್ಕೆ ಮುಂಚೆಯೆ ನಮ್ಮ ಅಪ್ಪಯ್ಯ, ಚಿಕ್ಕಪ್ಪಯ್ಯ ಇವರ ಮಾತು ಕೇಳಿಸಿತು. ಬೀಜಗಳನ್ನೆಲ್ಲಾ ಹುದುಗಿಸಿಟ್ಟು ಏನೂ ತಿಳಿಯದವರಂತೆ ಕುಳಿತೆವು. ಸ್ವಲ್ಪ ಹೊತ್ತಿಗೆ ಮುಂಚೆ ಒಬ್ಬನನ್ನು ಕೊಲೆಮಾಡಿ ಸುಲಿಗೆ ಮಾಡಲು ಸಿದ್ಧರಾಗಿದ್ದ ಠಕ್ಕರಂತೆ ಗುಂಪು ಸೇರಿ ಕುಳಿತಿದ್ದ ನಾವು ಈಗ ವನಗಳಲ್ಲಿ ವಿಕಸಿತವಾಗಿ ತಲೆದೂಗಿ ನಲಿನಲಿವ ಮುಗ್ಧ ಕುಸುಮಗಳಂತೆ ನಟಿಸಿ ಕುಳಿತೆವು.
ಎಲ್ಲರೂ ಬಂದರು. ಗದ್ದೆಯ ಕೆಲಸಕ್ಕೆ ಹೋಗಿದ್ದ ಸಿದ್ದ, ಪುಟ್ಟ ಇವರು ಬಂದು “ಒಂದೀಟು ಜಾಗ ಬಿಡಿ, ಅಯ್ಯ! ಮಳೇಲಿ ನೆಂದು ಬಂದೀವಿ. ಒಂದೀಟು ಚಳಿ ಕಾಸ್ಗೊಂಡು ಹೋಗ್ತೀವಿ” ಎಂದರು. ನಾವೆಲ್ಲರೂ ಒಟ್ಟಿಗೆ “ಜಾಗ ಇಲ್ಲ, ಹೋಗ್ರೋ! ನಮಗೂ ಚಳಿ” ಎಂದೆವು. ನಾವು ಮನೆಯಲ್ಲಿಯೆ ಇದ್ದವರು, ಅವರು ಗದ್ದೆಗಳಿಗೆ ಹೋಗಿ ಮಳೆಯಲ್ಲಿ ತೊಯ್ದು ಬಳಲಿ ಬಂದವರು! ಸ್ವಲ್ಪ ಹೊತ್ತಿನಮೇಲೆ ಮಂಜಣ್ಣನೂ ಬಂದ. ಬಂದವನು “ಜಾಗ ಬಿಡಿ” ಎಂದು ಕೇಳಲೇ ಇಲ್ಲ. ಬರಬರುತ್ತಾ ಕತೆ ಹೇಳುತ್ತಲೇ ಬಂದ. ನಾವೆಲ್ಲ ಅವನ ಕಡೆ ತಿರುಗಿದೆವು.
“ಒಂದೂರಿನಲ್ಲಿ ಒಬ್ಬನಿದ್ದ” ಎಂದು ಪ್ರಾರಂಭಿಸಿದನು. ನಮ್ಮ ಆನಂದಕ್ಕೆ ಪಾರವೆ ಇಲ್ಲದ ಹಾಗಾಯಿತು. ನಾವು ನಾಲ್ವರೂ ಒಟ್ಟಿಗೆ “ಆಮೇಲೆ” ಎಂದೆವು.
“ಅವನೊಂದು ಕುಂಬಳ ಬೀಳು ನಟ್ಟಿದ್ದ.”
ನಾನು ‘ಹುಂ’ ಎಂದೆ. ಏಕೆಂದರೆ ‘ಹುಂ ಗುಟ್ಟು’ವರಿಲ್ಲದ ಕತೆಗೆ ಮುಂದೆ ಸಾಗಲು ಕಾಲೇ ಬರುತ್ತಿರಲಿಲ್ಲ.
“ಅದರಲ್ಲೊಂದು ಹೂ ಬಿಟ್ಟಿತು.”
“ಹುಂ! ಹುಂ!”
“ಆಮೇಲೆ ಒಂದು ಮಿಡಿಯಾಯ್ತು”
ಈ ಸಾರಿ ನಾನೂ ಕಿಟ್ಟೂ ಇಬ್ಬರೂ ಹೊಂಗುಟ್ಟಿದೆವು.
“ಆ ಮಿಡಿ ಒಂದಿಷ್ಟು ದೊಡ್ಡಾಯ್ತು” ಹೀಗೆಂದು ಮಂಜಣ್ಣ ತನ್ನ ಎರಡು ಕೈಗಳಿಂದ ಮಿಡಿಯ ಗಾತ್ರವನ್ನು ತೋರಿಸುವಂತೆ ನಟಿಸುತ್ತಾ ನನಗೂ ಕಿಟ್ಟುಗೂ ಮದ್ಯೆ ಇದ್ದ ಸ್ವಲ್ಪ ಸ್ಥಳದಲ್ಲಿ ಕೈಯಿಟ್ಟ.
ನಾವು “ಹುಂ” ಎಂದೆವು.
“ಸ್ವಲ್ಪ ದಿವಸ ಆದಮೇಲೆ, ಇಷ್ಟು ದೊಡ್ಡಾಯ್ತು” ಎಂದು ಕೈಗಳನ್ನು ಇನ್ನೂ ಅಗಲಿಸಿದನು.
ಮತ್ತೆ “ಹುಂ” ಎಂದೆವು.
“ಆಮೇಲೆ ಇಷ್ಟು ದೊಡ್ಡಾಯ್ತು” ಎಂದು ಇನ್ನೂ ಕೈಗಳನ್ನು ಅಗಲಿಸಲು ಪ್ರಯತ್ನಪಟ್ಟ. ಆದರೆ ನಾನೂ ಕಿಟ್ಟೂ ಇಬ್ಬರೂ ಕಲ್ಲಿನಂತೆ ಕೂತಿದ್ದೆವು.
ಮಂಜಣ್ಣ “ಸ್ವಲ್ಪ ಜಾಗ ಬಿಡಿ, ಕತೆ ಹೇಳಿ ತೋರಿಸುವುದಕ್ಕೆ ಆಗುವುದಿಲ್ಲ” ಎಂದ, ನಾವೂ ಸರಿದೆವು.
ಒಂದು ಕುಂಬಳಕಾಯಿ ಎಷ್ಟು ಕಡಿಮೆ ಅಂದರೂ ಒಂದು ಅಡಿಯಷ್ಟಾದರೂ ದಪ್ಪ ಬೆಳೆಯುತ್ತದೆ. ನಿಜವಾದ ಕುಂಬಳಕಾಯಿಯೆ ಒಂದು ಅಡಿ ಬೆಳೆದ ಮೇಲೆ ಕತೆಯ ಕುಂಬಳಕಾಯನ್ನು ಕೇಳಬೇಕೆ? ಎಷ್ಟು ಬೆಳೆಯಿತೆಂದರೂ ಹೂಂ ಗುಡಲೇಬೇಕು. ಆದರೆ ಮಂಜಣ್ಣನ ಕತೆಯ ಕುಂಬಳಕಾಯಿ ಹೆಚ್ಚು ದಪ್ಪ ಬೆಳೆಯಲಿಲ್ಲ. ಅವನಿಗೆ ಕೂರುವುದಕ್ಕೆ ಎಷ್ಟು ಜಾಗ ಬೇಕಿತ್ತೋ ಅಷ್ಟು ದೊಡ್ಡದಾಗಿ ಬೆಳೆಯಿತು. ಮಂಜಣ್ಣ ಇದ್ದಕಿದ್ದ ಹಾಗೆಯೆ ಬೆಂಕಿ ಕಾಯಿಸುತ್ತಾ ಕುಳಿತೇಬಿಟ್ಟ. ಕೆಟ್ಟವರೇ ನಾನು, ಕಿಟ್ಟು!
ಎಲ್ಲರೂ ನಗಲಾರಂಭಿಸಿದರು. ನಮ್ಮಿಬ್ಬರಿಗೂ ಅವಮಾನವಾದಂತಾಗಿ ಅಳು ಬಂದಿತು. ಆದರೆ ಸಹಿಸಲಾರದ ನಗು ಅಳುವನ್ನು ಮೀರಿ ಹೊರ ಹೊರಟಿತು. ಮತ್ತೆ ಏನೇನೋ ಪ್ರಯತ್ನ ಮಾಡಿ ಸ್ಥಳ ಸಂಪಾದನೆ ಮಾಡಿದೆವು. ಆದರೆ ಬಹಳ ಇಕ್ಕಟ್ಟಾಗಿತ್ತು.
ಸ್ವಲ್ಪ ಹೊತ್ತಾದಮೇಲೆ ಕಿಟ್ಟು “ಆಮೇಲೆ?” ಎಂದ. ನಾವೆಲ್ಲರೂ “ಹೌದು! ಹೌದು! ಮರೆತಿದ್ದೆವು. ಆಮೇಲೆ?” ಎಂದೆವು. ಮಂಜಣ್ಣ ಮೌನಿಯಾಗಿದ್ದ. ನಸುನಗುತ್ತಿದ್ದನೋ ಏನೊ? ಆ ಗಡ್ಡಗಳ ದಾಂಧಲೆಯಲ್ಲಿ ನಮಗೆ ಗೊತ್ತಾಗಲೇ ಇಲ್ಲ.
ಕಿಟ್ಟು ಪುನಃ “ಆಮೇಲೆ?” ಎಂದ. ಮಂಜಣ್ಣ ಮಾತಾಡಲೇ ಇಲ್ಲ. ತರುವಾಯ ಕಿಟ್ಟು ಅವನ ಗಡ್ಡವನ್ನು ಮೆಲ್ಲನೆ ಹಿಡಿದುಕೊಂಡು ಅಲ್ಲಾಡಿಸುತ್ತಾ “ಆಮೇಲೆ” ಎಂದ.
ಮಂಜಣ್ಣ ಮತ್ತೂ ಮಾತಾಡಲಿಲ್ಲ. ಕಿಟ್ಟುಗೆ ಒಂದು ವಿಧವಾದ ಸಿಟ್ಟು ಬಂತು. ಗಡ್ಡವನ್ನು ಬಲವಾಗಿ ಹಿಡಿದು ಜಗ್ಗಿಸುತ್ತಾ “ಆಮೇಲೆ?” ಎಂದು ಗರ್ಜಿಸಿದ. ಮಂಜಣ್ಣನಿಗೆ ತುಂಬಾ ಯಾತನೆಯಾಯಿತು.
“ಅಯ್ಯೋ! ಹೇಳ್ತೀನಪ್ಪಾ” ಎಂದು ಗಟ್ಟಿಯಾಗಿ ರೋದನಧ್ವನಿಯಿಂದ ಕೂಗಿಕೊಂಡ. ಪಾಪ. ಮುದುಕನಿಗೆ ಬಹಳ ನೋವಾಗಿರಬೇಕು. ನಮ್ಮ ಮನಸ್ಸೆಲ್ಲಾ ಕರಗಿ ನೀರಾಗಿಹೋಯಿತು.
“ಮಂಜಣ್ಣ! ಮಂಜಣ್ಣ!” ಎಂದೆವು. ನಮಗೆ ವ್ಯಸನ ಗಾಬರಿಗಳು ಒಂದೇ ಬಾರಿ ಉಂಟಾದುವು. ಕಿಟ್ಟು ಅಳಲಾರಂಭಿಸಿದ. ಪೆಟ್ಟೆಲ್ಲಾ ಮಂಜಣ್ಣಗೆ ನೋವೆಲ್ಲಾ ಕಿಟ್ಟಣ್ಣನಿಗೆ ಎನ್ನುವಹಾಗೆ. ಮಂಜಣ್ಣ ಕಿಟ್ಟುವನ್ನು ಪ್ರೀತಿಪೂರ್ವಕವಾದ ಮಾತುಗಳಿಂದ ಸಮಾಧಾನಗೊಳಿಸಿದ. ಆದರೂ ಕಿಟ್ಟು ನೀರವವಾಗಿ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದ.
ನಾನು “ಮಂಜಣ್ಣಾ ಆಮೇಲೇನಾಯ್ತೋ? ಹೇಳೋ!” ಎಂದೆ.
“ತಿಂದ” ಎಂದನು. ಕತೆ ಪೂರೈಸಿತೆಂದು ನಮ್ಮ ಮನಸ್ಸೆಲ್ಲಾ ಶಾಂತವಾಯಿತು. ಕಿಟ್ಟು ಅಳುವನ್ನು ನಿಲ್ಲಿಸಿದ್ದರೂ ಖಿನ್ನನಾಗಿಯೆ ಇದ್ದ.
ಇನ್ನೊಂದು ಕತೆ ಕೇಳಬೇಕೆಂದು ನಮಗೆಲ್ಲ ಕುತೂಹಲ. ನಮಗೇನು ಅಂಥಾ ಕತೆ, ಇಂಥಾ ಕತೆ, ಹಾಗಿರಬೇಕು, ಹೀಗಿರಬೇಕು. ಎಂಬ ಭಾವನೆಯೆ ಇರಲಿಲ್ಲ. ಅಂತೂ ಕತೆಯಾದರೆ ಸರಿ. ಅನೇಕಸಾರಿ ಮಂಜಣ್ಣ ನಮ್ಮ ಕಾಟ ತಡೆಯಲಾರದೆ ಎಂತೆಂಥಾ ಕತೆಗಳನ್ನೋ ಹೇಳಿಬಿಟ್ಟಿದ್ದಾನೆ. ಒಂದು ದಿನ ‘ಕತೆ ಹೇಳು’ ಎಂದು ಕಾಡಿಸಿದೆವು. ಅವನು ಹೇಳಿದ್ದು ಈ ಕತೆ –
“ಒಂದೂರಿನಲ್ಲಿ ಒಬ್ಬನಿದ್ದ. ಅವನು ಊಟಕ್ಕೆ ಕೂತಿದ್ದ. ಸ್ವಲ್ಪ ಹೊತ್ತಾದ ಮೇಲೆ ಊಟ ಆಯ್ತು. ಬಳ್ಳೆ ಬಿಟ್ಟೆದ್ದ. ಆಮೇಲೆ ನೆಗೆದುಬಿದ್ದ!” ಇದೂ ನಮಗೊಂದು ಕತೆ. ಪ್ರಪಂಚದಲ್ಲೆಲ್ಲಾ ನಮ್ಮಂಥವರೇ ಇದ್ದಿದ್ದರ ಕಥೆಗಾರರಿಗೆ ಎಷ್ಟು ಸುಲಭವಾಗುತ್ತಿತ್ತು! ಮತ್ತೊಂದು ದಿನ ಇನ್ನೊಂದು ಕತೆ:
“ಒಂದೂರಿನಲ್ಲಿ ಒಬ್ಬಳಿದ್ದಳು. ಅವಳು ಬಾವಿಗೆ ನೀರು ಸೇದುವುದಕ್ಕೆ ಹೋದಳು. ಹಗ್ಗ ತುಂಡಾಗಿ ಕೊಡ ನೀರಿಗೆ ಬಿತ್ತು.” ‘ಹೂಂ’ ಎನ್ನುವುದೊಂದು ಬ್ರಹ್ಮನಿಯಮವಷ್ಟೆ? ನಾವೂ ‘ಹೂಂ’ ಗುಡಲು ಬದ್ಧರಾಗಿದ್ದೆವು.
ಇಷ್ಟು ಹೇಳಿದವನು – ನಾವು ‘ಹೂಂ’ ಎನ್ನಲು, ‘ಹೂಂ’, ಎಂದರೆ ಕೊಡ ಮೇಲೆ ಬರ್ತದೆಯೇ?” ಎಂದ.
“ಇಲ್ಲ” ಎಂದೆವು.
“ಇಲ್ಲ ಅಂದರೆ ಬರ್ತದೆಯೇ?”
“ಇಲ್ಲಾ!” ಎಂದು ಗಟ್ಟಿಯಾಗಿ ಕೂಗಿದೆವು.
“ಇಲ್ಲಾ!! ಎಂದರೆ ಬರ್ತದೆಯೇ?” ಎಂದು ನಕ್ಕನು.
ನಾವು ಅಳುವರಂತೆ ನಟಿಸಲು “ಅತ್ತರೆ ಬರ್ತದೆಯೆ?” ಎಂದ.
“ಅಯ್ಯೋ!” ಎಂದು ಕೂಗಿದೆವು. “ಅಯ್ಯೊ! ಎಂದರೆ ಬರ್ತದೆಯೆ?” ಎಂದ. ಮೌನವಾದರೆ ಇವನೇನು ಮಾಡುವನೆಂದು ಸುಮ್ಮನಾಗಲು “ಸುಮ್ಮನೆ ಕುಳಿತರೆ ಬರ್ತದೆಯೆ?” ಎಂದ. ಹೀಗೆಲ್ಲಾ ಮಾಡಿ ನಮ್ಮನ್ನು ಪೀಡಿಸುವನು.
ಆ ದಿನವೂ ಮಂಜಣ್ಣನಿಂದ ಒಂದು ಕತೆ ಕೇಳಬೇಕೆಂದು ನಮಗೆಲ್ಲಾ ತುಂಬಾ ಆಸೆ, ಆದರೆ ಅವನನ್ನು ಬಲಾತ್ಕರಿಸುವ ಅಧಿಕಾರವನ್ನು ಕಿಟ್ಟನ ದೆಸೆಯಿಂದ ಕಳಕೊಂಡುಬಿಟ್ಟಿದ್ದೆವು. ಕಡೆಗೆ ಮಂಜಣ್ಣನನ್ನು ಬೇಡಿಕೊಂಡೆವು. ಭಗೀರಥ ಪ್ರಯತ್ನ ಮಾಡಿ ಅಂತೂ ಅವನನ್ನು ಒಪ್ಪಿಸಿದೆವು. ಅಂದರೆ ಭಗೀರಥನ ಪ್ರಯತ್ನಕ್ಕಿಂತಲೂ ನಮ್ಮದೇ ಅತಿಶಯವಾದುದರಿಂದ ಅವನ ಪ್ರಯತ್ನವನ್ನೇ ನಮ್ಮದಕ್ಕೆ ಹೋಲಿಸುವುದೆ ಸರಿಯಾದುದೆಂದು ನನ್ನ ಮನಸ್ಸಿಗೆ ತೋರುತ್ತದೆ. ಅದು ಹೇಗಾದರೂ ಇರಲಿ. ಅಂತೂ ಮಂಜಣ್ಣ ಕತೆ ಹೇಳಲು ಒಪ್ಪಿಕೊಂಡ.
ಇನ್ನೇನು ಮಂಜಣ್ಣ ಕತೆ ಹೇಳಲು ಪ್ರಾರಂಭಿಸಬೇಕು. ಗಂಟಲನ್ನೂ ಸರಿ ಮಾಡಿಕೊಂಡ. “ಒಂದೂರಿನಲ್ಲಿ” ಎಂದಿದ್ದ. ಅಷ್ಟರಲ್ಲಿ (ನಮ್ಮ ಗ್ರಹಚಾರ!) ಚಿಕ್ಕಮ್ಮ ಬಂದು ನಮ್ಮನ್ನೆಲ್ಲಾ ಊಟಕ್ಕೆ ಕರೆದರು. ನಮ್ಮ ಎದೆಗೆ ಸಿಡಿಲುಬಡಿದಂತಾಯಿತು. ಮನಸ್ಸಿನಲ್ಲಿಯೆ “ಈ ಕಾಳು ಊಟಕ್ಕೆ ಬೆಂಕಿ ಹಾಕ!” ಎಂದಂದುಕೊಂಡೆವು. ನಮಗೆ ಈಗಿನ ಬುದ್ಧಿ ಆಗ ಇದ್ದಿದ್ದರೆ “ಊಟದ ಹಾವಳಿ” ಎಂಬ ಒಂದು ದೊಡ್ಡ ಗ್ರಂಥವನ್ನೆ ಬರೆದು ಮುದ್ರಿಸಿ ಪುಕ್ಕಟೆಯಾಗಿಯೆ ಹಂಚಿ ಬಿಡುತ್ತಿದ್ದೆವು. ಅಂತೂ ಮಾರಿಯ ಹರಕೆಗೆ ಹೋಗುವ ಕುರಿಗಳಂತೆ ಅಡುಗೆಮನೆಗೆ ಹೋದೆವು. ಹೋದುದೂ ಹೆದರಿಕೆಯಿಂದ ಹೊರತೂ ಹಸಿವೆಯಿಂದ ಅಲ್ಲವೇ ಅಲ್ಲ. ಅನ್ನವನ್ನು ಗಬಗಬನೆ ತಿಂದು ಬಂದೇಬಿಟ್ಟೆವು. ಬಂದವರು ಎಲ್ಲರೂ ಕತೆಗಾರ ಮಂಜಣ್ಣನ ಸುತ್ತಲೂ ಕುಳಿತೆವು: ವರವನ್ನು ದಯಪಾಲಿಸುವೆನೆಂದು ಪ್ರತ್ಯಕ್ಷನಾದ ಶ್ರೀಮನ್ನಾರಾಯಣನ ಮುಂದೆ ಮೊಳಕಾಲೂರಿ ಕುಳಿತುಕೊಳ್ಳುವ ಭಕ್ತರಂತೆ!
ಕಷ್ಟಗಳು ಬಂದರೆ ಪರಂಪರೆಯಾಗಿ ಬರುತ್ತವೆ ಎಂಬುದೇನೊ ಖಂಡಿತ ವಾಗಿಯೂ ಸುಳ್ಳು ಮಾತಲ್ಲ. ಅದು ಚೆನ್ನಾಗಿ ನಮ್ಮ ಅನುಭವಕ್ಕೆ ಬಂದ ಸಂಗತಿ. ಎಡರು ಎನ್ನೇನೂ ಇಲ್ಲ. ಮಂಜಣ್ಣನನ್ನು ಊಟಕ್ಕೆ ಕರೆದರು. ಅವನಿದ್ದಾಗ ನಾವಿಲ್ಲ; ನಾವಿದ್ದಾಗ ಅವನಿಲ್ಲ – ಹಲ್ಲಿದ್ದಾಗ ಕಡಲೆಯಿಲ್ಲ; ಕಡಲೆಯಿದ್ದಾಗ ಹಲ್ಲಿಲ್ಲ ಎಂಬ ಗಾದೆಯಂತೆ. ಮಂಜಣ್ಣ ಊಟಕ್ಕೆ ಹೊರಟ. “ಮಂಜಣ್ಣ ಬೇಗ ಬಾ” ಎಂದೆವು. ನಮ್ಮ ದನಿ ಕನಿಕರಣೀಯವಾಗಿತ್ತು. ಆದರೆ ಒಂದು ವಿಚಾರ ಮಾತ್ರ ನಮಗಾಗಿಗೂ ಬಗೆಹರಿಯಲಿಲ್ಲ. ಯಾವುದೆಂದರೆ : ನಾವಂತೂ ಊಟಕ್ಕೆ ಹೋಗಿದಿದ್ದರೆ ಏಟು ಬೀಳುತ್ತಿತ್ತೆಂದು ಹೆದರಿ ಹೋದೆವು; ಮಂಜಣ್ಣ “ಒಲ್ಲೆ” ಎಂದಿದ್ದರೆ ಅವನನ್ನು ಯಾರು ಹೊಡೆಯುತ್ತಿದ್ದರು? ಕತೆ ಹೇಳಬಹುದಾಗಿತ್ತಲ್ಲಾ? ಎಂಬುದು. ಮಂಜಣ್ಣ ಮುದುಕ, ನಾವು ಹುಡುಗರು ಎಂಬುದು ನಮಗೆ ತಿಳಿದಿರಲಿಲ್ಲ. ಕತೆ ಕೇಳುವುದು ನಮಗೆ ಸಂತೋಷಕರವಾಗಿದ್ದರೂ ಹೇಳುವ ಅವನಿಗೆ ಸ್ವಲ್ಪವೂ ಹಾಗಿರಲಿಲ್ಲ ಎಂಬುದು ನಮಗೆ ಗೊತ್ತೇ ಇರಲಿಲ್ಲ. ಅವನು ಕೆಲಸ ಮಾಡಿ ದಣಿದು ಹಸಿದು ಬಂದ ಬಡವನೆಂಬುದೂ ಮರೆತೇ ಹೋಗಿತ್ತು.
ಮಂಜಣ್ಣ ಊಟಮಾಡಿಕೊಂಡು ಬಂದ. ಎಲೆಯಡಕೆಯ ಚೀಲವನ್ನು ಬಿಚ್ಚಿ ಚೆನ್ನಾಗಿ ಧೋರಣೆಯಿಂದ ಸಾವಕಾಶವಾಗಿ ಎಲೆ ಹಾಕಿಕೊಂಡ. ನಾವು ಮಾತ್ರ ಮನದಲ್ಲಿ “ಇವನೇಕೆ ಇಷ್ಟು ತಡಮಾಡುವನು? ನಮ್ಮಂತ ಚುರುಕಾಗಿಲ್ಲವಲ್ಲಾ” ಎಂದುಕೊಳ್ಳುತ್ತಿದ್ದೆವು. ಆಹಾ! ಮುದಿತನ ನಮ್ಮನ್ನು ಕೂಡ ಅದೇ ಗತಿಗೆ ತಂದಿಡುವುದೆಂಬುದು ನಮಗೆ ತಿಳಿಯದೆ ಇದ್ದುದು ನಮ್ಮ ಸುಕೃತಕ್ಕೆಂದೇ ಹೇಳಬೇಕು.
ಅಂತೂ ಕತೆ ಕಡೆಗೆ ಪ್ರಾರಂಭವಾಯಿತು. ಮುಂಗಾರುಮಳೆ ಮಲೆನಾಡಿನ ದಟ್ಟವಾದ ಅರಣ್ಯದಿಂದಾವೃತವಾದ ಗಿರಿಗಳ ಮೇಲೆ ಬಿಡುವಿಲ್ಲದೆ ನಿರಂತರವಾಗಿ ಜಿರ್ರೆಂದು ಸುರಿಯುತ್ತಲೇ ಇತ್ತು. ಮನೆಯ ಮುಂದುಗಡೆ ಇರುವ ತೋಟದಲ್ಲಿ ಬಾಳೆಯ ಎಲೆಯ ಮೇಲೆ ಹನಿಗಳು ಬಿದ್ದು ಪಟಪಟವೆಂಬ ಮ್ಲಾನರವವನ್ನುಂಟು ಮಾಡುತ್ತಿದ್ದುವು. ನಿಶೆ ಭೀಕರವಾಗಿ ಕೈವಲ್ಯಶೂನ್ಯತೆಯ ಗಭೀರತೆಯನ್ನು ಮನಸ್ಸಿಗೆ ತರುವಂತಿತ್ತು. ಅಂದು ಆ ರಾತ್ರಿ ಆ ಗಳಿಗೆಯಲ್ಲಿ, ಸರ್ವ ಸೃಷ್ಟಿಯೂ ಉತ್ಪತ್ತಿಯಾದುದು – ನಾವು ಕತೆ ಕೇಳಲೆಂದು, ಮಂಜಣ್ಣ ಕತೆ ಹೇಳಲೆಂದು, ನಮ್ಮ ಮನಸ್ಸಿಗೆ ತೋರಿತು. ನಮ್ಮ ಹೊರಗಡೆ ಲೋಕವಿದೆ ಎಂಬುದನ್ನು ಮರೆತಿದ್ದೆವು. ಜಗತ್ತಿನಲ್ಲಿ ನಮ್ಮದಲ್ಲದ ಇತರ ಮಹಾ ಕಾರ್ಯಗಳು ನಡೆಯುತ್ತಿವೆ ಎಂಬುದನ್ನೂ ಮರೆತಿದ್ದೆವು, ಆಹ! ಅದು ಎಂತಹ ದಿವ್ಯವಿಸ್ಮೃತಿ! ಮೋಕ್ಷ ಎಂದರೆ ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಭಾವನೆ ಉಂಟಾಗಬಹುದು. ನನ್ನ ಆ ಮುದ್ದು ಮೋಕ್ಷದ ದರ್ಶನಚಿತ್ರ ಎಂದರೆ ಇದು: ಬ್ರಹ್ಮಾಂಡ! ಮನಸ್ಸು ಲಯವಾದ ಮಸಗುಬ್ರಹ್ಮಾಂಡ! ಅದರ ಸ್ವಪ್ನ ಗಭೀರವಾದ ಕೇಂದ್ರ ಸ್ಥಾನ! ರವಿಯಲ್ಲ; ಶಶಿಯಿಲ್ಲ; ತಾರಕೆಗಳಿಲ್ಲ! ನೀಲ ಮೇಘಾಂಧಕಾರ! ಮಳೆ ನಿರಂತರವಾಗಿ ಸದಾ ಸುರಿಯುತ್ತಿದೆ. ಅದೊಂದು ಮಹಾ ಏಕಾಂತ! ಅಲ್ಲಿ, ಆ ರಹಸ್ಯವಾದ ಬ್ರಹ್ಮಕೇಂದ್ರದಲ್ಲಿ, ಒಂದು ಮುರ ಬೇಯಿಸುವ ಒಲೆ! ಅದರ‍್ಲಿ ಸರ್ವದಾ ಝಗಿಸುವ ಬೆಂಕಿ! ಅದರ ಬಳಿ ನಾವು – ನಾನು, ಕಿಟ್ಟು, ಮಂಜಣ್ಣ, ವಾಸು, ಸೀತೆ ಇಷ್ಟೇ ಜನರು ಚಳಿ ಕಾಯಿಸುತ್ತಾ ಕುಳಿತಿರುವೆವು. ವೃದ್ಧಮೂರ್ತಿ ಮುಸುಕಾದ ಆ ಬೆಂಕಿಯ ಬೆಳಕಿನಲ್ಲಿ ಕತೆ ಹೇಳುತ್ತಿರುವನು – ಎಂದಿಗೂ ಮುಗಿಯದ ಕತೆ! ನಾವು ಏಕಾಗ್ರಚಿತ್ತರಾಗಿ ಆತನ ಮುಖದ ಕಡೆ ನೋಡುತ್ತಾ ಕತೆ ಕೇಳುತ್ತಲೇ ಇರುವೆವು – ಎಂದಿಗೂ ಮುಗಿಯದ ಕತೆ!
ಮುಂದಿನ ಭಾಗ : ರಾಮರಾವಣರ ಯುದ್ಧ
***********
makkalige manjannanalli gurubhava untagalu karnwenu?
ಪ್ರತ್ಯುತ್ತರಅಳಿಸಿ