ಪುಟಗಳು

02 ಅಕ್ಟೋಬರ್ 2015

ಜೇಡರ ದಾಸಿಮಯ್ಯ

ಜೇಡರ ದಾಸಿಮಯ್ಯ 
 

     ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂಬ ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆಯಾದರೂ ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯವಸ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವ ಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆ/ಸುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ. ಬಸವಾದಿ ವಚನಕಾರರರು ಈತನನ್ನು ಆದ್ಯವಚನಕಾರ ಎಂದು ತಮ್ಮ ವಚನಗಳಲ್ಲಿ ಉಲ್ಲೇಖಿಸಿದ್ದಾರೆ.
    ಸುರಪುರ ತಾಲೂಕಿನ ಮುದನೂರಿನವನಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ. ‘ರಾಮನಾಥ’ ಎಂಬ ಅಂಕಿತದಲ್ಲಿ ಬರೆಯಲಾದ ಈತನ ಸುಮಾರು ೧೫೦ ವಚನಗಳು ಈಚೆಗೆ ದೊರೆತಿವೆಯೆನ್ನಲಾಗಿದೆ. 
  ಮೊಲೆ ಮುಡಿಬಂದರೆಹೆಣ್ಣೆಂಬರು
  ಗಡ್ಡ ಮೀಸೆ ಬಂದರೆ ಗಂಡೆಂಬರು
  ನಡುವೆ ಸುಳಿಯುವಾತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ 
ಎಂದು ಸಾರುವಲ್ಲಿ ತೋರಿದ ಜನಪರ ಸಮಾನತೆಯ ಕಾಳಜಿ ಇಂದಿಗೂ ಆನ್ವಯಿಕ. 
ಶಿವ ಜಗತ್ತನ್ನೇ ವ್ಯಾಪಿಸಿಕೊಂಡಂತೆ, ಜಗತ್ತೇ ಶಿವನ ರೂಪ ಎಂಬ ನಿಲುವಿನೊಂದಿಗೆ; 
  ಇಳೆ ನಿಮ್ಮ ದಾನ  ಬೆಳೆ ನಿಮ್ಮ ದಾನ
  ಸುಳಿದು ಸೂಸುವ ಗಾಳಿ ನಿಮ್ಮ ದಾನ
  ನಿಮ್ಮ ದಾನವನುಂಡು ಅನ್ಯರ ಹೊಗಳುವ 
  ಕುನ್ನಿಗಳನೇನೆಂಬೆ ರಾಮನಾಥ
ಎಂದೆನ್ನುವ ದಾಸಿಮಯ್ಯನಲ್ಲಿ ಲೋಕವನ್ನು ನೋಡುವ ಕ್ರಮ ಹೊಸತನದಿಂದ ಕೂಡಿದೆ.
 
  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ