ಪುಟಗಳು

27 ನವೆಂಬರ್ 2013

ಇತಿಹಾಸದ ಚಕ್ಕಡಿ (ಗದ್ಯ-7)

ಪ್ರಸ್ತುತ ಗದ್ಯಭಾಗವನ್ನು ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಮತ್ತು ಆಯ್ದ ಕವಿತೆಗಳು ಕೃತಿಗಳಿಂದ ಆರಿಸಿ ಸಂಪಾದಿಸಿ ಸಂಯೋಜಿಸಲಾಗಿದೆ.


ಅರವಿಂದ ಮಾಲಗತ್ತಿಯವರ ಪರಿಚಯ
(ಮಾಹಿತಿ ಕೃಪೆ: ಜೈಭೀಮ್.ಕಾಂ)
    ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ಬಿಜಾಪುರ ಜಿಲ್ಲೆಯ ‘ಮುದ್ದೇ ಬಿಹಾಳ’ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ.
   ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.

 ಕವನ ಸಂಕಲನಗಳು
  • ಮೂಕನಿಗೆ ಬಾಯಿ ಬಂದಾಗ – ೧೯೮೨
  • ಕಪ್ಪು ಕಾವ್ಯ – ೧೯೮೫
  • ಮೂರನೇ ಕಣ್ಣು – ೧೯೯೬
  • ನಾದ ನಿನಾದ – ೧೯೯೯
  • ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨
  • ಸಿಲಿಕಾನ್ ಸಿಟಿ ಮತ್ತು ಕೋಗಿಲೆ – ೨೦೦೩
  • ಚಂಡಾಲ ಸ್ವರ್ಗಾರೋಹಣಂ – ೨೦೦೩
  • ಆಯ್ದಕವಿತೆಗಳು – ೨೦೦೪
  • ವಿಶ್ವತೋಮುಖ – ೨೦೧೦
  • ಹೂ ಬಲುಭಾರ – ೨೦೧೦
  • ಸಹಸ್ರಾಕ್ಷಿ – ೨೦೧೨
  • ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨

ಕಥೆ
  • ಮುಗಿಯದ ಕಥೆಗಳು – ೨೦೦೦

ಕಾದಂಬರಿ
  • ಕಾರ್ಯ -೧೯೮೮

ನಾಟಕಗಳು
  • ಮಸ್ತಕಾಭಿಷೇಕ – ೧೯೮೪
  • ಸಮುದ್ರದೊಳಗಣ ಉಪ್ಪು – ೧೯೯೯

ಪ್ರವಾಸ ಕಥನ
  • ಚೀನಾದ ಧರಣಿಯಲ್ಲಿ – ೨೦೧೧
ಆತ್ಮ ಕಥನ
  • ಗೌರ್ಮೆಂಟ್ ಬ್ರಾಹ್ಮಣ (ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ) -೧೯೯೪
ಸಂಶೋಧನಾತ್ಮಕ ವಿಮರ್ಶೆಗಳು
  • ಕನ್ನಡ ಸಾಹಿತ್ಯ ಮತ್ತು ದಲಿತಯುಗ
  • ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ
  • ಸಾಂಸ್ಕೃತಿಕ ದಂಗೆ
  • ಬೆಂಕಿ ಬೆಳದಿಂಗಳು
  • ದಲಿತ ಸಾಹಿತ್ಯ ಪ್ರವೇಶಿಕೆ
  • ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ
  • ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು
  • ಭೀಮ ನಡೆಯಬೇಕು
  • ಸಾಹಿತ್ಯ ಸಾಕ್ಷಿ
  • ದಲಿತ ಸಾಹಿತ್ಯ ಪರ್ವ
  • ದಲಿತ ಸಾಹಿತ್ಯ
  • ಸಾಹಿತ್ಯ ಕಾರಣ
  • ದಲಿತ ಮಾರ್ಗ
ಜಾನಪದ ಕೃತಿಗಳು
  • ಆಣೀ ಪೀಣಿ -೧೯೮೨
  • ಜಾನಪದ ವ್ಯಾಸಂಗ -೧೯೮೫
  • ಜಾನಪದ ಶೋಧ – ೧೯೮೦
  • ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩
  • ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ – ೧೯೯೧
  • ಪುರಾಣ ಜಾನಪದ ಮತ್ತು ದೇಶಿವಾದ -೧೯೯೮ 
ಸಹಬರವಣಿಗೆ
  • ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧
  • ವಯಸ್ಕರ ಶಿಕ್ಷಣ ಕೃತಿ
  • ಜನಪದ ಆಟಗಳು -೧೯೯೩
  • ತಾಳಿಕೋಟೆ ದ್ಯಾಮವ್ವ – ೧೯೯೫
ಪಿಎಚ್.ಡಿ ಮಹಾಪ್ರಬಂಧ
  • ಜನಪದ ಆಟಗಳು
ಸಂಪಾದಿತ ಕೃತಿಗಳು
  • ನಾಲ್ಕು ದಲಿತೀಯ ಕಾದಂಬರಿಗಳು
  • ಅಂಬೇಡ್ಕರ್ ವಿಚಾರಧಾರೆ
  • ಅಂಬೇಡ್ಕರ್ ವಾದ-ಸಂವಾದ
  • ಗೋಮಾಳದಿಂದ ಗಂಗೋತ್ರಿಗೆ
  • ದಲಿತ ಸಾಹಿತ್ಯ ನೆಲೆ- ಹಿನ್ನೆಲೆ
  • ಕನ್ನಡ ಗ್ರಂಥೋದ್ಯಮ
  • ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ
  • ಜಾನಪದ ಮೂಲತತ್ವ್ತಗಳು
  • ಕಾದಂಬರಿಗಳ ವಿಮರ್ಶೆ
  • ಮಲೆಯ ಮಹದೇಶ್ವರ
ಸಹ ಸಂಪಾದನೆ
  • ಸಮಾವೇಶ
  • ಬೇವು ಬೆಲ್ಲ
  • ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ[ಬದಲಾಯಿಸಿ] ಕನ್ನಡ ವಿಶ್ವಕೋಶ ೧೪ ಸಂಪುಟಗಳು.
ಸಿ.ಡಿ.ರೂಪದಲ್ಲಿ
  • ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ)
  • ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ
  • ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ
  • ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು
  • ಕುವೆಂಪು ಕೃತಿ ವಿಮರ್ಶೆ
ದೇವನೂರು ಮಹಾದೇವ ಅವರೊಂದಿಗೆ ಮಾಲಗತ್ತಿಯವರು
ಮಾಲಗತ್ತಿಯವರನ್ನು ಕುರಿತ ಈ ಕೆಳಗಿನ ವೀಡಿಯೋ ವೀಕ್ಷಿಸಿ 


ಇತಿಹಾಸ ಚಕ್ಕಡಿ ಗದ್ಯದ ಮೂಲಪಾಠ (‘ಗೌರ್ಮೆಂಟ್ ಬ್ರಾಹ್ಮಣ’ ಕೃತಿಯಿಂದ)
"ನನ್ನ ಕೇರಿ ನನ್ನ ಓದು"
      ಹಳ್ಳಿಯಲ್ಲಿ ಹೆಂಗಸರು ಬೀಡಿ ಸೇದುತ್ತಾರೆಂದರೆ ನನಗೆನೂ ಆಶ್ಚರ್ಯವಿಲ್ಲ. ಆದರೆ ಬಾಲ್ಯದ ದಿನಗಳಲ್ಲಿ ಇಂಥ ಹೆಂಗಸರನ್ನು ಕಂಡರೆ ತದೇಕ ಚಿತ್ತದಿಂದ ಕಣ್ಣರಳಿಸಿ ಬಾಯಿ ತೆರೆದು ಅವರನ್ನೇ ನೋಡುತ್ತಿದ್ದೆ. ಇಂತಹವೇ ದೃಶಗಳು ಮಂಗಳೂರಿನಂತಹ ನಗರದ ಪ್ರತಿಷ್ಟಿತ ಮನೆಗಳಲ್ಲಿ ಕಂಡಾಗ ಮತ್ತೆ ನನಗೆ ಬಾಲ್ಯದ ಮನಸ್ಸು ಮರುಕಳಿಸಿದ್ದೂ ಇದೆ. ಆದರೆ ಘನವಾದ ವ್ಯತ್ಯಾಸವೆಂದರೆ ಹಳ್ಳಿಯಲ್ಲಿ ಬಿಡೆ ಇಲ್ಲದೆ ಬೀಡಿ ಸೇದುವ ಪ್ರವೃತ್ತಿ ಕಂಡಿದ್ದೇ. ಆದರೆ ಅದು ನಗರದ ಹೆಂಗಸರಲ್ಲಿ ಕಾಣದಿರುವಾಗ ನನ್ನಷ್ಟಕ್ಕೆ ನಾನೇ ಈ ಕಳ್ಳ ಹೆಂಗಸರನ್ನು ಕಂಡು ನಕ್ಕಿದ್ದೇನೆ. ಹೆಂಗಸರು ಬೀಡಿ ಸೇದುವ ಇಂಥ ಒಂದು ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಈಗಲೂ ಅಂಥದ್ದೇನಾದರೂ ಕಂಡರೆ ಕುತೂಹಲದಿಂದ ಗಮನ ಸೆಳೆಯುವ ವಸ್ತುವಾಗುತ್ತದೆ ಎಂದುಕೊಂಡಿರಲಿಲ್ಲ.
     ಸೂಳೆಯರ ಕೇರಿ. ಇಲ್ಲಿ ಹಲವಾರು ಮನೆಗಳಲ್ಲಿ ನಮ್ಮದೂ ಒಂದು ಮನೆ. ನನಗಾಗ ಪ್ರಾಥಮಿಕ ಶಾಲೆಯಲ್ಲಿ ಓದುವ ವಿದ್ಯಾರ್ಥಿಯ ವಯಸ್ಸು. ಹದಿಹರೆಯದ ಜಿಂಕೆಯಂತೆ ಓಡಾಡುವ ಒಂದು ಹೆಣ್ಣು, ಇವಳು ನಮ್ಮ ಕೇರಿಯವಳೇ ಎಂದು ಬೇರೆ ಹೇಳಬೇಕಾಗಿಲ್ಲ. ಯಾವಾಗ ನಾನು ಕಾಲೇಜು ಕಟ್ಟೆಯನ್ನು ಏರಿದೆನೋ, ಇವಳ ಕುರಿತಾಗಿ ನನಗನ್ನಿಸಿದ್ದು ಇಷ್ಟು: ಅದೊಂದು ಸಾದಗಪ್ಪಿನ ತೀಡಿ ತುಂಬಿದ ಮೈಮಾಟ, ಅಷ್ಟೇನೂ ಎತ್ತರವಿಲ್ಲದಿದ್ದರೂ ಆ ಕೇರಿ ಎಲ್ಲ ಮುದುಕಿಯರ ಮುಖ ಲಕ್ಷಣವನ್ನು ಕದ್ದಂತೆ ಇದ್ದಳು. ಹಾಗಾಗಿ ಊರಿನಲ್ಲಿ ಅಷ್ಟೇ ಅಲ್ಲದೆ ಊರ ಹೊರಗಿನ ಹಳ್ಳಿಯಿಂದಲೂ ಜನ ಅವಳಿಗೆ ಹಂಬಲಿಸಿ ಬರುತ್ತಿತ್ತು. ಈ ಸಾದಾಗಪ್ಪಿನ ಹೆಣ್ಣಿನೊಂದಿಗೆ ನನಗೆ ಚಿಕ್ಕಂದಿನಿಂದಲೂ ನಂಟು. ಆಕೆ ನೀರಿಗೆ ಹೊರಟರೆ ಆಕೆಯೊಟ್ಟಿಗೆ ನೀರೆಳೆಯುವ ಹಗ್ಗವನ್ನು ಹಿಡಿದುಕೊಂಡು ಕೆಲಬಾರಿ ಹೋಗುತ್ತಿದ್ದೆ. ಆಕೆಯ ಮನೆಯ ನಿಕಟ ಕೆಲಸಗಳು ತಪ್ಪಿದರೂ, ಮಾತುಗಳು ತಪ್ಪಿರಲ್ಲ.
   ಎಂ.ಎ ಮುಗಿಸಿ ಊರಿಗೆ ಹೋದಾಗ ಆಕೆಯ ಅವತಾರ ಸಂಪೂರ್ಣ ಬದಲಾಗಿತ್ತು. ಹುರುಕು ಹತ್ತಿದ ನಾಯಿಯಂತೆ ಸದಾ ತನ್ನ ಮೈಯನ್ನು ತುರಿಸಿಕೊಳ್ಳುತ್ತಿದ್ದಳು. ಊರ ನಾಯಕರ ಇತಿಹಾಸವನ್ನೇ ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದ್ದಳು .
   ನನ್ನ ಕೇರಿಯಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಎಲ್ಲಮ್ಮ ದೇವಿಯ ಪಾದಗಳನ್ನು ಕೊರಳಲ್ಲಿ ಕಟ್ಟಿಕೊಂಡು ಬದುಕುವವರು ಕೆಲವರು. ಗಂಡ ಬಿಟ್ಟಿದ್ದಕ್ಕೆ ಬಂದು ನೆಲೆಯೂರಿದವರು ಇನ್ನೂ ಕೆಲವರು, ಪರಂಪರೆಯ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವವರು ಇನ್ನೂ ಕೆಲವರು.
    ಹೀಗೆಯೇ ಬಾಲ ಬೆಳೆಯುತ್ತದೆ. ಇವರೊಂದಿಗೆ ಜೋಗುತಿ, ಜೋಗಪ್ಪಗಳು; ಸೀರೆಯಟ್ಟ ಜೋಗಪ್ಪಗಳು. ಹೀಗೆ ವೈವಿದ್ಯಮಯ ಕಥಾನಕಗಳನ್ನು ಹೊತ್ತವರ ಬೀಡು. ಇವರಲ್ಲಿಯ ಕಲೆ ಎನ್ನುವುದು ದೇವಿಯ ಹೆಸರಿಂದ ಹೊರಬಿದ್ದರೂ ಕಲೆಗಿಂತ ಭಿನ್ನವಾದುದನ್ನೇ ಊರ ಜನರ ಕಣ್ಣು ಅಲ್ಲಿ ಅರಳಿಸುತ್ತಿದ್ದವು.
      ರಾತ್ರಿಯಾದರೆ ಸಾಕು ಈ ಕೇರಿಗೆ ಜೀವ ಬರುತ್ತಿತ್ತು. ಹಗಲಾದರೆ ಬಿಕೋ ಎನ್ನುತ್ತಿತ್ತು. ಕುಡಿಯುವ ತೆಕ್ಕೆಗೆ ಬಿದ್ದು ಅಳುವ,ನೆಲ ಬಡಿದು ಶಾಪ ಕೊಡುವ,ಮಣ್ಣು ತೂರುವ, ಕಚ್ಚೆ ಹಾಕಿ ಕದನಕ್ಕೆ ನಿಲ್ಲುವ ಕಚಾ-ಕಚಿ ಕೇಶಾಕೇಶಿ ಯುದ್ಧಗಳು ನಡೆಯುತ್ತಿದ್ದವು. ಈ ಕೇರಿಯಲ್ಲಿ ಶಾಲೆ ಓದಿದವರು ಎಂದರೆ ಸ್ವಲ್ಪ ನಮ್ಮ ಮನೆಯಲ್ಲಿಯೇ. ಹೀಗಾಗಿ, ಈ ಕೇರಿಯನ್ನು "ಮಾಲಗತ್ತಿಯವರ ಕೇರಿ" ಎಂದು ಗುರುತಿಸುವುದು ಸಾಮಾನ್ಯವಾಗಿತ್ತು.
      ನಾನು ಸಾಮಾನ್ಯವಾಗಿ ಓದುವುದು ರಾತ್ರಿ ವೇಳೆಯಲ್ಲಿ. ಈ ಕೇರಿಗೆ ಜೀವಂತಿಕೆ ಬಂದಾಗ ಪಿತ್ತ ನೆತ್ತಿಗೇರುತ್ತಿತ್ತು. ಹೀಗಾಗಿ ಇವರೊಂದಿಗೆ ಕದನ. ಓದು ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಇರುತ್ತಿತ್ತು. “ನಾವು ಓದುತ್ತಿದ್ದೇವೆ" ಎನ್ನುವ ಅಹಂ ತೋರಿಕೆಯದ್ದೇ ಹೆಚ್ಚಾಗಿರುತ್ತಿತ್ತು. ಕೆಲವು ಬಾರಿ ಪೊಲೀಸ್ ಸ್ಟೇಷನ್ ವರೆಗೂ ಹೋಗಿದ್ದು ಇದೆ. ಆದರೆ ಅದರ ಪರಿಣಾಮ ಮಾತ್ರ ಸೊನ್ನೆಯಾಗಿರುತ್ತಿತ್ತು. ಏಕೆಂದರೆ ಪೊಲೀಸರು ಇಲ್ಲಿಯ ತಾಂಬೂಲಿನ ರುಚಿಗೆ ತಮ್ಮನ್ನೇ ಮಾರಿಕೊಂಡವರು. ಹೀಗಾಗಿ ಪೊಲೀಸರ ಚೊಣ್ಣಕ್ಕೆ ಇಲ್ಲಿ ಬೆಲೆಯೇ ಇರಲಿಲ್ಲ.
    ನನ್ನ ಓದಿನ ಆತ್ಮೀಯ ಸ್ಥಳವೆಂದರೆ "ಪದ್ಮಾವತಿ ಗುಡ್ಡ". ಪದ್ಮಾವತಿಯ ದೇವಸ್ಥಾನ ಜೈನರಿಗೆ ಸಂಬಂಧಿಸಿದ್ದು. ಪ್ರಶಾಂತವಾದ ಸ್ಥಳವಿದು. ದೊಡ್ಡ ದೊಡ್ಡ ಕಲ್ಲು ಬಂಡೆಗಳಿಂದ ತುಂಬಿದೆ. ಇಲ್ಲಿಯ "ಅಳಬುರಕ ಕಲ್ಲು" ಹೆಸರುವಾಸಿ. ಈ ಸ್ಥಳಕ್ಕೆ ಜನ ಬರಲು ಹೆದರುತ್ತಿದ್ದರು. ಮೊದಮೊದಲು ನಮ್ಮ ಕೇರಿಯ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲಿಗೆ ಓದಲು ಬರುತ್ತಿದ್ದ. ಜೊತೆಗೊಸ್ಕರ ಕೆಲವೊಮ್ಮೆ ನನ್ನನ್ನೂ ಕರೆದು ತರುತ್ತಿದ್ದ. ಆತನ ಹೆಸರು ಇಟ್ಟಪ್ಪ. ಈಗ ಆತ ಬ್ಯಾಂಕೊಂದರಲ್ಲಿ ಕೆಲಸಕ್ಕಿದ್ದಾನೆ. ಈತನ ಓದುವ ಹವ್ಯಾಸವೇ ನನ್ನನ್ನೂ ಓದುವಂತೆ ಆನಂತರ ಪ್ರೇರೆಪಿಸಿತು. ಈತನ ಓದು ಮುಗಿದ ನಂತರ ನಾನೊಬ್ಬನೇ ಎಷ್ಟೋಬಾರಿ ಅಲ್ಲಿಗೆ ಓದಲು ಹೋಗುತ್ತಿದ್ದೆ. ಈಗಂತೂ ಅದು ಓದುಗರ ಪವಿತ್ರ ಸ್ಥಳವಾಗಿದೆ. ಎಲ್ಲೆಂದರಲ್ಲಿ ಆ ಗುಡ್ಡದ ತುಂಬೆಲ್ಲ ಓದುಗರಿರುವುದು ನೋಡಿ ನನಗಂತೂ ಎಲ್ಲಿಲ್ಲದ ಹೆಮ್ಮೆ.
      ನನ್ನೊಬ್ಬನ ಓದಿನ ದಿನಗಳಲ್ಲಿ ಕೇರಿಯ ಸ್ನೇಹಿತರೆಲ್ಲಾ ನನಗೆ ಹಂಗಿಸುತ್ತಿದ್ದರು. “ನಾಳೆ ಇಂವ ಚೌಕಟ್ನ್ಯಾಗ ಬರ್ತಾನಪ್ಪ" ಎನ್ನುತ್ತಿದ್ದರು. “ಮತ್ತೇನಪ್ಪಾ ಚೌಕಟ್" ಎಂದೇ ಮಾತನ್ನಾರಂಭಿಸುತ್ತಿದ್ದರು. ಎಂದರೆ ಓದಿ ರಾಂಕ್ ಬರ್ತಾನೆ. ಆಗ ಈತನ ಫೋಟೋ ಪತ್ರಿಕೆಯಲ್ಲಿ ಬರುತ್ತದೆಂದು ಗೇಲಿ ಮಾಡುತ್ತಿದ್ದರು. ಆದರೆ ಪ್ರತಿ ವರ್ಷ ಪಾಸಾಗುತ್ತಾ ಹೋದಾಗ ಅನಂತರ ಅವರು ನನ್ನ ಹಾದಿಯನ್ನೇ ತುಳಿದರು. ನನ್ನ ಹಿಂದೆ ಕೇರಿಯ ಜನ; ಕೇರಿಯ ಜನಗಳ ನಂತರ ಊರ ಜನವೇ ಪದ್ಮಾವತಿಯ ಗುಡ್ಡಕ್ಕೆ ಬರಲು ಪ್ರಾರಂಭಿಸಿದರು.
     ಗುಡಿಯ ಸುತ್ತಲೂ ಮೂರು ಬಾವಿಗಳಿದ್ದವು. ಎರೆಡು ಬಾವಿಯ ನೀರು ಕೊಳಕಾಗಿ ಹೋಗಿದ್ದವು. ಮೊದಮೊದಲು ನಾನು ಪದ್ಮಾವತಿ ಗುಡ್ಡಕ್ಕೆ ಹೋಗುವಾಗ ಅದೊಂದು ದೆವ್ವಗಳ ತಾಣವೆಂದೇ ಹೆಸರುವಾಸಿ. ಸುತ್ತೆಲ್ಲಾ ಹಾಸಿ ನಿಂತ ಬಂಡೆಗಳು. ಅದರ ಮೇಲೆ ನರ್ತನದ ಭಂಗಿಯಲ್ಲಿ ನಿಂತ ವಿಭಿನ್ನಾಕಾರದ ಕಲ್ಲು ಬಂಡೆಗಳು. ಅದರಲ್ಲಿಯೇ ಗುಹೆಗಳು ಕಾಡುಪ್ರಾಣಿಗಳು ಇವೆಲ್ಲವೂ ಹೆಚ್ಚು ಮನಸೆಳೆಯುವಂತಹವು. ನಾನಂತೂ ಕಲ್ಲು ಪೊಟರೆಯ ಒಳಗೆ ಮಲಗಿ ಓದುತ್ತಿದ್ದೆ. ಐದು ಗಂಟೆಯೊಳಗಾಗಿಯೇ ಮನೆಯಲ್ಲಿ ಇರುತ್ತಿದ್ದೆ. ಒಮ್ಮೆ ನಿದ್ದೆ ಬಂದು ಕಲ್ಲಿನ ಬಂಡೆಯಡಿಯಲ್ಲಿಯೇ ಮಲಗಿಬಿಟ್ಟಿದ್ದೆ. ಎಚ್ಚರ ಆದಾಗ ಕತ್ತಲಾಗಿ ಹೋಗಿದೆ! ಎಚ್ಚರಾಗಿ ಎದ್ದು ಕುಳಿತಾಗ ಎದೆಯೊಡೆದು ನೀರಾಯಿತು. ಆ ಕಲ್ಲು ಗುಡ್ಡದ ನಡುವೆ ಎದ್ದೆನೋ ಬಿದ್ದೆನೋ ಎನ್ನುವುದು ಖಬರಿಲ್ಲದೆ ಸತ್ತೆನೋ ಕೆಟ್ಟೆನೋ ಎಂದು ಓಡೋಡಿ ಬಂದಿದ್ದೆ.
     ಪರೀಕ್ಷೆ ಹತ್ತಿರ ಬಂತೆಂದರೆ ಸಾಕು. ನಾನು ಸಂಪೂರ್ಣವಾಗಿ ತಲೆ ಬೋಳಿಸಿಕೊಳ್ಳುತ್ತಿದ್ದೆ. ಏಕೆಂದರೆ ಇದರಿಂದ ತಿರುಗಾಡುವುದಕ್ಕೆ, ಇನ್ನೊಬ್ಬರಿಗೆ ಮುಖ ತೋರಿಸುವುದಕ್ಕೆ ನಾಚಿಕೆಯಾಗುತ್ತಿತ್ತು. ಒಂದೆಡೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ಹೀಗಿದ್ದಾಗಲೂ ಊರಲ್ಲಿ ಅವಶ್ಯಕವಾಗಿ ಹೋಗಬೇಕಾಗಿ ಬಂದಾಗ ತಲೆಗೆ ಟೋಪಿ ಹಾಕಿ ಅದರ ಮೇಲೆ ಸ್ಕಾರ್ಪ್ ಸುತ್ತಿಕೊಳ್ಳುತ್ತಿದ್ದೆ. ಪರೀಕ್ಷೆಗೆ ಸಂಬಂಧಿಸಿದ ಪತ್ರಗಳನ್ನು ತರಲು ಕಾಲೇಜಿಗೆ ಹೋಗುವಾಗಲೂ ಇದೇ ರೀತಿ ಇರುತ್ತಿದ್ದೆ. ಆಗ ಗುರುಗಳು "ಏನು ಮಾಲಗತ್ತಿ ಮೈಯಾಗ ಆರಾಮಿಲ್ಲೇನು?” ಎಂದು ವಿಚಾರಿಸಿದರೆ ಗತ್ತಿನಿಂದ "ಹೌದು ಸರ್ " ಎನ್ನುತ್ತಿದ್ದೆ. ಏಕೆಂದರೆ ತಲೆ ಬೋಳಿಸಿಕೊಂಡಿದ್ದಕ್ಕೆ ನಿಜ ಕಾರಣಕೊಡಲು ಮನಸ್ಸು ಹಿಂಜರಿಯುತ್ತಿತ್ತು .
     ಕಾಲೇಜಿನ ಪರೀಕ್ಷೆಯ ಓದು ಗಂಭೀರವಾಗಿ ಪ್ರಾರಂಭವಾಗುವುದು ಪರೀಕ್ಷೆ ಒಂದು ಎರಡು ತಿಂಗಳು ಇದೆ ಎನ್ನುವಾಗ. ವಿದ್ಯುತ್ ದೀಪ ಕೇರಿಗೆ ಪ್ರವೇಶವಾಗಿತ್ತು. ಆದರೆ ಇನ್ನೂ ಯಾರ ಮನೆಯೊಳಗೂ ಪ್ರವೇಶವಾಗಿರಲಿಲ್ಲ. ಹೀಗಾಗಿ ನಾನು ರಸ್ತೆಯ ವಿದ್ಯುತ್ ದೀಪದ ಬೆಳಕಿನಲ್ಲಿ ಕುಳಿತು ಓದುವ ರೂಢಿ ಮಾಡಿಕೊಂಡೆ. ಕೆಲವೊಮ್ಮೆ ವಿದ್ಯುಚ್ಛಕ್ತಿ ಹೊರಟು ಹೋದಾಗಲೂ ಬುಡ್ಡಿ ಲ್ಯಾಂಪನ್ನು ಹಚ್ಚಿ ಅದೇ ವಿದ್ಯುತ್ ಕಂಬದ ಅಡಿಯಲ್ಲಿಯೇ ಕುಳಿತು ವಿದ್ಯುತ್ತಿನ ನಿರೀಕ್ಷೆಯಲ್ಲಿಯೇ ಓದುವ ವಾಡಿಕೆ ಇತ್ತು.
     ಇದ್ದಕ್ಕಿದಂತೆಯೇ ಒಂದು ದಿನ ನಾನು ಓದುವ ಕಂಬದ ದೀಪ ಹತ್ತಲೇ ಇಲ್ಲ. ಆ ಕಂಬ ಅಲುಗಾಡಿಸಿದರೆ ಸಾಕು ದೀಪ ಹತ್ತುವ ಸಾಧ್ಯತೆ ಮತ್ತು ನಂದುವ ಸಾಧ್ಯತೆಗಳೂ ಇದ್ದವು. ಏನೆಲ್ಲಾ ಮಾಡಿದರೂ ದೀಪ ಹತ್ತಲೇ ಇಲ್ಲ. ಬಲ್ಬು ಹೋಗಿದೆ ಎಂದು ಪಂಚಾಯಿತಿಗೆ ದೂರು ಸಲ್ಲಿಸಿದೆ. ಮಾರನೆಯ ದಿನ ದೀಪ ಹತ್ತಿತು. ರಾತ್ರಿ ಒಂದು ಗಂಟೆಯ ಸಮಯಕ್ಕೆ ನಿದ್ದೆ ಕಳೆಯಲೆಂದು ಹೀಗೆ ಸುತ್ತುತ್ತಾ ಹರಕು ಪರದೆಯ ಟೂರಿಂಗ್ ಟಾಕೀಸಿನ ಎಡೆಗೆ ಸುತ್ತಿ ಬಂದು ನಾಲ್ಕು ಐದು ಗಂಟೆಯವರೆಗೆ ಓದುವ ಅಭ್ಯಾಸವಿತ್ತು.
     ಮತ್ತೆರಡು ದಿನಗಳಲ್ಲಿಯೇ ಮತ್ತೆ ಬಲ್ಬು ನಂದಿಹೋಯಿತು. ಹೀಗಾದಾಗ ಬುಡ್ಡಿ ಲ್ಯಾಂಪಿನ ಅಡಿಯಲ್ಲಿ ಓದುವುದೂ ಬೇಸರವಾಗುತ್ತಿತ್ತು. ಆಗ ಹದಿನೈದು ದಿನಗಳಲ್ಲಿಯೇ ಹೀಗೆ ಮೂರು ಬಲ್ಬುಗಳು ಹೋದವು. ಪಂಚಾಯಿತಿಯ ಬಲ್ಬಿಗೆ ಸಂಬಂಧಿಸಿದ ಅಧಿಕಾರಿಗಳಿಗೆಲ್ಲಾ ಸಲಾಮು ಹೊಡೆದು ಅಂಗಲಾಚಿ ಇನ್ನೊಮ್ಮೆ ಹಾಗೆ ಆಗದ ಹಾಗೆ ನೋಡುವೆ ಇದೊಂದು ಬಾರಿ ಬಲ್ಬು ಹಾಕಿ ಎಂದು ಬೇಡಿಕೊಂಡೆ.
      ಏನೋ ಹಿಂಗ ಹೇಳಾಕತ್ತ ಎಷ್ಟು ಸಾರಿ ಆಯ್ತು  ನೀ?
      ಓದ್ತಿಯೋ? ಕಂಬದ ಜೋಡಿ ಆಟಾ ಆಡ್ತಿಯಾ? ಎಂದರು ಚೇರಮನ್ನರು….
“ಇಲ್ಲ ಸರ್, ಆ ಕಂಬದಲ್ಲಿ ಲೈಟಿನ ವಾಯಾರ್ ಲೂಸ್ ಆಗಿದೆ ಅಂತಾ ಕಾಣ್ತದೆ. ಆ ವಾಯರ್ ಬಿಗಿ ಮಾಡಿಸಿ  ಬಲ್ಬು ಹಾಕಿದರೆ ಸರಿಯಾಗಬಹುದು.ಸರ್ ಎಂದೆ.
     "ಕೆ .ಇ .ಬಿ .ಯವರ ಹತ್ತಿರ ಹೇಳು" ಎಂದರು.
 ಕೆ .ಇ .ಬಿ .ಆಫೀಸ್ ಇನ್ನೂ ಬಂದಿರಲಿಲ್ಲ. ಅದರ ಕುರಿತು ಕೆದಕಿ ಬರಬೇಕಾದ ಒಂದು ಬಲ್ಬು ಕಳೆದುಕೊಳ್ಳುವುದಕ್ಕೆ ಮನಸ್ಸು ಒಪ್ಪದೇ ಮೌನವಾಗಿದ್ದೆ. ಕೊನೆಗೆ ಅಧಿಕಾರವಾಣಿಯಿಂದ ಬಂದದ್ದು
     “ಏ ಇದೊಂದು ಸಾರಿ ಹಾಕಂತ ಹೇಳೋ"
ಎಂದು ಹೇಳಿದಾಗ ಅಲ್ಲಿಂದ ಬೆನ್ನು ತೋರಿದೆ. ಮರುದಿನ ಕಂಬದ ದೀಪ ಹತ್ತಿತು ಎಂದು ಸಂತಸ ಪಟ್ಟರೆ ಮತ್ತೊಂದು ದಿನ ಮತ್ತೊಂದು ಘಟನೆ!
   ಸುಮಾರು ರಾತ್ರಿ ಒಂದೂವರೆಯ ಸಮಯ. ಟಾಕೀಸಿನೆಡೆಗೆ ಸುತ್ತಿ ಅಗಸೆಯ ದಿನ್ನೆಯನ್ನೇರಿ ಬರುತ್ತಿರಬೇಕಾದರೆ ಭೂತಗಳಂತೆ ಕಾಣುವ ಎರಡು ದೇಹಗಳು ನಾನು ಕುಳಿತು ಓದುವ ಕಂಬವನ್ನು ಹಿಡಿದು ಅಲುಗಾಡಿಸುತ್ತಿದ್ದವು!  
     ನಾನು "ಎ….. ಎ….” ಎಂದು ದೂರದಿಂದ ಓಡಿಬರುತ್ತಿದ್ದಂತೆ  ತಮ್ಮ ಕೆಲಸದಲ್ಲಿ ಆ ಭೂತಗಳು  ಸಫಲವಾಗಿದ್ದವು. ಕಂಬ ಅಲುಗಾಡಿಸುವುದರಿಂದ ಪ್ರಮುಖ ತಂತಿಯೊಂದಿಗೆ ಸುತ್ತಿದ ಬಲ್ಬಿನ ವಾಯರ್ ಅಲುಗಿ ಅಲುಗಿ ಚಿಟಚಿಟನೆ ಬೆಂಕಿ ಹೊರಟು  ದೀಪ ನಂದುವುದು ನಾನೇ ಕಣ್ಣಾರೆ ಕಂಡೆ. ಕತ್ತಲಲ್ಲಿ  ಆ ಕಪ್ಪು ದೇಹಗಳು ಮಾಯವಾದವು.
    ಯಾರಿರಬೇಕು ಇವರು? ಹೀಗೆ ದೀಪ ಆರಿಸುವುದಕ್ಕೆ ನಾನೇನು ಇವರಿಗೆ ಕೇಡು ಮಾಡಿದ್ದೆ ಎಂದು ಆ ಬುಡ್ಡಿ ದೀಪದ ಕೆಳಗೆ ಕುಳಿತು ಚಿಂತಿಸುತ್ತಿರಬೇಕಾದರೆ, ಈ ಹಿಂದಿನ ಘಟನೆಯೊಂದು ಹೊಳೆಯಿತು.
    ಒಂದು ರಾತ್ರಿ ವಿದ್ಯುಚ್ಛಕ್ತಿ ಹೊರಟು ಹೋಯಿತು. ಮಧ್ಯರಾತ್ರಿಯ ಸಮಯ ಬೇರೆ. ಬುಡ್ಡಿ ಲ್ಯಾಂಪ್ ಜೊತೆಗಿದ್ದರೂ  ಲ್ಯಾಂಪ್ ಹೊತ್ತಿಸಲು ದೀಪದ ಕಡ್ಡಿ ಇರಲಿಲ್ಲ. ದಾರಿಯಲ್ಲಿಯೇ ನಿಂತು ಆಗಂತುಕರಿಗಾಗಿ ಕಾಯುತ್ತಿದ್ದೆ. ನನಗಾಗಿಯೇ ಏನೋ, ಇಬ್ಬರು ವ್ಯಕ್ತಿಗಳು ಬೀಡಿ ಸೇದುತ್ತಾ  ಬರುತ್ತಿದ್ದರು. ನಡಿಗೆ ತೀವ್ರಗೊಳಿಸಿ ಅವರ ಹತ್ತಿರ ಹೋದೆ. ಅವರ ಮಾತುಗಳು ಮಾಯವಾದವು. ಆ ಇಬ್ಬರು ವ್ಯಕ್ತಿಗಳು ಗಕ್ಕನೆ ನಿಂತುಬಿಟ್ಟರು. ಅವು ಗಂಡಾಗಿರಲಿಲ್ಲ - ಹೆಣ್ಣುಗಳು! ಇಸ್ಲಾಮಿ ಹೆಣ್ಣುಗಳು! ಇಬ್ಬರೂ ಬುರುಕಾ ಹಾಕಿದ್ದರು. ಆದರೂ ಬೀಡಿ ಸೇದುತ್ತಿದ್ದರು. ಹೇಳಿಕೊಳ್ಳುವಂತಹ ಚಂದ್ರನ ಬೆಳಕು ಅದಾಗಿರಲಿಲ್ಲ. ಕೇಳಬೇಕೋ ಕೇಳಬಾರದೋ ಎಂಬ ಅನುಮಾನದಿಂದಲೇ "ಒಂದು ಕಡ್ಡಿ ಕೊಡಿ" ಎಂದು ಕೇಳಿದ್ದೇ ತಡ  ಮುಖಮುಚ್ಚಿಕೊಂಡು ಬಿರಬಿರನೆ ಓಡುವುದೊಂದೇ ಕೆಲಸ! ಆ ನಡಿಗೆ ಮಾತ್ರ ಹೆಂಗಸರದ್ದಾಗಿರಲಿಲ್ಲ. ಆಗ ನನ್ನಷ್ಟಕ್ಕೆ ನಾನೇ ಬಿದ್ದು ಬಿದ್ದು ನಕ್ಕಿದ್ದೆ. ಆದರೆ ಆ ಕುರಿತು ವಿಚಾರಿಸಿರಲಿಲ್ಲ. ಆ ವಿಚಾರ ಹೊಳೆದದ್ದು ಮತ್ತೆ ವಿದ್ಯುತ್ ದೀಪ ಹೋದಾಗ. ನನಗೆ ಸಿಕ್ಕ ಗುಟ್ಟುಗಳು ಹಿರಿಯರೆದುರು ಬಯಲು ಮಾಡಿದಾಗ ಅದು ಅವರು ವಿಶೇಷವಲ್ಲ ಎನ್ನುವಂತೆ ನಕ್ಕರು. ನಾನು ಮೊದಲ ಬಾರಿಗೆ ಹಿರಿಯರೆದುರು ದೊಡ್ಡ ವಿಷಯವನ್ನೇ ಬಿಚ್ಚಿಡುತ್ತಿದ್ದೇನೆ ಎನ್ನುವ  ಭ್ರಮೆ ಜಾರಿ ಹೋಯಿತು. ಅವರು ಕಥೆ ಮಾಡಿ ಹೇಳಿದ ವಿಷಯವನ್ನೆಲ್ಲಾ ಅರಿತ ಮೇಲೆ ನನ್ನ ಟ್ಯೂಬ್ ಲೈಟ್ ತಲೆಗೆ ಹೊಳೆದದ್ದು ಇಷ್ಟು.
        - ನಾನು ದಾರಿ ದೀಪದ ಅಡಿಯಲ್ಲಿ ಕುಳಿತು ಓದುವುದು ಕೆಲವರಿಗೆ ಬೇಡವಾಗಿತ್ತು. ಅದರಲ್ಲೂ ಊರ ಶ್ರೀಮಂತರಿಗೆ ಪ್ರಾಣ ಸಂಕಟ ತಂದಿತ್ತು. ರಾತ್ರಿ ಸೂಳೇಗೇರಿಗೆ ಮೋಜು ಮಾಡಲು ಬರುವ ಈ ಜನ ನನ್ನನ್ನು ಅಲ್ಲಿಂದ ಕದಲಿಸಬೇಕು  ಎನ್ನುವ ಉದ್ದೇಶ ಹೊಂದಿದವರಾಗಿದ್ದರು. ಎಷ್ಟೇ ವೇಷ ಮರೆಸಿಕೊಂಡು ಕೇರಿಗೆ ಬಂದರೂ ಅದು ಅಷ್ಟೇ ಬೇಗ ಕೇರಿಯಲ್ಲಿ ಜಾಹೀರಾಗುತ್ತಿತ್ತು. ನಡುರಾತ್ರಿಯಲ್ಲಿ ಕುಳಿತು ಓದುವ ನನ್ನ ಓದು ಊರವರಿಗೆ ಶಾಪವಾಗಿದ್ದರೂ, ಅವರು ಕೊಡುವ ಕಿರುಕುಳ ನನಗೆ ಇನ್ನಷ್ಟು ರಾತ್ರಿಯೇ ಓದುವಂತೆ ಪ್ರೇರೇಪಿಸಿತು. ಆಗ ನಾನು ಬಿ.ಎ ಮೊದಲ ವರ್ಷದಲ್ಲಿ  ಓದುತ್ತಿದ್ದೆ. ಪಿ.ಯು.ಸಿ. ಯಲ್ಲಿ ಒಂದು ವರ್ಷ ಲಾಗ ಹಾಕಿ ಮನೆಯಲ್ಲಿಯೇ ಕೊಳೆಯುತ್ತ ಕುಳಿತಿದ್ದರ ಪರಿಣಾಮದಿಂದಾಗಿ ರಾತ್ರಿ ಓದಿಗೆ ಬದ್ಧನಾಗಿದ್ದೆ. ಈಗಲೂ ಅಷ್ಟೇ ಹಗಲಿನ ಓದಿಗಿಂತ ರಾತ್ರಿಯ ಓದು ಹೆಚ್ಚು ಪ್ರಿಯವಾದುದು.
ಕನ್ನಡ ದೀವಿಗೆ ಮಹೇಶ್ ಆವರಿಗೆ ಸಿರಿಗನ್ನಡ ಪ್ರಕಾಶನದ 'ಕನ್ನಡ ಸ್ವಾಭಿಮಾನ ಸ್ಮರಣಿಕೆ' ಪ್ರದಾನ ಮಾಡುತ್ತಿರುವ ಪ್ರೊ. ಅರವಿಂದ ಮಾಲಗತ್ತಿಯವರು
***************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ