ಪುಟಗಳು

19 ನವೆಂಬರ್ 2021

ವಡ್ಡಾರಾಧನೆ -ಸುಕೌಶಳಸ್ವಾಮಿಯ ಕಥೆ | Vaddaradhane-Sukoushala swamiya kathe

 ಸುಕೌಶಳಸ್ವಾಮಿಯ ಕಥೆಯಂ ಪೇೞ್ವೆಂ :
ಗಾಹೆ || ಮೊಗ್ಗಳಗಿರಿಮ್ಹಿಯ ಸುಕೌಸಳೋ ವಿ ಸಿದ್ಧತ್ಥ ದಯಿದಗೋ ಭಗಮಂ
ವಗ್ನೀಯೆ ಖಯಿದಂ ಪದಿದೋ ಪಡಿವಣ್ಣೋ ಉತ್ತಮಂ ಅಟ್ಠಂ

ಮೊಗ್ಗಳ ಗಿರಿಮ್ಹಿಯ – ಮೊಗ್ಗಳಮೆಂಬ ಪರ್ವತದೊಳ್, ಸುಕೌಸಳೋಪಿ – ಸುಕೌಸಳ ಸ್ವಾಮಿಯುಂ, ಸಿದ್ದತ್ಥದಯಿಗೋ – ಸಿದ್ಧಾರ್ಥನೆಂಬ ಷರದನ ಕಾದಲಿಸೆ ಪಡುವ ಮಗಂ, ಭಗವಂ – ಪೆರ್ಮೆಯನೊಡೆಯೊಂ, ವಗ್ಘೀಯೆ ಖಯಿದಂ ಪದಿದೋ – ಮುನ್ನಿನ ಭವದ ತಾಯಪ್ಪ ಪೆಣ್ಬುಲಿಯಿಂದಂ ತಿನೆ ಬರ್ದಿದೊನಾಗಿಯಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮಂ ಅಟ್ಠಂ – ಮಿಕ್ಕ ಜ್ಞಾನ ಚಾರಿತ್ರಾರಾಧನೆಯಂ

ಅದೆಂತೆಂದೊಡೆ :

ಈ ಜಂಬೂದ್ವೀಪದ ದಕ್ಷಿಣ ಭರತಕ್ಷೇತ್ರದೊಳಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲದನಾಳ್ವೊಂ ಗಂಧಭಾಜನನೆಂಬರಸನಿಂದ್ರನೊಳೋರಂತಪ್ಪ ಭೋಗೆಶ್ವರ್ಯ ವಿಭಮಮನೊಡೆಯೊಂ ನ್ಯಾಯದಿಂದಿಂ ಪ್ರಜೆಗಳಂ ಪ್ರತಿಪಾಳಿಸುವೊನಗಮ ಸಮ್ಯಕ್ದೃಷ್ಟಿಯಪ್ಪ ನೇೞುಗುಣಂಗಳಿಂದಂ ಕೂಡಿದೊನಾಯೇೞುಂ ಗುಣಂಗಳೆಂಬುವಾವುವೆಚಿದೊಡೆ

ಗಾಹೆ || ಸಮ್ಮದ್ದಸ್ಸಣಸುದ್ದೋ ಕದವಧ ಕಮ್ಮೋ ಸುಸೀಲಗುಣಣಿಳಯೊ
ಉಜುಗತ್ತೋ ಗುರಭತ್ತೋ ಪವಯಣ ಕುಸಳೋ ಮದಿಪ್ಪಬ್ಭೋಯ
ಎಂದೇೞುಂ ಗುಣಂಗಳಿಂದಂ ಕೂಡಿದೊನಂತಪ್ಪರಸಂ ಶರತ್ಕಾಲದ ಮುಗಿಲೊಳೋರಂತಪ್ಪು ದನಾದಮಾನುಂ ವಿಚಿತ್ರಮಪ್ಪುದಂ
ಸಹಸ್ರಕೂಟಮೆಂಬ ಜಿನಾಲಯಮಂ ಮಾಡಿಸಿ ಅದರ್ಕ್ಕನ

    ಸುಕೌಶಳ ಸ್ವಾಮಿಯ ಕಥೆಯನ್ನು ಹೇಳುವೆನು :(ಸಿದ್ಧಾರ್ಥನೆಂಬ ವರ್ತಕನ ಪ್ರೀತಿಯ ಮಗ ಸುಕೌಶಳಸ್ವಾಮಿ ; ಹಿರಿಮೆಯನ್ನುಳ್ಳವನು. ಆತನು ಮೊಗ್ಗಳವೆಂಬ ಬೆಟ್ಟದಲ್ಲಿ ಇದ್ದಾಗ ಅವನನ್ನು ಹಿಂದಿನ ಜನ್ಮದ ತಾಯಿಯಾಗಿದ್ದೊಂದು ಹೆಣ್ಣು ಹುಲಿ ತಿನ್ನಲು ಸತ್ತವನಾಗಿ ಶ್ರೇಷ್ಠವಾದ ಜ್ಙಾನ – ಚಾರಿತ್ರ – ಆರಾಧನೆಯನ್ನು ಪಡೆದನು.) ಅದು ಹೇಗೆಂದರೆ : ಈ ಜಂಬೂದ್ವೀಪದಲ್ಲಿ ದಕ್ಷಿಣಕ್ಕಿರುವ ಭರತಕ್ಷೇತ್ರದಲ್ಲಿ ಅಂಗರಾಜ್ಯವಿದೆ. ಅಲ್ಲಿ ಚಂಪಾನಗರವೆಂಬ ಪಟ್ಟಣವನ್ನು ಗಂಧಭಾಜನನೆಂಬ ರಾಜನು ಆಳುತ್ತಿದ್ದನು. ಅವನು ಇಂದ್ರನಿಗೆ ಸಮಾನವಾದ ಸುಖ – ಐಶ್ವರ್ಯ – ಸಂಪತ್ತುಗಳುಳ್ಳವನಾಗಿ ಪ್ರಜೆಗಳನ್ನು ನ್ಯಾಯದಿಂದ ಆಳುತ್ತಿದ್ದನು. ಸಂಪಾದಿಸಿದ ಜ್ಞಾನವುಳ್ಳವನಾಗಿ ಏಳು ಗುಣಗಳಿಂದ ಕೂಡಿದವನಾಗಿದ್ದನು. ಆ ಏಳು ಗುಣಗಳು ಯಾವುವೆಂದರೆ – ಸಮ್ಯಗ್ದರ್ಶನ ಶುದ್ದನಾಗಿರುವವನು, ಉತ್ತಮವಾದ ಕರ್ಮವುಳ್ಳವನು, ಒಳ್ಳೆಯ ಶೀಲಕ್ಕೂ ಗುಣಕ್ಕೂ ಮನೆಯಾಗಿರುವವನು, ಪ್ರಯತ್ನದಲ್ಲಿ ಆಸಕ್ತಿವುಳ್ಳವನು, ಗುರುಭಕ್ತನು, ಪ್ರವಚನದಲ್ಲಿ ಕುಶಲನು, ಪಾಂಡಿತ್ಯವುಳ್ಳವನು. ಈ ವಿಧವಾದ ಏಳು ಗುಣಗಳಿಂದ ಕೂಡಿದ ಗಂಧಭಾಜನರಾಜನು ಶರತ್ಕಾಲದ ಮೋಡದಂತೆ ಬೆಳ್ಳಗಿರುವ ಮತ್ತು ಅತ್ಯಂತ ರಮ್ಯವಾಗಿರುವ ‘ಸಹಸ್ರಕೂಟ’ ಎಂಬ ಜಿನಮಂದಿರವನ್ನು

  ವರತಂ ಮಹಾಪೂಜೆಯುಮಂ ಮಹಿಮೆಯುಮಭಿಷೇಕಂಗಳುಮಂ ಸಲಿಸುತಿರ್ಪೊಂ ಮತ್ತಾಪೊೞಲೊಳೊರ್ವಂ ಸಾಗರದತ್ತನೆಂಬೊಂ ಸೆಟ್ಟಿಯಾತನ ಭಾರ್ಯೆ ಸುಭದ್ರೆಯೆಂಬೊಳಾಯಿರ್ವರ್ಗಂ ಮಗಳ್ ಸುರೂಪೆಯೆಂಬೊಳ್ ಮತ್ತಾ ಪೊೞಲೊಳ್ ಪೆಱನೊರ್ವಂ ಸೆಟ್ಟಿ ನಾಗದತ್ತನೆಂಬೊನಾತಂಗೆ ಸುರೂಪೆಯಂ ಕೊಟ್ಟೊಡಾಯಿರ್ವರ್ಗಂ ಸುಕೇಶಿನಿಯೆಂಬ ಮಗಳಾದಳಾಕೆ ಬಳೆದತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವಭಾವವಿಲಾಸ ವಿಭ್ರಮಂಗಳನೊಡೆಯೊಳ್ ಪಲವುಂ ತೆಱದ ಶುಭಲಕ್ಷಣಂಗಳಿಂದಂ ಕೂಡಿದ ಮೆಯ್ಯನೊಡೆಯೊಳ್ ನವಯೌವನೆ ದೇವಗಣಿಕೆಯನೆ ಪೋಲ್ವಳೊಂದು ದಿವಸಂ ಅಷ್ಟಮಿಯಂ ನೋಂತು ದೇವರನರ್ಚಿಸಲೆಂದು ಸಹಸ್ರಕೂಟಚೈತಾನ್ಯಲಯಕ್ಕರ್ಚನೆಯಂ ಕೊಂಡು ಪೋದಳನ್ನೆಗಮರನುಮಾಗಳೆ ದೇವರಂ ಬಂದಿಸಲ್ ಬಂದೊಡರಸಂಗೆ ನಾಣ್ಚಿ ಬಸದಿಯೊಳಗಣ ಕಂಬದ ಮಱೆಯೊಳ್ ಕೇರಂ ಸಾರ್ದು ಪೊನ್ನ ಬೆಳಗುವ ಗಳಂತಿಗೆಯನಾದಮಾನುಪ್ಪುತ್ತಿರ್ದುದಂ ಪಿಡಿದು ನಿಂದಿರ್ದೊಳನರಸಂ ಕಂಡಿಲ್ಲಿಯ ಚಿತ್ರದ ಲೆಪ್ಪದ ಕಾಷ್ಟಕರ್ಮದ ರೂಪುಗಳೊಳೆಲ್ಲಮೀ ಸ್ತ್ರೀಯ ಜೀವವಿದ್ಧಮಿಂತುಟತಿಶಯ ಮೆಂದರಸನಾಕೆಯ ರೂಪಿಂಗಚ್ಚರಿವಟ್ಟು ಪೊಗೞೆ ಕೆಲದೊಳಿರ್ದ ಕಶ್ಚಿದೇವದತ್ತನೀಕೆ ಕನೆಯಿರ್ದೊಳೆಂದು ಪೇೞ್ದೊಡಾರ ಮಗಳೆಂದು ಬೆಸಗೊಂಡೊಡೀ ಪೊೞಲ್ಗೆ ಪ್ರಧಾನಂ ನಾಗದತ್ತಸೆಟ್ಟಿಯ ಮಗಳೆಂದು

          ಮಾಡಿಸಿದನು. ಆ ಜಿನಮಂದಿರಕ್ಕೆ ಯಾವಾಗಲೂ ಮಹಾಪೂಜೆಯನ್ನೂ ಮಹಿಮೆಯನ್ನೂ (ವಿಶೇಷವಾದ ಉತ್ಸವಗಳನ್ನು) ಅಭಿಷೇಕಗಳನ್ನೂ ಸಲ್ಲಿಸುತ್ತಿದ್ದನು. ಆ ಪಟ್ಟಣದಲ್ಲಿ ಸಾಗರದತ್ತನೆಂಬ ಒಬ್ಬ ಸೆಟ್ಟಿಯಿದ್ದನು. ಅವನ ಹೆಂಡತಿ ಸುಭದ್ರೆಯೆಂಬುವಳು. ಅವರಿಬ್ಬರಿಗೆ ಸುರೂಪೆಯೆಂಬುವಳು ಮಗಳು. ಮತ್ತು, ಅದೇ ಪಟ್ಟಣದಲ್ಲಿ ನಾಗದತ್ತನೆಂಬ ಇನ್ನೊಬ್ಬ ಸೆಟ್ಟಿಯಿದ್ದನು. ಅವನಿಗೆ ಸುರೂಪೆಯನ್ನು ಕೊಡಲು, ಆ ಇಬ್ಬರಿಗೆ ಸುಕೇಶಿನಿ ಎಂಬ ಮಗಳಾದಳು. ಆಕೆ ದೊಡ್ಡವಳಾಗಿ ಹೆಚ್ಚಾದ ರೂಪ, ಲಾವಣ್ಯ, ಸಾಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳುಳ್ಳ ನವಯುವತಿಯಾಗಿ ದೇವವಾರಾಂಗನೆಯನ್ನೂ ಹೋಲುತ್ತಿದ್ದಳು. ಆವಳು ಒಂದು ದಿವಸ ಅಷ್ಷಮಿಯ ವ್ರತವನ್ನು ಆಚರಿಸಿ ಜಿನೇಂದ್ರನನ್ನು ಪೂಜಿಸುವುದಕ್ಕಾಗಿ ಸಹಸ್ರಕೂಟ ಜಿನಮಂದಿರಕ್ಕೆ ಪೂಜಾದ್ರವ್ಯಗಳನ್ನು ತೆಗೆದುಕೊಂಡು ಹೋದಳು. ಅಷ್ಟರಲ್ಲಿ ಅದೇ ವೇಳೆಗೆ ಗಂಧಭಾಜನರಾಜನು ಜಿನೇಶ್ವರನನ್ನು ವಂದಿಸುವುದಕ್ಕಾಗಿ ಬಂದನು. ಸುಕೇಶಿನಿ ರಾಜನನ್ನು ಕಂಡು ನಾಚಿಕೆಪಟ್ಟು ಬಸದಿಯೊಳಗಿನ ಕಂಬದ ಮನೆಯಲ್ಲಿ ಗೋಡೆಯ ಬಳಿಗೆ ಹೋಗಿ ಚೆನ್ನಾಗಿ ಶೋಭಿಸುವ ಚಿನ್ನದ ಗಡಿಗೆಯನ್ನು ಹಿಡಿದು ನಿಂತುಕೊಂಡಿದ್ದಳು. ಅವಳನ್ನು ರಾಜನು ಕಂಡು “ಇಲ್ಲಿ ಚಿತ್ರಿಸಿಯೂ ಲೇಪ್ಯವಸ್ತುಗಳಿಂದಲೂ ಮರಗೆಲಸದಿಂದಲೂ ಮಾಡಿರುವ ರೂಪಗಳಲ್ಲೆಲ್ಲ ಈ ಹೆಂಗುಸಿನ ಸಜೀವವೆನಿಸುವ ಶಿಲ್ಪದ ಪ್ರತಿಮೆ ಬಹಳ ಶ್ರೇಷ್ಠವಾದುದು* ಎಂದು ಆಕೆಯ ರೂಪಕ್ಕೆ ಆಶ್ಚರ್ಯಪಟ್ಟು ಹೊಗಳಿದನು. ಆಗ ಅವನ ಪಕ್ಕದಲ್ಲಿದ್ದ ದೇವದತ್ತನೆಂಬ ಯಾವನೋ ಒಬ್ಬನು “ಈಕೆ ಅವಿವಾಹಿತೆಯಾದ ಓರ್ವ ಬಾಲಿಕೆ* ಎಂದು ಹೇಳಿದನು. ರಾಜನು ಅವಳನ್ನು ಯಾರ ಮಗಳೆಂದು ಕೇಳಿದಾಗ, ಅವನು – “ಈಕೆ ಈ ಪಟ್ಟಣದಲ್ಲಿ ಶ್ರೇಷ್ಠನಾದ ನಾಗದತ್ತ ಸೆಟ್ಟಿಯ ಮಗಳು* ಎಂದು ಹೇಳಿದನು. ರಾಜನು ಇದನ್ನು ಕೇಳಿ ಸುಮ್ಮಗಿದ್ದು,

      ಪೇೞ್ದೊಡರಸಂ ಕೇಳ್ದು ಕೆಮ್ಮಗಿರ್ದು ದೇವರ್ಗೆ ನಮಸ್ಕಾರಂಗೆಯ್ದು ಋಷಿಯರಂ ಬಂದಿಸಿ ತನ್ನ ಮನೆಗೆವೋದನ್ ಇತ್ತ ಸುಕೇಶಿನಿಯುಂ ದೇವರನರ್ಚಿಸಿ ಬಂದಿಸಿ ಗುರುಪರಿವಿಡಿಯಿಂದಂ ರಿಸಿಯರಂ ಬಂದಿಸಿ ವ್ರತಂಗಳನೇಱಸಿಕೊಂಡು ಸಿದ್ದಸೇಸೆಯಂ ತಾಯ್ಗಂ ತಂದೆಗಂ ಪೋಗಿ ಕೊಟ್ಟೊಡವರ್ಗಳುಂ ತಲೆಯೊಳಿಟ್ಟುಕೊಂಡು ಯೌವನಂ ನೆಱೆದ ಕೂಸಿನ ರೂಪಂ ನೋಡುತ್ತಿರ್ದಾರ್ಗೆ ಕುಡುವಮೆಂದು ತಮ್ಮೊಳ್ ನುಡಿಯತ್ತಿರ್ಪಿನಮರಸಂ ಕನ್ನೆಯ ರೂಪಂ ಕಂಡಾಟಸಿ ಕೂಸಿನ ತಾಯಪ್ಪ ಸುರೂಪೆಗೆ ಬೞಯನಟ್ಟಿ ಬರಿಸಿ ಕೂಸನಾರ್ಗೆ ಕೊಟ್ಟಪಿರೆಂದು ಬೆಸಗೊಂಡೊಡೆನ್ನ ತಮ್ಮಂ ವರಾಂಗನೆಂಬೊನಾತನ ಮಗಂ ಜಿತರಂಗನೆಂಬೊನೆನ್ನ ಸೋದರಳಿಯನಾತಂಗ ಕೊಟ್ಟಪೆನೆಂದು ಪೇೞ್ದೊಡರಸಂ ಮಧುಸೇನಂ ಮಧುಸೂದನರೆಂಬಿರ್ವರ್ ಪ್ರಧಾನವೆರ್ಗಡೆಗಳಂ ನಾಗದತ್ತಸೆಟ್ಟಿಯಲ್ಲಿಗೆ ಕೂಸಂ ಬೇಡಿಯಟ್ಟಿಯುತ್ತವಳನಾಗಿಯವರ ಬೞಯನೆ ತಾನುಂ ನಾಗದತ್ತನ ಮನೆಗೆ ಪೋಗಿ ಕೂಸಂ ಬೇಡಿ ಪೆತ್ತಂ ನಾಗದತ್ತನುಮಷ್ಪಾಹ್ನಿಕ ಮಹಾಮಹಿಮೆಯನೆಂಟು ದಿವಸಂ ಮಾಡಿ ಪ್ರಶಸ್ತ ದಿನ ವಾರ ನಕ್ಷತ್ರ ಮುಹೂರ್ತ ಹೋರಾಲಗ್ನದೊಳ್ ಕೂಸಿನನುಕೂಲದೊಳ್ ಪಾಣಿಗ್ರಹಣಪುರಸ್ಸರಂ ಸುಕೇಶಿನಿಯಂ ಗಂಧಭಾಜನೆಂರಸಂಗೆ ಕೊಟ್ಟನಿಂತು ಮಹಾವಿಭೂತಿಯಿಂದಂ ಮದುವೆನಿಂದು ಗಂಧಭಾಜನನೃಪತಿಯುಂ ಸುಕೇಶಿನಿಯೊಳಿಷ್ಟವಿಷಯಕಾಮಭೋಗಂಗಳಂ ಪಲಕಾಲಮನುಭವಿಸುತ್ತರೆ

          ದೇವರಿಗೆ ನಮಸ್ಕಾರ ಮಾಡಿ, ಋಷಿಗಳಿಗೆ ವಂದಿಸಿ, ತನ್ನ ಮನೆಗೆ ತೆರಳಿದಳು. ಇತ್ತ ಸುಕೇಶಿನಿ ದೇವರನ್ನು ಪೂಜಿಸಿ, ವಂದಿಸಿದಳು. ಗುರುಪರಂಪರೆಯ ಕ್ರಮದಿಂದ ಋಷಿಗಳನ್ನು ವಂದಿಸಿ, ವ್ರತಗಳನ್ನು ಧಾರಣೆ ಮಾಡಿಕೊಂಡು ಸಿದ್ದರನ್ನು ಅರ್ಚಿಸಿದ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಹೊಗಿ ತನ್ನ ತಾಯಿತಂದೆಗಳಿಗೆ ಕೊಟ್ಟಳು. ಅವರು ಅದನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡರು. ತಾರುಣ್ಯದಿಂದ ಕೂಡಿದ ಮಗಳ ರೂಪವನ್ನು ನೋಡುತ್ತ, ‘ಈಕೆಯನ್ನು ಯಾರಿಗೆ ಮದುವೆ ಮಾಡಿ ಕೊಡಲಿ’ ಎಂದು ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ರಾಜನು ಆ ಕನ್ನಿಕೆಯ ಸೌಂದರ್ಯವನ್ನು ಕಂಡು ಆಸೆಪಟ್ಟು ಆಕೆಯ ತಾಯಿಯಾದ ಸುರೂಪೆಯ ಬಳಿಗೆ ದೂತರನ್ನು ಕಳುಹಿಸಿ ಬರಮಾಡಿಸಿದನು. ಈ ಕನ್ಯೆಯನ್ನು ಯಾರಿಗೆ ಕೊಡುತ್ತೀರಿ ? – ಎಂದು ಕೇಳಿದನು. ಅದಕ್ಕೆ ಆಕೆ – “ನನಗೆ ವರಾಂಗನೆಂಬ ತಮ್ಮನಿದ್ದಾನೆ, ಅವನ ಮಗ ಜಿತರಂಗನೆಂಬುವನು, ನನಗೆ ಸೋದರಳಿಯನು. ಅವನಿಗೆ ಕೊಡುತ್ತೇವೆ* ಎಂದಳು. ರಾಜನು ಮಧುಸೇನ ಮಧುಸೂದನ ಎಂಬಿಬ್ಬರು ಪ್ರಮುಖರಾದ ಹೆಗ್ಗಡೆಗಳನ್ನು ನಾಗದತ್ತಸೆಟ್ಟಿಯಲ್ಲಿಗೆ ಆತನ ಮಗಳನ್ನು ತನಗೆ ಕೇಳುವುದಕ್ಕಾಗಿ ಕಳುಹಿಸಿದನು. ತನ್ನ ಉತ್ಕಂಠತೆಯಿಂದ ಅವರ ಬಳಿಯಲ್ಲೇ ತಾನೂ ನಾಗದತ್ತನ ಮನೆಗೆ ಹೋಗಿ ಆ ಕನ್ಯೆಯನ್ನು ತನಗೆ ಕೊಡುವಂತೆ ಕೇಳಿ ಅವನ ಸಮ್ಮತಿ ಪಡೆದುಕೊಂಡನು. ನಾಗದತ್ತನು ಎಂಟು ದಿವಸಗಳ ಅಷ್ಟಾಹ್ನಿಕಮಹೋತ್ಸವಗಳನ್ನು ಮಾಡಿ, ಶುಭಕರವಾದ ದಿನ, ವಾರ, ನಕ್ಷತ್ರ, ಮೂಹೂರ್ತ, ಹೋರೆ, ಲಗ್ನಗಳು ತನ್ನ ಮಗಳಿಗೂ ಅನುಕೂಲವಾಗಿ ಇರುವಂದು ಪಾಣಿಗ್ರಹಣ ಪೂರ್ವಕವಾಗಿ ಸುಕೇಶಿಯನ್ನು ಗಂಧಭಾಜನನೆಂಬ ರಾಜನಿಗೆ ಕೊಟ್ಟನು. ಹೀಗೆ ಮಹಾವೈಭವದಿಂದ ಮದುವೆಯಾದ ನಂತರ ಗಂಧಭಾಜನರಾಜನು ಸುಕೇಶಿನಿಯೊಂದಿಗೆ ಇಷ್ಟವಿಷಯಗಳ ಕಾಮಸುಖಗಳನ್ನು ಹಲವು ಕಾಲ ಅನುಭವಿಸುತ್ತಿದ್ದನು. ಹೀಗಿರಲು

    ಮತ್ತೊಂದು ದಿವಸಂ ಕೌಸಲಾಪತಿಯಪ್ಪತಿಬಳನೆಂಬರಸಂಗಂ ಕಳಿಂಗಾಪತಿಯಪ್ಪ ಕಳಿಂಗನೆಂಬರಸಂಗಂ ತಮ್ಮೊಳ್ ವಿಗ್ರಹಮಾದೊಡೆ ಗಂಧಭಾಜನನೃಪತಿ ತನ್ನ ಮತಿಶ್ರುತನೆಂಬ ಮಂತ್ತಿಯನಟ್ಟಿ ಇರ್ವರ್ಗಂ ಸಂಮಾಡಿದೊಡೆ ಕಳಿಂಗನೆಂಬರಸಂ ಮಧುಸೂದನನೆಂಬ ಪೆರ್ಗಡೆಯ ಕೆಯ್ಯೊಳ್ ಮದಾಂಧಗಂಧಹಸ್ತಿಯ ಗಂಧಭಾಜನನೃಪತಿಗೆ ಪಾಗುಡಮಟ್ಟಿದೊಡದಂ ಸೊರ್ಕಿನಿಂದಂ ಮಸಗಿದುದಂ ಗಂಧಹಸ್ತಿಯಂ ಸುಕೇಶಿನಿ ಕಂಡು ಜಾತಿಸ್ಮರೆಯಾಗಿ ಮೂರ್ಛೆವೋಗಿರ್ದಳಂ ದಾದಿ ಮೊದಲಾಗಿ ಕೆಲದೊಳಿರ್ದೊರೆಲ್ಲಂ ಚಂದನದ ನೀರ್ಗಳಂ ತಳಿದು ಬೀಸೆ ನೀಡೞಂದೆೞ್ಚತ್ತಳನ್ನೆಗಮರಸನುತ್ತವಳನಾಗಿ ಪರಿತಂದಿದೇನೀಕೆಗೇಕಿಂತಾಯ್ತೆಂದು ಬೆಸಗೊಳೆ ದಾದಿಯಿಂದಳ್ ಸೊರ್ಕಾನೆಯಂ ಕಂಡು ಮೂರ್ಛೆವೋದಳೆಂದು ಪೇೞೊಡಾ ಮಾತನರಸಂ ಕೇಳ್ದು ಮಱುಸೂೞನಾನೆಯಂ ಕಂಡಂಜದಂತಿರೆ ಸುಕೇಶಿನಿಯ ಮಾಡದ ಕೇರ್ಗ್ಗಳೆಲ್ಲಾಯೆಡೆಗಳೊಳಂ ವ್ಯಾಳಂಗಳಪ್ಪಾನೆಗಳಂ ತನ್ನ ಚಿತ್ತಾರಿಗರಿಂದಂ ಬರೆಯಿಸಿದಂ ಮತ್ತೆ ಸುಕೇಶಿನಿಯುಂ ತನ್ನ ಮುನ್ನಿನ ಜನ್ನದೊಳ್ ನೆಗೞ್ದುದೆಲ್ಲಮಂ ಪಟದೊಳ್ ತಾನೆ ಬರೆದಾರುಮಱಯದಂತಿರೇಕಾಂತದೊಳ್ ನೋಡುತ್ತಿರ್ಕುಮಿಂತು ಕಾಲಂ ಸಲೆ ಮತ್ತೊಂದು ದಿವಸಂ ಮುನ್ನಿನ ಗಂಧಹಸ್ತಿಯೊಡನೆ ಬಾದಿಯೊಳ್ ಮೂವತ್ತೆರಡು ಗಜಕ್ರೀಡೆಗಳಿಂದಂ ನೀಡುಂ ಬೇಗಂ ಕ್ರೀಡಿಸಿಯಾನೆಯಂ ಸೇದೆಗೆಡಿಸಿ ತನ್ನ ಬಸಕ್ಕೆ, ಮಾಡಿಯೇಱಯಂಕುಸಮಂ

          ಮತ್ತೊಂದು ದಿನ ಕೌಶಲದೇಶಕ್ಕೆ ಒಡೆಯನಾದ ಅತಿಬಳನೆಂಬ ರಾಜನಿಗೂ ಕಳಿಂಗ ದೇಶದ ಒಡೆಯನಾದ ಕಳಿಂಗನೆಂಬ ಅರಸನಿಗೂ ತಮ್ಮೊಳಗೆ ಯುದ್ದವಾಯಿತು. ಆ ಸಂದರ್ಭದಲ್ಲಿ ಗಂಧಭಾಜರಾಜನು ಮತಿಶ್ರುತನೆಂಬ ತನ್ನ ಮಂತ್ರಯನ್ನು ಕಳುಹಿಸಿ ಇಬ್ಬರಿಗೂ ಸಂಯನ್ನು ಮಾಡಿದನು. ಕಳಿಂಗರಾಜನು ಮಧುಸೂದನನೆಂಬ ಅಕಾರಿಯ ಕೈಯಲ್ಲಿ ಸೊಕ್ಕಿ ಕಂಗೆಟ್ಟ ಗಂಧವಾರ ಣವನ್ನು ಗಂಧಭಾಜನರಾಜನಿಗೆ ಕಾಣಿಕೆಯಾಗಿ ಕಳುಹಿಸಿಕೊಟ್ಟನು. ಗರ್ವೋದ್ರೇಕದಿಂದ ಕೂಡಿದ ಆ ಮದ್ದಾನೆಯನ್ನು ಸುಕೇಶಿನಿಯು ಕಂಡು ಪೂರ್ವಜನ್ನದ ಸ್ಮರಣೆ ಬಂದವಳಾಗಿ ಮುರ್ಛಿತಳಾದಳು. ಆಗ ಬಳಿಯಲ್ಲಿದ್ದ ದಾದಿಯರು ಮುಂತಾದವರು ಶ್ರೀಗಂಧದ ನೀರನ್ನು ಸೇಚಿಸಿ ಗಾಳಿ ಹಾಕಲು ಬಹಳ ಹೊತ್ತಿನ ನಂತರ ಎಚ್ಚೆತ್ತಳು. ಅಷ್ಟರಲ್ಲಿ ರಾಜನು ಉತ್ಕಂಠತನಾಗಿ ಬಂದು ‘ಇವರಿಗೆ ಹೀಗೆ ಆಗಲು ಕಾರಣವೇನು ?’ ಎಂದು ಕೇಳಿದನು. ಆಗ ದಾದಿಯು “ಈಕೆ ಮದ್ದಾನೆಯನ್ನು ಕಂಡು ಮೂರ್ಛೆಹೋದಳು* ಎಂದು ಹೇಳಿದಳು. ಆ ಮಾತನ್ನು ರಾಜನು ಕೇಳಿ ಆಕೆ ಮತ್ತೊಂದು ಬಾರಿ ಆನೆಯನ್ನು ಕಂಡಾಗ ಹೆದರದಂತೆ ಮಾಡುವುದಕ್ಕಾಗಿ ಸುಕೇಶಿನಿಯ ಮನೆಯ ಗೋಡೆಗಳ ಎಲ್ಲಾ ಕಡೆಗಳಲ್ಲಿಯೂ ತುಂಟಾಟ ಮಾಡತಕ್ಕ ಆನೆಗಳನ್ನು ತನ್ನ ಚಿತ್ರಕಾರರಿಂದ ಬರೆಯಿಸಿದನು. ಆಮೇಲೆ ಸುಕೇಶಿನಿ ತನ್ನ ಹಿಂದಿನ ಜನ್ಮದಲ್ಲಿ ನಡೆದುದೆಲ್ಲವನ್ನೂ ಪಟದಲ್ಲಿ ತಾನೇ ಬರೆದು ಯಾರೂ ತಿಳಿಯದ ಹಾಗೆ ಒಬ್ಬಳೇ ಇದ್ದು ಹೀಗೆಯೇ ಕಾಲಕಳೆಯಿತು. ಮತ್ತೊಂದು ದಿವಸ ಗಂಧಭಾಜನನು ಹಿಂದಿನ ಮದ್ದಾನೆಯೊಡನೆ ಖೆಡ್ಡಾದಲ್ಲಿ ಮೂವತ್ತೆರಡು ಸಾರಿ ಗಜಕ್ರೀಡೆಗಳನ್ನು ಬಹಳ ಹೊತ್ತಿನವರೆಗೆ ನಡೆಸಿ ಆನೆಯನ್ನು ಬಳಲಿಸಿ ತನ್ನ ವಶಕ್ಕೆ ತಂದನು. ಅದರ ಮೇಲೆರಿ ಅಂಕುಶವನ್ನು ಹೊಳೆಯಿಸುತ್ತ, ರಾಣಿಯ ಬಳಿಗೆ ಬಂದು ನಿಂತನು. “ನಾನು ಹೀಗೆ ಮಾಡಿದ್ದು ಆಗಬಹುದೇ ? ಮೆಚ್ಚಿದೆಯಾ ? ಎಂದು ತನ್ನ ಸಾಹಸವನ್ನು ಹೇಳಿ ಮೆರೆದುಕೊಂಡನು. ಆಗ ಸುಕೇಶಿನಿ ಹೀಗೆಂದಳು – –

          ಪೊಳೆಯಿಸುತ್ತಮರಸಿಯಲ್ಲಿಗೆ ವಂದು ನಿಂದಿತಂಕ್ಕುಮೆ ಮಚ್ಚಿದಾ ಎಂದು ತನ್ನ ಸಾಹಸಮಂ ಪೇೞ್ದು ಮೆಱೆಯೆ ಸುಕೇಶಿನಿಯೆಂದೊಳಿದೇನೆಂಬಾನೆ ತಗರೊಳೋರಂತಪ್ಪುದು ಚಂದನಮಲಯಮೆಂಬ ಪಿರಿಯ ಪರ್ವತದೊಳ್ ಇಂದ್ರನೀಲಮಾಣಿಕದೊಳೋರಂತಪ್ಪ ಬಣ್ಣಮನೊಡೆಯದು ಮಲಯಸುಂದರನೆಂಬಾನೆಯುಂಟು ಹಸ್ತಿಯೂಥಕ್ಕೆಱೆಯನಪ್ಪುದು ಎಲ್ಲಾ ಕಾಲಮುಂ ಮದದಿಂದಂ ಪೆರ್ಚುತ್ತಿರ್ದುದು ಕೆಂದಾವರೆಯ ವಣ್ಣದೊಳೋರಂತಪ್ಪ ಬಣ್ಣಮನೊಡೆಯ ಪದ್ಮಾವತಿಯೆಂಬ ಪಿಡಿಯೊಡನೆ ಕ್ರೀಡಿಸುತ್ತಿರ್ಪಾನೆಯಂ ನಿನ್ನ ವಸಕ್ಕೆ ಮಾಡಿ ಪಿಡಿದೇೞಕೊಂಡು ವಂದೊಡೆ ನಿನ್ನ ಗಜಪ್ರಿಯತೆಯುಮೇೞಯಾಡಲ್ ಬಲ್ಮೆಯುಂ ಕಲಿತನಮುಂ ಸಾಹಸಮುಂ ಗಂಡಗುಣಮುಮ ನಱಯಲಕ್ಕುಮಾಯಾನೆಯುಂ ತಂದಂದು ಗಂಡರ್ ನಿನ್ನನ್ನರೀ ಭುವನದೊಳಾರುಮಿಲ್ಲೆಂದೊಸೆದು ಮಚ್ಚಿ ಪೊಗೞ್ವೆನೆಂದೊಡರಸನಿಂತೆಂದಂ ನೀನಪ್ಪೊಡಿಲ್ಲಿ ಪುಟ್ಟಿದ ಆಯಾನೆಯುಮನೆಲ್ಲಿ ಕಂಡೆಯೆಂತಱವೆಂಯೆಂದು ಬೆಸಗೊಳೆ ಸುಕೇಶಿನಿಯಿಂತೆದಳ್ ಆಂ ಮುನ್ನಿನ ಜನ್ಮದೊಳ್ ಮನೋವೇಗೆಯೆನೆಂಬ ವಿದ್ಯಾಧರಿ ಎನ್ನಂದಿನ ಭರ್ತಾರಂ ಮಣಿಚೂಳನೆಂಬೊಂ ವಿದ್ಯಾಧರನಾತನೊಡನೆ ಭೌಮವಿಹಾರಾರ್ಥಂ ತೊೞಲ್ವಲ್ಲಿ ಚಂದನಮಲಯಮೆಂಬ ಪರ್ವತದೊಳ್ ಕರಿಣೀವೃಂದಂಬೆರಸಾಡುವ ಕರಿಪತಿಯನೈರಾವಣಸನ್ನಿಭಮಂ ಕಂಡೆನೆಂದುರ್ಕೆವದಿಂದಂ ಪೇೞ್ದೊಡಾ ಮಾತನರಸಂ ಕೇಳು ಪೂರ್ವಜನ್ಮಾಂತರದೊಳ್ ಕಟ್ಟೆಪಟ್ಟ ಮುಳಿಸನೊಡೆಯೊಂ ತನ್ನುಳ್ಳ ಸಮಸ್ತಬಲಂಬೆರಸು ಪೋಗಿ

          ಇದೇನು ಮಹಾ ! ಕ್ಷುಲ್ಲಕವಾದ ಆನೆ. ಇದು ಟಗರಿನಂತಿರುವುದು. ಚಂದನಮಲಯವೆಂಬ ದೊಡ್ಡ ಪರ್ವತದಲ್ಲಿ ಇಂದ್ರನೀಲಮಾಣಿಕ್ಯದ ಹಾಗಿರುವ ಬಣ್ಣವನ್ನುಳ್ಳ ಮಲಯಸುಂದರನೆಂಬ ಆನೆಯಿದೆ. ಅದು ಆನೆಗಳ ಹಿಂಡಿಗೆ ಒಡೆಯನಾಗಿರುವುದು. ಎಲ್ಲಾ ಕಾಲದಲ್ಲಿಯೂ ಸೊಕ್ಕೇರಿಕೊಂಡಿರುವುದು. ಕೆಂಪು ತಾವರೆಯ ಬಣ್ಣದ ಹಾಗಿರುವ ಬಣ್ಣವುಳ್ಳ ಪದ್ಮಾವತಿಯೆಂಬ ಹೆಣ್ಣಾನೆಯೊಡನೆ ಆಡುತ್ತಿರುವ ಆ ಆನೆಯನ್ನು ನೀನು ವಶಮಾಡಿ ಹಿಡಿದು ಅದನ್ನೇರಿಕೊಂಡು ಬಂದರೆ ಆನೆಸವಾರಿಯಲ್ಲಿ ನಿನಗಿರುವ ಪ್ರೀತಿಯನ್ನೂ ಪ್ರಾಢಿಮೆಯನ್ನೂ ಪೌರುಷವನ್ನೂ ತಿಳಿಯಬಹುದು. ಆ ಆನೆಯನ್ನೂ ನೀನು ತಂದೆಯಾದರೆ, ನಿನ್ನಂತಹ ಗಂಡುಗಲಿಗಳು ಈ ಲೋಕದಲ್ಲಿ ಯಾರೂ ಇಲ್ಲ – ಎಂದು ಪ್ರೀತಿಪಟ್ಟು ಮೆಚ್ಚಿ ನಿನ್ನನ್ನು ಹೊಗಳುವೆನು – * ಎಂದಳು. ಆಗ ರಾಜನು ಹೀಗೆಂದನು – “ನೀನಾದರೆ ಹುಟ್ಟಿದ್ದು ಇಲ್ಲಿ. ಆ ಆನೆಯನ್ನು ಎಲ್ಲಿ ಕಂಡೆ ಮತ್ತು ಅದು ನಿನಗೆ ಹೇಗೆ ಗೊತ್ತು ? * ಎಂದು ಕೇಳಲು ಸುಕೇಶಿನಿ ಹೀಗೆಂದಳು – “ನಾನು ಹಿಂದಿನ ಜನ್ಮದಲ್ಲಿ ಮನೋವೇಗೆ ಎಂಬ ವಿದ್ಯಾಧರಿಯಾಗಿದ್ದೆನು. ಆಗಿನ ನನ್ನ ಗಂಡನು ಮಣಿಚೂಳನೆಂಬ ವಿದ್ಯಾಧರನು. ನಾನು ಆತನೊಡನೆ ಭೂಮಿಯ ಮೇಲೆ ಸಂಚಾರ ಮಾಡುವ ವಿನೊದಕ್ಕಾಗಿ ಸುತ್ತುಡಾತ್ತಿದ್ದಾಗ ಚಂದನಮಲಯವೆಂಬ ಬೆಟ್ಟದಲ್ಲಿ ಹೆಣ್ಣಾನೆಗಳ ಹಿಂಡನ್ನು ಕೂಡಿಕೊಂಡು ಕ್ರೀಡಿಸತಕ್ಕ ಆನೆಗಳೊಡೆಯನನ್ನು ಕಂಡೆನು. ಅದು ಇಂದ್ರನ ಐರಾವತದಂತೆ ಕಾಣುತ್ತಿತ್ತು – * ಎಂದು ಕಪಟದಿಂದ ಹೇಳಿದನು. ಆ ಮಾತನ್ನು ರಾಜನು ಕೇಳಿ ಹಿಂದಿನ ಯಾವುದೋ ಜನ್ಮದಲ್ಲಿ ಕಟ್ಟಲ್ಪಟ್ಟ ಕೋಪವುಳ್ಳವನಾಗಿ ತನ್ನಲ್ಲಿದ್ದ ಎಲ್ಲಾ ಸೈನ್ಯವನ್ನೂ ಕೂಡಿಕೊಂಡು ಹೊಗಿ ಮಲುಪರ್ವತವೆಲ್ಲವನ್ನೂ ಆವರಿಸಿ ಸುತ್ತಲೂ ಮುತ್ತಗೆ ಹಾಕಿದನು. ಆಗ ಮೋಡದ ಶಬ್ದದಂತೆ ಮೃದು ಮತ್ತು ಗಂಭೀರವಾದ

          ಮಲಯಪರ್ವತಮೆಲ್ಲಮಂ ಬಳಸಿ ಸುತ್ತಿಮುತ್ತಿದಾಗಳಿಂದ್ರನೀಲಮಾಣಿಕದ ತೇಪದೊಳೋರಂತಪ್ಪ ಮೆಯ್ಯನೊಡೆಯ ಗಜಪತಿಯುಂ ಮುಗಿಲಧ್ವನಿಯ ಮೆಲ್ಗಂಭೀರಮಪ್ಪ ಗರ್ಜನೆನೊಡೆಯದುಂ ಬಂದು ಪಡೆಯೆಲ್ಲಮಂ ಹತವಿತತಕೋಳಾಹಳಮೆೞೆದು ಕೊಲ್ವುದನಾದಮಾನುಂ ಕಲಿಯಪ್ಪುದನರಸಂ ಕಂಡು ಪಿಡಿಯಲಾಱದಾನೆಯಂ ಕೊಂದೆರಡುಂ ನಿಡಿಯ ತೋರಮಪ್ಪ ಕೊಂಬುಗಳುಮಂ ಕುಂಭಸ್ಥಳದ ಮುತ್ತುಗಳುಮಂ ಕೊಂಡೊಸಗೆಯಿಂದಂ ಬೇಗಂ ಚಂಪಾಪುರಕ್ಕೆ ವಂದರಮನೆಯಂ ಪೊಕ್ಕರಸಿಯಂ ಕಂಡು ನಿನ್ನ ನಚ್ಚುವ ಮಲಯ ಕೊಂಬುಗಳುಮಂ ಮುತ್ತುಗಳುಮಂ ಕೊಳ್ಳೆಂದವಂ ಸುಕೇಶಿನಿಯ ಮುಂದೆ ತಂದಿಟ್ಟೊಡೆ ಸುಕೇಶಿನಿಮಯುಂ ಹಾ ಮಲಯಸುಂದರಾ ಹಾ ಎನ್ನ ನಲ್ಲನೆ ಹಾ ಎನ್ನ ಮಲಯಸುಂದರನಪ್ಪ ಸ್ವಾಮಿಯೆಂದು ಪ್ರಳಾಪಂಗೆಯ್ದು ಎರಡು ಕೊಂಬುಗಳುಮಂ ತೞ್ಕೈಸಿಯಾದ ಮಾನುಂ ಬಿಗಿದಪ್ಪಿಕೊಂಡು ಸತ್ತಳ್ ಸುಕೇಶಿನಿ ಸತ್ತುದರ್ಕ್ಕರಸಂ ಮೊದಲಾಗಿ ಪರಿವಾರಮೆಲ್ಲಮುಂ ಬೆಱಗಾಗಿ ವಿಸ್ಮಯಂಬಟ್ಟು ದುಃಖಂಗೆಯ್ದರ್ ಕೆಲವು ದಿವಸದಿಂ ಯಶೋಧರರೆಂಬ ಕೇವಲಜ್ಞಾನಿಗಳ್ ವಿಹಾರಿಸುತ್ತಮಾ ಚಂಪಾನಗರಕ್ಕೆ ವಂದು ಪ್ರಮದೋದ್ಯಾನವನದೊಳಿರ್ದರೆಂಬ ಮಾತನರಸಂ ರಿಸಿನಿವೇದಕನಿಂದಱದು ಸಪರಿವಾರಂಬೆರಸು ಬಂದರ್ಚಿಸಿ ಯಥೋಚಿತಸ್ಥಾನದೊಳಿರ್ದಂ ಮತ್ತಂ ನಾಗದತ್ತಸೆಟ್ಟಿಯುಂ ಸುರೂಪೆಯುಂ ವರಾಂಗನುಂ ಪ್ರ್ರಿಯಂಗುವುಂ ಮೊದಲಾಗೊಡೆಯ ಶ್ರಾವಕಜನಂಗಳ್ ಬಂದರ್ಚಿಸಿ ತಂತಮ್ಮೆಡೆಯೊಳಿರ್ದು ಧರ್ಮಮಂ ಕೇಳ್ದು ತದನಂತರಮೆ ವೈರಾಗ್ಯಮಾಗಿ ಸುಕೇಶಿನಿಯ ದುಃಖಮಂ ಸೈರಿಸಲಾಱದೆ ಸುಕೇಶಿನಿಯ ತಂದೆಯಪ್ಪ ನಾಗದತ್ತಸೆಟ್ಟಿಯುಂ ತಾಯ್

          ಗರ್ಜನೆಯನ್ನುಳ್ಳ, ಇಂದ್ರನೀಲ ಮಾಣಿಕ್ಯದ ಕಾಂತಿಯನ್ನು ಹೋಲುವ ದೇಹವುಳ್ಳ ಆನೆಗಳ ರಾಜನು ಬಂದು ರಾಜನ ಸೈನ್ಯನೆಲ್ಲಾ ಚಲ್ಲಾಪಿಲ್ಲಿಯಾಗುವಂತೆ ಹೊಡೆದು ಎಳೆದು ಕೊಲ್ಲಲು ತೊಡಗಿತು. ಈ ಆನೆ ಅತ್ಯಂತ ಶೌರ್ಯವುಳ್ಳದೆಂಬುದನ್ನು ರಾಜನು ಕಂಡು, ಅದನ್ನು ಹಿಡಿಯಲಾರದೆ ಆ ಆನೆಯನ್ನು ಕೊಂದು ಅದರ ಉದ್ದವಾದ ಮತ್ತು ದಪ್ಪವಾದ ಎರಡು ದಾಡೆಗಳನ್ನೂ ಅದರ ತಲೆಯ ಮುತ್ತುಗಳನ್ನು ತೆಗೆದುಕೊಂಡು, ಸಂತೋಷವಾರ್ತೆಯೊಂದಿಗೆ ಬೇಗನೆ ಚಂಪಾಪುರಕ್ಕೆ ಬಂದನು. ಅರಮನೆಯನ್ನು ಪ್ರವೇಶಿಸಿ ಅರಸಿಯನ್ನು ಕಂಡು “ನಿನ್ನ ಪ್ರೀತಿಯ ಮಲಯಸುಂದರನ ದಾಡೆಗಳನ್ನೂ ಮುತ್ತುಗಳನ್ನೂ, ಇದೋ, ತೆಗೆದುಕೋ” ಎಂದು ಅವನ್ನು ಸುಕೇಶಿನಿ ಎದುರಿಗೆ ತಂದಿಟ್ಟನು. ಆಗ ಅವಳು ಹಾ ಮಲಯಸುಂದರಾ, ಹಾ ನನ್ನ ಪ್ರಿಯನೇ ನನ್ನ ಮಲಯಸುಂದರನಾದ ಒಡೆಯನೇ ! ’ ಎಂದು ಅತ್ತು ಎರಡು ದಾಡೆಗಳನ್ನೂ ಗಾಢವಾಗಿ ಅಪ್ಪಿಕೊಂಡು ಪ್ರಾಣಬಿಟ್ಟಳು. ಸುಕೇಶಿನಿ ಸತ್ತುದಕ್ಕಾಗಿ ರಾಜನೂ ಪರಿವಾರವೆಲ್ಲವೂ ಆಶ್ವರ್ಯಪಟ್ಟು ದುಃಖಿಸಿದರು. ಕೆಲವು ದಿವಸಗಳ ನಂತರ ಯಶೋಧರರೆಂಬ ಕೇವಲಜ್ಞಾನವುಳ್ಳ ಋಷಿಗಳು ಸಂಚಾರ ಮಾಡುತ್ತ ಆ ಚಂಪಾನಗರಕ್ಕೆ ಬಂದು ಪ್ರಮದೋದ್ಯಾನದಲ್ಲಿ ಇದ್ದಾರೆ – ಎಂಬ ಸಂಗತಿಯನ್ನು ರಾಜನು ಋಷಿನಿವೇದಕನ ಮಾತಿನಿಂದ ತಿಳಿದು ಪರಿವಾರಸಮೇತನಾಗಿ ಬಂದು ಅವರನ್ನು ಪೂಜಿಸಿ ಯಥೋಚಿತವಾದ ಸ್ಥಾನದಲ್ಲಿ ಇದ್ದನು. ಆ ಮೇಲೆ ನಾಗದತ್ತ ಸೆಟ್ಟಿ, ಸುರೂಪೆ, ವರಾಂಗ, ಪ್ರಿಯಂಗು – ಮುಂತಾಗಿರುವ ಶ್ರಾವಕಜನರು ಬಂದು ಪೂಜಿಸಿ ತಮ್ಮ ತಮ್ಮ ಸ್ಥಾನಗಳಲ್ಲಿ ಇದ್ದು ಧರ್ಮಬೋದನೆಯನ್ನು ಕೇಳಿದರು. ಅನಂತರ ವೈರಾಗ್ಯವುಂಟಾಗಿ, ಸುಕೇಶಿನಿಯ ಶೋಕವನ್ನು ಸಹಿಸಲಾರದೆ, ಅವಳ ತಂದೆ ನಾಗದತ್ತ ಸೆಟ್ಟಿ, ತಾಯಿಯಾದ ಸುರೂಪೆ,

          ಸುರೂಪೆಯುಂ ಮಾವನಪ್ಪ ವರಾಂಗನುಂ ವರಾಂಗನ ಭಾರ್ಯೆಯಪ್ಪ ಪ್ರಿಯಂಗುವುಮಂತು ನಾಲ್ವರುಮೆೞ್ದಭಿಮುಖರಾಗಿ ದೀಕ್ಷಾಪ್ರಸಾದಂಗೆಯ್ಯಿಂ ಭಟಾರಾ ಎಂದು ಬೇಡಿ ತಪಂಬಟ್ಟರ್ ಮತ್ತಂ ಸುಕೇಶಿನಿಯಾ ಮಲಯಸುಂದರನೆಂಬಾನೆಯ ಕೊಂಬುಗಳನಪ್ಪಿ ಸತ್ತಳೆಂಬ ಮಾತಂ ವರಾಂಗನುಂ ಕೇಳ್ದು ಜನ್ಮಾನುಬಂಯಪ್ಪ ಸ್ನೇಹಂ ಕಾರಣಮಾಗಿ ದುಃಖಮಂ ಸೈರಿಸಲಾಱದೆ ತಪಂಬಟ್ಟು ನಿದಾನಸಹಿತಂ ತಪಂಗೆಯ್ದನಿತ್ತ ಗಂಧಭಾಜನನೃಪತಿ ಯಶೋಧರಕೇವಲಿಗಳನಿತೆಂದು ಬೆಸಗೊಂಡಂ ಭಟಾರಾ ಸುಕೇಶಿನಿ ಮಲಯಸುಂದರನೆಂಬಾನೆಯ ಕೊಂಬುಗಳನಪ್ಪಿಕೊಂಡು ಸತ್ತುದರ್ಕೆ ಕಾರಣಮೇನೆಂದು ಬೆಸಗೊಂಡೊಡೆ ಕೇವಲಜ್ಞಾನಿಗಳಿಂತೆಂದು ಪೇೞ್ದರ್ ದಕ್ಷಿಣಾಪಥದೊಳ್ ದ್ರವಿಳವಿಷಯದೊಳ್ ದಕ್ಷಿಣಮಧುರೆಯೆಂಬುದು ಪೊೞಲದನಾಳ್ವೊಂ ಸುಂದರ ಪಾಂಡ್ಯನೆಂಬೊನರಸನಾತನರಸಿಯಮೃತಮಹಾದೇವಿಯೆಂಬೊಳಂತವರ್ಗ್ಗಳಿಷ್ಟ ವಿಷಯ  ಕಾಮಭೋಗಂಗಳನನುಭವಿಸುತ್ತಿದ್ದರೆ ಮತ್ತಮಾ ಪೊೞಲೊಳಾರ್ಯನಂದಿಯೆಂಬೊಂ ಸೆಟ್ಟಿಯಾತನ ಪರದಿಯವಿಯೆಂಬೊಳಾ ಇರ್ವ್ವರ್ಗ್ಗಂ ಸುಕೀರ್ತಿಯೆಂಬೊಳ್ ಮಗಳಾದಳ್ ಮತ್ತೊರ್ವನಾ ಪೊೞಲೊಳ್ ಸುದರ್ಶನನೆಂಬೊಂ ಪರದನಾತನ ಪರದಿ ವೀರಶ್ರೀಯೆಂಬೊಳಾಯಿರ್ವ್ವರ್ಗ್ಗಂ ಮಗಂ ಪ್ರಿಯದರ್ಶನನೆಂಬೊನಾತಂಗಾ ಸುಕೀರ್ತಿಯಂ ಕೊಟ್ಟರ್ ಸುಕೀರ್ತಿಯ ಕೆಳದಿ ಮಾಲೆಗಾರ್ತಿ ಪ್ರಿಯಸೇನೆಯೆಂಬೊಳಂತವರ್ಗ್ಗಳಿಷ್ಟ – ವಿಷಯಕಾಮಭೋಗಂಗಳನನುಭವಿಸುತ್ತಿರೆ ಮತ್ತೊಂದು ದಿವಸಂ ಸುಕೀರ್ತಿ 

          ಮಾವನಾದ ವರಾಂಗ, ವರಾಂಗನ ಹೆಂಡತಿಯಾದ ಪ್ರಿಯಂಗು – ಅಂತು ನಾಲ್ಕು ಮಂದಿಯೂ ಎದ್ದು ಮುನಿಗಳಿಗೆ ಎದುರಾಗಿ “ಸ್ವಾಮೀ, ದೀಕ್ಷೆಯನ್ನು ಅನುಗ್ರಹಿಸಿರಿ* ಎಂದು ಪ್ರಾರ್ಥಿಸಿ ದೀಕ್ಷೆ ಪಡೆದು ತಪಸ್ಸು ಮಾಡಿದರು. ಆ ಮೇಲೆ ಸುಕೇಶಿನಿ ಆ ಮಲಯಸುಂದರನೆಂಬ ಆನೆಯ ಕೋಡುಗಳನ್ನು ಅಪ್ಪಿಕೊಂಡು ಸತ್ತಳೆಂಬ ಸುದ್ದಿಯನ್ನು ವರಾಂಗನು ಕೇಳಿ, ಜನ್ಮಾಂತರದಿಂದ ಬಂದಿದ್ದ ಪ್ರೀತಿಯೇ ಕಾರಣವಾಗಿ ವ್ಯಸನವನ್ನು ಸಹಿಸಲಾರದೆ ತಪಸ್ಸನ್ನು ಸ್ವೀಕರಿಸಿ ಸಂಕಲ್ಪದೊಡನೆ ತಪಸ್ಸನ್ನು ಮಾಡಿದನು. ಇತ್ತ ಗಂದಭಾಜನರಾಜನು ಯಶೋಧರಮುನಿಗಳನ್ನು ಕುರಿತು “ಸ್ವಾಮೀ, ಸುಕೇಶಿನಿಯು ಮಲಯಸುಂದರನೆಂಬ ಆನೆಯ ದಾಡೆಗಳನ್ನು ಅಪ್ಪಿಕೊಂಡು ಸತ್ತುದಕ್ಕೆ ಕಾರಣವೇನು? – ಎಂದು ಕೇಳಿದನು. ಅದಕ್ಕೆ ಕೇವಲಜ್ಞಾನಿಗಳಾದ ಯಶೋಧರಮುನಿಗಳು ಹೀಗೆಂದರು – ದಕ್ಷಿಣಾಪಥದಲ್ಲಿರುವ ದ್ರಾವಿಡ ದೇಶದಲ್ಲಿ ದಕ್ಷಿಣಮಧುರೆ ಎಂಬ ಪಟ್ಟಣವಿದೆ. ಅದನ್ನು ಆಳುವವನು ಸುಂದರಪಾಂಡ್ಯನೆಂಬ ರಾಜನು. ಅವನ ಪತ್ನಿ ಮಹಾದೇವಿಯೆಂಬುವಳು. ಅಂತು ಅವರು ತಮಗೆ ಪ್ರಿಯವಾದ ಸುಖಗಳನ್ನು ಅನುಭವಿಸುತ್ತ ಇದ್ದರು. ಮತ್ತು, ಆ ಪಟ್ಟಣದಲ್ಲಿ ಆರ್ಯನಂದಿಯೆಂಬ ಸೆಟ್ಟಿಯಿದ್ದನು. ಅವನ ಪತ್ನಿ ಅವಿ ಎಂಬವಳು. ಆ ಇಬ್ಬರಿಗೆ ಸುಕೀರ್ತಿ ಎಂಬ ಮಗಳಾದಳು. ಆ ಪಟ್ಟಣದಲ್ಲಿ ಸುದರ್ಶನನೆಂಬ ಮತ್ತೊಬ್ಬ ವರ್ತಕನಿದ್ದನು. ಅವನ ಹೆಂಡತಿ ವೀರಶ್ರೀಯೆಂಬಾಕೆ. ಆ ಇಬ್ಬರಿಗೂ ಪ್ರಿಯದರ್ಶನನೆಂಬುವನು ಮಗನು. ಅವನಿಗೆ ಸುಕೀರ್ತಿಯನ್ನು ಕೊಟ್ಟರು. ಸುಕೀರ್ತಿಯ ಗೆಳತಿ, ಮಾಲೆಗಾರ್ತಿಯಾದ ಪ್ರಿಯಸೇನೆ ಎಂಬುವಳು. ಅಂತು ಅವರು ಇಷ್ಟವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗಿರಲು ಮತ್ತೊಂದು ದಿನ ಸುಕೀರ್ತಿ

     ತನ್ನ ಭರ್ತಾರನನಿಂತೆಂದಳಡವಿಯೊಳಂ ಪರ್ವತಂಗಳೊಳಂ ಪುಳಿನ ಸ್ಥಳಂಗಳೊಳಮೆನಗೆ ಕ್ರೀಡಿಸಲೞಯಾದುದೆನೆ ನಿನ್ನೞಯಂ ನೆಱಪಲಕ್ಕುಮೆಂದು ಪ್ರಿಯದರ್ಶನನುಂ ಸುಕೀರ್ತಿಯುಂ ಪ್ರಿಯಸೇನೆಯುಮಂತು ಮೂವರಂ ಪರಿವಾರಸಹಿತಮಡವಿಗೆ ಪೋಗಿಯಲ್ಲಿ ಕಾನನವನಸರಿತ್ಸರೋವರ ಪ್ರದೇಶಂಗಳೊಳ್ ಪರಿಜನಂಬೆರಸು ತದೀಪ್ಸಿತಪ್ರದೇಶಂಗಳೊಳ್ ವಿಹಾರಿಸಿ ರಮ್ಯಮಪ್ಪ ಗಿರಿನದಿಯ ಪುಷ್ಪಪಲ್ಲವಲತಾಕೀರ್ಣಮಪ್ಪ ಪುಳಿನಸ್ಥಳಂಗಳೊಳ್ ಕ್ರೀಡಿಸುತ್ತಿರ್ಪನ್ನೆಗಂ ಹಸ್ತಿಯೂಥಂ ಬರ್ಪುದಂ ಕಂಡಾಗಳೊಂದು ಮದಾಂಧ ಗಂಧಸಿಂಧುರಂ ಕರಿಣೀವೃಂದಂಗಳಿಂ ಪರಿವೇಷ್ಟಿತನಾಗಿ ಕರಿಣೀಗಣಂಗಳಾ ಕಾಶಪುಷ್ಪಂಗಳಿಂ ಚಾಮರಮಿಕ್ಕೆ ಮೃದುಪಲ್ಲವಂಗಳಂ ಕಬಳಂಗೊಳುತ್ತುಂ ಲೀಲೆಯಿಂ ಬಂದು ಸ್ವಚ್ಚವಿಚ್ಚಳಾಕಾರಮಪ್ಪ ಮಡುವಂ ಪೊಕ್ಕು ಮನೋಹರಿಗಳಪ್ಪ ಕರಿಣೀಗಣದೊಡನೆ ಕ್ರೀಡಿಸುವುದಂ ಮೂವರಂ ಕಂಡು ಹಸ್ತಿಭೋಗಂಗಳೊಳಪ್ಪ ಕಾಂಕ್ಷೆಯಿಂದಂ ನಿದಾನಂಗೆಯ್ದು ತಿರ್ಯಗಾಯುಷ್ಯಮಂ ಕಟ್ಟಿದರಿಂತು ಕಾಲಂ ಸಲೆ ಮತ್ತೊಂದು ದಿವಸಂ ಬಱಸಿಡಿಲ್ ಪೊಡೆದು ಪ್ರಿಯಸೇನೆ ಸತ್ತಳ್ ಪ್ರಿಯದರ್ಶನನೊಂದು ದಿವಸಂ ತನ್ನ ಭಾರ್ಯೆವೆರಸು ಕದಳೀವನದೊಳ್ ಮಱಲುಂದಿದಲ್ಲಿಗೆ ಕಾಳಿಂಗನಾಗು ಬಂದೊಡದಱ ಮೇಗೆಕಾಲಂ ನೀಡಿದೊಡೆ ಕರ್ಚಿತ್ತಾತನುಮಾಗಳೆ ಪರವಶನಾಗಿ ಪ್ರಾಣಪರಿತ್ಯಾಗಂಗೆಯ್ದನಂ ಕಂಡು ಸುಕೀರ್ತಿಯುಂ ಕಾದಲನ ವಿಯೋಗಂ ಕಾರಣಮಾಗೆ ಪ್ರಾಣವಲ್ಲಭನ ಸುರಿಗೆಯಂ ಕೊಂಡು ತನ್ನಂ ತಾನಿಱದು ಸತ್ತಳ್ 

          ತನ್ನ ಗಂಡನೊಡನೆ ಹೀಗೆಂದಳು ಕಾಡು, ಗುಡ್ಡ, ಮರಳು. ಜಾಗಗಳಲ್ಲಿ ಕ್ರೀಡಿಸಬೇಕೆಂದು ನನಗೆ ಬಯಕೆಯಾಗಿದೆ. ಹೀಗೆನ್ನಲು “ನಿನ್ನ ಬಯಕೆಯನ್ನೂ ಈಡೇರಿಸಬಹುದು* ಎಂದು ಪ್ರಿಯದರ್ಶನನು ಒಪ್ಪಿಗೆ ಕೊಟ್ಟನು. ಅದರಂತೆ ಪ್ರಿಯದರ್ಶನ, ಸುಕೀರ್ತಿ, ಪ್ರಿಯಸೇನ – ಅಂತು ಮೂವರೂ ಪರಿವಾರದೊಂದಿಗೆ ಕಾಡಿಗೆ ಹೋದರು. ಅಲ್ಲಿ ಕಾಡು, ಉದ್ಯಾನ, ನದಿ, ಸರೋವರ ಪ್ರದೇಶಗಳಲ್ಲಿ ಸೇವಕಜನರೊಂದಿಗೆ ಅವರಿಗೆ ಇಷ್ಟವಾದ ಸ್ಥಳಗಳಲ್ಲಿ ಸಂಚರಿಸಿ ಮನೋಹರವಾದ ಬೆಟ್ಟದ ಹೊಳೆಯ ಹೂ, ಚಿಗುರು, ಬಳ್ಳಿಗಳಿಂದ ಕೂಡಿದ ಮರಳಿನ ಸ್ಥಳಗಳಲ್ಲಿ ಕ್ರೀಡಿಸುತ್ತಿದ್ದರು. ಅಷ್ಟರಲ್ಲಿ ಒಂದು ಆನೆ ಹಿಂಡು ಬರುವುದನ್ನು ಕಂಡರು. ಆ ಹಿಂಡಿನಲ್ಲಿ ಒಂದು ಸೊಕ್ಕೇರಿ ಕಂಗಾಣದ ಆನೆ ಹೆಣ್ಣಾನೆಗಳ ಹಿಂಡಿನಿಂದ ಆವರಿಸಿದ್ದಿತು. ಹೆಣ್ಣಾನೆ ಹಿಂಡುಗಳು ನಾಣಿಲು ಹೂಗಳಿಂದ ಚಾಮರ ಬೀಸುತ್ತಿರಲು, ಮೆತ್ತಗಿನ ಚಿಗುರುಗಳನ್ನು ಮೆಲ್ಲುತ್ತ ವಿನೋದದಿಂದ ಬಂದು ಅದು ಸ್ವಚ್ಚವಾಗಿ ಹೊಳೆಯುವ ಸ್ವರೂಪವುಳ್ಳ ಮಡುವನ್ನು ಹೊಕ್ಕು ತನ್ನ ಮನಸ್ಸನ್ನು ಸೆಳೆಯತಕ್ಕ ಹೆಣ್ಣಾನೆಗಳ ಹಿಂಡಿನೊಡೆ ಕ್ರೀಡಿಸುತ್ತಿತ್ತು. ಅದನ್ನು ಮೂವರೂ ಕಂಡು, ಆನೆಗಳಾಗಿ ಸುಖವನ್ನು ಅನುಭವಿಸಬೇಕೆಂಬ ಬಯಕೆಯಿಂದ ಸಂಕಲ್ಪ ಮಾಡಿಕೊಂಡು ಪ್ರಾಣಿ ಜೀವನದ ಆಯುಷ್ಯವನ್ನು ಕಟ್ಟಿಕೊಂಡರು. ಹೀಗೆಯೇ ಕಾಲ ಕಳೆಯಲು ಮತ್ತೊಂದು ದಿನ ಬರಸಿಡಿಲು ಬಡಿದು ಪ್ರಿಯಸೇನೆ ಸತ್ತಹೋದಳು. ಪ್ರಿಯದರ್ಶನನು ಒಂದು ದಿವಸ ತನ್ನ ಪತ್ನಿಯೊಂದಿಗೆ ಬಾಳೆತೋಟದಲ್ಲಿ ನಿದ್ರಿಸುತ್ತಿದ್ದನು. ಅಲ್ಲಿಗೆ ಒಂದು ಕಾಳಿಂಗಸರ್ಪ ಬಂತು. ಇವನು ಅದರ ಮೇಲೆ ತನ್ನ ಕಾಲನ್ನು ಚಾಚಿದಾಗ, ಅದು ಕಚ್ಚಿತು. ಅವನು ಆಗಲೇ ಮೂರ್ಛೆ ಹೋಗಿ ಪ್ರಾಣಬಿಟ್ಟನು. ಅವನನ್ನು ನೋಡಿ ಸುಕೀರ್ತಿ ತನ್ನ ಪ್ರಿಯನ ಅಗಲಿಕೆಯೇ ಕಾರಣವಾಗಿ ತನ್ನ ಗಂಡನ ಕತ್ತಿಯನ್ನು ತೆಗೆದು ತನ್ನನ್ನು ತಿವಿದುಕೊಂಡು ಸತ್ತುಹೋದಳು. 

    ಅಂತಾ ಮೂವರುಂ ಸತ್ತು ತೆಂಕಣ ಪಡುವಣ ಸಮುದ್ರದ ತಡಿಯೊಳ್ ಚಂದನಮಲಯಮೆಂಬಾದಮಾನುಂ ರಮ್ಯಮಪ್ಪ ಪರ್ವತದೊಳ್ ಪ್ರಿಯದರ್ಶನನಿಂದ್ರನೀಲ ಮಾಣಿಕದೊಳೋರಂತಪ್ಪ ಮೆಯ್ಯನೊಡೆಯದಾಗಿ ಸುಭದ್ರಜಾತಿಯಪ್ಪಾನೆಗೆ ಮಲಯ ಸುಂದರನೆಂಬಾನೆಯಾಗಿ ಪುಟ್ಟಿದೊಂ ಸುಕೀರ್ತಿಯುಂ ಧವಳವರ್ಣಮಪ್ಪ ಮಲಯಾವತಿಯೆಂಬ ಪಿಡಿಯಾಗಿ ಪುಟ್ಟಿದಳ್ ಪ್ರಿಯಸೇನೆಯುಂ ಕೆಂದಾವರೆಯ ವಣ್ಣದೊಳೋರಂತಪ್ಪ ಮೆಯ್ಯನೊಡೆದು ಪದ್ಮಾವತಿಯೆಂಬ ಪಿಡಿಯಾಗಿ ಪುಟ್ಟಿದಳಾಯೆರಡುಂ ಪಿಡಿಗಳುಂ ಸುಭದ್ರ ಜಾತಿಯಪ್ಪಾನೆಗೆ ಪುಟ್ಟಿದವಂತಾ ಮೂಱರ್ಕಮಾರಣ್ಯನಿವಾಸಿಗಳಪ್ಪ ಜನಂಗಳುಂ ತಾಪಸಾದಿಗಳುಮವಂ ಕಂಡೊರ್ಗ್ಗಳೆಲ್ಲಮೊಸೆದು ಮೆಚ್ಚಿ ತದ್ದೇಹಾನುಸಾರಿಗಳಪ್ಪ ಪೆಸರನಿಟ್ಟುದರಿಂದಾ ನಾಡೊಳ್ ಪ್ರಸಿದ್ದಿಗೆ ಸಂದುವಂತವರ್ಕೆ ಕಾಲಂ ಸಲೆ ಮತ್ತಮಲ್ಲಿ ಯೂಥಾಪತಿ ಭದ್ರಜಾತಿಯಪ್ಪ ಸುಂದರನೆಂಬಾನೆ ಚಾರಣರಿಸಿಯರ್ಕ್ಕಳ ಪಾದಯುಗಳಂಗಳಂ ವಿದ್ಯಾಧರನರ್ಚಿಸಿ ಪೊಡೆವಟ್ಟು ಪೋಪುದಂ ಕಂಡು ತಾನುಂ ನಿಚ್ಚಮಾ ಸ್ಥಿತಿಯೊಳೆ ತಾಮರೆಯ ಪೂಗಳಂ ತಂದರ್ಚಿಸಿ ಪೂಜಿಸಿ ಪೊಡೆವಟ್ಟು ಪೋಕುಮಿಂತು ಪುಣ್ಯಮಂ ನೆರೆಪುತ್ತಂ ಕಾಲಂ ಸಲೆ 

        ಅಂತು ಆ ಮೂವರು ಸತ್ತು ನೈಋತ್ಯಸಮುದ್ರದ ತೀರದಲ್ಲಿರುವ ಚಂದನಮಲಯವೆಂಬ ಅತ್ಯಂತ ಮನೋಹರವಾದ ಪರ್ವತದಲ್ಲಿ ಪ್ರಿಯದರ್ಶನನು ಇಂದ್ರನೀಲ ಮಾಣಿಕ್ಯವನ್ನು ಹೋಲುವ ಮೈಬಣ್ಣವುಳ್ಳ ಸುಭದ್ರಜಾತಿಯ ಒಂದು ಆನೆಗೆ ಮಲಯಸುಂದರನೆಂಬ ಆನೆಯಾಗಿ ಹುಟ್ಟಿದನು. ಸುಕೀರ್ತಿಯು ಬಿಳಿಯ ಬಣ್ಣವುಳ್ಳ ಮಲಯಾವತಿಯೆಂಬ ಹೆಣ್ಣಾನೆಯಾಗಿ ಹುಟ್ಟಿದಳು. ಪ್ರಿಯಸೇನೆಯು ಬಣ್ಣವುಳ್ಳ ಮಲಯಾವತಿಯೆಂಬ ಹೆಣ್ಣಾನೆಯಾಗಿ ಹುಟ್ಟಿದಳು. ಪ್ರಿಯಸೇನೆಯು ಕೆಂಪುತಾವರೆಯ ಬಣ್ಣವನ್ನು ಹೋಲುವ ಶರೀರವುಳ್ಳ ಪದ್ಮಾವತಿಯೆಂಬ ಹೆಣ್ಣಾನೆಯಾಗಿ ಹುಟ್ಟಿದಳು. ಆ ಎರಡೂ ಹೆಣ್ಣಾನೆಗಳೂ ಆನೆಗಳಲ್ಲಿ ಉತೃಷ್ಟ ಜಾತಿಯದಾದ ಸುಭದ್ರಜಾತಿಯ ಆನೆಗೆ ಹುಟ್ಟಿದವು. ಅಂತು ಆ ಮೂರು ಆನೆಗಳಿಗೂ ಕಾಡಿನಲ್ಲಿ ವಾಸಮಾಡತಕ್ಕ ಜನರೂ ಋಷಿಗಳು ಮುಂತಾದವರೂ ಅವನ್ನು ಕಂಡವರೆಲ್ಲರೂ ಪ್ರೀತಿಪಟ್ಟು ಮೆಚ್ಚಿ ಅವುಗಳ ದೇಹಗಳಿಗೆ ಅನುಸಾರವಾದ ಹೆಸರುಗಳನ್ನು ಇಟ್ಟುದರಿಂದ ಆ ನಾಡಿನಲ್ಲಿ ಪ್ರಖ್ಯಾತವಾದವು. ಆಂತು ಅವುಗಳು ಹೀಗೆ ಕಾಲ ಕಳೆಯುತ್ತಿರಲು, ಅಲ್ಲಿ ಆನೆಗಳ ಹಿಂಡಿನೊಡೆಯನಾದ ಭದ್ರಜಾತಿಯದಾಗಿರುವ ಸುಂದರನೆಂಬ ಆನೆ ಚಾರಣ ಮುನಿಗಳ ಎರಡೂ ಪಾದಗಳನ್ನು ವಿದ್ಯಾಧರನೋರ್ವನು ಪೂಜಿಸಿ, ಸಾಷ್ಟಾಂಗ ವಂದಿಸಿ ಹೋಗುವುದನ್ನು ಕಂಡಿತು. ತಾನು ಕೂಡ, ನಿತ್ತವೂ ಆದೇ ರೀತಿಯಲ್ಲಿ ತಾವರೆಯ ಹೂಗಳನ್ನು ತಂದು ಪೂಜಿಸಿ, ವಂದಿಸಿ ಹೋಗುತ್ತಿತ್ತು. ಹೀಗೆ ಪುಣ್ಯವನ್ನು ಕೂಡಿಸಿಕೊಳ್ಳುತ್ತ ಕಾಲ ಕಳೆಯಲು

    ಮತ್ತೊಂದು ದಿವಸಂ ಪ್ರಭಂಕರಿಯೆಂಬ ಸರೋವರದೊಳ್ ಮಲಯಸುಂದರಂ ಪೂರ್ವಭವದ ಪ್ರಾಣವಲ್ಲಭೆಯರ್ಕಳಂ ಕಂಡತಿ ಸ್ನೇಹದಿಂದಂ ಪೊರ್ದುಲಾಟಿಸುವುದಂ ಕಂಡು ಸುಂದರನೆಂಬಾನೆ ಸಾರಲೀಯದುದಱಂ ತದ್ವಿರಹಪರಿತಪ್ತಮನದಿಂದಂ ಸಲ್ವುದಂ ನವಯೌವನಮನೆಯ್ದಿ ಆತ್ಮಬಲಮನದಱ ಬಲದೊಳ್ ವೃಕ್ಷಭಂಜನ ಸಾಮರ್ಥ್ಯದಿಂ ಪರೀಕ್ಷಿಸಿ ಮಱಯಾನೆಗಳಿಂ ಪರಿಭವಮನದರ್ಕೆ ಕಂಡು ವೃದ್ದನಪ್ಪಾ ಸುಂದರನೊಳ್ ಯುದ್ದಂಗೆಯ್ದು ಕೊಂದಾ ಯೂಥಕ್ಕೆಲ್ಲಮಪತಿಯಾಗಿ ಮಲಯಾವತಿಯುಂ ಪದ್ಮಾವತಿಯುಮನೊಡಗೊಂಡಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತ ಮಾಯೆರಡುಂ ಪಿಡಿಗಳ್ ತಮ್ಮೊಳನ್ಯೋನ್ಯ ಸ್ನೇಹದೊಳ್ ಕೂಡಿದುವು ಮಲಯ ಸುಂದರನ್ ಬಲದ ದೆಸೆಯೊಳ್ ಮಲಯಾವತಿಗೆ ಪೋಪ ದಾಯಮನೆಡದ ದೆಸೆಯೊಳ್ ಪದ್ಮಾವತಿಗೆ ಪೋಪ ದಾಯಮನಿತ್ತಂತು ಪ್ರಭಂಕರಿಯೆಂಬ ಸರೋವರದೊಳ್ ಸ್ವೇಚ್ಚೆಯಿಂ ಕ್ರೀಡಿಸಿ ಪೊಱಮಡುವಾಗಳ್ ಮಲಯಾವತಿಯ ಮಸ್ತಕದೊಳ್ ವಿಕಸಿತ ಸಹಸ್ರಪತ್ರಕುಸುಮವನಿಡುವ ದಾಯಮಂ ಕೊಟ್ಟು ಸಲಿಸುತ್ತಂ ಉೞದ ಪಿಡಿಗಳೆಲ್ಲಮಂ ತೊಱೆದಾಯೆರಡಱೊಳಮಾಸಕ್ತನಾಗಿ ಕಾಮಭೋಗಂಗಳನನುಭವಿಸುತ್ತಮಿಂತು ಸುಖದೊಳಿರ್ಪ್ಪ ಕಾಲದೊಳ್ ಮತ್ತೊಂದು ದಿವಸಂ ಪ್ರಭಂಕರಿಯೆಂಬ ಕೊಳದೊಳ್ ಸ್ವೆಚ್ಚೆಯಿಂ ನೀಡುಂ ಕ್ರೀಡಿಸುತ್ತಂ ತಡಂಬಂದು ಮನಃಪೂರ್ವಕಮಲ್ಲದೆ ಪೊಱಮಡುವಾಗಳ್ ಪದ್ಮಾವತಿ ಬಲದ ದೆಸೆಯೊಳಾಗಿ ಮಲಯಾವತಿ ಯೆಡದ ದೆಸೆಯೊಳಾಗಿ ಪೊಱಮಟ್ಟು ಬರೆ ಮದಾಂಧಗಂಧಸಿಂಧುರಂ ಮದದಿಂ ಮೆಯ್ಯಱಯದೆ ಬಲದ ದೆಸೆಯೊಳಿರ್ದ ಪದ್ಮಾವತಿಯಂ ಮಲಯಾವತಿಗೆತ್ತು ಪದ್ಮಾವತಿಯ ಮಸ್ತಕಗೊಳ್ ವಿಕಸಿತ ಸಹಸ್ರಪತ್ರ ಕುಸುಮಮನಿಟ್ಟೊಡೆ 

       ಮತ್ತೊಂದು ದಿನ ಮಲಯಸುಂದರನು ತನ್ನ ಹಿಂದಿನ ಜನ್ಮದ ಮಡದಿಯನ್ನು ಕಂಡು ಅತಿಶಯವಾದ ಪ್ರೀತಿಯಿಂದ ಸೇರಲು ಇಷ್ಟಪಟ್ಟಿತು. ಅದನ್ನು ಸುಂದರನೆಂಬ ಆನೆ ಕಂಡುಹತ್ತಿರ ಹೋಗಲಿಕ್ಕೇ ಬಿಡಲಿಲ್ಲ. ಆದುದರಿಂದ ಮಲಯಸುಂದರನು ಆ ಹೆಣ್ಣಾನೆಗಳ ವರಜಹದಿಂದ ಪರಿತಾಪಗೊಂಡ ಮನಸ್ಸುಳ್ಳುದಾಗಿತ್ತುಅದು ಹೊಸ ಜವ್ವನವನ್ನು ಪಡೆದು, ತನ್ನ ಶಕ್ತಿಯಿಂದ ಮರಗಳನ್ನು ಮುರಿದು ತನ್ನ ಶಕ್ತಿಯನ್ನು ಪರೀಕ್ಷಿಸಿಕೊಂಡಿತು. ಮುದಿಯಾಗಿರುವ ಸುಂದರನು ಮರಿಯಾನೆಗಳೊಂದಿಗೆ ಕಾದಾಡಿದಾಗಲೇ ಸೋತುಹೋಗುವುದನ್ನೂ ಕಂಡಿತು. ಮಲಯಸುಂದರನು ಈಗ ಸುಂದರನೆಂಬ ಆ ಮುದಿಯಾನೆಯೊಡನೆ ಯುದ್ದಮಾಡಿ, ಅದನ್ನು ಕೊಂದು ಆ ಆನೆಗಳ ಹಿಂಡಿಗೆಲ್ಲ ಒಡೆಯನಾಯಿತು. ಮಲಯಾವತಿಯನ್ನೂ ಪದ್ಮಾವತಿಯನ್ನೂ ಕೂಡಿಕೊಂಡು ತನ್ನ ಪ್ರೀತಿಯ ವಿಷಯಗಳಾದ ಕಾಮಸುಖಗಳನ್ನೂ ಅನುಭವಿಸುತ್ತಿತ್ತು. ಆ ಎರಡೂ ಹೆಣ್ಣಾನೆಗಳು ತಮ್ಮೊಳಗೆ ಪರಸ್ಪರ ಪ್ರೀತಿಯಿಂದ ಕೂಡಿಕೊಂಡವು. ಮಲಯಸುಂದರನು ತನ್ನ ಬಲಗಡೆಯಲ್ಲಿ ಹೋಗುವ ಅವಕಾಶವನ್ನು ಮಲಯಾವತಿಗೂ ಎಡಗಡೆಯಲ್ಲಿ ಹೋಗುವ ಅವಕಾಶವನ್ನು ಪದ್ಮಾವತಿಗೂ ಕೊಟ್ಟು, ಅಂತು ಪ್ರಭಂಕರಿಸರೋವರದಲ್ಲಿ ತನ್ನ ಇಚ್ಚೆಯ ಪ್ರಕಾರ ಆಡಿ ಹೊರಟು ಬರುವಾಗ ಮಲಯಾವತಿಯ ತಲೆಯಲ್ಲಿ ಅರಳಿದ ಸಾವಿರದಳದ ಹೂವನ್ನು ಇಡುವ ಮರ್ಯಾದೆಯ ಅವಕಾಶಕೊಟ್ಟು, ಈ ಗೌರವವನ್ನು ನಿತ್ಯವೂ ಸಲ್ಲಿಸುತ್ತಿತ್ತು. ಉಳಿದ ಹೆಣ್ಣಾನೆಗಳೆಲ್ಲವನ್ನೂ ಬಿಟ್ಟು ಆ ಎರಡರಲ್ಲಿ ಮಾತ್ರ ಪ್ರೀತಿಯುಳ್ಳದಾಗಿ ಕಾಮಸುಖಗಳನ್ನು ಅದು ಅನುಭವಿಸುತ್ತಿತ್ತು. ಹೀಗೆ ಸುಖದಿಂದ ಇರುವ ಕಾಲದಲ್ಲಿ, ಆ ಮೇಲೆ ಒಂದು ದಿನ ಪ್ರಭಂಕರಿಯೆಂಬ ಸರೋವರದಲ್ಲಿ ತನ್ನ ಇಚ್ಚೆಯ ಪ್ರಕಾರ ಹೆಚ್ಚು ಕಾಲ ಅಡಿ ತಡಮಾಡಿ, ಗೊಡವೆಯೇ ಇಲ್ಲದೆ ಹೊರಡುವಾಗ ಪದ್ಮಾವತಿ ಅದರ ಬಲಗಡೆಯಾಗಿಯೂ ಮಲಯಾವತಿ ಎಡಗಡೆಯೂ ಹೊರಟು ಬಂದುವು. ಮದದಿಂದ ಸೊಕ್ಕೇರಿದ ಆ ಮಲಯಸುಂದರನು ಮತ್ತಿನಿಂದ ಮೈಮೇಲಿನ ಎಚ್ಚರವಿಲ್ಲದೆ, ಬಲಗಡೆಯಲ್ಲಿದ್ದ ಪದ್ಮಾವತಿಯನ್ನು ಮಲಯಾವತಿಯೆಂದು ಭ್ರಮಿಸಿ, ಆ ಪದ್ಮಾವತಿಯ ತಲೆಯಲ್ಲಿ ಅರಳಿದ ಸಾವಿರದೆಸಳಿನ ಹೂವನ್ನು ಇಟ್ಟಿತು. 

          ಮಲಯಾವತಿ ನೋಡಿ ತನ್ನಂ ಪರಿಭವಿಸಿದನೆಂದು ಪದ್ಮಾವತಿಯೊಳಪ್ಪ ಪುರುಡುಂ ಕಾರಣಮಾಗಿ ಮುಳಿಸಿನಿಂದಂ ಚಂದನಮಲಯಪರ್ವತದ ತುತ್ತ ತುದಿಯಂ ಬೇಗಂ ಪರಿದಡರ್ದಂತಲ್ಲಿಂದಂ ತನ್ನನಿಕ್ಕಿ ಮಲಯಾವತಿ ಶತಖಂಡಮಾಗಿ ಬಿೞ್ದು ಸತ್ತತ್ತದಱ ಸತ್ತುದಂ ಮಲಯಸುಂದರಂ ಕಂಡು ಮಲಯಾವತಿಯ ವಿಯೋಗದೊಳಾದಮಾನುಂ ದುಃಖಂಗೈದು ಪದ್ಮಾವತಿಯನೊಡಗೊಂಡು ಪೋಯ್ತು ಮತ್ತಾ ಮಲಯಾವತಿಯೆಂಬ ಪಿಡಿ ಸತ್ತು ಸುಕೇಶಿನಿಯೆಂಬೊಳಾದಳಾ ಪದ್ಮಾವತಿಯೆಂಬ ಪಿಡಿಯುಮಾಯುಷ್ಯಾಂತದೊಳ್ ಸತ್ತು ಸುಕೇಶಿನಿಯ ತಾಯ್ ಸುರೂಪೆಯ ಸೋದರ ತಮ್ಮಂ ವರಾಂಗನಾದೊಂ ಮತ್ತಾ ಮಲುಸುಂದರನಿಂದಂ ಕೊಲೆ ಸತ್ತ ಸುಂದರನೆಂಬಾನೆ ಸುವೇಗನೆಂಬ ವಿದ್ಯಾಧರನಿಂದಂ ಪೂಜಿಸೆಪಟ್ಟ ಚಾರಣರಿಷಿಯರ ಪಾದಪದ್ಮಯುಗಳಂಗಳುಮಂ ನೋಡಿಯುಮಶಮಕ್ಕೆ ಸಂದು ತಾನುಂ ತಾಮರೆಯ ಪೂಗಳಂ ತಂದು ಪ್ರತಿದಿನಮರ್ಚಿಸಿ ಪೂಜಿಸಿ ಪೊಡೆಮಟ್ಟು ಪೋಕುಮಾ ಚಾರಣರಿಷಯರಡಿವೊಣರನರ್ಚಿಸಿದ ಪುಣ್ಯದಿಂದಂ ಸತ್ತಿಲ್ಲಿ ನೀಂ ಚಂಪಾಪುರಕ್ಕಧಪತಿಯಯ್ ಗಂಧಭಾಜನನೆಂಬರಸನಾದಯ್ ಸುಕೇಶಿನಿಯುಂ ಜಾತಿಸ್ಮರೆಯಾಗಿ ತನ್ನ ಮುನ್ನಿನ ಭವದ ಭರ್ತಾರನಪ್ಪ ಮಲಯಸುಂದರನಂ ನೆನೆದು ನಿನ್ನಿಂದಂ ಕೊಲೆ ಸತ್ತುದಱ ಕೋೞ್ಕಳನಾದಮಾನುಂ ಬಿಗಿದಪ್ಪಿಕೊಂಡು ಸತ್ತುದರ್ಕಿದು ಕಾರಣಂ

       ಮಲಯಾವತಿ ಇದನ್ನು ನೋಡಿತು. ಮಲಯಸುಂದರನು ತನ್ನನ್ನು ತಿರಸ್ಕಾರಮಾಡಿದನೆಂದು ಭಾವಿಸಿತು. ಪದ್ಮಾವತಿಯ ಮೇಲೆ ಉಂಟಾದ ಹೊಟ್ಟೆಕಿಚ್ಚು ಕಾರಣವಾಗಿ ಕೋಪಗೊಂಡು ಬೇಗನೆ ಹೋಗಿ ಚಂದನ ಮಲಯಪರ್ವತದ ತುತ್ತತುದಿಯನ್ನೇರಿ, ಅಲ್ಲಿಂದ ಕೆಳಕ್ಕೆ ಬಿದ್ದು, ಮಲಯಾವತಿಯು ನೂರಾರು ತುಂಡಾಗಿ ಸತ್ತುಹೋಯಿತು. ಅದು ಸತ್ತುದನ್ನು ಮಲಯಸುಂದರನು ಕಂಡು, ಮಲಯಾವತಿಯ ಅಗಲಿಕೆಯಿಂದ ಅತ್ಯಂತ ದುಃಖಿಸಿ, ಪದ್ಮಾವತಿಯನ್ನು ಕೂಡಿಕೊಂಡು ಹೋಯಿತು. ಅನಂತರ, ಆ ಮಲಯಾವತಿಯೆಂಬ ಹೆಣ್ಣಾನೆ ಸತ್ತು ಸುಕೇಶಿನಿ ಎಂಬವಳಾದಳು. ಆ ಪದ್ಮಾವತಿಯೆಂಬ ಹೆಣ್ಣಾನೆಯೂ ಆಯುಷ್ಯ ಕೊನೆಗೊಳ್ಳಲು ಸತ್ತು ಸುಕೇಶಿನಿಯ ತಾಯಿಯಾದ ಸುರೂಪೆಯ ಸೋದರ ತಮ್ಮನಾದ ವರಾಂಗನೆಬವನಾದನು. ಅಲ್ಲದೆ, ಆ ಮಲಯಸುಂದರನು ಕೊಂದುದರಿಂದ ಸತ್ತ ಸುಂದರನೆಂಬ ಆನೆ ತಾನು ಸಾಯುವುದಕ್ಕೆ ಮೊದಲು ಸುವೇಗನೆಂಬ ವಿದ್ಯಾಧರನಿಂದ ಪೂಜಿತನಾದ ಚಾರಣ ಋಷಿಗಳ ಎರಡು ಪಾದಕಮಲಗಳನ್ನು ನೋಡಿ, ಶಾಂತತೆಯನ್ನು (ಸಮತ್ವಭಾವವನ್ನು) ಹೊಂದಿ ತಾನು ಕೂಡ, ತಾವರೆಯ *ಹೂಗಳನ್ನು ತಂದು ಪ್ರತಿದಿನವೂ ಅರ್ಚನೆ ಮಾಡಿ ಪೂಜಿಸಿ ವಂದಿಸಿ ಹೋಗುತ್ತಿತ್ತು. ಆ ಚಾರಣ ಋಷಿಗಳ ಪಾದಯುಗ್ಮವನ್ನು ಅರ್ಚಿಸಿದ ಪುಣ್ಯದಿಂದಾಗಿ ಸತ್ತ ಮೇಲೆ, ಇಲ್ಲಿ ನೀನು ಈಗ ಚಂಪಾಪುರಕ್ಕೆ ಒಡೆಯನದ ಗಂಧಭಾಜನೆಂಬ ರಾಜನಾಗಿರುವೆ. ಸುಕೇಶಿನಿ ಪೂರ್ವಜನ್ಮದ ನೆನಪನ್ನು ಪಡೆದು. ತನ್ನ ಹಿಂದಿನ ಜನ್ಮದ ಗಂಡನಾದ ಮಲಯಸುಂದರನನ್ನು ಸ್ಮರಿಸಿ, ನೀನು ಕೊಂದುದರಿಂದ ಸತ್ತ ಮಲಯಸುಂದರನು ಕೊಂಬುಗಳನ್ನು ಅತಿಶಯವಾಗಿ ಬಿಗಿದಪ್ಪಿಕೊಂಡು ಸಾಯಲು ಇದು ಕಾರಣವಾಗಿದೆ. 

     ಮತ್ತೆ ನೀಂ ಮುನ್ನೆ ಸುಂದರನೆಂ ಆನೆಯಾಗಿ ಚಾರಣರಿಷಿಯರ ಪಾದಯುಗಳಂಗಳನರ್ಚಿಸುವಂದು ನಿನ್ನಂ ಕಂಡಾಯೆರಡುಂ ಪಿಡಿಗಳ್ ನಿನ್ನೊಡವೋಗಿಯರ್ಚಿಸಿ ಪುಣ್ಯಮಂ ನೆರಪಿದ ಫಲದಿಂದಂ ಸುಕೇಶಿನಿಯುಂ ವರಾಂಗನುಮಾದರೆಂದು ಯಶೋಧರಕೇವಲಿಗಳ್ ಸವಿಸ್ತರಂ ಪೇೞ್ದೊಡೆ ಗಂಧಭಾಜನನೆಂಬರಸಂ ಕೇಳ್ದು ಮತ್ತಮಿಂತೆಂದಂ ಭಟಾರಾ ಸುಕೇಶಿನಿ ಸತ್ತೀಗಳೆಲ್ಲಿ ಪುಟ್ಟಿದಳೆಂದು ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ ಸುರಟಮೆಂಬುದು ನಾಡಲ್ಲಿ ಗಿರಿನಗರವೆಂಬುದು ಪೊೞಲದನಾಳ್ವೊಂ ನಿನ್ನಾಳ್ ಮಹಾಸಾಮಂತನತಿರಥನೆಂಬೊನಾತನರಸಿ ಗೌರಿಯೆಂಬಳಾ ಇರ್ವರ್ಗ್ಗಂ ಸುಕೇಶಿನಿ ಸತ್ತು ಮನೋಹರಿಯೆಂಬೊಳಾ ಮಗಳಾಗಿ ಪುಟ್ಟದಳ್ ಮತ್ತಾ ಅರಸನ ಮಂತ್ರಿ ವಿಜಯನೆಂಬೊನಾತನ ಭಾರ್ಯೆ ವೀರಶ್ರೀಯೆಂಬೊಳಾ ಇರ್ವರ್ಗ್ಗಂ ಮಲಯಸುಂದರಂ ಸತ್ತು ಕುಬೇರಕಾಂತನೆಂಬೊಂ ಮಗನಾಗಿ ಪುಟ್ಟಿದೊಂ ವಿಭವೈಶ್ವರ್ಯಂಗಳಿಂದಂ ಕುಬೇರನೊಳೋರನ್ನನಪ್ಪೊಂ ಮತ್ತಾ ಪೊೞಲೊಳ್ ರಾಜಶ್ರೇಷ್ಠಿ ಧನದನೆಂಬೊನಾತನ ಪರೆದಿ ಧನಶ್ರೀಯೆಂಬೊಳಾ ಇರ್ವರ್ಗ್ಗಂ ಮಲಯಸುಂದರಂ ಸತ್ತುದಂ ಸುಕೇಶಿನಿ ಕಂಡು ಸೈರಿಸಲಾಱದೆ ಪ್ರಾಣಪರಿತ್ಯಾಗಂಗೆಯ್ದಳಂ ನೆನೆದು ದ್ರವ್ಯತಪದೊಳ್ ಕೂಡಿ ತಪಂತೆಯ್ದು ವರಾಂಗಂ ಸತ್ತು ಶ್ರೀಧರನೆಂಬೊಂ ಮಗನಾಗಿ ಪುಟ್ಟಿದೊನಾತನ ಭಾರ್ಯೆ ಕುಬೇರಶ್ರೀಯೆಂಬೊಳಾ ಶ್ರೀಧರ ಕುಬೇರಕಾಂತಂಗಿಷ್ಟವಾದಮಿತ್ರನಾಗಿ ಸಲೆ ಮತ್ತೊಂದು ದಿವಸಂ ಶ್ರೀಧರ ಕುಬೇರಕಾಂತನೊಡನೆ ಮಱಲುಂದಿಯಾತನ ರತ್ನಕಂಬಳಮಂ ಪೊದೆದು ತನ್ನ ಮನೆಗೆ ಬರ್ಪ್ಪೊನಂ ಕಂಡು 

    ಆಮೇಲೆನೀನು ಪೂರ್ವಜನ್ಮದಲ್ಲಿ ಸುಂದರನೆಂಬ ಆನೆಯಾಗಿದ್ದು ಚಾರಣ ಋಷಿಗಳ ಎರಡುಪಾದಗಳನ್ನು ಅರ್ಚಿಸುವಾಗ ನಿನ್ನನ್ನು ಕಂಡು ಆ ಎರಡೂ ಹೆಣ್ಣಾನೆಗಳು ನಿನ್ನ ಒಟ್ಟಿಗೆ ಹೋಗಿ ಪೂಜಿಸಿ ಪುಣ್ಯವನ್ನು ಗಳಿಸಿದ ಫಲದಿಂದ ಸುಕೇಶಿನಿಯೂ ವರಾಂಗನೂ ಆದರು. ಹೀಗೆಂದು ಯಶೋಧರಮುನಿಗಳು ವಿಸ್ತಾರವಾಗಿ ಹೇಳಲು ಗಂಧಭಾಜನನೆಂಬ ರಾಜನು ಕೇಳಿ, ಆಮೇಲೆ ಹೀಗೆಂದನು – ಸ್ವಾಮೀ, ಸುಕೇಶಿನಿ ಮಡಿದು ಈಗ ಎಲ್ಲಿದ್ದಾಳೆ ? – ಎಂದು ಕೇಳಿದನು. ಆಗ ಯಶೋಧರಮುನಿಗಳು ಹೀಗೆಂದರು – ಸುರಟ ಎಂಬ ನಾಡಿನಲ್ಲಿ ಗಿರಿನಗರ ಎಂಬ ಪಟ್ಟಣವಿದೆ. ಅದನ್ನು ಆಳುವವನು ನಿನ್ನ ಸೇವಕನೆನಿಸಿರುವ ಮಹಾಸಾಮಂತನಾದ ಅತಿರಥನೆಂಬವನು. ಅವನ ಪತ್ನಿ ಗೌರಿಯೆಂಬುವಳು. ಸುಕೇಶಿನಿ ಸತ್ತು ಪುನರ್ಜನ್ಮದಲ್ಲಿ ಆ ಇಬ್ಬರಿಗೂ ಮನೋಹರಿ ಎಂಬ ಮಗಳಾಗಿ ಹುಟ್ಟಿದಳು. ಆ ಮೇಲೆ, ಆ ರಾಜನ ಮಂತ್ರಿ ವಿಜಯನೆಂಬವನು. ಅವನ ಪತ್ನಿ ವೀರಶ್ರೀ ಎಂಬವಳು. ಮಲಯಸುಂದರನು ಸತ್ತು, ಆ ಇಬ್ಬರಿಗೂ ಕುಬೇರಕಾಂತನೆಂಬ ಮಗನಾಗಿ ಜನಿಸಿದನು. ಅವನು ವೈಭವ ಸಂಪತ್ತುಗಳಿಂದ ಕುಬೇಗನಿಗೆ ಸರಿಯಾದವನಾಗಿದ್ದನು. ಮತ್ತು ಆ ಪಟ್ಟಣದಲ್ಲಿ ಸೆಟ್ಟಿಗಳಿಗೆ ರಾಜನೆನಿಸಿದ ಧನದನೆಂಬವನಿದ್ದನು. ಅವನ ಮಡದಿ ಧನಶ್ರೀಯೆಂಬುವಳು. ಮಲಯಸುಂದರನು ಸತ್ತುದನ್ನು ಸುಕೇಶಿನಿ ಕಂಡು ಸಹಿಸಲಾರದೆ ಪ್ರಾಣಬಿಟ್ಟುದನ್ನು ವರಾಂಗನು ನೆನಸಿಕೊಂಡು ಮಿಥ್ಯಾತಪಸ್ಸಿನಲ್ಲಿ ಸೇರಿಕೊಂಡು ತಪಸ್ಸುಮಾಡಿ ಸತ್ತು ಆ ಧನದ – – ಧನಶ್ರೀಯೆಂಬ ಇಬ್ಬರಿಗೆ ಶ್ರೀಧರನೆಂಬ ಮಗನಾಗಿ ಹುಟ್ಟಿದನು. ಅವನ ಹೆಂಡತಿ ಕುಬೇರಶ್ರೀಯೆಂಬುವಳು. ಆ ಶ್ರೀಧರನು ಕುಬೇರಕಾಂತನಿಗೆ ಪ್ರೀತಿಮಿತ್ರನಾಗಿದ್ದನು. ಹೀಗೆ ಕಳೆಯಲು, ಮತ್ತೊಂದು ದಿನ ಶ್ರೀಧರನು ಕುಬೇರಕಾಂತನೊಡನೆ ನಿದ್ರೆಮಾಡಿ ಅವನ ರತ್ನಕಂಬಳಿಯನ್ನು ಹೊದೆದುಕೊಂಡು ತನ್ನ ಮನೆಗೆ ಬಂದನು. ಅವನನ್ನು ಕುಬೇರಶ್ರೀ ಕಂಡು 

ಸವತಿಯೊಳಪ್ಪ ಶಂಕೆಯಿಂದಂ ಪ್ರಾಸಾದದ ಮೇಗಣಿಂದಂ ನೆಲಕ್ಕಿಕ್ಕಿ ಬಿೞ್ದು ಸತ್ತೊಳಾ ಸತ್ತೊಳಂ ಶ್ರೀಧರಂ ಕಂಡಾದಮಾನುಂ ದುಃಖಂಗೈದು ಶೋಕಾಭಿಭೂತನಾಗಿರ್ದೊನಂ ಕುಬೇರಕಾಂತಂ ಬಂದು ಕಂಡು ಶ್ರೀಧರಾ ಪರಮಮಿತ್ರಾ ಇಂತೇಕೆ ಬರ್ದಿ ಬಂಬಳಂ ಬಾಡಿ ಪಾಡೞದುಬ್ಬೆಗಂಬಟ್ಟಿರ್ದ್ದೆಯೆಂದು ಬೆಸಗೊಂಡೊಡೆ ತನ್ನ ಕೆಳೆಯಂಗಿಂತೆಂದು ಶ್ರೀಧರಂ ಪೇೞ್ಗುಂ ನಿನ್ನ ರತ್ನಕಂಬಳಮಂ ಪೊದೆದು ಮನೆಗೆ ವಂದೊಡೆ ಸವತಿಯೊಳಪ್ಪ ಶಂಕೆಯಿಂದೆನ್ನ ಭಾರ್ಯೆ ಕುಬೇರಶ್ರೀ ಮಾಡದ ಮೇಗಣಿಂದಂ ತನ್ನಂ ನೆಲಕ್ಕಿಕ್ಕಿ ಬಿೞ್ದು ಸತ್ತಳಿನ್ನುಮಾಯಿರ್ದ್ದಳೆಂದು ತೋಱದೊಡೆ ಕುಬೇರಕಾಂತಂ ನೋಡೆ ನೋಡೆ ಜಾತಿಸ್ಮರನಾಗಿ ಕೆಳಯಂಗಿಂತೆಂದು ಪೇೞ್ಗುಮೆನ್ನ ಪೆಂಡತಿ ಮಲಯಾವತಿಯಪ್ಪ ಪಿಡಿ ಪುರುಡಿನಿಂದಂ ಚಂದನಮಲಯಮೆಂಬ ಪರ್ವತದ ಶಿಖರದಿಂದಂ ತನ್ನನಿಕ್ಕಿ ಸತ್ತಂತೆ ನಿನ್ನ ಪೆಂಡತಿಯುಂ ಸತ್ತಳೆಂದು ಪೇೞ್ದುಬ್ಬೆಗಂಬಡಲ್ವೇಡೆಂದು ಸಂತಯಿಸಿ ತನ್ನ ಮನೆಗೆ ವೋಗಿ ಜಾತಿಸ್ಮರನಪ್ಪುದಱಂ ಕುಬೇರಕಾಂತಂ ತನ್ನ ಮುನ್ನಿನ ಮಲಯಸುಂದರನಪ್ಪ ಭವದ ನೆಗೞ್ತೆಗಳೆಲ್ಲಮಂ ಮಲಯಾವತಿ ಪದ್ಮಾವತಿ ಮೊದಲಾಗಿ ಕರಿಣೀವೃಂದಸಹಿತಂ ವನಹಸ್ತಿಕ್ರೀಡೆಗಳೆಲ್ಲಮನೊಂದು ಪಟದೊಳ್ ಬರೆದದಂ ನೋಡುತ್ತಂ ಪಾಡುತ್ತಂ ಹಾ ಎನ್ನ ಮಲಯಾವತಿ ಹಾ ಎನ್ನ ನಲ್ಲಳೆ ನೀನೀಗಳೆಲ್ಲಿರ್ದೆಯೆಂದಱಸುತ್ತಂ ಮರುಳ್ಗೊಂಡು ಪ್ರಳಾಪಂಗೆಯ್ಯುತ್ತಂ

    ತನ್ನ ಗಂಡನು ಸವತಿಯಲ್ಲಿ ಅಸಕ್ತನಾಗಿರುವನೆಂಬ ಸಂಶಯದಿಂದ ಮೇಲುಪ್ಪರಿಗೆಯಿಂದ ಕೆಳನೆಲಕ್ಕೆ ಹಾರಿ ಬಿದ್ದು ಸತ್ತಳು. ಹಾಗೆ ಸತ್ತವಳನ್ನು ಶ್ರೀಧರನು ಕಂಡು ಅತ್ಯಂತವಾಗಿ ಮರುಗಿ, ದುಃಖದಿಂದ ಹೊಡೆಯಲ್ಪಟ್ಟವನಾಗಿದ್ದನು. ಆಗ ಕುಬೇರಕಾಂತನು ಬಂದು ಅವನನ್ನು ಕಂಡು “ಪರಮ ಸ್ನೇಹಿತನಾದ ಶ್ರೀಧರನೇ, ಹೀಗೆ ಯಾಕೆ ಸೊರಗಿ ಬಹಳ ಬಾಡಿಹೋಗಿರುವೆ ? ಸ್ಥಿತಿಕೆಟ್ಟು ಉದ್ವೇಗಗೊಂಡಿರುವೆ?* ಎಂದು ಕೇಳಿದನು. ಶ್ರೀಧರನು ತನ್ನ ಗೆಳೆಯನಿಗೆ ಈ ರೀತಿಯಾಗಿ ಹೇಳಿದನು – ನಾನು ನಿನ್ನ ರತ್ನಗಂಬಳಿಯನ್ನು ಹೊದೆದುಕೊಂಡು ಮನೆಗೆ ಬಂದಾಗ ನನ್ನ ಮಡದಿ ಕುಬೇರಶ್ರೀಯು ಸವತಿಯಲ್ಲಿ ಆದ ಸಂಶಯದಿಂದ ಉಪ್ಪರಿಗೆಯ ಮೇಲಿನಿಂದ ಕೆಳಗೆ ಹಾರಿಬಿದ್ದು ಸತ್ತಳು. ಇನ್ನೂ ಆಗೋ ಅಲ್ಲಿದ್ದಾಳೆಂದು ಆಕೆಯ ದೇಹವನ್ನು ತೋರಿಸಿದನು. ಆಗ ಕುಬೇರಕಾಂತನು ನೋಡುನೋಡುತ್ತಲೇ ಪೂರ್ವಜನ್ಮದ ಸ್ಮರಣೆಯನ್ನು ಪಡೆದು ತನ್ನ ಗೆಳಯನಿಗೆ ಹೀಗೆಂದನು – “ನನ್ನ ಹೆಂಡತಿಯಾಗಿದ್ದ ಮಲಯಾವತಿಯೆಂಬ ಹೆಣ್ಣಾನೆ ಹೊಟ್ಟೆಕಿಚ್ಚಿನಿಂದ ಚಂದನಮಲಯವೆಂಬ ಪರ್ವತದ ತುದಿಯಿಂದ ತಾನೇ ಕೆಳಗೆ ಹಾರಿ ಬಿದ್ದು ಸತ್ತ ರೀತಿಯಲ್ಲಿಯೇ ನಿನ್ನ ಹೆಂಡತಿಯೂ ಸತ್ತಳು* – ಎಂದು ಹೇಳಿದನು. ‘ವ್ಯಸನ ಪಡಬೇಡ’ ಎಂದು ಅವನನ್ನು ಸಮಾಧಾನಪಡಿಸಿ ತನ್ನ ಮನೆಗೆ ಹೊದನು. ಪೂರ್ವಜನ್ಮದ ಸ್ಮರಣೆಯುಳ್ಳವನಾದುದರಿಂದ ಕುಬೇರಕಾಂತನು ತಾನು ಹಿಂದೆ ಮಲಯಸುಂದರನಾಗಿದ್ದ ಜನ್ಮದಲ್ಲಿ ಮಾಡಿದುದೆಲ್ಲವನ್ನೂ ಮಲಯಾವತಿ ಪದ್ಮಾವತಿ ಮುಂತಾದ ಹೆಣ್ಣಾನೆಗಳ ಹಿಂಡಿನೊಡನೆ ನಡೆಸಿದ ಆಟಗಳೆಲ್ಲವನ್ನೂ ಒಂದು ಚಿತ್ರಪಟದಲ್ಲಿ ಬರೆದು, ಅದನ್ನು ನೋಡುತ್ತ ಹಾಡುತ್ತಾ “ಹಾ, ನನ್ನ ಮಲಯಾವತೀ, ಹಾ ನನ್ನ ಪ್ರಿಯತಮಳೇ, ನೀನು ಈಗ ಎಲ್ಲಿರುವೆ? * ಎಂದುಕೊಂಡು ಹುಡುಕುತ್ತ ಹುಚ್ಚನಂತಾಗಿ ಗೋಳಾಡುತ್ತ 

ಉಜ್ಜಯಂತಪರ್ವತಮಂ ಬಲಗೊಂಡು ಬರ್ಪೊನಂ ಚಿತ್ರಾಂಗದನೆಂಬ ವಿದ್ಯಾಧರಂ ಕಂಡು ಕರುಣಿಸಿ ಧರ್ಮವಾತ್ಸಲ್ಯದಿಂದಂ ತನ್ನ ಕಾಮಮುದ್ರಿಕೆಯಂ ಸ್ಪೇಪ್ಸಿತ ಕಾರ್ಯಸಿದ್ದಿಯಂ ಮಾಡುವ ವಿದ್ಯೆಯಂ ಕುಬೇರಕಾಂತನಿಗೆ ಕೊಟ್ಟಂ ಕುಬೇರಕಾಂತನುಂ ವಿದ್ಯಾದೇವತೆಯಂ ಬೆಸಗೊಂಡೆನ್ನ ಮುನ್ನಿನ ಭವದ ಪ್ರಾಣವಲ್ಲಭೆಯಲ್ಲಿರ್ದಳೆನೆ ವಿದ್ಯಾದೇವತೆಯೆಂದಳ್ ನಿನ್ನ ಪ್ರಾಣವಲ್ಲಭೆಯತಿರಥನೆಂಬರಸಂಗೆ ಮಗಳ್ ಮನೋಹರಿಯಾಗಿರ್ದಳೆಂದು ವಿದ್ಯಾದೇವತೆ ಪೇೞೆ ಕೇಳ್ದಱದು ಪಿಶಾಚವೇಷಮಂ ಕೈಕೊಂಡರಮನೆ ಯಂಗಣದೊಳಿರ್ದು ಪಟಮಂ ನಿಮಿರ್ಚಿಯೆತ್ತಿ ತೋಱ ಪಾಡುತ್ತಮೆಲೆ ಮಲಯಾವತಿ ಹಾ ಎನ್ನ ಕಾದಲಳೆ ನೀನೀಗಳೆಲ್ಲಿರ್ದ್ದೆಯೆಂದು ಪಾಡುವುದಂ ಕೇಳ್ದು ಪಟಮಂ ನೋಡಿ ಮನೋಹರಿ ಜಾತಿಸ್ಮರೆಯಾಗಿ ತನ್ನ ಮುನ್ನಿನ ಭವಮನಱದು ದಾಮರಥಿಯೆಂಬ ತನ್ನ ದಾದಿಗೊಸಗೆನೆಯಿಂದ ಮಿಂತೆಂದಳೀಯಂಗಣದೊಳ್ ಪಟಮಂ ತೋಱುವಾತನೆನ್ನ ಮುನ್ನಿನ ಭವದ ಭರ್ತಾರನೆಂದು ಪೇೞ್ದು ಮತ್ತಮಿಂತೆಂದಳಬ್ದಾ ನೀನೆನ್ನ ಪ್ರಾಣಮಂ ಕಾವುದು ಕಾರಣವಾಗಿ ಆತನಲ್ಲಿಗೆವೋಗಿ ಏಕಾಂತದೊಳಿಂತೆಂದು ಪೇೞ್ ಪದ್ವಾವತಿಯ ತಲೆಯೊಳೞಯಿಂದಂ ನೀಂ ತಾವರೆಯ ಪೂವಂ ಮುನ್ನವಿಟ್ಟು ಮಲಯಾವತಿ ಪ್ರಾಣವಲ್ಲಭೆ ಎಲ್ಲಿರ್ದೆಯೆಂದೀಗಳೇಕೆ ಮಲಯಸುಂದರಾ ನೀನಾರಯ್ದಪ್ಪೆಯೆಂದು ಪೇೞ್ದ ಮತ್ತಮಿಂತೆಂದು ಪೇೞ್ 

    ಉಜ್ಜಯಂತ ಪರ್ವತವನ್ನು ಪ್ರದಕ್ಷಿಣ ಮಾಡುತ್ತ ಬರುತ್ತಿದ್ದನು. ಅವನನ್ನು ಚಿತ್ರಾಂಗದನೆಂಬ ವಿದ್ಯಾಧರನು ಕಂಡು ಕರುಣೆಗೊಂಡನು. ತನ್ನ ಧರ್ಮಕ್ಕೆ ಅನುಗುಣವಾದ ಪ್ರೀತಿಯಿಂದ, ಅವನು ಕುಬೇರಕಾಂತನಿಗೆ ತನ್ನ ಕಾಮಮುದ್ರಿಕೆಯನ್ನು ತಾನು ಬಯಸಿದ ಕಾರ್ಯವನ್ನು ಕೈಗೊಡಿಸುವ ವಿದ್ಯೆಯನ್ನು ಕೊಟ್ಟನು, ಕುಬೇರಕಾಂತನು ವಿದ್ಯಾದೇವತೆಯನ್ನು ಕುರಿತು “ನನ್ನ ಹಿಂದಿನ ಜನ್ಮದ ಪ್ರಾಣದರಿಸಿ ಎಲ್ಲಿದ್ದಾಳೆ* ಎಂದು ಕೇಳಿದನು. ಆಗ ವಿದ್ಯಾದೇವತೆ ಹೀಗೆ ಹೇಳಿದಳು – “ನಿನ್ನ ಪ್ರಾಣದರಸಿ ಅತಿರಥನೆಂಬ ಅರಸನಿಗೆ ಮನೋಹರಿಯೆಂಬ ಮಗಳಾಗಿ ಇದ್ದಾಳೆ* – ಹೀಗೆ ವಿದ್ಯಾದೇವತೆ ಹೇಳಲು, ಕುಬೇರಕಾಂತನು ಕೇಳಿ ತಿಳಿದುಕೊಂ ಡು ಹುಚ್ಚನ ರೂಪವನ್ನು ತಾಳಿಕೊಂಡು, ಅರಮನೆಯ ಅಂಗಳದಲ್ಲಿ ಇದ್ದ ಚಿತ್ರಪಟವನ್ನು ಸುರುಳಿಬಿಚ್ಚಿ ನೇರವಾಗಿರಿಸಿ, ಎತ್ತಿ ತೋರಿಸಿ ಹಾಡುತ್ತ – “ಎಲೆ ಮಲಯಾವತೀ, ಹಾ ನನ್ನ ಪ್ರಿಯಳೇ! ನೀನು ಈಗ ಎಲ್ಲಿರುವೆ? * – – ಎಂದು ಹಾಡುತ್ತಿದ್ದನು. ಹಾಗೆ ಹಾಡುವುದನ್ನು ಕೇಳಿದ ಮನೋಹರಿ ಪಟವನ್ನು ನೋಡಿ ಪೂರ್ವದ ನೆನಪನ್ನು ಹೊಂದಿ, ತನ್ನ ಹಿಂದಿನ ಜನ್ಮವೃತ್ತಾಂತವನ್ನು ತಿಳಿದು ದಾಮರಥಿಯೆಂಬ ತನ್ನ ಸೇವಕಿಗೆ ಸಂತೋಷದಿಂದ ಹೀಗೆ ಹೇಳಿದಳು – “ ಈ ಆಂಗಳದಲ್ಲಿ ಚಿತ್ರಪಟ ತೋರಿಸುವವನು ಹಿಂದಿನ ಜನ್ಮದಲ್ಲಿ ನನ್ನ ಗಂಡನಾಗಿದ್ದನು, * ಹೀಗೆ ಹೇಳಿ, ಅನಂತರ ಅವಳೊಡನೆ ಹೀಗೆಂದಳು – ತಾಯೇ ನೀನು ನನ್ನ ಪ್ರಾಣವನ್ನು ಉಳಿಸುವ ಕಾರಣಕ್ಕಾಗಿ ಆತನಲ್ಲಿಗೆ ಹೋಗಿ, ಅವನೊಬ್ಬನೇ ಇರುವ ವೇಳೆಯಲ್ಲಿ ಹೀಗೆ ಹೇಳು ಎಲೈ ಮಲಯಸುಂದರಾ, ನೀನು ಪದ್ಮಾವತಿಯ ತಲೆಯ ಮೇಲೆ ಮೊದಲು ತಾವರೆಯ ಹೂವನ್ನಿಟ್ಟು, ಪ್ರಾಣದರಸಿಯಾದ ಮಲಯಾವತಿಯೇ ಎಲ್ಲಿರುವೆ? ಎಂದು ಯಾಕೆ ವಿಚಾರಿಸುತ್ತಿರುವೆ ? ಎಂದು ಹೇಳಿ, ಆಮೇಲೆ ಹೀಗೆ ಹೇಳು 

    ನಿನ್ನ ಪ್ರಾಣವಲ್ಲಭೆ ನಿನ್ನನೆಯಱಸಿ ಬಯಸುತ್ತಿರ್ಪಳಾಕೆ ನಿನ್ನೊಳ್ ಕೊಡುವನ್ನೆಗಮೀ ಪಟಮಂ ತೋಱಯಾಕೆಯ ಪ್ರಾಣಮಂ ಕಾವೆನೆಂದು ಪಟಮಂ ಬೇಡಿಕೊಂಡು ಬಾ ಎಂದು ಕಲ್ಪಿಸಿಯಟ್ಟಿದೊಡಾಕೆಯುಂ ಕಲ್ಪಿಸಿದ ಪಾಂಗಿನೊಳಾತನಲ್ಲಿಗೆವೋಗೇಕಾಂತದೊಳೆಲ್ಲಮಂ ನುಡಿದು ಕುಬೇರಕಾಂತನ ಕೆಯ್ಯ ಪಟಮಂ ಬೇಡಿ ಕೊಂಡು ಪೋಗಿ ಮನೋಹರಿಗೆ ಕೊಟ್ಟಳ್ ಮನೋಹರಿಯುಮಾ ಪಟಮಂ ಕೊಂಡು ದೆವಸಕ್ಕಮೞ್ಕಱೊಳ್ ನೋಡುತ್ತಿರ್ಕುಂ ಮತ್ತಿತ್ತ ಕುಬೇರಕಾಂತಂ ತನ್ನ ಮರುಳ್ವೇಷಮಂ ತೊಱೆದು ಸ್ವಾಭಾವಿಕವಾಗಿ ತನ್ನ ಮನೆಗೆ ವಂದೊಡೆ ಪ್ರಸನ್ನರೂಪನಾಗಿರ್ದೊನಂ ವಿಜಯನಿಂತೆಂದು ಬೆಸಗೊಂಡಂ ಮಗನೆ ನೀನಿನಿತು ದಿವಸಮೇಕೆ ಮರುಳಾಗಿರ್ದ್ದೆ ಈಗಳೆಂತು ಮರುಳ್ತನಂ ಪಿಂಗಿತೆಂದು ಬೆಸಗೊಂಡೊಡೆ ಕುಬೇರಕಾಂತನಿಂತೆಂದು ಪೇೞ್ದನೀಯರಸರ ಮಗಳಪ್ಪ ಮನೋಹರಿ ಎನ್ನ ಮುನ್ನಿನ ಭವದ ಪೆಂಡತಿಯನಱಸಲ್ವೇಡಿ ಇನಿತು ದಿವಸಂ ಮರುಳ್ಗೊಂಡಿರ್ದ್ದೆಂ ಮತ್ತೀಗಳಾರಯ್ದಱಸಿ ಕಂಡೆನಪ್ಪುದಱಂದಂ ಮರುಳ್ತನಂ ಪಿಂಗಿತೆಂದು ಪೀೞ್ದೊಡೆ ತಂದೆಯೆಂದಂ ಮಗನೆ ನಿನ್ನ ಮುನ್ನಿನ ಪೆಂಡತಿಯೆಂದಱದೆಯಪ್ಪೊಡಿಮೀಗಳಾಕೆಯರಸನ ಮಗಳಗಿರ್ಪುದಱಂ ನಿನಗತಿ ದುರ್ಲಭೆ ಭಾಗ್ಯಮಿಲ್ಲದುದಂ ಪೆಱಲಾಗ ನಿನಗಾಕೆಯೊಳಪ್ಪ ಬೇಂಟಮನೞವುದು ಮಗನೆ ಎಂದೊಡೆ ಕುಬೇರಕಾಂತಂ ಕಾಮವಿದ್ಯೆಯಿಂದಂ ಹಸ್ತ್ಯಶ್ವರಥಪದಾತಿಬಲಸಮೂಹಮನೆನಿತಾನುಮಂ ವಿಭವೈಶ್ವರ್ಯಸಮನ್ವಿತಂ ತಂದೆಗೆ ತೋಱದೊಡೆ 

    – ನಿನ್ನ ಪ್ರಾಣದರಸಿ ನಿನ್ನನ್ನೇ ಹುಡುಕಿಕೊಂಡು ಬಯಸಿಕೊಂಡು ಇದ್ದಾಳೆ. ಅವಳು ನಿನ್ನೊಡನೆ ಸೇರುವವರೆಗೆ ಈ ಚಿತ್ರಪಟಗಳನ್ನು ತೋರಿಸಿ ಆಕೆಯ ಪ್ರಾಣರಕ್ಷಣೆ ಮಾಡುವೆನೆಂದು ಚಿತ್ರಪಟವನ್ನು ಕೇಳಿ ತೆಗೆದುಕೊಂಡು ಬಾ ಎಂದು ತಿಳಿಸಿ ಕಳು*ಸಿದಳು. ದಾಮರಥಿಯು ಆಕೆ ಹೇಳಿಕೊಟ್ಟ ರೀತಿಯಲ್ಲಿ ಕುಬೇರಕಾಂತನ ಬಳಿಗೆ ಹೋದಳು. ಏಕಾಂತದಲ್ಲಿ ಎಲ್ಲ ಸಂಗತಿಗಳನ್ನೂ ಹೇಳಿ, ಕುಬೇರಕಾಂತನ ಕೈಯಲ್ಲಿದ್ದ ಚಿತ್ರಪಟವನ್ನು ಕೇಳಿ, ತೆಗೆದುಕೊಂಡುಹೋಗಿ ಮನೋಹರಿಗೆ ಕೊಟ್ಟಳು. ಮನೋಹರಿ ಆ ತೆಗೆದುಕೊಂಡು ಪ್ರತಿದಿನವೂ ಪ್ರೀತಿಯಿಂದ ನೋಡುತ್ತಾ ಇದ್ದಳು. ಆ ಮೇಲೆ, ಇತ್ತ ಕುಬೇರಕಾಂತನು ತನ್ನ ಹುಚ್ಚನ ವೇಷವನ್ನು ಬಿಟ್ಟು, ಸಹಜವೇಷವನ್ನು ತಾಳಿ, ತನ್ನ ಮನೆಗೆ ಬಂದು ಸಂತೋಷದಿಂದ ಇರುತ್ತಿದ್ದನು. ತಂದೆಯಾದ ವಿಜಯನು ಅವನನ್ನು ಕುರಿತು ಹೀಗೆ ಹೇಳಿದನು –  – “ಮಗನೇ, ನೀನು ಇಷ್ಟು ದಿವಸವೂ ಯಾಕೆ ಹುಚ್ಚನ ಹಾಗೆ ಇದ್ದೆ ? ಈಗ ಹುಚ್ಚುತನವು ಹೇಗೆ ಹೋಯಿತು ? ಎಂದು ಕೇಳಿದಾಗ, ಕುಬೇರಕಾಂತನು ಹೀಗೆ ಹೇಳಿದನು – “ಈಗ ರಾಜರ ಮಗಳಾಗಿಗುವ ಮನೋಹರಿ ನನ್ನ ಹಿಂದಿನ ಜನ್ಮದ ಹೆಂಡತಿ. ಆಕೆಯನ್ನು ಹುಡುಕುವುದಕ್ಕಾಗಿ ಇಷ್ಟು ದಿವಸವೂ ನಾನು ಹುಚ್ಚಗೊಂಡಿದ್ದೆನು. ಆ ಮೇಲೆ ಈಗ ವಿಚಾರಿಸಿ, ಹುಡುಕಿ ಕಂಡೆನಾದುದರಿಂದ ನನ್ನ ಹುಚ್ಚು ಹೋಗಿಬಿಟ್ಟಿತು. * ಕುಬೇರಕಾಂತನು ಹೀಗೆ ಹೇಳಲು ಅವನ ತಂದೆ – “ಮಗನೆ, ನೀನು ಆಕೆಯನ್ನು ಪೂರ್ವಜನ್ಮದ ಪತ್ನಿಯೆಂದು ತಿಳಿದಿರುವೆಯಾದರೂ ಈಗ ಆಕೆಯು ರಾಜನ ಮಗಳಾಗಿರುವುದರಿಂದ ನಿನಗೆ ದೊರೆಯಲಾರಳು, ಅದೃಷ್ಟವಿಲ್ಲದುದನ್ನು ಪಡೆಯಲಿಕ್ಕಾಗುವುದಿಲ್ಲ. ಮಗನೇ, ನಿನಗೆ ಅವಳಲ್ಲಿರುವ ಪ್ರೀತಿಯನ್ನು ಬಿಟ್ಟುಬಿಡು* – ಎಂದು ಹೇಳಿದನು. ಆಗ ಕುಬೇರಕಾಂತನು ಕಾಮವಿದ್ಯೆಯಿಂದ ಆನೆ, ಕುದುರೆ, ರಥ ಕಾಲಾಲುಗಳ ಎಷ್ಟೋ ಸೈನ್ಯದ ಸಮೂಹವನ್ನು, ವೈಭವಸಂಪತ್ತುಗಳಿಂದ ಕೂಡಿದವನಾಗಿ ತಂದೆಗೆ ತೋರಿಸಿದನು. 

ತಂದೆಯುಂ ಮಗನ ಸಾಮರ್ಥ್ಯಮಂ ಕಂಡಾದಮಾನುಂ ಸಂತಸಂಬಟ್ಟಿರ್ದಂ ಮತ್ತೊಂದು ದಿವಸಂ ಆತಿರಥಮಹಾರಾಜಂ ಮಂತ್ರಿಯರ್ಕಳೊಡನೆ ಮಂತಣಮಿರ್ದಲ್ಲಿ ಮಂತ್ರಿಯರ್ಕಳನಿಂತು ಬೆಸಗೊಂಡಂ ಮನೋಹರಿಗೆ ಯೌವನಂ ನೆಱೆದುದು ಕೂಸು ಕುಡಲ್ಕಾದುದಾರ್ಗೆ ಕುಡುವಮೆಂದು ಮಂತ್ರಿಯರ್ಕಳಂ ಬೆಸಕೊಂದೊಡೆ ಉೞದ ಮಂತ್ರಿಯರ್ಕಳೆಲ್ಲಂ ತಂತಮ್ಮ ಬಗೆದರಸುಗಳ ಪೆಸರ್ಗಳಂ ಪೇೞ್ದವರ್ಗೆ ಕುಡುವಮೆಂದೊಡೆ ಕುಬೇರಕಾಂತನ ತಂದೆಯಪ್ಪ ವಿಜಯನೆಂಬ ಮಂತ್ರಿಯುರ್ಕೆವದಿಂದವರ ಪೇೞ್ದ ಮದವಕ್ಕಳಂ ನಿರಾಕರಿಸಿ ಮನೋಹರಿಯ ರೂಪಿಂಗಂ ಜವ್ವನಕ್ಕಂ ಕಳಾಗುಣಂಗಳನಱವುದರ್ಕ್ಕಮವರ್ ಯೋಗ್ಯರ್ ಮದವಕ್ಕಳಲ್ಲರ್ ಕೂಸಿಂಗೆ ಸ್ವಯಂಬರಮಂ ಪಣ್ಣುವಂ ಸ್ವಯಂಬರದೊಳ್ ತನ್ನ ಭ್ಯಾಗದೊಳ್ ಮೆಚ್ಚಿದವರಂ ಕಯ್ಕೊಳ್ಗೆಂದು ನುಡಿದೊಡರಸನುಮಾತನ ಮಾತನೊಡಂಬಟ್ಟು ಸ್ವಯಂವರಸಾಲೆಯಂ ಮಾಡಿಸಿ ಅರಸುಗಳ್ಗೆಲ್ಲಂ ಬೞಯನಟ್ಟಿ ಬರಿಸೆ ಸ್ವಯಂವರಸಾಲೆಯೊಳ್ ನೆರೆದಿರ್ದ್ದರಂಗ ವೆಂಗಿ ಕಳಿಂಗ ಕಾಂಭೋಜ ಕಾಶಿ ಕೌಶಲ ಪಲ್ಲವ ಪಾಂಚಾಳ ಮಗಧ  ಮಾಳವ ವತ್ಸ ಮಹಾರಾಷ್ಟ್ರ ಕುಣಾಳ ಕುರುಜಾಂಗಣ ದ್ರವಿಳ ಲಾಳ ಕರ್ಣಾಟ ಗೌಳ ಸುಹುಮ ಸುರಕಾಂತ ಸೂರಸೇನೀಯ ಪ್ರಭೃತಿ ನಾನಾ ವಿಷಯಾಪತಿಗಳಪ್ಪರಸುಗಳೆಲ್ಲಂ ನೆರೆದಿರ್ದ್ದಲ್ಲಿಯಾರುಮಂ ಮೆಚ್ಚದೆ ದಾಂಟಿ ಪೋಗಿ ಕುಬೇರಕಾಂತಂಗೆ 

ಮಗನ ಸಾಮರ್ಥ್ಯವನ್ನು ಕಂಡು ತಂದೆ ಅತಿಶಯವಾಗಿ ಸಂತೋಷಪಟ್ಟಿದನು. ಆಮೇಲೆ ಒಂದು ದಿವಸ ಅತಿರಥಮಹಾರಾಜನು ಮಂತ್ರಿಗಳೊಂದಿಗೆ ಮಂತ್ರಾಲೋಚನೆ ನಡೆಸುತ್ತಿದ್ದಾಗ ತನ್ನ ಮಂತ್ರಿಗಳೊಡನೆ ಹೀಗೆ ಕೇಳಿದನು – “ಮನೋಹರಿಗೆ ಯೌವನ ತುಂಬಿದೆ. ಮದುವೆ ಮಾಡಲಿಕ್ಕೆ ಆಗಿದೆ. ಯಾರಿಗೆ ಕೊಡೋಣ ? * ಹೀಗೆ ಮಂತ್ರಿಗಳನ್ನು ಕೇಳಿದಾಗ ಉಳಿದ ಮಂತ್ರಿಗಳೆಲ್ಲರೂ ತಾವು ತಾವು ಭಾವಿಸಿಕೊಂಡ ರಾಜರುಗಳ ಹೆಸರುಳನ್ನು ಹೇಳಿ, ಅವರಿಗೆ ಕೊಡೋಣ ಎಂದು ಹೇಳಿದರು. ಕುಬೇರಕಾಂತನ ತಂದೆಯಾದ ವಿಜಯನೆಂಬ ಮಂತ್ರಿ ಉಪಾಯದಿಂದ ಆ ಇತರ ಮಂತ್ರಿಗಳು ಹೇಳಿದ ಮದುಮಕ್ಕಳನ್ನು ತಿರಸ್ಕರಿಸಿದನು. “ಅವರು ಮನೋಹರಿಯ ರೂಪಕ್ಕೂ ತಾರುಣ್ಯಕ್ಕೂ ತಕ್ಕವರಲ್ಲ. ಅವಳ ಕಲೆಗಳನ್ನು ಮತ್ತು ಗುಣಗಳನ್ನು ತಿಳಿಯುವುಕ್ಕೂ ಅವರು ಯೋಗ್ಯರಾದ ಮದುಮಕ್ಕಳಲ್ಲ. ಕನ್ಯೆಗೆ ಸ್ವಯಂವರವನ್ನು ಮಾಡೋಣ. ಆ ಸ್ವಯಂವರದಲ್ಲಿ ಆಕೆ ತನ್ನ ಅದೃಷ್ಟದಂತೆ ಮೆಚ್ಚಿದವನನ್ನು ವರನಾಗಿ ಸ್ವೀಕರಿಸಲಿ ಎಂದು ಹೇಳಿದನು. ರಾಜನು ಅವನ ಮಾತಿಗೆ ಒಪ್ಪಿ ಸ್ವಯಂವರಶಾಲೆಯನ್ನು ಮಾಡಿಸಿದನು. ರಾಜರುಗಳಿಗೆಲ್ಲ ದೂತರನ್ನು ಕಳುಹಿಸಿ ಬರಮಾಡಿಸಿದನು. ಸ್ವಯಂವರಶಾಲೆಯಲ್ಲಿ ಅಂಗ, ವೆಂಗಿ, ಕಳಿಂಗ, ಕಾಂಭೋಜ, ಕಾಶಿ, ಕೌಶಲ, ಪಲ್ಲವ, ಪಾಂಚಾಳ, ಮಗಧ, ಮಾಳವ, ವತ್ಸ, ಮಹಾರಾಷ್ಟ್ರ, ಕುಣಾಳ, ಕುರುಜಾಂಗಣ, ದ್ರವಿಳ, ಲಾಳ, ಕರ್ಣಾಟ, ಗೌಳ, ಸುಹುಮ, ಸುರಕಾಂತ, ಶೂರಸೇನೀಯ – ಮುಂತಾದ ಹಲವಾರು ದೇಶಗಳ ಒಡೆಯರಾದ ಅರಸುಗಳೆಲ್ಲಾ ನೆರೆದಿದ್ದರು. ಹಾಗೆ ನೆರೆದಿದ್ದವರಲ್ಲಿ ಯಾರೊಬ್ಬನನ್ನು ಮೆಚ್ಚದೆ, ಮನೋಹರಿಯು ದಾಟುತ್ತ ಹೋಗಿ ಕುಬೇರಕಾಂತನಿಗೆ

    ಮಾಲೆಯಂ ಸೂಡಿದಳಾಗಳರಸುಗಳೆಲ್ಲಂ ನೆರೆದಾಮೇಕೈಕ ಪ್ರಧಾನರೆಮಿರ್ದ್ವಂತಿರೆ ಬಡವಂಗೇನುಮಲ್ಲದೊಂಗೆ ಮಾಲೆಯಂ ಸೂಡಿದಳೆಂದು ಸಭಾಕ್ಷೋಭಮಾಗಿ ಕುಬೇರಕಾಂತನೊಳನಿಬರುಂ ನೆರೆದು ಯುದ್ದಂಗಿಯ್ದೊಡೆ ಸಂಗ್ರಾಮರಂಗದೊಳ್ ಸುವರ್ಮವರ್ಮಂ ಮೊದಲಾಗೊಡೆಯರರ್ಕ್ಕಳೆಲ್ಲರುಮಂ ಗೆಲ್ದು ಮನೋಹರಿಯಂ ಪಾಣಿಗ್ರಹಣಪುರಸ್ಸರಂ ಮದುವೆನಿಂದು ಸೊಪಾರಕ್ಕಧಪತಿಯಾಗಿರ್ದ್ದನ್ ಇಂತು ಕುಬೇರಕಾಂತಂ ಮನೋಹರಿಯೊಳಿಪ್ಪ ವಿಷಯ ಕಾಮಭೋಗಂಗಳನನುಭವಿಸುತ್ತುಮಿರೆಯಿರೆ ಸುವರ್ಮ್ಮವರ್ಮನೆಂಬರಸಂ ರಾಜ್ಯಪರಿಭ್ರಷ್ಟನಾಗಿ ತಾಪಸ ತಪಮಂ ಕೈಕೊಂಡು ನೆಗೞ್ದು ಸತ್ತು ಪ್ರತಿಸೂರ್ಯನೆಂಬ ವೈಂತರದೇವನಾಗಿ ಪುಟ್ಟಿದೊಂ ಮತ್ತೆ ಶ್ರೀಧರನುಂ ಕುಬೇರಕಾಂತನುಂ ಮನೋಹರಿಯುಮನ್ಯೋನ್ಯಾತಿ ಸ್ನೇಹದೊಳ್ ಕೂಡಿ ರಾಜ್ಯಂಗೆಯ್ದು ತಮ್ಮ ಗೆಯ್ದ ದಾನಧರ್ಮದ ಫಲದಿಂದಂ ಅನ್ಯಜನ್ಮದೊಳಿಂತಪ್ಪ ವಿದ್ಯೆಯಕ್ಕೆಂದು ಮೂವರುಂ ನಿದಾನಂ ಗೆಯ್ದು ಮುನ್ನಂ ಶ್ರೀಧರಂ ಸತ್ತು ವಿಜಯಾರ್ಧಪರ್ವತದ ಉತ್ತರ ಶ್ರೇಣಿಯೊಳ್ ಆಳಕಾಪುರಮೆಂಬುದು ಪೊೞಲದನಾಳ್ವೊಂ ಗಗನವಲ್ಲಭನೆಂಬೊನಾತನ ಭಾರ್ಯೆ ಅನಂಗಮಾಲೆಯೆಂಬೊಳಾಯಿರ್ವ್ವರ್ಗ್ಗಂ ಶ್ರೀಧರಂ ಚಂಡವೇಗನೆಂಬೊಂ ಮಗನಾಗಿ ಪುಟ್ಟಿದೊಂ ಆ ಚಂಡವೇಗನ ಮಹಾದೇವಿ ವಿದ್ಯುಲ್ಲತೆಯೆಂಬೊಳಾಯಿರ್ವ್ವರ್ಗ್ಗಂ ಕುಬೇರಕಾಂತಂ ಸತ್ತು ವಿದ್ಯುನ್ಮಾಳಿಯೆಂಬ ಮಗನಾಗಿ ಪುಟ್ಟಿದೊಂ ಮತ್ತಂ ದಕ್ಷಿಣಶ್ರೇಣಿಯೊಳ್ ವಿದುಲ್ಲತೆಯ ಸೋದರ ತಮ್ಮ ಮೇಘಕೂಟಾಪತಿ ಮೇಘಮಾಳಿಯೆಂಬೊಂ ವಿದ್ಯಾಧರನಾತನ ಮಹಾದೇವಿ ರತಿಬಿಂದುವೆಂಬೊಳಾಯಿರ್ವ್ವರ್ಗ್ಗಂ ಮನೋಹರಿ ಸತ್ತು ವಿರಳವೇಗೆಯೆಂಬೊಳ್ ಮಗಳಾಗಿ ಪುಟ್ಟಿದಳ್

ವರಮಾಲಿಕೆಯನ್ನು ಮುಡಿಸಿದಾಗ ಅರಸುಗಳೆಲ್ಲರೂ ಒಟ್ಟಾಗಿ ನಾವು ಒಬ್ಬೊಬ್ಬರೇ ಶ್ರೇಷ್ಠವ್ಯಕ್ತಿಗಳಾಗಿದ್ದೇವೆ. ನಾವು ಇದ್ದ ಹಾಗೆಯೇ ಏನೂ ಅಲ್ಲದಿರುವ ಬಡವನಿಗೆ ಮಾಲೆ ಹಾಕಿದಳು ಎಂದು ಸಭೆಯಲ್ಲಿ ಗದ್ದಲವಾಗಿ ಅವರೆಲ್ಲರೂ ಸೇರಿ ಕುಬೇರಕಾಂತನೊಡನೆ ಯುದ್ದಮಾಡಿದರು. ಕುಬೇರಕಾಂತನು ಯುದ್ದರಂಗದಲ್ಲಿ ಸುವರ್ಮವರ್ಮ ಮುಂತಾಗಿ ಉಳ್ಳವರೆಲ್ಲರನ್ನೂ ಗೆದ್ದು ಮನೋಹರಿಯನ್ನು ಕೈಹಿಡಿವ ಮೂಲಕವಾಗಿ ಮದುವೆಯಾಗಿ ಸೋಪಾರವೆಂಬ ದೇಶಕ್ಕೆ ಒಡೆಯನಾಗಿ ಇದ್ದನು. ಈ ರೀತಿಯಾಗಿ ಕುಬೇರಕಾಂತನು ಮನೋಹರಿಯಲ್ಲಿ ತನ್ನ ಪ್ರೀತಿಯ ವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಇರುತ್ತಿರಲು ಸುವರ್ಮವರ್ಮ ಎಂಬ ರಾಜನು ರಾಜ್ಯವನ್ನು ಕಳೆದುಕೊಂಡು ಋಷಿಗಳ ತಪಸ್ಸನ್ನು ಸ್ವೀಕರಿಸಿ, ಆಚರಿಸಿ, ಸತ್ತು ಪ್ರತಿಸೂರ್ಯನೆಂಬ ಪಿಶಾಚದೇವತೆಯಾಗಿ ಹುಟ್ಟಿದನು. ಅನಂತರ ಶ್ರೀಧರನೂ ಕುಬೇರಕಾಂತನೂ ಮನೋಹರಿಯೂ ಪರಸ್ಪರವಾಗಿ ಕಡುಗೆಳೆತನದಿಂದ ಕೂಡಿ ರಾಜ್ಯವನ್ನಾಳಿದರು. ತಾವು ಮಾಡಿದ ದಾನಧರ್ಮದ ಫಲದಿಂದ ಬೇರೆ ಜನ್ಮದಲ್ಲಿ ಇದೇ ರೀತಿಯ ಇರವು ಉಂಟಾಗಲೆಂದು ಮೂವರೂ ಸಂಕಲ್ಪಮಾಡಿಕೊಂಡು ಸತ್ತರು. ಮೊತ್ತ ಮೊದಲು ಶ್ರೀಧರನು ಸತ್ತನು. ವಿಜಯಾರ್ಧ ಪರ್ವತದ ಬಡಗಣ ಸಾಲಿನಲ್ಲಿ ಅಳಕಾಪುರವೆಂಬ ಪಟ್ಟಣವಿದೆ. ಅದನ್ನು ಅಳುವವನು ಗಗನವಲ್ಲಭನೆಂಬುವನು. ಅವನ ಹೆಂಡತಿ ಅನಂಗಮಾಲೆಯೆಂಬುವಳು. ಆ ಇಬ್ಬರಿಗೆ ಶ್ರೀಧರನು ಚಂಡವೇಗನೆಂಬ ಮಗನಾಗಿ ಹುಟ್ಟಿದನು. ಆ ಚಂಡವೇಗನ ಪತ್ನಿ ವಿದ್ಯುಲ್ಲತೆ ಎಂಬುವಳು ಆ ಇಬ್ಬರಿಗೆ ಕುಬೇರಕಾಂತನು ಮಗನಾಗಿ ವಿದ್ಯುನ್ಮಾಳಿ ಎಂಬವನಾಗಿ ಹುಟ್ಟಿದನು. ಆಮೇಲೆ ವಿಜಯಾರ್ಧಪರ್ವತದ ತೆಂಕಣ ಸಾಲಿನಲ್ಲಿ ಮೇಘಕೂಟಕ್ಕೆ ಒಡೆಯನಾಗಿ ವಿದ್ಯುಲ್ಲತೆಯ ಸೋದರ ಮೇಘಮಾಳಿ ಎಂಬ ವಿದ್ಯಾಧರನಿದ್ದನು. ಅವನ ಪತ್ನಿ ರತಿಬಿಂದು ಎಂಬುವಳು. ಆ ದಂಪತಿಗಳಿಗೆ ಮನೋಹರಿಯು ವಿರಳವೇಗೆ ಎಂಬ ಮಗಳಾಗಿ ಹುಟ್ಟಿದಳು.

ಮತ್ತೊಂದು ದಿವಸಂ ಚಂಡವೇಗನುಂ ವಿದ್ಯುನ್ಮಾಲಿಯುಮಂತು ತಮ್ಮಿರ್ವರುಂ ಉಜ್ಜಯಂತಪರ್ವತದ ಶಿಖರದೊಳ್ ಅರಿಷ್ಟನೇಮಿ ಭಟ್ಟಾರರ ಪರಿನಿರ್ವಾಣಭೂಮಿಯೊಳ್ ಭಕ್ತಿಯಿಂ ಪೂಜಿಸಲೆಂದರ್ಚನೆಯಂ ಕೊಂಡು ಪೋದೊಡಾ ಪರ್ವತದ ಶಿಖರಮಂ ಕಂಡು ವಿದ್ಯುನ್ಮಾಲಿ ಮೂರ್ಛೆವೋಗಿ ಜಾತಿಸ್ಮರನಾಗಿ ಮನೋಹರಿಯಂ ನೆನೆದು ಮಾಸೋಪವಾಸಂಗೆಯ್ದು ಪ್ರಜ್ಞಪ್ತಿಯೆಂಬ ಮಹಾವಿದ್ಯೆಯಂ ಸಾಸಿದೊಡಾ ವಿದ್ಯೆ ಬೆಸನೇನೆಂದು ಮುಂದೆ ನಿಲೆ ಎನ್ನ ಮುನ್ನಿನ ಭವದ ಪ್ರಾಣವಲ್ಲಭೆಯಪ್ಪ ಮನೋಹರಿ ಈರಳೀ ಲೋಕದೊಳೆಲ್ಲಿರ್ದಳೆಂಬುದನಱಸಿ ಬೇಗಮೆನಗೆ ಪೇೞೆಂದೊಡಾ ವಿದ್ಯೆಯಿಂತೆಂದು ಪೇೞ್ದತ್ತು ವಿಜಯಾರ್ಧಪರ್ವತದ ದಕ್ಷಿಣಶ್ರೇಣಿಯೊಳ್ ಮೇಘಕೂಟರಾಪತಿ ಮೇಘಮಾಳಿಯೆಂಬೊಂ ವಿದ್ಯಾಧರಂ ನಿನ್ನ ಸೋದರಮಾವನಾತಂಗೆ ಮನೋಹರಿ ಸತ್ತು ವಿರಳವೇಗಯೆಂಬೊಳ್ ಮಗಳಾಗಿರ್ದೊಳೆಂದೊಡಂತಪ್ಪೊಡೆ ನೀನೆನ್ನ ಮಾವನ ಮನೆಗೆ ಪೋಗಿ ವಿರಳವೇಗೆಗಿಂತೆಂದು ಪೇೞು ಎಲೆ ಮನೋಹರಿ ನೀಂ ಮುನ್ನಿನ ಭವದೊಳ್ ಕುಬೇರಕಾಂತನೊಡನೆ ಕ್ರೀಡಿಸಿದ ಕ್ರೀಡೆಗಳಂ ನೆನೆದಾ ಎಂದು ಪೇೞೆಂದು ವಿದ್ಯೆಯಂ ಕಲ್ಪಿಸಿಯಟ್ಟಿದೊಡಾ ವಿದ್ಯೆಯುಂ ಪೋಗಿ ಕಲ್ಪಿಸಿದ ಪಾಂಗಿನೊಳೆ ನುಡಿದೊಡೆ ವಿರಳವೇಗೆ ಮೂರ್ಛೆವೋಗಿರ್ದು ನೀಡಱಂದೆೞ್ಚತ್ತು ಜಾತಿಸ್ಮರೆಯಾಗಿ

ಮತ್ತೊಂದು ದಿನ ಆ ಇಬ್ಬರೂ ಉಜ್ಜಯಂತಪರ್ವತದ ತುದಿಯಲ್ಲಿ ಅರಿಷ್ಟನೇಮಿ ಜಿನೇಂದ್ರರು ಮೋಕ್ಷಕ್ಕೆ ಹೋದ ಸ್ಥಳದಲ್ಲಿ, ಭಕ್ತಿಯಿಂದ ಪೂಜೆಮಾಡುವುದಕ್ಕಾಗಿ ಪೂಜಾವಸ್ತುಗಳನ್ನು ತೆಗೆದುಕೊಂಡು ಹೋದರು. ಆಗ ಆ ಪರ್ವತದ ತುದಿಯನ್ನು ನೋಡಿ ವಿದ್ಯುನ್ಮಾಲಿ ಮೂರ್ಛೆ ಹೋದನು. ಅವನಿಗೆ ಪೂರ್ವಜನ್ಮದ ಸ್ಮರಣೆಯುಂಟಾಯಿತು. ಅವನು ಮನೋಹರಿಯನ್ನು ನೆನೆಸಿಕೊಂಡು ಒಂದು ತಿಂಗಳು ಉಪವಾಸ ಮಾಡಿ ಪ್ರಜ್ಞಪ್ತಿಯೆಂಬ ಮಹಾವಿದ್ಯೆಯನ್ನು ಸಾಸಿದನು. ಆ ವಿದ್ಯೆ “ನನಗೇನಪ್ಪಣೆ?* ಎಂದು ಅವನ ಮುಂದೆ ಬಂದು ನಿಂತಿತು. ಆಗ ವಿದ್ಯುನ್ಮಾಲಿ – “ಹಿಂದಿನ ಜನ್ಮದಲ್ಲಿ ನನ್ನ ಪ್ರಾಣರಸಿಯಾ ಮನೋಹರಿಯು ಈಗ ಈ ಲೊಕದಲ್ಲಿ ಎಲ್ಲಿ ಇದ್ದಾಳೆ ಎಂಬುದನ್ನು ಹುಡುಕಿ ಹಿಡಿದು ನನಗೆ ಬೇಗ ಹೇಳು* ಎಂದನು. ಅದಕ್ಕೆ ಆ ವಿದ್ಯೆ ಈ ರೀತಿಯಾಗಿ ಹೇಳಿತು – “ವಿಜಾಯರ್ಧಪರ್ವತದ ತೆಂಕಣ ಸಾಲಿನಲ್ಲಿ ಮೇಘಕೂಟವೆಂಬ ಪಟ್ಟಣಕ್ಕೆ ಒಡೆಯನಾದ ಮೇಘಮಾಳಿಯೆಂಬ ವಿದ್ಯಾಧರನು ನಿನ್ನ ಸೋದರಮಾವನು. ಮನೋಹರಿ ಸತ್ತು ಆ ಮೇಘಮಾಳಿಗೆ ವಿರಳವೇಗೆಯೆಂಬ ಮಗಳಾಗಿ ಇದ್ದಾಳೆ* – ಎಂದು ಹೇಳಲು, ವಿದ್ಯುನ್ಮಾಲಿ ಹೀಗೆಂದನು – “ಹಾಗಾದರೆ ನೀನು ನನ್ನ ಮಾವನ ಮನೆಗೆ ಹೋಗಿ ವಿರಳವೇಗಗೆ ಈ ರೀತಿಯಾಗಿ ಹೇಳು – – ಎಲೈ ಮನೋಹರಿಯೇ, ನೀನು ಹಿಂದಿನ ಜನ್ಮದಲ್ಲಿ ಕುಬೇರಕಾಂತನೊಡನೆ ಆಡಿದ ಆಟಗಳನ್ನು ನೆನೆಪಿಟ್ಟುರುವೆಯಾ ಎಂದು ಹೇಳು* – – ಎಂದು ವಿದ್ಯಗೆ ಹೇಳಿಕೊಟ್ಟು ಕಳುಹಿಸಿದನು. ಆ ವಿದ್ಯೆಯು ಹೋಗಿ, ಕಲಿಸಿ ಕೊಟ್ಟ ರೀತಿಯಲ್ಲಿಯೇ ಹೇಳಿತು. ಆಗ ವಿರಳವೇಗೆ ಮೂರ್ಛೆಹೋದಳು ಹೆಚ್ಚು ಹೊತ್ತಿನ ಮೇಲೆ ಎಚ್ಚತ್ತಳು ಪೂರ್ವಜನ್ಮದ ಸ್ಮರಣೆಯುಂಟಾಗಿ 

ವಿರಹಸಂತಾಪದಿಂ ತನ್ನ ಮುನ್ನಿನ ಭರ್ತಾರನಂ ನೆನೆಯುತ್ತಿರೆ ವಿದ್ಯುನ್ಮಾಳಿಯುಂ ತನ್ನ ಮನೆಗೆ ವೋಗಿ ತಂದೆ ಚಂಡವೇಗಂಗೆ ತನ್ನ ವೃತ್ತಾಂತಮೆಲ್ಲಮಂ ಪೇೞ್ದೊಡಾತನುಮಾದಮಾನಮೊಸೆದು ತನ್ನ ಮೈದುನನಪ್ಪ ಮೇಘಮಾಳಿ ವಿದ್ಯಾಧರನಲ್ಲಿಗೆ ಪೆರ್ಗಡೆಗಳಂ ಕೂಸಂ ಬೇಡಿಯಟ್ಟೆ ಪೆತ್ತು ವಿರಳವೇಗೆಯಂ ವಿದ್ಯುನ್ಮಾಲಿ ಮದುವೆನಿಂದಾಕೆಯೊಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದು ದಿವಸಂ ವಿದ್ಯಾನಿರ್ಮಿತ ವಿಚಿತ್ರಮಾಗುತ್ತಿರ್ದ ವಿಮಾನಮನೇಱಕೊಂಡು ಪೋಪಲ್ಲಿ ಹಿಮವಂತ ಪರ್ವತದ ಮೇಗೆ ಪಾಱುವ ವಿಮಾನಮಂ ಮು ಪೇೞ್ದ ಪ್ರತಿಸೂರ್ಯನೆಂಬ ವ್ಯಂತರದೇವಮ ಕಂಡು ತನ್ನ ಸುವರ್ಮವರ್ಮನಪ್ಪ ಭವದ ಪಗೆಯಂ ನೆನದಿರ್ವ್ವರುಮಂ ಕೂಡಿ ಕೋಂದನಿಂತಿರ್ವರುಂ ಸತ್ತು ಗಂಗೆಯೆಂಬ ಮಹಾನದಿಯ ತೆಂಕಣ ಪಡುವಣ ಕೋಣೊಳ್ ಸುಕೌಶಳಮೆಂಬ ವಿಷಯದೊಳಯೋಧ್ಯಾಪುರಮೆಂಬ ಪೊೞಲೊಳ್ ಸಾಗರಸೇನೆನೆಂಬೊಂ ರಾಜಶ್ರೇಷ್ಠಿಯಾತನ ಭಾರ್ಯೆ ಧರಣಿಯೆಂಬೋಳಾಯಿರ್ವರ್ಗ್ಗಂ ವಿದ್ಯುನ್ಮಾಳಿಯೆಂಬ ವಿದ್ಯಾಧರಂ ಕಾಲಂಗೆಯ್ದು ಸಿದ್ದಾರ್ಥನೆಂಬೊಂ ಮಗನಾಗಿ ಪುಟ್ಟಿದೊಂ ಪಿತೃಮಾತೃಗಳೊಸಗೆಯಂ ಮಾಡುತ್ತಂ ಶ್ರೀ ವಿಭವ ರೂಪಕಾಂತಿ ಸೌಭಾಗ್ಯದಿ ಗುಣಂಗಳಿಂ ನೆಱೆದೊಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ರಾಜಗೃಹಮೆಂಬ ಪೊೞಲೊಳ್ ಸಮುದ್ರವಿಜಯನೆಂಬೊಂ ರಾಜಶ್ರೇಷ್ಠಿಯಾತಂಗೆ ಸಾಗರಸೆಟ್ಟಿಯ ಸೋದರ ತಂಗೆ ಸುಮತಿಯೆಂಬೊಳಂ ಕೊಟ್ಟರಾಯಿರ್ವರ್ಗ್ಗಂ 

    ಅವಳು ಆಗಲಿಕೆಯ ದುಃಖದಿಂದ ತನ್ನ ಗಂಡನನ್ನು ಸ್ಮರಿಸುತ್ತ ಇದ್ದಳು. ಹೀಗಿರಲು ವಿದ್ಯುನ್ಮಾಲಿಯು ತನ್ನ ಮನೆಗೆ ತೆರಳಿ ತಂದೆಯಾದ ಚಂಡವೇಗನಿಗೆ ತನ್ನ ಎಲ್ಲಾ ಸಂಗತಿಯನ್ನು ಹೇಳಿದನು. ಆಗ ಚಂಡವೇಗನು ಬಹಳವಾಗಿ ಸಂತೋಷಪಟ್ಟು ತನ್ನ ಮೈದುನನಾದ ಮೇಘಮಾಳಿ ವಿದ್ಯಾಧರನಲ್ಲಿಗೆ ಕನ್ಯಾರ್ಥಿಯಾಗಿ ಹೆಗ್ಗಡೆ (ಅರಮನೆಯ ಅಕಾರಿ)ಗಳನ್ನು ಕಳುಹಿಸಿ ಒಪ್ಪಿಗೆಯನ್ನು ಪಡೆದನು. ವಿದ್ಯುನ್ಮಾಲಿಯು ವಿರಳವೇಗೆಯನ್ನು ಮದುವೆಯಾಗಿ ಅವಳಲ್ಲಿ ತನ್ನ ಇಚ್ಚೆಯ ವಿಷಯದ ಕಾಮಸುಖಗಳನ್ನು ಸವಿಯುತ್ತಿರಲು ಹಲವು ಕಾಲ ಸಂದಿತು. ಆಮೇಲೆ ಒಂದು ದಿವಸ ವಿದ್ಯೆಯಿಂದ ನಿರ್ಮಿತವಾದ ಅಶ್ಚರ್ಯಕರವಾಗಿದ್ದ ವಿಮಾನವನ್ನು ಹತ್ತಿಕೊಂಡು ವಿದ್ಯುನ್ಮಾಲಿಯು ವಿರಳವೇಗೆಯೊಡನೆ ಹೋಗುತ್ತಿದ್ದನು. ಹಿಮಾಲಯ ಪರ್ವತದ ಮೇಲೆ ಹಾರುವ ಅವನ ವಿಮಾನವನ್ನು ಹಿಂದೆ ಹೇಳಿದ ಪ್ರತಿಸೂರ್ಯನೆಂಬ ಪಿಶಾಚದೇವತೆ ಕಂಡು, ತಾನು ಸುವರ್ಮವರ್ಮನಾಗಿದ್ದ ಜನ್ಮದ ಹಗೆತನವನ್ನು ಸ್ಮರಿಸಿಕೊಂಡು, ಇಬ್ಬರನ್ನೂ ಒಟ್ಟಿಗೆ ಕೊಂದಿಕ್ಕಿದನು. ಹೀಗೆ ಇಬ್ಬರೂ ಸತ್ತರು. ಗಂಗೆಯೆಂಬ ದೊಡ್ಡ ನದಿಯ ನೈಋತ್ಯದ ಮೂಲೆಯಲ್ಲಿ ಸುಕೌಶಲವೆಂಬ ದೇಶದಲ್ಲಿ ಆಯೋಧ್ಯಾಪುರವೆಂಬ ಪಟ್ಟಣದಲ್ಲಿ ಸಾಗರಸೇನನೆಂಬ ರಾಜ ವರ್ತಕನಿದ್ದನು. ಆತನ ಹೆಂಡತಿ ಧರಣಿಯೆಂಬವಳು. ಆ ದಂಪತಿಗಳಿಗೆ ವಿದ್ಯಾನ್ಮಾಳಿಯೆಂಬ ವಿದ್ಯಾಧರನು ಸತ್ತು ಸಿದ್ದಾರ್ಥನೆಂಬ ಮಗನಾಗಿ ಹುಟ್ಟಿದನು. ಅವನು ತಂದೆ ತಾಯಿಗಳಿಗೆ ಸಂತೋಷವನ್ನು ಉಂಟುಮಾಡುತ್ತ ಸಂಪತ್ತು – ವೈಬವ – ಸೌಂದರ್ಯ – ತೇಜಸ್ಸು – ಅದೃಷ್ಟ ಮುಂತಾದ ಗುಣಗಳಿಂದ ಕೂಡಿದವನಾದನು. ಆ ಮೇಲೆ ಇತ್ತ ಮಗಧೆಯೆಂಬ ನಾಡಿದ್ದಿತು. ಅಲ್ಲಿ ರಾಜಗೃಹವೆಂಬ ಪಟ್ಟಣದಲ್ಲಿ ಸಮುದ್ರವಿಜಯನೆಂಬ ರಾಯಸೆಟ್ಟಿಯಿದ್ದನು. ಅವನಿಗೆ ಸಾಗರಸೆಟ್ಟಿಯ ಸೋದರ ತಂಗಿಯಾದ ಸುಮತಿ ಎಂಬಳನ್ನು ಕೊಟ್ಟಿದ್ದರು. 

    ವಿರಳವೇಗೆಯೆಂಬ ವಿದ್ಯಾಧರಿ ಕಾಲಂಗೆಯ್ದು ಶ್ರೀಕಾಂತಯೆಂಬೊಳ್ ಮಗಳಾಗಿ ಪುಟ್ಟಿದೊಳತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವಭಾವವಿಲಾಸವಿಭ್ರಮಗಳಿಂ ಕೂಡಿದೊಳ್ ದೇವಗಣಿಕೆಯನೆ ಪೋಲ್ವಳೆಕೆಯಂ ಸೋದರಮಾವನ ಮಗಂಗೆ ಪಿರಿದುಂ ವಿಸ್ತಾರದಿಂ ಸಿದ್ದಾರ್ಥಂಗೆ ಕೊಟ್ಟರಂತು ಸಿದ್ದಾರ್ಥನುಂ ಶ್ರೀಕಾಂತೆಯುಂ ತಮ್ಮೊಳನ್ಯೋನ್ಯ ಸ್ನೇಹದೊಳ್ ಕೂಡಿ ಇಷ್ಟವಿಷಯ ಕಾಮಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದು ದಿವಸಂ ಸಪ್ತತಳ ಪ್ರಾಸಾದದ ಮೇಲಿರ್ವರುಮಿಷ್ಟಪರಿವಾರಸಹಿತಂ ದಿಶಾವಳೋಕನಂ ಗೆಯ್ಯುತ್ತಂ ಸುಖಸಂಕಥಾವಿನೋದದಿಂದಿರ್ಪನ್ನೆಗಂ ವಿಚಿತ್ರಮಾಗುತ್ತಿರ್ದ್ದ ವಿಮಾನಮನೇಱ ಆಕಾಶಪಥಕ್ಕೊಗೆದು ಮೇಗೆವೋಪ ವಿದ್ಯಾಧರಯುಗಳಮಂ ಕಂಡಿರ್ವರುಂ ಮೂರ್ಛೆವೋಗಿ ನೀಡಱಂದೆೞ್ಚರ್ತು ಜಾತಿಸ್ಮರನಾಗಿ ತಮ್ಮ ಮುನ್ನಿನ ಭವಮಂ ನೆನೆದು ಸಂಸಾರದ ಪೊಲ್ಲಮೆಯುಮನನಿತ್ಯತೆಯುಮಂ ಬಗೆದು ವೈರಾಗ್ಯಪರರರಾಗಿ ಇರ್ವರುಂ ತಪಂಬಡುವ ಬುದ್ಧಿಯನೊಡೆಯರಾಗಿ ಸ್ವಜನ ಪರಿಜನ ಮಂತ್ರಿ ಮಿತ್ರವರ್ಗಕ್ಕೆಲ್ಲಂ ಬೞಯನಟ್ಟಿ ಬರಿಸಿ ಸಂಸಾರದ ಪೊಲ್ಲಮೆಯುಮಂ ತಂತಮ್ಮ ಬಗೆದ ಕಾರ್ಯಮುಮನವರ ಮುಂದೆ ನುಡಿದೊಡವರ್ಗ್ಗಳೆಲ್ಲಂ ನೆರೆದಿಂತೆಂದರಮ್ಮಾ ಪೂರ್ವದಿಂದಂ ಬಂದ ಕುಲಸಂತತಿಯಂ ಕಾವೊರಾರುಮಿಲ್ಲಿನಿತು ಭಾರಮನಾರ್ಗ್ಗೊಪ್ಪಿಸಿ ತಪಂಬಟ್ಟಿಷ್ಟಿರದಱಂ ಕೆಲವು ಕಾಲದಿಂ ಮಗನಾಡೊಡೆ ಮಗಂಗೆ ಸಮಸ್ತ ಭಾರಮಂ ನಿರೂಪಿಸಿ ತಪಂಡಬಡುವುದೆಂದು ನುಡಿದೊಡೆ 

 ಆ ಇಬ್ಬರಿಗೂ, ವಿರಳವೇಗೆಯೆಂಬ ವಿದ್ಯಾಧರಿ ಸತ್ತು ಶ್ರೀಕಾಂತೆಯೆಂಬ ಮಗಳಾಗಿ ಹುಟ್ಟಿದಳು. ಅವಳು ಹೆಚ್ಚಾದ ರೂಪ ಸೌಂದರ್ಯ, ಅದೃಷ್ಟ, ತೇಜಸ್ಸು, ಒಯ್ಯಾರ, ಭಾವ, ಬೆಡಗು, ವಿಭ್ರಮಗಳಿಂದ ಕೂಡಿದವಳಾಗಿ ದೇವತಾ ವಾರಿನಾರಿಯನ್ನು ಹೋಲುತ್ತಿದ್ದಳು. ಅವಳನ್ನು ಸೋದರಮಾವನ ಮಗನಾದ ಸಿದ್ದಾರ್ಥನಿಗೆ ಹಿರಿದಾದ ವೈಭವದ ವಿಸ್ತಾರದಿಂದ ಕೊಟ್ಟರು. ಅಂತೂ ಸಿದ್ದಾರ್ಥನೂ ಶ್ರೀಕಾಂತೆಯೂ ತಮ್ಮೊಳಗೆ ಪರಸ್ಪರ ಪ್ರೀತಿಯಿಂದ ಕೂಡಿ ತಮ್ಮ ಇಚ್ಛೆಯ ವಿಷಯದ ಕಾಮಸುಖಗಳನ್ನು ಅನುಭವಿಸುತ್ತ ಹಲವು ಕಾಲ ಕಳೆದರು. ಹೀಗಿರಲು ಒಂದು ದಿವಸ, ಅವರಿಬ್ಬರೂ ಏಳು ಉಪ್ಪರಿಗೆಗಳುಳ್ಳ ಅರಮನೆಯ ಮೇಲುಗಡೆ ಇಷ್ಟರಾದ ಪರಿವಾರದವರೊಂದಿಗೆ ದಿಕ್ಕುಗಳನ್ನು ನೋಡುತ್ತ ಸುಖವಿಷಯದ ಕಥೆಗಳ ವಿನೋದದಿಂದ ಇದ್ದರು. ಆ ವೇಳೆಗೆ ಆಶ್ಚರ್ಯಕರವಾಗಿದ್ದು ವಿಮಾನವನ್ನು ಏರಿಕೊಂಡು ಆಕಾಶಮಾರ್ಗ ಹಾರಿ ಮೇಲುಗಡೆ ಹೋಗತಕ್ಕ ಇಬ್ಬರು ವಿದ್ಯಾಧರರನ್ನು ಕಂಡು ಇಬ್ಬರೂ ಮೂರ್ಛೆ ಹೋದರು. ಬಹಳ ಹೊತ್ತಿನ ಮೇಲೆ ಎಚ್ಚರಗೊಂಡು ಜನ್ಮವೃತ್ತಾಂತದ ಸ್ಮರಣೆಯುಳ್ಳವರಾಗಿ ತಮ್ಮ ಪೂರ್ವ ಜನ್ಮವನ್ನು ನೆನಸಿ ಸಂಸಾರದ ಕೆಡುಕನ್ನು ಕ್ಷಣಿಕತೆಯನ್ನೂ ಭಾವಿಸಿಕೊಂಡು ವೈರಾಗ್ಯದಲ್ಲಿ ತತ್ಪರರಾಗಿ ಇಬ್ಬರೂ ತಪಸ್ಸುಮಾಡುವ ಬುದ್ದಿಯುಳ್ಳವರಾದರು. ಬಂಧುಗಳನ್ನೂ ಮಂತ್ರಿವರ್ಗ ಸ್ನೇಹಿತರ ವರ್ಗಗಳನ್ನೂ ದೂತರನ್ನು ಕಳುಹಿಸಿ ಬರಮಾಡಿಸಿದರು. ಸಂಸಾರದ ಕೆಡುಕನ್ನೂ ಕ್ಷಣಿಕತೆಯನ್ನೂ ಭಾವಿಸಿಕೊಂಡ ಕಾರ್ಯವನ್ನೂ ಅವರ ಎದುರಿನಲ್ಲಿ ತಿಳಿಸಿದರು. ಆಗ ಅವರೆಲ್ಲರೂ ಒಟ್ಟಾಗಿ ಹೀಗೆಂದರು – “ಅಪ್ಪಾ ಹಿಂದಿನಿಂಲೇ ಬಂದ ವಂಶದ ಸಂತತಿಯನ್ನು ಕಾಪಾಡುವವರು ಬೇರೆ ಯಾರೂ ಎಲ್ಲ. ಇಷ್ಟೊಂದು ಭಾರವನ್ನು ನೀವು ಯಾರಿಗೆ ಒಪ್ಪಿಸಿಕೊಟ್ಟು ತಪಸ್ಸು ಮಾಡುವಿರಿ ! ಆದುದರಿಂದ ಕೆಲವು ಕಾಲದ ಮೇಲೆ ನಿಮಗೆ ಮಗನು ಹುಟ್ಟಿದರೆ, ಆ ಮಗನಿಗೆ ಎಲ್ಲಾ ಭಾರವನ್ನು ತಿಳಿಸಿ (ವಹಿಸಿಕೊಟ್ಟು) ತಪಸ್ಸಿಗೆ ಹೋಗಬಹುದು – ಹೀಗೆ ಹೇಳಲು,

ಸಿದ್ದಾರ್ಥನೆಂದಂ ನಿಮ್ಮೆಲ್ಲರ ಪೇೞ್ದುದನಿಂಬುಗೆಯ್ದಪ್ಪೆನೆಂದು ಮಗನಾದಂದೆನ್ನ ತಪಂಬಡುವಂದಾರುಂ ವಕ್ರಂ ಬರಸಲ್ಲೆಂದು ನಿಮ್ಮೆಲ್ಲೆಂದು ನುಡಿದೊಡಂಬಡಿಸಿ ಕೆಲವು ಕಾಲಂ ಪರಿವಾರಂ ಬಾರಿಸೆ ಮಾಣ್ದಿರ್ದಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆಯಿರೆ ಮತ್ತೆ ಸಿದ್ದಾರ್ಥನ ಪಿರಿಯರಸಿ ಜಯಾವತಿಯೆಂಬೊಳ್ ಮಕ್ಕಳಂ ಬೇಡಿ ದೇವರ್ಗ್ಗಂ ದೇವತೆಗಳ್ಗಂ ಪರಸಿ ಪೂಜೆಯಂ ಮಾಡುತ್ತಿರ್ಪೊಳೊಂದು ದಿವಸಂ ವಿಜಯಭದ್ರರೆಂಬ ಭಟಾರರವಜ್ಞಾನಿಗಳ್ ಚರಿಗೆವೊಕ್ಕೊಡೆ ಕಂಡವರಂ ಜಯಾವತಿ ನಿಱಸಿಯಾದಮಾನುಂ ಭಕ್ತಿಯಿಂದಂ ಕೈಯಲಿಕ್ಕಿ ನಿರಂತರಂ ಮಾಡಿ ಕುಳ್ಳರ್ದ ಬೞಕ್ಕಿಂತೆಂದು ಬೆಸಗೊಂಡಳ್ ಭಟಾರಾ ಎನಗೆ ಮಕ್ಕಳಕ್ಕುಮೋ ಆಗದೋ ಎಂದು ಬೆಸಗೊಂಡೊಡೆ ಭಟಾರರಿಂತೆಂದರ್ ವಿಭವೈಶ್ವರ್ಯರೂಪ ಕಾಂತಿ ಸೌಭಾಗ್ಯಾದಿಗುಣಗಳಿಂದಂ ಸಿದ್ದಾರ್ಥನಿಂದಗ್ಗಳಂ ಕುಲತಿಲಕನಪ್ಪ ಮಗನಂ ಪೆಱುವಯ್ ಪೆತ್ತಾಗಳೆಂತು ಪುಣ್ಣಮಿಯಂದಿನ ಚಂದ್ರನಂ ಕಂಡಾಗಳಾದಿತ್ಯನಸ್ತಮಾನಕ್ಕೆ ಸಲ್ಗುಮಂತೆ ಮಗನಂ ಕಂಡಾಗಳೆ ನಿನ್ನ ಭರ್ತಾರನುಂ ತಪಂಬಡುಗುಮಾ ರಿಸಿಯರಂ ಕಂಡಾಗಳೆ ಮಗುನುಂ ತಪಂಬಡುಗುಮೆಂದು ಭಟಾರರ್ ಪೇೞ್ದು ಪೋದರಿತ್ತ ಜಯಾವತಿಗೆ ಹರ್ಷವಿಷಾದಂಗಳೆರಡುಮೊರ್ಮ್ಮೊದಲಾಗೆ ಕಾಲಂ ಸಲೆ ಮತ್ತಿತ್ತ ಚಂಡವೇಗಂ ಪಲಕಾಲಮರಸುಗೆಯ್ದು ಆಯುಷ್ಯಾಂತದೊಳ್ ಕೞದು ಜಯಾವತಿಯ ಗರ್ಭದೊಳ್ ನೆಲಸಿ ಗರ್ಭಮಾದೊಡೆ 

ಸಿದ್ದಾರ್ಥ ಹೇಳಿದನು – ನೀವೆಲ್ಲರು ಹೇಳಿದುದನ್ನು ಒಪ್ಪುತ್ತೇನೆ, ಮುಂದೆ ನನಗೆ ಮಗನಾದಾಗ ನಾನು ತಪಸ್ಸು ಮಾಡುವಾಗ ಯಾರೂ ಅಡ್ಡಿಬರಬಾರದು* ಎಂದು ಹೇಳಿ ಒಪ್ಪುವಂತೆ ಮಾಡಿದನು. ಕೆಲವು ಕಾಲ ಪರಿವಾರದವರು ತಡೆದುದರಿಂದ ತಪಸ್ಸಿಗೆ ಹೋಗುವುದನ್ನು ಬಿಟ್ಟಿದ್ದು ಇಷ್ಟವಾದ ವಿಷಯದ ಕಾಮಸುಖಗಳನ್ನು ಅನುಭವಿಸುತ್ತಿದ್ದನು. ಅನಂತರ ಸಿದ್ದಾರ್ಥನ ಹಿರಿಯ ಹೆಂಡತಿಯಾದ ಜಯಾವತಿಯೆಂಬವಳು ಮಕ್ಕಳನ್ನು ಅಪೇಕ್ಷಿಸಿ ದೇವರಿಗೂ ದೇವತೆಗಳಿಗೂ ಹರಕೆ ಹೇಳಿ ಪೂಜೆಯನ್ನು ಮಾಡುತ್ತಿದ್ದಳು. ಒಂದು ದಿವಸ ಅವಜ್ಞಾನ (ತ್ರಿಕಾಲಜ್ಞಾನ)ವುಳ್ಳ ವಿಜಯಭದ್ರರೆಂಬ ಮುನಿಗಳು ಭಿಕ್ಷಕ್ಕಾಗಿ ಮನೆಯನ್ನು ಪ್ರವೇಶಿಸಿದರು. ಜಯಾವತಿ ನೋಡಿ ಅವರನ್ನು ನಿಲ್ಲಿಸಿ, ಅತ್ಯಂತ ಭಕ್ತಿಯಿಂದ ಪಾಣಿತಲ ಭೋಜಿಗಳಾದ ಅವರಿಗೆ ಕೈಯಲ್ಲಿ ಆಹಾರವನ್ನಿತ್ತಳು. ಎಡಬಿಡದೆ ಪ್ರತಿದಿನ ಹೀಗೆಯೇ ಮಾಡಿ ಅವರನ್ನು ಕುಳ್ಳಿರಿಸಿದ ನಂತರ ಹೀಗೆ ಕೇಳಿದಳು – “ಸ್ವಾಮಿಗಳೇ, ನನಗೆ ಮಕ್ಕಳಾದರೋ ಆಗಲಿಕ್ಕಲ್ಲವೋ? * ಎಂದು ಕೇಳಲು, ಸ್ವಾಮಿಗಳು ಹೀಗೆಂದರು – “ವೈಭವ, ಸಂಪತ್ತು, ಸೌಂದರ್ಯ, ತೇಜಸ್ಸು, ಅದೃಷ್ಟ ಮುಂತಾದ ಗುಣಗಳಿಂದ ತಂದೆಯಾದ ಸಿದ್ದಾರ್ಥನಿಗಿಂತಲೂ ಶ್ರೇಷ್ಠನೂ ವಂಶಕ್ಕೆ ತಿಲಕದಂತಿರುವವನೂ ಆದ ಮಗನನ್ನು ನೀನು ಹೆರುವೆ. ಹೆತ್ತಾಗ, ಹುಣ್ಣಿಮೆಯ ದಿನ ಚಂದ್ರನನ್ನು ಕಂಡಾಗ ಸೂರ್ಯನು ಹೇಗೆ ಅಸ್ತಮಿಸುವನೋ ಹಾಗೆಯೇ ಮಗನನ್ನು ಕಂಡೊಡನೆಯೇ ನಿನ್ನ ಗಂಡನು ತಪಸ್ಸನ್ನು ಕೈಗೊಳ್ಳುವನು. ಆ ಋಷಿಗಳನ್ನು ಕಂಡೊಡನೆಯೇ ನಿನ್ನ ಮಗನೂ ತಪಸ್ಸನ್ನು ಕೈಗೊಳ್ಳುವನು. ಎಂದು ಹೇಳಿ ಹೋದರು. ಇತ್ತ ಜಯಾವತಿಗೆ ಸಂತೋಷದುಃಖಗಳೆರಡೂ ಏಕಕಾಲದಲ್ಲಿ ಉಂಟಾದವು. ಹೀಗೆಯೇ ಕಾಲ ಕಳೆಯಿತು. ಆಮೇಲೆ, ಇತ್ತ ಚಂಡವೇಗನು ಹಲವು ಕಾಲ ರಾಜ್ಯವಾಳಿ ಆಯುಷ್ಯ ತೀರಲು ಸತ್ತು ಜಯಾವತಿಯ ಬಸಿರಿನಲ್ಲಿ ನೆಲಸಿ ಗರ್ಭವಾಗಲು, 

    ಜಯಾವತಿ ಮುಂ ನೆಲಮನೆಯಂ ಮಾಡಿಸಿ ಎನಗೆ ಕುತ್ತಂ ಜಲೋದರಮಾದುದದರ್ಕ್ಕ ವೈದ್ಯಂಗೆಯ್ಸಿದಪ್ಪೆನೆಂದು ಸಿದ್ದಾರ್ಥಂಗೆ ಪೇೞ್ದು ಕುತ್ತಮಂ ಭಾವಿಸಿ ನೆಲಮನೆಯೊಳಗಿರ್ದು ನವಮಾಸಂ ನೆಱೆದಂದು ಪ್ರಸೂತೆಯಾಗಿ ಮಗನಂ ಪೆತ್ತು ತಾನುಂ ದಾದಿಯುಂ ಮತ್ತಂ ಬೆಸಕೆಯ್ವ ತೊೞ್ತುಮಿಂತು ಮೂವರುಮಱವೊರುೞದರಾರುಮಱಯರಿಂತು ದಿವಸಂಗಳ್ ಸಲೆ ಮತ್ತೊಂದು ದಿವಸಂ ಬೆಸಕೈವ ತೊೞ್ತು ನೀರಂ ಪೋದಲ್ಲಿ ನೀರ ಪೊೞೆಯೊಳಾಕೆಯ ಕೆಳದಿ ನಾಗಬ್ಬೆಯೆಂಬೊಳಾಕೆಯಂ ಕಂಡಿಂತೆಂದು ಬೆಸಗೊಂಡಳೆಲೆಗೆ ಕುಂದುಬೆ ಪಲದಿವಸದಿಂದ ನಿನ್ನ ಕಂಡೆನಿಲ್ಲಿನಿತು ದಿವಸದಿಂ ಮುಂ ಕಾಣದುದರ್ಕ್ಕೆ ಕಾರಣಮಂ ಪೇೞೆಂದು ಬೆಸಗೊಂಡಳ್ಗೆ ಕಾರಣಮಂ ನಿನಗೆ ಪೇೞ್ದಪ್ಪೆಂ ನೀನಾರ್ಗ್ಗಂ ಪೇೞೆಯಪ್ಪ್ಪೊಡೆಂದು ಸೂರುಳಿಸಿ ಇಂತೆಂದು ಪೇೞ್ದರ್ ನೋಡಾ ಎಮ್ಮ ಸೆಟ್ಟತಿ ಜಯಾವತಿ ಬೆಸಲೆಯಾದಳ್ ಕಿಱುಂಡೆಗನಂ ಪೆತ್ತಳಾರುಮನಱಯಲೀಯದೆ ನೆಲಮನೆಯೊಳಡಂಗಿರ್ಪ್ಪೊಳೆಂದು ಪೇೞ್ದೊಡಾ ಮಾತನಲ್ಲಿಯೊರ್ವಂ ಸಂಜೆವಾರಿಸುತ್ತಿದ್ದ ಬ್ರಾಹ್ಮಣಂ ದಾರದ್ರ್ಯಾಭಿಭೂತಂ ಸೋಮಶರ್ಮನೆಂಬಾತಂ ಕೇಳ್ದಾದಮಾನುಂ ಸಂತೋಷಂಬಟ್ಟು ಪಿರಿದೊಂದು ಮಾದುಫಲಮಂ ಕೊಂಡು ಪೋಗಿ ಸಿದ್ದಾರ್ಥನಂ ಕಂಡಿಂತೆಂದು ಬಿನ್ನವಿಕುಂ  ಸಿದ್ದಾರ್ಥಸೆಟ್ಟಿ ಮಹಾಪುರುಷಾ ನಿನಗಾನೊಂದಾಸಗೆಯಂ ಪೇೞಲ್ ಬಂದೆಂ ಜಯಾವತಿ ಬೆಸಲೆಯಾದಳ್....

ಜಯಾವತಿಯು ಮೊದಲಾಗಿ ನೆಲಮನೆಯನ್ನು ಮಾಡಿಸಿದಳು, “ನನಗೆ ಜಲೋದರರೋಗವಾಗಿದೆ. ಅದಕ್ಕೆ ಚಿಕಿತ್ಸೆ ಮಾಡಿಸುತ್ತೇನೆ* ಎಂದು ಸಿದ್ದಾರ್ಥನಿಗೆ ಹೇಳಿ ರೋಗವೆಂಬ ಭಾವನೆ ಬರುವಂತೆ ಮಾಡಿ ನೆಲಮನೆಯೊಳಗೆ ಇದ್ದಳು. ಒಂಬತ್ತು ತಿಂಗಳು ತುಂಬಿದಾಗ ಪ್ರಸವವಾಯಿತು. ಮಗನನ್ನು ಹೆತ್ತು ತಾನು, ದಾದಿ, ಸೇವೆಮಾಡುವವಳು ಹೀಗೆ ಮೂವರು ಮಂದಿ ಮಾತ್ರ ಬಲ್ಲರು – ಉಳಿದ ಯಾರೂ ತಿಳಿಯರು ಹೀಗೆ ದಿವಸಗಳು ಕಳೆದುವು ಆಮೇಲೆ ಒಂದು ದಿವಸ ಚಾಕರಿ ಮಾಡುವ ದಾಸಿ ನೀರನ್ನು ತರಲು ಹೋದ ವೇಳೆಯಲ್ಲಿ ಹೊಳೆಯಲ್ಲಿ ಆಕೆಯ ಗೆಳತಿಯಾದ ನಾಗಬ್ಬೆಯೆಂಬವಳು ಆಕೆಯನ್ನು ಕಂಡು ಹೀಗೆ ಕೇಳಿದಳು – “ಎಲೈ ಕುಂದಬ್ಬೆಯೇ, ಹಲವು ದಿವಸಗಳಿಂದ ನಾನು ನಿನ್ನನ್ನು ಕಂಡಿಲ್ಲ. ಇಷ್ಟುದಿವಸಗಳಿಂದಲೂ ಮೊದಲು ನೀನು ಕಾಣಿಸುದುದಕ್ಕೆ ಕಾರಣವನ್ನು ಹೇಳು* ಎಂದು ಕೇಳಿದಳು. ಅದಕ್ಕೆ ಕುಂದಬ್ಬೆ “ಕಾರಣವನ್ನು ನೀನು ಯಾರಿಗೂ ಹೇಳಕೂಡದು. ಹಾಗಿದ್ದರೆ ಮಾತ್ರ ಹೇಳುವೆನು* ಎಂದಳು. ಯಾರಿಗೂ ಹೇಳುವುದಿಲ್ಲವೆಂದು ನಾಗಬ್ಬೆಯಿಂದ ಪ್ರತಿಜ್ಞೆ ಮಾಡಿಸಿ ಅವಳು ಹೀಗೆಂದಳು – “ನೋಡು, ನಮ್ಮ ಸೆಟ್ಟತಿಯಾಗಿರುವ ಜಯಾವತಿಯ ಚಿಕ್ಕಸೆಟ್ಟಿ (ಮಗು)ವನ್ನು ಹೆತ್ತಿದ್ದಾಳೆ. ಈ ಸಂಗತಿಯನ್ನು ಯಾರಿಗೂ ತಿಳಿಯಲು ಬಿಡದೆ ನೆಲಮನೆಯಲ್ಲಿ ಅಡಗಿಕೊಂಡಿದ್ದಾಳೆ*. ಈ ಮಾತನ್ನು ಅಲ್ಲಿಯೇ ಸಂಧ್ಯಾವಂದನೆಯನ್ನು ಮಾಡುತ್ತಿದ್ದ ಸೋಮಶರ್ಮನೆಂಬವನು ಕೇಳಿದನು. ಅತ್ಯಂತ ಬಡವನಾದ ಆ ಬ್ರಾಹ್ಮಣನು ಇದರಿಂದ ಬಹಳ ಸಂತೋಷಪಟ್ಟನು. ಅವನು ದೊಡ್ಡದೊಂದು ಮಾದಳದ ಹಣ್ಣನ್ನು ತೆಗೆದುಕೊಂಡು ಹೊಗಿ ಸಿದ್ದಾರ್ಥನನ್ನು ಕಂಡು ಹೀಗೆ ವಿಜ್ಞಾಪನೆ ಮಾಡಿದನು. “ಎಲೈ ಮಹಾಪುರುಷನಾದ ಸಿದ್ದಾರ್ಥಸೆಟ್ಟಿಯೇ, ನಿನಗೆ ನಾನು ಒಂದು ಶುಭವಾರ್ತೆಯನ್ನು ಹೇಳಲಿಕ್ಕಾಗಿ ಬಂದಿದ್ದೇನೆ. ನಿನ್ನ ಹೆಂಡತಿ ಜಯಾವತಿ ಗಂಡು ಮಗುವನ್ನು ಹೆತ್ತಿದ್ದಾಳೆ* ಎಂದು ಬ್ರಾಹ್ಮಣನು ಹೇಳಿದನು....

*****ಕೃಪೆ: ಕಣಜ****