ಪುಟಗಳು

08 ನವೆಂಬರ್ 2013

ಕ್ರಿಯಾಪದ

ಕ್ರಿಯಾಪದ
ಕ್ರಿಯಾಪ್ರಕೃತಿ (ಧಾತು)
ಈಗ ನಾಮಪದಗಳ ಹಾಗೆಯೇ ಇನ್ನೊಂದು ರೀತಿಯ ಪದಗಳ ವಿಚಾರವನ್ನು ತಿಳಿಯೋಣ.  ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆದ ಶಬ್ದರೂಪವೆಂದು ನಿಮಗೆ ತಿಳಿದಿದೆ.
(i) ತಾಯಿಯು ಅಡಿಗೆಯನ್ನು ಮಾಡುತ್ತಾಳೆ.
(ii) ತಂದೆಯು ಕೆಲಸವನ್ನು ಮಾಡಿದನು.
(iii) ಅಣ್ಣ ಊಟವನ್ನು ಮಾಡುವನು.
(iv) ದೇವರು ಒಳ್ಳೆಯದನ್ನು ಮಾಡಲಿ.
(vi) ಅವನು ನಾಳೆಯದಿನ ಮಾಡಾನು (ಮಾಡಿಯಾನು).
(vii) ಅವನು ಊಟವನ್ನು ಮಾಡನು.
ಮೇಲೆ ಇರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳಾದ- ಮಾಡುತ್ತಾಳೆ, ಮಾಡಿದನು, ಮಾಡುವನು, ಮಾಡಲಿ, ಮಾಡಾನು (ಮಾಡಿಯಾನು), ಮಾಡನು -ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ.  ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ-ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.
ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ಮಾಡು ಎಂಬ ಶಬ್ದವಾಗಿದೆ.  ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ರೂಪವೇ ಆಗಿದೆ.
ಮಾಡುತ್ತಾನೆಮಾಡು
ಮಾಡಿದನು
ಮಾಡುವನು
ಮಾಡಲಿ
ಮಾಡಾನು
ಮಾಡನು
ಮಾಡು ಎಂಬ ಈ ಮೂಲರೂಪಕ್ಕೆ ಅನೇಕ ಪ್ರತ್ಯಯಗಳು ಸೇರಿದ ಮೇಲೆ ಅದು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದವಾಗುವುದು.  ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.  ಇದರ ಸೂತ್ರವನ್ನು ಮುಂದಿನಂತೆ ಹೇಳಬಹುದು.
ಕ್ರಿಯಾರ್ಥವನ್ನು ಕೊಡುವುದಾಗಿಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ಅಥವಾ ಧಾತು ಎನ್ನುವರು.
ಇಂಥ ಧಾತುಗಳು ಎರಡು ವಿಧ.
ಧಾತು
ಮೂಲ ಧಾತುಪ್ರತ್ಯಯಾಂತ ಧಾತು
(೧) ಮೂಲಧಾತುಗಳು- ಉದಾಹರಣೆಗೆ:- ಮಾಡು, ತಿನ್ನು, ಹೋಗು, ಬರು, ಮಲಗು, ಏಳು, ನಡೆ, ನೋಡು, ಓಡು, ನಿಲ್ಲು, ಓದು, ಆಗು, ಹೊಳೆ, ಬದುಕು, ಇಕ್ಕು, ಮುಗಿ, ತೂಗು, ಹಿಗ್ಗು, ನಡುಗು, ಮಿಂಚು, ಮೆಟ್ಟು, ಹಂಚು, ಅಂಜು, ಈಜು, ಉಜ್ಜು, ದಾಟು, ಹುಟ್ಟು, ಒಕ್ಕು, ತುಂಬು, ಮುಚ್ಚು, ಹಿಡಿ, ಕೊಡು, ಹರಡು, ಇಡು, ಪಡೆ, ಕುಣಿ, ಕಾಣು, ಸುತ್ತು, ಒತ್ತು, ಎತ್ತು, ಬಿತ್ತು, ತೆರು, ಒದೆ, ತಿದ್ದು, ಹೊಡೆ, ಬಡಿ, ಬರೆ, ನೆನೆ, ಎನ್ನು, ಒಪ್ಪು, ತಪ್ಪು, ನಂಬು, ಉಬ್ಬು, ಕಾ, ಬೇ, ಮೀ, ಮೇ, ಚಿಮ್ಮು, ಹೊಯ್, ಬಯ್, ಸುಯ್, ಕೊಯ್, ತೆಯ್, ಸುರಿ, ಅರಿ, ಹೀರು, ಸೇರು, ಸೋಲು, ಹೊಲಿ, ಬಲಿ, ಹೇಸು, ಅರಸು, ಹುಡುಕು, ಬಳಸು, ಗುಡಿಸು, ಚೆಲ್ಲು, ತೊಳೆ, ಬೆಳಗು, ಬಡಿಸು, ಇಳಿ, ಏರು, ಹೊಗಳು, ತೆಗಳು, ಬಾಳು, ಬೀಳು, ತಾಳು, ಎಳೆ, ಕಳಿ, ಸೆಳೆ, ತಿಳಿ, ಸುಳಿ, ಕೊರೆ-ಇತ್ಯಾದಿ.
ಮೇಲೆ ಹೇಳಿದವುಗಳಲ್ಲದೆ ಇನ್ನೂ ಅನೇಕ ಧಾತುಗಳಿವೆ.  ಈ ಎಲ್ಲ ಧಾತುಗಳಿಂದ ಆದ ವಿವಿಧ ಪ್ರತ್ಯಯಗಳನ್ನು ಹೊಂದಿ ವರ್ತಮಾನ, ಭೂತ, ಭವಿಷ್ಯತ್‌ಕಾಲಗಳಲ್ಲೂ ವಿಧ್ಯರ್ಥ, ಸಂಭಾವನಾರ್ಥ, ನಿಷೇಧಾರ್ಥಗಳಲ್ಲೂ ನಾವು ಅನೇಕ ಕ್ರಿಯಾಪದಗಳನ್ನು ಪ್ರತಿನಿತ್ಯ ಭಾಷೆಯಲ್ಲಿ ಬಳಸುತ್ತೇವೆ.
(೨) ಸಾಧಿತ ಧಾತು (ಪ್ರತ್ಯಯಾಂತ ಧಾತು)- ಒಮ್ಮೊಮ್ಮೆ ನಾವು ನಾಮಪ್ರಕೃತಿಗಳನ್ನೇ ಧಾತುಗಳನ್ನಾಗಿ ಮಾಡಿಕೊಂಡು ಕ್ರಿಯಾಪ್ರಕೃತಿಗಳಿಗೆ ಹತ್ತುವ ಪ್ರತ್ಯಯ ಹಚ್ಚಿ ಕ್ರಿಯಾಪದಗಳ ನ್ನಾಗಿ ಮಾಡಿ ಹೇಳುತ್ತೇವೆ.
ಉದಾಹರಣೆಗೆ:- ಅವನು ಆ ಗ್ರಂಥವನ್ನು ಕನ್ನಡಿಸಿದನು.  ಕನ್ನಡ ಎಂಬುದು ನಾಮಪ್ರಕೃತಿಯಾಗಿದೆ.  ಇದು ಧಾತುವಲ್ಲ.  ಇದರ ಮೇಲೆ ಇಸು ಪ್ರತ್ಯಯ ಹಚ್ಚಿ ಕನ್ನಡಿಸು ಎಂದು ಆಗುವುದಿಲ್ಲವೆ? ಹೀಗೆ ಕನ್ನಡಿಸು ಎಂದಾದ ಮೇಲೆ ಇದು ಧಾತುವೆನಿಸುತ್ತದೆ.  ಇದರ ಮೇಲೆ ಧಾತುಗಳ ಮೇಲೆ ಸೇರಬೇಕಾದ ಎಲ್ಲ ಪ್ರತ್ಯಯಗಳು ಸೇರಿ-ಕನ್ನಡಿಸುತ್ತಾನೆ, ಕನ್ನಡಿಸಿದನು, ಕನ್ನಡಿಸುವನು, ಕನ್ನಡಿಸಲಿ, ಕನ್ನಡಿಸಾನು, ಕನ್ನಡಿಸನು-ಇತ್ಯಾದಿ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ.  ಇಂಥ ಧಾತುಗಳನ್ನೇ ನಾವು ಸಾಧಿತಧಾತು ಅಥವಾ ಪ್ರತ್ಯಯಾಂತಧಾತು ಗಳೆಂದು ಕರೆಯುತ್ತೇವೆ.
ಪ್ರತ್ಯಯಾಂತ ಧಾತು (ಸಾಧಿತ ಧಾತು):- ಕೆಲವು ನಾಮ ಪ್ರಕೃತಿಗಳ ಮೇಲೂ, ಧಗ ಧಗ, ಛಟ ಛಟ ಮೊದಲಾದ ಅನುಕರಣ ಶಬ್ದಗಳ ಮೇಲೂ ಇಸು ಎಂಬ ಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತುಗಳೆನಿಸುತ್ತವೆ. ಇವಕ್ಕೆ ಸಾಧಿತ ಧಾತುಗಳೆಂದೂ ಹೆಸರು.
ಉದಾಹರಣೆಗೆ:-
ನಾಮ ಪ್ರಕೃತಿ+ಇಸು=ಧಾತು-ಕ್ರಿಯಾಪದ
ಕನ್ನಡ+ಇಸು=ಕನ್ನಡಿಸು-ಕನ್ನಡಿಸಿದನು
ಓಲಗ+ಇಸು=ಓಲಗಿಸು-ಓಲಗಿಸುತ್ತಾನೆ
ಅಬ್ಬರ+ಇಸು=ಅಬ್ಬರಿಸು-ಅಬ್ಬರಿಸುವನು
ನಾಮ ಪ್ರಕೃತಿ+ಇಸು=ಧಾತು-ಕ್ರಿಯಾಪದ
ಅನುಕರಣ ಶಬ್ದಗಳು ಧಾತುಗಳಾಗುವುದಕ್ಕೆ ಉದಾಹರಣೆ:-
ಧಗ ಧಗ+ಇಸು=ಧಗಧಗಿಸು-ಧಗಧಗಿಸುತ್ತಾನೆ
ಥಳ ಥಳ+ಇಸು=ಥಳಥಳಿಸು-ಥಳಥಳಿಸುತ್ತಾನೆ
ಗಮ ಗಮ+ಇಸು=ಗಮಗಮಿಸು-ಗಮಗಮಿಸುವುದು
ಛಟ ಛಟ+ಇಸು=ಛಟಛಟಿಸು-ಛಟಛಟಿಸುತ್ತದೆ

ಸಂಸ್ಕೃತದ ಕೆಲವು ನಾಮ ಪ್ರಕೃತಿಗಳಾದ ಯತ್ನ, ಪ್ರಯತ್ನ, ರಕ್ಷಾ, ಪೂಜಾ, ಭಾವ, ಭಂಗ, ಪ್ರಲಾಪ, ಸಿದ್ಧಿ, ಭೇದ, ನಿರ್ಣಯ, ದುಃಖ, ಪಾಲನಾ, ಸೇವನಾ-ಮುಂತಾದವುಗಳಿಗೆ ಕನ್ನಡದ ಇಸು ಪ್ರತ್ಯಯವು ಬಂದು ಅವು ಕನ್ನಡ ಧಾತುಗಳೇ ಆಗಿ, ಪ್ರತ್ಯಯಾಂತ ಧಾತುಗಳೆನಿಸುತ್ತವೆ.
ಉದಾಹರಣೆಗೆ:-
ಸಂಸ್ಕೃತ ನಾಮ ಪ್ರಕೃತಿ +ಕನ್ನಡದ ಇಸು ಪ್ರತ್ಯಯ=ಧಾತು-ಕ್ರಿಯಾಪದ
ಯತ್ನ+ಇಸು=ಯತ್ನಿಸು-ಯತ್ನಿಸುತ್ತಾನೆ
ಪ್ರಯತ್ನ+ಇಸು=ಪ್ರಯತ್ನಿಸು-ಪ್ರಯತ್ನಿಸಿದನು
ಭಾವ+ಇಸು=ಭಾವಿಸು-ಭಾವಿಸಿದನು
ಭಂಗ+ಇಸು=ಭಂಗಿಸು-ಭಂಗಿಸುತ್ತಾನೆ
ರಕ್ಷಾ+ಇಸು=ರಕ್ಷಿಸು-ರಕ್ಷಿಸನು
ಪ್ರಲಾಪ+ಇಸು=ಪ್ರಲಾಪಿಸು-ಪ್ರಲಾಪಿಸಿದನು
ಸಿದ್ಧಿ+ಇಸು=ಸಿದ್ಧಿಸು-ಸಿದ್ಧಿಸುತ್ತದೆ
ದುಃಖ+ಇಸು=ದುಃಖಿಸು-ದುಃಖಿಸುತ್ತಾನೆ
ನಿರ್ಣಯ+ಇಸು=ನಿರ್ಣಯಿಸು-ನಿರ್ಣಯಿಸುತ್ತಾನೆ
ಪಾಲನೆ+ಇಸು=ಪಾಲಿಸು-ಪಾಲಿಸಿದನು
ಸೇವನೆ+ಇಸು=ಸೇವಿಸು-ಸೇವಿಸುತ್ತಾನೆ
ಇಸು ಪ್ರತ್ಯಯವು ಮೇಲೆ ಹೇಳಿದ ಕಡೆಗಳಲ್ಲಿ ಮಾತ್ರವೇ ಬರುತ್ತದೆಂದು ತಿಳಿಯಬಾರದು.  ಇದು ಸಹಜಧಾತುಗಳ ಮೇಲೂ ಪ್ರೇರಣಾರ್ಥದಲ್ಲಿ ಸಾಮಾನ್ಯವಾಗಿ ಬರುತ್ತದೆ.
ಉದಾಹರಣೆಗೆ:-
(i) ತಾಯಿ ಮಗುವಿಗೆ ಅನ್ನವನ್ನು ಉಣ್ಣಿಸಿದಳು.
(ii) ತಂದೆ ಮಗನಿಗೆ ಅಂಗಿಯನ್ನು ತೊಡಿಸಿದನು.
(iii) ತಾಯಿ ಮಗುವನ್ನು ಮಲಗಿಸಿದಳು.
ಮೇಲಿನ ಉದಾಹರಣೆಗೆಳಲ್ಲಿ ಉಣ್ಣಿಸಿದಳು ಎಂದರೆ ಉಣ್ಣುವಂತೆ ಮಾಡಿದಳು ಎಂದು ಅರ್ಥ.  ತಾಯಿಯ ಪ್ರೇರಣೆಯಿಂದ ಅನ್ನವನ್ನು ಮಗು ಉಂಡಿತು.  ಇದರಂತೆ ತೊಡಿಸಿದನು, ಮಲಗಿಸಿದಳು ಎಂಬಿವೂ ಪ್ರೇರಣಾರ್ಥಕ ಕ್ರಿಯಾಪದಗಳು.  ಇವುಗಳಲ್ಲಿ ಎರಡು ಕರ್ತೃ ಪದಗಳಿವೆ.  ಮೊದಲನೆಯ ವಾಕ್ಯದಲ್ಲಿ ತಾಯಿ ಪ್ರೇರಣಾರ್ಥಕ ಕರ್ತೃ, ಮಗು ಪ್ರೇರ‍್ಯಕರ್ತೃ.
ಪ್ರೇರಣಾರ್ಥದಲ್ಲಿ ಎಲ್ಲ ಧಾತುಗಳ ಮೇಲೂ ಸಾಮಾನ್ಯವಾಗಿ ಇಸು ಪ್ರತ್ಯಯ ಬರುವುದು.
ಉದಾಹರಣೆಗೆ:
ಸಹಜ ಧಾತು+ಪ್ರೇರಣಾರ್ಥದಲ್ಲಿ ಇಸು=ಪ್ರೇರಣಾರ್ಥಕ ಧಾತು-ಪ್ರೇರಣಾರ್ಥಕ ಕ್ರಿಯಾಪದ
ಮಾಡು+ಇಸು=ಮಾಡಿಸು-ಮಾಡಿಸುತ್ತಾನೆ
ತಿನ್ನು+ಇಸು=ತಿನ್ನಿಸು-ತಿನ್ನಿಸುತ್ತಾನೆ
ಓಡು+ಇಸು=ಓಡಿಸು-ಓಡಿಸುತ್ತಾನೆ
ಬರೆ+ಇಸು=ಬರೆಸು-ಬರೆಸುತ್ತಾನೆ
ಕಲಿ+ಇಸು=ಕಲಿಸು-ಕಲಿಸುತ್ತಾನೆ
ಮೇಲೆ ವಿವರಿಸಿದಂತೆ ಧಾತುಗಳು (ಕ್ರಿಯಾಪ್ರಕೃತಿಗಳು) ಸಹಜವಾದುವು ಹಾಗು ಇಸು ಪ್ರತ್ಯಯಾಂತಗಳಾದ ಸಾಧಿತಧಾತುಗಳು ಎಂದು ಎರಡು ಬಗೆ ಎಂದ ಹಾಗಾಯಿತು.


ಸಕರ್ಮಕ, ಅಕರ್ಮಕ ಧಾತುಗಳು

(೧) ಸಕರ್ಮಕ ಧಾತುಗಳು
ಈ ಕೆಳಗಿನ ವಾಕ್ಯವನ್ನು ಗಮನಿಸಿರಿ:-
ರಾಮನು ಮರವನ್ನು ಕಡಿದನು.  ಈ ವಾಕ್ಯದಲ್ಲಿ ಏನನ್ನು ಕಡಿದನು? ಎಂದು ಪ್ರಶ್ನಿಸಿದರೆ, ಮರವನ್ನು ಎಂಬ ಉತ್ತರ ಬರುತ್ತದೆ.  ಯಾರು? ಎಂದು ಪ್ರಶ್ನೆ ಮಾಡಿದರೆ ರಾಮ ಎಂಬ ಉತ್ತರ ಬರುತ್ತದೆ.  ಕಡಿಯುವ ಕೆಲಸ ಮಾಡಿದನಾದ್ದರಿಂದ ರಾಮನು ಎಂಬ ಪದವು ಕರ್ತೃಪದವೆನಿಸಿತು.  ಏನನ್ನು ಕಡಿದನೋ ಅದೇ ಕರ್ಮ.  ಆದ್ದರಿಂದ ಮರವನ್ನು ಎಂಬುದು ಕರ್ಮಪದ.  ಕಡಿದನು ಎಂಬುದು ಕ್ರಿಯಾಪದ.  ಕಡಿದನು – ಎಂಬ ಕ್ರಿಯೆಗೆ ಏನನ್ನು? ಎಂಬ ಪ್ರಶ್ನೆ ಮಾಡಿದಾಗ ಬರುವ ಉತ್ತರವೇ ಕರ್ಮ.  ಈ ವಾಕ್ಯವು ಕರ್ಮಪದವನ್ನುಳ್ಳ ವಾಕ್ಯವೆಂದಹಾಗಾಯಿತು.  ಇದರ ಹಾಗೆ ಕೆಳಗಿನ ಕೆಲವು ವಾಕ್ಯಗಳನ್ನು ನೋಡಿರಿ:
ಕರ್ತೃಪದ ಕರ್ಮಪದ ಕ್ರಿಯಾಪದ ಧಾತು
ದೇವರುಲೋಕವನ್ನುರಕ್ಷಿಸುವನುರಕ್ಷಿಸು
ಶಿಲ್ಪಿಗಳುಗುಡಿಯನ್ನುಕಟ್ಟಿದರುಕಟ್ಟು
ವಿದ್ಯಾರ್ಥಿಗಳುಪಾಠವನ್ನುಓದಿದರುಓದು
ಹುಡುಗರುಮನೆಯನ್ನುಸೇರಿದರುಸೇರು
ಇಲ್ಲಿ ರಕ್ಷಿಸುವನು, ಕಟ್ಟಿದರು, ಓದಿದರು, ಸೇರಿದರು ಇತ್ಯಾದಿ ಕ್ರಿಯಾಪದಗಳನ್ನುಳ್ಳ ವಾಕ್ಯಗಳಲ್ಲಿ ಕರ್ಮಪದ ಇದ್ದೇ ಇರಬೇಕು.  ರಕ್ಷಿಸುವನು ಎಂಬ ಕ್ರಿಯೆಗೆ ಏನನ್ನು ಎಂಬ ಪ್ರಶ್ನೆ ಹುಟ್ಟೇ ಹುಟ್ಟುತ್ತದೆ.  ಆದ್ದರಿಂದ ರಕ್ಷಿಸು ಎಂಬ ಧಾತು ಕರ್ಮಪದವನ್ನು ಅಪೇಕ್ಷಿಸುವ ಧಾತು.  ಇದರ ಹಾಗೆಯೇ ಕಟ್ಟು, ಓದು, ಮಾಡು, ತಿನ್ನು, ಬರೆ ಇತ್ಯಾದಿ ಧಾತುಗಳಿಗೆ ಕರ್ಮಪದ ಬೇಕೇ ಬೇಕು.  ಇಂಥ ಧಾತುಗಳೇ ಸಕರ್ಮಗಳು.
ಕರ್ಮಪದವನ್ನು ಅಪೇಕ್ಷಿಸುವ ಧಾತುಗಳೆಲ್ಲ ಸಕರ್ಮಕ ಧಾತುಗಳು.
ಉದಾಹರಣೆಗೆ:- ಮಾಡು, ಕೊಡು, ಕೆರೆ, ಬಿಡು, ಉಣ್ಣು, ತೊಡು, ಇಕ್ಕು, ಉಜ್ಜು, ದಾಟು, ಮೆಟ್ಟು, ತಿದ್ದು, ತುಂಬು, ನಂಬು, ಹೊಡೆ, ತಡೆ, ಹೀರು, ಸೇರು, ಹೊಯ್, ಸೆಯ್, ಕೆತ್ತು, ಕಡಿ, ತರ್ (ತರು), ಕೊಯ್, ಮುಚ್ಚು, ತೆರೆ, ಕತ್ತರಿಸು-ಇತ್ಯಾದಿ.
() ಅಕರ್ಮಕ ಧಾತುಗಳು
ಕೆಲವು ಧಾತುಗಳಿಗೆ ಕರ್ಮಪದದ ಅವಶ್ಯಕತೆ ಇರುವುದಿಲ್ಲ.  ಕೆಳಗಿನ ಈ ವಾಕ್ಯಗಳನ್ನು ಗಮನಿಸಿರಿ:-

ಕರ್ತೃಪದಕ್ರಿಯಾಪದಧಾತು
(i)ಕೂಸುಮಲಗಿತುಮಲಗು
(ii)ರಾಮನುಓಡಿದನುಓಡು
(iii)ಆಕಾಶಹೊಳೆಯುತ್ತದೆಹೊಳೆ
(iv)ಅವನುಬದುಕಿದನುಬದುಕು
(v)ಗಿಡವುಹುಟ್ಟಿತುಹುಟ್ಟು
ಮೇಲಿನ ವಾಕ್ಯಗಳಲ್ಲಿ ಕರ್ಮಪದಗಳಿಲ್ಲ.  ಮಲಗಿತು ಎಂಬ ಕ್ರಿಯಾಪದಕ್ಕೆ ಏನನ್ನು? ಎಂಬ ಪ್ರಶ್ನೆ ಮಾಡಲು ಉತ್ತರ ಬರುವುದಿಲ್ಲ.  ಏನನ್ನು ಮಲಗಿತು? ಎಂದು ಯಾರೂ ಕೇಳುವುದಿಲ್ಲ.  ಅದರಂತೆ ಏನನ್ನು ಓಡಿತು? ಎಂದು ಯಾರೂ ಕೇಳುವುದಿಲ್ಲ.  ಅಂದರೆ ಈ ಕ್ರಿಯೆಗಳಿಗೆ ಕರ್ಮಪದಗಳು ಬೇಕಾಗಿಲ್ಲ.
ಕರ್ಮಪದದ ಅಪೇಕ್ಷೆಯಿಲ್ಲದ ಧಾತುಗಳನ್ನು ಅಕರ್ಮಕ ಧಾತುಗಳೆನ್ನುವರು.
ಉದಾಹರಣೆಗೆ:- ಮಲಗು, ಓಡು, ಇರು, ಬದುಕು, ಬಾಳು, ಹೋಗು, ಬರು, ನಾಚು, ಹೆದರು, ಬೀಳು, ಏಳು, ಸೋರು, ಇಳಿ, ಉರುಳು-ಇತ್ಯಾದಿ.
ಈಗ ಅಕರ್ಮಕ ಸಕರ್ಮಕ ವಾಕ್ಯ ನೋಡಿರಿ

ಅಕರ್ಮಕ ವಾಕ್ಯಗಳುಸಕರ್ಮಕ ವಾಕ್ಯಗಳು
(೧)ಮಗು ಮಲಗಿತುಮಗು ಹಾಲನ್ನು ಕುಡಿಯಿತು
(೨)ಹುಡುಗ ಓಡಿದನುಹುಡುಗನು ಪುಸ್ತಕವನ್ನು ಓದಿದನು
(೩)ತಂದೆ ಇದ್ದಾರೆತಂದೆ ಊಟವನ್ನು ಮಾಡಿದನು
(೪)ಅವನು ಬದುಕಿದನುಅವನು ದೇವರನ್ನು ನೆನೆದನು
(೫)ಅಕ್ಕ ಬಂದಳುಅಕ್ಕ ಅಡಿಗೆಯನ್ನು ಮಾಡಿದಳು
(೬)ಅವನು ಬಾಳಿದನುಅವನು ಊರನ್ನು ಸೇರಿದನು

(ಇಲ್ಲಿ ಕರ್ಮಪದದ ಅವಶ್ಯಕತೆ ಇಲ್ಲ)(ಇಲ್ಲಿ ಕರ್ಮಪದ ಬೇಕೇ ಬೇಕು)



ಕ್ರಿಯಾಪದ

ಮೇಲಿನ ಭಾಗದಲ್ಲಿ ಧಾತುವೆಂದರೇನು? ಅವು ಎಷ್ಟು ಪ್ರಕಾರ? ಎಂಬುದನ್ನು ಅರಿತಿರಿ.  ಈಗ ಧಾತುಗಳು ಕ್ರಿಯಾಪದಗಳಾಗುವ ರೀತಿಯನ್ನು ತಿಳಿಯೋಣ.  ಈ ಕೆಳಗೆ ಕೆಲವು ಕ್ರಿಯಾಪದ ಗಳನ್ನು ಕೊಟ್ಟಿದೆ. ಅವುಗಳನ್ನು ಬಿಡಿಸಿ ನೋಡೋಣ.

ಕ್ರಿಯಾಪದ ಏಕವಚನ
ಧಾತು
ಕಾಲಸೂಚಕ ಪ್ರತ್ಯಯ
ಆಖ್ಯಾತ ಪ್ರತ್ಯಯ (ಬಹುವಚನ)
(೧)ಮಾಡುತ್ತಾನೆ-ಮಾಡು+ಉತ್ತ+ಆನೆ-(ಮಾಡುತ್ತಾರೆ)
(೨)ಮಾಡುತ್ತಾಳೆ-ಮಾಡು+ಉತ್ತ+ಆಳೆ-(ಮಾಡುತ್ತಾರೆ)
(೩)ಮಾಡುತ್ತದೆ-ಮಾಡು+ಉತ್ತ+ಅದೆ-(ಮಾಡುತ್ತವೆ)
(೪)ಮಾಡುತ್ತೀಯೆ-ಮಾಡು+ಉತ್ತ+ಈಯೆ-(ಮಾಡುತ್ತೀರಿ)
(೫)ಮಾಡುತ್ತೇನೆ-ಮಾಡು+ಉತ್ತ+ಏನೆ-(ಮಾಡುತ್ತೇವೆ)

(೧)ಹುಟ್ಟಿದನು-ಹುಟ್ಟು++ಅನು-(ಹುಟ್ಟಿದರು)
(೨)ಹುಟ್ಟಿದಳು-ಹುಟ್ಟು++ಅಳು-(ಹುಟ್ಟಿದರು)
(೩)ಹುಟ್ಟಿತು-ಹುಟ್ಟು++ಇತು-(ಹುಟ್ಟಿದವು)
(೪)ಹುಟ್ಟಿದೆ-ಹುಟ್ಟು++ಎ-(ಹುಟ್ಟಿದಿರಿ)
(೫)ಹುಟ್ಟಿದೆನು-ಹುಟ್ಟು++ಎನು-(ಹುಟ್ಟಿದೆವು)

(೧)ಬರುವನು-ಬರು++ಅನು-(ಬರುವರು)
(೨)ಬರುವಳು-ಬರು++ಅಳು-(ಬರುವರು)
(೩)ಬರುವುದು-ಬರು++ಉದು-(ಬರುವುವು)
(೪)ಬರುವೆ-ಬರು++ಎ-(ಬರುವಿರಿ)
(೫)ಬರುವೆನು-ಬರು++ಎನು-(ಬರುವೆವು)
ಮೇಲೆ ಐದೈದು ಕ್ರಿಯಾಪದಗಳ ಮೂರು ಗುಂಪುಗಳಿವೆ.  ಮೊದಲಿನ ಐದು ಕ್ರಿಯಾಪದ ಗಳಲ್ಲಿ-ಮಾಡು ಧಾತುವಿನ ಮುಂದೆ ಎಲ್ಲ ಕಡೆಗೂ ಉತ್ತ ಎಂಬ ಪ್ರತ್ಯಯವು ಬಂದು ಅದರ ಮುಂದೆ ಆನೆ, ಆಳೆ, ಅದೆ, ಈಯೆ, ಏನೆ ಎಂಬ ಪ್ರತ್ಯಯಗಳು ಏಕವಚನದಲ್ಲೂ, ಬಹುವಚನದಲ್ಲಿ ಆರೆ, ಆರೆ, ಅವೆ, ಈರಿ, ಏವೆ ಎಂಬ ಪ್ರತ್ಯಯಗಳೂ ಬಂದಿವೆ.
ಎರಡನೆಯ ಐದು ಕ್ರಿಯಾಪದಗಳಲ್ಲಿ ಹುಟ್ಟು ಎಂಬ ಧಾತುವಿನ ಮುಂದೆ ದ ಎಂಬ ಪ್ರತ್ಯಯವು ಎಲ್ಲ ಕಡೆಗೂ ಬಂದು ಅದರ ಮುಂದೆ ಅನು, ಅಳು, ಇತು, ಎ, ಎನು ಎಂಬ ಪ್ರತ್ಯಯಗಳು ಏಕವಚನದಲ್ಲೂ, ಅರು, ಅರು, ಅವು, ಇರಿ, ಎವು ಎಂಬ ಪ್ರತ್ಯಯಗಳು ಬಹುವಚನದಲ್ಲೂ ಬಂದಿವೆ.
ಮೂರನೆಯ ಐದು ಕ್ರಿಯಾಪದಗಳಲ್ಲಿ ಬರು ಎಂಬ ಧಾತುವಿನ ಮುಂದೆ ವ ಎಂಬ ಪ್ರತ್ಯಯವು ಎಲ್ಲ ಕಡೆಗೂ ಬಂದು ಅದರ ಮುಂದೆ ಅನು, ಅಳು, ಉದು, ಎ, ಎನು ಎಂಬ ಪ್ರತ್ಯಯಗಳು ಏಕವಚನದಲ್ಲೂ, ಅರು, ಅರು, ಅವು, ಇರಿ, ಎವು ಎಂಬ ಪ್ರತ್ಯಯಗಳು ಬಹುವಚನದಲ್ಲೂ ಬಂದಿವೆ.
ಮಧ್ಯದಲ್ಲಿ ಮೂರು ಕಡೆಗೆ ಬಂದಿರುವ ಉತ್ತ, ದ, ವ – ಎಂಬುವು ಕಾಲಸೂಚಕ ಪ್ರತ್ಯಯಗಳು* ಅಂದರೆ ಉತ್ತ ಎಂಬುದು ವರ್ತಮಾನಕಾಲವನ್ನೂ, ದ ಎಂಬುದು ಭೂತಕಾಲ ವನ್ನೂ, ವ ಎಂಬುದು ಭವಿಷ್ಯತ್ ಕಾಲವನ್ನೂ ಸೂಚಿಸುತ್ತವೆ ಎಂದು ತಿಳಿಯಬೇಕು.  ಕೊನೆಯಲ್ಲಿ ಬಂದಿರುವ ಆನೆ, ಆಳೆ, ಆರೆ, ಆರೆ, ಅದೆ, ಅವೆ, ಈಯೆ, ಈರಿ, ಏನೆ, ಏವೆ ಇತ್ಯಾದಿ ಪ್ರತ್ಯಯಗಳೆಲ್ಲ ಆಖ್ಯಾತಪ್ರತ್ಯಯಗಳು.
ಆದ್ದರಿಂದ ಮೇಲೆ ಹೇಳಿದ ಮೂರು ಗುಂಪುಗಳ ಕ್ರಿಯಾಪದಗಳಲ್ಲಿ ಮೊದಲಿನ ಐದು ಕ್ರಿಯಾಪದಗಳ ಗುಂಪು ವರ್ತಮಾನಕಾಲದ (ಈಗ ನಡೆಯುತ್ತಿರುವ) ಕ್ರಿಯೆಯನ್ನೂ, ಎರಡನೆಯ ಐದು ಕ್ರಿಯಾಪದಗಳ ಗುಂಪು ಹಿಂದೆ ನಡೆದ ಕ್ರಿಯೆಯ ಅಂದರೆ ಭೂತಕಾಲದ ಕ್ರಿಯೆಯನ್ನೂ, ಮೂರನೆ ಐದು ಕ್ರಿಯಾಪದಗಳ ಗುಂಪು ಮುಂದೆ ನಡೆಯುವ ಅಂದರೆ ಭವಿಷ್ಯತ್‌ಕಾಲದ ಕ್ರಿಯೆಯನ್ನೂ ಗೊತ್ತುಪಡಿಸುವ ಕ್ರಿಯಾಪದಗಳೆಂದ ಹಾಗಾಯಿತು.  ಹಾಗಾದರೆ ಕ್ರಿಯಾಪದ ಎಂದರೇನೆಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-
ಧಾತುಗಳಿಗೆ ಆಖ್ಯಾತ* ಪ್ರತ್ಯಯಗಳು ಸೇರಿ ಕ್ರಿಯಾಪದಗಳೆನಿಸುವುವು.
ಹೀಗೆ ಆಖ್ಯಾತಪ್ರತ್ಯಯಗಳು ಸೇರುವಾಗ ವರ್ತಮಾನ, ಭೂತ, ಭವಿಷ್ಯತ್ ಕಾಲಗಳಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಕ್ರಮವಾಗಿ ಉತ್ತ, ದ, ವ ಎಂಬ ಕಾಲಸೂಚಕ ಪ್ರತ್ಯಯಗಳು ಆಗಮವಾಗಿ ಬರುತ್ತವೆ.

* ಇವಕ್ಕೆ ವಿಕರಣ ಪ್ರತ್ಯಯಗಳೆಂದೂ ಕರೆಯುವರು.  ಸಂಸ್ಕೃತ ವ್ಯಾಕರಣದಲ್ಲಿ ಕರೆಯುವ ಪದ್ದತಿಯಂತೆ ಕನ್ನಡದಲ್ಲೂ ವಿಕರಣ ಪ್ರತ್ಯಯವೆನ್ನುತ್ತಾರೆ.  ಆದರೆ ಇವು ಕಾಲವನ್ನು (ವರ್ತಮಾನಕಾಲ, ಭೂತಕಾಲ, ಭವಿಷ್ಯತ್‌ಕಾಲ) ಸೂಚಿಸುತ್ತವಾದ್ದರಿಂದ ಕನ್ನಡದಲ್ಲಿ ಕಾಲಸೂಚಕ ಪ್ರತ್ಯಯಗಳೆಂದೇ ಕರೆಯುವರು.
* ಆಖ್ಯಾತ ಎಂದರೆ ಭಾವಪ್ರಧಾನವಾದುದು (ಭಾವಪ್ರಧಾನಮಾಖ್ಯಾತಂ)

ಕ್ರಿಯಾಪದದ ರೂಪಗಳು

ಎಲ್ಲ ಧಾತುಗಳಿಗೂ ಆಖ್ಯಾತ ಪ್ರತ್ಯಯಗಳು (೧) ವರ್ತಮಾನ, (೨) ಭೂತ, (೩) ಭವಿಷ್ಯತ್‌ಕಾಲಗಳಲ್ಲೂ, (೧) ವಿಧ್ಯರ್ಥ, (೨) ನಿಷೇಧಾರ್ಥ, (೩) ಸಂಭಾವನಾರ್ಥ ಗಳೆಂಬ ಮೂರು ಅರ್ಥಗಳಲ್ಲೂ ಸೇರಿ ಆರು ಪ್ರಕಾರದ ಕ್ರಿಯಾಪದರೂಪಗಳು ಉಂಟಾಗು ತ್ತವೆ.  ಈಗ ಒಂದೊಂದರ ವಿಚಾರವನ್ನೂ ಕ್ರಮವಾಗಿ ತಿಳಿಯೋಣ.
() ವರ್ತಮಾನ ಕಾಲದ ಕ್ರಿಯಾಪದಗಳು
ಧಾತುಗಳಿಗೆ ವರ್ತಮಾನ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನಕಾಲ ಕ್ರಿಯಾಪದಗಳೆನಿಸುವುವು.
ವರ್ತಮಾನ ಕಾಲದಲ್ಲಿ ಧಾತುಗಳಿಗೂ ಆಖ್ಯಾತಪ್ರತ್ಯಯಕ್ಕೂ ಮಧ್ಯದಲ್ಲಿ ಉತ್ತ ಎಂಬ ಕಾಲಸೂಚಕ ಪ್ರತ್ಯಯವು ಬರುವುದು.
ಉದಾಹರಣೆಗೆ:- ಧಾತು: ಹೋಗು

ಧಾತು
ಕಾಲಸೂಚಕ + ಪ್ರತ್ಯಯಆಖ್ಯಾತ ಪ್ರತ್ಯಯ
ಏಕವಚನಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನುಹೋಗು+ಉತ್ತ   +ಆನೆ=ಹೋಗುತ್ತಾನೆಹೋಗುತ್ತಾರೆ
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳುಹೋಗು+ಉತ್ತ   +ಆಳೆ=ಹೋಗುತ್ತಾಳೆಹೋಗುತ್ತಾರೆ
(ಪ್ರ. ಪು., ನಪುಂಸಕ ಲಿಂಗ) ಅದುಹೋಗು+ಉತ್ತ   +ಅದೆ=ಹೋಗುತ್ತದೆಹೋಗುತ್ತವೆ
(ಮಧ್ಯಮ ಪುರುಷ) ನೀನು*ಹೋಗು+ಉತ್ತ   +ಈಯೆ=ಹೋಗುತ್ತೀಯೆಹೋಗುತ್ತೀರಿ
(ಉತ್ತಮ ಪುರುಷ) ನಾನು*ಹೋಗು+ಉತ್ತ   +ಏನೆ=ಹೋಗುತ್ತೇನೆಹೋಗುತ್ತೇವೆ
ಇದರ ಹಾಗೆಯೇ ವರ್ತಮಾನಕಾಲದಲ್ಲಿ ಉಳಿದ ಧಾತುಗಳಿಗೂ ಏಕವಚನದಲ್ಲಿ ಆನೆ, ಆಳೆ, ಅದೆ, ಈಯೆ, ಏನೆ-ಎಂಬ ಆಖ್ಯಾತ ಪ್ರತ್ಯಯಗಳನ್ನೂ, ಬಹುವಚನದಲ್ಲಿ ಆರೆ, ಆರೆ, ಅವೆ, ಈರಿ, ಏವೆ-ಎಂಬ ಆಖ್ಯಾತ ಪ್ರತ್ಯಯಗಳನ್ನೂ ಹಚ್ಚಿ ಹೇಳಬೇಕು.

() ಭೂತಕಾಲದ ಕ್ರಿಯಾಪದಗಳು
 ಧಾತುಗಳಿಗೆ ಭೂತ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದಗಳೆನಿಸುವುವು.
ಭೂತಕಾಲದಲ್ಲಿ ದ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಎಲ್ಲ ಕಡೆಗೂ ಬರುವುದುಂಟು*.
ಉದಾಹರಣೆಗೆ:- ಧಾತು: ತಿಳಿ
ಧಾತು
ಕಾಲಸೂಚಕ ಪ್ರತ್ಯಯಆಖ್ಯಾತ   ಪ್ರತ್ಯಯ
ಏಕವಚನಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು – ತಿಳಿ+ಅನು=ತಿಳಿದನುತಿಳಿದರು
(ಪ್ರಥಮಪುರುಷ, ಸ್ತ್ರೀಲಿಂಗ) ಅವಳು – ತಿಳಿ+ಅಳು=ತಿಳಿದಳುತಿಳಿದರು
(ಪ್ರ. ಪು. , ನಪುಂಸಕ ಲಿಂಗ) ಅದು – ತಿಳಿ+ಇತು=ತಿಳಿಯಿತುತಿಳಿದವು
(ಮಧ್ಯಮ ಪುರುಷ) ನೀನು  – ತಿಳಿ+=ತಿಳಿದೆತಿಳಿದಿರಿ
(ಉತ್ತಮ ಪುರುಷ) ನಾನು – ತಿಳಿ+ಎನು=ತಿಳಿದೆನುತಿಳಿದೆವು
ಇದರ ಹಾಗೆಯೇ ಎಲ್ಲ ಧಾತುಗಳ ಮೇಲೂ ಅನು-ಅರು, ಅಳು-ಅರು, ಇತು-ಅವು, ಎ-ಇರಿ, ಎನು-ಎವು ಎಂಬ ಆಖ್ಯಾತ ಪ್ರತ್ಯಯಗಳನ್ನು ಸೇರಿಸಿ ಹೇಳಬೇಕು.

() ಭವಿಷ್ಯತ್‌ಕಾಲದ ಕ್ರಿಯಾಪದಗಳು
 ಧಾತುಗಳಿಗೆ ಭವಿಷ್ಯತ್‌ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭವಿಷ್ಯತ್ ಕಾಲದ ಕ್ರಿಯಾಪದಗಳೆನಿಸುವುವು.
ಭವಿಷ್ಯತ್‌ಕಾಲದಲ್ಲಿ ಧಾತುವಿಗೂ, ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ವ ಎಂಬ ಕಾಲಸೂಚಕ ಪ್ರತ್ಯಯವು ಆಗಮವಾಗಿ ಬರುವುದು.  ಕೆಲವು ಕಡೆ ಉವ ಎಂಬುದೂ ಬರುವುದುಂಟು.  ಉವ ಪ್ರತ್ಯಯವು ನಡೆ, ತಿಳಿ ಇತ್ಯಾದಿ ಎಕಾರಾಂತ ಆಕಾರಾಂತ ಧಾತುಗಳ ಮೇಲೆ ಬರುವುದೆಂದು ತಿಳಿಯಬೇಕು.
ಉದಾಹರಣೆಗೆ:- ಧಾತು: ಕೊಡು


ಧಾತು
ಕಾಲ ಸೂಚಕ
ಪ್ರತ್ಯಯ

ಆಖ್ಯಾತ  ಪ್ರತ್ಯಯ
ಏಕವಚನಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನು-ಕೊಡು++ಅನು=ಕೊಡುವನುಕೊಡುವರು
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳು-ಕೊಡು++ಅಳು=ಕೊಡುವಳುಕೊಡುವರು
(ಪ್ರ. ಪು. , ನಪುಂಸಕ ಲಿಂಗ) ಅದು-ಕೊಡು++ಅದು=ಕೊಡುವದುಕೊಡುವುವು

-*(ಕೊಡು++ಉದು=ಕೊಡುವುದುಕೊಡುವುವು)
(ಮಧ್ಯಮ ಪುರುಷ) ನೀನು-ಕೊಡು++=ಕೊಡುವೆಕೊಡುವಿರಿ
(ಉತ್ತಮ ಪುರುಷ) ನಾನು-ಕೊಡು++ಎನು=ಕೊಡುವೆನುಕೊಡುವೆವು
ಇದರ ಹಾಗೆಯೇ ಎಲ್ಲ ಧಾತುಗಳಿಗೂ ಅನು-ಅರು, ಅಳು-ಅರು, ಅದು-ಅವು, (ಉದು-ಉವು), ಎ-ಇರಿ, ಎನು-ಎವು ಎಂಬ ಆಖ್ಯಾತ ಪ್ರತ್ಯಯ ಹಚ್ಚಿ ಹೇಳಬೇಕು.
ಈಗ ಒಂದೇ ಧಾತುವಿನ ವರ್ತಮಾನ, ಭೂತ, ಭವಿಷ್ಯತ್ ಕಾಲಗಳ ಮೂರು ಸಿದ್ಧ ರೂಪಗಳನ್ನೂ ಕೆಳಗೆ ನೋಡಿರಿ:-
ಧಾತು - ಬರು
ವರ್ತಮಾನಕಾಲಭೂತಕಾಲಭವಿಷ್ಯತ್ ಕಾಲ
ಏಕವಚನ
ಬಹುವಚನಏಕವಚನ
ಬಹುವಚನಏಕವಚನ
ಬಹುವಚನ
ಬರುತ್ತಾನೆ-ಬರುತ್ತಾರೆ*ಬಂದನು-ಬಂದರುಬರುವನು-ಬರುವರು
ಬರುತ್ತಾಳೆ-ಬರುತ್ತಾರೆಬಂದಳು-ಬಂದರುಬರುವಳು-ಬರುವರು
ಬರುತ್ತದೆ-ಬರುತ್ತವೆಬಂದಿತು-ಬಂದವು (ಬಂದುವು)ಬರುವದು (ಬರುವುದು-ಬರುವವು ಬರುವುವು)
ಬರುತ್ತೀಯೆ-ಬರುತ್ತೀರಿಬಂದೆ-ಬಂದಿರಿಬರುವೆ-ಬರುವಿರಿ
ಬರುತ್ತೇನೆ-ಬರುತ್ತೇವೆಬಂದೆನು-ಬಂದೆವುಬರುವೆನು-ಬರುವೆವು

ಧಾತು - ತಿನ್ನು
ವರ್ತಮಾನಕಾಲಭೂತಕಾಲಭವಿಷ್ಯತ್ ಕಾಲ
ಏಕವಚನ
ಬಹುವಚನಏಕವಚನ
ಬಹುವಚನಏಕವಚನ
ಬಹುವಚನ
ತಿನ್ನುತ್ತಾನೆ-ತಿನ್ನುತ್ತಾರೆ+ತಿಂದನು-ತಿಂದರುತಿನ್ನುವನು-ತಿನ್ನುವರು
ತಿನ್ನುತ್ತಾಳೆ-ತಿನ್ನುತ್ತಾರೆ+ತಿಂದಳು-ತಿಂದರುತಿನ್ನುವಳು-ತಿನ್ನುವರು
ತಿನ್ನುತ್ತದೆ-ತಿನ್ನುತ್ತವೆ+ತಿಂದಿತು-ತಿಂದವುತಿನ್ನುವದು-ತಿನ್ನುವವು





(ತಿಂದುವು)ಷಿ(ತಿನ್ನುವುದು-ತಿನ್ನುವುವು)
ತಿನ್ನುತ್ತೀಯೆ-ತಿನ್ನುತ್ತೀರಿ+ತಿಂದೆ-ತಿಂದಿರಿತಿನ್ನುವೆ-ತಿನ್ನುವಿರಿ
ತಿನ್ನುತ್ತೇನೆ-ತಿನ್ನುತ್ತೇವೆ+ತಿಂದೆನು-ತಿಂದೆವುತಿನ್ನುವೆನು-ತಿನ್ನುವೆವು

ಇದುವರೆಗೆ ವರ್ತಮಾನ, ಭೂತ, ಭವಿಷ್ಯತ್ ಕಾಲದ ಕ್ರಿಯಾಪದಗಳ ರೂಪಗಳು ಹೇಗಾಗುತ್ತವೆಂಬ ವಿಷಯವನ್ನು ಕ್ರಮವಾಗಿ ತಿಳಿದಿದ್ದೀರಿ.  ಈಗ ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥದ ಕ್ರಿಯಾಪದ ರೂಪಗಳು ಹೇಗಾಗುತ್ತವೆ? ಎಂಬ ಬಗೆಗೆ ತಿಳಿಯೋಣ.

() ವಿಧ್ಯರ್ಥ (ವಿಧಿ+ಅರ್ಥ) ರೂಪಗಳು
(i) ದೇವರು ನಿನಗೆ ಒಳ್ಳೆಯದು ಮಾಡಲಿ.
(ii) ಅವರು ಪಾಠವನ್ನು ಓದಲಿ.
(iii) ನೀನು ಆ ಕೆಲಸವನ್ನು ಮಾಡು.
(iv) ಅವನಿಗೆ ಜಯವಾಗಲಿ.
(v) ಅವನು ಹಾಳಾಗಿ ಹೋಗಲಿ.
ಇಲ್ಲಿ ಮೇಲೆ ಬಂದಿರುವ ಮಾಡಲಿ, ಓದಲಿ, ಮಾಡು, ಆಗಲಿ, ಹೋಗಲಿ ಇತ್ಯಾದಿ ಕ್ರಿಯಾಪದಗಳಲ್ಲಿ- ದೇವರು ನಿನಗೆ ಒಳ್ಳೆಯದು ಮಾಡಲಿ ಎನ್ನುವಾಗ ಒಳ್ಳೆಯ ಹಾರೈಕೆಯೂ, ಅವರು ಪಾಠವನ್ನು ಓದಲಿ ಎನ್ನುವಾಗ ಸಮ್ಮತಿಯೂ, ನೀನು ಆ ಕೆಲಸವನ್ನು ಮಾಡು ಎನ್ನುವಲ್ಲಿ ಆಜ್ಞೆಯೂ, ಅವನಿಗೆ ಜಯವಾಗಲಿ ಎನ್ನುವಾಗ ಆಶೀರ್ವಾದವೂ, ಅವನು ಹಾಳಾಗಿ ಹೋಗಲಿ ಎನ್ನುವಾಗ ಕೆಟ್ಟ ಹಾರೈಕೆಯೂ ತೋರಿಬರುತ್ತದೆ.
ಹೀಗೆ ಒಂದು ಕ್ರಿಯೆಯ ವಿಷಯದಲ್ಲಿ ವಿಧಿ ತೋರುವುದೇ ವಿಧ್ಯರ್ಥ ಎನಿಸುವುದು.  ಇದಕ್ಕೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
ವಿಧ್ಯರ್ಥಕ ಕ್ರಿಯಾಪದಗಳು:- ಆಶೀರ್ವಾದ, ಅಪ್ಪಣೆ, ಆಜ್ಞೆ, ಹಾರೈಕೆ ಇವುಗಳು ತೋರುವಾಗ ಧಾತುಗಳಿಗೆ ಆಖ್ಯಾತಪ್ರತ್ಯಯಗಳು ಸೇರಿ ವಿಧ್ಯರ್ಥಕ ಕ್ರಿಯಾಪದಗಳೆನಿಸುವುವು.
ಉದಾಹರಣೆಗೆ:- ಮಾಡು’ ಧಾತು (ಇಲ್ಲಿ ಯಾವ ಕಾಲಸೂಚಕ ಪ್ರತ್ಯಯಗಳೂ ಬರುವುದಿಲ್ಲ)

ಧಾತು + ಆಖ್ಯಾತ ಪ್ರತ್ಯಯ ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನುಮಾಡು+          ಅಲಿಮಾಡಲಿಮಾಡಲಿ
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳುಮಾಡು +ಅಲಿಮಾಡಲಿಮಾಡಲಿ
(ಪ್ರ. ಪು. , ನಪುಂಸಕ ಲಿಂಗ) ಅದುಮಾಡು+ಅಲಿಮಾಡಲಿಮಾಡಲಿ
(ಮಧ್ಯಮ ಪುರುಷ) ನೀನುಮಾಡು+          ಅಲಿ*ಮಾಡುಮಾಡಿರಿ
(ಉತ್ತಮ ಪುರುಷ) ನಾನುಮಾಡು+          ಎಮಾಡುವೆಮಾಡು+ವಾ=ಮಾಡುವಾ+



(ಮಾಡೋಣ, ಮಾಡುವ)
ಇಲ್ಲಿ ಪ್ರಥಮಪುರುಷದ ಏಕವಚನ, ಬಹುವಚನಗಳಲ್ಲಿ ಆರು ರೂಪಗಳೂ ಒಂದೇ ರೀತಿ ಇರುತ್ತವೆ.  ಮಧ್ಯಮಪುರುಷ ಏಕವಚನದಲ್ಲಿ ಆಖ್ಯಾತಪ್ರತ್ಯಯ ಲೋಪವಾಗುವುದು.  ಬಹು ವಚನದಲ್ಲಿ ಇರಿ ಪ್ರತ್ಯಯವೂ, ಉತ್ತಮಪುರುಷ ಏಕವಚನದಲ್ಲಿ ಎ ಎಂಬುದೂ, ಬಹುವಚನ ದಲ್ಲಿ ವಾ, ಉವಾ, ವ, ಉವ, ಓಣ-ಇತ್ಯಾದಿ ಆಖ್ಯಾತ ಪ್ರತ್ಯಯಗಳು ಬರುವುದುಂಟು.

() ನಿಷೇಧಾರ್ಥಕ ರೂಪಗಳು
(i) ಅವನು ಅನ್ನವನ್ನು ತಿನ್ನನು,
(ii) ಅವನು ಬಾರನು ಇತ್ಯಾದಿ ವಾಕ್ಯಗಳಲ್ಲಿ ಬಂದಿರುವ ತಿನ್ನನು, ಬಾರನು ಎಂಬ ಕ್ರಿಯಾಪದಗಳು ತಿನ್ನುವುದಿಲ್ಲ, ಬರುವುದಿಲ್ಲ-ಎಂಬ ಅರ್ಥದವು.  ಎಂದರೆ ಕ್ರಿಯೆಯು ನಡೆಯಲಿಲ್ಲ ಎಂಬರ್ಥವನ್ನು ಸೂಚಿಸುತ್ತವೆ.
ಕ್ರಿಯೆಯು ನಡೆಯಲಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ, ನಿಷೇಧಾರ್ಥಕ ಕ್ರಿಯಾಪದಗಳೆನಿಸುವುವು.
ಉದಾಹರಣೆಗೆ:- ತಿನ್ನು ಧಾತು

ಧಾತು+ಆಖ್ಯಾತ ಪ್ರತ್ಯಯ
ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನುತಿನ್ನು +ಅನು=ತಿನ್ನನು-  ತಿನ್ನರು
(ಪ್ರಥಮಪುರುಷ, ಸ್ತ್ರೀಲಿಂಗ) ಅವಳುತಿನ್ನು +ಅಳು=ತಿನ್ನಳು-  ತಿನ್ನರು
(ಪ್ರ. ಪು., ನಪುಂಸಕಲಿಂಗ) ಅದುತಿನ್ನು +ಅದು=ತಿನ್ನದು-  ತಿನ್ನವು
(ಮಧ್ಯಮ ಪುರುಷ) ನೀನು-ತಿನ್ನು+ಎ=ತಿನ್ನೆ-  ತಿನ್ನರಿ
(ಉತ್ತಮ ಪುರುಷ) ನಾನುತಿನ್ನು +ಎನು=ತಿನ್ನೆನು-  ತಿನ್ನೆವು
ಹೀಗೆ ಏಕವಚನದಲ್ಲಿ ಅನು, ಅಳು, ಅದು, ಎ, ಎನು ಎಂಬ ಆಖ್ಯಾತಪ್ರತ್ಯಯಗಳೂ, ಬಹುವಚನದಲ್ಲಿ ಅರು, ಅರು, ಅವು, ಅರಿ, ಎವು-ಎಂಬ ಆಖ್ಯಾತಪ್ರತ್ಯಯಗಳೂ ಎಲ್ಲ ಧಾತುಗಳ ಮೇಲೆ ಸೇರುತ್ತವೆ.
ಇನ್ನೊಂದು ವಿಶೇಷ ರೂಪದ ಉದಾಹರಣೆ ನೋಡಿರಿ
ಉದಾಹರಣೆಗೆ:- *ಬರು ಧಾತು

ಧಾತು+ಆಖ್ಯಾತ ಪ್ರತ್ಯಯ =ಏಕವಚನ ಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನುಬರು +ಅನು=ಬಾರನುಬಾರರು
(ಪ್ರ.ಪು., ಸ್ತ್ರೀಲಿಂಗ) ಅವಳುಬರು +ಅಳು=ಬಾರಳುಬಾರರು
(ಪ್ರ.ಪು.ನಪುಂಸಕಲಿಂಗ)ಅದುಬರು +ಅದು=ಬಾರದುಬಾರವು
(ಮಧ್ಯಮ ಪುರುಷ) ನೀನುಬರು+ಎ=ಬಾರೆಬಾರರಿ
(ಉತ್ತಮ ಪುರುಷ) ನಾನುಬರು +ಎನು=ಬಾರೆನುಬಾರೆವು

() ಸಂಭಾವನಾರ್ಥಕ ರೂಪಗಳು
(i) ಅವನು ನಾಳೆ ಬಂದಾನು.
(ii) ಅನ್ನವನ್ನು ಆತ ತಿಂದಾನು.
(iii) ಅದು ಮೇಲಕ್ಕೆ ಏರೀತು.
ಇತ್ಯಾದಿ ವಾಕ್ಯಗಳಲ್ಲಿ ಬಂದಿರುವ ಬಂದಾನು, ತಿಂದಾನು, ಏರೀತು-ಎಂಬ ಕ್ರಿಯಾಪದಗಳು ಕಾರ‍್ಯ ನಡೆಯುವಲ್ಲಿ ಸಂಶಯ ಅಥವಾ ಊಹೆಯನ್ನು ತಿಳಿಸುತ್ತವೆ.  ಬಂದಾನು ಎಂಬಲ್ಲಿ ಬರುವ ವಿಷಯಲ್ಲಿ ಸಂಶಯವಾಗುತ್ತದಲ್ಲದೆ ನಿಶ್ಚಯವಿಲ್ಲ.  ಬಂದರೆ ಬರಬಹುದು ಅಥವಾ ಬಾರದೆಯೂ ಇರಬಹುದು.  ಇದರ ಹಾಗೆಯೇ ತಿಂದಾನು, ಏರೀತು-ಎಂಬಲ್ಲಿಯೂ ಕೂಡ ಸಂಶಯ, ಊಹೆಗಳು ತೋರುತ್ತವೆ.  ಇಂಥ ಕ್ರಿಯಾಪದಗಳೇ ಸಂಭಾವನಾರ್ಥಕ ಕ್ರಿಯಾಪದ ಗಳು.  ಇದಕ್ಕೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
ಸಂಭಾವನಾರ್ಥಕ ಕ್ರಿಯಾಪದ:- ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯ ಅಥವಾ ಊಹೆ ತೋರುವಲ್ಲಿ ಧಾತುಗಳ ಮೇಲೆ ಆಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳೆನಿಸುವುವು.
ಉದಾಹರಣೆಗೆ:- ಹೋಗು ಧಾತು

ಧಾತು +ಆಖ್ಯಾತ ಪ್ರತ್ಯಯ
ಕ್ರಿಯಾಪದ
ಏಕವಚನಬಹುವಚನ
(ಪ್ರಥಮ ಪುರುಷ, ಪುಲ್ಲಿಂಗ) ಅವನುಹೋಗು +ಆನು=ಹೋದಾನುಹೋದಾರು
(ಪ್ರಥಮಪುರುಷ, ಸ್ತ್ರೀ ಲಿಂಗ) ಅವಳುಹೋಗು +ಆಳು=ಹೋದಾಳುಹೋದಾರು
(ಪ್ರ. ಪು. , ನಪುಂಸಕ ಲಿಂಗ) ಅದುಹೋಗು+ಈತು=ಹೋದೀತುಹೋದಾವು
(ಮಧ್ಯಮ ಪುರುಷ) ನೀನುಹೋಗು+ಈಯೆ=ಹೋದೀಯೆಹೋದೀರಿ
(ಉತ್ತಮ ಪುರುಷ) ನಾನುಹೋಗು+ಏನು=ಹೋದೇನುಹೋದೇವು
ಹೋಗು ಎಂಬ ಧಾತುವಿನ ಮೇಲೆ ಸಂಭಾವನಾರ್ಥಕ ಆಖ್ಯಾತ ಪ್ರತ್ಯಯಗಳು ಸೇರಿದಾಗ ಧಾತುವಿನ ಕೊನೆಯ ಗು ಕಾರಕ್ಕೆ ದ ಕಾರ ಆದೇಶವಾಗಿ ಬರುವುದನ್ನು ಗಮನಿಸಿರಿ.  ಇದರ ಹಾಗೆ ಎಲ್ಲಾ ಧಾತುಗಳಿಗೂ ಏಕವಚನದಲ್ಲಿ ಆನು, ಆಳು, ಈತು, ಈಯೆ, ಏನು-ಎಂಬ ಆಖ್ಯಾತ ಪ್ರತ್ಯಯಗಳನ್ನೂ ಬಹುವಚನದಲ್ಲಿ ಆರು, ಆರು, ಆವು, ಈರಿ, ಏವು ಎಂಬ ಆಖ್ಯಾತ ಪ್ರತ್ಯಯಗಳನ್ನೂ ಸೇರಿಸಿ ಹೇಳಬೇಕು.
ಈಗ ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥ-ಈ ಮೂರು ರೂಪಗಳು ಒಂದೇ ಧಾತುವಿಗೆ ಹೇಗಾಗುತ್ತವೆಂಬುದನ್ನು ಈ ಕೆಳಗಿನ ಉದಾಹರಣೆಯಿಂದ ತುಲನೆ ಮಾಡಿ ನೋಡಿರಿ.
ಉದಾಹರಣೆಗೆ:- ಬರೆ ಧಾತು
ವಿಧ್ಯರ್ಥ ನಿಷೇಧಾರ್ಥ ಸಂಭಾವನಾರ್ಥ
ಏಕವಚನ ಬಹುವಚನ ಏಕವಚನ ಬಹುವಚನ ಏಕವಚನ ಬಹುವಚನ
ಬರೆಯಲಿಬರೆಯಲಿಬರೆಯನುಬರೆಯರುಬರೆದಾನುಬರೆದಾರು
ಬರೆಯಲಿಬರೆಯಲಿಬರೆಯಳುಬರೆಯರುಬರೆದಾಳುಬರೆದಾರು
ಬರೆಯಲಿಬರೆಯಲಿಬರೆಯದುಬರೆಯವುಬರೆದೀತುಬರೆದಾವು
ಬರೆಬರೆಯಿರಿಬರೆಯೆಬರೆಯಿರಿಬರೆದೀಯೆಬರೆದೀರಿ
ಬರೆವೆಬರೆಯುವಬರೆಯೆನುಬರೆಯೆವುಬರೆದೇನುಬರೆದೇವು -ಇತ್ಯಾದಿ
ಬರೆಯುವಾ
ಬರೆಯೋಣ
ಹೊಸಗನ್ನಡದಲ್ಲಿ ಈಗ ಸಾಮಾನ್ಯವಾಗಿ ಬರೆಯೆ ತಿನ್ನೆ ಎಂಬ ಮಧ್ಯಮಪುರುಷ ಏಕವಚನರೂಪಗಳನ್ನೂ, ಬರೆಯಿರಿ ತಿನ್ನಿರಿ ಎಂಬ ಬಹುವಚನ ರೂಪಗಳನ್ನೂ ಯಾರೂ ಹೆಚ್ಚಾಗಿ ಬಳಸುವುದೇ ಇಲ್ಲ.  ಅದಕ್ಕೆ ಪ್ರತಿಯಾಗಿ ಬರೆಯಲಾರಿರಿ (ಬರೆಯಲ್ + ಆರಿರಿ), ತಿನ್ನಲಾರಿರಿ (ತಿನ್ನಲ್ + ಆರಿರಿ), ಬರೆಯುವುದಿಲ್ಲ (ಬರೆಯವುದು+ಇಲ್ಲ), ತಿನ್ನುವುದಿಲ್ಲ (ತಿನ್ನುವುದು + ಇಲ್ಲ) ಇತ್ಯಾದಿಯಾಗಿ ಎರಡು ಕ್ರಿಯೆಗಳಿಂದ ನಿಷೇಧರೂಪಗಳನ್ನು ಹೇಳುವುದು ಪರಿಪಾಠವಾಗಿದೆ.  ಸಂಭಾವನಾರ್ಥಕ ರೂಪಗಳನ್ನು ಕೂಡ ಹಾಗೆಯೇ ಬರೆದಾನು ಎಂಬುದನ್ನು ಬರೆಯಬಹುದು ಎಂದು ಏಕವಚನ, ಬಹುವಚನಗಳೆರಡರಲ್ಲೂ ಪುಂಸ್ತ್ರೀನಪುಂಸಕಲಿಂಗ ಮೂರರಲ್ಲೂ ಸಹ ಒಂದೇ ರೀತಿಯ ರೂಪದಿಂದ ಹೇಳುವುದು ವಾಡಿಕೆಯಾಗಿದೆ.
ಉದಾಹರಣೆಗೆ:-
ಅವನು ಬರೆಯಬಹುದುಅವರು ಬರೆಯಬಹುದು
ಅವಳು ಬರೆಯಬಹುದುಅವರು ಬರೆಯಬಹುದು
ಅದು ಬರೆಯಬಹುದುಅವು ಬರೆಯಬಹುದು
ನೀನು ಬರೆಯಬಹುದುನೀವು ಬರೆಯಬಹುದು
ನಾನು ಬರೆಯಬಹುದುನಾವು ಬರೆಯಬಹುದು

* ನೀನು, ನಾನು ಎಂಬ ಸರ್ವನಾಮಗಳು ವಾಚ್ಯಲಿಂಗ ಅಥವಾ ವಿಶೇಷ್ಯಾಧೀನ ಲಿಂಗಗಳಾದ್ದರಿಂದ-ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಒಂದೇ ರೂಪಗಳಾಗುತ್ತವೆಂಬುದನ್ನು ಜ್ಞಾಪಕದಲ್ಲಿಡಬೇಕು.

* ಉ, ಎ, ಇಕಾರಾಂತ ಧಾತುಗಳ ಮೇಲೆ ನಪುಂಸಕಲಿಂಗ ಏಕವಚನದಲ್ಲಿ ಭೂತಕಾಲದ ಆಖ್ಯಾತ ಪ್ರತ್ಯಯ ಸೇರಿದಾಗ ದ ಎಂಬ ಕಾಲಸೂಚಕ ಪ್ರತ್ಯಯ ಬಂದು ಲೋಪವಾಗುತ್ತದೆಂದು ತಿಳಿಯಬೇಕು.  ನಡೆಯಿತು, ಮಾಡಿತು, ಹೋಯಿತು-ಇತ್ಯಾದಿ.  ಇತು ಆಖ್ಯಾತಪ್ರತ್ಯಯ ಬಂದೆಡೆಯಲ್ಲೆಲ್ಲ ದ ಕಾಲಸೂಚಕ ಪ್ರತ್ಯಯ ಬಂದು ಲೋಪವಾಗಿದೆಯೆಂದು ತಿಳಿಯಬೇಕು.
* ನಪುಂಸಕಲಿಂಗ ಏಕವಚನದಲ್ಲಿ ಉದು, ಬಹುವಚನದಲ್ಲಿ ಉವು ಎಂಬ ಆಖ್ಯಾತ ಪ್ರತ್ಯಯ ಬರುವುದುಂಟು.  ಉದಾಹರಣೆಗೆ:- ತಿಳಿದವು, ತಿಳಿದುವು.  ಈ ಎರಡೂ ರೂಪಗಳು ಸಾಧುಗಳೆಂದು ಭಾವಿಸಬೇಕು.  ಇದರಂತೆ – ಮಾಡುವುವು, ಮಾಡಿದುವು; ತಿಂದವು, ತಿಂದುವು ಇತ್ಯಾದಿ.
* ಬರು, ತಿನ್ನು ಮೊದಲಾದ ಧಾತುಗಳಿಗೆ ಭೂತಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರುವಾಗ ಧಾತುವಿನ ಕೊನೆಯ ಅಕ್ಷರಗಳಿಗೆ (ರು-ನ್ನು ಎಂಬವುಗಳಿಗೆ) ಅನುಸ್ವಾರವು ಆದೇಶವಾಗಿ ಬರುವುದು.
+ ಇಲ್ಲಿ ಕ್ರಮವಾಗಿ ಉದು, ಉವು ಎಂಬ ಆಖ್ಯಾತ ಪ್ರತ್ಯಯಗಳು ಬಂದಿವೆ ಎಂದು ತಿಳಿಯಬೇಕು.
* ವಿಧ್ಯರ್ಥದ ಮಧ್ಯಮಪುರುಷ ಏಕವಚನದಲ್ಲಿ ಅಲಿ ಎಂಬ ಆಖ್ಯಾತ ಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು.  ಆಗ ಧಾತುವೇ ಕ್ರಿಯಾಪದದ ರೂಪದಲ್ಲಿ ಉಳಿಯುವುದು.  ಕೆಲವರು ಇಲ್ಲಿ ಯಾವ ಆಖ್ಯಾತಪ್ರತ್ಯಯವೂ ಬರುವುದಿಲ್ಲವೆಂದು ಹೇಳುವರು.
+ ಉತ್ತಮಪುರುಷ ಬಹುವಚನದಲ್ಲಿ ಮಾಡುವಾ, ಮಾಡೋಣ, ಮಾಡುವ-ಇತ್ಯಾದಿ ರೂಪಗಳು ಪ್ರಯೋಗದಲ್ಲಿ ಸಿಗುತ್ತವೆ.  ಉದಾಹರಣೆಗೆ:- ನಾವು ಮಾಡೋಣ, ನಾವು ಮಾಡುವಾ, ನಾವು ಮಾಡುವ.  ಕೆಲವು ಕಡೆ ಉವ ಪ್ರತ್ಯಯ ಸೇರಿ ತಿಳಿಯುವ ಎಂದೂ, ಉವಾ ಸೇರಿ ತಿಳಿಯುವಾ ಎಂದೂ ರೂಪಗಳಾಗುವುವು.
* ತರು-ಬರು ಧಾತುಗಳು ನಿಷೇಧಾರ್ಥದಲ್ಲಿ ತಾರ್, ಬಾರ್ ರೂಪಗಳನ್ನು ಪಡೆಯುತ್ತವೆ ಎಂದು ತಿಳಿಯಬೇಕು.  ತರು ಧಾತುವಿನ ರೂಪಗಳು- ತಾರನು, ತಾರರು, ತಾರಳು, ತಾರರು, ತಾರದು, ತಾರವು, ತಾರೆ, ತಾರಿರಿ, ತಾರೆನು, ತಾರೆವು –ಎಂದಾಗುತ್ತವೆಂದು ತಿಳಿಯಬೇಕು.


ಇದುವರೆಗೆ ವರ್ತಮಾನ, ಭೂತ, ಭವಿಷ್ಯತ್ ಕಾಲದಲ್ಲಿ ಆಗುವ ಕ್ರಿಯಾಪದ ರೂಪಗಳನ್ನೂ ವಿಧಿ, ನಿಷೇಧ, ಸಂಭಾವನಾರ್ಥಗಳಲ್ಲಿ ಆಗುವ ಕ್ರಿಯಾಪದರೂಪಗಳನ್ನೂ ಸಾಮಾನ್ಯವಾಗಿ ತಿಳಿದಿದ್ದೀರಿ.  ಈಗ ಆ ಆರೂ ರೂಪಗಳಲ್ಲಿನ ಕೆಲವು ವಿಶೇಷ ರೂಪಗಳನ್ನು ಕೆಳಗೆ ವಿವರಿಸಲಾಗಿದೆ.  ಅವನ್ನು ಗಮನವಿಟ್ಟು ನೋಡಿರಿ.
() ವರ್ತಮಾನ ಕಾಲದ ಕೆಲವು ವಿಶೇಷ ಪ್ರಯೋಗಗಳು

ಇರು ಧಾತುವು ವರ್ತಮಾನಕಾಲದಲ್ಲಿ ಎರಡು ರೂಪ ಧರಿಸುತ್ತದೆ. ಉತ್ತ ಎಂಬ ಕಾಲಸೂಚಕ ಪ್ರತ್ಯಯ ಬರುವ ಮತ್ತು ಬರದಿರುವ ರೂಪಗಳು
ಪ್ರಥಮಪುರುಷ (ಅವನು) (ಅವಳು)
(ಅದು)
(i) ಇರುತ್ತಾನೆ-ಇರುತ್ತಾರೆ ಇರುತ್ತಾಳೆ-ಇರುತ್ತಾರೆ
ಇರುತ್ತದೆ-ಇರುತ್ತವೆ
(ii) ಇದ್ದಾನೆ-ಇದ್ದಾರೆ ಇದ್ದಾಳೆ-ಇದ್ದಾರೆ
ಇದೆ-ಇವೆ
ಮಧ್ಯಮಪುರುಷ (ನೀನು)ಇರುತ್ತೀಯೆ-ಇರುತ್ತೀರಿಇದ್ದೀಯೆ-ಇದ್ದೀರಿ
ಉತ್ತಮಪುರುಷ (ನಾನು)ಇರುತ್ತೇನೆ-ಇರುತ್ತೇವೆಇದ್ದೇನೆ-ಇದ್ದೇವೆ
ಮೇಲಿನ ಇರು ಧಾತುವಿನ ಎರಡು ಬಗೆಯ ರೂಪಗಳನ್ನೂ ನೋಡಿದರೆ, ನಮಗೆ ಗೊತ್ತಾಗುವ ಅಂಶವಾವುದೆಂದರೆ, ಇರು ಧಾತುವಿಗೆ ವರ್ತಮಾನಕಾಲದಲ್ಲಿ ಉತ್ತ ಎಂಬ ಕಾಲಸೂಚಕ ಪ್ರತ್ಯಯವಿಲ್ಲದೆಯೆ ಇರು+ದ್+ದ+ಆನೆ=ಇದ್ದಾನೆ ಇತ್ಯಾದಿ ರೂಪವನ್ನೂ ಧರಿಸುತ್ತದೆ.  ಇನ್ನೊಂದು ಉತ್ತ ಎಂಬ ಕಾಲಸೂಚಕ ಪ್ರತ್ಯಯ ಸಮೇತ ರೂಪಧರಿಸುತ್ತದೆ.  ಕೆಲವರು-ಇರುತ್ತೆ, ಬರುತ್ತೆ, ತಿನ್ನುತ್ತೆ ಇತ್ಯಾದಿಯಾಗಿ ಬರೆಯುವ ಮಾತನಾಡುವ ರೂಢಿಯುಂಟು.  ಇದು ತಪ್ಪಾದ ಪ್ರಯೋಗವೇ ಆಗಿದೆ.

(iii) ವರ್ತಮಾನ ಕಾಲದಲ್ಲಿ ಉಂಟು ಎಂಬ ಕ್ರಿಯಾರ್ಥಕಾವ್ಯಯದ ರೂಪಗಳು
(ಅ) ಅವನು ಮನೆಯಲ್ಲಿ ಇರುತ್ತಾನೆ.  ಈ ವಾಕ್ಯದಲ್ಲಿ ಇರುತ್ತಾನೆ ಎಂಬ ಕ್ರಿಯಾಪದಕ್ಕೆ ಪ್ರತಿಯಾಗಿ,
(ಆ) ಅವನು ಮನೆಯಲ್ಲಿ ಉಂಟು-ಹೀಗೆ ಉಂಟು ಎಂಬ ರೂಪ ಹೇಳುವುದುಂಟು.  ಸಾಮಾನ್ಯವಾಗಿ ಈ ರೂಪವನ್ನು ವರ್ತಮಾನಕಾಲದಲ್ಲಿ ಪ್ರಥಮಪುರುಷ, ಮಧ್ಯಮಪುರುಷ ಉತ್ತಮಪುರುಷ ಎಲ್ಲ ಕ್ರಿಯಾಪದಗಳ ರೂಪದಲ್ಲೂ ಹೇಳುತ್ತೇವೆ.
ಉದಾಹರಣೆಗೆ:-
(i) ಪ್ರಥಮಪುರುಷಕ್ಕೆ-
ಏಕವಚನಬಹುವಚನ
ಪುಲ್ಲಿಂಗ (ಅವನು)-ಅವನು ಮನೆಯಲ್ಲಿ ಉಂಟುಅವರು ಮನೆಯಲ್ಲಿ ಉಂಟು
ಸ್ತ್ರೀಲಿಂಗ (ಅವಳು)-ಅವಳು ಮನೆಯಲ್ಲಿ ಉಂಟುಅವರು ಮನೆಯಲ್ಲಿ ಉಂಟು
ನಪುಂಸಕಲಿಂಗ (ಅದು)-ಅದು ಮನೆಯಲ್ಲಿ ಉಂಟುಅವು ಮನೆಯಲ್ಲಿ ಉಂಟು

(ii) ಮಧ್ಯಮಪುರುಷಕ್ಕೆ-
ಏಕವಚನ-ನೀನು ಮನೆಯಲ್ಲಿ ಉಂಟು ಎಂದು ಭಾವಿಸಿದ್ದೆ (ಇರುತ್ತೀಯೆ ಎಂದು)
ಬಹುವಚನ-ನೀವು ಮನೆಯಲ್ಲಿ ಉಂಟೆಂದು ಭಾವಿಸಿದ್ದೆ (ಇರುತ್ತೀರಿ ಎಂದು)

(iii) ಉತ್ತಮಪುರುಷಕ್ಕೆ-
ಏಕವಚನ-ನಾನು ಮನೆಯಲ್ಲಿ ಉಂಟು ಎಂದು ಬಗೆದಿದ್ದೆಯಾ? (ಇರುತ್ತೇನೆಂದು)
ಬಹುವಚನ-ನಾವು ಮನೆಯಲ್ಲಿ ಉಂಟು ಎಂದು ಬಗೆದಿದ್ದೆಯಾ? (ಇರುತ್ತೇವೆ ಎಂದು)
ಹೀಗೆ – ಉಂಟು ಎಂಬ ರೂಪವು ಇರು ಎಂಬ ಧಾತುವಿನ ವರ್ತಮಾನ ಕಾಲದ ಎಲ್ಲ ಕ್ರಿಯಾಪದಗಳ ರೂಪದಲ್ಲಿ ಬರುವುದುಂಟು.  ಇದನ್ನು ಕ್ರಿಯಾರ್ಥಕಾವ್ಯಯ ಎಂದು ಕರೆಯುವರು.*

() ಭೂತಕಾಲದ ಕೆಲವು ವಿಶೇಷ ರೂಪಗಳು
(i) ಮಾಡು, ಓಡು, ತೀಡು, ಕೂಡು ಇತ್ಯಾದಿ ಉಕಾರಾಂತ ಧಾತುಗಳಿಗೆ ಭೂತಕಾಲ ಸೂಚಕ ದ ಎಂಬ ಪ್ರತ್ಯಯವು ಆಗಮವಾಗಿ ಬಂದಾಗ ಧಾತುವಿನ ಕೊನೆಯು ಉ ಕಾರಕ್ಕೆ ಇ ಕಾರವು ಆದೇಶವಾಗಿ ಬರುವುದು.
ಮಾಡು++ಅನು=ಮಾಡಿದನು
ಮಾಡು++ಅರು=ಮಾಡಿದರು
ಮಾಡು++ಅಳು=ಮಾಡಿದಳು
ಮಾಡು++ಇತು=ಮಾಡಿತು
-ಇತ್ಯಾದಿ
ಇದರಂತೆ-ಓಡಿದನು, ತೀಡಿದನು, ಕೂಡಿದನು, -ಇತ್ಯಾದಿ ರೂಪಗಳನ್ನು ತಿಳಿಯಬೇಕು.
(ii) ಇರು, ತರು, ಬರು – ಇತ್ಯಾದಿ ಕೆಲವು ಉಕಾರಾಂತ ಧಾತುಗಳಾದರೋ ಈ ಮೊದಲು ಹೇಳಿದ ಉಕಾರಾಂತ ಧಾತುಗಳಾದ ಮಾಡು, ಓಡು-ಇತ್ಯಾದಿಗಳಂತೆ ರೂಪ ಧರಿಸುವುದಿಲ್ಲ.
ಉದಾಹರಣೆಗೆ:-
ಇರು ಧಾತು ತರು ಧಾತು ಬರು ಧಾತು
ಇದ್ದನು-ಇದ್ದರುತಂದನು-ತಂದರುಬಂದನು-ಬಂದರು
ಇದ್ದಳು-ಇದ್ದರುತಂದಳು-ತಂದರುಬಂದಳು-ಬಂದರು
ಇತ್ತು-ಇದ್ದವುತಂದಿತು-ತಂದವುಬಂದಿತು-ಬಂದವು
ಇದ್ದೀಯೆ-ಇದ್ದೀರಿತಂದೆ-ತಂದಿರಿಬಂದೆ-ಬಂದಿರಿ
ಇದ್ದೇನೆ-ಇದ್ದೇವೆತಂದೆನು-ತಂದೆವುಬಂದೆನು-ಬಂದೆವು
ಮೇಲಿನ ಉದಾಹರಣೆಗಳನ್ನು ನೋಡಿದಾಗ ಇರು ಧಾತುವಿಗೆ ಭೂತಕಾಲದ ಆಖ್ಯಾತಪ್ರತ್ಯಯಗಳೂ ಕಾಲಸೂಚಕ ಪ್ರತ್ಯಯವೂ ಬಂದಾಗ ಇದ್ ಎಂಬ ರೂಪವು ನಪುಂಸಕಲಿಂಗ ಏಕವಚನದ ವಿನಾ ಎಲ್ಲಕಡೆಗೂ ಆಗುವುದು.  ನಪುಂಸಕಲಿಂಗ ಏಕವಚನದಲ್ಲಿ ಮಾತ್ರ ಕ್ರಿಯಾಪದವು ಇತ್ತು ಎಂಬ ರೂಪ ಹೊಂದುವುದು.
ತರು, ಬರು, ಧಾತುಗಳ ಕೊನೆಯ ರು ಕಾರಗಳಿಗೆ ಅನುಸ್ವಾರವು ಆದೇಶವಾಗಿ ಬಂದು ತಂ-ಬಂ ಎಂಬ ರೂಪ ಧರಿಸಿದ ಮೇಲೆ, ಕಾಲಸೂಚಕ ಪ್ರತ್ಯಯ ಆಖ್ಯಾತ ಪ್ರತ್ಯಯಗಳು ಕ್ರಮವಾಗಿ ಸೇರುತ್ತವೆ.
(iii) ಕೀಳು, ಬೀಳು, ಏಳು, ಬಾಗು - ಇತ್ಯಾದಿ ಮೊದಲನೆಯ ಸ್ವರವು ದೀರ್ಘವಾಗಿ ಉಳ್ಳ ಧಾತುಗಳ ರೂಪಗಳು ಈ ಕೆಳಗಿನಂತೆ ಆಗುತ್ತವೆ-
() ಕೀಳು ಧಾತು () ಬೀಳು ಧಾತು () ಏಳು ಧಾತು () ಬಾಗು ಧಾತು
ಕಿತ್ತನು-ಕಿತ್ತರುಬಿದ್ದನು-ಬಿದ್ದರುಎದ್ದನು-ಎದ್ದರುಬಗ್ಗಿದನು-ಬಗ್ಗಿದರು
ಕಿತ್ತಳು-ಕಿತ್ತರುಬಿದ್ದಳು-ಬಿದ್ದರುಎದ್ದಳು-ಎದ್ದರುಬಗ್ಗಿದಳು-ಬಗ್ಗಿದರು
ಕಿತ್ತಿತು-ಕಿತ್ತವುಬಿದ್ದಿತು-ಬಿದ್ದವುಎದ್ದಿತು-ಎದ್ದವುಬಗ್ಗಿತು-ಬಗ್ಗಿದವು
ಕಿತ್ತೆ-ಕಿತ್ತಿರಿಬಿದ್ದೆ-ಬಿದ್ದಿರಿಎದ್ದೆ-ಎದ್ದಿರಿಬಗ್ಗಿದೆ-ಬಗ್ಗಿದಿರಿ
ಕಿತ್ತೆನು-ಕಿತ್ತೆವುಬಿದ್ದೆನು-ಬಿದ್ದೆವುಎದ್ದೆನು-ಎದ್ದೆವುಬಗ್ಗಿದೆನು-ಬಗ್ಗಿದೆವು

(iv) ಕೊಡು, ಬಿಡು, ಸುಡು, ಉಡು, ತೊಡು, ಇಡು-ಮೊದಲಾದ ಡು ಕಾರಾಂತಗಳಾದ ಧಾತುಗಳ ಭೂತಕಾಲದ ರೂಪಗಳು-
() ಕೊಡು ಧಾತು () ಬಿಡು ಧಾತು () ಸುಡು ಧಾತು
ಕೊಟ್ಟನು-ಕೊಟ್ಟರುಬಿಟ್ಟನು-ಬಿಟ್ಟರುಸುಟ್ಟನು-ಸುಟ್ಟರು
ಕೊಟ್ಟಳು-ಕೊಟ್ಟರುಬಿಟ್ಟಳು-ಬಿಟ್ಟರುಸುಟ್ಟಳು-ಸುಟ್ಟರು
ಕೊಟ್ಟಿತು-ಕೊಟ್ಟವುಬಿಟ್ಟಿತು-ಬಿಟ್ಟವುಸುಟ್ಟಿತು-ಸುಟ್ಟವು
ಕೊಟ್ಟೆ-ಕೊಟ್ಟಿರಿಬಿಟ್ಟೆ-ಬಿಟ್ಟಿರಿಸುಟ್ಟೆ-ಸುಟ್ಟಿರಿ
ಕೊಟ್ಟೆನು-ಕೊಟ್ಟೆವುಬಿಟ್ಟೆನು-ಬಿಟ್ಟೆವುಸುಟ್ಟೆನು-ಸುಟ್ಟೆವು

() ಉಡು ಧಾತು () ತೊಡು ಧಾತು () ಇಡುಧಾತು
ಉಟ್ಟನು-ಉಟ್ಟರುತೊಟ್ಟನು-ತೊಟ್ಟರುಇಟ್ಟನು-ಇಟ್ಟರು
ಉಟ್ಟಳು-ಉಟ್ಟರುತೊಟ್ಟಳು-ತೊಟ್ಟರುಇಟ್ಟಳು-ಇಟ್ಟರು
ಉಟ್ಟಿತು-ಉಟ್ಟವುತೊಟ್ಟಿತು-ತೊಟ್ಟವುಇಟ್ಟಿತು-ಇಟ್ಟವು
ಉಟ್ಟೆ-ಉಟ್ಟಿರಿತೊಟ್ಟೆ-ತೊಟ್ಟಿರಿಇಟ್ಟೆ-ಇಟ್ಟಿರಿ
ಉಟ್ಟೆನು-ಉಟ್ಟೆವುತೊಟ್ಟೆನು-ತೊಟ್ಟೆವುಇಟ್ಟೆನು-ಇಟ್ಟೆವು
ಮೇಲಿನ ಎಲ್ಲ ರೂಪಗಳನ್ನು ನೋಡಿದರೆ ಧಾತುವಿನ ಕೊನೆಯ ಡು ಕಾರಕ್ಕೆ ಟ್ ಕಾರವೂ ಭೂತಕಾಲ ಸೂಚಕವಾದ ದ ಕಾರಕ್ಕೆ ಟ ಕಾರವೂ ಎಲ್ಲ ಕಡೆಗೂ ಬಂದಿರುವುದನ್ನು ತಿಳಿಯಬಹುದು.

() ಭವಿಷ್ಯತ್ ಕಾಲದ ಕೆಲವು ವಿಶೇಷರೂಪಗಳು
ಭವಿಷ್ಯತ್ ಕಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಬದಲಾವಣೆಗಳಾವುವೂ ಆಗುವುದಿಲ್ಲ.  ನಪುಂಸಕಲಿಂಗದ ಏಕವಚನದಲ್ಲಿ ಅದು ಅಥವಾ ಉದು ಎಂಬ ಆಖ್ಯಾತಪ್ರತ್ಯಯವೂ, ಬಹುವಚನದಲ್ಲಿ ಅವು ಅಥವಾ ಉವು ಎಂಬ ಆಖ್ಯಾತ ಪ್ರತ್ಯಯಗಳೂ ಧಾತುಗಳ ಮೇಲೆ ಸೇರುತ್ತವೆ.
ಉದಾಹರಣೆಗೆ:-
ಮಾಡುವದು (ಅದು-ಆಖ್ಯಾತಪ್ರತ್ಯಯ)
ಮಾಡುವುದು (ಉದು-ಆಖ್ಯಾತಪ್ರತ್ಯಯ)
ಮಾಡುವವು (ಅವು-ಆಖ್ಯಾತಪ್ರತ್ಯಯ)
ಮಾಡುವುವು (ಉವು-ಆಖ್ಯಾತಪ್ರತ್ಯಯ)

ಕ್ರಿಯಾಪದಗಳ ಕಾಲಪಲ್ಲಟಗೊಳ್ಳುವಿಕೆ
ಅವನು ಘಂಟೆಯ ನಂತರ ಊಟ ಮಾಡುವನು (ಭವಿಷ್ಯತ್‌ಕಾಲ)
ಅವನು ಘಂಟೆಯ ನಂತರ ಊಟ ಮಾಡುತ್ತಾನೆ (ವರ್ತಮಾನಕಾಲ)
ಭವಿಷ್ಯತ್‌ಕಾಲದ ಒಂದು ಕ್ರಿಯೆಯು ವರ್ತಮಾನಕಾಲಕ್ಕೆ ತೀರ ಸಮೀಪದಲ್ಲಿ ಇದ್ದರೆ ಅದನ್ನು ವರ್ತಮಾನಕಾಲದಂತೆಯೇ ಪ್ರಯೋಗಮಾಡುವುದು ರೂಢಿಯಲ್ಲಿದೆ.  ಮೇಲಿನ ಉದಾಹರಣೆಗಳಲ್ಲಿ ಘಂಟೆಯ ನಂತರ ಊಟ ಮಾಡುವನು ಎಂಬುದು ಭವಿಷ್ಯತ್ ಕಾಲವೇ ಆಗಿದೆ.  ಆದರೆ ಅದನ್ನು ಘಂಟೆಯ ನಂತರ ಊಟ ಮಾಡುತ್ತಾನೆ ಎಂದು ವರ್ತಮಾನ ಕಾಲದಲ್ಲಿಯೇ ಪ್ರಯೋಗ ಮಾಡುವುದು ರೂಢಿ.
ಅವನು ನಾಳೆಯ ದಿನ ಬರುವನು (ಭವಿಷ್ಯತ್ ಕಾಲ)
ಅವನು ನಾಳೆಯ ದಿನ ಬರುತ್ತಾನೆ (ವರ್ತಮಾನಕಾಲ)
(೬೭) ಒಂದು ಕಾಲದಲ್ಲಿ ನಡೆಯುವ ಕ್ರಿಯೆಯನ್ನು ಬೇರೆ ಕಾಲದ ಕ್ರಿಯಾ ರೂಪದಿಂದ ಹೇಳುವ ಪ್ರಯೋಗಗಳು ಭಾಷೆಯಲ್ಲಿ ಉಂಟು. ಇದನ್ನೇ ಕಾಲಪಲ್ಲಟ* ಎಂದು ಹೇಳುವರು.
ಭವಿಷ್ಯತ್‌ಕಾಲದ ಕ್ರಿಯಾಪದಗಳು ವರ್ತಮಾನಕಾಲದಲ್ಲೂ, ವರ್ತಮಾನಕಾಲದ ಕ್ರಿಯಾಪದಗಳು ಭವಿಷ್ಯತ್‌ಕಾಲದಲ್ಲೂ ಪ್ರಯೋಗವಾಗುತ್ತವೆ.
(i) ವರ್ತಮಾನಕಾಲದ ಕ್ರಿಯೆಗೆ ಭವಿಷ್ಯತ್ತಿನ ಕ್ರಿಯೆ ಹೇಳುವುದಕ್ಕೆ-
ಉದಾಹರಣೆ:-
(ಅ) ಅವನು ಒಳಗೆ ಊಟ ಮಾಡುವನು.
(ಆ) ಅಗೋ ಅಲ್ಲಿ ಬರುವನು, ನೋಡು.
ಇಲ್ಲಿ ಒಳಗೆ ಊಟ ಮಾಡುತ್ತಾನೆ, ಅಗೋ ಬರುತ್ತಾನೆ ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗಿಸಬೇಕಾದ ಕ್ರಿಯಾಪದ ಭವಿಷ್ಯತ್ತಿನಲ್ಲಿ ಪ್ರಯೋಗಗೊಂಡಿದೆ.
(ii) ಭವಿಷ್ಯತ್‌ಕಾಲದ ಕ್ರಿಯೆ ಹೇಳುವುದಕ್ಕೆ ವರ್ತಮಾನಕಾಲದ ಕ್ರಿಯಾಪದ ಪ್ರಯೋಗಕ್ಕೆ-
ಉದಾಹರಣೆ:-
(ಅ) ಅವನು ನಾಳೆ ಕೊಡುತ್ತಾನೆ.
(ಆ) ಮುಂದಿನವಾರ ಬರುತ್ತೇನೆ.  ಇತ್ಯಾದಿ.

() ವಿಧ್ಯರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು
(i) ವಿಧ್ಯರ್ಥದ ಪ್ರಥಮಪುರುಷ ಪುಲ್ಲಿಂಗ, ಸ್ತ್ರೀಲಿಂಗ ನಪುಂಸಕಲಿಂಗ, ಎರಡೂ ವಚನಗಳು ಇವುಗಳಲ್ಲೆಲ್ಲಾ ಅಲಿ ಎಂಬ ಆಖ್ಯಾತಪ್ರತ್ಯಯ ಸಾಮಾನ್ಯವಾಗಿ ಎಲ್ಲ ಧಾತುಗಳಿಗೂ ಬರುತ್ತದೆ.
ಏಕವಚನಬಹುವಚನ
ಪ್ರಥಮಪುರುಷಅವನು ಮಾಡಲಿಅವರು ಮಾಡಲಿ
ಪ್ರಥಮಪುರಷಅವಳು ಮಾಡಲಿಅವರು ಮಾಡಲಿ
ಪ್ರಥಮಪುರುಷಅದು ಮಾಡಲಿಅವು ಮಾಡಲಿ

(ii) ಮಧ್ಯಮಪುರುಷ ಏಕವಚನದಲ್ಲಿ ಮಾತ್ರ ಕೇವಲ ಧಾತುವೇ ಕ್ರಿಯಾಪದವಾಗುತ್ತದೆ.
ನೀನು ಪುಸ್ತಕ ಓದು (ಧಾತುವೂ ಓದು)
ನೀನು ಈ ಕಾರ‍್ಯ ಮಾಡು
ನೀನು ಕಲ್ಲನ್ನು ಹೊರು
ಓದು, ಮಾಡು, ಹೊರು-ಎಂಬುವು ಧಾತುರೂಪಗಳೂ ಹೌದು.  ವಿಧ್ಯರ್ಥದ ಮಧ್ಯಮಪುರುಷ ಏಕವಚನದ ಕ್ರಿಯಾಪದಗಳೂ ಹೌದು.  ಆದರೆ ಇಲ್ಲಿ ಅಲಿ ಎಂಬ ಆಖ್ಯಾತಪ್ರತ್ಯಯವು ಬಂದು ಲೋಪವಾಗಿದೆಯೆಂದು ಭಾವಿಸಬೇಕು.ಷಿ
(iii) ತರು, ಬರು, ಕೊಯ್, ಬಯ್, ನೆಯ್ ಎಂಬ ಧಾತುಗಳೂ ಏಕಾಕ್ಷರ ಧಾತುಗಳಾದ ಸಾ, ನೋ, ಬೇ ಇತ್ಯಾದಿಗಳೂ, ವಿಧ್ಯರ್ಥದ ಮಧ್ಯಮ ಪುರುಷ ಏಕವಚನದಲ್ಲಿ ಧಾತುರೂಪವಾಗಿಯೇ ಉಳಿಯದೆ ಬೇರೆ ರೂಪ ಧರಿಸುತ್ತವೆ.
ಉದಾಹರಣೆಗೆ:-
(೧)      ತರು    ನೀನು ಆ ಕಲ್ಲನ್ನು ತಾ* (ತರು ಧಾತು ತಾ ರೂಪ)
(೨)      ಬರು    ನೀನು ಬೇಗ ಬಾ+ (ಬರು ಧಾತು ಬಾ ರೂಪ)
(೩)      ಕೊಯ್  ನೀನು ಹೂವು ಕೊಯ್ಯಿ (ಕೊಯ್+ಯ್+ಇ=ಕೊಯ್ಯಿ)
(೪)      ಬಯ್   ನೀನು ಬಯ್ಯಿ (ಬಯ್+ಯ್+ಇ=ಬಯ್ಯಿ)
(೫)      ನೆಯ್   ನೀನು ಬಟ್ಟೆಯನ್ನು ನೆಯ್ಯಿ (ನೆಯ್+ಯ್+ಇ=ನೆಯ್ಯಿ)
(೬)      ಸಾ      ನೀನು ಸಾಯಿ (ಸಾಯ್+ಇ=ಸಾಯಿ)
(೭)      ನೋ    ನೀನು ಗಾಯದಿಂದ ನೋಯಿ (ನೋಯ್+ಇ=ನೋಯಿ)
(೮)      ಬೇ      ನೀನು ಬೆಂಕಿಯಿಂದ ಬೇಯಿ (ಬೇಯ್+ಇ=ಬೇಯಿ)
(iv) ಮಧ್ಯಮಪುರುಷ ಏಕವಚನ ಬಹುವಚನಗಳಲ್ಲಿ ಕೆಲವು ಸಲ ಬಾ, ಬನ್ನಿರಿ ಎಂಬುವಕ್ಕೆ ಪ್ರತಿಯಾಗಿ ಬರುವುದು ಮತ್ತು ಕೊಡು, ಕೊಡಿರಿ ಎಂಬುವಕ್ಕೆ ಪ್ರತಿಯಾಗಿ ಕೊಡುವುದು ಎಂಬ ಒಂದೇ ರೂಪವನ್ನು ಪ್ರಯೋಗಿಸುವುದುಂಟು.
ಉದಾಹರಣೆಗೆ:-
(i) ನೀನು ಈ ದಿನ ಊಟಕ್ಕೆ ಬರುವುದು      (ಬಾ ಎಂಬುದಕ್ಕೆ ಪ್ರತಿಯಾಗಿ)
(ii)     ನೀವು ಈ ದಿನ ಊಟಕ್ಕೆ ಬರುವುದು (ಬನ್ನಿರಿ ಎಂಬುದಕ್ಕೆ ಪ್ರತಿಯಾಗಿ)
(iii)   ನೀನು ಎಲ್ಲರಿಗೂ ಕೊಡುವುದು      (ಕೊಡು ಎಂಬುದಕ್ಕೆ ಪ್ರತಿಯಾಗಿ
(iv)     ನೀವು ಎಲ್ಲರಿಗೂ ಕೊಡುವುದು       (ಕೊಡಿರಿ ಎಂಬುದಕ್ಕೆ ಪ್ರತಿಯಾಗಿ)
ಸಾಮಾನ್ಯವಾಗಿ ಈ ರೂಪಗಳನ್ನು ಗೌರವಾರ್ಥದಲ್ಲಿ ಎಲ್ಲ ಧಾತುಗಳ ಮೇಲೂ ಉವುದು ಪ್ರತ್ಯಯ ಹಚ್ಚಿ ಹೇಳುವುದುಂಟು.  ಆಗ ಏಕವಚನ, ಬಹುವಚನಗಳಲ್ಲಿ ಈ ರೂಪ ಒಂದೇ ರೀತಿಯಿರುತ್ತದೆ.
(v) ಉತ್ತಮಪುರುಷ ಏಕವಚನದಲ್ಲಿ ಮಾತ್ರ ಪ್ರತ್ಯಯವೇ ಇಲ್ಲವೆಂದರೆ ತಪ್ಪಲ್ಲ. ಏಕೆಂದರೆ ತನಗೆ ತಾನೇ ಆಜ್ಞೆ, ಆಶೀರ್ವಾದ ವಿಧಿಸಿಕೊಳ್ಳುವುದು ಹೇಗೆ? ಆದರೂ ಮಾಡುವೆ ನೋಡುವೆ ಎಂದು ವ್ಯಾಕರಣದಲ್ಲಿ ಹೇಳುವುದು ವಾಡಿಕೆ. ಬಹುವಚನದಲ್ಲಿ ಮಾಡೋಣ, ನೋಡೋಣ, ಮಾಡುವಾ, ನೋಡುವಾ-ಇತ್ಯಾದಿ ಕ್ರಿಯಾಪದಗಳನ್ನು ಪ್ರಯೋಗಿಸುವುದುಂಟು. ಆದರೆ ಮಾಡುವಾ ನೋಡುವಾ ಇತ್ಯಾದಿ ಪ್ರಯೋಗಗಳು ಹೊಸಗನ್ನಡದಲ್ಲಿ ರೂಢಿಯಲ್ಲಿಲ್ಲ.
(vi) ವಾಕ್ಯವು ಪ್ರಶ್ನಾರ್ಥಕವಾಗಿದ್ದರೆ ಮಾತ್ರ ವಿಧ್ಯರ್ಥದ ಉತ್ತಮಪುರುಷ ಏಕವಚನ ದಲ್ಲಿ ಅಲಿ ಎಂಬ ಆಖ್ಯಾತಪ್ರತ್ಯಯವು ಬರುವುದುಂಟು.
ಉದಾಹರಣೆಗೆ:-
(ಅ) ತಾಯಿಯ ಹಾಲೇ ವಿಷವಾಗಿ ಕೊಂದರೆ, ಯಾರನ್ನು ದೂರಲಿ?
(ಆ) ತಂದೆಯೇ ಬೇಡವೆಂದರೆ, ಹೇಗೆ ಹೋಗಲಿ?
(ಇ) ಬೇಡವೆಂದ ಮೇಲೆ ನಾನು ಹೇಗೆ ಕೊಡಲಿ?     -ಇತ್ಯಾದಿ

() ನಿಷೇಧಾರ್ಥದಲ್ಲಿ ಬರುವ ಕೆಲವು ವಿಶೇಷರೂಪಗಳು
(i) ಮಾಡನು, ಮಾಡರು, ಮಾಡಳು, ಮಾಡರು, ಮಾಡದು, ಮಾಡವು, ಮಾಡೆ, ಮಾಡಲಿ, ಮಾಡೆನು, ಮಾಡೆವು.  ಇವೆಲ್ಲ ಮಾಡು ಧಾತುವಿನ ನಿಷೇಧಾರ್ಥಕ ಕ್ರಿಯಾಪದಗಳು.  ಈ ನಿಷೇಧರೂಪಗಳ ಬಳಕೆಯನ್ನು ಈಗೀಗ ಕನ್ನಡದಲ್ಲಿ ಮಾಡುವುದು ಕಡಿಮೆಯಾಗಿದೆ.  ಅವಕ್ಕೆ ಪ್ರತಿಯಾಗಿ ಇಲ್ಲ ಎಂಬ ಕ್ರಿಯಾರ್ಥಕಾವ್ಯಯವನ್ನು ಕೃದಂತಕ್ಕೆ ಜೋಡಿಸಿ ನಿಷೇಧರೂಪ ಹೇಳುವುದೇ ಹೆಚ್ಚು.  ಉದಾಹರಣೆಗೆ ಈ ಕೆಳಗೆ ನೋಡಿರಿ-
(ii) ಅವನು ಮಾಡನು -  ಎಂಬುದನ್ನು ಅವನು ಮಾಡುವುದಿಲ್ಲ ಮಾಡುವುದು+ಇಲ್ಲ ಎಂದರೆ ಅವನು ಮಾಡುವುದು ಎಂಬುದು ಇಲ್ಲ.  ಹೀಗೆ ನಿಷೇಧರೂಪ ಹೇಳುತ್ತೇವೆ.
(iii) ಹೀಗೆ ಇಲ್ಲ ಎಂಬ ಕ್ರಿಯಾರ್ಥಕಾವ್ಯಯವನ್ನು ಬಳಸಿ ನಿಷೇಧರೂಪಮಾಡಿ ಹೇಳಲ್ಪಟ್ಟ ರೂಪಗಳು ಏಕವಚನ, ಬಹುವಚನಗಳಲ್ಲೂ ಮೂರು ಲಿಂಗಗಳಲ್ಲೂ ಒಂದೇ ರೀತಿಯಿರುತ್ತವೆ.

ಪ್ರಥಮಪುರುಷದಲ್ಲಿ
(೧) ಪುಲ್ಲಿಂಗ ಏಕವಚನ – ಅವನು ಮಾಡುವುದಿಲ್ಲ (ಮಾಡನು ಎಂಬ ರೂಪಕ್ಕೆ ಪ್ರತಿಯಾಗಿ)
ಬಹುವಚನ -ಅವರು ಮಾಡುವುದಿಲ್ಲ (ಮಾಡರು ಎಂಬುದಕ್ಕೆ ಪ್ರತಿಯಾಗಿ)
(೨) ಸ್ತ್ರೀಲಿಂಗ ಏಕವಚನ – ಅವಳು ತಿನ್ನುವುದಿಲ್ಲ (ತಿನ್ನಳು ಎಂಬುದಕ್ಕೆ ಪ್ರತಿಯಾಗಿ)
ಬಹುವಚನ – ಅವರು ತಿನ್ನುವುದಿಲ್ಲ (ತಿನ್ನರು ಎಂಬುದಕ್ಕೆ ಪ್ರತಿಯಾಗಿ)
(೩) ನಪುಂಸಕ ಲಿಂಗಏಕವಚನ – ಅದು ಬರುವುದಿಲ್ಲ (ಬಾರದು ಎಂಬುದಕ್ಕೆ ಪ್ರತಿಯಾಗಿ)
ಬಹುವಚನ – ಅವು ಬರುವುದಿಲ್ಲ (ಬಾರವು ಎಂಬುದಕ್ಕೆ ಪ್ರತಿಯಾಗಿ)

ಮಧ್ಯಮಪುರುಷದಲ್ಲಿ
(೪)      ನೀನು ನೋಡುವುದಿಲ್ಲ (ನೋಡೆ-ಎಂಬರ್ಥದಲ್ಲಿ)
ನೀವು ನೋಡುವುದಿಲ್ಲ (ನೋಡರಿ-ಎಂಬರ್ಥದಲ್ಲಿ)

ಉತ್ತಮಪುರುಷದಲ್ಲಿ
(೫)      ನಾನು ಬರೆಯುವುದಿಲ್ಲ (ಬರೆಯೆನು-ಎಂಬರ್ಥದಲ್ಲಿ)
ನಾವು ಬರೆಯುವುದಿಲ್ಲ (ಬರೆಯೆವು-ಎಂಬರ್ಥದಲ್ಲಿ)

(iv) ಸಾಮರ್ಥ್ಯವಿಲ್ಲ-ಎಂಬರ್ಥ ತೋರುವಾಗಲೂ, ಸಂಶಯ ತೋರುವಾಗಲೂ *ಆರನು, ಆರಳು, ಆರರು, ಆರದು, ಆರೆ, ಆರಿರಿ+, ಆರೆನು, ಆರೆವು-ಎಂಬ ರೂಪಗಳು ಧಾತುಗಳಿಗೆ ಸೇರುವುವು.  ಹೀಗೆ ಸೇರುವಾಗ ಧಾತುವಿಗೂ, ಆರನು-ಇತ್ಯಾದಿ ನಿಷೇಧ ರೂಪಗಳಿಗೂ ಮಧ್ಯದಲ್ಲಿ ಅಲ್ ಎಂಬುದು ಬರುವುದು.
ಉದಾಹರಣೆಗೆ:-
ಊರನ್ನು ಸೇರಲಾರನು (ಸೇರು+ಅಲ್+ಆರನು)
ಅವಳು ಹೋಗಲಾರಳು (ಹೋಗು+ಅಲ್+ಆರಳು)
ಅವರು ತಿನ್ನಲಾರರು (ತಿನ್ನು+ಅರ್+ಆರರು)
ಅದು ಬರಲಾರದು (ಬರು+ಅಲ್+ಆರದು)
ನೀನು ಬರಲಾರೆ (ಬರು+ಅಲ್+ಆರೆ)
ನೀವು ಇಳಿಯಲಾರಿರಿ (ಇಳಿ+ಅಲ್+ಆರಿರಿಷಿ)
ನಾನು ಓದಲಾರೆನು (ಓದು+ಅಲ್+ಆರೆನು)
ನಾವು ಬರೆಯಲಾರೆವು (ಬರೆ+ಅಲ್+ಆರೆವು)

(v) ನಿಷೇಧಾರ್ಥದಲ್ಲಿ ಆಜ್ಞೆ ತೋರುವಾಗ ಕೂಡದು ಬೇಡ ಎಂಬಿವು ಧಾತುವಿನ ಕೊನೆಯಲ್ಲಿ ಬರುವುದುಂಟು.
ಆಗ ಕೂಡದು ಬಂದಾಗ ಉಕಾರಾಂತ ಧಾತುಗಳ ಉಕಾರಕ್ಕೆ ಅಕಾರವು ಆದೇಶವಾಗಿಯೂ, ಇ-ಎ ಕಾರಾಂತಗಳಾದ ಧಾತುಗಳ ಮುಂದೆ ಅಕಾರವು ಆಗಮವಾಗಿಯೂ ಬರುವುದು. ಬೇಡ ಎಂಬುದು ಬಂದಾಗ ಧಾತುವಿನ ಮುಂದೆ ಉವುದು ಎಂಬುದು ಬರುವುದು.
ಉದಾಹರಣೆಗೆ:-
ನೀನು ಬರಕೂಡದು (ಬರು=ಬರ+ಕೂಡದು)
ನೀವು ಬರಕೂಡದು (ಬರು=ಬರ+ಕೂಡದು)
ಅವನು ಬರಕೂಡದು (ಬರು=ಬರ+ಕೂಡದು)
ಅವಳು ಬರಕೂಡದು (ಬರು=ಬರ+ಕೂಡದು)
ಅವರು ಬರಕೂಡದು (ಬರು=ಬರ+ಕೂಡದು)
ನೀನು ಅರಿಯಕೂಡದು (ಅರಿ+ಅ+ಕೂಡದು)
ನೀವು ಅರಿಯಕೂಡದು (ಅರಿ+ಅ+ಕೂಡದು)
ಅವನು ಅರಿಯಕೂಡದು (ಅರಿ+ಅ+ಕೂಡದು)
ಅವಳು ಅರಿಯಕೂಡದು (ಅರಿ+ಅ+ಕೂಡದು)
ನೀನು ನಡೆಯಕೂಡದು (ನಡೆ+ಅ+ಕೂಡದು)
ನೀವು ನಡೆಯಕೂಡದು (ನಡೆ+ಅ+ಕೂಡದು)
ಅವನು ನಡೆಯಕೂಡದು (ನಡೆ+ಅ+ಕೂಡದು)

(vi) ಬೇಡ ಎಂಬ ನಿಷೇಧ ರೂಪವು ಬರುವುದಕ್ಕೆ- ಉದಾಹರಣೆ:-
ಅವನು ಬರುವುದು ಬೇಡ
ಅವಳು ಬರುವುದು ಬೇಡ
ಅವರು ಬರುವುದು ಬೇಡ
ಅದು ಬರುವುದು ಬೇಡ
ನೀನು ಬರುವುದು ಬೇಡ
ನೀವು ತಿನ್ನುವುದು ಬೇಡ
ನಾನು ಹೋಗುವುದು ಬೇಡ
ನಾವು ನಿಲ್ಲುವುದು ಬೇಡ
ಬೇಡ ಎಂಬ ನಿಷೇಧರೂಪವು ಮಧ್ಯಮಪುರುಷ ಏಕವಚನ, ಬಹುವಚನಗಳಲ್ಲಿ ಬಂದಾಗ, ಕೂಡದು ಎಂಬ ನಿಷೇಧವಾಚಿಯು ಬಂದಾಗ ಯಾವ ರೂಪವನ್ನು ಧಾತುವು ಹೊಂದುವುದೋ ಅದೇ ರೂಪವನ್ನು ಹೊಂದುತ್ತದೆ.  ಬಹುವಚನದಲ್ಲಿ ಬೇಡ ಎಂಬುದರ ಮುಂದೆ ಇರಿ ಪ್ರತ್ಯಯ ಬರುವುದು.
ಉದಾಹರಣೆಗೆ:-
ನೀನು ಬರಬೇಡ
ನೀವು ಬರಬೇಡಿರಿ
ನೀನು ತಿನ್ನಬೇಡ
ನೀವು ತಿನ್ನಬೇಡಿರಿ
ನೀನು ಕರೆಯಬೇಡ
ನೀವು ಕರೆಯಬೇಡಿರಿ

(vii) ನಿಷೇಧಾರ್ಥದಲ್ಲಿ ಇನ್ನೂ ಕೆಲವು ರೂಪಗಳನ್ನು ಗಮನಿಸಿರಿ
೧) ಆರಕ್ಕೆ ಏರ
೩) ಅವನು ಯಾರನ್ನೂ ಬೇಡ
೨) ಮೂರಕ್ಕೆ ಇಳಿಯ
೪) ಹಣ್ಣನ್ನು ತಿನ್ನ
ಏರ, ಇಳಿಯ, ಬೇಡ, ತಿನ್ನ, ಇವು ಕ್ರಮವಾಗಿ ಏರು, ಇಳಿ, ಬೇಡು, ತಿನ್ನು ಧಾತುಗಳ ನಿಷೇಧ ರೂಪಗಳು.  ಇಲ್ಲಿ ಧಾತುವಿನ ಕೊನೆಯ ಸ್ವರಕ್ಕೆ ಅಕಾರವು ಎಲ್ಲ ಕಡೆಗೂ ಆದೇಶವಾಗಿ ಬಂದಿದೆ.  ಈ ಅಕಾರವೇ ನಿಷೇಧಸೂಚಕ ಪ್ರತ್ಯಯವೆನಿಸಿದೆ.  ಇಳಿ ಎನ್ನುವಲ್ಲಿ ಅಕಾರವು ಧಾತುವಿನ ಮುಂದೆ ಬಂದಿದೆ.

() ಸಂಭಾವನಾರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು
(i) ಸಂಭಾವನಾರ್ಥದಲ್ಲಿ ಸಾಮಾನ್ಯವಾಗಿ ದ ಎಂಬ ಪ್ರತ್ಯಯವು ಧಾತುಗಳಿಗೂ, ಆಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಬರುವುದುಂಟು.
ಉದಾಹರಣೆಗೆ:-
ಹೋಗು ಧಾತುಏಕವಚನ – ಹೋದಾನು, ಹೋದಾಳು, ಹೋದೀತು, ಹೋದೀಯೆ, ಹೋದೇನು
ಬಹುವಚನ – ಹೋದಾರು, ಹೋದಾರು, ಹೋದಾವು, ಹೋದೀರಿ, ಹೋದೇವು

ಬರು ಧಾತುಏಕವಚನ  – ಬಂದಾನು, ಬಂದಾಳು, ಬಂದೀತು, ಬಂದೀಯೆ, ಬಂದೇನು
ಬಹುವಚನ – ಬಂದಾರು, ಬಂದಾವು, ಬಂದೀರಿ, ಬಂದೇವು

ತಿನ್ನು ಧಾತುಏಕವಚನ  – ತಿಂದಾನು, ತಿಂದಾಳು, ತಿಂದೀತು, ತಿಂದೀಯೆ, ತಿಂದೇನು
ಬಹುವಚನ – ತಿಂದಾರು, ತಿಂದಾವು, ತಿಂದೀರಿ, ತಿಂದೇವು

ಇರು ಧಾತುಏಕವಚನ  – ಇದ್ದಾನು, ಇದ್ದಾಳು, ಇದ್ದೀತು, ಇದ್ದೀಯೆ, ಇದ್ದೇನು
ಬಹುವಚನ – ಇದ್ದಾರು, ಇದ್ದಾವು, ಇದ್ದೀರಿ, ಇದ್ದೇವು

ಬೇ ಧಾತುಏಕವಚನ  – ಬೆಂದಾನು, ಬೆಂದಾಳು, ಬೆಂದೀತು, ಬೆಂದೀಯೆ, ಬೆಂದೇನು
ಬಹುವಚನ – ಬೆಂದಾರು, ಬೆಂದಾವು, ಬೆಂದೀರಿ, ಬೆಂದೇವು

ಬೀಳು ಧಾತುಏಕವಚನ  – ಬಿದ್ದಾನು, ಬಿದ್ದಾಳು, ಬಿದ್ದೀತು, ಬಿದ್ದೀಯೆ, ಬಿದ್ದೇನು
ಬಹುವಚನ – ಬಿದ್ದಾರು, ಬಿದ್ದಾವು, ಬಿದ್ದೀರಿ, ಬಿದ್ದೇವು

ಮೀ ಧಾತುಏಕವಚನ  – ಮಿಂದಾನು, ಮಿಂದಾಳು, ಮಿಂದೀತು, ಮಿಂದೀಯೆ, ಮಿಂದೇನು
ಬಹುವಚನ – ಮಿಂದಾರು, ಮಿಂದಾವು, ಮಿಂದೀರಿ, ಮಿಂದೇವು

ಮೇಲಿನ ಈ ಕ್ರಿಯಾಪದಗಳನ್ನು ನೋಡಿದಾಗ-ಆನು, ಆಳು, ಆರು, ಈತು, ಆವು, ಈಯೆ, ಈರಿ, ಏನು, ಏವು-ಎಂಬ ಆಖ್ಯಾತಪ್ರತ್ಯಯಕ್ಕೂ ಧಾತುವಿಗೂ ಮಧ್ಯದಲ್ಲಿ ದ ಪ್ರತ್ಯಯ ಬಂದಿರುವುದನ್ನು ಗಮನಿಸಿರಿ.
ಬರು, ತಿನ್ನು ಧಾತುಗಳ ರು ಮತ್ತು ನ್ನು ಅಕ್ಷರಗಳಿಗೆ ಅನುಸ್ವಾರವೂ, ಬೇ, ಮೀ ಇತ್ಯಾದಿ ಏಕಾಕ್ಷರ ಧಾತುಗಳ ದೀರ್ಘವು ಹ್ರಸ್ವವಾಗಿ ಅನುಸ್ವಾರದಿಂದ ಕೂಡಿ ಮಿಂ, ಬೆಂ ಎಂದೂ ರೂಪ ಪಡೆಯುತ್ತವೆ, ಅಂದರೆ ಬಂ, ತಿಂ, ಮಿಂ, ಬೆಂ ಅಕ್ಷರಗಳ ಮುಂದೆ ದಕಾರವೂ ಅದರ ಮುಂದೆ ಆಖ್ಯಾತಪ್ರತ್ಯಯಗಳೂ ಬಂದು ಸಂಭಾವನಾರೂಪಗಳಾಗುತ್ತವೆ ಎಂದು ತಿಳಿಯಬೇಕು.
(ii) ಕೊಡು, ಬಿಡು, ಸುಡು, ಉಡು, ತೊಡು, ಇಡು, ಮೊದಲಾದ ಡು ಕಾರಾಂತ ಆದಿಹ್ರಸ್ವಸ್ವರದಿಂದ ಕೂಡಿದ ಧಾತುಗಳ ಸಂಭಾವನಾರೂಪಗಳು ಭೂತಕಾಲದ ರೂಪಗಳನ್ನು ಹೋಲುತ್ತವೆ.
ಉದಾಹರಣೆಗೆ:-
ಕೊಡು ಧಾತುಏಕವಚನ  – ಕೊಟ್ಟಾನು, ಕೊಟ್ಟಾಳು, ಕೊಟ್ಟೀತು, ಕೊಟ್ಟೀಯೆ, ಕೊಟ್ಟೇನು
ಬಹುವಚನ – ಕೊಟ್ಟಾರು, ಕೊಟ್ಟಾರು, ಕೊಟ್ಟಾವು, ಕೊಟ್ಟೀರಿ, ಕೊಟ್ಟೇವು

ಬಿಡು ಧಾತುಏಕವಚನ  – ಬಿಟ್ಟಾನು, ಬಿಟ್ಟಾಳು, ಬಿಟ್ಟೀತು, ಬಿಟ್ಟೀಯೆ, ಬಿಟ್ಟೇನು
ಬಹುವಚನ – ಬಿಟ್ಟಾರು, ಬಿಟ್ಟಾರು, ಬಿಟ್ಟಾವು, ಬಿಟ್ಟೀರಿ, ಬಿಟ್ಟೇವು

ಸುಡು ಧಾತುಏಕವಚನ  – ಸುಟ್ಟಾನು, ಸುಟ್ಟಾಳು, ಸುಟ್ಟೀತು, ಸುಟ್ಟೀಯೆ, ಸುಟ್ಟೇನು
ಬಹುವಚನ – ಸುಟ್ಟಾರು, ಸುಟ್ಟಾರು, ಸುಟ್ಟಾವು, ಸುಟ್ಟೀರಿ, ಸುಟ್ಟೇವು.

ಉಡು ಧಾತುಏಕವಚನ  – ಉಟ್ಟಾನು, ಉಟ್ಟಾಳು, ಉಟ್ಟೀತು, ಉಟ್ಟೀಯೆ, ಉಟ್ಟೇನು
ಬಹುವಚನ – ಉಟ್ಟಾರು, ಉಟ್ಟಾರು, ಉಟ್ಟಾವು, ಉಟ್ಟೀರಿ, ಉಟ್ಟೇವು.
ಇವುಗಳ ಹಾಗೆಯೇ ಉಳಿದ ಧಾತುರೂಪಗಳನ್ನು ಅರಿಯಬೇಕು

(iii) ಡುಕಾರಾಂತಗಳಾದ – ಮಾಡು, ಕೂಡು, ಬೇಡು, ತೀಡು ಮೊದಲಾದ ಆದಿ ದೀರ್ಘಸ್ವರದಿಂದ ಕೂಡಿದ ಧಾತುಗಳ ರೂಪಗಳು ಮೇಲೆ ಹೇಳಿದ ರೂಪಗಳ ಹಾಗೆ ಆಗುವುದಿಲ್ಲ.  ಅವುಗಳ ರೂಪಗಳನ್ನು ಈ ಕೆಳಗೆ ನೋಡಿರಿ.
ಉದಾಹರಣೆಗೆ:- ಮಾಡಾನು (ಮಾಡಿಯಾನು), ಮಾಡಾಳು (ಮಾಡಿಯಾಳು), ಮಾಡಾರು (ಮಾಡಿಯಾರು),  ಮಾಡೀತು, ಮಾಡಾವು, ಮಾಡಿಯಾವು-ಇತ್ಯಾದಿ.
ಮೇಲಿನ ಉದಾಹರಣೆಗಳಲ್ಲಿ ಮಾಡಾನು ಎಂಬುದು ಮಾಡಿಯಾನು ಎಂದೂ ಆಗುವುದು.  ಆಗ ಧಾತುವಿನ ಉಕಾರಕ್ಕೆ ಇಕಾರಾದೇಶವಾಗುವುದು.  ಸಂಧಿಯ ನಿಯಮದಂತೆ ಯಕಾರವು ಆಗಮವಾಗಿ ಬಂದು ರೂಪಗಳು ಸಿದ್ಧಿಸುವುವು.  ಇದರ ಹಾಗೆ ಉಳಿದ ಧಾತುಗಳ ಸಿದ್ಧರೂಪ ಗಳನ್ನು ತಿಳಿಯಬೇಕು.
(iv) ಸಾಮಾನ್ಯವಾಗಿ ಸಂಭಾವನಾರ್ಥಕ ಕ್ರಿಯಾಪದದ ರೂಪಗಳು ಭೂತಕಾಲದ ರೂಪಗಳನ್ನು ಹೋಲುತ್ತವೆ. ಕೆಳಗೆ ಕೊಟ್ಟಿರುವ ಭೂತಕಾಲದ ಮತ್ತು ಸಂಭಾವನಾರ್ಥದ ಕ್ರಿಯಾಪದ ರೂಪಗಳ ಹೋಲಿಕೆಯನ್ನು ಗಮನಿಸಿರಿ.  (ಪ್ರಥಮಪುರುಷ ಪುಲ್ಲಿಂಗ ರೂಪಗಳನ್ನು ಮಾತ್ರ ಕೊಟ್ಟಿದೆ. ಉಳಿದವುಗಳನ್ನು ಇವುಗಳ ಹಾಗೆಯೇ ತಿಳಿಯಿರಿ.)

ಪ್ರಥಮಪುರುಷ ಪುಲ್ಲಿಂಗ
ಭೂತಕಾಲ ಸಂಭಾವನಾರ್ಥ
ಧಾತುಏಕವಚನಬಹುವಚನಏಕವಚನಬಹುವಚನ
ತಿನ್ನು-ತಿಂದನು-ತಿಂದರುತಿಂದಾನು-ತಿಂದಾರು
ಬರು-ಬಂದನು-ಬಂದರುಬಂದಾನು-ಬಂದಾರು
ತಿರಿ-ತಿರಿದನು-ತಿರಿದರುತಿರಿದಾನು-ತಿರಿದಾರು
ಹುರಿ-ಹುರಿದನು-ಹುರಿದರುಹುರಿದಾನು-ಹುರಿದಾರು
ಸುರಿ-ಸುರಿದನು-ಸುರಿದರುಸುರಿದಾನು-ಸುರಿದಾರು
ತಿಳಿ-ತಿಳಿದನು-ತಿಳಿದರುತಿಳಿದಾನು-ತಿಳಿದಾರು
ಬಿಡು-ಬಿಟ್ಟನು-ಬಿಟ್ಟರುಬಿಟ್ಟಾನು-ಬಿಟ್ಟಾರು
ತೊಡು-ತೊಟ್ಟನು-ತೊಟ್ಟರುತೊಟ್ಟಾನು-ತೊಟ್ಟಾರು
ಕೊಡು-ಕೊಟ್ಟನು-ಕೊಟ್ಟರುಕೊಟ್ಟಾನು-ಕೊಟ್ಟಾರು
ಇಡು-ಇಟ್ಟನು-ಇಟ್ಟರುಇಟ್ಟಾನು-ಇಟ್ಟಾರು
ತೋಡು-ತೋಡಿದನು-ತೋಡಿದರುತೋಡಿಯಾನು
(ತೋಡಾನು
-ತೋಡಿಯಾರು
ತೋಡಾರು)
ಮಾಡು-ಮಾಡಿದನು-ಮಾಡಿದರುಮಾಡಾನು-ಮಾಡಾರು
ತರು-ತಂದನು-ತಂದರುತಂದಾನು-ತಂದಾರು
ಕಾಣು-ಕಂಡನು-ಕಂಡರುಕಂಡಾನು-ಕಂಡಾರು
ಬೇ-ಬೆಂದನು-ಬೆಂದರುಬೆಂದಾನು-ಬೆಂದಾರು
ಕಡಿ-ಕಡಿದನು-ಕಡಿದರುಕಡಿದಾನು-ಕಡಿದಾರು
ಕ್ರಿಯಾಪದಗಳ ಅರ್ಥದಲ್ಲಿ ಬರುವ ಕೆಲವು ಬೇರೆ ಪದಗಳು (ಕ್ರಿಯಾರ್ಥಕಾವ್ಯಯಗಳು).
(i) ಅವನಿಗೆ ವಿವೇಕ ಉಂಟು*
(ii) ನನಗೆ ಸ್ವಲ್ಪ ಹಣ ಬೇಕು
(iii) ಅವನಿಗೆ ಯಾವುದೂ ಬೇಡ
(iv) ನನ್ನಲ್ಲಿ ಹಣ ಇಲ್ಲ
(v) ಅದು ನನ್ನ ಮನೆ ಅಲ್ಲ
(vi) ಅವು ಜಿಂಕೆಗಳೇ ಹೌದು (ಅಹುದು)
ಮೇಲೆ ಹೇಳಿದ ಇಂಥ-ಬೇಕು, ಬೇಡ, ಇಲ್ಲ, ಅಲ್ಲ, ಉಂಟು, ಹೌದು-ಮೊದಲಾದ ಪದಗಳ ಪ್ರಯೋಜನವು ಹೆಚ್ಚು.  ಇವು ಯಾವಾಗಲೂ ತಮ್ಮ ರೂಪದಲ್ಲಿ ವ್ಯತ್ಯಾಸಗೊಳ್ಳು ವುದಿಲ್ಲ.  ಇದನ್ನು ಕ್ರಿಯೆಯ ಅರ್ಥಕೊಡುವ ಅವ್ಯಯಗಳು ಎನ್ನುತ್ತಾರೆ.
(೬೮) ಕ್ರಿಯಾರ್ಥಕಾವ್ಯಯಗಳು:- ಕ್ರಿಯಾಪದದ ಅರ್ಥಕೊಡುವ ಬೇಕು, ಬೇಡ, ಉಂಟು, ಇಲ್ಲ, ಅಲ್ಲ, ಸಾಕು, ಹೌದು-ಇತ್ಯಾದಿ ಅವ್ಯಯಗಳನ್ನು ಕ್ರಿಯಾರ್ಥಕಾವ್ಯಯ ಗಳೆನ್ನುವರು.
ಸಾಮಾನ್ಯವಾಗಿ ಈ ಕ್ರಿಯಾರ್ಥಕಾವ್ಯಯಗಳು ಸ್ವತಂತ್ರವಾಗಿಯೂ, ಕೆಲವು ಸಲ ತಮ್ಮ ಹಿಂದೆ ಇನ್ನೊಂದು ಕ್ರಿಯೆಯಿಂದ ಕೂಡಿ ಪ್ರಯೋಗಗೊಳ್ಳುವುದೂ ಉಂಟು.  ಅಥವಾ ತಮ್ಮ ಮುಂದೆ ಇನ್ನೊಂದು ಕ್ರಿಯಾಪದದಿಂದ ಕೂಡಿ ಪ್ರಯೋಗಗೊಳ್ಳುವುದೂ ಉಂಟು.
ಉದಾಹರಣೆಗೆ:-
(i) ಹಿಂದೆ ಕ್ರಿಯೆ ಇರುವುದಕ್ಕೆ-
ಅಡಿಗೆ ಆಗಿಲ್ಲ. (ಆಗಿ+ಇಲ್ಲ)
ಹಣ್ಣು ತಿನ್ನಬೇಕು. (ತಿನ್ನ+ಬೇಕು
(ii) ಮುಂದೆ ಕ್ರಿಯೆ ಇರುವುದಕ್ಕೆ-
ನನಗೆ ಅದು ಬೇಡವಾಗಿದೆ.   (ಬೇಡ+ಆಗಿದೆ)
ಹಣ ಬೇಕಾಗಿದೆ.   (ಬೇಕು+ಆಗಿದೆ)
(iii) ಸ್ವತಂತ್ರವಾಗಿ ಪ್ರಯೋಗವಾಗುವುದಕ್ಕೆ-
ನನ್ನಲ್ಲಿ ಹಣ ಇಲ್ಲ.
ಹತ್ತು ರೂಪಾಯಿ ಬೇಕು.
ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ-
(೧) ಅದಕ್ಕೆ ಬೆಲೆ ಉಂಟಾಯಿತು (ಉಂಟು+ಆಯಿತು)
(೨) ಅವನಿಗೆ ಅದು ಬೇಕಾಯಿತು (ಬೇಕು+ಆಯಿತು)
(೩) ನನಗೆ ಊಟ ಸಾಕಾಗಿತ್ತು (ಸಾಕು+ಆಗಿ+ಇತ್ತು)
(೪) ರಾಜನು ಹೌದೆಂದನು (ಹೌದು+ಎಂದನು)
(೫) ಅವನಲ್ಲಿ ಅದು ಇಲ್ಲದಿಲ್ಲ (ಇಲ್ಲದೆ+ಇಲ್ಲ)
(೬) ಅವನಿಗೆ ಬೇಕಾಗಿಲ್ಲ (ಬೇಕು+ಆಗಿ+ಇಲ್ಲ)
(೭) ನನಗೆ ಸಾಕಾಗಿದೆ (ಸಾಕು+ಆಗಿ+ಇದೆ)
(೮) ನನ್ನಲ್ಲಿ ಇಲ್ಲವಾಗಿದೆ (ಇಲ್ಲ+ಆಗಿದೆ)
(೯) ಆಸೆಯುಂಟಾಗಿದೆ (ಉಂಟು+ಆಗಿದೆ)
(೧೦) ನಾವು ಮಾಡುವುದುಂಟು (ಮಾಡುವುದು+ಉಂಟು)
ಮೇಲಿನ ಉದಾಹರಣೆಗಳನ್ನು ನೋಡಿದರೆ, ಈ ಕ್ರಿಯಾರ್ಥಕಾವ್ಯಯಗಳ ಮುಂದೆ ಆಗು ಧಾತುವಿನ ಕ್ರಿಯಾಪದಗಳು ಸೇರುವುದುಂಟು.  ಅಥವಾ ಇವುಗಳ ಹಿಂದೆ ಅನೇಕ ಧಾತುಗಳ ಅಪೂರ್ಣಕ್ರಿಯೆಗಳು, ಕೃದಂತ ಭಾವನಾಮಗಳು ಸೇರುವುದೂ ಉಂಟು.

* ‘ಉಂಟು’ ಎಂಬ ಕ್ರಿಯಾರೂಪವು ಉಳ್ ಎಂಬ ಧಾತುವಿನಿಂದ ನಿಷ್ಪತ್ತಿಯಾದ ರೂಪವೆಂದೂ ಕೆಲವರು ಹೇಳುವರು.
ನಿಲ್ಲುವುದುಂಟು, ಇರುವುದುಂಟು-ಇತ್ಯಾದಿ ರೂಪಗಳು ವಿಶೇಷವಾಗಿ ಬಳಕೆಯಲ್ಲಿವೆ.  ಇವನ್ನು-ಇರುವುದು ಎಂಬುದು ಉಂಟು ನಿಲ್ಲುವುದು ಎಂಬುದು ಉಂಟು ಎಂದು ಅರ್ಥಮಾಡಬೇಕು.  ಈ ಕ್ರಿಯಾಪದಗಳು ಇರುತ್ತವೆ, ನಿಲ್ಲುತ್ತವೆ ಎಂಬ ಕ್ರಿಯಾಪದದ ಅರ್ಥದಲ್ಲಿ ಒಮ್ಮೊಮ್ಮೆ ಸಂಶಯ ತೋರುವಂತೆಯೂ ಭಾಸವಾಗುತ್ತವೆ.  ನಿಲ್ಲುವುದುಂಟು ಎಂದರೆ ನಿಲ್ಲದಿರುವುದೂ ಉಂಟು, ಎಂಬ ಅರ್ಥದಲ್ಲೂ ಪ್ರಯೋಗವಾಗುತ್ತವೆ.
* ಹಿಂದಿನ ಪ್ರಕರಣದಲ್ಲಿ ಬಂದ ವಿಭಕ್ತಿ ಪಲ್ಲಟವನ್ನು ಜ್ಞಾಪಿಸಿಕೊಳ್ಳಿ.  ಅಲ್ಲಿ ಒಂದು ವಿಭಕ್ತಿಪ್ರತ್ಯಯವನ್ನು ಪ್ರಯೋಗ ಮಾಡಬೇಕಾದ ಕಡೆ ಬೇರೆ ವಿಭಕ್ತಿಪ್ರತ್ಯಯವನ್ನು ಪ್ರಯೋಗ ಮಾಡಿ ಹೇಳುವುದುಂಟು.  ಅದರಂತೆ ಇಲ್ಲಿ ಒಂದು ಕಾಲದಲ್ಲಿ ಹೇಳಬೇಕಾದ ಕ್ರಿಯೆಯನ್ನು ಬೇರೊಂದು ಕಾಲದ ಕ್ರಿಯಾಪದದಿಂದ ಹೇಳುವುದು ವಾಡಿಕೆ.
* ಕೇವಲ ಪ್ರಕೃತಿಗಳು ಪ್ರಯೋಗಕ್ಕೆ ಅರ್ಹವಾದುವಲ್ಲ.  ಆಖ್ಯಾತಪ್ರತ್ಯಯವಿಲ್ಲದೆ ಕ್ರಿಯಾಪದವಾಗುವಂತೆಯೂ ಇಲ್ಲ.  ಆದ್ದರಿಂದ ಇಲ್ಲಿ ಆಖ್ಯಾತ ಪ್ರತ್ಯಯವು ಬಂದು ಲೋಪವಾದುದಾಗಿ ಭಾವಿಸಬೇಕೆಂದು ಹೇಳುವರು.
+ ಹಳಗನ್ನಡದಲ್ಲಿ ಈ ಧಾತುಗಳು ತರ್, ಬರ್ ಎಂಬ ರೂಪದಿಂದಿರುತ್ತವೆ.  ಅಲ್ಲಿ ವಿಧ್ಯರ್ಥ ಮಧ್ಯಮಪುರುಷ ಏಕವಚನದಲ್ಲಿ ಇವುಗಳ ರೂಪಗಳು ತಾರ, ಬಾರ-ಎಂದೂ ಬಹುವಚನದಲ್ಲಿ ಇವು ತನ್ನಿಂ, ಬನ್ನಿಂ-ಎಂದೂ ರೂಪ ಹೊಂದುತ್ತವೆ.
* ಆರ್ ಎಂಬುದು ಸಾಮರ್ಥ್ಯ ಎಂಬರ್ಥದ ಧಾತುವೇ ಆಗಿದೆ.  ಆದರೆ ಇದರ ಕ್ರಿಯಾರೂಪಗಳು ಕೇವಲ ನಿಷೇಧಾರ್ಥದಲ್ಲಿಯೇ ಪ್ರಯೋಗಿಸಲ್ಪಡುತ್ತವೆ.
+ ಅರಿರಿ ಎಂಬ ರೂಪವೂ ಉಂಟು.
* ಉಂಟು-ಎಂಬುದು ಉಳ್ ಧಾತುವಿನಿಂದ ನಿಷ್ಪನ್ನವಾದ ರೂಪವೆಂದು ಕೆಲವರ ಮತ.  ಆದರೆ ಇದು ಲಿಂಗವಚನಾದಿಗಳಿಂದ ವ್ಯತ್ಯಾಸವಾಗುವ ಶಬ್ದರೂಪವಾದ್ದರಿಂದ ಇದನ್ನು ಕ್ರಿಯಾರ್ಥಕಾವ್ಯಯವೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ.


ಕರ್ಮಣಿ ಪ್ರಯೋಗದಲ್ಲಿ ಕ್ರಿಯಾಪದದ ಲಿಂಗವ್ಯವಸ್ಥೆ
ಕರ್ತರಿ ಪ್ರಯೋಗಕರ್ಮಣಿ ಪ್ರಯೋಗ
ರಾಮನು ಹೊಲವನ್ನು ಕೊಂಡನುರಾಮನಿಂದ ಹೊಲವು ಕೊಳ್ಳಲ್ಪಟ್ಟಿತು
ಭೀಮನು ಅನ್ನವನ್ನು ಉಂಡನುಭೀಮನಿಂದ ಅನ್ನವು ಉಣ್ಣಲ್ಪಟ್ಟಿತು
ಮೇಲಿನ ವಾಕ್ಯಗಳಲ್ಲಿ ಕರ್ತರಿ ಪ್ರಯೋಗದಲ್ಲಿರುವ ರಾಮನು-ಭೀಮನು-ಎಂಬ ಈ ಕರ್ತೃಪದಗಳು ಪುಲ್ಲಿಂಗಗಳಾಗಿದ್ದು, ಈ ಕರ್ತೃಪದದ ಲಿಂಗವನ್ನೇ-ಕೊಂಡನು, ಉಂಡನು ಎಂಬ ಕ್ರಿಯಾಪದಗಳು ಹೊಂದಿ ಅವೂ ಪುಲ್ಲಿಂಗಗಳಾಗಿವೆ.  ಕರ್ಮಣಿ ಪ್ರಯೋಗದಲ್ಲಿ ಹೀಗಾಗುವುದಿಲ್ಲ.  ಅಲ್ಲಿ ಕ್ರಿಯಾಪದಗಳಾದ ಕೊಳ್ಳಲ್ಪಟ್ಟಿತು, ಉಣ್ಣಲ್ಪಟ್ಟಿತು – ಎಂಬ ಕ್ರಿಯಾಪದಗಳು ಹೊಲವು, ಅನ್ನವು ಎಂಬ ಕರ್ಮಪದಗಳ ಲಿಂಗವನ್ನು ಎಂದರೆ-ನಪುಂಸಕಲಿಂಗವನ್ನು ಹೊಂದಿವೆ.

"ಕ್ರಿಯಾಪದಕ್ಕೆ ಕರ್ತರಿಪ್ರಯೋಗದಲ್ಲಿ (ಸಕರ್ಮಕ, ಅಕರ್ಮಕ ಕರ್ತರಿ ಪ್ರಯೋಗಗಳಲ್ಲಿ) ಕರ್ತೃವಿನ ಲಿಂಗವಚನಗಳೂ, ಕರ್ಮಣಿ ಪ್ರಯೋಗದಲ್ಲಿ ಕರ್ಮಪದದ ಲಿಂಗವಚನಗಳೂ ಬರುತ್ತವೆ."
ಉದಾಹರಣೆಗೆ:-
ಕರ್ತರಿ -ಶಂಕರನು ಊರನ್ನು ಸೇರಿದನು. (ಪುಲ್ಲಿಂಗ)
ಕರ್ಮಣಿ - ಶಂಕರನಿಂದ ಊರು ಸೇರಲ್ಪಟ್ಟಿತು. (ನಪುಂಸಕಲಿಂಗ)
ಕರ್ತರಿ - ಕವಿಯು ಕಾವ್ಯವನ್ನು ಬರೆಯುತ್ತಾನೆ. (ಪುಲ್ಲಿಂಗ)
ಕರ್ಮಣಿ - ಕವಿಯಿಂದ ಕಾವ್ಯವು ಬರೆಯಲ್ಪಡುತ್ತದೆ. (ನಪುಂಸಕಲಿಂಗ)
ಕರ್ತರಿ - ತಾಯಿಯು ಹಾಲನ್ನು ಕೊಡುವಳು. (ಸ್ತ್ರೀಲಿಂಗ)
ಕರ್ಮಣಿ - ತಾಯಿಯಿಂದ ಹಾಲು ಕೊಡಲ್ಪಡುವುದು. (ನಪುಂಸಕಲಿಂಗ)
ಕರ್ತರಿ - ಅವನು ನನ್ನನ್ನು ಹೊಡೆದನು. (ಪುಲ್ಲಿಂಗ)
ಕರ್ಮಣಿ - ಅವನಿಂದ ನಾನು ಹೊಡೆಯಲ್ಪಟ್ಟೆನು. (ಪುಲ್ಲಿಂಗ)
ಕರ್ತರಿತಂದೆಯು ಮಗುವನ್ನು ರಕ್ಷಿಸುವನು. (ಪುಲ್ಲಿಂಗ)
ಕರ್ಮಣಿತಂದೆಯಿಂದ ಮಗವು ರಕ್ಷಿಸಲ್ಪಡುವುದು. (ನಪುಂಸಕಲಿಂಗ)

ಒಂದು ಕ್ರಿಯೆಗೆ ಅನೇಕ ಕರ್ತೃಗಳು ಇದ್ದಾಗ ಕ್ರಿಯಾಪದದ ರೂಪ ಹೇಗಾಗುತ್ತದೆ?
(೧) ಆನೆಯೂ, ಕುದುರೆಯೂ, ಒಂಟೆಯೂ, ಮನುಷ್ಯರೂ ಬಂದರು.
(೨) ಮನುಷ್ಯರೂ, ಕುದುರೆಗಳೂ, ಆನೆಗಳೂ, ದನಗಳೂ ಬಂದವು.
ಮೇಲಿನ ವಾಕ್ಯಗಳಲ್ಲಿ ಬಂದರು ಎಂಬ ಕ್ರಿಯಾಪದವನ್ನು ವಿಚಾರಿಸಿ ನೋಡಿರಿ.  ಈ ಕ್ರಿಯಾಪದಕ್ಕೆ ಕರ್ತೃಸ್ಥಾನದಲ್ಲಿ ಆನೆಯೂ, ಕುದುರೆಯೂ, ಒಂಟೆಯೂ, ಮನುಷ್ಯರೂ ಎಂಬ ನಾಲ್ಕು ಬಗೆಯ ಕರ್ತೃಪದಗಳಿವೆ.  ಇವುಗಳಲ್ಲಿ ಆನೆ, ಕುದುರೆ, ಒಂಟೆ ಇವು ನಪುಂಸಕ ಲಿಂಗಗಳು. ಮನುಷ್ಯರು ಎಂಬ ಕರ್ತೃಪದ ಪುಲ್ಲಿಂಗವಾಗಿ ಕೊನೆಯ ಕರ್ತೃಪದವಾಗಿದೆ.  ಆದ್ದರಿಂದ ಬಂದರು ಎಂಬ ಕ್ರಿಯಾಪದವು ಕೊನೆಯ ಕರ್ತೃಪದವಾದ ಪುಲ್ಲಿಂಗದ ಲಿಂಗವನ್ನೇ ಹೊಂದಿದೆ.
ಎರಡನೆಯ ವಾಕ್ಯದಲ್ಲಿ ಮನುಷ್ಯರು, ಆನೆಗಳು, ಕುದುರೆಗಳು, ದನಗಳು-ಎಂಬ ನಾಲ್ಕು ಕರ್ತೃಪದಗಳು ಬಂದವು ಎಂಬ ಕ್ರಿಯಾಪದಕ್ಕೆ ಇವೆ.  ಮನುಷ್ಯ ಎಂಬ ಮೊದಲನೆಯ ಪದ ಪುಲ್ಲಿಂಗವಾಗಿದ್ದು ಉಳಿದ ಮೂರು ನಪುಂಸಕಲಿಂಗಗಳಾಗಿವೆ.  ಕೊನೆಯ ಕರ್ತೃಪದವಾದ ದನಗಳು ಎಂಬುದು ನಪುಂಸಕಲಿಂಗವೇ ಆಗಿದ್ದು ಬಂದವು ಎಂಬ ಕ್ರಿಯಾಪದವೂ ನಪುಂಸಕ ಲಿಂಗವೇ ಆಗಿದೆ.  ಅದ್ದರಿಂದ-

ಭಿನ್ನಭಿನ್ನವಾದ ಅನೇಕ ಕರ್ತೃಪದಗಳು ಒಂದು ಕ್ರಿಯೆಗೆ ಇರುವಾಗ ಕೊನೆಯ ಕರ್ತೃಪದದ ಲಿಂಗವೇ ಕ್ರಿಯಾಪದಕ್ಕೆ ಬರುವುದು.
ಉದಾಹರಣೆಗೆ:-
ಬೇಟೆಗಾರನೂ, ನಾಯಿಗಳೂ ಬಂದವು. (ನಪುಂಸಕಲಿಂಗ)
ನಾಯಿಗಳೂ, ಬೇಟೆಗಾರನೂ ಬಂದರು. (ಪುಲ್ಲಿಂಗ)
ಹಸುವೂ, ಎತ್ತೂ, ಹುಡುಗನೂ ಬಂದರು. (ಪುಲ್ಲಿಂಗ)
ಹುಡುಗನೂ, ಹಸುವೂ, ಎತ್ತೂ ಬಂದವು. (ನಪುಂಸಕಲಿಂಗ)

ಸರ್ವನಾಮಗಳು ಕರ್ತೃಪದವಾಗಿದ್ದಾಗ ಕ್ರಿಯಾಪದದ ರೂಪಗಳು ಹೇಗಾಗುತ್ತವೆ?
(ಅ) ಅವನೂ, ನೀನೂ, ಕೂಡಿ ಬಂದಿರಿ.
(ಆ) ಅವಳೂ, ನೀವೂ, ಒಟ್ಟಿಗೆ ಬಂದಿರಿ.
(ಇ) ನೀನೂ, ಆತನೂ ಕೂಡಿ ಹೋದಿರಿ.
ಮೇಲಿನ ವಾಕ್ಯಗಳಲ್ಲಿ ಅವನು ಎಂಬ ಸರ್ವನಾಮವು ಮೊದಲನೆಯ ವಾಕ್ಯದಲ್ಲಿದ್ದು ಕರ್ತೃಪದವಾಗಿದೆ.  ಅದು ಪ್ರಥಮ ಪುರುಷ ಪುಲ್ಲಿಂಗವಾಗಿದೆ.  ಎರಡನೆಯ ಕರ್ತೃವಾದ ನೀನು ಎಂಬುದು ಮಧ್ಯಮ ಪುರುಷ.  ಕ್ರಿಯಾಪದವಾದ ಬಂದಿರಿ ಎಂಬುದೂ ಮಧ್ಯಮ ಪುರುಷವೇ ಆಗಿದೆ.
೨ ನೆಯ ವಾಕ್ಯದಲ್ಲಿ ಅವಳು ಎಂಬ ಕರ್ತೃಪದ ಪ್ರಥಮ ಪುರುಷ ಸರ್ವನಾಮ, ನೀವು ಎಂಬುದು ಮಧ್ಯಮ ಪುರುಷ.  ಬಂದಿರಿ ಎಂಬ ಕ್ರಿಯಾಪದವೂ ಕೂಡ ಮಧ್ಯಮ ಪುರುಷವೇ ಆಗಿದೆ.
೩ ನೆಯ ವಾಕ್ಯದಲ್ಲಿ ನೀನು ಎಂಬ ಕರ್ತೃಪದ ಮಧ್ಯಮ ಪುರುಷ, ಆತನು ಎಂಬ ಕರ್ತೃ ಪದದ ಪ್ರಥಮ ಪುರುಷ, ಕ್ರಿಯಾಪದವೂ ಕೂಡ ಮಧ್ಯಮ ಪುರುಷವೇ ಆಯಿತು.
ನೀನು ಎಂಬ ಮಧ್ಯಮ ಪುರುಷ ಸರ್ವನಾಮವು ಕರ್ತೃವಾಗಿ, ಜೊತೆಗೆ ಪ್ರಥಮ ಪುರುಷ ಸರ್ವನಾಮದ ಕರ್ತೃಪದ ಬೇರೆ ಇದ್ದರೂ ಕ್ರಿಯಾ ಪದವು ಮಧ್ಯಮ ಪುರುಷದಲ್ಲಿ ಇರುತ್ತದೆ.
ಉದಾಹರಣೆಗೆ:-
ನೀನೂ ರಾಮನೂ ಬಂದಿರಿ.
ರಾಮನೂ ನೀನೂ ಬಂದಿರಿ.
ಸೀತೆಯು, ರಾಮನೂ, ನೀನೂ ಬಂದಿರಿ.
ಇದರಂತೆಯೇ

 ನಾನು ಎಂಬ ಉತ್ತಮ ಪುರುಷ ಸರ್ವನಾಮವೂ, ಇತರ ಸರ್ವನಾಮಗಳೂ ಒಂದೇ ಕ್ರಿಯೆಗೆ ಕರ್ತೃಗಳಾಗಿದ್ದಾಗ ಕ್ರಿಯಾಪದವು ಉತ್ತಮ ಪುರುಷವೇ ಆಗುವುದು.
ಉದಾಹರಣೆಗೆ:-
ನಾನೂ, ಅವನೂ, ನೀನೂ ಬಂದೆವು.
ನೀನೂ, ನಾನೂ ಕೂಡಿ ಹೋದೆವು.
ಅವನೂ, ನಾನೂ ಸೇರಿ ಉಂಡೆವು.

ಸಾರಾಂಶ

ಕ್ರಿಯಾಪ್ರಕೃತಿ (ಧಾತು)
ಸಹಜಧಾತುಇಸು ಪ್ರತ್ಯಯಾಂತ ಧಾತು (ಸಾಧಿತ ಧಾತು
ಸಕರ್ಮಕಅಕರ್ಮಕ(i) ಕನ್ನಡ ನಾಮ ಪ್ರಕೃತಿಗಳಿಗೆ ಇಸು ಹತ್ತಿದವು. (ii) ಅನುಕರಣ ಶಬ್ದಕ್ಕೆ ಇಸು ಹತ್ತಿದವು.
(ಅ) ಭಾವಿಸು
(ಅ) ಕನ್ನಡಿಸು
(ಆ) ಧಗಧಗಿಸು
ಸಂಸ್ಕೃತ ನಾಮಪ್ರಕೃತಿಗಳಿಗೆ ಇಸು ಪ್ರತ್ಯಯ ಬಂದು ಆದ ಧಾತುಗಳು.
ಮಾಡು, ತಿನ್ನು, ಬರೆ, ಓದು
(ಕರ್ಮಪದವನ್ನು ಅಪೇಕ್ಷಿಸುವ ಧಾತು)
ಮಲಗು, ಏಳು, ಓಡು (ಕರ್ಮಪದವನ್ನು ಅಪೇಕ್ಷಿಸದ ಧಾತು)
ಈ ಮೇಲೆ ಹೇಳಿದ ಸಹಜ ಧಾತು, ಇಸು ಪ್ರತ್ಯಯಾಂತ ಧಾತುಗಳ ಮೇಲೆ ವರ್ತಮಾನ, ಭೂತ, ಭವಿಷ್ಯತ್ ಕಾಲಗಳಲ್ಲೂ, ವಿಧ್ಯರ್ಥ, ನಿಷೇಧಾರ್ಥ, ಸಂಭಾವನಾರ್ಥಗಳಲ್ಲೂ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.  ಸಕರ್ಮಕ ಧಾತುಗಳ ಮುಂದೆ ಅಲ್ಪಡು ಪ್ರತ್ಯಯ ಸೇರಿ ಕರ್ಮಣಿ ಪ್ರಯೋಗವೆನಿಸುತ್ತದೆ.

ಮುಖ್ಯವಾದ ಕೆಲವು ಧಾತುಗಳು

ಕನ್ನಡ ಬರವಣಿಗೆಯಲ್ಲಿ ಬರುವ ಮುಖ್ಯವಾದ ಕೆಲವು ಧಾತುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದ್ದು ಧಾತುವಿನ ಅರ್ಥ ಮತ್ತು ಕ್ರಿಯಾಪದದ ಒಂದು ರೂಪವನ್ನು ಮಾತ್ರ ಕೊಡಲಾಗಿದೆ.
ಧಾತು
ಅರ್ಥ
ಕ್ರಿಯಾಪದ
ಅಲರು-ಹೂವಾಗು-ಅಲರಿತು
ಅರಳು-ಹೂವಾಗು-ಅರಳಿತು
ಅಡರು-ಏರು-ಅಡರಿದನು
ಅಪ್ಪು-ತಬ್ಬಿಕೊಳ್ಳು-ಅಪ್ಪಿದನು
ಅಡು-ಅಡಿಗೆ ಮಾಡು-ಅಟ್ಟನು
ಅಗಿ-ಹಲ್ಲಿನಿಂದ ಅಗಿಯುವಿಕೆ-ಅಗಿದನು
ಅರೆ-ಅರೆಯುವಿಕೆ-ಅರೆದನು
ಅಗೆ-ನೆಲತೋಡು-ಅಗೆದನು
ಅರಸು೫೫-ಹುಡುಕು-ಅರಸುವನು
ಅಂಟು-ಮೆತ್ತು-ಅಂಟಿತು
ಅಡಗು-ಮುಚ್ಚಿಕೊ-ಅಡಗಿತು
ಅರಿ-ಕತ್ತರಿಸು-ಅರಿದನು
ಅರಿ-ತಿಳಿ-ಅರಿದನು
ಅದಿರು-ಅಲ್ಲಾಡು-ಅದಿರಿತು
ಅಲೆ-ತಿರುಗು-ಅಲೆದನು
ಅಳಲು-ಸಂಕಟಪಡು-ಅಳಲಿದನು
ಅಳೆ-ಅಳತೆಮಾಡು-ಅಳೆದನು
ಅಂಜು-ಹೆದರು-ಅಂಜಿದನು
ಅಳಿ-ಸಾಯ್-ಅಳಿದನು
ಅಳು-ರೋದನಮಾಡು-ಅಳುತ್ತಾನೆ
ಅಳಿಸು-ಇಲ್ಲದಂತೆಮಾಡು-ಅಳಿಸಿದನು
ಅವಚು-ಅಪ್ಪಿಕೊ-ಅವಚಿದನು
ಆಳು-ರಾಜ್ಯಭಾರ ಮಾಡು-ಆಳಿದನು
ಆನ್-ಧರಿಸು-ಆಂತನು
ಆರು-ಒಣಗು-ಆರಿತು
ಆಲಿಸು-ಕೇಳು-ಆಲಿಸಿದನು
ಆಗು-ಮುಗಿ-ಆಯಿತು
ಆರ್-ಆರ್ಭಟಿಸು-ಆರ್ದನು (ಆರ್ದಂ)
ಆರ್-ಸಾಮರ್ಥ್ಯ-ಆರನು
ಇಡು-ಇಡುವಿಕೆ-ಇಟ್ಟನು
ಇಕ್ಕು-ನೀಡು-ಇಕ್ಕಿದನು
ಇಕ್ಕು-ಮುಚ್ಚು-ಕದವನ್ನು ಇಕ್ಕಿದನು
ಇಕ್ಕು-ಹೊಡೆ-ಕೊಲ್ಲು-ಇಕ್ಕಿದನು
ಇರು-ಇರುವಿಕೆ-ಇದ್ದಾನೆ
ಇಸು-ಬಾಣಪ್ರಯೋಗ ಮಾಡು-ಎಚ್ಚನು
ಇರಿ-ಕತ್ತರಿಸು-ಇರಿದನು
ಇಳಿ-ಕೆಳಗೆ ಹೋಗು-ಇಳಿದನು
ಇಂಗು-ಇಲ್ಲದಾಗು-ಇಂಗಿತು
ಈಡಾಡು-ಚೆಲ್ಲಾಡು-ಈಡಾಡಿದನು
ಈಯ್-ಕರುಹಾಕು-ಈಯಿತು-(ಈದಿತು)
ಈಂಟು-ಕುಡಿ-ಈಂಟಿದನು
ಈಸು-ನೀರಿನಲ್ಲಿ ಈಸುವಿಕೆ-ಈಸಿದನು
ಈಜು-ಈಜಿದನು
ಉಡು-ಉಡುವಿಕೆ-ಉಟ್ಟನು
ಉಗಿ-ಎಳೆಯುವುದು-ಉಗಿವೆನು
ಉಗಳು-ಉಗುಳುವಿಕೆ-ಉಗುಳಿದನು
ಉಮ್ಮಳಿಸು-ದುಃಖಿಸು-ಉಮ್ಮಳಿಸಿದನು
ಉಸುರು-ಹೇಳು-ಉಸುರಿದನು
ಉಳಿ-ಮಿಕ್ಕು-ಉಳಿದಿದೆ
ಉಕ್ಕು-ಹೊರಸೂಸು-ಉಕ್ಕಿಸು
ಉದಿರು-ಕೆಳಗೆ ಬೀಳು-ಉದಿರಿತು
ಉದುರು-ಉದುರಿತು
ಉರುಳು-ಉರುಳುವಿಕೆ-ಉರುಳಿತು
ಉಬ್ಬು-ಉತ್ಸಾಹಗೊಳ್ಳು-ದಪ್ಪವಾಗು-ಉಬ್ಬಿದನು
ಉರಿ-ಬೆಂಕಿ ಹತ್ತು-ಉರಿಯುತ್ತದೆ
ಉಗ್ಗು-ತಡೆದುಮಾತಾಡು-ಉಗ್ಗುತ್ತಾನೆ
ಉಜ್ಜು-ತಿಕ್ಕು-ಉಜ್ಜಿದನು
ಉಳುಕು-ನರಗಳತೊಡಕು-ಉಳುಕಿದೆ
ಉದ್ದು-ತಿಕ್ಕು-ಉದ್ದುತ್ತದೆ
ಉಳಿಸು-ಮಿಕ್ಕಿಸು-ಉಳಿಸಿದನು
ಉಳು-ಭೂವ್ಯವಸಾಯ ಮಾಡು-ಉತ್ತನು
ಊರು-ನೆಡು-ಸಸಿಊರಿದನು
ಊಡು-ಊಟಮಾಡಿದನು-ಊಡಿಸಿದನು
ಊದು-ಗಾಳಿಯನ್ನುಬಿಡು-ಊದಿದನು
ಎಣಿಸು-ಲೆಕ್ಕಮಾಡು-ಎಣಿಸಿದನು
ಎಸೆ-ಚೆಲ್ಲು-ಎಸೆದನು
ಎಸಗು-ಮಾಡು-ಎಸಗಿದನು
ಎನ್ನು (ಎ)-ಹೇಳು-ಎಂದನು
ಎರೆ-ನೀಡು-ಎರೆದನು
ಎರೆ-ಬೇಡು-ಎರೆದನು
ಎಳೆ-ಜಗ್ಗು-ಎಳೆದನು
ಎರಗು-ಮೇಲೆ ಬೀಳು-ಎರಗಿತು
ಏಳು-ಎದ್ದುನಿಲ್ಲು-ಎದ್ದನು
ಎರಗು-ನಮಸ್ಕರಿಸು-ಎರಗಿದನು
ಎಳಸು-ಅಪೇಕ್ಷಿಸು-ಎಳಸಿದನು
ಏದು-ತೇಗು-ಏದುತ್ತಾನೆ
ಒಗೆ-ಹುಟ್ಟು-ಒಗೆಯಿತು
ಒಯ್-ಸಾಗಿಸು-ಬೇರೆಡೆಗೆಒಯ್ಯಿ-ಒಯ್ದನು
ಒಳಸಾರು-ಒಳಗೆಹೋಗು-ಒಳಸಾರಿತು
ಒಸರು-ಜಿನುಗು-ಒಸರಿತು
ಒರಗು-ಮಲಗು-ಆಶ್ರಯಿಸಿನಿಲ್ಲು-ಒರಗಿದನು-ಬೀಳು
ಒರೆ-ಹೇಳು-ಒರೆದನು
ಒಡಂಬಡು-ಒಪ್ಪು-ಒಡಂಬಟ್ಟನು
ಒಡೆ-ಸೀಳು-ಅರಳು-ಒಡೆಯಿತು
-ಭಾಗಮಾಡು-ಬಿರಿ
ಒಸೆ-ಪ್ರೀತಿ-ಒಸೆದನು
ಒಲೆ-ಪ್ರೀತಿಹೊಂದು-ಒಲೆಯಿತು, ಅನುಗ್ರಹಿಸು
ಒಕ್ಕಲಿಕ್ಕು-ಕೊಲ್ಲು-ಮುಗಿಸು-ಒಕ್ಕಲಿಕ್ಕಿದನು
ಒಡ್ಡು-ಎದುರಾಗು-ಬೇಡು-ಒಡ್ಡಿದರು- ಕೈಒಡ್ಡಿದರು
ಒಣಗು-ಶುಷ್ಕವಾಗು-ಒಣಗಿತು
ಒತ್ತು-ಹಿಸುಕು-ಪಕ್ಕಕ್ಕೆತಳ್ಳು-ಒತ್ತಿದನು
ಓದು-ಓದುವಿಕೆ-ಓದಿದನು
ಓಲೈಸು-ಆಶ್ರಯಿಸು-ಓಲೈಸಿದನು
ಓವು-ಸಂರಕ್ಷಿಸು-ಓವಿದನು
ಓಕರಿಸು-ವಾಂತಿಮಾಡು-ಓಕರಿಸಿದನು
ಓಡು-ಓಡುವಿಕೆ-ಓಡಿದನು
ಔಂಕು-ಹಿಸುಕು-ಔಂಕಿದನು
ಅವುಂಕು-ಹಿಚುಕು-ಅವುಂಕಿದನು
ಔತುಕೊಳ್ಳು-ಅಡಗು-ಔತುಕೊಂಡನು
ಕದಿ-ಕಳವುಮಾಡು-ಕದ್ದನು
ಕರಿ-ಕರಿಯುವಿಕೆ-ಎಣ್ಣೆಯಲ್ಲಿ ಕರಿದನು
ಕರೆ-ಸುರಿಸು-ಹಾಲುಕರೆದನು
ಮಳೆಕರೆಯಿತು
ಕರೆ-ಕರೆಯುವಿಕೆ-ಕರೆದನು
ಕನಲು-ಕೋಪಗೊಳ್ಳು-ಕನಲಿದನು
ಕವಿ-ಮುಸುಕು-ಕವಿಯಿತು
ಕಲಿ-ತಿಳಿ-ಕಲಿತನು
ಕಲಸು-ಬೆರಸು-ಕಲಸಿದನು
ಕಳು-ಕದಿಯುವಿಕೆ-ಕದ್ದನು
ಕಡಿ-ಛೇದಿಸು-ಕಡಿದನು
ಕಲಕು-ಕಲಕುವಿಕೆ-ನೀರುಕಲಕಿತು
ಕಚ್ಚು-ಹಲ್ಲಿನಿಂದಕಡಿ-ಕಚ್ಚಿದನು
ಕಟ್ಟು-ಬಂಧಿಸು-ಕಟ್ಟಿದನು
ಕಸಿ-ಅಪಹರಿಸು-ಕಸಿದನು
ಕಡೆಗಣಿಸು-ತಿರಸ್ಕರಿಸು-ಕಡೆಗಣಿಸಿದನು
ಕಂಗೊಳಿಸು-ಪ್ರಕಾಶಿಸು-ಕಂಗೊಳಿಸುತ್ತದೆ
ಕದಕು-ಕದಕುವಿಕೆ-ಕದಕಿದನು
ಕದಡು-ಕದಡುವಿಕೆ-ಕದಡಿದನು
ಕರ್ದುಕು-ಕೊಕ್ಕಿನಿಂದ ಕುಕ್ಕು-ಕರ್ದುಕಿತು
ಕನಲು-ಕೋಪಗೊಳ್ಳು-ಕನಲಿದನು
ಕನವರಿಸು-ಬಡಬಡಿಸು-ಕನವರಿಸಿದನು
ಕರಗು-ವಿಲೀನವಾಗು-ಕರಗಿತು
ಕಳುಹು-ಕಳುಹುವಿಕೆ-ಕಳುಹಿದನು
ಕಳಿಸು-ಕಳುಹುವಿಕೆ-ಕಳಿಸಿದನು
ಕಾ(ಕಾಯ್) (ಕಾಯಿ)-ರಕ್ಷಿಸು-ಕಾಯುತ್ತಾನೆ-ಕಾಯ್ದನು
ಕಾಣು-ನೋಡು-ಕಂಡನು
ಕಾದು-ಜಗಳವಾಡು-ಕಾದಿದನು
ಕಾಪಾಡು-ರಕ್ಷಿಸು-ಕಾಪಾಡಿದನು
ಕಾಯು(ಕಾಯಿ)-ಬಿಸಿಯೇರು-ಕಾಯಿಸಿದನು-ಕಾಯ್ದಿದೆ
ಕಾಡು-ಕಾಟಕೊಡು-ಕಾಡುತ್ತಾನೆ
ಕಿಡು (ಕೆಡು)-ಕೆಡುವಿಕೆ-ಕೆಟ್ಟನು
ಕೀಳ್-ಕೀಳುವಿಕೆ-ಕಿತ್ತನು
ಕೀ-ಕೀವಾಗುವಿಕೆ-ಕೀತಿದೆ
ಕುಂದು-ಒತ್ತು-ಕುಂದಿದೆ (ಕಡಿಮೆಯಾಗು)
ಕುಕ್ಕು-ಕುಕ್ಕುವಿಕೆ-ಕುಕ್ಕುತ್ತದೆ
(ಚುಂಚಿನಿಂದ ಕುಕ್ಕುವುದು)-ಕುಕ್ಕಿತು
ಕುಡಿ-ಕುಡಿಯುವಿಕೆ-ಕುಡಿದನು
ಕುಡು (ಕೊಡು)-ಕೊಡುವಿಕೆ-ಕೊಟ್ಟನು
ಕುದಿ-ಕುದಿಯುವಿಕೆ (ಕರುಬುವಿಕೆ)-ಕುದ್ದಿತು
(ಮನದಲ್ಲಿ ಕುದ್ದನು)
ಕುಪ್ಪಳಿಸು-ಹಾರು-ಕುಪ್ಪಳಿಸುತ್ತಾನೆ
ಕುಗ್ಗು (ಕುರ್ಗು)-ಸಣ್ಣದಾಗು (ಉಡುಗು)-ಕುಗ್ಗಿದನು
ಕುಲುಕು-ಅಲ್ಲಾಡಿಸು-ಕುಲುಕಿದನು
ಕೂಡು-ಬೆರೆ-ಕೂಡಿದನು
ಕೂಗು-ಕೂಗುವಿಕೆ-ಕೂಗಿದನು
ಕೆಚ್ಚು-ನೂಲು ಕೆಚ್ಚುವಿಕೆ-ಕೆಚ್ಚಿದನು
ಕೆಡಹು(ಕೆಡವು)-ನೆಲಕ್ಕೆ ಬೀಳುವಂತೆ ಮಾಡು-ಕೆಡಹಿದನು(ಕೆಡವಿದನು)
ಕೆಡೆ-ಬೀಳು-ಕೆಡೆದನು
ಕೆರೆ-ತುರಿಸು-ಕೆರೆದನು
ಕೆಣಕು-ರೇಗಿಸು-ಕೆಣಕಿದನು
ಕೆತ್ತು-ಸವರು-ಕೆತ್ತಿದರು
ಕೆಡಿಸು-ಹಾಳುಮಾಡು-ಕೆಡಿಸಿದನು
ಕೆರಳು-ಸಿಟ್ಟಿಗೇಳು-ಕೆರಳಿದನು
ಕೆಲಸಾರು-ಹತ್ತಿರಕ್ಕೆ ಬಾ-ಕೆಲಸಾರಿದನು
ಕೇಳು-ಕೇಳುವಿಕೆ-ಕೇಳಿದನು
ಕೇರು-ಹಸನುಮಾಡು (ಧಾನ್ಯಶುದ್ಧಿ ಮಾಡುವಿಕೆ)-ಕೇರಿದನು
ಕೈಗೂಡು-ಕೈಗೆಸಿಗು-ಕೈಗೂಡಿತು
ಕೈಬಿಡು-ತ್ಯಜಿಸು-ಕೈಬಿಟ್ಟನು
ಕೈಸಾರು-ವಶವಾಗು-ಕೈಸಾರಿತು
ಕೊಡು(ಕುಡು)-ಕೊಡುವಿಕೆ-ಕೊಟ್ಟನು
ಕೊಂಡಾಡು-ಹೊಗಳು-ಕೊಂಡಾಡಿದನು
ಕೊನರು-ಚಿಗುರು-ಕೊನರಿತು
ಕೊಲ್ಲು(ಕೊಲ್)-ಸಾಯಿಸು-ಕೊಂದನು
ಕೊಚ್ಚು-ಚೂರುಮಾಡು-ಕೊಚ್ಚಿದನು
ಕೊಡವು-ಕೊಡವುವಿಕೆ-ಕೊಡವಿದನು
ಕೊರಗು-ವ್ಯಸನಪಡು-ಕೊರಗಿದನು
ಕೊರೆ-ಕತ್ತರಿಸು-ಕೊರೆದನು
ಕೊಯ್-ಕೊಯ್ಯುವಿಕೆ-ಕೊಯ್ದನು
ಕೊಳೆ-ಕೊಳೆಯುವಿಕೆ-ಕೊಳೆತಿದೆ
ಕೋರಯಿಸು-ಕಣ್‌ಕುಕ್ಕು-ಕೋರೈಸುತ್ತದೆ
ಕೋರು-ಬಯಸು-ಕೋರಿದನು
ಗದರು-ಸಿಟ್ಟುಮಾಡು ಗದ್ದರಿಸು-ಗದರಿದನು
ಗಳಪು-ಹರಟು-ಗಳಪಿದನು
ಗಳಿಸು-ಕೂಡುಹಾಕು-ಗಳಿಸಿದನು
ಗುದ್ದು-ಮುಷ್ಟಿಯಿಂದ ಹೊಡೆ-ಗುದ್ದಿದನು
ಗುಡಿಸು-ಸ್ವಚ್ಛಮಾಡು-ಗುಡಿಸಿದನು
ಗುಡುಗು-ಗದರಿಸು-ಗುಡುಗಿದನು
ಗೆಲ್ (ಗೆಲ್ಲು)-ಗೆದ್ದೆ-ಗೆದ್ದೆನು
ಗೆಯ್ (ಗೆಯ್ಯಿ)-ಮಾಡುವಿಕೆ-ಗೆಯ್ದನು
ಗೋರು-ತಳಕ್ಕೆ ಹಚ್ಚಿಮೊಗೆಯುವಿಕೆ-ಗೋರಿದನು
ಗೋಳಿಡು-ಹೆಚ್ಚಾಗಿ ದುಃಖಪಡು-ಗೋಳಿಟ್ಟನು
ಚೆಲ್ಲು-ಬಿಸಾಡು-ಚೆಲ್ಲಿದನು
ಚೆಚ್ಚು (ಜಜ್ಜು)-ಜಜ್ಜಿಹಾಕು-ಚೆಚ್ಚಿದನು
ಚಿಗಿ-ಕೊನರುವಿಕೆ-ಚಿಗಿತಿತು
ಚೀರು-ಗಟ್ಟಿಯಾಗಿ ಕೂಗು-ಚೀರಿದನು
ಚಾಚು-ಮುಂದುಮಾಡು-ಚಾಚಿದನು
ಚಿಮ್ಮು-ಬೆರಳಿನಿಂದ ನೂಕು-ಚಿಮ್ಮಿದನು
ಚುಚ್ಚು-ಚುಚ್ಚುವಿಕೆ-ಚುಚ್ಚಿತು
ಚಿತ್ತೈಸು-ಕೇಳು-ಚಿತ್ತೈಸಿದನು
ಚಿವುಟು-ಉಗುರಿನಿಂದ ಚುಚ್ಚು-ಚಿವುಟಿದನು
ಚಿಮುಕಿಸು-ಚಿಮುಕಿಸುವಿಕೆ-ನೀರು ಚಿಮುಕಿಸಿದನು
ಚೀಪು-ಚೀಪುವಿಕೆ-ಚೀಪುತ್ತಾನೆ
ಜಜ್ಜು-ಜಜ್ಜಿಹಾಕು-ಜಜ್ಜಿದನು
ಜಾರು-ಜಾರುವಿಕೆ-ಜಾರಿದನು
ಜಗುಳು-ಜಾರುವಿಕೆ-ಜಗುಳುತ್ತದೆ
ಜಡಿ-ಹೊಡೆ-ಜಡಿದನು
ಜಿನುಗು (ಜಿನುಂಗು)-ಸಣ್ಣಗೆ ಒಸರುವಿಕೆ-ಜಿನುಗುತ್ತದೆ
ತಗಲು-ಸೊಂಕು-ತಗಲಿತು
ತಣಿ-ತೃಪ್ತಿಗೊಳ್ಳು-ತಣಿದನು
ತಗ್ಗು-ಬಾಗು-ತಗ್ಗಿದನು
ತಳ್ಳು-ನೂಕು-ತಳ್ಳಿದನು
ತಡವು-ಕೈಯಿಂದ ಮುಟ್ಟಿನೋಡುವಿಕೆ-ತಡವಿದನು
ತಟ್ಟು-ಬಡಿ-ತಟ್ಟಿದನು
ತಡೆ-ನಿಲ್ಲಿಸು, ಎದುರಿಸು, ಪ್ರತಿಬಂಧಿಸು-ತಡೆದನು
ತಣಿ-ತೃಪ್ತಿಪಡು-ತಣಿದನು
ತಳೆ-ಹೊಂದು, ಧರಿಸು-ತಳೆದನು
ತಳಿ-ಚಿಮುಕಿಸು-ನೀರುತಳಿದಳು
ತದೆ-ಹೊಡೆ-ತದ್ದನು
ತರುಬು-ನಿಲ್ಲಿಸು-ತರುಬಿದನು
ತಪ್ಪು-ಚ್ಯುತಿಹೊಂದು-ತಪ್ಪಿದನು
ತಬ್ಬು-ಆಲಂಗಿಸು-ತಬ್ಬಿದನು
ತರಿ-ಕತ್ತರಿಸು-ತರಿದನು
ತಲುಪು-ಸೇರು-ತಲುಪಿದನು
ತಲ್ಲಣಿಸು-ಸಂಕಟಪಡು-ತಲ್ಲಣಿಸಿದನು
ತಳುವು-ತಡಮಾಡು-ತಳುವಿದನು
ತಳೆ-ಹೊಂದು (ಧರಿಸು)-ತಳೆದನು
ತಾಕು (ತಾಗು)-ಮುಟ್ಟು, ಎದುರಾಗು-ತಾಕಿದನು
ತಾಳು-ಸೈರಿಸು-ತಾಳಿದನು
ತಾಗು-ಸೊಂಕು-ಮೈತಾಗಿತು
ತಿಳಿ-ತಿಳಿಯುವಿಕೆ-ತಿಳಿದನು
ತಿರುಗು-ಅಲೆ, ಮರಳು-ತಿರುಗಿದನು
ತಿನ್ನು-ಭಕ್ಷಿಸು-ತಿಂದನು
ತಿರಿ-ತಿರಿಯುವಿಕೆ-ತಿರಿದನು
ತಿವಿ-ಚುಚ್ಚು-ತಿವಿದನು
ತಿದ್ದು-ಸರಿಪಡಿಸು-ತಿದ್ದಿದನು
ತಿಕ್ಕು-ಉಜ್ಜು-ತಿಕ್ಕಿದನು
ತೀಡು-ಬೀಸು-ತೀಡಿತು
ತೀರು-ಮುಗಿ-ತೀರಿತು
ತೀವು-ತುಂಬು-ತೀವಿದೆ
ತುಂಬು-ತುಂಬುವಿಕೆ-ತುಂಬಿದೆ
ತುರುಕು-ಬಿರುಸಿನಿಂದ ಇಡು-ತುರುಕಿದನು
ತುಡು (ತೊಡು)-ಧರಿಸು-ತೊಟ್ಟನು
ತುಳುಕು-ಹೊರಚೆಲ್ಲು-ತುಳುಕಿತು
ತುಳಿ-ಮೆಟ್ಟು-ತುಳಿದನು
ತುರಿಸು-ಕೆರೆ-ತುರಿಸಿದನು
ತುಡುಕು-ಆತುರದಿಂದ ಹಿಡಿ-ತುಡುಕಿದನು
ತೂಗು-ಅಲ್ಲಾಡಿಸು, ಅಳತೆಮಾಡು-ತೂಗಿದನು
ತೆಗೆ-ತೆಗೆಯುವಿಕೆ-ತೆಗೆದನು
ತೆರೆ-ಕಾಣುವಹಾಗೆ ಮಾಡು-ತೆರೆದನು
ತೆಗಳು-ತಿರಸ್ಕರಿಸು-ತೆಗಳಿದನು
ತೆರು-ಕೊಡು-ತೆತ್ತನು
ತೇಗು-ತೇಗುವಿಕೆ (ತೇಂಕು)-ತೇಗಿದನು
ತೇಲು-ತೇಲುವಿಕೆ-ತೇಲುತ್ತದೆ
ತೊಡು-ತೊಡುವಿಕೆ, ಧರಿಸುವಿಕೆ-ತೊಟ್ಟನು
ತೊಡಗು-ಕಾರ‍್ಯದಲ್ಲಿ ಪ್ರವೃತ್ತನಾಗು-ತೊಡಗಿದನು
ತೊಳಗು-ಪ್ರಕಾಶಿಸು-ತೊಳಗಿತು
ತೊಲಗು-ದೂರಸರಿ-ತೊಲಗಿತು
ತೊಡೆ-ಧರಿಸು, ಹಚ್ಚು-ತೊಡೆದನು
ತೊಡೆ-ಸುಗಂಧವನ್ನು ತೊಡೆದನು-ತೊಡೆದನು
ತೊಯ್-ಒದ್ದೆಯಾಗು-ತೊಯ್ದನು
ತೋರು-ಕಾಣುವಂತೆ ಮಾಡು-ತೋರಿದನು
ದಣಿ-ಆಯಾಸ ಹೊಂದು-ದಣಿದನು
ದಾಟು-ಆಚೆ ದಡ ಸೇರು-ದಾಟಿದನು
ಧುಮುಕು-ಹಾರಿಕೊಳ್ಳುವಿಕೆ-ಧುಮುಕಿದನು
ದೊರೆ-ಸಿಗು-ದೊರೆಯಿತು
ದೊರಕು-ಸಿಗು-ದೊರಕಿತು
ದೋಚು-ಲೂಟಿಮಾಡು-ದೋಚಿದನು
ನಡೆ-ಚಲಿಸುವಿಕೆ-ನಡೆದನು
ನಡುಗು-ಕಂಪಿಸು-ನಡುಗಿತು
ನಂಬು-ವಿಶ್ವಾಸವಿಡು-ನಂಬಿದನು
ನಂದು-ಆರುವಿಕೆ-ನಂದಿತು
ನಗು-ನಗುವಿಕೆ-ನಕ್ಕನು
ನರಳು-ನರಳುವಿಕೆ-ನರಳಿದನು
ನಲುಗು-ಬೇನೆಯಿಂದ ಬತ್ತುವಿಕೆ-ನಲುಗಿದನು
ನಲಿ-ಸಂತೋಷಪಡು-ನಲಿದನು
ನಾಟು-ಚುಚ್ಚುವುದು-ನಾಟಿತು
ನಾಚು-ಲಜ್ಜೆಪಡು-ನಾಚಿದನು
ನಾರು-ವಾಸನೆ ಬರುವಿಕೆ-ನಾರುವುದು
ನಿಲ್ಲು-ನಿಲ್ಲುವಿಕೆ-ನಿಂತನು
ನಿಮಿರು-ಎದ್ದುನಿಲ್ಲುವಿಕೆ-ಕೂದಲು ನಿಮಿರಿದವು (ಕಿವಿ ನಿಮಿರಿದವು)
ನೀಡು-ಹಾಕು, ಕೊಡು-ನೀಡಿದನು
ನೀಗು-ದೂರವಾಗು-ನೀಗಿತು
ನುಡಿ-ಮಾತಾಡು-ನುಡಿದನು
ನುಂಗು-ನುಂಗುವಿಕೆ-ನುಂಗಿದನು
ನುಸುಳು-ಜಾರಿಹೋಗುವಿಕೆ-ನುಸುಳಿದನು
ನುರಿ-ಸಣ್ಣಗೆ ಮಾಡು-ನುರಿಯಿತು
ನೂಂಕು (ನೂಕು)-ನೂಕುವಿಕೆ-ನೂಂಕಿದನು (ನೂಕಿದನು)
ನೂಲು-ನೂಲುವಿಕೆ-ನೂತನು
ನೆಗಪು (ನೆಗಹು)-ಎತ್ತುವಿಕೆ-ನೆಗಪಿದನು (ನೆಗಹಿದನು)
ನೆಗೆ-ಹಾರು-ನೆಗೆದನು
ನೆನೆ-ಸ್ತೋತ್ರ ಮಾಡು-ನೆನೆದನು
ನೆಯ್-ಬಟ್ಟೆನೇಯುವಿಕೆ-ನೇಯ್ದನು
ನೆಲಸು-ಸ್ಥಿರವಾಗಿ ನಿಲ್ಲು-ನೆಲಸಿದೆ
ನೆರೆ-ಸೇರು-ನೆರೆದರು
ನೆಗಳ್-ಮಾಡುವಿಕೆ-ನೆಗಳ್ದನು (ಪ್ರಯತ್ನ ಮಾಡುವಿಕೆ)
ನೋ (ನೋಯ್)-ನೊಯ್ಯುವಿಕೆ-ನೊಂದನು
ನೋನ್ (ನೋನು)-ವ್ರತಮಾಡು-ನೋಂತನು
ಪಡೆ-ಹೊಂದು-ಪಡೆದನು
ಪರಿ-ಹರಿಯುವಿಕೆ-ಪರಿದನು
ಹರಿ-ತುಂಡುಮಾಡುವಿಕೆ-ಹರಿದನು
ಪರ್ಬು-ಎಲ್ಲಕಡೆಗೂ ವಿಸ್ತಾರವಾಗು-ಪರ್ಬು
ಹಬ್ಬು-ಎಲ್ಲಕಡೆಗೂ ವಿಸ್ತಾರವಾಗು-ಪಬ್ಬು
ಪಡು-ಮಲಗುವಿಕೆ-ಪಟ್ಟನು
ಪತ್ತು (ಹತ್ತು)-ಏರುವಿಕೆ-ಪತ್ತಿದನು (ಹತ್ತಿದನು)
ಪರಸು (ಹರಸು)-ಆಶೀರ್ವಾದ ಮಾಡು,-ಪರಸಿದನು
ಕೋರು(ಹರಸಿದನು)
ಪರಪು (ಹರಹು)-ಹರಡುವಿಕೆ-ಪರಪಿದನು
(ಹರಹಿದನು)
ಪವಡಿಸು-ಮಲಗು-ಪವಡಿಸಿದನು
ಪಾಸು (ಹಾಸು)-ಹಾಸುವಿಕೆ-ಪಾಸಿದನು (ಹಾಸಿದನು)
ಪಾಡು (ಹಾಡು)-ಹಾಡುವಿಕೆ-ಪಾಡಿದನು (ಹಾಡಿದನು)
ಪುಗು (ಹೊಗು) (ಹುಗು)-ಪ್ರವೇಶಿಸುವಿಕೆ-ಪೊಕ್ಕನು (ಹೊಕ್ಕನು)
ಪುದುಗಿಸು-ಹುದುಗಿಸುವಿಕೆ-ಪುದುಗಿಸಿದನು
ಹುದುಗಿಸು-ಅಡಗಿಸುವಿಕೆ-ಹುದುಗಿಸಿದನು
ಪೂಣ್ (ಹೂಣ್)-ಪ್ರತಿಜ್ಞೆಮಾಡು-ಪೂಣ್ದನು (ಹೂಣ್ದನು)
ಪೂಸು (ಹೂಸು)-ಲೇಪಿಸು-ಪೂಸಿದನು (ಹೂಸಿದನು)
ಪೆರ್ಚು-ಹೆಚ್ಚಾಗುವಿಕೆ-ಪೆರ್ಚಿತು
ಪೇಳ್ (ಹೇಳು)-ಹೇಳುವಿಕೆ-ಪೇಳಿದನು (ಹೇಳಿದನು) (ಪೇಳ್ದನು)
ಪೊರಮಡು-ಹೊರಬೀಳು-ಪೊರಮಟ್ಟನು
ಪೊರೆ (ಹೊರೆ)-ಸಂರಕ್ಷಿಸು-ಪೊರೆದನು (ಹೊರೆದನು)
ಪೊಳೆ (ಹೊಳೆ)-ಪ್ರಕಾಶಿಸು-ಪೊಳೆಯಿತು (ಹೊಳೆಯಿತು)
ಪೊರ್ದು-ಹೊಂದು-ಪೊರ್ದಿದನು
ಪೊಸೆ (ಹೊಸೆ)-ಪೊಸೆಯುವಿಕೆ-ಪೊಸೆದನು (ಹೊಸೆದನು)
ಪೋರ್ (ಹೋರು)-ಹೋರಾಡುವಿಕೆ-ಪೋರ್ದನು (ಹೋರಿದನು)
ಪೋಗು (ಹೋಗು)-ಹೋಗುವಿಕೆ-ಪೋದನು (ಹೋದನು)
ಪೇಳ್ (ಪೇಳು) (ಹೇಳು)-ಹೇಳುವಿಕೆ-ಪೇಳಿದನು (ಹೇಳಿದನು)
ಪಿಂಗು (ಹಿಂಗು)-ದೂರವಾಗು-ಪಿಂಗಿತು (ಹಿಂಗಿತು)
ಪೀರ್ (ಹೀರು)-ಹೀರುವಿಕೆ-ಪೀರಿದಂ (ಹೀರಿದನು)
ಬರೆ-ಬರೆಯುವಿಕೆ-ಬರೆದನು
ಬಗೆ-ಚಿಂತಿಸು, ಯೋಚಿಸು-ಬಗೆದನು
ಬಸಿ-ತೊಟ್ಟಿಕ್ಕು, ಜಿನುಗು-ಬಸಿಯಿತು
ಬರು-ಬರುವಿಕೆ-ಬಂದನು
ಬದುಕು-ಜೀವಿಸು-ಬದುಕಿದನು
ಬಗಿ-ತೋಡು-ಬಗಿದನು
ಬಚ್ಚಿಡು-ಮುಚ್ಚಿಡು-ಬಚ್ಚಿಟ್ಟನು
ಬತ್ತು-ಇಂಗು-ಬತ್ತಿತು
ಬಳಲು-ಆಯಾಸಗೊಳ್ಳು-ಬಳಲಿದನು
ಬಳಸು-ಸುತ್ತಿಬರುವುದು (ವೆಚ್ಚಮಾಡು)-ಬಳಸಿದನು
ಬಳೆ (ಬೆಳೆ)-ವೃದ್ಧಿಯಾಗು ಬೆಳೆಯುವಿಕೆ-ಬಳೆದನು (ಬೆಳೆದನು)
ಬಳುಕು-ಬಳುಕುವಿಕೆ-ಬಳುಕಿದಳು
ಬಾಗು-ಬಾಗುವಿಕೆ-ಬಾಗಿದನು
ಬಾಡು-ಬತ್ತುವುದು-ಬಾಡಿತು
ಬಾಚು-ಒಟ್ಟುಗೂಡು-ಬಾಚಿದನು
ಬಾಯ್ವಿಡು (ಬಾಯಿಬಿಡು)-ಅಳುವಿಕೆ (ಕೂಗುವಿಕೆ)-ಬಾಯ್ವಿಟ್ಟಳು (ಬಾಯಿಬಿಟ್ಟಳು)
ಬಾಳು-ಬದುಕುವಿಕೆ-ಬಾಳಿದನು
ಬಾಸಣಿಸು-ಮುಚ್ಚು-ಬಾಸಣಿಸಿದನು
ಬಿಡು-ತ್ಯಜಿಸು-ಬಿಟ್ಟನು
ಬಿರಿ-ಅರಳು, ಸೀಳು-ಬಿರಿಯಿತು
ಬಿಕ್ಕು-ಬಿಕ್ಕುವಿಕೆ-ಬಿಕ್ಕಿದನು
ಬಿಗಿ-ಬಂಧಿಸು-ಬಿಗಿದನು
ಬಿತ್ತು-ಬೀಜಹಾಕು-ಬಿತ್ತಿದನು
ಬಿಚ್ಚು-ಕಟ್ಟು ಉಟ್ಟು-ಬಿಚ್ಚಿದನು
ಬಿಸುಡು-ಎಸೆಯುವಿಕೆ-ಬಿಸುಟನು
ಬೀಗು-ಗರ್ವಪಡು-ಬೀಗಿದನು
ಬೀಸು-ಬೀಸುವಿಕೆ (ಎಸೆಯುವಿಕೆ)-ಒಲೆ ಬೀಸಿದನು
ಬೀಳು-ನೆಲಕ್ಕೆ ಬೀಳು-ಬಿದ್ದನು
ಬೆಳಗು-ಪ್ರಕಾಶಿಸು-ಬೆಳಗಿತು
ಬೆದರು-ಅಂಜು-ಬೆದರಿದನು
ಬೆರಸು-ಮಿಶ್ರಮಾಡು-ಬೆರಸಿದನು
ಬೆಸಸು-ಅಪ್ಪಣೆ ಮಾಡು-ಬೆಸಸಿದನು
ಬೆಸೆ-ಜೋಡಿಸು (ಅಂಟಿಸು)-ಬೆಸೆದನು
ಬೆಂಗೊಳ್ಳು-ಬೆನ್ನುಹತ್ತು-ಬೆಂಗೊಂಡನು
ಬೆರ್ಚು (ಬೆಚ್ಚು)-ಬೆಚ್ಚುಬೀಳುವಿಕೆ-ಬೆರ್ಚಿದನು (ಬೆಚ್ಚಿದನು)
ಬೇಡು-ಯಾಚಿಸು-ಬೇಡಿದನು
ಬೇ-ಸುಡುವಿಕೆ-ಬೆಂದಿತು (ಬೆಯ್)
ಬೊಬ್ಬಿರಿ-ಗಟ್ಟಿಯಾಗಿ ಕೂಗು-ಬೊಬ್ಬಿರಿದನು
ಮಸಗು-ವಿಜೃಂಭಿಸು-ಕೈಕೈಮಸಗಿತು
ಮಡಗು-ಇಡು-ಮಡಗಿದನು (ಮಡುಗು)
ಮರುಗು-ವ್ಯಸನಪಡು-ಮರುಗಿದನು
ಮಡಿ-ಸಾಯ್-ಮಡಿದನು
ಮರಳು-ಕುದಿಯುವಿಕೆ-ಮರಳುತ್ತದೆ
ಮರಳು-ಹಿಂದಿರುಗು-ಮರಳಿದನು
ಮರೆ-ಮರೆಯುವಿಕೆ-ಮರೆತನು
ಮರಸು-ಮರೆಯುವಂತೆ ಮಾಡು (ಕಾಣದಂತೆಮಾಡು)-ಮರೆಸಿದನು
ಮಲೆ-ಗರ್ವದಿಂದ ಎದುರಿಸಿ ನಿಲ್ಲು-ಮಲೆತನು
ಮಸೆ-ತಿಕ್ಕು, ಚೂಪುಗೊಳಿಸು-ಮಸೆದನು
ಮಾಡು-ಮಾಡುವಿಕೆ-ಮಾಡುತ್ತಾನೆ
ಮಾರು-ಮಾರಾಟಮಾಡುವಿಕೆ-ಮಾರಿದನು
ಮಾಗು-ಹಣ್ಣಾಗುವಿಕೆ-ಮಾಗಿತು
ಮಾಸು-ಕೊಳೆಯಾಗು-ಮಾಸಿದೆ
ಮಾಣ್ (ಮಾಣು)-ಬಿಡುವಿಕೆ ನಿಷೇಧಿಸು, ನಿಲ್ಲಿಸು-ಮಾಣಲಿ
ಮಾರ್ನುಡಿ-ಎದುರುಮಾತಾಡು-ಮಾರ್ನುಡಿದನು
ಮಿಸುಕು-ಮಿಸುಕುವಿಕೆ-ನಿದ್ದೆಯಲ್ಲಿ ಮಿಸುಕಿದನು
ಮಿನುಗು-ಪ್ರಕಾಶಿಸು-ಮಿನುಗುತ್ತದೆ
ಮಿಕ್ಕು-ಉಲ್ಲಂಘಿಸು-ಮಿಕ್ಕಿದನು
ಮಿಂಚು-ಹೊಳೆಯುವಿಕೆ-ಮಿಂಚಿತು
ಮಿಡಿ-ಬೆರಳಿನಿಂದ ಬಾರಿಸು-ಮಿಡಿದನು
ಮಿದಿ-ನಾದುವುದು-ಮಿದಿಯುತ್ತಾನೆ
ಮೀ (ಮೀಯ್)-ಸ್ನಾನಮಾಡು-ಮಿಂದನು
ಮೀಂಟು-ಮುಂದೆತಳ್ಳು-ಮೀಂಟಿದನು
ಮೀರು-ಮಿಕ್ಕು-ಮೀರಿದನು
ಮುಟ್ಟು-ಮುಟ್ಟುವಿಕೆ, ತಲಪುವಿಕೆ-ಮುಟ್ಟಿದನು
ಮುಳಿ-ಸಿಟ್ಟಾಗು-ಮುಳಿದನು
ಮುಡಿ-ಧರಿಸು-ಹೂ ಮುಡಿದಳು
ಮುದುಡು-ಮುದುಡಿಕೊಳ್ಳುವಿಕೆ-ಮುದುಡಿಕೊಂಡನು
ಮುಗಿ-ಮೊಗ್ಗಾಗು, ಕೈಜೋಡಿಸು ತೀರಿಹೋಗು-ಮುಗಿದನು
ಮುಸುಕು-ಕವಿಯುವಿಕೆ-ಹೊಗೆ ಮುಸುಕಿತು
ಮುಕ್ಕುಳಿಸು-ನೀರು ಮುಕ್ಕುಳಿಸುವಿಕೆ-ನೀರು ಮುಕ್ಕುಳಿಸಿದನು
ಮುಕ್ಕು-ತಿನ್ನು, ನುಂಗು-ಮುಕ್ಕಿದನು
ಮುಗ್ಗು-ಜೋಲಿಹೋಗು-ರಾಗಿ ಮುಗ್ಗಿದೆ
-ಧಾನ್ಯಗಳು ವಾಸನೆ ಬರುವಿಕೆ
ಮುಗ್ಗರಿಸು-ಜೋಲಿಹೋಗುವಿಕೆ-ಮುಗ್ಗರಿಸಿದನು
ಮುರಿ-ಚೂರು ಮಾಡು-ಮುರಿದನು
ಮುಳುಗು-ಕಾಣದಂತಾಗು-ಮುಳುಗಿತು
ಮೂಡು-ಹುಟ್ಟು-ಮೂಡಿತು
ಮೂಸು-ವಾಸನೆ ತೆಗೆದುಕೊಳ್ಳುವುದು-ಮೂಸಿದನು
ಮೆರೆ-ಡಂಭಾಚಾರದಿಂದ ತಿರುಗು-ಮೆರೆಯುತ್ತಾನೆ
ಮೆಚ್ಚು-ಒಪ್ಪು, ಪ್ರಸನ್ನನಾಗು-ಮೆಚ್ಚಿದನು
ಮೆಲ್ಲು-ತಿನ್ನು-ಮೆದ್ದನು
ಮೆಟ್ಟು-ತುಳಿ-ಮೆಟ್ಟಿದನು
ಮೇ (ಮೇಯ್)-ಪಶುಗಳು ಆಹಾರ ತಿನ್ನುವಿಕೆ-ಮೇಯುತ್ತದೆ
ಮೊಳೆ-ಮೊಳಕೆಯೊಡಯುವಿಕೆ-ಮೊಳೆಯಿತು
ಮೊಳಗು-ವಾದ್ಯಗಳು ಧ್ವನಿಮಾಡುವಿಕೆ  ಮೇಘಧ್ವನಿ-ಮೊಳಗಿದವು
ಮೋದು-ಹೊಡೆಯುವಿಕೆ, ಪ್ರಯೋಗಿಸುವಿಕೆ-ಗದೆಯಿಂದ ಮೋದಿದನು
ರೇಗು-ಸಿಟ್ಟಾಗು-ರೇಗಿದನು
ಸಲಹು-ಸಂರಕ್ಷಿಸು-ಸಲಹಿದನು
ಸರಿ-ಪಕ್ಕಕ್ಕೆ ಹೋಗುವಿಕೆ-ಸರಿದನು
ಸಂತವಿಡು-ಸಂತೋಷಪಡಿಸು ಸಂತೈಸುವಿಕೆ-ಸಂತವಿಟ್ಟನು
ಸವಿ-ರುಚಿನೋಡು, ತಿನ್ನು-ಸವಿದನು
ಸಡಿಲು-ಕಟ್ಟುಸಡಿಲಾಗುವಿಕೆ-ಸಡಿಲಿದೆ
ಸದೆ-ಹೊಡೆ, ಬಡಿ-ಸದೆದನು
ಸಾ (ಸಾಯ್)-ಮರಣಹೊಂದು-ಸತ್ತನು
ಸಾಕು-ರಕ್ಷಿಸು-ಸಾಕಿದನು
ಸಾರಿಸು-ಸಾರಣೆ ಮಾಡುವಿಕೆ-ಸಾರಿಸಿದಳು
ಸಾರು-ಪ್ರಕಟಪಡಿಸು ಹತ್ತಿರಕ್ಕೆ ಹೋಗು-ಸಾರಿದರು
ಸಾಗು-ಹೋಗು, ನಡೆ-ಸಾಗಿದನು
ಸಿಗು-ಕೈಸೇರು-ಸಿಕ್ಕಿತು
ಸೀನ್ (ಸೀನು)-ಸೀನುವಿಕೆ-ಸೀತನು
ಸೀಯ್-ಸುಡುವಿಕೆ ಕಮರುವಿಕೆ, ಹೊತ್ತುವಿಕೆ-ಅನ್ನ ಸೀತಿದೆ (ಸೀದಿದೆ)
ಸಿಲುಕು-ಬಂಧನಕ್ಕೊಳಗಾಗು-ಸಿಲುಕಿದನು
ಸಿಗು-ಹಸ್ತಗತವಾಗು-ಸಿಕ್ಕಿತು
ಸುಗಿ-ಸುಗಿಯುವಿಕೆ-ಸುಗಿದನು
ಸುಯ್-ಉಸಿರುಬಿಡು-ಸುಯ್ದನು
ಸುಲಿ-ಸಿಪ್ಪೆಸುಲಿಯುವಿಕೆ-ಸುಲಿದನು
ಸುಳಿ-ತಿರುಗುವಿಕೆ-ಸುಳಿದನು
ಸೂಸು-ತುಂಬು-ಸೂಸಿದೆ
ಸೆಣಸು-ಯುದ್ಧಮಾಡು-ಸೆಣಸಿದನು
ಸೆಳೆ-ಜಗ್ಗು-ಸೆಳೆದನು
ಸೊಲ್ಲಿಸು-ಮಾತಾಡುವಿಕೆ-ಸೊಲ್ಲಿಸಿದನು
ಸೋಲ್ (ಸೋಲು)-ಅಪಜಯ-ಸೋತನು
ಹರಡು-ಹರಡುವಿಕೆ-ಹರಡಿದನು
ಹವಣಿಸು-ಅಪೇಕ್ಷಿಸು, ಇಚ್ಚಿಸು ಸಿದ್ಧಪಡಿಸು-ಹವಣಿಸಿದನು
ಹಂಚು-ಹಂಚುವಿಕೆ-ಹಂಚಿದನು
ಹತ್ತು-ಏರು-ಹತ್ತಿದನು
ಹನಿ-ತೊಟ್ಟಿಕ್ಕು-ಹನಿಯುತ್ತದೆ
ಹನಿಸು-ಎರೆಯುವಿಕೆ-ಹನಿಸಿದನು
ಹರಸು-ಆಶೀರ್ವಾದಮಾಡು-ಹರಸಿದನು
ಹಿಂಡು-ಹಿಂಡುವಿಕೆ-ರಸಹಿಂಡಿದನು ತೊಂದರೆಕೊಡುವಿಕೆ
ಹುರಿ-ಹುರಿಯುವಿಕೆ-ಹುರಿದನು
ಹರಿ-ಹರಿಯುವಿಕೆ-ಹರಿಯಿತು
ಹಿರಿ-ಹೊರಗೆಳೆ-ಹಿರಿದನು
ಹಬ್ಬು-ವಿಸ್ತಾರವಾಗು-ಹಬ್ಬಿತು
ಹಳಿ-ನಿಂದಿಸು-ಹಳಿದನು
ಹಾರು-ಜಿಗಿಯುವಿಕೆ, ನೆಗೆಯುವಿಕೆ-ಹಾರಿದನು
ಹಾರು-ಎದುರುನೋಡು-ಹಾರಿದನು
ಹಾಡು-ಸಂಗೀತ ಹೇಳುವಿಕೆ-ಹಾಡಿದನು
ಹಿಂಗು-ನೀಗು, ಬಿಟ್ಟುಬಿಡು-ಹಿಂಗಿತು
ಹಿಂಜು-ಹಿಂಜುವಿಕೆ-ಹತ್ತಿಯನ್ನು ಹಿಂಜಿದನು
ಹಿಸುಕು (ಹಿಚುಕು)-ಒತ್ತೊವಿಕೆ-ಹಿಸುಕಿದನು ಹಿಚುಕಿದನು
ಹೀರು-ಹೀರುವಿಕೆ-ರಸ ಹೀರಿದನು
ಹುಗಿ-ನೆಲದಲ್ಲಿ ಮುಚ್ಚು-ಹುಗಿದನು
ಹೆರು-ಪ್ರಸವಕ್ರಿಯೆಯಲ್ಲಿ-ಹೆತ್ತಳು
ಹೆಣಗು-ಯತ್ನಿಸು-ಹೆಣಗಿದನು
ಹೇರು-ಭಾರಹೇರುವಿಕೆ-ಭಾರಹೇರಿದನು
ಹೇವರಿಸು-ನಾಚು-ಹೇವರಿಸಿದನು
ಹೊರೆ-ರಕ್ಷಣೆಮಾಡು-ಹೊರೆದನು
ಹೊಂದು-ಸೇರು, ಪಡೆ-ಹೊಂದಿದನು
ಹೊಳೆ-ಪ್ರಕಾಶಿಸು-ಹೊಳೆಯುತ್ತದೆ
ಹೋರು-ಯುದ್ಧಮಾಡು-ಹೋರಿದನು
ಜಗಳವಾಡು
ಹೋಲು-ಸಮನಾಗು ಹೋಲಿಕೆಯಲ್ಲಿ-ಹೋಲುತ್ತಾನೆ

[1] ಅರಸು ಎಂಬಲ್ಲಿ ರಕಾರವೂ, ಅರಿ ಎಂಬಲ್ಲಿ ರಿ ಕಾರವೂ ಶಕಟ ರೇಫಗಳಾದರೂ ಬಳಕೆಯಲ್ಲಿ ಈ ವರ್ಣವನ್ನು ಈಗ ಕೈಬಿಟ್ಟಿರುವುದರಿಂದ ರೇಫ ರಕಾರವನ್ನೇ ಬರೆಯಲಾಗಿದೆ.  ಎಲ್ಲ ಕಡೆಗೂ ಆ ನಿಯಮವನ್ನು ಪಾಲಿಸಿಲ್ಲ.
[2] ಅಳಲು-ಎಂಬಲ್ಲಿ ಳಕಾರವು ರಳ ಳಕಾರ.  ಆ ನಿಯಮವನ್ನು ಪಾಲಿಸದೆ ಎಲ್ಲ ಕಡೆಗೂ ಳ ಕಾರವನ್ನೇ ಬರೆಯಲಾಗಿದೆ.

19 ಕಾಮೆಂಟ್‌ಗಳು:

  1. ಪೂರ್ಣ ಕ್ರಿಯಾಪದಗಳು.
    ಸಾಪೇಕ್ಷ ಕ್ರಿಯಾಪದಗಳು.
    ೩ಸಂಯುಕ್ತ ಕ್ರಿಯಾಪದಗಳು.ಅರ್ಥ ಮತ್ತು ಉದಾಹರಣೆಗಳನ್ನೂ ನೀಡಿ

    ಪ್ರತ್ಯುತ್ತರಅಳಿಸಿ
  2. Thank you so much sir. it is very use full for me i am taking online class for that I did the ppt from this only. once a again thank u so much sir.

    ಪ್ರತ್ಯುತ್ತರಅಳಿಸಿ
  3. ತುಂಬಾ ಧನ್ಯವಾದಗಳು ಸರ್.ನನಗೆ ಬಹಳ ಉಪಯುಕ್ತವಾಗಿದೆ 🙏🙏🙏🙏🙏🙏

    ಪ್ರತ್ಯುತ್ತರಅಳಿಸಿ
  4. ಅದ್ಭುತವಾಗಿದೆ ಮತ್ತು ತಿಳಿಯಲು ಸುಲಭವೂ ಇದೆ 👌

    ಪ್ರತ್ಯುತ್ತರಅಳಿಸಿ
  5. ತುಂಬಾ ಉಪಯುಕ್ತವಾದ ವಿಷಯ... ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  6. ಬಹಳ ಉಪಯೋಗಕರ ಮಾಹಿತಿ (ಕನ್ನಡ ಹನ್‌ಸ್ಪಲ್‌ಚೆಕರ್‌ಗೂ ಉತ್ತಮ ಪಡಿಸಲೂ ಸಹಾಯಕ)

    ಪ್ರತ್ಯುತ್ತರಅಳಿಸಿ
  7. ತಿನ್ನು ಇದು ಸಕಾರಾತ್ಮಕ ಧಾತು ವೇ

    ಪ್ರತ್ಯುತ್ತರಅಳಿಸಿ