ಪುಟಗಳು

06 ಡಿಸೆಂಬರ್ 2021

ವಡ್ಡಾರಾಧನೆ - ಭದ್ರಬಾಹು ಭಟ್ಟಾರರ ಕಥೆ | Vaddaradhane-Badrabahu bhattarara kathe

 ಭದ್ರಬಾಹು ಭಟ್ಟಾರರ ಕಥೆಯಂ ಪೇೞ್ವೆಂ:

ಗಾಹೆ || ಓಮೋದರಿ ಏ ಘೋರಾ ಎ ಭದ್ದಬಾಹೂ ಅಸಂಕಿಲಿಟ್ಟಮದೀ
ಘೋರಾ ಎ ತಿಗಿಂಚ್ಛಾ ಏ ಪಡಿವಣ್ಣೋ ಉತ್ತಮಂ ಅಟ್ಟಂ ||

[ಓಮೋದರಿ ಏ – ಅರೆಉಣಿಸಿನಿಂದಂ, ಘೋರಾ ಎ – ಆದಮಾನುಂ ಕಡಿದಪ್ಪುದ ೞಂದಂ, ಭದ್ದಬಾಹೂ – ಭದ್ರಬಾಹು ಭಟ್ಟಾರರ್, ಅಸಂಕಿಲಿಟ್ಠಮದೀ – ಸಂಕ್ಲೇಶ ಪರಿಣಾಮಮಿಲ್ಲದೊನಾಗಿ, ಘೋರಾ ಎ – – ಕಡಿದಪ್ಪ, ತಿಗಿಂಚ್ಛಾ ಏ – ಪಸಿವಿನಿಂದಂ, ಪಡಿಮಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕದರ್ಶನಜ್ಞಾನ ಚಾರಿತ್ರಾರಾಧನೆಯಂ]

    ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಪುರವರ್ಧನಮೆಂಬುದು ನಾಡಲ್ಲಿ ಕೌಂಡಿನೀನಗರಮೆಂಬುದು ಪೊೞಲದನಾಳ್ರ್ವೆಂ ಪದ್ಮರಥನೆಂಬೊನರಸನಾತನ ಮಹಾದೇವಿ ಪದ್ಮಶ್ರೀಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಿರೆ ಮತ್ತಾ ಅರಸನ ಪುರೋಹಿತಂ ನಾಲ್ಕು ವೇದಮುಮಾಱಂಗಮುಂ ಪದಿನೆಂಟು ಧರ್ಮಶಾಸ್ತ್ರಂಗಳುಮಂ ಬಲ್ಲೊಂ ಸೋಮಶರ್ಮನೆಂಬೊಂ ಪಾರ್ವನಾತನ ಭಾರ್ಯೆ ಪ್ರತ್ಯಕ್ಷ ಶ್ರೀಯಾದೇವತೆಯೆನೆ ಪೋಲ್ವ ಸೋಮಶ್ರೀಯೆಂಬೊಳಾಯಿರ್ವರ್ಗ್ಗಂ ಮಗಂ ಪುಟ್ಟಿದೊಂ ತಾಯ್ಗಂ ತಂದೆಗಮೆಲ್ಲಾ ನಂಟರ್ಗೆಯುತ್ಸಾಹಮುಂ ಸುಖಮುಂ ವಿಭವಮುಮಂ ಪಡೆವುದಱಂದಮಾ ಕೂಸಿಂಗೆ ಭದ್ರಬಾಹುವೆಂಬ ಪೆಸರನೆಲ್ಲರುಂ ನೆರೆದಿಟ್ಟೊಡಾತನುಂ ಬಿದಿಗೆಯ ಚಂದ್ರನಂತೆ ಕ್ರಮಕ್ರಮದಿಂ ಸುಖದಿಂ ಬಳೆದು ಮುಂಜಿಗಟ್ಟುವ ಪ್ರಾಯಮಾದೊಡೆ ಪ್ರಶಸ್ತ ದಿವಸ ವಾರ ನಕ್ಷತ್ರ ಮುಹೂರ್ತದೊಳ್

    ಭದ್ರಬಾಹುಭಟ್ಟಾರರ (ಋಷಿಗಳ) ಕಥೆಯನ್ನು ಹೇಳುವೆನು: (ಭದ್ರಬಾಹು ಋಷಿ ಅರೆ ಉಣಿಸಿನಿಂದ ಅತ್ಯಂತ ಕಠಿನವಾದ ಕಷ್ಟದ ಪರಿಣಾಮವಿಲ್ಲದೆ ಅಂದರೆ ಪರಿಣಾಮವನ್ನು ಸಹಿಸಿ ತೀವ್ರವಾದ ಹಸಿವಿನಿಂದಲೇ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರಗಳ ಆರಾಧನೆಯನ್ನು ಮಾಡಿದನು.) ಅದು ಹೇಗೆಂದರೆ : ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಪುರವರ್ಧನವೆಂಬ ನಾಡಿದೆ. ಅಲ್ಲಿ ಕೌಂಜಿನೀನಗರವೆಂಬ ಪಟ್ಟಣವನ್ನು ಪದ್ಮರಥನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಪದ್ಮಶ್ರೀ ಎಂಬುವಳು. ಅಂತು ಅವರು ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತಿದ್ದರು. ಆ ರಾಜನ ಪುರೋಹಿತನಾದ ಸೋಮಶರ್ಮನೆಂಬ ಬ್ರಾಹ್ಮಣನು ನಾಲ್ಕು ವೇದಗಳನ್ನೂ ಆರು ವೇದಾಂಗಗಳನ್ನೂ ಹದಿನೆಂಟು ಧರ್ಮಶಾಸಗಳನ್ನೂ ಬಲ್ಲವನಾಗಿದ್ದನು. ಅವನ ಹೆಂಡತಿಯಾದ ಸೋಮಶ್ರೀ ಎಂಬುವಳು ಪ್ರತ್ಯಕ್ಷ ಲಕ್ಷ್ಮೀದೇವಿಯನ್ನೇ ಹೋಲುತ್ತಿದ್ದಳು. ಆ ಇಬ್ಬರಿಗೆ ಒಬ್ಬ ಮಗನು ಹುಟ್ಟಿದನು. ತಾಯಿಗೆ, ತಂದೆಗೆ ಮತ್ತು ಎಲ್ಲ ನಂಟರಿಗೆ ಉತ್ಸಾಹವನ್ನೂ ಸುಖವನ್ನೂ ಐಶ್ವರ್ಯವನ್ನೂ ಉಂಟುಮಾಡುವವನೆಂಬ ಅರ್ಥದಿಂದ ಎಲ್ಲರೂ ಕೂಡಿ ಆ ಮಗುವಿಗೆ ಭದ್ರಬಾಹು ಎಂಬ ಹೆಸರನ್ನಿಟ್ಟರು. ಅವನು ಬಿದಿಗೆಯ ಚಂದ್ರನ ಹಾಗೆ ಕ್ರಮಕ್ರಮವಾಗಿ ಸುಖದಿಂದ ಬೆಳೆದನು. ಉಪನಯನ ಮಾಡುವ ಪ್ರಾಯವಾಗಲು ಉತ್ತಮವಾದ ದಿವಸ, ವಾರ, ನಕ್ಷತ್ರ, ಮುಹೂರ್ತದಲ್ಲಿ 

    ಉಪನಯನ ಮುಂಜಿಬಂಧನಕ್ರಿಯೆಯಂ ಮಾಡಿದ ಬಱಕ್ಕೆ ತನ್ನೋರಗೆಗಳಪ್ಪ ಪಲಂಬರ್ ಮಾಣಿಗಳ್ವೆರಸು ಪೊಱವೊೞಲೊಳ್ ಬಟ್ಟಾಡುತ್ತಿರೆ ಭದ್ರಬಾಹುವೆಂಬ ಮಾಣಿಯೊಂದುಬಟ್ಟಿನ ಮೇಗೆ ಪದಿನಾಲ್ಕು ಬಟ್ಟನೊಂದೊಂದಱ ಮೇಗೋಳಿಯೊಳಿಟ್ಟಾಡುತ್ತಿರ್ಪನ್ನೆಗಂ ಇತ್ತ ವರ್ಧಮಾನ ಭಟ್ಟಾರರ್ ಮೋಕ್ಷಕ್ಷೆವೋದಿಂ ಬೞಕ್ಕೆ ಚತುರ್ದಶ ಪೂರ್ವಧಾರಿಗಳಪ್ಪ ಶ್ರುತಕೇವಳಿಗಳ್ ನಾಲ್ಕನೆಯವರ್ ಗೋವರ್ಧನರೆಂಬ ಭಟಾರರುಜ್ಜಯಂತಮಂ ವಂದಿಸಲೆಂದು ವಿಹಾರಿಸುತ್ತುಂ ಬರ್ಪೊರಾ ಕೌಂಡಿನೀ ನಗರಕ್ಕೆವಂದು ಪೊಱವೊೞಲೊಳೊಂದು ಬಟ್ಟಿನ ಮೇಗೆ ಪದಿನಾಲ್ಕುಂ ಬಟ್ಟನೊಂದೊಂದಱ ಮೇಗೋಳಿಯೊಳಿಟ್ಟಾಡುತ್ತಿರ್ಪ್ಪ ಭದ್ರಬಾಹುಮಾಣಿಯಂ ಗೋವರ್ಧನ ಭಟ್ಟಾರರ್ ಪಿರಿದುಂ ಬೇಗಂ ನೋಡುತ್ತಿರ್ದಿಂತೆಂದುದ್ದೇಶಂ ಗೊಯ್ದೊರೀತನೆಮ್ಮಿಂ ಬೞಕ್ಕೆ ಚತುರ್ದಶಪೂರ್ವಧಾರಿಯಪ್ಪ ಮಹಾತ್ಮ್ಯಮನೊಡೆಯೊಂ ಭದ್ರಬಾಹು ಭಟಾರರೆಂಬೊರಪ್ಪೊರೆಂದು ಬಗೆದಾತನನವರ ಮನೆಗೊಡಗೊಂಡು ಪೋಗಿಯವರ ತಾಯ್ತಂದೆಗಮಿಂತೆಂದರೀತನನೆಮಗೊಪ್ಪಿಸಿಮೆಲ್ಲಾ ಶಾಸ್ತ್ರಂಗಳುಮಂ ಕಲ್ಪಿಸಿ ಪಂಡಿತನಂ ಮಾಡಿ ನಿಮಗೊಪ್ಪಿಸುವೊಮೆಂದೊಡವರುಮಂತೆಗೆಯ್ಯಿಮೆಂದೊಡಾತನನೊಡಗೊಂಡು ಪೋಗಿ ಕೆಲವು ದಿವಸದಿಂದೊಳಗೆ ವ್ಯಾಕರಣಂ ಪ್ರಮಾಣಂ ಛಂದಮಲಂಕಾರ ನಿಘಂಟು ಕಾವ್ಯ ನಾಟಕಂ ಮೊದಲಾಗೊಡೆಯ ಲೋಕದೊಳುಳ್ಳ ಶಾಸ್ತ್ರಂಗಳೆಲ್ಲಮಂ ಕಲ್ಪಿಸಿದೊಡಾಗಮ

        ಉಪನಯನ ಮುಂಜಿಬಂಧನ ಸಂಸ್ಕಾರವನ್ನು ಮಾಡಿದರು. ಆಮೇಲೆ, ತನ್ನ ಸಂಗಡಿಗರಾದ ಹಲವರು ಬ್ರಹ್ಮಚಾರಿಗಳನ್ನು ಕೂಡಿಕೊಂಡು ಪಟ್ಟಣದ ಹೊರಗೆ ಬಿಲ್ಲೆಯಾಟವನ್ನು ಆಡುತ್ತಿದ್ದಾಗ, ಭದ್ರಬಾಹುವೆಂಬ ವಟು ಒಂದು ಬಿಲ್ಲೆಯ ಮೇಲೆ ಒಂದೊಂದರಂತೆ ಮೇಲೆ ಮೇಲೆ ಹದಿನಾಲ್ಕು ಬಿಲ್ಲೆಗಳನ್ನು ಸಾಲಾಗಿಟ್ಟು ಆಡುತ್ತದ್ದನು. ಇತ್ತ ವರ್ಧಮಾನ ತೀರ್ಥಂಕರರು ಮೋಕ್ಷಕ್ಕೆ ಹೋದ ಮೇಲೆ ಜೈನಧರ್ಮಶಾಸ್ತ್ರದ ಹದಿನಾಲ್ಕು ಪೂರ್ವಗ್ರಂಥಗಳನ್ನು ಬಲ್ಲವರಾದ, ಜೈನಾಗಮದ ಪರಿಪೂರ್ಣ ಜ್ಞಾನವುಳ್ಳವರಾದ, ವರ್ಧಮಾನರಿಂದ ನಾಲ್ಕನೆಯವರಾದ ಗೋವರ್ಧನರೆಂಬ ಋಷಿಗಳೂ ಉಜ್ಜಯಂತವೆಂಬ ಪರ್ವತನ್ನು ವಂದಿಸುವುದಕ್ಕಾಗಿ ಸಂಚಾರಮಾಡುತ್ತ ಬರುತ್ತಿದ್ದರು. ಅವರು ಕೌಂಡಿನೀನಗರಕ್ಕೆ ಬಂದು ಬಿಲ್ಲೆಯ ಮೇಲೆ ಇನ್ನೊಂದರಂತೆ ಹದಿನಾಲ್ಕು ಬಿಲ್ಲೆಗಳನ್ನು ಸಾಲಿನಲ್ಲಿ ಇಟ್ಟು ಆಡುತ್ತಿರುವುದನ್ನು ಕಂಡರು. ಅವರು ಭದ್ರಬಾಹು ಮಾಣಿಯನ್ನು ಬಹಳ ಹೊತ್ತು ನೋಡಿ ತಮ್ಮ ಮನಸ್ಸಿನಲ್ಲಿಯೇ ಹೀಗೆ ಹೇಳಿಕೊಂಡರು – “ಈತನು ನಮ್ಮ ನಂತರದಲ್ಲಿ ಹದಿನಾಲ್ಕು ಪೂರ್ವಗ್ರಂಥಗಳನ್ನು ಬಲ್ಲ ಮಾಹಾತ್ಮ್ಯವನ್ನುಳ್ಳ ಭದ್ರಬಾಹುವೆಂಬ ಮಹರ್ಷಿಯಾಗಲಿರುವನು”. ಹೀಗೆ ಭಾವಿಸಿ, ಆ ಋಷಿಗಳು ಭದ್ರಬಾಹುವನ್ನು ಕೂಡಿಕೊಂಡು ಅವನ ಮನೆಗೆ ಹೋಗಿ ಅವನ ತಾಯಿತಂದೆಯವರಿಗೆ ಹೀಗೆ ಹೇಳಿದರು – “ಈತನನ್ನು ನಮಗೆ ಕೊಡಿರಿ. ಇವನಿಗೆ ನಾವು ಎಲ್ಲಾ ಶಾಸಗಳನ್ನು ಅಭ್ಯಾಸ ಮಾಡಿಸಿ ವಿದ್ವಾಂಸನನ್ನಾಗಿ ಮಾಡಿ ನಿಮಗೆ ಒಪ್ಪಿಸುವೆವು.” ಹೀಗೆನ್ನಲು ಅವರು “ ಹಾಗೆಯೇ ಮಾಡಿ” ಎಂದರು ಋಷಿಗಳು ಅವನನ್ನು ಕರೆದುಕೊಂಡು ಹೋಗಿ ಕೆಲವು ದಿವಸಗಳ ಒಳಗಾಗಿ ವ್ಯಾಕರಣ, ಪ್ರಮಾಣ, ಛಂದಸ್ಸು, ಅಲಂಕಾರ, ನಿಘಂಟು, ಕಾವ್ಯ, ನಾಟಕ ಮೊದಲಾಗಿ ಲೋಕದಲ್ಲಿ ಇರತಕ್ಕ ಎಲ್ಲ ಶಾಸ್ತ್ರಗಳನ್ನೂ ಕಲಿಸಿದರು. 

        ಸಮ್ಯಗ್ ದೃಷ್ಟಿಯಾಗಿಯಾಗಮದೊಳೆಲ್ಲಮನೞದು ಸಂಸಾರ ಶರೀರ ಭೋಗ ವೈರಾಗ್ಯ ಪರಾಯಣನಾಗಿ ಭಟ್ಟಾರಾ ಎನಗೆ ದೀಕ್ಷೆಯಂ ದಯೆಗೆಯ್ಯಿಮೆನೆ ಭಟಾರರೆಂದರೆಮಗಂತು ದೀಕ್ಷೆಯಂ ಕುಡಲಾಗ ಮಗನೆ ನಿನ್ನ ಪೊೞಲ್ಗೆ ನೀಂ ಪೋಗಿ ನಿನ್ನ ಕಲ್ತ ವಿದ್ಯೆಯಂ ಪಂಡಿತಿಕ್ಕೆಯುಮನಾ ಪೊೞಲೊಳ್ ನೆಗೞ ನೆಗೞ್ದ ಪಂಡಿತರ್ಕಳೊಡನೆ ವಾದಂಗೆಯ್ದವರಂ ಗೆಲ್ದು ದಶದಿಶೆಗಳೊಳೆಲ್ಲಂ ನಿನ್ನ ಪಾಂಡಿತ್ಯದ ಯಶಮಂ ಪಸರಿಸಿ ನಿನ್ನ ಪೊೞಲೊಳ್ ನಾಮೊಡಗೊಂಡು ಬಂದುದರ್ಕೆ ತಾಯ್ತಂದೆಗಂ ಸಂತೋಸಂಮಾಡಿಯವರಂ ಬಿಡಿಸಿಯೊಡಂಬಡಿಸಿ ಬಂದೊಡೆ ತಪಮಂ ಕುಡಲಕ್ಕುಮಂತೆ ಯಾಗದೆಂದೊಡೆ ಭದ್ರಬಾಹುಮಾಣಿಯುಂ ಭಟ್ಟಾರರಂ ವಂದಿಸಿ ತನ್ನ ಪೊೞಲ್ಗೆವೋಗಿ ತಾಯುಂ ತಂದೆಯುಮಂ ಕಂಡು ಪೊೞಲೊಳ್ ನೆಗೞ್ದ ಪಂಡಿತರ್ಕಳೊಡನೆ ವಾದಂಗೆಯ್ದು ಗೆಲ್ಲು ದಶದಿಶೆಗಳೊಳೆಲ್ಲಂ ತನ್ನ ಪಾಂಡಿತ್ಯದ ಯಶಮಂ ಪಸರಿಸಿ ತಾಯ್ತಂದೆಗಂ ಸಂತೋಸಂ ಮಾಡಿಯವರನೊಡಂಬಡಿಸಿ ಬಂದು ಗೋವರ್ಧನ ಭಟ್ಟಾರರ ಪಕ್ಕದೆ ಕುಮಾರಬ್ರಹ್ಮಚಾರಿಯಾಗಿ ಭದ್ರಬಾಹು ತಪಂಬಟ್ಟು ಕೆಲವು ದಿವಸದಿಂದೊಳಗೆ ದ್ವಾದಶಾಂಗ ಚತುರ್ದಶಪೂರ್ವಮಪ್ಪಾಗ ಮಮೆಲ್ಲಮಂ ಗ್ರ್ರಂಥಾರ್ಥಸ್ವರೂಪದಿಂ ಕಲ್ತು ಸಕಲಶಾಸ್ತ್ರಪಾರಾವಾರಗನಾಗಿ ಎಲ್ಲಾವೋದುಗಳುಮಂ ನೆಱೆಯೋದಿ ಕಲ್ತು ಶ್ರುತದೊಳಪ್ಪ ಭಕ್ತಿಕಾರಣಮಾಗಿ ಪ್ರತಿಮಾಯೋಗಂನಿಂದೊರಂ ದೇವರ್ಕಳುಂ ಮನುಷ್ಯರ್ಕಳುಂ ಬಂದು ಪಿರಿದಪ್ಪ ಪೂಜೆಯಂ ಮಾಡಿಯರ್ಚಿಸಿ ಪೂಜಿಸಿ ಬಂದಿಸಿದೊಡೆಲ್ಲಾ ಋಷಿಸಮುದಾಯಮುಮಂ

     ಇದರಿಂದ ಭದ್ರಬಾಹು ಸಮ್ಯಕ್ ದೃಷ್ಟಿಯನ್ನು ಪಡೆದು ಧರ್ಮಶಾಸ್ತ್ರಗಳೆಲ್ಲವನ್ನೂ ತಿಳಿದು ಸಂಸಾರದಲ್ಲಿಯೂ ಶರೀರದಲ್ಲಿಯೂ ಸುಖಾನುಭವದಲ್ಲಿಯೂ ವೈರಾಗ್ಯಾಸಕ್ತನಾಗಿ ಗೋವರ್ಧನ ಭಟಾರರೊಡನೆ “ ಪೂಜ್ಯರೇ ನನಗೆ ಜೈನದೀಕ್ಷೆಯನ್ನು ಕರುಣಿಸಿರಿ* ಎಂದು ಕೇಳಿದನು. ಅದಕ್ಕೆ ಭಟಾರರು ಹೀಗೆಂದರು – “ ನಮಗೆ ಹಾಗೆ ಸುಲಭದಲ್ಲಿ ದೀಕ್ಷೆ ಕೊಡಲಿಕ್ಕೆ ಆಗುವುದಿಲ್ಲ. ಮಗನೇ, ನೀನು ನಿನ್ನ ಪಟ್ಟಣಕ್ಕೆ ಹೋಗಿ ನಿನ್ನ ಕಲಿತ ವಿದ್ಯೆಯನ್ನೂ ವಿದ್ವತ್ತೆಯನ್ನೂ ಆ ಪಟ್ಟಣದಲ್ಲಿ ತೋರಿಸಿ ಪ್ರಸಿದ್ಧರಾದ ವಿದ್ವಾಂಸರೊಡನೆ ವಾದ ಮಾಡಿ, ಅವರನ್ನು ಸೋಲಿಸಿ ಹತ್ತು ದಿಕ್ಕುಗಳಲ್ಲೆಲ್ಲ ನಿನ್ನ ಪಾಂಡಿತ್ಯದ ಕೀರ್ತಿಯನ್ನು ಹಬ್ಬಿಸು. ನಿನ್ನನ್ನು ನಾವು ಕರೆದುಕೊಂಡು ಬಂದುದಕ್ಕೆ ನಿನ್ನ ತಂದೆತಾಯಿಗಳಿಗೆ ಸಂತೋಷವನ್ನುಂಟುಮಾಡಿ, ಅವರು ಒಪ್ಪುವಂತೆ ಮಾಡಿ ಅವರನ್ನು ಬಿಟ್ಟು ಬಂದರೆ, ತಪಸ್ಸನ್ನು ನಿನಗೆ ಉಪದೇಶಿಸಬಹುದು. ಅದಲ್ಲವಾದರೆ ಸಾಧ್ಯವಾಗದು’ ಎಂದರು ಭದ್ರಬಾಹು ವಟು ಋಷಿಗಳನ್ನು ನಮಸ್ಕರಿಸಿ ತನ್ನ ಪಟ್ಟಣಕ್ಕೆ ಹೋದನು. ತನ್ನ ತಾಯಿತಂದೆಯರನ್ನು ಕಂಡು ಪಟ್ಟಣದಲ್ಲಿ ಪ್ರಸಿದ್ಧರಾದ ವಿದ್ವಾಂಸರೊಡನೆ ವಾದಮಾಡಿ ಗೆದ್ದು ಹತ್ತು ದಿಕ್ಕುಗಳಲ್ಲೆಲ್ಲ ತನ್ನ ವಿದ್ವತ್ತಿನ ಕೀರ್ತಿಯನ್ನು ಹಬ್ಬಿಸಿದನು. ತಾಯಿತಂದೆಗಳಿಗೆ ಸಂತೋಷವನ್ನುಂಟುಮಾಡಿ, ಅವರನ್ನು ಒಪ್ಪುವಂತೆ ಮಾಡಿ ಬಂದು ಗೋವರ್ಧನ ಋಷಿಗಳ ಬಳಿಯಲ್ಲಿ ಭದ್ರಬಾಹು ಬಾಲಬ್ರಹ್ಮಚಾರಿಯಾಗಿ ತಪಸ್ಸನ್ನು ಮಾಡಿದನು. ಕೆಲವು ದಿವಸಗಳೊಳಗಾಗಿ ಹನ್ನೆರಡು ಅಂಗ ಮತ್ತು ಹದಿನಾಲ್ಕು ಪೂರ್ವಗಳು ಉಳ್ಳ ಶಾಸ್ತ್ರಗಳನ್ನೆಲ್ಲ ಗ್ರಂಥದ ಅರ್ಥದೊಂದಿಗೆ ಕಲಿತನು. ಎಲ್ಲ ಶಾಸ್ತ್ರಗಳಲ್ಲಿಯೂ ಪಾರಂಗತನಾಗಿ ಎಲ್ಲ ವಿದ್ಯೆಗಳನ್ನೂ ವಿಶೇಷವಾಗಿ ಓದಿ, ಶಾಸ್ತ್ರಗಳಲ್ಲಿರುವ ಭಕ್ತಿಯೇ ಕಾರಣವಾಗಿ ಕಲಿತು ಪ್ರತಿಮಾಯೋಗದಲ್ಲಿ ನಿಂತನು. ದೇವತೆಗಳೂ ಮನುಷ್ಯರೂ ಬಂದು ಭದ್ರಬಾಹು ಋಷಿಗಳನ್ನು ಅತಿಶಯವಾಗಿ ಗೌರವಿಸಿ, ಪೂಜಿಸಿದರು. ಎಲ್ಲಾ ಋಷಿಗಳ ಸಮೂಹಕ್ಕೂ

     ಪ್ರತಿಪಾಲಿಸಲ್ಕೆ ಸಮರ್ಥರಾಗಿರ್ಪ್ಪನ್ನೆಗಂ ಗೋವರ್ಧನ ಭಟ್ಟಾರರ್ ಸಮಾ ಮರಣದಿಂದಂ ರತ್ನತ್ರಯಮಂ ಸಾಸಿ ಮುಡಿಪಿ ದೇವಲೋಕಕ್ಕೆ ವೋದರ್. ಇತ್ತ ಭದ್ರಬಾಹು ಭಟ್ಟಾರರ್ ಚತುರ್ದಶ ಪೂರ್ವಧಾರಿಗಳುಂ ಕಡೆಯಾ ರಿಸಿಯಯ್ದನೆಯ ಶ್ರುತಕೇವಳಿಗಳವಜ್ಞಾನಿಗಳುಂ ಪಲವುಂ ಋದ್ಧಗಳಿಂ ಕೂಡಿದೊರೆಲ್ಲಾ ಋಷಿಸಮುದಾಯಮುಮಂ ಪ್ರತಿಪಾಳಿಸುತ್ತಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಿರ್ಪ್ಪನ್ನೆಗಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ಪಾಟಳೀಪುತ್ರಮೆಂಬುದುಪೊೞಲದನಾಳ್ರ್ವೆಂ ನಂದನೆಂಬರಸಂ ಪಲಕಾಲಮರಸುಗೆಯ್ಯುತ್ತಿರೆ ಮತ್ತೊಂದುದಿವಸಂ ಚಾಣಕ್ಯನೆಂಬ ಭಟ್ಟನಂ ನಂದಂ ಪರಿಭವಿಸಿ ನೂಂಕಿಯಟ್ಟಿ ಕಳೆಯಿಸಿದೊಡಾತನುಂ ಮುಳಿದು ನಂದನಂ ಕೆಡಿಸಿ ರಾಜ್ಯಸ್ಥಾನದೊಳ್ ಪೆಱನೊರ್ವನಂ ಚಂದ್ರಗುಪ್ತನೆಂಬೊನಂ ನಿಱಸಿದೊಡಾತನುಂ ಪಲಕಾಲಮರಸುಗೆಯ್ದು ಕೞದೊಡಾತನ ಮಗಂ ಬಿಂದುಸಾಗರನೆಂಬೊನರಸುಗೆಯ್ದು ಕೞದ ಬೞಕ್ಕಾತನ ಮಗನಶೋಕನೆಂಬೊನರಸುಗೆಯ್ಯುತ್ತಿರೆ ಆತನ ಮಗಂ ಪ್ರತಾಪರಿಂ ತೇಜದಿಂದಾದಿತ್ಯನೊಳೋರನ್ನನಪ್ಪೊಂ ಕುಣಾಳನೆಂಬೊನಂತವರ್ಗಳಿಷ್ಟ ವಿಷಯ ಕಾಮಬೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಮಶೋಕಮಹಾರಾಜಂ ಪರಚಕ್ರದ ಮೇಗೆತ್ತಿ ಪೋಗಿ ಅಲ್ಲಿಂದಂ ಮಂತ್ರಿ ಪುರೋಹಿತ ತಳವಱಾದಿಗಳ್ಗಿಂತೆಂದೋಲೆಯನಟ್ಟಿದೊನುಪಾಧ್ಯಾಯಂಗೆ ಕೞವೆಯ ಕೂೞಂ ತುಪ್ಪಮಂ ತೊವೆಯುಮನುಣಲ್ ಕೊಟ್ಟು ಕುಮಾರನನೋದಿಸುಗೆಂದೋಲೆಯನಟ್ಟಿದೊಡೆ 

    ಪಾಲಕರಾಗಿ ಸಮರ್ಥರಾಗಿ ಭದ್ರಬಾಹು ಋಷಿಗಳು ಇದ್ದರು. ಆಗ ಗೋವರ್ಧನ ಋಷಿಗಳು ರತ್ನತ್ರಯವನ್ನು ಸಂಪಾದಿಸಿ ಸಮಾಮರಣದಿಂದ ಸತ್ತು ದೇವಲೋಕಕ್ಕೆ ಹೋದರು. ಇತ್ತ ಭದ್ರಬಾಹು ಋಷಿಗಳು ಹದಿನಾಲ್ಕು ಪೂರ್ವಗಳುಳ್ಳ ಶಾಸ್ತ್ರಗಳನ್ನರಿತವರೂ ಋಷಿ ಪರಂಪರೆಯಲ್ಲಿ ಐದನೆಯವರೂ ಕೇವಲಜ್ಞಾನ ಅವಜ್ಞಾನಗಳನ್ನು ಪಡೆದವರೂ ಹಲವು ತಪಸ್ಸಿದ್ಧಿಗಳುಳ್ಳವರೂ ಆಗಿ, ಎಲ್ಲ ಋಷಿ ಸಮೂಹವನ್ನೂ ಪಾಲಿಸುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಇದ್ದರು. ಹೀಗಿರಲು, ಇತ್ತ ಮಗಧೆ ಎಂಬ ನಾಡಿನಲ್ಲಿ ಪಾಟಳೀಪುತ್ರವೆಂಬ ಪಟ್ಟಣವನ್ನಾಳುವ ನಂದನೆಂಬ ರಾಜನಿದ್ದನು. ಅವನು ಹಲವು ಕಾಲ ರಾಜ್ಯಭಾರಮಾಡುತ್ತ ಇದ್ದನು. ಅನಂತರ, ನಂದನು ಒಂದು ದಿವಸ ಚಾಣಕ್ಯನೆಂಬ ಭಟ್ಟನನ್ನು ಅಪಮಾನಗೊಳಿಸಿ, ನೂಕಿ, ಅಟ್ಟಿ ಹೊರಪಡಿಸಿದನು. ಚಾಣಾಕ್ಯನು ಕೋಪಗೊಂಡು ನಂದನನ್ನು ನಾಶಗೊಳಿಸಿ ರಾಜ್ಯದ ಅಕಾರ ಸ್ಥಾನದಲ್ಲಿ ಚಂದ್ರಗುಪ್ತನೆಂಬ ಬೇರೊಬ್ಬನನ್ನು ನಿಲ್ಲಿಸಿದನು. ಆತನು ಹಲವು ಕಾಲ ಅರಸುತನವನ್ನು ನಡೆಸಿ ಸತ್ತುಹೋಗಲು, ಅವನ ಮಗನಾದ ಬಿಂದುಸಾಗರ ನೆಂಬಾತನು ರಾಜ್ಯಭಾರ ಮಾಡಿ ತೀರಿಹೋದನು. ಅವನ ನಂತರ, ಅವನ ಮಗನಾದ ಅಶೋಕವೆಂಬವನು ರಾಜ್ಯಭಾರಮಾಡುತ್ತಿದ್ದನು. ಅಶೋಕನ ಮಗನಾದ ಕುಣಾಳನು ಪರಾಕ್ರಮದಲ್ಲಿಯೂ ತೇಜಸ್ಸಿನಲ್ಲಿಯೂ ಸೂರ್ಯನಂತಿದ್ದನು. ಅಂತು ಅವರು ಇಷ್ಟವಾದ ವಿಷಯದ ಬಯಕೆಯ ಸುಖಗಳನ್ನು ಅನುಭವಿಸುತ್ತಿದ್ದು ಹೀಗೆಯೇ ಕಾಲ ಕಳೆಯಿತು. ಆಮೇಲೆ ಒಂದು ದಿವಸ ಅಶೋಕ ಮಹಾರಾಜನು ಶತ್ರುಗಳ ರಾಜ್ಯದ ಮೇಲೆ ದಂಡೆತ್ತಿಹೋದನು. ಅಲ್ಲಿಂದ ಮಂತ್ರಿ ಪುರೋಹಿತ – ನಗರ ರಕ್ಷಕ ಮುಂತಾದವರಿಗೆ ಈ ರೀತಿಯಾಗಿ ಪತ್ರವನ್ನು ಕಳುಹಿಸಿದನು – “ಉಪಾಧ್ಯಾಯನಿಗೆ ಕಳಮೆಯ ಅನ್ನ, ತುಪ್ಪ ತೊವ್ವೆಗಳನ್ನು ಉಣಲಿಕ್ಕೆ ಕೊಟ್ಟ ರಾಜಕುಮಾರನನ್ನು (ಅಧ್ಯಾಪಯೇತ್) ಓದಿಸತಕ್ಕದ್ದು”. ಹೀಗೆ ಪತ್ರವನ್ನು ಕಳುಯಿಸಲು 

    ವಾಚಕನೋಲೆಯರ್ಥಮನಱಯದೆ ವಿಪರೀತಮಾಗಿಂತೆಂದು ಬಾಚಿಸಿದನ್ ಉಪಾಧ್ಯಾಯಂ ಶಾಲಿಂ ಕೂರಂ ಚ ಮಶಿಂ ಘೃತಂ ದತ್ವಾ ಕುಮಾರಮಂಧಾಪಯೇತ್ ಎಂದಿಂತು ವಿಪರೀತಮಾಗಿ ಲೇಖಾ ರ್ಥಮಂ ಬಾಚಿಸಿದೊಡನಿಬರುಂ ಕೇಳ್ದು ಅಪ್ರತಿಹತಶಾಸನನಪ್ಪ ನೃಪತಿಯಾಜ್ಞೆಗೆ ಭಯಸ್ಥರ್ಕಳಾಗಿ ಉಪಾಧ್ಯಾಯಂಗೆ ಕೞಮೆಯ ಕೂೞುಂ ಮಸಿಯುಂ ತುಪ್ಪಮುಮನುಣಲ್ಕೊಟ್ಟು ಕುಣಾಳನೆಂಬ ಕುಮಾರನೆರಡುಂ ಕಣ್ಗಳುಮನೊಡೆದು ಕುರುಡಂ ಮಾಡಿದ ಕೆಲವು ದಿವಸದಿಂದರಸಂ ಪರಚಕ್ರಮಂ ಸಾಧಸಿ ಬಂದು ಮಗಂ ಕುರುಡಾದುದಂ ಕಂಡಾದಮಾನುಮುಬ್ಬೆಗಂಬಟ್ಟು ಸೈರಿಸಲಾಱದೆ ಕುಣಾಳನರಸಿ ಚಂದ್ರಾನನೆಯೆಂಬೊಳ್ಗೆ ಮಗಂ ಪುಟ್ಟಿದೊಡಾತಂಗೆ ಸಂಪ್ರತಿ ಚಂದ್ರಗುಪ್ತನೆಂದು ಪೆಸರನಿಟ್ಟು ರಾಜ್ಯಾಭಿಷೇಕಂಗೆಯ್ದು ಪಟ್ಟಂಗಟ್ಟಿ ಸಮಸ್ತ ರಾಜ್ಯಭಾರಮೆಲ್ಲಮಂ ನಿರೂಪಿಸಿ ಕುಣಾಳನುಮನೆಂದಂ ಮಗನೆ ಬೇಡು ನೀನೆಂದೊಡಾತನುಂ ಕಾಕಿಣೀರತ್ನಮಂ ಬೇಡಿದೊಡಾ ರತ್ನಂ ಚಕ್ರವರ್ತಿಗಲ್ಲದಿಲ್ಲೆಂದು ಮಗಂಗೆ ಮಱುಮಾತುಗೊಟ್ಟು ಸಂಸಾರವೈರಾಗ್ಯಮಾದಮಾನುಂ ಪೆರ್ಚಿ ಸುವ್ರತರೆಂಬ ಭಟ್ಟಾರರ ಪಕ್ಕದೆ ಜಿನದೀಕ್ಷೆಯಂ ಕೈಕೊಂಡು ಪರತ್ರಯಂ ಸಾಸಿದೊಂ ಮತ್ತಿತ್ತ ಸಂಪ್ರತಿ ಚಂದ್ರಗುಪ್ತಮಹಾರಾಜನರಸುಗೆಯ್ಯುತ್ತಿರೆ ಸಮಾಗುಪ್ತ ರೆಂಬಾಚಾರ್ಯರವಜ್ಞಾನಿಗಳ್ ವಿಹಾರಸುತ್ತಂ ಬರ್ಪರಾ ಪಾಟಳೀಪುತ್ರಕ್ಕೆ ವಂದು ಪೊಱವೊೞಲ ಬಹಿರುದ್ಯಾನವನದೊಳಿರ್ದೊರಂ ಸಂಪ್ರತಿ ಚಂದ್ರಗುಪ್ತಂ ಪೋಗಿ ವಂದಿಸಿ ಧರ್ಮಮಂ ಕೇಳ್ದು ತದನಂತರಂ ತನ್ನ ಭವಾಂತರಂಗಳಂ ಬೆಸಗೊಂಡೊಡೆ 

       ಅದನ್ನು ಓದುವವನು ಪತ್ರದ ಅರ್ಥವನ್ನು ತಿಳಿಯದೆ ವ್ಯತ್ಯಸ್ತವಾಗಿ ಅದನ್ನು ಓದಿದನು. “ಉಪಾಧ್ಯಾಯನಿಗೆ ಶಾಲ್ಯನ್ನವನ್ನೂ ಮಸಿಯನ್ನೂ ತುಪ್ಪವನ್ನೂ ಕೊಟ್ಟು ರಾಜಕುಮಾರನನ್ನು (ಅಂಧಾಪಯೇತ್) ಕುರುಡನನ್ನಾಗಿ ಮಾಡತಕ್ಕದ್ದು ” ಈ ರೀತಿಯಾಗಿ ನಿಜವಾದ ಅರ್ಥಕ್ಕೆ ವ್ಯತಿರಿಕ್ತವಾಗಿ ಆ ಬರವಣಿಗೆಯ ಅರ್ಥವನ್ನು ಓದಿದನು. ಅವರೆಲ್ಲರೂ ಇದನ್ನು ಕೇಳಿ ತಡೆಯಿಲ್ಲದ ಶಾಸನವುಳ್ಳವನಾದ ರಾಜನ ಆಜ್ಞೆಗೆ ಹೆದರಿ, ಉಪಾಧ್ಯಾಯನಿಗೆ ಶಾಲ್ಯನ್ನವನ್ನೂ ತುಪ್ಪವನ್ನೂ ಮಸಿ(ಶಾಯಿ)ಯನ್ನೂ ಉಣ್ಣಲು ಕೊಟ್ಟು ಕುಣಾಳನೆಂಬ ರಾಜಕುಮಾರನ ಕಣ್ಣುಗಳನ್ನು ಒಡೆದು ಕುರುಡನನ್ನಾಗಿ ಮಾಡಿದರು. ಕೆಲ ದಿನಗಳಲ್ಲಿ ಅಶೋಕರಾಜನು ಶತ್ರುಗಳ ರಾಜವನ್ನು ಗೆದ್ದು ಬಂದಾಗ ಮಗನು ಕುರುಡನಾದುದನ್ನು ಕಂಡನು. ಅವನು ಅತ್ಯಂತ ದು:ಖವನ್ನು ಹೊಂದಿ ಸಯಿಸಲಾರದಾದನು. ಕುಣಾಳನ ಪತ್ನಿಯಾದ ಚಂದ್ರಾನನೆ ಎಂಬವಳಿಗೆ ಒಬ್ಬ ಮಗನು ಹುಟ್ಟಲು ಅವನಿಗೆ ಸಂಪ್ರತಿ ಚಂದ್ರಗುಪ್ತನೆಂಬ ನಾಮಕರಣವನ್ನು ಮಾಡಿ, ರಾಜ್ಯಾಭಿಷೇಕ ಮಾಡಿ, ಪಟ್ಟವನ್ನು ಕಟ್ಟಿ ತನ್ನ ಸಮಸ್ತ ರಾಜ್ಯಭಾರವನ್ನು ಅವನಿಗೆ ಒಪ್ಪಿಸಿದನು. ಆಮೇಲೆ ಅಶೋಕನು ಕುಣಾಳನೊಡೆನೆ – “ಮಗನೇ ನಿನಗೆ ಏನು ಬೇಕು, ಕೇಳು” ಎಂದನು. ಆಗ ಕುಣಾಳನು ಅಶೋಕನ ವಶದಲ್ಲಿದ್ದ ಕಾಕಿಣಿ ಎಂಬ ಚಿಂತಾರತ್ನವನ್ನು ತನಗೆ ಕೊಡಬೇಕೆಂದು ಕೇಳಿದನು. ಅದಕ್ಕೆ ಅಶೋಕನು ಆ ರತ್ನವು ಚಕ್ರವರ್ತಿಗೆ ಮಾತ್ರ ಸಲ್ಲತಕ್ಕದ್ದು, ಇತರರಿಗೆ ಸಲ್ಲತಕ್ಕದ್ದಲ್ಲವೆಂದು ಮಗನಿಗೆ ಪ್ರತ್ಯುತ್ತರ ಕೊಟ್ಟು ಸಂಸಾರದಲ್ಲಿ ಅತಿಶಯ ವೈರಾಗ್ಯವು ಹೆಚ್ಚಾಗಿ ಸುವ್ರತರೆಂಬ ಋಷಿಗಳ ಬಳಿಯಲ್ಲಿ ಜಿನದೀಕ್ಷೆ ಸ್ವೀಕರಿಸಿ ಪರಗತಿಯನ್ನು ಪಡೆದನು. ಆಮೇಲೆ , ಇತ್ತ ಸಂಪ್ರತಿ ಚಂದ್ರಗುಪ್ತ ಮಹಾರಾಜನು ರಾಜ್ಯವಾಳುತ್ತ ಇದ್ದನು. ಹೀಗಿರಲು ಅವಜ್ಞಾನಿ (ತ್ರಿಕಾಲಜ್ಞಾನಿ)ಗಳಾದ ಸಮಾಗುಪ್ತರೆಂಬ ಆಚಾರ್ಯರು ಸಂಚಾರಮಾಡುತ್ತ ಬರತಕ್ಕವರು ಪಾಟಳೀಪುತ್ರಕ್ಕೆ ಬಂದರು. ಅಲ್ಲಿ ಪಟ್ಟಣದ ಹೊರಗಿನ ಉದ್ಯಾನದಲ್ಲಿದ್ದರು. ಸಂಪ್ರತಿ ಚಂದ್ರಗುಪ್ತನು ಅವರಲ್ಲಿಗೆ ಹೊಗಿ ನಮಸ್ಕರಿಸಿ ಧರ್ಮಬೋಧನೆಯನ್ನು ಕೇಳಿದನಂತರ ತನ್ನ ಬೇರೆ ಬೇರೆ ಜನ್ಮಗಳ ಸಂಗತಿಯೇನೆಂದು ಕೇಳಿದನು. 

    ಭಟಾರರ್ ಪೇೞಲ್ ತೊಡಗಿದರ್ ಈ ಜಂಬೂದ್ವೀಪದ ಭರಕ್ಷೇತ್ರದೊಳವಂತಿಯೆಂಬುದು ನಾಡಲ್ಲಿ ವೈದಿಶಮೆಂಬುದು ಪೊೞಲದನಾಳ್ವೊಂ ಜಯವರ್ಮನೆಂಬೊನರಸನಾತನ ಮಹಾದೇವಿ ಧಾರಿಣಿಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಿರೆ ಮತ್ತಾ ಪೊೞಲ ಸಾರೆ ಪರಾಳಕೂಟಮೆಂಬೂರೊಳ್ ದೇವಿಲನೆಂಬೊಂ ಶಾಕಟಿಕಂ ಪರದನಾತನ ಭಾರ್ಯೆ ಪೃಥ್ವಿಶ್ರೀಯೆಂಬೊಳಾಕೆಯ ಗರ್ಭದೊಳ್ ಪಾಪಕರ್ಮಜೀವಂ ನೆಲಸಿದೊಡೇನುಂ ನೆವಮಿಲ್ಲದೆ ಕಸವರಮೆಲ್ಲಂ ಕೆಟ್ಟತ್ತು ಮತ್ತೊಂದು ದಿವಸಂ ಪಲಂಬರ್ ಶಾಕಟಿಕ ಪರದರುಂ ಬೆರಸು ಬಂಡಿಗಳೊಳ್ ಪೞಯುಂ ಧಾನ್ಯಮಂ ತೀವಿಕೊಂಡು ಪೊೞಲ್ಗೆ ಮಾಱಲೆಂದು ಪೋಪನ್ನೆಗಮೆಡೆಯೊಳಡವಿಯೊಳ್ ಕಳ್ಳರ್ ಬಟ್ಟೆಗಟ್ಟಿ ಮೇಲ್ವಾಯ್ದಿಱದೊಡೆ ದೇವಿಲಂ ಮೊದಲಾಗೊಡೆಯ ಪಲಂಬರ್ ಪರದರ್ ಸತ್ತರುೞದರೆಲ್ಲಮೋಡಿ ಕೆಟ್ಟೊಡೆ ಬಂಡಮುಮೆೞ್ತುಗಳುಂ ಮೊದಲಾಗೆಲ್ಲಮಂ ಕಳ್ಳರ್ ಕೊಂಡುಪೋದರಾ ಪ್ರಸ್ತಾವದೊಳ್ ಪೃಥ್ವಿಶ್ರೀ ಬೆಸಲೆಯಾಗಿ ನಂದಿಮಿತ್ರನೆಂದಾ ಕೂಸಿಂಗೆ ಪೆಸರನಿಟ್ಟು ಎರೞ್ಮೂರು ತಿಂಗಳಿಂಗೆ ತಾಯ್ ಕೞದೊಡೆ ಬಂದ ನಂಟರ್ ನಡಪೆ ಬಳೆದೊಡಾ ನಂಟರುಂ ಕೞದುಳ್ಳರೆಲ್ಲಂ ಸತ್ತು ಕುಲಕ್ಷಯಮಾದೊಡೂರವರೆಲ್ಲಮಿಂತೆಂದರೀ ತರುವಲಿ ನಮ್ಮೂರೊಳಿರೆ ನಮಗೆ ಸಾವುಂ ಕೇಡುಮಮೋಘಮಕ್ಕುಮಿವನನಟ್ಟಿ ಕಳೆಯಿಮೆಂದೂರಿಂದನಿಬರುಮಟ್ಟಿ

    ಋಷಿಗಳು ಆಗ ಹೇಳತೊಡಗಿದರು. ಈ ಜಂಬೂದ್ವೀಪದ ಭರತಕ್ಷೆತ್ರದಲ್ಲಿ ಆವಂತಿ ಎಂಬ ನಾಡಿದೆ. ಅಲ್ಲಿ ವೈದಿಶವೆಂಬ ಪಟ್ಟಣವಿದೆ. ಅದನ್ನು ಜಯವರ್ಮವೆಂಬ ಅರಸನು ಆಳುತ್ತದ್ದನು. ಅವನ ಮಹಾರಾಣಿ ಧಾರಿಣಿ ಎಂಬುವಳು. ಅಂತು ಅವರು ತಮಗೆ ಮೆಚ್ಚುಗೆಯಾದ ವಿಷಯದ ಇಷ್ಟುಸುಖಗಳನ್ನು ಅನುಭವುಸುತ್ತ ಇದ್ದರು. ಆ ಪಟ್ಟಣದ ಸಮೀಪದಲ್ಲಿರುವ ಪರಾಳಕೂಟವೆಂಬ ಊರಿನಲ್ಲಿ ದೇವಿಲನೆಂಬ ಸರಕು ಸಾಗಿಸುವ ಗಾಡಿಗಳನ್ನುಳ್ಳ ವರ್ತಕನಿದ್ದನು. ಅವನ ಹೆಂಡತಿ ಪೃಥ್ವಿಶ್ರೀ ಎಂಬುವಳು. ಆಕೆಯ ಬಸಿರಿನಲ್ಲಿ ಪಾಪಕೃತ್ಯವನ್ನು ಮಾಡಿದ ಒಂದು ಜೀವವು ನೆಲಸಿತು. ಇದರಿಂದ ಏನೊಂದು ಕಾರಣವೂ ಇಲ್ಲದೆ ಅವನ ಹೊನ್ನೆಲ್ಲ (ಐಶ್ವರ್ಯವೆಲ್ಲ) ಹಾಳಾಯಿತು. ಆಮೇಲೆ ಒಂದು ದಿವಸ ಅವನು ಹಲವು ಮಂದಿ ಗಾಡಿಯುಳ್ಳ ವ್ಯಾಪಾರಿಗಳನ್ನು ಕೂಡಿಕೊಂಡು ಗಾಡಿಗಳಲ್ಲಿ ಹತ್ತಿಯನ್ನೂ ಧಾನ್ಯವನ್ನೂ ತುಂಬಿಸಿಕೊಂಡು ಪಟ್ಟಣಕ್ಕೆ ಮಾರಲಿಕ್ಕೆಂದು ಹೋಗುತ್ತಿದ್ದನು. ಹಾಗೆ ಹೋಗುವಾಗ ನಡುವೆ ಕಾಡಿನಲ್ಲಿ ಕಳ್ಳರು ಇವರ ದಾರಿಯನ್ನು ಕಟ್ಟಿ ಮೇಲೆ ಹಾರಿ ಬಂದು ತಿವಿಯಲು ದೇವಿಲ ಮೊದಲಾಗಿ ಉಳ್ಳ ಹಲವರು ವರ್ತಕರು ಸತ್ತರು. ಉಳಿದವರೆಲ್ಲ ಓಡಿ ತಪ್ಪಿಸಿಕೊಂಡರು. ಸರಕುಗಳು ಎತ್ತುಗಳು ಮುಂತಾದ ಎಲ್ಲವನ್ನೂ ಕಳ್ಳರು ಕೊಂಡುಹೋದರು. ಆ ಸಂದರ್ಭದಲ್ಲಿ ಪೃಥ್ವಿಶ್ರೀ ಗಂಡುಮಗುವನ್ನು ಹೆತ್ತಳು. ಆ ಮಗುವಿಗೆ ನಂದಿಮಿತ್ರನೆಂದು ಹೆಸರಿಟ್ಟು, ಎರಡು ಮೂರು ತಿಂಗಳಾಗಲು ತಾಯಿ ಮಡಿದಳು. ನಂಟರು ಆ ಮಗುವನ್ನು ಸಾಕಿ ಸಲಹಲು ನಂದಿಮಿತ್ರನು ದೊಡ್ಡವನಾದನು. ಅವನನ್ನು ಸಾಕಿದ ನಂಟರೂ ಸತ್ತರು. ಇನ್ನೂ ಇದ್ದ ಇತರರೂ ಸತ್ತು ಅವರ ಕುಲವೇ ನಾಶವಾಯಿತು. ಆಗ ಊರಿನವರೆಲ್ಲ ಹೀಗೆ ಹೇಳಿಕೊಂಡರು – “ ಈ ಬಾಲಕನು ನಮ್ಮ ಊರಿನಲ್ಲಿದ್ದರೆ ನಮಗೆಲ್ಲ ನಿಶ್ಚಯವಾಗಿಯೂ ಮರಣವೂ ಕೆಡುಕೂ ಉಂಟಾಗುವುದು. ಇವನನ್ನು ಇಲ್ಲಿಂದ ಓಡಿಸಿ ಕಳೆದು ಬಿಡಿ ”  . ಹೀಗೆಂದು ಅವರೆಲ್ಲರೂ ನಂದಿಮಿತ್ರನನ್ನು ಊರಿನಿಂದ ಓಡಿಸಿಬಿಟ್ಟರು. 

    ಕಳೆದೊಡಾತಂ ಕೆಲದೂರ್ಗಳುಮಂ ನಾೞ್ಕಳುಮಂ ತೊೞಲ್ದು ಬೈಕಂದಿರಿದೆಲ್ಲಿಯಾನುಂ ಪೆತ್ತುಂ ಪೆಱದೆಯುಮಿಂತು ಬಾೞುತ್ತಂ ಪದಿನೈದು ಪದಿನಾಱು ಪ್ರಾಯದಾತನಾಗಿ ವೈದಿಶಮೆಂಬ ಪೊಱಲ್ಗೆವರ್ಪೊನ್ ಅನ್ನಗಂ ಕಾಷ್ಠಕೂಟನೆಂಬ ಬೆಸದವಂ ಪುಳ್ಳಿಯ ಪೊಱೆಯಂ ಪೊತ್ತು ಪೊೞಲ್ಗೆವ ರ್ಪೊನಂ ಕಂಡಾತನೊಡನೆ ಗೊಟ್ಟಿಯೊಳ್ ಬಂದು ಪೊಱಪೊೞಲೊಳಾರವೆಯೊಳ್ ಕಾಷ್ಠಕೂಟಂ ಸೇದೆಗೆಟ್ಟು ಪುಳ್ಳಿಯ ಪೊಱೆಯನಿೞಪಿ ಪಟ್ಟಿರ್ದೊಡೆ ತಾನುಂ ಪಟ್ಟರಲೆಂದು ಬಗೆದು ತಲೆಯ ತ್ತಿಡಲ್ಕರಸಿಯೇನುಮಂ ಕಾಣದೆ ತರ್ಪೊನೆಣ್ಬರಿಂದಂ ತಳರ್ಚಲಾಱದಂತಪ್ಪ ಪಿರಿದೊಂದುಸಿಲೆಯಂ ತಂದು ತಲೆಯತ್ತಿಟು ಪಟ್ಟಿರ್ದುದಂ ಕಾಷ್ಠಾಕೂಟನಾತನ ಬಲಮಂ ಕಂಡು ತನ್ನ ಮನೆಗೊಡಗೊಂಡು ಪೋಗಿಯೂಡಿ ನಿನಗೀ ಪೊೞಲೊಳಾರಾನುಂ ನಂಟರೊಳರೆಯೆಂದು ಬೆಸಗೊಂಡೊಡಾರುಮಿಲ್ಲೆಂದೊಡಂತಪ್ಪೊಡೆ ನೀನೆನ್ನೊಡನಿರೆತ್ತಲುಂ ಪೋಗದಿರೆಂದು ತಾಂಗಿ ತಾನುಮಾತನುಮಂ ತಿರ್ವರುಂ ದಿವಸಕ್ಕಂ ಪುಳ್ಳಿಯಂ ತರೆ ಪದಿಂಬರ್ ತರ್ಪ ಪೊಱೆಯನೊರ್ವನೆ ತರ್ಪನಂತು ಪಲವು ದಿವಸಂ ಸಲೆ ಕಾಷ್ಠಕೂಟಂ ತನ್ನ ಪೆಂಡತಿ ಜಯಘಂಟೆಯೆಂಬೊಳನಿಂತೆಂದು ಕಲ್ಪಿಸಿದ ನೀತಂಗೆ ನೀಂ ಬಸಿಱ್ತೀವೆ ಬಡ್ಡಿಸದಿರೆಣ್ಣೆಯಂ ತಿಣ್ಣಮೆಱೆಯದಿರ್ ಮೀಯಲ್ಬೇಡಿದೊಡ ಮೆಱೆಯದಿರೆಂದು ಕಲ್ಪಿಸಿದೊಡಾಕೆಯುಮಾ ಪಾಂಗಿನೊಳ್ ದಿವಸಕ್ಕಂ ಬಡ್ಡಿಸೆ 

    ಆಗ ಅವನು ಸಮೀಪದ ಊರುಗಳನ್ನೂ ನಾಡುಗಳನ್ನೂ ಸುತ್ತಾಡುತ್ತ ಭಿಕ್ಷೆ ಬೇಡಿಕೊಂಡು ಅಲೆಯುತ್ತ ಎಲ್ಲಿಯಾದರೂ ಭಿಕ್ಷೆ ಸಿಕ್ಕಿದರೂ ಆಯಿತು ಸಿಕ್ಕದಿದ್ದರೂ ಆಯಿತು ಎಂಬ ರೀತಿಯಲ್ಲಿ ಬಾಳುತ್ತ ಹದಿನೈದು ಹದಿನಾರು ವರ್ಷ ವಯಸ್ಸಿನವನಾಗಿ ವೈದಿಶವೆಂಬ ಪಟ್ಟಣಕ್ಕೆ ಬರುತ್ತಿದ್ದನು. ಆ ವೇಳೆಗೆ ಕಾಷ್ಠಕೂಟನೆಂಬ ಕೆಲಸದವನು (ಕಾರ್ಮಿಕನು) ಸೌದೆಯ ಹೊರೆಯನ್ನು ಹೊತ್ತುಕೊಂಡು ಪಟ್ಟಣಕ್ಕೆ ಬರುತ್ತಿದ್ದನು. ನಂದಿಮಿತ್ರನು ಅವನನ್ನು ಕಂಡು, ಅವನ ಜೊತೆಯಲ್ಲಿ ಬಂದನು. ಪಟ್ಟಣದ ಹೊರಗಿನ ಉದ್ಯಾನದಲ್ಲಿ ಕಾಷ್ಠಕೂಟನು ಆಯಾಸದಿಂದ ಅಶಕ್ತನಾಗಿ ತಲೆಯಲ್ಲಿದ್ದ ಸೌದೆ ಹೊರೆಯನ್ನು ಇಳಿಸಿ ಮಲಗಿದನು. ಆಗ ನಂದಿಮಿತ್ರನು ತಾನೂ ಮಲಗಬೇಕೆಂದು ಯೋಚಿಸಿ ತಲೆಯ ಕಡೆ ಒತ್ತಾಗಿ (ತಲೆದಿಂಬಾಗಿ) ಇಡಲಿಕ್ಕೆ ಹುಡುಕಲು ಏನೂ ಕಾಣದೆ, ಎಂಟು ಜನರಿಂದ ಅಲುಗಾಡಿಸಲು ಕೂಡ ಸಾಧ್ಯವಾಗದಂತಹ ದೊಡ್ಡದೊಂದು ಕಲ್ಲನ್ನು ತರತೊಡಗಿದನು. ಅದನ್ನು ತಂದು ತಲೆಯ ಕಡೆ ಇಟ್ಟು ಮಲಗಿದನು. ಕಾಷ್ಠಕೂಟನು ಇದನ್ನು ನೋಡಿ, ಅವನ ಬಲವನ್ನು ಕಂಡು ತನ್ನ ಮನೆಗೆ ಅವನನ್ನು ಕರೆದುಕೊಂಡು ಹೋದನು. “ ಈ ಪಟ್ಟಣದಲ್ಲಿ ನಿನಗೆ ಯಾರಾದರೂ ನಂಟರಿರುವರೆ ? ಎಂದು ಕೇಳಲು, “ಯಾರೂ ಇಲ್ಲ” ಎಂದು ನಂದಿಮಿತ್ರನು ಉತ್ತರ ಕೊಟ್ಟನು. ಆಗ ಕಾಷ್ಠಕೂಟನು – “ಹಾಗಾದರೆ ನೀನು ನನ್ನೊಡನೆ ಇರು. ಎಲ್ಲಗೂ ಹೋಗಬೇಡ” ಎಂದು ಅವನಿಗೆ ಆಶ್ರಯಕೊಟ್ಟನು. ತಾನೂ ಅವನೂ ಹೀಗೆ ಇಬ್ಬರೂ ಪ್ರತಿದಿನವೂ ಸೌದೆ ತರುತ್ತಿದ್ದರು. ಹತ್ತು ಮಂದಿ ತರತಕ್ಕ ಹೊರೆಯನ್ನು ನಂದಿಮಿತ್ರನೊಬ್ಬನೆ ತರುತ್ತಿದ್ದನು. ಅಂತೂ ಹಲವು ದಿವಸ ಕಳೆಯಲು ಕಾಷ್ಠಕೂಟನು ತನ್ನ ಹೆಂಡಿತಿಯಾದ ಜಯಘಂಟೆಗೆ ಹೀಗೆ ಹೇಳಿಕೊಟ್ಟನು. – “ಈತನಿಗೆ ನೀನು ಹೊಟ್ಟೆ ತುಂಬುವಷ್ಟು ಬಡಿಸಬೇಡ. ಎಣ್ಣೆಯನ್ನು ಹೆಚ್ಚು ಹೂಯ್ಯಬೇಡ. ಸ್ನಾನಕ್ಕಾಗಿ ಕೇಳಿದರೆ ಕೂಡ ಎಣ್ಣೆಯನ್ನು ಹೊಯ್ಯಬೇಡ” ಹೀಗೆ ಹೇಳಿಕೊಡಲು, ಆಕೆ ಅದೇ ರೀತಿಯಲ್ಲಿಯೇ ಬಡಿಸುತ್ತಿದ್ದಳು. 

    ನಂದಿಮಿತ್ರನುಂ ಪಿರಿಯ ಪುಳ್ಳಿಯ ಪೊಱೆಗಳಂ ದಿವಸಕ್ಕಂ ತಂದು ಕುಡಲವಂ ಮಾಱ ಕಾಷ್ಠಕೂಟನೊಡೆಯೊ ನಾದೊನಿಂತು ದಿವಸಂಗಳ್ ಸಲೆ ಮತ್ತೊಂದು ದಿವಸಂ ಜಯಘಂಟೆ ಕರುಣಿಸಿ ತಣಿಯೆ ಬಡ್ಡಿಸಿದೊ ಡುಂಡು ಮಱುದಿವಸಮಿರ್ವರುಂ ಪುಳ್ಳಿಗೆ ಪೋದಲ್ಲಿ ನಂದಿಮಿತ್ರನೆಂದನಯ್ಯಾ ಎನೆಗುಡಲಿಲ್ಲೇನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೊಂಡೀಯಿಮೆಂದೊಡಂತೆಗೆಯ್ವಮೆಂದು ಮಱುಮಾತು ಗೊಟ್ಟಿರ್ವರುಂ ಪುಳ್ಳಿಯ ಪೊಱೆಯಂ ಮನೆಗೆ ತಂದ ಬೞಕ್ಕೆ ಕಾಷ್ಠಕೂಟಂ ಪೆಂಡತಿಯನೆಂದನೀ ತಂಗೆ ನೀಂ ಬಸಿಱ್ ತೀವೆಯುಣಲಿಕ್ಕಿದಾ ಎಂದೊಡೆ ಕರುಣಿಸಿ ಪರ್ವಮೆಂದು ತಣಿಯುಣಲಿಕ್ಕಿದೆನೆಂದೊಡೆ ಮುಳಿದು ಸಾಯೆ ಬಡಿದು ಮನೆಯಿಂ ಪೆಂಡತಿಯನಟ್ಟಿ ಕಳೆದೊಡೆ ನಂದಿಮಿತ್ರಂ ಪೋಗಿ ಜಯಘಂಟೆಯಂ ಬೆಸಗೊಂಡನ್ ನಿನ್ನನೇಕೆ ಕಾಷ್ಠಕೂಟಂ ಬಡಿದನಬ್ಬಾ ಎಂದು ಬೆಸಗೊಂಡೊಡೆ ನಿನಗೆ ನಿನ್ನೆ ತಣಿಯೆಯುಣಲಿಕ್ಕಿದೆನೆಂದು ಮುಳಿದು ಬಡಿದಟ್ಟಿ ಕಳೆದೊನೆಂ ದೊಡಿಂತಪ್ಪ ಪಂಚಮಹಾಪಾತಕನ ಮನೆಯೊಳ್ ಮಾರಿಯಿರ್ಕೆಂದು ಕಾಷ್ಠಕೂಟನಂ ಬಿಸುಟ್ಟು ಪೋಗಿ ಬೇಱೆ ತನಗೆ ಪುಳ್ಳಿಗಳಂ ದಿವಸಕ್ಕಂ ತಂದು ಮಾಱಲ್ ತಗುಳ್ದೊಡೆಂಟು ದಮ್ಮದ ಪುಳ್ಳಿಯಂ ತಂದೊಡಮೊಂದು ಪಣಮನಪ್ಪೊಡಂ ಪೆಱದೆ ಬಸಿಕೂೞ್ಗಮಂಬಲಿಗಮೆಣ್ಣೆಗಂ ಕೞಗಂ ಕೊಟ್ಟು ಪೋಕುಮಿಂತು ಬಾೞುತ್ತುಮಿರೆ 

    ನಂದಿಮಿತ್ರನು ಪ್ರತಿದಿವಸವೂ ಕಟ್ಟಿಗೆಯ ದೊಡ್ಡ ದೊಡ್ಡ ಹೊರೆಗಳನ್ನು ತಂದು ಕೊಡುತ್ತಿದ್ದನು. ಕಾಷ್ಠಕೂಟನು ಅವನ್ನು ಮಾರಿ ಧನಿಕನಾದನು. ಹೀಗೆ ದಿವಸಗಳು ಕಳೆದುವು. ಒಂದಿ ದಿನ ಜಯಘಂಟೆ ಕನಿಕರಪಟ್ಟು ನಂದಿಮಿತ್ರನಿಗೆ ತೃಪ್ತಿಯಾಗುವಷ್ಟು ಬಡಿಸಿದಳು. ಅದನ್ನು ಉಂಡು ಮಾರನೆ ದಿನ ಇಬ್ಬರೂ ಸೌದೆ ತರಲು ಹೋದಾಗ ನಂದಿಮಿತ್ರನು – “ ಅಯ್ಯಾ, ನನಗೆ ಉಡಲಿಕ್ಕೆ ಗತಿಯಿಲ್ಲ, ಎಲ್ಲಾದರೊಂದು ದಮ್ಮಕ್ಕೆ (ದಮ್ಮ – ಒಂದು ನಾಣ್ಯ) ಸಿಗುವಷ್ಟಾದರೂ ಬಟ್ಟೆ ತಂದುಕೊಡಿ “. ಎಂದನು. “ಹಾಗೆ ಮಾಡೋಣ” ಎಂದು ಕಾಷ್ಠಕೂಟನು ಪ್ರತ್ಯುತ್ತರ ಕೊಟ್ಟನು. ಇಬ್ಬರೂ ಸೌದೆಯ ಹೊರೆಯನ್ನು ಮನಗೆ ತಂದನಂತರ ಕಾಷ್ಠಕೂಟನು ತನ್ನ ಹೆಂಡತಿಯೊಡನೆ “ಇವನಿಗೆ ನೀನು ಹೊಟ್ಟೆತುಂಬ ಉಣಬಡಿಸಿದೆಯಾ? ” ಎಂದು ಕೇಳಿದನು. ಅದಕ್ಕೆ ಆಕೆ – “ನಾನು ಕನಿಕರಪಟ್ಟು ಹಬ್ಬವೆಂದು ಅವನಿಗೆ ತೃಪ್ತಿಯಾಗುವಷ್ಟು ಉಣಬಡಿಸಿದೆನು ” ಎಂದಳು. ಆಗ ಕಾಷ್ಠಕೂಟನು ಸಿಟ್ಟಾಗಿ ಸಾಯುವಂತೆ ಬಡಿದು ತನ್ನ ಮನೆಯಿಂದ ಹೆಂಡಿತಿಯನ್ನು ಓಡಿಸಿ ಬಿಟ್ಟನು. ನಂದಿಮಿತ್ರನು ಜಯಘಂಟೆ ಬಳಿಗೆ ಹೋಗಿ – “ ತಾಯೇ, ನಿನ್ನನ್ನು ಕಾಷ್ಠಕೂಟನು ಯಾಕೆ ಬಡಿದನು? ” ಎಂದು ಕೇಳಿದನು. “ನಿನ್ನೆ ನಿನಗೆ ತೃಪ್ತಿಯಾಗುವಷ್ಟು ಉಣಬಡಿಸಿದೆನೆಂದು ಕೋಪಗೊಂಡು ಅವನು ನನ್ನನ್ನು ಹೊಡೆದು ಓಡಿಸಿದನು ” ಎಂದು ಜಯಘಂಟೆ ನುಡಿದಳು. ಆಗ ನಂದಿಮಿತ್ರನು – “ಇಂತಹ ಪಂಚಮಹಾಪಾಪ ಮಾಡಿದವನ ಮನೆಯಲ್ಲಿ ಮಾರಿದೇವತೆ ನೆಲಸಲಿ !” ಎಂದು ಹೇಳಿ, ಕಾಷ್ಠಕೂಟನನ್ನು ಬಿಟ್ಟು ಹೋದನು. ತಾನು ಬೇರೆಯಾಗಿ ಪ್ರತಿದಿನವೂ ಸೌದೆಹೊರೆಗಳನ್ನು ತಂದು ತೊಡಗಿದನು. ಎಂಟು ದಮ್ಮದ ಸೌದೆಯನ್ನು ತಂದರೂ ಚಿಕ್ಕನಾಣ್ಯವಾದ ಒಂದು ಹಣವೂ ಸಂಪಾದನೆಯಾಗದೆ, ಅದನ್ನು ಹೊಟ್ಟೆಯ ಅನ್ನಕ್ಕೂ ಅನ್ನದ ಗಂಜಿಗೂ ಎಣ್ಣೆಗೂ ಹುಳಿಗಂಜಿಗೂ ಕೊಟ್ಟು ಹೋಗುತ್ತಿದ್ದನು. 

    ಮತ್ತೊಂದು ದಿವಸಂ ಪುಳ್ಳಿಗೆ ಪೋಗಿ ಪುಳ್ಳಿಯ ಪೊಱೆಯಂ ಪೊತ್ತು ಬರ್ಪೊನನ್ನೆಗಮೆಡೆಯೊಳ್ ಶಿವಗುಪ್ತಚಾರ್ಯರಷ್ಟಾಂಗ ನಿಮಿತ್ತಂಗಳಂ ಬಲ್ಲೊರಡವಿಗೆ ವೋಗಿ ಸಿದ್ಧಾಂತಮಂ ಪರಿವಿಡಿಗೆಯ್ದಂದಿನ ದಿವಸಮಲ್ಲಿಮೆ ದೇವರಂ ವಂದಿಸಿ ಪಕ್ಷೋಪವಾಸದ ಪಾರಣೆಗೆಂದು ಪೊೞಲ್ಗೆ ಚರಿಗೆವುಗುತಂದೊಡೆ ನಂದಿಮಿತ್ರಂ ಕಂಡಾಶ್ಚರ್ಯಭೂತನಾಗಿ ನೀಡುಂ ನೋಡಿಯಿವರೆಲ್ಲಿಗೆ ವೋದಪ್ಪರೋ ಎಂದು ಬೞವೞಯನೆವಂದು ಪೊಱಪೊೞಲ ಬಸದಿಯ ಪ್ರಾಕಾರದೊಳಗೆ ಪುಳ್ಳಿಯ ಪೊಱೆಯನಿಕ್ಕಿ ನೋೞ್ಪನನ್ನೆಗಮಿವರನೆಂದವರಂ ಬೞವೞಯನೆ ಬರ್ಪನ್ನೆಗಮಾದಿವಸಮರಸಂ ಶಿವಗುಪ್ತ ಭಟ್ಟಾರಕರ್ಗ್ಗಾಂ ಪಾರಣೆಯಂ ಮಾಡುವೆಂ ಪೆಱರಾರುಂ ನಿಱಸಲ್ ಸಲ್ಲೆಂದು ಪೊೞಲೊಳಗೆಲ್ಲಂ ಗೋಸನೆಯಂ ತೊೞಲ್ಚಿದೊಡಂಜಿಯಾರುಂ ನಿಱಸುವರಿಲ್ಲದೆ ಭಟಾರರುಂ ಕಿಱುಮನೆ ಪೆರ್ಮನೆಯೆನ್ನದುಣಲ್ತಕ್ಕ ಮನೆಗಳಂ ಚರಿಗೆವುಗುತ್ತಂ ಬರ್ಪೊರರಮನೆಯಂ ಪೊಕ್ಕಾಗಳ್ ಕಂಡರಸನುಂ ಮಹಾದೇವಿಯುಂ ಸುವರ್ಣಪೂರ್ಣಕಳಶಮುಂ ಕನ್ನಡಿಯುಂ ಪೂವುಮಕ್ಕಿಯುಂ ಮಾದುಫಲಮುಂ ಮೊದಲಾಗೊಡೆಯನೇಕಾರ್ಚನೆಯಿಂದಿದಿರಂ ಬಂದು ನಿಱಸಿ ಬಲಗೊಂಡು ಬಂದು ಭಟಾರರ ಕಾಲಂ ಮಹಾದೇವಿ ನೀರ್ವೊಯ್ಯೆ ಅರಸಂ ತಾನೆ ಪ್ರಕ್ಷಾಳಿಸಿ ಬೞಕ್ಕೊಡವೋದ ಬೋೞದಲೆಯ ದೇಸಿಗನ ಕಾಲಂ ಬ್ರಹ್ಮಯ್ಯಾ ನೀಡಿಂ ನಿಮ್ಮ ಕಾಲಂ ತೊಳೆವೆಮೆಂದು ಮಹಾದೇವಿ ತಾನೆ ಕಾಲಂ ಭಟ್ಟಾರಕರ್ಗೆಱಗಿ 

    ಹೀಗೆ ಅವನು ಜೀವನ ಸಾಗಿಸುತ್ತಿದ್ದನು. ನಂದಿಮಿತ್ರನು ಒಂದು ದಿವಸ ಸೌದೆಗೆ ಹೋಗಿ, ಸೌದೆಯ ಹೊರೆಯನ್ನು ಹೊತ್ತುಕೊಂಡು ಬರುತ್ತಿದ್ದನು. ಆಗ ದಾರಿಯಲ್ಲಿ ಲಕ್ಷಣ, ಅಂಗ, ಸ್ವರ, ವ್ಯಂಜನ, ಭೌಮ, ಅಂತರಿಕ್ಷ, ಸ್ವಪ್ನ, ಛಿನ್ನ – ಎಂಬ ಎಂಟು ಅಂಗಗಳುಳ್ಳ ಶಕುನ ಶಾಸ್ತ್ರವನ್ನು ಬಲ್ಲವರಾದ ಶಿವಗುಪ್ತಾಚಾರ್ಯರು ಕಾಡಿಗೆ ಹೋಗಿ ಶಾಸ್ತ್ರಸಿದ್ಧಾಂತವನ್ನು ಅನುಕ್ರಮವಾಗಿ ಹೇಳಿ ಆ ದಿನ ಅಲ್ಲಿಯೇ ದೇವರನ್ನು ವಂದಿಸಿ, ಎರಡುವಾರಗಳ ಉಪವಾಸ ಮಾಡಿ, ಆ ಉಪವಾಸ ಮುಗಿಸುವ ಊಟಕ್ಕೆಂದು ಪಟ್ಟಣಕ್ಕೆ ಭಿಕ್ಷೆಗಾಗಿ ಪ್ರವೇಶಿಸುತ್ತಿದ್ದರು. ಅವರನ್ನು ನಂದಿಮಿತ್ರನು ಕಂಡು ಆಶ್ಚರ್ಯಪಟ್ಟು ಹೆಚ್ಚು ಹೊತ್ತು ನೋಡಿ “ ಇವರು ಎಲ್ಲಿಗೆ ಹೋಗುತ್ತಾರೋ ! ” ಎಂದು ಹಿಂದಿನಿಂದಲೇ ಬಂದು ಪಟ್ಟಣದ ಹೊರಗಿನ ಬಸದಿಯ ದರೆಯ ಒಳಗೆ ಸೌದೆಹೊರೆಯನ್ನಿಟ್ಟು ನೋಡಿದನು. ಅವರ ಹಿಂದು ಹಿಂದಿನಿಂದಲೇ ಬಂದನು. ಆ ದಿವಸ ರಾಜನು ಶಿವಗುಪ್ತ ಋಷಿಗಳಿಗೆ ತಾನು ಪಾರಣೆಯ ಊಟ ಕೊಡುವೆನು, ಬೇರೆ ಯಾರೂ ಅವರನ್ನು ನಿಲ್ಲಿಸಕೂಡದೆಂದು ಪಟ್ಟಣದ ಹೊರಗೆಲ್ಲ ಡಂಗುರವನ್ನು ಸಾರಿಸಿದ್ದನು. ಇದರಿಂದ ಹೆದರಿ, ಯಾರೊಬ್ಬರೂ ನಿಲ್ಲಿಸುವವರಿಲ್ಲದೆ, ಋಷಿಗಳು ಚಿಕ್ಕಮನೆ ದೊಡ್ಡ ಮನೆ ಎನ್ನದೆ ಭೋಜನ ಮಾಡಲು ತಕ್ಕುದೆನಿಸಿದ ಮನೆಗಳನ್ನೆಲ್ಲಾ ಭಿಕ್ಷೆಗೆಂದು ಪ್ರವೇಶ ಮಾಡುತ್ತ ಬರುತ್ತಿದ್ದು ಅರಮನೆಯನ್ನು ಪ್ರವೇಶಿಸಿದರು. ಆಗ ರಾಜನು ಕಂಡು ಮಹಾರಾಣಿಯನ್ನು ಕೂಡಿಕೊಂಡ, ಚಿನ್ನದ ಪೂರ್ಣ ಕಳಶ, ಹೂವು, ಅಕ್ಕಿ, ಮಾದಳಹಣ್ಣು – ಮುಂತಾದವುಗಳುಳ್ಳ ಅನೇಕ ವಿಧವಾದ ಅರ್ಚನೆಯ ವಸ್ತುಗಳಿಂದ ಎದುರುಗೊಂಡು ಅವರನ್ನು ನಿಲ್ಲಿಸಿ, ಪ್ರದಕ್ಷಿಣೆ ಬಂದನು. ಮಹಾರಾಣಿ ನೀರು ಹೊಯ್ಯುತ್ತಿರಲು ರಾಜನು ಸ್ವತ: ಋಷಿಗಳ ಕಾಲನ್ನು ತೊಳೆದು. ಆಮೇಲೆ ಒಟ್ಟಿಗೆ ಹೋದಬೋಳುತಲೆಯ ಈ ದೇಶಿಕನನ್ನು (ದೇಶವನ್ನು ಅಲೆದಾಡುವವನ) ಕುರಿತು ರಾಣಿಯು “ಬ್ರಹ್ಮಯ್ಯಾ ನಿಮ್ಮ ಕಾಲು ತೊಳೆಯುವೆನು, ನೀಡಿರಿ” ಎಂದು ಆ ಮಹಾದೇವಿ ಅವನ ಕಾಲನ್ನು ತೊಳೆದಳು. 

    ಕುಳ್ಳಿರಿಸಿ ಪಿರಿಯ ಪೊನ್ನ ತಳಿಗೆಯುಮಚ್ಚಮಪ್ಪಡ್ಡವಣಿಗೆಯು ಮನಿಟ್ಟು ಬ್ರಹ್ಮಚಾರಿಗಂ ಪೊನ್ನತಳಿಗೆಯುಮಡ್ಡಣಿಗೆಯುಮನಿಟ್ಟು ಭಟ್ಟಾರಕರ್ಗರಸಮ ತಾನೆ ಬಡ್ಡಿಸಲ್ತಗುಳ್ದ ಬೞಯಂ ರಾಜಾನ್ನದ ಕೂೞುಂ ಪೆಸಱತೊವೆಯುಂ ಬೆಣ್ಣೆಗಾಸಿದಾಮೋದ ಸುಗಂಧ ಪರಿಮಳಂ ನಾರ್ಪ ತುಪ್ಪಮುಂ ಪಲವುಂ ತೆಱದ ಬಾಡುಗಳುಂ ತುಯ್ಯಲುಂ ಪೂರಿಗೆಯಿಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪ್ರರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತೆಱದ ಭಕ್ಷ್ಯರೂಪಂಗಳುಮಂ ನಾನಾಪ್ರಕಾರದ ಪಾನಂಗಳುಮಂ ಭಟ್ಟಾರರ್ಗೆ ಬಡ್ಡಿಸಿದಂತೆ ಬ್ರಹ್ಮಯ್ಯಂಗೆ ಮಹಾದೇವಿ ಬಡ್ಡಿಸಿದೊಡೆ ದೇಸಿಗಂ ಕಂಡು ಬೆಱಗಾಗಿ ಪುಟ್ಟಿದಂದಿಂ ತೊಟ್ಟಿಂತಪ್ಪುಣಿಸಂ ಕನಸಿನೊಳಪ್ರ್ಪೆಡಂ ಕಂಡಱಯದ ಮಗಂ ಚೋದ್ಯಂಬಟ್ಟೆಂದಪ್ರ್ಪೆಡಂ ತಣಿಯೆಯುಣಲ್ವೆಱದ ದೇಸಿಗಂ ನಾನಾಪ್ರಕಾರದುಣಿಸಂ ಸುಗಂಧಮಪ್ಪ ದಿವ್ಯಾಹಾರಮನಾಕಂಠಪ್ರಮಾಣಂ ಬರೆಗಂ ತಣಿಯುಂಡು ಬೞಕ್ಕೆ ಕರ್ಪೂರಸಮ್ಮಿಶ್ರಮಪ್ಪ ನೆಲಬತ್ತಿಯಡಕೆಯ ಪೋೞ್ಗಳುಮಂ ಕೈತೀವಿದೆಲೆಯುಮಂ ಬ್ರಹ್ಮಯ್ಯಂಗೆ ಕೊಟ್ಟುಭಟಾರರ್ ಚರಿಗೆ ಮಾಡಿದ ಬೞಕ್ಕಸರನುಮಂ ಮಹಾದೇವಿಯುಮಂ ಕರ್ಮಕ್ಷಯ ಮುಮಕ್ಷಯದಾನಮುಮಕ್ಕೆಂದು ಪರಸಿ ಪೊಱಮಟ್ಟು ಬಸದಿಗೆ ಪೋಪಾಗಳ್ ಭಟ್ಟಾರರ ಬೞವೞಯನೆ ಪೋದಮ ಭಟ್ಟಾರರ್ ಬಸದಿಯಂ ಬಲಗೊಂಡು ಕಾಲಂ ಕರ್ಚಿಯೊಳಗಂ ಪೊಕ್ಕೀರ್ಯಾಪತ್ತಿಯಂ ಬಿಡಿಸಿ ಗೋಚಾರ ನಿಯಮಂಗೆಯ್ದುದಂ

    ಋಷಿಗಳಿಗೆ ವಂದಿಸಿ ಕುಳ್ಳಿರಿಸಿದಳು. ದೊಡ್ಡದಾದ ಹೊಂದಟ್ಟೆಯನ್ನೂ ಎತ್ತರದ ಅಡ್ಡಣಿಗೆ (ತಟ್ಟೆಯಿಡಲು ಮೂರುಕಾಲಿನ ಮಣೆ)ಯನ್ನೂ ಇಟ್ಟಳು. ಬ್ರಹ್ಮಚಾರಿಗೂ ಚಿನ್ನದ ತಟ್ಟೆ ಅಡ್ಡಣಿಗೆಗಳನ್ನಿಟ್ಟಳು. ಋಷಿಗಳಿಗೆ ರಾಜನು ಸ್ವತ: ಉಣಬಡಿಸಲು ಪ್ರಾರಂಭಿಸಿದ ನಂತರ ಮಹಾರಾಣಿ ಬಡಿಸತೊಡಗಿದಲು. ರಾಜಾನ್ನ ಎಂಬ ಅಕ್ಕಿಯ ಅನ್ನ, ಹೆಸರುಬೇಳೆಯ ತೊವ್ವೆ, ಬೆಣ್ಣೆಯನ್ನು ಕಾಸಿ ಬಹಳ ವಿಶೇಷವಾಗಿ ಮಗಮಗಿಸುತ್ತಿರುವ ತುಪ್ಪ, ಹಲವು ರೀತಿಯ ಕಾಯಿಪಲ್ಲೆಗಳು, ಪಾಯಸ, ಪೂರಿ, ಇಡ್ಡಲಿ, ಗೋರವೆಯ ಭಕ್ಷ್ಯ, ಉಪ್ಪಿನಕಾಯಿ, ತುಪ್ಪದ ಪೂರಿ, ಲಾಡು, ಮಂಡಿಗೆ – ಮುಂತಾಗಿ ಇರತಕ್ಕ ಹದಿನೆಂಟು ರೀತಿಯ ಭಕ್ಷ್ಯ ರೂಪಗಳನ್ನೂ ಹಲವಾರು ರೀತಿಯ ಪಾನೀಯಗಳನ್ನೂ ಮಹಾದೇವಿಯು ಋಷಿಗಳಿಗೆ ಬಡಿಸಿದಂತೆ ಬ್ರಹ್ಮಚಾರಿಗೂ ಬಡಿಸಿದಳು. ದೇಸಿಗನಾದ ನಂದಿಮಿತ್ರನು ಕಂಡು ಬೆರಗಾದನು. ಹುಟ್ಟಿದಂದಿನಿಂದ ಇಂಥದೊಂದು ಊಟವನ್ನು ಕನಸಿನಲ್ಲಿಯೂ ಕಂಡರಿಯದ ಮಗನೂ ಎಂದಿಗೂ ತೃಪ್ತಿಯಾಗುವಷ್ಟು ಊಟ ಮಾಡುವ ಯೋಗ್ಯತೆಯನ್ನೇ ಪಡೆಯದ ದೇಸಿಗನೂ ಆದ ನಂದಿಮಿತ್ರನು ಹಲವಾರು ವಿಧದ ಉಣಿಸನ್ನು – ಸುವಾಸನೆಯಿಂದ ಕೂಡಿದ ದಿವ್ಯವಾದ ಆಹಾರವನ್ನು ಕುತ್ತಿಗೆಯವರೆಗೂ ಪೂರ್ಣ ತೃಪ್ತಿಯಾಗುವತನಕವೂ ಉಂಡನು. ಆಮೇಲೆ ಕರ್ಪುರದಿಂದ ಸರಿಯಾಗಿ ಬೆರಕೆಯಾದ ನೆಲವತ್ತಿಯ ಅಡಕೆಯ ಹೋಳುಗಳನ್ನೂ ಕೈತುಂಬ ವೀಳೆಯವನ್ನೂ ಬ್ರಹ್ಮಚಾರಿಗೆ ಕೊಟ್ಟರು ಶಿವಗುಪ್ತಾಚಾರ್ಯರು ಭಿಕ್ಷೆ ಸ್ವೀಕರಿಸಿ(ಊಟ ಮಾಡಿ) ಆದ ನಂತರ ಅರಸನನ್ನೂ ಮಹಾರಾಣಿಯನ್ನೂ “ ನಿಮ್ಮ ಕರ್ಮವು ಅಳಿಯಲಿ! ಚಾನವು ಅಕ್ಷಯವಾಗಲಿ!” ಎಂದು ಆಶೀರ್ವದಿಸಿ ಹೊರಟು ಬಸದಿಗೆ ಹೋಗುವಾಗ ಅವರ ಹಿಂದಿನಿಂದಲೇ ಅವನೂ ಹೋದನು. ಋಷಿಗಳು ಬಸದಿಗೆ ಪ್ರದಕ್ಷಿಣೆ ಮಾಡಿ, ಕಾಲು ತೊಳೆದು ಒಳಹೊಕ್ಕು ಈರ್ಯಾಪತ್ತಿಯನ್ನು ಬಿಡಿಸಿ (ಹಿಂದೆಯಾಗದಂತೆ ಸೂಕ್ಷ್ಮಜೀವಿಗಳನ್ನು ಪರಿಹರಿಸಿಕೊಂಡು), ಸಾಧುವಿನ ಭಿಕ್ಷಾಕ್ರಮದಂತೆ ಗೋಚಾರ ನಿಯಮವನ್ನು ಮಾಡಿದರು. 

    ನಂದಿಮಿತ್ರಂ ನೋಡುತ್ತಿರ್ದ್ದಿಂತೆಂದು ಮನದೊಳ್ ಬಗೆದಪ್ಪನಿಂತಪ್ಪ ರೂಪುಮಂ ಕೈಕೊಂಡೊಡೆ ಲೋಕದೊಳ್ ಗೌರವಮುಂ ಪೂಜೆಯುಮಂ ಪೆಱಲಕ್ಕುಮೊಂದುಂ ಕ್ಲೇಶಮಿಲ್ಲದೆ ದಿವ್ಯಾಹಾರಮನೆಲ್ಲಾ ಕಾಲಮುಣಲ್ಪೆಱಲಕ್ಕುಮೆಂದು ಬಗೆದು ಭಟಾರರ್ ನಿಮಯಮಂಗೆಯ್ದು ಸಮೆದಿರ್ದ ಬೞಕ್ಕೆ ಬಂದು ಮುಂದೆ ನಿಂದುಕೈಗಳಂ ಮುಗಿದಿಂತೆಂದನ್ ಭಟಾರಾ ಎನ್ನಂ ನಿಮ್ಮಂತೆ ಮಾಡಿಮೆಂದೊಳ್ ಭಟಾರರಾತನಂ ನೋಡಿಯಲ್ಪಾಯುಷ್ಯನುಮಾಸನ್ನ ಭವ್ಯನಪ್ಪುದನಱದೊಳ್ಳಿತಪ್ಪ ಮೂಹರ್ತದೊಳ್ ತಪಂಬಡಿಸಿದೊಡಾತನುಂ ತಪಂಬಟ್ಟು ದೀಕ್ಷೋಪವಾಸಂ ಗೆಯ್ದಿರ್ದನ್ ಅನ್ನೆಗಮರಸನುಮರಸಿಯುಂ ಭಟ್ಟಾರರೊಡವಂದ ಬ್ರಹ್ಮಚಾರಿ ತಪಂಬಟ್ಟನೆಂಬುದಂ ಕೆಳ್ದೊಸೆದು ಮುನ್ನೆಮ್ಮ ಮನೆಯೊಳುಂಡು ತಪಂಬಟ್ಟಿನಿಂ ನಾಳೆ ನಮ್ಮ ಮನೆಯೊಳ್ ಪಾನಿಗಟ್ಟುವಮೆಂದು ಬಗೆದಿರ್ದು ಮಱುದಿವಸಂ ಸಾಮಂತ ಮಹಾಸಾಮಂತರ್ಕಳುಂ ರಾಜ್ಯಚಿಹ್ನಂಗಳುಂ ಬೆರಸು ಮಹಾವಿಭೂತಿಯಿಂದರಸಂ ಪೊೞ್ತಡಿನ ಬೇಗಂ ಬಸದಿಗೆ ವಂದು ವಾಹನದಿಂದಿೞದು ಬಲಗೊಂಡು ಬಂದು ಗಂಧಪುಷ್ಪ ದೀಪ ಧೂಪಾಕ್ಷತೆಗಳಿಂ ದೇವರನರ್ಚಿಸಿ ಕ್ರಿಯಾಪೂರ್ವಕಂ ವಂದಿಸಿ ಭಟ್ಟಾರರ್ಗೆ ಗುರುಭಕ್ತಿಗೆಯ್ದು ಪಂಚಮುಷ್ಠಿಯಿಂ ವಂದಿಸಿಯಂತೆ ಕಿತ್ತಯ್ಯಂಗಳುಮನಾ ಮಾರ್ಗದಿಂ ವಂದಿಸಿ ಭಟಾರರಲ್ಲಿಗೆ ವಂದು ಕುಳ್ಳಿರ್ದು ಧರ್ಮಮಂ ಕೇಳ್ದ ತದನಂತರ ಮೆರ್ದು 

    ನಂದಿಮಿತ್ರನು ಇದನ್ನು ನೋಡುತ್ತಿದ್ದು ಮನಸ್ಸಿನಲ್ಲಿ ಹೀಗೆ ಭಾವಿಸಿದನು. – “ಈ ರೀತಿಯ ರೂಪವನ್ನು ತಾಳಿದರೆ ಲೋಕದಲ್ಲಿ ಗೌರವನ್ನೂ ಪೂಜೆಯನ್ನೂ ಪಡೆಯಬಹುದು. ಎನೊಂದೂ ಕಷ್ಟವಿಲ್ಲದೆ ದಿವ್ಯವಾದ ಆಹಾರವನ್ನು ಎಲ್ಲ ಕಾಲದಲ್ಲಿಯೂ ಉಣ್ಣಲು ಪಡೆಯಬಹುದು. ” ಹೀಗೆ ಯೋಚಿಸಿ, ಋಷಿಗಳು ತಮ್ಮ ನಿಯಮಗಳನ್ನು ಮಾಡಿ ಮುಗಿಸಿದ ನಂತರ ಅವರ ಹತ್ತಿರಕ್ಕೆ ಬಂದು ಮುಂದೆ ನಿಂತು ಕೈಗಳನ್ನು ಮುಗಿದು ಅವರೊಡನೆ “ಪೂಜ್ಯರೇ ನನ್ನನ್ನು ನಿಮ್ಮ ಹಾಗೆಯೇ ಮಾಡಿ” ಎಂದನು. ಭಟಾರರು ಅವನನ್ನು ನೋಡಿ, ಅವನು ಸ್ವಲ್ಪ ಮಾತ್ರ ಆಯುಷ್ಯವುಳ್ಳವನೂ ಮೋಕ್ಷಕ್ಕೆ ಹೋಗುವ ಪುಣ್ಯಜೀವಿಯೂ ಆದುದರಿಂದ ಸುಮುಹೂರ್ತದಲ್ಲಿ ತಪಸ್ಸಿಗೆ ಉಪದೇಶಕೊಟ್ಟರು. ನಂದಿಮಿತ್ರನು ತಪಸ್ಸನ್ನು ಸ್ವೀಕರಿಸಿ ದೀಕ್ಷೆ – ಉಪವಾಸಗಳನ್ನು ಆಚರಿಸುತ್ತಿದ್ದನು. ಆ ವೇಳೆಗೆ ರಾಜನೂ ರಾಣಿಯೂ ಶಿವಗುಪ್ತ ಋಷಿಗಳೊಂದಿಗೆ ಬಂದ ಬ್ರಹ್ಮಚಾರಿ ತಪಸ್ಸನ್ನು ಆಚರಿಸಿದ್ದಾನೆ – ಎಂಬುದನ್ನು ಕೇಳಿ ಪ್ರೀತಿಪಟ್ಟು, ಹಿಂದೆ ನಮ್ಮ ಮನೆಯಲ್ಲಿ ಊಟಮಾಡಿ ತಪಸ್ಸು ಮಾಡಿದವನನ್ನು ನಾಳೆ ನಮ್ಮ ಮನೆಗೆ ಕರೆದು ಪಾದತೊಳೆದು ಊಟಹಾಕೋಣ ಎಂದು ಬಗೆದರು. ಮರುದಿನ ರಾಜನು ಹೊತ್ತಾರೆಯ ಸಮಯದಲ್ಲಿ ಸಾಮಂತರು, ಮಹಾಸಾಮಂತರು, ರಾಜ್ಯ ಚಿಹ್ನೆಗಳು – ಇವನ್ನು ಕೂಡಿಕೊಂಡು ಬಹಳ ವೈಭವದಿಂದ ಬಸದಿಗೆ ಬಂದನು. ವಾಹನದಿಂದ ಕೆಳಗಿಳಿದು ಪ್ರದಕ್ಷಿಣೆ ಮಾಡಿ ಬಂದು ಗಂಧ, ಪುಷ್ಪ, ದೀಪ, ಧೂಪ, ಅಕ್ಷತೆಗಳಿಂದ ಜಿನದೇವರನ್ನು ಪೂಜಿಸಿ, ಕ್ರಿಯೆಗಳನ್ನು ಮಾಡಿ ನಮಸ್ಕರಿಸಿದರು. ಶಿವಗುಪ್ತಾಚಾರ್ಯರಿಗೆ ಗುರುಭಕ್ತಿಯನ್ನು ಸಲ್ಲಿಸಿ ಕೈಮುಗಿದು, ಹಾಗೆಯೇ ಚಿಕ್ಕಸ್ವಾಮಿಗಳನ್ನು (ನಂದಿಮಿತ್ರನನ್ನು) ಅದೇ ರೀತಿಯಾಗಿ ನಮಸ್ಕರಿಸಿದನು. ಆಮೇಲೆ ಋಷಿಗಳ ಬಳಿಗೆ ಬಂದು ಕುಳಿತು ಧರ್ಮೋಪದೇಶವನ್ನು ಕೇಳಿದನಂತರ ಎದ್ದು – 

    "ಭಟಾರಾ ಬಿನ್ನಪಂ ಕಿತ್ತಯ್ಯಂಗಳನಿಂದೆಮಗೆ ಕಾರುಣ್ಯಂಗೆಯ್ವುದಾವು ನಿಱಸಿ ಪಾನಿಟ್ಟಿ ಪುಣ್ಯಮಂ ನೆರಪಿಕೊಳ್ವಮೆಂದೊಡಂತೆಗೆಯ್ಯಿಮೆಂದಾನ್ಮಡಿಯಂ ಕಿತ್ತಯ್ಯಂಗಳ್ ಕೇಳ್ದು ಸಾಮಂತ ಮಹಾಸಾಮಂತರ್ಗೆ ಸ್ವಾಮಿಯಪ್ಪೀ ಪೃಥ್ವೀಶ್ವರಂ ಬಂದೆನ್ನುಮನರ್ಚಿಸಿ ಬಂದಿಸಿ ನೀಚವೃತ್ತಿಯಿಂ ಕಿಂಕುರ್ವಾಣಂಗೆಯ್ದಪ್ಪನಹೋ ಆಶ್ಚರ್ಯಮೀ ತಪದ ಧರ್ಮದ ಫಲಮಿಲ್ಲಿಯೆ ಪ್ರತ್ಯಕ್ಷಮಾಯ್ತಿನ್ನುಂ ಮುಂದೆ ಪಿರಿದಾಗದೆ ಮಾಣದೆಂದು ತನ್ನೊಳೆ ತಱಸಚಿದು ಮತ್ತಮಾ ದಿವಸಮುಪವಾಸಮಂ ಕೈಕೊಂಡರ್ ಇತ್ತಲ್ ಜಯವರ್ಮ ಮಹಾರಾಜಂ ಭಟಾರರುಮಂ ಕಿತ್ತಯ್ಯಂಗಳುಮಂ ಬಂದಿಸಿದುದಂ ಭಟಾರರಱದೆ ಕಿತ್ತಯ್ಯಂಗಳ್ಗೆ ಏಷಣಾಸಮಿತಿ ಮೊದಲಾಗೊಡೆಯ ಬ್ರತಂಗಳಂ ಮತ್ತಂ ಸಂಕ್ಷೇಪದಿಂ ಪೇೞ್ದು ಕಿತ್ತಯ್ಯಂಗಳಿರಾ ನಿಮಗೆ ಶ್ರಮಮಾದಪ್ಪುದು ದೇವರಂ ಬಂದಿಸಿ ಚರಿಗೆಗೆ ಪೊಱಮಡುವುದೆನೆ ಮತ್ತಂ ತಾವು ಕೊಂಡುಪವಸಮಂ ಗುರುಗಳ್ಗೆ ಪ್ರಕಟಿಸಿದನರಸಂ ಜಯವರ್ಮ ಮಹಾರಾಜಂ ಕೇಳ್ದು ಬಿನ್ನನೆ ಮೊಗಂ ಮಾಡಿ ಭಟಾರರುಮಂ ಕಿತ್ತಯ್ಯಂಗಳುಮಂ ಬಂದಿಸಿ ತನ್ನರಮನೆಗೆ ವೋಗಿ ಮಹಾದೇವಿಗೆಂದನಿಂದೆನಗೆ ರಿಸಿಯರಂವಿಱಸಿ ಪುಣ್ಯಂಗೊಳ್ವ ಭಾಗ್ಯಮಿಲ್ಲೆಂದೊಡೆ ಮಹಾದೇವಿಯಂತಪ್ಪೊಡೆ ನಾಳೆಯಾಂ ನಿಱಮಂ ಪುಣ್ಯಮಂ ಕೈಕೊಳ್ವೆನೆಂದೊಡರಸನೆಂದೊಂ ನಿನಗಮೆನಗಂ ಸಮಭಾಗಂ ಪುಣ್ಯಮೆಂದುಸಿರಿ ನೀಮೇಕೆನಗಿಂದು ಸಮಭಾಗಮೀಯಾದಾದರೀ ಪುಣ್ಯಮನಾನಿಂದುನಿಱಸಿ ಕೈಕೊಳ್ವೆಂ

    ಪೂಜ್ಯರೇ, ನನ್ನ ವಿಜ್ಞಾಪನಗಳು. ಚಿಕ್ಕಸ್ವಾಮಿಗಳನ್ನು ನಮಗೆ ಇಂದು ಕರುಣಿಸಬೇಕು. ನಾವು ಅವರನ್ನು ನಿಲ್ಲಿಸಿ ಕಾಲುತೊಳೆದು ಊಟ ಹಾಕಿ ಪುಣ್ಯವನ್ನು ಕೊಡಿಸುವೆವು” ಎಂದಾಗ, ‘ಹಾಗೆಯೇ ಮಾಡಿ’ಎಂದರು. ಆ ಮಾತನ್ನು ಚಿಕ್ಕಸ್ವಾಮಿಗಳು ಕೇಳಿ – “ಸಾಮಂತರಿಗೂ ಮಹಾಸಾಮಂತರಿಗೂ ಒಡೆಯನಾಗಿರುವ ಈ ಭೂಪನು ಬಂದು ನನ್ನನು ಕೂಡ ಪೂಜಿಸಿ ವಂದಿಸಿರುತ್ತಾನೆ. ಕೀಳುವೃತ್ತಿಯಿಂದ ಸೇವೆಯನ್ನು ಮಾಡುತ್ತಾನೆ. ! ಆಹಾ, ಆಶ್ಚರ್ಯವೆ ! ಈ ತಪೋಧರ್ಮದ ಫಲ ಇಲ್ಲಿಯೇ ಕಾಣುವಂತಾಯಿತು. ಇನ್ನೂ ಮುಂದೆ ಹೋದರೆ ಇದಕ್ಕಿಂತ ಹಿರಿದಾದ ಫಲ ಆಗದೆ ಇರದು” ಎಂದು ತನ್ನಲ್ಲಿಯೇ ನಿಶ್ಚಯ ಮಾಡಿಕೊಂಡು, ಆಮೇಲೆ ಆ ದಿವಸ ಉಪವಾಸವನ್ನು ಕೈಗೊಂಡರು. ಇತ್ತ ಜಯವರ್ಮ ಮಹಾರಾಜನು ಭಟಾರರನ್ನೂ ಚಿಕ್ಕಸ್ವಾಮಿಗಳನ್ನೂ ವಂದಿಸಿದ್ದನ್ನು ಭಟಾರರು ತಿಳಿದೇ ಚಿಕ್ಕಸ್ವಾಮಿಗಳಿಗೆ ಏಷಣಾ ಸಮಿತಿ ಮುಂತಾಗಿರತಕ್ಕ ವ್ರತಗಳನ್ನು ಅಮೇಲೆ ಸಂಕ್ಷೇಪದಿಂದ ತಿಳಿಸಿದನು. “ಚಿಕ್ಕಸ್ವಾಮಿಗಳೇ ನಿಮಗೆ ಶ್ರಮವಾಗುತ್ತದೆ, ದೇವರನ್ನು ವಂದಿಸಿ ಭಿಕ್ಷಾಟನೆಗೆ ಹೊರಡಿರಿ ” ಎಂದರು. ಆಗ ತಾನು ಸ್ವೀಕರಿಸಿರುವ ಉಪವಾಸದ ಸಂಗತಿಯನ್ನು ಗುರುಗಳಿಗೆ ತಿಳಿಸಿದನು. ಜಯವರ್ಮ ಮಹಾರಾಜನು ಕೇಳಿ, ಮೌನಮುಖಮುದ್ರೆಯನ್ನು ತಾಳಿ ಋಷಿಗಳನ್ನೂ ಚಿಕ್ಕಸ್ವಾಮಿಗಳನ್ನೂ ವಂದಿಸಿ ತನ್ನ ಅರಮನೆಗೆ ತೆರಳಿದನು. ಅರಸನು ರಾಣಿಯೊಡನೆ – “ ಇಂದು ನನಗೆ ಋಷಿಗಳನ್ನು ನಿಲ್ಲಿಸಿ ಪುಣ್ಯವನ್ನು ಪಡೆಯುವ ಯೋಗ್ಯತೆಯಿಲ್ಲ” ಎಂದು ಹೇಳಿದನು. ಆಗ ಮಹಾರಾಣಿ – “ಹಾಗಾದರೆ ನಾಳೆ ನಾನು ಅವರನ್ನು ಕರೆದು ನಿಲ್ಲಿಸಿ ಪುಣ್ಯವನ್ನು ಪಡೆಯುವೆನು” ಎಂದಳು. ಅದಕ್ಕೆ ರಾಜನು – “ನಿನಗೂ ನನಗೂ ಪುಣ್ಯವು ಸಮಪಾಲು” ಎಂದು ಹೇಳಲು ಆಕೆ ಹೀಗೆಂದಳು – “ನೀವು ಇಂದು ನನಗೆ ಯಾಕೆ ಸರಿಪಾಲನ್ನು ಕೊಡಲಿಲ್ಲ? ಈ ಪುಣ್ಯವನ್ನು ನಾನು ಮರಿಸ್ವಾಮಿಗಳನ್ನು ಮನೆಗೆ ಕರೆದು ನಿಲ್ಲಿಸಿ ಪಡೆಯುತ್ತೇನೆ. 

        ನೀಂ ನಾಳೆ ನಿಱಸೆಂದು ನುಡಿದು ಬಸದಿಗೆ ಪೋಗಿರೆನ್ನ ಭಾಗ್ಯಮೇಂ ಕಿಡಿಸುಗುಮೆ ನಾಳೆಯುಂ ನಿಱಸಿಯಾವಗಂ ಪುಣ್ಯಮಂ ಕೈಕೊಳ್ವೆನೆಂದರಸಂಗೆ ಮಱುಮಾತುಗೊಟ್ಟು ಮಱುದಿವಸಂ ಧಾರಣೆ ಮಹಾದೇವಿಯಯನ್ನೂರ್ವರರಸಿಯರ್ಕಳುಂ ಪೆಂಡವಾಸದಗ್ಗಳದ ಸೂಳೆಯರ್ಕಳುಂಬೆರಸು ವೇಸರಿಗೞ್ತೆಗಳುಂ ಪಿಡಿಗಳುಂ ಸಿಬಿಗೆಗಳುಮನೇಱ ಸೀಗುರಿಗಳುಮಂ ಕೊಡೆಗಳುಮಂ ಪಿಡಿಯಿಸಿ ಎಕ್ಕಮದ್ದಳೆಯ ಕೊೞಲ ಝಂಕಾರದ ಪಱೆಗಳ್ ಮುಂದೆ ಬಾಜಿಸುತ್ತಂ ಬೞಯಂ ಕಾಪಿವನರ್ವರೆ ಮುಂದಣ ಮಾನಸರಂ ಪಡಿಯಱರ್ ತೊಲಗಿಸುತ್ತಂ ಬರೆ ವಿದ್ಯಾಧರಿಯರ್ಕಳ್ ಬರ್ಪತೆ ಬಂದು ಬಾಗಿಲ್ಮಾಡದ ಪೊಱUಣ ದೆಸೆಒಳ್ ತಂತಮ್ಮ ವಾಹನಂಗಳಿಂದಿೞದು ಪೊಕ್ಕು ಬಸದಿಯಂ ಬಲಗೊಂಡು ಬಂದೊಳಗಂ ಪೊಕ್ಕು ದರ್ಶನವಂದನೆಗಳುಮಂ ಪೇೞರ್ಯಾಪತ್ತಿಯಂ ಬಿಡಿಸಿ ಗಂಧ ಪುಷ್ಪ ದೀಪ ಧೂಪಾಕ್ಷತಂಗಳಿಂ ದೇವರನರ್ಚಿಸಿ ಕ್ರಿಯಾಪೂರ್ವಕಂ ದೇವರಂ ಬಂದಿಸಿ ಶಿವಗುಪ್ತ ಭಟ್ಟಾರರುಮನರ್ಚಿಸಿ ಗುರುಭಕ್ತಿಗೆಯ್ದು ಬಂದಿಸಿ ಶ್ರಾವಕಬ್ರತಂಗಳನೇಱಸಿಕೊಂಡು ಬೞಕಿಂತೆಂದಳ್ ಭಟ್ಟಾರಾ ಇಂದೆಮ್ಮಲ್ಲಿಗೆ ನೀಮುಂ ಕಿತ್ತಯ್ಯಂಗಳನೊಡಗೊಂಡು ಬಂದು ಪಕ್ಕದಿರ್ದು ಪಾನಿಗಟ್ಟಿ ಮಾರ್ಗಮಂ ತೋಱ ಮಗುೞ ಬಿಜಯಂಗೆಯ್ಯಿಮೆನೆ ಕಿತ್ತಯ್ಯಂಗಳಂ ನೀಮೆ ಬೆಸಗೊಳ್ಳಿಮವರೊಡಂಬಟ್ಟೊಡಾಮೊಡಗೊಂಡು ಬರ್ಪೆಮೆಂದೊಡೆ ಧಾರಿಣಿ ಮಹಾದೇವಿ ಕಿತ್ತಯ್ಯಂಗಳಲ್ಲಿಗೆ ಪೋಗಿ ಕಾಲಂಪಿಡಿದು ವಂದಿಸಿ ಇಂತೆಂದಳ್ 

    ನೀನು ನಾಳೆ ನಿಲ್ಲಿಸು ಎಂದು ಹೇಳಿ ಬಸದಿಗೆ ಹೋದರಿ. ಇದರಿಂದ ನನ್ನ ಭಾಗ್ಯ ಕೆಟ್ಟುಹೋಗುವುದೇ ? ನಾಳೆ ನಾನೇ ಅವರನ್ನು ನಿಲ್ಲಿಸಿ ಪುಣ್ಯವನ್ನು ಪಡೆಯುವೆನು” ಹೀಗೆ ರಾಣಿ ಪ್ರತ್ಯುತ್ತರಕೊಟ್ಟು ಮಾರನೆಯ ದಿನ ಧಾರಿಣಿ ಮಹಾದೇವಿ ಚಿಕ್ಕಸ್ವಾಮಿಗಳನ್ನು ಕರೆಯಲು ಹೊರಟಳು. ಐನೂರು ಮಂದಿ ಅರಸಿಯರೂ ರಾಣೀವಾಸದಲ್ಲಿದ್ದ ಶ್ರೇಷ್ಠರಾದ ದಾಸಿಯರೂ ಅವಳ ಒಡನಿದ್ದರು. ಅವರು ಹೇಸರಕತ್ತೆಗಳನ್ನೂ ಹೆಣ್ಣಾನೆಗಳನ್ನೂ ಪಲ್ಲಕ್ಕಿಗಳನ್ನೂ ಏರಿದ್ದರು. ಚಾಮರಗಳನ್ನೂ ಛತ್ರಗಳನ್ನೂ ಹಿಡಿಸಿದೊಂಡು, ಮುಂಗಡಯಲ್ಲಿ ಎಕ್ಕಮದ್ದಳೆ ಕೊಳಲು ಝಂಕಾರವನ್ನು ಕೊಡುವ ಚರ್ಯವಾದ್ಯಗಳನ್ನು ಬಾರಿಸುತ್ತಿರುಲು ಹಿಂದಿನಿಂದ ಅಂಗರಕ್ಷಕರು ಬರುತ್ತಿರಲು, ಮುಂದುಗಡೆ ಅಡ್ಡವಾಗಿ ಬರುತ್ತಿದ್ದವರನ್ನು ಪ್ರತೀಹಾರರು ತೊಲಗಿಸುತ್ತ ಬರಲು ವಿದ್ಯಾಧರಿಯರು ಬರುವ ರೀತಿಯಲ್ಲಿ ಅವರೆಲ್ಲರೂ ಬಂದರು. ಪಟ್ಟಣದ ಗೋಪುರದ ಹೊರಗಡೆಯಲ್ಲಿ ಅವರು ತಮ್ಮತಮ್ಮ ವಾಹನಗಳಿಂದ ಇಳಿದು ಹೊಕ್ಕರು. ಬಸದಿಗೆ ಪ್ರದಕ್ಷಿಣೆ ಮಾಡಿ ಬಂದು ಒಳಗೆ ಹೋಗಿ ದರ್ಶನ ವಂದನೆಗಳನ್ನು ಹೇಳಿ ದಾರಿಯನ್ನು ಸೂಕ್ಷ್ಮಜಂತುಗಳಿಲ್ಲದಂತೆ ಗುಡಿಸಿ ಗಂಧ ಪುಷ್ಷ ದೀಪ ಧೂಪ ಅಕ್ಷೆತೆಗಳಿಂದ ಜಿನದೇವರನ್ನು ಪೂಜಿಸಿ ಕ್ರಿಯೆಗಳ ಮೂಲಕ ದೇವರಿಗೆ ವಂದಿಸಿದರು. ಶಿವಗುಪ್ತಾಚಾರ್ಯರನ್ನೂ ಪೂಜಿಸಿ ಗುರುಭಕ್ತಿಯನ್ನು ತೋರಿಸಿ ನಮಸ್ಕರಿಸಿ ಶ್ರಾವಕ ವ್ರತಗಳನ್ನು ಸ್ವೀಕರಿಸಿಕೊಂಡು ಮಹಾರಾಣಿ ಅವರೊಡನೆ – “ಪೂಜ್ಯರೇ, ಈ ದಿವಸ ನೀವು ಚಿಕ್ಕಸ್ವಾಮಿಗಳೊಂದಿಗೆ ನಮ್ಮಲ್ಲಿಗೆ ಬಂದು ಒಟ್ಟಿಗೆ ಇದ್ದು ನಮ್ಮ ಉಪಚಾರವನ್ನು ಸ್ವೀಕರಿಸಿ ಮಾರ್ಗದರ್ಶನವನ್ನು ಮಾಡಿ ಆಮೇಲೆ ಹಿಂದೆರಳಬಹುದು” ಎಂದು ಹೇಳಿದಳು. ಅದಕ್ಕೆ ಅವರು “ಚಿಕ್ಕಸ್ವಾಮಿಗಳನ್ನು ನೀವೇ ಕೇಳಿಕೊಳ್ಳಿ. ಅವರು ಒಪ್ಪಿದರೆ ನಾವು ಕೂಡಿಕೊಂಡು ಬರುವೆವು” ಎಂದರು ಧಾರಿಣಿದೇವಿ ಚಿಕ್ಕಸ್ವಾಮಿಗಳ ಬಳಿಗೆ ಹೋದಳು. ಅವರನ್ನು ಪಾದಮುಟ್ಟಿ ವಂದಿಸಿ ಹೀಗೆ ಹೇಳಿದಳು..

        ಕಿತ್ತಯ್ಯಾ ನಿಮಗಿಂದು ನಾಮ್ ಪಾನಿಗಟ್ಟುವೆಮೆಮ್ಮ ಮನೆಗೆೞ್ತರಮೇೞ್ಪುದೆಂದು ಕಾಲಂ ಪಿಡಿದು ಪೊಡೆವಟ್ಟಿರ್ದಾಗಳರಸಿಯ ಮೊಗಮಂ ನೋಡಿ ನೆಱೆಯತೊಟ್ಟುಟ್ಟು ಪಸದನಂಗೊಂಡಿರ್ದ ದೇವಗಣಿಕೆಯರನೆ ಪೋಲ್ವಯ್ನೂರ್ವರರಸಿಯರ್ಕಳಿಂದಂ ಸೂಲೆಯರ್ಕಳಿಂವಂ ಪರಿವೇಷ್ಟಿತೆಯಾಗಿರ್ದ ಶಚೀ ಮಹಾದೇವಿಯನೆ ಪೋಲ್ವ ಧಾರಿಣಿ ಮಹಾದೇವಿಯೆನ್ನ ಕಾಲ್ಗೆಱಗಿ ಪೊಡೆವಟ್ಟಿರ್ದಳಿದೆಲ್ಲಮೀ ತಪದ ಫಲಮಿನ್ನುಂ ಮುಂದೆ ಪಿರಿದುಂಟೆಂದು ಬಗೆದರಸಿಗೆಂದರಬ್ಬಾ ಇಚಿದೆಮಗುಣಲ್ಕೆ ಬಗೆಯಿಲ್ಲುಪವಾಸಂ ಗೆಯ್ದಪ್ಪೆಮೆಂದು ಪರಿಚ್ಛೇದಿಸಿ ನುಡಿದೊಡೆ ಬಿನ್ನನೆ ಮೊಗಂ ಮಾಡಿ ಭಟಾರರಂ ವಂದಿಸಿ ಪೋಗಿಯರಸಂಗೆ ಕಿತ್ತಯ್ಯಗಳಿಂದುಪವಾಸಂಗೆಯ್ದೊರೆಂದು ಪೇೞ್ದಾಗಳ್ ಮತ್ತಿರುಳಿನ ಕರಣವೇಳೆಯೊಳ್ ವಜ್ರಸೇನನೆಂಬ ಮಂತ್ರಿಯರಸಂಗಿಂತೆಂದು ಬಿನ್ನಪಂ ಗೆಯ್ದಂ ದೇವಾ ನಾಳೆಯಾಂ ನಿಱಸಿ ಕಿತ್ತಯಂಗಳ್ಗೆ ಪಾರಣೆಯಮ ಮಾಡುವೆನೆನೆ ಅಂತೆಗೆಯ್ಯೆಂದೊಡೆ ಮಱುದಿವಸಂ ಬಸದಿಗೆ ವಂದು ಭಟ್ಟಾರಾ ಕತ್ತಯ್ಯಂಗಳ ನಮ್ಮಲ್ಲಿಗೊಡಗೊಂಡು ಬಂದು ಚರಿಗೆದೋಱ ನೀಮುಂ ಬಿಜಯಂಗೆ ಯ್ಯಿಮೆನೆ ಕಿತ್ತಯ್ಯಂಗಳೊಡಂಬಟ್ಟೊಡೊಡಗೊಂಡು ಬರ್ಪೆಮವರನೊಡಂಬಡಿಸಿಮೆಂದೊಡೆ ಕಿತ್ತಯ್ಯಂಗಳಲ್ಲಿಗೆ ವೋಗಿ ಕಿತ್ತಯ್ಯಾ ಇಂದೆಮ್ಮ ಮನೆಯೊಳ್ ಪಾರಿಸಲ್ವೇೞ್ಕುಮೆಂದು ಕಾಲಂ ಪಿಡಿದು ಪೊಡೆವಟ್ಟಿರ್ದೊನಂ ನೋಡಿ

        “ಚಿಕ್ಕಸ್ವಾಮಿಗಳೇ, ನಿಮಗೆ ಇಂದು ನಾವು ಭೋಜನ ಮಾಡಿಸಬೇಕೆಂದಿದ್ದೇವೆ. ನಮ್ಮ ಮನಗೆ ನೀವು ಬರಬೇಕು” ಎಂದು ಕಾಲು ಹಿಡಿದು ಸಾಷ್ಟಾಂಗ ವಂದನೆ ಮಾಡಿದಳು. ಆಗ ಚಿಕ್ಕಸ್ವಾಮಿಗಳು ಅವಳ ಮುಖವನ್ನು ನೋಡಿದರು. “ಅತ್ಯಂತ ವಿಶೇಷವಾಗಿ ಉಡಿಗೆ ತೊಡಿಗೆಗಳನ್ನು ಧರಿಸಿ ಶೃಂಗಾರ ಮಾಡಿಕೊಂಡಿರುವ ದೇವತಾಸ್ತ್ರೀಯರನ್ನು ಹೋಲುವಂತಹ ಐನೂರು ಮಂದಿ ರಾಣಿಯರಿಂದಲೂ ದಾಸಿಯರಿಂದಲೂ ಈಕೆ ಸುತ್ತುವರಿಯಲ್ಪಟ್ಟಿದ್ದಾಳೆ. ಇಂದ್ರನ ಪತ್ನಿಯಾದ ಶಚೀದೇವಿಯನ್ನೇ ಹೋಲುತ್ತಿದ್ದಾಳೆ. ಅಂತಹ ಧಾರಿಣಿ ಮಹಾದೇವಿ ನನ್ನ ಕಾಲಿಗೆ ಎರಗಿ ಸಾಷ್ಟಾಂಗ ವಂದನೆ ಮಾಡಿದ್ದಾಳೆ. ಇದೆಲ್ಲವು ಈ ತಪಸ್ಸಿನ ಫಲವಾಗಿದೆ. ಇನ್ನೂ ಮುಂದೆ ಇದಕ್ಕಿಂತ ಹೆಚ್ಚಿನ ಫಲ ಕಾಣಲಿಕ್ಕಿದೆ” ಎಂದು ಭಾವಿಸಿಕೊಂಡರು. ರಾಣಿಯೊಡನೆ – “ಅಮ್ಮಾ ಈ ದಿವಸ ನಮಗೆ ಊಟ ಮಾಡಲು ಮನಸ್ಸಿಲ್ಲ; ಉಪವಾಸ ಮಾಡುತ್ತೇವೆ” ಎಂದು ನಿಶ್ಚಯವಾಗಿ ಹೇಳಿದರು. ಆಗ ರಾಣಿಯು ಮಾತಿಲ್ಲದೆ ಮೋರೆ ಮಾಡಿಕೊಂಡು ಋಷಿಗಳಿಗೆ ವಂದಿಸಿ, ತೆರಳಿದಳು. ರಾಜನೊಡನೆ, ಚಿಕ್ಕಸ್ವಾಮಿಗಳು ಈ ದಿವಸ ಉಪವಾಸಕೈಗೊಂಡಿದ್ದಾರೆ ಎಂದು ಹೇಳಿದಳು. ಆನಂತರ ರಾತ್ರಿಯ ಕರಣದ ಹೊತ್ತನಲ್ಲಿ (ಸುಮಾರು ಐದೂವರೆಗಳಿಗೆ) ವಜ್ರಸೇನನೆಂಬ ಮಂತ್ರಿಯು ರಾಜನಿಗೆ ಈ ರೀತಿಯಾಗಿ ವಿಜ್ಞಾಪನೆ ಮಾಡಿದನು – “ದೇವಾ, ನಾಳೆ ನಾನು ಚಿಕ್ಕಸ್ವಾಮಿಗಳನ್ನು ಕರೆದು ನಿಲ್ಲಿಸಿ ಭೋಜನ ಮಾಡಿಸುವೆನು. ” ಹೀಗೆ ನುಡಿದಾಗ “ಹಾಗೆಯೇ ಮಾಡು” ಎಂದು ಅರಸನು ಹೇಳಿದನು. ಮರುದಿವಸ ಮಂತ್ರಿ ಬಸದಿಗೆ ಹೋಗಿ ಶಿವಗುಪ್ತಾಚಾರ್ಯರೊಡನೆ “ಪೂಜ್ಯರೇ ಚಿಕ್ಕಸ್ವಾಮಿಗಳನ್ನು ಕೊಡಿಕೊಂಡು ನೀವು ನಮ್ಮಲ್ಲಿಗೆ ಬಂದು ಭಿಕ್ಷೆ ಮಾಡಿಸಿ ನೀವು ದಯಮಾಡಿಸಿ” ಎಂದು ಹೇಳಿದನು. ಅದಕ್ಕೆ ಋಷಿಗಳು “ಚಿಕ್ಕ ಸ್ವಾಮಿಗಳು ಬರಲು ಒಪ್ಪುವುದಾದರೆ ಒಟ್ಟಿಗೆ ಕರೆದುಕೊಂಡು ಬರುತ್ತೇವೆ. ಅವರು ಒಪ್ಪುವಂತೆ ನೀವೇ ಮಾಡಬೇಕು” ಎಂದರು. ಮಂತ್ರಿಯು ಚಿಕ್ಕಸ್ವಾಮಿಗಳ ಬಳಿಗೆ ಹೋಗಿ – “ಚಿಕ್ಕಸ್ವಾಮಿಗಳೇ, ಇಂದು ನಮ್ಮ ಮನೆಯಲ್ಲಿ ನೀವು ಪಾರಣೆ ಮಾಡಬೇಕು” ಎಂದು ಕಾಲುಹಿಡಿದು ಸಾಷ್ಟಾಂಗ ವಂದನೆ ಮಾಡಿದನು. ಅವನನ್ನು ಚಿಕ್ಕಸ್ವಾಮಿಗಳು ನೋಡಿ ತಮ್ಮ ಮನಸ್ಸಿನಲ್ಲಿ ಹೀಗೆ ಯೋಚಿಸಿದರು. 

     ‘ರಾಜೋ ವಾ ಮರ್ತ್ಯೋ ವಾ’ ಎಂದು ಸಾಮಂತ ಮಹಾಸಾಮಂತರ್ಕಳಿಂ ಪರಿವೇಷ್ಟಿತನಾಗಿರ್ದ ಮಂತ್ರಿಯೆನಗೆ ಪೊಡೆಮಟ್ಟನಿವೆಲ್ಲಂ ತಪದ ಮಹಾತ್ಮ್ಯಾಮಿನಯ್ನಂ ಮುಂದೆ ಪಿರಿದುಂಟೆಂದು ಬಗೆದಿಂತೆಂದರಾಮಿಂದುಪವಾಸಂಗೆಯ್ದೆಮೆಂದೊ ಡಾತನೆನನಗೆ ಪುಣ್ಯಮಿಲ್ಲಾಗದೆ ಎಂದು ನುಡಿದು ಭಟ್ಟಾರರಂ ವಂದಿಸಿ ಪೋದಂ ಮತ್ತಮಿರುಳಿನ ಕರಣವೇಳೆಯೊಳರ್ಹದ್ದಾಸನೆಂಬೊಂ ರಾಜಶ್ರೇಷ್ಟಿಯರಸಂಗೆ ಬಿನ್ನಪಂಗೆಯ್ದಂ ನಾಳೆಯಾಂ ಕಿತ್ತಯ್ಯಂಗಳ್ಗೆ ಪಾರಣೆಯಂ ಮಾಡುವೆನೆಂದೊಡರಸನಂತೆ ಗೆಯ್ಯಿಮೆಂದೊಡಾತನುಂ ಬಸದಿಗೆವೋಗಿ ಭಟ್ಟಾರರಂ ವಂದಿಸಿ ಕಿತ್ತಯ್ಯಗಳುಮಂ ವಂದಿಸಿ ಗುರುಗಳನುಮತದಿಮದೆಮ್ಮ ಮನೆಗೆ ಚರಿಗೆ ವರಲ್ವೇೞ್ಕುಮೆಂದು ನುಡಿದೊಡುಪವಾಸಂಗೆಯ್ದೆನೆಂದೊಡಾತನುಂ ಭಟ್ಟಾರರಂ ವಂದಿಸಿಪೋದಂ ಇತ್ತ ನಂದಿಮಿತ್ರ ಕಿತ್ತಯ್ಯಂಗಳ್ಗೆ ಶ್ರಮಮಂ ಭಟ್ಟಾರರಱೆದು ಕಿತ್ತಯ್ಯಾ ಪಂಚನಮಸ್ಕಾರಮಂ ಮಾಣದಿರುಳುಂ ಪಲಗುಮೋದುತ್ತಮಿರಿಮೆಂದು ಕಲ್ಪಿಸಿದೊಡವರುಮಿರುಳುಂ ಪಗಲುಮೋದುತ್ತಿರೆ ಮತ್ತಿತ್ತ ಇರುಳಿನೋಲಗದೊಳ್ ನೆರೆದಿರ್ದ ನೆರವಿಯೊಳರಸನುಂ ಮಹಾದೇವಿಯುಂ ತಪಮುಂ ಗುಣಮುಮಂ ಪೊಗೞುತ್ತೆ ತಪಂಬಟ್ಟ ದಿವಸದಿಂ ತಗುಳ್ದಿಂದಿಗಯ್ದು ದಿವಸಮುಣ್ಬುದಿಲ್ಲ ಕುಡಿವುದಿಲ್ಲುಪ ವಾಸಂಗೆಯ್ದಿರ್ದರಾಮೆನಿತು ಕೀಱ ನಿಡಿದೊಡಂ ಚರಿಗೆಮಾಡಲೊಲ್ಲರಿನ್ನವು ಸಾಹಸಮುಂ

         “ರಾಜನೋ, ರಾಜನ ಜನವೋ! ಎಂಬ ಹಾಗೆ ಸಾಮಂತರಿಂದಲೂ ಮಹಾಸಾಮಂತರಿಂದಲೂ ಸುತ್ತುವರಿದಿರುವ ಮಂತ್ರಿ ಬಂದು ನನಗೆ ನಮಸ್ಕರಿಸಿದ್ದಾನೆ. ಇವೆಲ್ಲವೂ ನನ್ನ ತಪಸ್ಸಿನ ಮಹಾತ್ಮೆ ! ಇನ್ನು ಮುಂದೆ ಇದಕ್ಕಿಂತಲೂ ಹೆಚ್ಚಿನದು ಉಂಟು” ಈ ರೀತಿ ಭಾವಿಸಿ ಮಂತ್ರಿಯೊಡನೆ – “ನಾವು ಈ ದಿವಸ ಉಪವಾಸ ಮಾಡಿರುತ್ತೇವೆ ” ಎನ್ನಲು, ಆತನು “ನನಗೆ ಪುಣ್ಯವಿಲ್ಲದಾಯಿತೆ” ! ಎಂದು ಹೇಳಿಕೊಂಡು ಋಷಿಗಳನ್ನು ವಂದಿಸಿ ತೆರಳಿದನು. ಅನಂತರದ ರಾತ್ರಿಯ ಕರಣದ ವೇಳೆಯಲ್ಲಿ ಅರ್ಹದ್ದಾಸನೆಂಬ ರಾಜಶ್ರೇಷ್ಠಿ ಅರಸನಿಗೆ “ನಾಳೆ ನಾನು ಚಿಕ್ಕಸ್ವಾಮಿಗಳಿಗೆ ಪಾರಣೆಯನ್ನು ಏರ್ಪಡಿಸುವೆನು” ಎಂದು ವಿಜ್ಞಾಪನೆ ಮಾಡಿದನು. ರಾಜನು “ಹಾಗೆಯೇ ಮಾಡು” ಎನ್ನಲು ಆತನು ಬಸದಿಗೆ ಹೋಗಿ ಶಿವಗುಪ್ತ ಋಷಿಗಳನ್ನು ವಂದಿಸಿದನು. ಚಿಕ್ಕಸ್ವಾಮಿಗಳನ್ನೂ ವಂದಿಸಿ – “ನೀವು ಗುರುಗಳ ಒಪ್ಪಿಗೆಯಿಂದ ನಮ್ಮ ಮನೆಗೆ ಭಿಕ್ಷಕ್ಕೆ ಬರಬೇಕು” ಎಂದನು ಆಗ ‘ ನಾನು ಉಪವಾಸದಲ್ಲಿದ್ದೇನೆ, ಎಂದು ಹೇಳಲು, ಅರ್ಹದ್ದಾಸಸೆಟ್ಟಿಯು ಋಷಿಗಳಿಗೆ ವಂದಿಸಿ ಹೋದನು. ಇತ್ತ ನಂದಿಮಿತ್ರ ಚಿಕ್ಕಸ್ವಾಮಿಗಳಿಗೆ ಆದ ಶ್ರಮವನ್ನು ಋಷಿಗಳು ತಿಳಿದು “ಚಿಕ್ಕಸ್ವಾಮಿಗಳೇ, ನೀವು ಪಂಚನಮಸ್ಕಾರಗಳನ್ನು ಬಿಡದೆ ಇರುಳೂ ಹಗಲೂ ಅವನ್ನು ಹೇಳುತ್ತಾ ಇರಿ” ಎಂದು ತಿಳಿಸಿದರು. ಅವರು ಅದರಂತೆ ಇರುಳೂ ಹಗಲೂ ಅವನ್ನು ಹೇಳುತ್ತಾ ಇದ್ದರು. ಆಮೇಲೆ ಇತ್ತ ರಾಜನೂ ರಾಣಿಯೂ ರಾತ್ರಿಯ ಸಭೆಯಲ್ಲಿ ಸೇರಿದ್ದ ಸಮುದಾಯದ ಮುಂದೆ ಚಿಕ್ಕಸ್ವಾಮಿಗಳ ತಪಸ್ಸನ್ನೂ ಗುಣವನ್ನೂ ಹೊಗಳುತ್ತಿದ್ದರು. “ಅವರು ತಪಸ್ಸನ್ನು ಆಚರಿಸಿದ ದಿನದಿಂದ ಪ್ರಾರಂಭವಾಗಿ ಇಂದಿನ ತನಕ ಐದು ದಿವಸವೂ ಉಣ್ಣದೆ, ಕುಡಿಯದೆ ಉಪವಾಸ ಮಾಡಿದ್ದಾರೆ. ನಾವು ಎಷ್ಟು ಒತ್ತಾಯ ಮಾಡಿ ಹೇಳಿದರೂ ಭಿಕ್ಷೆ ಸ್ವೀಕರಿಸಲು ಒಪ್ಪಲಿಲ್ಲ. ಇಂತಹ ಸಾಹಸವೂ

    ಸತ್ವವುಮಾರ್ಗವೊಳವೆ ಎಂದರಸನುರಸಿಯುಂ ಪೊಗೞ್ವುದಂ ಕೇಳ್ದು ಯುವರಾಜನೆರ್ದು ಬಿನ್ನಪಂಗೆಯ್ದು ದೇವಾ ಕಿತ್ತಯ್ಯಂಗಳ್ಗೆ ನಾಳೆಯಾಂ ಪಾರಣೆಯಂ ಮಾಡಿಸುವೆ ನೆಂದೊಡರಸನಂತೆಗೆಯ್ಯೆಂದೊಡೆಮಱುದಿವಸಂ ಯುವರಾಜಂ ಮಹಾವಿಭೂತಿವೆಸಸು ಬಸದಿಗೆ ವೋಗಿ ದೇವರಂ ಭಟ್ಟಾರರುಮನರ್ಚಿಸಿ ಬಂದಿಸಿ ಭಟಾರಾ ಕಿತ್ತಯ್ಯಂಗಳಿಂದೆಮ್ಮ ಮನೆಚಿiಳ್ ಪಾರಿಸುವಂತಿರೆ ಬೆಸಸಿಮೆನೆ ಕಿತ್ತಯ್ಯಂಗಳನ್ರೆಡಂಬಡಿಸಿ ವಿಱಸಿಮೆನೆ ಕಿತ್ತಯ್ಯಂಗಳ ಕಾಲಂಪಡಿದು ಪೊಡೆಮಟ್ಟು ಕಿತ್ತಯ್ಯ ಎಮ್ಮ ಮನೆಯೊಳಿಂದು ನೀಮುಂ ಪಾರಿಸಲ್ವೇೞ್ಪುದೆಂದೊಡೆ ಕಿತ್ತಯ್ಯಂಗಳಾತನ ಶ್ರೀಯುಂ ವಿಭೂತಿಯುಂ ತೇಜಮುಮಂ ಕಂಡು ಇಂತಪ್ಪ ಕ್ಷತ್ರಿಯ ಪುತ್ರಾದಿಗಳೆಲ್ಲಮೆನಗೆಱಗಿ ಪೊಡೆಮಟ್ಟು ಕಿಂಕುರ್ವಾಣಂಗೆಯ್ದಪ್ಪರುಣ್ಬುದರ್ಕೇನೀಗಳ್ ಸಂಕಟಮೀ ತಪದ ಫಲಮಿನ್ನುಂ ಮುಂದೆ ಪಿರಿದುಂಟೆಂದು ಬಗೆದಿಂದುಪವಾಸಂಗೆಯ್ದೆವೆಂದು ಮಱುಮಾತುಗೊಟ್ಟೊಡೆ ವಿರಾಗನಾಗಿ ಯುವರಾಜಂ ಭಟಾರರಂ ವಂದಿಸಿ ಪೋದನಿಂತಾಱು ದಿವಸಂ ಪೋದ ಬೞಕ್ಕೇೞನೆಯ ದಿವಸದಂದು ನೇಸಱ್ ಮೂಡಿದೊಡೆ ಭಟಾರರಲ್ಲಿಗೆ ನಂದಿಮಿತ್ರಂ ವಂದು ಬಂದಿಸಿ ಇಂತೆಂದಂ ಭಟಾರಾ ಇನಿತುಕಾಲಮುಂಡುದು ಸಾಲ್ಗುಮೆಮಗೆ ಯಾವಜ್ಜೀವಂ ಬಾೞ್ವನ್ನೆಗಮುಪವಾಸ ಪಚ್ಚಕ್ಖಾಣಂ ಗುಡುವುದೆಂದೊಡೆ ಭಟಾರರೆಂದರ್ ನೀಮುಂ ಮಹಾಪುರುಷರಿರ್ ನಿಮ್ಮನ್ನರ್ ಧೈರ್ಯವಂತರುಂ ಸತ್ವವಂತರುಮಾರುಮಿಲ್ಲಂ ಇನಿತುಕಾಲಂ ತಪಂಗೆಯ್ದಪ್ಪೆಮಗಪ್ಪೊಡಮಿನಿತು ಧೈರ್ಯಮುಂ ಸತ್ವಮುಮಿಲ್ಲೆಂದು ಗುರುಗಳ್ ಪೊಗೞ್ದೊಡೆ 

        ಸತ್ವವೂ ಯಾರಿಗಾದರೂ ಇದೆಯೇ ?” ಎಂದು ಅರಸನೂ ಅರಸಿಯೂ ಹೊಗಳುವುದನ್ನು ಯುವರಾಜನು ಕೇಳಿ ಎದ್ದು ವಿಜ್ಞಾಪನೆ ಮಾಡಿದನು. “ಪಿತೃದೇವನೇ ಚಿಕ್ಕಮಸ್ವಾಮಿಗಳಿಗೆ ನಾನು ನಾಳೆ ಪಾರಣೆ ಮಾಡಿಸುವೆನು “ ಎಂದು ಹೇಳಿದನು. “ಹಾಗೆಯೆ ಮಾಡು“ ಎಂದು ರಾಜನು ಹೇಳಲು, ಮಾರನೆಯ ದಿನ ಯುವರಾಜನು ಬಹಳ ವೈಭವದಿಂದ ಕೊಡಿ ಬಸದಿಗೆ ಹೋದನು. ಅಲ್ಲಿ ಜಿನದೇವರನ್ನೂ ಋಷಿಗಳನ್ನೂ ವಂದಿಸಿ – “ಸ್ವಾಮಿ, ಚಿಕ್ಕಸ್ವಾಮಿಗಳು ಈ ದಿವಸ ನಮ್ಮ ಮನೆಯಲ್ಲಿ ಪಾರಣೆ ಮಾಡುವಂತೆ ಅಪ್ಪಣೆ ಮಾಡಿ“ ಎಂದನು. ಋಷಿಗಳು ಆಗ “ಚಿಕ್ಕಸ್ವಾಮಿಗಳನ್ನು ಒಪ್ಪುವಂತೆ ಮಾಡಿಕೊಂಡು ಹೋಗಿ ನಿಲ್ಲಿಸಿ“ ಎಂದರು. ಯುವರಾಜನು ಚಿಕ್ಕಸ್ವಾಮಿಗಳ ಕಾಲನ್ನು ಹಿಡಿದು ಸಾಷ್ಟಾಂಗ ವಂದಿಸಿ “ಚಿಕ್ಕಸ್ವಾಮಿಗಳೇ, ನಮ್ಮ ಮನೆಯಲ್ಲಿ ಇಂದು ನೀವು ಪಾರಣೆ ಮಾಡಬೇಕು“ ಎಂದನು. ಚಿಕ್ಕಸ್ವಾಮಿಗಳು ಅವನ ಐಶ್ವರ್ಯ ವೈಭಯ ತಪಸ್ಸುಗಳನ್ನು ಕಂಡು – “ಇಂತಹ ರಾಜಕುಮಾರ ಮುಂತಾದವರು ನನಗೆ ವಂದಿಸಿ ಅಡ್ಡಬಿದ್ದು ಸೇವೆ ಮಾಡುತ್ತಾರೆ. ಊಟ ಮಾಡುವುದಕ್ಕೆ ಈಗ ಸಂಕಷ್ಟವೇನಿದೆ? ಈ ತಪಸ್ಸಿನ ಫಲ ಮುಂದೆ ಇನ್ನೂ ಹೆಚ್ಚಾಗಲಿಕ್ಕಿದೆ“ ಎಂದು ಭಾವಿಸಿದರು. “ ಈ ದಿವಸ ನಾವು ಉಪವಾಸ ಮಾಡಿರುತ್ತೇವೆ“ ಎಂದು ಪ್ರತ್ಯುತ್ತರ ಕೊಟ್ಟರು. ಯುವರಾಜನು ಬೇಸರಗೊಂಡು ಋಷಿಗಳಿಗೆ ವಂದಿಸಿ ಹೋದನು. ಈ ರೀತಿಯಾಗಿ ಆರು ದಿವಸಗಳು ಕಳೆದನಂತರ ಏಳನೆಯ ದಿವಸ ಸೂರ್ಯೋದಯದ ವೇಳೆಗೆ ನಂದಿಮಿತ್ರನು ಋಷಿಗಳ ಬಳಿಗೆ ಬಂದು ವಂದಿಸಿ ಹೀಗೆ ಹೇಳಿದನು – ‘ಪೂಜ್ಯರೇ, ಇಷ್ಟು ಕಾಲ ಊಟ ಮಾಡಿದ್ದು ಸಾಕು. ನನಗೆ ಪ್ರಾಣವಿರುವವರೆಗೆ ಬದುಕುವ ತನಕ ಉಪವಾಸವಿರಲು ಉಪದೇಶ ಕೊಡಿ” ಎಂದು ಹೇಳಲು, ಋಷಿಗಳು “ ನೀವು ಮಹಾಪುರುಷರಾಗಿದ್ದೀರಿ. ನಿಮ್ಮಂತೆ ಧೈರ್ಯಶಾಲಿಗಳೂ ಸತ್ವವಂತರೂ ಯಾರೂ ಇಲ್ಲ. ಇಷ್ಟು ಕಾಲವೂ ತಪಸ್ಸು ಮಾಡುತ್ತಿರುವ ನಮಗಾದರೂ ಕೂಡ ಇಷ್ಟು ಧೈರ್ಯವೂ ಇಲ್ಲ” ಎಂದು ಶಿಷ್ಯನನ್ನು ಹೊಗಳಿದರು.

        ಗುರುಗಳ ಪೊಗೞ್ತೆಗೆ ರಾಗಿಸಿ ಸಮತೋಸಂಬಟ್ಟಿರ್ದೊಡೆ ಭಟಾರರೆಂದರ್ ನಿಮಗಿಂದಿನ ದಿವಸದನಿತೆಯಾಯುಷ್ಯಮೆಂದು ಪೇೞ್ದುಂ ಜಾವಜ್ಜೀವಂ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ನಿವೃತ್ತಿಗೆಯ್ಯೆಂದು ಪಚ್ಚಕ್ಖಾಣಂಗೊಟ್ಟು ಬಸದಿಯೊಳೊಂದು ಕೋಣೆಯೋಳೀ ಎಡೆಯೊಳ್ ನೀಮೊಂದು ಕೆಲದೊಳ್ ಮಗುೞದೆ ತಳರದೆ ಕೈಯುಂ ಕಾಲ್ಗಳುಮನುಡುಗದೆ ನೀಡದೆ ಬಾೞ್ವನ್ನೆಗಂ ಪಟ್ಟರ್ದು ಪಂಚನಮಸ್ಕಾರಮಂ ಮನದೊಳೋದುತ್ತಿರಿಮೆಂದು ಕಲ್ಪಿಸಿ ಪಟ್ಟರಿಸಿ ಆರಾಧನೆಯನರ್ಚಿಸಿ ಭಟ್ಟಾರರಾರಾಧನೆಯಂ ವಕ್ಖಾಣಿಸುವ್ಯದಂ ಕೇಳ್ಮತ್ತಿರ್ದಂ ಮತ್ತಿತ್ತ ಕಿತ್ತಯ್ಯಂಗಳ್ ಸಂನ್ಯಸನಂಗೆಯ್ದರೆಂಬಾ ಮಾತನರಸನಾದಿಯಾಗಿ ಪೊೞಲ ಜನಂಗಳೆಲ್ಲಂ ಕೇಳ್ದು ಪಿರಿದುಂ ಸಂಭ್ರಮಮಾಗಿಯರಸನುಂ ಮಹಾದೇವಿಯುಂ ಮಂತ್ರಿಯುಂ ರಾಜಶ್ರೇಷ್ಠಿಯುಂ ಯುವರಾಜಂ ಮೊದಲಾಗಿ ಪೊೞಲ ಜನಮೆಲ್ಲಮಿರ್ಪೊತ್ತುಮರ್ಚನೆಯಂ ಕೊಂಡುಬಂದರ್ಚಿಸಿ ಕಿಱದು ಬೇಗಮಿರ್ದಾರಾಧನೆಯಂ ವಕ್ಖಾಣಿಸುವ್ಯದಂ ಕೇಳ್ದು ಮಿಥ್ಯಾದೃಷ್ಟಿಗಳಪ್ಪವರ್ ಶಾವಕಬ್ರತಂಗಳಂ ಕೈಕೊಂಡರ್ ಶ್ರಾವಕರುಂ ದೃಢಸಮ್ಯಗ್ದೃಷ್ಟಿಗಳಾಗಿ ಬಂದಿಸಿ ಪೋದರ್ ಇತ್ತ ನೇಸಱ್ ಪಟ್ಟೊಡೆ ಕಿತ್ತಯ್ಯಂಗಳ್ಗಾಸನ್ನಕಾಲಮಾದುದೆಂಬುದಂ ಭಟಾರರಱದಿಂತೆಂದರ್ ಕಿತ್ತಯ್ಯಾ ನಿಮಗೀಗಳ್ ಪ್ರಾಣಂಪೋಗಲ್ ಬಗೆದಪ್ಪುದು ದೇವರಂ ಜಾನಿಸುವುದು

         ಗುರುಗಳ ಹೊಗಳಿಕೆಗೆ ನಂದಿಮಿತ್ರನು ಪ್ರೀತಿಗೊಂಡು ಸಂತೋಷಪಟ್ಟು ಇರಲು, ಋಷಿಗಳು ಅವನಿಗೆ ಹೀಗೆಂದರು – “ನಿಮಗೆ ಇಂದಿನ ದಿವಸದ ವರೆಗೆ ಮಾತ್ರವೇ ಆಯುಷ್ಯ. ಜೀವವಿರುವ ತನಕವೂ ನಾಲ್ಕು ವಿಧವಾದ ಆಹಾರಕ್ಕೂ ದೇಹಕ್ಕೂ ಪರಿಹಾರ ಮಾಡಿ” ಎಂದು ಉಪದೇಶಕೊಟ್ಟರು. “ಈ ಬಸದಿಯ ಒಂದು ಮೂಲೆಯಲ್ಲಿ ಈ ಸ್ಥಳದಲ್ಲಿ ಬದಿಯಲ್ಲಿದ್ದು ಮಗುಚಿಕೊಳ್ಳದೆ, ಆಲುಗಾಡದೆ, ಕೈಕಾಲುಗಳನ್ನು ಮುದುಡಿಸಿಕೊಳ್ಳದೆ ಬದುಕಿರುವವರೆಗೂ ಮಲಗಿರಬೇಕು. ಮನಸ್ಸಿನಲ್ಲಿ ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಗಳು ಎಂಬ ಪಂಚಪರಮೇಷ್ಠಿಗಳಿಗೆ ಪಂಚನಮಸ್ಕಾರಗಳನ್ನು ಮನಸ್ಸಿನಲ್ಲಿಯೇ ಹೇಳುತ್ತಿರಬೇಕು” ಎಂದು ಹೇಳಿಕೊಟ್ಟು ಮಲಗಿಸಿ ಆರಾಧನೆ ಮಾಡಿ, ಋಷಿಗಳು ಆರಾಧನೆಯನ್ನು ವ್ಯಾಖ್ಯಾನಿಸುವುದನ್ನು ಕೇಳುತ್ತಿದ್ದನು. ಇತ್ತ ಚಿಕ್ಕಸ್ವಾಮಿಗಳು ವೈರಾಗ್ಯ ಸ್ವೀಕರಿಸಿದರೆಂಬ ಮಾತನ್ನು ಅರಸನೇ ಮೊದಲಾಗಿ ಪಟ್ಟಣಿಗರೆಲ್ಲ ಕೇಳಿ ಬಹಳ ಸಂಭ್ರಮಗೊಂಡರು. ಅರಸ, ಅರಸಿ, ಮಂತ್ರಿ, ರಾಜಶ್ರೇಷ್ಠಿ, ಯುವರಾಜ ಮುಂತಾದ ಪಟ್ಟಿಣಿಗರೆಲ್ಲರೂ ಎರಡೂ ಹೊತ್ತೂ ಪೂಜಾದ್ರವ್ಯಗಳನ್ನು ತೆಗೆದುಕೊಂಡು ಬಂದು ಪೂಜಿಸಿ ಸ್ವಲ್ಪ ಹೊತ್ತಿನವರೆಗೆ ಇದ್ದು ಆರಾಧನೆಯನ್ನು ವ್ಯಾಖ್ಯಾನಿಸುವುದನ್ನು ಕೇಳಿದ ಮಿಥ್ಯಾದೃಷ್ಚಿಯುಳ್ಳವರಾದ ಜನರು ಶ್ರಾವಕವ್ರತಗಳನ್ನು ಸ್ವೀಕರಿಸಿದರು ಶ್ರಾವಕರಾದವರು ಅಲುಗಾಡದಿರುವ ಸಮ್ಯಕ್ ದೃಷ್ಟಿಯುಳ್ಳವರಾಗಿ ವಂದಿಸಿ ತೆರಳಿದರು. ಇತ್ತ ಸೂರ್ಯಾಸ್ತವಾಗಲು, ಚಿಕ್ಕಸ್ವಾಮಿಗೆ ಮರಣದ ಹೊತ್ತು ಬಂತೆಂಬುದನ್ನು ಋಷಿಗಳು ತಿಳಿದು ಹೀಗೆಂದರು – “ಚಿಕ್ಕಸ್ವಾಮಿಗಳೇ ನಿಮಗೆ ಈಗ ಪ್ರಾಣವು ಹೋಗಲು ಯೋಚಿಸುತ್ತಿದೆ. ದೇವರನ್ನು ಧ್ಯಾನಿಸಿರಿ, 

        ಪಂಚನಮಸ್ಕಾರಮನೋದುತ್ತಮು ಚ್ಚಾರಿಸುವ್ಯದಂ ಕೇಳುತ್ತಮಿರಿಮೆಂದುಂ ಕಲ್ಪಿಸಿ ಭಟಾರರ್ ಪಂಚನಮಸ್ಕಾರಮಂ ಪಿರಿದು ಬೇಗಂ ಪೇೞೆ ಪ್ರಾಯೋಪಗಮನದಿನೆಂತಂತೆ ಶುಭಪರಿನಾಮದಿಂ ಸವ್ಮ್ಯಗ್ ದರ್ಶನ ಜ್ಞಾನಚಾರಿತ್ರಂಗಳಂ ಸಾಸಿ ಮುಡಿಪಿ ಸೌಧರ್ಮ ಕಲ್ಪದೊಳೆರಡು ಸಾಗರೋಪಮಾಯುಷ್ಯಮನೊಡೆಯೊಂ ಕನಕಧ್ವಜನೆಂಬೊಂ ದೇವನಗಿ ಪುಟ್ಟಿಯವಜ್ಞಾನದಿಂ ತನ್ನ ಭವಮನಱದೀ ಶರೀರದಿಂದಮಿಂತಪ್ಪ ದಿವ್ಯಶರೀರಮುಂ ದೇವಲೋಕದೊಳಪ್ಪ ಸುಖಮೈಶ್ವರ್ಯಮುಮಾದುದೆಂದು ಮೂಱುಕೋಟಿ ಪರಿವಾರ ದೇವರ್ಕಳುಂ ಮೂಱುಲಕ್ಕೆ ದೇವಿಯರಪ್ಪರಸಿಯರ್ಕಳುಂ ಗಣಿಕಯರ್ಕಳುಂ ಬೆರಸು ಸುರತ್ನಮಯಮಪ್ಪ ದಿವ್ಯವಿಮಾನಮುಂ ಘಂಟಾಜಾಳ ಮುಕ್ತಾಜಾಳ ಹೇಮಜಾಳಂಗಳಿಂದೊಪ್ಪುವ ವಿಮಾನಮನೇಱ ಮಹಾವಿಭೂತಿಯಿಂ ತಗುಳ್ದುರಗಾವ್ಮರಂಬೆರಸು ಪಾಡುತ್ತಂ ಬರ್ಪನ್ನೆಗಮಿತ್ತ ವೈದಿಶಮೆಂಬ ಪೊೞಲೊಳ್ ನಂದಿಮಿತ್ರ ಕಿತ್ತಯ್ಯಂಗಳ್ ಮುಡಿಪಿದರೆಂಬುದಂ ಕೇಳ್ದರಸನುಂ ಮಹಾದೇವಿಯುಂ ಮಂತ್ರಿಯುಂ ಪೆರ್ಗಡೆಯುಂ ಮೊದಲಾಗಿ ಪೊೞಲೊಳಗುಳ್ಳ ಜನಮೆಲ್ಲಮರ್ಚನೆಗಳುಂ ಕೊಂಡು ಬಂದರಸಂ ತಾಂ ಪಕ್ಕದಿರ್ದು ಕ್ಷಪಣಕನನುಯ್ವ ವಿಮಾನಮುಮಂ ಮತ್ತಂ ಶೋಭೆಗೆಂದು ಪಲವು ವಿಮಾನಂಗಳುಮನೊಳ್ಳಿದುವಾಗಿ ಮಾಡಿಸಿ ಪಲವುಂ ನೇತ್ರದ ಪೞವುಲ್ಲವಂಗಳ್ ಧ್ವಜ ಪತಾಕೆಗಳುಮನೆತ್ತಿಸಿ 

        ಪಂಚನಮಸ್ಕಾರವನ್ನು ಓದುತ್ತ ಉಚ್ಚಾರಣೆ ಮಾಡುವುದನ್ನು ಕೇಳುತ್ತಾ ಇರಿ ” ಎಂದು ಕಲಿಸಿಕೊಟ್ಟು ಋಷಿಗಳು ಪಂಚನಮಸ್ಕಾರದ ಮಂತ್ರವನ್ನು ಬಹಳ ಬೇಗನೆ ಹೇಳಿದರು. ಆಗ ನಂದಿಮಿತ್ರನು ಪ್ರಾಣಾಂತ ಉಪವಾಸವ್ರತದಿಂದ ಹೇಗೋ ಹಾಗೆ ಶುಭವಾದ ಪರಿಣಾಮದಿಂದ ಸಮ್ಕ್ಯಗ್ ದರ್ಶನ – ಜ್ಞಾನ – ಚರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಸತ್ತು, ಸೌಧರ್ಮ ಎಂಬ ಸ್ವರ್ಗದಲ್ಲಿ ಎರಡು ಸಾಗರದಷ್ಟು ಆಯುಷ್ಯವುಳ್ಳ ಕನಕಧ್ವಜನೆಂಬ ದೇವನಾಗಿ ಹುಟ್ಟಿದನು. ಅವನು ಅವಜ್ಞಾನದಿಂದ ತನ್ನ ಜನ್ಮವಿಚಾರವನ್ನು ತಿಳಿದು, “ಈ ಶರೀರದಿಂದ ಇಂತಹ ದಿವ್ಯವಾದ ಶರೀರವೂ ದೇವಲೋಕದಲ್ಲಿ ಆಗತಕ್ಕ ಸುಖೈಶ್ವರ್ಯಗಳೂ ಆದುವು” ಎಂದುಕೊಂಡು, ಮೂರು ಕೋಟಿ, ಪರಿವಾರ ದೇವತೆಗಳನ್ನೂ ಮೂರು ಲಕ್ಷದೇವಾಂಗನೆಯಾರಾದ ರಾಣಿಯರನ್ನೂ ದಾಸಿಯರನ್ನೂ ಕೂಡಿಕೊಂಡು ಒಳ್ಳೆಯ ರತ್ನಗಳಿಂದ ಕೊಡಿದ ಮತ್ತು ಗಂಟೆ, ಮುತ್ತು, ಚಿನ್ನಗಳ ಸಮೂಹದಿಂದ ಮೆರೆಯುವ, ದಿವ್ಯವಾದ ವಿಮಾನವನ್ನೇರಿ ಮಹಾವೈಭವದಿಂದ ಅನುಸರಿಸಿ ಬರುತ್ತಿದ್ದ ಉರಗಲೋಕದವರೂ ದೇವಲೋಕದವರೂ ಸೇರಿಕೊಂಡಿದ್ದು, ಹಾಡುತ್ತ ಬರುತ್ತಿದ್ದನು. ಆ ವೇಳೆಗೆ ಇತ್ತ ವೈದಿಶವೆಂಬ ಪಟ್ಟಣದಲ್ಲಿ ನಂದಿಮಿತ್ರ ಚಿಕ್ಕಸ್ವಾಮಿಗಳು ಸತ್ತುಹೋದರೆಂಬುದನ್ನು ಕೇಳಿ ರಾಜನೂ ಮಹಾರಾಣಿಯೂ ಮಂತ್ರಿಯೂ ಹೆಗ್ಗಡೆ (ಅರಮನೆಯ ಅಕಾರಿ)ಯೂ ಮುಂತಾದ ಪಟ್ಟಣದಲ್ಲಿದ್ದ ಜನರೆಲ್ಲರೂ ಪೂಜಾವಸ್ತುಗಳನ್ನು ತೆಗೆದುಕೊಂಡು ಬಂದರು. ಅರಸನು ತಾನು ಪಕ್ಕದಲ್ಲೇ ಇದ್ದು ಜೈನಸನ್ಯಾಸಿಯನ್ನು ಒಯ್ಯುತ್ತಿದ್ದ ಮಂಟಪವನ್ನಲ್ಲದೆ ಮತ್ತೂ ಹೆಚ್ಚಿನ ಶೋಭೆಗಾಗಿ ಹಲವು ಮಂಟಪಗಳನ್ನು ಒಳ್ಳೆಯ ರೀತಿಯವಾಗಿ ಮಾಡಿಸಿದನು. ಹಲವು ಬಗೆಯ ನೇತ್ರವೆಂಬ ರೇಷ್ಮೆವಸ್ತ್ರದ ಮೇಲ್ಕಟ್ಟುಗಳನ್ನೂ ಧ್ವಜಪತಾಕೆಗಳನ್ನೂ ಎತ್ತಿಸಿದನು. 

        ಚಾತುರ್ವರ್ಣ ಶ್ರವಣ ಸಂಘ ಸಹಿತಂ ಪಟು ಪಟಹ ತುಣವ ಭಂಭಾ ಮರ್ದಳೆ ಝಲ್ಲರಿ ಮುಕುಂದ ತಾಳ ಕಾಹಳ ಶಂಖ ವಂಶ ವೀಣಾಸ್ವರಂಗಳೆಸೆಚಿi ಕವಿವರರುಂ ಪೆಚಿಡವಾಸದೊಳ್ವೆಂಡಿರ್ಕಳುಂ ವಿಮಾನಂಗಳ ಮಂದಾಡುತ್ತಂ ಕಮ್ಮಮುಮಂ ಪೊನ್ನುಮಂ ಕೇಳಿಮಾಡಿ ಮುಂದೆ ಸೂಸುತ್ತಮೊಯ್ವುದಂ ಕನಕಧ್ವಜನೆಂಬ ದೇವಂ ಕಂಡೆನ್ನ ದೇಹಕ್ಕಿವರೆಲ್ಲಮಿನಿವಿರಿ ದರ್ಚನೆಯುಮಂ ಪೂಜೆಯುಮಂ ವಿಭವಮುಂ ಪ್ರಭಾವನೆಯುಮಂ ಮಾಡಿದಪ್ಪರೆಂದೊಡಾನೆನ್ನ ದೇಹಕ್ಕೆ ಮಾಡದಿರ್ಪನೆಯೆಂದು ಪಲವು ವಿಮಾನಂಗಳಂ ವಿಗುರ್ವಿಸಿ ಕ್ಷಪಣಕನ ವಿಮಾನದ ಮುಂದೆ ಬಳಸಿಯುಂ ಪೋಪಂತು ಮಾಡಿಯಾಕಾಶಮೆಲ್ಲಮಂ ವಿಮಾನಮಯಮಾಗೆ ವಿಗುರ್ವಿಸಿ ದೇವಲೋಕದ ಪಱೆಗಳಂ ಬಾಜಿಸುತ್ತಂ ನಮೇರು ಮಂದಾರ ಸಂತಾನಕ ಪಾರಿಜಾತಂಗಳೆಂಬ ಪೂಗಳಂ ಸುರಿಯುತ್ತಂ ದೇವರ್ಕಳ ದೇವಿಯರ್ಕಳ್ ಸಹಿತಂ ಕ್ಷಪಣಕನ ವಿಮಾನದ ಮುಂದೆ ಇಂತೆಂದು ಪೇೞ್ದಾಡಿದಂ :

    ಗಾಹೆ ||          ಪೆಚ್ಚಹ ಪೆಚ್ಚಹ ಓದಣ ಮುಂಡ
                        ಅಚ್ಚರ ಮಜ್ಝಗಯಂ ರವ್ಮಣಿಜ್ಜಂ
                        ಆಂಜೆಣ ಮಂತೆಣ ಕಾರಣ ಯೇಣ
                        ಪಚ್ಚ ಇಯವ್ವಂಹೋ ಇಣರೇಣ

        ಎಂದು ಛಂದಛಂದದಿಂ ಪೇೞ್ದಾಡುವ್ಯದಂ ಕಂಡರಸಂ ಮೊದಲಾಗಿ ಪೊೞಲ ಜನವೆಲ್ಲಂ ಚೋದ್ಯಂಬಟ್ಟು ಬೆಱಗಾಗಿ ನೋಡುತ್ತಿರ್ದಿಂತೆಂದರಸಂ ಬೆಸಗೊಂಡಂ ವೀಮಾರ್ಗೇನೆಂಬಿರೆಲ್ಲಿಂ ಬಂದಿರಿಂತೇಕೆ ಪೇೞ್ದಾಡಿದಪ್ಪಿರೆಂದು ಬೆಸಗೊಂಡೊಡಾನಲ್ತೆ 

        ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣದವರು ಜೈನಸನ್ಯಾಸಿಗಳ ವೃಂದ ಸಮೇತವಾಗಿದ್ದರು. ಸಮರ್ಥವಾದ ತಮಟೆ, ತುಣವ, ಭಂಭಾ (ಭೇರಿ), ಮದ್ದಳೆ, ಝಲ್ಲರಿ (ವಲಯಾಕರಾದ ವಾದ್ಯ), ಮುಕುಂದ (ಒಂದು ಬಗೆಯ ಮದ್ದಳೆ), ತಾಳ, ಕಾಹಳ(ತುತೂರಿ), ಶಂಖ, ಕೊಳಲು, ವೀಣೆ – ಇವುಗಳಿಂದ ನಾದ ಶೋಭಿಸುತ್ತಿತ್ತು. ಕವಿಶ್ರೇಷ್ಠರೂ ರಾಣೀವಾಸದ ಒಳ್ಳೆಯ ಹೆಂಡಿರೂ ಆ ಮಂಟಪಗಳ ಮುಂದೆ ಆಡುತ್ತ ದಮ್ಮ ಎಂಬ ನಾಣ್ಯಗಳನ್ನೂ ಹೊನ್ಮ್ನಗಳನ್ನೂ ಆಟದಂತೆ ಮುಂದೆ ಚೆಲ್ಲುತ್ತಿದ್ದರು. ನಂದಿಮಿತ್ರನ ಶವವನ್ನು ಈ ರೀತಿಯಾಗಿ ಒಯ್ಯುವುದನ್ನು ಕನಕಧ್ವಜನೆಂಬ ದೇವನು ಕಂಡನು. “ನನ್ನ ಹಿಂದಿನ ಮೃತದೇಹಕ್ಕೆ ಇವರೆಲ್ಲ ಇಷ್ಟೊಂದು ಹಿರಿದಾದ ಅರ್ಚನೆಯನ್ನೂ ಪ್ರಜೆಯನ್ನೂ ವೈಭವವನ್ನೂ ಗೌರವವನ್ನೂ ಮಾಡುತ್ತಿರುವಾಗ ನಾನು ನನ್ನ ದೇಹಕ್ಕೆ ಮಾಡದಿರುವೆನೆ ? ” ಎಂದು ಕನಕಧ್ವಜನು ಹಲವು ವಿಮಾನಗಳನ್ನು ಮಾಯೆಯಿಂದ ಸೃಷ್ಟಿಸಿ ಜೈನಸಂನ್ಯಾಸಿ ನಂದಿಮಿತ್ರನ ಶವದ ವಿಮಾನದ (ಮಂಟಪ) ಮುಂದೆ ಬಳಸಿ ಹೋಗುವಂತೆ ಮಾಡಿದನು. ಆಕಾಶವೆಲ್ಲವೂ ತುಂಬಿ ಹೋಗುವಂತೆ ಮಾಯೆಯಿಂದ ವಿಮಾನಗಳನ್ನು ಸೃಷ್ಟಿಸಿ ದೇವಲೋಕದ ಚರ್ಮವಾದ್ಯಗಳನ್ನು ಬಾರಿಸಿಕೊಂಡು, ಸುರಪುನ್ನಾಗ (ನಮೇರು), ಮಂದಾರ, ಸಂತಾನಕ, ಪಾರಿಜಾತ – ಎಂಬ ದೇವಲೋಕದ ಮರಗಳ ಹೂಗಳನ್ನು ಸುರಿಸುತ್ತ, ದೇವತಾಪುರುಷರಿಂದಲೂ ಸ್ತ್ರೀಯರಿಂದಲೂ ಕೂಡಿ ನಂದಿಮಿತ್ರ ಜೈನ ಸಂನ್ಯಾಸಿಯ ಶವಮಂಟಪದ ಮುಂದೆ ಹೀಗೆ ಹೇಳಿಕೊಂಡು ನೃತ್ಯ ಮಾಡಿದನು – (ಅನ್ನಕ್ಕಾಗಿ ತಲೆಯನ್ನು ಬೋಳಿಸಿರುವ ಬೋಳನನ್ನು – ಅಪ್ಸರಸ್ತ್ರೀಯರ ನಡುವೆ ಸುಂದರನಾಗಿ ಇರುವವನನ್ನು ನೋಡು ನೋಡು. ಯಾವುದಾದರೂ ಕಾರಣದಿಂದ ಮನುಷ್ಯನು ಇಂತಹದನ್ನು ನಂಬುತ್ತಾನೆ) ಈ ರೀತಿಯಾಗಿ ಬೇರೆ ಬೇರೆ ಛಂದಸ್ಸುಗಳಿಂದ (ಪದ್ಯ ಧಾಟಿಗಳಿಂದ) ಹೇಳಿ ನರ್ತಿಸುವುದನ್ನು ರಾಜನೇ ಮುಂತಾದ ಪಟ್ಟಣಿಗರೆಲ್ಲ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.  ರಾಜನು ಕನಕಧ್ವಜನೊಡನೆ – “ ನೀವು ಯಾರ ಸಂಬಂಧದವರು ? ಏನು ಹೇಳಲಿದ್ದೀರಿ ? ಎಲ್ಲಿಂದ ಬಂದಿರಿ? ಈ ರೀತಿ ಹೇಳಿಕೊಂಡು ಯಾಕೆ ಕುಣಿದಾಡುತ್ತೀರಿ? ” ಎಂದು ಕೇಳಿದನು. 

        ನಂದಿಮಿತ್ರನಪ್ಪ ಕಿತ್ತಯ್ಯನೆನುಣಿಸಿಂಗೆಂದು ತಪಂಬಟ್ಟೇೞುದಿವಸಮುಪವಾಸಂಗೆಯ್ದು ಮುಡಿಪಿ ಸಂನ್ಯಸನಂಗೆಯ್ದು ಮುಡಿಪಿ ದೇವಲೋಕದೊಳ್ ಕನಕಧ್ವಜನೆಂಬೊಂ ದೇವನಾಗಿ ಪುಟ್ಟ ಎನ್ನ ದೇಹಮಂ ಪೂಜಿಸಲುಂ ನಿಮಗೆನ್ನ ವಿಭವಮಂ ತೋಱಲ್ ಬಂದೆನೆಂದು ಪೇೞ್ದು ತನ್ನ ಶರೀರಮಂ ದಿವ್ಯಮಪ್ಪ ಗಂಧ ಪುಷ್ಪ ದೀಪ ಧೂಪಾಕ್ಷತೆಗಳಿಂದರ್ಚಿಸಿ ತನ್ನ ಗುರುಗಳಪ್ಪ ಶಿವಗುಪರೆಂಬಾಚಾರ್ಯರುಮಂ ಪೂಜಿಸಿ ನಿಮ್ಮ ಪ್ರಸಾದದಿಂದೆನಗಿನಿವಿರಿದು ಶ್ರೀಯುಂ ಮಹಾವಿಭೂತಿಯುಮೈಶ್ವರ್ಯಮುಂ ದೇವತ್ವಮುಮಾದುದೆಂದು ಪೇೞ್ದು ಬಂದಿಸಿ ತನ್ನ ದೇವಲೋಕಕ್ಕೆ ಪೋದನ್ ಇತ್ತಲರಸನುಮದೆಲ್ಲಮಂ ಕಂಡು ಸಂಸಾರ ಶರೀರ ಭೋಗ ವೈರಾಗ್ಯಪರಾಯಣನಾಗಿ ಶ್ರೀವರ್ಮನೆಂಬ ತನ್ನ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಪಲಂಬರರಸುಮಕ್ಕಳು ಮಹಾದೇವಿ ಮೊದಲಾಗಿ ಪಲಂಬರರಸಿಯರ್ಕಳುಂ ಪರಿವಾರದವರುಂ ಪೊೞಲ ಪಲಂಬರ್ ಜನಂಗಳೆಲ್ಲಂ ಬೆರಸು ಶಿವಗುಪ್ತ ಭಟ್ಟಾರರ ಪಕ್ಕದೆ ತಪಂಬಟ್ಟು ಸವ್ಮ್ಯಗ್ ಜ್ಞಾನ ಚಾರಿತ್ರಂಗಳೊಳಗೊಳ್ಳಿತಾಗಿ ನೆಗೞ್ದು ಪಶ್ಚಾತ್ಕಾಲದೊಳ್ ಸಂನ್ಯಸನಂಗೆಯ್ದು ಮುಡಿಪಿಯನಿಬರುಂ ದೇವಲೋಕಕ್ಕೆ ವೋದರ್ ಮತ್ತಂ ಕನಕಧ್ವಜನೆಂಬ ದೇವಂ ಪಲಕಾಲಂ ದೇವಲೋಕದ ಸುಖಮನನುಭವಿಸಿ ಬಂದಿಲ್ಲಿ ನೀಂ ಸಂಪ್ರತಿ ಚಂದ್ರಗುಪ್ತನಾಗಿ ಪುಟ್ಟಿದೆಯೆಂದು 

        ಆಗ ಅವನು “ನಾನು ನಂದಿಮಿತ್ರನೆಂಬ ಚಿಕ್ಕಸ್ವಾಮಿಯಾಗಿದ್ದವನಲ್ಲವೆ? ಊಟಕ್ಕಾಗಿ ತಪಸ್ಸನ್ನು ಸ್ವೀಕರಿಸಿ ಏಳು ದಿವಸ ಉಪವಾಸ ಮಾಡಿ ಸತ್ತು ಸಂನ್ಯಾಸ ಕೈಕೊಂಡು ಸತ್ತು ದೇವಲೋಕದಲ್ಲಿ ಕನಕಧ್ವಜನೆಂಬ ದೇವನಾಗಿ ಹುಟ್ಟಿದೆನು. ನನ್ನ ಹಿಂದಿನ ಶರೀರವನ್ನು ಪೂಜಿಸುವುದಕ್ಕೂ ನಿಮಗೆ ನನ್ನ ವೈಭವವನ್ನು ತೋರಿಸುವುದಕ್ಕೂ ಬಂದಿದ್ದೇನೆ” ಎಂದು ಹೇಳಿದನು. ಆಮೇಲೆ ತನ್ನ ಶರೀರವನ್ನು ದೇವಲೋಕದಿಂದ ತಂದ ಗಂಧ, ಪುಷ್ಪ, ದೀಪ, ಧೂಪ, ಅಕ್ಷತೆಗಳಿಂದ ಪೂಜಿಸಿದನು. ತನ್ನ ಗುರುಗಳಾದ ಶಿವಗುಪ್ತರೆಂಬ ಆಚಾರ್ಯರನ್ನು ಪೂಜಿಸಿ, “ನಿಮ್ಮ ಅನುಗ್ರಹದಿಂದ ನನಗೆ ಇಷ್ಟೊಂದು ಹಿರಿದಾದ ಕಾಂತಿಯೂ ಐಶ್ವರ್ಯವೂ ಮಹಾಸಂಪತ್ತೂ ದೇವತ್ವವೈ ಆಗಿದೆ” ಎಂದು ಹೇಳಿ ವಂದಿಸಿ ತನ್ನ ದೇವಲೋಕಕ್ಕೆ ತೆರಳಿದನು. ಇತ್ತ ಜಯವರ್ಮ ಮಹಾರಾಜನು ಅದೆಲ್ಲವನ್ನೂ ಕಂಡು ಸಂಸಾರದಲ್ಲಿಯೂ ಶರೀರದಲ್ಲಿಯೂ ಸುಖದಲ್ಲಿಯೂ ವೈರಾಗ್ಯವೇ ಮುಖ್ಯ ಗುರಿಯಾಗುಳ್ಳವನಾಗಿ ಶ್ರೀವರ್ಮನೆಂಬ ತನ್ನ ಹಿರಿಯ ಮಗನಿಗೆ ರಾಜ್ಯಪಟ್ಟ ಕಟ್ಟಿದನು. ಅವನೂ ಹಲವು ಮಂದಿ ರಾಜಕುಮಾರರೂ ಮಹಾರಾಣಿ ಮುಂತಾದ ಹಲವು ಮಂದಿ ರಾಣಿಯರೂ ಪರಿವಾರದವರೂ ಪಟ್ಟಣದ ಹಲವು ಜನರೂ ಒಟ್ಟಾಗಿ ಶಿವಗುಪ್ತ ಋಷಿಗಳ ಬಳಿಯಲ್ಲಿ ತಪಸ್ಸನ್ನು ಸ್ವೀಕರಿಸಿದರು. ಸವ್ಮ್ಯಗ್ ಜ್ಞಾನ ಸಮ್ಯಕ್ ಚಾರಿತ್ರಗಳನ್ನು ಚೆನ್ನಾಗಿ ಆಚರಿಸಿ ಅನುಚಿತರದ ಕಾಲದಲ್ಲಿ ಸಂನ್ಯಾಸವನ್ನು ಮಾಡಿ ಸತ್ತು ಅವರೆಲ್ಲರೂ ದೇವಲೋಕಕ್ಕೆ ಹೋದರು. ಆಮೇಲೆ ಕನಕಧ್ವಜನೆಂಬ ದೇವನು ಹಲವು ಕಾಲ ದೇವಲೋಕದ ಸುಖವನ್ನು ಅನುಭವಿಸಿ ಮತ್ತೆ ಈ ಭೂಮಿಗೆ ಬಂದು ನೀನೀಗ ಸಂಪ್ರತಿ ಚಂದ್ರಗುಪ್ತನಾಗಿ ಹುಟ್ಟಿರುತ್ತೀಯೆ – ಎಂದು

        ಸಮಾಗುಪ್ತ ಭಟ್ಟಾರರ್ ತನ್ನ ಭವಮಂ ಪೇೞ್ದೊಡಾದಮಾನುಮೊಸೆದು ಸಂತೋಷಂಬಟ್ಟು ಭಟ್ಟಾರರಂ ವಂದಿಸಿ ತನ್ನರಮನೆಗೆ ವೋಗಿ ಇಂತು ಸಂಪ್ರತಿ ಚಂದ್ರಗುಪ್ತ ಮಹಾರಾಜಂ ಪೃಥ್ವಿಯನೇಕಚ್ಛತ್ರಚ್ಛಾಯೆಯಿಂದ ಮಾಳುತ್ತಮುಜ್ಜೇನಿಯೊಳ್ ಸುಖದಿಂದಿರ್ಪನ್ನೆಗಂ ಇತ್ತ ದ್ವಾದಶಾಂಗ ಚತುರ್ದಶಪುರ್ವಧಾರಿಗಳಪ್ಪ ಭದ್ರಬಾಹು ಭಟ್ಟಾರರ್ ಪಿರಿದು ಋಷಿಸಮುದಾಯಂ ಬೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರುಜ್ಜೇನಿಗೆ ವಂದಾ ಪೊೞಲ ಬಹಿರುದ್ಯಾನವನದೊಳಿರ್ದರದನರಸಂ ಕೇಳ್ದು ಪರಿವಾರಸಹಿತಂ ಪೋಗಿ ಭಟಾರರಂ ವಂದಿಸಿ ಸದ್ಧರ್ಮಮಂ ಕೇಳ್ದು ಶ್ರಾವಕಬ್ರತಂಗಳನೇಱಸಿಕೊಂಡು ವಂದಿಸಿ ತನ್ನರಮನಗೆಗೆ ವೋದನಿತ್ತ ಭಟಾರರುಂ ಪಲವು ದಿವಸಮಾ ಪೊೞಲೊಳಿರೆ ಮತ್ತೊಂದು ದಿವಸಂ ಋಷಿಸಮುದಾಯವೆಲ್ಲಮಂ ಚರಿಗೆವೊಗಿಸುತ್ತಮೆಲ್ಲರುಮಂ ನಿಱಸಿ ತಾವೊರ್ವರೆಯೊಂದು ಮನೆಯಂ ಪೊಕ್ಕಾಗಳಾ ಮನೆಚಿiಳಾರು ಮಿಲ್ಲೋಸರಿಗೆಯೊಳ್ ತೊಟ್ಟಿಲೊಳಿರ್ದವ್ಯಕ್ತ ಕಿಱುಗೂಸು ಬೋಳಹ ಬೋಳಹ ಭಟ್ಟಾರಾ ಎಂದತ್ತಾಗಳಾ ವಚನಮಂ ಭಟ್ಟಾರರ್ ಕೇಳ್ದು ದಿವ್ಯವಾಕ್ಯಮೆದಱದು ಕಾಲಪ್ರಮಾಣಮಂ ಬೆಸಗೊಂಡೊಡೆ ದ್ವಾದಶವರ್ಷಮೆಂದು ಪೇೞ್ದತ್ತು ಭಟ್ಟಾರರ್ ಕಾಲದೋಷದಿಂ ಪ್ರಜಾಪೀಡೆಯಾದಪ್ಪುದೆಂದಱದು ಕಾರುಣ್ಯಬುದ್ಧಿಮುಂದಾಹಾರಮಂ ಕೊಳ್ಳೆದೆ ಅಲಾಭಂ ಮಾಡಿಯಂತೆ ಬಸದಿಗೆ ವೋಗಿ ಗೋಚಾರನಿಯಮಂಗೆಯ್ದು 

           ಸಮಾಗುಪ್ತ ಋಷಿಗಳು ಅವನ ಜನ್ಮವೃಂತ್ತಾಂತವನ್ನು ಹೇಳಿದರು. ಇದರಿಂದ ಅತ್ಯಂತ ಪ್ರೀತಿಗೊಂಡು ಸಂತೋಷಪಟ್ಟು ಸಂಪ್ರತಿ ಚಂದ್ರಗುಪ್ತ ಮಹಾರಾಜನು ಸಮಾಗುಪ್ತ ಋಷಿಗಳನ್ನು ವಂದಿಸಿ ತನ್ನ ಅರಮನೆಗೆ ಹೋಗಿ ಈ ರೀತಿಯಾಗಿ ಭೂಮಿಯನ್ನು ಏಕಚ್ಛತ್ರದ ನೆರಳಿನಲ್ಲಿ (ಚಕ್ರವರ್ತಿಯಾಗಿ) ಆಳುತ್ತ ಉಜ್ಜಯನಿಯಲ್ಲಿ ಸುಖದಿಂದ ಇದ್ದನು. ಇತ್ತ ಹನ್ನೆರಡು ಅಂಗಗಳನ್ನೂ ಹದಿನಾಲ್ಕು ಪೂರ್ವವೆನಿಸಿದ ಶಾಸಗಳನ್ನೂ ಬಲ್ಲ ಭದ್ರಬಾಹು ಋಷಿಗಳು ಹೆಚ್ಚು ಋಷಿಗಳ ಸಮೂಹವನ್ನು ಕೂಡಿಕೊಂಡು ಗ್ರ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಮುಖಗಳನ್ನು ಸಂಚಾರಮಾಡುತ್ತ ಬರುತ್ತಿದ್ದವರು ಉಜ್ಜಯನಿಗೆ ಬಂದು ಆ ಪಟ್ಟಣದ ಬಾಹ್ಯೋದ್ಯಾನದಲ್ಲಿದ್ದರು. ಅವರು ಅಲ್ಲಿದ್ದುದನ್ನು ರಾಜನು ಕೇಳಿ ಪರಿವಾರದೊಡನೆ ಹೋಗಿ ಋಷಿಗಳನ್ನು ವಂದಿಸಿ ಅವರಿಂದ ಒಳ್ಳೆಯ ಧರ್ಮದ ಉಪದೇಶವನ್ನು ಕೇಳಿ, ಶ್ರಾವಕವ್ರತಗಳನ್ನು ಸ್ವೀಕರಿಸಿ, ವಂದಿಸಿ ತನ್ನ ಅರಮನೆಗೆ ತೆರಳಿದನು. ಇತ್ತ ಋಷಿಗಳು ಹಲವು ದಿವಸ ಆ ಪಟ್ಟಣದಲ್ಲಿದ್ದರು. ಹೀಗಿರಲು ಒಂದು ದಿವಸ ಅವರು ಋಷಿಸಮೂಹವನ್ನು ಅಲ್ಲಲ್ಲಿ ಭಿಕ್ಷೆಗೆ ಕಳುಹಿಸಿ ಅವರೆಲ್ಲರೂ ಅಲ್ಲಲ್ಲೇ ಊಟಮಾಡುವಂತೆ ಹೇಳಿ ತಾವು ಒಬ್ಬರೇ ಒಂದು ಮನೆಯನ್ನು ಹೊಕ್ಕರು. ಆ ಮನೆಯಲ್ಲಿ ಯಾರು ಇರಲಿಲ್ಲ. ಒಳಕೋಣೆಯಲ್ಲಿ ತೊಟ್ಟಿಲಲ್ಲಿ ಇದ್ದಂತಹ ಮತ್ತು ಅಸ್ಪಷ್ಟವಾಗಿ ಕಾಣುತ್ತಿದ್ದಂತಹ ಒಂದು ಚಿಕ್ಕಮಗು “ಎಲೈ ಋಷಿಯೇ, ಹೋಗು ಹೋಗು” ಎಂಬಂತೆ ಕೂಗಿತು. ಆ ಮಾತನ್ನು ಭದ್ರಬಾಹು ಭಟ್ಟಾರರು ಕೇಳಿ, ಇದು ದೇವರ ಮಾತೆಂತಲೇ ತಿಳಿದು “ಎಷ್ಟು ಕಾಲ?” ಎಂಬುದಾಗಿ ಕೇಳಿದರು. ಆಗ ಅದು “ಹನ್ನೆರಡು ವರ್ಷ” ಎಂದು ಹೇಳಿತು. ಕಾಲದೋಷದಿಂದ ಪ್ರಜೆಗಳಿಗೆ ತೊಂದರೆಯಾಗುವುದೆಂದು ಋಷಿಗಳು ತಿಳಿದು, ಕರುಣೆಯ ಬುದ್ಧಿಯಿಂದ ಆಹಾರವನ್ನು ಸ್ವೀಕರಿಸದೆ (ಅಲಾಭ ಮಾಡಿ) ಹಾಗೆಯೇ ಬಸದಿಗೆ ಹೋಗಿ ಗೋಚಾರ ನಿಯಮವನ್ನು ಮಾಡಿ 

        ವೞಕ್ಕೆ ರಿಸಿಯರ್ಕಳ್ಗೆಲ್ಲಂ ಬೞಯನಟ್ಟಿ ಬರಿಸಿ ಇಂತೆಂದರೀ ನಾಡೊಳ್ ಪನ್ನೆರಡು ಮರುಷಂಬರೆಗಮನಾವೃಷ್ಟಿಯಾಗಿ ದುರ್ಭಿಕ್ಷಮಾದಪ್ಪುದೀ ನಾಡೊಳಗಿರ್ದ ರಿಸಿಯರ್ಕಳ್ಗೆಲ್ಲಂ ಬೇಗಂ ಬೞಯಟ್ಟಿ ಬರಿಸಿಂ ಪೋಪಂ ದಕ್ಷಿಣಾಪಥಕ್ಕೆಂದು ರಿಸಿಯರ್ಕಳ್ಗೆಲ್ಲಂ ಬೞಯನಟ್ಟಿದರಿತ್ತರಸನುಮಾ ದಿವಸದಿರುಳ್ ಪದಿನಾಱುಂ ಪೊಲ್ಲಕನಸುಗಳಂ ಕಂಡನವಾವುವೆಂದೊಡೆ ಆದಿತ್ಯನಸ್ತಮಾನಕ್ಕೆ ಸಲ್ವುದುಮಂ ಕಲ್ಪವೃಕ್ಷದ ಕೋಡುಡಿವುದುಮಂ ನೆಲಕ್ಕೆವರುತಿರ್ದ ವಿಮಾನಂ ಬಾರದೆಡೆಮುಂದೆ ಮೇಗೆ ಮಗುೞ್ದದುಮಂ, ಪನ್ನೆರಡು ತಲೆಯ ಪಾವುಮಂ ಚಂದ್ರನೊಡೆದುದುಮಂ ಕಡುಗಡಿಯವಪ್ಪೆರಡಾನೆಗಳ್ ತಮ್ಮೊಳ್ ಪೋರಲ್ ಸಾರ್ದು ಪೆಱಪಿಂಗಿ ಪೋದುದುಮಂ ಮೀನಂ ಬುೞುವುಮಂ ನೀರಿಲ್ಲದ ಕೆಱೆಯ ನಡುವುಮಂ ಪೊಗೆ ಪೆರ್ಚಿ ನೆಗೆದ ಕಾೞರ್ಚುಮಂ ಸಿಂಹಾಸನದ ಮೇಗೇಱರ್ದ ಕೋಡಗಮುಮಂ ಪೊನ್ನ ತಳಿಗೆಯೊಳ್ ನಾಯ್ ತುಯ್ಯಲುಣ್ಬುದುಮಂ ಕೊಡಗವೇಱರ್ದ ಸೊರ್ಕಾನೆಯುಮಂ ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಸಮುದ್ರಂ ಮೇರೆದಪ್ಪಿದುದುಮಂ ಬೆಳ್ಗೞ್ತೆಪೂಡಿದ ಪೊನ್ನರಥಮಂ ಬೆಳ್ಗೞ್ತೆಯನರಸರ್ಕಳೇಱುವುದುಮಂ – ಇಂತೀ ಪದಿನಾಱುಂ ಕನಸುಗಳಂ ಸಮ್ಯಗ್ದರ್ಶನ ಶುದ್ಧಿ ಮೊದಲಾಗೊಡೆಯ ಗುಣಂಗಳಿಂ ಕೂಡಿದ ಸಂಪ್ರತಿ ಚಂದ್ರಗುಪ್ತಮಹಾರಾಜಂ ಪೊಲ್ಲಕನಸುಗಳಂ ಕಂಡೆನೆಂದಂಜಿ ನೇಸಱ್ ಮೂಡಿದಾಗಳ್ ಭದ್ರಬಾಹು ಭಟ್ಟಾರರಲ್ಲಿಗೆ ಪೋಗಿ ವಂದಿಸಿ ತನ್ನ ಕಂಡ ಕನಸುಗಳಂ ಭಟಾರರ್ಗೆ ಭಟಾರರ್ಗೆ ಪೇೞ್ದದರ ಫಲಂಗಳಂ ಬೆಸಗೊಂಡೊಡೆ ಭಟಾರರಿಂತೆಂದು ಪೇೞಲ್ ತೊಡಗಿದರ್ 

            (ಬೇರೆ ಯಾವ ಕಡೆಗೂ ಮನಸ್ಸು ಕೊಡದೆ) ಮತ್ತೆ ಋಷಿಗಳಿಗೆಲ್ಲ ಕರೆ ಕಳುಹಿಸಿ ಬರಮಾಡಿ ಅವರೊಡನೆ ಹೀಗೆಂದರು – “ಈ ನಾಡಿನಲ್ಲಿ ಹನ್ನೆರಡು ವರ್ಷಗಳವರೆಗೆ ಮಳೆಬಾರದೆ ದುರ್ಭಿಕ್ಷ (ಬರಗಾಲ) ವುಂಟಾಗುವುದು. ಈ ನಾಡಿನಲ್ಲಿರುವ ಋಷಿಗಳಿಗೆಲ್ಲ ಬೇಗ ಕರೆ ಕಳುಹಿಸಿ ಬರಮಾಡಿ, ದಕ್ಷಿಣದೇಶಕ್ಕೆ ಹೋಗೋಣ, “‘ ಈ ರೀತಿಯಾಗಿ ಋಷಿಗಳಿಗೆಲ್ಲ ಕರೆ ಕಳುಹಿಸಿದರು. ಇತ್ತ ರಾಜನು ಅಂದಿನ ರಾತ್ರಿ ಹದಿನಾರು ದುಃಸ್ವಪ್ನಗಳನ್ನು ಕಂಡನು. ಅವು ಯಾವುವೆಂದರೆ : . ಸೂರ್ಯನು ಅಸ್ತಂಗತನಾಗುವುದು, ೨. ಕಲ್ಪವೃಕ್ಷದ ಕೊಂಬೆ ಮುರಿಯುವುದು, ೩. ನೆಲಕ್ಕೆ ಬರುವ ವಿಮಾನ ಬಾರದೆ ಮಧ್ಯದಿಂದಲೇ ಮೇಲಕ್ಕೆ ತಿರುಗಿಹೋದುದು, ೪. ಹನ್ನೆರಡು ತಲೆಗಳುಳ್ಳ ಹಾವು ಕಾಣಿಸಿದುದು, ೫. ಚಂದ್ರಬಿಂಬ ಒಡೆದುದು, ೬. ಅತ್ಯಂತ ಬಲಿಷ್ಠವಾದ ಎರಡು ಆನೆಗಳು ತಮ್ಮೊಳಗೆ ಹೋರಾಡುವುದಕ್ಕಾಗಿ ಹತ್ತಿರ ಬಂದು ಹಿಂದಕ್ಕೆ ಸರಿದು ಹೋದುದು, ೭. ಮಿಂಚುಹುಳು ಕಾಣಿಸಿದುದು, ೮. ನೀರಿಲ್ಲದ ಕೆರೆಯ ಮಧ್ಯಭಾಗ, ೯. ಹೊಗೆ ಹೆಚ್ಚಾಗಿ ಮೇಲೆದ್ದ ಕಾಡುಗಿಚ್ಚು, ೧೦. ಸಿಂಹಾಸನದ ಮೇಲೆ ಏರಿದ ನರಿ, ೧೧. ಚಿನ್ನದ ತಟ್ಟೆಯಲ್ಲಿ ನಾಯಿ ಪಾಯಸವನ್ನು ಉಣ್ಣುವುದು, ೧೨. ಮದ್ದಾನೆಯ ಮೇಲೆ ಕೋತಿ ಕುಳಿತುದು, ೧೩. ಕಸದ ರಾಶಿಯಲ್ಲಿ ತಾವರೆ ಹುಟ್ಟಿದುದು, ೧೪. ಸಾಗರವು ತನ್ನ ಎಲ್ಲೆ ದಾಟಿದುದು, ೧೫. ಬಿಳಿಯ ಕತ್ತೆಯನ್ನು ಕಟ್ಟಿದ ಚಿನ್ನದ ತೇರು, ೧೬. ರಾಜರುಗಳು ಬಿಳಿಕತ್ತೆಯ ಮೇಲೆ ಸವಾರಿಮಾಡುವುದು – ಈ ರೀತಿಯಾಗಿ ಹದಿನಾರು ಕೆಟ್ಟ ಕನಸುಗಳನ್ನು ಸಮ್ಯಗ್ದರ್ಶನ – ಶುದ್ಧಿ ಮುಂತಾಗಿರುವಗುಣಗಳಿಂದ ಕೂಡಿದ ಸಂಪ್ರತಿ ಚಂದ್ರಗುಪ್ತ ಮಹಾರಾಜನು ತಾನು ಕಂಡೆನೆಂದು ಹೆದರಿದನು. ಸೂರ್ಯೋದಯವಾದ ವೇಳೆಗೆ ಅವನು ಭದ್ರಬಾಹು ಋಷಿಗಳಲ್ಲಿ ಹೋಗಿ ನಮಸ್ಕರಿಸಿ, ತಾನು ಕಂಡ ಕನಸುಗಳನ್ನು ಋಷಿಗಳಿಗೆ ಹೇಳಿ ಅವುಗಳ ಫಲವೇನೆಂಬುದಾಗಿ ಕೇಳಲು ಭದ್ರಬಾಹು ಮುನಿಗಳು ಹೀಗೆ ಹೇಳತೊಡಗಿದರು – 

 ಅದಿತ್ಯನಸ್ತಮಾನಕ್ಕೆ ಸಲ್ವುದಂ ಕಂಡುದಱಂದೀ ಭರತಕ್ಷೇತ್ರದೊಳ್ ಚತುರ್ದಶಪೂರ್ವಧಾರಿಗಳುಮವಜ್ಞಾನಿಗಳುಮಿಲ್ಲಿಂದಿತ್ತಲಾಗರ್ ಕಲ್ಪವೃಕ್ಷದ ಕೋಡುಡಿದುದುಮಂ ಕಂಡುದಱಂದಿಂದಿಂನ ದಿವಸಂ ಕೞದೊಡೆ ಕುಲಬಲವಿಭವದಿಂ ಪಿರಿಯರಪ್ಪ ಮಕುಟಬದ್ಧರ್ಪರಸುಗಳ್ ತಪಂಬಡುವರಲ್ಲರ್ ನೆಕ್ಕೆವರುತ್ತರ್ದ ಮಿಮಾನದೆಡೆಮುಂದಂ ಮೇಗೆ ಮಗುೞು*ದಂ ಕಂಡುದಱಂ ದೇವರ್ಕಳುಂ ವಿದ್ಯಾಧರ್ರಳುಮಿಲ್ಲಿಂದಿತ್ತೀ ಕ್ಷೇತ್ರಕ್ಕೆ ವಾರರ್ ಪನ್ನೆರಡು ತಲೆಯ ಪಾವಂ ಕಂಡುದಱಂದಿಲ್ಲಿಂ ತೊಟ್ಟೀನಾಡೊಳ್ ಪನ್ನೆರಡು ವರ್ಷಂಬರಂ ರೌದ್ರ ಪಸವಮಕ್ಕುಂ ಚಂದ್ರನೊಡೆದುದುಂ ಕಂಡುದಱಂ ಸದ್ದರ್ಮದ ಮೊದಲ ಪೊರ್ದಿದ ಮಾರ್ಗದಿಂ ಬೆಳೆಯೊಳ್ ಪುಲ್ಗಳ್ ಪಲವಕ್ಕುಂ ಕಡುಗಡಿಯವಪ್ಪೆರಡಾನೆಗಳ್ ತಮ್ಮೊಳ್ ಪೋರಲ್ ಸಾರ್ದು ಪೆಱಪಿಂಗುವ್ಯದಂ ಕಂಡುದಱಂ ಪ್ರಜೆಗಳ ಮೆಚ್ಚಿದಂತೆ ಮೞೆಕೊಳ್ಳವು ಮಂಡಲ ವರ್ಷಂಗಳಕ್ಕುಂ ಮೀನಂಬುೞುವಂ ಕಂಡುದಱಂ ಮೀನಂಬುೞುವಿನೋಲೋರನ್ನವು ಶಾಸ್ತ್ರಂಗಳುಮಂಗ ಬಾಹ್ಯಮಪ್ಪ ಚತುರ್ದಶ ವಿದ್ಯಾಸ್ಥಾನಂ ಗಳುಂ ಕುಂದಿಯುಪದೇಶ ತನುಮಾತ್ರಮೆ ನಿಲ್ಕುಂ ನೀರಿಲ್ಲದೆ ಕೆಱೆಯ ನಡುವಂ ಕಂಡುದಱೆಂ ತೀರ್ಥಂಕರ ಚಕ್ರವರ್ತಿಗಳ ಪುಟ್ಟಿದ ಮಧ್ಯದೇಶದೊಳ್ ಪಿನ್ನ ನೆಗೞ್ತೆಯಾಗದು ಆ ಮಧ್ಯಪ್ರದೇಶಕ್ಕೆ ಸಂಬಂಯೀ

        ಗಾಹೆ:     ಪುವ್ವೇಣ ಅಂಗವಿಸಓ ದಕ್ಖಣ ದೋ ಜಾವಹೋ ಇ ಕೋಸಂಬೀ
                    ಅವರೇಣ ಜಾವ ದೂಣಾ ಕುಣಾಳ ವಿಸಯೋಯ ಉತ್ತರದೋ ||

        ಸೂರ್ಯನು ಮುಳುಗುವುದನ್ನು ಕಂಡುದರಿಂದ ಈ ಭರತಕ್ಷೇತ್ರದಲ್ಲಿ ಹದಿನಾಲ್ಕು ಪೂರ್ವಗಳನ್ನು ತಿಳೀದವರೂ ಅವಜ್ಞಾನಿಗಳೂ ಇನ್ನು ಮುಂದೆ ಆಗರು. ಕಲ್ಪವೃಕ್ಷದ ಮರಕೊಂಬೆ ಮುರಿದುದನ್ನು ಕಂಡುದರಿಂದ ಈ ದಿವಸ ದಾಟಿದರೆ, ಕುಲ – ಸಾಮರ್ಥ್ಯ – ವೈಭವದಿಂದ ದೊಡ್ಡವರೆನಿಸಿದ ಕಿರೀಟಧಾರಿಗಳದ ರಾಜರುಗಳು ತಪಸ್ಸು ಮಾಡಲು ಉದ್ಯುಕ್ತರಾಗರು. ನೆಲಕ್ಕೆ ಬರುತ್ತಿದ್ದ ವಿಮಾನವು ಮಧ್ಯದಿಂದಲೇ ಮೇಲಕ್ಕೆ ತಿರುಗಿದುದನ್ನು ಕಂಡುದರಿಂದ ದೇವತೆಗಳೂ ವಿದ್ಯಾಧರರೂ ಇಲ್ಲಿಂದ ಮುಂದೆ ಈ ಕ್ಷೇತ್ರಕ್ಕೆ ಬರಲಿಕ್ಕಿಲ್ಲ. ಹನ್ನೆರಡು ತಲೆಗಳಿರುವ ಹಾವನ್ನು ಕಂಡುದರಿಂದ ಇಲ್ಲಿಂದ ಹಿಡಿದು ಈ ನಾಡಿನಲ್ಲಿ ಹನ್ನೆರಡು ವರ್ಷಗಳವರೆಗೆ ಘೋರವಾದ ಕ್ಷಾಮ ತಲೆದೋರುವುದು. ಚಂದ್ರಬಿಂಬ ಹೋಳಾದುದನ್ನು ಕಂಡುದರಿಂದ ಸದ್ಧರ್ಮದ ಮೂಲದ ಮಾರ್ಗದಲ್ಲಿರುವ ಬೆಳೆಯಲ್ಲಿ ಹಲವು ಹುಲ್ಲುಗಳು ಕಳೆಯಾಗಿ ಉಂಟಾಗಿರುವುವು (ಧರ್ಮ ಕೆಡುವುದು). ಬಲಿಷ್ಠವಾದ ಎರಡು ಆನೆಗಳು ಹೋರಾಡಲು ಬಂದು ಹಿಂಜರಿದುದನ್ನು ಕಂಡುದರಿಂದ ಪ್ರಜೆಗಳು ಇಚ್ಚಿಸಿದ ಹಾಗೆ ಮಳೆಗಳಾಗವು, ಕೆಲಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಗಳು ಸುರಿದಾವು. ಮಿಂಚು ಹುಳವನ್ನು ಕಂಡುದರಿಂದ ಮಿಂಚುಹುಳುವಿನಂತಾಗಿ ಶಾಸ್ತ್ರಗಳು ಕುಂದಿಹೋಗಿ ಹೊರ ಮೈ ಮಾತ್ರ ನಿಲ್ಲುವುದು. ನೀರಿಲ್ಲದೆ ಕೆರೆಯ ಮಧ್ಯಭಾಗವನ್ನು ಕಂಡುದರಿಂದ ತೀರ್ಥಂಕರ ಚಕ್ರವರ್ತಿಗಳು ಜನಿಸಿದ ಮಧ್ಯದೇಶದಲ್ಲಿ ಹಿಂದಿನ ಕಾಲದ ಖ್ಯಾತಿ ಇಲ್ಲವಾಗುವುದು. ಆ ಮಧ್ಯದೇಶವನ್ನು ಸಂಬಂಸಿದ ಗಾಹೆಯ ಅರ್ಥ ಹೀಗಿದೆ – (ಪೂರ್ವದಲ್ಲಿ ಅಂಗದೇಶ. ಚಕ್ಷಿಣದಲ್ಲಿ ಕೌಶಂಬೀನಗರ. ಪಶ್ಚಿಮದಲ್ಲಿ ದಾಣ, ಉತ್ತರದಲ್ಲಿ ಕುಣಾಳ ದೇಶ – ಈ ಭಾಗವೇ ಮಧ್ಯದೇಶ.) ಮಧ್ಯದೇಶದ ಹರಹು ಹೀಗಿದೆ. 

            ಎಂದು ಮಧ್ಯದೇಶಪ್ರಮಾಣಂ ಮತ್ತಂ ಪೊಗೆಂದಂ ಪೆರ್ಚಿ ನೆಗೆದ ಕಾೞ್ಕರ್ಚಂ ಕಂಡುಕಱಂ ಧೂರ್ತರಪ್ಪ ಪೊಲ್ಲಲಿಂಗಿಗಳ ಪೆರ್ಚಕ್ಕುಂ ಮತ್ತಂ ದಯೆ ಮೊದಲಾಗೊಡೆಯ ಸದ್ಧರ್ಮಕ್ಕೆ ವಿರುದ್ಧ ಮಾಗಿ ನೆಗೞ್ದ ಪಿರಿದಪ್ಪ ಹಿಂಸಾದಿಗಳಂ ಗೆಯ್ವ ವೇದಾದಿಶಾಸ್ತ್ರಂಗಳ ಪೆರ್ಚಕ್ಕುಂ ಸಿಂಹಾಸನ ಮನೇಱರ್ದ ಕೋಡಗಮಂ ಕಂಡುದಱಂ ಕುಲಜರಲ್ಲದವರರಸುಗೆಯ್ವರ್ ಪೊನ್ನತಳಿಗೆಯೊಳ್ ನಾಯ್ ತುಯ್ಯಲನ್ಮಣ್ಬುದಂ ಕಂಡುದಱಂ ಪೊಲ್ಲಲಿಂಗಿಗಳರಸರ್ಕಳಿಂದಂ ಪೂಜಿಸೆ ಪಡುವರ್ ಕೋಡಗಮಾನೆಯನೇಱುವ್ಯದಂ ಕಂಡುದಱಂದಾದಮಾನುಂ ಶುದ್ಧಕುಲದೊಳ್ ಪುಟ್ಟಿದರಸು ಮಕ್ಕಳುತ್ತಮ ಕುಲದೊಳಪ್ಪಭಿಮಾನಮಂ ತೊಱೆದು ಬಾೞ್ಕಾರಣಮಾಗಿ ಕುಲಜರಲ್ಲಕದವರ್ಗಾಳಾಗಿ ಬಾೞ್ವರ್ ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಕಂಡುಕಱಂ ದಯೆಯುಪಶಮಮುಂ ಪರಿಗ್ರಹ ಪರಿತ್ಯಾಗಮುಂ ಸಮಾಯುಂ ಸತ್ಯಮುಂ ಶೌಚಮುಂ ಕ್ಷಮೆಯುಮೆಂದಿವು ಮೊದಲಾಗೊಡೆಯವಱೊಳ್ ಕೂಡಿದ ಮಿಕ್ಕ ಸದ್ಧರ್ಮಮಾರ್ಗಮಂ ದ್ರವ್ಯಪತಿಗಳುಮರಸು ಮಕ್ಕಳುಂ ತಮ್ಮ ದ್ರವ್ಯಾದಿ ಮದದಿಂದಂ ತೊಱೆವರ್ ನೀಚಜಾತಿಗಳುಂ ಬಡವರುಂ ಸದ್ಧರ್ಮಮಂ ಕೈಕೊಂಡು ನೆಗೞ್ವರ್ ಸಮುದ್ರಂ ಮೇರೆದಪ್ಪುವ್ಯದಂ ಕಂಡುದಱಂದರಸುಮಕ್ಕಳ್ ತಮ್ಮ ಮರ್ಯಾದೆಯಂ ಮಿಕ್ಕು ದ್ರವ್ಯಂ ಮೊದಲಾಗೊಡೆಯವಱೊಳ್ ಲೋಭಿಷ್ಠರಪ್ಪರ್ ಒಳ್ಳಿತಪ್ಪ ಸತ್ಯ ಶೌಚ ಚಾರಿತ್ರವೆಂದಿವಱಂ ಕುಂದಿಯಾದಮಾನುಂ ನಿರ್ದಯರ್ಕಳಪ್ಪರ್ ಬೆಳ್ಗೞ್ತೆ ಪೂಡಿದ ಪೊನ್ನರಥಮಂ ಕಂಡುದಱಚಿದಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಿಂದಂ ಪವಿತ್ರಮಪ್ಪ ನಿರ್ಗ್ರಂಥ ಲಿಂಗಮಪ್ಪುದನೞದೊಳ್ಳಿತಪ್ಪ ತಪಮಂ ಕೈಕೊಳೆಪಟ್ಟುಂ 

        ಆಮೇಲೆ ಹೊಗೆ ಹೆಚ್ಚಾಗಿ ಮೇಲೆದ್ದ ಕಾಡುಗಿಚ್ಚನ್ನು ಕಂಡುದರಿಂದ ದುಷ್ಟರಾದ ಕೆಟ್ಟ ಲಾಂಛನವುಳ್ಳವರು ಹೆಚ್ಚಳವಾಗುವುದು, ಮತ್ತು ದಯೆ ಮುಂತಾಗಿರುವ ಸದ್ಧರ್ಮಕ್ಕೆ ವಿರುದ್ಧವಾಗಿ ವರ್ತಿಸುವ ಹೆಚ್ಚಿನ ಹಿಂಸೆ ಮುಂತಾದುವನ್ನು ಮಾಡುವ ವೇದಶಾಸ್ತ್ರಗಳು ಹೆಚ್ಚಾಗುವುವು. ಸಿಂಹಾಸನವೇರಿದ ಕೋತಿಯನ್ನು ಕಂಡುದರಿಂದ ಕುಲೀನರಲ್ಲದವರು ರಾಜ್ಯವಾಳುವರು. ಹೊಂದಟ್ಟೆಯಲ್ಲಿ ನಾಯಿ ಪಾಯಸವುಣ್ಣುವುದನ್ನು ಕಂಡದ್ದರಿಂದ ಕೆಟ್ಟಲಾಂಛನದವರು ರಾಜರಿಂದ ಪೂಜಿಸಲ್ಪಡುವರು. ಮಂಗವು ಆನೆಯ ಮೇಲೆ ಏರಿದುದನ್ನು ಕಂಡುದರಿಂದ ಅತ್ಯಂತ ಪವಿತ್ರವಾದ ವಂಶದಲ್ಲಿ ಜನಿಸಿದ ರಾಜಕುಮಾರರು ತಮ್ಮ ಶ್ರೇಷ್ಠವಂಶದ ಗೌರವವನ್ನು ಬಿಟ್ಟು ಜೀವನೋಪಾಯಕ್ಕಾಗಿ ಕುಲೀನರಲ್ಲದವರಿಗೆ ದಾಸರಾಗಿ ಬಾಳುವರು. ಕಸದ ರಾಶಿಯಲ್ಲಿ ತಾವರೆ ಹುಟ್ಟಿದುದನ್ನು ಕಂಡುದರಿಂದ ದಯೆ, ಶಾಂತಿ, ಅಪರಿಗ್ರಹ, ಸಮಾ, ಸತ್ಯ, ಶುಚಿತ್ವ, ಕ್ಷಮೆ, ಮುಂತಾದವುಗಳಿಂದ ಕೂಡಿದ ಶ್ರೇಷ್ಠವಾದ ಸದ್ಧರ್ಮದ ಹಾದಿಯನ್ನು ಶ್ರೀಮಂತರೂ ರಾಜಕುಮಾರರೂ ತಮ್ಮಲ್ಲಿರುವ ಧನ ಮುಂತಾದವುಗಳ ಮದದಿಂದ ಬಿಟ್ಟುಬಿಡುವರು. ಕೀಳುಜಾತಿಯವರೂ ಬಡವರೂ ಒಳ್ಳೆಯ ಧರ್ಮವನ್ನು ಸ್ವೀಕರಿಸಿಕೊಂಡು ಅದನ್ನು ಆಚರಿಸುವರು. ಸಮುದ್ರವು ತನ್ನ ಎಲ್ಲೆಯನ್ನು ಮೀರಿರುವುದನ್ನು ಕಂಡ ಕಾರಣ ರಾಜಕುಮಾರರು ತಮ್ಮ ಮರ್ಯಾದೆಯನ್ನು ಮೀರಿ ಧನ ಮುಂತಾಗಿರುವ ವಿಷಯಗಳಲ್ಲಿ ದುರಾಶಭರಿತರಾಗಿ ವರ್ತಿಸುವರು. ಒಳ್ಳೆಯದಾಗಿರುವ ಸತ್ಯ, ಶುಚಿತ್ವ, ನಡತೆ ಎಂಬುವುಗಳಲ್ಲಿ ನ್ಯೂನತೆಯುಳ್ಳವರಾಗಿ ಅತ್ಯಂತ ದಯಾಹೀನರಾಗುವರು. ಬಿಳಿ ಕತ್ತೆಯನ್ನು ಕಟ್ಟಿದ ಚಿನ್ನದ ರಥವನ್ನು ಕಂಡುದರಿಂದ ಸಮ್ಯಗ್ದರ್ಶನ, ಸಮ್ಯಗ್ಞಾನ, ಸಮ್ಯಕ್ಚಾರಿತ್ರಗಳಿಂದ ಪರಿಶುದ್ಧವೆನಿಸುವ ದಿಗಂಬರತ್ವದ ಲಾಂಛನವನ್ನೂ ಬಿಟ್ಟು ಒಳ್ಳೆಯ ತಪಸ್ಸನ್ನು ಸ್ವೀಕರಿಸಿಯೂ 

        ಪಿರಿದಪ್ಪ ಪುರುಷಕಾರಮುಂ ಸತ್ಯಮುಂ ಮನೋಬಲಮುಂ ವೀರ್ಯಮುಮೆಂದಿವಱಂದಂ ಕೂಡಿದವರ್ಗಳಿಂದಮೊಳ್ಳಿದರಪ್ಪ ತೀರ್ಥಂಕರ ಪರಮ ದೇವರ್ಕಳಿಂದಂ ಚಕ್ರವರ್ತಿಗಳಿಂದಂ ಚರಮದೇಹಧಾರಿಗಳಿಂದಂ ನೆಗೞೆಪಟ್ಟುದನೊಳ್ಳಿತಪ್ಪ ಮೋಕ್ಷಮಾರ್ಗಮಂ ಪೊರ್ದಿಯುಂ ವಿಷಯ ಸುಖಂಗಳೊಳ್ ಮೋಹಿತರ್ಕಳಾಗಿ ಕಿಡುವರ್ ಬೆಳ್ಗೞ್ತೆಯನರಸರ್ಕಳೇಱುವ್ಯದಂ ಕಂಡುದಱಂದುತ್ತಮ ಕುಲದವರ್ಗಳ್ಗೆ ಕುಲಜರಲ್ಲದವರೊಡನೆ ಮದುವೆಯೊಳ್ ತೊಟ್ಟ ನಣ್ಪುಗಳಕ್ಕುಮೆಂದಿಂತು ಪದಿನಾಱುಂ ಕಂಡ ಕನಸುಗಳ ಫಲಂಗಳಂ ಸಂಪ್ರತಿ ಚಂದ್ರಗುಪ್ತ ಮಹಾರಾಜಂಗೆ ಭದ್ರಬಾಹು ಭಟ್ಟಾರರ್ ಪೇೞ್ದು ಮತ್ತಮೀ ಕಲಿಯುಗ ಮಹಾರಾಜನ ಸ್ವರೂಪಮನಿಂತೆಂದು ಪೇೞಲ್ ತೊಡಗಿದರ್ :

ಹರಿಣಿ || ಅನೃತವಚನೇ ನಿತ್ಯಾಭ್ಯಾಸ: ಖಲೇಷು ವಿದಗ್ಧತಾ
            ಗುಣಬತಿ ಜನೇ ವೈರಬುದ್ಧಿ: ಖಲೇಷ್ವತಿಗೌರವಂ
            ಯತಿಷು ನಿಯತಂ ವಾಕ್ಷಾರುಷ್ಯಂ ವಿಪತ್ತಿಷು ಚ ಕ್ರಿಯಾ
            ಕಲಿಯುಗ ಮಹಾರಾಜಸ್ಯೇತಾನಿ ರಾಜವಿಭೂತಯ: ||

ಕಾಲೇ ಸಂಪ್ರತಿವರ್ತತೇ ಕಲಿಯುಗೇ ಸತ್ಯಾ ನರಾ ದುರ್ಲಭಾ
ನಾನಾ ಚೋರಗಣಾ ಮುಷಂತಿ ಪ್ಲಥಿವೀಮಾರ್ಯೋ ಜನ: ಕ್ಷೀಯತೇ
ದೇವಾಶ್ಚ ಪ್ರಲಯಂಗತಾ: ಕರಭವಲ್ಲೌಲ್ಲ್ಯಂ ಗತಾ: ಪಾರ್ಥಿವಾ:
ಪುತ್ರಸ್ಯಾಪಿ ನ ವಿಶ್ವಸಂತಿ ಪಿತರಂ: ಕಷ್ಟಂ ಯುಗಂ ವರ್ತತೇ ||

        ಹಿರಿದಾದ ಪುರುಷ ಪ್ರಯತ್ನ, ಸತ್ಯ, ಮನಶ್ಯಕ್ತಿ, ವೀರ್ಯ ಎಂಬುವುಗಳಿಂದ ಕೂಡಿದಂತಹ ಒಳ್ಳೆಯವರಾದ ತೀರ್ಥಂಕರರೆಂಬ ಶ್ರೇಷ್ಠ ದೇವತೆಗಳಿಂದಲೂ ಚಕ್ರವರ್ತಿಗಳಿಂದಲೂ ಚಮರ (ಕೊನೆಯ) ದೇಹಧಾರಿಗಳಿಂದಲೂ ಆಚರಿಸಲ್ಪಟ್ಟ ಒಳ್ಳೆಯದಾದ ಮೋಕ್ಷದ ದಾರಿಯನ್ನು ಹಿಡಿದಿದ್ದರೂ ಪಂಚೇಂದ್ರಿಯ ವಿಷಯಗಳ ಸುಖಗಳಲ್ಲಿ ಮೋಹಗೊಂಡವರಾಗಿ ಕೆಟ್ಟುಹೋಗುವರು. ಬಿಳಿ ಕತ್ತೆಯನ್ನು ರಾಜರು ಏರುವುದನ್ನು ಕಂಡುದರಿಂದ ಶ್ರೇಷ್ಠ ಕುಲದವರಿಗೆ ಕುಲಹೀನರೊಡನೆ ಮದುವೆಯ ನಂಟತನಗಳಾಗುವುವು. ಈ ರೀತಿಯಾಗಿ ಹದಿನಾರು ಕಂಡ ಕನಸುಗಳ ಫಲವನ್ನು ಸಂಪ್ರತಿ ಚಂದ್ರಗುಪ್ತ ಮಹಾರಾಜನಿಗೆ ಭದ್ರಬಾಹುಮುನಿಗಳು ಹೇಳಿದರು. ಆಮೇಲೆ ಈ ಕಲಿಯುಗವೆಂಬ ಮಹಾರಾಜನ ಸ್ವರೂಪವನ್ನು ಹೀಗೆ ಹೇಳತೊಡಗಿದರು – ಸುಳ್ಳಾಡುವುದರಲ್ಲಿ ಎಡೆಬಿಡದೆ ಅಭ್ಯಾಸ, ದುಷ್ಟರಲ್ಲಿ ಪಾಂಡಿತ್ಯ, ಗುಣವಂತರಾದ ಜನರಲ್ಲಿ ದ್ವೇಷಬುದ್ಧಿ, ದುಷ್ಟರಲ್ಲಿ ಬಹಳ ಮರ್ಯಾದೆ, ಯತಿಗಳಲ್ಲಿ ಮಾತಿನ ಬಿರುಸುತನ, ಆಪತ್ತು ಅಡಗಿಸಿದಾಗಲೂ ಕಾರ್ಯತತ್ಪರತೆ – ಇವೆಲ್ಲವೂ ಕಲಿಯುಗವೆಂಬ ಮಹಾರಾಜನ ರಾಜವೈಭವಗಳಾಗಿವೆ. ಈಗ ನಡೆಯುತ್ತಿರುವ ಕಲಿಯುಗದಲ್ಲಿ ಸತ್ಯವಂತರಾದ ಮನುಷ್ಯರು ದೊರಕಲಾರರು. ಹಲವು ಬಗೆಯ ಕಳ್ಳರ ಗುಂಪುಗಳು ಲೋಕವನ್ನೇ ಅಪಹರಿಸುವುವು. ಶ್ರೇಷ್ಠಜನರು ನಾಶಹೊಂದಿದ್ದಾರೆ. ದೇವತೆಗಳೂ ನಾಶವಾದಾರು. ರಾಜರು ಒಂಟೆಯಂತೆ ದುರಾಶೆಗೊಂಡಿದ್ದಾರೆ. ತಂದೆ ತಾಯಿಗಳು ಮಗನ ಮೇಲೂ ನಂಬಿಕೆಯಿಡರು. ಕಷ್ಟಕರವಾದ ಕಲಿಯುಗ ಹೀಗಿರುತ್ತದೆ. 

        ನಿರ್ವೀರ್ಯಾ ಪೃಥಿವೀ ಗತೌಷರಸಾ ನೀಚಾ ಮಹತ್ತ್ವಂ ಗತಾ:
        ರಾಜಾನೋ – ರ್ಥಪರಾ: ಕುಧರ್ಮನಿರತಾ ವಿಪ್ರಾ ವಿಕರ್ಮಸ್ಥತಾ:
        ಭಾರ್ಯಾ ಭರ್ತರಿ ನೈವಬದ್ಧಹ್ಲದಯಾ ಪುತ್ರಾ: ಪಿತೃದ್ವೇಷಿಣ:
        ಇತ್ಯೇವಂ ಸಮುಪಸ್ಥಿತೇ ಕಲಿಯುಗೇ ಧನ್ಯಾ ವನಂ ಪ್ರಸ್ಥಿತಾ: ||

            ಎಂದಿಂತು ಭಟ್ಟಾರರ್ ಪೇೞೆ ಸಂಪ್ರತಿ ಚಂದ್ರಗುಪ್ತ ಮಹಾರಾಜಂ ಕೇಳ್ದು ಮತ್ತಂದಿನ ದಿವಸಂ ಕೞದೊಡೆ ಮಂಡಳಿಕರ್ ಜಿನದೀಕ್ಷೆಯಂ ಕೈಕೊಳ್ಳರೆಂಬುದಂ ಕೇಳ್ದಾದಮಾನುಂ ಭೀತನಾಗಿ ಸಿಂಹಸೇನನೆಂಬ ತನ್ನ ಪಿರಿಯ ಮಗಂಗೆ ರಾಜ್ಯಪ್ಪಟಂಗಟ್ಟಿ ಭದ್ರಬಾಹುಟ್ಟಾರಾರ ಪಕ್ಕದೆ ಪಲಂಬರರಸು ಮಕ್ಕಳ್ವೆರಸಾ ದಿವಸಮೆ ತಪಂಬಟ್ಟಂ ಮತ್ತಿತ್ತ ಮಧ್ಯದೇಶದೊಳಿರ್ದ ರಿಸಿಯರ್ಕಳ್ಗೆಲ್ಲಂ ಬೞಯಟ್ಟಿ ಬರಿಸಿ ಭಟ್ಟಾರರಿಂತೆಂದರ್ ಪನ್ನೆರಡು ವರ್ಷಂಬರೆಗಮೀ ನಾಡೊಳನಾವೃಷ್ಟಿಯಾಗಿ ಮಹಾರೌದ್ರ ಪಸವಮಕ್ಕುಂ ಮಧ್ಯಮದೇಶಮೆಲ್ಲಂ ಪಾೞಕ್ಕುಮೀ ನಾಡೊಳಿರ್ದ ರಿಸಿಯರ್ಕಳ್ಗೆ ಬ್ರತಭಂಗಮಪ್ಪುದದಱಂ ಪೋಪಂ ದಕ್ಷಿಣಾಪಥಕ್ಕೆಂದಾಚಾರ್ಯರ್ಕಳ್ ಸಹಿತಮಿರ್ಚ್ಛಾಸಿರ ರಿಸಿಸಮುದಾಯಮುಂ ಸಂಪ್ರತಿ ಚಂದ್ರಗುಪ್ತ ಮುನಿಯುಂ ಬೆರಸು ದಕ್ಷಿಣಾಪಥಕ್ಕೆ ಪೋದರಿತ್ತ ರಾಮಿಲಾಚಾರ್ಯರುಂ ಸ್ಥೂಲಾಚಾರ್ಯರುಂ ಸ್ಥೂಲಭದ್ರಾಚಾರ್ಯರುಮಿಚಿತೀ ಮೂವರಾಚಾರ್ಯರುಂ ಭಟಾರರೊಡನೆ ಪೋಗಲೊಲ್ಲದೆ 

            ಭೂಮಿ ಸತ್ವಹೀನವಾಗಿದೆ. ಔಷ (ಸಸ್ಯಗಳ) ರಸಗಳು ಇಲ್ಲವಾಗಿವೆ. ಕೀಳಾದ ಜನರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ರಾಜರು ಹಣದ ಆಸೆಯುಳ್ಳವರಾಗಿದ್ದಾರೆ. ಕೆಟ್ಟ ಧರ್ಮದಲ್ಲಿ ತತ್ಪರರಾದ ಬ್ರಾಹ್ಮಣರು ಅನ್ಯಾಯವಾದ ಕಾರ್ಯದಲ್ಲಿ ತೊಡಗಿದ್ದಾರೆ. ಹೆಂಡಿರು ಗಂಡನಲ್ಲಿ ಅನುರಾಗವುಳ್ಳ ಹೃದಯದವರಾಗಿಲ್ಲ. ಗಂಡುಮಕ್ಕಳು ತಂದೆಯಲ್ಲಿ ದ್ವೇಷವುಳ್ಳವರು. ಹೀಗಿರತಕ್ಕ ಕಲಿಯುಗದಲ್ಲಿ ಕಾಡಿಗೆ ಹೋಗಿ ನಿಂತವರು ಧನ್ಯಜೀನಿಗಳು.ಹೀಗೆ ಋಷಿಗಳು ಹೇಳಿದಾಗ ಸಂಪ್ರತಿ ಚಂದ್ರಗುಪ್ತ ಮಹಾರಾಜನು ಕೇಳಿ ಅಂದಿನ ದಿವಸ ದಾಟಿದರೆ ಅವನ ಸಾಮಂತರು ಜಿನದೀಕ್ಷೆಯನ್ನು ಸ್ವೀಕಾರ ಮಾಡಲಿಕ್ಕಿಲ್ಲವೆಂಬುದನ್ನು ತಿಳಿದು ಅತ್ಯಂತ ಭಯಪಟ್ಟನು. ಸಿಂಹಸೇನನೆಂಬ ತನ್ನ ಹಿರಿಯ ಮಗನಿಗೆ ರಾಜ್ಯಾಕಾರ ಕೊಟ್ಟು ಭದ್ರಬಾಹುಸ್ವಾಮಿಗಳ ಬಳಿ ಹಲವಾರು ರಾಜಕುಮಾರರೊಟ್ಟಿಗೆ ತಪಸ್ಸನ್ನು ಕೈಗೊಂಡನು. ಇತ್ತ ಮಧ್ಯದೇಶದಲ್ಲಿದ್ದ ಋಷಿಗಳೆಲ್ಲರ ಬಳಿಗೂ ಜನ ಕಳುಹಿಸಿ ಅವರನ್ನು ಬರಿಸಿ ಭದ್ರಬಾಹುಮುನಿಗಳು ಹೀಗೆಂದರು – “ಈ ನಾಡಿನಲ್ಲಿ ಹನ್ನೆರಡು ವರ್ಷಗಳವರೆಗೆ ಮಳೆಬಾರದೆ ಭಯಂಕರವಾದ ಕ್ಷಾಮವುಂಟಾಗುವುದು. ಮಧ್ಯದೇಶವೆಲ್ಲ ಹಾಳಾಗುವುದು. ಈ ನಾಡಿನಲ್ಲಿದ್ದ ಋಷಿಗಳ ವ್ರತ ಕೆಟ್ಟುಹೋಗುವುದು. ಆದುದರಿಂದ ದಕ್ಷಿಣ ಭಾರತದ ಕಡೆಗೆ ಹೋಗೋಣ“, ಹೀಗೆ ಹೇಳಿ ಆಚಾರ್ಯರುಗಳೊಂದಿಗೆ ಎರಡು ಸಾವಿರ ಋಷಿಗಳು ಸಮೂಹವನ್ನೂ ಸಂಪ್ರತಿ ಚಂದ್ರಗುಪ್ತ ಮುನಿಯನ್ನೂ ಕೂಡಿಕೊಂಡು ದಕ್ಷಿಣ ದೇಶಕ್ಕೆ ತೆರಳಿದರು. ಇತ್ತ ರಾಮಿಲಾಚಾರ್ಯ, ಸ್ಥೂಲಾಚಾರ್ಯ, ಸ್ಥೂಲಭದ್ರಾಚಾರ್ಯ – ಈ ಮೂವರು ಆಚಾರ್ಯರು ಭದ್ರಬಾಹು ಮುನಿಗಳೊಂದಿಗೆ ಹೋಗಲು ಒಪ್ಪಲಿಲ್ಲ. 

             ತಂತಮ್ಮ ಋಷಿಸಮುದಾಯಂಬೆರಸು ಸಿಂಧುವಿಷಯಕ್ಕೆ ಪೋದರಿತ್ತ ಭಟ್ಟಾರರುಂ ಪಿರಿದು ಋಷಿಸಮುದಾಯಂ ಬೆರಸು ಗ್ರ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ಕೞದು ಪೋಗಿ ಕೞ್ಚಪ್ಪುನಾಡನೆಯ್ದಿ ಪೋಗುತ್ತಾಂ ಭದ್ರಬಾಹು ಭಟ್ಟಾರರ್ ತಮ್ಮಾಯುಷ್ಯಪ್ರಮಾಣ ಮಱದಾಮಿಲ್ಲಿ ಸಂನ್ಯಸನಂಗೆಯ್ದಪ್ಪೆವು ನೀಮೆಲ್ಲಂ ಪೋಗಿಮೆಂದು ತಮ್ಮ ಪಿರಿಯ ಶಿಷ್ಯರ್ ದಶಪೂರ್ವಧಾರಿಗಳ್ ವಿಶಾಖಾಚಾರ್ಯರೆಂಬೊರಲ್ಲಿಂ ಬೞಯಮಾರ್ಯ ಸುಹಸ್ತಿಗಳುಮರಭದ್ರರುಂ ಸುಭದ್ರಮಿತ್ರರುಂ ಮಹಾಗಿರಿಯುಂ ಸುಮತಿಯುಂ ಮಹಾಮತಿಯುಂ ವಿಶಾಖನಂದಿಯು ಮೆಂದಿವರ್ಗಲೆಲ್ಲರುಮನಾಚಾರ್ಯರ್ ಮಾಡಿ ದ್ರವಿೞವಿಷಯಕ್ಕೆ ಪೋಗಿಮೆಂದು ವಿಶಾಖಾಚಾರಯರೊಡನೆ ಎಣ್ಭಾಸಿರ್ವರ್ ರಿಸಿಯರನಟ್ಟಿದರ್ ಚಂದ್ರಗುಪ್ತಮುನಿಯುಮನವರೊಡನೆ ಪೋಗಿಮೆಂದು ಭಟ್ಟಾರರ್ ಕೀಱಪೋಗಳ್ವೇೞ್ದೊಡಾಮುಂ ಪೋಗಲೊಲ್ಲೆವು ನಿಮ್ಮಡಿಗಳ್ಗೆ ವಿನಯಂ ಗೆಯ್ಯುತ್ತಮಿರ್ದಪ್ಪೆಮೆಂದು ಪೋಗಲೊಲ್ಲದೆ ಪಕ್ಕದಿರ್ದರುೞದರೆಲ್ಲಂ ಪೋದರಿತ್ತ ಭದ್ರಬಾಹು ಭಟ್ಟರರ್ ಕೞ್ಬಪ್ಪುನಾಡಡವಿಯ ಬೆಟ್ಟದ ಮೇಗಣೀಕಸಱಯಮೇಗಿರ್ದು ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಪೂರ್ವಕಂ ಸಂನ್ಯಸನಂ ಗೆಯ್ದರ್ ಇತ್ತ ಚಂದ್ರಗುಪ್ತಮುನಿಯುಮಷ್ಟೋಪವಾಸಂಗೆಯಿರ್ದೊರಂ ಭಟ್ಟಾರರೆಂದರಾಮುಂ ನೋಂತಿರ್ಪೆವು ನೀಮುಂ ಚರಿಗೆಪುಗುವುದಲ್ಲತೆಯೆಂದೊಡೆ ಭಟ್ಟಾರಾ ಊರಿಲ್ಲ ಕೇರಿಯಿಲ್ಲೀಯಡವಿಯೊಳೆಲ್ಲಿಗೆ ಚರಿಗೆವುಗುದೆಂದೊಡೆ ಭಟ್ಟಾರರೆಂದರ್ ಕಾಂತಾರಭೈಕ್ಷಮೆಂಬುದಾಗಮದೊಳ್ ಪೇೞ್ದುದಾರಾನುಂ ಬಟ್ಟೆವೋಪರ್ ಬೀಡಂ ಬಿಟ್ಟಿರ್ದರ್

        ಅವರು ತಮ್ಮ ತಮ್ಮ ಋಷಿವೃಂದದೊಡನೆ ಸಿಂಧುದೇಶಕ್ಕೆ ಹೋದರು. ಭದ್ರಬಾಹು ಋಷಿಗಳು ಇತ್ತ ದೊಡ್ಡದಾದ ಋಷಿ ಸಂದೋಹದೊಡನೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳನ್ನು ದಾಟಿ, ಕಳ್ಬಪ್ಪು ಎಂಬ ಹೆಸರುಳ್ಳ ಶ್ರವಣಬೆಳಗೊಳಕ್ಕೆ ಬಂದರು. ತಮ್ಮ ಆಯುಷ್ಯವೆಷ್ಟಿದೆಯೆಂಬುದನ್ನು ತಿಳಿದ ಭದ್ರಬಾಹು ಋಷಿಗಳು – “ತಾವು ಇಲ್ಲಿ ಸಂನ್ಯಾಸ ಕೈಗೊಳ್ಳುತ್ತೇವೆ. ನೀವೆಲ್ಲರೂ ಹೋಗಿ” ಎಂದು ಹೇಳಿ ತಮ್ಮ ಹಿರಿಯ ಶಿಷ್ಯರೂ ದಶಪೂರ್ವಗಳನ್ನರಿತವರೂ ಆದ ವಿಶಾಖಾಚಾರ್ಯ ರೆಂಬವರನ್ನಲ್ಲದೆ, ಶ್ರೇಷ್ಠರಾದ ಸುಹಸ್ತಿಗಳು, ಅರಭದ್ರರು, ಸುಭದ್ರಮಿತ್ರರು, ಮಹಾಗಿರಿ, ಸುಮತಿ, ಮಹಾಮತಿ, ವಿಶಾಖನಂದಿ ಎಂಬ ಇವರೆಲ್ಲರನ್ನೂ ಆಚಾರ್ಯರನ್ನಾಗಿ ಮಾಡಿ, “ನೀವೆಲ್ಲ ದ್ರಾವಿಡ ದೇಶಕ್ಕೆ (ತಮಿಳು ನಾಡಿಗೆ) ಹೋಗಿ” ಎಂದು ವಿಶಾಖಾಚಾರ್ಯ ರೊಂದಿಗೆ ಎಂಟು ಸಾವಿರ ಮಂದಿ ಋಷಿಗಳನ್ನು ಕಳುಹಿಸಿದರು. ಚಂದ್ರಗುಪ್ತಮುನಿಯೊಡನೆ “ನೀವೂ ಅವರೊಡನೆ ಹೋಗಿ” ಎಂದು ಋಷಿಗಳು ಒತ್ತಾಯಮಾಡಿ ಹೋಗಲು ಹೇಳಿದಾಗ ಅವರು “ನಾನು ಹೋಗಲೊಲ್ಲೆವು. ನಿಮ್ಮ ಸೇವೆಮಾಡುತ್ತ ಇರುತ್ತೇವೆ” ಎಂದು, ಹೋಗಲು ಒಪ್ಪದೆ, ಜೊತೆಯಲ್ಲೇ ಇದ್ದರು. ಉಳಿದವರೆಲ್ಲ ಹೋದರು. ಇತ್ತ ಭದ್ರಬಾಹು ಋಷಿಗಳು ಕಳ್ಬಪ್ಪು (ಕಟವಪ್ರ = ಶ್ರವಣಬೆಳ್ಗೊಳ) ನಾಡಿನ ಕಾಡುಬೆಟ್ಟದ ಮೇಲಿನ ಒಂದು ಬಂಡೆಗಲ್ಲಿನ ಮೇಲೆ ಇದ್ದುಕೊಂಡು ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ಜೀವಿಸುವ ತನಕವೂ ಪರಿಹಾರ ಮಾಡಿ ಸಂನ್ಯಾಸವನ್ನು ಕೈಗೊಂಡರು. ಇತ್ತ ಚಂದ್ರಗುಪ್ತ ಋಷಿಗಳು – “ನಾವೂ ವ್ರತವನ್ನು ಧರಿಸಿದ್ದೇವೆ. ನೀವು ಭಿಕ್ಷಕ್ಕೆ ಹೋಗುವುದು ಒಳ್ಳೆಯದಲ್ಲವೆ ?” ಎಂದರು. ಅದಕ್ಕೆ ಉತ್ತರವಾಗಿ – “ಪೂಜ್ಯರೇ, ಇಲ್ಲಿ ಯಾರೂ ಇಲ್ಲ, ಬೀದಿಯೂ ಇಲ್ಲ. ಈ ಕಾಡಿನಲ್ಲಿ ಎಲ್ಲಿ ಭಿಕ್ಷಕ್ಕೆ ಹೋಗಲಿ ?" ಎಂದರು. ಆಗ ಋಷಿಗಳು – “ಶಾಸ್ತ್ರದಲ್ಲಿ ಕಾಂತಾರಭೈಕ್ಷ (ಕಾಡಿನಲ್ಲಿ ಭಿಕ್ಷೆ ಬೇಡುವುದು) ಎಂಬುದನ್ನು ಹೇಳಿದೆ. ಯಾರಾದರೂ ದಾರಿ ಹೋಗುವವರು ಬೀಡುಬಿಟ್ಟಿರುತ್ತಾರೆ. 

        ನಿಱಸುವರಪ್ಪುದಱಚಿದೆ ಚರಿಗೆವುಗುವ್ಯದೆಂದೊಡೆ ಅಂತೆಗೆಯ್ವೆನೆಂದು ದೇವರಂ ಬಂದಿಸಿ ಚರೆಗೆವೊಕ್ಕಡವಿಯಂ ತೊೞಲ್ವಲ್ಲಿಯೊಂದು ಮರದ ಪೊೞಲೊಳಿರ್ದು ಮಾಣಿಕದ ಮುತ್ತಿನ ಪಿಂಡುಗಂಕಣಮಂ ತೊಟ್ಟಕೈಯಿಂದಂ ಪೊನ್ನ ಸಟ್ಟುಗಮಂ ತೀವಿ ಭೈಕ್ಷಮಂ ಪಿಡಿಯೆಂದು ನೀಡಿದ ಕೈಯನಿತನೆ ಕಂಡು ತೊೞಲ್ದಲಾಭಮಾಗಿ ತಮ್ಮಾವಾಸಕ್ಕೆ ಪೋದೊಡೆ ಭಟ್ಟಾರರ್ ನಿಲೆವಟ್ಟುದೆಯೆಂದು ಬೆಸಗೊಂಡೊಡವರುಂ ತಮ್ಮ ಕಂಡುದಂ ಪೇೞ್ದೊಡೆ ಬೇಸಱದೆ ದಿವಸಕ್ಕಂ ಚರಿಗೆವೊಗುವ್ಯದೆಂದು ಭಟ್ಟಾರರ್ ಕಲ್ಪಿಸಿದೊಡಂತೆಗೆಯ್ವಮೆಂದು ಮಱುದಿವಸಂ ಚರಿಗೆವೊಕ್ಕಡವಿಯಂ ತೊೞಲ್ವಲ್ಲಿಯೊಂದು ಮರದ ಕೆೞಗೆ ಪೊನ್ನ ಮಡಕೆಯೊಳ್ ಬೋನಮನೊಡ್ಡಿ ನೆಱೆಯೆ ತೊಟ್ಟುಟ್ಟು ಮಗಂಸವಸದನಂಗೊಂಡು ದಿವ್ಯಸ್ತ್ರೀ ಬಂದು ನಿಱಸಿದೊಡೆ ಇಂತೆಂದರಬ್ಬಾ ನೀನೊರ್ವಳೆಯೆ ಪೆಱರಾರುಮಿಲ್ಲಿಂತು ರಿಸಿಯರ್ಕಳ್ಗೆ ನಿಲಲಾಗದೆಂದು ಪೇೞ್ದು ತಮ್ಮಿರ್ದೆಡೆಗೆವೋದೊಡೆ ಭಟ್ಟಾರರಿಂತೆಂದರ್ ನಿಲೆವಟ್ಟುದೆ ಎಂದು ಬೆಸಗೊಂಡೊಡವರಿಂತೆಂದರ್ ಒವಾಳ್ ದಿವ್ಯಸ್ತ್ರೀ ಸರ್ವಾಭರನ ಭೂಷಿತೆಯೊಂದು ಮರದ ಕೆೞಗೆ ಬೋನಮನೊಡ್ಡಿರ್ದಿದಿರಂ ಬಂದು ನಿಱಸಿದೊಡೊರ್ವಳೆ ಪೆಱರಾರುಮಿಲ್ಲೆಂದೆನೆ ನಿಲ್ಲದೆ ಬಂದೆಮೆಂದೊಡೊಳ್ಳಿಕೆಯ್ದಿರೆಂದೊರಿಂತುಪತ್ತುಪವಾಸಂಗೆಯ್ದು 

        ಅವರು ಊಟಕ್ಕಾಗಿ ನಿಲ್ಲಿಸುತ್ತಾರೆ – ಆದುದರಿಂದ ಭಿಕ್ಷೆಗೆ ಹೋಗಬಹುದು” ಎಂದರು ಚಂದ್ರಗುಪ್ತ ಮುನಿಗಳು ಹಾಗೆಯೆ ಮಾಡುವೆನು ಎಂದುಕೊಂಡು ದೇವರನ್ನು ವಂದಿಸಿ ಭಿಕ್ಷೆಗೆಂದು ಕಾಡನ್ನು ಸುತ್ತಾಡುವಾಗ, ಒಂದು ಮರದ ಪೊಟ್ಟರೆಯೊಳಗಿದ್ದುಕೊಂಡು ಮಾಣಿಕ ಮುತ್ತುಗಳ ಹಿಂಡುಬಳೆಯನನು ಧರಿಸಿದ ಕೈಯಿಂದ ಚಿನ್ನದ ಸೌಟಿನಲ್ಲಿ ತುಂಬಿದ ಭಿಕ್ಷೆಯನ್ನು ‘ತೆಗೆದುಕೋ” ಎಂದು ನೀಡಿದ ಕೈಯನ್ನು ಮಾತ್ರವೇ ಕಂಡು, ಸುತ್ತಾಡಿ ಏನೂ ಭಿಕ್ಷೆ ಪಡೆಯದೆ, ತಮ್ಮ ವಾಸದ ಕಡೆಗೆ ಹೋದರು. ಆಗ ಭದ್ರಬಾಹು ಋಷಿಗಳು “ನಿಲ್ಲಿಸಲ್ಪಟ್ಟಿರೆ (ಭಿಕ್ಷಕ್ಕೆ ಯಾರಾದರೂ ನಿಲ್ಲಿಸಿದರೆ)? ” ಎಂದು ಕೇಳಿದರು. ಆಗ ಅವರು ತಾವು ಕಂಡುದನ್ನು ಹೇಳಲು, ಪ್ರತಿದಿನವೂ ಬೇಸರ ಪಡೆದೆ ಭಿಕ್ಷಕ್ಕೆ ಹೋಗುವಂತೆ ಋಷಿಗಳು ಹೇಳಿದರು. “ಹಾಗೆಯೇ ಮಾಡೋಣ” ಎಂದು ಚಂದ್ರಗುಪ್ತ ಮುನಿಗಳು ಮರುದಿವಸ ಭಿಕ್ಷೆಗೆ ಹೋಗಿ ಕಾಡನ್ನೆಲ್ಲ ಸುತ್ತಾಡಿದಾಗ ಓರ್ವ ದೇವತಾ ಸ್ತ್ರೀ ಕಾಣಿಸಿದಳು. ಆಕೆ ಒಂದು ಮರದ ಕೆಳಗೆ ಚಿನ್ನದ ಪಾತ್ರೆಯಲ್ಲಿ ಭೋಜನವನ್ನು ಸಿದ್ಧಪಡಿಸಿ, ಪರಿಪೂರ್ಣವಾಗಿ ಉಡಿಗೆತೊಡಿಗೆಗಳನ್ನು ಧರಿಸಿ ಮಂಗಳಾಲಂಕಾರದಿಂದಿದ್ದಳು. ಆಕೆ ಊಟಕ್ಕೆ ನಿಲ್ಲುವಂತೆ ಹೇಳಿದಾಗ, ಚಂದ್ರಗುಪ್ತ ಮುನಿಗಳು – “ಅಮ್ಮಾ ನೀನು ಒಬ್ಬಳೇ ಇರುವೆಯಾ? ಬೇರೆ ಯಾರೂ ಇಲ್ಲವೆ ? ಹೀಗಿದ್ದರೆ (ನಮ್ಮಂತಹ) ಋಷಿಗಳಿಗೆ ನಿಲ್ಲಲು ಸಾಧ್ಯವಿಲ್ಲ” ಎಂದು ಹೇಳಿ ತಾವು ಇದ್ದಲ್ಲಿಗೆ ತೆರಳಿದರು. ಭದ್ರಬಾಹು ಋಷಿಗಳು –  "ಭಿಕ್ಷಕ್ಕೆ ಯಾರಾದರೂ ನಿಲ್ಲಿಸಿದರೆ ? ” ಎಂದು ಕೇಳಿದರು. ಆಗ ಅವರು ಹೀಗೆಂದರು – “ಒಬ್ಬಳು ದೇವತಾಸ್ತ್ರೀ ಎಲ್ಲಾ ಆಭರಣಗಳಿಂದಲೂ ಅಲಂಕರಿಸಿಕೊಂಡು ಒಂದು ಮರದ ಕೆಳಗೆ ಊಟವನ್ನು ಸಿದ್ಧಮಾಡಿದವಳಾಗಿ ನನ್ನ ಎದುರಿಗೆ ಬಂದು ಊಟಕ್ಕೆ ನಿಲ್ಲುವಂತೆ ಹೇಳಿದಳು. ಆಕೆ ಒಬ್ಬಳೇ ಇದ್ದುದು, ಬೇರೆ ಯಾರೂ ಇಲ್ಲವೆಂದು ಆಕೆ ಹೇಳಿದ್ದರಿಂದ ನಾನು ನಿಲ್ಲಲಿಲ್ಲ, ಬಂದು ಬಿಟ್ಟೆನು” ಎಂದು ಹೇಳಿದರು. ನೀವು ಒಳ್ಳೆಯದು ಮಾಡಿದಿರಿ – ಎಂದು ಋಷಿಗಳು ಹೇಳಿದರು. ಹೀಗೆ ಹತ್ತು ದಿನಗಳ ಉಪವಾಸವನ್ನು ಮಾಡಿ 

        ಪನ್ನೊಂದನೆಯ ದಿವಸದಂದು ಚರಿಗೆಪೊಕ್ಕಡವಿಯಂ ತೊೞಲ್ವನ್ನೆಗಂ ಪಿರಿದೊಂದು ಪೊೞಲುಂ ಧವಳಾರಂಗಳುಂ ನೆಲೆಯ ಮಾಡಂಗಳುಂ ಸೂಳೆಗೇರಿಗಳುಂ ದೇವಾಲಯಂಗಳುಮಾನೆ ಕುದುರೆಗಳುಂ ಮಾನಸರ ಬರವುಮಂ ಪೋಗುಮಂ ಕಂಡಿನಿತು ದಿವಸಮೀ ಮರಗಳ ಗಿಡುಗಳ ಪೊದಱುಗಳ ಮಱೆಗಳೊಳೀ ಪೊೞಲಂ ಕಂಡೆಮಿಲ್ಲೆಂದು ಮನದೊಳ್ ಬಗೆದು ಪೊೞಲೊಳಗೆ ಚರಿಗೆಪೊಕ್ಕಾಗಳೊರ್ವಳ್ ದಿವ್ಯ ಸ್ತ್ರೀ ಪರಿವಾರಸಹಿತಮಿದಿರಂ ಬಂದು ನಿಱಸಿ ತನ್ನ ಮಾಡಕ್ಕೊಡಗೊಂಡು ಪೋಗಿಕಾಲಂ ಕರ್ಚಿಯರ್ಚಿಸಿ ಗುರುಭಕ್ತಿಗೆಯ್ದು ವಂದಿಸಿಯಾದಮಾನುಂ ಭಕ್ತಿಯಿಂದಂ ದಿವ್ಯಾಹಾರಮಂ ಮಗುೞೆ ಮಗುೞೆ ಬಡ್ಡಿಸೆ ಚರಿಗೆಮಾಡಿ ಪರಸಿ ತಮ್ಮಾವಾಸಕ್ಕೆ ಪೋದೊಡೆ ಭಟ್ಟಾರರ್ ನಿಲೆಮಟ್ಟುದೆ ಯೆಂದು ಬೆಸಗೊಂಡೊಡೆ ನಿಲೆವಟ್ಟುದೆಂದೊಡೆಲ್ಲಿ ನಿಂದಿರೆಂದು ಬೆಸಗೊಂಡೊಡಿಂತೆಂದರ್ ಭಟ್ಟಾರಾ ಇನಿತು ದಿವಸಂ ಮರಂಗಳ ಪೊದಱುಗಳ ಮಱೆಗಳೊಳೀ ಪೊೞಲಂ ಕಂಡೆಮಿಲ್ಲಿಂದಿನಿಸಾನುಂ ತಿಣ್ಣಂ ತೊೞಲ್ವಲ್ಲಿ ಪಿರಿದೊಂದು ಪೊೞಲಂಕಂಡು ಚರಿಗೆಪೊಕ್ಕೊಡೊರ್ವಳ್ ದಿವ್ಯಸ್ತ್ರೀ ಪರಿವಾರಸಹಿತಮಿದಿರಂ ಬಂದು ನಿಱಸಿ ತನ್ನ ಮನಗೆಗೊಂಡುಪೋಗಿ ಕಾಲಂ ಕರ್ಚಿಯರ್ಚಿಸಿ ಗುರುಭಕ್ತಿಗೆಯ್ದು ವಂದಿಸಿಯಾದಮಾನುಂ ಭಕ್ತಿಯಿಂದಂ ದಿವ್ಯಾಹಾರಂಗಳಂ ಬಡ್ಡಿಸೆ ಶ್ರಮಂ ಪೋಗಿ ಚರಿಗೆಮಾಡಿ ಪರಿಸ ಬಂದೆಮೆಂದು ಭಟ್ಟಾರರ್ಗೆ ಪೇೞ್ದೊಡೊಳ್ಳಿತ್ತಾಯಿತ್ತೆಂದು ಸಂತೋಸಂ ಬಟ್ಟಿರ್ದರಿಂತು ದಿವಸಕ್ಕಂ ಪೊೞಲ್ಗೆ ವೋಗಿ ಚರಿಗೆ ಮಾಡುವರಿತ್ತ ಭದ್ರಬಾಹು ಭಟ್ಟಾರರ್ ಮುನ್ನೆ ತಮ್ಮ ತಪಂಗೆಯ್ವಂದೆಲ್ಲಾ ಕಾಲಮುಮವಮೋದರ್ಯ ಚರಿಗೆಮಾಡಿ ಪಸಿವಂ ಸೈರಿಸಿ ತಮ್ಮ ಮೆಯ್ಯಂ ಕ್ಷಯಕ್ಕೆ ತಂದು ಸಂನ್ಯಸನಂಗೆಯ್ದು ಪಲವು ದಿವಸದಿಂದಂ ಪಸಿವುಂ ನೀರೞ್ಕೆಯುಮಂ ಸೈರಿಸಿ ಶುಭಪರಿಣಾಮದಿಂದಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಮುಡಿಪಿ ಬ್ರಹ್ಮಕಲ್ಪದೊಳ್

            ಹನ್ನ್ನೊಂದನೆಯ ದಿವಸದಂದು ಭಿಕ್ಷೆಗೆ ಹೋಗಿ ಕಾಡನ್ನೆಲ್ಲ ಸುತ್ತಾಡುತ್ತಿರಲು, ಒಂದು ದೊಡ್ಡ ಪಟ್ಟಣ ಕಾಣಿಸಿತು. ಅಲ್ಲಿ ಸುಣ್ಣ ಬಳಿದು ಬಿಳುಪೇರಿದ ಮನೆಗಳೂ ಉಪ್ಪರಿಗೆ ಮನೆಗಳೂ ವೇಶ್ಯಾವಾಟಿಗಳೂ ದೇವಾಲಯಗಳೂ ಆನೆಕುದುರೆಗಳೂ ಮನುಷ್ಯರ ಬರುವಿಕೆ ಹೋಗುವಿಕೆಗಳೂ ಕಾಣಿಸಿದುವು. ಇವನ್ನೆಲ್ಲ ಕಂಡು, “ಇಷ್ಟು ದಿವಸವೂ ಈ ಮರಗಿಡ ಪೊದರುಗಳ ಮರೆಯಲ್ಲಿದ್ದ ಆ ಪಟ್ಟಣವನ್ನು ನಾವು ಕಂಡೇ ಇಲ್ಲ” ಎಂದು ಮನಸ್ಸಿನಲ್ಲಿ ಭಾವಿಸಿ, ಆ ಪಟ್ಟಣದಲ್ಲಿ ಭಿಕ್ಷೆ ಪಡೆಯಲು ಹೋದರು. ಆಗ ಒಬ್ಬಳು ದೇವತಾ ಸ್ತ್ರೀ ತನ್ನ ಪರಿವಾರದೊಡನೆ ಎದುರಿಗೆ ಬಂದು ಅವರನ್ನು ಊಟಕ್ಕೆ ನಿಲ್ಲಿಸಿ, ತನ್ನ ಮನೆಗೆ ಕರೆದುಕೊಂಡು ಹೋಗಿ ಕಾಲನ್ನು ತೊಳೆದು ಪೂಜಿಸಿ ಗುರುಭಕ್ತಿಯನ್ನು ಮಾಡಿದಳು. ನಮಸ್ಕರಿಸಿ ಅತಿಶಯಾವಾದ ಭಕ್ತಿಯಿಂದ ದಿವ್ಯವಾದ ಆಹಾರವನ್ನು ಮತ್ತೂ ಮತ್ತೂ ಬಡಿಸಿದಳು. ಚಂದ್ರಗುಪ್ತ ಮುನಿಗಳು ಊಟ ಮಾಡಿ ತಮ್ಮ ವಾಸಸ್ಥಳಕ್ಕೆ ತೆರಳಿದಾಗ ಭದ್ರಬಾಹು ಋಷಿಗಳು – “ಯಾರಾದರೂ ಊಟಕ್ಕೆ ನಿಲ್ಲಿಸಿದರೆ ? ” ಎಂದು ಕೇಳಲು “ನಿಲ್ಲಿಸಿದರು” ಎಂದು ಉತ್ತರ ಕೊಟ್ಟಾಗ, “ಎಲ್ಲಿ ಊಟಕ್ಕೆ ನಿಂತಿರಿ ? ” ಎಂದು ಕೇಳಿದರು. ಆಗ ಚಂದ್ರಗುಪ್ತ ಮುನಿಗಳು – “ಪೂಜ್ಯರೇ, ಇಷ್ಟು ದಿವಸವೂ ಮರಗಳ ಮತ್ತು ಪೊದರುಗಳ ಮನೆಯಲ್ಲಿದ್ದ ಈ ಪಟ್ಟಣವನ್ನು ನಾನು ಕಂಡಿಲ್ಲ. ಆದರೆ ಇಂದು ಸ್ವಲ್ಪ ಹೆಚ್ಚಾಗಿ ಸುತ್ತಾಡಿದಾಗ ದೊಡ್ಡದೊಂದು ಪಟ್ಟಣವನ್ನು ಕಂಡುಭಿಕ್ಷೆಗಾಗಿ ಹೋದೆನು. ಆಗ ಓರ್ವ ದೇವತಾಸ್ತ್ರೀ ತನ್ನ ಎದುರಿಗೆ ಪರಿವಾರದೊಡನೆ ಬಂದು ಊಟಕ್ಕೆ ನಿಲ್ಲಲು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ನನ್ನ ಕಾಲು ತೊಳೆದು, ಸತ್ಕರಿಸಿ ಗುರುಭಕ್ತಿಯಿಂದ ನಮಸ್ಕರಿಸಿ ಅತಿಶಯವಾದ ಭಕ್ತಿಯಿಂದ ದಿವ್ಯವಾದ ಭೋಜನವನ್ನು ಬಡಿಸಿದಳು. ನಾನು ನನ್ನ ಶ್ರಮವೆಲ್ಲ ಹೋಗುವ ಹಾಗೆ ಊಟಮಾಡಿ ಆಶೀರ್ವದಿಸಿ ಬಂದೆನು ” ಎಂದು ಹೇಳಿದರು. ಭದ್ರಬಾಹುಗಳು ‘ಒಳ್ಳೆಯದಾಯಿತು’ ಎಂದು ಹೇಳಿ ಸಂತೋಷಗೊಂಡು ಇದ್ದರು. ಹೀಗೆ ಪ್ರತಿದಿಸವೂ ಪಟ್ಟಣಕ್ಕೆ ಹೋಗಿ ಊಟಮಾಡುತ್ತಿದ್ದರು. ಇತ್ತ ಭದ್ರಬಾಹು ಋಷಿಗಳು ಹಿಂದೆ ತಾವು ತಪಸ್ಸು ಮಾಡುತ್ತಿದ್ದ ಎಲ್ಲಾ ಕಾಲದಲ್ಲಿಯೂ ಅವಮೋದರ್ಯ (ಹೊಟ್ಟೆ ತುಂಬುವುದಕ್ಕೆ ಬೇಕಾಗುವ ಮೂವತ್ತೆರಡು ತುತ್ತುಗಳಲ್ಲಿ ದಿನಕ್ಕೆ ಒಂದೊಂದೇ ತುತ್ತು ಕಡಮೆ ಮಾಡಿ ಊಟಮಾಡುವುದು) ಎಂಬ ವಿಧಾನದ ಊಟವನ್ನು ಮಾಡಿ ಹಸಿವನ್ನು ಸಹಿಸಿ, ದೇಹವನ್ನು ಕ್ಷೀಣಗೊಳಿಸು ಸಂನ್ಯಾಸ ಕೈಗೊಂಡು, ಹಲವು ದಿವಸಗಳಿಂದ ಹಸಿವು ಬಾಯಾರಿಕೆಗಳನ್ನು ಸಹಿಸಿದರು. ಮಂಗಳಕರ ಪರಿಣಾಮದಿಂದ ರತ್ನತರಯವನ್ನು ಸಾಸಿ ಸತ್ತು ಬ್ರಹ್ಮಕಲ್ಪದಲ್ಲಿ 

            ಪತ್ತು ಸಾಗರೋಪಮಾಯುಷ್ಯಮನೊಡೆಯೊಂ ಅಮಿತಕಾಂತಿಯೆಂಬೊಂ ದೇವನಾಗಿ ಪುಟ್ಟಿದೊಂ ಚಂದ್ರಗುಪ್ತ ಮುನಿಯುಂ ಭಟ್ಟಾರರ ನಿಸಿದಿಗೆಯಂ ಬಂದಿಸುತ್ತಮಾ ದೇವತೆ ಬೆಸಕೆಂಯ್ಕೆ ಚರಿಗೆಮಾಡಿ ತಪಂಗೆಯ್ಯುತ್ತುಂ ಪನ್ನೆರಡು ವರಷಂಬರೆಗಮಿಂತಿರ್ಪನ್ನೆಗಮಿತ್ತ ತಿಮುೞನಾೞ್ಗೆಪೋದ ಋಷಿಸಮುದಾಯಮೆಲ್ಲಂ ಪನ್ನೆರಡು ವರುಷಂಬರೆಗಂ ಸುಖದೊಳಿರ್ದು ನಿರುಪಸರ್ಗದಿಂ ದರ್ಶನಜ್ಙಾನಚಾರಿತ್ರಂಗಳಿಂ ಪ್ರತಿಪಾಳಿಸಿ ಬಡಗನಾಡ ಪಸವು ತಿಳೀದುದೆಂಬುದನಾ ನಾಡಿಂದಂ ಬಂದರ್ ಪೇೞೆ ಕೇಳ್ದಱದು ಭಟ್ಟಾರರ ನಿಸಿದಿಗೆಯಂ ಬಂದಿಸಿ ಪೋಪಮೆಂದು ವಿಶಾಖಾಚಾರ್ಯರ್ ಮೊದಲಾಗೊಡೆಯ ಋಷಿಸಮುದಾಯಮೆಲ್ಲಂ ದಕ್ಷಿಣಾಪಘದಿಂದಂ ಬಂದು ಭಟ್ಟಾರರ ನಿಸಿದಿಗೆಯನೆಮ್ದಿದಾಗಳ್ ಚಂದ್ರಗುಪ್ತಮುನಿಯುಂ ರಿಸಿಯರ್ಕಳಿಂತೆಂದು ಬಗೆದರೀಯಡವಿಯೊಳಿನ್ನೆಗಮಿವರ್ ಕಂದಮೂಲಫಲಂಗಳಂ ತಿಂದು ತೊಱೆಯ ಪಳ್ಳದ ನೀರ್ಗಳಂ ಕುಡಿದು ಪನ್ನೆರಡು ವರುಷಂಬರೆಗಮೆಂತು ಬರ್ದೊರೆಂದು ತಮ್ಮೊಳ್ ನುಡಿದು ಮತ್ತಂ ತಲೆನವಿರ್ ಬೆಳೆದುದುಮಂ ಕಂಡಾರಪ್ಪೊಡಂ ಪ್ರತಿವಂದನೆಯಂ ಕೊಟ್ಟುದಿಲ್ಲ ಮತ್ತಾ ರಿಸಿಯರ್ಕಳವಿಬರುಮಾ ದಿವಸಮುಪವಾಸಂ ಗೆಯ್ದರ್ಚಿಸಿ ಕ್ರಿಯೆಗೆಯ್ದು ಭಟ್ಟಾರರ ನಿಸಿದಿಗೆಯಮ ಬಂದಿಸಿಯಾ ದಿವಸಮಲ್ಲಿಯೆ ಕೆಂದು ಮಱುದಿವಸಂ ಪೋಪಾಗಳ್ ಚಂದ್ರಗುಪ್ತಮುನಿಗಳೆಂದರ್ 

        ಹತ್ತು ಸಾಗರಕ್ಕೆ ಸಮಾನವಾದ ಆಯುಷ್ಯವುಳ್ಳ ಅಮಿತಕಾಂತಿ ಎಂಬ ದೇವನಾಗಿ ಹುಟ್ಟಿದನು. ಚಂದ್ರಗುಪ್ತಮುನಿ ಭದ್ರಬಾಹು ಋಷಿಗಳ ಸಮಾಯನ್ನು ನಮಸ್ಕರಿಸಿ, ಅಲ್ಲಿಯ ದೇವತೆಯ ಅಪ್ಪಣೆಯಂತೆ ಭಿಕ್ಷೆ ಮಾಡಿಕೊಂಡು ತಪಸ್ಸನ್ನು ಎಸಗಿ ಹನ್ನೆರಡು ವರ್ಷಗಳವರೆಗೆ ಹೀಗೆಯೇ ಇದ್ದರು. ಇತ್ತ ತಮಿಳುನಾಡಿಗೆ ಹೋದ ಋಷಿಸಮೂಹದವರೆಲ್ಲ ಹನ್ನೆರಡು ವರ್ಷಗಳವರೆಗೆ ಸುಖವಾಗಿದ್ದು ಉಪಸರ್ಗಗಳಿದಲ್ಲದೆ ಸಮ್ಯಗ್ದರ್ಶನ ಸವ್ಮ್ಯಗ್ ಜ್ಞಾನ ಸಮ್ಯಕ್ ಚಾರಿತ್ರ ಎಂಬ ರತ್ನತ್ರಯವನ್ನು ನಡೆಸಿಕೊಂಡು ಬಂದರು. ಉತ್ತರಾಪಥದಲ್ಲಿ ಬಂದಿದ್ದ ಕ್ಷಾಮವು ತೀರಿತೆಂದು ಆ ನಾಡಿನಿಂದ ಬಂದವರು ಹೇಳಿದುದನ್ನು ಕೇಳಿ ತಿಳಿದುಕೊಂಡು ಅವರು ಭದ್ರಬಾಹು ಭಟ್ಟಾರರ ಸಮಾಗೆ ವಂದನೆಯನ್ನು ಸಲ್ಲಿಸಿ ಹೋಗೋಣವೆಂದುಕೊಂಡು ವಿಶಾಖಾಚಾರ್ಯರೇ ಮೊದಲಾಗಿ ಉಳ್ಳ ಋಷಿಸಮೂಹದವರೆಲ್ಲ ದಕ್ಷಿಣ ದೇಶದಿಂದ ಬಂದು ಭಟ್ಟಾರರ ಸಮಾಯಿದ್ದಲ್ಲಿಗೆ ಬಂದರು. ಆಗ ಚಂದ್ರಗುಪ್ತ ಮುನಿಗಳು ಆ ಋಷಿಗಳ ಬರವನ್ನು ಎದುರುಗೊಂಡು ಋಷಿವೃಂದಗಳೀಗೆಲ್ಲ ವಂದನೆ ಮಾಡಿದರು. ಆಗ ಆ ಋಷಿಗಳು ತಮ್ಮೊಳಗೆ ಹೀಗೆ ಭಾವಿಸಿದರು – “ಇವರು ಈ ಕಾಡಿನಲ್ಲಿ ಇದುವರೆಗೂ ಗಡ್ಡೆ ಬೇರು ಹಣ್ಣುಗಳನ್ನು ತಿಂದು ಹೊಳೆಯ ಮತ್ತು ಹಳ್ಳದ ನೀರುಗಳನ್ನು ಕುಡಿದು ಹನ್ನೆರಡು ವರ್ಷಗಳವರೆಗೆ ಹೇಗೆ ಬಾಳಿದರು ? ” ಹೀಗೆ ತಮ್ಮಲ್ಲೇ ಹೇಳಿಕೊಂಡು, “ತಲೆಯ ಕೂದಲು ಬೆಳೆದುದನ್ನು ನೋಡಿ ಯಾರೊಬ್ಬರಾದರೂ ಇವರಿಗೆ ನಮಸ್ಕಾರಕ್ಕೆ ಪ್ರತಿಯಾಗಿ ನಮಸ್ಕಾರವನ್ನು ಮಾಡಿಲ್ಲ” ಎಂದುಕೊಂಡರು. ಆಮೇಲೆ ಆ ಋಷಿಗಳೆಲ್ಲರೂ ಆ ದಿವಸ ಉಪವಾಸ ಮಾಡಿದರು. ಪ್ರಜೆ ಕ್ರಿಯೆಗಳನ್ನಲ್ಲ ಮಾಡಿ ಭದ್ರಬಾಹುಭಟ್ಟಾರರ ಸಮಾಗೆ ವಂದನೆ ಸಲ್ಲಿಸಿದರು. ಆ ದಿನ ಅಲ್ಲಿಯೇ ಮಲಗಿ ಮರುದಿವಸ ಹೋಗುವ ಸಂದರ್ಭದಲ್ಲಿ ಚಂದ್ರಗುಪ್ತ ಮುನಿಗಳು ಅವರೊಡನೆ (ವಿಶಾಧಾಚಾರ್ಯರೊಡನೆ) ಹೀಗೆಂದರು 

            ಭಟಾರಾ ನಿನ್ನೆ ಬಟ್ಟೆವಂದುಪವಾಸಂಗೆಯ್ದು ಸೇದೆವಟ್ಟಿರಿಂದಿನ      ದಿವಸಮಿಲ್ಲಿರ್ದು ಚರಿಗೆಪೊಕ್ಕು ಸೇದೆಯನಾಱಸಿ ನಾಳೆ ಪೋಗಿಮೆಂದೊಡೆ ಭಟ್ಟಾರರೆಂದರೂರಿಲ್ಲ ಕೇರಿಯಿಲ್ಲೆಲ್ಲಿ ಚರಿಗೆವುಗುವಮಂತು ಕೆಮ್ಮನೇಕೆಮ್ಮಂ ತಾಂಗಿದಪಿರೆಂದೊಡೆ ಪಿರಿದೊಂದು ಪೊೞಲುಂಟು ನೀಮುಂ ಸಂಕ್ಲೇಶಂಬಡದಿರಿಂದಿನ ದಿವಸಮಿರ್ಕೆಂಡನಿಬರುಮೆಂದರಿಂದಿನ ದಿವಸಮುಪವಾಸಂ ಗೆಯ್ದಪ್ಪೊಡಮಿವರೆಂಬುದನಿಂಬುಕೆಯ್ವಮೆಂದಿರ್ದೊಡೆ ಮಧ್ಯಹ್ನಮಪ್ಪಾಗಳ್ ದೇವರಂ ಬಂದಿಸವೇೞ್ಕೊಡನಿಬರುಂಬಂದಿಸಿ ಚಂದ್ರಗುಪ್ತಮುನಿಯ ಬೞಯಂ ಋಷಿಸಮುದಾಯಮೆಲ್ಲಂ ತಗುಳ್ದು ಕಿಱದಂತರಮಂ ಪೋಪನ್ನೆಗಂ ಪಿರಿದೊಂದು ಪೊೞಲಂ ಕಮಡುಚರಿಗೆಪೊಕ್ಕನಿಬರುಮಂ ನಿಱೆಸಿ ಕೆಲ ರಿಸಿಯರುಮಾಚಾರ್ಯರ್ಕಳುಂ ಬೆಸಸುತಾಮೊಂದು ಮನೆಚಿiಳ್ ನಿಂದರಿಂತನಿಬರುಂ ದಿವ್ಯಾಹಾರಂಗಳಂ ಶ್ರಮಂ ವೋಗೆ ಚರಿಗೆ ಮಾಡಿ ತಮ್ಮಾವಾಸಕ್ಕೆ ಬಂದು ವಿಶಾಖಾಚಾರ್ಯರೆಂದರ್ ಬ್ರಹ್ಮಯ್ಯಾ ಕಾಲಂ ಕರ್ಚಲ್ ಗುಂಡಿಗೆಯಂ ಕೊಂಡು ಬನ್ನಿಮೆಂದೊಡೆ ಬ್ರಹ್ಮಯ್ಯನೆಂದಂ ಗುಂಡಿಗೆಯನುಂಡ ಮನೆಯೊಳ್ ಮಱೆದು ಬಂದೆನೆನೆ ಬೇಗಂ ಪೋಗಿ ಕೊಂಡು ಬಾಯೆನೆ ಬ್ರಹ್ಮಯಂ ಪೋಗಿ ಪೊೞಲೆಡೆಯಂ ಕಾಣದಡವಿಯೆಲ್ಲಮಂ ತೊೞಲ್ದು ನೋಡಿ ಗುಂಡಿಗೆಯಂ ಕಾಣದತ್ತಮಿತ್ತಂ ನೊೞ್ವನ್ನೆಗಮೊಂದು ಮರದ ತುತ್ತತುದಿಯೊಳಿರ್ದೆೞಲ್ವ ಗುಂಡಿಗೆಯಂ ಕಂಡು ಬಂದು ಗುರುಗಳ್ಗಿಂತೆಂದಂ ಭಟ್ಟಾರಾ ನಾವುಂಡೆಡೆಯೊಳಾ ಪೋೞಲಿಲ್ಲ ನಮ್ಮುಂಡ ಮನೆಯುಮಿಲ್ಲ ಗುಂಡಿಗೆಯುಮೊಂದು ನಿಡಿಯ ಮರದ ತುತ್ತತುದಿಯೊಳಿರ್ದುದಾರಾನುಮೇಱಲ್ ಬಲ್ಲೊರನಟ್ಟುಗೆಂದೊಡನಿಬರುಂ ರಿಸಿಯರ್ಕಳೆಲ್ಲಂ ಚೋದ್ಯಂಬಟ್ಟು 

        – “ಪೂಜ್ಯರೇ, ನಿನ್ನೆ ನೀವೆಲ್ಲ ದಾರಿ ನಡೆದು ಬಂದು ಉಪವಾಸ ಮಾಡಿ ಆಯಾಸಪಟ್ಟಿದ್ದೀರಿ. ಈ ದಿವಸ ಇಲ್ಲೇ ಇದ್ದು ಊಟಮಾಡಿ ಬಳಲಿಕೆಯನ್ನು ನಿವಾರಿಸಿ ನಾಳೆ ಹೋಗಬಹುದು “. ಹೀಗೆ ಹೇಳಿದಾಗ ಅವರು – “ಇಲ್ಲಿ ಊರೂ ಇಲ್ಲ ಕೇರಿಯೂ ಇಲ್ಲ ಎಲ್ಲಿ ಭಿಕ್ಷೆಗೆ ಹೋಗೋಣ ? ಅಂತೂ ವ್ಯರ್ಥವಾಗಿ ನೀವು ನಮ್ಮನ್ನೇಕೆ ತಡೆಯುತ್ತೀರಿ? ” ಎಂದು ಕೇಳಿದರು. ಅದಕ್ಕೆ ಚಂದ್ರಮುನಿಗಳು – “ದೊಡ್ಡದಾದ ಒಂದು ಪಟ್ಟಣವಿದೆ. ನೀವೇನೂ ಕಷ್ಟಪಡಬೇಕಾಗಿಲ್ಲ. ಈ ದಿವಸ ಇದ್ದು ಬಿಡಿ” ಎಂದರು. ಆಗ ಅವರೆಲ್ಲರೂ ಹೀಗೆಂದರು – ಈ ದಿವಸ ಉಪವಾಸವನ್ನು ಮಾಡಿಯಾದರೂ ಇವರು ಹೇಳಿದ್ದನ್ನು ನೆರವೇರಿಸೋಣ”. ಹೀಗೆಂದು ಅವರೆಲ್ಲ ನಿಂತಿರಲು ಮಧ್ಯಾಹ್ನವಾದಾಗ, ದೇವರನ್ನು ನಮಸ್ಕರಿಸಲು ಹೇಳಿದಾಗ, ಅವರೆಲ್ಲರೂ ವಂದಿಸಿ, ಆ ಋಷಿಗಳ ತಂಡದವರೆಲ್ಲ ಚಂದ್ರಗುಪ್ತಮುನಿಯ ಜೊತೆಯಲ್ಲಿ ಸೇರಿಕೊಂಡು ಸ್ವಲ್ಪದೂರ ಹೋದರು. ಆಗ ದೊಡ್ಡದೊಂದು ಪಟ್ಟಣ ಕಾಣಿಸಿತು. ಭಿಕ್ಷೆಗೆ ಹೋದ ಅವರೆಲ್ಲರನ್ನೂ ನಿಲ್ಲಿಸಿ ಕೆಲವು ಮಂದಿ ಋಷಿಗಳು ಮತ್ತು ಆಚಾರ್ಯರೂ ಕೂಡಿ ತಾವು ಒಂದು ಮನೆಯಲ್ಲಿ ನಿಂತರು. ಹೀಗೆ ಅವರೆಲ್ಲರೂ ತಮ್ಮ ದಣಿವು ಆರಿ ತೃಪ್ತಿಯಾಗುವವರೆಗೂ ದಿವ್ಯಾಹಾರಗಳನ್ನು ಉಂಡರು. ತಮ್ಮ ವಾಸಸ್ಥಳಕ್ಕೆ ಬಂದನಂತರ, ವಿಶಾಖಾಚಾರ್ಯರು ತಮ್ಮ ಶಿಷ್ಯನನ್ನು ಕರೆದು – “ಮಾಣಿಯೇ, ಕಾಲು ತೊಳೆಯಲು ಕಮಂಡಲು(ಜಲಪಾತ್ರೆ)ತೆಗೆದುಕೊಂಡು ಬಾ” ಎಂದುರು. ಆಗ ಆ ವಟುವು – “ಕಮಂಡಲುವನ್ನು ನಾನು ಊಟಮಾಡಿದ ಮನೆಯಲ್ಲಿ ಮರೆತು ಬಂದಿದ್ದೇನೆ” ಎಂದನು. “ಬೇಗನೆ ಹೋಗಿ ಅದನ್ನು ತೆಗೆದುಕೊಂಡು ಬಾ” ಎನ್ನಲು ಆ ಬ್ರಹ್ಮಚಾರಿ ಹೋಗಿ ಪಟ್ಟಣವಿರುವ ಸ್ಥಳವನ್ನೇ ಕಾಣದೆ, ಕಾಡನ್ನೆಲ್ಲ ಸುತ್ತಾಡಿ ನೋಡಿದನು. ಕಮಂಡಲವನ್ನು ಕಾಣದೆ ಅತ್ತಿತ್ತ ನೋಡುತ್ತಿದ್ದನು. ಆಗ ಒಂದು ಮರದ ತುತ್ತತುದಿಯಲ್ಲಿದ್ದುಕೊಂಡು ನೇತಾಡುತ್ತಿರುವ ಕಮಂಡಲವನ್ನು ಕಂಡು ಬಂದು ತನ್ನಗುರುಗಳಿಗೆ ಹೀಗೆಂದನು – “ಪೂಜ್ಯರೇ, ನಾವು ಊಟಮಾಡಿದ ಸ್ಥಳದಲ್ಲಿ ಆ ಪಟ್ಟಣವಿಲ್ಲ. ನಾವು ಊಟ ಮಾಡಿದ ಮನೆಯೂ ಇಲ್ಲ ಕಮಂಡಲು ಮಾತ್ರ ಒಂದು ಉದ್ದವಾದ ಮರದ ತುತ್ತತುದಿಯಲ್ಲಿದೆ. ಮರವನ್ನು ಹತ್ತಬಲ್ಲ ಯಾರನ್ನಾದರೂ ಕಳುಹಿಸಬೇಕು” ಆಗ ಆ ಋಷಿಗಳೆಲ್ಲರೂ ಆಶ್ಚರ್ಯಪಟ್ಟು 

    ನೋಡಲ್ಪೋಗಿ ಪೊೞಲಂ ಕಾನದಡವಿಯೊಳ್ ನಿಡಿಯ ಮರದ ತುತ್ತತುದಿಯೊಳಿರ್ದೆೞಲ್ವ ಗುಂಡಿಗೆಯಂ ಕಂಡು ತೆಗೆಯಿಸಿಕೊಂಡು ಪೋಗಿ ಚಂದ್ರಗುಪ್ತಮುನಿಯನನಿಬುರಂ ರಿಸಿಯರ್ಕಳ್ ನೆರದಿಂತೆಂದರಾಮುಂ ನಿಮ್ಮನೀಯಡವಿಯೊಳ್ ಕಂದಮೂಲಫಲಂಗಳಂ ತಿಂದು ಪಳ್ಳದ ನೀರಂ ಕುಡಿದು ಇನಿತು ಕಾಲಂ ಬರ್ದಿರೆಂದು ನಿಮ್ಮಂ ಬಗೆದು ಬಂದಿಸಿದೆಮಿಲ್ಲಿದರ್ಕೆ ನೀಮುಂ ಮನದೊಳೇವಂಗೊಳ್ಳದೆ ಕ್ಷಮಿಯಿಸಿಮೆಂದು ನುಡಿದು ವಂದಿಸಿ ಮತ್ತಮಿಂತೆಂದರ್ ನೀಮುಂ ಸೇವಾಷ್ಠತರಿರ್ ನಿಮಗೆ ದೇವತೆಗಳ್ ಬೆಸಕೆಯ್ವುವು ದೇವತೆಗಳ್ ಮಾಡಿದಾಹಾರಮಂ ನೀಮಿನ್ನೆಗಮುಂಡು ತಪಂಗೆಯ್ದಿರಿನ್ನುಣಲ್ವೇಡ ದೇವತೆಗಳ ಮಾಡಿದಾಹಾರಮಂ ರಿಸಿಯರ್ಗೆ ಚರಿಗೆ ಮಾಡಲಾಗದೆಂದು ಬಾರಿಸಿಯವರ್ಗೆ ಲೊಚಂಗೆಯ್ದು ಬ್ರತಂಗಳನೇಱಸಿ ಪಡಿಕವ್ಮಣಂಬೇೞ್ದೊಡಗೊಂಡುತ್ತರಾಪಥಕ್ಕೆ ಪಯಣಂಬೋಗಿ ಕತಿಪಯದಿವಸಂಗಳಿಂದಂ ಮಧ್ಯದೇಶಮನೆಯ್ದಿಯಾ ನಾಡೊಳ್ ಋಷಿಸಮುದಾಯಮೆಲ್ಲಂ ನಿರುಪಸರ್ಗಮಿರ್ದ್ದತ್ತು ಮತ್ತಿತ್ತ ರಾಮಿಲಾಚಾರ್ಯರಂ ಸ್ಥೂಲಾಚಾರ್ಯರುಂ ಸ್ಥೂಲಭದ್ರಾಚಾರ್ಯರುಮಂತು ಮೂವರುಂ ಸಿಂದುವಿಷಯಕ್ಕೆ ತಂತಮ್ಮ ಋಷಿಸಮುದಾಯಂ ಬೆರಸು ಪೋದೊಡಾ ನಾಡೊಳ್ ಮಾನಸರ್ ತಿಂಬಂತುಟಪ್ಪ ಮಹಾಘೋರಂ ಪಸವಾದೊಡಲ್ಲಿಯ ಶ್ರಾವಕರೆಲ್ಲಂ ನೆರೆದು ರಿಸಿಯರಲ್ಲಿಗೆ ವೋಗಿ ಇಂತೆಂದರ್ ಭಟಾರಾ ಲವಟುಗಳ ಕೈಯಲ್ ಪಗಲುಣಲುಮಡಲುಂ ಪೆಱಲಾಗ ಮೇಲ್ವಾಯ್ಗೆೞೆದು ಕೊಂಡುಂಬರ್ ಲೋಗರೆಲ್ಲಮವರ ಭಯಕ್ಕೆ ಪಗಲಡುಗೆಮಂ ಬಸುಟ್ಟಿರುಳಟ್ಟುಣಲ್ ತಗುಳ್ದರದಱಂ ನೀಮುಮಿಂದಿತ್ತಿರುಳ್ ಭೈಕ್ಷಭಾಜನಂಗಳಂ ಕೊಂಡುಪೋಗಿ ಶ್ರಾವಕರ ಮನೆಗಳಂ ತೊೞಲ್ದು ಭೈಕ್ಷಂ ಬೇಡಿಕೊಂಡು ಕೂೞನಿರುಳ್ ತಂದಿಟ್ಟು ಪಗಲುಣ್ಬುದೆಂದೊಡಂತೆಗೆಯ್ವಮೆಂದು ಇರುಳ್ ತೊೞಲ್ದು ಭೈಕ್ಷಮಂ ತಂದು ಮಡಗಿಟ್ಟು ಪಗಲುಣ್ಬೊರಾದರಿಂತೀ ಪಾಂಗಿನೊಳ್ ಕಾಲಂ ಸಲೆ 

        ನೋಡುವುದಕ್ಕೆ ಹೋಗಿ ಪಟ್ಟಣವನ್ನು ಕಾಣದೆ ಕಾಡಿನಲ್ಲಿ ಎತ್ತರವಾದ ತುತ್ತತುದಿಯಲ್ಲಿ ಜೋತಾಡುತ್ತಿರುವ ಕಮಂಡಲವನ್ನು ಕಂಡರು. ಅದನ್ನು ತೆಗೆಯಿಸಿಕೊಂಡು ಹೋಗಿ ಆ ಋಷಿಗಳೆಲ್ಲರೂ ಒಟ್ಟಾಗಿ ಚಂದ್ರಗುಪ್ತಮುನಿಯ ಬಳಿಗೆ ಬಂದರು. “ನೀವು ಈ ಕಾಡಿನಲ್ಲಿ ಗೆಡ್ಡೆ ಬೇರು ಹಣ್ಣುಗಳನ್ನು ತಿಂದು ಹಳ್ಳದ ನೀರನ್ನು ಕುಡಿದು ಇಷ್ಟುಕಾಲ ಬಾಳಿದ್ದೀರೆಂದು ನಿಮ್ಮನ್ನ ಕುರಿತು ಭಾವಿಸಿ ವಂದನೆಮಾಡಲಿಲ್ಲ. ಇದಕ್ಕೆ ನೀವು ಮನಸ್ಸಿನಲ್ಲಿ ಸಿಟ್ಟಾಗಬಾರದು, ಕ್ಷಮಿಸಬೇಕು” ಎಂದು ಹೇಳಿ ವಂದಿಸಿ ಆಮೇಲೆ ಹೀಗೆ ಹೇಳಿದರು – “ನೀವು ಸೇವೆಗೆ ಪಾತ್ರರಾಗಿದ್ದೀರಿ. ದೇವತೆಗಳು ನಿಮ್ಮ ಆಜ್ಞಾಪಾಲಕರಾಗಿ ನಡೆದುಕೊಳ್ಳತ್ತಿರುವರು. ದೇವತೆಗಳು ಮಾಡಿದ ಆಹಾರವನ್ನು ಇದುವರೆಗೂ ನೀವು ಊಟ ಮಾಡಿ ತಪಸ್ಸನ್ನು ಆಚರಿಸಿದ್ದೀರಿ. ಇನ್ನು ನೀವು ಅದನ್ನುಉಣಬಾರದು. ದೇವತೆಗಳು ಮಾಡಿದ ಆಹಾರವನ್ನು ಋಷಿಗಳು ಉಣಬಾರದು” ಹೀಗೆ ಹೇಳಿ ಅವರನ್ನು ಪಡೆದು ಅವರಿಗೆ ಲೋಚು (ಕೂದಲು ಕೀಳುವುದು) ಕ್ರಿಯೆಯನ್ನು ಮಾಡಿ ವ್ರತ ಸ್ವೀಕಾರ ಮಾಡಿಸಿ ಪಡಿಕಮಣವನ್ನು (ಹಿಂದಿನ ಪಾಪಗಳಿಗೆ ಪಶ್ಚಾತ್ತಾಪ ಹೇಳಿಸುವುದು) ಹೇಳಿಸಿ, ಅವರನ್ನು ಕೂಡಿಕೊಂಡು ಉತ್ತರದೇಶಕ್ಕೆ ಪ್ರಯಾಣ ಮಾಡಿದರು. ಕೆಲವು ದಿವಸಗಳಲ್ಲಿ ಮಧ್ಯದೇಶಕ್ಕೆ ತಲಪಿದರು. ಅಲ್ಲಿ ಋಷಿ ಸಮೂಹದವರೆಲ್ಲರೂ ಉಪಸರ್ಗಗಳಿಲ್ಲದೆ ಇದ್ದರು. ಆಮೇಲೆ ಇತ್ತ ರಾಮಿಲಾಚಾರ್ಯರು ಸ್ಥೂಲಲಾಚಾರ್ಯರು ಸ್ಥೂಲಭದ್ರಾಚಾರ್ಯರು ಅಂತು ಈ ಮೂವರು ಸಿಂಧುದೇಶಕ್ಕೆ ತಮ್ಮತಮ್ಮ ಋಷಿಸಮೂಹವನ್ನು ಕೂಡಿಕೊಂಡು ಹೋದರಷ್ಟೆ. ಆ ಕಾಡಿನಲ್ಲಿ ಮನುಷ್ಯರು ಮನುಷ್ಯರನ್ನೇ ತಿಂದುಬಿಡತಕ್ಕಂತಹ ಅತಿ ಭಯಂಕರವಾದ ಕ್ಷಾಮ ತಲೆದೋರಿದ್ದಿತು. ಅಲ್ಲದ್ದ ಶ್ರಾವಕರೆಲ್ಲರೂ ಒಟ್ಟುಗೂಡಿ ಈ ಋಷಿಗಳ ಬಳಿಗೆ ಹೋಗಿ ಹೀಗೆಂದರು – “ಅನ್ಯದೇಶೀಯರಾದ ಕೆಟ್ಟವರಾದ ಇಲ್ಲಿಯ ಜನರೊಂದಿಗೆ ಹಗಲು ಹೊತ್ತನಲ್ಲಿ ಊಟಮಾಡಲೂ ಬಾರದು, ಅಡುಗೆ ಮಾಡಲೂ ಬಾರದು. ಮಾಡಿದರೆ, ಅವರು ಮೇಲೆ ಬಿದ್ದು ಎಳೆದು ತೆಗೆದುಕೊಂಡು ತಿಂದುಬಿಡುತ್ತಾರೆ. ಆದುದರಿಂದ ಜನರೆಲ್ಲರೂ ಅವರ ಭಯದಿಂದ ಹಗಲು ಅಡುಗೆ ಮಾಡುವುದನ್ನು ಬಿಟ್ಟು ರಾತ್ರಿ ಅಡುಗೆ ಮಾಡಿ ಉಣ್ಣಲು ತೊಡಗಿದ್ದಾರೆ. ಆದುದರಿಂದ ನೀವು ಇಂದಿನಿಂದ ರಾತ್ರಿ ವೇಳೆಯಲ್ಲಿ ಭಿಕ್ಷಾಪಾತ್ರೆಗಳನ್ನು ತೆಗೆದುಕೊಂಡು ಶ್ರಾವಕರ ( ಜಿನಧರ್ಮದಲ್ಲಿ ನಿಷ್ಠೆಯುಳ್ಳ ಗೃಹಸ್ಥರ) ಮನೆಗಳಿಗೆ ಸುತ್ತಾಡಿ ಭಿಕ್ಷೆ ಬೇಡಿಕೊಂಡು, ಅನ್ನವನ್ನು ರಾತ್ರಿಯ ವೇಳೆಯಲ್ಲಿ ತಂದು ಇಟ್ಟುಕೊಳ್ಳರಿ. ಅದನ್ನು ಹಗಲು ಊಟಮಾಡಿ” ಹೀಗೆ ಹೇಳಲು ಅವರು ‘ಹಾಗೆಯೇ ಮಾಡುವೆವು’ ಎಂದುಕೊಂಡು ರಾತ್ರಿಯಲ್ಲಿ ಸುತ್ತಾಡಿ ಭಿಕ್ಷೆಯನ್ನು ತಂದು ಇಟ್ಟು ಅದನ್ನು ಹಗಲು ಊಟಮಾಡುವವರಾದರು. ಈ ರೀತಿಯಲ್ಲಿ ಸ್ವಲ್ಪ ಕಾಲ ಕಳೆಯಿತು. 

        ಮತ್ತೊಂದು ದಿವಸಮೊರ್ವ ನಿರ್ಗ್ರಂಥಯತಿ ಭೈಕ್ಷಭಾಜನಮಂ ಕೊಂಡು ಶ್ರಾವಕರ ಮನೆಗಳನಿರುಳ್ ಭೈಕ್ಷಂ ಬೇಡಿ ತೊೞಲುತ್ತಂ ಪೋಪರೊಂದು ಮನೆಯಂ ಪೊಕ್ಕುಂ ಬೈಕ್ಷಮಂ ಬೇಡಿದೊಡೆರ್ವಳ್ ಪೊಸಶ್ರಾವಕಿ ಬಸಿರ್ಪೆಂಡತಿ ವೇಳಾಸ್ವಮಿನಿಯೆಂಬೊಳ್ ಕರ್ದಿಂಗಳಿರುಳೊಳ್ ಕೞ್ತಲೆಯೊಳ್ ನಿರ್ಗ್ರಂಥಮಪ್ಪ ರೂಪಂ ಕಂಡು ಬೆರ್ಚಿದೊಡಾಕೆಗೆ ಬಸಿಱೞದತ್ತದಂ ಕಂಡು ಶ್ರಾವಕರೆಲ್ಲಂ ನೆರೆದು ರಿಸಿಯರಲ್ಲಿಗೆ ವೋಗಿ ಇಂತೆಂದರ್ ಭಟ್ಟಾರಾ ಕಾಲಮಪ್ಪೊಡೆ ಕೆಟ್ಟತ್ತೊಳ್ಳಿತಪ್ಪ ಕಾಲಮಾದಂದು ಪ್ರಾಯಶ್ಚಿತ್ತಂಗೊಂಡು ನಿಮ್ಮ ತಪಂಗಳೊಳ್ ನಿಲ್ಲಿಮೀಗಳೀ ಪಸವು ಕೞವನ್ನೆಗಂ ನೀಮುಮೆಡದ ಕೈಯನೆೞಲಿಕ್ಕಿಯರ್ಧಗಪ್ಪಡಮನೆಡದ ಮುಯ್ವಿನ ಮೇಗಿಕ್ಕಿ ಒಳಗೆ ನಿರ್ಗ್ರಂಥಮಪ್ಪ ರೂಪಂ ತಾಳ್ದಿ ಬಲದ ಕೈಯೊಳ್ ಭೈಕ್ಷದ ಭಾಜನಮಂ ಪಿಡಿದು ತೊೞಲ್ದು ಭೈಕ್ಷಮಂ ಬೇಡಿ ಮಡಗಿಟ್ಟು ಪಗಲುಣ್ಣಿಮೆಂದೊಡವರ್ಗಳುಮಂತೆ ಗೆಯ್ವಮೆಂದವರ ಪೇೞ್ದ ಪಾಂಗಿನೊಳ್ ನೆಗೞ್ದು ಪಸವಂ ನೀಗಿ ಕಾಲವೊಳ್ಳಿತ್ತಾದೊಡೆ ರಾಮಿಲಾಚಾರ್ಯರುಂ ಸ್ಥೂಲಾಚಾರ್ಯರುಂ ಸ್ಥೂಲಭದ್ರಾಚಾರ್ಯರುಮಂತು ಮೂವರುಂ ತಮತಮ್ಮ ಋಷಿಸಮುದಾಯಂ ಬೆರಸು ವಿಹಾರಿಸುತ್ತಂ ಮಧ್ಯದೇಶಕ್ಕೆ ರಿಸಿಯರ್ಕಲಿರ್ದಲ್ಲಿಗೆ ಬಂದೊಡೆ ವಿಶಾಖಾಚಾರ್ಯರ್ ಮೊದಲಾಗೊಡೆಯ ಆಚಾರ್ಯರ್ಕಳವರನಿಂತೆಂದರ್ ನೀಮೆಳ್ಲರುವ್ಮರ್ಧಗಪ್ಪಡಮಂ ಬಿಸುಟ್ಟು ನಿರ್ಗ್ರಂಥ ರೂಪುಮಂ ಕೈಕೊಂಡು ಬ್ರತಂಗಳನೇಱಸಿ ಪ್ರಯಶ್ಚಿತ್ತಂಗೊಂಡು ಪಡಿಕಮಣಂಗೇಳ್ದು ತಪದೊಳ್ ನಿಲ್ಲಿಮೆಂದೊಡಂ ತೆಗೆಯ್ವಮೆಂದು ರಾಮಿಲಾಚಾರ್ಯರುಂ ಸ್ಥೂಲಾಚಾರ್ಯರುಂ ತಂತಮ್ಮ ಋಷಿಸಮುದಾಯಂ ಬೆರಸು

        ಆಮೇಲೆ ಒಂದು ದಿವಸ ಒಬ್ಬ ದಿಗಂಗರ ಸಂನ್ಯಾಸಿಗಳು ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಜೈನಗೃಹಸ್ಥರ ಮನೆಗಳಲ್ಲಿ ರಾತ್ರಿವೇಳೆ ಭಿಕ್ಷೆ ಬೇಡಿದರು. ಆಗ ಓರ್ವ ಗರ್ಭಿಣಿಯಾದ ಶ್ರಾವಕಿ ವೇಳಸ್ವಾಮಿನಿಯೆಂಬವಳು ಅಮಾವಾಸ್ಯೆಯ ಕತ್ತಲೆಯಲ್ಲಿ ಆ ಯತಿಯ ದಿಗಂಬರವಾಗಿರುವ (ಬಟ್ಟೆಬರೆಯಿಲ್ಲದ) ರೂಪವನ್ನು ಕಂಡು ಬೆಚ್ಚಿ ಬೀಳಲು, ಆಕೆಗೆ ಗರ್ಭಸ್ರಾವವಾಯಿತು. ಅದನ್ನು ಕಂಡು ಶ್ರಾವಕರೆಲ್ಲ ಒಟ್ಟಾಗಿ ಋಷಿಗಳಲ್ಲಿಗೆ ಹೋಗಿ ಹೀಗೆಂದರು – “ಪೂಜ್ಯರೇ, ಕಾಲವಾದರೋ ಕೆಟ್ಟುಹೋಗಿದೆ. ಒಳ್ಳೆಯ ಕಾಲ ಬಂದಾಗ ಪ್ರಾಯಶ್ಚಿತ್ತ ಮಾಡಿಕೊಂಡು ನಿಮ್ಮ ತಪಸ್ಸನ್ನು ಆಚರಿಸಿರಿ. ಈ ಬರಗಾಲ ಮುಗಿಯುವವರೆಗೂ ನೀವು ಎಡಗೈಯನ್ನು ಜೋಲುವಂತೆ ಬಿಟ್ಟು ಅರೆಬಟ್ಟೆಯನ್ನು ಎಡದ ಹೆಗಲ ಮೇಲೆ ಹಾಕಿ ಒಳಗೆ ದಿಗಂಬರ ರೂಪವನ್ನು ತಾಳಿ, ಬಲದ ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಸುತ್ತಾಡುತ್ತ ಭಿಕ್ಷೆಯನ್ನು ಬೇಡಿ, ಅದನ್ನು ಹಾಗೆಯೇ ಮಾಡೋಣ” ಎಂದು ಹೇಳಿ, ಅವರು ಹೇಳಿದ ರೀತಿಯಲ್ಲೇ ಮಾಡಿದರು. ಬರಗಾಲ ಕಳೆದು ಒಳ್ಳೆಯ ಕಾಲ ಬರಲು, ರಾಮಿಲಾಚಾರ್ಯರು ಸ್ಥೂಲಾಚಾರ್ಯರು ಸ್ಥೂಲಭದ್ರಾಚಾರ್ಯರು – ಅಚಿತು ಮೂರು ಮಂದಿಯೂ ತಮ್ಮ ತಮ್ಮ ಋಷಿಸಮೂಹವನ್ನು ಕೂಡಿಕೊಂಡು ಸಂಚಾರ ಮಾಡುತ್ತ ಮಧ್ಯದೇಶದಲ್ಲಿ ಋಷಿಗಳಿದ್ದಲ್ಲಿಗೆ ಬಂದರು. ಆಗ ವಿಶಾಖಾಚಾರ್ಯರು ಮೊದಲಾಗಿ ಉಳ್ಳ ಆಚಾರ್ಯರುಗಳು ಅವರೊಡನೆ ಹೀಗೆಂದರು – “ನೀವೆಲ್ಲರೂ ಅರೆಬಟ್ಟಿಯನ್ನು ಬಿಸಾಡಿ (ಅರೆಬತ್ತಲೆಯನ್ನು ಇಟ್ಟುಕೊಳ್ಳದೆ) ಪ್ರರ್ತಿಯಾಗಿ ದಿಗಂಬರತ್ವವನ್ನು ಸ್ವೀಕರಿಸಿಕೊಳ್ಳಿ. ವ್ರತಗಳನ್ನು ಧರಿಸಿ ಪ್ರಾಯಶ್ಚಿತ್ತ ಕೈಕೊಂಡು ಪಡಿಕಮಣವನ್ನು (ದೋಷಗಳಿಗೆ ಪಶ್ಚಾತ್ತಾಪವನ್ನು) ಮಾಡಿ ತಪೋನಿರತರಾಗಿರಿ”. ಹೀಗೆನ್ನಲು ಅದಕ್ಕೆ ಒಪ್ಪಿ ರಾಮಿಲಾಚಾರ್ಯರೂ ಸ್ಥೂಲಾಚಾರ್ಯರೂ ತಮ್ಮ ತಮ್ಮ ಋಷಿಸಮೂಹವನ್ನು ಕೂಡಿಕೊಂಡು 

        ವಿಶಾಖಾಚಾರ್ಯರ ಪಕ್ಕದೆ ಅರ್ಧಗಪ್ಪಡಮಂ ಬಿಸುಟ್ಟು ಪಡಿಕಮಣಂಗೇಳ್ದು ಪ್ರಾಯಶ್ಚಿತ್ತಂ ಗೊಂಡು ಯಥೋಕ್ತಮಪ್ಪ ಚಾರಿತ್ರದೊಳ್ ನಿಂದರ್ ಸ್ಥೂಲಭದ್ರಾಚಾರ್ಯರ್ ಮೊದಲಾಗಿ ಕೆಲಂಬರ್ ಕೊಳಲೊಲ್ಲದವರ್ ಜಿನಕಲ್ಪಂ ಸ್ಥವಿರಕಲ್ಪಮೆಂದೆರಡು ಭೇದಂ ಮಾಡಿ ಅರ್ಧಗಪ್ಪಡದ ತೀರ್ಥಮಂ ನೆಗೞದರ್ ಇಂತರ್ಧಗಪ್ಪಡದ ತೀರ್ಥ ಪಾರಂಪರ್ಯದಿಂದಂ ಸುರಥಮೆಂಬುದು ನಾಡಲ್ಲಿ ವಳಭಿಯೆಂಬುದು ಪೊೞಲದನಾಳ್ಪೊಂ ವಪ್ರಪಾಳನೆಂಬೊನರಸನ ರಾಜ್ಯಂಬರೆಗಮರ್ಧಗಪ್ಪಡದ ತೀರ್ಥಂ ನೆಗೞ್ದತ್ತು ಮತ್ತಂ ವಪ್ರಪಾಳನೆಂಬರಸಂ ಮಿಥ್ಯಾದೃಷ್ಟಿಯಾತನ ಮಹಾದೇವಿ ಸ್ವಾಮಿನಿಯೆಂಬೊಳರ್ಧಗಪ್ಪಡದ ತೀರ್ಥದ ತಪಸ್ವಿಯರ ಶ್ರಾವಕ್ಕಾಗಿ ಇಂತು ಕಾಲಂ ಸಲೆ ಮತ್ತೊಂದು ದಿವಸಂ ನಡುವಗಲರಸನುಂ ಮಹಾದೇವಿಯುಮಿಂತಿರ್ವರುಂ ಪ್ರಾಸಾದದ ಮೇಗಿರ್ದು ಗವಾಕ್ಷ ಪಾಳಾಂತರಂಗಳಿಂದಂ ದಿಶಾವಲೋಕನಂಗೆಯ್ಯುತ್ತಿರ್ಪನ್ನೆಗವ್ಮರ್ಧಗಪ್ಪಡದ ಸಂಘಂ ಭೈಕ್ಷಂ ಕಾರಣಮಾಗಿಯರಮನೆಯಂ ಪುಗುವುದನರಸಂ ಕಂಡರಸಿಯನಿಂತೆಂದನೆಲೆ ಮಹಾದೇವಿ ಈ ನಿನ್ನರ್ಧಗಪ್ಪಡದ ಯತಿಯರ ಧರ್ಮಮೊಳ್ಳಿತಲ್ತಮರುಟ್ಟರುಮಲ್ಲರ್ ಬತ್ತಲೆಗರುಮಲ್ಲರೆಂದು ನುಡಿದು 

         ವಿಶಾಖಾಚಾರ್ಯರ ಬಳಿಯಲ್ಲಿ ತಮ್ಮ ಅರೆಬಟ್ಟೆ (ಅರ್ಧಮಾತ್ರ ವಸಧಾರಣೆ)ಯನ್ನು ಬಿಟ್ಟರು. ಪಡಿಕಮಣವನ್ನು ಕೇಳಿ ಪ್ರಾಯಶ್ಚಿತ್ತವನ್ನು ಮಾಡಿ ಯೋಗ್ಯವಾದಂತಹ ಸಮ್ಯಕ್ ಚಾರಿತ್ರವನ್ನುಳ್ಳವರಾದರು. ಸ್ಥೂಲಭದ್ರಾಚಾರ್ಯರೇ ಮೊದಲಾದ ಕೆಲವುರ ದಿಗಂಬರತ್ವವನ್ನು ಸ್ವೀಕರಿಸಲು ಒಪ್ಪದವರು, ಜಿನಕಲ್ಪ, ಸ್ಥವಿರಕಲ್ಪ – ಎಂದು ಎರಡು ಪ್ರಭೇದಗಳನ್ನು ಮಾಡಿ ಅರೆಬಟ್ಟೆಯನ್ನು ಧರಿಸುವ ಸಂಪ್ರದಾಯವನ್ನು ಮಾಡಿದರು. ಈ ಅರೆಬಟ್ಟೆಯ ಸಂಪ್ರದಾಯ ವಿಸ್ತಾರವಾಗತೊಡಗಿತು. ಸ್ಮರಥಿ ಎಂಬ ನಾಡಿವಲ್ಲಿ ವಳಭಿ ಎಂಬ ಪಟ್ಟಣವನ್ನು ವಪ್ರಪಾಳನೆಂಬ ರಾಜನುಆಳುತ್ತಿದ್ದನು. ಅವನ ರಾಜ್ಯದವರೆಗೂ ಅರೆಬಟ್ಟೆಯ ಸಂಪ್ರದಾಯವು ವ್ಯಾಪಿಸಿಕೊಂಡಿತು. ವಪ್ರಪಾಳರಾಜನು ಮಿಥ್ಯಾದೃಷ್ಟಿ(ಧರ್ಮದಲ್ಲಿ ನಂಬಿದೆಯಿಲ್ಲದವನು). ಯತಿಗಳ ಬೋಧನೆಯನ್ನು ಕೇಳುತ್ತಿದ್ದಳು. ಹೀಗೆ ಸ್ವಲ್ಪ ಕಾಲ ಕಳೆಯಿತು. ಆಮೇಲೆ ಒಂದು ದಿವಸ ನಡುಹಗಲಿನ ವೇಳೆ ರಾಜ ಮತ್ತು ರಾಣಿ ಇಬ್ಬರೂ ತಮ್ಮಅರಮನೆಯ ಉಪ್ಪರಿಗೆಯಲ್ಲಿದ್ದರು. ಅವರು ಕಿಟಕಿಯ ಬಲೆಯ ಒಳಗಿನಿಂದ ದಿಕ್ಕುಗಳ ಕಡೆನೋಡುತ್ತಿದ್ದಾಗ ಅರೆಬಟ್ಟೆಯುಳ್ಳ ಸಂಘ ಭಿಕ್ಷೆಗಾಗಿ ಅರಮನೆಯೊಳಗೆ ಬಂದುದನ್ನು ಕಂಡರು. ಆಗ ರಾಜನು ರಾಣಿಯೊಡನೆ – “ಎಲೈ ಮಹಾದೇವಿ, ಈ ನಿನ್ನ ಅರೆಬಟ್ಟೆಯ ಮುನಿಗಳ ಧರ್ಮ ಒಳ್ಳೆಯದಲ್ಲ. ಇವರು ವಸ್ತ್ರಧರಿಸಿದವರೂ ಅಲ್ಲ ನಗ್ನರೂ ಅಲ್ಲ” ಎಂದು ನುಡಿದನು. 

    ಮತ್ತೂಂದು ದಿವಸವ್ಮರ್ಧಗಪ್ಪಡದ ಸಂಗಮನರಸಂ ಬೞಯಟ್ಟಿವರಿಸಿ ಇಂತೆಂದಂ ನೀವ್ಮರ್ಧಗಪ್ಪಡಮಂ ಬಿಸುಟು ನಿರ್ಗ್ರಂಥಮಪ್ಪ ರಿಸಿ ರೂಪಂ ಕೈಕೊಂಡು ಬೞಯೆ ತಪಂಗೆಯ್ವುದೆಂದೊಡವರೊಲ್ಲದಿರ್ದೊಡರಸಂ ಮತ್ತಮಿಂತೆಂದಂ ನಿರ್ಗ್ರಂಥಮಪ್ಪರೂಪಂ ಕೈಕೊಳಲೊಲ್ಲಿರಪ್ರ್ಪೆಡರ್ಧಗಪ್ಪಡಮಂ ಬಿಸುಟ್ಟು ಪೞಯಮ ಸಯ್ತುಟ್ಟುಕೊಂಡಿರಿಮೆಂದೊಡಂತೆ ಗೆಯ್ವೆಮೆಂದಾ ದಿವಸಂ ತಗುಳ್ದು ಬಡಗನಾಡವರ್ ವಪ್ರಪಾಳನ ರಾಜ್ಯದೊಳರ್ಧಗಪ್ಪಡಮಂ ಬಿಸುಟ್ಟು ಕಚ್ಚೆಗಟ್ಟದೆ ಸಯ್ತುಡುವರುಂ ಕುಱವಡವಂ ಪೊದೆವರುಮಾದೊರಲ್ಲಿಂದಿತ್ತ ಕಂಬಳತೀರ್ಥಮೆಂಬುದಾದವರುಂ ಶ್ವೇತಪಟರೆಂಬೊರಾದರ್ ದಕ್ಷಿಣಾಪಥದೊಳ್ ಸಾಮಳಿಪುತ್ರನೆಂಬರಸನಪ್ಪನವರಯೆ ಸಚಿತತಿಯ ಶ್ವೇತಭಿಕ್ಷುಜಾಪುಲಿ ಸಂಘಕ್ಕೆ ಮೊದಲಿಗನಾದಂ ಮತ್ತಿತ್ತ ಸಂಪ್ರತಿಚಂದ್ರಗುಪ್ತಮುನಿಯುಮುಗ್ರೋಗ್ರ ತಪಶ್ಚರನಂಗೆಯ್ದು ಸಂನ್ಯಸನವಿಧಾನದಿಂದಂ ಪರಮ ಶುದ್ಧ ಸಹಜ ರತ್ನತ್ರಯಮಂ ಸಾಸಿ ಮುಡಿಪಿ ಬ್ರಹ್ಮಕಲ್ಪಕೊಳ್ ಪತ್ತುಸಾಗರೋಪಮಾಯುಷ್ಯಮನೊಡೆಯೊಂ ಶ್ರೀದರನೆಂಬೊ ದೇವನಾಗಿ ಪುಟ್ಟಿದೊನಿಂತಿದು ಭದ್ರಬಾಹು ಭಟಾರರ ಕಥೆ ಪೇೞ್ದುದು. ಪೆಱರುಂ ಸಂನ್ಯಸನಂ ಗೆಯ್ದೊರೆಲ್ಲಂ ಭದ್ರಬಾಹು ಭಟಾರಕರ ಮನದೆ ಬUದವರೆಂತು ಪಸಿವುಂ ನೀರೞ್ಕೆ ಶೀತಮುಷ*ದಂಸ ಮಸಕಾದಿ ಪರೀಷಹಂಗಳಂ ಸೈರಿಸಿ ಪರಮಶುದ್ಧ ರತ್ನತ್ರಯಮಂ ಸಾಸಿದರಂತೆ ಸಂನ್ಯಸನಂಗೆಯ್ದು ಭವ್ಯರ್ಕಳುಂ ಪಸಿವುಂ ನಿರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ಸೈರಿಸಿ ಸಮಾ ಮರಣದಿಂ ಮುಡಿಪಿ ಪರಮ ಶುದ್ಧಸಹಜ ರತ್ನತ್ರಯಂಗಳಂ ಸಾಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ

        ಆಮೇಲೆ ಒಂದು ದಿವಸ ರಾಜನು ಅರೆಬಟ್ಟೆಯ ಯತಿ ಸಂಘವನ್ನು ಕರೆಕಳುಹಿಸಿ ಬರಮಾಡಿ, ಹೀಗೆಂದನು – “ನೀವು ಅರೆಬಟ್ಟೆಯನ್ನು ಬಿಸಾಡಿ, ದಿಗಂಗಬರ ಯತಿ ಸ್ವರೂಪವನ್ನು ಕೈಕೊಂಡು, ಅನಂತರ ತಪಸ್ಸನ್ನುಅಚರಿಸಿರಿ “. ಹೀಗೆ ಹೇಳಿದಾಗ ಅವರು ಒಪ್ಪಲಿಲ್ಲ. ರಾಜನು ಆಮೇಲೆ ಅವರೊಡನೆ – “ನೀವು ಇಡೀ ಬತ್ತಲೆಯಗಿರುವ ರೂಪವನ್ನು ಸ್ವೀಕರಿಸಿಲು ಒಪ್ಪುವುದಿಲ್ಲವಾದರೆ ಅರ್ಧವಸ್ತ್ರ ಧಾರಣೆಯನ್ನು ಬಿಸಾಡಿ ವಸ್ತ್ರವನು ಉಟ್ಟುಕೊಂಡಿರಿ” ಎಂದು ಹೇಳಿದನು. “ಹಾಗೆಯೆ ಮಾಡುವೆವು” ಎಂದುಕೊಂಡು, ಆ ದಿನದಿಂದ ಹಿಡಿದು ಉತ್ತರ ದೇಶದವರು ವಪ್ರಪಾಳನ ರಾಜ್ಯದಲ್ಲಿ ಅರೆಬಟ್ಟೆ ಉಡುವುದನ್ನು ಬಿಟ್ಟುಕಚ್ಚೆ ಹಾಕದೆ ಸರಿಯಾಗಿ ಧರಿಸುವವರೂ ಚಿಕ್ಕ ಮಡಿಬಟ್ಟೆಯನ್ನು ಹೊದೆಯುವವರೂ ಆದರು. ಅಲ್ಲಿಂದೀಚೆಗೆ ಕಂಬಳಿ ಹೊದೆಯುವ ಶಾಖೆಯೂ (ಸಂಪ್ರದಾಯವೂ) ಆಯಿತು. ಆ ಶಾಖೆಯವರು ಶ್ವೇತಾಂಬರರಾದರು. ದಕ್ಷಿಣ ದೇಶದಲ್ಲಿ ಸಾಮಳಿ ಪುತ್ರನೆಂಬ ರಾಜನು ಅವರದೇ ಪರಂಪರೆಗೆ ಸೇರಿದ ಶ್ವೇತಾಂಬರಯತಿಗಳ ಜಾಪುಲಿ ಎಂಬ ನಗರದ ಸಂಘಕ್ಕೆ ಮೂಲಪುರುಷನಾದನು. ಇತ್ತ ಸಂಪ್ರತಿ ಚಂದ್ರಗುಪ್ತಮುನಿ ಅತ್ಯಂತ ಘೋರವಾದ ತಪಸ್ಸನ್ನು ಆಚರಿಸಿ ಸಂನ್ಯಾಸ ಕ್ರಮದಿಂದ ಅತ್ಯಂತ ಪರಿಶುದ್ಧವೂ ಸಹಜವೂ ಆದ ಸಮ್ಯಗ್ದರ್ಶನದ ಜ್ಞಾನ ಚಾರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಸತ್ತು ಬ್ರಹ್ಮಕಲ್ಪದಲ್ಲಿ ಹತ್ತು ಸಾಗರದಷ್ಟು ಆಯುಷ್ಯವಿರತಕ್ಕ ಶ್ರೀಖರನೆಂಬ ದೇವನಾಗಿ ಹುಟ್ಟಿದನು. ಹೀಗೆ ಈ ಭದ್ರಬಾಹು ಋಷಿಗಳ ಕಥೆ ಹೇಳಲ್ಪಟ್ಟಿತು. ಸಂನ್ಯಾಸವನ್ನು ಕೈಗೊಂಡ ಬೇರೆಯವರು ಕೂಡ, ಭದ್ರಬಾಹುಋಷಿಗಳನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು, ಹಸಿವು, ಬಾಯಾರಿಕೆ, ಶೀತ, ಸೊಳ್ಳೆ, ನೊಣ ಮುಂತಾದವುಗಳಿಂದ ಆಗತಕ್ಕ ಬಾಧೆಯನ್ನು ಸಹಿಸಿ, ಅತ್ಯಂತ ಪರಿಶುದ್ಧವಾದ ರತ್ನತ್ರಯವನ್ನು ಪಡೆದರು. ಹಾಗೆಯೇ ಸಂನ್ಯಾಸವನ್ನು ಮಾಡಿದ ಪುಣ್ಯವಂತರು ಹಸಿವು ಬಾಯಾರಿಕೆ ಮೊದಲಾಗಿ ಉಳ್ಳ ತೊಂದರೆಗಳನ್ನು ಸಹಿಸಿ, ಸಮಾ ಸ್ಥಿತಿಯಲ್ಲಿ ಸತ್ತು ಅತ್ಯಂತ ಪರಿಶುದ್ಧವೂ ಸಹಜವೂ ಆದ ರತ್ನತ್ರಯಗಳನು ಸಾಸಿ ಸ್ವರ್ಗ – ಮೋಕ್ಷ ಸುಖಗಳನ್ನು ಪಡೆಯಲಿ !


*****ಕೃಪೆ: ಕಣಜ****

ವಡ್ಡಾರಾಧನೆ - ಅಣ್ಣಿಕಾಪುತ್ರನ ಕಥೆ | Vaddaradhane-Annikaputhrana kathe

 ಅಣ್ಣಿಕಾಪುತ್ರನ ಕಥೆಯಂ ಪೇೞ್ವೆಂ :

ಗಾಹೆ || ಣಾವಾ ಎ ಣಿಬ್ಬುಡಾ ಏ ಗಂಗಾಮಜ್ಝೇ ಅಮೂಢಮಾಣಮದೀ
ಆರಾಧಣಂ ಪವಣ್ಣೋ ಕಾಲಗದೋ ಏಣಿಯಾ ಪುತ್ತೋ ||

[ಣಾವಾ ಎ – ನಾವೆ, ಣಿಬ್ಬುಡಾ ಏ – ಮುೞುಗಿದುದಾದೊಡೆ, ಗಂಗಾಮಜ್ಝೇ – ಗಂಗಾಮಹಾನದಿಯ ನಡುವೆ, ಅಮೂಢಮಾಣಮದೀ – ಮೋಹಿಸದ ಬುದ್ದಿಯನೊಡೆಯನಾಗಿ, ಆರಾಧಣಂ – ನಿಜಾತ್ಮಾರಾಧನೆಯಂ, ಪವಣ್ಣೋ – ಲೇಸಾಗಿ ಪೊರ್ದಿದೊಂ, ಕಾಲಗದೊ – ಕಾಲಂಗೆಯ್ದೊನಾಗಿ, ಏಣಿಯಾಪುತ್ತೋ – ಆಣ್ಣಿಕೆಯ ಮಗಂ]

    ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಉತ್ತರಮಧುರೆಂಬುದು ಪೊೞಲದನೊಳ್ವೊಂ ಪ್ರಜಾಪಾಳನೆಂಬೊನರಸನಾತನ ಮಹಾದೇವಿ ಸುಪ್ರಭೆಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ ಮತ್ತಾ ಪೊೞಲೊಳ್ ಸಾರ್ಥಾಪತಿ ಧನದತ್ತನೆಂಬೊಂ ಪರದಂ ಧನಕನಕಸಮೃದ್ಧನಾತನ ಭಾರ್ಯೆ ಧನಶ್ರೀ ಯೆಂಬೊಳಾಯಿರ್ವರ್ಗಂ ಮಗಂ ಧನದೇವನೆಂಬೊನಂತವರ್ಗಳ್ಗೆ ಸುಖದಿಂ ಕಾಲಂ ಸಲೆ ಮತ್ತೊಂದು ದಿವಸಂ ಧನದೇವಂ ಪರದಿಂಗೆಂದು ಪಿರಿದುಂ ಸಾರಮಪ್ಪ ಭಂಡಮಂ ತೀವಿಕೊಂಡು ಪಿರಿದುಂ ಸಾರ್ಥಂ ಬೆರಸು ದಕ್ಷಿಣ ಮಧುರೆಗೆವೋದಾಡಾ ಪೊೞಲ ರಾಜಶ್ರೇಷ್ಠಿ ತಿಳಕಶ್ರೇಷ್ಠಿಯೆಂಬೊನಾತನ ಭಾರ್ಯೆ ನಂದೆಯೆಂಬೊಳಾಯಿರ್ವರ್ಗಂ ಮಕ್ಕಳ್ ಪದ್ಮಾವತಿ ಸುಮತಿ ಗುಣಮತಿಯೆಂದಿವರ್ ಮೊದಲಾಗೊಡೆಯ ಎಣ್ಬರ್ ಪೆಣ್ಗೂಸುಗಳಾದೊಡವರೊಳಗೆಲ್ಲರಿಂ ಕಿಱಯಳಣ್ಣಿಕೆಯೆಂಬೊಳಾಕೆಯಂ

        ಅಣ್ಣಿಕಾಪುತ್ರನ ಕಥೆಯನ್ನು ಹೇಳುವೆನು. (ಗಂಗಾನದಿಯ ನಡುವೆ ದೋಣಿ ಮುಳುಗಿಹೋದಾಗ ಅದರಲ್ಲಿದ್ದ ಮೋಹಗೊಳ್ಳದ ಬುದ್ದಿಯುಳ್ಳ ಅಣ್ಣಿಕಾಪುತ್ರನೆಂಬ ಋಷಿ ಕಾಲವಶನಾಗಿ ತನ್ನ ಆತ್ಮದ ಆರಾಧನೆಯನ್ನು ನೆರವೇರಿಸಿದನು.) ಅದು ಹೇಗೆಂದರೆ. ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಮಗಧೆ ಎಂಬ ನಾಡಿದೆ. ಅಲ್ಲಿ ಉತ್ತರ ಮಧುರೆ ಎಂಬ ಪಟ್ಟಣವಿದೆ. ಅದನ್ನು ಪ್ರಜಾಪಾಳನೆಂಬ ಅರಸನು ಆಳುತ್ತಿದ್ದನು. ಅವನ ಮಹಾರಾಣಿ ಸುಪ್ರಭೆಯೆಂಬವಳು. ಅಂತು ಅವರು ತಮ್ಮ ಇಷ್ಟವಾದ ವಿಷಯದ ಬಯಸಿದ ಸುಖಗಳನ್ನು ಅನುಭವಿಸುತ್ತ ಇದ್ದರು. ಅದಲ್ಲದೆ, ಆ ಪಟ್ಟಣದಲ್ಲಿ ಸರಕಿನ ವ್ಯಾಪಾರಿಗಳಿಗೆ ಒಡೆಯನಾದ ಧನದತ್ತನೆಂಬ ವರ್ತಕನು ಐಶ್ವರ್ಯದಿಂದಲೂ ಹೊನ್ನಿನಿಂದಲೂ ಸಮೃದ್ದನಾಗಿದ್ದನು. ಅಂತು ಸುಖದಿಂದ ಅವರ ಕಾಲ ಕೆಳೆಯುತ್ತಿತ್ತು. ಅನಂತರ ಒಂದು ದಿವಸ ಧನದೇವನು ವ್ಯಾಪಾರಕ್ಕಾಗಿ ಆಕವಾದ ಮೌಲ್ಯವುಳ್ಳ ಸರಕನ್ನು ತುಂಬಿಕೊಂಡು ಹೆಚ್ಚು ಮಂದಿ ಸರಕು ವ್ಯಾಪಾರಿಗಳೊಂದಿಗೆ ದಕ್ಷಿಣ ಮಧುರೆಗೆ ಹೋದನು. ಆ ಪಟ್ಟಣದಲ್ಲಿ ರಾಜಶ್ರೇಷ್ಠಿಯೆನಿಸಿಕೊಂಡು ತಿಳಕಶ್ರೇಷ್ಠಿ ಎಂಬವನಿದ್ದನು. ಅವನ ಪತ್ನಿ ನಂದೆ ಎಂಬುವಳು. ಆ ದಂಪತಿಗಳಿಗೆ ಪದ್ವಾವತಿ, ಸುಮತಿ, ಗುಣಮತಿ ಎಂದು ಇವರೇ ಮೊದಲಾಗಿ ಉಳ್ಳ ಎಂಟುಮಂದಿ ಹೆಣ್ಣುಮಕ್ಕಳಾದರು. ಅವರಲ್ಲಿ ಎಲ್ಲರಿಂದಲೂ ಕಿರಿಯಳು ಆಣ್ಣಿಕೆ. 

    ಧನದತ್ತನ ಮಗನಪ್ಪ ಧನದೇವನಂ ರೂಪಲಾವಣ್ಯ ಸೌಭಾಗ್ಯ ಕಾಂತಿಗುಣಂಗಳಿಂ ಕೂಡಿದೊನಂ ತಿಳಕಶ್ರೇಷ್ಠಿಯುಂ ನಂದೆಯುಂ ಕಂಡಾತಂಗೆ ಬಯಸಿ ಅಣ್ಣಿಕೆಯೆಂಬ ಕೂಸಂ ಕೊಟ್ಟೊಡೆ ಕೆಲವು ದಿವಸಮಾ ಪೊೞಲೊಳಿರ್ದು ತಮ್ಮ ಕೊಂಡು ಪೋದ ಭಂಡಮಂ ಮಾಱ ಪೆಱದಂ ತಮ್ಮ ನಾೞ್ಕಪೂರ್ವಮಪ್ಪ ಭಂಡಮಂ ತೀವಿಕೊಂಡು ತಮ್ಮ ಪೊೞಲ್ಗುತ್ತರ ಮಧುರೆಗೆ ಬಂದಿರ್ದ್ದರನ್ನೆಗಮಣ್ಣ್ಣಿಕೆಗೆ ಗರ್ಭಮಾಗಿ ಮಗಂ ಪುಟ್ಟಿದೊಡೆ ಧನದೇವನ ತಾಯುಂ ತಂದೆಯುಂ ನೆಂಟರುಮೆಲ್ಲಂ ನೆರೆದಣ್ಣಿಕೆಯ ಮಗನೆಂದಾತಂಗಣ್ಣಿಕಾಪುತ್ರನೆಂದು ಪೆಸರನಿಟ್ಟೊಡಾತಂ ಕ್ರಮಕ್ರಮದಿಂ ಸುಖದಿಂ ಬಳೆದು ನವಯೌವನನಾಗಿರ್ಪ್ಪನ್ನೆಗಂ ಇತ್ತ ದಮಸೂರಿಗಳೆಂಬವರವಜ್ಞಾನಿಗಳಪ್ಪ ಆಚಾರ್ಯರ್ ಪಿರಿದುಂ ರಿಸಿಸಮುದಾಯಂ ಬೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೋರುತ್ತರ ಮಧುರೆಗೆ ಬಂದು ಬಹಿರುದ್ಯಾನವನದೊಳಿರ್ದ್ದರನಣ್ಣಿಕಾಪುತ್ರಂ ಪೋಗಿ ವಂದಿಸಿ ಧರ್ಮಮಂ ಕೇಳ್ದು ಸಮ್ಯಕ್ತ್ವಪೂರ್ವಕಂ ಶ್ರಾವಕವ್ರತಂಗಳೆಲ್ಲಮಂ ಕೈಕೊಂಡು ತದನಂತರಮೆ ಭಟಾರಾ ಎನಗಾಯುಷ್ಯವೆನಿತೆಂದು ತನ್ನಾಯುಷ್ಯ ಪ್ರಮಾಣಮಂ ಬೆಸಗೊಂಡೊಡೆ ಭಟಾರರುಂ ಕಿಱದೆ ನಿನಗಾಯುಷ್ಯಮೆಂದು ಪೇೞ್ದೊಡೆ ವೈರಾಗ್ಯಪರಾಣಯಣನಾಗಿ ತಾಯುಂ ತಂದೆಯುಮಂ ನಂಟರುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ದಮಸೂರಿಗಳೆಂಬಾಚಾರ್ಯರ ಪಕ್ಕದೆ ತಪಂಬಟ್ಟು

        ತಿಳಕಶ್ರೇಷ್ಠಿ ಮತ್ತು ನಂದೆ ಎಂಬುವರು ಧನದತ್ತನ ಮಗನೂ ರೂಪ ಸೌಂದರ್ಯ – ಸೌಭಾಗ್ಯ – ಕಾಂತಿ – ಗುಣಗಳಿಂದ ಕೂಡಿದವನೂ ಆದ ಧನದೇವನನ್ನು ಕಂಡು, ಅವನನ್ನು ಬಯಸಿ, ಅವನಿಗೆ ಅಣ್ಣಿಕೆಯೆಂಬ ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟರು. ಸರಕಿನ ವ್ಯಾಪಾರಿಗಳು ಕೆಲವು ದಿವಸಗಳವರೆಗೆ ಆ ಪಟ್ಟಣದಲ್ಲಿದ್ದು ತಾವು ಕೊಂಡು ಹೋದ ಸರಕನ್ನು ಮಾರಿ, ತಮ್ಮ ನಾಡಿಗೆ ಅಪೂರ್ವವೆನಿಸತಕ್ಕ ಬೇರೆ ಇತರ ಸರಕುಗಳನ್ನು ತುಂಬಿಕೊಂಡು ತಮ್ಮ ಪಟ್ಟಣವಾಗಿರುವ ಉತ್ತರಮಧುರೆಗೆ ಬಂದರು. ಹೀಗೆ ಇರುತ್ತಿರಲು ಅಣ್ಣಿಕೆಗೆ ಗರ್ಭವಾಗಿ ಮಗನು ಹುಟ್ಟಿದನು. ಧನದೇವನ ತಾಯಿಯೂ ತಂದೆಯೂ ನಂಟರೂ ಎಲ್ಲ ಸೇರಿ ಅಣ್ಣಿಕೆಯ ಮಗನಾದುದರಿಂದ ಅವನಿಗೆ ಅಣ್ಣಿಕಾ ಪುತ್ರನೆಂಬ ಹೆಸರಿಟ್ಟರು. ಆತನು ಅನುಕ್ರವಾಗಿ ಸುಖದಿಂದ ಬೆಳೆದು ಯೌವನಸ್ಥನಾದನು. ಹೀಗಿರಲು ಇತ್ತ ಅವಜ್ಞಾನಿಗಳಾದ ದಮಸೂರಿಗಳೆಂಬ ಆಚಾರ್ಯರು ಹೆಚ್ಚಾದ ಋಷಿಸಮೂಹವನ್ನು ಕೂಡಿಕೊಂಡು ಗ್ರಾಮ – ನಗರ – ಖೇಡ – ಖರ್ವಡ – ಮಡಂಬ – ಪಟ್ಟಣ – ದ್ರೋಣಾಮುಖ ಎಂಬ ಭೂಭಾಗಗಳಲ್ಲಿ ಸಂಚಾರ ಮಾಡುತ್ತ ಬರತಕ್ಕವರು ಉತ್ತರ ಮಧುರೆಗೆ ಬಂದು ಹೊರಗಿನ ಉದ್ಯಾನದಲ್ಲಿದ್ದರು. ಅಣ್ಣಿಕಾ ಪುತ್ರನು ಅವರ ಬಳಿಗೆ ಹೋಗಿ ವಂದಿಸಿ ಧರ್ಮಬೋಧನೆಯನ್ನು ಕೇಳಿ ತತ್ವವಿಚಾರದಲ್ಲಿ ನಂಬಿಕೆಯೊಂದಿಗೆ ಶ್ರಾವಕ (ಜೈನಗೃಹಸ್ಥ) ವ್ರತಗಳೆಲ್ಲವನ್ನೂ ಸ್ವೀಕರಿಸಿಕೊಂಡನು. ಆಮೇಲೆ “ಪೂಜ್ಯರೇ, ನನಗೆ ಆಯುಷ್ಯವು ಎಷ್ಟಿದೆ* ಎಂದು ತನ್ನ ಆಯುಷ್ಯದ ಪ್ರಮಾಣವನ್ನು ಕೇಳಿದನು. ಆಗ ಋಷಿಗಳು “ನಿನಗೆ ಆಯುಷ್ಯ ಇನ್ನು ಸ್ವಲ್ಪವೇ ಇದೆ* ಎಂದು ಹೇಳಿದರು. ಅಣ್ಣಿಕಾ ಪುತ್ರನು ವೈರಾಗ್ಯತತ್ಪರನಾಗಿ ತನ್ನ ತಾಯನ್ನೂ ತಂದೆಯನ್ನೂ ನಂಟರನ್ನೂ ಬಿಟ್ಟು ತೊಂದರೆಯಿಲ್ಲದಂತೆ ಮಾಡಿ, ದಮಸೂರಿಗಳೆಂಬ ಆಚಾರ್ಯರಬಳಿಯಲ್ಲಿ ತಪಸ್ಸನ್ನು ಪಡೆದು

       ದ್ವಾದಶಾಂಗ ಚತುರ್ದಶಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಗುರುಗಳನೊಡಂಬಡಿಸಿ ಏಕವಿಹಾರಿಯಾಗಿ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಆಟವ್ಯಾಂ ದಶರಾತ್ರಮೆಂಬೀನ್ಯಾಯದಿಂ ಗ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ತೀರ್ಥಂಗಳೆಲ್ಲಮಂ ವಂದಿಸಲ್ಕೆಂದು ಗಂಗಾಮಹಾನದಿಯಂ ಪಾಯ್ದು ಪೋಪ ಬಗೆಯಿಂದಂ ನಾವೆಯನೇಱದೊಡದೊಂದುತ್ಪಾತವಾತದಿಂದಂ ಗಂಗಾಮಹಾನದಿಯ ನಡುವೆ ಮಡುವಿನೊಳ್ ಭಯಂಕರಮಾಗುತ್ತಿರ್ದ್ದ ತೆರೆಯನೊಡೆಯದಱೊಳ್ ಮುೞುಗಿದೊಡಾ ಅಣ್ಣಿಕಾಪುತ್ರನೆಂಬ ರಿಸಿ ಪಿರಿದಪ್ಪ ಮಹಾತ್ಮ್ಯಮಂ ಮೋಹಿಸದ ಬುದ್ದಿಯನೊಡೆಯೊಂ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಯಾವಜ್ಜೀವಂ ನಿವೃತ್ತಿಯ್ದು ಕಾಯೋತ್ಸರ್ಗಂ ನಿಂದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಜಾನಿಸಿ ಸಕಳಕರ್ಮಂಗಳಂ ಕಿಡಿಸಿ ಅಂತರ್ಗತ ಕೇವಲಿಯಾಗಿ ಮೋಕ್ಷಕ್ಕೆವೋದರ್ ಮತ್ತಂ ಪೆಱರಾರಾಧಕರಪ್ಪವರ್ಗಗಳೆಲ್ಲಮಣ್ಣಿಕಾಪುತ್ರನೆಂಬ ರಿಸಿಯಂ ಮನದೊಳಿಟ್ಟು ಅಚೇತನೋಪಸರ್ಗಂ ಮೊದಲಾಗೊಡೆಯ ಉಪಸರ್ಗಂಗಳುಮಂ ನೀರೞ್ದೆ ಮೊದಲಾಗೊಡೆಯ ಪರೀಷಹಂಗಳುಮಂ ಸೈರಿಸಿ ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗದ ಸುಖಂಗಳಂ ಭವ್ಯರ್ಕಳೆಯ್ದುಗೆ

        ಹನ್ನೆರಡು ಅಂಗಗಳುಳ್ಳದೂ ಹದಿನಾಲ್ಕು ಪೂರ್ವಗಳುಳ್ಳುದೂ ಆದ ಶಾಸ್ತ್ರಗಳನ್ನೆಲ್ಲಾ ಕಲಿತು ಗುರುಗಳು ಒಪ್ಪುವಂತೆ ಮಾಡಿ ಒಬ್ಬನೇ ಸಂಚಾರ ಮಾಡುತ್ತ “ಗ್ರಾಮದಲ್ಲಿ ಒಂದು ರಾತ್ರಿ, ನಗರದಲ್ಲಿ ಐದು ರಾತ್ರಿ, ಕಾಡಿನಲ್ಲಿ ಹತ್ತು ರಾತ್ರಿಗಳು* ಎಂಬ ಈ ನ್ಯಾಯದಂತೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳನ್ನು ಸುತ್ತುತ್ತ ಪುಣ್ಯತೀರ್ಥಗಳಿಗೆಲ್ಲಾ ನಮಸ್ಸರಿಸುವುದಕ್ಕಾಗಿ ಗಂಗಾ ಮಹಾನದಿಗೆ ನಡುವೆ ಭಯಂಕರವಾಗಿ ಕಾಣಿಸಿದ ಅಲೆಯುಳ್ಳ ಮಡುವಿನಲ್ಲಿ ದೋಣಿ ಮುಳುಗಿತು. ಮುಳುಗುತ್ತಿದ್ದಾಗ ಆ ಅಣ್ಣಿಕಾಪುತ್ರನೆಂಬ ಋಷಿ ಹಿರಿದಾಗಿರುವ ಮಹತ್ವಕ್ಕೆ ಮೋಹಗೊಳ್ಳದ ಬುದ್ದಿಯುಳ್ಳವನಾಗಿ ಭಕ್ಷ್ಯ, ಭೋಜ್ಯ, ಚೋಷ್ಯ, ಲೇಹ್ಯ – ಎಂಬ ನಾಲ್ಕು ವಿಧವಾದ ಶರೀರಕ್ಕೂ ಆಹಾರಕ್ಕೂ ಪ್ರಾಣವಿರುವವರೆಗೂ ನಿವೃತ್ತಿ ಮಾಡಿ, ದೇಹತ್ಯಾಗಕ್ಕೆ ಸಿದ್ದನಾಗಿ ಧರ್ಮಧ್ಯಾನ ಶುಕ್ಲಧ್ಯಾನಗಳನ್ನು ಮಾಡಿ ಎಲ್ಲಾ ಕರ್ಮಗಳನ್ನೂ ನಾಶಗೊಳಿಸಿ ತನ್ನೊಳಗೆ ಕೇವಲಜ್ಞಾನವನ್ನು ಪಡೆದು ಮೋಕ್ಷಕ್ಕೆ ತೆರಳಿದರು. ಆಮೇಲೆ, ಬೇರೆ ಆರಾಧಕರಾಗಿರುವ ಭವ್ಯರೆಲ್ಲರೂ ಆಣ್ಣಿಕಾಪುತ್ರನೆಂಬ ಋಷಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅಚೇತನೋಪಸರ್ಗವೇ ಮೊದಲಾದ ಉಪಸರ್ಗಗಳನ್ನೂ ಬಾಯಾರಿಕೆ ಮುಂತಾಗಿರುವ ಪರೀಷಹಗಳನ್ನೂ ಸಹಿಸಿಕೊಂಡು ಸಮ್ಯಗ್ದರ್ಶನ ಜ್ಞಾನ ಚಾರಿತ್ರಗಳೆಂಬ ಮೂರುರತ್ನಗಳನ್ನು ಸಾಸಿ ಸ್ವರ್ಗ ಮೋಕ್ಷ ಸುಖಗಳನ್ನು ಹೊಂದಲಿ.


*****ಕೃಪೆ: ಕಣಜ****