ಪುಟಗಳು

26 ನವೆಂಬರ್ 2013

ಸಪ್ತಾಕ್ಷರಿ ಮಂತ್ರ (ಗದ್ಯ-8)

ಈ ಗದ್ಯದ ಕರ್ತೃ: ಮುದ್ದಣ, ಆಕರ ಕೃತಿ: `ಶ್ರೀರಾಮ ಪಟ್ಟಾಭಿಷೇಕ'
  • 'ಮುದ್ದಣ' ಎಂಬ ಕಾವ್ಯನಾಮದಿಂದ ಪ್ರಸಿದ್ಧಿಗೆ ಬಂದಿರುವ ಲಕ್ಶ್ಮೀ ನಾರಾಯಣ ಕವಿಯ ಊರು ನಂದಳಿಕೆ. ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆಸೇರಿದ ಒಂದು ಗ್ರಾಮ. 
  • ಈತನ ಜನನ ಕ್ರಿ. ಶ. ೧೮೭೦ನೆಯ ಜನವರಿ ೨೪ರಂದು . 
  • ಈತನ ತಂದೆ ಪಾಠಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ.

ಇವರು ಮದುವೆಯಾಗಿ ನಂದಳಿಕೆಯಲ್ಲಿ ನೆಲೆಯಾಗಿ ನಿಂತ ವೇಳೆ ತಿಮ್ಮಪ್ಪಯ್ಯ ಊರ ದೇವಸ್ಥಾನದಲ್ಲಿ ಕಟ್ಟಿಗೆ ಕೋಲು ಹಿಡಿಯುವ ಕೆಲಸದಲ್ಲಿ ಇದ್ದರೆಂದು ಹೇಳುತ್ತಾರೆ. ಗಂಡ ದೇವರ ಊಳಿಗದಲ್ಲಿ ತೊಡಗಿದಂದು ಹೆಂಡತಿ ಗಂಡನ ಸೇವೆ, ದೇವರ ಸೇವೆ, ಮನೆಗೆಲಸಗಳಲ್ಲಿ ನಿರತಳಾಗಿದ್ದಳೆಂದು ಊಹಿಸಬಹುದಾಗಿದೆ.ತಿಮ್ಮಪ್ಪಯ್ಯನವರಿಗೆ ಮೂವತ್ತು ವರ್ಷವೂ, ಮಹಾಲಕ್ಷ್ಮಮ್ಮನವರಿಗೆ ಹದಿನೈದು ವರ್ಷವೂ ವಯಸ್ಸಾಗಿದ್ದಾಗ ಇವರ ಹಿರಿಯಮಗನಾಗಿ ಲಕ್ಶ್ಮೀನಾರಾಯಣನು ಹುಟ್ಟಿದನು. ಈತ ಹುಟ್ಟಿದ್ದು ಶುಕ್ಲ ಸಂ||ರದ ಪುಷ್ಯ ಬಹುಳ ಅಷ್ಟಮಿ ಸೋಮವಾರ. ಮಗುವಿನ ಬಾಲಲೀಲೆ ತಾಯಿತಂದೆಯರಿಗೆ ಮೋಹಕವಾಗಿ ಕಂಡಿತು. ಈ ಕಾರಣದಿಂದಾಗಿ ಮಗನನ್ನುಮುದ್ದಿಗಾಗಿ`ಮುದ್ದಣ' ಎಂದು ಕರೆಯಲಾರಂಭಿಸಿದರು. ಹುಡುಗ ಬೆಳೆದು ಬುದ್ಧಿ ತಿಳಿದ ಮೇಲೆ ತನ್ನ ತಾಯಿ ಪ್ರೀತಿಯಿಂದ ಕರೆದ ಹೆಸರನ್ನೇ ತನ್ನ ಕಾವ್ಯ ನಾಮವನ್ನಾಗಿ ಆರಿಸಿಕೊಂಡನು. ನಂದಳಿಕೆಯಲ್ಲಿ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ ಲಕ್ಶ್ಮೀನಾರಾಯಣನು ಓದು ಬರಹ ಕಲಿಯಲು ಪ್ರಾರಂಭಿಸಿದನು. ನಾಲ್ಕೈದು ವರ್ಷಗಳಲ್ಲಿ ಓದು ಬರಹಗಳಲ್ಲಿ ಈತ ತುಂಬ ಬುದ್ಧಿವಂತನಾಗಿ ತೇರ್ಗಡೆಯಾದನು. ಇದೇ ವೇಳೆಗೆ ಹುಟ್ಟಿದ ಊರಿನ ಸಹಜಸುಂದರವಾದ ನಿಸರ್ಗ ಸೌಂದರ್ಯ ಈ ಬಾಲಕನ ಮೇಲೆ ಒಳ್ಳೆಯ ಪರಿಣಾಮವನ್ನು ಉಂಟುಮಾಡಿರಬೇಕು. ಗದ್ದೆ, ಹೊಲ ತೋಟ ಕೆರೆ ಕಟ್ಟೆ, ಕಾಲುವೆ ಹೊಳೆ ಕಡಲು ಗುಡ್ಡ ಬೆಟ್ಟ ಕಾಡು ಕಣಿವೆ -ಮುಂತಾದ ಪ್ರಕೃತಿಯ ನೋಟಗಳು ಕವಿಗೆ ವಿಸ್ಮಯಕಾರಿಯಾಗಿ ಕಂಡಿರಬೇಕು. ಜೊತೆಗೆ ಆಗಿನ ದಿನಗಳಲ್ಲಿ ನಡೆಯುತ್ತಿದ್ದ ದೇವಸ್ಥಾನದ ಉತ್ಸವಗಳು, ನೆರೆಯ ಊರಿನ ಜಾತ್ರೆ, ಸಿರಿ ಜಾತ್ರೆ, ಪರಿಷೆ, ರಥೋತ್ಸವಾದಿಗಳು, ಹರಿಕಥೆ, ಪುರಾಣ ಶ್ರವಣ, ಭಾಗವತಸಂಕೀರ್ತನ,ರಾಮಾಯಣ ಪಾರಾಯಣ ಮುಂತಾದವುಗಳು, ಉಗಾದಿ, ಗೌರಿ-ಗಣೇಶ, ನವರಾತ್ರಿ, ದೀಪಾವಳಿ, ಸಂಕ್ರಾಂತಿ, ಮುಂತಾದ ದೊಡ್ಡ ದೊಡ್ಡ ಹಬ್ಬ ಹರಿದಿನಗಳು ಈ ಬಾಲಕನ ಹೃದಯವನ್ನು ಸೂರೆಗೊಂಡಿರಬೇಕು. ಈ ವಿಧವಾದ ಶಾಲೆಯ, ಸೃಷ್ಟಿಯ, ಸಂಸ್ಕೃತಿಯ ಈ ಮೂರು ಬಗೆಯ ಸಂಗತಿಗಳಿಂದ ಬಾಲಕ ಲಕ್ಷ್ಮೀನಾರಾಯಣನ ಕವಿ ಹೃದಯ ಪ್ರೇರಣೆ ಪಡೆದಿರಬೇಕು. ಪ್ರಾಥಮಿಕ ಶಿಕ್ಷಣ ನಂದಳಿಕೆಯಲ್ಲಿ ನಡೆಯಿತು.ಮುಂದಿನ ಶಿಕ್ಷಣಕ್ಕಾಗಿ ಈ ಬಾಲಕ ಉಡುಪಿಗೆ ಹೋದನು. ಅಲ್ಲಿ ಇಂಗ್ಲೀಷ್ ಶಾಲೆಗೆ ಸೇರಿ ಒಂದೆರಡು ವರ್ಷ ಕಲಿತನು. ಆ ಮೇಲೆ ಬಡತನದ ದೆಸೆಯಿಂದ ಅದನ್ನು ಬಿಟ್ಟು ಟ್ರೈನಿಂಗ್ ಶಾಲೆಗೆ ಸೇರಿದನು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಮನೆಯಲ್ಲಿಯೇ ಕಲಿಯತೊಡಗಿದನು. ಇಅದರ ಮೇಲೆ ಉಡುಪಿ ಪಟ್ಟಣದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗಗಳಿಗೆ ಪದೇ ಪದೇ ಹೋಗುತ್ತಿದ್ದನು. ಶಾಸ್ತ್ರೀಯವಾದ ಸಂಗೀತವನ್ನು ಅಭ್ಯಾಸ ಮಾಡುವುದನ್ನೂ ಪ್ರಯತ್ನ ಪಟ್ಟನು. ಯಕ್ಷಗಾನ ವೇಷ, ಹಾಡು,, ಕುಣಿತ ಇವು ಹುಡುಗನ ಮೇಲೆ ಪ್ರಭಾವ ಬೀರಿದವು. ತಾನೂ ವೇಷ ಕಟ್ಟಿ ಕುಣಿದನು. ಹಾಡು ಕಟ್ಟಿ ಹಾಡಿದನು.ಹೀಗೆ ಹತ್ತು ಹದಿಮೂರು ವರ್ಷ ಉಡುಪಿಯಲ್ಲಿ ಇದ್ದ ದಿನಗಳಲ್ಲಿ ಟ್ರೈನಿಂಗ್ ಕಾಲೇಜಿನಲ್ಲಿ ಉತ್ತೀರ್ಣನಾಗುವುದರ ಜೊತೆಗೆ ಯಕ್ಷಗಾನವನ್ನು ರಚಿಸುವ ಸಾಮರ್ಥ್ಯವನ್ನೂ ಪಡೆದನು. ಮುಂದೆ ಗಟ್ಟಿ ಮುಟ್ಟಾಗಿ ಕಂಡುಬಂದ ಈ ಹುಡುಗನನ್ನು ಸ್ಕೂಲಿನ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಗಳಿಸುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ (ಇಂದಿನ ಚೆನ್ನೈ) ಈತ ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವನ್ನೂ ಪ್ರಯತ್ನಿಸಿದಂತೆ ತೋರುತ್ತದೆ. ಶ್ರೀ ಎಚ್. ನಾರಾಯಣ ರಾಯರು, , ಶ್ರೀ ಬೆನಗಲ್ ರಾಮರಾಯರು ಮುಂತಾದವರ ಸಹಾಯದಿಂದ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದ್ದನೆಂದು ಹೇಳುತ್ತಾರೆ. ಮದರಾಸಿನಿಂದ ಹಿಂದಿರುಗಿದ ಮೇಲೆಉಡುಪಿಯಿಯ ಹೈಸ್ಕೂಲಿನಲ್ಲಿ ಲಕ್ಶ್ಮೀನಾರಾಯಣನಿಗೆ ವ್ಯಾಯಾಮ ಶಿಕ್ಷಕನ ಕೆಲಸ ದೊರೆಯಿತು. `ಸಂಬಳ ತಿಂಗಳ ಮೂವತ್ತು ದಿನಗಳೂ ದುಡಿದರೂ ಹತ್ತು ರೂಪಾಯಿ! ಈ ಕವಿ ಅಂಗಸಾಧನೆಯ ಶಿಕ್ಷಕನಾಗಿ ಉಡುಪಿಯಲ್ಲಿ ನೆಲೆಸಿದ್ದು ೧೮೮೯ನೆಯ ಮೇ ತಿಂಗಳಲ್ಲಿ. ಈ ವೃತ್ತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಇದ್ದನೆಂದು ತೋರುತ್ತದೆ. ಈ ಅವಧಿಯಲ್ಲಿ ಮಳಲಿ ಸುಬ್ಬರಾಯರೆಂಬ ಅದೇ ಶಾಲೆಯ ಉಪಾಧ್ಯಾಯರು ಇವನಿಗೆ ಗುರುವಾಗಿ ದೊರೆತರು. ಸುಬ್ಬರಾಯರೂ ಗ್ರಂಥಕರ್ತರು. ಅವರು ತಾವು ರಚಿಸಿದ ಕೃತಿಗಳನ್ನು ಲಕ್ಶ್ಮೀನಾರಾಯಣನಿಗೆ ಓದಲು ಕೊಟ್ಟರು.ತಮ್ಮ ಸ್ವಕೀಯ ಪುಸ್ತಕಭಂಡಾರದ ಗ್ರಂಥಗಳನ್ನೂ ಅವನಿಗೆ ಕೊಟ್ಟರು. ಲಕ್ಶ್ಮೀನಾರಾಯಣನು ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದಿದನು. ತನಗೂ ಅಂತಹ ಕೃತಿಗಳನ್ನು ರಚಿಸುವ ಅಭಿಲಾಷೆಯನ್ನು ಗುರುಗಳಲ್ಲಿ ಭಿನ್ನವಿಸಿಕೊಂಡನು. ಗುರುಗಳು ಸಂತೋಷದಿಂದ ಒಪ್ಪಿ ಸಂಸ್ಕೃತದ ರತ್ನಾವಳಿ ನಾಟಕದ ಕಥಾನಕವನ್ನು ಹೇಳಿ ಬರೆಯಿಸಿದರು. ಮಳಲಿ ಗುರುಗಳ ಕೃಪೆಯಿಂದ ಲಕ್ಶ್ಮೀನಾರಾಯಣನು `ರತ್ನಾವತಿ ಕಲ್ಯಾಣ' ಎಂಬ ತನ್ನ ಚೊಚ್ಚಲ ಕೃತಿಯನ್ನು ರಚಿಸಿ ಕವಿಯಾದನು. ಮುಂದೆ`ಕುಮಾರವಿಜಯ' ಎಂಬ ಇನ್ನೊಂಡು ಯಕ್ಷಗಾನ ಪ್ರಸಂಗವನ್ನು ಬರೆದು ಸಂಸ್ಕೃತ ಅದ್ಭುತ ರಾಮಾಯಣವನ್ನು ಗುರುಗಳಲ್ಲಿ ಓದಿ ಅದನ್ನು ಹಳೆಗನ್ನಡದಲ್ಲಿ ಗದ್ಯದಲ್ಲಿ ಸ್ವತಂತ್ರವಾದ ಕೃತಿಯನ್ನಾಗಿ ರಚಿಸಲು ತೊಡಗಿದನು. ಈ ನಡುವೆ ಸಂಸ್ಕೃತ ಹಳಗನ್ನಡ ಕಾವ್ಯನಾಟಕಗಳನ್ನು ಅಭ್ಯಾಸ ಮಾಡಿದನು. ಸಾಹಿತ್ಯದ ಉಪಾಸನೆಯನ್ನು ಒಂದು ತಪ್ಪಸ್ಸೆಂಬಂತೆ ಕೈಕೊಂಡನು. ಮುಂದೆ ಮಳಲಿಯವರಿಗೆ ಕುಂದಾಪುರಕ್ಕೆ ವರ್ಗವಾದಾಗ ೧೮೯೨ನೆ ಮಾರ್ಚಿನಲ್ಲಿ ಲಕ್ಶ್ಮೀನಾರಾಯಣನೂ ಕಷ್ಟಪಟ್ಟು ಅದೇ ಊರಿಗೆ ವರ್ಗ ಮಾಡಿಸಿಕೊಂಡನು. ಕನ್ನಡ`ಅದ್ಭುತ ರಾಮಾಯಣ'ವೆಂಬ ಗದ್ಯ ಕಾವ್ಯ ಈ ವೇಳೆಗೆ ಪೂರ್ತಿಯಾಯಿತು.೧೮೯೫ನೆ ಮಾರ್ಚ್ ೨ರಲ್ಲಿ ಲಕ್ಶ್ಮೀನಾರಾಯಣನು ಅನ್ಯ ಕತೃವೆಂಬ ಸೋಗಿನಲ್ಲಿ ಈ ಕೃತಿಯನ್ನು ಮೈಸೂರಿನ ಕಾವ್ಯಮಂಜರಿ ಸಂಪಾದಕರಿಗೆ ಮುದ್ರಣಕ್ಕಾಗಿ ಕಳುಹಿಸಿಕೊಟ್ಟನು. ೧೮೯೫ನೆ ಜುಲೈ ತಿಂಗಳ ಸಂಚಿಕೆಯಲ್ಲಿ ಮುದ್ರಣ ಪ್ರಾರಂಭವಾಗಿ ಅಕ್ಟೋಬರ್ ತಿಂಗಳ ಸಂಚಿಕೆಯಲ್ಲಿ ಮುಕ್ತಾಯವಾಯಿತು. ಈ ವೇಳೆಗೆ ಲಕ್ಶ್ಮೀನಾರಾಯಣನಿಗೆ ಬವುಲಾಡಿ ವೆಂಕಟರಮಣ ಹೆಬ್ಬಾರರು ಎಂಬ ವಿದ್ವಾಂಸರೊಬ್ಬರ ಪರಿಚಯಲಾಭ ದೊರೆಯಿತು. ಈ ಮಹನೀಯರಲ್ಲಿ ಲಕ್ಶ್ಮೀನಾರಾಯಣನು ತಾನು ಕನ್ನಡ ಜೈಮಿನಿ ಭಾರತದ ಮಾದರಿಯಲ್ಲಿ ಬರೆಯಲು ತೊಡಗಿದ್ದ `ರಾಮಾಶ್ವಮೇಧ' ಎಂಬ ದೊಡ್ಡ ಗ್ರಂಥದ ಮೊದಮೊದಲಿನ ಕೆಲವು ಪದ್ಯಗಳನ್ನು ಓದಿ ಹೇಳಿದನಂತೆ. ಹೆಬ್ಬಾರರು ಪದ್ಯಬಂಧದಲ್ಲಿ ಕಾಣ ಬರುವ ರಸಹೀನತೆಯನ್ನು ತೋರಿಸಿಕೊಟ್ಟು ಪ್ರಾಚೀನ ಗ್ರಂಥಗಳಲ್ಲಿ ದೊರೆಯದ ಶಬ್ದರೂಪಗಳಿಗೆ ಆಧಾರಗಳನ್ನು ಕೇಳುತ್ತ ಬಂದರಂತೆ. ಮೂರು ನಾಲ್ಕು ವರ್ಷಗಳು ಕಳೆದ ಮೇಲೆ ಮತ್ತೊಮ್ಮೆ ಲಕ್ಶ್ಮೀನಾರಾಯಣನು ಹೆಬ್ಬಾರರನ್ನು ಸಂಧಿಸಿದಾಗ ಅವರಿಗೆ ಆ ರಾಮಾಶ್ವಮೇಧದ ಇನ್ನೂಕೆಲವು ಪದ್ಯಗಳನ್ನು ಓದಿದರಂತೆ.
        ಆಗ ಅವರು ಖಡಾಖಡಿಯಾಗಿ `ನೀವು ಹೀಗೆ ಬರೆಯುವುದಕ್ಕಿಂತ ಛಂದಸ್ಸಿನ ಗೊಡವೆ ಬಿಟ್ಟು ವಚನ ರೂಪದಲ್ಲಿ ಏಕೆ ಬರೆಯಬಾರದು' ಎಂದು ಕೇಳಿದರಂತೆ. ಮತ್ತೆ ಮೂರು ವರ್ಷಗಳ ಮೇಲೆ ಇನ್ನೊಮ್ಮೆ ಸಂಧಿಸಿದಾಗ ಲಕ್ಶ್ಮೀನಾರಾಯಣನು ತನ್ನ ಅಚಾದ `ಅದ್ಭುತ ರಾಮಾಯಣವ'ದ ಪ್ರತಿಯೊಂದನ್ನು ಹೆಬ್ಬಾರರಿಗೆ ಕೊಟ್ಟಾಗ ಅವರು ಓದಿ ನೋಡಿ ಸಂತೋಷಪಟ್ಟರಂತೆ. ಇನ್ನೊಮ್ಮೆ ಸಂಧಿಸಿದಾಗ `ರಾಮಪಟ್ಟಾಭಿಷೇಕ' ಮುಗಿಯಿತೆಂದೂ ಮುಂದಿನ ಭಾಗವನ್ನು ಗದ್ಯದಲ್ಲಿ ಬರೆಯುವೆನೆಂದೂ ಈ ಕವಿ ಹೆಬ್ಬಾರರಿಗೆ ಹೇಳಿದನಂತೆ. ಅಲ್ಲದೇ ಪಟ್ಟಾಭಿಷೇಕ ಕಾಲದಲ್ಲಿ ರಾಮನ ಸ್ತುತಿ ಪರವಾದ ಕೆಲವು ಪದ್ಯಗಳನ್ನು ಹೆಬ್ಬಾರರೆ ಕೊಡಬೇಕೆಂದು ಕೇಳಿಕೊಂಡನಂತೆ. ಅದಕ್ಕೆ ಹೆಬ್ಬಾರರು ಒಪ್ಪಿ `ಭೂರಮೆ ಭುಜಾಗ್ರದೊಳ್ ಭುಜಮಧ್ಯದೊಳ್' ಎಂಬ ಪದ್ಯವನ್ನು ಆರಂಭಿಸಿ `ಇಂತು ಮೃದುಮಧುರವಚನರಚನೆಗಳಂ' ಎಂಬ ಪದ್ಯದವರೆಗೆ ನಡುವಣ ೩೩ ಪದ್ಯಗಳನ್ನು ಬರೆದುಕೊಟ್ಟರಂತೆ. ಅಲದೇ ಒಟ್ಟಿನಲ್ಲಿ ಕಾವ್ಯವನ್ನು ಒಮ್ಮೆ ಕೈಯಾಡಿಸಿದರಂತೆ. ಹೀಗೆ ಹೆಬ್ಬಾರರ ಸಲಹೆ ಸಹಕಾರಗಳಿಂದ ಲಕ್ಶ್ಮೀನಾರಾಯಣನು `ಶ್ರೀರಾಮಪಟ್ಟಾಭಿಷೇಕ' ವನ್ನು ಪೂರ್ತಿಗೊಳಿಸಿದನು. ೨೫-೯-೧೮೯೫ರಲ್ಲಿ `ಮಹಾಲಕ್ಶ್ಮಿಯೆಂಬಾಕೆಯಿಂದ ರಚಿತವಾದ ರಾಮಪಟ್ಟಾಭಿಷೇಕ ವೆಂಬ ಷಟ್ಪದಿ ಗ್ರಂಥವು ಸಿಕ್ಕಿದೆ. ಅದರಲ್ಲಿ ಪದ್ಯಗಳು ೨೫೦ರೊಳಗಿವೆ. ಗ್ರಂಥವು ಬಹಳಚೆನ್ನಾಗಿದೆ. ಮುದ್ರಿಸಲು ಯೋಗ್ಯವೆಂದು ಬ್ ಹಾವಿಸುತ್ತೇನೆ...' ಎಂದು ಕಾವ್ಯಮಂಜರಿಯವರಿಗೆ ಬರೆದನು. ೧೮೯೫ನೆಯನವೆಂಬರ್ ೪೪ನೆ ಸಂಚಿಕೆಯಲ್ಲಿ ಎಂದರೆ `ಅದ್ಭುತ್ ರಾಮಾಯಣ' ವನ್ನು ಮುಗಿಸಿದ ಸಂಚಿಕೆಯಲ್ಲಿಯೇ ರಾಮಪಟ್ಟಾಭಿಷೇಕವನ್ನು ಆರಂಭ ಮಾಡಿ ೧೮೯೬ನೆಯ ಜನವರಿ ೪೬ನೆಯ ಸಂಚಿಕೆಯಲ್ಲಿ ಮುಗಿಸಿದರು.
         ರಾಮಪಟ್ಟಾಭಿಷೇಕ ಕಾವ್ಯದಲ್ಲಿ ನಾಂದಿ ಸಂಧಿಯಲ್ಲಿ ಬರುವ ಪ್ರತಿ ಪದ್ಯದ ಅಕ್ಷರವನ್ನು ಜೋಡಿಸುತ್ತ ಹೋದರೆ `ಶ್ರೀ ರಾಮಚಂದ್ರಾಯ ನಮಾಮಿ' ಎಂದಾಗುತ್ತದೆ. ಈ ಗೂಢರಚನೆಯ ಸ್ವಾರಸ್ಯವನ್ನು ಈತನೇ ಹೆಬ್ಬಾರರಿಗೆ ತೋರಿಸಿ ಕೊಟ್ಟಿದ್ದನಂತೆ. `ರಾಮಾಶ್ವಮೇಧ' ಎಂದು ಪ್ರಾರಂಭವಾದ ಕೃತಿ ಹೀಗೆ`ರಾಮಪಟ್ಟಾಭಿಷೇಕ ಕಾವ್ಯವಾಗಿ ಬೇರ್ಪಟ್ಟಾಗ ಅದಕ್ಕೆ ಅನುಗುಣವಾಗಿ ಅಲ್ಲಲ್ಲಿ ಪದಗಳ ಬದಲಾವಣೆ ಆಗಬೇಕಾಯಿತು. `ಶ್ರೀಕಾಂತನಧ್ವರದಚಾರಿತ್ರ್ಯಮಂ' ಎನ್ನುವ ಕಡೆ ಬದಲಾವಣೆಯಾಗದಿದ್ದುದನ್ನು ಹೆಬ್ಬಾರರು ತೋರಿಸಿಕೊಟ್ಟು `ಅಭ್ಯುದಯಚಾರಿತ್ರ್ಯಮಂ' ಎಂದು ತಿದ್ದಿದರಂತೆ. ಮುಂದೆ ಲಕ್ಶ್ಮೀನಾರಾಯಣನಿಗೆ ಮತ್ತೆ ಉಡುಪಿಗೆ ವರ್ಗವಾದುದರ ಪರಿಣಾಮವಾಗಿ ಹೆಬ್ಬಾರರ ಸಂಪರ್ಕ ಕಡಿಮೆಯಾಗಿ ಬರಬರುತ್ತ ಕಡೆಗೊಮ್ಮೆ ಕಡಿದೇ ಹೋಯಿತೆಂದು ತೋರುತ್ತದೆ. `ಪದ್ಯಂ ವಧ್ಯಂ ಗದ್ಯಂ ಹೃದ್ಯಂ; ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು' ಎಂದು ಮುಂದೆ ಕವಿ ನಿರ್ಧರಿಸಿದನು. ಹೆಬ್ಬಾರರ ಪ್ರೇರಣೆಯಿಂದ ಈ ನಿರ್ಧಾರಕ್ಕೆ ಬಂದು ಅದರಂತೆ ರಾಮಪಟ್ಟಾಭಿಷೇಕದ ಮುಂದಣ ಕಥೆಯನ್ನು ಗದ್ಯದಲ್ಲಿ ಬರೆಯುತ್ತಾನೆ. ಜೈಮಿನಿ ಭಾರತದ ಹೃದ್ಯವಾದ ಸೀತಾಪರಿತ್ಯಾಗದ ಕಥೆಯನ್ನು ರಾಮನ ಅಶ್ವಮೇಧ ವೃತ್ತಾಂತವನ್ನು ಸುಂದರೆವಾಗಿ ಗದ್ಯದಲ್ಲಿ ಹೇಳಿದನು. ವೆಂಕಟಾಚಾರ್ಯರ ಕಾದಂಬರಿಯನ್ನು ಈತ ಓದಿದ್ದನೋ ಏನೋ! ಆ ಕಾದಂಬರಿಯ ಕಥೆಯ ಸಂವಾದ ಸ್ವಾರಸ್ಯವನ್ನು ಗ್ರಹಿಸಿ ಮುದ್ದಣ-ಮನೋರಮೆಯರ ಅಪೂರ್ವವಾದ ಮುದ್ದಣ-ಮನೋರಮೆಯರ ಸರಸ ಸಲ್ಲಾಪವನ್ನು ಕಥೆಯಲ್ಲಿ ಬಳಸಿಕೊಂಡು ಕಥೆ ಹೇಳಿದನು. ಎಡೆ ಎಡೆಯಲ್ಲಿ ಸಕ್ಕದ ಕನ್ನಡ ನಲ್ನುಡಿಯನ್ನು ಮೆರೆಯಲು ತಿರುಳ್ಗನ್ನಡದಲ್ಲಿ ಈ ಕಥೆ ಬರೆದನು. ಈ ಗ್ರಂಥವೂ ಮೈಸೂರಿನ ಕಾವ್ಯಕಲಾನಿಧಿಯವರಿಂದ ೧೯೧೧ರಲ್ಲಿ ಬೆಳಕಿಗೆ ಬಂದಿತು. ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಸಂವಾದದ ವಾಕ್ಯಗಳು ಜನಪ್ರಿಯವಾದವು. ಎಲ್ಲ ಪತ್ರಿಕೆಗಳೂ ಕೃತಿಯನ್ನು ಕತೃವನ್ನು ಹೊಗಳಿದವು. ಕೆಲವು ಇಂಗ್ಲಿಷ್ ಪತ್ರಿಕೆಗಳು ಈ ಕವಿಯ ಕೃತಿಯನ್ನು ಕೊಂಡಾಡಿದವು. ಲಕ್ಶ್ಮೀನಾರಾಯಣನ ಸಾಹಿತ್ಯ ಸಂಬಂಧವಾದ ಜೀವನ ಚರಿತ್ರೆಯ ಈ ಘಟ್ಟದಲ್ಲಿ ಅವನ ಕುಟುಂಬಜೀವನಕ್ಕೆ ಸಂಬಂಧಪಟ್ಟ ಕೆಲವು ಸಂಗತಿಗಳನ್ನು ನೆನೆಯಬಹುದು. ೧೮೯೩ರಲ್ಲಿ ತನ್ನ ಇಪ್ಪತ್ತೈದನೆ ವಯಸ್ಸಿನಲ್ಲಿ ಈ ಕವಿ ಮದುವೆಯಾದನು. ಈತನ ಹೆಂಡತಿಯ ಹೆಸರು ಕಮಲಾಬಾಯಿ ಎಂದು. ಮೈಸೂರು ಸೀಮ್ಯ ಶಿವಮೊಗ್ಗಾ ಜಿಲ್ಲೆಯ ಕಾಗೇಗೋಡುಮಗ್ಗಿ ಇವಳ ತವರು. ಈಕೆಯ ತಂದೆ ನಾರಣಪ್ಪಯ್ಯಾ ಎನ್ನುವವರು. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ. ರಾಮಾಶ್ವಮೇಧಗಳನ್ನು ಬರೆಯುವ ಕಾಲಕ್ಕೆ ಕವಿ ಮದುವೆಯಾಗಿ ದಾಂಪತ್ಯ ಜೀವನ ಸುಖವನ್ನು ಅನುಭವಿಸುತ್ತಿದ್ದನು. ರಾಮಾಶ್ವಮೇಧದಲ್ಲಿ ಬರುವ ಮುದ್ದಣ-ಮನೋರಮೆಯರ ಸರಸ ಸಂವಾದ ಭಾಗ ರಸಿಕ ಲಕ್ಶ್ಮೀನಾರಾಯಣನ ಸರಸ ಸಂಸಾರ ಚಿತ್ರದ ಒಂದು ಮುಖ ಎನ್ನಬಹುದು. ಈತನಿಗೆ ಮೂವತ್ತು ವರ್ಷವಾದಾಗ (೧೮೯೮)ಒಬ್ಬ ಮಗ ಹುಟ್ಟಿದನು. ಈತನಿಗೆ ರಾಧಾಕೃಷ್ಣನೆಂದು ಹೆಸರಿಟರು. ಈ ಕವಿಯ ಸಾಹಿತ್ಯ ಸಂಬಂಧವಾದ ಚಟುವಟಿಕೆಗಳನ್ನು ಶ್ರೀ ಪಂಜೆ ಮಂಗೇಶ ರಾಯರು ಶ್ರೀ ಬೆನಗಲ್ ರಾಮರಾಯರು ಮುಂತಾದವರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಪ್ರಭಾವವನ್ನು ಬೀರಿರುವುದು ಕ್ಂಡು ಬರುತ್ತದೆ. ಅವಿಶ್ರಾಂತವಾದ ಮಾನಸಿಕ ಪರಿಶ್ರಮದಿಂದಲೂ ದಿನನಿತ್ಯದ ದಾರಿದ್ರ್ಯದ ಕಷ್ಟಕೋಟಲೆಗಳಿಂದಲೂ ಬಳಲಿ ಬೆಂಡಾದ ಲಕ್ಶ್ಮೀನಾರಾಯಣನು ರೋಗಗ್ರಸ್ತನಾಗಿ ಹಾಸಿಗೆ ಹಿಡಿದನು. ಕ್ಷ್ಯಯರೋಗಕ್ಕೆ ತುತ್ತಾಗಿ ಕೆಲಕಾಲ ನರಳಿದನು. ಕೊನೆಗೆ ಲಕ್ಶ್ಮೀನಾರಾಯಣನು ೧೯೦೧ ಫೆಬ್ರುವರಿ ೧೫ನೆಯ (ಶಾರ್ವರಿ ಸಂ||ದ ಮಾಘಬಹುಳ ೧೨) ಶುಕ್ರವಾರ ತನ್ನ ಮೂವತ್ತೊಂದನೆಯ ವರ್ಷ ಕಳೆದ ಕೆಲವೇ ದಿನಗಳಲ್ಲಿ ಅಕಾಲಮೃತ್ಯುವಿಗೆ ತುತ್ತಾಗಿ ಕಾಲವಶನಾದನು.
  • ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ.
  • ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.
  • ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು.
*********

ಅಂತರಾಳ ಗದ್ಯಭಾಗದ ಸರಳ ಗದ್ಯಾನುವಾದ
ಹೀಗೆ ಬಂದೊದಗಿದ ಚಳಿಗಾಲದಲ್ಲಿ ರಾಘವನ ಯಜ್ಞಾಶ್ವವು ಅರಣ್ಯಕ ಎಂಬ ತಪಸ್ವಿಯ ಪವಿತ್ರ ಆಶ್ರಮಕ್ಕೆ ಪ್ರವೇಶಿಸುತ್ತಿರುವುದನ್ನು ಕಂಡು ಶತ್ರುಘ್ನ ಮೊದಲಾದವರು (ಜಾಂಬವ, ಹನುಮಂತ, ಸುಗ್ರೀವಾದಿ ಕಪಿವೀರರು ಮೊದಲಾದವರು) ಮುನಿಗಳ ದರ್ಶನಕ್ಕೆಂದು ಆಶ್ರಮದ ಒಳಗೆ ಹೋದರು. ತಪಸ್ವಿಗಳ ಕಾಲಿಗೆ ಬಿದ್ದು ನಮಸ್ಕರಿಸಿದರು. ಆಕಸ್ಮಿಕವಾಗಿ ಆಗಮಿಸಿದ ಈ ಅತಿಥಿಗಳನ್ನು ಅರಣ್ಯಕ ಮುನಿಗಳು ಬಹಳ ಗೌರವದಿಂದ ಬರಮಾಡಿಕೊಂಡು ತಮ್ಮ ಆತಿಥ್ಯದಿಂದ ಸತ್ಕರಿಸಿದರು. ನಂತರ ಶ್ರೀರಾಮನನ್ನು ಕುರಿತ ಸತ್ಕಥೆಯ ವಿನೋದವಾದ ಸಂಭಾಷಣೆಯಲ್ಲಿ...... [ಹೀಗೆ ಕಥೆ ಹೇಳುತ್ತಿದ್ದ ಮುದ್ದಣನು ಇನ್ನು ಮುಂದುವರಿದು ಏನೋ ಹೇಳಬೇಕೆಂದು ಮಾತು ಮುಂದುವರಿಸುತ್ತಿರುವಾಗ ಮನೋರಮೆಗೆ ಮಧ್ಯದಲ್ಲಿ ಸಂಶಯವುಂಟಾಗಿ ಮುದ್ದಣನನ್ನು ಮುಂದಿನಂತೆ ಕೇಳುತ್ತಾಳೆ. ಆಗ ಅವರಿಬ್ಬರ ಸಲ್ಲಾಪ ಆರಂಭವಾಗುತ್ತದೆ.]
ಮನೋರಮೆ :  ನನ್ನ ಚೆಲುವ! ಆತಿಥ್ಯವೆಂದರೇನು? ಬರಿಯ ಬಾಯುಪಚಾರವೇ?
ಮುದ್ದಣ: ಅಲ್ಲ ಅಲ್ಲ, ಬರಿಯ ಬಾಯುಪಚಾರವಲ್ಲ. ಬಂದವರಿಗೆ ಕೈಗೆ, ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ, ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ, ಹೂವಿನಿಂದ ಅಲಂಕರಿಸಿ, ಪರಿಮಳಭರಿತವಾದ ಶ್ರೀಗಂಧವನ್ನು ಸಿಂಪಡಿಸಿ, ಜೊತೆಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ, ಗೌರವಿಸುವುದು.
ಮನೋರಮೆ: ಹಾಗಿದ್ದರೆ, ಶತ್ರು ಸಂಹಾರಮಾಡುವಂತಹ ಸಾವಿರ ಸಾವಿರ ಲೆಕ್ಕದಲ್ಲಿದ್ದ ಅಷ್ಟೊಂದು ದೊಡ್ಡ ಸೈನ್ಯಕ್ಕೆ ಅನ್ನ-ನೀರು ಕೊಟ್ಟು (ಊಟಕೊಟ್ಟು) ತೃಪ್ತಿಪಡಿಸಿದನೆ?
ಮುದ್ದಣ: ಹೌದು ಹೌದು. ಸಾಕಷ್ಟು ರುಚಿಕರವಾದ ಭೋಜನದಿಂದ ಎಲ್ಲರನ್ನು ತೃಪ್ತಿಪಡಿಸಿದನು.
ಮನೋರಮೆ: ನನಗೆ ಇದು ಆಶ್ಚರ್ಯವೆನಿಸುತ್ತಿದೆ. ಅವನಿಗೆ (ಮುನಿಗೆ) ಇದು ಹೇಗೆ ಸಾಧ್ಯವಾಯಿತು?
ಮುದ್ದಣ: ಮತ್ತೇನು! ಮುನಿಗಳ ಒಂದು ಜಪ-ತಪ-ಮಂತ್ರದ ಶಕ್ತಿಯೇನು ಕಿರಿದೇ? ಬೇಡಿದ ದ್ರವ್ಯವನ್ನು (ವಸ್ತುವನ್ನು) ಕೂಡಲೆ ತಂದುಕೊಡುವುದು.
ಮನೋರಮೆ: ಅಷ್ಟೊಂದು ಶ್ರೇಷ್ಠವೇ! ಯಾವು ಆ ಮಂತ್ರ.
ಮುದ್ದಣ: ಯಾವುದೆಂದರೆ! ಏಕಾಕ್ಷರಿ(ಒಂದು ಅಕ್ಷರದ ಮಂತ್ರ –ಉದಾ: ಓಂ), ದ್ವ್ಯಕ್ಷರಿ (ಎರಡು ಅಕ್ಷರದ ಮಂತ್ರ. ಉದಾ: ರಾಮ ನಾಮ), ತ್ರ‍್ಯಕ್ಷರಿ (ಮೂರು ಅಕ್ಷರದ ಮಂತ್ರ. ಉದಾ: ಶಿವಾಯ), ಚತುರಾಕ್ಷರಿ (ಉದಾ: ನಾರಾಯಣ), ಪಂಚಾಕ್ಷರಿ (ಉದಾ: ನಮಃ ಶಿವಾಯ), ಷಡಕ್ಷರಿ (ಉದಾ: ಓಂ ನಮಃ ಶಿವಾಯ) ಮುಂತಾದ ಪ್ರಸಿದ್ಧ ಮಂತ್ರಗಳು ಇರುವವಲ್ಲವೇ.
ಮನೋರಮೆ: ಓಹೋ! ಇಷ್ಟೊಂದು ಜಪದ ಶಕ್ತಿಯ ಸಹಾಯ ಇರುವುದರಿಂದಲೇ ತಪಸ್ವಿಗಳು ಬೇರೊಂದರ ಚಿಂತೆಯಿಲ್ಲದಂತೆ ಇದ್ದಾರೆ.
ಮುದ್ದಣ: ಹೌದೌದು. ತಪ್ಪೇನು?
ಮನೋರಮೆ: ಅದು ಹಾಗಿರಲಿ(ಆ ಮಾತು ಹಾಗಿರಲಿ). ನಿನ್ನಂತಹ ಕವಿಗಳು ತಮ್ಮ ಮನೆ-ಸಂಸಾರದ ಬಗ್ಗೆ ಸ್ವಲ್ಪವೂ ಚಿಂತೆಮಾಡದೆ, ಸುಮ್ಮಸುಮ್ಮನೆ ಹಾಳು ಕಥೆ-ಕಾವ್ಯದಲ್ಲಿ ಭ್ರಮೆಗೊಂಡಿದ್ದಾರಲ್ಲಾ. ಅವರಿಗೇನು ಬಟ್ಟೆಯೋ, ಉಣ್ಣಲು-ತನ್ನಲು ಏನುಮಾಡುವುದು? ಆದ್ದರಿಂದ ನೀವು ಅಂತಹ ಒಂದು ಜಪವನ್ನು ಹಿರಿಯ ತಪಸ್ವಿಯಿಂದ ಉಪದೇಶ ಪಡೆದುಕೊಂಡರೆ ಆಗುವುದಿಲ್ಲವೇ?
ಮುದ್ದಣ: (ಮುಗುಳು ನಗೆಬೀರುತ್ತಾ) ಏನು! ನಮ್ಮವರ ರೀತಿಯ ಬಗ್ಗೆ ನಗುವೇ? ಆಹಾ! ನನ್ನಂತಹ ಕವಿಗಳಿಗೇನು ಕೊರತೆಯಾಗಿದೆ? ತಮ್ಮ ಒಂದೆ ಒಂದು ನುಡಿಯ ಸಾಮರ್ಥ್ಯದಿಂದ ಮೂರು ಜಗತ್ತನ್ನೆ ನಾಶಮಾಡುವ, ಹೊಗಳುವ, ತೆಗಳುವ, ಕೊಂಡುಕೊಳ್ಳುವ, ಆಳುವ, ಅನುಭವಿಸುವ,ನಾಶಪಡಿಸುವ, ಹೂತುಬಿಡುವ, ಆಜ್ಞೆಮಾಡುವ, ಬಾಳುವಂತೆ ಮಾಡುವ, ಶೃಂಗಾರಮಯವಾಗಿ ವರ್ಣಿಸುವ(ಸೊಗಸಾಗಿ ವರ್ಣಿಸುವ) ನಮ್ಮ ಕವಿಗಳ ರೀತಿಯನ್ನು ನೀನು ತಿಳಿದಿಲ್ಲ.
ಮನೋರಮೆ: (ಬಿಸವಂದಗೊಂಡು=ವಿಸ್ಮಯಗೊಂಡು) ನಿಮ್ಮವರಿಗೆ ಹಾಗಾದರೆ ಮಂತ್ರ ಸಿದ್ಧಿ ಮಾಡಿಕೊಳ್ಳವುದು ಗೊತ್ತೇ?
ಮುದ್ದಣ: ಅದಕ್ಕೆ ತಡೆಯೇನಿದೆ! ಹೆದರಿಕೆ ಏನಿದೆ!
ಮನೋರಮೆ: ನಿನ್ನಲ್ಲಿಯೂ ಇದೆಯೇ?
ಮುದ್ದಣ: ನನ್ನಲ್ಲಿ ಇದು ಹಾಸು ಹೊಕ್ಕಾಗಿದೆ. (ಸಾಕಷ್ಟಿದೆ)
ಮನೋರಮೆ: ಆಹಾ! ನೀನು ಬಹಳ ಮಹಿಮೆಗಾರ. ನಿನಗೆ ಯಾರ ಕಡೆಯಿಂದ ಉಪದೇಶವಾಯಿತು?
ಮುದ್ದಣ: ಗುರುವಿನ ಕಡೆಯಿಂದ; ಚಿಕ್ಕಂದಿನಲ್ಲೆ.
ಮನೋರಮೆ: ನನ್ನ ಪ್ರಿಯನೇ! ಅದು ಯಾವುದೋ ಆ ಮಂತ್ರವನ್ನು ನನಗೆ ಹೇಳಾ.
ಮುದ್ದಣ: ಎಲೆ ಹೆಣ್ಣೆ! ನೀನು ಯಾರಲ್ಲೂ ಎಂದೆಂದಿಗೂ ಹೇಳಬಾರದು, ಜೋಕೆ!
ಮನೋರಮೆ: ಎಂದಿಗೂ ಹೇಗೂ ಯಾರೊಡನೆಯೂ ಹೇಳುವುದಿಲ್ಲ.
ಮುದ್ದಣ: ಹಾಗಾದರೆ ಈ ರೀತಿ ಇದು. ಕೇಳು.... ಭ....ವ... (ಮಧ್ಯೆ ನಿಲ್ಲಿಸಿ) ಬೇರೆಯವರಿಗೆ ಇದನ್ನು ಹೇಳುವುದಿಲ್ಲವೆಂದು ನಂಬುವ ಹಾಗೆ ಪ್ರಮಾಣಮಾಡು.
ಮನೋರಮೆ: (ಮುದ್ದಣನ ಕೈಮೇಲೆ ಕೈ ಇಟ್ಟು ಪ್ರಮಾಣಮಾಡುತ್ತಾ) ಇದೆ. ಹಿಡಿ ಪ್ರಮಾಣ ಮಾಡುತ್ತೇನೆ. ನಿನ್ನಾಣೆ, ಕುಲದೇವರ ಮೇಲಾಣೆ! ಎಂದಿಗೂ ಬೇರೆಯವರಲ್ಲಿ ಹೇಳುವುದಿಲ್ಲ.
ಮುದ್ದಣ್ಣ: ಉಂ! .......ಭವತಿ.......ಭಿ...... (ಅಂದು ಮತ್ತೊಮ್ಮೆ ಹೇಳುವುದನ್ನು ಅರ್ಧಕ್ಕೆ ನಿಲ್ಲಿಸಿ) ನೀನು ಹೇಗಾದರೂ ಮರೆತು ಬೇರೆಯವರೊಡನೆ ಹೇಳಿ ಗುಟ್ಟನ್ನು ಬಿಟ್ಟುಕೊಟ್ಟರೆ ನಮ್ಮಿಬ್ಬರ ಬಾಳು ಪಾಳಾಗುತ್ತದೆ(ಹಾಳಾಗುತ್ತದೆ).
ಮನೋರಮೆ: (ಹುಸಿ ಮುನಿಸಿನಿಂದ) ನಾನೇನು ದಡ್ಡಿಯೇ! ಹೋಗು! ತನ್ನ ಆಣೆ, ಕಣ್ಣಿನ ಆಣೆ, ನೀನು ಹೇಳಿದಂತೆ ಕೇಳುತ್ತೇನೆ.
ಮುದ್ದಣ: (ಎಕ್ಕಟಿಯೊಳ್- ಹಾಸ್ಯದಿಂದ) ’ಭವತಿ ಭಿಕ್ಷಾಂ ದೇಹಿ’ ಎಂಬುವುದು ಇದೇ ಕವಿಗಳಿಗೆ ಸಿದ್ಧಿಸಿರುವ ಹೆಮ್ಮೆಯ ಸಪ್ತಾಕ್ಷರಿ ಮಂತ್ರವಾಗಿದೆ. ಇದನ್ನು ಯಾರ ಬಳಿಯೂ ಹೇಳಬೇಡ.
ಮನೋರಮೆ: (ಅರೆಮುನಿಸಿನಿಂದ) ಹೋಗು. ಬಿಡು ಎಲೆ ನನ್ನ ರಮಣ! ನಿನ್ನ ನುಡಿಯನ್ನು ಸಹಜ(ನಿಜ), ನಿಶ್ಚಿತ ಎಂದೇ ತಿಳಿದ. ಈ ರೀತಿಯ ಮಾಟದ, ಮೋಸದ, ಕೊಂಕು ನುಡಿ ಎಂಬುದನ್ನು ತಿಳಿದುಕೊಳ್ಳದಾದೆ. ನೀನು ಕವಿಯೋ ಇಲ್ಲ ಹಾಸ್ಯಗಾರನೊ! ನಿನ್ನ ಈ ಕಾವ್ಯದ ಸೊಗಸು ನಮ್ಮಂತಹ ಜಾಣರಲ್ಲದ (ದಡ್ಡರಾದ) ಹೆಣ್ಣುಗಳೇ ಕೊಂಡಾಡಬೇಕು(ಹೊಗಳಬೇಕು). ಅದಲ್ಲದೇ ತಿಳಿದವರು(ಬುದ್ಧಿವಂತರು) ಇಷ್ಟಪಡುವರೇ?
ಮುದ್ದಣ: ಸಾಕು ಈ ವಿನೋದ(ಚೇಷ್ಟೆ). ಮುಂದಿನ ಕಥೆಯನ್ನು ಕೇಳು. (ಎಂದು ಕಥೆಯನ್ನು ಮುಂದುವರೆಸುತ್ತಾನೆ)


**************

13 ಕಾಮೆಂಟ್‌ಗಳು:

  1. ಮಹೇಶ ಸರ್ ನೀವು ಮಾಡಿರುವುದು ಬಹಳ ಶ್ರೇಷ್ಠವಾದ ಕೆಲಸ.ನಿಮಗೆ ಧನ್ಯವಾದಗಳು. ಈ ಹೊಸಗನ್ನಡ ಸಾರಾಂಶದಲ್ಲಿ 'ಶತ್ರುಹನ ಸಾಯಿರ ಸಾಯಿರ' ಎಂಬುದಕ್ಕೆ ಶತ್ರುವನ್ನು ಸಂಹಾರ ಮಾಡುವಂತ ಎಂದು ಬರೆದಿದ್ದೀರಿ.ಆದರೆ ಅದು ಶತ್ರುಘ್ನನ ಸಾವಿರ ಸಾವಿರ ಅಲ್ಲವೇ?

    ಪ್ರತ್ಯುತ್ತರಅಳಿಸಿ