ಪುಟಗಳು

10 ಆಗಸ್ಟ್ 2014

ಧರ್ಮಸಮದೃಷ್ಟಿ ಗದ್ಯಪಾಠ-4 10ನೇ ತರಗತಿ ಕನ್ನಡ (Dharmasamadrushti-4 10th kannada lesson)

ಧರ್ಮಸಮದೃಷ್ಟಿ

ಬುಕ್ಕರಾಯನು ವೈಷ್ಣವರ ಕೈಯಲ್ಲಿ ಜೈನರ ಕೈ ಇಟ್ಟು ಧರ್ಮ ಸಮನ್ವಯ ಮಾಡಿದ್ದು
 ಬುಕ್ಕರಾಯನ ಕಾಲದ ಹೊನ್ನು (ಚಿನ್ನದ ನಾಣ್ಯ)


ಧರ್ಮಸಮದೃಷ್ಟಿ- ಬುಕ್ಕರಾಯನ ಶಾಸನ ವಿಮರ್ಶೆ - ಡಾ||ಚಿದಾನಂದ ಮೂರ್ತಿ
click here to Download


        ಬಸದಿಯೊಂದು ಹೂತುಹೋಗಿದ್ದರೆ ಆಶ್ಚರ್ಯವಿಲ್ಲ. ಕಲ್ಯ ಮತ್ತು ಸುತ್ತಮುತ್ತ ಜೈನ ಮಂದಿರಗಳ ದೊಡ್ಡ ಪ್ರಮಾಣದ ವಿನಾಶ ನಡೆಯಿತೆಂಬುದಕ್ಕೆ ಇವು ಪ್ರಬಲ ಸಾಕ್ಷ್ಯಾಧಾರಗಳು.

    ಕಲ್ಯದಲ್ಲಿ ಚಕ್ರತ್ತಾಳ್ವಾರರ ವಿಗ್ರಹವೊಂದಿದ್ದು ಅದು ಈಗ ಮಾಯವಾಗಿದೆ. ಮಾಗಡಿಯಲ್ಲಿ ಶ್ರೀವೈಷ್ಣವರಿಂದ ಆರಾಧನೆಗೊಳ್ಳುತ್ತಿರುವ ರಂಗನಾಥಸ್ವಾಮಿಯ ವಿಗ್ರಹವು ಮೂಲತಃ ಕಲ್ಯದ್ದೆಂದು ಜನ ಹೇಳುತ್ತಾರೆ. ಈಗಲೂ ಮಾಗಡಿಯ ಆ ದೇವರ ರಥೋತ್ಸವದಲ್ಲಿ ದೇವರ ಮೊದಲ ಪ್ರಸಾದವು ಕಲ್ಯದ ಜನರಿಗೆ ಮೀಸಲು. ಇದೆಲ್ಲವೂ ಕಲ್ಯದಲ್ಲಿ ನಡೆದ ಶ್ರೀ ವೈಷ್ಣವ ದೇವಾಲಯದ ನಾಶಕ್ಕೆ ಸಾಕ್ಷ್ಯಾಧಾರ. ಹಳೆಯ ಬೆಳ್ಗೊಳ ಮತ್ತು ಕಲ್ಯ ಎರಡು ಊರುಗಳಲ್ಲಿಯೂ 'ಉಷ್ಟಮರು' ಎಂದು ಕರೆಯುವ ಶ್ರೀ ವೈಷ್ಣವ ಮತದ ಶೂದ್ರ ಅನುಯಾಯಿಗಳಿದ್ದಾರೆ. ಆ ಎರಡು ಊರುಗಳಲ್ಲಿ ಈಗ ಜೈನರು ಇಲ್ಲದಿದ್ದರೂ ಅಲ್ಲಿ ಮೊದಲು ಜೈನರಿದ್ದರೆಂದೂ, 'ಭಕ್ತರ' ಉಪಟಳವನ್ನು ತಾಳಲಾರದೆ ಅವರು ಬೇರೆಡೆಗಳಿಗೆ ವಲಸೆ ಹೋದರೆಂದೂ ಹೇಳಲು ಪ್ರಬಲ ಸೂಚನೆಗಳಿವೆ. ಹಳೆಯ ಬೆಳ್ಗೊಳದ ಜೈನರು ಸಮೀಪದ ಶ್ರವಣಬೆಳ್ಗೊಳಕ್ಕೂ ಕಲ್ಯದ ಜನರು ಸಮೀಪದ ಸಂಕಿಘಟ್ಟಕ್ಕೂ ಹೋಗಿ ನೆಲಸಿರಬೇಕು. ಶ್ರವಣಬೆಳ್ಗೊಳವಂತೂ ಸರಿಯೇ, ಸಂಕಿಘಟ್ಟದಲ್ಲಿ ಈಗಲೂ ಸಾಕಷ್ಟು ಸಂಖ್ಯೆಯ ಜೈನರಿದ್ದು ಅವರು ಅಲ್ಲಿನ ವರ್ಧಮಾನಸ್ವಾಮಿಯನ್ನು ಆರಾಧಿಸುತ್ತಿದ್ದಾರೆ.

       ಜೈನ ವೈಷ್ಣವ ಘರ್ಷಣೆಗಳು ಕಲ್ಯ ಶ್ರವಣಬೆಳ್ಗೊಳಗಳಿಗೆ ಸೀಮಿತವಾಗಿರಲಿಲ್ಲ. ಬುಕ್ಕನ ತೀರ್ಪು ಬರುವ ಮುನ್ನ, ಬಹುಶಃ ಬಂದ ಮೇಲೂ-ಬಹು ವ್ಯಾಪಕವಾಗಿ ಘರ್ಷಣೆಗಳು ನಡೆದಿರುವಂತೆ ತೋರುತ್ತದೆ. ನಾಗಮಂಗಲ ತಾಲೂಕಿನ ಹಟ್ಣದಲ್ಲಿರುವ ವೀರಭದ್ರ ದೇವಾಲಯವು ಮೂಲತಃ ಪಾಶ್ರ್ವನಾಥ ಬಸದಿಯಾಗಿತ್ತು. ಜೈನ ವಿಗ್ರಹವಿದ್ದ ಪೀಠದ ಮೇಲೆ ಈಗ ವೀರಭದ್ರನ ವಿಗ್ರಹವಿದೆ. ಪಿರಿಯಾಪಟ್ಟಣ ತಾಲೂಕಿನ ಹೊನ್ನೂರಿನಲ್ಲಿ ರಂಗಸ್ವಾಮಿ ಗುಡಿಯೆಂದು ಕರೆಯುವ ದೇವಾಲಯದಲ್ಲಿರುವುದು ವಾಸ್ತವವಾಗಿ ಜಿನ ವಿಗ್ರಹ; ಅದಕ್ಕೆ ನಾಮವನ್ನು ಹಚ್ಚಿ ವಿಷ್ಣು ವಿಗ್ರಹವಾಗಿ ಮಾಡಲಾಗಿದೆ. ಮಾಗಡಿ ತಾಲೂಕಿನ ನಿಸಕೂರಿನಲ್ಲಿ ಎಪ್ಪತ್ತೈದು ಬಸದಿಗಳಿದ್ದವೆಂದು ಜನ ಹೇಳುತ್ತಾರೆ; ಈಗ ಅಲ್ಲಿ ಬಸದಿಗಳ ಬದಲು ಕೇವಲ ಬೂದಿ ಗುಂಡಿಗಳಿವೆ. ತಿಪಟೂರಿನ ಸಮೀಪದ ಹಳ್ಳಿಯೊಂದರಲ್ಲಿ ಜಿನ ಬಸದಿಯು ಶಿವದೇವಾಲಯವಾಗಿ ಪರಿವರ್ತಿತವಾಗಿ, ಜಿನ ಬಿಂಬಕ್ಕೆ ಭಸ್ಮ, ಕರಡಿಗೆಗಳನ್ನು ಅಳವಡಿಸಲಾಗಿದೆ. ಈ ಮತ್ತು ಇಂತಹ ಎಲ್ಲಾ ಉದಾಹರಣೆಗಳೂ ಹದಿನಾಲ್ಕನೇ ಶತಮಾನದ ಘರ್ಷಣೆಗಳ ಫಲವೇ ಎಂದು ಖಚಿತವಾಗಿ ಹೇಳಲಾಗದಿದ್ದರೂ ಅವುಗಳಲ್ಲಿ ಕೆಲವಾದರೂ ಆ ಘರ್ಷಣೆಗಳ ಫಲವಿರಬಹುದು ಎಂದು ಅನುಮಾನಿಸಲು ಸಾಧ್ಯ.

       ಹದಿನಾಲ್ಕನೇ ಶತಮಾನದಲ್ಲಿ ಕಲ್ಯ-ಶ್ರವಣಬೆಳ್ಗೊಳ ಪ್ರದೇಶದ ಜೈನರು ಅನುಭವಿಸಿದ ಯಾತನೆ, ಭೀತಿಯ ನೆರಳಲ್ಲಿ ಅವರು ಬದುಕಬೇಕಾಗಿ ಬಂದ ಬವಣೆ ಇವುಗಳನ್ನು ಅರ್ಥ ಮಾಡಿಕೊಂಡ ಬುಕ್ಕ ಅತ್ಯಂತ ನೋವಿನಿಂದ, ಅಷ್ಟೇ ದೃಢವಾಗಿ, ಆದರೆ ಎರಡೂ ಪಂಗಡಗಳ ಮಧ್ಯದ ವಿರಸ ಹೆಚ್ಚಾಗದ ರೀತಿಯಲ್ಲಿ, ಆದರೆ ಪ್ರೀತಿಯಿಂದ ತನ್ನ ಹೃದಯಸ್ಪರ್ಶಿ ತೀರ್ಪನ್ನು ಕೊಟ್ಟನು. ಬುಕ್ಕನ ತೀರ್ಪು ಘರ್ಷಣೆಗಳ ಮೊನಚನ್ನು ಮೊಂಡು ಮಾಡಿರಬಹುದು, ಅನಾಹುತಗಳ ಪ್ರಮಾಣವನ್ನು ತಗ್ಗಿಸಿರಬಹುದು; ಆದರೆ ಘರ್ಷಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿತೇ ಎಂಬುದು ಅನುಮಾನಾಸ್ಪದ. ಒಂದು ವ್ಯಾಪಾರ ಕೇಂದ್ರವೂ ಆಗಿದ್ದ ಕಲ್ಯದಲ್ಲಿ ಅವನು ತನ್ನ ಪ್ರತಿನಿಧಿಯಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿದಂತೆ ಕಾಣುತ್ತದೆ. ಆ ಅಧಿಕಾರಿ ಇತರ ಕರ್ತವ್ಯಗಳ ಜೊತೆ ಘರ್ಷಣೆಗಳಾಗದಂತೆ, ಜೈನ ದೇವಾಲಯಗಳಿಗೆ ಹೆಚ್ಚಿನ ಹಾನಿ ಆಗದಂತೆ ನೋಡಿಕೊಳ್ಳುವ ಕರ್ತವ್ಯವನ್ನೂ ನೆರವೇರಿಸಿರಬಹುದು. ಕ್ರಿ.ಶ.1386 ರ ಶಾಸನವೊಂದು ವಿಜಯನಗರದ ಅಧಿಕಾರಿ ಕಲ್ಯದಲ್ಲಿದ್ದು ಕೆಲಸ ಮಾಡುತ್ತಿದ್ದುದನ್ನು ಸೂಚಿಸುತ್ತದೆ.

ಸಮಸ್ಯಾತ್ಮಕ ಪದಗಳು:

         ಶಾಸನದಲ್ಲಿ ಬಳಕೆಯಾಗಿರುವ ಕೆಲವು ಪದಗಳ ಅರ್ಥ ಇನ್ನೂ ಪರಿಹಾರವಾಗಿಲ್ಲ. 'ಮೋಷ್ಟಿಕ' ಎಂದರೇನು ತಿಳಿಯದು. 'ತಿರುವಡಿ'ಯೆಂಬುದು ಭಗವಂತನ ಪಾದಗಳನ್ನು ಪೂಜಿಸುವ ಜನರನ್ನು (ಶ್ರೀಪಾದಂ ತಾಂಗಿಗಳ್) ಸೂಚಿಸಬಹುದು. 'ತಣ್ಣೀರವರ್' ಎಂಬುದು ದೇವರ ತೀರ್ಥವನ್ನು ಮೊದಲು ಸ್ವೀಕರಿಸುವ ತೀರ್ಥಗಾರರ್ ಅಥವಾ ಮುದಲ್ ತೀರ್ಥಗಾರರ್ ಇರಬಹುದು ಅಥವಾ ದೇವರ ಅಭಿಷೇಕಕ್ಕೆ ನೀರು ತರುವ ಸೇವಾಕಾರ್ಯವನ್ನು (ತೀರ್ಥಕೈಂಕರ್ಯಮ್) ಕೈಕೊಂಡವರು ಇರಬಹುದು. 'ತಿರುಪಣಿ'ಯವರು ದೇವಾಲಯದ ಸೇವಕವರ್ಗದವರಿರಬಹುದು. 'ತಿರುಕುಲ' 'ಜಾಂಬವಕುಲ'ದವರು ಹರಿಜನರಲ್ಲಿರುವ ಬಲಗೈ ಎಡಗೈ ಪಂಗಡದವರು. ಒಂದು ನಂಬಿಕೆಯ ಪ್ರಕಾರ ಶ್ರೀರಾಮಪ್ರಿಯ ವಿಗ್ರಹವನ್ನು ತರಲು ದೆಹಲಿಗೆ ಹೋದ ಶ್ರೀರಾಮಾನುಜರಿಗೆ ಸಹಾಯಕರಾಗಿ ಜೊತೆಯಲ್ಲಿದ್ದ ಹರಿಜನರನ್ನು ಅವರು ಪ್ರೀತಿಯಿಂದ 'ತಿರುಕುಲ'ದವರೆಂದು ಕರೆದರು. 'ತಿರುಕುಲ' ಪದದ ಅತ್ಯಂತ ಪ್ರಾಚೀನ ಪ್ರಯೋಗವು ಶ್ರವಣಬೆಳ್ಗೊಳ ಶಾಸನದಲ್ಲಿ ದೊರಕುವುದು ಗಮನಾರ್ಹ (ತಮಿಳು ಕೃತಿಗಳ ಪ್ರಯೋಗಗಳೆಲ್ಲಾ ಈಚಿನವು). 'ಹದಿನೆಂಟು ನಾಡು ಎಂಬುದು ಹಿಂದೂಗಳ ಸಾಂಪ್ರದಾಯಿಕ ಹದಿನೆಂಟು ಜಾತಿಗಳನ್ನು ಹೇಳುತ್ತದೆ. ಶ್ರೀ ವೈಷ್ಣವರನ್ನು 'ಭಕ್ತ'ರೆಂದು ಕರೆದಿರುವುದು ಗಮನಾರ್ಹ. 'ಆಚಾರ್ಯ', 'ಸಮಯಿ', 'ಸಾತ್ವಿಕ' ಪದಗಳಿಗಿರುವ ನಿರ್ದಿಷ್ಟಾರ್ಥಗಳನ್ನು, ವ್ಯತ್ಯಾಸಗಳನ್ನು ಗುರುತಿಸುವುದು ಇನ್ನೂ ಕಷ್ಟವಾಗಿದೆ. 'ನಾಲ್ವತ್ತೆಂಟು ಜನ' ಉಕ್ತಿಯ ಅರ್ಥವೂ ಅಷ್ಟೇ; ಬಹುಶಃ ಅದೊಂದು ಜಾತಿಯ ಅಥವಾ ವೃತ್ತಿಯ ಯಾವುದೋ ಶ್ರೇಣಿಯನ್ನು (guild) ಸೂಚಿಸುವಂತೆ ಕಾಣುತ್ತದೆ.
ಕನ್ನಡ ಎಂ.ಎ (ಅಂತಿಮ)ಕ.ರಾ.ಮು .ವಿ. ಕನ್ನಡ ಶಾಸನ ಅಧ್ಯಯನ ಕೋರ್ಸ್೧೦, ಬ್ಲಾಕ್ ೩೫ ,ಪುಟ ೩೨-೩೩,೨೮-೨೯ ನಲ್ಲಿರು ವಂತೆ ಬರೆಯಲಾಗಿದೆ. 
[ಕೃಪೆ-'ಪ್ರತೀಕ್ಷಾ ಬ್ಲಾಗ್' -ಮಮತಾಭಾಗವತ್]
ಬು ಕ್ಕರಾಯನ ಶಾಸನ ಪಾಠವು ದೇವಚಂದ್ರನ (೧೭೭೦-೧೮೪೧)ರಾಜಾವಳಿ ಕಥಾಸಾರದಲ್ಲಿ (ಕನ್ನಡ ಅಧ್ಯಯನ ಸಂಸ್ಥೆ, ಮೈಸೂ ರು ವಿಶ್ವವಿದ್ಯಾನಿಲಯ,೧೯೮೮,ಪು.೧೯೮-೧೯೯)ಕೂ ಡ ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಬಂದಿದೆ. ಆ ಶಾಸನ ಪಾಠ ಹೀಗಿದೆ....
            ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಪಾಷಂಡ ಸಾಗರ ಮಹಾವಡಬಾ ಮು ಖಾಗ್ನಿ ಶ್ರೀ ರಂಗರಾಜ ಚರಣಾಂಬ ಜ ಮೂ ಲದಾಸಃ ಶ್ರೀ ವಿಷ್ಣು ಲೋಕ ಮಣಿ ಮಂಡಪ ಮಾರ್ಗದಾಯಿ ರಾಮಾನು ಜೋ ವಿಜಯತೇ ಯತಿರಾಜರಾಜ
ಶಕವರುಷ ೧೨೯೦ ನೆಯ ಕೀಲಕ ಸಂವತ್ಸರದ ಭಾದ್ರಪದ ಶು ೧೦ ಬೃಹಸ್ಪತಿವಾರ ಸ್ವಸ್ತಿ ಶ್ರೀಮನ್ಮಹಾಮಂಡಳೇಸ್ವರಂ ಅರಿರಾಯ ವಿಭಾಡ ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರಬು ಕ್ಕರಾಯಂ ಪೃಥ್ವೀರಾಜ್ಯಮಂ ಮಾಡು ತ್ತಾ ಇರು ವಲ್ಲಿ ಜೈನರಿಗೂ ಭಕ್ತರಿಗೂ ಸಂವಾದಮಾದಲ್ಲಿ ಆನೆಗೊಂದಿ ಹೊಸಪಟ್ಟಣ ಪೆನುಗೊಂಡೆ ಕಲ್ಲೇಹದ ಪಟ್ಟಣದೊಳಗಾದ ಸಮಸ್ತ ಭವ್ಯಜನಂಗಳ್ ಬು ಕ್ಕರಾಯಂಗೆ ಭಕ್ತರ್ ಮಾಡುವ ಅನ್ಯಾಯಂಗಳನ್ನು ಬಿನ್ನಹಂ ಮಾಡಲಾಗಿ ಕೋವಿಲ್ ತಿರು ಮಲೆ ಪೆರು ಗೋಯಿಲ್ ತಿರುನಾರಾಯಣಪುರಂ ಮುಖ್ಯವಾದ ಸಕಳಾಚಾರ್ಯರು ಸಕಳ ಸಮಯಿಗಳ್ ಸಕಳ ಸಾತ್ವಿಕರ್ ವೇಷ್ಟಿಕರ್ ತಿರು ಮಣಿ ತಿರು ವಡಿ ತಣ್ಣಿರು ನಾಲ್ವತ್ತೆಂಟು ತಾತಯ್ಯಗಳು ಸಾವಂತ ಬೋವಕ್ಕಳು ತಿರು ಕು ಲ ಜಾಂಬವ ಕು ಲ ದೊಳಾದ ದಿನ್ನೆರಡರೊಳಾದ ಒಳೆಗಾದ ಹದಿನೆಂಟು ನಾಡ ರಾಯನು ಶ್ರೀ ವೈಷ್ಣವರ ಕೈಯೊಳು ಜೈನರ ಕೈವಿಡಿದು ಕೊಟ್ಟು ಈ ಜೈನ ದರ್ಶನಕ್ಕೆ ಪೂ ರ್ವಮರ್ಯಾದೆಯಿಟ್ಟು ಪಂಚಮಹಾವಾದ್ಯಂಗಳುಂ ಕಳಸ ಕನ್ನಡಿ ಶ್ವೇತ ಚ್ಛತ್ರ ಚಾಮರೆಂಗಳ್ ಮೊದಲಾದ ಬಿರು ದು ಗಳು ಸಲು ವವು. ಜೈನ ದರ್ಶನಕ್ಕೆ ಭಕ್ತರ ದೆಸೆಯಿಂದ ಹಾನಿವೃದ್ಧಿಯಾದೊಡಂ ವೈಷ್ಣವ ಹಾನಿವೃದ್ಧಿಯೆಂದು ಪಾಲಿಸಬೇಕು . ಈ ಮರ್ಯಾದೆಯೊಳು ಎಲ್ಲಾ ರಾಜ್ಯಂಗಳೊಳಿಹ ಬಸ್ತಿಗಳಿಗೆ ಶ್ರೀ ವೈಷ್ಣವರು ಶಾಸನಮಂ ಕೊಟ್ಟು ಪಾಲಿಸುವರು . ಚಂದ್ರಾರ್ಕಸ್ಥಾಯಿಯಾಗಿ ವೈಷ್ಣವ ಸಮಯದವರು , ಶ್ರೀಜೈನದರ್ಶನದವರನತ್ಯಾದರದಿಂ ರಕ್ಷಿಸಿಕೊಂಡು ಬಹೆವು . ವೈಷ್ಣವ ರೂ ಜೈನರು ಒಂದು ಭೆದವಾಗಿ ಕಾಣಲಾಗದು . ಶ್ರೀ ತಿರು ಮಲೆಯ ತಾತಯ್ಯಂಗಳು ಸಮಸ್ತ ರಾಜ್ಯದ ಭವ್ಯಜನಂಗಳನಮತಗಳಿಂದ ಬೆಳ್ಗುಳದ ತೀರ್ಥದಲ್ಲಿ ದೇವರ ಅಂಗರಕ್ಷಣೆಗೋಸ್ಕರ ಸಮಸ್ತ ರಾಜ್ಯಗಳೊಳಗು ಳ್ಳಂಥ ವೈಷ್ಣವರು ಜೈನರು ಬಾಗಿಲು ಗಟ್ಟಲೆಯಾಗಿ ಮನೆಗೆ ವರುಷ ಒಂದಕ್ಕೆ ಒಂದು ಹಣವಂ ಕೊಟ್ಟು ಆ ಯೆತ್ತಿ ಬಂದ ಹೊನ್ನಿಂಗೆ ದೇವರ ಅಂಗ ರಕ್ಷಣೆಗೆ ೨೦ ಆಳನ್ನು ಸಂತವಿಟ್ಟು ಮಿಕ್ಕ ಹೊನ್ನಿಂಗೆ ಜೀರ್ಣ ಜಿನ ಚೈತ್ಯಾಲಯೋದ್ಧರಣಕ್ಕೆ ಸೊದೆಯನಿಕ್ಕುವುದು .
ಈ ಮರ್ಯಾದೆಯಲ್ಲು ಚಂದ್ರಾರ್ಕರುಳ್ಳನ್ನಂ ತಪ್ಪಲೀಯದೆ ವರ್ಷ ವರ್ಷಂ ಪ್ರತಿಕೊಟ್ಟು ಕೀರ್ತಿ ಸಂಪಾದನೆಯನ್ನು ಪುಣ್ಯವನ್ನೂ ಉಪಾರ್ಜಿಸಿಕೊಂಬುದು . ಈ ಮಾಡಿದ ಕಟ್ಟಳೆಯನ್ನು ಆವನಾನೊಬ್ಬನು ಮೀರಿದವನು ರಾಜದ್ರೋಹಿ .ಸಂಘಸಮುದಾಯಕ್ಕೆ ದ್ರೋಹಿ,ತಪಸ್ವಿಯಾಗಲಿ ಗ್ರಾಮಣಿಯಾಗಲಿ ಈ ಧರ್ಮಮಂ ಕೆಡಿಸಿದರಾದೊಡೆ ಗಂಗೆಯ ತಡಿಯಲ್ಲಿ ಕಪಿಲೆಯನ್ನು ಬ್ರಾಹ್ಮಣನನ್ನೂ ಕೊಂದ ಪಾಪವನ್ನು ಪಡೆದು ಪೋಪರು . ಸ್ವದತ್ತಾಂ ಪರದತ್ತಾಂ ವಾ|| ಕಲ್ಲೇಹದ ಹೆತ್ತ ಶೆಟ್ಟಿ ಮಗ ಬಸವ ಶೆಟ್ಟಿಗೆ ಉಭಯ ಸಮಯಗೂ ಡಿ ಸಂಘನಾಯಕ ಪಟ್ಟಮಂ ಕಟ್ಟಿದರು .ಈ ಶಾಸನಂ ಬೆಳು ಗು ಳದ ಭಂಡಾರಿ ಬಸದಿಯ ಬಲಗಡೆ ದಕ್ಷಿಣದೊಳು ತ್ತರಾಭಿಮು ಖವಾಗಿ ಸ್ಥಾಪಿಸಿದೆ.



ಶಾಸನದ ಪಠ್ಯ -ಅರ್ಥ

ಒಳ್ಳೆಯದಾಗಲಿ, ನಾಸ್ತಿಕರೆಂಬ ಸಮುದ್ರವನ್ನು ಬತ್ತಿಸುವ ಬಡವಾಗ್ನಿಯಾಗಿ, ಶ್ರೀರಂಗನಾಥನ ಪಾದಕಮಲಗಳ ಸೇವಕರಾಗಿ, ಶ್ರೀ ವಿಷ್ಣು ಸನ್ನಿಧಿಯೆಂಬ ರತ್ನ ಮಂಟಪಕ್ಕೆ ಮಾರ್ಗದಾಯಕರಾಗಿ ಇರುವ ಯತಿರಾಜರಾಜರಾದ ರಾಮಾನುಜಾಚಾರ್ಯರಿಗೆ ಜಯವಾಗಲಿ.

ಶಕವರ್ಷ ೧೨೯೦ ನೆಯ ಕೀಲಕನಾಮ ಸಂವತ್ಸರಸದ ಭಾದ್ರಪದ ಮಾಸದ ಶುಕ್ಲಪಕ್ಷದ ದಶಮಿಯ ಗುರುವಾರದಂದು ಶ್ರೀ ಮನ್ಮಹಾಮಂಡಳೇಶ್ವರನೂ ಶತ್ರು ರಾಜರನ್ನೂ ಸದೆಬಡಿಯುವವನೂ, ನುಡಿದಂತೆ ನಡೆಯದ ರಾಜರ ದರ್ಪವನ್ನು ಮುರಿಯುವವನೂ ಆದ ಶ್ರೀ ಬುಕ್ಕರಾಯನು ರಾಜ್ಯಭಾರ ಮಾಡುತ್ತಿರುವಾಗ ಜೈನರಿಗೂ ಶ್ರೀವೈಷ್ಣವರಿಗೂ (ಒಂದು ಸಲ) ವಾಗ್ವಾದವಾಯಿತು.

ಆಗ ಆನೆಯಗೊಂದಿ, ಹೊಸಪಟ್ಟಣ, ಪೆನುಗೊಂಡೆ, ಕಲ್ಲೆಹ -ಇವುಗಳನ್ನು ಒಳಗೊಂಡ ಎಲ್ಲ ನಾಡುಗಳ ಜೈನ ಮತೀಯರು (ಭವ್ಯಜನಂಗಳು) ಬುಕ್ಕರಾಯನಿಗೆ ಶ್ರೀವೈಷ್ಣವರು (ಭಕ್ತರು) ಮಾಡುವ ಅನ್ಯಾಯಗಳನ್ನು ವಿಜ್ಞಾಪಿಸಿಕೊಂಡರು. ಕೋವಿಲ್ ತಿರುಮಲೆ ಪೆರುಮಾಳ್, ಕೋಯಿಲ್ ತಿರುನಾರಾಯಣಪುರ -ಇವೇ ಮುಖ್ಯವಾದ (ಕ್ಷೇತ್ರಗಳ) ಸಕಲಾಚಾರ್ಯರು, ಸಕಲಮಯಿಗಳು, ಸಕಲ ಸಾತ್ವಿಕರು, ಮೋಷ್ಠಿಕರು(ಅಕ್ಕಸಾಲಿಗರು), ತಿರುಪಣಿ ತಿರುವಿಡಿ  ತಣ್ಣೀರವರು(ನೀರು ಒದಗಿಸಿವ ಜಲಗಾರರು), ನಾಲ್ವತ್ತೆಂಟು ಜನಗಳು, ಸಾಮಂತ ಬೋವರುಗಳು, ತಿರಿಕುಲ ಜಾಬವ ಕುಲ ಒಳಗೊಂಡ ಹದಿನೆಂಟು ನಾಡುಗಳ ಶ್ರೀವೈಷ್ಣವರನ್ನು ಬರಮಾಡಿಕೊಂಡು ಮಹಾರಾಜನು ವೈಷ್ಣವರ ಕೈಯಲ್ಲಿ ಜೈನರ ಕೈಯನ್ನು ಹಿಡಿದು ಕೊಟ್ಟು, ವೈಷ್ಣವ ಧರ್ಮಕ್ಕೂ ಜೈನಧರ್ಮಕ್ಕೂ ಭೇದವಿಲ್ಲವೆಂದು ಹೇಳಿದನು.

       ಜೈನಧರ್ಮಕ್ಕೆ ಈ ಹಿಂದೆ ಸಲ್ಲುತ್ತಿದ್ದಂತೆ (ಪೂರ್ವಮರ್ಯಾದೆಯಲು) ಪಂಚಮಹಾವಾದ್ಯಗಳು (ಶೃಂಗವಾದ್ಯ, ತಮಟೆ, ಶಂಖ, ಭೇರಿ, ಜಯಘಂಟೆ) ಕಳಶವು ಸಲ್ಲುವುದು. ಶ್ರೀ ವೈಷ್ಣವರ ಕಡೆಯಿಂದ ಜೈನಧರ್ಮಕ್ಕೆ ಯಾವುದೇ ಹಾನಿಯಾಗಲಿ ವೃದ್ಧಿಯಾಗಲಿ ಆದರೆ ಅದು ವೈಷ್ಣವ ಧರ್ಮಕ್ಕೆ ಆದ ಹಾನಿಯೆಂದು ವೃದ್ಧಿಯೆಂದು ಶ್ರೀವೈಷ್ಣವರು ತಿಳಿಯಬೇಕು. ನಿಯಮದಂತೆ (ಮರ್ಯಾದೆಯಲು) ರಾಜ್ಯದಲ್ಲಿರುವ ಎಲ್ಲಾ ಬಸದಿಗಳಲ್ಲಿ ಶ್ರೀ ವೈ ಷ್ಣವರೇ ಶಾಸನವನ್ನು ಹಾಕಿಸಿ ಇದನ್ನು ಪಾಲಿಸಬೇಕು. ಚಂದ್ರ ಸೂರ್ಯರು ಇರುವವರೆಗೆ ವೈಷ್ಣವ ಧರ್ಮವು ಜೈನಧರ್ಮವನ್ನು ರಕ್ಷಿಸಿಕೊಂಡು ಬರತ್ತದೆ. ವೈಷ್ಣವ ಧರ್ಮ ಜೈನಧರ್ಮಗಳು ಒಂದೇ, ಅವುಗಳ ನಡುವೆ ಭೇದವಿಲ್ಲ. ಅದನ್ನು ಬೇರೆ ಬೇರೆ ಎಂದು ತಿಳಿಯಬಾರದು. ಶ್ರೀ ತಿರುಮಲೆ ತಾತಯ್ಯನವರು ರಾಜಯದ ಎಲ್ಲ ಜೈನಮತೀಯರ ಅನುಮತಿಯಂತೆ ಶ್ರವಣ ಬೆಳುಗೊಳ ಕ್ಷೇತ್ರದಲ್ಲಿ (ಬೆಳುಗೊಳ ತೀರ್ಥದಲ್ಲಿ) ವೈಷ್ಣವ (=ವಿಷ್ಣುದೇವಾಲಯ) ಅಂಗರಕ್ಷೆಗೆ (ಎಂದರೆ ಕಾವಲಿನ ವ್ಯವಸ್ಥೆಗಾಗಿ) ರಾಜ್ಯದಲ್ಲಿರುವ ಎಲ್ಲ ಜೈನರು ಬಾಗಿಲುಗಟ್ಟಳೆಯಾಗಿ (ಪ್ರತಿಮನೆಯವರು) ಮನೆಮನೆಗೆ ವರ್ಷಕ್ಕೆ ಒಂದು ಹಣ ಎಂದು ಕೊಡಬೇಕು. ಹಾಗೆ ಸಂಗ್ರಹಿಸಿದ ಹೊನ್ನಿನಿಂದ ದೇವರ ಕಾವಲಿಗೆ ಇಪ್ಪತ್ತು ಜನರನ್ನು ನೇಮಿಸಬೇಕು. ಉಳಿದ ಹೊನ್ನಿನಿಂದ ಜೀರ್ಣಜಿನಾಲಯಗಳಿಗೆ ಸುಣ್ಣವನ್ನು ಳಿಸಬೇಕು. ನಿಯಮದಂತೆ ಚಂದ್ರ ಸೂರ್ಯರು ಇರುವವರೆಗೆ ಪ್ರತಿವರ್ಷ ಹೊನ್ನನ್ನು ಕೊಟ್ಟು ಕೀರ್ತಿಯನ್ನು ಪುಣ್ಯವನ್ನು (ಜೈನರು ಅರ್ಜಿಸಿಕೊಳ್ಳಲಿ) ಹೀಗೆ ಮಾಡಿದ ಕಟ್ಟಳೆಯನ್ನು ಯಾರು ಮೀರಿದರೂ ಆತ ರಾಜದ್ರೋಹಿ. ಜೈನಸಂಘ-ವೈಷ್ಣವ ಸಮಾಜಗಳಿಗೆ ದ್ರೋಹಿ, ಮುನಿಯಾಗಲಿ, ಗ್ರಾಮೀಣನಾಗಲಿ ಈ ಧರ್ಮವನ್ನು ಯಾರಾದರೂ ಕೆಡಿಸಿದರೆ ಅವರು ಗಂಗಾನದಿಯ ದಡದಲ್ಲಿ ಹಸುವನ್ನೂ ಬ್ರಾಹ್ಮಣನ್ನೂ ಕೊಂದ ಪಾಪಕ್ಕೆ ಗುರಿಯಾಗುತ್ತಾರೆ.
ತಾನು ಕೊಟ್ಟದ್ದಾಗಲಿ, ಬೇರೆಯವರು ಕೊಟ್ಟದ್ದಾಗಲಿ ಅಪಹರಿಸಿದ್ದಾದರೆ ಅಂಥವನು ಈ ಭೂಮಿಯಲ್ಲಿ ಅರವತ್ತು ಸಾವಿರ ಕ್ರಿಮಿಯಾಗಿ ಹುಟ್ಟುತ್ತಾನೆ.


*******

5 ಕಾಮೆಂಟ್‌ಗಳು:

  1. ಶ್ರೀಯುತರಿಗೆ ನನ್ನ ನಮಸ್ಕಾರಗಳು ತಾವು ನೀಡಿದ ಈ ಅದ್ಭುತ ಕನ್ನಡದ ಕೊಡುಗೆಗೆ ನಾನು ಅಭಾರಿಯಾಗಿದ್ದೆನೆ.
    ಹಾಗೆಯೆ ತಾವು ಈ ಪಾಠದ ಪ್ರಶ್ನೊತ್ತರಗಳ ನೀಡಿದುದರಿಂದ ನನಗೆ ತುಂಬಾ ಸಹಾಯಕಾರಿಯಾಗಿದೆ . ಇದರಿಂದ ಹಲವಾರು ಮಕ್ಕಳಿಗೆ ತುಂಬ ಉಪಯೋಕ್ತಕಾರಿಯಾಗಿದ್ದು ಇದೆ ತೆರದಲ್ಲಿ ಎಲ್ಲಾ ಪಾಠಗಳಿಗು ಕೂಡ ಪ್ರಶ್ನೋತ್ತರಗಳ ನಿರೀಕ್ಷೆಯಲ್ಲಿರುವೇನು. ತಾವುಗಳು ಆದಷ್ಟು ಬೇಗ ದಯಮಾಡಿ ಎಲ್ಲಾ ಪಾಠಗಳ ಪ್ರಶ್ನೋತ್ತರಗಳನ್ನು ನೀಡುವಿರೆಂದು ಭಾವಿಸಿರುತ್ತೆನೆ.
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  2. ದೇವರಾಜು ಕೆ ಎಸ್ ಮು.ಶಿ ಆದರ್ಶ ವಿದ್ಯಾಲಯಅಕ್ಟೋಬರ್ 27, 2014 ರಂದು 04:23 ಅಪರಾಹ್ನ ಸಮಯಕ್ಕೆ

    ಉತ್ತಮ ಪ್ರಯತ್ನ ನಿಮ್ಮ ಅಭಿರುಚಿಯನ್ನು ನಿಮ್ಮ ವಿದ್ಯಾಥಿFಗಳಲ್ಲಿ ಬಳಸಿ.

    ಪ್ರತ್ಯುತ್ತರಅಳಿಸಿ
  3. ಉತ್ತಮವಾಗಿ ಅನುವಾದ ಮಾಡಿದ್ದೀರಿ ಮೂಲ ಕೃತಿಗೆ ಮೌಲ್ಯ ಒಡಗಿಸಿದ್ದೀರಿ

    ಪ್ರತ್ಯುತ್ತರಅಳಿಸಿ