ಪುಟಗಳು

02 ಅಕ್ಟೋಬರ್ 2015

ದುರ್ಗಸಿಂಹ

ದುರ್ಗಸಿಂಹ
ಕವಿ ಈಶ್ವರಾರ್ಯ ಮತ್ತು ರೇವಾಂಬಿಕೆ ದಂಪತಿಗಳ ಮಗ. ಇವನು ಜಯಸಿಂಹ ಜಗದೇಕಮಲ್ಲನ ಅಳ್ವಿಕೆಯಲ್ಲಿ ಕಿಸುಕಾಡನಾಡಿನ ಸೈಯಡಿ ಎಂಬ ಅಗ್ರಹಾರದಲ್ಲಿ ವಾಸವಾಗಿದ್ದನು. ತಕ್ಕಮಟ್ಟಿಗೆ ಶ್ರೀಮಂತನಾಗಿದ್ದ ಕವಿಯು ತನ್ನ ಹುಟ್ಟೂರಿನಲ್ಲಿ ಹರಿಹರ ದೇವಾಲಯವನ್ನು ಕಟ್ಟಿಸಿದ. ಇವನು ಗೌತಮಗೋತ್ರದ ಕಮ್ಮೆ ಕುಲದ ಬ್ರಾಹ್ಮಣ. ಮಹಾಯೋಗಿಯಾಗಿದ್ದ ಶಂಕರಭಟ್ಟ ಎಂಬುವನು ಈತನ ಗುರು. ಇವನು ಅನೇಕ ಸಂಸ್ಕೃತ ಕವಿಗಳನ್ನು ಹೊಗಳಿದ್ದಲ್ಲದೆ ಇವನಿಗಿಂತ ಮುಂಚಿನ ಹಲವಾರು ಕನ್ನಡ ಕವಿಗಳಾದ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪೊನ್ನ, ಪಂಪ, ಗಜಾಂಕುಶರನ್ನು ತನ್ನ ಕೃತಿಗಳಲ್ಲಿ ಹೆಸರಿಸಿದ್ದಾನೆ.ಇದರಿಂದ ಕವಿಗಳ ಕಾಲನಿರ್ಣಯಕ್ಕೆ ಸಹಾಯಕವಾಗಿದೆ.
 
ಈತನ ಸಾಹಿತ್ಯಕೃತಿಗಳು :  
  • ದುರ್ಗಸಿಂಹ ಕರ್ಣಾಟಕ ಪಂಚತಂತ್ರ ಕಾವ್ಯವು ಇಂದು ಪ್ರಸಿದ್ಧವಾಗಿರುವ ವಿಷ್ಣುಶರ್ಮನ ಪಂಚತಂತ್ರದ ಅನುವಾದವಲ್ಲ.
  • ಗುಣಾಢ್ಯನು ಪೈಶಾಚಿಭಾಷೆಯಲ್ಲಿ ಬರೆದ ಬೃಹತ್ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ವಸುಭಾಗಭಟ್ಟನು ರಚಿಸಿದ ಪಂಚತಂತ್ರ ಎಂಬ ಸಂಸ್ಕೃತ ಕೃತಿಯೇ ನನ್ನ ಕಾವ್ಯಕ್ಕೆ ಆಧಾರವೆಂದು ದುರ್ಗಸಿಂಹನು ಹೇಳಿದ್ದಾನೆ.
  • ಪಂಚತಂತ್ರಗಳಾದ ಭೇದ, ಪರೀಕ್ಷಾ, ವಿಶ್ವಾಸ, ವಂಚನೆ ಮತ್ತು ಮಿತ್ರಕಾರ್ಯ ಇವುಗಳ ಮೇಲೆ ಕಥೆ, ಉಪಕಥೆಗಳನ್ನು ಹೆಣೆದು ರಚಿಸಿದ ಕಾಲ್ಪನಿಕ ಕೃತಿ.
  • ದುರ್ಗಸಿಂಹನು ಮತಪ್ರಚಾರಕ್ಕಾಗಿ ಕೃತಿ ರಚನೆಗೆ ತೊಡಗಿದವನಲ್ಲ. ಆದರೂ ಪಂಚತಂತ್ರದಲ್ಲಿ ಕೊಂಚ ಜೈನ ಧರ್ಮದ ಆವರಣದಲ್ಲಿ ಮೂಡಿ ಬಂದಿದೆ.
  • ಚಂಪೂ ಸಂಪ್ರದಾಯ ಶೈಲಿಯಲ್ಲಿ ಬರೆದಿದ್ದರೂ ಸಂಸ್ಕೃತ ಶಬ್ದಗಳನ್ನು ಸೂಕ್ತವಾಗಿ ಬಳಸಲಾಗಿದೆ. ಜೊತೆಗೆ ಕನ್ನಡದ ಗಾದೆಗಳನ್ನು ಬಹಳ ಹಿತವಾಗಿ ಬಳಸಿಕೊಂಡು ಕನ್ನಡದ ಗದ್ಯದ ಬೆಳವಣಿಗೆಗೆ ಸಹಾಯ ಮಾಡಿದ್ದಾನೆ.
  • ಪಂಚತಂತ್ರದಲ್ಲಿ ಪ್ರಾಣಿಪಕ್ಷಿ, ಜಡವಸ್ತುಗಳು ಪ್ರಧಾನ ಪಾತ್ರಗಳಾಗಿ ಮಾನವರ ರೀತಿಯಲ್ಲಿ ಮಾತನಾಡುವುದನ್ನು ಕಾಣಬಹುದು.ಇದರಲ್ಲಿ ಚಿತ್ರಿತವಾದ ಪಾತ್ರಗಳಾದ ಪಿಂಗಳಿಕ ಎಂಬ ಸಿಂಹ, ಸಂಜೀವಕ ಎಂಬ ಎತ್ತು, ಕರಟಕ ದಮನಕರೆಂಬ ನರಿಗಳು, ಹಿರಣ್ಯರೋಮ ಎಂಬ ಇಲಿ ..ಮುಂತಾದವುಗಳು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ.
ಹೆಚ್ಚಿನ ವಿವರಗಳು:-
ದುರ್ಗಸಿಂಹನು ತನ್ನವಿಚಾರವನ್ನು ತನ್ನ ಕೃತಿಯಲ್ಲಿ ಕನ್ನಡದ ಆದಿ ಕವಿ ಪಂಪನ ಹಾಗೆ ವಿವರವಾಗಿ ನಿವೇದಿಸಿಕೊಂಡಿರುವುದರಿಂದ ಕವಿಚರಿತೆಯನ್ನು ತಿಳಿದುಕೊಳ್ಳಲು ಕಷ್ಟವಾಗುವುದಿಲ್ಲ. ಅವನು ತನ್ನ ಊರು  ಕರ್ನಾಟಕದ ಸಯ್ಯಡಿಯ ಅಗ್ರಹಾರವೆಂದು ಹೇಳಿದ್ದಾನೆ. ‘ಛಂದೋಂಬು ಯನ್ನು ಬರೆದ ನಾಗವರ್ಮನ ಊರು ಅದೇ ಆಗಿದೆ. ಅದು ಕಿಸುಕಾಡುನಾಡಿನಲ್ಲಿದೆ ಎಂದು ಅವನು ಹೇಳಿದ್ದಾನೆ. ಆ ಸಯ್ಯಡಿಯಲ್ಲಿ ತನ್ನ ಚಕ್ರವರ್ತಿಯ ಆಜ್ಞೆಯಂತೆ ಹರಿಹರಭವನಗಳನ್ನು ದುರ್ಗಸಿಂಹನು ಕಟ್ಟಿಸಿದನಂತೆ, ಸಯ್ಯಡಿ ಇಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿದೆ.
         
ದುರ್ಗಸಿಂಹನು ಪದ್ಯಗಳು ಸೂಕ್ತಿ ಸುಧಾರ್ಣವದಲ್ಲಿ ದೊರಕುವುದರಿಂದ ದುರ್ಗಸಿಂಹನು ಕ್ರಿ.ಶ. ೧೧೩೯ ರಿಂದ ಕ್ರಿ.ಶ. ೧೧೪೯ರ ವರೆಗೆ ಆಳಿದ ಚಾಲುಕ್ಯ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿಯಾಗಿದ್ದಿರಬೇಕೆಂದೂ ಆದರಿಂದ ಇವನ ಕಾಲವು ಕ್ರಿ.ಶ.ಸು. ೧೧೪೫ ಆಗಿದ್ದಿರಬೇಕೆಂದೂ ಕವಿಚರಿತ್ರೆಯ ಪ್ರಥಮ ಸಂಪುಟದಲ್ಲಿ ಶ್ರೀ ಆರ್. ನರಸಿಂಹಾಚಾರ್ಯರು ನಿರ್ಣಯಿಸಿದ್ದರು. ಈ ಅಭಿಪ್ರಾಯವನ್ನೇ ಶ್ರೀ  ಎಸ್. ಜಿ. ನರಸಿಂಹಾಚಾರ್ಯರ ಆವೃತ್ತಿಯ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀ ರಾಜಪುರೋಹಿತರು ಒಂದನೆಯ ಜಗದೇಕಮಲ್ಲ ಜಯಸಿಂಹನ ಆಳ್ವಿಕೆಯ ಕಾಲದಲ್ಲಿ  ಎಂದರೆ ಕ್ರಿ.ಶ. ೧೦೩೭-೧೦೪೨ರ ಅವಯಲ್ಲಿ ದುರ್ಗಸಿಂಹನು ತನ್ನ ಕೃತಿಯನ್ನು ರಚಿಸಿರಬೇಕು  ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ರಂ. ಶ್ರೀ. ಮುಗಳಿಯವರು ಸು.ಕ್ರಿ.ಶ. ೧೦೩೦  ಎನ್ನುತ್ತಾರೆ. ಕರ್ಣಾಟಕ ಕವಿಚರಿತ್ರೆಯ ೧೯೬೧ರ ಪರಿಶೋತ ಮುದ್ರಣದಲ್ಲಿ ದುರ್ಗಸಿಂಹನ ಕಾಲವನ್ನು ಕ್ರಿ.ಶ. ಸು. ೧೦೨೫  ಎಂದು ಹೇಳಿದೆ.

ಈತನ ಕೃತಿ - ಪಂಚತಂತ್ರ (ಭೇದ, ಪರೀಕ್ಷಾ, ವಿಶ್ವಾಸ, ವಂಚನೆ ಮತ್ತು ಮಿತ್ರಕಾರ್ಯ ಎಂಬ ಐದು ತಂತ್ರಗಳನ್ನು ಆಧರಿಸಿ ರಚಿತವಾದ ಒಂದು ಕಥಾಸಂಕಲನ)

ಪಂಚತಂತ್ರದ  ಆರಾ ಪ್ರತಿಯಲ್ಲಿ ದೊರಕಿದ ಒಂದು ಪದ್ಯ ದುರ್ಗಸಿಂಹನ ಕಾಲ ನಿರ್ಣಯ ಮಾಡಲು ಸಹಕಾರಿಯಾಯಿತು. ಪದ್ಯ ಹಿಗಿದೆ :
ಅತಿ ಸಂಪನ್ನತೆವೆತ್ತ ಸದ್ಗೃಹನಿವಾಸಸ್ಥಾನಮಾದ ಪ್ರಜಾಪತಿ
ಸಂವತ್ಸರ ಚೆತ್ರಮಾಸಸಿತಪಕ್ಷ ದ್ವಾದಶೀ ತಾರಕಾ ಪತಿವಾರಂ
ಬರೆ ಪಂಚತಂತ್ರಮೆಸೆದತ್ತೀ ಧಾತ್ರಿಯೂಳ್ ದುರ್ಗನಿರ್ಮಿತಮುದ್ಯತ್
ಕವಿಶೇಖರ ಪ್ರಮದ ಲೀಲಾಪುಷ್ಥಿತಾಮ್ರದ್ರುಮಂ ||
ವಸುಭಾಗಭಟ್ಟ ಕೃತಿಯಂ
ವಸುಧಾದಿಪ ಹಿತಮನಖಿಲ ವಿಬುಧಸ್ತುತಮಂ
ಪೊಸತಾಗಿರೆ ವಿರಚಿಸುವೆಂ
ವಸುವ್ಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||

ಈ ಪದ್ಯವನ್ನು ಆಧರಿಸಿ ರಾಷ್ಥ್ರಕವಿ ಗೋವಿಂದ ಪೈ ಅವರು ಜಯಸಿಂಹ ಜಗದೇಕಮಲ್ಲನ ಕಾಲ ಕ್ರಿ.ಶ. ೧೦೧೫-೧೦೪೨ ಎಂದು ಅವನಲ್ಲಿಯೇ ದುರ್ಗಸಿಂಹನು ಸಂವಿಗ್ರಹಿಯಾಗಿರಬೇಕೆಂದೂ, ಮೇಲಿನ ಪದ್ಯದಲ್ಲಿ ಹೇಳಿದ ಶಕ ಸಂವತ್ಸರ ೯೫೩ ನೆಯ ಪ್ರಜಾಪತಿ ಸಂವತ್ಸರ ಚೈತ್ರಶುದ್ದ ೧೨ ಸೋಮವಾರವು ಕ್ರಿ.ಶ. ೧೦೩೧ನೆಯ ಮಾರ್ಚ್ ಎಂಟನೆಯ ತಾರೀಕು ಆಗುತ್ತದೆ ಎಂದೂ ನಿರ್ಣಯಿಸಿದ್ದಾರೆ. ಇದನ್ನು ದುರ್ಗಸಿಂಹನ ಕೃತಿ ರಚನೆಯ ಕಾಲ ಎಂದು ಒಪ್ಪಬಹುದು.
ದುರ್ಗಸಿಂಹನು ತನ್ನ ಗ್ರಂಥದ ಆದಿಭಾಗದಲ್ಲಿ ಸುಮಾರು ೬೨ ಪದ್ಯಗಳಲ್ಲಿ ತನ್ನ ವಿಚಾರವನ್ನು ವಿವರವಾಗಿ ತಿಳಿಸಿದ್ದಾನೆ. ಅದು ಹೀಗಿದೆ.

ಕರ್ಣಾಟಕದ ಕಿಸುಕಾಡಿನಲ್ಲಿ ಸಯ್ಯಡಿಯೆಂಬ ಅಗ್ರಹಾರದಲ್ಲಿ ‘ಸಕಲ ಧರ್ಮಕ್ಕೆಲ್ಲಂ ಕಯ್ಕಾಲ್ ಮೂಡಿದಂತೆ,’ದುರ್ಗಸಿಂಹನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ರೇವಕಬ್ಬೆ. ಇವರ ಮಗ ‘ಮನ್ವಾದಿ ಪುರಾಣ ಮುನಿಗಣ ಪ್ರಣುತ ಶ್ರುತಿವಿಹಿತ ವಿಶುದ್ದಮಾರ್ಗನುಂ ನಿತ್ಯಹೋವ್ಮಧಯನಾನೇಕ ಯಾಗಾವಭೃತಸ್ನಾನ ಪವಿತ್ರಗಾತ್ರನುಂ, ಭಗವನ್ನಾರಯಣ ಚರಣಾಂಬುಜ ಸ್ಮರಣ ಪರಿಣತಾಂತ:ಕರಣನುಂ, ತರ್ಕವ್ಯಾಕರಣ ಕಾವ್ಯ ನಾಟಕ ಭರತ ವಾತ್ಸ್ಯಯನಾದ್ಯಶೇಷ ವಿದ್ಯಾಸಮುದ್ರತರಣಗುಣೈಕಪುಣ್ಯನುಂ ಧರಾಮರಾಗ್ರಗಣ್ಯನುಂ, ಅದ ದುರ್ಗಮಯ್ಯನಿದ್ದನು. ಅವನ ಮಗನಾದ ‘ದೇವದ್ವಿಜ ಗುರುಜನಪದಸೇವಾನಿರತ, ನದ ಈಶ್ವರಾರನಿದ್ದನು. ಅವನ ಹೆಂಡತಿ ರೇವಾಂಬಿಕೆ ಇವರಿಬ್ಬರ ಮಗ ಪ್ರಸ್ತುತ ಕವಿಯಾದ ದುರ್ಗಸಿಂಹ. ಈತನು ಬ್ರಾಹಣ. ಕಮ್ಮೆ ಕುಲದವನು ಗೌತಮ ಗೋತ್ರ ಸಂಭೂತನು. ಇವನ ಗುರು ‘ಮಹಾಯೋಗಿ, ಯಾದ ಶಂಕರಭಟ್ಟ. ‘ಸತ್ಯಾಶ್ರಯ ಕುಲತಿಲಕಂ. ಚೋಳ ಕಾಲಾನಲಂ, ಎಂಬ ಬಿರುದುಗಳುಳ್ಳ ಜಗದೇಕಮಲ್ಲ ಜಯಸಿಂಹ ಎಂಬ ರಾಜನಲ್ಲಿ ಶ್ರೀ ಗಂಡಭೂರಿಶ್ರಯನೆಂಬ ಬಿರುದುಳ್ಳ ಸಿಂಹಸನ್ನಾಹನೆಂಬ ದಂಡನಾಯಕನಿದ್ದನು. ಅವನ ಪಾದಕಮಲಭೃಂಗನಾದ ಚಕ್ರವರ್ತಿಯದಂಡಾದೀಶ, ಕೋದಂಡರಾಮಾಪ ಮೊದಲಾದ ಬಿರುದುಳ್ಳ ಕುಮಾರಸ್ವಾಮಿಯು ಕವಿಗೆ  ಜಗದೇಕಮಲ್ಲನಲ್ಲಿ ಸಂವಿಗ್ರಹಿ ಪದವಿಯನ್ನು ಕೊಡಿಸಿದನು. ಇವನು ತನ್ನ ಚಕ್ರವರ್ತಿಯ ಅಜ್ಞೆಯ ಸಯ್ಯಡಿಯಲ್ಲಿ ‘ಹರಿಹರಭವನ, ಗಳನ್ನು ಮಾಡಿಸಿದಂತೆ.

ಈತನು ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸರನ್ನೂ ‘ನಾಭೇಯಂ ಸುರಾಮಾತ್ಯನಿಂದ್ರನದೀನಂದನನುದ್ದವಂ ಮನುವಿಶಾಲಕ್ಷೇಭದಂತಂ ಕುಬೇರನಜಾತಪ್ರಿಯಪುತ್ರ, ಎಂಬ ನೀತಿಶಾಸ್ತ್ರ ಪ್ರವರ್ತಕರನ್ನೂ, ಚಂದ್ರಗುಪ್ತನಿಗೆ ರಾಜ್ಯವನ್ನು ಸಂಪಾದಿಸಿಕೊಟ್ಟ ನೀತಿವಿದನಾದ ವಿಷ್ಣುಗುಪ್ತನನ್ನೂ, ಗುಣಾಡ್ಯ, ವರರುಚಿ, ಕಾಳಿದಾಸ, ಬಾಣ, ಮಯೂರ, ಧನಂಜಯ, ‘ವಾಮನಕುಮಾರನುದ್ಬಟ ಭೀಮಂಭವಭೂತಿ ಭಾರವೀ ಭಟ್ಟಿ ವಚಶ್ರೀಮಾಘ ರಾಜಶೇಖರ ಕಾಮಂದಕರು, ದಂಡಿ ಮೊದಲಾದ ಸಂಸ್ಕೃತ ಕವಿಗಳನ್ನು ಸ್ಮರಿಸಿರುವನು. ಕನ್ನಡದ ಕವಿಗಳಲ್ಲಿ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪಂಪ, ಗಜಾಂಕುಶ, ಕವಿತಾವಿಲಾಸರನ್ನು ಸ್ಮರಿಸಿದ್ದಾನೆ.  ತನ್ನ ಗ್ರಂಥವನ್ನು‘ ಕವಿ ಗಮಕಿ ವಾದಿ ವಾಗ್ಮಿಪ್ರವರ,ನಾದ ಶ್ರೀಮಾದಿರಾಜ ಮುನಿಪುಂಗವನ್ನು ತಿದ್ದಿದನೆಂದು ಹೇಳಿದ್ದಾನೆ.

ದುರ್ಗಸಿಂಹನು ತನ್ನ ಗುಣಾವಳಿಗಳನ್ನು ಹೀಗೆ ಹೇಳಿಕೊಂಡಿದ್ದಾನೆ: ನಿರ್ದುಷ್ಟವಾದ ನಡತೆಗೆ ಉದಾಹರಣನು, ಪ್ರಕಾಶಮಾನವಾದ ಕೀರ್ತಿಗೆ ಆಧಾರ, ಸ್ವಾಮಿ  ಕಾರ‍್ಯಕ್ಕೆ ಹನುಮಂತ, ತನ್ನ ವಂಶಕ್ಕೆ ಅಲಂಕಾರರತ್ನ, ಸೆನ್ಯ ಸಮುದ್ರವನ್ನು ದಾಟುವುದರಲ್ಲಿ ಶೋಭಾಯಮಾನ, ಸಿದ್ದ ಇಷ್ಟ ಶಿಷ್ಟರ ಸಮೂಹಕ್ಕೆ ದೋಣಿ ಎಂದು ದುರ್ಗಸಿಂಹನನ್ನು ವಿದ್ವಜ್ಜನರು ಹೊಗಳುವರು. ವಿನಯಕ್ಕೆ ಆಶ್ರಯನು ಉತ್ತಮನೂ ಸತ್ಕುಲಸಂಭವನ ಸ್ವಾಮಿಕಾರ‍್ಯಧುರೀಣನೂ ಮನುಧರ್ಮದ ಮಾರ್ಗದಲ್ಲಿರುವವನೂ ಎಂದು ದುರ್ಗಸಿಂಹ ಪ್ರಸಿದ್ದನಲ್ಲವೇ, ಜ್ಞಾನಕ್ಕೆ ಆಶ್ರಯಸ್ಥಾನ, ಒಳ್ಳೆಯ ಗುಣಕ್ಕೆ ಕಣಿ, ಶ್ಮಚಿಗೆ ಆಧಾರ, ಜಾಣತನಕ್ಕೆ ದಿಣ್ಣೆ, ಒಳ್ಳೆಯ ಮಾತಿಗೆ ಒಡೆಯ, ಪರಾಕ್ರಮಕ್ಕೆ ಆಶ್ರಯ, ಸಾಮರ್ಥ್ಯಕ್ಕೆ ಆಟದ ಮನೆ, ಧರ್ಮಕ್ಕೆ, ಗುರಿ, ವಿನಯಕ್ಕೆ ತವರು ಮನೆ, ಸತ್ಯಕ್ಕೆ ಆಶ್ರಯಸ್ಥಾನ ಎಂದು ಬುದ್ದಿಗೆ ಮೀರಿ ಪ್ರೀತಿಸಿ ದುರ್ಗಸಿಂಹನನ್ನು ಪ್ರಪಂಚವು ಹೊಗಳುವುದು. ಚಂಚಲಚಿತ್ತರನ್ನು ದುಷ್ಟರನ್ನು, ಪಡೆದ ದೋಷಕ್ಕೆ ಪ್ರಾಯಶ್ಚಿತ್ತವೆಂಬ ಸರ್ವವಿದ್ವಜ್ಜನಆಶ್ರಯನಾದ ದುರ್ಗಸಿಂಹನನ್ನು ವಿ ಪಡೆದನು ವಿನಯ ಸಮುದ್ರ, ಶಿಷ್ಟಕಲ್ಪವೃಕ್ಷ, ಸತ್ಯವ್ರತ, ಬ್ರಾಹ್ಮಣವಂಶವೆಂಬ ಆಕಾಶಕ್ಕೆ ಸೂರ‍್ಯ, ವಾಗ್ವನಿತೆಯ ಮನೋರಮ, ಎಂದೆಷ್ಟೋ ರೀತಿಯಲ್ಲಿ ತನ್ನ ವಂಶದ ಕೀರ್ತಿಯೆಂಬ ದುರ್ಗಸಿಂಹನನ್ನು ಪ್ರಪಂಚ ಬಣ್ಣಿಸುವುದಂತೆ. ಜಗತ್ತಿನಲ್ಲಿ ಸ್ವಾಮಿಹಿತದಲ್ಲಿ ಪ್ರಸಿದ್ದನಾದ ಕರ್ಣನಿಗಿಂತ, ಹನುಮಂತನಿಗಿಂತ ಗರುಡನಿಗಿಂತ ದುರ್ಗಸಿಂಹನು ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐದುಮಡಿ ದೊಡ್ಡವನಂತೆ !

ಪರಮಾತ್ಮನು ಪರಮೇಶ್ವರ, ವಿಷ್ಣುವು ದೆವ, ಮಹಾಯೋಗಿಗಳಾದ ಶಂಕರಭಟ್ಟರು ಗುರುಗಳು, ಚೆನ್ನಾಗಿ ಘೋಷಿಸಿದವನು ಶ್ರೀ ಚೋಳಕಾಳಾನಲ ಎಂಬ ಬಿರುದುಳ್ಳ ರಾಜಶ್ರೇಷ್ಟನೂ, ಚಕ್ರವರ್ತಿತಿಲಕನ್ನೂ ಚೆನ್ನಾಗಿ ಸೊಕ್ಕಿದ ವೆರಿಗಳೆಂಬ ಆನೆಗಳಿಗೆ ಸಿಂಹಸ್ವರೂಪನೂ ಅದ ಜಗದೇಕಮಲ್ಲ ಜಯಸಿಂಹನು ಒಡೆಯನು ಎಂದ ಮೇಲೆ ದುರ್ಗಸಿಂಹನ ದೊಡ್ಡತನವನ್ನು ಏನೆಂದು ವರ್ಣಿಸಲಿ !
******ಕೃಪೆ: ಕಣಜ******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ