ರಸಧಾರೆ -181
ಯಮನ ಶೂಲ ಕ್ಷಣ ಮಾತ್ರದಲ್ಲಿ ಒಂದೇ ಬಾರಿ ಕೊಲ್ಲುವುದು. ಆದರೆ ಈ ಜಗತ್ತಿನ ಮೋಹವು ನಮ್ಮಕುತ್ತಿಗೆಗೆ ಕುಣಿಕೆ ಹಾಕಿ ಅನುದಿನವೂ ಕ್ಷಣ ಕ್ಷಣವೂ ನಮ್ಮನ್ನು ಸೆಳೆಯುತ್ತಾ ಕೊಲ್ಲುತ್ತಲೇ ಇರುತ್ತದೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.
ನಮ್ಮ ಜೀವನದಲ್ಲಿ ನಾವು ಬಹಳಷ್ಟು ವ್ಯಕ್ತಿ ವಿಷಯ ಮತ್ತು ವಸ್ತುಗಳಿಗೆ ಅಂಟಿಕೊಂಡಿರುತ್ತೇವೆ. ಕೆಲವಕ್ಕೆ ನಮ್ಮ ಇಷ್ಟದಿಂದ ಮತ್ತೆ ಕೆಲವಕ್ಕೆ ಇಷ್ಟವಿಲ್ಲದಿದ್ದರೂ! ದೈಹಿಕ, ಮಾನಸಿಕ ಮತ್ತು ಭೌತಿಕ ಸಂಭಂದಗಳಿಂದ ನಮ್ಮ ನಂಟು ಈ ಜಗತ್ತಿನೊಂದಿಗೆ ನಮ್ಮ ಹುಟ್ಟಿನಿಂದ ಅಂತ್ಯದವರೆಗೆ ನಿರಂತರ. ಅನ್ಯ ಮಾರ್ಗವಿಲ್ಲ. ಇದು ಸರಿಯೇ ಎಂದು ಯೋಚಿಸಿದರೆ, ಹೌದು ಈ ಬಂಧಗಳಿಲ್ಲದೆ ಇದ್ದರೆ ಬದುಕು ನೀರಸವಾಗುತ್ತದೆ. ಆದರೆ ಯಾವುದೇ ಬಂಧನಗಳು ತಾವೇ ತಾವಾಗಿ ಉಂಟಾಗುವುದಿಲ್ಲ. ನಾವು ಹೋಗಿ ಅದನ್ನು ಹಿಡಿದುಕೊಳ್ಳುತ್ತೇವೆ. ಮೊದಲು ನಾವು ಅದನ್ನು ಇಷ್ಟಪಡುತ್ತೇವೆ. ನಂತರ ಅನಿಷ್ಟವಾದರೆ ( un -ishta ) ಅದರಿಂದ ಬಿಡುಗಡೆ, ಅಷ್ಟು ಸುಲಭವಲ್ಲ.
ನಮ್ಮ ಈ ಸಂಬಂಧಗಳು ಎಲ್ಲಿಯತನಕ ತಮ್ಮ ಶುದ್ಧತೆಯನ್ನು ಉಳಿಸಿಕೊಳ್ಳುತ್ತವೋ ಅಲ್ಲಿಯತನಕ ಅವು ಎಲ್ಲರಿಗೂ ಆನಂದವನ್ನು ನೀಡುತ್ತಿರುತ್ತವೆ. ಎಂದು ಈ ಬಂಧಗಳಿಗೆ, ಸ್ವಾರ್ಥದ, ಮೋಹದ, ಅಹಂಕಾರದ, ದೈನ್ಯತೆಯ ಲೇಪನವಾಗುತ್ತದೋ ಅಂದು ಆಪ್ಯಾಯಮಾನವಾಗಿದ್ದ ಸಂಬಂಧಗಳು ಕಲುಷಿತವಾಗಿ ನಮಗೆ ನೋವಿಗೆ ಕಾರಣವಾಗುತ್ತದೆ. ಸುಲಭದಲ್ಲಿ ಬಿಡಲಾಗದ ಬಂಧ ಸಂಬಂಧಗಳಂತೂ ಪ್ರತಿ ನಿತ್ಯ ವೇದನೆಯನ್ನು ಕೊಡುವ ಕುತ್ತಿಗೆಯ ಕುಣಿಕೆಯಂತಾಗುತ್ತದೆ. ನಮ್ಮನ್ನು ಜಗ್ಗೀ ಜಗ್ಗೀ ಹತಾಶರನ್ನಾಗಿಸುತ್ತದೆ. ಇದಕ್ಕೆ ಕಾರಣ ನಾವು ಕಟ್ಟಿ ಕೊಂಡ ಸಂಬಂಧಗಳು. ಇದನ್ನೇ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ” ಸಂಗಾತ್ ಸಂಜಾಯತೆ ಕಾಮ ಕಾಮಾತ್ ಕ್ರೋದೋಭಿಜಾಯತೆ, ಕ್ರೋದಾತ್ ಭವತಿ ಸಂಮೋಹಃ, ಸಂಮೋಹಾತ್ ಸ್ಮೃತಿ ವಿಭ್ರಮಃ, ಸ್ಮೃತಿ ವಿಭ್ರಮಾತ್ ಬುಧ್ಧಿನಾಶಃ ಬುದ್ಧಿನಾಶೋ ಪ್ರಣಶ್ಯತಿ.” ಎನ್ನುತ್ತಾನೆ. ಮೊದಲು ಸಂಗ, ನಂತರ ಆಸೆ, ದುರಾಸೆ, ಮೋಹ, ಮದ, ಅವಿವೇಕ ಮತ್ತು ಬುದ್ಧಿನಾಶ. ಹೀಗೆ ಒಂದಕ್ಕೊಂದು ಅಂಟಿಕೊಂಡು, ಸಾಂಕ್ರಾಮಿಕ ರೋಗದಂತೆ ನಮ್ಮ ಮನಸ್ಸು ಬುದ್ಧಿ ದೇಹಗಳನ್ನಾವರಿಸಿ, ನಮ್ಮನ್ನು ಅಧೋಗತಿಗೆ ತಳ್ಳುವುದು ಈ ಬಂಧನಗಳು.
ವಾಚಕರೆ, ಈ ಜಗತ್ತಿನಲ್ಲಿ ಹುಟ್ಟಿದ ಮೇಲೆ ಈ ಬಂಧನಗಳಿಂದ ಬಿಡುಗಡೆ ಇಲ್ಲ. ತಾವೇ ತಾವಾಗಿ ಉಂಟಾದ ಬಂಧನಗಳಿಂದ ಅಷ್ಟಾಗಿ ನಮಗೆ ತೊಂದರೆಗಳಿಲ್ಲ. ಬರುತ್ತವೆ ಹೋಗುತ್ತವೆ. ಆದರೆ ನಾವು ಇಷ್ಟಪಟ್ಟು ಮೋಹದಿಂದ ಗಂಟು ಹಾಕಿಕೊಂಡ ಬಂಧನಗಳಿವೆಯಲ್ಲ, ಅವು ನಮಗೆ ಅತೀ ಹಿಂಸೆಯನ್ನು ಕೊಡುತ್ತವೆ. ಹಾಗಾಗಿ ನಮ್ಮ ನಮ್ಮ ಜೀವನಗಳನ್ನು ಆನಂದಮಯವಾಗಿಸಿಕೊಳ್ಳಬೇಕಾದರೆ, ನಾವಾಗೇ ಬಂಧನಗಳಿಗೆ ಸಿಕ್ಕಿಕೊಳ್ಳದೆ, ಸ್ವಾಭಾವಿಕವಾಗಿ ಉಂಟಾದ ಬಂಧಗಳನ್ನು ಒಂದು ” ನಿರ್ಲಿಪ್ತತೆ” ಯಿಂದ ಅನುಭವಿಸಿದರೆ ಸುಖ ಇಲ್ಲದಿದ್ದರೆ ಗುಂಡಪ್ಪನವರು ಹೇಳಿದಹಾಗೆ ಒಂದು ನರಕ ಯಾತನೆ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಅದರ ನೋವು.
“ಅತಿ”ಯಾಗಿ ಯಾವುದಕ್ಕೂ ಅಂಟದೆ “ಮಿತಿ” ಗಳನ್ನು ಅರಿತು ಬಾಳಿದರೆ ” ಹಿತ” .
ರಸಧಾರೆ - 182
ಜನುಮಜನುಮದ ಕಥೆಯ ತಂತುಗಳನಂತ II
ಅನವರತ ನೂತನವಿದೆನಿಪ ವಿಶ್ವದ ತಂತ್ರ I
ಬಿನದ ಪರಬೊಮ್ಮಂಗೆ – ಮಂಕುತಿಮ್ಮ. II
ಋಣದಜಾಲವನಂತ = ಋಣದ+ ಜಾಲವು+ಅನಂತ// ಕರುಮಚಕ್ರವನಂತ = ಕರುಮ+ ಚಕ್ರವು+ ಅನಂತ// ತಂತುಗಳನಂತ= ತಂತುಗಳು + ಅನಂತ // ನೂತನವಿದೆನಿಪ = ನೂತನವು+ ಇದು + ಎನಿಪ
ಜಾಲವು = ಬಲೆಯು// ಕರುಮ = ಕರ್ಮ // ತಂತು = ಎಳೆ, ಹಗ್ಗ, ದಾರ,// ಅನವರತ = ಎಡೆಬಿಡದೆ, ನಿರಂತರ // ನೂತನವು = ಹೊಸದು // ಬಿನದ = ವಿನೋದ // ಪರಬೊಮ್ಮಂಗೆ = ಪರಮಾತ್ಮನಿಗೆ.
ಈ ಜಗತ್ತಿನೊಂದಿಗೆ ನಮ್ಮ ಋಣದ ಸಂಬಂಧ ಕೊನೆಯಿಲ್ಲದ್ದು, ನಾವು ಅದರೊಳಗೆ ಇದ್ದು, ನಮ್ಮನ್ನೂ ಸೇರಿಸಿಕೊಂಡು ಸುತ್ತುವ ಕರ್ಮದ ಚಕ್ರದ ಸುತ್ತಾಟ, ಕೊನೆಯಿಲ್ಲದ್ದು, ಒಂದು ಜನ್ಮದಿಂದ ಇನ್ನೊದು ಜನ್ಮಕ್ಕೆ ನಮ್ಮನ್ನು ಹೆಣೆದುಕೊಳ್ಳುವ ಸಂಕೋಲೆಗಳೂ ಕೊನೆಮೊದಲಿಲ್ಲದ್ದು. ಆದರೂ ಪ್ರತೀ ಬಾರಿಯೂ ನಮಗೆ ಇದು ಹೊಸದು ಎಂದು ಅನಿಸುವ ಈ ವಿಶ್ವದ ತಂತ್ರವನ್ನು ಆ ಪರಮಾತ್ಮ ತನ್ನ ವಿನೋದಕ್ಕಾಗಿಯೇ ಸೃಷ್ಟಿಸಿಕೊಂಡಂತಿದೆ, ಎಂದು ಒಂದು ವೇದಾಂತದ ಒಂದು ಸೂಕ್ಷ್ಮ ವಿಚಾರವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ನಮ್ಮ, ಕರ್ಮ ಶೇಷದ ಬಲೆಯ ವಿಸ್ತಾರ ಅಂತ್ಯವಿಲ್ಲದ್ದು. ಹಿಂದಿನ ಕರ್ಮ ಇಂದು ಅನುಭವಿಸಬೇಕು. ಇಂದಿನ ಕರ್ಮ ನಾಳೆಗೆ. ಹೀಗೆ ಹಳೆಯದನ್ನು ಕಳೆಯುತ್ತಾ ಹೊಸದನ್ನು ಸಂಚಯನಮಾಡುತ್ತಾ, ನಿರಂತರವಾಗಿ ಈ ಕರ್ಮದ ಬಲೆಯಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ಈ ನಮ್ಮ ಪೂರ್ವಜನ್ಮದ ಮತ್ತು ಈ ಜನ್ಮದ ಪೂರ್ವಕರ್ಮವೇ ನಾವು ಹೊತ್ತು ತರುವ ಅಥವಾ ಸಂಚಯನ ಮಾಡುವ ಋಣ, ಅಂದರೆ ಸಾಲ. ಈ ಸಾಲ ತೀರುವುದೇ ಇಲ್ಲ. ಹಳೆಯಸಾಲ ತೀರಿಸುವುದು, ಹೊಸ ಸಾಲ ಮಾಡುವುದು. ಒಂದು ಸಾಲಕ್ಕೆ ಮತ್ತೊಂದು ಸಾಲದ ಕೊಂಡಿ. ಹಿಂದಿನ ಜನ್ಮದ ಸಂಚಿತ ಕರ್ಮವನ್ನು ಈ ಜನ್ಮಕ್ಕೆ ತಂದು ಅದನ್ನು ಅನುಭವಿಸುತ್ತಾ, ಮತ್ತೆ ಈ ಜನ್ಮದಲ್ಲಿ ಹೊಸ ಹೊಸ ಕರ್ಮಗಳನ್ನು ಸಂಚಯನಮಾಡುತ್ತಾ, ಮುಂದಿನ ಜನ್ಮಕ್ಕೆ ಶೇಷ ಕರ್ಮವನ್ನು ಹೊತ್ತು ಹೋಗುವುದೇ ವಿಧಿ.
ಆದರೂ ಪ್ರತೀ ಜನ್ಮದಲ್ಲೂ ನಮ್ಮ ಜೀವನ, ಹುಟ್ಟೂ, ಸ್ನೇಹವೂ, ಬಾಂಧವ್ಯಗಳು, ಈ ಜಗತ್ತು, ಹೀಗೆ ಎಲ್ಲವೂ, ಹೊಸದೆಂಬ ಒಂದು ಭಾವ. ಎಷ್ಟು ಜನ್ಮ ಕಳೆದಿದ್ದೇವೋ, ಇನ್ನೂ ಎಷ್ಟುಜನ್ಮ ಕಳೆಯಬೇಕೋ ನಮಗರಿವಿಲ್ಲ, ನಮ್ಮರಿವಿಗೆ ಬರುವುದೂ ಇಲ್ಲ. ಇದು ಆ ಪರಮಾತ್ಮನಿಗೊಂದು ವಿನೋದದ ಆಟ. ನಮ್ಮನ್ನಾಡಿಸುವುದೇ ಅವನಿಗೊಂದು ವಿನೋದ. ಆದರೆ, ಇದರಿಂದ ಮುಕ್ತಿ ಇಲ್ಲವೇ? ಎಂದರೆ ಉಂಟು. ಎಲ್ಲ ಕರ್ಮಗಳನ್ನೂ ಮಾಡುತ್ತಾ “ನಾನು ಮಾಡುತ್ತಿಲ್ಲ- ಇದು ಅವನಾಟ, ನಾನೊಂದು ಕೈಗೊಂಬೆ- ಅವನಿಚ್ಚೆಯಂತೆ ಏನು ಬೇಕೋ ಅದನ್ನು ಮಾಡಿಸಲಿ” ಎಂದು ಒಂದು ನಿರ್ಲಿಪ್ತಭಾವ ತಳೆದರೆ, ನಾವು ಮುಕ್ತರಾದಂತೆಯೇ ಅಲ್ಲವೇ? ಯಾವುದರಿಂದ ಮುಕ್ತಿ? ಕರ್ಮದಿಂದಲ್ಲ, ಆದರೆ ಕರ್ಮದ ಬಂಧನದಿಂದ.
ಇದನ್ನೇ ರಾಜ ಕುಲಶೇಖರರು ತಮ್ಮ ” ಮುಕುಂದಮಾಲ ಸ್ತ್ರೋತ್ರ ರತ್ನದಲ್ಲಿ” ಯದ್ ಯದ್ ಭವ್ಯಂ ಭವತು ಭಗವನ್ ಪೂರ್ವ ಕರ್ಮಾನುರೂಪಂ, ಏತತ್ ಪ್ರಾರ್ತ್ಯಂ ಮಮ ಬಹುಮತಂ ಜನ್ಮ ಜನ್ಮಾಂತರೇಪಿ, ತ್ವತ್ ಪಾದಾಂಬೋರುಹ ಯುಗಗತಾ ನಿಶ್ಚಲಾ ಭಕ್ತಿರಸ್ತು” ಎಂದರು. ಅಂದರೆ ” ಹೇ ಪರಮಾತ್ಮ ಜನ್ಮ ಜನ್ಮಾಂತರದ ಕರ್ಮಶೇಷದ ಅನುಗುಣವಾಗಿ ನನಗೆ ಈ ಜನ್ಮದಲ್ಲಿ ಏನೆಲ್ಲಾ ನಡೆಯಬೇಕೋ, ಅದೆಲ್ಲ ನಡೆಯಲಿ. ಅದರಿಂದ ಆಗುವ ಎಲ್ಲ ಪರಿಣಾಮಗಳನ್ನೂ ನಾನು ಅನುಭವಿಸಲು ತಯಾರಾಗಿದ್ದೇನೆ, ಆದರೆ ನಾನು ಹಾಗೆ ಅನುಭವಿಸುವಾಗ, ನನ್ನ ಮನಸ್ಸು ಮಾತ್ರ ನಿನ್ನ ಪಾದಾರವಿಂದದಲ್ಲಿ ನಿಲ್ಲಲಿ” ಎಂದು ಬೇಡುತ್ತಾರೆ. ಮಹಾನ್ ಭಕ್ತರಾದ ಅವರಿಗೆ ಅಂತಹ ಭಾವ ಬಂದದ್ದು ಸಹಜವೇ. ವಾಚಕರೆ, ಅಂತಹ ಭಾವ ನಮಗೂ ಬಂದರೆ ನಾವೂ ಈ ಕರ್ಮಶೇಷದ ಬಂಧನದಿಂದ ಮುಕ್ತರಾಗಬಹುದು.
ನಾವೂ ಅಂತಹ ಪ್ರಯತ್ನವನ್ನು ಮಾಡೋಣ ಬನ್ನಿ
ರಸಧಾರೆ - 183
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು
ಧನ್ಯನುಭಯವ ಮೀರೆ – ಮಂಕುತಿಮ್ಮ
ಖಿನ್ನನಾಗಿಪ = ಖಿನ್ನನ್ + ಆಗಿಪ // ಪಾಪಫಲವಾತ್ಮಶುದ್ಧಿ = ಪಾಪ+ಫಲವು + ಆತ್ಮಶುದ್ದಿ // ಧನ್ಯನುಭಯವ = ಧನ್ಯನು+ ಉಭಯವ
ಖಿನ್ನ= ನೊಂದವ// ಅನ್ಯೋನ್ಯಜನಕಗಳು = ಪರಸ್ಪರ ಉಂಟಾಗುವವು// ಉಭಯವ = ಎರಡನ್ನೂ
ಒಬ್ಬ ವ್ಯಕ್ತಿ ಮಾಡಿದ ಪುಣ್ಯಕಾರ್ಯದಿಂದ ಅವನಿಗೆ ಸುಖ ಸಂಪತ್ತುಗಳು ಆನಂದಗಳು ಲಭಿಸುವುವು. ಹಾಗೆಯೆ ಅವನು ಮಾಡಿದ ಪಾಪಕರ್ಮಗಳಿಂದ ನೋವು ದುಃಖ ಕಷ್ಟ ಪಡೆಯುವನು. ಆದರೆ ಈ ಪಾಪ ಪುಣ್ಯಗಳನ್ನೂ ಮೀರಿ ಅವುಗಳ ಪರಿಧಿಯಿಂದ ಮೇಲೇರುವವನೆ ಧನ್ಯ, ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಈ ಜಗತ್ತಿನಲ್ಲಿ ಒಳ್ಳೆಯದನ್ನು ಮಾಡಿದರೆ ಪುಣ್ಯ, ಕೆಟ್ಟದ್ದನ್ನು ಮಾಡಿದರೆ ಪಾಪ ಎಂಬ ಒಂದು ಪ್ರತೀತಿ ಇದೆ. ಪುಣ್ಯ ಮಾಡಿದರೆ ಒಳ್ಳೆಯ ಫಲ. ಪಾಪ ಮಾಡಿದರೆ, ಕೆಟ್ಟ ಫಲವೆಂದೂ ಪ್ರತೀತಿಯಿದೆ. ಆದರೆ ಪ್ರತೀ ಮನುಷ್ಯನೂ ತಾನು ಮಾಡಿದ ಪುಣ್ಯ ಕಾರ್ಯಗಳನ್ನು ಮರೆತು, “ಆ ಕಾರ್ಯಗಳಿಂದಲೇ ಇಂದು ನಂಗೆ ಈ ಸೌಲಭ್ಯಗಳು ಲಭ್ಯವಾಗಿವೆ” ಎನ್ನುವುದನ್ನು ಮರೆತು, ” ನಾನು” ಮಾಡಿದೆ ಎಂದು ಅಹಂಕಾರವನ್ನೂ ಮದವನ್ನೂ ತೋರುತ್ತಾ, ತನ್ನ ಪುಣ್ಯ ಫಲವನ್ನು ಅನುಭವಿಸುತ್ತಾನೆ. ಹಾಗೆ ವರ್ತಿಸುತ್ತಾ ಒಂದು ವ್ಯಕ್ತಿ ಪುಣ್ಯ ಕೆಲಸಗಳನ್ನು ಮಾಡಿ ತಾನೇ ಆರ್ಜಿಸಿದ ಸಂಪತ್ತುಗಳಿಂದ ಮತ್ತು ಐಹಿಕ ಭೋಗಗಳಿಂದ ತನ್ನ ವ್ಯಕ್ತಿತ್ವಕ್ಕೆ ಕುಂದು ತಂದುಕೊಳ್ಳುತ್ತಾನೆ. ಅವನಿಗೆ ಮೋಹ ಉಂಟಾಗಿ ಮದವು ಇನ್ನೂ ಹೆಚ್ಚುತದೆ. ಈ ರೀತಿ ಅವನು ತನ್ನ ಪುಣ್ಯ ಫಲವನ್ನು ಕರಗಿಸುತ್ತಾನೆ. ಅಧೋಗತಿಗೆ ಹೋಗುತ್ತಾನೆ.
ಹಾಗೆಯೇ ಒಬ್ಬನು ಕೇವಲ ಪಾಪಕರ್ಮಗಳನ್ನೇ ಮಾಡಿದ್ದಾನೆ ಎಂದು ಇಟ್ಟುಕೊಳ್ಳಿ. ಅದರ ಫಲ ಸ್ವರೂಪವಾಗಿ, ಅವನಿಗೆ ಕಷ್ಟ, ನೋವು, ದಾರಿದ್ರ್ಯ, ಖಿನ್ನತೆ, ಹಿಂಸೆಯಂಥಾ ಎಲ್ಲ ಪಾಪ ಫಲಗಳೂ ದೊರೆಯುತ್ತವೆ. ಅವನು ಖಿನ್ನನಾಗುತ್ತಾನೆ. ತನ್ನ ತಪ್ಪುಗಳ ಅವಲೋಕನಮಾಡಿಕೊಳ್ಳುತ್ತಾನೆ.ಆ ಪಾಪ ಕರ್ಮಗಳ ಫಲವನ್ನು ಅನುಭವಿಸುತ್ತಾನೆ. ಅವನಿಗೆ ಬೇರೆ ವಿಧಿಯಿಲ್ಲ. ಹಾಗೆ ಅನುಭವಿಸುವಾಗ ಅವನು ತನ್ನ ತಪ್ಪನ್ನು ಅರಿತು ಮತ್ತೆ ಪಾಪ ಕರ್ಮಗಳನ್ನು ಮಾಡದೆ, ಒಳ್ಳೆಯ ಕೆಲಸಗಳನ್ನು ಮಾಡಲು ಧೃಢ ನಿಶ್ಚಯನಾಗಿ ಅಥವಾ ಪಾಪ ಮಾಡಬಾರದೆಂಬ ನಿಶ್ಚಯದಿಂದ ಶುದ್ಧನಾಗುತ್ತಾನೆ. ಉನ್ನತ ಗತಿಯನ್ನು ಪಡೆಯುತ್ತಾನೆ.
ಹಾಗಾಗಿ ಯಾರಾದರೂ ತುಂಬಾ ಆನಂದದಿಂದ ಇದ್ದಾರೆ, ಸುಖವಾಗಿದ್ದಾರೆ ಎಂದರೆ ಅವರು ತಮ್ಮ ಪುಣ್ಯವನ್ನು ಕರಗಿಸುತ್ತಿದ್ದಾರೆ ಎಂದೂ, ಯಾರಾದರೂ ಬಹಳ ಸಂಕಷ್ಟದಲ್ಲಿ ಇದ್ದರೆ, ಯಾತನೆ, ಖಿನ್ನತೆ, ಬಡತನ, ಹಿಂಸೆ ಅನುಭಸಿತ್ತಿದ್ದರೆ, ಅವರು ತಮ್ಮ ಪಾಪಗಳನ್ನು ಕಳೆದುಕೊಂಡು ಕರಗಿಸುತ್ತಿದ್ದಾರೆ ಎಂದೂ ಅರ್ಥ.
ಹಾಗಾಗಿ, ಯಾರು ಪುಣ್ಯ ಕೆಲಸಮಾಡಿ ಅದರ ಫಲವನ್ನು, ಸ್ವಾರ್ಥದಿಂದ ಅನುಭವಿಸದೆ, ಮದ ಮೋಹಗಳ ಭಾವದಿಂದ ಮುಕ್ತರಾಗುತ್ತಾರೋ, ಯಾರು ತನ್ನ ಪಾಪ ಕರ್ಮದಿಂದ ಸಂದ ಕಷ್ಟಗಳ ಕೋಟಲೆಯನ್ನು ಅನುಭವಿಸುವಾಗ, ಕೋಪ, ಸೇಡು, ಅಹಂಕಾರದ ಭಾವ ಬಿಟ್ಟು, ತನ್ನ ಕಷ್ಟಗಳಿಗೆ ತನ್ನನ್ನಲ್ಲದೆ, ಬೇರೆ ಯಾರನ್ನೂ ದೂಷಿಸದೆ ಪರಮಾತ್ಮನ ಇಚ್ಚೆಯಂತೆ ನಡೆವುದೆಲ್ಲ ನಡೆಯಲಿ ಎಂದು ಬಂದ ಕಷ್ಟವನ್ನು ಅನುಭವಿಸಿ ತೀರಿಸಿಬಿಡುತ್ತಾನೋ, ಇಬ್ಬರೂ ಈ ಲೋಕದಲ್ಲಿ ಧನ್ಯರು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಪುಣ್ಯಫಲದ ಮದಪೂರಿತ ಅಹಂಕಾರ ಅಥವಾ ಪಾಪಫಲದ ಖಿನ್ನತೆ ಮತ್ತು ದೈನ್ಯತೆಯ ಭಾವವನ್ನು ಮೀರಿ ನಿಂತಾಗ ಮನುಷ್ಯ ಧನ್ಯನಾಗುತ್ತಾನೆ ಎನ್ನುವುದೇ ಈ ಕಗ್ಗದ ಹೂರಣ.
ನಾವೂ ಸಹ ಅಂತಹ ಭಾವಗಳಿಗೆ ಬಲಿಯಾಗದೆ, ಅದರಿಂದ ಮೀರಿ ಬೆಳೆಯುವ ಪ್ರಯತ್ನ ಮಾಡೋಣವೆ?
ರಸಧಾರೆ - 184
ಬಾಡುತಿಹ ಹೂಮಾಲೆ, ಗೂಢವಿಹ ಕಜ್ಜಿ II
ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ I
ನೋಡಾಡು ಹಗುರದಿಂ – ಮಂಕುತಿಮ್ಮ II
ಈ ಲೋಕದದಲ್ಲಿ ನಮ್ಮ ಬಾಳ್ವೆ ಮೊದಮೊದಲು ಆನಂದವಾಗಿರುತ್ತದೆ . ಎಲ್ಲವೂ ವಿನೂತನವಾಗಿರುತ್ತದೆ, ಎಲ್ಲವೂ ಇಷ್ಟಪಡುವಂತಿರುತ್ತದೆ. ಕಾಲಕ್ರಮೇಣ ಬಾಡುತಿಹ ಹೂ ಮಾಲೆಯಂತೆಯೋ ಅಥವಾ ಬಹಳದಿನದಿಂದ ಬಾಧಿಸುತ್ತಿರುವ ಕಜ್ಜಿಯಂತೆಯೋ, ” ಸಾಕಪ್ಪಾ ಸಾಕು” ಎಂದು ಅನ್ನಿಸತೊಡಗುತ್ತದೆ. ಹಾಗಾಗಿ ಈ ಲೋಕದ ಸಹವಾಸದಲ್ಲಿ ತುಂಬಾ ಆಳವಾಗಿ ಇಳಿಯದೆ, ಮೇಲೆ ಮೇಲೆ ಹಗುರವಾಗಿ ಓಡಾಡಿಕೊಂಡು ನಿನ್ನ ಜೀವನವನ್ನು ಬಾಳು ಎಂದು ಸೂಚನೆಯನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.
ಸಹೃದಯರೇ, ನೋಡಿ ನಮಗೆ ಒಂದು ವಿಷಯ ಚೆನ್ನಾಗಿ ಗೊತ್ತು ಮತ್ತು ಅದುವೇ ಸತ್ಯ. ನಾವು ಈ ಜಗತ್ತಿನಲ್ಲಿ ಶಾಶ್ವತವಾಗಿ ಇರುವುದಿಲ್ಲ. ನಾವು ಈ ರೂಪದಲ್ಲಿ ಈ ಜನ್ಮದಲ್ಲಿ ಕೇವಲ ಕೆಲ ಕಾಲ ಮಾತ್ರ ಇರಲು ಸಾಧ್ಯ. ಹಾಗಿದ್ದರೂ ನಾವು ಮಾಡುವ ಕೆಲಸವೆಲ್ಲವೂ, “ನಾವು ಇಲ್ಲಿ ಇದೇ ರೂಪದಲ್ಲಿ ಶಾಶ್ವತವಾಗಿ ಇರುತ್ತೇವೆ” ಎನ್ನುವ ಒಂದು ಭ್ರಮೆಯನ್ನು ಇಟ್ಟುಕೊಂಡೆ ಮಾಡುತ್ತೇವೆ. ನಾನು ನನ್ನ ವಂಶ, ನನ್ನ ಪರಂಪರೆ, ನನ್ನ ಸಂಸಾರ, ನನ್ನ ಆಸ್ತಿ,ಮನೆ, ಮಠ ಹೀಗೆ ಎಲ್ಲವನ್ನೂ “ನಾವು ನಿರಂತರವಾಗಿ ಅನುಭವಿಸುತ್ತೇವೆ” ಎನ್ನುವ ಭ್ರಮೆಯಲ್ಲಿರುತ್ತೇವೆ .
ಈ ಜನ್ಮದಲ್ಲಿ ಈ ರೂಪ ತಳೆದು ಹುಟ್ಟಿರುವ ನಾವು, ಈ ರೂಪವನ್ನು ಬಿಟ್ಟು ಮತ್ತೊಂದು ರೂಪವನ್ನು ಧರಿಸುವಾಗ, ಎಲ್ಲಿ ಹುಟ್ಟುತ್ತೇವೆಯೋ , ಏನಾಗಿ ಹುಟ್ಟುತ್ತೇವೆಯೋ ಗೊತ್ತಿಲ್ಲ ಮತ್ತು ಅದನ್ನು ಅರಿಯುವುದೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಈ ಜನ್ಮದಿಂದ ಮತ್ತೊಂದು ಜನ್ಮಕ್ಕೆ ಹೋಗುವಾಗ, ಈ ಜನ್ಮದಲ್ಲಿ ಸಂಚಯಿಸಿದ ಕರ್ಮ ಶೇಷ ಮತ್ತು ವಾಸನೆಗಳನ್ನಷ್ಟೇ ಕೊಂಡು ಹೋಗಬಹುದು. ಮತ್ತೆಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಾವು ಆರ್ಜಿಸಿದ ವಸ್ತು, ವಿಷಯ ಮತ್ತು ವ್ಯಕ್ತಿಗಳು ಏನಾದರು, ಹೇಗಿದ್ದಾವೆ ಎನ್ನುವ ಅರಿವು ನಮಗೆ ಇದನ್ನು ಬಿಟ್ಟು ಹೋದಮೇಲೆ ಕಿಂಚಿತ್ತೂ ಇರುವುದಿಲ್ಲ. ಆದರೂ ನಾವು ಈ ಜೀವನಕ್ಕೆ ಅಂಟಿಕೊಂಡಿರುತ್ತೇವೆ. ಆಳವಾಗಿ ಇದರೊಳಕ್ಕೆ ಇಳಿದುಬಿಡುತ್ತೇವೆ.
ಜೀವನವನ್ನು ನಡೆಸುತ್ತಾ ನಡೆಸುತ್ತಾ ನಮಗೆ ಇದರ ನಿಸ್ಸಾರತೆ ಅರ್ಥವಾಗುವಾಗ, ಇದು ಒಂದು ಬಾಡುತ್ತಿರುವ ಮಲ್ಲಿಗೆ ಹೂವಿನ ದಂಡೆಯಂತೆ ಅಥವಾ ಬಹಳ ದಿನದಿಂದ ಬಾಧಿಸುತ್ತಿರುವ ಕಜ್ಜಿಯಂತೆ ಎಂದು ಅನ್ನಿಸತೊಡಗುತ್ತದೆ. ದೇಹದ ಶಕ್ತಿ ಕುಂದಿ, ಗತ ಜೀವನದ ಜ್ಞಾಪಕಗಳು ಮನಸ್ಸು ಬುದ್ಧಿಯನ್ನು ಆವರಿಸಿಕೊಂಡು, ಏನೋ ಮಾಡಬೇಕೆಂದರೂ ಏನೂ ಮಾಡಲಾಗದ ಸ್ಥಿತಿಗೆ ತಲುಪುತ್ತೇವೆ. ಈ ಸ್ಥಿತಿ ಅನಹಸೀಯ.
ಇದಕ್ಕೆ ಪರಿಹಾರವಾಗಿ ಮಾನ್ಯ ಗುಂಡಪ್ಪನವರು ನಮಗೆ ಒಂದು ಸಲಹೆಯನ್ನು ನೀಡುತ್ತಾರೆ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ, ನಾವು ತಾವರೆ ಎಲೆಯಮೇಲಿನ ನೀರಿನ ಹನಿಯಂತೆ ಜೀವನ ಮಾಡಬೇಕು. ಇದ್ದೂ ಇಲ್ಲದಹಾಗೆ ಇರಬೇಕು. ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರೂ ಅದಕ್ಕೆ ಅಂಟದ ಹಾಗೆ, ಆಳಕ್ಕೆ ಹೋಗದೆ ಇರಬೇಕು. ಆಳವಾಗಿ ಮತ್ತು ಗಾಢವಾಗಿ ಈ ಬದುಕಿಗೆ, ಸಂಸಾರಕ್ಕೆ, ಮತ್ತು ಈ ಜಗತ್ತಿಗೆ ಅಂಟದೆ ಇದ್ದರೆ ಮನಸ್ಸಿಗೆ ನೆಮ್ಮದಿ ಮತ್ತು ನಿರಾಳ. ಆದರೆ ಬಾಳ ಬೇಕು, ಸಕ್ರಿಯವಾಗಿ ಬಾಳಬೇಕು. ಈ ಬಾಳಿನ ಸತ್ಯವನ್ನಿರುತು ಬಾಳಬೇಕು. ಇದರ ನಶ್ವರತೆಯನ್ನು ಅರಿತು ಬಾಳಬೇಕು.
ಆದರೆ ಅಂತಹ ಭಾವವನ್ನು ತಳೆಯುವುದು ಮತ್ತು ಹಾಗೆ ಜೀವಿಸುವುದು, ಈ ಪ್ರಾಕೃತ ದೇಹವನ್ನು ಹೊತ್ತ ನಮ್ಮಂತಾ ಹುಲುಮಾನವರಿಗೆ ಕಷ್ಟಸಾಧ್ಯ. ಆದರೆ ಅಸಾಧ್ಯವಲ್ಲ. ಪ್ರಯತ್ನ ಪಡಬೇಕು ಅಷ್ಟೇ.
ರಸಧಾರೆ - 185
ಲೋಕ ಸಹವಾಸ
ಮಧುರಭಾವ ಪ್ರೇಮ ದಯೆಯಲ್ಲ ಬರಿದೆ?
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ
ಬದುಕಿನಲಿ ತಿರುಳೇನು – ಮಂಕುತಿಮ್ಮ.
ಹೃದಯಜೀವನಕಿನಿತು = ಹೃದಯ+ಜೀವನಕೆ+ಇನಿತು// ವಿಧಿಯಂಗಡಿಯೊಳದನು = ವಿಧಿಯ + ಅಂಗಡಿಯೋಳು + ಅದನು ಇನಿತು = ಸ್ವಲ್ಪವೂ// ತಿರುಳೇನು = ಸ್ವಾರಸ್ಯವೇನು
ಹೃದಯವಂತಿಕೆಯಿಂದ ನಡೆಸುವ ಜೀವನಕೆ ಬೆಲೆಯೇ ಇಲ್ಲವೇ? ಅದಕ್ಕೇನೂ ಪ್ರಯೋಜನವಿಲ್ಲವೆ? ಪರಸ್ಪರ ಸವಿಯಾದ ಭಾವನೆಗಳು,ಪ್ರಮಾನುರಾಗಗಳು ದಯೆ ದಾಕ್ಷಿಣ್ಯಗಳು ಕೇವಲ ಪೊಳ್ಳೆ? ವಿಧಿಯ ಆಟದಲ್ಲಿ ಇದನ್ನೆಲ್ಲಾ ಕೆಲಸಕ್ಕೆ ಬಾರದ್ದು ಎಂದು ತಿರಸ್ಕರಿಸುವಹಾಗಿದ್ದರೆ, ಈ ಜೀವನದ ಸ್ವಾರಸ್ಯವೇನು ಎಂದು ಒಂದು ಪ್ರಶ್ನಾ ರೂಪದ ಪ್ರಸ್ತಾಪವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಮಾಡುತ್ತಾರೆ.
ಕೊಂಚಮಟ್ಟಿಗೆ ಇನ್ನೂ ನಮ್ಮ ಭಾರತೀಯ ಅಸ್ಮಿತೆಯ ಬೇರುಗಳು ಭದ್ರವಾಗಿದ್ದ ಕಾಲಕ್ಕೇ, ಇಂತಹ ಒಂದು ಪ್ರಶ್ನೆಯನ್ನು ಕೇಳುವ ಗುಂಡಪ್ಪನವರು ಇಂದು ಏನು ಹೇಳುತ್ತಿದ್ದರೋ? ಆ ಭಗವಂತನೇ ಬಲ್ಲ!!! ಇರಲಿ, ನಾವು ಇಂದಿನ ಪರಿಸ್ಥ್ತಿಯನ್ನು ನೋಡುವ . ಲಕ್ಷಕ್ಕೊಬ್ಬರಂತೆ ಯಾರಾದರೂ ಹೃದಯವಂತರು, ಸ್ವಾರ್ಥರಹಿತರು, ಮಧುರವಾದ ಪ್ರೇಮಾನುರಾಗಗಳ ಶುದ್ಧ ಭಾವವನ್ನು ಇಟ್ಟುಕೊಂಡಿರುವವರು ನಮಗೆ ಈ ಲೋಕದಲ್ಲಿ ಸಿಗಬಹುದು. ಆದರೆ ಒಟ್ಟಾರೆ ಸಮಾಜದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅವರು ಉಲ್ಲೇಖ ಮಾಡುವ ಆ ಹೃದಯವಂತಿಕೆ, ಪ್ರೇಮ,ದಯೆ, ಮಧುರಭಾವದ ಸ್ಥಳವನ್ನು ಸ್ವಾರ್ಥ, ಅಸೂಯೆ , ನಿರ್ದಯೆ, ಕಾಠಿಣ್ಯ, ನಿರ್ಲಕ್ಷ್ಯ ಮುಂತಾದವು ಆಕ್ರಮಿಸಿಕೊಂಡುಬಿಟ್ಟಿದೆ. ಕಾರಣವನ್ನು ಯಾವುದೋ ಒಂದು ನಿರ್ಧಿಷ್ಟ ವ್ಯಕ್ತಿಗೋ, ಘಟನೆಗೋ ಆರೋಪಿಸಲಾಗುವುದಿಲ್ಲ. ಕಾಲಕ್ರಮೇಣ ಎಲ್ಲವೂ ಬದಲಾಗಿದೆ. ಜೀವನ ಶೈಲಿ ಬದಲಾಗಿದೆ.
ನಮ್ಮ ದೇಶದಮೇಲೆ ಪರಕೀಯರ ಆಕ್ರಮಣದ ಕಾರಣ ಕಾಲ ಕ್ರಮಣದಲ್ಲಿ ಹತ್ತು ಹಲವಾರು ಪ್ರಭಾವಗಳಿಂದ ಸಮಾಜದಲ್ಲಿನ ವ್ಯಕ್ತಿಗಳ ಪರಸ್ಪರ ಸಂಬಂಧಗಳಲ್ಲಿ ಬದಲಾವಣೆಗಳು ಬಂದಿವೆ. ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ, ಸಂಬಂಧಗಳೆಲ್ಲ ವ್ಯವಹಾರಗಳಾಗಿವೆ. ಪ್ರಾಪಂಚಿಕ ಭೋಗಲೋಲುಪತೆಯೇ ಹೆಚ್ಚಾಗಿ, ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಪಡೆಯುವ, ಅವುಗಳ ಮೇಲೆ ಸ್ವಾಮಿತ್ವವನ್ನು ಸ್ಥಾಪಿಸುವ ಮತ್ತು ನಿರಂತರವಾಗಿ ತಮ್ಮದಾಗಿಸಿಕೊಂಡು ಅನುಭವಿಸುವ ಭಾವಗಳಿಂದ ನಮ್ಮ ಸಮಾಜ ಮತ್ತು ಸಂಸ್ಕಾರಗಳ ವಿಧ್ಯಮಾನಗಳು ತುಂಬಿಹೋದವು. ನಮ್ಮ ಭಾರತೀಯ ಸಮಾಜದ ಮೂಲ ತತ್ವಗಳಾದ, ಸತ್ಯ ಧರ್ಮ ನ್ಯಾಯ ನೀತಿಗಳು ನೇಪತ್ಯಕ್ಕೆ ಸರಿಯತೊಡಗಿದವು. ಇಂದು ಬಹಳ ಸತ್ಯವಂತ, ಬಹಳ ಧರ್ಮಿಷ್ಠ ನಿಗೆ ” ಹುಚ್ಚ” ನೆಂಬ ಬಿರುದನ್ನು ಕೊಡಲಾಗುತ್ತೆ. ” ಋತಂಚ ಸ್ವಾಧ್ಯಾಯ ಪ್ರವಚನೇಚ, ಸತ್ಯಂಚ ಸ್ವಾಧ್ಯಾಯ ಪ್ರವಚನೇಚ ” ಎನ್ನುವ ಉಪನಿಷತ್ತಿನ ವಾಕ್ಕುಗಳಿಗೆ ಅರ್ಥವೇ ಇಲ್ಲದಾಗಿದೆ. ಜೀವನದಲ್ಲಿ ಸ್ವಾರಸ್ಯವಿಲ್ಲದಾಗಿದೆ.
ಇಂದು ತಂದೆ ತಾಯಿ ಮತ್ತು ಮಕ್ಕಳ ನಡುವೆಯಾಗಲಿ, ಅಣ್ಣತಮ್ಮ, ಅಕ್ಕಾ ತಂಗಿಯರ ನಡುವೆಯಾಗಲೀ ಬಂಧುಬಳಗದೊಡನೆಯಾಗಲೀ, ಸ್ನೇಹಿತರೊಡನೆಯಾಗಲೀ ಪರಸ್ಪರ ಬಾಂಧವ್ಯವೇ ಇಲ್ಲ. ಎಲ್ಲ ವ್ಯವಹಾರವಾಗಿಬಿಟ್ಟಿದೆ. ಪ್ರೀತಿ – ಪ್ರೇಮಗಳು, ಸ್ನೇಹ – ಸೌಹಾರ್ದತೆಗಳು, ಮಮತೆ – ಅನುರಾಗಗಳು ಕೇವಲ ಬೂಟಾಟಿಕೆಯಾಗಿಬಿಟ್ಟಿದೆ. ಇದರ ವಿಷಯ ಮಾತನಾಡಿದರೆ, ” ಏನು ಸ್ವಾಮಿ ಮಾಡುವುದು, ಕಲಿಕಾಲ” ಎನ್ನುವ ಮಾತು ನಮಗೆ ಕೇಳಬರುತ್ತದೆ. ಬಹುಶಃ ಆ ಪರಮಾತ್ಮನಿಗೆ ಜನರನ್ನು ಬದಲಾಯಿಸುವ ಅಥವಾ ಮಾರ್ಪಾಡು ಮಾಡುವ ತಂತ್ರವಿರಬಹುದು. ವಿಧಿಯೇ ಈ ರೀತಿಯಿರಬಹುದು. ಆದರೂ ಇಂದಿಗೂ ಸತ್ಯ, ಧರ್ಮ, ನ್ಯಾಯ, ನೀತಿ, ಪ್ರೇಮ, ಅನುರಾಗ, ಮುಂತಾದ ಸದ್ಭಾವಗಳಿಗೆ ಬೆಲೆ ಇದೆ ಎಂದು ಅರಿತು ಅವುಗಳನ್ನು ಉಳಿಸಿಕೊಂಡು ಬೆಳೆಸಿಕೊಂಡರೆ, ಕಾಲಕ್ರಮೇಣ ಎಲ್ಲ ಬದಲಾಗಿ ಮತ್ತೆ ಈ ಜಗತ್ತು ಸುಂದರವಾಗಬಹುದು. ಆದರೆ ಇಡೀ ಸಮಾಜವೇ ಬದಲಾಗಬೇಕಾದರೆ ಒಂದು ದೊಡ್ಡ ಶತ್ರ ಚಿಕಿತ್ಸೆಯೇ ಬೇಕಾಗಿದೆ ಎಂದು ಅನ್ನಿಸುತ್ತದೆ. ಅದನ್ನು ಮಾಡುವವನೇ ಆ ಪರಮಾತ್ಮ. ಅವನಕೃಪೆಗಾಗಿ ಕಾಯುತ್ತಾ ಇರಬೇಕು.
ಹಾಗಾಗಿ ನಾವು ” ಸರ್ವೇ ಜನಾಃ ಸುಜನಾ ಭವಂತು ಸರ್ವೇ ಸುಜನಾಃ ಸುಖಿನಃ ಸಂತು” ಎಂದು ಹಾರೈಸುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.
ರಸಧಾರೆ - 186
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ
ಮಡುವೊಳೋಲಾಡುತ್ತೆ – ಮಂಕುತಿಮ್ಮ.
ಬದುಕೆಲ್ಲವೇಕಾಕಿಜೀವ = ಬದುಕು+ ಎಲ್ಲ+ ಏಕಾಕಿ + ಜೀವ // ತನ್ನೊಡನಾಡಿ = ತನ್ನ + ಒಡನಾಡಿ// ಪಿಡಿಯಲಲೆದಾಡುಗುಂ = ಪಿಡಿಯಲು+ಅಲೆದಾಡುಗುಂ // ಮಡುವೊಳೋಲಾಡುತ್ತೆ = ಮಡುವೊಳು+ಒಲಾಡುತ್ತೆ
ಮಡುವೊಳು = ಸುಳಿಯೊಳು.
ಒಂದು ಜೀವ ಬದುಕಲ್ಲಿ ಏಕಾಕಿಯಾಗಿದ್ದು ಒಡನಾಡಿ ಜೀವಗಳ ಹುಡುಕಿ ಹಿಡಿದು, ಪ್ರೀತಿ, ಕರ್ಮಶೇಷ, ಮತ್ತು ಅಪ್ಯಾಯತೆಗಳ ಬಂಧನಗಳ ಸುಳಿಯಲ್ಲಿ ಸಿಕ್ಕು ಜೀವಿಸುತ್ತದೆ ಎಂಬುದೇ ಈ ಕಗ್ಗದ ಹೂರಣ.
ಪ್ರತಿ ಜೀವಿಯೂ ಮೂಲರೂಪದಲ್ಲಿ ಏಕಾಕಿ. ತಾಯಿಯ ಗರ್ಭದಲ್ಲಿ ಸೃಷ್ಟಿಯಾದ ಭ್ರೂಣದೊಳಗೆ ಬಂದು ಸೇರಿಕೊಂಡು ಈ ಜಗತ್ತಿಗೆ ಒಂದು ರೂಪದೊಂದಿಗೆ ಬಂದು ಎರಗುತ್ತದೆ. ಎರಗಿದಾಕ್ಷಣ, ತನ್ನ ಅಸ್ತಿತ್ವವನ್ನು ಪಡೆದು, ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ, ಎನ್ನುವ ಬಾಂಧವ್ಯದಲ್ಲಿ ಮೊಟ್ಟಮೊದಲಿಗೆ ತನ್ನ ಸಂಬಂಧವನ್ನು ಈ ಜಗತ್ತಿನಲ್ಲಿ ಬೆಳೆಸಿಕೊಳ್ಳುತ್ತದೆ. ಬೆಳೆದು ದೊಡ್ಡದಾಗುತ್ತಾ, ಸುತ್ತಲಿನ ಪರಿಸರದೊಂದಿಗೆ, ಗಿಡ, ಮರ, ಬಳ್ಳಿ, ಪಕ್ಷಿ, ಕೀಟ ಕ್ರಿಮಿ, ನದಿ, ಬೆಟ್ಟ, ಗುಡ್ಡ, ಹೀಗೆ ತನ್ನ ಸಂಪರ್ಕ-ಸಂಬಂಧದ ಜಾಲವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ನೆರೆ ಹೊರೆ, ಸ್ನೇಹಿತರು, ಅನ್ಯ ಪ್ರಾಣಿಗಳು, ಪರಸರದಲ್ಲಿ ಇರುವ ಎಲ್ಲದರೊಟ್ಟಿಗೆ ಒಂದು ಭಾವನಾತ್ಮಕವಾದ ಸಂಬಂಧವನ್ನು ಕಟ್ಟಿಕೊಳ್ಳುತ್ತದೆ.
ಒಂದೇ ಜೀವಿಯಾದರೂ, ಹಲವರೊಡನೆ ಮತ್ತು ಹಲವೊಡನೆ ತಾನು ಕಟ್ಟಿಕೊಳ್ಳುವ ಸಂಬಂಧದ ರೂಪಗಳು ಅನೇಕ. ಪ್ರೀತಿಯ, ಪ್ರೇಮದ, ಕೋಪದ, ದ್ವೇಷದ, ಅಹಂಕಾರದ, ಅಸೂಯೆಯ, ಹೀಗೆ ಹಲವಾರು ಭಾವನೆಗಳ ತಂತುವಿನೊಂದಿಗೆ ತನ್ನ ಸಂಪರ್ಕವನ್ನು ಕಟ್ಟಿಕೊಳ್ಳುತ್ತದೆ. ಅಷ್ಟೇ ಅಲ್ಲ, ಆ ಜೀವಿಯ ಸಂಬಂಧದ ರೂಪ, ಕಾಲಕಾಲಕ್ಕೆ, ಕಾಲಧರ್ಮಕ್ಕನುಗುಣವಾಗಿ, ವಯೋಧರ್ಮಕ್ಕನುಗುಣವಾಗಿ ಮತ್ತು ಬೇರೆ ಬೇರೆ ಕಾರಣಗಳಿಗೆ, ಬೇರೆ ಬೇರೆ ರೂಪಗಳನ್ನು ತಾಳುತ್ತದೆ. ಇದೊಂದು ಸುಳಿ. ನದಿಯ ಮಡುವಿನಲ್ಲಿ ಹೇಗೆ ನೀರು ಸುತ್ತುತ್ತಾ ಇರುತ್ತದೋ ಹಾಗೆಯೇ ಜೀವಿಯೂ ಈ ಭೂಮಿಯಲ್ಲಿ ಇರುವ ತನಕ, ಎಲ್ಲರೊಂದಿಗೆ ಮತ್ತು ಎಲ್ಲದರೊಂದಿಗೆ ಚಿತ್ರ ವಿಚಿತ್ರವಾದ ಸಂಬಂಧಗಳನ್ನು ಪಡೆದುಕೊಂಡು ಸುತ್ತುತ್ತಾ ಇರುತ್ತದೆ. ಹಾಗೆ ಸುತ್ತುವುದೇ ಜೀವನ. ಇದೇ ಬದುಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಈ ಸಂಬಂಧಗಳ ಮಡುವಿನ ಸುತ್ತಾಟ ಜೀವಿಗೆ ನಿರಂತರವಾಗಿ ನಡೆದೇ ಇರುತ್ತದೆ. ಜನ್ಮಜನ್ಮಾಂತರಗಳಲ್ಲೂ ಅವ್ಯಾಹತವಾಗಿ ಸುತ್ತುತ್ತಲೇ ಇರುತ್ತದೆ. ಈ ಬಂಧನಗಳಿಂದ ಮುಕ್ತರಾಗುವ ಪ್ರಯತ್ನವೇ ಅಧ್ಯಾತ್ಮ. ಅಂದರೆ ವಾಸನಾ ರಹಿತವಾಗಿ ಮೊಟ್ಟಮೊದಲಿಗೆ ಈ ಜಗತ್ತಿನ ಸಂಪರ್ಕಕ್ಕೆ ಬಂದ ಜೀವಿ ಮತ್ತೆ ವಾಸನಾ ರಹಿತವಾಗಿ, ಕರ್ಮ ಶೇಷ ರಹಿತವಾಗಿ, ಸಂಬಂಧಗಳ ಬಂಧನದಿಂದ,ಬಂಧಿಸಿರುವ ಸಂಕೋಲೆಯ ಪ್ರತೀ ಕೊಂಡಿಯನ್ನು ಕಳಚಿಕೊಂಡು ಮತ್ತೆ ತನ್ನ ಸ್ವಸ್ಥಾನ ಸೇರುವುದೇ ಅಧ್ಯಾತ್ಮದ ಗುರಿ. ಆಗ ಇಲ್ಲಿ ಇದ್ದರೂ ಇಲ್ಲದ ಹಾಗೆ, ಅಂಟದ ಹಾಗೆ ಇರಲು ಆದರೆ, ಅದೇ ಅಧ್ಯಾತ್ಮ ಸಾಧನೆಯ ಫಲ. ಮಾತುಗಳಲ್ಲಿ ವರ್ಣಿಸಲು, ಪದಗಳಲ್ಲಿ ಬರೆಯಲು ಸುಲಭ ಆದರೆ ಆ ಸ್ಥಿತಿಯನ್ನು ತಲುಪುವುದಕ್ಕೆ ದೀರ್ಘಕಾಲದ ಸಾಧನೆ ಬೇಕು. ಅಸಾಧ್ಯವಲ್ಲ ಆದರೆ ಕಷ್ಟ ಸಾಧ್ಯ.
ರಸಧಾರೆ - 187
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ
ಬಿಡಿಜೀವ ಸಂಗಾತಿಜೀವಗಳನರಸಿ
ಪಡೆದಂದು ಪೂರ್ಣವದು – ಮಂಕುತಿಮ್ಮ
“ನುಡಿಕಟ್ಟು”ಎನ್ನುವುದು ಒಂದು ಆಟ. ಸೂಕ್ತ ಅಕ್ಷರಗಳ ಜೋಡಣೆಯನ್ನು ಮಾಡುತ್ತಾ, ಪದಗಳ ವಿನ್ಯಾಸವನ್ನು ಮಾಡುವುದು. ಅದನ್ನಾಡುವುದಕ್ಕೆ ಉಪಯೋಗಿಸುವ ಅಕ್ಷರಗಳನ್ನು ಬರೆದ ಚೀಟಿಗಳನ್ನು ನಾವು ಆಯುವಂತೆ, ಜೀವನದಲ್ಲೂ ನಮಗೆ ಬೇಕಾದ ಸೂಕ್ತ ಸಂಗಾತಿ ಜೀವಗಳನ್ನಾರಿಸಿಕೊಂಡರೆ ಅಂದು ನಮ್ಮ ಜೀವನದ ವಿನ್ಯಾಸದ ಜೋಡಣೆ ಪೂರ್ಣವಾಗುವುದೆಂದು ಅಪ್ಪಣೆ ಕೊಡಿಸಿದ್ದಾರೆ ಮಾನ್ಯ ಗುಂಡಪ್ಪನವರು. ಈ ಕಗ್ಗದಲ್ಲಿ.
ಆ ನುಡಿಗಟ್ಟಿನಾಟದಲಿ ಅಕ್ಷರಗಳು ಸರಿಯಾಗಿ ಸಿಗದೇ ಹೋದರೆ ಪದವೂ ಆಗುವುದಿಲ್ಲ ವಿನ್ಯಾಸವೂ ಸರಿಯಾಗುವುದಿಲ್ಲ. ಸರಿಯಾದ ಅಕ್ಷರಗಳು ಸಿಕ್ಕರೆ ಪದ ಸರಿಯಾಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲೂ ನಾವು ನಮಗೆ ಸರಿಹೊಂದುವಂತ ಜೀವಿಗಳನ್ನು ಹುಡುಕುತ್ತೇವೆ ಮತ್ತು ನಿರಂತರವಾಗಿ ಹುಡುಕುತ್ತಲೇ ಇರುತ್ತೇವೆ. ಸಿಕ್ಕರೆ ಸಂತೋಷ, ಸಿಗದಿದ್ದರೆ ಮತ್ತೆ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅರಿಯದೆ ಕೆಲವರನ್ನು ಹುಡುಕಿ ಸೇರುತ್ತೇವೆ. ಸ್ವಲ್ಪದಿನವಾದ ನಂತರ ಬೇಡವೆನಿಸುತ್ತದೆ. ಆಗ ಆ “ಪದ” ಗಳಿಂದ ಎಲ್ಲ ಅಕ್ಷರಗಳನ್ನು ತೆಗೆದುಕೊಂಡು ಮತ್ತೆ ಹೊಸ ಅಕ್ಷರಗಳನ್ನು ಹುಡುಕಿ ಮತ್ತೆ ಹೊಸ ಪದ ಜೋಡಣೆಯ ಕೆಲಸ.
ಆದರೆ ನಾವು ಹುಡುಕುವ ಮತ್ತು ಆಯ್ದುಕೊಳ್ಳುವ ಅಕ್ಷರಗಳೇ ಸರಿಯಾಗಿಲ್ಲದಿದ್ದರೆ, ಪದ ದೋಷಪೂರಿತವಾಗಿರುತ್ತದೆ. ಹಾಗೆಯೇ ನಮ್ಮ ಆಯ್ಕೆ ಸರಿಯಿಲ್ಲದಿದ್ದರೆ ಅನ್ಯರೊಡನೆ ನಮ್ಮ ಸಂಬಂಧಗಲ್ಲೂ ಸರಿಯಾಗಿರುವುದಿಲ್ಲ. ಆಗ ನಾವು ಸಾಮಾನ್ಯವಾಗಿ ನಮ್ಮ ಆಯ್ಕೆಯನ್ನು ದೂರದೆ ಅಕ್ಷರವನ್ನು ದೂರುತ್ತೇವೆ, ಪದಗಳನ್ನು ದೂರುತ್ತೇವೆ, ಅಂದರೆ ನಾವು ಮಾಡಿ ಆಯ್ಕೆ ಸರಿಯಾಗಲಿಲ್ಲವೆಂದುಕೊಳ್ಳದೆ ನಾವು ಆಯ್ಕೆ ಮಾಡಿದ ವಸ್ತುವನ್ನೋ ವಿಷಯವನ್ನೂ ಅಥವಾ ವ್ಯಕ್ತಿಯನ್ನೂ ದೂರುತ್ತೇವೆ. ಆದರೆ ಜೀವನದಲ್ಲಿ ನಮಗೆ ಸಂಪೂರ್ಣವಾಗಿ ಸರಿಹೊಂದುವಂಥಾ ವ್ಯಕ್ತಿಗಳು ಸಿಗಲು ಸಾಧ್ಯವೇ? ಬಹಳ ದುರ್ಲಭ. ಏಕೆಂದರೆ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ವ್ಯಕ್ತಿತ್ವ, ಭಾವನೆಗಳನ್ನು ಹೊಟ್ಟೆ ಹುಟ್ಟಿರುತ್ತಾರೆ. ಅದು ಅವರ ಸ್ವಾಭಾವವೆನ್ನಬಹುದು. ಸ್ವಭಾವ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಹಾಗಾಗಿ ಒಬ್ಬರಿಗೊಬ್ಬರು ಸಂಪೂರ್ಣ ಹೊಂದಾಣಿಕೆ ಸಾಧ್ಯವೇ ಇಲ್ಲ !!!!!
” ಇಬ್ಬರು ವ್ಯಕ್ತಿಗಳಿದ್ದರೆ – ಮೂರು ಅಭಿಪ್ರಾಯಗಳಿರುತ್ತವೆ ” ಎನ್ನುವ ಒಂದು ಮಾತಿದೆ. ಹಾಗೆ ನಮಗೆ ನಮ್ಮ ಭಾವನೆಗಳಿಗೆ ಸಂಪೂರ್ಣ ಎಕೀಭಾವ ತೋರುವ ವ್ಯಕ್ತಿ ಸಿಕ್ಕರೆ ಮತ್ತು ಅಂಥವರ ಸಾಂಗತ್ಯ ನಮಗೆ ಜೀವನ ಪೂರ್ತಿ ಲಭ್ಯವಾದರೆ ಅದು ನಮ್ಮ ಸೌಭಾಗ್ಯವೇ ಸರಿ ಆದರೆ ವಾಚಕರೆ ಅಂತಹ ಒಂದು ಆದರ್ಶ (Ideal ) ಸ್ಥತಿ ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಮತ್ತೊಬ್ಬರೊಂದಿಗೆ ಬಹಳಷ್ಟು ಹೊಂದಿಕೊಂಡು ತಮ್ಮ ಅವಶ್ಯಕತೆಗಳನ್ನು ಬದಿಗೊತ್ತಿ ತಮ್ಮ ಭಾವನೆಗಳಿಗೆ ಅತೀ ಮಹತ್ವಕೊಡದೆ, ಅನ್ಯರ ಕೊರತೆಗಳನ್ನು ಕಡೆಗಣಿಸುತ್ತಾ ಹೊಂದಿಕೊಂಡು ಹೋದರೆ ಒಂದು ಸಾಮರಸ್ಯ ಜೀವನ ಮಾಡಬಹುದು. ಇಲ್ಲದಿದ್ದರೆ ಪ್ರತಿ ನಿತ್ಯ ಸಮರಸದ ಕೊರತೆಯಿಂದ ಕೇವಲ ” ಸಮರವೇ” ಆಗುತ್ತದೆ.
ರಸಧಾರೆ - 188
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು
ವಶನಾಗದಿಹ ನರನು? – ಮಂಕುತಿಮ್ಮ.
ಪ್ರಕೃತಿಗದಾರು + ಪ್ರಕೃತಿಗೆ+ ಅದಾರು // ವಶನಾಗದಿಹ = ವಶನು + ಆಗದಿಹ ರಸನಾ= ನಾಲಿಗೆ
ರುಚಿರುಚಿಯಾದ ರಸಭರಿತವಾದ ಅಡುಗೆಗಳನ್ನು ಮಾಡಲು ಕಲಿಸಿ, ಇವುಗಳನ್ನು ಸವಿಯುವ ತವಕದಲಿ ನಾಲಿಗೆಯಲಿ ನೀರಿಳಿಸಿ,ಹಲವಾರು ರೀತಿಯ ಪಕ್ವಾನ್ನಗಳನ್ನು ಜೀರ್ಣಿಸಿಕೊಂಡು, ಜಿಹ್ವಾ ಚಾಪಲ್ಯವನ್ನು ತೀರಿಸಿಕೊಳ್ಳಲು ಅನುವಾಗುವಂತೆ ಮತ್ತೆ ಮತ್ತೆ ಆಸೆಪದುವಂತೆ, ಪ್ರಕೃತಿಯೇ ಹತ್ತಾರು ಕಡೆಗಳಿಂದ ನಮ್ಮನ್ನು ಸೆಳೆಯುತ್ತಿರುವಾಗ ಇದಕ್ಕೆ ವಶನಾಗದವನು ಯಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.
ಆಹಾರವನ್ನು ತಿನ್ನುವುದು ಸ್ವಾಭಾವಿಕ. ಅದನ್ನು ರುಚಿರುಚಿಯಾಗಿ ಮಾಡಿ ತಿನ್ನುವುದು ರಸಿಕತೆ. ಹಾಗೆ ವಿಧ ವಿಧವಾದ ರುಚಿ ರುಚಿಯಾದ ಆಹಾರವನ್ನು ಮಾಡಲು ಬೇಕಾದ ಆಸೆ, ಆಸ್ಥೆ, ಅದಕ್ಕೆ ಬೇಕಾದ ಪರಿಕರಗಳು, ಆ ಪರಿಕರಗಳನ್ನು ಪ್ರಯೋಗಿಸಿ ಸೂಕ್ತವಾಗಿ ಉಪಯೋಗಿಸುವ ಕಲೆ ಎಲ್ಲವೂ ನಮಗೆ ಪ್ರಕೃತಿದತ್ತವಾಗಿ ಬಂದಿದೆ. ಹಾಗೆ ಬಂದ ಕಲೆಯನ್ನು ನಾವು ಮನುಷ್ಯರು ಪ್ರತಿ ನಿತ್ಯ ನೂತನ ವಿನೂತನವಾದ ಪ್ರಯೋಗಗಳನ್ನು ಮಾಡಿ ಹೊಸ ಹೊಸ ರುಚಿಕರವಾದ ಆಹಾರಗಳ ಆವಿಷ್ಕರಿಸುವ ಕೆಲಸ ಜಗತ್ತಿನಾದ್ಯಂತ ನಿರಂತರವಾಗಿ ಮಾಡುತ್ತಲೇ ಇದ್ದೇವೆ. ಇವುಗಳನೆಲ್ಲ ಅನುಭವಿಸದೆ ಇವುಗಳಿಂದ ಆಕರ್ಷಿತರಾಗೆದೆ ಇರುವವರು ಈ ಜಗತ್ತಿನಲ್ಲಿ ವಿರಳ. ಇಂದು ಜಗತ್ತಿನಲ್ಲಿ ಪಾಕಶಾಸ್ತ್ರವೇ ಒಂದು ಪ್ರಮುಖ ವ್ಯಾಪಾರೀ ಉಧ್ಯಮವಾಗಿದೆ.
ಒಂದು ಬಾರಿ ನಾವು ನಮಗೆ ಇಂದು ಇರುವ ಅಡುಗೆಯ ವಿಧಾನಗಳು ಮತ್ತು ತಯಾರಾಗುವ ವಿಧ ವಿಧವಾದ ಪಕ್ವಾನಗಳ ಯಾದಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅಷ್ಟು ದೊಡ್ಡದಾಗುತ್ತದೆ ಆ ಪಟ್ಟಿ. ಯಾರು ಯಾರಿಗೆ ಏನೇನು ಬೇಕೋ ಅದೆಲ್ಲವೂ ಇದೆ. ಪ್ರತಿಯೊಬ್ಬರನ್ನೂ ತೃಪ್ತಿಪಡಿಸುವ ಸಲಕರಣೆಗಳನ್ನು ಆ ಪರಮಾತ್ಮ ಪ್ರಕೃತಿಯ ಮೂಲಕ ನಮಗೆ ಒದಗಿಸಿದ್ದಾನೆ. ಇರಲಿ ಇದರ ಬಗ್ಗೆ ಬಹಳ ಬರೆಯಬಹುದು. ಅದೊಂದು ಸಂಶೋಧನಾ ಗ್ರಂಥವೇ ಆಗುವುದು.
ಆದರೆ ನಾವುಣ್ಣುವುದೆಲ್ಲವನ್ನೂ ನಾಲಿಗೆ ರುಚಿ ನೋಡಿ ಚೆನ್ನವೆಂದೋ ಚೆನ್ನಾಗಿಲ್ಲವೆಂದೋ ಒಂದು ನಿರಧಾರಕ್ಕೆ ಬರುತ್ತದೆ. ಆದರೆ ನಾಲಿಗೆ ಇರುವುದೇ ಮೂರು ಅಂಗುಲ. ಆ ಮೂರು ಅಂಗುಲದಲ್ಲಿ ಮೂರುಭಾಗಗಳು. ಮೊದಲನೆಯದು ಖಾರ, ನಂತರ, ಸಿಹಿ, ಕಡೆಗೆ ಕಹಿ. ಹೀಗೆ ನಮ್ಮ ನಾಲಿಗೆಯ ಮೇಲಿರುವ ರುಚಿ ಗುಳ್ಳೆಗಳು ಬೇರೆ ಬೇರೆ ರುಚಿಗಳನ್ನು ಅನುಭವಿಸಿ ತಿಳಿಸುತ್ತದೆ. ನಮಗೆ, ಯಾವುದೇ ಆಹಾರ ನಮ್ಮ ನಾಲಿಗೆಗೆ ಸಾಕುವ ತನಕ ಅದರ ರುಚಿ ಗೊತ್ತಿರುವುದಿಲ್ಲ. ಈ ನಾಲಿಗೆಯನ್ನು, ಅಂದರೆ ನಾಲಿಗೆಯ ಮೂರೂ ಭಾಗಗಳನ್ನು ದಾಟಿ ಗಂಟಲ ಬಳಿ ಬರುವಾಗ ನಾವು ತಿಂದ ಆಹಾರ ತನ್ನ ರೂಪ, ಸ್ವರೂಪ, ಹೆಸರುಗಳನ್ನೂ ಕಳೆದುಕೊಂಡು ನಮ್ಮ ಹೊಟ್ಟೆಯೊಳಕ್ಕೆ ಹೋಗಿಬಿಡುತ್ತದೆ, ಕಳೆದು ಹೋಗಿಬಿಡುತ್ತದೆ. ಅಂದರೆ ಇಷ್ಟೊಂದು ಕಷ್ಟಪಟ್ಟು ತಯಾರಿಸಿದ ಆ ಆಹಾರದ ಪ್ರಯಾಣದ ಕಾಲ ಒಂದು ನಿಮಿಷಕೂಡ ಇಲ್ಲ.
ಆದರೂ ಪ್ರತಿ ನಿತ್ಯ ನಮಗೆ ಈ ಆಹಾರದಲ್ಲಿ ಮತ್ತು ಅದರ ರುಚಿಯಲ್ಲಿ ಇಷ್ಟೊಂದು ಆಸೆ ಅಕ್ಕರೆಯನ್ನು ಪ್ರಕೃತಿ ನಮ್ಮಲ್ಲಿ ಉಂಟುಮಾಡುತ್ತದೆ ಮತ್ತು ನಮ್ಮನ್ನು ಈ ಆಕರ್ಷಣೆಗೆ ಒಳಪಡಿಸುತ್ತದೆ.ಇದನ್ನು ಪಡೆಯಲು ನಮ್ಮನ್ನು ಪರದಾಡಿಸುತ್ತದೆ, ಗೋಳಾಡಿಸುತ್ತದೆ,ಬೆವರಿಳಿಸುತ್ತದೆ. ಆದರೂ ಇಡೀ ಜಗತ್ತಿನಲ್ಲಿ ಈ ಆಹಾರದ, ಪಕ್ವಾನಗಳ, ರುಚಿಯ ಮತ್ತು ಆಹಾರದ ಸುವಾಸನೆಯಿಂದ ಆಕರ್ಷಿತರಾಗದೆ ಇರುವವರು ಯಾರೂ ಇಲ್ಲ
ರಸಧಾರೆ - 189
ಪರಿಪರಿಯ ಫಲಮಧುರಗಳ ರಸನೆಗುಣಿಪ
ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ
ಗುರು ಸೃಷ್ಟಿ ರಸಿಕತೆಗೆ – ಮಂಕುತಿಮ್ಮ.
ರಸನೆಗುಣಿಪ = ರಸನೆಗೆ+ ಉನಿಪ // ರಸನೆಗುಣಿಪ = ರಸನೆಗೆ+ ಉಣಿಪ// ಕಂಠರವಗಳ = ಕಂಠ + ರವಗಳ //
ರಸನೆ= ನಾಲಿಗೆ// ಉಣಿಪ = ಉಣಬಡಿಸುವ// ಕಂಠರವ = ಕಿವಿಯಾಲಿಸುವ ನಾದ//
ಪರಿ ಪರಿಯಾದ ರೂಪ ಕಾಂತಿಗಳು, ಹೂಗಳು ಹಣ್ಣುಗಳು ತಿಂಡಿ ತಿನಿಸುಗಳು, ಪರಿಪರಿಯಾದ ಮಧುರ ನಾದಗಳು ಇವುಗಳನ್ನೆಲ್ಲ ಸೃಷ್ಟಿಸಿ ನಮ್ಮ ಮನಸ್ಸಿಗೆ ಆನಂದವೀಯುವ ಈ ಪ್ರಕೃತಿಯೇ, ಸೃಷ್ಟಿಯೇ ನಮ್ಮ ರಸಿಕತೆಗೆ ಗುರು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಯಾವುದಾದರೂ ಒಂದು ವಸ್ತುವಿನಲ್ಲಿರುವ ಗುಣ, ರುಚಿ, ರೂಪ, ನಾದ ಮುಂತಾದವುಗಳನ್ನು ನೋಡಿ ಸವಿದು ಆಸ್ವಾದಿಸಿ ಮೆಚ್ಚುವುದು, ರಸಿಕತೆ. ಈ ರಸಿಕತೆ, ಸರ್ವೇ ಸಾಮಾನ್ಯ ಎಲ್ಲರಲ್ಲಿಯೂ ಇರುತ್ತದೆ. ಇಲ್ಲದವರೂ ಇದ್ದಾರೆ. ಆದರೆ ಈ ರಸಿಕತೆ ಎನ್ನುವುದು ಕೆಲವರಿಗೆ ಕೆಲ ವಿಷಯಗಳಲ್ಲೋ ಅಥವಾ ಯಾವುದೋ ಒಂದು ವಿಷಯದಲ್ಲೋ ಇರುತ್ತದೆ. ಕೆಲವರಿಗೆ ಸಂಗೀತ ಕೇಳುವುದರಲ್ಲಿ ರಸಿಕತೆ, ಕೆಲವರಿಗೆ ಹಾಡುವುದರಲ್ಲಿ ರಸಿಕತೆ,
ಕೆಲವರಿಗೆ ಚಿತ್ರ ಕಲೆ, ಕೆಲವರಿಗೆ ಶಿಲ್ಪಿ ಕಲೆ, ಕೆಲವರಿಗೆ ರುಚಿ ರುಚಿಯಾದ ಹಣ್ಣುಗಳನ್ನೂ ಅಥವಾ ತಿಂಡಿ ತಿನಿಸುಗಳನ್ನು ತಿಂದು ಆಸ್ವಾದಿಸುವುದರಲ್ಲಿ ರಸಿಕತೆ. ನಮ್ಮಲ್ಲಿ ಒಬ್ಬರು, ಕಾಫೀ ಕುಡಿದು, ೧೫ ನಿಮಿಷ ಬಾಯಿ ಮುಚ್ಚಿ ಕುಳಿತಿರುತ್ತಿದ್ದರು. ಏಕೆಂದು ಕೇಳಿದರೆ, “ಮಾತನಾಡಿದರೆ ಕಾಫಿಯ ಸುಗಂಧ ಬಾಯಿಂದ ಹೊರ ಹೋಗುತ್ತದೆಂದು” ಅವರ ಅಂಬೋಣ. ಈ ರೀತಿಯ ರಸಿಕರೂ ಇದ್ದಾರೆ. ಕೆಲವರು ಕಾಫೀ ಕುಡಿದಾಕ್ಷಣ ಬಾಯಿ ಮುಕ್ಕಳಿಸುವವರೂ ಇದ್ದಾರೆ. ಹೀಗೆ ಬೇರೆ ಬೇರೆಯವರಿಗೆ ಬೇರೆ ಬೇರೆಯಾದ ಅಭಿರುಚಿ.
ಮತ್ತೆ ಕೆಲವರಿಗೆ, ಪ್ರಕೃತಿಯ ಅಥವಾ ಪ್ರಕೃತಿಯಲ್ಲಿನ ಸೃಷ್ಟಿಯ ರೂಪ ಲಾವಣ್ಯಗಳನ್ನು ಕಂಡು ಅಭಿನಂದಿಸುವ, ಆರಾಧಿಸುವ, ಅಸ್ವಾಧಿಸುವ, ಪಡೆದುಕೊಳ್ಳಬೇಕೆಂದುಕೊಳ್ಳುವ ಅಥವಾ ಪಡೆದುಕೊಳ್ಳುವ, ಹೀಗೆ ಹತ್ತು ಹಲವಾರು ವಿಧದ ರಸಿಕತೆ ಇರುತ್ತದೆ. ಈ ರಸಿಕತೆ ಮಾನವನಿಗೆ ಆ ಪರಮಾತ್ಮ ನೀಡಿದ ಒಂದು ಶ್ರೇಷ್ಠ ವರ. ಬಹುಶಃ ಯಾವ ಅನ್ಯ ಜೀವಿಗೂ ಇಲ್ಲದ ಮತ್ತು ಕೇವಲ ಮಾನವನಿಗೆ ಇರುವ ಒಂದು ಗುಣವೇ ಈ ರಸಿಕತೆ.
ಈ ಪ್ರಕೃತಿಯಲ್ಲಿ ರೂಪ, ರಸ, ಗಂಧ, ನಾದ, ರುಚಿ, ಭಾವ, ಎಲ್ಲವನ್ನೂ ರಸಿಕತೆಯಿಂದ ಆಸ್ವಾಧಿಸುವ ಕ್ಷಮತೆಯನ್ನು ಮಾನವನಿಗೆ ಕೊಟ್ಟ ಸೃಷ್ಟಿಯೇ ಮನುಷ್ಯನಿಗೆ ” ರಸಿಕತೆಯ ಗುರು” ಎಂದು ಮಾನ್ಯ ಗುಂಡಪ್ಪನವರು ಹೇಳುತ್ತಾರೆ.
ವಾಚಕರೆ, ಈ ರಸಿಕತೆ ನಮ್ಮಲ್ಲಿ ಇಲ್ಲದೆ ಇದ್ದಿದ್ದರೆ ಜೀವನ ಎಷ್ಟೊಂದು ಬರಡಾಗಿ, ನೀರಸವಾಗಿರುತ್ತಿತ್ತು ಎಂದು ನಾ ಬೇರೆ ಹೇಳಬೇಕೇ. ಹಾಗಾಗಿ ಆ ರಸಿಕತೆಯನ್ನು ನಮಗೆ ನೀಡಿದ ಈ ಸೃಷ್ಟಿಗೆ ಮತ್ತು ಆ ಸೃಷ್ಟಿಕರ್ತನಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.
ರಸಧಾರೆ - 190
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು
ಕ್ರಮತೆಯೋ ನಮ್ರತೆಯೋ – ಮಂಕುತಿಮ್ಮ.
ಅಮೃತಕಣವಂ = ಅಮೃತ + ಕಣವಂ// ಮರ್ತ್ಯಮೃದ್ಘಟದಿ = ಮರ್ತ್ಯ + ಮೃತ್+ಘಟದಿ// ಬಯ್ತಿರಿಸಿ = ಬಯ್ತು+ಇರಿಸಿ// ಮೋಹದುಪನೇತ್ರವಿಡಿಸಿ = ಮೋಹದ + ಉಪ+ ನೇತ್ರ+ ಇಡಿಸಿ//
ಅಮೃತ = ಸಾವಿಲ್ಲದ// ಕಣವಂ = ಕಣವನ್ನು // ಮರ್ತ್ಯ = ನಾಶವಾಗುವ // ಮೃತ್=ಮಣ್ಣಿನ// ಘಟದಿ=ಮಡಿಕೆಯಲ್ಲಿ// ಬಯ್ತು= ಬಚ್ಚಿಟ್ಟು// ವಿಮೃಶಬುದ್ಧಿಗೆ= ವಿಮರ್ಶಾತ್ಮಕವಾದ ಬುದ್ಧಿ// ಮೋಹದ = ಮಮಕಾರದ// ಉಪನೇತ್ರ = ಒಳನೋಟವನ್ನು// ಸಾಮ್ರಾಜ್ಯಮಧ್ಯದಲಿ = ಜೀವನವೆನ್ನುವ ಸಾಮ್ರಾಜ್ಯದಮಧ್ಯದಲಿ// ದುರ್ಭಿಕ್ಷವಾಗಿಪುದು = ಏನೂ ಇಲ್ಲದಂತಾಗಿಸುವುದು// ಕ್ರಮತೆಯೋ = ವಿಧಾನವೋ// ನಮ್ರತೆಯೋ = ಪ್ರಲೋಭನೆಯೋ
ನಾಶವಿಲ್ಲದ ಆತ್ಮ ಅಥವಾ ಚೇತನನನ್ನು, ನಾಶವಾಗುವಂಥಾ ಈ ದೇಹವೆಂಬ ಮಣ್ಣಿನ ಮಡಿಕೆಯಲ್ಲಿ ಬಚ್ಚಿಟ್ಟು, ವಿಮರ್ಶೆಮಾಡುವಂತಾ ಬುದ್ಧಿಶಕ್ತಿಯನ್ನೂ ಕೊಟ್ಟು ವಿವೇಚನೆಯಿಂದಲೋ ಅಥವಾ ಮೋಹದಿಂದಲೋ ತನ್ನ ಬೇಕು ಬೇಡಗಳ ವಿಮರ್ಶೆಮಾಡುತ್ತಾ ಈ ಜಗತ್ತಿಗೆ ಅಂಟಿಕೊಳ್ಳುವಂತಾ ಮನವನಿತ್ತು, ಎಲ್ಲವೂ ಇರುವಾಗ ಇದ್ದಕ್ಕಿದ್ದಂತೆಯೇ, ಏನೂ ಇಲ್ಲದಂತಾಗಿಸುವುದು, ಇದೇನು ವಿಧಾನವೋ ಅಥವಾ ಮಾನವರಿಗೆ ಒಂದು ಪ್ರಲೋಭನೆಯೋ ಎಂದು ವಿಚಾರಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಮಣ್ಣಿಂದ ಆದ ದೇಹ. ಆ ದೇಹದೊಳಗೆ ಒಂದು ಆತ್ಮ. ಈ ದೇಹಾತ್ಮ ಸಂಬಂಧಕ್ಕೆ ಪೂರಕವಾಗಿ ಪಂಚ ಭೂತಗಳಿಂದಾದ, ಮನಸ್ಸು ಬುದ್ಧಿಗಳು. ಈ ನಾಲ್ಕರಿಂದ ನಮ್ಮ ಅಸ್ಥಿತ್ವ. ಪ್ರಕೃತಿ ಸಂಬಂಧದಿಂದ, ಮನಸ್ಸು ಬುದ್ಧಿಗಳ ಪ್ರಲೋಭನೆಯಿಂದ ನಾವು ಈ ಜಗತ್ತಿಗೆ ಅಂಟಿಕೊಂಡು, ಈ ಜಗತ್ತನ್ನು ಮೋಹಿಸುತ್ತಾ ಇಲ್ಲಿರುವ ಎಲ್ಲ ವಸ್ತುಗಳನ್ನೂ ರಸಿಕತೆಯಿಂದ ಅನುಭವಿಸುತ್ತಾ ಜೀವಿಸುತ್ತೇವೆ. ನಮ್ಮ ಜೀವನಕ್ಕೆ ಒಂದು ಅಂತ್ಯ ಉಂಟು, ಎಲ್ಲವನ್ನೂ ಬಿಟ್ಟು, ಈ ದೇಹವನ್ನು ತೊರೆದು ನಾವು ಹೋಗಲೇಬೇಕೆಂದು ಅರಿತಿದ್ದರೂ, ಇಲ್ಲಿ ಜೀವಿಸುವವರೆಲ್ಲರೂ,ಈ ಜಗತ್ತಿನಲ್ಲಿ ನಾವು ನಿರಂತರವಾಗಿ ಜೀವಿಸಿರುತ್ತೇವೆ ಎಂದು ಅಂದುಕೊಳ್ಳುತ್ತೇವೆ. ಈ ಜಗತ್ತನ್ನು ಬಿಟ್ಟು ಹೋಗುವಾಗಲೂ ” ಅಯ್ಯೋ ಬಿಟ್ಟು ಹೋಗಬೇಕಲ್ಲ ” ಎಂದು ಕೊರಗುತ್ತಾ ಹೋಗುವವರೇ ಎಲ್ಲರೂ. ಇದೇ ನಮಗಿರುವ ಈ ಜಗತ್ತಿನ ಮೋಹ. ಈ ಮೋಹವನ್ನು ಕೊಟ್ಟವನೇ ಆ ಪರಮಾತ್ಮ. ಇದು ಅವನಿಗೊಂದು ಆಟ. ನಮಗೆ ಇದನ್ನೆಲ್ಲಾ ಕೊಟ್ಟು, ನಾವು ಪಡುವ ಪಾಡು ಅವನಿಗೆ ವಿನೋದ ಅಥವಾ ಈ ಜಗತ್ತನ್ನು ನಡೆಸುವ ಅವನ ವಿಧಾನವಿರಬಹುದು.
ಜೀವಿಗಳಿಗೆ ಈ ಮೋಹವನ್ನು ಕೊಟ್ಟದ್ದರಿಂದಲೇ ಈ ಜಗತ್ತಿನ ವೈವಿಧ್ಯಮಯ ಜೀವನದ ಆಟ ನಡೆಯುತ್ತಿದೆ. ಇಲ್ಲದಿದ್ದರೆ ಜಗತ್ತು, ಬಾಳು, ಜೀವನ ಎಲ್ಲವೂ ನೀರಸವಾಗಿ, ಇಡೀ ಜಗತ್ತೇ ಒಂದು ಬೆಂಗಾಡಿನಂತಿರುತ್ತಿತ್ತು. ಇದರೊಳಗೆ ರಕ್ತಿಯಿಂದ ಇರುವುದು ಒಂದು ಹಂತದ ತನಕ ಸರಿ. ಆದರೆ ಜೀವನವಿಡೀ ಈ ಮೋಹಕ್ಕೆ ಅಂಟಿಕೊಂಡಿದ್ದರೆ ಇದನ್ನೆಲ್ಲಾ ಬಿಟ್ಟು ಹೋಗುವಾಗ ತೀವ್ರ ನೋವು ಮತ್ತು ಸಂಕಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ, ಈ ಮೋಹವೆಂಬುದು ಪರಮಾತ್ಮ ಸೃಷ್ಟಿಯೇ ಆದರೂ ನಮ್ಮ ಹಿರಿಯರು ಸಾಧು ಸಂತರು, ಭಕ್ತ ಶಿಖಾಮಣಿಗಳ ಬೋಧನೆಯು ಮತ್ತು ನಮ್ಮ ವೇದ,ಉಪನಿಷತ್ತುಗಳು, ಪುರಾಣಗಳು, ಹೀಗೆ ಎಲ್ಲವೂ ಈ ಮೋಹವನ್ನು ಬಿಟ್ಟರೆ ಆತ್ಮನಿಗೆ ಸುಖವೆಂದು ಬೋಧಿಸಿದ್ದಾರೆ. ಹಾಗಾಗಿ ಅಶಾಶ್ವತವಾದ ಇಂದ್ರಿಯ ಸುಖಕ್ಕಿಂತ ನಿತ್ಯವಾದ ಸತ್ಯವಾದ ಆತ್ಮಾನಂದ ಬೇಕಾದರೆ ಈ ಮೋಹವನ್ನು ಬಿಡಬೇಕೆಂದು ನಮ್ಮ ಸನಾತನ ಧರ್ಮದ ಅಭಿಪ್ರಾಯ. ಆದರೆ ಈ ಜಗತ್ತಿನಲ್ಲಿ ರಕ್ತಿಯಿಂದಿರುವುದೋ ಅಥವಾ ವಿರಕ್ತಿಯಿಂದಿರುವುದೋ ಎನ್ನುವುದು ಪ್ರತಿಯೊಬ್ಬರ ಸ್ವಂತ ವಿಚಾರಕ್ಕೆ ಬಿಟ್ಟದ್ದು.
ರಸಧಾರೆ - 191
ತಡಕುವನು; ತನ್ನಾತ್ಮದುಣಿಸ ಮರೆಯುವನು
ಒಡಲಿನಬ್ಬರವೇನು? ಆತುಮದ ನಾಣ್ಚೇನು
ಪೊಡವಿಗೆದೆ ದುಮ್ಮಾನ – ಮಂಕುತಿಮ್ಮ
ಪೊಡೆಯುಣಿಸ = ಪೊಡೆ+ ಉಣಿಸ // ಮಿಗಹಕ್ಕಿಹುಳುಗಳಂದದಿ= ಮಿಗ+ಹಕ್ಕಿ +ಹುಳು+ ಗಳಂದದಿ// ತನ್ನಾತ್ಮದುಣಿಸ = ತನ್ನ+ ಆತ್ಮದ+ಉಣಿಸ// ಒಡಲಿನಬ್ಬರವೇನು = ಒಡಲಿನ + ಅಬ್ಬರವು+ ಅದೇನು // ಪೊಡವಿಗೆದೆ = ಪೋದವಿಗೆ+ ಅದೆ
ಪೊಡೆಯುಣಿಸ = ಹೊಟ್ಟೆಯಾಹಾರ, ನಾಣ್ಚೇನು= ಸಂಕೋಚ// ಒಡಲು = ದೇಹ// ಪೊಡವು = ಹೊಳಪು ಅಥವಾ ತೇಜಸ್ಸು.
ಮನುಷ್ಯನು, ಪ್ರಾಣಿ, ಹಕ್ಕಿ ಹುಳುಗಳ ರೀತಿ ತನ್ನ ಹೊಟ್ಟೆಪಾಡಿಗಾಗಿ ಆಹಾರಕ್ಕಾಗಿ ತಡಕಾಡುತ್ತಾನೆ. ಆದರೆ ಆತ್ಮಕ್ಕೆ ಬೇಕಾದ ಆಹಾರವನ್ನು ಕೊಡಬೇಕಾದ ಆಹಾರವನ್ನು ಕೊಡದೆ, ಅದನ್ನು ಸೊರಗಿಸುತ್ತಿದ್ದಾನೆ. ತೆಜೋರೂಪವಾದ ಆತ್ಮವು ಕಡೆಗಣಿಸಲ್ಪಟ್ಟಿದೆ. ಇದು ತೀರ ದುಃಖದ ವಿಚಾರ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.
ಮನುಷ್ಯನನ್ನು ಬಿಟ್ಟು ಬೇರೆ ಎಲ್ಲಾ ಅನ್ಯ ಪ್ರಾಣಿಗಳು, ಕೇವಲ ತಮ್ಮ ಆಹಾರವನ್ನು ಹುಡುಕುವುದು, ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಮತ್ತು ತಮ್ಮ ಸಂತತಿಯನ್ನು ಬೆಳೆಸುವ ಕಾರ್ಯದಲ್ಲಿ ಮಾತ್ರ ನಿರತರು. ಮನುಷ್ಯ ಮಾತ್ರ ಭಿನ್ನವಾಗಿ ಆಧ್ಯಾತ್ಮದ ದಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಪ್ರಯತ್ನ ಪಡುವ ಸಾಮರ್ತ್ಯವನ್ನು ಹೊಂದಿದ್ದಾನೆ. ಅನ್ಯ ಪ್ರಾಣಿಗಳಿಗಿಂತ ಮನುಷ್ಯ ಎಷ್ಟೊಂದು ರೀತಿಯಲ್ಲಿ ಭಿನ್ನ ಎನ್ನುವದು ಸರ್ವರಿಗೂ ವೇಧ್ಯ. ಆ ಕಾರಣಕ್ಕಾಗಿಯೇ ಮನುಷ್ಯ ಬೇರೆ ಪ್ರಾಣಿಗಳಂತೆ ಅಲ್ಲದೆ ಊರ್ಧ್ವಮುಖನಾಗಿದ್ದಾನೆ. “ತಾನು ಆತ್ಮ” ಎಂದು ಅರಿತುಕೊಳ್ಳಲು ಪ್ರಯತ್ನ ಪಡಲು ಅವನಿಗೆ ಸಾಮರ್ತ್ಯವನ್ನು ಪರಮಾತ್ಮ ಕೊಟ್ಟಿದ್ದಾನೆ.
ಆತ್ಮಕ್ಕೆ ದೇಹವಿಲ್ಲದೆ ಇದ್ದರೆ ಅಸ್ಥಿತ್ವವೇ ಇಲ್ಲ. ಅಂದರೆ ಆತ್ಮವು ತನ್ನ ಪೂರ್ವ ಕರ್ಮಗಳನ್ನು ಕಳೆದುಕೊಳ್ಳಲು ಪುನಃ ಜನ್ಮ ಪಡೆದುಕೊಳ್ಳುವುದಕ್ಕೆ ಒಂದು ಕಾಯ ಅಥವಾ ದೇಹದ ಅವಶ್ಯಕತೆ ಇದೆ. ಅತ್ಮೋದ್ಧಾರಕ್ಕೆ ದೇಹ ಒಂದು ಉಪಕರಣವಷ್ಟೇ. ಆದರೆ ಮನುಷ್ಯ ಈ ದೇಹಕ್ಕಷ್ಟೇ ಪ್ರಾಮುಖ್ಯತೆಯನ್ನು ನೀಡಿ ಆತ್ಮಕ್ಕೆ ನೀಡಬೇಕಾದ ಗಮನವನ್ನು ಕೊಡುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ.
” ಇದಂ ಶರೀರಂ, ಪರಿಣಾಮ ಪೇಶಲಂ ಪತತ್ಯವಶ್ಯಂ ಶ್ಲಥ ಸಂಧಿ ಜರ್ಜರಂ” ಎಂದು ಕುಲಶೇಖರ ಆಳ್ವಾರರು ಹೇಳುತ್ತಾರೆ. ಎಂದರೆ ಕಾಲದ ಪರಿಣಾಮಗಳಿಗೊಳಗಾಗಿ ಈ ಶರೀರ ಬಿದ್ದು ಹೋಗುವುದು ಖಂಡಿತ ಎಂದು. ಇಂತಹ ದೇಹವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ, ಏನೆಲ್ಲಾ ಸಾಹಸ ಮಾಡುತ್ತಾನೆ ಮನುಷ್ಯ. ಈ ದೇಹಕ್ಕೆ ಎಷ್ಟೊಂದು ಪ್ರಾಮುಖ್ಯತೆ ಎಷ್ಟೊಂದು ರೀತಿಯ ಅಲಂಕಾರ. ಆದರೆ ನಿರಂತರವಾದ, ನಿತ್ಯವಾದ ತನ್ನ ಆತ್ಮವನ್ನು ಕಾಪಾಡಿಕೊಳ್ಳಲು ಆತ್ಮದ ಉನ್ನತಿಗೆ, ಏನನ್ನೂ ಮಾಡುವುದಿಲ್ಲ.
ದೇಹವನ್ನು ಕಾಪಾಡಿಕೊಳ್ಳುವುದು ಅವಶ್ಯ. ಆದರೆ ಅದನ್ನು ಒಂದು ಉಪಕರಣ ಎಂದು ಅರಿತು, ಅದಕ್ಕೆ ಸೀಮಿತ ಪ್ರಾಮುಖ್ಯತೆಯನ್ನು ನೀಡಿ, ದೇಹವನ್ನು ಉಪಯೋಗಿಸಿಕೊಂಡು, ಆತ್ಮವನ್ನು ಅರಿಯಲು ಪ್ರಯತ್ನಪಡಬೇಕು. ಆ ದಾರಿಯಲ್ಲಿ ಮುಂದೆ ಸಾಗಲು ನಮ್ಮ ಪೂರ್ವಜರು ಸಾವಿರಾರು ಮಾರ್ಗಗಳನ್ನು ಸ್ವಾನುಭವದಿಂದ ನಮಗೆ ತೋರಿಸಿದ್ದಾರೆ. ಆದರೆ ನಾವು ಅದನ್ನು ಕಡೆಗಣಿಸಿದ್ದೇವೆ. ಒಂದು ದಿನದ ೨೪ ಗಂಟೆಗಳಲ್ಲಿ ನಮಗೆ ೫ ನಿಮಿಷವೂ ಧ್ಯಾನಮಾಡುವ ಸಮಯವಿರುವುದಿಲ್ಲ. ನಮಗೆ ಸದಾಕಾಲ ನಮ್ಮ ಬಾಹ್ಯವಾದ ಈ ದೇಹ, ಮನಸ್ಸು ಬುದ್ಧಿಗಳ ಮೂಲಕ ಈ ಜಗತ್ತಿನೊಂದಿಗೆ ಸಂಪರ್ಕ, ಜಗತ್ತಿನ ಮೇಲೆ ಅತೀವ ಮೋಹ ಮತ್ತು ಅತೀ ರಸಿಕತೆ. ನಮಗೆ ಬೇಡದೆ ಇರುವ ವಿಷಯವೇ ಇಲ್ಲ. ನಾವು ಸದಾಕಾಲ ಬಾಹ್ಯಮುಖಿಗಳು.ಎಲ್ಲವೂ ತೋರಿಕೆ, ಆಡಂಬರ ಮತ್ತು ಡಂಬಾಚಾರ. ಅಂತರ್ಮುಖಿಗಳಾಗುವುದೇ ಇಲ್ಲ. ಇದರಿಂದ ಸತ್ಯವಾದ ಆನಂದಸ್ವರೂಪಿಯಾದ ಆತ್ಮ ಸಂಕೋಚದಿಂದ ಸೊರಗಿಹೋಗಿದೆ. ” ಆತ್ಮ”!!! ಹಂಗಂದರೇನು? ಎಂದು ಕೇಳುವ ಕಾಲ ಬಂದಿದೆ. ಇದು ವಿಷಾದನೀಯವಲ್ಲವೇ?
ವಾಚಕರೆ, ಈ ದೇಹ ಕೇವಲ ಒಂದು ಉಪಕರಣ.ಅದನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಏಕೆಂದರೆ ಈ ದೇಹದಿಂದಲೇ ಆತ್ಮಕ್ಕೆ ಮುಕ್ತಿ. ಆದ್ದರಿಂದ ಆತ್ಮವನ್ನು ಸೊರಗಲು ಬಿಡಬಾರದು, ಅಂತರ್ಮುಖಿಗಳಾಗಿ ಅದಕ್ಕೂ ಆಗಾಗ ಆಹಾರವನ್ನು ಕೊಡುತ್ತಲೇ ಇರಬೇಕು. ಅಂತಹ ಪ್ರಯತ್ನವನ್ನು ನಾವೆಲ್ಲಾ ಮಾಡೋಣ.
ರಸಧಾರೆ - 192
ಭಾವ ರಾಗ ಹಠಂಗಳವರ ಸೇನೆಗಳು
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು
ಜೀವಾಮೃತವನವರು – ಮಂಕುತಿಮ್ಮ
ಹಠಂಗಳವರ = ಹಠಂಗಳು+ ಅವರ // ಭೂವಿಭವಜಯಗಳ = ಭೂ+ವಿಭವ+ಜಯಗಳ// ಜೀವಾಮೃತವನವರು + ಜೀವಾಮೃತವನು+ಅವರು
ಇಂದಿನ ಸಮಾಜದಲ್ಲಿ ಮಾನವರ ನಡವಳಿಕೆಯನ್ನು ವಿಶ್ಲೇಷನೆಮಾಡುತ್ತಾ, ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ನಡುವಿನ ಯುದ್ಧ ಪ್ರತಿ ಹೃದಯದಲ್ಲೂ ನಡೆದಿದೆ ಮತ್ತು ಜನರೆಲ್ಲಾ, ಭಾವುಕತೆ, ಕೋಪ ಮತ್ತು ಹಠವನ್ನು ಮನಗಳಲ್ಲಿ ತುಂಬಿಕೊಂಡು ಈ ಜಗತ್ತಿನಲ್ಲಿ ವೈಭವದಿಂದ ಜೀವಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಜೀವಿಸುತ್ತಾ, ಆತ್ಮದ ವಿಚಾರವನ್ನು ತೊರೆದು, ಅದರಿಂದ ದೊರೆಯುವ ಅಮೃತದ೦ತ ಅನುಭವವನ್ನು ಮರೆತಿದ್ದಾರೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು.
ನಮ್ಮಲ್ಲಿ ವಿಫುಲವಾದ ಪೌರಾಣಿಕ ಸಾಹಿತ್ಯವಿದೆ. ಅದರಲ್ಲೆಲ್ಲಾ ಒಂದು ಸಮಾನವಾದ ವಿಚಾರವಿದೆ. ಕೆಟ್ಟದ್ದರ ಮೇಲೆ ಒಳ್ಳೆಯದಕ್ಕೆ ವಿಜಯ. ಅದನ್ನು ಬರೆದವರು, ಆಯಾ ಕಥೆಗಳ ಪಾತ್ರಗಳ ಮೂಲಕ ಈ ತತ್ವವನ್ನು ಹೇಳಿದ್ದಾರೆ. ಹಾಗೆ ನೋಡಿದರೆ ಅದು ಜಗತ್ತಿನ ಎಲ್ಲ ಮನುಜರ ಕಥೆಯೇ ಎಂದು ಅನ್ನಿಸುತ್ತದೆ. ಎಲ್ಲ ಮಾನವರ ಹೃದಯಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ನಿರಂತರ ತಿಕ್ಕಾಟ ನಡೆದೇ ಇರುತ್ತದೆ. ಪ್ರತೀ ಮನುಷ್ಯನಿಗೂ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವು ಇದ್ದು ಅದೇ ರಾಮ ಮತ್ತು ರಾವಣರ ಪಾತ್ರವನ್ನು ವಹಿಸುತ್ತಿರುತ್ತದೆ. ಗುಣದ ಪ್ರಮಾಣದ ವ್ಯತ್ಯಾಸದಿಂದ ಆ ವ್ಯಕ್ತಿಯನ್ನು ಒಳ್ಳೆಯವನೆಂದೋ ಕೆಟ್ಟವನೆಂದೋ ಕರೆಯಲಾಗುತ್ತದೆ.
ಅಂತಹವರು ಈ ಜಗತ್ತಿನಲ್ಲಿ ತಮ್ಮ ಭಾವುಕತೆ, ಪ್ರೇತಿ ಪ್ರೇಮಗಳು, ದ್ವೇಷಾಸೂಯೆಗಳು, ಕೋಪತಾಪಗಳು, ಹೀಗೆ ಹತ್ತು ಹಲವಾರು ಭಾವನೆಗಳೊಂದಿಗೆ ವೈಭವದಿಂದ ಮೆರೆಯುತ್ತಾರೆ. ತಾವೇನೋ ಇಲ್ಲಿ ಶಾಶ್ವತವಾಗಿ ಇದ್ದುಬಿಡುತ್ತಾರೇನೋ ಎನ್ನುವ ಹಾಗೆ ಮೆರೆಯುತ್ತಾರೆ. ಹಾಗೆ ಮೆರೆಯುವಾಗ ಅವರು ಆತ್ಮಾನುಸಂಧಾನದಿಂದ ದೊರೆಯುವ ನಿಜವಾದ ಮತ್ತು ಶಾಶ್ವತ ಆನಂದವನ್ನು ಪಡೆಯಲು ಮರೆಯುತ್ತಾರೆ. ಹೊರಗಿನ ಭಾವಗಳನ್ನೇ ಒಳಗೂ ತುಂಬಿಕೊಂಡು ಅಂತರ್ಮುಖಿಗಳಾಗಿ ಧ್ಯಾನ ಭಕ್ತಿ ಮತ್ತು ವಿರಕಿಯಿಂದ ದೊರೆಯಬಹುದಾದ ಆನಂದಿಂದ ವಂಚಿತರಾಗಿದ್ದಾರೆ. ಇಂದಿನ ನೂತನ ಜೀವನ ಶೈಲಿಯ ದುರಂತವೇ ಇದು. ಆತ್ಮನ ಮುಂದಿನ ಪ್ರಯಾಣಕ್ಕೆ ಯಾವ ಸಿದ್ಧತೆಯೂ ಇಲ್ಲ. ವಿಪರ್ಯಾಸವೆಂದರೆ, ಪಾಪ ಈ ಆತ್ಮ ತನ್ನ ಮೂಲವನ್ನು ಸೇರುವ ಪ್ರಯಾಣದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟರೆ, ಇಂದಿನ ಜಗತ್ತಿನ ಸಂಪರ್ಕದಿಂದ ಹತ್ತು ಹೆಜ್ಜೆ ಹಿಂದೆ ಬರುತ್ತಿದೆ. ಹೀಗಾದರೆ ಅದು ತನ್ನ ಗಮ್ಯವನ್ನು ಮುಟ್ಟುವುದು ಎಂದೋ!
ವಾಚಕರೆ, ನಾವೂ ಸಹ ಇದರ ಬಗ್ಗೆ ಯೋಚಿಸಿ, ಈ ಜಗತ್ತಿನೊಂದಿಗಿನ ರಕ್ತಿಯನ್ನು ಕಡಿಮೆಯಾಗಿಸಿ, ಆತ್ಮದ ಮುನ್ನಡೆಗೆ ಅಣಿಮಾಡಿಕೊಡಲು, ಪ್ರಯತ್ನಿಸೋಣ.
ರಸಧಾರೆ - 193
ನೆರಡುಕೈಯಿಂದೆರಡು ಜಂತುಗಳ ಬಳಿಕ
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು
ನರಿಯು ವಾನರವು ನರ – ಮಂಕುತಿಮ್ಮ.
ನಿಜಚಾತುರಿಯನಳೆಯೆ = ನಿಜ + ಚಾತುರಿಯನು + ಅಳೆಯೆ // ನೆರಡುಕೈಯಿಂದೆರಡು = ಎರಡು + ಕೈಗಳಿಂದ+ ಎರಡು// ತಾನವನೊಂದುಗೂಡಿಸಲು = ತಾನು+ಅವನು + ಒಂದು + ಕೂಡಿಸಲು// ಬೆರಗಾಯ್ತು = ಬೆರಗು + ಆಯ್ತು.
ಪರಮೇಷ್ಠಿ = ಬ್ರಹ್ಮ // ಚಾತುರಿಯನು = ಚಾತುರ್ಯವನು // ಅಳೆಯೆ = ಪರೀಕ್ಷಿಸಲು // ಜಂತು= ಪ್ರಾಣಿ ( ಜೀವಂತಿ ಇತಿ ಜಂತು:) ಬೆರಗು = ಆಶ್ಚರ್ಯ.
ಪರಬ್ರಹ್ಮನು ತನ್ನ ನಿಜವಾದ ಚಾತುರ್ಯವನ್ನು ಪರೀಕ್ಷಿಸಲು ತನ್ನ ಎರಡೂ ಕೈಗಳಿಂದ ಎರಡು ಪ್ರಾಣಿಗಳನ್ನು ಸೃಷ್ಟಿಸಿದನಂತೆ. ಒಂದು ನರಿ, ಇನ್ನೊಂದು ಮಂಗ. ಅವುಗಳನ್ನು ಸೃಷ್ಟಿಸಿದಮೇಲೆ, ಸುಮ್ಮನೆ ಇರದೆ, ಇವೆರಡನ್ನೂ ಒಂದಾಗಿ ಸೇರಿಸಿದನಂತೆ. ಆಶ್ಚರ್ಯವೆಂದರೆ ಅವೆರಡರ ಸಮ್ಮಿಲನದಿಂದ ಉಂಟಾದದ್ದು ನರ( ಮನುಷ್ಯ) ಪ್ರಾಣಿಯಂತೆ, ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.
ವಿಜ್ಞಾನಿ ಡಾರ್ವಿನ್ನನ ಸಿದ್ಧಾಂತದ ಪ್ರಕಾರ ಮಂಗನಿಂದ ಮಾನವ ಎಂದಿದೆ. ಆ ಸಿದ್ಧಾಂತ ಸರಿಯಲ್ಲ ಎಂದು ಇತ್ತೀಚಿನ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಆದರೆ ನಮ್ಮ ಗುಂಡಪ್ಪನವರು ಒಂದು ವಿಚಿತ್ರವಾದ ವಿಷಯವನ್ನು ನಮ್ಮ ಮುಂದಿಟ್ಟಿದ್ದಾರೆ. ಮನುಷ್ಯ, ನರಿ ಮತ್ತು ಮಂಗನ ಮಿಶ್ರಣದಿಂದ ಆಗಿದ್ದಾನೆ ಎನ್ನುತ್ತಾರೆ. ಮನುಷ್ಯನ ಗುಣಗಳನ್ನು ವಿಶ್ಲೇಷಣೆ ಮಾಡಿ ಅವರು ಬಹುಶಃ ಈ ನಿರ್ಧಾರಕ್ಕೆ ಬಂದಿರಬಹುದು. ಏಕೆಂದರೆ ಮನುಷ್ಯನ ರೂಪ ಏನೇ ಆದರೂ, ಬಣ್ಣ ಏನೇ ಆದರೂ, ಲಿಂಗವೇನೆ ಆದರೂ, ಭಾಷೆ ಯಾವುದೇ ಆದರೂ, ದೇಶವಾವುದೇ ಆದರೂ ಮೂಲ ಗುಣಗಳು ಮಾತ್ರ ಒಂದೇ ಆಗಿವೆ ಎನ್ನುವುದು ಆಶ್ಚರ್ಯವಲ್ಲವೇ?
ಇವನಿಗೆ ಮಂಗ ಬುದ್ಧಿಯೂ ಇದೆ. ನರಿಯಂತೆ ಕುತಂತ್ರಿಯೂ ಹೌದು. ಮನುಷ್ಯನಿಗೆ, ಮಂಗನಂತೆ ಸ್ಥಿರ ಚಿತ್ತವಿಲ್ಲದೇ ನರಿಯಂತೆ ಕುಟಿಲತೆಯಿಂದಲೂ ಕೂಡಿದ್ದಾನೆ. ಮಾನವನ ಮನಸ್ಸು ಒಂದು ಕಡೆ ನಿಲ್ಲುವುದೇ ಇಲ್ಲ. ಮಂಗ ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ನೆಗೆಯುವಂತೆ, ಮನುಷ್ಯನ ಮನಸ್ಸೂ ಸಹ ನಿಮಿಷ ನಿಮಿಷಕ್ಕೂ ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ಒಂದು ಕ್ಷಣವೂ ಸ್ಥಿರ ಚಿತ್ತವಿರುವುದಿಲ್ಲ. ಅಷ್ಟೇ ಅಲ್ಲ, ಇವನಿಗೆ ಮಂಗನನತೆಯೇ ಕುಚೇಷ್ಟೆಯನ್ನೂ ಸಹ ಮಾಡಲು ಬರುತ್ತದೆ. ಚಿಕ್ಕಂದಿನಲ್ಲಿ ಇದು ಹೆಚ್ಚು. ” ಮಗನನ್ನು ಕೊಡು ಎಂದರೆ, ದೇವರೇ ಮಧ್ಯದಲ್ಲಿ ಒಂದು ಸೊನ್ನೆಯನ್ನೂ ಇಟ್ಟು ಕೊಟ್ಟಿದ್ದೀಯಲ್ಲಾ” ಎಂದು, ನಮ್ಮಜ್ಜಿ ಹೇಳುತ್ತಿದ್ದರು, ಆದರೆ ವಯಸ್ಸಾದಂತೆ ಈ ಮಂಗ ಚೇಷ್ಟೆಗಳು ಕಡಿಮೆಯಾದರೂ ಮಂಗ ಬುಧ್ಧಿ ಕಡಿಮೆಯಾಗುವುದೇ ಇಲ್ಲ.
ಇನ್ನು ನರಿಯೋ ಪ್ರಾಣಿಗಳಲ್ಲೇ ಹೆಚ್ಚು ಬುದ್ಧಿವಂತ ಪ್ರಾಣಿ ಎಂದು ಹೆಸರು ಗಳಿಸಿದೆ. ಕುಟಿಲತೆಗೆ ಪ್ರಖ್ಯಾತಿ. ಮನುಷ್ಯನೂ ಸಹ ಆ ನರಿಯ ಬುದ್ಧಿಯನ್ನು ಹೊಂದಿದ್ದಾನೆ. ತನಗೇನು ಬೇಕೋ ಅದನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಉಪಾಯಗಳನ್ನೂ ಮಾಡಿ ಪರರಿಂದ, ಬೇಡಿಯೋ, ಕದ್ದೋ, ಕಸಿದೋ , ವಂಚಿಸಿಯೋ, ಪಡೆದುಕೊಂಡು ಬಿಡುತ್ತಾನೆ. ಒಂದು ಕಾಗೆಯನ್ನು ವಂಚಿಸಿ ಅದರ ಬಾಯಲ್ಲಿನ ಮಾಂಸದ ತುಂಡನ್ನು ಕಸಿದ ನರಿಯ ಕತೆಯನ್ನು ನೀವೆಲ್ಲ ಓದಿರುತ್ತೀರಿ. ತೇಟ್, ಹಾಗೆಯೇ ಮನುಷ್ಯನ ಬುದ್ಧಿಯೂ. ತನ್ನ ಕಾರ್ಯ ಸಾಧನೆಗೆ ಯಾವ ಹಂತಕ್ಕೆ ಬೇಕಾದರೂ ಇಳಿದು ಬಿಡುತ್ತಾನೆ. ಎಲ್ಲ ಮಾನವರೂ ಹಾಗೆಯೇ ಎಂದಲ್ಲ. ಪ್ರಸಕ್ತ ಸಮಾಜದಲ್ಲಿ ದುಡ್ಡಿಗೆ ಹೆಚ್ಚುಮಹತ್ವವಿರುವ ಕಾಲದಲ್ಲಿ, ಅಸ್ಥಿತ್ವಕ್ಕೆ ತೀವ್ರ ಪೈಪೋಟಿಯ ಕಾಲದಲ್ಲಿ ಮನುಷ್ಯ ಈ ನರಿ ಬುದ್ಧಿಯನ್ನು ಅತಿಯಾಗಿ ಉಪಯೋಗಿಸುತ್ತಾನೆ. ಹಾಗಾಗಿ ಗುಂಡಪ್ಪನವರು, ಮನುಷ್ಯ ಮಂಗ ಮತ್ತು ನರಿಯ ಮಿಶ್ರಣ ಎಂದು ಸೂಕ್ತವಾಗೆ ಹೇಳಿದ್ದಾರೆ.
ಆದರೆ, ವಾಚಕರೆ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಾವು ಮನುಷ್ಯರು. ಮಾನವತೆಯಿಂದ ಬಾಳಬೇಕಾದವರು. ನಾವು ನಮ್ಮಲ್ಲಿರುವ ಮಂಗನ ಚಂಚಲ ಬುದ್ಧಿಯನ್ನು ಮತ್ತು ನರಿಯ ಕುಟಿಲತೆಯನ್ನೂ ತೊರೆದು ಕೇವಲ ಮಾನವರಾಗಿ ಉಳಿಯಬೇಕು. ” ಬದುಕು-ಬದುಕಲು ಬಿಡು ” ಎನ್ನುವ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲರೂ ಸಂತೋಷದಿಂದ ಸೌಹಾರ್ಧತೆಯಿಂದ ಇರಬಹುದು ಎನ್ನವುದು ನನ್ನ ಅಭಿಪ್ರಾಯ. ನೀವೂ ಸಹ ಒಪ್ಪುತ್ತೀರಲ್ಲವೇ?
ರಸಧಾರೆ - 194
ಅಂತರಗಭೀರಗಳ ತಾನೆ ಕಂಡವನಾರ್?
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ
ಸ್ವಂತಕೇ ದುರ್ದರ್ಶ- ಮಂಕುತಿಮ್ಮ
ಅಂತರಂಗವನೆಲ್ಲ = ಅಂತರಂಗವನ್ನು+ ಎಲ್ಲ // ತೋರಿಪನಾರು = ತೋರಿಪನು+ ಯಾರು
ತಮ್ಮ ತಮ್ಮ ಅಂತರಂಗದಲ್ಲಿ ಏನಿದೆ ಎಂದು ತೋರುವವರು ಯಾರು ಅಥವಾ ಒಳಗಿರುವ ಗಂಭೀರತೆಯನ್ನು ಕಂಡವರಾರು, ವಿಚಾರ ಮತ್ತು ವಿಷಯಗಳು ಮನಸ್ಸಿನ ಮಡಿಕೆ ಮಡಿಕೆಗಳಲ್ಲಿ ತಿರುವು ತಿರುವುಗಳಲ್ಲಿ ಗಂಟು ಗಂಟುಗಳಾಗಿ ಸೇರಿಕೊಂಡುಬಿಟ್ಟಿದೆ. ನಮ್ಮ ಮನದಾಳದಲ್ಲಿರುವುದು ನಮ್ಮ ಅನುಭವಕ್ಕೇ ಬರುವುದು ಕಷ್ಟವಾಗಿದೆ, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಅಂತರಂಗದ ಆಳ ಬಹಳ ಅಗಾಧವಾಗಿದೆ. ಒಂದು ಸಮುದ್ರವೆಷ್ಟು ದೊಡ್ಡದೋ ಅಷ್ಟೇ ದೊಡ್ಡದಿರಬಹುದು ಅದರ ಆಳ ಮತ್ತು ವಿಸ್ತಾರ. ನಾವು ಅನ್ಯರಿಗೆ ನಮ್ಮ ಅಂತರಂಗವನ್ನು ಸಂಪೂರ್ಣವಾಗಿ ತೋರುವುದು ಸಾಧ್ಯವಿಲ್ಲ. ಒಂದೇ ಕ್ಷಣದಲ್ಲಿ ನಮ್ಮ ಮನಸ್ಸಿನಲ್ಲಿ ಹತ್ತು ಹಲವಾರು ವಿಚಾರಗಳು, ಆಲೋಚನೆಗಳು ತೆರೆ ತೆರೆಯಾಗಿ ಬಂದು ಹೋಗುತ್ತವಲ್ಲವೇ. ಇವೆಲ್ಲ ಒಳಗೇ ಇದ್ದು ಆಗಾಗ ಸಮುದ್ರದ ಅಲೆಗಳಂತೆ ಏರುತ್ತವೆ ಮತ್ತು ಇಳಿಯುತ್ತವೆ.ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳ ಸಂಪರ್ಕದಿಂದ ಹೊಸದಾಗಿ ಎಷ್ಟೆಷ್ಟೋ ವಿಚಾರಗಳು ನಮ್ಮ ಮನಸ್ಸಿನೊಳಕ್ಕೆ ನುಗ್ಗುತ್ತಲೇ ಇರುತ್ತವೆ. ಹಲವು ಸ್ವಲ್ಪ ಕಾಲ ಇದ್ದು ಮರೆಯಾಗುತ್ತವೆ, ಮತ್ತೆ ಕೆಲವು ಮನಸ್ಸಿನ ಆಳದಲ್ಲಿ ಹೋಗಿ ಕುಳಿತುಬಿಡುತ್ತವೆ. ಕೆಲವು ವಿಷಯಗಳು ಶಾಶ್ವತವಾಗಿ ಅಳಿಸಿಹೊಗಿರುತ್ತವೆ. ಯಾವುದೋ ಒಂದು ವಿಚಾರ ನಮ್ಮ ಮನಸ್ಸಿಗೆ ಏಕೆ ಬಂತು ಎಂದು ಹೇಳುವುದು ಬಹಳ ಕಷ್ಟದ ಕೆಲಸ.
ಅಷ್ಟೇ ಅಲ್ಲ ಯಾವ ವಿಚಾರ ಒಳಗೆ ಬರಬೇಕು ಯಾವುದು ಬರಬಾರದು ಎಂದು ಸಾಮಾನ್ಯವಾಗಿ ನಾವು ನಿರ್ಧರಿಸಲಾಗುವುದಿಲ್ಲ ಮತ್ತು ವಿಚಾರಗಳು ನಮ್ಮ ಮನಸ್ಸಿನೊಳಕ್ಕೆ ನುಗ್ಗುವುದನ್ನು ನಾವು ನಿಯಂತ್ರಿಸಲೂ ಆಗುವುದಿಲ್ಲ.
ನಮ್ಮ ಅಂತರಂಗದ ಭಾವ ನಮಗೇ ಅರ್ಥವಾಗುವುದು ಕಷ್ಟ. ಹಾಗಂದಮೇಲೆ ಅನ್ಯರು ಅದನ್ನು ಕಾಣಲಾಗುವುದೇ. ನಾವು ಅದನ್ನು ಎಷ್ಟೇ ವಿವರಿಸಲು ಪ್ರಯತ್ನಿಸಿದರೂ ಪರರಿಗೆ ಅದು ವೇದ್ಯವಾಗುವುದಿಲ್ಲ.ಏಕೆಂದರೆ ಮಾನ್ಯ ಗುಂಡಪ್ಪನವರು ಹೇಳಿದ ಹಾಗೆ, ಅವು ನಮ್ಮ ಮನಸ್ಸಿನ ಪದರ ಪದರಗಳಲ್ಲಿ ಒಳಹೊಕ್ಕು ಗಂಟು ಗಂಟಾಗಿ, ಗೋಜಲು ಗೋಜಲಾಗಿ, ಸುರುಳಿ ಸುರುಳಿಯಾಗಿ ಸೇರಿಕೊಂಡುಬಿಟ್ಟಿರುತ್ತೆ. ಎಲ್ಲ ರೀತಿಯ ಭಾವಗಳು, ಯೋಚನೆಗಳು, ಚಿಂತೆ, ಚಿಂತನೆಗಳು, ಹೀಗೇ ಸಾವಿರ ಸಾವಿರ ವಿಷಯಗಳು ಮನಸ್ಸಿನ ಅಂತರ್ಯದಲ್ಲಿ ತುಂಬಿಕೊಂಡಿರುತ್ತದೆ. ಆದರೆ ಈ ಯೋಚನೆಗಳು ಸುಮ್ಮನೆ ಬಂದು ಹೋದರೆ ಚಿಂತೆಯಿಲ್ಲ. ಆದರೆ ಅವು ನಮ್ಮನ್ನು ಅಲುಗಾಡಿಸಿ , ನಮ್ಮ ಜೀವನವನ್ನು ಕ್ಲಿಷ್ಟತೆಗೆ ತಳ್ಳಿದರೆ ಅದು ಕಷ್ಟದ ವಿಚಾರ. ಎಲ್ಲಿಯತನಕ ನಾವು ಅವುಗಳಿಗೆ ಅಂಟದೆ ಇರುತ್ತೇವೆಯೋ ಅಲ್ಲಿಯತನಕ ಒಳ್ಳೆಯದು.
ವಾಚಕರೆ ಮನಸ್ಸನ್ನು ವಿಶ್ಲೇಷಣೆ ಮಾಡುವುದು ಸುಲಭವಲ್ಲ. ಅದನ್ನೇ ಮಾನ್ಯ ಗುಂಡಪ್ಪನವರು ” .ಸ್ವಂತಕೇ ದುರ್ದರ್ಶ” ಎಂದರು.ಆದರೂ ನಮ್ಮ ನಮ್ಮ ಪರಿಮಿತ ಮತಿಯ ಮಿತಿಯಲ್ಲಿ ನಮ್ಮ ನಮ್ಮ ಮನಸ್ಸುಗಳನ್ನು ತಹಬಂದಿಯಲ್ಲಿಟ್ಟುಕೊಂಡರೆ ಸುಖ.
ರಸಧಾರೆ - 195
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು
ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು
ಬಗೆಯೆಷ್ಟೊ ಮೊಗವೆಷ್ಟು – ಮಂಕುತಿಮ್ಮ
ನರನಿಗಂತೆಯೇ = ನರನಿಗು+ಅಂತೆಯೇ // ಕಾಣಿಪುದೊಂದು = ಕಾಣಿಪುದು + ಒಂದು // ಸೊಗಸಿನೆಳಸಿಕೆಗೊಂದು = ಸೊಗಸಿನ+ಎಳಸಿಕೆಗೆ+ಒಂದು//
ತನ್ನಾತ್ಮಕಿನ್ನೊಂದು = ತನ್ನಾತ್ಮಕೆ + ಇನ್ನೊಂದು.
ನರನಿಗೆ, ನಾರಿಯನ್ನೂ ಸೇರಿ, ನಾಲ್ಕು ರೀತಿಯ ಮುಖಗಳಂತೆ. ಜಗತ್ತಿಗೆ ತೋರಲು ಒಂದು, ಮನೆಯಲ್ಲಿರುವ ಜನಗಳಿಗೆ ಒಂದು, ತನ್ನನ್ನು ತಾನಿ ನೋಡಿಕೊಳ್ಳುವುದಕ್ಕೆ ಒಂದು ಮುಖ ಮತ್ತು ಕಡೆಯದಾಗಿ ಅನ್ತಾರತ್ಮದ ಮುಖ. ಹೀಗೆ ಮನುಷ್ಯನಿಗೆ ಹಲವಾರು ಮುಖವಾಡಗಳು ಇರುತ್ತವೆ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.
ಪ್ರತಿ ಮನುಷ್ಯನೂ ತನ್ನನ್ನು ತಾನು ತೋರಿಸಿಕೊಳ್ಳುವುದಕ್ಕೆ ಅವನ ಅಂತರಂಗದ ವ್ಯಕ್ತಿತ್ವಕ್ಕಿಂತ ಭಿನ್ನವಾದ ಮುಖವನ್ನು ಜಗತ್ತಿಗೆ ತೋರುತ್ತಿರುತ್ತಾನೆ. ಕಾರಣಗಳು ಹಲವಾರು ಇರಬಹುದು. ತಾನು ಏನು ಎಂಬುದನ್ನು ಜಗಕ್ಕೆ ತೋರುವ ಬಯಕೆ, ಅವಶ್ಯಕತೆ ಮತ್ತು ಅನಿವಾರ್ಯತೆಗಳಿಗಾಗಿ ಜಗವು ಮೆಚ್ಚುವಂತಹ ಮುಖವಾಡವನ್ನು ಹಾಕಿಕೊಳ್ಳುತ್ತಾನೆ ಅಥವಾ ಜಗವನ್ನು ಮೆಚ್ಚಿಸಲು ಪ್ರಯತ್ನ ಪಡುತ್ತಾನೆ. ಬಹಳಷ್ಟು ಬಾರಿ ತಾನು ಏನು ಅಲ್ಲವೋ ಅದನ್ನೇ ತೋರುತ್ತಿರುತ್ತಾನೆ. ಉದಾ! ನಮ್ಮ ರಾಜಕಾರಣಿಗಳನ್ನೇ ನೋಡೋಣ. ಪ್ರತಿಯೊಬ್ಬನೂ “ಸಮಾಜ ಸೇವಕನ” ಮುಖವಾಡವನ್ನು ಧರಿಸುತ್ತಾನೆ, ಅಲ್ಲವೇ. ಇದು ಮೊದಲನೆಯ ಮುಖ.
ಇನ್ನು ತನ್ನ ಮನೆಯವರಿಗೆ ತೋರುವ ಮುಖ. ಸಂಸಾರವನ್ನು ಕಟ್ಟಿಕೊಂಡಮೇಲೆ ತನ್ನ ಮನೆಯವರನ್ನು ನೋಡಿಕೊಳ್ಳುವ , ಕಾಪಾಡುವ ಜವಾಬ್ದಾರಿಯನ್ನು ಹೆಗಲಿಗೇರಿಸಿ ಕೊಂಡಿರುತ್ತಾನೆ(ಳೆ). ಸಾಮಾನ್ಯವಾಗಿ ಕೊರತೆಗಳ ನಡುವೆಯೇ ಜೀವನವನ್ನು ಸಾಗಿಸಬೇಕಾದ ಅನಿವಾರ್ಯತೆಯಿಂದ, ತನ್ನ ಮನೆಯ ಸದಸ್ಯರನೆಲ್ಲರನ್ನೂ ಮೆಚ್ಚಿಸುವುದಕ್ಕಾಗಿ ಎಲ್ಲವೂ ಸಮರ್ಪಕವಾಗಿದೆ( ಇರದಿದ್ದರೂ) ಎನ್ನುವ ಒಂದು ಮುಖವನ್ನು ಸದಾ ಧರಿಸಿರುತ್ತಾನೆ. ಇದು ಎರಡನೆಯ ಮುಖ.
ಇನ್ನು ತನ್ನನ್ನು ತಾನೇ ನೋಡಿಕೊಳ್ಳುವ ಮುಖ. ತಾನೇನು, ತನ್ನ ಕೊರತೆಗಳು, ಸುಗುಣಗಳು, ದುರ್ಗುಣಗಳು, ಆಲೋಚನೆಗಳ ಶುದ್ಧತೆ ಮತ್ತು ಅಶುದ್ದತೆ ಯಾವ ಮಟ್ಟದಲ್ಲಿ ಇವೆ ಎನ್ನುವ ಸತ್ಯದ ಅರಿವು ಪ್ರತಿಯೊಬ್ಬರಿಗೂ ಇರುತ್ತದೆ. ಅಂತರಂಗದಲ್ಲಿ ಅದನ್ನು ಒಪ್ಪಿಕೊಂಡರೂ, ತಾನು ಅದನ್ನು ಹೊರಗೆ ತೋರಿದರೆ ತನ್ನ ಅಸ್ಥಿತ್ವಕ್ಕೇ ಧಕ್ಕೆ ಬರುತ್ತದೆಂಬ ಅರಿವೂ ಇರುತ್ತದೆ. ಇದು ತನ್ನ ಬಗ್ಗೆ ತನಗಿರುವ ಶುದ್ಧ ಅರಿವಿನ ಅಂತರಂಗದ ಮುಖ. ಇದು ಮೂರನೆಯ ಮುಖ.
ಪ್ರತಿ ಜೀವಿಯೂ ಅಧ್ಯಾತ್ಮ ಪ್ರಯಾಣದ ಯಾವುದೋ ಒಂದು ಹಂತದಲ್ಲಿ ಇರುತ್ತಾನೆ. ಪ್ರತಿ ಜೀವಿಗೂ ಅವನ ಜೀವನದ ಯಾವುದಾದರೂ ಸಮಯದಲ್ಲಿ ಈ ಜಗತ್ತಿನ ನಶ್ವರತೆಯ ಒಂದು ಆಯಾಮ ಗೋಚರಿಸುತ್ತದೆ.ಈ ಭಾವ ನಿರಂತರವಾಗಲ್ಲದಿದ್ದರೂ ಆಗಾಗ ಬಂದು ಹೋಗುವ ಭಾವವಾಗಿರಬಹುದು. ಆ ಸಮಯದಲ್ಲಿ ” ಅಯ್ಯೋ ಈ ಜಗತ್ತು ನಶ್ವರ, ನನ್ನ ಜೀವನ ಎಂದಿದ್ದರೂ ಕೊನೆಯಾಗಲೇ ಬೇಕು, ಒಂದು ದಿವಸ ಎಲ್ಲ ಬಿಟ್ಟು ಹೋಗಲೇ ಬೇಕು” ಎನ್ನುವ ಭಾವ ಬಂದು ಹೋಗಿರಬಹುದು. ಆ ಸಮಯದಲ್ಲಿ ಆ ವ್ಯಕ್ತಿ ಪರಮಾತ್ಮನನ್ನು ಅಂತರಂಗದಲ್ಲಿ ನೋಡುವ ಮುಖವನ್ನು ಹೊಂದಿರುತ್ತಾನೆ. ಇದು ನಾಲ್ಕನೆಯದು.
ಹೀಗೆ ಗುಂಡಪ್ಪನವರು ಹೇಳುವಂತೆ ಮನುಷ್ಯನಿಗೆ ನಾಲ್ಕು ಮುಖಗಳು.ವಾಸ್ತವ ಬದುಕಿನಲ್ಲಿ ಇವುಗಳ ಅನಿವಾರ್ಯತೆ ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರಸಕ್ತ ಸಮಾಜದಲ್ಲಿ ಇನ್ನೂ ಹತ್ತು ಹಲವಾರು ಮುಖವಾಡಗಳನ್ನು ಧರಿಸಿ ಈ ಜಗತ್ತಿನಲ್ಲಿ ಮನುಷ್ಯ ತನ್ನ ಸ್ವಾರ್ಥ ಸಾಧನೆಯನ್ನು ಮಾಡುತ್ತಿದ್ದಾನೆ. ಇವನಿಗೆ ರಾವಣನಂತೆ ಹತ್ತೇನು, ತಲೆಗಳು ಮತ್ತು ಮುಖಗಳು, ಅದಕ್ಕೂ ಹೆಚ್ಚಿರಬಹುದು. ನಮಗೆ ಎಷ್ಟು ಮುಖಗಳಿವೆ ಎಂದು ನಾವು ಆತ್ಮಾವಲೋಕನ ಮಾಡಿಕೊಂಡು ನಮಗಿರುವ ಮುಖವಾಡಗಳನ್ನು ಕಳಚಿದರೆ, ಮನಸ್ಸಿನ ಕ್ಲಿಷ್ಟತೆ ಕಡಿಮೆಯಾಗಬಹುದು.
ರಸಧಾರೆ - 196
ಮನಕೊಂದು ದರ್ಪಣವ ನಿರವಿಸೆಂತಾನುಂ
ಅನುಭವಿಪರವರಂದು ತಮ್ಮಂತರಂಗಗಳ
ಅನುಪಮಾಸಹ್ಯಗಳ – ಮಂಕುತಿಮ್ಮ
ಮನುಜಲೋಕವಿಕಾರಗಳನು = ಮನುಜಲೋಕ + ವಿಕಾರಗಳನು// ನೀನಳಿಸುವೊಡೆ = ನೀನ್+ಅಳಿಸು+ಒಡೆ// ನಿರವಿಸೆಂತಾನುಂ = ನಿರವಿಸೆ+ ಎಂತಾನುಂ // ಅನುಭವಿಪರವರಂದು = ಅನುಭವಿಪರ್ +ಅವರ್ +ಅಂದು//
ತಮ್ಮಂತರಂಗಗಳ = ತಮ್ಮ + ಅಂತರಂಗಗಳ // ಅನುಪಮಾಸಹ್ಯಗಳ = ಅನುಪಮ+ ಅಸಹ್ಯಗಳ.
ನಿರವಿಸೆ = ನಿರ್ಮಿಸೆ// ಎಂತಾನುಂ = ಹೇಗಾದರೂ
ಮನುಜರ ಮನಸ್ಸುಗಳಲ್ಲಿರುವ ವಿಕಾರಗಳನ್ನು ಅಳಿಸಿಹಾಕಿ ಅವರಲ್ಲಿ ನಿರ್ಮಲ ಮನೋ ಪ್ರವೃತ್ತಿಯನ್ನು ಉಂಟು ಮಾಡಲು ಪ್ರಯತ್ನಿಸಿ, ಆ ಮನಸ್ಸು ತನ್ನನ್ನು ತಾನೇ ನೋಡಿಕೊಳ್ಳುವಂಥಾ ಒಂದು ಕನ್ನಡಿಯನ್ನು ತಯಾರಿಸಿದರೆ, ಆಗ ಅವರುಗಳು ತಮ್ಮ ತಮ್ಮ ಮನಸ್ಸಿನ ಭಾವನೆಗಳನ್ನು ನೋಡಿಕೊಂಡರೆ, ಅಂತರಂಗದಲ್ಲಿ ಹುದುಗಿರುವ ಹೋಲಿಸಲಾಗದಷ್ಟು ಅಸಹ್ಯಕರವಾದ ಭಾವನೆಗಳನ್ನು ಅನುಭವಿಸುತ್ತಾರೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಪ್ರತಿಯೊಬ್ಬರೂ ಒಪ್ಪಲೇಬೇಕಾದ ವಿಷಯವೆಂದರೆ, ನಮ್ಮ ನಮ್ಮ ಮನಸ್ಸುಗಳೊಳಗೆ ಯಾರಿಗೂ ಹೇಳಲಾರದಂತಾ ವಿಷಯಗಳೆಷ್ಟೋ ಅಡಗಿವೆ. ನಮ್ಮನ್ನು ಆ ವಿಷಯಗಳು ಆಗಾಗ ಒಂದು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ನಮ್ಮಲ್ಲಿರುವ ಒಳ್ಳೆಯ ಭಾವಗಳನ್ನು ಮತ್ತು ನಾವು ಮಾಡಿದ ಒಳ್ಳೆಯ ಕಾರ್ಯಗಳನ್ನು ನಾವು ಬಚ್ಚಿಟ್ಟುಕೊಳ್ಳದೆ, ಎಲ್ಲರಿಗೂ ಸಾರುತ್ತೇವೆ. ಅನ್ಯರ ಗಮನ ಮತ್ತು ಪ್ರಶಂಸೆಯನ್ನು ಗಳಿಸುವುದಕ್ಕೋಸ್ಕರ. ಆದರೆ ನಾವು ಹೇಳಿದ ಸುಳ್ಳನ್ನೋ, ಮಾಡಿದ ಕಳ್ಳತನವನ್ನೋ, ಪ್ರದರ್ಶಿಸಿದ ಕಪಟವನ್ನೋ, ನಮ್ಮ ಮನಸ್ಸಲ್ಲಿ ಬಂದ ಒಂದು ನೀಚ ಆಲೋಚನೆಯನ್ನೋ ಯಾರಿಗೂ ಹೇಳುವುದಿಲ್ಲ. ಅವುಗಳನ್ನು,ನಮ್ಮನ್ನು ಕಟ್ಟಿಕೊಂಡವರಲ್ಲೋ, ನಮ್ಮನ್ನು ಹೆತ್ತವರಲ್ಲೋ, ನಾವು ಹೆತ್ತವರಲ್ಲೋ, ಹೀಗೆ ನಮಗೆ ಬಹಳ ಆಪ್ತರು ಎಂದು ಅನ್ನಿಸಿಕೊಳ್ಳುವರಲ್ಲೂ, ಹಂಚಿಕೊಳ್ಳುವುದಿಲ್ಲ. ಏಕೆಂದರೆ ನಾವು ಸದಾಕಾಲ ನಮ್ಮ ಶುದ್ಧ ಬಿಂಬವನ್ನು ಪ್ರದರ್ಶಿಸುವುದರಲ್ಲೇ ಆಸಕ್ತರು. ಇದನ್ನು ಬಹಿರಂಗವಾಗಲ್ಲದಿದ್ದರೂ ಕಡೆಯ ಪಕ್ಷ ಅಂತರಂಗದಲ್ಲಿಯಾದರೂ, ಎಲ್ಲರೂ ಸಮ್ಮತಿಸುವ ವಿಷಯವಲ್ಲವೇ.?
ಈ ರೀತಿಯ ಮಾನಸಿಕ ವಿಕಾರಗಳನ್ನು ನಮ್ಮ ನಮ್ಮ ಮನಸ್ಸುಗಳಿಂದ ಅಳಿಸಿಹಾಕಲು ಪ್ರಯತ್ನಪಟ್ಟು ಮನದೊಳಗೆ ಅಡಗಿರುವ ವಿಚಾರಗಳನ್ನು ನೋಡಿಕೊಳ್ಳಲು ಒಂದು ಕನ್ನಡಿಯನ್ನೇನಾದರೂ ನಿರ್ಮಿಸದರೆ, ನಮಗಲ್ಲಿ ಕಾಣುವುದು ಕೇವಲ ಇಂತಹ ಕುವಿಚಾರಗಳೇ ಹೊರತು ಬೇರಲ್ಲ. ಅದನ್ನು ಕಂಡು ನಾವು ನಮ್ಮ ಅಂತರಂಗದಲ್ಲಿ ನಾವೇ ಅಸಹ್ಯಪಡುವಂಥಾ ಯಾತನಾ ಭಾವವನ್ನು ಅನುಭವಿಸಬೇಕಾಗುವುದು. ನಮ್ಮ ಮನದ ಆಳದಲ್ಲಿ ಅಡಗಿ ಕುಳಿತಿರುವ ಅಂತಹ ವಿಚಾರಗಳನ್ನು ಅರಿತು, ನಮಗೆ ನಾವೇ ಅಸಹ್ಯಪಟ್ಟುಕೊಳ್ಳುವ, ಭಾವ ನಮಗೆ ಬರುತ್ತದೆ ಅಲ್ಲವೇ?
ಆದರೆ ಪ್ರಶೆ ಏನೆಂದರೆ, ನಮ್ಮ ನಮ್ಮ ಮನಸ್ಸುಗಳಲ್ಲಿ ಆ ರೀತಿಯ ಭಾವಗಳು ಸರಿಯೇ? ತಪ್ಪೇ? ಸಹಜವೇ? ಅಸಹಜವೇ? ಎಂದು ಒಂದು ಕ್ಷಣ ಯೋಚಿಸಿದಾಗ, ನನಗೆ ತೋರುವುದು ಹೀಗೆ. ಈ ರೀತಿಯ ಆಲೋಚನೆಗಳು ಬಹಳ ಸಹಜ. ಅವೆಲ್ಲ ಒಂದೇ ಬಾರಿಗೆ, ಕಾರಣವಿಲ್ಲದೆ ಬಂದು ನಮ್ಮ ಮನಸ್ಸಿನಲ್ಲಿ ಕೂರುವಂಥಾ ವಿಚಾರಗಳಲ್ಲ. ಪೂರ್ವ ಕರ್ಮ, ಪ್ರಸ್ತುತ ಸಂಸ್ಕಾರಗಳು, ನಮ್ಮ ಸಂಗಗಳು, ನಮ್ಮ ವಿದ್ಯೆ, ನಮ್ಮ ಪರಿಸರ, ಹೀಗೆ ಹತ್ತು ಹಲವಾರು ಕಾರಣಗಳಿಂದ ನಮಗೆ ಈ ರೀತಿಯ ಆಲೋಚನೆಗಳು ಬರುತ್ತವೆ ಮತ್ತು ಬಂದ ವಿಚಾರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಇದು ಬಹಳ ಸಹಜವಾಗಿ ಆಗುವ ಪ್ರಕ್ರಿಯೆ. ನಮ್ಮ ಮನಸ್ಸಿನಲ್ಲಿ ಕೆಟ್ಟ ಅಥವಾ ನೀಚ ಆಲೋಚನೆಗಳಿವೆ ಎಂದಾಕ್ಷಣ ನಾವು ಕೊರಗಿ ಕುಗ್ಗಬೇಕಾಗಿಲ್ಲ. ಅದನ್ನು ಈ ದರ್ಪಣದಲ್ಲಿ ನೋಡಿಕೊಳ್ಳುವ ಧೈರ್ಯ ಮತ್ತು ನೋಡಿಕೊಂಡಾಗ ಅದರ ಅರಿವು, ನಮಗೆ ಆಗುತ್ತದಲ್ಲ ಅದೇ ಒಂದು ಸಾಧನೆ. ಅದು ಸರಿಯಲ್ಲ ಎಂದು ನಾವು ಒಪ್ಪಿಕೊಳ್ಳುವುದು ಮತ್ತೊಂದು ಸಾಧನೆ. ಅದನ್ನು ಅಳಿಸುವ ಮತ್ತು ಪುನಃ ಅಂತಹ ಆಲೋಚನೆಗಳು ಮತ್ತು ವಿಚಾರಗಳು ನಮ್ಮ ಮನದಲ್ಲಿ ನುಸುಳದ ಹಾಗೆ ಎಚ್ಚರ ವಹಿಸುವುದು ಒಂದು ಉತ್ತಮ ಸಾಧನೆ. ಹಾಗೆ ಅವುಗಳನ್ನು ತಡೆದು ನಮ್ಮ ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಳ್ಳಲು ನಾವು ಯಶಸ್ವಿಯಾದರೆ ಅದು ಬೃಹತ್ ಸಾಧನೆ !!!
ವಾಚಕರೆ ನಾವೂ ಸಹ ನಮ್ಮ ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಳ್ಳುವ ಪ್ರಯತ್ನ ಪಡೋಣವೇ?
ರಸಧಾರೆ - 197
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ
ವಣಗಿಹುವು ನರಮನದಿ – ಮಂಕುತಿಮ್ಮ
ಚೇಷ್ಟೆಗಳೆಲ್ಲವಣಗಿಹುವು = ಚೇಷ್ಟೆಗಳೆಲ್ಲವು + ಅಣಗಿಹವು
ಕೋಪಗೊಂಡ ಹುಲಿ, ಕೆರಳಿದ ಸಿಂಹ, ಮುಳ್ಳಿನ ಕರಡಿ, ಛಲ ಹಿಡಿದ ನಾಗರಹಾವು, ಚೇಷ್ಟೆಯ ಕಪಿ, ಬೇಟೆಯಾಡುವ ಸೀಳು ನಾಯಿ ಮೊದಲಾದ ಮೃಗಗಳ೦ತೆ ಹೋರಾಡುವ ಮುಖವಾಡ ಹೊತ್ತು ಘೋರವಾದ ದುಷ್ಟತೆಯಿಂದ ಕೂಡಿದ ಚೇಷ್ಟೆಗಳೆಲ್ಲ ಈ ಮಾನವನ ಮನಸ್ಸಿನಲ್ಲಿ ಅಡಗಿವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
ಒಬ್ಬ ಮನುಷ್ಯ ಮಾನವ ಜನ್ಮವನ್ನು ತಳೆಯುವ ಮೊದಲು ಹಲವಾರು ಪ್ರಾಣಿ, ಪಕ್ಷಿ, ಕೀಟ ಮುಂತಾದ ದೇಹಗಳನ್ನು ಧರಿಸಿ ನಂತರ ಮಾನವ ಜನ್ಮವನ್ನು ಪಡೆಯುತ್ತಾನೆ ಎಂದು ಹೇಳುತ್ತದೆ ನಮ್ಮ ಸನಾತನ. ಒಂದು ಆತ್ಮ ಮನುಷ್ಯ ಜನ್ಮಕ್ಕೆ ಎಂದು ಬಂದಿತು ಎಂದು ಹೇಳಲು ಅಸಾಧ್ಯ. ಕೆಲ ಆತ್ಮಗಳು ಬಹಳ ಹಿಂದೆ ಮತ್ತು ಕೆಲ ಆತ್ಮಗಳು ಇತ್ತೀಚಿಗೆ ಬಂದಿರಬಹುದು. ಹಾಗೆ ಇತೀಚೆಗೆ ಬಂದ ಆತ್ಮಗಳು ತಮ್ಮ ಪೂರ್ವ ಜನ್ಮದ ವಾಸನೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಿಕೊಳ್ಳದೆ ಇದ್ದ ಪಕ್ಷದಲ್ಲಿ ಈ ಜನ್ಮದಲ್ಲೂ ಆ ವಾಸನೆಗಳ ಛಾಯೆ ಇರುವುದಲ್ಲವೇ? ಹಾಗೆ ಇದ್ದ ಗುಣಗಳೇ ಈಗ ಪ್ರದರ್ಶಿಸಲ್ಪಡುತ್ತವೆ.
ಹಾಗಾಗಿ ನಾವು ಕೆಲವರನ್ನು ಹುಲಿಯಂತೆ ಕೋಪಗೊಳ್ಳುವವರನ್ನೂ, ಸಿಂಹದಂತೆ ಕೆರಳುವವರನ್ನೂ, ಹಾವಿನಂತೆ ಛಲ ಹಿಡಿಯುವವರನ್ನೂ, ನಾಯಿಯಂತೆ ಆಡುವವರನ್ನೂ ನಮ್ಮ ಸಮಾಜದಲ್ಲಿ ಕಾಣುತ್ತೇವೆ. ಅಷ್ಟೇ ಏಕೆ ಒಬ್ಬನೇ ವ್ಯಕ್ತಿ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಪ್ರಾಣಿಗಳಂತೆ ಆಡುವುದನ್ನೂ ನಾವು ಕಾಣುವುದಿಲ್ಲವೇ? ” ಅವನು ಒಳ್ಳೆ ಕೋತಿ ಥರ ಆಡ್ತಾನೆ” ಅಥವಾ ” ಯಾಕೋ ಒಳ್ಳೆ ನಾಯಿ ಥರ ಆಡ್ತೀಯಾ?” ಎನ್ನುವ ಮಾತುಗಳನ್ನು ನಾವು ಬಹಳಷ್ಟು ಬಾರಿ ಕೇಳುತ್ತೇವಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು ” ಘೋರಚೇಷ್ಟೆಗಳೆಲ್ಲವಣಗಿಹುವು” ಎಂದು ಮಾನವನ ಮನಸ್ಸಿನ ಒಂದು ಮುಖವನ್ನು ವಿಶ್ಲೇಷಿಸುತ್ತಾರೆ.
ಪ್ರಾಣಿಗಳಿಗೆ ಅವು ಸಹಜ ಗುಣಗಳು. ಆದರೆ ಮನುಷ್ಯನಿಗೆ ಗುಂಡಪ್ಪನವರು ಹೇಳುವಂತೆ ಅವು ” ದುಷ್ಟ ಗುಣಗಳು”. ಪ್ರಾಣಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು, ತಮ್ಮ ಸಂತತಿಯನ್ನು ಬೆಳೆಸಲು ಮತ್ತು ತಮ್ಮ ಆಹಾರ ಹುಡುಕಲು ಮಾತ್ರ ಈ ಗುಣಗಳನ್ನು ಪ್ರದರ್ಶಿಸುತ್ತವೆ. ಆದರೆ ಮನುಷ್ಯ ದುರಾಸೆಯ, ಸ್ವಾರ್ಥದ ಮತ್ತು ಅಹಂಕಾರದ ಭಾವಗಳನ್ನು ಪ್ರದರ್ಶಿಸಲು ಈ ದುಷ್ಟ ಗುಣಗಳನ್ನು ಉಪಯೋಗಿಸುತ್ತಾನೆ. ಇಡೀ ಸೃಷ್ಟಿಯೇ ತನಗಾಗಿ ಸೃಷ್ಟಿಸಲ್ಪಟ್ಟಿದೆ ಎನ್ನುವ ದುರಹಂಕಾರ ಮನುಷ್ಯನಿಗೆ. ಸ್ವಾರ್ಥ ಸಾಧನೆಗಾಗಿ ಯಾವ ಪ್ರಾಣಿಯ ವೇಷವನ್ನಾದರೂ ಹಾಕಲು ಅಥವಾ ಯಾವುದೇ ಪ್ರಾಣಿಯ ಗುಣವನ್ನು ಪ್ರದರ್ಶಿಸಲು ಇವನು ಹೇಸುವುದಿಲ್ಲ.
ನಾವು ಮಾನವರು ಮೃಗಗಳ ಕೀಟಗಳ ಮತ್ತು ಅನ್ಯ ಪ್ರಾಣಿಗಳ ದೈಹಿಕ ಸ್ಥರವನ್ನು ಬಿಟ್ಟು ಮೇಲೆ ಬಂದಿದ್ದೇವೆ. ಅವುಗಳ ಗುಣಗಳನ್ನೂ ಸಂಪೂರ್ಣವಾಗಿ ಬಿಟ್ಟರೆ, “ನಾವು ಮಾನವರು” ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇಲ್ಲದಿದರೆ, ನಾವು ಆ ಗುಣಗಳನ್ನು ಬಿಡದಿದ್ದರೆ, ಮತ್ತೆ ಪ್ರಾಣಿಗಳಾಗುವ ಸಂಭವ ಉಂಟು. ಹಾಗಾಗಿ ನಾವು ಬಹಳ ಜಾಗರೂಕರಾಗಿ ನಮ್ಮ ಗುಣಗಳನ್ನು ನಾವೇ ವಿಶ್ಲೇಷಣೆ ಮಾಡುತ್ತಾ, ನಮ್ಮ ಗುಣಗಳನ್ನು ಸುಧಾರಿಸಿಕೊಳ್ಳುವ ಪ್ರಯತ್ನವನ್ನು ಪಡಬೇಕು.
ರಸಧಾರೆ - 198
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು
ತಾತ್ವಿಕಡಯೋಜೆನಿಸ್ – ಮಂಕುತಿಮ್ಮ
ಸತ್ಯವಂತನನರಸೆಲೆನುತ= ಸತ್ಯವಂತನನು+ಅರಸಲು+ ಎನುತ// ಕೆಟ್ಟುದೀ = ಕೆಟ್ಟದು + ಈ
ಈಗ್ಗೆ ೨೪೨೪ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಜನಿಸಿದ ಡಯೋಜೆನಿಸ್ ಎಂಬ ತತ್ವಜ್ಞಾನಿಯು “ಸತ್ಯವಂತನಾದ ವ್ಯಕ್ತಿಯಾರಾದರೂ ಸಿಗುವನೋ” ಎಂದು ಹಗಲಿನ ಹೊತ್ತಿನಲ್ಲಿ ದೀವಿಗೆಯನ್ನು ಹಿಡಿದುಕೊಂಡು ಪೇಟೆಬೀದಿಗಳಲ್ಲಿ ಹುಡುಕಿದನಂತೆ. ಅವನಿಗೆ ಯಾರೂ ಸಿಗದಾಗ, “ಈ ಜಗತ್ತು ಕೆಟ್ಟು ಹೋಗಿದೆ” ಎಂದು ತನ್ನ ಮನೆಯಲ್ಲಿ ಒಂದು ತೊಟ್ಟಿಯನ್ನು ಕಟ್ಟಿಸಿ ಅದರೊಳಗೆ ವಾಸಿಸತೊಡಗಿದನಂತೆ, ಎನ್ನುತ್ತಾ ಒಂದು ವಿಡಂಬನೆಯನ್ನು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರು ಪ್ರಸ್ತಾಪ ಮಾಡಿದ್ದಾರೆ.
” ಕಿಸಾ ಗೌತಮಿಯಲ್ಲಿ” ಗೌತಮನು ” ಸಾವಿಲ್ಲದ ಮನೆಯ ಸಾಸಿವೆ ತಾ” ಎಂದನಂತೆ. ಹಾಗಲ್ಲದೆ” ಸುಳ್ಳನ್ನೇ ಹೇಳದವನ ಮನೆಯಲ್ಲಿ ಸಾಸಿವೆ ತಾ ” ಎಂದಿದ್ದರೂ ಸಮರ್ಪಕವಾಗೆ ಇರುತಿತ್ತು ಎಂದು ಅನಿಸುತ್ತದೆ. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲೂ ಎಂದಾದರೂ, ಒಂದಾದರೂ ಸುಳ್ಳನ್ನು ಹೇಳದಿರುವಂತ ವ್ಯಕ್ತಿ ಸಿಗುವುದೇ ಇಲ್ಲ . ಇದೇ ಅನುಭವ ದಾರ್ಶನಿಕ ಡಯೋಜೆನಿಸ್ ಗೂ ಆಯಿತು. ೫೬೮ ವರ್ಷಗಳ ಹಿಂದಿನ , ನಮ್ಮ ಕನ್ನಡ ಪುರಂದರ ದಾಸರು” ಸತ್ಯವಂತರಿಗೆ ಇದು ಕಾಲವಲ್ಲ, ದುಷ್ಟ ಜನರಿಗೆ ಇದು ಸುಭಿಕ್ಷಕಾಲ ” ಎಂದು ಎಂದೋ ಹೇಳಿದ್ದಾರೆ. ಅವರಿಗೆ ಹಾಗೆ ಅಂದೇ ಅನಿಸಿದ್ದರೆ, ಇಂದಿನ ಪರಿಸ್ಥಿತಿ ಏನು ಎಂದು ವಾಚಕರೇ ಊಹಿಸಿಕೊಳ್ಳಬಹುದು.
ನಮ್ಮ ಸನಾತನದಲ್ಲಿ ” ಸತ್ಯಂ ಬ್ರೂಯಾತ್” ” ಸತ್ಯಮೇವ ಜಯತೆ” ಸತ್ಯಂ ವದ” ” ಸತ್ಯಾ ನ ಪ್ರಮದಿತವ್ಯಂ ” ಸತ್ಯ೦ ಚ ಸ್ವಾಧ್ಯಾಯ ಪ್ರವಚನೇಚ” ಎನ್ನುವ ಮತ್ತು ಸತ್ಯವನ್ನೇ ಹೇಳಬೇಕೆಂದು ಪ್ರತಿಪಾದಿಸುವ ಹಲವಾರು ಸೂಕ್ತಗಳು ಹೇರಳವಾಗಿ ಸಿಗುತ್ತದೆ. ಸತ್ಯದ ಮಹಿಮೆಯನ್ನು ಪುರಸ್ಕರಿಸಲು, ” ಹರಿಶ್ಚಂದ್ರ “ನ ಕಥೆಯನ್ನು ಬರೆಯಲಾಯಿತು. ನಮ್ಮ ಭಾರತೀಯ ನೀತಿಕತೆಗಳಲ್ಲಿ, ಸುಭಾಷಿತಗಳಲ್ಲಿ, ಶಿವ ಶರಣರ ವಚನಗಳಲ್ಲಿ, ಸತ್ಯವನ್ನೇ ನುಡಿಯಬೇಕು , ನೃತವನ್ನು ನುಡಿಯಬಾರದು ಎಂದು ಹಲವಾರು ದೃಷ್ಟಾಂತಗಳಿಂದ ಸತ್ಯದ ಮಹಿಮೆಯನ್ನು ಕೊಂಡಾಡಿದ್ದಾರೆ. ಕೇವಲ ನಮ್ಮ ಕನ್ನಡದಲ್ಲಿ ಇರುವ ” ಪುಣ್ಯಕೋಟಿಯ “ಕತೆಯೇ ಮನ ಕರಗಿಸುವಂತೆ ಸತ್ಯವಚನದ ಮಹಿಮೆಯನ್ನು ತಿಳಿಸಿದೆಯಲ್ಲ.
ತೈತ್ತರೀಯ ಉಪನಿಷತ್ತಿನಲ್ಲಿ ” ಸತ್ಯ” ಮತ್ತು ” ಋತ” ವೆನ್ನುವ ಎರಡು ಪ್ರಯೋಗಗಳು ಬರುತ್ತದೆ. ಮಾನ್ಯ ಗುಂಡಪ್ಪನವರು ಒಂದು ಸಣ್ಣ ಪುಸ್ತಕದಲ್ಲಿ ಅದನ್ನು ವಿಶ್ಲೇಷಣೆ ಮಾಡುತ್ತಾ ” ಋತ”ವೆಂದರೆ ಮನಸ್ಸಿನಲ್ಲಿ ಅಡಗಿದ ವಿಚಾರ ಮತ್ತು ಸತ್ಯವೆಂದರೆ ಆ ಮನಸ್ಸಿನೊಳಗಿನ ವಿಚಾರ ಹಾಗೆಯೇ ಪ್ರಕಟವಾದರೆ, ಹೇಳಿದರೆ ಅದು ” ಸತ್ಯ” ವೆನಿಸಿಕೊಳ್ಳುತ್ತದೆ. ಹಾಗಾದರೆ ಒಳ್ಳೆಯದೇ? ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅದು ಸಾಧ್ಯವೂ ಅಲ್ಲ. ಮನಸ್ಸಿಗೆ ಬಂದ ವಿಚಾರವನ್ನೆಲ್ಲ ಹೊರಹಾಕುತ್ತಾ ಹೋದರೆ ” ಹುಚ್ಚನೆಂಬ ” ಬಿರುದನ್ನೂ ಪಡೆದುಕೊಳ್ಳ ಬೇಕಾಗುತ್ತದೆ. ಹಾಗೆಯೇ ” ನ ಬ್ರೂಯಾತ್ ಸತ್ಯಮಪ್ರಿಯಂ” ಎಂದರೆ ಅಪ್ರಿಯವಾದ ಸತ್ಯವನ್ನು ನುಡಿಯಬೇಡ, ಎಂದೂ ಹೇಳಿದ್ದಾರಲ್ಲವೆ?
ವಾಚಕರೇ ಸತ್ಯವನ್ನು ನುಡಿದರೆ ಮನಸ್ಸಿಗೆ ನಿರಾಳ. ಸತ್ಯವನ್ನು ನುಡಿದರೆ ನಮ್ಮ ಅಂತರಂಗ ಶುದ್ಧವಾಗಿರುತ್ತದೆ. ಸತ್ಯವನ್ನು ನುಡಿಯುತ್ತೇವೆಯೋ ಇಲ್ಲವೋ ಆದರೆ ಸುಳ್ಳು ಹೇಳುವ ಅವಶ್ಯಕತೆ ನಮಗೆ ಬಾರದಿದ್ದರೆ ಅದೇ ಪುಣ್ಯ. ಯಾರಿಗೆ ಏನು ಬೇಕೋ ಅದನ್ನು ನುಡಿಯಬಹುದು. ಹಾಗೆ ನುಡಿದದ್ದರಿಂದ ಬಂದದ್ದನ್ನು ಅನುಭವಿಸಬಹುದು. ಆಯ್ಕೆ ಅವರವರಿಗೇ ಬಿಟ್ಟದ್ದಲ್ಲವೇ?
ರಸಧಾರೆ - 199
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ
ಇದಮಿತ್ಥಂಮೆಲ್ಲಿಹುದು ಮನುಜಸ್ವಭಾವದಲಿ
ವಿಧಿಯ ಕೈ ಚಿತ್ರವಿದು – ಮಂಕುತಿಮ್ಮ
ಪದರಪದರಗಳಿಹವು = ಪದರ ಪದರಗಳು+ ಇಹವು // ಗಂಟುಗಂಟುಗಳಿಹವು = ಗಂಟು ಗಂಟುಗಳಿಹವು // ವಾಕ್ಚರ್ಯೆಗಳಲಿ = ವಾಕ್+ ಚರ್ಯೆಗಳಲಿ// ಇದಮಿತ್ಥಂಮೆಲ್ಲಿಹುದು = ಇದಮಿತ್ಥಂ + ಎಲ್ಲಿಹುದು
ವಾಕ್ಚರ್ಯೆಗಳಲಿ = ಮಾತು ಮತ್ತು ಕೃತಿಯಲಿ// ಇದಮಿತ್ಥಂ = ಇದು “ಇದೇ” ಎಂದು ಹೇಳುವುದು
ಮನುಷ್ಯನ ಹೃದಯದ ಮತ್ತು ಬುದ್ಧಿಯ ಭಾವಗಳು, ಅವನ ಮಾತುಗಳು ಮತ್ತು ಕೃತಿಗಳು ಗೋಜಲು ಗೋಜಲಾಗಿಯೂ ಸಿಕ್ಕು ಸಿಕ್ಕಾಗಿ ಗಂಟಾಗಿಯೂ ಇವೆ. ಮನುಷ್ಯರ ಸ್ವಭಾವ ” ಹೇಗೇ ” ಎಂದು ಹೇಳಲಾಗದು. ಬಹುಷಃ ಇದು ವಿಧಿಯ ಕ್ರಮದಿಂದಾದ ಚಿತ್ರವಿರಬಹುದು ಎಂದು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.
ಮನುಷ್ಯರ ಮನಸ್ಸಿನ ವಿಚಾರಗಳನ್ನು ಅರಿಯುವುದೇ ಸಾಧ್ಯವಿಲ್ಲ. ಎಲ್ಲವೂ ನಿಗೂಢ . ಅಷ್ಟೇ ಅಲ್ಲ ಗೋಜಲು, ಕಗ್ಗಂಟು. ಒಂದು ಕ್ಷಣವಿದ್ದ ವಿಚಾರ ಮತ್ತೊಂದು ಕ್ಷಣವಿಲ್ಲ. ಕೆಲ ದಿವಸಗಳಲ್ಲಿ ಇದ್ದ ಸ್ವಭಾವ ಮತ್ತೊಂದು ಕಾಲಕ್ಕೆ ಇರುವುದಿಲ್ಲ. ಬಿಡಿಸಲಾಗದ ಗಂಟುಗಳ ಹಂದರವೇ ಮನುಷ್ಯನ ಮನಸ್ಸು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಅಷ್ಟೇ ಅಲ್ಲ ಆಡುವುದು ಒಂದಾದರೆ ಮಾಡುವುದು ಇನ್ನೊಂದು. ಕ್ಷಣ ಕ್ಷಣಕ್ಕೂ ಬದಲಾಗುವ ಮನಸ್ಸಿನ ಪರಿ.
ನಾವು ನಮ್ಮ ಜೀವನದಲ್ಲಿ ಹತ್ತು ಹಲವಾರು ವ್ಯಕ್ತಿಗಳೊಡನೆ ಸಂಪರ್ಕವನ್ನು ಹೊಂದಿರುತ್ತೇವೆ. ” ಅವರು ನನಗೆ ಚೆನ್ನಾಗಿ ಗೊತ್ತು” ಎಂದು ಹಲವರು ಹೇಳುವುದನ್ನು ನಾವು ಆಗಾಗ ಕೇಳುತ್ತಲಿರುತ್ತೇವೆ. ವಿಚಿತ್ರವಲ್ಲವೇ? ನಮಗೆ ನಾವೇ ಏನು ಎಂದು ಅರ್ಥವಾಗುವುದಿಲ್ಲ. ಹಾಗಿದ್ದಮೇಲೆ ಬೇರೆಯವರನ್ನು ” ಅವರು ನನಗೆ ಚೆನ್ನಾಗಿ ಗೊತ್ತು” ಎಂದು ಹೇಳುವುದು ಎಷ್ಟು ಸೂಕ್ತ . ಪರಿಚಯ ಎನ್ನುವುದು ಸೂಕ್ತ ಪದವಾದೀತು. ಎಲ್ಲರ ಮನಸ್ಸು ಹಾಗೆ ಏಕೆ ಇರುತ್ತದೆ? ನಮಗೇಕೆ ಅರ್ಥವಾಗುವುದಿಲ್ಲ ಎನ್ನುವ ಪ್ರಶ್ನೆಗೆ ನಮಗೆ ಉತ್ತರ ಸಿಗುವುದೇ ಇಲ್ಲ.
ಇದು ಏಕೆ ಹೀಗೆ ಇದೆ ಎಂದು ವಿಚಾರವಂತರ ಮನಗಳಲ್ಲಿ ಮಂಥನ ನಡೆದೇ ಇರುತ್ತದೆ. ಆದರೆ ಉತ್ತರ ಸಿಗುವುದೇ ಇಲ್ಲ. ಪ್ರಕೃತಿಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆಯೋ ಅಷ್ಟೊಂದು ವೈವಿಧ್ಯತೆ ಈ ಮಾನವನ ಮನಸ್ಸಿನಲ್ಲಿದೆ. ಪ್ರಕೃತಿಯ ವೈವಿಧ್ಯತೆಯನ್ನು ಸೃಷ್ಟಿಸಿದ ಪರಮ ಚೇತನವೇ ಮನುಜ ಮನಸ್ಸಿನ ವೈವಿಧ್ಯತೆಯನ್ನೂ ಸೃಷ್ಟಿಸಿದೆ ಎನ್ನುವ ಅರ್ಥದಲ್ಲೇ ಮಾನ್ಯ ಗುಂಡಪ್ಪನವರು ” ವಿಧಿಯ ಕೈ ಚಿತ್ರವಿದು ” ಎಂದಿದ್ದಾರೆ.
ವಾಚಕರೆ ಮಾನವನ ಮನಸ್ಸು ಎನ್ನುವ ಗೊಂಡಾರಣ್ಯದಲ್ಲಿ ಇರುವ ದಾರಿಗಳೆಷ್ಟೋ, ಗುಹೆಗಳೆಷ್ಟೋ, ಬೆಟ್ಟ ಗುಡ್ಡಗಳೆಷ್ಟೋ, ಸುಳಿ – ಜಲಪಾತಗಳೆಷ್ಟೋ ಯಾರೂ ಅರಿಯಲು ಸಾಧ್ಯವಿಲ್ಲ. ಪಂಚ ಭೂತಗಳೆಷ್ಟು ವಿಶಾಲವೋ, ನಿಗೂಢವೋ, ಅಷ್ಟೇ ನಿಗೂಢ ನಮ್ಮ ಮನಸ್ಸು. ಇದು ವಿಧಿಯಿಂದ ನಿರ್ಮಿತವಾದದ್ದು. ನಾವು ನಮ್ಮ ಸ್ವಪ್ರಯತ್ನದಿಂದ ಅಲ್ಪ ಸ್ವಲ್ಪ ಅರ್ಥಮಾಡಿಕೊಂಡು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನ ಪಡಬಹುದಷ್ಟೇ!
ರಸಧಾರೆ – 200
ಹೊಟ್ಟೆ ಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತು ನೀಂ ಪೆರರ
ದಿಟ್ಟಿಸುತ ಕರುಬುವೆಯೋ – ಮಂಕುತಿಮ್ಮ
ಹೊಟ್ಟೆಯೊಂದರ = ಹೊಟ್ಟೆ+ ಒಂದರ// ಸಾಲದೆಂದೇನೋ = ಸಾಲದು +ಎಂದು + ಏನೋ// ನೆಟ್ಟಿಹನು = ನೆಟ್ಟು + ಇಹನು
ಕಿಚ್ಚಿನ = ಬೆಂಕಿಯ, ಉರಿಯ// ಪೆರರ + ಪರರ // ದಿಟ್ಟಿಸುತ = ನೆಟ್ಟ ನೋಟದಿ ನೋಡುತ// ಕರುಬುವೆಯೋ = ಕೊರಗುವೆಯೋ
ಊಟದ ಚಿಂತೆಯೊಂದು ಸಾಲದೇನೋ ಎಂಬಂತೆ, ಅಸೂಯೆ ಅಥವಾ ಹೊಟ್ಟೆಯುರಿಯ ಬೆಂಕಿಯನ್ನು ಮನುಷ್ಯರ ಮನಸ್ಸುಗಳಲ್ಲಿ ಆ ವಿಧಿಯು ನೆಟ್ಟಿದ್ದಾನೆ. ಹೊಟ್ಟೆಬಾಕತನಕ್ಕೆ ಅಥವಾ ಹಸಿವಿಗೆ ಹೆಸರಾದ ಪ್ರಾಣಿ ತೋಳ. ಆ ತೋಳವೂ ಹೊಟ್ಟೆ ತುಂಬಿದರೆ ನೆಮ್ಮದಿಯಿಂದ ನಿದ್ದೆ ಮಾಡುತ್ತದೆ, ಆದರೆ ಮನುಷ್ಯ ಮಾತ್ರ ಅನ್ಯರನ್ನು ನೋಡಿ ಕೊರಗುತ್ತಿರುತ್ತಾನೆ ಎಂದು ಮನುಷ್ಯರ ಅಸೂಯಾ ಪ್ರವೃತ್ತಿಯನ್ನು ಉಪಮೆಯ ಸಹಿತ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ತಮಗಿಂತ ಕಡಿಮೆ ಇರುವವರನ್ನು ನೋಡಿ ಗರ್ವ ಅಥವಾ ಮದ ತೋರುವ ಪ್ರವೃತ್ತಿಯಂತೆಯೇ, ನಮಗಿಂತ ಅಧಿಕ ಪಡೆದವರನ್ನು ಕಂಡು ಅಸೂಯೆ ಪಡುವುದು ಮತ್ತು ಕೊರಗುವುದೂ ಸಹ ಅರಿಷಡ್ವರ್ಗಗಳಲ್ಲಿ ಒಂದು. ಸಾಮಾನ್ಯವಾಗಿ ಎಲ್ಲ ಮನುಷ್ಯರಲ್ಲೂ ಈ ಗುಣ ಪರಿಮಾಣ ಭೇದವಿದ್ದರೂ ಇದ್ದೇ ಇರುತ್ತದೆ. “ಬಡತನಕೆ ಉಂಬುವ ಚಿಂತೆ, ಉ೦ಬುವುದಾದರೆ ಉಡುವ ಚಿಂತೆ, ಉಡುವುದಾದರೆ ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆ ” ಎನ್ನುತ್ತಾರೆ ನಮ್ಮ ಶಿವ ಶರಣರು. ಮನುಷ್ಯರ ಈ ಅವಶ್ಯಕತೆಗಳ ಚಿಂತೆ ನಿರಂತರ, ಒಂದರ ನಂತರ ಒಂದು. ಒಂದಕ್ಕೂ ಇನ್ನೊಂದಕ್ಕೂ ಅಂತರವೇ ಇರುವುದಿಲ್ಲ. ” ಇಷ್ಟಾದರೆ ಅಷ್ಟರಾಸೆ” ಎಂದು ದಾಸರು ಹೇಳುವಂತೆ ಮೊದಲು ಅವಶ್ಯಕತೆಗಾಗಿ ಒಂದು ಆಸೆ ಮನಸ್ಸಲ್ಲಿ ಹುಟ್ಟುತ್ತದೆ. ಆ ಆಸೆ ಪೂರೈಸಿದರೆ ಇನ್ನೊಂದು ಆಸೆ ಹುಟ್ಟುತ್ತದೆ . ಮೊದಲು ಅವಶ್ಯಕತೆಗೆಷ್ಟು ಬೇಕೋ ಅಷ್ಟರ ಪೂರೈಕೆ ನಂತರ ಇನ್ನಷ್ಟು ಬೇಕೆನ್ನುವ ದುರಾಸೆ.
ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು “ಹೊಟ್ಟೆ” ಎಂದು ಮಾನವನ ಮೂಲ ಅವಶ್ಯಕತೆಯನ್ನು ಉಲ್ಲೇಖಿಸಿದ್ದಾರೆ. ನಮಗೆ ಹೊಟ್ಟೆಯದಷ್ಟೇ ಅಲ್ಲ, ಇನ್ನೂ ಹತ್ತು ಹಲವಾರು ಅವಶ್ಯಕತೆಗಳುಂಟು. ಪ್ರತಿ ನಿತ್ಯ ಈ ಅವಶ್ಯಕತೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾವು ಅವುಗಳನ್ನು ಮಿತಿಗೊಳಿಸಲು ಒಂದು ಗೆರೆ ಎಳೆಯಲು ಅಸಮರ್ಥರಾಗಿದ್ದೇವೆ. ಹೀಗೆ ನಮ್ಮ ಆಸೆಗಳ ಪಟ್ಟಿ ಮತ್ತು ಒಂದೊಂದು ಆಸೆಯೂ ಗಾತ್ರದಲ್ಲಿಯೂ ಬೆಳೆಯುತ್ತಾ ಹೋಗುತ್ತದೆ. ಹಾಗೆ ಬೃಹದಾಕಾರದಲ್ಲಿ ಬೆಳೆಯುವ ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ನಾವು “ಪಡುವ ಪಾಡೇನು” ಎಂದು ಒಂದು ಸರ್ತಿ ಅವಲೋಕಿಸಿಕೊಂಡರೆ ನಮಗೆ ಬಗ್ಗೆಯೇ ಅಸಹ್ಯ ಬರುತ್ತದೆ.
ನಮ್ಮ ಸಾಮರ್ಥ್ಯವನ್ನು ಉಪಯೋಗಿಸಿ ನಾವು ನಮ್ಮ ಆಸೆಗಳ ಬೆಟ್ಟವನ್ನು ಏರಿದರೆ, ಸಾಧಿಸಿದರೆ ಸರಿ. ಆದರೆ ಸಾಮರ್ಥ್ಯವಿಲ್ಲದಿದ್ದರೂ ನಮ್ಮ ಯೋಗ್ಯತೆಗೆ ಮೀರಿದ ಆಸೆ ಪಡುವುದು, ಅದನ್ನು ಪೂರೈಸಿಕೊಳ್ಳಲಿಕ್ಕಾಗಿ ಮಾಡಬಾರದ ಕೆಲಸವನ್ನು ಮಾಡುತ್ತಾ, ನಮ್ಮ ಮತ್ತು ಅನ್ಯರ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡುತ್ತಾ, ಈ ಪ್ರಯತ್ನದಲ್ಲಿ ಜಯಗಳಿಸಿದರೆ ಬೀಗುತ್ತಾ, ಸೋತರೆ ಕೊರಗುತ್ತಾ ಮತ್ತಷ್ಟು ಅಸೂಯೆಯನ್ನು ಹೆಚ್ಚಿಸಿಕೊಳ್ಳುತ್ತಾ, ಗತವನ್ನು ಮೆಲುಕುಹಾಕುತ್ತಾ ಇನ್ನಷ್ಟು ಕೊರಗುವ ನಮ್ಮಂತವರು ಈ ಜಗತ್ತಿನಲ್ಲಿ ಬಹಳಷ್ಟು ಜನ ನಮಗೆ ಸಿಗುತ್ತಾರೆ.
ನಮ್ಮ ಅವಶ್ಯಕತೆ ಏನು ಎಂದು ಮೊದಲು ಅರಿಯಬೇಕು. ನಮ್ಮ ಅವಶ್ಯಕತೆ ಎಷ್ಟು ಎಂದು ಅರಿಯಬೇಕು. ಅದನ್ನು ಪೂರೈಸಿಕೊಳ್ಳಲು ನಮಗೆ ಯೋಗ್ಯತೆ ಮತ್ತು ಸಾಮರ್ಥ್ಯ ಎರಡೂ ಇವೆಯೇ ಎಂದು ಯೋಚಿಸಬೇಕು. ನಮ್ಮ ಮನಸ್ಸು ಬುಧ್ಧಿಗಳನ್ನು ಕೆಡಿಸದಂತಾ ಆಸೆಗಳನ್ನು ಪಡಬೇಕು. ಪಟ್ಟ ಆಸೆ ಎಲ್ಲವೂ ಪೂರ್ಣಗೊಳ್ಳುವುದಿಲ್ಲ. ನಾವು ಆಸೆ ಪಟ್ಟದ್ದು ಮತ್ತು ಪಟ್ಟಷ್ಟು ನಮಗೆ ಸಿಗುವುದಕ್ಕೆ, ನಮ್ಮ ಆಸೆಯಷ್ಟೇ ಅಲ್ಲ, ಅನ್ಯ ಕಾರಣಗಳೂ ಇರುತ್ತವೆ, ಹಾಗಾಗಿ ಸಿಕ್ಕಿದಕ್ಕೆ ಸಂತೋಷದಿಂದ ತೃಪ್ತಿಯಿಂದ ಇದ್ದರೆ “ಹೊಟ್ಟೆ ತುಂಬಿದ ತೋಳ ಮಲಗೀತು” ಎಂದು ಗುಂಡಪ್ಪನವರು ಹೇಳಿದಂತೆ ನಾವೂ ಮಲಗಿ ನಿದ್ದೆ ಮಾಡಬಹುದು. ಭಗವಾನ್ ಬುದ್ಧ ” ಆಸೆಯೇ ದುಃಖಕ್ಕೆ ಮೂಲ” ಎಂದ. ಆದರೆ ನನಗನ್ನಿಸುವುದು ಏನೆಂದರೆ ” ಆಸೆಯೇ ಬಾಳಿಗೆ ಮೂಲ” ಆದರೆ “ದುರಾಸೆಯೇ ದುಃಖಕ್ಕೆ ಮೂಲ” ವೆಂದರೆ ಹೆಚ್ಚು ಸಮರ್ಪಕವಾದೀತೇನೋ ಎಂದು ಆನಿಸುತ್ತದೆ.
ಹಾಗಾಗಿ ವಾಚಕರೆ, ಗೆರೆ ಎಳೆಯಬೇಕು, ನಮ್ಮ ಆಸೆಗಳಿಗೆ ನಮ್ಮ ಅವಶ್ಯಕತೆ ಮತ್ತು ಸಾಮರ್ಥ್ಯದ ಮಿತಿಯನ್ನರಿತು ಗೆರೆ ಎಳೆಯಬೇಕು. ಎಳೆದರೆ ಬಾಳು ಸುಖವಾಗಿರುತ್ತದೆ. ಇಲ್ಲದಿದ್ದರೆ ಇಲ್ಲ. ಆಯ್ಕೆ ನಮ್ಮಲ್ಲೇ ಇದೆ ಅಲ್ಲವೇ?