ಪುಟಗಳು

05 ಅಕ್ಟೋಬರ್ 2015

೨) ಜನಪದ ನುಡಿಗಟ್ಟುಗಳ ಕೋಶ: ಬಯಲನು ತುಂಬುವ ಆಲಯದ ಬೆಳಕಿನ ಬೀಜಗಳು

        ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.
       ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.
ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ -ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವು ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ಪ್ರೊ. ಸುಧಾಕರ ಅವರ ಜನಪದ ನುಡಿಗಟ್ಟುಗಳ ಕೋಶವು ಅಪಾರ ಅನುಭವ, ಕ್ಷೇತ್ರಕಾರ್ಯ ಮತ್ತು ಸಂಸ್ಕೃತಿಯ ಒಳಹೊಗುವಿಕೆಯ ಮೂಲಕ ರೂಪಿತವಾದ ಒಂದು ಮಹತ್ವದ ಕೋಶ. ಕನ್ನಡ ಭಾಷೆಯ ಸೊಗಡನ್ನು ತನ್ನ ಬಸಿರಲ್ಲಿ ಹೊತ್ತುಕೊಂಡ ಇಂತಹ ನುಡಿಗಟ್ಟುಗಳು ಇಂದು ಬಹುತೇಕ ಕಣ್ಮರೆಯಾಗಿವೆ. ನಮ್ಮ ಆಧುನಿಕ ಕನ್ನಡ ಹೆಚ್ಚೆಚ್ಚು ಬರಡಾಗುತ್ತಾ ಇಂಗ್ಲಿಷ್ ನುಡಿಗಟ್ಟುಗಳ ಅನುಕರಣೆಯಾಗುತ್ತಾ ತನ್ನ ಜೀವಧಾತುವನ್ನು ಕಳೆದುಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಸುಧಾಕರ ಅವರ ಈ ಬೃಹತ್‌ಕೋಶ ಸಂಸ್ಕೃತಿಯ ಗಣಿಯಾಗಿ ಬಹಳ ಮಹತ್ವಪೂರ್ಣವಾಗಿದೆ. ಭಾವ ವ್ಯಂಜಕತೆಯುಳ್ಳ ಕನ್ನಡ ಭಾಷೆಯ ಅರ್ಥದ ಬಹುನೆಲೆಗಳನ್ನು, ಧ್ವನಿ ಪರಂಪರೆಯ ಅನಂತ ಸಾಧ್ಯತೆಗಳನ್ನು ಇಂತಹ ನುಡಿಗಟ್ಟುಗಳಲ್ಲಿ ಕಾಣಬಹುದು. ಇಲ್ಲಿ ಶೀಲ, ಅಶ್ಲೀಲಗಳ ಭೇದವಿಲ್ಲ, ಜಾತಿ ಪಂಥಗಳ ವ್ಯತ್ಯಾಸವಿಲ್ಲ. ಕೆಲವೇ ಪದಗಳಲ್ಲಿ ಅನೇಕ ಅರ್ಥಗಳನ್ನು ತುಂಬುವ ಮತ್ತು ಭಾಷೆಗೆ ಮಾಂತ್ರಿಕ ಶಕ್ತಿಯನ್ನು ಕೊಡುವ ಅಭಿವ್ಯಕ್ತಿಯ ಈ ಮಾದರಿಗಳು ಆಧುನಿಕ ಕನ್ನಡಕ್ಕೆ ಹೊಸ ರಕ್ತಮಾಂಸಗಳನ್ನು ತುಂಬಬಲ್ಲವು. ಆಧುನಿಕ ಕನ್ನಡವು ಕನ್ನಡದ್ದೇ ಆದ ಪದಗಳನ್ನು ಬಳಸುವ ಮೂಲಕವೇ ನಮ್ಮ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಹಂಬಲಕ್ಕೆ ಪೂರಕವಾಗಿ ಇಲ್ಲಿಯ ನುಡಿಗಟ್ಟುಗಳನ್ನು ಮತ್ತೆ ಮತ್ತೆ ಬಳಸುವ ಅಗತ್ಯವಿದೆ. ಅತ್ಯಧಿಕ ಪ್ರಮಾಣದಲ್ಲಿ ಅರ್ಥದ ಸಾಧ್ಯತೆಗಳನ್ನು ಉಳ್ಳಂತಹ ಭಾಷೆಯೇ ಕಾವ್ಯೆ ಎನ್ನುವ ಮಾತಿಗೆ ಜೀವಂತ ಉದಾಹರಣೆಗಳು ಇಲ್ಲಿ ದೊರೆಯುತ್ತವೆ. ಇಲ್ಲಿ ರೂಪಕ, ಉಪಮೆ, ಸಂಕೇತ, ಪ್ರತಿಮೆ ಇವೆಲ್ಲವೂ ಭಾಷೆಯ ಅವಿನಾಭಾವ ಸಂಬಂಧವನ್ನು ಹೊಂದಿವೆ.
ಇಂತಹ ಜನಸಂಸ್ಕೃತಿಯ ಬೇರುಗಳನ್ನು ಹುಡುಕಿ ತೆಗೆದು ಕೋಶವೊಂದನ್ನು ಕಟ್ಟುವ ಸಾಹಸವನ್ನು ಸಾಹಿತ್ಯ ಮತ್ತು ಜಾನಪದಗಳೆರಡರಲ್ಲೂ ಸಮಾನ ಆಸಕ್ತಿ ಮತ್ತು ಸಾಧನೆ ಮಾಡಿರುವ ಪ್ರೊ.ಸುಧಾಕರ ಅವರು ಮಾಡಿದ್ದಾರೆ. ಹೊಸಗನ್ನಡದ ಉತ್ತಮ ಸಣ್ಣಕತೆಗಾರರಾಗಿ ಗ್ರಾಮೀಣ ಬದುಕಿನ ಎಲ್ಲ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಪ್ರೊ.ಸುಧಾಕರರು ರಚಿಸಿಕೊಟ್ಟಿರುವ ಈ ಕೋಶವು ಕನ್ನಡ ಸಂಸ್ಕೃತಿಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ. ದೀರ್ಘಕಾಲದ ಪರಿಶ್ರಮ, ಅಧ್ಯಯನ ಮತ್ತು ಅನುಭವಗಳ ಮೂಲಕ ಇದನ್ನು ಸಿದ್ಧಮಾಡಿಕೊಟ್ಟ ಪ್ರೊ.ಸುಧಾಕರ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಸಹಾಯಕ ನಿರ್ದೇಶಕರಾದ ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೆ ಅಭಿನಂದನೆಗಳು.
ಬಿ.ಎ.ವಿವೇಕ ರೈ
ಕುಲಪತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ