ಪುಟಗಳು

27 ನವೆಂಬರ್ 2013

ರಮ್ಯಸೃಷ್ಟಿ (ಪದ್ಯ-2)

ಮಧುರ ಚೆನ್ನ ಅವರ ಪರಿಚಯ
         ಮಧುರಚೆನ್ನರೆಂದು ಖ್ಯಾತಿಪಡೆದ ಕವಿ ಹಲಸಂಗಿ ಚೆನ್ನಮಲ್ಲಪ್ಪನವರು.ಇವರ ಪೂರ್ಣ ಹೆಸರು ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ. ಇವರು ಜನಿಸಿದ್ದು ಹಲಸಂಗಿಯಿಂದ ಪಶ್ಚಿಮಕ್ಕೆ ೬ ಮೈಲು ದೂರದಲ್ಲಿರುವ ಲೋಣಿ ಎನ್ನುವ ಊರಿನಲ್ಲಿ. ಜನನ ದಿನಾಂಕ ೧೯೦೩ ಜುಲೈ ೩೦. ಅವರು ಹುಟ್ಟಿದ ಊರು ಹಲಸಂಗಿಯ ನೆರೆ ಊರಾದ ಹಿರೇಲೋಣಿಯಾದರೂ ಅವರು ಬದುಕೆಲ್ಲ ಕಳೆದದ್ದು ಹಲಸಂಗಿಯಲ್ಲಿಯೇ. ಅವರು ೧೯೨೧ ರಲ್ಲಿ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದರಾದರೂ ಅವರ ಶಾಲೆಯ ಓದು ಅಲ್ಲಿಗೇ ಮುಕ್ತಾಯಗೊಂಡಿತು. ಬಳಿಕ ಬಿಜಾಪುರಕ್ಕೆ ಹೋಗಿ ಅಲ್ಲಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಸಾಧ್ಯವಾದಷ್ಟು ಇಂಗ್ಲಿಷ್,ಸಂಸ್ಕೃತ ಹಾಗು ಹಳಗನ್ನಡಗಳನ್ನು ಕಲಿತರು. ಅವರ ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಮುಂತಾದವುಗಳೆಲ್ಲ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳಾಗಿವೆ.

            ಮಧುರಚನ್ನರ ವಿವಾಹ ಅವರ ೧೬ನೆಯ ವರ್ಷಕ್ಕೆ ಬಸಮ್ಮ ಎನ್ನುವ ೧೨ ವರ್ಷದ ಕನ್ಯೆಯ ಜೊತೆಗೆ ಆಯಿತು. ಅವರಿಗೆ ೬ ಹುಡುಗರು ಹಾಗೂ ಇಬ್ಬ್ಬರು ಹುಡುಗಿಯರು. ಮಧುರಚೆನ್ನರು ತಮ್ಮ ೧೪ನೆಯ ವಯಸ್ಸಿನಲ್ಲಿಯೆ ಸಾಹಿತ್ಯಸೃಷ್ಟಿಗೆ ತೊಡಗಿದರು. ೧೯ನೆಯ ವಯಸ್ಸಿಗೆ ಶಿಲಾಶಾಸನಗಳ ಹಾಗು ಜನಪದ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದರು. ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು. ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆದರೆ ಬಾಲ್ಯದಿಂದಲೂ ಅವರದು ಆಧ್ಯಾತ್ಮಿಕತೆಯ ಕಡೆಗೆ ಒಲೆದ ಮನಸ್ಸು ಕೆಲಕಾಲ ನಾಸ್ತಿಕರಾಗಿದ್ದರೂ ಸಹ, ಕೊನೆಗೊಮ್ಮೆ ಶ್ರೀ ಅರವಿಂದರನ್ನು ತನ್ನ ಗುರುಗಳೆಂದು ಭಾವಿಸಿದರು. ತೀವ್ರ ಆಧ್ಯಾತ್ಮಸಾಧನೆಯ ನಂತರ ಮಧುರಚೆನ್ನರು ೧೯೫೩ರ ಆಗಸ್ಟ ೧೫ರಂದು ದೇಹವಿಟ್ಟರು.

5 ಕಾಮೆಂಟ್‌ಗಳು: