ಪುಟಗಳು

20 ಅಕ್ಟೋಬರ್ 2015

೦೯.ಕಲ್ಯಾಣಕೀರ್ತಿ

ಕಲ್ಯಾಣಕೀರ್ತಿ
ಈತನ ಕಾಲ: ಸು.೧೪೩೯, ಈತ ಜೈನಕವಿ.
ಈತನ ಕೃತಿಗಳು:
ಜ್ಞಾನಚಂದ್ರಾಭ್ಯುದಯ, ನಾಗಕುಮಾರಚರಿತೆ, ಕಾಮನಕಥೆ, ಚಿನ್ಮಯಚಿಂತಾಮಣಿ, ಅನುಪ್ರೇಕ್ಷೆ, ಜಿನಸ್ತುತಿ ತತ್ತ್ವಭೇದಾಷ್ಟಕ ಎಂಬ ಕನ್ನಡ ಕೃತಿಗಳು ಹಾಗೂ
ಜಿನಯಜ್ಞಫಲೋದಯ, ಯಶೋಧರಚರಿತೆ ಎಂಬ ಸಂಸ್ಕೃತ ಕೃತಿಗಳು.
ಸಿದ್ಧರಾಶಿ ಎಂಬ ಗ್ರಂಥವನ್ನೂ ಈತ ಬರೆದಿರುವಂತೆ ತೋರುತ್ತದೆ ಎಂದು ಕವಿಚರಿತೆಕಾರರು ಹೇಳಿದ್ದಾರೆ. ಆದರೆ ಇದು ಬೇರೊಂದು ಗ್ರಂಥವಾಗಿರದೆ ಮೇಲೆ ಹೇಳಿದ ಅನುಪ್ರೇಕ್ಷೆಗೆ ಇರುವ ಮತ್ತೊಂದು ಹೆಸರಾಗಿದೆ.
ಈತ ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದ ಮಠಾಧೀಶರಾಗಿದ್ದ ಲಲಿತಕೀರ್ತಿಗಳ ಶಿಷ್ಯನೆಂದು ತಿಳಿದುಬರುತ್ತದೆ.

ಜ್ಞಾನಚಂದ್ರಾಭ್ಯುದಯಕ್ಕೆ ಜ್ಞಾನಚಂದ್ರೋದಯ ಎಂಬ ಹೆಸರೂ ಕಂಡುಬರುತ್ತದೆ. ಇದನ್ನು ಶಕನೃಪದ ರತಿಲೋಕ (೧೩೬೨) ಸಂಖ್ಯೆಯಿಂ ವಿಧಿತ ಸಿದ್ಧಾರ್ಥಿ ವರ್ಷದಲ್ಲಿ ಎಂದರೆ ೧೪೩೯ರಲ್ಲಿ ಬರೆದಂತೆ ತಿಳಿಯುತ್ತದೆ. ವಿವಿಧ ಷಟ್ಪದಿಗಳನ್ನೊಳಗೊಂಡ, ೯೦೮ ಪದ್ಯಗಳನ್ನುಳ್ಳ ಈ ಕಾವ್ಯ ಜ್ಞಾನಚಂದ್ರನೆಂಬ ರಾಜ ತಪಸ್ಸು ಮಾಡಿ ಮುಕ್ತಿಯನ್ನು ಪಡೆದ ಕಥೆಯಿಂದ ಕೂಡಿದೆ.

ನಾಗಕುಮಾರ ಚರಿತೆ ಮುಖ್ಯವಾಗಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ (೧೪೪೨), ಜೊತೆಗೆ ಕಂದವೃತ್ತಗಳೂ ಬಳಕೆಯಾಗಿವೆ. ಇದಕ್ಕೆ ಫಣಿಕುಮಾರಚರಿತೆಯೆಂದೂ ಹೆಸರಿದೆ. ಇದು ೫ ಸಂಧಿಗಳನ್ನೂ ೫ ಪದ್ಯಗಳನ್ನೂ ಒಳಗೊಂಡಿದೆ.

ಕಾಮನಕಥೆ ಸಾಂಗತ್ಯದಲ್ಲಿ ರಚಿತವಾಗಿದೆ. ಇದರಲ್ಲಿ ೪ ಸಂಧಿಗಳೂ ೩೩೧ ಪದ್ಯಗಳೂ ಇವೆ. ಅಲ್ಲಲ್ಲಿ ಕಂದ, ಷಟ್ಪದಿ, ವಚನಗಳೂ ಬರುವುದುಂಟು. ಇದನ್ನು ಲಲಿತಕೀರ್ತಿಯ ಶಿಷ್ಯನಾದ ತುಳುವ ದೇಶದ ದೊರೆ ಭೈರವಸುತ ಪಾಂಡರಾಯನ ಇಷ್ಟಾನುಸಾರವಾಗಿ ಬರೆದಂತೆ ಕವಿ ಹೇಳಿಕೊಂಡಿದ್ದಾನೆ. ಕೃತಿ ಜೈನಮತಾನುಸಾರವಾಗಿ ಮನ್ಮಥಕಥಾ ನಿರೂಪಣೆಯನ್ನೊಳಗೊಂಡಿದೆ.

ಚಿನ್ಮಯಚಿಂತಾಮಣಿ ಮಾತ್ರಾವಿನ್ಯಾಸದ ಛಂದಸ್ಸಿನಿಂದ ಕೂಡಿದ್ದು ಒಟ್ಟು ೧೦೫ ಪದ್ಯಗಳನ್ನೊಳಗೊಂಡಿದೆ. ಇದರಲ್ಲಿ ತತ್ತ್ವನಿರೂಪಣೆ ಅಡಕವಾಗಿದೆ. ಗ್ರಂಥದ ಕೊನೆಯಲ್ಲಿ ಪ್ರಣಿಹಿತ ಚಿನ್ಮಯಚಿಂತಾಮಣಿಯಿದು ಕಲ್ಯಾಣಕೀರ್ತಿ ಸೌಖ್ಯಾಸ್ಪದಮಂ ಮಣಿಯದೆ ಜಯಿಸಲಿ ಜಗದೊಳು ಗುಣಿಜನಗಳಿಗಿತ್ತು ಚಾರುಮುಕ್ತಿ ಶ್ರೀಯಂ ಎಂಬ ಒಂದು ಕಂದಪದ್ಯವಿದೆ.

ಅನುಪ್ರೇಕ್ಷೆ ಅಥವಾ ಸಿದ್ಧರಾಶಿಯಲ್ಲಿ ೭೪ ಪದ್ಯಗಳಿವೆ. ಇದರಲ್ಲಿ ಕೊಂಡಕುಂದಾಚಾರ್ಯರ ಗಾಹೆಯ ಅರ್ಥವನ್ನು ವರ್ಣಿಸುವುದಾಗಿಯೂ ಪನ್ನೆರಡುನುಪ್ರೇಕ್ಷೆ ಚೆನ್ನಕನ್ನಡದಿಂದವೆ ಬಾಲಕರಿಗೆ ತಿಳಿಯುವಂತೆ ಹೇಳುವುದಾಗಿಯೂ ಕವಿ ಹೇಳಿಕೊಂಡಿದ್ದಾನೆ. ಜಿನಸ್ತುತಿ ೨೭ ಕಂದ ಪದ್ಯಗಳನ್ನುಳ್ಳ ಚಿಕ್ಕ ಕೃತಿ. ಜಿನ ಮಹಿಮೆಯ ವರ್ಣನೆಯಿಂದ ಕೂಡಿದೆ. ತತ್ತ್ವಭೇದಾಷ್ಮಕ ೯ ಮಲ್ಲಿಕಾಮಾಲಾವೃತ್ತಗಳಲ್ಲಿ ಜೈನತತ್ತ್ವವನ್ನು ನಿರೂಪಿಸುವ ಒಂದು ಅಷ್ಟಕ ಗ್ರಂಥ.

************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ